Posts Tagged ‘ಹೇಮಾಂತರಂಗ’
ಹೇಮಾಂತರಂಗ: ನಾ ಕಂಡ ಸ್ವಾತಂತ್ರ್ಯ ದಿನ
Posted ಆಗಷ್ಟ್ 17, 2009
on:– ಹೇಮಾ ಪವಾರ್, ಬೆಂಗಳೂರು
ಸ್ವಾತಂತ್ರ್ಯದ ದಿನದಲ್ಲಿ ಬರೆಯಬಹುದಾದ ಮಾಡಬಹುದಾದ ವಿಷಯಗಳು ನನಗೆ
ಸ್ಪಷ್ಟವಾಗಿಲ್ಲವಾದರೂ ಈ ಸಲದ ಸ್ವಾತಂತ್ರ್ಯ ದಿನ ನನ್ನ ಪಾಲಿಗೆ ಅತಿ ಮುಖ್ಯ ದಿನ
ಎನಿಸಿದ್ದರಿಂದ ಬರೆಯುತ್ತಿದ್ದೇನೆ. ಮೊದಲೆಲ್ಲಾ ಇತರೆ ರಜದ ದಿನಗಳ ಹಾಗೆ
ಸ್ವಾತಂತ್ರ್ಯದಿನಾಚರಣೆಯೂ ಮುಗಿದು ಹೋಗುತ್ತಿತ್ತು ಮತ್ತು ಹಾಗೆ ಕಳೆದುಬಿಟ್ಟಿದ್ದರ
ಬಗ್ಗೆ ಸಣ್ಣದೊಂದು ಗಿಲ್ಟ್ ಮನಸಲ್ಲುಳಿದುಬಿಡುತ್ತಿತ್ತು, ಈ ಸಲ ಹಾಗಾಗಲಿಲ್ಲವೆಂಬುದೇ
ಖುಷಿಯ ವಿಚಾರ. ನಾನು ಬೆಳ್ಳಂಬೆಳಿಗ್ಗೆ ಎದ್ದು ರೆಡಿಯಾಗಿ ಸ್ಯಾಟಲೈಟ್ ಬಸ್ಟಾಪ್
ತಲುಪಿಕೊಂಡು, ಇಡ್ಲಿ ತಿಂದು, ಬಿಸೀ ಬಿಸಿ ಕಾಫಿ ಕಪ್ ಹಿಡಿದು ವಾಚ್ ನೋಡಿಕೊಂಡಾಗ ಸಮಯ
ಆರುಗಂಟೆ. ಅಲ್ಲಿಂದ ನನ್ನ ಪಯಣ ಸಾಗಿದ್ದು ಮದ್ದೂರಿನ ಹತ್ತಿರವಿರುವ ನಂಬಿನಾಯಕನಹಳ್ಳಿ
ಎಂಬ ಗ್ರಾಮಕ್ಕೆ. ಹಳ್ಳಿಗಳು ನನಗೇ ಪ್ರತಿ ವಿಷಯದಲ್ಲೂ ವಿಸ್ಮಯದ ಸಂತೆ, ದೊಡ್ಡ ದೊಡ್ಡ
ಹೆಂಚಿನ ಮನೆಗಳು, ಮನೆಯಲ್ಲೇ ಸಾಕಿರುವ ರೇಷ್ಮೆ ಹುಳುಗಳು, ಆಡು, ಕುರಿ, ಹಸು, ಎತ್ತು,
ಎಮ್ಮೆ, ಕೋಳಿ ಮತ್ತು ಅವೆಲ್ಲಕ್ಕೂ ಮನೆಮಂದಿ ಮಾಡುವ ಆರೈಕೆ, ಹಳ್ಳಿಯ ನಿರ್ಮಲ ಗಾಳಿ,
ಹಸಿರು ಎಲ್ಲವೂ ಬೆಂಗಳೂರಿನ ಕಾಂಕ್ರೀಟ್ ಕಾಡಿನಲ್ಲಿ ಹುಟ್ಟಿ ಬೆಳೆದ ನನಗೆ ಒಂದು
ಅಪೂರ್ವ ಸೆಳೆತವನ್ನುಂಟು ಮಾಡುತ್ತದೆ. ಅಲ್ಲಿನ ಪರಿಚಿತರ ಮನೆ ಹೊಕ್ಕು ಎಲ್ಲರನ್ನು
ಮಾತಾಡಿಸುತ್ತಿದ್ದಾಗಲೇ ಟಿ.ವಿಯಲ್ಲಿ ಬರುತ್ತಿದ್ದ ಕಾರ್ಯಕ್ರಮವೊಂದು ಗಮನ ಸೆಳೆಯಿತು,
ನಟಿ ರಮ್ಯ ಯಡಿಯೂರಪ್ಪನವರ ಸಂದರ್ಶನ ಮಾಡಿತ್ತಿದ್ದುದ್ದು. ಚಾನೆಲ್ ಸರ್ಫ್
ಮಾಡುತ್ತಿದ್ದ ಸಣ್ಣ ಹುಡುಗ ರಮ್ಯಳ ಮುಖ ನೋಡುತ್ತಿದ್ದ ಹಾಗೆ ನಿಲ್ಲಿಸಿದ,
ಪರವಾಗಿಲ್ವೆ ನಮ್ಮ ಮುಖ್ಯಮಂತ್ರಿಗಳು ಹೀರೋಯಿನ್ ರಿಗೆಲ್ಲಾ ಸಂದರ್ಶನ ಕೊಡುವ ಧೈರ್ಯ
ಮಾಡಿದ್ದಾರೆಂದು ನಾನೂ ಕಿವಿಗೊಟ್ಟೆ, ಆಕೆಯ ಪ್ರಶ್ನೆಗಳನ್ನು ಕೇಳುತ್ತಿದ್ದ ಹಾಗೇ
ನನಗೆ ಮೈ ಉರಿದು ಹೋಯಿತು, ನೀವೇಕೆ ವೈಟ್ ಸಫಾರಿ ಹಾಕುತ್ತೀರಿ? ನೀವು ಮ್ಯಾನಿಕ್ಯೂರ್
ಪೆಡಿಕ್ಯೂರ್ ಮಾಡಿಸುತ್ತೀರ? ಬ್ಯೂಟಿ ಪಾರ್ಲರಿಗೆ ಹೋಗುತ್ತೀರ? ಅರೆ ರಾಜ್ಯದ ಮುಖ್ಯ
ಮಂತ್ರಿಗಳಿಗೆ ಕೇಳುವ ಪ್ರಶ್ನೆಯಾ ಇದು?! ಇರಲಿ ಅದರ ಬಗ್ಗೆ ಮುಂದೆ ಬರೆಯುವೆ.
ಅಲ್ಲಿನ ವಾತಾವರಣ ಅನುಭವಿಸಿ ಖುಷಿ ಪಡಲು ಇನ್ನೊಂದು ಅವಕಾಶವೆಂಬಂತೆ ಪಕ್ಕದ ಹಳ್ಳಿಗೆ
ಹೋಗಬೇಕಿದ್ದ ಬಸ್ ಆ ದಿನ ನಾಪತ್ತೆಯಾಗಿತ್ತು, ಮೂರು ಕಿ.ಮೀ ನಷ್ಟು ದೂರವಿದ್ದ ಊರಿಗೇ
ನಡೆದೇ ಹೊರಟೆವು. ನನ್ನ ಜೊತೆಯಲ್ಲಿ ಬರುತ್ತಿದ್ದ ಗೆಳೆಯರೊಬ್ಬರೊಡನೆ ಹಳ್ಳಿಯ ಆಗು
ಹೋಗುಗಳ ಬಗ್ಗೆ, ಪಟ್ಟಣದ ಯಾಂತ್ರಿಕತೆಯ ಬಗ್ಗೆ ಲೋಕಾಭಿರಾಮವಾಗಿ ಮಾತು ಸಾಗಿತ್ತು.
ಮಾತು ಒಳ್ಳೆಯ ಬಿರುಸು ಪಡೆದು ನಾನು ಹಳ್ಳಿಯ ಜನರೆಲ್ಲ ನೆಮ್ಮದಿ ಉಳ್ಳವರೆಂದು
ಪಟ್ಟಣದವರ ಚೆನ್ನಾಗಿರುವಿಕೆ ಬರಿಯ ತೋರಿಕೆಯೆಂದೂ ಹೇಳಿದೆ. ಆದರೆ ಆ ಹಳ್ಳಿಯ ಜನರ ಇತರ
ಸ್ವಭಾವಗಳ ಬಗ್ಗೆ (ಅವರು ಸ್ವತಃ ಅದೇ ಊರಿನವರಾದ್ದರಿಂದ) ಹೇಳುತ್ತಾ, ಹೇಗೆ ರೈತನ
ಶ್ರಮವು ಸರಿಯಾದ ಅನುಕೂಲಗಳಿಲ್ಲದೆ ಇರುವುದರಿಂದ ಫಲ ದೊರೆಯದೇ ಪೋಲಾಗುತ್ತಿದೆ,
ಅನಕ್ಷರಸ್ಥ ಹಳ್ಳಿಗರು ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳದೆ ಅವುಗಳಿಗೆ
ವಿಮುಖರಾಗುತ್ತಾರೆ, ಸಮಯ ಬಂದಾಗ ಒಗ್ಗಟ್ಟಾಗಿರಲು ಒದ್ದಾಡುತ್ತಾರೆ, ಕಷ್ಟವಿಲ್ಲದ
ಪಟ್ಟಣದ ಜೀವನಕ್ಕೆ ಹಾತೊರೆಯುತ್ತಾರೆ, ಸರ್ಕಾರವು ರೈತನಿಗೆ ಕೊಟ್ಟಿರುವ
ಸೌಲಭ್ಯಗಳನ್ನು ಬಳಸಿಕೊಳ್ಳುವಲ್ಲಿ ಎಡವುತ್ತಾರೆ, ಸರ್ಕಾರವು ಒದಗಿಸಿರುವ
ಸೌಲಭ್ಯಗಳಲ್ಲಿ ರೈತನಿಗೆ ಆಗುತ್ತಿರುವ ಅನುಕೂಲವೆಷ್ಟು ಎಂದೆಲ್ಲ ವಿವರಿಸಿ ಒಂದು
ಉದಾಹರಣೆಯನ್ನು ಕೊಟ್ಟರು.
ಅದನ್ನು ವಿವರಿಸುವ ಮೊದಲು ಕಬ್ಬಿನ ಬಗ್ಗೆ ಸ್ವಲ್ಪ ವಿವರಣೆ ಅಗತ್ಯ. ಕಬ್ಬು ಒಂದು
ದೀರ್ಘ ಕಾಲದ ಬೆಳೆ, ಕಬ್ಬನ್ನು ಸಸಿಯಿಂದ ಕಟಾವಿನ ಹಂತದವರೆಗು ಬೆಳೆಯಲು ಕನಿಷ್ಟ
ಹನ್ನೊಂದು ತಿಂಗಳು ಬೇಕಾಗುತ್ತದೆ. ಕಬ್ಬು ಬೆಳೆಗಾರರಿಗೆ ಸರ್ಕಾರದಿಂದ ಸಾಲ
ದೊರೆಯುತ್ತದೆ. ಸರ್ಕಾರ, ರೈತನು ಬೆಳೆದ ಕಬ್ಬನ್ನು ತನ್ನದೇ ಅಧೀನದಲ್ಲಿರುವ
ಕಾರ್ಖಾನೆಗೆ ಕೊಡುವಂತೆ ಒಪ್ಪಂದ ಮಾಡಿಕೊಂಡು ಕಡಿಮೆ ಬಡ್ಡಿ ದರದಲ್ಲಿ ಸಾಲ
ಕೊಡುತ್ತದೆ. ನಿಗಧಿತ ಸಮಯದಲ್ಲಿ ಕಬ್ಬನ್ನು ಕಾರ್ಖಾನೆಗೆ ಒದಗಿಸದ ಪಕ್ಷದಲ್ಲಿ,
ಸಾಲವನ್ನು ಬಡ್ಡಿ ಮತ್ತು ಇತರೆ ದಂಡಗಳ ಸಮೇತ ಹಿಂತಿರುಗಿಬೇಕಾಗುತ್ತದೆ. ಇತ್ತ
ಸರ್ಕಾರದ ಅಧೀನದಲ್ಲಿರುವ ಕಾರ್ಖಾನೆಯ ಫೀಲ್ಡ್ ಮ್ಯಾನ್ ನಿಂದ ರೈತನ ಜಮೀನನ್ನು
ಪರಿಶೀಲಿಸಿ ಆ ಜಾಗದಲ್ಲಿ ಬೆಳೆಯಬಹುದಾದ ಕಬ್ಬನ್ನು ಅಂದಾಜಿಸಿ, ಕಟಾವಿನ ಸಮಯದಲ್ಲಿ
ಅಂದಾಜಿಸದಷ್ಟೇ ಕಬ್ಬು ಜಮೀನಿನಲ್ಲಿ ದೊರೆಯಬೇಕೆಂದು ಒಪ್ಪಂದದಲ್ಲಿ ಹೇಳಿರುತ್ತಾರೆ.
ಇದು ಸಾಲ ನೀಡಿ ರೈತನಿಂದ ಮರುಪಾವತಿ ಪಡೆಯುವುದಕ್ಕೆ ಸರ್ಕಾರ ಮಾಡಿರುವ ನಿಯಮ. ಆದರೆ
ಇಲ್ಲಾಗುವ ವ್ಯತಿರಿಕ್ತ ಪರಿಣಾಮಗಳೆಂದರೆ ಕಾರ್ಖಾನೆಯು ಒಂದೊಮ್ಮೆ ಫೀಲ್ಡ್ ಮ್ಯಾನ್
ನನ್ನು ಕಳಿಸಿ ಬೆಳೆಯನ್ನು ಅಂದಾಜಿಸಿದ ಮೇಲೂ ಕೆಲವೊಮ್ಮೆ ಸರಿಯಾದ ಸಮಯದಲ್ಲಿ ಕಟಾವು
ಮಾಡಿಸುವಲ್ಲಿ ತಡಮಾಡುತ್ತದೆ. (ಇದಕ್ಕೆ ಬೇರೆ ಬೇರೆಯದೇ ಕಾರಣಗಳಿರುತ್ತವೆ,
ಕಾರ್ಖಾನೆಯೂ ಅದಾಗಲೇ ಬೇರೆ ಕಡೆಯಿಂದ ಕಡಿಮೆ ಬೆಲೆಯ ಕಬ್ಬು ತರಿಸಿದ್ದರೆ,
ಕಾರ್ಖಾನೆಯಲ್ಲಿ ಕಡಿಮೆ ಕಬ್ಬನ್ನು ಅರೆಯುವ ಅವಕಾಶವಿದ್ದು ಜಾಸ್ತಿ ಜಮೀನಿಗೆ ಒಪ್ಪಂದ
ಮಾಡಿಕೊಂಡಿದ್ದರೆ, ಮಳೆ ಸರಿಯಾಗಿ ಆಗದೇ ಬೆಳೆಯೇ ತಡವಾಗಿದ್ದರೆ, ಇತ್ಯಾದಿ) ಆಗ ತಪ್ಪು
ಸರ್ಕಾರದ ಅಧೀನದಲ್ಲಿರುವ ಕಾರ್ಖಾನೆಯದ್ದೇ ಆದರೂ ರೈತ ತಾನು ಪಡೆದಿರುವ ಸಾಲಕ್ಕೆ
ಬಡ್ಡಿ ಕಟ್ಟಲೇ ಬೇಕು. ಸರ್ಕಾರದ್ದೇ ಅಧೀನದಲ್ಲಿರುವ ಎರೆಡು ವಿಭಾಗಗಳು ಒಂದಕ್ಕೊಂದು
ಪೂರಕವಲ್ಲದೆ ರೈತನಿಗೆ ಅನಾನುಕೂಲಕರವಾಗಿದೆ ಎಂಬುದು ಒಂದು ಅಂಶವಾದರೆ, ಒಂದೊಮ್ಮೆ
ಕಬ್ಬಿನ ಬೆಲೆಯಲ್ಲಿ ಏರಿಕೆ ಇದ್ದರೆ ಕೆಲವು ರೈತರು ಖಾಸಗೀ ಕಾರ್ಖಾನೆಯವರಿಗೆ
(ಬಂಡವಾಳಶಾಹಿಗಳಾದ ಖಾಸಗೀ ಕಾರ್ಖಾನೆಯವರು ತಮ್ಮ ಉತ್ಪನ್ನಗಳನ್ನು ಹೆಚ್ಚಿನ
ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಂಡಿದ್ದು, ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಸಿ
ಹೆಚ್ಚಿನ ಬೆಲೆಗೆ ಮಾರುತ್ತಾರೆ) ತಮ್ಮ ಬೆಳೆಯನ್ನು ಹೆಚ್ಚಿನ ಬೆಲೆಗೆ ಮುಂಚೆಯೇ
ಮಾರಿಕೊಂಡು ಕಾರ್ಖಾನೆಯವರು ಬಂದಾಗ ಬೆಳೆಯಿಲ್ಲದ ಜಮೀನನ್ನು ತೋರಿಸುತ್ತಾರೆ.
ಕಾರ್ಖಾನೆಯಲ್ಲಾಗ ಕಬ್ಬಿನ ಪೂರೈಕೆ ಇಲ್ಲದೆ ಅರೆಯುವ ಮಶೀನುಗಳು ಬಳಕೆಯಾಗದೆ ಸರ್ಕಾರವು
ಅದರಲ್ಲಿ ತೊಡಗಿಸಿದ ಹಣ ಪೋಲಾಗುತ್ತದೆ. ಕಬ್ಬಿನ ಬೆಲೆಯ ಹೆಚ್ಚಳಕ್ಕೆ, ಸಾಲ ಮನ್ನಾ
ಮಾಡಲಿಕ್ಕೆ ಮುಷ್ಕರಗಳು ಹೂಡಲಾಗುತ್ತದೆಯಾದರೂ ನಿಜವಾಗಿಯೂ ತೊಡಕಾಗಿರುವ ಈ
ಕಾರಣಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಸರ್ಕಾರ ಮತ್ತು ಇತರ ಹೋರಾಟಗಾರರೆನಿಸಿಕೊಂಡವರು
ಸೋಲುತ್ತಾರೆ.
ಇದು ಗಮನಕ್ಕೆ ಬಂದ ಉದಾಹರಣೆಯಾಗಿದ್ದು ವ್ಯವಸಾಯ ಮಾಡುವಾಗ ಇಂತಹ ಹಲವು ಹತ್ತು
ಸಮಸ್ಯೆಗಳನ್ನು ರೈತನು ಎದುರಿಸಬೇಕಾಗುತ್ತದೆ. ರೈತನ ಜೀವನ ನಾನಂದುಕೊಂಡಷ್ಟು ಸುಲಭವೂ,
ಸಲೀಸೂ ಅಲ್ಲ ಎಂಬುದರ ಅರಿವಾಯಿತು. ಇವೆಲ್ಲದರ ಅರಿವು ಎಷ್ಟು ಜನಕ್ಕೆ ಇರುತ್ತದೆ?
ಅರಿವು ಮೂಡಿದ ಮೇಲಾದರೂ ಯುವಜನಾಂಗವೆನಿಸಿಕೊಂಡ ನಾವು ಮಾಡಬೇಕಾದದ್ದೇನು? ಇಂದಿನ ಯುವ
ಪೀಳಿಗೆ ವ್ಯವಸಾಯದಲ್ಲಿ ತೊಡಗುತ್ತಿಲ್ಲ ಎಂದು ದೂರುವ ಹಿರಿಯರಿಗೆ, ಇಲ್ಲಿನ
ಅನಾನುಕೂಲಗಳ ಅರಿವಿಲ್ಲವೇ? ಹಾಯಾದ ಪಟ್ಟಣದ ಜೀವನ ನೌಕರಿ ಎಲ್ಲವನ್ನು ಬಿಟ್ಟು
ವ್ಯವಸಾಯ ಮಾಡಲು ಯುವಕರಾದರೂ ಏಕೆ ಮುಂದೆ ಬಂದಾರು? ಮುಂದೆ ಬರುವಂತೆ ನಮ್ಮ ಸರ್ಕಾರ
ಏನು ಕ್ರಮ ತೆಗೆದುಕೊಂಡಿದೆ? ನಮ್ಮ ಶಿಕ್ಷಣ ಪದ್ದತಿಯು ರೈತರ ಸಮಸ್ಯೆಗಳು
ಯುವಜನಾಂಗಕ್ಕೆ ಎಷ್ಟರ ಮಟ್ಟಿಗೆ ಮುಟ್ಟಿಸುತ್ತಿದೆ? ನಗರದ ಜನತೆಗೆ ಹೀಗೆ
ಹಳ್ಳಿಗಳಲ್ಲಿ ರೈತರು ಅನುಭವಿಸುತ್ತಿರುವ ಬವಣೆ ತಿಳಿದಿದೆಯೇ? ನಮ್ಮಲ್ಲಿಲ್ಲಿ ದೇಶದ
ತುಂಬಾ ಸಮಸ್ಯೆಗಳಿವೆ, ಸ್ವಾತಂತ್ರ್ಯದದಿನ, ನಟಿಯೊಬ್ಬಳು ಮುಖ್ಯಮಂತ್ರಿಯನ್ನು
ಕೇಳುತ್ತಾಳೆ ’ನೀವೇಕೆ ವೈಟ್ ಸಫಾರಿ ಹಾಕುತ್ತೀರಿ? ನೀವು ಮ್ಯಾನಿಕ್ಯೂರ್ ಪೆಡಿಕ್ಯೂರ್
ಮಾಡಿಸುತ್ತೀರ? ಬ್ಯೂಟಿ ಪಾರ್ಲರಿಗೆ ಹೋಗುತ್ತೀರ?’ ನಗುವುದೋ ಅಳುವುದೋ ನೀವೆ ಹೇಳಿ?!
(ಮುಗಿಸುವ ಮುನ್ನ: ಇದನ್ನೆಲ್ಲ ತಿಳಿದುಕೊಂಡು ಹೀಗೆ ಬರೆಯುತ್ತಿರುವುದರಿಂದ ನನ್ನ
ದೇಶಕ್ಕೆ ಅದರ ಸಮಸ್ಯೆಗಳ ನಿವಾರಣೆಗೆ ನಾನು ಉಪಕಾರ ಮಾಡುತ್ತಿದ್ದೇನೆ ಎಂದು
ನನಗನಿಸುತ್ತಿಲ್ಲ. ನಗರದ ನೌಕರಿಯಲ್ಲಿ ಆರಾಮವಾಗಿ ಕಾಲ ಕಳೆಯುತ್ತಿರುವ ನಾನು ಹಳ್ಳಿಗೆ
ಹೋಗಿ ಎಂದಾದರು ಮೈ ಬಗ್ಗಿಸಿ ದುಡಿಯಬಲ್ಲೆನೇ? ಬಡಕಲು ದನಗಳಿಗೆ ನೇಗಿಲನ್ನು ಕಟ್ಟಿ
ವ್ಯವಸಾಯ ಮಾಡುತ್ತಿರುವ ರೈತನಿಗೆ ನಗರದಲ್ಲಿ ನಮಗೆ ಸಿಗುವ ಸಾರ್ವಜನಿಕ ಸೌಲಭ್ಯಗಳ ಶೇ
೫ ರಷ್ಟೂ ಸಿಗುತ್ತಿಲ್ಲ. ಓದಿರುವ ನಾವು ಸರ್ಕಾರಿ ನೌಕರಿಗಳಲ್ಲಿನ ಮೀಸಲಾತಿ,
ಕನ್ನಡಪರಚಳವಳಿಗಳಲ್ಲಿ ತುಸು ಹೆಚ್ಚೇ ಎನಿಸುವಷ್ಟು ಹೋರಾಡುತ್ತೀವಾದರೂ, ರೈತನ ಕಷ್ಟಗಳ
ಬಗ್ಗೆ ಎಂದಾದರೂ ಯೋಚಿಸಿದ್ದೇವೆಯೇ? ನಿಜವಾಗಿಯೂ ಅತಿ ಹೆಚ್ಚಿನ ಪ್ರಾಮುಖ್ಯತೆ,
ಸೌಲಭ್ಯಗಳು ಸಿಗಬೇಕಾಗಿರುವುದು ನಮ್ಮ ದೇಶದ ಬೆನ್ನೆಲುಬಾದ ರೈತನಿಗಲ್ಲವೇ?)
- In: ಹೇಮಾಂತರಂಗ
- 7 Comments
– ಹೇಮಾ ಪವಾರ್, ಬೆಂಗಳೂರು
ಬೆಳಿಗ್ಗೆಯಿಂದ ಆ ಮುಖಾನೇ ಕಾಡ್ತಿದೆ. ಸಿಗ್ನಲ್ನಲ್ಲಿ ಸಿಂಬಳ ಸೋರುತ್ತಿರುವ ಮಗುವನ್ನು ಎತ್ತಿಕೊಂಡು ಭಿಕ್ಷೆ ಬೇಡುತ್ತಿದ್ದ ಆ ಹೆಣ್ಣಿನ ಮುಖ. ಅವಳನ್ನ ದಿನಾ ನೋಡ್ತಿದ್ದೆ, ಇವತ್ತು ಆ ಮುಖ ಪದೇ ಪದೇ ನೆನಪಾಗ್ಲಿಕ್ಕೆ ಕಾರಣ, ಪತ್ರಿಕೆಯಲ್ಲಿ ಈ ಸಿಗ್ನಲ್ ಭಿಕ್ಷುಕರ ಬಗ್ಗೆ ಓದಿದ್ದ ಲೇಖನ. ಅವರು ಮಕ್ಕಳನ್ನ ಭಿಕ್ಷೆ ಬೇಡೋಕೆ ಅಂತಾನೆ ದುಡ್ಡುಕೊಟ್ಟು ತರ್ತಾರಂತೆ!! ಒಮ್ಮೆ ಪೋಲೀಸರಿಗೆ ಸಿಕ್ಕಿಹಾಕಿಕೊಂಡ ಒಬ್ಬ ಭಿಕ್ಷುಕಿಯ ಸೆರಗಿನ ಗಂಟಲ್ಲಿ ಭರ್ತಿ ನಲವತ್ತು ಸಾವಿರ ಸಿಕ್ತಂತೆ!! ಇದೆಲ್ಲ ನಿಜವಾ? ಅವಳ ದೀನ ಮುಖ, ಸಿಂಬಳ ಸುರಿಸುತ್ತಿದ್ದ ಆ ಮುಗ್ದ ಮಗು, ಅರೆ ಹಾಲೂಡಿಸುತ್ತಿದ್ದಳಲ್ಲ ಅದೂ ಸುಳ್ಳೇ? ಮನ ಕಲಕಿತ್ತು. ಈ ಜನಕ್ಕೆ ಅದೇನು ಬಂದಿದೀಯೋ. ಭಿಕ್ಷಾಟನೇನು ಬಿಸಿನೆಸ್ ಆಗಿ ಹೋಯ್ತೆ? ಆ ಹುಡುಗಿ ಮಗುವನ್ನಿಟ್ಟುಕೊಂಡು ತನ್ನ ಹೆಣ್ತನವನ್ನು ಎನ್‌ಕ್ಯಾಶ್ ಮಾಡಿಕೊಳ್ತಿತ್ತಾ? ಛೆ ಅಷ್ಟೊಂದು ಮುಗ್ದತೆ ಇತ್ತು ಮುಖದಲ್ಲಿ, ಅದರ ಹಿಂದೆ ಅಂಥಾ ಸ್ವಾರ್ಥವಿತ್ತಾ? ಸ್ವಾರ್ಥ ಅಂದೇಕೆ ಅಂದುಕೊಳ್ಳಬೇಕು ಅದು ಅವಳ ನೆಸೆಸಿಟಿ ಇರಬಹುದು, ಓದಿಲ್ಲದ, ಮನೆಯಿಲ್ಲದ ಅವಳಿಗೆ ಕೆಲಸ ಯಾರು ಕೊಡ್ತಾರೆ? ಯೋಚಿಸಿಕೊಂಡೇ ಬಸ್ ಹತ್ತಿದೆ. ಈ ಬಸ್ ಕಾರ್ಪೊರೇಷನ್ಗೆ ಹೋಗುತ್ತ… ಕಂಡಕ್ಟರನ್ನ ಕೇಳುತ್ತಿದ್ದ ಹುಡುಗಿ ಬಸ್ ಹತ್ತಿ ಸೀದಾ ನನ್ನ ಪಕ್ಕ ಬಂದು ಕೂತು, ಕಾರ್ಪೋರೇಷನ್ ಬಂದ್ರೆ ಹೇಳ್ತೀರಾ? ಅಂತ ಇಂಗ್ಲೀಷ್ನಲ್ಲಿ ಕೇಳಿದಾಗಲೆ ನನಗೆ ಎಚ್ಚರವಾಗಿದ್ದು. ಆಫ್ ಕೋರ್ಸ್ ಅಂತ ನಾನೂ ಸ್ಟೈಲಾಗಿ ಉಲಿದು ಇಷ್ಟಗಲ ಮುಗುಳ್ನಕ್ಕೆ. ಅಷ್ಟೇ ಸಾಕು ಅಂತ ಆ ಹುಡುಗಿ ಮಾತಿಗೆ ಶುರುವಿಡ್ತು. ಅವಳ ಕೆಲಸ, ಗಂಡ, ಆರು ತಿಂಗಳ ಮಗು ಇನ್ನು ಏನೇನೋ ನಮ್ಮ (ಅವಳ) ಮಾತಿನ ನಡುವೆ ಬಂತು. ಕಾರ್ಪೋರೇಷನ್ ಬಂದಿದ್ದೆ ಗೊತ್ತಾಗ್ಲಿಲ್ಲ. ಆ ಹುಡುಗಿ ತಡಬಡಾಯಿಸಿ ನನಗೊಂದು ಬಾಯ್ ಹೇಳಿ, ನಾನು ಕೊಟ್ಟಿದ್ದ ಅದೇ ಇಷ್ಟಗಲ ಮುಗುಳ್ನಗುವನ್ನು ನನಗೇ ಮರಳಿಸಿ ಇಳಿದು ಹೋದಳು. ಮನಸ್ಸು ಆ ಭಿಕ್ಷುಕಿಯೊಡನೆ ಇವಳನ್ನು ಹೋಲಿಸುತಿತ್ತು. ಹಿಂದೆಯೇ ಗುದ್ದಿಕೊಂಡು ಆ ಹೆಣ್ಣಿನ ನೆನಪು ಬಂದಿತ್ತು.
ಮೊದಲು ನಾನು ನೋಡಿದ್ದು ಅವಳ ಗಂಡನನ್ನು. ಅವಳು ಅವನನ್ನ ಬಿಟ್ಟು ಹೋಗಿದ್ದಳು. ಅವನನ್ನಷ್ಟೇ ಅಲ್ಲ ಅವಳ ಎರಡು ಮಕ್ಕಳನ್ನೂ ಬಿಟ್ಟು ಹೋಗಿದ್ದಲ್ಲದೇ ಅವಳ ಗಂಡನಿಂದ ಜೀವನಾಂಶ ಕೋರಿ ಕೋರ್ಟಿನಲ್ಲಿ ಕೇಸೊಂದನ್ನು ಹಾಕಿದ್ದಳು. ಆ ಮನುಷ್ಯನನ್ನು ನೋಡಿದಾಗ ನನಗೆ ಎಲ್ಲಿಲ್ಲದ ಕೋಪ ಬಂದಿತ್ತು. ಇರೋ ಎರಡು ಮಕ್ಕಳನ್ನು ಬಿಟ್ಟು ಹೋಗಬೇಕೆಂದರೆ ಅದಿನ್ನೆಂತಾ ಹಿಂಸೆ ಕೊಟ್ಟಿರಬೇಕು ಈ ಪ್ರಾಣಿ ಅಂತ ಬೈದುಕೊಂಡಿದ್ದೆ. ಬರೋ ಸಂಬಳ ಮಕ್ಕಳ ಊಟಕ್ಕೆ, ಸ್ಕೂಲ್ fee ಸಾಲೋಲ್ಲ ಸಾರ್ ಜೀವನಾಂಶ ಅಂದ್ರೆ ತೊಂದರೆಯಗುತ್ತೆ ಹೇಗಾದ್ರೂ ರಾಜಿ ಮಾಡ್ಸಿ ಸಾರ್ ಅಂತ ಲಾಯರನ್ನ ಅಂಗಲಾಚುತ್ತಿದ್ದ. ರಾಜಿಗೆ ಅಂತ ಕರೆಸಿದಾಗ ನೋಡಿದ್ದೆ ಅವಳನ್ನು, ಆಗ್ಲೇ ನನಗೆ ಗೊತ್ತಾಗಿದ್ದು ಅವಳು ಇನ್ನೊಬ್ಬ ಗಂಡಿನೊಂದಿಗೆ ಸಂಸಾರ ಮಾಡುತ್ತಿದ್ದಾಳೆಂದು. ಬೆಳೆಯುತ್ತಿರುವ ಇಬ್ಬರು ಮಕ್ಕಳನ್ನು, ಅಷ್ಟು ವರ್ಷ ಸಂಸಾರ ಮಾಡಿದ್ದ ಗಂಡನನ್ನು ಬಿಟ್ಟು ಇನ್ನೊಬ್ಬ ಗಂಡಿನೊಂದಿಗೆ ಹೋಗಿದ್ದು ತಪ್ಪೋ ಸರಿಯೋ ಗೊತ್ತಿಲ್ಲ. ಆದರೆ ಅವಳಲ್ಲಿ ಒಂದಿಷ್ಟೂ ಪಶ್ಚಾತಾಪವಿರಲಿಲ್ಲ! ಗಂಡ ಬೈದಿದ್ದು, ಅವನು ಹೊಡೆದಿದ್ದರ ಬಗ್ಗೆ ಸಾಲು ಸಾಲಾಗಿ ವರದಿಯೊಪ್ಪಿಸಿ ಬೈತಿದ್ದವಳು, ಮಕ್ಕಳ ವಿಷಯ ಬಂದಾಗ, ಅವನೇ ಹುಟ್ಟಿಸಿದ್ದಲ್ಲವೇ ಸಾಕಲೀ ಬೇಕಾದ್ರೆ ಅಂದಿದ್ದಳು. ತೀರಾ ಹಳ್ಳಿಯವಳಾದ, ಅದರಲ್ಲೂ ಹೆಣ್ಣಾದ ಆಕೆಯಲ್ಲಿ ಅಷ್ಟು ಕ್ರೌರ್ಯವಿರಲು ಹೇಗೆ ಸಾಧ್ಯ? ನನ್ನ ಮನಸ್ಸು ಒಪ್ಪಿಕೊಳ್ಳಲು ತಯಾರಿರಲಿಲ್ಲ ಆದರೆ ವಾಸ್ತವ ಕಣ್ಣಿಗೆ ರಾಚುತ್ತಿತ್ತು.
ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ವಿಷಯದಲ್ಲಿ ಎಂಜಿನಿಯರಿಂಗ್ ಮುಗಿಸಿ, ಸಾಫ್ಟ್ ವೇರ್ ಎಂಜಿನಿಯರ್ ಆಗಿ ಮೂರು ವರ್ಷದಿಂದ ಕೆಲಸ ಮಾಡುತ್ತಿದ್ದ ರಚನ, ಹೆರಿಗೆಗಾಗಿ ಮೂರು ತಿಂಗಳಷ್ಟೇ ರಜ ಹಾಕಿ ತೀರ ಎರಡು ತಿಂಗಳ ಮಗುವನ್ನು ಮನೇಲಿ ಬಿಟ್ಟು ಅರ್ಧ ದಿನ ಆಫೀಸಿಗೆ ಹೋಗಿಬರಲೇ ಬೇಕಾದ ಅನಿವಾರ್ಯತೆ, ಅವಳ ಮುಖದಲ್ಲಿ ಮಗುವಿನ ಬಗ್ಗೆ ಇದ್ದ ಪ್ರೀತಿ, ಕಾಳಜಿ, ಆತಂಕ, ಅವಳ ಕೆಲಸ ಬಿಡಲಾರದ ಪರಿಸ್ಥಿತಿ, ನಾಲ್ಕು ತಿಂಗಳಿಂದ ಅದನ್ನು ನಿಭಾಯಿಸುತ್ತಿದ್ದ ಅವಳ ಬುದ್ದಿವಂತಿಕೆ, ಬಸ್ಸಿನಲ್ಲಿ ಅವಳೊಡನೆ ಮಾತಾಡಲು ಸಿಕ್ಕ ಇಪ್ಪತ್ತು ನಿಮಿಷಕ್ಕೇ ಅವಳ ಬಗ್ಗೆ ಆರಾಧನಾ ಭಾವವನ್ನು ಮೂಡಿಸಿತ್ತು. ಗಂಡ ಹೇಗಿದ್ದರೂ ಅವನು ಗಂಡನೆಂಬ ಒಂದೇ ಕಾರಣಕ್ಕೆ ಜೀವಮಾನವಿಡೀ ಸಣ್ಣ ಬಿಕ್ಕಳಿಕೆಯೊಂದಿಗೇ ಬದುಕಿಬಿಡುವ ಎಷ್ಟೋ ಜನ ಹೆಣ್ಣುಮಕ್ಕಳ ಮಧ್ಯೆ, ಇಬ್ಬರು ಮಕ್ಕಳಿದ್ದುಕೊಂಡು ಗಂಡನನ್ನು ಬಿಟ್ಟು ಬೇರೆ ಗಂಡಿನೊಂದಿಗೆ ಹೋಗಿದ್ದಲ್ಲದೆ, ಅವನು ಕಿರುಕುಳ ನೀಡುತ್ತಿದ್ದ ಎಂದು domestic violence act ಕೆಳಗೆ ಜೀವನಾಂಶ ಕೇಳಿ ಕೇಸು ಬರೆಸಿದ್ದ ಆ ಹೆಣ್ಣು ಅದೇಕೋ ನನ್ನ ದೃಷ್ಠಿಯಲ್ಲಿ ದುಡ್ಡಿಗಾಗಿ ಮಗುವನ್ನಿಟ್ಟುಕೊಂಡು ಭಿಕ್ಷೆಬೇಡುತ್ತಿದ್ದ ಆ ಭಿಕ್ಷುಕಿಗಿಂತ ಕೀಳಾಗಿ ಹೋಗಿದ್ದಳು. “ಮನೆ ಮನೆಯಲಿ ದೀಪ ಉರಿಸಿ, ಹೊತ್ತು ಹೊತ್ತಿಗೆ ಅನ್ನ ಉಣಿಸಿ, ತಂದೆ ಮಗುವ ತಬ್ಬಿದಾಕೆ, ನಿನಗೆ ಬೇರೆ ಹೆಸರು ಬೇಕೆ… ಸ್ತ್ರೀ ಅಂದರೆ ಅಷ್ಟೇ ಸಾಕೆ?” ಬಸ್ಸಿನ ರೇಡಿಯೋದಲ್ಲಿ ಬರುತ್ತಿದ್ದ ಹಾಡು ನನ್ನನ್ನು ಅಣಕಿಸುತ್ತಿತ್ತು.
ಹೇಮಾಂತರಂಗ: ಹುಡುಗೀರ್ಯಾಕೆ ಹೀಗೆ?
Posted ಸೆಪ್ಟೆಂಬರ್ 30, 2008
on:- In: ಹೇಮಾಂತರಂಗ
- 4 Comments
– ಹೇಮಾ ಪವಾರ್, ಬೆಂಗಳೂರು
“ಅಲ್ಲವೇ ನೋಡಿದ್ರೇನೆ ಗೊತ್ತಾಗುತ್ತೆ ಜೊಲ್ಲು ಅಂತ ಅದು ಹೇಗೆ ಮಾತಾಡ್ತೀಯಾ ಅವನ ಜೊತೆ ? ಅದೇನು ಅಷ್ಟೊಂದು ಹಲ್ಲು ಗಿಂಜತಾನೆ? irritate ಆಗಲ್ವಾ ನಿಂಗೆ?” ಅಂದೆ.
“ಯಾಕಾಗಬೇಕು? ” ತಣ್ಣಗೆ ಅಂದಳವಳು.
“He is a flirt !!” ತುಸು ಜೋರಾಗೇ ಅಂದೇ ನಾನು.
“ಛೇ! ನಿನಗೆ ಗೊತ್ತಿಲ್ವೇ ಅವ್ನು ಫ್ಲರ್ಟ್ ಅಲ್ಲ. ಅವ್ನಿಗೆ ಹುಡುಗಿಯರ ಶೋಕಿ ಇದೆ
ಅಷ್ಟೇ. ಫ್ಲರ್ಟ್ ಮಾಡೋ ಕ್ವಾಲಿಟೀಸ್ ಇಲ್ಲ!!!”
“ಫ್ಲರ್ಟ್ ಮಾಡೋಕೂ ಕ್ವಾಲಿಟೀಸ್ ಬೇಕಾ?” ಇಷ್ಟಗಲ ಬಾಯಿ ತೆರೆದು ಕೇಳಿದೆ ನಾನು.
“ಬೇಡ್ವ ಮತ್ತೆ? ಅದೂ ಒಂದು ಕಲೆ. ಈಗ ನೋಡು ನನಗೆ ಲೆಕ್ಕ ಹಾಕಿದಂಗೆ 33 ಜನ boy
friends ಇದಾರೆ. ಅವರನ್ನೆಲ್ಲ ಮ್ಯಾನೇಜ್ ಮಾಡೋದು ಸುಮ್ನೇ ಅಂದುಕೊಂಡ? ಒಬ್ಬನ
ಜೊತೆಲಿದ್ದಾಗ ಇನ್ನೊಬ್ಬನ ಕಾಲ್ ಬಂದ್ರೆ ಏನು ಮಾಡಬೇಕು? ಎದುರಿಗೆ ಸಿಕ್ಕಿಬಿಟ್ಟರೆ
ಹೇಗೆ ತಪ್ಪಿಸ್‌ಕೋಬೇಕು ಅನ್ನೋದು ಎಲ್ಲರಿಗೂ ಬರೋಲ್ಲ.”
“ಇಷ್ಟಕ್ಕೂ ಅಷ್ಟೊಂದು ಹುಡುಗರ ಅವಶ್ಯಕತೆ ಏನಿದೆ ನಿನಗೆ? ಯಾವನಾದ್ರೂ ಒಬ್ಬನ ಜೊತೆ
ಇರಬಾರದ permanent ಆಗಿ?”
“ಹ್ಹೆ ಹ್ಹೆ bore ಆಗಲ್ಲವೇನೆ!! ನನಗೆ ಇದೆಲ್ಲ ಇಷ್ಟ! I enjoy flirting!!” ಅಂತ
ಕಣ್ಣು ಹೊಡೆದಳು.
ಅಷ್ಟೊತ್ತಿಗಾಗಲೆ ಅವಳ ಫೋನು ಕುಣೀತೂ. ಆ ಕಡೆಯಿಂದ ಯಾರೋ ಹುಡುಗ. “ಇನ್ನೈದು ನಿಮಿಷ ಹನೀ ಅಲ್ಲಿರ್ತೀನಿ.” ಅಂದವಳೇ ನನ್ನ ಕಡೆ ತಿರುಗಿ, “ನಾನು ಬರ್ತೀನೆ ನನ್ನ boy
friend ಕಾಯ್ತಿದಾನೇ ಬೈ.” ಅಂದಳು.
“ಇವನೆಷ್ಟನೇಯವನೆ?” ಅಂದ ತಮಾಷೆಗೆ ನಾನು.
“34th ಕಣೇ!! ಹೊಸಬಾ ಪಾಪ” ಅಂದ್ಲು.
ಅವಳ ಮಾತಿನಿಂದ ಸಾವರಿಸಿ ಕೊಳ್ಳುವಷ್ತರಲ್ಲಿ ಅವಳಾಗಲೇ ಹೊರಗಾರಿದ್ದಳು.
ಎಂಥಾ ಹುಡುಗಿ! ಯೋಚಿಸುತ್ತಿದ್ದೆ.
***
ಮನೆ ಮುಂದೇನೆ ಅವನ ಮನೆ ಕಣೇ, ನಾನು ಓಡಾಡುವಾಗ ನನ್ನೇ ನೋಡೋನು. ಹುಡುಗರು ಅಂದ್ರೇನೆ ಒಂದು ಮಾರು ದೂರ ಓಡ್ತಿದ್ದೋಳು, ಅದು ಹೇಗೆ ಅವನನ್ನ ಮಾತಾಡಿಸ್ದೆ ಅಂತ ಈಗ್ಲೂ ಅನುಮಾನ ನಂಗೆ. ವಿಪರೀತ ಇಷ್ಟ ಆಗೋಗ್ಬಿಟ್ಟಿದ್ದಾನೆ. ಸ್ಲೋಕ್ ಮಾಡ್ತಿದ್ದನಂತೆ ಗೊತ್ತಾ? ಈಗ ಬಿಟ್ಬಿಟ್ಟಿದ್ದಾನೆ, ನಂಗೋಸ್ಕರ ಅಂತ ಖುಶಿಯಿಂದ ಅವಳು ಹೇಳಿಕೊಳ್ತಿದ್ಲು. ಹುಷಾರು ಕಣೇ ಇನ್ಯಾರೋ ಸಿಕ್ರು ಅಂತ ನಿನ್ನ ಬಿಟ್ಟು ಬಿಟ್ಟಾನು ಅಂದೆ. ನನ್ನ ಮಾತು ಅವಳಿಗೆ ಇಷ್ಟವಾಗಲಿಲ್ಲ. ಸುಮ್ನಿರೆ! ನಿಂಗೆ ಯಾವಾಗ್ಲೂ ತಮಾಷೇನೇ ಅಂದು ಕೆನ್ನೆ ತಿವಿದಳು.
ಅದಾದ ಮೇಲೆ ತುಂಬಾ ದಿನಗಳವರೆಗೆ ಆಕೆ ನನಗೆ ಸಿಕ್ಕಲಿಲ್ಲ. ಒಂದು ದಿನ ಇದ್ದಕ್ಕಿದ್ದಂತೆ ಮನೆಗೆ ಬಂದವಳು ತುಂಬಾ ಬೇಜಾರಲ್ಲಿದ್ದಂತೆ ಕಂಡಳು. ಯಾಕೆ ರಾಣಿ ಮಂಕಾಗಿದ್ದೀಯ ಅಂದೆ. ಒಂದು ವಾರ ಆಯ್ತು ಕಣೇ ಅವ್ನ ಮಾತಾಡ್ಸಿ ಅಂದವಳೇ ಅಳೋಕೆ ಶುರು ಮಾಡಿದ್ಲು. ಇದೊಳ್ಳೆ ಕತೆಯಾಯ್ತು,
ಅನ್ಕೊಂಡು ಸಮಾಧಾನ ಮಾಡಿ, ಏನಾಯ್ತೇ ಅಂತ ಕೇಳೋಷ್ಟರಲ್ಲಿ ಅವಳೇ ಹೇಳಿದಳು, ‘ಮೊದಮೊದಲು ತುಂಬಾ ಕೇರ್ ಮಾಡ್ತಿದ್ದ ಕಣೇ. ಸಿಗರೇಟು ಬಿಟ್ಟಿದ್ದ, ಅಪರೂಪಕ್ಕೆ ಫ್ರೆಂಡ್ಸ್ ಜೊತೆ ಸೇರಿ ಕುಡೀತಿದ್ನಂತೆ, ಅದೂ ಬಿಟ್ಟಿದೀನಿ ಅಂದ. ‘ನಾವು ವೆಜಿಟೇರಿಯನ್ಸ್ ಅಲ್ಲ, ಬೇಕಾದ್ರೆ ನಿಮ್ಮ ಜಾತಿಗೆ ಕನ್ವರ್ಟ್ ಆಗ್ತೀನಿ. ಇನ್ಮೇಲೆ ನಾನ್ ವೆಜ್ಜೂ ತಿನ್ನಲ್ಲ’ ಅಂತ ಪ್ರಾಮಿಸ್ ಮಾಡಿದ್ದ. ಆದ್ರೆ ಒಂದು ವಾರದ ಹಿಂದೆ ಮೂರ್ನಾಲ್ಕು ದಿನ ಫೋನ್ ಮಾಡಿದ್ರೂ ಸರೀಗೆ ಮಾತಾಡಿಸ್ಲಿಲ್ಲ. ಕೆಲ್ಸ ಇದೆ ಆಮೇಲೆ ಮಾಡ್ತೀನಿ ಅನ್ನೋನು, ಮತ್ತೆ ಮಾಡ್ತಲೇ ಇರ್ಲಿಲ್ಲ. ಮೊನ್ನೆ ಅವನ ಫ್ರೆಂಡ್ ಒಬ್ಬ ಸಿಕ್ಕಿದ್ದ. ಅವ್ನು ಹೇಳ್ದ, ಹೋದ ವಾರ ಮನೆಗೆ ಕುಡಿದು ಹೋಗಿದ್ನಂತೆ! ಅವ್ರಪ್ಪ ಅವ್ನಿಗೆ, ಅವ್ನ ಫ್ರೆಂಡ್ಸಿಗೆ ಬೈಯ್ದ್ರಂತೆ. ನಂಗೆ ಮೋಸ ಮಾಡ್ಬಿಟ್ಟ ಕಣೇ” ಎನ್ನುತ್ತಾ ಮತ್ತೆ ಬಿಕ್ಕಿದಳು.
ಆತ ಮೋಸ ಮಾಡೋಕೆ ಮುಂಚೆ ನೀನೇ ಮೋಸ ಹೋಗ್ಬಿಟ್ಟಿದ್ದ್ ಎಹುಡುಗಿ ಅನ್ನೋಣ ಅಂದ್ಕೊಂಡೆ, ಅವಳಿಗೆ ಹರ್ಟ್ ಆಗುತ್ತೇನೋ ಅನ್ನಿಸಿ ಸುಮ್ಮನಾದೆ. “ಸರಿ ಈಗೇನ್ಮಾಡ್ತೀಯಾ ಅಂದೆ. ಗೊತ್ತಿಲ್ಲ ಅಂದ್ಲು. ನಾನು ಹೇಳೋದು ಕೇಳು. ಅವನನ್ನ ಮರೆತು ಬಿಡು. ಇಷ್ಟಕ್ಕೆ ಗೊತ್ತಾಗಿದ್ದು ಒಳ್ಳೇದಾಯ್ತು ಅಂತ ಸುಮ್ಮನಿದ್ದು ಬಿಡು. ನಿನ್ನ ಪ್ರೀತಿಸೋ ಯೋಗ್ಯತೆ ಅವನಿಗಿಲ್ಲ. ಅವನನ್ನ ನೆನೆಸಿಕೊಂಡು ಏನು ಅಳ್ತೀ, ಅವ್ನೊಬ್ಬ ಅಯೋಗ್ಯ. ನೀನು ಏನೋ ಆದೋಳ ಥರ ಕೊರಗಬೇಡ, ಆರಾಮಾಗಿರು” ಅಂತ ಬುದ್ಧಿ ಹೇಳಿದೆ. ನೀನು ಹೇಳೋದು ಸರಿ ಕಣೇ.. ಅಂತಂದು ಹೊರಟ್ಳು. ಹುಡುಗೀರು ಎಷ್ಟು ವಿಚಿತ್ರ ಅಲ್ವಾ, ಯೋಚಿಸುತ್ತಿದ್ದೆ.
***
ಅವಳದು ಪಕ್ಕಾ ಅರೇಂಜ್ಡ್ ಮ್ಯಾರೇಜ್. ಹೀಗೆ ಒಂದಿನ ಸಿಕ್ಕಿದ್ಲು. “ಹೇಮಾ, ನಿಂಗೆ ಯಾವುದಾದ್ರೂ ಪಿ.ಜಿ ಹೌಸ್ ಗೊತ್ತೇನೆ, ಗೊತ್ತಿದ್ರೆ ಹೇಳೆ. ನನಗೆ ನನ್ನ ಗಂಡನ ಜೊತೆಗೆ ಇರೋಕೆ ಆಗ್ತಾ ಇಲ್ಲ. ಎಲ್ಲಾದ್ರೂ ಪೇಯಿಂಗ್ ಗೆಸ್ಟ್ ಆಗಿದ್ದು ಬಿಡ್ತೀನಿ” ಅಂದ್ಲು! “ಅದ್ಯಾಕೆ ಅಕ್ಕ! ಮದುವೆಯಾಗಿ ನಾಲ್ಕು ವರ್ಷಕ್ಕೆ ಗಂಡ ಬೇಜಾರಾದ್ನೇ?” ಅಂದೆ. “ಗಂಡ ಅಲ್ವೇ, ಬದುಕೇ ಬೇಜಾರು, ಸತ್ತೋಗಣ ಅನ್ನಿಸತ್ತೆ!” ಅಂದವಳ ಕಣ್ಣಂಚಲ್ಲಿ ನೀರಿತ್ತು.
“ಛೇ! ತಮಾಷೆಗಂದೆ ಕಣೇ. ಯಾಕಷ್ಟು ಬೇಜಾರಾಗಿದ್ದೀಯ? ಏನಾಯ್ತು?”
“ದಿನಾ ಜಗಳ ಕಣೇ. ಕೆಲಸಕ್ಕೆ ಸೇರೋವಾಗ ಇವ್ರನ್ನ ಕೇಳೇ ಸೇರಿದ್ದೀನಿ. ಕೆಲಸ ಮುಗಿಸಿ ಮನೆಗೆ ಬಂದ ಮೇಲೆ ಆಫೀಸಿನಿಂದ ಒಂದು ಫೋನು ಬರೋ ಹಾಗಿಲ್ಲ. ಯಾರದು, ಯಾರವನು, ನಿಂಗೇ ಯಾಕೆ ಫೋನ್ ಮಾಡ್ದ, ಆಫೀಸಿನಲ್ಲಿ ಬೇರೆ ಯಾರೂ ಇಲ್ವಾ, ನೀನೊಬ್ಳೇ ಕೆಲಸ ಮಾಡೋದೇನು ಅಂತೆಲ್ಲಾ ಕೇಳ್ತಾನೆ. ಮನೆಗೆ ಬರೋದು ಒಂಚೂರು ಲೇಟ್ ಆಗೋ ಹಾಗಿಲ್ಲ. ಯಾವನ ಜೊತೆ ಊರು ಸುತ್ತಿ ಬರ್ತಿದ್ದೀಯ ಅಂತಾನೆ. ಪ್ರತಿ ನಿಮಿಷಾನೂ ನಾನೇನು ಮಾಡ್ಲಿಲ್ಲ, ನಿಮ್ಮಾಣೆ, ನನ್ನಾಣೆ ಅಂತ ಜಸ್ಟಿಫೈ ಮಾಡಿಕೊಂಡೇ ಬದುಕಬೇಕು. ಮೊನ್ನೆ ಜಗಳ ಆಡಿದಾಗ ಕೋಪ ಬಂದು ಅವನ ಹಣೆಗೆ ಹೊಡೆದು ಬಿಟ್ಟೆ. ಚೂರು ರಕ್ತ ಬಂತು. ನನ್ನ ಸಾಯಿಸಿ ಇನ್ನೊಬ್ಬನ ಜೊತೆ ಓಡೋಗ್ಬೇಕು ಅಂತಿದೀಯ ಅಂತಾನೆ ಕಣೇ. ಹೇಗಿರ್ಲಿ ಹೇಳು ಇಂತಹ ಮನುಷ್ಯನ ಜೊತೆ? ಹಾಳಾದ ಕೆಲಸ ಬಿಟ್ಟುಬಿಡೋಣ ಅಂದ್ರೆ ಇವನು ತರೋ ಸಂಬಳ ಊಟಕ್ಕೇ ಸಾಲ್ದು. ಇಷ್ಟು ಓದಿ, ಇಷ್ಟು ದಿನ ಕಂಫರ್ಟಬಲ್ ಆಗಿರೋ ಕೆಲ್ಸಾನ ಬಿಟ್ಬಿಡೋದಾದ್ರೂ ಹೇಗೆ ಹೇಳು? ಜೀವನಾನೆ ಬೇಜಾರಾಗ್ಬಿಟ್ಟಿದೆ ಕಣೇ”
“ನೋಡೇ, ನನಗೆ ಗೊತ್ತಿರೋ ಹಾಗೆ ನಿನ್ನ ಗಂಡನಿಗಿಂತ ಜಾಸ್ತಿ ದುಡೀತೀಯ ನೀನು. ದಿನಾ ಜಗಳ ಆಡಿಕೊಂಡು ನೆಮ್ಮದಿ ಇಲ್ದೇ ಅವನ ಜೊತೇನೇ ಯಾಕಿದೀಯಾ? ಡಿವೋರ್ಸ್ ಮಾಡಿಬಿಡು. ಒಬ್ಬಳೇ ಬದುಕೋದು ಅಷ್ಟು ಕಷ್ಟವೇನಲ್ಲ. ನೀನು ಈಗಿರೋದಕ್ಕಿಂತ ನೂರು ಪಾಲು ಚೆನ್ನಾಗಿರಬಹುದು”, ವಿವರಿಸಿ ಹೇಳಿದೆ.
“ನೀನು ಹೇಳೋದು ಸರಿ ಕಣೇ. ಆದ್ರೆ ಜನ ಏನನ್ನಲ್ಲ, ಗಂಡನ್ನ ಬಿಟ್ಟು ಬಂದ್ರೆ ಮರ್ಯಾದೆ ಇರುತ್ತಾ?” ಆತಂಕದಿಂದ ಕೇಳಿದಳು.
“ಅನ್ನೋ ಜನ ಬಂದು ನಿನ್ನ ಗಂಡನ ಕೈಲಿ ಬೈಸಿಕೊಳ್ಳೋದಿಲ್ಲ. ಅನುಭವಿಸ್ತಾ ಇರೋಳು ನೀನು, ನೋಡೋ ಜನ ಅನ್ಲಿ, ಅವ್ರಿಗೆಲ್ಲಾ ಕೇರ್ ಮಾಡಿದ್ರೆ ಬದುಕ್ಲಿಕ್ಕೆ ಆಗುತ್ತಾ? ಯೋಚನೆ ಮಾಡು.” ಯೋಚನೆ ಮಾಡುತ್ತಿರುವವಳಂತೆ ಕಂಡಳು. ಅವಳನ್ನು ಯೋಚಿಸಲು ಬಿಟ್ಟು ನಾನು ಹೊರನಡೆದೆ.
***
ಅವಳು ಆಫೀಸಿನೋರಿಗೆ ಸ್ವೀಟ್ಸ್ ಹಂಚುತ್ತಿದ್ದಳು. ಏನು ವಿಶೇಷ ಅಂತ ವಿಚಾರಿಸಿದ್ದಕ್ಕೆ, ನನ್ನ ಮದುವೆ ಫಿಕ್ಸ್ ಆಯ್ತು ಕಣೇ! ನನ್ನಪ್ಪನ ಫ್ರೆಂಡ್ ಮಗನ ಜೊತೆ. ಇನ್ನೆರಡು ತಿಂಗಳಿಗೆ ಮದುವೆ! ಅಂತ ನಾಚಿಕೊಂಡಳು. “ಅಲ್ಲಾ!! ನಿನ್ನ ಬಾಯ್ ಫ್ರೆಂಡ್‌ಗಳ ಗತಿಯೇನೆ? ೩೪ ಹೃದಯಗಳೂ ಒಂದೇ ಸಲ ಚೂರಾಗಿ ಹೋಗ್ತವಲ್ಲೇ?!” ಅಂದೆ. “ಹೇ, ನಾನೀಗ ಅದನ್ನೆಲ್ಲಾ ಬಿಟ್ಬಿಟ್ಟಿದ್ದೀನಮ್ಮ. ಐ ಆಮ್ ಎ ಗುಡ್ ಗರ್ಲ್ ನೌ ಅಂದ್ಲು.” ಇವ್ಳು ಸಿಕ್ಕಾಗಲೆಲ್ಲಾ ಸರ್‌ಪ್ರೈಸ್ ಕೊಡ್ತಾಳೆ ಅನ್ಕೊಂಡೆ.
***
ಇವಳು ಸಿಕ್ಕು ತುಂಬಾ ದಿನವಾಗಿತ್ತು. ಅಂದು ಅಕಸ್ಮಾತ್ ದಾರಿಯಲ್ಲಿ ಸಿಕ್ಕಿದಳು. ನನ್ನನ್ನು ನೋಡಿಯೂ ನೋಡದಂತೆ ಹೋಗುತ್ತಿದ್ದಾಳೆನಿಸಿತು. ನಾನೇ ಕೂಗಿ ಕರೆದೆ. ಹೇಗಿದ್ದೀಯೇ ಅಂದೆ. ‘‘ಚೆನ್ನಾಗಿದಿದೀನೆ, ನಾನು ಬೇಗ ಹೋಗ್ಬೇಕು ಲೇಟ್ ಆಗ್ತಿದೆ. ಅವನು ಕಾಯ್ತಿರ್ತಾನೆ’’ ಅಂದ್ಲು. ‘‘ಅರೆ ನಿನ್ನ! ನೀನಿನ್ನು ಅವ್ನನ್ನ ಬಿಟ್ಟಿಲ್ವೇನೆ?”, “ಇಲೇ, ಅವತ್ತು ನಿನ್ನ ಜೊತೆ ಮಾತಾಡಿ ಬಂದ್ನಲ್ಲ, ಆ ರಾತ್ರಿ ಅವ್ನಿಗೆ ಫೋನ್ ಮಾಡಿದ್ದೆ. ಒಂದು ವಾರದಿಂದ ಮಾತಾಡಿರ್ಲಿಲ್ಲ. ಚೂರು ಮೆತ್ತಗಾಗಿದ್ದ. ಸಾರಿ ಕೇಳ್ದ. ಇನ್ಮೇಲೆ ಹಿಂಗೆ ಮಾಡಲ್ಲ ಅಂದ. ಪಾಪ ಅನ್ನಿಸ್ತು. ಹೇಗೆ ಬಿಟ್ಟು ಬಿಡೋದಕ್ಕೆ ಆಗುತ್ತೆ ಹೇಳು?” ಅಂತಂದು ನಕ್ಕಳು. ನಾನು ಏನಾದ್ರೂ ಹೇಳ್ತಿದ್ದೆನೇನೋ, ಆದ್ರೆ ಅದು ಅವಳ ತಲೆಗೆ ಹೋಗೋ ಲಕ್ಷಣ ಕಾಣಲಿಲ್ಲ ಸುಮ್ಮನಾದೆ.
***
“ಏನು ಯೋಚನೆ ಮಾಡ್ದೆ?” ಕೇಳಿದೆ. “ಯಾವ ವಿಷಯ ಕೇಳ್ತಿದ್ದೀಯ?” ಅಂದ್ಲು. “ಅಲ್ವೇ ಅವತ್ತು ಜಗಳ ಆಗಿದೆ, ಗಂಡನ ಜೊತೆ ಇರಕ್ಕಾಗಲ್ಲ. ಪಿ.ಜಿ ಹೌಸ್ ನೋಡು ಅಂದ್ಯಲ್ಲೇ, ನಮ್ಮನೆ ಹತ್ರಾನೆ ಒಂದಿದೆ, ನೋಡ್ಕಂಡು ಬರಾಣ ಅಂತ ಕೇಳಿದ್ದು.” ಆಕೆಗೆ ನೆನಪಾದಂತಾಯ್ತು, “ಅಯ್ಯೋ ಆ ವಿಷಯಾನಾ! ನನಗೆ ಮರೆತೇ ಹೋಗಿತ್ತು. ಇಲ್ವೇ, ನಮ್ಮೆಜಮಾನ್ರು ಈಗ ಪರ್ವಾಗಿಲ್ಲ. ನಾನೇ ಮನೆಗೆ ಹೋದ ಮೇಲೆ ಫೋನ್ ಸ್ವಿಚ್ ಆಫ್ ಮಾಡ್ಬಿಡ್ತೀನಿ. ಸಂಸಾರ ಅಂದಮೇಲೆ ಅಷ್ಟು ಹೊಂದಿಕೊಂಡು ಹೋಗದಿದ್ರೆ ಹ್ಯಾಗೆ ಹೇಳೂ?” ತೀರ ಆಘಾತವೇನು ಆಗಲಿಲ್ಲ ನನಗೆ. ಅವಳಿಂದ ಈ ಉತ್ತರಾನ ನಿರೀಕ್ಷಿಸಿದ್ದೆ. ನಕ್ಕು ಸುಮ್ಮನಾದೆ. ಹೆಣ್ಣೆಂದ ಮಾತ್ರಕ್ಕೆ ಎಲ್ಲಾನೂ ಸಹಿಸಿಕೊಳ್ಳಬೇಕು ಅಂತ ಏನಿಲ್ಲ. ತಾನು ಹೆಣ್ಣು ಎಂಬ ಕಾರಣಕ್ಕೆ ಎಲ್ಲವನ್ನೂ ಸಹಿಸಲು ಅವಳೇ ಸಿದ್ದಳಾಗಿ ಬಿಡ್ತಾಳೆ. ಯಾಕೋ ಇವಳನ್ನು ನೋಡಿ ಹಾಗನ್ನಿಸಿತು.
ಹೆಣ್ಣು ಚಂಚಲೆಯಾ, ಫ್ಲರ್ಟಾ, ಎಮೋಶನಲ್ಲಾ, ಮೋಸಗಾರಳಾ, ಕಷ್ಟ ಸಹಿಷ್ಣುವಾ, ಏನೋ ಹೆಣ್ಣಾದ ನನಗೂ ಅರ್ಥವಾಗಲೇ ಇಲ್ಲ. ಆದರೆ ಇವರೆಲ್ಲಾ ಬದಲಾಗೇ ಬಿಡ್ತಾರೆ ಅಂತ ನಂಬಿದ್ದ ನಾನು ಮಾತ್ರ ಮೂರ್ಖಳೆಂದು ಎದೆತಟ್ಟಿ ಹೇಳಿಕೊಳ್ಳಬಲ್ಲೆ!
ಇತ್ತೀಚಿನ ಟಿಪ್ಪಣಿಗಳು