ಕಲರವ

Posts Tagged ‘ಸುದ್ದಿ

book review copy.jpg

ಸಮಾಜದ ಯಾವುದೇ ವ್ಯಕ್ತಿಯನ್ನು ಪ್ರಶ್ನಿಸುವ ಹಕ್ಕು ಹೊಂದಿರುವುದಾಗಿ ಬೀಗುತ್ತಿದ್ದ ಸುದ್ದಿ ಮಾಧ್ಯಮಗಳು ಈಗ ತಾವೇ ಪ್ರಶ್ನೆಗೊಳಗಾಗುವಂತೆ ನಡೆದುಕೊಳ್ಳುತ್ತಿವೆ. ಸಮಾಜದ ಆಗುಹೋಗುಗಳ ಮೇಲೆ ನಿಗಾ ಇಡಬೇಕಾದ ಪತ್ರಕರ್ತರು ಜನರ ವಿಮರ್ಶೆಯ ಎಕ್ಸ್ ರೇ ಕಿರಣಗಳನ್ನು ಹಾಯಬೇಕಾದ ಪರಿಸ್ಥಿತಿ ಬಂದೊದಗಿದೆ. ಬದಲಾಗುತ್ತಿರುವ ಸಮಾಜದ ಸ್ಥಿತಿಗತಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗದೆ ಮಾಧ್ಯಮ ಜಗತ್ತು ಎಡವಿ ತಡವಿಕೊಂಡು ಹೆಜ್ಜೆ ಹಾಕುತ್ತಿದೆ. ಕುರುಡು ಅನುಕರಣೆಯಿಂದಾಗಿ ಅನೇಕಾನೇಕ ಅಧ್ವಾನಗಳನ್ನು ಸೃಷ್ಟಿಸಿಕೊಳ್ಳುತ್ತಿದೆ. ಪ್ರಜಾಪ್ರಭುತ್ವದ ಕಾವಲು ನಾಯಿಯ ನಿಯತ್ತಿನ ಮೇಲೆಯೇ ಸಂಶಯದ ತೂಗು ಕತ್ತಿ ನೇತಾಡುತ್ತಿದೆ. ಈ ಸಂದರ್ಭದಲ್ಲಿ ಡಿ.ವಿ.ಜಿಯವರು ಸುಮಾರು ಎಂಭತ್ತು ವರ್ಷಗಳ ಹಿಂದೆ ಪತ್ರಿಕೆಗಳ ಬಗೆಗೆ ದಾಖಲಿಸಿದ ವಿಚಾರಗಳ ಸಂಗ್ರಹದ ಪುಸ್ತಕ ‘ವೃತ್ತ ಪತ್ರಿಕೆಗಳು’ ತೀರಾ ಮಹತ್ವದ್ದಾಗಿ ಕಾಣುತ್ತದೆ.

ಪುಸ್ತಕ: ವೃತ್ತ ಪತ್ರಿಕೆಗಳು ಅವುಗಳ ಚರಿತ್ರೆ ಕರ್ತವ್ಯ ಅಪೇಕ್ಷೆ ಸ್ವಾತಂತ್ರ್ಯಗಳು
ಲೇಖಕರು: ಡಿ.ವಿ.ಗುಂಡಪ್ಪ
ಪ್ರಕಾಶಕರು: ಕರ್ನಾಟಕ ಪ್ರಕಟನಾಲಯ, ಬೆಂಗಳೂರು
ಪ್ರಕಟಣೆ: ೧೯೨೮

ಆಗಿನ್ನೂ ಭಾರತ ಬ್ರಿಟೀಷರ ಆಳ್ವಿಕೆಯಿಂದ ಮುಕ್ತವಾಗಿರಲಿಲ್ಲ. ಜನರಿಗೆ ಸ್ವಾತಂತ್ರ್ಯ ಬೇಕಿತ್ತು, ಸ್ವರಾಜ್ಯ ಬೇಕಿತ್ತು, ಪ್ರಜಾಪ್ರಭುತ್ವ ಬೇಕಿತ್ತು. ಜೊತೆಗೆ ಇಡೀ ದೇಶಕ್ಕೆ ಒಬ್ಬ ಶತೃ ಇದ್ದ. ಜನರೂ ಪತ್ರಿಕೆಗಳೂ ನಾಯಕರೂ ಏಕಕಂಠದಲ್ಲಿ ಆ ಶತೃವಿನ ವಿರುದ್ಧ ದನಿಯೆತ್ತುವ ಅಗತ್ಯವಿತ್ತು. ಪ್ರಜೆಗಳ ಎದೆಯ ಭಾವನೆಗೆ ಕಿವಿಗೊಟ್ಟರೆ ಪತ್ರಕರ್ತನಾದವನು ಆಳುವ ಅರಸರ ಕೆಂಗಣ್ಣಿಗೆ ಗುರಿಯಾಗಬೇಕಾಗಿತ್ತು. ಅರಸರ ಎಂಜಲಿನ ಪ್ರಸಾದದಿಂದ ಕೊಬ್ಬಿದ ಪತ್ರಿಕೆಗಳನ್ನು ಜನರು ಅಸಹ್ಯದಿಂದ ದೂರವಿರಿಸುತ್ತಿದ್ದರು. ಪತ್ರಿಕೆಗಳ ನಿಜವಾದ ಚಾರಿತ್ರ್ಯ ಬಯಲಾಗುತ್ತಿದ್ದ ಸಂದರ್ಭವದು. ಆಗ ತಾನೆ ದೇಶದಲ್ಲಿ ಕಣ್ತೆರೆಯುತ್ತಿದ್ದ ಪತ್ರಿಕೆಗಳಿಗೆ ಜನರಿಗೆ ಜಗತ್ತಿನ ಎಲ್ಲಾ ಸುದ್ದಿ ಸಮಾಚಾರವನ್ನು ತಲುಪಿಸುವ ಹುಮ್ಮಸ್ಸು ಇತ್ತು. ಜನರಿಗೂ ಪತ್ರಿಕೆಗಳು ಹೊರಗಿನ ಜಗತ್ತಿಗೂ ತಮಗೂ ನಡುವಿನ ಸೇತುವೆ ಎಂಬ ಅರಿವಿತ್ತು. ಜನರು ಸುದ್ದಿಗಾಗಿ, ಸಿದ್ಧಾಂತಗಳಿಗಾಗಿ, ರಾಜಕೀಯ ನಿಲುವುಗಳಿಗಾಗಿ, ಸಂದಿಗ್ಧ ಪರಿಸ್ಥಿತಿಗಳಲ್ಲಿನ ತೀರ್ಮಾನಗಳಿಗಾಗಿ ಪತ್ರಿಕೆಗಳತ್ತ ಮುಖ ಮಾಡುತ್ತಿದ್ದರು. ಅಲ್ಲದೆ ಆಗ ಸಾರ್ವಜನಿಕ ಹೋರಾಟದ ಮುಂದಾಳುಗಳಾಗಿರುತ್ತಿದ್ದ ನಾಯಕರುಗಳೇ ಪತ್ರಿಕೆಗಳ ಸಾರಥಿಗಳಾಗಿರುತ್ತಿದ್ದರು. ಪತ್ರಿಕೆಗೆ ಅನಾಯಾಸವಾಗಿ ಜನರ ಮಧ್ಯೆ ಸ್ಥಾನಮಾನ ಲಭ್ಯವಾಗಿತ್ತು.

ಆದರೆ ಸ್ವಾತಂತ್ರ್ಯ ಬಂದ ನಂತರ ಸರಕಾರದ ಸ್ವರೂಪ ಬದಲಾಯಿತು. ಆಡಳಿತ ರೀತಿ ನೀತಿಗಳು ಬದಲಾದವು. ಈ ಬದಲಾವಣೆಗೆ ಕೆಲವು ಪತ್ರಿಕೆಗಳು ತೆರೆದುಕೊಂಡವು ಕೆಲವು ಅದನ್ನು ಗಮನಿಸುವಷ್ಟು ಸೂಕ್ಷ್ಮತೆಯನ್ನು ಕಳೆದುಕೊಂಡಿದ್ದವು. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳು ಕಳೆದರೂ ಡೆಮಾಕ್ರಸಿಯಲ್ಲಿ ಜನ ಸಾಮಾನ್ಯರೇ ರಾಜರಾಗಿರುವಾಗ ಪತ್ರಿಕೆಗಳ ಸ್ಥಾನ ಯಾವುದು ಎಂಬುದನ್ನು ನಿರ್ಧರಿಸುವಲ್ಲಿ ಮಾಧ್ಯಮಗಳು ಅನೇಕ ವೇಳೆ ಎಡವುತ್ತಿವೆ. ತಮ್ಮ ಅಧಿಕಾರ ವ್ಯಾಪ್ತಿಯ ಗಡಿಯನ್ನು ಕಾಣಲಾಗದೆ ಅನೇಕ ವೇಳೆ ಅಪಸವ್ಯಗಳನ್ನು ಮಾಡಿಕೊಂಡದ್ದಿದೆ. ಪತ್ರಿಕೆಗಳು ಬಂಡವಾಳ ಶಾಹಿ ಸಮಾಜದಲ್ಲಿ ತಮ್ಮ ನೆಲೆಯನ್ನು ಕಂಡುಕೊಳ್ಳಲು ಇಂದಿಗೂ ತೊಳಲಾಡುತ್ತಿವೆ. ಈ ಸಮಯದಲ್ಲಿ ಪತ್ರಕರ್ತರು, ಕಗ್ಗದ ಕರ್ತೃವೂ ಆಗಿದ್ದ ಡಿ.ವಿ ಗುಂಡಪ್ಪನವರ ವಿಚಾರಗಳು ಪ್ರಸ್ತುತಯನ್ನು ಉಳಿಸಿಕೊಳ್ಳುತ್ತವೆ ಅನ್ನಿಸುತ್ತದೆ.

newspapers.jpg

ಸುಮಾರು ಎಂಭತ್ತು ಪುಟಗಳ ಪುಸ್ತಕದಲ್ಲಿ ಗುಂಡಪ್ಪನವರು ಸ್ಥೂಲವಾಗಿ ಪತ್ರಿಕೆಗಳ ಬಗೆಗೆ ಚಿಂತಿಸಿದ್ದಾರೆ. ಆ ಕಾಲದಲ್ಲಿ ಇಂಗ್ಲೆಂಡು, ಅಮೇರಿಕಾ, ಫ್ರಾನ್ಸ್, ಜಪಾನ್‌ಗಳಲ್ಲಿನ ಪತ್ರಿಕೆಗಳ ಸ್ಥಿತಿಗತಿಯನ್ನು ವಿವರಿಸಿ ಭಾರತ ಹಾಗೂ ಕರ್ನಾಟಕದಲ್ಲಿನ ಪ್ರಯತ್ನಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ೧೯೨೮ರಲ್ಲಿ ಬಾಗಲಕೋಟೆಯಲ್ಲಿ ನಡೆದ ಅಖಿಲ ಕರ್ಣಾಟಕ ವೃತ್ತಪತ್ರಿಕಾಕರ್ತರ ಪ್ರಥಮ ಪರಿಷತ್ತಿನ ಅಧ್ಯಕ್ಷರಾಗಿ ಮಾಡಿದ ಉಪನ್ಯಾಸದಲ್ಲಿ ಸಮಕಾಲೀನ ಪತ್ರಕರ್ತರೊಂದಿಗೆ ಕನ್ನಡದ ಪತ್ರಿಕೋದ್ಯಮದ ಕಷ್ಟ ನಷ್ಟ, ಸಾಧನೆ- ನ್ಯೂನ್ಯತೆಗಳ ಬಗ್ಗೆ ಚರ್ಚಿಸಿದ್ದಾರೆ. ಆ ಉಪನ್ಯಾಸದ ಜೊತೆಗೇ ಪತ್ರಿಕೆಗಳ ಸ್ವಾತಂತ್ರ್ಯ ಹಾಗೂ ಜವಾಬ್ದಾರಿಗಳ ಬಗ್ಗೆ ಬರೆದ ಲೇಖನ ಈ ಪುಸ್ತಕದಲ್ಲಿದೆ.

ಪತ್ರಿಕೆಯಲ್ಲಿನ ವಿಷಯಗಳನ್ನು ಗುಂಡಪ್ಪನವರು ಸ್ಥೂಲವಾಗಿ ನಾಲ್ಕು ಭಾಗಗಳಾಗಿ ವಿಂಗಡಿಸುತ್ತಾರೆ. ವೃತ್ತಾಂತ ಭಾಗ ಪ್ರಾದೇಶಿಕ, ರಾಜ್ಯ ಹಾಗೂ ರಾಷ್ಟ್ರೀಯ ಸುದ್ದಿ ಸಮಾಚಾರ, ಅಂತರಾಷ್ಟ್ರೀಯ ವಿದ್ಯಮಾನಗಳನ್ನು ಬಗ್ಗೆ ಮಾಹಿತಿಯನ್ನು ಒದಗಿಸುವ ಕೆಲಸ ಮಾಡಬೇಕು. ವಾದ ವಿಭಾಗದಲ್ಲಿ ರಾಜಕೀಯ ವಿದ್ಯಮಾನಗಳ ಬಗ್ಗೆ ಟೀಕೆ ಟಿಪ್ಪಣಿ, ಸಂಪಾದಕರ ಅಭಿಪ್ರಾಯ, ಯಾವುದೇ ಪ್ರಚಲಿತ ವಿಷಯದ ಬಗ್ಗೆ ಪತ್ರಿಕೆ ತಳೆದ ನಿಲುವು ವ್ಯಕ್ತವಾಗಬೇಕು. ವಿದ್ಯಾಪ್ರಚಾರ ಭಾಗದಲ್ಲಿ ಜ್ಞಾನದ ಎಲ್ಲಾ ಶಾಖೆಗಳಲ್ಲಿ ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ಓದುಗರಿಗೆ ಮಾಹಿತಿಯನ್ನು ಕೊಡುವ ಕೆಲಸವನ್ನು ಆಯಾ ಕ್ಷೇತ್ರಗಳಲ್ಲಿನ ಪರಿಣಿತರ ಮುಖಾಂತರ ಮಾಡಿಸಬೇಕು. ಇನ್ನು ವ್ಯಾಪಾರ ಪ್ರಕಟಣೆಯ ವಿಭಾಗ ಜಾಹೀರಾತು ಮುಂತಾದವಕ್ಕೆ ಸಂಬಂಧಿಸಿದ್ದು. ಪತ್ರಿಕೆಯ ಹೂರಣದಲ್ಲಿ ಈ ನಾಲ್ಕೂ ಭಾಗಗಳಿಗೆ ಸೂಕ್ತ ನ್ಯಾಯ ಸಲ್ಲಿಸಿರಬೇಕು.

ಪತ್ರಿಕೆಗಳಾಗಲಿ, ನ್ಯೂಸ್ ಚಾನಲ್ಲುಗಳಾಗಲಿ ಸದಾ ತಮ್ಮ ಕರ್ತವ್ಯ ಏನು ಎಂಬುದರ ಬಗ್ಗೆ ಗಮನ ಕೊಡಬೇಕು. ” ವೃತ್ತಾಂತ ಪ್ರಕಟನೆಯ ಮುಖ್ಯೋದ್ದೇಶವು ಜನರ ದಿನಚರಿಗೆ ಆವಶ್ಯಕವಾದ ತಿಳಿವಳಿಕೆಯನ್ನು ಕೊಡುವುದು. ರಾಜಕೀಯ ವ್ಯತ್ಯಾಸಗಳು, ಸಾಮಾಜಿಕ ಸಮಾರಂಭಗಳು, ವ್ಯಾಪಾರದ ಬದಲಾವಣೆಗಳು, ಶಾಸ್ತ್ರಕಲೆಗಳಲ್ಲಿ ನೂತನ ರಚನೆಗಳು- ಇವೇ ಮೊದಲಾದುವನ್ನು ಈ ಭಾಗವು ತಿಳಿಸಬೇಕು. ಈ ನಾನಾ ಸಂಗತಿಗಳು ಸ್ವದೇಶಕ್ಕೆ ಸಂಬಂಧಪಟ್ಟವಾದರೆ ಹೆಚ್ಚು ಗಮನಕ್ಕೆ ಅರ್ಹವಾಗುವುವು. ಇಂಥವುಗಳನ್ನು ಬಿಟ್ಟು, ಮೂರು ಕೈಯುಳ್ಳ ಮನುಷ್ಯ, ಎರಡು ತಲೆಯ ಆಡು, ಹಲ್ಲಿಲ್ಲದ ಹಾವು- ಇಂಥಾ ಅದ್ಭುತ ಕಥೆಗಳನ್ನು ಪ್ರಕಟಿಸುತ್ತಿದ್ದರೆ ಪತ್ರಿಕೆಯ ಮುಖ್ಯೋದ್ದೇಶವು ನೆರವೇರಿದಂತಾಗುವುದಿಲ್ಲ.” ಎನ್ನುತ್ತಾರೆ ಡಿ.ವಿ.ಜಿ. ಅವರ ಈ ಮಾತನ್ನು ನಮ್ಮ ಮಾಧ್ಯಮಗಳು ಗಮನಿಸಿದರೆ ತಾವು ಪದೇ ಪದೇ ಎಡವುತ್ತಿರುವುದು ಎಲ್ಲಿ ಎಂಬುದು ಸ್ಪಷ್ಟವಾಗುತ್ತದೆ.

ಪತ್ರಿಕೆಗಳಿಗೆ ಇರಬೇಕಾದ ಸ್ವಾತಂತ್ರ್ಯ ಹಾಗೂ ಸರಕಾರದ ಅಧಿಕಾರದ ಬಗ್ಗೆ ಬರೆಯುತ್ತಾ ಜಾನ್ ಮಿಲ್ಟನ್‌ನ ವಿಚಾರವೊಂದನ್ನು ಪ್ರಸ್ತಾಪಿಸುತ್ತಾರೆ. “ಯಾರು ಒಬ್ಬ ಮನುಷ್ಯನನ್ನು ಕೊಲ್ಲುತ್ತಾನೆಯೋ ಅವನು ವಿವೇಚನಾ ಶಕ್ತಿಯುಳ್ಳ ಪ್ರಾಣಿಯೊಂದನ್ನು, ಭಗವಂತನ ಪ್ರತಿಬಿಂಬವೊಂದನ್ನು ಕೊಂದಂಥವನಾಗುತ್ತಾನೆ; ಯಾರು ಒಂದು ಸದ್ಗ್ರಂಥವನ್ನು ನಾಶಪಡಿಸುತ್ತಾನೆಯೋ ಅವನು ವಿವೇಚನಾಶಕ್ತಿಯನ್ನೇ ಕೊಂದವನಾಗುತ್ತಾನೆ- ಎಂದರೆ ಭಗವಂತನ ಪ್ರತಿಬಿಂಬದ ಕಣ್ಣನ್ನೇ ಕಿತ್ತು ಅದನ್ನು ಕೊಂದವನಾಗುತ್ತಾನೆ… ನನಗೆ ಎಲ್ಲ ಸ್ವಾತಂತ್ರ್ಯಗಳಿಗಿಂತಲೂ ಮುಖ್ಯವಾಗಿ ಬೇಕಾದುದು ತಿಳಿವಳಿಕೆ ಪಡೆದುಕೊಳ್ಳುವ, ತಿಳಿದುದನ್ನು ಹೇಳುವ ಮತ್ತು ಆತ್ಮಸಾಕ್ಷಿಗನುಸಾರವಾಗಿ, ನಿರಾತಂಕವಾಗಿ, ಚರ್ಚೆ ನಡೆಸುವ ಸ್ವಾತಂತ್ರ್ಯ” ಸುಮಾರು ನಾಲ್ಕು ಶತಮಾನದ ಹಿಂದೆ ಮಿಲ್ಟನ್ ಹೇಳಿದ್ದು ಇಂದಿಗೂ ಪ್ರಸ್ತುತವಾಗಿದೆ. ನಮ್ಮ ನಡುವಲ್ಲಿರುವ ಪತ್ರಕರ್ತರಲ್ಲಿ ಈ ಸ್ವಾತಂತ್ರ್ಯಕ್ಕಾಗಿನ ಆಗ್ರಹದ ದನಿ ಸದಾ ಎಚ್ಚರವಾಗಿರಬೇಕು.

ಬದಲಾವಣೆಯ ಹಾದಿಯಲ್ಲಿ ಹೊಸತನಕ್ಕೆ ಒಗ್ಗಿಕೊಳ್ಳುವುದಕ್ಕೆ ಬೇರೆಲ್ಲಾ ಉದ್ಯಮಗಳು ಒದ್ದಾಡುವ ಹಾಗೆಯೇ ನಮ್ಮ ಮಾಧ್ಯಮಗಳೂ ತೊಳಲಾಡುತ್ತಿವೆ. ಜಾಗತೀಕರಣ, ತಂತ್ರಜ್ಞಾನಗಳು ತಂದೊಡ್ಡುತ್ತಿರುವ ಹೊಸ ಅವಕಾಶಗಳನ್ನು ಬಳಸಿಕೊಳ್ಳುವ, ರೂಪಾಂತರಗೊಳ್ಳುವ ಭರದಲ್ಲಿ ನಮ್ಮ ಮಾಧ್ಯಮಗಳು ತಮ್ಮ ಮೂಲಭೂತ ಕಾಳಜಿ ಹಾಗೂ ಆಶಯಗಳಿಗೆ ಅನ್ಯಾಯ ಮಾಡಿಕೊಳ್ಳಬಾರದು. ಡಿವಿಜಿಯವರ ಈ ಪುಸ್ತಕ ಆ ಎಚ್ಚರವನ್ನು ನಮಗೆ ನೀಡುತ್ತದೆ.


Blog Stats

  • 69,182 hits
ಅಕ್ಟೋಬರ್ 2021
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 123
45678910
11121314151617
18192021222324
25262728293031

Top Clicks

  • ಯಾವುದೂ ಇಲ್ಲ