Archive for ಏಪ್ರಿಲ್ 2008
ಇದು ಈ ಸಂಚಿಕೆಯ ಸಂಪಾದಕೀಯ
ಕಾಫಿ ಡೇಗಳಲ್ಲಿ, ಹೊಟೇಲುಗಳಲ್ಲಿ, ಸಿನೆಮಾ ಥಿಯೇಟರುಗಳಲ್ಲಿ, ಹಾಸ್ಟೆಲ್ಲಿನ ಕಿಕ್ಕಿರಿದ ರೂಮುಗಳಲ್ಲಿ, ಮೊಬೈಲುಗಳಲ್ಲಿ, ಗಂಭೀರ ಚರ್ಚೆಗಳಲ್ಲಿ, ಬೀದಿ ದೀಪದ ಅಡಿಯ ಬೆಳಕಿನಲ್ಲಿ ಗುಂಪು ಕಟ್ಟಿದಾಗ ನಾವು ದೇಶದ ಬಗ್ಗೆ ಅಪಾರ ಕಾಳಜಿ ಉಳ್ಳವರ ಹಾಗೆ ಮಾತನಾಡುತ್ತಿರುತ್ತೇವೆ. ‘ಈ ದೇಶದ ಗತಿಯೇ ಇಷ್ಟು, ಇಲ್ಲಿದ್ದುಕೊಂಡು ನಾವು ಉದ್ಧಾರವಾಗುವುದಕ್ಕೆ ಸಾಧ್ಯವಾ? ಇಂತಹ ವ್ಯವಸ್ಥೆಯನ್ನು ನೆಚ್ಚಿಕೊಂಡು ನಾವು ದೇಶವನ್ನು ಉದ್ಧಾರ ಮಾಡಲು ಸಾಧ್ಯವಾಗುತ್ತದಾ? ನಮ್ಮ ದೇಶದ ದೊಡ್ಡ ಸಮಸ್ಯೆಯೆಂದರೆ ರಾಜಕೀಯ. ಈ ಪೊಲಿಟೀಶಿಯನ್ನುಗಳನ್ನು ಲೈನಾಗಿ ನಿಲ್ಲಿಸಿ ಶೂಟ್ ಮಾಡಬೇಕು. ಆಗಲೇ ನಮ್ಮ ದೇಶ ಸುಧಾರಿಸೋದು. ಇಲ್ಲಾಂದ್ರೆ ಖಂಡಿತಾ ಸಾಧ್ಯವಿಲ್ಲ ಬಾಸ್’ ಎಂದು ಭಾಷಣ ಕಚ್ಚುತ್ತಿರುತ್ತೇವೆ. ಗದ್ದದ ಮೇಲೆ ಬೆರಳಿಟ್ಟುಕೊಂಡು ಆಳವಾಗಿ ಯೋಚಿಸುವವರಂತೆ ಫೋಸುಕೊಡುತ್ತಾ ಆಗಾಗ ನಿಟ್ಟುಸಿರಿಡುತ್ತಿರುತ್ತೇವೆ.
ನಿಜಕ್ಕೂ ನಮ್ಮ ದೇಶದ ಎಲ್ಲಾ ಸಮಸ್ಯೆಗಳಿಗೂ ನಾವು ದೂಷಿಸುವಂತೆ ಕೇವಲ ರಾಜಕೀಯವೇ ಕಾರಣವಾ? ರಾಜಕಾರಣಿಗಳ ಮೇಲೆ ಅಷ್ಟು ಭಯಾನಕವಾದ ಕೋಪವನ್ನು ವ್ಯಕ್ತಪಡಿಸುವ ನಮಗೆ ಒಮ್ಮೆಗೇ ಎಲ್ಲಾ ರಾಜಕಾರಣಿಗಳನ್ನು ನಿರ್ನಾಮ ಮಾಡಿಬಿಟ್ಟರೆ ದೇಶವನ್ನು ನಡೆಸಲು ಸಾಧ್ಯವಾ? ಈಗಿರುವ ರಾಜಕಾರಣಿಗಳನ್ನೆಲ್ಲಾ ಬದಿಗೆ ಸರಿಸಿಬಿಟ್ಟರೆ ಅವರ ಸ್ಥಾನವನ್ನು ತುಂಬಲು ನಾವು ಸಿದ್ಧರಿದ್ದೇವಾ? ಒಂದು ಮಾತು ನೆನಪಿರಬೇಕು, ಹಿಂದೆಂದೋ ಹೀಗೇ ನಮ್ಮ ನಡುವೆಯೇ, ನಮ್ಮಂತೆಯೇ ಇದ್ದವರೇ ಅಧಿಕಾರಕ್ಕೇರಿದಾಗ ರಾಜಕಾರಣಿಗಳು ಎನ್ನಿಸಿಕೊಳ್ಳುವುದು. ಅವರು ನಮ್ಮ ನಡುವಿನಿಂದಲೇ ಅಧಿಕಾರದ ಶಕ್ತಿ ಕೇಂದ್ರದೆಡೆಗೆ ನಡೆದವರು. ಅವರು ನಮ್ಮ ಸಮಾಜದ ಪ್ರತಿನಿಧಿಗಳು. ಅವರನ್ನೇ ನಿರ್ನಾಮ ಮಾಡಬೇಕು ಎಂದರೆ ನಮ್ಮಿಡೀ ಸಮಾಜ ನಿರ್ನಾಮಕ್ಕೆ ಅರ್ಹವಾದದ್ದು ಎಂಬ ತೀರ್ಮಾನಕ್ಕೆ ಬಂದಂತಾಗುವುದಿಲ್ಲವೇ?
ನಿಜ, ರಾಜಕೀಯವೆಂಬುದು ಈಗ ಹಣ ಮಾಡುವ ದಂಧೆಯಾಗಿದೆ. ಹಿಂದೆಲ್ಲ ತಮ್ಮ ತತ್ವಾದರ್ಶಗಳ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಪಕ್ಷಗಳು ಸಿದ್ಧಾಂತದ ಆಧಾರದ ಮೇಲೆ ಓಟು ಕೇಳಲು ಜನರ ಬಳಿಗೆ ಹೋಗುತ್ತಿದ್ದರು. ಜನರು ಪಕ್ಷಗಳ ತತ್ವಾದರ್ಶಗಳನ್ನು ನಂಬಿಕೊಂಡು ಓಟುಕೊಡುತ್ತಿದ್ದರು. ರಾಜಕೀಯ ನಾಯಕರುಗಳು ನಿಜವಾದ ಜನಪ್ರತಿನಿಧಿಗಳಾಗಿರುತ್ತಿದ್ದರು. ಚಳುವಳಿ, ಸಂಘಟನೆಗಳಲ್ಲಿ ಬೆಳೆದವರು ನಾಯಕರಾಗುತ್ತಿದ್ದರು. ಆದರೆ ಇಂದು ರಾಜಕಾರಣವೆಂಬುದೂ ಕುದುರೆ ರೇಸಿನಂತಾಗಿದೆ. ಜನಸೇವೆ ಮಾಡುವುದಕ್ಕಾಗಿ ರಾಜಕೀಯಕ್ಕೆ ಇಳಿಯುತ್ತಿರುವುದಾಗಿ ಘೋಷಿಸುತ್ತಿರುವ ನಮ್ಮ ರಾಜಕಾರಣಿಗಳು ಹೇಳುವುದನ್ನೇ ನಂಬುವುದಾಗಿದ್ದರೆ, ಈ ‘ಜನಸೇವೆ’ಗಾಗಿ ಇರುವ ಪೈಪೋಟಿಯನ್ನು ಗಮನಿಸಿದ್ದೇ ಆದಲ್ಲಿ ನಮ್ಮ ದೇಶ ಎಂದೋ ಸುಭೀಕ್ಷವಾಗಿರಬೇಕಿತ್ತು. ನಮ್ಮ ರಾಜಕಾರಣಿಗಳ ಪ್ರಕಾರ ಈ ‘ಜನಸೇವೆ’ಯ ಜನ ಯಾರೋ! ತಮಗೆ ಓಟುಕೊಟ್ಟ ಜನರೋ ಅಥವಾ ತಮ್ಮ ಮನೆ ಮಂದಿಯೋ?
ಇಂದು ರಾಜಕಾರಣಿಯಾದವನೊಬ್ಬ ಭ್ರಷ್ಠನಾಗಿದ್ದಾನೆ ಎಂದರೆ ನಮಗ್ಯಾರಿಗೂ ಗಾಬರಿಯಾಗುವುದಿಲ್ಲ. ಆತನನ್ನು ವಿರೋಧಿಸುವ ಕೆಚ್ಚು ಹುಟ್ಟುವುದಿಲ್ಲ. ಅದೇ ಒಂದು ವೇಳೆ ಒಬ್ಬ ರಾಜಕಾರಣಿ ಶುದ್ಧ ಹಸ್ತದವನಾಗಿದ್ದಾನೆ ಎಂದರೆ ನಮಗೆ ಆಶ್ಚರ್ಯವಾಗುತ್ತದೆ. ನಾವು ಆತನನ್ನು ಸಂಶಯಿಸುತ್ತೇವೆ. ಆತನನ್ನು ಭ್ರಷ್ಟನನ್ನಾಗಿಸಲು ಪ್ರಯತ್ನಿಸುತ್ತೇವೆ. ಇವನಿಗೆ ಪ್ರಾಕ್ಟಿಕಲ್ಲಾಗಿರೋದು ಗೊತ್ತೇ ಇಲ್ಲ ಅಂತ ಚುಡಾಯಿಸುತ್ತೇವೆ. ಕೊನೆಗೆ ಆತನೂ ಭ್ರಷ್ಠಾಚಾರದ ಕೊಚ್ಚೆಯಲ್ಲಿ ಬೀಳುವವರೆಗೂ ನಮಗೆ ನೆಮ್ಮದಿಯಿರುವುದಿಲ್ಲ . ಇದು ಅಸ್ವಾಭಾವಿಕ ಎನ್ನಿಸುವುದಾದರೆ ನಿಮ್ಮ ನಡುವಿನ ಉದಾಹರಣೆಗಳನ್ನೇ ತೆಗೆದುಕೊಳ್ಳಿ, ನಮ್ಮೊಡನೆ ಹರಟೆಗಳಲ್ಲಿ ಪಾಲ್ಗೊಳ್ಳದ, ನಿಮ್ಮ ಹಾಗೆ ಸಣ್ಣ ಪುಟ್ಟ ಕರ್ಮಕಾಂಡಗಳನ್ನು ಮಾಡಿಕೊಳ್ಳದವನನ್ನು ನಾವು ನಮ್ಮ ಹಾಗೆ ಮಾಡಲು ಎಷ್ಟು ಚಡಪಡಿಸುತ್ತೇವೆ ಅಲ್ಲವೇ? ಆದರ್ಶವಾದಿಗಳನ್ನು ನಾವು ಕನಿಕರದಿಂದ ನೋಡುವ ನೈತಿಕ ಅಧಃಪತನವನ್ನು ನಾವು ಕಂಡಿದ್ದೇವೆನ್ನುವುದಾದರೆ ಇದಕ್ಕೆ ರಾಜಕೀಯ ಮಾತ್ರ ಹೇಗೆ ಹೊಣೆಯಾದೀತು?
ರಾಜ್ಯದಲ್ಲಿ ಮತ್ತೊಂದು ಚುನಾವಣೆ ಬಂದಿದೆ. ಪಕ್ಷಗಳ ಮೇಲಾಟ ನಡೆಯುತ್ತಿದ್ದೆ. ಹಣವಿದ್ದವರು, ರಿಯಲ್ ಎಸ್ಟೇಟು ಕುಳಗಳು, ಗಣಿ ಧಣಿಗಳು, ಮದ್ಯದ ದೊರೆಗಳು ಓಟು ಕೇಳಿಕೊಂಡು ಮನೆ ಬಾಗಿಲಿಗೆ ಬಂದಿದ್ದಾರೆ. ಪ್ರಜ್ಞಾವಂತರು, ವಿಚಾರವಂತರು ಎಂದುಕೊಳ್ಳುವ ನಮ್ಮಂತಹ ಯುವಕರು ಬಾಗಿಲು ಗಿಡಿದುಕೊಂಡು ಮನೆಯೊಳಗೆ ಕುಳಿತು ಮಜವಾಗಿ ಸಿನೆಮಾ ನೋಡುತ್ತಿದ್ದೇವೆ. ಅದರಲ್ಲಿ ಕಾಣುವ ರಾಜಕಾರಣಿಗಳನ್ನು ಕೊಲ್ಲಬೇಕು, ಗಲ್ಲಿಗೇರಿಸಬೇಕು ಅಂತ ಮಾತನಾಡುತ್ತೇವೆ. ಬಾಗಿಲು ತೆರೆದು ಹೊರಗೆ ಬಂದು ಒಂದು ಓಟು ಹಾಕಲಾಗದ ನಮಗೆ ದೇಶದ ಬಗ್ಗೆ ಮಾತನಾಡುವ ಹಕ್ಕು ಬರುವುದಾದರೂ ಹೇಗೆ? ರಾಜಕಾರಣಿಗಳ ಕೊರಳ ಪಟ್ಟಿ ಹಿಡಿದು ಪ್ರಶ್ನಿಸುವ ನೈತಿಕತೆ ಬರುವುದಾದರೂ ಎಲ್ಲಿಂದ?
ಹದಿನೆಂಟು ದಾಟಿರುವ ನಮ್ಮಲ್ಲಿ ಬಹುತೇಕರಿಗೆ ಇದೇ ಮೊದಲ ವೋಟಿಂಗ್ ಅವಕಾಶ. ಮತದಾನ ನಡೆಯುವ ದಿನದ ರಜೆಯನ್ನು ಹೇಗೆ ಕಳೆಯುವುದು ಎಂದು ಪ್ಲಾನ್ ಮಾಡುವ ಮುನ್ನ ಯಾರಿಗೆ ಓಟ್ ಹಾಕಬೇಕು ಎಂಬುದನ್ನೂ ಕೊಂಚ ವಿವೇಚಿಸೋಣ. ನಮ್ಮ ಮೊದಲ ಮತವನ್ನು , ಮಗುವನ್ನು ಶಾಲೆಗೆ ಸೇರಿಸುವ ಕಾಳಜಿಯಲ್ಲಿ ಚಲಾಯಿಸೋಣ. If you are not the part of the solution, then you are the part of the problem!
ಹಾಗೆ ಅರ್ಧಕ್ಕೆ ನಿಂತ ಕಥೆಗಳ ಕುರಿತು
Posted ಏಪ್ರಿಲ್ 24, 2008
on:ನಿನ್ನೆಯ ನೆನಪು ನಮ್ಮ ನಾಳೆಗೆ ಬದುಕಿನ ಹಾದಿಗೆ ಬೆಳಕಾಗಲೇ ಬೇಕಂತೇನೂ ಇಲ್ಲ. ಆದರೆ ನೆನಪುಗಳನ್ನು ಮೆಲಕು ಹಾಕುವುದರಲ್ಲಿಯೇ ಎಂಥದ್ದೋ ಒಂದು ಬಗೆಯ ಸಂತೃಪ್ತಿಯಿದೆ. ಸಮಾಧಾನವಿದೆ. ಪುಳಕವಿದೆ. ಕಳೆದ ದಿನಗಳ ನೆನಪಿನ ಹಂಗಿನಲ್ಲಿ ಮೆಲುವಾಗಿ ನರಳುವ ಅಂಕಣ ‘ಬೀಥೆ ಹುಯೆ ದಿನ್…’.
ತಮ್ಮ ಬರವಣಿಗೆಯ ಪ್ರಾರಂಭವನ್ನು ನಯವಾಗಿ ನೇವರಿಸುತ್ತಾ ಅರ್ಧಕ್ಕೆ ನಿಲ್ಲಿಸಿದ ಕಥೆಗಳ ನೆನಪನ್ನು ಮೆಲುಕು ಹಾಕಿದ್ದಾರೆ ‘ಅಂತರ್ಮುಖಿ.’
ಬರವಣಿಗೆಯ ಗೀಳು ನನಗೆ ಹತ್ತನೆಯ ಎಂಟನೆಯ ತರಗತಿಯ ಆಸುಪಾಸಿನಲ್ಲೇ ಹತ್ತಿಕೊಂಡಿತ್ತಾದರೂ ಹತ್ತನೆಯ ತರಗತಿಗೆ ಕಾಲಿಡುವಷ್ಟರಲ್ಲಿ ಅದು ಜ್ವರದಂತೆ ಏರಿತ್ತು. ಮನಸ್ಸಿಗೆ ಬಂದ ವಿಚಾರಗಳನ್ನೆಲ್ಲಾ ಅಕ್ಷರಕ್ಕಿಳಿಸುವ ಚಟ ಹತ್ತಿಕೊಂಡು ಬಿಟ್ಟಿತ್ತು. ಅದೊಂದು ರೀತಿಯಲ್ಲಿ emotional outlet ಆಗಿ ಕೂಡ ಸಹಾಯ ಮಾಡುತ್ತಿತ್ತು. ಮನೆಯಲ್ಲಿ ಚಿಕ್ಕ ಪುಟ್ಟದ್ದಕ್ಕೆ ಸಿಟ್ಟಾದಾಗ ನೇರವಾಗಿ ರೂಮಿಗೆ ಹೋಗಿ ಬಾಗಿಲು ಗಿಡಿದುಕೊಂಡು ನನ್ನ ಸಿಟ್ಟನ್ನೆಲ್ಲಾ ಅಕ್ಷರಕ್ಕಿಳಿಸಿ ಡರಿಯ ಪುಟಗಳನ್ನು ತುಂಬಿಸುತ್ತಿದ್ದೆ. ವಾದ ಮಾಡುವಾಗ, ಅಪ್ಪನಿಗೆ ಎದುರು ಮಾತನಾಡುವಾಗ ನನಗೆ ವಿಪರೀತ ಭಾವೋದ್ವೇಗ ಉಂಟಾಗುತ್ತಿತ್ತು. ಮಾತಿಗೂ ಮುನ್ನ ಅಳು ಬಂದುಬಿಡುತ್ತಿತ್ತು. ಕಣ್ಣಲ್ಲಿ ನೀರು ತುಂಬಿಬಿಡುತ್ತಿತ್ತು. ಮಾತನಾಡಬೇಕು ಅಂದುಕೊಂಡದ್ದು ಗಂಟಲಲ್ಲೇ ಸಿಕ್ಕಿ ಹಾಕಿಕೊಂಡು ಸತ್ತು ಹೋಗಿಬಿಡುತ್ತಿತ್ತು. ಆಗೆಲ್ಲಾ ನನ್ನ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಳ್ಳುವ, ನನ್ನ ಭಾವೋದ್ವೇಗದ ಅಣೆಕಟ್ಟಿಗೆ ಪುಟ್ಟ ಕಿಂಡಿಯಾಗುವ ಪಾತ್ರವನ್ನು ನನ್ನ ಡೈರಿಯ ಪುಟಗಳು ವಹಿಸುತ್ತಿದ್ದವು. ಅಸಲಿಗೆ ನಾನು ಡೈರಿಗಾಗಿ ಪುಸ್ತವೊಂದನ್ನು ಕೊಂಡು ತಂದು ‘ಓಂ’ ಬರೆದಿಟ್ಟುಕೊಂಡು ಮೊದಲ ಎಂಟ್ರಿಯನ್ನು ಮಾಡಿದ್ದೇ ನನ್ನ ಸಿಟ್ಟಿಗೆ ಅಭಿವ್ಯಕ್ತಿಯನ್ನು ಕೊಡಲು.
ಹತ್ತನೆಯ ತರಗತಿಯ ಪಬ್ಲಿಕ್ ಪರೀಕ್ಷೆಯೆಂಬ ವಕ್ರವ್ಯೂಹವನ್ನು ಬೇಧಿಸಿ ಸುಸ್ತಾಗಿ ಕುಳಿತ ಅಭಿಮನ್ಯುವಿನ ಹಾಗೆ ರಜೆಯಲ್ಲಿ ಕಾಲ ಕಳೆಯುತ್ತಿದ್ದೆ. ತಲೆಯನ್ನು ಹೊಕ್ಕಿದ್ದ ಬರವಣಿಗೆಯ ಚಟ ಸುಮ್ಮನಿರಲು ಬಿಡುತ್ತಿರಲಿಲ್ಲ. ಕಂಡ ಕಂಡ ಪತ್ರಿಕೆಗಳನ್ನು ಹೊತ್ತು ತಂದು ಓದುವ ಖಯಾಲಿ ಬೇರೆ ಇತ್ತು. ಹಾಗೆ ಓದುತ್ತಿದ್ದವನಿಗೆ ಅದ್ಯಾವುದೋ ದಿವ್ಯ ಘಳಿಗೆಯಲ್ಲಿ ಇವಕ್ಕೆಲ್ಲಾ ನಾನು ಬರೆದು ಕಳುಹಿಸಿದರೆ ಹೇಗೆ ಎನ್ನಿಸುತ್ತಿತ್ತು. ಹಾಗನ್ನಿಸಲು ನನ್ನ ಬರವಣಿಗೆ ಪತ್ರಿಕೆಗಳಲ್ಲಿ ಬೆಳಕು ಕಾಣಬೇಕು, ನನ್ನ ಕೆಲಸಕ್ಕೆ recognition ಸಿಗಬೇಕು ಎನ್ನುವುದು ಒಂದು ಕಾರಣವಾದರೆ, ಪತ್ರಿಕೆಯಲ್ಲಿ ಲೇಖನಗಳು ಪ್ರಕಟವಾದರೆ ಒಂದಷ್ಟು ಗೌರವ ಧನವನ್ನು ಕಳುಹಿಸುತ್ತಾರೆ ಎಂಬ ದುರಾಸೆ ಇನ್ನೊಂದು ಕಾರಣವಾಗಿತ್ತು! ನಾನೋದುತ್ತಿದ್ದ ಪತ್ರಿಕೆಗಳಲ್ಲಿ ಯಾವ ಯಾವ ಅಂಕಣಗಳಿಗೆ ಲೇಖನಗಳನ್ನು ಬರೆಯಬಹುದು ಎಂದು ಗುರುತು ಮಾಡಿಟ್ಟುಕೊಳ್ಳುತ್ತಿದ್ದೆ. ವಾಚಕರವಾಣಿ, ವೈಯಕ್ತಿಕ ಅನುಭವದ ಪುಟಗಳು, ನಿಮ್ಮ ಪ್ರಶ್ನೆ ಕೇಳಿ ಎಂಬಂತಹ ಕಾಲಮ್ಮುಗಳಿಗೆ ನನ್ನ ಮೊದಲ ಆದ್ಯತೆ. ಪಟ್ಟಾಗಿ ಕುಳಿತು ಒಂದು ವಿಷಯದ ಬಗ್ಗೆ ಅಧ್ಯಯನ ಮಾಡಿ ಬರೆಯುವಷ್ಟು ತಾಳ್ಮೆಯಾಗಲೀ, ಆಸಕ್ತಿಯಾಗಲೀ ನನಗಿರುತ್ತಿರಲಿಲ್ಲ. ಮನಸ್ಸಿಗೆ ತೋಚಿದ ವಿಚಾರವನ್ನು ಆಧರಿಸಿ ಪುಟ್ಟಪುಟ್ಟದಾಗಿ ಒಂದಿಷ್ಟು ಲೇಖನಗಳನ್ನು ಬರೆದಿಟ್ಟುಕೊಳ್ಳುತ್ತಿದ್ದೆ. ಅವುಗಳಲ್ಲಿ ಹೆಚ್ಚಿನವು ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತಹ ಲೇಖನಗಳಾಗಿರುತ್ತಿದ್ದವು. ಆ ಸಮಯದಲ್ಲಿ ನಾನು ಹೆಚ್ಚಾಗಿ ಓದುತ್ತಿದ್ದದ್ದು ಅಂಥದ್ದೇ ಧಾಟಿಯ ಪುಸ್ತಕಗಳನ್ನಾದ್ದರಿಂದ ಬರವಣಿಗೆಗೆ ಅಂಥವೇ ಸರಕುಗಳನ್ನು ಆಯ್ದುಕೊಳ್ಳುತ್ತಿದ್ದೆ. ಹತ್ತು ಲೇಖನ ಬರೆದರೆ ಒಂದನ್ನು ಯಾವುದಾದರೂ ಪತ್ರಿಕೆಯ ವಿಳಾಸಕ್ಕೆ ಕಳುಹಿಸಿಕೊಡುತ್ತಿದ್ದೆ. ನನ್ನ ಲೇಖನ ಪ್ರಕಟಿಸಿದ್ದಾರೋ ಇಲ್ಲವೋ ಎಂದು ಪ್ರತಿ ಸಂಚಿಕೆಯನ್ನು ಖರೀದಿಸಿ ಹುಡುಕುತ್ತಿದ್ದೆ. ಒಂದು ವೇಳೆ ಪ್ರಕಟವಾಗಿದ್ದರೆ ಆ ಪತ್ರಿಕೆಯ ಇನ್ನೊಂದು ಪ್ರತಿಯನ್ನು ಬೇರೆಯ ಅಂಗಡಿಯಿಂದ ಕೊಂಡು ತಂದು ಮನೆಯಲ್ಲಿ ಒಂದು ಕಡೆ ಶೇಖರಿಸಿಡುತ್ತಿದ್ದೆ. ಅಪ್ಪಿತಪ್ಪಿಯೂ ಮನೆಯಲ್ಲಿ ಪ್ರಕಟವಾದ ಲೇಖನಗಳನ್ನು ತೋರಿಸುತ್ತಿರಲಿಲ್ಲ. ನನ್ನ ಸ್ವಭಾವ ಸಹಜವಾದ ಸಂಕೋಚವೇ ಇದಕ್ಕೆ ಕಾರಣವಾಗಿತ್ತು.
ಹೀಗೆ, ಸಣ್ಣ ಪುಟ್ಟ ಲೇಖನಗಳನ್ನು ಬರೆಯುತ್ತಾ, ಜೋಕುಗಳನ್ನು, ವಿಸ್ಮಯಕಾರಿ ವಿಚಾರಿಗಳನ್ನು ಸಂಗ್ರಹಿಸುತ್ತಾ ಎಷ್ಟು ದಿನ ಅಂತ ಕೂರಲಾಗುತ್ತದೆ? ಸಹಜವಾಗಿ ಅದಕ್ಕಿಂತ ಹೆಚ್ಚಿನದಕ್ಕೆ ಕೈ ಹಾಕುವ ಮನಸ್ಸಾಗುತ್ತಿತ್ತು. ಆಗ ಒಂದೆರಡು ಕಥೆಗಳನ್ನೂ ಬರೆದದ್ದುಂಟು. ಮನೆಯಲ್ಲಿ ಆಗಾಗ ನಡೆಯುತ್ತಿದ್ದ ಅಪ್ಪ-ಅಮ್ಮನ ನಡುವಿನ ಕಾಳಗ ಕಂಡು ಮನಸ್ಸಿನಲ್ಲಿ ವಿಪರೀತವಾದ ಹಿಂಸೆಯನ್ನನುಭವಿಸುತ್ತಿದ್ದೆ. ಏನು ಮಾಡಲೂ ಸಾಧ್ಯವಾಗದಂತೆ ಮನಸ್ಸು ಮುದುಡಿ ಬಿಡುತ್ತಿತ್ತು. ನನ್ನ ಅಸಹನೆಯನ್ನು ತೋರ್ಪಡಿಸುವ ಯಾವ ಮಾರ್ಗವೂ ಇಲ್ಲದೆ ನಾನು ಅಸಹಾಯಕನಾಗಿ ಉಗುಳು ನುಂಗುತ್ತಿದ್ದೆ. ಒಂದು ದಿನ ಹಾಗೇ ಯಾವುದೋ ವಿಷಯಕ್ಕೆ ಅಪ್ಪ ರೇಗುತ್ತಿದ್ದರು. ನಾನು ಅದಕ್ಕೆ ಮೂಕ ಸಾಕ್ಷಿಯಾಗಿ ಕೂರಲಾಗದೆ ಮಹಡಿಗೆ ಓಡಿದೆ, ಕೈಯಲ್ಲಿ ಪೇಪರ್ ಪ್ಯಾಡಿತ್ತು. ಜೊತೆಗೆ ಪೆನ್ನು ಇತ್ತು. ಅಲ್ಲೆ ಕುಳಿತು ಒಂದು ಕಥೆಯನ್ನು ಬರೆದೆ. ಆ ಕಥೆ ಒಬ್ಬ ಹುಡುಗನದ್ದು. ಅವನು ತುಂಬಾ ಸೂಕ್ಷ್ಮ ಮನಸ್ಸಿನವನು. ಮನೆಯಲ್ಲಿ ತನ್ನೆದುರು ಅಪ್ಪ ಅಮ್ಮ ಜಗಳವಾಡುವುದನ್ನು ಕಂಡು ಆತನಿಗೆ ವಿಪರೀತ ವೇದನೆಯಾಗುತ್ತಿತ್ತು. ಒಮ್ಮೆ ಈ ವೇದನೆಯ ಉತ್ಕಟತೆಯನ್ನು ಸಹಿಸಲಾಗದೆ ಆತ ಮನೆ ಬಿಟ್ಟು ಹೋಗಿಬಿಡುತ್ತಾನೆ. ಅಪ್ಪ-ಅಮ್ಮ ಎಷ್ಟು ಹುಡುಕಿದರೂ ಆತ ಸಿಕ್ಕುವುದಿಲ್ಲ. ಎರಡು ದಿನಗಳಾದ ನಂತರ ಆ ಮನೆಯ ಬಾಗಿಲು ತೆರೆಯುತ್ತದೆ, ಮಗ ಹಿಂದಿರುಗಿರುತ್ತಾನೆ, ಹೆಣವಾಗಿ. ಆ ಕಥೆಯಲ್ಲಿದ್ದದ್ದು ನಾನೇ, ನನ್ನ ಆವೇಶವೇ ಆ ಹುಡುಗನ ಪಾತ್ರವಾಗಿತ್ತು. ಆದರೆ ಆ ಕಥೆಯನ್ನು ಯಾವ ಪತ್ರಿಕೆಗೂ ಕಳುಹಿಸುವ ಮನಸ್ಸಾಗಲಿಲ್ಲ. ಯಾವುದೋ ಆವೇಶದ ಸಮಯದಲ್ಲಿ ಸೃಷ್ಟಿಯಾದ ಅದನ್ನು ಮತ್ತ್ಯಾವಗಲೋ ಶಾಂತಚಿತ್ತನಾಗಿರುವಾಗ ಓದಿದಾಗ ನನಗೇ ರುಚಿಸಲಿಲ್ಲ. ಅದನ್ನು ಹಾಗೇ ನನ್ನ ಲಾಕರ್‌ನೊಳಕ್ಕೆ ಹಾಕಿಟ್ಟೆ.
ಬದುಕಿನ ಬಗೆಗೆ ನಿರ್ದಿಷ್ಟವಾದ ಯಾವ ದೃಷ್ಟಿಕೋನವೂ ಆಗ ಇರಲಿಲ್ಲ. ನನ್ನ ಅದೃಷ್ಟಕ್ಕೆ ನಾನಾವ ಸಿದ್ಧಾಂತಗಳ ಪ್ರಭಾವಕ್ಕೂ ಬಿದ್ದಿರಲಿಲ್ಲ. ಹಾಗಾಗಿ ನನ್ನ ಕಥೆಗಳಿಗೆ ನನ್ನ ಸುತ್ತಮುತ್ತಲು ಕಂಡ,ಅನುಭವಕ್ಕೆ ದಕ್ಕಿದ ಸಂಗತಿಗಳೇ ವಸ್ತುವಾಗುತ್ತಿದ್ದವು. ಹೊಟೇಲಿನೆದುರು ಸಾಫ್ಟಿ ಐಸ್ ಕ್ರೀಮ್ ಗಿಟ್ಟಿಸಿಕೊಂಡು ನೆಕ್ಕುತ್ತಿರುವಾಗ ಕಂಕುಳಲ್ಲಿ ಚಿಕ್ಕ ಮಗುವನ್ನೆತ್ತಿಕೊಂಡು ಸೋರುತ್ತಿದ್ದ ತನ್ನ ಮೂಗನ್ನು ತನ್ನ ಮಲಿನವಾದ ಬಟ್ಟೆಯಿಂದ ಒರೆಸಿಕೊಂಡು ನನ್ನೆದುರು ಬಂದು ನಿಂತು ಕೈ ಚಾಚಿ ಒಂದು ಬಗೆಯ ಯಾಂತ್ರಿಕ ದೀನತೆಯಿಂದ ಬೇಡುತ್ತಾ ನಿಂತ ಸುಮಾರು ನನ್ನದೇ ವಯಸ್ಸಿನ ಹುಡುಗಿಯನ್ನು ಕಂಡು ಆ ಕ್ಷಣ ಹೇಸಿಗೆಯಾದಂತಾದರೂ, ಆ ಕ್ಷಣಕ್ಕೆ ಆಕೆಯನ್ನು ಗದರಿ ಅಟ್ಟಿದರೂ ಆ ದಿನವಿಡೀ ಆ ಘಟನೆ ಮನಸ್ಸನ್ನು ಕೊರೆಯುತ್ತಿತ್ತು. ಸರಿ, ಮತ್ತೊಂದು ಕಥೆಗೆ ಕೈ ಹಚ್ಚಿದೆ. ಒಬ್ಬ ಹುಡುಗ, ಮನೆಯಲ್ಲಿ ಶ್ರೀಮಂತಿಕೆ ಕಾಲು ಮುರಿದು ಬಿದ್ದಿದೆ. ಅಪ್ಪನ ಜೊತೆಗೆ ಹಠ ಮಾಡುತ್ತಿದ್ದಾನೆ. ತಾನು ಕೇಳಿದ್ದ ಏರೋಪ್ಲೇನ್ ಅಪ್ಪ ತಂದು ಕೊಟ್ಟಿಲ್ಲ ಅನ್ನೋದು ಅವನ ತಕರಾರು. ಮುನಿಸಿಕೊಂಡು ಊಟ ಮಾಡಲ್ಲ ಅಂತ ಕೂತಿದ್ದಾನೆ. ಸಮಾಧಾನ ಮಾಡಲು ಬಂದ ಅಮ್ಮನಿಗೆ ಬಯ್ದು ಮನೆಯ ಬಾಲ್ಕನಿಗೆ ಬಂದು ಬೀದಿ ನೋಡುತ್ತಾ ಕುಳಿತಿದ್ದಾನೆ. ಅತ್ತ ಬೀದಿಯಲ್ಲಿ ಒಬ್ಬ ಹುಡುಗ ಇವನದೇ ವಯಸ್ಸಿನವನು ಪೇಪರ್ ಆಯುತ್ತಿದ್ದಾನೆ. ಹರಿದ, ಕೊಳಕು ಬಟ್ಟೆ, ಮಂಡಿ, ಹಿಮ್ಮಡಿಯೆನ್ನದೆ ಕಾಲುಗಳ ತುಂಬಾ ಗಾಯದ ಗುರುತುಗಳು, ಕೆಲವು ಕಡೆ ಗಾಯಕ್ಕೆ ಕಟ್ಟಿದ ಬಟ್ಟೆ ಬಣ್ಣಗೆಟ್ಟು, ಅದಕ್ಕೆ ಧೂಳು ಮೆತ್ತಿಕೊಂಡು ಅದರ ಸುತ್ತ ನೊಣಗಳು ಸುತ್ತುತ್ತಿವೆ. ತಲೆ ಕೂದಲು ತೊಳೆದು ಎಷ್ಟು ವರ್ಷವಾಯಿತೋ ಎಂಬಂತೆ ಕೆಂಚಗಾಗಿ ಉರುಟು ಉರುಟಾಗಿ ಸುತ್ತಿಕೊಂಡಿವೆ. ಇಷ್ಟು ಸಾಲದು ಎಂಬಂತೆ ಅವನ ಬಾಲದಂತೆ ಅವನ ತಮ್ಮನೋ, ಪುಟ್ಟ ಸ್ನೇಹಿತನೋ ಅಲೆಯುತ್ತಿದ್ದಾನೆ. ಇವನು ಆಯುವ ಪೇಪರುಗಳನ್ನು ಒಂದು ಗೋಣಿಗೆ ತುಂಬುತ್ತಿದ್ದಾನೆ. ಇದನ್ನೆಲ್ಲಾ ಬಾಲ್ಕನಿಯಲ್ಲಿ ಕುಳಿತು ನೋಡುತ್ತಿದ್ದ ಹುಡುಗನಿಗೆ ತನ್ನ ಹಠ, ತನ್ನ ಸಿಡುಕಿನ ಬಗ್ಗೆ ನಾಚಿಕೆಯೆನ್ನಿಸುತ್ತದೆ. ಒಳಕ್ಕೆ ಬಂದು ಅಮ್ಮನ ಬಳಿ ಹೋಗಿ ಸಾರಿ ಕೇಳುತ್ತಾನೆ. ಒಳ್ಳೆಯ ಹುಡುಗನಂತೆ ಉಟಕ್ಕೆ ಕೂರುತ್ತಾನೆ. ಕಥೆಯ ವಸ್ತು ಇಷ್ಟು ಚೆನ್ನಾಗಿದ್ದರೂ ಬರವಣಿಗೆಯ ಶೈಲಿ, ಬಂಧ ಈಗ ಸಾರಾಂಶ ಕೊಟ್ಟಷ್ಟು ಚೆಂದಗೆ ಇರಲಿಲ್ಲ ಹಾಗಾಗಿ ಆ ಕಥೆಯೂ ಕತ್ತಲ ಮೆರೆಗೆ ಸರಿಯಿತು.
ಈ ಮಧ್ಯೆ ಕೇವಲ ವೈಯಕ್ತಿಕ ಆವೇಶವನ್ನು ಕಥೆಯ ಚೌಕಟ್ಟಿಗೆ ಸಿಕ್ಕಿಸಿ ಕಥೆ ಹೆಣೆಯುವ ಕಸರತ್ತಿನಿಂದ ಕೊಂಚ ಬೇಸರವೆನಿಸಿತ್ತು. ಕೆಲವು ಕಥೆಗಳನ್ನು ಓದಿದರೆ ಒಳ್ಳೆಯ ಐಡಿಯಾ ಬರಬಹುದೆಂದು ಒಳ್ಳೆಯ ಕಥಾಗಾರರು ಎಂದು ನಾನು ಕೇಳಲ್ಪಟ್ಟಿದ್ದವರ ಕಥೆಗಳನ್ನು ಓದಿದೆ. ಆದರೆ ಅವುಗಳು ಅರ್ಥವಾಗುತ್ತಿರಲಿಲ್ಲ. ಅದೊಂದು ಸಂಜೆ ನನ್ನ ಹೈಸ್ಕೂಲಿನ ಮೆಚ್ಚಿನ ಟೀಚರ್ ಒಬ್ಬರ ಬಳಿ ಮಾತನಾಡುತ್ತಿದ್ದೆ. ಪರೀಕ್ಷೆಗಳೆಲ್ಲಾ ಮುಗಿದಿದ್ದವಾದ್ದರಿಂದ ನಮ್ಮ ಮಾತು ಕಥೆಗಳ ಬಗ್ಗೆ, ಕಾದಂಬರಿಗಳ ಕಡೆಗೆ ಹೊರಳಿಕೊಂಡಿತ್ತು. ಅವರು ತಾವು ತುಂಬಾ ಮೆಚ್ಚಿದ ಚಿತ್ರ ನಿರ್ದೇಶಕ ಸತ್ಯಜಿತ್ ರೇ ಬರೆದಿದ್ದ ಕಥೆಯೊಂದರ ಬಗ್ಗೆ ಹೇಳಿದರು. ಎಂದೋ ಓದಿದ್ದ ಅವರ ಕಥೆಯ ಕನ್ನಡಾನುವಾದವನ್ನು ನೆನಪಿನಿಂದ ಹೆಕ್ಕಿ ತೆಗೆದು ನನಗೆ ವಿವರಿಸುತ್ತಿದ್ದರು. ಆ ಕಥೆಗೆ ‘ತದ್ರೂಪು’ ಎಂಬ ಶೀರ್ಷಿಕೆ ಕೊಟ್ಟಿದ್ದನ್ನು ನೆನಪು ಮಾಡಿಕೊಂಡರು. ಅದರ ವಿವರಗಳು ನನಗೆ ಸ್ಪಷ್ಟವಾಗಿ ನೆನಪಿಲ್ಲ. ಆದರೆ ಆ ಕ್ಷಣದಲ್ಲಿ ಆ ಕಥೆ ನನ್ನನ್ನು ಆಳವಾಗಿ ಪ್ರಭಾವಿಸಿತ್ತು. ಹೆಂಡತಿಯೊಬ್ಬಳು ದೂರದಲ್ಲಿರುವ ತನ್ನ ಗಂಡನಿಗೆ ಪತ್ರ ಬರೆದ ಧಾಟಿಯಲ್ಲಿ ರವೀಂದ್ರನಾಥ್ ಠಾಗೋರ್‍ರ ಒಂದು ಕಥೆಯ ಪ್ರಸ್ತಾಪವೂ ಆಗಿತ್ತು. ಅದೇ ಗುಂಗಿನಲ್ಲಿ ನಾನು ‘ತದ್ರೂಪು’ ಎಂಬ ಹೆಸರಿನಲ್ಲೇ ಒಂದು ಕಥೆಯನ್ನು ಬರೆದೆ. ಅದನ್ನು ನನ್ನ ಟೀಚರ್‌ಗೂ ತೋರಿಸಿದ್ದೆ. ಶೈಲಿ ಚೆನ್ನಾಗಿದೆ, ಕಥೆ ಹೆಣೆಯುವ ಶ್ರದ್ಧೆ ಇಷ್ಟವಾಯ್ತು ಆದರೆ ಇದರಲ್ಲಿ ಕಥೆಯೇ ಇಲ್ಲವಲ್ಲಾ, stuff ಎನ್ನುವುದು ಏನೂ ಇಲ್ಲ- ಅಂದರು ಕಡ್ಡಿ ಮುರಿದಂತೆ! ಅವತ್ತೇ ಹಠ ಮಾಡಿದವನ ಹಾಗೆ ಮತ್ತದೇ ಶೀರ್ಷಿಕೆಯನ್ನಿಟ್ಟು ಮತ್ತೊಂದು ಕಥೆ ಬರೆಯಲು ಶುರುಮಾಡಿದೆ ಅದರಲ್ಲಿ ಹಿಂದೆಂದೂ ಬರೆದಿರದಿದ್ದ ರೀತಿಯಲ್ಲಿ ಕಥೆಯನ್ನು ಬಿಚ್ಚಿಡುವ ಪ್ರಯತ್ನ ಮಾಡಿದೆ. ಪ್ರಜ್ಞಾಪೂರ್ವಕವಾಗಿ ಅಸ್ಪಷ್ಟತೆ, ನಿಗೂಢತೆ, ಗೊಂದಲಗಳನ್ನು ಎಳೆದು ತರುವ ಪ್ರಯತ್ನ ಮಾಡಿದ್ದೆ. ಆದರೆ ಎಲ್ಲಿಂದಲೋ ಹೇಗ್ಹೇಗೋ ಬೆಳೆಯುತ್ತಾ ಹೋದ ಆ ಕಥೆಗೆ ಹೇಗೆ ಅಂತ್ಯ ಹಾಡಬೇಕೆಂದೇ ತಿಳಿಯದೆ ಅದನ್ನು ಹಾಗೇ ಇಟ್ಟುಕೊಂಡಿದ್ದೆ. ಈ ನಡುವೆ ಈ ಕಥೆಯನ್ನು ಒಂದು ಕಾದಂಬರಿಯಾಗಿ ಬರೆಯಬಾರದೇಕೆ ಎಂಬ ಭಯೋತ್ಪಾದಕ ವಿಚಾರವೂ ಬಂದಿತ್ತು. ಆದರೆ ಆಪದ್ಭಾಂದವನ ಹಾಗೆ ಸದಾ ನನ್ನ ಜೊತೆಗಿರುವ ಸೋಮಾರಿತನ ಅಂತಹ ಕ್ರಾಂತಿಕಾರಕ ಸಾಹಸಗಳಿಗೆ ನಾನು ಧುಮುಕದಂತೆ ತಡೆದಿತ್ತು!
ಒಂದೆರಡು ದೆವ್ವದ ಕಥೆಗಳನ್ನು ಓದಿ, ದೆವ್ವದ ಬಗ್ಗೆ ‘ವೈಜ್ಞಾನಿಕವಾಗಿ’ ಗೆಳೆಯರೊಂದಿಗೆ ಹರಟಿದ್ದರ ಫಲವಾಗಿ ಒಂದು ಕಥೆಯನ್ನು ಬರೆದಿದ್ದೆ. ಅನಂತ್ ನಾಗ್, ರಮೇಶ್ ಭಟ್ ಅಭಿನಯದ ‘ಗಣೇಶ ಸುಬ್ರಹ್ಮಣ್ಯ’ ಸಿನೆಮಾದಲ್ಲಿ ಮುಖ್ಯಮಂತ್ರಿ ಚಂದ್ರು ಅನಂತ್ ನಾಗ್‌ಗೆ ರಾತ್ರಿ ಒಂದು ಪತ್ತೇದಾರಿ ಕಥೆಯನ್ನು ರೋಚಕವಾಗಿ, ಮಿಮಿಕ್ರಿ ಮಾಡಿ ಅಭಿನಯಿಸುತ್ತಾ ಹೇಳಿದ್ದನ್ನು ಅನುಕರಿಸಿ ದೆವ್ವದ ಕಥೆಯನ್ನು ನಿರೂಪಿಸಿದ್ದೆ. ರೋಚಕವಾದ ವಿವರಗಳನ್ನು ಸೇರಿಸಿದ್ದೆ. ಬರೆಯುವಾಗ ಪ್ರತಿ ಸಾಲಿಗೂ ನಾನೇ ಬೆಚ್ಚಿ ಬೀಳುವವನಂತೆ ನಟಿಸುತ್ತಾ ವಿವರಗಳನ್ನು ದಾಖಲಿಸುತ್ತಿದೆ. ಆ ಕಥೆಯನ್ನ ತುಷಾರಕ್ಕೆ ಕಳುಹಿಸಿಕೊಟ್ಟಿದ್ದೆ. ಆದರ ಪ್ರಕಟವಾದಂತೆ ಕಾಣಲಿಲ್ಲ. ಕಳೆದ ಎರಡು ಸಂಚಿಕೆಗಳಲ್ಲಿ ಅದೇ ಕಥೆಯನ್ನು ತಿಕ್ಕಿ ತೀಡಿ ‘ವೈಚಾರಿಕತೆ’ ಎಂಬ ಹೆಸರಲ್ಲಿ ಪ್ರಕಟಿಸಿದ್ದೆ.
‘ಕಲರವ’ವನ್ನು ಪ್ರಾರಂಭಿಸಿದಾಗಿನಿಂದ ನಿಯಮಿತವಾಗಿ ಕಥೆಗಳನ್ನು ಬರೆಯುತ್ತಿರುವೆನಾದರೂ ನನ್ನ ಕಥೆಗಳ ಬಗ್ಗೆ ನನಗೆ ತೃಪ್ತಿಯಿಲ್ಲ. ಈ ಹಾದಿಯಲ್ಲಿ ನಾನಿನ್ನೂ ಕ್ರಮಿಸಬೇಕಾದ ಮೈಲುಗಲ್ಲುಗಳು ಬೇಕಾದಷ್ಟಿವೆ. ನನ್ನ ನೆನಪಿನ ಖಜಾನೆಯನ್ನು ಬಿಚ್ಚಿಕೊಂಡು ಕುಳಿತರೆ ಅರ್ಧಕ್ಕೆ ನಿಲ್ಲಿಸಿದ, ದಾರಿ ತಪ್ಪಿದ, ಮೊದಲಿಂದಲೇ ವಕ್ರವಾಗಿ ಚಲಿಸಿದ, ಅಸ್ಪಷ್ಟವಾಗಿ ಮೂಡಿದ ಕಥೆಗಳ ರಾಶಿಯೇ ಇವೆ. ಹಾಗೆ ಸುಮ್ಮನೆ ನೆನಪಿನ ಕಂತೆಯನ್ನು ಕೆದರುತ್ತಾ ಕುಳಿತವನಿಗೆ ಸಿಕ್ಕಿದ್ದು ಇಷ್ಟು.
- In: ಇತರೆ
- 10 Comments
ಕೆಲವು ಸಲ ಹಾಗಾಗುತ್ತದೆ. ಮನಸ್ಸಲ್ಲಿ ಹುಟ್ಟಿದ ಭಾವಕ್ಕೆ ಅಭಿವ್ಯಕ್ತಿಯ ಸ್ವಾತಂತ್ರ್ಯ ಕೊಡದಿದ್ದರೆ ಅದು ಒಳಗೊಳಗೇ ನಮ್ಮನ್ನು ತಿನ್ನತೊಡಗುತ್ತದೆ. ಅಂಥದ್ದನ್ನು ಒಮ್ಮೆ ಹೊರಗೆಡವಿಬಿಟ್ಟರೆ ಮನಸ್ಸಿಗೆ ನಿರಾಳ. ‘ನೆನೆಯದೆ ಇರಲಿ ಹ್ಯಾಂಗ…?‘ ಎನ್ನುತ್ತಾರೆ ‘ಅಂತರ್ಮುಖಿ’.
ಪ್ರೈಮರಿ ಸ್ಕೂಲಿನಲ್ಲಿದ್ದಾಗ ನಮ್ಮ ಕನ್ನಡ ಮೇಷ್ಟ್ರ ಒತ್ತಾಯಕ್ಕಾಗಿ ಒಂದೆರಡು ಪ್ರಬಂಧಗಳನ್ನು, ಪ್ರಾಸಕ್ಕೆ ಜೋತುಬಿದ್ದ ನಾಲ್ಕೈದು ಕವನಗಳನ್ನು ಬರೆದಿದ್ದೆ. ತರಗತಿಯಲ್ಲಿದ್ದ ನಮ್ಮೆಲ್ಲರಿಗೂ ಅವರು ಹೋಂ ವರ್ಕ್ ಎಂಬಂತೆ ಒಂದೊಂದು ವಿಷಯ ಕೊಟ್ಟು ಪ್ರಬಂಧ ಬರೆದು ತರಲು ಹೇಳುತ್ತಿದ್ದರು. ಕೆಲವರಿಗೆ ಚಿತ್ರಗಳನ್ನು ಬರೆದುಕೊಡಲು ಹೇಳುತ್ತಿದ್ದರು. ಅವುಗಳಲ್ಲಿ ಆಯ್ದು ಕೆಲವನ್ನು ಅವರು ಸ್ಥಳೀಯ ಪತ್ರಿಕೆಯೊಂದರ ಮಕ್ಕಳ ಪುಟಕ್ಕೆ ಕಳುಹಿಸಿಕೊಡುತ್ತಿದ್ದರು. ಹೋಂ ವರ್ಕ್ ಎಂದುಕೊಂಡು ಏನೇನನ್ನೋ ಗೀಚಿ ಕೊಟ್ಟಿರುತ್ತಿದ್ದ ನನಗೆ ಅದು ಪೇಪರಿನಲ್ಲಿ ಹಾಕುವುದಕ್ಕಾಗಿ ಎಂದು ಗೊತ್ತಾದಾಗ, ‘ಇನ್ನೂ ಚೆನ್ನಾಗಿ ಬರೆಯಬಹುದಿತ್ತಲ್ಲವಾ’ ಎಂದು ಕೈ ಕೈ ಹಿಸುಕಿಕೊಳ್ಳುವಂತಾಗುತ್ತಿತ್ತು.
ಅದಾದ ನಂತರ ಬರವಣಿಗೆಯ ಅಭ್ಯಾಸ ತಪ್ಪಿ ಹೋಗಿತ್ತು. ಬರವಣಿಗೆ, ಕತೆ, ಕವನ ಎಂಬುವೆಲ್ಲಾ ಅಪರಿಚಿತ ಪದಗಳಾಗಿದ್ದವು. ಆಗ ನನಗೆ ಪರಿಚಯವಾದದ್ದೇ ‘ಹಾಯ್ ಬೆಂಗಳೂರ್!’. ನನ್ನ ಸಂಬಂಧಿಕರೊಬ್ಬರ ಮನೆಯಲ್ಲಿ ಈ ವಾರಪತ್ರಿಕೆಯನ್ನು ರೆಗ್ಯುಲರ್ ಆಗಿ ತರಿಸುತ್ತಿದ್ದರು. ನಾನು ಆಗಾಗ ಅವರ ಮನೆಗೆ ಹೋದಾಗ ಅಲ್ಲಿರುತ್ತಿದ್ದ ದಿಕ್ಸೂಚಿ, ತರಂಗಗಳನ್ನು ತಿರುವಿ ಹಾಕಿದ ನಂತರ ಕಪ್ಪು-ಕಪ್ಪು ಬಣ್ಣದ, ವಿಚಿತ್ರ ಆಕಾರದ ಈ ಪತ್ರಿಕೆಯನ್ನು ಕುತೂಹಲಕ್ಕಾಗಿ ತೆಗೆದು ನೋಡುತ್ತಿದ್ದೆ. ಒಳಪುಟಗಳಲ್ಲಿ, ಕೆಲವೊಮ್ಮೆ ಮುಖಪುಟದಲ್ಲೇ ಇರುತ್ತಿದ್ದ ಮುಜುಗರ ಪಡುವಂತಹ ಫೋಟೊಗಳು, ಕೊಲೆ, ರಕ್ತಪಾತದ ಫೋಟೊಗಳನ್ನು ನೋಡಿ ಕೊಳೆತ ಬಾಳೆಗಣ್ಣಿನ ಬುಟ್ಟಿಗೆ ಕೈ ಹಾಕಿದವನಂತೆ ಅಸಹ್ಯಪಟ್ಟುಕೊಳ್ಳುತ್ತಿದ್ದೆ.
ಹೀಗೆ ಒಮ್ಮೆ ಒಂದು ಬೀಡಾ ಅಂಗಡಿಯ ಎದುರು ನಿಂತಿದ್ದಾಗ ಅಂಗಡಿಯಲ್ಲಿ ನೇತುಹಾಕಿದ್ದ ಹಲವಾರು ಪತ್ರಿಕೆಗಳ ಮಧ್ಯೆ ‘ಹಾಯ್ ಬೆಂಗಳೂರ್!’ ಕಂಡಿತು. ಮುಖಪುಟದಲ್ಲಿ ಅದರ ಸಂಪಾದಕ ಅದೆಲ್ಲೋ ಅಫಘಾನಿಸ್ತಾನಕ್ಕೆ ಹೋಗಿದ್ದಾನೆ… ಅಲ್ಲಿಂದ ಬಂದ ವರದಿಗಳಿವೆ… ಎಂಬ ಹೆಡ್ಡಿಂಗುಗಳನ್ನು ಓದಿ ಕುತೂಹಲ ಕೆರಳಿತ್ತು. ಆ ವಾರ ನನ್ನ ಸಂಬಂಧಿಕರ ಮನೆಗೆ ಹೋದಾಗ ಮರೆಯದೆ ‘ಹಾಯ್’ನ್ನು ಹುಡುಕಿ ಓದತೊಡಗಿದೆ. ಆಗ ನಾನು ಆಶ್ಚರ್ಯದಿಂದ, ಬೆರಗಿನಿಂದ ಕಂಡ ಹೆಸರೇ ರವಿ ಬೆಳಗೆರೆ!
ಆ ಕ್ಷಣದಿಂದ ನನ್ನ ಜೊತೆಯಾದ ಆತನ ವಿಲಕ್ಷಣ ಆಸಕ್ತಿಗಳು, ತಿಕ್ಕಲು ಸಾಹಸಗಳು, ಆತ್ಮೀಯವಾದ ಬರವಣಿಗೆ ಇಂದಿಗೂ ನನ್ನೊಂದಿಗಿವೆ ನನ್ನನ್ನು ಬೆಳೆಸುತ್ತಿವೆ. ಬರವಣಿಗೆಯ ಬಗ್ಗೆ ಒಂದು ಪ್ಯಾಶನ್ ಎಂಬುದು ಹುಟ್ಟಿದ್ದೇ ‘ಹಾಯ್ ಬೆಂಗಳೂರ್!’ ಓದಲು ಪ್ರಾರಂಭಿಸಿದಂದಿನಿಂದ. ಒಂದು ಪತ್ರಿಕೆಯ ಸಂಪಾದಕನಿಗೆ ಇರುವ ಗ್ಲಾಮರ್‌ನ್ನು ಕಂಡು ಮೊದಮೊದಲು ಮುದಗೊಳ್ಳುತ್ತಿದ್ದೆ. ಬಹುಶಃ ಆ ಗ್ಲಾಮರೇ ನನ್ನನ್ನು ಬರವಣಿಗೆಗೆ ಸೆಳೆಯಿತು ಅನ್ನಿಸುತ್ತದೆ. ಒಂದು action ಸಿನೆಮಾ ನೋಡಿದ ನಂತರ ನಮ್ಮಲ್ಲೊಂದು ಹುರುಪು, ಒಂದು ಬಗೆಯ ಹಿರೋಯಿಸಂ ಹುಟ್ಟಿಕೊಳ್ಳುತ್ತದಲ್ಲಾ ಅಂಥದ್ದೇ ಭಾವೋದ್ವೇಗ ‘ಹಾಯ್’ನಲ್ಲಿನ ರವಿ ಬೆಳಗೆರೆಯ ಬರಹಗಳನ್ನು ಓದುವಾಗ ಹುಟ್ಟಿಕೊಳ್ಳುತ್ತಿದ್ದವು.
ಅದೇ ಸಮಯಕ್ಕೆ ಸರಿಯಾಗಿ ದಾವಣಗೆರೆಯ ಹರಪ್ಪನಹಳ್ಳಿಯ ಬಳಿ ನಕಲಿ ಚಿನ್ನದ ಜಾಲದ ಬೆನ್ನುಹತ್ತಿ ಕೊರಚರ ಹಟ್ಟಿಯ ಡಕಾಯಿತನೊಬ್ಬನ ಕಾಲಿಗೆ ಗುಂಡು ಹೊಡೆದು, ಮಾಧ್ಯಮಗಳಲ್ಲಿ ರಾಕ್ಷಸನಂತೆ ಬಿಂಬಿತವಾಗಿ, ತನ್ನ ಪತ್ರಿಕೆಯಲ್ಲಿ ‘ನಾನೇ ಡಕಾಯಿತನ ಕಾಲಿಗೆ ಗುಂಡು ಹೊಡೆದದ್ದು’ ಎಂದು ಬರೆದುಕೊಂಡು ಸರಕಾರದ ವಿರುದ್ಧ ಕೇಸನ್ನು ಗೆದ್ದದ್ದು ಎಲ್ಲವನ್ನೂ ಕಂಡವನಿಗೆ ಬೆಳಗೆರೆ ಮೇಲಿನ ಅಭಿಮಾನ ಹೆಚ್ಚಿತ್ತು. ‘ದಿನಕ್ಕೆ ಹದಿನೆಂಟು ತಾಸು ಓದು ಬರೆದು ಮಾಡುತ್ತೇನೆ’, ‘ನಾಲ್ಕು ದಿನ ನಾಲ್ಕು ರಾತ್ರಿ ಕುಳಿತು ಒಂದು ಪುಸ್ತಕ ಬರೆದು ಮುಗಿಸಿದೆ’ ಎಂಬಂಥ ಅವರ ಕೆಲಸದ ಬಗೆಗಿನ ಅವರದೇ ಮಾತುಗಳನ್ನು ಕೇಳಿ ರೋಮಾಂಚಿತನಾಗುತ್ತಿದ್ದೆ. ಎಂಥವರಿಗಾದರೂ ಅಂಥ ಮಾತುಗಳು ಒಂದೆರಡು ಕ್ಷಣ ಆಸಕ್ತಿಯನ್ನು ಕೆರಳಿಸಿಬಿಡುತ್ತವೆ. ಪತ್ರಿಕೋದ್ಯಮದ ಬಗ್ಗೆ, ಬರವಣಿಗೆಯ ಬಗ್ಗೆ ‘ಹಾಯ್’ನಲ್ಲಿ ರವಿ ಬರೆಯುತ್ತಿದ್ದ ಸಂಗತಿಗಳನ್ನು ಓದಿಕೊಂಡು ನಾನೂ ಬರವಣಿಗೆಗೆ ಕೈ ಹಾಕಿದ್ದೆ. ನಾನಾಗ ನಿಯಮಿತವಾಗಿ ಓದುತ್ತಿದ್ದದ್ದು ‘ಹಾಯ್ ಬೆಂಗಳೂರ್!’ ಒಂದನ್ನೇ ಆದ್ದರಿಂದ ಸ್ವಾಭಾವಿಕವಾಗಿ ನನ್ನ ಬರವಣಿಗೆಯ ಶೈಲಿ, ಚಿಂತನೆಯ ಜಾಡು, ವಿಷಯಗಳ ಆಸಕ್ತಿಯ ಮೇಲೆ ರವಿ ಬೆಳಗೆರೆಯ ಛಾಯೆ ಎದ್ದು ಕಾಣುತ್ತಿತ್ತು. ‘ಹಾಯ್…’ ಎಂಬ ಟ್ಯಾಬ್ಲಾಯ್ಡ್‌ನ ಭಾಷೆಯಲ್ಲಿ ನಾನು ಬರೆಯುತ್ತಿದ್ದ ಕೆಲವು ಲೇಖನಗಳು ನಮ್ಮ ಶಾಲೆಯ ಗೋಡೆ ಪತ್ರಿಕೆಯಲ್ಲಿ ಬೆಳಕು ಕಂಡು ಹಲವರನ್ನು ಬೆರಗುಗೊಳಿಸುತ್ತಿದ್ದವು. ಆಗಲೇ ಹುಟ್ಟಿದ್ದು ನಾನೂ ಒಂದು ಪತ್ರಿಕೆಯನ್ನೇಕೆ ಮಾಡಬಾರದು ಎಂಬ ಐಡಿಯಾ!
ನನ್ನ ಬರವಣಿಗೆಯ ಹಾದಿಯಲ್ಲಿನ ಇಷ್ಟು ಕಾಲದಲ್ಲಿ ನಾನು ಪ್ರಜ್ಞಾಪೂರ್ವಕವಾಗಿ ರವಿಬೆಳಗೆರೆ ಎಂಬ ಶಕ್ತಿಯ ಅನುಕರಣೆ ಮಾಡುವ ಪ್ರಯತ್ನ ಮಾಡಿದ್ದೇನೆ. ಅನಂತರ ಆ ಅನುಕರಣೆಗಾಗಿ guilt ಅನುಭವಿಸಿದ್ದೇನೆ. ನಾನು ಯಾರ ಅನುಕರಣೆಯೂ ಮಾಡುತ್ತಿಲ್ಲ ಎಂದು ಸಾಧಿಸುವ ವ್ಯರ್ಥ ಪ್ರಯತ್ನವನ್ನೂ ಮಾಡಿದ್ದೇನೆ. ಈಗೀಗ ಪ್ರಜ್ಞಾಪೂರ್ವಕವಾಗಿ ಎಲ್ಲಾ ಬಗೆಯ ಅನುಕರಣೆಗಳ ಪ್ರಭಾವವನ್ನು ಮೀರಿನಿಲ್ಲುವ ಪ್ರಯತ್ನ ಮಾಡುತ್ತಿದ್ದೇನೆ. ಆದರೂ ತುಂಬಾ ಚಿಕ್ಕಂದಿನಲ್ಲೇ ಬರವಣಿಗೆಯೆಡೆಗೆ, ಓದಿನೆಡೆಗೆ ನನ್ನಲ್ಲಿ ಅದಮ್ಯವಾದ ಪ್ಯಾಶನ್ ಹುಟ್ಟಿಸಿದ ಆ ಲೇಖಕನಿಗೊಂದು ಶುಕ್ರಿಯಾ!
ಈ ನಂಟಿಗೇಕೆ ಹೆಸರಿನ ಹಂಗು?-ಭಾಗ 2
Posted ಏಪ್ರಿಲ್ 24, 2008
on:ಕಳೆದ ಸಂಚಿಕೆಯಿಂದ ಮುಂದುವರೆದದ್ದು…
ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ. ನಿನ್ನ ನನ್ನ ಸಂಬಂಧದ ಹಸಿ ಮಣ್ಣಿನಲ್ಲಿ ಚಿಗುರೊಡೆದಿದ್ದ ಪರಿಚಿತತೆ ಎಂಬ ಹುಲ್ಲಿನ ಎಸಳಿಗೆ ಹೆಸರನ್ನಿಟ್ಟುಬಿಡುವ ನಿನ್ನ ಉದ್ವೇಗ ಕಂಡು ನನಗೆ ನಿಜಕ್ಕೂ ದಿಗಿಲಾಗಿತ್ತು. ನಿನ್ನೊಂದಿಗೆ ನಾನು ಲ್ಯಾಬಿನಲ್ಲಿ, ಲಂಚ್ ಟೈಮಿನ ಹರಟೆಯಲ್ಲಿ, ಅಪರೂಪದ ಕಂಬೈನ್ಡ್ ಸ್ಟಡಿಯಲ್ಲಿ ಕಳೆಯುತ್ತಿದ್ದ ಸಮಯದಲ್ಲಿ ನಮ್ಮಿಬ್ಬರ ಮಧ್ಯೆ ಆವರಿಸಿಕೊಳ್ಳುತ್ತಿದ್ದ ಆಹ್ಲಾದವಿದೆಯಲ್ಲಾ, ಅದನ್ನು ನಾನು ಇಂದಿಗೂ ಅನುಭವಿಸಲು ಹಪಹಪಿಸುತ್ತೇನೆ. ಆ ದಿನಗಳಲ್ಲಿ ನಿನ್ನ ಜೊತೆಗೆ ಇರುವಾಗ ಯಾರೇನಂದುಕೊಳ್ಳುವರೋ ಎನ್ನುವ ಭಯವಿತ್ತೇ ವಿನಃ ನೀನು ನನ್ನ ಬಗ್ಗೆ ಏನಂದುಕೊಳ್ಳುವಿಯೋ ಎಂಬ ಚಿಂತೆಯಿರಲಿಲ್ಲ. ನಿನ್ನಲ್ಲಿ ನನ್ನ ಗುಟ್ಟುಗಳನ್ನು ಹೇಳಿಕೊಳ್ಳಲು, ಬೇರೆ ಹುಡುಗರ ಬಗ್ಗೆ ಕಮೆಂಟು ಮಾಡಲು ನನಗ್ಯಾವ ಹಿಂಜರಿಕೆಯೂ ಕಾಣುತ್ತಿರಲಿಲ್ಲ. ನೆನಪಿದೆಯಾ, ಅವತ್ತು ರಾಜೇಶ್ ನನ್ನ ಕಂಡರೆ ಹ್ಯಾಗ್ಹ್ಯಾಗೋ ಆಡುತ್ತಿದ್ದಾನೆ ಅಂತ ನಿನ್ನ ಹತ್ತಿರ ಹೇಳಿದ್ದೆ. ನೀನು ತುಟಿಯ ಕೊನೆಯಲ್ಲಿ ಒಂದು ವಿಕಟ ನಗೆ ನಕ್ಕು ಈ ಹುಡುಗಿಯರು ಕಾಲೇಜಿಗೆ ಬಂದರೆ ಕೊಂಬು ಬಂದು ಬಿಡುತ್ತೆ. ನೋಡೋಕೆ ಸ್ವಲ್ಪ ಸುಂದರವಾಗಿದ್ದರಂತೂ ಮುಗಿದೇ ಹೋಯ್ತು, ನಿಮಗೆ ಕಣ್ಣಿಗೆ ಕಾಣುವ ಹುಡುಗರೆಲ್ಲಾ ನಿಮ್ಮೆದುರು ಪ್ರೇಮಭಿಕ್ಷೆ ಬೇಡಲು ನಿಂತಿರುವ ಭಿಕಾರಿಗಳ ಹಾಗೆ ಕಾಣುತ್ತಾರೆ ಎಂದಿದ್ದೆ. ಆ ಕ್ಷಣದಲ್ಲಿ ನನಗೆ ನಿನ್ನ ಮೇಲೆ ವಿಪರೀತವಾದ ಸಿಟ್ಟು ಬಂದಿತ್ತು. ನಾನು ನಿನ್ನಲ್ಲಿ ಬಯಸಿದ್ದು ‘ನಾನಿದ್ದೇನೆ ಬಿಡು’ ಎನ್ನುವಂಥ ಅಭಯವನ್ನ, ಉಡಾಫೆಯ ಉಪದೇಶವನ್ನಲ್ಲ. ಆದರೆ ಈಗ ಇಷ್ಟೆಲ್ಲಾ ಆದ ನಂತರ ಕುಳಿತು ಯೋಚಿಸಿದರೆ ನಮ್ಮ ಆ ಹೆಸರಿಲ್ಲದ ಸಂಬಂಧದಲ್ಲಿದ್ದ ಉಡಾಫೆ, ಸ್ವಾತಂತ್ರ್ಯ ಹಾಗೂ ಜವಾಬು ನೀಡುವ ಆವಶ್ಯಕತೆಯಿಲ್ಲದ ನಂಬುಗೆಯೇ ಚೆನ್ನಾಗಿತ್ತು ಅನ್ನಿಸುತ್ತಿದೆ.
ಇನ್ನೂ ನನಗೆ ಆ ನಮ್ಮ ಸಂಬಂಧದ ಬಗ್ಗೆ ಬೆರಗಿದೆ. ಹೆಸರಿಲ್ಲದ, ರೂಪವಿಲ್ಲದ, ಗಮ್ಯವಿಲ್ಲದ, ಕಟ್ಟಳೆಗಳಿಲ್ಲದ ಸದಾ ಹರಿಯುವಂತಹ ಅನುಭವವನ್ನು ನೀಡುತ್ತಿದ್ದ ಆ ಸಂಬಂಧ ಯಾವುದು? ಹೀಗೆ ಕೇಳಿಕೊಂಡ ತಕ್ಷಣ ಮತ್ತೆ ನಾವು ಸಮಾಜ ಕೊಡಮಾಡುವ ಹೆಸರುಗಳ ಆಸರೆ ಪಡೆಯಬೇಕಾಗುತ್ತದೆ. ನಮ್ಮ ಸಂಬಂಧವನ್ನು ಏನಾದರೊಂದು ಹೆಸರು ಕೊಟ್ಟು ಗುರುತಿಸಬೇಕಾಗುತ್ತದೆ. ಹರಿಯುವ ನದಿಯ ನೀರಿಗ್ಯಾವ ಹೆಸರು? ನದಿಯು ಹರಿಯುವ ಪಾತ್ರದ ಗುರುತು, ಅದರ ಸುತ್ತಮುತ್ತಲಿನ ಪ್ರದೇಶದ ಗುರುತಿನಿಂದ ನಾವು ನದಿಗೆ ಹೆಸರು ಕೊಡುತ್ತೇವೆ ಆದರೆ ಆ ಹೆಸರು ಎಷ್ಟು ಬಾಲಿಶವಾದದ್ದು ಅಲ್ಲವಾ? ನದಿಯ ಹರಿವು ನಿಂತು ಹೋಗಿ ಒಂದು ಹನಿ ನೀರೂ ಇಲ್ಲದಿದ್ದಾಗ ಅದನ್ನು ಇಂಥ ನದಿ ಅಂತ ಹೆಸರಿಟ್ಟು ಕರೆಯಲು ಸಾಧ್ಯವೇ? ಹಾಗಾದರೆ ನದಿಯೆಂದು ನಾವು ಕರೆಯುವುದು ಹರಿಯುವ ನೀರನ್ನೇ? ಆ ನದಿಗೆ ನೀರು ಬಂದದ್ದು ಎಲ್ಲಿಂದ? ತಾಳ್ಮೆಯ ತಪಸ್ಸಲ್ಲಿ ಫಲಿಸಿದ ಮೋಡದಿಂದ ಧಾರೆಯಾಗಿ ಸುರಿದ ಮಳೆ, ನಗರ, ಹಳ್ಳಿ, ಕೊಂಪೆಗಳ ರಸ್ತೆ, ಚರಂಡಿಗಳಲ್ಲಿ ಹರಿದು ಬಂದ ನೀರು ನದಿಯ ಸತ್ವವಾಗುತ್ತದೆ. ಹಾಗಂತ ನಾವು ನದಿಗೆ ಸೇರುವ ನೀರನ್ನು ‘ನದಿ’ ಎಂದು ಹೆಸರಿಟ್ಟು ಕರೆಯಲಾಗುತ್ತದೆಯೇ? ಲಕ್ಷ ಲಕ್ಷ ಮೈಲುಗಳನ್ನು ಉನ್ಮಾದದಲ್ಲಿ ಕ್ರಮಿಸಿ ವಿಶಾಲವಾದ ಜಲರಾಶಿಯನ್ನು ಸೇರುವ ಈ ನೀರು ಅಷ್ಟರವರೆಗೆ ನದಿಯಾದದ್ದು ‘ಸಮುದ್ರ’ ಹೇಗೆ ಆಗಿಬಿಡಲು ಸಾಧ್ಯ? ಸಮುದ್ರವನ್ನು ಸೇರಿದ ನದಿ ನದಿಯಾಗಿ ಉಳಿಯುವುದೇ? ನೋಡು, ನಮ್ಮ ಹೆಸರಿಡುವ ಪ್ರಯತ್ನ ಎಷ್ಟು ಬಾಲಿಶವಾದದ್ದು ಅಂತ! ನಮ್ಮ ಸಂಬಂಧಗಳಿಗೂ ನಾವು ಇದೇ ಮನಸ್ಥಿತಿಯಲ್ಲಿ ಪ್ರತಿಕ್ರಿಯಿಸುತ್ತಿರುವುದು ವಿಪರ್ಯಾಸ ಅಲ್ಲವೇ?
ಈಗ ನಿನ್ನಿಂದ ದೂರವಾಗಿ ನಿನ್ನೊಂದಿಗಿನ ಸಂಬಂಧವನ್ನು ಅವಲೋಕಿಸುತ್ತಿರುವವಳಿಗೆ ಹೀಗೆ ದೊಡ್ಡ ಚಿಂತಕಿಯ ಹಾಗೆ, ದಾರ್ಶನಿಕಳ ಹಾಗೆ ಮಾತನಾಡಲು ಸಾಧ್ಯವಾಗುತ್ತಿದೆ. ಆದರೆ ಆ ಪರಿಸ್ಥಿತಿಯಲ್ಲಿ, ನಿನ್ನೊಂದಿಗಿನ ಸಂಬಂಧದಲ್ಲಿ ನನ್ನನ್ನೇ ನಾನು ಕಳೆದುಕೊಂಡಿದ್ದಾಗ ನಾನು ಹೇಗಿದ್ದೆ? ಕ್ಷಣ ಕ್ಷಣಕ್ಕೂ ದಿಗಿಲು, ಆತಂಕ, ಗೊಂದಲ. ಏನೋ ಸಿಕ್ಕಬಹುದು ಎಂಬ ಕಾತುರ, ಅದು ಈಗ ಸಿಕ್ಕೀತು, ಆಗ ಸಿಕ್ಕೀತು ಎನ್ನುವ ನಿರೀಕ್ಷೆ, ಒಂದು ವೇಳೆ ಸಿಕ್ಕೇ ಬಿಟ್ಟರೆ ಏನು ಮಾಡುವುದು ಎನ್ನುವ ಆತಂಕ, ಅದನ್ನು ಪಾಲಿಸುವ ಧೈರ್ಯ, ತಾಕತ್ತು ನನ್ನಲ್ಲಿದೆಯೇ ಎನ್ನುವ ಅಭದ್ರತೆ, ಅಥವಾ ಅದು ಸಿಕ್ಕುವ ಸಾಧ್ಯತೆಗಳು ಶಾಶ್ವತವಾಗಿ ಇಲ್ಲವಾಗಿಬಿಟ್ಟರೆ ಎನ್ನುವ ದುಗುಡ, ಇನ್ನು ಅದು ಸಿಕ್ಕುವುದೇ ಇಲ್ಲ ಎಂದು ನಿಶ್ಚಯವಾಗಿಬಿಟ್ಟರೆ ಆಗುವ ನಿರಾಶೆಯನ್ನು, ದುಃಖವನ್ನು ಭರಿಸುವುದು ಹೇಗೆ? – ಹೀಗೆ ಮನಸ್ಸು ಲಕ್ಷ ಲಕ್ಷ ಭಾವನೆಗಳ ಸುಂದರ ಕೊಲಾಜ್ ಆಗಿರುತ್ತಿತ್ತು. ಆದರೆ ಅಸಲಿಗೆ ನನಗೆ ಸಿಕ್ಕಬೇಕಾದ್ದು ಏನು ಎನ್ನುವುದೇ ನನಗೆ ತಿಳಿದಿರುತ್ತಿರಲಿಲ್ಲ. ಯಾಕೆ ಅಂದರೆ, ಈ ತಿಳಿವು ಬುದ್ಧಿಗೆ, ನನ್ನ ಅಹಂಕಾರಕ್ಕೆ ಸಂಬಂಧಿಸಿದ್ದು. ಏನೋ ಸಿಕ್ಕುತ್ತದೆ ಎಂದು ನಿರೀಕ್ಷಿಸುತ್ತಿದ್ದದ್ದು ನನ್ನ ಮನಸ್ಸು. ಮನಸ್ಸು, ಬುದ್ಧಿಗಳ ನಡುವಿನ ತಿಕ್ಕಾಟದಿಂದಲೇ ಈ ಪ್ರೀತಿ ಇಷ್ಟು ನಿಗೂಢವಾಗಿ, ಆಕರ್ಷಕವಾಗಿ, ಗೊಂದಲದ ಗೂಡಾಗಿರುವುದೇ? ನೀನು ಹೇಳಬೇಕು, ಹೇಳುತ್ತಿದ್ದೆಯಲ್ಲ ಯಾವಾಗಲೂ ‘ನಾನು ವಿಪರೀತ ಭಾವಜೀವಿ ಕಣೇ’ ಅಂತ.
ನಿನ್ನ ನನ್ನ ನಡುವೆ ಎಗ್ಗಿಲ್ಲದೆ, ಸರಾಗವಾಗಿ ಪ್ರವಹಿಸುತ್ತಿದ್ದ ಭಾವದ ಹರಿವಿಗೆ ಒಂದು ಸ್ವರೂಪವನ್ನು ಕೊಡುವ ಪ್ರಯತ್ನವನ್ನ ನೀನೇ ಮಾಡಿದ್ದು. ಈ ಹರಿವಿಗೊಂದು ಅಣೇಕಟ್ಟು ಕಟ್ಟಿಕೊಂಡು ನೀನು ನಿನ್ನ ಬದುಕಿನ ತೋಟಕ್ಕೆ ನಿರಾವರಿ ಮಾಡಿಕೊಂಡು ನಿನ್ನ ತೋಟದಲ್ಲಿ ನನ್ನ ಪ್ರೀತಿಯ ಹೂವು ಹಣ್ಣು ಅರಳಬೇಕೆಂದು ಅಪೇಕ್ಷಿಸಿದೆ. ಸ್ವಚ್ಛಂದವಾಗಿ ಹರಿಯುತ್ತಿದ್ದ ಸಂಬಂಧಕ್ಕೆ ಒಂದು ತಂಗುದಾಣ ಕಟ್ಟಬಯಸಿದ್ದೆ. ಅದರ ಸೂಚನೆಯೋ ಎಂಬಂತೆ ನನ್ನೆದುರು ನಿನ್ನ ಮಾತು ಕಡಿಮೆಯಾಯಿತು. ಇನ್ನೊಬ್ಬ ಹುಡುಗಿಯನ್ನು ಹೊಗಳುವಾಗ ವಿಪರೀತ ಕಾಳಜಿಯನ್ನು ವಹಿಸಲು ಪ್ರಯತ್ನಿಸುತ್ತಿದ್ದದ್ದು ನನಗೆ ತಿಳಿಯುತ್ತಿತ್ತು. ಅಪ್ಪಿತಪ್ಪಿಯೂ ನಿನ್ನ ಗೆಳೆಯರ ಬಗ್ಗೆ ನನ್ನೆದುರು ಒಂದೊಳ್ಳೆ ಮಾತು ಆಡದಂತೆ ಎಚ್ಚರ ವಹಿಸುತ್ತಿದ್ದೆ. ಆಗಿನಿಂದ ನಾನಿನ್ನ ಕೆದರಿದ ಕೂದಲು, ವಡ್ಡ-ವಡ್ಡಾದ ಡ್ರೆಸ್ ಸೆನ್ಸ್ ಕಾಣುವುದು ತಪ್ಪಿಯೇ ಹೋಗಿತ್ತು. ನೀನು ಪ್ರಜ್ಞಾಪೂರ್ವಕವಾಗಿ ಬದಲಾಗುತ್ತಿದ್ದೆ, ನನ್ನನ್ನು ಮೆಚ್ಚಿಸಲು. ಒಂದು ಮಾತು ಹೇಳಲಾ, ನೀನು ಬೇಜವಾಬಾರಿಯಿಂದ ಡ್ರೆಸ್ ಮಾಡಿಕೊಂಡಾಗಲೇ ನನಗೆ ಚೆನ್ನಾಗಿ ಕಾಣುತ್ತಿದ್ದೆ. ನಿನ್ನ ವಕ್ರವಕ್ರವಾದ ವ್ಯಕ್ತಿತ್ವವೂ ನನಗೆ ಪ್ರಿಯವಾಗಿತ್ತು. ಆದರೆ ನೀನು ಅವನ್ನೆಲ್ಲಾ ಬದಲಾಯಿಸಿಕೊಳ್ಳುತ್ತಿದ್ದೆ. ನನ್ನನ್ನು ಮೆಚ್ಚಿಸುವುದಕ್ಕೆ. ಒಂದು ವೇಳೆ ನಾನು ನನಗೇನಿಷ್ಟ ಎಂಬುದನ್ನು ಹೇಳಿ, ನೀನು ಮೊದಲಿದ್ದ ಹಾಗೇ ಇರು ಅಂತೇನಾದರೂ ಹೇಳಿದ್ದರೆ ನೀನು ಹಾಗಿರಲು ಪ್ರಯತ್ನ ಮಾಡುತ್ತಿದ್ದೆ. ಪ್ರಯತ್ನಪೂರ್ವಕವಾಗಿ ಅಶಿಸ್ತು ರೂಢಿಸಿಕೊಳ್ಳುತ್ತಿದ್ದೆ, ಆದರೆ ನಾನು ಮೆಚ್ಚಿದ್ದ ನಿನ್ನ ಸಹಜ ಬೇಜವಾಬ್ದಾರಿತನವನ್ನು ನಾನೆಂದಿಗೂ ನಿನ್ನಲ್ಲಿ ಕಾಣಲು ಸಾಧ್ಯವಾಗುತ್ತಿರಲಿಲ್ಲ. ನೀನು ನೀನಾಗಿ ನನ್ನೆದುರು ಉಳಿದಿರಲಿಲ್ಲ. ನಮ್ಮತನವನ್ನು ಕಳೆದುಕೊಂಡು ಅಸ್ವಾಭಾವಿಕವಾಗಿ ವರ್ತಿಸಲೇಬೇಕಾ ಪ್ರೀತಿಸಿದವರು? ಹಾಗಾದರೆ ಪ್ರೀತಿ ಅಸ್ವಾಭಾವಿಕವಾ?
ಅಂದು ಸಂಜೆ ಕಾಫಿ ಬಾರಿನಲ್ಲಿ ಕುಳಿತಿದ್ದಾಗ ನೀನು ನೀನಾಗಿರಲಿಲ್ಲ. ಹಿಂದಿನ ದಿನ ತಾನೆ ನಮಗೆ ಸೆಂಡಾಫ್ ಕೊಟ್ಟಿದ್ದರು. ಇನ್ನು ಒಬ್ಬರದು ಒಂದೊಂದು ತೀರ. ನೀನು ಸಂಜೆ ಕಾಫಿ ಬಾರಿಗೆ ಬರಲು ಹೇಳಿದ್ದೆ. ಬಹುಶಃ ಅದೇ ನಮ್ಮ ಕೊನೆ ಭೇಟಿಯಾಗಬಹುದು ಅಂತ ನನಗೆ ತಿಳಿದಿರಲಿಲ್ಲ. ಅಗಲಿಕೆಯ ಗಾಬರಿ ನನ್ನಲ್ಲಿತ್ತು. ಇಷ್ಟು ದಿನ ಕಾಲೇಜಿನಲ್ಲಿ ಪ್ರತಿದಿನ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡಿರುತ್ತಿದ್ದವರು ಇನ್ನು ಮುಂದೆ ಬೇರೆ ಬೇರೆ ಜಾಗಗಳಿಗೆ ಹೋಗಬೇಕಲ್ಲಾ ಎನ್ನುವುದು ನನ್ನ ವೇದನೆಯಾಗಿತ್ತು. ಅದೇ ಭಾವವನ್ನು ನಾನು ನಿನ್ನ ಮುಖದ ಮೇಲೆ ಕಾಣಲು ಪ್ರಯತ್ನಿಸಿದ್ದೆ. ಆದರೆ ನಿನ್ನ ಮುಖದ ಮೇಲಿನ ಆತಂಕ, ಭಯ, ಅದನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದ ನಿನ್ನ ಶ್ರಮವನ್ನೆಲ್ಲಾ ಕಂಡು ನನಗೆ ಹೆದರಿಕೆಯಾಗಿತ್ತು. ಏನೋ ಅಹಿತವಾದದ್ದು ನಡೆಯಲಿದೆ ಅಂತ ಗಾಳಿ ಸೂಚನೆ ಕೊಡುತ್ತಿತ್ತು. ಕೊನೆಗೂ ನೀನು ಹೇಳಿಬಿಟ್ಟೆ, ‘ಬಿಂದು, ಐ ಲವ್ ಯೂ’! ನನ್ನ ಪ್ರತಿಕ್ರಿಯೆಗೂ ಕಾಯದೆ ಎದ್ದು ಹೋಗಿಬಿಟ್ಟೆ. ನಾನೂ ಎದ್ದು ಬಿಟ್ಟೆ, ಕೇಳಿದ ಪ್ರಶ್ನೆಗೆ ಉತ್ತರ ನೀಡಬೇಕೆಂಬ ಕನಿಷ್ಠ ಸೌಜನ್ಯವೂ ಇಲ್ಲದವಳ ಹಾಗೆ ನಾನು ನಿನ್ನ ಬದುಕಿನಿಂದಲೇ ಎದ್ದುಬಿಟ್ಟೆ. ಉತ್ತರವೇ ಇಲ್ಲದ ನಿನ್ನ ಪ್ರಶ್ನೆಯೊಂದಿಗೆ ನೀನು ಹೇಗಿರುವೆಯೋ!
ನಿನ್ನ ಪ್ರಶ್ನೆಗೆ ನಾನು ಯಾವ ಉತ್ತರವನ್ನೂ ಕೊಡದಿದ್ದರೂ ನನ್ನಿಡೀ ಬದುಕಿಗೆ ಒಂದು ಶಾಶ್ವತ ಕ್ವೆಶ್ಚನ್ ಮಾರ್ಕನ್ನು ಸಿಕ್ಕಿಸಿಬಿಟ್ಟಿತ್ತು ನಿನ್ನ ಪ್ರಶ್ನೆ. ‘ಈ ನಂಟಿಗೇಕೆ ಹೆಸರಿನ ಹಂಗು?’ ಉತ್ತರಿಸುವೆಯಾ ಗೆಳೆಯಾ?
ಇಂತಿ ನಿನ್ನ ಪ್ರೀತಿಯ,
ಏಪ್ರಿಲ್ ಒಂದು ಯಾರ ದಿನ?
Posted ಏಪ್ರಿಲ್ 24, 2008
on:`ನಗೆ ನಗಾರಿ ಡಾಟ್ ಕಾಮ್’ ಎಂಬ ಬ್ಲಾಗನ್ನು ತೆರೆದು ಹಾಸ್ಯದ ಉಣಿಸನ್ನು ಕನ್ನಡಿಗರಿಗೆ ಉಣಬಡಿಸುತ್ತಿರುವ ನಗೆ ಸಾಮ್ರಾಟರು ‘ಕಲರವ’ಕ್ಕಾಗಿ ಏಪ್ರಿಲ್ ಒಂದರ ಪ್ರಯುಕ್ತ ಹಾಸ್ಯ ಲೇಖನವೊಂದನ್ನು ಕಳುಹಿಸಿಕೊಟ್ಟಿದ್ದಾರೆ.
ಮತ್ತೊಂದು ಏಪ್ರಿಲ್ ಒಂದು ಬಂದಿದೆ. ಏಪ್ರಿಲ್ ಒಂದು ಬರುವುದು ವರ್ಷಕ್ಕೆ ಒಂದೇ ಸಾರಿಯೇ ಆದರೂ ಆ ದಿನದ ಮಹತ್ವವನ್ನು ಅಲ್ಲಗಳೆಯಲಾಗದು. ಆ ದಿನವನ್ನು ‘ಮೂರ್ಖ’ರಿಗಾಗಿ ಮೀಸಲಿಟ್ಟಿರುವುದು ನಿಜಕ್ಕೂ ಅಭಿನಂದನಾರ್ಹವಾದ ಹಾಗೂ ಅತ್ಯಂತ ಸೂಕ್ತವಾದ ಸಂಗತಿ. ಜಗತ್ತಿನಲ್ಲಿ ಎಂಥೆಂಥವರಿಗೋ ಒಂದಿಡೀ ದಿನವನ್ನು ಮೀಸಲಿಡುವ ಪರಿಪಾಠ ಇದೆ. ‘ವ್ಯಾಲೆಂಟೈನ್ಸ್ ಡೇ’ ಅಂತೆ, ‘ಮದರ್ಸ್ ಡೇ’ ಅಂತೆ, ‘ಫಾದರ್ಸ್ ಡೇ’ (ಇದನ್ನು Father`s day ಎಂದು ಓದಿಕೊಳ್ಳಬೇಕಾಗಿ ವಿನಂತಿ, Fathers day ಎಂದು ಓದಿಕೊಂಡರೂ ಅದು ತಾಂತ್ರಿಕವಾಗಿ, ತಾತ್ವಿಕವಾಗಿ, ವಾಸ್ತವಿಕವಾಗಿ, ಕಾಲ್ಪನಿಕವಾಗಿ ತಪ್ಪಿಲ್ಲವಾದರೂ ‘ವ್ಯಾವಹಾರಿಕ’ವಾಗಿ ನಿಷಿದ್ಧ!), ‘ವುಮನ್ಸ್ ಡೇ’ ಇವೆಲ್ಲಾ ಇರಲಿ, ಅಂಥಾ ಮಹಾಮಾರಿ ಏಡ್ಸ್‌ಗೂ ಸಹ ಒಂದು ‘ಏಡ್ಸ್ ಡೇ’ ಎಂಬುದಿದೆ. ಅದೂ ಹೋಗಲಿ ಎಂದುಕೊಳ್ಳೋಣ ಎಂದರೆ Every dog has its day ಎನ್ನುತ್ತಾರೆ. ಹಂಗಾದರೆ ಪ್ರತಿಯೊಂದು ನಾಯಿಗೂ ಒಂದು ದಿನವಿದೆ, ಗಂಡಂದಿರಿಗೂ ಇದೆ!
ಹೀಗೆ ಜಗತ್ತಿನ ಸಣ್ಣ ಸಣ್ಣ ಗುಂಪುಗಳಿಗಾಗಿ ಎಂದೇ ಒಂದೊಂದು ದಿನವಿರುವಾಗ ಜಗತ್ತಿನ ಬಹುಸಂಖ್ಯಾತರ, majority ಜನರ ಹೆಸರಿನಲ್ಲಿ ವರ್ಷಕ್ಕೆ ಒಂದೇ ಒಂದು ದಿನವಾದರೂ ಬೇಡವೇ? ಜಗತ್ತಿನಲ್ಲಿ ಪ್ರಜಾಪ್ರಭುತ್ವವೇ ಅತ್ಯಂತ ಶ್ರೇಷ್ಠವಾದ ಪ್ರಭುತ್ವ ಎಂದು ನಮ್ಮನ್ನು ಮುನ್ನೂರು ಚಿಲ್ಲರೆ ವರ್ಷ ಆಳಿದ ಬ್ರಿಟೀಷರು ಹೇಳಿಕೊಟ್ಟದ್ದನ್ನು ಅವರಿಗಿಂತ ಚೆನ್ನಾಗಿ ನಂಬಿರುವ ಹಾಗೂ ಅದರ ಫಲವಾಗಿ ಪ್ರಸ್ತುತ ರಾಜಕಾರಣಿಗಳನ್ನು ಆರಿಸಿ ನಮ್ಮದು ಪ್ರಜಾಪ್ರಭುತ್ವ, ಪ್ರಭುತ್ವದಲ್ಲಿರುವವರ ಹಾಗೆಯೇ ನಮ್ಮ ದೇಶದ ಪ್ರಜೆಗಳೂ ಇರುವುದು ಎಂಬುದನ್ನು ಸಾರುತ್ತಿದ್ದೇವೆ. ಈ ಪ್ರಜಾಪ್ರಭುತ್ವದಲ್ಲಿ ಬಹುಸಂಖ್ಯಾತರಿಗೇ ಮೊದಲ ಮಣೆ. ನೂರು ಮಂದಿಯಲ್ಲಿ ತೊಂಭತ್ತು ಮಂದಿ ಸೂರ್ಯ ಪಶ್ಚಿಮದಲ್ಲಿ ಹುಟ್ಟುತ್ತಾನೆ ಎಂದರೆ ಅದೇ ಸತ್ಯ. ಹೀಗಿರುವಾಗ ಇಡೀ ಜಗತ್ತಿನಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿರುವ ಮೂರ್ಖರಿಗಾಗಿ ಮುನ್ನೂರ ಅರವತ್ತೈದು ಕಾಲು ದಿನಗಳಲ್ಲಿ ಅಟ್‌ಲೀಸ್ಟ್ ಒಂದು ದಿನವಾದರೂ ಬೇಡವೇ?
ಏಪ್ರಿಲ್ ಒಂದು ನಿಜಕ್ಕೂ ಮಹತ್ವದ ದಿನ. ಜಗತ್ತಿನಲ್ಲಿರುವ ಬಹುತೇಕರ ಪ್ರತಿಭೆಯನ್ನು ಗುರುತಿಸುವ ದಿನ. ತನ್ನ ಮೈಯಲ್ಲೇ ಕಸ್ತೂರಿಯಿದ್ದರೂ ಅದರ ಪರಿಮಳವನ್ನು ಹುಡುಕಿಕೊಂಡು ಕಸ್ತೂರಿ ಮೃಗ ಕಾಡೆಲ್ಲಾ ಸುತ್ತಿ ಕಂಗಾಲಾಗುತ್ತ, ಈ ಪರಿಮಳ ಅಗೋಚರವಾದದ್ದು ಸರ್ವವ್ಯಾಪಿಯಾದದ್ದು ಎಂಬ ನಿರ್ಧಾರಕ್ಕೆ ಬಂದಂತೆ ಜಗತ್ತಿನ ಜನರು ತಮ್ಮ ಕಿವಿಗಳೆರಡರ ಮಧ್ಯದೊಳಗೇ ಅಡಗಿರುವ ಮೂರ್ಖತನವನ್ನು ಕಾಣಲಾರದೆ ಹೊರಜಗತ್ತಿನಲ್ಲಿ ಮೂರ್ಖತನದ ಕೆಲಸಗಳನ್ನು ಗುರುತಿಸುತ್ತಾ, ಮೂರ್ಖರು ಯಾರು, ಮೂರ್ಖತನ ಎಲ್ಲಿದೆ ಅಂತ ಹುಡುಕುತ್ತಾ ಜಗತ್ತಿನೆಲ್ಲೆಡೆ ಅಲೆಯುತ್ತಿದ್ದಾನೆ. ತನ್ನೊಳಗಂತೂ ಇಲ್ಲ ಎಂದು ನೆಮ್ಮದಿಯಾಗಿರುತ್ತಾನೆ. ಕೆಲವೊಮ್ಮೆ ಅಪರೂಪಕ್ಕೆ ಜ್ಞಾನೋದಯವಾಗಿ ನನ್ನೊಳಗೇ ಅದು ಇದ್ದಿರಬಹುದಲ್ಲವಾ ಎಂಬ ಸಂಶಯ ನುಸುಳಿದರೂ ಕೂಡಲೇ ಆತನ ‘ಅಹಂ’ ಎಂಬ ಕಾವಲುಗಾರ ಅದನ್ನು ಹೊರಗಟ್ಟಿಬಿಡುತ್ತಾನೆ. ”ಮಗು ನೀನು ಮೂರ್ಖನಲ್ಲ. ನೀನು ಇಡೀ ಜಗತ್ತಿನಲ್ಲೇ ಅತ್ಯಂತ ಬುದ್ಧಿವಂತ. ಇಡೀ ಜಗತ್ತು ಹಗಲು ರಾತ್ರಿಯೆನ್ನದೆ ಕಾಯುತ್ತಿರುವ ಶ್ರೇಷ್ಠ ವ್ಯಕ್ತಿ ನೀನು. ನೀನು ಮೂರ್ಖನಾಗಲಿಕ್ಕೆ ಹೇಗೆ ಸಾಧ್ಯ? ಅದೋ ನೋಡು ಅಲ್ಲಿ ಕಾಣಿಸ್ತಾ ಇದ್ದಾನಲ್ಲ ಅವನು ಮೂರ್ಖ.” ಎನ್ನುತ್ತಾ ನೆತ್ತಿ ಸವರುತ್ತಾನೆ.
ಈ ನಮ್ಮ ನೆಮ್ಮೆಲ್ಲರ ಹೆಮ್ಮೆಯ ‘ಮೂರ್ಖರ ದಿನ’ ಆಗಮಿಸುತ್ತಿರುವ ಶುಭ ಮುಹೂರ್ತದಲ್ಲಿ ಜಗತ್ತಿನಲ್ಲಿ ನಮ್ಮ ನಿಮ್ಮೆಲ್ಲರ ಸಹೋದರ ಸಹೋದರಿಯರ ಬಗ್ಗೆ ಸ್ವಲ್ಪ ವಿಶ್ಲೇಷಿಸೋಣ. ಇಡೀ ಭೂಮಿಯ ಏಳುನೂರು ಕೋಟಿ ಜನ ಸಂಖ್ಯೆಯಲ್ಲಿ ಮೂರ್ಖರು ಎಷ್ಟು ಮಂದಿ ಎಂಬುದನ್ನು ಮೊದಲು ಪತ್ತೆ ಹಚ್ಚೋಣ. ಮನೆಯೇ ಮೊದಲ ಪಾಠ ಶಾಲೆ ಅಲ್ಲವೇ ಹಾಗಾಗಿ ನಮ್ಮ ಪತ್ತೇದಾರಿಕೆಯನ್ನು ಮನೆಯಿಂದಲೇ ಪ್ರಾರಂಭಿಸೋಣ. ಪ್ರೀತಿಯಿಂದ ಸಾಕಿ ಬೆಳೆಸಿದ ತಂದೆ ಮಗನನ್ನು “ಕತ್ತೆ ಮಗನೇ” ಎನ್ನುತ್ತಾನೆ. ಮನುಷ್ಯ ಎಸಗುತ್ತಿರುವ ಕ್ಷಮೆ ಇಲ್ಲದ ಅಪರಾಧಗಳಲ್ಲಿ ಇದೂ ಒಂದು. ತನ್ನಲ್ಲಿರುವ ಮೂರ್ಖತನವನ್ನು ಮರೆ ಮಾಚಲಿಕ್ಕೆ ಪ್ರಕೃತಿ ವಹಿಸಿದ ಪಾತ್ರವನ್ನು ಅನೂಚಾನವಾಗಿ ನಿರ್ವಹಿಸುತ್ತಿರುವ ಗಾರ್ಧಭ ಮಹಾಶಯನನ್ನು ಮೂರ್ಖ ಎಂದು ಬಿಂಬಿಸುತ್ತಿರುವುದು ಹಾಗೂ ಅಪರೂಪಕ್ಕೆ ಒಮ್ಮೆ ತನ್ನಂಥವನೇ ಆದ ಮಾನವನಲ್ಲಿ ಗೋಚರಿಸುವ ಮೂರ್ಖತನವನ್ನು ಹೆಸರಿಸಲಿಕ್ಕೆ ಗಾರ್ಧಭ ಮಹಾಶಯನ ಹೆಸರನ್ನೇ ಬಳಸುತ್ತಿರುವುದು ಅಕ್ಷಮ್ಯ ಅಪರಾಧ. ಇರಲಿ, ಅಪ್ಪ ತನ್ನ ಮಗನನ್ನು “ಕತ್ತೆ ಮಗನೇ” ಎಂದು ಸಂಬೋಧಿಸುತ್ತಾನೆ. ಅಂದರೆ ಆತನ ಮಗ ಮೂರ್ಖನ ಮಗ ಎಂದಾಯಿತು. ಆ ಮಗನಿಗೆ ತಾನೇ ನಿಜವಾದ ಅಪ್ಪ ಎಂಬ ನಂಬಿಕೆ ಇದ್ದರೆ, ಅಪ್ಪ ತನ್ನನ್ನೇ ಕತ್ತೆ ಎಂದು ಕರೆದುಕೊಂಡಂತಾಯಿತು. ಆ ಮೂಲಕ ತನ್ನ ಹೆಂಡತಿಯೂ ಕತ್ತೆ ಎಂದು ಸಾಬೀತು ಪಡಿಸಿದಂತಾಯಿತು. ಈ ‘ಕತ್ತೆಗಳಿಬ್ಬರ’ ಮಗ ಅಥವಾ ಮಗಳು ಮುಂದೆ ತಂದೆ ಅಥವಾ ತಾಯಿಯ ಪಾತ್ರವನ್ನು ಅಲಂಕರಿಸಿದಾಗ ಇದೇ ರೀತಿಯಾಗಿ ತಮ್ಮ ಮಕ್ಕಳನ್ನು ಸಂಬೋಧಿಸುವುದರಿಂದ ಅವರೂ ಮೂರ್ಖ ಮಹಾಸಭೆಯ ಸದಸ್ಯರಾಗುತ್ತಾರೆ.
ಇನ್ನು ಮನೆಯೆಂಬ ಮೊದಲ ಪಾಠ ಶಾಲೆಯಿಂದ ನಂತರದ ಪಾಠಶಾಲೆಯೆಂಬ ಮನೆಗೆ ಬರೋಣ. ತಿಂಗಳ ಮುವ್ವತ್ತು ದಿನಗಳಲ್ಲಿ ನಾಲ್ಕು ಭಾನುವಾರಗಳು, ನಾಲ್ಕು ಹಾಫ್ ಡೇ ಶನಿವಾರಗಳನ್ನು ಬಿಟ್ಟರೆ ಸಿಕ್ಕುವ ೨೨ ದಿನಗಳಲ್ಲಿ ಎರಡು ಸರಕಾರಿ ರಜೆಗಳು, ಒಂದು ರೀಜನಲ್ ರಜಾ ಸೇರಿಸಿ ಉಳಿದ ೧೯ ದಿನಗಳಲ್ಲಿ ಮೂರು ದಿನ ಟೆಸ್ಟು, ನಾಲ್ಕೈದು ದಿನ ಸ್ವಯಂ ಘೋಷಿತ ರಜೆಗಳನ್ನು ಕಳೆದರೆ ಮಿಕ್ಕುವ ಹನ್ನೊಂದು ದಿನಗಳಲ್ಲಿ ಒಂದು ತಾಸಿನ ಪಿರಿಯಡ್ ನಲ್ಲಿ ಕಾಲುಘಂಟೆ ಹಾಜರಾತಿಗಾಗಿ, ಇನ್ನರ್ಧ ಘಂಟೆ ಶಿಸ್ತಿನ ಬಗೆಗಿನ, ಸಮಯ ಪಾಲನೆ ಬಗೆಗಿನ ಭಾಷಣಕ್ಕಾಗಿ ವ್ಯಯವಾಗಿ ಇನ್ನುಳಿದ ಕಾಲುಘಂಟೆಯಲ್ಲಿ ಮಾಡಿದ ಪಾಠವನ್ನು ಮಕ್ಕಳು ತಪ್ಪಾಗಿ ಒಪ್ಪಿಸಿದರೆ ಶಿಕ್ಷಕರು ಮಕ್ಕಳನ್ನು ಬೈಯುತ್ತಾರೆ, “ಯಾವ ಕತ್ತೆ ನಿನಗೆ ಹೇಳಿ ಕೊಟ್ಟನೋ”. ಈ ಸ್ವಯಂ ಸಂಬೋಧನೆಯಿಂದಾಗಿ ಶಿಕ್ಷಕರು ಹಾಗೂ ಅವರ ಶಿಷ್ಯ ಶಿರೋಮಣಿಗಳಿಗೆ ಮೂರ್ಖ ಸಂಘದ ಸದಸ್ಯತ್ವ ನೀಡಲು ಅಡ್ಡಿಯಿಲ್ಲ.
ಹೀಗೇ ಸಾಗುತ್ತಾ, ಆಫೀಸಿಗೆ ಬನ್ನಿ… “ನಿನ್ನಂಥ ಮೂರ್ಖನನ್ನ ಕೆಲಸಕ್ಕೆ ಇಟ್ಟುಕೊಂಡಿದ್ದೀನಲ್ಲಾ, ನನಗೆ ಬುದ್ಧಿಯಿಲ್ಲ” ಎಂದು ಬಾಸೂ, “ನಿನ್ನ ಹತ್ರ ಕೆಲ್ಸ ಮಾಡ್ತಿದ್ದೀನಲ್ಲಾ, ನನ್ನಂಥ ಮೂರ್ಖ ಬೇರೊಬ್ಬನಿಲ್ಲ” ಅಂತ ಕೆಲಸಗಾರರೂ ಹೇಳುವುದರಿಂದ ಅವರೂ ಗಾಂಪರ ಗುಂಪಿನ ಹೆಮ್ಮೆಯ ಪ್ರಜೆಗಳಾಗುತ್ತಾರೆ. “ಈ ನಾಡಿನಲ್ಲಿ ಹುಟ್ಟಿದೆನಲ್ಲಾ, ನನಗೆ ಬುದ್ಧಿಯಿಲ್ಲ” ಎನ್ನುವ ಜನನಾಯಕರು, “ನಿಮ್ಮ ಮುಂದೆ ಅರಚುತ್ತಿದ್ದೇನಲ್ಲಾ, ಕತ್ತೆ ಮುಂದೆ ಕಿಂದರಿ ಬಾರಿಸಿದ ಹಾಗೆ” ಎನ್ನುವ ಸ್ವಯಂ ಘೋಷಿತ ಸಂಗೀತಗಾರ, “ಕತ್ತೇಗೇನು ಗೊತ್ತು ಕಸ್ತೂರಿ ಪರಿಮಳ” ಎನ್ನುವ ಕವಿಗಳು ಸಂಬೋಧಿಸುವ ಜನಸಮೂಹವೆಲ್ಲಾ ಮೂರ್ಖರ ಗಣತಿಯ ಲೆಕ್ಕದಲ್ಲಿ ಸೇರುತ್ತಾರೆ.
ಇನ್ನು, “ಪ್ರೀತಿ ಕುರುಡು. ಪ್ರೀತಿಗೆ ಕಣ್ಣಿಲ್ಲ… ಪ್ರೀತಿಸುವವರನ್ನು ಹೀಗಳೆಯುವ ಜಗತ್ತು ಮೂರ್ಖ” ಎನ್ನುವ ಅಮರ ಪ್ರೇಮಿಯ ಪ್ರಕಾರ ತಮ್ಮ ಜೋಡಿಯನ್ನು ಬಿಟ್ಟು ಉಳಿದ ಜಗತ್ತೆಲ್ಲಾ ‘ಮೂರ್ಖ’ ಲೇಬಲ್ಲಿಗೆ ಅರ್ಹ. “ಪ್ರೀತಿಗೆ ಕಣ್ಣು ಮಾತ್ರವಲ್ಲ ಅದಕ್ಕೆ ಮೂಗೂ ಇಲ್ಲ, ಕಿವಿಯೂ ಇಲ್ಲ, ಮೆದುಳಂತೂ ಮೊದಲೇ ಇಲ್ಲ, ಅದಕ್ಕಿರುವುದು ಬರೀ ಬಾಯಿ, ಹೊಟ್ಟೆ ಹಾಗೂ ಅವೆರಡರೊಳಗಿರುವ ಅಗಾಧ ಹಸಿವು ಮಾತ್ರ. ಈ ಪ್ರೇಮಿಗಳು ಭ್ರಾಂತುಗಳು” ಎನ್ನುವವರ ಪ್ರಕಾರ ಪ್ರೇಮದಲ್ಲಿ ಬಿದ್ದಿರುವವರು, ಎದ್ದಿರುವವರು ಎಲ್ಲರೂ ಮೂರ್ಖರು.
ಅವರನ್ನು ಮೊದಲಿಗೆ ಇಡೀ ಜಗತ್ತೇ ಹುಚ್ಚರು ಅಂತ ಕರೆದಿತ್ತು. ಲಿಯನಾರ್ಡೋ ಡವಿಂಚಿ, ಗೆಲಿಲಿಯೋ, ಐನ್ ಸ್ಟೈನ್ ಮುಂತಾದ ಕನಸುಗಾರ ಜೀನಿಯಸ್ಸುಗಳನ್ನು ಜಗತ್ತು ಮೂರ್ಖರು ಎಂದಿತ್ತು. ಗೆಲಿಲಿಯೋನನ್ನು ಕತ್ತೆ ಮೇಲೆ ಕೂರಿಸಿ ಮೆರವಣಿಗೆ ಮಾಡಿಸಿತು ಚರ್ಚು. ಜಗತ್ತೇ ಅಂತಹ ಜೀನಿಯಸ್ಸುಗಳನ್ನು ಹುಚ್ಚರು ಅಂತ ಕರೆದಿತು. ಅನಂತರ ಇಡೀ ಜಗತ್ತಿನ ಕಣ್ಣು ತೆರೆದ ಮೇಲೆ ಅವರನ್ನು ಮಹಾನ್ ಬುದ್ಧಿವಂತರು ಎಂದು ಕರೆದು ಪ್ರಾಯಶ್ಚಿತ ಮಾಡಿಕೊಂಡಿತು. ಆ ಮೂಲಕ ಹುಚ್ಚರು ಅವರಲ್ಲ, ಜಗತ್ತು ಎಂದು ಒಪ್ಪಿಕೊಂಡಿತು. ತಾವು ಮೂರ್ಖರು ಅವರು ಜೀನಿಯಸ್ಸುಗಳು ಎಂದು ಜಗತ್ತೇ ಹೆಮ್ಮೆಯಿಂದ ಹೇಳಿಕೊಂಡಿತು.
ಇನ್ನು ನಿಮ್ಹಾನ್ಸ್ ನಿವಾಸಿಗಳನ್ನು ಹುಚ್ಚರು, ಮೂರ್ಖರು ಅನ್ನುತ್ತದೆ ಜಗತ್ತು. ಅಲ್ಲಿರುವ ಯಾರಿಗೂ ಬುದ್ಧಿ ಸರಿಯಿಲ್ಲ ಎನ್ನುತ್ತದೆ ಹೊರಗಿರುವ ಜನ ಸಮೂಹ. ಹೊರಗೆ ನಿಂತು ನೋಡುವವರಿಗೆ ಹುಚ್ಚಾಸ್ಪತ್ರೆಯ ಒಳಗಿರುವವರೆಲ್ಲರೂ ಮೂರ್ಖರಾಗಿ ಕಾಣುತ್ತಾರೆ, ಅದೃಷ್ಟವಶಾತ್ ಡಾಕ್ಟರ್, ನರ್ಸುಗಳನ್ನು ಹೊರತು ಪಡಿಸಿ. ಆದರೆ ಆಸ್ಪತ್ರೆಯ ಒಳಗಿರುವ so called ಮೂರ್ಖರು ಹೇಳುವ ಪ್ರಕಾರ ತಾವು ಸಾಚಾಗಳು, ತಮ್ಮನ್ನು ಇಲ್ಲಿ ಕೂಡಿ ಹಾಕಿರುವ ಜಗತ್ತೇ ಹುಚ್ಚು. ಈ ಆಸ್ಪತ್ರೆಯ ಹೊರಗಿರುವವರೆಲ್ಲರೂ ಹುಚ್ಚರು. ಐನ್ ಸ್ಟೀನ್‍ನ ರಿಲೇಟಿವಿಟಿ ಸಿದ್ಧಾಂತದ ಪ್ರಕಾರ ಬೇರೆ ಬೇರೆ ನೆಲೆಗಳಲ್ಲಿ ನೋಡುವಾಗ ಸತ್ಯ ಬೇರೆ ಬೇರೆ ರೀತಿಯಾಗಿ ಕಾಣಿಸುತ್ತದೆ. ಹಾಗಾದರೆ ಎಲ್ಲವೂ ಸತ್ಯವೇ!
ಈ ಎಲ್ಲಾ ವಿಶೇಷ ಸಂಶ್ಲೇಷಣೆ-ವಿಶ್ಲೇಷಣೆಗಳನ್ನು ಪರಿಶೀಲಿಸಿದಾಗ ಏಪ್ರಿಲ್ ಒಂದು ಎಷ್ಟು ಮಹತ್ವದ ದಿನ ಎಂಬುದರ ಅರಿವಾಗದಿರದು. ಇದು ಎಲ್ಲರ ದಿನ ಆದರೂ ಯಾರ ದಿನವೂ ಅಲ್ಲ. ಎಲ್ಲರಿಗೂ ಏಪ್ರಿಲ್ ಒಂದು ಅಂದರೆ ಒಳಗೊಳಗೇ ಖುಶಿ ಆದರೆ ಯಾರೂ ತಮ್ಮನ್ನು ತಾವು ವಿಶ್ ಮಾಡಿಕೊಳ್ಳಲಾರರು. ಆದರೆ ನಗೆ ಸಾಮ್ರಾಟರಿಗೆ ಆ ಚಿಂತೆ ಇಲ್ಲ, ಅವರು ಸಂತೋಷವಾಗಿ, ಹೆಮ್ಮೆಯಿಂದೊಡಗೂಡಿ ವಿಶ್ ಮಾಡಿಕೊಳ್ಳುತ್ತಿದ್ದಾರೆ, ‘Happy April First’!
ಅವರು ಸ್ವರ್ಗದ ಮಕ್ಕಳೇ!
Posted ಏಪ್ರಿಲ್ 24, 2008
on:ತಾವು ನೋಡಿದ ಮಾಜಿದ್ ಮಜಿನಿ ನಿರ್ದೇಶನದ ಚಿತ್ರ children Of Heaven ಬಗೆಗಿನ ತಮ್ಮ ಅನುಭವವನ್ನು ಇಲ್ಲಿ ದಾಖಲಿಸಿರುವವರು ಚಿತ್ರ.
ಕೆಲವು ಮಕ್ಕಳ ಚಿತ್ರಗಳೇ ಹಾಗಿರುತ್ತವೆ. ಅವು ಮಕ್ಕಳಿಗೆ ಮಾತ್ರ ಮನರಂಜನೆಯ, ಬೋಧನೆಯ ನೀಡುವುದಿಲ್ಲ. ಅದರ ಜೊತೆಗೇ ದೊಡ್ಡವರನ್ನೂ ಆಕರ್ಷಿಸುತ್ತವೆ. ಎಲ್ಲಾ ವಯೋಮಾನದವರನ್ನೂ ಮರುಳು ಮಾಡುತ್ತವೆ. ವಯಸ್ಕರಿಗೆ ತಮ್ಮ ಬಾಲ್ಯದ ನವಿರಾದ ನೆನಪುಗಳನ್ನು ಹೆಕ್ಕಿಕೊಡುತ್ತವೆ. ಕಳೆದು ಹೋದ ಬಾಲ್ಯದ ಮುಗ್ಧತೆಯನ್ನು, ಅಭೋಧತೆಯನ್ನು ನೆನಪಿಸಿ ಕಣ್ಣು ತೇವವಾಗಿಸುತ್ತವೆ, ಮನಸ್ಸನ್ನು ಎಲ್ಲಾ ಬಗೆಯ ಒತ್ತಡಗಳಿಂದ ಬಿಡಿಸಿ ಸಡಿಲಾಗಿಸುತ್ತವೆ. ಅಂಥದ್ದೊಂದು ಸಿನೆಮಾವನ್ನು ಜಗತ್ತಿಗೆ ಕಟ್ಟಿ ಕೊಟ್ಟವ ಮಾಜಿದ್ ಮಜಿದಿ. ಪರ್ಶಿಯನ್ ಭಾಷೆಯಲ್ಲಿ ಆತ ನಿರ್ಮಿಸಿದ ಸುಂದರ ದೃಶ್ಯಕಾವ್ಯದ ಹೆಸರೇ ‘Children of Heaven’!
ಅವು ಟೆಹ್ರೇನ್‌ನ ಬಡವರ ಮನೆಗಳಿರುವ ಕಾಲೊನಿಗಳು. ಒರಟೊರಟಾದ ಗೋಡೆಗಳನ್ನು ಹೊಂದಿರುವ ಪುಟ್ಟ ಪುಟ್ಟ ಮನೆಗಳು ಯಾವ ನಿಯಮ, ಲೆಕ್ಕಾಚಾರವಿಲ್ಲದೆ ಚಾಚಿಕೊಂಡಿವೆ. ಮನೆಗಳ ಗೋಡೆಗಳ ನಡುವೆ ಇರುವ ಇರುಕಿನಂತಹ ಜಾಗವೇ ಜನರ ಓಡಾಟಕ್ಕೂ, ಹರಿಯುವ ಕೊಚ್ಚೆ ನೀರಿಗೂ ಅವಕಾಶ ಮಾಡಿಕೊಟ್ಟಿರುತ್ತದೆ. ಇಂಥ ಜನವಸತಿ ಪ್ರದೇಶದಲ್ಲಿ ಒಂದು ಸಾಮಾನ್ಯ ಮನೆ. ಅಲ್ಲಿ ಇಬ್ಬರು ಮಕ್ಕಳಿರುತ್ತಾರೆ. ಆತ ಅಲಿ. ಅವನ ತಂಗಿ ಜಾಹ್ರಾ.
ತನ್ನ ತಂಗಿಯ ಹರಿದ ಶೂಗಳನ್ನು ಚಮ್ಮಾರನ ಬಳಿ ರಿಪೇರಿಗಾಗಿ ಕೊಂಡೊಯ್ಯುತ್ತಾನೆ ಆಲಿ. ಚಮ್ಮಾರ ಗುಲಾಬಿ ಬಣ್ಣದ ಆ ಪುಟ್ಟ ಶೂಗಳನ್ನು ಹೊಲಿಯುವ ಸೀನಿನೊಂದಿಗೆ ಸಿನೆಮಾ ನಮ್ಮ ಮುಂದೆ ತೆರೆದುಕೊಳ್ಳುತ್ತದೆ. ತಂಗಿಯ ಶೂ ರೆಡಿ ಮಾಡಿಸಿಕೊಂಡು ಆಲಿ ಹೊರಡುತ್ತಾನೆ, ಮನೆಗೆ ರೊಟ್ಟಿಯನ್ನು ಕೊಂಡುಕೊಳ್ಳುತ್ತಾನೆ, ತರಕಾರಿ ಕೊಳ್ಳಲು ಅಂಗಡಿಯೊಳಕ್ಕೆ ಹೋಗುವಾಗ ರೊಟ್ಟಿಯ ಗಂಟಿನ ಜೊತೆಗೆ ಶೂಗಳಿರುವ ಚೀಲವನ್ನೂ ಹೊರಗಿಡುತ್ತಾನೆ. ಆತ ಅಗ್ಗದ ಬೆಲೆಯ ಆಲೂಗಡ್ಡೆಗಳನ್ನು ಆಯುವಲ್ಲಿ ತಲ್ಲೀನನಾಗಿರುವಾಗ ಮಾರುಕಟ್ಟೆಯಲ್ಲಿ ಕಸವನ್ನು ಆಯ್ದುಕೊಂಡು ಹೋಗುವ ಗಾಡಿಯವನು ಆ ತರಕಾರಿ ಅಂಗಡಿಯ ಉಳಿದೆಲ್ಲಾ ಕಸದ ಜೊತೆಗೆ ಈ ಹುಡುಗ ಇಟ್ಟಿದ್ದ ಶೂಗಳ ಚೀಲವನ್ನೂ ಗಾಡಿಗೆ ತುಂಬಿಕೊಂಡು ಹೊರಟು ಹೋಗುತ್ತಾನೆ.
ತರಕಾರಿ ಕೊಂಡು ಹೊರಬಂದು ನೋಡಿದ ಹುಡುಗನಿಗೆ ಶೂಗಳಿರುವ ಚೀಲ ಕಾಣುವುದಿಲ್ಲ. ಕಂಗಾಲಾದ ಆತ ತರಕಾರಿ ಜೋಡಿಸಿಟ್ಟ ಡಬ್ಬಗಳ ನಡುವೆ ಚೀಲಕ್ಕಾಗಿ ತಡಕಾಡುವಾಗ ಜೋಡಿಸಿಟ್ಟ ತರಕಾರಿಗಳೆಲ್ಲಾ ಕೆಳಕ್ಕೆ ಬಿದ್ದು ಮಣ್ಣುಪಾಲಾಗುತ್ತವೆ. ಇದನ್ನೆಲ್ಲಾ ಕಂಡ ಅಂಗಡಿಯವ ಆಲಿಯನ್ನು ಓಡಿಸುತ್ತಾನೆ.
ಇತ್ತ ಮನೆಗೆ ಬಂದ ಆಲಿ ಶೂ ಕಳೆದುಹೋದ ವಿಚಾರವನ್ನು ತಂಗಿ ತಿಳಿಸುತ್ತಾನೆ. ಆಕೆಯ ಕಣ್ಣು ಹನಿಗೂಡಿದ್ದನ್ನು ಕಂಡು ಈತನೂ ಕಣ್ಣೀರಾಗುತ್ತಾನೆ. ಆದರೆ ಮನೆಯ ಕಿತ್ತು ತಿನ್ನುವ ಬಡತನದ ಅರಿವಿದ್ದುದರಿಂದ ಶೂ ಕಳೆದ ವಿಚಾರವನ್ನು ದೊಡ್ಡವರಿಗೆ ತಿಳಿಸಿದರೆ ಏಟು ಬೀಳಬಹುದು ಎಂದು ಹೆದರಿ ಸುಮ್ಮನಾಗುತ್ತಾರೆ. ಆ ರಾತ್ರಿ ಒಂದೇ ಕೋಣೆಯ ಮನೆಯಲ್ಲಿ ಅಣ್ಣ-ತಂಗಿ ಓದುತ್ತಾ ಕುಳಿತಿರುವಾಗ, ಶೂ ಕಳೆದ ವಿಚಾರವನ್ನು ಅಪ್ಪ, ಅಮ್ಮರಿಗೆ ತಿಳಿಯದ ಹಾಗೆ ತಮ್ಮ ನೋಟ್ ಬುಕ್ಕುಗಳಲ್ಲಿ ಬರೆದು ಪರಸ್ಪರ ಬದಲಾಯಿಸಿಕೊಳ್ಳುತ್ತಾ ಒಂದು ತೀರ್ಮಾನಕ್ಕೆ ಬರುತ್ತಾರೆ. ಅಣ್ಣನ ಬಿಳಿಯ ಕ್ಯಾನ್ವಾಸ್ ಶೂಗಳನ್ನೇ ಜಾಹ್ರಾ ತನ್ನ ಬೆಳಗಿನ ಶಾಲೆಗೆ ತೊಟ್ಟುಕೊಂಡು ಹೋಗುವುದು, ಆಕೆಯ ಶಾಲೆ ಬಿಟ್ಟೊಡನೆಯೇ ಓಡಿ ಬಂದು ಮಾರ್ಗ ಮಧ್ಯದಲ್ಲೇ ಶೂಗಳನ್ನು ಅಣ್ಣನಿಗೆ ಕೊಡುವುದು. ಆತ ಅನಂತರ ತನ್ನ ಮಧ್ಯಾನದ ತರಗತಿಗೆ ಹೋಗುವುದು. ಪುಟ್ಟ ಮಕ್ಕಳು ಇಂಥದ್ದೊಂದು ಗುಪ್ತ ಒಪ್ಪಂದವನ್ನು ಮಾಡಿಕೊಳ್ಳುತ್ತಾರೆ. ಇದಕ್ಕೆ ಒಪ್ಪಿಕೊಂಡದ್ದಕ್ಕೆ ಜಾಹ್ರಾಗೆ ಅಣ್ಣನಿಂದ ಹೊಸ ಪೆನ್ಸಿಲ್ಲಿನ ಉಡುಗೊರೆಯೂ ಸಿಕ್ಕುತ್ತದೆ!
ತಮ್ಮ ಒಪ್ಪಂದದ ಪ್ರಕಾರ ಆ ಇಬ್ಬರು ಮಕ್ಕಳು ಶಾಲೆಗೆ ಹೋಗಿಬರುತ್ತಿರುತ್ತಾರೆ. ಬಣ್ಣಬಣ್ಣದ, ಚೆಂದದ ಶೂಗಳನ್ನು ತೊಟ್ಟ ಸಹಪಾಠಿಗಳ ನಡುವೆ ಹರಿದ, ಕೊಳಕಾದ ಕ್ಯಾನ್ವಾಸ್ ಶೂ ತೊಟ್ಟ ಜಾಹ್ರಾ ಸಂಕೋಚದ ಮುದ್ದೆಯಾಗಿರುತ್ತಾಳೆ. ಕ್ರಮೇಣ ಆಕೆಗೆ ಅದು ಒಗ್ಗಿ ಹೋದರೂ ಪ್ರತಿದಿನ ಶಾಲೆಯ ಅಸೆಂಬ್ಲಿಯ ಸಾಲಿನಲ್ಲಿ ನಿಂತಾಗ ಎಲ್ಲಾ ಹುಡುಗಿಯರ ಕಾಲುಗಳನ್ನು ಪರೀಕ್ಷಿಸುವ ಚಟ ಮಾತ್ರ ಬಿಟ್ಟುಹೋಗುವುದಿಲ್ಲ. ಪ್ರತಿದಿನ ಮಾರ್ಗ ಮಧ್ಯದಲ್ಲಿ ತಂಗಿಯಿಂದ ತನ್ನ ಶೂಗಳನ್ನು ಪಡೆದು ಆಲಿ ಮೈಲು ದೂರದ ಶಾಲೆಗೆ ಓಡಿ ಹೋಗುವಷ್ಟರಲ್ಲಿ ತರಗತಿಗಳು ಶುರುವಾಗಿಬಿಟ್ಟಿರುತ್ತವೆ. ಒಮ್ಮೆ ಶಾಲೆ ಮುಗಿಸಿಕೊಂಡು ಅವಸರದಲ್ಲಿ ಓಡಿಬರುತ್ತಿರುವಾಗ ಜಾಹ್ರಾಳ ಕಾಲಿನಿಂದ ಜಾರಿ ಶೂ ಚರಂಡಿಯಲ್ಲಿ ಬಿದ್ದು ಬಿಡುತ್ತದೆ. ಪುಟ್ಟ ಹುಡುಗಿ ವೇಗವಾಗಿ ಹರಿಯುವ ಚರಂಡಿಯ ನೀರಿನಲ್ಲಿ ತೇಲುತ್ತಾ ಹೋದ ತನ್ನ ಶೋಗಳನ್ನಟ್ಟಿಕೊಂಡು ಓಡುತ್ತಾಳೆ. ಅಂದು ಅಣ್ಣನಿಗೆ ಶೂ ಒಪ್ಪಿಸಲು ತಡವಾಗಿಬಿಡುತ್ತದೆ. ಆತ ಶಾಲೆಗೆ ಹೋಗುವುದೂ ಇನ್ನೂ ತಡವಾಗುತ್ತದೆ. ಶಾಲೆಯ ಹೆಡ್ ಮಾಸ್ಟರ್ ಆತನಿಗೆ ಒಂದು ವಾರ್ನಿಂಗ್ ಕೊಟ್ಟು ಇನ್ನೊಮ್ಮೆ ಆತ ತಡವಾಗಿ ಬರುವುದನ್ನು ಕಂಡರೆ ಶಾಲೆಯ ಒಳಗೆ ಬಿಟ್ಟುಕೊಳ್ಳುವುದಿಲ್ಲ ಎಂದು ಗದರುತ್ತಾನೆ. ಆದರೆ ತಮ್ಮಿಬ್ಬರ ನಡುವಿನ ಗುಪ್ತ ಒಪ್ಪಂದವನ್ನು ಯಾರಿಗೂ ಬಿಟ್ಟುಕೊಡಬಯಸದ ಆಲಿ ಸತ್ಯ ಸಂಗತಿಯನ್ನು ಬಾಯ್ಬಿಡುವುದಿಲ್ಲ.
ಎಲ್ಲಾ ಸಹಪಾಠಿಗಳ ಕಾಲುಗಳನ್ನು ಪರೀಕ್ಷಿಸುತ್ತಾ ಅವರ ಶೂಗಳನ್ನು ನೋಡುವ ಅಭ್ಯಾಸ ಬೆಳೆಸಿಕೊಂಡ ಜಾಹ್ರಾಳಿಗೆ ಅದೊಂದು ದಿನ ತನ್ನ ಕಳೆದುಹೋದ ಶೂಗಳು ಕಂಡುಬಿಡುತ್ತವೆ. ಆದರೆ ಬೇರೊಬ್ಬಾಕೆಯ ಕಾಲುಗಳಲ್ಲಿ! ಸರಿ ಆಕೆ ಆ ಶೂಗಳ ಒಡತಿಯನ್ನೇ ಹಿಂಬಾಲಿಸಿ ಆಕೆಯ ಮನೆಯನ್ನು ತಿಳಿದುಕೊಂಡು ಬಂದು ಅಣ್ಣನಿಗೆ ತಿಳಿಸುತ್ತಾಳೆ. ಶಾಲೆ ಮುಗಿದ ತಕ್ಷಣ ಅಣ್ಣ-ತಂಗಿ ಆ ಶೂಗಳ ಅನಧಿಕೃತ ಮಾಲೀಕಳ ಮನೆಯ ಬಳಿಗೆ ಹೋಗುತ್ತಾರೆ. ಆದರೆ ಆ ಮನೆಯವರ ಸ್ಥಿತಿಯನ್ನು ಕಂಡು ಶೂ ಕೇಳುವ ಮನಸ್ಸಾಗುವುದಿಲ್ಲ. ಆ ಹುಡುಗಿಯ ಕುರುಡ ತಂದೆ ಭಿಕ್ಷೆಗೆ ಹೋಗುವುದನ್ನು ನೋಡಿದ ಅಣ್ಣ-ತಂಗಿಗೆ ಮನಸ್ಸು ಕರಗುತ್ತದೆ.
ಈ ನಡುವೆ ಆ ಕುರುಡನ ಮಗಳಿಗೂ ಜಾಹ್ರಾಳಿಗೂ ಗೆಳೆತನ ಬೆಳೆಯುತ್ತದೆ. ಅವರಿಬ್ಬರೂ ಒಳ್ಳೆಯ ಗೆಳತಿಯರಾಗುತ್ತಾರೆ. ಇದೆಲ್ಲವನ್ನು ಆ ಪುಟ್ಟ ಮಕ್ಕಳಿಬ್ಬರು ಯಾರಿಗೂ ತಿಳಿಯದ ಹಾಗೆ ನೋಡಿಕೊಂಡಿರುತ್ತಾರೆ. ಹೀಗಿರುವಾಗ ಒಂದು ದಿನ ಆಲಿಯ ಶಾಲೆಯಲ್ಲಿ ಪ್ರತಿಷ್ಟಿತವಾದ ಮ್ಯಾರಥಾನ್ ಓಟದ ಸ್ಪರ್ಧೆಯ ಬಗ್ಗೆ ಮಾಹಿತಿ ದೊರೆಯುತ್ತದೆ. ಶ್ರೀಮಂತ ಹಾಗೂ ಮೇಲ್ವರ್ಗದ ಜನರ ಮಕ್ಕಳೇ ಹೆಚ್ಚಿರುವ ಆ ರೇಸಿನಲ್ಲಿ ಮೂರನೆಯ ಬಹುಮಾನವಾಗಿ ಹೊಚ್ಚ ಹೊಸ ಶೂಗಳನ್ನು ಕೊಡುತ್ತಾರೆ ಎಂಬುದನ್ನು ಓದಿಯೇ ಆಲಿಯ ಕಣ್ಣುಗಳು ಅರಳುತ್ತವೆ. ತನ್ನ ದೈಹಿಕ ಶಿಕ್ಷಕನ ಮನ ಒಲಿಸಿ ಆತ ಓಟದ ಸ್ಪರ್ಧೆಗೆ ಆಯ್ಕೆಯಾಗುತ್ತಾನೆ. ಪ್ರತಿದಿನ ಮೈಲುದೂರ ಓಡಿಯೇ ಶಾಲೆ ತಲುಪುತ್ತಿದ್ದ ಆತನ ಕಾಲುಗಳ ಸಾಮರ್ಥ್ಯ ಕಂಡು ದೈಹಿಕ ಶಿಕ್ಷಕನೇ ದಂಗು ಬಡಿದುಹೋಗಿರುತ್ತಾನೆ.
ಆ ಪ್ರತಿಷ್ಟಿತ ರೇಸಿನಲ್ಲಿ ತನ್ನ ತಂಗಿಗಾಗಿ, ಆಕೆಗೊಂದು ಜೊತೆ ಒಳ್ಳೆಯ ಹೊಸ ಶೂ ಕೊಡುವುದಕ್ಕಾಗಿ ಈ ಅಣ್ಣ ಓಡುತ್ತಾನೆ. ತನ್ನ ಬಡತನ, ತನ್ನ ಅಸಹಾಯಕತೆ, ತನ್ನ ಹರಿದ ಕ್ಯಾನ್ವಾಸ್ ಶೂ, ತನ್ನ ಅನಾಥ ಪ್ರಜ್ಞೆ ಎಲ್ಲವೂ ಆತನ ಕಾಲುಗಳಿಗೆ ದೈತ್ಯ ಶಕ್ತಿಯನ್ನು ಕೊಡುತ್ತವೆ. ಹಿಂದಕ್ಕೆಳೆದು ಕಾಲು ಕೊಟ್ಟು ಬೀಳಿಸಿದ ಹುಡುಗನನ್ನೂ ದಾಟಿ ಮುಂದೆ ಓಡುತ್ತಾನೆ. ಆಕಸ್ಮಿಕವಾಗಿ ಮೊದಲನೆಯ ಸ್ಥಾನವನ್ನು ಪಡೆದುಬಿಡುತ್ತಾನೆ! ಆದರೆ ಆತನ ಮುಖ ಅರಳುವುದಿಲ್ಲ. ಮೊದಲ ಬಹುಮಾನವನ್ನು ಪಡೆದುಕೊಳ್ಳುತ್ತಿರುವಾಗ ಆತನ ಕಣ್ಣುಗಳು ಮೂರನೆಯ ಬಹುಮಾನವಾದ ಶೂಗಳ ಮೇಲೆಯೇ ನೆಟ್ಟಿರುತ್ತವೆ. ಉಳಿದೆಲ್ಲಾ ಸ್ಪರ್ಧಿಗಳಿಗೆ ಓಟದ ನಂತರ ಗ್ಲೂಕೋಸು ಕುಡಿಸುತ್ತಾ ಅವರ ದಣಿದ ಪುಟ್ಟ ಕಾಲುಗಳನ್ನು ನೀವಲು ತಾಯಿ ತಂದೆಯರಿದ್ದಾರೆ. ಆದರೆ ಈ ಅಲಿಗಾದರೋ? ಆತನನ್ನು ತಲೆ ಮೇಲೆ ಹೊತ್ತು ದೈಹಿಕ ಶಿಕ್ಷಕ ಸಂಭ್ರಮಿಸುತ್ತಾನೆ. ಆತನ ಶಾಲೆಯ ಹೆಡ್ ಮಾಸ್ಟರ್ ಆತನೊಂದಿಗೆ ನಿಂತು ಫೋಟೊಗೆ ಫೋಸು ಕೊಡುತ್ತಾನೆ.
ಅಲಿ ಬರುವುದನ್ನೇ ಕುತೂಹಲದಿಂದ ಕಾಯುತ್ತಿದ್ದ ಜಾಹ್ರಾಳಿಗೆ ಆತನ ಮುದುಡಿದ ಮುಖ ಕಂಡು ನಿರಾಶೆಯಾಗುತ್ತದೆ. ಆಕೆ ತನಗಿನ್ನೆಂದೂ ಶೂ ಸಿಕ್ಕುವುದಿಲ್ಲವೆಂದು ಭಾವಿಸಿ ಒಳಕ್ಕೆ ಹೋಗುತ್ತಾಳೆ. ಓಟದ ಬಿರುಸಿನಲ್ಲಿ ಸಂಪೂರ್ಣವಾಗಿ ಜಖಂ ಗೊಂಡ ತನ್ನ ಶೂಗಳಿಂದ ಕಾಲುಗಳನ್ನು ಬಿಡಿಸುತ್ತಾನೆ ಅಲಿ. ಆ ಪುಟ್ಟ ಪಾದಗಳ ಮೇಲೆ ನಾಲ್ಕಾಣೆ ನಾಣ್ಯದ ಗಾತ್ರದ ಗಾಯಗಳಾಗಿರುತ್ತವೆ. ಆದರೆ ಆತನ ನೋವನ್ನು ಕೇಳುವವರಿಲ್ಲ. ಆತ ತನ್ನ ಮನೆಯೆದುರಿನ ಪುಟ್ಟ ನೀರಿನ ಟ್ಯಾಂಕಿನಲ್ಲಿ ತನ್ನ ಗಾಯಗೊಂಡ ಪಾದಗಳನ್ನು ಮುಳುಗಿಸುತ್ತಾನೆ. ಆತನಿಂದ ಪ್ರತಿದಿನ ಆಹಾರ ಪಡೆಯುವ ಪುಟ್ಟ ಪುಟ್ಟ ಮೀನುಗಳು ಆತನ ಗಾಯದ ಚರ್ಮವನ್ನು ನೇವರಿಸಿ ಆತನಿಗೆ ಹಿತವನ್ನು ನೀಡಲು ತವಕಿಸುವಂತೆ ಮುತ್ತಿಕೊಳ್ಳುತ್ತವೆ.
ಈ ಮಧ್ಯೆ ಒಂದು ಪುಟ್ಟ ಝಲಕ್‌ನ ಹಾಗೆ ಅಲಿ ಹಾಗೂ ಜಾಹ್ರಾಳ ತಂದೆ ಕಾಣಿಸುತ್ತಾನೆ. ಆತನ ಹಳೆಯ ಸೈಕಲ್ಲಿನ ಹಿಂಬದಿಯ ಕ್ಯಾರಿಯರ್‌ನಲ್ಲಿ ಎರಡು ಜೊತೆ ಪುಟ್ಟ ಶೂಗಳಿರುವುದು ಕಾಣಿಸುತ್ತದೆ!
ಗ್ರಾಮೀಣ ಹಾಗೂ ಬಡ ಮಕ್ಕಳು ತಮ್ಮ ಪ್ರಕೃತಿದತ್ತವಾದ ಪ್ರತಿಭೆಯಿಂದ ಸಾಧನೆ ಮಾಡುವ ಎಷ್ಟೋ ಸಿನೆಮಾಗಳನ್ನು ನೋಡಿದ್ದೇನೆ. ಆದರೆ ಈ ಚಿತ್ರ ಅವುಗಳಲ್ಲೆಲ್ಲಾ ವಿಶಿಷ್ಟವಾಗಿ ಕಾಣುವುದಕ್ಕೆ ಕಾರಣ ಇಲ್ಲಿ ಮಕ್ಕಳ ಜಗತ್ತಿನ ಮುಗ್ಧತೆ ಬೇರಾವ ಆದರ್ಶ, ಸಿದ್ಧಾಂತಕ್ಕೂ compromise ಮಾಡಿಕೊಳ್ಳುವುದಿಲ್ಲ. ಆಲಿ ಓಡುವುದಕ್ಕೆ ಆತನ ತಂಗಿಗೊಂದು ಶೂ ಬೇಕೆನ್ನುವುದು ಕಾರಣವಾಗುತ್ತದೆಯೇ ವಿನಃ ಆತನ ಬಡತನವನ್ನು ಮೀರುವ, ಸಾಧನೆ ಮಾಡುವ ಛಲವಲ್ಲ. ದೊಡ್ಡವರಿಗೆ ಯಕಶ್ಚಿತ್ ಒಂದು ಜೊತೆ ಶೂಗಳಿಗಾಗಿ ಈ ಮಕ್ಕಳು ಇಷ್ಟು ಕಷ್ಟಪಡುತ್ತವಲ್ಲಾ ಎನ್ನಿಸಿದರೂ ಮುಗ್ಧ ಮಕ್ಕಳ ಜಗತ್ತಿನಲ್ಲಿ ಶೂನ ಬೆಲೆಯನ್ನು ಹಣದಿಂದ ಎಣಿಸುವುದಿಲ್ಲ ಎಂಬುದನ್ನು ಮರೆಯಬಾರದು. ಆಲಿಯ ಪಾತ್ರದಲ್ಲಿ ಅಭಿನಯಿಸಿರುವ ಅಮಿರ್ ಫಾರೂಕ್ ಹಶೆಮಿಯಾ ಹಾಗೂ ಜಾಹ್ರಾ ಪಾತ್ರವನ್ನು ಆವಾಹಿಸಿಕೊಂಡ ಬಹರೆ ಸಿದ್ಧಿಕಿ ಎಂಬ ಪುಟ್ಟ ಮಕ್ಕಳು ನಮ್ಮ ಬಾಲ್ಯವನ್ನು ನೆನಪಿಸದಿರುವುದಿಲ್ಲ.
ಒಮ್ಮೆ ಈ ‘ಸ್ವರ್ಗದ ಮಕ್ಕಳ’ ಪ್ರಪಂಚವನ್ನು ಪ್ರವೇಶಿಸಿ ನೋಡಿ. ಪರ್ಶಿಯನ್ ಭಾಷೆಯಲ್ಲಿರುವ ಸಿನೆಮಾಗೆ ನಿಮಗೆ ಇಂಗ್ಲೀಷ್ ಸಬ್ ಟೈಟಲ್ ಸಿಕ್ಕದಿದ್ದರೂ ತೊಂದರೆಯಾಗುವುದಿಲ್ಲ. ಯಾಕೆ ಅಂದರೆ ಎದೆಯ ಭಾವವನ್ನು ಅರಿಯಲಿಕ್ಕೆ ಯಾವ ಭಾಷೆ ಬೇಕು ಅಲ್ಲವೇ?
ಈ ಲೇಖನದ ಲೇಖಕರು ಅರುಣ್ ಕುಮಾರ್ ಢಗೆ.
ಪ್ರೀತಿ… ಈ ಪದವನ್ನು ಕೇಳಿದಾಕ್ಷಣ ನಮ್ಮ ಮನಸ್ಸೆಲ್ಲಾ ಪುಳಕಗೊಳ್ಳುವುದು ನಿಜ. ನಾವು ಒಬ್ಬರನ್ನು ಎಷ್ಟೇ ಪ್ರೀತಿಸಿದರೂ, ಅದರ ಬಗ್ಗೆ ಏಷ್ಟೇ ಬರೆದರೂ, ಓದಿದದರೂ, ಅರ್ಥ ಮಾಡಿಕೊಂಡರೂ ಸಾಲದು. ಈ ಹದಿ ವಯಸ್ಸಿನ ಗಂಡು-ಹೆಣ್ಣಿನ ಪ್ರೀತಿಯನ್ನು ಮರ ಮತ್ತು ಬಳ್ಳಿಯ ಅವಲಂಬನೆಗೆ ಹೋಲಿಸಬಹುದು. ಏಕೆಂದರೆ ಮರ ಮತ್ತು ಬಳ್ಳಿ ಬೆಳೆದಷ್ಟೂ ಹತ್ತಿರವಾಗುತ್ತೆ. ಅವುಗಳ ಸಂಬಂಧ ಇನ್ನೂ ಮಧುರವಾಗುತ್ತಾ ಹೋಗುತ್ತದೆ. ಹಾಗೆಯೇ ಗಂಡು,ಹೆಣ್ಣಿನ ನಡುವಿನ ಪ್ರೀತಿಯು ಸವಿದಷ್ಟೂ ರುಚಿ ಹೆಚ್ಚುತ್ತಾ, ಕಾಲ ಸವೆದಷ್ಟೂ ಗಟ್ಟಿಯಾಗುತ್ತಾ ಹೋಗುತ್ತದೆ. ಪ್ರೀತಿಯೆಂಬುದು ಹೃದಯಗಳಿಗಷ್ಟೇ ಮೀಸಲಾದ ಭಾಷೆ. ಈ ಭಾಷೆಗೆ ಲಿಪಿಯಿಲ್ಲ. ಆದ್ದರಿಂದ ಇದನ್ನು ಕಲಿಯುವುದು ಕಷ್ಟ. ಆದರೆ ಒಂದು ಸಲ ಕಲಿತರೆ, ಮರೆಯುವುದು ಇನ್ನೂ ಕಷ್ಟ.
ಎಲ್ಲಾ ಹದಿವಯಸ್ಸಿನವರೂ ಪ್ರೀತಿಸುತ್ತಾರೆ. ಆದರೆ ಎಲ್ಲರೂ ಒಬ್ಬರಿಗೊಬ್ಬರು ಪ್ರೀತಿಸುವುದಿಲ್ಲ. ಏಕೆಂದರೆ ಈ ಪ್ರೀತಿಗೆ ಒಂದು ಕಂಫರ್ಟ್ ಲೆವೆಲ್ (ಸಲುಗೆಯ ಮಟ್ಟ) ಅಂತಿರುತ್ತದೆ. ಆ ಮಟ್ಟವನ್ನು ಎಲ್ಲರೂ ತಲುಪಲಾಗುವುದಿಲ್ಲ. ಆದ್ದರಿಂದ ಇಂಥವರು ಜಂಟಿಯಾಗದೇ ಒಂಟಿಯಾಗೇ ಉಳಿದುಬಿಡುತ್ತಾರೆ. ಕೆಲವೊಮ್ಮೆ ಪ್ರೇಮ ನಿವೇದನೆ ಮಾಡಿದರೂ ತಿರಸ್ಕೃತರಾಗಿ ವೇದನೆ ಅನುಭವಿಸುತ್ತಾರೆ. ಏಕೆಂದರೆ, ಇಂಥವರಿಗೆ ಮೋಹಲವಾಗಿ ಮಾತನಾಡಲು ಬರುವುದಿಲ್ಲ. ತಮಾಷೆ ಮಾಡಲು ಅಥವಾ ‘ಅವರು’ ತಮಾಷೆ ಮಾಡಿದರೆ, ಅದನ್ನು ಗಾಳಿಯಲ್ಲಿ ತೇಲಿಸಿ ನಕ್ಕುಬಿಡುವ ಹಗುರ ಹೃದಯ ಇರುವುದಿಲ್ಲ. ಆದರೆ ಇವರು ಹೃದಯವಂತರೇನೋ ಸರಿ. ಒಂದು ವೇಳೆ ಇಂಥವರು ಪ್ರೀತಿಸುತ್ತಿದ್ದರೆ, ಇವರ ಪ್ರೇಮದ ದೋಣಿ ಹೃದಯದ ಭಾರಕ್ಕೆ ತೀರ ತಲುಪುವ ಮುನ್ನವೇ ಮುಳುಗಿ ಬಿಡುವ ಅಪಾಯವಿದೆ. ಏಕೆಂದರೆ ಇವರಂತಾರೆ- “ಜೀವನ ಅಂದರೆ ತಮಾಷೆಯಲ್ಲ”. ಹಾಗಾದರೆ, ಪ್ರೀತಿ ಎಂದರೆ ಗಂಭೀರವಾ? ಅಥವಾ ಬರೀ ತಮಾಷೇನೇ ಪ್ರೀತಿಯಾ? ನೀವೇ ಹೇಳಿ.
ಮತ್ತೆ ಕೆಲವರಿರುತ್ತಾರೆ. ಅಂಥವರು ತಂದೆ-ತಾಯಿ, ಅಣ್ಣ-ತಂಗಿಗಳಿಗಿಂತ ಹೆಚ್ಚಾಗಿ ‘ಒಬ್ಬರನ್ನು’ ಪ್ರೀತಿಸಿರುತ್ತಾರೆ. ಇವರಿಗೆ ಪ್ರೀತಿ ಎಂದರೆ ಓದು, ಭವಿಷ್ಯ, ಊಟ, ನಿದ್ದೆ, ಎಲ್ಲ ಸಂಬಂಧಗಳ ಪ್ರತಿರೂಪ. ಇಂಥವರು ಕೇವಲ ‘ಅವರ’ ಸುಖ ಸಂತೋಷಕ್ಕಾಗಿ ಬದುಕುತ್ತಿರುತ್ತಾರೆ. ಇವರು ಪ್ರತಿ ವಿಷಯಕ್ಕೂ “ಅವರು ನನ್ನೊಂದಿಗಿದ್ದರೆ ಸಾಕು, ಜೀವನದಲ್ಲಿ ನಾನು ಏನು ಬೇಕಾದರೂ ಸಾಧಿಸುತ್ತೇನೆ. ” ಎನ್ನುವಂಥಹ ಒಂದು ದೊಡ್ಡ ಜೋಶನ್ನು ಹೊಂದಿರುತ್ತಾರೆ. “ಒಂದು ವೇಳೆ ಈ ಪ್ರೀತಿ ದೂರ ಹೋಗಿಬಿಟ್ಟರೆ…?” ಅಂತ ಕೇಳಿ ನೋಡಿ… “ಖಂಡಿತ ನಾನು ಬದುಕುವುದಿಲ್ಲ” ಎಂದು ಉತ್ತರಿಸುವ ದೊಡ್ಡ ಮೂರ್ಖತನವೂ ಅವರಲ್ಲಿರುತ್ತದೆ. ಅಂದರೆ, ಆ ಕ್ಷಣಕ್ಕೆ ಮಾತ್ರ ಇವರು ಪ್ರೀತಿಗಾಗಿ ಬದುಕುತ್ತಾರೆ. ಆದರೆ ಮುಂದೆ ‘ಅವರ’ ಜೊತೆ ಬದುಕುವುದಕ್ಕಾಗಿಯೇ ಪ್ರೀತಿಸುವುದಿಲ್ಲ. ಒಂದು ವೇಳೆ ಪ್ರೀತಿ ಸೋತರೆ, ಅವರು ಮುಂದೆ ಬದುಕೋದಿಲ್ಲವಾ? ಜೀವನದಲ್ಲಿ ಏನೂ ಸಾಧಿಸೋದಿಲ್ವಾ? ಕೆಲವು ಹುಚ್ಚು ಖೋಡಿಗಳು ಆಕಾಶವೇ ತಲೆಯ ಮೇಲೆ ಬಿದ್ದವರಂತೆ ಆಡಬಹುದು. ಮತ್ತೆ ಕಲವು ಬುದ್ಧಿವಂತರು ಪ್ರಾಣ ಕಳೆದುಕೊಳ್ಳಲೂ ಪ್ರಯತ್ನಿಸಬಹುದು. ಏಕೆಂದರೆ, ಪ್ರಾಣದಂತಿದ್ದ ‘ಅವರನ್ನೇ’ ಕಳೆದುಕೊಂಡ ಮೇಲೆ, ತಂದೆ-ತಾಯಿ ತಮ್ಮ ಜೀವಕ್ಕಿಂತ ಹೆಚ್ಚಾಗಿ ಕಾಪಾಡಿದ ‘ಈ ಪ್ರಾಣಕ್ಕೆ’ ಬೆಲೆ ಎಲ್ಲಿದೆ ಹೇಳಿ? ಕೆಲವರು ಆರಂಭಿಕ ದಿನಗಳಲ್ಲಿ ಚೈತನ್ಯ ಕಳೆದುಕೊಂಡರೂ, ಮುಂದಿನ ದಿನಗಳಲ್ಲಿ ಜೀವನವನ್ನು ಅರ್ಥ ಮಾಡಿಕೊಂಡು, ಖಂಡಿತಾ ಚೆನ್ನಾಗಿ ಬದುಕುತ್ತಾರೆ. ಕೆಲವೊಂದು ಸಲ ‘ಅವರು’ ಜೊತೆಗಿದ್ದಾಗ ಅಂದುಕೊಂಡದ್ದಕ್ಕಿಂತ ಹೆಚ್ಚಿನದನ್ನು ಸಾಧಿಸುತ್ತಾರೆ. ಆಗ ಅವರಿಗೆ ಪ್ರೀತಿಯ ಬಗ್ಗೆ ಕೇಳಿ ನೋಡಿ… ಪ್ರೇಮ, ಪ್ರೀತಿಯೆಲ್ಲಾ ಮತಿ ಬರುವ ಮುನ್ನವೇ ಬರುವುದು ಎನ್ನುತ್ತಾರೆ. ಗೆಳೆಯರು ಯಾಕೆ, ಏನು, ಎತ್ತ ಎಂದು ಪ್ರಶ್ನಿಸಿದರೆ ‘ಈಗ ಬುದ್ಧಿ ಬಂತು’ ಎನ್ನುತ್ತಾರೆ. ಅಂದರೆ ಇದಕ್ಕೆ ಮುನ್ನ ಅವರು ಪ್ರೀತಿಸುತ್ತಿದ್ದರು ಎಂದರ್ಥ!
ಇನ್ನೊಂದು ವೆರೈಟಿಯ ಜನರಿರುತ್ತಾರೆ. ‘ನನ್ನನ್ನು ಯಾರಾದರೂ ಪ್ರೀತಿಸಲಿ’ ಅಂತ ಕಾಯುತ್ತಿರುತ್ತಾರೆ. ‘ಅವರು’ ಬಂದು ಫಿಲ್ಮಿ ಸ್ಟೈಲಿನಲ್ಲಿ ಜೋರಾಗಿ ‘ಐ ಲವ್ ಯೂ..’ ಅಂತ ಹೇಳಲಿ ಎಂದು ಕನಸು ಕಾಣುತ್ತಿರುತ್ತಾರೆ. “ನನ್ನನ್ನು ಯಾಕೆ ಇನ್ನೂ ಯಾರೂ ಪ್ರೀತಿಸುತ್ತಿಲ್ಲ?” ಅಂದುಕೊಳ್ಳುತ್ತಾರೆ. By chance, ಇಂತಹವರು ‘ಅವರನ್ನು’ ಪ್ರೀತಿಸುತ್ತಿದ್ದರೂ, ತಾವಾಗಿಯೇ ಯಾರಿಗೂ ಪ್ರಪೋಸ್ ಮಾಡುವುದಿಲ್ಲ. ಏಕೆಂದರೆ, ಇವರು “ನಾವು ಪ್ರೀತಿಸುವುದಕ್ಕಿಂತ, ನಮ್ಮನ್ನು ಪ್ರೀತಿಸುವವರನ್ನು ನಾವು ಇಷ್ಟ ಪಡಬೇಕು” ಅಂತ ತತ್ವಜ್ಞಾನ ಹೇಳುತ್ತಾರೆ. ಆದರೆ ‘ಅವರು’ ಕಣ್ಣಲ್ಲೇ ಪ್ರಪೋಸ್ ಮಾಡಿದ್ದರೂ ಬಿಸಿಯುಸಿರಲ್ಲೇ ‘ನೀನೇ ನನ್ನುಸಿರು’ ಎಂದರೂ, ಮುಸ್ಸಂಜೆ ಜಡಿ ಮಳೆಯಲ್ಲಿ ‘ನೀನೆಂದೂ ನನ್ನವನು(ಳು)’ ಎಂದು ಬೆಚ್ಚಗೆ ಅಪ್ಪಿಕೊಂಡರೂ ಅವರಿಗೆ ಅರ್ಥವಾಗಿರುವುದಿಲ್ಲ. ಇಂಥವರು ಪ್ರೀತಿಯ ರೂಪವನ್ನು ಹುಡುಕಲು ಪ್ರಯತ್ನಿಸುತ್ತಿರುತ್ತಾರೆ. ಸಮಾಜದಲ್ಲಿ ಕಂಡು, ಕೇಳಿದ ಪ್ರೇಮಿಗಳ ಪ್ರೀತಿಯ ರೂಪ ನೋಡಿ, “ಪ್ರೀತಿ ಅಂದ್ರೆ ಇದೇನಾ?” ಅಂತ ಯೋಚಿಸುತ್ತಾರೆ. ಆದರೆ ಬೇರೆ ಪ್ರೇಮಿಗಳನ್ನು ನೋಡಿದಾಗ, ‘ಓ ಪ್ರೀತಿ ಹೀಗೂ ಇರುತ್ತದೆ’ ಅಂತ ಅರ್ಥ ಮಾಡಿಕೊಳ್ಳದೆ ಗೊಂದಲಕ್ಕೀಡಾಗುತ್ತಾರೆ. ಇನ್ನು ಸಿನೆಮಾ ರೀತಿಯ ಪ್ರೀತಿ ಇಂಥವರಿಗೆ ಇಷ್ಟವಾಗುವ ಮಾತಿರಲಿ, ಕಷ್ಟವಾಗದಿದ್ದರೆ ಸಾಕು!
ನೀವೂ ಕೂಡ ಪ್ರೀತಿಯ ಮಹಲಿನ ಹೊಸ್ತಿಲಲ್ಲಿ ನಿಂತುಕೊಂಡಿದ್ದರೆ ಈ ಮೂರರಲ್ಲಿ ಯಾವ ಕೆಟಗರಿಗೆ ಸೇರುತ್ತೀರಿ ಎಂಬುದನ್ನೊಮ್ಮೆ ಅವಲೋಕಿಸಿಕೊಳ್ಳಿ. ಪ್ರೀತಿಯಲ್ಲಿ ಆದಷ್ಟು flexible ಹಾಗೂ comfortable ಆಗಿರಿ, ನಾನು ಗ್ಯಾರಂಟಿ ಕೊಡುತ್ತೇನೆ, ನೀವು ಖಂಡಿತಾ loveable ಆಗ್ತೀರ. ನಿಮ್ಮ ಪ್ರೀತೀನಾ ಅವರು ಒಪ್ಪಿಲ್ಲ ಅಂದರೆ ನಿಮ್ಮದೇನೂ ತಪ್ಪಿಲ್ಲ. ಆದರೆ ತಪ್ಪಿ ಕೂಡ ಪ್ರೀತ್ಸೋದನ್ನ ತಪ್ಪಿಸ್ಕೋಬೇಡಿ. ಇಲ್ಲಾಂದ್ರೆ ಕಾಲ ಕಳೆದ ಮೇಲೆ, ವಯಸ್ಸು ಇಳಿದ ಮೇಲೆ ಪ್ರೇಮದ ಮೆಟ್ಟಿಲಿಳಿದು ನಿಟ್ಟುಸಿರಿಡಬೇಕಾಗಬಹುದು.
so, ನಿಷ್ಕಲ್ಮಶ ಪ್ರೀತಿಗಾಗಿ ನಿಮ್ಮ ಹೃದಯವನ್ನು ರೆಡಿಯಾಗಿಟ್ಟುಕೊಳ್ಳಿ.
ಈ ಸಂಚಿಕೆಯ ಚರ್ಚೆ: ಮಹಿಳೆಯ ಉಡುಪು ಹಾಗೂ ಪ್ರಚೋದನೆ. ಮಹಿಳೆ ತೊಡುವ ಪ್ರಚೋದನಾಕಾರಿ ಉಡುಪಿನಿಂದ ಆಕೆಯ ಮೇಲೆ ಅತ್ಯಾಚಾರಗಳು ನಡೆಯುತ್ತಿವೆಯೇ? ಎಲ್ಲಕ್ಕೂ ಮಹಿಳೆಯೇ ಕಾರಣವೇ?
ಎಲ್ಲಾ ವಿಷಯಗಳಲ್ಲೂ ಹೆಣ್ಣನ್ನು ಬಲಿಪಶುವಾಗಿಸುವುದೇಕೆ? ಪ್ರಚೋದನೆ ಇರುವುದು ತೊಡುಗೆಯಲ್ಲಾ ಅಥವಾ ಪುರುಷನ ಕಣ್ಣುಗಳಲ್ಲಾ ಎಂದು ಕೇಳುತ್ತಾರೆ ‘ಅಂತರ್ಮುಖಿ’
ಕಳೆದ ವರ್ಷ ಪಾಕಿಸ್ತಾನದಲ್ಲಿ ನಲವತ್ತರ ಆಸುಪಾಸಿನಲ್ಲಿದ್ದ ವ್ಯಕ್ತಿಯೊಬ್ಬ ಕೈಯಲ್ಲಿ ಗನ್ ಅಡಗಿಸಿಟ್ಟುಕೊಂಡು ಬಂದು ದೇಶದ ಮಹಿಳಾ ಮಂತ್ರಿಯೊಬ್ಬಳನ್ನು ಕೊಂದು ಬಿಟ್ಟ.
ಆಕೆ ಜಿಲ್ಲಾ ಹುಮಾ ಉಸ್ಮಾನ್. ಆಕೆ ಮುವತ್ತೈದರ ಆಸುಪಾಸಿನಲ್ಲಿದ್ದ ಹೆಣ್ಣು. ಪಾಕಿಸ್ತಾನವೆಂಬ ಧರ್ಮಾಧಾರಿತ ದೇಶದಲ್ಲಿ ಆಕೆ ಮಂತ್ರಿಯಾಗಿದ್ದಳು. ಹೆಣ್ಣು ಮಕ್ಕಳಿಗೆ ಸಿಗಬೇಕಾದ ಹಕ್ಕುಗಳ ಬಗ್ಗೆ ಹೋರಾಟ ನಡೆಸಿದ್ದಳು. ಆ ಮತಾಂಧನ ಗುಂಡಿಗೆ ಈಕೆ ಬಲಿಯಾದದ್ದು ಈಕೆ ಇಸ್ಲಾಂ ನಿಯಮಾನುಸಾರ ಬುರ್ಕಾ ತೊಟ್ಟಿರಲಿಲ್ಲವೆಂಬ ಕಾರಣಕ್ಕೆ. ಮೇಲಾಗಿ ಹೆಣ್ಣಾಗಿ ಆಕೆ ರಾಜಕೀಯ ನಾಯಕಿಯಾದದ್ದು ಆಕೆ ಮಾಡಿದ ಅಪರಾಧವಾಗಿತ್ತು.
ನಮ್ಮ ಪುರುಷ ಪ್ರಧಾನ ಸಮಾಜದ ಒಟ್ಟು ಮನಸ್ಥಿತಿ ಆ ಮತಾಂಧನಿಗಿಂತ ಬೇರೆಯಾಗಿಲ್ಲ. ಮಬ್ಬುಗತ್ತಲ ಅಡುಗೆ ಮನೆಯಲ್ಲಿ ಹೊಗೆಗೆ ಕಣ್ಣಿರು ಸುರಿಸುತ್ತಲೇ ಜೀವನ ಸವೆಸುತ್ತಿದ್ದ ಹೆಣ್ಣು ಮಕ್ಕಳು ಈಗ ಮನೆಯ ಹೊಸ್ತಿಲನ್ನು ದಾಟಿ ಹೊರಬಂದು ಗಂಡಸಿಗೆ ಸರಿ ಸಮಾನವಾಗಿ ವಿದ್ಯೆಯನ್ನು ಪಡೆದು ಕೆಲಸ ಮಾಡಿ ತೋರಿಸುತ್ತಿರುವುದನ್ನು ಯಾವ ಸಮಾಜದಲ್ಲೂ ಸಂತೋಷದಿಂದ ಕಾಣುವುದಿಲ್ಲ ಈ ಪುರುಷ ಪ್ರಧಾನ ವರ್ಗ. ಇದಕ್ಕೆ ತಮ್ಮ ಏಕಸ್ವಾಮ್ಯಕ್ಕೆಲ್ಲಿ ಏಟು ಬೀಳುತ್ತದೆಯೋ ಎಂಬ ಆತಂಕವೇ ಕಾರಣ.
ಮಹಿಳೆಯರನ್ನು ಹಿಮ್ಮೆಟ್ಟಿಸಲು, ಸಮಾನ ಅವಕಾಶಗಳಿಂದ ಆಕೆಯನ್ನು ವಂಚಿಸಲು ಕಾಲಕಾಲಕ್ಕೆ ತಕ್ಕಂತೆ ಧರ್ಮದ, ನೈತಿಕತೆಯ ಸಹಾಯವನ್ನು ಪಡೆಯುತ್ತಾ ಬಂದಿತು ಪುರುಷ ಸಮಾಜ. ಆಕೆಯನ್ನು ವಿದ್ಯೆಯಿಂದ ದೂರವಿರಿಸಲಾಯ್ತು. ಅದಕ್ಕೆ ಕೆಲಸಕ್ಕೆ ಬಾರದ ಪುರಾಣದ ಕಥೆಗಳನ್ನು ಸಾಕ್ಷಿಗಾಗಿ ಸೃಷ್ಟಿಸಿತು. ಆಕೆಯ ಕೈಯಿಂದ ಆರ್ಥಿಕ ಸ್ವಾತಂತ್ರ್ಯವನ್ನು ಕಸಿಯಲಾಯಿತು. ಆ ಮೂಲಕ ಆಕೆಯ ಪ್ರತಿಭಟನೆಯ ಸ್ವಾತಂತ್ರ್ಯವನ್ನೇ ಕಸಿದುಕೊಂಡು ಆಕೆಯನ್ನು ಎಲ್ಲದಕ್ಕೂ ತನ್ನ ಮೇಲೆ ಅವಲಂಬಿತವಾಗುವಂತೆ ಮಾಡಿದ ಪುರುಷ ಪುಂಗವ. ಆ ಮೂಲಕ ತನ್ನನ್ನು ತಾನು ಪುರುಷೋತ್ತಮನಾಗಿಸಿಕೊಳ್ಳಲು ಪ್ರಯತ್ನಿಸಿದ. ಯಾವಾಗ ಮಹಿಳೆ ಪುರುಷರಿಗೆ ಸಮಾನವಾಗಿ ಅಕ್ಷರ ತಿದ್ದಲು ಶಾಲೆಗಳಿಗೆ ಕಾಲಿರಿಸಿದಳೋ ಆಗಲೇ ಪುರುಷ ಸಮಾಜದಲ್ಲಿ ಅಪಸ್ವರ ಕೇಳಿ ಬರಲಾರಂಭಿಸಿತು. ಹೆಣ್ಣಿಗೆ ಓದಿಸುವುದು ಮರಳಿಗೆ ನೀರು ಹೊಯ್ದಂತೆ, ಎಷ್ಟು ಓದಿಸಿದರೇನು ಕೊನೆಗೆ ಆಕೆ ಗಂಡನ ಮನೆಯಲ್ಲಿ ಮುಸುರೆ ತಿಕ್ಕುವ ಕೆಲಸ ಮಾಡಿಕೊಂಡೇ ಇರಬೇಕು ಎನ್ನುವ ಭಾವನೆಯ ವಿಷ ಬೀಜ ಬಿತ್ತಲಾಯ್ತು. ಆದರೆ, ಹೆಣ್ಣು ಮಕ್ಕಳಿಗೆ ತಮ್ಮ ಪ್ರತಿಭೆಗೆ ತಕ್ಕ ಹಾಗೆ ಕೆಲಸ, ಪರಿಶ್ರಮಕ್ಕೆ ತಕ್ಕಂತೆ ಕೈತುಂಬಾ ಸಂಬಳ ದೊರೆಯಲಾರಂಭಿಸಿತೋ ಆಗ ಶುರುವಾಯ್ತು ಪುರುಷ ಪುಂಗವರ ಅಸೂಯೆಯ ಪ್ರದರ್ಶನ. ಹೆಣ್ಣು ಮನೆ ಬಿಟ್ಟು ದುಡಿಯೋಕೆ ನಿಂತದ್ದರಿಂದಲೇ ಮನೆಗಳು ಹಾಳಾಗುತ್ತಿರುವುದು, ಆಕೆ ದುಡಿಯುತ್ತಿರುವುದರಿಂದಲೇ ಮಕ್ಕಳು ದಾರಿ ತಪ್ಪುತ್ತಿರುವುದು. ಅಪರಾಧ ಹೆಚ್ಚಲಿಕ್ಕೆ ಆಕೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದೇ ಕಾರಣ ಎಂದು ಘೋಷಿಸತೊಡಗಿದರು.
ಇದೇ ಮನಸ್ಥಿತಿಯ ಮುಂದುವರಿಕೆಯಂತೆ ಕಾಣುವುದು, ಮಹಿಳೆಯರ ಆಧುನಿಕ ತೊಡುಗೆ ಪ್ರಚೋದನಾಕಾರಿಯಾಗಿದೆ ಎಂಬ ಆರೋಪ. ಮಹಿಳೆಯರು ಆಧುನಿಕವಾಗಿ ಬಟ್ಟೆ ತೊಡುವುದು ಆಕೆಗೆ ಕ್ಷೇಮವಲ್ಲ, ಪ್ರಚೋದನಕಾರಿಯಾಗಿ ಬಟ್ಟೆ ತೊಟ್ಟ ಹೆಣ್ಣನ್ನು ರೇಗಿಸಿದರೆ, ಚೇಡಿಸಿದರೆ, ಅತ್ಯಾಚಾರಕ್ಕೀಡು ಮಾಡಿದರೆ ಅದು ಪುರುಷರ ತಪ್ಪಲ್ಲ. ಆಕೆ ಪ್ರಚೋದನಕಾರಿಯಾಗಿ ಬಟ್ಟೆ ತೊಟ್ಟದ್ದೇ ತಪ್ಪು ಎಂಬ ಭಾವನೆ ಬೆಳೆಯುತ್ತಿದೆ. ಮಗಳ ಹಿಂದೆ ಯಾವ ಹುಡುಗನೋ ಬಿದ್ದಿದ್ದಾನೆ ಎಂದಾಗ ಮನೆಯವರು ಹುಡುಗನನ್ನು ಗದುಮಿ ಬುದ್ಧಿ ಕಲಿಸುವ ಬದಲು ಹುಡುಗಿಯ ಮೇಲೆ ‘ನೀನೇ ಏನೋ ಮಾಡಿದ್ದೀಯಾ’ ಎಂದು ಆರೋಪ ಹೊರಿಸಿ ಆಕೆಯನ್ನು ಕಾಲೇಜು ಬಿಡಿಸಿಬಿಡುವಂತೆಯೇ ಇದೂ ಸಹ.
ಪ್ರಚೋದನಕಾರಿಯಾದ ತೊಡುಗೆ ಎಂಬುದಕ್ಕೆ ವ್ಯಾಖ್ಯಾನ ಎಲ್ಲಿದೆ? ಧರ್ಮ ಬೀರುಗಳು ಹೇಳಿದ್ದೇ ಮಾಪನವೇ? ಹಳ್ಳಿಗಳಲ್ಲಿ ದುಡಿಯುವ ರೈತ ಹೆಣ್ಣು ಮಕ್ಕಳು ಕೆಲಸದ ವೇಳೆಯಲ್ಲಿ ತೊಡುವ ಕಡಿಮೆ ಪ್ರಮಾಣದ ಬಟ್ಟೆ ಪ್ರಚೋದನಾಕಾರಿಯಾಗಿ ಕಾಣುತ್ತದೆಯೇ? ಚಿಕ್ಕ ಪಟ್ಟಣಗಳಲ್ಲಿ ಜೀನ್ಸು, ಶರ್ಟು ಹಾಕಿಕೊಂಡು ಓಡಾಡುವ ಹೆಣ್ಣು ಮಕ್ಕಳನ್ನು ಬಿಟ್ಟ ಕಣ್ಣು ಬಿಟ್ಟು ನೋಡುವ ಜನರಿದ್ದಾರೆ. ಅದೇ ದೊಡ್ಡ ನಗರಗಳಲ್ಲಿ ಇಂಥ ಬಟ್ಟೆಯೇ ಸಭ್ಯ ಎನ್ನುವಂತೆ ಜನರು ಮನ್ನಣೆ ಕೊಡುತ್ತಾರೆ. ಹಾಗಾದರೆ ಪ್ರಚೋದನಕಾರಿ ಎಂಬುದಕ್ಕಿರುವ ಮಾಪನವಾದರೂ ಯಾವುದು?
ಬೇಲೂರು ಹಳೆ ಬೀಡುಗಳಲ್ಲಿ ಬೆತ್ತಲೆಯಾಗಿ ನಿಂತ ಶಿಲಾ ಬಾಲಿಕೆಯರ ಶಿಲ್ಪವನ್ನು ಕಂಡಾಗ ಪ್ರಚೋದನೆಯಾಗುತ್ತದೆಯೇ? ಎಷ್ಟೋ ದೇವ ದೇವತೆಯರ ವಿಗ್ರಹಗಳಲ್ಲಿ ನಗ್ನತೆಯೇ ಕಲೆಯಾಗಿದ್ದರೂ ನಾವು ಅವುಗಳಿಗೆ ಕೈ ಮುಗಿಯುವುದಿಲ್ಲವೇ? ಹಾಗಾದರೆ ಪ್ರಚೋದನೆ ಎಂಬುದು ಇರುವುದು ಮಹಿಳೆಯರು ತೊಡುವ ಬಟ್ಟೆಯಲ್ಲಾ ಅಥವಾ ನೋಡುವ ಪುರುಷರ ಕಣ್ಣುಗಳಲ್ಲಾ? ಅಸಲಿಗೆ ಪುರುಷರಿಗೆ ನೈತಿಕತೆಯ, ಕಾನೂನಿನ ಗಡಿಯೇ ಇಲ್ಲವೇ? ಗಂಡು ಏನು ಮಾಡಿದರೂ ಮಾಫಿ ಇದೆಯಾ?
ನಮ್ಮ ಸುತ್ತ ಮುತ್ತ ಲಕ್ಷಾಂತರ ವಿದ್ಯಮಾನಗಳು ನಡೆಯುತ್ತಿರುತ್ತವೆ. ಅವುಗಳೆಲ್ಲಾ ಒಬ್ಬರಿಲ್ಲ ಒಬ್ಬರಿಗೆ ಪ್ರಚೋದನೆಯನ್ನು ನೀಡುವಂತೆಯೇ ಇರುತ್ತವೆ. ಕುಡಿತ ಕೆಟ್ಟದ್ದು ಎಂಬುದನ್ನು ಮನವರಿಕೆ ಮಾಡಿಕೊಡಲು ನಿರ್ಮಿಸಿದ ಚಿತ್ರದಲ್ಲಿ ವ್ಯಕ್ತಿಯೊಬ್ಬ ಕಂಠಮಟ್ಟ ಕುಡಿದು ತೂರಾಡುವುದುದನ್ನೂ, ಬಗೆ ಬಗೆಯ ಮದ್ಯದ ಬಾಟಲಿಗಳನ್ನು ನೋಡಿ ಕುಡಿಯುವುದಕ್ಕೆ ಪ್ರಚೋದನೆ ಪಡೆದರೆ ಅದು ಸಿನೆಮಾ ಮಾಡಿದವನ ತಪ್ಪಾ ಅಥವಾ ನೋಡುಗನ ದೃಷ್ಟಿಯಲ್ಲಿರುವ ಲೋಪವಾ? ದೃಷ್ಟಿಯಂತೆ ಸೃಷ್ಟಿ ಎಂಬ ಹಳೆಯ ಮಾತಿನಂತೆ ಮೊದಲು ದೃಷ್ಟಿಕೋನದಲ್ಲಿನ ಲೋಪವನ್ನು ಸರಿ ಪಡಿಸುವ ಕೆಲಸವಾಗಬೇಕು. ಇಲ್ಲವಾದರೆ ತನ್ನ ವಿಕೃತ ಕಾಮ ತೃಷೆಯನ್ನು ಪೂರೈಸಿಕೊಳ್ಳಲು ಅಪ್ರಾಪ್ತ ವಯಸ್ಕ ಹೆಣ್ಣು ಮಕ್ಕಳ ಮೇಲೆ, ಕಂದಮ್ಮಗಳ ಮೇಲೆ, ವಯಸ್ಸಾದ ಹೆಂಗಸರ ಮೇಲೆರಗುವ ಗಂಡಿನ ಕುಕೃತ್ಯವನ್ನು ಸಮರ್ಥಿಸಲು ಹೆಣ್ಣು ಬದುಕಿರುವುದೇ ಕಾರಣ ಎಂದೂ ವಾದಿಸಬಹುದು. ಈಗಾಗಲೇ, ಗಂಡಿನ ಪಾರಮಾರ್ಥಿಕ ಸಾಧನೆಗೆ ಹೆಣ್ಣೇ ಅಡ್ಡಿ ಎಂಬಂತೆ ಕಾಣುತ್ತಿಲ್ಲವೇ? ಹೀಗಿರುವಾಗ ಪ್ರಚೋದನೆಯಿರುವುದು ಹೆಣ್ಣಿನ ಬಟ್ಟೆಯಲ್ಲಾ ಅಥವಾ ಅದನ್ನು ನೋಡುವ ಪುರುಷರ ಕಣ್ಣಿನಲ್ಲಾ ಎಂಬುದನ್ನು ಚಿಂತಿಸಬೇಕಾದ ತುರ್ತಿದೆ.
ಈ ಸಂಚಿಕೆಯ ಚರ್ಚೆ: ಮಹಿಳೆಯ ಉಡುಪು ಹಾಗೂ ಪ್ರಚೋದನೆ. ಮಹಿಳೆ ತೊಡುವ ಪ್ರಚೋದನಾಕಾರಿ ಉಡುಪಿನಿಂದ ಆಕೆಯ ಮೇಲೆ ಅತ್ಯಾಚಾರಗಳು ನಡೆಯುತ್ತಿವೆಯೇ? ಎಲ್ಲಕ್ಕೂ ಮಹಿಳೆಯೇ ಕಾರಣವೇ?
ತನ್ನ ಎಚ್ಚರಿಕೆಯಲ್ಲಿ ತಾನಿರಲು ಹೆಣ್ಣು ಪ್ರಚೋದನಕಾರಿಯಾಗಿ ಬಟ್ಟೆ ತೊಡುವುದನ್ನು ತಪ್ಪಿಸಬೇಕೇ ಹೊರತು ಅದು ಆಕೆಗೆ ಕಟ್ಟಳೆಯಾಗಬೇಕಿಲ್ಲ ಎನ್ನುತ್ತಾರೆ ಸುಪ್ರೀತ್.ಕೆ.ಎಸ್.
ಸಮಾನತೆ, ಸ್ತ್ರೀವಾದದ ಬಗ್ಗೆ ಮಾತನಾಡುವ ಮೊದಲು ನಮ್ಮ ಸಮಾಜ ಸಮಾನತೆಯ ಸಮಾಜವಾ ಎಂಬುದನ್ನು ಕೂಲಂಕುಶವಾಗಿ ಪರಿಶೀಲಿಸಬೇಕು. ನಮ್ಮ ಮನೆಗಳಲ್ಲಿ ಹೆಣ್ಣು ಮಕ್ಕಳು ಗಂಡಿನ ಸರಿಸಮಾನವಾಗಿ ಓದಬಹುದು, ಕೆಲಸಗಿಟ್ಟಿಸಿಕೊಳ್ಳಬಹುದು, ಸಂಪಾದನೆ ಮಾಡಬಹುದು. ಇದನ್ನೆಲ್ಲಾ ಹೆಮ್ಮೆಯಿಂದ, ಮಮತೆಯಿಂದ ಕಾಣುವ ನಮಗೆ ಆಕೆ ಗಂಡಿನ ಸರಿ ಸಮಾನವಾಗಿ ಸ್ವೇಚ್ಛಾಚಾರಕ್ಕಿಳಿದರೆ ಸಹಿಸಲು ಸಾಧ್ಯವೇ? ಗಮನಿಸಿ ನೋಡಿ, ಮಗ ಮನೆಗೆ ತಡವಾಗಿ ಬರಲಾರಂಭಿಸಿದರೆ ಆತನ ಸಹವಾಸದ ಬಗ್ಗೆ ಸಂಶಯ ಬರಬಹುದು. ಆತನೇನಾದರೂ ಕೆಟ್ಟ ಚಟಗಳಿಗೆ ಅಂಟಿಕೊಂಡಿದ್ದಾನಾ ಎಂಬ ಆತಂಕ ಕಾಡಬಹುದು. ಅದನ್ನು ನಾವು ಪ್ರಶ್ನಿಸುತ್ತೇವೆಯೇ ಹೊರತು ಮನೆಗೆ ತಡವಾಗಿ ಬರುವ ಅವನ ಸ್ವಾತಂತ್ರ್ಯವನ್ನಲ್ಲ. ಆದರೆ ಅದೇ ಹೆಣ್ಣು ಮಗಳು ಸಕಾರಣಕ್ಕಾಗಿ ಮನೆಗೆ ತಡವಾಗಿ ಬರುತ್ತಿದ್ದಾಳೆ ಎಂದರೆ ನಾವು ವರ್ತಿಸುವ ರೀತಿಯಿದೆಯಲ್ಲಾ, ಅದನ್ನು ಗಮನಿಸಬೇಕು. ನಾವು ಮೊಟ್ಟಮೊದಲು ಆಕೆಯ ವ್ಯಕ್ತಿತ್ವವನ್ನೇ ಸಂಶಯಿಸುತ್ತೇವೆ, ಆಕೆಯ ಆತ್ಮಗೌರವವನ್ನೇ ನಾವು ಅನುಮಾನಿಸುತ್ತೇವೆ. ಆಕೆಯನ್ನು ಹೊರಗೇ ಹೋಗದ ಹಾಗೆ ಕಟ್ಟು ನಿಟ್ಟು ಮಾಡುತ್ತೇವೆ. ಆಕೆಯ ಎಲ್ಲಾ ಖಾಸಗಿ ಸಂಗತಿಗಳಲ್ಲಿ ಮೂಗು ತೂರಿಸುತ್ತೇವೆ. ನಮ್ಮ ಮನಸ್ಥಿತಿ ಹೀಗಿರುವಾಗ ಹೆಣ್ಣು ಮಕ್ಕಳು ಗಂಡಿನ ಸರಿಸಮಾನವಾಗಿ ಸ್ವೇಚ್ಛೆಗಿಳಿಯುವುದು ಸ್ವಾತಂತ್ರ್ಯದ ಅಭಿವ್ಯಕ್ತಿಯಾಗುತ್ತದೆಯೇ?
ಪೊಳ್ಳು ಸ್ತ್ರೀವಾದವನ್ನು ಭಾಷಣಗಳಲ್ಲಿ ಗಂಟಾಘೋಷವಾಗಿ ಉದ್ಗರಿಸುವ ‘ಲೇಡಿ’ಗಳಿಗೆ ಒಂದು ಸಂಗತಿ ಮನವರಿಕೆಯಾಗಬೇಕು. ಮಹಿಳೆಯ ಮೇಲಿರುವ ನೈತಿಕ ಜವಾಬುದಾರಿಗಳು, ಆಕೆಯ ಮೇಲಿರುವ ಕಟ್ಟುನಿಟ್ಟು, ಆಕೆಯ ವ್ಯಕ್ತಿತ್ವಕ್ಕಿರುವ ಸಭ್ಯತೆಯ ಎಲ್ಲೆ ಎಲ್ಲವನ್ನೂ ನಿರ್ಧರಿಸುವಲ್ಲಿ ಪುರುಷರು ಎಷ್ಟು ಪ್ರಮಾಣದಲ್ಲಿ ಕಾರಣಕರ್ತರೋ ಅದೇ ಪ್ರಮಾಣದಲ್ಲಿ ಮಹಿಳೆಯರೂ ಕಾರಣಕರ್ತರು. ಅಸಭ್ಯವಾಗಿ ವರ್ತಿಸುವ ಮಗಳನ್ನು ಹದ್ದುಬಸ್ತಿನಲ್ಲಿಡಲು ತಂದೆ ಎಷ್ಟು ಪ್ರಯತ್ನ ಮಾಡುತ್ತಾನೋ ಅದರಷ್ಟೇ ಹೆಚ್ಚು ಕಾಳಜಿಯನ್ನು, ಕಠಿಣತೆಯನ್ನು ತಾಯಿಯೂ ತೋರುತ್ತಾಳೆ. ಒಂದು ಕಾಲದಲ್ಲಿ ಅತ್ತೆಯ ಕಟ್ಟುನಿಟ್ಟಿನಲ್ಲಿ ಉಸಿರುಗಟ್ಟಿದ ಭಾವವನ್ನು ಅನುಭವಿಸುವ ಹೆಣ್ಣುಮಗಳೇ ಮುಂದೆ ತನ್ನ ಮಗನಿಗೆ ಹೆಣ್ಣನ್ನು ತಂದಾಗ ಆಕೆಯ ಮೇಲೆ ಕಟ್ಟುನಿಟ್ಟು ಮಾಡುತ್ತಾಳೆ. ಆಕೆಯ ಮೇಲೆ ಇನ್ನಿಲ್ಲದ ನಿಗಾ ಇಡುತ್ತಾಳೆ. ನಮ್ಮ ಸಮಾಜದಲ್ಲಿ ಹೆಣ್ಣು ಅವಕಾಶ ವಂಚಿತೆ ಎಂಬುದು ಸೂರ್ಯನಷ್ಟೇ ಸತ್ಯವಾದ ಸಂಗತಿ. ಆದರೆ ಇದಕ್ಕೆ ಪುರುಷರ ದಬ್ಬಾಳಿಕೆ ಎಷ್ಟರ ಮಟ್ಟಿಗೆ ಕಾರಣವೋ, ಅಷ್ಟೇ ಮಹಿಳೆಯರೂ ಕಾರಣ. ವಾಸ್ತವ ಸ್ಥಿತಿ ಹೀಗಿರುವಾಗ ವಿವೇಚನೆಯಿಲ್ಲದೆ ಎಲ್ಲಕ್ಕೂ ಪುರುಷರನ್ನೇ ಅಪರಾಧಿಯಾಗಿ ನಿಲ್ಲಿಸಿ ಏಕಪಕ್ಷೀಯವಾದ ಜಡ್ಜ್ ಮೆಂಟುಗಳನ್ನು ಹೊರಡಿಸುವುದು ಸರಿಯೇ?
ಸಮಾಜ ಸೃಷ್ಟಿಸಿರುವ ಸಿದ್ಧ ಮಾದರಿಗಳಿಗೆ ಸ್ತ್ರೀಯರಷ್ಟೇ ಪುರುಷರೂ ಬಾಧ್ಯರಾಗಿದ್ದಾರೆ. ಒಬ್ಬ ಹುಡುಗನನ್ನು ನಾವು ಪೋಲಿ ಎನ್ನುವುದಕ್ಕೂ, ಒಬ್ಬ ಹುಡುಗಿಯನ್ನು ಆಕೆ ಸ್ವಲ್ಪ ಸಡಿಲ ಎನ್ನುವುದಕ್ಕೂ ವ್ಯತ್ಯಾಸವಿದೆ. ಹೀಗಾಗಿಯೇ ಶೀಲವೆಂಬುದು ಕೇವಲ ಹೆಣ್ಣಿಗೆ ಸಂಬಂಧಿಸಿದ ಸಂಗತಿಯಾಗಿದೆ. ಸಭ್ಯತೆ, ಮರ್ಯಾದೆ, ಸೌಜನ್ಯಗಳು ಸಮಾಜ ಹೆಣ್ಣಿನ ಮೇಲೆ ಹೇರಿರುವ ಸಂಕೋಲೆಗಳು. ಒಂದು ವೇಳೆ ಇವು ಕೇವಲ ಸಂಕೋಲೆಗಳು ಎಂಬ ಅರಿವು ಹೆಣ್ಣಿನಲ್ಲಿದ್ದರೆ ಅವುಗಳನ್ನು ಮುರಿದು ಮುಕ್ತರಾಗುವ ಸಾಧ್ಯತೆಯಿರುತ್ತಿತ್ತು, ಆದರೆ ದುರದೃಷ್ಟದ ಸಂಗತಿಯೆಂದರೆ ಹೆಣ್ಣು ಸಮಾಜ ವಿಧಿಸಿದ ಈ ಸಂಕೋಲೆಗಳನ್ನು ಆಭರಣಗಳನ್ನಾಗಿ ಧರಿಸಿಕೊಂಡು ಓಡಾಡುತ್ತಿದ್ದಾಳೆ. ಅವುಗಳನ್ನು ಮೆರೆಸುವ, ಗೌರವ, ಹೆಮ್ಮೆ ಪಟ್ಟುಕೊಳ್ಳುವ ವಸ್ತುವಾಗಿ ಆಕೆ ಪರಿಗಣಿಸಿದ್ದಾಳೆ. ಹೀಗಾಗಿಯೇ ಒಬ್ಬ ಹೆಣ್ಣನ್ನು ಪತಿವೃತೆ, ಸತಿಯೇ ದೇವರು ಎಂದು ನಂಬಿಕೊಂಡಾಕೆ ಎಂದಾಗ ಆ ಹೆಣ್ಣಿಗೆ ಸಮಾಜದಲ್ಲಿ ಗೌರವ ದೊರೆಯುತ್ತದೆ, ಆಕೆಗೆ ಆ ಬಗ್ಗೆ ಹೆಮ್ಮೆಯೆನಿಸುತ್ತದೆ.
ಹೀಗೆ ಆಕೆ ತನ್ನ ವ್ಯಕ್ತಿತ್ವದ ಘನತೆಗೆ ಸಮಾಜವನ್ನು ಅವಲಂಬಿಸಿರುವಾಗ, ಸರಪಳಿಗಳನ್ನೇ ಆಭರಣಗಳೆಂದು ಭಾವಿಸಿರುವಾಗ ಅವುಗಳನ್ನು ಮೀರಲು ಮಾಡಿದ ಪ್ರಯತ್ನಗಳು ಸಮಾಜದ ಕಣ್ಣಿಗೆ ಅನಾರೋಗ್ಯಕರವಾಗಿ ಕಾಣುತ್ತದೆ. ಹೆಣ್ಣು ಪ್ರಚೋದನಕಾರಿಯಾಗಿ ಬಟ್ಟೆ ತೊಡುವುದರಿಂದ, ಸಿಗ್ಗಿಲ್ಲದ ಹಾಗೆ ವರ್ತಿಸುವುದರಿಂದ, ಗಂಡುಗಳಿಗೆ ಸಮಾನವಾಗಿ ಮದ್ಯಪಾನ, ಸಿಗರೇಟು ಸೇದುತ್ತಾ ನಿಲ್ಲುವುದರಿಂದ ಆಕೆ ಪುರುಷರನ್ನು ಆಕರ್ಷಸಿವುದು, ಪ್ರಚೋದಿಸುವುದಲ್ಲದೆ ತನ್ನ ವ್ಯಕ್ತಿತ್ವವನ್ನೇ ತಾನು ಕೀಳು ಮಟ್ಟಕ್ಕೆ ಎಳೆದುಕೊಂಡಂತಾಗುತ್ತದೆ. ಇಲ್ಲಿ ತುಂಬಾ ಸೂಕ್ಷ್ಮವಾಗಿ ಗಮನಿಸಬೇಕಾದ ಅಂಶವೆಂದರೆ, ಅಡಸಾಬಡಸಾ ಬಿಹೇವಿಯರ್ ಇರುವ ಹೆಣ್ಣು ಕೇವಲ ಗಂಡಸಿನ ಕಣ್ಣಿಗೆ ಅಗ್ಗವಾಗಿ ಕಾಣಿಸುವುದಿಲ್ಲ, ಉಳಿದ ಹೆಣ್ಣುಗಳ ನಡುವೆಯೂ ಆಕೆಯ ಅಗ್ಗವಾದ ಇಮೇಜು ಚಾಲ್ತಿಯಲ್ಲಿರುತ್ತದೆ. ಹೀಗಾಗಿ ಆಕೆಯ ಅಂತಃಸತ್ವ ಹೇಗೇ ಇದ್ದರೂ ಸಹ ತೊಡುವ ಬಟ್ಟೆಯಿಂದ ಹುಟ್ಟುವ ವ್ಯಕ್ತಿತ್ವವಿದೆಯಲ್ಲಾ, ಅದು ಅಗ್ಗದ್ದಾಗಿರುತ್ತದೆ.
ಸಭ್ಯತೆಯ ಮಾನದಂಡ ದೇಶ, ಕಾಲಗಳಿಗೆ ತಕ್ಕಂತೆ ಬದಲಾಗುವಂಥದ್ದು ಎಂಬುದು ಎಲ್ಲರೂ ಒಪ್ಪಿಕೊಳ್ಳಬೇಕಾದ ಸಂಗತಿ. ಆದರೆ ಹೆಣ್ಣು ತಾನು ತೊಡುವ ಬಟ್ಟೆಯ ಬಗ್ಗೆ ಯೋಚಿಸುವಾಗ ಅಷ್ಟೆಲ್ಲಾ ವೈಚಾರಿಕವಾಗಿ ಚಿಂತಿಸುವ ಅಗತ್ಯವಿಲ್ಲ. ಕಳ್ಳಕಾಕರು ಹೆಚ್ಚಿರುವ ಪ್ರದೇಶದಲ್ಲಿ, ನಿರ್ಜನವಾದ ರಸ್ತೆಯಲ್ಲಿ ಹೊತ್ತು ಕಳೆದ ಮೇಲೆ ಸಂಚರಿಸುವ ಸಂದರ್ಭದಲ್ಲಿ ನಾವು ಸಹಜವಾಗಿ ನಮ್ಮ ಎಚ್ಚರಿಕೆಯಿಂದ ಬೆಲೆಬಾಳುವ ವಾಚು, ರಿಂಗು, ಚೈನು, ಮೊಬೈಲುಗಳನ್ನು ಒಳಕಿಸೆಗಳಲ್ಲಿಟ್ಟುಕೊಂಡು ಜೋಪಾನ ಮಾಡಿಕೊಳ್ಳುತ್ತೇವಲ್ಲಾ, ಬಸ್ಸಿನಲ್ಲಿ ದೂರ ಪ್ರಯಾಣ ಮಾಡುವಾಗ, ರೈಲಿನಲ್ಲಿ ಹೋಗುವಾಗ ಹಣವನ್ನೆಲ್ಲಾ ಕಳ್ಳ ಜೇಬಿನಲ್ಲಿಟ್ಟುಕೊಳ್ಳುತ್ತೇವಲ್ಲಾ ಹಾಗೆ ಹೆಣ್ಣು ತನ್ನ ದೈಹಿಕ ಪಾವಿತ್ರ್ಯಕ್ಕೆ ಪ್ರಾಮುಖ್ಯತೆ ಕೊಡುವುದಾದರೆ ಹಾಗೂ ಅದಕ್ಕೆ ಸಮಾಜ ಕೊಡುವ ಬೆಲೆಯನ್ನು ನಂಬಿಕೊಂಡವಳಾದರೆ ಆಕೆ ತನ್ನ ಹುಷಾರಿನಲ್ಲಿ ತಾನಿರಬೇಕು. Of course, ಕಳ್ಳತನ ಮಾಡುವುದು, ಪಿಕ್ ಪಾಕೆಟ್ ಮಾಡುವುದು ಅಪರಾಧವೇ, ಅದರಲ್ಲಿ ತೊಡಗಿದವರನ್ನು ಶಿಕ್ಷಿಸುವುದಕ್ಕಾಗಿಯೇ ಕಾನೂನು, ಪೊಲೀಸು,ಕೋರ್ಟುಗಳಿರುವುದು ಹಾಗಂತ ನಮ್ಮ ರಕ್ಷಣೆಯನ್ನು ನಾವು ನಿರ್ಲಕ್ಷಿಸುವುದಕ್ಕೆ ಸಾಧ್ಯವೇ? ಇದನ್ನು ಹೆಣ್ಣು ತನ್ನ ಸುರಕ್ಷತೆಗಾಗಿ ತಾನು ಕಂಡುಕೊಳ್ಳಬೇಕಾದ ಉಪಾಯವೆಂದು ಕಾಣಬೇಕೇ ಹೊರತು ತನಗೆ ಸಮಾಜ ವಿಧಿಸಿದ ಕಟ್ಟಳೆ ಎಂದು ಭಾವಿಸಬಾರದು. ಹಾಗೆ ಭಾವಿಸಿದಾಗ ಅದನ್ನು ಮೀರುವ ಹುಚ್ಚು ಉನ್ಮಾದ ಬೆಳೆಯುತ್ತದೆ. ಏನಂತೀರಿ?
ಈ ಟಿವಿಯಲ್ಲಿ ರಾತ್ರಿ ಎಂಟೂ ವರೆಗೆ ‘ಮಂಥನ’ ಎಂಬ ಧಾರಾವಾಹಿ ಪ್ರಸಾರವಾಗುತ್ತಿತ್ತು. ‘ಇದು ಇನ್ನೊಂದು ಮುಕ್ತ’ ಅಂತ ಹೆಸರು ಪಡೆದ ಈ ಧಾರಾವಾಹಿ ಇತ್ತೀಚೆಗೆ ಮುಕ್ತಾಯ ಕಂಡಿತು. ಧಾರಾವಾಹಿಗಳು ಎಂದರೆ ಸಾವಿಲ್ಲದ, ಕೊನೆಯಿಲ್ಲದ ಚಿರಂಜೀವಿಗಳು ಎಂದೇ ಜನರು ಭಾವಿಸಿರುವ ಇತ್ತೀಚಿನ ದಿನಗಳಲ್ಲಿ ಒಂದು ಧಾರಾವಾಹಿ ಮುಕ್ತಾಯವಾಯ್ತಂತೆ ಎಂದು ಕೇಳಿದರೇನೇ ಆಶ್ಚರ್ಯವಾಗುತ್ತದೆ!
ಈ ‘ಮಂಥನ’ದ ಬಗೆಗೊಂದು ಪುಟ್ಟ ಟಿಪ್ಪಣಿ, ಒಂದೊಳ್ಳೆ ಧಾರಾವಾಹಿಯ ನೆನಪಿಗಾಗಿ… ‘ಮಂಥನ’ದಪಾತ್ರಗಳ ಸಂಭಾಷಣೆ ಮೊದಲ ವೀಕ್ಷಣೆಯಲ್ಲೇ ನಮ್ಮ ಗಮನವನ್ನು ಸೆಳೆದುಬಿಡುತ್ತದೆ. ತುಂಬಾ ನಾಟಕೀಯ ಎನ್ನಿಸುವಂತಹ ಸಂಭಾಷಣೆಗಳು, ಗ್ರಾಂಥಿಕ ಭಾಷೆ ಎಲ್ಲವೂ ಹೊಸ ಪ್ರಯೋಗದಂತೆ ಮನಸ್ಸನ್ನು ಸೆಳೆಯುತ್ತವೆ. ಆದರೆ ಇಡೀ ಧಾರಾವಾಹಿಯನ್ನು ಆ ಹೊಸತನವೇ ಆಕ್ರಮಿಸಿಕೊಂಡು ಹೊಸಕಿ ಹಾಕಿಬಿಡುತ್ತದೆ. ಸೃಜನಶೀಲತೆ, ಬುದ್ಧಿವಂತಿಕೆ, ವೈಚಾರಿಕತೆಯನ್ನು ಮೆರೆಸುವ ಸಡಗರದಲ್ಲಿ ಸಹಜತೆ ನರಳುತ್ತದೆ. ಕಾವ್ಯಾತ್ಮಕವಾದ ಅಭಿವ್ಯಕ್ತಿ ಕಾಣೆಯಾಗುತ್ತದೆ, ಕಲಾಕೃತಿಯಾಗುವ ಬದಲು ಅದೊಂದು ಹತ್ತು ಬಟ್ಟೆ ಸೇರಿಸಿ ಹೊಲಿದ ಕೌದಿಯಾಗಿಬಿಡುತ್ತದೆ. ಚಿಕ್ಕ ಮಕ್ಕಳ ಬಾಯಲ್ಲಿ ದೊಡ್ಡವರೂ ಅರ್ಥಮಾಡಿಕೊಳ್ಳಲಾಗದಂತಹ ಮಾತುಗಳನ್ನು ತುರುಕುವುದು ಇದಕ್ಕೆ ಸಾಕ್ಷಿ. ಮೊದಲೇ ತಯಾರಿಸಿಟ್ಟುಕೊಂಡ ವಾದವನ್ನು, ವಿಚಾರವನ್ನು ಎರಡು ಪಾತ್ರಗಳು ಮಂಡಿಸುವಂತೆ ಸಂಭಾಷಣೆಯಿರುತ್ತದೆ. ಪಾತ್ರಗಳ ಸಂಸ್ಕಾರ, ವಯೋಮಾನ, ಮನೋಧರ್ಮಕ್ಕನುಗುಣವಾಗಿ ಸಂಭಾಷಣೆಯಿದ್ದರೆ ಕಲಾಕೃತಿ ಗೆಲ್ಲುತ್ತದೆ ಇಲ್ಲವಾದರೆ ಸಂಭಾಷಣೆ ಬರೆಯುವವ ಮಾತ್ರ ಗೆಲ್ಲುತ್ತಾನೆ.
ಹಾಗೆ ನೋಡಿದರೆ, ಈಗ ಕನ್ನಡದ ಚಾನಲ್ಲುಗಳಲ್ಲಿ ಹರಿಯುತ್ತಿರುವ ‘ಧಾರಾವಾಹಿ’ಗಳಿಗೆ ಹೋಲಿಸಿದರೆ ‘ಮಂಥನ’ ಸಾವಿರ ಪಾಲು ಶ್ರೇಷ್ಠ. ಮನುಷ್ಯ ಸಂಬಂಧಗಳನ್ನು ಹೆಜ್ಜೆ ಹೆಜ್ಜೆಗೂ ಪ್ರಶ್ನಿಸುವ, ಅಗ್ನಿ ಪರೀಕ್ಷೆಗೊಡ್ಡುವ, ಸಂಶಯದಿಂದ ಕಾಣುವ, ಸೀಳಿ ನೋಡಿ ವಿಶ್ಲೇಷಿಸುವ ಪ್ರಯತ್ನ ಹೊಸತನದಿಂದ ಕೂಡಿದೆ. ಮದುವೆ, ಮಕ್ಕಳ ಮೇಲಿನ ಪ್ರೀತಿ, ನಿರೀಕ್ಷೆ, ಕುಟುಂಬ ವ್ಯವಸ್ಥೆ, ಸಂಬಂಧಗಳ ಸ್ವರೂಪವನ್ನು ಎಳೆ ಎಳೆಯಾಗಿ ಕಾಣುವ ಪ್ರಯತ್ನ ಮನಸ್ಸಿಗೆ ಮುಟ್ಟುತ್ತದೆ. ವ್ಯವಹಾರ, ಪ್ರಾಮಾಣಿಕತೆ- ಸುತ್ತಲಿನ ಭ್ರಷ್ಟ ಪರಿಸರದಲ್ಲಿ ಅದು ಪ್ರಾಮಾಣಿಕನಲ್ಲಿ ಹುಟ್ಟಿಸುವ ಅಹಂಕಾರ, ಹಣದ ಗುಣ, ಸರಕಾರಿ ಅಧಿಕಾರಿ, ಕಾರ್ಖಾನೆಯ ಶ್ರೀಮಂತರು, ತೆರಿಗೆ ಸಂಸ್ಕೃತಿ -ಹೀಗೆ ಅನೇಕ ಸಾಮಾಜಿಕ ಮುಖಗಳ ಮೇಲೂ ಬೆಳಕು ಚೆಲ್ಲುವ ಪ್ರಯತ್ನ ಸ್ತುತ್ಯಾರ್ಹ.
ಗಮನಿಸಬೇಕಾದ ಮತ್ತೊಂದು ಸೂಕ್ಷ್ಮ ಸಂಗತಿಯೆಂದರೆ, ‘ಮಂಥನ’ದ ಪ್ರತಿ ಪಾತ್ರದ ಆಲೋಚನೆಯಲ್ಲೂ ಹೊಸತನವನ್ನು ಒತ್ತಾಯದಿಂದ ತೂರಿಸುವ ಪ್ರಯತ್ನ ಉಂಟುಮಾಡುವ ಕಿರಿಕಿರಿ. ಎಲ್ಲಾ ಪಾತ್ರಗಳಿಗೂ ಮಾನವೀಯ ಸಂಬಂಧಗಳ ಬಗ್ಗೆ ಸಮಾಜ ಸೃಷ್ಟಿಸಿರುವ ‘ಮಾದರಿ'(stereotype)ಗಳನ್ನು ಧಿಕ್ಕರಿಸುವ, ಅವುಗಳ ಹಂಗನ್ನು ಮೀರುವ ಉನ್ಮಾದವಿದೆ, ಹೊಸ ಆಯಾಮಗಳಿಗೆ ಕೈಚಾಚುವ ಹಸಿವಿದೆ. ಇದು ಮೆಚ್ಚುಗೆಗೆ ಅರ್ಹವಾದ ವಿಚಾರವೇ ಆದರೆ ಈ ಭಾವ ಎಲ್ಲಾ ಪಾತ್ರಗಳನ್ನೂ ಆವರಿಸುವುದರಿಂದ ಕಥಾನಕದ ಒಟ್ಟು ಅಂದಕ್ಕೆ ತೊಂದರೆಯಾಗುತ್ತದೆ. ಸಮಾಜದಲ್ಲಿ ಸಂಬಂಧಗಳು ಪುನರ್ ಮೌಲ್ಯಮಾಪನ ಗೊಳ್ಳುತ್ತಾ ಹೋಗುತ್ತಲೇ ಇರುತ್ತವೆ. ಹೊಸ ಹೊಸ ಆಯಾಮಗಳು ತೆರೆದುಕೊಳ್ಳುತ್ತಲೇ ಹೋಗುತ್ತಿರುತ್ತವೆ. ಹತ್ತಾರು ವರ್ಷಗಳ ನಂತರ ಈ ಧಾರಾವಾಹಿಯನ್ನು ನೋಡುವವನಿಗೆ ಇವೆಲ್ಲಾ ಹೊಸ ಚಿಂತನೆಗಳು ಅನ್ನಿಸದಷ್ಟು ಸಹಜವಾಗಿಬಿಟ್ಟಿರುತ್ತವೆ, ಇಲ್ಲವೆ ಅಪ್ರಸ್ತುತವಾಗಿಬಿಟ್ಟಿರುತ್ತವೆ. ಸತಿ ಪದ್ಧತಿ, ಬಾಲ್ಯವಿವಾಹಗಳ ಪ್ರಶ್ನೆ ನಮ್ಮಲ್ಲಿ ಅಪ್ರಸ್ತುತವಾಗಿರುವಂತೆ. ಈ ಬಗೆಯ ಸಂಬಂಧಗಳ ವಿಶ್ಲೇಷಣೆ ಸಲ್ಲದು ಅಂತಲ್ಲ, ಆ ಅಂಶದ ನೆರಳು ಎಲ್ಲಾ ಪಾತ್ರಗಳ ಮೇಲೂ ಬೀಳುವುದು ಸರಿಯಲ್ಲ.
ಇಷ್ಟೆಲ್ಲಾ ವಿಚಾರಗಳನ್ನು- ಅವುಗಳಲ್ಲಿ ನೆಗೆಟೀವ್ ಅಭಿಪ್ರಾಯಗಳೂ ಸೇರಿದ್ದರೂ- ಹುಟ್ಟುಹಾಕುವ ಕೆಲಸವನ್ನು ಒಂದು ಕನ್ನಡ ಧಾರಾವಾಹಿ ಮಾಡಿದೆಯೆಂದರೆ ಅದು ಆ ಧಾರಾವಾಹಿಯ ಯಶಸ್ಸೆಂದೇ ಕರೆಯಬೇಕು.ಇದು ‘ಮಂಥನ’ಕ್ಕೊಂದು ಆತ್ಮೀಯ ವಿದಾಯ…
ಇತ್ತೀಚಿನ ಟಿಪ್ಪಣಿಗಳು