ಕಲರವ

Archive for ಫೆಬ್ರವರಿ 16th, 2008

ಈ ಕಥೆಯನ್ನು ಬರೆದವರು ಸುಪ್ರೀತ್.ಕೆ.ಎಸ್

ಓದುತ್ತಿದ್ದ ಪುಸ್ತಕದ ವಿಚಾರ ಬಹಳ ಸೂಕ್ಷ್ಮದ್ದಾಗಿತ್ತು. ಮನುಷ್ಯನ ಮನಸ್ಸಿನ ಪದರಗಳನ್ನು ಎಳೆಯೆಳೆಯಾಗಿ ಬಿಡಿಸಿಡುತ್ತಾ ಮನುಷ್ಯನ ನಂಬಿಕೆಗಳು, ಆತನು ಬಯಸುವ ಶ್ರದ್ಧೆಯ ಮೂಲ ಸೆಲೆಗಳು, ಆತನ ಅಭದ್ರತೆಗಳನ್ನು ವಿವರವಾಗಿ ಬಿಡಿಸಿಡುತ್ತಾ ಮನುಷ್ಯ ದೇವರನ್ನು ಏಕೆ ನಂಬುತ್ತಾನೆ? ಧರ್ಮ ವಿಧಿಸುವ ಆಚರಣೆಗಳನ್ನು ಏಕೆ ಒಪ್ಪಿಕೊಳ್ಳುತ್ತಾನೆ ಎಂಬುದನ್ನು ತಾರ್ಕಿಕವಾಗಿ, ವೈಜ್ಞಾನಿಕವಾಗಿ, ಮನಃಶಾಸ್ತ್ರದ ಹಿನ್ನೆಲೆಯಲ್ಲಿ ವಿವರಿಸುವ ಪ್ರಯತ್ನವನ್ನು ಲೇಖಕ ಮಾಡಿದ್ದ. ಓದುತ್ತಾ ಓದುತ್ತಾ ಸುನೀಲನಿಗೆ ಏನೋ ಒಂದು ಬಗೆಯ ನೆಮ್ಮದಿಯ ಭಾವ ಮನಸ್ಸಿನಲ್ಲಿ ಹರಡಿದಂತಾಗುತ್ತಿತ್ತು. ಪ್ರತಿದಿನ ದೇವರ ಪೂಜೆ ಮಾಡುವ, ಭಜನೆ, ವ್ರತಗಳಲ್ಲಿಯೇ ಸಮಯವನ್ನು ಕಳೆಯುವ ತನ್ನ ತಾಯಿಯನ್ನು, ಅಷ್ಟೇನು ಆಚರಣೆಗಳನ್ನು ಮಾಡದಿದ್ದರೂ ‘ದೇವರ ಮನಸ್ಸಿಲ್ಲದಿದ್ದರೆ ಒಂದು ಹುಲ್ಲು ಕಡ್ಡಿಯೂ ಅಲುಗಾಡದು’ ಎಂದು ನಂಬಿದ ತಂದೆಯೊಂದಿಗೆ ವಾದ ಮಾಡಲು ಆತನಿಗೆ ಈ ಪುಸ್ತಕ ಒಳ್ಳೆಯ ಸಾಮಗ್ರಿಯಾಗಬಹುದು ಎನ್ನಿಸುತ್ತಿತ್ತು. ದೇವರನ್ನು ನಂಬುವ ತನ್ನ ಓರಗೆಯ ಗೆಳೆಯರೊಂದಿಗೆ ತಾನು ತನ್ನ ನಾಸ್ತಿಕವಾದವನ್ನು ಸಮರ್ಥಿಸಿಕೊಳ್ಳಲು ಈ ಪುಸ್ತಕದ ಅಂಶಗಳನ್ನು ಬಳಸಿಕೊಳ್ಳಬಹುದಲ್ಲ ಎಂದು ಯೋಚಿಸಿಯೇ ಅವನು ಪುಳಕಗೊಳ್ಳುತ್ತಿದ್ದ. ಲೇಖಕನ ಒಂದೊಂದು ವಿಚಾರವನ್ನು ಓದುತ್ತಲೂ ಆತನಿಗೆ ತಾನೇನೋ ಹೆಚ್ಚೆಚ್ಚು ಎತ್ತರಕ್ಕೆ ಏರಿದವನಂತೆ, ದೇವರು-ದಿಂಡಿರ ಮೂಢನಂಬಿಕೆಗಳಲ್ಲಿ ಮುಳುಗಿದ ಜನರಿಗಿಂತ ಹೆಚ್ಚಿನ ಪ್ರಾಮುಖ್ಯತೆ ಉಳ್ಳವನಂತೆ ಭಾವಿಸಿಕೊಳ್ಳುತ್ತಿದ್ದ. ಸ್ವಲ್ಪ ರೋಮಾಂಚನದ, ಸ್ವಲ್ಪ ಸಮರೋತ್ಸಾಹದ ಒಂದು ವಿಚಿತ್ರವಾದ ವಾತಾವರಣ ಅವನ ಮನಸ್ಸಿನಲ್ಲಿ ಮೂಡಿತ್ತು. ಸೂರ್ಯ ಅಸ್ತಂಗತನಾದ ವರ್ತಮಾನವನ್ನು ಹಬ್ಬಿಕೊಳ್ಳುತ್ತಿದ್ದ ಅಮಾವಾಸ್ಯೆಯ ಕತ್ತಲೆ ಕಿಟಕಿಯೊಳಗೆ ಕಳ್ಳನಂತೆ ನುಸುಳುತ್ತಾ ಸಾಬೀತುಪಡಿಸುತ್ತಿತ್ತು.2067513000_256550352f.jpg

ಗಂಟೆ ಏಳಾಗಿತ್ತು. ಪುಸ್ತಕದಲ್ಲಿ ತಲೆ ಹುದುಗಿಸಿ ಓದುವುದರಲ್ಲಿ ತಲ್ಲೀನನಾದ ಸುನೀಲನಿಗೆ ಸಂಜೆಯಾದುದರ ಅರಿವೇ ಆಗಿರಲಿಲ್ಲ. ಹೊರಗಿನ ಕತ್ತಲು ಕೋಣೆಯನ್ನಾವರಿಸಿ ಇನ್ನು ಓದುವುದಕ್ಕೆ ಸಾಧ್ಯವೇ ಇಲ್ಲ ಎನ್ನಿಸಿದಾಗ ಆತನಿಗೆ ಇಹಲೋಕದ ಪರಿವೆ ಬಂದದ್ದು. ಪುಸ್ತಕವನ್ನು ತೆರೆದಂತೆಯೇ ಹೊಟ್ಟೆಯ ಮೇಲೆ ಅಂಗಾತ ಮಲಗಿಸಿದಂತೆ ಮೇಜಿನ ಮೇಲಿಟ್ಟು ಲೈಟು ಹಾಕಲು ಎದ್ದ. ಆಗ ಗೆಳೆಯನೊಬ್ಬ ಹಿಂದೊಮ್ಮೆ ಪುಸ್ತಕವನ್ನು ತೆರೆದು ಹಾಗೆ ಅಂಗಾತ ಇರಿಸಿದರೆ ವಿದ್ಯೆ ತಲೆಗೆ ಹತ್ತಲ್ಲ ಎಂದು ಎಚ್ಚರಿಸಿದ್ದು ನೆನಪಾಯಿತು. ಕೂಡಲೇ ‘ಎಂಥಾ ಮೂರ್ಖ ನಂಬಿಕೆ?’ ಎಂದುಕೊಂಡ, ಬಹುಶಃ ಪುಸ್ತಕವನ್ನು ಹಾಗೆ ಇಟ್ಟರೆ ಅದರ ಬೈಂಡು ಕಿತ್ತುಹೋಗಬಹುದು ಅಂತ ಹಾಗೆ ಹೇಳಿದ್ದಾರೇನೊ ಅಂದುಕೊಂಡ. ರೂಮಿನ ಟ್ಯೂಬ್ ಲೈಟು ಹತ್ತಿಸಿ, ಓರೆಯಾಗಿ ತೆರೆದಿದ್ದ ಬಾಗಿಲ ಚಿಲಕ ಹಾಕಿಕೊಂಡು ಬಂದು ಪುಸ್ತಕದ ಓದನ್ನು ಮುಂದುವರೆಸಿದ.

‘ದೇವರು ಮನುಷ್ಯನ ನಂಬಿಕೆಯ ಭಾಗವಾಗಿ ಬೇರೂರಲು ಆತನಿಗೆ ಒಂದು ಪಾಶವಿ ಶಕ್ತಿಯ ಆಸರೆ ಬೇಕಿತ್ತು. ಹಾಗೆ ಭಯದ ಮೂಲದಲ್ಲಿ ಹುಟ್ಟಿಕೊಂಡದ್ದು ದೆವ್ವದ ನಂಬಿಕೆ. ಮನುಷ್ಯ ತನ್ನ ನಿಯಂತ್ರಣಕ್ಕೊಳಪಡದ, ತನ್ನಿಚ್ಛೆಯಂತೆ ನಡೆಯದ ಸಂಗತಿಗಳನ್ನು ನಿಯಂತ್ರಿಸುವ, ತನಗಿಂತ ಬಲಶಾಲಿಯಾದ ವ್ಯಕ್ತಿಯೊಬ್ಬನಿದ್ದಾನೆ ಎಂಬ ನಂಬಿಕೆಯ ಫಲವಾಗಿಯೇ ದೇವರು ಹುಟ್ಟಿಕೊಂಡ. ಅವನನ್ನು ಒಲಿಸಿಕೊಂಡರೆ ನಮಗೆ ಆಪತ್ತು ಬರದು ಎಂದು ಭಾವಿಸಿದ ಮನುಷ್ಯ ಅವನ ಗುಣಗಾನವನ್ನು, ಅವನಿಗೆ ಬಲಿಕೊಡುವುದು,ತನ್ನ ಉತ್ಪತ್ತಿಯಲ್ಲಿ ಪಾಲು ಕೊಡುವುದನ್ನು ಪ್ರಾರಂಭಿಸಿದ. ಆದರೆ ಯಾವಾಗ ತತ್ವಜ್ಞಾನದ ಬೆಳವಣಿಗೆಯಿಂದ ದೇವರು ದಯಾಮಯಿ, ಆತ ಸರ್ವಶಕ್ತ ಎಂದೆಲ್ಲಾ ಕೇವಲ ಒಳ್ಳೆಯ ಗುಣಗಳ ಆರೋಪ ನಡೆಯಿತೋ ಆಗ ನಮಗುಂಟಾಗುವ ಕೆಡುಕು, ದುರ್ಘಟನೆಗಳಿಗೆ, ಲೋಕದಲ್ಲಿರುವ ಪಾಪಕ್ಕೆ ಕಾರಣವಾಗಿಸಲು ಹುಟ್ಟಿಕೊಂಡದ್ದು ದೆವ್ವ, ಭೂತದ ನಂಬಿಕೆ…’ ಓತಪ್ರೋತವಾಗಿ ಹರಿದಿತ್ತು ಲೇಖಕನ ವಿಚಾರಧಾರೆ. ಸುನೀಲನಿಗಂತೂ ದೆವ್ವದ ಬಗೆಗಿನ ಲೇಖಕನ ಸವಿವರವಾದ ಸ್ಪಷ್ಟನೆ ಓದಿ ಖುಷಿಯಾಯಿತು. ಈ ಸಮಾಜ ಎಷ್ಟು ಚೆನ್ನಾಗಿ ಬ್ರೈನ್ ವಾಷ್ ಮಾಡುತ್ತದೆಯಲ್ಲವೇ? ದೇವರ ಕರುಣೆಯ ಆಸೆ ತೋರಿಸಿ, ದೆವ್ವದ ಹೆದರಿಕೆ ಹುಟ್ಟಿಸಿ, ಸ್ವರ್ಗದ ಮೋಹ ಹುಟ್ಟಿಸಿ, ನರಕದ ಭಯ ಬೆಳೆಸಿ ಹೇಗೆ ಮನುಷ್ಯನ ಮೇಲೆ ನಿಯಂತ್ರಣ ಸಾಧಿಸುತ್ತದೆಯಲ್ಲಾ ಎಂದು ಬೆರಗುಂಟಾಯಿತು. ಇಡೀ ಪುಸ್ತಕ ಓದಿ ಮುಗಿಸಿ ಮೇಜಿನ ಮೇಲಿಟ್ಟು ಸ್ವಲ್ಪ ಹೊತ್ತು ಕಣ್ಣು ಮುಚ್ಚಿಕೊಂಡು ವಿಚಾರ ಮಾಡಿದ ಸುನೀಲ ಈ ದೇವರು, ದೆವ್ವಗಳನ್ನು ನಂಬುವವರು ಒಂದೋ ಮೂಢರು ಇಲ್ಲವೇ ವಂಚಕರು ಎಂದುಕೊಂಡ.

ಮೇಜಿನ ಮೇಲಿದ್ದ ವಾರಪತ್ರಿಕೆಯೊಂದನ್ನು ಕೈಗೆತ್ತಿಕೊಂಡು ಅದರ ಪುಟಗಳನ್ನು ತಿರುವಲಾರಂಭಿಸಿದ. ಪುಟಗಳನ್ನು ತಿರುಗಿಸುತ್ತಿದ್ದ ಕೈಗಳು ಆ ಪುಟದ ಬಳಿ ಬರುತ್ತಿದ್ದಂತೆಯೇ ನಿಧಾನವಾದವು. ಆ ಕತೆಯ ಶೀರ್ಷಿಕೆ ನೋಡಿ ಅವನ ಕುತೂಹಲ ಬೆಳೆಯಿತು. ಅದು ದೆವ್ವದ ಬಗೆಗಿನ ಕತೆ ಎಂದು ತಿಳಿದ ಮೇಲೆ ಕೊಂಚ ತಮಾಷೆಯೆನಿಸಿತು. ಮಾಡಲು ಬೇರೆ ಕೆಲಸವಿರದಿದ್ದರಿಂದ ಆ ಕತೆಯನ್ನು ಓದಲು ಪ್ರಾರಂಭಿಸಿದ.

ಕತ್ತಲೆಯ ರಾತ್ರಿ… ಅದೊಂದು ಒಂಟಿ ಮನೆ. ಆ ಕೋಣೆಯಲ್ಲಿ ನಾಯಕ ಒಬ್ಬನೇ ಒಂದು ಪುಸ್ತಕ ಓದುತ್ತಾ ಕುಳಿತಿದ್ದಾನೆ. ಹೊರಗೆ ಅಮಾವಾಸ್ಯೆ ಕತ್ತಲು ಗಾಢವಾಗಿ ಕವಿದಿದೆ. ಸ್ವಲ್ಪ ಹೊತ್ತಿನ ಹಿಂದೆ ಪ್ರಶಾಂತವಾಗಿದ್ದ ಗಿಡಮರಗಳು ವೇಗವಾಗಿ ಬೀಸಲಾರಂಭಿಸಿದ ಗಾಳಿಗೆ ತೊಯ್ದಾಡುತ್ತಿವೆ. ಕತ್ತಲ ಆಗಸದ ಎದೆಯನ್ನು ಮಿಂಚು ಫಳ್ಳನೆ ಹರಿತವಾದ ಕತ್ತಿಯಂತೆ ಇರಿಯುತ್ತಿದೆ. ಒಮ್ಮೆಗೇ ಜೋರಾಗಿ ಮಳೆ ಶುರುವಾಗಿಬಿಡುತ್ತದೆ. ಗಾಳಿಯ ರಭಸಕ್ಕೆ ಆತನ ಕೋಣೆಯ ಕಿಟಕಿಗಳು ಫಟ-ಫಟನೆ ಬಡಿದುಕೊಳ್ಳುತ್ತಿವೆ. ಆತನಿಗೆ ಓದುತ್ತಿದ್ದ ಪುಸ್ತಕದಿಂದ ಕಣ್ಣು ಕೀಳಲು ಸಾಧ್ಯವಾಗುತ್ತಿಲ್ಲ. ‘ಪಕ್’ ಅಂತ ಕರೆಂಟು ಹೊರಟು ಹೋಗುತ್ತದೆ. ಓದುತ್ತಿದ್ದ ಪುಸ್ತಕವನ್ನು ಮೇಜಿನ ಮೇಲಿರಿಸಿದ ನಾಯಕ ಬೆಂಕಿ ಪೊಟ್ಟಣಕ್ಕಾಗಿ ರೂಮನ್ನು ತಡಕಾಡಲು ಪ್ರಾರಂಭಿಸುತ್ತಾನೆ. ತುಂಬಾ ಸಮಯವಾದರೂ ಬೆಂಕಿ ಪೊಟ್ಟಣವೂ ಸಿಗಲಿಲ್ಲ, ಕ್ಯಾಂಡಲ್ ಕೂಡ ಸಿಗುವುದಿಲ್ಲ. ತನ್ನ ಅಶಿಸ್ತನ್ನು ಶಪಿಸುತ್ತಾ ಅಲ್ಲಿ ಇಲ್ಲಿ ತಡಕಾಡುತ್ತಾ ಕೈಕಾಲು ಮಂಚಕ್ಕೆ, ಮೇಜಿಗೆ ಬಡಿಸಿಕೊಳ್ಳುತ್ತಿರುತ್ತಾನೆ. ಹೊರಗೆ ಮಳೆ ಧೋ ಎಂದು ಸುರಿಯುತ್ತಿದೆ. ಕೋಣೆಯ ಮೌನದ ಒಡಲನ್ನು ಬೀಧಿಸಿ ಬಂದ ‘ಟ್ರಿಣ್…ಟ್ರಿಣ್…’ ಎಂಬ ಫೋನಿನ ಸದ್ದು ಕೇಳಿ ಅವನಿಗೆ ಒಮ್ಮೆಗೇ ಭಯವಾಗುತ್ತದೆ.

ಸಾವರಿಸಿಕೊಂಡು ಬಂದು ರಿಸೀವರ್ ಎತ್ತಿಕೊಂಡು ‘ಹೆಲೋ…’ ಎನ್ನುತ್ತಾನೆ.

‘….’ ಅತ್ತ ಕಡೆಯಿಂದ ಯಾವ ಸದ್ದೂ ಇಲ್ಲ.

‘ಹೆಲೋ, ಯಾರದು ಮಾತನಾಡುತ್ತಿರುವುದು…’,

‘….’

ಬಹುಶಃ ಸಂಪರ್ಕ ಸರಿಯಿಲ್ಲವೆಂದುಕೊಂಡ ಆತ ರಿಸೀವರನ್ನು ಕ್ರೆಡಲ್ ಮೇಲಿಟ್ಟು ಬೆಂಕಿ ಪೊಟ್ಟಣ ಹುಡುಕುವುದರಲ್ಲಿ ಮಗ್ನನಾಗುತ್ತಾನೆ. ನಿಮಿಷ ಕಳೆದಿರಲಿಲ್ಲ ಅಷ್ಟರಲ್ಲಿ…

‘ಟ್ರಿಣ್… ಟ್ರಿಣ್…’ ಮತ್ತೆ ರಿಂಗಣಿಸಲಾರಂಭಿಸುತ್ತದೆ ದೂರವಾಣಿ.

‘ಹೆಲೋ….’

‘…’ ಉತ್ತರವಿಲ್ಲ.

‘ಹೆಲೋ… ಜೋರಾಗಿ ಮಾತನಾಡಿ, ಕೇಳಿಸುತ್ತಿಲ್ಲ’ ಒದರುತ್ತಾನೆ ಆತ.

‘….’

ಮತ್ತೆ ರಿಸೀವರ್ ಕುಕ್ಕಿದ ಆತನಿಗೆ ಯಾರಾದರೂ ತನ್ನ ಆಟವಾಡಿಸಲು ಹೀಗೆ ಮಾಡುತ್ತಿರಬಹುದಾ ಎನ್ನಿಸಿತು. ಇರಲಿಕ್ಕಿಲ್ಲ, ಮಳೆ-
ಗಾಳಿಗೆ ಟೆಲಿಫೋನ್ ಕಂಬ ಬಿದ್ದು ಸಂಪರ್ಕದಲ್ಲಿ ತೊಂದರೆಯಾಗಿರಬಹುದು ಎಂದುಕೊಂಡ. ಮತ್ತೆ…

‘ಟ್ರಿಣ್… ಟ್ರಿಣ್…’

ಈ ಬಾರಿ ಆತ ಮೌನವಾಗಿ ರಿಸೀವರ್ ಎತ್ತಿ ಕಿವಿಯ ಬಳಿ ಹಿಡಿದು ನಿಂತ.

‘….’

‘…’

ಬೆಚ್ಚಿಬೀಳಿಸುವ ಮೌನ ಎರಡೂ ಬದಿಯಲ್ಲಿ…ಅತ್ತಕಡೆಯಿಂದ ಉಸಿರು ಏರುವ ಇಳಿಯುವ ಸದ್ದು ಮಾತ್ರ ಕೇಳಿದಂತಾಯಿತು. ಲೈನ್ ಸರಿಯಾಗಿಯೇ ಇದೆ ಎಂದು ಆತನಿಗೆ ಮನವರಿಕೆಯಾಯಿತು. ಅತ್ತ ಕಡೆಯಿಂದ ಯಾರೋ ಕೀಟಲೆ ಮಾಡಲು ಕರೆ ಮಾಡುತ್ತಿದ್ದಾರೆ ಎಂದುಕೊಂಡು ಸಿಟ್ಟಿನಿಂದ ಆತ ರಿಸೀವರ್ ತೆಗೆದು ಪಕ್ಕದಲ್ಲಿಟ್ಟ. ಅನಂತರ ತಾನು ಕೇಳಿದ ಸದ್ದು ಬಹುಶಃ ತನ್ನ ಉಸಿರಾಟದ ಸದ್ದೇ ಆಗಿರಬಹುದೇನೋ ಅನ್ನಿಸಿತು. ಆದರೂ ರಿಸೀವರ್‌ನ್ನು ಸರಿಯಾಗಿರಿಸುವ ಪ್ರಯತ್ನ ಮಾಡಲಿಲ್ಲ.
ಹಾಳಾದ್ದು ಮ್ಯಾಚ್ ಬಾಕ್ಸ್ ಎಲ್ಲಿಹೋಯ್ತೊ ಎಂದುಕೊಂಡು ಅದನ್ನು ಹುಡುಕುವುದರಲ್ಲಿ ತೊಡಗಿಕೊಂಡ. ಸ್ವಲ್ಪ ಸಮಯ ಕಳೆಯಿತು. ಮಳೆ ಕಡಿಮೆಯಾಗುವುದರ ಲಕ್ಷಣವೇ ಕಾಣುತ್ತಿರಲಿಲ್ಲ. ರಾತ್ರಿ ಇಡೀ ಹೀಗೇ ಸುರಿದರೆ ಕರೆಂಟು ಬರೋಕೆ ಸಾಧ್ಯವೇ ಇಲ್ಲ ಎಂದುಕೊಂಡ. ಬೆಂಕಿ ಪೊಟ್ಟಣ ಸಿಗದಿದ್ದರೆ ರಾತ್ರಿ ಎಲ್ಲಾ ಕತ್ತಲಲ್ಲಿ ಕಳೆಯಬೇಕಲ್ಲಾ ಎಂದುಕೊಂಡು ಪುಸ್ತದ ರ್ಯಾಕಿನೊಳಗೆ ಕೈಗಿರಿಸಿದವನಿಗೆ ಬೆಂಕಿಪೊಟ್ಟಣ ಸಿಕ್ಕಿತು. ಕಡ್ಡಿ ಗೀರಿ ಕ್ಯಾಂಡಲ್ ಹುಡುಕಿ ಇನ್ನೇನು ಅದನ್ನು ಬೆಳೆಗಿಸಬೇಕು ಎನ್ನುವಷ್ಟರಲ್ಲಿ…

‘ಟಿಂಗ್ ಟಾಂಗ್….’ ಬಾಗಿಲಿನ ಕರೆಗಂಟೆಯ ಸದ್ದು ಇರುಳಿನ ಮೌನವನ್ನು ಬೇಧಿಸುವಂತೆ ಅಬ್ಬರಿಸಿತು.

ಬೆಂಕಿಪೊಟ್ಟಣ ಹಿಡಿದ ಆತನ ಕೈಗಳು ಮೆಲ್ಲಗೆ ಕಂಪಿಸಿದವು. ಆ ಕಂಪನದ ರಭಸಕ್ಕೆ ಕೈಲಿದ್ದ ಬೆಂಕಿಪೊಟ್ಟಣ ಹಿಡಿತ ತಪ್ಪಿಸಿಕೊಂಡಂತೆನಿಸಿತು. ಇಷ್ಟು ಹೊತ್ತಿನಲ್ಲಿ ಯಾರಿರಬಹುದು ಎಂದುಕೊಂಡು ಬಾಗಿಲು ತೆರಯಲು ಮುಂದಾದ, ಬೆಂಕಿ ಕಡ್ಡಿಯ ಬೆಳಕಿನಲ್ಲಿ. ಬಾಗಿಲಿನ ಅಗುಳಿ ಸರಿಸಿ ಬಾಗಿಲು ತೆರೆದವನಿಗೆ ಹೊರಗಿನ ಗಾಳಿಯ ರಭಸಕ್ಕೆ ಕೈಲಿದ್ದ ಬೆಂಕಿ ಕಡ್ಡಿ ನಂದಿಹೋದದ್ದು ಅರಿವಿಗೆ ಬರುವಷ್ಟರಲ್ಲಿ ಮೈಗೆ ಶೀತಲವಾದ ಗಾಳಿಯೊಂದಿಗೆ ಕಪ್ಪನೆಯ ಅಮಾವಾಸ್ಯೆಯ ಕತ್ತಲು ಅಪ್ಪಳಿಸಿದ್ದು ಅರಿವಿಗೆ ಬಂದಿತ್ತು. ಕೈಲಿದ್ದ ಬೆಂಕಿಕಡ್ಡಿಯಿಂದ ಮತ್ತೊಂದು ಕಡ್ಡಿಗೀರಿದವನನ್ನು ಸ್ವಾಗತಿಸಿದ್ದು ಮತ್ತದೇ ಕಗ್ಗತ್ತಲು. ಬಾಗಿಲು ಬಡಿದವರು ಯಾರೂ ಅಲ್ಲಿರಲೇ ಇಲ್ಲ…

ಅಷ್ಟರಲ್ಲಿ ಸುನೀಲನ ರೂಮು ಇದ್ದಕ್ಕಿದ್ದಂತೆ ಕತ್ತಲೆಯಲ್ಲಿ ಮುಳುಗಿಬಿಟ್ಟಿತು. ಕುತೂಹಲದಿಂದ ಕಥೆ ಓದುತ್ತಿದ್ದ ಸುನೀಲನಿಗೆ ಕರೆಂಟ್ ಹೋದದ್ದು ತಿಳಿಯಲು ಕೆಲಸಮಯ ಬೇಕಾಯಿತು. ಮೆಲ್ಲಗೆ ಓದುತ್ತಿದ್ದ ವಾರಪತ್ರಿಕೆಯನ್ನು ಮೇಜಿನ ಮೇಲಿಟ್ಟು, ಮೊದಲೇ ಮೇಜಿನ ಡ್ರಾದೊಳಕ್ಕೆ ಇಟ್ಟುಕೊಂಡಿದ್ದ ಬೆಂಕಿಕಡ್ಡಿ, ಕ್ಯಾಂಡಲ್ ಹೊರತೆಗೆದು ಕ್ಯಾಂಡಲ್ ಹೊತ್ತಿಸಿದ. ಹೊರಗೆ ಬಿರುಮಳೆ ಪ್ರಾರಂಭವಾಗಿತ್ತು. ಗೋಲಿಗಾತ್ರದ ನೀರ ಹನಿಗಳು ಕಿಟಕಿಯ ಗಾಜುಗಳಿಗೆ ಅಪ್ಪಳಿಸುವ ಸದ್ದು ಬಿಟ್ಟರೆ ಸುನೀಲನಿಗೆ ಬೇರಾವ ಸದ್ದೂ ಕೇಳುತ್ತಿರಲಿಲ್ಲ. ಇನ್ನೇನು ಅರ್ಧಕ್ಕೆ ನಿಲ್ಲಿಸಿದ್ದ ಕಥೆಯನ್ನು ಓದಬೇಕು ಅಂದುಕೊಂಡು ಪತ್ರಿಕೆಯನ್ನು ಕೈಗೆತ್ತಿಕೊಂಡ ಅಷ್ಟರಲ್ಲಿ ಮಳೆ ಹನಿಗಳ ಏಕತಾನದ ಸದ್ದನ್ನು ಅಡಗಿಸುವಂತೆ ಟೆಲಿಫೋನ್ ರಿಂಗಣಿಸಲಾರಂಭಿಸಿತು…

‘ಟ್ರಿಣ್…ಟ್ರಿಣ್…’

‘ಹಲೋ…’

‘…’

‘ಯಾರು ಮಾತಾಡ್ತಿರೋದು? ಸ್ವಲ್ಪ ಜೋರಾಗಿ ಮಾತಾಡಿ ಕೇಳ್ತಿಲ್ಲ…’

‘…’

ಸುನೀಲನ ತಲೆಯೊಳಗೆ ಒಂದೇ ಸಮನೆ ಸಂಶಯದ ಹೊಗೆ ಭುಗಿಲೇಳತೊಡಗಿತು. ಯಾರಿರಬಹುದು ಎಂಬ ಪ್ರಶ್ನೆ ಒಂದೆಡೆಯಾದರೆ, ಯಾಕೆ ಮಾತನಾಡುತ್ತಿಲ್ಲ ಎಂಬ ಪ್ರಶ್ನೆ ಮತ್ತೊಂದೆಡೆ. ಏನಾದ್ರೂ ದೆವ್ವ, ಗಿವ್ವ… ಸ್ವಲ್ಪ ಹೊತ್ತಿನ ಹಿಂದೆ ತಾನೆ ಓದಿದ ಕತೆಯ ಪ್ರಭಾವ ಚೆನ್ನಾಗಿಯೇ ಆಗಿದ್ದಂತಿತ್ತು. ‘ಛೇ, ದೆವ್ವಗಳೆಲ್ಲಾ ಫೋನ್ ಮಾಡಿ ಹೆದರಿಸ್ತವಾ? ಮಳೆಗೆ ನೆಟ್‌ವರ್ಕ್ ಕೆಟ್ಟುಹೋಗಿರಬೇಕು…’ ಅಂತ ಸಮಾಧಾನ ಮಾಡಿಕೊಂಡು, ರಿಸೀವರನ್ನು ಕ್ರೆಡಲ್ ಮೇಲಿಂದ ತೆಗೆದು ಫೋನ್ ಪಕ್ಕದಲ್ಲಿ ಇರಿಸಿದ.

ಮೇಜಿನ ಮೇಲಿಟ್ಟಿದ್ದ ಪತ್ರಿಕೆಗೆ ಕೈ ಹಾಕಿ ಅರ್ಧಕ್ಕೆ ನಿಲ್ಲಿಸಿದ್ದ ಕಥೆಯನ್ನು ಮುಂದುವರೆಸಿದ.

… ಬಾಗಿಲು ತೆರೆದು ನೋಡಿದವನ ಎದೆ ಝಲ್ಲೆನ್ನುವಂತಹ ನಿಶ್ಯಬ್ಧ. ಹೊರಗೆ ಯಾರೂ ಇಲ್ಲ. ಈತ ಕೈಲಿರುವ ಬೆಂಕಿ ಕಡ್ಡಿಯ ಬೆಳಕಿನಲ್ಲಿ ಮನೆಯ ಅಕ್ಕ ಪಕ್ಕ ಕಣ್ಣು ಹಾಯಿಸಿ ಪರೀಕ್ಷಿಸಿದ ಒಂದು ನರಪಿಳ್ಳೆಯ ಸುಳಿವೂ ಸಿಗಲಿಲ್ಲ. ಈತನ ಎದೆ ಬಡಿತದ ಸದ್ದು ತನ್ನ ಕಿವಿಗಳಲ್ಲೇ ಮಾರ್ದನಿಸತೊಡಗಿತು…

‘ಟರ್ರ್‌ರ್… ಟರ್ರ್‌ರ್…’

ಮತ್ತೊಮ್ಮೆ ಬೆಚ್ಚಿಬಿದ್ದ ಸುನೀಲ. ಆತನ ಕೋಣೆಯ ಕಾಲಿಂಗ್ ಬೆಲ್ ಯಾರೋ ಒತ್ತುತ್ತಿದ್ದಾರೆ. ಇಂಥಾ ಬಿರು ಮಳೆಯಲ್ಲಿ ಯಾರು ಬಂದಿರಬಹುದು ಎಂಬ ಸಂಶಯದಲ್ಲಿ ಸುನೀಲ ಬಾಗಿಲು ತೆರೆದ. ಕೈಯಲ್ಲಿದ್ದ ಕ್ಯಾಂಡಲ್‌ ಗಾಳಿಗೆ ಆರದ ಹಾಗೆ ಬಲಗೈಯನ್ನು ಅಡ್ಡ ಹಿಡಿಯುತ್ತ.

ಹೊರಗೆ ಮಳೆ ರಚ್ಚೆ ಹಿಡಿದಂತೆ ಸುರಿಯುತ್ತಿದೆ. ಕಾಲಿಂಗ್ ಬೆಲ್ ಒತ್ತಿದ ಪ್ರಾಣಿಯ ಸುಳಿವಿಲ್ಲ! ಯಾರದು ಆಟವಾಡಿಸುತ್ತಿರೋದು ಎಂದು ಸುನೀಲನಿಗೆ ರೇಗಿತು. ರೂಮಿನ ಸುತ್ತಲೂ ಒಮ್ಮೆ ತಿರುಗಿದ, ಮಳೆಯಲ್ಲಿ ಮೈ ಕೊಂಚ ನೆನೆಯಿತು. ತನಗಾದ ಕಿರಿಕಿರಿಯನ್ನು ನಿವಾರಿಸಿಕೊಳ್ಳುವ ಯಾವ ಪ್ರಯತ್ನವನ್ನೂ ಮಾಡದೆ ಆತ ಬಾಗಿಲನ್ನು ಅರೆಯಾಗಿ ತೆರೆದು ಬಂದು ಮೇಜಿನ ಮುಂದೆ ಕುಳಿತ. ಆತ ಕುಳಿತಿದ್ದ ಕುರ್ಚಿ ಬಾಗಿಲುಗೆ ಬೆನ್ನು ಮಾಡಿತ್ತಾದ್ದರಿಂದ ಬಾಗಿಲಿನಿಂದ ಒಳಕ್ಕೆ ಬೀಸುತ್ತಿದ್ದ ಶೀತಲವಾದ ಗಾಳಿ ಸುನೀಲನ ಬೆನ್ನು ಸೋಕುತ್ತಿತ್ತು.

ಈ ಕರೆಂಟು ಯಾವಾಗ ಬರುತ್ತದೆಯೋ ಎಂದುಕೊಳ್ಳುತ್ತಾ ಟವೆಲ್ಲಿನಿಂದ ತಲೆ ಒರೆಸಿಕೊಳ್ಳುತ್ತಿದ್ದ ಸುನೀಲನಿಗೆ ತಾನೇಕೆ ಕತ್ತಲಿಗೆ ಹೆದರುತ್ತಿದ್ದೇನೆ ಎನ್ನಿಸಿತು. ‘ಇದೆಂಥಾ ಕಾಕತಾಳೀಯ! ನಾನು ಓದುತ್ತಿರೋ ಕಥೆಯಲ್ಲಿ ನಡೆಯುತ್ತಿರುವ ಘಟನೆಗಳೇ ನನ್ನ ಮುಂದೆ ಜರಗುತ್ತಿವೆಯಲ್ಲಾ? ಆ ಕಥೆ ಪೂರ್ತಿ ಓದಿ ಮುಂದೇನಾಗುತ್ತೆ ನೋಡಿಬಿಡಬೇಕು’ ಅಂದುಕೊಂಡು ಕಥೆಯಿದ್ದ ಪತ್ರಿಕೆಯನ್ನು ಕೈಗೆತ್ತಿಕೊಂಡ. ತಾನು ಎಲ್ಲಿ ನಿಲ್ಲಿಸಿದ್ದೆ ಎಂಬುದನ್ನು ಕ್ಯಾಂಡಲ್ಲಿನ ಓಲಾಡುವ ಬೆಳಕಿನಲ್ಲಿ ಹುಡುಕುತ್ತಿರುವಾಗ ಬೆನ್ನ ಹಿಂದೆ ಯಾವುದೋ ಆಕೃತಿ ಚಲಿಸಿದ ಹಾಗೆ ಭಾಸವಾಯ್ತು. ಕೂಡಲೇ ಹಿಂದೆ ತಿರುಗಿ ನೋಡಿದ. ಯಾರೂ ಇಲ್ಲ! ಇವನ ಉಸಿರು ಘನವಾಗ ತೊಡಗಿತು. ಸ್ವಲ್ಪ ಕಾಲ ಬಾಗಿಲ ಕಡೆಗೇ ನೋಡುತ್ತಿದ್ದವನು ತಿರುಗಿ ಮತ್ತೆ ಪುಸ್ತಕದಲ್ಲಿ ಮಗ್ನನಾಗಲು ಪ್ರಯತ್ನಿಸಿದ. ಮತ್ತೆ… ಅದೇ ಆಕೃತಿ, ಆಗ ಕಂಡದ್ದೇ… ಇನ್ನೂ ಹತ್ತಿರವಾದ ಹಾಗೆ ತನ್ನ ಹಿಂಬದಿಯಿಂದ ಬಲಕ್ಕೆ ಚಲಿಸಿದ ಹಾಗೆ ಕಂಡಿತು. ಬೆಚ್ಚಿ ಬಿದ್ದು ತಿರುಗಿ ನೋಡಿದ ಗಾಳಿಗೆ ಓಲಾಡುವ ಕ್ಯಾಂಡಲ್ಲಿನ ಬೆಳಕಿನಲ್ಲಿ ತನ್ನದೇ ನೆರಳು ಗೋಡೆಯ ಮೇಲೆ ತೇಲುತ್ತಿತ್ತು. ಬೇರಾವ ಆಕೃತಿಯೂ ಆತನ ಕಣ್ಣಿಗೆ ಬೀಳಲಿಲ್ಲ.

‘ಇದೆಂಥಾ ಮರುಳು…’ ಅಂತ ಹಣೆಗೆ ಕೈಲಿದ್ದ ಪತ್ರಿಕೆ ಬಡಿದುಕೊಳ್ಳುವಾಗ ಅದರಲ್ಲಿರುವ ಕಥೆಯಲ್ಲಿನ ನಾಯಕನಿಗೂ ಹೀಗೇ ಆಗುತ್ತಾ ನೋಡೋಣ ಎನ್ನಿಸಿತು. ಕುತೂಹಲದಲ್ಲಿ ಮತ್ತೆ ಕಥೆ ಓದತೊಡಗಿದ.

…. ತನ್ನ ಬೆನ್ನ ಹಿಂದೆ ಚಲಿಸಿದಂತಾದ ಆಕೃತಿಯ ಹುಡುಕಾಟದಲ್ಲಿ ಆತ ಕಳೆದು ಹೋಗಿದ್ದ…. ‘ಅಯ್ಯೋ ಒಂದು ಪ್ಯಾರಾ ಬಿಟ್ಟೇ ಬಿಟ್ಟೆನಲ್ಲಾ, ಇರಲಿ ಮುಂದೇನಾಗುತ್ತೋ ನೋಡ್ಬೇಕು, ಇವನಿಗೂ ಆಕೃತಿ ಕಾಣಿಸಿದೆ!’ … ಎದೆಯ ನಗಾರಿ ಹುಚ್ಚೆದ್ದು ಬಡಿದುಕೊಳ್ಳುತ್ತಿತ್ತು. ಅಮ್ಮ ಹೇಳಿ ಕೊಟ್ಟಿದ್ದ ರಾಮ ರಕ್ಷಾ ಸ್ತೋತ್ರವನ್ನು ನೆನಪಿನಿಂದ ಹೆಕ್ಕಿ ತೆಗೆದು ಜೋರಾಗಿ ಪಠಿಸುತ್ತಾ ಆತ ಹಾಸಿಗೆಯೆಡೆಗೆ ನಡೆದ. ಮಲಗಿ ನಿದ್ರೆ ಮಾಡಿದರೆ ಯಾವ ಕೆಟ್ಟ ಆಲೋಚನೆಯೂ ಬರುವುದಿಲ್ಲ ಅಂದುಕೊಂಡು ಹಾಸಿಗೆಯ ಮೇಲೆ ಮೈಚಾಚಿದ.

ಕಣ್ಣು ಮುಚ್ಚಿ ನಾಲ್ಕೈದು ನಿಮಿಷ ಕಳೆದಿರಬೇಕು, ತನ್ನ ಉಸಿರಾಟವನ್ನು ಮೀರಿಸುವಂತಹ ಉಸಿರಿನ ಸದ್ದು ಕಿವಿಯನ್ನು ತಲುಪುತ್ತಿತ್ತು. ಮುಖದ ಮೇಲೆ ಬಿಸಿ ಗಾಳಿ ಹರಿದಾಡಿದಂತಾಯ್ತು. ಪ್ರಯಾಸದಿಂದ ಕಣ್ಣು ತೆರೆದವನಿಗೆ ಎದೆ ಹಾರಿಹೋಗುವಂತಹ ಆಕೃತಿ ಗೋಚರಿಸಿತು. ಅಂತಹ ವಿಕಾರವಾದ ಮುಖವನ್ನು ಆತ ಕನಸಿನಲ್ಲೂ ಕಂಡಿರಲಿಲ್ಲ. ಎದೆ ಪೌಂಡಿಂಗ್ ಮಶೀನಿನ ಹಾಗೆ ಕುಟ್ಟುತ್ತಿತ್ತು. ಮುಖದ ಮೇಲೆ ಬೆವರ ಸಾಲು. ತಾನೆಂದೂ ಕಲ್ಪಿಸಿಕೊಂಡಿರದಷ್ಟು ಭಯಾನಕವಾದ ಭೂತ ಆತನೆದುರು ನಿಂತಿತ್ತು. ಕೈ ಕಾಲು ಮರಗಟ್ಟಿದಂತಾಗಿಬಿಟ್ಟಿತ್ತು. ಬುದ್ಧಿಗೆ ಮಂಕು ಕವಿದಂತಾಯಿತು. ಆ ದಿಗ್ಭ್ರಾಂತಿಯ ಸಮಯದಲ್ಲೂ ಮನೆಯ ಪುರೋಹಿತರು ಕೊಟ್ಟಿದ್ದ ಬಂಗಾರದ ಬಣ್ಣದ ಕಟ್ಟು ಹಾಕಿಸಿದ್ದ ಗಣಪತಿಯೆ ಫೋಟೊ ನೆನಪಾಯ್ತು. ಹಾಸಿಗೆಯಿಂದ ನೆಗೆದವನೇ ಗಣಪತಿಯ ಫೋಟೊ ಕೈಗೆತ್ತಿಕೊಂಡ. ತಿರುಗಿ ನೋಡುವಷ್ಟರಲ್ಲಿ ಆ ಆಕೃತಿ ವಿಕಾರವಾಗಿ ಕೂಗುತ್ತಾ ನೆಲದೊಳಕ್ಕೆ ಇಂಗಿಹೋಯಿತು…

ಇಷ್ಟನ್ನು ಓದಿ ನಿಟ್ಟುಸಿರುಬಿಟ್ಟು ಮೇಜಿನೆದುರಿನ ಗೋಡೆ ನೋಡಿದ ಸುನೀಲ ಗಾಬರಿಯಲ್ಲಿ ಕುರ್ಚಿಯಿಂದ ಕೆಳಕ್ಕುರುಳಿದ. ಗೋಡೆಯ ಮೇಲಿನ ವಿಚ್ಛಿದ್ರಕಾರಿ ಆಕೃತಿಯನ್ನು ಕಂಡು ಆತ ಎಚ್ಚರ ತಪ್ಪಿ ಬಿದ್ದಿದ್ದ.

ಮರುದಿನ ಬೆಳಕು ಹರಿದಾಗ ಸುನೀಲ ರೂಮಿನಲ್ಲಿ ಆತನ ಮೇಜಿನ ಎದುರಿನ ಗೋಡೆಗೆ ಮೊಳೆ ಹೊಡೆಯಲಾಗಿತ್ತು. ಅದರ ಮೇಲೆ ಬಂಗಾರದ ಬಣ್ಣದ ಕಟ್ಟು ಹಾಕಿದ ಗಣಪತಿಯ ಫೋಟೊ ನೇತುಹಾಕಲ್ಪಟ್ಟಿತ್ತು.


Technorati : , ,


Blog Stats

  • 68,988 hits
ಫೆಬ್ರವರಿ 2008
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 123
45678910
11121314151617
18192021222324
2526272829  

Top Clicks

  • ಯಾವುದೂ ಇಲ್ಲ