ಕಲರವ

Archive for ಮಾರ್ಚ್ 2009

‘ಇನ್ನು ಸಾಧ್ಯವಾಗುವುದಿಲ್ಲ’ ಎನ್ನುವ ಷರಾದೊಂದಿಗೆ ನಾನು ನನ್ನ ಮತ್ತೊಂದು ಹುಂಬತನವನ್ನು ಕೊನೆಗಾಣಿಸಬೇಕಿದೆ.

ಸುಮಾರು ಎರಡು ವರ್ಷಗಳಿಂದ ಕುಂಟುತ್ತಲೋ, ತೆವಳುತ್ತಲೋ ನಡೆಯುತ್ತಿದ್ದ ನಮ್ಮ ಪತ್ರಿಕೆಯನ್ನು ಅಧಿಕೃತವಾಗಿ ಮುಚ್ಚುವ ಸಮಯ ಬಂದಾಗಿದೆ. ಇಷ್ಟು ದಿನ ನಾನಾ ಕಷ್ಟಗಳು, ತಾಪತ್ರಯಗಳ ನಡುವೆ ಹೇಗೋ ‘ಸಡಗರ’ವನ್ನು ನಡೆಸಿಕೊಂಡು ಬರುತ್ತಿದ್ದೆವು. ಆದರೆ ಈಗ ನಾವು ಡೆಡ್ ಎಂಡ್ ತಲುಪಿದ್ದೇವೆ. ಎಲ್ಲಾ ವಿಧದಲ್ಲೂ ಹೈರಾಣಾಗಿದ್ದೇವೆ. ಆರ್ಥಿಕವಾಗಿ ಕುಗ್ಗಿಹೋಗಿದ್ದೇವೆ, ಉತ್ಸಾಹವೂ ಬತ್ತಿ ಹೋಗಿದೆ. ಈ ಸಂದರ್ಭದಲ್ಲಿ ನಮ್ಮ ಕನಸಿನ ಸಮಾಧಿಯನ್ನು ಶಾಸ್ತ್ರೋಕ್ತವಾಗಿ ನೆರವೇರಿಸುವುದೊಂದೇ ಬಾಕಿ ಉಳಿದಿರುವುದು. ಈಗದನ್ನು ಮಾಡುತ್ತಿರುವೆ.

ಝೆರಾಕ್ಸಿನಿಂದ ಶುರುವಾಗಿ ಸಾವಿರ ಪ್ರತಿ ಪ್ರಸಾರದ ಪತ್ರಿಕೆಯಾಗಿ ಬೆಳೆದ ‘ಸಡಗರ’ ಈ ಚಿಕ್ಕ ಸಾಧನೆಗೆ ಕಾರಣಕರ್ತರಾದ ನಮ್ಮ ಓದುಗರನ್ನು ನಾವು ಅಭಿನಂದಿಸುತ್ತೇವೆ. ಇಷ್ಟು ದಿನ ನಮಗೆ ಅಕಾರಣ ಪ್ರೀತಿ ತೋರಿದ ಎಲ್ಲಾ ಚಂದಾದಾರರಿಗೂ, ಪ್ರಿಯ ಓದುಗರಿಗೂ ನಮ್ಮ ನಮನ.

ಇನ್ನು ನನ್ನ ಈ ಕನಸನ್ನು ತಮ್ಮ ಕೂಸೆಂದು ಭಾವಿಸಿ ಸಾಕಿ ಸಲುಹಿದ ನನ್ನ ಗೆಳೆಯರ ಬಳಗಕ್ಕೆ ನಾನು ಚಿರಋಣಿಯಾಗಿರುವೆ. ಅವರ ಬೆಂಬಲ, ನಿರಂತರ ಪ್ರೋತ್ಸಾಹ ಇರದಿದ್ದರೆ ನನ್ನ ಈ ಪತ್ರಿಕೆಯ ಕನಸು ನನ್ನ ಇತರೆ ನೂರಾರು ಕನಸುಗಳಂತೆ ಕತ್ತಲೆಯ ಲೋಕದ ದಾರಿ ಹಿಡಿಯುತ್ತಿದ್ದವು. ಈ ಪತ್ರಿಕೆಯ ಅಭಿವೃದ್ಧಿಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನೆರವಾದ ಎಲ್ಲಾ ಗೆಳೆಯರಿಗೂ ನಾನು ಮನಸಾ ವಂದಿಸುವೆ.

ಪತ್ರಿಕೆಯ ಬ್ಲಾಗಿನ ಓದುಗರಾದ  ನಿಮ್ಮನ್ನು ಮರೆಯಲಾದೀತೇ? ನಿಮಗೂ ನಮ್ಮ ತಂಡದ ಪರವಾಗಿ ಕೃತಜ್ಞತೆಗಳು.

ಇನ್ನು ಮುಂದೆ ಈ ಬ್ಲಾಗಿನಲ್ಲಿ ಯಾವ ಬರಹಗಳೂ ಪ್ರಕಟವಾಗುವುದಿಲ್ಲ ಎಂದು ತಿಳಿಸಲು ವಿಷಾದಿಸುತ್ತೇವೆ. ನಿಮ್ಮ ಬೆಂಬಲ, ಸ್ನೇಹ, ಪ್ರೋತ್ಸಾಹಕ್ಕೆ ವಂದನೆಗಳು.

ಇಂತಿ,
ನಿಮ್ಮ ವಿಶ್ವಾಸಿ
ಸುಪ್ರೀತ್.ಕೆ.ಎಸ್
(ಸಂಪಾದಕ)
‘ಸಡಗರ’ ಮಾಸಪತ್ರಿಕೆ

ಕೆಲಸದ ಅರ್ಜಿಯನ್ನು ಗುಂಡ ಬಹಳ ಸಮಯದಿಂದ ಗುರಾಯಿಸುತ್ತಿದ್ದ.
ಯಾರ ಕಾಪಿಯನೂ ಮಾಡದೇ ಎಲ್ಲಾ ಜಾಗವನ್ನು ಪ್ರಥಮ ಸಲ ತುಂಬಿದ ಬಳಿಕ ಆತ್ಮವಿಶ್ವಾಸದ ನಂತರ ಇದೊಂದು ಪ್ರಶ್ನೆ ತೀವ್ರವಾಗಿ ತಲೆ(?!) ತಿನ್ನುತಿತ್ತು.
ಬಹಳ ಅಲೋಚಿಸಿದ ಬಳಿಕ ಸ್ಯಾಲರಿ ಎಕ್ಸ್ಪ್ ಪೆಕ್ಟೆಡ್ ಎದುರು ಕೊನೆಗೂ ಯೆಸ್ ಅಂತ ಬರೆದ.

ತಲೆಗೆ ಹುಳ!

ಕುಟುಂಬವೊಂದರಲ್ಲಿ ಪ್ರತಿಯೊಂದು ಮಗುವಿಗೂ ಕನಿಷ್ಠ ನಾಲ್ಕು ಮಂದಿ ಸಹೋದರರೂ, ನಾಲ್ಕು ಮಂದಿ ಸಹೋದರಿಯರೂ ಇದ್ದಾರೆಂದರೆ ಆ ಕುಟುಂಬದಲ್ಲಿ ಅತಿ ಕಡಿಮೆ ಎಂದರೆ ಎಷ್ಟು ಮಂದಿ ಮಕ್ಕಳಿರುತ್ತಾರೆ?
(ಉತ್ತರ: ಹತ್ತು )

ಪ್ರತಿ ಪ್ರತಿಭಾಶಾಲಿಗೂ ಒಂದು ರೀತಿಯ ಮನೋವೈಕಲ್ಯವಿರುತ್ತದೆ.
ಆತನ ಕೃತಿಗಳು ಅದೇ ರೀತಿಯ ವೈಫಲ್ಯವಿರುವವರಿಗೆ ಮೆಚ್ಚಿಗೆ ಆಗುತ್ತದಂತೆ.
ಆ ಪ್ರತಿಭಾಶಾಲಿ ಅದೃಷ್ಟವಂತನಾಗಿದ್ದರೆ ಅದೇ ರೀತಿಯ ವೈಕಲ್ಯದಿಂದ ನರಳುವವರ ಸಂಖ್ಯೆ ಲಕ್ಷಾಂತರ.
– ಮ್ಯಾಕ್ಸ್ ನಾರ್ಡೋ

ಚಾಣಾಕ್ಯ ಉವಾಚ

ಮನುಷ್ಯ ಹುಟ್ಟುವುದು ಒಬ್ಬಂಟಿಯಾಗಿ, ಸಾಯುವುದು ಒಬ್ಬಂಟಿಯಾಗಿ. ಒಬ್ಬಂಟಿಯಾಗಿಯೇ ಆತ ತನ್ನ ಕರ್ಮದ ಫಲ ಉಣ್ಣುತ್ತಾನೆ. ಒಬ್ಬಂಟಿಯಾಗಿಯೇ ಸ್ವರ್ಗಕ್ಕೆ ಅಥವಾ ನರಕಕ್ಕೆ ಹೋಗುತ್ತಾನೆ.

ಪ್ರೀತಿ ಪ್ರೇಮ ಪ್ರಣಯ

ಮದುವೆಯನ್ನು ಗಟ್ಟಿಯಾಗಿರಿಸುವ ಅತಿ ಮುಖ್ಯ ಮಾತು: ‘ಇವತ್ತು ಅಡಿಗೆ ನಾನು ಮಾಡ್ತೀನಿ.’
        ಅನಾಮಿಕ

ಗಂಡಸು ಬದಲಾಗಬಹುದು ಎಂದುಕೊಂಡು ಹೆಂಗಸು,
ಹೆಂಗಸು ಬದಲಾಗಲಾರಳು ಎಂದುಕೊಂಡು ಗಂಡಸು
ಮದುವೆಯಾಗುತ್ತಾರೆ.
ಆದರೆ ಇಬ್ಬರಿಗೂ ನಿರಾಶೆ ಕಟ್ಟಿಟ್ಟ ಬುತ್ತಿ.
-ಆಲ್ಬರ್ಟ್ ಐನ್‍ಸ್ಟೈನ್

Remember, beneath every cynic there lies a romantic, and probably an injured one.
— Glenn Beck

ನಿನ್ ಕಥೆ ಮುಗೀತು!

ಕಡು ನಾಸ್ತಿಕನೊಬ್ಬ ಅಮೇಜಾನಿನ ದಟ್ಟ ಕಾಡುಗಳಲ್ಲಿ ಅಲೆಯುತ್ತಿದ್ದ. ಅಕಸ್ಮಾತಾಗಿ ನೂರಾರು ಮಂದಿಯಿದ್ದ ‘ನರ ಭಕ್ಷಕ’ ಕಾಡು ಜನರ ಮಧ್ಯೆ ಸಿಕ್ಕಿ ಬಿದ್ದ.
ನೂರಾರು ಮಂದಿ ಕ್ರೂರ ಕಾಡು ಜನರನ್ನು ಕಂಡು ನಾಸ್ತಿಕನ ಜಂಗಾ ಬಲವೇ ಉಡುಗಿ ಹೋಯ್ತು. ತನಗೆ ತಾನೇ ತಣ್ಣಗಿನ ಸ್ವರದಲ್ಲಿ ಹೇಳಿಕೊಂಡ, “ಓ ದೇವರೆ, ಇನ್ನು ನನ್ನ ಕಥೆ ಮುಗೀತು!”.
ಆತನ ಕಿವಿಯಲ್ಲಿ ಧ್ವನಿಯೊಂದು ಅನುರಣಿಸಿತು, “ಇಲ್ಲ ಕಥೆ ಮುಗಿದಿಲ್ಲ. ಈಗ ನಿನ್ನೆದುರು ಇರುವ ಕಲ್ಲನ್ನು ತೆಗೆದುಕೊಂಡು ಆ ಮುಖಂಡನ ತಲೆಗೆ ಹೊಡಿ.”
ನಾಸ್ತಿಕ ಕಲ್ಲು ಬೀರಿದ. ಕಲ್ಲೇಟು ತಿಂದ ಮುಖಂಡ ನೆಲಕ್ಕುರುಳಿದ. ನೂರಾರು ಮಂದಿಯ ಗುಂಪು ಹಲ್ಲು ಮಸೆಯುತ್ತಾ ಇವನ ಬಳಿಗೆ ಧಾವಿಸಿದರು.
ದೇವರ ಧ್ವನಿ ಮತ್ತೆ ಮೊಳಗಿತು, “ಹುಂ, ಈಗ ನಿನ್ನ ಕಥೆ ಮುಗೀತು!”

‘ರಿಸೆಶನ್ ಬಿಸಿ ನಿಮಗೂ ತಟ್ಟಿತಾ’ ಎಂದು ಉಡಾಫೆ ಮಾಡಿದರು ಕೆಲವರು. ದೊಡ್ಡ ದೊಡ್ಡ ಕಂಪೆನಿಗಳೆಲ್ಲ ತಮ್ಮ ಉದ್ಯೋಗಿಗಳು ಕುಡಿಯುವ ನೀರು, ಬಳಸುವ ಟಿಶ್ಯು ಪೇಪರುಗಳಲ್ಲೆಲ್ಲಾ ಉಳಿತಾಯ ಮಾಡುತ್ತ ಈ ಕಷ್ಟದ ದಿನಗಳಲ್ಲಿ ಜೀವವನ್ನುಳಿಸಿಕೊಳ್ಳಲು ಹೋರಾಡುತ್ತಿರುವಾಗ ನಾವು ಪತ್ರಿಕೆಯ ಗಾತ್ರವನ್ನು ಅರ್ಧಕ್ಕಿಳಿಸಿದ್ದು ಅನೇಕರಲ್ಲಿ ಈ ಭಾವನೆ ಹುಟ್ಟಿಸಿದೆ. ನಿಜಕ್ಕೂ ಪತ್ರಿಕೆಯೊಂದರ ನಿರ್ವಹಣೆ ಎಷ್ಟು ಕಷ್ಟದ್ದು ಎಂಬುದರ ಅರಿವು ಈಗಾಗುತ್ತಿದ್ದೆ. ಎಲ್ಲವೂ ಸರಿಯಾಗಿ ನಡೆಯುತ್ತಿದ್ದಾಗ ಕೆಲಸಗಳು ಬೆಣ್ಣೆಯಿಂದ ಕೂದಲು ತೆಗೆದಷ್ಟು ಸಲೀಸಾಗಿ ನಡೆದುಹೋಗುತ್ತವೆ. ಆದರೆ ಒಂದೊಂದೇ ಲೋಪ, ಅನನಕೂಲ ಎದುರಾದ ಹಾಗೆ ಕೆಲಸ ಮುಳ್ಳಿನ ಮೇಲಿನ ನಡಿಗೆಯಾಗುತ್ತದೆ.

ಏನೇ ಆದರೂ ಪತ್ರಿಕೆಯ ಪ್ರಯತ್ನಕ್ಕೆ ಅಂತ್ಯ ಹಾಡುವುದು ಬೇಡ. ದೊಡ್ಡ ಪ್ರಮಾಣದಲ್ಲಿ ಸಾಧ್ಯವಾಗದಿದ್ದರೆ ಸಣ್ಣದಾಗಿ, ಸಾವಿರ ಮಂದಿಯನ್ನು ತಲುಪಲು ಸಾಧ್ಯವಾಗದಿದ್ದರೆ ನೂರೇ ಮಂದಿಯನ್ನು ತಲುಪುವ ಗುರಿ ಇಟ್ಟುಕೊಳ್ಳೋಣ ಎಂದು ಆಲೋಚಿಸಿ ನಮ್ಮನ್ನು ನಾವು ಹುರಿದುಂಬಿಸಿಕೊಂಡಿದ್ದೇವೆ. ಅದರ ಫಲವಾಗಿ ನಿಮ್ಮೆದುರು ಈ ತಿಂಗಳ ಸಂಚಿಕೆ ಮೈತಳೆದು ನಿಂತಿದೆ.

ನಿಮ್ಮ ಸಲಹೆ, ಅಭಿಪ್ರಾಗಳಿಗೆ ಸದಾ ಸ್ವಾಗತವಿದೆ.


Blog Stats

  • 71,866 hits
ಮಾರ್ಚ್ 2009
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 1
2345678
9101112131415
16171819202122
23242526272829
3031  

Top Clicks

  • ಯಾವುದೂ ಇಲ್ಲ