ಕಲರವ

Archive for ಫೆಬ್ರವರಿ 27th, 2008

ಓದು ಎನ್ನುವುದು ನಮ್ಮ ಜೀವನದಲ್ಲಿ ನಿರಂತರ ಪ್ರಕ್ರಿಯೆಯಾಗಿರಬೇಕು, ದಿನಾ ನೋಡುವ ಧಾರಾವಾಹಿಯಂತೆ. ಪುಸ್ತಕದ ಮೂಲಕ ನಾವು ಜಗತ್ತಿನ ಒಬ್ಬ ಶ್ರೇಷ್ಠ ವ್ಯಕ್ತಿಯನ್ನು ಭೇಟಿ ಮಾಡುತ್ತೇವೆ. ಆತನನ್ನು ಮಾತನಾಡಿಸುತ್ತೇವೆ. ಆತ ಹೇಳುವುದನ್ನು ಕೇಳುತ್ತೇವೆ. ಆತನಿಗೆ ನಾವು ಹೇಳುವುದನ್ನು ಕೇಳು ಅನ್ನುತ್ತೇವೆ. ಆತನ ಅಭಿಪ್ರಾಯಗಳನ್ನು ಒಪ್ಪಿಕೊಳ್ಳುತ್ತೇವೆ, ಪ್ರಶ್ನೆ ಮಾಡುತ್ತೇವೆ, ತಕರಾರು ಎತ್ತುತ್ತೇವೆ. ಆತನೊಂದಿಗೆ ಜಗಳ ಮಾಡುತ್ತೇವೆ, ರಾಜಿಯಾಗುತ್ತೇವೆ. ಕೋಪಿಸಿಕೊಂಡು ದೂರ ಮಾಡುತ್ತೇವೆ. ಅಪ್ಪಿ ಮುದ್ದಾಡುತ್ತೇವೆ. ಪ್ರೀತಿಯಿಂದ ಎದೆಗೊತ್ತಿಕೊಳ್ಳುತ್ತೇವೆ. ಯಾವ ಪೊಸೆಸೀವ್‌ನೆಸ್ ಇಲ್ಲದೆ ಆತನನ್ನು ಇನ್ನೊಬ್ಬರಿಗೆ ಪರಿಚಯ ಮಾಡಿಸಿಕೊಡುತ್ತೇವೆ. ಆತನಿಗೆ ಇವನನ್ನು ಪ್ರೀತಿಸು ಎಂದು ಮುಕ್ತವಾಗಿ ಶಿಫಾರಸ್ಸು ಮಾಡುತ್ತೇವೆ. ಸಮಯ ಕಳೆದಾಗ ಯಾವ ನೋವೂ, ಅನುಮಾನ, ಮುರಿದ ಮನಸ್ಸಿಲ್ಲದೆ ಬೇರೊಬ್ಬ ವ್ಯಕ್ತಿಯೆಡೆಗೆ ನಡೆದುಬಿಡುತ್ತೇವೆ, ಹೆಚ್ಚು ಪ್ರಬುದ್ಧರಾಗಿ. ಪುಸ್ತಕಗಳ ಜಗತ್ತೇ ಇಂಥದ್ದು! ಇಂತಹ ಪುಸ್ತಕ ಲೋಕದ ಪರಿಚಯ: ಇಂಥದ್ದೊಂದು ಪುಸ್ತಕ ಓದಿದ್ದೆ…!

ಮಾಸ್ತಿ ಎಂದೊಡನೆಯೇ ‘ಸಣ್ಣ ಕಥೆಗಳ ಜನಕ’ ಎಂಬ ಅವರ ಬಿರುದು ನೆನಪಿಗೆ ಬಾರದಿರದು.ಕನ್ನಡದಲ್ಲಿ ಸಣ್ಣ ಕಥೆಗಳ ಪ್ರಕಾರವನ್ನು ಸಾಕಷ್ಟು ಪ್ರಭಾವಿಸಿದ ಹಾಗೂ ಶ್ರೀಮಂತಗೊಳಿಸಿದ ಕೀರ್ತಿ ಅವರಿಗೆ ಸಲ್ಲಬೇಕು. ಕತೆ ಹೇಳುವಿಕೆ ಎಂಬ ಪರಂಪರೆ ನಮ್ಮ ನಾಗರೀಕತೆ ಹಾದಿಯ ಬದಿಯಲ್ಲೇ ಸಾಗಿಬಂದದ್ದು. ನಾವು,ನಮ್ಮ ಅಪ್ಪ, ಅಜ್ಜಂದಿರೆಲ್ಲಾ ತಮ್ಮ ಅಜ್ಜಿ-ಅಜ್ಜಂದಿರಿಂದ ಕಥೆ ಕೇಳುತ್ತಲೇ ಬೆಳೆದವರು. ಕಥೆ ಕೇಳುವಿಕೆಯ ಸಂಪ್ರದಾಯ ಕಡಿಮೆಯಾಗುತ್ತಾ ಬಂದತೆಲ್ಲಾ ಕಥೆ ಹೇಳುವ ಕಲಾಗಾರಿಕೆಯೂ, ಸಹಜವಾದ ಪ್ರತಿಭೆಯೂ ಮರೆಯಾಗುತ್ತಾ ಕಥೆ ಹೇಳುವುದು ಹೇಗೆ ಎಂದು ಕೇಳುವ ಹಂತವನ್ನು ನಾವು ತಲುಪಿಕೊಂಡಿದ್ದೇವೆ.book review copy.jpg

ಅದೇನೇ ಇರಲಿ, ಮಾಸ್ತಿಯವರ ಕಥೆಗಳು ಬಹುಮುಖ್ಯವಾಗಿ ಕಥೆ ಹೇಳುವ ಸಂಸ್ಕೃತಿಯ ಮುಂದುವರಿಕೆಯಂತೆ ನಮಗೆ ಕಾಣುತ್ತವೆ. ಅವರ ವಿವರೆಣೆ ತೀರಾ ಸಹಜವಾಗಿ ನಮ್ಮನ್ನು ಆವರಿಸಿಕೊಳ್ಳುತ್ತಾ ಹೋಗುತ್ತವೆ, ನಮ್ಮ ಯಾವ ಬೌದ್ಧಿಕ ಕಸರಿತ್ತಿನ ಹಂಗೂ ಇಲ್ಲದೆ ನಮ್ಮ ಕಲ್ಪನಾ ಜಗತ್ತಿನಲ್ಲಿ ಮಾಸ್ತಿಯವರ ಪಾತ್ರಗಳು ಅನಾಯಾಸವಾಗಿ ಪ್ರವೇಶ ಪಡೆದುಬಿಡುತ್ತವೆ. ಇಲ್ಲಿ ಮಾಸ್ತಿಯವರು ಕೇವಲ ಒಬ್ಬ ನಿರೂಪಕರಾಗಿ, ಪಾತ್ರಗಳು ಹೇಳುವುದನ್ನು ಕೇಳಿ ನಮಗೆ ಹೇಳುವ ಕೆಲಸವನ್ನು ಮಾಡುವವರಾಗಿ ಮಾತ್ರ ಕಾಣಿಸುತ್ತಾರೆ. ಅಲ್ಲಿ ಕಥೆಗಾರ ಮಾಸ್ತಿ ಮರೆಯಾಗಿಬಿಟ್ಟಿರುತ್ತಾರೆ, ಅವರ ಪಾತ್ರಗಳು ನಮ್ಮ ಮನೋವೇದಿಕೆಯನ್ನು ಆಕ್ರಮಿಸಿಕೊಂಡುಬಿಡುತ್ತವೆ. ಪಾತ್ರಗಳ ಸೃಷ್ಟಿಕರ್ತನಿಗಿಂತ ಪ್ರಭಾವಶಾಲಿಯಾಗಿ ಬೆಳೆಯುವ ಪಾತ್ರಗಳೇ ಅಲ್ಲವೇ ನಮಗೆ ಕಡೆತನಕ ಮನಸ್ಸಿನಲ್ಲಿ ಉಳಿಯುವುದು. ಆಗಲೇ ಕಥೆಗಾರ ಗೆಲ್ಲುವುದು.

ಶಾಸ್ತ್ರೀಯವಾಗಿ ಮಾಸ್ತಿಯವರ ಕಥೆಗಳನ್ನು ಯಾವ ರೀತಿಯಲ್ಲಿ ವಿಂಗಡಣೆ ಮಾಡುತ್ತಾರೋ ನನಗೆ ತಿಳಿದಿಲ್ಲ. ಆದರೆ ಅವರ ಕಥೆಗಳ ಅನನ್ಯನತೆಯ ಅನುಭವವನ್ನು ಮಾತ್ರ ನಿಮ್ಮೊಂದಿಗೆ ಹಂಚಿಕೊಳ್ಳಬಯಸುವೆ. ಕಥೆ ಕಥೆಗಾರನ ಒಂದು ಕಲಾಕೃತಿ. ಅದು ತನ್ನಷ್ಟಕ್ಕೆ ತಾನೇ ಸ್ವಯಂ ಸಂಪೂರ್ಣವಾದದ್ದಾಗಬೇಕು. ಕಥೆಯ ಹರಿವಿನ ನಡುವೆ ಕಥೆಗಾರ ನುಸುಳಿ ಏನಾದರೂ ಸಂದೇಶ ಕೊಡಹೊರಟರೆ ಕಥೆ ರಾಜಕೀಯ ಪ್ರಣಾಳಿಕೆಯಾಗುತ್ತದೆ. ಕಥೆಯ ಪಾತ್ರಗಳು ಕಥೆಗಾರನ ಅಭಿಪ್ರಾಯ, ಅನುಭವ ಜಗತ್ತಿನ ಹಂಗಿಗೆ ಒಳಗಾದರೆ ಕಥೆ ಬರಹಗಾರನ ಆತ್ಮಕಥೆಯಾಗುತ್ತದೆ. ಕಥೆ ಒಂದು ಕಲಾಕೃತಿಯಾಗಬೇಕಾದರೆ ಅಲ್ಲಿ ಕೇವಲ ಪಾತ್ರಗಳಿರಬೇಕು ಹಾಗೂ ಪಾತ್ರಗಳ ನಡುವೆ ಪಾರದರ್ಶಕವಾದ ಸಂವಾದವಿರಬೇಕು. ಇವುಗಳಿಗೆಲ್ಲಾ ಸಿದ್ಧ ಮಾದರಿಯ ಹಾಗೆ ಅತ್ಯುತ್ತಮ ಉದಾಹರಣೆಯಾಗಿ ನಮಗೆ ಸಿಗುವಂಥವು ಮಾಸ್ತಿಯವರ ಸಣ್ಣ ಕಥೆಗಳು.2202649087_faafa01e4b.jpg

ಮಾಸ್ತಿಯವರು ತಾವು ನಡೆಸುತ್ತಿದ್ದ ‘ಜೀವನ’ ಎಂಬ ಪತ್ರಿಕೆಯಲ್ಲಿ ನಿಯಮಿತವಾಗಿ ಕಥೆಗಳನ್ನು ಪ್ರಕಟಿಸುತ್ತಿದ್ದರು. ಅವುಗಳನ್ನು ಸಂಗ್ರಹಿಸಿ ಅನೇಕ ಸಂಪುಟಗಳಲ್ಲಿ ಪ್ರಕಟಿಸಿದ್ದಾರೆ. ನನಗೆ ಸಿಕ್ಕ ಸಂಪುಟವೊಂದರಲ್ಲಿ ನಾನು ಕಂಡ ಕಥಾ ಜಗತ್ತಿನ ಚಿತ್ರಣವನ್ನು ನಿಮ್ಮ ಮುಂದೆ ಬಿಚ್ಚಿಡಬಯಸುವೆ.

ರಂಗಸ್ವಾಮಿ ತುಂಬಾ ಸ್ಫುರದ್ರೂಪಿಯಾದವ. ಆತನ ಹೆಂಡತಿಯೂ ಸುರಸುಂದರಿಯೇ. ಆದರೆ ಆತನಿಗೆ ಆಕೆಯಲ್ಲಿ ತಾನು ಕಾಣಬಯಸುವ ಗುಣವೊಂದರ ಕೊರತೆ ಕಂಡುಬರುತ್ತದೆ. ಸರಿ, ಆ ಗುಣವಿರುವ ಹೆಂಗಸನ್ನು ಹುಡುಕಿಕೊಂಡು ಹೊರಡುತ್ತಾನೆ. ಅಂಥವಳೊಬ್ಬಳನ್ನು ಹಿಂಬಾಲಿಸುತ್ತಾನೆ. ಕಪಾಳಮೋಕ್ಷವಾಗುವುದರ ಜೊತೆಗೆ ಆತನಿಗೆ ಕವಿದ ಮಂಕು ಮೋಕ್ಷ ಕಾಣುತ್ತದೆ. ಪ್ರೀತಿ ಎಂದರೆ ಕೇವಲ ಹದಿಹರೆಯದವರ ಎದೆಯ ಮಿಡಿತ ಎಂಬಂತೆ ಬಿಂಬಿಸುವ ಸಿದ್ಧಮಾದರಿಯ ಕಥೆಗಾರರಿಗಿ ದಕ್ಕದ ಪ್ರೀತಿಯ ನೈಜ ಚಿತ್ರಣವನ್ನ ಮಾಸ್ತಿಯವರು ಕಟ್ಟಿಕೊಡುತ್ತಾರೆ. ಪ್ರೀತಿಯಲ್ಲಿ ಬಿದ್ದವರ ಅವಿವೇಕ, ತಾವು ಪ್ರೀತಿಸುವವರು ತೋರುವ ಸಹಜವಾದ ಗೌರವ, ಆತ್ಮೀಯತೆ, ನಗು ಎಲ್ಲವನ್ನೂ ತಮ್ಮೆಡೆಗಿನ ಪ್ರೀತಿಯೆಂದು ಭಾವಿಸುವ ಹೆಡ್ಡತನವನ್ನು ‘ರಂಗಸ್ವಾಮಿಯ ಅವಿವೇಕ’ದಲ್ಲಿ ಬಿಂಬಿಸಿದ್ದಾರೆ.

‘ಮಸುಮತ್ತಿ’ ಎನ್ನುವ ಕಥೆಯಲ್ಲಿ ಸೂಕ್ಷ್ಮವಾದ ಸಮಸ್ಯೆಯೊಂದನ್ನು ಕೈಗೆತ್ತಿಕೊಳ್ಳುತ್ತಾರೆ ಮಾಸ್ತಿ. ಪ್ರಾಚೀನವಾದ, ಆರ್ಷೇಯವಾದ ಸಂಗತಿಗಳನ್ನೆಲ್ಲಾ ಎತ್ತಿಕೊಂಡು ಹೋಗಿ ಮ್ಯೂಸಿಯಮ್ಮಿನ ಟ್ಯೂಬ್ ಲೈಟ್‌ನ ಬೆಳಕಿನಲ್ಲಿ ಇಟ್ಟು ಪ್ರಸಿದ್ಧಿಯನ್ನು ತಂದು ಕೊಡಲು ಬಯಸುವ ಪಾಶ್ಚೀಮಾತ್ಯ ಮನಸ್ಥಿತಿ ಹಾಗೂ ತಮ್ಮ ಹಿತ್ತಿಲಲ್ಲೇ ಇರುವಂತಹ ಇತಿಹಾಸದ ಪಳೆಯುಳಿಕೆಯನ್ನು ಅವುಗಳ ಬೆಲೆಯರಿಯದೆ ಅಸಡ್ಡೆಯಿಂದ ಕಾಣುವೆ ಈ ನೆಲದ ಜನರ ಮನಸ್ಥಿತಿಯ ಚಿತ್ರಣ ನಮಗಿಲ್ಲಿ ಸಿಗುತ್ತದೆ.

ಕುರುಡು ಹೆಂಗಸಾದ ಲಕ್ಷ್ಮಮ್ಮ ತನ್ನ ಬದುಕಿನಲ್ಲಿ ಎದುರಿಸುವ ಸಂಕಷ್ಟ, ಗಂಡನೆಡೆಗಿನ ಆಕೆಯ ಭಕ್ತಿ ಅದರ ಫಲವಾಗಿ ಉಂಟಾಗುವ ಮತಿವಿಭ್ರಾಂತಿಯ ಕಥೆ ‘ಮಾಲೂರಿನ ಲಕ್ಷ್ಮಮ್ಮ’ದಲ್ಲಿ ಬಂದುಹೋದರೆ, ‘ವೆಂಕಟ ಶಾಮಿಯ ಕಥೆ’ಯಲ್ಲಿ ಮನೆಯವರ ವಿರೋಧಕ್ಕೆ ಅಂಜದೆ ದೊಂಬರದ ಹುಡುಗಿಯನ್ನು ಮದುವೆಯಾಗಬಯಸುವ ಯುವಕ ವೆಂಕಟಶಾಮಿಯ ದುರಂತ ಪ್ರೇಮ ಕಥೆಯಿದೆ.

‘ಜೋಗ್ಯೋರ ಅಂಜಪ್ಪನ ಕೋಳಿ ಕಥೆ’ಯಲ್ಲಿ ಬದುಕಿನಲ್ಲಿ ಎದುರಾಗುವ ಕೆಲವು ಅನಿರೀಕ್ಷಿತ ಘಟನೆಗಳಿಂದ ಸಿಗುವ ಪಾಠದ ವಿವರಣೆಯಿದೆ. ಮನುಷ್ಯ ಸ್ವಭಾವಗಳ ನಿಗೂಢ ತಂತುಗಳ ಅನಾವರಣವಿದೆ. ಮನೆ ಮೆನೆಗೆ ತಿರುಗಿ ಪದ ಹಾಡಿ ಭಿಕ್ಷೆ ಪಡೆಯುವ ಅಂಜಪ್ಪ ಹುಡುಗಿಯೊಬ್ಬಳು ನೀಡಿದ ಕೋಳಿಯನ್ನು ತಾನೇ ಕದ್ದದ್ದು ಎಂದು ಒಪ್ಪಿಕೊಂಡು ಹುಡುಗಿಯ ಹೆಸರು ಉಳಿಸುತ್ತಾನೆ. ಆದರೆ ಆ ಮಹಾಪ್ರಚಂಡ ಹುಡುಗಿ ಹಿಂದೆ ತನ್ನ ಪ್ರಿಯತಮನಿಗೆ ಒಂದೆರಡು ಕೋಳಿ ಕೊಟ್ಟದ್ದನ್ನು ಮರೆಮಾಚಲು ಕೋಳಿ ಕಳ್ಳತನವಾಗಿವೆ ಎನ್ನುವುದನ್ನು ಸಾಧಿಸಲು ಅಂಜಪ್ಪನನ್ನು ಸಿಕ್ಕಿಸಿಹಾಕುತ್ತಾಳೆ.

‘ಮೊಸರಿನ ಮಂಗಮ್ಮ’ ಕಥೆಯಲ್ಲಿ ಬಹುತೇಕ ಮನೆಗಳಲ್ಲಿ ಅತ್ತೆ ಸೊಸೆಯರ ಜಗಳಕ್ಕೆ ಕಾರಣವಾಗುವ ಮಗನೆಡೆಗಿನ ತಾಯಿಯ ಅತಿಯಾದ ಪೊಸೆಸಿವ್ ನೆಸ್ ಹಾಗೂ ಅದನ್ನೇ ಪ್ರೀತಿಯೆಂದು ಭಾವಿಸುವ ದುರಂತವಿದೆ. ತನ್ನ ದರ್ಪ ಹಾಗೂ ಯಜಮಾನಿಕೆಗೆ ಆದ ಅತಿಕ್ರಮಣವನ್ನು ಸಹಿಸಲಾಗದೆ ಅದನ್ನು ತನ್ನ ಹೆಂಡತಿಯೆಡೆಗಿರುವ ಮಗನ ಸಹಜವಾದ ಮೋಹವನ್ನು ಟೀಕಿಸುವುದರಲ್ಲಿ ನಿವಾರಿಸಿಕೊಳ್ಳಬಯಸುವ ತಾಯಿಯ ಚಿತ್ರಣ ಸಿಕ್ಕುತ್ತದೆ.

ಪ್ರಕೃತಿ ಸಹಜವಾದ ಕಾಮದ ವಾಂಛೆ ಹಾಗೂ ಅದು ಮಾನವ ಸಂಬಂಧಗಳ ಮೇಲೆ ಬೀರುವ ಪರಿಣಾಮಗಳನ್ನು ‘ಗೋತಮಿ ಹೇಳಿದ ಕಥೆ’ಯಲ್ಲಿ ಕಾಣಬಹುದು. ಮನುಷ್ಯನ ಸಂಬಂಧಗಳೆಲ್ಲವೂ ನಾಗರೀಕತೆಯ ಫಲವಾದಂಥವು ಆದರೆ ಕಾಮ ಪ್ರಾಕೃತಿಕ. ಅದು ನಮ್ಮ ಸಂಬಂಧಗಳ ಮೇಲೆ ಪರಿಣಾಮ ಬೀರುವುದು ಸ್ವಾಭಾವಿಕ. ಇದನ್ನು ತಡೆಯಲು ಸಂಯಮ ಇರಬೇಕು ಎನ್ನುವುದು ಕಥೆಯಲ್ಲಿ ಮಾರ್ಮಿಕವಾಗಿ ಬಿಂಬಿತವಾಗಿದೆ.

ಒಳ್ಳೆಯತನ ಯಾವಾಗಲೇ ಕೆಡುಕಿನ ಮೇಲೆ ಗೆಲ್ಲುತ್ತದೆ ಎಂಬ ಲೋಕರೂಢಿಯ ಮಾತನ್ನು ಮರುಮಾಪನ ಮಾಡುವ ‘ಬೈಚೇಗೌಡ’ ಕಥೆಯಲ್ಲಿ ಊರಿನ ದುರಾಚಾರಿ ಶಾನುಭೋಗನನ್ನು ತನ್ನ ಒಳ್ಳೆಯತನದ ಬಲದಿಂದ ಮಣಿಸುವಲ್ಲಿ ವಿಫಲನಾಗುವ ಬೈಚೇಗೌಡನ ಕಥೆಯಿದೆ. ಮದುವೆಯೆಂಬ ಸಮಾಜದ ವ್ಯವಸ್ಥೆಗೆ ಬಲಿಯಾಗುವ ಹೆಣ್ಣು ಜೀವದ ದಾರುಣ ಕಥೆ, ಸಮಾಜದ ಢೋಂಗಿ ನಡವಳಿಕೆ ತೆರೆದಿಡುವ ‘ದುರದೃಷ್ಟದ ಹೆಣ್ಣು’, ಹಾಗೆಯೇ ಉಳಿದ ಕಥೆಗಳಾದ ‘ಟಾಂಗಾ ಹುಸೇನ’, ‘ಆಚಾರವಂತ ಅಯ್ಯಂಗಾರ್ರು’, ‘ಸಂನ್ಯಾಸ ಅಲ್ಲದ ಸಂನ್ಯಾಸ’ ನಮ್ಮನ್ನು ಹಿಡಿದಿಡುವಲ್ಲಿ ಸಫಲವಾಗುತ್ತವೆ.

ಸಾಹಿತ್ಯವನ್ನು ಗಂಭೀರವಾಗಿ ಪರಿಗಣಿಸಿ ಅಧ್ಯಯನ ಮಾಡುವವರಿಗೆ ಮಾಸ್ತಿಯವರ ಕೆಲವು ಕಥೆಗಳು ಕೇವಲ ಕೇಳಿದ, ನೋಡಿದ, ನಡೆದ ಘಟನೆಗಳ ಚಿತ್ರಣದಂತೆ ಕಂಡು ನಿರಾಶೆಯಾಗಬಹುದಾದರೂ ಅವರ ಕಥನ ಕ್ರಿಯೆಗೆ ಮಾರುಹೋಗದೆ ಅವುಗಳನ್ನು ಓದುವುದು ಅಸ್ವಾಭಾವಿಕವೆನಿಸುತ್ತದೆ ಎಂಬುದು ಸುಳ್ಳಲ್ಲ.

ಕೆ.ಎಸ್.ಎಸ್

ಈ ಸಂಚಿಕೆಯ ಡಿಬೇಟಿನ ವಿಷಯ “ವ್ಯವಸ್ಥೆ ಮನುಷ್ಯನ ಬೆಳವಣಿಗೆಗೆ ಮಾರಕವೇ, ಪೂರಕವೇ?” ವ್ಯವಸ್ಥೆ ಮನುಷ್ಯನ ಸಹಜವಾದ ಜೀವನೊಲ್ಲಾಸವನ್ನು ಕಟ್ಟಿಹಾಕುವ ಸೆರೆಮನೆ ಎಂದು ವಾದಿಸಿದ್ದಾರೆ ‘ಅಂತರ್ಮುಖಿ’.

ನಿಮ್ಮ ಅಭಿಪ್ರಾಯವೇನು ತಿಳಿಸ್ತೀರಲ್ಲಾ?

ಮನುಷ್ಯ ನಿಸರ್ಗದಿಂದ ದೂರಾದ ಪ್ರಕ್ರಿಯೆಯ ಮೊದಲ ಹಂತವೇ ವ್ಯವಸ್ಥೆ. ಭೂಮಿಯ ಮೇಲಿನ ಸಕಲೆಂಟು ಜೀವ ಜಂತುಗಳು ಸಹಬಾಳ್ವೆಯಿಂದ ಜೀವಿಸುವುದಕ್ಕೆ ಪ್ರಕೃತಿ ತನ್ನದೇ ಆದ ನಿಯಮಗಳನ್ನು ರೂಪಿಸಿದೆ. ಇದರಲ್ಲಿ ಪ್ರತಿಯೊಂದು ಜೀವಿಗೂ ಪ್ರತ್ಯೇಕವಾದ ಅಸ್ತಿತ್ವವಿದೆ. ಅವಕ್ಕೆ ಪ್ರಕೃತಿ ಕೊಡಮಾಡಿದ ತಮ್ಮವೇ ಆದ ಸಾಮರ್ಥ್ಯಗಳಿವೆ, ದೌರ್ಬಲ್ಯಗಳಿವೆ. ಮನುಷ್ಯ ಪ್ರಕೃತಿಯ ಅನುಸಾರವಾಗಿ ನಡೆದುಕೊಳ್ಳಲು ಇರುವ ಏಕೈಕ ಅಡ್ಡಿಯೆಂದರೆ ಪ್ರಕೃತಿ ವಿಧಿಸುವ ಮಿತಿಗಳು. ಈ ಎಲ್ಲಾ ಮಿತಿಗಳನ್ನು ಮೀರುವ ತುಡಿತ, ಜೀವನೋಲ್ಲಾಸವಿರುವ ಮನುಷ್ಯ ಸ್ವಭಾವತಃ ಯಾವ ವ್ಯವಸ್ಥೆಗೂ ಬಂಧಿತನಲ್ಲ. ಆತನ ಚೈತನ್ಯ ಸೀಮೆಯನ್ನು ಅರಿಯದಂಥದ್ದು. ಮನುಷ್ಯನಿಗೆ ಯಾವ ಕೌಶಲ್ಯವೂ ಹುಟ್ಟಿನಿಂದಲೇ ತಾನೇ ತಾನಾಗಿ ಕೈಗೂಡುವುದಿಲ್ಲ. ಆಗ ತಾನೆ ತಾಯ ಗರ್ಭದಿಂದ ಹೊರಬಂದ ಆಡಿನ ಮರಿ ತನ್ನ ಕಾಲ ಮೇಲೆ ತಾನು ನಿಂತು ಬಿಡಬಲ್ಲದು. ಆಹಾರ ಹುಡುಕಿ ಹೊರಟು ಬಿಡಬಲ್ಲದು. ಇದು ಪ್ರಕೃತಿ ನಿರ್ದೇಶಿತ. ಆದರೆ ಅದೇ ಆಡಿನ ಮರಿಗೆ ಪ್ರಕೃತಿ ವಿಧಿಸಿದ ಮಿತಿಯನ್ನು ಮೀರಿ ನಡೆಯುವ ಜೀವನೋಲ್ಲಾಸ ಇರುವುದಿಲ್ಲ. ಮನುಷ್ಯ ಬೇರೆಲ್ಲಾ ಜೀವಿಗಳಿಗಿಂತ ವಿಭಿನ್ನವಾಗಿರುವುದು ಇದೇ ಕಾರಣಕ್ಕೆ.

ಮನುಷ್ಯ ಚೇತನಕ್ಕೆ ಪ್ರಕೃತಿಯ ಮಿತಿಗಳನ್ನು, ಎಲ್ಲೆಯನ್ನು ಮೀರುವ ಜೀವನೊಲ್ಲಾಸವಿರುವುದು ಮಾತ್ರವಲ್ಲ, ಆತನ ಚೇತನವನ್ನು ಯಾವ ಬೇಲಿಯೂ ಕಟ್ಟಿಹಾಕಲಾರದು. ಆತನ ಮೂಲ ಸ್ವಭಾವ ಅನಿಕೇತನವಾದದ್ದು. ಮನೆಯನ್ನೆಂದೂ ಕಟ್ಟದೆ ಪರಿಪೂರ್ಣತೆಯ ಗುರಿಯೆಡೆಗೆ ಸಾಗುವುದು. ಆದರೆ ಮನುಷ್ಯ ಚೇತನದ ಜೀವನೋಲ್ಲಾಸಕ್ಕೆ, ಸಹಜವಾದ ಅಭಿವ್ಯಕ್ತಿಗೆ ಎಲ್ಲೆಯೇ ಇರದಿದ್ದರೆ ಆತನನ್ನು ನಿಯಂತ್ರಿಸಲಾಗದು, ಆತನನ್ನು ಬಗ್ಗಿಸಲು ಸಾಧ್ಯವಾಗದು ಎಂಬುದನ್ನು ಮನುಷ್ಯನೇ ಕಂಡುಕೊಂಡ. ಪ್ರಕೃತಿಯ ನಿಯಮಗಳನ್ನೇ ಮೀರಿದ ಮನುಷ್ಯ ತನ್ನ ಚೇತನದ ಅನಂತತೆಗೆ ತಾನೇ ಹೆದರಿ ಅದಕ್ಕೊಂದು ಅಣೆಕಟ್ಟು ಕಟ್ಟಿದ. ಧುಮ್ಮಿಕ್ಕಿ ಹರಿಯಬೇಕಾದ ಚೈತನ್ಯಕ್ಕೆ ಬಲವಾದ ತಡೆಗೋಡೆ ನಿರ್ಮಿಸಿ ಚೇತನವನ್ನು ಬಂಧಿಸುವ ಪ್ರಯತ್ನ ಮಾಡಿದ. ಒಂದು ಹಂತದವರೆಗೆ ಇದು ಆತನಿಗೆ ಒಳ್ಳೆಯ ಫಲವನ್ನೇ ನೀಡಿತು. ಸ್ವಚ್ಛಂದವಾಗಿ ಹರಿಯಬೇಕಾದ ಮನುಷ್ಯನ ಪ್ರಜ್ಞೆಗೆ ಅಣೆಕಟ್ಟು ಕಟ್ಟಿ ಅದನ್ನು ಮಿತವಾಗಿ ಹರಿಸುವ ವ್ಯವಸ್ಥೆ ಆತನಿಗೆ ತಕ್ಕ ಪ್ರತಿಫಲವನ್ನೂ ನೀಡಿತ್ತು. ಆದರೆ ಆ ಅಣೆಕಟ್ಟಿನ ಬಾಗಿಲುಗಳನ್ನು ಯಾವ ದಿಕ್ಕಿಗೆ ತೆರೆಯಬೇಕು, ಹರಿವು ಎಷ್ಟಿರಬೇಕು ಎನ್ನುವುದನ್ನು ತೀರ್ಮಾನಿಸಲು ತಮ್ಮಲ್ಲೇ ಒಬ್ಬನನ್ನು ಯಾವಾಗ ನೇಮಿಸಿಕೊಂಡನೋ ಅಲ್ಲಿಂದಲೇ ಅವನತಿ ಪ್ರಾರಂಭವಾಯಿತು.spirituality4.jpg

ವ್ಯವಸ್ಥೆ ಕುರುಡು. ಅದಕ್ಕೆ ಸಹಜತೆ ಕಾಣಿಸುವುದಿಲ್ಲ. ಇದಕ್ಕೊಂದು ಸರಳವಾದ ಉದಾಹರಣೆಯನ್ನು ಕೊಡುತ್ತೇನೆ ಕೇಳಿ, ವ್ಯವಸ್ಥೆಯ ರೀತಿ-ರಿವಾಜುಗಳು ಯೂನಿಫಾರಂ ಇದ್ದಂತೆ. ಸಹಸ್ರಾರು ಮಂದಿಗೆ ಒಂದೇ ರೀತಿಯ ಅಪಿಯರೆನ್ಸ್ ಕೊಡುವುದಕ್ಕಾಗಿ ಯೂನಿಫಾರಂ ಬಳಕೆ ಬಂದಂತೆ ವ್ಯವಸ್ಥೆ ರೂಪುಗೊಳ್ಳುತ್ತದೆ. ಯೂನಿಫಾರಮ್ಮಿನ ಬಣ್ಣ ಒಂದೇ ತೆರನಾದರೂ, ಯೂನಿಫಾರಂನ ಬಟ್ಟೆ ಒಂದೇ ಗುಣಮಟ್ಟದ್ದಾದರೂ ಅದರ ಅಳತೆ ಆಯಾಯ ವ್ಯಕ್ತಿಗೆ ತಕ್ಕನಾಗಿರಬೇಕು ಅಲ್ಲವೇ? ವ್ಯವಸ್ಥೆ ಎಡವಿದ್ದೇ ಇಲ್ಲಿ. ಎಲ್ಲರಿಗೂ ಒಂದೇ ಯೂನಿಫಾರಂ ಕೊಡುವ ಭರದಲ್ಲಿ ಅದು ಒಂದೇ ಸೈಜಿನ ಯೂನಿಫಾರಂಗಳನ್ನು ಹೊಲಿದು ಕೊಡುತ್ತದೆ. ಅಳತೆ ಸೂಕ್ತವಾದವರಿಗೆ ಆ ಯೂನಿಫಾರಂ ತಮಗೆ ಬೇಕಾದ ಎಲ್ಲಾ ಐಶಾರಾಮವನ್ನು ಕೊಡುತ್ತದೆ.ಕೆಲವರಿಗೆ ಅದು ಕೊಂಚ ಬಿಗ್ಗ ಬಿಗಿಯಾದರೆ ಮತ್ತೆ ಕೆಲವರಿಗೆ ದೊಗಲೆ ದೊಗಲೆಯಾಗುತ್ತದೆ. ಕುರುಡಾದ ವ್ಯವಸ್ಥೆ ತಪ್ಪನ್ನು ಯೂನಿಫಾರಂ ಮೇಲೆ ಹಾಕುವುದಿಲ್ಲ, ಯೂನಿಫಾರಮ್ಮಿನ ಅಳತೆಗೆ ಸರಿಯಾಗಿಲ್ಲದ ವ್ಯಕ್ತಿಗಳ ಮೇಲೆ ತಪ್ಪು ಹೊರಿಸುತ್ತದೆ. ವ್ಯಕ್ತಿಯ ಅಳತೆಗೆ ಅನುಗುಣವಾಗಿ ಯೂನಿಫಾರಂ ಹೊಲಿಯುವ ಬದಲಾಗಿ ಯೂನಿಫಾರಂನ ಅಳತೆಗೆ ವ್ಯಕ್ತಿಯನ್ನು ಮಿತಿಗೊಳಿಸುವ ಪ್ರಯತ್ನ ಮಾಡುತ್ತದೆ ವ್ಯವಸ್ಥೆ. ಈ ಹಂತದಲ್ಲೇ ಇದು ಮನುಷ್ಯನ ಜೀವನೋಲ್ಲಾಸಕ್ಕೆ, ಮಿತಿಯಿಲ್ಲದ ಚೇತನಕ್ಕೆ ಸೆರೆಮನೆಯಾಗುವುದು.

ಸೂಕ್ಷ್ಮವಾಗಿ ಗಮನಿಸಿ ನೋಡಿ, ಈ ಯೂನಿಫಾರಂನ ಉದಾಹರಣೆ ಎಷ್ಟು ಸಮರ್ಥವಾಗಿ ನಮ್ಮ ವ್ಯವಸ್ಥೆಯ ಗುಣ ಸ್ವಭಾವವನ್ನು ಪ್ರತಿನಿಧಿಸಬಲ್ಲದು. ಸಹಜವಾದ ಪ್ರತಿಭೆಯಿರುವ, ಹೆಚ್ಚಿನ ಬುದ್ಧಿ ಮಟ್ಟವಿರುವ ಮಕ್ಕಳು ಪರೀಕ್ಷೆಯಲ್ಲಿ ಅಂಕಗಳಿಸಲಾರದೆ ಮೂರ್ಖರೆನ್ನಿಸಿಕೊಳ್ಳುತ್ತಾರೆ. ಮಕ್ಕಳ ಸಹಜವಾದ ಬುದ್ಧಿ ಶಕ್ತಿಗೆ, ಸಾಮರ್ಥ್ಯಕ್ಕೆ ತಕ್ಕಹಾಗೆ ಶಿಕ್ಷಣ ವ್ಯವಸ್ಥೆ ರೂಪಿಸಿ ಅವರ ಬುದ್ಧಿವಂತಿಕೆಯನ್ನು ಬೆಳೆಸುವ, ಒರೆಗೆ ಹಚ್ಚುವ ಕೆಲಸ ಮಾಡುವ ಬದಲು ನಾವು ನಮ್ಮ ಶಿಕ್ಷಣ ವ್ಯವಸ್ಥೆಗೆ ಅನುಗುಣವಾಗಿ ಮಗುವಿನ ಬುದ್ಧಿವಂತಿಕೆಯನ್ನೇ, ಪ್ರತಿಭೆ, ಆಸಕ್ತಿಗಳನ್ನೇ ರೂಪಿಸುವ ತಪ್ಪು ಮಾಡುತ್ತಿದ್ದೇವೆ. ಬುದ್ಧಿವಂತ ಮಗು ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸದಿದ್ದರೆ ಅದು ವ್ಯವಸ್ಥೆಯ ಲೋಪವಾಗುವುದರ ಬದಲು ಮಗುವಿನ ಲೋಪವಾಗಿ, ಅಪರಾಧವಾಗಿ ಕಾಣುತ್ತದೆ. ತರಗತಿಯಲ್ಲಿ ಅತ್ಯಂತ ಮಂದ ಮತಿಯ ವಿದ್ಯಾರ್ಥಿ ಎಂದು ಹೆಸರುಗಳಿಸಿದ್ದ ಆಲ್ಬರ್ಟ್ ಐನ್‌ಸ್ಟೀನ್, ಮೂರ್ಖ ಎಂದು ಶಿಕ್ಷಕರಿಂದ ಮೂದಲಿಸಲ್ಪಟ್ಟಿದ್ದ ಥಾಮಸ್ ಅಲ್ವಾ ಎಡಿಸನ್ ಜಗತ್ತೇ ತಲೆಬಾಗುವ ಬುದ್ಧಿವಂತರಾಗಿ ಮಿಂಚಿದ್ದು ವ್ಯವಸ್ಥೆಯನ್ನು ಮೀರಿದ್ದರಿಂದ. ಇದನ್ನೇ ಹೆಸರಾಂತ ಚಿಂತಕರೊಬ್ಬರು, ‘ನಾನು ಪರೀಕ್ಷೆಯಲ್ಲಿ ಫೇಲ್ ಆಗಲಿಲ್ಲ. ಪರೀಕ್ಷೆ ನನ್ನನ್ನು ಪರೀಕ್ಷಿಸುವಲ್ಲಿ ಫೇಲ್ ಆಯಿತು’ ಎಂದು ವ್ಯವಸ್ಥೆಯ ವಿಪರ್ಯಾಸವನ್ನು ವಿವರಿಸಿದ್ದಾರೆ.

ವ್ಯವಸ್ಥೆ ನಿಂತಿರುವುದೇ ಅದನ್ನು ಪಾಲಿಸುವವರ ದೌರ್ಬಲ್ಯಗಳ ಮೇಲೆ. ಮೂಲದಲ್ಲಿ ಒಂದೇ ಆಗಿರುವ ಸತ್ಯವನ್ನು ಕಾಣುವ, ಪರಿಪೂರ್ಣತೆಯನ್ನು ಕಂಡುಕೊಳ್ಳುವ ಸಾಮರ್ಥ್ಯವಿರದ ಜನರಿರುವುದರಿಂದಲೇ ಹತ್ತಾರು ಧರ್ಮಗಳು ಬದುಕಿರುವುದು. ಇಡೀ ಮನುಷ್ಯ ಕುಲ ಒಂದೇ ಸತ್ಯದೆಡೆಗೆ ಮುಖ ಮಾಡಿರುವುದು ಎಂಬ ಅರಿವನ್ನು ಪಡೆಯಲಾಗದಿರುವುದರಿಂದಲೇ ಸಾವಿರಾರು ಪಂಥಗಳು ಉಸಿರಾಡುತ್ತಿರುವುದು. ಹೆಣ್ಣು ಗಂಡಿನ ನಡುವಿನ ಸಂಬಂಧ ಕೇವಲ ಲೈಂಗಿಕ ಹಸಿವಿನ ಪೂರೈಕೆಗಷ್ಟೇ ಅಲ್ಲದೆ, ಆತ್ಮಗಳ ಸಮ್ಮಿಲನಕ್ಕೆ, ಸಂತಾನ ಪೋಷಣೆಗೆ ಎಂಬ ಸತ್ಯವನ್ನು ಅರಗಿಸಿಕೊಳ್ಳಲಾಗದಿರುವುದರಿಂದಲೇ ನಮ್ಮ ಸಮಾಜಕ್ಕೆ ಮದುವೆ ಎಂಬ ವ್ಯವಸ್ಥೆಯ ಆವಶ್ಯಕತೆ ಕಂಡಿದ್ದು. ಮನುಷ್ಯನಿಗೆ ತನ್ನ ಅರಿ ಷಡ್ವರ್ಗವನ್ನು ನಿಯಂತ್ರಿಸಿಕೊಳ್ಳುವ ಸಾಮರ್ಥ್ಯ ಇಲ್ಲ ಎಂಬ ಅರಿವಾದಾಗಲೇ ಪೊಲೀಸು, ನ್ಯಾಯಾಲಯ, ಕಾನೂನಿನ ನೆರವು ಬೇಕಾಯಿತು. ಮನುಷ್ಯನ ಪ್ರೀತಿಗೆ,ಹೃದಯದ ಮಿಡಿತಕ್ಕೆ ಎಲ್ಲೆಯನ್ನು ವಿಧಿಸಲಾಗದು ಎಂಬ ಸೂಕ್ಷ್ಮವನ್ನು ಅರಿಯಲು ಮನುಷ್ಯ ಎಡವಿರುವುದರಿಂದಲೇ ಪಾತಿವ್ರತ್ಯ, ಏಕ ಪತಿ ವ್ರತಸ್ಥನ ಆದರ್ಶಗಳನ್ನು ರೂಪಿಸಿಕೊಂಡಿರುವುದು. ಒಂದು ವೇಳೆ ಈ ಮಿತಿಗಳನ್ನು ಮೀರಿದ ಮನುಷ್ಯ ಚೇತನಗಳು ಭೂಮಿಯಲ್ಲಿ ಜನಿಸಿದರೆ ವ್ಯವಸ್ಥೆಯನ್ನು ಆತನ ಸತ್ಯಕ್ಕೆ ಅನುಗುಣವಾಗಿ ಬೆಳೆಸಿ ವಿಸ್ತರಿಸುವ ಬದಲು ಆ ಚೇತನಗಳನ್ನೇ ನಿರ್ನಾಮ ಮಾಡುವ ಮೂಲಕ ವ್ಯವಸ್ಥೆಯೆ ನೆಮ್ಮದಿಗೆ ಯಾವ ತೊಂದರೆಯೂ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ಯೇಸು ಕ್ರಿಸ್ತ ಶಿಲುಬೆಯೇರಬೇಕಾದ್ದು ಇದಕ್ಕಾಗಿಯೇ, ಸಾಕ್ರಟಿಸ್ ವಿಷ ಕುಡಿದು ಪ್ರಾಣ ನೀಗಬೇಕಾದ್ದು ಈ ಕಾರಣಕ್ಕಾಗಿಯೇ. ಚರ್ಚು ದಾರ್ಶನಿಕರನ್ನು, ವಿಜ್ಞಾನಿಗಳನ್ನು ಕೊಲ್ಲುತ್ತಿದ್ದದ್ದು ವ್ಯವಸ್ಥೆಯ ಅಮಲಿನಿಂದಾಗಿಯೇ.

ವ್ಯವಸ್ಥೆಯೆಂಬುದು ಕೋಮಲವಾದ ಸಸಿಯನ್ನು ಹೊರಗಿನ ಶಕ್ತಿಗಳಿಂದ, ದನ ಕರುಗಳಿಂದ ರಕ್ಷಿಸುವ ಬೇಲಿಯಾಗಿ ಮಾತ್ರ ಕೆಲಸ ಮಾಡಬೇಕು. ಸಸಿ ಮರವಾಗಿ ಬೆಳೆಯಲು, ಸಾವಿರಾರು ಹಸಿರು ಎಲೆಗಳನ್ನು, ಹೂವು ಹಣ್ಣುಗಳನ್ನು ತೊಟ್ಟು ನಿಂತುಕೊಳ್ಳಲು ಸಹಾಯಕವಾಗಬೇಕು. ಆದರೆ ನಾವು ಕಟ್ಟಿಕೊಂಡಿರುವ ವ್ಯವಸ್ಥೆಯು ಸಸಿಯ ಬೆಳವಣಿಗೆಗೆ ಅಡ್ಡಿಯಾಗುವ ಸೆರೆಮನೆಯಾಗಿದೆ. ಆ ಸೆರೆಮನೆಯ ಬಲಿಷ್ಠ ಗೋಡೆಗಳೊಳಗೆ ಸಸಿಯು ಜೀವ ಕಳೆದುಕೊಂಡು ಮುರುಟಿಹೋಗುತ್ತಿದೆ. ಇದೇ ವ್ಯವಸ್ಥೆಯ ದುರಂತ!


Technorati : , ,

ಈ ಸಂಚಿಕೆಯ ಡಿಬೇಟಿನ ವಿಷಯ “ವ್ಯವಸ್ಥೆ ಮನುಷ್ಯನ ಬೆಳವಣಿಗೆಗೆ ಮಾರಕವೇ, ಪೂರಕವೇ?” ವ್ಯವಸ್ಥೆ ಮನುಷ್ಯನನ್ನು ತನ್ನದೇ ಕ್ರೂರತೆ, ದೌರ್ಬಲ್ಯಗಳಿಂದ ರಕ್ಷಿಸುವ ಕೋಟೆಯಿದ್ದಂತೆ ಎಂದು ವಾದಿಸಿದ್ದಾರೆ ಸುಪ್ರೀತ್.ಕೆ.ಎಸ್.

ನಿಮ್ಮ ಅಭಿಪ್ರಾಯವೇನು ತಿಳಿಸ್ತೀರಲ್ಲಾ?

ವ್ಯವಸ್ಥೆಯು ಮನುಷ್ಯನ ಸಮಗ್ರವಾದ ಅಭಿವ್ಯಕ್ತಿಗೆ ತೊಡಕಾಗುತ್ತದೆಯೇ ಇಲ್ಲವೇ ಎಂದು ಚರ್ಚಿಸುವ ಮೊದಲು ವ್ಯವಸ್ಥೆಯ ಹುಟ್ಟಿಗೆ ಕಾರಣವಾದ ಸಂಗತಿಗಳನ್ನು ಗಮನಿಸೋಣ. ಈ ಭೂಮಿಯ ಮೇಲಿರುವ ಯಾವ ಪ್ರಕ್ರಿಯೆಗಳನ್ನೇ ಗಮನಿಸಿ, ಅಲ್ಲಿ ವ್ಯವಸ್ಥೆಯೆಂಬುದು ಎದ್ದು ಕಾಣುತ್ತದೆ. ಇಡೀ ವಿಶ್ವ ನಡೆಯುತ್ತಿರುವುದು ಅಗೋಚರವಾದ ವ್ಯವಸ್ಥೆಯ ಮೇಲೆ. ಸೂರ್ಯನ ಸುತ್ತ ಗ್ರಹಗಳು ವ್ಯವಸ್ಥಿತವಾಗಿ ಸುತ್ತುಹಾಕುತ್ತಿರುವುದರಿಂದಲೇ ಭೂಮಿಯ ಮೇಲೆ ಜೀವದ ಉಗಮ ಸಾಧ್ಯವಾದದ್ದು. ಭೂಮಿಯಲ್ಲಿ ಹಗಲು ರಾತ್ರಿಗಳೆಂಬ ವ್ಯವಸ್ಥೆಗೆ ಅನುಗುಣವಾಗಿ ಜೀವಿಗಳು ಹಾಗೂ ಅವುಗಳ ಜೀವನ ವಿಧಾನ ರೂಪುಗೊಂಡಿದೆ. ಪ್ರಕೃತಿಯಲ್ಲಿರುವಷ್ಟು ಸುಸಜ್ಜಿತವಾದ ವ್ಯವಸ್ಥೆಯನ್ನು ಮಾನವ ಆದರ್ಶವಾಗಿ ಇಟ್ಟುಕೊಳ್ಳಬಹುದು ಅಷ್ಟು ವ್ಯವಸ್ಥಿತವಾದ ಪ್ರಕ್ರಿಯೆಗಳು ಪ್ರಕೃತಿಯಲ್ಲಿ ನಡೆಯುತ್ತವೆ. ಎಲ್ಲೋ ಬಿದ್ದ ಬೀಜದಿಂದ ಹುಟ್ಟಿದ ಹುಲ್ಲಿಗೆ ಸಿಗುವ ಸೂರ್ಯನ ಬೆಳಕು, ಮಳೆಯ ನೀರು, ಮಣ್ಣಿನ ಸತ್ವದಿಂದ ಅದು ಪೌಷ್ಟಿಕವಾಗಿ ಬೆಳೆಯುತ್ತದೆ. ಅದನ್ನು ತಿನ್ನುವ ಮೊಲಗಳ ಹಿಂಡನ್ನೇ ಆಹಾರಕ್ಕಾಗಿ ಅವಲಂಬಿಸಿದ ಮಾಂಸಾಹಾರಿ ಮೃಗಗಳಿರುತ್ತವೆ. ಆ ಮಾಂಸಾಹಾರಿಗಳ ಸಂಖ್ಯೆ ವಿಪರೀತವಾಗಬಾರದೆನ್ನುವ ಎಚ್ಚರಿಕೆ ಅವುಗಳ ಸಂತಾನೋತ್ಪತ್ತಿಯ ಮಿತಿಯನ್ನು ನಿಗಧಿಪಡಿಸುತ್ತದೆ. ಪ್ರತಿಯೊಂದಕ್ಕೂ ಅರ್ಹವಾದ ಪ್ರಾಮುಖ್ಯತೆ ಹಾಗೂ ಸ್ಥಾನವನ್ನು ಕೊಟ್ಟು ಸಲಹುವ ಶಕ್ತಿಯಿರುವುದು ವ್ಯವಸ್ಥೆಗೆ.

ಪ್ರಾಕೃತಿಕವಾದ ವ್ಯವಸ್ಥೆಗೆ ಅನುಗುಣವಾಗಿ ನಡೆಯಲು ಪ್ರಜ್ಞೆಯ ಆವಶ್ಯಕತೆಯಿಲ್ಲ. ಪ್ರಾಣಿಗಳ ಹಾಗೆ ಪ್ರಕೃತಿಯ ನಿಯಮಗಳಿಗನುಸಾರವಾಗಿ ಸಾಗಲು ಬುದ್ಧಿ ಶಕ್ತಿ, ವಿವೇಚನಾ ಸಾಮರ್ಥ್ಯದ ಅಗತ್ಯತೆಯಿಲ್ಲ. ಆದರೆ ಮನುಷ್ಯ ಬುದ್ಧಿ ಜೀವಿ ಆತನಿಗೆ ವಿವೇಚನೆಯ ಶಕ್ತಿಯಿದೆ. ಆತ ಪ್ರಕೃತಿಯ ನಿಯಮಗಳಿಗೆ ತಲೆಬಾಗಲು ಆತನ ಪ್ರಜ್ಞೆ ಬಿಡುವುದಿಲ್ಲ. ಸದಾ ಆತನಿಗೆ ಮೀರುವ, ಕಾಣದ್ದನ್ನು ಹಿಡಿಯುವ ಹಂಬಲ. ಹೀಗಾಗಿ ಆತ ಪ್ರಕೃತಿ ವಿಧಿಸುವ ನಿಯಮಗಳಿಗೆ ಬದ್ಧನಾದವನಲ್ಲ. ಆತ ಸ್ವಚ್ಛಂದ ಜೀವಿ.

ಒಮ್ಮೆ ಹೀಗೆ ಸ್ವಚ್ಛಂದತೆಯ ರುಚಿ ಕಂಡ ಮನುಷ್ಯನಿಗೆ ಪ್ರಕೃತಿಯ ಮತ್ತಷ್ಟು ನಿಯಮಗಳನ್ನು ಮುರಿಯುತ್ತಾ ತನ್ನ ಮನಸ್ಸು ಎಳೆದ ಕಡೆಗೆ ಸಾಗುವ ಹಂಬಲ ತೀವ್ರವಾಗಲಾರಂಭಿಸುತ್ತದೆ. ಬರುಬರುತ್ತಾ ಆತನ ಸ್ವಚ್ಛಂದತೆ ಇತರರ ಪಾಲಿನ ನೆಮ್ಮದಿಯ ತೆರಿಗೆಯನ್ನು ಬಯಸಲು ಶುರು ಮಾಡುತ್ತದೆ. ಆಗಲೇ ಅನಾಹುತದ ಪ್ರಕ್ರಿಯೆ ಶುರುವಾಗುವುದು. ಒಬ್ಬ ಮನುಷ್ಯನ ಸ್ವಾತಂತ್ರ್ಯದ ಧ್ವಜ ಇನ್ನೊಬ್ಬನ ಶವದ ಮೇಲೆ ಹಾರಾಡಬಾರದಲ್ಲವಾ? ಈ ಕಾರಣಕ್ಕಾಗಿ ಮನುಷ್ಯನಿಗೆ ತನ್ನನ್ನೇ ತಾನು ನಿಯಂತ್ರಿಸಿಕೊಳ್ಳುವ, ತನ್ನ ಸ್ವಾತಂತ್ರ್ಯ ಹಾಗೂ ಸ್ವಚ್ಛಂದತೆ ಮತ್ತೊಬ್ಬನ ಸ್ವಾತಂತ್ರ್ಯ ಹರಣ ಮಾಡದ ಹಾಗೆ ಎಚ್ಚರ ವಹಿಸುವ ಸಲುವಾಗಿ ವ್ಯವಸ್ಥೆಯ ಆವಶ್ಯಕತೆ ಎದ್ದು ಕಂಡಿತು. ಮನುಷ್ಯನ ವೈಯಕ್ತಿಕ ವ್ಯಕ್ತಿತ್ವಕ್ಕೆ ಸಾಮಾಜಿಕ ಆಯಾಮವೂ ದೊರೆಯಲು ಪ್ರಾರಂಭವಾಯಿತು. ಒಂದು ಆದರ್ಶಯುತ ವ್ಯವಸ್ಥೆಯನ್ನು ರೂಪಿಸಿಕೊಳ್ಳುವೆಡೆ ಮನುಷ್ಯನ ನಿರಂತರ ಅನ್ವೇಷಣೆ ನಡೆಯುತ್ತಲೇ ಇದೆ. ಪರಿಪೂರ್ಣತೆಯನ್ನು ಬೆನ್ನಟ್ಟುತ್ತಾ ಮನುಷ್ಯ ಸಾಗುತ್ತಲೇ ಇದ್ದಾನೆ.Untitled picture.png

ಒಂದು ವ್ಯವಸ್ಥೆಯಲ್ಲಿ ಎಷ್ಟೇ ಕುಂದುಗಳಿದ್ದರೂ ವ್ಯವಸ್ಥೆಯ ಆವಶ್ಯಕತೆ ಮನುಷ್ಯನಿಗೆ ಇದ್ದೇ ಇದೆ. ಇದಕ್ಕೆ ಒಂದು ಸರಳವಾದ ಉದಾಹರಣೆಯನ್ನು ಕೊಡುತ್ತೇನೆ ಕೇಳಿ. ಪ್ರಕೃತಿಯಲ್ಲಿರುವ ಪ್ರತಿಯೊಂದು ಜೀವಿಗೂ ತನ್ನದೇ ಆದ ಸಾಮರ್ಥ್ಯವಿದೆ ಹಾಗೂ ತನ್ನದೇ ಆದ ದೌರ್ಬಲ್ಯಗಳಿವೆ. ಒಂದು ಪ್ರಾಣಿಯ ಬದುಕು ತನ್ನ ಸಾಮರ್ಥ್ಯದ ಮೇಲೆ ಹಾಗೂ ಇತರರ ದೌರ್ಬಲ್ಯದ ಮೇಲೆ ಅವಲಂಬಿತವಾಗಿದೆ. ಕಾಡಿನಲ್ಲಿ ಬೆಳೆದ ಹಸಿರು-ಹುಲ್ಲು ತಿಂದು ಬೆಳೆಯುವ ಮೊಲಕ್ಕೆ ತಾನು ಸಸ್ಯಾಹಾರಿಯಾಗಿರುವುದು ತನ್ನ ಬದುಕಿನ ಪ್ಲಸ್ ಪಾಯಿಂಟ್ ಆದರೆ ತಾನು ಹುಲಿಯಷ್ಟು ಬಲಶಾಲಿಯಾಗದಿರುವುದು ಅದಕ್ಕೆ ಆಪತ್ತು. ಇನ್ನು ಹುಲಿಗೋ, ಮೊಲದಂತಹ ಪ್ರಾಣಿಗಳ ಮೇಲೆರಗಿ ಅವುಗಳ ರಕ್ತ ಹೀರುವಷ್ಟು ಕಸುವು ಮೈಯಲ್ಲಿರುವುದೇ ವರವಾದರೆ, ಯಥೇಚ್ಛವಾಗಿರುವ ಸಸ್ಯ ಆಹಾರವನ್ನು ದಕ್ಕಿಸಿಕೊಳ್ಳಲಾಗದ ದೌರ್ಬಲ್ಯವೇ ಶಾಪ.ಸಾಮರ್ಥ್ಯದ ಜೊತೆಗೆ ದೌರ್ಬಲ್ಯ, ಶಕ್ತಿಯ ಜೊತೆಗೆ ಬಲಹೀನತೆ ಇದ್ದಾಗಲೇ ಈ ಎರಡೂ ವರ್ಗದ ಪ್ರಾಣಿಗಳ ಬದುಕು ಸಾಧ್ಯವಾಗುವುದು.

ಆದರೆ ಮನುಷ್ಯನ ವಿಚಾರದಲ್ಲಿ ಪ್ರಕೃತಿ ಕೊಂಚ ಉದಾರತೆಯನ್ನು ತೋರಿದೆ. ತಾನಾಗಿ ಆಯ್ದು ಸಾಮರ್ಥ್ಯ, ದೌರ್ಬಲ್ಯಗಳನ್ನು ನಿರ್ಧರಿಸಿದೆ ನಮ್ಮ ನಮ್ಮ ಪರಿಶ್ರಮ, ವಿವೇಕಕ್ಕೆ ಅನುಗುಣವಾಗಿ ಬೆಳೆಯಲು ಅನುವು ಮಾಡಿಕೊಟ್ಟಿದೆ. ಅನಂತ ಅವಕಾಶಗಳನ್ನು ನಮ್ಮ ಮುಂದೆ ಇಟ್ಟಿದೆ. ಹುಲಿಯ ಮರಿಯೊಂದು ಬೆಳೆಯುತ್ತಾ ಬೆಳೆಯುತ್ತಾ ಬೇಟೆ ಆಡುವುದರಲ್ಲಿ ತನ್ನ ಕೌಶಲ್ಯವನ್ನು ಬೆಳೆಸಿಕೊಳ್ಳುತ್ತಾ ಹೋಗಬಹುದೇ ವಿನಃ ಅದು ಎಂದಿಗೂ ತನ್ನ ಆಹಾರ ಬೇಟೆ ಆಡಿಕೊಡಲು ಗುಲಾಮರಾಗಿ ನರಿಯನ್ನೋ, ತೋಳಗಳನ್ನೋ ಬಳಸಿಕೊಳ್ಳುವ ಆಲೋಚನೆ ಮಾಡಲಾಗದು. ಮನುಷ್ಯನ ಪಾಲಿಗೆ ವರವಾಗಿಯೂ, ಶಾಪವಾಗಿಯೂ ಲಭ್ಯವಾಗಿರುವುದೇ ಈ ಸವಲತ್ತು. ಪ್ರಕೃತಿ ನೀಡಿರುವ ವಿವೇಕ, ಸ್ವತಂತ್ರ ಆಲೋಚನಾಶಕ್ತಿಯಿಂದಾಗಿ ಮನುಷ್ಯ ಹೆಚ್ಚು ಹೆಚ್ಚು ಬುದ್ಧಿವಂತನಾದಷ್ಟೂ ಹೆಚ್ಚು ಮೋಸಗಾರನಾಗುತ್ತಾ ಹೋಗುತ್ತಾನೆ. ಪರಿಪೂರ್ಣತೆಯ ಹಾದಿಯಲ್ಲಿ ಸಾಗುವ ಉಮ್ಮೇದಿಯೇ ಇರದ ಸಹಸ್ರಾರು ಜೀವಜಂತುಗಳ ಹಾಗೆ ಮನುಷ್ಯನೂ ಇದ್ದಿದ್ದರೆ ಯಾವ ತೊಂದರೆಯೂ ಇರುತ್ತಿರಲಿಲ್ಲ. ಆದರೆ ಪ್ರಕೃತಿ ಮನುಷ್ಯನಿಗೆ ಆ ಹಸಿವಿನ ಬೆಂಕಿಯನ್ನು ಹಚ್ಚಿ ಕಳುಹಿಸಿದೆ. ಹೀಗೆ ಎಲ್ಲರೂ ತಮ್ಮ ಪರಿಪೂರ್ಣತೆಯ ಹಸಿವನ್ನು ಇಂಗಿಸಿಕೊಳ್ಳಲು ಹೊರಟಾಗ ಸ್ಪರ್ಧೆಯೆಂಬುದು ಅನಿವಾರ್ಯ. ಎತ್ತರೆತ್ತರಕ್ಕೆ ಹೋದವನು ಕೆಳಗಿನವನ ಶೋಷಣೆಯನ್ನು ಮಾಡಲು ಶುರುಮಾಡುತ್ತಾನೆ. ಇದನ್ನು ಹೀಗೇ ಬಿಟ್ಟರೆ ಮನುಷ್ಯ ಭಸ್ಮಾಸುರನ ಹಾಗೆ ತನ್ನ ತಲೆಯ ಮೇಲೆ ತಾನೇ ಕೈಯಿಟ್ಟುಕೊಂಡು ಭಸ್ಮವಾಗುತ್ತಾನೆ. ಈ ಅಪಾಯದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಮನುಷ್ಯ ವ್ಯವಸ್ಥೆಯ ಮೊರೆ ಹೋಗುತ್ತಾನೆ.

ವ್ಯವಸ್ಥೆ ಮನುಷ್ಯನದೇ ಸೃಷ್ಟಿಯಾದರೂ ಅದನ್ನಾತ ತನ್ನ ಧೀಶಕ್ತಿಗಿಂತ ಹೆಚ್ಚು ಬಲಿಷ್ಠವಾಗಿಸುವಲ್ಲಿ, ಶಕ್ತಿಶಾಲಿಯಾಗಿಸುವಲ್ಲಿ, ಸಮರ್ಥವಾಗಿಸುವಲ್ಲಿ ಸದಾ ಕಾರ್ಯಶೀಲನಾಗಿರುತ್ತಾನೆ. ಏಕೆಂದರೆ ಈ ವ್ಯವಸ್ಥೆಗೆ ಇಡೀ ಮಾನವ ಸಮಾಜವನ್ನು ನಿಯಂತ್ರಿಸುವ ಶಕ್ತಿ ಬೇಕು. ಅತಿ ಬಲಿಷ್ಠನ ಕಾಲ್ತುಳಿತದಿಂದ ಅತಿ ದುರ್ಬಲನಾದವನನ್ನು ರಕ್ಷಿಸಲು ವ್ಯವಸ್ಥೆಗೆ ಬಲಿಷ್ಠನಿಗಿಂತ ಹೆಚ್ಚಿನ ಶಕ್ತಿಬೇಕು. ವ್ಯವಸ್ಥೆಯ ಹಲ್ಲುಗಳು ಹೆಚ್ಚು ಹರಿತವಾಗಿರಬೇಕು. ಈ ನಿಟ್ಟಿನಲ್ಲಿ ಸಾಗುವಾಗ ವ್ಯವಸ್ಥೆ ಕೊಂಚ ಕ್ರೂರಿಯಾಗಬೇಕಾಗುತ್ತದೆ, ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವಾಗ ವ್ಯವಸ್ಥೆಯ ಮುಳ್ಳಿನ ಮೊನಚು ಕೋಮಲವಾದ ಹೂವಿನ ಪಕಳೆಗಳ ಕೆನ್ನೆಯನ್ನು ಗೀರಲೂ ಬಹುದು. ಇದು ವ್ಯವಸ್ಥೆ ತಂದೊಡ್ಡುವ ಅನಿವಾರ್ಯತೆ.

ವ್ಯವಸ್ಥೆ ಬಹುಪಾಲು ಮಂದಿ ವಾದಿಸುವಂತೆ ಜಡವಲ್ಲ. ಅದು ನಿತ್ಯ ಚಲನೆಯಲ್ಲಿರುವಂಥದ್ದು. ವ್ಯವಸ್ಥೆಗೆ ಸ್ವತಂತ್ರವಾದ ಅಸ್ತಿತ್ವವಿಲ್ಲ. ಅದು ಅದನ್ನೊಪ್ಪಿಕೊಂಡ ಮಾನವ ಸಮೂಹದ ಅಡಿಯಾಳು. ಅವರ ಮರ್ಜಿಯಂತೆ ಅದು ಕೆಲಸ ಮಾಡುತ್ತದೆ. ಒಂದು ವ್ಯವಸ್ಥೆಯಲ್ಲಿನ ಕುಂದು, ಕೊರತೆ, ಅನ್ಯಾಯಗಳಿಂದ ಕುದ್ದ ಜನ ಸಮೂಹ ಕ್ರಾಂತಿಗೆ ಕೈ ಹಾಕುತ್ತದೆ ಹೊಸ ವ್ಯವಸ್ಥೆಗೆ ನಾಂದಿ ಹಾಡುತ್ತದೆ. ಹೊಸತಾಗಿ ಕಟ್ಟಿಕೊಂಡ ವ್ಯವಸ್ಥೆ ಸ್ವಲ್ಪ ಕಾಲ ಹಳೆಯ ವ್ಯವಸ್ಥೆ ಮಾಡಿ ಹೋದ ಗಾಯಗಳಿಗೆ ಮುಲಾಮು ಸವರುವ ಕೆಲಸ ಮಾಡುತ್ತದೆ, ಆದರೆ ಕಾಲಾ ನಂತರ ಹೊಸ ವ್ಯವಸ್ಥೆಯ ಹಲ್ಲುಗಳೂ ಹರಿತವಾದಷ್ಟು ಅದು ಉಂಟು ಮಾಡುವ ಗಾಯಗಳಿಂದಾಗಿ ಮತ್ತೊಂದು ಹೊಸ ವ್ಯವಸ್ಥೆಯ ಆವಶ್ಯಕತೆ ಹುಟ್ಟಿಕೊಳ್ಳುತ್ತದೆ. ಜಮೀನ್ದಾರೀ ವ್ಯವಸ್ಥೆಯ ಉಪಟಳದಿಂದ ಬೇಸತ್ತ ರಷ್ಯಾ ಅಪ್ಪಿಕೊಂಡ ಕಮ್ಯುನಿಸಂನ ಮುಷ್ಠಿಯಿಂದ ಪಾರಾಗಲಿಕ್ಕೆ ಪಟ್ಟ ಪಾಡು ಇಲ್ಲಿ ಉಲ್ಲೇಖಾರ್ಹ.

ವ್ಯವಸ್ಥೆಯೆಂಬುದು ನಮ್ಮ ರಕ್ಷಣೆಗಾಗಿ ನಾವು ನಮ್ಮ ಸುತ್ತ ಕಟ್ಟಿಕೊಂಡ ಕೋಟೆ. ಆದರೆ ಅದೇ ನಮ್ಮನ್ನು ಬಂಧಿಸಿಡಬಲ್ಲ ಸೆರೆಮನೆಯಾಗಬಹುದು. ಕೋಟೆಯ ಬಲಿಷ್ಠವಾದ ನಾಲ್ಕು ಗೋಡೆಗಳು ಸೆರೆಮನೆಯ ಗೋಡೆಗಳಾಗಬಹುದು. ಎಲ್ಲರಲ್ಲೂ ಸೆರೆಮನೆಯ ಗೋಡೆಗಳನ್ನು ಜಜ್ಜಿ ಪುಡಿ ಪುಡಿ ಮಾಡಿ ಹೊರಕ್ಕೆ ಹಾರುವ ತುಡಿತವಿರುತ್ತದೆಯಾದರೂ ಕೋಟೆಯಿಂದ ಹೊರಬಂದು ವಿಶಾಲ ಬಯಲಿನಲ್ಲಿ ಇತರರ ಬಾಣಗಳಿಗೆ ನೇರ ಗುರಿಯಾಗಿ ನಿಲ್ಲುವ ಶಕ್ತಿ ಹಲವರಲ್ಲಿರುವುದಿಲ್ಲ. ಆದರೆ ಕೆಲವರು ತಮ್ಮ ಚೈತನ್ಯಕ್ಕೆ ಸೆರೆಮನೆಯಾಗಿ ಪರಿಣಮಿಸಿದ ಕೋಟೆಯ ಗೋಡೆಗಳನ್ನು ಕೆಡವಿ ಹಾಕುವ ಪ್ರಯತ್ನ ಮಾಡುತ್ತಾರೆ. ವ್ಯವಸ್ಥೆಯಿಂದ ಹೊರಗೆ ಜಿಗಿಯುವ ಸಾಹಸಕ್ಕೆ ಕೈ ಹಾಕುತ್ತಾರೆ. ಅಲ್ಲಿ ಬೇಗನೇ ಶತ್ರುವಿನ ಬಾಣಗಳಿಗೆ, ನಮ್ಮದೇ ಕೋಟೆಯ ಕಲ್ಲುಗಳ ಏಟಿಗೆ ಬಲಿಯಾಗುವ ಅಪಾಯವಿದೆಯಾದರೂ ಅವರಿಗೆ ಸೆರೆಮನೆಯಲ್ಲಿ ಬಾಳು ದೂಡುವುದಕ್ಕಿಂತ ಹೊರಗೆ ಬರುವ ಪ್ರಯತ್ನದಲ್ಲಿ ಸಾರ್ಥಕತೆ ಕಾಣುವ ಹಂಬಲವಿರುತ್ತದೆ. ಅಂಥವರನ್ನು ಯಾವ ವ್ಯವಸ್ಥೆಯೂ ಬಂಧಿಸಿಡಲಾರದು! ಆದರೆ ನಮ್ಮ ದುರದೃಷ್ಟವೆಂದರೆ ನಮ್ಮ ನಡುವೆ ಅಂಥ ಚೇತನಗಳು ಇರುವುದು ಕೇವಲ ಬೆರಳೆಣಿಕೆಯಷ್ಟು ಮಾತ್ರ!


Technorati : ,

ಈ ಲಲಿತ ಪ್ರಬಂಧದ ಲೇಖಕರು ಸುಪ್ರೀತ್.ಕೆ.ಎಸ್

ಆಗಿನ ನಮ್ಮ ಬದುಕಿನ ಸ್ಥಿತಿಯೇ ವಿಚಿತ್ರವಾಗಿರುತ್ತಿತ್ತು. ನಾಡು ಹೋಗು ಎನ್ನುವ ಹಾಗೂ ಕಾಡು ಬಾ ಎನ್ನುವ ಸ್ಥಿತಿಯಂಥದ್ದೇ. ಆದರೆ ಇಲ್ಲಿನ ವ್ಯತ್ಯಾಸ ಅಂದರೆ ನಾವು ಬಂದದ್ದು ನಮ್ಮೂರುಗಳಿಂದ ಈ ಮಾಯಾನಗರಿಗೆ. ಊರಿನಲ್ಲಿ ಉಂಡುಟ್ಟು ಕುಣಿದಾಡಿದ ಮನೆ ಬಿಟ್ಟು ಅಬ್ಬೇಪಾರಿಯಂತೆ ಕೆಲಸ ಅರಸಿಕೊಂಡು ಈ ಊರು ಸೇರಿಕೊಂಡಿದ್ದೆವು. ನಮ್ಮಂತಹ ನಾಲ್ಕಾರು ಅಬ್ಬೇಪಾರಿಗಳು ಸೇರಿ ಈ ಭಯಂಕರ ರಾಕ್ಷಸನಂತಹ ನಗರಿಯಲ್ಲಿ ಪುಟ್ಟದೊಂದು ರೂಮು ಮಾಡಿಕೊಂಡು, ಮನೆಯಿಂದ ತಂದಿದ್ದ ದುಡ್ಡನ್ನು ದಿನಕ್ಕೆರಡು ಬಾರಿ ಎಣಿಸಿಕೊಂಡು ಪಂಚೆಯ ಒಳಗಿನ ಅಂಡರ್ ವೇರಿನ ಪದರಗಳಲ್ಲಿಟ್ಟುಕೊಂಡು ಇದಕ್ಕಿಂತ ಸೇಫ್ ಜಾಗವನ್ನು ಕೊಡುವ ಗ್ಯಾರಂಟಿಯನ್ನು ಆ ಸ್ವಿಸ್ ಬ್ಯಾಂಕಿನವರೂ ಕೊಡಲಾರರು ಎಂದುಕೊಳ್ಳುತ್ತಿದ್ದೆವು!

ಹೆಸರಿಗೆ ನಮ್ಮ ದು ಒಂದೇ ಸೂರು. ಆದರೆ ಅದರಡಿ ಬದುಕುವ ನಮ್ಮಲ್ಲಿ ಚೂರೇ ಚೂರು ರುಚಿ ನೋಡಲಾದರೂ ಸಾಕೆನ್ನುವಷ್ಟೂ ಸಹ ಸಾಮ್ಯತೆಗಳಿರಲಿಲ್ಲ. ಒಬ್ಬೊಬ್ಬನದು ಒಂದೊಂದು ದಿಕ್ಕು. ಒಬ್ಬೊಬ್ಬನದು ಒಂದೊಂದು ಜಗತ್ತು, ಇತರರಿಗೆ ಅದು ಆಪತ್ತಾದರೂ ಅವನಿಗೆ ಅದೇ ಮಹತ್ತು. ಇಂತಹ ಜೀವನ ಶೈಲಿಯನ್ನು ಅಖಂಡ ಐದು ವರ್ಷಗಳ ಕಾಲ ಜೀವಿಸಿರುವ ನನಗೆ ಇದನ್ನು ಕಾಣದ ಜಗತ್ತಿನ ಜನರು ಮಾಡಿರುವ ಅನೇಕ ನುಡಿಗಟ್ಟುಗಳು ಗಮ್ಮತ್ತಿನವಾಗಿ ಕಾಣಿಸುತ್ತವೆ. ‘ಎರಡು ದೇಹ ಒಂದೇ ಜೀವ’ ಅಂತ ಪ್ರೇಮಿಗಳನ್ನು ಕರೆಯುತ್ತಾರೆ. ಈ ನುಡಿಗಟ್ಟನ್ನೇ ಸ್ವಲ್ಪ ತಿರುಚಿ, ಅಲ್ಲಿ ಇಲ್ಲಿ ಕೆರೆದು, ಕೊಂಚ ಹರಿದು ನಮ್ಮ ಆ ದಿನಗಳ ಬದುಕಿಗೆ ಅನ್ವಯಿಸುವುದಾದರೆ, ‘ ಒಂದೇ ದೇಹ, ನಾಲ್ಕು ಜೀವ, ನಾಲ್ಕು ದಿಕ್ಕು’ ಎನ್ನಬಹುದು. ಒಬ್ಬ ದಢೂತಿ ಮಾರ್ವಾಡಿಯನ್ನು ಮಣ್ಣು ಮಾಡಲು ಬೇಕಾದಷ್ಟು ಜಾಗದಲ್ಲಿ ಎಬ್ಬಿಸಿದ ಒಂದು ಬಾಗಿಲಿನ, ಅರ್ಧ ಕಿಟಕಿಯ ರೂಮಿನಲ್ಲಿ ನಾವು ನಾಲ್ಕು ಮಂದಿ ಇರುತ್ತಿದ್ದೆವು. ರಾತ್ರಿ ಎಲ್ಲರೂ ಮಲಗಿದಾಗ ನಮ್ಮನ್ನು ಯಾರಾದರೂ ದೂರದಿಂದ ನೋಡಿದರೇ ಅಲ್ಲಿರುವುದು ಒಂದೇ ದೇಹವೆನ್ನಬೇಕು ಹಾಗೆ ಇಬ್ಬರನ್ನೊಬ್ಬರು ಒತ್ತಿಕೊಂಡು, ಒಬ್ಬನ ಕಾಲೊಳಗೆ ಮತ್ತೊಬ್ಬ ಹೊಸೆದುಕೊಂಡು ಬಿದ್ದುಕೊಂಡಿರುತ್ತಿದ್ದೆವು. ರಾತ್ರಿಗಳಲ್ಲಿ ಹೀಗೆ ನಾಲ್ಕು ದೇಹಗಳು ಒಂದೇ ಎನ್ನುವಂತೆ ಬೆಸೆದು, ಹೊಸೆದು, ಮಸೆದುಕೊಳ್ಳುತ್ತಿದ್ದರೂ ಒಮ್ಮೆ ಬೆಳಗಿನ ಅಲಾರಾಂ ಕೂಗಿ (ಈ ನಗರಿಯಲ್ಲಿ ಕೂಗಲಿಕ್ಕೆ ಕೋಳಿಗಳಾದರೂ ಎಲ್ಲಿವೆ?)ದರೆ ಸಾಕು ಒಂದೊಂದು ಜೀವ ಒಂದೊಂದು ದಿಕ್ಕಿನೆಡೆಗೆ ಮುಖ ಮಾಡಿರುವುದು, ಒಬ್ಬೊಬ್ಬರೂ ಒಂದೊಂದು ಧೃವಗಳಾಗಿರುವುದು ಗೋಚರವಾಗುತ್ತದೆ.

ಇದೊಂದು ಕೆಟ್ಟ ಅಭ್ಯಾಸ ಬೆಳೆದು ಬಿಟ್ಟಿದೆ ನೋಡಿ, ಹೇಳಬೇಕಾದ ಸಂಗತಿಗೆ ಸವಿಸ್ತಾರವಾದ ಪೀಠಿಕೆ ಹಾಕುತ್ತಾ ವಿಷಯವನ್ನೇ ಮರೆತುಬಿಡುವ ಚಾಳಿ. ನಾನು ಹೇಳ ಹೊರಟದ್ದು ಐದು ವರ್ಷದ ನಮ್ಮ ನಾಲ್ವರ ಗುಂಪಿನಲ್ಲಿದ್ದ ನಮ್ಮ ತಾರಾನಾಥನ ಬಗ್ಗೆ, ಆದರೆ ಪೀಠೆಕೆಯೇ ಇಲ್ಲಿಯವರೆಗೆ ಕಾಲು ಚಾಚಿಕೊಂಡು ಬಿಟ್ಟಿತು. ಸರಿ, ಇನ್ನು ತಾರಾನಾಥನ ವಿಷಯಕ್ಕೆ ಬರೋಣ.

ತಾರಾನಾಥ ಅತ್ತ ಎತ್ತರದ ತೆಂಗಿನ ಮರವೂ ಅಲ್ಲ ಇತ್ತ ಗಿಡ್ಡಗಿನ ತುಂಬೇ ಗಿಡವೂ ಅಲ್ಲ. ಆತ ಬಣ್ಣ ಅತ್ತಕಡೆ ಗೋಡೆ ಮೇಲಿನ ಸುಣ್ಣವೂ ಅಲ್ಲ, ಇತ್ತ ಬಚ್ಚಲು ಮನೆಯ ಇದ್ದಿಲೂ ಅಲ್ಲ. ಆತನ ಮುಖ ಲಕ್ಷಣ ಅತ್ತ ಗಂಡಸಿನ ಹಾಗೂ ಇರಲಿಲ್ಲ, ಇತ್ತ ಹೆಣ್ಣಿಗನ ಹಾಗೂ ಇರಲಿಲ್ಲ. ಆತನ ಕೂದಲು ಅತ್ತ ನೀಳವಾಗಿಯೂ ಇರಲಿಲ್ಲ, ಇತ್ತ ವಿರಳವಾಗಿಯೂ ಇರಲಿಲ್ಲ. ಅವನ ಮೂಗು… ಇದೇನಿದು ಅತ್ತ ಹಾಗೂ ಇರಲಿಲ್ಲ, ಇತ್ತ ಹೀಗೂ ಇರಲಿಲ್ಲ ಅಂತ ಬರೀ ‘ಇಲ್ಲ’ಗಳನ್ನೇ ಪಟ್ಟಿ ಮಾಡುತ್ತಿರುವಿರಲ್ಲಾ ಎನ್ನುವಿರಾ? ಏನು ಮಾಡುವುದು ದೇವರನ್ನು ವಿವರಿಸುವಾಗ ನನ್ನಪ್ಪ ಅತನು ಅದೂ ಅಲ್ಲ, ಇದೂ ಅಲ್ಲ ಅಂತ ಹೇಳುತ್ತಿದ್ದದ್ದನ್ನು ಕೇಳಿ ಕೇಳಿ ನನಗೆ ಈ ಅಭ್ಯಾಸ ಹತ್ತಿಕೊಂಡಿ ಬಿಟ್ಟಿದೆ. ಇರಲಿ, ತಾರಾನಾಥ ಎಂಬ ಸಾಕಷ್ಟು ಉದ್ದವಾದ ಹೆಸರಿಗೆ ನಾವು ನಾಲ್ಕು ಅಕ್ಷರ ಹೆಚ್ಚಾಗಿ ಸೇರಿಸಿದ್ದೆವು. ಅವನನ್ನು ನಾವು ಟಾಕು ಟೀಕು ತಾರಾನಾಥ ಎಂದು ಕರೆಯುತ್ತಿದ್ದೆವು. ಅದಕ್ಕೆ ಕಾರಣ ಆತನ ಒಪ್ಪ ಓರಣ, ನಮಗೆ ಸುಸ್ತು ಹೊಡೆಸುತ್ತಿದ್ದ ಆತನ ಶಿಸ್ತು. 233.jpg

ಮನೆಯೆಂಬ ಸೇನಾ ಶಿಬಿರದಲ್ಲಿ ಸೇನಾಧಿಪತಿಯಂತಹ ಅಪ್ಪಂದಿರು ಇದ್ದಾಗಲೇ ನಾನು ಹಾಗೂ ನಮ್ಮ ನಾಲ್ವರ ಗುಂಪಿನ ಮತ್ತಿಬ್ಬರು ‘ರೂಂ ಪಾಠಿ’ಗಳು (ಸಹಪಾಠಿಗಳು ಇದ್ದಂತೆ) ಶಿಸ್ತು ಕಲಿಯದವರು ನಾವು. ಹಾಕಿಕೊಳ್ಳುವ ಬಟ್ಟೆ, ನಮ್ಮ ಊಟ, ತಿಂಡಿ, ಚಹಾ, ಕೆಲಸ, ಓದು, ಪುಸ್ತಕ-ಬ್ಯಾಗು ಯಾವುದನ್ನೂ ಒಪ್ಪವಾಗಿಟ್ಟುಕೊಳ್ಳದ ನಾವು ಹುಟ್ಟುತ್ತಲೇ ಬಂಡಾಯ ಎದ್ದವರು. ವ್ಯವಸ್ಥಿತವಾಗಿದ್ದ ಯಾವುದನ್ನು ಕಂಡರೂ ನಮ್ಮ ನೆಮ್ಮದಿ ಹಾಳಾಗಿ ಹೋಗುತ್ತಿತ್ತು. ಓರಣವಾಗಿ ಜೋಡಿಸಿಟ್ಟ ಸಾಮಾನುಗಳನ್ನೆಲ್ಲಾ ಕೆದರಿ, ಮನೆಯ ತುಂಬೆಲ್ಲಾ ಹರಡಿ ಅಮ್ಮ ಗಾಬರಿಯಾಗುವಂತೆ ಮಾಡಿದಾಗಲೇ ನಮ್ಮ ಮನಸ್ಸಿಗೆ ತೃಪ್ತಿ, ಏನನ್ನೋ ಸಾಧಿಸಿದ ಸಾರ್ಥಕತೆ. ನಮ್ಮ ಪೂರ್ವಾಶ್ರಮದ ಗುಣಲಕ್ಷಣಗಳು ಹೀಗಿರುವಾಗ ನಮಗೆ ಟಾಕು-ಟೀಕು ತಾರಾನಾಥನಂತಹ ಜೀವಿಯನ್ನು ನೋಡಿ ನಮ್ಮ ಕಣ್ಣುಗಳ ಮೇಲೇ ಸಂಶಯ ಬಂದಿತ್ತು.

ಆಗಿನ್ನೂ ನಮ್ಮ ಹತ್ತೂ ಬೈ ಹತ್ತರ ರೂಮಿನಲ್ಲಿ ಮೂರು ಮಂದಿ ಇದ್ದೆವು. ಎಂದಾದರೊಮ್ಮೆ ಪರಮ ಅವ್ಯವಸ್ಥೆಯ ಗೂಡಾದ ಊರ ಮೀನು ಮಾರುಕಟ್ಟೆಯ ಮೇಲೆ ಆ ದಯಾಮಯಿಯಾದ ದೇವರಿಗೆ ಸಡನ್ನಾದ ಪ್ರೀತಿ ಬಂದು ಅದಕ್ಕೆ ಓಡಾಡುವ ಚೈತನ್ಯ ಕೊಟ್ಟು, ನೋಡಲು ಎರಡು ಕಣ್ಣು ಕೊಟ್ಟು ನಮ್ಮ ರೂಮು ನೋಡಲು ಕಳುಹಿಸಿದರೆ ಅದು ನಮ್ಮ ರೂಮಿನ ಅವವ್ಯವಸ್ಥೆ, ಗಲೀಜು ನೋಡಿ ನಾಚಿ ಓಡಿಬಿಡುತ್ತಿತ್ತೇನೊ! ಹೀಗಿರುವಾಗ ನಮ್ಮ ಈ ಗೂಡಿಗೆ ಸೇರ್ಪಡೆಯಾದವನು ತಾರಾನಾಥ. ನಮ್ಮ ರೂಮಿನೊಳಕ್ಕೆ ಕಾಲಿಟ್ಟ ಕ್ಷಣವೇ ಆತ ಕಣ್ಣು ಕತ್ತಲೆಬಂದು ಬಿದ್ದುಬಿಟ್ಟ. ಸ್ವಲ್ಪ ಸಮಯ ಕಳೆದು ಸುಧಾರಿಸಿಕೊಂಡು ಕಣ್ಣುಬಿಟ್ಟು ನೋಡಿದವನಿಗೆ ನಮ್ಮ ರೂಮಿನ ವಿರಾಟ್ ರೂಪ ದರ್ಶನವಾಗಿ ಕಣ್ಣಲ್ಲಿ ರಕ್ತ ಬಂದಂತಾಯಿತು. ಆದರೂ ಅವನ ಶಕ್ತಿಯನ್ನು ಮೆಚ್ಚಲೇ ಬೇಕು, ಆ ನಯನ ಕಠೋರವಾದ ವಿರಾಟ್ ರೂಪದ ದರ್ಶನವನ್ನು ಸಹಿಸಿಕೊಂಡು ಯಾವ ಮುನ್ಸೂಚನೆಯೂ ಇಲ್ಲದೆ ನಾವು ಮೂರು ಜನರನ್ನೂ ರೂಮಿನಿಂದ ಹೊರಕ್ಕೆ ಅಟ್ಟಿ ರೂಮಿನ ಬಾಗಿಲನ್ನು ಒಳಗಿನಿಂದ ಜಡಿದುಕೊಂಡ.

ಒಂದು ತಾಸಾದರೂ ಮಹಾನುಭಾವ ಬಾಗಿಲು ತೆರೆಯಲೇ ಇಲ್ಲ. ನಮಗೆಲ್ಲಾ ಈತ ಒಳಗೇನು ಮಾಡಿಕೊಳ್ಳುತ್ತಾನೋ ಎನ್ನುವ ಭಯ. ಆದರೆ ಏನನ್ನೂ ಮಾಡಲಾಗದ ಶಾಕ್‌ನಿಂದ ಇನ್ನೂ ಚೇತರಿಸಿಕೊಳ್ಳಲಾಗಿರಲಿಲ್ಲ. ಸರಿಯಾಗಿ ಎರಡು ತಾಸು ಕಳೇದ ನಂತರ ಬಾಗಿಲು ತೆರೆದ. ಗಾಬರಿಯಿಂದ ರೂಮಿನೊಳಕ್ಕೆ ನಾವು ನುಗ್ಗಿದೆವು. ಈಗ ರೂಮನ್ನು ನೋಡಿ ಮೂರ್ಛೆ ಬೀಳಬೇಕಾದ ಸರದಿ ನಮ್ಮದಾಗಿತ್ತು. ಅಥವಾ ಈಗಾಗಲೇ ನಾವು ಹೃದಯಾಘಾತವಾಗಿ ಸತ್ತು ನೇರವಾಗಿ ಬಂದು ಸ್ವರ್ಗವನ್ನು ನೋಡುತ್ತಿದ್ದೇವೇನೊ ಎನ್ನುವ ಭ್ರಮೆಯಾಯಿತು. ಕೇವಲ ಎರಡು ತಾಸಿನ ಕೆಳಗೆ ಅಪ್ಪಟ ಕೊಳಗೇರಿಯಂತಿದ್ದ ನಮ್ಮ ರೂಮು ಸಾಕ್ಷಾತ್ ಇಂದ್ರದೇವನ ಅಮರಾವತಿಯಂತಾಗಿಬಿಟ್ಟಿತ್ತು! ನಮ್ಮ ಈ ಹೊಸ ‘ಅಮರಾವತಿಯ’ ಇಂದ್ರ ತಾರಾನಾಥ ಬೆಳ್ಳಿ ಬಣ್ಣದ ಬನಿಯನ್ನು, ಅದಕ್ಕೆ ಬಿಳುಪಿನಲ್ಲಿ ಸ್ಪರ್ಧೆ ಒಡ್ಡುವ ಪಂಚೆ ಸುತ್ತಿಕೊಂಡು ನಮ್ಮೆದುರು ನಿಂತಿದ್ದ.

ಆಮೇಲಿನ ಒಂದು ವಾರ ನಾವು ಈ ‘ಅನ್ಯಗ್ರಹ ಜೀವಿ’ಯ ಚರ್ಯೆಗಳನ್ನು ಕುತೂಹಲದಿಂದ ಗಮನಿಸುವುದರಲ್ಲೇ ಕಳೆದುಬಿಟ್ಟೆವು. ಬೆಳಿಗ್ಗೆ ಎಂದೂ ಸೂರ್ಯನಿಗಿಂತ ಮುಂಚೆ ಏಳುವ ಅಪರಾಧ ಮಾಡದ ನಮಗೆ ಬೆಳಿಗ್ಗೆ ಮೂರು ಘಂಟೆಗೇ ಈತ ಇಟ್ಟ ಅಲರಾಮಿನ ಬಡಿತ ಮರಣ ಮೃದಂಗವಾಗಿ ಕೇಳುತ್ತಿತ್ತು. ಮೂರು ಗಂಟೆಗೆ ಒಂದು ಸೆಕೆಂಡು ಆಚೆ, ಒಂದು ಸೆಕೆಂಡು ಈಚೆ ಇಲ್ಲ ಎನ್ನುವಂತೆ ಏಳುತ್ತಿದ್ದ ತಾರಾನಾಥ ನೇರವಾಗಿ ನಮ್ಮ ರೂಮಿನ ಸ್ನಾನದ ಸೆಕ್ಷನ್‌ಗೆ ನಡೆಯುತ್ತಿದ್ದ. ಅಲ್ಲಿ ಹಿಂದಿನ ರಾತ್ರಿಯೇ ಭರ್ತಿ ಬಕೆಟ್ ನೀರು ತುಂಬಿಸಿಟ್ಟಿರುತ್ತಿದ್ದ, ಗರಿಗರಿಯಾದ ಟವೆಲ್ಲು, ಸ್ನಾನವಾದ ನಂತರ ಹಾಕಿಕೊಳ್ಳಬೇಕಾದ ಬನಿಯನ್ನು ಲುಂಗಿ, ಅಂಡರ್ವೇರುಗಳನ್ನು ಹಿಂದಿನ ರಾತ್ರಿಯೇ ಜೋಡಿಸಿಟ್ಟಿರುತ್ತಿದ್ದ. ಎಚ್ಚರವಾದ ಕೂಡಲೇ ರೋಬೊಟ್‌ನ ಹಾಗೆ ಸ್ನಾನದ ಸೆಕ್ಷನ್‌ಗೆ ಹೋಗಿ ಸ್ನಾನ ಆರಂಭಿಸಿಬಿಡುತ್ತಿದ್ದ. ನಿಖರವಾಗಿ ಎರಡು ವರೆ ಚೊಂಬು ನೀರು ಮೈ ಮೇಲೆ ಬಿದ್ದ ಕೂಡಲೆ ಸ್ವಲ್ಪ ಕಾಲ ಮೌನ. ಆಗ ಆತನ ಮೈಗೆ ಸೋಪು ತಿಕ್ಕಿಕೊಳ್ಳುತ್ತಿದ್ದ. ಸರಿಯಾಗಿ ಎರಡು ನಿಮಿಷದ ನಂತರ ಮತ್ತೆ ನಾಲ್ಕು ಚೊಂಬು ನೀರು ಮೈ ಮೇಲೆ ಸುರಿದ ಸದ್ದು. ಮತ್ತೆ ಮೌನ. ಆಗ ಮತ್ತೊಮ್ಮೆ ಆತ ಮೈಗೆ ಸೋಪು ಹಚ್ಚುತ್ತಿದ್ದಾನೆ ಎಂದು ತಿಳಿಯಬೇಕು. ಇದಾದ ನಂತರ ಆರು ಚೊಂಬು ನೀರು. ಇಷ್ಟಾಗುತ್ತಿದ್ದಂತೆಯೇ ಹದಿನೈದು ನಿಮಿಷವಾಗುತ್ತಿತ್ತು. ಆತ ಹಿಂದಿನ ದಿನ ತೊಟ್ಟುಕೊಂಡಿದ್ದ ಬನೀನು, ಪಂಚೆಯನ್ನು ಅದೇ ಬಕೆಟ್ಟಿನಲ್ಲಿ ನೆನೆ ಹಾಕಿ ಮೊದಲೇ ಜೋಡಿಸಿಟ್ಟುಕೊಂಡಿದ್ದ ಬನೀನು, ಪಂಚೆ ತೊಟ್ಟುಕೊಂಡು ಹೊರಬರುತ್ತಿದ್ದ.

ಸ್ನಾನ ಮುಗಿಸಿದ ನಂತರ ಹಿಂದಿನ ರಾತ್ರಿಯೇ ತುಂಬಿಟ್ಟುಕೊಂಡ ಬಿಸ್ಲೇರಿ ಬಾಟಲಿಯಲ್ಲಿ ಕಾಲು ಭಾಗದಷ್ಟು ನೀರನ್ನು ಕುಡಿದು ರೂಮಿನ ಒಂದು ಮೂಲೆಯಲ್ಲಿದ್ದ ದೇವರ ಫೋಟೊ ಮುಂದೆ ಕುಳಿತುಕೊಳ್ಳುತ್ತಿದ್ದ. ಆಮೇಲಿ ಒಂದು ತಾಸು ಅಖಂಡವಾದ ಪೂಜೆ. ಅವನ ಭಕ್ತಿ, ಭಾವಕ್ಕಿಂತಲೂ ದೇವರ ಮೂಲೆಯನ್ನು ಒಪ್ಪವಾಗಿಸುತ್ತಿದ್ದ ರೀತಿ, ಊದಿನಬತ್ತಿ ಹಚ್ಚಿಡುವ ಶೈಲಿ, ಒಂದು ಹನಿ ಎಣ್ಣೆ ನೆಲಕ್ಕೆ ಬೀಳದ ಹಾಗೆ ಹಚ್ಚಿಡುತ್ತಿದ್ದ ದೀಪ, ಹಿಂದಿನ ರಾತ್ರಿ ಮಲಗುವ ಮುನ್ನವೇ ಪಕ್ಕದ ಮನೆಯ ಗಿಡದಿಂದ ಕಿತ್ತು ತಂಡಿಟ್ಟುಕೊಂಡ ದಾಸವಾಳದ ಅರೆಬಿರಿದ ಮೊಗ್ಗು – ಇವನ್ನೆಲ್ಲಾ ನೋಡಿಯೇ ದೇವರು ಪ್ರತ್ಯಕ್ಷವಾಗಿಬಿಡಬೇಕು! ಒಂದು ತಾಸಿನ ಪೂಜೆಯೆಂದರೆ ಕರೆಕ್ಟಾಗಿ ಒಂದೇ ತಾಸು. ಅನಂತರ ಇನ್ನೊಂದು ಐದು ನಿಮಿಷ ಇರಯ್ಯಾ ಅಂತ ಸಾಕ್ಷಾತ್ ಆ ಆಂಜನೇಯನೇ ಹೇಳಿದರೂ ಈತ ನಿಲ್ಲುವುದಿಲ್ಲ. ನೇರವಾಗಿ ಬಚ್ಚಲಿಗೆ ಹೋಗಿ ನೆನೆಸಿಟ್ಟಿದ್ದ ಬಟ್ಟೆ ಒಗೆದು ರೂಮಿನ ಹೊರಗೆ ಒಣಗಲು ಹರವಿ ಚಪ್ಪಲಿ ಮೆಟ್ಟಿ ಹೊರಗೆ ವಾಕಿಂಗ್ ಹೊರಟು ಬಿಡುತ್ತಿದ್ದ. ರೂಮಿನ ಬಾಗಿಲ ಬಳಿ ಆತ ಚಪ್ಪಲಿಬಿಡುವ ಸದ್ದು ಕೇಳಿತೆಂದರೆ ಸಮಯ ಐದು ಗಂಟೆಯಾಯಿತೆಂದೇ ಅರ್ಥ!

ವಾಕಿನಿಂದ ಹಿಂದಿರುಗಿ ಬರುವಾಗ ಪಕ್ಕದ ಮನೆಯ ಎದುರು ಬಿದ್ದಿರುತ್ತಿದ್ದ ದಿನಪತ್ರಿಕೆಯನ್ನು ಅನಾಮತ್ತಾಗಿ ಎತ್ತಿಕೊಂಡು ಬಂದಿರುತ್ತಿದ್ದ. ಸರಿಯಾಗಿ ನಲವತ್ತೈದು ನಿಮಿಷ ಪೇಪರ್ ಓದಿ ಅದನ್ನು ಮತ್ತೆ ಅದರ ಸ್ವಸ್ಥಾನದಲ್ಲಿಯೇ ಎಸೆದು ಬಂದು ಈತ ಕೂರುವುದಕ್ಕೆ ಸರಿಯಾಗಿ ಪಕ್ಕದ ಮನೆಯವರು ಬಾಗಿಲು ತೆರೆಯುತ್ತಿದ್ದರು.

ಇದದ್ದು ಒಂದೇ ಕೋಣೆಯಾದರೂ ಅದರಲ್ಲಿ ನಾಲ್ಕು ಕಂಪಾರ್ಟ್ ಮೆಂಟುಗಳನ್ನಾಗಿ ಮಾಡಿಕೊಂಡು ನಾವು ನಾಲ್ಕು ಮಂದಿ ನಮ್ಮ ಸಾಮಾನು ಸರಂಜಾಮುಗಳನ್ನು ಜೋಡಿಸಿಟ್ಟುಕೊಳ್ಳುತ್ತಿದ್ದೆವು. ನಮ್ಮ ಶಿಸ್ತೋ, ಆ ದೇವರಿಗೇ ಪ್ರೀತಿ. ಲಾಠಿಚಾರ್ಜ್ ಆದಾಗ ಚದುರಿದ ಜನರ ಗುಂಪಿನಂತೆ ನಮ್ಮ ಚೀಲಗಳು, ಅಂಗಿ, ಬನಿಯನ್ನು, ಪ್ಯಾಂಟು, ಪುಸ್ತಕಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತಿದ್ದವು. ಆದರೆ ಆ ಒಂದು ಮೂಲೆ ಮಾತ್ರ ನಿಗಿನಿಗಿ ಹೊಳೆಯುವಷ್ಟು ಚೊಕ್ಕಟವಾಗಿರುತ್ತಿತ್ತು. ಅದು ತಾರಾನಾಥನದು ಅಂತ ಪ್ರತ್ಯೇಕವಾಗಿ ಹೇಳಬೇಕೆ? ಆರುಗಂಟೆಗೆ ತನ್ನ ಸ್ಥಳವನ್ನು ಸ್ವಚ್ಛ ಮಾಡಲು ಕೂರುತ್ತಿದ್ದ ತಾರಾನಾಥ ಏಕಾಗ್ರ ಚಿತ್ತನಾಗಿ, ತಪಸ್ಸು ಮಾಡುವ ಯೋಗಿಯ ಹಾಗೆ ಸುಮಾರು ಒಂದು ತಾಸು ಅದರಲ್ಲೇ ತಲ್ಲೀನನಾಗುತ್ತಿದ್ದ. ಹಿಂದಿನ ದಿನವಷ್ಟೇ ಜೋಡಿಸಿಟ್ಟ ಬಟ್ಟೆ, ಪುಸ್ತಕ, ಸೂಟಕೇಸುಗಳನ್ನು ಮತ್ತೆ ಜರುಗಿಸಿ ಧೂಳು ಒರೆಸಿ, ನೀಟಾಗಿ ಜೋಡಿಸಿಡುತ್ತಿದ್ದ. ಆತ ಆ ದೈನಂದಿನ ಕ್ರಿಯೆ ಮುಗಿಸಿ ಮುಖ ಕೈಕಾಲು ತೊಳೆದು ನಮ್ಮನ್ನು ನಿದ್ರಾಲೋಕದಲ್ಲಿ ಮುಳುಗಿ ತೇಲಿ ಓಲಾಡುತ್ತಿದ್ದ ನಾವು ಮೂರು ಮಂದಿಯನ್ನು ಎಬ್ಬಿಸಲು ಆರಂಭಿಸುತ್ತಿದ್ದ. ಆತ ನಮ್ಮನ್ನು ಏಳಿಸಲು ಬಳಸುತ್ತಿದ್ದ ವಿಧಾನವೂ ಬಲೇ ಮಜವೆನಿಸುವಂಥದ್ದು. ಮೂರ್ನಾಲ್ಕು ಸಲ ‘ಎದ್ದೇಳ್ರೋ ಬೆಳಕಾಯ್ತು…’ ಅನ್ನುತ್ತಿದ್ದ ಸಮಯ ಇನ್ನೂ ಏಳೇ ಗಂಟೆ ಆಗಿದ್ದರೂ ‘ಎಂಟುಗಂಟೆಯಾಯ್ತು, ಒಂಭತ್ತು ಗಂಟೆಯಾಯ್ತು’ ಅಂತ ಹೆದರಿಸುತ್ತಿದ್ದ ಮೊದ ಮೊದಲು ಆತನ ಈ ತಂತ್ರಕ್ಕೆ ಬಲಿಬಿದ್ದು ನಾವು ಎದ್ದು ಬಿದ್ದು ಹೊರಡಲು ಸಿದ್ಧರಾಗುತ್ತಿದ್ದೆವು. ನಂತರದ ದಿನಗಳಲ್ಲಿ ಆತನ ಉಪಾಯ ತಿಳಿದು ಯಾವ ಭಯವೂ ಇಲ್ಲದೆ ಮಲಗಿರುತ್ತಿದ್ದೆವು. ಆಗ ಆತ ದಬದಬನೆ ಸದ್ದು ಮಾಡುತ್ತಾ ನಮ್ಮ ಕಿವಿಗಳಿಗೆ ಮರಣ ಮೃದಂಗದ ದನಿ ಕೇಳಿಸುವಂತೆ ಸದ್ದು ಮಾಡುತ್ತಾ ಅತ್ತಿಂದಿತ್ತ ಓಡಾಡುತ್ತಿದ್ದ. ಧಡಾರನೆ ಬಾಗಿಲು ಕಿಟಕಿ ಘರ್ಷಿಸಿ ‘ಕುಂಭಕರ್ಣ’ರನ್ನು ಏಳಿಸಲು ಪ್ರಯತ್ನಿಸುತ್ತಿದ್ದ. ಇದೆಲ್ಲಾ ಫಲ ಕೊಡದಿದ್ದರೆ ಕಟ್ಟ ಕಡೆಯ ಅಸ್ತ್ರವೆಂಬಂತೆ ತನ್ನ ‘ಕೋಕಿಲ’ ಕಂಠದಿಂದ ಹಾಡು ಗುನುಗಲು ಶುರುಮಾಡಿಬಿಡುತ್ತಿದ್ದ! ಆತ ಸಂಗೀತ ಕಛೇರಿಯ ಅಬ್ಬರ, ಬರ್ಬರತೆಗೆ ಮಣಿದು ನಾವು ಏಳದಿದ್ದರೆ ನಮ್ಮ ಕಿವಿಗಳಿಂದ ರಕ್ತ ಹರಿಯುತ್ತಿದ್ದದ್ದು ಗ್ಯಾರಂಟಿ.

ನಾವು ಮೂರೂ ಮಂದಿ ಒಟ್ಟಿಗೇ ಎದ್ದು ಹಲ್ಲುಜ್ಜಲು, ನಿತ್ಯ ಕರ್ಮ ತೀರಿಸಲು ಒಬ್ಬರಿಗೊಬ್ಬರು ಸ್ಪರ್ಧೆಯೊಡ್ಡುತ್ತ ಭೀಕರ ಕಾಳಗದಲ್ಲಿ ಮುಳುಗಿರುವಾಗ ತಾರಾನಾಥ ತನ್ನ ಸೂಟ್ ಕೇಸಿನಲ್ಲಿ ಗರಿ ಮುರಿಯದ ಹಾಗೆ ಮಡಚಿಟ್ಟ ಬಟ್ಟೆಯನ್ನು ಕೇರ್ ಫುಲ್ಲಾಗಿ ಹೊರತೆಗೆದು ಡ್ರೆಸ್ಸಿಂಗ್ ಶುರುಮಾಡಿಕೊಳ್ಳುತ್ತಿದ್ದ. ಆಹಾ… ಅವನ ಡ್ರೆಸ್ಸಿಂಗ್ ಸಂಪ್ರದಾಯವನ್ನು ನೋಡಲು ಎರಡು ಕಣ್ಣುಗಳೂ ಸಾಲದಾಗಿದ್ದವು. ಮಾರ್ನಿಂಗ್ ಶೋ ಸಿನೆಮಾಗೆಂದು ಮೇಕಪ್ ಶುರುಮಾಡುವ ಹೆಣ್ಣು ಮಕ್ಕಳು ಸೆಕೆಂಡ್ ಶೋ ಹೊತ್ತಿಗೆ ರೆಡಿಯಾಗುವಷ್ಟಲ್ಲದಿದ್ದರೂ ಅವರಿಗಿಂತ ಕಡಿಮೆಯಿಲ್ಲ ಎನ್ನುವಂತೆ ಆತ ರೆಡಿಯಾಗುತ್ತಿದ್ದ. ಸ್ನಾನ ಮಾಡಿ ಇನ್ನೂ ಮೈಯ ಮೇಲಿನ ತೇವ ಆರಿರದಿದ್ದರೂ ತಾರಾನಾಥ ಡ್ರೆಸ್ ಮಾಡಿಕೊಳ್ಳುವ ಮೊದಲು ಎರಡೆರಡು ಬಾರಿ ಸೋಪ್ ಹಾಕಿ ಮುಖ ತೊಳೆಯುತ್ತಿದ್ದ. ನಾವೆಲ್ಲ ಗುಬ್ಬಿಯ ಹಿಕ್ಕೆ ಅಂತ ಛೇಡಿಸುತ್ತಿದ್ದ ‘ಫೇರ್ ಅಂಡ್ ಲವ್ಲಿ’ಯನ್ನು ಒಂದು ಕೋಟ್ ಬಳಿದುಕೊಳ್ಳುತ್ತಿದ್ದ. ಅದರ ಮೇಲೆ ಪೌಡರ್. ಬಗಲುಗಳಿಗೆ ಸೂಟ್ ಕೇಸಿನಲ್ಲಿ ಬಚ್ಚಿಟ್ಟುಕೊಂಡಿರುತ್ತಿದ್ದ ವಿದೇಶಿ ಪರ್ ಫ್ಯೂಮ್. ಇದೆಷ್ಟು ನಡೆಯುವಷ್ಟರಲ್ಲಿ ನಮ್ಮ ನಿತ್ಯ ಕರ್ಮಗಳೆಲ್ಲಾ ಮುಗಿದು ಆಫೀಸಿಗೆ ಹೊರಡಲು ತಯಾರಾಗಿರುತ್ತಿದ್ದೆವು!

ಬಟ್ಟೆ-ಬರೆ, ತಿನ್ನುವ ಪದಾರ್ಥ, ಜೀವನ ಪದ್ಧತಿಗಳಲ್ಲಿ ತಾರಾನಾಥ ಪಾಲಿಸುತ್ತಿದ್ದ ಟಾಕು ಟೀಕನ್ನು ಲೇವಡಿ ಮಾಡುತ್ತಿದ್ದ ನಾವು ದುಡ್ಡಿನ ವಿಚಾರದಲ್ಲಿನ ಆತನ ಲೆಕ್ಕ ತಪ್ಪದ ವಿವೇಕ, ಮಾತುಗಾರಿಕೆಯಲ್ಲಿನ ತೂಕ ಹಾಗೂ ಸಮಯ ಪಾಲನೆಯನ್ನು ಮಾತ್ರ ಪರೋಕ್ಷವಾಗಿ ಗೌರವಿಸುತ್ತಿದ್ದೆವು. ಶೀತವಾದಾಗ ಕಟ್ಟಿಕೊಂಡ ಮೂಗಿನಿಂದ ಸಿಂಬಳವನ್ನು ಸೀಟಿ ತೆಗೆದು ರೊಪ್ಪನೆ ನೆಲಕ್ಕೆ ಒಗೆಯುವಂತೆ ಹಣವನ್ನು ಖರ್ಚು ಮಾಡುತ್ತಿದ್ದ ನನಗೂ, ಮಾತಿಗೆ ಕುಳಿತರೆ ಎದುರಿಗಿರುವವನ ತೆಲೆ ಹೋಳಾಗಿ ಮೆದುಳು ಈಚೆ ಬಂದರೂ ಮಾತು ನಿಲ್ಲಿಸದ ರಂಗನಿಗೂ, ಸಮಯ ಪಾಲನೆಯಲ್ಲಿ ನಮ್ಮ ರೈಲುಗಳಿಗೇ ಪಾಠ ಹೇಳಿಕೊಡುವಷ್ಟು ಪಂಡಿತನಾದ, ಸಮಯಕ್ಕೆ ಸರಿಯಾಗಿ ಯಾವ ಕೆಲಸವನ್ನೂ ಮಾಡದ, ಹುಟ್ಟುವಾಗಲೇ ಒಂದು ತಿಂಗಳು ಲೇಟಾಗಿ ಹುಟ್ಟಿದ್ದ ಪ್ರಕಾಶನಿಗೂ ತಾರಾನಾಥ ಅನೇಕ ವಿಷಯಗಳಲ್ಲಿ ಆದರ್ಶನಾಗಿದ್ದ. ನಾವೆಲ್ಲರೂ ಹೊರಗೆ ಆತನನ್ನು ರೇಗಿಸಿ ಆಡಿಕೊಳ್ಳುತ್ತಿದ್ದರೂ ಅಂತರಂಗದಲ್ಲಿ ಆತನ ಟೀಕು-ಟಾಕಿನ ಆರಾಧಕರಾಗಿದ್ದೆವು. ಆತನಂತಾಗಬೇಕು ಎಂತ ದಿನಕ್ಕೆ ಹತ್ತಾರು ಬಾರಿಯಾದರೂ ಅಂದುಕೊಳ್ಳುತ್ತಿದ್ದೆವು, ಅದರ ಜೊತೆಗೇ ಆತನ ವಿಪರೀತಗಳನ್ನು ನೆನೆಸಿಕೊಂಡು ದಿನಕ್ಕೆ ಕನಿಷ್ಠ ಪಕ್ಷ ಇಪ್ಪತ್ತು ಬಾರಿಯಾದರೂ ಅಪಹಾಸ್ಯ ಮಾಡುತ್ತಿದ್ದೆವು.

ತಾರಾನಾಥನನ್ನು ಕಂಡು ಅದಾಗಲೇ ಹತ್ತು ವರ್ಷಗಳಾಗಿದ್ದವು. ಅಂದು ಹೆಂಡತಿಯ ಒತ್ತಾಯಕ್ಕೆ ಹದಿನೈದು ದಿನಗಳ ಗಡ್ಡಕ್ಕೆ ಮೋಕ್ಷ ಕಾಣಿಸಲು ಸಲೂನ್‌ಗೆ ಹೋಗಿ ಹಿಂದಿರುಗುತ್ತಿದ್ದೆ. ಅಂದು ಅಮಾವಾಸ್ಯೆ ಇದ್ದದ್ದರಿಂದ ಬೆಳಗಾಗಿಯೇ ಮಗ ಸ್ಕೂಟರನ್ನು ತೊಳೆದು ಲಕ-ಲಕ ಹೊಳೆಯುವಂತೆ ಮಾಡಿದ್ದ. ನನ್ನಾಕೆಯ ಕೈಗಳ ಕೈಶಲ್ಯಕ್ಕೆ ಸಾಕ್ಷಿಯೆಂಬಂತೆ ನನ್ನ ಬಟ್ಟೆಗಳು ಶುಭ್ರವಾಗಿದ್ದವು. ಸಲೂನಿನಿಂದ ಟಿಪ್ ಟಾಪ್ ಆಗಿ ಹೊರಬರುವಾಗ ಸಿಗ್ನಲ್ ಬಳಿ ಮಣ್ಣು ಮೆತ್ತಿಕೊಂಡು ಗುರುತು ಸಿಗದ ಹಾಗೆ ಬಣ್ಣಗೆಟ್ಟಿದ್ದ ಸ್ಕೂಟರಿನಲ್ಲಿ ತನ್ನ ಮಗನ ಮೂಗಿನಿಂದ ಇಳಿಯುತ್ತಿದ್ದ ಸಿಂಬಳವನ್ನು ತನ್ನ ಶರ್ಟಿನ ಅಂಚಿನಿಂದ ಒರೆಸುತ್ತಿದ್ದ ವ್ಯಕ್ತಿ ಕಾಣಿಸಿದ. ಆತನನ್ನು ಎಲ್ಲೋ ಕಂಡಂತೆ ನನಗೆ ಭಾಸವಾಗುತ್ತಿತ್ತು. ಆದರೆ ಆತನ ಕೆದರಿದ ಕೂದಲು, ಮಾಸಲು ಬಣ್ಣದ ಬಟ್ಟೆ, ಸುಮಾರು ತಿಂಗಳ ವಯಸ್ಸಿನ ಗಡ್ಡದಿಂದಾಗಿ ಆತ ಯಾರೆಂಬುದು ಸ್ಪಷ್ಟವಾಗಲಿಲ್ಲ. ಕೊಂಚ ಹತ್ತಿರ ಹೋಗಿ ದಿಟ್ಟಿಸಿದಾಗ ನನ್ನ ಕಣ್ಣುಗಳನ್ನು ನಾನೇ ನಂಬಲಾಗಲಿಲ್ಲ! ಆತ ನಮ್ಮ ತಾರಾನಾಥ! ಬದುಕೆಂಬ ಶಿಕ್ಷಕ ತೋರಿಸುವ ದಾರಿಗಳನ್ನು ಕ್ರಮಿಸದೆ ಇರುವ ಧೈರ್ಯ ಯಾರು ತೋರಿಯಾರು?


Technorati : ,


Blog Stats

  • 68,990 hits
ಫೆಬ್ರವರಿ 2008
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 123
45678910
11121314151617
18192021222324
2526272829  

Top Clicks

  • ಯಾವುದೂ ಇಲ್ಲ