Archive for ಆಗಷ್ಟ್ 2008
ಆಗಸ್ಟ್ ಸಂಚಿಕೆಯ ಮುಖಪುಟ
Posted ಆಗಷ್ಟ್ 29, 2008
on:ಯಾರಿಗೆ ಬಂತು, ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ?
‘ಹೆಣ್ಣು ಮಗಳೊಬ್ಬಳು ಭಾರತದ ರಸ್ತೆಗಳ ಮೇಲೆ ಮಧ್ಯರಾತ್ರಿಯಲ್ಲಿ ನಿರ್ಭಯವಾಗಿ ಓಡಾಡುವಂತಾದಾಗಲೇ ನಮ್ಮ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಂತೆ’ ಎಂದರು ಮಹಾತ್ಮಾ ಗಾಂಧಿ.
ನಮ್ಮ ದೇಶದ, ಸಮಾಜದ ಪ್ರಸ್ತುತ ಸನ್ನಿವೇಶವನ್ನು ಗಮನಿಸಿದರೆ ನಾವು ‘ಸಿಕ್ಕಿತು, ಸಿಕ್ಕಿತು’ ಎಂದು ಸಂಭ್ರಮಿಸುತ್ತಿರುವ ಸ್ವಾತಂತ್ರ್ಯವಾದರೂ ಎಂಥದ್ದು ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಲೇ ಬೇಕಾಗುತ್ತದೆ. ದೇಶದ ಸ್ವಾತಂತ್ರ್ಯಕ್ಕಾಗಿ ಅಷ್ಟು ಹೋರಾಡಿದ ಮಹಾತ್ಮರು ಬಯಸಿದ್ದ ಸ್ವಾತಂತ್ರ್ಯ ಯಾವ ಬಗೆಯದ್ದು, ನಾವು ಪಡೆದಿರುವ ಸ್ವಾತಂತ್ರ್ಯ ಎಂಥದ್ದು?
ಸ್ವಾತಂತ್ರ್ಯವೆಂದರೆ ಅದು ಸ್ವೇಚ್ಛೆಯಾ? ಏನನ್ನು ಬೇಕಾದರೂ ಮಾಡುವ, ದಕ್ಕಿಸಿಕೊಳ್ಳುವ ಸ್ಥಿತಿಯಾ? ಸ್ವಾತಂತ್ರ್ಯ ಎಂದರೆ ಜವಾಬ್ದಾರಿಯಾ? ವ್ಯಕ್ತಿಯೊಬ್ಬನ ಸ್ವಾತಂತ್ರ್ಯಕ್ಕೂ ಸಮಾಜಕ್ಕೂ ಏನು ಸಂಬಂಧ? ಸ್ವಾತಂತ್ರ್ಯ ನಾವು ಪಡೆದುಕೊಳ್ಳುವಂಥದ್ದಾ ಅಥವಾ ಯಾರಾದರೂ ಕರುಣಿಸುವಂಥದ್ದಾ? ನಮ್ಮ ಸ್ವಾತಂತ್ರ್ಯ ಇತರರ ಮರ್ಜಿಯನ್ನು ಅವಲಂಬಿಸಿದರೆ ಅದು ಸ್ವಾತಂತ್ರ್ಯವಾದರೂ ಹೇಗಾಗಲಿಕ್ಕೆ ಸಾಧ್ಯ?
ಇವೆಲ್ಲಾ ಪ್ರಶ್ನೆಗಳನ್ನು ಇಟ್ಟುಕೊಂಡು ಭಾರತದ ಅರವತ್ತೊಂದನೆಯ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಈ ಸಂಚಿಕೆಯನ್ನು ರೂಪಿಸಿದ್ದೇವೆ. ನಮ್ಮ ಈ ಪ್ರಯತ್ನ ಕಂಡು ನಿಮಗೆ ಏನನ್ನಿಸಿತು ತಿಳಿಸುತ್ತೀರಲ್ಲವಾ?
–ಸಂ
ಆಗಸ್ಟ್ ಸಂಚಿಕೆಯ ತಯಾರಿ
Posted ಆಗಷ್ಟ್ 12, 2008
on:- In: ಮಾತುಕತೆ
- 2 Comments
ಆಗಸ್ಟ್ ಸಂಚಿಕೆಯ ತಯಾರಿ
ಸ್ವಾತಂತ್ರ್ಯ ಎಂದರೇನು? ೧೯೪೭ ಆಗಸ್ಟ್ ಹದಿನೈದರಂದು ನಾವು ಪಡೆದದ್ದು ಯಾವ ಬಗೆಯ ಸ್ವಾತಂತ್ರ್ಯ? ಇದನ್ನೇನಾ ನಮ್ಮ ನಾಯಕರು, ಸ್ವಾತಂತ್ರ್ಯ ಹೋರಾಟಗಾರರು ಆಶಿಸಿದ್ದು. ಈ ಸ್ವಾತಂತ್ರ್ಯಕ್ಕೇನಾ ನಮ್ಮ ದೇಶದ ಲಕ್ಷಾಂತರ ಮಂದಿ ಯುವಕ-ಯುವತಿಯರು ಪ್ರಾಣ ತೆತ್ತಿದ್ದು? ನಾವು ನಿಜಕ್ಕೂ ಈಗ ಸ್ವತಂತ್ರರೇ? ನಿಜವಾದ ಸ್ವಾತಂತ್ರ್ಯವೆಂದರೆ ಹೇಗಿರಬೇಕು? ಸ್ವತಂತ್ರ ಭಾರತದಲ್ಲಿ ಪ್ರಜೆಗಳ ಚೇತನ, ಆತ್ಮಶಕ್ತಿ ಎಷ್ಟು ಸ್ವತಂತ್ರ?
ಈ ವಿಚಾರಗಳನ್ನು ಮೂಲವಾಗಿಟ್ಟುಕೊಂಡು ಈ ಸಂಚಿಕೆಯನ್ನು ರೂಪಿಸುತ್ತಿದ್ದೇವೆ. ನಿಮ್ಮ ಸಲಹೆ, ಅಭಿಪ್ರಾಯಗಳಿಗೆ ಸ್ವಾಗತ.
ಎದೆಯ ದನಿ ೧ (ಧಾರಾವಾಹಿ)
Posted ಆಗಷ್ಟ್ 2, 2008
on:ಬಹು ದೂರದ ಪಯಣಕ್ಕೆ ತನ್ನನ್ನು ತಾನು ತಯಾರು ಮಾಡಿಕೊಳ್ಳುತ್ತಿರುವಂತೆ ಗಂಭೀರವಾಗಿ ನಿಂತಿತ್ತು ಬಸ್ಸು. ಡ್ರೈವರ್ ಬಸ್ಸಿನ ಏಜನ್ಸಿಯ ಮಾಲೀಕನೊಂದಿಗೆ ಅದರ ಗೇರ್ ಬಾಕ್ಸ್ ಬಗೆಗೆ ಏನೋ ಕಮೆಂಟ್ ಮಾಡುತ್ತಿದ್ದ. ಕ್ಲೀನರ್ ತನ್ನ ಎಂದಿನ ಚಾಕಚಕ್ಯತೆಯಿಂದ ಬಸ್ಸಿನ ಗಾಜಿನ ಮುಖವನ್ನು ಒರೆಸುತ್ತಿದ್ದ. ಕಂಡಕ್ಟರ್ ಬಸ್ಸಿನ ಪಕ್ಕೆಯನ್ನು ಸೀಳಿಟ್ಟಂತೆ ಡಿಕ್ಕಿಯನ್ನು ತೆರೆದು ಪ್ರಯಾಣಿಕರ ಲಗೇಜುಗಳನ್ನು ಗುರುತು ಹಾಕಿ ಒಳಕ್ಕೆ ನೂಕುತ್ತಿದ್ದ. ಆಗ ತಾನೆ ಆವರಿಸುತ್ತಿದ್ದ ಕತ್ತಲೆಗೆ ಇದ್ಯಾವುದರ ಪರಿವೆಯೂ ಇದ್ದಂತೆ ಕಾಣುತ್ತಿರಲಿಲ್ಲ. ಜಗತ್ತಿನ ಕೋಟ್ಯಂತರ ಜೀವಿ ಜಂತುಗಳ ವ್ಯವಹಾರಗಳಲ್ಲಿ ಇದೂ ಕೂಡ ಒಂದು ಎಂಬ ನಿರ್ಲಿಪ್ತತೆಯಲ್ಲಿ ಸೂರ್ಯ ಪಶ್ಚಿಮದ ಬಾನಿನಲ್ಲಿ ಮುಳುಗು ಹಾಕುತ್ತಿದ್ದ. ಪಕ್ಷಿಗಳು ಕಚಪಿಚವೆನ್ನುತ್ತಾ ದಿನವನ್ನು ಕಳೆದ ಸಂಭ್ರಮವನ್ನು ಆಚರಿಸುತ್ತಿದ್ದವು. ಮೆಲ್ಲಗೆ ಕತ್ತಲು ಕಿಟಕಿಗಳ ಮೂಲಕ ಬಸ್ಸಿನ ಒಳಕ್ಕೂ ತೂರಲು ಶುರುವಾದದ್ದನ್ನು ಸುಹಾಸ್ ಗಮನಿಸಿದ.
ಮಾತು ಮುಗಿಸಿದ ಡ್ರೈವರ್ ಬಸ್ಸಿನೊಳಕ್ಕೆ ಹಾರಿ ಬಸ್ಸಿನ ಲೈಟುಗಳನ್ನು ಹತ್ತಿಸಿದ. ಬಸ್ಸಿನೊಳಕ್ಕಿದವರಲ್ಲಿ ಅನೇಕರು ಕಣ್ಣು ಮುಚ್ಚಿ ಎದೆ ಮುಟ್ಟಿಕೊಂಡು ದೇವರನ್ನು ಸ್ಮರಿಸಿದ್ದು ಸುಹಾಸನಿಗೆ ಮಜವಾಗಿ ಕಂಡಿತು. ಡ್ರೈವರ್ ತನ್ನೆದುರಿದ್ದ ದೇವರ ಫೋಟೊಗೆ ಊದುಬತ್ತಿ ಬೆಳಗಿ ಅದನ್ನು ಸ್ಟೇರಿಂಗಿನ ಪಕ್ಕದಲ್ಲಿ ಅಂಟಿಸಿಕೊಂಡಿದ್ದ ಸ್ಟ್ಯಾಂಡಿನೊಳಕ್ಕೆ ಇಟ್ಟ. ಅಲ್ಲೇ ಪಕ್ಕದಲ್ಲಿ ಅಜ್ಜಿಯೊಬ್ಬಳಿಂದ ಕೊಂಡ ಮಲ್ಲಿಗೆ ಹೂವಿನ ಮಾಲೆ ದೇವರ ಫೋಟೊವನ್ನು ಅಪ್ಪಿಕೊಂಡಿತ್ತು. ಕ್ಲೀನರ್ ತನ್ನ ಕೆಲಸ ಮುಗಿಸಿ ಹಸಿಯಾದ ಬನಿಯನ್ ಬಿಚ್ಚಿ ಹಳೆಯ ದೊಗಲೆ ಶರ್ಟಿನೊಳಕ್ಕೆ ನುಸುಳಿದ. ಮೇಲೇರಿಸಿದ್ದ ಪ್ಯಾಂಟಿನ ಮಡಿಕೆಗಳನ್ನು ಬಿಡಿಸಿಕೊಂಡ. ಲಗೇಜ್ ವಿಚಾರದಲ್ಲಿ ಯಾರೊಂದಿಗೋ ಜಗಳ ತೆಗೆದಿದ್ದ ಕಂಡಕ್ಟರ್, ‘ಹೌದ್ರೀ, ಲಗೇಜಿಗೂ ಟಿಕೆಟ್ ತಗೋ ಬೇಕು. ನೀವು ಟಿಕೆಟ್ ತಗೊಂಡ್ರೆ ಲಗೇಜನ್ನು ಫ್ರೀ ಸಾಗಿಸ್ತೀವಿ ಅಂತೇನು ನಾವು ಹೇಳಿಲ್ಲ’ ಎನ್ನುತ್ತಾ ಸರಸವಾಡುತ್ತಿದ್ದ. ಆದರೆ ಅವನೊಂದಿಗೆ ವಾದಿಸುತ್ತಿದ್ದ ಪ್ರಯಾಣಿಕನಿಗೆ ಅವನ ಯಾವ ಸರಸದ ಮಾತಿನ ಮೇಲೂ ಗಮನವಿರಲಿಲ್ಲ. ಆತ ಧ್ವನಿಯೇರಿಸಿ ಏನನ್ನೋ ಬಡಬಡಿಸುತ್ತಿದ್ದ. ಡ್ರೈವರ್ ಹಾಗೂ ಕ್ಲೀನರ್ ಸಹ ಈ ಜಗಳ ನಡೆಯುತ್ತಿದ್ದ ಜಾಗಕ್ಕೆ ದೌಡಾಯಿಸಿದರು.
ಇದೇ ಸಮಯ ಕಾಯುತ್ತಿದ್ದಂತೆ ಕಾಣುತ್ತಿದ್ದ ಪುಟ್ಟ ಹುಡುಗಿಯೊಬ್ಬಳು ಕಂಕುಳಲ್ಲಿ ಮಲಗಿದ ಮಗುವನ್ನು ಎತ್ತಿಕೊಂಡು ಬಂದು ಕಾಸಿಗೆ ಕೈ ಚಾಚುತ್ತಿದ್ದಳು. ಯಾರೂ ಆಕೆಯ ಮುಖವನ್ನೂ ಸಹ ನೋಡುವ ಪ್ರಯತ್ನ ಮಾಡದೆ ಆಕೆಯನ್ನು ಮುಂದಕ್ಕೆ ಹೋಗುವಂತೆ ಹೇಳುತ್ತಿದ್ದರು. ಚಿಕ್ಕ ಮಕ್ಕಳು, ಹೆಂಗಸರು, ಫ್ಯಾಮಿಲಿ ಇರುವ ಕಡೆ ಆ ಪುಟ್ಟ ಭಿಕ್ಷುಕಿ ಎರಡು ಮೂರು ಸಲ ‘ಮುಂದಕ್ಕೆ ಹೋಗು’ ಎಂದು ಹೇಳಿದರೂ ಕದಲದೆ ನಿಲ್ಲುತ್ತಿದ್ದುದನ್ನು ಕಂಡ ಸುಹಾಸನಿಗೆ ಈಕೆ ಪಕ್ಕಾ ಫ್ರೊಫೆಶನಲ್ ಭಿಕ್ಷುಕಿಯಿರಬೇಕು ಎನ್ನಿಸಿತು. ತನ್ನೆದುರು ಆಕೆ ಬಂದು ಕೈಯೊಡ್ಡಿದಾಗ ‘ಇದರಲ್ಲಿ ನಿನಗೆ ಎಷ್ಟು ವರ್ಷ ಎಕ್ಸ್ ಪೀರಿಯನ್ಸ್ ಇದೆ’ ಎಂದು ಕೇಳಿಬಿಡಬೇಕೆನಿಸಿತು. ಸುಮ್ಮನೆ ಆತ ಆಕೆಯನ್ನು ದಿಟ್ಟಿಸಿದ. ಅವನ ನಗುವನ್ನು ಕಂಡು ಗಾಬರಿಯಾದ ಹುಡುಗಿ ಸುಮ್ಮನೆ ಮುಂದಕ್ಕೆ ಸರಿದಳು. ಆಕೆ ಏತಕ್ಕೆ ಗಾಬರಿಯಾಗಿರಬಹುದು ಎಂದು ಆಲೋಚಿಸಿದ. ತಲೆಯಲ್ಲಿ ಏನೇನೋ ಹರಿದಾಡಿದಂತಾಗಿ ಅರೆಕ್ಷಣ ಸುಹಾಸ ಮೈಮರೆತಿದ್ದ. ಅಷ್ಟರಲ್ಲಿ ಆತನ ಪಕ್ಕದಲ್ಲಿಂದ ಒಂದು ಧ್ವನಿ ಹೊರಟಿತು.
“ನಾನು ಹಾಗೆ ಅರ್ಧಕ್ಕೇ ಕಾಲೇಜು ಬಿಟ್ಟು ಹೋದದ್ದಕ್ಕೆ ಬರೀ ಹೋಂ ಸಿಕ್‌ನೆಸ್ ಕಾರಣ ಅಂತ ನಿಂಗೂ ಅನ್ನಿಸುತ್ತಾ?”
ಸುಹಾಸ ನಸುನಗುತ್ತಾ ಅಮರ್‌ನ ಮುಖ ನೋಡಿದ.
***
“ಇವ್ನು ಚಿಕ್ಕವನಾಗಿದ್ದಾಗ ಹಠ ಮಾಡಿದರೆ ರಾಜಗಿರಿಯ ಹಾಸ್ಟೆಲ್‌ಗೆ ಹಾಕ್ತೀವಿ ನೋಡು ಎಂದು ಇವರು ಗದರಿಸುತ್ತಿದ್ದರು. ಗಪ್ ಚುಪ್ ಆಗಿಬಿಡ್ತಿದ್ದ. ಮನೆ ಬಿಟ್ಟು ಹಾಸ್ಟೆಲ್ಲಿಗೆ ಹೋಗುವುದು ಅಂದರೇನೇ ಹೆದರಿ ನಡುಗುತ್ತಿದ್ದ ಈಗ ನೋಡು ಹೆಂಗೆ ಕುಣಿದುಕೊಂಡು ರೆಡಿಯಾಗ್ತಿದಾನೆ ರಾಜಗಿರಿ ಕಾಲೇಜಿಗೆ ಹೋಗೋದಕ್ಕೆ..” ಸುಹಾಸನ ಅಮ್ಮ ತನ್ನ ಗೆಳತಿಗೆ ಹೇಳುತ್ತಿದ್ದರು. ಸುಹಾಸ ಮುಜುಗರ ತಾಳಲಾಗದೆ ಹಾಲಿನಿಂದ ಎದ್ದು ಹೊರಗಿನ ಕೋಣೆಗೆ ಬಂದ. ತನ್ನ ಕ್ರಿಕೆಟ್ ಬ್ಯಾಟು ಹಾಗೂ ಬಾಲನ್ನು ತೆಗೆದುಕೊಂಡು ಹೋಗಿ ತನ್ನ ರೂಮಿನ ಮೂಲೆಯಲ್ಲಿ ಭದ್ರವಾಗಿರಿಸುತ್ತಾ ಇನ್ನು ಎರಡು ವರ್ಷ ಇವು ಬೇಕಾಗಲ್ಲ ಎಂದುಕೊಂಡ. ಮುಂದೆ ಏನು ಮಾಡಬೇಕು ಅನ್ನೋದು ತೋಚದೆ ವಾಪಸ್ಸು ಹಾಲಿಗೆ ಬಂದು ಕುಳಿತ.
ರಾತ್ರಿ ಹನ್ನೊಂದಕ್ಕೆ ಬಸ್ಸು ಬುಕ್ ಮಾಡಿ ಆಗಿತ್ತು. ಚಿತ್ರದುರ್ಗದಿಂದ ರಾಜಗಿರಿಗೆ ಎಂಟು ತಾಸು ಪ್ರಯಾಣ ಇತ್ತು. ಪಶ್ಚಿಮ ಘಟ್ಟವನ್ನು ಬಳಸಿ ಮಂಗಳೂರು ತಲುಪಿದರೆ ಅಲ್ಲಿಂದ ಒಂದು ತಾಸು ಪ್ರಯಾಣ ಮಾಡಬೇಕಿತ್ತು ರಾಜಗಿರಿಗೆ. ಘಾಟಿಯನ್ನು ಏರಬೇಕು ಎಂಬ ವಿಚಾರವೇ ಸುಹಾಸನ ಹೊಟ್ಟೆಯಲ್ಲಿ ತಳಮಳವನ್ನೇಳಿಸಿತ್ತು. ಆತನಿಗೆ ಬಸ್ ಪ್ರಯಾಣವೆಂದರೇನೆ ಆಗದು. ಅದರಲ್ಲೂ ಗುಡ್ಡಗಾಡುಗಳ ಘಾಟಿಯಾದರಂತೂ ಮುಗಿಯಿತು, ಬಸ್ಸಿನೊಳಗಿಂದ ಘಾಟಿಯನ್ನು ನೋಡುತ್ತಿದ್ದ ಹಾಗೆ ಈತನಿಗೆ ಹೊಟ್ಟೆ ತೊಳಲಿಸಿದಂತಾಗಿ ವಾಂತಿ ಕಾರಿಕೊಂಡು ಬಿಡುತ್ತಿದ್ದ. ಎಷ್ಟೇ ನಿಂಬೆ ಹಣ್ಣು ಮೂಸಿದರೂ ವಾಂತಿ ನಿಲ್ಲುತ್ತಿರಲಿಲ್ಲ. ಪ್ರಯಾಣದುದ್ದಕ್ಕೂ ಹೊಟ್ಟೆಯೊಳಗಿದ್ದುದನೆಲ್ಲಾ ಕಾರಿಕೊಂಡು ಬಸ್ಸು ಇಳಿಯುವಷ್ಟರಲ್ಲಿ ಹತ್ತು ದಿನದಿಂದ ಉಪವಾಸವಿದ್ದವನ ಹಾಗೆ ಸುಸ್ತಾಗಿರುತ್ತಿದ್ದ. ರಸ್ತೆಯನ್ನು ನೋಡುತ್ತಾ ಕೂರು, ಎಚ್ಚರವಾಗಿರಬೇಡ ಮಲಗಿಕೊಂಡುಬಿಡು ಎಂದು ಅಪ್ಪ ಎಷ್ಟೇ ಉಪದೇಶಿಸಿದರೂ ಈತನಿಗೆ ಘಾಟಿಯಲ್ಲಿನ ಬಸ್ ಪ್ರಯಾಣದಲ್ಲಿ ನರಳುವುದನ್ನು ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಎಲ್ಲಿಗೆ ಹೋಗಬೇಕಾದರೂ ಬಸ್ಸಿನ ಟೈಮಿಂಗ್ ವಿಚಾರಿಸುವ ಮುನ್ನ ಅಲ್ಲಿಗೆ ರೈಲು ಇದೆಯಾ ಎಂದು ಕೇಳಿಕೊಳ್ಳುತ್ತಿದ್ದ. ರೈಲಿನಲ್ಲಿ ಸಾವಿರ ಕಿಲೋಮೀಟರ್ ಬೇಕಾದರೂ ಕ್ರಮಿಸಬಲ್ಲೆ ಎಂಬ ವಿಶ್ವಾಸ ಅವನಲ್ಲಿತ್ತು. ರೈಲಿನ ಪ್ರಯಾಣವನ್ನು ಆತ ವಿಪರೀತವಾಗಿ ಎಂಜಾಯ್ ಮಾಡುತ್ತಿದ್ದ. ಎಷ್ಟೋ ಒಳ್ಳೆಯ ಪುಸ್ತಕಗಳನ್ನು ಆತ ಓದಿದ್ದು ರೈಲಿನಲ್ಲಿ ಓಡಾಡುವಾಗಲೇ. ರಾಜಗಿರಿಗೆ ರೈಲು ಇಲ್ಲ ಅಂತ ಕಾಲೇಜಿನ ಆಫೀಸಿನವರು ಫೋನಿನಲ್ಲಿ ಹೇಳಿದಾಗಲೇ ಸುಹಾಸನ ಮುಖದ ಮೇಲೆ ಅಪ್ರಸನ್ನತೆ ಸುಳಿದು ಮಾಯವಾಗಿತ್ತು. ಈಗ ರಾತ್ರಿಯ ಪ್ರಯಾಣವನ್ನು ಹೇಗೆ ನಿಭಾಯಿಸುವುದು ಎಂದು ಆಲೋಚಿಸುತ್ತಾ ಟಿವಿ ಆನ್ ಮಾಡಿದ, ‘ಇನ್ನು ಎರಡು ವರ್ಷ ಇದನ್ನೂ ನೋಡೋಕೆ ಆಗೋದಿಲ್ಲ’ ಅಂತ ಮತ್ತೆ ಅನ್ನಿಸಿತು. ಅಮ್ಮ ಆಂಟಿಯೊಂದಿಗೆ ಹರಟುತ್ತಿದ್ದದ್ದು ಕಿವಿಗೆ ಬೀಳುತ್ತಲೇ ಇತ್ತು.
“ಅಲ್ವೇ ರಾಜಗಿರಿಯ ಕಾಲೇಜಲ್ಲಿ ಸೀಟು ಸಿಕ್ಕೋದು ಬಹಳ ಕಷ್ಟ ಅಂತಾರೆ. ನಮ್ಮ ಅಣ್ಣನ ಮಗನಿಗೆ ಅಲ್ಲಿ ಟ್ರೈ ಮಾಡಿದ್ರು ಎಂ.ಎಲ್.ಎ ಕಡೆಯಿಂದ ಲೆಟರ್ ಒಯ್ದಿದ್ರು ಆದ್ರೂ ಸೀಟ್ ಸಿಕ್ಕಲಿಲ್ಲ. ಅವನ ಪರ್ಸೆಂಟ್ ನೋಡಿ ಎಂಟ್ರೆನ್ಸ್ ಬರೆಯೋಕೆ ಹೇಳಿದ್ರಂತೆ. ಇವರು ಇಂಟರ್ವ್ಯೂನಲ್ಲಿ ಎ.ಎಲ್.ಎ ರೆಕಮಂಡೇಶನ್ ಲೆಟರ್ ಕೊಟ್ಟರೆ ಅದನ್ನು ಪಕ್ಕಕ್ಕಿಟ್ಟು ಪ್ರಶ್ನೆಗಳನ್ನು ಕೇಳಿದರಂತೆ, ಆಮೇಲೆ ಒಂದು ವಾರ ಬಿಟ್ಟು ರಿಸಲ್ಟ್ ಕಳಿಸ್ತೇವೆ ಅಂದ್ರಂತೆ. ಒಂದು ವಾರ ಆದ್ಮೇಲೆ ಸೀಟ್ ಸಿಕ್ಕಿಲ್ಲ ಅಂತ ಉತ್ತರ ಬಂದಿತ್ತು. ನಮ್ಮಣ್ಣ ಏನೆಲ್ಲಾ ಪ್ರಯತ್ನ ಮಾಡಿದ್ರು ಆದ್ರೆ ಸೀಟು ಸಿಕ್ಕಲಿಲ್ಲ. ಸುಹಾಸಂಗೆ ಹೆಂಗೆ ಸಿಕ್ತು? ಪರ್ಸೆಂಟೇಜೇನೋ ಚೆನ್ನಾಗಿದೆ. ಆದ್ರೆ ಅಲ್ಲಿ ಹೊರಗಿನವರಿಗೆ ಸೀಟು ಸಿಕ್ಕೋದು ಕಷ್ಟ ಅಂತಾರಲ್ವಾ?” ಅಮ್ಮನ ಗೆಳತಿ ಅನುರಾಧಾ ಕೇಳಿದರು.
ಅಮ್ಮನಿಗೆ ಸುಹಾಸನ ಬಗ್ಗೆ ಹೇಳಿಕೊಳ್ಳಲು ಸಂಭ್ರಮ, “ಇವಂದು ತೊಂಭತ್ತೈದು ಪರ್ಸೆಂಟು ಇತ್ತಲ್ಲ ಎಸ್.ಎಸ್.ಎಲ್.ಸಿಯಲ್ಲಿ, ಅದಕ್ಕೇ ಎಂಟ್ರೆನ್ಸ್ ಎಕ್ಸಾಂ ಬರೆಯೋದಕ್ಕೆ ಹೇಳಿ ಕಳುಹಿಸಿದ್ರು. ಕಳೆದ ತಿಂಗಳೇ ಹೋಗಿ ಬರೆದು ಬಂದ. ಇವಂಗೂ ಇಂಟರ್ವ್ಯೂ ಮಾಡಿದ್ರು. ಅಷ್ಟೇನು ಚೆನ್ನಾಗಿ ಮಾಡಿಲ್ಲ ಅಂದಿದ್ದ. ಅವ್ರು ರಿಸಲ್ಟು ಕಳ್ಸೋಕೆ ಎರಡು ದಿನ ಮುಂಚೆಯೇ ಇಲ್ಲಿ ಎಲ್ಲಾ ಕಾಲೇಜ್‌ಗಳಲ್ಲಿ ಅಡ್ಮಿಷನ್ ಡೇಟ್ ಮುಗಿದು ಆಗಿತ್ತು. ಇವ್ನ ಎಲ್ಲಾ ಫ್ರೆಂಡ್ಸು ಕಾಲೇಜು ಸೇರಿಕೊಂಡಿದ್ರು. ಅಷ್ಟು ದೂರ ಯಾಕೆ ಹೋಗ್ತೀಯ ಅಂತ ಇವನ ಟೀಚರ್ ಕೇಳಿದ್ರಂತೆ. ಇವನಿಗೆ ಏನೋ ಒಮ್ಮೆ ಮನೆಯಿಂದ ದೂರ ಇದ್ದು ಓದಬೇಕು ಅನ್ನಿಸಿದೆ. ನಂಗೆ ಕಚ್ಚಿಕೊಂಡು ಬೆಳಿದಿದ್ದಾನೆ ಅಂತ ಇವರಪ್ಪ ರೇಗಿಸುತ್ತಿದ್ದರಲ್ಲ, ಅದ್ಕೇ ಏನಾದರಾಗಲೀ ಎರಡು ವರ್ಷ ಅಮ್ಮನಿಂದ ದೂರ ಇರಬೇಕು ಅನ್ನಿಸಿದೆ ಇವ್ನಿಗೆ. ಇಲ್ಲಿ ಎಲ್ಲಾ ಕಾಲೇಜ್ ಅಡ್ಮಿಶನ್ ಮುಗಿದ ಮೇಲೆ ಅಲ್ಲಿಂದ ಫೋನ್ ಬಂದಿತ್ತು. ಸೆಲೆಕ್ಟ್ ಆಗಿದಾನೆ ಅಂದ್ರು. ಹತ್ತು ದಿನದಲ್ಲಿ ಬಂದು ಅಡ್ಮಿಶನ್ ಮಾಡಿಸಿ ಅಂದ್ರು. ಇವ್ರು ಹೋಗಿ ಅಡ್ಮಿಶನ್ ಮಾಡಿಸಿ ಬಂದಿದ್ದಾರೆ.” ಅಮ್ಮ ಹೇಳುತ್ತಲೇ ಇದ್ದಳು.
ಸುಹಾಸ ಟಿವಿ ನ್ಯೂಸ್ ನೋಡುವುದರಲ್ಲಿ ಮಗ್ನನಾಗಿದ್ದ. ಸಂಜೆ ಎಂಟಕ್ಕೇ ಮನೆ ಬಿಡಬೇಕು. ಬಸ್ಸು ಕರೆಕ್ಟ್ ಟೈಮಿಗೆ ಹೊರಡುತ್ತಂತೆ, ಅದಕ್ಕೂ ಮುಂಚೆ ಶ್ರೀನಾಥ, ವಿಜಯ್, ಮಂಜುಗೆ ಫೋನ್ ಮಾಡಿ ತಾನು ಹೋಗುತ್ತಿರೋದನ್ನು ತಿಳಿಸಬೇಕು. ಹಂಗೇ ಸುರೇಶ್ ಸರ್‌ಗೂ ಫೋನ್ ಮಾಡ್ಬೇಕು ಅಂದುಕೊಂಡ. ಅದಕ್ಕೂ ಮುನ್ನ ಅರ್ಧಕ್ಕೆ ಬಿಟ್ಟಿದ್ದ ಪ್ಯಾಕಿಂಗನ್ನು ಮುಗಿಸಬೇಕು ಎಂದುಕೊಂಡು ತನ್ನ ರೂಮಿಗೆ ಬಂದ. ಹಾಲಿನಲ್ಲಿ ಅಮ್ಮ ತನ್ನ ಬಟ್ಟೆಗೆ ಇಸ್ತ್ರಿ ಹಾಕುತ್ತಾ ರಾಧಾ ಆಂಟಿಯ ಜೊತೆಗೆ ಮಾತಾಡುತ್ತಿದ್ದುದನ್ನು ಗಮನಿಸಿ ಒಳಕ್ಕೆ ಹೋದ.
ತನ್ನ ರೂಮನ್ನೊಮ್ಮೆ ಗಮನಿಸಿದ. ಇನ್ನೆರಡು ವರ್ಷ ಅದು ಹೇಗೆ ಮನೆ ಬಿಟ್ಟು ಇರುತ್ತೇನೋ ಅನ್ನಿಸಿತು. ಎಲ್ಲಿಗೂ ಹೋಗೋದು ಬೇಡ. ಇಲ್ಲೇ ಮನೆಯಲ್ಲೇ ಇದ್ದು ಬಿಡೋಣ. ಇಲ್ಲೇ ಯಾವ್ದಾದರೂ ಕಾಲೇಜಿಗೆ ಸೇರಿದರೆ ಆಯ್ತು ಅನ್ನಿಸಿತು. ಒಡನೆಯೇ ತಾನು ದುರ್ಬಲನಾಗಬಾರದು. ತಾನು ಅಳುಮುಂಜಿಯಾಗಬಾರದು. ಧೈರ್ಯ ತಂದುಕೊಳ್ಳಬೇಕು. ಎಷ್ಟೋ ಜನಕ್ಕೆ ಸಿಕ್ಕದ ಅವಕಾಶ ನನಗೆ ಸಿಕ್ಕಿದೆ. ಹಾಸ್ಟೆಲ್ಲಿನಲ್ಲಿ ಇದ್ದು ಓದುವ ಹೊಸ ಅನುಭವವನ್ನು ನನ್ನದಾಗಿಸಿಕೊಳ್ಳಬೇಕು. ಎಷ್ಟು, ಅಬ್ಬಬ್ಬಾ ಎಂದರೆ ಎರಡು ವರ್ಷ ಎಂದು ಮನಸ್ಸಿನ ವ್ಯಾಪಾರಗಳನ್ನು ತಹಬಂದಿಗೆ ತಂದುಕೊಂಡು ಪ್ಯಾಕಿಂಗ್ ಮಾಡಲು ತೆಗೆದಿಟ್ಟುಕೊಂಡಿದ್ದ ತನ್ನ ಪುಸ್ತಕಗಳನ್ನು ತಡವಿದ. ಪುಸ್ತಕಗಳ ರಾಶಿಯ ನಡುವೆ ಇಣುಕುತ್ತಿದ್ದ ಕಾರ್ಡನ್ನು ಕೈಗೆತ್ತಿಕೊಂಡ. ‘ಟು ಡಿಯರ್ ಸುಹಾಸ್…’ ಎಂದು ಮುದ್ದಾದ ಅಕ್ಷರಗಳಲ್ಲಿ ಬರೆದಿದ್ದಳು ಆಶಾ. ಸುರೇಶ್ ಸರ್ ಅವಳಿಗೆ, ಇನ್ನೂ ನಾಲ್ಕೈದು ಮಂದಿಗೆ ಹೇಳಿ ನನಗೆ ಅಂಥ ಪತ್ರಗಳನ್ನು ಬರೆಸಿದ್ದರು, ನಾನು ದೂರದ ಊರಿಗೆ ಹೋಗುತ್ತಿದ್ದೇನೆ ಎಂಬುದನ್ನು ಕೇಳಿ. ಎಲ್ಲಾ ಗೆಳೆಯರೂ ತಮ್ಮ ನೆನಪುಗಳನ್ನು ಹಂಚಿಕೊಂಡು ಆತ್ಮೀಯವಾಗಿ ಪತ್ರಗಳನ್ನು ಬರೆದು ತಾನು ಶಾಲೆಗೆ ಹೋದಾಗ ಕೊಟ್ಟಿದ್ದರು. ಅವತ್ತು ಗಂಟಲ ಸೆರೆ ಉಬ್ಬಿಬಂದಂತಾಗಿ ಮಾತು ಮರೆತುಹೋಗಿತ್ತು. ಈಗ ಆಶಾ ಬರೆದ ಪತ್ರವನ್ನು ಕೈಗೆತ್ತಿಕೊಂಡು ನಾಲ್ಕು ಸಾಲು ಓದುತ್ತಿದ್ದ ಹಾಗೆ ಮತ್ತೆ ಮನಸ್ಸಿನ ವ್ಯಾಪಾರಗಳು ಜಿಗಿಯಲು ಶುರುಮಾಡಿದ್ದವು. ಯಾವ ರಗಳೆಯೂ ಬೇಡ ಅಂದುಕೊಂಡು ಆ ಪತ್ರವನ್ನೂ, ಇನ್ನುಳಿದ ಐದು ಪತ್ರಗಳನ್ನೂ ಜೋಡಿಸಿ ಒಂದು ಪುಸ್ತಕದೊಳಗಿಟ್ಟು ಟ್ರಂಕಿನಲ್ಲಿಟ್ಟ. ಸುರೇಶ್ ಸರ್ ಅವತ್ತು ಯಾಕೆ ಹಾಗೆ ಹೇಳಿದರು ಎಂಬ ಪ್ರಶ್ನೆ ಧುತ್ತೆಂದು ಎದ್ದು ಅವನ ಪ್ರಜ್ಞೆಯನ್ನೆಲ್ಲಾ ಆವರಿಸಿತು!
(ಸಶೇಷ)
ಲಹರಿ ಹರಿದಂತೆ: ಆಹಾ ಎಂಥ ಮಧುರ ಯಾತನೆ!
Posted ಆಗಷ್ಟ್ 2, 2008
on:- In: ಇತರೆ
- 4 Comments
ವಿಪರೀತ ಮಾತನಾಡುತ್ತಿದ್ದೇನಾ ಎಂಬ ಸಂಶಯ ಮೂಡುತ್ತದೆ. ಅನೇಕ ವೇಳೆ ಆತಂಕಕ್ಕೂ ಒಳಗಾಗುತ್ತೇನೆ. ಯಾರಾದರೂ ಮುಖಕ್ಕೆ ಹೊಡೆದಂತೆ ‘ಮಾತು ಜಾಸ್ತಿ ಆಯ್ತು. ಮಾತು ಕಡಿಮೆ ಮಾಡಿ ಕೆಲಸ ಜಾಸ್ತಿ ಮಾಡಬೇಕು’ ಎಂದು ಬಿಡುವರೋ ಎಂದು ಗಾಬರಿಯಾಗುತ್ತದೆ. ಹಾಗೆ ಬೈಸಿಕೊಳ್ಳಬಾರದು ಎಂದು ಎಚ್ಚರಿಕೆ ತೆಗೆದುಕೊಳ್ಳೋಣ ಎಂದು ಯೋಚಿಸುತ್ತಾ ಕುಳಿತರೆ, ಮಾತು ಎಷ್ಟು ಆಡಬೇಕು ಎಂದು ಯೋಚಿಸುವುದೇ ಒಂದು ಕೆಲಸವಾಗಿ ಗಾಬರಿ ಇಮ್ಮಡಿಯಾಗುತ್ತದೆ.
ನಾನು ಬರೆಯೋದಕ್ಕೆ ಶುರು ಮಾಡಿ ತುಂಬಾ ದಿನವಾಯ್ತು ಎಂಬ ಭ್ರಮೆ ಇದೆ. ಬರೆಯುವಾಗ, ಬರೆಯಬೇಕೆಂದು ಆಲೋಚಿಸಿದಾಗ ನನ್ನಲ್ಲಿ ಹುಟ್ಟುವ ಹುರುಪು, ಮೆಲ್ಲಗೆ ಅಕ್ಷರಗಳು ಮೂಡುತ್ತಾ ಹೋದಾಗ ಸಿಕ್ಕುವ ನಿರಾಳತೆ, ಮನಸ್ಸಿನ ಹಗ್ಗದಲ್ಲಿನ ಒಂದೊಂದೇ ಗಂಟುಗಳು ಬಿಚ್ಚಿಕೊಳ್ಳುತ್ತಾ ಹೋದಂತಾಗುವಾಗ ಸಿಕ್ಕುವ ಅನುಭೂತಿ, ಹುತ್ತಗಟ್ಟುವ ತಾಳ್ಮೆ ಕೈಗೂಡದಾಗ ಮೂಡುವ ಸಿಡಿಮಿಡಿ ಎಲ್ಲವನ್ನೂ ಅನುಭವಿಸುವಾಗ ಬೆರಗು ಮೂಡುತ್ತದೆ. ಒಮ್ಮೆ ಬೆರಗು ಹುಟ್ಟಿದ ಮೇಲೆ ಸುಮ್ಮನಿರಲಾಗುವುದಿಲ್ಲ. ಅದನ್ನು ಯಾರಲ್ಲಾದರೂ ಹೇಳಿಕೊಳ್ಳಬೇಕು ಅನ್ನಿಸುತ್ತದೆ. ಕಾಲ ತೊಡೆ ಗಾತ್ರದ ಟೆಕ್ಸ್ಟ್ ಬುಕ್ಕುಗಳಲ್ಲಿ ತಲೆಯನ್ನು ಹುದುಗಿಸಿ ಸೈಂಟಿಫಿಕ್ ಕ್ಯಾಲ್ಸಿಗೆ ಆಕ್ಯುಪಂಚರ್ ಮಾಡುವಂತೆ ಲೆಕ್ಕ ಮಾಡುತ್ತಾ ಕುಳಿತ ಗೆಳೆಯರಿಗೆ ಬರೆಯುವಾಗಿನ ಸುಖ, ಅನುಭವಿಸುವ ಟ್ರಾನ್ಸ್‌ನ ಬಗ್ಗೆ ಹೇಳಲು ಹೋದರೆ, ಮುಖ ಮುಖ ನೋಡಿ ‘ಹುಶಾರಾಗಿದ್ದೀಯಲ್ವಾ?’ ಎಂದು ಕೇಳುತ್ತಾರೆ. ರಾತ್ರಿ ಸರಿಯಾಗಿ ನಿದ್ದೆ ಮಾಡಿಲ್ವಾ ಎಂದು ನನ್ನ ಯೋಗಕ್ಷೇಮದ ಬಗ್ಗೆ ಕಾಳಜಿ ತೋರಿಸುತ್ತಾರೆ. ಸಂಜೆ ಬೀದಿ ಬದಿಯಲ್ಲಿ ಕುಳಿತು ಕಾಫಿ ಹೀರುವಾಗ ಗೆಳೆಯರ ಗುಂಪಿಗೆ ನನ್ನ ಸಂಭ್ರಮವನ್ನು ಹೇಳಿಕೊಳ್ಳೋಣವೆಂದರೆ ಗುಂಪಿನ ಸ್ಪೇಸನ್ನು ಕಮಲ್‌ನ ದಶಾವತಾರಂ, ಆಪಲ್‌ನ ಐಫೋನು, ಮಹೇಶ್ ಭಟ್‌ನ ಸಿನೆಮಾ ಆವರಿಸಿರುತ್ತದೆ. ಕೇಳಲು ಯಾರೂ ಸಿಕ್ಕದಿದ್ದರೆ ಒಳಗಿನ ಸಂಭ್ರಮ ಎಲ್ಲಿ ಸತ್ತು ಹೋಗುಬಿಡುತ್ತದೋ ಎಂದು ಆತಂಕವಾಗಿ ಲ್ಯಾಪ್ ಟಾಪ್‌ನ ರೆಪ್ಪೆ ಬಿಡಿಸಿ ಕುಟ್ಟ ತೊಡಗುತ್ತೇನೆ. ಯಾರೋ ಬರೆದ ಕಥೆ ಮೌನವನ್ನು ಕರೆತಂದು ಮನಸ್ಸಿನೊಳಕ್ಕೆ ಕೂರಿಸಿದಾಗ, ಯಾವುದೋ ಪದ್ಯದ ಸಾಲುಗಳು ಆಳದಲ್ಲೇನನ್ನೋ ಕದಲಿಸಿದಂತಾದಾಗ ಮೂಡಿದ ಅನುಭೂತಿಯನ್ನು ಅಕ್ಷರಕ್ಕಿಳಿಸಿಬಿಟ್ಟರೆ ಅದು ಸದಾ ಹಸಿರಾಗಿರುತ್ತೇನೋ ಎನ್ನುವ ಭ್ರಮೆ ನನ್ನದು. ಅಕ್ಷರಕ್ಕೆ ನನ್ನೊಳಗೇ ಅಸ್ತಿತ್ವ ಇರುವುದು ಅನ್ನೋದು ಮರೆತಂತಾಗುತ್ತದೆ. ಬರೆದಾದ ನಂತರ ಅದನ್ನು ಬ್ಲಾಗಿನಲ್ಲೋ, ಪತ್ರಿಕೆಯಲ್ಲೋ ವಿಜೃಂಭಿಸಿದ ಮೇಲೆ ನಾನೆಲ್ಲೋ ಅಕ್ಷರದ ಬೆಲೆವೆಣ್ಣಿಗೆ ಮರುಳಾಗಿ ಒಳಗಿನ ಸಂಭ್ರಮವನ್ನು ಹೊರಕ್ಕೆ ಕಳುಹಿಸಿಬಿಟ್ಟೆನಾ ಎಂದು ನಾಚಿಕೆಯಾಗುತ್ತದೆ.
‘ಈ ವಯಸ್ಸಿನವರು ಹೇಗಿರಬೇಕೋ ಹಾಗಿರು. ಇದೆಲ್ಲಾ ಕಥೆ, ಕವಿತೆ ಅದನ್ನ ಮುಂದೆ ನೋಡಿಕೊಳ್ಳಬಹುದು.’ ಎಂದು ಮನೆಯಲ್ಲಿ ಹೇಳಿದಾಗೆಲ್ಲಾ ‘ಕಥೆ , ಕವಿತೆ ಬರೆಯುವುದು, ಸುಮ್ಮನೆ ಒಂದು ಹೂವನ್ನು ನೋಡುತ್ತಾ ಗಂಟೆ ಗಟ್ಟಲೆ ಪಾರ್ಕಿನಲ್ಲಿ ಕುಳಿತುಕೊಳ್ಳುವುದು ಯಾವ ವಯಸ್ಸಿನಲ್ಲಿ?’ ಎಂದು ಕೇಳಬೇಕನ್ನಿಸುತ್ತದೆ. ಕಲೆ ಕೊಡುವ ತಾದಾತ್ಮ್ಯದ ಮೇಲಿನ ಮೋಹವನ್ನು ವಿವರಿಸಿ ಹೇಳುವುದು ಹೇಗೆ ಅನ್ನಿಸುತ್ತದೆ. ಯಾಕೆ ಯಾರಿಗೂ ನನ್ನನ್ನು ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ ಎಂದು ಕಿರಿಕಿರಿಯಾಗುತ್ತದೆ. ಎಲ್ಲರ ಮೇಲೂ ಕೋಪ ಬರುತ್ತದೆ. ಕೆಲವೊಮ್ಮೆ ನನ್ನ ಬಗ್ಗೆಯೇ ಜಿಗುಪ್ಸೆ ಮೂಡಿಬಿಡುತ್ತದೆ. ಬಹುಶಃ ಪ್ರೇಮಿಗಳಿಗೂ ಇಂಥದ್ದೇ ಅನುಭವವಾಗುತ್ತದೆಯೇನೋ, ಪ್ರೀತಿಯೂ ಒಂದು ಕಲೆಯೇನೋ ಎಂಬ ಅನುಮಾನ ಮೂಡುತ್ತದೆ.
ಇದೆಲ್ಲವುಗಳಿಗಿಂತಲೂ ನನಗೆ ವಿಪರೀತ ಆಶ್ಚರ್ಯವಾಗುವುದು ‘ಬರೆಯೋದರಿಂದ ನನಗೇನು ಲಾಭವಾಗುತ್ತಿದೆ?’ ಎಂಬ ಪ್ರಶ್ನೆ ನನ್ನಲ್ಲಿ ಮೂಡಿದಾಗ. ಆ ಕ್ಷಣದಲ್ಲಿ ಕಥೆ ಓದುವಾಗ ಅನುಭವಿಸಿದ ತನ್ಮಯತೆ, ಕವಿತೆ ಕಣ್ಣಲ್ಲಿ ಹುಟ್ಟಿಸಿದ ಮಿಂಚು ಎಲ್ಲವೂ ನಗಣ್ಯವಾಗಿ ಕಂಡುಬಿಡುತ್ತದೆ. ಇದೆಲ್ಲಾ ಯಾತರ ಸಹವಾಸ ಎನ್ನಿಸಿಬಿಡುತ್ತದೆ. ಸುಮ್ಮನೆ ಎಷ್ಟೋಂದು ಸಮಯ ವ್ಯರ್ಥವಾಗಿ ಕಳೆದುಬಿಟ್ಟೆನಲ್ಲಾ ಎಂಬ ಗಿಲ್ಟ್ ಮೂಡುತ್ತದೆ. ಇದೆಲ್ಲಾ ಬಿಟ್ಟು ಸುಮ್ಮನೆ ನನ್ನ ಕಾಲೇಜು, ನನ್ನ ಕೆರಿಯರ್ರು ಅಂತ ಗಮನ ಹರಿಸಬೇಕು ಎಂಬ ವಿವೇಕ ಕಾಣಿಸಿದ ಹಾಗಾಗುತ್ತದೆ. ಪ್ರೀತಿಯಲ್ಲಿ ಬಿದ್ದು ಕ್ಲಾಸಿನಲ್ಲಿ ಫರ್ಸ್ಟ್ ರ್ಯಾಂಕ್ ಕಳೆದುಕೊಂಡವ ಚಡಪಡಿಸಿದ ಹಾಗೆ ಚಡಪಡಿಸುತ್ತೇನೆ. ಕೆಲವು ದಿನ ಪ್ರೀತಿಯನ್ನೇ ದ್ವೇಷಿಸಬೇಕು, ಪ್ರೀತಿಸಿದವರನ್ನು ನೋಯಿಸಬೇಕು ಎಂಬಂಥ ವಿಲಕ್ಷಣ ಭಾವ ಹುಟ್ಟಿಬಿಡುತ್ತದೆ. ಹಾಸ್ಟೆಲ್ಲಿನಲ್ಲಿ ರೂಂ ಮೇಟು ನಿರಾಳವಾಗಿ ಗೊರಕೆ ಹೊಡೆಯುತ್ತಿರುವಾಗ, ನಿದ್ದೆ ಬರದೆ ನರಳಾಡುವಂಥ ಪಾಪ ನಾನೇನು ಮಾಡಿದ್ದೇನೆ ಎಂದು ಖಿನ್ನನಾಗುತ್ತೇನೆ.
‘ಆಹಾ ಎಂಥಾ ಮಧುರ ಯಾತನೆ..’ ಅನ್ನೋ ಸಾಲು ಅದಿನ್ಯಾವ ಯಾತನೆಯಲ್ಲಿ ಹುಟ್ಟಿತೋ ಎಂದು ಅಚ್ಚರಿಯಾಗುತ್ತೇನೆ!
– ‘ಅಂತರ್ಮುಖಿ’
ಆತ ರಾಫೆಲ್ ನಡಾಲ್!
Posted ಆಗಷ್ಟ್ 1, 2008
on:
‘ಆದರೆ ಫೆಡರರ್‌ಗೆ ನಾನೇ ನಂಬರ್ ಒನ್!’
ಸತತ ನೂರ ಐವತ್ತು ವಾರಗಳವರೆಗೆ ಟೆನ್ನಿಸ್ ವಿಶ್ವ ರ್ಯಾಂಕಿಂಗಿನಲ್ಲಿ ಎರಡನೆಯ ಸ್ಥಾನವನ್ನು ಆಕ್ರಮಿಸಿಕೊಂಡು ಕುಳಿತಿದ್ದ ಸ್ಪೇನಿನ ಕುಡಿ ಮೀಸೆಯ ಯುವಕ ಹೀಗಂತ ಅಬ್ಬರಿಸಿದ್ದ ಪತ್ರಕರ್ತರೆದುರು. ಜುಲೈ ೬, ೨೦೦೮ರ ಸಂಜೆಗಾಗಲೇ ಆತ ಫೆಡರರ್‌ನನ್ನೂ ಸೋಲಿಸಿ ವಿಂಬಲ್ಡನ್ ಕಿರೀಟ ತೊಟ್ಟಾಗಿತ್ತು. ಸತತ ಆರು ವರ್ಷಗಳಲ್ಲಿ ಹುಲ್ಲುಗಾವಲಿನ ಅಂಕಣದಲ್ಲಿ ಆಡಿದ ಅರವತ್ತೈದು ಪಂದ್ಯಗಳನ್ನೂ ಗೆದ್ದುಕೊಂಡು ಹುಲ್ಲುಗಾವಲಿನ ಟೆನ್ನಿಸ್ ಅಂಕಣದ ಸಾಮ್ರಾಟ ಎನ್ನಿಸಿಕೊಂಡಿದ್ದ ಸ್ವಿಝರ್‌ಲ್ಯಾಂಡಿನ ರೋಜರ್ ಫೆಡರರ್‌ನನ್ನು ಭಾರಿ ತಿಕ್ಕಾಟದ ಪಂದ್ಯದಲ್ಲಿ ಸೋಲಿಸಿ ವಿಂಬಲ್ಡನ್ ತನ್ನದಾಗಿಸಿಕೊಂಡ ಆತನಿಗೆ ಮೊನ್ನೆ ಜೂನ್ ಮೂರಕ್ಕೆ ಇಪ್ಪತ್ತೆರೆಡನೆಯ ಬರ್ತಡೇ!
ಆತ ರಾಫೆಲ್ ನಡಾಲ್!
ನಡಾಲ್ ಹುಟ್ಟಿದ್ದು ಸ್ಪೇನ್‌ನ ಮಜೋರ್ಕ ನಗರದಲ್ಲಿ. ಇವನ ಪೂರ್ವಜರು ಹದಿನಾಲ್ಕನೆಯ ಶತಮಾನದಲ್ಲೇ ಅಲ್ಲಿಗೆ ಬಂದು ನೆಲೆಸಿದವರು. ಇವರದು ಕೂಡು ಕುಟುಂಬ. ಸುಮಾರು ಹನ್ನೆರಡು ಮಿಲಿಯನ್ ಬಹುಮಾನದ ಹಣವನ್ನು ಈಗಾಗಲೇ ಗೆದ್ದಿದ್ದರೂ ನಡಾಲ್ ತಾನು ಹುಟ್ಟಿ ಬೆಳೆದ ಮನೆಯಲ್ಲೇ, ತನ್ನ ಕುಟುಂಬದೊಂದಿಗೇ ವಾಸಿಸುತ್ತಿದ್ದಾನೆ. ಫೆಡರರ್, ರಾಡಿಕ್‌ನಂತಹ ಆಟಗಾರರು ಟ್ರೈನಿಂಗ್ ಸೆಂಟರ್‌ಗಳಲ್ಲೇ ವಾಸ್ತವ್ಯ ಹೂಡಿ ಟೆನ್ನಿಸ್ ಕಡೆಗೆ ಗಮನ ಹರಿಸುತ್ತಿದ್ದರೆ ಈತ ಮನೆಯಲ್ಲೇ ಇದ್ದುಕೊಂಡು ಟೆನ್ನಿಸ್ ಕಸರತ್ತು ಮಾಡುತ್ತಾನೆ. ಇವನ ಅಂಕಲ್ ಟೋನಿಯೇ ಈತನಿಗೆ ಕೋಚ್. ಮೂರನೆಯ ವರ್ಷದಲ್ಲೇ ಇವನಿಗೆ ಟೆನಿಸ್ ಆಡಲು ಹಚ್ಚಿದವನು. ಈಗಲೂ ನಡಾಲ್‌ನೊಂದಿಗಿದ್ದೇ ಆತನನ್ನು ಕೋಚ್ ಮಾಡುತ್ತಿದ್ದಾನೆ.
ನಡಾಲ್‌ನ ಕುಟುಂಬ ಶ್ರೀಮಂತ ಕುಟುಂಬವೇ. ತಂದೆ ಸೆಬಾಸ್ಟಿಯನ್ ಕಿಟಕಿ ವ್ಯಾಪಾರವನ್ನು ಹೊಂದಿದ್ದಾರೆ. ಇವನ ಅಂಕಲ್ ಟೋನಿ ಸ್ವತಃ ಟೆನಿಸ್ ಆಟಗಾರನಾಗಿದ್ದವನು. ಇನ್ನೊಬ್ಬ ಅಂಕಲ್ ಮಿಗುಲ್ ಏಂಜಲ್ ಫುಟ್ ಬಾಲ್ ಆಟಗಾರನಾಗಿದ್ದ. ಈತ ಬಾರ್ಸಿಲೋನ, ರಿಯಲ್ ಮಲ್ಲೋರ್ಕಗಳಿಗೆ ಆಡಿದ್ದ. ಮೂರು ಬಾರಿ ವಿಶ್ವಕಪ್‌ನಲ್ಲಿ ಸ್ಪೇನ್‌ನನ್ನು ಪ್ರತಿನಿಧಿಸಿದ್ದ. ಇವನಿಂದ ಪ್ರಭಾವಿತನಾಗಿದ್ದ ನಡಾಲ್ ಟೋನಿ ಅಂಕಲ್ ಕಲಿಸಿದ ಟೆನಿಸ್‌ನೊಂದಿಗೇ ಫುಟ್ಬಾಲನ್ನೂ ಆಡಲು ತೊಡಗಿದ್ದ. ಶಾಲೆಯಲ್ಲಿ ಈತ ಟೆನಿಸ್, ಫುಟ್ಬಾಲ್ ಹಾಗೂ ಬ್ಯಾಡ್‌ಮಿಂಟನ್‌ಗಳನ್ನು ಆಡುತ್ತಿದ್ದ. ತಾನೂ ಮುಂದೊಂದು ದಿನ ಒಳ್ಳೆಯ ಫುಟ್ಬಾಲ್ ಆಟಗಾರನಾಗಬೇಕು ಎಂಬ ಕನಸು ನಡಾಲ್‌ನದಾಗಿತ್ತು. ಹಾಗಂತ ಇತ್ತ ಟೆನಿಸ್ ಬಿಡಲೂ ಅವನಿಗೆ ಮನಸ್ಸಾಗುತ್ತಿರಲಿಲ್ಲ. ಆದರೆ ಆತ ತನ್ನ ಹನ್ನೆರಡನೆಯ ವಯಸ್ಸಿನಲ್ಲಿ ತನ್ನ ಜೀವನದ ಮಹತ್ತರವಾದ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿತ್ತು. ಒಂದು ಕಡೆ ಅಂಕಲ್ ಏಂಜಲ್‌ನ ಫುಟ್ಬಾಲ್ ಸ್ಪೂರ್ತಿ ಮತ್ತೊಂದು ಕಡೆ ಟೋನಿ ಅಂಕಲ್‌ನ ಟೆನ್ನಿಸ್. ಹನ್ನೆರಡರ ಪೋರ ಒಲ್ಲದ ಮನಸ್ಸಿನಿಂದ ಫುಟ್ಬಾಲಿಗೆ ವಿದಾಯ ಹೇಳಿ ಟೆನ್ನಿಸ್ ರ್ಯಾಕೆಟ್ಟಿನ ಮೇಲೆ ತನ್ನ ಹಿಡಿತ ಬಿಗಿಗೊಳಿಸಿದ. ಹದಿನೈದನೇ ವಯಸ್ಸಿಗೆ ಬರುವಾಗಲೇ ಆತ ಟೆನ್ನಿಸ್ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ ಐವತ್ತರ ಪಟ್ಟಿಯೊಳಕ್ಕೆ ನುಸುಳಿಯಾಗಿತ್ತು.
ತನ್ನೆಲ್ಲಾ ಯಶಸ್ಸಿಗೆ ತನ್ನ ಕುಟುಂಬವನ್ನು ಅಭಿನಂದಿಸುವ ನಡಾಲ್ ತಂದೆಗೆ ಮುದ್ದಿನ ಮಗ. ಅಜ್ಜಿ ತಾತನಿಗೆ ಬಲು ಪ್ರಿಯ. ಅಂಕಲ್‌ಗಳ ಪ್ರೀತಿಯ ರಾಫಾ. ಇಂದಿಗೂ ಅವರ ಇಡೀ ಕುಟುಂಬ ಒಂದೇ ಅಪಾರ್ಟ್ ಮೆಂಟಿನಲ್ಲಿ ವಾಸಿಸುತ್ತದೆ. ಸ್ಪೇನ್‌ನ ಮನಕೋರ್‌ನಲ್ಲಿನ ಅಪಾರ್ಟ್‌ಮೆಂಟಿನಲ್ಲಿ ಗ್ರೌಂಡ್ ಫ್ಲೋರಿನಲ್ಲಿ ನಡಾಲ್‌ನ ಅಜ್ಜಿ ತಾತ ವಾಸವಿದ್ದಾರೆ. ಮೊದಲನೆಯ ಅಂತಸ್ತಿನಲ್ಲಿ ಟೋನಿ ಅಂಕಲ್ , ಆತನ ಪತ್ನಿ ಹಾಗೂ ಅವರ ಮೂವರು ಮಕ್ಕಳು ವಾಸವಾಗಿದ್ದಾರೆ. ಎರಡನೆಯ ಫ್ಲೋರಿನಲ್ಲಿ ನಡಾಲ್ ತಂದೆ ತಾಯಿ ಇದ್ದರೆ ನಾಲ್ಕನೆಯ ಫ್ಲೋರಿನಲ್ಲಿ ನಡಾಲ್ ತನ್ನ ತಂಗಿ ಮರಿಯಾ ಇಸಾಬೆಲ್ ಜೊತೆಗೆ ಇರುತ್ತಾನೆ. ಟೆನ್ನಿಸ್ ಸಾಧನೆಯ ಜೊತೆಗೆ ಶಾಲೆಗೂ ಹೋಗುತ್ತಾನೆ.
ಟೆನ್ನಿಸ್ ಅಂಕಣದಲ್ಲಿನ ಈತನ ರಭಸದ ಆಟ, ಪಾದರಸದ ಹಾಗೆ ಅಂಕಣದ ತುಂಬಾ ಓಡಾಡುವ ಲವಲವಿಕೆ, ಕ್ಲಿಷ್ಟವಾದ ಸಂದರ್ಭಗಳಲ್ಲಿ ಈತ ಕಾಪಾಡಿಕೊಳ್ಳುವ ಶಾಂತತೆ, ಸೆಟ್ ಗೆದ್ದಾಗ ಸಂಭ್ರಮದಿಂದ ಹಾಕುವ ಗರ್ಜನೆ ಇವೆಲ್ಲಾ ಜಗತ್ತಿನಾದ್ಯಂತ ನಡಾಲ್‌ಗೆ ಲಕ್ಷಾಂತರ ಮಂದಿ ಅಭಿಮಾನಿಗಳನ್ನು ಹುಟ್ಟು ಹಾಕಿದೆ. ಇಂಥಾ ಚಿಕ್ಕ ವಯಸ್ಸಿನಲ್ಲೇ ಅಗಾಧವನ್ನು ಸಾಧಿಸಿರುವ ನಡಾಲ್ ತನ್ನ ವಿನಯವಂತಿಕೆಯಿಂದಲೂ ಅನೇಕರ ಗೌರವಕ್ಕೆ ಪಾತ್ರನಾಗಿದ್ದಾನೆ. ತನ್ನ ಖಾಸಗಿ ವೆಬ್ ಸೈಟಿನಲ್ಲಿ ಪ್ರತಿದಿನ ಬ್ಲಾಗ್ ಬರೆಯುತ್ತಾನೆ. ತನ್ನ ಬದುಕಿನ ಸಣ್ಣ ಸಣ್ಣ ಖುಶಿಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾನೆ.
‘ಜಿಂದಗಿ’ ಇದು ಕಾಲೇಜು ಹಂತದ ಯುವ ಮನಸ್ಸಿನ ತಳಮಳ, ಗೊಂದಲ, ಆಸೆ, ಕನಸುಗಳ ಗುಚ್ಛ.
ಆಗಿನ್ನೂ ನನಗೂ ಎಲ್ಲಾ ತಿಳಿಯುತ್ತೆ ಅಂತ ಅನ್ನಿಸುತ್ತಲೇ ಇರಲಿಲ್ಲ. ಮನೆಗೆ ಪೇಪರ್ ಹಾಕುವ ಹುಡುಗ ಲೇಟಾಗಿ ಬಂದಾಗ, ಹಾಲಿನವನು ತನ್ನ ಸಹಜ ಅಪ್ರಮಾಣಿಕತೆಯ ಪ್ರಮಾಣವನ್ನು ಯಾವ ಸೂಚನೆಯೂ ಇಲ್ಲದೆ ಏರಿಸಿಬಿಟ್ಟಾಗ, ತಂಗಿ ದೂರದ ಗೆಳತಿಯ ಮನೆಗೆ ಹೋಗಿ ಬರಲು ಅಪ್ಪಣೆ ಕೋರುವಂತೆ ಮುಖ ಮಾಡಿಕೊಂಡು ನಿಂತಾಗ, ಮಾರ್ಕೆಟ್ಟಿನಲ್ಲಿ ಅಪ್ಪ ಅಂಗಡಿಯಾತ ಕೇಳಿದಷ್ಟು ದುಡ್ಡು ತೆತ್ತು ಬೆನ್ನು ಹಾಕಿದಾಗ ಅಂಗಡಿಯವ ಮರೆಯಲ್ಲಿ ಕಿಸಿ ಕಿಸಿ ನಕ್ಕಾಗ, ಅಮ್ಮ ಅಡುಗೆ ಮನೆಯಲ್ಲಿ ಅಸಹಾಯಕಳಾಗಿ ಪಾತ್ರೆ ನೆಲಕ್ಕೆ ಕುಟ್ಟುತ್ತಿರುವಾಗ, ಮನೆಗೆ ಯಾವ ಮಾಡೆಲ್ ಟಿವಿ ತರಬೇಕು ಎಂಬ ಚರ್ಚೆ ನಡೆಯುವಾಗ, ತೋಟದ ಕೆಲಸಕ್ಕೆ ಇವನು ಆಗ್ತಾನಾ ಎಂದು ಮನೆಯಲ್ಲಿ ಚಿಂತಿಸುವಾಗ, ನನ್ನ ಕೋಣೆಯ ಎದುರಿನ ಗೋಡೆಯ ಮೇಲೆ ಸರಸ್ವತಿ ಶಂಕರಾಚಾರ್ಯರ ಫ್ರೇಮು ಹಾಕಿದ ಫೋಟೊ ಇರಬೇಕಾ, ಬಿಜೆಪಿ ಬಂದರೆ ಒಳ್ಳೆಯದಾ ಇಲ್ಲಾ ಕಾಂಗ್ರೆಸ್ಸು ಛಲೋದಾ ಎಂದೆಲ್ಲಾ ನನ್ನೆದುರು ಅನೇಕ ಸಂಗತಿಗಳು ಜರುಗುತ್ತಿರುವಾಗ ನನಗೂ ಇವೆಲ್ಲಾ ತಿಳಿಯುತ್ತೆ ಅಂತ ಅನ್ನಿಸುತ್ತಲಿರಲಿಲ್ಲ.
ಬಟ್ಟೆ ಅಂಗಡಿಗೆ ಅಪ್ಪನ ಜೊತೆಗೆ ಹೋಗದಿದ್ದರೆ ಆತ ಬಟ್ಟೆಯನ್ನು ತೋರಿಸುವುವೇ ಇಲ್ಲ ಎಂದುಕೊಂಡಿದ್ದೆ. ತರಕಾರಿ ತರಲು ಹೋದಾಗ ಅಪ್ಪ ನನ್ನ ಹಿಂದಿರದಿದ್ದರೆ ಅಂಗಡಿಯಾಕೆ ಮುಲಾಜಿಲ್ಲದೆ ಹುಳವಿರುವ ಬದನೇಕಾಯಿ, ಬೆಂಡು ಬಂದ ಕ್ಯಾರೆಟ್ ಬ್ಯಾಗಿಗೆ ತುರುಕುತ್ತಾಳೆ ಎಂದು ಆತಂಕಗೊಂಡಿದ್ದೆ. ಸೈಕಲ್ ಶಾಪಿಗೆ ಪಂಕ್ಚರ್ ಹಾಕಿಸಲು ಹೋದಾಗ ಅಪ್ಪನ ಹೆಸರು ಹೇಳಿದರೆ ಆತ ಪಂಕ್ಚರಿನ ಕಾಸಿನಲ್ಲಿ ಒಂದು ರೂಪಾಯಿ ಕಡಿಮೆ ಪಡೆಯುತ್ತಿದ್ದ ಎಂದು ನಂಬಿಕೊಂಡಿದ್ದೆ. ಶಾಲೆಗೆ ತಾನೇಕೆ ಲೇಟು ಬಂದೆ ಅನ್ನೋದನ್ನ ಹೆಡ್ ಮಾಸ್ಟರ್‌ಗೆ ಹೇಳೋದಕ್ಕೆ ಅಪ್ಪನೇ ಬರಬೇಕು ಎಂದುಕೊಂಡಿದ್ದೆ. ಚಿಲ್ಲರೆ ಕಾಸಿನ ನಾಣ್ಯ ಬಿಟ್ಟರೆ ದೊಡ್ಡ ದೊಡ್ಡ ನೋಟುಗಳೇನಿದ್ದರೂ ಅಪ್ಪನ ಜೇಬಿನಲ್ಲಿ ಮಾತ್ರ ಇರಬೇಕು ಎನ್ನಿಸುತ್ತಿತ್ತು. ಶಾಲೆಗೆ ಹೊತ್ತಾಯಿತೆಂದು ಅಪ್ಪ ಉಟ್ಟ ಲುಂಗಿಯಲ್ಲೇ ಸ್ಕೂಟರ್ ಚಾಲು ಮಾಡಿದರೆ ನನ್ನ ಗೆಳೆಯರ್ಯಾರೂ ಅಪ್ಪನನ್ನು ನೋಡದಿದ್ದರೆ ಸಾಕು ಎಂದು ಆಶಿಸುತ್ತಿದ್ದೆ. ವಾರ್ಷಿಕೋತ್ಸವಕ್ಕೆ ಆಡಿಸುತ್ತಿದ್ದ ನಾಟಕದಲ್ಲಿ ಪಾತ್ರ ಮಾಡುತ್ತೀಯಾ ಅಂದರೆ ಅಪ್ಪನನ್ನೊಂದು ಮಾತು ಕೇಳಲೇಬೇಕು ಎಂದಿರುತ್ತಿದ್ದೆ. ದೊಡ್ಡಪ್ಪ ಅಪ್ಪನ ಮೇಲೆ ವಿನಾಕಾರಣ ರೇಗುವಾಗ ಉಮ್ಮಳಿಸಿ ಬಂದ ಅಳುವನ್ನು ಹತ್ತಿಕ್ಕಲಾಗದೆ ಮಹಡಿಗೆ ಓಡಿ ಮೂಲೆಯಲ್ಲಿ ಕಣ್ಣೀರಾಗಿದ್ದೆ. ಅಪ್ಪನಿಗೆ ನಿಜಕ್ಕೂ ಎಲ್ಲಾ ಗೊತ್ತಿದೆ ಎಂದೇ ನನಗಾಗ ಅನ್ನಿಸುತ್ತಿತ್ತು.
ಶಾಲೆಯ ಯೂನಿಫಾರಂ ಚಡ್ಡಿಯಿಂದ ಪ್ಯಾಂಟಿಗೆ ಪ್ರಮೋಶನ್ ಪಡೆದು ಮುಂದೆ ಯೂನಿಫಾರಮ್ಮೇ ಇಲ್ಲದ ಕಾಲೇಜು ಕಂಡಾಗ ಅಪ್ಪನಿಗೇನೂ ಗೊತ್ತಾಗುವುದಿಲ್ಲ ಎಂಬುದು ಗೊತ್ತಾಗತೊಡಗಿತು. ನನ್ನ ಕ್ಯಾಲ್ಕುಲಸ್, ನ್ಯೂಕ್ಲಿಯಾರ್ ಫಿಸಿಕ್ಸುಗಳ ಬಗ್ಗೆ ಅಪ್ಪನಿಗೆ ಗೊತ್ತಿರಲು ಸಾಧ್ಯವೇ ಇಲ್ಲ ಎಂಬುದು ಅರಿವಾಗತೊಡಗಿತು. ಏಳನೆಯ ತರಗತಿಯ ಪಬ್ಲಿಕ್ ಪರೀಕ್ಷೆಗೆ ಒಂದು ತಿಂಗಳಿರುವಾಗ ಅಂಗಳದಲ್ಲಿ ಪೇಪರ್ ಓದುತ್ತಾ ಕುಳಿತಿದ್ದ ಅಪ್ಪನ ಎದುರು ತಲೆ ಮೇಲೆತ್ತದೆ ಲೆಕ್ಕ ಮಾಡಲು ತಿಣುಕುತ್ತಿದ್ದ ನನ್ನನ್ನು ನೆನಪಿಸಿಕೊಂಡರೆ ಸಣ್ಣಗೆ ನಗುಬರುವುದು ಗಮನಕ್ಕೆ ಬರತೊಡಗಿತು. ತರಕಾರಿ, ಹಣ್ಣುಗಳನ್ನು ಅಪ್ಪನಿಗಿಂತ ಕಡಿಮೆ ದುಡ್ಡಿನಲ್ಲಿ ನಾನು ತರುತ್ತೀನಿ ಅಂತ ಅಮ್ಮ ನನ್ನನ್ನೇ ಮಾರ್ಕೆಟ್ಟಿಗೆ ಅಟ್ಟಲು ಶುರು ಮಾಡಿದಾಗ ಅಪ್ಪ ನನ್ನ ನೋಡಿ ನಕ್ಕಿದ್ದು ವಿಚಿತ್ರವಾಗಿ ಕಂಡಿತ್ತು. ಮನೆಗೆ ಕಂಪ್ಯೂಟರ್ ತರುವಾಗ ಅಪ್ಪ ಅಂಗಡಿಯವನೊಂದಿಗೆ ಮಾತಾಡಲು ನನಗೇ ಹೇಳುತ್ತಿದ್ದರು. ಹೊಸ ಮೊಬೈಲು ಮನೆಗೆ ಬಂದಾಗ ಮ್ಯಾನುಯಲ್ಲು ನನ್ನ ತೊಡೆಯ ಮೇಲಿರುತ್ತಿತ್ತು. ಕಾಲೇಜಿಗೆ ರಜೆ ಹಾಕಲು ಲೀವ್ ಲೆಟರ್‌ಗೆ ಅಪ್ಪನ ಸಿಗ್ನೇಚರು ಬೇಕಿರಲಿಲ್ಲ. ಶಾಪಿಂಗ್ ಮಾಲಿಗೆ ಹೋದರೆ ಅಪ್ಪ ಇಲ್ಲ ಎಂಬ ಹೆದರಿಕೆ ಸುಳಿಯುತ್ತಿರಲಿಲ್ಲ. ಥಿಯೇಟರಿನಲ್ಲಿ ಒಬ್ಬನೇ ಕುಳಿತು ನೋಡಿದರೆ ಸಿನೆಮಾದ ಮಜಾನೆ ಬೇರೆ ಅನ್ನಿಸತೊಡಗಿತ್ತು. ಮನೆಯಲ್ಲಿ ಅಮ್ಮನ ಪರವಾಗಿ ಮಾತನಾಡಿದರೆ ಅಪ್ಪ ಎದುರಾಡುತ್ತಿರಲಿಲ್ಲ. ಧರ್ಮಸ್ಥಳದಲ್ಲಿ ಕೇಶ ಮುಂಡನಕ್ಕೆ ಒಲ್ಲೆ ಎಂದರೆ ಅಮ್ಮ ‘ಹೇಳಿದಂತೆ ಕೇಳು ನಿನಗೆ ಇದೆಲ್ಲಾ ಗೊತ್ತಾಗಲ್ಲ’ ಎಂದು ಹೇಳುತ್ತಿದ್ದದ್ದು ನಿಂತು ಹೋಗಿ ಯಾವ ಕಾಲವಾಯಿತು ಎಂಬುದು ನೆನಪಿಲ್ಲ. ಮನೆಗೆ ತಡವಾಗಿ ಬರುವಾಗ ರಸ್ತೆಯುದ್ದಕ್ಕೂ ಅಪ್ಪ ಮನೆಗೆ ಬಂದಿರುವುದು ಬೇಡ ಅಂತ ದೇವರಲ್ಲಿ ಬೇಡಿಕೊಳ್ಳುವುದರ ಆವಶ್ಯಕತೆಯಿರಲಿಲ್ಲ. ಅಪರೂಪಕ್ಕೊಮ್ಮೆ ಅಪ್ಪ ‘ನಿನಗಿದೆಲ್ಲಾ ಅರ್ಥವಾಗಲ್ಲ’ ಎಂದಾಗ ನನಗೆ ಅರ್ಥವಾಗದ್ದು ಏನಿದೆ ಎಂದೇ ಅನ್ನಿಸುತ್ತಿತ್ತು.
ಈಗೇನು ಪರಿಸ್ಥಿತಿ ಬದಲಾಗಿಲ್ಲ. ನಾನು ಕ್ರಿಕೆಟ್ ನೆಟ್ ಪ್ರ್ಯಾಕ್ಟಿಸ್ ಮಾಡುತ್ತಿರುವುದು ಅಪ್ಪನಿಗೆ ಇಷ್ಟವಿಲ್ಲ. ಅಮ್ಮ ಮೊದಲು ಓದು ಮುಗಿಸು ಅನ್ನೋದು ತಪ್ಪಿಲ್ಲ. ಹಾಗಂತ ಪ್ರತಿದಿನ ನಾನು ಮೈದಾನದಲ್ಲಿ ಬೆವರಿಳಿಸುವುದು ನಿಂತಿಲ್ಲ. ಈಗ್ಲೂ ಕ್ರಿಕೆಟ್ ಕೋಚಿಂಗ್‌ಗೆ ಹೋಗ್ತಿದ್ದೀಯಾ ಅಂತ ಅಪ್ಪ ಕೇಳೋದಿಲ್ಲ. ಆದರೆ ಪ್ರತಿ ತಿಂಗಳ ಮುವತ್ತಕ್ಕೆ ಬ್ಯಾಂಕಿನ ಅಕೌಂಟಿನಲ್ಲಿ ಹಣ ಜಮೆಯಾಗಿರುತ್ತದೆ. ಅದರಲ್ಲಿ ಕ್ರಿಕೆಟ್ ಕೋಚಿಂಗ್‌ನ ಫೀಸೂ ಸೇರಿರುತ್ತೆ! ತಮ್ಮ ಸಿಇಟಿ ಆದ ಮೇಲೆ ಏನು ಮಾಡಲಿ ಎಂದು ನನ್ನ ಮೊದಲು ಕೇಳುತ್ತಾನೆ. ಮನೆಗೆ ಹೋದಾಗ ಅಮ್ಮ ಅಪ್ಪನ ಖರ್ಚು ವಿಪರೀತವಾಯ್ತು ಎನ್ನುತ್ತಿರುತ್ತಾಳೆ. ಮಾತಿಗೆ ಮಾತು ಬಂದಾಗ ನೀನೂ ಮದುವೆಯಾಗ್ತೀಯಲ್ಲಪ್ಪ ನೋಡೋಣಂತೆ ಎಂದು ಕೊಂಕು ತೆಗೆಯುತ್ತಾಳೆ. ವಾರ ವಾರ ಮನೆಗೆ ಬಂದಾಗ ನಿಂಗೂ ಕಂಪ್ಯೂಟರ್ ಕಲಿಸ್ತೇನೆ ಅಂದರೆ ನಂಗೆಲ್ಲಿ ಪುರುಸೊತ್ತು ಎಂದು ತಪ್ಪಿಸಿಕೊಳ್ಳುತ್ತಾಳೆ. ಅಪ್ಪ ಟ್ಯಾಬಲಾಯ್ಡ್‌ಗಳನ್ನು ತಮ್ಮ ಬೀಗವಿರುವ ಟೇಬಲ್ಲಿನ ಡ್ರಾದೊಳಗೆ ಇಡುವ ಎಚ್ಚರಿಕೆಯನ್ನು ಕೈಬಿಟ್ಟಿದ್ದಾರೆ. ಟಿವಿಯಲ್ಲಿ ಕಾಂಡೋಮ್ ಜಾಹೀರಾತು ಬಂದೊಡನೆ ಚಾನಲ್ ಬದಲಾಗುವುದು ನಿಂತು ಹೋಗಿದೆ. ಬೆಂಗಳೂರಿಗೆ ಬರುವ ಮೊದಲು ‘ಅಲ್ಲಿನ ಬಿ.ಎಂ.ಟಿ.ಸಿ ಬಸ್ಸು ಮತ್ತು ಬೆಂಗಳೂರಿನ ಹುಡುಗಿಯರ ಬಗ್ಗೆ ಹುಶಾರಗಿರಬೇಕು. ಎರಡೂ ಸ್ಪೀಡು ಜಾಸ್ತಿ’ ಎಂದು ಅಪ್ಪ ಹೇಳಿದ್ದು ಮತ್ತೆಂದೂ ರಿಪೀಟಾಗಿಲ್ಲ!
ನಾನು ತಿಳಿದುಕೊಂಡಿರುವುದರಲ್ಲಿ ಎಷ್ಟೋಂದು ಅಪ್ಪನಿಗೆ ಗೊತ್ತೇ ಇಲ್ಲ ಎನ್ನುವ ನನ್ನ ಉಡಾಫೆ ನಿಂತಿಲ್ಲ. ಈ ವಯಸ್ಸಿನವರೆಲ್ಲಾ ಇರೋದೇ ಹೀಗೆ ಎಂಬ ವಯಸ್ಸಾದವರ ಕಮೆಂಟಿಗೆ ಕೊರತೆಯಿಲ್ಲ, ಜೊತೆಗೆ ನಾವು ಇರಬೇಕಾದ್ದೇ ಹೀಗೆ ಎನ್ನುವ ನಮ್ಮ ಹುಂಬತನಕ್ಕೂ .
– ಸುಪ್ರೀತ್
ಇತ್ತೀಚಿನ ಟಿಪ್ಪಣಿಗಳು