ಕಲರವ

Archive for ಫೆಬ್ರವರಿ 2008

ಓದು ಎನ್ನುವುದು ನಮ್ಮ ಜೀವನದಲ್ಲಿ ನಿರಂತರ ಪ್ರಕ್ರಿಯೆಯಾಗಿರಬೇಕು, ದಿನಾ ನೋಡುವ ಧಾರಾವಾಹಿಯಂತೆ. ಪುಸ್ತಕದ ಮೂಲಕ ನಾವು ಜಗತ್ತಿನ ಒಬ್ಬ ಶ್ರೇಷ್ಠ ವ್ಯಕ್ತಿಯನ್ನು ಭೇಟಿ ಮಾಡುತ್ತೇವೆ. ಆತನನ್ನು ಮಾತನಾಡಿಸುತ್ತೇವೆ. ಆತ ಹೇಳುವುದನ್ನು ಕೇಳುತ್ತೇವೆ. ಆತನಿಗೆ ನಾವು ಹೇಳುವುದನ್ನು ಕೇಳು ಅನ್ನುತ್ತೇವೆ. ಆತನ ಅಭಿಪ್ರಾಯಗಳನ್ನು ಒಪ್ಪಿಕೊಳ್ಳುತ್ತೇವೆ, ಪ್ರಶ್ನೆ ಮಾಡುತ್ತೇವೆ, ತಕರಾರು ಎತ್ತುತ್ತೇವೆ. ಆತನೊಂದಿಗೆ ಜಗಳ ಮಾಡುತ್ತೇವೆ, ರಾಜಿಯಾಗುತ್ತೇವೆ. ಕೋಪಿಸಿಕೊಂಡು ದೂರ ಮಾಡುತ್ತೇವೆ. ಅಪ್ಪಿ ಮುದ್ದಾಡುತ್ತೇವೆ. ಪ್ರೀತಿಯಿಂದ ಎದೆಗೊತ್ತಿಕೊಳ್ಳುತ್ತೇವೆ. ಯಾವ ಪೊಸೆಸೀವ್‌ನೆಸ್ ಇಲ್ಲದೆ ಆತನನ್ನು ಇನ್ನೊಬ್ಬರಿಗೆ ಪರಿಚಯ ಮಾಡಿಸಿಕೊಡುತ್ತೇವೆ. ಆತನಿಗೆ ಇವನನ್ನು ಪ್ರೀತಿಸು ಎಂದು ಮುಕ್ತವಾಗಿ ಶಿಫಾರಸ್ಸು ಮಾಡುತ್ತೇವೆ. ಸಮಯ ಕಳೆದಾಗ ಯಾವ ನೋವೂ, ಅನುಮಾನ, ಮುರಿದ ಮನಸ್ಸಿಲ್ಲದೆ ಬೇರೊಬ್ಬ ವ್ಯಕ್ತಿಯೆಡೆಗೆ ನಡೆದುಬಿಡುತ್ತೇವೆ, ಹೆಚ್ಚು ಪ್ರಬುದ್ಧರಾಗಿ. ಪುಸ್ತಕಗಳ ಜಗತ್ತೇ ಇಂಥದ್ದು! ಇಂತಹ ಪುಸ್ತಕ ಲೋಕದ ಪರಿಚಯ: ಇಂಥದ್ದೊಂದು ಪುಸ್ತಕ ಓದಿದ್ದೆ…!

ಮಾಸ್ತಿ ಎಂದೊಡನೆಯೇ ‘ಸಣ್ಣ ಕಥೆಗಳ ಜನಕ’ ಎಂಬ ಅವರ ಬಿರುದು ನೆನಪಿಗೆ ಬಾರದಿರದು.ಕನ್ನಡದಲ್ಲಿ ಸಣ್ಣ ಕಥೆಗಳ ಪ್ರಕಾರವನ್ನು ಸಾಕಷ್ಟು ಪ್ರಭಾವಿಸಿದ ಹಾಗೂ ಶ್ರೀಮಂತಗೊಳಿಸಿದ ಕೀರ್ತಿ ಅವರಿಗೆ ಸಲ್ಲಬೇಕು. ಕತೆ ಹೇಳುವಿಕೆ ಎಂಬ ಪರಂಪರೆ ನಮ್ಮ ನಾಗರೀಕತೆ ಹಾದಿಯ ಬದಿಯಲ್ಲೇ ಸಾಗಿಬಂದದ್ದು. ನಾವು,ನಮ್ಮ ಅಪ್ಪ, ಅಜ್ಜಂದಿರೆಲ್ಲಾ ತಮ್ಮ ಅಜ್ಜಿ-ಅಜ್ಜಂದಿರಿಂದ ಕಥೆ ಕೇಳುತ್ತಲೇ ಬೆಳೆದವರು. ಕಥೆ ಕೇಳುವಿಕೆಯ ಸಂಪ್ರದಾಯ ಕಡಿಮೆಯಾಗುತ್ತಾ ಬಂದತೆಲ್ಲಾ ಕಥೆ ಹೇಳುವ ಕಲಾಗಾರಿಕೆಯೂ, ಸಹಜವಾದ ಪ್ರತಿಭೆಯೂ ಮರೆಯಾಗುತ್ತಾ ಕಥೆ ಹೇಳುವುದು ಹೇಗೆ ಎಂದು ಕೇಳುವ ಹಂತವನ್ನು ನಾವು ತಲುಪಿಕೊಂಡಿದ್ದೇವೆ.book review copy.jpg

ಅದೇನೇ ಇರಲಿ, ಮಾಸ್ತಿಯವರ ಕಥೆಗಳು ಬಹುಮುಖ್ಯವಾಗಿ ಕಥೆ ಹೇಳುವ ಸಂಸ್ಕೃತಿಯ ಮುಂದುವರಿಕೆಯಂತೆ ನಮಗೆ ಕಾಣುತ್ತವೆ. ಅವರ ವಿವರೆಣೆ ತೀರಾ ಸಹಜವಾಗಿ ನಮ್ಮನ್ನು ಆವರಿಸಿಕೊಳ್ಳುತ್ತಾ ಹೋಗುತ್ತವೆ, ನಮ್ಮ ಯಾವ ಬೌದ್ಧಿಕ ಕಸರಿತ್ತಿನ ಹಂಗೂ ಇಲ್ಲದೆ ನಮ್ಮ ಕಲ್ಪನಾ ಜಗತ್ತಿನಲ್ಲಿ ಮಾಸ್ತಿಯವರ ಪಾತ್ರಗಳು ಅನಾಯಾಸವಾಗಿ ಪ್ರವೇಶ ಪಡೆದುಬಿಡುತ್ತವೆ. ಇಲ್ಲಿ ಮಾಸ್ತಿಯವರು ಕೇವಲ ಒಬ್ಬ ನಿರೂಪಕರಾಗಿ, ಪಾತ್ರಗಳು ಹೇಳುವುದನ್ನು ಕೇಳಿ ನಮಗೆ ಹೇಳುವ ಕೆಲಸವನ್ನು ಮಾಡುವವರಾಗಿ ಮಾತ್ರ ಕಾಣಿಸುತ್ತಾರೆ. ಅಲ್ಲಿ ಕಥೆಗಾರ ಮಾಸ್ತಿ ಮರೆಯಾಗಿಬಿಟ್ಟಿರುತ್ತಾರೆ, ಅವರ ಪಾತ್ರಗಳು ನಮ್ಮ ಮನೋವೇದಿಕೆಯನ್ನು ಆಕ್ರಮಿಸಿಕೊಂಡುಬಿಡುತ್ತವೆ. ಪಾತ್ರಗಳ ಸೃಷ್ಟಿಕರ್ತನಿಗಿಂತ ಪ್ರಭಾವಶಾಲಿಯಾಗಿ ಬೆಳೆಯುವ ಪಾತ್ರಗಳೇ ಅಲ್ಲವೇ ನಮಗೆ ಕಡೆತನಕ ಮನಸ್ಸಿನಲ್ಲಿ ಉಳಿಯುವುದು. ಆಗಲೇ ಕಥೆಗಾರ ಗೆಲ್ಲುವುದು.

ಶಾಸ್ತ್ರೀಯವಾಗಿ ಮಾಸ್ತಿಯವರ ಕಥೆಗಳನ್ನು ಯಾವ ರೀತಿಯಲ್ಲಿ ವಿಂಗಡಣೆ ಮಾಡುತ್ತಾರೋ ನನಗೆ ತಿಳಿದಿಲ್ಲ. ಆದರೆ ಅವರ ಕಥೆಗಳ ಅನನ್ಯನತೆಯ ಅನುಭವವನ್ನು ಮಾತ್ರ ನಿಮ್ಮೊಂದಿಗೆ ಹಂಚಿಕೊಳ್ಳಬಯಸುವೆ. ಕಥೆ ಕಥೆಗಾರನ ಒಂದು ಕಲಾಕೃತಿ. ಅದು ತನ್ನಷ್ಟಕ್ಕೆ ತಾನೇ ಸ್ವಯಂ ಸಂಪೂರ್ಣವಾದದ್ದಾಗಬೇಕು. ಕಥೆಯ ಹರಿವಿನ ನಡುವೆ ಕಥೆಗಾರ ನುಸುಳಿ ಏನಾದರೂ ಸಂದೇಶ ಕೊಡಹೊರಟರೆ ಕಥೆ ರಾಜಕೀಯ ಪ್ರಣಾಳಿಕೆಯಾಗುತ್ತದೆ. ಕಥೆಯ ಪಾತ್ರಗಳು ಕಥೆಗಾರನ ಅಭಿಪ್ರಾಯ, ಅನುಭವ ಜಗತ್ತಿನ ಹಂಗಿಗೆ ಒಳಗಾದರೆ ಕಥೆ ಬರಹಗಾರನ ಆತ್ಮಕಥೆಯಾಗುತ್ತದೆ. ಕಥೆ ಒಂದು ಕಲಾಕೃತಿಯಾಗಬೇಕಾದರೆ ಅಲ್ಲಿ ಕೇವಲ ಪಾತ್ರಗಳಿರಬೇಕು ಹಾಗೂ ಪಾತ್ರಗಳ ನಡುವೆ ಪಾರದರ್ಶಕವಾದ ಸಂವಾದವಿರಬೇಕು. ಇವುಗಳಿಗೆಲ್ಲಾ ಸಿದ್ಧ ಮಾದರಿಯ ಹಾಗೆ ಅತ್ಯುತ್ತಮ ಉದಾಹರಣೆಯಾಗಿ ನಮಗೆ ಸಿಗುವಂಥವು ಮಾಸ್ತಿಯವರ ಸಣ್ಣ ಕಥೆಗಳು.2202649087_faafa01e4b.jpg

ಮಾಸ್ತಿಯವರು ತಾವು ನಡೆಸುತ್ತಿದ್ದ ‘ಜೀವನ’ ಎಂಬ ಪತ್ರಿಕೆಯಲ್ಲಿ ನಿಯಮಿತವಾಗಿ ಕಥೆಗಳನ್ನು ಪ್ರಕಟಿಸುತ್ತಿದ್ದರು. ಅವುಗಳನ್ನು ಸಂಗ್ರಹಿಸಿ ಅನೇಕ ಸಂಪುಟಗಳಲ್ಲಿ ಪ್ರಕಟಿಸಿದ್ದಾರೆ. ನನಗೆ ಸಿಕ್ಕ ಸಂಪುಟವೊಂದರಲ್ಲಿ ನಾನು ಕಂಡ ಕಥಾ ಜಗತ್ತಿನ ಚಿತ್ರಣವನ್ನು ನಿಮ್ಮ ಮುಂದೆ ಬಿಚ್ಚಿಡಬಯಸುವೆ.

ರಂಗಸ್ವಾಮಿ ತುಂಬಾ ಸ್ಫುರದ್ರೂಪಿಯಾದವ. ಆತನ ಹೆಂಡತಿಯೂ ಸುರಸುಂದರಿಯೇ. ಆದರೆ ಆತನಿಗೆ ಆಕೆಯಲ್ಲಿ ತಾನು ಕಾಣಬಯಸುವ ಗುಣವೊಂದರ ಕೊರತೆ ಕಂಡುಬರುತ್ತದೆ. ಸರಿ, ಆ ಗುಣವಿರುವ ಹೆಂಗಸನ್ನು ಹುಡುಕಿಕೊಂಡು ಹೊರಡುತ್ತಾನೆ. ಅಂಥವಳೊಬ್ಬಳನ್ನು ಹಿಂಬಾಲಿಸುತ್ತಾನೆ. ಕಪಾಳಮೋಕ್ಷವಾಗುವುದರ ಜೊತೆಗೆ ಆತನಿಗೆ ಕವಿದ ಮಂಕು ಮೋಕ್ಷ ಕಾಣುತ್ತದೆ. ಪ್ರೀತಿ ಎಂದರೆ ಕೇವಲ ಹದಿಹರೆಯದವರ ಎದೆಯ ಮಿಡಿತ ಎಂಬಂತೆ ಬಿಂಬಿಸುವ ಸಿದ್ಧಮಾದರಿಯ ಕಥೆಗಾರರಿಗಿ ದಕ್ಕದ ಪ್ರೀತಿಯ ನೈಜ ಚಿತ್ರಣವನ್ನ ಮಾಸ್ತಿಯವರು ಕಟ್ಟಿಕೊಡುತ್ತಾರೆ. ಪ್ರೀತಿಯಲ್ಲಿ ಬಿದ್ದವರ ಅವಿವೇಕ, ತಾವು ಪ್ರೀತಿಸುವವರು ತೋರುವ ಸಹಜವಾದ ಗೌರವ, ಆತ್ಮೀಯತೆ, ನಗು ಎಲ್ಲವನ್ನೂ ತಮ್ಮೆಡೆಗಿನ ಪ್ರೀತಿಯೆಂದು ಭಾವಿಸುವ ಹೆಡ್ಡತನವನ್ನು ‘ರಂಗಸ್ವಾಮಿಯ ಅವಿವೇಕ’ದಲ್ಲಿ ಬಿಂಬಿಸಿದ್ದಾರೆ.

‘ಮಸುಮತ್ತಿ’ ಎನ್ನುವ ಕಥೆಯಲ್ಲಿ ಸೂಕ್ಷ್ಮವಾದ ಸಮಸ್ಯೆಯೊಂದನ್ನು ಕೈಗೆತ್ತಿಕೊಳ್ಳುತ್ತಾರೆ ಮಾಸ್ತಿ. ಪ್ರಾಚೀನವಾದ, ಆರ್ಷೇಯವಾದ ಸಂಗತಿಗಳನ್ನೆಲ್ಲಾ ಎತ್ತಿಕೊಂಡು ಹೋಗಿ ಮ್ಯೂಸಿಯಮ್ಮಿನ ಟ್ಯೂಬ್ ಲೈಟ್‌ನ ಬೆಳಕಿನಲ್ಲಿ ಇಟ್ಟು ಪ್ರಸಿದ್ಧಿಯನ್ನು ತಂದು ಕೊಡಲು ಬಯಸುವ ಪಾಶ್ಚೀಮಾತ್ಯ ಮನಸ್ಥಿತಿ ಹಾಗೂ ತಮ್ಮ ಹಿತ್ತಿಲಲ್ಲೇ ಇರುವಂತಹ ಇತಿಹಾಸದ ಪಳೆಯುಳಿಕೆಯನ್ನು ಅವುಗಳ ಬೆಲೆಯರಿಯದೆ ಅಸಡ್ಡೆಯಿಂದ ಕಾಣುವೆ ಈ ನೆಲದ ಜನರ ಮನಸ್ಥಿತಿಯ ಚಿತ್ರಣ ನಮಗಿಲ್ಲಿ ಸಿಗುತ್ತದೆ.

ಕುರುಡು ಹೆಂಗಸಾದ ಲಕ್ಷ್ಮಮ್ಮ ತನ್ನ ಬದುಕಿನಲ್ಲಿ ಎದುರಿಸುವ ಸಂಕಷ್ಟ, ಗಂಡನೆಡೆಗಿನ ಆಕೆಯ ಭಕ್ತಿ ಅದರ ಫಲವಾಗಿ ಉಂಟಾಗುವ ಮತಿವಿಭ್ರಾಂತಿಯ ಕಥೆ ‘ಮಾಲೂರಿನ ಲಕ್ಷ್ಮಮ್ಮ’ದಲ್ಲಿ ಬಂದುಹೋದರೆ, ‘ವೆಂಕಟ ಶಾಮಿಯ ಕಥೆ’ಯಲ್ಲಿ ಮನೆಯವರ ವಿರೋಧಕ್ಕೆ ಅಂಜದೆ ದೊಂಬರದ ಹುಡುಗಿಯನ್ನು ಮದುವೆಯಾಗಬಯಸುವ ಯುವಕ ವೆಂಕಟಶಾಮಿಯ ದುರಂತ ಪ್ರೇಮ ಕಥೆಯಿದೆ.

‘ಜೋಗ್ಯೋರ ಅಂಜಪ್ಪನ ಕೋಳಿ ಕಥೆ’ಯಲ್ಲಿ ಬದುಕಿನಲ್ಲಿ ಎದುರಾಗುವ ಕೆಲವು ಅನಿರೀಕ್ಷಿತ ಘಟನೆಗಳಿಂದ ಸಿಗುವ ಪಾಠದ ವಿವರಣೆಯಿದೆ. ಮನುಷ್ಯ ಸ್ವಭಾವಗಳ ನಿಗೂಢ ತಂತುಗಳ ಅನಾವರಣವಿದೆ. ಮನೆ ಮೆನೆಗೆ ತಿರುಗಿ ಪದ ಹಾಡಿ ಭಿಕ್ಷೆ ಪಡೆಯುವ ಅಂಜಪ್ಪ ಹುಡುಗಿಯೊಬ್ಬಳು ನೀಡಿದ ಕೋಳಿಯನ್ನು ತಾನೇ ಕದ್ದದ್ದು ಎಂದು ಒಪ್ಪಿಕೊಂಡು ಹುಡುಗಿಯ ಹೆಸರು ಉಳಿಸುತ್ತಾನೆ. ಆದರೆ ಆ ಮಹಾಪ್ರಚಂಡ ಹುಡುಗಿ ಹಿಂದೆ ತನ್ನ ಪ್ರಿಯತಮನಿಗೆ ಒಂದೆರಡು ಕೋಳಿ ಕೊಟ್ಟದ್ದನ್ನು ಮರೆಮಾಚಲು ಕೋಳಿ ಕಳ್ಳತನವಾಗಿವೆ ಎನ್ನುವುದನ್ನು ಸಾಧಿಸಲು ಅಂಜಪ್ಪನನ್ನು ಸಿಕ್ಕಿಸಿಹಾಕುತ್ತಾಳೆ.

‘ಮೊಸರಿನ ಮಂಗಮ್ಮ’ ಕಥೆಯಲ್ಲಿ ಬಹುತೇಕ ಮನೆಗಳಲ್ಲಿ ಅತ್ತೆ ಸೊಸೆಯರ ಜಗಳಕ್ಕೆ ಕಾರಣವಾಗುವ ಮಗನೆಡೆಗಿನ ತಾಯಿಯ ಅತಿಯಾದ ಪೊಸೆಸಿವ್ ನೆಸ್ ಹಾಗೂ ಅದನ್ನೇ ಪ್ರೀತಿಯೆಂದು ಭಾವಿಸುವ ದುರಂತವಿದೆ. ತನ್ನ ದರ್ಪ ಹಾಗೂ ಯಜಮಾನಿಕೆಗೆ ಆದ ಅತಿಕ್ರಮಣವನ್ನು ಸಹಿಸಲಾಗದೆ ಅದನ್ನು ತನ್ನ ಹೆಂಡತಿಯೆಡೆಗಿರುವ ಮಗನ ಸಹಜವಾದ ಮೋಹವನ್ನು ಟೀಕಿಸುವುದರಲ್ಲಿ ನಿವಾರಿಸಿಕೊಳ್ಳಬಯಸುವ ತಾಯಿಯ ಚಿತ್ರಣ ಸಿಕ್ಕುತ್ತದೆ.

ಪ್ರಕೃತಿ ಸಹಜವಾದ ಕಾಮದ ವಾಂಛೆ ಹಾಗೂ ಅದು ಮಾನವ ಸಂಬಂಧಗಳ ಮೇಲೆ ಬೀರುವ ಪರಿಣಾಮಗಳನ್ನು ‘ಗೋತಮಿ ಹೇಳಿದ ಕಥೆ’ಯಲ್ಲಿ ಕಾಣಬಹುದು. ಮನುಷ್ಯನ ಸಂಬಂಧಗಳೆಲ್ಲವೂ ನಾಗರೀಕತೆಯ ಫಲವಾದಂಥವು ಆದರೆ ಕಾಮ ಪ್ರಾಕೃತಿಕ. ಅದು ನಮ್ಮ ಸಂಬಂಧಗಳ ಮೇಲೆ ಪರಿಣಾಮ ಬೀರುವುದು ಸ್ವಾಭಾವಿಕ. ಇದನ್ನು ತಡೆಯಲು ಸಂಯಮ ಇರಬೇಕು ಎನ್ನುವುದು ಕಥೆಯಲ್ಲಿ ಮಾರ್ಮಿಕವಾಗಿ ಬಿಂಬಿತವಾಗಿದೆ.

ಒಳ್ಳೆಯತನ ಯಾವಾಗಲೇ ಕೆಡುಕಿನ ಮೇಲೆ ಗೆಲ್ಲುತ್ತದೆ ಎಂಬ ಲೋಕರೂಢಿಯ ಮಾತನ್ನು ಮರುಮಾಪನ ಮಾಡುವ ‘ಬೈಚೇಗೌಡ’ ಕಥೆಯಲ್ಲಿ ಊರಿನ ದುರಾಚಾರಿ ಶಾನುಭೋಗನನ್ನು ತನ್ನ ಒಳ್ಳೆಯತನದ ಬಲದಿಂದ ಮಣಿಸುವಲ್ಲಿ ವಿಫಲನಾಗುವ ಬೈಚೇಗೌಡನ ಕಥೆಯಿದೆ. ಮದುವೆಯೆಂಬ ಸಮಾಜದ ವ್ಯವಸ್ಥೆಗೆ ಬಲಿಯಾಗುವ ಹೆಣ್ಣು ಜೀವದ ದಾರುಣ ಕಥೆ, ಸಮಾಜದ ಢೋಂಗಿ ನಡವಳಿಕೆ ತೆರೆದಿಡುವ ‘ದುರದೃಷ್ಟದ ಹೆಣ್ಣು’, ಹಾಗೆಯೇ ಉಳಿದ ಕಥೆಗಳಾದ ‘ಟಾಂಗಾ ಹುಸೇನ’, ‘ಆಚಾರವಂತ ಅಯ್ಯಂಗಾರ್ರು’, ‘ಸಂನ್ಯಾಸ ಅಲ್ಲದ ಸಂನ್ಯಾಸ’ ನಮ್ಮನ್ನು ಹಿಡಿದಿಡುವಲ್ಲಿ ಸಫಲವಾಗುತ್ತವೆ.

ಸಾಹಿತ್ಯವನ್ನು ಗಂಭೀರವಾಗಿ ಪರಿಗಣಿಸಿ ಅಧ್ಯಯನ ಮಾಡುವವರಿಗೆ ಮಾಸ್ತಿಯವರ ಕೆಲವು ಕಥೆಗಳು ಕೇವಲ ಕೇಳಿದ, ನೋಡಿದ, ನಡೆದ ಘಟನೆಗಳ ಚಿತ್ರಣದಂತೆ ಕಂಡು ನಿರಾಶೆಯಾಗಬಹುದಾದರೂ ಅವರ ಕಥನ ಕ್ರಿಯೆಗೆ ಮಾರುಹೋಗದೆ ಅವುಗಳನ್ನು ಓದುವುದು ಅಸ್ವಾಭಾವಿಕವೆನಿಸುತ್ತದೆ ಎಂಬುದು ಸುಳ್ಳಲ್ಲ.

ಕೆ.ಎಸ್.ಎಸ್

ಈ ಸಂಚಿಕೆಯ ಡಿಬೇಟಿನ ವಿಷಯ “ವ್ಯವಸ್ಥೆ ಮನುಷ್ಯನ ಬೆಳವಣಿಗೆಗೆ ಮಾರಕವೇ, ಪೂರಕವೇ?” ವ್ಯವಸ್ಥೆ ಮನುಷ್ಯನ ಸಹಜವಾದ ಜೀವನೊಲ್ಲಾಸವನ್ನು ಕಟ್ಟಿಹಾಕುವ ಸೆರೆಮನೆ ಎಂದು ವಾದಿಸಿದ್ದಾರೆ ‘ಅಂತರ್ಮುಖಿ’.

ನಿಮ್ಮ ಅಭಿಪ್ರಾಯವೇನು ತಿಳಿಸ್ತೀರಲ್ಲಾ?

ಮನುಷ್ಯ ನಿಸರ್ಗದಿಂದ ದೂರಾದ ಪ್ರಕ್ರಿಯೆಯ ಮೊದಲ ಹಂತವೇ ವ್ಯವಸ್ಥೆ. ಭೂಮಿಯ ಮೇಲಿನ ಸಕಲೆಂಟು ಜೀವ ಜಂತುಗಳು ಸಹಬಾಳ್ವೆಯಿಂದ ಜೀವಿಸುವುದಕ್ಕೆ ಪ್ರಕೃತಿ ತನ್ನದೇ ಆದ ನಿಯಮಗಳನ್ನು ರೂಪಿಸಿದೆ. ಇದರಲ್ಲಿ ಪ್ರತಿಯೊಂದು ಜೀವಿಗೂ ಪ್ರತ್ಯೇಕವಾದ ಅಸ್ತಿತ್ವವಿದೆ. ಅವಕ್ಕೆ ಪ್ರಕೃತಿ ಕೊಡಮಾಡಿದ ತಮ್ಮವೇ ಆದ ಸಾಮರ್ಥ್ಯಗಳಿವೆ, ದೌರ್ಬಲ್ಯಗಳಿವೆ. ಮನುಷ್ಯ ಪ್ರಕೃತಿಯ ಅನುಸಾರವಾಗಿ ನಡೆದುಕೊಳ್ಳಲು ಇರುವ ಏಕೈಕ ಅಡ್ಡಿಯೆಂದರೆ ಪ್ರಕೃತಿ ವಿಧಿಸುವ ಮಿತಿಗಳು. ಈ ಎಲ್ಲಾ ಮಿತಿಗಳನ್ನು ಮೀರುವ ತುಡಿತ, ಜೀವನೋಲ್ಲಾಸವಿರುವ ಮನುಷ್ಯ ಸ್ವಭಾವತಃ ಯಾವ ವ್ಯವಸ್ಥೆಗೂ ಬಂಧಿತನಲ್ಲ. ಆತನ ಚೈತನ್ಯ ಸೀಮೆಯನ್ನು ಅರಿಯದಂಥದ್ದು. ಮನುಷ್ಯನಿಗೆ ಯಾವ ಕೌಶಲ್ಯವೂ ಹುಟ್ಟಿನಿಂದಲೇ ತಾನೇ ತಾನಾಗಿ ಕೈಗೂಡುವುದಿಲ್ಲ. ಆಗ ತಾನೆ ತಾಯ ಗರ್ಭದಿಂದ ಹೊರಬಂದ ಆಡಿನ ಮರಿ ತನ್ನ ಕಾಲ ಮೇಲೆ ತಾನು ನಿಂತು ಬಿಡಬಲ್ಲದು. ಆಹಾರ ಹುಡುಕಿ ಹೊರಟು ಬಿಡಬಲ್ಲದು. ಇದು ಪ್ರಕೃತಿ ನಿರ್ದೇಶಿತ. ಆದರೆ ಅದೇ ಆಡಿನ ಮರಿಗೆ ಪ್ರಕೃತಿ ವಿಧಿಸಿದ ಮಿತಿಯನ್ನು ಮೀರಿ ನಡೆಯುವ ಜೀವನೋಲ್ಲಾಸ ಇರುವುದಿಲ್ಲ. ಮನುಷ್ಯ ಬೇರೆಲ್ಲಾ ಜೀವಿಗಳಿಗಿಂತ ವಿಭಿನ್ನವಾಗಿರುವುದು ಇದೇ ಕಾರಣಕ್ಕೆ.

ಮನುಷ್ಯ ಚೇತನಕ್ಕೆ ಪ್ರಕೃತಿಯ ಮಿತಿಗಳನ್ನು, ಎಲ್ಲೆಯನ್ನು ಮೀರುವ ಜೀವನೊಲ್ಲಾಸವಿರುವುದು ಮಾತ್ರವಲ್ಲ, ಆತನ ಚೇತನವನ್ನು ಯಾವ ಬೇಲಿಯೂ ಕಟ್ಟಿಹಾಕಲಾರದು. ಆತನ ಮೂಲ ಸ್ವಭಾವ ಅನಿಕೇತನವಾದದ್ದು. ಮನೆಯನ್ನೆಂದೂ ಕಟ್ಟದೆ ಪರಿಪೂರ್ಣತೆಯ ಗುರಿಯೆಡೆಗೆ ಸಾಗುವುದು. ಆದರೆ ಮನುಷ್ಯ ಚೇತನದ ಜೀವನೋಲ್ಲಾಸಕ್ಕೆ, ಸಹಜವಾದ ಅಭಿವ್ಯಕ್ತಿಗೆ ಎಲ್ಲೆಯೇ ಇರದಿದ್ದರೆ ಆತನನ್ನು ನಿಯಂತ್ರಿಸಲಾಗದು, ಆತನನ್ನು ಬಗ್ಗಿಸಲು ಸಾಧ್ಯವಾಗದು ಎಂಬುದನ್ನು ಮನುಷ್ಯನೇ ಕಂಡುಕೊಂಡ. ಪ್ರಕೃತಿಯ ನಿಯಮಗಳನ್ನೇ ಮೀರಿದ ಮನುಷ್ಯ ತನ್ನ ಚೇತನದ ಅನಂತತೆಗೆ ತಾನೇ ಹೆದರಿ ಅದಕ್ಕೊಂದು ಅಣೆಕಟ್ಟು ಕಟ್ಟಿದ. ಧುಮ್ಮಿಕ್ಕಿ ಹರಿಯಬೇಕಾದ ಚೈತನ್ಯಕ್ಕೆ ಬಲವಾದ ತಡೆಗೋಡೆ ನಿರ್ಮಿಸಿ ಚೇತನವನ್ನು ಬಂಧಿಸುವ ಪ್ರಯತ್ನ ಮಾಡಿದ. ಒಂದು ಹಂತದವರೆಗೆ ಇದು ಆತನಿಗೆ ಒಳ್ಳೆಯ ಫಲವನ್ನೇ ನೀಡಿತು. ಸ್ವಚ್ಛಂದವಾಗಿ ಹರಿಯಬೇಕಾದ ಮನುಷ್ಯನ ಪ್ರಜ್ಞೆಗೆ ಅಣೆಕಟ್ಟು ಕಟ್ಟಿ ಅದನ್ನು ಮಿತವಾಗಿ ಹರಿಸುವ ವ್ಯವಸ್ಥೆ ಆತನಿಗೆ ತಕ್ಕ ಪ್ರತಿಫಲವನ್ನೂ ನೀಡಿತ್ತು. ಆದರೆ ಆ ಅಣೆಕಟ್ಟಿನ ಬಾಗಿಲುಗಳನ್ನು ಯಾವ ದಿಕ್ಕಿಗೆ ತೆರೆಯಬೇಕು, ಹರಿವು ಎಷ್ಟಿರಬೇಕು ಎನ್ನುವುದನ್ನು ತೀರ್ಮಾನಿಸಲು ತಮ್ಮಲ್ಲೇ ಒಬ್ಬನನ್ನು ಯಾವಾಗ ನೇಮಿಸಿಕೊಂಡನೋ ಅಲ್ಲಿಂದಲೇ ಅವನತಿ ಪ್ರಾರಂಭವಾಯಿತು.spirituality4.jpg

ವ್ಯವಸ್ಥೆ ಕುರುಡು. ಅದಕ್ಕೆ ಸಹಜತೆ ಕಾಣಿಸುವುದಿಲ್ಲ. ಇದಕ್ಕೊಂದು ಸರಳವಾದ ಉದಾಹರಣೆಯನ್ನು ಕೊಡುತ್ತೇನೆ ಕೇಳಿ, ವ್ಯವಸ್ಥೆಯ ರೀತಿ-ರಿವಾಜುಗಳು ಯೂನಿಫಾರಂ ಇದ್ದಂತೆ. ಸಹಸ್ರಾರು ಮಂದಿಗೆ ಒಂದೇ ರೀತಿಯ ಅಪಿಯರೆನ್ಸ್ ಕೊಡುವುದಕ್ಕಾಗಿ ಯೂನಿಫಾರಂ ಬಳಕೆ ಬಂದಂತೆ ವ್ಯವಸ್ಥೆ ರೂಪುಗೊಳ್ಳುತ್ತದೆ. ಯೂನಿಫಾರಮ್ಮಿನ ಬಣ್ಣ ಒಂದೇ ತೆರನಾದರೂ, ಯೂನಿಫಾರಂನ ಬಟ್ಟೆ ಒಂದೇ ಗುಣಮಟ್ಟದ್ದಾದರೂ ಅದರ ಅಳತೆ ಆಯಾಯ ವ್ಯಕ್ತಿಗೆ ತಕ್ಕನಾಗಿರಬೇಕು ಅಲ್ಲವೇ? ವ್ಯವಸ್ಥೆ ಎಡವಿದ್ದೇ ಇಲ್ಲಿ. ಎಲ್ಲರಿಗೂ ಒಂದೇ ಯೂನಿಫಾರಂ ಕೊಡುವ ಭರದಲ್ಲಿ ಅದು ಒಂದೇ ಸೈಜಿನ ಯೂನಿಫಾರಂಗಳನ್ನು ಹೊಲಿದು ಕೊಡುತ್ತದೆ. ಅಳತೆ ಸೂಕ್ತವಾದವರಿಗೆ ಆ ಯೂನಿಫಾರಂ ತಮಗೆ ಬೇಕಾದ ಎಲ್ಲಾ ಐಶಾರಾಮವನ್ನು ಕೊಡುತ್ತದೆ.ಕೆಲವರಿಗೆ ಅದು ಕೊಂಚ ಬಿಗ್ಗ ಬಿಗಿಯಾದರೆ ಮತ್ತೆ ಕೆಲವರಿಗೆ ದೊಗಲೆ ದೊಗಲೆಯಾಗುತ್ತದೆ. ಕುರುಡಾದ ವ್ಯವಸ್ಥೆ ತಪ್ಪನ್ನು ಯೂನಿಫಾರಂ ಮೇಲೆ ಹಾಕುವುದಿಲ್ಲ, ಯೂನಿಫಾರಮ್ಮಿನ ಅಳತೆಗೆ ಸರಿಯಾಗಿಲ್ಲದ ವ್ಯಕ್ತಿಗಳ ಮೇಲೆ ತಪ್ಪು ಹೊರಿಸುತ್ತದೆ. ವ್ಯಕ್ತಿಯ ಅಳತೆಗೆ ಅನುಗುಣವಾಗಿ ಯೂನಿಫಾರಂ ಹೊಲಿಯುವ ಬದಲಾಗಿ ಯೂನಿಫಾರಂನ ಅಳತೆಗೆ ವ್ಯಕ್ತಿಯನ್ನು ಮಿತಿಗೊಳಿಸುವ ಪ್ರಯತ್ನ ಮಾಡುತ್ತದೆ ವ್ಯವಸ್ಥೆ. ಈ ಹಂತದಲ್ಲೇ ಇದು ಮನುಷ್ಯನ ಜೀವನೋಲ್ಲಾಸಕ್ಕೆ, ಮಿತಿಯಿಲ್ಲದ ಚೇತನಕ್ಕೆ ಸೆರೆಮನೆಯಾಗುವುದು.

ಸೂಕ್ಷ್ಮವಾಗಿ ಗಮನಿಸಿ ನೋಡಿ, ಈ ಯೂನಿಫಾರಂನ ಉದಾಹರಣೆ ಎಷ್ಟು ಸಮರ್ಥವಾಗಿ ನಮ್ಮ ವ್ಯವಸ್ಥೆಯ ಗುಣ ಸ್ವಭಾವವನ್ನು ಪ್ರತಿನಿಧಿಸಬಲ್ಲದು. ಸಹಜವಾದ ಪ್ರತಿಭೆಯಿರುವ, ಹೆಚ್ಚಿನ ಬುದ್ಧಿ ಮಟ್ಟವಿರುವ ಮಕ್ಕಳು ಪರೀಕ್ಷೆಯಲ್ಲಿ ಅಂಕಗಳಿಸಲಾರದೆ ಮೂರ್ಖರೆನ್ನಿಸಿಕೊಳ್ಳುತ್ತಾರೆ. ಮಕ್ಕಳ ಸಹಜವಾದ ಬುದ್ಧಿ ಶಕ್ತಿಗೆ, ಸಾಮರ್ಥ್ಯಕ್ಕೆ ತಕ್ಕಹಾಗೆ ಶಿಕ್ಷಣ ವ್ಯವಸ್ಥೆ ರೂಪಿಸಿ ಅವರ ಬುದ್ಧಿವಂತಿಕೆಯನ್ನು ಬೆಳೆಸುವ, ಒರೆಗೆ ಹಚ್ಚುವ ಕೆಲಸ ಮಾಡುವ ಬದಲು ನಾವು ನಮ್ಮ ಶಿಕ್ಷಣ ವ್ಯವಸ್ಥೆಗೆ ಅನುಗುಣವಾಗಿ ಮಗುವಿನ ಬುದ್ಧಿವಂತಿಕೆಯನ್ನೇ, ಪ್ರತಿಭೆ, ಆಸಕ್ತಿಗಳನ್ನೇ ರೂಪಿಸುವ ತಪ್ಪು ಮಾಡುತ್ತಿದ್ದೇವೆ. ಬುದ್ಧಿವಂತ ಮಗು ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸದಿದ್ದರೆ ಅದು ವ್ಯವಸ್ಥೆಯ ಲೋಪವಾಗುವುದರ ಬದಲು ಮಗುವಿನ ಲೋಪವಾಗಿ, ಅಪರಾಧವಾಗಿ ಕಾಣುತ್ತದೆ. ತರಗತಿಯಲ್ಲಿ ಅತ್ಯಂತ ಮಂದ ಮತಿಯ ವಿದ್ಯಾರ್ಥಿ ಎಂದು ಹೆಸರುಗಳಿಸಿದ್ದ ಆಲ್ಬರ್ಟ್ ಐನ್‌ಸ್ಟೀನ್, ಮೂರ್ಖ ಎಂದು ಶಿಕ್ಷಕರಿಂದ ಮೂದಲಿಸಲ್ಪಟ್ಟಿದ್ದ ಥಾಮಸ್ ಅಲ್ವಾ ಎಡಿಸನ್ ಜಗತ್ತೇ ತಲೆಬಾಗುವ ಬುದ್ಧಿವಂತರಾಗಿ ಮಿಂಚಿದ್ದು ವ್ಯವಸ್ಥೆಯನ್ನು ಮೀರಿದ್ದರಿಂದ. ಇದನ್ನೇ ಹೆಸರಾಂತ ಚಿಂತಕರೊಬ್ಬರು, ‘ನಾನು ಪರೀಕ್ಷೆಯಲ್ಲಿ ಫೇಲ್ ಆಗಲಿಲ್ಲ. ಪರೀಕ್ಷೆ ನನ್ನನ್ನು ಪರೀಕ್ಷಿಸುವಲ್ಲಿ ಫೇಲ್ ಆಯಿತು’ ಎಂದು ವ್ಯವಸ್ಥೆಯ ವಿಪರ್ಯಾಸವನ್ನು ವಿವರಿಸಿದ್ದಾರೆ.

ವ್ಯವಸ್ಥೆ ನಿಂತಿರುವುದೇ ಅದನ್ನು ಪಾಲಿಸುವವರ ದೌರ್ಬಲ್ಯಗಳ ಮೇಲೆ. ಮೂಲದಲ್ಲಿ ಒಂದೇ ಆಗಿರುವ ಸತ್ಯವನ್ನು ಕಾಣುವ, ಪರಿಪೂರ್ಣತೆಯನ್ನು ಕಂಡುಕೊಳ್ಳುವ ಸಾಮರ್ಥ್ಯವಿರದ ಜನರಿರುವುದರಿಂದಲೇ ಹತ್ತಾರು ಧರ್ಮಗಳು ಬದುಕಿರುವುದು. ಇಡೀ ಮನುಷ್ಯ ಕುಲ ಒಂದೇ ಸತ್ಯದೆಡೆಗೆ ಮುಖ ಮಾಡಿರುವುದು ಎಂಬ ಅರಿವನ್ನು ಪಡೆಯಲಾಗದಿರುವುದರಿಂದಲೇ ಸಾವಿರಾರು ಪಂಥಗಳು ಉಸಿರಾಡುತ್ತಿರುವುದು. ಹೆಣ್ಣು ಗಂಡಿನ ನಡುವಿನ ಸಂಬಂಧ ಕೇವಲ ಲೈಂಗಿಕ ಹಸಿವಿನ ಪೂರೈಕೆಗಷ್ಟೇ ಅಲ್ಲದೆ, ಆತ್ಮಗಳ ಸಮ್ಮಿಲನಕ್ಕೆ, ಸಂತಾನ ಪೋಷಣೆಗೆ ಎಂಬ ಸತ್ಯವನ್ನು ಅರಗಿಸಿಕೊಳ್ಳಲಾಗದಿರುವುದರಿಂದಲೇ ನಮ್ಮ ಸಮಾಜಕ್ಕೆ ಮದುವೆ ಎಂಬ ವ್ಯವಸ್ಥೆಯ ಆವಶ್ಯಕತೆ ಕಂಡಿದ್ದು. ಮನುಷ್ಯನಿಗೆ ತನ್ನ ಅರಿ ಷಡ್ವರ್ಗವನ್ನು ನಿಯಂತ್ರಿಸಿಕೊಳ್ಳುವ ಸಾಮರ್ಥ್ಯ ಇಲ್ಲ ಎಂಬ ಅರಿವಾದಾಗಲೇ ಪೊಲೀಸು, ನ್ಯಾಯಾಲಯ, ಕಾನೂನಿನ ನೆರವು ಬೇಕಾಯಿತು. ಮನುಷ್ಯನ ಪ್ರೀತಿಗೆ,ಹೃದಯದ ಮಿಡಿತಕ್ಕೆ ಎಲ್ಲೆಯನ್ನು ವಿಧಿಸಲಾಗದು ಎಂಬ ಸೂಕ್ಷ್ಮವನ್ನು ಅರಿಯಲು ಮನುಷ್ಯ ಎಡವಿರುವುದರಿಂದಲೇ ಪಾತಿವ್ರತ್ಯ, ಏಕ ಪತಿ ವ್ರತಸ್ಥನ ಆದರ್ಶಗಳನ್ನು ರೂಪಿಸಿಕೊಂಡಿರುವುದು. ಒಂದು ವೇಳೆ ಈ ಮಿತಿಗಳನ್ನು ಮೀರಿದ ಮನುಷ್ಯ ಚೇತನಗಳು ಭೂಮಿಯಲ್ಲಿ ಜನಿಸಿದರೆ ವ್ಯವಸ್ಥೆಯನ್ನು ಆತನ ಸತ್ಯಕ್ಕೆ ಅನುಗುಣವಾಗಿ ಬೆಳೆಸಿ ವಿಸ್ತರಿಸುವ ಬದಲು ಆ ಚೇತನಗಳನ್ನೇ ನಿರ್ನಾಮ ಮಾಡುವ ಮೂಲಕ ವ್ಯವಸ್ಥೆಯೆ ನೆಮ್ಮದಿಗೆ ಯಾವ ತೊಂದರೆಯೂ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ಯೇಸು ಕ್ರಿಸ್ತ ಶಿಲುಬೆಯೇರಬೇಕಾದ್ದು ಇದಕ್ಕಾಗಿಯೇ, ಸಾಕ್ರಟಿಸ್ ವಿಷ ಕುಡಿದು ಪ್ರಾಣ ನೀಗಬೇಕಾದ್ದು ಈ ಕಾರಣಕ್ಕಾಗಿಯೇ. ಚರ್ಚು ದಾರ್ಶನಿಕರನ್ನು, ವಿಜ್ಞಾನಿಗಳನ್ನು ಕೊಲ್ಲುತ್ತಿದ್ದದ್ದು ವ್ಯವಸ್ಥೆಯ ಅಮಲಿನಿಂದಾಗಿಯೇ.

ವ್ಯವಸ್ಥೆಯೆಂಬುದು ಕೋಮಲವಾದ ಸಸಿಯನ್ನು ಹೊರಗಿನ ಶಕ್ತಿಗಳಿಂದ, ದನ ಕರುಗಳಿಂದ ರಕ್ಷಿಸುವ ಬೇಲಿಯಾಗಿ ಮಾತ್ರ ಕೆಲಸ ಮಾಡಬೇಕು. ಸಸಿ ಮರವಾಗಿ ಬೆಳೆಯಲು, ಸಾವಿರಾರು ಹಸಿರು ಎಲೆಗಳನ್ನು, ಹೂವು ಹಣ್ಣುಗಳನ್ನು ತೊಟ್ಟು ನಿಂತುಕೊಳ್ಳಲು ಸಹಾಯಕವಾಗಬೇಕು. ಆದರೆ ನಾವು ಕಟ್ಟಿಕೊಂಡಿರುವ ವ್ಯವಸ್ಥೆಯು ಸಸಿಯ ಬೆಳವಣಿಗೆಗೆ ಅಡ್ಡಿಯಾಗುವ ಸೆರೆಮನೆಯಾಗಿದೆ. ಆ ಸೆರೆಮನೆಯ ಬಲಿಷ್ಠ ಗೋಡೆಗಳೊಳಗೆ ಸಸಿಯು ಜೀವ ಕಳೆದುಕೊಂಡು ಮುರುಟಿಹೋಗುತ್ತಿದೆ. ಇದೇ ವ್ಯವಸ್ಥೆಯ ದುರಂತ!


Technorati : , ,

ಈ ಸಂಚಿಕೆಯ ಡಿಬೇಟಿನ ವಿಷಯ “ವ್ಯವಸ್ಥೆ ಮನುಷ್ಯನ ಬೆಳವಣಿಗೆಗೆ ಮಾರಕವೇ, ಪೂರಕವೇ?” ವ್ಯವಸ್ಥೆ ಮನುಷ್ಯನನ್ನು ತನ್ನದೇ ಕ್ರೂರತೆ, ದೌರ್ಬಲ್ಯಗಳಿಂದ ರಕ್ಷಿಸುವ ಕೋಟೆಯಿದ್ದಂತೆ ಎಂದು ವಾದಿಸಿದ್ದಾರೆ ಸುಪ್ರೀತ್.ಕೆ.ಎಸ್.

ನಿಮ್ಮ ಅಭಿಪ್ರಾಯವೇನು ತಿಳಿಸ್ತೀರಲ್ಲಾ?

ವ್ಯವಸ್ಥೆಯು ಮನುಷ್ಯನ ಸಮಗ್ರವಾದ ಅಭಿವ್ಯಕ್ತಿಗೆ ತೊಡಕಾಗುತ್ತದೆಯೇ ಇಲ್ಲವೇ ಎಂದು ಚರ್ಚಿಸುವ ಮೊದಲು ವ್ಯವಸ್ಥೆಯ ಹುಟ್ಟಿಗೆ ಕಾರಣವಾದ ಸಂಗತಿಗಳನ್ನು ಗಮನಿಸೋಣ. ಈ ಭೂಮಿಯ ಮೇಲಿರುವ ಯಾವ ಪ್ರಕ್ರಿಯೆಗಳನ್ನೇ ಗಮನಿಸಿ, ಅಲ್ಲಿ ವ್ಯವಸ್ಥೆಯೆಂಬುದು ಎದ್ದು ಕಾಣುತ್ತದೆ. ಇಡೀ ವಿಶ್ವ ನಡೆಯುತ್ತಿರುವುದು ಅಗೋಚರವಾದ ವ್ಯವಸ್ಥೆಯ ಮೇಲೆ. ಸೂರ್ಯನ ಸುತ್ತ ಗ್ರಹಗಳು ವ್ಯವಸ್ಥಿತವಾಗಿ ಸುತ್ತುಹಾಕುತ್ತಿರುವುದರಿಂದಲೇ ಭೂಮಿಯ ಮೇಲೆ ಜೀವದ ಉಗಮ ಸಾಧ್ಯವಾದದ್ದು. ಭೂಮಿಯಲ್ಲಿ ಹಗಲು ರಾತ್ರಿಗಳೆಂಬ ವ್ಯವಸ್ಥೆಗೆ ಅನುಗುಣವಾಗಿ ಜೀವಿಗಳು ಹಾಗೂ ಅವುಗಳ ಜೀವನ ವಿಧಾನ ರೂಪುಗೊಂಡಿದೆ. ಪ್ರಕೃತಿಯಲ್ಲಿರುವಷ್ಟು ಸುಸಜ್ಜಿತವಾದ ವ್ಯವಸ್ಥೆಯನ್ನು ಮಾನವ ಆದರ್ಶವಾಗಿ ಇಟ್ಟುಕೊಳ್ಳಬಹುದು ಅಷ್ಟು ವ್ಯವಸ್ಥಿತವಾದ ಪ್ರಕ್ರಿಯೆಗಳು ಪ್ರಕೃತಿಯಲ್ಲಿ ನಡೆಯುತ್ತವೆ. ಎಲ್ಲೋ ಬಿದ್ದ ಬೀಜದಿಂದ ಹುಟ್ಟಿದ ಹುಲ್ಲಿಗೆ ಸಿಗುವ ಸೂರ್ಯನ ಬೆಳಕು, ಮಳೆಯ ನೀರು, ಮಣ್ಣಿನ ಸತ್ವದಿಂದ ಅದು ಪೌಷ್ಟಿಕವಾಗಿ ಬೆಳೆಯುತ್ತದೆ. ಅದನ್ನು ತಿನ್ನುವ ಮೊಲಗಳ ಹಿಂಡನ್ನೇ ಆಹಾರಕ್ಕಾಗಿ ಅವಲಂಬಿಸಿದ ಮಾಂಸಾಹಾರಿ ಮೃಗಗಳಿರುತ್ತವೆ. ಆ ಮಾಂಸಾಹಾರಿಗಳ ಸಂಖ್ಯೆ ವಿಪರೀತವಾಗಬಾರದೆನ್ನುವ ಎಚ್ಚರಿಕೆ ಅವುಗಳ ಸಂತಾನೋತ್ಪತ್ತಿಯ ಮಿತಿಯನ್ನು ನಿಗಧಿಪಡಿಸುತ್ತದೆ. ಪ್ರತಿಯೊಂದಕ್ಕೂ ಅರ್ಹವಾದ ಪ್ರಾಮುಖ್ಯತೆ ಹಾಗೂ ಸ್ಥಾನವನ್ನು ಕೊಟ್ಟು ಸಲಹುವ ಶಕ್ತಿಯಿರುವುದು ವ್ಯವಸ್ಥೆಗೆ.

ಪ್ರಾಕೃತಿಕವಾದ ವ್ಯವಸ್ಥೆಗೆ ಅನುಗುಣವಾಗಿ ನಡೆಯಲು ಪ್ರಜ್ಞೆಯ ಆವಶ್ಯಕತೆಯಿಲ್ಲ. ಪ್ರಾಣಿಗಳ ಹಾಗೆ ಪ್ರಕೃತಿಯ ನಿಯಮಗಳಿಗನುಸಾರವಾಗಿ ಸಾಗಲು ಬುದ್ಧಿ ಶಕ್ತಿ, ವಿವೇಚನಾ ಸಾಮರ್ಥ್ಯದ ಅಗತ್ಯತೆಯಿಲ್ಲ. ಆದರೆ ಮನುಷ್ಯ ಬುದ್ಧಿ ಜೀವಿ ಆತನಿಗೆ ವಿವೇಚನೆಯ ಶಕ್ತಿಯಿದೆ. ಆತ ಪ್ರಕೃತಿಯ ನಿಯಮಗಳಿಗೆ ತಲೆಬಾಗಲು ಆತನ ಪ್ರಜ್ಞೆ ಬಿಡುವುದಿಲ್ಲ. ಸದಾ ಆತನಿಗೆ ಮೀರುವ, ಕಾಣದ್ದನ್ನು ಹಿಡಿಯುವ ಹಂಬಲ. ಹೀಗಾಗಿ ಆತ ಪ್ರಕೃತಿ ವಿಧಿಸುವ ನಿಯಮಗಳಿಗೆ ಬದ್ಧನಾದವನಲ್ಲ. ಆತ ಸ್ವಚ್ಛಂದ ಜೀವಿ.

ಒಮ್ಮೆ ಹೀಗೆ ಸ್ವಚ್ಛಂದತೆಯ ರುಚಿ ಕಂಡ ಮನುಷ್ಯನಿಗೆ ಪ್ರಕೃತಿಯ ಮತ್ತಷ್ಟು ನಿಯಮಗಳನ್ನು ಮುರಿಯುತ್ತಾ ತನ್ನ ಮನಸ್ಸು ಎಳೆದ ಕಡೆಗೆ ಸಾಗುವ ಹಂಬಲ ತೀವ್ರವಾಗಲಾರಂಭಿಸುತ್ತದೆ. ಬರುಬರುತ್ತಾ ಆತನ ಸ್ವಚ್ಛಂದತೆ ಇತರರ ಪಾಲಿನ ನೆಮ್ಮದಿಯ ತೆರಿಗೆಯನ್ನು ಬಯಸಲು ಶುರು ಮಾಡುತ್ತದೆ. ಆಗಲೇ ಅನಾಹುತದ ಪ್ರಕ್ರಿಯೆ ಶುರುವಾಗುವುದು. ಒಬ್ಬ ಮನುಷ್ಯನ ಸ್ವಾತಂತ್ರ್ಯದ ಧ್ವಜ ಇನ್ನೊಬ್ಬನ ಶವದ ಮೇಲೆ ಹಾರಾಡಬಾರದಲ್ಲವಾ? ಈ ಕಾರಣಕ್ಕಾಗಿ ಮನುಷ್ಯನಿಗೆ ತನ್ನನ್ನೇ ತಾನು ನಿಯಂತ್ರಿಸಿಕೊಳ್ಳುವ, ತನ್ನ ಸ್ವಾತಂತ್ರ್ಯ ಹಾಗೂ ಸ್ವಚ್ಛಂದತೆ ಮತ್ತೊಬ್ಬನ ಸ್ವಾತಂತ್ರ್ಯ ಹರಣ ಮಾಡದ ಹಾಗೆ ಎಚ್ಚರ ವಹಿಸುವ ಸಲುವಾಗಿ ವ್ಯವಸ್ಥೆಯ ಆವಶ್ಯಕತೆ ಎದ್ದು ಕಂಡಿತು. ಮನುಷ್ಯನ ವೈಯಕ್ತಿಕ ವ್ಯಕ್ತಿತ್ವಕ್ಕೆ ಸಾಮಾಜಿಕ ಆಯಾಮವೂ ದೊರೆಯಲು ಪ್ರಾರಂಭವಾಯಿತು. ಒಂದು ಆದರ್ಶಯುತ ವ್ಯವಸ್ಥೆಯನ್ನು ರೂಪಿಸಿಕೊಳ್ಳುವೆಡೆ ಮನುಷ್ಯನ ನಿರಂತರ ಅನ್ವೇಷಣೆ ನಡೆಯುತ್ತಲೇ ಇದೆ. ಪರಿಪೂರ್ಣತೆಯನ್ನು ಬೆನ್ನಟ್ಟುತ್ತಾ ಮನುಷ್ಯ ಸಾಗುತ್ತಲೇ ಇದ್ದಾನೆ.Untitled picture.png

ಒಂದು ವ್ಯವಸ್ಥೆಯಲ್ಲಿ ಎಷ್ಟೇ ಕುಂದುಗಳಿದ್ದರೂ ವ್ಯವಸ್ಥೆಯ ಆವಶ್ಯಕತೆ ಮನುಷ್ಯನಿಗೆ ಇದ್ದೇ ಇದೆ. ಇದಕ್ಕೆ ಒಂದು ಸರಳವಾದ ಉದಾಹರಣೆಯನ್ನು ಕೊಡುತ್ತೇನೆ ಕೇಳಿ. ಪ್ರಕೃತಿಯಲ್ಲಿರುವ ಪ್ರತಿಯೊಂದು ಜೀವಿಗೂ ತನ್ನದೇ ಆದ ಸಾಮರ್ಥ್ಯವಿದೆ ಹಾಗೂ ತನ್ನದೇ ಆದ ದೌರ್ಬಲ್ಯಗಳಿವೆ. ಒಂದು ಪ್ರಾಣಿಯ ಬದುಕು ತನ್ನ ಸಾಮರ್ಥ್ಯದ ಮೇಲೆ ಹಾಗೂ ಇತರರ ದೌರ್ಬಲ್ಯದ ಮೇಲೆ ಅವಲಂಬಿತವಾಗಿದೆ. ಕಾಡಿನಲ್ಲಿ ಬೆಳೆದ ಹಸಿರು-ಹುಲ್ಲು ತಿಂದು ಬೆಳೆಯುವ ಮೊಲಕ್ಕೆ ತಾನು ಸಸ್ಯಾಹಾರಿಯಾಗಿರುವುದು ತನ್ನ ಬದುಕಿನ ಪ್ಲಸ್ ಪಾಯಿಂಟ್ ಆದರೆ ತಾನು ಹುಲಿಯಷ್ಟು ಬಲಶಾಲಿಯಾಗದಿರುವುದು ಅದಕ್ಕೆ ಆಪತ್ತು. ಇನ್ನು ಹುಲಿಗೋ, ಮೊಲದಂತಹ ಪ್ರಾಣಿಗಳ ಮೇಲೆರಗಿ ಅವುಗಳ ರಕ್ತ ಹೀರುವಷ್ಟು ಕಸುವು ಮೈಯಲ್ಲಿರುವುದೇ ವರವಾದರೆ, ಯಥೇಚ್ಛವಾಗಿರುವ ಸಸ್ಯ ಆಹಾರವನ್ನು ದಕ್ಕಿಸಿಕೊಳ್ಳಲಾಗದ ದೌರ್ಬಲ್ಯವೇ ಶಾಪ.ಸಾಮರ್ಥ್ಯದ ಜೊತೆಗೆ ದೌರ್ಬಲ್ಯ, ಶಕ್ತಿಯ ಜೊತೆಗೆ ಬಲಹೀನತೆ ಇದ್ದಾಗಲೇ ಈ ಎರಡೂ ವರ್ಗದ ಪ್ರಾಣಿಗಳ ಬದುಕು ಸಾಧ್ಯವಾಗುವುದು.

ಆದರೆ ಮನುಷ್ಯನ ವಿಚಾರದಲ್ಲಿ ಪ್ರಕೃತಿ ಕೊಂಚ ಉದಾರತೆಯನ್ನು ತೋರಿದೆ. ತಾನಾಗಿ ಆಯ್ದು ಸಾಮರ್ಥ್ಯ, ದೌರ್ಬಲ್ಯಗಳನ್ನು ನಿರ್ಧರಿಸಿದೆ ನಮ್ಮ ನಮ್ಮ ಪರಿಶ್ರಮ, ವಿವೇಕಕ್ಕೆ ಅನುಗುಣವಾಗಿ ಬೆಳೆಯಲು ಅನುವು ಮಾಡಿಕೊಟ್ಟಿದೆ. ಅನಂತ ಅವಕಾಶಗಳನ್ನು ನಮ್ಮ ಮುಂದೆ ಇಟ್ಟಿದೆ. ಹುಲಿಯ ಮರಿಯೊಂದು ಬೆಳೆಯುತ್ತಾ ಬೆಳೆಯುತ್ತಾ ಬೇಟೆ ಆಡುವುದರಲ್ಲಿ ತನ್ನ ಕೌಶಲ್ಯವನ್ನು ಬೆಳೆಸಿಕೊಳ್ಳುತ್ತಾ ಹೋಗಬಹುದೇ ವಿನಃ ಅದು ಎಂದಿಗೂ ತನ್ನ ಆಹಾರ ಬೇಟೆ ಆಡಿಕೊಡಲು ಗುಲಾಮರಾಗಿ ನರಿಯನ್ನೋ, ತೋಳಗಳನ್ನೋ ಬಳಸಿಕೊಳ್ಳುವ ಆಲೋಚನೆ ಮಾಡಲಾಗದು. ಮನುಷ್ಯನ ಪಾಲಿಗೆ ವರವಾಗಿಯೂ, ಶಾಪವಾಗಿಯೂ ಲಭ್ಯವಾಗಿರುವುದೇ ಈ ಸವಲತ್ತು. ಪ್ರಕೃತಿ ನೀಡಿರುವ ವಿವೇಕ, ಸ್ವತಂತ್ರ ಆಲೋಚನಾಶಕ್ತಿಯಿಂದಾಗಿ ಮನುಷ್ಯ ಹೆಚ್ಚು ಹೆಚ್ಚು ಬುದ್ಧಿವಂತನಾದಷ್ಟೂ ಹೆಚ್ಚು ಮೋಸಗಾರನಾಗುತ್ತಾ ಹೋಗುತ್ತಾನೆ. ಪರಿಪೂರ್ಣತೆಯ ಹಾದಿಯಲ್ಲಿ ಸಾಗುವ ಉಮ್ಮೇದಿಯೇ ಇರದ ಸಹಸ್ರಾರು ಜೀವಜಂತುಗಳ ಹಾಗೆ ಮನುಷ್ಯನೂ ಇದ್ದಿದ್ದರೆ ಯಾವ ತೊಂದರೆಯೂ ಇರುತ್ತಿರಲಿಲ್ಲ. ಆದರೆ ಪ್ರಕೃತಿ ಮನುಷ್ಯನಿಗೆ ಆ ಹಸಿವಿನ ಬೆಂಕಿಯನ್ನು ಹಚ್ಚಿ ಕಳುಹಿಸಿದೆ. ಹೀಗೆ ಎಲ್ಲರೂ ತಮ್ಮ ಪರಿಪೂರ್ಣತೆಯ ಹಸಿವನ್ನು ಇಂಗಿಸಿಕೊಳ್ಳಲು ಹೊರಟಾಗ ಸ್ಪರ್ಧೆಯೆಂಬುದು ಅನಿವಾರ್ಯ. ಎತ್ತರೆತ್ತರಕ್ಕೆ ಹೋದವನು ಕೆಳಗಿನವನ ಶೋಷಣೆಯನ್ನು ಮಾಡಲು ಶುರುಮಾಡುತ್ತಾನೆ. ಇದನ್ನು ಹೀಗೇ ಬಿಟ್ಟರೆ ಮನುಷ್ಯ ಭಸ್ಮಾಸುರನ ಹಾಗೆ ತನ್ನ ತಲೆಯ ಮೇಲೆ ತಾನೇ ಕೈಯಿಟ್ಟುಕೊಂಡು ಭಸ್ಮವಾಗುತ್ತಾನೆ. ಈ ಅಪಾಯದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಮನುಷ್ಯ ವ್ಯವಸ್ಥೆಯ ಮೊರೆ ಹೋಗುತ್ತಾನೆ.

ವ್ಯವಸ್ಥೆ ಮನುಷ್ಯನದೇ ಸೃಷ್ಟಿಯಾದರೂ ಅದನ್ನಾತ ತನ್ನ ಧೀಶಕ್ತಿಗಿಂತ ಹೆಚ್ಚು ಬಲಿಷ್ಠವಾಗಿಸುವಲ್ಲಿ, ಶಕ್ತಿಶಾಲಿಯಾಗಿಸುವಲ್ಲಿ, ಸಮರ್ಥವಾಗಿಸುವಲ್ಲಿ ಸದಾ ಕಾರ್ಯಶೀಲನಾಗಿರುತ್ತಾನೆ. ಏಕೆಂದರೆ ಈ ವ್ಯವಸ್ಥೆಗೆ ಇಡೀ ಮಾನವ ಸಮಾಜವನ್ನು ನಿಯಂತ್ರಿಸುವ ಶಕ್ತಿ ಬೇಕು. ಅತಿ ಬಲಿಷ್ಠನ ಕಾಲ್ತುಳಿತದಿಂದ ಅತಿ ದುರ್ಬಲನಾದವನನ್ನು ರಕ್ಷಿಸಲು ವ್ಯವಸ್ಥೆಗೆ ಬಲಿಷ್ಠನಿಗಿಂತ ಹೆಚ್ಚಿನ ಶಕ್ತಿಬೇಕು. ವ್ಯವಸ್ಥೆಯ ಹಲ್ಲುಗಳು ಹೆಚ್ಚು ಹರಿತವಾಗಿರಬೇಕು. ಈ ನಿಟ್ಟಿನಲ್ಲಿ ಸಾಗುವಾಗ ವ್ಯವಸ್ಥೆ ಕೊಂಚ ಕ್ರೂರಿಯಾಗಬೇಕಾಗುತ್ತದೆ, ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವಾಗ ವ್ಯವಸ್ಥೆಯ ಮುಳ್ಳಿನ ಮೊನಚು ಕೋಮಲವಾದ ಹೂವಿನ ಪಕಳೆಗಳ ಕೆನ್ನೆಯನ್ನು ಗೀರಲೂ ಬಹುದು. ಇದು ವ್ಯವಸ್ಥೆ ತಂದೊಡ್ಡುವ ಅನಿವಾರ್ಯತೆ.

ವ್ಯವಸ್ಥೆ ಬಹುಪಾಲು ಮಂದಿ ವಾದಿಸುವಂತೆ ಜಡವಲ್ಲ. ಅದು ನಿತ್ಯ ಚಲನೆಯಲ್ಲಿರುವಂಥದ್ದು. ವ್ಯವಸ್ಥೆಗೆ ಸ್ವತಂತ್ರವಾದ ಅಸ್ತಿತ್ವವಿಲ್ಲ. ಅದು ಅದನ್ನೊಪ್ಪಿಕೊಂಡ ಮಾನವ ಸಮೂಹದ ಅಡಿಯಾಳು. ಅವರ ಮರ್ಜಿಯಂತೆ ಅದು ಕೆಲಸ ಮಾಡುತ್ತದೆ. ಒಂದು ವ್ಯವಸ್ಥೆಯಲ್ಲಿನ ಕುಂದು, ಕೊರತೆ, ಅನ್ಯಾಯಗಳಿಂದ ಕುದ್ದ ಜನ ಸಮೂಹ ಕ್ರಾಂತಿಗೆ ಕೈ ಹಾಕುತ್ತದೆ ಹೊಸ ವ್ಯವಸ್ಥೆಗೆ ನಾಂದಿ ಹಾಡುತ್ತದೆ. ಹೊಸತಾಗಿ ಕಟ್ಟಿಕೊಂಡ ವ್ಯವಸ್ಥೆ ಸ್ವಲ್ಪ ಕಾಲ ಹಳೆಯ ವ್ಯವಸ್ಥೆ ಮಾಡಿ ಹೋದ ಗಾಯಗಳಿಗೆ ಮುಲಾಮು ಸವರುವ ಕೆಲಸ ಮಾಡುತ್ತದೆ, ಆದರೆ ಕಾಲಾ ನಂತರ ಹೊಸ ವ್ಯವಸ್ಥೆಯ ಹಲ್ಲುಗಳೂ ಹರಿತವಾದಷ್ಟು ಅದು ಉಂಟು ಮಾಡುವ ಗಾಯಗಳಿಂದಾಗಿ ಮತ್ತೊಂದು ಹೊಸ ವ್ಯವಸ್ಥೆಯ ಆವಶ್ಯಕತೆ ಹುಟ್ಟಿಕೊಳ್ಳುತ್ತದೆ. ಜಮೀನ್ದಾರೀ ವ್ಯವಸ್ಥೆಯ ಉಪಟಳದಿಂದ ಬೇಸತ್ತ ರಷ್ಯಾ ಅಪ್ಪಿಕೊಂಡ ಕಮ್ಯುನಿಸಂನ ಮುಷ್ಠಿಯಿಂದ ಪಾರಾಗಲಿಕ್ಕೆ ಪಟ್ಟ ಪಾಡು ಇಲ್ಲಿ ಉಲ್ಲೇಖಾರ್ಹ.

ವ್ಯವಸ್ಥೆಯೆಂಬುದು ನಮ್ಮ ರಕ್ಷಣೆಗಾಗಿ ನಾವು ನಮ್ಮ ಸುತ್ತ ಕಟ್ಟಿಕೊಂಡ ಕೋಟೆ. ಆದರೆ ಅದೇ ನಮ್ಮನ್ನು ಬಂಧಿಸಿಡಬಲ್ಲ ಸೆರೆಮನೆಯಾಗಬಹುದು. ಕೋಟೆಯ ಬಲಿಷ್ಠವಾದ ನಾಲ್ಕು ಗೋಡೆಗಳು ಸೆರೆಮನೆಯ ಗೋಡೆಗಳಾಗಬಹುದು. ಎಲ್ಲರಲ್ಲೂ ಸೆರೆಮನೆಯ ಗೋಡೆಗಳನ್ನು ಜಜ್ಜಿ ಪುಡಿ ಪುಡಿ ಮಾಡಿ ಹೊರಕ್ಕೆ ಹಾರುವ ತುಡಿತವಿರುತ್ತದೆಯಾದರೂ ಕೋಟೆಯಿಂದ ಹೊರಬಂದು ವಿಶಾಲ ಬಯಲಿನಲ್ಲಿ ಇತರರ ಬಾಣಗಳಿಗೆ ನೇರ ಗುರಿಯಾಗಿ ನಿಲ್ಲುವ ಶಕ್ತಿ ಹಲವರಲ್ಲಿರುವುದಿಲ್ಲ. ಆದರೆ ಕೆಲವರು ತಮ್ಮ ಚೈತನ್ಯಕ್ಕೆ ಸೆರೆಮನೆಯಾಗಿ ಪರಿಣಮಿಸಿದ ಕೋಟೆಯ ಗೋಡೆಗಳನ್ನು ಕೆಡವಿ ಹಾಕುವ ಪ್ರಯತ್ನ ಮಾಡುತ್ತಾರೆ. ವ್ಯವಸ್ಥೆಯಿಂದ ಹೊರಗೆ ಜಿಗಿಯುವ ಸಾಹಸಕ್ಕೆ ಕೈ ಹಾಕುತ್ತಾರೆ. ಅಲ್ಲಿ ಬೇಗನೇ ಶತ್ರುವಿನ ಬಾಣಗಳಿಗೆ, ನಮ್ಮದೇ ಕೋಟೆಯ ಕಲ್ಲುಗಳ ಏಟಿಗೆ ಬಲಿಯಾಗುವ ಅಪಾಯವಿದೆಯಾದರೂ ಅವರಿಗೆ ಸೆರೆಮನೆಯಲ್ಲಿ ಬಾಳು ದೂಡುವುದಕ್ಕಿಂತ ಹೊರಗೆ ಬರುವ ಪ್ರಯತ್ನದಲ್ಲಿ ಸಾರ್ಥಕತೆ ಕಾಣುವ ಹಂಬಲವಿರುತ್ತದೆ. ಅಂಥವರನ್ನು ಯಾವ ವ್ಯವಸ್ಥೆಯೂ ಬಂಧಿಸಿಡಲಾರದು! ಆದರೆ ನಮ್ಮ ದುರದೃಷ್ಟವೆಂದರೆ ನಮ್ಮ ನಡುವೆ ಅಂಥ ಚೇತನಗಳು ಇರುವುದು ಕೇವಲ ಬೆರಳೆಣಿಕೆಯಷ್ಟು ಮಾತ್ರ!


Technorati : ,

ಈ ಲಲಿತ ಪ್ರಬಂಧದ ಲೇಖಕರು ಸುಪ್ರೀತ್.ಕೆ.ಎಸ್

ಆಗಿನ ನಮ್ಮ ಬದುಕಿನ ಸ್ಥಿತಿಯೇ ವಿಚಿತ್ರವಾಗಿರುತ್ತಿತ್ತು. ನಾಡು ಹೋಗು ಎನ್ನುವ ಹಾಗೂ ಕಾಡು ಬಾ ಎನ್ನುವ ಸ್ಥಿತಿಯಂಥದ್ದೇ. ಆದರೆ ಇಲ್ಲಿನ ವ್ಯತ್ಯಾಸ ಅಂದರೆ ನಾವು ಬಂದದ್ದು ನಮ್ಮೂರುಗಳಿಂದ ಈ ಮಾಯಾನಗರಿಗೆ. ಊರಿನಲ್ಲಿ ಉಂಡುಟ್ಟು ಕುಣಿದಾಡಿದ ಮನೆ ಬಿಟ್ಟು ಅಬ್ಬೇಪಾರಿಯಂತೆ ಕೆಲಸ ಅರಸಿಕೊಂಡು ಈ ಊರು ಸೇರಿಕೊಂಡಿದ್ದೆವು. ನಮ್ಮಂತಹ ನಾಲ್ಕಾರು ಅಬ್ಬೇಪಾರಿಗಳು ಸೇರಿ ಈ ಭಯಂಕರ ರಾಕ್ಷಸನಂತಹ ನಗರಿಯಲ್ಲಿ ಪುಟ್ಟದೊಂದು ರೂಮು ಮಾಡಿಕೊಂಡು, ಮನೆಯಿಂದ ತಂದಿದ್ದ ದುಡ್ಡನ್ನು ದಿನಕ್ಕೆರಡು ಬಾರಿ ಎಣಿಸಿಕೊಂಡು ಪಂಚೆಯ ಒಳಗಿನ ಅಂಡರ್ ವೇರಿನ ಪದರಗಳಲ್ಲಿಟ್ಟುಕೊಂಡು ಇದಕ್ಕಿಂತ ಸೇಫ್ ಜಾಗವನ್ನು ಕೊಡುವ ಗ್ಯಾರಂಟಿಯನ್ನು ಆ ಸ್ವಿಸ್ ಬ್ಯಾಂಕಿನವರೂ ಕೊಡಲಾರರು ಎಂದುಕೊಳ್ಳುತ್ತಿದ್ದೆವು!

ಹೆಸರಿಗೆ ನಮ್ಮ ದು ಒಂದೇ ಸೂರು. ಆದರೆ ಅದರಡಿ ಬದುಕುವ ನಮ್ಮಲ್ಲಿ ಚೂರೇ ಚೂರು ರುಚಿ ನೋಡಲಾದರೂ ಸಾಕೆನ್ನುವಷ್ಟೂ ಸಹ ಸಾಮ್ಯತೆಗಳಿರಲಿಲ್ಲ. ಒಬ್ಬೊಬ್ಬನದು ಒಂದೊಂದು ದಿಕ್ಕು. ಒಬ್ಬೊಬ್ಬನದು ಒಂದೊಂದು ಜಗತ್ತು, ಇತರರಿಗೆ ಅದು ಆಪತ್ತಾದರೂ ಅವನಿಗೆ ಅದೇ ಮಹತ್ತು. ಇಂತಹ ಜೀವನ ಶೈಲಿಯನ್ನು ಅಖಂಡ ಐದು ವರ್ಷಗಳ ಕಾಲ ಜೀವಿಸಿರುವ ನನಗೆ ಇದನ್ನು ಕಾಣದ ಜಗತ್ತಿನ ಜನರು ಮಾಡಿರುವ ಅನೇಕ ನುಡಿಗಟ್ಟುಗಳು ಗಮ್ಮತ್ತಿನವಾಗಿ ಕಾಣಿಸುತ್ತವೆ. ‘ಎರಡು ದೇಹ ಒಂದೇ ಜೀವ’ ಅಂತ ಪ್ರೇಮಿಗಳನ್ನು ಕರೆಯುತ್ತಾರೆ. ಈ ನುಡಿಗಟ್ಟನ್ನೇ ಸ್ವಲ್ಪ ತಿರುಚಿ, ಅಲ್ಲಿ ಇಲ್ಲಿ ಕೆರೆದು, ಕೊಂಚ ಹರಿದು ನಮ್ಮ ಆ ದಿನಗಳ ಬದುಕಿಗೆ ಅನ್ವಯಿಸುವುದಾದರೆ, ‘ ಒಂದೇ ದೇಹ, ನಾಲ್ಕು ಜೀವ, ನಾಲ್ಕು ದಿಕ್ಕು’ ಎನ್ನಬಹುದು. ಒಬ್ಬ ದಢೂತಿ ಮಾರ್ವಾಡಿಯನ್ನು ಮಣ್ಣು ಮಾಡಲು ಬೇಕಾದಷ್ಟು ಜಾಗದಲ್ಲಿ ಎಬ್ಬಿಸಿದ ಒಂದು ಬಾಗಿಲಿನ, ಅರ್ಧ ಕಿಟಕಿಯ ರೂಮಿನಲ್ಲಿ ನಾವು ನಾಲ್ಕು ಮಂದಿ ಇರುತ್ತಿದ್ದೆವು. ರಾತ್ರಿ ಎಲ್ಲರೂ ಮಲಗಿದಾಗ ನಮ್ಮನ್ನು ಯಾರಾದರೂ ದೂರದಿಂದ ನೋಡಿದರೇ ಅಲ್ಲಿರುವುದು ಒಂದೇ ದೇಹವೆನ್ನಬೇಕು ಹಾಗೆ ಇಬ್ಬರನ್ನೊಬ್ಬರು ಒತ್ತಿಕೊಂಡು, ಒಬ್ಬನ ಕಾಲೊಳಗೆ ಮತ್ತೊಬ್ಬ ಹೊಸೆದುಕೊಂಡು ಬಿದ್ದುಕೊಂಡಿರುತ್ತಿದ್ದೆವು. ರಾತ್ರಿಗಳಲ್ಲಿ ಹೀಗೆ ನಾಲ್ಕು ದೇಹಗಳು ಒಂದೇ ಎನ್ನುವಂತೆ ಬೆಸೆದು, ಹೊಸೆದು, ಮಸೆದುಕೊಳ್ಳುತ್ತಿದ್ದರೂ ಒಮ್ಮೆ ಬೆಳಗಿನ ಅಲಾರಾಂ ಕೂಗಿ (ಈ ನಗರಿಯಲ್ಲಿ ಕೂಗಲಿಕ್ಕೆ ಕೋಳಿಗಳಾದರೂ ಎಲ್ಲಿವೆ?)ದರೆ ಸಾಕು ಒಂದೊಂದು ಜೀವ ಒಂದೊಂದು ದಿಕ್ಕಿನೆಡೆಗೆ ಮುಖ ಮಾಡಿರುವುದು, ಒಬ್ಬೊಬ್ಬರೂ ಒಂದೊಂದು ಧೃವಗಳಾಗಿರುವುದು ಗೋಚರವಾಗುತ್ತದೆ.

ಇದೊಂದು ಕೆಟ್ಟ ಅಭ್ಯಾಸ ಬೆಳೆದು ಬಿಟ್ಟಿದೆ ನೋಡಿ, ಹೇಳಬೇಕಾದ ಸಂಗತಿಗೆ ಸವಿಸ್ತಾರವಾದ ಪೀಠಿಕೆ ಹಾಕುತ್ತಾ ವಿಷಯವನ್ನೇ ಮರೆತುಬಿಡುವ ಚಾಳಿ. ನಾನು ಹೇಳ ಹೊರಟದ್ದು ಐದು ವರ್ಷದ ನಮ್ಮ ನಾಲ್ವರ ಗುಂಪಿನಲ್ಲಿದ್ದ ನಮ್ಮ ತಾರಾನಾಥನ ಬಗ್ಗೆ, ಆದರೆ ಪೀಠೆಕೆಯೇ ಇಲ್ಲಿಯವರೆಗೆ ಕಾಲು ಚಾಚಿಕೊಂಡು ಬಿಟ್ಟಿತು. ಸರಿ, ಇನ್ನು ತಾರಾನಾಥನ ವಿಷಯಕ್ಕೆ ಬರೋಣ.

ತಾರಾನಾಥ ಅತ್ತ ಎತ್ತರದ ತೆಂಗಿನ ಮರವೂ ಅಲ್ಲ ಇತ್ತ ಗಿಡ್ಡಗಿನ ತುಂಬೇ ಗಿಡವೂ ಅಲ್ಲ. ಆತ ಬಣ್ಣ ಅತ್ತಕಡೆ ಗೋಡೆ ಮೇಲಿನ ಸುಣ್ಣವೂ ಅಲ್ಲ, ಇತ್ತ ಬಚ್ಚಲು ಮನೆಯ ಇದ್ದಿಲೂ ಅಲ್ಲ. ಆತನ ಮುಖ ಲಕ್ಷಣ ಅತ್ತ ಗಂಡಸಿನ ಹಾಗೂ ಇರಲಿಲ್ಲ, ಇತ್ತ ಹೆಣ್ಣಿಗನ ಹಾಗೂ ಇರಲಿಲ್ಲ. ಆತನ ಕೂದಲು ಅತ್ತ ನೀಳವಾಗಿಯೂ ಇರಲಿಲ್ಲ, ಇತ್ತ ವಿರಳವಾಗಿಯೂ ಇರಲಿಲ್ಲ. ಅವನ ಮೂಗು… ಇದೇನಿದು ಅತ್ತ ಹಾಗೂ ಇರಲಿಲ್ಲ, ಇತ್ತ ಹೀಗೂ ಇರಲಿಲ್ಲ ಅಂತ ಬರೀ ‘ಇಲ್ಲ’ಗಳನ್ನೇ ಪಟ್ಟಿ ಮಾಡುತ್ತಿರುವಿರಲ್ಲಾ ಎನ್ನುವಿರಾ? ಏನು ಮಾಡುವುದು ದೇವರನ್ನು ವಿವರಿಸುವಾಗ ನನ್ನಪ್ಪ ಅತನು ಅದೂ ಅಲ್ಲ, ಇದೂ ಅಲ್ಲ ಅಂತ ಹೇಳುತ್ತಿದ್ದದ್ದನ್ನು ಕೇಳಿ ಕೇಳಿ ನನಗೆ ಈ ಅಭ್ಯಾಸ ಹತ್ತಿಕೊಂಡಿ ಬಿಟ್ಟಿದೆ. ಇರಲಿ, ತಾರಾನಾಥ ಎಂಬ ಸಾಕಷ್ಟು ಉದ್ದವಾದ ಹೆಸರಿಗೆ ನಾವು ನಾಲ್ಕು ಅಕ್ಷರ ಹೆಚ್ಚಾಗಿ ಸೇರಿಸಿದ್ದೆವು. ಅವನನ್ನು ನಾವು ಟಾಕು ಟೀಕು ತಾರಾನಾಥ ಎಂದು ಕರೆಯುತ್ತಿದ್ದೆವು. ಅದಕ್ಕೆ ಕಾರಣ ಆತನ ಒಪ್ಪ ಓರಣ, ನಮಗೆ ಸುಸ್ತು ಹೊಡೆಸುತ್ತಿದ್ದ ಆತನ ಶಿಸ್ತು. 233.jpg

ಮನೆಯೆಂಬ ಸೇನಾ ಶಿಬಿರದಲ್ಲಿ ಸೇನಾಧಿಪತಿಯಂತಹ ಅಪ್ಪಂದಿರು ಇದ್ದಾಗಲೇ ನಾನು ಹಾಗೂ ನಮ್ಮ ನಾಲ್ವರ ಗುಂಪಿನ ಮತ್ತಿಬ್ಬರು ‘ರೂಂ ಪಾಠಿ’ಗಳು (ಸಹಪಾಠಿಗಳು ಇದ್ದಂತೆ) ಶಿಸ್ತು ಕಲಿಯದವರು ನಾವು. ಹಾಕಿಕೊಳ್ಳುವ ಬಟ್ಟೆ, ನಮ್ಮ ಊಟ, ತಿಂಡಿ, ಚಹಾ, ಕೆಲಸ, ಓದು, ಪುಸ್ತಕ-ಬ್ಯಾಗು ಯಾವುದನ್ನೂ ಒಪ್ಪವಾಗಿಟ್ಟುಕೊಳ್ಳದ ನಾವು ಹುಟ್ಟುತ್ತಲೇ ಬಂಡಾಯ ಎದ್ದವರು. ವ್ಯವಸ್ಥಿತವಾಗಿದ್ದ ಯಾವುದನ್ನು ಕಂಡರೂ ನಮ್ಮ ನೆಮ್ಮದಿ ಹಾಳಾಗಿ ಹೋಗುತ್ತಿತ್ತು. ಓರಣವಾಗಿ ಜೋಡಿಸಿಟ್ಟ ಸಾಮಾನುಗಳನ್ನೆಲ್ಲಾ ಕೆದರಿ, ಮನೆಯ ತುಂಬೆಲ್ಲಾ ಹರಡಿ ಅಮ್ಮ ಗಾಬರಿಯಾಗುವಂತೆ ಮಾಡಿದಾಗಲೇ ನಮ್ಮ ಮನಸ್ಸಿಗೆ ತೃಪ್ತಿ, ಏನನ್ನೋ ಸಾಧಿಸಿದ ಸಾರ್ಥಕತೆ. ನಮ್ಮ ಪೂರ್ವಾಶ್ರಮದ ಗುಣಲಕ್ಷಣಗಳು ಹೀಗಿರುವಾಗ ನಮಗೆ ಟಾಕು-ಟೀಕು ತಾರಾನಾಥನಂತಹ ಜೀವಿಯನ್ನು ನೋಡಿ ನಮ್ಮ ಕಣ್ಣುಗಳ ಮೇಲೇ ಸಂಶಯ ಬಂದಿತ್ತು.

ಆಗಿನ್ನೂ ನಮ್ಮ ಹತ್ತೂ ಬೈ ಹತ್ತರ ರೂಮಿನಲ್ಲಿ ಮೂರು ಮಂದಿ ಇದ್ದೆವು. ಎಂದಾದರೊಮ್ಮೆ ಪರಮ ಅವ್ಯವಸ್ಥೆಯ ಗೂಡಾದ ಊರ ಮೀನು ಮಾರುಕಟ್ಟೆಯ ಮೇಲೆ ಆ ದಯಾಮಯಿಯಾದ ದೇವರಿಗೆ ಸಡನ್ನಾದ ಪ್ರೀತಿ ಬಂದು ಅದಕ್ಕೆ ಓಡಾಡುವ ಚೈತನ್ಯ ಕೊಟ್ಟು, ನೋಡಲು ಎರಡು ಕಣ್ಣು ಕೊಟ್ಟು ನಮ್ಮ ರೂಮು ನೋಡಲು ಕಳುಹಿಸಿದರೆ ಅದು ನಮ್ಮ ರೂಮಿನ ಅವವ್ಯವಸ್ಥೆ, ಗಲೀಜು ನೋಡಿ ನಾಚಿ ಓಡಿಬಿಡುತ್ತಿತ್ತೇನೊ! ಹೀಗಿರುವಾಗ ನಮ್ಮ ಈ ಗೂಡಿಗೆ ಸೇರ್ಪಡೆಯಾದವನು ತಾರಾನಾಥ. ನಮ್ಮ ರೂಮಿನೊಳಕ್ಕೆ ಕಾಲಿಟ್ಟ ಕ್ಷಣವೇ ಆತ ಕಣ್ಣು ಕತ್ತಲೆಬಂದು ಬಿದ್ದುಬಿಟ್ಟ. ಸ್ವಲ್ಪ ಸಮಯ ಕಳೆದು ಸುಧಾರಿಸಿಕೊಂಡು ಕಣ್ಣುಬಿಟ್ಟು ನೋಡಿದವನಿಗೆ ನಮ್ಮ ರೂಮಿನ ವಿರಾಟ್ ರೂಪ ದರ್ಶನವಾಗಿ ಕಣ್ಣಲ್ಲಿ ರಕ್ತ ಬಂದಂತಾಯಿತು. ಆದರೂ ಅವನ ಶಕ್ತಿಯನ್ನು ಮೆಚ್ಚಲೇ ಬೇಕು, ಆ ನಯನ ಕಠೋರವಾದ ವಿರಾಟ್ ರೂಪದ ದರ್ಶನವನ್ನು ಸಹಿಸಿಕೊಂಡು ಯಾವ ಮುನ್ಸೂಚನೆಯೂ ಇಲ್ಲದೆ ನಾವು ಮೂರು ಜನರನ್ನೂ ರೂಮಿನಿಂದ ಹೊರಕ್ಕೆ ಅಟ್ಟಿ ರೂಮಿನ ಬಾಗಿಲನ್ನು ಒಳಗಿನಿಂದ ಜಡಿದುಕೊಂಡ.

ಒಂದು ತಾಸಾದರೂ ಮಹಾನುಭಾವ ಬಾಗಿಲು ತೆರೆಯಲೇ ಇಲ್ಲ. ನಮಗೆಲ್ಲಾ ಈತ ಒಳಗೇನು ಮಾಡಿಕೊಳ್ಳುತ್ತಾನೋ ಎನ್ನುವ ಭಯ. ಆದರೆ ಏನನ್ನೂ ಮಾಡಲಾಗದ ಶಾಕ್‌ನಿಂದ ಇನ್ನೂ ಚೇತರಿಸಿಕೊಳ್ಳಲಾಗಿರಲಿಲ್ಲ. ಸರಿಯಾಗಿ ಎರಡು ತಾಸು ಕಳೇದ ನಂತರ ಬಾಗಿಲು ತೆರೆದ. ಗಾಬರಿಯಿಂದ ರೂಮಿನೊಳಕ್ಕೆ ನಾವು ನುಗ್ಗಿದೆವು. ಈಗ ರೂಮನ್ನು ನೋಡಿ ಮೂರ್ಛೆ ಬೀಳಬೇಕಾದ ಸರದಿ ನಮ್ಮದಾಗಿತ್ತು. ಅಥವಾ ಈಗಾಗಲೇ ನಾವು ಹೃದಯಾಘಾತವಾಗಿ ಸತ್ತು ನೇರವಾಗಿ ಬಂದು ಸ್ವರ್ಗವನ್ನು ನೋಡುತ್ತಿದ್ದೇವೇನೊ ಎನ್ನುವ ಭ್ರಮೆಯಾಯಿತು. ಕೇವಲ ಎರಡು ತಾಸಿನ ಕೆಳಗೆ ಅಪ್ಪಟ ಕೊಳಗೇರಿಯಂತಿದ್ದ ನಮ್ಮ ರೂಮು ಸಾಕ್ಷಾತ್ ಇಂದ್ರದೇವನ ಅಮರಾವತಿಯಂತಾಗಿಬಿಟ್ಟಿತ್ತು! ನಮ್ಮ ಈ ಹೊಸ ‘ಅಮರಾವತಿಯ’ ಇಂದ್ರ ತಾರಾನಾಥ ಬೆಳ್ಳಿ ಬಣ್ಣದ ಬನಿಯನ್ನು, ಅದಕ್ಕೆ ಬಿಳುಪಿನಲ್ಲಿ ಸ್ಪರ್ಧೆ ಒಡ್ಡುವ ಪಂಚೆ ಸುತ್ತಿಕೊಂಡು ನಮ್ಮೆದುರು ನಿಂತಿದ್ದ.

ಆಮೇಲಿನ ಒಂದು ವಾರ ನಾವು ಈ ‘ಅನ್ಯಗ್ರಹ ಜೀವಿ’ಯ ಚರ್ಯೆಗಳನ್ನು ಕುತೂಹಲದಿಂದ ಗಮನಿಸುವುದರಲ್ಲೇ ಕಳೆದುಬಿಟ್ಟೆವು. ಬೆಳಿಗ್ಗೆ ಎಂದೂ ಸೂರ್ಯನಿಗಿಂತ ಮುಂಚೆ ಏಳುವ ಅಪರಾಧ ಮಾಡದ ನಮಗೆ ಬೆಳಿಗ್ಗೆ ಮೂರು ಘಂಟೆಗೇ ಈತ ಇಟ್ಟ ಅಲರಾಮಿನ ಬಡಿತ ಮರಣ ಮೃದಂಗವಾಗಿ ಕೇಳುತ್ತಿತ್ತು. ಮೂರು ಗಂಟೆಗೆ ಒಂದು ಸೆಕೆಂಡು ಆಚೆ, ಒಂದು ಸೆಕೆಂಡು ಈಚೆ ಇಲ್ಲ ಎನ್ನುವಂತೆ ಏಳುತ್ತಿದ್ದ ತಾರಾನಾಥ ನೇರವಾಗಿ ನಮ್ಮ ರೂಮಿನ ಸ್ನಾನದ ಸೆಕ್ಷನ್‌ಗೆ ನಡೆಯುತ್ತಿದ್ದ. ಅಲ್ಲಿ ಹಿಂದಿನ ರಾತ್ರಿಯೇ ಭರ್ತಿ ಬಕೆಟ್ ನೀರು ತುಂಬಿಸಿಟ್ಟಿರುತ್ತಿದ್ದ, ಗರಿಗರಿಯಾದ ಟವೆಲ್ಲು, ಸ್ನಾನವಾದ ನಂತರ ಹಾಕಿಕೊಳ್ಳಬೇಕಾದ ಬನಿಯನ್ನು ಲುಂಗಿ, ಅಂಡರ್ವೇರುಗಳನ್ನು ಹಿಂದಿನ ರಾತ್ರಿಯೇ ಜೋಡಿಸಿಟ್ಟಿರುತ್ತಿದ್ದ. ಎಚ್ಚರವಾದ ಕೂಡಲೇ ರೋಬೊಟ್‌ನ ಹಾಗೆ ಸ್ನಾನದ ಸೆಕ್ಷನ್‌ಗೆ ಹೋಗಿ ಸ್ನಾನ ಆರಂಭಿಸಿಬಿಡುತ್ತಿದ್ದ. ನಿಖರವಾಗಿ ಎರಡು ವರೆ ಚೊಂಬು ನೀರು ಮೈ ಮೇಲೆ ಬಿದ್ದ ಕೂಡಲೆ ಸ್ವಲ್ಪ ಕಾಲ ಮೌನ. ಆಗ ಆತನ ಮೈಗೆ ಸೋಪು ತಿಕ್ಕಿಕೊಳ್ಳುತ್ತಿದ್ದ. ಸರಿಯಾಗಿ ಎರಡು ನಿಮಿಷದ ನಂತರ ಮತ್ತೆ ನಾಲ್ಕು ಚೊಂಬು ನೀರು ಮೈ ಮೇಲೆ ಸುರಿದ ಸದ್ದು. ಮತ್ತೆ ಮೌನ. ಆಗ ಮತ್ತೊಮ್ಮೆ ಆತ ಮೈಗೆ ಸೋಪು ಹಚ್ಚುತ್ತಿದ್ದಾನೆ ಎಂದು ತಿಳಿಯಬೇಕು. ಇದಾದ ನಂತರ ಆರು ಚೊಂಬು ನೀರು. ಇಷ್ಟಾಗುತ್ತಿದ್ದಂತೆಯೇ ಹದಿನೈದು ನಿಮಿಷವಾಗುತ್ತಿತ್ತು. ಆತ ಹಿಂದಿನ ದಿನ ತೊಟ್ಟುಕೊಂಡಿದ್ದ ಬನೀನು, ಪಂಚೆಯನ್ನು ಅದೇ ಬಕೆಟ್ಟಿನಲ್ಲಿ ನೆನೆ ಹಾಕಿ ಮೊದಲೇ ಜೋಡಿಸಿಟ್ಟುಕೊಂಡಿದ್ದ ಬನೀನು, ಪಂಚೆ ತೊಟ್ಟುಕೊಂಡು ಹೊರಬರುತ್ತಿದ್ದ.

ಸ್ನಾನ ಮುಗಿಸಿದ ನಂತರ ಹಿಂದಿನ ರಾತ್ರಿಯೇ ತುಂಬಿಟ್ಟುಕೊಂಡ ಬಿಸ್ಲೇರಿ ಬಾಟಲಿಯಲ್ಲಿ ಕಾಲು ಭಾಗದಷ್ಟು ನೀರನ್ನು ಕುಡಿದು ರೂಮಿನ ಒಂದು ಮೂಲೆಯಲ್ಲಿದ್ದ ದೇವರ ಫೋಟೊ ಮುಂದೆ ಕುಳಿತುಕೊಳ್ಳುತ್ತಿದ್ದ. ಆಮೇಲಿ ಒಂದು ತಾಸು ಅಖಂಡವಾದ ಪೂಜೆ. ಅವನ ಭಕ್ತಿ, ಭಾವಕ್ಕಿಂತಲೂ ದೇವರ ಮೂಲೆಯನ್ನು ಒಪ್ಪವಾಗಿಸುತ್ತಿದ್ದ ರೀತಿ, ಊದಿನಬತ್ತಿ ಹಚ್ಚಿಡುವ ಶೈಲಿ, ಒಂದು ಹನಿ ಎಣ್ಣೆ ನೆಲಕ್ಕೆ ಬೀಳದ ಹಾಗೆ ಹಚ್ಚಿಡುತ್ತಿದ್ದ ದೀಪ, ಹಿಂದಿನ ರಾತ್ರಿ ಮಲಗುವ ಮುನ್ನವೇ ಪಕ್ಕದ ಮನೆಯ ಗಿಡದಿಂದ ಕಿತ್ತು ತಂಡಿಟ್ಟುಕೊಂಡ ದಾಸವಾಳದ ಅರೆಬಿರಿದ ಮೊಗ್ಗು – ಇವನ್ನೆಲ್ಲಾ ನೋಡಿಯೇ ದೇವರು ಪ್ರತ್ಯಕ್ಷವಾಗಿಬಿಡಬೇಕು! ಒಂದು ತಾಸಿನ ಪೂಜೆಯೆಂದರೆ ಕರೆಕ್ಟಾಗಿ ಒಂದೇ ತಾಸು. ಅನಂತರ ಇನ್ನೊಂದು ಐದು ನಿಮಿಷ ಇರಯ್ಯಾ ಅಂತ ಸಾಕ್ಷಾತ್ ಆ ಆಂಜನೇಯನೇ ಹೇಳಿದರೂ ಈತ ನಿಲ್ಲುವುದಿಲ್ಲ. ನೇರವಾಗಿ ಬಚ್ಚಲಿಗೆ ಹೋಗಿ ನೆನೆಸಿಟ್ಟಿದ್ದ ಬಟ್ಟೆ ಒಗೆದು ರೂಮಿನ ಹೊರಗೆ ಒಣಗಲು ಹರವಿ ಚಪ್ಪಲಿ ಮೆಟ್ಟಿ ಹೊರಗೆ ವಾಕಿಂಗ್ ಹೊರಟು ಬಿಡುತ್ತಿದ್ದ. ರೂಮಿನ ಬಾಗಿಲ ಬಳಿ ಆತ ಚಪ್ಪಲಿಬಿಡುವ ಸದ್ದು ಕೇಳಿತೆಂದರೆ ಸಮಯ ಐದು ಗಂಟೆಯಾಯಿತೆಂದೇ ಅರ್ಥ!

ವಾಕಿನಿಂದ ಹಿಂದಿರುಗಿ ಬರುವಾಗ ಪಕ್ಕದ ಮನೆಯ ಎದುರು ಬಿದ್ದಿರುತ್ತಿದ್ದ ದಿನಪತ್ರಿಕೆಯನ್ನು ಅನಾಮತ್ತಾಗಿ ಎತ್ತಿಕೊಂಡು ಬಂದಿರುತ್ತಿದ್ದ. ಸರಿಯಾಗಿ ನಲವತ್ತೈದು ನಿಮಿಷ ಪೇಪರ್ ಓದಿ ಅದನ್ನು ಮತ್ತೆ ಅದರ ಸ್ವಸ್ಥಾನದಲ್ಲಿಯೇ ಎಸೆದು ಬಂದು ಈತ ಕೂರುವುದಕ್ಕೆ ಸರಿಯಾಗಿ ಪಕ್ಕದ ಮನೆಯವರು ಬಾಗಿಲು ತೆರೆಯುತ್ತಿದ್ದರು.

ಇದದ್ದು ಒಂದೇ ಕೋಣೆಯಾದರೂ ಅದರಲ್ಲಿ ನಾಲ್ಕು ಕಂಪಾರ್ಟ್ ಮೆಂಟುಗಳನ್ನಾಗಿ ಮಾಡಿಕೊಂಡು ನಾವು ನಾಲ್ಕು ಮಂದಿ ನಮ್ಮ ಸಾಮಾನು ಸರಂಜಾಮುಗಳನ್ನು ಜೋಡಿಸಿಟ್ಟುಕೊಳ್ಳುತ್ತಿದ್ದೆವು. ನಮ್ಮ ಶಿಸ್ತೋ, ಆ ದೇವರಿಗೇ ಪ್ರೀತಿ. ಲಾಠಿಚಾರ್ಜ್ ಆದಾಗ ಚದುರಿದ ಜನರ ಗುಂಪಿನಂತೆ ನಮ್ಮ ಚೀಲಗಳು, ಅಂಗಿ, ಬನಿಯನ್ನು, ಪ್ಯಾಂಟು, ಪುಸ್ತಕಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತಿದ್ದವು. ಆದರೆ ಆ ಒಂದು ಮೂಲೆ ಮಾತ್ರ ನಿಗಿನಿಗಿ ಹೊಳೆಯುವಷ್ಟು ಚೊಕ್ಕಟವಾಗಿರುತ್ತಿತ್ತು. ಅದು ತಾರಾನಾಥನದು ಅಂತ ಪ್ರತ್ಯೇಕವಾಗಿ ಹೇಳಬೇಕೆ? ಆರುಗಂಟೆಗೆ ತನ್ನ ಸ್ಥಳವನ್ನು ಸ್ವಚ್ಛ ಮಾಡಲು ಕೂರುತ್ತಿದ್ದ ತಾರಾನಾಥ ಏಕಾಗ್ರ ಚಿತ್ತನಾಗಿ, ತಪಸ್ಸು ಮಾಡುವ ಯೋಗಿಯ ಹಾಗೆ ಸುಮಾರು ಒಂದು ತಾಸು ಅದರಲ್ಲೇ ತಲ್ಲೀನನಾಗುತ್ತಿದ್ದ. ಹಿಂದಿನ ದಿನವಷ್ಟೇ ಜೋಡಿಸಿಟ್ಟ ಬಟ್ಟೆ, ಪುಸ್ತಕ, ಸೂಟಕೇಸುಗಳನ್ನು ಮತ್ತೆ ಜರುಗಿಸಿ ಧೂಳು ಒರೆಸಿ, ನೀಟಾಗಿ ಜೋಡಿಸಿಡುತ್ತಿದ್ದ. ಆತ ಆ ದೈನಂದಿನ ಕ್ರಿಯೆ ಮುಗಿಸಿ ಮುಖ ಕೈಕಾಲು ತೊಳೆದು ನಮ್ಮನ್ನು ನಿದ್ರಾಲೋಕದಲ್ಲಿ ಮುಳುಗಿ ತೇಲಿ ಓಲಾಡುತ್ತಿದ್ದ ನಾವು ಮೂರು ಮಂದಿಯನ್ನು ಎಬ್ಬಿಸಲು ಆರಂಭಿಸುತ್ತಿದ್ದ. ಆತ ನಮ್ಮನ್ನು ಏಳಿಸಲು ಬಳಸುತ್ತಿದ್ದ ವಿಧಾನವೂ ಬಲೇ ಮಜವೆನಿಸುವಂಥದ್ದು. ಮೂರ್ನಾಲ್ಕು ಸಲ ‘ಎದ್ದೇಳ್ರೋ ಬೆಳಕಾಯ್ತು…’ ಅನ್ನುತ್ತಿದ್ದ ಸಮಯ ಇನ್ನೂ ಏಳೇ ಗಂಟೆ ಆಗಿದ್ದರೂ ‘ಎಂಟುಗಂಟೆಯಾಯ್ತು, ಒಂಭತ್ತು ಗಂಟೆಯಾಯ್ತು’ ಅಂತ ಹೆದರಿಸುತ್ತಿದ್ದ ಮೊದ ಮೊದಲು ಆತನ ಈ ತಂತ್ರಕ್ಕೆ ಬಲಿಬಿದ್ದು ನಾವು ಎದ್ದು ಬಿದ್ದು ಹೊರಡಲು ಸಿದ್ಧರಾಗುತ್ತಿದ್ದೆವು. ನಂತರದ ದಿನಗಳಲ್ಲಿ ಆತನ ಉಪಾಯ ತಿಳಿದು ಯಾವ ಭಯವೂ ಇಲ್ಲದೆ ಮಲಗಿರುತ್ತಿದ್ದೆವು. ಆಗ ಆತ ದಬದಬನೆ ಸದ್ದು ಮಾಡುತ್ತಾ ನಮ್ಮ ಕಿವಿಗಳಿಗೆ ಮರಣ ಮೃದಂಗದ ದನಿ ಕೇಳಿಸುವಂತೆ ಸದ್ದು ಮಾಡುತ್ತಾ ಅತ್ತಿಂದಿತ್ತ ಓಡಾಡುತ್ತಿದ್ದ. ಧಡಾರನೆ ಬಾಗಿಲು ಕಿಟಕಿ ಘರ್ಷಿಸಿ ‘ಕುಂಭಕರ್ಣ’ರನ್ನು ಏಳಿಸಲು ಪ್ರಯತ್ನಿಸುತ್ತಿದ್ದ. ಇದೆಲ್ಲಾ ಫಲ ಕೊಡದಿದ್ದರೆ ಕಟ್ಟ ಕಡೆಯ ಅಸ್ತ್ರವೆಂಬಂತೆ ತನ್ನ ‘ಕೋಕಿಲ’ ಕಂಠದಿಂದ ಹಾಡು ಗುನುಗಲು ಶುರುಮಾಡಿಬಿಡುತ್ತಿದ್ದ! ಆತ ಸಂಗೀತ ಕಛೇರಿಯ ಅಬ್ಬರ, ಬರ್ಬರತೆಗೆ ಮಣಿದು ನಾವು ಏಳದಿದ್ದರೆ ನಮ್ಮ ಕಿವಿಗಳಿಂದ ರಕ್ತ ಹರಿಯುತ್ತಿದ್ದದ್ದು ಗ್ಯಾರಂಟಿ.

ನಾವು ಮೂರೂ ಮಂದಿ ಒಟ್ಟಿಗೇ ಎದ್ದು ಹಲ್ಲುಜ್ಜಲು, ನಿತ್ಯ ಕರ್ಮ ತೀರಿಸಲು ಒಬ್ಬರಿಗೊಬ್ಬರು ಸ್ಪರ್ಧೆಯೊಡ್ಡುತ್ತ ಭೀಕರ ಕಾಳಗದಲ್ಲಿ ಮುಳುಗಿರುವಾಗ ತಾರಾನಾಥ ತನ್ನ ಸೂಟ್ ಕೇಸಿನಲ್ಲಿ ಗರಿ ಮುರಿಯದ ಹಾಗೆ ಮಡಚಿಟ್ಟ ಬಟ್ಟೆಯನ್ನು ಕೇರ್ ಫುಲ್ಲಾಗಿ ಹೊರತೆಗೆದು ಡ್ರೆಸ್ಸಿಂಗ್ ಶುರುಮಾಡಿಕೊಳ್ಳುತ್ತಿದ್ದ. ಆಹಾ… ಅವನ ಡ್ರೆಸ್ಸಿಂಗ್ ಸಂಪ್ರದಾಯವನ್ನು ನೋಡಲು ಎರಡು ಕಣ್ಣುಗಳೂ ಸಾಲದಾಗಿದ್ದವು. ಮಾರ್ನಿಂಗ್ ಶೋ ಸಿನೆಮಾಗೆಂದು ಮೇಕಪ್ ಶುರುಮಾಡುವ ಹೆಣ್ಣು ಮಕ್ಕಳು ಸೆಕೆಂಡ್ ಶೋ ಹೊತ್ತಿಗೆ ರೆಡಿಯಾಗುವಷ್ಟಲ್ಲದಿದ್ದರೂ ಅವರಿಗಿಂತ ಕಡಿಮೆಯಿಲ್ಲ ಎನ್ನುವಂತೆ ಆತ ರೆಡಿಯಾಗುತ್ತಿದ್ದ. ಸ್ನಾನ ಮಾಡಿ ಇನ್ನೂ ಮೈಯ ಮೇಲಿನ ತೇವ ಆರಿರದಿದ್ದರೂ ತಾರಾನಾಥ ಡ್ರೆಸ್ ಮಾಡಿಕೊಳ್ಳುವ ಮೊದಲು ಎರಡೆರಡು ಬಾರಿ ಸೋಪ್ ಹಾಕಿ ಮುಖ ತೊಳೆಯುತ್ತಿದ್ದ. ನಾವೆಲ್ಲ ಗುಬ್ಬಿಯ ಹಿಕ್ಕೆ ಅಂತ ಛೇಡಿಸುತ್ತಿದ್ದ ‘ಫೇರ್ ಅಂಡ್ ಲವ್ಲಿ’ಯನ್ನು ಒಂದು ಕೋಟ್ ಬಳಿದುಕೊಳ್ಳುತ್ತಿದ್ದ. ಅದರ ಮೇಲೆ ಪೌಡರ್. ಬಗಲುಗಳಿಗೆ ಸೂಟ್ ಕೇಸಿನಲ್ಲಿ ಬಚ್ಚಿಟ್ಟುಕೊಂಡಿರುತ್ತಿದ್ದ ವಿದೇಶಿ ಪರ್ ಫ್ಯೂಮ್. ಇದೆಷ್ಟು ನಡೆಯುವಷ್ಟರಲ್ಲಿ ನಮ್ಮ ನಿತ್ಯ ಕರ್ಮಗಳೆಲ್ಲಾ ಮುಗಿದು ಆಫೀಸಿಗೆ ಹೊರಡಲು ತಯಾರಾಗಿರುತ್ತಿದ್ದೆವು!

ಬಟ್ಟೆ-ಬರೆ, ತಿನ್ನುವ ಪದಾರ್ಥ, ಜೀವನ ಪದ್ಧತಿಗಳಲ್ಲಿ ತಾರಾನಾಥ ಪಾಲಿಸುತ್ತಿದ್ದ ಟಾಕು ಟೀಕನ್ನು ಲೇವಡಿ ಮಾಡುತ್ತಿದ್ದ ನಾವು ದುಡ್ಡಿನ ವಿಚಾರದಲ್ಲಿನ ಆತನ ಲೆಕ್ಕ ತಪ್ಪದ ವಿವೇಕ, ಮಾತುಗಾರಿಕೆಯಲ್ಲಿನ ತೂಕ ಹಾಗೂ ಸಮಯ ಪಾಲನೆಯನ್ನು ಮಾತ್ರ ಪರೋಕ್ಷವಾಗಿ ಗೌರವಿಸುತ್ತಿದ್ದೆವು. ಶೀತವಾದಾಗ ಕಟ್ಟಿಕೊಂಡ ಮೂಗಿನಿಂದ ಸಿಂಬಳವನ್ನು ಸೀಟಿ ತೆಗೆದು ರೊಪ್ಪನೆ ನೆಲಕ್ಕೆ ಒಗೆಯುವಂತೆ ಹಣವನ್ನು ಖರ್ಚು ಮಾಡುತ್ತಿದ್ದ ನನಗೂ, ಮಾತಿಗೆ ಕುಳಿತರೆ ಎದುರಿಗಿರುವವನ ತೆಲೆ ಹೋಳಾಗಿ ಮೆದುಳು ಈಚೆ ಬಂದರೂ ಮಾತು ನಿಲ್ಲಿಸದ ರಂಗನಿಗೂ, ಸಮಯ ಪಾಲನೆಯಲ್ಲಿ ನಮ್ಮ ರೈಲುಗಳಿಗೇ ಪಾಠ ಹೇಳಿಕೊಡುವಷ್ಟು ಪಂಡಿತನಾದ, ಸಮಯಕ್ಕೆ ಸರಿಯಾಗಿ ಯಾವ ಕೆಲಸವನ್ನೂ ಮಾಡದ, ಹುಟ್ಟುವಾಗಲೇ ಒಂದು ತಿಂಗಳು ಲೇಟಾಗಿ ಹುಟ್ಟಿದ್ದ ಪ್ರಕಾಶನಿಗೂ ತಾರಾನಾಥ ಅನೇಕ ವಿಷಯಗಳಲ್ಲಿ ಆದರ್ಶನಾಗಿದ್ದ. ನಾವೆಲ್ಲರೂ ಹೊರಗೆ ಆತನನ್ನು ರೇಗಿಸಿ ಆಡಿಕೊಳ್ಳುತ್ತಿದ್ದರೂ ಅಂತರಂಗದಲ್ಲಿ ಆತನ ಟೀಕು-ಟಾಕಿನ ಆರಾಧಕರಾಗಿದ್ದೆವು. ಆತನಂತಾಗಬೇಕು ಎಂತ ದಿನಕ್ಕೆ ಹತ್ತಾರು ಬಾರಿಯಾದರೂ ಅಂದುಕೊಳ್ಳುತ್ತಿದ್ದೆವು, ಅದರ ಜೊತೆಗೇ ಆತನ ವಿಪರೀತಗಳನ್ನು ನೆನೆಸಿಕೊಂಡು ದಿನಕ್ಕೆ ಕನಿಷ್ಠ ಪಕ್ಷ ಇಪ್ಪತ್ತು ಬಾರಿಯಾದರೂ ಅಪಹಾಸ್ಯ ಮಾಡುತ್ತಿದ್ದೆವು.

ತಾರಾನಾಥನನ್ನು ಕಂಡು ಅದಾಗಲೇ ಹತ್ತು ವರ್ಷಗಳಾಗಿದ್ದವು. ಅಂದು ಹೆಂಡತಿಯ ಒತ್ತಾಯಕ್ಕೆ ಹದಿನೈದು ದಿನಗಳ ಗಡ್ಡಕ್ಕೆ ಮೋಕ್ಷ ಕಾಣಿಸಲು ಸಲೂನ್‌ಗೆ ಹೋಗಿ ಹಿಂದಿರುಗುತ್ತಿದ್ದೆ. ಅಂದು ಅಮಾವಾಸ್ಯೆ ಇದ್ದದ್ದರಿಂದ ಬೆಳಗಾಗಿಯೇ ಮಗ ಸ್ಕೂಟರನ್ನು ತೊಳೆದು ಲಕ-ಲಕ ಹೊಳೆಯುವಂತೆ ಮಾಡಿದ್ದ. ನನ್ನಾಕೆಯ ಕೈಗಳ ಕೈಶಲ್ಯಕ್ಕೆ ಸಾಕ್ಷಿಯೆಂಬಂತೆ ನನ್ನ ಬಟ್ಟೆಗಳು ಶುಭ್ರವಾಗಿದ್ದವು. ಸಲೂನಿನಿಂದ ಟಿಪ್ ಟಾಪ್ ಆಗಿ ಹೊರಬರುವಾಗ ಸಿಗ್ನಲ್ ಬಳಿ ಮಣ್ಣು ಮೆತ್ತಿಕೊಂಡು ಗುರುತು ಸಿಗದ ಹಾಗೆ ಬಣ್ಣಗೆಟ್ಟಿದ್ದ ಸ್ಕೂಟರಿನಲ್ಲಿ ತನ್ನ ಮಗನ ಮೂಗಿನಿಂದ ಇಳಿಯುತ್ತಿದ್ದ ಸಿಂಬಳವನ್ನು ತನ್ನ ಶರ್ಟಿನ ಅಂಚಿನಿಂದ ಒರೆಸುತ್ತಿದ್ದ ವ್ಯಕ್ತಿ ಕಾಣಿಸಿದ. ಆತನನ್ನು ಎಲ್ಲೋ ಕಂಡಂತೆ ನನಗೆ ಭಾಸವಾಗುತ್ತಿತ್ತು. ಆದರೆ ಆತನ ಕೆದರಿದ ಕೂದಲು, ಮಾಸಲು ಬಣ್ಣದ ಬಟ್ಟೆ, ಸುಮಾರು ತಿಂಗಳ ವಯಸ್ಸಿನ ಗಡ್ಡದಿಂದಾಗಿ ಆತ ಯಾರೆಂಬುದು ಸ್ಪಷ್ಟವಾಗಲಿಲ್ಲ. ಕೊಂಚ ಹತ್ತಿರ ಹೋಗಿ ದಿಟ್ಟಿಸಿದಾಗ ನನ್ನ ಕಣ್ಣುಗಳನ್ನು ನಾನೇ ನಂಬಲಾಗಲಿಲ್ಲ! ಆತ ನಮ್ಮ ತಾರಾನಾಥ! ಬದುಕೆಂಬ ಶಿಕ್ಷಕ ತೋರಿಸುವ ದಾರಿಗಳನ್ನು ಕ್ರಮಿಸದೆ ಇರುವ ಧೈರ್ಯ ಯಾರು ತೋರಿಯಾರು?


Technorati : ,

ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದವರು ಶ್ರೇಯಸ್.ಕೆ.ಎಂ

ಪ್ರೀತಿ ಎನ್ನುವುದು ಒಂದು ಉನ್ನತವಾದ ಭಾವನೆ. ಅದನ್ನು ಯಾವುದೇ ರೀತಿಯಲ್ಲಿ define ಮಾಡಹೊರಟರೂ ನಮ್ಮ ವ್ಯಾಖ್ಯಾನ ಕುರುಡನೊಬ್ಬನು ಆನೆಯನ್ನು ಕುರಿತು ದೊಡ್ಡ ಕಂಬ ಅಂತ ವರ್ಣಿಸಿದ ಹಾಗಾಗುತ್ತೆ. ಪ್ರೀತಿಯನ್ನು ಬದಿಗಿಟ್ಟು ಇಂದಿನ ಪ್ರೇಮಿಗಳನ್ನು ನೋಡಿದರೆ ಏನೋ ಒಂದು ರೀತಿಯ ಜಿಗುಪ್ಸೆ, ತಿರಸ್ಕಾರ ಮೂಡುತ್ತದೆ. ‘ಪ್ರೀತಿ ಅಂದರೆ ಇಷ್ಟೇನಾ…?’ ಅನ್ನೋ ಪ್ರಶ್ನೆಯನ್ನು ಕೇಳಿಕೊಂಡಾಗ, ಅವರ ಹುಚ್ಚುತನವನ್ನು ಅವಲೋಕಿಸಿದಾಗ, ಪ್ರೀತಿಸಿದವರೆಲ್ಲರೂ ಚಿಕ್ಕವರಾಗಿ ಕಾಣುತ್ತಾರೆ. ಕೆಲವು ಪ್ರೇಮಕಥೆಗಳನ್ನು ಕೇಳಿದಾಗಲಂತೂ ನಗಬೇಕೋ ಅಳಬೇಕೋ ಗೊತ್ತಾಗುವುದೇ ಇಲ್ಲ. ನಗಬೇಕೆ ಏಕೆಂದರೆ ಅದು ಅಸಲಿಗೆ ಪ್ರೇಮವೇ ಆಗಿರುವುದಿಲ್ಲ. ಹಳ್ಳಿಯಲ್ಲಿ ಭೂತವನ್ನು ದೇವರು ಅಂತ ಭಾವಿಸಿ ಅದಕ್ಕೆ ಪೂಜೆ-ಬಲಿ ನಡೆಸ್ತಾರಲ್ಲ ಹಾಗೆ. ‘ಗಾಳಿಪಟ’ ಸಿನೆಮಾದಲ್ಲಿರುವ ಹಾಗೆ ಮೂವರು ಹುಡುಗರು, ಮೂವರು ಹುಡುಗಿಯರು ಇಷ್ಟೇ ಕಾರಣಕ್ಕೆ ಒಬ್ಬರನ್ನೊಬ್ಬರು ಪ್ರೀತಿಸಬೇಕು, ಪ್ರೀತಿಸಿ ಮದುವೆಯಾಗಬೇಕು. ಇನ್ನು ಅಳಬೇಕನ್ನಿಸುವುದು ಅವರ ಧರ್ಮ ಸಂಕಟವನ್ನು ನೋಡಲಾಗದೆ. ಈ ಕಡೆ ಅಕ್ಕರೆಯಿಂದ ಸಾಕಿ ಬೆಳೆಸಿದ ಅಪ್ಪ ಅಮ್ಮ, ಆ ಕಡೆ ಪ್ರಾಣಕ್ಕಿಂತಲೂ ಹೆಚ್ಚಾಗಿ(?) ಪ್ರೀತಿಸುವ ಹುಡುಗಿ. ಹಾವೂ ಸಾಯಬಾರದು ಕೋಲೂ ಮುರಿಯಬಾರದು. ನಗುವುದಕ್ಕೂ ಅಳುವುದಕ್ಕೂ ಇನ್ನೂ ಸಾಕಷ್ಟು ಕಾರಣಗಳಿವೆ ಬಿಡಿ. ಮೈಯಲ್ಲಿ ಆಗುತ್ತಿರುವ ತುರಿಕೆಯನ್ನು ಕೆರೆದುಕೊಳ್ಳುತ್ತಾ ಅದನ್ನೇ ಸುಖ ಅಂತ ಹೇಳ್ತಾರಲ್ಲ ಬಹುಶಃ ಅವರನ್ನೇ ‘ಪ್ರೇಮಿ’ಗಳು ಅಂತ ಕರೆಯಬಹುದೇನೋ.

ನೂರು ಪ್ರೇಮ ಕಥೆಗಳನ್ನು ಕೇಳಿದರೆ ಅದರಲ್ಲಿ ಎಲ್ಲೋ ಒಂದೋ ಎರಡೋ genuine ಹಾಗೂ ಪ್ರಬುದ್ಧ ಅನ್ನಿಸುತ್ತವೆ. ಇನ್ನು ಉಳಿದವಂತೂ ಬರೀ ಜೊಳ್ಳು, ತೀರಾ ಬಾಲಿಶ ಅನ್ನಿಸಿಬಿಡುತ್ತವೆ.l3.jpg

ಸಿನೆಮಾಗಳಲ್ಲಿ ರೌಡಿಯಿಸಂ ತೋರಿಸಿ ಬೀದಿ-ಬೀದಿಗೂ ಚಿಲ್ಲರೆ ರೌಡಿಗಳು ಹುಟ್ಟಿಕೊಂಡಿದ್ದಾರಲ್ಲಾ ಹಾಗೆ ಪ್ರೀತಿ ಪ್ರೇಮ ಅಂತನೂ ತೋರಿಸಿ-ತೋರಿಸಿ ಬೀದಿ-ಬೀದಿಗೂ ಚಿಲ್ಲರೆ ಪ್ರೇಮಿಗಳು ಹುಟ್ಟಿಕೊಂಡಿದ್ದಾರೆ. ಅವಳು ಇವನನ್ನ ಇಷ್ಟಪಡುವುದಕ್ಕೆ ಇವನು ಹಾಕುವ ‘ಅರಿಶಿಣ ಬಣ್ಣದ’ ಶರ್ಟು, ‘ಕೆಂಪು ಬಣ್ಣದ’ ಕಾರ್ಗೋ ಪ್ಯಾಂಟು ಕಾರಣವಂತೆ, ಅರಳು ಹುರಿದ ಹಾಗೆ ಮಾತನಾಡೋದೆ ಇಷ್ಟವಂತೆ, ಅವಳ ನಗುವಿಗಾಗಿ ಇವನು ಏಳೇಳು ಜನ್ಮ ಎತ್ತಿ ಬರುತ್ತಾನಂತೆ, ಕಣ್ಣಿಗೆ ಅಡ್ಡಬರುವ ಮುಂಗುರುಳನ್ನು ಅವಳು ಕಿವಿಯ ಹಿಂದೆ ಸಿಕ್ಕಿಸುವ ಶೈಲಿಯನ್ನು ನೋಡಿದರೆ ಮೈಮರೆತು ಹೋಗುತ್ತಾನಂತೆ. ಇವನ್ನೂ ಪ್ರೇಮಕಥೆಗಳು ಅಂತ ಕರೆಯಬೇಕಲ್ಲಾ…! ಇನ್ನೊಂದು ಹೊಸ ಟ್ರೆಂಡ್ ಶುರುವಾಗಿಬಿಟ್ಟಿದೆ. ಗರ್ಲ್ ಫ್ರೆಂಡ್, ಬಾಯ್ ಫ್ರೆಂಡ್ ಸಂಸ್ಕೃತಿ. ಪ್ರೀತಿ ಅನ್ನುವ ಹೆಸರಿನಲ್ಲಿ ಶೋಕಿ. ಇದರ ಬಗ್ಗೆ ಬರೆಯೋದಕ್ಕಿಂತ ಬರೆಯದೇ ಇರುವುದೇ ಉತ್ತಮ. ಯಾಕೆ ಸುಮ್ಮನೆ ಮಾಡಿದವರ ಪಾಪ ಆಡಿದವರ ಬಾಯಲ್ಲಿ, ಅಲ್ವಾ? ಲವ್ ಅಟ್ ಫರ್ಸ್ಟ್ ಸೈಟ್ ಎನ್ನುವ ಕಾನ್ಸೆಪ್ಟಂತೂ ಇನ್ನೂ ನನಗೆ ಅರ್ಥವಾಗಿಲ್ಲ. ಬಹುಶಃ ಇದು ಪ್ರೀತಿ ಎನ್ನುವ ರೋಗದ ಇನ್ನೊಂದು ಗುಣಲಕ್ಷಣ ಅನ್ನಿಸುತ್ತದೆ.

‘ಗಾಢವಾದ ಸ್ನೇಹವೇ ಪ್ರೇಮ’ ಅನ್ನುವುದು ಪ್ರೀತಿಗೆ ಕೊಡುವ ಇನ್ನೊಂದು ಸಮರ್ಥನೆ. ಅದ್ಯಾವ ಮೂರ್ಖ ಈ ಮಾತನ್ನು ಹೇಳಿದನೋ ಗೊತ್ತಿಲ್ಲ. ಹಾಗಾದರೆ ಒಬ್ಬ ಹುಡುಗ ಹುಡುಗಿ ಕೇವಲ ಸ್ನೇಹಿತರಾಗಿರುವುದಕ್ಕೆ ಸಾಧ್ಯವೇ ಇಲ್ಲವಾ? ಸ್ನೇಹವನ್ನೂ, ಪ್ರೇಮವನ್ನೂ ಅದು ಹೇಗೆ ಒಂದೇ ತಕ್ಕಡಿಯಲ್ಲಿ ತೂಗುತ್ತಾರೋ ಗೊತ್ತಿಲ್ಲ. ಸ್ನೇಹ ಅಂದರೆ ಸ್ವಚ್ಛಂದತೆ, ಪ್ರೇಮ ಅಂದ ಕೂಡಲೆ ಪೊಸೆಸಿವ್‌ನೆಸ್ ಅಮರಿಕೊಳ್ಳುತ್ತದೆ. ‘ನಾನು ನಿನ್ನನ್ನು ಪ್ರೀತಿಸ್ತೀನಿ’ ಅಂತ ಹೇಳುವ ಹುಡುಗ ನೀನು ನನ್ನೊಬ್ಬನನ್ನು ಮಾತ್ರ ಪ್ರೀತಿಸಬೇಕು ಎಂದು ನಿರೀಕ್ಷಿಸುತ್ತಾನೆ ಆದರೆ ಸ್ನೇಹಕ್ಕೆ ಆ ಭಯ ಇರುವುದಿಲ್ಲ. ಇರುವುದನ್ನು ಇರುವ ಹಾಗೆಯೇ,ಯಾವುದೇ ನಿರೀಕ್ಷೆಯಿಲ್ಲದೆ ಇಷ್ಟಪಡುವುದಿದೆಯಲ್ಲ ಅದು ಸ್ನೇಹ, ಇದು ಹೀಗೆಯೇ ಇರಬೇಕು, ನೀನು ಹೀಗಿದ್ದರೆ ನನಗೆ ಇಷ್ಟ,ಇಲ್ಲಾಂದ್ರೆ ಇಬ್ಬರಿಗೂ ಕಷ್ಟ ಎನ್ನುವುದು ಪ್ರೇಮ. So how can friendship end in love? ಸ್ನೇಹ, ಅದು ಪ್ರೇಮವಾಗಿ ಬದಲಾದರೆ ಅಸಲಿಗೆ ಅದು ಸ್ನೇಹವೇ ಅಲ್ಲ. ಇಬ್ಬರು ಹುಡುಗರು ತುಂಬಾ ಒಳ್ಳೆಯ ಗೆಳೆಯರಾಗಿದ್ದರೆ ಅವರಿಬ್ಬರಿಗೂ ಮದುವೆಯಾಗಲೇ ಬೇಕಾ? ಅಂತಹ ಬಾಂಧವ್ಯಕ್ಕೆ ಪ್ರೀತಿ ಎನ್ನುವ ‘ಟ್ಯಾಗ್’ ಸಿಕ್ಕಿಸಿ ನರಳಬೇಕಾ?

ಪ್ರೀತಿ ಅನ್ನುವುದು ಹುಡುಗ ಹುಡುಗಿಯರಿಗೆ ಒಂದು ಶಾಪ. ಅದಕ್ಕೇ ಅನ್ನಿಸುತ್ತದೆ, falling in love ಅಂತ ಹೇಳುವುದು. ಒಂದು ಸಾರಿ ಬಿದ್ದ ಮೇಲೆ ಮುಗಿದೇ ಹೋಯ್ತು. ಚಿಕ್ಕ ಮಕ್ಕಳಿದ್ದಾಗ ಜೀವನದಲ್ಲಿ ಏನಾಗಬೇಕಪ್ಪಾ ಅಂತ ಕೇಳಿದಾಗ ‘ಏರೋಪ್ಲೇನ್ ಪೈಲಟ್, ಡಾಕ್ಟರ್, ಐ.ಎ.ಎಸ್ ಆಫೀಸರ್!’ ಅಂತೆಲ್ಲಾ ಮುದ್ದುಮುದ್ದಾಗಿ ಉತ್ತರ ಕೊಡುತ್ತಿದ್ದವರು ಈಗ ಕೇಳಿದರೆ “ಹೆಚ್ಚಿಗೆ ಏನೂ ಇಲ್ಲ, ನನ್ನ ಅಪ್ಪ-ಅಮ್ಮ ನನ್ನ ಪ್ರೀತಿಗೆ ಒಪ್ಪಿದರೆ ಸಾಕು, ನನ್ನ ಪ್ರೀತಿಸುವ ಹುಡುಗಿ ನನ್ನ ಪುಟ್ಟ ಸಂಸಾರ…” ಅಲ್ಲಿಗೆ ಮುಗಿಯಿತು ನೋಡಿ. ಪ್ರೀತಿಯ ಗಾಳಿಪಟವನ್ನು ಹಾರಿಸುತ್ತ, ಕೈಯಲ್ಲಿ ಮೊಬೈಲ್ ಕುಟ್ಟುತ್ತಾ, ಭಾವನೆಗಳು, ಹೃದಯ ಮನಸ್ಸು ಅಂತ ದೊಡ್ಡ ದೊಡ್ಡ ಮಾತುಗಳನ್ನು ಆಡಿಕೊಂಡು ತಿರುಗಾಡುವುದಕ್ಕೆ ಸರಿಯಾಗಿಯೇ ‘ಪ್ರೀತಿಯಲ್ಲಿ ಬೀಳುವುದು’ ಅಂತ ಹೇಳಿರುವುದು ಎನ್ನಿಸುತ್ತದೆ.

ಇನ್ನು ಪ್ರೀತಿಸಿ ಮನೆ ಬಿಟ್ಟು ಓಡಿಹೋಗುವವರಿಗೆ ನನ್ನದೊಂದು ಪ್ರಶ್ನೆ “ಆ ಹುಡುಗಿಯದ್ದು ಪ್ರೀತಿಯಾದರೆ, ನಿಮ್ಮ ತಂದೆ-ತಾಯಿ, ಅಣ್ಣ ತಮ್ಮಂದಿರು , ಇವರದ್ದೆಲ್ಲಾ ಪ್ರೀತಿ ಅಲ್ಲವಾ? ಪ್ರೇಯಸಿಯ ಮುತ್ತಿನ ಹಿಂದಿರುವುದು ಪ್ರೀತಿಯಾದರೆ ತಂದೆಯ ಶಿತಿನ ಹಿಂದೆ ಇರುವುದು ಪ್ರೀತಿ ಅಲ್ಲವಾ?” ಇನ್ನೂ ಒಂದು ಪ್ರಶ್ನೆ, ‘ಪರ್ಫೆಕ್ಟ್ ಲಫ್ ಪಾರ್ಟನರ್’ ಹುಡುಕಿಕೊಳ್ಳುವುದೇ ಜೀವನದ ಪರಮೋಚ್ಛ ಹುಡುಕಾಟವಾ?

ಪ್ರೀತಿ ಎನ್ನುವ ವಿಷಯ ಬಂದಾಗ ಎಲ್ಲರೂ ತೀರಾ ಭಾವುಕರಾಗಿ ಪ್ರತಿಕ್ರಿಯಿಸುತ್ತೇವೆ. ಇದು ಕೇವಲ ಪ್ರೀತಿಸುವ ಹುಡುಗ ಹುಡುಗಿಯರಿಗೆ ಮಾತ್ರ ಸೀಮಿತವಲ್ಲ. ಅವರ ತಂಡೆ ತಾಯಿಯರಿಗೂ ಕೂಡ. ‘ಮುಂಗಾರು ಮಳೆ’ ಸಿನೆಮಾ ನೋಡಿಕೊಂಡು ಹೊರಗೆ ಬರುವಾಗ ಎಲ್ಲರ ಕಣ್ಣಲ್ಲೂ ನೀರು. “ಅಯ್ಯೋ ನಮ್ಮ ಗಣೇಶನ ‘ಮೊಲ’ ಸತ್ತುಹೋಯ್ತಲ್ಲ” ಅಂತ. ಯಾವಾಗಲೂ ನಮ್ಮ ಹುಡುಗ ಅವನು ಇಷ್ಟಪಟ್ಟ ಹುಡುಗಿಯನ್ನೇ ಮದುವೆಯಾಗಬೇಕು. ಅವಳು ಸ್ಮಂನಲ್ಲಿ ಹುಟ್ಟಿಬೆಳೆದಿರಲಿ ಅಥವಾ ಕುಬೇರನ ಮಗಳಾಗಿರಲಿ. ಆದರೆ ನಿಜ ಜೀವನಕ್ಕೆ ಬಂದರೆ ಅದೇ ‘ನಮ್ಮ ಹುಡುಗ’ ಯಾರಾದರೂ ಹುಡುಗಿಯನ್ನು ಇಷ್ಟಪಟ್ಟರೆ…? ಯಾರದೋ ಪ್ರೇಮ ಕಥೆಗೆ ಕಣ್ಣೀರು ಸುರಿಸಿದ ನಾವು ನಮ್ಮ ಹುಡುಗ ಪ್ರೀತಿಸಿದಾಗ ಸ್ವೀಕರಿಸಲು ಸಾಧ್ಯವಾಗುವುದಿಲ್ಲ ಏಕೆ? ಶೇಕ್ಸ್ ಪಿಯರ್ ಹೇಳಿದ ಮಾತಿನಂತೆ ‘ಪ್ರಪಂಚದಲ್ಲಿ ಹುಡುಗ ಹುಡುಗಿ ಪ್ರೀತಿಸಬೇಕು ಆದರೆ ಅವರ್ಯಾರೂ ನಮ್ಮ ಮನೆಯ ಮಕ್ಕಳಾಗಿರಬಾರದು. ರೋಮಿಯೋ ಜೂಲಿಯಟ್ ಸೃಷ್ಟಿಸಿದ ಶೇಕ್ಸ್‌ಪಿಯರ್‌ನ ಮಗನೋ, ಮಗಳೋ ಪ್ರೀತಿಸಿದಿದ್ದರೆ ಏನು ಮಾಡುತ್ತಿದ್ದನೋ…?

‘ಪ್ರೀತಿ ಪ್ರೇಮ ಎಲ್ಲಾ ಪುಸ್ತಕದ ಬದನೆಕಾಯಿ’ ಅಂದ ಒಬ್ಬ. ‘ಒಲವೇ ಜೀವನ ಸಾಕ್ಷಾತ್ಕಾರ’ ಅಂದ ಇನ್ನೊಬ್ಬ. ‘ಪ್ರೀತಿ ಮಾಡು ತಮಾಷೆ ನೋಡು’ ಅಂದ ಮತ್ತೊಬ್ಬ. ಒಟ್ಟಿನಲ್ಲಿ ಹೇಳಬೇಕಂದರೆ ಅವರವರ ಭಾವಕ್ಕೆ, ವಿಚಾರಗಳಿಗೆ ತಕ್ಕಂತೆ ಪ್ರೀತಿಯ ಬಗೆಗಿನ ಅವರ ನಿಲುವು, ದೇವರ ವಿಷಯದ ಚರ್ಚೆಗೆ ಬಂದಾಗ ಕಾಲ, ದೇಶ, ವ್ಯಕ್ತಿಗಳ ಜೊತೆ ಹೇಗೆ ಅಭಿಪ್ರಾಯಗಳು ಬದಲಾಗುತ್ತಾ ಹೋಗುತ್ತವೆಯೋ, ಪ್ರೀತಿ ಎನ್ನುವ ವಿಷಯ ಬಂದಾಗ ಕೂಡ ನಾನು ಮಾತ್ರ ಸರಿ ಅನ್ನುವುದು ಅಷ್ಟು ಸೂಕ್ತವಲ್ಲ. ನನ್ನ ಕನ್ನಡಕ ಹಳದಿಯಾಗಿದೆ ಅಂತ ಪ್ರಪಂಚವೇ ಹಳದಿಯಾಗಿಎ ಅಂತ ಹೇಳುವುದಕ್ಕೆ ಆಗುವುದಿಲ್ಲ. ತಪ್ಪು-ಒಪ್ಪಿನ ಪ್ರಶ್ನೆಗಿಂತಲೂ ನನ್ನ ಅನಿಸಿಕೆ ಇಷ್ಟೇ- ಯಾಕೆ ಸುಮ್ಮನೆ ರಿಸ್ಕು? ಅಲ್ಲವಾ? ಪ್ರೀತಿಸುವುದಕ್ಕಿಂತ ಮುಂಚೆ ಹೀಗೂ ಒಂದು ಸಾರಿ ಯೋಚಿಸಬಹುದಲ್ಲವಾ… ಯಾಕಂದರೆ ಪ್ರೀತಿಸಿದ ಮೇಲೆ ತಲೆ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ!


Technorati : ,

ತಮ್ಮ ಲಹರಿಯಲ್ಲಿ ಬಂದ ಆಲೋಚನೆಗಳನ್ನು ಹರಿಬಿಟ್ಟಿದ್ದಾರೆಸುಪ್ರೀತ್.ಕೆ.ಎಸ್

‘ನಮ್ಮ ಕಾಲ ಮೇಲೆ ನಾವು ನಿಲ್ಲಬೇಕು’ ಎನ್ನುವ ಮಾತನ್ನು ನಾವು ಅನೇಕ ವೇಳೆ ಕೇಳಿರುತ್ತೇವೆ. ಹಾಗೆಂದರೆ ಏನು? ಆರ್ಥಿಕವಾಗಿ ನಾವು ಸ್ವತಂತ್ರರಾಗುವುದಾ? ಹಣಕ್ಕಾಗಿ ಇನ್ನೊಬ್ಬರನ್ನು ಆಶ್ರಯಸುವುದನ್ನು ಬಿಡುವುದಾ? ಅಷ್ಟು ದಿನಗಳ ಕಾಲ ಅಪ್ಪ ದುಡಿಯುವ ದುಡ್ಡಿನಲ್ಲಿ ನಮ್ಮ ಆವಶ್ಯಕತೆಗಳನ್ನು ತೀರಿಸಿಕೊಳ್ಳುತ್ತಿರುತ್ತೇವೆ, ನಮ್ಮ ಶಾಲೆ-ಕಾಲೇಜಿನ ಫೀಸು, ನಮಗೆ ಬೇಕಾಗುವ ಪುಸ್ತಕ, ಬಟ್ಟೆ-ಬರೆ, ಪಾಕೆಟ್ ಮನಿ ಎಲ್ಲಕ್ಕೂ ನಾವು ತಂದೆ ತಾಯಿಯನ್ನು ಎದುರುನೋಡುತ್ತೇವೆ. ಹಾಗಾಗಿ ನಮ್ಮ ಕಾಲ ಮೇಲೆ ನಾವು ನಿಲ್ಲುವುದು ಎಂದರೆ ನಾವೇ ಸಂಪಾದಿಸುವ ಹಣದಲ್ಲಿ ನಮ್ಮ ಆವಶ್ಯಕತೆಗಳನ್ನು ಪೂರೈಸಿಕೊಳ್ಳುವುದು ಎಂದು ಭಾವಿಸುತ್ತೇವೆ. ನಾವೇ ದುಡಿಯಲಾರಂಭಿಸಿದರೆ ನಮಗೆ ಯಾರ ಆಶ್ರಯವೂ ಬೇಕಾಗುವುದಿಲ್ಲ ಎನ್ನಿಸುತ್ತದೆ. ಆದರೆ ವಾಸ್ತವವಾಗಿ ನಾವು ನಮ್ಮ ಕಾಲ ಮೇಲೆಯೇ ನಿಂತಿರುತ್ತೇವೆಯಾ?

ಊಹುಂ! ನಾವು ಮಾಡುವ ಕೆಲಸದಿಂದ ಸಂಪಾದಿಸಿದ ಹಣ ನಮ್ಮ ಕೈಗೆ ಬರುತ್ತದಾದರೂ ನಾವು ‘ಆಶ್ರಯ’ದಿಂದ ಹೊರಗೆ ಬಂದಿರುವುದಿಲ್ಲ. ಕೆಲಸಕ್ಕಾಗಿ ಬಾಸನ್ನು ಆಶ್ರಯಿಸಿರುತ್ತೇವೆ, ಸಂಪಾದನೆಗೆ ವೃತ್ತಿಯನ್ನು ಆಶ್ರಯಿಸಿರುತ್ತೇವೆ, ವೃತ್ತಿಯ ಭದ್ರತೆಗೆಗಾಗಿ ಕಾನೂನನ್ನು, ವ್ಯವಸ್ಥೆಯನ್ನು ಆಶ್ರಯಿಸಿರುತ್ತೇವೆ. ನಮ್ಮ ಕಾಲ ಮೇಲೆ ನಾವು ನಿಂತಿರುತ್ತೇವೆಯಾ? ಈಗ ನಾನು ಕೆಲಸ ಮಾಡುತ್ತೇನೆ, ಅದಕ್ಕೆ ಪ್ರತಿಫಲವಾಗಿ ನನಗೆ ಹಣ ಬರುತ್ತಿದೆ. ಸಮಾಜ ನನಗೊಂದು ರೋಲ್ ಕೊಟ್ಟಿದೆ ಅದನ್ನು ಸರಿಯಾಗಿ ನಿರ್ವಹಿಸುತ್ತಿರುವುದಕ್ಕಾಗಿ ನನಗೆ ಕೂಲಿ ಸಿಗುತ್ತಿದೆ. ಹಿಂದೆಯೂ ನಾನೊಬ್ಬ ಮಗನಾಗಿದ್ದೆ, ನನಗೊಂದು ಜವಾಬ್ದಾರಿಯಿತ್ತು. ಓದಬೇಕು, ಒಳ್ಳೆಯ ಹುಡುಗನಾಗಲು ಪ್ರಯತ್ನಿಸಬೇಕು, ತಂದೆ-ತಾಯಿ ಹೇಳಿದಂತೆ ಕೇಳಬೇಕು. ಅದನ್ನು ನಿರ್ವಹಿಸುತ್ತಿದ್ದೆ, ನನ್ನ ಆವಶ್ಯಕತೆಗಳ ಪೂರೈಕೆಯಾಗುತ್ತಿತ್ತು. ಆಗ ನನ್ನ ಆವಶ್ಯಕತೆಗಳ ಪೂರೈಕೆಗೆ ಹಣ ಒಂದು ಸಾಧನವಾಗಿತ್ತು. ಕೆಲಸ ಸಿಕ್ಕಮೇಲೆ ಹಣವೇ ನನ್ನ ಆವಶ್ಯಕತೆಯಾಯಿತು. ಅದನ್ನು ಸಮಾಜ ಪೂರೈಸುತ್ತಿದೆ. ಹಾಗಾದರೆ ನನ್ನ ಕಾಲ ಮೇಲೆ ನಾನು ನಿಂತಿದ್ದೇನೆಯೇ?

ವಾಸ್ತವವಾಗಿ ನಮ್ಮ ಕಾಲ ಮೇಲೆ ನಾವು ನಿಲ್ಲಲು ಸಹ ಕಾಲ ಕೆಳಗೆ ಗಟ್ಟಿಯಾದ, ಜಾರುವಿಕೆಯಿಲ್ಲದ ನೆಲದ ಆವಶ್ಯಕತೆಯಿರುತ್ತದೆ. ನಡೆಯುವಾಗ ಬೇರೊಬ್ಬರ ಕಾಲು ಅಡ್ಡ ಬಂದು ಎಡವಿ ಬೀಳದಿರಲು ನಮಗೆ ರಕ್ಷಣೆಯ ಆವಶ್ಯಕತೆಯಿರುತ್ತದೆ. ನಡೆಯುವ ಹಾದಿಯಲ್ಲಿ ಮುಳ್ಳು, ಹಳ್ಳ ದಿಣ್ಣೆಯನ್ನು ಸ್ವಚ್ಛಗೊಳಿಸುವ ವ್ಯವಸ್ಥೆಯ ಆವಶ್ಯಕತೆಯಿರುತ್ತದೆ. ಇಂಥದ್ದನ್ನೆಲ್ಲಾ ಅವಲಂಬಿಸಿದ ನಂತರವೂ ನಾವು ನಮ್ಮ ಕಾಲ ಮೇಲೆ ನಿಂತಿದ್ದೇವೆ ಎಂದು ಬೀಗುವುದಕ್ಕೆ ಸಾಧ್ಯವಾ? ಹಾಗೆ ಬೀಗುವುದು ಕೇವಲ ಅಹಂಕಾರದ, ಸೀಮಿತ ಆಲೋಚನೆಯ ಪ್ರದರ್ಶನವಾಗುವುದಿಲ್ಲವಾ?

lahari.png

ಇದನ್ನು ಪ್ರಸ್ತಾಪಿಸಬೇಕಾದ್ದು ಮುಂದೆ ಹೇಳಲಿರುವ ವಿಷಯವನ್ನು ಮನದಟ್ಟು ಮಾಡಿಸಲು. ‘ಸ್ವಂತ ವಿಚಾರ ಮಾಡಬೇಕು’ ಎನ್ನುವುದು ಒಂದು ವಿಚಾರ. ಚಿಕ್ಕಂದಿನಲ್ಲಿ ಸ್ವಂತ ವಿಚಾರಗಳಿರುವುದಿಲ್ಲ, ತಂದೆ ತಾಯಿ ಹೇಳಿದ ಸಂಗತಿಗಳು, ಶಾಲೆಗಳಲ್ಲಿ ಹೇಳಿಕೊಟ್ಟ ಪಾಠಗಳು ನಮ್ಮ ವಿಚಾರವಾಗಿರುತ್ತವೆ. ಮುಂದೆ ಬೆಳೆಯುತ್ತಾ ಸ್ವತಂತ್ರವಾಗಿ ಆಲೋಚನೆ ಮಾಡುವ ವೈಚಾರಿಕತೆಯನ್ನು ಬೆಳೆಸಿಕೊಳ್ಳಬೇಕು ಎಂಬುದು ಬುದ್ಧಿವಾದ. ಆದರೆ ಎಂದಾದರೂ ನಾವು ಹಾಗೆ ಸ್ವತಂತ್ರವಾಗಿ ಆಲೋಚನೆ ಮಾಡುವ ಸಾಧ್ಯತೆಗಳಿರುತ್ತವೆಯೇ? ಏಕೆ ಎಂದರೆ, ಚಿಕ್ಕಂದಿನಲ್ಲಿ ನಮ್ಮನ್ನು, ನಮ್ಮ ಆಲೋಚನಾ ಸರಣಿಯನ್ನು, ನಮ್ಮ ವೈಚಾರಿಕತೆಯನ್ನು ಪ್ರಭಾವಿಸುವುದು ನಮ್ಮ ಪರಿಸರ, ಅದರಲ್ಲಿನ ವಿಚಾರದ ಮೂಲಗಳು. ಇದರಲ್ಲಿ ಎರಡು ಅಂಶಗಳನ್ನು ಗಮನಿಸುವುದು ಆವಶ್ಯಕ. ಒಂದು, ನಾವು ಯಾವ ವಿಚಾರಗಳಿಗೆ ಎಷ್ಟು frequent ಆಗಿ expose ಆಗುತ್ತೇವೆ ಎನ್ನುವುದು. ಮತ್ತೊಂದು, ಆ ವಿಚಾರಗಳ ಶಕ್ತಿ, ಪ್ರಭಾವ ಎಂಥದ್ದು ಎನ್ನುವುದು. ಗಮನಿಸಿ ನೋಡಿ, ಒಂದು ಮಗುವಿನ ಬಾಲ್ಯದಲ್ಲಿ ಅದು ಯಾರೊಂದಿಗೆ ಹೆಚ್ಚು ಸಮಯವನ್ನು ಕಳೆಯುತ್ತದೆಯೇ ಅವರ ವಿಚಾರದ ಪ್ರಭಾವವನ್ನು ತನ್ನ ಮೇಲೆ ಹೇರಿಕೊಳ್ಳುತ್ತದೆ. ಮತ್ತು ತನಗೆ ಅತ್ಯಂತ ಪ್ರಿಯವಾದವರ, ತಾನು ಹೆಚ್ಚು ಗೌರವಿಸುವವರ ಪ್ರಭಾವಕ್ಕೂ ಅದು ಒಳಗಾಗುತ್ತದೆ. ಅದರ ಬೌದ್ಧಿಕ, ವೈಚಾರಿಕ ಆವಶ್ಯಕತೆಗಳಿಗಾಗಿ ಅದು ಇಂತಹ ಪ್ರಭಾವಗಳನ್ನು ಅವಲಂಬಿಸಿರುತ್ತದೆ.

ಹಾಗಾದರೆ ಮಗು ಬೆಳೆದು ಪ್ರೌಢವಾದ ನಂತರ ಆಗುವುದೇನು? ವಯಸ್ಸಿಗೆ ತಕ್ಕ ಹಾಗೆ ದೇಹ ಬೆಳೆದಂತೆಯೇ ಮನಸ್ಸಿನ, ಬುದ್ಧಿ ಶಕ್ತಿಯ ಬೆಳವಣಿಗೆಯಾಗಿರುತ್ತದೆ. ಆಗ ಆತ ಸ್ವತಂತ್ರವಾಗಿ ಆಲೋಚಿಸಲು ಸಾಧ್ಯವೇ? ಊಹುಂ, ಆಗಲೂ ಪ್ರಭಾವಗಳಿಂದ ಸ್ವತಂತ್ರನಾಗಲು ಸಾಧ್ಯವಿಲ್ಲ. ತಾನು ಹೆಚ್ಚು ಸಮಯ ಕಳೆಯುವ, ತನ್ನನ್ನು ಸೆಳೆಯುವ ಸಾಮರ್ಥ್ಯವಿರುವ ವಿಚಾರ ಸರಣಿಯನ್ನು, ತಾನು ಮಣಿಸಲಾಗದ ವೈಚಾರಿಕತೆಯನ್ನು, ತನ್ನ ಅಹಂಗೆ ತೃಪ್ತಿ ನೀಡಿದ ವಿಚಾರದಿಂದ ಆತ ಪ್ರಭಾವಕ್ಕೊಳಗಾಗುವುದಿಲ್ಲವೇ? ಕಾಲೇಜಿನ ಹಂತಕ್ಕೆ ಕಾಲಿಟ್ಟ ಯುವಕ ಕಮ್ಯುನಿಸಂ, ನಾಸ್ತಿಕವಾದ, ರಾಷ್ಟ್ರೀಯವಾದ, ಹಿಂದುತ್ವ ಹೀಗೆ ಯಾವುದಾದರೂ ಇಸಂಗೆ ಒಳಗಾಗುತ್ತಾನೆ. ಅದರ ಶಕ್ತಿಶಾಲಿ ಪ್ರತಿಪಾದಕನಾಗುತ್ತಾನೆ. ಅದನ್ನು ವಿರೋಧಿಸುವವರೊಂದಿಗೆ ವಾದಕ್ಕೆ ನಿಲ್ಲುತ್ತಾನೆ. ಹಾಗಾದರೆ, ಅದು ಅವನ ಸ್ವಂತ ವಿಚಾರ ಅಲ್ಲವೇ? ಆತ ಹಾಗೆ ಭಾವಿಸುವುದಿಲ್ಲ. ಮನೆಯಲ್ಲಿ ತಾಯಿ ದೇವರ ಪೂಜೆ ಮಾಡು, ಪ್ರಾರ್ಥನೆ ಮಾಡು, ಭಕ್ತಿಯಿಂದ ಕೇಳಿಕೊ ಅಂತೆಲ್ಲಾ ಹೇಳುವಾಗ ತಾನು ವಿನಮ್ರನಾಗಿ ನಮಸ್ಕರಿಸುತ್ತಿದ್ದದ್ದು, ದೇವರೆದುರು ಅಳುತ್ತಿದ್ದದ್ದು ಎಲ್ಲವೂ ಮೂರ್ಖತನವಾಗಿ, ತಾಯಿಯ ನಂಬಿಕೆಯ ದಾಸ್ಯದಿಂದ ಹುಟ್ಟಿದ ಆಲೋಚನೆಯಾಗಿ ಕಾಣುತ್ತದೆ. ತಾನೀಗ ದೇವರಿಲ್ಲ, ಸಂಪ್ರದಾಯಗಳೆಲ್ಲಾ ಗೊಡ್ಡು ಎನ್ನುತ್ತಿರುವುದು ಸ್ವತಂತ್ರ ಆಲೋಚನೆಯಾಗಿ ಕಾಣುತ್ತದೆ. ಇನ್ನೂ ಒಂದಷ್ಟು ವರ್ಷ ಕಳೆದುಹೋದ ನಂತರ ಇನ್ನಷ್ಟು ಪ್ರೌಢಿಮೆ ಬಂದಿದೆ ಎಂದ ನಂತರ ತಾನು ಯುವಕನಾಗಿದ್ದಾಗ ಕಾಲೇಜಿನ ಆ ಫ್ರೊಫೆಸರ್‌ನ ಪ್ರಭಾವ ತುಂಬಾ ಆಗಿತ್ತು. ಆಗ ಓದುತ್ತಿದ್ದ ಕ್ರಾಂತಿಕಾರಿ ಸಾಹಿತ್ಯದಿಂದ ನನ್ನ ಆಲೋಚನೆ ಪ್ರಭಾವಹೊಂದಿತ್ತು ಎಂದು ಒಪ್ಪಿಕೊಳ್ಳುತ್ತಾನೆ. ತಾನು ಆಗ ದೇವರನ್ನು ನಂಬುವವರನ್ನು ಮೂಢರು, ವೈಚಾರಿಕತೆ ಇಲ್ಲದವರು ಎಂದದ್ದು ಮೂರ್ಖತನದ ಅಭಿಪ್ರಾಯವಾಗಿತ್ತು ಎನ್ನಿಸಲಾರಂಭವಾಗುತ್ತದೆ. ಆಗ ತನ್ನದು ಸ್ವತಂತ್ರವಾದ ಆಲೋಚನೆಯಾಗಿರಲಿಲ್ಲ ಎನ್ನಿಸುತ್ತದೆ. ಮುಂದೆ ಮದುವೆ, ಮಕ್ಕಳು ಸಂಸಾರದ ಅನುಭವದಲ್ಲಿ ಪಾಲ್ಗೊಂಡು ವಯಸ್ಸು ಕಳೆದು ವೃದ್ಧನಾದ ನಂತರ ತಾನು ಆಗ ಸ್ವತಂತ್ರವಾಗಿ ಯೋಚಿಸಲು ಸಾಧ್ವವೇ ಆಗಲಿಲ್ಲ. ನನ್ನ ಅನುಭವಗಳು, ಸಂಸಾರ ಬಂಧನ ನನ್ನ ಆಲೋಚನೆಯನ್ನು ಪ್ರಭಾವಿಸುತ್ತು ಎನ್ನುತ್ತಾನೆ. ಹಾಗಾದರೆ ಆತನಿಗೆ ಸ್ವತಂತ್ರ ವಿಚಾರ ಶಕ್ತಿ ಯಾವಾಗ ದಕ್ಕೀತು? ಇದು ನನ್ನ ಆಲೋಚನೆ ಎನ್ನುವ ಅಹಂಕಾರಕ್ಕೆ ಹಾಗಾದರೆ ಅರ್ಥವೆಲ್ಲಿದೆ?

ಹೀಗೆಲ್ಲಾ ಯೋಚಿಸಿದಾಗ ಒಂದು ವಿಚಾರ ಅಸ್ಪಷ್ಟವಾಗಿ ನನ್ನ ಮನಸ್ಸಿನಲ್ಲಿ ಮೂಡಲಾರಂಭಿಸಿದೆ. ನಾವು ಇದು ನನ್ನ ಸಂಪಾದನೆ ಎನ್ನುವುದು ಹೇಗೆ ನಮ್ಮ ದುಡಿಮೆ, ಸಾಮರ್ಥ್ಯ, ಕೌಶಲ್ಯ, ಯೋಗ್ಯತೆಗೆ ಸಿಗುವ ಪ್ರತಿಫಲವೋ ಹಾಗೆಯೇ ನಮ್ಮ ವಿಚಾರಗಳು ಎನ್ನುವವೂ ಸಹ ಪ್ರತಿಕ್ರಿಯೆಗಳಾಗಿರಬಹುದಲ್ಲವಾ? ಜೀವನದಲ್ಲಿ ಎದುರಿಸುತ್ತಾ ಹೋಗುವ ಘಟನೆಗಳು, ಓದುವ ಸಾಹಿತ್ಯ, ಮೆಚ್ಚುವ ವ್ಯಕ್ತಿಗಳ ವಿಚಾರಧಾರೆ, ನಮ್ಮದೇ ವ್ಯವಸಾಯ, ಮನಸ್ಸಿನ ಅಹಂಕಾರ, ತಾಳ್ಮೆ, ಸಹನೆಯಂತಹ ಗುಣಗಳಿಗೆ ಪ್ರತಿಕ್ರಿಯೆಯಾಗಿ ನಮಗೆ ದೊರೆಯುವ ವಿಚಾರಗಳು ನಮ್ಮವಾಗುತ್ತವೆಯೇ?

ಕೊನೆ ಕೊನೆಗೆ ತುಂಬಾ ಮಬ್ಬುಮಬ್ಬಾಗಿ ಗೋಚರಿಸುತ್ತಿರುವ ಸಂಗತಿಯೆಂದರೆ, ಹಣವೆಂಬುದು ಸಮಾಜದಲ್ಲಿ ಹರಿಯುತ್ತಿರುವ ಒಂದು ಮಾಧ್ಯಮ. ಹಣವನ್ನು ಯಾರೂ ಉತ್ಪಾದಿಸಲು ಸಾಧ್ಯವಿಲ್ಲ. ನಮ್ಮ-ನಮ್ಮ ಕಾಲ, ಸ್ಥಿತಿಗೆ, ಶಕ್ತಿಗೆ ಅನುಗುಣವಾಗಿ ನಮ್ಮ ಆವಶ್ಯಕತೆಗಳನ್ನು ಪೂರೈಸಿಕೊಳ್ಳಲು ಹಣ ನಮಗೆ ನೆರವಾಗುತ್ತದೆ. ನಮ್ಮದು ಕೇವಲ ಆವಶ್ಯಕತೆ, ಹಾಗೂ ಪ್ರಯತ್ನ ಹಣ ನಮ್ಮದಲ್ಲ. ನಾವು ಬೇರೆ ಬೇರೆ ಗಾತ್ರದ ಪಾತ್ರೆ, ಹೂಜಿಗಳಿದ್ದಂತೆ ಹಣ ನೀರಿನಂತೆ ನಮ್ಮನ್ನು ತುಂಬುತ್ತದೆ. ನಮ್ಮ ಆಕಾರವನ್ನೇ ಪಡೆಯುತ್ತದೆ. ಆಗ ಅದನ್ನು ನಾವು ನಮ್ಮ ಹಣ ಎನ್ನುತ್ತೇವೆ. ಅದೇ ನೀರು ಬೇರೊಬ್ಬನನ್ನು ಸೇರಿದಾಗ ಅದರ ಆಕಾರ ಬದಲಾಗುತ್ತದೆ. ಅದನ್ನು ಆತ ತನ್ನ ಹಣ ಎನ್ನುತ್ತಾನೆ. ಆಲೋಚನೆಗಳೂ ಸಹ ಹಾಗೇನಾ? ಅದು ಯಾರಿಗೂ ಸೇರಿದ್ದಲ್ಲ. ವಿಚಾರಗಳು ಮನುಷ್ಯನಲ್ಲಿ ಹುಟ್ಟುವ್ದೇ ಇಲ್ಲವಾ? ಆತನದೇನಿದ್ದರೂ ಆವಶ್ಯಕತೆ ಹಾಗೂ ಪ್ರಯತ್ನ ಮಾತ್ರವಾ? ಅದಕ್ಕನುಗುಣವಾಗಿ ಆತನನ್ನು ತುಂಬಿಕೊಳ್ಳುವ ಆಲೋಚನೆ, ವಿಚಾರದ ಮೇಲೆ ಅವನ ಅಧಿಕಾರವಿಲ್ಲವಾ?

ಈ ಎಲ್ಲಾ ಆಲೋಚನೆಗಳು ನಿಜಕ್ಕೂ ನನ್ನವಾ…!


Technorati : ,

ಕೆಲವು ಸಲ ಹಾಗಾಗುತ್ತದೆ. ಮನಸ್ಸಲ್ಲಿ ಹುಟ್ಟಿದ ಭಾವಕ್ಕೆ ಅಭಿವ್ಯಕ್ತಿಯ ಸ್ವಾತಂತ್ರ್ಯ ಕೊಡದಿದ್ದರೆ ಅದು ಒಳಗೊಳಗೇ ನಮ್ಮನ್ನು ತಿನ್ನತೊಡಗುತ್ತದೆ. ಅಂಥದ್ದನ್ನು ಒಮ್ಮೆ ಹೊರಗೆಡವಿಬಿಟ್ಟರೆ ಮನಸ್ಸಿಗೆ ನಿರಾಳ. ‘ನೆನೆಯದೆ ಇರಲಿ ಹ್ಯಾಂಗ…?’ ಎನ್ನುತ್ತಾರೆ ‘ಅಂತರ್ಮುಖಿ’.

ವೈಯಕ್ತಿಕ ಕೆಲಸಕ್ಕೆ ಸಂಬಂಧಿಸಿದಂತೆ ದಾವಣಗೆರೆಗೆ ಹೋಗಬೇಕಿತ್ತು. ಬೆಂಗಳೂರಿನಿಂದ ದಾವಣಗೆರೆಗೆ ಬಸ್ಸು ತುಮಕೂರು, ಶಿರಾ, ಹಿರಿಯೂರು, ಚಿತ್ರದುರ್ಗದ ಮಾರ್ಗವಾಗಿ ಹೋಗುತ್ತದೆ.neneyade copy.jpg ಶಿರಾದಲ್ಲಿ ಟೀ, ಕಾಫಿಗಾಗಿ ಹದಿನೈದು ನಿಮಿಷ ವಿರಾಮವಿರುತ್ತದೆ. ತಿಂಡಿ, ಕಾಫಿಯ ಆವಶ್ಯಕತೆಯಿರುವವರು, ಜಲಬಾಧೆ ತೀರಿಸುವ ಅನಿವಾರ್ಯತೆ ಇರುವವರು ಶಿರಾ ಯಾವಾಗ ಬರುತ್ತದೋ ಎಂದು ಕಾಯುತ್ತಿರುತ್ತಾರೆ. ಬಸ್ಸು ನಿಲ್ದಾಣದಲ್ಲಿ ನಿಂತ ಮೇಲೆ ಎಲ್ಲರೂ ದುಡುದುಡನೆ ಇಳಿದುಬಿಡುತ್ತಾರೆ. ಕೆಲವರು ಕಳ್ಳರ ಭಯಕ್ಕೆ ತಮ್ಮ ಲಗೇಜನ್ನು ಕಾಯಲು ಒಬ್ಬರನ್ನು ಬಿಟ್ಟು ಒಬ್ಬರು ಸರದಿಯಂತೆ ಕೆಳಕ್ಕಿಳಿದು ಹೋಗುತ್ತಾರೆ. ಪ್ರಯಾಣಿಕರ ಸೋಗಿನಲ್ಲಿ ಬಸ್ಸು ಹತ್ತಿ ಅಲ್ಲಿ ಇಲ್ಲಿ ಕುಳಿತಂತೆ ಮಾಡಿ ಸೂಟ್ ಕೇಸ್, ಬ್ಯಾಗುಗಳನ್ನು ತೆಗೆದುಕೊಂಡು ಕೆಳಗಿಳಿದುಹೋಗುವ ಚಾಣಾಕ್ಷ ಕಳ್ಳರ ಬಗ್ಗೆ ಅಪ್ಪ ಎಚ್ಚರಿಸುತ್ತಿದ್ದರು. ನಾನು ಕೆಳಕ್ಕಿಳಿದು ಹೋಗಿ ಟೀ ತರುತ್ತೇನೆ ಅಂತ ಹೇಳಿ ಹೊರಟೆ, ಅಪ್ಪ ಬಸ್ಸಲ್ಲೇ ಉಳಿದರು.

ಸುಡು ಸುಡು ಟೀಯನ್ನು ಪ್ಲಾಸ್ಟಿಕ್ ಕಪ್ಪುಗಳಿಗೆ ಹುಯ್ಸಿಕೊಂಡು ಬಂದು ಅಪ್ಪನ ಪಕ್ಕದ ನನ್ನ ಕಿಟಕಿಯ ಸೀಟಿನಲ್ಲಿ ಕುಳಿತೆ. ಘಮ ಘಮಿಸುವ ಟೀಯನ್ನು ಮೆಲ್ಲಗೆ ಹೀರುತ್ತ ಕಿಟಕಿಯಿಂದಾಚೆಗೆ ಕಣ್ಣು ಹಾಯಿಸಿದೆ. ಬಸ್ ನಿಲ್ದಾಣದ ಮುಂಭಾಗದ ಕಾಂಪೌಂಡಿನ ಎದುರು ನಿಂತ ಜನರ ಗುಂಪು ಇತ್ತ ಕಡೆ ತಿರುಗಿ ಏನನ್ನೋ ನೋಡುತ್ತಿದ್ದರು. ಕೆಲವರು ನಗುತ್ತಿದ್ದರು, ಕೆಲವರು ಕುತೂಹಲದಿಂದ ಸುಮ್ಮನೆ ನೋಡುತ್ತಾ ನಿಂತಿದ್ದರು. ಕಾಂಪೌಂಡಿನ ಹಾಗೂ ನಮ್ಮ ಬಸ್ಸಿನ ನಡುವಿನ ಪ್ರದೇಶ ಅವರ ಆಕರ್ಷಣೆಯ ಕೇಂದ್ರವಾಗಿತ್ತು. ಏನಿರಬಹುದೆಂದು ಅತ್ತ ನೋಡಿದೆ. ಒಬ್ಬ ಮಧ್ಯವಯಸ್ಕ ಗಂಡಸು ಕಪ್ಪು ಪ್ಯಾಂಟು, ಕಪ್ಪು ಬಣ್ಣದ ದಪ್ಪನೆಯ ಕೋಟಿನಂಥದ್ದು ತೊಟ್ಟುಕೊಂಡಿದ್ದಾನೆ. ಕೋಟನ್ನು ಇನ್ ಶರ್ಟ್ ಮಾಡಿಕೊಂಡಿದ್ದಾನೆ. ಮಾಸಿದ ಬಿಳಿ ಬಣ್ಣದ ಶಾಲೊಂದನ್ನು ಎದೆಯ ಮೇಲೆ ‘ಎಕ್ಸ್’ ಆಕಾರದಲ್ಲಿ ಕುತ್ತಿಗೆ ಬಳಸಿ ಸುತ್ತಿಕೊಂಡಿದ್ದಾನೆ. ಅಲ್ಲಲ್ಲಿ ಹರಿದ ಹಳೆಯ ಕಪ್ಪು ಬೂಟು ತೊಟ್ಟಿದ್ದಾನೆ. ತಲೆಯಲ್ಲಿ ಕೆದರಿದ ಕಪ್ಪು ಕೂದಲು. ಅದಕ್ಕೊಪ್ಪುವಂತಹ ಕಪ್ಪು ಮೈ ಚರ್ಮ. ಆತನ ಮುಖವನ್ನೇ ಗಮನಿಸಿದೆ, ಕೂಡಲೇ ಸೀಳಿದ ಆತನ ಮೇಲ್ದುಟಿ ನನ್ನ ಗಮನ ಸೆಳೆಯಿತು. ಮುಖದ ಬೇರೆ ಸೂಕ್ಷ್ಮಗಳನ್ನು ಗಮನಿಸಲಾಗದಷ್ಟು ಆ ಗುರುತು ನನ್ನನ್ನು ಆವರಿಸಿತು. ಬಲವಂತವಾಗಿ ಗಮನವನ್ನು ಆ ಸೀಳ್ದುಟಿಯಿಂದ ಕಿತ್ತು ತೆಗೆಯುತ್ತಿದ್ದವನಿಗೆ ಆತನ ಇಕ್ಕಟ್ಟಾದ ಹಣೆಯಲ್ಲಿ ಢಾಳಾಗಿ ಬಳಿದುಕೊಂಡಿದ್ದ ಕುಂಕುಮ ರಾಚಿತು. ಯಾವುದೋ ಕಪ್ಪು ಬಿಳುಪು ಕಾರ್ಟೂನಿನಿಂದ ಎದ್ದು ಬಂದಂತಿದ್ದ ಆತ. ಹತ್ತು ಮಂದಿಯ ಗುಂಪಿನೊಳಗೆ ನಿಂತರೆ ನಿಜವಾಗಿಯೂ ಆತ ಎಲ್ಲರ ಗಮನಕ್ಕೆ ಈಡಾಗುತ್ತಿದ್ದ. ಆತನ ವಿಚಿತ್ರವಾದ ಅಪೀಯರೆನ್ಸ್ ಎಲ್ಲರನ್ನು ಸೆಳೆಯುತ್ತಿತ್ತು. ಆದರೆ ಅಷ್ಟಕ್ಕೆ ಜನ ಗುಂಪಾಗಿ ನೋಡುತ್ತ ನಗುತ್ತಿದ್ದದ್ದು ನನ್ನಲ್ಲಿ ಬೆರಗನ್ನು ಹುಟ್ಟಿಸಿತು.

ನನ್ನ ಬೆರಗನ್ನು ಗಮನಿಸಿದ ಅಪ್ಪ, ‘ಅವನು ಮೆಂಟಲ್ ಕೇಸು… ಇಲ್ಲಿ ಬಸ್ ಸ್ಟ್ಯಾಂಡಿನಲ್ಲಿ ನಿಂತು ಹೋಗಿ ಬರುವ ಬಸ್ಸುಗಳಿಗೆ ಸಿಗ್ನಲ್ಲು ಕೊಡುತ್ತಿರುತ್ತಾನೆ. ಸ್ಟ್ಯಾಂಡಿನಲ್ಲಿ ನಿಂತ ಬಸ್ಸುಗಳ ಮಾರ್ಗವನ್ನು ಕೂಗಿ ಹೇಳುತ್ತಾನೆ. ಸ್ಟ್ಯಾಂಡಿನ ನೆಲದ ಮೇಲಿರುವ ಕಲ್ಲುಗಳನ್ನು ಎತ್ತಿ ಪಕ್ಕೆಸೆದು ಬಸ್ಸುಗಳಿಗೆ ಸಲೀಸು ಮಾಡುತ್ತಾನೆ, ಪ್ಲಾಸ್ಟಿಕ್ಕು, ಕಾಗದ, ಕಸವನ್ನು ತೆಗೆದು ಹಾಕಿ ನಿಲ್ದಾಣದ ಅಂಗಳವನ್ನು ಸ್ವಚ್ಚ ಮಾಡುತ್ತಾನೆ. ಪಾಪ ಹುಚ್ಚ… ಒಂದು ರೀತಿಯಲ್ಲಿ ಈತ ಕೆ.ಎಸ್.ಆರ್.ಟಿ.ಸಿಗೆ ಸ್ವಯಂ ಸೇವಕ.’ ಎಂದರು. ಕಪ್ಪಿನಲ್ಲಿದ್ದ ಟೀಯನ್ನು ಹೀರುತ್ತ.
ಅವನನ್ನೇ ಗಮನಸಿದೆ. ನಮ್ಮ ಬಸ್ಸಿನ ಪಕ್ಕದಲ್ಲಿ ರಸ್ತೆಯ ಮೇಲಿದ್ದ ಕಲ್ಲುಗಳನ್ನು ಆರಿಸಿ ಎತ್ತಿಕೊಂಡು ಪಕ್ಕಕ್ಕೆ ಹಾಕುತ್ತಿದ್ದ. ಕಸವನ್ನೆಲ್ಲ ಕೈಯಲ್ಲಿ ಎತ್ತಿ ಚರಂಡಿ ಬಳಿಗೆ ಎಸೆಯುತ್ತಿದ್ದ. ಜನರು ಅವನ ಈ ‘ಹುಚ್ಚಾಟ’ವನ್ನು ತದೇಕ ಚಿತ್ತದಿಂದ ನೋಡುತ್ತಿದ್ದರು ತಮ್ಮಲ್ಲೇ ಜೋಕ್ ಮಾಡಿಕೊಂಡು ನಗುತ್ತಿದ್ದರು. ಅವನನ್ನು ಗೇಲಿ ಮಾಡುವಂತೆ ಚೇಷ್ಟೆ ಮಾಡುತ್ತಿದ್ದರು, ಮಾಡಲು ಬೇರಾವ ಕೆಲಸವೂ ಇಲ್ಲದಂತೆ . ಈತ ಮಾತ್ರ ತನ್ನ ಕೆಲಸದಲ್ಲಿ ತಲ್ಲೀನನಾಗಿದ್ದ.

ನನ್ನ ಕಪ್ಪಿನಲ್ಲಿದ್ದ ಟೀ ಕುಡಿದು ಮುಗಿಸಿದ್ದೆ. ಆ ‘ಹುಚ್ಚ’ನನ್ನು ನೋಡುತ್ತಾ ಆಗೀಗ ಅಪ್ಪನೊಂದಿಗೆ ಹರಟುತ್ತ ಆ ಪುಟ್ಟ ಪ್ಲಾಸ್ಟಿಕ್ ಕಪ್ಪನ್ನು ಕ್ರಶ್ ಮಾಡಿ ಕಿಟಕಿಯಾಚೆ ಕೈ ಹಾಕಿ ಕೆಳಕ್ಕೆಸೆದೆ. ಪುನಃ ಆತ ಮಾಡುತ್ತಿದ್ದ ಕೆಲಸವನ್ನು ನೋಡ ತೊಡಗಿದೆ. ಈ ಮಧ್ಯೆ ನಮ್ಮ ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳಲು ಬಂದ ವ್ಯಕ್ತಿಗೆ ಅಲ್ಲಿದ್ದವರು ಟೀಗಾಗಿ ಕೆಳಕ್ಕಿಳಿದು ಹೋಗಿದ್ದಾರೆ ಅಂತ ಎಚ್ಚರಿಸಿ ಮತ್ತೆ ಕಿಟಕಿಯಿಂದಾಚೆ ತಲೆ ಹಾಕಿ ಹಣಕಿದೆ. ಆತ ಅಲ್ಲಿರಲಿಲ್ಲ. ರಸ್ತೆಯ ಮೇಲೆ ನಾನು ಎಸೆದಿದ್ದ ಪ್ಲಾಸ್ಟಿಕ್ ಕಪ್ಪು ಸಹ ಅಲ್ಲಿರಲಿಲ್ಲ. ನನಗೆ ಒಂದು ಕ್ಷಣ ಮೈ ಜುಮ್ಮೆನ್ನಿಸಿತು. ಬುದ್ಧಿ ತನ್ನ ಸ್ಥಿಮಿತದಲ್ಲಿಲ್ಲದ ವ್ಯಕ್ತಿ ದಿನ ನಿತ್ಯ ನೂರಾರು ಬಸ್ಸು ಓಡಾಡುವ ರಸ್ತೆಯಲ್ಲಿದ್ದ ಕಲ್ಲು, ಮುಳ್ಳು ತೆಗೆದು ಹಾಕುತ್ತಿದ್ದ. ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಬಿದ್ದಿದ್ದ ಬಾಳೆ, ಕಿತ್ತಳೆ ಹಣ್ಣುಗಳ ಸಿಪ್ಪೆ, ವಾಟರ್ ಬಾಟಲ್ ಗಳು, ಕಾಫಿ ಕುಡಿದು ಎಸೆದ ಪ್ಲಾಸ್ಟಿಕ್ ಲೋಟಗಳು, ಗುಟಕಾದ ಚೀಟಿಗಳು ಎಲ್ಲವನ್ನು ತೆಗೆದು ಹಾಕಿ ಸ್ವಚ್ಚ ಗೊಳಿಸುತ್ತಿದ್ದ. ನಿಲ್ದಾಣದ ಅಕ್ಕಪಕ್ಕ ನಿಂತವರು, ಬಸ್ಸಿನೊಳಕ್ಕೆ ಕುಳಿತವರು ಆತನನ್ನು ಕನಿಕರ ಬೆರೆತ ವ್ಯಂಗ್ಯ ನೋಟದಿಂದ ಬುದ್ಧಿ ಸ್ಥಿಮಿತದಲ್ಲಿದ್ದವರು ನೋಡುತ್ತಿದ್ದೆವು. ಆತನನ್ನು ಗೇಲಿ ಮಾಡಿಕೊಂಡು ನಗುತ್ತ ಬಸ್ಸಿನಿಂದ ಹೊರಕ್ಕೆ ಕಸ ಎಸೆಯುತ್ತಿದ್ದೆವು.
ಆತನ ಹೆಸರೇನೆಂದು ಕೇಳಬೇಕೆನಿಸಿತು. ಅಪ್ಪ, ‘ಹುಚ್ಚನಿಗೆಲ್ಲಿರುತ್ತೆ ಹೆಸರು… ಪಾಪ ಎಷ್ಟೊಳ್ಳೆ ಕೆಲಸ ಮಾಡ್ತಿದ್ದಾನಲ್ಲ’ ಅಂದರು. ನನಗೆ ಹೆಸರು ಏಕೆ ಬೇಕು ಎನ್ನುವ ಪ್ರಶ್ನೆ ಪ್ರಯಾಣದುದ್ದಕ್ಕೂ ಕಾಡಿತು.


Technorati : , , ,

ನಿನ್ನೆಯ ನೆನಪು ನಮ್ಮ ನಾಳೆಗೆ ಬದುಕಿನ ಹಾದಿಗೆ ಬೆಳಕಾಗಲೇ ಬೇಕಂತೇನೂ ಇಲ್ಲ. ಆದರೆ ನೆನಪುಗಳನ್ನು ಮೆಲಕು ಹಾಕುವುದರಲ್ಲಿಯೇ ಎಂಥದ್ದೋ ಒಂದು ಬಗೆಯ ಸಂತೃಪ್ತಿಯಿದೆ. ಸಮಾಧಾನವಿದೆ. ಪುಳಕವಿದೆ. ಕಳೆದ ದಿನಗಳ ನೆನಪಿನ ಹಂಗಿನಲ್ಲಿ ಮೆಲುವಾಗಿ ನರಳುವ ಅಂಕಣ ‘ಬೀಥೆ ಹುಯೆ ದಿನ್…’. ಈ ಸಂಚಿಕೆಯ ಅಂಕಣದಲ್ಲಿ ‘ಅಂತರ್ಮುಖಿ’ ತಮ್ಮ ಬೈಕ್ ಕಲಿಕೆಯ ರಸವತ್ತಾದ ಅನುಭವವನ್ನು ಅಕ್ಷರಗಳಲ್ಲಿ ಕಡೆದಿರಿಸಿದ್ದಾರೆ.

beethe copy.jpgಬೈಕು ಓಡಿಸುವುದು ತುಂಬಾ ಸುಲಭ ಅಂದುಕೊಂಡಿದ್ದೆ. ಪ್ರೈಮರಿ ಸ್ಲೂಲಿನಲ್ಲಿರುವಾಗಲೇ ಸೈಕಲ್ ಹೊಡೆಯುವುದನ್ನು ಕಲಿತುಕೊಂಡಿದ್ದೆ. ಅನಂತರ ಹೈಸ್ಕೂಲ್ ಮೆಟ್ಟಿಲು ಏರುತ್ತಿದ್ದಂತೆಯೇ ಗೇರ್ ಇಲ್ಲದ, ಸ್ಕೂಟಿಯಂತಹ ಮೊಪೆಡ್‌ಗಳನ್ನು ಓಡಿಸುವುದನ್ನು ಕಲಿತೆ. ಹತ್ತನೆಯ ತರಗತಿಯಲ್ಲಿ ನಮ್ಮ ಶಾಲೆಯಲ್ಲಿ ಪಬ್ಲಿಕ್ ಪರೀಕ್ಷೆಗಳಿಗೆ ಅಂತ ಪ್ರತ್ಯೇಕವಾದ ಕೋಚಿಂಗ್ ತರಗತಿಗಳು ನಡೆಯುತ್ತಿದ್ದವು. ಮುಂಜಾನೆ ಆರುಗಂಟೆಯಿಂದ ಒಂಭತ್ತರವರೆಗೆ, ಸಂಜೆ ಆರರಿಂದ ಒಂಭತ್ತರವರೆಗೆ. ಒಟ್ಟು ಆರು ತಾಸುಗಳು. ಇದಲ್ಲದೆ ರೆಗ್ಯುಲರ್ ಆಗಿ ತರಗತಿಗಳು ನಡೆಯುತ್ತಿದ್ದವು. ಒಟ್ಟು ಹದಿನಾಲ್ಕು ತಾಸುಗಳ ಕಾಲ ಶಾಲೆಯಲ್ಲಿರುತ್ತಿದ್ದೆವು! ಗಾಬರಿಯಾಗಬೇಡಿ, ಈ ಪ್ರತ್ಯೇಕ ಕೋಚಿಂಗ್ ತರಗತಿಗಳು ಪ್ರಾರಂಭವಾಗುತ್ತಿದ್ದದ್ದು ಪರೀಕ್ಷೆಗೆ ಒಂದು ತಿಂಗಳಿರುವಾಗ ಮಾತ್ರ.

ಮುಂಜಾನೆ ಆರುಗಂಟೆಗೇ ಮನೆಯಿಂದ ಕೊಂಚ ದೂರವೇ ಇದ್ದ ಶಾಲೆಗೆ ಸೈಕಲ್ಲಿನಲ್ಲಿ ಹೋಗಲು ನಾನು ಸಿದ್ಧನಿರಲಿಲ್ಲ. ಮುಂಜಾನೆಯ ಸವಿ ನಿದ್ದೆಯನ್ನು ತಪ್ಪಿಸಿಕೊಳ್ಳುವುದೇ ನನಗೆ ಅತ್ಯಂತ ದುಃಖದ ಸಂಗತಿಯಾಗಿತ್ತು. ಅದರ ಜೊತೆಗೆ ಆ ಚುಮುಚುಮು ಮೈಕೊರೆವ ಚಳಿಯಲ್ಲಿ ನಾಲ್ಕು ವರ್ಷ ಹಳೆಯದಾದ ಆದರೆ ಮಾಡರ್ನಾಗಿದ್ದ ಹೀರೋ ಸೈಕಲ್ಲನ್ನು ಏರಿಕೊಂಡು ಹೋಗುವುದೆಂದರೆ ನರಕಯಾತನೆಯನ್ನು ಅನುಭವಿಸಿದ ಹಾಗಾಗುತ್ತಿತ್ತು. ಮನೆಯಿಂದ ಶಾಲೆಗೆ ಹೋಗುವ ದಾರಿ ತುಂಬಾ ಏರಿನದಾಗಿತ್ತು ಬೆಳಿಗ್ಗೆ ಹಸಿ ಹೊಟ್ಟೆಯಲ್ಲಿ ಸೈಕಲ್ ಏರಿ ಹೊರಟರೆ ಆ ಏರಿಯನ್ನು ದಾಟಿ ಶಾಲೆಯನ್ನು ತಲುಪುವಷ್ಟರಲ್ಲಿ ಬೆವರಿನಿಂದ ಮೈ ಜಳಕವಾಗಿಬಿಟ್ಟಿರುತ್ತಿತ್ತು. ಅಲ್ಲಿ ಹೋಗಿ ಮಾಡುವುದಾದರೂ ಏನು? ಓದಬೇಕು! ಅದರಷ್ಟು repulsive ಹಾಗೂ disturbing ಆದ ಕೆಲಸ ನಮಗಿನ್ನ್ಯಾವುದಿತ್ತು? ಕರಾಟೆ ಕಲಿಯುವುದಕ್ಕೆ, ಖೊ-ಖೊ ಅಭ್ಯಾಸ ಮಾಡುವುದಕ್ಕೆ, ಕ್ರಿಕೆಟ್ ಮ್ಯಾಚ್ ಗಾಗಿ ಹೀಗೆ ಐದು, ಆರು ಗಂಟೆಗೇ ಎದ್ದು ಸೈಕಲ್ ಏರಿ ಹೊರಟಿದ್ದುಂಟು ಆದರೆ ಅದು ನಮ್ಮ ಪರ್ಸನಲ್ ಪ್ಯಾಶನ್‌ಗಾಗಿ. ವಿದ್ಯಾರ್ಥಿ ಜೀವನ ಮುಗಿವವರೆಗೂ ಓದುವುದೂ ಒಂದು ಪ್ಯಾಶನ್ ಅಂತ ನಮಗೆ ಅರಿವಾಗುವುದಾದರೂ ಹೇಗೆ?

ಸರಿ, ನನ್ನ ಬೆಳಗಿನ ಜಾವದ ಪಡಿಪಾಟಲನ್ನು ನೋಡಲಾಗದೆ ಅಪ್ಪ ಮನೆಯಲ್ಲಿದ್ದ ಹೀರೋ ಹೊಂಡದವರ ‘ಸ್ಟ್ರೀಟ್’ ಎಂಬ ಸ್ಕೂಟರನ್ನು ಶಾಲೆಗೆ ತೆಗೆದುಕೊಂಡು ಹೋಗಲು ಅನುಮತಿಸಿದರು. ಅದು ಬಹುಪಾಲು ಉಳಿದೆಲ್ಲಾ ಬೈಕ್ ಗಳಂತೇ ಗೇರ್ ಹೊಂದಿತ್ತು, ಆದರೆ ಕ್ಲಚ್ ಇರಲಿಲ್ಲ. ಬೈಕುಗಳಲ್ಲಿ ಗೇರುಗಳನ್ನು ಬದಲಾಯಿಸುವಾಗ ಕ್ಲಚ್ಚನ್ನು ಬಳಸಬೇಕಾಗುತ್ತದೆ. ಆದರೆ ಈ ‘ಸ್ಟ್ರೀಟ್’ನಲ್ಲಿ ನೇರವಾಗಿ ಗೇರುಗಳನ್ನು ಬದಲಾಯಿಸಬಹುದಿತ್ತು. ಕೆಲವು ದಿನ ಸೈಕಲ್ಲಿಗಿಂತ ನೂರುಪಟ್ಟು ಹೆವಿಯಾದ ಗಾಡಿಯನ್ನು ಬ್ಯಾಲೆನ್ಸ್ ಮಾಡುವುದು ಕಷ್ಟವಾಯಿತು. ಒಂದು ಸಲ ಅದು ನನಗೆ ಪಳಗಿದ ಮೇಲೆ ನೋಡಬೇಕಿತ್ತು ನನ್ನ ಸವಾರಿ! ಬೆಳಿಗ್ಗೆ ಆರುಗಂಟೆಯ ಮಸುಕು ಮಸುಕಾದ ವಾತಾವರಣ, ಡಿಸೆಂಬರ್-ಜನವರಿ ಸಮಯದ ಮೈ ಕೊರೆವ ಚಳಿ, ನಿರ್ಜನವಾದ ಟಾರು ರೋಡುಗಳು. ಕಿವಿಗೆ ಬಿಗ್ಗ ಬಿಗಿಯಾದ ಸ್ಕಾರ್ಫು, ಎದೆಗೆ ಬೆಚ್ಚನೆಯ ಜರ್ಕಿನ್ನು ಹಾಕಿಕೊಂಡು ಚಳಿಗಾಲದಲ್ಲಿ ಬಿರುಕು ಬಿಟ್ಟುಕೊಂಡ ತುಟಿ ಅಂದಗೆಟ್ಟ ಮೂಗಿಗೆ ಕೊಂಚ ವ್ಯಾಸಲೀನ್ ಸವರಿಕೊಂಡು ಬ್ಯಾಗ್ ಹೆಗಲೇರಿಸಿ ಶಾಲೆಗೆ ಹೊರಡುತ್ತಿದ್ದೆ. ಬೆಳಗಿನ ಸವಿನಿದ್ದೆಯಲ್ಲಿ ಮೈಚಾಚು ಮಲಗಿರುತ್ತಿದ್ದ ಸ್ಕೂಟರಿನ ಪಕ್ಕೆ ಒದ್ದು ಸ್ಟಾರ್ಟ್ ಮಾಡಿ ಮನೆಯಿಂದ ಮರೆಯಾಗುವವರೆಗೆ ನಿಧಾನವಾಗಿ ಕಾಳಜಿಯಿಂದ ಓಡಿಸಿದಂತೆ ಮಾಡಿ ಆ ರಸ್ತೆ ದಾಟುತ್ತಿದ್ದಂತೆಯೇ ಒಂದನೇ ಗೇರಿಗೆ ನೆಗೆದುಬಿಡುತ್ತಿದ್ದೆ. ಆಮೇಲಿನದು ಹುಚ್ಚು ಕುದುರೆಯ ವೇಗ. ಮೊದಲೇ ನಿರ್ಜನವಾದ ರಸ್ತೆ, ಮನೆ-ಮನೆಗೆ ಹಾಲು ಪೂರೈಸುವ ಹುಡುಗರು, ಪೇಪರ್ ಹಾಕಲು ಸೈಕಲ್ಲುಗಳ ಕ್ಯಾರಿಯರ್‌ನಲ್ಲಿ ಬಂಡಲು ಸಿದ್ಧಪಡಿಸಿಕೊಳ್ಳುತ್ತಿದ್ದ ಹುಡುಗರು, ಹತ್ತು ಗಂಟೆಗೆ ಬಾಗಿಲು ತೆರೆಯುತ್ತಿದ್ದ ಸೊಸೈಟಿಯ ಸೀಮೆ ಎಣ್ಣೆಗಾಗಿ ಕ್ಯಾನುಗಳನ್ನು ಸಾಲಾಗಿ ಜೋಡಿಸಿಟ್ಟು ಸೊಸೈಟಿಯ ಜಗುಲಿಯ ಮೇಲೇ ಕಂಬಳಿ ಹೊದ್ದು ತೂಕಡಿಸುತ್ತಿದ್ದ ಜನ, ಕಾಫಿ ಬಾರ್‌ನ ಬಾಗಿಲು ಅರ್ಧದವರೆಗೆ ಏರಿಸಿ ಕೆಲಸದ ಹುಡುಗನ ಕೈಲಿ ಅಂಗಳ ಗುಡಿಸಿಸುತ್ತಿರುವ ಯಜಮಾನರು, ಚಿಲಿ ಪಿಲಿಗುಟ್ಟುತ್ತಾ ಗೂಡುಗಳಿಂದ ಹೊರಬರುತ್ತಿರುವ ಹಕ್ಕಿಗಳು, ಚಳಿಗೆ ವಿಕಾರವಾಗಿ ಊಳಿಡುತ್ತಾ ಅಲೆದಾಡುವ ಬೀದಿನಾಯಿಗಳನ್ನು ಹೊರತು ಪಡಿಸಿದರೆ ನಾನು ಹಾಗೂ ನನ್ನ ಕಾಲುಗಳ ಸಂದಿಯಲ್ಲಿ ಹುಚ್ಚೇಳಿಸುವ ಸ್ಪೀಡಿನ ಸ್ಕೂಟರ್ರು! ಕೆಲವು ದಿನಗಳ ಕಾಲ ಸ್ಕೂಟರಿನಲ್ಲಿ ಹೋಗಬೇಕೆಂಬ ಹಪಹಪಿಯಲ್ಲಿ ಮೈ ಹುಶಾರು ಇಲ್ಲದ ದಿನವೂ ಸ್ಕೂಲಿಗೆ ಹೋಗುತ್ತಿದ್ದೆ.354983759_e8315935f0.jpg

ಹತ್ತನೆಯ ತರಗತಿ ಮುಗಿದ ನಂತರ ಪಿಯುಸಿಗೆ ದೂರದ ಮಂಗಳೂರಿನ ಹತ್ತಿರದ ರೆಸಿಡೆನ್ಶಿಯಲ್ ಕಾಲೇಜ್‌ಗೆ ಸೇರಿದ್ದರಿಂದ ಸ್ಕೂಟರು, ಬೈಕುಗಳಿರಲಿ, ನನ್ನ ಐದು ವರ್ಷಗಳ ಸಂಗಾತಿಯಾದ ಸೈಕಲ್ಲನ್ನೂ ಬಿಟ್ಟಿರಬೇಕಾಯಿತು. ಎರಡು ವರ್ಷಗಳ ಪಿ.ಯು ಓದು ಮುಗಿಸಿ ಇಂಜಿನಿಯರಿಂಗ್ ಸೀಟು ಪಡೆದುಕೊಂಡು ಬೆಂಗಳೂರಿನ ಕಾಲೇಜಿಗೆ ಸೇರಿದ ಮೇಲಂತೂ ಬಿ.ಎಂ.ಟಿ.ಸಿ ಬಸ್ಸುಗಳೇ ನಿತ್ಯದ ಸಂಗಾತಿಗಳಾದವು. ರಜೆಯಲ್ಲಿ ಮನೆಗೆ ಹೋದಾಗ ಬೈಕ್ ಓಡಿಸಬೇಕೆಂಬ ಆಸೆಯಾಗುತ್ತಿದ್ದಾದರೂ ಸರಿಯಾದ ತರಬೇತಿ ನೀಡದೆ ಬೈಕನ್ನು ಮುಟ್ಟಗೊಡುವುದಿಲ್ಲ ಎಂದು ಅಪ್ಪ ಶಿಸ್ತು ಮಾಡಿದ್ದರಿಂದ ಸುಮ್ಮನಾಗುತ್ತಿದ್ದೆ.

ಈ ಸಲದ ಪರೀಕ್ಷೆ ಮುಗಿಸಿ ರಜೆಗೆ ಮನೆಗೆ ಬಂದಾಗ ಈ ಸಲ ಏನೇ ಆಗಲಿ ಬೈಕನ್ನು ಪಳಗಿಸಿಕೊಂಡೇ ಬಿಡಬೇಕು ಎಂದು ನಿರ್ಧರಿಸಿದೆ. ಹಿಂದೆ ಕ್ಲಚ್ ಇಲ್ಲದ ಸ್ಕೂಟರ್‌ಗಳನ್ನು ಓಡಿಸಿದ ಆತ್ಮವಿಶ್ವಾಸ ಇದ್ದುದರಿಂದ ಬೈಕನ್ನು ಓಡಿಸುವುದು ಅಂತಹ ಪ್ರಯಾಸದ ಕೆಲಸವಾಗಲಿಕ್ಕಿಲ್ಲ ಎಂದು ಭಾವಿಸಿದ್ದೆ. ಆದರೆ ಯಾವಾಗ ಊರ ಹೊರಗಿನ ನಿರ್ಜನ ಮೈದಾನದಲ್ಲಿ ಬೈಕಿನ ಮೇಲೆ ಕುಳಿತು ಬೈಕನ್ನು ನ್ಯೂಟ್ರಲ್ಲಿನಿಂದ ಮೊದಲ ಗೇರಿಗೆ ಹಾಕಿ ಹಿಡಿದಿದ್ದ ಕ್ಲಚ್ಚನ್ನು ಒಮ್ಮೆಗೇ ಕೈಬಿಟ್ಟೆನೋ ಹುಚ್ಚು ಕುದುರೆ ಮುಗಿಲೆತ್ತರಕ್ಕೆ ಚಿಮ್ಮಿ ಸವಾರನನ್ನು ಬೆನ್ನ ಮೇಲಿಂದ ಕೆಳಕ್ಕೆ ಕೆಡವುತ್ತದೆಯೋ ಹಾಗೆ ‘ಗಕ್!’ ಅಂತ ಮುಂದಕ್ಕೆ ಎಗರಿ ಮುಂದಿನ ಗಾಲಿ ಗಾಳಿಯಲ್ಲಿ ಗಿರ್ರನೆ ತಿರುಗಿತು, ಗಾಬರಿಯಿಂದ ಬಲಗಾಲು ಬ್ರೇಕ್ ಅದುಮಿದ್ದರೆ ಬಲಗೈ ಆತಂಕದಲ್ಲಿ ಏಕ್ಸಲೇಟರನ್ನು ಹಿಂಡುತ್ತಿತ್ತು. ಬೈಕಿನ ಇಂಜಿನ್ನು ಗಾಯಗೊಂಡ ಆನೆಯ ಹಾಗೆ ಒಂದೇ ಸಮನೆ ಘೀಳಿಡುತ್ತಿತ್ತು. ನನ್ನ ತಲೆಗೆ ಅಮರಿಕೊಂಡಿದ್ದ ಹೆಮ್ಮೆಯೆಲ್ಲ ಒಂದೇ ಕ್ಷಣಕ್ಕೆ ಜರ್ರನೆ ಇಳಿದುಹೋಯ್ತು. ಪ್ರಯಾಸದಿಂದ ಬೈಕನ್ನು ನಿಲ್ಲಿಸಿ, ಸ್ಟ್ಯಾಂಡ್ ಹಾಕಿ ಕೆಳಗಿಳಿದು ಕೆಲಕಾಲ ಶಾಕ್ ನಿಂದ ಹೊರಬಂದು ‘ಎಲಾ, ಬೈಕೇ ನಿನಗಿಷ್ಟೊಂದು ಧಿಮಾಕೇ…’ ಎಂದು ಕೊಂಡೆ. ಹೊಸ ಸವಾರನ್ನು ಒಲ್ಲದ ಮನಸ್ಸಿನಿಂದ ಬೆನ್ನ ಮೇಲೇರಿಸಿಕೊಂಡು ಒಮ್ಮೆ ಕೆಳಕ್ಕೊಗೆದು ‘ಹೆಂಗೆ’ ಎಂದು ಗುರಾಯಿಸುತ್ತ ನಿಲ್ಲುವ ಕುದುರೆಯ ಹಾಗೆ ಬೈಕು ನಿಂತಿತ್ತು!

ಆ ದಿನ ಸುಮಾರು ಅರ್ಧಗಂಟೆಗಳ ಕಾಲ ಕ್ಲಚ್ ಹಿಡಿಯುವ, ಅದನ್ನು ನಿಧಾನವಾಗಿ ಬಿಡುವ ತರಬೇತಿ ನಡೆಯಿತು. ಬೈಕನ್ನು ಬ್ಯಾಲೆನ್ಸ್ ಮಾಡುವುದರಲ್ಲಿ, ಓಡಿಸುವುದರಲ್ಲಿ ನನಗೆ ಯಾವ ಅಡ್ಡಿಯೂ ಇರಲಿಲ್ಲ. ಸಮಸ್ಯೆಯಿದ್ದದ್ದೆಲ್ಲಾ ಈ ಹಾಳಾದ್ದು ಕ್ಲಚ್ಚಿನದ್ದು. ಅಪ್ಪ ಹೇಳುತ್ತಿದ್ದ ಇಂಜಿನ್ನಿನ ಮೆಕಾನಿಸಂ, ಕ್ಲಚ್, ಗೇರ್ ಬಾಕ್ಸ್ ಕೆಲಸ ಮಾಡುವ ವಿಧಾನಗಳನ್ನು ತಿಳಿದು, ಹತ್ತಾರು ಬಾರಿ ನೆಗೆ-ನೆಗೆದು ಅಭ್ಯಾಸ ಮಾಡಿ ಇನ್ನು ಪರವಾಗಿಲ್ಲ ಎನ್ನಿಸಿದ ಮೇಲೆ ಮನಗೆ ಮರಳಿದ್ದೆ. ಒಮ್ಮೆ ಬೈಕನ್ನು ಸ್ಟಾರ್ಟ್ ಮಾಡಿ ಅದರ ಮನವೊಲಿಸಿ ಮುಂದಕ್ಕೆ ನಡೆಸಬಲ್ಲೆ ಅಂತ ಆತ್ಮವಿಶ್ವಾಸ ಬಂದ ಕೂಡಲೇ ಮತ್ತೆ ‘ಅಹಂ’ನ ಭೂತ ತಲೆಯೇರಿತ್ತು. ನಾಳೆ ಈ ಬೈಕಿನ ಸೊಕ್ಕು ಮುರಿಯಬೇಕು ಅಂದುಕೊಂಡು ರಾತ್ರಿ ನಿದ್ದೆಹೋದೆ.

ಮರುದಿನ ಬೈಕನ್ನೇರಿ ಸ್ಟಾರ್ಟ್ ಮಾಡಿ ನಿರಾಯಾಸವಾಗಿ ಕ್ಲಚ್ ನಿರ್ವಹಣೆ ಮಾಡಿ ದೂರದವರೆಗೆ ಓಡಿಸಿದೆ. ಇನ್ನು ಕಲಿಯುವುದು ಏನೂ ಇಲ್ಲ, ಬೈಕೆಂದರೆ ಇಷ್ಟೇ ಅಂತ ಅಂದುಕೊಂಡು ಹೋದ ರಸ್ತೆಯಲ್ಲೇ ಹಿಂತಿರುಗಿ ಬರೋಣವೆಂಡುಕೊಂಡು ವೇಗ ಕಡಿಮೆ ಮಾಡಿ ಟರ್ನ್ ಮಾಡುತ್ತಿರುವಾಗ ‘ಗಕ್ಕ್..ಕ್ಕ್..’ ಅಂತ ಬಿಕ್ಕಳಿಸುತ್ತ ಇಂಜಿನ್ ಆಫ್ ಮಾಡಿಕೊಂಡು ಬೈಕು ನಿಂತುಬಿಟ್ಟಿತು. ತೀವ್ರವಾದ ಅವಮಾನವಾಯಿತು. ‘ಗಾಡಿ ನಾಲ್ಕು ಅಥವಾ ಮೂರನೆ ಗೇರಿನಲ್ಲಿರುವಾಗ ಕ್ಲಚ್ ಅದುಮದೆ ಏಕ್ಸ್ ಲೇಟರನ್ನು ಸಂಪೂರ್ಣವಾಗಿ ಕಡಿಮೆಮಾಡಿಬಿಟ್ಟರೆ ಇಂಜಿನ್ ಆಫ್ ಆಗಿಬಿಡುತ್ತೆ. ಟರ್ನಿಂಗ್ ಮಾಡುವಾಡುವಾಗ ಎರಡನೆಯ ಗೇರಿಗೆ ಗಾಡಿಯನ್ನು ತಳ್ಳಬೇಕು.’ ಎಂಬ ಅಪ್ಪನ ಸಲಹೆಯಂತೆ ಒಂದೆರಡು ಬಾರಿ ಟರ್ನಿಂಗ್ ಮಾಡುವಷ್ಟರಲ್ಲಿ ನನ್ನ ಬೈಕ್ ಕಲಿಕೆ ‘ಟರ್ನಿಂಗ್ ಪಾಯಿಂಟ್’ಬಂದಿತ್ತು.

ಮೂರನೆಯ ದಿನ ಯಥಾಪ್ರಕಾರ ಇನ್ನೇನಿದೆ ಕಲಿಯಲಿಕ್ಕೆ ಎಂಬ ಭಾವದಲ್ಲೇ ಅಪ್ಪನೊಂದಿಗೆ ಅಭ್ಯಾಸದ ಮೈದಾನಕ್ಕೆ ಹೋದೆ. ಒಂದೆರಡು ಸಲ ಹಿಂದಿನ ದಿನ ಕಲಿತ ಕಸರತ್ತುಗಳನ್ನು revise ಮಾಡಿಕೊಂಡ ನಂತರ ಅಪ್ಪ ‘ರಸ್ತೆಯಲ್ಲಿ ತಿರುವು ಬಂದಾಗ, ತಿರುವಿನಲ್ಲಿ ಬಂದು ಮುಖ್ಯ ರಸ್ತೆಯನ್ನು ಸೇರಿಕೊಳ್ಳುವಾಗ ಬೈಕನ್ನು ನಿಲ್ಲಿಸಿ ಹಿಂದೆ ಮುಂದೆ ಬರುತ್ತಿರುವ ವಾಹನಗಳನ್ನು ಗಮನಿಸಿ ಮತ್ತೆ ಮುಂದೆ ಹೋಗಬೇಕು. ಆ practice ಮಾಡು’ ಎಂದರು. ಅದರಲ್ಲೇನಿದೆ ಮಹಾ ಅಂದುಕೊಂಡು ನೇರವಾದ ರಸ್ತೆಯಲ್ಲಿ ವೇಗವಾಗಿ ಬಂದು ಟರ್ನಿಂಗಿನಲ್ಲಿ ನಿಲ್ಲಿಸಲೆಂದು ಬ್ರೇಕ್ ಒತ್ತಿದೆ, ಜೊತೆಗೆ ಕ್ಲಚ್ಚನ್ನೂ ಕಚ್ಚಿ ಹಿಡಿದಿದ್ದರಿಂದ ಬೈಕು ಸರ್ರನೆ, ಸ್ಕೀಯಿಂಗ್ ಮಾಡುವವನಂತೆ ರಸ್ತೆಯ ಮೇಲೆ ಜಾರಿತು. ‘ಹೀಗೆ ರಸ್ತೆಯಲ್ಲಿ ಜಾರಿದರೆ ಹಿಂದೆ ಬರುವ ಲಾರಿ ಬಸ್ಸಿನಡಿ ಹೋಗಬೇಕಾಗುತ್ತೆ’ ಅಂತ ಅಪ್ಪ ಹೇಳಿದರು ನಸುನಗುತ್ತ. ಅನಂತರ ಬ್ರೇಕ್ ಹಾಗು ಕ್ಲಚ್ ಕೆಲಸ ಮಾಡುವ ವಿಧಾನವನ್ನು ಮತ್ತೊಮ್ಮೆ brief ಆಗಿ ಹೇಳಿದರು. ಬ್ರೇಕ್ ಹಾಕಿದಾಗ ಇಂಜಿನ್ನು ವೇಗಕಳೆದುಕೊಳ್ಳುತ್ತ ನಿಂತು ಆಫ್ ಆಗಿಬಿಡುತ್ತೆ. ಕ್ಲಚ್ ಅವುಚಿ ಹಿಡಿದರೆ ಬ್ರೇಕ್ ಹಾಕಿ ನಿಲ್ಲಿಸಿದಾಗಲೂ ಇಂಜಿನ್ ಆಫ್ ಆಗುವುದಿಲ್ಲ. ಸರಿ ಹಲವು ಟೆಸ್ಟ್ ಡ್ರೈವ್‌ಗಳ ನಂತರ ಆ ಕಸರತ್ತೂ ಕರಗತವಾಯಿತು.

ನಾಲ್ಕನೆಯ ದಿನ ಮುಂಚೆ ಕಲಿತ ಎಲ್ಲಾ ವಿದ್ಯೆಗಳನ್ನು ಒರೆಗೆ ಹಚ್ಚಿ ಪರೀಕ್ಷಿಸಿಯಾದ ಮೇಲೆ ಅಪ್ಪನನ್ನು ಕೂರಿಸಿಕೊಂಡು ಮೈದಾನದಲ್ಲಿದ್ದ ಎಪಿಎಂಸಿ ಕಚೇರಿಯ ಸುತ್ತ ರೌಂಡು ಹೊಡೆದೆ. ಇಂಡಿಕೇಟರ್ ಹಾಕುವುದು, ಹಾರ್ನ್ ಮಾಡುವುದು, ಎದುರು ಬರುವ ವಾಹನಕ್ಕೆ ಒಮ್ಮೆ ಕಣ್ಣು ಮಿಟುಕಿಸಿದಂತೆ ಹೈ ಬೀಮಿನಲ್ಲಿ ಲೈಟ್ ಬ್ಲಿಂಕ್ ಮಾಡಿ ಸೂಚನೆ ಕೊಡುವುದನ್ನೆಲ್ಲ ಅಭ್ಯಾಸ ಮಾಡಿಸಿದರು. ಅದಕ್ಕೂ ಮುನ್ನ ಗಮನವಿಡೀ ಕ್ಲಚ್ಚು ಅವುಚಿ ಹಿಡಿದ ಕೈ ಹಾಗೂ ಗೇರ್ ಬದಲಿಸುವ ಕಾಲಿನ ಮೇಲೆಯೇ ಇರುತ್ತಿತ್ತು. ಅತ್ತ ಕಡೆಯಿಂದ ಗಮನವನ್ನು ಎಳೆದು ತಂದು ಇಂಡಿಕೇಟರ್, ಹಾರನ್ ಕಡೆಗೆ ವಾಲಿಸುವಷ್ಟರಲ್ಲಿ ಕ್ಲಚ್ಚು, ಗೇರುಗಳ ಮೇಳ ತಪ್ಪಿ ಬೈಕು ರ್ರ್‌ರ್ರ್ ಅಂತ ರೇಗುತ್ತಿತ್ತು.

ಕೊನೆಗೂ ಎಲ್ಲಾ ರಹಸ್ಯ ವಿದ್ಯೆಗಳನ್ನು ಸಿದ್ಧಿಸಿಕೊಂಡು ಹೆಮ್ಮೆಯಿಂದ ರಸ್ತೆಗಿಳಿಯುತ್ತಿದ್ದರೆ ಎದೆಯಲ್ಲಿ ಪುಟಿಯುವ ಉತ್ಸಾಹ. ಎದೆಯ ಮೂಲೆ ಮೂಲೆ ತಲುಪುವಂತೆ ಗಾಳಿ ಎಳೆದುಕೊಂಡು ಎದೆಯುಬ್ಬಿಸಿ ಏಕ್ಸಲೇಟರ್‌ನ ಕತ್ತು ಹಿಚುಕಿದರೆ ಬೈಕು ಉನ್ಮಾದದಲ್ಲಿ ಮುನ್ನೆಗೆಯುತ್ತಿತ್ತು. ಆದರೆ ಭರ್ರೋ ಅಂತ ಎದುರು ಬರುವ ವಾಹನಗಳು, ಹಿಂದಿನಿಂದ ಕಿಟಾರನೆ ಹಾರ್ನ್ ಬಾರಿಸುತ್ತಾ ಸವರಿಕೊಂಡು ಹೋಗುವ ಬಸ್ಸು, ಲಾರಿಗಳು ದಿಗಿಲನ್ನುಂಟು ಮಾಡುತ್ತಿದ್ದವು. ಅಲ್ಲಿಯವರೆಗೂ ನಿರ್ಮಾನುಷವಾದ ಮೈದಾನದ ರೋಡುಗಳಲ್ಲಿ ಕಲಿತ ವಿದ್ಯೆಗಳು, ಮಾಡಿದ ಕಸರತ್ತುಗಳೆಲ್ಲಾ ತಲೆಕೆಳಗಾದಂತಹ ಅಭದ್ರತೆಯಲ್ಲಿ ನಲುಗಿ ಹೋಗುತ್ತಿದ್ದೆ. ಆ ರಸ್ತೆಯ ಮೇಲೆ ಓಡಾಡುವ ಕಾರು, ಬಸ್ಸು, ಲಾರಿ, ಮತ್ತೊಬ್ಬ ಬೈಕಿನವ ನನ್ನನ್ನು ಕಂಡು ಕೊಂಚ ಕನಿಕರ, ಕೊಂಚ ರೇಗುವಿಕೆ, ಕೊಂಚ ಕೀಟಲೆಯ ಕಣ್ಣುಗಳಲ್ಲಿ ದಿಟ್ಟಿಸಿ ಹೊರಟು ಹೋಗುತ್ತಾರೆ. ನನಗೆ ಹೊಸಬನೆಂಬ ಭಯ. ತಾನು ಕಲಿತದ್ದು ಇಲ್ಲಿ ಯಾವ ಉಪಯೋಗಕ್ಕೂ ಬರುವುದಿಲ್ಲ ಎಂಬ ಬಿಟ್ಟಿ ಉಪದೇಶಗಳು. ಕೆಲವು ದಿನ ಕಳೆಯುವಷ್ಟರಲ್ಲಿ ಎಲ್ಲಾ ಸರಾಗ. ಬೈಕೆಂಬುದು ನಮ್ಮ ರಕ್ತ ಹಂಚಿಕೊಂಡು ಬೆಳೆದ ದೇಹದ ಭಾಗವೇನೊ ಎಂಬ ಆಪ್ತತೆ ಬೆಳೆದುಬಿಡುತ್ತದೆ. ಎಷ್ಟೋ ದಿನಗಳ ನಂತರ ಬೈಕಿನ ಬೆನ್ನೇರಿ ಗಾಳಿಯನ್ನು ಅಟ್ಟಿಕೊಂಡು ಹೋಗುವಾಗ ಬೆದರಿದ ಕಣ್ಣುಗಳ ಹೊಸ ಬೈಕ್ ಸವಾರ ಎದುರಾದಾಗ ಹಳೆಯದೆಲ್ಲ ನೆನಪಾಗಿ ನಮಗೆದುರಾಗಿದ್ದವರ ಕಣ್ಣುಗಳಲ್ಲಿದೆ ಅದೇ ಕನಿಕರ, ಕೀಟಲೆಯನ್ನು ನಾವು ತುಂಬಿಕೊಂಡು ಆತನನ್ನು ದಿಟ್ಟಿಸಿ ನೋಡಿ ಮುಂದೆ ಹೊರಟು ಹೋಗುತ್ತೇವೆ…


Technorati : , , ,

ಆತ್ಮೀಯ ಗೆಳೆಯಾ,

ಇನ್ನೇನಂಥ ಕರೆಯಲಿ ನಿನ್ನ? ನಮ್ಮ ಸಂಬಧಕ್ಕೆ ಇದಕ್ಕಿಂತ ಸೂಕ್ತವಾದ ಯಾವ ಹೆಸರನ್ನು ತಾನೆ ಇಡಲು ಸಾಧ್ಯ? ಹೀಗೆ ಸಂಬಂಧಗಳಿಗೆ ಹೆಸರಿಡುವ ಚಾಳಿಗೆ ಏನನ್ನ ಬೇಕು? ಎಲ್ಲಕ್ಕೂ ನಾವು ಹೆಸರಿಟ್ಟು, ಚೌಕಟ್ಟು ಹಾಕಿ ಹರಿವನ್ನು ನಿಲ್ಲಿಸಿಬಿಡಲು ಏಕೆ ಹವಣಿಸುತ್ತೇವೆ? ಕಣ್ಣೆದುರು ಇರುವ ನಿತ್ಯ ಹಸಿರಾದ ಜೀವನಕ್ಕಿಂತ ನಮಗೆ ಚೌಕಟ್ಟು ಹಾಕಿರಿಸಿದ ಫೋಟೊ ಏಕೆ ಇಷ್ಟವಾಗುತ್ತೆ? ಸದಾ ಹರಿಯುತ್ತಲೇ, ಸದಾ ಬದಲಾಗುತ್ತಲೇ ಇರುವ ನೀರಿನ ಹರಿವಿಗೆ ನದಿ ಅಂತ ಹೆಸರಿಟ್ಟು ಬಿಡಬಹುದೇ? ಮರ ಅಂತ ನಾವು ಕರೆದ ಭೌತಿಕ ವಸ್ತು ಕ್ಷಣಕ್ಷಣಕ್ಕೂ ಬೆಳೆದು, ಬೇರೆಯದೇ ಹಂತವನ್ನು ಮುಟ್ಟುತ್ತಿರುತ್ತದೆ. ಮಗುವಿಗೆ ಹೆಸರಿಡುವ ನಾವು ಅದೇ ಹೆಸರಿಗೆ ಆತನ ಇಡೀ ಆಯುಷ್ಯವನ್ನು ಟ್ಯಾಗ್ ಮಾಡಿಬಿಡುತ್ತೇವಲ್ಲ, ಹೀಗೆ ಹೆಸರಿಡುವುದು ನಮ್ಮ ಮನಸ್ಸಿನ ದೌರ್ಬಲ್ಯವೇ? ಹೀಗೆ ಹೆಸರಿಲ್ಲದ ಸಂಬಂಧಗಳೆಂದರೆ ನಮಗೆ ಭಯವೇ, ಸಂಶಯವೇ, ಅಭದ್ರತೆಯೇ? ಹೆಸರಿಲ್ಲದ ವ್ಯಕ್ತಿಯ ಅಪರಿಚಿತತೆ ಮತ್ತಷ್ಟು ಗಾಢವಾದಂತೆ!

ಈಗೇಕೆ ಹಳೆಯದನ್ನೆಲ್ಲಾ ನೆನಪಿಸಿಕೊಳ್ಳಬೇಕು? ಹಳೆಯ ಸಮಾಧಿಗಳನ್ನೆಲ್ಲಾ ಅಗೆದಗೆದು ನಮ್ಮ ಇಂದಿನ ಸಂಬಂಧದ ಬೇರನ್ನು ಹುಡುಕುವ ಪ್ರಯತ್ನವೇಕೆ? ಹಾಗೆ ಬೇರನ್ನು ಹಿಡಿದಾಗಲಾದರೂ ನಮ್ಮ ಸಂಬಂಧದ ಸ್ವರೂಪದ ದರ್ಶನ ನಮಗಾಗಬಹುದು ಎಂಬ ಆಸೆಯಿಂದಲೇ, ಆಗಲಾದರೂ ನಾವು ಅದಕ್ಕೆ ಹೆಸರಿಡಬಹುದು ಎಂಬ ದುರಾಸೆಯಿಂದಲೇ? ಇರಲಿ, ಹಳೆಯ ನೆನಪಿನ ಪುಟಗಳನ್ನು ತೆರೆಯುವಲ್ಲಿ ಇರುವ ಆಕರ್ಷಣೆಗಾಗಿಯಾದರೂ ನಾನು ನೆನಪುಗಳಿಗೆ ಹೊರಳಿಕೊಳ್ಳುತ್ತೇನೆ.inti ninna preetiya copy.jpg

ಆಗಿನ್ನೂ ನಾವು ಕಾಲೇಜು ಓದುತ್ತಿದ್ದ ದಿನಗಳು. ನಾವು ಹೈಸ್ಕೂಲ್ ಓದಿದ ಸಂಸ್ಥೆಯಲ್ಲೇ ಪಿಯು ಕಾಲೇಜೂ ಇತ್ತು ಡಿಗ್ರಿ ಸಹ ಇತ್ತು. ನನಗೆ ನಿನ್ನ ಪರಿಚಯ ಹೈಸ್ಕೂಲ್ ದಿನಗಳಿಂದಲೇ ಆಗಿತ್ತು. ನಾವಿಬ್ಬರು ಡಿಬೇಟ್‌ಗಾಗಿ ಬೇರೆ ಶಾಲೆಗಳಿಗೆ ಹೋಗುತ್ತಿದ್ದದ್ದು ನಿನಗೆ ನೆನಪಿದೆಯಾ? ನನಗೆ ಬಹುಮಾನ ಬಂದಾಗಲೆಲ್ಲಾ ನೀನು ‘ಈ ಜಡ್ಜುಗಳಿಗೆ ಹುಡುಗೀರು ಅಂದ್ರೇನೇ ಮುದ್ದು’ ಅಂತ ಸೋತ ಅವಮಾನವನ್ನು ಮುಚ್ಚಿಕೊಳ್ಳುವ ಪ್ರಯತ್ನದಲ್ಲಿ ವಟಗುಟ್ಟುತ್ತಿದ್ದೆಯಲ್ಲಾ, ಅದನ್ನು ನಾನು ನನ್ನ ಗೆಳತಿಯರಲ್ಲಿ ಹೇಳಿಕೊಂಡು ಎಷ್ಟು ನಕ್ಕಿದ್ದೇನೆ ಗೊತ್ತಾ? ಅದೇನು ಬರೆದಿತ್ತೋ,ನಮ್ಮ ನಸೀಬಿನಲ್ಲಿ ಶಾಲೆಯಲ್ಲಿ ನಡೆದ ಕ್ವಿಝ್‌ಗೆ ನಮ್ಮಿಬ್ಬರನ್ನೂ ಗ್ರೂಪ್ ಮಾಡಿದ್ದರು. ನೀನು ಅದೆಷ್ಟು ಪಡಿಪಾಟಲು ಪಟ್ಟು ನನಗೆ ಓದುವಂತೆ ಪುಸಲಾಯಿಸಿದರೂ ನಾನು ಗಂಭೀರವಾಗಿ ಕುಳಿತು ಓದಲಿಲ್ಲ, ‘ನೀನು ಓದು ಸಾಕು, ನೀನಿದ್ದ ಮೇಲೆ ನನಗೇಕೆ ಚಿಂತೆ’ ಎಂದು ನಿನಗೆ ಹೇಳಿದ್ದೆ ನಿನ್ನ ಬುದ್ಧಿವಂತಿಕೆಯ ಮೇಲಿದ್ದ ಅಭಿಮಾನದಿಂದ. ನಿನಗೆ ಗೊತ್ತಾ, ನಾವಿಬ್ಬರೂ ಒಂದು ಟೇಬಲ್ಲಿನಲ್ಲಿ ಕುಳಿತು ಕ್ವಿಝ್ ಮಾಸ್ಟರ್ ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ವಿ. ನಮ್ಮ ಟೇಬಲ್‌ಗೆ ‘ಇಂಚರ’ ಅಂತ ಹೆಸರು ಕೊಟ್ಟಿದ್ರು. ಕ್ವಿಝ್ ಮಾಸ್ಟರ್ ಪ್ರಶ್ನೆಯನ್ನು ಪೂರ್ಣಗೊಳಿಸುವ ಮುಂಚೆಯೇ ನೀನು ಉತ್ತರ ಹೇಳುತ್ತಿದ್ದೆ. ನೆಪಮಾತ್ರಕ್ಕೆ ನನ್ನ ಬಳಿ ಚರ್ಚಿಸಿದ ಹಾಗೆ ಮಾಡುತ್ತಿದ್ದೆ. ಆಗೆಲ್ಲಾ ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ನನ್ನ ಗೆಳತಿಯರ ಮುಖದಲ್ಲಿ ಒಡೆದು ಕಾಣುತ್ತಿದ್ದ ಅಸೂಯೆಯನ್ನು ನಾನು ಅದೆಷ್ಟು ಎಂಜಾಯ್ ಮಾಡ್ತಿದ್ದೆ ಗೊತ್ತಾ? ನೀನೊಬ್ಬ ನನ್ನ ಜೊತೆ ಇದ್ದರೆ ಇಡೀ ಜಗತ್ತೇ ಅಸೂಯೆ ಪಟ್ಟುಕೊಳ್ಳುವಂತೆ ಬದುಕಬಹುದಲ್ವಾ ಅಂದುಕೊಳ್ಳುತ್ತಿದ್ದೆ. ನಿನ್ನ ಜೊತೆಗಿರುವುದು ಎಷ್ಟು ಹೆಮ್ಮೆ ಎನ್ನಿಸುತ್ತಿತ್ತು ಗೊತ್ತಾ? ನಾವಿಬ್ಬರೂ ಹೀಗೆ ಇದ್ದು ಬಿಡೋಣ, ಮದುವೆಯಾಗಿ ಅಂತಲೂ ಅನ್ನಿಸಿತ್ತು. ಆದರೆ ಬಹುಮಾನ ಪಡೆದು ಸ್ಟೇಜ್ ಇಳಿದು ಬರುತ್ತಲೇ ಎಲ್ಲಾ ಭಾವ ಕರಗಿಹೋಗಿತ್ತು.

ಹೈಸ್ಕೂಲ್ ಮುಗಿಸಿಕೊಂಡು ನಾವು ಇಬ್ಬರೂ ಪಿಯುಗೆ ಸೇರಿಕೊಂಡ್ವಿ. ಕಾಲೇಜು ಮೆಟ್ಟಿಲೇರಿದ ಪುಳಕ… ಅದೇ ಸಂಸ್ಥೆ, ಅದೇ ಕ್ಯಾಂಪಸ್ಸು, ಬಹುಪಾಲು ಅವೇ ಮುಖಗಳು ಆದರೂ ಏನೋ ಒಂದು ಹೊಸತನ. ಅಷ್ಟು ದಿನವಿಲ್ಲದ್ದು ಆಗ ಏನೋ ಬದಲಾವಣೆ ನಮ್ಮಲ್ಲಿ ಕಾಣಲು ಪ್ರಾರಂಭವಾಗಿಬಿಡುತ್ತವೆ. ಮೊದಲೆಲ್ಲಾ ಬೇಕೆಂದಾಗ ನಿನ್ನ ಬೆಂಚಿನ ಬಳಿ ಬಂದು ನೋಟ್ಸ್ ಪಡೆದು ಕೀಟಲೆ ಮಾಡಿ ರೇಗಿಸಿಕೊಂಡು ಹೋಗುತ್ತಿದ್ದ ನನಗೆ ಕಾಲೇಜು ಶುರುವಾದ ಒಂದೆರಡು ವಾರಗಳಲ್ಲಿ ಎಲ್ಲರೂ ಇರುವಾಗ ನಿನ್ನ ಹತ್ತಿರ ಬಂದು ಮಾತನಾಡೋಕೆ ಎಂಥದ್ದೋ ಹಿಂಜರಿಕೆ ಕಾಡಲಾರಂಭಿಸಿತ್ತು. ನೀನೊಬ್ಬನೇ ಅಂತಲ್ಲ ಕ್ಲಾಸಿನ ಬೇರಾವ ಹುಡುಗರೊಂದಿಗೆ ಮಾತನಾಡಬೇಕೆಂದುಕೊಂಡರೂ ಎದೆ ಬಡಿತ ಏರು ಪೇರಾಗುತ್ತಿತ್ತು. ಇದಕ್ಕೆ ತಕ್ಕ ಹಾಗೆ ನಿನ್ನ ಹಾಗೂ ಇತರ ಹುಡುಗರ ವರ್ತನೆಯೂ ಬದಲಾಗುತ್ತಿತ್ತು. ಮೊದಲೆಲ್ಲಾ ಯಾವ ಮುಜುಗರವಿಲ್ಲದೆ ಹುಡುಗಿಯರ ಗುಂಪಿಗೆ ಬಂದು ಮಾತನಾಡುತ್ತಿದ್ದ ಹುಡುಗರೆಲ್ಲ ಕಾಲೇಜಿಗೆ ಬಂದ ಮೇಲೆ ವಿಪರೀತ ಸಂಕೋಚ ಪಡಲು ಶುರುಮಾಡಿದ್ದರು. ಬಹುಶಃ ಆಗ ತಾನೆ ದೇಹದಲ್ಲಾಗುತ್ತಿದ್ದ ಬದಲಾವಣೆಗಳು, ನೈಸರ್ಗಿಕವಾದ ಹಾರ್ಮೋನ್‌ಗಳ ಕೈವಾಡದಿಂದ ಹೀಗೆ ಮೊದಲ ಬಾರಿಗೆ ನಾವು ವಿರುದ್ಧ ಧೃವಗಳು ಅನ್ನೋ ಅನುಭವವಾಗುತ್ತಿತ್ತೇನೊ.

ಆದರೆ ತುಂಬಾ ಕಾಲ ಹೀಗೇ ಇರಲಾಗುತ್ತಿರಲಿಲ್ಲ. ಕ್ಲಾಸು ಎಂದ ಮೇಲೆ ಹುಡುಗರು-ಹುಡುಗಿಯರು ಬೆರೆಯಲೇ ಬೇಕಾಗುತ್ತಿತ್ತು. ನನ್ನ ನಿನ್ನ ಹೆಸರು ಹಾಜರಾತಿಯಲ್ಲಿ ಒಂದರ ಹಿಂದೊಂದು ಇದ್ದದ್ದಕ್ಕೋ ಏನೊ ಲ್ಯಾಬುಗಳಿಗೆ ನಾವಿಬ್ಬರು couple ಆದೆವು. ಆಗ ಒಂದು ವಿಚಿತ್ರವಾದ ಅನುಭವವನ್ನು ನಾನು ಗಮನಿಸುತ್ತಿದ್ದೆ. ನೀನು ಯಾವುದಾದರೂ ಎಕ್ಸ್‌ಪೆರಿಮೆಂಟನ್ನು ವಿವರಿಸುವಾಗ, ತದೇಕ ಚಿತ್ತದಿಂದ ಕೆಮಿಕಲ್‌ಗಳನ್ನು ಬೆರೆಸುವಾಗ ನಾನು ನಿನ್ನ ಮುಖ ನೋಡುತ್ತಾ ನಿಂತಿರುತ್ತಿದ್ದೆ. ಒಮ್ಮೊಮ್ಮೆ ನೀನು ಆಕಸ್ಮಿಕವಾಗಿ ನನ್ನ ಕಣ್ಣುಗಳಲ್ಲಿ ನೋಡಿಬಿಡುತ್ತಿದ್ದೆ. ಆಗ ನನಗೆ ಮೈಜುಮ್ ಎನ್ನಿಸಿ ನಾನು ನಿನ್ನ ನೋಟವನ್ನು ತಪ್ಪಿಸುತ್ತಿದ್ದೆ. ನಿನಗೂ ಏನೋ ಕಸಿವಿಸಿಯಾಗುತ್ತಿದ್ದದ್ದು ನಿನ್ನ ಮುಖದಲ್ಲಿ ಕಾಣಿಸುತ್ತಿತ್ತು. ಎಷ್ಟೋ ಬಾರಿ ನನ್ನ ಸ್ಪರ್ಶಕ್ಕೆ ನಿನ್ನ ಮೈ ಬೇರೆಯ ಅರ್ಥವನ್ನೇ ಕಂಡುಕೊಳ್ಳುತ್ತಿತ್ತು.

ಇದು ಗೆಳೆತನವಾ, ಪ್ರೀತಿಯಾ, ಆಕರ್ಷಣೆಯಾ.. ಏನೊಂದೂ ಹೆಸರಿಡಲು ನೀನು ತಯಾರಿರಲಿಲ್ಲ. ನಿನ್ನೊಳಗೆ ಅಗಾಧವಾದ ಹೋರಾಟ ನಡೆಯುತ್ತಿದ್ದದ್ದನ್ನು ನಾನು ಗುರುತಿಸಿದ್ದೆ. ನಿಧಾನವಾಗಿ ನಿನ್ನ ಕಣ್ಣುಗಳಲ್ಲಿ ನನ್ನ ಬೆಗೆಗಿದ್ದ ಭಾವ ಬದಲಾಗುತ್ತಾ ಬಂದಿತ್ತು. ಹೈಸ್ಕೂಲು ದಿನಗಳಲ್ಲಿದ್ದ ಮುಗ್ಧ ಬೆರಗು, ಕಾಲೇಜಿಗೆ ಬಂದಾಗ ತುಂಬಿಕೊಂಡಿದ್ದ ತುಸು ನಾಚಿಕೆಯ ಜಾಗಕ್ಕೆ ಈಗ ಸಂಶಯಾಸ್ಪದವಾದ ಪರಿಚಿತತೆ ತುಂಬಿಕೊಂಡಿತ್ತು. ನಿನ್ನ ಕಣ್ಣು ಬೇಟೆಗಾರನ ಕಣ್ಣುಗಳಂತೆ ಕಂಡು ನಾನು ಎಷ್ಟೋ ಬಾರಿ ಬೆಚ್ಚಿದ್ದಿದೆ. ಆದರೆ ನನಗೆ ಈ ನಂಟಿನ ಹರಿವು ಪಡೆಯುತ್ತಿದ್ದ ಹೊಸ ಹೊಸ ಆಕಾರದ ಬಗ್ಗೆ ಕುತೂಹಲ ಹಾಗೂ ಪ್ರೀತಿ ಇತ್ತೇ ವಿನಃ ಅದಕ್ಕೊಂದು ಹೆಸರು ಕೊಟ್ಟುಬಿಡುವ ಉಮ್ಮೇದು ಖಂಡಿತಾ ಇರಲಿಲ್ಲ.

ಹೀಗಿರುವಾಗ…

(ಮುಂದುವರೆಯುವುದು…)


Technorati :

ಇಂಥದ್ದೊಂದು ಪತ್ರವನ್ನು ನೀವು ಯಾರಿಗೂ ಬರೆದಿರಲಾರಿರಿ. ಯಾರಿಂದಲೂ ಪಡೆದಿರಲಾರಿರಿ. ಇಂತಹ ಪತ್ರ ಸಿಗುವುದು ಇಲ್ಲಿ ಮಾತ್ರ.ಇದು ‘ ಹೀಗೊಂದು ಪತ್ರ’. ಪ್ರೀತಿಯ ಬಗ್ಗೆ ಎಲ್ಲರೂ ಪುಟಗಟ್ಟಲೆ ಬರೀತಾರೆ. ಆದರೆ ಪ್ರೀತಿಗೂ ಮಾತನಾಡೋಕೆ ಏನಾದರೂ ಇದೆಯೇ?

ಹೀಗೆ ನಾನು ಪತ್ರ ಬರೆಯುತ್ತಿರುವುದು ಇದೇ ಮೊದಲು. ನಿನಗೆ ಆಶ್ಚರ್ಯವಾಗಬಹುದು, ನನಗೂ ಮಾತನಾಡುವುದಕ್ಕೆ ಇದೆಯಾ ಅಂತ ನಿನಗೆ ಅಚ್ಚರಿಯಾಗಬಹುದು. ನಾನು ಏನು, ನಾನು ಹೇಗಿದ್ದೇನೆ, ನನ್ನ ವ್ಯಾಪ್ತಿ ಏನು ಎಂಬುದರ ಬಗ್ಗೆ ಇದುವರೆಗೇ ನೀನು ದಣಿವಿಲ್ಲದೆಯೇ ಮಾತನಾಡಿದ್ದೀಯ ಈಗ ನನಗೂ ಹೇಳಿಕೊಳ್ಳುವುದಕ್ಕೆ, ವಿವರಿಸಿಕೊಳ್ಳುವುದಕ್ಕೆ, ನನ್ನ ಸ್ವಭಾವವನ್ನು ಸೂಚಿಸುವುದಕ್ಕೆ ಆಸೆಯಿದೆ ಎಂಬುದನ್ನು ಊಹಿಸಿದರೇನೆ ನಿನಗೆ ಬೆರಗಾಗಬಹುದು. ಸಾವರಿಸಿಕೊಂಡು ಈ ನನ್ನ ಪತ್ರವನ್ನು ಓದು ಇದು ಪ್ರೀತಿ ಇಡೀ ಮನುಷ್ಯಕುಲವನ್ನು ಸಂಬೋಧಿಸಿ ಬರೆಯುತ್ತಿರುವ ಪತ್ರ.letter copy.jpg

ನಾನು ಯಾರು? ಅನಾದಿಕಾಲದಿಂದಲೂ ನೀನು ಈ ಪ್ರಶ್ನೆಯನ್ನು ಕೇಳುತ್ತಲೇ ಬಂದಿದ್ದೀಯ. ಈ ಪ್ರಶ್ನೆಗೆ ನೂರಾರು ರೂಪಗಳನ್ನು ಕೊಟ್ಟು ವಿಸ್ತರಿಸಿದ್ದೀಯ, ಹತ್ತಾರು ಬಣ್ಣಗಳನ್ನು ಲೇಪಿಸಿ ಸಿಂಗರಿಸಿದ್ದೀಯ. ಉತ್ತರ ಹುಡುಕುವುದಕ್ಕೆ ನಿಜಕ್ಕೂ ಕಷ್ಟಪಟ್ಟಿದ್ದೀಯ. ನಿನ್ನ ಬದುಕಿನ ಬೇರೆಲ್ಲಾ ಸಂಗತಿಗಳನ್ನು ಕಡೆಗಣಿಸಿ ನನ್ನ ಹಿಂದೆ ಬಿದ್ದಿದ್ದೀಯ. ಬಾಗದ ಮೈಯನ್ನು ಮನಸಾರೆ ದಂಡಿಸಿದ್ದೀಯ, ಮಾಗದ ಮನಸ್ಸನ್ನು ಸಹಸ್ರ ಸಂಕಟಗಳಿಗೆ ಈಡುಮಾಡಿಕೊಂಡಿದ್ದೀಯ. ಕಾಡುಗಳಲ್ಲಿ ಅಲೆದಾಡಿದ್ದೀಯ, ಗಿರಿ ಕಂದರಗಳಲ್ಲಿ ಧೇನಿಸಿದ್ದೀಯ, ನೀರೊಳಗೆ ಮುಳುಗು ಹಾಕಿ ಅರಸಿದ್ದೀಯ. ಮೈಲುಗಟ್ಟಲೆ ಕಾಲಿಗೆ ಚಕ್ರ ಕಟ್ಟಿಕೊಂಡು ಅಲೆದಾಡಿದ್ದೀಯ. ಹಸಿರಿನ ಮಡಿಲೊಳಗೆ ತಲೆ ಹುದುಗಿಸಿ ಮೌನವನ್ನೇ ಹನಿಯಾಗಿಸಿ ಕಣ್ಣು ನೆನೆಸಿದ್ದೀಯ. ಅಕ್ಷರಗಳ ನೆರವು ಪಡೆದು ಕವಿತೆಗಳ ಹಾದಿಯಲ್ಲಿ ನನ್ನೆಡೆಗೆ ಸೇರುವ ಯತ್ನ ಮಾಡಿದ್ದೀಯ. ನಾದದ ಅಲೆಯ ಮೇಲೆ ತೇಲುವ ನಾವೆಯಾಗಿ ನನ್ನೆಡೆಗೆ ತಲುಪುವ ತುಡಿತ ತೋರಿದ್ದೀಯ. ಕೋಟಿ ಕೋಟಿ ಬಣ್ಣಗಳೊಂದಿಗೆ ಸರಸವಾಡಿ ನನ್ನನ್ನು ರಮಿಸಿದ್ದೀಯ. ಹಂಗಿನ ಹಿಡಿತದಿಂದ ಕಾಲುಗಳನ್ನು ಸ್ವತಂತ್ರಗೊಳಿಸಿ ನಲಿದಾಡಿ ನನ್ನ ಮುದಗೊಳಿಸಿದ್ದೀಯ. ನಿನ್ನೊಳಗೆ ಬೇರಾರನ್ನೋ ಆವಾಹಿಸಿಕೊಂಡು ನನ್ನ ಕಾಣುವ ಪ್ರಯತ್ನ ಮಾಡಿದ್ದೀಯ. ಯಂತ್ರ ತಂತ್ರದ ನೆರವು ಪಡೆದು ಈ ಭುವಿಯ ಸೆಳೆತವನ್ನೇ ಮೀರಿ ಹಾರಿದ್ದೀಯ. ನನ್ನ ಹುಡುಕುವ ಚಪಲದಲ್ಲಿ ಕೈಗೆ ಸಿಕ್ಕಿದ್ದನ್ನು ಒಡೆದು ಒಡೆದು ಪರಮಾಣು, ಅಣುವಿನ ಎದುರು ನಿಂತಿದ್ದೀಯ. ನನಗಾಗಿ ಕೋಟಿ ಕಟ್ಟಿದ್ದೀಯ, ಅದರೊಳಗೆ ನೀನೇ ಬಂಧಿಯಾಗಿದ್ದೀಯ. ನನಗಾಗಿ ಕತ್ತಿ ಹರಿತಗೊಳಿಸಿದ್ದೀಯ, ಕತ್ತಿಗೆ ಕತ್ತು ಕೊಟ್ಟಿದ್ದೀಯ. ಇಷ್ಟೆಲ್ಲಾ ಮಾಡುತ್ತಾ ನಾನು ಯಾರು ಎಂಬ ಪ್ರಶ್ನೆಗೆ ಸಾವಿರಸಾವಿರ ಬಗೆಯ ಉತ್ತರಗಳನ್ನು ನೀನೇ ಕಂಡುಕೊಂಡಿದ್ದೀಯಾ! ಎಲ್ಲಾ ಉತ್ತರ ಅವಲೋಕಿಸಿದ ನಂತರವೂ ನಿಸ್ಸಹಾಯಕನಾಗಿ ನಿಟ್ಟುಸಿರು ಬಿಟ್ಟಿದ್ದೀಯ. ದಣಿವಾರಿಸಿಕೊಂಡು ಮತ್ತದೇ ಉತ್ಸಾಹದಲ್ಲಿ ಹುಡುಕಾಟಕ್ಕೆ ಹೊರಟಿದ್ದೀಯ.

ನಿನ್ನ ಹಟಕ್ಕೆ, ನಿನ್ನ ಪ್ರಯತ್ನಕ್ಕೆ ನನ್ನ ಮೆಚ್ಚುಗೆ ಇದೆ ಕಣೋ. ಆದರೆ ಉತ್ತರವೇ ಅಲ್ಲದ ಸಂಗತಿಗಳಿಗೆ ಪ್ರಶ್ನೆಗಳನ್ನು ಸೃಷ್ಟಿಸಿಕೊಂಡು ಆ ಸಂಗತಿಗಳಿಗೆ ಉತ್ತರವಾಗುವ ಬಲಾತ್ಕಾರ ಮಾಡಿದರೆ ಅವು ಸತ್ತು ಹೋಗುತ್ತವೆ. ನಿನ್ನ ಎಲ್ಲಾ ಪ್ರಶ್ನೆಗಳ ಶವಪೆಟ್ಟಿಗೆಯೊಳಗೆ ನಿನ್ನ ಅಭಿರುಚಿಯ ಸಿಂಗಾರ ಪಡೆದು ನಿರ್ಜೀವವಾಗಿ ಮಲಗಿಕೊಳ್ಳುತ್ತವೆ. ಈ ಸೂಕ್ಷ್ಮ ನಿನಗೆ ಯಾವಾಗ ಅರ್ಥವಾಗುತ್ತದೆಯೋ! ಎಂದೂ ನಿನ್ನ ಕೈಗೆ ಸಿಗದ ಆದರೆ ಸದಾ ನಿನ್ನೊಂದಿಗಿರುವ ನನಗೆ ಪ್ರೀತಿ ಅಂತ ಹೆಸರಿಟ್ಟು ಅದನ್ನು ಹುಡುಕಲು ಸೇನೆ ಕಟ್ಟಿಕೊಂಡು ಹೊರಟಿದ್ದೀಯ. ನಿನ್ನ ಕಣ್ಣುಗಳೊಳಗಿರುವ ಕಾಂತಿ, ಹುರುಪು, ರಣೋತ್ಸಾಹ, ಯೌವನಗಳು ದೂರದ ದಿಗಂತದೆಡೆಗೆ ಬೆರಳು ಮಾಡುತ್ತಿವೆ. ನೀನು ದಾಪುಗಾಲು ಹಾಕಿಕೊಂಡು ಅತ್ತ ಮುನ್ನುಗುತ್ತಿದ್ದೀಯ. ಆದರೆ ನಾನು ನಿನ್ನ ನೆರಳಿನಂತೆ ನಿನ್ನ ಹಿಂಬಾಲಿಸುತ್ತಲೇ ಇದ್ದೇನೆ, ಒಮ್ಮೆ ಹಿಂದೆ ತಿರುಗಿ ನೋಡುತ್ತೀಯಾ ಎಂಬ ಸಣ್ಣ ಆಸೆಯಲ್ಲಿ!

ನಿನಗೆ ಈ ಅಭ್ಯಾಸ ಯಾವಾಗ ಅಂಟಿಕೊಂಡಿತೋ ಗೊತ್ತಿಲ್ಲ. ನಿನ್ನ ಸಂಧಿಸಬಯಸುವ, ನಿನ್ನ ಪರಿಧಿಯೊಳಗೆ ಸೇರಬಯಸುವ ಎಲ್ಲವನ್ನೂ ಹಿಡಿದು ಕಟ್ಟಿಹಾಕಿ ಸಂತೆ ಸೇರಿಸಿ ನಿನ್ನ ತರ್ಕ, ವಿಶ್ಲೇಷಣೆಯ ಹರಿತವಾದ ಅಲಗಿನಿಂದ ತುಂಡು ತುಂಡು ಮಾಡಿ ವಿವರಿಸುವ ಚಟ ಯಾವಾಗಿನಿಂದ ಬೆಳೆಯಿತು? ಮುಗ್ಧ ಪ್ರಪಂಚದಿಂದ ಆಗತಾನೆ ಕಣ್ತೆರೆದ ಮೊಗ್ಗಿನ ಸೌಂದರ್ಯವನ್ನು ಮುಷ್ಠಿಯಲ್ಲಿ ಹಿಸುಕಿಯೇ ಪಡೆದುಕೊಳ್ಳಬೇಕು ಎಂಬ ತುಡಿತ ನಿನ್ನೊಳಗೇಕೆ ಹುಟ್ಟುತ್ತದೆ? ನಿನ್ನ ಈ ಚಟದಿಂದ ನಿನಗೇ ನೀನು ಮಾಡಿಕೊಂಡ ಅನಾಹುತಗಳು ಅವೆಷ್ಟಿವೆ ಎನ್ನುವುದು ನಿನ್ನ ಊಹೆಗಾದರೂ ಬಂದಿವೆಯಾ? ಜೀವಂತವಾಗಿ ನಿನ್ನೆದುರು ನಡೆದಾಡಿದ ಹಾರುವ ಹಕ್ಕಿಯಂತಹ ಯೇಸುವನ್ನು ನೀನು ಶಿಲುಬೆಗೆ ಹಾಕಿದೆ. ಆತನ ಪ್ರಾಣ ತೆಗೆದೆ. ಅನಂತರ ಆತನ ಶವವನ್ನಿಟ್ಟುಕೊಂಡು ಸಿಂಗಾರ ಶುರು ಮಾಡಿದೆ. ವಿವರಣೆ ಕೊಡಲು ಕುಳಿತುಕೊಂಡೆ. ಅಖಂಡವಾಗಿ ಬರೆಯುತ್ತಾ ಹೋದೆ. ಲಕ್ಷಾಂತರ ಮಂದಿಯನ್ನು ಪ್ರಭಾವಿಸುತ್ತಾ ಹೋದೆ. ಆದರೇನು ಮಾಡುವುದು? ನಿನ್ನ ಒರಟು ಮುಷ್ಠಿಯ ಬಿರುಸಿಗೆ ಯೇಸು ಎಂಬ ಹೂವು ಎಂದೋ ಮುರುಟಿಹೋಗಿತ್ತು. ನೀನು ಮಾತ್ರ ಇಂದಿಗೂ ಆ ಹಕ್ಕಿಯ ಶವದೆದುರು ಹಬ್ಬದ ಊಟ ಮಾಡುತ್ತಿರುವೆ, ಪಾಂಡಿತ್ಯದ ಪ್ರದರ್ಶನ ಮಾಡುತ್ತಿರುವೆ. ಪಾಪ!

ನನ್ನ ಬುದ್ಧಿವಂತ ಗೆಳೆಯನೇ ಆಪ್ತವಾದ ಒಂದು ಸಲಹೆಯನ್ನು ಕೊಡುತ್ತೇನೆ ಕೇಳು ಈ ಭಾಷೆ, ಹೆಸರುಗಳ ನಾಮಕರಣ, ಚರ್ಚೆ, ಪಾಂಡಿತ್ಯ, ತರ್ಕ, ಪ್ರಯೋಗ, ವಿವಾದ, ವಿಚಾರ, ಪುಸ್ತಕ, ಗುಂಪುಗಾರಿಕೆ, ಶಕ್ತಿ ಪ್ರದರ್ಶನ ಇವೆಲ್ಲಾ ನೀನು ಕಟ್ಟಿಕೊಂಡಿರುವ ಕೋಟೆಗಳು ಕಣೋ. ಇದಕ್ಕಿಂತ ಹೆಚ್ಚಿನ ದುರದೃಷ್ಟದ ಸಂಗತಿಯೆಂದರೆ, ಇವನ್ನೆಲ್ಲಾ ನೀನು ನಿನ್ನ ಸುತ್ತಲೇ ಕಟ್ಟಿಕೊಳ್ಳುತ್ತಾ ಬಂದಿದ್ದೀಯ. ಈ ಕೋಟೆಯೊಳಗೆ ನಿನ್ನೊಬ್ಬನನ್ನು ಬಿಟ್ಟು ಎಲ್ಲವನ್ನೂ ನೀನು ಪರಕೀಯವಾಗಿ ಕಾಣುತ್ತೀಯ. ಈ ಕೋಟೆಯೇನು ಸಾಮಾನ್ಯವಾದದ್ದಲ್ಲ, ನಿನ್ನ ಬಿಟ್ಟು ಉಳಿದೆಲ್ಲವನ್ನೂ ಅವು ನಿನ್ನ ಅನುಭೂತಿಗೆ ನಿಲುಕದ ಹಾಗೆ ಮಾಡಿಬಿಡುತ್ತವೆ. ಆದರೂ ನನ್ನಂಥವರಿಗೆ ಆಶಾವಾದ ಅಳಿಯುವುದಿಲ್ಲ. ನಿನ್ನ ಕೋಟೆಗೆ ಎಷ್ಟೇ ಗಡುಸಾದ ಗೋಡೆಯನ್ನು ಕಟ್ಟಿಸಿಕೊಂಡಿರು, ನಾನು ಸಣ್ಣ ಬಿಲ ಕೊರೆದುಕೊಂಡು ಕಳ್ಳನ ಹಾಗೆ ಒಳ ನುಸುಳಿಬಿಡುತ್ತೇನೆ. ನಿನ್ನ ಕೋಟೆಗೆ ಎಷ್ಟೇ ಬಾಗಿಲುಗಳನ್ನು ಹಾಕಿಸಿಕೊಂಡಿರು, ನಾನು ಎಲ್ಲಾ ಬಾಗಿಲುಗಳನ್ನು ನುಚ್ಚುನೂರು ಮಾಡಿಕೊಂಡು ಪ್ರವಾಹದ ಹಾಗೆ ಒಳನುಗ್ಗುತ್ತೇನೆ. ನೀನು ಎಷ್ಟೇ ಬಲಿಷ್ಠವಾದ ಉಕ್ಕಿನ ಕವಚ ತೊಟ್ಟು ಅದರೊಳಗೆ ಅವಿತಿರು, ನನ್ನ ಶಾಖದೆದುರು ಆ ಕವಚ ಕರಗಿ ನೀರಾಗದಿದ್ದರೆ ಕೇಳು. ನೀನು ಎಷ್ಟೇ ಎತ್ತರಕ್ಕೆ, ನಿಲುಕದ ಎತ್ತರಕ್ಕೆ ಹೋಗಿ ಕುಳಿತುಕೋ ನಾನು ನೀನು ಉಸಿರಾಡುವ ಗಾಳಿಯ ಹಾಗೆ ನಿನ್ನ ಅರಿವಿಗೇ ಬರದ ಹಾಗೆ ನಿನ್ನ ವ್ಯಾಪಿಸಿಕೊಂಡಿರುತ್ತೇನೆ. ಇಷ್ಟೆಲ್ಲಾ ಕಷ್ಟ ಪಟ್ಟು ನಾನು ನಿನ್ನ ಬಳಿ ಬಂದು ಇಗೋ ನಾನೇ ಬಂದಿರುವೆ. ನಾನೇ ಪ್ರೀತಿ ಎಂದು ನಿಂತರೂ ನೀನು ನಿನ್ನ ಕಣ್ಣುಗಳಿಗೆ ಕಪ್ಪು ಗಾಜು ಅಡ್ಡ ಇಟ್ಟುಕೊಂಡು ಪ್ರೀತಿ ಎಂದರೇನು? ಪ್ರೀತಿ ಇರುವುದು ಹೇಗೆ?’ ಅಂತ ಪ್ರಶ್ನಿಸಿಕೊಳ್ಳುತ್ತೀಯ. ಅನಂತರ ನೀನೇ ಪ್ರೀತಿಯೆಂಬುದು ಮಾಯೆ, ಪ್ರೀತಿಯೆಂಬುದು ವಂಚನೆ, ಪ್ರೀತಿ ಕುರುಡು, ಪ್ರೀತಿ ಅಗೋಚರ, ಪ್ರೀತಿ….’ ಎಂದು ಸಾಲು ಸಾಲುಗಟ್ಟಲೆ ಬರೆಯುತ್ತಾ ಹೋಗುತ್ತೀಯ. ನೀನೇ ಸೃಷ್ಟಿಸಿಕೊಂಡ ಪ್ರಶ್ನೆಗಳಿಗೆ ನೀನೇ ಉತ್ತರ ಕಂಡುಕೊಳ್ಳುತ್ತೀಯ. ನಿನ್ನ ಪ್ರಶ್ನೆಗೂ ಉತ್ತರಕ್ಕೂ ಸಂಬಂಧಿಸಿರದ ನನ್ನನ್ನು ಅನಾಥವಾಗಿ ಬಿಟ್ಟು ದೂರ ದೂರಕ್ಕೆ ನನ್ನ ಹುಡುಕುತ್ತಾ ಹೊರಟು ಹೋಗುತ್ತೀಯ.

ಇನ್ನು ಪತ್ರವನ್ನು ಮುಗಿಸಬೇಕು. ಮತ್ತೆ ನಿನ್ನದು ಅದೇ ಚಾಳಿ, ‘ಸರಿ, ಕೊನೆಗೆ ಹೇಳಿ ಬಿಡು ನೀನು ಯಾರು ಅಂತ ಬಲವಂತ ಮಾಡ್ತಿದ್ದೀಯ. ಪ್ರತಿ ಪತ್ರಕ್ಕೂ ನಿನಗೆ ಉಪಸಂಹಾರ ಬೇಕು. ಎಲ್ಲಾ ಪ್ರಶ್ನೆಗಳಿಗೆ ನಿನಗೆ ಉತ್ತರಗಳು ಬೇಕು. ಪ್ರತೀ ಉತ್ತರಗಳಿಗೆ ನಿನ್ನಲ್ಲಿ ಮತ್ತಷ್ಟು ಪ್ರಶ್ನೆಗಳು ಹುಟ್ಟಬೇಕು. ಆ ಪ್ರಶ್ನೆಗಳ ಬೆನ್ನ ಮೇಲೆ ಏರಿ ಉತ್ತರದ ಮಾಯಾ ಮೃಗವನ್ನು ಅಟ್ಟಿಕೊಂಡು ನುಗ್ಗುತ್ತೀಯ. ನಾನು ನಿನ್ನ ಹಿಂದೇ, ನಿನ್ನ ಒಳಗೇ ನಿನ್ನ ಒಂದೇ ಒಂದು ಕ್ಷಣದ ಮೌನಕ್ಕಾಗಿ, ಒಂದೇ ಒಂದು ಹಿನ್ನೋಟಕ್ಕಾಗಿ ಕಾಯುತ್ತಾ ನಿಂತಿರುತ್ತೇನೆ ಅನಾಥವಾಗಿ!

ಇಂತಿ ನಿನ್ನ,

ಪ್ರೀತಿ


Technorati : , ,


Blog Stats

  • 71,866 hits
ಫೆಬ್ರವರಿ 2008
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 123
45678910
11121314151617
18192021222324
2526272829  

Top Clicks

  • ಯಾವುದೂ ಇಲ್ಲ