ಈ ಸೂಕ್ಷ್ಮ ನಿನಗ್ಯಾವಾಗ ಅರ್ಥವಾಗುತ್ತದೆಯೋ!
Posted ಫೆಬ್ರವರಿ 25, 2008
on:
ಇಂಥದ್ದೊಂದು ಪತ್ರವನ್ನು ನೀವು ಯಾರಿಗೂ ಬರೆದಿರಲಾರಿರಿ. ಯಾರಿಂದಲೂ ಪಡೆದಿರಲಾರಿರಿ. ಇಂತಹ ಪತ್ರ ಸಿಗುವುದು ಇಲ್ಲಿ ಮಾತ್ರ.ಇದು ‘ ಹೀಗೊಂದು ಪತ್ರ’. ಪ್ರೀತಿಯ ಬಗ್ಗೆ ಎಲ್ಲರೂ ಪುಟಗಟ್ಟಲೆ ಬರೀತಾರೆ. ಆದರೆ ಪ್ರೀತಿಗೂ ಮಾತನಾಡೋಕೆ ಏನಾದರೂ ಇದೆಯೇ?
ಹೀಗೆ ನಾನು ಪತ್ರ ಬರೆಯುತ್ತಿರುವುದು ಇದೇ ಮೊದಲು. ನಿನಗೆ ಆಶ್ಚರ್ಯವಾಗಬಹುದು, ನನಗೂ ಮಾತನಾಡುವುದಕ್ಕೆ ಇದೆಯಾ ಅಂತ ನಿನಗೆ ಅಚ್ಚರಿಯಾಗಬಹುದು. ನಾನು ಏನು, ನಾನು ಹೇಗಿದ್ದೇನೆ, ನನ್ನ ವ್ಯಾಪ್ತಿ ಏನು ಎಂಬುದರ ಬಗ್ಗೆ ಇದುವರೆಗೇ ನೀನು ದಣಿವಿಲ್ಲದೆಯೇ ಮಾತನಾಡಿದ್ದೀಯ ಈಗ ನನಗೂ ಹೇಳಿಕೊಳ್ಳುವುದಕ್ಕೆ, ವಿವರಿಸಿಕೊಳ್ಳುವುದಕ್ಕೆ, ನನ್ನ ಸ್ವಭಾವವನ್ನು ಸೂಚಿಸುವುದಕ್ಕೆ ಆಸೆಯಿದೆ ಎಂಬುದನ್ನು ಊಹಿಸಿದರೇನೆ ನಿನಗೆ ಬೆರಗಾಗಬಹುದು. ಸಾವರಿಸಿಕೊಂಡು ಈ ನನ್ನ ಪತ್ರವನ್ನು ಓದು ಇದು ಪ್ರೀತಿ ಇಡೀ ಮನುಷ್ಯಕುಲವನ್ನು ಸಂಬೋಧಿಸಿ ಬರೆಯುತ್ತಿರುವ ಪತ್ರ.
ನಾನು ಯಾರು? ಅನಾದಿಕಾಲದಿಂದಲೂ ನೀನು ಈ ಪ್ರಶ್ನೆಯನ್ನು ಕೇಳುತ್ತಲೇ ಬಂದಿದ್ದೀಯ. ಈ ಪ್ರಶ್ನೆಗೆ ನೂರಾರು ರೂಪಗಳನ್ನು ಕೊಟ್ಟು ವಿಸ್ತರಿಸಿದ್ದೀಯ, ಹತ್ತಾರು ಬಣ್ಣಗಳನ್ನು ಲೇಪಿಸಿ ಸಿಂಗರಿಸಿದ್ದೀಯ. ಉತ್ತರ ಹುಡುಕುವುದಕ್ಕೆ ನಿಜಕ್ಕೂ ಕಷ್ಟಪಟ್ಟಿದ್ದೀಯ. ನಿನ್ನ ಬದುಕಿನ ಬೇರೆಲ್ಲಾ ಸಂಗತಿಗಳನ್ನು ಕಡೆಗಣಿಸಿ ನನ್ನ ಹಿಂದೆ ಬಿದ್ದಿದ್ದೀಯ. ಬಾಗದ ಮೈಯನ್ನು ಮನಸಾರೆ ದಂಡಿಸಿದ್ದೀಯ, ಮಾಗದ ಮನಸ್ಸನ್ನು ಸಹಸ್ರ ಸಂಕಟಗಳಿಗೆ ಈಡುಮಾಡಿಕೊಂಡಿದ್ದೀಯ. ಕಾಡುಗಳಲ್ಲಿ ಅಲೆದಾಡಿದ್ದೀಯ, ಗಿರಿ ಕಂದರಗಳಲ್ಲಿ ಧೇನಿಸಿದ್ದೀಯ, ನೀರೊಳಗೆ ಮುಳುಗು ಹಾಕಿ ಅರಸಿದ್ದೀಯ. ಮೈಲುಗಟ್ಟಲೆ ಕಾಲಿಗೆ ಚಕ್ರ ಕಟ್ಟಿಕೊಂಡು ಅಲೆದಾಡಿದ್ದೀಯ. ಹಸಿರಿನ ಮಡಿಲೊಳಗೆ ತಲೆ ಹುದುಗಿಸಿ ಮೌನವನ್ನೇ ಹನಿಯಾಗಿಸಿ ಕಣ್ಣು ನೆನೆಸಿದ್ದೀಯ. ಅಕ್ಷರಗಳ ನೆರವು ಪಡೆದು ಕವಿತೆಗಳ ಹಾದಿಯಲ್ಲಿ ನನ್ನೆಡೆಗೆ ಸೇರುವ ಯತ್ನ ಮಾಡಿದ್ದೀಯ. ನಾದದ ಅಲೆಯ ಮೇಲೆ ತೇಲುವ ನಾವೆಯಾಗಿ ನನ್ನೆಡೆಗೆ ತಲುಪುವ ತುಡಿತ ತೋರಿದ್ದೀಯ. ಕೋಟಿ ಕೋಟಿ ಬಣ್ಣಗಳೊಂದಿಗೆ ಸರಸವಾಡಿ ನನ್ನನ್ನು ರಮಿಸಿದ್ದೀಯ. ಹಂಗಿನ ಹಿಡಿತದಿಂದ ಕಾಲುಗಳನ್ನು ಸ್ವತಂತ್ರಗೊಳಿಸಿ ನಲಿದಾಡಿ ನನ್ನ ಮುದಗೊಳಿಸಿದ್ದೀಯ. ನಿನ್ನೊಳಗೆ ಬೇರಾರನ್ನೋ ಆವಾಹಿಸಿಕೊಂಡು ನನ್ನ ಕಾಣುವ ಪ್ರಯತ್ನ ಮಾಡಿದ್ದೀಯ. ಯಂತ್ರ ತಂತ್ರದ ನೆರವು ಪಡೆದು ಈ ಭುವಿಯ ಸೆಳೆತವನ್ನೇ ಮೀರಿ ಹಾರಿದ್ದೀಯ. ನನ್ನ ಹುಡುಕುವ ಚಪಲದಲ್ಲಿ ಕೈಗೆ ಸಿಕ್ಕಿದ್ದನ್ನು ಒಡೆದು ಒಡೆದು ಪರಮಾಣು, ಅಣುವಿನ ಎದುರು ನಿಂತಿದ್ದೀಯ. ನನಗಾಗಿ ಕೋಟಿ ಕಟ್ಟಿದ್ದೀಯ, ಅದರೊಳಗೆ ನೀನೇ ಬಂಧಿಯಾಗಿದ್ದೀಯ. ನನಗಾಗಿ ಕತ್ತಿ ಹರಿತಗೊಳಿಸಿದ್ದೀಯ, ಕತ್ತಿಗೆ ಕತ್ತು ಕೊಟ್ಟಿದ್ದೀಯ. ಇಷ್ಟೆಲ್ಲಾ ಮಾಡುತ್ತಾ ನಾನು ಯಾರು ಎಂಬ ಪ್ರಶ್ನೆಗೆ ಸಾವಿರ–ಸಾವಿರ ಬಗೆಯ ಉತ್ತರಗಳನ್ನು ನೀನೇ ಕಂಡುಕೊಂಡಿದ್ದೀಯಾ! ಎಲ್ಲಾ ಉತ್ತರ ಅವಲೋಕಿಸಿದ ನಂತರವೂ ನಿಸ್ಸಹಾಯಕನಾಗಿ ನಿಟ್ಟುಸಿರು ಬಿಟ್ಟಿದ್ದೀಯ. ದಣಿವಾರಿಸಿಕೊಂಡು ಮತ್ತದೇ ಉತ್ಸಾಹದಲ್ಲಿ ಹುಡುಕಾಟಕ್ಕೆ ಹೊರಟಿದ್ದೀಯ.
ನಿನ್ನ ಹಟಕ್ಕೆ, ನಿನ್ನ ಪ್ರಯತ್ನಕ್ಕೆ ನನ್ನ ಮೆಚ್ಚುಗೆ ಇದೆ ಕಣೋ. ಆದರೆ ಉತ್ತರವೇ ಅಲ್ಲದ ಸಂಗತಿಗಳಿಗೆ ಪ್ರಶ್ನೆಗಳನ್ನು ಸೃಷ್ಟಿಸಿಕೊಂಡು ಆ ಸಂಗತಿಗಳಿಗೆ ಉತ್ತರವಾಗುವ ಬಲಾತ್ಕಾರ ಮಾಡಿದರೆ ಅವು ಸತ್ತು ಹೋಗುತ್ತವೆ. ನಿನ್ನ ಎಲ್ಲಾ ಪ್ರಶ್ನೆಗಳ ಶವಪೆಟ್ಟಿಗೆಯೊಳಗೆ ನಿನ್ನ ಅಭಿರುಚಿಯ ಸಿಂಗಾರ ಪಡೆದು ನಿರ್ಜೀವವಾಗಿ ಮಲಗಿಕೊಳ್ಳುತ್ತವೆ. ಈ ಸೂಕ್ಷ್ಮ ನಿನಗೆ ಯಾವಾಗ ಅರ್ಥವಾಗುತ್ತದೆಯೋ! ಎಂದೂ ನಿನ್ನ ಕೈಗೆ ಸಿಗದ ಆದರೆ ಸದಾ ನಿನ್ನೊಂದಿಗಿರುವ ನನಗೆ ‘ಪ್ರೀತಿ‘ ಅಂತ ಹೆಸರಿಟ್ಟು ಅದನ್ನು ಹುಡುಕಲು ಸೇನೆ ಕಟ್ಟಿಕೊಂಡು ಹೊರಟಿದ್ದೀಯ. ನಿನ್ನ ಕಣ್ಣುಗಳೊಳಗಿರುವ ಕಾಂತಿ, ಹುರುಪು, ರಣೋತ್ಸಾಹ, ಯೌವನಗಳು ದೂರದ ದಿಗಂತದೆಡೆಗೆ ಬೆರಳು ಮಾಡುತ್ತಿವೆ. ನೀನು ದಾಪುಗಾಲು ಹಾಕಿಕೊಂಡು ಅತ್ತ ಮುನ್ನುಗುತ್ತಿದ್ದೀಯ. ಆದರೆ ನಾನು ನಿನ್ನ ನೆರಳಿನಂತೆ ನಿನ್ನ ಹಿಂಬಾಲಿಸುತ್ತಲೇ ಇದ್ದೇನೆ, ಒಮ್ಮೆ ಹಿಂದೆ ತಿರುಗಿ ನೋಡುತ್ತೀಯಾ ಎಂಬ ಸಣ್ಣ ಆಸೆಯಲ್ಲಿ!
ನಿನಗೆ ಈ ಅಭ್ಯಾಸ ಯಾವಾಗ ಅಂಟಿಕೊಂಡಿತೋ ಗೊತ್ತಿಲ್ಲ. ನಿನ್ನ ಸಂಧಿಸಬಯಸುವ, ನಿನ್ನ ಪರಿಧಿಯೊಳಗೆ ಸೇರಬಯಸುವ ಎಲ್ಲವನ್ನೂ ಹಿಡಿದು ಕಟ್ಟಿಹಾಕಿ ಸಂತೆ ಸೇರಿಸಿ ನಿನ್ನ ತರ್ಕ, ವಿಶ್ಲೇಷಣೆಯ ಹರಿತವಾದ ಅಲಗಿನಿಂದ ತುಂಡು ತುಂಡು ಮಾಡಿ ವಿವರಿಸುವ ಚಟ ಯಾವಾಗಿನಿಂದ ಬೆಳೆಯಿತು? ಮುಗ್ಧ ಪ್ರಪಂಚದಿಂದ ಆಗತಾನೆ ಕಣ್ತೆರೆದ ಮೊಗ್ಗಿನ ಸೌಂದರ್ಯವನ್ನು ಮುಷ್ಠಿಯಲ್ಲಿ ಹಿಸುಕಿಯೇ ಪಡೆದುಕೊಳ್ಳಬೇಕು ಎಂಬ ತುಡಿತ ನಿನ್ನೊಳಗೇಕೆ ಹುಟ್ಟುತ್ತದೆ? ನಿನ್ನ ಈ ಚಟದಿಂದ ನಿನಗೇ ನೀನು ಮಾಡಿಕೊಂಡ ಅನಾಹುತಗಳು ಅವೆಷ್ಟಿವೆ ಎನ್ನುವುದು ನಿನ್ನ ಊಹೆಗಾದರೂ ಬಂದಿವೆಯಾ? ಜೀವಂತವಾಗಿ ನಿನ್ನೆದುರು ನಡೆದಾಡಿದ ಹಾರುವ ಹಕ್ಕಿಯಂತಹ ಯೇಸುವನ್ನು ನೀನು ಶಿಲುಬೆಗೆ ಹಾಕಿದೆ. ಆತನ ಪ್ರಾಣ ತೆಗೆದೆ. ಅನಂತರ ಆತನ ಶವವನ್ನಿಟ್ಟುಕೊಂಡು ಸಿಂಗಾರ ಶುರು ಮಾಡಿದೆ. ವಿವರಣೆ ಕೊಡಲು ಕುಳಿತುಕೊಂಡೆ. ಅಖಂಡವಾಗಿ ಬರೆಯುತ್ತಾ ಹೋದೆ. ಲಕ್ಷಾಂತರ ಮಂದಿಯನ್ನು ಪ್ರಭಾವಿಸುತ್ತಾ ಹೋದೆ. ಆದರೇನು ಮಾಡುವುದು? ನಿನ್ನ ಒರಟು ಮುಷ್ಠಿಯ ಬಿರುಸಿಗೆ ಯೇಸು ಎಂಬ ಹೂವು ಎಂದೋ ಮುರುಟಿಹೋಗಿತ್ತು. ನೀನು ಮಾತ್ರ ಇಂದಿಗೂ ಆ ಹಕ್ಕಿಯ ಶವದೆದುರು ಹಬ್ಬದ ಊಟ ಮಾಡುತ್ತಿರುವೆ, ಪಾಂಡಿತ್ಯದ ಪ್ರದರ್ಶನ ಮಾಡುತ್ತಿರುವೆ. ಪಾಪ!
ನನ್ನ ಬುದ್ಧಿವಂತ ಗೆಳೆಯನೇ ಆಪ್ತವಾದ ಒಂದು ಸಲಹೆಯನ್ನು ಕೊಡುತ್ತೇನೆ ಕೇಳು… ಈ ಭಾಷೆ, ಹೆಸರುಗಳ ನಾಮಕರಣ, ಚರ್ಚೆ, ಪಾಂಡಿತ್ಯ, ತರ್ಕ, ಪ್ರಯೋಗ, ವಿವಾದ, ವಿಚಾರ, ಪುಸ್ತಕ, ಗುಂಪುಗಾರಿಕೆ, ಶಕ್ತಿ ಪ್ರದರ್ಶನ ಇವೆಲ್ಲಾ ನೀನು ಕಟ್ಟಿಕೊಂಡಿರುವ ಕೋಟೆಗಳು ಕಣೋ. ಇದಕ್ಕಿಂತ ಹೆಚ್ಚಿನ ದುರದೃಷ್ಟದ ಸಂಗತಿಯೆಂದರೆ, ಇವನ್ನೆಲ್ಲಾ ನೀನು ನಿನ್ನ ಸುತ್ತಲೇ ಕಟ್ಟಿಕೊಳ್ಳುತ್ತಾ ಬಂದಿದ್ದೀಯ. ಈ ಕೋಟೆಯೊಳಗೆ ನಿನ್ನೊಬ್ಬನನ್ನು ಬಿಟ್ಟು ಎಲ್ಲವನ್ನೂ ನೀನು ಪರಕೀಯವಾಗಿ ಕಾಣುತ್ತೀಯ. ಈ ಕೋಟೆಯೇನು ಸಾಮಾನ್ಯವಾದದ್ದಲ್ಲ, ನಿನ್ನ ಬಿಟ್ಟು ಉಳಿದೆಲ್ಲವನ್ನೂ ಅವು ನಿನ್ನ ಅನುಭೂತಿಗೆ ನಿಲುಕದ ಹಾಗೆ ಮಾಡಿಬಿಡುತ್ತವೆ. ಆದರೂ ನನ್ನಂಥವರಿಗೆ ಆಶಾವಾದ ಅಳಿಯುವುದಿಲ್ಲ. ನಿನ್ನ ಕೋಟೆಗೆ ಎಷ್ಟೇ ಗಡುಸಾದ ಗೋಡೆಯನ್ನು ಕಟ್ಟಿಸಿಕೊಂಡಿರು, ನಾನು ಸಣ್ಣ ಬಿಲ ಕೊರೆದುಕೊಂಡು ಕಳ್ಳನ ಹಾಗೆ ಒಳ ನುಸುಳಿಬಿಡುತ್ತೇನೆ. ನಿನ್ನ ಕೋಟೆಗೆ ಎಷ್ಟೇ ಬಾಗಿಲುಗಳನ್ನು ಹಾಕಿಸಿಕೊಂಡಿರು, ನಾನು ಎಲ್ಲಾ ಬಾಗಿಲುಗಳನ್ನು ನುಚ್ಚುನೂರು ಮಾಡಿಕೊಂಡು ಪ್ರವಾಹದ ಹಾಗೆ ಒಳನುಗ್ಗುತ್ತೇನೆ. ನೀನು ಎಷ್ಟೇ ಬಲಿಷ್ಠವಾದ ಉಕ್ಕಿನ ಕವಚ ತೊಟ್ಟು ಅದರೊಳಗೆ ಅವಿತಿರು, ನನ್ನ ಶಾಖದೆದುರು ಆ ಕವಚ ಕರಗಿ ನೀರಾಗದಿದ್ದರೆ ಕೇಳು. ನೀನು ಎಷ್ಟೇ ಎತ್ತರಕ್ಕೆ, ನಿಲುಕದ ಎತ್ತರಕ್ಕೆ ಹೋಗಿ ಕುಳಿತುಕೋ ನಾನು ನೀನು ಉಸಿರಾಡುವ ಗಾಳಿಯ ಹಾಗೆ ನಿನ್ನ ಅರಿವಿಗೇ ಬರದ ಹಾಗೆ ನಿನ್ನ ವ್ಯಾಪಿಸಿಕೊಂಡಿರುತ್ತೇನೆ. ಇಷ್ಟೆಲ್ಲಾ ಕಷ್ಟ ಪಟ್ಟು ನಾನು ನಿನ್ನ ಬಳಿ ಬಂದು ‘ಇಗೋ ನಾನೇ ಬಂದಿರುವೆ. ನಾನೇ ಪ್ರೀತಿ‘ ಎಂದು ನಿಂತರೂ ನೀನು ನಿನ್ನ ಕಣ್ಣುಗಳಿಗೆ ಕಪ್ಪು ಗಾಜು ಅಡ್ಡ ಇಟ್ಟುಕೊಂಡು ‘ಪ್ರೀತಿ ಎಂದರೇನು? ಪ್ರೀತಿ ಇರುವುದು ಹೇಗೆ?’ ಅಂತ ಪ್ರಶ್ನಿಸಿಕೊಳ್ಳುತ್ತೀಯ. ಅನಂತರ ನೀನೇ ‘ಪ್ರೀತಿಯೆಂಬುದು ಮಾಯೆ, ಪ್ರೀತಿಯೆಂಬುದು ವಂಚನೆ, ಪ್ರೀತಿ ಕುರುಡು, ಪ್ರೀತಿ ಅಗೋಚರ, ಪ್ರೀತಿ….’ ಎಂದು ಸಾಲು ಸಾಲುಗಟ್ಟಲೆ ಬರೆಯುತ್ತಾ ಹೋಗುತ್ತೀಯ. ನೀನೇ ಸೃಷ್ಟಿಸಿಕೊಂಡ ಪ್ರಶ್ನೆಗಳಿಗೆ ನೀನೇ ಉತ್ತರ ಕಂಡುಕೊಳ್ಳುತ್ತೀಯ. ನಿನ್ನ ಪ್ರಶ್ನೆಗೂ ಉತ್ತರಕ್ಕೂ ಸಂಬಂಧಿಸಿರದ ನನ್ನನ್ನು ಅನಾಥವಾಗಿ ಬಿಟ್ಟು ದೂರ ದೂರಕ್ಕೆ ನನ್ನ ಹುಡುಕುತ್ತಾ ಹೊರಟು ಹೋಗುತ್ತೀಯ.
ಇನ್ನು ಪತ್ರವನ್ನು ಮುಗಿಸಬೇಕು. ಮತ್ತೆ ನಿನ್ನದು ಅದೇ ಚಾಳಿ, ‘ಸರಿ, ಕೊನೆಗೆ ಹೇಳಿ ಬಿಡು ನೀನು ಯಾರು‘ ಅಂತ ಬಲವಂತ ಮಾಡ್ತಿದ್ದೀಯ. ಪ್ರತಿ ಪತ್ರಕ್ಕೂ ನಿನಗೆ ಉಪಸಂಹಾರ ಬೇಕು. ಎಲ್ಲಾ ಪ್ರಶ್ನೆಗಳಿಗೆ ನಿನಗೆ ಉತ್ತರಗಳು ಬೇಕು. ಪ್ರತೀ ಉತ್ತರಗಳಿಗೆ ನಿನ್ನಲ್ಲಿ ಮತ್ತಷ್ಟು ಪ್ರಶ್ನೆಗಳು ಹುಟ್ಟಬೇಕು. ಆ ಪ್ರಶ್ನೆಗಳ ಬೆನ್ನ ಮೇಲೆ ಏರಿ ಉತ್ತರದ ಮಾಯಾ ಮೃಗವನ್ನು ಅಟ್ಟಿಕೊಂಡು ನುಗ್ಗುತ್ತೀಯ. ನಾನು ನಿನ್ನ ಹಿಂದೇ, ನಿನ್ನ ಒಳಗೇ ನಿನ್ನ ಒಂದೇ ಒಂದು ಕ್ಷಣದ ಮೌನಕ್ಕಾಗಿ, ಒಂದೇ ಒಂದು ಹಿನ್ನೋಟಕ್ಕಾಗಿ ಕಾಯುತ್ತಾ ನಿಂತಿರುತ್ತೇನೆ ಅನಾಥವಾಗಿ!
ಇಂತಿ ನಿನ್ನ,
ಪ್ರೀತಿ
ನಿಮ್ಮದೊಂದು ಉತ್ತರ