ಕಲರವ

Archive for ಅಕ್ಟೋಬರ್ 2008

ಅಕ್ಟೋಬರ್ ತಿಂಗಳ ‘ಸಡಗರ’ ಪತ್ರಿಕೆಯ ತಯಾರಿಯಲ್ಲಿ ಮುಳುಗಿಹೋಗಿದ್ದೇನೆ. ಪತ್ರಿಕೆಯು ಸರಿಯಾದ ಸಮಯಕ್ಕೆ ಪ್ರಕಟವಾಗುವುದಿಲ್ಲ ಎಂಬುದು ನಮ್ಮ ಮೇಲಿರುವ ಆರೋಪಗಳಲ್ಲಿ ಬಹಳ ಪ್ರಮುಖವಾದದ್ದು. ಈ  ಆರೋಪ ಕೇಳಿಬರದ ಹಾಗೆ ನಾವು ಕೆಲಸ ಮಾಡಬೇಕು ಎಂಬುದು ಒಂದು ಬಗೆಯ ಚಿಂತನೆಯಾದರೂ, ಪತ್ರಿಕೆಯು ಸಮಯಕ್ಕೆ ಸರಿಯಾಗಿ ಬರದದ್ದನ್ನು ಕಂಡು ಬೇಸರಗೊಳ್ಳುವ, ಅದರ ದಾರಿ ಕಾಯುತ್ತಾ ಗೊಣಗುವವರ ಸಂಖ್ಯೆ ಇಷ್ಟು ದೊಡ್ಡದಿದೆಯಲ್ಲ ಎಂದು ಸಂತೋಷ ಪಡುವುದು ನಮಗೆ ಇಷ್ಟವಾದದ್ದು. ಹಾಗಂತ ನಾವು ಸಂಪೂರ್ಣ ಬೇಜವಾಬ್ದಾರಿಯ ದಾರಿ ಹಿಡಿಯುತ್ತೇವೆ ಎಂದುಕೊಳ್ಳಬೇಡಿ. ನಮ್ಮ ಮಿತಿಯಲ್ಲೇ ಸಾಧ್ಯವಾದಷ್ಟು ಮಟ್ಟಿಗೆ ನಿಮ್ಮ ನಿರೀಕ್ಷೆಯನ್ನು ಮುಟ್ಟಲು ಪ್ರಯತ್ನಿಸುತ್ತೇವೆ.

ಪ್ರತಿ ತಿಂಗಳು ನಮ್ಮಿಡೀ ತಂಡ ಒಂದು ವಿಷಯವನ್ನು ಧೇನಿಸಬೇಕು. ಅದರ ನಾನಾ ಮಜಲುಗಳನ್ನು ಕೂಲಂಕುಶವಾಗಿ ಪರಿಶೀಲಿಸಬೇಕು. ಆ ವಿಷಯದ ಬಗೆಗಿನ ನಮ್ಮ-ನಮ್ಮ ಗ್ರಹಿಕೆಗಳನ್ನು ಪುನರ್ ಪರಿಶೀಲಿಸಿಕೊಳ್ಳಬೇಕು. ಹೊಸ ಆಯಾಮಗಳನ್ನು ಕಂಡುಕೊಳ್ಳಬೇಕು. ನಮ್ಮ ಚಿಂತನೆಯಲ್ಲಿನ, ಗ್ರಹಿಕೆಯಲ್ಲಿನ ಲೋಪಗಳನ್ನು ತಿಳಿದು ತಿದ್ದಿಕೊಳ್ಳಬೇಕು. ಈ ಇಡೀ ಪ್ರಕ್ರಿಯೆಯಲ್ಲಿ ನಮ್ಮ ಓದುಗರನ್ನೂ ತೊಡಗಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಮುಖಪುಟದ ವಿಷಯವನ್ನು ಆಯ್ದುಕೊಳ್ಳುತ್ತೇವೆ. ಈ ಹಿಂದಿನ ಸಂಚಿಕೆಗಳಲ್ಲಿ ಸ್ನೇಹ, ಪ್ರೀತಿ, ಸ್ವಾತಂತ್ರ್ಯದ ಬಗೆಗೆ ಮುಖಪುಟವನ್ನು ರೂಪಿಸಿ ಲೇಖನಗಳನ್ನು ಪ್ರಕಟಿಸಿದ್ದೇವು. ಅಕ್ಟೋಬರ್ ಸಂಚಿಕೆಗಾಗಿ ನಾವು ಆಯ್ಕೆ ಮಾಡಿಕೊಂಡಿರುವ ವಿಷಯ: ಗೂಡಿನಿಂದ ದೂರಾದ ಹಕ್ಕಿಗಳು.

ಓದಿಗಾಗಿ, ನೌಕರಿಗಾಗಿ, ಯಶಸ್ಸಿಗಾಗಿ, ಬಾಳ ಸಂಗಾತಿಗಾಗಿ, ಆಧ್ಯಾತ್ಮಕ್ಕಾಗಿ, ಸುಖಕ್ಕಾಗಿ, ಶಿಕ್ಷೆಗಾಗಿ, ಸ್ವಾತಂತ್ರ್ಯಕ್ಕಾಗಿ, ವಿಧಿಯ ವಿಲಾಸದಿಂದಾಗಿ ಮನೆಯಿಂದ, ಮನೆಯವರಿಂದ ದೂರಾದವರ ಬಗೆಗಿನ ಮಾತುಕತೆಯೇ ಈ ಸಂಚಿಕೆಯ ಫೋಕಸ್. ಬುದ್ಧಿ ಬೆಳೆಯುವ ಮೊದಲೇ ಓದುವುದಕ್ಕೆಂದು ದೂರದ ರೆಸಿಡೆನ್ಷಿಯಲ್ ಸ್ಕೂಲುಗಳಿಗೆ ಹಾಕಲ್ಪಟ್ಟ ಮಕ್ಕಳಿಂದ ಹಿಡಿದು ಮನೆ ಭವ ಬಂಧನ ಎಂದು ಬಗೆದು ಮೋಕ್ಷಕ್ಕಾಗಿ ಹಿಮಾಲಯಕ್ಕೆ ಹೊರಟು ನಿಲ್ಲುವ ಸರ್ವಪರಿತ್ಯಾಗಿಯವರೆಗೆ ಎಲ್ಲರನ್ನೂ ಕೂರಿಸಿಕೊಂಡು ಮಾತಾಡುವುದು, ಅವರಂತರಾಳವನ್ನು ಕೆದಕುವುದು, ಪ್ರಶ್ನೆಗಳನ್ನು ಎಸೆಯುವುದು, ಸಲಹೆ ಪಡೆಯುವುದು, ಕೆಲವು ಸಲಹೆ ಕೊಡುವುದು – ಇದು ಈ ಸಂಚಿಕೆಯಲ್ಲಿನ ಮುಖಪುಟದ ಬರಹಗಳಲ್ಲಿ ನಾವು ನಡೆಸುವ ಪ್ರಯತ್ನಗಳು.

ಇಷ್ಟಲ್ಲದೇ ನಮ್ಮ ಪತ್ರಿಕೆಯ ಮೂಲಗುಣವಾದ ‘ಅಶಿಸ್ತು’ ಹಾಗೂ ಅದರ ಫಲವಾಗಿ ಆಗುವ ಅನೇಕಾನೇಕ ಬದಲಾವಣೆಗಳು, ಹೊಸ ಪ್ರಯತ್ನಗಳು ನಿಮ್ಮನ್ನು ಸೆಳೆಯಲಿವೆ ಎಂಬುದು ನಮ್ಮ ನಂಬಿಕೆ.

-ಸಂ

(‘ಸಡಗರ’ಕ್ಕೆ ಚಂದಾದಾರರಾಗಿ ನಮ್ಮ ಪ್ರಯತ್ನವನ್ನು ಜೀವಂತವಾಗಿರಿಸಲು ಸಹಾಯ ಮಾಡಿ)

ಕನ್ನಡದ ಬ್ಲಾಗುಗಳ ಆಗುಹೋಗುಗಳ ಮೇಲೊಂದು ಕಣ್ಣನ್ನಿಟ್ಟು ಅಲ್ಲಿನ ಸತ್ವಯುತವಾದ ಸಂಗತಿಗಳೆಡೆಗೆ ತಮ್ಮ ಪತ್ರಿಕೆಯ ಓದುಗರನ್ನು ಸೆಳೆಯುವ, ಹೊಸತನ್ನು ಪರಿಚಯಿಸುವ ಸಹೃದಯತೆಯಿರುವ ಕನ್ನಡಪ್ರಭದ ‘ಸಾಪ್ತಾಹಿಕ ಪುರವಣಿ’ಯ ಸಂಪಾದಕರು ಜೋಗಿ.
ನಮ್ಮ ಪತ್ರಿಕೆಯ ಬ್ಲಾಗನ್ನು ಪರಿಚಯಿಸಿ ‘ಇಲ್ಲಿಗೀ ಕಥೆ ಮುಗಿಯಿತು’ ಲೇಖನವನ್ನು ಕಳೆದ ರವಿವಾರದ (೧೯-೧೦-೨೦೦೮) ಸಾಪ್ತಾಹಿಕ ಪುರವಣಿಯನ್ನು ಪ್ರಕಟಿಸಿದ್ದಾರೆ. ನಮ್ಮ ಬೆನ್ನು ತಟ್ಟಿದ್ದಾರೆ. ನಮ್ಮ ಹುಮ್ಮಸ್ಸಿನ, ಹುಂಬತನದ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಆ ಮೂಲಕ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದ್ದಾರೆ. ಅವರಿಗೆ ಹಾಗೂ ಕನ್ನಡಪ್ರಭ ಪತ್ರಿಕೆಗ ನಮ್ಮ ಬಳಗದ ಕೃತಜ್ಞತೆಗಳು…

ಕನ್ನಡಪ್ರಭದಲ್ಲಿನ ಸಾಪ್ತಾಹಿಕ ಪುರವಣಿಯ ಅಂತರ್ಜಾಲ ಪುಟವನ್ನು ಇಲ್ಲಿ ನೋಡಬಹುದು. (ಬಹುಶಃ ಇಂಟರ್ನೆಟ್ ಎಕ್ಸ್‌ಪ್ಲೋರರ್‌ನಲ್ಲಿ ಚೆಂದಗೆ ಕಾಣುತ್ತದೆ)

ಆಗಸ್ಟ್ ಹಾಗೂ ಸೆಪ್ಟೆಂಬರ್ ಎರಡೂ ತಿಂಗಳಿಗೆ ಸೇರಿ ಎಂಬಂತೆ ಒಂದೇ ಸಂಚಿಕೆಯನ್ನು ಮಾಡಿದ್ದಕ್ಕಾಗಿ ನಾವು ಅನೇಕರಿಂದ ಆಕ್ಷೇಪಣೆಗಳನ್ನು ಎದುರಿಸಬೇಕಾಯ್ತು. ಆದರೆ ಪರಿಸ್ಥಿತಿಗಳ ಅನಿವಾರ್ಯತೆಯಲ್ಲಿ ನಾವು ಅಸಹಯಾಕರಾಗಿದ್ದೇವೆ ಎಂದು ತಿಳಿಸಲೇಬೇಕು. ಬ್ಲಾಗುಗಳಲ್ಲಿ ಚಿಟಿಕೆ ಹೊಡೆಯುವಷ್ಟರಲ್ಲಿ ಲೇಖನಗಳನ್ನು ಪ್ರಕಟಿಸಿಬಿಡಬಹುದು. ಆದರೆ ಪತ್ರಿಕೆಯನ್ನು ಮುದ್ರಿಸಿ ಅದನ್ನು ಓದುಗರಿಗೆ ತಲುಪಿಸುವ ಕೆಲಸ ತ್ರಾಸದ್ದು. ಮೇಲಾಗಿ ಈ ಪೋಸ್ಟ್ ಆಫೀಸು, ಪ್ರೆಸ್ಸುಗಳೆಲ್ಲಾ ನಮ್ಮ ಕಾಲೇಜು ಸಮಯ ಮುಗಿಯುವುದನ್ನೇ ಕಾಯುತ್ತಿರುವಂತೆ ಮುಂಚಿಕೊಂಡು ಬಿಡುತ್ತವೆ. ನಾವು ನಾನಾ ತರಹದ ಸಾಹಸಗಳನ್ನು ಮಾಡುತ್ತಾ ಪ್ರತಿ ತಿಂಗಳ ಪತ್ರಿಕೆಯ ಕೆಲಸವನ್ನು ಮುಗಿಸಬೇಕು. ಹೀಗಾಗಿ ಇಂಥ ಅಪಸವ್ಯಗಳಾಗುತ್ತಿರುತ್ತವೆ. ಆದರೆ ನಾವು ಎಂದಿಗೂ ಬದಲಾವಣೆಗೆ, ಬೆಳವಣಿಗೆಗೆ, ನಮ್ಮನ್ನು ನಾವು ತಿದ್ದಿಕೊಳ್ಳುವುದಕ್ಕೆ ಬದ್ಧರು.

ಆಗಸ್ಟ್, ಸೆಪ್ಟೆಂಬರ್ ತಿಂಗಳ ಪತ್ರಿಕೆಯ ಪಿಡಿಎಫ್ ಪ್ರತಿಯನ್ನು ಇಲ್ಲಿಂದ ಇಳಿಸಿಕೊಳ್ಳಬಹುದು

ಪ್ರೀತಿಯ ಸಿಗರೇಟೇ,
ಹೇಗಿರುವೆ… ನಿನ್ನನ್ನು ಕಂಡು ತುಂಬಾ ದಿನಗಳಾದವು ಅಲ್ಲವಾ? ನಿನಗೆ ನನ್ನ ನೆನಪಿದೆಯೋ ಇಲ್ಲವೋ ಕಾಣೆ. ಆದರೆ ನಾನು ಮಾತ್ರ ಕಳೆದ ಹದಿನೈದೋ, ಇಪ್ಪತ್ತೋ ದಿನಗಳಿಂದ ನಿನ್ನನ್ನು ನೆನದು ನೆನೆದು ವಿಪರೀತ ಹಿಂಸೆಯನ್ನು ಅನುಭವಿಸಿದ್ದೇನೆ. ಮರೆವು ಇಷ್ಟು ದುಬಾರಿ ಎಂತ ನನಗೆ ಎಂದೂ ಅನಿಸಿದ್ದೇ ಇಲ್ಲ. ಪರೀಕ್ಷೆಗಾಗಿ ಓದಿದ್ದ ವಿಷಯಗಳನ್ನು ಬಿಡು, ಉಪನಯನ ಮಾಡಿಸಿದ ಮೂರನೆಯ ದಿನಕ್ಕೆ ಅಪ್ಪ ಆಕ್ಸಿಡೆಂಟಿನಲ್ಲಿ ಉಸಿರುಬಿಟ್ಟ ದಿನದ ನೆನಪು ಮಸುಕು ಮಸುಕಾಗಿಯಾದರೂ ನೆನಪಿಲ್ಲ. ಆದರೆ ನಿನ್ನ ಮರೆಯುವುದಕ್ಕೆ ನಾನು ಪಟ್ಟ ಪಾಡಿದೆಯಲ್ಲ, ಅದನ್ನ ಹೇಗೆ ವಿವರಿಸಲಿ? ನಿನ್ನ ನೆನಪು ಬರೀ ನನ್ನ ಮನಸ್ಸಿಗೆ ಸಂಬಂಧಿಸಿದ್ದಾಗಿದ್ದರೆ ಮನಸ್ಸಿನ ಮೇಲೆ ಹೇರಲ್ಪಡುವ ಸಾವಿರಾರು ಸಂಗತಿಗಳಲ್ಲಿ ಅದೂ ಕಳೆದುಹೋಗಿಬಿಡುತ್ತಿತ್ತು. ಆದರೆ ನಿನ್ನ ನೆನಪಿಗೆ ನನ್ನ ದೇಹದ ನರ-ನರವೂ, ಶ್ವಾಸಕೋಶದ ಪ್ರತಿ ಗಾಳಿ ಚೀಲವೂ ತುಡಿಯುತ್ತಿದ್ದುದರಿಂದ ನಿನ್ನ ಮರೆಯುವುದು ಎಂದರೆ ನನ್ನನ್ನೇ ನಾನು ನಿರಾಕರಿಸಿದಂತಾಗಿತ್ತು. ನಿನ್ನಿಂದ ದೂರವಾಗಿ ಇಷ್ಟು ದಿನ ಕಳೆದ ಮೇಲೂ ನಿನ್ನ ನೆನಪು ಅಳಿದಿಲ್ಲ. ಅದಕ್ಕೆ ಈ ಓಲೆ ನಿನಗಾಗಿ…

ನೀನು ನನಗೆ ಪರಿಚಯವಾದ ಘಳಿಗೆಯನ್ನು ಏನೆಂದು ಕರೆಯಲಿ? ಅಮೃತ ಘಳಿಗೆಯೆನ್ನಲ್ಲಾ, ದೇವರು ನನ್ನ ಬದುಕಿನಲ್ಲಿ ಮಾರ್ಕು ಮಾಡಿಟ್ಟ ಸಮಯವೆನ್ನಲಾ, ನನ್ನ ಅವನತಿಗೆ ವಿಧಿ ಇಟ್ಟುಕಳುಹಿಸಿದ್ದ ಮುಹೂರ್ತವೆನ್ನಲಾ? ನಿನ್ನ ಬಗ್ಗೆ ನನಗೇನೂ ಅಂಥಾ ಅಜ್ಞಾನವಿರಲಿಲ್ಲ. ಎತ್ತೆತ್ತಲೂ ನಿನ್ನನ್ನೇ ನೋಡುತ್ತಿದ್ದೆ. ಬೀದಿಯ ಕೊನೆಯ ಬೀಡಾ ಸ್ಟಾಲಿನ ಎದುರು ಗುಂಪು ನಿಂತ ಜನರಿಗೆ ಬೆಚ್ಚಗೆ ಕಾವು ಕೊಡುವಂತೆ ಬೆಂಕಿ ಹಾಕಿಸಿಕೊಳ್ಳುತ್ತಿದ್ದೆ. ಕಾಲೇಜಿನಲ್ಲಿ ಸಿನಿಯರುಗಳ ಎರಡು ಬೆರಳುಗಳ ಮಧ್ಯದಲ್ಲಿ ತೂರಿ, ‘ಇವರಿಗೆ ಸಿನಿಯಾರಿಟಿಯನ್ನು ಕೊಟ್ಟಿದ್ದೇ ನಾನು’ ಎಂದು ಬೀಗುತ್ತಿದ್ದೆ. ಸಿನೆಮಾ ನಟರ ತುಟಿಯಲ್ಲಿ ಕುಣಿದಾಡುತ್ತಾ ಅವರ ಸ್ಟೈಲಿಗೆ ಮೆಚ್ಚಿ ತಲೆದೂಗುತ್ತಿದ್ದೆ. ಆದರೂ ಹದಿನೆಂಟು ದಾಟುವವರೆಗೆ ನಾನು ನಿನಗಾಗಿ ಕೈಚಾಚಿರಲಿಲ್ಲ. ಅಲ್ಲಿಯವರೆಗೆ ಸಂಯಮಿಯಾಗಿದ್ದೆ ಅಂತೇನಲ್ಲ, ಅವಕಾಶ ಸಿಕ್ಕಿರಲಿಲ್ಲ ಅಷ್ಟೇ. ಮುಂದೆಂದಾದರೂ ಬೇರೆಯವರಿಗೆ ನನ್ನ ನಿನ್ನ ಚರಿತ್ರೆಯನ್ನು ಹೇಳುವಾಗ ನಾನು ಹದಿನೆಂಟು ದಾಟುವವರೆಗೆ ನಿನ್ನನ್ನು ದ್ವೇಷಿಸುತ್ತಿದ್ದೆ, ನೀನು ಎಂದರೆ ಅಲರ್ಜಿ ಎಂದು ಮೂಗು ಮುರಿಯುತ್ತಿದ್ದೆ. ನಿನ್ನ ಬಳಗದವರೊಂದಿಗೆ ಚೆಲ್ಲಾಟವಾಡುತ್ತಾ ನಿಂತವರನ್ನು ಕಂಡು ರೇಗಿಕೊಳ್ಳುತ್ತಿದ್ದೆ ಎಂದೆಲ್ಲಾ ಹೇಳಬಹುದೇನೋ, ಆದರೆ ನಿನಗೆ ನನ್ನ ಅಂತರಂಗ ತಿಳಿದಿಲ್ಲವೇ? ನಿನ್ನಲ್ಲೇಕೆ ಮುಚ್ಚು ಮರೆ.

ಅದೊಂದು ದಿನ ವಿಪರೀತ ತಲೆಬಿಸಿಯಾಗಿತ್ತು. ನಾಲ್ಕಾರು ದಿನಗಳಿಂದ ಕಾಲೇಜಿಗೆ ಹೋಗಿರಲಿಲ್ಲ. ಪ್ರಿನ್ಸಿಪಾಲರು ಬಂದು ನೋಡಲು ಹೇಳಿದ್ದರು. ಹೋಟೆಲಿನ ಕೌಂಟರಿನಲ್ಲಿ ಕುಳಿತವನಿಗೆ ಮುಖ ತೋರಿಸಬೇಕಾಗುತ್ತದೆ ಎಂದು ಹೊಟ್ಟೆ ಹಸಿದಿದ್ದರೂ ಹೋಟೆಲಿಗೆ ಹೋಗದ ಮಖೇಡಿಯಾದ ನನಗೆ ಪ್ರಿನ್ಸಿಪಾಲರನ್ನು ಏಕಾಂಗಿಯಾಗಿ ಭೇಟಿಯಾಗುವುದು ಭಯ ಹುಟ್ಟಿಸಿತ್ತು. ಬೇರಾವ ಸಂಗತಿಗೂ ಗಮನ ಕೊಡಲಾಗದ ಹಾಗೆ ಆ ಭಯ ನನ್ನ, ಹಿಂಜರಿಕೆ ನನ್ನನ್ನು ಆವರಿಸಿತ್ತು. ಇಡೀ ಸಂಜೆ ನಾನು ಪ್ರಿನ್ಸಿಪಾಲರ ಕೊಠಡಿಗೆ ಹೋದಂತೆ, ಅವರೆದುರು ಧೈರ್ಯವಾಗಿ ಮಾತಾಡಿದಂತೆ, ನನ್ನ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಿದಂತೆ ಕಲ್ಪಿಸಿಕೊಂಡು – ಹಾಗೆ ಮಾಡುವ ಧೈರ್ಯವಿದೆಯೇ ಎಂದು ಯೋಚಿಸಿ ಕಂಗಾಲಾಗಿದ್ದೆ. ರೂಮಿನಲ್ಲಿ ಕೂತರೆ ತಲೆ ಒಡೆದು ನೂರು ಚೂರಾದೀತು ಅನ್ನಿಸಿ ಹೊರಕ್ಕೆ ಜಿಗಿದೆ. ರಸ್ತೆಯ ಮೇಲೆ ಓಡಾಡುವ ಪ್ರತಿ ಮುಖದಲ್ಲೂ ನನ್ನೆಡೆಗೆ ತಿರಸ್ಕಾರ ಕಂಡಂತಾಗಿ ದಿಗಿಲಾಯಿತು. ಟೀ ಅಂಗಡಿಯ ಬಳಿ ನಿಂತು ಅರ್ಧ ಕಪ್ ಟೀ ಬೇಡಿದೆ. ಆತ ಡಿಕಾಕ್ಷನ್ನಿಗೆ ಹಾಲು ಬೆರೆಸುತ್ತಾ ಸಮಯ ದೂಡುತ್ತಿರುವಾಗ ಆಕಸ್ಮಿಕವಾಗಿ ನೀನು ಕಣ್ಣಿಗೆ ಬಿದ್ದೆ. ಅದೇನನ್ನಿಸಿತೋ, ಒಮ್ಮೆ ನಿನ್ನ ಸಂಗಾತವನ್ನು ಅನುಭವಿಸಬೇಕು ಎಂಬ ಹಂಬಲ ಹುಟ್ಟಿಕೊಂಡುಬಿಟ್ಟಿತು. ನಿನ್ನ ಸನ್ನಿಧಿಯಲ್ಲಿ ನನ್ನೆಲ್ಲಾ ದುಗುಡ, ಆತಂಕಗಳು ಕಳೆದು ನನ್ನ ಬದುಕು ಬಂಗಾರದ್ದಾಗಿ ಬಿಡುತ್ತದೆ ಅನ್ನಿಸಿತು. ನಿನ್ನ ಬಗ್ಗೆ ಅವರಿವರು ಹೇಳಿದ್ದು, ಅಲ್ಲಲ್ಲಿ ಓದಿದ್ದು ಎಲ್ಲಾ ಅಪರೂಪಕ್ಕೊಮ್ಮೆಮ್ಮೆ ನಿನ್ನೆಡೆಗೆ ಹುಟ್ಟಿಕೊಂಡಿದ್ದ ಬೆರಗು, ಆಸಕ್ತಿ ಎಲ್ಲಾ ಸೇರಿ ಕೈ ಎಳೆದು ನಿನ್ನ ಕೈಕುಲುಕಿಸಿತು. ನಿನ್ನ ಪ್ರೀತಿಯಲ್ಲೂ ಅದೇಷ್ಟೆಷ್ಟೋ ವಿಧಗಳಿವೆ ಎಂಬುದನ್ನು ಟೀ ಅಂಗಡಿಯವ ಟೀ ಬಸಿದು ಕೊಟ್ಟು ನನಗ್ಯಾವ ಟೈಪು ಬೇಕು ಅಂದಾಗಲೇ ತಿಳಿದದ್ದು. ಚಿಕ್ಕದಾಗಿದ್ದ ನಿನ್ನ ಒಲವನ್ನು ಆಯ್ದುಕೊಂಡೆ. ಕಿಂಗ್ ಸೈಜಿನಲ್ಲೂ ನಿನ್ನ ಒಲವು ದೊರೆಯುತ್ತದೆ ಎಂದು ಅನಂತರ ಗೆಳೆಯರಿಂದ ತಿಳೀತು.

ನಿನ್ನ ಕೋಮಲವಾದ ಫಿಲ್ಟರನ್ನು ತುಟಿಗಳಿಗೆ ಚುಂಬಿಸುತ್ತಿರುವಾಗ ನಡುಗುತ್ತಿದ್ದ ನನ್ನ ತುಟಿಗಳನ್ನು ಯಾರಾದರೂ ನೋಡುತ್ತಿದ್ದಾರಾ ಎಂದು ಆತಂಕವಾಗಿದ್ದನ್ನು ನೀನು ಗಮನಿಸಿದ್ದೆಯಾ? ಕಡ್ಡಿ ಗೀರಿ ನಿನ್ನ ಮೂತಿಗೆ ಕಿಚ್ಚು ಹೊತ್ತಿಸಿ ಅರೆಕ್ಷಣ ಮುಂದೇನು ಮಾಡಬೇಕು ಎನ್ನುವುದು ತೋಚದೆ ಹಾಗೇ ನಿಂತಿದ್ದೆ. ಯಾರಾದರೂ ನೋಡಿಬಿಟ್ಟರೆ ಎಂಬ ಆತಂಕಕ್ಕಿಂತ ನಿನ್ನೆದುರು ನಾನು ಸೋತು ಬಿಟ್ಟರೆ ಎಂಬ ಭಯ ಕಾಡುತ್ತಿತ್ತು. ನಾನು ನಾಲಾಯಕ್ಕು ಅಂತ ನೀನು ಕೈ ಬಿಟ್ಟರೆ ಎಂಬ ಅಭದ್ರತೆಯು ಕಾಡುತ್ತಿತ್ತು. ಇದೇ ದುಗುಡದಲ್ಲಿ ಉಸಿರಾಡುವುದನ್ನೂ ಮರೆತವನಂತೆ ನಿಂತಿದ್ದ ನಾನು ಒಮ್ಮೆಗೇ ಬಾಯಲ್ಲಿ ಗಾಳಿಯೆಳೆದುಕೊಂಡೆ, ಕಾದ ಸೀಸವನ್ನು ಬಾಯ ಮೂಲಕ ಎದೆಯ ಗೂಡಿಗೆ ಸುರಿದಂತಾಗಿ ಕೆಮ್ಮು ಒತ್ತರಿಸಿ ಬಂತು. ಕಣ್ಣಲ್ಲಿ ನೀರು ಚಿಮ್ಮಿ ‘ಕವ್ವು ಕವ್ವು’ ಎಂದು  ಕೆಮ್ಮುತ್ತಾ ಯಾರಿಗೂ ಕಾಣದ ಮೂಲೆಯೊಂದನ್ನು ತಲುಪಿಕೊಂಡೆ. ಎದೆಯ ಬಣವೆಗೆ ಬೆಂಕಿ ಬಿದ್ದಿದೆ ಎಂಬ ವರ್ತಮಾನವನ್ನು ಹೃದಯದ ಗಂಟೆ ಢಣ ಢಣನೆ ಬಾರಿಸುವ ಮೂಲಕ ದೇಹ ತಿಳಿಸುತ್ತಿತ್ತು. ಎದೆಯನ್ನು ಹೊಕ್ಕಿದ್ದ ನಿನ್ನ ಗಂಧ ಕೆಮ್ಮಿದಾಗೆಲ್ಲಾ ಮೂಗು, ಬಾಯೊಳಗಿಂದ ಇಷ್ಟಿಷ್ಟೇ ಹೊರ ಬರುತ್ತಿತ್ತು. ಪಕ್ಕೆಯನ್ನು ಒದಾಗಲೆಲ್ಲಾ ಬೈಕು ಕೆಮ್ಮುವಾಗ ಹೊಮ್ಮುವ ಹೊಗೆಯ ಹಾಗೆ!

ಹೇಗೋ ಸಾವರಿಸಿಕೊಂಡು ನಿನನ್ನು ಇಡಿಯಾಗಿ ಹೀರಿಕೊಳ್ಳುವಷ್ಟರಲ್ಲಿ ಟೀ ತಣ್ಣಗಾಗಿತ್ತು. ನನ್ನ ಆತಂಕ, ತಳಮಳದಲ್ಲಿ ನಿನ್ನ ಫಿಲ್ಟರು ಒದ್ದೆಯಾಗಿತ್ತು. ಟೀ ಅಂಗಡಿಯ ಮುದುಕನಿಗೆ ಇನ್ನೊಂದು ಟೀ ಬಸಿದುಕೊಡುವಂತೆ ಹೇಳಿ ಮತ್ತೆ ನಿನ್ನನ್ನು ಬರಸೆಳೆದೆ. ನಳನಳಿಸುವ ಹೊಸ ಫಿಲ್ಟರು, ಘಮಘಮಿಸುವ ಬಿಳಿಯ ನಳಿಕೆ. ಮೊದಲ ಚುಂಬನದಲ್ಲಿ ಆದ ಅವಾಂತರಗಳು ಈಗಾಗಲಿಲ್ಲ. ನಾನು ಬಲು ನಾಜೂಕಾಗಿ, ನಯವಾಗಿ ನಿನ್ನನ್ನು ಹ್ಯಾಂಡಲ್ ಮಾಡಿದೆ. ನೀನೂ ಕೂಡ ನನ್ನ ಮೊದಲ ಮಿಲನದ ಒರಟೊರಟು ಬಿಹೇವಿಯರನ್ನು ಮರೆತು ಲವಲವಿಕೆಯಿಂದ ಬೆರಳುಗಳ ಮಧ್ಯೆ ಒರಗಿಕೊಂಡಿದ್ದೆ. ತಾತ ಬಸಿದುಕೊಟ್ಟ ಟೀಯಲ್ಲಿ ಒಂದೇ ಒಂದು ಗುಟುಕು ಹೀರುವುದು,  ಎದೆಯ ಮೂಲೆ ಮೂಲೆ ತಲುಪುವಷ್ಟು ದೀರ್ಘವಾಗಿ ನಿನ್ನನ್ನು ಚುಂಬಿಸುವುದು, ಮತ್ತೆ ಒಂದು ಗುಟುಕು ಟೀ… ಮತ್ತೆ ನಿನ್ನ ಸುದೀರ್ಘ ಚುಂಬನ… ಅನಾಯಾಸವಾಗಿ ನನ್ನನ್ನು ಮೌನಿಯಾಗಿಸಿಬಿಟ್ಟಿದ್ದೆ ನೀನು. ಹೌದು ಆ ನಾಲ್ಕಾರು ನಿಮಿಷಗಳಲ್ಲಿ ನಾನು ಅಕ್ಷರಶಃ ಮೌನಿಯಾಗಿದ್ದೆ, ಬಾಯೂ ಬಂದ್, ಮನಸ್ಸೂ ಬಂದ್! ಯಾವ ಧ್ಯಾನದಲ್ಲೂ ಸಾಧ್ಯವಾಗದ ಮೌನವನ್ನು ಪರಿಚಯಿಸಿದ್ದೆ ನೀನು. ನಿನ್ನ ಬೀಳ್ಕೊಡುವಾಗ ನಾನು ಉನ್ಮತ್ತನಾದ ಗಂಧರ್ವನಾಗಿದ್ದೆ!

ಟೀ ಅಂಗಡಿಯ ತಾತನಿಗೆ ಚಿಲ್ಲರೆ ಎಣಿಸಿಕೊಟ್ಟು ವಾಪಸ್ಸು ಬರುವಾಗ ನಾನು ನಿರಾಳನಾಗಿದ್ದೆ. ಹಗಲಿಡೀ ಕಾಡುತ್ತಿದ್ದ ಪ್ರಿನ್ಸಿಪಾಲನ ಮುಖ ಮಾಯವಾಗಿತ್ತು. ನನ್ನ ಮಖೇಡಿತನ, ಕೀಳರಿಮೆ, ಆತಂಕಗಳು ಮನಸ್ಸಿನ ಅಂಗಳದಿಂದ ಜಾಗ ಖಾಲಿ ಮಾಡಿದ್ದವು. ಎಲ್ಲವೂ ಹಗುರಾದ ಅನುಭವ. ಲೋಕದಲ್ಲಿ ಯಾಕಿಷ್ಟು ದುಃಖವಿದೆ ಎನ್ನಿಸುವಂತೆ ಮಾಡಿದ್ದು ನೀನು ಕೊಟ್ಟ ಅನುಭೂತಿ. ರಾತ್ರಿ ಊಟವಾದೊಡನೆ ವಾರ್ಡನ್ನಿನ ಕಣ್ಣು ತಪ್ಪಿಸಿ ಬಂದು ನಿನ್ನ ತೆಕ್ಕೆಯನ್ನು ಸೇರಿದ್ದೆ. ನಿನ್ನದು ಅದೇ ಒಲುಮೆ, ಕೊಂಚವೂ ಊನವಿಲ್ಲದ ಪ್ರೀತಿ. ಸಿಕ್ಕು ಬೀಳಬಹುದೆಂಬ ಆತಂಕದಲ್ಲಿ ಹೊಡೆದುಕೊಳ್ಳುತ್ತಿದ್ದ ಎದೆಗೆ ನೀನೇ ಸಮಾಧಾನ ಹೇಳುತ್ತಿದ್ದ. ನಿನ್ನ ಪ್ರೀತಿಯ ಕಾವಿನಲ್ಲಿ ನನ್ನ ಮನಸ್ಸಿನ ಗಂಟುಗಳೆಲ್ಲಾ ಕರಗಿ ಕರಗಿ ನೀರಾದಂಥ ಭಾವ. ನಿನ್ನೊಂದಿಗಿನ ಸರಸವನ್ನು ಮುಗಿಸಿ ನೇರವಾಗಿ ಹಾಸ್ಟೆಲ್ಲಿಗೆ ನುಗ್ಗಿದರೆ ವಾರ್ಡನ್ನು ನಮ್ಮ ಗುಟ್ಟನ್ನು ತಿಳಿದುಬಿಡಬಹುದು ಎನಿಸಿ ಬೇರೆಲ್ಲಾ ಪ್ರೇಮಿಗಳು ಮಾಡುವಂತೆ ನಮ್ಮ ಮಿಲನದ ಸುಳಿವು ಅಳಿಸಿಹಾಕಲು ಎರಡು ಕ್ಲೊರೊಮಿಂಟ್ ಬಾಯಿಗೆ ಎಸೆದುಕೊಂಡು ನಡೆದೆ. ಮರುದಿನ ಬೆಳಿಗ್ಗೆ ನಿನ್ನನ್ನೊಮ್ಮೆ ಕಂಡು ಬೇಕಿದ್ದ ಸ್ಪೂರ್ತಿ, ಧೈರ್ಯವನ್ನೆಲ್ಲಾ ಪಡೆದುಕೊಂಡು ಪ್ರಿನ್ಸಿಪಾಲರ ಎದುರು ಹೋದೆ. ನನ್ನ ಪ್ರಾಮಾಣಿಕ ಕ್ಷಮಾಪಣೆಯನ್ನು ಮಾನ್ಯ ಮಾಡಿ ನನ್ನ ತಪ್ಪು ಮಾಫಿ ಮಾಡಿದರು. ಕೂಡಲೇ ನಿನಗೆ ಅದನ್ನು ತಿಳಿಸಿ ಅಪ್ಪಿ ಮುದ್ದಾಡ ಬೇಕು ಅನ್ನಿಸಿತ್ತು ಗೊತ್ತಾ?

(ಮುಂದಿನ ಸಂಚಿಕೆಗೆ)

(ಕಳೆದ ಸಂಚಿಕೆಯಿಂದ….)

‘ನಾನಾಗಿಯೇ ಮೇಲೆ ಬಿದ್ದು ಮಾತನಾಡಿಸಲು ಹೋದರೆ ಹುಡುಗೀರು ನನ್ನನ್ನು ಚೀಪ್ ಅಂತ ನೋಡುವುದಿಲ್ಲವಾ? ನನ್ನ ಗೆಳೆಯರನೇಕರು ಹಾಗೆ ಮಾಡುವುದನ್ನು ನೋಡಿದ್ದೇನೆ. ನನಗೇ ಅವರು ಜೊಲ್ಲು ಪಾರ್ಟಿಗಳ ಹಾಗೆ ಕಾಣಿಸಿಬಿಡುತ್ತಾರೆ. ಇನ್ನು ಹುಡುಗಿಯರು ಅವರನ್ನು ಹೇಗೆ ಕಾಣಬಹುದು ಅಲ್ಲವಾ? ಅದಕ್ಕೇ ನಾನಾಗಿ ಯಾವ ಹುಡುಗಿಯನ್ನೂ ಮಾತನಾಡಿಸುವುದಿಲ್ಲ, ಎಲ್ಲಾದರೂ ಮಾತನಾಡುವ ಅವಕಾಶ ಸಿಕ್ಕರೂ ತೀರಾ ಚುಟುಕಾಗಿ, ಎಲ್ಲೂ ನನ್ನ ಆತ್ಮಾಭಿಮಾನಕ್ಕೆ ಧಕ್ಕೆಯಾಗದ ಹಾಗೆ, ಆಕೆ ಬೇರೇನನ್ನೂ ಕಲ್ಪಿಸಿಕೊಳ್ಳದ ಹಾಗೆ, ಅಸಲಿಗೆ ಇಬ್ಬರ ನಡುವೆ ಯಾವುದಾದರೂ ಸೆಳೆತಕ್ಕೆ ಆಸ್ಪದವನ್ನೂ ಕೊಡದ ಹಾಗೆ ಮಾತನಾಡಿ ಮುಗಿಸಿಬಿಡುತ್ತೇನೆ.’ ನಾನು ನಿನ್ನೊಂದಿಗೆ ಫೋನಿನಲ್ಲಿ ಮಾತನಾಡುತ್ತಿರುವೆ ಎಂಬುದನ್ನೇ ಮರೆತವನಂತೆ, ಯಾವುದೋ ಕೌನ್ಸಿಲಿಂಗ್ ರೂಮಿನಲ್ಲಿ ಮನಃಶಾಸ್ತ್ರಜ್ಞನ ಎದುರು ಕುಳಿತು ಮಾತನಾಡಿದ ಹಾಗೆ ಪಿಸುಗುಡುತ್ತಿದ್ದೆ.

ನೀನು ನನ್ನನ್ನು ಗೇಲಿ ಮಾಡಲಿಲ್ಲ. ನೀನು ಅಂಜುಬುರುಕ, ಮಖೇಡಿ ಎಂದು ಕಾಲೆಳೆಯಲಿಲ್ಲ. ‘ಹುಡುಗಿಯೊಂದಿಗೆ ಸಲುಗೆಯಲ್ಲಿ ಮಾತನಾಡಿದರೆ ಆಕೆ ನಿನ್ನನ್ನು ಚೀಪ್ ಅಂತ ತಿಳಿದಿಕೊಳ್ಳಬಹುದು ಎಂಬುದು ನಿನ್ನ ಭಯ. ಯೋಚನೆ ಮಾಡು, ನೀನೊಬ್ಬ ಹುಡುಗ, ಈ ಸೊಸೈಟಿಯಲ್ಲಿ ಹುಡುಗಿಗಿಂತ ಹೆಚ್ಚು ಸ್ವತಂತ್ರನಾದವನು. ನಿನಗೇ ಇಷ್ಟು ಆತಂಕವಿರುವಾಗ, ಯಾವ ಹುಡುಗಿ ತಾನೆ ಮೇಲೆ ಬಿದ್ದು ನಿನ್ನನ್ನು ಮಾತನಾಡಿಸುವ ಪ್ರಯತ್ನ ಮಾಡುತ್ತಾಳೆ ಹೇಳು? ಒಂದು ವೇಳೆ ಆಕೆಯೇನಾದರೂ ಸ್ವಲ್ಪ ಸಲುಗೆ ತೋರಿಸಿದರೂ ಅದಕ್ಕೆ ತಪ್ಪಾದ ಅರ್ಥ ಅಂಟಿಕೊಳ್ಳುತ್ತೆ. ಹುಡುಗರಿಗೆ ಇಲ್ಲದ ಅಸಂಖ್ಯಾತ ಅದೃಶ್ಯವಾದ ಕಟ್ಟಳೆಗಳು ಹುಡುಗಿಗೆ ಇರುತ್ತವೆ ತಿಳಿದುಕೋ. ನಮ್ಮಮ್ಮ ಯಾವಾಗಲೂ ಹೇಳ್ತಾಳೆ, ‘ಹುಡುಗಿಯ ವ್ಯಕ್ತಿತ್ವ ಅನ್ನೋದು ಹೂವಿನ ಪಕಳೆಯ ಹಾಗೆ, ತಾನಾಗಿ ಮುಳ್ಳನ್ನು ಸವರಿದರೂ, ಮುಳ್ಳೇ ಬಂದು ಇರಿದರೂ ಹರಿಯುವುದು ಪಕಳೆಯ ಎದೆಯೇ’ ಅಂತ. ನಾನು ಆಗ ಆಕೆ ನನ್ನಲ್ಲಿ ಕೀಳರಿಮೆ ಬಿತ್ತುತ್ತಿದ್ದಾಳೆ ಅಂತ ಭಾವಿಸಿ ವಿರೋಧಿಸುತ್ತಿದ್ದೆ. ಕೋಪಮಾಡಿಕೊಂಡು ಕೂಗಾಡುತ್ತಿದ್ದೆ. ಆದರೆ ಅದು ವಾಸ್ತವಕ್ಕೆ ತೀರಾ ಹತ್ತಿರವಾದದ್ದು ಅಂತ ಅನ್ನಿಸುತ್ತಿದೆ…’ ಹುಡುಕಿ ಹುಡುಕಿ ನೋಡಿದರೂ ನಿನ್ನ ಮಾತಿನಲ್ಲಿ ಚೂರೂ ನಂಜು ಕಾಣಲಿಲ್ಲ. ನನ್ನ ಆತಂಕ, ತಳಮಳಗಳೆಡೆಗೆ ನಿನ್ನ ಮಾತಿನಲ್ಲಿದ್ದದ್ದು ಶುದ್ಧ ಸಹಾನುಭೂತಿ. ಬದುಕಿನಲ್ಲಿ ಹೆಚ್ಚು ವಸಂತಗಳನ್ನು ಕಂಡ ತಂದೆ ಮಗನನ್ನು ಸಂತೈಸುವಂತೆ ನೀನು ಮಾತನಾಡುತ್ತಲಿದ್ದೆ. ಗೆಳತಿಯೊಬ್ಬಳನ್ನು ಗುರುವಾಗುವ ಪರಿಯನ್ನು ನಾನು ಮೌನವಾಗಿ ಅನುಭವಿಸುತ್ತಿದ್ದೆ.

ಪ್ರತಿರಾತ್ರಿ ನಿನ್ನ ಕರೆಗಾಗಿ ನಾನು ಚಡಪಡಿಸುವುದನ್ನು ಗಮನಿಸಿ ನನಗೇ ವಿಚಿತ್ರ ಎನ್ನಿಸುತ್ತಿತ್ತು. ನಾನೇಕೆ ಹೀಗೆ ನಿನ್ನ ಗುಂಗಿನಲ್ಲಿ ಸಿಕ್ಕಿಹಾಕಿಕೊಂಡಿರುವೆ ಎಂದು ಕೇಳಿಕೊಳ್ಳುತ್ತಿದ್ದೆ. ನನ್ನ ಬುದ್ಧಿ, ‘ಎಚ್ಚರವಾಗಿರು ಗುರು, ಹುಡುಗೀರ ಸಂಗತಿ ಸ್ವಲ್ಪ ಕೇರ್ ಫುಲ್ಲಾಗಿರು. ಯಾಕೆ ಹಿಂಗೆ ನೀನು ಅವಳೊಂದಿಗೆ ಮಾತಾಡಲು, ಹರಟೆ ಹೊಡೆಯಲು ಕಾತರಿಸುತ್ತಿದ್ದೀಯ?’ ಅಂತ ಹೇಳಿದರೂ  ನನ್ನ ಮನಸ್ಸು ಅದಕ್ಕೆ ಕವಡೆ ಕಾಸಿನ ಬೆಲೆಯನ್ನೂ ಕೊಡದಂತೆ, ಅಸಲಿಗೆ ಪ್ರಶ್ನೆಯೇ ಕೇಳಲಿಲ್ಲವೆನ್ನುವಂತೆ ಲಹರಿಯಲ್ಲಿರುತ್ತಿತ್ತು. ನಿನ್ನ ನಂಬರು ನನ್ನ ಮೊಬೈಲಿನ ಹಣೆಯ ಮೇಲೆ ಕುಣಿಯುತ್ತಿದ್ದ ಹಾಗೆ ನಾನು ಪುಟಿಯುವ ಹೃದಯವನ್ನು ಹೊತ್ತುಕೊಂಡು ರೂಮಿನಿಂದ ಹೊರಕ್ಕೆ ಹಾರುತ್ತಿದ್ದೆ. ಟೆರೇಸಿನ ಮೇಲೇರಿ, ಅಲ್ಲಿನ ಏಕಾಂತದಲ್ಲಿ ನಿನ್ನ ಧ್ವನಿಗೆ ಕಿವಿಯಾಗುತ್ತಿದ್ದೆ. ಎಷ್ಟೇ ಹತ್ತಿರದ ಗೆಳೆಯನೇ ಆದರೂ ಎರಡು ನಿಮಿಷ ಕಳೆಯುತ್ತಿದ್ದ  ಹಾಗೆಯೇ ವಿಷಯಗಳು ಮುಗಿದು ಅಧಿಕೃತ ವಂದನಾರ್ಪಣೆಗಾಗಿ ಕಾಯುತ್ತಿರುವವನಂತೆ  ಮಾತನಾಡುತ್ತಿದ್ದ ನನಗೆ ನೀನು ಸಾಮು ಕಲಿಸುವ ಗರಡಿಯ ಪೈಲ್ವಾನನ ಹಾಗೆ ಮಾತನಾಡುವ ಕಲೆಯ ಒಂದೊಂದೇ ಮಟ್ಟುಗಳನ್ನು ಕಲಿಸುತ್ತಾ ಹೋದೆ. ನಾನು ದಿನವಿಡೀ ಓದಿದ ಪುಸ್ತಕದ ಬಗ್ಗೆ, ಎಂದೋ ನೋಡಿದ್ದ ಸಿನೆಮಾದ ಬಗ್ಗೆ, ಇಬ್ಬರಿಗೂ ಇಷ್ಟವಾದ ಲೇಖಕನ ಬಗ್ಗೆ, ಟಿವಿ ಪರ್ಸನಾಲಿಟಿಯ ಬಗ್ಗೆ, ನನಗಷ್ಟೇ ಇಷ್ಟವಾದ ಓಶೋ ಬಗ್ಗೆ – ಹೀಗೆ ಮಾತೆಂಬ ಮಹಾನದಿಗೆ ಎಷ್ಟೆಲ್ಲಾ ಪಾತ್ರಗಳು ಸೃಷ್ಟಿಯಾಗುತ್ತಿದ್ದವು!

ಎರಡು ಮೂರು ತಿಂಗಳಾಗಿತ್ತು ನಾವು ಪರಿಚಯವಾಗಿ. ಆದರೆ ನಾವು ಒಬ್ಬರನ್ನೊಬ್ಬರು ನೋಡಿಯೇ ಇರಲಿಲ್ಲ. ಮೊಬೈಲಿನಲ್ಲಿ ಪರಸ್ಪರರ ಧ್ವನಿ ಪರಿಚಿತವಾಗಿದ್ದರೆ ಆರ್ಕುಟ್ಟಿನ ಆಲ್ಬಮ್ಮಿನಲ್ಲಿ ಇಬ್ಬರ ಪುಟ್ಟ ಪುಟ್ಟ ಫೋಟೊಗಳು ಮಾತಾಡಿಕೊಂಡಿದ್ದವು. ಈ ಮನುಷ್ಯನೆಂಬ ಬುದ್ಧಿವಂತ ಮೊಬೈಲು, ಇಂಟರ್ನೆಟ್ಟುಗಳನ್ನು ಕಂಡುಹಿಡಿಯದೇ ಹೋಗಿದ್ದರೆ ನಾವಿಬ್ಬರೂ ಜಗತ್ತಿನ ಒಂದೊಂದು ಮೂಲೆಯಲ್ಲಿ ಪರಿಚಯವೇ ಇಲ್ಲದವರ ಹಾಗೆ, ಬಂಧನದ ಯಾವ ಎಳೆಯೂ ಇಲ್ಲದ ಹಾಗೆ ಜೀವಮಾನವಿಡೀ ಕಳೆದುಬಿಡುತ್ತಿದ್ದೆವಲ್ಲವಾ? ಏನಾದರಾಗಲಿ ಒಮ್ಮೆ ಮುಖಾಮುಖಿಯಾಗಿ ಭೇಟಿಯಾಗಿ ನಮ್ಮ ತಂತ್ರಜ್ಞಾನದ ‘ಸಂಬಂಧ’ವನ್ನು ವೈಯಕ್ತಿಕ ಮಟ್ಟಕ್ಕೆ ವಿಸ್ತರಿಸಬೇಕು ಅಂತ ನಾನು ತೀರ್ಮಾನಿಸುವಷ್ಟರಲ್ಲಿ ನೀನು ಕೇಳಿದ್ದೆ, ‘ಎಲ್ಲಿ ಭೇಟಿಯಾಗೋಣ?’
ಮೊದಲೇ ಮಾತಾಡಿಕೊಂಡ ಜಾಗಕ್ಕೆ ಬಂದು ಅಲ್ಲಿನ ಮುಖಗಳಲ್ಲಿ ನಿನ್ನ ಆತ್ಮೀಯತೆಯನ್ನು ಹುಡುಕುತ್ತಾ ನಿಂತಿದ್ದೆ. ನೀನು ಬರುವ ಮುಂಚಿನ ಐದಾರು ನಿಮಿಷ ನನ್ನ ತಲೆಯಲ್ಲಿ ಗೊಂದಲದ ಅಲೆಗಳು ಮೊರೆತ. ನೀನು ಬಂದು ಎದುರು ನಿಂತು ‘ಹೆಲೋ!’ ಎಂದಾಗ ನಾನು ಅಕ್ಷರಶಃ ಬೆಚ್ಚಿ ಬಿದ್ದಿದ್ದೆ. ಫೋನಿನಲ್ಲಿ, g-ಣಚಿಟಞನ ಕೋಣೆಯಲ್ಲಿ ನಾವೆಷ್ಟು ಪರಿಚಿತರು, ಆತ್ಮೀಯರಾಗಿದ್ದರೂ ಧುತ್ತೆಂದು ಎದುರು ಬಂದು ನಿಂತಾಗ ನನ್ನ ಮೈ ಮನಸ್ಸುಗಳಿಗೆ ಆ ಆತ್ಮೀಯತೆಯನ್ನು ಒಪ್ಪಿಕೊಳ್ಳಲು ಕೊಂಚ ಸಮಯ ಹಿಡಿಯಿತು. ಒಬ್ಬರ ಪಕ್ಕ ಒಬ್ಬರು ಕುಳಿತು ನಾವು ತಾಸುಗಟ್ಟಲೆ ಮಾತನಾಡುತ್ತಿದ್ದರೆ ನನಗೆ ಸುತ್ತಲಿದ್ದವರ ಕಣ್ಣುಗಳಲ್ಲಿ ನಮ್ಮೆಡೆಗೆ ಪ್ರತಿಫಲಿತವಾಗುತ್ತಿದ್ದ ಭಾವದ್ದೇ ಚಿಂತೆ. ನನ್ನೊಳಗಿನ ಪ್ರಶ್ನೆಯನ್ನು ಸುತ್ತಲ ಜಗತ್ತು ಮೈಯೆಲ್ಲಾ ಬಾಯಾಗಿ ಕೇಳಿದಂತೆ ಭಾಸವಾಗುತ್ತಿತ್ತು, ಈಕೆ ನನಗೇನಾಗಬೇಕು!

ನನ್ನ ಈ ಪ್ರಶ್ನೆ ನಿನಗೆ ತಿಳಿದುಬಿಟ್ಟಿತೇನೋ ಎಂಬಂತೆ ನೀನು ಕೆಲವೇ ದಿನಗಳಲ್ಲಿ ಒಂದು ಬಾಂಬು ಸಿಡಿಸಿದೆ. ಜಿ-ಟಾಕಿಯ ಪರದೆಯ ಮೇಲೆ ನಿನ್ನ ಅಕ್ಷರಗಳು ಮೂಡುತ್ತಿದ್ದ ಹಾಗೆ ನನ್ನ ನೆಮ್ಮದಿ ಚೂರು ಚೂರಾಗುತ್ತಿತ್ತು. ‘ನನಗೊಬ್ಬ ಬಾಯ್ ಫ್ರೆಂಡ್ ಇದ್ದಾನೆ. ಕಳೆದ ಆರು ತಿಂಗಳಿಂದ ನಮ್ಮ ಅಫೇರ್ ನಡೆಯುತ್ತಿದೆ’. ಒಂದು ಕ್ಷಣ ನಾನು ದಿಗ್ಮೂಢನಾಗಿ ಕುಳಿತಿದ್ದೆ. ನೀನು ಟೈಪಿಸಿ ಕಳುಹಿಸಿದ ಈ ಸಾಲುಗಳೊಳಗೆ ಯಾವ ಭಾವವಿರಬಹುದು ಎಂದು ಯೋಚಿಸಿ ಮನಸ್ಸು ವಿಹ್ವಲಗೊಂಡಿತು. ನಾನು ನಿನ್ನೊಂದಿಗಿನ ಸಂಬಂಧದಲ್ಲಿ ಎಲ್ಲೆ ಮೀರುತ್ತಿದ್ದೇನೆ ಎಂಬುದನ್ನು ನೆನಪಿಸಲು ಹೀಗೆ ಹೇಳಿದ್ದೆಯಾ, ‘ನೋಡು, ಇದು ವಾಸ್ತವ. ನೀನು ಸುಮ್ಮನೆ ಆಶಾಗೋಪುರವನ್ನು ಕಟ್ಟಿಕೊಳ್ಳಬೇಡ’ ಎಂಬ ಎಚ್ಚರಿಕೆ ಕೊಟ್ಟೆಯಾ, ಇಲ್ಲ, ಸಹಜವಾಗಿ ನಿನ್ನ ಇತರ ವೈಯಕ್ತಿಕ ರಹಸ್ಯಗಳನ್ನು ಹೇಳಿಕೊಳ್ಳುವ ಸಲುಗೆಯಲ್ಲಿ ಇದನ್ನು ಹೇಳಿದ್ದೆಯಾ? ಗೊತ್ತಾಗಲಿಲ್ಲ. ನಾನು ನಿನ್ನೆದುರು ಚೀಪ್ ಆದ ಅನುಭವವಾಯ್ತು. ‘ಇದ್ದರೇನಂತೆ, ನನಗೂ ಒಬ್ಬಳು ಗರ್ಲ್ ಫ್ರೆಂಡ್ ಇದ್ದಾಳೆ. ಏನೀಗ’ ಎಂದು ಮುಯ್ಯಿ ತೀರಿಸಿಕೊಳ್ಳುವ ಮನಸ್ಸಾಯಿತು. ಶುಭ್ರವಾದ ನೀರಿನ ಪಾತ್ರೆಯಲ್ಲಿ ಬಿದ್ದ ಒಂದು ಹನಿ ಇಂಕು ಪಾತ್ರೆಯನ್ನೆಲ್ಲಾ ವಿಷಾನಿಲದ ಹಾಗೆ ಆವರಿಸುವಂತೆ ನಿನ್ನ ಮಾತಿನೊಳಗಿನ ಕಹಿ ನನ್ನ ಮನಸ್ಸನ್ನು ಆವರಿಸಿತು. ನಿನಗೆ ನಾನು ಏನು ಉತ್ತರಿಸಿದೆನೋ ನೆನಪಿಲ್ಲ. ಆದರೆ ಆ ಸಂಜೆಯೆಲ್ಲಾ ನಾನು ಮೋಸ ಹೋದವನಂತೆ, ಬೆನ್ನಿಗೆ ಚೂರಿ ಹಾಕಿಸಿಕೊಂಡವನಂತೆ ಹಿಂಸೆ ಅನುಭವಿಸಿದ್ದೆ. ರಾತ್ರಿಯಿಡೀ ಅವ್ಯಕ್ತವಾದ ಬೇನಯಲ್ಲಿ ನರಳಾಡಿದ್ದೆ. ‘ನಾನು ನಿನ್ನನ್ನು ಪ್ರೀತಿಸಲು ಶುರು ಮಾಡಿಬಿಟ್ಟೆನಾ?’ ಎಂದು ಕೇಳಿಕೊಳ್ಳಲೂ ಸಹ ಸಮಯವಿಲ್ಲದ ಹಾಗೆ ನೋವು ನನ್ನನ್ನು ತಿನ್ನುತ್ತಿತ್ತು.

ಬೆಳಗಾಯಿತೆಂದು ಸೂರ್ಯ ಕಿಟಕಿಯ ಮುಖಾಂತರ ವರ್ತಮಾನ ಕೊಟ್ಟಾಗ ಕಣ್ಣು ಬಿಟ್ಟೆ. ರಾತ್ರಿಯಿಡೀ ನಿದ್ದೆ ಮಾಡದಿದ್ದುದರಿಂದಲೋ ಏನೋ ಕಣ್ಣುಗಳು ಕೆಂಡದಂತೆ ಕೆಂಪಾಗಿದ್ದವು.ನಿದ್ದೆ ಬಾರದೆ ಹಾಸಿಗೆಯಲ್ಲಿ ಹೊರಳಾಡಿ ಕೂದಲು ಕೆದರಿ ಹೋಗಿತ್ತು. ನನ್ನ ಅವತಾರವನ್ನು ಕಂಡ ನನ್ನ ರೂಂ ಮೇಟು ‘ಏನೋ, ಹುಶಾರಿಲ್ಲವಾ?’ ಎಂದು ವಿಚಾರಿಸಿದ. ನಾನು ಭಗ್ನ ಪ್ರೇಮಿಯ ಹಾಗೆ, ಶಾಪಗ್ರಸ್ತ ಗಂಧರ್ವನ ಹಾಗೆ ಬೆಳಗನ್ನು ಕಳೆದೆ. ಆ ದರಿದ್ರ ಮೂಡಿನಲ್ಲಿ ಕಾಲೇಜಿಗೂ ಹೋಗಲಾಗಲಿಲ್ಲ. ಸಂಜೆಯವರೆಗೆ ಯಾವುದೋ ಆಲಸ್ಯ ಮೈಯನ್ನೆಲ್ಲಾ ಆವರಿಸಿತ್ತು. ಸಂಜೆಯಾಗುತ್ತಿದ್ದ ಹಾಗೆ ನನ್ನ ಮೊಬೈಲಿನ ಮೆಸೇಜು ಡಬ್ಬಿ ತೆಗೆದು ಕುಟ್ಟಿ ಕಳಿಸಿದ್ದು ಒಂದೇ ಸಾಲು, ‘ಐ ಲವ್ ಯೂ’. ತಲೆಯ ಮೇಲಿನ ದೊಡ್ಡ ಹೊರೆ ಇಳಿಸಿದಷ್ಟು ನಿರಾಳ. ಮರುಕ್ಷಣದಲ್ಲೇ ನಿನ್ನ ಸಂದೇಶ ಬಂದಿತ್ತು, ‘ಏನು ತಮಾಶೆ ಮಾಡ್ತಿದ್ದೀಯಾ?’ ಅಂತ ಕೇಳಿದ್ದೆ. ನಾನು ಉತ್ತರಿಸಲಿಲ್ಲ, ‘ತಲೆ ಕೆಟ್ಟಿದೆಯಾ…’ ‘…’ ‘ಇದು ಸರಿಯಲ್ಲ, ನಾನು ಯಾವತ್ತೂ ನಿನ್ನ ಹಾಗೆ ನೋಡಿಲ್ಲ..’ ಉತ್ತರಿಸುವ ಗೋಜಿಗೆ ಹೋಗಲಿಲ್ಲ.
ಮೊಬೈಲು ಮೊರೆಯತೊಡಗಿತು. ಆಕೆಯದೇ ಕರೆ. ನಾಲ್ಕು ಬಾರಿ ರಿಂಗಣಿಸಿದ ಮೇಲೆ ಎತ್ತಿಕೊಂಡೆ.

‘ಏನಾಗಿದೆ ನಿನಗೆ? ಯಾಕೆ ಹಿಂಗೆ ಮೆಸೇಜ್ ಮಾಡಿದೆ?’

‘ನಾನು ನಿನ್ನ ಪ್ರೀತಿಸ್ತಿದ್ದೀನಿ’

‘ಯೂ ಈಡಿಯಟ್! ನಾನು ನಿನ್ನ ಫ್ರೆಂಡ್ ಆಗಿ ಒಪ್ಪಿಕೊಂಡಿದ್ದೀನಿ. ಲವರ್ ಅಂತ ಬೇರೊಬ್ಬನನ್ನು ಒಪ್ಪಿಕೊಂಡಿದ್ದೀನಿ…’

‘…’

‘ನಾವು ಫ್ರೆಂಡ್ಸಾಗಿ ಇರೋದಾದರೆ ಸರಿ, ಇಲ್ಲಾಂದ್ರೆ ನಮ್ಮ ಪರಿಚಯವನ್ನ ಇಲ್ಲಿಗೇ ಕೊನೆ ಮಾಡಿಬಿಡೋಣ. ಛೇ! ನೀನು ಈ ರೀತಿ ವರ್ತಿಸುತ್ತೀಯ ಅಂತ ನಾನು ಅಂದುಕೊಂಡಿರಲಿಲ್ಲ’

ಫೋನು ಕಟ್ ಮಾಡಿದೆ. ಎದೆಯಲ್ಲಿ ಕಾಳ್ಗಿಚ್ಚಿನ ಧಗೆ. ಮುಖದ ತುಂಬಾ ಅಳು ಒತ್ತರಿಸಿಬಂದಂತಾಗಿ ಮುಖ ಮುಚ್ಚಿಕೊಂಡು ಕುಳಿತೆ. ನಾಲ್ಕು ಹನಿ ಕಣ್ಣಿರು ನನ್ನ ಅನುಮತಿಯಿಲ್ಲದೆ ಹರಿದುಹೋದವು. ಮೊಬೈಲಿನ ಮೆಸೇಜು ಡಬ್ಬಿ ಬಿಚ್ಚಿ ನಿನ್ನ ಸಂದೇಶಗಳೆಲ್ಲವನ್ನೂ ನಾಶ ಮಾಡಿದೆ. ನಿನ್ನ ಮೊಬೈಲ್ ನಂಬರನ್ನೇ ಅಳಿಸಿ ಹಾಕಿದೆ. ನಿನ್ನ ನೆನಪನ್ನೇ ನಾಶ ಮಾಡುತ್ತಿದ್ದೇನೆಂಬ ಭ್ರಮೆಯಲ್ಲಿ. ಇನ್ನೆಂದೂ ನಿನ್ನ ಮಾತನಾಡಿಸಬಾರದು ಅಂತ ತೀರ್ಮಾನಿಸಿದೆ. ಈ ಪ್ರೀತಿ ಪ್ರೇಮದ ಗುಂಗಿಗೆ ಬಿದ್ದು ನನ್ನ ಬದುಕಿನ ಗುರಿಯಿಂದ ವಿಮುಖನಾದ ತಪ್ಪಿತಸ್ಥ ಭಾವ ಕವಿಯತೊಡಗಿತು. ಮನಸಾರೆ ಅತ್ತು ಸಂಜೆಗೇ ಮಲಗಿಬಿಟ್ಟೆ. ಕನಸಲ್ಲಿ ನೀನು ಕಾಣಲಿಲ್ಲ.

***

ಇದೆಲ್ಲಾ ಆಗಿ ನಾಲ್ಕು ವರ್ಷಗಳೇ ಕಳೆದಿವೆ. ಈಗ ಇವನ್ನೆಲ್ಲಾ ನೆನಪಿಸಿಕೊಂಡರೆ ಮಜವೆನಿಸುತ್ತದೆ. ಎಂದಿಗೂ ಒಬ್ಬ ಹುಡುಗಿಯನ್ನು ಮಾತನಾಡಿಸಿ ಅಭ್ಯಾಸವಿಲ್ಲದ ನಾನು ನಿನ್ನ ಗೆಳೆತನ, ನಿನ್ನ ಆತ್ಮೀಯತೆಯನ್ನು ಅದರದೇ ಆದ ಭಾವದಲ್ಲಿ ಸ್ವೀಕರಿಸುವಲ್ಲಿ ಸೋತಿದ್ದೆ. ಚಿಕ್ಕ ವಯಸ್ಸಿನಲ್ಲೇ ನನಗೆ ಗೆಳತಿಯರಿದ್ದಿದ್ದರೆ ಇಂತ ಲೋಪ ಆಗುತ್ತಿರಲಿಲ್ಲವಾ ಗೊತ್ತಿಲ್ಲ. ಸಂಬಂಧಗಳನ್ನು ಅರ್ಥ ಮಾಡಿಕೊಳ್ಳಲು ಬೇಕಿರುವುದು ವಿವೇಕವಾ, ಅನುಭವವಾ, ಬುದ್ಧಿವಂತಿಕೆಯಾ? ಗೆಳೆತನ, ಪ್ರೇಮದ ನಡುವಿನೆ ಗಡಿಯನ್ನು ಮೀರದಿರುವ ವಿವೇಕವಿಲ್ಲದೆ ಪ್ರೀತಿಯಲ್ಲಿ ಬಿದ್ದರೆ ಗೆಳೆತನವನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂಬುದು ನನಗೇಕೆ ತಿಳಿಯಲಿಲ್ಲ.

ಇಷ್ಟು ದಿನಗಳ ನಂತರ ಈಗೇಕೆ ಪತ್ರ ಬರೆಯುತ್ತಿರುವೆ ಅಂತ ನಿನಗೆ ಆಶ್ಚರ್ಯವಾಗಬಹುದು. ತುಂಬಾ ಹಿಂದೆಯೇ ನಿನ್ನ ಬಾಯ್ ಫ್ರೆಂಡ್ ಬೇರೊಬ್ಬಳನ್ನು ಮದುವೆಯಾದ ಅನ್ನೋದು ತಿಳಿಯಿತು. ನನಗೆ ನಾಲ್ಕೈದು ಮಂದಿ ಗರ್ಲ್ ಫ್ರೆಂಡ್‌ಗಳ ಅನುಭವವಾಗಿದೆ. ಪ್ರೀತಿಸಲು ಎಷ್ಟಾದರೂ ಹುಡುಗಿಯರು ಸಿಕ್ಕಾರು ಆದರೆ ಗುರುವಿನಂಥ, ತಾಯಿಯಂಥ, ಹಿರಿಯಕ್ಕನಂತಹ ನಿನ್ನಂತಹ ಗೆಳತಿ ನನಗ್ಯಾರೂ ಸಿಕ್ಕುವುದಿಲ್ಲ. ಆ ದಿನಗಳಲ್ಲಿ ನಾನು ನಿನ್ನಲ್ಲಿ ಕಾಣುತ್ತಿದ್ದ ಆತ್ಮೀಯತೆ ನೀನು ಕೊಡುತ್ತಿದ್ದ ರಿಲೀಫ್, ಸಮಾಧಾನ ನನಗೆ ಜಗತ್ತಿನಲ್ಲಿ ಬೇರಾರ ಬಳಿಯೂ ಸಿಕ್ಕದು. ನನ್ನ ಕೋರಿಕೆಯನ್ನು ಮನ್ನಿಸಿ ನನ್ನ ಪುನಃ ಗೆಳೆಯನಾಗಿ ಸ್ವೀಕರಿಸುವೆಯಾ? ನನ್ನನ್ನು ಶಾಪ ವಿಮುಕ್ತನಾಗಿಸುವೆಯಾ?

ಇಂತಿ ನಿನ್ನ,
ಶಾಪಗ್ರಸ್ತ ಗಂಧರ್ವ

– ರಂಜಿತ್ ಅಡಿಗ

ಪ್ರೀತಿಯೇ ಹಾಗೆ!

ಬದುಕಿನಲ್ಲಿ ಎಲ್ಲಾ ಸಾಧಿಸಿದವನಿಗೆ ತೃಪ್ತಿ ಸಿಗಬಹುದು. ‘ಅಬ್ಬ! ಎಲ್ಲ ಸಾಧಿಸಿದೆ… ಇನ್ನು ಸಾಕು’ ಅನ್ನಿಸಬಹುದು. ಆದರೆ ಪ್ರೀತಿಯ ವಿಷಯದಲ್ಲಿ ಎದೆಯ ಮಡಿಕೆಗೆ ಎಂದಿಗೂ ತೂತು. ಪ್ರೀತಿ ಎಷ್ಟು ಸಿಕ್ಕಿದರೂ ಅವರ ದಾಹ ನೀಗದು. ಜಗತ್ತನ್ನೇ ಗೆದ್ದೆ ಅಂದವನೂ ಪ್ರೀತಿಯ ವಿಷಯದಲ್ಲಿ ಮೊಣಕಾಲೂರಿ ಬೇಡಲೇಬೇಕು. ಹಿಡಿ ಪ್ರೀತಿಗಾಗಿ ಫಕೀರನಾಗಲೇ ಬೇಕು. ಯಾಕೆಂದರೆ…

ಪ್ರೀತಿಯೇ ಹಾಗೆ!

ಪ್ರೀತಿಯೆಂದರೆ ಎದೆಯ ಹಸಿವು. ಉಸಿರು, ನೀರು, ಆಹಾರ ದೇಹಕ್ಕೆಷ್ಟು ಅಗತ್ಯವೋ ಅಷ್ಟೇ ಅಗತ್ಯ ಹೃದಯದ ಹಸಿವು ನೀಗಲೂ ಇದೆ. ಪ್ರೀತಿ ಎಂಬುದು ಬೊಗಳೆ… ಇಂಪ್ರಾಕ್ಟಿಕಲ್ ಅಂದವನೂ ಒಂದು ಘಟ್ಟದಲ್ಲಿ ಪ್ರೀತಿಯ ಕೊರತೆಯಿಂದ ಹಪಹಪಿಸಲೇಬೇಕು. ಎದೆಯ ಏಕಾಂಗಿತನಕ್ಕೆ ಸಂಗಾತಿಯನ್ನು ಅರಸಲೇ ಬೇಕು.
ಪ್ರೀತಿಯೆಂದರೆ ಹೃದಯದ ಹಸಿವು, ಯಾಕೆಂದರೆ… ಹೃದಯವುಳ್ಳ ಪ್ರತಿ ಜೀವವೂ ಪ್ರೀತಿಗಾಗಿ ತುಡಿಯುತ್ತಿರುತ್ತದೆ. ಸ್ವಲ್ಪ ಪ್ರೀತಿಯ ತೋರಿದರೆ ನಾಯಿಗಳು ಕೊನೆವರೆಗೂ ನೆನಪಿರಿಸಿಕೊಳ್ಳುತ್ತವೆ. ದನಗಳು ತೋರುವ ಪ್ರೀತಿ ಅದನ್ನು ಸಾಕಿದವರಿಗೇ ಗೊತ್ತು. ಬೆಕ್ಕಿನಿಂದ ಸಿಕ್ಕುವ ಪ್ರೀತಿಯ ನೆಕ್ಕುವಿಕೆ ಅದನ್ನು ಪ್ರೀತಿಸಿದವರಿಗೆ ಮಾತ್ರ. ಬರಿಯ ಸಾಕು-ಪ್ರಾಣಿಗಳಷ್ಟೇ ಅಲ್ಲ. ಭಾವನೆಗಳು, ಪ್ರೀತಿಯ ಹಂಚುವಿಕೆ ಕ್ರೂರ ಪ್ರಾಣಿಗಳಲ್ಲೂ ಇರುತ್ತದೆ. ವ್ಯಾಘ್ರನ ಇನ್ನೊಂದು ಮುಖ ‘ಧರಣಿ ಮಂಡಲ ಮಧ್ಯದೊಳಗೆ’ ಕಥೆಯಲ್ಲೂ ಕಾಣಸಿಗುತ್ತದೆ.

ಪ್ರೀತಿ-ಪ್ರೇಮ ಯಾವಾಗಲೂ ಹಚ್ಚ ಹಸಿರು. ಮಾನವ ಜನ್ಮ ಉಗಮವಾದಾಗಿನಿಂದಲೂ ಪ್ರತಿ ಮನಸ್ಸನ್ನು ಕಾಡಿದೆ. ಪ್ರತಿಯೊಬ್ಬರನ್ನೂ ಕ್ಷಣಕಾಲ ಚಲಿಸುವಂತೆ ಮಾಡಿದೆ. ಎಲ್ಲ ರೀತಿಯ ಕಥೆಗಳು ಮನುಷ್ಯನಿಗೆ ಬೋರ್ ಹೊಡೆಸಿದರೂ… ಪ್ರೀತಿ ಪ್ರೇಮ ಅಂದೊಡನೆ ಮನ ಅರಳುತ್ತದೆ. ಅದೇ ಕಥೆಯನ್ನು ಮತ್ತೆ ಮತ್ತೆ ಕೇಳುವಂತೆ ಅನುಭವಿಸುವಂತೆ ಮಾಡುವ ಶಕ್ತಿ ಪ್ರೇಮಕ್ಕಿದೆ. ಹೀಗಾಗಿ ಪ್ರೇಮದ ವಿಷಯ ಮಾತ್ರ ಸಾಹಿತ್ಯದಲ್ಲಿ, ಸಿನೆಮಾದಲ್ಲಿ ಅಜರಾಮರ.

ಕಲಿಗಾಲದಲ್ಲಿ ಎಲ್ಲದರಲ್ಲೂ ಕಲಬೆರಕೆ ಉಂಟಾಗುವಂತೆ ಪ್ರೀತಿಯಲ್ಲೂ ಆಗಿದೆ. ಪ್ರೇಮವೆಂಬುದು ಪೊಸೆಸಿವ್‌ನೆಸ್ ಆದಾಗ… ವಿಕೃತಿಯ ಹುಟ್ಟು. ತನಗೇ ಬೇಕೆಂಬ ಸ್ವಾರ್ಥ. ಹೀಗಾಗಿ ಪ್ರೇಮ ಎಂಬ ಪವಿತ್ರ ಪದದ ಮೇಲೆ ಮನುಷ್ಯನಿಗೆ ಹೇಕರಿಕೆ ಉಂಟಾಗುತ್ತಿದೆ. ಅನ್ ಕಂಡೀಶನಲ್ ಆಗಿ ಪ್ರೇಮಿಸುವ, ಪ್ರೇಮವೆಂದರೆ ಕೊನೆಯವರೆಗೆ ಸಂಗಾತಿಯನ್ನು ಕಂಫರ್ಟ್ ಆಗಿರಿಸುವ… ಅದೂ ಖಾಯಂ ಆಗಿರುವ ಭಾವನೆ ಎಂಬುದು ಅರ್ಥ ಮಾಡಿಕೊಳ್ಳದೇ, ಕ್ಷಣಿಕ ಆವೇಶಗಳಿಗೆ ಮಣಿದು, ಆಕರ್ಷಣೆಗಳಿಗೇ ಸೋಲುವ ಯುವ ಹೃದಯಗಳು ಸಾಕಷ್ಟು.
ಪ್ರೇಮವೆಂದರೆ ಪರಸ್ಪರ ನೀಡುವ ಗೌರವ. ‘ನಿನಗೆ ಬೇಕಾದ್ದನ್ನು ನೀಡಲು ಸಾಧ್ಯವಾಗದೇ ಇರಬಹುದು… ಆದರೆ ಎಂದಿಗೂ ಕಣ್ಣೀರು ಹಾಕಿಸಲಾರೆ… ಕೊನೆವರೆಗೂ ಕಷ್ಟದಲ್ಲಿ- ಇಷ್ಟದಲ್ಲಿ ಜತೆಗೇ ಇರುವೆ… ನೆಮ್ಮದಿಯನ್ನು ನೀಡುವೆ’ ಎಂಬ ಭಾವನೆಯೇ ಪ್ರೇಮ.

ಪಕ್ವ ಪ್ರೇಮಕ್ಕೆ ಹಣದ, ಸೌಂದರ್ಯದ ಹಂಗಿಲ್ಲ. ಸುಂದರ ಭವಿಷ್ಯಕ್ಕೆ ಜತೆಯಾಗಿ ನಡೆವುದೇ ಪ್ರೇಮ.
ಬದುಕು ಎಲ್ಲವನ್ನೂ ಸುಲಭವಾಗಿ ನೀಡದು. ಅದರ ದಾರಿ ಬಲುದೂರ. ಸಾಧನೆಯ, ನೆಮ್ಮದಿಯ ಗುರಿ ತಲುಪಲು ಕಷ್ಟದ ಬಿಸಿಲಿನಲ್ಲಿ ಬರಿಗಾಲ ನಡಿಗೆ. ಪ್ರೇಮವೆಂಬುದು ಅದರಲ್ಲಿನ ತಂಪು ನೆರಳು. ಬದುಕಿನ ದಾರಿಯಲ್ಲಿ ಸುಸ್ತಾದವನಿಗೆ ದೊರಕುವ ಅಮೃತ. ಅಮೃತ ಕುಡಿದೊಡನೆ ಮತ್ತೆ ಸುಸ್ತನ್ನೆಲ್ಲ ಕೊಡವಿ ಎದ್ದು ನಿಲ್ಲಬೇಕು. ಮತ್ತೆ ನೆಮ್ಮದಿಯತ್ತ ನಡೆಯಬೇಕು.

ಪ್ರೇಮವೆಂದರೆ ಬರಿಯ ಅಮೃತವಷ್ಟೇ ಅಲ್ಲ. ಪರಸ್ಪರ ಗೌರವ, ತ್ಯಾಗ, ಹೊಂದಾಣಿಕೆ, ಕಾಳಜಿ, ಕೊನೆವರೆಗೂ ಜತೆಗಿರುವ ಸ್ಥೈರ್ಯಗಳೆಂಬ ಪಂಚಾಮೃತ. ಸಾಧನೆಯ ಮಾರ್ಗದಲ್ಲಿ ಬೇಸರ, ಸುಸ್ತಾಗದೇ ಪ್ರೇಮದ ಅಮೃತ ಪಾತ್ರೆ ಜತೆಗಿರಲಿ; ಅನುದಿನವೂ ಪಕ್ವ ಪ್ರೇಮಕ್ಕೆ ಜಯವಾಗಲಿ!

‘ಆ ಕಾದಂಬರಿ ಕೊನೆಗೂ ಏನೂ conclusion ಕೊಡಲಿಲ್ಲ. ಅದು ಸಮಸ್ಯೆಗಳೊಂದಿಗೇ ಶುರುವಾಗಿ ಸಮಸ್ಯೆಗಳೊಂದಿಗೇ ಅಂತ್ಯವಾಗುತ್ತದೆ. ಅದರ ಅಂತ್ಯ ನಿನಗೇನಾದರೂ ಗೊತ್ತಾಯಿತಾ?’ ಎಂದು ಕೇಳಿದ್ದಳು ಆಕೆ.

‘ಕನ್‌ಕ್ಲೂಶನ್ ಇರಲೇ ಬೇಕಾ?’ ಕೇಳಿದ್ದೆ. ಯಾಕೋ ಹಿಂಗೆ ತುಂಬಾ ತಿಳಿದವನ ಹಾಗೆ, ಬುದ್ಧಿವಂತಿಕೆಯನ್ನು ಪ್ರದರ್ಶಿಸುವ ಹಾಗೆ ಮಾತನಾಡುವ ಚಟ ಹತ್ತಿಸಿಕೊಂಡಿದ್ದೇನೆಯೋ ಎಂಬ ಆತಂಕ ಹುಟ್ಟಿಕೊಂಡಿತ್ತು. ನನ್ನ ಅಭಿಪ್ರಾಯ ಎಂದು ನಾನು ಹೇಳುವುದು ನಿಜಕ್ಕೂ ನನ್ನ ಅನಿಸಿಕೆಯೋ ಅಥವಾ ಇತರರು ಇದು ನನ್ನ ಅಭಿಪ್ರಾಯ  ಎಂದು ತಿಳಿದುಕೊಳ್ಳಲಿ ಎಂದು ಮುತುವರ್ಜಿಯಿಂದ ಫಾರ್ಮ್ ಮಾಡಿದ ಚಿಂತನೆಯೋ ಎಂದು ಹಲವು ಬಾರಿ ಅಂದುಕೊಂಡಿದ್ದೇನೆ. ಸಹಜವಾಗಿರಬೇಕು ಎಂಬ ಪ್ರಯತ್ನವೂ ಅಸಹಜವಾಗಿಬಿಟ್ಟರೆ ಎಂದು ಗೊಂದಲವಾಗಿ ನನ್ನ ವ್ಯಕ್ತಿತ್ವಕ್ಕೆ ಸಹಜವಾದ ಅಲೆಮಾರಿತನದ ಆಸರೆ ಪಡೆದು ಆಲೋಚಿಸುವ ವಿಷಯದಿಂದಲೇ ಬೇರೊಂದಕ್ಕೆ ಜಿಗಿದುಬಿಡುತ್ತೇನೆ.

***

ಪುರಾಣದ ಕಥೆಗಳನ್ನೋ, ಇತಿಹಾಸವನ್ನೋ ಓದುವಾಗ ವಾಚ್ಯ ಅರ್ಥಗಳಿಗಿಂತ ಗೂಢಾರ್ಥ ಹಾಗೂ ಪ್ರತಿಮಾರ್ಥಗಳನ್ನು ಹುಡುಕುವ, ಕಲ್ಪಿಸುವ ಖಯಾಲಿ ಬೆಳೆದಿದೆ. ಮೊನ್ನೆ ಟಿವಿಯಲ್ಲಿ ಬರಗೂರು ರಾಮಚಂದ್ರಪ್ಪನವರು ನಿರ್ದೇಶಿಸಿರುವ ‘ಏಕಲವ್ಯ’ ಸಿನೆಮಾದ ಟ್ರೈಲರ್‌ಗಳನ್ನು ನೋಡಿದ ಮೇಲೆ ನನ್ನ ಮನಸ್ಸಿನಲ್ಲಿ ಏಕಲವ್ಯನ ಬಗ್ಗೆ ನಾನು ಓದಿದ, ಕೇಳಿದ ಕಥೆಗಳು ಬಂದು ಸುಳಿದುಹೋದವು. ಪ್ರೈಮರಿಯಲ್ಲಿರುವಾಗ ನಮ್ಮ ಶಾಲೆಯಲ್ಲಿ ನೀತಿಪಾಠ ಎಂಬ ಸಬ್ಜೆಕ್ಟು ಪಠ್ಯದಲ್ಲಿತ್ತು. ಅದರಲ್ಲಿ ಹತ್ತಾರು ನೀತಿ ಕಥೆಗಳಿರುತ್ತಿದ್ದವು. ಆ ಕಥೆಗಳ ಮೇಲೆ ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ಕೇಳಿರುತ್ತಿದ್ದರು. ಪಠ್ಯವಿಡೀ ಕಥೆಗಳೇ ಇರುತ್ತಿದ್ದರಿಂದ ನಮಗೂ ಕೇಳಲಿಕ್ಕೆ ಎಲ್ಲಿಲ್ಲದ ಆಸಕ್ತಿ. ಅದರಲ್ಲಿ ಮೊದಲ ಬಾರಿಗೆ ಏಕಲವ್ಯನ ಕಥೆಯನ್ನು ನಾನು ಓದಿದ್ದು. ಅನಂತರ ಅಸಂಖ್ಯಾತ ಸಂದರ್ಭಗಳಲ್ಲಿ ಈ ಕಥೆಯನ್ನೋ ಇಲ್ಲವೆ ಅದರ ಉಲ್ಲೇಖವನ್ನೋ ಕೇಳಿದ್ದಿದೆ.

ನೀತಿ ಕಥೆಯಾಗಿದ್ದ ಏಕಲವ್ಯನ ಕಥೆಯಲ್ಲಿ ವಿಜೃಂಭಣೆಗೆ ಒಳಗಾದದ್ದು ಆತನ ಗುರುಭಕ್ತಿ. ಸರಳವಾಗಿ ಕಥೆಯನ್ನು ಓದಿಕೊಂಡರೆ ಏಕಲವ್ಯ ಕೀಳುಜಾತಿಯವನಾದ್ದರಿಂದ ಆತನ ವಿದ್ಯಾಸಕ್ತಿಗೆ ಪುರಸ್ಕಾರ ಸಿಕ್ಕಲಿಲ್ಲ, ಆದರೆ ಆತ ತನ್ನ ಅದಮ್ಯ ಛಲದಿಂದ ಮರೆಯಲ್ಲಿಂದಲೇ ವಿದ್ಯೆಯನ್ನು ಕಲಿತುಕೊಳ್ಳುತ್ತಾನೆ. ದ್ರೋಣರು ಅರ್ಜುನನಿಗೆ ನೀಡಿದ ವಚನಕ್ಕೆ ಕುತ್ತು ತರುವಷ್ಟರ ಮಟ್ಟಿಗೆ ಈತ ಬಿಲ್ಲು ವಿದ್ಯೆಯ ಪರಿಣಿತಿಯನ್ನು ಪಡೆಯುತ್ತಾನೆ. ಆಗ ದ್ರೋಣರು ಏಕಲವ್ಯನ ಬಳಿಗೆ ಬಂದು ‘ನಿನ್ನ ಗುರು ಯಾರು’ ಅನ್ನುತ್ತಾರೆ. ಏಕಲವ್ಯ ದ್ರೋಣರ ಮೂರ್ತಿಯನ್ನು ತೋರಿಸುತ್ತಾನೆ. ‘ಹಾಗಾದರೆ ನನಗೆ ನೀನು ಗುರುದಕ್ಷಿಣೆ ಕೊಡಬೇಕಲ್ಲವಾ’ ಎಂದು ಗುರು ಕೇಳುತ್ತಾನೆ. ‘ನನ್ನಿಂದ ದಕ್ಷಿಣೆಯನ್ನು ಕೇಳಲು ನೀವು ನನಗೇನೂ ಕಲಿಸಿಲ್ಲ. ನಿಮ್ಮ ಮೂರ್ತಿಯನ್ನಿಟ್ಟುಕೊಂಡು ನಾನು ಸ್ವಂತ ಪರಿಶ್ರಮದಿಂದ ವಿದ್ಯೆ ಕಲಿತದ್ದು ಅಷ್ಟೇ, ನಾನೇಕೆ ನಿಮಗೆ ದಕ್ಷಿಣೆ ಕೊಡಬೇಕು’ ಎಂದು ಏಕಲವ್ಯ ಕೇಳಬಹುದಿತ್ತು. ಆದರೆ ಕೇವಲ ಒಂದು ಕಲ್ಲಿನ ವಿಗ್ರಹದಲ್ಲಿ ವಿದ್ಯೆಯನ್ನು ಧಾರೆಯೆರೆಯುವ ಗುರುವಿನ ಭಾವವನ್ನು ಪ್ರತಿಷ್ಠಾಪಿಸಿಕೊಂಡ ಏಕಲವ್ಯನಿಗೆ ಆ ಭಾವ ಹೊಳೆಯುವುದಿಲ್ಲ. ಆತ ‘ನೀವು ಏನು ಕೇಳಿದರೂ ಕೊಡುತ್ತೇನೆ’ ಎನ್ನುತ್ತಾನೆ. ಆತನಲ್ಲಿನ ಸಮರ್ಪಣಾ ಭಾವನೆಯನ್ನು ಕಂಡಾಗ ದ್ರೋಣರಿಗೆ ‘ನನ್ನ ಉಪಾಯ ಫಲಿಸಿತು’ ಎಂಬ ನೆಮ್ಮದಿ ಉಂಟಾಗಬೇಕಿತ್ತು. ಇಷ್ಟು ಸುಲಭವಾಗಿ ಒಪ್ಪಿಕೊಂಡನಲ್ಲಾ ಎಂಬ ಸಮಾಧಾನ ಸಿಕ್ಕಬೇಕಿತ್ತು. ಆದರೆ ಏಕಲವ್ಯನ ಮೇಲೆ ದ್ರೋಣರಿಗೆ ಅದಮ್ಯವಾದ ಪ್ರೀತಿ ಹುಟ್ಟುತ್ತದೆ. ಕರ್ತವ್ಯ ಎಂಬ ಹೆಸರಿನಲ್ಲಿ ಆ ಶಿಷ್ಯನಿಗೆ ಘೋರವಾದ ಅನ್ಯಾಯ ಮಾಡುತ್ತಾರೆ. ಬಿಲ್ಲುಗಾರನ ಹೆಬ್ಬೆರಳನ್ನೇ ದಕ್ಷಿಣೆಯಾಗಿ ಪಡೆದು ಹೊರಡುತ್ತಾರೆ. ಅರ್ಜುನ ಎದುರಾಳಿಗಳಿಲ್ಲದ ಬಿಲ್ವಿದ್ಯೆಯ ಕೋವಿದನಾಗುತ್ತಾನೆ.

ಆ ನೀತಿ ಕಥೆಯಲ್ಲಿ ಏಕಲವ್ಯನ ಗುರುಭಕ್ತಿಯನ್ನು ವಿಜೃಂಭಿಸಿ ಶಿಷ್ಯಂದಿರು ಹಾಗಿರಬೇಕು ಎಂದು ಹೇಳಿದ್ದನ್ನು ತಲೆಯಾಡಿಸಿ ಒಪ್ಪಿಕೊಂಡು, ಮನನ ಮಾಡಿಕೊಂಡು, ಗುರು ಬ್ರಹ್ಮಾ ಎಂದು ಉದಾತ್ತ ಭಾವನೆಯನ್ನು ತಳೆದು ಆ ಕ್ಲಾಸಿನಿಂದ ಮುಂದಿನದಕ್ಕೆ ಹಾರಿದ್ದಾಗಿತ್ತು. ಆದರೆ ಎಂದಿಗೂ ಮಹಾಭಾರತದಲ್ಲಿ ವ್ಯಾಸರು ಈ ಉಪಕಥೆಯನ್ನು
ಹೇಳಿ ಏಕಲವ್ಯನ ಗುರುಭಕ್ತಿಯನ್ನು ಹೊಗಳಿದ್ದಾರಾ ಎಂಬ ಪ್ರಶ್ನೆ ಉದ್ಭವಿಸಿರಲಿಲ್ಲ. ಕಥೆ ಮುಗಿದ ತಕ್ಷಣ ಅದರ ಕೆಳಗಿನ ಸಾಲಿನಲ್ಲಿ ನೀತಿಯನ್ನು ಓದಿ ನೆನಪಿಟ್ಟುಕೊಳ್ಳುತ್ತಿದ್ದ ನಮಗೆ, ಹಾಗೆ ನೆನಪಿಟ್ಟುಕೊಂಡ ನೀತಿಯ ಆಧಾರದ ಮೇಲೆ ಕಥೆಯನ್ನು ಪುನಃ ಪುನಃ ಎಷ್ಟು ಬಾರಿಯಾದರೂ, ಯಾವ ಸಂದರ್ಭದಲ್ಲಾದರೂ, ಯಾರ ಮುಂದಾದರೂ ಹೇಳಬಲ್ಲವರಾಗಿದ್ದ ನಮಗೆ ಯಾವುದೋ ಹಂತದಲ್ಲಿ ನಾವು ಕಲಿತ ನೀತಿಯಿಂದ ಕಥೆಯನ್ನು ಸಂಕುಚಿತ ಗೊಳಿಸಿದ ಹಾಗೆ, ಅನಂತ ಸಾಧ್ಯತೆಗಳಿರುವ ಆಕಾಶವನ್ನು ಕೇವಲ ಒಂದಡಿ ಚೌಕದಲ್ಲೇ ನೋಡುವ ಪ್ರತಿಜ್ಞೆ     ಮಾಡಿಕೊಂಡ  ಹಾಗಾಗಲಿಲ್ಲವೇ ಎಂದನ್ನಿಸಿದ್ದು ಅದೇ ಮಹಾಭಾರತದ ಅದೇ ಏಕಲವ್ಯನ ಕಥೆಯನ್ನು ಎರಡನೆಯ ಪಿಯುಸಿಯಲ್ಲಿ ಒಂದು ನಾಟಕದ ರೂಪದಲ್ಲಿ ಓದಿದಾಗ. ಕಿರಂ ನಾಗರಾಜರು ಬರೆದ ನಾಟಕ ‘ಏಕಲವ್ಯ’ ನಮ್ಮ ಕನ್ನಡ ಭಾಷೆಯ ಪಠ್ಯದಲ್ಲಿತ್ತು. ಅದನ್ನು ನಮ್ಮ ಕನ್ನಡದ ಲೆಕ್ಚರ್ರು ತೆರೆದಿಟ್ಟ ಪರಿ ಅಂದು ನನ್ನ ಮಂತ್ರ ಮುಗ್ಧವಾಗಿಸಿತ್ತು.

***

ಕಥೆಗೆ ಕನ್‌ಕ್ಲೂಷನ್ ಇರಬೇಕಾ? ಅಸಲಿಗೆ ಕಥೆಯೆನ್ನುವುದು ಏನು? ಅದು ಅಕ್ಷರಗಳ ನೇಯ್ಗೆಯಲ್ಲವೇ ಅಲ್ಲ. ಏಕೆಂದರೆ ಅಕ್ಷರಗಳ ಸರ್ಕಸ್ಸಿನಿಂದ ಕಾವ್ಯವೂ ಹುಟ್ಟಬಹುದು, ಪ್ರಬಂಧವೂ ಹುಟ್ಟಬಹುದು, ಡಾಕ್ಟರ್ ಪ್ರಿಸ್ಕ್ರಿಪ್ಷನ್ ಕೂಡ ಹುಟ್ಟಬಹುದು. ಹಾಗಾದರೆ ಕಥನವಾಗಲೀ, ಕಾವ್ಯವಾಗಲೀ ನಮ್ಮೊಳಗಿನ ‘ನಮ್ಮತನದ’ ‘ನಮ್ಮ ಪ್ರಜ್ಞೆ’ಯ ಸ್ಥಿತಿಯಾ? ನೀರು ಶೀತಲವಾಗಿ ಹಿಮವಾಗಿ, ಗಟ್ಟಿ ಮಂಜುಗಡ್ಡೆಯಾಗುವಂತೆ ನಮ್ಮೊಳಗಿನ ನಾವು ತಲುಪಿಕೊಳ್ಳುವ ವಿವಿಧ ಸ್ಥಿತಿಯ, ಭಾವದ ಅಭಿವ್ಯಕ್ತಿಯನ್ನೇ ಕಥನ, ಕಾವ್ಯ ಎನ್ನಬಹುದಾ? ಹಾಗಾದರೆ ಬರೆದವನು ಮಾತ್ರ ಕವಿಯಾಗುವುದಿಲ್ಲ, ಕಥೆಗಳು ಬರಹಕ್ಕಿಳಿಸಿದಾಕ್ಷಣ ಕತೆಗಾರ ಹುಟ್ಟುವುದಿಲ್ಲ. ಕವಿಯಾಗುವುದೂ ಪ್ರೇಮಿಯಾದಂತೆಯೇ, ಆದರೆ ಜಗತ್ತಿನ ರಿವಾಜುಗಳು ವಿಚಿತ್ರ. ಪ್ರೇಮಿಯಾದವನು ಯಾರನ್ನಾದರೂ ಪ್ರೀತಿಸಲೇಬೇಕು. ಕವಿಯಾದವನೂ ಏನನ್ನಾದರೂ ಬರೆಯಲೇ ಬೇಕು. ವಿಚಿತ್ರ ಅಲ್ಲವಾ?

ಟ್ಯಾಗ್ ಗಳು: , , ,

Blog Stats

  • 71,866 hits
ಅಕ್ಟೋಬರ್ 2008
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 12345
6789101112
13141516171819
20212223242526
2728293031  

Top Clicks

  • ಯಾವುದೂ ಇಲ್ಲ