ಕಲರವ

ಎಲ್ಲಾ ಅರ್ಥಗಳಿಗೂ ಮೀರಿದ ಬಂಧ ಸ್ನೇಹ..!

Posted on: ಜೂನ್ 22, 2009

-ರಂಜಿತ್ ಅಡಿಗ, ಕುಂದಾಪುರ

 

“ಕೊಡುವುದು ಬೇಡ ಜೀವಕ್ಕೆ ಜೀವ
ಹಂಚಿಕೊಂಡರೆ ಸಾಕು ನನ್ನೊಡಲ ನೋವ”

ಎಲ್ಲ ಸಂಬಂಧಗಳೂ ಏನನ್ನಾದರೂ ಬೇಡುತ್ತವೆ. ಆದರೆ ಸ್ನೇಹ ಎಂಬ ಬಗೆಯ ಸಂಬಂಧ ಮಾತ್ರ ವಿಶಿಷ್ಟವಾದದ್ದು. ಜೊತೆಗೆ ಅಚ್ಚರಿ ಉಂಟುಮಾಡುವಂತದ್ದು ಕೂಡ. ಅದಕ್ಕೆ ರಕ್ತ ಸಂಬಂಧವಿರಬೇಕಾದ್ದಿಲ್ಲ. ತಂದೆ-ತಾಯಿಯೊಡನೆ ಮಕ್ಕಳಿಗಿರಬೇಕಾದ ಭಯ-ಭಕ್ತಿ ಬೇಡ. ಗಂಡನ ಕಿರಿಕಿರಿ ಸಹಿಸುವ ಹೆಂಡತಿಯ ಸಹನೆ ಬೇಕಿಲ್ಲ. ಸ್ನೇಹಕ್ಕೆ ಬೇಕಾದ್ದು ರಹಸ್ಯಗಳಿಲ್ಲದ ಮುಕ್ತ ಮತ್ತು ಶುದ್ಧ ಮನಸ್ಸು. ಜತೆಗೆ ಬೊಗಸೆ ಪ್ರೀತಿ. ಇವಿಷ್ಟಿದ್ದರೆ ಸ್ನೇಹಕ್ಕೆ ಸಲ್ಲುವ ಸಮಯ ಸಹ್ಯ. ಅರಿವಾಗದೇ ನೋವುಗಳೆಲ್ಲ ಮಾಯ. ಸುಖ-ದುಃಖ ಹಂಚಿಕೊಂಡ ಬಳಿಕ ಮನದಲ್ಲಿ ಮಿಂದ ಭಾವ. ಜತೆಗೆ ಕಳೆದ ಸ್ವಲ್ಪ ಸಮಯದಲ್ಲೇ ಮನಸ್ಸೆಲ್ಲ ಫ್ರೆಶ್!

ಗೆಳೆತನಗಳು ಅನಿರೀಕ್ಷಿತವಾಗಿ ಹುಟ್ಟಬಹುದು ಅಥವ ಅಭಿರುಚಿಗಳ ಕೃಪೆಯಿಂದ ನಾವೇ ಉಂಟುಮಾಡಿಕೊಂಡದ್ದಾಗಿರಬಹುದು. ಕೆಟ್ಟ ಮನದ ಜತೆಗಿನ ಸ್ನೇಹ ಬದುಕನ್ನು ಅಲ್ಲೋಲಕಲ್ಲೋಲ ಮಾಡಿಬಿಡಬಹುದು. ಹಾಗೆಯೇ ಒಳ್ಳೆಯ ಸರ್ಕಲ್ ಬದುಕಿನ ಪಯಣವನ್ನು ಸುಮಧುರವಾಗಿಸಬಹುದು. ಅದೃಷ್ಟವೆಂದರೆ ಈ ಒಳ್ಳೆಯ ಅಥವ ಕೆಟ್ಟವೆಂಬ ಎರಡು ಬಗೆಯನ್ನು ನಾವೇ ವಿಂಗಡಿಸಿ ಬೇಕಾದ್ದನ್ನು ಮಾತ್ರ ಸವಿಯಬಹುದಾದಂತ ಅವಕಾಶ ಈ ಸ್ನೇಹಸಂಬಂಧದಲ್ಲಿ ಇದೆ. ಅಂದರೆ ಸ್ನೇಹಿತರನ್ನು ಆಯ್ಕೆ ಮಾಡಬಹುದು. ಒಮ್ಮೊಮ್ಮೆ ಗೋಮುಖವ್ಯಾಘ್ರರಂತಹ ಮನಸ್ಸುಗಳು ಹೊರನೋಟಕ್ಕೆ ತಿಳಿಯದೇಹೋಗಬಹುದು; ಅಂತವರನ್ನು ಬಲುಬೇಗ ಗುರುತಿಸಿ ವಿಮುಖರಾಗುವುದು ಮನಸ್ಸಿಗೆ ಮತ್ತು ಬದುಕಿಗೆ ಅವಶ್ಯಕತೆ, ಕರ್ತವ್ಯ.

ಗೋಮುಖವ್ಯಾಘ್ರರ ಜಾತಿಗೆ ಸೇರಿದವರೊಡಗಿನ ಸ್ನೇಹ ಕುತ್ತಿಗೆಗೆ ಕತ್ತಿ ಕಟ್ಟಿದಂತೆ. ಕಷ್ಟಬಂದೊಡನೆ ಅಪಾಯವನ್ನು ನಮ್ಮ ಮಡಿಲಿಗೆ ಹಾಕಿ ನಗುತ್ತಾರೆ. ಅಷ್ಟರಲ್ಲಿ ಸಮಯ ಮೀರಿಹೋಗಿರುತ್ತದೆ. ಅದಕ್ಕೇ ಸ್ನೇಹಿತರನ್ನು ಆಯ್ಕೆ ಮಾಡುವಾಗ ಸೂಕ್ಷ್ಮವಾಗಿ ಗಮನಿಸಬೇಕು. ಅವರ ಅಭಿರುಚಿ, ಕಷ್ಟ ಎದುರಾದಾಗ ಅವರ ನಡೆವಳಿಕೆ, ಸ್ಪಂದಿಸುವ ಗುಣ ಇತ್ಯಾದಿ ಎಲ್ಲವೂ ತಾಳೆ ಹೊಂದಿದರೆ ಅವರೇ ನಿಜವಾದ ಸ್ನೇಹಿತರು ಅನ್ನಬಹುದು.

ಸ್ನೇಹ ಕೊಡುವ ಮತ್ತು ಕೂಡ ಹತ್ತು ಹಲವು.ಒಮ್ಮೊಮ್ಮೆ ಗೆಳೆಯನೊಡನೆ ಕಳೆಯಬೇಕಿರುವ ಸಂಜೆಗಾಗಿ ಮನಸ್ಸು ಬೆಳಗ್ಗಿನಿಂದಲೇ ತಹತಹಿಸುತ್ತಿರುತ್ತದೆ.ಒಂದು ದಿನ ಭೇಟಿಯಾಗದೇ ಹೋದರೂ ತೀವ್ರ ಚಡಪಡಿಕೆ. ಮತ್ತೆ ಗೆಳೆಯನ ಮುಖ ಕಂಡಾಗ ಮಾತು ಒಡೆದ ಅಣೆಕಟ್ಟು. ಎಲ್ಲ ಸಂಗತಿ ಕಕ್ಕಿದ ನಂತರ ಮನಸ್ಸು ಹಕ್ಕಿಹಗುರು.

friendship

ಅಂತೆಯೇ ಗೆಳೆತನದ ಉಪಯೋಗವೂ ಬಹಳಷ್ಟುಂಟು. ತಂದೆ-ತಾಯಿಯೊಡನೆ ಚರ್ಚಿಸಲಾಗದ ಸಮಸ್ಯೆಗಳನ್ನು ಜತೆಗೂಡಿ ಪರಿಹರಿಸಿಕೊಳ್ಳಬಹುದು. ನೋವುಗಳಿಗೆ ಸಾಂತ್ವನವಿದೆ. ಮಾತುಗಳಲ್ಲಿ ಜೋಕುಗಳಿರುತ್ತವೆ. ಚರ್ಚೆಯಲ್ಲಿ ಚಿಂತನೆಯ ಘಮವಿರುತ್ತದೆ. ಕೆಲವೊಮ್ಮೆ ಜ್ಞಾನದ ಕೊಟ್ಟು ತೆಗೆದುಕೊಳ್ಳುವಿಕೆಗೂ ಸ್ನೇಹವೇ ವೇದಿಕೆ.

ನಿಜವಾಗಿಯೂ ಈ ಗೆಳೆತನ ಎಂದರೇನು? ಎಲ್ಲರನ್ನೂ ರಕ್ತಸಂಬಂಧಿಗಲಾಗಿ ಮಾಡಲಾಗದ ದೇವರು ನಿಸ್ಸಹಾಯಕತೆಯಿಂದ ಸೃಷ್ಟಿಸಿದ ಸೆಳೆತವಾ? ಭೇಟಿಗಳಲಿ ಬೀಜ ಹಾಕಿ ಅಭಿರುಚಿಗಳಿಂದ ಪೋಷಿಸಿ ಕೊನೆಗೆ ಅಗತ್ಯವೆಂಬ ಫಲ ಬಿಡುವ ಕಲ್ಪವೃಕ್ಷವಾ? ಪ್ರಪಂಚವೆಲ್ಲಾ ಎದುರಾದಾಗ ನಿನ್ನೊಡನಿರುವವನೆ ನಿಜವಾದ ಗೆಳೆಯ ಅಂದರು ಯಂಡಮೂರಿ.ಕಷ್ಟಕಾಲದಲ್ಲಿ ನೆರವಾಗುವುದೇ ಸ್ನೇಹಿತನ ಗುಣ ಎಂದಿತು ಇಂಗ್ಲೀಷ್ ನಾಣ್ಣುಡಿ. ಆದರೆ ಸ್ನೇಹದ ಸೆಳೆತಕ್ಕೊಳಗಾದ ಪ್ರತೀ ಜೀವ ಅನ್ನುವುದೊಂದೇ

 ” ಎಲ್ಲಾ ಅರ್ಥಗಳಿಗೂ ಮೀರಿದ ಬಂಧ ಸ್ನೇಹ!”

1 Response to "ಎಲ್ಲಾ ಅರ್ಥಗಳಿಗೂ ಮೀರಿದ ಬಂಧ ಸ್ನೇಹ..!"

ಸ್ನೇಹ ಎಂಬ ದೋಣಿಯಲ್ಲಿ ಪಯಣಿಗರು ನಾವು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Blog Stats

  • 71,866 hits
ಜೂನ್ 2009
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
1234567
891011121314
15161718192021
22232425262728
2930  

Top Clicks

  • ಯಾವುದೂ ಇಲ್ಲ
%d bloggers like this: