ಕಲರವ

Posts Tagged ‘relations


ಮಾರ್ಚ್ ೨೦೦೮ರ ಸಂಚಿಕೆಯ ಮುಖಪುಟವನ್ನು ಸ್ನೇಹದ ಬಗೆಗಿನ ಚರ್ಚೆಗೆ ಮೀಸಲಿರಿಸಲಾಗಿತ್ತು. ಗೆಳೆತನ ಹುಟ್ಟುವುದು ಕೇವಲ ಪರಸ್ಪರರಲ್ಲಿನ ಆವಶ್ಯಕತೆಗಾಗಿ ಎನ್ನುತ್ತಾರೆ ಬಾಲುಪ್ರಸಾದ್.ಆರ್.

ಸ್ನೇಹ ಅಂದರೇನು?

ಒಂದೇ ಮನೋಭಾವ, ಒಂದೇ ಆಸಕ್ತಿ-ನಿರಾಸಕ್ತಿ, ಒಂದೇ ಆಯ್ಕೆ-ವಿಮುಖತೆ- ಹೀಗೆ ಹಲವು ‘ಒಂದೇ’ಗಳನ್ನು ಹೊಂದಿರುವ ಇಬ್ಬರ ನಡುವಿನ ಸಂಬಂಧವಾ? ಹೌದು ಅಂತೀನಿ. ಸ್ನೇಹ ಅಂತಸ್ತು, ಗೌರವ, ಸ್ಥಾನಮಾನಗಳ ಹಾರೈಕೆಯಲ್ಲಿ ಬೆಳೆಯುತ್ತಾ? ಅದಕ್ಕೂ ಹೌದು ಅಂತೀನಿ. ಯಾಕಂದ್ರೆ, ಸ್ನೇಹ ಹುಟ್ಟುವುದು basically ಆವಶ್ಯಕತೆಗೆ. ನಮ್ಮ ಚಿಂತನೆಗೆ ಮನ್ನಣೆಯ ಆವಶ್ಯಕತೆ, ಸಂಕಷ್ಟಕ್ಕೆ ಸಾಂತ್ವನ, ಹಾಸ್ಯಕ್ಕೆ ನಗು, ಸಾಧನೆಗೆ ಮೆಚ್ಚುಗೆ, ಸಹಾಯಕ್ಕೆ ಕೃತಜ್ಞತೆಗಳನ್ನು ನಮ್ಮ ಮನಸ್ಸು ನಿರೀಕ್ಷಿಸುತ್ತದೆ. ಇಷ್ಟೇ ಅಲ್ಲದೆ ನಾವು ನಮ್ಮ ವ್ಯವಹಾರಗಳಲ್ಲಿ, ನಮ್ಮ ಆಯ್ಕೆಗಳಲ್ಲಿ, ಮತ್ತೊಬ್ಬರ ಬದುಕಿನಲ್ಲಿ ಐಡೆಂಟಿಟಿಯನ್ನು ಸ್ಥಾಪಿಸ ಬಯಸುತ್ತೀವಿ. ಒಟ್ಟಾರೆ ನಮ್ಮ ಭಾವಕ್ಕೆ ನಾವು ನಿರೀಕ್ಷಿಸಿದ ಪ್ರತಿಭಾವ ಎಲ್ಲಿ ದೊರೆಯುತ್ತೋ ಅಲ್ಲಿ ಒಂದು ನಂಬಿಕೆ ಮೊಳಕೆಯೊಡೆಯುತ್ತದೆ. ಕ್ರಮೇಣ ಈ ನಂಬಿಕೆಯಿಂದಾಗಿ ಆವಶ್ಯಕತೆಗಳು ತಂತಾನೇ ಪೂರೈಕೆಯಾಗಿ ಮಧುರ ಹೊಂದಾಣಿಕೆಗೆ ಎಡೆಮಾಡಿಕೊಡುತ್ತದೆ.

ಸ್ನೇಹ ಅಂತಸ್ತು, ಸ್ಥಾನಮಾನ, ಪರಸ್ಪರ ಗೌರವಗಳ ಹಾರೈಕೆಯಲ್ಲಿ ಬೆಳೆಯುತ್ತೆ. ಸಮಾನ ಸ್ಥಿತಿವಂತರ ನಡುವಿನ ಸಮಾನವಾದ ಪರಿಸ್ಥಿತಿಗಳು ಬಹುಬೇಗ ಅವರ ನಡುವೆ ಸಂಬಂಧವನ್ನು ಏರ್ಪಡಿಸುತ್ತವೆ. ಇನ್ನು ವಿಭಿನ್ನ ಸ್ಥಿತಿವಂತರ ನಡುವೆ ಅದು ಬೇರೆಯದೇ ನೆಲೆಯಲ್ಲಿ ಕೆಲಸ ಮಾಡುತ್ತದೆ. ಸ್ನೇಹಕ್ಕೆ ಬಾಹ್ಯದ ಪರಿವಿಲ್ಲ. ಎಲ್ಲರೊಟ್ಟಿಗೆ ಬೆರೆಯಬೇಕು ಎಂಬ ಆದರ್ಶ ಹಾಕುವ ಬಯಕೆ. ಕೆಲವೊಮ್ಮೆ ಅದರ ಬಗ್ಗೆ ಇತರರಿಂದ ಮೆಚ್ಚುಗೆಯ ನಿರೀಕ್ಷೆ. ಕೃಷ್ಣನಿಗೆ ಅವ್ಯಕ್ತ ಕನಿಕರ; ಕುಚೇಲನಿಗೆ ತನ್ನ ಸ್ಥಿತಿಯ ಮೇಲೆ ತಿರಸ್ಕಾರವಿಟ್ಟುಕೊಳ್ಳದ ಕೃಷ್ಣನನ್ನು ಕಂಡರೆ ಮೆಚ್ಚು. ಅವನಂತಹ ಸಖ ದೊರೆತನಲ್ಲ ಎಂಬ ಹೆಮ್ಮೆಯ ಭಾವ. ಕೃಷ್ಣನ ಸಾಮೀಪ್ಯದ ಮೂಲಕ ಹೆಮ್ಮೆ ಪಡುವುದರ ಮೂಲಕ ತನ್ನ ಗೌರವ ಗಳಿಕೆ.

ಬಂಧುವು ನಾವು ಶ್ರೀಮಂತರಾಗಲೀ, ಬಡವರಾಗಲೀ ಯಾವಾಗಲೂ ನಮ್ಮ ಜೊತೆ ಇರುತ್ತಾನೆ. ಹಾಗೇ, ಸ್ನೇಹ ಕೂಡ ಬಾಂಧವ್ಯವಾದಾಗ ಇನ್ನಷ್ಟು ಗಟ್ಟಿಗೊಳ್ಳುತ್ತಾ? ಖಂಡಿತಾ ಇಲ್ಲ. ಬಂಧುಗಳು ನಾವು ಹುಟ್ಟಿದಾಗಿನಿಂದ ಸಾಯುವ ತನಕವೂ ಇರುತ್ತಾರೆ. ಆದ್ದರಿಂದಲೇ ಅವರ ಬಗೆಗೊಂದು ಭಯ ಕೂಡ ಇರುತ್ತದೆ. ಎಲ್ಲಿ ನಮ್ಮ ಆವಶ್ಯಕತೆ-ಪರಿಸ್ಥಿತಿಗಳು ಅವರಿಗೆ ಹೊರೆಯಾಗಿ ಬಿಡುತ್ತವೆಯೋ ಅನ್ನೋ ಭಯ. ಆದ್ದರಿಂದಲೇ ಅವರು ಸ್ನೇಹಿತರಿಗಿಂತ ಹೆಚ್ಚು ಅಂತರ ಕಾಯ್ದುಕೊಳ್ಳುತ್ತಾರೆ. ಸ್ನೇಹದಲ್ಲಿ ಹಾಗಲ್ಲ. ನಮ್ಮ ಎಲ್ಲಾ ನಿರೀಕ್ಷೆ-ಆವಶ್ಯಕತೆಗಳನ್ನು ಪೂರೈಸುವ ಸಾಮರ್ಥ್ಯ ಸ್ನೇಹಿತರಲ್ಲಿರುತ್ತೆ. ಅದಕ್ಕಿಂತ ಮುಖ್ಯವಾಗಿ, ಇವೆಲ್ಲಾ ಅವರಿಗೆ ಹೊರೆಯೆನಿಸಿದಾಗ, ನಮ್ಮಿಂದ ದೂರವಾಗುವ ಸ್ವಾತಂತ್ರ್ಯ ಅವರಿಗಿರುತ್ತದೆ. ಆದರೆ ಬಂಧುವಿಗೆ ಅಗಲುವಿಕೆಯ ಸ್ವಾತಂತ್ರ್ಯ ಇರುವುದಿಲ್ಲ. ಈ ಅಗಲುವಿಕೆಯ ಸ್ವಾತಂತ್ರ್ಯ ಸ್ನೇಹವನ್ನು ಬಾಂಧವ್ಯಕ್ಕಿಂತ ಒಂದು ಸ್ತರ ಮೇಲಿಡುತ್ತದೆ, ಒಂದು ಹೆಜ್ಜೆ ಹತ್ತಿರ ತರಿಸುತ್ತೆ.

ಸ್ನೇಹದಲ್ಲಿ ಅಂತರ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಗಂಡ ಹೆಂಡತಿ ಉತ್ತಮ ದಂಪತಿಗಳಾಗೋದು ಅವರು ಉತ್ತಮ ಸ್ನೇಹಿತರಾದಾಗ; ಬೆಳೆದ ಮಕ್ಕಳು ಹಾಗೂ ತಂದೆ ತಾಯಿಗಳ ನಡುವಿನ ಬಾಂಧವ್ಯ ಉತ್ತಮವಾಗುವುದು ಅವರು ಒಳ್ಳೆಯ ಗೆಳೆಯರಾದಾಗ ಅಂತ ಹೇಳ್ತಾರೆ. ಯಾಕಂದ್ರೆ ಸ್ನೇಹದಲ್ಲಿ ಸ್ವಾತಂತ್ರ್ಯ ಇರುತ್ತದೆ. ಸ್ವತಂತ್ರ ಚಿಂತನೆಗಳಿಗೆ, ಸ್ವತಂತ್ರ ನಿರ್ಧಾರಗಳಿಗೆ, ಸ್ವಂತ ಆಶೆಗಳಿಗೆ-ಆಯ್ಕೆಗಳಿಗೆ ಅವಕಾಶಗಳಿರುತ್ತವೆ. ಆ ಸ್ವಾತಂತ್ರ್ಯದ ಅಂತರ ಸ್ನೇಹವನ್ನು ಗಟ್ಟಿಗೊಳಿಸುತ್ತದೆ.

ಹೀಗಾಗಿ, ಸ್ನೇಹ ಅನ್ನೋದು ಆತ್ಮಗಳ ಸಮ್ಮಿಲನವಲ್ಲ; ಆವಶ್ಯಕತೆಗಳ ಪೂರೈಕೆ ಅಷ್ಟೇ. ಆವಶ್ಯಕತೆಗಳ ಬಯಕೆಯಾಗಲೀ ಅವುಗಳ ಪೂರೈಕೆಯಾಗಲೀ ತಪ್ಪಲ್ಲ. Infact, ಈ ಕ್ರಿಯೆಗಳಲ್ಲೇ ಮನುಷ್ಯ ಸಂಬಂಧ ಉಸಿರಾಡೋದು. ಅದನ್ನು ಒಳಗೊಂಡ ಕ್ರಿಯೆಗಳಲ್ಲಿ ಸ್ವಾರ್ಥ, ಅಸೂಯೆಗಳು ತುಂಬಿದರೆ, ಅಲ್ಲಿ ದ್ರೋಹ ತಲೆಹಾಕುತ್ತದೆ. ಕರ್ಣ ದುರ್ಯೋಧನರ ಸ್ನೇಹ ಇದಕ್ಕೆ ಉತ್ತಮ ನಿದರ್ಶನ. We live in a need based society, mind you!


ಮಾರ್ಚ್ ೨೦೦೮ರ ಸಂಚಿಕೆಯ ಮುಖಪುಟವನ್ನು ಸ್ನೇಹದ ಬಗೆಗಿನ ಚರ್ಚೆಗೆ ಮೀಸಲಿರಿಸಲಾಗಿತ್ತು. ಗೆಳೆತನ ಎಂಬುದು ನೀಡ್‌ಶಿಪ್ ಅಲ್ಲ ಎನ್ನುತ್ತಾರೆ ಶ್ರೇಯಸ್.ಕೆ.ಎಂ.

What is a friend?
I will tell you… It is someone with whom you dare to be yourself.
-Frank Crane

ಸ್ನೇಹಿತರು ಎಂದರೆ ಯಾರು ಎನ್ನುವುದಕ್ಕೆ ಬಹುಶಃ ಇದಕ್ಕಿಂತ ಉತ್ತಮವಾದ ವಿವರಣೆ ಇರಲಿಕ್ಕಿಲ್ಲವೇನೋ. ನಾವು ಯಾರೊಂದಿಗಿರುವಾಗ ನಮ್ಮ ನೈಜತೆಯನ್ನು, ನಮ್ಮತನವನ್ನು ಕಳೆದುಕೊಳ್ಳುವುದಿಲ್ಲವೋ ಆ ವ್ಯಕ್ತಿಯನ್ನೇ ನಮ್ಮ ಸ್ನೇಹಿತ ಎಂದು ಕರೆಯಬಹುದು. ನಾವು ಏನಾಗಿದ್ದೇವೋ, ಹೇಗಿದ್ದೇವೋ ಅದಕ್ಕಾಗಿಯೇ ನಮ್ಮನ್ನು ಇಷ್ಟಪಡುವವನು ಸ್ನೇಹಿತ. ನಮ್ಮಲ್ಲಿರುವ ಅಪರಿಪೂರ್ಣತೆಯನ್ನು ಸ್ವೀಕರಿಸಿ, ವಿಭಿನ್ನತೆಯನ್ನು ಗೌರವಿಸುವವನೇ ನಿಜವಾದ ಗೆಳೆಯ.

ಆದರೆ ನನ್ನ ಅನಿಸಿಕೆಯ ಪ್ರಕಾರ ನನ್ನ ಸ್ನೇಹಿತ ಯಾರು ಅಂತ ತಿಳಿಯುವುದಕ್ಕೆ ಇಷ್ಟೊಂದು ಮಾನದಂಡಗಳು ಖಂಡಿತವಾಗ್ಯೂ ಬೇಕಿಲ್ಲ. ಸ್ನೇಹಿತನಾಗಿರುವವನಿಗೆ ತಾನಾಗಿಯೇ ಇವು ಬಂದಿರುತ್ತವೆ. ‘ಜೇನು ತುಂಬಾ ಸಿಹಿಯಾಗಿರುತ್ತಂತೆ ಕಣೋ’ ಎಂದು ಒಬ್ಬ ಅಂದಾಗ, ‘ಜೇನು ಸಕ್ಕರೆಯಷ್ಟು ಸಿಹಿಯಾಗಿರುತ್ತದೆಯೋ ಅಥವಾ ಅದಕ್ಕಿಂತ ಸಿಹಿಯಾಗಿರುತ್ತಾ’ ಅಂತ ಇನ್ನೊಬ್ಬ ಕೇಳಿದ ಹಾಗೆ ಆಯ್ತು. ಜೇನು ಹೇಗಿರುತ್ತೆ ಎಂಬ ವ್ಯಾಖ್ಯಾನ ಜೇನನ್ನು ಸವಿದವರಿಗೆ ಅನವಶ್ಯಕ. ಸ್ನೇಹವೆಂಬ ಜೇನಿನ ಬಗ್ಗೆ ಆ ಬಗೆಯ ವ್ಯಾಖ್ಯಾನವನ್ನು ಕೊಡುವ ವ್ಯರ್ಥ್ಯ ಪ್ರಯತ್ನಕ್ಕೆ ನಾನು ಕೈ ಹಾಕುವುದಿಲ್ಲ.

ಸಂತೋಷ ಎಂದರೆ ಏನು ಎಂಬ ಪ್ರಶ್ನೆ ಮನಸ್ಸನ್ನು ಕಾಡಲು ಶುರು ಮಾಡಿತ್ತು. ಮನುಷ್ಯ ತನ್ನ ಸುತ್ತ ಏನೆಲ್ಲಾ ಕಟ್ಟಿಕೊಳ್ಳುತ್ತಾ ಹೋದ… ಒಂದು ವ್ಯವಸ್ಥೆಯನ್ನು ಸೃಷ್ಟಿಸಿದ. ಅದಕ್ಕೊಂದು ಕಾನೂನು ತಂದ. ಒಂದು ಆಚರಣೆಯನ್ನು ತಂದ ಅದಕ್ಕೊಂದು ಅರ್ಥವನ್ನು ಹುಡುಕಿಕೊಂಡ. ಸೌಕರ್ಯಗಳ ಹುಡುಕಾಟದಲ್ಲಿ ತೊಡಗಿದ. ಹುಡುಕಾಟದಲ್ಲೇ ಬದುಕುವುದನ್ನೂ ರೂಢಿಸಿಕೊಂಡುಬಿಟ್ಟ. ವಸ್ತುಗಳಲ್ಲಿ ಸಂತೋಷವನ್ನು ಹುಡುಕುತ್ತಲೋ ಏನೋ, ಬಿಸಿಲಿನ ತಾಪ ತಾಳಲಾರದೆ ಫ್ಯಾನ್ ಕಂಡು ಹಿಡಿದ. ಫ್ಯಾನಿಗಿಂತಲೂ ಉತ್ತಮ ಎಂದು ಏರ್ ಕಂಡೀಶನರ್ ಕಂಡು ಹಿಡಿದ. ಆ ಏರ್ ಕಂಡೀಶನ್ಡ್ ರೂಮಿನಲ್ಲಿ ಕುಳಿತು ಬಿಸಿಲನ್ನು ಆಸ್ವಾದಿಸುವ ಮನಸ್ಸನ್ನೇ ಕಳೆದುಕೊಳ್ಳುತ್ತಿದ್ದಾನೆ. ಮತ್ತದೇ ಕಂಪ್ಯೂಟರಿನ ಮುಂದೆ ಮತ್ತದೇ ಸಂತೋಷವನ್ನು ‘ಗೂಗಲ್ ಸರ್ಚ್’ ಮಾಡುತ್ತಾ ಇದ್ದಾನೆ. ಹಾಗಾದರೆ ಸಂತೋಷ ಎಂದರೆ…?

“ಯುದ್ಧ ಭೂಮಿಯಿಂದ ನನ್ನ ಗೆಳೆಯ ಇನ್ನೂ ಹಿಂದಕ್ಕೆ ಬಂದಿಲ್ಲ ಸಾರ್… ದಯವಿಟ್ಟು ಒಮ್ಮೆ ಹೋಗಿ ಬರುವುದಕ್ಕೆ ಅವಕಾಶ ಮಾಡಿಕೊಡಿ” ಕೇಳಿದ ಜಾನ್.

“ಖಂಡಿತಾ ಸಾಧ್ಯವಿಲ್ಲ. ಈಗಾಗಲೇ ಸತ್ತಿರಬಹುದಾದವನಿಗೋಸ್ಕರ ನೀನು ನಿನ್ನ ಪ್ರಾಣವನ್ನು ಪಣವಾಗಿಡುವುದು ನನಗೆ ಇಷ್ಟವಿಲ್ಲ.” ಕಡ್ಡಿ ಮುರಿದ ಹಾಗೆ ಹೇಳಿದ ಕಮಾಂಡರ್ ಅವನ ಬೇಡಿಕೆಯನ್ನು ತಿರಸ್ಕರಿಸುತ್ತಾ…

ಒಂದೆರಡು ಗಂಟೆಗಳ ನಂತರ ತೀವ್ರವಾಗಿ ಗಾಯಗೊಂಡ ಆ ಯೋಧ ತನ್ನ ಸ್ನೇಹಿತನ ಶವವನ್ನು ಹೊತ್ತುಕೊಂಡು ಬಂದ. ಕಮಾಂಡರ್‌ನ ಕೋಪ ನೆತ್ತಿಗೇರಿತ್ತು. “ಅವನಾಗಲೇ ಸತ್ತಿರುತ್ತಾನೆ ಅಂತ ನಿನಗೆ ನಾನು ಹೇಳಿದ್ದೆ. ನೋಡು ನಾನೀಗ ನಿಮ್ಮಿಬ್ಬರನ್ನೂ ಕಳೆದುಕೊಳ್ಳುತ್ತಿದ್ದೇನೆ. ಕೇವಲ ಒಂದು ಶವವನ್ನು ತರುವುದಕ್ಕೋಸ್ಕರ ಅಲ್ಲಿಗೆ ಹೋಗಬೇಕಾಗಿತ್ತಾ…?”

ಸಾಯುತ್ತಾ ಇರುವ ಮನುಷ್ಯ ಉತ್ತರಿಸಿದ “ಖಂಡಿತವಾಗ್ಯೂ ಸರ್, ನಾನಲ್ಲಿಗೆ ಹೋದಾಗ ಅವನಿನ್ನೂ ಬದುಕಿದ್ದ. ಅವನು ಹೇಳಿದ, ‘ಜಾನ್ ನಂಗೆ ಗೊತ್ತು, ನೀನು ಬಂದೇ ಬರ್ತೀಯ ಅಂತ'”.

ಪ್ರತಿ ಸಾರಿ ಈ ಕಥೆಯನ್ನು ಓದುವಾಗಲೂ ಏನೋ ಒಂದು ರೀತಿಯ ರೋಮಾಂಚನಕ್ಕೆ ಒಳಗಾಗುತ್ತೇನೆ. ಚಿಕ್ಕಂದಿನಿಂದಲೂ ನನ್ನ ಜೊತೆಗೇ ಬೆಳೆದು ಬಂದ ಗೆಳೆತನದ ಕಲ್ಪನೆ ಅದರ ಮಾಧುರ್ಯ ಮನಸ್ಸನ್ನು ತುಂಬಿಕೊಳ್ಳುತ್ತದೆ.

ಹೀಗೆ ಹರಿಯುತ್ತಿದ್ದ ಯೋಚನಾ ಲಹರಿಗೆ ‘ಬ್ರೇಕ್’ ಎಂಬಂತೆ ಒಂದು ಉತ್ತರ ಸಿಕ್ಕಿತು: ಮನುಷ್ಯನ ಸಂತೋಷ ಇರುವುದು ಬಾಂಧವ್ಯಗಳಲ್ಲಿ. (ನನ್ನ ಈ ಉತ್ತರ ಪರಿಪೂರ್ಣ ಅಲ್ಲದೆ ಇರಬಹುದು. ಆದರೂ ಪಾಸ್ ಆಗೋದಕ್ಕೇನೂ ಕಷ್ಟ ಇಲ್ಲ… ಎಷ್ಟೇ ಆದರೂ ನಾನು ಇಂಜಿನಿಯರಿಂಗ್ ಸ್ಟೂಡೆಂಟ್ಸ್ ಅಲ್ಲವೇ..?!) ಈ ಮನುಷ್ಯ ಬಾಂಧವ್ಯಗಳಲ್ಲಿ ಸ್ನೇಹಕ್ಕೆ ಒಂದು ಅಪರೂಪದ ಸ್ಥಾನವಿದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದ ನಿರ್ಮಲ ಪ್ರೇಮ ಅಂದರೆ ಮಾತೃಪ್ರೇಮ. ಅದರ ನಂತರದ ಸ್ಥಾನ ಸ್ನೇಹದ್ದು.

ಸ್ನೇಹ ಅನ್ನುವುದು ಹುಟ್ಟುವುದೂ ಇಲ್ಲ. ಅದು ಸಾಯುವುದೂ ಇಲ್ಲ. ನಾವು ಸ್ನೇಹಿತರಾಗಿ ಹುಟ್ಟಿರುತ್ತೇವೆ, ಸ್ನೇಹಿತರನ್ನು ಮಾಡಿಕೊಳ್ಳುವುದಿಲ್ಲ ಎನ್ನುವುದು ನನ್ನ ಅನುಭವ ಒಪ್ಪಿದ ಮಾತು. ನನ್ನ ನೆನಪಿನ ಪುಟಗಳನ್ನು ತಿರುವಿದಂತೆ ಇದಕ್ಕೊಂದು ಒಳ್ಳೆಯ ಉದಾಹರಣೆ ಸಿಕ್ಕುತ್ತದೆ. ನನ್ನ ಹಾಸ್ಟೆಲ್ ಜೀವನದ ಮೊದಲ ದಿನಗಳವು. ಅವತ್ತು ನನ್ನ ಜೀವಮಾನದಲ್ಲಿ ಮೊದಲಬಾರಿಗೆ ಬಟ್ಟೆ ತೊಳೆಯುವ ಸಾಹಸಕ್ಕೆ ಕೈಹಾಕಿದ್ದೆ. ಬಟ್ಟೆ ತೊಳೆಯುವ ಜಾಗದಲ್ಲಿ ನನಗಿಂತ ಮೊದಲೇ ಒಬ್ಬ ಬಟ್ಟೆ ತೊಳೆಯುತ್ತಿದ್ದ. ಅಲ್ಲಿಯವರೆಗೆ ನಾನು ಅವನ ಬಗ್ಗೆ ಕೇಳಿದ ಮಾತುಗಳ್ಯಾವೂ ಆತನ ಬಗ್ಗೆ ನನ್ನಲ್ಲಿ ಅಷ್ಟೇನು ಒಳ್ಳೆಯ ಅಭಿಪ್ರಾಯವನ್ನು ಮೂಡಿಸಿರಲಿಲ್ಲ. ಅದೇಕೋ ಏನೋ, ಅವನ ಕೈಯಲ್ಲಿದ್ದ ಬಟ್ಟೆ ಉಜ್ಜುವ ಬ್ರಶ್ಯು ನನ್ನ ಮನಸ್ಸನ್ನು ಗೆದ್ದಿತ್ತು! ಅದನ್ನು ಹೇಗಾದರೂ ಮಾಡಿ ನೋಡಬೇಕೆಂಬ ಉದ್ದೇಶದಿಂದ ಅವನನ್ನು ಮಾತಿಗೆಳೆದೆ. ಅವನ ಮತ್ತು ನನ್ನ ನಡುವೆ ಯಾವುದೇ ರೀತಿಯ ಸಾಮ್ಯತೆ ಇರಲಿಲ್ಲ. ಸಮಾನ ಆಸಕ್ತಿಯ ಪ್ರಶ್ನೆಯೇ ಇರಲಿಲ್ಲ. ಆದರೂ ಅಲ್ಲೊಂದು ಸ್ನೇಹ ಮೊಳಕೆಯೊಡೆದಿತ್ತು. ಇವತ್ತಿಗೂ ಆ ದಿನವನ್ನು ನೆನೆಸಿಕೊಂಡಾಗ ಇಬ್ಬರೂ ಎದ್ದೂ ಬಿದ್ದೂ ನಗ್ತೀವಿ. ನಮ್ಮ ಸ್ನೇಹ ಹುಟ್ಟುವುದಕ್ಕೆ ಆ ಬ್ರಶ್ ಕಾರಣವಾಗಿತ್ತು. ಅದಕ್ಕೇ ನಾನು ಹೇಳಿದ್ದು, ಸ್ನೇಹ ಹುಟ್ಟುವುದಕ್ಕೆ ಕಾರಣ ಬೇಕಿಲ್ಲ. ಹೀಗೆ ಕಾರಣವಿದ್ದು ಹುಟ್ಟುವುದು ಅಂದರೆ, ನಾನು ಒಳ್ಳೆಯವನು ಎಂಬ ಕಾರಣಕ್ಕೋ, ನಾನು ಇನ್ನೊಬ್ಬನ ಮೆಂಟಾಲಿಟಿಗೆ ಹೊಂದಿಕೆಯಾಗುತ್ತೀನಿ ಎಂಬ ಕಾರಣಕ್ಕೋ ಹುಟ್ಟುವುದು ಫ್ರೆಂಡ್‌ಶಿಪ್ ಅಲ್ಲ ಅದು ನೀಡ್‌ಶಿಪ್ ಅಷ್ಟೇ.

ಸ್ನೇಹದ ಬಗ್ಗೆ ಹೆಚ್ಚಿನದೇನನ್ನು ಬರೆಯೋದಕ್ಕೆ ನನ್ನ ಲೇಖನಿ ಕೂಡ ಒಪ್ಪುತ್ತಾ ಇಲ್ಲ. ಕೆಲವು ವಿಷಯಗಳನ್ನು ಅನುಭವಿಸಬೇಕು ಮತ್ತೆ ಕೆಲವನ್ನು ಅರ್ಥಮಾಡಿಕೊಳ್ಳಬೇಕು. ಅನುಭವಿಸಬೇಕಾದ್ದನ್ನೆಲ್ಲವನ್ನೂ ಅರ್ಥಮಾಡಿಕೊಳ್ಳಲು ಹೋಗಬಾರದು. ರಸ್ತೆಯ ತಿರುವಿನಲ್ಲಿ ಕಂಡ ಅಪ್ಸರೆಯನ್ನು ವರ್ಣಿಸುವುದಕ್ಕೆ, ಓದಿದ ಪುಸ್ತಕವೊಂದರ ಮೇಲೆ ಭಾಷಣ ಹೊಡೆಯುವುದಕ್ಕೆ, ಟೀಮ್ ಇಂಡಿಯಾ ಮ್ಯಾಚ್ ಗೆದ್ದರೂ ಸಚಿನ್ ಸೆಂಚುರಿ ಹೊಡೆಯಲಿಲ್ಲವಲ್ಲಾ ಎಂದು ಪರಿತಪಿಸಲಿಕ್ಕೆ. ಲಾಸ್ಟ್ ಬೆಂಚಿನಲ್ಲಿ ಕುಳಿತು ಕದ್ದು ಕಡಲೇ ಮಿಠಾಯಿ ತಿನ್ನುವುದಕ್ಕೆ, ಬಿಡುಗಡೆಯಾದ ಹೊಸ ಸಿನೆಮಾವನ್ನು ಗಾಂಧಿ ಸೀಟಿನಲ್ಲಿ ಕುಳಿತು ನೋಡುವುದಕ್ಕೆ, ಕನಸುಗಳನ್ನು ಕಟ್ಟುವುದಕ್ಕೆ, ಜೀವನ, ತರ್ಕ ಅಂತ ಕೆಲಸಕ್ಕೆ ಬಾರದ ವೇದಾಂತ ಹೊಡೆಯುವುದಕ್ಕೆ, ಸೋತಾಗ ಹೆಗಲು ಕೊಡುವುದಕ್ಕೆ, ಗೆದ್ದಾಗ ಸಂತೋಷ ಪಡುವುದಕ್ಕೆ ಸ್ನೇಹಿತರು ಇಲ್ಲದಿದ್ದರೆ ಜೀವನ ಎಷ್ಟು ಬೋರ್ ಆಗಿಬಿಡುತ್ತಿತ್ತು ಅಲ್ಲವಾ?

ಜೀವನದಲ್ಲಿ ಸಿಹಿನೆನಪುಗಳು ಮತ್ತು ಒಳ್ಳೆಯ ಅನುಭವಗಳಿಗಿಂತ ಹೆಚ್ಚು ಬೆಲೆಬಾಳುವುದೇನನ್ನು ತಾನೆ ನಾವು ಸಂಪಾದಿಸುತ್ತೇವೆ? ಚಿಕ್ಕವನಾಗಿದ್ದಾಗ ಬಿಸಿನೀರು ಹಂಡೆಯಲ್ಲಿ ಸ್ವಲ್ಪ ನೀರನ್ನು ಉಳಿಸದೇ ಹೋದರೆ ಅದು ತಳ ಸಿಡಿಯುತ್ತದೆ ಎನ್ನುವುದನ್ನು ನನ್ನ ಪುಟ್ಟ ತಲಗೆ ತುರುಕಲಾಗದೆ ನನ್ನ ಅಮ್ಮ, “ನೀರು ಉಳಿಸದೇ ಹೋದರೆ ನಿಂಗೆ ಫ್ರೆಂಡ್ಸ್ ಕಡಿಮೆಯಾಗ್ತಾರೆ.” ಅಂತ ಹೇಳಿಕೊಟ್ಟಿದ್ದರು. ಇಂಜಿನಿಯರಿಂಗಿಗೆ ಬಂದು ಮೆಟೀರಿಯಲ್ ಸೈನ್ಸ್ ತಿಳಿದುಕೊಂಡಿದ್ದರೂ, ಪ್ಲಾಸ್ಟಿಕ್ ಬಕೆಟ್‌ನಲ್ಲಿ ಸ್ನಾನ ಮಾಡುವಾಗಲೂ ಕೊನೆಯಲ್ಲಿ ಒಂದಿಷ್ಟು ನೀರು ಉಳಿಸದೇ ಹೋದರೆ ಮನಸ್ಸಿಗೆ ಸಮಾಧಾನ ಆಗೋದೇ ಇಲ್ಲ…


ಮಾರ್ಚ್ ೨೦೦೮ರ ಸಂಚಿಕೆಯ ಮುಖಪುಟವನ್ನು ಸ್ನೇಹದ ಬಗೆಗಿನ ಚರ್ಚೆಗೆ ಮೀಸಲಿರಿಸಲಾಗಿತ್ತು. ಸ್ನೇಹ ಎನ್ನುವುದು ನಮ್ಮ ಮನಸ್ಸಿನ ಸ್ಥಿತಿ, ಪ್ರತಿಕ್ರಿಯಿಸುವ ವಿಧಾನ ಎನ್ನುತ್ತಾರೆ ‘ಅಂತರ್ಮುಖಿ.’

ಜನಜಂಗುಳಿಯಿಂದ ತುಂಬಿದ ರೈಲಿನಲ್ಲಿ ನಮ್ಮ ಪಕ್ಕದಲ್ಲಿ ಕುಳಿತವನೊಬ್ಬ ತನ್ನ ಹೆಸರು ಹೇಳಿ, ನಮ್ಮ ಪರಿಚಯ ಕೇಳಿಕೊಂಡ ನಂತರ ನಮ್ಮಿಬ್ಬರ ನಡುವೆ ಒಂದು ಆಪ್ಯಾಯಮಾನವಾದ ಭಾವ ಸೃಷ್ಟಿಯಾಗುತ್ತದಲ್ಲಾ, ಥೇಟ್ ಅಂಥದ್ದೇ ಭಾವನೆಗೂ, ಎಲ್ಲೋ ಅಪರಿಚಿತ ಪ್ರದೇಶದಲ್ಲಿ ಅವಘಡ ಮಾಡಿಕೊಂಡಾಗ, ಜೀವವೇ ಹೊರಕ್ಕೆ ಬರುವಷ್ಟು ಭಯ ಆವರಿಸಿಕೊಂಡಾಗ ನಾವು ಕೂಡಲೇ ಅಪ್ಪನನ್ನು ನೆನೆದು ಹಪಹಪಿಸುವ ಆಸರೆಯಿದೆಯಲ್ಲಾ- ಇವೆರಡರ ಮಧ್ಯದ ಮನಸ್ಥಿತಿಯೇ ಸ್ನೇಹ. ಅದು ಪರಿಚಿತತೆಯನ್ನು ಮೀರಿದ, ಕಮಿಟ್‌ಮೆಂಟಿನ ಅನಿವಾರ್ಯತೆಯನ್ನು ಅಂಟಿಸಿಕೊಳ್ಳದ ಒಂದು ಶುದ್ಧ ಮನಸ್ಥಿತಿ.

ಗೆಳೆತನ, ಸ್ನೇಹ ಎಂಬುದು ಒಂದು ಮನಸ್ಥಿತಿ. ಅದು ಸಂಬಂಧವಲ್ಲ. ಗಂಡ ಹೆಂಡತಿಯರ ನಡುವೆ ಸ್ನೇಹವಿದ್ದರೆ ಅವರ ದಾಂಪತ್ಯ ಸುಗಮವಾಗಿರುತ್ತದ್ದೆ ಎನ್ನುತ್ತಾರೆ. ಬೆಳೆದ ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು ಎನ್ನುತ್ತಾರೆ. ಮದುವೆಯಾಗುವ ಮುನ್ನ, ಪ್ರೀತಿ ಹುಟ್ಟುವ ಮುನ್ನ ಹೆಣ್ಣು-ಗಂಡು ಏನಾಗಿರುತ್ತಾರೆ? ಅವರು ಗೆಳೆಯರೇ ತಾನೆ? ಹಾಗಾದರೆ ಪ್ರೀತಿ ಪ್ರಾರಂಭವಾದೊಡನೆ, ಇಲ್ಲವೇ ಮದುವೆಯಾದ ತಕ್ಷಣ ಗೆಳೆತನ ಸತ್ತು ಹೋಗಿಬಿಡುತ್ತದಾ? ಹಾಗೊಂದು ವೇಳೆ ಗೆಳೆತನದ ಗೋರಿಯ ಮೇಲೆಯೇ ಪ್ರೀತಿಯ ಸಸಿ ಮೊಳೆಯುವುದು, ಮದುವೆಯ ತೋಟ ಹುಟ್ಟಿಕೊಳ್ಳುವುದು ಎನ್ನುವುದಾದರೆ ದಂಪತಿಗಳ ನಡುವೆ ಮತ್ತೆ ಗೆಳೆತನದ ಆವಶ್ಯಕತೆ ಹುಟ್ಟುವುದಾದರೂ ಯಾಕೆ? ತಂದೆ ಮಗನ ನಡುವಿನದು ರಕ್ತ ಸಂಬಂಧ ಎನ್ನುವುದಾದರೆ ಅದು ಸಾಯುವ ತನಕ ಉಳಿಯುವಂಥದ್ದು. ಮಗ ಎಷ್ಟೇ ದೊಡ್ಡವನಾದರೂ ಅಪ್ಪನಿಗೆ ಆತ ಮಗನೇ. ಆದರೂ ಅಪ್ಪ ಮಗನ ಸಂಬಂಧ ಒಂದು ಹಂತಕ್ಕೆ ಬಂದಾಗ ಗೆಳೆತನದ ಲೇಪವನ್ನು ಬಯಸುವುದೇಕೆ? ಅಪ್ಪ ಮಕ್ಕಳು ಸ್ನೇಹಿತರಂತಿರಬೇಕು ಎಂದು ಆಶಿಸಲು ಇರುವ ಕಾರಣವಾದರೂ ಏನು?

ನಮ್ಮ ಬದುಕಿನಲ್ಲಿ ನಾವು ಕಾಣುವ ಸಂತೋಷ, ತೃಪ್ತಿ, ಉತ್ಸಾಹದಂತೆಯೇ ಸ್ನೇಹ. ಅದು ನಮ್ಮ ದೃಷ್ಟಿಕೋನ, ಜಗತ್ತನ್ನು, ಜಗತ್ತಿನ ವಿದ್ಯಮಾನಗಳನ್ನು ನೋಡುವ, ಗ್ರಹಿಸುವ ಅವಕ್ಕೆ ಪ್ರತಿಕ್ರಿಯಿಸುವ ವಿಧಾನದಂತೆ. ಸ್ನೇಹ ಇಬ್ಬರು ವ್ಯಕ್ತಿಗಳ ನಡುವೆ ಹುಟ್ಟಿಕೊಳ್ಳುವಂಥದ್ದಲ್ಲ. ಹಾಗೆ ಇಬ್ಬರು ವ್ಯಕ್ತಿಗಳ ನಡುವೆ ಬೆಸೆಯುವ ಭಾವಕ್ಕೆ ಸಂಬಂಧ ಎನ್ನಬಹುದು. ಆದರೆ ಸ್ನೇಹ ಹಾಗಲ್ಲ. ಸ್ನೇಹ ಎಂಬುದು ತೀರಾ ವಯಕ್ತಿಕ. ಸ್ನೇಹ ಎನ್ನುವುದು ನಿಮ್ಮ ಮನಸ್ಸಲ್ಲಿರುವ ಒಂದು ಆಲೋಚನಾ ಶೈಲಿ. ಉದಾಹರಣೆಗೆ ನೀವು ಜೋಗ ಜಲಪಾತವನ್ನು ಕಂಡ ತಕ್ಷಣ ‘ವಾಹ್’ ಎಂದು ಉದ್ಗಾರವೆಳೆಯುತ್ತೀರಿ. ಇಂತಹ ರುದ್ರ ರಮಣೀಯ ಪ್ರಕೃತಿಯ ಎದುರು ನಾನೆಷ್ಟು ಕುಬ್ಜ ಎಂದುಕೊಳ್ಳುತ್ತೀರಿ. ಇದು ನೀವು ಹೊರಗೆ ಕಂಡ ಜಲಪಾತಕ್ಕೆ ಪ್ರತಿಕ್ರಿಯೆ ನೀಡುವ ವಿಧಾನ. ಹಾಗೆಯೇ ಸ್ನೇಹ. ನಾವು ನಮ್ಮ ಬದುಕಿನ ಅಂಗಳಕ್ಕೆ ಬರುವ ವ್ಯಕ್ತಿಗಳಿಗೆ ತೋರುವ ಪ್ರತಿಕ್ರಿಯೆಯನ್ನೇ ಸ್ನೇಹ ಎನ್ನುವುದು.

ಕೆಲವರಿಗೆ ಯಾರನ್ನಾದರೂ ಸ್ನೇಹಿತರನ್ನಾಗಿಸಿ ಕೊಳ್ಳಬೇಕೆಂದರೆ ಅಲರ್ಜಿ. ಅವರಿಗೆ ಯಾರೂ ಆಪ್ತರೆನ್ನಿಸುವ ಸ್ನೇಹಿತರಿರುವುದಿಲ್ಲ. ಇನ್ನೂ ಕೆಲವರಿಗೆ ಅಸಂಖ್ಯಾತ ಗೆಳೆಯರು, ಒಮ್ಮೆ ಸಿಟಿ ಬಸ್ಸಿನಲ್ಲಿ ಕುಳಿತಾಗಲೂ ಅವರಿಗೆ ಒಬ್ಬೊಬ್ಬರು ಸ್ನೇಹಿತರಾಗುತ್ತಿರುತ್ತಾರೆ. ಕೆಲವರಿಗೆ ಸಾಕು ಪ್ರಾಣಿಗಳೇ ಗೆಳೆಯರಾಗಿರುತ್ತವೆ. ಕೆಲವರಿಗೆ ಬುಕ್ಕುಗಳಲ್ಲೇ ಸ್ನೇಹಲೋಕ ಕಾಣಸಿಕ್ಕರೆ ಮತ್ತೆ ಕೆಲವರು ತಮಗೆ ತಾವೇ ಒಳ್ಳೆಯ ಸ್ನೇಹಿತರು ಎನ್ನುವಂತಿರುತ್ತಾರೆ.

ಸ್ನೇಹ ಒಂದು ಕಮಿಟ್‌ಮೆಂಟ್ ಆಗಿರದೆ ಕೇವಲ ಒಂದು ಮನಸ್ಥಿತಿ,ನಮಗೆ ಹತ್ತಿರವಾಗುವ ವ್ಯಕ್ತಿಗಳಿಗೆ ನಾವು ಸ್ಪಂದಿಸುವ ವಿಧಾನವಾಗಿರುವುದರಿಂದಲೇ ಒಬ್ಬನಿಗೆ ಎಷ್ಟಾದರೂ ಮಂದಿ ಸ್ನೇಹಿತರಿರಲು ಸಾಧ್ಯ. ನಮಗಿರುವ ಇಬ್ಬರು ಸ್ನೇಹಿತರು ತಾವೂ ಸ್ನೇಹಿತರಾಗಿರಬೇಕಾದ ಆವಶ್ಯಕತೆಯಿಲ್ಲ. ನಮಗೆ ತುಂಬಾ ಹತ್ತಿರವಾದ ಒಬ್ಬ ಗೆಳೆಯನಿಗೆ ತುಂಬಾ ಮೆಚ್ಚಿನ ಸ್ನೇಹಿತ ನಮಗೆ ಇಷ್ಟವಾಗಬೇಕೆಂದಿಲ್ಲ.

ನಾವು ಸುತ್ತಮುತ್ತಲಿನ ವಿದ್ಯಮಾನಗಳಿಗೆ ಪ್ರತಿಕ್ರಿಯಿಸುವ ರೀತಿ ಬದಲಾಗುತ್ತಾ ಹೋದಂತೆಯೇ ನಮ್ಮ ಸ್ನೇಹವೂ ಬದಲಾಯಿಸುತ್ತದೆ. ಬಾಲ್ಯದಲ್ಲಿ ವಿಪರೀತ ಹಠ ಮಾಡಿ ಊಟ ಬಿಟ್ಟಂತೆ ನಾಟಕವಾಡಿ ಕೊಡಿಸಿಕೊಂಡ ಆಟಿಕೆಯನ್ನು ನಾವು ದೊಡ್ಡವರಾದ ಮೇಲೂ ಅಷ್ಟೇ ಪ್ರೀತಿಯಿಂದ, ಕಾಳಜಿಯಿಂದ ಕಾಣಲು ಸಾಧ್ಯವಿಲ್ಲ. ಚಿಕ್ಕಂದಿನಲ್ಲಿ ನಮ್ಮನ್ನು ರಮಿಸುತ್ತಿದ್ದ ಚಂದಮಾಮ ಕಥೆಗಳನ್ನು ಡಿಗ್ರಿ ಮುಗಿಸಿದ ಮೇಲೂ ನಾವು ಓದುವುದಿಲ್ಲ. ಹಾಗೆಯೇ, ನಮ್ಮ ಗೆಳೆತನದ ವ್ಯಾಖ್ಯಾನವೂ ಬದಲಾಯಿಸುತ್ತಾ, ಸ್ನೇಹದ ಪರಿಧಿ ಬೇರೆ ಬೇರೆ ಬಣ್ಣ ಪಡೆಯುತ್ತಾ ಹೋಗುತ್ತದೆ. ಏನಂತೀರಿ?


ಮಾರ್ಚ್ ೨೦೦೮ರ ಸಂಚಿಕೆಯ ಮುಖಪುಟವನ್ನು ಸ್ನೇಹದ ಬಗೆಗಿನ ಚರ್ಚೆಗೆ ಮೀಸಲಿರಿಸಲಾಗಿತ್ತು. ಸ್ನೇಹದ ವಿವಿಧ ಆಯಾಮಗಳನ್ನು ಕಾಣುವ ಪ್ರಯತ್ನವನ್ನು ಮಾಡಿದ್ದಾರೆ ಸುಪ್ರೀತ್.ಕೆ.ಎಸ್.

ಯಾರನ್ನಾದರೂ ಕೇಳಿ ನೋಡಿ. ಆತ ಎಷ್ಟೇ ಬಡವನಾಗಿರಲಿ, ಎಷ್ಟೇ ಹಣವಂತನಾಗಿರಲಿ, ಹೆಣ್ಣಾಗಿರಲಿ, ಗಂಡಾಗಿರಲಿ, ಯಾವ ಜಾತಿಯೇ ಆಗಿರಲಿ, ಯಾವ ವಯೋಮಾನದವನೇ ಆಗಿರಲಿ ಆತನಿಗೆ ಒಬ್ಬನಾದರೂ ಗೆಳೆಯ ಎಂಬುವವನು ಇದ್ದೇ ಇರುತ್ತಾನೆ. ಆತ ಒಡಹುಟ್ಟಿದವನಲ್ಲ, ರಕ್ತಸಂಬಂಧಿಯಲ್ಲ, ನಂಟನಲ್ಲ. ಆದರೂ ಆತ ಇವೆಲ್ಲಾ ಸಂಬಂಧಿಗಳಿಗಿಂತ ಗುಲಗಂಜಿಯಷ್ಟು ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತಾನೆ. ಆತನೊಂದಿಗೆ ನಾವು ಯಾರಿಗೂ ಹೇಳಿಕೊಳ್ಳದ ಗುಟ್ಟುಗಳನ್ನು ಹೇಳಿಕೊಳ್ಳುತ್ತೇವೆ, ನಮ್ಮ ತೀರಾ ಖಾಸಗಿ ಸಂಗತಿಗಳೆಲ್ಲಾ ಆತನಿಗೆ ತಿಳಿಯಪಡಿಸುತ್ತೇವೆ, ನಮ್ಮ ಸಂಭ್ರಮ, ನಿರಾಸೆಗಳನ್ನೆಲ್ಲಾ ಆತನಲ್ಲಿ ತೋಡಿಕೊಳ್ಳಬೇಕು ಅನ್ನಿಸುತ್ತದೆ, ಯಾರ ಬಗ್ಗೆಯಾದರೂ ಆತನಲ್ಲಿ ನಾವು ಕೆಮೆಂಟ್ ಮಾಡಬಹುದು. ಆತನ ಜೊತೆಗೆ ಸಿಕ್ಕುವ ಕಂಫರ್ಟ್ ಬೇರಾರ ಜೊತೆಗೂ ಸಿಗುವುದಿಲ್ಲ. ಆತ ನಮ್ಮ ಪಕ್ಕದ ಮನೆಯವನಾಗಿರಬಹುದು, ನಮ್ಮ ಸಂಬಂಧಿಗಳಿಗೆ ಪರಿಚಿತನಾಗಿರಬಹುದು, ಶಾಲೆಯಲ್ಲಿ ನಮ್ಮ ಬೆಂಚ್ ಮೇಟ್ ಆಗಿರಬಹುದು, ಹಾಸ್ಟೆಲ್ಲಿನಲ್ಲಿ ಜೊತೆಗಿದ್ದವನಾಗಿರಬಹುದು, ಸಹೋದ್ಯೋಗಿಯಾಗಿರಬಹುದು, ಪ್ರೀತಿಸಿದ ಹುಡುಗ ಅಥವಾ ಹುಡುಗಿಯ ದೋಸ್ತ್ ಆಗಿರಬಹುದು, ಹೀಗೆ ಸುಮ್ಮನೆ ಕವಿಗೋಷ್ಠಿಯಲ್ಲಿ ಪಕ್ಕದಲ್ಲಿ ಕುಳಿತಿದ್ದವನಾಗಿರಬಹುದು, ಪತ್ರದ ಮೂಲಕ ಹತ್ತಿರವಾದವನಾಗಬಹುದು, ಆರ್ಕುಟ್ಟಿನಲ್ಲಿ ಫ್ರೆಂಡ್ ಆಗ್ತೀಯಾ ಅಂತ ಕೇಳಿದವನಾಗಬಹುದು, ಅಸಲಿಗೆ ಪರಸ್ಪರ ಮುಖ ನೋಡದೆಯೇ ಕಷ್ಟ ಸುಖ ಹಂಚಿಕೊಳ್ಳುವ ಪೆನ್ ಫ್ರೆಂಡ್‌ಗಳಾಗಬಹುದು. ಈ ಗೆಳೆತನಕ್ಕೆ ಯಾವ ಗಡಿಯೂ ಇಲ್ಲ. ಗೆಳೆತನ ಬೆಳೆಸಲಿಕ್ಕೆ ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಿಲ್ಲ. ಇಷ್ಟು ವಿಶಾಲ ಹರವಿನ ಗೆಳೆತನದ ಉದ್ದೇಶವಾದರೂ ಏನು? ಗೆಳೆತನದ ಗಮ್ಮತ್ತೇನು?

ಅವನು ಚಡ್ಡಿದೋಸ್ತು

ಕೂಸು ಈ ಭೂಮಿಗೆ ಬಂದ ಕ್ಷಣವೇ ಅದಕ್ಕೆ ಸಖ ಸಖಿಯರು ಸಿದ್ಧವಾಗಿಬಿಟ್ಟಿರುತ್ತಾರೆ. ಅಕ್ಕಪಕ್ಕದ ಮನೆಯ ಪುಟಾಣಿ ಗೆಳೆಯರು ಹೊಸ ಅತಿಥಿಯನ್ನು ಸ್ವಾಗತಿಸಲು ದೇವತೆಗಳ ಹಾಗೆ ತಯಾರಾಗಿಬಿಟ್ಟಿರುತ್ತಾರೆ. ಮಗು ತೊಟ್ಟಿಲಿನಿಂದ ಕೆಳಗಿಳಿದು ಬಾರಲು ಬೀಳುವ ಕ್ಷಣಕ್ಕೆ ಹೆತ್ತ ತಾಯಿ-ತಂದೆಯರ ಜೊತೆಗೆ ಹಲವು ಅಕ್ಕರೆಯ ಜೀವಗಳು ಸಾಕ್ಷಿಯಾಗಿರುತ್ತವೆ. ಮೆಲ್ಲಗೆ ಅಂಗೈ, ಮಂಡಿ ಊರಿ ಅಂಬೆಗಾಲಿಡುವ ಮಗುವಿಗೆ ಹಾಲು ಕುಡಿಸುವ, ಅದರ ಶೌಚ ಸ್ವಚ್ಛ ಮಾಡುವ, ಆರೋಗ್ಯ ನೋಡಿಕೊಳ್ಳುವ ಜವಾಬ್ದಾರಿಗಳನ್ನು ಮುಗಿಸಿದ ತಾಯಿಯೇ ಮೊದಲ ಗರ್ಲ್ ಫ್ರೆಂಡ್ ಆಗಿರುತ್ತಾಳೆ.

ಮಗು ತನ್ನ ಕಾಲ ಮೇಲೆ ತಾನು ನಂಬಿಕೆ ಬೆಳೆಸಿಕೊಂಡು ಒಮ್ಮೆ ಹೊಸ್ತಿಲು ದಾಟಿದೊಡನೆಯೇ ಅದಕ್ಕೆ ಹೊರಗಿನ ಗೆಳೆಯರ, ಗೆಳತಿಯರ ಆಸರೆ ಬೇಕಾಗುತ್ತದೆ. ಇದಕ್ಕೆ ಆಟ, ತುಂಟಾಟಗಳು ನೆಪವಷ್ಟೇ. ಗುಂಪು ಗುಂಪಾದ ಮನೆಗಳಿರುವ ಓಣಿಗಳು, ಒತ್ತೊತ್ತಾದ ಮನೆಗಳಿರುವ ಚಿಕ್ಕ ಹಳ್ಳಿಗಳು, ನೂರಾರು ಕುಟುಂಬಗಳಿರುವ ಅಪಾರ್ಟ್‌ಮೆಂಟುಗಳು, ಒಟ್ಟಿನಲ್ಲಿ ಭೂತದ ಬಂಗಲೆಯಂತಹ ದೈತ್ಯ ಗೇಟುಗಳ ಮನೆಗಳನ್ನು ಹೊರತುಪಡಿಸಿದರೆ ಬೇರೆಲ್ಲಾ ಕಡೆ ಎಂಥದ್ದೇ ವಯಸ್ಸಿನ ಹುಡುಗ, ಹುಡುಗಿಯರಿಗೂ ಆಟವಾಡಲು ಗೆಳೆಯರು ಸಿಕ್ಕುಬಿಡುತ್ತಾರೆ. ಆಟದ ನೆಪದಲ್ಲಿ ಅವರು ಹತ್ತಿರವಾಗುತ್ತಾರೆ. ಮನೆಯಿಂದ ಕದ್ದ ಮಿಠಾಯಿ, ಚಕ್ಕುಲಿ, ಬಾಳೆಹಣ್ಣುಗಳು ಪರಸ್ಪರರ ಕೈಬದಲಾಗುತ್ತವೆ. ಅಜ್ಜಿ ಮಾಡಿಕೊಟ್ಟ ಚಿಗುಳಿ, ಅಪ್ಪ ಕೊಡಿಸಿದ ಪೆಪ್ಪರ್‌ಮೆಂಟಿನ ಒಂದು ಭಾಗ ಗೆಳೆಯನಿಗೆ ಸಂದಾಯವಾಗುತ್ತದೆ. ಆಟಕ್ಕೆ ಹೊರಗಿನಿಂದ ಬರುವ ಹುಡುಗರ ಎದುರು ಇವರು ಒಗ್ಗಟ್ಟಾಗುತ್ತಾರೆ. ಜಗಳ, ಮುನಿಸು, ಟೂ ಬಿಡುವುದು, ಮರು ಮೈತ್ರಿಯಾಗುವುದು ಅವರ ಮುಗ್ಧತೆಯಲ್ಲಿ ಅರಳಿ ನಿಲ್ಲುತ್ತವೆ. ಹಾಗೆ ಇನ್ನೂ ಚಡ್ಡಿ ಏರಿಸಲು ಕಷ್ಟ ಪಡುವ ವಯಸ್ಸಿನಲ್ಲಿ ಜೊತೆಗಾದವನೇ ಚಡ್ಡಿ ದೋಸ್ತು!

ಬಹಳಷ್ಟು ಮಂದಿ ಅಪ್ಪ, ಅಮ್ಮನ ಕೆಲಸದ ಟ್ರಾನ್ಸ್‌ಫರ್‌ಗಳಿಂದಾಗಿ, ಬಾಡಿಗೆ ಮನೆ ಬದಲಾಯಿಸಬೇಕಾದ ಅನಿವಾರ್ಯತೆಯಿಂದಾಗಿ, ಓದುವುದಕ್ಕೆ ಹಳ್ಳಿ ಬಿಟ್ಟು ಸಿಟಿಗೆ ಬರುವುದಕ್ಕಾಗಲೀ ತಮ್ಮ ಚಡ್ಡಿ ದೋಸ್ತುಗಳನ್ನು ಬಿಟ್ಟು ನಡೆಯಬೇಕಾಗುತ್ತದೆ. ಮುಂದೆಂದೋ ದೊಡ್ಡವರಾದಾಗ ಇನ್ನೆಲ್ಲೋ ಒಮ್ಮೆ ಆ ನಮ್ಮ ಚಡ್ಡಿ ದೋಸ್ತು ಸಿಕ್ಕಾಗ ಹಳೆಯ ದಿನಗಳನ್ನು ಮೆಲುಕು ಹಾಕಬಹುದೇ ಹೊರತು ಅದೇ ಉತ್ಕಟತೆಯಲ್ಲಿ ಅವರ ನಡುವೆ ಗೆಳೆತನ ಸಾಧ್ಯವಾಗುವುದಿಲ್ಲ. ಆ ಚಡ್ಡಿ ದೋಸ್ತಿ ನಮ್ಮ ಚಿಕ್ಕಂದಿನ ಚಡ್ಡಿಯ ಹಾಗೆ, ನಾವು ಅದನ್ನು ಮೀರಿಬೆಳೆದುಬಿಟ್ಟಿರುತ್ತೇವೆ. ನಾವು ಪ್ಯಾಂಟು, ಶರ್ಟು, ಕೋಟು, ಜೀನ್ಸು ತೊಡಲಾರಂಭಿಸಿರುತ್ತೇವೆ. ನಮ್ಮ ದೋಸ್ತಿ ಚಡ್ಡಿಯಿಂದ ಪ್ಯಾಂಟಿಗೆ, ಪ್ಯಾಂಟಿನಿಂದ ಪಂಚೆಗೆ ಬೆಳೆಯದಿದ್ದರೆ ಹಳೆಯ ನೆನಪಿನ ಹಾಗೆ, ಗತಕಾಲದ ಪಳೆಯುಳಿಕೆಯ ಹಾಗಾಗಿಬಿಡುತ್ತದೆ. ಅನಂತರ ಅದರಲ್ಲಿ ಸ್ವಾದವಿರುವುದಿಲ್ಲ, ಅದೇನಿದ್ದರೂ ಮ್ಯೂಸಿಯಮ್ಮಿನಲ್ಲಿ ನೋಡಿ ಖುಶಿಪಡಬೇಕಾದ ವಸ್ತುವಂತಾಗಿಬಿಡುತ್ತದೆ.

ಈತ ಕ್ಲಾಸ್ ಮೇಟು

ಇದರ ಖದರೇ ಬೇರೆ. ಇದರ ವ್ಯಾಕರಣವೇ ಬೇರೆ. ನಮ್ಮ ಚಡ್ಡಿ ದೋಸ್ತ್ ಆದವನೇ ನಮ್ಮ ಕ್ಲಾಸ್ ಮೇಟೂ ಆಗಬಹುದಾದರೂ ಈ ಕ್ಲಾಸ್ ಮೇಟುಗಳ ಲೋಕವೇ ಬೇರೆ ತೆರನಾದದ್ದು. ಈ ವರ್ಗದಲ್ಲಿ ನಮ್ಮ ಚಡ್ಡಿದೋಸ್ತನನ್ನು ಮರೆತುಬಿಡೋಣ. ಶಾಲೆಗೆ ಸೇರಿದ ಸಮಯದಲ್ಲಿ ಎಲ್ಲವೂ ಹೊಸತೇ. ಸ್ವಚ್ಛಂದವಾಗಿ ಆಡಿಕೊಂಡಿದ್ದ ಮನೆಯನ್ನು ಬಿಟ್ಟು ಬೆಳಗಿನಿಂದ ಸಂಜೆಯವರೆಗೆ ಕಾಲ ಕಳೆಯಬೇಕಾದ ಶಾಲೆ ಜೈಲಾಗಿ ಕಾಣುತ್ತಿರುತ್ತದೆ. ಪರಿಸರ ಹೊಸದು, ಶಿಕ್ಷಕರು ಹೊಸಬರು ಸುತ್ತಲಿರುವ ನಮ್ಮದೇ ವಯಸ್ಸಿನ ನೂರಾರು ವಿದ್ಯಾರ್ಥಿಗಳಲ್ಲಿ ಒಂದೂ ಪರಿಚಯದ ಮುಖವಿಲ್ಲ. ಗಾಬರಿಯಾಗುವುದೇ ಆಗ.

ಆದರೆ ಕೆಲವೇ ದಿನಗಳಲ್ಲಿ ಅಪರಿಚಿತ ಮುಖಗಳಲ್ಲಿ ಪರಿಚಯದ ನಗೆ ಅರಳಲು ಶುರುವಾಗುತ್ತದೆ. ಹೆಸರುಗಳ ಪರಿಚಯವಾಗುತ್ತದೆ. ಬಳಪ, ಪನ್ಸಿಲ್ಲುಗಳ ವಿಲೇವಾರಿಯಾಗುತ್ತದೆ. ಸಹಪಾಠಿಯಾದವನು ಶಾಲೆಯ ಹೊರಗೂ ಸಿಗುವ ಗೆಳೆಯನಾದರಂತೂ ಬೆಸುಗೆ ಗಾಢವಾಗಿ ಉಂಟಾಗುತ್ತದೆ. ಆದರೆ ಇಲ್ಲಿ ಆಯ್ಕೆಗೆ ವಿಪುಲವಾದ ಅವಕಾಶವಿರುತ್ತದೆ. ಎಂಥ ಗೆಳೆಯರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಅಪ್ಪ ಅಮ್ಮ ಎಷ್ಟೇ ಬುದ್ಧಿಮಾತು ಹೇಳಿದರೂ ನಾವು ನಮ್ಮ ಸ್ವಭಾವಕ್ಕೆ ತಕ್ಕಂಥವರ ಜೊತೆಗೇ ಗೆಳೆಯರಾಗುತ್ತೇವೆ. ಇಂಥಿಂಥವರನ್ನೇ ಫ್ರೆಂಡ್ ಮಾಡಿಕೊಳ್ಳಬೇಕು ಎಂದು ಆಯ್ಕೆ ಮಾಡಲು ಗೆಳೆಯರೇನು ಶೋ ರೂಮಿನಲ್ಲಿ ನೇತುಹಾಕಿದ ಬಟ್ಟೆಯೇ?

ಕ್ಲಾಸುಗಳಲ್ಲಿ ಹುಟ್ಟುವ ಸ್ನೇಹದಲ್ಲಿ ಅನೇಕ ಆಯಾಮಗಳಿರುತ್ತವೆ. ನೋಟ್ಸು ಚೆನ್ನಾಗಿ ಬರೆಯುತ್ತಾನೆ ಎಂಬ ಕಾರಣಕ್ಕೆ ಒಬ್ಬನ ಬಳಿ ನಾವು ಸ್ನೇಹ ಹಸ್ತ ಚಾಚಿದರೆ, ಕರೆದಾಗ ಆಟಕ್ಕೆ ಬರುತ್ತಾನೆ ಎಂಬುದಕ್ಕಾಗಿ ನಾವು ಇನ್ನೊಬ್ಬನೊಂದಿಗೆ ದೋಸ್ತಿಗೆ ಬೀಳುತ್ತೇವೆ, ಒಬ್ಬಾಕೆ ತುಂಬಾ ಸೈಲೆಂಟು, ಭಯಂಕರವಾಗಿ ಓದುತ್ತಾಳೆ ಅನ್ನೋದಕ್ಕಾಗಿ ಆಕೆಗೆ ಗೆಳತಿಯಾಗಲು ಹಂಬಲಿಸಿದರೆ ಮತ್ತೊಬ್ಬಾಕೆ ಮನೆಯಿಂದ ತಂದ ಟಿಫಿನ್ನಿನಲ್ಲಿ ಪಾಲು ಕೊಡುತ್ತಾಳೆ ಎಂಬ ಕಾರಣಕ್ಕೆ ಗೆಳತಿಯಾಗುತ್ತಾಳೆ. ಮೇಲ್ನೋಟಕ್ಕೆ ಸ್ನೇಹವೆಂಬುದು ಕೇವಲ ಸ್ವಾರ್ಥ ಉದ್ದೇಶಕ್ಕಾಗಿ ರೂಪುಗೊಳ್ಳುವಂತೆ ಕಂಡರೂ ಗೆಳೆತನ ಅಂದರೆ ಅಷ್ಟೇ ಅಲ್ಲ. ನಮ್ಮ ಆವಶ್ಯಕತೆಗಳನ್ನು ಪೂರೈಸಿಕೊಳ್ಳಲು ಗೆಳೆತನ ಬೇಕಿಲ್ಲ. ಅದಕ್ಕೆ ನಮ್ಮಲ್ಲಿ ಹಣವಿದ್ದರೆ ಸಾಕು ಆದರೆ ಆವಶ್ಯಕತೆಗಳು ನಮ್ಮನ್ನು ಹತ್ತಿರ ತರುತ್ತವೆ. ಉದ್ದೇಶಗಳಿಂದ ಸ್ನೇಹಕ್ಕೆ ಫೌಂಡೇಶನ್ ಬೀಳುತ್ತದೆ. ಗೆಳೆತನವೆಂಬ ಭಾವ ಇಬ್ಬರ ನಡುವೆ ಬೆಸೆಯುವುದಕ್ಕೆ ಈ ಆವಶ್ಯಕತೆಗಳು ಕೇವಲ ನೆಪಗಳಿದ್ದಂತೆ.

ಇವರು ಯಂಗ್ ಟರ್ಕ್ಸ್

ಕಾಲೇಜು ಸಹ ವಿದ್ಯಾರ್ಥಿ ಜೀವನದ ಮುಂದುವರಿಕೆಯೇ ಆದರೂ ಹೈಸ್ಕೂಲು ದಾಟಿ ಕಾಲೇಜಿಗೆ ಕಾಲಿಟ್ಟವರ ಖದರ್ರೇ ಬದಲಾಗಿಬಿಡುತ್ತದೆ. ವಯಸ್ಸು ಬಲಿತಂತೆ ದೇಹದಲ್ಲಿ, ಮಾನಸಿಕತೆಯಲ್ಲಿ, ಪ್ರಬುದ್ಧತೆಯಲ್ಲಿ ಬದಲಾವಣೆಗಳಾದ ಹಾಗೆಯೇ ಕಾಲೇಜು ಜೀವನದಲ್ಲಿ ಹೊಸತೊಂದು ಪರಿಸರವೇ ಸೃಷ್ಟಿಯಾಗುತ್ತದೆ. ಅಲ್ಲಿಯವರೆಗೆ ತೀರಾ ಸಹಜವಾಗಿ ಬೆರೆಯುತ್ತಿದ್ದ, ಜಗಳವಾಡುತ್ತಿದ್ದ, ಹರಟೆ ಕೊಚ್ಚುತ್ತಿದ್ದ ಹುಡುಗಿಯರು ಸಡನ್ನಾಗಿ ಗಂಭೀರವಾಗಿಬಿಡುತ್ತಾರೆ. ಒಂದೊಂದು ಮಾತನ್ನೂ ಅಳೆದು ಸುರಿದು ಆಡತೊಡಗುತ್ತಾರೆ. ಹುಡುಗರು ತಮ್ಮ ಸಹಜವಾದ ಮಾತಿನಲ್ಲಿ ಯಾವ್ಯಾವ ಅರ್ಥಗಳು ಹೊಮ್ಮಿಬಿಡುತ್ತವೋ ಎಂಬ ಎಚ್ಚರಿಕೆಯಲ್ಲಿ ಮಾತನಾಡುತ್ತಿರುತ್ತಾರೆ. ಎಷ್ಟೇ ಹಳೆಯ ಗೆಳೆತನವೆಂದರೂ ವಯಸ್ಸಿಗೆ ಸಹಜವಾದ ಲೈಂಗಿಕ ಸೆಳೆತದ ಅಲೆಗೆ ಸ್ನೇಹದ ನಾವೆ ಒಲಾಡಿದ ಅನುಭವವಾಗುತ್ತದೆ.

ಇನ್ನು ಹುಡುಗರ ನಡುವಿನ ಗೆಳೆತನಕ್ಕೂ ಸಹ ಬದಲಾವಣೆಯ ಸಮಯ ಸನ್ನಿಹಿತವಾಗಿರುತ್ತದೆ. ಸ್ವಂತದ್ದೊಂದು ವ್ಯಕ್ತಿತ್ವ, ಆಲೋಚನಾ ರೀತಿಯಿಲ್ಲದಿದ್ದಾಗ ಎಂಥವರು ಬೇಕಾದರೂ ಗೆಳೆಯರಾಗಿಬಿಡಬಹುದು. ಚಿಕ್ಕವರಾಗಿದ್ದಾಗ ಜಗಳಗಳು, ವೈಮನಸ್ಸು ಆಟದ ವಿಷಯದಲ್ಲಿ, ಸಣ್ಣ ಪುಟ್ಟ ಸಂಗತಿಗಳಲ್ಲಿ ಕಾಣಿಸಿಕೊಳ್ಳಬಹುದು. ಆದರೆ ಬೆಳೆದಾಗ ವೈಚಾರಿಕ ಭೇದ, ಚಿಂತನೆಯಲ್ಲಿನ ವ್ಯತ್ಯಾಸ, ಸಿದ್ಧಾಂತಗಳಲ್ಲಿನ ಬಿರುಕು ಗೆಳೆತನದಲ್ಲಿ ಸಣ್ಣಗೆ ಅಪಸ್ವರವನ್ನು ಹುಟ್ಟಿಸುತ್ತಿರುತ್ತದೆ. ಮನೆಯಿಂದ ಸಾಕಷ್ಟು ಸಮಯ ಹೊರಗೇ ಕಳೆಯುವುದರಿಂದ, ಕೈಯಲ್ಲಿ ಹಣ ಓಡಾಡಲು ಶುರುವಾಗುವುದರಿಂದ ಗೆಳೆತನಕ್ಕೆ ಹೊಸ ಹೊಸ ಬಣ್ಣಗಳ ಲೇಪ ದೊರೆಯಲಾರಂಭವಾಗುತ್ತದೆ.

ಇದು ಸ್ನೇಹದ ನವೀಕರಣದ ಸಮಯ. ನಮ್ಮ ಗೆಳೆತನಕ್ಕೆ ನಿರ್ದಿಷ್ಟ ಅರ್ಥಗಳನ್ನು ಕಂಡುಕೊಳ್ಳುವ ಕಾಲ. ಈ ಸಂದರ್ಭದಲ್ಲಿ ಕೊಂಚ ನಾಜೂಕಿನಿಂದ ವ್ಯವಹರಿಸಿದರೆ ಅದೆಷ್ಟೋ ಅಪರೂಪದ ಗೆಳೆತನದ ಎಳೆಗಳನ್ನು ಜೋಪಾನ ಮಾಡಬಹುದು. ಸ್ವಲ್ಪ ಎಚ್ಚರವಾಗಿದ್ದರೆ ಅಪಾಯಕಾರಿ ಕಳೆಗಳನ್ನು ಕಿತ್ತೊಗೆದುಬಿಡಬಹುದು. ಎಷ್ಟೋ ತಪ್ಪು ಅಭಿಪ್ರಾಯಗಳನ್ನು, ಗೆಳೆತನವನ್ನು ಪ್ರೀತಿಯನ್ನಾಗಿಯೂ, ಆಕರ್ಷಣೆಯನ್ನು ಗೆಳೆತನವನ್ನಾಗಿಯೂ ಕಲ್ಪಿಸಿಕೊಳ್ಳುವ ಪ್ರಮಾದಗಳು ನಡೆಯದಂತೆ ನೋಡಿಕೊಳ್ಳಬಹುದು. ಆದರೆ ನಾವೆಂದೂ ಅಂಥ ನವೀಕರಣವನ್ನು ಪ್ರಜ್ಞಾಪೂರ್ವಕವಾಗಿ ಕೈಗೊಳ್ಳುವುದಿಲ್ಲ. ಎಷ್ಟೋ ಸಲ ತಾನೇ ತಾನಾಗಿ ಗೆಳೆತನದ ಹದ ಬದಲಾಯಿಸುತ್ತಿರುತ್ತದೆ. ಹೀಗಾದಾಗ ಯಾವ ತೊಂದರೆಯೂ ಆಗುವುದಿಲ್ಲ. ಆದರೆ ತೀರಾ ಆಪ್ತವಾದ ಸ್ನೇಹದಲ್ಲಿ ಈ renewal ಸಾಧ್ಯವಾಗದಿದ್ದಾಗ ಅಲ್ಲಿ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗುತ್ತದೆ. ಸ್ನೇಹದ ಹೂವು ಬಾಡಲಾರಂಭಿಸುತ್ತದೆ.

ಇವರು ಹಾಸ್ಟೆಲ್ ವಾಸಿಗಳು

ಈ ಹಂತದ ಗೆಳೆತನಕ್ಕೆ ಅಪಾರವಾದ ಶಕ್ತಿಯಿದೆ. ಕಾಲೇಜುಗಳಲ್ಲಿ, ಶಾಲೆಯಲ್ಲಿ ತರಗತಿಗಳಲ್ಲಿ ಕಳೆಯುವ ಸಮಯವನ್ನು ಹೊರತು ಪಡಿಸಿದರೆ ಬಹುಪಾಲು ಸಮಯವನ್ನು ನಾವು ಕಳೆಯುವುದು ಹಾಸ್ಟೆಲ್ಲುಗಳಲ್ಲಿ. ಇಲ್ಲಿ ನಮ್ಮ ಮನೆಯ ವಾತಾವರಣವಿರುವುದಿಲ್ಲ. ನಮ್ಮ ಅಭ್ಯಾಸಗಳಿಗೆ, ನಮ್ಮ ರೀತಿ ರಿವಾಜುಗಳಿಗೆ ತೀರಾ ವ್ಯತಿರಿಕ್ತವಾದ ವಾತಾವರಣವಿರುತ್ತದೆ. ನಮ್ಮ ಮೇಲೆ ಅಪ್ಪ, ಅಮ್ಮಂದಿರ ಕಣ್ಣಿರುವುದಿಲ್ಲ. ತೀರಾ ಪಂಜರದಿಂದ ಹಾರಿಬಿಟ್ಟ ಹಕ್ಕಿಯ ಹಾಗಾಗಿರುತ್ತದೆ ನಮ್ಮ ಮನಸ್ಸು. ಈ ಸಮಯದಲ್ಲಿ ನಮ್ಮ ಗೆಳೆತನ ನಮ್ಮ ಬೆಳೆವಣಿಗೆಯ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರುತ್ತದೆ. ಹೊಸ ಊರಿನಲ್ಲಿ ಸಿನೆಮಾ ಥಿಯೇಟರು, ಬಾರುಗಳನ್ನು ಹುಡುಕಿಕೊಂಡು ಹೋಗಲೂ ಗೆಳೆಯರು ಬೇಕು. ಪುಸ್ತಕದಂಗಡಿ, ಲೈಬ್ರರಿ, ಮ್ಯೂಸಿಯಮ್ಮುಗಳನ್ನು ಹುಡುಕಲೂ ಗೆಳೆಯರು ಬೇಕು. ಇಲ್ಲಿ ಒಂದು ಅಂಶವನ್ನು ನಿಚ್ಚಳವಾಗಿ ಅರ್ಥಮಾಡಿಕೊಳ್ಳಬೇಕು. ನಿಮಗೆ ಒಬ್ಬ ಗೆಳೆಯನಾಗಿದ್ದಾನೆ ಎಂದರೆ ನೀವೂ ಆತನಿಗೆ ಗೆಳೆಯನಾಗಿರುತ್ತೀರಿ. ನಿಮ್ಮ ಆಸಕ್ತಿಗೆ ತಕ್ಕ ಹಾಗೆ ಗೆಳೆಯರನ್ನ ಸಂಪಾದಿಸಿಕೊಂಡಿದ್ದೀರಿ ಅಂದರೆ ಅದರರ್ಥ ನಿಮಗೆ ಗೆಳೆಯರಾದವರ ಆಸಕ್ತಿ ತಕ್ಕ ಹಾಗೆ ನೀವು ಇದ್ದೀರಿ ಎಂದರ್ಥ.

ಹಲವು ಸಲ ನಾವು ಒಂದು ಗೆಳೆಯರ ಗುಂಪು ನಂಬಲಾಗದಂತಹ ಸಾಧನೆಗಳನ್ನು ಮಾಡುವುದನ್ನು ಗಮನಿಸಿರುತ್ತೇವೆ. ನಾಲ್ಕೈದು ಮಂದಿ ಗೆಳೆಯರ ಗುಂಪು ಸೇರಿಕೊಂಡು ಒಂದು ಮ್ಯೂಸಿಕ್ ಆಲ್ಬಂ ಹೊರತರುತ್ತಾರೆ, ಒಂದೈದು ಮಂದಿ ಹುಡುಗರು ಸೇರಿಕೊಂಡು ಒಂದು ಸಾಫ್ಟವೇರ್ ಕಂಪೆನಿ ಶುರು ಮಾಡಿರುತ್ತಾರೆ, ಐದಾರು ಮಂದಿ ಗೆಳತಿಯರು ಅನಾಥಾಶ್ರಮಕ್ಕಾಗಿ ದೇಣಿಗೆ ಸಂಗ್ರಹಿಸಿ ಕೊಡುತ್ತಿರುತ್ತಾರೆ ಹೀಗೆ ಈ ವಯಸ್ಸಿನಲ್ಲಿ ಕೆಲಸ ಮಾಡಬೇಕೆಂಬ ತುಡಿತವಿರುವವರು, ಒಂದೇ ಆದರ್ಶವನ್ನು, ಕನಸನ್ನು ಹಂಚಿಕೊಂಡವರು ಒಟ್ಟು ಸೇರಿದರೆ ಅಸಾಧ್ಯವಾದ ಕೆಲಸಗಳು ಸಾಧ್ಯವಾಗುತ್ತವೆ. ಇವರಿಗೆ ಹಣ ಮಾಡಬೇಕೆಂಬ ಹಪಹಪಿಯಿರುವುದಿಲ್ಲ, ತಮ್ಮ ಪ್ರತಿಭೆಗೆ ಒಂದು ರೆಕಾಗ್ನಿಶನ್ ಸಿಕ್ಕರೆ ಸಾಕು ಎಂದು ಒಂದೇ ಮನಸ್ಸಿನಿಂದ ದುಡಿಯುತ್ತಿರುತ್ತಾರೆ. ಪ್ರೊಫೆಶನಲ್‌ಗಳು ಮಾಡಲಾಗದ ಕೆಲಸವನ್ನು ಇಂಥ ಅಮೆಚೂರ್ ಗುಂಪುಗಳೇ ಮಾಡಿರುತ್ತವೆ. ಇಲ್ಲಿ ಆ ವ್ಯಕ್ತಿಗಳ ಸಾಧನೆಗೆ ಗೆಳೆತನ ಎಂಬುದು ಕೇವಲ ಬೈಂಡಿಂಗ್ ಫೋರ್ಸ್ ಆಗಿ ಕೆಲಸ ಮಾಡಿರುತ್ತದೆ.

ಆದರೆ ಇದೇ ಸಮಯದಲ್ಲಿ ಇನ್ನೊಂದು ಅಪಾಯದ ಪ್ರಪಾತವೂ ಇರುತ್ತದೆ. ಕಾಲೇಜುಗಳಲ್ಲಿ ನಡೆಯುವ ಚಿಲ್ಲರೆ ಜಗಳ, ಪ್ರೀತಿ ಸಂಬಂಧಿಸಿದ ಕೀಟಲೆ, ಕ್ರಿಕೆಟ್, ವಾಲಿಬಾಲ್ ಆಡುವಾಗಿನ ಕಿರಿಕ್ಕು ಇಂಥವುಗಳಲ್ಲಿ ಗುಂಪು ಗೂಡುವ ಗೆಳೆಯರಿಗೆ ಅದಮ್ಯವಾದ ಉನ್ಮಾದವಿರುತ್ತದೆ. ವಯಸ್ಸಿಗೆ ತಕ್ಕ ಹಾಗೆ ಬಿಸಿ ರಕ್ತ ಮೈಯಲ್ಲಿ ಕುದಿಯುತ್ತಿರುತ್ತದೆ. ಒಂದು ಕಲ್ಲಿಗೆ ಹತ್ತು ಕಲ್ಲು ಬೀರುವ ಕೆಚ್ಚು ಇರುತ್ತದೆ. ಇಂಥ ಮನಸ್ಥಿತಿಯವರು ಒಟ್ಟುಗೂಡಿ ಗೆಳೆಯರ ಗುಂಪಾದಾಗ ಅದು ಡೆಡ್ಲಿ ಕಾಂಬಿನೇಷನ್ ಆಗಿಬಿಡುತ್ತದೆ. ತಮ್ಮಲ್ಲಿ ಒಬ್ಬನಿಗೆ ಹೊಡೆದರು ಎಂಬ ಕಾರಣಕ್ಕೆ ಇವರೆಲ್ಲರ ದೋಸ್ತಿಯ ಮಾನದ ಪ್ರಶ್ನೆ ಮುಂದೆ ಬಂದುಬಿಡುತ್ತದೆ. ತಮ್ಮ ಭವಿಷ್ಯ, ತಮ್ಮನ್ನು ನಂಬಿಕೊಂಡಿರುವವರ ಆಶೋತ್ತರಗಳನ್ನು, ಕೊನೆಗೆ ತಮ್ಮ ಪ್ರಾಣದ ಹಂಗನ್ನೇ ತೊರೆದು ಆ ಗೆಳೆಯರ ಗುಂಪಿನ ಉನ್ಮಾದಕ್ಕೆ ಬಲಿಯಾಗಿ ಹೋಗುತ್ತಾರೆ. ಇದ್ಯಾವುದೂ ದೂರದ ಊರುಗಳಲ್ಲಿರುವ, ವಾರಕ್ಕೊಮ್ಮೆ ಫೋನ್ ಮಾಡುವ ತಾಯ್ತಂದೆಯರಿಗೆ ಗೊತ್ತೇ ಆಗಿರುವುದಿಲ್ಲ.ಇಲ್ಲಿ ಕೂಡ ಗೆಳೆತನದ ಪಾತ್ರ ಕೇವಲ ಬೈಂಡಿಂಗ್ ಫೋರ್ಸ್ ಆಗಿ ಕೆಲಸ ಮಾಡುವುದೇ ಆಗಿರುತ್ತದೆ.

ವಿರುದ್ಧ ಧೃವಗಳ ಸ್ನೇಹ

ಹೈಸ್ಕೂಲು ಮೆಟ್ಟಿಲು ದಾಟುತ್ತಿದ್ದಂತೆಯೇ ಒಬ್ಬ ಹುಡುಗನಿಗೆ ಗಂಡಸುತನದ ಲಕ್ಷಣಗಳು ಪರಿಚಯವಾಗಲಾರಂಭಿಸುತ್ತವೆ. ಹುಡುಗಿಗೆ ತನ್ನ ಹೆಣ್ತನದ ಪ್ರಜ್ಞೆ ಬೆಳೆಯಲಾರಂಭಿಸುತ್ತದೆ. ಅಲ್ಲಿಯವರೆಗೆ ಹುಡುಗ ಹುಡುಗಿಯರಾಗಿದ್ದವರು ಒಮ್ಮೆಗೇ ಯುವಕ-ಯುವತಿಯರಾಗಿ ಬಿಡುತ್ತಾರೆ. ಯುವಕನೇ ಆಗಲಿ ಯುವತಿಯೇ ಆಗಲಿ ಪ್ರತಿಯೊಬ್ಬರಲ್ಲೂ opposite sexನ ಬಗ್ಗೆ ಕುತೂಹಲ, ಸ್ವಾಭಾವಿಕವಾದ ಆಕರ್ಷಣೆಗಳು ಇದ್ದೇ ಇರುತ್ತವೆ. ಒಬ್ಬ ಹುಡುಗನಿಗೆ ಎಷ್ಟೇ ಮಂದಿ ಗೆಳೆಯರಿದ್ದರೂ ಆತನ ಮನಸ್ಸು ಸದಾ ಒಂದು ಹೆಣ್ಣು ಜೀವಕ್ಕೆ ಕಾತರಿಸುತ್ತಿರುತ್ತದೆ. ಆದರೆ ಇದಕ್ಕೆ ಕೇವಲ ಲೈಂಗಿಕ ಆಕರ್ಷಣೆಯೇ ಕಾರಣವಾಗಿರುವುದಿಲ್ಲ. ವಿರುದ್ಧ ಧ್ರುವಗಳ ಆಕರ್ಷಿಸುವಂತೆ, ಹುಡುಗನಿಗೆ ಹುಡುಗಿಯರ ಜಗತ್ತಿನ ಬಗ್ಗೆ, ಆಕೆಯ ಒಟ್ಟಾರೆ ಬದುಕಿನ ಬಗ್ಗೆ, ಆಕೆಯ ವ್ಯಕ್ತಿತ್ವದ ಬಗ್ಗೆ ವಿಲಕ್ಷಣವಾದ ಕುತೂಹಲವಿರುತ್ತದೆ. ಒಬ್ಬ ಹುಡುಗಿಗೂ ಹುಡುಗರು ಹೇಗಿರ್ತಾರೆ ಎಂಬ ಬಗ್ಗೆ ಇಂಟರೆಸ್ಟ್ ಇರುತ್ತದೆ. ಚಡ್ಡಿ ಹಾಕಿಕೊಂಡ ಹುಡುಗನಿಗೆ ಕಾಲೇಜು ಹುಡುಗರ ಬಗ್ಗೆ ಒಂದು ಕುತೂಹಲ, ವಿನಾಕಾರಣದ ಬೆರಗು ಇರುತ್ತದಲ್ಲಾ, ಹಾಗೆ.

ಒಬ್ಬ ಗಂಡಿಗೆ ಹೆಣ್ಣಿನ ಲೋಕದ ಬಗ್ಗೆ, ಒಬ್ಬ ಹೆಣ್ಣಿಗೆ ಗಂಡಸಿನ ಮಾನಸಿಕತೆಯ ಬಗ್ಗೆ ಸ್ಪಷ್ಟವಾದ ಒಳನೋಟ, ಗ್ರಹಿಕೆ ದಕ್ಕಬೇಕಾದರೆ ಇರುವ ಏಕೈಕ ಮಾರ್ಗವೆಂದರೆ ಗೆಳೆತನ. ಗಂಡು ಹೆಣ್ಣು ಸ್ನೇಹಿತರಾಗಿರುವಾಗ ಅವರ ನಡುವೆ ಅರಳುವ ಆಪ್ಯಾಯಮಾನತೆ, ವಿಚಿತ್ರವಾದ ಸಮಾಧಾನ, ಬಿಗಿದಿರಿಸಿದ ಮುಷ್ಟಿಯನ್ನು ಸಡಿಲಿಸಿದಾಗ ಸಿಕ್ಕುವ ನಿರಾಳತೆಯಂತಹ ಭಾವಗಳು ಬೇರಾವ ಹೆಣ್ಣುಗಂಡಿನ ಸಂಬಂಧದಲ್ಲೂ ಸಿಕ್ಕುವುದಿಲ್ಲ. ಒಬ್ಬ ಹುಡುಗನಿಗೆ ಗೆಳತಿಯರಿದ್ದಾರೆ ಎಂದ ಕೂಡಲೇ ಆತನನ್ನು ಬೇರೆ ದೃಷ್ಟಿಯಿಂದ ನೋಡುವ, ಒಬ್ಬ ಹೆಣ್ಣಿಗೆ ಗೆಳೆಯರಿದ್ದಾರೆ ಎಂದ ತಕ್ಷಣ ಆಕೆಯನ್ನು ಸಂಶಯಿಸುವ ಪರಿಪಾಠ ನಮ್ಮಲ್ಲಿದ್ದರೂ ಗೆಳೆತನ ಬೆಸೆದುಕೊಳ್ಳಲಿಕ್ಕೆ ಅಡ್ಡಿಯಾಗಿಲ್ಲ.

ಹೆಣ್ಣು ಗಂಡಿನ ನಡುವೆ ಅನಾವಶ್ಯಕವಾದ ಆಕರ್ಷಣೆಯನ್ನು, ಸಂಶಯಾಸ್ಪದ ಕುತೂಹಲವನ್ನು ತೊಡೆದು ಹಾಕಿ, ಇಬ್ಬರೂ ಸಾಕಾಗುವಷ್ಟು ಉಸಿರಾಡುವ ಸ್ಪೇಸ್ ಕೊಡುವ ಸಂಬಂಧವೇ ಗೆಳೆತನ. ‘ಅವರ ಸ್ನೇಹ ಪ್ರೇಮದಲ್ಲಿ ಮುಕ್ತಾಯವಾಯಿತು’ ಎಂಬುದೊಂದು ಮೂರ್ಖತನದ ಮಾತು. ಪ್ರೇಮ ಶುರುವಾದ ಬಳಿಕ, ಇಲ್ಲವೇ ಮದುವೆಯಾದ ನಂತರ ಸ್ನೇಹ ದಿವಂಗತವಾಗಿಬಿಡುವುದಿಲ್ಲ. ಮದುವೆಯಾದ ನಂತರವೂ ಗಂಡು ಹೆಣ್ಣು ಗೆಳೆಯರ ಹಾಗಿರಬಹುದು. ಗೆಳೆತನವೆಂಬ ಸಂಬಂಧದ ತಾಕತ್ತೇ ಅಂಥದ್ದು ಬೇರಾವ ಸಂಬಂಧವನ್ನಾದರೂ ಅದು ತನ್ನ ತೆಕ್ಕೆಗೆ ಎಳೆದುಕೊಂಡುಬಿಡಬಲ್ಲದು.

ಹೆಸರಿಡಲಾಗದ ಸಂಬಂಧ

ಆತನಿಗೆ ಮದುವೆಯಾಗಿರುತ್ತದೆ. ಮಕ್ಕಳಿರುತ್ತಾರೆ ಆದರೂ ಒಬ್ಬ ಗೆಳತಿಯ ಸಂಗಾತ ಬೇಕೆನಿಸುತ್ತಿರುತ್ತದೆ. ಅವರ ನಡುವೆ ದೈಹಿಕ ಸಂಬಂಧವಿರುವುದಿಲ್ಲ. ಅವರು ಸುಮ್ಮನೆ ಕುಳಿತು ಗಂಟೆಗಟ್ಟಲೆ ಮಾತನಾಡಬಯಸುತ್ತಿರುತ್ತಾರೆ. ತಮ್ಮ ಕಷ್ಟ ಸುಖಗಳ ಬಗ್ಗೆ, ಬೇರಾರೂ ಕೇಳುವ ಆಸಕ್ತಿ ತೋರದ ವಿಷಯಗಳ ಬಗ್ಗೆ ಮಾತನಾಡಲು ಇಷ್ಟಪಡುತ್ತಿರುತ್ತಾರೆ. ಕಾಲೇಜು ದಿನಗಳಲ್ಲಿ ಇದ್ದ ಗೆಳೆತನ ಬಾಂಧವ್ಯವನ್ನು ಅವರು ತಮ್ಮ ಸಂಬಂಧದಲ್ಲಿ ಅರಸುತ್ತಿರುತ್ತಾರೆ. ಕೊಂಚ ಕ್ರಿಯೇಟಿವ್ ಆದವರಿಗೆ ತಾವು ಓದಿದ ಪುಸ್ತಕವನ್ನು, ತಮಗೆ ಬೆಳಗಿನಿಂದ ಕಾಡುತ್ತಿರುವ ರಾಗವನ್ನೋ ಹಂಚಿಕೊಳ್ಳಲು ಇಂಥ ಸ್ನೇಹದ ಆಸರೆ ಪಡೆಯುತ್ತಾರೆ. ನಿರ್ಣಾಯಕ ತೀರ್ಮಾನಗಳನ್ನು ತೆಗೆದುಕೊಳ್ಳಲು ಅವರು ಇಂಥ ಗೆಳೆಯರನ್ನು, ಗೆಳತಿಯರನ್ನು ಆಶ್ರಯಿಸುತ್ತಾರೆ. ಕೌನ್ಸೆಲಿಂಗ್ ಗಾಗಿ ದೂರದ ಗೆಳೆಯನನ್ನು ಆಕೆ ಫೋನ್ ಮಾಡಿ ಮಾತನಾಡಿಸುತ್ತಾಳೆ. ಇಂಥ ಹೆಸರಿಡಲಾಗದ, ಹೆಸರನ್ನು ಬಯಸದ ಸಂಬಂಧಗಳಿಗೆಲ್ಲಾ ನೀರೆರೆಯುತ್ತದೆ ಸ್ನೇಹ.

ಇಷ್ಟೇ ಅಲ್ಲದೆ ನಾವು ಸಾಕಿಕೊಂಡ, ನಮ್ಮೊಂದಿಗೆ ಮಾತೂ ಕೂಡ ಆಡದ ಸಾಕು ಪ್ರಾಣಿಗಳು ನಮ್ಮ ಗೆಳೆಯರಾಗಬಹುದು. ಒಂದೊಳ್ಳೆಯ ಗೆಳೆಯನಂತಹ ಪುಸ್ತಕ ಕೊಂಡುಕೊಂಡೆ ಎನ್ನುತ್ತೇವೆ. ಇದನ್ನೆಲ್ಲಾ ಒಮ್ಮೆ ಸ್ಥೂಲವಾಗಿ ಅವಲೋಕಿಸಿದರೆ ಸ್ನೇಹವೆಂಬುದು ನಾವು ತಿಳಿದಷ್ಟು, ಭಾವಿಸಿದಷ್ಟು ಸೀಮಿತವಾದದ್ದಲ್ಲ ಎಂಬುದು ಮನವರಿಕೆಯಾಗುತ್ತದೆ. ಈ ಸ್ನೇಹದ ಹರವಿನ ಬಗ್ಗೆ ಬೆರಗು ಉಂಟಾಗುತ್ತದೆ. ಕೆಲವು ಸಂಗತಿಗಳನ್ನು ವಿಶ್ಲೇಷಿಸಬೇಕು, ವಿಭಜಿಸಿ ಪರಿಶೀಲಿಸಬೇಕು ಇನ್ನು ಕೆಲವನ್ನು ಪ್ರಶ್ನಿಸುವ ಗೋಜಿಗೆ ಹೋಗದೆ ಮನಃಪೂರ್ವಕವಾಗಿ ಒಪ್ಪಿಕೊಂಡು ಅನುಭವಿಸಬೇಕು. ಹಾಗೆ ಅನುಭವಿಸಬೇಕಾದ ಸಂಗತಿ ಗೆಳೆತನ ಆದರೆ ಈ ನಮ್ಮ ವಿಶ್ಲೇಷಣೆ, ಆಲೋಚನೆಗಳು ನಮ್ಮ ಅನುಭವವನ್ನು ಇನ್ನಷ್ಟು ಆಳವಾಗಿಸುವುದಕ್ಕೆ, ಹೊಸ ಒಳನೋಟಗಳನ್ನು ಕಾಣಿಸುವುದಕ್ಕೆ ಸಹಕಾರಿಯಾಗುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ.

ಕೊನೆಗೂ ನಮ್ಮೆದೆಯಿಂದ ಹೊಮ್ಮುವುದಕ್ಕೆ ಸಾಧ್ಯವಾಗುವುದು ‘ದೋಸ್ತಿ ನಿನಗೊಂದು ಸಲಾಮ್’ ಎಂಬ ಉದ್ಗಾರ ಮಾತ್ರ!

ಸ್ನೇಹ! ಹಾಗಂದರೇನು?

ಉತ್ತರಿಸಲು ಕಷ್ಟವಾಗಬಹುದು. ವ್ಯಾಖ್ಯಾನ ಕೊಡುವುದಕ್ಕೆ ಯಾರಿಗೂ ಸಾಧ್ಯವಾಗದಿರಬಹುದು. ಆದರೆ ಸ್ನೇಹದ ಅನುಭೂತಿಯನ್ನು ಪಡೆಯದಿರುವವರು ಬಹುಶಃ ಯಾರೂ ಇರಲಾರರು. ಗೆಳೆತನದ ಗಮ್ಮತ್ತನ್ನು ಅನುಭವಿಸದವರು ಯಾರೂ ಇರಲಿಕ್ಕಿಲ್ಲ. ನೀವು ಪ್ರೀತಿಯಿಂದ ವಂಚಿತರಾಗಬಹುದು, ತಾಯಿಯ ಮಮತೆಯಿಂದ ವಂಚಿತರಾಗಬಹುದು ಆದರೆ ಗೆಳೆತನದಿಂದ ವಂಚಿತರಾಗಿರಲು ಸಾಧ್ಯವಿಲ್ಲ. ಗೆಳೆತನದ ವಿಶೇಷತೆಯೇ ಅಂಥದ್ದು. ಅದನ್ನು ಹುಡುಕಿಕೊಂಡು ಎಲ್ಲಿಗೂ ಹೋಗಬೇಕಿಲ್ಲ. ಅದು ಇಂಥವರ ಬಳಿಯೇ ಸಿಕ್ಕುತ್ತದೆ ಎಂದು ಯಾರೂ ಹೇಳಿಟ್ಟಿಲ್ಲ. ನಮಗೆ ಪರಿಚಿತವಾಗುವ ಪ್ರತಿಮುಖದಲ್ಲೂ ಸ್ನೇಹದ ಲೋಕಕ್ಕೆ ದೊಡ್ಡದೊಂದು ಬಾಗಿಲು ಸದಾ ನಮ್ಮನ್ನು ಸ್ವಾಗತಿಸುತ್ತಿರುತ್ತದೆ. ‘ಇಡೀ ಜಗತ್ತಿನಲ್ಲಿ ಅತ್ಯಂತ ಬೋರಿಂಗ್ ವ್ಯಕ್ತಿ ಅಂದರೆ ದೇವರು, ಯಾಕಂದ್ರೆ ಅವನಿಗೆ ಗೆಳೆಯರು ಇಲ್ಲ’- ಎಂಬ ತಮಾಷೆಯ ಮಾತು ಎಷ್ಟು ಚೆಂದದ್ದು ಅಲ್ಲವಾ?

ಹಾಗಾದರೆ ಈ ಸ್ನೇಹೆವೆಂದರೆ ಏನು? ಎಲ್ಲೋ ಹುಟ್ಟಿ ಬೆಳೆದ ಇಬ್ಬರು ಅಪರಿಚಿತರ ನಡುವೆ ಉಂಟಾಗುವ ಪರಿಚಯವಾ, ಇಬ್ಬರು ಬೇರೆ ಬೇರೆ ಸಂಸ್ಕಾರದ ವ್ಯಕ್ತಿಗಳು ತಮ್ಮಲ್ಲಿಲ್ಲದ ಗುಣಗಳಿಗಾಗಿ ಪರಸ್ಪರ ಹತ್ತಿರಾಗುವುದಾ, ಲೌಕಿಕವನ್ನೇ ಮೀರಿದ ಆತ್ಮಗಳ ಸಮ್ಮಿಳನವಾ, ಕೇವಲ ಒಂದೇ ಬಗೆಯ ಆಲೋಚನೆಗಳನ್ನು ಹೊಂದಿರುವುದಾ, ಭಾವನೆಗಳನ್ನು, ಬೇಗುದಿಗಳನ್ನು ಹಂಚಿಕೊಳ್ಳಲು ಹೆಗಲೊಂದು ಬೇಕು ಎಂಬ ಹಪಹಪಿಯಾ, ಕಷ್ಟದ ಸಮಯದಲ್ಲಿ ನೆರವಿಗೆ ಬರಲಿ ಎಂದು ಕಾಪಿಟ್ಟುಕೊಂಡ ಆಪತ್-ಧನವಾ, ಪರಸ್ಪರ ಬೆಳೆಯುವುದಕ್ಕಾಗಿ ಮಾಡಿಕೊಂಡ ತಾತ್ಕಾಲಿಕ ಹೊಂದಾಣಿಕೆಯಾ, ಬೇಸರ ಕಳೆಯಲು, ಒಬ್ಬಂಟಿತದಿಂದ ಪಾರಾಗಲು ಮಾಡಿಕೊಂಡ ಒಂದು ವ್ಯವಸ್ಥೆಯಾ, ಸಮಾಜದ ಎಲ್ಲಾ ಅಣೆಕಟ್ಟುಗಳನ್ನು ಕಿತ್ತೊಗೆದು ಭೋರ್ಗರೆಯ ಬಯಸುವ ಮನಸ್ಸಿಗೆ ಆವಶ್ಯಕವಾದ ವಿಶಾಲವಾದ ಬಯಲಾ ಅಥವಾ ಅನಿವಾರ್ಯ ಅವಲಂಬನೆಯಾ? ಇದ್ಯಾವುದೂ ಅಲ್ಲದೆ ಮತ್ತೇನೋ ಆಗಿರುವುದಾ; ಇಲ್ಲಾ, ಇವೆಲ್ಲವುಗಳ ಹದವಾದ ಮಿಶ್ರಣವಾ?

ನಮ್ಮ ವ್ಯಕ್ತಿತ್ವಕ್ಕೆ ಅನುಗುಣವಾಗಿ ನಮಗೆ ಗೆಳೆಯರು ದೊರೆಯುತ್ತಾರಾ? ಇಲ್ಲವೇ, ನಮ್ಮ ಗೆಳೆಯರು ಹೇಗಿದ್ದಾರೋ ಹಾಗೆ ನಮ್ಮ ವ್ಯಕ್ತಿತ್ವ ಬೆಳೆಯುತ್ತದಾ? “ನೀನು ನಿನ್ನ ಗೆಳೆಯರು ಎಂಥವರು ಎಂದು ಹೇಳು, ನಾನು ನೀನೆಂಥವನು ಎಂಬುದನ್ನು ಹೇಳುತ್ತೇನೆ” ಎಂದೊಬ್ಬ ಮಹಾನುಭಾವ ಹೇಳಿದ್ದು ನಿಜವಾ? ನಮಗೆ ನಮ್ಮದೇ ವೆರೈಟಿಯ ಗೆಳೆಯರು ಸಿಕ್ಕುತ್ತಾರಾ? ಹಾಗಾದರೆ ಬುದ್ಧಿವಂತನಿಗೆ ಸಾಧಾರಣ ಬುದ್ಧಿವಂತಿಕೆಯ ಹುಡುಗ, ಸುಂದರಿಗೆ ಸಾಧಾರಣ ರೂಪಿನ ಹುಡುಗಿ ಗೆಳೆಯರಾಗುವುದೇ ಇಲ್ಲವಾ? ಗೆಳೆತನಕ್ಕೂ ಆಸ್ತಿ, ಅಂತಸ್ತು, ಮನೆತನದ ಗೌರವಕ್ಕೂ ಸಂಬಂಧವಿಲ್ಲವಾ? ಗೆಳೆತನದಲ್ಲಿ ಜಾತಿ ಧರ್ಮಗಳ ಅಡ್ಡಿ, ಮಡಿ-ಮೈಲಿಗೆಗಳ ರೀತಿ ರಿವಾಜು ಇರುವುದಿಲ್ಲವಾ? ಗೆಳೆತನದಲ್ಲಿ ನಮ್ಮನ್ನು ಬೆಳೆಸುವ ಹುರಿದುಂಬಿಸುವ ಶಕ್ತಿಯಿದೆಯಾ, ಸೋತಾಗ ಬೆನ್ನುತಟ್ಟಿ ಮುಂದಕ್ಕೆ ತಳ್ಳುವ ಪ್ರೇರಣೆ ಇದೆಯಾ? ತಪ್ಪುದಾರಿಗೆಳೆದು ಸಹವಾಸವನ್ನು ದೋಷವಾಗಿಸುವ ಅಪಾಯವಿದೆಯಾ? ಅಸಲಿಗೆ ಸ್ನೇಹ ಯಾವ ವಯಸ್ಸಿನವರ ನಡುವೆಯಾದರೂ ಮೊಳೆಯಬಹುದಾ? ಹುಡುಗ ಹುಡುಗಿ ಸ್ನೇಹಿತರಾಗಿರಲು ಸಾಧ್ಯವಿಲ್ಲವಾ? ಗಂಡ ಹೆಂಡತಿ ಸ್ನೇಹಿತರಾಗಿರಬೇಕಾ? ವಯಸ್ಸಿಗೆ ಬಂದ ಮಕ್ಕಳನ್ನೇಕೆ ಸ್ನೇಹಿತರಂತೆ ಕಾಣಬೇಕು? ಇಷ್ಟಕ್ಕೂ ಗೆಳೆಯರು ಬೇಕೇ ಬೇಕಾ?

ಈ ಎಲ್ಲಾ ವೆರೈಟಿಯ ಪ್ರಶ್ನೆಗಳನ್ನು ಕೇಳಿಕೊಂಡು ಉತ್ತರ ಪಡೆಯುವುದಕ್ಕೆ ನಾವು ಮಾಡಿದ ಪ್ರಯತ್ನ, ಪಡೆದ ಉತ್ತರಗಳು ನಮ್ಮನ್ನೇ ಸಂಶಯಿಸುವಂತೆ ಮಾಡಿದ ವಿಸ್ಮಯ, ಉತ್ತರ ಪಡೆಯಲಾಗದೆ ಕೈಚೆಲ್ಲಿ ಕುಳಿತಾಗಿನ ನಿಟ್ಟುಸಿರು, ಉತ್ತರ ಸಿಕ್ಕಲಿಲ್ಲವಲ್ಲ ಸಧ್ಯ ಎಂಬ ಸಮಾಧಾನ ಎಲ್ಲಕ್ಕೂ ವೇದಿಕೆಯಾದದ್ದು ಈ ಸಂಚಿಕೆಯ ‘ಸಡಗರ’!

ಸ್ನೇಹ!
ಬಹುಶಃ ಇದು ಪ್ರೀತಿ,ಪ್ರೇಮ, ಪ್ರಣಯದಷ್ಟು ಗೊಂದಲದ ಗೂಡಾದ ಸಂಬಂಧವಲ್ಲ. ಇದರಲ್ಲಿ ಅನವಶ್ಯಕವಾದ ಗೊಂದಲಗಳಿಲ್ಲ, ಆದರ್ಶಗಳಲ್ಲಿನ ತಿಕ್ಕಾಟವಿಲ್ಲ. ಇಲ್ಲಿ ಎಲ್ಲವೂ ನಿಚ್ಚಳ. ತಿಳಿನೀರಿನ ಕೊಳದ ಆಳದಲ್ಲಿ ಮೂಡಿದ ಬಿಂಬದ ಹಾಗೆ!
ಸ್ನೇಹವನ್ನ ಮನುಷ್ಯ ಸಂಬಧಗಳಲ್ಲೇ ಶ್ರೇಷ್ಠ ಎಂದವರಿದ್ದಾರೆ. ತಮ್ಮ ಬದುಕಿನಲ್ಲಿ ಸ್ನೇಹಕ್ಕೆ ಮೊದಲ ಪ್ರಾಶಸ್ತ್ಯದ ಮಣೆ ಹಾಕುವವರಿದ್ದಾರೆ, ಅವರ ಪ್ರಕಾರ ಸ್ನೇಹ ಚಿರಂಜೀವಿ. ಇನ್ನು ಕೆಲವರಿಗೆ ಸ್ನೇಹವೆಂಬುದು ಚದುರಂಗದ ಆಟ. ಬಲ ಪ್ರದರ್ಶನದ ಮೆರೆದಾಟ. ಸ್ನೇಹಿತರು ಅವರಿಗೆ ತಮ್ಮ ಬೆಳವಣಿಗೆಯ ಹಾದಿಯ ಮೆಟ್ಟಿಲುಗಳು.
ಹಣಕ್ಕಾಗಿ ಹಲವರು ಹತ್ತಿರಾಗುತ್ತಾರೆ, ರಕ್ಷಣೆಗಾಗಿ ಹಲವರು ಗುಂಪುಗೂಡುತ್ತಾರೆ, ಐಡೆಂಟಿಟಿ ಕಂಡುಕೊಳ್ಳಲು ಕೆಲವರು ಸ್ನೇಹವನ್ನರಸುತ್ತಾರೆ, ಬೆಳೆಯಲು ಕೆಲವರು ಸ್ನೇಹಿತರನ್ನು ಆಯ್ದುಕೊಂಡರೆ ಕೆಲವರಿಗೆ ಸಹವಾಸವೇ ದೋಷವಾಗುತ್ತದೆ. ಹಾಗಾದರೆ ನಿಜಕ್ಕೂ ಈ ಸ್ನೇಹದ ಆಂತರ್ಯವೇನು? ಇದರ ಗಮ್ಮತ್ತು ಇರೋದು ಎಲ್ಲಿ?
ಉತ್ತರದ ಹುಡುಕಾಟ ಈ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.

-ಸಂ.


Blog Stats

  • 69,182 hits
ಅಕ್ಟೋಬರ್ 2021
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 123
45678910
11121314151617
18192021222324
25262728293031

Top Clicks

  • ಯಾವುದೂ ಇಲ್ಲ