ಕಲರವ

Archive for ಜುಲೈ 2008

ಓ ಮಾಯಾಂಗನೆ ನಗರವೇ!

ನಾನು ಕಲಾವಿದ. ನೆನಪಾಗಲಿಲ್ಲವಾ?ಊರೆಲ್ಲಾ ಸವಿ ನಿದ್ದೆಯಲ್ಲಿ ಮುಳುಗಿ ದಣಿವು ಕಳೆದುಕೊಳ್ಳುತ್ತಾ ಸವಿಗನಸು ಕಾಣುತ್ತಿರುವಾಗ ನಾನು ನದಿಯ ದಂಡೆಯ ಮೇಲೆ ಕುಳಿತು ಶುಭ್ರ ಬಿಳಿಯ ಕಾಗದಕ್ಕೆ ಬಣ್ಣದ ಕುಂಚದ ಸ್ಪರ್ಶ ನೀಡುವುದರಲ್ಲಿ ಮಗ್ನನಾಗಿರುತ್ತೇನೆ. ಮುಸ್ಸಂಜೆಯ ಹೊತ್ತಿನಲ್ಲಿ ಮರದ ಕೆಳಗೆ ಕುಳಿತು ನಾಲ್ಕು ಸಾಲು ಗೀಚಿ ಬಿಸಾಕುವುದಕ್ಕಾಗಿ ಗಂಟೆ ಗಟ್ಟಲೆ ಧ್ಯಾನಸ್ಥನಾಗಿರುತ್ತೇನೆ. ನಿಸರ್ಗದ ನಾಡಿ ಮಿಡಿತಕ್ಕೆ ನನ್ನ ದೇಹವನ್ನೇ ಶ್ರುತಿಗೊಳಿಸಿ ಕುಣಿಯುತ್ತಿರುತ್ತೇನೆ. ಗಂಟಲಿನಿಂದ ಹೊರಡುವ ಯಃಕಶ್ಚಿತ್ ಧ್ವನಿಯಲ್ಲಿ ಅಲೌಕಿಕ ಸಂದೇಶವನ್ನು ಹುಡುಕುತ್ತಾ ಹಾಡುತ್ತಿರುತ್ತೇನೆ. ಊರ ಹೊರಗಿನ ಮೈದಾನದಲ್ಲಿ ಕಲ್ಲು ಬಂಡೆಯನ್ನು ಕಟೆಯುತ್ತಾ ನನ್ನೊಳಗಿನ ಅಮೂರ್ತ ಭಾವಕ್ಕೆ ಆಕಾರವನ್ನು ಕೊಟ್ಟು ತಿಕ್ಕಿ ತೀಡುತ್ತಿರುತ್ತೇನೆ. ಇಹ ಪರವನ್ನು ಮರೆತು ಯಾವುದೋ ಪಾತ್ರದ ಪರಕಾಯ ಪ್ರವೇಶ ಮಾಡಿ ಒಮ್ಮೆ ರಾಜನಂತೆಯೂ ಮತ್ತೊಮ್ಮೆ ಭಿಕ್ಷುಕನಂತೆಯೂ ಹುಚ್ಚುಹುಚ್ಚಾಗಿ ಮಾತನಾಡುತ್ತಿರುತ್ತೇನೆ. ನೆನಪಾಯಿತಾ? ಹ್ಹಾ! ನಾನು ಅದೇ ಕಲಾವಿದ.

brown-city-1.jpg

ನೀ ಹೇಗಿದ್ದೀ? ಹೇಗಿದ್ದೇನೆ ಅಂತ ಕೇಳಿಕೊಳ್ಳಲಿಕ್ಕೂ ಬಹುಶಃ ನಿನಗೆ ಪುರುಸೊತ್ತಿಲ್ಲ ಅಂತ ಕಾಣುತ್ತೆ. ಒಂದೇ ಸಮನೆ ಓಡುತ್ತಿರುವೆ. ಲಕ್ಷ ಅಶ್ವಧ ಸಾರೋಟಿನಲ್ಲಿ ಆಸೀನಳಾಗಿ ಓಡುತ್ತಲೇ ಇರುವೆ. ಕನಸುಗಳನ್ನು ಬೆನ್ನಟ್ಟಿ ಓಡುತ್ತಿರುವೆ. ಸಿದ್ಧಾಂತಗಳನ್ನು ಬೆನ್ನಟ್ಟಿ ಓಡುತ್ತಿರುವೆ. ನಿನ್ನ ಕಾಲುಗಳ ಕಸುವನ್ನು ಮೆಚ್ಚಲೇ ಬೇಕು. ಈ ವೇಗ ಪಡೆಯುವುದಕ್ಕೆ ನೀನು ಅದೆಷ್ಟು ಬಲಿದಾನಗಳನ್ನು ಮಾಡಿದ್ದೀಯೆ. ಅದೆಷ್ಟು ರಾತ್ರಿಗಳ ಸವಿ ನಿದ್ದೆಯನ್ನು ನಿರ್ದಯವಾಗಿ ಸುಟ್ಟು ಬಿಟ್ಟಿದ್ದೀಯೆ. ಅವೆಷ್ಟು ಸಣ್ಣ ಸಣ್ಣ ಸುಖಗಳಿಗೆ ನೀನು ಬೆನ್ನು ಹಾಕಿ ಬಂದು ಬಿಟ್ಟಿದ್ದೀಯೆ. ರಾಕ್ಷಸನ ರಭಸದಲ್ಲಿ ಓಡುತ್ತಿರುವೆ. ನೀನು ಓಡುತ್ತಿರುವ ದಿಕ್ಕಾದರೂ ನಿನಗೆ ತಿಳಿದಿರಲಿ ಎಂದು ಆಶಿಸುವೆ.

ನಿನ್ನ ಬೆಡಗು ಬಿನ್ನಾಣಗಳನ್ನು ಕಂಡು ನಾನು ಅನೇಕ ವೇಳೆ ಮೈಮರೆತಿದ್ದೇನೆ. ನಿನ್ನ ಮೋಹಕ ಸೌಂದರ್ಯದ ಮುಖವಾಡದ ಹಿಂದೆ ಎಂಥಾ ಕ್ರೂರತೆ ಇದೆ ಅನ್ನೋದು ತಿಳಿಯದೆ ಮುಗ್ಧವಾಗಿ ಆಕರ್ಷಿತನಾಗಿದ್ದೇನೆ. ತನ್ನ ಯೌವನವನ್ನು ಕಾಪಾಡಿಕೊಳ್ಳಲು ಮೈನೆರೆದ ಯುವತಿಯರ ರಕ್ತದಿಂದ ಅಭಿಷೇಕ ಮಾಡಿಕೊಂಡು ಕೊಬ್ಬಿದ ಮಾಟಗಾತಿಯಂಥ ನಿನ್ನ ವಾಸ್ತವದ ರೂಪವನ್ನು ಕಂಡು ನಾನು ದಿಗ್ಮೂಢನಾಗಿದ್ದೇನೆ. ನಿನ್ನ ಆಕಾಶ ಚುಂಬಿಸುವ ಕಟ್ಟಡಗಳು, ಒಂದು ಒಣಗಿದ ಎಲೆಯನ್ನೂ ಮಲಗಲು ಬಿಡದಷ್ಟು ಬ್ಯುಸಿಯಾದ, ಸ್ವಚ್ಛವಾದ ನಿನ್ನ ರಸ್ತೆಗಳು, ಕತ್ತಲಲ್ಲಿ ಕಣ್ಣು ಕೋರೈಸುವ ನಿನ್ನ ಕಾಂತಿ, ಝಗಮಗಿಸುವ ನಿನ್ನ ಒಡವೆಗಳು- ಊಹುಂ, ಇವೆಲ್ಲವನ್ನು ವರ್ಣಿಸಲು ನನ್ನಲ್ಲಿ ಪದಗಳಿಲ್ಲ. ಹೌದು, ಕವಿಯೂ ಸೋಲುತ್ತಾನೆ ಈ ಪ್ರಯತ್ನದಲ್ಲಿ.
ನಿನ್ನ ಪರಿವಾರವಾದರೂ ಎಂಥದ್ದು? ನರ ನಾಡಿಗಳಲ್ಲಿ ಉನ್ಮಾದವೇ ಹರಿಯುತ್ತಿರುವ ಯುವಕರು ಎಲ್ಲೆಲ್ಲೂ ಕಾಣುತ್ತಾರೆ. ತೋಳುಗಳಲ್ಲಿ ಉಕ್ಕಿನ ಕಠಿಣತೆ, ಕೈಗಳಲ್ಲಿ ಮಿಂಚಿನ ಚಾಕಚಕ್ಯತೆ, ಕಾಲುಗಳಿಗೆ ಹುಚ್ಚು ನದಿಯ ವೇಗ ಬೆನ್ನಟ್ಟುವ ತುಡಿತ. ಅವರಿಗೂ ನೀನು ನಿನ್ನ ರಾಕ್ಷಸ ಹಸಿವೆಯನ್ನು ಅಂಟಿಸಿಬಿಟ್ಟಿರುವೆ. ರಾಕ್ಷಸನ ಹಸಿವಿರುವವನು ರಾಕ್ಷಸನ ಹಾಗೇ ದುಡಿಯಬೇಕು, ರಾಕ್ಷಸನ ಹಾಗೇ ತಿನ್ನಬೇಕು ಅಲ್ಲವೇ? ಅವರೂ ಓಡುತ್ತಿದ್ದಾರೆ. ಬೆನ್ನಟ್ಟುತ್ತಿದ್ದಾರೆ. ಕೆಲವರು ಹೆಸರಿನ, ಪ್ರಸಿದ್ಧಿಯ ಹಿಂದೆ ಬಿದ್ದಿದ್ದಾರೆ. ಕೆಲವರು ಹಣದ ಕಂತೆಯ ಹಿಂದೆ ಓಡುತ್ತಿದ್ದಾರೆ. ಇನ್ನೂ ಕೆಲವರು ಪ್ರೀತಿ, ನೆಮ್ಮದಿ, ಮನಃಶಾಂತಿಗಳ ಹಿಂದೆ ರೇಸಿಗೆ ಬಿದ್ದವರ ಹಾಗೆ ಓಡುತ್ತಿದ್ದಾರೆ, ಅವೂ ಸಹ ಗಳಿಸಬಹುದಾದ ವಸ್ತುಗಳೇನೋ ಎಂಬ ಭ್ರಮೆಯಲ್ಲಿ! ಒಂದೇ ಸಮನೆ ಓಡುತ್ತಿರುವ ಅವರಿಗೆ ಕೂತು ದಣಿವಾರಿಸಿಕೊಂಡು ಮುಂದಿನ ದಾರಿಯನ್ನು ನಿರ್ಧರಿಸಿ ಮುಂದೆ ಸಾಗುವ ವ್ಯವಧಾನವನ್ನೂ ನೀನು ಕರುಣಿಸಿಲ್ಲ. ದಣಿವಾರಿಸಿಕೊಳ್ಳಲು ಕೂತವನನ್ನು ಹೂತು ಹಾಕಿಬಿಡುತ್ತೀಯೆ. ಎಲ್ಲರಿಗೂ ಓಟದ ಚಿಂತೆ, ಎಲ್ಲರಿಗೂ ಹಾದಿಗಿಂತ ಹೆಜ್ಜೆ ಸ್ಪಷ್ಟ.

ನಂಗೆ ಗೊತ್ತು. ಹೀಗೆ ಕುಳಿತು ನಾನು ನಿನ್ನ ಬಗ್ಗೆ ಮಾತನಾಡುತ್ತಿರುವುದು ನಿನಗೆ ಕಿರಿಕಿರಿ ಉಂಟು ಮಾಡುತ್ತಿದೆ. ನಾನೂ ನಿನ್ನೊಳಗಿನ ರೇಸಿನಲ್ಲಿ ಕುದುರೆಯಾಗಿ ಓಡಬೇಕು ಅನ್ನೋದು ನಿನ್ನ ಆಸೆ. ಆದರೇನು ಮಾಡಲಿ ನನಗೆ ಓಡುವ ಉನ್ಮಾದವೇ ಇಲ್ಲ. ಯಾವ ದಿಕ್ಕಿನತ್ತ ತಿರುಗಿ ನೋಡಿದರೂ ಮಾಯಾ ಮೃಗವೇ ಕಾಣುವಾಗ ಓಡಬೇಕಿರುವುದಾದರೂ ಎಲ್ಲಿಗೆ? ನೀನು ಓಡುವುದಕ್ಕೆ ಕೊಡಮಾಡುವ ಸ್ಪೂರ್ತಿ, ಉಚಾವಣೆ, ಒಡ್ಡುವ ಸವಾಲುಗಳು ಇವೆಲ್ಲದರ ಹಿಂದಿರುವ ಶುದ್ಧ ನಿರರ್ಥಕತೆಯನ್ನು ಕಂಡವನಿಗೆ ನಿನ್ನ ಯಾವ ಜಾಲವೂ ಆಕರ್ಷಕವಾಗಿ ಕಾಣದು. ಅದಕ್ಕೇ ನಾನು ಸಂಭ್ರಮದಿಂದ ಬಂದು ನಿನ್ನ ತೆಕ್ಕೆಯಲ್ಲಿ ಬೀಳುವುದಿಲ್ಲ. ನೀನು ಹಬ್ಬಿಸಿರುವ ಜಾಲದಲ್ಲಿ ಸಿಕ್ಕಿಹಾಕಿಕೊಂಡು ಕೈ ಕಾಲು ಬಡಿಯುತ್ತಾ ಕುಟುಕು ಉಸಿರಾಗಿ ಒದ್ದಾಡುತ್ತಾ ಮರಣ ಭಿಕ್ಷೆಗಾಗಿ ನಿನ್ನೆದುರು ಕೈ ಚಾಚಿ ನಿಲ್ಲುವುದಿಲ್ಲ. ಓ ಮಾಯಾಂಗನೆ ನಗರವೇ, ನೀನು ನನ್ನ ಮುಟ್ಟುವುದಕ್ಕೂ ಸಾಧ್ಯವಿಲ್ಲ. ನೆನಪಿಟ್ಟುಕೋ!

ಹೌದು, ನನಗೆ ಗೊತ್ತು. ನಿನ್ನ ಹಂಗಿನರಮನೆಯಲ್ಲಿ ನನ್ನ ಸ್ಥಾನ ಯಾವುದು ಅಂತ. ನನಗೆ ಅದರ ಬಗ್ಗೆ ಬೇಸರವಿಲ್ಲ. ನಿನ್ನ ತೆಕ್ಕೆಗೆ ಬಿದ್ದು ನಿನ್ನ ರೇಸಿನಲ್ಲಿ ಕುದುರೆಗಳಾಗಿ ಓಡುವವರಿಗೆ ನೀನು ನನ್ನನ್ನು ಹೇಗೆ ಪರಿಚಯಿಸುವೆ ಎಂಬುದು ನನಗೆ ಗೊತ್ತು. ನಾನು ಅವರ ಕಣ್ಣುಗಳಲ್ಲಿ ಶುದ್ಧ ಗೇಲಿಯ ವಸ್ತುವಾಗಿರುತ್ತೇನೆ ಎಂಬುದನ್ನು ನಾನು ಬಲ್ಲೆ. ಕುಡಿಯಲು ಹಾಲು ಕೊಟ್ಟ ತಾಯಿ ತಲೆಯಲ್ಲಿ ವಿಷವ ಬಿತ್ತಿದರೆ ಯಾವ ಮಗುವಿಗೆ ತಾನೆ ತಿಳಿಯುತ್ತದೆ. ನನಗೆ ನಿನ್ನ ಮಕ್ಕಳ ಬಗ್ಗೆ ಬೇಸರವಿಲ್ಲ. ಅವರ ಕಣ್ಣಿಗೆ ನಾನು ನಿರುಪಯುಕ್ತ ಕ್ರಿಮಿಯಾಗಿ, ಆಸರೆಗೆ ಹಂಬಲಿಸಿ ಅಂಟಿಕೊಂಡ ಪ್ಯಾರಸೈಟ್ ಆಗಿ, ಓಡಲು ಬಾರದ ಹೆಳವನಾಗಿ, ಪರಿಶುದ್ಧ ಸೋಮಾರಿಯಾಗಿ ಕಾಣುತ್ತೇನೆ ಎಂಬುದನ್ನು ನಾನು ಅರಿತಿದ್ದೇನೆ. ತಮ್ಮ ಓಟ ನನಗೆ ಆದರ್ಶವಾಗಲಿ, ನನಗೆ ಸ್ಪೂರ್ತಿಯಾಗಲಿ ಎಂದು ಅವರು ತೀರಾ ಪ್ರಾಮಾಣಿಕವಾಗಿ ಹಂಬಲಿಸಿ ಪ್ರಯತ್ನಿಸುವುದನ್ನು ಕಂಡು ಮರುಗಿದ್ದೇನೆ. ನನ್ನ ಧ್ಯಾನ ಅವರಿಗೆ ಸೋಮಾರಿತನವಾಗಿ ಕಂಡರೆ, ನನ್ನ ಏಕಾಂತವನ್ನು ಅವರು ಮುಖಹೇಡಿತನದ ಹಾಗೆ ಭಾವಿಸಿದರೆ, ನನ್ನ ಕ್ರಿಯಾಶೀಲತೆಯನ್ನು ಅವರು ಹುಚ್ಚಾಟ ಎಂದು ಅರ್ಥಮಾಡಿಕೊಂಡರೆ ನಾನೇನು ಮಾಡಲು ಸಾಧ್ಯ? ಅವರು ಹಾಗೆ ನನ್ನನ್ನು ಅವಮಾನಿಸಿದಾಗಲೆಲ್ಲಾ ನಾನು ನಿನ್ನ ನೆನೆಯುತ್ತೇನೆ. ನಿನ್ನ ವಿಕಟ ಹಾಸವನ್ನು ಸ್ಮರಿಸುತ್ತೇನೆ. ಅವರ ಮುಗ್ಧತೆಗಾಗಿ ನನ್ನಲ್ಲಿ ಅನುಕಂಪ ಮೂಡುತ್ತದೆ. ಓ ನಗರವೇ ನಿನ್ನ ಮಕ್ಕಳ ನೀ ಚೆನ್ನಾಗಿ ನೋಡಿಕೋ?

ಇಂತಿ,
ಒಬ್ಬ ಕಲಾವಿದ

inti ninna preetiya copy.jpg

ಗುರುವಿನಂಥ ಗೆಳತಿಯೇ,

‘ಹುಡುಗಿಯರ ಜತೆ ಮಾತಾಡುವುದು ಅಂದರೇನೆ ನನಗೆ ಅಲರ್ಜಿ’, ಒಂದೇ ಮಾತಲ್ಲಿ ಹೇಳಿ ಬಿಟ್ಟಿದ್ದೆ ನಾನು. ನೀನು ಜೋರಾಗಿ ನಗುತ್ತಿದ್ದದ್ದು ನನ್ನ ರೂಂ ಮೇಟ್‌ಗೂ ಕೇಳಿತ್ತು.

‘ಹಾಗಾದರೆ ನನ್ನ ಜೊತೆಗೆ ಮಾತಾಡ್ತಿದ್ದೀಯಲ್ಲ?’ ಅದು ಮಾತೋ, ನಿನ್ನ ನಗುವೇ ಹೊರಡಿಸಿದ ಅರ್ಥವೋ ತಿಳಿಯದೆ ನಾನು ಅರೆಕ್ಷಣ ಮೌನವಾಗಿದ್ದೆ.

‘ಹುಚ್ಚಪ್ಪ, ಹುಡುಗೀರೇನು ಬೇರೆ ಗ್ರಹದಿಂದ ಇಳಿದು ಬಂದವರಲ್ಲ. ಅವರೂ ನಿನ್ನ ಹಾಗೇ ಮನುಷ್ಯರು. ದೇವರು ಎಲ್ಲಾ ಗುಣಗಳು ಇರುವ ಒಂದೇ ಜಾತಿಯ ಮನುಷ್ಯರನ್ನು ಸೃಷ್ಠಿ ಮಾಡಿಬಿಟ್ಟರೆ ಅವರಿಗೆ ಒಬ್ಬರಲ್ಲೊಬ್ಬರಿಗೆ ಆಸಕ್ತಿಯೇ ಹುಟ್ಟುವುದಿಲ್ಲ ಅನ್ನೋ ಕಾರಣಕ್ಕೆ ಗಂಡು ಹೆಣ್ಣನ್ನ ಮಾಡಿದ. ಹೆಣ್ಣಿಗೆ ಗಂಡು ಯಾವಾಗಲೂ ಅಚ್ಚರಿಗಳ ಮೂಟೆಯೇ. ಹುಡುಗನಿಗೂ ಹಾಗೇ ಹುಡುಗಿ ಜಗತ್ತಿನ ವಿಸ್ಮಯಗಳ ಸಂತೆ. ಹುಡುಗಿಯರ ಜೊತೆ ಬೆರೆತು ನೋಡು ನಿನ್ನೊಳಗಿನ ದುಗುಡಗಳು, ನಿನಗೇ ಗೊತ್ತಿಲ್ಲದೆ ಮನಸ್ಸು ಹಾಕಿಟ್ಟುಕೊಂಡ ಕಗ್ಗಂಟುಗಳು ಸಡಿಲವಾಗುತ್ತಾ ಹೋಗುತ್ತವೆ….’ ನೀನು ಮಾತನಾಡುತ್ತಲೇ ಇದ್ದೆ. ನನ್ನೊಳಗೆ ಆ ನಿನ್ನ ದನಿಯ ಏರಿಳಿತಗಳು ನವಿರಾದ ಕಂಪನಗಳನ್ನು ಉಂಟು ಮಾಡುತ್ತಿದ್ದವು. ನೀನು ಗೆಳತಿಯಾಗಿ, ಗುರುವಾಗಿ, ಫಿಲಾಸಫರ್ ಆಗಿ ನನ್ನೆದುರು ನಿಲ್ಲುತ್ತಿದ್ದೆ.

ಅದೊಂದು ಇಳಿಸಂಜೆಯಲ್ಲಿ ತೂಕಡಿಸುತ್ತಾ ಬಿದ್ದಿದ್ದ g-talk ನ ಪರದೆಯಲ್ಲಿ ಅಚಾನಕ್ಕಾಗಿ ನಿನ್ನ ಹೆಸರು ಕಂಡಿತ್ತು. ನೀನಾಗೆ ನಿನ್ನ ಪರಿಚಯಿಸಿಕೊಂಡೆ. ನಿನ್ನ ಹೆಸರು ಹೇಳಿದೆ. ನನ್ನ ಬಗ್ಗೆ ಕೇಳುತ್ತಾ ಹೋದೆ. ನಾನು ಎಲ್ಲಾ ಉತ್ತರ ಗೊತ್ತಿರುವ ಜಾಣ ವಿದ್ಯಾರ್ಥಿಯ ಹಾಗೆ ನಿನ್ನ ಒಂದೊಂದೇ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋದೆ. ನೀನು ನನ್ನ ಬಗ್ಗೆ ಎಲ್ಲಾ ತಿಳಿದುಕೊಳ್ಳಲೇ ಬೇಕು ಎಂಬ ಹಸಿವಿನಿಂದ ಕೇಳುತ್ತಿದ್ದರೆ ನಾನು ಮಾತು ಬರುವ ಮೂಕನ ಹಾಗೆ ಉತ್ತರಿಸುತ್ತಿದ್ದೆ. ಸುಮಾರು ಅರ್ಧ ಗಂಟೆ ಕಳೆದ ಮೇಲೆ, ‘ನನ್ನ ಬಗ್ಗೆ ಕೇಳೋಲ್ಲವೇನೊ’ ಎಂದು ನೀನು ಕೊಂಕು ತೆಗೆದಾಗಲೇ ನಾನು ಎಚ್ಚರನಾದದ್ದು.

ಪ್ರತಿದಿನ ಸಂಜೆಯಾಗುತ್ತಿದ್ದ ಹಾಗೆ ನನ್ನ ಮನಸ್ಸು ಅರಳಿ ನಿಲ್ಲುತ್ತಿತ್ತು. ಕಂಪ್ಯೂಟರಿನ ಮುಂದೆ ಪ್ರತಿಷ್ಠಾಪಿತನಾಗಿ ನಿನ್ನ ಬರುವಿಕೆಗಾಗಿ ಕಾಯುತ್ತಿದ್ದರೆ ನನ್ನೆದೆಯಲ್ಲಿ ನೂರು ಕುದುರೆಗಳ ರೇಸು. ಪರದೆಯ ಮೇಲೆ ‘hi’ ಎಂಬ ನಿನ್ನ ಎರಡು ಅಕ್ಷರದ ಸಂಬೋಧನೆ ಕಾಣುತ್ತಿದ್ದ ಹಾಗೆ ಟ್ರಾನ್ಸಿಸ್‌ಟರು, ಮೈಕ್ರೋ ಕಂಟ್ರೋಲರು ಎಂದು ದಿನವಿಡೀ ಜಪಿಸಿ ದಣಿದ ಮೈ ಮನಗಳು ಆಳವಾದ ನಿದ್ದೆ ಮಾಡಿ ಎದ್ದ ಮಗುವಿನ ಹಾಗಾಗಿ ಬಿಡುತ್ತಿದ್ದವು. ಕೀಬೋರ್ಡಿನೊಂದಿಗೆ ಸಖ್ಯ ಸಂಪಾದಿಸಿಕೊಂಡಿದ್ದ ಕೈ ಬೆರಳುಗಳು ಸರ ಸರನೆ ಓಡಾಡುತ್ತಾ ಚಾಟು ಬಾಕ್ಸಿನ ಪುಟ್ಟ ಸ್ಕ್ರೀನಿನಲ್ಲಿ ಅಕ್ಷರಗಳನ್ನು ಮೂಡಿಸುತ್ತಿದ್ದರೆ ನಮ್ಮಿಬ್ಬರ ಮಧ್ಯೆ ನೂರಾರು ಭಾವನೆಗಳು ವಿನಿಮಯವಾಗುತ್ತಿದ್ದವು. ನನ್ನ ಬ್ಲಾಗಿನಲ್ಲಿ ಹಾಕಿದ ಕವಿತೆ ನಿನಗೆ ಇಷ್ಟವಾಗಿತ್ತು. ಅದನ್ನು ನನಗೆ ತಿಳಿಸಬೇಕು ಅಂತ ನೀನು ಮೊದಲು ಚಾಟಿಸಿದೆ. ಕವಿತೆಯ ಬಗೆಗಿನ ಮಾತು ಮೆಲ್ಲಗೆ ನಮ್ಮ ನಮ್ಮ ಬದುಕಿನ ಕಥೆಗೆ ಹೊರಳಿಕೊಂಡಿತು. ನಾನು ನನ್ನ ಬರವಣಿಗೆಯ ಪ್ರವರವನ್ನು ನಿನ್ನೆದುರು ಕೊಚ್ಚಿಕೊಳ್ಳುತ್ತಿದ್ದರೆ ನೀನು ಮೈತುಂಬಾ ಬೆರಗಾಗಿ ನನ್ನನ್ನು ಆಲಿಸುತ್ತಿದ್ದೆ. ಜಲಾಶಯದ ಕ್ರೆಸ್ಟ್ ಗೇಟ್ ತೆಗೆದಾಗ ಧುಮ್ಮಿಕ್ಕುವ ಜಲಧಾರೆಯ ಹಾಗೆ ನಾನು ನನ್ನ ಬಗ್ಗೆ ಕುಟ್ಟುತ್ತಲೇ ಇದ್ದೆ. ನನ್ನ ಗೋಳು ಕೇಳುವ ಒಂದು ಜೀವಕ್ಕಾಗಿ ಜೀವಮಾನವಿಡೀ ಕಾಯುತ್ತಿದ್ದೆನೇನೋ ಎಂಬಂತೆ ನಾನು ಒದರುತ್ತಲೇ ಹೋದೆ. ನೀನು ಕೊಂಚವೂ ಬೇಸರಿಸದೆ ನನ್ನ ಮಾತಿಗೆ ಕಿವಿಯಾದೆ. ನಾನು ಎಲ್ಲವನ್ನೂ ಹೊರಹಾಕಿ ದಣಿದು ಕುಳಿತಾಗ ನೀನು ಕಳುಹಿಸಿದ ಸ್ಮೈಲಿ ಚಾಟು ಬಾಕ್ಸಿನಲ್ಲಿ ಮಿನುಗುತ್ತಿತ್ತು!

ಚಾಟು ಬಾಕ್ಸಿನ ಕಿಟಕಿಯ ಮೂಲಕ ಸಾವಿರಾರು ಅಕ್ಷರಗಳು ನಮ್ಮಿಬ್ಬರ ನಡುವೆ ಹರಿದಾಡಿದ ನಂತರ ಮೊಬೈಲಿನ ಇನ್ ಬಾಕ್ಸಿಗೆ ಜೀವ ಬಂದಿತ್ತು. ತಾಸೊಂದರಲ್ಲಿ ನನ್ನ ಮೊಬೈಲಿನ ಮೆಸೇಜ್ ಬುಟ್ಟಿಗೆ ಬಂದು ಬೀಳುವ ಹತ್ತಾರು ಮೆಸೇಜುಗಳಲ್ಲಿ ನಿನ್ನ ಹೆಸರನ್ನೇ ಹುಡುಕುತ್ತಿದ್ದೆ. ನಿನ್ನ ಮೆಸೇಜುಗಳನ್ನು ಅಳಿಸಿಹಾಕಿಬಿಟ್ಟರೆ ನಿನಗೆಲ್ಲಿ ನೋವಾಗುವುದೋ ಎಂದು ಒಂದನ್ನೂ ಡಿಲಿಟ್ ಮಾಡದ ಹಾಗೆ ಉಳಿಸಿಟ್ಟುಕೊಳ್ಳುತ್ತಿದ್ದೆ. ನನ್ನ ಮೊಬೈಲಿನ ಪುಟ್ಟ ಮೆದುಳು ಜಾಗ ಸಾಲದು ಎಂದು ಗೋಳಾಡಿದಾಗೆಲ್ಲಾ ನನ್ನ ಗೆಳೆಯರು ಕಳುಹಿಸಿರುತ್ತಿದ್ದ ಬಹುಮುಖ್ಯವಾದ ಮೆಸೇಜುಗಳನ್ನೆಲ್ಲಾ ನಿರ್ದಾಕ್ಷಿಣ್ಯವಾಗಿ ಕಿತ್ತು ಬಿಸಾಕಿ ನಿನ್ನ ಓಲೆಗೆ ಜಾಗ ಮಾಡಿಕೊಟ್ಟೆ, ಪ್ರತಿಸಂಜೆ ನಿನ್ನೊಂದಿಗೆ ಚಾಟಿಸುವುದಕ್ಕಾಗಿ ಜಿಮ್‌ಗೆ ಹೋಗುವುದನ್ನು ಮರೆತ ಹಾಗೆ. ಚಾಟು ಬಾಕ್ಸು, ಮೇಸೇಜು ಬಾಕ್ಸಿನ ಅಕ್ಷರಗಳಿಗೆ ನಮ್ಮ ಕುತೂಹಲಗಳನ್ನು ತಣಿಸುವ ಶಕ್ತಿಯಿಲ್ಲ ಎಂದು ನಮಗೆ ಅರಿವಾಗುತ್ತಿದ್ದಂತೆಯೇ ನಮ್ಮಿಬ್ಬರ ಮೊಬೈಲುಗಳು ಸಖ್ಯಕ್ಕಾಗಿ ಕಾತರಿಸಿದವು. ಆಗಲೂ ಮೊದಲು ಫೋನ್ ಮಾಡಿದವಳು ನೀನೇ. ನನ್ನ ಧ್ವನಿಯಲ್ಲಿನ ಗಾಬರಿಯನ್ನು ನೀನು ಆಗಲೇ ಗುರುತು ಹಿಡಿದುಬಿಟ್ಟಿದ್ದೆ. ‘ಯಾಕೆ ವಾಯ್ಸು ನಡುಗುತ್ತಿದೆ?’ ಎಂದು ನೇರವಾಗಿ ಕೇಳಿದ್ದೆ ನೀನು. ‘ಇಲ್ಲಿ ತುಂಬಾ ಥಂಡಿ’ ಎಂದಿದ್ದೆ ನಾನು, ಹಣೆಯ ಮೇಲೆ ಬೆವರ ಸಾಲು. ನೀನು ಮೆಲ್ಲಗೆ ನಕ್ಕಿದ್ದೆ. ಮೊಗ್ಗು ಅರಳಿದ ಹಾಗೆ ಮಾತು ಇಬ್ಬರ ಮೊಬೈಲುಗಳಲ್ಲಿ ಅರಳುತ್ತಾ ಹೋಯಿತು.

‘ಚಿಕ್ಕಂದಿನಿಂದಲೂ ನಾನು ವಿಪರೀತ ಸಂಕೋಚದಲ್ಲಿಯೇ ಬೆಳೆದವನು. ತೀರಾ ಒಳಮುಚ್ಚುಗ ಮನಸ್ಸಿನವನು. ಓರಗೆಯ ಹುಡುಗರೊಂದಿಗೇ ಮಾತನಾಡಲು ಹಿಂಜರಿಯುತ್ತಿದ್ದೆ. ಇನ್ನು ಹುಡುಗಿಯರನ್ನು ಮಾತನಾಡಿಸುವುದು ದೂರದ ಮಾತಾಗಿತ್ತು. ಇದಕ್ಕೆ ಸರಿಯಾಗಿ ನಾನು ನನ್ನ ಹೈಸ್ಕೂಲು, ಕಾಲೇಜುಗಳನ್ನು ಓದಿದ್ದು ಹುಡುಗರ ಶಾಲೆಯಲ್ಲಿ. ಹೀಗಾಗಿ ಈಗಲೂ ಒಬ್ಬ ಹುಡುಗಿಯನ್ನು ಮಾತನಾಡಿಸುವುದು ಎಂದರೆ ಜೀವ ಬಾಯಿಗೆ ಬಂದ ಹಾಗಾಗುತ್ತದ್ದೆ.’ ಎಂದು ನಾನು ಹೇಳಿಕೊಳ್ಳುತ್ತಿರುವಾಗ ನಿನ್ನ ಜೊತೆ ಮಾತಾಡಲು ನನಗೇಕೆ ಸಂಕೋಚವಾಗುತ್ತಿಲ್ಲ ಎಂದು ವಿಸ್ಮಯಗೊಳ್ಳುತ್ತಿದ್ದೆ.

‘ನೀನು ನಿನ್ನ ಸುತ್ತಲೇ ಕೋಟೆ ಕಟ್ಟಿಕೊಂಡು ಒಳಗೆ ಕೂತಿರುವೆ. ನೀನಾಗಿ ಯಾರನ್ನೂ ಹತ್ತಿರ ಸೇರಿಸುತ್ತಿಲ್ಲ. ನಿನ್ನ ಸಾಮೀಪ್ಯ ಬಳಸಿ ಹತ್ತಿರ ಬಂದವರನ್ನೂ ನೀನು ಅನುಮಾನದಿಂದಲೇ ನೋಡುವೆ. ನಿನ್ನೊಂದಿಗೆ ಸಂಪರ್ಕ ಸಾಧಿಸಲು ಯಾರಾದರೂ ನಿನ್ನ ಸುತ್ತಲಿನ ಕೋಟೆಯನ್ನು ಕೆಡವಲು ಪ್ರಯತ್ನಿಸಿದರೆ ನಿನಗವರು ಶತ್ರುವಿನ ಹಾಗೆ ಕಾಣುತ್ತಾರೆ. ಅಲ್ವಾ?’ ನಿನ್ನ ಧ್ವನಿಗೆ ವಿಲಕ್ಷಣವಾದ ಮಾದಕತೆ ಬೆರೆತಿತ್ತು. ನಿನ್ನ ಮಾತುಗಳಲ್ಲಿನ ಶೀತಲತೆ ಬಿಸಿಯಾಗುತ್ತಿದ್ದ ನನ್ನ ಮೊಬೈಲಿಗೂ ತಂಪನ್ನೆರೆಯುವಂತಿತ್ತು.

(ಮುಂದುವರೆಯುವುದು)

ಭಾರತದ ಪತ್ರಿಕೆಗಳಿಗೆ ಏಪ್ರಿಲ್ ಒಂದು ಎರಡು ತಿಂಗಳು ತಡವಾಗಿ ಬಂದಿತ್ತು!
ಹೌದು! ಇಪ್ಪತ್ನಾಲ್ಕು ಗಂಟೆಗಳ ಕಾಲ ಅಂಗಡಿ ತೆಗೆದಿಟ್ಟುಕೊಂಡು ವದಂತಿ, ಸುಳ್ಳು ಮಾಹಿತಿ, ತಮ್ಮ ಕಲ್ಪನೆಗಳನ್ನೇ gospel truth ಎನ್ನುವಂತೆ ಜನರಿಗೆ ಉಣಬಡಿಸುವ ಟಿವಿ ಚಾನಲ್‌ಗಳು, ದಿನಕ್ಕೊಂದು ಸೆನ್ಸೇಷನ್ ಹುಟ್ಟಿಸುವಂತೆ ವರದಿ ಮಾಡುವ ಪತ್ರಿಕೆಗಳು ಅಂದು ಬೆಚ್ಚಿ ಬಿದ್ದವು, ತಮ್ಮ ಮೂರ್ಖತನವನ್ನು ಬಯಲುಗೊಳಿಸಿ ಬೆತ್ತಲಾಗಿದ್ದವು. ರಾಷ್ಟ್ರಮಟ್ಟದಲ್ಲಿ ಹೆಸರಾಗಿರುವ ಇಂಡಿಯನ್ ಎಕ್ಸ್‌ಪ್ರೆಸ್, ಟೈಮ್ಸಾಫ್ ಇಂಡಿಯ, ಟೆಲಿಗ್ರಾಫ್, ಡೆಕ್ಕನ್ ಹೆರಾಲ್ಡ್ ನಂತಹ ಪತ್ರಿಕೆಗಳೂ ಸಹ ಕೆಲವು ಬುದ್ಧಿವಂತ ಪತ್ರಕರ್ತರು ಮಾಡಿದ ಕೀಟಲೆಯಿಂದಾಗಿ ಅಪಹಾಸ್ಯಕ್ಕೆ ಒಳಗಾದವು. ಪತ್ರಿಕೆಗಳಿಲ್ಲದೆ ದಿನ ಶುರು ಮಾಡದ, ಟಿವಿ ಚಾನಲ್‌ಗಳ ಸುದ್ದಿಗಳನ್ನು ನೋಡದೆ ಯಾವುದನ್ನೂ ನಂಬದ ಜನರು ಮಾಧ್ಯಮಗಳ ಮೇಲಿನ ತಮ್ಮ ನಂಬಿಕೆಯನ್ನು ಪುನರ್ ಪರಿಶೀಲಿಸಿಕೊಳ್ಳುವಂಥ ಘಟನೆ ನಡೆಯಿತು.

Johann_Christian_Bach.jpg

ಅಸಲಿಗೆ ನಡೆದದ್ದಾದರೂ ಏನೆಂದರೆ, ಗೋವಾದ ಕೆಲವು ಪತ್ರಕರ್ತರು ಭಾರತದ ಮಾಧ್ಯಮಗಳ ಪತ್ರಿಕೋದ್ಯಮದ ರೀತಿ-ರಿವಾಜುಗಳ ಬಗ್ಗೆ ಸಿಟ್ಟಾಗಿದ್ದರು. ಗೋವಾದಲ್ಲಿ ಕೊಲೆಯಾದ ವಿದೇಶಿ ಹುಡುಗಿ ಸ್ಕಾರ್ಲೆಟ್ ಹಾಗೂ ನೋಯಿಡಾದ ಆರುಷಿ ತಲ್ವಾರ್ ಕೊಲೆಯ ಪ್ರಕರಣಗಳನ್ನು ವರದಿ ಮಾಡುವಲ್ಲಿ ಮಾಧ್ಯಮಗಳು ವಹಿಸಿದ ಪಾತ್ರವನ್ನು ಕಂಡು ಇವರು ನಿರಾಶರಾಗಿದ್ದರು. ಪತ್ರಿಕೋದ್ಯಮದ ಘನತೆಯನ್ನು ಬೀದಿಗೆಳೆದ ಪತ್ರಿಕೆಗಳ ವಿರುದ್ಧ ಇವರು ಕುದ್ದುಹೋಗಿದ್ದರು. ನಮ್ಮ ಮಾಧ್ಯಮಗಳು ಸುದ್ದಿಯ ಹೆಸರಿನಲ್ಲಿ ಎಷ್ಟು ಸುಳ್ಳು ಮಾಹಿತಿಯನ್ನು, ಕಾಲ್ಪನಿಕ ಕಟ್ಟು ಕತೆಗಳನ್ನು ಜನರಿಗೆ ನೀಡುತ್ತಿದ್ದಾರೆ ಎಂಬುದನ್ನು ಸಾಬೀತು ಮಾಡಬೇಕು ಎಂದು ಇವರಿಗನ್ನಿಸಿತು. ವಿವಿಧ ಮೂಲಗಳಿಂದ ಬಂದ ಸುದ್ದಿಗೇ ಮಸಾಲೆ ಹಚ್ಚಿ ರೋಚಕವಾಗಿಸಿ, ಕಾಗಕ್ಕ-ಗುಬ್ಬಕ್ಕನ ಕಥೆಗಳನ್ನು ಕಟ್ಟಿ ರಂಜಕವಾಗಿ ವರದಿ ಮಾಡಿ ತಮ್ಮ ಸುಳ್ಳುಗಳನ್ನು, ಕಟ್ಟು ಕಥೆಗಳನ್ನು ‘ಅಧಿಕೃತ ಮೂಲಗಳಿಂದ’ ‘ಪೋಲೀಸ್ ಮೂಲಗಳಿಂದ’ ಎಂದು ಹಣೆ ಪಟ್ಟಿ ಅಂಟಿಸಿ ಓದುಗರನ್ನು ದಿಕ್ಕುತಪ್ಪಿಸುವ ಕೆಲಸ ಪತ್ರಕರ್ತರು ರೂಢಿಸಿಕೊಂಡಿದ್ದಾರೆ ಎಂಬುದನ್ನು ಅವರು ಬಯಲು ಮಾಡಬಯಸಿದ್ದರು. ಆಗ ಹುಟ್ಟಿಕೊಂಡದ್ದೇ ಜರ್ಮನಿಯ ನರಹಂತಕನ ಸೈನ್ಯಾಧಿಕಾರಿ ಬಾಕ್‌ನ ಬಂಧನದ ಸುದ್ದಿ!

ಪೆನ್ ಪ್ರಿಕ್ಸ್(penpricks.blogspot.com) ಎಂಬ ಬ್ಲಾಗನ್ನು ಬರೆಯುವ ಕೆಲವು ಗೋವಾ ಪತ್ರಕರ್ತರು ಒಂದು ಪತ್ರಿಕಾ ಪ್ರಕಟಣೆಯನ್ನು ತಯಾರಿಸಿ ಗೋವಾದ ಎಲ್ಲಾ ಪತ್ರಿಕೆಗಳ ಕಛೇರಿಗೆ ಕಳುಹಿಸಿದರು. ಹಿಟ್ಲರನ ಕಾಲದಲ್ಲಿ ಜರ್ಮನಿಯ ಮಾರ್ಷ ಟಿಕಾಶ್ ವಾಹ್ನಾಬ್ ಕಾನ್ಸನ್ ಟ್ರೇಶನ್ ಕ್ಯಾಂಪಿನಲ್ಲಿ ಹನ್ನೆರಡು ಸಾವಿರ ಮಂದಿ ಯಹೂದಿಯರ ಮಾರಣಹೋಮಕ್ಕೆ ಕಾರಣನಾಗಿದ್ದ ಸೈನ್ಯಾಧಿಕಾರಿ ಬಾಕ್ ಎಂಬುವವನನ್ನು ಜರ್ಮನಿಯ ಪೆರಸ್ ನಾರ್ಕಪ್ ಎಂಬ ಸೀಕ್ರೆಟ್ ಏಜೆನ್ಸಿ ಗೋವಾದಲ್ಲಿ ಕರ್ನಾಟಕದ ಗಡಿಯ ಬಳಿ ಬಂಧಿಸಿದೆ. ಎಂಬತ್ತು ವರ್ಷದ ಈ ನರಹಂತಕ ಮ್ಯೂಸಿಯಂವೊಂದರಿಂದ ಕಳುವಾಗಿದ್ದ ಪಿಯಾನೋವೊಂದರನ್ನು ಮಾರಲು ಯತ್ನಿಸುವಾಗ ಜರ್ಮನಿಯ ರಹಸ್ಯ ಕಾರ್ಯಾಚರಣೆಯಲ್ಲಿ ಬಂಧಿತನಾಗಿದ್ದಾನೆ ಎಂದು ಆ ಪ್ರಕಟಣೆ ಹೇಳುತ್ತಿತ್ತು. ಈ ಪತ್ರಿಕಾ ಪ್ರಕಟಣೆಯನ್ನು ಪಡೆದ ಪತ್ರಿಕೆಗಳು ಭಾರಿ ಮಹತ್ವದ ಸುದ್ದಿ ಸಿಕ್ಕಂತೆ ಖುಶಿಯಾಗಿ ಅದನ್ನು ಮಾರನೆಯ ದಿನ ತಮ್ಮ ಮುಖಪುಟಗಳಲ್ಲಿ ಮುದ್ರಿಸಿಬಿಟ್ಟರು. ಕೆಲವು ಪತ್ರಿಕೆಗಳಲ್ಲಿ ನಾಲ್ಕೈದು ಪ್ಯಾರಾಗಟ್ಟಲೆ ಸುದ್ದಿ ವರದಿಯಾಗಿತ್ತು.

ಮರುದಿನ ಪೆನ್ ಪ್ರಿಕ್ಸ್ ಬ್ಲಾಗಿಗರು ಆ ವರದಿ ಕೀಟಲೆಯದು ಎಂದು ಹೇಳಿಕೊಂಡಾಗಲೇ ಪತ್ರಿಕೆಗಳು ಎಚ್ಚೆತ್ತಿದ್ದು! ಪತ್ರಿಕೆಗಳು ತಮಗೆ ಬರುವ ಸುದ್ದಿಯ ಸತ್ಯಾಸತ್ಯತೆಯನ್ನು ಪರೀಕ್ಷಿಸದೆ ಹೇಗೆ ಬೇಜವಾಬ್ದಾರಿಯಿಂದ ಪ್ರಕಟಿಸಿಬಿಡುತ್ತಾರೆ ಎಂಬುದನ್ನು ಕಂಡು ರೋಸಿದ್ದ ಪತ್ರಕರ್ತರು ಬಹು ಚಾಲಾಕಿನಿಂದ ಪತ್ರಿಕಾ ಪ್ರಕಟಣೆಯನ್ನು ತಯಾರಿಸಿದ್ದರು. ಹದಿನೆಂಟನೆಯ ಶತಮಾನದ ಖ್ಯಾತ ಸಂಗೀತಗಾರ ಜಾನ್ ಕ್ರಿಶ್ಚಿಯನ್ ಬಾಕ್‌ನ ಹೆಸರನ್ನು ಬಳಸಿಕೊಂಡು ಅವರು ಬಾಕ್ ಎಂಬ ಕಾಲ್ಪನಿಕ ವ್ಯಕ್ತಿಯನ್ನು ಸೃಷ್ಟಿಸಿದರು. ಪತ್ರಿಕಾ ಕಛೇರಿಗಳಲ್ಲಿರುವ ಯುವ ಪೀಳಿಗೆಯ ಪತ್ರಕರ್ತರು ಆ ಹದಿನೆಂಟನೆಯ ಶತಮಾನದ ಸಂಗೀತಗಾರನ ಹೆಸರೂ ಕೇಳಿರುವುದಿಲ್ಲ ಎಂಬ ವಿಶ್ವಾಸ ಅವರಿಗಿತ್ತು. ಆತ ಗೋವಾದ ಬಳಿ ಹದಿನೆಂಟನೆಯ ಶತಮಾನದ ಪಿಯಾನೊ ಮಾರುವಾಗ ಸಿಕ್ಕಿಬಿದ್ದ ಎಂದು ಸುಳ್ಳು ಹೆಣೆಯಲಾಯಿತು. ಸ್ವಾರಸ್ಯವೆಂದರೆ ಹದಿನೆಂಟನೆಯ ಶತಮಾನದ ಪಿಯಾನೊವೊಂದು ಮ್ಯೂಸಿಯಂನಿಂದ ಕಳುವಾದದ್ದು ಸುದ್ದಿಯಾಗಿತ್ತು. ಅನಂತರ ಗೂಗಲಿಸಿ ಕಾಲ್ಪನಿಕ ವ್ಯಕ್ತಿ ಬಾಕ್‌ನ ಚರ್ಯೆಗೆ ಹೊಂದುವಂಥ ಅನಾಮಿಕ ಫೋಟೊವೊಂದನ್ನು ಹೆಕ್ಕಿತೆಗೆದರು. ಅಂತರ್ಜಾಲದಲ್ಲಿ ಲಭ್ಯವಿದ್ದ ಜರ್ಮನಿಯ ಸಂಸ್ಥೆಯೊಂದರ ಲೋಗೊವನ್ನು ಕೊಂಚ ಎಡಿಟ್ ಮಾಡಿ ತಮ್ಮ ಪತ್ರಿಕಾ ಪ್ರಕಟಣೆಯ ಲೆಟರ್ ಹೆಡ್ಡಿನಲ್ಲಿ ಇಟ್ಟರು. ಯಾಹೂ ಬ್ಯಾಬಲ್ ಎಂಬ ಉಪಕರಣ ಬಳಸಿ ಕೆಲವು ಜರ್ಮನ್ ಪದಗಳನ್ನು ಟಂಕಿಸಿ ಪ್ರಕಟಣೆಗೆ ಅಧಿಕೃತ ರೂಪ ಕೊಟ್ಟರು. ಗೋವಾದ ಪತ್ರಿಕೆಗಳಿಗೆ ಕಳುಹಿಸಿದರು. ಯಾವಾಗ ಗೋವಾದ ಪತ್ರಿಕೆಗಳು ಗಂಟಲು ಹರಿಯುವಂತೆ ಈ ಸುದ್ದಿಯನ್ನು ಒದರಲು ಶುರು ಮಾಡಿದವೋ ಆಗ ರಾಷ್ಟೀಯ ಮಟ್ಟದ ಪತ್ರಿಕೆಗಳೂ ಸಹ ಈ ಸುದ್ದಿಯ ಹಿಂದೆ ಬಿದ್ದವು. ಕೆಲವು ಪತ್ರಿಕೆಗಳಂತೂ ಅಸ್ತಿತ್ವದಲ್ಲೇ ಇಲ್ಲದ ಜರ್ಮನಿಯ ಪೆರಸ್ ನಾರ್ಕಪ್ ಸಂಸ್ಥೆಯ ಮುಖ್ಯಸ್ಥರನ್ನೇ ಸಂಪರ್ಕಿಸಿ ಮಾಹಿತಿ ಪಡೆದಿದ್ದೇವೆ ಎಂದು ಬರೆದುಕೊಂಡಿದ್ದವು!

ಈ ಕೀಟಲೆಯನ್ನು ಮಾಡಿದ ಚಾಣಾಕ್ಷ ಪತ್ರಕರ್ತರು ತಾವು ಹೆಣೆದ ಕಥೆಯಲ್ಲಿ ಕೆಲವು ಸ್ವಾರಸ್ಯಗಳನ್ನು ಮಾಡಿದ್ದಾರೆ. PERUS NARKP ಎಂಬ ಹೆಸರನ್ನು SUPER PRANK (ಮಹಾನ್ ಕೀಟಲೆ) ಎಂಬ ಪದದ ಅಕ್ಷರಗಳನ್ನು ಹಿಂದುಮುಂದು ಮಾಡಿ ಟಂಕಿಸಲಾಗಿತ್ತು. ಇದನ್ನು ಈ ರೀತಿ ಟಂಕಿಸುವ ಪದಗಳನ್ನು ಅನಾಗ್ರಾಮ್ ಎಂದು ಕರೆಯುತ್ತಾರೆ. ಇನ್ನು MARSHA TIKASH WAHNAAB ಎಂಬ ಕಾನ್ಸಟ್ರೇಶನ್ ಕ್ಯಾಂಪಿನ ಹೆಸರನ್ನು Shrama Shakti Bhawaan ಎಂಬುದರಿಂದ ಟಂಕಿಸಲಾಗಿತ್ತು! ಇನ್ನೊಂದು ಮಜವಾದ ಸಂಗತಿಯೆಂದರೆ ಪಣಜಿಯಲ್ಲಿರುವ ಈ ಹೆಸರಿನ ಕಟ್ಟಡದ ಮಳಿಗೆಯಲ್ಲೇ ಗೋವಾದ ಪತ್ರಕರ್ತರ ಯೂನಿಯನ್ನು ಇರುವುದು! ಜರ್ಮನಿಯ ಗುಪ್ತಚರ ಇಲಾಖೆಯ ಮುಖ್ಯಸ್ಥೆ ಎಂದು MALAK DULAB ಎಂಬುವವನನ್ನು ಸೃಷ್ಟಿಸಲಾಗಿತ್ತು. ತಲೆ ಕೆಡಿಸಿಕೊಂಡು ಯೋಚಿಸಿದರೆ ಇದೂ ಸಹ ಒಂದು ಅನಾಗ್ರಾಮ್ ಎಂಬುದು ತಿಳಿಯುತ್ತದೆ. ಆ ಭೂಪರು ABDUL KALAM ಎಂಬ ಹೆಸರಿನಿಂದ ಅದನ್ನು ಟಂಕಿಸಿದ್ದರು! ಪತ್ರಿಕೆಗಳಿಗೆ ಕಳುಹಿಸಿದ ಲೆಟರ್ ಹೆಡ್ ನಲ್ಲಿ ಸಂಸ್ಥೆಯ ಧ್ಯೇಯ ವಾಕ್ಯವಾಗಿ EHT REA ENP CABK SKRIPC ಎಂದು ಸೇರಿಸಿದ್ದರು. ಇದರ ಅನಾಗ್ರಾಮ್ ರಹಸ್ಯವನ್ನು ಬೇಧಿಸಿದರೆ THE PEN PRICKS ARE BACK ಎಂದು ತಿಳಿದುಬರುತ್ತದೆ! ಪಾಪದ ಸುದ್ದಿ ಸಂಪಾದಕ ಇದನ್ನು ಯಾವುದೋ ಜರ್ಮನ್ ವಾಕ್ಯ ಎಂದುಕೊಂಡು ಬಿಟ್ಟಿದ್ದನೇನೋ!

ಇಷ್ಟು ದೊಡ್ಡ ಕಟ್ಟುಕಥೆಯನ್ನು ಯಾವ ಪರಿಶೀಲನೆಯೂ ಇಲ್ಲದೆ ಪತ್ರಿಕೆಗಳು ಪ್ರಕಟಿಸಿಬಿಟ್ಟವು. ಕೆಲವು ಪತ್ರಿಕೆಗಳು ಪೋಲೀಸ್ ವರಿಷ್ಟರನ್ನು ಸಂಪರ್ಕಿಸಿದಾಗ ಪೋಲೀಸರು ತಮ್ಮ ಬಳಿ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದರೂ ಇವರಿಗೆ ಸತ್ಯಾಸತ್ಯ ಪರೀಕ್ಷಿಸುವ ಮನಸ್ಸಾಗಲಿಲ್ಲ. ಇಂಥಾ ರೋಚಕವಾದ ವರದಿ ಮಿಸ್ ಮಾಡಿಕೊಂಡರೆ ಹೇಗೆ ಎಂದೇ ಎಲ್ಲಾ ಪತ್ರಿಕೆಗಳು ಭಾವಿಸಿದಂತಿತ್ತು. ಇಂಟರ್ನೆಟ್ ಕ್ರಾಂತಿಯ ಈ ಯುಗದಲ್ಲಿ ಕೇವಲ ಅರ್ಧ ಸೆಕೆಂಡಿನಲ್ಲಿ ಈ ಬಾಕ್ ಎಂಬ ಅಧಿಕಾರಿಯೂ, ಪೆರಸ್ ನರ್ಕಪ್ ಸಂಸ್ಥೆಯೂ, ಆ ಯಹೂದಿ ಮಾರಣ ಹೋಮವೂ ಎಲ್ಲಾ ಕಾಲ್ಪನಿಕ ಎಂಬುದನ್ನು ಕಂಡುಕೊಳ್ಳಬಹುದಾಗಿತ್ತು. ಆದರೆ ಸತ್ಯಾಸತ್ಯತೆಯನ್ನು ಪರಿಶೀಲಿಸುವಲ್ಲಿ ಪತ್ರಕರ್ತರಿಗೆ, ಪತ್ರಿಕೆಗಳಿಗೆ ಇರುವ ಬೇಜವಾಬ್ದಾರಿತನ ಹಾಗೂ ಸೋಮಾರಿತನಗಳಿಂದ ಅವರು ಮೂರ್ಖರಾಗಿಹೋದರು.

ಈ ರೀತಿ ಮೂರ್ಖರಾದರೂ, ಮೀಸೆ ಮಣ್ಣಾಗಿಲ್ಲ ಎಂಬಂತೆ ವರ್ತಿಸುತ್ತಿರುವ ಕೆಲವು ಪತ್ರಿಕೆಗಳು ತಮ್ಮ ತಪ್ಪು ಒಪ್ಪಿಕೊಂಡು ಒಂದು ಪುಟ್ಟ ಸ್ಪಷ್ಟೀಕರಣವನ್ನೂ ಪ್ರಕಟಿಸಿಲ್ಲವೆಂದರೆ ನಮ್ಮ ಪತ್ರಿಕೆಗಳು ಅದೆಷ್ಟು ಜವಾಬ್ದಾರಿಯುತವಾಗಿವೆ ಎಂಬುದು ತಿಳಿಯುತ್ತದೆಯಲ್ಲವೇ?


ಈ ಸಂಚಿಕೆಯ ಚರ್ಚೆಯ ವಸ್ತು, ಇಪ್ಪತೊಂದನೆಯ ಶತಮಾನದ ಮಾಹಿತಿಕ್ರಾಂತಿಯ ಯುಗದಲ್ಲಿ ಶಿಕ್ಷಕರು, ಗುರು-ಶಿಷ್ಯ ಸಂಸ್ಕೃತಿ ಅಪ್ರಸ್ತುತವಾಗುತ್ತಿದೆಯೇ? ಇಲ್ಲ, ಯಾವ ಕಾಲದಲ್ಲೂ ಗುರುವಿನ ಸ್ಥಾನವನ್ನು ಯಾವುದರಿಂದಲೂ ತುಂಬಲುಸ ಸಾಧ್ಯವಿಲ್ಲ ಎಂದು ವಾದಿಸಿದ್ದಾರೆ ಚೇತನ್ ಸಾಗರ್.

ವಿದ್ಯೆಯೆಂಬುದು ಒಬ್ಬ ಕೊಟ್ಟು ಇನ್ನೊಬ್ಬ ಪಡೆದುಕೊಂಡು ಕೂಡಿಡಬಹುದಾದ ವಸ್ತುವಲ್ಲ. ಅದು ಬಿಕರಿಯಾಗುವ ಮಾಲೂ ಅಲ್ಲ. ಹಣವಿದ್ದವನು, ಅಧಿಕಾರವಿದ್ದವನು, ವಶೀಲಿ ಮಾಡಲು ಸಾಧ್ಯವಿದ್ದವನು ಸಂಪಾದಿಸಬಹುದಾದ ಸಂಪತ್ತಲ್ಲ. ಬಲ ಪ್ರಯೋಗದಿಂದ ಪಡೆಯಬಹುದಾದ ಸವಲತ್ತೂ ಅಲ್ಲ. ಅಸಲಿಗೆ ಅದು ವಶಪಡಿಸಿಕೊಂಡು ಮೆರೆಯಬಹುದಾದ ಐಶ್ವರ್ಯವೂ ಅಲ್ಲ. ವಿದ್ಯೆಯೆಂಬುದು ಶುದ್ಧವಾಗುವ ಪ್ರಕ್ರಿಯೆ. ಕುಲುಮೆಯ ಕಾವಿನಲ್ಲಿ ನಲುಗಿ ಚಿನ್ನ ಹೊಳೆಪು ಪಡೆಯುವಂತೆ ಮನುಷ್ಯ ತನ್ನ ಪ್ರಜ್ಞೆಗೆ, ತಿಳಿವಿಗೆ ಹೊಳಪು ಪಡೆದುಕೊಳ್ಳುವ ಕ್ರಿಯೆ ವಿದ್ಯಾಭ್ಯಾಸ. ಹೀಗೆ ಚಿನ್ನಕ್ಕೆ ಪುಟಕೊಡುವ ಮಾಂತ್ರಿಕನೇ ಶಿಕ್ಷಕ. ಕಲ್ಲು ಮಣ್ಣುಗಳ ಅದಿರನ್ನು ಸಂಸ್ಕರಿಸಿ ಚಿನ್ನವನ್ನು ಹೊರತೆಗೆಯುವ ಜಾದೂಗಾರನೇ ಗುರು ಎನ್ನಿಸಿಕೊಳ್ಳುತ್ತಾನೆ.

teacher2.gif

ಇಪ್ಪತೊಂದನೆಯ ಶತಮಾನವನ್ನು ಮಾಹಿತಿ ಸ್ಫೋಟದ ಶತಮಾನ ಎಂದೇ ಕರೆಯಲಾಗುತ್ತದೆ. ಒಂದು ಬಾಂಬ್ ಸ್ಫೋಟದಲ್ಲಿ ಉಂಟಾಗುವ ಒತ್ತಡ ಹಾಗೂ ರಭಸದೊಂದಿಗೆ ಮಾಹಿತಿಯು ಲಭ್ಯವಾಗುತ್ತಿರುವುದು ನಿಜಕ್ಕೂ ಮಾನವ ಕುಲ ಸಾಕ್ಷಿಯಾದ ಹಲವು ಅದ್ಭುತಗಳಲ್ಲಿ ಒಂದು. ಯಾವ ವಿಷಯದ ಬಗ್ಗೆ ಏನು ತಿಳಿಯಬೇಕಾದರೂ ಕಂಪ್ಯೂಟರಿನ ಎದುರು ಪದ್ಮಾಸನ ಹಾಕಿ ಕುಳಿತರೆ ಸಾಕು. ಜಗತ್ತಿನ ಮೂಲೆ ಮೂಲೆಯಲ್ಲಿನ ಮಾಹಿತಿಯನ್ನು ಅಂತರ್ಜಾಲವೆಂಬ ಮಾಟಗಾತಿ ನಮ್ಮೆದುರು ತಂದು ಸುರಿಯುತ್ತಾಳೆ. ಯಾರ ಹಂಗೂ ಇಲ್ಲದೆ, ಯಾರ ಮರ್ಜಿಗೂ ತಲೆಬಾಗದೆ ನಮಗೆ ಬೇಕಾದ ಮಾಹಿತಿಯನ್ನೆಲ್ಲಾ ಪಡೆಯುವ ಸೌಲಭ್ಯವನ್ನು ಮಾಹಿತಿ ಕ್ರಾಂತಿಯು ಒದಗಿಸಿಕೊಟ್ಟಿದೆ. ಒಂದು ತುದಿಬೆರಳ ಚಿಟುಕಿನಲ್ಲಿ ಬ್ರಹ್ಮಾಂಡದ ಜ್ಞಾನವೆಲ್ಲಾ ಕಣ್ಣೆದುರು ತೆರೆದುಕೊಳ್ಳುವಾಗ ಹಿಂದಿನಿಂದ ನಡೆದುಕೊಂಡು ಬಂದಿರುವ ಗುರು ಹಾಗೂ ಶಿಷ್ಯ ಸಂಸ್ಕೃತಿ ತನ್ನ ಪ್ರಸ್ತುತತೆಯನ್ನು ಉಳಿಸಿಕೊಳ್ಳುತ್ತದೆಯೇ ಎಂಬುದು ಪ್ರಶ್ನೆ. ಮಾಹಿತಿಯ ಅಲೆಯ ಮೇಲೆ ತೇಲುತ್ತಿರುವವರಿಗೆ ‘ಗುರು’ ಎಂಬ ಸ್ಥಾನವೇ ಸವಕಲು ನಾಣ್ಯವಾಗಿದೆ ಎಂಬ ಉಡಾಫೆಯಿದೆ. ಗುರುವಿನ ಹಂಗಿಲ್ಲದೆ ಏನನ್ನು ಬೇಕಾದರೂ ಕಲಿಯಬಹುದು ಎಂಬ ಆತ್ಮವಿಶ್ವಾಸ ಕಾಣುತ್ತಿದೆ.

ಕುವೆಂಪು ತುಂಬಾ ಹಿಂದೆ ಕವನವೊಂದರಲ್ಲಿ ಗುರು ಹಾಗೂ ಗುರಿಯ ಮಹತ್ವವನ್ನು ಹೇಳಿದ್ದರು. ಹಿಂದೆ ಗುರು ಹಾಗೂ ಮುಂದೆ ಗುರಿ ಇರುವ ಮಂದಿ ಧೀರರ ಹಾಗೆ ಮುನ್ನುಗ್ಗುತ್ತಾರೆ ಎಂದು. ಧೀರರಿಗೆ ಮುಂದೆ ಗುರಿಯೂ ಇರಬೇಕು, ಹಿಂದೆ ಮಾರ್ಗದರ್ಶನ ಮಾಡುವ ಗುರುವೂ ಇರಲೇಬೇಕು. ಒಂದು ಪಾತ್ರೆಯಲ್ಲಿ ತರಕಾರಿ, ನೀರು, ಮಸಾಲೆ, ಉಪ್ಪು, ಕೊತ್ತಂಬರಿ ಹಾಕಿದ ತಕ್ಷಣ ಅದು ಸಾಂಬಾರು ಆಗಿಬಿಡುವುದಿಲ್ಲ. ಅವೆಲ್ಲವನ್ನೂ ಒಂದೇ ಹದದಲ್ಲಿ ಬೇಯಿಸುವ ಬೆಂಕಿ ಬೇಕು ಅದು ಗುರು. ಶಿಕ್ಷಕನಿಲ್ಲದೆ ಗುರಿಯೆಡೆಗೆ ನುಗ್ಗಬಹುದು. ಆದರೆ ಅದು ಹಗಲು ಕಂಡ ಬಾವಿಗೆ ರಾತ್ರಿ ಬಿದ್ದ ಹಾಗಾಗುತ್ತದೆ.

ಪುಸ್ತಕಗಳು ಒಳ್ಳೆಯ ಮಿತ್ರ ಎನ್ನುವುದು ಸರಿ. ಅಂತರ್ಜಾಲ ಮಾಹಿತಿಯ ಕಣಜ ಎನ್ನುವುದನ್ನೂ ಒಪ್ಪಿಕೊಳ್ಳೋಣ. ಆದರೆ ಅವು ನಿರ್ಜೀವವಾದ ಸಂಗತಿಗಳು. ಒಂದು ಪುಸ್ತಕಕ್ಕೆ ತಾನು ಕೊಡುತ್ತಿರುವ ಮಾಹಿತಿಯ ಅರಿವು ಇರುವುದಿಲ್ಲ. ಮೇಲಾಗಿ ಶಿಕ್ಷಣ ಎಂದರೆ ಕೇವಲ ಮಾಹಿತಿಯ ಕ್ರೂಢೀಕರಣ ಮಾತ್ರವಲ್ಲ. ನಮ್ಮ ಮೆದುಳು ಕೇವಲ ವಿಷಯಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ಕಂಪ್ಯೂಟರ್ ಅಲ್ಲ. ಶಿಕ್ಷಣದಲ್ಲಿ ವಿದ್ಯಾರ್ಥಿಗೆ ಆವಶ್ಯಕವಾದ ಮಾಹಿತಿಯನ್ನು ಕೊಡುವುದರ ಜೊತೆಗೆ ಆತನ ಸರ್ವತೋಮುಖ ಬೆಳವಣಿಗೆ ಆಗುವಂತೆ ನೋಡಿಕೊಳ್ಳಬೇಕಾದದ್ದು ಶಿಕ್ಷಕರ ಕರ್ತವ್ಯ. ವಿದ್ಯಾರ್ಥಿಯ ಭಾವ ಲೋಕದ ಬೆಳವಣಿಗೆಯಾಗಬೇಕು, ಅವನ ಕಲ್ಪನಾ ಶಕ್ತಿಗೆ ಪ್ರೋತ್ಸಾಹ ಸಿಕ್ಕಬೇಕು. ಬದುಕು ಸಹ್ಯವಾಗಿಸಿಕೊಳ್ಳಲು ಆತನ ಹೃದಯವಂತಿಕೆಗೆ ಪುಟ ಕೊಡಬೇಕು. ಆತನಲ್ಲಿ ಆತ್ಮವಿಶ್ವಾಸ, ಎದೆಗಾರಿಗೆ, ಹೋರಾಟ ಮಾಡುವ ನೈತಿಕ ಶಕ್ತಿ ಜೊತೆಗೇ ಸೋಲನ್ನು ಸಮಚಿತ್ತದಿಂದ ಸ್ವೀಕರಿಸುವ ಮನೋಭಾವವನ್ನು ಸೃಷ್ಟಿಸುವುದಕ್ಕೆ ಗುರು ಅತ್ಯವಶ್ಯಕವಾಗಿ ಬೇಕು. ಈ ಎಲ್ಲಾ ಕೆಲಸಗಳನ್ನು ಪುಸ್ತಕಗಳು ಮಾಡಲು ಸಾಧ್ಯವಿಲ್ಲ.

ಒಂದು ಸಸಿಗೆ ಚಿಗುರಿಕೊಂಡು ನೆಲದೊಳಗೆ ಬೇರುಗಳನ್ನು ಹರಡಿಕೊಂಡು ಭದ್ರವಾಗಲು, ನೆಲದ ಮೇಲೆ ಎತ್ತರಕ್ಕೆ ಏರಿ ಹರಡಿಕೊಳ್ಳಲು ಸಾಧ್ಯವಾಗುವವರೆಗೆ ಸುತ್ತಲೂ ಬೇಲಿ ಹಾಕಬೇಕಾದುದು ಆವಶ್ಯಕ. ಬೇಲಿ ಸಸಿಯ ರಕ್ಷಣೆಗೆ, ಬೆಳವಣಿಗೆಗೆ ಹಾಕುವುದೇ ಹೊರತು ಸಸಿಯ ಬೆಳವಣಿಗೆಯನ್ನು ಕುಂಠಿತಗೊಳಿಸುವುದಕ್ಕಾಗಿ ಅಲ್ಲ. ಸಸಿಗಳಿಗೆ ಆಸರೆಗೆ ಕೆಲವೊಮ್ಮೆ ಕೋಲು ಬೇಕಾಗುತ್ತದೆ. ಮುಂದೆ ಅದು ಸಾವಿರಾರು ಹಕ್ಕಿಗಳಿಗೆ ಆಸರೆ ನೀಡುವ ಬೃಹದಾಕಾರದ ಮರವಾಗಿ ಬೆಳೆಯಬಹುದು. ಆದರೆ ಸಸಿಯಾಗಿದ್ದಾಗ ಅದಕ್ಕೆ ಸೂಕ್ತವಾದ ಆಸರೆ ಹಾಗೂ ಸಹಾಯ ಬೇಕು. ಇದೇ ಕೆಲಸವನ್ನು ಶಿಕ್ಷಕನಾದವನು ಮಾಡುತ್ತಾನೆ. ಪುಸ್ತಕಗಳು ಎಷ್ಟೇ ಇದ್ದರು ಏನನ್ನು, ಎಷ್ಟರ ಮಟ್ಟಿಗೆ ಯಾವಾಗ ತಿಳಿಯಬೇಕು ಎನ್ನುವ ವಿವೇಕ ಮಕ್ಕಳಿಗೆ ಇರುವುದಿಲ್ಲ. ಪಕ್ವವಾಗದ ಮನಸ್ಸಿಗೆ ಕೆಲವು ಮಾಹಿತಿಯನ್ನು ಕೊಟ್ಟರೆ ಅದು ಅನರ್ಥಕ್ಕೆ ಈಡು ಮಾಡುವುದೇ ಹೆಚ್ಚು. ಪುಸ್ತಕವಾಗಲೀ ಅಂತರ್ಜಾಲವಾಗಲೀ ತನ್ನ ಮಾಹಿತಿಯನ್ನು ಗ್ರಹಿಸುತ್ತಿರುವ ಮನಸ್ಸು ಪಕ್ವವಾದದ್ದಾ ಅಥವಾ ಇನ್ನೂ ಅಪಕ್ವವಾ ಎಂದು ತಿಳಿಯಲು ಸಾಧ್ಯವೇ ಇಲ್ಲ. ಜೊತೆಗೆ ಅವು ತಾವು ಕೊಡುವ ಮಾಹಿತಿ, ಜ್ಞಾನದ ಪರಿಣಾಮವನ್ನು ನಿಯಂತ್ರಿಸಲು ಶಕ್ತವಾದವಲ್ಲ. ಅವು ವಿದ್ಯಾರ್ಥಿಗೆ ಶಕ್ತವಾದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಯಾವ ರೀತಿಯಿಂದಲೂ ನೆರವಾಗುವುದಿಲ್ಲ. ಪುಸ್ತಕಗಳು, ಅಂತರ್ಜಾಲ ಎಂದಿಗೂ ಶಿಕ್ಷಕನ, ಗುರುವಿನ ಸ್ಥಾನವನ್ನು ತುಂಬಲು ಸಾಧ್ಯವೇ ಇಲ್ಲ. ಅದಕ್ಕಾಗಿಯೇ ದಾಸರು ಹಾಡಿ ಹೊಗಳಿದ್ದು, ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂದು!


ಈ ಸಂಚಿಕೆಯ ಚರ್ಚೆಯ ವಸ್ತು, ಇಪ್ಪತೊಂದನೆಯ ಶತಮಾನದ ಮಾಹಿತಿಕ್ರಾಂತಿಯ ಯುಗದಲ್ಲಿ ಶಿಕ್ಷಕರು, ಗುರು-ಶಿಷ್ಯ ಸಂಸ್ಕೃತಿ ಅಪ್ರಸ್ತುತವಾಗುತ್ತಿದೆಯೇ? ಹೌದು, ಮಾಹಿತಿ ಕ್ರಾಂತಿಯ ಈ ಶತಮಾನದಲ್ಲಿ ಶಿಕ್ಷಕ ನೆಪಮಾತ್ರವಾಗಿದ್ದಾನೆ. ಶಿಕ್ಷಣ ಕ್ಷೇತ್ರವೇ ವ್ಯಾಪಾರೀಕರಣಗೊಂಡಿರುವಾಗ ಗುರು-ಶಿಷ್ಯ ಸಂಸ್ಕೃತಿ ಹಾಸ್ಯಾಸ್ಪದ ಎಂದು ವಾದಿಸಿದ್ದಾರೆ ಚಂದ್ರಶೇಖರ್ ಪ್ರಸಾದ್.

‘ಗುರು ಹೆಗಲ ಮೇಲಿನ ಹೆಣ. ಅದನ್ನು ಕೆಳಕ್ಕೆ ಹಾಕಿ ನೀನು ಮುಂದೆ ಸಾಗು’
– ಸತ್ಯಕಾಮ

ಮಾಹಿತಿ ತಂತ್ರಜ್ಞಾನ ಉಚ್ಛ್ರಾಯ ಸ್ಥಿತಿಯಲ್ಲಿರುವ ಈ ಶತಮಾನದಲ್ಲಿ ಗುರುವಿನ ಅಸ್ತಿತ್ವಕ್ಕೇ ಸಂಚಕಾರ ಪ್ರಾಪ್ತವಾಗುವ ಕುರುಹುಗಳು ದೊರೆಯುತ್ತಿವೆ. ‘ಗುರು ಬ್ರಹ್ಮ, ಗುರು ವಿಷ್ಣು, ಗುರುವೇ ಪರಮೇಶ್ವರ’ ಎಂದು ಪೂಜಿಸಿದ ನಮ್ಮ ದೇಶದಲ್ಲೂ ಸಹ ಗುರುವಿನ ಸಹಾಯವಿಲ್ಲದೆಯೇ ಎಂಥಾ ವಿದ್ಯೆಯನ್ನಾದರೂ ಕಲಿಯಬಹುದು ಎಂಬ ವಾತಾವರಣದ ಸೂಚನೆಗಳು ಸಿಕ್ಕುತ್ತಿವೆ. ಶಿಕ್ಷಕರಿಗಾಗಿ ತಮ್ಮ ಹುಟ್ಟಿದ ದಿನವನ್ನೇ ಬಿಟ್ಟು ಕೊಟ್ಟ ಭಾರತದ ಶ್ರೇಷ್ಠ ತತ್ವಜ್ಞಾನಿ, ಶಿಕ್ಷಕ ಡಾ||ಎಸ್.ರಾಧಾಕೃಷ್ಣನ್, ಲಕ್ಷಾಂತರ ಮಂದಿ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಹಾಗೂ ಆದರ್ಶವಾಗಿರುವ ಭಾರತದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ಗುರು ಪರಂಪರೆಯನ್ನು ಹುಟ್ಟಿ ಹಾಕಿದ, ಗುರುಕುಲಗಳನ್ನು ಸ್ಥಾಪಿಸಿ ‘ಗುರು’ ಸ್ಥಾನಕ್ಕೆ ವ್ಯಾಖ್ಯಾನವನ್ನು ಒದಗಿಸಿಕೊಟ್ಟ ಋಷಿಗಳನ್ನು ನೆನೆಯುತ್ತಲೇ, ಅವರ ಕೊಡುಗೆಗಳಿಗೆ ಗೌರವಯುತವಾಗಿ ತಲೆಬಾಗುತ್ತಲೇ ಇಂದು ಅಂತರ್ಜಾಲ ಹಾಗೂ ಮಾಹಿತಿ ಕ್ರಾಂತಿಯ ಯುಗದಲ್ಲಿ ಶಿಕ್ಷಕರ ಅಗತ್ಯವಿದೆಯೇ ಎಂಬುದನ್ನು ಆಲೋಚಿಸಬೇಕಾಗುತ್ತದೆ.

ie7.jpg

‘ನಾನು ಹುಟ್ಟುತ್ತಲೇ ಜೀನಿಯಸ್ ಆಗಿದ್ದೆ. ನಮ್ಮ ಶಾಲೆಗಳು ನನ್ನನ್ನು ಸರ್ವನಾಶ ಮಾಡಿದವು’ ಎಂಬ ವಾಕ್ಯ ಅನೇಕ ಮಂದಿ ವಿದ್ಯಾರ್ಥಿಗಳ ಟೀಶರ್ಟುಗಳ ಮೇಲೆ ರಾರಾಜಿಸುತ್ತಿದೆ. ಇದರ ಹಿಂದಿರುವ ವ್ಯಂಗ್ಯ ಹಾಗೂ ಸಿನಿಕತನದ ಮೊನಚನ್ನು ಸ್ವಲ್ಪ ಪಕ್ಕಕ್ಕಿಟ್ಟು ಗಮನಿಸಿದರೆ ಈ ಮಾತು ಅದೆಷ್ಟು ಸತ್ಯ ಎಂಬುದು ವೇದ್ಯವಾಗುತ್ತದೆ. ನಮ್ಮ ಶಿಕ್ಷಣ ಪದ್ಧತಿ ಹಾಗೂ ನಮ್ಮ ಶಿಕ್ಷಕರ ಕೈಯಲ್ಲಿ ದಿನೇ ದಿನೇ ಅಸಂಖ್ಯಾತ ಪ್ರತಿಭೆಗಳ ಕಗ್ಗೊಲೆ ನಡೆಯುತ್ತಿದೆ. ಶಿಕ್ಷಕ ಎನ್ನುವವನು, ಸತ್ಯಕಾಮರು ಹೇಳಿದ ಹಾಗೆ ದಾರಿ ತೋರುವ ಮ್ಯಾಪ್ ಮಾತ್ರವಾಗದೆ ದಾರಿಯುದ್ದಕ್ಕೂ ಹೊತ್ತೊಯ್ಯಬೇಕಾದ ಹೆಣವಾಗಿ ವಿದ್ಯಾರ್ಥಿಗಳ ಬೆನ್ನನ್ನು ಏರಿದ್ದಾನೆ. ಗುರು, ಶಿಕ್ಷಕ ಎಂದ ಕೂಡಲೆ ಋಷಿ ಮುನಿಗಳ ಆಶ್ರಮಗಳನ್ನು, ಗುರುಕುಲ ಮಾದರಿಯ ಗುರು-ಶಿಷ್ಯ ಪದ್ಧತಿಯನ್ನು ನೆನೆಪಿಸಿಕೊಳ್ಳುವವರಿಗೆ ಇಂದಿನ ಸಮಾಜದಲ್ಲಿ ಶಿಕ್ಷಕರು ಎಂಥವರಿದ್ದಾರೆ ಹಾಗೂ ಶಿಕ್ಷಣ ವ್ಯವಸ್ಥೆ ಎಂಥದ್ದಿದೆ ಎಂಬುದನ್ನು ನೆನಪಿಸಬೇಕಾಗಿದೆ. ವಾಸ್ತವದ ಚಿತ್ರಣವನ್ನು ತೆರೆದಿಡಬೇಕಾಗಿದೆ.

ಹಿಂದೆ ಶಿಕ್ಷಣವೆಂಬುದು ಒಂದು ಪವಿತ್ರ ಕ್ಷೇತ್ರವಾಗಿತ್ತು. ಗುರು-ಶಿಷ್ಯ ಸಂಬಂಧ ಎಂಬುದು ಕೇವಲ ಕೊಟ್ಟು ತೆಗೆದುಕೊಳ್ಳುವ ವ್ಯವಹಾರವಾಗಿರಲಿಲ್ಲ. ಶಿಷ್ಯ ಗುರುವಿನ ಆಶ್ರಮದಲ್ಲೇ ಇದ್ದು ಗುರುವಿನ ಸೇವೆ ಮಾಡುತ್ತಿದ್ದ. ಆಶ್ರಮದ ಕೆಲಸಗಳನ್ನು ಮಾಡುತ್ತಿರುತ್ತಿದ್ದ. ಆ ಮೂಲಕ ಗುರುವಿನಿಂದ ಪಡೆಯುವ ಶಿಕ್ಷಣಕ್ಕೆ ಬೇಕಾದ ಮನೋಭೂಮಿಕೆಯನ್ನು ಸಿದ್ಧ ಪಡಿಸಿಕೊಳ್ಳುತ್ತಿದ್ದ. ಆತನಿಗೆ ಗುರುದಿನ ಆಶ್ರಮದಲ್ಲಿದ್ದಷ್ಟೂ ಕಾಲ ಶಿಕ್ಷಣವನ್ನು ಪಡೆಯಬೇಕು ಎಂಬ ಹಂಬಲವಿರುತ್ತಿತ್ತು. ಜೊತೆಗೆ ತಾನು ಪಡೆಯುತ್ತಿರುವ ಶಿಕ್ಷಣಕ್ಕೆ ಕೊಡಬೇಕಾದ ಮರ್ಯಾದೆ ಎಂಥದ್ದೂ ಎಂಬುದನ್ನೂ ಆತ ಕಲಿಯುತ್ತಿದ್ದ. ತಾನು ಕಲಿತ ಶಿಕ್ಷಣದಿಂದ ತನ್ನ ಕಲ್ಯಾಣ ಮಾಡಿಕೊಳ್ಳುವುದ ಜೊತೆಗೆ ಸಮಾಜದ ಕಲ್ಯಾಣವನ್ನೂ ಮಾಡಬೇಕೆಂಬ ಗುರಿ ಆತನಲ್ಲಿರುತ್ತಿತ್ತು. ಶಿಕ್ಷಣಕ್ಕಾಗಿ ಶಿಕ್ಷಣ ಎಂಬುದು ಆಗ ಸಮಾಜದ ನೀತಿಯಾಗಿತ್ತು. ಗುರುವಿಗೋ ಶಿಷ್ಯಂದಿರಿಗೆ ವಿದ್ಯೆಯನ್ನು ಧಾರೆಯೆರೆಯುವುದೇ ಜೀವನದ ಪರಮೋದ್ದೇಶವಾಗಿತ್ತು.

ಆದರೆ ಈಗಿನ ಪರಿಸ್ಥಿತಿ ಹೇಗಿದೆ? ಶಿಕ್ಷಕನಾಗಲೇ ಬೇಕು ಎಂದು ಎಷ್ಟು ಮಂದಿ ಜೀವನ ಗುರಿಯನ್ನು ಹೊಂದಿರುತ್ತಾರೆ? ವಿದ್ಯೆಯನ್ನು ಧಾರೆಯೆರೆಯುವುದಕ್ಕಾಗಿ ಶಿಕ್ಷಕರಾಗುತ್ತಿದ್ದೇವೆ ಎಂದು ಅದೆಷ್ಟು ಮಂದಿ ಶಿಕ್ಷಕರು ಎದೆಯ ಮೇಲೆ ಕೈ ಇಟ್ಟು ಹೇಳಬಲ್ಲರು? ಧಾರೆಯೆರೆಯಲು ಅವರ ಬಳಿ ವಿದ್ಯೆ ಇದ್ದರೆ ತಾನೆ! ಬೇರಾವ ಕೆಲಸವೂ ಸಿಕ್ಕದಿದ್ದರೆ ಶಿಕ್ಷಕನಾಗಬಹುದು ಎಂದು ಆಲೋಚಿಸಿ ಶಿಕ್ಷಣ ಕ್ಷೇತ್ರಕ್ಕೆ ಧಾವಿಸುವವರಿಗೆ ‘ಗುರು’ವಿನ ಸ್ಥಾನವನ್ನು ತುಂಬುವಂಥ ಅರ್ಹತೆ ಇರುತ್ತದಾ? ಬೇರೆಲ್ಲಾ ಕ್ಷೇತ್ರಗಳಿದ್ದ ಹಾಗೆಯೇ ಶಿಕ್ಷಣ ಕ್ಷೇತ್ರವೂ ಹಣ ಮಾಡುವ ದಂಧೆಯಾಗಿರುವಾಗ ಯಾವ ಗುರು-ಶಿಷ್ಯ ಸಂಬಂಧವನ್ನು ನಾವು ಅಪೇಕ್ಷಿಸಲು ಸಾಧ್ಯ? ಬೇರೆಲ್ಲಾ ಕ್ಷೇತ್ರಗಳಲ್ಲಿರುವ ಮಾರುಕಟ್ಟೆ ವ್ಯಾಕರಣವೇ ಶಿಕ್ಷಣ ಕ್ಷೇತ್ರದಲ್ಲೂ ಚಲಾವಣೆಯಾಗುತ್ತಿದೆ. ವಿದ್ಯಾರ್ಥಿ ಕಸ್ಟಮರ್ ಆಗುತ್ತಿದ್ದಾನೆ. ಶಾಲೆಗಳು ಒಳ್ಳೆಯ ಕಸ್ಟಮರ್ ಸರ್ವೀಸ್ ಕೊಡುವ ಕಂಪನಿಗಳಾಗುತ್ತಿವೆ. ಅವಕ್ಕೂ ಜಾಹೀರಾತು, ಡೊನೇಷನ್ ಪೈಪೋಟಿ, ರಾಜಕೀಯದ ಪಿಡುಗುಗಳು ಅಂಟಿಕೊಂಡಿವೆ. ಇಷ್ಟೇ ಅಲ್ಲದೆ ಶಿಕ್ಷಣ ಎಂಬುದು ಕೇವಲ ಪರೀಕ್ಷೆಗಳನ್ನು ಪಾಸು ಮಾಡುತ್ತಾ ಒಳ್ಳೆಯ ಮಾರ್ಕು ಗಳಿಸುವ ಉದ್ಯಮವಾಗಿ ರೂಪುಗೊಂಡಿದೆ. ಶಿಕ್ಷಣ ಪದ್ಧತಿಯು ಮಾರ್ಕುಗಳನ್ನೇ ‘ವಿದ್ಯೆ’ಯೆಂದು ಪರಿಗಣಿಸುತ್ತಿರುವಾಗ, ಪರೀಕ್ಷೆಗಳನ್ನು ಪಾಸು ಮಾಡಿದವರನ್ನೇ ವಿದ್ಯಾವಂತರು ಎಂದು ಘೋಷಿಸುತ್ತಿರುವಾಗ ‘ಗುರು ಬ್ರಹ್ಮ, ಗುರು ವಿಷ್ಣು…’ ಎನ್ನುವುದು ಹಾಸ್ಯಾಸ್ಪದವಾಗುತ್ತದೆ. ಗುರುವನ್ನು ದೈವ ಎಂದು ವಿದ್ಯಾರ್ಥಿಗಳು ಭಾವಿಸಬೇಕು ಎಂದು ಅಪೇಕ್ಷಿಸುವುದು ಅತಿಯಾಗುತ್ತದೆ. ಇವೆಲ್ಲದರ ಜೊತೆಗೆ ಡೊನೇಶನ್ ಹೆಸರಿನಲ್ಲಿ ನಿಜವಾದ ಪ್ರತಿಭೆಗೆ ಸಲ್ಲ ಬೇಕಾದ ಮನ್ನಣೆಯನ್ನು ವಂಚಿಸುವ ಶಿಕ್ಷಣ ಸಂಸ್ಥೆಗಳು, ಇಂಟರ್ನಲ್‌ಗಳು, ಅಟೆಂಡೆನ್ಸಿನ ನೆಪದಲ್ಲಿ ವೈಯಕ್ತಿಕ ಸೇಡು ತೀರಿಸಿಕೊಳ್ಳುವ ಶಿಕ್ಷಕರು, ತಮ್ಮ ಸ್ಥಾನವನ್ನು ದುರುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳ ಮೇಲೆ ಎರಗುವ ಕಾಮುಕರು ಇಂಥದ್ದೆಲ್ಲಾ ಕಣ್ಣ ಮುಂದೇ ನಡೆಯುವಾಗ ‘ಗುರುವಿನ ಗುಲಾಮನಾಗು..’ ಎಂದು ಹೇಳಲು ಯಾರಿಗೆ ಮನಸ್ಸು ಬಂದೀತು?

ವಿದ್ಯೆಯೆಂಬುದು ವಿದ್ಯೆಯಾಗಿ ಉಳಿದಿಲ್ಲ. ಗುರುವೆಂಬುವವನು ಗುರುವಾಗಿ ಉಳಿದಿಲ್ಲ – ಇದು ಅರಗಿಸಿಕೊಳ್ಳಲು ಸ್ವಲ್ಪ ಕಷ್ಟವಾದರೂ ಈ ದಿನದ ಸತ್ಯ. ಗುರು ಪರಂಪರೆಯಿಂದ ಎಂದಿಗೂ ನಿಜವಾದ ವಿದ್ಯಾಕಾಂಕ್ಷಿಗೆ ನ್ಯಾಯ ದಕ್ಕಲು ಸಾಧ್ಯವಿಲ್ಲ ಎಂಬುದನ್ನು ಏಕಲವ್ಯ ಹಾಗೂ ದ್ರೋಣರ ಕಥೆಯಿಂದ ತಿಳಿಯಬಹುದು. ಈ ಪರಂಪರೆಯ ಹಂಗಿನಿಂದ ಹೊರಬರಲು ನಮಗೆ ಆಶಾಕಿರಣವಾಗಿ ಗೋಚರಿಸಿರುವುದೇ ಈ ಮಾಹಿತಿ ಕ್ರಾಂತಿ ಹಾಗೂ ಪುಸ್ತಕ ಲೋಕ. ಇಲ್ಲಿಗೆ ಯಾರೂ ನಿಷಿದ್ಧರಲ್ಲ. ಇವು ನಿಮ್ಮ ಜಾತಿ ಯಾವುದು, ನಿಮ್ಮ ವಂಶ ಯಾವುದು, ನಿಮ್ಮ ಪೂರ್ಜರು ಯಾರು ಎಂದು ಕೇಳುವುದಿಲ್ಲ. ಗಂಡೋ, ಹೆಣ್ಣೋ ಎಂದು ಭೇದ ಮಾಡುವುದಿಲ್ಲ. ಚಿಕ್ಕವರು, ದೊಡ್ಡವರು ಎಂಬ ತಾರತಮ್ಯ ಇವಕ್ಕೆ ತಿಳಿದಿಲ್ಲ. ಯಾರೆಂದರೆ ಯಾರು ಬೇಕಾದರೂ ವಿದ್ಯೆಗಾಗಿ ಕೈಚಾಚ ಬಹುದು. ಇವು ಮೊಗೆದು ಮೊಗೆದು ಕೊಡುತ್ತವೆ. ಅರ್ಹತೆಯಿರುವವರು ಅದನ್ನು ದಕ್ಕಿಸಿಕೊಳ್ಳುತ್ತಾರೆ. ಪುಸ್ತಕಗಳು ಎಂದಿಗೂ ನಮ್ಮ ಬಲಹೀನತೆಯ ಲಾಭ ಪಡೆಯುವುದಿಲ್ಲ. ಅಂತರ್ಜಾಲ ಎಂದಿಗೂ ಶೋಷಣೆಗೆ ಕೈ ಹಾಕುವುದಿಲ್ಲ. ಹಳ್ಳಿಯ ಮೂಲೆಯ ಹುಡುಗನು ಸಹ ನಾಸಾದ ಬಾಗಿಲು ತಟ್ಟಬಹುದು. ಬಡವನ ಮಗಳು ಸಹ ವರ್ಲ್ಡ್ ಬ್ಯಾಂಕಿನೊಳಕ್ಕೆ ಹೋಗಬಹುದು. ಇಷ್ಟೆಲ್ಲಾ ಸೌಲಭ್ಯ ಕೊಡಮಾಡಿರುವ ಮಾಹಿತಿ ಕ್ರಾಂತಿ ಶಿಕ್ಷಕನ ಪಾತ್ರವನ್ನು ಆಕ್ರಮಿಸಿಕೊಂಡಿರುವುದು ಸ್ಪಷ್ಟ. ಶಿಕ್ಷಣವೆನ್ನುವುದು ವ್ಯಾಪಾರವಾಗಿರುವಾಗ, ಶಿಕ್ಷಕನೆಂಬುವವನು ದಲ್ಲಾಳಿಯಾಗಿರುವಾಗ ಅರಿವೇ ಗುರು, ಪುಸ್ತಕವೇ ಮಾರ್ಗದರ್ಶಿ, ಅಂತರ್ಜಾಲವೇ ಜ್ಞಾನದೇಗುಲ ಎನ್ನುವುದರಲ್ಲಿ ತಪ್ಪೇನಿದೆ?

ಪಕ್ಕದ ಮನೆಯಾಕೆ ಬೆಳಿಗ್ಗೆಯಿಂದ ಹುಡುಕಾಡುತ್ತಿದ್ದರು. ಅವರ ೨ ವರ್ಷದ ಮಗು ಹಣವಿದ್ದ ಪರ್ಸನ್ನು ಎಲ್ಲೋ ಹಾಳು ಮಾಡಿತ್ತು. ಆಟದ ಸಂಭ್ರಮದಲ್ಲಿ ಗೃಹಕೃತ್ಯದಲ್ಲಿದ್ದಾಕೆ ಆ ಹೊತ್ತಿನಲ್ಲಿ ಗಮನಿಸಲಿಲ್ಲ. ಏನನ್ನೋ ಕೊಳ್ಳಬಯಸಿದಾಗ ಆ ಬಗ್ಗೆ ಗಮನಿಸಿದ್ದರು. ಹುಡುಕಾಟ ಪ್ರಾರಂಭವಾಗಿತ್ತು. ಮನೆ ಹೊರಗೆ, ಒಳಗೆ ಎಲ್ಲಾ ಕಡೆ ಹುಡುಕಾಡಿದರೂ ಪರ್ಸು ಸಿಕ್ಕಲಿಲ್ಲ. ಅಳುತ್ತಾ ಬಂದ ಆಕೆ ಪಕ್ಕದ ಮನೆಯವರ ಸಂಗಡ ಹೇಳಿಕೊಂಡರು. ಬಡವರಾದ, ವಿಧವೆ ನರಸಮ್ಮ ಅವರ ನೆರೆಮನೆಯಾಕೆ. ತಕ್ಷಣ ಅವರೊಂದಿಗೆ ಸೇರಿ ತಾವೂ ಹುಡುಕಾಡತೊಡಗಿದ್ದರು. ಹಣದ ಬೆಲೆ ನರಸಮ್ಮ ಚೆನ್ನಾಗಿ ಅರಿತಿದ್ದವರು. ಮಗು ಕೈಯಲ್ಲಿ ಆಡಲು ಹಣವಿದ್ದ ಪರ್ಸು ಕೊಡಬಾರದಿತ್ತು ಎಂದು ಹೇಳುತ್ತ ಪಕ್ಕದ ಮನೆಯಾಕೆಗೆ ಸಮಾಧಾನ ಪಡಿಸಿದರು. ದೇವರಿದ್ದಾನೆ ಖಂಡಿತಾ ಕಷ್ಟಪಟ್ಟ ಹಣ ಸಿಗುತ್ತೆ ಎಂದೂ ಹೇಳಿದರು.

ಮಗ ನಾರಾಯಣ ಹೈಸ್ಕೂಲ್ ವಿದ್ಯಾರ್ಥಿ. ಮಧ್ಯಾಹ್ನ ಊಟಕ್ಕೆ ಬಂದಿದ್ದಾಗ ನರಸಮ್ಮ ವಿಷಯ ಮಗನ ಕಿವಿಗೂ ಹಾಕಿ ಹುಡುಕಿ ನೋಡು ನಾರಾಯಣ. ಪಾಪ ಪುಟ್ಟ ಮಗು ಎಲ್ಲಾದರೂ ಬೀಳಿಸಿರಬಹುದು ಆಡುತ್ತ. ಆಕೆ ಬೆಳಿಗ್ಗೆಯಿಂದ ಅಳುತ್ತಿದ್ದಾರೆ. ಗಂಡ ಬಂದರೆ ಬೈದಾರು ಅಂತ ವಿವರಿಸಿದ್ದರು. ನಾರಾಯಣ ಹುಡುಕಾಡಿದ. ಶ್ರಮ ವ್ಯರ್ಥವಾಗಲಿಲ್ಲ. ಪರ್ಸ್ ಸಿಕ್ಕಿದ ಖುಶಿಯಲ್ಲಿ ಓಡಿಹೋಗಿ ಪರ್ಸ್ ಸಿಕ್ಕಿದೆ. ಬೇಲಿ ಬಳಿ ಎಸೆದಿದ್ದರು ಎಂದ, ಕಂಡು ಹಿಡಿದ ಹೆಮ್ಮೆಯಲ್ಲಿ.ಆತುರದಿಂದ ಪರ್ಸ್ ತೆಗೆದ ಪಕ್ಕದ ಮನೆಯಾಕೆ ಹಣವಿಲ್ಲದ್ದನ್ನು ಕಂಡು ಬಡ ನಾರಾಯಣನನ್ನು ಅಪಾದಮಸ್ತಕ ನೋಡುತ್ತ, ‘ಹಣ ತೆಗೆದುಕೊಂಡಿದ್ದರೆ ಪ್ಲೀಸ್ ಹೇಳಿಬಿಡು ನಾರಾಯಣ’ ಎಂದರು. ನಾರಾಯಣನಿಗೆ ಭೂಮಿ ಕುಸಿಯಬಾರದೆ ಎನ್ನಿಸಿತು. ನಾಲಿಗೆ ಒಣಗಿ ಕಣ್ಣಲ್ಲಿ ನೀರು ಬಂದಿತ್ತು. ನಿರ್ಮಲ ಮನದಿಂದ ದೇವರಲ್ಲಿ ಪ್ರಾರ್ಥಿಸಿದ್ದ, ಪರಿಸ್ಥಿತಿಯಿಂದ ಪಾರು ಮಾಡು ಎಂದು. ಹೊರಗೆ ಗದ್ದಲ. ಪೊಲೀಸಿನವರು ಹೆಂಗಸೊಬ್ಬಳನ್ನು ಎಳೆದು ತಂದಿದ್ದರು ವಿಚಾರಣೆಗೆ. ‘ಇದೇ ಮನೆಯಲ್ಲಿ ಪರ್ಸ್‌ನಲ್ಲಿದ್ದ ಹಣ ಕದ್ದದ್ದು’- ಎಂದಾಕೆ ತೋರಿಸಿದಳು. ಅಲ್ಲಿಗೆ ಪಕ್ಕದ ಮನೆಯಾಕೆ ಹಣ ಹಿಂದಕ್ಕೆ ಬಂದಿತ್ತು. ಬಡ ನಾರಾಯಣನಿಗೆ ಆಗಿದ್ದ ಅಂದಿನ ನೋವಿಗೆ ಮಾತ್ರ ಔಷಧಿ ಸಿಕ್ಕಿದ್ದು ತಾಯಿ ಮಡಿಲಲ್ಲಿ ಅತ್ತಾಗ ಮಾತ್ರ.

– ವೈ.ಎಂ.ರಘುನಂದನ್, ಮೈಸೂರು

ಟ್ಯಾಗ್ ಗಳು: , ,

ಸಾಮ್ರಾಟರ ಸಡಗರ!

ಅಂತರ್ಜಾಲದಲ್ಲಿ ನಗೆ ನಗಾರಿ ಡಾಟ್ ಕಾಮ್ ಎಂಬ ಬ್ಲಾಗನ್ನು ತೆರೆದುಕೊಂಡು ಹಾಸ್ಯದ ರಸಗವಳವನ್ನು ಉಣಬಡಿಸುವ ನಗೆ ಸಾಮ್ರಾಟರು ನಮ್ಮ ಪತ್ರಿಕೆಯ ಬಳಗಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಅವರ ಬ್ಲಾಗಿನ ಬರಹಗಳ ರಾಶಿಯಿಂದ ಯಾವ ಬರಹವನ್ನಾದರೂ ಆರಿಸಿಕೊಂಡು ಪ್ರಕಟಿಸಿಕೊಳ್ಳುವ ಸ್ವಾತಂತ್ರ್ಯವನ್ನು ನಮಗೆ ಕೊಟ್ಟುಬಿಟ್ಟಿದ್ದಾರೆ!

ಈ ಸಂಚಿಕೆಯಿಂದ ಪ್ರತಿ ತಿಂಗಳು ಎರಡು ಪುಟ ನಗೆ ಸಾಮ್ರಾಟರಿಗೆ ಮೀಸಲು. ನಗೆಯ ನಗಾರಿಯ ಸದ್ದಿಗೆ ನಿಮ್ಮ ಮನಸ್ಸುಗಳು ನಲಿಯಲಿ ಎಂದು ಆಶಿಸುವೆ. – ಸಂಪಾದಕ

ಮಾನವನಿಗೆ ದೇವನ ಮೊರೆ!

(ನಗೆ ನಗಾರಿ ಆಧ್ಯಾತ್ಮ ಬ್ಯೂರೋ)

ಜಗತ್ತಿನ ಸಮಸ್ತ ಲೌಕಿಕ ಸಂಗತಿಗಳ ಬಗ್ಗೆ ಹೆಕ್ಕಿ, ಹರಡಿ ವರದಿ ಮಾಡುವ ನಗೆ ಸಾಮ್ರಾಟರಿಗೆ ಒಂದು ಅನಾಮಧೇಯ ಸಂಖ್ಯೆಯಿಂದ ಫೋನ್ ಬಂದಿತು. ಯಾವುದೋ ಅಪರೂಪದ ವರದಿಯಿರಬೇಕೆಂದು ನಗೆ ಸಾಮ್ರಾಟರು ಹಿಗ್ಗಿದರು. ಹೀಗೆ ಅನಾಮಧೇಯ, ಅವಿಶ್ವಾಸನೀಯ, ಅಗೋಚರ ಸುದ್ದಿ ಮೂಲಗಳಿಂದ ಪಡೆದ ಸುದ್ದಿಯನ್ನು ರಸವತ್ತಾಗಿ ಪ್ರಕಟಿಸಿ ಕೊನೆಗೆ ಇದು ನಮ್ಮ ‘ನಂಬಲರ್ಹ’ ಮೂಲಗಳಿಂದ ಬಂದದ್ದು ಎಂದು ಹೇಳುವ ಸಂಪ್ರದಾಯವನ್ನು ಸಾಮ್ರಾಟರು ನಮ್ಮ ಮುಖ್ಯವಾಹಿನಿಯ ಸುದ್ಧಿ ಮಾಧ್ಯಮಗಳಿಂದ ಕಲಿತುಕೊಂಡಿದ್ದಾರೆ. ಗುರುವಿಲ್ಲದೆಯೇ, ಏಕಲವ್ಯನ ಥರ.

‘ಪ್ರಿಯ ಸಾಮ್ರಾಟ್!’ ಎಂದಿತು ಅತ್ತಲಿನ ದನಿ. ‘ನನ್ನ ದುಃಖ, ಸಂಕಟಗಳು ನಿನಗೆ ಮಾತ್ರ ತಿಳಿಯುತ್ತವೆ ಎಂದು ನಿನಗೆ ಫೋನ್ ಮಾಡಿರುವೆ.’

t-mobile-shadow-hands1.jpg

‘ಹೇಳಿ. ಏನಾಗಬೇಕಿತ್ತು. ನಾನು ಸದಾ ನಿಮ್ಮ ಸೇವೆಗೆ ಸಿದ್ದ, ಸಮರಕ್ಕೂ ಬದ್ಧ (ಅಯ್ಯೋ, ಅದು ಇಲ್ಲಿ ಬಳಸೋದಲ್ಲ, ಬಿಡಿ). ನೀವೇ ನಮ್ಮ ಓದುಗ ಮಹಾಶಯರು.’ ಪೀಟಿಕೆ ಹಾಕಿದರು ಸಾಮ್ರಾಟರು ಸುದ್ದಿಯನ್ನು ಪೀಕಲು.

‘ನಾನು ನಗೆ ನಗಾರಿಯ ಸ್ಕೂಪ್ ವರದಿಗಳನ್ನ ಆಗಾಗ ನಮ್ಮ ಗಣೇಶ್‌ನ ಲ್ಯಾಪ್‌ಟಾಪಿನಲ್ಲಿ ಓದುತ್ತಿರುತ್ತೇನೆ. ಅದಕ್ಕಾಗಿಯೇ ನಿಮ್ಮನ್ನು ಸಂಪರ್ಕಿಸಿದ್ದು. ಬೇರೆಯವರ ಬಳಿಗೆ ನಾನು ಹೋಗಬಹುದಿತ್ತು. ಆದರೆ ಅವರು ನಾನು ಹೇಳಿದ್ದನ್ನು ಇನ್ನು ಹೇಗೋ ತಿರುಚಿ ಬರೆದು ಅದು ಕ್ಯಾತೆಯಾಗಿ ಆಮೇಲೆ ನಾನು ಪತ್ರಿಕೆಗಳಿಗೆ ಮಾತಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಆಮೇಲೆ ಪ್ರಚಾರ ಬೇಕಾದಾಗ ಅದನ್ನು ಮುರಿಯುವುದು? ಇವೆಲ್ಲಾ ಸರಿ ಕಾಣಲಿಲ್ಲ.

‘ಹ್ಹಾ? ವಿಷಯಕ್ಕೆ ಬರುತ್ತೀನಿ. ನಾನು ದೇವರು. ನಾನು ಒಬ್ಬನೇ ಅಂತೆ, ನನಗೆ ನೂರು ನಾಮಗಳು ಎನ್ನುತ್ತಾರೆ ನನ್ನ ಭಕ್ತರು. ಆದರೆ ಒಬ್ಬೊಬ್ಬರೂ ನನಗೆ ನೂರು ನೂರು ‘ನಾಮ’ಗಳನ್ನು ತಿಕ್ಕುತ್ತಿದ್ದಾರೆ. ನನ್ನ ಸಂಕಟಗಳನ್ನು ಕೇಳುವವರು ಗತಿಯಿಲ್ಲ.
‘ನನ್ನ ಗೋಳು ಹೇಳುತ್ತಾ ಹೋದರೆ ಇಲ್ಲಿ ಮೊಬೈಲ್ ಬಿಲ್ಲು ಜಾಸ್ತಿ ಬರಬಹುದು ಎಂದು ಸುಬ್ರಹ್ಮಣ್ಯ ಎಚ್ಚರಿಸುತ್ತಿದ್ದಾನೆ. ಅದಕ್ಕೆ ಒಂದೇ ಒಂದು ಸಂಗತಿಯನ್ನು ಹೇಳುತ್ತೇನೆ. ಈ ಜನರು ನನ್ನ ಮೂರ್ತಿ ಎಂದು ಎಲ್ಲಿಂದಲೇ ತಂದ ಕಲ್ಲನ್ನು ಸಮನಾಗಿ ಕಟೆದು ದೇವಸ್ಥಾನದಲ್ಲಿ ನಿಲ್ಲಿಸುತ್ತಾರೆ. ಕೆಲವೊಮ್ಮೆ ಭೂಮಿಯಲ್ಲಿರುವ ಯಾವುದೋ ಕಲ್ಲನ್ನು ದೇವರು ಎಂದು ಉದ್ಭವ ಮೂರ್ತಿಯಾಗಿಸುತ್ತಾರೆ. ಅಸಲಿಗೆ ನಾನು ಬ್ರಹ್ಮಾಂಡದ ಎಲ್ಲಾ ಕಲ್ಲು, ಬಂಡೆ, ಮಣ್ಣು, ಚರಾಚರ ಜೀವಿಗಳಲ್ಲಿ ಇದ್ದೇನೆ. ಆದರೆ ಇವರು ಸಾಂಕೇತಿಕವಾಗಿ ಒಂದು ಕಲ್ಲನ್ನು ದೇವರು ಅಂದಾಗ ನಾನೇನು ಬೇಡ ಅನ್ನಲಿಲ್ಲ. ಕಲ್ಲಿಗೆ ಹಾಲು, ಮೊಸರು, ಬೆಣ್ಣೆ, ತುಪ್ಪ ಎಲ್ಲಾ ಸುರಿಯುತ್ತಾರೆ. ನಾನು ಅವರಿಗೆ ಇದೆಲ್ಲಾ ಏನಕ್ಕಯ್ಯಾ? ನಿಮ್ಮ ಮಧ್ಯೆಯೇ ಹಸಿವು, ನೀರಡಿಕೆ ಇರುವಾಗ ಮೊದಲು ಅದನ್ನು ತಣಿಸಿಕೊಳ್ಳಿ ನನಗ್ಯಾಕೆ ಎಂದು ಹೇಳಬೇಕೆನ್ನಿಸಿದರೂ ಸುಮ್ಮನಾದೆ.

‘ಆದರೆ ಈ ಒಂದು ಸಂಗತಿಯ ಬಗ್ಗೆ ಹೇಳಲೇಬೇಕು. ಇದು ನನಗೆ ವಿಪರೀತ ಕಿರಿಕಿರಿ ಮಾಡುತ್ತಿದೆ. ಈ ಜನರಿಗೆ ನನಗೆ ಹೂವಿನ ಮಾಲೆಯನ್ನಾಗಲೀ, ಬಿಡಿಹೂಗಳ ಅಲಂಕಾರವನ್ನಾಗಲೀ, ಚಿನ್ನದ ಬೆಳ್ಳಿಯ ತೊಡುಗೆಗಳನ್ನಾಗಲೀ ಹಾಕಬೇಡಿ ಎಂದು ಆಗ್ರಹಿಸಬೇಕು.

‘ಏಕೆ ಅನ್ನುತ್ತೀರಾ? ನೋಡಪ್ಪಾ, ನೂರಾರು ನಮೂನೆಯ ಹೂಗಳನ್ನು ತಂದು ಕಲ್ಲ ಮೇಲೆ ಜೋಡಿಸಿ ದೇವರಿಗೆ ಅಲಂಕಾರ ಮಾಡಿದೆವು ಅಂದುಕೊಳ್ತಾರೆ. ನಾನೂ ಅವರ ಮೇಲಿನ ಮಮತೆಗೆ ಕಲ್ಲೊಳಗೆ ಬಂದು ಕುಳಿತರೆ ಕಾಣುವುದು ಏನು? ಬರೀ ಹೂಗಳ ತುಂಬುಗಳು! ಚಿನ್ನದ ತೊಡುಗೆ, ಒಡವೆಯ ಹಿಂಬದಿಯನ್ನು ನಾನು ನೋಡಿ ಸಮಾಧಾನ ಪಟ್ಟುಕೊಳ್ಳಬೇಕು. ಹುಂಡಿಗೆ ದುಡ್ಡು ಹಾಕಲು ಬರುವವರ ಕಣ್ಣುಗಳಿಗೆ ತಂಪು ಕೊಡುವ ಅಲಂಕಾರ. ಈ ದೇವಸ್ಥಾನದವರಿಗೆ ದೇವರಾದ ನನಗಿಂಥಾ ಹುಂಡಿಗೆ ಹಾಕುವ ಭಕ್ತ-ಆದಿಗಳೇ ಮುಖ್ಯವಾದರಾ? ಸರಿ, ಏನೋ ಹುಚ್ಚಾಟ ಮಾಡಿಕೊಳ್ಳಲಿ, ನಾನೇ ಆ ಭಕ್ತರ ಕಣ್ಣುಗಳನ್ನು ಸೇರಿ ನನ್ನ ಅಲಂಕಾರವನ್ನು ನೋಡೋಣ ಎಂದುಕೊಂಡರೆ ಅದೂ ಸಾಧ್ಯವಿಲ್ಲ.

‘ಹೂಂ, ಹೇಳ್ತೇನೆ ಇರು. ಜಗತ್ತಿನ ಬೇರೆಲ್ಲಾ ವಸ್ತು, ಜೀವಿಗಳಲ್ಲಿ ನಾನು ವಾಸವಿದ್ದೇನೆ. ನಾನು ಯಾವುದನ್ನಾದರೂ ಪ್ರವೇಶಿಸಬಹುದು. ಆದರೆ ಈ ಮನುಷ್ಯನನ್ನು ಮಾತ್ರ ನಾನು ಪ್ರವೇಶಿಸಲಾಗದು. ಆತ ತನ್ನ ಸ್ವಂತ ಪರಿಶ್ರಮದಿಂದ ಈ ಸಾಧನೆ ಮಾಡಿದ್ದಾನೆ. ಅದಕ್ಕೇ ನಾನು ಅವನ ಕಣ್ಣು ಸೇರಿ ನನ್ನ ಅಲಂಕಾರ ನೋಡಲಾಗದು.

‘ನನಗೊಂದು ಸಹಾಯ ಮಾಡಪ್ಪ. ನೀನು ಜನರಿಗೆ ಇನ್ನು ಮುಂದೆ ದೇವರಿಗೆ ಯಾವ ಹೂವು, ಹೂಹಾರ, ಫಲ, ಪತ್ರೆ, ಒಡವೆ, ಕವಚಗಳ ಅಲಂಕಾರ ಬೇಡವಂತೆ ಎಂಬ ಸಂದೇಶವನ್ನು ತಲುಪಿಸಿಬಿಡಪ್ಪ. ನೀನು ನನ್ನ ಆಶಯದ ‘ಆವರಣ’ದಲ್ಲಿ ನಿನ್ನ ಆಶಯವನ್ನು ತುಂಬಿ ಹೂರಣವನ್ನು ಕೆಡಿಸಿ ವರದಿ ಮಾಡುವುದಿಲ್ಲ ಅನ್ನೋ ನಂಬಿಕೆ ನನಗಿದೆ.

‘ಸರಿಯಪ್ಪ, ಸುಬ್ರಹ್ಮಣ್ಯ ಎಚ್ಚರಿಸ್ತಾ ಇದ್ದಾನೆ. ಇಡಲಾ ಫೋನು. ದೇವರು ನಿನಗೆ ಒಳ್ಳೆಯದು ಮಾಡಲಿ’

‘ಫೋನಿ’ಗನ ಮಾತಿನ ಕೊನೆಯ ಸಾಲನ್ನು ಕೇಳಿ ಸಾಮ್ರಾಟರಿಗೆ ದಿಗ್ಧರ್ಶನವಾದ ಹಾಗಾಗಿ ಜ್ಞಾನೋದಯವಾಗಿದೆ. ಮಠ, ಮಂದಿರ, ಬದುಕಿನ ಆರ್ಟು, ‘ಕಾಮ’ರ್ಸು ಕಲಿಸುವ ಶಾಲೆ ತೆರೆಯುವ ಉದ್ದೇಶವಿರುವವರು ಆವಶ್ಯಕವಾಗಿ ಸಂಪರ್ಕಿಸಬಹುದು.

ಭಜ್ಜಿ ಸಿಂಗಿಗೆ ಶಾಂತನಿಂದ ಕೋಚಿಂಗ್!

(ನಗೆ ನಗಾರಿ ಕ್ರೀಡಾ ಬ್ಯೂರೋ)

ದೇಶ ಬಿಟ್ಟು ನೂರಾರು ಮೈಲು ದೂರ ಹಾರಿ ಹೋಗಿ ಅಲ್ಲಿನ ತಂಡದ ಆಟಗಾರನೊಬ್ಬನಿಗೆ ತನ್ನ ಭಾಷೆಯಲ್ಲಿಯೇ ‘ತೆರೆ ಮಾ ಕೀ..’ ಎಂದು ಮೈದನದಲ್ಲೇ ಬೈದು ಅದನ್ನು ಆ ಆಸ್ಟ್ರೇಲಿಯನ್ನು ‘ಮಂಕೀ’ ಎಂದು ಅರ್ಥೈಸಿಕೊಂಡು ಅವಮಾನಿತನಾದವನಂತೆ ನಟಿಸಿ ಕೇಸು ಜರುಗಿಸಿ ಸುಸ್ತಾದದ್ದು ಹಳೆಯ ಸಂಗತಿಯಾದರೂ ಆ ಮಂಕೀ ವೀರನಿಗೆ ಟಾಂಗುಕೊಟ್ಟ ಹರ್‌ಭಜನ್ ಸಿಂಗ್ ದೇಶದ ಜನರ ಕಣ್ಣಿನಲ್ಲಿ ಹೀರೋ ಆಗಿದ್ದ. ಅವನ ವಿರುದ್ಧ ಪ್ರಪಂಚದ ಪತ್ರಿಕೆಗಳೆಲ್ಲಾ ಮುರಕೊಂಡು ಬಿದ್ದರೂ ನಮ್ಮ ಜನರು ಎರಡೂ ಕೈಚಾಚಿ ಆತನನ್ನು ಬರಸೆಳೆದು ಅಪ್ಪಿಕೊಂಡರು. ಏನೋ ಸ್ವಲ್ಪ ಒರಟ ಅನ್ನೋ ಕಾರಣಕ್ಕೆ ಮನೆ ಮಗನನ್ನು ದೂರಲು ಸಾಧ್ಯವಾಗುತ್ತದೆಯೇ ನೀವೇ ಹೇಳಿ. (ಅಲ್ಲದೆ ಒರಟ ಐ ಲವ್ ಯೂ ಎಂದು ಹಾಡುವವರ ನಾಡು ನಮ್ಮದು!)

ದುಡ್ಡಿನ ಜಾತ್ರೆಯ ನೆಪದಲ್ಲಿ ನಲವತ್ತು ಚಿಲ್ಲರೆ ದಿನಗಳಲ್ಲಿ ಆಡಿಸಿದ ಕ್ರಿಕೆಟ್ ಎಂಬ ಆಟದಲ್ಲಿ ನಮ್ಮ ಭಜ್ಜಿ ರಾಂಗಾದದ್ದನ್ನು ಯಾರೂ ಮರೆತಿಲ್ಲ. ತನ್ನ ತಂಡ ಹೀನಾಯವಾಗಿ ಸೋತಾಗ ಎದುರಾಳಿ ತಂಡದಲ್ಲಿರುವ ತನ್ನದೇ ಸಹೋದ್ಯೋಗಿಗೆ ಕಪಾಳಮೋಕ್ಷ ಮಾಡಿದ. ಅವನ ಸಿಟ್ಟು, ಒರಟುತನ ಗೊತ್ತಿದ್ದವರಿಗೇ ಗಾಬರಿಯಾಯಿತು. ಸೋಲು ಗೆಲುವನ್ನು ಕ್ರೀಡಾ ಮನೋಭಾವದಿಂದ ತೆಗೆದುಕೊಳ್ಳಬೇಕು ಎಂದು ಬುದ್ಧಿ ಮಾತು ಹೇಳಲು ಹೋದರೆ ನಮ್ಮ ಕೆನ್ನೆಗೊಂದು ಬಾರಿಸಿ ‘ಇದೂ ಕ್ರೀಡಾ ಮನೋಭಾವವೇ, ಬಾಕ್ಸಿಂಗಿನದು’ ಎನ್ನಬಹುದು ಎಂಬ ಭಯದಿಂದ ಬುದ್ಧಿಜೀವಿಗಳು ತೆಪ್ಪಗಾದರು. ಸಿಂಗಿಗೆ ಪನಿಶ್ ಮೆಂಟ್ ಕೊಟ್ಟು ಶಾಂತನಿಗೆ ಉಶ್..ಉಶ್ ಮಾಡಿ ಕೈತೊಳೆದುಕೊಂಡರು.

2008042952831802.jpg

ಕೆನ್ನೆಗೆ ಬಾರಿಸಿದ ತಪ್ಪಿಗಾಗಿ ಭಜ್ಜಿ ಈಗ ಶಾಂತನಿಗೆ ಕಂಡಕಂಡಲ್ಲಿ ಡಿನ್ನರ್ ಕೊಡಿಸುವ ಕರ್ಮ ಅಂಟಿಸಿಕೊಂಡಿದ್ದಾನೆ. ಈ ನಡುವೆ ಬೇರಾವ ಪತ್ರಿಕೆ, ನ್ಯೂಸ್ ಚಾನಲ್ಲು, ಟ್ಯಾಬಲಾಯ್ಡು, ಸುದ್ದಿ ಸಂಸ್ಥೆಗಳಿಗೆ, ಬೊಗಳೆ ಮಜಾದ ಬ್ಯೂರೋಗೂ ದಕ್ಕದ ಸುದ್ದಿ ನಗೆ ನಗಾರಿಯ ಒನ್ ರೂಂ ಕಚೇರಿಯನ್ನು ತಲುಪಿದೆ.

ಅದೇನೆಂದರೆ ಐಪಿಎಲ್ ಎಂಬ ಹಣದ ತೈಲಿಯ ಜಾತ್ರೆಯ ನೆಪದಲ್ಲಿ ನಡೆಯುವ ಕ್ರಿಕೆಟ್ ಆಟದಲ್ಲಿ ಭಾರೀ ಕಾಸನ್ನು ಹೂಡಿರುವ ಕುಳಕ್ಕೆ ಸಿಂಗನ ಬಗ್ಗೆ ಚಿಂತೆಯಾಗಿದೆಯಂತೆ. ಆತನ ಕೋಪಕ್ಕೆ, ಒರಟುತನಕ್ಕೆ ಒಳ್ಳೆ ಇಲಾಜು ಕೊಡಿಸಬೇಕೆಂದು ಆತ ಅವನನ್ನು ಕೋಚಿಂಗಿಗೆ ಕಳುಹಿಸುತ್ತಿದ್ದಾನಂತೆ. ಯಾರ ಬಳಿ ಅಂದಿರಾ? ನಂಬ್ತೀರೋ ಬಿಡ್ತೀರೋ ಕೇಳಿ, ಶಾಂತನ ಬಳಿ! ಹೌದು ಹೌಹಾರಬೇಡಿ. ಈ ಹಿಕಮತ್ತಿನ ಹಿಂದಿನ ಮರ್ಮ ತಿಳಿಯಲು ನಗೆ ಸಾಮ್ರಾಟರು ತಮ್ಮ ಚೇಲ ಕುಚೇಲನನ್ನು ಅಟ್ಟಿದ್ದು ವರದಿ ಈಗ ತಾನೆ ಟೆಲಿ ಪ್ರಿಂಟರಿನಿಂದ ತಲೆಗೆ ಹಾರಿದೆ.

ಅದು ಆಸ್ಟ್ರೇಲಿಯಾದ ಆಂಡ್ರೂ ಸಾಯಿ-ಮೊಂಡನೇ ಆಗಿರಲಿ, ಹೇ-ಡಾನ್ ಆಗಲಿ, ಸೋತ ಆಫ್ರಿಕಾದ ಆಂಡ್ರೂ ನೆಲ್ಲಿಯಾಗಲಿ ಎಲ್ಲರ ವಿರುದ್ಧವೂ ಮೂಗಿನ ಹೊಳ್ಳೆ ಅಗಲಿಸಿಕೊಂಡು ಡ್ರಾಗನ್ನಿನ ಹಾಗೆ ಘರ್ಜಿಸುವ ಶಾಂತನಿಗೆ ಏಕೆ ಯಾರೂ ಶಿಕ್ಷೆ ವಿಧಿಸಿಲ್ಲ? ಅದಕ್ಕೆ ಕಾರಣವಿದೆ. ಶಾಂತನು ತನ್ನ ಎದುರಾಳಿಯ ಮೇಲಿನ ಸಿಟ್ಟು, ಸೆಡುವುಗಳನ್ನೆಲ್ಲಾ ಹೊರಹಾಕಲು ಅತ್ಯಂತ ಚಾಣಾಕ್ಷವಾದ ವಿಧಾನವೊಂದನ್ನು ಕಂಡುಕೊಂಡಿದ್ದಾನಂತೆ. ಕ್ರಿಕೆಟ್ ಮೈದಾನದ ಪಿಚ್‌ನ್ನೇ ಎದುರಾಳಿಯ ಕೆನ್ನೆ ಎಂದುಕೊಂಡು ಅದಕ್ಕೇ ತನ್ನೆರಡು ಹಸ್ತಗಳಿಂದ ಮನಸ್ಸಿಗೆ ನೆಮ್ಮದಿ ಸಿಗುವಷ್ಟು ಹೊತ್ತು ‘ನಗಾರಿ’ ಬಾರಿಸುತ್ತಾನಂತೆ. ಇತ್ತ ಹಾವೂ ಸಾಯಬೇಕು ಅತ್ತ ಕೋಲೂ ಮುರಿಯಬಾರದು ಎಂಬ ಬುದ್ಧಿವಂತಿಕೆ. ಇದನ್ನು ಕಲಿಯುವುದಕ್ಕೆ ಭಜ್ಜಿಯನ್ನು ಶಾಂತನ ಬಳಿಗೆ ಕೋಚಿಂಗಿಗೆ ಕಳಿಸಲಾಗುತ್ತಿದೆಯಂತೆ. ಹೀಗಾಗಿ ಭಜ್ಜಿ ಶಾಂತನಿಗೆ ಬಿಟ್ಟಿ ಡಿನ್ನರುಗಳಿಗೆ ಕರೆಯುವ ಅನಿವಾರ್ಯತೆಯಿದೆಯಂತೆ.

ಈ ಮಧ್ಯೆ ನಮ್ಮ ವರದಿ ಮಧ್ಯದಲ್ಲೆಲ್ಲೋ ಲೀಕ್ ಆಗಿ ಕ್ರಿಕೆಟ್ ಮೈದಾನದ ಅಂಗಳದ ಕ್ಯೂರೇಟರ್ ನಮ್ಮನ್ನು ಸಂಪರ್ಕಿಸಿ ಈ ಸುದ್ದಿಯಿಂದ ನಮಗೆ ತೀವ್ರವಾದ ಹಾನಿಯಾಗುತ್ತದೆ. ಎಲ್ಲಾ ಕ್ರಿಕೆಟ್ ಮಂದಿಯೂ ಶಾಂತನ ಟೆಕ್ನಿಕ್ ಬಳಸಲು ಶುರು ಮಾಡಿಕೊಂಡರೆ ನಮ್ಮ ಪಿಚ್ಚುಗಳ ಕೆನ್ನೆ ಜಖಂ ಗೊಳ್ಳುತ್ತದೆ ಎಂದು ಅವರು ತಮ್ಮ ಆತಂಕ ತೋಡಿಕೊಂಡಿದ್ದಾರೆ.

ಚರ್ಚೆ: ಕಲ್ಲು ನಗುವ ಸಮಯ

ನಮ್ಮ ವೇಗದ ನಗರದ ಬದುಕಿನಲ್ಲಿ ಎಲ್ಲವೂ ಕಮಾಡಿಟಿಗಳಾದ ಹಾಗೆಯೇ ನಗುವೂ ಒಂದು ಪ್ರಾಡಕ್ಟ್ ಆಗುತ್ತಿದೆಯಾ ಎಂಬ ಸಂಶಯ ಮೂಡುತ್ತದೆ. ಜನರಿಗೆ ನಗುವುದಕ್ಕೆ ಕಾರಣಗಳು ಬೇಕು. ನಗು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಿದರೆ ಜೋಕುಗಳನ್ನು ಹುಡುಕಲು ಶುರು ಮಾಡುತ್ತಾರೆ. ಜೋಕ್ ಪುಸ್ತಕಗಳನ್ನು ಕೊಳ್ಳುತ್ತಾರೆ. ನೂರಾರು ರುಪಾಯಿ ಶುಲ್ಕ ಕಟ್ಟಿ ಲಾಫಿಂಗ್ ಕ್ಲಬ್ಬುಗಳಿಗೆ ಸೇರಿಕೊಂಡು ನಗುತ್ತಾರೆ. ಕೆಲವರು ತುಂಬಾ ಪರಿಶ್ರಮ ವಹಿಸಿ ನಗುವುದರಲ್ಲಿ ಗಂಭೀರವಾದ ಸಾಧನೆ ಮಾಡುತ್ತಾರೆ. ನಗುವುದು ಎಂದರೇನೇ ಎಲ್ಲಾ ಪ್ರಯತ್ನಪೂರ್ವಕ ಕ್ರಿಯೆಗಳನ್ನು ಮರೆಯುವುದು, ಜನರು ನಗುವುದನ್ನೂ ಪ್ರಯತ್ನ ಪೂರ್ವಕವಾದ ಕ್ರಿಯೆಯಾಗಿಸಿಕೊಳ್ಳುತ್ತಿರುವುದನ್ನು ಕಂಡರೆ ಅಪ್ರಯತ್ನ ಪೂರ್ವಕವಾಗಿ ನಗು ಬರುತ್ತದೆ!

ಕಾಮಿಡಿ ಸೀರಿಯಲ್ಲುಗಳು, ಜೋಕುಗಳನ್ನು ಹೇಳಿ ಬಹುಮಾನ ಪಡೆಯಲು ಅದನ್ನೊಂದು ಸ್ಪರ್ಧೆಯಾಗಿಸಿದ ಕಾರ್ಯಕ್ರಮಗಳು ಬಹು ಮಜವಾಗಿರುತ್ತವೆ. ಒಂದೊಂದು ಹಾಸ್ಯ ಪ್ರಸಂಗ ಬಂದಾಗಲೂ, ಸಂಭಾಷಣೆಯಲ್ಲಿ ಒಂದೊಂದು ಪಂಚಿಂಗ್ ಲೈನ್ ಬಂದಾಗಲೂ ಹಿನ್ನೆಲೆಯಲ್ಲಿ ‘ಹ್ಹ..ಹ್ಹ?ಹ್ಹ’ ಎಂಬ ರೆಕಾರ್ಡೆಡ್ ನಗುವನ್ನು ಪ್ಲೇ ಮಾಡುತ್ತಾರೆ. ನಗುವುದಕ್ಕೆಂದೇ ಟಿವಿ ಸೆಟ್‌ಗಳ ಮುಂದೆ ಕುಳಿತ ಜನ ಆ ಎಲ್ಲಿ ನಗಬೇಕು ಎಂದು ಟಿವಿಯವರು ಸೂಚಿಸುವಂತೆ! ನಿಜಕ್ಕೂ ನಾವು ಅಷ್ಟು ಯಾಂತ್ರಿಕವಾಗಿದ್ದೇವೆ. ಮನಃಪೂರ್ವಕವಾಗಿ ನಗುವುದಕ್ಕೂ ಮುಂಚೆ ಇಲ್ಲಿ ನಗಬಹುದಾ, ನಕ್ಕರೆ ಯಾರೇನು ತಿಳಿಯುತ್ತಾರೆ ಎಂದು ಆಲೋಚಿಸಿ ಮುಂದುವರೆಯುವಷ್ಟು ಯಾಂತ್ರಿಕರಾಗಿದ್ದೇವೆ.

ಹೀಗಾಗಿ ನಮ್ಮ ನಗುವೂ, ನಮ್ಮನ್ನು ನಗಿಸಲು ಪ್ರಯತ್ನಿಸುವವರೂ ಇಷ್ಟೇ ಯಾಂತ್ರಿಕವಾಗುತ್ತಿದ್ದಾರೆ.

ಕಾರಣವಿರಲಿ, ಕಾರಣವಿಲ್ಲದೆ ಇರಲಿ,
ನಗಿ, ಆಗ ನಿಮ್ಮನ್ನು ನೋಡಿ
ಇತರರೂ ನಗುತ್ತಾರೆ.
– ಟಿ.ಪಿ.ಕೈಲಾಸಂ

ಕೊಂಚ ತಡವಾದರೂ ಜುಲೈ ತಿಂಗಳ ಪತ್ರಿಕೆಯನ್ನು ರೆಡಿ ಮಾಡಿ ಆಗಿದೆ. ಇದು ನಮ್ಮ ಪ್ರತಿ ತಿಂಗಳ ದಿಗ್ವಿಜಯ! ಈ ತಿಂಗಳ ಸಂಚಿಕೆಯ ಪಿಡಿಎಫ್ ಪ್ರತಿಗಾಗಿ ಇಲ್ಲಿ ಚಿಟುಕಿಸಿ.

Martin-3lg.jpg

ನಮ್ಮ ಯುವ ಪೀಳಿಗೆಯನ್ನು ನೆನೆಸಿಕೊಂಡರೆ ಅಪ್ರಯತ್ನಪೂರ್ವಕವಾಗಿ ನನ್ನೆದುರು ಬರುವುದು ತಳುಕು ಬಳುಕಿನಲ್ಲಿ ಮುಳುಗಿದ ಯುವಕರ ಚಿತ್ರಣ. ಭಾರತೀಯ ಸಂಸ್ಕೃತಿ, ಪರಂಪರೆಯ ಬಗ್ಗೆ ಅಭಿಮಾನ, ನಮ್ಮದು ಎನ್ನುವ ಭಾವ ಬೆಳೆಯುವ ಬದಲು ಅದರ ಬಗ್ಗೆ ಅಸಡ್ಡೆ ಹಾಗೂ ಅದನ್ನು ಲೇವಡಿ ಮಾಡಿ ಸುಖಿಸುವ ಮನೋಭಾವ ಬೆಳೆಯುತ್ತಿದೆ. ವಿದೇಶಿ ವಿಕೃತಿಯನ್ನು ಆಧುನಿಕತೆಯ ಹೆಸರಿನಲ್ಲಿ ಅಪ್ಪಿಕೊಳ್ಳುತ್ತಿರುವ ಇವರಿಗೆ ತಮ್ಮ ಬೇರುಗಳು ಒಳಗೇ ಕೊಳೆಯುತ್ತಿರುವುದು ಕಣ್ಣಿಗೆ ಕಾಣುತ್ತಿಲ್ಲವೆನಿಸುತ್ತದೆ. ಮುಂದಿನ ಜನಾಂಗಕ್ಕೆ ನಮ್ಮ ದೇಶವನ್ನು ದೂರದರ್ಶನದಲ್ಲಿ ತೋರಿಸಿ ಇಂಥದ್ದೊಂದು ದೇಶವಿತ್ತು, ಇಂಥದ್ದೊಂದು ಸಂಸ್ಕೃತಿ ಇತ್ತು ಎಂದು ವಿವರಿಸಬೇಕಾದ ಪ್ರಸಂಗ ಬಂದರೆ ಅಚ್ಚರಿಯಿಲ್ಲ.

ಇವತ್ತಿನ ಕಾಲೇಜು ಕ್ಯಾಂಪಸ್ಸಿನ ಗೇಟಿನಲ್ಲಿ ನಿಂತುಕೊಂಡು ಕೇಳಿ, ‘ನಿಮ್ಮ ಗುರಿ ಏನು ಅಂತ’. ನಿಮಗೆ ನೂರರಲ್ಲಿ ತೊಂಭತ್ತು ಮಂದಿ ‘ Planning to get settled in abroad’ ಎಂದು ನುಲಿಯುವವರು ಸಿಕ್ಕುತ್ತಾರೆ. ವಿದೇಶಕ್ಕೆ ಹಾರುವುದೇ ಜೀವನದ ಗುರಿ ಎಂದು ಕೊಂಡಿರುವ ಇವರನ್ನು ದೇಶದ ಆಶಾಕಿರಣ, ಭವಿಷ್ಯದ ಆಸರೆ ಎಂದೆಲ್ಲಾ ವೈಭವೀಕರಿಸುವುದು ವ್ಯರ್ಥವಲ್ಲವೇ? ಬೇರೆಲ್ಲಾ ದೇಶಗಳಿದ್ದ ಹಾಗೆ ನಮ್ಮದೂ ಒಂದು ದೇಶವಿದೆ. ಅದಕ್ಕೆ ನಮ್ಮ ಪ್ರತಿಭೆ, ನಮ್ಮ ಪ್ರೀತಿ, ನಮ್ಮ ದುಡಿಮೆ ಆವಶ್ಯಕತೆ ಎಂದು ನಮ್ಮ ಯುವಕರಿಗೆ ಅನ್ನಿಸದಿರುವಾಗ ದೇಶಪ್ರೇಮ, ಸಾಮಾಜಿಕ ಜವಾಬ್ದಾರಿಯ ಬಗ್ಗೆ ಮಾತನಾಡುವುದು ದೊಡ್ಡ ಮಾತಾಗುತ್ತದೆ!

ಓದಿಗಾಗಿ ಮನೆ ತೊರೆದು ದೂರದ ಊರುಗಳಲ್ಲಿ ಉಳಿದುಕೊಳ್ಳುವ ಪದ್ಧತಿಗೆ ಯುವಕರ ಒಲವು ಹೆಚ್ಚಾಗಿದೆ ಅನ್ನಿಸುತ್ತಿದೆ. ಬೆಳೆಯುವುದಕ್ಕೆ ಮನೆ ಹೊಸ್ತಿಲು ದಾಟಿ ಹೊರಬರಬೇಕು ಎಂಬುದು ಒಪ್ಪುವ ವಿಚಾರವೇ ಆದರೂ ಕುಟುಂಬ, ತಂದೆ, ತಾಯಿ, ಸಹೋದರರು, ನೆರೆಹೊರೆಯವರು, ಸಂಬಂಧಿಕರು ಮುಂತಾದ ಮಾನವೀಯ ಸಂಬಂಧಗಳ ಎಳೆಯ ಗಂಧವೇ ಇಲ್ಲದೆ ಅವರು ಬೆಳೆಯುತ್ತಿರುವುದು ಆರೋಗ್ಯಕರವಲ್ಲ. ಮನುಷ್ಯ ಹೊರಗೆ ಎಷ್ಟೇ ಹಾರಾಡಿ, ಹೋರಾಡಿದರೂ ಆತ ಮನಃಶಾಂತಿಗಾಗಿ, ಆಸರೆಗಾಗಿ, ಸವಿಯಾದ ನಿದ್ದೆಗಾಗಿ ಮರಳುವುದು ಮನೆಗೇ. ಮನೆಯನ್ನೇ ಗೆಸ್ಟ್ ಹೌಸ್ ಥರ ಭಾವಿಸುತ್ತಿರುವ ಯುವಕರನ್ನು ಬುದ್ಧಿವಂತ ಜನರೇಷನ್ ಎಂದು ಏಕಾದರೂ ಕರೆಯಬೇಕೋ!

ಇಂಗ್ಲೀಷ್ ವ್ಯಾಮೋಹದ ಬಗ್ಗೆ ಮಾತನಾಡಿದಷ್ಟೂ ಬೇಸರವಾಗುತ್ತದೆ. ಇಂಗ್ಲೀಷ್ ಮನೆಯ ಹೊರಗಿನ ಭಾಷೆಯಾಗಲಿ ಚಿಂತೆಯಿಲ್ಲ. ವ್ಯವಹಾರಕ್ಕೆ ಇಂಗ್ಲೀಷ್ ಸುಲಲಿತವಾಗಲಿ ತೊಂದರೆಯಿಲ್ಲ. ಆದರೆ ಇಂಗ್ಲೀಷನ್ನು ಪ್ರತಿಷ್ಟೆಯಾಗಿ ಕಾಣುವ, ಇಂಗ್ಲೀಷನ್ನು ಉದ್ಧರಿಸಲು ಬಂದಿರುವ ದೇವದೂತನ ಹಾಗೆ ಕಾಣುವ ಮನಸ್ಥಿತಿಗೆ ಅಸಹ್ಯವಾಗುತ್ತದೆ. ನಮ್ಮ ಮನೆಗಳನ್ನು ಮಾರಿಕೊಂಡು ಅನ್ಯರ ಹಂಗಿನಲ್ಲಿ ಬದುಕಿದಂತೇ ಇದು. ಕನ್ನಡ ಮಾತಾಡಲಿಕ್ಕೆ ಹೆಮ್ಮೆಯಾಗಬೇಕು. ಅದು ನಮ್ಮ ವ್ಯಕ್ತಿತ್ವದ ಭಾಗವಾಗಬೇಕು.
ಆದರೂ ಯುವಕರ ಬಗ್ಗೆ ನಿರಾಶೆ ತಾಳುವ ಅಗತ್ಯವಿಲ್ಲ. ಅವರ ಜೀವನದ ಹರವಿನ್ನೂ ವಿಶಾಲವಾಗಿದೆ. ಯಾವ ದಿನದಲ್ಲಾದರೂ ಅವರಿಗೆ ಬದಲಾಗ ಬೇಕು ಎನ್ನುವ ಆಸೆ ಕಾಣುತ್ತದೆ. ಭರವಸೆಯ ಕಿರಣ ಮೊಳೆಯುತ್ತದೆ.

ಬನ್ನಿ ಯುವಕರೇ ಬನ್ನಿ
ಮೋಹವೆಂಬ ನಿದ್ದೆಯಿಂದೆದ್ದು ಬನ್ನಿ
ರಕ್ತದ ಕಣ ಕಣದಲ್ಲಿ ದೇಶಭಕ್ತಿಯ ಹೊತ್ತು ತನ್ನಿ
ನಾವೆಲ್ಲರೂ ಒಂದೇ ಎಂದು ತಿಳಿಸ ಬನ್ನಿ…

– ಸುಪ್ರಿಯಾ.ಎಸ್, ಬೆಂಗಳೂರು

cityzx.jpg

ಪ್ರೀತಿಯ ಮಚ್ಚಿಗಳೇ,
ಎಲ್ರಿಗೂ ಈ ಮಚೆಂಪು ಮಾಡೋ ನಮಸ್ಕಾರ.

‘ಈ ನಮ್ ಜನ ಮಾತಾಡೋದೇ ಒಂದು ಮಾಡೋದೇ ಇನ್ನೊಂದು’ ಅಂತ ಗೊಣಗುತ್ತಿದ್ದೆ. As usual ನನ್ನ ಗೊಣಗಾಟವನ್ನ ಕೆಳಲಿಕ್ಕೆ ನನ್ನ ಪಕ್ಕ ಮಲ್ಲಿ ಇದ್ದ. ‘ಏನ್ ಮಚ್ಚಿ, ಮತ್ತೆ ಯಾವ್ದೋ ದೊಡ್ಡ disappointment ಆಗಿರೋ ಹಾಗಿದೆ? ಏನ್ಸಮಾಚಾರ?’ ಅಂದ. ನಾನು ಅವತ್ತು ಬೆಳ್ಗೆ college campusನಲ್ಲಿ ನೋಡಿದ ಘಟನ್ನೇನಾ with details ಅವನಿಗೆ ವಿವರಿಸಿದೆ.

ನಮ್ ಕಾಲೇಜಲ್ಲಿ ಎಲ್ಲಾ ಹುಡುಗ್ರಿಗೂ ಪರಮೇಶಿ ಮೇಷ್ಟ್ರು ಅಂದ್ರೆ ಭಾರಿ ಭಯ, ಭಕ್ತಿ. ಅವರ ಕ್ಲಾಸು ಅಂದರೆ ಯಾರೂ miss ಮಾಡುವುದಿಲ್ಲ. ಹಾಗಂತ ಅವರು ಅಷ್ಟು ಚೆನ್ನಾಗಿ ಪಾಠ ಮಾಡ್ತಾರೆ ಅಂತ ತಿಳ್ಕೋಬೇಡಿ. ನಮ್ಮ university ನವರೇ ಹುಡುಗ್ರಿಗೆ 75 percent ಅಟೆಂಡೆನ್ಸ್ ಸಾಕು. ಇನ್ನುಳಿದ ೨೫% ಕ್ಲಾಸು ಬಂಕ್ ಮಾಡಿ ಊರು ಸುತ್ತಿ ಉದ್ಧಾರ ಮಾಡಲಿ ಎಂದು ಹೇಳಿದ್ದರೂ ಈ ನಮ್ಮ ಪರಮೇಶಿ ಮೇಷ್ಟ್ರ ಕ್ಲಾಸಿಗೆ ಕಂಪಲ್ಸರಿ ತೊಂಭತ್ತೈದು ಪರ್ಸೆಂಟ್ ಅಟೆಂಡೆನ್ಸು ಇರಲೇ ಬೇಕು. ಇಲ್ಲಾ ಅಂದ್ರೆ ಪರೀಕ್ಷೆಗೆ ಕೂರಲು allow ಮಾಡುವುದಿಲ್ಲ. ಅದ್ಕೇ ಕಾಲೇಜ್‌ನ ಹುಡುಗ್ರೆಲ್ಲಾ ಮನೆಯಲ್ಲಿ ದೇವರ ಫೋಟೋ ಮೇಲೆ ಹೂ ತಪ್ಪಿಸಿದರೂ ಪರಮೇಶಿ ಮೇಷ್ಟ್ರ ಕ್ಲಾಸು miss ಮಾಡುವುದಿಲ್ಲ.

ಇವರ ಕ್ಲಾಸು ಹೇಗಿರುತ್ತೆ ಅನ್ನೋದನ್ನ ತಿಳಿಯೋದೇ ಮಜಾ. ಇವ್ರು ಯಾವ ಸಬ್ಜೆಕ್ಟ್ ತಗೋಳ್ತಾರೆ ಅನ್ನೋದೆ ಕ್ಲಾಸಿನ majority ಹುಡುಗ್ರಿಗೆ ಗೊತ್ತಿಲ್ಲ. ಕ್ಲಾಸಿಗೆ ಬರ್ತಿದ್ದ ಹಾಗೆ ‘ಈಗಿನ ಕಾಲ ಅದೇಷ್ಟು ಹಾಳಾಗಿದೆ. ನಮ್ಮ ಕಾಲದಲ್ಲಿ ಹಿಂಗಿರಲಿಲ್ಲ. ಏನು ಹುಡುಗ್ರು ನೀವು… ‘ ಎಂದು ಭಾಷಣಕ್ಕೆ ಶುರುಹಚ್ಚಿಕೊಂಡು, ‘ಮನುಷ್ಯ ವಿಶ್ವ ಮಾನವ ಆಗಬೇಕು, ಜಾತಿ-ಗೀತಿ ನಾಶ ಆಗ್ಬೇಕು, ಮೇಲು-ಕೀಳು ಅನ್ನೋದು ಅಳಿಸಿ ಹೋಗ್ಬೇಕು. We should erase the word discrimination from our society.’ ಎಂದು ಅರ್ಧಗಂಟೆ ಕೊರೆಯೋದು ಅವರ ಅಭ್ಯಾಸ. ಅದೆಂಥಾ ಎದೆವಂತ student ಆದರೂ ಇವರ ಕೊರೆತದ ರಭಸ ತಡೆಯೋಕೆ ಸಾಧ್ಯವಾಗ್ತಿರಲಿಲ್ಲ. ಇವರು ತಮ್ಮದೇ ಭಾಷಣಕ್ಕೆ ತಾವೇ ವಂದನಾರ್ಪಣೆ ಹೇಳಿ ಮುಗಿಸಿ ಪಾಠ ಶುರು ಮಾಡುವಷ್ಟರಲ್ಲಿ ಹುಡುಗರೆಲ್ಲಾ ನಿದ್ರಾ ಲೋಕದಲ್ಲಿ beet ಹಾಕುತ್ತಿರುತ್ತಾರೆ. ಹೀಗಾಗಿ ಇವರು ಯಾವ subject ಪಾಠ ಮಾಡೋದು ಅನ್ನೋದು ಯಾರಿಗೂ ತಿಳಿಯುವುದಿಲ್ಲ. ಅದನ್ನೊಂದು ಭಾರೀ ರಹಸ್ಯ ಎಂದೇ ಹುಡುಗ್ರು ಭಾವಿಸಿಕೊಂಡಿದ್ದಾರೆ.

ಪರಮೇಶಿ ಮೇಷ್ಟ್ರು ಅಂದ್ರೆ ವಿಶ್ವ ಮಾನವ, ಭಾರೀ ಆದರ್ಶವಂತರು ಎಂದು ಇಡೀ ಕಾಲೇಜು ತಿಳಿದುಕೊಂಡಿತ್ತು. ನಾನೂ ‘ಈ ಯಪ್ಪ ದೊಡ್ಡ ಕೊರೆತದ ಆಸಾಮಿಯಾದ್ರೂ ಬೋ ಒಳ್ಳೆ ಮನಿಶ್ಯಾನೆ’ ಅಂತಂದ್ಕಂಡಿದ್ದೆ. ಆದರೆ ಅವತ್ತು ಬೆಳ್ಗೆ ಆಯ್ತಲ್ಲ ಅವರ ವಿಶ್ವರೂಪ ದರ್ಶನ!

ಮೇಷ್ಟ್ರು ಹೆಸರಿಗೆ ಎಷ್ಟೇ ಆದರ್ಶ ಅಂತ ಭೋಂಗು ಬಿಟ್ಟರೂ posh ಆಗಿ ಇರುತ್ತಿದ್ದರು. Honda City ಕಾರಿನಲ್ಲಿ ಜುಮ್‌ ಅಂತ daily ಕಾಲೇಜಿಗೆ ಬರ್ತಿದ್ರು. ನಾವೊಂದಿಷ್ಟು ಜನ ಹುಡುಗ್ರಿಗೆ ಮಾಡೋಕೆ ಕೆಲಸ ಇಲ್ದಾಗೆಲ್ಲಾ ಪರಮೇಶಿ ಮೇಷ್ಟ್ರು ಕಾರಲ್ಲಿ ಚಾಂಗ್ ಅಂತ ಬಂದು ಇಳಿಯೋದನ್ನೇ slow motionನಲ್ಲಿ ನೋಡಿದಂಗೆ ನೋಡ್ತಾ ಕೂತಿರ್ತಿದ್ವಿ. ಅವತ್ತೂ ಹಂಗೇ ಆಯ್ತು. ನಂದೂ ರೆಕಾರ್ಡ್ ಬರ್ದು ಮುಗ್ದಿದ್ರಿಂದ ನಾನೂ ಕಾಲೇಜ್ ಕಟ್ಟೆ ಮೇಲೆ ನಜ್ರ್ ಹಾಕುತ್ತಾ ಕೂತಿದ್ದೆ.

ಅವತ್ತು ಬೆಳಿಗ್ಗೆ ಮೇಷ್ಟ್ರು ಹೊಂಡಾ ಸಿಟಿ ಕಾರನ್ನ park ಮಾಡಿ ಬರುತ್ತಿದ್ದರು. ಅವರಿನ್ನೂ ಕಾಲೇಜ್ ಕಾಂಪೌಡ್ ಒಳಗೆ ಬಂದಿರಲಿಲ್ಲ ಅಷ್ಟರಲ್ಲಿ ಭಿಕ್ಷುಕಿಯೊಬ್ಳು ತನ್ನ ಮಗನನ್ನು ಎಳೆದು ಕೊಂಡು ಬಂದು ಅವರ ಎದುರು ನಿಂತ್ಲು. ಆಕೆಯ ಮಗನಿಗೆ ಕಾಲು ಕುಂಟುತ್ತಿತ್ತು. ಅವರನ್ನು ನೋಡಿದ್ರೆ ಪ್ರೊಫೆಶನ್ ಭಿಕ್ಷುಕರು ಅನ್ನೋ ಹಂಗಿರ್ಲಿಲ್ಲ. ಅವ್ರಿಬ್ರೂ ಮೇಷ್ಟ್ರ ಹತ್ರ ಬಂದು ದುಡ್ಡಿಗಾಗಿ ಕೈ ಒಡ್ತಾರೆ ಅಂದುಕೊಂಡಿದ್ದೆ. ಆದ್ರೆ ಅವರಿ ಭಿಕ್ಷೆ ಬೇಡಲಿಲ್ಲ. ಒಂದೇ ಸಲಕ್ಕೆ ಮೇಷ್ಟ್ರನ್ನ ಬೈಯ್ಯೋಕೆ ಶುರು ಮಾಡಿದರು. ಆ ಹೆಂಗಸು ತನ್ನ ಮಗನ ಕಾಲನ್ನು ತೋರಿಸುತ್ತಾ ಮೇಷ್ಟ್ರಿಗೆ ಹಿಡಿ ಶಾಪ ಹಾಕ್ತಿದ್ರು. ಮೇಷ್ಟ್ರು ಅವ್ರನ್ನ ನೋಡೇ ಇಲ್ಲ ಅನ್ನೋ ಹಂಗೆ ಕಾಲೇಜು ಕಡೆಗೆ ಹೆಜ್ಜೆ ಹಾಕಿದರು. ಆ ಹೆಂಗಸು ಅವರನ್ನು ಬಿಡೋದಿಲ್ಲ ಅನ್ನೋ ಥರ ಅವ್ರನ್ನೇ ಹಿಂಬಾಲಿಸಿದಳು. ಅವಳ ಮಗ ಹಿಂದೆ ಕಾಲು ಎಳೆದುಕೊಂಡು ಬರುತ್ತಿದ್ದ. ಮೇಷ್ಟ್ರು ಕಾಲೇಜು ಕಾಂಪೌಂಡಿನೊಳಕ್ಕೆ ಬಂದು ಸೆಕ್ಯುರಿಟಿ ಕೈಗೆ ಹತ್ತು ರುಪಾಯಿ ಕೊಟ್ಟು ಏನೀ ಹೇಳಿದ್ರು. ಆ ಸೆಕ್ಯುರಿಟಿಯವ ಈ ತಾಯಿ ಮಗನಿಗೆ ಬಡಿದು ಕಾಲೇಜು ಕ್ಯಾಂಪಸ್ಸಿನಿಂದ ದೂರ ಅಟ್ಟಿದ. ಆ ಹೆಂಗಸು ನೆಟಿಕೆ ಮುರಿಯುತ್ತಾ, ನಮ್ಮ ಸೆಕ್ಯುರಿಟಿಯವನ ಎದುರು ಮಣ್ಣು ಎರಚಿ ಶಾಪ ಹಾಕುತ್ತಾ ಅಳುತ್ತಾ ಹೋದಳು.

ನಂಗೆ ಇಲ್ಲಿ ಏನೋ ಕರಾಮತ್ತು ನಡ್ದಿದೆ ಅನ್ನಿಸ್ತು. ಮೊದ್ಲೇ Sherlok Holmes ತುಂಡು ನಾನು, ಏನು ಸಂಗತಿ ಅನ್ನೋದನ್ನ ತಿಳ್ಕೋಬೇಕು ಅಂತ decide ಮಾಡಿ ಅವ್ರಿಬ್ರನ್ನೂ ಹಿಂಬಾಲಿಸ್ದೆ. ಅವ್ರಿಬ್ರೂ ಕಾಲೇಜು ಪಕ್ಕದ ರಸ್ತೆಯ ಫೂಟ್ ಪಾತ್‌ನ ಮೂಲೆಯಲ್ಲಿ ಕುಳಿತಿದ್ರು. ಅವ್ರನ್ನ ಮಾತಾಡ್ಸಿದೆ.

ಆ ಹುಡ್ಗನ ಹೆಸ್ರು ಮಾಲಿಂಗ. ಅವ್ನು ಗವರ್ನಮೆಂಟ್ ಹೈಸ್ಕೂಲಿನಲ್ಲಿ ಓದ್ತಿದ್ದ. State level ರನ್ನಿಂಗ್ ರೇಸ್ ಚಾಂಪಿಯನ್ ಆಗಿದ್ದ. ಮುಂದಿನ ತಿಂಗಳು ನ್ಯಾಷನಲ್ ಲೆವೆಲ್‌ ಚಾಪಿಯನ್ ಶಿಪ್‌ಗೆ ಆಡೋಕೆ ಹೋಗ್ಬೇಕಿತ್ತು. ಅವತ್ತು ಸ್ಕೂಲು ಮುಗಿಸ್ಕಂಡು ಮನೆಗೆ ಬರ್ತಿದ್ದ. ರಸ್ತೆ ದಾಟೋಕೆ ಗ್ರೀನ್ ಸಿಗ್ನಲ್ ಇತ್ತು. ಇವನು ಆರಾಮಾಗಿ ಬರ್ತಿದ್ದ ಅಷ್ಟರಲ್ಲಿ ಎಲ್ಲಿಂದ್ಲೋ ಬಂದ ಪರಮೇಶಿ ಮೇಷ್ಟ್ರ ಹೊಂಡಾ ಸಿಟಿ ಕಾರು ಸಿಗ್ನಲ್ ಜಂಪ್ ಮಾಡಿ ಇವನಿಗೆ ಅಪ್ಪಳಿಸಿತು. ಈ Accidentನಲ್ಲಿ ಹುಡುಗನ ಕಾಲು ಮುರಿಯಿತು. ಏನಾಗಿದೆ ಅಂತ ನೋಡೋ ಮಾನವೀಯತೆನೂ ಇಲ್ದೆ ಪರಮೇಶಿ ಮೇಷ್ಟ್ರು ಅಲ್ಲಿಂದ ಓಡಿದ್ದರು. ಪೊಲೀಸರು ಹುಡುಗನೇ ಓಡಿ ಬಂದು ಕಾರಿಗೆ ಬಿದ್ದ ಎಂದರು. ಅವತ್ತಿನಿಂದ ಈ ತಾಯಿ ಮಗ ಪರಮೇಶಿ ಮೇಷ್ಟ್ರ ಬೆನ್ನು ಬಿಡದೆ ಹಿಂಬಾಲಿಸಿ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದರು.

ನಂಗೆ ಅವ್ರ ಕಥೆ ಕೇಳಿ ತುಂಬಾ ದುಃಖ ಆಯ್ತು. ಪಾರ್ಕಿಂಗ್‌ನಲ್ಲಿ ನಿಂತಿದ್ದ ಪರಮೇಶಿ ಮೇಷ್ಟ್ರ ಕಾರಿಗೆ ದೊಡ್ಡದೊಂದು ಕಲ್ಲು ತೂರಿ ನಾನು ಕಾಲ್ಕಿತ್ತೆ! ಹೇಳಿ friends ನಾನು ಮಾಡಿದ್ದು ತಪ್ಪಾ?

ನಿಮ್ಮ ಪ್ರೀತಿಯ,
ಮಚೆಂಪು


Blog Stats

  • 71,866 hits
ಜುಲೈ 2008
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 123456
78910111213
14151617181920
21222324252627
28293031  

Top Clicks

  • ಯಾವುದೂ ಇಲ್ಲ