ಕಲರವ

Archive for the ‘Uncategorized’ Category

– ಸುಪ್ರೀತ್ ಕೆ. ಎಸ್, ಬೆಂಗಳೂರು.

ಪ್ರತಿನಿತ್ಯ ತಪ್ಪದೆ ಬ್ಲಾಗಿಗೆ ಬರೆಯಬೇಕು ಅಂದುಕೊಂಡಿದ್ದೆ. ಅದನ್ನೊಂದು ಸಾಧನೆ ಎನ್ನುವ ಹಾಗೆ ಭಾವಿಸಿದ್ದೆ. ಏಕೆ ದಿನನಿತ್ಯ ಬರೆಯಬೇಕು ಎಂದು ಕೇಳಿಕೊಳ್ಳುವ ತಾಳ್ಮೆ ಇರುತ್ತಿರಲಿಲ್ಲ. ಏನೋ ಉನ್ಮಾದ. ಬರೀ ಬೇಕು ಅನ್ನಿಸಿದ ತಕ್ಷಣ ಬರೆಯಲು ಶುರುಮಾಡಿಬಿಡಬೇಕು. ಏನಾದರೂ ಮಾಡಬೇಕೆಂಬ ಹುಮ್ಮಸ್ಸು ಹುಟ್ಟಿದಾಗ ದೊಡ್ಡವರು ಅದರ ಇಹಪರಗಳ ಬಗ್ಗೆ ಯೋಚಿಸಿ ಮಾಡು ಎಂದಾಗ ಹುಟ್ಟುವ ರೇಜಿಗೆಯನ್ನೇ ನಮ್ಮನ್ನು ನಾವು ನಿಧಾನಿಸಲು ಪ್ರಯತ್ನಿಸಿದಾಗ ಎದುರಿಸಬೇಕಾಗುತ್ತದೆ. ಈ ಹದಿ ವಯಸ್ಸಿನಲ್ಲಿ ಯಾವಾಗಲೂ ವಿವೇಕಕ್ಕಿಂತ ಸಂಕಲ್ಪಶಕ್ತಿ, ಕ್ರಿಯಾಶೀಲತೆಯೇ ಹೆಚ್ಚಾಗಿರುತ್ತದೆಯೇನೋ! ಹಾಗಾಗಿ ನಾನು ಉಕ್ಕುವ ಉತ್ಸಾಹಕ್ಕೆ ಬ್ರೇಕ್ ಹಾಕುವ ಯಾವ ಪ್ರಯತ್ನವನ್ನೂ ಮಾಡುವುದಿಲ್ಲ. ಆದರೆ ಆ ಕೆಲಸವನ್ನು ನನ್ನ ಸೋಮಾರಿತನ, ಅಶಿಸ್ತುಗಳು ನಿರ್ವಹಿಸುವುದರಿಂದ ನನಗೆ ಹೆಚ್ಚಿನ ಹಾನಿಯೇನೂ ಆಗಿಲ್ಲ!

ಪ್ರತಿದಿನ ಬ್ಲಾಗು ಬರೆಯಬೇಕು ಎಂಬುದರ ಹಿಂದೆ ಕೇವಲ ಬರಹದ ಪ್ರಮಾಣದ ಮೇಲಿನ ಮೋಹ ಕೆಲಸ ಮಾಡುತ್ತಿತ್ತು. ನನ್ನನ್ನು ಪ್ರಭಾವಿಸಿದ ಪತ್ರಕರ್ತನ ಹಾಗೆ ದಿನಕ್ಕಷ್ಟು ಪುಟ ಬರೆಯಬೇಕು, ವಾರಕ್ಕೆ ಇಷ್ಟು ಓದಬೇಕು ಎಂಬ ಅನುಕರಣೆಯ ಗುರಿಗಳನ್ನು ನನ್ನೆದುರು ಇರಿಸಿಕೊಂಡಿದ್ದೆ. ನನ್ನದಲ್ಲದ ಗುರಿಯೆಡೆಗೆ ಓಡುವ ಧಾವಂತ ಪಡುತ್ತಿದ್ದೆ. ನನ್ನದಲ್ಲದ ಹಸಿವಿಗೆ ಊಟ ಮಾಡುವ, ನನ್ನದಲ್ಲದ ಹೊಟ್ಟೆನೋವಿಗೆ ಔಷಧಿ ಕುಡಿಯುವ ಹುಂಬತನದ ಅರಿವೇ ಆಗಿರಲಿಲ್ಲ. ಒಬ್ಬ ಕವಿಯನ್ನೋ, ಲೇಖಕನನ್ನೋ, ಕಥೆಗಾರನನ್ನೋ, ಸಿನೆಮಾ ನಿರ್ದೇಶಕನನ್ನೋ, ಹೀರೋವನ್ನೋ ಪ್ರಾಣ ಹೋಗುವಷ್ಟು ಗಾಢವಾಗಿ ಪ್ರೀತಿಸುವುದು, ಆರಾಧಿಸುವುದು, ಅನುಕರಣೆಯಲ್ಲಿ ಸಾರ್ಥಕ್ಯವನ್ನು ಕಂಡುಕೊಳ್ಳುವುದು, ಅನಂತರ ಸ್ವಂತಿಕೆ ಕಳೆದುಕೊಂಡ ಅಭದ್ರತೆ ಕಾಡಿದಾಗ ಆ ಪ್ರೇರಣೆಯ ಮೂಲವನ್ನೇ ದ್ವೇಷಿಸಲು ತೊಡಗುವುದು ಇದೆಲ್ಲಾ ಯಾಕೆ ಬೇಕು? ಆದರೆ ಈ ಅರಿವು ಒಂದು ಅಚ್ಚಿನಲ್ಲಿ ಮೌಲ್ಡ್ ಆಗುವಾಗಿನ ಸುಖವನ್ನು, ಐಶಾರಾಮವನ್ನು ಅನುಭವಿಸುವಾಗ ಉಂಟಾಗುವುದಿಲ್ಲ. ಅದೇ ತಮಾಷೆಯ ಹಾಗೂ ದುರಂತದ ಸಂಗತಿ.

ವಿಪರೀತ ಬರೆಯಬೇಕು ಅನ್ನಿಸುವುದು ಸಹ ತುಂಬಾ ಮಾತಾಡಬೇಕು ಅನ್ನಿಸುವುದುರ ತದ್ರೂಪು ಭಾವವಾ? ಮಾತು ಹೇಗೆ ಚಟವಾಗಿ ಅಂತಃಸತ್ವವನ್ನು ಕಳೆದುಕೊಂಡು ಕೇವಲ ಶಬ್ಧವಾಗಿಬಿಡಬಲ್ಲುದೋ ಹಾಗೆಯೇ ಬರವಣಿಗೆಯು ಬರಡಾಗಬಲ್ಲದಾ? ವಿಪರೀತ ಬರೆಯಬೇಕು ಎಂದು ತೀರ್ಮಾನಿಸಿದವರು ವಾಚಾಳಿಯಾಗಿಬಿಡಬಲ್ಲರಾ? ಮನಸ್ಸಲ್ಲಿ ಕದಲುವ ಪ್ರತಿ ಭಾವವನ್ನೂ ಅಕ್ಷರಕ್ಕಿಳಿಸಿಬಿಡುವ, ಆ ಮೂಲಕ ತೀರಾ ಖಾಸಗಿಯಾದ ಭಾವವನ್ನು ಪ್ರದರ್ಶನದ ‘ಕಲೆ’ಯಾಗಿಸಿಬಿಡುವುದು ಒಳ್ಳೆಯದಾ? ಇವೆಲ್ಲಕ್ಕೂ ಉತ್ತರವನ್ನೂ ಸಹ ಅಕ್ಷರದ ಮೂಲಕವೇ ಕೇಳಿಕೊಳ್ಳುವ ಅನಿವಾರ್ಯತೆ ಇರುವುದು ನಮ್ಮ ಪರಿಸ್ಥಿತಿಯ ವ್ಯಂಗ್ಯವಲ್ಲವೇ? ನಮ್ಮೊಳಗಿನ ದನಿಗೆ ಅಭಿವ್ಯಕ್ತಿಕೊಡುವ ಮಾಧ್ಯಮವೂ ಕೂಡ ನಮ್ಮ ಚಟವಾಗಿಬಿಡಬಹುದೇ? ಅಕ್ಷರಗಳ ಮೋಹ ನಮ್ಮೊಳಗಿನ ದನಿಯನ್ನು ನಿರ್ಲಕ್ಷಿಸಿಬಿಡುವ ಅಪಾಯವಿದೆಯೇ? ಅಥವಾ ಇವೆಲ್ಲಕ್ಕೂ ಮನ್ನಣೆ, ಪ್ರಸಿದ್ಧಿ, ಹೆಸರುಗಳೆಂಬ ವಿಷಗಳು ಸೇರಿಕೊಂಡು ಬಿಟ್ಟಿವೆಯೇ?

ತುಂಬಾ ಬರೆಯುತ್ತಾ, ಯಾವಾಗಲೋ ಒಮ್ಮೆ ನಾನು ವಿಪರೀತ ವಾಚಾಳಿಯಾಗಿಬಿಟ್ಟೆನಾ ಅನ್ನಿಸತೊಡಗುತ್ತದೆ. ಅದರಲ್ಲೂ ಈ ಬ್ಲಾಗ್ ಬರಹಗಳಲ್ಲಿ ನನ್ನ ವೈಯಕ್ತಿಕ ಅನುಭವ, ವಿಚಾರ, ತಳಮಳಗಳನ್ನೇ ದಾಖಲಿಸುತ್ತಾ ಕೆಲವೊಮ್ಮೆ ನಾನು ಬರೀ ಮಾತುಗಾರನಾಗಿಬಿಟ್ಟೆನಾ ಎಂಬ ಭಯವಾಗುತ್ತದೆ. ನನ್ನ ಓದು ನಿಂತುಹೋಗಿಬಿಟ್ಟಿತಾ ಎಂಬ ಆತಂಕ ಕಾಡುತ್ತದೆ. ಈ ಸಕಲ ವ್ಯವಹಾರಗಳಿಗೂ ತಿಲಾಂಜಲಿಯಿತ್ತು ಕೆಲಕಾಲ ಎಲ್ಲಾದರೂ ಅಡಗಿಕೊಂಡು ಬಿಡಲಾ ಅನ್ನಿಸುತ್ತದೆ. ಬರೆಯುವುದನ್ನೆಲ್ಲಾ ಬಿಟ್ಟು ಓ ಹೆನ್ರಿಯ ಕಥೆಯಲ್ಲಿನ ಪಾತ್ರದ ಹಾಗೆ ಒಬ್ಬಂಟಿ ಕೋಣೆಯಲ್ಲಿ ಓದುತ್ತಾ, ಚಿಂತಿಸುತ್ತಾ, ಧ್ಯಾನಿಸುತ್ತಾ ಬದುಕು ಕಳೆದುಬಿಡಲಾ ಎನ್ನಿಸುತ್ತದೆ. ಹೀಗೆ ಬರೆಯುತ್ತಲೇ ಇದ್ದರೆ ನನ್ನ ತಿಳುವಳಿಕೆ, ಜ್ಞಾನ ಸೀಮಿತವಾಗಿಬಿಡುತ್ತದಾ ಎನ್ನಿಸುತ್ತದೆ. ಈ ಬಗೆಯ ಭಾವಗಳು ಕಾಡಿದಾಗ ಒಂದಷ್ಟು ದಿನ ಬ್ಲಾಗು ಬರೆಯುವುದನ್ನು ನಿಲ್ಲಿಸಿಬಿಟ್ಟಿದ್ದೇನೆ. ನಾವು ಗೆಳೆಯರು ನಡೆಸುತ್ತಿರುವ ಈ ಪತ್ರಿಕೆಗೆ ರಾಜೀನಾಮೆ ಕೊಟ್ಟುಬಿಟ್ಟಿದ್ದೇನೆ. ಒಂದೆರಡು ತಿಂಗಳು ಅದರಿಂದ ದೂರವಾಗಿಬಿಟ್ಟಿದ್ದೇನೆ. ಮತ್ತೆ ಅದನ್ನು ಅಪ್ಪಿಕೊಂಡಿದ್ದೇನೆ.

ಪರಿಸ್ಥಿತಿ ಬದಲಾಯಿಸಿತಾ? ಬ್ಲಾಗು ಬರೆಯುವುದನ್ನು ಬಿಟ್ಟಾಗ ನನಗೆ ತೃಪ್ತಿ ಸಿಕ್ಕಿತಾ? ಸಮಾಧಾನ ಎನ್ನುವುದು ಸಿಕ್ಕಿತಾ? ನನ್ನನ್ನು ನಾನು ನಿರಂತರವಾದ ಓದಿಗೆ, ಅಧ್ಯಯನಕ್ಕೆ ತೊಡಗಿಸಿಕೊಳ್ಳಲು ಸಾಧ್ಯವಾಯಿತಾ? ಖಂಡಿತಾ ಇಲ್ಲ. ಓದು ಅನ್ನೋದು ತೀರಾ ಖಾಸಗಿಯಾದ ಕ್ರಿಯೆಯೇ ಆದರೂ ಅದರಲ್ಲಿ ದೊರೆಯುವ ಸಂತೋಷವನ್ನು, ನಾನು ಕಂಡುಕೊಂಡ ಸಂಗತಿಗಳನ್ನು, ಅನುಭವಿಸಿದ ಬೆರಗನ್ನು ಹಂಚಿಕೊಳ್ಳಬೇಕು ಎನ್ನುವ ಹಂಬಲವನ್ನು ಹತ್ತಿಕ್ಕಲು ಸಾಧ್ಯವಾಗುವುದಿಲ್ಲ. ಬರೆಯುವಾಗ ನಾನು ಅದುವರೆಗೂ ಆಲೋಚಿಸಿರದಿದ್ದ ಅನೇಕ ಒಳನೋಟಕಗಳು ದಕ್ಕಿದಂತಾಗಿ ಪುಳಕಗೊಳ್ಳುವ ಸುಖವನ್ನು ಬಿಡಲು ಸಾಧ್ಯವಾಗುವುದಿಲ್ಲ. ಸೃಜನಶೀಲತೆಯಲ್ಲಿ ಸಿಕ್ಕುವ ಸಮಾಧಾನವನ್ನು ಕಳೆದುಕೊಂಡು ಇರುವುದು, ಪ್ರತಿದಿನ ರುಚಿ ರುಚಿಯಾಗಿ ತಿನ್ನುತ್ತಿದ್ದವನಿಗೆ ಒಮ್ಮೆಗೇ ಸಪ್ಪೆ ಊಟ ಹಾಕಲು ಶುರುಮಾಡಿದ ಹಾಗಾಗುತ್ತದೆ. ಬಹುಶಃ ಸ್ವಂತ ಅಭಿವ್ಯಕ್ತಿಗೆ, ನಮ್ಮವೇ ಆದ ಸೃಷ್ಠಿಗೆ ಯಾವ ಅವಕಾಶವನ್ನೂ ಕೊಡದೆ ಕೇವಲ ಹೊರಗಿನಿಂದ ಒಳಗೆ ಫೀಡ್ ಮಾಡಿಕೊಳ್ಳಬೇಕಾದ ನಮ್ಮ ಈ ಶಿಕ್ಷಣ ವ್ಯವಸ್ಥೆಯಿಂದಾಗಿ ಸಣ್ಣ ಸಣ್ಣ ಸೃಜನಶೀಲ ಕೆಲಸಗಳಲ್ಲೂ ಅಪಾರವಾದ ಖುಷಿ ಸಿಕ್ಕುತ್ತದೆಯೇನೋ! ಈ ಸಣ್ಣ ಖುಶಿ, ಅಹಂಕಾರಕ್ಕೆ ಸಿಕ್ಕುವ ಬೆಚ್ಚಗಿನ ಪ್ರೋತ್ಸಾಹಗಳನ್ನು ತೊರೆಯುವುದು ರಾಜಕಾರಣಿ ಕುರ್ಚಿಯ ಮೇಲಿನ ಆಸೆಯನ್ನು ಬಿಟ್ಟಂತೆಯೇ ಏನೋ! ಈ ನಮ್ಮ ಹಪಹಪಿಗೆ ಒಂದು ಗೌರವಯುತವಾದ ಸ್ಥಾನವಿದೆ ಆದರೆ ಅಧಿಕಾರದ ಮೇಲಿನ ಹಂಬಲಕ್ಕೆ ಅದಿಲ್ಲ ಅಷ್ಟೇ ವ್ಯತ್ಯಾಸ!

ಬ್ಲಾಗಿಂಗ್ ಕೂಡಾ ಚಟವಾಗುತ್ತಿದೆ ಎಂಬ ಇತ್ತೀಚಿನ ಕೆಲವು ಇಂಗ್ಲೀಷ್ ಪತ್ರಿಕೆಗಳ ವರದಿಗಳಲ್ಲಿನ ವೈಜ್ಞಾನಿಕ ಕಾರಣಗಳನ್ನು ಅವಲೋಕಿಸುವಾಗ ಇದೆಲ್ಲಾ ಹೊಳೆಯಿತು. ಆದರೆ ಇದನ್ನೆಲ್ಲಾ ಬರೆಯುತ್ತಾ ಹೋದಂತೆ ಹಲವು ಸಂಗತಿಗಳು ಸ್ಪಷ್ಟವಾಗುತ್ತಾ ಹೋದವು. ನಾವು ಬರೆಯುವುದು ನಮ್ಮೊಳಗೆ ಸ್ಪಷ್ಟತೆಯನ್ನು ಸ್ಥಾಪಿಸಿಕೊಳ್ಳುವುದಕ್ಕಾ?

– ಪ್ರಜ್ಞಾ, ಶಿವಮೊಗ್ಗ

“ಕವಿತೆಯೊಳಗಾ ಸೆಗೈಯು ಫಲಯಾವುದೇ
ಕೀರ್ತಿ – ನೆಗಳೆಯೆಂಬುದೆ ಫಲ ವಂ”
ಎಂಬ ಮಾತು ಅಕ್ಷರಶಃ ಸಾಕಾರಗೊಂಡಿದೆ, ಕುವೆಂಪುರವರ ಮಹಾರಸಋಷಿಯ ಮಹಾ ಬದುಕಿನಲ್ಲಿ ಸರಸ್ವತಿಯ ಕೃಪಾಕಟಾಕ್ಷದೊಂದಿಗೆ ಲಕ್ಷ್ಮಿಯ ಕೃಪಾಕಟಾಕ್ಷ ಅವರಿಗಿತ್ತು. ಅವರದು ಕವಿ ವ್ಯಕ್ತಿತ್ವ, ಯುಗ ಪ್ರವರ್ತಕ ವ್ಯಕ್ತಿತ್ವ, ‘ಋಷಿ ಅಲ್ಲದವನು ಕವಿಯಲ್ಲ’ ಎನ್ನುವ ಮಾತು ಅವರನ್ನು ನೋಡಿಯೇ ಹುಟ್ಟಿರಬೇಕು. ಕುವೆಂಪು ತಮ್ಮ ಕೃತಿಗಳೊಂದಿಗೆ ಯುಗವನ್ನು ಬರೆದಿರುವರು. ಯುಗ ಪ್ರವರ್ತಕರಾದ ಈ ಭೌಮ ವ್ಯಕ್ತಿತ್ವಕ್ಕೆ ಸಲ್ಲಿಸಿದ ನಮೋ ಭಾವದ ವಂದನೆ ಮಹಾಚೇತನ ಬೇಂದ್ರೆಯವರ ನುಡಿಯಲ್ಲಿ ಶ್ರವಣಿಸಬೇಕು:
“ಯುಗದ ಕವಿಗೆ ಜಗದ ಕವಿಗೆ
ಶ್ರೀರಾಮಾಯಣ ದರ್ಶನದಿಂದಲೇ ಕೈ
ಮುಗಿದ ಕವಿಗೆ ಮಣಿಯದವರು ಯಾರು”

ಶ್ರೀರಾಮಾಯಣ ದರ್ಶನಂ ಮಹಾಕಾವ್ಯದಂತಹ ಕೃತಿಯು ಜನಿಸುವುದು ಮುರಾರಿಯ ಕೃಪೆಯಿಂದ. ಎಂಥವನಾದರೂ ಈ ಕೃತಿಯ ಸತ್ವಕ್ಕೆ ಮಣಿಯಲೇ ಬೇಕು.

ಒಮ್ಮೆ ವಿನೋಬಾ ಭಾವೆಯರನ್ನು ಭೇಟಿಯಾಗಲು ಕುವೆಂಪುರವರು ಪಿರಿಯಾಪಟ್ಟಣಕ್ಕೆ ಹೋದಾಗ ಏನಾದರೂ ಆಶೀರ್ವಚನ ಬರೆದುಕೊಡುವಂತೆ ಬಿನ್ನವಿಸಿಕೊಂಡರು. ಆಗ ವಿನೋಬಾರವರು ನಗುತ್ತಾ ನಾನೇನು ಆಶೀರ್ವಚನ ಬರೆದುಕೊಡಲಿ? ನಾನು ಹೇಳಬಹುದಾದಂತದ್ದು ಹಾಗೂ ಹೇಳಲಾರದಂತದ್ದು ಎಲ್ಲವೂ ರಾಮಾಯಣ ದರ್ಶನದಲ್ಲಿಯೇ ಅಡಗಿದೆ. ಅಂಥ ಮಹಾಕಾವ್ಯದ ದಾರ್ಶನಿಕ ಕವಿಗೆ ಆಶೀರ್ವಚನವೇ? ಎಂದು ಹೇಳಿ ಶ್ರೀರಾಮಾಯಣ ದರ್ಶನದ ಹಿರಿಮೆಯನ್ನು ಎತ್ತಿ ಹೇಳಿದರು.

ಈ ಮಹಾಕಾವ್ಯದ ಯೋಜನೆ ಸಿದ್ಧವಾದ ಬಗೆಯನ್ನು ಕುರಿತು ಕುವೆಂಪುರವರು ಹೇಳಿದ ಬಗೆ ಹೀಗೆ. “ ‘ಪ್ಯಾರಡೈಸ್ ಲಾಸ್ಟ್’ ಓದಿದ ನಂತರ ಅದರಲ್ಲಿನ ಛಂದಸ್ಸು ನನ್ನನ್ನು ಸಮ್ಮೋಹನಗೊಳಿಸಿತು. ಅದನ್ನು ಕನ್ನಡಕ್ಕೆ ಬಳಸುವುದು ಸಾಧ್ಯವೇ ಎಂದು ಯೋಚಿಸುತ್ತ ಕುಳಿತಿದ್ದೆ. ರಾಮಾಯಣದ ವಸ್ತುವನ್ನು ಬಳಸಿಕೊಂಡು ಇನ್ನೂರೈವತ್ತು ಪುಟದ ಕಾವ್ಯವನ್ನು ಬರೆಯುವುದೆಂದು ಯೋಚಿಸಿ ಎಂದೋ ಒಂದು ದಿನ ಆರಂಭಿಸಿದೆ. ನನಗರಿಯದಂತೆಯೇ ಮನಬಂದ ಕಡೆ ಲೇಖನಿ ಹರಿಯಿತು. ಬರೆಯುತ್ತ ಹೋದಂತೆ ಛಂದಸ್ಸಿನ ಹಿಡಿತ ತಪ್ಪಿತು. ಸುಮಾರು ಐದು ಸಾವಿರ ಪಂಕ್ತಿಗಳನ್ನು ಬರೆದ ನಂತರ ನಾನು ಅಧೀನನಾದೆ. ಅದರಲ್ಲಿ ಲಯವಾದ ಛಂದಸ್ಸು ಬದಲಾವಣೆ ಹೊಂದಿತು. ರೀತಿ ಮಾರ್ಪಾಡಾಯಿತು. ಗುರಿ ವ್ಯತ್ಯಾಸವಾಯಿತು. ಸಂಸ್ಕೃತದಿಂದ ಪೋಷಿತವಾದ ಈ ಕನ್ನಡ ನುಡಿಯ ನಾದ ಮಾಧುರ್ಯ ಆಂಗ್ಲ ಭಾಷೆಯಲ್ಲಿಯೂ ಇಲ್ಲವೆಂದು ನನಗಾಗ ಭಾಸವಾಯಿತು.

“ರಾಮಾಯಣ ಬೆಳೆದಂತೆಲ್ಲಾ ನಾನು ಬೆಳೆದು ನನ್ನ ಸಾಧನೆ ಬೆಳೆಯಿತು. ನಾನು ಆ ಮಹಾಕಾವ್ಯಕ್ಕೆ ವಶನಾದೆ. ಅದನ್ನು ನಾನೇ ಬರೆದವನೆಂದು ಹೇಳುವುದು ತಪ್ಪು. ವಿಶ್ವ ಶಕ್ತಿಗಳೆಲ್ಲ ಸೇರಿ ಆ ಕಾವ್ಯವಾಗಿದೆ. ನಾನೆಂದೂ ನಿಮಿತ್ತ ಮಾತ್ರ. ಅಲ್ಲಿ ಬರುವ ವರ್ಣನೆ, ಘಟನೆ, ಸಂದರ್ಭಗಳನ್ನು ಕಲಾತ್ಮಕವಾಗಿ ಚಿತ್ರಿಸಲು ಲೋಕ ಮತ್ತು ಪ್ರಕೃತಿ ಬಹಳ ಸಹಾಯ ಮಾಡಿದೆ. ‘ಪಂಚಮಲೆಯ ಪರ್ಣಕುಟಿ’ ಸಂಧಿಯನ್ನು ಕವನಿಸುವಾಗ ನಾನು ಊರಿನಲ್ಲಿದ್ದೆ. ಆಗ ನಾನನುಭವಿಸಿದ ಮಂಜಿನ ಸೌಂದರ್ಯ, ಆ ಸಂಧಿಯಲ್ಲಿ ಭಾವ ಗೀತೆಯಾಗಿ ಹರಿದಿದೆ. ಯುರೋಪಿನಲ್ಲಿ ಯುದ್ಧ ನಡೆಯುತ್ತಿದ್ದಾಗ ಯುದ್ಧ ವರ್ಣನೆ ರೂಪ ಪಡೆಯಿತು.” kuvempu

ಸೀತಾಪಹರಣಕ್ಕಾಗಿ ರಾವಣ ಬಂದಿದ್ದಾನೆ. ಇನ್ನೇನವನು ಸೀತೆಯನ್ನು ಹಿಡಿದುಕೊಳ್ಳಬೇಕು, ಸೀತೆ ಚೀರಬೇಕು, ಅಷ್ಟರಲ್ಲಿ ಕವಿಯ ಕೈ ತತ್ತರಿಸುತ್ತದೆ, ಬರಹ ನಿಲ್ಲುತ್ತದೆ. ಆ ವೇಳೆಯಲ್ಲೊಂದು ಅಳಿಲು  ಅವರ ಅಧ್ಯಯನ ಕಕ್ಷದ ಕಡೆಗೆ ಚಿತ್ರಿಸುತ್ತಾ ಬರುತ್ತದೆ. ಅದರ ಹಿಂದೆಯೇ ಓಡಿಬಂದ ಬೆಕ್ಕು ಅದನ್ನು ಹಿಡಿಯಲು ಬರುತ್ತದೆ. ಅಳಿಲಿನ ಚೀತ್ಕಾರ ಕೋಣೆಯಲ್ಲಿ ಮರುದನಿಗೂಡುತ್ತದೆ. ಕವಿ ಹೃದಯ ಅನುಕಂಪದಿಂದ ಕರಗುತ್ತದೆ. ಅಳಿಲಿನ ಚೀತ್ಕಾರ ಸೀತಾ ಮಾತೆಯ ಚೀತ್ಕಾರವಾಗುತ್ತದೆ. “ಹೀಗೆ ಒಂದೊಂದು ಹೆಜ್ಜೆಯಲ್ಲಿಯೂ ವಿಶ್ವಶಕ್ತಿಯು ನನ್ನಿಂದ ನೇರವಾಗಿ ಕೆಲಸ ಮಾಡಿಸಿದೆ. ಇದನ್ನು ಬರೆಯಲು ತೆಗೆದುಕೊಂಡ ಕಾಲ ೯ ವರ್ಷಗಳು” ಎನ್ನುತ್ತಾರೆ ಕುವೆಂಪು.

ವಾಲ್ಮೀಕಿ ರಾಮಾಯಣದಲ್ಲಿ ರಾವಣ ಮಹಾದುಷ್ಟನಾಗಿ ರೂಪುಗೊಂಡರೆ ನಮ್ಮ ರಾಷ್ಟ್ರಕವಿ ಕುವೆಂಪುರವರ ರಾಮಾಯಣದಲ್ಲಿ ರಾವಣ ಹೀಗೆ ಪರಿವರ್ತನೆ ಗೊಳ್ಳುತ್ತಾನೆ:
“ನಿನಿಗಿಂ ಮಿಗಿಲ್ ಸೀತೆ
ನನಗೆ ದೇವತೆ ಮಾತೆ ಶ್ರದ್ಧೆಗೆಟ್ಟಿರ್ದೆನಗೆ
ಶ್ರದ್ಧೆಯಂ ಮರುಕಳಿಸುತಾತ್ಮದುದ್ಧಾರಂ
ತಂದ ದೇವತೆ ಪುಣ್ಯಮಾತೆ”

ಮನದನ್ನೆಯಾಗಿಸಿಕೊಳ್ಳಲು ಕೊಂಡೊಯ್ದ ಸೀತೆಯನ್ನು ತಾಯಿಯೆಂದು ಕರೆಯುವಷ್ಟರ ಮಟ್ಟಿಗೆ ರಾವಣ ಪರಿವರ್ತನೆಗೊಂಡಿರುವುದು ಅಗಾಧವಾಗಿದೆ. ದೈವೀಪ್ರಾಪ್ತಿಗಾಗಿ ಸದಾ ಹಂಬಲಿಸುತ್ತಿರುವ ಲೋಕದ ಜೀವಿಗಳ ಪ್ರತೀಕವಾಗಿರುವ ಶಬರಿ, ಭಕ್ತ ಶ್ರೇಷ್ಠನಾದ ಹನುಮ, ಅಪೂರ್ವ ಮಹಾಸತಿ, ಸೌಂದರ್ಯದಲ್ಲಿ ದೇವತೆ, ಸುಸಂಸ್ಕೃತಿಯ ಶ್ರೇಷ್ಠ ಪ್ರತಿನಿಧಿ, ಪತಿಯ ಆತ್ಮೋದ್ಧಾರಕ ಶಕ್ತಿ ಸೀತದೇವಿಯ ಪಾತಿವ್ರತ್ಯ ರಕ್ಷಣೆಯ ವಜ್ರಕವಚ, ಲಂಕೆಯ ಯೋಗಕ್ಷೇಮವನ್ನು ಬಯಸುವ, ಮಹಾ ಮಾತೃ ಹೃದಯಿಯಾಗಿ ಮೂಡಿ ನಿಂತಿರುವ ಮಂಡೋದರಿ, ತಾನು ಹೊತ್ತಿಸಿದ ಬೆಂಕಿಯನ್ನು ತಾನೇ ಆರಿಸಲು ಪ್ರಯತ್ನಿಸುವ ಚಂದ್ರನಖಿ- ಈ ಪಾತ್ರಗಳೆಲ್ಲವೂ ಅತ್ಯಂತ ಪರಿಣಾಮಕಾರಿಯಾಗಿ ಈ ಮಹಾಕಾವ್ಯದಲ್ಲಿ ಕಾಣಿಸಿವೆ. ಒಟ್ಟಿನಲ್ಲಿ ಕುವೆಂಪುರವರ ‘ಶ್ರೀರಾಮಾಯಣ ದರ್ಶನಂ’ ಕುವೆಂಪುರವರು ಸೃಜಿಸಿದ ಕಾವ್ಯವಷ್ಟೇ ಅಲ್ಲ, ಯುಗವನ್ನು, ಯುಗದ ಶಕ್ತಿಯನ್ನು ಸೃಜಿಸುವ ಕಾವ್ಯ.

 

ಜಳಜಳನೆ ಹರಿವ ನೀರಿಗೆ ತಡೆ ಬೇಕಿರಲಿಲ್ಲ
ಗುರಿ ಕಡಲಾದರೂ
ಒಡಲಿಗೆ ತಂಪ ಕೊಡಬೇಕಿತ್ತು!

ಸ್ಪೂರ್ತಿ ನೀಡುವ ಪ್ರಕೃತಿಗೆ
ಬರ ಬೇಕಿರಲಿಲ್ಲ.
ಆಕಾಶ ಬರಿದಾಗಿದ್ದರೂ
ಇಳೆ ತುಂಬಾ ಹಸಿರಿರಬೇಕಿತ್ತು!

spring

ಕನಸ ಮಾರುವ ಹುಡುಗಿಗೆ
ಅಳು ಬೇಕಿರಲಿಲ್ಲ.
ಕಣ್ತುಂಬಾ ಕತ್ತಲಿದ್ದರೂ
ಮನದ ತುಂಬಾ ಬೆಳಕಿರಬೇಕಿತ್ತು!

ಆಘಾತ ಕಂಡ ಮನಸಿಗೆ ಪದೇ ಪದೇ
ನೋವು ಬೇಕಿರಲಿಲ್ಲ.
ಸುಖವಿಲ್ಲದಿದ್ದರೂ
ನಿರಾಶೆಯ ತಡೆವ ಹೃದಯವಿರಬೇಕಿತ್ತು!

ಲವಲವಿಕೆಯ ಜೀವಕೆ
ಸತ್ಯ ಕಂಡಿರಲಿಲ್ಲ
ಸಾವು ಖಂಡಿತವಾದರೂ
ಬದುಕನ್ನು ಪ್ರೀತಿಸುವ ಕಲೆ ಗೊತ್ತಿರಬೇಕಿತ್ತು!

-ನವಿತಾ.ಎಸ್, ಸಾಗರ

‘ಇನ್ನು ಸಾಧ್ಯವಾಗುವುದಿಲ್ಲ’ ಎನ್ನುವ ಷರಾದೊಂದಿಗೆ ನಾನು ನನ್ನ ಮತ್ತೊಂದು ಹುಂಬತನವನ್ನು ಕೊನೆಗಾಣಿಸಬೇಕಿದೆ.

ಸುಮಾರು ಎರಡು ವರ್ಷಗಳಿಂದ ಕುಂಟುತ್ತಲೋ, ತೆವಳುತ್ತಲೋ ನಡೆಯುತ್ತಿದ್ದ ನಮ್ಮ ಪತ್ರಿಕೆಯನ್ನು ಅಧಿಕೃತವಾಗಿ ಮುಚ್ಚುವ ಸಮಯ ಬಂದಾಗಿದೆ. ಇಷ್ಟು ದಿನ ನಾನಾ ಕಷ್ಟಗಳು, ತಾಪತ್ರಯಗಳ ನಡುವೆ ಹೇಗೋ ‘ಸಡಗರ’ವನ್ನು ನಡೆಸಿಕೊಂಡು ಬರುತ್ತಿದ್ದೆವು. ಆದರೆ ಈಗ ನಾವು ಡೆಡ್ ಎಂಡ್ ತಲುಪಿದ್ದೇವೆ. ಎಲ್ಲಾ ವಿಧದಲ್ಲೂ ಹೈರಾಣಾಗಿದ್ದೇವೆ. ಆರ್ಥಿಕವಾಗಿ ಕುಗ್ಗಿಹೋಗಿದ್ದೇವೆ, ಉತ್ಸಾಹವೂ ಬತ್ತಿ ಹೋಗಿದೆ. ಈ ಸಂದರ್ಭದಲ್ಲಿ ನಮ್ಮ ಕನಸಿನ ಸಮಾಧಿಯನ್ನು ಶಾಸ್ತ್ರೋಕ್ತವಾಗಿ ನೆರವೇರಿಸುವುದೊಂದೇ ಬಾಕಿ ಉಳಿದಿರುವುದು. ಈಗದನ್ನು ಮಾಡುತ್ತಿರುವೆ.

ಝೆರಾಕ್ಸಿನಿಂದ ಶುರುವಾಗಿ ಸಾವಿರ ಪ್ರತಿ ಪ್ರಸಾರದ ಪತ್ರಿಕೆಯಾಗಿ ಬೆಳೆದ ‘ಸಡಗರ’ ಈ ಚಿಕ್ಕ ಸಾಧನೆಗೆ ಕಾರಣಕರ್ತರಾದ ನಮ್ಮ ಓದುಗರನ್ನು ನಾವು ಅಭಿನಂದಿಸುತ್ತೇವೆ. ಇಷ್ಟು ದಿನ ನಮಗೆ ಅಕಾರಣ ಪ್ರೀತಿ ತೋರಿದ ಎಲ್ಲಾ ಚಂದಾದಾರರಿಗೂ, ಪ್ರಿಯ ಓದುಗರಿಗೂ ನಮ್ಮ ನಮನ.

ಇನ್ನು ನನ್ನ ಈ ಕನಸನ್ನು ತಮ್ಮ ಕೂಸೆಂದು ಭಾವಿಸಿ ಸಾಕಿ ಸಲುಹಿದ ನನ್ನ ಗೆಳೆಯರ ಬಳಗಕ್ಕೆ ನಾನು ಚಿರಋಣಿಯಾಗಿರುವೆ. ಅವರ ಬೆಂಬಲ, ನಿರಂತರ ಪ್ರೋತ್ಸಾಹ ಇರದಿದ್ದರೆ ನನ್ನ ಈ ಪತ್ರಿಕೆಯ ಕನಸು ನನ್ನ ಇತರೆ ನೂರಾರು ಕನಸುಗಳಂತೆ ಕತ್ತಲೆಯ ಲೋಕದ ದಾರಿ ಹಿಡಿಯುತ್ತಿದ್ದವು. ಈ ಪತ್ರಿಕೆಯ ಅಭಿವೃದ್ಧಿಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನೆರವಾದ ಎಲ್ಲಾ ಗೆಳೆಯರಿಗೂ ನಾನು ಮನಸಾ ವಂದಿಸುವೆ.

ಪತ್ರಿಕೆಯ ಬ್ಲಾಗಿನ ಓದುಗರಾದ  ನಿಮ್ಮನ್ನು ಮರೆಯಲಾದೀತೇ? ನಿಮಗೂ ನಮ್ಮ ತಂಡದ ಪರವಾಗಿ ಕೃತಜ್ಞತೆಗಳು.

ಇನ್ನು ಮುಂದೆ ಈ ಬ್ಲಾಗಿನಲ್ಲಿ ಯಾವ ಬರಹಗಳೂ ಪ್ರಕಟವಾಗುವುದಿಲ್ಲ ಎಂದು ತಿಳಿಸಲು ವಿಷಾದಿಸುತ್ತೇವೆ. ನಿಮ್ಮ ಬೆಂಬಲ, ಸ್ನೇಹ, ಪ್ರೋತ್ಸಾಹಕ್ಕೆ ವಂದನೆಗಳು.

ಇಂತಿ,
ನಿಮ್ಮ ವಿಶ್ವಾಸಿ
ಸುಪ್ರೀತ್.ಕೆ.ಎಸ್
(ಸಂಪಾದಕ)
‘ಸಡಗರ’ ಮಾಸಪತ್ರಿಕೆ

‘ಕಲರವ’ ಎಂಬ ಹೆಸರಿನಲ್ಲಿ ಝೆರಾಕ್ಸ್ ಪ್ರತಿಯಾಗಿ ಶುರುವಾದ ನಮ್ಮ ಪತ್ರಿಕೆ ಆಫ್ ಸೆಟ್ ಮುದ್ರಣ ಕಂಡು ಎ-ನಾಲ್ಕು ಸೈಜಿಗೆ ಭಡ್ತಿ ಪಡೆದು ಬೆಳೆದದ್ದು ಸುಂದರವಾದ ಫ್ಲಾಶ್‌ಬ್ಯಾಕಿನಂತೆ ಆಗಾಗ ನಮ್ಮ ಕಣ್ಣ ಮುಂದೆ ಸುಳಿದು ಹೋಗುತ್ತದೆ. ಸುಮಾರು ಇಪ್ಪತ್ತಕ್ಕಿಂತ ಹೆಚ್ಚು ಸಂಚಿಕೆಗಳನ್ನು ಪ್ರಕಟಿಸಿದ ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳಲು ಸಹ ನಮಗೆ ಸಮಯವಾಗಿಲ್ಲ.

ಈ ವರ್ಷಕ್ಕೆ ಕೆಲವು ಹೊಸ ಯೋಜನೆಗಳನ್ನು ಹಾಕಿಕೊಂಡು ಕೆಲಸ ಮಾಡಬೇಕೆಂದಿದ್ದೇವೆ. ಅದರ ಮೊದಲ ಹಂತವಾಗಿ ಹಳೆಯ ಎಲ್ಲಾ ಸಂಚಿಕೆಗಳನ್ನು ಡಿಜಿಟಲೈಸ್ ಮಾಡುವುದು ನಮ್ಮ ಯೋಜನೆ. ಹಳೆಯ ಎಲ್ಲಾ ಸಂಚಿಕೆಗಳನ್ನು ಪಿಡಿಎಫ್ ಪ್ರತಿಯಾಗಿಸಿ ಅಂತರ್ಜಾಲದಲ್ಲಿ ಲಭ್ಯವಾಗಿಸುವುದು ನಮ್ಮ ಮುಂದಿರುವ ಕೆಲಸ. ಜೊತೆಗೆ ಇತ್ತೀಚಿನ ಸಂಚಿಕೆಗಳನ್ನು ಇಳಿಸಿಕೊಳ್ಳಲು ನೀಡಿದ್ದ ಕೊಂಡಿಗಳು ಕೆಲಸ ಮಾಡುತ್ತಿಲ್ಲ ಎಂಬ ಕಂಪ್ಲೆಂಟುಗಳಿವೆ, ಅವನ್ನು ಸರಿ ಪಡಿಸಬೇಕು. ಇನ್ನು ಒಂದು ವಾರದಲ್ಲಿ ಅವನ್ನು ಮುಗಿಸುವ ವಿಶ್ವಾಸ ನಮಗಿದೆ.

ಜೊತೆಗೆ ಈ ತಿಂಗಳ ಸಂಚಿಕೆಯ ತಯಾರಿಯು ಭರದಿಂದ ಸಾಗಿದೆ. ಫೆಬ್ರವರಿ ಎಂಬ ಪುಟ್ಟ ತಿಂಗಳು ನೋಡು ನೋಡುವಷ್ಟರಲ್ಲೇ ಕಳೆದು ಹೋಗುತ್ತಿದೆ. ಎಲ್ಲರೂ ವ್ಯಾಲಂಟೈನ್ ದಿನ, ಪಬ್ಬು-ಮಬ್ಬಿನ ಗಲಾಟೆಯಲ್ಲಿ ಬ್ಯುಸಿಯಾಗಿದ್ದಾರೆ ನಾವು ಲವಲವಿಕೆಯ, ಹೊಸ ಗಾಳಿಯ ಸಂಚಿಕೆಯೊಂದನ್ನು ನಿಮ್ಮ ಮುಂದಿಡುವ ಕನಸು ಕಂಡಿದ್ದೇವೆ.

Enso2

ಕತ್ತಿವರಸೆಯನ್ನು ಕಲಿಯುವುದರಲ್ಲಿ ಆಸಕ್ತನಾಗಿದ್ದ ಯುವಕನೊಬ್ಬ ಝೆನ್ ಗುರುವಿನ ಬಳಿಗೆ ಬಂದ.

"ನಾನು ನಿಮ್ಮ ಬಳಿ ಕತ್ತಿವರಸೆಯ ಕೌಶಲ ಕಲಿಯಬೇಕೆಂದಿದ್ದೇನೆ. ಪರಿಣತಿಯನ್ನು ಪಡೆಯಲು ಎಷ್ಟು ಕಾಲ ಬೇಕಾದೀತು?" ಎಂದು ಕೇಳಿದ.

ತೀರ ಸಹಜವೆಂಬಂತೆ ಗುರು "ಹತ್ತು ವರ್ಷ" ಎಂದ.

"ನನಗೆ ಬೇಗ ಕಲಿಯಬೇಕೆಂದು ಇಷ್ಟ. ಪ್ರತಿ ದಿನವೂ, ದಿನಕ್ಕೆ ಹದಿನೆಂಟು ಗಂಟೆಯ ಕಾಲ ಬೇಕಾದರೆ ಅಭ್ಯಾಸ ಮಾಡಬಲ್ಲೆ. ಹಾಗಾದರೆ ಎಷ್ಟು ಕಾಲ ಹಿಡಿದೀತು?" ಆತುರದಿಂದ ಯುವಕ ಕೇಳಿದ.

ಗುರು ಒಂದು ಕ್ಷಣ ಯೋಚನೆ ಮಾಡಿ "ಇಪ್ಪತ್ತು ವರ್ಷ" ಎಂದ.

………………………………………..

ಶಿಷ್ಯನೊಬ್ಬ ಗುರುವನ್ನು ಕೇಳಿದ: "ಗುರುವೇ, ಜ್ಞಾನೋದಯ ಎಂದರೆ ಏನು?"

ಗುರು ಹೇಳಿದ: "ಹಸಿವಾದಾಗ ಉಣ್ಣು, ಬಾಯಾರಿದಾಗ ನೀರು ಕುಡಿ, ನಿದ್ರೆ ಬಂದಾಗ ಮಲಗು"

………………………………………..

ಗುರು ಗ್ಯುಡೊನನ್ನು ಚಕ್ರವರ್ತಿ ಕೇಳಿದ.

‘ಜ್ಞಾನಿಯಾದವನು ಸತ್ತಮೇಲೆ ಏನಾಗುತ್ತದೆ?’

‘ನನಗೇನು ಗೊತ್ತು?’ ಅಂದ ಗ್ಯುಡೊ.

‘ಗೊತ್ತಿರಬೇಕು, ನೀವು ಗುರು’ ಅಂದ ಚಕ್ರವರ್ತಿ.

‘ನಿಜ. ಆದರೆ ಸತ್ತಿಲ್ಲ’ ಎಂದ ಗ್ಯುಡೊ.

………………………………………..

ಒಂದು ದಿನ ಚಾಂಗ್ ತ್ಸು ಮತ್ತು ಅವನ ಗೆಳೆಯ ನದಿಯಪಕ್ಕದಲ್ಲಿ ನಡೆಯುತ್ತಿದ್ದರು.

‘ಈಜುತ್ತಿರುವ ಮೀನು ನೋಡು, ಎಷ್ಟು ಖುಷಿಯಾಗಿವೆ’ ಅಂದ ಚಾಂಗ್ ತ್ಸು.

‘ನೀನು ಮೀನಲ್ಲ. ಆದ್ದರಿಮದ ಅವು ಖುಷಿಯಾಗಿವೆಯೋ ಇಲ್ಲವೋನಿನಗೆ ಗೊತ್ತಾಗುವುದು ಸಾಧ್ಯವಿಲ್ಲ’ ಅಂದಗೆಳೆಯ.

‘ನೀನು ನಾನಲ್ಲ, ಮೀನು ಖುಷಿಯಾಗಿವೆ ಅನ್ನುವುದು ನನಗೆಗೊತ್ತಿಲ್ಲ ಅಂತ ನಿನಗೆ ಹೇಗೆ ಗೊತ್ತಾಯಿತು?’ ಅಂದ ಚಾಂಗ್ ತ್ಸು.

‘ಸಡಗರ’ ಇದು ಆರೇಳು ಮಂದಿ ವಿದ್ಯಾರ್ಥಿಗಳು ಸೇರಿ ನಡೆಸುತ್ತಿರುವ ಮಾಸಪತ್ರಿಕೆ. ಎ-೪ ಆಕಾರದ ಮುವತ್ತಾರು ಪುಟಗಳ ಈ ಪುಟ್ಟ ಪತ್ರಿಕೆಯಲ್ಲಿ ಬರೆಯುವವರೆಲ್ಲಾ ಯುವಕ ಯುವತಿಯರೇ.

ಈ ದೇಶ ಕಾಲದ ಯುವಕ ಯುವತಿಯರನ್ನು ಕಾಡುವ ಸಂಗತಿಗಳು, ಅವರ ಚಿಂತನೆಯನ್ನು ರೂಪಿಸುವ ವಿಷಯಗಳು ಇದರ ಹೂರಣದ ಬಹುಮುಖ್ಯ ಭಾಗವನ್ನು ಆಕ್ರಮಿಸಿಕೊಂಡಿದ್ದರೆ, ಹಸಿ ಉತ್ಸಾಹದ, ಅಪ್ಪಟ ರಚನಾತ್ಮಕತೆಯ ಬಿಂಬಿಸುವ ಬರಹಗಳಿಗೇನು ಕೊರತೆಯಿಲ್ಲ.

ಪ್ರತಿ ತಿಂಗಳು ಪ್ರಕಟವಾಗುವ ಈ ಪತ್ರಿಕೆಯಲ್ಲಿನ ಕೆಲವು ಆಯ್ದ ಬರಹಗಳನ್ನು ಈ ಬ್ಲಾಗಿನಲ್ಲಿ ಪ್ರಕಟಿಸುತ್ತೇವೆ. ಬ್ಲಾಗಿನ ಲೇಖನಗಳು ಮೆಚ್ಚುಗೆಯಾದರೆ ಖಂಡಿತವಾಗಿಯೂ ಮುದ್ರಿತ ಪತ್ರಿಕೆ ನಿಮಗೆ ಮೆಚ್ಚುಗೆಯಾಗುವುದರಲ್ಲಿ ಸಂದೇಹವಿಲ್ಲ. ನಮ್ಮ ಪ್ರಯತ್ನ ನಿಮಗಿಷ್ಟವಾದರೆ ನಮ್ಮ ಪತ್ರಿಕೆಗೆ ಚಂದಾದಾರರಾಗುವ ಮೂಲಕ ನಮ್ಮನ್ನು ಬೆಂಬಲಿಸಿ, ನಮ್ಮ ಪ್ರಯತ್ನ ಜೀವಂತವಾಗಿರುವಂತೆ ಮಾಡಿ.

cover-page cover-page-april-20081

cover-page-august cover page oct nov 08

ಪತ್ರಿಕೆಗೆ ಚಂದಾದಾರರಾಗಲು ನೀವು ಮಾಡಬೇಕಾದ್ದು ಇಷ್ಟೇ, ಈ  ವಿಳಾಸಕ್ಕೆ (editor.sadagara@gmail.com) ಒಂದು ಮಿಂಚಂಚೆ ಕಳುಹಿಸಿ ಅದರಲ್ಲಿ ನಿಮ್ಮ ಸಂಪೂರ್ಣ ವಿಳಾಸ ಹಾಗೂ ಫೋನ್ ನಂಬರ್ ನೀಡಿ. ಒಂದು ಗೌರವ ಪ್ರತಿಯನ್ನು ಪಡೆಯಿರಿ. ಓದಿ ಇಷ್ಟವಾದರೆ ಈ ಕೆಳಗಿನ ವಿಳಾಸಕ್ಕೆ ಚಂದಾ ಹಣ ಕಳುಹಿಸಿ.

Balu Prasad.R
S/o Ravindra Prasad
No.58/14, 1st Floor, Near
Kumaran`s Children Home
2nd Cross, Tata Silk Farm
Basavanagudi, Banglore-04

ಚಂದಾ ಹಣ:

ಒಂದು ವರ್ಷಕ್ಕೆ (ಹನ್ನೆರಡು ಸಂಚಿಕೆಗಳು) ರೂ 150

ಆರು ತಿಂಗಳಿಗೆ (ಆರು ಸಂಚಿಕೆಗಳು)  ರೂ 80

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಸುಪ್ರೀತ್.ಕೆ.ಎಸ್ (editor.sadagara@gmail.com) ph: 9986907526

ಚಂದ್ರಯಾನ ಜುಟ್ಟಿನ ಮಲ್ಲಿಗೆಯೇ?

– ಸುಪ್ರೀತ್.ಕೆ.ಎಸ್

ಪುರಾತನ ಕಾಲದಿಂದಲೂ ಭಾರತೀಯರು ಜ್ಞಾನದ ಉಪಾಸನೆಯನ್ನು ಮಾಡುತ್ತಾ ಬಂದವರು. ಜ್ಞಾನ Moon11-19-02b ಯಾವ ದಿಕ್ಕಿನಿಂದ ಬಂದರೂ ಅದನ್ನು ಸ್ವೀಕರಿಸುವ ಮನೋಭೂಮಿಕೆಯನ್ನು ಸಿದ್ಧ ಪಡಿಸಿಕೊಂಡವರು. ಭೂಮಿಯ ಮೇಲಿನ ಸಂಗತಿಗಳ ಬಗ್ಗೆ ತಿಳಿಯುತ್ತಾ ಅವರ ಹಸಿವು ದಿಗಂತದೆಡೆಗೆ ವಿಸ್ತರಿಸಿತು. ನೆಲದ ಮೇಲೆ ನೆಟ್ಟಿದ್ದ ದೃಷ್ಟಿ ಸೂರ್ಯ, ಚಂದ್ರರನ್ನು ದಾಟಿ ದೂರದ ನಕ್ಷತ್ರ ಪುಂಜಗಳವರೆಗೆ ವ್ಯಾಪಿಸಿತು. ಗ್ರಹಗಳ ಚಲನೆಯ ಬಗ್ಗೆ, ನಕ್ಷತ್ರಗಳ ಪುಂಜಗಳ ಸ್ಥಾನಗಳ ಬಗ್ಗೆ, ಗ್ರಹಣಗಳ ಬಗ್ಗೆ ತಿಳಿಯುತ್ತಾ ಅಂತರಿಕ್ಷವೆಂಬುದು ಇಡೀ ಬ್ರಹ್ಮಾಂಡದ ರಹಸ್ಯವನ್ನು ಬಿಚ್ಚಿಡುವ ಕೀಲಿಕೈ ಎಂಬುದನ್ನು ಕಂಡುಕೊಂಡರು. ಕ್ರಿಸ್ತಶಕ ೧೨೦೦ ರಷ್ಟು ಹಿಂದೆಯೇ, ಅಂದರೆ ಪಶ್ಚಿಮದಲ್ಲಿ ಗೆಲಿಲಿಯೋ ಗೆಲಿಲಿ ಎಂಬ ಬುದ್ಧಿವಂತ ಖಗೋಳ ವಿಜ್ಞಾನಿ ಭೂಮಿ ಗುಂಡಗಿದೆ, ಭೂಮಿಯ ಸುತ್ತ ಸೂರ್ಯ ಸುತ್ತುವುದಿಲ್ಲ ಬದಲಾಗಿ ಸೂರ್ಯನ ಸುತ್ತ ಭೂಮಿ ಹಾಗೂ ಇತರ ಗ್ರಹಗಳು ಸುತ್ತುತ್ತವೆ ಎಂದು ಸಾಬೀತು ಪಡಿಸುವ ಎರಡು ಸಾವಿರದ ಎಂಟುನೂರು ವರ್ಷಗಳ ಹಿಂದೆಯೇ ಖಗೋಳ ಶಾಸ್ತ್ರಕ್ಕೆ ಸಂಬಂಧಿಸಿದ ಹಾಗೆ ಲಗಧ ‘ವೇದಾಂಗ ಜೋತಿಷ್ಯ’ ಎಂಬ ಕೃತಿ ರಚಿಸಿದ್ದ! ಮುಂದೆ ಆರ್ಯಭಟ, ಬ್ರಹ್ಮಗುಪ್ತ, ವರಹಾಮಿಹಿರ, ಭಾಸ್ಕರ ೧, ಲಲ್ಲ , ಭಾಸ್ಕರ ೨, ಶ್ರೀಪಾಠಿ, ಮಹೆಂದ್ರ ಸೂರಿ ಮುಂತಾದ ಮಹಾಮಹಿರು ಅಂತರಿಕ್ಷವನ್ನು ಅಕ್ಷರಶಃ ಜಾಲಾಡಿ ಬಿಟ್ಟರು. ಬ್ರಹ್ಮಾಂಡದ ಬಗ್ಗೆ ಜ್ಞಾನವನ್ನು ಧಾರೆಯೆರೆಯುವ ಅಂತರಿಕ್ಷವನ್ನು ಅವರು ಜ್ಞಾನ ದೇಗುಲವಾಗಿ ಕಂಡರು. ಅವರಿಗೆಂದೂ ಆ ಜ್ಞಾನ ಅನುಪಯುಕ್ತವಾಗಿ ಕಂಡಿರಲಿಲ್ಲ.

ಎರಡು ಸಾವಿರ ವರ್ಷಗಳ ಕಾಲ ಹೊರಗಿನವರ ಆಳ್ವಿಕೆಯಲ್ಲಿ ನಲುಗಿದ ಭಾರತೀಯರು ತಮ್ಮೆ ಜ್ಞಾನದಾಹ, ಶ್ರೇಷ್ಠತೆಗಾಗಿನ ಹಂಬಲವನ್ನೆಲ್ಲಾ ಮರೆತು ದಾಸ್ಯದಲ್ಲಿ ಮುಳುಗಿದ್ದಾರೆ. ಸಾವಿರ ವರ್ಷಗಳ ಪಾಶ್ಚಾತ್ಯರ ದಬ್ಬಾಳಿಕೆಯಿಂದ ಆತ್ಮವಿಶ್ವಾಸವೆಂಬುದು ನಶಿಸಿ ಹೋಗಿದೆ. ಬದುಕಿನಲ್ಲಿರಬೇಕಾದ ಹುಮ್ಮಸ್ಸು, ಜ್ಞಾನವನ್ನು ಪಡೆಯುದರೆಡೆಗಿನ ತುಡಿತ, ವಿಜ್ಞಾನದಲ್ಲಿನ ಆಸಕ್ತಿಯನ್ನೆಲ್ಲಾ ಕಳೆದುಕೊಂಡು ಪಾಶ್ಚಾತ್ಯರು ಹಾಕಿಕೊಟ್ಟ ಮಾರ್ಗದಲ್ಲಿ ಕುರಿಗಳ ಹಾಗೆ ನಡೆಯುವುದನ್ನು ಅಭ್ಯಾಸ ಮಾಡಿಕೊಂಡುಬಿಟ್ಟಿದ್ದಾರೆ. ಹೀಗಾಗಿ ನಮಗೆಂದೂ ಹೊಸ ಸಾಹಸಗಳು, ಆವಿಷ್ಕಾರಗಳು, ಹೊಸತನದ ಆಲೋಚನೆಗಳು, ನವೀನ ಯೋಜನೆಗಳು ಪ್ರಿಯವಾಗುವುದಿಲ್ಲ. ಬದಲಾವಣೆಗಳು ನಮ್ಮ ಜಡತ್ವವನ್ನು ಕುಟುಕುತ್ತವೆಯಾದ್ದರಿಂದ ನಾವು ನಮಗೆ ತಿಳಿಯದಂತೆ ಅವುಗಳಿಗೆ ಪ್ರತಿರೋಧ ಒಡ್ಡುತ್ತಿದ್ದೇವೆ. ನಮಗೆ ಅಣು ವಿದ್ಯುತ್ ಬೇಕಿಲ್ಲ, ಹೆಚ್ಚಿನ ವೇಗದ ಸಾರಿಗೆ ಬೇಕಿಲ್ಲ, ಉಪಗ್ರಹಳ ಉಡಾವಣೆ ನಮಗೆ ಅನುಪಯುಕ್ತ. ಇದೇ ಮನೋಭಾವದ ಮುಂದುವರೆಕೆಯಾಗಿ ಇತ್ತೀಚಿನ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ‘ಚಂದ್ರಯಾನ’ ಜುಟ್ಟಿನ ಮಲ್ಲಿಗೆಯಾಗಿ ಕಾಣುತ್ತಿದೆ. ಪ್ರತಿವರ್ಷ ಸುಮಾರು ೯೦೦ ಕೋಟಿ ರೂಪಾಯಿ ಮೌಲ್ಯದಷ್ಟು ಪಟಾಕಿಯನ್ನು ಸುಟ್ಟು ಸಂಭ್ರಮಿಸುವಾಗ ಇಲ್ಲದ ಹಣದ ಬಗೆಗಿನ ಕಾಳಜಿ ಇಸ್ರೋ ತನ್ನ ಪಾಲಿನ ಬಜೆಟಿನಿಂದ ೩೬೮ ಕೋಟಿಯನ್ನು ಈ ಯೋಜನೆಗೆ ವೆಚ್ಚ ಮಾಡಿದ್ದನ್ನು ಕೇಳಿ ಉದ್ಭವಿಸಿಬಿಡುತ್ತದೆ!

ಅಭಿವೃದ್ಧಿ ಹೊಂದುತ್ತಿರುವ ಭಾರತದಂತಹ ದೇಶಕ್ಕೆ, ಬಡತನ, ರೋಗ-ರುಜಿನಗಳಿಂದ ಮುಕ್ತವಾಗಲು ಬಡಿದಾಡುತ್ತಿರುವ, ತನ್ನ ಪ್ರಜೆಗಳಿಗೆ ಮೂಲಭೂತ ಆವಶ್ಯಕತೆಗಳನ್ನು ಸಮರ್ಪಕವಾಗಿ ಪೂರೈಸುವಲ್ಲಿ ವಿಫಲವಾಗಿರುವ ದೇಶಕ್ಕೆ ಇಸ್ರೋದಂತಹ ಬಾಹ್ಯಾಕಾಶ ಸಂಸ್ಥೆ ಏತಕ್ಕೆ ಬೇಕು? ದೇಶದ ಜನರ ಹುಟ್ಟೆ ತುಂಬಿಸುವಲ್ಲಿ ಸೋತಿರುವ ಸರಕಾರ ಅಂತರಿಕ್ಷಕ್ಕೆ ಕೋಟಿ ಕೋಟಿ ರೂಪಾಯಿಗಳನ್ನು ಸುರಿಯುವುದು ಯಾವ ದಿಕ್ಕಿನಿಂದ ಬುದ್ಧಿವಂತಿಕೆಯಾಗಿ ಕಾಣುತ್ತದೆ ಎಂದೆಲ್ಲಾ ವಾದಿಸುವವರು, ದೇಶದ ಅಭಿವೃದ್ಧಿಗೆ ಪೂರಕವಾಗುವ ಆವಿಷ್ಕಾಕರಗಳಿಗಾಗಿ ಇಸ್ರೋ ತನ್ನ ಸಾಮರ್ಥ್ಯವನ್ನು ವಿನಿಯೋಗಿಸಲು ಎಂದು ಪುಕ್ಕಟೆ ಉಪದೇಶ ನೀಡುವವರು ೧೯೭೪ರಲ್ಲಿ ಭಾರತ ಮೊಟ್ಟ ಮೊದಲ ಬಾರಿಗೆ ಪರಮಾಣು ಬಾಂಬ್ ಸಿಡಿಸಿದಾಗ ಉಂಟಾದ ಜಾಗತಿಕ ಬಿಕ್ಕಟ್ಟಿನ ಬಗ್ಗೆ ತಿಳಿಯಬೇಕು. ಅಮೇರಿಕಾ ಸೇರಿದಂತೆ ಮುಂದುವರಿದ ಬಲಿಷ್ಠ ರಾಷ್ಟ್ರಗಳು ಭಾರತಕ್ಕೆ ಯಾವುದೇ ಬಗೆಯ ತಂತ್ರಜ್ಞಾನ, ಉಪಕರಣವನ್ನು ನೀಡುವುದಕ್ಕೆ ನಿರಾಕರಿಸಿದಾಗ ಇಸ್ರೋದ ವಿಜ್ಞಾನಿಗಳು ಹಗಲು ರಾತ್ರಿಯೆನ್ನದೆ ಶ್ರಮವಹಿಸಿ ದೇಶೀಯ ತಂತ್ರಜ್ಞಾನವನ್ನು ಬೆಳೆಸಿದರು. ದೇಶ ಹಲವು ಅತ್ಯವಶ್ಯಕ ಮೂಲಭೂತ ತಂತ್ರಜ್ಞಾನಗಳಲ್ಲಿ ಸ್ವಾಲವಂಬನೆಯನ್ನು ಸಾಧಿಸುವುದಕ್ಕೆ ಕಾರಣಕರ್ತರಾದರು.

ಇಸ್ರೋ ಈಗಾಗಲೇ ಭೂಮಿಯ ಕಕ್ಷೆಯಲ್ಲಿ ಆರು ದೂರ ಸಂವೇದಿ ಉಪಗ್ರಹಗಳನ್ನು ನೆಟ್ಟಿದೆ. ಇದರಿಂದ ಮೀನುಗಾರರಿಗೆ ಸಮುದ್ರದ ಅಲೆಗಳ ಬಗ್ಗೆ ಮುನ್ಸೂಚನೆ ನೀಡಲು, ತೀರದಲ್ಲಿರುವವರಿಗೆ ಮುನ್ನೆಚ್ಚರಿಕೆಗಳನ್ನು ನೀಡಲು ಸಾಧ್ಯವಾಗಿದೆ. ಭಾರತದ ಏಳು ದೂರ ಸಂಪರ್ಕ ಉಪಗ್ರಹಗಳು ಭೂಮಿಯ ಮೂಲೆಗೆ ಸಂಪರ್ಕವನ್ನು ಹೊಂದಿವೆ. ಈ ಉಪಗ್ರಹಗಳ ನೆರವಿನಿಂದ ದೇಶದ ಸುಮಾರು ತೊಂಭತ್ತರಷ್ಟು ಜನಸಂಖ್ಯೆಗೆ ದೂರದರ್ಶನ ವೀಕ್ಷಣೆ ಸಾಧ್ಯವಾಗಿದೆ. ಅಲ್ಲದೆ ಉಪಗ್ರಹಗಳ ಮೂಲಕ ಕೃಷಿ ಮಾಹಿತಿ, ಶಿಕ್ಷಣ ಬಿತ್ತರಿಸಲು ಸಾಧ್ಯವಾಗಿದೆ. ದೇಶದ ೬೯ ಆಸ್ಪತ್ರೆಗಳನ್ನು ಪರಸ್ಪರ ಸಂಪರ್ಕಕ್ಕೆ ಲಭ್ಯವಾಗಿಸಿ ತಜ್ಞರ ಸೇವೆ ಎಲ್ಲಾ ಕಡೆ ಲಭ್ಯವಾಗುವಂತೆ ಮಾಡಲಾಗಿದೆ. ಇಸ್ರೋ ನೆಟ್ಟಿರುವ ಉಪಗ್ರಹಗಳಿಂದ ನೈಸರ್ಗಿಕ ವಿಪತ್ತುಗಳ ಮುನ್ಸೂಚನೆ ಪಡೆದು ದೇಶ ಅನೇಕ ಗಂಡಾಂತರಗಳಿಂದ ಪಾರಾಗಿದೆ. ೧೯೭೭ರಲ್ಲಿ ಆಂಧ್ರಪ್ರದೇಶದ ಕರಾವಳಿ ತೀರಕ್ಕೆ ಅಪ್ಪಳಿಸಿದ ಚಂಡಮಾರುತಕ್ಕೆ ಸುಮಾರು ಹತ್ತು ಸಾವಿರ ಮಂದಿ ಬಲಿಯಾಗಿದ್ದರೆ. ಆಗ ಚಂಡಮಾರುತದ ಬಗ್ಗೆ ಮುನ್ಸೂಚನೆ ನೀಡುವ ಯಾವ ಸವಲತ್ತುಗಳೂ ನಮ್ಮ ಬಳಿ ಇರಲಿಲ್ಲ ಎಂಬುದನ್ನು ನೆನಪಿಡಬೇಕು. ಮುಂದೆ ೧೯೯೦ರಲ್ಲಿ ಮತ್ತೆ ಅಪ್ಪಳಿಸಿದ ಚಂದಮಾರುತದ ಬಗ್ಗೆ ಸೂಕ್ತ ಮಾಹಿತಿ ಉಪಗ್ರಹಗಳಿಂದ ಪಡೆದು ಅವಶ್ಯಕವಾದ ಮುನ್ನೆಚರಿಕೆಗಳನ್ನು ಕೈಗೊಂಡು ಸಾವಿನ ಪ್ರಮಾಣವನ್ನು ೯೦೦ಕ್ಕೆ ಇಳಿಸಲಾಯ್ತು.

ಜಾಗತೀಕರಣ, ಔದ್ಯೋಗಿಕ ಕ್ರಾಂತಿ, ಬಾಹ್ಯಾಕಾಶ ಸಂಶೋಧನೆಯಲ್ಲಿನ ಪ್ರಗತಿಯನ್ನೆಲ್ಲಾ ಸಂಶಯ ದೃಷ್ಟಿಯಿಂದ ಕಾಣುವುದರಿಂದ ಯಾವ ಲಾಭವೂ ಇಲ್ಲ. ಜಾಗತೀಕರಣದಿಂದ ಲಕ್ಷಾಂತರ ಯುವಕ ಯುವತಿಯರು ತಮ್ಮ ಅರ್ಹತೆಗೆ ತಕ್ಕ ಆರ್ಥಿಕ ಸ್ಥಾನಮಾನವನ್ನು ಗಳಿಸಿಕೊಳ್ಳಲು, ಮಧ್ಯಮ ವರ್ಗ ಸದೃಢವಾಗಿ ರೂಪುಗೊಳ್ಳಲು ಸಾಧ್ಯವಾದಂತೆಯೇ ಯುವ ಜನಾಂಗದಲ್ಲಿ ಹೊಸ ಹುಮ್ಮಸ್ಸನ್ನು, ಸ್ಪೂರ್ತಿಯನ್ನು ಮೂಡಿಸಿತು. ಒಬ್ಬ ನಾರಾಯಣ ಮೂರ್ತಿ, ಒಬ್ಬ ಧೀರುಭಾಯಿ ಅಂಬಾನಿಯಿಂದ ಲಕ್ಷಾಂತರ ಮಂದಿ ಯುವಕರು ಸ್ಪೂರ್ತಿ ಪಡೆದರು. ಕೋಟ್ಯಂತರ ರೂಪಾಯಿ ವಹಿವಾಟು ಹೊಂದಿರುವ ಕ್ರಿಕೆಟ್, ಅದರಷ್ಟೇ ಹಣಕಾಸಿನ ವ್ಯವಹಾರ ನಡೆಸುವ ಬಾಲಿವುಡ್‌ನಿಂದ ದೇಶದ ಪ್ರಗತಿಗೆ ನೇರವಾಗಿ ಯಾವ ಕೊಡುಗೆಯೂ ಸಲ್ಲದಿರಬಹುದು. ಆದರೆ ಅವು ಇಡೀ ದೇಶದ ಜನರ ಮನಸ್ಥಿತಿಯನ್ನು ಬದಲಾಯಿಸುತ್ತವೆ. ಬದುಕಿಗೆ ಅರ್ಥವಂತಿಕೆಯನ್ನು ತರುತ್ತವೆ. ಹೊಸ ಕನಸುಗಳನ್ನು ಬಿತ್ತುತ್ತವೆ. ಮನುಷ್ಯ ಆಹಾರವಿಲ್ಲದೆ ಬದುಕಬಹುದು, ವಿದ್ಯುತ್, ನೀರು ಇಲ್ಲದೆ ಜೀವನ ಸಾಗಿಸಬಹುದು ಆದರೆ ಕನಸುಗಳೆಂಬುವು ಇಲ್ಲವಾಗಿದ್ದರೆ ಮನುಷ್ಯ ಕುಲ ಅಸ್ತಿತ್ವದಲ್ಲೇ ಇರುತ್ತಿರಲಿಲ್ಲ. ಇಸ್ರೋ ಕೈಗೊಂಡಿರುವ ಚಂದ್ರಯಾನ ಯೋಜನೆ ದೇಶದ ಮಕ್ಕಳಲ್ಲಿ, ಯುವಕರಲ್ಲಿ ಕನಸುಗಳನ್ನು ಬಿತ್ತುವಲ್ಲಿ ಯಶಸ್ವಿಯಾದರೆ ಅದಕ್ಕಿಂತ ದೊಡ್ಡ ಕೊಡುಗೆ ಏನು ಬೇಕು? ಈಗಾಗಲೇ ನಮ್ಮ ವಿಜ್ಞಾನಿಗಳು ಚಂದ್ರಯಾನದ ಪೇಲಾಯ್ಡನ್ನು ಚಂದ್ರನ ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ತಂತ್ರಜ್ಞಾನದ ಉತ್ಕೃಷ್ಟತೆ,ನಿಖರತೆಯಿಂದ ಜಗತ್ತಿನ ಗಮನ ಸೆಳೆದಿದ್ದಾರೆ. ಅತಿ ಕಡಿಮೆ ಖರ್ಚಿನಲ್ಲಿ ಚಂದ್ರಯಾನವನ್ನು ಕೈಗೊಂಡು ವಿಶ್ವವೇ ಹುಬ್ಬೇರಿಸುವಂತೆ ಮಾಡಿದ್ದಾರೆ. ಅವರು ತಮ್ಮ ಯೋಜನೆಯಲ್ಲಿ ಸಾಧಿಸುವ ಒಂದೊಂದೇ ಸಣ್ಣ ಯಶಸ್ಸು ದೇಶದ ಯುವಕರನ್ನು ಅಪರಿಮಿತವಾಗಿ ಪ್ರಭಾವಿಸುತ್ತದೆ. ದುಡ್ಡಿನ ಹಿಂದೆ ಬಿದ್ದು ವೃತ್ತಿ ಪರ ಕೋರ್ಸುಗಳನ್ನು ತೆಗೆದುಕೊಂಡು ತಮ್ಮ ಪ್ರತಿಭೆಯನ್ನು ಯಾರದೋ ಕಂಪನಿ ಕಟ್ಟುವಲ್ಲಿ ಕಳೆಯುತ್ತಿರುವ ಯುವಕ ಯುವತಿಯರು ವೈಜ್ಞಾನಿಕ ಸಂಶೋಧನೆಯ ಕ್ಷೇತ್ರದೆಡೆಗೆ ಇದರಿಂದ ಆಕರ್ಷಿತರಾದರೆ, ದೇಶದಲ್ಲಿ ವಿಜ್ಞಾನಕ್ಕೆ ಭವಿಷ್ಯವಿದೆ, ವಿಜ್ಞಾನಿಗಳಿಗೆ ಮನ್ನಣೆಯಿದೆ ಎಂಬ ಸಂದೇಶ ರವಾನೆಯಾದರೆ ಹಿಂದೊಮ್ಮೆ ಅಮೇರಿಕ ತೀವ್ರ ಆರ್ಥಿಕ ಕುಸಿತದಲ್ಲಿದ್ದಾಗ ಅದರ ಪ್ರಜೆಗಳು ತೋರಿದ ಅಪ್ರತಿಮ ಉತ್ಸಾಹ, ಹೋರಾಟ ಮನೋಭಾವವನ್ನು ನಮ್ಮ ದೇಶದಲ್ಲೂ ಕಾಣಬಹುದು. ಅಣು ಬಾಂಬಿನ ಶಾಖದಲ್ಲಿ ಬೂದಿಯಾದ ನಗರಗಳನ್ನು ಮತ್ತೆ ಕಟ್ಟಿದ ಜಪಾನಿನ ಜನರ ಆತ್ಮಶಕ್ತಿಯನ್ನು ನಮ್ಮ ದೇಶವೂ ಪಡೆಯಬಹುದು. ಇಂಥ ಕೊಡುಗೆಯನ್ನು ನೀಡಬಲ್ಲ ಚಂದ್ರಯಾನಕ್ಕೆ ಸರಿಸಾಟಿಯಾದ ಯೋಜನೆ ದೇಶದ ಬೇರಾವ ಕ್ಷೇತ್ರದಲ್ಲಿದೆ? ಹೀಗಿರುವಾಗ ಚಂದ್ರಯಾನ ನಮಗೆ ಜುಟ್ಟಿನ ಮಲ್ಲಿಗೆಯಾಗುತ್ತದೆಯೇ?

No way!

ಈ ಬರಹ ಓದುವ ಮುನ್ನವೇ ಹೇಳಿಬಿಡುತ್ತೇನೆ. ನೀವು ಅಪ್ಪಟ ಸೋಮಾರಿಯಾಗಿದ್ದರೆ ಈ ಬರಹವನ್ನು ಇಡಿಯಾಗಿ ಓದುವ ಸಂಕಲ್ಪವನ್ನಾದರೂ ಮಾಡಿಕೊಳ್ಳಿ. ಇಲ್ಲ, ನೀವು ಸೋಮಾರಿಗಳಲ್ಲ ಎಂಬ ನಂಬಿಕೆ ನಿಮಗಿದ್ದರೆ ಇದನ್ನು ಓದುವ ಕಷ್ಟವನ್ನು ತೆಗೆದುಕೊಳ್ಳಬೇಕಿಲ್ಲ!

your_laziness.png

ನಾನು ಈಗ ಮಾತನಾಡುತ್ತಿರುವುದು ತಮ್ಮಲ್ಲಿ ಸಾಮರ್ಥ್ಯವಿದ್ದರೂ ಏನನ್ನೂ ಮಾಡದೆ ಕಾಲವನ್ನು ಜಾರಿ, ಸೋರಿ ಹೋಗಲು ಬಿಟ್ಟು ಕೂರುವ ಸೋಮಾರಿ ವರ್ಗದ ಕುರಿತು. ತಮ್ಮ ಸಾಮರ್ಥ್ಯ ಮೀರಿದ ಸಂಗತಿಗಳನ್ನು ಸಾಧಿಸಲು ಪಡಬೇಕಾದ ಪ್ರಯತ್ನವನ್ನು, ಸುರಿಸಬೇಕಾದ ಬೆವರನ್ನು ಸುರಿಸಲು ಹಿಂದೆ ಮುಂದೆ ನೋಡುತ್ತಾ ಕುಳಿತುಕೊಳ್ಳುವ ಇನ್ನೊಂದು ವರ್ಗದ ಸೋಮಾರಿಗಳ ಬಗ್ಗೆ ಮತ್ತೆ ಮಾತನಾಡೋಣ. ಮೊದಲನೆಯ ವರ್ಗದ ಸೋಮಾರಿಗಳ ಗುಣಲಕ್ಷಣಗಳ ಬಗ್ಗೆ ಹೇಳುವುದಾದರೆ, ಅವರು ಬುದ್ಧಿವಂತರು. ವಿಚಾರವಂತರು. ಪ್ರತಿಭಾಶಾಲಿಗಳು. ಮೈಯಲ್ಲಿ ಕಸುವು ಹೊಂದಿರುವವರು. ಆದರೆ ಅದನ್ನೆಲ್ಲಾ ಬಳಸಿಕೊಂಡು ತಾವು ಏರಬಹುದಾದ ಎತ್ತರವನ್ನು ತಿಳಿಯದವರು. ತಮ್ಮ ಸಾಮರ್ಥ್ಯವನ್ನು ಬಳಸಿಕೊಂಡು ಕ್ರಮಿಸಬಹುದಾದ ಹಾದಿಯನ್ನು ಅಲಕ್ಷಿಸಿದವರು. ಇವರ ಬಗ್ಗೆ ಸ್ವಲ್ಪ ವಿವರವಾಗಿ ಮಾತಾಡೋಣ.

ಮೇಲೆ ಹೇಳಿದ ವರ್ಗದ ಸೋಮಾರಿಗಳಿಗೆ ಅಂದುಕೊಂಡದ್ದನ್ನೆಲ್ಲ ಮಾಡುವ ಸಾಮರ್ಥ್ಯವಿರುತ್ತದೆ. ತಮಗೆ ಅಂಥ ಸಾಮರ್ಥ್ಯವಿದೆ, ಪ್ರತಿಭೆಯಿದೆ ಎಂಬುದೂ ಅವರಿಗೆ ಗೊತ್ತಿರುತ್ತದೆ. ಕೆಲವೊಮ್ಮೆ ಅದೇ ಅವರನ್ನು ಮಾಡಬೇಕಾದ ಕೆಲಸದಿಂದ ವಿಮುಖರನ್ನಾಗಿಸಿಬಿಡುತ್ತದೆ. ಎಂಥ ಕೆಲಸವನ್ನಾದರೂ ನಾನು ಮಾಡಬಲ್ಲೆ ಎಂಬ ಅವರ ಆತ್ಮವಿಶ್ವಾಸವೇ ಅವರಲ್ಲಿ ಕೆಲಸ ಮಾಡುವ ಉತ್ಸಾಹವನ್ನು ಕಸಿದುಕೊಂಡುಬಿಡುತ್ತದೆ. ‘ನನ್ನಲ್ಲಿ ಶಕ್ತಿಯಿರುವಾಗ ನಾನು ಆ ಕೆಲಸವನ್ನು ಯಾವಾಗ ಬೇಕಾದರೂ ಮಾಡಬಲ್ಲೆ’ ಎಂಬ ಉಡಾಫೆ ಮನಸ್ಸಿನಲ್ಲಿ ಮೊಳೆತು ಕೆಲಸವನ್ನು ಮಾಡಲು ಬೇಕಾದ ತುರ್ತನ್ನು ಅದು ಹುಟ್ಟಿಸುವುದೇ ಇಲ್ಲ. ಹೀಗಾಗಿ ಧುಮ್ಮಿಕ್ಕಿ ಹರಿಯಲು ಚಿಕ್ಕದೊಂದು ಕಿಂಡಿಯೂ ಇಲ್ಲದೆ ಬಲಿಷ್ಠವಾದ ಡ್ಯಾಮಿನ ಗೋಡೆಯ ಹಿಂದೆ ಖೈದಿಯಾದ ಜಲರಾಶಿಯ ಹಾಗೆ ಇವರ ಧೀಶಕ್ತಿ ಬಂಧಿಯಾಗಿರುತ್ತದೆ. ಆತ್ಮಶಕ್ತಿ ಪ್ರಕಟಗೊಳ್ಳಲು ಉತ್ಕಟವಾದ ಹಂಬಲವನ್ನು ತೋರುತ್ತಿದ್ದರೂ ಇವರಿಗೆ ಸೂಕ್ತ ಅವಕಾಶವನ್ನು ಕಲ್ಪಿಸಿಕೊಡಲು ಸಾಧ್ಯವಾಗುವುದಿಲ್ಲ.

ಹೀಗೆ ತಮ್ಮ ರೆಕ್ಕೆಯ ಮೇಲೆ ವಿಪರೀತ ವಿಶ್ವಾಸವಿಟ್ಟುಕೊಂಡು ಒಮ್ಮೆಯೂ ಸ್ವಚ್ಛಂದ ಆಗಸಕ್ಕೆ ಜಿಗಿಯದೆ ಕವುಚಿ ಕುಳಿತ ಬುದ್ಧಿವಂತರಿಗೆ ಬಹುದೊಡ್ಡ ಸಮಸ್ಯೆಯಾಗಿ ಕಾಡುವುದು. ‘ಎಲ್ಲಿಂದ ಶುರು ಮಾಡಬೇಕು?’ ಎಂಬ ಪ್ರಶ್ನೆ. ಇವರಿಗೆ ತಮ್ಮ ಯೋಗ್ಯತೆಗೆ, ತಮ್ಮ ಸಾಮರ್ಥ್ಯಕ್ಕೆ ದಕ್ಕಬೇಕಾದ ಸ್ಥಾನ ಮಾನದ ಕಲ್ಪನೆಯಿರುತ್ತದೆ. ತಾವು ಏರಬಹುದಾದ ಎತ್ತರದ ಬಗ್ಗೆ ಸ್ಪಷ್ಟವಾದ ಅಂದಾಜಿರುತ್ತದೆ. ಆದರೆ ಒಮ್ಮೆಗೇ ಮೊದಲನೇ ಮೆಟ್ಟಿಲಿನಿಂದ ಅಷ್ಟು ಮೇಲಕ್ಕೆ ಹಾರುವ ವಿವೇಕಶೂನ್ಯತೆಯೂ ಇವರಲ್ಲಿ ಮಡುಗಟ್ಟಿರುತ್ತದೆ. ಒಂದು ಹೆಜ್ಜೆಯೂ ಇಟ್ಟು ಅನುಭವವಿರದ ಇವರು ನೂರು ಅಡಿಯನ್ನು ಒಂದೇ ಬೀಸಿನಲ್ಲಿ ಕ್ರಮಿಸುವ ಯೋಜನೆಯನ್ನು ಹಾಕಿಕೊಳ್ಳುತ್ತಾರೆ. ತಮ್ಮ ಕಾಲುಗಳ ಮೇಲೆ ಅವರಿಗೆ ಅಷ್ಟು ವಿಶ್ವಾಸವಿರುತ್ತದೆ. ಹಾದಿ ಕ್ರಮಿಸಿದ ಅನುಭವ ಬೆನ್ನ ಹಿಂದಿರದೆ ಗುರಿ ಅಸ್ಪಷ್ಟವಾಗುತ್ತದೆ. ಗಾಳಿಯಲ್ಲಿ ಗುದ್ದುತ್ತಾರೆ, ಬಡಿದಾಡುತ್ತಾರೆ, ಸಂಪೂರ್ಣ ಶಕ್ತಿಯನ್ನು ವಿನಿಯೋಗಿಸಿ ಹೋರಾಡುತ್ತಾರೆ. ಆದರೆ ಒಂದಿನಿತೂ ಫಲ ಪಡೆಯದೆ ದಣಿಯುತ್ತಾರೆ. ಇವರಿಗೆ ಎಲ್ಲಿಗೆ ತಲುಪಬೇಕು ಎಂಬ ತಿಳಿವು ಇರುತ್ತದೆಯೇ ಹೊರತು ಎಲ್ಲಿಂದ ಶುರು ಮಾಡಬೇಕು ಎಂಬ ವಿವೇಕ ಇರುವುದಿಲ್ಲ. ಗಾಳಿಯೊಂದಿಗಿನ ಗುದ್ದಾಟ ಕೊಟ್ಟು ಹೋದ ದಣಿವು ಮೈಮನಸ್ಸನ್ನು ಹಣ್ಣು ಮಾಡಿರುತ್ತದೆ. ಇವರು ಸೋಮಾರಿತನದ ಬೆಚ್ಚನೆಯ ಆಲಿಂಗನಕ್ಕೆ ಶರಣಾಗಿ ಮಲಗಿಬಿಡುತ್ತಾರೆ. Poor fellows!

ಇಂಥಾ ಸೋಮಾರಿಗಳು ಮೊದಲು ತಮ್ಮ ತಲೆಯನ್ನು ಆಕಾಶದಲ್ಲಿ ಗಿರಕಿ ಹೊಡೆಯುವುದನ್ನು ತಪ್ಪಿಸಬೇಕು. ನೆಲದ ರಿಯಾಲಿಟಿಯನ್ನು ಅರಗಿಸಿಕೊಳ್ಳುವ ಗಂಡೆದೆಯನ್ನು ತೋರಬೇಕು. ಒಂದೇ ಏಟಿಗೆ ಹತ್ತು ಪಕ್ಷಿಗಳನ್ನು ಹೊಡೆಯುವುದು ಎಷ್ಟೇ ರಮ್ಯವಾದ ಕಲ್ಪನೆಯೇ ಆದರೂ ಒಮ್ಮೆಗೆ ಒಂದೇ ಪಕ್ಷಿಗೆ ಗುರಿಯಿಡಬೇಕು ಎನ್ನುವ ವಾಸ್ತವವನ್ನು ಇವರು ಮೈಗೂಡಿಸಿಕೊಳ್ಳಬೇಕು. ಒಂದೊಂದೇ ಹೆಜ್ಜೆ ಇಡುವಲ್ಲಿ ಇವರ ಕಾಳಜಿ ವ್ಯಕ್ತವಾಗಬೇಕು. ಗುರಿ ದೊಡ್ಡದೇ ಇರಲಿ ಚಿಂತೆ ಇಲ್ಲ, ಏಣಿ ಆಕಾಶಕ್ಕೇ ಇಟ್ಟಿರಲಿ ತೊಂದರೆಯಿಲ್ಲ, ಆದರೆ ಗಮನ ಹಾಗೂ ಏಕಾಗ್ರತೆಗಳು ಒಂದೊಂದೇ ಮೆಟ್ಟಿಲನ್ನು ಸಾವಕಾಶವಾಗಿ ಏರುವಲ್ಲಿ ವಿನಿಯೋಗವಾಗಲಿ. ಸಣ್ಣ ಸಣ್ಣ ಕೆಲಸಗಳನ್ನು ಮಾಡುವುದಕ್ಕೆ ಶುರು ಮಾಡಿಬಿಡುವುದು ಸೋಮಾರಿತನ ಎಂಬ ಬಹುದೊಡ್ಡ ಹಡಗಿನ ತಳಕ್ಕೆ ಸಣ್ಣ ರಂಧ್ರಗಳನ್ನು ಕೊರೆದಂತೆ. ಒಮ್ಮೆ ಕಲ್ಲು ಗುಂಡು ಕೂತ ಜಾಗದಿಂದ ಅಲುಗಾಡಿ ಉರುಳಲು ಶುರುವಾದರೆ ಎಂಥಾ ಕಲ್ಲು ಮುಳ್ಳಿನ, ಒರಟೊರಟಾದ, ಅಂಕುಡೊಂಕಿನ ಹಾದಿಯಾದರೂ ಅದಕ್ಕೆ ಅಡ್ಡಿಯಾಗುವುದಿಲ್ಲ. ಪ್ರಾರಂಭದ ಜಡತ್ವ ಮೀರಿ ರಾಕೆಟ್ ಆಗಸಕ್ಕೆ ಚಿಮ್ಮಿದ ಹಾಗೆ ಅಂತಃಶಕ್ತಿಯನ್ನೆಲ್ಲಾ ಕ್ರೋಢೀಕರಿಸಿಕೊಂಡು ಇವರು ಎದ್ದು ನಿಲ್ಲಬೇಕು. ಕೆಳಕ್ಕೆ ಎಳೆಯುವ ಸೋಮಾರಿತನದ ಗುರುತ್ವವನ್ನು ಮೀರುವುದಕ್ಕೆ ಹಲ್ಲು ಕಚ್ಚಿ ರೆಕ್ಕೆಗಳನ್ನು ಬಡಿಯುತ್ತಿರಬೇಕು. ಎಷ್ಟೋ ವೇಳೆ ರೆಕ್ಕೆ ಬಡಿಯುವುದೇ ನಿರರ್ಥಕ ಅನ್ನಿಸುತ್ತದೆ. ಮೇಲೆ ಎತ್ತರದ ನೀಲಾಕಾಶದಲ್ಲಿ ಹಾರುತ್ತಿರುವ ಇತರ ಪಕ್ಷಿಗಳಿಗೆ ಹಾರಾಟ ಅನಾಯಾಸವಾಗಿ ದಕ್ಕಿದೆಯಲ್ಲಾ ಎಂದೆನ್ನಿಸುತ್ತದೆ. ಒಂದು ವೇಳೆ ಆ ಅಮಲಿನಲ್ಲೇ ಮೈಮರೆತುಬಿಟ್ಟರೆ ಸೋಮಾರಿತನ ಪುನಃ ಇವರನ್ನು ತನ್ನ ತೆಕ್ಕೆಳೆದುಕೊಂಡುಬಿಡುತ್ತದೆ. ರೆಕ್ಕೆ ಪಟಪಟ ಬಡಿಯುತ್ತಲೇ ಇರಬೇಕು, ನೀರಲ್ಲಿ ಮುಳುಗಿದವ ಉಸಿರಿಗಾಗಿ ಬಡಿದಾಡುವ ಹಾಗೆ.

ಒಮ್ಮೆ ಈ ಬಗೆಯ ಸೋಮಾರಿತನವೆಂಬ ಕಪಿಮುಷ್ಟಿಯಿಂದ ಹೊರಗೆ ಹಾರಿದರೆ ಯಾವ ಬಂಧನವೂ ಇರದು. ಎದುರಿಗೆ ವಿಶಾಲವಾದ ಆಕಾಶ, ಕಸುವು ತುಂಬಿದ ರೆಕ್ಕೆಗಳು ಸ್ವಚ್ಛಂದ ಹಾರಾಟಕ್ಕೆ ಯಾವ ತಡೆಯೂ ಇರುವುದಿಲ್ಲ. ಅನಂತರ ಇವರು ಈ ಲೇಖನ ಓದಬೇಕಾದ ಅಗತ್ಯ ಬರುವುದಿಲ್ಲ!

ಒಂದು ಕ್ಷಮಾಪಣೆ ಕೇಳಬೇಕಿದೆ. ಮೇ ತಿಂಗಳಲ್ಲಿ ಬರಬೇಕಿದ್ದ ಪತ್ರಿಕೆ ಈಗ ಜುಲೈನಲ್ಲಿ ಹೊರಬರುತ್ತಿದೆ!

‘ಕಲರವ’ದ ಹಿಂದಿನ ಸಂಚಿಕೆ ಪ್ರಕಟವಾಗಿ ಎರಡು ತಿಂಗಳು ಕಳೆದಿವೆ. ನಿಮ್ಮ ಸಿಟ್ಟು ನ್ಯಾಯಯುತವಾದದ್ದೇ. ಆದರೂ ಪತ್ರಿಕೆ ಹೀಗೆ ಹೇಳದೇ ಕೇಳದೆ ಪ್ರಕಟವಾಗುವುದು ನಿಂತು ಹೋದರೆ ಏಳುವ ಸಹಜ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾಗಿದೆ.

ನಿಮಗೆ ತಿಳಿದಂತೆ ಇದು ವೃತ್ತಿಪರ ಪತ್ರಿಕೆಯಲ್ಲ. ಹಾಗಂತ ಇದರಲ್ಲಿ ಬರೆಯುವವರನ್ನು ಹವ್ಯಾಸಿ ಬರಹಗಾರರು ಎಂದು ಕರೆಯಲು ಸಹ ಸಾಧ್ಯವಾಗುವುದಿಲ್ಲ. ಬರವಣಿಗೆಯ ಹಾದಿಯಲ್ಲಿ ಅಂಬೆಗಾಲಿಡುತ್ತಾ, ತೊಡರುತ್ತಾ, ಎಡವಿ ಬೀಳುತ್ತಾ, ಸಂತೈಸಿಕೊಳ್ಳುತ್ತಾ ಮುಂದೆ ಸಾಗುವ ಹುಮ್ಮಸ್ಸನ್ನು ಉಳಿಸಿಕೊಂಡಿರುವ ಹುಡುಗ-ಹುಡುಗಿಯರ ತಂಡ ನಮ್ಮದು. ಪತ್ರಿಕೆಯೊಂದರ ಜೀವಂತಿಕೆ ಅದಕ್ಕೆ ಬರೆಯುವವರ ಆಸಕ್ತಿ ಹಾಗೂ ಶ್ರದ್ಧೆಯನ್ನು ಅವಲಂಬಿಸುತ್ತಿರುತ್ತದೆ. ಅದಿಲ್ಲದೆ ಹೋದರೆ ಸಂತೆ ಹೊತ್ತಿಗೆ ಮೊಳ ಹೂವು ನೇಯುವ ನಿರ್ಲಜ್ಜ ಅನಿವಾರ್ಯತೆ ಸೃಷ್ಠಿಯಾಗುತ್ತದೆ. ಈ ತೊಂದರೆಗಳಿಂದಾಗಿ ಎರಡು ತಿಂಗಳು ನಮ್ಮ ಗೆಳೆಯರ ನಡುವೆ ಪತ್ರಿಕೆಯ ‘ಸಡಗರ’ವಿರಲಿಲ್ಲ. ಸಂತೋಷದ ಸಂಗತಿಯೆಂದರೆ ಈ ಸಂಚಿಕೆಯ ತಯಾರಿಯಲ್ಲಿ ಎಲ್ಲರ ಶ್ರದ್ಧೆ, ಆಸಕ್ತಿಗಳು ಪಾಲ್ಗೊಂಡಿವೆ. ಕೆಲವು ಗಮನಾರ್ಹ ಬದಲಾವಣೆಗಳನ್ನು ಪತ್ರಿಕೆಯ ಹೂರಣದಲ್ಲಿ ನೀವು ಗಮನಿಸಬಹುದು. ಹೊಸ ಬರಹಗಾರರು ನಿಮಗೆ ಪರಿಚಯವಾಗುತ್ತಿದ್ದಾರೆ. ನಿಮ್ಮ ಪ್ರೀತಿ ಇರಲಿ.

ಈ ಸಂಚಿಕೆಯಲ್ಲಿ ಎರಡು ಹೊಸತನದ ಧಾರಾವಾಹಿಗಳು ಶುರುವಾಗುತ್ತಲಿವೆ. ಟಿವಿ ಮಾಧ್ಯಮಗಳ ಹಾವಳಿಯ ಈ ಸಂದರ್ಭದಲ್ಲಿ ‘ಧಾರಾವಾಹಿ’ ಎಂಬ ಪದವನ್ನೇ ಬಳಸಲು ಮುಜುಗರವಾಗುತ್ತದೆ. ಅದನ್ನು ಗಮನದಲ್ಲಿಟ್ಟುಕೊಂಡು ಈ ಧಾರಾವಾಹಿಗಳು ಮೂಡಿ ಬರುತ್ತವೆ. ಆರ್.ವಿ.ಸಿ.ಇ ಕಾಲೇಜಿನ ಗೆಳೆಯ ಕಾರ್ತಿಯೇಯ ಭಟ್ ‘ಬೇರು ಚಿಗುರು’ ಬರೆಯುತ್ತಿದ್ದಾರೆ. ಇನ್ನು ಹಿಂದಿನ ಸಂಚಿಕೆಯಲ್ಲಿ ತಿಳಿಸಿದ ಹಾಗೆ ಅಂತರ್ಮುಖಿಯವರ ‘ಎದೆಯ ದನಿ’ ಪ್ರಕಟವಾಗಿದೆ. ನಿಮಗಿಷ್ಟವಾಗುತ್ತವೆ ಎಂಬ ನಂಬಿಕೆ ನಮ್ಮದು.

-ಸುಪ್ರೀತ್.ಕೆ.ಎಸ್

ಟ್ಯಾಗ್ ಗಳು: , , ,

Blog Stats

  • 71,866 hits
ಮಾರ್ಚ್ 2023
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 12345
6789101112
13141516171819
20212223242526
2728293031  

Top Clicks

  • ಯಾವುದೂ ಇಲ್ಲ