ಕಲರವ

Posts Tagged ‘majid majini


ತಾವು ನೋಡಿದ ಮಾಜಿದ್ ಮಜಿನಿ ನಿರ್ದೇಶನದ ಚಿತ್ರ children Of Heaven ಬಗೆಗಿನ ತಮ್ಮ ಅನುಭವವನ್ನು ಇಲ್ಲಿ ದಾಖಲಿಸಿರುವವರು ಚಿತ್ರ.

ಕೆಲವು ಮಕ್ಕಳ ಚಿತ್ರಗಳೇ ಹಾಗಿರುತ್ತವೆ. ಅವು ಮಕ್ಕಳಿಗೆ ಮಾತ್ರ ಮನರಂಜನೆಯ, ಬೋಧನೆಯ ನೀಡುವುದಿಲ್ಲ. ಅದರ ಜೊತೆಗೇ ದೊಡ್ಡವರನ್ನೂ ಆಕರ್ಷಿಸುತ್ತವೆ. ಎಲ್ಲಾ ವಯೋಮಾನದವರನ್ನೂ ಮರುಳು ಮಾಡುತ್ತವೆ. ವಯಸ್ಕರಿಗೆ ತಮ್ಮ ಬಾಲ್ಯದ ನವಿರಾದ ನೆನಪುಗಳನ್ನು ಹೆಕ್ಕಿಕೊಡುತ್ತವೆ. ಕಳೆದು ಹೋದ ಬಾಲ್ಯದ ಮುಗ್ಧತೆಯನ್ನು, ಅಭೋಧತೆಯನ್ನು ನೆನಪಿಸಿ ಕಣ್ಣು ತೇವವಾಗಿಸುತ್ತವೆ, ಮನಸ್ಸನ್ನು ಎಲ್ಲಾ ಬಗೆಯ ಒತ್ತಡಗಳಿಂದ ಬಿಡಿಸಿ ಸಡಿಲಾಗಿಸುತ್ತವೆ. ಅಂಥದ್ದೊಂದು ಸಿನೆಮಾವನ್ನು ಜಗತ್ತಿಗೆ ಕಟ್ಟಿ ಕೊಟ್ಟವ ಮಾಜಿದ್ ಮಜಿದಿ. ಪರ್ಶಿಯನ್ ಭಾಷೆಯಲ್ಲಿ ಆತ ನಿರ್ಮಿಸಿದ ಸುಂದರ ದೃಶ್ಯಕಾವ್ಯದ ಹೆಸರೇ ‘Children of Heaven’!

ಅವು ಟೆಹ್ರೇನ್‌ನ ಬಡವರ ಮನೆಗಳಿರುವ ಕಾಲೊನಿಗಳು. ಒರಟೊರಟಾದ ಗೋಡೆಗಳನ್ನು ಹೊಂದಿರುವ ಪುಟ್ಟ ಪುಟ್ಟ ಮನೆಗಳು ಯಾವ ನಿಯಮ, ಲೆಕ್ಕಾಚಾರವಿಲ್ಲದೆ ಚಾಚಿಕೊಂಡಿವೆ. ಮನೆಗಳ ಗೋಡೆಗಳ ನಡುವೆ ಇರುವ ಇರುಕಿನಂತಹ ಜಾಗವೇ ಜನರ ಓಡಾಟಕ್ಕೂ, ಹರಿಯುವ ಕೊಚ್ಚೆ ನೀರಿಗೂ ಅವಕಾಶ ಮಾಡಿಕೊಟ್ಟಿರುತ್ತದೆ. ಇಂಥ ಜನವಸತಿ ಪ್ರದೇಶದಲ್ಲಿ ಒಂದು ಸಾಮಾನ್ಯ ಮನೆ. ಅಲ್ಲಿ ಇಬ್ಬರು ಮಕ್ಕಳಿರುತ್ತಾರೆ. ಆತ ಅಲಿ. ಅವನ ತಂಗಿ ಜಾಹ್ರಾ.

ತನ್ನ ತಂಗಿಯ ಹರಿದ ಶೂಗಳನ್ನು ಚಮ್ಮಾರನ ಬಳಿ ರಿಪೇರಿಗಾಗಿ ಕೊಂಡೊಯ್ಯುತ್ತಾನೆ ಆಲಿ. ಚಮ್ಮಾರ ಗುಲಾಬಿ ಬಣ್ಣದ ಆ ಪುಟ್ಟ ಶೂಗಳನ್ನು ಹೊಲಿಯುವ ಸೀನಿನೊಂದಿಗೆ ಸಿನೆಮಾ ನಮ್ಮ ಮುಂದೆ ತೆರೆದುಕೊಳ್ಳುತ್ತದೆ. ತಂಗಿಯ ಶೂ ರೆಡಿ ಮಾಡಿಸಿಕೊಂಡು ಆಲಿ ಹೊರಡುತ್ತಾನೆ, ಮನೆಗೆ ರೊಟ್ಟಿಯನ್ನು ಕೊಂಡುಕೊಳ್ಳುತ್ತಾನೆ, ತರಕಾರಿ ಕೊಳ್ಳಲು ಅಂಗಡಿಯೊಳಕ್ಕೆ ಹೋಗುವಾಗ ರೊಟ್ಟಿಯ ಗಂಟಿನ ಜೊತೆಗೆ ಶೂಗಳಿರುವ ಚೀಲವನ್ನೂ ಹೊರಗಿಡುತ್ತಾನೆ. ಆತ ಅಗ್ಗದ ಬೆಲೆಯ ಆಲೂಗಡ್ಡೆಗಳನ್ನು ಆಯುವಲ್ಲಿ ತಲ್ಲೀನನಾಗಿರುವಾಗ ಮಾರುಕಟ್ಟೆಯಲ್ಲಿ ಕಸವನ್ನು ಆಯ್ದುಕೊಂಡು ಹೋಗುವ ಗಾಡಿಯವನು ಆ ತರಕಾರಿ ಅಂಗಡಿಯ ಉಳಿದೆಲ್ಲಾ ಕಸದ ಜೊತೆಗೆ ಈ ಹುಡುಗ ಇಟ್ಟಿದ್ದ ಶೂಗಳ ಚೀಲವನ್ನೂ ಗಾಡಿಗೆ ತುಂಬಿಕೊಂಡು ಹೊರಟು ಹೋಗುತ್ತಾನೆ.

ತರಕಾರಿ ಕೊಂಡು ಹೊರಬಂದು ನೋಡಿದ ಹುಡುಗನಿಗೆ ಶೂಗಳಿರುವ ಚೀಲ ಕಾಣುವುದಿಲ್ಲ. ಕಂಗಾಲಾದ ಆತ ತರಕಾರಿ ಜೋಡಿಸಿಟ್ಟ ಡಬ್ಬಗಳ ನಡುವೆ ಚೀಲಕ್ಕಾಗಿ ತಡಕಾಡುವಾಗ ಜೋಡಿಸಿಟ್ಟ ತರಕಾರಿಗಳೆಲ್ಲಾ ಕೆಳಕ್ಕೆ ಬಿದ್ದು ಮಣ್ಣುಪಾಲಾಗುತ್ತವೆ. ಇದನ್ನೆಲ್ಲಾ ಕಂಡ ಅಂಗಡಿಯವ ಆಲಿಯನ್ನು ಓಡಿಸುತ್ತಾನೆ.

ಇತ್ತ ಮನೆಗೆ ಬಂದ ಆಲಿ ಶೂ ಕಳೆದುಹೋದ ವಿಚಾರವನ್ನು ತಂಗಿ ತಿಳಿಸುತ್ತಾನೆ. ಆಕೆಯ ಕಣ್ಣು ಹನಿಗೂಡಿದ್ದನ್ನು ಕಂಡು ಈತನೂ ಕಣ್ಣೀರಾಗುತ್ತಾನೆ. ಆದರೆ ಮನೆಯ ಕಿತ್ತು ತಿನ್ನುವ ಬಡತನದ ಅರಿವಿದ್ದುದರಿಂದ ಶೂ ಕಳೆದ ವಿಚಾರವನ್ನು ದೊಡ್ಡವರಿಗೆ ತಿಳಿಸಿದರೆ ಏಟು ಬೀಳಬಹುದು ಎಂದು ಹೆದರಿ ಸುಮ್ಮನಾಗುತ್ತಾರೆ. ಆ ರಾತ್ರಿ ಒಂದೇ ಕೋಣೆಯ ಮನೆಯಲ್ಲಿ ಅಣ್ಣ-ತಂಗಿ ಓದುತ್ತಾ ಕುಳಿತಿರುವಾಗ, ಶೂ ಕಳೆದ ವಿಚಾರವನ್ನು ಅಪ್ಪ, ಅಮ್ಮರಿಗೆ ತಿಳಿಯದ ಹಾಗೆ ತಮ್ಮ ನೋಟ್ ಬುಕ್ಕುಗಳಲ್ಲಿ ಬರೆದು ಪರಸ್ಪರ ಬದಲಾಯಿಸಿಕೊಳ್ಳುತ್ತಾ ಒಂದು ತೀರ್ಮಾನಕ್ಕೆ ಬರುತ್ತಾರೆ. ಅಣ್ಣನ ಬಿಳಿಯ ಕ್ಯಾನ್ವಾಸ್ ಶೂಗಳನ್ನೇ ಜಾಹ್ರಾ ತನ್ನ ಬೆಳಗಿನ ಶಾಲೆಗೆ ತೊಟ್ಟುಕೊಂಡು ಹೋಗುವುದು, ಆಕೆಯ ಶಾಲೆ ಬಿಟ್ಟೊಡನೆಯೇ ಓಡಿ ಬಂದು ಮಾರ್ಗ ಮಧ್ಯದಲ್ಲೇ ಶೂಗಳನ್ನು ಅಣ್ಣನಿಗೆ ಕೊಡುವುದು. ಆತ ಅನಂತರ ತನ್ನ ಮಧ್ಯಾನದ ತರಗತಿಗೆ ಹೋಗುವುದು. ಪುಟ್ಟ ಮಕ್ಕಳು ಇಂಥದ್ದೊಂದು ಗುಪ್ತ ಒಪ್ಪಂದವನ್ನು ಮಾಡಿಕೊಳ್ಳುತ್ತಾರೆ. ಇದಕ್ಕೆ ಒಪ್ಪಿಕೊಂಡದ್ದಕ್ಕೆ ಜಾಹ್ರಾಗೆ ಅಣ್ಣನಿಂದ ಹೊಸ ಪೆನ್ಸಿಲ್ಲಿನ ಉಡುಗೊರೆಯೂ ಸಿಕ್ಕುತ್ತದೆ!

ತಮ್ಮ ಒಪ್ಪಂದದ ಪ್ರಕಾರ ಆ ಇಬ್ಬರು ಮಕ್ಕಳು ಶಾಲೆಗೆ ಹೋಗಿಬರುತ್ತಿರುತ್ತಾರೆ. ಬಣ್ಣಬಣ್ಣದ, ಚೆಂದದ ಶೂಗಳನ್ನು ತೊಟ್ಟ ಸಹಪಾಠಿಗಳ ನಡುವೆ ಹರಿದ, ಕೊಳಕಾದ ಕ್ಯಾನ್ವಾಸ್ ಶೂ ತೊಟ್ಟ ಜಾಹ್ರಾ ಸಂಕೋಚದ ಮುದ್ದೆಯಾಗಿರುತ್ತಾಳೆ. ಕ್ರಮೇಣ ಆಕೆಗೆ ಅದು ಒಗ್ಗಿ ಹೋದರೂ ಪ್ರತಿದಿನ ಶಾಲೆಯ ಅಸೆಂಬ್ಲಿಯ ಸಾಲಿನಲ್ಲಿ ನಿಂತಾಗ ಎಲ್ಲಾ ಹುಡುಗಿಯರ ಕಾಲುಗಳನ್ನು ಪರೀಕ್ಷಿಸುವ ಚಟ ಮಾತ್ರ ಬಿಟ್ಟುಹೋಗುವುದಿಲ್ಲ. ಪ್ರತಿದಿನ ಮಾರ್ಗ ಮಧ್ಯದಲ್ಲಿ ತಂಗಿಯಿಂದ ತನ್ನ ಶೂಗಳನ್ನು ಪಡೆದು ಆಲಿ ಮೈಲು ದೂರದ ಶಾಲೆಗೆ ಓಡಿ ಹೋಗುವಷ್ಟರಲ್ಲಿ ತರಗತಿಗಳು ಶುರುವಾಗಿಬಿಟ್ಟಿರುತ್ತವೆ. ಒಮ್ಮೆ ಶಾಲೆ ಮುಗಿಸಿಕೊಂಡು ಅವಸರದಲ್ಲಿ ಓಡಿಬರುತ್ತಿರುವಾಗ ಜಾಹ್ರಾಳ ಕಾಲಿನಿಂದ ಜಾರಿ ಶೂ ಚರಂಡಿಯಲ್ಲಿ ಬಿದ್ದು ಬಿಡುತ್ತದೆ. ಪುಟ್ಟ ಹುಡುಗಿ ವೇಗವಾಗಿ ಹರಿಯುವ ಚರಂಡಿಯ ನೀರಿನಲ್ಲಿ ತೇಲುತ್ತಾ ಹೋದ ತನ್ನ ಶೋಗಳನ್ನಟ್ಟಿಕೊಂಡು ಓಡುತ್ತಾಳೆ. ಅಂದು ಅಣ್ಣನಿಗೆ ಶೂ ಒಪ್ಪಿಸಲು ತಡವಾಗಿಬಿಡುತ್ತದೆ. ಆತ ಶಾಲೆಗೆ ಹೋಗುವುದೂ ಇನ್ನೂ ತಡವಾಗುತ್ತದೆ. ಶಾಲೆಯ ಹೆಡ್ ಮಾಸ್ಟರ್ ಆತನಿಗೆ ಒಂದು ವಾರ್ನಿಂಗ್ ಕೊಟ್ಟು ಇನ್ನೊಮ್ಮೆ ಆತ ತಡವಾಗಿ ಬರುವುದನ್ನು ಕಂಡರೆ ಶಾಲೆಯ ಒಳಗೆ ಬಿಟ್ಟುಕೊಳ್ಳುವುದಿಲ್ಲ ಎಂದು ಗದರುತ್ತಾನೆ. ಆದರೆ ತಮ್ಮಿಬ್ಬರ ನಡುವಿನ ಗುಪ್ತ ಒಪ್ಪಂದವನ್ನು ಯಾರಿಗೂ ಬಿಟ್ಟುಕೊಡಬಯಸದ ಆಲಿ ಸತ್ಯ ಸಂಗತಿಯನ್ನು ಬಾಯ್ಬಿಡುವುದಿಲ್ಲ.

ಎಲ್ಲಾ ಸಹಪಾಠಿಗಳ ಕಾಲುಗಳನ್ನು ಪರೀಕ್ಷಿಸುತ್ತಾ ಅವರ ಶೂಗಳನ್ನು ನೋಡುವ ಅಭ್ಯಾಸ ಬೆಳೆಸಿಕೊಂಡ ಜಾಹ್ರಾಳಿಗೆ ಅದೊಂದು ದಿನ ತನ್ನ ಕಳೆದುಹೋದ ಶೂಗಳು ಕಂಡುಬಿಡುತ್ತವೆ. ಆದರೆ ಬೇರೊಬ್ಬಾಕೆಯ ಕಾಲುಗಳಲ್ಲಿ! ಸರಿ ಆಕೆ ಆ ಶೂಗಳ ಒಡತಿಯನ್ನೇ ಹಿಂಬಾಲಿಸಿ ಆಕೆಯ ಮನೆಯನ್ನು ತಿಳಿದುಕೊಂಡು ಬಂದು ಅಣ್ಣನಿಗೆ ತಿಳಿಸುತ್ತಾಳೆ. ಶಾಲೆ ಮುಗಿದ ತಕ್ಷಣ ಅಣ್ಣ-ತಂಗಿ ಆ ಶೂಗಳ ಅನಧಿಕೃತ ಮಾಲೀಕಳ ಮನೆಯ ಬಳಿಗೆ ಹೋಗುತ್ತಾರೆ. ಆದರೆ ಆ ಮನೆಯವರ ಸ್ಥಿತಿಯನ್ನು ಕಂಡು ಶೂ ಕೇಳುವ ಮನಸ್ಸಾಗುವುದಿಲ್ಲ. ಆ ಹುಡುಗಿಯ ಕುರುಡ ತಂದೆ ಭಿಕ್ಷೆಗೆ ಹೋಗುವುದನ್ನು ನೋಡಿದ ಅಣ್ಣ-ತಂಗಿಗೆ ಮನಸ್ಸು ಕರಗುತ್ತದೆ.

ಈ ನಡುವೆ ಆ ಕುರುಡನ ಮಗಳಿಗೂ ಜಾಹ್ರಾಳಿಗೂ ಗೆಳೆತನ ಬೆಳೆಯುತ್ತದೆ. ಅವರಿಬ್ಬರೂ ಒಳ್ಳೆಯ ಗೆಳತಿಯರಾಗುತ್ತಾರೆ. ಇದೆಲ್ಲವನ್ನು ಆ ಪುಟ್ಟ ಮಕ್ಕಳಿಬ್ಬರು ಯಾರಿಗೂ ತಿಳಿಯದ ಹಾಗೆ ನೋಡಿಕೊಂಡಿರುತ್ತಾರೆ. ಹೀಗಿರುವಾಗ ಒಂದು ದಿನ ಆಲಿಯ ಶಾಲೆಯಲ್ಲಿ ಪ್ರತಿಷ್ಟಿತವಾದ ಮ್ಯಾರಥಾನ್ ಓಟದ ಸ್ಪರ್ಧೆಯ ಬಗ್ಗೆ ಮಾಹಿತಿ ದೊರೆಯುತ್ತದೆ. ಶ್ರೀಮಂತ ಹಾಗೂ ಮೇಲ್ವರ್ಗದ ಜನರ ಮಕ್ಕಳೇ ಹೆಚ್ಚಿರುವ ಆ ರೇಸಿನಲ್ಲಿ ಮೂರನೆಯ ಬಹುಮಾನವಾಗಿ ಹೊಚ್ಚ ಹೊಸ ಶೂಗಳನ್ನು ಕೊಡುತ್ತಾರೆ ಎಂಬುದನ್ನು ಓದಿಯೇ ಆಲಿಯ ಕಣ್ಣುಗಳು ಅರಳುತ್ತವೆ. ತನ್ನ ದೈಹಿಕ ಶಿಕ್ಷಕನ ಮನ ಒಲಿಸಿ ಆತ ಓಟದ ಸ್ಪರ್ಧೆಗೆ ಆಯ್ಕೆಯಾಗುತ್ತಾನೆ. ಪ್ರತಿದಿನ ಮೈಲುದೂರ ಓಡಿಯೇ ಶಾಲೆ ತಲುಪುತ್ತಿದ್ದ ಆತನ ಕಾಲುಗಳ ಸಾಮರ್ಥ್ಯ ಕಂಡು ದೈಹಿಕ ಶಿಕ್ಷಕನೇ ದಂಗು ಬಡಿದುಹೋಗಿರುತ್ತಾನೆ.

ಆ ಪ್ರತಿಷ್ಟಿತ ರೇಸಿನಲ್ಲಿ ತನ್ನ ತಂಗಿಗಾಗಿ, ಆಕೆಗೊಂದು ಜೊತೆ ಒಳ್ಳೆಯ ಹೊಸ ಶೂ ಕೊಡುವುದಕ್ಕಾಗಿ ಈ ಅಣ್ಣ ಓಡುತ್ತಾನೆ. ತನ್ನ ಬಡತನ, ತನ್ನ ಅಸಹಾಯಕತೆ, ತನ್ನ ಹರಿದ ಕ್ಯಾನ್ವಾಸ್ ಶೂ, ತನ್ನ ಅನಾಥ ಪ್ರಜ್ಞೆ ಎಲ್ಲವೂ ಆತನ ಕಾಲುಗಳಿಗೆ ದೈತ್ಯ ಶಕ್ತಿಯನ್ನು ಕೊಡುತ್ತವೆ. ಹಿಂದಕ್ಕೆಳೆದು ಕಾಲು ಕೊಟ್ಟು ಬೀಳಿಸಿದ ಹುಡುಗನನ್ನೂ ದಾಟಿ ಮುಂದೆ ಓಡುತ್ತಾನೆ. ಆಕಸ್ಮಿಕವಾಗಿ ಮೊದಲನೆಯ ಸ್ಥಾನವನ್ನು ಪಡೆದುಬಿಡುತ್ತಾನೆ! ಆದರೆ ಆತನ ಮುಖ ಅರಳುವುದಿಲ್ಲ. ಮೊದಲ ಬಹುಮಾನವನ್ನು ಪಡೆದುಕೊಳ್ಳುತ್ತಿರುವಾಗ ಆತನ ಕಣ್ಣುಗಳು ಮೂರನೆಯ ಬಹುಮಾನವಾದ ಶೂಗಳ ಮೇಲೆಯೇ ನೆಟ್ಟಿರುತ್ತವೆ. ಉಳಿದೆಲ್ಲಾ ಸ್ಪರ್ಧಿಗಳಿಗೆ ಓಟದ ನಂತರ ಗ್ಲೂಕೋಸು ಕುಡಿಸುತ್ತಾ ಅವರ ದಣಿದ ಪುಟ್ಟ ಕಾಲುಗಳನ್ನು ನೀವಲು ತಾಯಿ ತಂದೆಯರಿದ್ದಾರೆ. ಆದರೆ ಈ ಅಲಿಗಾದರೋ? ಆತನನ್ನು ತಲೆ ಮೇಲೆ ಹೊತ್ತು ದೈಹಿಕ ಶಿಕ್ಷಕ ಸಂಭ್ರಮಿಸುತ್ತಾನೆ. ಆತನ ಶಾಲೆಯ ಹೆಡ್ ಮಾಸ್ಟರ್ ಆತನೊಂದಿಗೆ ನಿಂತು ಫೋಟೊಗೆ ಫೋಸು ಕೊಡುತ್ತಾನೆ.

ಅಲಿ ಬರುವುದನ್ನೇ ಕುತೂಹಲದಿಂದ ಕಾಯುತ್ತಿದ್ದ ಜಾಹ್ರಾಳಿಗೆ ಆತನ ಮುದುಡಿದ ಮುಖ ಕಂಡು ನಿರಾಶೆಯಾಗುತ್ತದೆ. ಆಕೆ ತನಗಿನ್ನೆಂದೂ ಶೂ ಸಿಕ್ಕುವುದಿಲ್ಲವೆಂದು ಭಾವಿಸಿ ಒಳಕ್ಕೆ ಹೋಗುತ್ತಾಳೆ. ಓಟದ ಬಿರುಸಿನಲ್ಲಿ ಸಂಪೂರ್ಣವಾಗಿ ಜಖಂ ಗೊಂಡ ತನ್ನ ಶೂಗಳಿಂದ ಕಾಲುಗಳನ್ನು ಬಿಡಿಸುತ್ತಾನೆ ಅಲಿ. ಆ ಪುಟ್ಟ ಪಾದಗಳ ಮೇಲೆ ನಾಲ್ಕಾಣೆ ನಾಣ್ಯದ ಗಾತ್ರದ ಗಾಯಗಳಾಗಿರುತ್ತವೆ. ಆದರೆ ಆತನ ನೋವನ್ನು ಕೇಳುವವರಿಲ್ಲ. ಆತ ತನ್ನ ಮನೆಯೆದುರಿನ ಪುಟ್ಟ ನೀರಿನ ಟ್ಯಾಂಕಿನಲ್ಲಿ ತನ್ನ ಗಾಯಗೊಂಡ ಪಾದಗಳನ್ನು ಮುಳುಗಿಸುತ್ತಾನೆ. ಆತನಿಂದ ಪ್ರತಿದಿನ ಆಹಾರ ಪಡೆಯುವ ಪುಟ್ಟ ಪುಟ್ಟ ಮೀನುಗಳು ಆತನ ಗಾಯದ ಚರ್ಮವನ್ನು ನೇವರಿಸಿ ಆತನಿಗೆ ಹಿತವನ್ನು ನೀಡಲು ತವಕಿಸುವಂತೆ ಮುತ್ತಿಕೊಳ್ಳುತ್ತವೆ.

ಈ ಮಧ್ಯೆ ಒಂದು ಪುಟ್ಟ ಝಲಕ್‌ನ ಹಾಗೆ ಅಲಿ ಹಾಗೂ ಜಾಹ್ರಾಳ ತಂದೆ ಕಾಣಿಸುತ್ತಾನೆ. ಆತನ ಹಳೆಯ ಸೈಕಲ್ಲಿನ ಹಿಂಬದಿಯ ಕ್ಯಾರಿಯರ್‌ನಲ್ಲಿ ಎರಡು ಜೊತೆ ಪುಟ್ಟ ಶೂಗಳಿರುವುದು ಕಾಣಿಸುತ್ತದೆ!

ಗ್ರಾಮೀಣ ಹಾಗೂ ಬಡ ಮಕ್ಕಳು ತಮ್ಮ ಪ್ರಕೃತಿದತ್ತವಾದ ಪ್ರತಿಭೆಯಿಂದ ಸಾಧನೆ ಮಾಡುವ ಎಷ್ಟೋ ಸಿನೆಮಾಗಳನ್ನು ನೋಡಿದ್ದೇನೆ. ಆದರೆ ಈ ಚಿತ್ರ ಅವುಗಳಲ್ಲೆಲ್ಲಾ ವಿಶಿಷ್ಟವಾಗಿ ಕಾಣುವುದಕ್ಕೆ ಕಾರಣ ಇಲ್ಲಿ ಮಕ್ಕಳ ಜಗತ್ತಿನ ಮುಗ್ಧತೆ ಬೇರಾವ ಆದರ್ಶ, ಸಿದ್ಧಾಂತಕ್ಕೂ compromise ಮಾಡಿಕೊಳ್ಳುವುದಿಲ್ಲ. ಆಲಿ ಓಡುವುದಕ್ಕೆ ಆತನ ತಂಗಿಗೊಂದು ಶೂ ಬೇಕೆನ್ನುವುದು ಕಾರಣವಾಗುತ್ತದೆಯೇ ವಿನಃ ಆತನ ಬಡತನವನ್ನು ಮೀರುವ, ಸಾಧನೆ ಮಾಡುವ ಛಲವಲ್ಲ. ದೊಡ್ಡವರಿಗೆ ಯಕಶ್ಚಿತ್ ಒಂದು ಜೊತೆ ಶೂಗಳಿಗಾಗಿ ಈ ಮಕ್ಕಳು ಇಷ್ಟು ಕಷ್ಟಪಡುತ್ತವಲ್ಲಾ ಎನ್ನಿಸಿದರೂ ಮುಗ್ಧ ಮಕ್ಕಳ ಜಗತ್ತಿನಲ್ಲಿ ಶೂನ ಬೆಲೆಯನ್ನು ಹಣದಿಂದ ಎಣಿಸುವುದಿಲ್ಲ ಎಂಬುದನ್ನು ಮರೆಯಬಾರದು. ಆಲಿಯ ಪಾತ್ರದಲ್ಲಿ ಅಭಿನಯಿಸಿರುವ ಅಮಿರ್ ಫಾರೂಕ್ ಹಶೆಮಿಯಾ ಹಾಗೂ ಜಾಹ್ರಾ ಪಾತ್ರವನ್ನು ಆವಾಹಿಸಿಕೊಂಡ ಬಹರೆ ಸಿದ್ಧಿಕಿ ಎಂಬ ಪುಟ್ಟ ಮಕ್ಕಳು ನಮ್ಮ ಬಾಲ್ಯವನ್ನು ನೆನಪಿಸದಿರುವುದಿಲ್ಲ.

ಒಮ್ಮೆ ಈ ‘ಸ್ವರ್ಗದ ಮಕ್ಕಳ’ ಪ್ರಪಂಚವನ್ನು ಪ್ರವೇಶಿಸಿ ನೋಡಿ. ಪರ್ಶಿಯನ್ ಭಾಷೆಯಲ್ಲಿರುವ ಸಿನೆಮಾಗೆ ನಿಮಗೆ ಇಂಗ್ಲೀಷ್ ಸಬ್ ಟೈಟಲ್ ಸಿಕ್ಕದಿದ್ದರೂ ತೊಂದರೆಯಾಗುವುದಿಲ್ಲ. ಯಾಕೆ ಅಂದರೆ ಎದೆಯ ಭಾವವನ್ನು ಅರಿಯಲಿಕ್ಕೆ ಯಾವ ಭಾಷೆ ಬೇಕು ಅಲ್ಲವೇ?


Blog Stats

  • 69,182 hits
ಅಕ್ಟೋಬರ್ 2021
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 123
45678910
11121314151617
18192021222324
25262728293031

Top Clicks

  • ಯಾವುದೂ ಇಲ್ಲ