ಕಲರವ

Archive for ಮೇ 2009

ಪ್ರತಿ ತಿಂಗಳು ‘ಸಡಗರ’ ಎಂಬ ಹೆಸರಿನಲ್ಲಿ ಮುದ್ದಾಗಿ ಮುದ್ರಣ ಕಂಡು ಹೊರ ಬರುತ್ತಿದ್ದ ನಮ್ಮ ನಾನಾ ಸಾಹಸ, ತುಂಟತನ, ಕ್ರಿಯೇಟಿವಿಟಿ, ತೆವಲುಗಳು ಇನ್ನು ಮುಂದೆ ಎಲೆಕ್ಟ್ರಾನ್ ಹರಿವಿನಲ್ಲಿ ಲೀನವಾಗಿ ಈ ಬ್ಲಾಗಿನಲ್ಲಿ ಬೆಳಕು ಕಾಣಲಿವೆ. ಜೂನ್ ಒಂದರಿಂದ ಪೂರ್ಣ ಪ್ರಮಾಣದಲ್ಲಿ ‘ಕಲರವ’ ಬ್ಲಾಗು ಅರಳಿಕೊಳ್ಳಲಿದೆ. ಎಂದೂ ತೀರದ ನಮ್ಮ ಅಕ್ಷರದ ಮೋಹಕ್ಕೆ ಈ ಬ್ಲಾಗು ಒಂದು ಸಣ್ಣ ಸಮಾಧಾನವನ್ನು ನೀಡುತ್ತದೆ ಎನ್ನುವುದು ನಮ್ಮ ನಂಬಿಕೆ.

ಈ ಯುವ ಮನಸುಗಳ ‘ಕಲರವ’ಕ್ಕೆ ಕಿವಿಗೊಡದಷ್ಟು ನಿಷ್ಕರುಣಿಗಳು ನೀವಲ್ಲ ಎಂಬುದೂ ನಮಗೆ ತಿಳಿದಿದೆ.

– ಸಂಪಾದಕ

– ಇಂಚರ, ಬೆಂಗಳೂರು

ನನ್ನ ಮನಸ್ಸಿಗೆ ತಟ್ಟಿದ ಸಿನೆಮಾದ ಬಗ್ಗೆ ಯೋಚನೆ ಮಾಡುತ್ತಿದ್ದಾಗ, ನೆನಪಾಗಿದ್ದು ‘ರಾಮಚಂದ್ ಪಾಕಿಸ್ತಾನಿ’.  ಮೆಹ್ರೀನ್ ಜಬ್ಬಾರ್ ಎಂಬ ಪಾಕಿಸ್ತಾನಿ ನಿರ್ದೇಶಕಿ ನಿರ್ದೇಶಿಸಿರುವ ಚಿತ್ರ.     ಪಾಕಿಸ್ತಾನದ ಗಡಿ ಪ್ರದೇಶದಲ್ಲಿ ವಾಸವಾಗಿರುವ ಒಂದು ಅಲೆಮಾರಿ ಹಿಂದೂ ಕುಟುಂಬದ ಕಥೆ ಇದು. ಗಡಿಭಾಗದಲ್ಲಿ Ramchand-Pakistani-1 ಇವರ ನೋವುನಲಿವು, ಸ್ಥಿತಿಗತಿಗಳನ್ನು ಬಹಳ ಮನೋಜ್ಣವಾಗಿ, ಹೃದಯಸ್ಪರ್ಶಿಯಾಗುವಂತೆ ಚಿತ್ರಿಸಿದ್ದಾರೆ. ಅಮ್ಮ ನ   ಮೇಲೆ ಕ್ಷುಲ್ಲಕ ಕಾರಣಕ್ಕೆ ಕೋಪಗೊಂಡ ೭ ವರ್ಷದ ಬಾಲಕನು(ರಾಮಚಂದ್) ಮನೆಯಿಂದ ಹೊರಗೆ ಹೋಗುತ್ತಾನೆ. ಕೈಯಲ್ಲಿ ಕ್ಯಾಟರ್ ಪಿಲ್ಲರ್ ಹಿಡಿದ ಈತನಿಗೆ ಗಡಿ ದಾಟಬಾರದು ಎಂಬ ಅರಿವಿರುವುದಿಲ್ಲ. ಅಲ್ಲೇ ಗದ್ಧೆಯಲ್ಲಿ ದುಡಿಯುತ್ತಿದ್ದ ಆತನ ತಂದೆಗೆ ಮಗ ಗಡಿ ದಾಟುತ್ತಿರುವುದು ಗಮನಕ್ಕೆ ಬಂದು, ಕೂಗಿದರೂ ಕೋಪದಲ್ಲಿದ್ದ ಅವನು ತಂದೆಯ ಮಾತನ್ನು ಕೇಳದೇ ವಾಪಸ್ಸು ಬರುವುದಿಲ್ಲ. ಪಾಕಿಸ್ತಾನದ ಗಡಿ ದಾಟಿಯೇ ಬಿಡುತ್ತಾನೆ.  ಗಡಿ ಕಾಯುತ್ತಿದ್ದ ಸೈನಿಕರು ಆ ಮಗುವನ್ನು ಹಿಡಿಯುತ್ತಾರೆ, ಗಾಬರಿಗೊಂಡ ತಂದೆಯೂ ಕೂಡ ಗಡಿಯನ್ನು ದಾಟುತ್ತಾನೆ. ಹಿಂದೂ ಸೈನಿಕರಿಗೆ ಈತನ ಕೈಯಲ್ಲಿದ್ದ ಆಟದ ಕ್ಯಾಟರ್ ಪಿಲ್ಲರ್ ಆಯುಧದಂತೆ ತೋರುತ್ತದೆ.  ಇವರಿಗೆ ಸುನ್ನತಿ ಚಿಕಿತ್ಸೆಯಾಗಿಲ್ಲದ ಕಾರಣ ಹಿಂದೂಗಳೆಂದು ಗೊತ್ತಾದರೂ, ಪಾಕಿಸ್ತಾನದ ಕಡೆಯ ಸ್ಪೈಗಳಾಗಿರಬಹುದೆಂದು ಇವರನ್ನು ದೆಹಲಿಯ ಜೈಲಿಗೆ ಹಾಕಲಾಗುತ್ತದೆ.

ಇಲ್ಲಿಂದ ಕಥೆ ಶುರುವಾಗುತ್ತದೆ.  ತಂದೆಯ ಅಸಹಾಯಕತೆ – ತನ್ನ ಮಗುವನ್ನು ಇನ್ನಿತರ ಕೈದಿಗಳ ಲೈಂಗಿಕ ಹಸಿವಿನಿಂದ ಬಚಾವ್ ಮಾಡಿಕೊಳ್ಳುವ ಪ್ರಯತ್ನ.  ಬಿಸ್ಕೆಟ್ಟಿನ ಆಸೆ ತೋರಿಸಿ ಆ ಪುಟ್ಟ ಮಗುವನ್ನು ಲೈಂಗಿಕವಾಗಿ ಬಳಸಲು ಪ್ರಯತ್ನಿಸುವ ವಿಕೃತ ಕಾಮಿಯೊಬ್ಬ, ಆತನೊಂದಿಗೆ ಕಾದಾಡುವ ತಂದೆ.  ರಾಮಚಂದ್ ಹಾಗೆ ಪುಟ್ಟ ಹುಡುಗನೊಬ್ಬ ಅಲ್ಲಿಗೆ ಬಂದು, ಈ ವಿಕೃತಿಗಳನ್ನೆಲ್ಲಾ ಅನುಭವಿಸಿ ಹುಚ್ಚನಾಗಿರುತ್ತಾನೆ.  ಜೈಲಿನಲ್ಲಿ ಅಪ್ಪ, ಮಗ ಕಳೆಯುವ ಮೊದಲ ರಾತ್ರಿಯಂತೂ ಮನೋಜ್ನವಾಗಿದೆ.  ಒಂದು ಕಡೆ ಈ ಹುಚ್ಚನ ಆರ್ಭಟ, ಇತ್ತ ಕಡೆ ಈ ವಿಕೃತ ಕಾಮಿಗಳ ಕಾಟ, ಮತ್ತೆ ಇನ್ನೊಬ್ಬನ ದಾದಾಗಿರಿ ಹೀಗೆ….. ಮುಗ್ದ ಬಾಲಕನೊಬ್ಬ ಅಲ್ಲಿ ಒರಟು ಹುಡುಗನಾಗಿ ಬೆಳೆಯುವ ಪರಿಯಂತೂ ಬಹಳ ಸಹಜವಾಗಿ ತೆಗೆದಿದ್ದಾರೆ. ಹೀಗೆ ಜೈಲಿನಲ್ಲಿ ಆರಂಭಗೊಳ್ಳುತ್ತದೆ ಇಬ್ಬರ ಜೀವನ.

ಇತ್ತ ಕಡೆ ತಾಯಿಗೆ ಅಕಸ್ಮಾತ್ತಾಗಿ ಗಂಡ ಮತ್ತು ಮಗ ಕಣ್ಮರೆಯಾದ ಬಗ್ಗೆ ಚಿಂತಿಸಲು ಶುರು ಮಾಡುತ್ತಾಳೆ.  ತಾನು ಕೂಡ ಬಾರ್ಡರ್ ಕ್ರಾಸ್ ಮಾಡಲು ಪ್ರಯತ್ನಿಸುತ್ತಾಳೆ.  ಸುತ್ತಮುತ್ತಲಿನ ಜನರು ಬಿಡುವುದಿಲ್ಲ.  ಅಲ್ಲೊಬ್ಬ ವ್ಯಕ್ತಿ ಆಕೆಯ ಗಂಡನಿಗೆ ವ್ಯವಸಾಯಕ್ಕಾಗಿ ಸಾಲ ಕೊಟ್ಟಿರುತ್ತಾನೆ.  ಪಂಚಾಯಿತಿಯಲ್ಲಿ ಈಕೆಯೇ ಅದನ್ನು ತೀರಿಸಬೇಕೆಂದು ತೀರ್ಮಾನ ಕೈಗೊಳ್ಳುತ್ತಾರೆ.  ಅವಳನ್ನು ಹೇಗಾದರೂ ಮಾಡಿ ತನ್ನವಳನ್ನಾಗಿ ಮಾಡಿಕೊಳ್ಳಬೇಕೆಂಬ ದುರಾಸೆ ಆ ಸಾಲ ಕೊಟ್ಟಿರುವಾತನಿಗೆ.  ಇನ್ನೊಬ್ಬ ಈಕೆಯ ಕಷ್ಟವನ್ನು ನೋಡಿ ಕನಿಕರದಿಂದ ಅವಳಿಗೆ ಸಹಾಯ ಮಾಡುತ್ತಾ ಇಬ್ಬರೂ ಪ್ರೀತಿಸಲು ಶುರು ಮಾಡುತ್ತಾರೆ.  ೫-೬ ವರ್ಷಗಳು ಕಳೆದರೂ ಮಗ ಮತ್ತು ಗಂಡ ಬರುವುದೇ ಇಲ್ಲ.  ಮಹಿಳೆಯ ನೋವನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ.

ಇಲ್ಲಿ ಮಗುವಿನ ಮೇಲಿನ ದೌರ್ಜನ್ಯ ನೋಡಿ, ಅವನನ್ನು ಒಬ್ಬ ಪೋಲಿಸ್ ಅಧಿಕಾರಿಣಿಯ ಬಳಿ ಶಿಕ್ಷಣಕ್ಕಾಗಿ ಬಿಡುತ್ತಾರೆ.  ಅವಳಿಗೆ ಈ ಹುಡುಗ ದಲಿತನೆಂಬ ಅಸಹ್ಯ.  ಇವನು ರಕ್ಷಾಬಂಧನದ ದಾರವನ್ನು ಕಟ್ಟಲು ಬೇಡಿಕೊಂಡಾಗ ಇವನನ್ನು ಮುಟ್ಟಲು ಹಿಂಜರಿಯುತ್ತಾಳೆ.  (ಅವನಿಗೆ ತನ್ನ ಮಗನಿಗೆ ಏನು ಆಗಬಾರದೆಂದು ಅವನ ಅಮ್ಮ ಕಟ್ಟಿರುತ್ತಾಳೆ).  ಆದರೂ ಇಬ್ಬರ ನಡುವೆ ಒಂದು  ಬಾಂಧವ್ಯ ಬೆಳೆಯುತ್ತದೆ.  ಹಾಗೆಯೇ ಇವನನ್ನು ಬಹು ಮಟ್ಟಿಗೆ ಬೇರೆಯವರ ದೌರ್ಜನ್ಯದಿಂದ ಕಾಪಾಡುತ್ತಾಳೆ.  ಅವಳದೊಂದು ಪ್ರೇಮಕಥೆ, ಈ ಕಥೆಯೊಂದಿಗೆ ಬೇಕಾಗಿರಲಿಲ್ಲ ಅನಿಸುತ್ತದೆ.  ಆದರೂ ಅವಳು ತನ್ನ ಪ್ರೇಮಿಯೊಂದಿಗೆ ಓಡಿಹೋಗಲು ತೀರ್ಮಾನ ಮಾಡಿದಾಗ, ಇವನ ಕೈಗೆ ಇನ್ನೊಂದು ರಕ್ಷಾಬಂಧವನ್ನು ಕಟ್ಟುತ್ತಾಳೆ.  ಆಗ ಇವನ ಮಾನಸಿಕ ತುಮುಲಗಳನ್ನು ಬಹಳ ಚೆನ್ನಾಗಿ ಚಿತ್ರಿಸಿದ್ದಾರೆ. ramchand-pakistani-wallpaper

ಮುಗ್ಧ ಬಾಲಕ ತನ್ನನ್ನು ತಾನು ಜಗತ್ತಿಗೆ ತೆರೆದುಕೊಳ್ಳುವ ಪರಿ,  ಇವನಿಂದಾಗಿ ಜೈಲು ಸೇರುವಂತಾಯಿತು ಎಂದು ಅಪ್ಪನ ಅಸಹನೆ, ಕೆಟ್ಟ ಚಟಗಳನ್ನು ಕಲಿಯುವುದು (ತಂದೆಗೆ ತಡೆಯಲಾಗದ ಅಸಹಾಯಕತೆ), ಅವನ ಚಟಗಳಿಗಾಗಿ ಆ ಹುಡುಗ ಜೈಲಿನಲ್ಲಿ ಬಿಸ್ಕೆಟ್ ಮುಂತಾದವನ್ನು ಮಾರುವುದು, ಜೈಲಿನಲ್ಲಿ ಪೇದೆಗಳೊಟ್ಟಿಗಿನ ಗೆಳೆತನ, ಅವರ ಸೈಕಲ್ ಕಲಿಯಲು ಪಾಡು ಪಡುವುದು, ಇಷ್ಟೆಲ್ಲಾ ನೋವಿದ್ದರೂ ಮಗನಿಗೆ ಸೈಕಲ್ ತಂದೆ ಕಲಿಸುವಾಗಿನ ಆ ಕ್ಷಣ…….ನಮ್ಮನ್ನು ಕಣ್ಣೀರಿನಲ್ಲಿ ಮುಳುಗುವಂತೆ ಮಾಡುತ್ತದೆ.

ಹೀಗೆ ಜೈಲಿನ್ನೇ ಮನೆ ಮಾಡಿಕೊಂಡ ಹುಡುಗನಿಗೆ ಹಠಾತ್ತಾಗಿ ಸ್ವಾತಂತ್ರ್ಯದ ದಿವಸ ಬಿಡುಗಡೆ ಮಾಡಲಾಗುವುದು.  ತಂದೆಗೆ ಆ ಅವಕಾಶ ದೊರಕುವುದಿಲ್ಲ.  ಆಗ ಮತ್ತೆ ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಭಾಸವಾಗುವುದು. 

ಎಲ್ಲೂ ವಿಷಯವನ್ನು ಅನಗತ್ಯವಾಗಿ ಎಳೆದಿಲ್ಲ ಹಾಗೂ ಸಿನೀಮಯ ಅನ್ನಿಸುವಂತಹ ಚಿತ್ರಣವಿಲ್ಲ ಹಾಗೂ ಪಾಕಿಸ್ತಾನವನ್ನಾಗಲೀ, ಭಾರತವನ್ನಾಗಲೀ ದೂಶಿಸುವುದಿಲ್ಲ. ಬಹಳ ನೈಜ ಅಷ್ಟೇ ಮನಸ್ಸನ್ನು ಬಹಳ ಚಿಂತನೆಗೀಡಾಗುವುದಂತೆ ಮಾಡುವುದು. ಉಭಯ ರಾಷ್ಟ್ರಗಳ ನಡುವಣಾ ನಡೆಯುತ್ತಿರುವ ರಾಜಕೀಯ ಸಮರದಲ್ಲಿ, ಇವತ್ತಿನ ದಿವಸ ಯಾರು ಉಗ್ರರೋ ಎಂದು ಎಲ್ಲರೂ ಎಲ್ಲರನ್ನು ಅನುಮಾನಿಸುತ್ತಿರುವ ಕಾಲದಲ್ಲಿ, ಮುಗ್ದ ಜನರ ಬವಣೆಯನ್ನು ತೋರಿಸುವ ಈ ಚಿತ್ರ ಹೃದಯಕ್ಕೆ ತಟ್ಟುವುದರಲ್ಲಿ ಸಂಶಯವೇ ಇಲ್ಲ.

– ರಂಜಿತ್ ಅಡಿಗ, ಕುಂದಾಪುರ

ಅಪ್ಪನ ಬೈಗುಳ ನನಗೆ ಸ್ಪಷ್ಟವಾಗಿ ಕೇಳಿಸುತ್ತಿತ್ತು. ಕಾರಣ ಚಿಕ್ಕದು, ಅಕ್ಕನಿಂದ ಪತ್ರ ಬಂದಿತ್ತು ಅಕ್ಕನೆಂದರೆ ನನ್ನ ಪಾಲಿಗಂತೂ ದೊಡ್ಡ ಧೈರ್ಯಸ್ಥೆ! ಅಷ್ಟುವರ್ಷ ಪ್ರೀತಿಯಿಂದ ಸಾಕಿದ ಅಪ್ಪನನ್ನು ಧಿಕ್ಕರಿಸಿ ಯಾವುದೋ ಹುಡುಗನ ಪ್ರೀತಿಯ ಮಾಯಾಮೃಗಕ್ಕೆ ಆಸೆಪಟ್ಟು, ಕಟ್ಟು ಪಾಡಿನ ಲಕ್ಷಣ ರೇಖೆಯನ್ನು ದಾಟಿದವಳು. ಸದಾ ಮುಗುದೆಯಂತೆ ಮಾಡುತ್ತಿದ್ದ ಅಕ್ಕನಿಗೆ ಅಂತಹ ಮಾನಸಿಕ ಶಕ್ತಿಯನ್ನು ನೀಡಿದ ಮಹಾನ್ ಶಕ್ತಿ ಪ್ರೇಮವೆಂದು ಅಚ್ಚರಿಪಟ್ಟಿದ್ದೆ!flower

ಅಪ್ಪನ ಕೋಪಕ್ಕೆ ತಲೆಕೆಡಿಸಿಕೊಳ್ಳದೆ ’ಆದದ್ದು ಆಗಿ ಹೋಯಿತು, ಇನ್ನಾದರು ಒಟ್ಟಿಗೆ ಇರೋಣ….’ ಎಂಬ ಸಂಧಾನ ಪತ್ರ ಆಗಾಗ್ಗೆ ಕಳುಹಿಸುತ್ತಲೇ ಇರುತ್ತಾಳೆ. ಈ ಪತ್ರಗಳ ಬಿಸಿಗೆ ಅಪ್ಪನ ಕೋಪದ ಮಂಜುಗಡ್ಡೆ ಇನ್ನು ಕರಗಲೇ ಇಲ್ಲ. ಮತ್ತೆ ಇನ್ನೊಂದು ಪತ್ರ ಹಾಕಿದ್ದಳು.

ಅವಳಿಗಾಗಲೇ ಈ ಬೈಗುಳ. ನನಗೆ ಯಾಕೋ ಕಸಿವಿಸಿ, ಅವರು ಬೈದ ಮಾತುಗಳು ನನಗೂ ತಾಗುತ್ತಿದ್ದವು. ಪ್ರೇಮವೆಂದೊಡನೆ ಎಲ್ಲರ ಮನೆಗಳಲ್ಲಿಯೂ ತಂದೆ ತಾಯಿಗಳ ಮಾಮೂಲಿ ಮಾತುಗಳಿರಬಹುದು ಆದರೆ ನಿಜವಾದ ಪ್ರೀತಿಯಲ್ಲಿ ತೋಯ್ದಿರುವ ನನ್ನಂತವಳಿಗೆ ಇದು ಚುಚ್ಚುವ ಈಟಿಯಂತದ್ದು. ಅಸಲು ದೊಡ್ಡವರಿಗೆ ಪ್ರೀತಿಯ ಮೇಲಿಷ್ಟು ದ್ವೇಷ ಯಾಕೆ ಅಂತ ಅರ್ಥವಾಗುವುದಿಲ್ಲ. ಹರೆಯದ ವಯಸ್ಸಿನಲ್ಲಿ ಅವರೂ ಪ್ರೇಮಿಸಿರಲಿಲ್ಲವೇ? ಪ್ರೇಮದ ಗಾಢತೆ, ಅದರ ಸವಿಸ್ಪರ್ಶ ಅವರೂ ಅನುಭವಿಸಿರಲಿಲ್ಲವೇ? ಆದರೂ ಇದನ್ನೆಲ್ಲ ಧೈರ್ಯವಾಗಿ ನಿರ್ಭಯತೆಯಿಂದ ತಂದೆಯೆದುರು ಹೇಳುವಂತಹ ಅಕ್ಕನ ಧೈರ್ಯ ಧಿಮಾಕು ನನ್ನ ಬಳಿ ಇಲ್ಲ. ಆ ಭಯ ನಿಜಕ್ಕೂ ಧೈರ್ಯವಿಲ್ಲದೆಯಷ್ಟೇ ಅಲ್ಲ, ಇಷ್ಟು ದಿನ ತಂದೆ ತೋರಿದ ಪ್ರೀತಿಯೆ ಅಂತಹ ಮಾತಾಡದಂತೆ ಕಟ್ಟಿಹಾಕಿರುವುದು.

ಹೌದು…. ತಂದೆಗೆ ನನ್ನ ಮೇಲೆ ಅಗಾಧ ಪ್ರೀತಿ. ಅಕ್ಕ ಹೋದ ಮೇಲಂತೂ ಅವರಿಗೆ ನನ್ನ ಮೇಲೆ ಪ್ರೀತಿ ಇಮ್ಮಡಿಯಾಗಿದೆ. ಯಾವ ವಿಷಯಕ್ಕೂ ನನ್ನ ನಿರ್ಧಾರಕ್ಕೆ ಅಡ್ಡಿ ಬರುವವರಲ್ಲ ಅಲ್ಲದೇ ಜಬ್ದಾರಿಯಿಂದ ಬೆಳೆಸಿದ್ದರು. ಆದರೆ ಮದುವೆ ವಿಷಯಕ್ಕೆ ಬಂದರೆ
ಮಾತ್ರ ನನಗೆ ನಿರ್ಣಯದ ಸ್ವಾತಂತ್ರ್ಯ ನೀಡುವುದು ಅನುಮಾನವೇ!  ಅದಕ್ಕೆ ಕಾರಣವನ್ನೂ ಆಗಾಗ್ಗೆ ಹೇಳುತ್ತಿರುತ್ತಾರೆ. ‘ಹರೆಯಕ್ಕೆ ಬಂದವರ ಕಣ್ಣು ಕುರುಡಂತೆ’. ಆದರೆ ನನಗೆ ಈ ಅಭಿಪ್ರಾಯದ ಬಗ್ಗೆ ಕೊಂಚವೂ ನಂಬಿಕೆ, ಒಪ್ಪಿಗೆಯಿಲ್ಲ.

ಪಕ್ಕದಲ್ಲೇ ಬಿದ್ದಿದ್ದ ಎಕನಾಮಿಕ್ಸ್ ಪುಸ್ತಕದ ಮಧ್ಯಭಾಗದಲ್ಲಿ ಬಚ್ಚಿಟ್ಟಿದ್ದ ಅವನ ಫೋಟೊ ಕೈಗೆತ್ತಿಕೊಂಡೆ. ಅವನ ತುಟಿಯಂಚಿನ ಮುಗ್ಧ ನಗು ಸೂಜಿಗಲ್ಲಂತೆ ಸೆಳೆಯುತ್ತಿತ್ತು. ಕಣ್ಣ ಹೊಳಪು, ಆಕರ್ಷಣೆಗೆ ಮನ ತಲೆಬಾಗಿತ್ತು. ನಿಜವಾಗಿಯೂ ಹೇಳೆಬೇಕೆಂದರೆ ಆತನ ಸೌಂದರ್ಯವನ್ನು ಇಷ್ಟಪಟ್ಟು ಪ್ರೇಮಿಸಿದ್ದಲ್ಲ. ಸೌಂದರ್ಯಕ್ಕೆ ಮೀರಿದ ರಹಸ್ಯವೇನೋ ಆತನಲ್ಲಿದೆ. ಅದು ಆತನ ನಡೆ, ಮಾತು, ನಗು, ದಿರಿಸು ಏನೂ ಆಗಿರಬಹುದು. ಒಟ್ಟಿನಲ್ಲಿ ಆತನೆಂದರೆ ನಂಗಿಷ್ಟ.

ಆದರೆ ಇವತ್ತಿಗೂ ಚಿಕ್ಕ ಅನುಮಾನದ ಮೊಳಕೆ ಎದೆಯ ಭೂಮಿಯಲ್ಲಿ ಇದ್ದೇ ಇದೆ. ಅದೇನೆಂದರೆ, ಆತನೊಳಗೆ ನನ್ನ ಬಗ್ಗೆ ಪ್ರೇಮದ ಭಾವನೆ ಇದೆಯಾ ಎಂದು. ಯಾಕೆಂದರೆ ಯಾವತ್ತೂ ಅದನ್ನು ಅವನ ಬಳಿ ಕೇಳಿಲ್ಲ. ನನ್ನ ಇಂಟ್ರಾವರ್ಟ್ ಮನಸತ್ವಕ್ಕೆ ಅದು ಸಾಧ್ಯವಾಗುತ್ತದಾ ಇಲ್ಲವಾ ಎಂಬ ಭಯ ನನ್ನಲ್ಲಿದೆ. ಅವನು ಮೊದಲು ಭೇಟಿಯಾದಾಗಿನಿಂದ ಇಲ್ಲಿಯವರೆಗೂ ಒಮ್ಮೆ ಅದೂ ಕಾಲೇಜ್ ಡೇ ದಿನದ ಫೋಟೊ ಆಲ್ಬಮ್‌ನಿಂದ ಆತನ ಫೋಟೊ ಕದ್ದಿದ್ದನ್ನು ಬಿಟ್ಟರೆ, ಪ್ರೇಮ ನಿವೇದನೆಯ ಪ್ರಯತ್ನವಾಗಲೀ, ಲೆಟರ್ ಮೂಲಕ ಹೇಳುವ ಧೈರ್ಯವಂತ ನಿರ್ಧಾರವಾಗಲೀ ಮಾಡಿದ ನೆನಪಿಲ್ಲ. ಆದರೆ ಆತ ನನ್ನೆಡೆಗೆ ನೋಡುವ ನೋಟದಲ್ಲಿನ ಚಿಲುಮೆ, ನೀಡುವ ಗೌರವ, ಯಾವತ್ತೂ ನನ್ನ ಹೃದಯದಲ್ಲಿ ‘ಅವನೂ ಪ್ರೀತಿಸುತ್ತಿದ್ದಾನೆ’ ಎಂಬ ಮಾತು ಮಾರ್ದವಗೊಳ್ಳುವಂತೆ ಮಾಡುತ್ತಿರುತ್ತದೆ.

ಕ್ಲಾಸಿನಲ್ಲಿ ಕೆಲವೊಮ್ಮೆ ಆತನನ್ನು ಗಮನಿಸುತ್ತಿರುತ್ತೇನೆ. ಯಾರ ಬಳಿಯೂ ಹೆಚ್ಚು ಮಾತಿಲ್ಲ. ಅವನಾಯಿತು. ಓದಾಯಿತು ಎಂಬಂತಿರುತ್ತಾನೆ. ನನ್ನಂತೆಯೇ ಶುದ್ಧ ಇಂಟ್ರಾವರ್ಟ್ ಇರಬೇಕು. ಅವನೊಳಗಿರುವ ನನ್ನ ಬಗೆಗಿನ ಪ್ರೇಮವನ್ನು ತೋಡಿಕೊಳ್ಳಲು ಅದೇ ಅಡ್ಡಿ ಬರುತ್ತದೆ ಅಂದುಕೊಂಡು ವಿಲಪಿಸುವ ಹೃದಯಕ್ಕೆ ಸಮಾಧಾನ ಹೇಳುತ್ತಿರುತ್ತದೆ.

ಅವನನ್ನು ಭೇಟಿ ಮಾಡಿದ ಕ್ಷಣಗಳೆಲ್ಲ ಅವಿಸ್ಮರಣೀಯ. ನನ್ನೆಡೆಗೆ ಆತ ನೋಡಿದ ಚಿಕ್ಕ ನೋಟವನ್ನೂ ಕೂಡ ಮನಸ್ಸು ರೆಕಾರ್ಡ್ ಮಾಡಿಟ್ಟುಕೊಂಡಿರುತ್ತದೆ. ಅದನ್ನು ಮನಸ್ಸು ಮೆಲುಕು ಹಾಕಿದಾಗಲೆಲ್ಲ ಹೃದಯ ನವಿಲುಗರಿಬಿಚ್ಚಿ ಕುಣಿದಾಡುತ್ತದೆ. ಅಬ್ಬ! ಪ್ರೇಮವೇ, ನಿನ್ನ ಒಂದು ಚಿಕ್ಕಲಹರಿ ಇಷ್ಟು ಗಾಢವಾಗಿ ಮನ ತಟ್ಟುತ್ತಾ ಎಂದು ಚಿಕ್ಕ ಮಗುವಿನಂತೆ ಅಚ್ಚರಿ ಪಡುತ್ತೇನೆ! ಅಂತಹ ಅನುಭವ ಪಡೆಯದ ಜೀವಗಳನ್ನು ನೋಡಿ ಗೆಲುವಿನ ನಗೆ ಮೂಡುತ್ತದೆ ನನ್ನೊಳಗೆ.

ಸದ್ಯಕ್ಕೆ ಅವನ ಸ್ನಿಗ್ಧ ನಗುವಿನ ಚಿಕ್ಕ ಫೋಟೋನೇ ನನ್ನ ಆಸ್ತಿ. ಅವನ ನಗುವಿನೊಳಗೆ ಮುಳುಗಿ ಒದ್ದೆ ತಂಪಿನ ಸುಲ್ಹ ಅನುಭವಿಸುತ್ತೇನೆ. ಖುಷಿಯಾದಾಗ ದುಃಖವಾದಾಗ ಏನೂ ಭಾವನೆ ಮೂಡದಿರುವಾಗ – ಯಾವಾಗಲೂ ಅವನೊಳಗೇ ಇರುವಾಸೆ ಮನಸ ಬಸಿರಿಗೆ. ಈ ಆಸೆಯ ಬಸಿರಿಗೆ ಹೆರಿಗೆ ಯಾವಾಗ?

ಸ್ವಲ್ಪ ದಿನ ಕಳೆಯಿತು. ಒಮ್ಮೆ ತಂದೆ ಮನೆಗೆ ಬರುವಾಗ ಎಂದಿನಂತಲ್ಲದೆ ಬಹಳ ಉತ್ಸಾಹದಿಂದ ಬಂದರು. ಅವರು ತಂದ ಸುದ್ದಿಗೆ ನನ್ನ ಮನಕ್ಕೆ ಬುದ್ಧಿ ಭ್ರಮಣೆಯಾದಂತಾಯಿತು. ನನ್ನ ಮದುವೆಗೆ ಯಾವುದೋ ಹುಡುಗನನ್ನು ಹುಡುಕಿದ್ದು ನನ್ನ ನೋಡಲು ಒಂದೆರಡು ದಿನಗಳಲ್ಲಿ ಬರುತ್ತಾನಂತೆ. ಒಂದೇ ಉಸಿರಿಗೆ ರೂಮಿಗೆ ಓಡಿದೆ. ಅವರು ನಾಚಿಕೆ ಅಂದುಕೊಂಡರು. ಬಾಗಿಲು ಹಾಕಿಕೊಂಡು ಹಾಸಿಗೆಯಲ್ಲಿ ಬಿದ್ದು ಮನಸಾರೆ ಅತ್ತೆ. ಮನದ ರೋದನ ಮುಸಲ ಧಾರೆಯಾಗಿ ದಿಂಬನ್ನೆಲ್ಲ ಒದ್ದೆಯಾಗಿಸಿತು. ಮೌನ ಎಷ್ಟು ಅಸಹನೀಯ! ಪ್ರೀತಿ ಅವನಲ್ಲೂ ಇದೆ. ಆದರೆ ಅವರ ಮಧ್ಯೆ ಹಾಳು ಭಯವಿದೆಯಲ್ಲ! ಭಯದ ಮಗುವಾದ ಮೌನದ ಹೊರೆಯಿದೆಯಲ್ಲ ಅದನ್ನು ಸರಿಸುವವರು ಯಾರು? ಅವನಾ..? ನಾನಾ..?

ಗಂಡಸರಿಗೇನಾಗಬೇಕು? ಮರೆತೂ ಸುಖವಾಗಿರಬಲ್ಲರು. ಆದರೆ ಹೆಂಗಸಿನ ಪ್ರಥಮ ಪ್ರೇಮವಿದೆಯಲ್ಲ, ಅಂಟಿಕೊಂಡರೆ ಬಿಡದು. ಬದುಕಿನುದ್ದಕ್ಕೂ ಹೃದಯದ ಹೊಟ್ಟೆಯಲ್ಲಿಟ್ಟುಕೊಂಡೇ ಬಾಳಬೇಕು. ಆ ಹಾಳು ಹಾದರ ಯಾರಿಗೆ ಬೇಕು?

ಇಷ್ಟಕ್ಕೂ ಒಂದು ವಿಷಯ ಮಾತ್ರ ಖಂಡಿತ. ಹೃದಯಕ್ಕೆ ಬೇರಾರೂ ಬೇಡ. ಅವನಿಗೇ ಮೀಸಲಾಗಿದೆ ಈ ಬದುಕು. ಬೇರೆ ಯಾರನ್ನೂ ಪ್ರೀತಿಸಲಾರೆ. ಬೇರಾರಿಗೂ ಒಲವಧಾರೆ ಎರೆಯಲಾರೆ.

ಆದರೆ ಇದನ್ನೆಲ್ಲ ತಂದೆಗೆ ಹೇಗೆ ಹೇಳಲಿ? ಹತ್ತೊಂಭತ್ತು ವರ್ಷ ಪೋಷಿಸಿದವರವರು. ತಿದ್ದಿ ತೀಡಿದವರು… ಹೇಗೆ ಎದುರಾಡಲಿ ಅಕ್ಕನಂತೆ.

ಸ್ವಲ್ಪ ಹೊತ್ತು ಕುಳಿತು ಆಲೋಚಿಸಿದೆ. ಇಬ್ಬರ ಪ್ರೀತಿ ನಡುವೆ ಮೌನ ಭಾರ, ಅಸಹನೀಯ. ಅವನ ಬಳಿಯೇ ಹೋಗಬೇಕು. ಭಯ, ಸಂಕೋಚ ಎಲ್ಲದಕ್ಕೂ ತಿಲಾಂಜಲಿ ಕೊಟ್ಟು ಬಿಡಬೇಕು. ನನ್ನೊಳಗಿನೊಲವು ತಿಳಿಸಿಬಿಡಬೇಕು. ನಾಳೆ ಹೇಳುವೆನೆಂದರೆ ಬಾಳೆ ಕೂಪದಲ್ಲಿ ಬಿದ್ದೀತು. ಇವತ್ತೇ ಏನಾದರಾಗಲೀ ಹೇಳಿ ಬಿಡಬೇಕೆಂದು ನಿರ್ಧರಿಸಿದೆ.

ಒಂದುವೇಳೆ ಆತ ಒಲ್ಲೆ ಎಂದರೆ? ದಡ ಕಾಣದ ಹಡಗಿನಂತಾದೀತು ಮನಸು. ಅಂತಹ ಪರಿಸ್ಥಿತಿ ಊಹಿಸಲೂ ನಿರಾಕರಿಸಿತು ಮನ.
……………….

ಪ್ರಿಯ ಸಖನಿಗೆ,
ಭರಿಸಲಾಗದಷ್ಟು ಹೊರೆಯಾಗಿದೆ ಈ ಪ್ರೀತಿ. ಹಂಚಿಕೊಳ್ಳದೇ ವಿಧಿಯಿಲ್ಲ ಎಂಬಂತಾಗಿದೆ. ಕಣ್ಣ ಕುಡಿಯಂಚಿನ ಪ್ರೇಮದಾಟ ಸಾಕು. ಹೃದಯದ ‘ನೀನೇ ಬೇಕೆಂಬ’ ಹಠ ಹೆಚ್ಚಾಗಿದೆ. ನಿನ್ನೊಳಗೂ ನನ್ನ ಬಗ್ಗೆ ಪ್ರೇಮವಿದೆಯಾ? ಇದೆಯಾದರೆ ಹಂಚಿಕೋ. ಇಲ್ಲವಾದರೆ ಈ ಪತ್ರ ಹರಿದು ಚೂರು ಮಾಡು.
        ನಿನ್ನ
        ಶರ್ಮಿಳ

ಹೀಗೆ ಬರೆದು ಮಡಚಿ ಪುಸ್ತಕದೊಳಗಿಟ್ಟುಕೊಂಡಳು. ಕಾಲೇಜು ಬಿಡುವ ಸಮಯಕ್ಕಾಗಿ ಕಾಯತೊಡಗಿದೆ. ಕ್ಲಾಸಿನಲ್ಲಿ ಅನ್ಯಮನಸ್ಕತೆ ಬದುಕು ಏನಾದೀತೋ ಎಂಬ ಭೀತಿ. ಆತನ ಉತ್ತರವೇನೋ ಎಂಬ ಆತಂಕ. ಏನಾದರಾಗಲಿ ಇಂದೇ ನಿರ್ಧಾರವಾಗಿ ಹೋಗುವುದೆಂಬ ನಿರುಮ್ಮಳತೆ ಮತ್ತೊಂದು ಕಡೆ.

ಸಂಜೆ ಕಾಲೇಜು ಬೀಡುವ ಸಮಯದಲ್ಲಿ ಆಗಸದ ತುಂಬ ಮೋಡ. ಸಣ್ಣ ಮಬ್ಬುಗತ್ತಲೆ. ಉಸಿರು ಬಿಗಿ ಹಿಡಿದು ಕಾಲೇಜು ಗೇಟ ಬಳಿ ನಿಂತೆ. ತುಂಬು ಜನಸಂದಣಿ ಮಧ್ಯೆ ಜಾಗ ಮಾಡಿಕೊಂಡು ಆತ ಬರುತ್ತಿದ್ದ. ಹತ್ತಿರ. ಇನ್ನೂ ಹತ್ತಿರ ಬಂದ. ಹತ್ತಿರ ಬಂದಷ್ಟೂ ಹೆಚ್ಚುವ ಭಯ, ನಡುಕ.

“ಒಂದ್ನಿಮಿಷ ನನ್ನ ಜೊತೆ ಬರ್ತೀರಾ?” ಕೇಳಿದೆ. ಆಶ್ಚರ್ಯಕರ ಮುಖಭಾವದೊಂದಿಗೆ ‘ಸರಿ’ ಎಂದನಾತ.

ಮೈದಾನದೆಡೆಗೆ ಏಕಾಂತವನ್ನರಸಿ ಹೋಗುತ್ತಿದ್ದರೆ ನನ್ನ ಹಿಂದೆಯೇ ಬರುತ್ತಿದ್ದ, ಚಿಕ್ಕದಾಗಿ ಊಟದೆಲೆಗೆ ನೀರು ಚಿಮುಕಿಸಿದಂತೆ ಹೊಯ್ಯುತ್ತಿತ್ತು ಮಳೆ.

flower ಮೈದಾನದ ಮೂಲೆಗೆ ಕರೆದೊಯ್ದು ನೀಡಿದ ಪತ್ರ, ಆತನ ಕೈಗಿಟ್ಟು ಆತನನ್ನು ಎದುರಿಸಲಾಗದೆ ಈ ಕಡೆ ಬಂದು ಬಿಟ್ಟೆ. ಮರದ ಕೆಳಗೆ ಮರೆಯಲ್ಲಿ ನಿಂತು ಆತನನ್ನು ಗಮನಿಸುತ್ತಿದ್ದೆ.

ಮಳೆ ಸಣ್ಣಗೆ ಬರುತ್ತಿದ್ದುದು ಹೆಚ್ಚುತ್ತಾ ಹೋಯಿತು. ಅಂತೆಯೇ ನನ್ನ ಆತಂಕವೂ! ಆತ ಓದುವುದ ಮುಗಿಸಿ ಕಣ್ಣು ಮುಚ್ಚಿ ನಿಂತಿದ್ದ. ಮೊಗದ ತುಂಬ ಮಳೆನೀರು. ಅಳುತ್ತಿರುವನಾ? ಗೊತ್ತಾಗಲಿಲ್ಲ.

ಸ್ವಲ್ಪಹೊತ್ತು ಕಾದೆ. ಬರಲಿಲ್ಲ. ತಿರುಗಿ ನೋಡಲೂ ಇಲ್ಲ. ಭಯವಾಯಿತು. ಆತನ ಬಳಿ ಓಡಿದೆ. ಆತನಿನ್ನೂ ತೊಯ್ಯುತ್ತಲೇ ಇದ್ದ; ಬಯಲ ಮಧ್ಯದ ಮರದಂತೆ. ಅವನ ಶರಟು ಹಿಡಿದೆ. “ಏನಾಯ್ತು” ಕೇಳಿದೆ. ನಿರ್ಭಾವುಕ ನೋಟ ನನ್ನತ್ತ ಎಸೆದ. “ಸಾರಿ ಶರ್ಮಿಳ ಶರ್ಮಿಳ ಇಷ್ಟು ದಿನ ನಿನ್ನನ್ನು ಕಾಡಿದ್ದಕ್ಕೆ ಪ್ರೀತಿ ನನ್ನಲ್ಲೂ ಇದೆ” ಅಂದ. ನನ್ನ ಮೇಲೆ ಬೀಳುತ್ತಿರುವುದು ನೀರಹನಿಯಲ್ಲ ಪನ್ನೀರ ಸುರಿಮಳೆ ಅನ್ನಿಸಿತು. ಆನಂದದಿಂದ ತಬ್ಬಿಕೊಂಡೆ ಮತ್ತೆ ಹೇಳಿದೆ, “ನಾನೇ ನಿನ್ನ ಬಳಿ ಬಂದು ಕೇಳಬೇಕಿತ್ತು. ಕ್ಷಮಿಸು ಇಷ್ಟು ದಿನ ಹೇಳದಿದುದಕ್ಕೆ ಕಾರಣ ನನಗಿದ್ದ ಭಯವೇ. ನಿನ್ನ ನಿರಾಕರಣೆಯ ಭಯ. ನೀನೇ ಒಪ್ಪಿಕೊಂಡ ಮೇಲೆ ಇನ್ನು ಯಾವ ಭಯವೂ ಇಲ್ಲ.”

“ಆದರೆ ನನ್ನ ತಂದೆ ನನಗೆ ಬೇರೆ ಹುಡುಗನನ್ನು ನೋಡುತ್ತಿದ್ದಾರೆ…” ಅಂದೆ.

“ಇವತ್ತೇ ಹೋಗಿ ಮಾತಾಡುತ್ತೇನೆ. ಪ್ರೀತಿ ಮಾಡಿದರೆ ಭಯ ಪಡಬಾರದು. ಇದೇ ನಾನು ಕಲಿತ ಪಾಠ.”

“ನನ್ನ ತಂದೆ ಒಪ್ಪದಿದ್ದರೆ…?”

“ಒಪ್ಪಿಸುವೆ ಎಂಬ ನಂಬಿಕೆ ನನಗಿದೆ.” ಅಂದ.

ಜಡಿ ಮಳೆಯಲ್ಲಿ ಇಬ್ಬರೂ ಒಟ್ಟಾಗಿ ಒದ್ದೆಯಾದೆವು. ಇನ್ನು ಯಾವ ಬೆದರು ಮಳೇಗೂ ಬಗ್ಗುವವಳಲ್ಲ ನಾನು, ಸಂಗಾತಿಯಾಗಿ ಅವನಿರುವ ತನಕ…

ರಂಜಿತ್ ಅಡಿಗ, ಕುಂದಾಪುರ

ಬದುಕಿನಲ್ಲಿ ಸದಾ ನೆಗೆಟಿವ್ ಆಗಿ ಯೋಚಿಸುವವರನ್ನು, ಪದೇ ಪದೇ ಸೋಲುವವರನ್ನು ಜಗತ್ತು ಹೀನಾಯವಾಗಿ ನೋಡುತ್ತದೆ. ಅವರು ದೂರ ಬರುವುದು ಕಾಣುತ್ತಲೇ ಜನರಿಗೆ ‘ಅರ್ಜೆಂಟು ಕೆಲಸ’ಗಳು ನೆನಪಾಗುತ್ತವೆ. ಬೇಗ ಎರಡೂ ಕಾಲಿಗೆ ಚೆನ್ನಾಗಿ ಬುದ್ಧಿ ಹೇಳಲು ಕಾರಣಗಳು ಸಿಕ್ಕುತ್ತವೆ.

ಆದರೆ ಸದಾ ನಗೆ ಬೀರುವ, ಗೆಲ್ಲುತಲಿರುವ ವ್ಯಕ್ತಿಗೆ ಅಂಥ ಟ್ರೀಟ್ ಮೆಂಟ್ ಸಿಗುವುದಿಲ್ಲ. ಅಂಥವರನ್ನು ನೋಡಲು ಕಾಯುತ್ತಿರುತ್ತಾರೆ. ಅವರ ಜೊತೆಗೆ ಮತ್ತಷ್ಟು ಹೊತ್ತು ನಿಲ್ಲಲು ತವಕಿಸುತ್ತಿರುತ್ತಾರೆ. ಅರ್ಜೆಂಟು ಕೆಲಸಗಳೆಲ್ಲ ಪಕ್ಕಕ್ಕೆ ನಿಂತು ಯಶಸ್ವಿ ವ್ಯಕ್ತಿಗೆ ದಾರಿ ಬಿಡುತ್ತದೆ.

ಆದರೆ ಅಂಥ ಸ್ಥಿತಿ ತಲುಪುವ ದಾರಿ ಸುಗುಮವಾದುದಲ್ಲ.ಮೇಲಕ್ಕೆ ಸರಾಗವಾಗಿ ಕಂಡರೂroad_to_success ಸಾಕಷ್ಟು ಪರಿಶ್ರಮವಿರುತ್ತದೆ. ಬಾತುಕೋಳಿಯಂತೆ ಸಲಿಲವಾಗಿ ಈಜುತ್ತಿದ್ದರೂ, ಪಟ ಪಟ ಬಡಿಯುವ ಕಾಲಿನ ಶ್ರಮ ಕಾಣುವುದಿಲ್ಲ. ಗೆಲುವಿಗೆ ಅವರು ಕಂಡ ಕನಸಿನ ಬೀಜ, ಕನಸನ್ನು ಪೋಷಿಸಲು ವಿನಿಯೋಗಿಸಿದ ಶ್ರಮ, ನಿದ್ದೆಗೆಟ್ಟ ರಾತ್ರಿಗಳು, ಪಟ್ಟ ಅವಮಾನಗಳು, ‘ಈ ಗುರಿ ಅಸಾಧ್ಯ’ ಎಂಬ ಲೆವೆಲ್ಲಿನಿಂದ ಮತ್ತೆ ಉತ್ಸಾಹದ ಬುಗ್ಗೆಯೊಡೆದು ಸಾಧಿಸುವ ಶ್ರದ್ಧೆ ಇವ್ಯಾವುದೂ ತೋರದು.

ಸಾಮಾನ್ಯ ಮನುಷ್ಯರಿಗೆ ಕನಸು ಕಾಣುವ ಪ್ರವೃತ್ತಿಯಿರುವುದು ಸಹಜ. ಕೆಲವರು ಅದನ್ನು ಕನಸಿನ ಮಟ್ಟಕ್ಕೇ ಉಳಿಸಿ ಮತ್ತೆ ಜೀವನವನ್ನು ಮಾಮೂಲಾಗಿ ಕಳೆದುಬಿಡುತ್ತಾರೆ. ಉಳಿದವರು ಅದರಿಂದಲೇ ಪ್ರೇರಣೆ ಪಡೆದು ಒಂದಿಷ್ಟು ಪ್ರಯತ್ನ ಮಾಡಿದರೂ ಚಿಕ್ಕ ಸೋಲು ಎದುರಾದೊಡನೆ ಸುಸ್ತಾಗುತ್ತಾರೆ. ಗಾಜು ಮುಚ್ಚಿದ ಕಾರಿನೊಳಗಡೆ ಹಾರುವ ನೊಣ ಒಂದೆರಡು ಬಾರಿ ಪ್ರಯತ್ನಿಸಿ ಸಾಧ್ಯವಾದಾಗ ಒಳಗಿನ ಪರಿಸರಕ್ಕೇ ಅಡ್ಜಸ್ಟ್ ಆಗುವಂತೆ ಮತ್ತೆ ರೊಟೀನ್ ಜೀವನಕ್ಕೆ ಶರಣಾಗುತ್ತಾರೆ. 

ಮೊದಲು ಕಂಡ ಕನಸು ಅನನ್ಸಾಗಿಸುವ ಸಾಮರ್ಥ್ಯ ಇದೆಯಾ? ಅದಕ್ಕೆ ಬೇಕಾಗುವ ಸಮಯ, ಪಡಬೇಕಾದ ಕಷ್ಟದ ಅಂದಾಜು ಮಾಡಿ ಸಾಧಿಸಬಲ್ಲೆವಾ ಎಂದು ನಿಯತ್ತಾಗಿ ಪ್ರಶ್ನಿಸಿಕೊಳ್ಳಬೇಕು. ಒಮ್ಮೆ ಹಠ, ಶ್ರದ್ಧೆ ಮೂಡಿದರೆ ಅದರಲ್ಲೆದುರಾಗುವ ಸೋಲುಗಳನ್ನು ತಾತ್ಮಾಲಿಕ ಎಂದೇ ಪರಿಗಣಿಸಿ ಮುನ್ನುಗ್ಗಬೇಕು. ಮಹಾನ್ ಆಟಗಾರರಲ್ಲಿ ಚಿರವಾಗಿ ಉಳಿಯುವ ಹೆಸರಾದ ಸಚಿನ್ ತೆಂಡುಲ್ಕರ್ ಸಹ ಶೂನ್ಯದಿಂದಲೇ ಟೆಸ್ಟ್ ಕ್ರಿಕೆಟ್ ಶುರು ಮಾಡಿದ್ದು ಎಂಬುದು ನೆನಪಿರಲಿ. ಅಮಿತಾಭ್ ಬಚ್ಚನ್ ದನಿಯನ್ನು ಆಕಾಶವಾಣಿಯಲ್ಲಿ ‘ಚೆನ್ನಾಗಿಲ್ಲ’ ಎಂದು ತಿರಸ್ಕರಿಸಲಾಗಿತ್ತು. ಈಗ ಅಂದಾಜಿಗೆ ಸಾವಿರದೈನೂರು ಕೋಟಿಗೆ ಒಡೆಯನಾಗಿರುವ ಶಾರುಕ್ ಚಿಕ್ಕ ಧಾರಾವಾಹಿಗಳಲ್ಲಿ ನಟಿಸುತ್ತಲೇ ಪದಾರ್ಪಣೆ ಮಾಡಿದ್ದು. ಅವರೆಲ್ಲ ತಮ್ಮ ರಂಗದಲ್ಲೆದುರಾದ ಸೋಲಿಗೆ ಹೆದರಿ ‘ಅಯ್ಯೋ! ನನ್ನಿಂದಾಗುವುದಿಲ್ಲ’ ಎಂದು ನಿರ್ಧರಿಸಿದ್ದರೆ ಏನಾಗುತ್ತಿತ್ತು ಊಹಿಸಬಲ್ಲಿರಾ?

ದೇವರು ಬದ್ಕೆಂಬ ಖಾಲಿ ಹಾಳೆ ಕೊಟ್ಟು ಏನಾದರೂ ಬರೀರಿ ಎಂದರೆ ಚಿಕ್ಕಪುಟ್ಟದನ್ನು ಯಾಕೆ ಬರೆಯುವಿರಿ? ದೊಡ್ಡ ಕನಸುಗಳನ್ನೇ ಕಾಣಿರಿ ಎಂದವರು ಶಂಕರ್‌ನಾಗ್. ಬೆಳಿಗೆ ಏಳುತ್ತಿದ್ದಂತೆ ಉತ್ಸಾಹ ಮೂಡಬೇಕು. ಉಳಿದ ಪ್ರಾಣಿಗಳಂತೆ ಬರೀ ಹಸಿವು, ಕಾಮ ಮಾತ್ರ ನಮ್ಮ ಉದ್ದೇಶಗಳಲ್ಲ. ನಾಳಿನ ಸೊಗಸಾದ ಜೀವನದ ಕನಸು ಕಾಣಲು ರಾತ್ರಿಗಳಿವೆ. ಅದನ್ನು ಸಾಧಿಸಲು ಚಂದದ ಹಗಲುಗಳಿವೆ. ಸರಿಯಾಗಿ ನೋಡಿದಲ್ಲಿ ಆಕಾಶದಷ್ಟು ಅವಕಾಶವಿದೆ. ಸಾಧಿಸಬೇಕಾದ್ದನ್ನು ಪೂರ್ಣಗೊಳಿಸಲು ಬೇಕಾದ ಶ್ರದ್ಧೆ, ಅಂಕಿತಭಾವ, ಏಕಾಗ್ರತೆ ಎಲ್ಲವೂ ಬೇರೆಲ್ಲೋ ಇಲ್ಲದೇ ನಮ್ಮ ಮೆದುಳಲ್ಲೇ ಇವೆ.

ಬಹಳಷ್ಟು ಜನ ಆಲೋಚಿಸುತ್ತಾರೆ, ತಮ್ಮನ್ನು ಸರಿಯಾದ ಮಾರ್ಗದಲ್ಲಿ ಗೈಡ್ ಮಾಡುವ, ಸೋಲುಗಳಲ್ಲಿ ಧೈರ್ಯ ಹೇಳುವ, ತಮ್ಮ ಅನುಮಾನಗಳನ್ನು ಪರಿಹರಿಸುವ, ಜಗತ್ತಿಗೆ ಜಗತ್ತೇ ತಮ್ಮೆದುರಿಗೆ ತಿರುಗಿ ಬಿದ್ದರೂ ನಮ್ಮ ಜತೆಯಲ್ಲೇ ಇದ್ದು ಹುಮ್ಮಸ್ಸು ನೀಡುವ ಗೆಳೆಯ ಒಬ್ಬನಿದ್ದರೆ ಎಷ್ಟು ಚೆನ್ನ ಅಲ್ಲವಾ ಎಂದು. ನಿಜ ಅಂಥ ಸ್ನೇಹಿತನಿರಬೇಕು.

ಆದರೆ ಬೇರೊಬ್ಬ ವ್ಯಕ್ತಿಯಲ್ಲಲ್ಲ. ಅವನಲ್ಲೇ ಇರಬೇಕು!

ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಅಂತ ಸ್ನೇಹಿತ ಸಿಕ್ಕರೆ ಅದೃಷ್ಟವೇ. ನಮ್ಮಲ್ಲೇ ಇದ್ದರೆ ಸೋತಾಗ ಹೆಗಲಿಗಾಗಿ ಹುಡುಕುವುದಿಲ್ಲ. ನಮ್ಮೊಳಗಿನ ಶಕ್ತಿಗೆ ಬೇರೆಯವರ ಮೇಲೆ ಆಧಾರ ಪಡಬೇಕಿಲ್ಲ.

ಅಂಥ ಸ್ನೇಹಿತ ನಮ್ಮಲ್ಲಿರಬೇಕಾದರೆ ‘ಅವನು’ ಎಲ್ಲ ತಿಳಿದವನಾಗಿರಬೇಕು. ಧೈರ್ಯದ ಮಾತುಗಳು, ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಕ್ಷಮತೆ, ಮುನ್ನುಗ್ಗಿಸುವ ಛಾತಿ ಉಳ್ಳವನಾಗಿರಬೇಕಲ್ಲವೆ?

ಅಂತಹ ಸ್ನೇಹಿತನನ್ನು ಬೆಳೆಸಿಕೊಳ್ಳುಲೋಸುಗ ನಾವು ಓದುತ್ತಿರಬೇಕು. ತೆಗೆದುಕೊಳ್ಳುವ ಉಸಿರಿನಂತೆ ಜ್ಞಾನ ದಿನೇ ದಿನೇ ಮೆದುಳ ಜಗದೊಳಗೆ ಸೇರುತ್ತಿರಬೇಕು. ಎದುರಾಗುವ ಸೋಲುಗಳೆಲ್ಲ ಒಳಗಿಳಿಯುವಾಗ ‘ಅನುಭವ’ವಾಗಿ ಮಾರ್ಪಾಡಾಗಬೇಕು.

ಆಗ ಮನ ಮನದ ಒಳಗೂ ಮೂಡುವುದು ಬೆಳಕು. ಹೂದೋಟವಾಗುವುದು ದೇವರು ಕೊಟ್ಟ ಬಯಲು.

ಬೇರೆಯವರಿಗೂ ಸಹಾಯ ಮಾಡುವಷ್ಟು ಬೆಳಕು ನೀಡುವಷ್ಟು ಪ್ರಜ್ವಲಿಸುವುದು ಬದುಕು!

– ಹೇಮಾ ಪವಾರ್, ಬೆಂಗಳೂರುhemantaranga

ಅದ್ಯಾಕೆ ಅಷ್ಟು ರೂಡ್ ಆಗಿ ಉತ್ತರಿಸಿದೀಯ. ಅವಳು ಹುಡುಗಿ ಗೊತ್ತಿಲ್ವ ನಿನಗೆ?
ಎಂದಿದ್ದಕ್ಕೆ, ‘ಹುಡುಗಿಯಾದ್ರೆ ಎರಡು ಕೊಂಬ? ಸಮಾನತೆ ಬೇಕು ಅಂತೀರ ಮತ್ತೆ ಹೀಗೆ
ರಿಸರ್ವೇಶನ್ನು ಕೇಳ್ತೀರ’ ಅಂತಂದು ನಕ್ಕಿದ್ದ. ಹೌದಲ್ವ ಹುಡುಗಿ ಎಂದ ಮಾತ್ರಕ್ಕೆ
ಆಕೆಯನ್ನು ವಿಶೇಷವಾಗಿ ಉಪಚರಿಸಬೇಕಿತ್ತು ಅಂತ ನನಗನ್ನಿಸಿದ್ದೇಕೆ? ಪುರುಷರೊಡನೆ
ಸಮಾನತೆ ಬಯಸುವ ನಾವು, ಇತರ ಪುರುಷರಂತೆ ನಮ್ಮನ್ನು ಕಂಡಾಗ ಸ್ತ್ರೀ ಶೋಷಣೆ
ಅಂದುಕೊಂಡುಬಿಡುತ್ತೇವಲ್ಲ? ಸ್ತ್ರೀ ಪುರುಷ ಸಮಾನತೆಯ ಬಗ್ಗೆ ನನ್ನದು ಮೊದಲಿನಿಂದಲೂ
ಗೊಂದಲದ ಅಭಿಪ್ರಾಯಗಳೇ. ಸ್ಪಷ್ಟವಾಗಿ ಏನನ್ನು ತೀರ್ಮಾನಿಸಿಕೊಳ್ಳಲಾಗದೆ
ಚಡಪಡಿಸುತ್ತೇನೆ.

ಮೊನ್ನೆ ಟಿವಿ ಚಾನೆಲ್ ಒಂದರಲ್ಲಿ ವೈಶ್ಯಾವಾಟಿಕೆಯ ಕುರಿತು ಚರ್ಚಿಸುತ್ತಿದ್ದರು.
ಸ್ತ್ರೀ ಸ್ವಾತಂತ್ರ್ಯ ಮತ್ತು ಸಮಾಜದ ಸ್ವಾಸ್ಥ್ಯ ಚರ್ಚೆಯ ಪ್ರಮುಖ ವಿಷಯವಾಗಿತ್ತು.
ವೈಶ್ಯಾವಾಟಿಕೆಯನ್ನೇ ವೃತ್ತಿಯನ್ನಾಗಿಸಿಕೊಂಡಿದ್ದ ಯುವತಿ, ತಾನು ಸ್ವಇಚ್ಛೆಯಿಂದ ಈ
ಕೆಲಸಕ್ಕೆ ಬಂದಿದ್ದಾಗಿಯೂ, ಇತರ ಎಲ್ಲಾ ಕೆಲಸಗಳಂತೆ ಜೀವನ ನಿರ್ವಹಣೆಗಾಗಿ ತಾನು ಈ
ಕೆಲಸವನ್ನು ಆರಿಸಿಕೊಂಡಿರುವೆ, ತನ್ನ ವೃತ್ತಿಯ ಬಗ್ಗೆ ಪಶ್ಚಾತಾಪವಾಗಲೀ ದುಃಖವಾಗಲೀ
ತನಗೆ ಇಲ್ಲವೆಂದೂ ಹೇಳುತ್ತಿದ್ದಳು. ಚರ್ಚೆ ಮುಂದುವರೆದು ಸಮಾಜದ ಸ್ವಾಸ್ಥ್ಯದ ಬಗ್ಗೆ
ಹೊರಳಿತು. ವೈಶ್ಯಾವಾಟಿಕೆಗೆ ಬಂದವರೆಲ್ಲಾ ತಮ್ಮ ಇಚ್ಛೆಯಿಂದ ಬಂದಿರುವುದಿಲ್ಲ,
ಕೆಲವರನ್ನು ಬಲತ್ಕಾರವಾಗಿ ವೈಶ್ಯಾವಾಟಿಕೆಗೆ ಇಳಿಸುತ್ತಾರೆ. ಅದನ್ನು ಇತರ
ವೃತ್ತಿಗಳಂತೆ ಪರಿಗಣಿಸಲು ಸಾಧ್ಯವಿಲ್ಲ. ವೈಶ್ಯಾವಾಟಿಕೆಯಂತಹ ಕೊಳಕನ್ನು ಒಳಗೊಂಡಿರುವ
ಸಮಾಜದಲ್ಲಿ ಬದುಕುವುದು ಕಳವಳಕಾರಿಯೆಂದೂ, ಅದು ಪೇಯ್ಡ್ ರೇಪ್ (ಹಣನೀಡಿ
ಅತ್ಯಚಾರವೆಸಗುವುದು)  ಎಂದು, ಬಲತ್ಕಾರವಾಗಿಯಾಗಲೀ  ಸ್ವ ಇಚ್ಛೆಯಿಂದಾಗಲೀ
ವೈಶ್ಯಾವಾಟಿಕೆಯಿಂದ ಸಮಾಜದ ಮೇಲಾಗುವ ಪರಿಣಾಮಗಳು ಯೋಚಿಸುವಂತಹುದ್ದು.
ವೈಶ್ಯಾವಾಟಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದಾಗಲೀ, ಒಪ್ಪಿಕೊಳ್ಳುವುದಾಗಲೀ
ಗೊಂದಲದ ವಿಷಯವೇ ಎಂಬ ಕನ್ ಕ್ಲೂಶನ್ ನಿಂದ ಚರ್ಚೆ ಮುಗಿದಿತ್ತು.

ಸ್ತ್ರೀಸ್ವಾತಂತ್ರ್ಯದ ಬಗ್ಗೆ ಅವರ ಮಾತುಗಳನ್ನು ಕೇಳಿದಾಗ ನನ್ನಲ್ಲಿ ಅನೇಕ
ಗೊಂದಲಗಳುಂಟಾದವು. ಸಮಾಜದ ಸ್ವಾಸ್ಠ್ಯದ ವಿಷಯ ಬಂದಾಗ ಹೆಣ್ಣಿನ ಜೀವನ ಕ್ರಮವೇ ಅಷ್ಟು
ಪ್ರಾಮುಖ್ಯತೆ ಪಡೆದುಕೊಂಡುಬಿಡುತ್ತದಲ್ಲ? ಗಂಡಸು ಹೇಗಿದ್ದರು ಸಹಿಸುವ ಸಮಾಜ ಹೆಣ್ಣಿನ
ನಡತೆಯಿಂದ, ಆಕೆಯ ಜೀವನಕ್ರಮದಿಂದಲೇ ಅದರ ಆರೋಗ್ಯವನ್ನು ನಿರ್ಧರಿಸಿಕೊಳ್ಳೋದು ಏಕೆ?
ಹೆಣ್ಣಿನ ಹಲವು ನಿಲುವುಗಳಿಗೆ, ಅಭಿಪ್ರಾಯಗಳಿಗೆ ಮೈಲಿಗೆಯ ಆರೋಪ ಹೊರಿಸಿ, ಆಕೆ ಹೀಗೆ
ಇರಬೇಕು ಎಂದು ಅವಳ ಮೇಲೆ ಬಂಧನಗಳನ್ನು ಹೇರಿ ಅವಳ ಮನಸಿನಲ್ಲಿ ತಾನು ಅಬಲೆ
ನಿಸ್ಸಾಹಯಕಳು ಎಂಬತಹ ಭಾವನೆಗಳನ್ನು ಬೆಳೆಸುವ ಸಮಾಜ ಹೆಣ್ಣನ್ನು ಮಾತ್ರ
ನಿಯಂತ್ರಣದಲ್ಲಿಡಲು ಮಾಡಿರುವ ಹೇರಿಕೆಗಳಲ್ಲವೇ? ಇಂತಹ ಹೇರಿಕೆಗಳನ್ನು ಮೀರಿದ ಹೆಣ್ಣು
ಸಮಾಜದ ದೃಷ್ಟಿಯಲ್ಲಿ ಕೀಳು ಅನಿಸಿಬಿಡುತ್ತಾಳೆ! ಒಂದೇ ಗಂಡಿಗೆ ನಿಷ್ಠಳಾದ ಹೆಣ್ಣು
ಪತಿವ್ರತೆಯಾಗಿ ಆರೋಗ್ಯ ಸಮಾಜದ ಪ್ರತೀಕವಾದಂತೆ, ವಿವಿಧ ಕಾರಣಗಳಿಂದ ವೈಶ್ಯಾವೃತ್ತಿಗೆ
ಇಳಿದ ಹೆಣ್ಣು ಸಮಾಜದ ಸ್ವಾಸ್ಥ್ಯ ಕೆಡಿಸಿಬಿಡುತ್ತಾಳೆ!! ಒಂದಕ್ಕಿಂತ ಹೆಚ್ಚು
ಹೆಣ್ಣುಗಳ ಸಂಪರ್ಕ ಹೊಂದಿಯೂ ಗಂಡಸೊಬ್ಬ ಗೃಹಸ್ಥನಾಗಿ ಬಾಳುವುದು ಸಾಧ್ಯವಿದೆಯಾದರೇ,
ಹೆಣ್ಣಿಗೇಕೆ ಇದು ಸಾಧ್ಯವಿಲ್ಲ? ಇಷ್ಟಕ್ಕೂ ವೈಶ್ಯಾವಾಟಿಕೆ ಹೆಣ್ಣಿಂದ ಮಾತ್ರ
ಸಾಧ್ಯವಾಗುತ್ತದೆಯೇ? ಹೆಣ್ಣಿನಷ್ಟೇ ಗಂಡೂ ಸಹ ಅದರಲ್ಲಿ ಭಾಗಿಯಾಗಿರುತ್ತಾನಲ್ಲ
ಅವನನ್ನು ಪ್ರಶ್ನಿಸದ ಸಮಾಜ ಹೆಣ್ಣನ್ನೇಕೆ ದೂರುತ್ತದೆ? ಹೆಣ್ಣು ತನ್ನ ಮೈ
ಮಾರಿಕೊಳ್ಳುತ್ತಾಳೆಂದರೆ, ಕೊಂಡು ಕೊಳ್ಳುವವನು ಗಂಡಲ್ಲವೇ?
ಒಬ್ಬ ಪುರುಷ ಅನೇಕ ಹೆಂಗಸರೊಂದಿಗಿದ್ದಾಗ್ಯೂ ಸ್ತ್ರೀ ಆತನನ್ನು ಒಪ್ಪುತ್ತಾಳೆಂದರೆ
ಸ್ತ್ರೀಯ ಅದೇ ಪ್ರವೃತ್ತಿಯನ್ನು ಪುರುಷನ್ಯಾಕೆ ಕಡೆಗಣಿಸಬೇಕು ಎಂಬುದು ನನ್ನ ಬೇಸಿಕ್
ಪ್ರಶ್ನೆಯಾದರೂ, ನನ್ನಲ್ಲಿನ ಗೊಂದಲ ಅಷ್ಟೇ ಅಲ್ಲ. ಸಮಾನತೆ ಅಂದರೆ ಸ್ತ್ರೀಯು
ಪುರಷನಿಂದ ಸಾಧ್ಯವಾಗುವುದನ್ನೆಲ್ಲ ಮಾಡುವುದಷ್ಟೇ ಎಂದರ್ಥವೇ? ಅದೇ ನಿಜವಾದರೆ ಸ್ತ್ರೀ
ಸ್ವಾತಂತ್ರ್ಯ ಎಂಬ ಪದಕ್ಕೆ ಅರ್ಥವೇನಿದೆ? ಸ್ತ್ರೀಯೊಬ್ಬಳು ಪುರುಷನ ಫ್ಲರ್ಟಿಂಗನ್ನು
ಸಹಿಸಿಕೊಂಡು ತಾನು ಪತಿವ್ರತೆಯಾಗಿ ಉಳಿಯುವುದು ಸಾಧ್ಯವಿದೆ ಎಂದಾದರೆ, ಆ ಸ್ಥಿತಿ
ಅವಳಿಗೆ ಸಮಾಜದಲ್ಲಿ  ಭದ್ರತೆ ಮತ್ತು ಗೌರವ ತಂದುಕೊಡುತ್ತಿದೆಯಲ್ಲ. ಸಮಾಜವೆಂದರೇ
ಕೇವಲ ಪುರುಷರೆಂದಲ್ಲ, ಸಮಾಜವು ಸ್ತ್ರೀಪುರುಷರಿಬ್ಬರನ್ನೂ ಒಳಗೊಂಡಿರುತ್ತದೆ. ಹಲವು
ಗಂಡಸರ ಸಂಬಂಧವಿರಿಸಿಕೊಳ್ಳುವ ಹೆಣ್ಣನ್ನು ಕೀಳು ಎಂದು ಭಾವಿಸುವುದು ಸಮಾಜದ
ಪುರುಷರಷ್ಟೇ ಅಲ್ಲ, ಪತಿವ್ರತೆ ಎನಿಸಿಕೊಂಡಿರುವ ಇತರ ಸ್ತ್ರೀಯರ ನಿಲುವೂ ಇದೇ
ಆಗಿರುತ್ತದೆ. ಅಲ್ಲದೇ ನಮ್ಮ ಸಮಾಜಕ್ಕೆ ಪಾತಿವ್ರತ್ಯದ ಶೀಲ ಮುಂತಾದ ಕಲ್ಪನೆಗಳು
ಇರುವುದರಿಂದಲೇ ಇತರ ಪಾಶ್ಚಾತ್ಯ ದೇಶಗಳಿಗೆ  ಸಾಧ್ಯವಾಗದ ಕುಟುಂಬವ್ಯವಸ್ಥೆ ನಮ್ಮ
ದೇಶದಲ್ಲಿ ಸಾಧ್ಯವಾಗಿರುವುದು. ಸ್ತ್ರೀ ಪುರುಷ ಸಮಾನತೆ ಸಾಧಿಸಿದ ಅಥವಾ ಸಾಧಿಸಿದೆ
ಎನ್ನಲಾದ ಅಮೆರಿಕದಂತಹ ಮುಂದುವರೆದ ದೇಶಗಳಲ್ಲಿ ತೀರ ಶಾಲೆಯ ಮಕ್ಕಳಿಗೆ ಊಟದಲ್ಲಿ Anti
pregnancy pill ಗಳನ್ನು ಹಾಕಿಕೊಡುತ್ತಾರೆಂದರೆ, ನಮ್ಮ ಕುಟುಂಬ ವ್ಯವಸ್ಥೆಯಿಂದ
ಹಾಗು ಅದರಿಂದ ಉಳಿದಿರುವ ಸಮಾಜದ ಸ್ವಾಸ್ಥ್ಯದಿಂದ ನಮ್ಮ ಹಾಗೂ ನಮ್ಮ ಮುಂದಿನ
ಪೀಳಿಗೆಗೆ ಎಷ್ಟು ಅನುಕೂಲವಾಗುತ್ತಿದೆಯಲ್ಲವೇ?

ಸಮಾನತೆ ಮತ್ತು ಸ್ತ್ರೀ ಸ್ವಾತಂತ್ರ್ಯ ಎರಡೂ ಒಂದಕ್ಕೊಂದು ಪೂರಕ. ಸಮಾಜದ ಸ್ವಾಸ್ಥ್ಯ
ಕೆಡಿಸುವುದಾಗಲೀ ಉಳಿಸುವುದಾಗಲೀ ಹೆಣ್ಣಿನ ಕೈಯಲ್ಲಿ ಸಾಧ್ಯವೆನ್ನುವುದಾದರೆ ಅದು
ಸ್ತ್ರೀ ಕುಲಕ್ಕೆ ಸಂದ ಗೌರವವಲ್ಲವೇ? ಹೀಗೆ ಎರಡೂ ಕೋನಗಳಲ್ಲಿ ಯೋಚಿಸಿದಾಗ ಯಾವುದು
ಸರಿ ಎಂದು ತೀರ್ಮಾನಿಸಲಾಗದೆ ಮತ್ತೆ ಮತ್ತೆ ಅದೇ ಗೊಂದಲದ ಗುಂಡಿಗೆ ಬೀಳುತ್ತೇನೆ.

(ನಮ್ಮ ಪ್ರಯತ್ನಕ್ಕೆ ನಿಮ್ಮ ತೀರ್ಪು)

ಸಾಹಿತ್ಯದಂಬರದಲ್ಲಿ ಮತ್ತೊಂದು ಮಹಾನಕ್ಷತ್ರವೇ ಸಡಗರ

ಪತ್ರಿಕಾರಂಗದಲ್ಲಿ ಈ ರೀತಿಯ ಒಳ್ಳೆಯ ಸಡಗರದ, ಸದಭಿರುಚಿಯ ಪತ್ರಿಕೆ ತುಂಬಾ ವಿರಳ. ಅತಿ ಅಪರೂಪ. ಅಪರಿಚಿತನಾದ ನನಗೆ ಎರಡು ಪುಸ್ತಕ ಕಳುಹಿಸಿದ್ದೀರಿ, ತುಂಬಾ ಧನ್ಯವಾದಗಳು. ಇದರ ಯಶಸ್ಸಿಗಾಗಿ ನಾನು ದುಡೀತೀನಿ ಕಣ್ರಿ. ಯಾಕಂದ್ರೆ ಸಾಹಿತ್ಯದಲ್ಲಿ ದೊಡ್ಡವರ ಮಾತು ಮಾತ್ರ ನಡೆಯುತ್ತದೆ. ಆದ್ರೆ ನೀವೆಲ್ಲ ವಿದ್ಯಾರ್ಥಿಗಳು. ನನಗೆ ತುಂಬಾ ಹೆಮ್ಮೆ. ಎಷ್ಟು ಹೇಳಿದರೂ ಕಡಿಮೆ.

ಹಾಗೆಯೇ ಸರ್‌ಜಿ, ನಾನು ಬರೆದಿರುವ ಕೆಲವು ಹನಿಗವನ, ನಗೆಹನಿ ‘ಸಡಗರ’ದಲ್ಲಿ ಪ್ರಕಟಿಸಲು ಕೋರುತ್ತೇನೆ. ಹಾಗೆಯೇ ದಯಮಾಡಿ ಎಲ್ಲಾ ಪತ್ರಿಕೆಗಳಲ್ಲಿರುವಂತೆ ‘ಸ್ನೇಹ’ದ ಬಗ್ಗೆ ಅಂಕಣ ಪ್ರಾರಂಭಿಸಿ. ‘ಸ್ನೇಹ’ ಅಂಕಣದಿಂದ ಪರಿಚಯವಾಗಿ ‘ಸಡಗರ’ ತುಂಬು ಸಡಗರದಿಂದ ಕರುನಾಡಿನ ಮೂಲೆ ಮೂಲೆಯಲ್ಲೂ ಓಡಾಡಲಿ ಎಂದು ಹಾರೈಸುವೆ.

– ಸಿದ್ದು.ಬಿ.ಮಠಪತಿ
ಗುಲಬರ್ಗಾ

ಚಂದ್ರಯಾನ ಜುಟ್ಟಿನ ಮಲ್ಲಿಗೆಯೇ

ಚಂದ್ರಯಾನದ ಪ್ರಯೋಜನ ಹಾಗೂ ಅಪ್ರಸ್ತುತತೆಯ ಬಗ್ಗೆ ಮೂಡಿ ಬಂದ ಡಿಬೇಟ್ ಅದ್ಭುತವಾಗಿತ್ತು. ನಮ್ಮ ದೇಶದಲ್ಲಿ ವಿಜ್ಞಾನ ಹೆಚ್ಚು ಚರ್ಚೆಗೊಳಗಾಗುವುದಿಲ್ಲ. ದೊಡ್ಡ ದೊಡ್ಡ ಪತ್ರಿಕೆಗಳಲ್ಲಿ, ಟಿವಿ ಚಾನೆಲ್ಲುಗಳಲ್ಲಿ ರಾಜಕೀಯ, ಸಿನೆಮಾ, ಫ್ಯಾಶನ್ನು, ಸಾಹಿತ್ಯಕ್ಕೆ ಕೊಡುವ ಪ್ರಾಮುಖ್ಯತೆಯನ್ನು ವಿಜ್ಞಾನಕ್ಕೆ ಕೊಡುವುದಿಲ್ಲ.
‘ಸಡಗರ’ದಲ್ಲಿ ವಿಜ್ಞಾನ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸುವ ಲೇಖನಗಳು ಹೆಚ್ಚೆಚ್ಚು ಮೂಡಿ ಬರಲಿ.

– ಮಂಜುನಾಥ್, ಶ್ರವಣಬೆಳಗೊಳ

ಮುಷ್ಟಿಯಲ್ಲಿ ಮಿಲೇನಿಯಂ

ನಾಗೇಶ್ ಹೆಗಡೆಯವರು ನನ್ನ ಅಚ್ಚುಮೆಚ್ಚಿನ ಬರಹಗಾರರಲ್ಲಿ ಒಬ್ಬರು. ಪ್ರಕೃತಿಯ ಬಗ್ಗೆ, ವಿಜ್ಞಾನ ತಂತ್ರಜ್ಞಾನದ ಬಗ್ಗೆ ವಿಸ್ಮಯವನ್ನು, ಕುತೂಹಲವನ್ನು ನನ್ನಲ್ಲಿ ಬಿತ್ತಿದವರು ಅವರು. ತೇಜಸ್ವಿಯವರ ಹಾಗೂ ನಾಗೇಶ್ ಹೆಗಡೆಯವರ ವೈಜ್ಞಾನಿಕ ಬರಹಗಳನ್ನು ಓದಿಯೇ ನಾನು ವಿಜ್ಞಾನದ ವಿದ್ಯಾರ್ಥಿಯಾದದ್ದಕ್ಕೆ ಹೆಮ್ಮೆಯನ್ನು ಪಡುತ್ತಿದ್ದದ್ದು.
ಮಿಲೇನಿಯಂ ಸಂಭ್ರಮದ ನೆಪದಲ್ಲಿ ವಿಜ್ಞಾನ ಹಾಗೂ ಅದರ ಸಾಮಾಜಿಕ ಮುಖದ ಅನಾವರಣವನ್ನು ಮಾಡಿಸುವ ‘ಮುಷ್ಟಿಯಲ್ಲಿ ಮಿಲೇನಿಯಂ’ ಕೃತಿಯ ಪರಿಚಯ ಮಾಡಿಸಿದ ಸುಪ್ರೀತ್‌ಗೆ ಥ್ಯಾಂಕ್ಸ್.

-ಸಂಧ್ಯಾ.ಎಸ್, ಚಿಕ್ಕಮಗಳೂರು

ತೂರಿದ ಕಲ್ಲಿನದ್ಯಾವ ಧರ್ಮ?

ನಮ್ಮ ಎಲ್ಲಾ ಸಾಮಾಜಿಕ ಚರ್ಚೆಗಳಲ್ಲಿ ಕೋಮುವಾದ, ಅಲ್ಪ ಸಂಖ್ಯಾತರ ಓಲೈಕೆ, ದಿಕ್ಕಿಲ್ಲದ ವಿಚಾರವಾದ, ಹಿಪಾಕ್ರಸಿಗಳು ತುಂಬಿ ಹೋಗಿವೆ. ಈ ಸಂದರ್ಭದಲ್ಲಿ ನಿಮ್ಮ ನೇರ ಅನಿಸಿಕೆಗಳಿಂದ ಕೂಡಿದ ಸಂಪಾದಕೀಯ ಮನಮುಟ್ಟುವಂತಿತ್ತು.
ಹಿಂಸೆಗೆ, ಕ್ರೌರ್ಯಕ್ಕೆ ಯಾವ ಧರ್ಮವೂ ಇಲ್ಲ. ಬಣ್ಣವೂ ಇಲ್ಲ. ಅದನ್ನೆದುರಿಸಲು ಸರಕಾರಕ್ಕೂ ಯಾವ ಧರ್ಮ, ಜಾತಿಯ ಮುಖವಾಡವಿರಬಾರದು. ಈ ಸರಳ ಸತ್ಯವನ್ನು ನಮ್ಮ ರಾಜಕಾರಣಿಗಳು ಅದೆಂದು ಅರ್ಥ ಮಾಡಿಕೊಳ್ಳುತ್ತಾರೋ.

– ರಘು.ವೈ, ಮಂಗಳೂರು

 

– ಸುಪ್ರಿಯಾ.ಎಸ್, ಬೆಂಗಳೂರು

(ಕಳೆದ ಸಂಚಿಕೆಯಲ್ಲಿ ಮುಖಪುಟದ ವಿಷಯ ‘ಗೂಡು ಬಿಟ್ಟ ಹಕ್ಕಿಗಳು’ ಸಂಬಂಧಿಸಿದಂತೆ ಪ್ರಕಟವಾದ ಲೇಖನಗಳಿಗೆ ಪ್ರತಿಕ್ರಿಯೆಯಾಗಿ ಬಂದ ಲೇಖನ)

ಓದಿಗಾಗಿ, ಕೆಲಸಕ್ಕಾಗಿ, ಸೌಕರ್ಯಗಳಿಗಾಗಿ ಮನೆಯಿಂದ ದೂರ ಇದ್ದು ಬದುಕುವ ಪದ್ಧತಿ ಸರಿಯೇ?

ಇಲ್ಲ, ಓದು, ಕೆಲಸ ಮತ್ಯಾವುದೋ ಕಾರಣಕ್ಕೆ ಮನೆಯಿಂದ ದೂರ ಉಳಿಯುವುದು ಸರಿಯಲ್ಲ. ಇದರಿಂದ ಪರಂಪರಾಗತವಾಗಿ ಬಂದ ಬಾಂಧವ್ಯಕ್ಕೆ ಕುಂದುಂಟಾಗುತ್ತದೆ. ಮನುಷ್ಯನಿಗೆ ಸಹಜವಾಗಿ ಸಿಕ್ಕಬೇಕಾದ ಕೌಟುಂಬಿಕ ಸಂಸ್ಕಾರಗಳು ದೊರೆಯದೆ ಆತನ ವ್ಯಕ್ತಿತ್ವ ಅಪೂರ್ಣವಾಗಿ ಉಳಿಯುತ್ತದೆ.

ತಂದೆ ತಾಯಿ ಇಬ್ಬರೂ ದುಡಿಯುವ, ನಗರದ ಅನೇಕ ಕುಟುಂಬಗಳಲ್ಲಿ ಮಕ್ಕಳು ಮನೆಯಲ್ಲಿರುವುದಿಲ್ಲ. ದುಡಿಮೆಯ ಗಡಿಬಿಡಿಯಲ್ಲಿ ಮಕ್ಕಳ ಕಡೆಗೆ ಹೆಚ್ಚಿನ ಗಮನ ಕೊಡಲಾಗುವುದಿಲ್ಲವೆಂದು ತಂದೆ ತಾಯಿಯರು ಅವರನ್ನು ದೂರದ ರೆಸಿಡೆನ್ಷಿಯಲ್ ಸ್ಕೂಲುಗಳಲ್ಲಿ ಬಿಡುತ್ತಾರೆ. ಚಿಕ್ಕ ವಯಸ್ಸಿನಲ್ಲಿ ತಾಯಿಯ ಆರೈಕೆಯಲ್ಲಿ, ತಂದೆಯ ಕಣ್ಣಳತೆಯ ಶಿಸ್ತಿನಲ್ಲಿ ಬೆಳೆಯಬೇಕಾದ ಮಗು ಅನಾಮಿಕರಾದ ಶಿಕ್ಷಕರ ಬಳಿ ಬೆಳೆಯುತ್ತದೆ. ತಾಯಿಯ ಪ್ರೀತಿಯಿಂದ, ಕಕ್ಕುಲತೆಯಿಂದ ಅದು ವಂಚಿತವಾಗುತ್ತದೆ. ಮುಂದೆ ಅದೆಷ್ಟೇ ಬಯಸಿದರೂ  ಆ ಮಗುವಿಗೆ ಕಳೆದು ಹೋದ ಬಾಲ್ಯದ ಮಮಕಾರವನ್ನು, ಪ್ರೀತಿಯನ್ನು ಕೊಡುವುದಕ್ಕೆ ಯಾರಿಗೂ ಸಾಧ್ಯವಾಗುವುದಿಲ್ಲ. ಮಗುವಿನ ಬಾಲ್ಯ ಅಪೂರ್ಣವಾಗಿಯೇ ಉಳಿದುಹೋಗುತ್ತದೆ.

ಓದಿಗಾಗಿ ದೂರದ ಊರುಗಳಿಗೆ ಹೋಗುವವರು ಹೆಚ್ಚಿನ ಸ್ವಾತಂತ್ರ್ಯವನ್ನು ಪಡೆಯುತ್ತಾರಾದರೂ, ಓದಿನಲ್ಲಿ ವಿನಿಯೋಗಿಸುವುದಕ್ಕೆ ಹೆಚ್ಚಿನ ಸಮಯ ಅವರಿಗೆ ಲಭ್ಯವಾಗುತ್ತದೆಯಾದರೂ ಮನೆಯೆಂಬ ಘಟಕದಲ್ಲಿ ದೊರೆಯುವ ಅನುಭವದಿಂದ ವಂಚಿತರಾಗುತ್ತಾರೆ. ತಮ್ಮ ಜವಾಬ್ದಾರಿಗಳು, ತಮ್ಮ ವ್ಯಕ್ತಿತ್ವದ ಓರೆಕೋರೆಗಳು, ತಾಯಿ ತಂದೆಯರ ವ್ಯಕ್ತಿತ್ವದ ಪ್ರಭಾವ ಅವರಿಗೆ ಸಿಕ್ಕುವುದಿಲ್ಲ. ಜೊತೆಗೆ ಮನೆಯಿಂದ ದೂರ ಉಳಿದಾಗ ಹಾದಿ ತಪ್ಪಲು ಸಾವಿರಾರು ಪ್ರಲೋಭನೆಗಳು ಸಿಕ್ಕುತ್ತವೆ. ಮನೆಯಲ್ಲಿ ದುಶ್ಚಟಗಳಿಗೆ ಸಿಕ್ಕದಿದ್ದ ಸ್ವಾತಂತ್ರ ಹೊರಗೆ ಸಿಕ್ಕುತ್ತದೆ. ಇದರಿಂದ ಓದಿನಲ್ಲಿ ಅಡಚಣೆಯಾಗುತ್ತದೆ. ಓದಿನಲ್ಲಿ, ವಯ್ಯಕ್ತಿಕ ಬದುಕಿನಲ್ಲಿ ಅನಿರೀಕ್ಷಿತ ಅವಘಡಗಳು ಸಂಭವಿಸಿದಾಗ, ವಯೋ ಸಹಜವಾದ ಗೊಂದಲಗಳಲ್ಲಿ ಮುಳುಗಿದಾಗ ಮನಸ್ಸು ಕದಡಿದಾಗ ಅವನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಾ ಸೂಕ್ತವಾದ ಸಲಹೆ, ಬೆಂಬಲ ನೀಡುವ ಆತ್ಮವಿಶ್ವಾಸ ವೃದ್ಧಿಸುವ ಮನೆಯ ಪರಿಸರ ಮನೆಯಿಂದ ದೂರವಿರುವವರಿಗೆ ಸಿಕ್ಕುವುದಿಲ್ಲ.

ಓದು, ಕೆಲಸ ಎಂದು ದೂರದ ಊರುಗಳಲ್ಲಿ,ದೇಶಗಳಲ್ಲಿ ಇರುವ ಜನರು ತಮ್ಮವರೆಲ್ಲಾ ಇದ್ದರೂ ಅನಾಥರಂತೆ ಬದುಕಬೇಕಾಗುತ್ತದೆ. ನಮ್ಮವರ, ಅಕಾರಣವಾಗಿ ನಮ್ಮನ್ನು ಪ್ರೀತಿಸುವವರ ಆತ್ಮೀಯತೆಯಿಲ್ಲದೆ ಬದುಕನ್ನು ಕೃತಕ ನಗೆಗಳ, ಸ್ವಾರ್ಥದಿಂದ ಕೂಡಿದ ಮೆಚ್ಚುಗೆಗಳ ನಡುವೆ ಕಳೆಯಬೇಕಾಗುತ್ತದೆ.

ದುಡ್ಡಿನ ಹಿಂದೆ ಬಿದ್ದು, ಸ್ವಾರ್ಥಕ್ಕಾಗಿ, ಸುಖ ಸೌಕರ್ಯದ ಆಸೆಯಿಂದ ಮನೆಯಿಂದ ದೂರಾಗುವವರಿಗೆ ಅವೆಲ್ಲಾ ದೊರಕಬಹುದು ಇಲ್ಲವೇ ದೊರಕದಿರಬಹುದು. ಅವರು ತಮ್ಮ ಮನೆಯಲ್ಲಿ ಇದ್ದದ್ದಕ್ಕಿಂತ ಹೆಚ್ಚು ಸುಖವಾಗಿ, ಸೌಕರ್ಯಗಳನ್ನು ಸಂಪಾದಿಸಬಹುದು. ಆದರೆ ಅವರ ಬದುಕಿನ ಪುಸ್ತಕದಲ್ಲಿನ ಅನೇಕ ಹಾಳೆಗಳು ಖಾಲಿಯಾಗಿ ಉಳಿದುಹೋಗುತ್ತವೆ. ಏನೆಲ್ಲ ಇದ್ದರೆ ಏನು, ಮನುಷ್ಯನ ಮನಸ್ಸು ತುಂಬಿದ ಮನೆಯಾಗದಿದ್ದ ಮೇಲೆ?

ಅಲ್ಲವೇ?

-ರಂಜಿತ್ ಅಡಿಗ, ಕುಂದಾಪುರ

ಹಾದಿಯಲಿ ಒಂದಿಷ್ಟು ಸಿಗುತ್ತದೆ
ಸಾಕಷ್ಟು ಹೋಗುತ್ತದೆ
ತುಲನೆ ಮಾಡಿ ನೋಡಿದರೆ
ಹೋದಷ್ಟೇ ನೋವು,
ಸಿಕ್ಕಷ್ಟೂ ಸಂಭ್ರಮ…

ಜನರು ಹೇಳುವರು
ತಲುಪಲಾಗದು
ಗುರಿಯೆಂಬುದು ಬಹಳ ದೂರ…
ಅರಿವಿದೆಯೆನಗೆ
ಯಾರೂ ಹೋಗರು ಸೋತು
ಕೇಳಿದರೆ ಎದೆಯ ಮಾತು.. 

path

ಡೇರೆ ಹಾಕಿ ಮಲಗಿದವರು
ಹೊಟ್ಟೆಕಿಚ್ಚಿನಿಂದ ಸುಡುವವರು
ಸಾಗಲಾರೆ ಎಂದು ಹಂಗಿಸುವವರು
ದಾರಿ ತುಂಬಾ ಸಿಗುವರು
ಪ್ರೀತಿಯಿಂದ ನೇವರಿಸುವೆನು,

ಕಾರುವ ಕಣ್ಣುಗಳೂ ತಣ್ಣಗಾಗಬಹುದು
ನೋಡುವ ಆಸೆಯಿದ್ದರೆ
ನಿಲುಕಿದಷ್ಟೂ ನೋಟವಿದೆ,
ಸಾಗುವ ಇಚ್ಚೆಯಿದ್ದರೆ
ನಡೆದಷ್ಟೂ ದಾರಿಯಿದೆ

ಬದುಕಿನ ಸವಿ ಹೊತ್ತು
ಹೊಡೆಸಬೇಕಿದೆ
ರಸ್ತೆಗೇ ಸುಸ್ತು!

– ಮಚೆಂಪು

‘ಮಚ್ಚಿ ನಾಲ್ಕ್ ವರ್ಷ ನಾವ್ ಕಣ್ಣಿಗೆ ಎಣ್ಣೆ ಬಿಟ್ಕಂಡು, ಹೊಟ್ಟೆಗ್ ಇನ್ನೇನೋ ಬಿಟ್ಕಂಡು ಓದೋದ್ಯಾಕೆ?’ coffee ಬಾರ್ ಎದುರು ನಿಂತು ನಾನು ಮಲ್ಲಿ ಮಾತಾಡ್ತಿದ್ವಿ. ಬಾರ್ ಅನ್ನೋ ಹೆಸ್ರು ಕಂಡ್ ಕೂಡ್ಲೆ ನಾನು ವೇದಾಂತಿ ಆಗೋಯ್ತಿನಿ ಅನ್ನೋದು ಮಲ್ಲಿಯಾದಿಯಾಗಿ ನನ್ ದೋಸ್ತರೆಲ್ಲರ ಆರೋಪ. ಅವತ್ತೂ ಅಂಗೇ ಆಯ್ತು. ನಾನು ನಮ್ ದೇಶದ ಲಕ್ಷಾಂತರ ಮಂಡಿ engineering ಹುಡುಗ್ರ ಜೀವ್ನದ ಅರ್ಥವನ್ನೇ question ಮಾಡ್ಬಿಟ್ಟಿದ್ದೆ.

ಮಲ್ಲಿ ಕಾಫಿ ಹೀರಿ ತುಸು ಸುಧಾರಿಸ್ಕಂಡು ಶುರು ಹಚ್ಕಂಡ, ‘ನೋಡ್ ಶಿಷ್ಯ, ನಾಲ್ಕ್ ವರ್ಷ ಕಷ್ಟ ಬಿದ್ ಓದೋದು ಯಾರಪ್ಪನ್ ಉದ್ಧಾರ ಮಾಡಕೂ ಅಲ್ಲ. ದೇಶ ಸೇವೆಗೂ, ವಿದ್ಯಾರ್ಜನೆಗೂ ಅಲ್ಲ. ಈ ಕಂಪ್ನಿಗಳು expect ಮಾಡೋ ಅಗ್ರಿಗೇಟ್ maintain ಮಾಡೋಕಷ್ಟೇ. ಒಂದ್ಸಲ ಒಂದ್ ಒಳ್ಳೇ ಕಂಪ್ನೀಲಿ ಪ್ಲೇಸ್ ಆಗ್ಬಿಟ್ರೆ ಸಾಕು. ಮೊದ್ಲ ಸಂಬ್ಳದಲ್ಲಿ ಒಂದ್ ಎನ್ ಸೀರೀಸ್ ಮೊಬೈಲು, ಎರಡ್ನೇ ತಿಂಗ್ಳ್ ಸಂಬ್ಳದಲ್ಲಿ ಒಂದು ಜಿಂಕ್ ಚಾಕ್ ಐಪಾಡು…’

ಮಗಂದು ಹಗಲುಗನಸಿನ ಮ್ಯಾಟನಿ ಶೋ ಶುರುವಾಯ್ತು ಅಂದ್ಕಂಡು ನಾನು, ‘ಮುಚ್ಚಲೇ ಸಾಕು, ಕಂಪ್ನಿಗಳು ಕಂಡ್ ಕಂಡವ್ರಿಗೆಲ್ಲಾ ಪಿಂಕ್ ಸ್ಲಿಪ್ಪು ಕೊಟ್ಟು ಮನೀಗ್ ಕಳಿಸ್ತಿದ್ರೆ ಇವ್ನಿಗೆ ಆಗ್ಲೇ ಫೈ ಇಯರ್ ಪ್ಲಾನು’ ಅಂತ ದಬಾಯಿಸಿ ಒಂದು ಆಲೂ ಬನ್ನಿಗೆ ಆರ್ಡರ್ ಮಾಡಿದೆ.

ರಾತ್ರಿ ಊಟ ಮುಗ್ಸಿ ರೆಕಾರ್ಡ್ ಬರಿಯೋಕೆ ಕುಂತಾಗ ಮತ್ತೆ ಅದೇ ಪ್ರಶ್ನೆ ತಲೆಯಾಗೆ ಗುಯ್‍ಗುಡೋಕೆ ಶುರುವಾಯ್ತು. ಇಷ್ಟೆಲ್ಲ ಒದ್ಕಂಡು, ಬರ್ಕಂಡು ಮಾಡೋದೆಲ್ಲ ಒಂದಿನ ಕೆಲ್ಸಕ್ಕೆ ಸೇರ್ಕಳ್ಳಕಾ. ಓದೋಕ್ ಮುಂಚೆನೇ ವರ್ಷಕ್ಕೆ ಇಷ್ಟ್ ಲಕ್ಷ ಕೊಡೋ ಕಂಪ್ನಿ ಮೇಲೆ ಕಣ್ ಮಡಗಿ ಅಗ್ರಿಗೇಟು ಸಂಪಾದ್ಸೋದು, ನಾವ್ ಬದುಕಿರೋದೇ ಆ ಕಂಪ್ನಿನೀನ ಅದ್ರ ಯಜಮಾನ್ನ ಉದ್ಧಾರ ಮಾಡೋಕೆ ಅಂದ್ಕಂಡು ನಲಿಯೋದು. ಅಮೇರಿಕಾದ ಕಂಪ್ನಿ ಆದ್ರಂತೂ engineering ಮೊದ್ಲ ದಿನದಿಂದ್ಲೇ ಕಾವೇರಿ ನದಿಗೆ ಥೇಮ್ಸ್ ನದಿ ಸ್ಮೆಲ್ಲು ಬರ್ತಿದೆ ಅಂತ imagine ಮಾಡ್ಕಳದು, ಕನ್ನಡ ಪೇಪರ್ ಕಂಡ್ರೆ ಮೈಲಿಗೆಯಾದವ್ರ ಹಾಗೆ ಮುಖ ಸಿಂಡರಿಸಿಕೊಳ್ಳೋದು, ಹಳ್ಳಿಯೋವ್ರು, ಆರ್ಡಿನರಿ ಬಟ್ಟೆ ಹಾಕ್ಕಂಡಿರೋರು ಕಂಡ್ರೆ ಸಿಲ್ಲಿಯಾಗಿ ನೋಡದು, ಉಪ್ಪಿಟ್ಟು, ಚಿತ್ರನ್ನ, ಅವಲಕ್ಕಿ, ಚಪಾತಿ, ರೊಟ್ಟಿನೆಲ್ಲ ಮ್ಯೂಸಿಯಂ ಶೋ ಪೀಸ್ ಕಂಡಂಗೆ ಕಾಣೋದು, ಪಿಜ್ಜಾ, ಬರ್ಗರು, ಬ್ರೆಡ್ಡು ಜಾಮು ಅಂತ ಜಪ ಮಾಡದು, ಐಪಾಡಲ್ಲಿ ಅಪ್ಪಿ ತಪ್ಪಿನೂ ಸಿ.ಅಶ್ವತ್ ಹಾಡಿದ ಭಾವಗೀತೆ ಕೇಳ್ಬಾರ್ದು, ಅದ್ಯಾವನೋ ಅಲ್ಲಿ ಅಮೆರಿಕಾದಲ್ಲಿ ತಂತಿ ಹರಿದುಹೋಗೊ ಅಂಗೆ ಗಿಟಾರ್ ಕೆರೆದ್ರೆ ಅದ್ನೇ ಭಕ್ತಿಗೀತೆಯಂಗೆ ಕೇಳಿ ಪಾವನರಾಗ್ತಾರೆ. ಅಮೇರಿಕಾಗೆ ಹೋಗೋ ಕನಸ್ ಕಾಣ್ತಾ ಇಲ್ಲೇ ಅಮೇರಿಕನ್ ಆಗಿ ಹೋಗ್ತಾರೆ.

ಅದು ಹಾಳಾಗ್ ಹೋಗ್ಲಿ, ಓದ್ನಾದ್ರೂ ನೆಟ್ಟಗೆ ಮಾಡ್ತೀವಾ? ಹಿಂದೆ ನಮ್ ಗುರುಕುಲಗಳಲ್ಲಿ ವಿದ್ಯಾಭ್ಯಾಸ ಮುಗಿದ್ ಮೇಲೆ ಗುರುಗಳು ಶಿಷ್ಯನ್ನ ಕರೆದು, ‘ಮಗು ನಾನ್ ಕಲಿತಿರೋದ್ನೆಲ್ಲಾ ನಿಂಗೆ ಧಾರೆಯೆರ್ದಿದೀನಿ. ನಂಗೆ ತಿಳ್ದಿರೋದೇ ಇಷ್ಟು. ಇನ್ನು ಹೆಚ್ಚಿಂದು ಬೇಕಂದ್ರೆ ಇಂಥವ್ರ ಹತ್ರ ಹೋಗ್ ಕಲಿ. ಸಾಕನ್ನಿಸಿದ್ರೆ ನಿನ್ ವಿದ್ಯೆ ಸಮಾಜಕ್ಕೆ ಉಪಯೋಗ ಹಾಗಂಗೆ ಬದುಕು. ಒಳ್ಳೇದ್ ಮಾಡು’ ಅಂತ ಹರಸ್ತಾ ಇದ್ರು. ಇಂಥ ಗುರುಕುಲ ಇರೋದು ನಮ್ ಮಕ್ಳನ್ನ  ಉದ್ಧಾರ ಮಾಡಕ್ಕೆ ಅದ್ಕಂಡು ರಾಜ್ರು ಕಣ್ಮುಚ್ಕಂಡು ಸೌಲಭ್ಯ ಕೊಡೋರು, ಊರ ಜನ ಅಕ್ಕಿ ಬೇಳೆ ಕಳ್ಸೋರು. ಗುರುಗಳು ತಮ್ ಹೊಟ್ಟೆ ಬಟ್ಟೆಗೆಷ್ಟ್ ಬೇಕೋ ಅಷ್ಟು ತಕ್ಕೊಂಡು ಶಿಷ್ಯರ್ನ ತಯಾರ್ ಮಾಡೋರು.

ಈಗೇನಾಗಿದೆ? ಗುರು ಅವ್ರಪ್ಪಂದು ಲಕ್ಷ ಲಕ್ಷ ಕೊಟ್ಟು ಓದಿರ್ತಾನೆ. ಒಂದ್ಸಲ ಡಿಗ್ರಿ ಕೈಗ್ ಸಿಕ್ಮೇಲೆ ಅದ್ನ ಝೆರಾಕ್ಸ್ ಮಶೀನಲ್ಲಿ ಹಾಕಿ ನೂರು ಸಾವಿರ ಕಾಪಿ ತೆಗೆದಂಗೆ ನೋಟು ಸಂಪಾದಿಸೋಕೆ ನಿಲ್ತಾನೆ. ಒಂದ್ ಕಾಲೇಜಲ್ಲಿ ಸಾಕಾಗಿಲ್ಲ ಅಂತ ಎರಡು ಮೂರಕ್ಕೆ guest faculty ಆಗಿ ಹೋಗ್ತಾನೆ, ಅದೂ ಸಾಲಲ್ಲ ಅಂದ್ರೆ ಮನೇಲೆ ಅಂಗಡಿ ತೆಕ್ಕೋತಾನೆ. ಶಿಷ್ಯಂಗೆ ವಿದ್ಯೆ ಧಾರೆಯೆರೆಯೋ ಬದ್ಲಿಗೆ ಅವ್ನ ದುಡ್ಡಿ ಕಿತ್ಕಂಡು ತನ್ನತ್ರ ಇರೋ ಅಂಥದ್ದೊಂದು ಸರ್ಟಿಫಿಕೇಟು ಸಿಕ್ಕೋ ಹಂಗೆ ಮಾಡ್ತಾನೆ. ‘ತಗಾ, ಇದ್ನ ಮಡಗ್ಕಂಡು ನೀನೂ ಸುಲಿಯೋಕೆ ನಿಂತ್ಕೋ’ ಅಂತ ಹುರಿದುಂಬಿಸ್ತಾನೆ. ಯಾರ್ ಹೆಚ್ ದುಡ್ ಕೊಡ್ತಾರೊ ಅಂಥವ್ರ ಪಾದಕ್ಕೆ ಅಡ್ ಬೀಳು ಅಂತ ಉಪದೇಶ ಮಾಡ್ತಾನೆ. ಎಲ್ಲಿಂದ ಎಲ್ಲೀಗ್ ಬಂದ್ವಿ ಶಿವಾ?

ನಮ್ daily lifeನಾಗೆ, ನಮ್ ಕನಸು, ಆದರ್ಶ, ಗುರಿಗಳೊಳ್ಗೆ ಈ ದುಡ್ಡು ಅನ್ನೋದು ಅದ್ಯಾವಾಗ ಬಂದ್ ಸೇರ್ತೋ ಗೊತ್ತಿಲ್ಲ. ‘ನೀ ಬದುಕಿರೋದು ಉಣ್ಣಕ್ಕಲ್ಲ, ಉಣ್ಣೋದು ಬದುಕೋದಕ್ಕೆ’ ಅಂತಂದ ದೊಡ್ ಮನುಷ್ಯನ ಈ ದೊಡ್ ಮಾತನ್ನ ಮರ್ತು ನಾವು ಬದ್ಕಿರೋದೇ ದುಡ್ ದುಡಿಯೋಕೆ, ನಂಗೆ ಸಾಕಾಗಿ ಮಿಕ್ಕೊವಷ್ಟು ಮಾತ್ರ ಅಲ್ಲ ನಮ್ ಮೊಮ್ಮಕ್ಕಳು ಮರಿಮಕ್ಕಳು ತಿಂದು ಕೊಬ್ಬೋವರ್ಗೆ ಅಂತ ಯೋಚ್ನೆ ಮಾಡಕೆ ಶುರು ಮಾಡಿದ್ವಲ್ಲ, ನಾವು ವಿದ್ಯಾವಂತ್ರು ಅಂದ್ರೆ ಆ ಸರಸ್ವತಿ ವೀಣೆ ತಗೊಂಡು ಬಾರ್ಸಲ್ವಾ? ಸ್ವಲ್ಪ್ ಯೋಚ್ನೆ ಮಾಡ್ರಿ…

ಇಂತಿ,
ನಿಮ್ ಪ್ರೀತಿಯ ಹುಡ್ಗ
ಮಚೆಂಪು

– ಪ್ರಜ್ಞಾ, ಶಿವಮೊಗ್ಗ

“ಕವಿತೆಯೊಳಗಾ ಸೆಗೈಯು ಫಲಯಾವುದೇ
ಕೀರ್ತಿ – ನೆಗಳೆಯೆಂಬುದೆ ಫಲ ವಂ”
ಎಂಬ ಮಾತು ಅಕ್ಷರಶಃ ಸಾಕಾರಗೊಂಡಿದೆ, ಕುವೆಂಪುರವರ ಮಹಾರಸಋಷಿಯ ಮಹಾ ಬದುಕಿನಲ್ಲಿ ಸರಸ್ವತಿಯ ಕೃಪಾಕಟಾಕ್ಷದೊಂದಿಗೆ ಲಕ್ಷ್ಮಿಯ ಕೃಪಾಕಟಾಕ್ಷ ಅವರಿಗಿತ್ತು. ಅವರದು ಕವಿ ವ್ಯಕ್ತಿತ್ವ, ಯುಗ ಪ್ರವರ್ತಕ ವ್ಯಕ್ತಿತ್ವ, ‘ಋಷಿ ಅಲ್ಲದವನು ಕವಿಯಲ್ಲ’ ಎನ್ನುವ ಮಾತು ಅವರನ್ನು ನೋಡಿಯೇ ಹುಟ್ಟಿರಬೇಕು. ಕುವೆಂಪು ತಮ್ಮ ಕೃತಿಗಳೊಂದಿಗೆ ಯುಗವನ್ನು ಬರೆದಿರುವರು. ಯುಗ ಪ್ರವರ್ತಕರಾದ ಈ ಭೌಮ ವ್ಯಕ್ತಿತ್ವಕ್ಕೆ ಸಲ್ಲಿಸಿದ ನಮೋ ಭಾವದ ವಂದನೆ ಮಹಾಚೇತನ ಬೇಂದ್ರೆಯವರ ನುಡಿಯಲ್ಲಿ ಶ್ರವಣಿಸಬೇಕು:
“ಯುಗದ ಕವಿಗೆ ಜಗದ ಕವಿಗೆ
ಶ್ರೀರಾಮಾಯಣ ದರ್ಶನದಿಂದಲೇ ಕೈ
ಮುಗಿದ ಕವಿಗೆ ಮಣಿಯದವರು ಯಾರು”

ಶ್ರೀರಾಮಾಯಣ ದರ್ಶನಂ ಮಹಾಕಾವ್ಯದಂತಹ ಕೃತಿಯು ಜನಿಸುವುದು ಮುರಾರಿಯ ಕೃಪೆಯಿಂದ. ಎಂಥವನಾದರೂ ಈ ಕೃತಿಯ ಸತ್ವಕ್ಕೆ ಮಣಿಯಲೇ ಬೇಕು.

ಒಮ್ಮೆ ವಿನೋಬಾ ಭಾವೆಯರನ್ನು ಭೇಟಿಯಾಗಲು ಕುವೆಂಪುರವರು ಪಿರಿಯಾಪಟ್ಟಣಕ್ಕೆ ಹೋದಾಗ ಏನಾದರೂ ಆಶೀರ್ವಚನ ಬರೆದುಕೊಡುವಂತೆ ಬಿನ್ನವಿಸಿಕೊಂಡರು. ಆಗ ವಿನೋಬಾರವರು ನಗುತ್ತಾ ನಾನೇನು ಆಶೀರ್ವಚನ ಬರೆದುಕೊಡಲಿ? ನಾನು ಹೇಳಬಹುದಾದಂತದ್ದು ಹಾಗೂ ಹೇಳಲಾರದಂತದ್ದು ಎಲ್ಲವೂ ರಾಮಾಯಣ ದರ್ಶನದಲ್ಲಿಯೇ ಅಡಗಿದೆ. ಅಂಥ ಮಹಾಕಾವ್ಯದ ದಾರ್ಶನಿಕ ಕವಿಗೆ ಆಶೀರ್ವಚನವೇ? ಎಂದು ಹೇಳಿ ಶ್ರೀರಾಮಾಯಣ ದರ್ಶನದ ಹಿರಿಮೆಯನ್ನು ಎತ್ತಿ ಹೇಳಿದರು.

ಈ ಮಹಾಕಾವ್ಯದ ಯೋಜನೆ ಸಿದ್ಧವಾದ ಬಗೆಯನ್ನು ಕುರಿತು ಕುವೆಂಪುರವರು ಹೇಳಿದ ಬಗೆ ಹೀಗೆ. “ ‘ಪ್ಯಾರಡೈಸ್ ಲಾಸ್ಟ್’ ಓದಿದ ನಂತರ ಅದರಲ್ಲಿನ ಛಂದಸ್ಸು ನನ್ನನ್ನು ಸಮ್ಮೋಹನಗೊಳಿಸಿತು. ಅದನ್ನು ಕನ್ನಡಕ್ಕೆ ಬಳಸುವುದು ಸಾಧ್ಯವೇ ಎಂದು ಯೋಚಿಸುತ್ತ ಕುಳಿತಿದ್ದೆ. ರಾಮಾಯಣದ ವಸ್ತುವನ್ನು ಬಳಸಿಕೊಂಡು ಇನ್ನೂರೈವತ್ತು ಪುಟದ ಕಾವ್ಯವನ್ನು ಬರೆಯುವುದೆಂದು ಯೋಚಿಸಿ ಎಂದೋ ಒಂದು ದಿನ ಆರಂಭಿಸಿದೆ. ನನಗರಿಯದಂತೆಯೇ ಮನಬಂದ ಕಡೆ ಲೇಖನಿ ಹರಿಯಿತು. ಬರೆಯುತ್ತ ಹೋದಂತೆ ಛಂದಸ್ಸಿನ ಹಿಡಿತ ತಪ್ಪಿತು. ಸುಮಾರು ಐದು ಸಾವಿರ ಪಂಕ್ತಿಗಳನ್ನು ಬರೆದ ನಂತರ ನಾನು ಅಧೀನನಾದೆ. ಅದರಲ್ಲಿ ಲಯವಾದ ಛಂದಸ್ಸು ಬದಲಾವಣೆ ಹೊಂದಿತು. ರೀತಿ ಮಾರ್ಪಾಡಾಯಿತು. ಗುರಿ ವ್ಯತ್ಯಾಸವಾಯಿತು. ಸಂಸ್ಕೃತದಿಂದ ಪೋಷಿತವಾದ ಈ ಕನ್ನಡ ನುಡಿಯ ನಾದ ಮಾಧುರ್ಯ ಆಂಗ್ಲ ಭಾಷೆಯಲ್ಲಿಯೂ ಇಲ್ಲವೆಂದು ನನಗಾಗ ಭಾಸವಾಯಿತು.

“ರಾಮಾಯಣ ಬೆಳೆದಂತೆಲ್ಲಾ ನಾನು ಬೆಳೆದು ನನ್ನ ಸಾಧನೆ ಬೆಳೆಯಿತು. ನಾನು ಆ ಮಹಾಕಾವ್ಯಕ್ಕೆ ವಶನಾದೆ. ಅದನ್ನು ನಾನೇ ಬರೆದವನೆಂದು ಹೇಳುವುದು ತಪ್ಪು. ವಿಶ್ವ ಶಕ್ತಿಗಳೆಲ್ಲ ಸೇರಿ ಆ ಕಾವ್ಯವಾಗಿದೆ. ನಾನೆಂದೂ ನಿಮಿತ್ತ ಮಾತ್ರ. ಅಲ್ಲಿ ಬರುವ ವರ್ಣನೆ, ಘಟನೆ, ಸಂದರ್ಭಗಳನ್ನು ಕಲಾತ್ಮಕವಾಗಿ ಚಿತ್ರಿಸಲು ಲೋಕ ಮತ್ತು ಪ್ರಕೃತಿ ಬಹಳ ಸಹಾಯ ಮಾಡಿದೆ. ‘ಪಂಚಮಲೆಯ ಪರ್ಣಕುಟಿ’ ಸಂಧಿಯನ್ನು ಕವನಿಸುವಾಗ ನಾನು ಊರಿನಲ್ಲಿದ್ದೆ. ಆಗ ನಾನನುಭವಿಸಿದ ಮಂಜಿನ ಸೌಂದರ್ಯ, ಆ ಸಂಧಿಯಲ್ಲಿ ಭಾವ ಗೀತೆಯಾಗಿ ಹರಿದಿದೆ. ಯುರೋಪಿನಲ್ಲಿ ಯುದ್ಧ ನಡೆಯುತ್ತಿದ್ದಾಗ ಯುದ್ಧ ವರ್ಣನೆ ರೂಪ ಪಡೆಯಿತು.” kuvempu

ಸೀತಾಪಹರಣಕ್ಕಾಗಿ ರಾವಣ ಬಂದಿದ್ದಾನೆ. ಇನ್ನೇನವನು ಸೀತೆಯನ್ನು ಹಿಡಿದುಕೊಳ್ಳಬೇಕು, ಸೀತೆ ಚೀರಬೇಕು, ಅಷ್ಟರಲ್ಲಿ ಕವಿಯ ಕೈ ತತ್ತರಿಸುತ್ತದೆ, ಬರಹ ನಿಲ್ಲುತ್ತದೆ. ಆ ವೇಳೆಯಲ್ಲೊಂದು ಅಳಿಲು  ಅವರ ಅಧ್ಯಯನ ಕಕ್ಷದ ಕಡೆಗೆ ಚಿತ್ರಿಸುತ್ತಾ ಬರುತ್ತದೆ. ಅದರ ಹಿಂದೆಯೇ ಓಡಿಬಂದ ಬೆಕ್ಕು ಅದನ್ನು ಹಿಡಿಯಲು ಬರುತ್ತದೆ. ಅಳಿಲಿನ ಚೀತ್ಕಾರ ಕೋಣೆಯಲ್ಲಿ ಮರುದನಿಗೂಡುತ್ತದೆ. ಕವಿ ಹೃದಯ ಅನುಕಂಪದಿಂದ ಕರಗುತ್ತದೆ. ಅಳಿಲಿನ ಚೀತ್ಕಾರ ಸೀತಾ ಮಾತೆಯ ಚೀತ್ಕಾರವಾಗುತ್ತದೆ. “ಹೀಗೆ ಒಂದೊಂದು ಹೆಜ್ಜೆಯಲ್ಲಿಯೂ ವಿಶ್ವಶಕ್ತಿಯು ನನ್ನಿಂದ ನೇರವಾಗಿ ಕೆಲಸ ಮಾಡಿಸಿದೆ. ಇದನ್ನು ಬರೆಯಲು ತೆಗೆದುಕೊಂಡ ಕಾಲ ೯ ವರ್ಷಗಳು” ಎನ್ನುತ್ತಾರೆ ಕುವೆಂಪು.

ವಾಲ್ಮೀಕಿ ರಾಮಾಯಣದಲ್ಲಿ ರಾವಣ ಮಹಾದುಷ್ಟನಾಗಿ ರೂಪುಗೊಂಡರೆ ನಮ್ಮ ರಾಷ್ಟ್ರಕವಿ ಕುವೆಂಪುರವರ ರಾಮಾಯಣದಲ್ಲಿ ರಾವಣ ಹೀಗೆ ಪರಿವರ್ತನೆ ಗೊಳ್ಳುತ್ತಾನೆ:
“ನಿನಿಗಿಂ ಮಿಗಿಲ್ ಸೀತೆ
ನನಗೆ ದೇವತೆ ಮಾತೆ ಶ್ರದ್ಧೆಗೆಟ್ಟಿರ್ದೆನಗೆ
ಶ್ರದ್ಧೆಯಂ ಮರುಕಳಿಸುತಾತ್ಮದುದ್ಧಾರಂ
ತಂದ ದೇವತೆ ಪುಣ್ಯಮಾತೆ”

ಮನದನ್ನೆಯಾಗಿಸಿಕೊಳ್ಳಲು ಕೊಂಡೊಯ್ದ ಸೀತೆಯನ್ನು ತಾಯಿಯೆಂದು ಕರೆಯುವಷ್ಟರ ಮಟ್ಟಿಗೆ ರಾವಣ ಪರಿವರ್ತನೆಗೊಂಡಿರುವುದು ಅಗಾಧವಾಗಿದೆ. ದೈವೀಪ್ರಾಪ್ತಿಗಾಗಿ ಸದಾ ಹಂಬಲಿಸುತ್ತಿರುವ ಲೋಕದ ಜೀವಿಗಳ ಪ್ರತೀಕವಾಗಿರುವ ಶಬರಿ, ಭಕ್ತ ಶ್ರೇಷ್ಠನಾದ ಹನುಮ, ಅಪೂರ್ವ ಮಹಾಸತಿ, ಸೌಂದರ್ಯದಲ್ಲಿ ದೇವತೆ, ಸುಸಂಸ್ಕೃತಿಯ ಶ್ರೇಷ್ಠ ಪ್ರತಿನಿಧಿ, ಪತಿಯ ಆತ್ಮೋದ್ಧಾರಕ ಶಕ್ತಿ ಸೀತದೇವಿಯ ಪಾತಿವ್ರತ್ಯ ರಕ್ಷಣೆಯ ವಜ್ರಕವಚ, ಲಂಕೆಯ ಯೋಗಕ್ಷೇಮವನ್ನು ಬಯಸುವ, ಮಹಾ ಮಾತೃ ಹೃದಯಿಯಾಗಿ ಮೂಡಿ ನಿಂತಿರುವ ಮಂಡೋದರಿ, ತಾನು ಹೊತ್ತಿಸಿದ ಬೆಂಕಿಯನ್ನು ತಾನೇ ಆರಿಸಲು ಪ್ರಯತ್ನಿಸುವ ಚಂದ್ರನಖಿ- ಈ ಪಾತ್ರಗಳೆಲ್ಲವೂ ಅತ್ಯಂತ ಪರಿಣಾಮಕಾರಿಯಾಗಿ ಈ ಮಹಾಕಾವ್ಯದಲ್ಲಿ ಕಾಣಿಸಿವೆ. ಒಟ್ಟಿನಲ್ಲಿ ಕುವೆಂಪುರವರ ‘ಶ್ರೀರಾಮಾಯಣ ದರ್ಶನಂ’ ಕುವೆಂಪುರವರು ಸೃಜಿಸಿದ ಕಾವ್ಯವಷ್ಟೇ ಅಲ್ಲ, ಯುಗವನ್ನು, ಯುಗದ ಶಕ್ತಿಯನ್ನು ಸೃಜಿಸುವ ಕಾವ್ಯ.


Blog Stats

  • 71,861 hits
ಮೇ 2009
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 123
45678910
11121314151617
18192021222324
25262728293031

Top Clicks

  • ಯಾವುದೂ ಇಲ್ಲ