ಕಲರವ

Posts Tagged ‘ಸಾಧನೆ

– ರಂಜಿತ್ ಅಡಿಗ

“ದುರದೃಷ್ಟ ಬಾಗಿಲು ಬಡಿಯುತ್ತಲೇ ಇರುತ್ತದೆ.. ಆದರೆ ಅದೃಷ್ಟ ಅನ್ನೊದು ಯಾವಾಗಲೋ ಒಮ್ಮೆ ಮಾತ್ರ ಬಾಗಿಲು ತಟ್ಟುತ್ತದೆ.”

ಲೇಖಕನೊಬ್ಬನ ಸಾಲುಗಳಿವು. ಸಾಮಾನ್ಯವಾಗಿ ಯಾವುದಾದರೊಂದು ಕ್ಷೇತ್ರದಲ್ಲಿ ಯಶಸ್ವಿಯಾದ ವ್ಯಕ್ತಿಯನ್ನು ಕಂಡು ಹಲುಬುವವರೇ ಹೆಚ್ಚು.

“ಪ್ರತಿಭೇನೂ ಇಲ್ಲ.. ಏನೂ ಇಲ್ಲ.ಬರೇ ಲಕ್ಕಿನಿಂದ ಮೇಲೆ ಬಂದ ಮಾರಾಯ..”ಅಂದುಕೊಂಡೋ, ಇಲ್ಲವೇ “ನಾನೂ ಅವನೂ ಇಬ್ಬರೂ ಒಟ್ಟೇ ಕಷ್ಟ ಪಟ್ವಿ.. ಅವನ ಲಕ್ಕು ಚೆನ್ನಾಗಿತ್ತು” ಅಂತ ಯಶಸ್ಸನ್ನು ಅದೃಷ್ಟಕ್ಕೇ ಕಟ್ಟಿ ಬಿಡುತ್ತಾರೆ. ದುರದೃಷ್ಟ ಬಾಗಿಲು ಬಡಿಯುತ್ತಲೇ ಇರುವ ಅತಿಥಿ.ಅದಕ್ಕೆ ತಕ್ಷಣವೇ ಯಾರನ್ನಾದರೂ ಅವರಿಸಿಕೊಳ್ಳುವ ತವಕ. ಎಲ್ಲರ ಮನೆ ಬಾಗಿಲ ಬಳಿಯೇ ಅದರ ಕೆಲಸ. ಅಡ್ಡದಾರಿಯ ಸೂತ್ರಕ್ಕೆ, ಕಷ್ಟಪಡದೇ ಸುಲಭ ತುತ್ತಿನ ಆಸೆಗೆ ಬಿದ್ದು ಕೂಡಲೇ ಬಾಗಿಲು ತೆಗೆಯುವವರೆಲ್ಲರೂ ದುರದೃಷ್ಟವಂತರೇ.

ನಿಜಕ್ಕೂ ಅದೃಷ್ಟ ಅಂದರೆ ಏನು?
ಬದುಕಿನಲ್ಲಿ ಅಧಃಪಾತಾಳಕ್ಕಿಳಿದ ವ್ಯಕ್ತಿ ಹಂತ ಹಂತವಾಗಿ ಯಶಸ್ಸಿನ ತುದಿ ಮುಟ್ಟಿದವರನ್ನು ಕೇಳಿ ನೋಡಿ. ಬದುಕನ್ನು ಉನ್ನತ ದೃಷ್ಟಿಕೋನದಿಂದ
ನೋಡಿರುತ್ತಾನಾತ. ಅವನಿಗೆ ಅದೃಷ್ಟ ಬಾಗಿಲು ಬಡಿವುದೂ ಗೊತ್ತು. ದುರದೃಷ್ಟದ ಹಟವೂ ಗೊತ್ತು. ಅದೃಷ್ಟ ಅಂದರೆ “ಅವಕಾಶ ಮತ್ತು ಸಿದ್ಧತೆಗಳ ಸಂಗಮ” ಅಂತ ಸಕಾರಾತ್ಮಕವಾಗಿ ಸರಿಯಾದ ಡೆಫಿನೇಶನ್ ಹೇಳಬಲ್ಲ. ಅವಕಾಶ ಹೇಳದೇ ಕೇಳದೇ ಯಾವಾಗಲೋ ಒಮ್ಮೆ ಬರುತ್ತದೆ. ಆದರೆ ಆ ಅವಕಾಶಕ್ಕಾಗಿ ಮಾಡಬೇಕಾದ ಸಿದ್ಧತೆಯಿದೆಯಲ್ಲ.. ಅದು ಪ್ರಾರಂಭದಿಂದಲೇ ಹುಟ್ಟಿರಬೇಕು.
ಬೆಳಗಾಗುವುದರೊಳಗೆ ಶ್ರೀಮಂತನಾಗಿ ಬಿಡಬೇಕು. ಎವರೆಸ್ಟ್ ಹತ್ತಿ ಬಿಡಬೇಕು, ಯಶಸ್ಸಿನ ಜುಟ್ಟು ಹಿಡಿದಿರಬೇಕು ಅಂತೆಲ್ಲಾ ಅಲೋಚಿಸುವವರು ಅದಕ್ಕೆ ತನಗೆ ಅರ್ಹತೆಉಂಟಾ ಅಂತ ಯೋಚಿಸಿದ್ದಿದೆಯಾ? ಅಲ್ಲಿಯವರೆಗೂ ಅದೇ ಫೀಲ್ಡಿನಲ್ಲಿರುವ ಸಾವಿರಾರು ಜನರು, ಅನುಭವಸ್ಥರು ಅವರನ್ನೆಲ್ಲಾ ಹಿಂದಿಕ್ಕಿ ಮುನ್ನುಗ್ಗಬಲ್ಲ ಛಾತಿ ಇದೆಯಾ ಅಂತ ತಮ್ಮ ಅಂತರಂಗದ ಕನ್ನಡಿಯಲ್ಲಿ ನೋಡಿದ್ದಿದೆಯಾ?

ದಿಢೀರ್ ಯಶಸ್ಸು ಅಷ್ಟು ಸುಲಭ ಸಾಧ್ಯವಲ್ಲ. ಚೀನಾದಲ್ಲಿ ಒಂದು ಬಗೆಯ ಬಿದಿರು ಮರವಿದೆ. ಸಾಮಾನ್ಯವಾಗಿ ಬೇರೆ ಜಾತಿಯ ಬಿದಿರುಗಳು ವೇಗವಾಗಿ ಬೆಳೆಯುತ್ತವೆ. ಆದರೆ ಆ ಚೀನಾದ ಬಿದಿರು ಬೀಜ ಹಾಕಿ ನೀರು ಹಾಕಿ ಪೋಷಿಸಿದರೂ ಗಿಡವಾಗುವುದೇ ಇಲ್ಲ. ಒಂದು ವರ್ಷ.. ಎರಡು ವರ್ಷ.. ಮೂರು ವರ್ಷ… ನಾಲ್ಕು… ಉಹುಂ.. ಬರೋಬ್ಬರಿ ಏಳು ವರ್ಷದ ತನಕ ಬೀಜ ಹಾಕಿದ ಜಾಗೆಯಲ್ಲಿ ಚಿಕ್ಕ ಸಸಿಯೂ ಏಳುವುದಿಲ್ಲ. ಆದರೆ ಏಳನೆಯ ವರ್ಷವಿದೆಯಲ್ಲ.. ಆಗ ಚಿಕ್ಕದೊಂದು ಸಸಿ ಕುಡಿಯೊಡೆಯುತ್ತದೆ. ಮುಂದೆ ಅದರ ಬೆಳವಣಿಗೆ ಬಹಳ ಕ್ಷಿಪ್ರ. ಕೇವಲ ಏಳು – ಎಂಟು ತಿಂಗಳಲ್ಲಿ ತನ್ನ ಎತ್ತರವನ್ನು ಬೆಳೆದುಬಿಡುತ್ತದೆ.

ಯಶಸ್ಸೂ ಹಾಗೆಯೇ ಅಲ್ಲವೆ?

ಏಳು ವರ್ಷಗಳ ನಂತರ ಬೆಳೆವ ವೇಗಕ್ಕಾಗಿ ಶಕ್ತಿಯನ್ನು ಹೊಂದಿಸಿಕೊಳ್ಳುತ್ತಿದೆಯೆನೋ ಎಂಬಂತೆ ಸುಮ್ಮನಿರುತ್ತದಲ್ಲ ಆ ಬೀಜ, ಹಾಗೆಯೇ ಮನಸ್ಸನ್ನು ಅಣಿಗೊಳಿಸುತ್ತಿರಬೇಕು. ಗುರಿಗೆ ಬೇಕಾಗುವ ಕೌಶಲ್ಯಗಳನ್ನು ಒಟ್ಟುಹಾಕುತ್ತಿರಬೇಕು. ಮುಖ್ಯವಾಗಿ ಯಶಸ್ಸಿನ ತುದಿಮುಟ್ಟಿದ ಮಹಾನುಭಾವರ ಬಗ್ಗೆ ಹಲುಬುವ ಮಾನಸಿಕ ಖಾಯಿಲೆಗೆ ಎಡೆಮಾಡಿಕೊಡಬಾರದು. ಎಷ್ಟೋ ಸಲ ಇದೂ ಒಂದು ಮಾನಸಿಕ ದುರ್ಬಲತೆ ಎಂಬುದನ್ನು ಮರೆತಿರುತ್ತೇವೆ. ಇಂದಿನ ಯುವಕರ ಇಂತಹ ಧೋರಣೆ ಅವರನ್ನು ಪಲಾಯನವಾದದತ್ತ ಕೊಂಡೊಯ್ಯುತ್ತದೆ.
ಇದು ಸ್ಪರ್ಧಾತ್ಮಕ ಯುಗ. ನಿಜವಾಗಿಯೂ ಪ್ರತಿಭೆ ಒಳಗಿದ್ದರೆ ಮುಂದೆ ಬರಲು ಹಲವಾರು ಹಾದಿಗಳೂ, ಆಕಾಶದಷ್ಟು ಅವಕಾಶಗಳಿವೆ. ಆದ್ದರಿಂದ ಮನಸ್ಸಿನ ಅಸಂಬದ್ಧ ವಿಚಾರಸರಣಿಗೆ ಸೋಲದೇ ವಿಜಯದ ಸಿದ್ಧತೆಗಳನ್ನು ಆರಂಭಿಸಬೇಕು. “ಇಂಟರ್ವ್ಯೂಗೆ ಕರೆ ಬಂದಾಗ ಓದಿಕೊಂಡರಾಯ್ತು.. ಈಗ್ಲೆ ಏನವಸರ?” ಎಂದುಕೊಂಡು ದಿನಗಳನ್ನು ಜಾರಿಹೋಗಲು ಬಿಟ್ಟು ಉದ್ಯೋಗಕ್ಕಾಗಿ ಪರದಾಡುವ ಯುವಕ-ಯುವತಿಯರೇನು ಕಡಿಮೆ ಇಲ್ಲ. ಇಂಟರ್ವ್ಯೂ ಎಂಬುದು ಅವಕಾಶ. ಓದು ಅನ್ನುವುದು ಸಿದ್ಧತೆ.
ಸಿದ್ಧತೆ ಮತ್ತು ಅವಕಾಶದ ಸಂಗಮವಾದಾಗ ಮಾತ್ರ ಯಶಸ್ಸು; ಅದೃಷ್ಟ!

ಇನ್ನು ವಿದ್ಯಾರ್ಥಿಗಳಿಗೂ ಅಷ್ಟೇ. ಪರೀಕ್ಷೆ ಎಂಬುದನ್ನು ತನ್ನ ಪ್ರತಿಭೆ ತೋರಿಸಲು ಅವಕಾಶ ಎಂದುಕೊಂಡು ಖುಷಿಯಾಗಿ ಕಾಲೇಜಿನ ಪ್ರಾರಂಭದ ದಿನದಿಂದಲೇ (ಅರ್ಧ-ಒಂದು ಘಂಟೆಯಾದರೂ ಸರಿ) ಓದುತ್ತಾ ಬಂದರೆ ಯಾವ ಅದೃಷ್ಟ ದ ಮೇಲೂ ಡಿಪೆಂಡ್ ಆಗಬೇಕಿಲ್ಲ?ಲಕ್ಕಿನ ಸಿಕ್ಕುಗಳಲ್ಲಿ ಸಿಲುಕಿ ನರಳಬೇಕಿಲ್ಲ..

ಬದುಕು, ಹೆಗಲಿಗೆ ಕೈ ಹಾಕಿ ಗೆಳೆಯನಂತೆ ಸ್ವಾಗತಿಸುತ್ತದೆ.

hemantaranga.png

ಹುಡ್ಗೀರೇ ಹಿಂಗೇನೋ? ಯಾವ್ದನ್ನಾದ್ರೂ ತೀರ ಹಚ್ಕೋಬಿಡ್ತಾರೆ, ಯಾವ್ದ್ರಿಂದ ಆದ್ರೂ ತೀರ ಹರ್ಟ್ ಆಗ್ಬಿಡ್ತಾರೆ! ಎಲ್ಲಾ ಹುಡ್ಗೀರೂ ಹೀಗೆ ಇರ್‍ತಾರೇನೋ ಅಥವಾ ನಾನು ಮಾತ್ರ ಹೀಗಾ ಗೊತ್ತಿಲ್ಲ. ಇಷ್ಟಕ್ಕೂ ಅಪ್ಪ ಅಂತ ಅನ್ನಬಾರದ್ದೇನೂ ಅಂದಿರಲಿಲ್ಲ. “ಗಂಡು ಮಕ್ಕಳಿದ್ದಿದ್ದರೆ ಯೋಚನೆ ಇರ್‍ತಿರ್‍ಲಿಲ್ಲ. ನನಗೆ ನನ್ನ ಎರಡನೇ ಮಗಳದೇ ಯೋಚನೆ” ಅಷ್ಟೆ ಅಪ್ಪ ಹೇಳಿದ್ದು. ಅದೂ ಅವರಿಗೆ ಒಂದು ಮೈನರ್ ಹಾರ್ಟ್ ಅಟ್ಯಾಕ್ ಆಗಿ ಆಸ್ಪತ್ರೆಲಿ ಇರ್‍ಬೇಕಾದ್ರೆ!

ಆ ಮಾತಲ್ಲಿ ಅಪ್ಪನ ಭಯ ಪ್ರೀತಿ ಕಾಳಜಿ ಎಲ್ಲಾ ತುಂಬಿತ್ತು ಆದ್ರೆ ನನಗೆ ಆಗ ಅದ್ರಲ್ಲಿ ಕಾಣ್ಸಿದ್ದೆ ಬೇರೆ. ಅದೊಂದು ಮಾತು ನನ್ನ ಜೀವನದ ರೀತೀನೇ ಬದಲಾಯಿಸಿ ಬಿಡ್ತು. ಅಷ್ಟು ದಿನ ಕಾಲೇಜು, ಪಿಕ್ಚರ್ರು, ಹರಟೆ ಅಂತ ಟೈಮ್ ಪಾಸ್ ಮಾಡ್ತಿದ್ದ ನನಗೆ ಇದ್ದಕ್ಕಿದ್ದಂತೆ ನಾನು ಬದುಕ್ತಿದ್ದ ರೀತೀನೇ ಅಸಹ್ಯ ಅನ್ಸೋಕೆ ಶುರು ಆಯ್ತು. ಗಂಡು ಮಗ ಆಗಿದ್ರೆ ಇಷ್ಟು ಯೋಚನೆ ಮಾಡ್ತಿದ್ದನೋ ಇಲ್ವೋ ಆದ್ರೆ ನನಗೆ ಅವತ್ತಿಂದ ಹೇಳಲಾರದ ಚಡಪಡಿಕೆ ಶುರುವಾಗಿದ್ದಂತು ನಿಜ.

ಆಗಿನ್ನೂ second year PUC ಎಕ್ಸಾಮ್ ಬರೆದಿದ್ದೆ ಇನ್ನೂ ರಿಸಲ್ಟ್ ಬಂದಿರ್‍ಲಿಲ್ಲ ಏನು ಘನಂದಾರಿ qualification ಇತ್ತು ಅಂತ ನನಿಗೆ ಕೆಲ್ಸ ಕೊಡ್ತಾರೆ? ಒಂದೊಂದು ಇಂಟರ್‌ವ್ಯೂವ್‌ಗೆ ಹೋಗಿ ಬಂದಾಗಲೂ ತೀರ depression. ಛೆ! ಇನ್ನೂ ಚೆನ್ನಾಗಿ ಮಾಡಿದ್ರೆ ಕೆಲ್ಸ ಸಿಗದೇನೋ ಅಂತ. ಅಷ್ಟರಲ್ಲಿ ರಿಸಲ್ಟ್ಸ್ ಬಂದಿತ್ತು. ೬೭%. ನಾನು ಅನ್ಕೊಂಡಿದ್ದಕ್ಕಿಂತ ಜಾಸ್ತೀನೇ ಮಾರ್ಕ್ಸ್ ಬಂದಿತ್ತು. ಮನೇಲಿ ಅಕ್ಕಂದು ಬೇರೆ ಒಂದೇ ಬಲವಂತ ಕಾಲೇಜು ಸೇರು ಅಂತ. ಆದ್ರೆ ನಾನಾಗಲೇ ತೀರ್ಮಾನ ಮಾಡ್ಬಿಟ್ಟಿದ್ದೆ ಮುಂದೆ ಓದೋದು ಅಂತ ಆದ್ರೆ ಅಪ್ಪನ್ನ ದುಡ್ಡು ಕೇಳ್ಬಾರ್‍ದು. ಭೀಷ್ಮ ಶಪಥ ಮಾಡಿಯಾಗಿತ್ತು ಆದ್ರೆ ಅದನ್ನ ಜಾರಿಗೆ ತರೋ ಯಾವ ದಾರಿಗಳು ಕಾಣ್ತಾ ಇರ್‍ಲಿಲ್ಲ. ಪೂರ್ತಿ ನಾಲ್ಕು ತಿಂಗಳು ಕಳೀತು. ಫ್ರೆಂಡ್ಸ್ ಎಲ್ಲಾ ಬಿಕಾಂ ಸೇರಿದ್ರೂ ನಾನು ಸೇರ್‍ಲಿಲ್ಲ. ಕಾಲೇಜ್‌ಗೆ ಕೂಡಾ ಹೋಗ್ದೆ ಸುಮ್ನೆ ಮನೇಲಿರೋದು ತೀರ ಹಿಂಸೆ ಆಗ್ತಿತ್ತು. ಸುಮ್ನೆ ಯಾರಿಗೂ ಹೇಳೋದೇ ಬೇಡ ಎಲ್ಲಿಗಾದ್ರೂ ಹೋಗಿಬಿಡೋಣ ಅನ್ಸೋದು. ಬಹುಶಃ ಹುಡುಗಿ ಅನ್ನೋ ಹೆದರಿಕೆ ಇಲ್ದಿದ್ರೆ ಹಾಗೇ ಮಾಡ್ತಿದ್ದೆ ಅನ್ನಿಸುತ್ತೆ. ಛೆ ನಾನು ಹುಡುಗಿ ಆಗಿದ್ದೇ ತಪ್ಪು, ಹುಡುಗ ಆಗಿದ್ರೆ ಯಾವ್ದಾದ್ರೂ ಕೆಲ್ಸ ಮಾಡಬಹುದಿತ್ತು ಅನ್ಕೊಳ್ತಿದ್ದೆ. ಹುಡುಗಿ ಆಗಿ ನಾನೇನು ಕಡಿಮೆ ಇಲ್ಲ ಅಂತ ತೋರ್‍ಸೋಕೆ ಓದನ್ನ ನಿಲ್ಸಿ ಕೆಲಸ ಹುಡುಕ್ತಿರೋದು ಜ್ಞಾಪಕ ಬಂದಾಗ ನನ್ನ ಯೋಚನೆಗೆ ನನಗೆ ನಗು ಬರೋದು.

ಬೆಂಗಳೂರು, ಉದ್ಯಾನನಗರಿ, ಅವಕಾಶಗಳು ಉಕ್ಕಿ ಹರೀತಿರ್ತವೆ! ಹುಡುಗೀರು ಜೀವನ ಸಾಗಿಸೋ ಅಷ್ಟು ದುಡಿದು ಬದುಕಬಹುದು! ಅಂತ ಓದಿದ್ದು, ಬೇರೆ ಬೇರೆ ಸೆಮಿನಾರ್‌ಗಳಲ್ಲಿ, ಪರ್ಸನಾಲಿಟಿ ಡೆವಲಪ್‌ಮೆಂಟ್ ಕ್ಲಾಸ್‌ಗಳಲ್ಲಿ ಕೇಳಿದ್ದು ಎಲ್ಲಾ ಸುಳ್ಳು ಅನ್ನಿಸ್ತಿದ್ವು. ಒಂದೊಂದು ಇಂಟರ್‌ವ್ಯೂವ್‌ನಲ್ಲಿ ಒಂದೊಂದು ಪ್ರಶ್ನೆ ಕೇಳ್ತಿದ್ರು (ಅಫ್‌ಕೋರ್ಸ್ ಅವ್ರು ಕೇಳ್ಲೇಬೇಕು ಎಲ್ಲಾ ಇಂಟರ್‌ವ್ಯೂವ್‌ನಲ್ಲೂ ಒಂದೇ ಪ್ರಶ್ನೆ ಕೇಳ್ತಾರಾ?) ಒಂದ್ಸಲ ಒಂದು ವಿಷಯಕ್ಕೆ ಪ್ರಿಪೇರ್ ಆದ್ರೆ ಅದಕ್ಕೆ ಸಂಬಂಧಾನೇ ಇಲ್ದೆ ಇರೋಅಂಥದ್ದು ಇನ್ನೊಂದು ಕೇಳೋರು. ಎಲ್ಲಾದಕ್ಕಿಂತ ನಾನು ತೀರ ಅವಮಾನಪಟ್ಕೊಂಡಿದ್ದು ಒಂದು ಇಂಟರ್‌ವ್ಯೂವ್‌ನಲ್ಲಿ. ಕಾಲ್ ಸೆಂಟರ್‌ಗೆ ಅಪ್ಲೈ ಮಾಡಿದ್ದೆ ರಿಟನ್ ಟೆಸ್ಟು ಪಾಸೂ ಮಾಡಿದ್ದೆ, ಕಮ್ಯುನಿಕೇಷನ್ ರೌಂಡ್ ಅಂತ ಒಂದಿತ್ತು, ಒಂದು ಟಾಪಿಕ್ ಕೊಟ್ಟು ಅದರ ಬಗ್ಗೆ ಮಾತಾಡಿ ಅಂತ ಹೇಳಿದ್ರು, ನಾನು ಮಾತಾಡ್ಬೇಕು ಅಂತ ಎದ್ದು ನಿಂತ್ಕೊಂಡೆ ನಾನು ಎಷ್ಟು ನರ್ವಸ್ ಆಗಿದ್ದೆ ಅಂದ್ರೆ ಒಂದೇ ಒಂದು ಶಬ್ದ ನನ್ನ ಬಾಯಿಯಿಂದ ಬರ್‍ಲಿಲ್ಲ ಎರಡು ನಿಮಿಷ ನಿಂತೇ ಇದ್ದೆ. “ಯು ಕ್ಯಾನ್ ಸಿಟ್” ಅಂದ್ರು. ಆಮೇಲೆ ಇಂಟರ್‌ವ್ಯೂವ್ ಏನಾಗಿರಬಹುದು ಅಂತ ನಾನು ಹೇಳ್ಬೇಕಾಗಿಲ್ಲ. ಅವತ್ತು ತುಂಬಾನೇ ಬೇಜಾರಾಯ್ತು ಮನೆಗೆ ಬಂದು ಬಿಕ್ಕಿ ಬಿಕ್ಕಿ ಅತ್ಬಿಟ್ಟೆ. ಆ ಇಂಟರ್‌ವ್ಯೂವ್ ಆದ್ಮೇಲೆ ನನಗೆ ಇಂಥ ಹೈ ಕ್ಲಾಸ್ ಕೆಲ್ಸಗಳು ಸರಿ ಬರಲ್ಲ ಅಂತ ಒಂದು ಡಿ.ಟಿ.ಪಿ. ಸೆಂಟರ್‌ಗೆ ಕೆಲ್ಸಕ್ಕೆ ಸೇರಿದೆ. ೨೦೦೦ ಸಂಬಳ! ಕಡಿಮೆ ಅನ್ನಿಸ್ತು ಆದ್ರೂ ಸೇರಿದೆ. ಮೊದಮೊದಲು ಬೇಜಾರಾಗ್ತಿತ್ತು, ೫ ಗಂಟೆ ಆಗೋದನ್ನೇ ಕಾಯ್ತಿದ್ದು ಮನೆಗೆ ಬಂದ್ಬಿಡ್ತಿದ್ದೆ. ಆಮೇಲೆ ಡಿ.ಟಿ.ಪಿ. ಕಲಿಯೋಕೆ ಶುರು ಮಾಡ್ದೆ ಕಂಪ್ಯೂಟರ್ ಬಗ್ಗೆ ಆಸಕ್ತಿ ಬೆಳೀತು. ಆದಷ್ಟು ಕಲಿತೆ. ಮೊದಲನೇ ತಿಂಗಳು ಸಂಬಳ ಬಂದಾಗ ಅದೆಷ್ಟು ಖುಷಿ ಆಯ್ತು ಅಂದ್ರೆ ಅಷ್ಟನ್ನೂ ಅಮ್ಮನ ಕೈಗೆ ತಂದ್ಕೊಟ್ಬಿದ್ದೆ ಅಮ್ಮ ತುಂಬಾನೇ ಖುಷಿಪಟ್ರು. ಆ ಖುಷಿ ಈಗ ಅದರ ಐದು ಪಟ್ಟು ಸಂಬಳ ತಗೊಂಡ್ರು ಸಿಗಲ್ಲ. ಆದ್ರೆ ಎರಡೇ ತಿಂಗಳು ಅಲ್ಲಿ ಕೆಲ್ಸ ಮಾಡಿದ್ದು ಆಮೇಲೆ ಅಲ್ಲಿದ್ದವನೊಬ್ಬ ನಂಜೊತೆ ಕೆಟ್ಟದಾಗಿ ನಡ್ಕೊಂಡ ಅಂತ ಆ ಕೆಲ್ಸ ಇದ್ದಕ್ಕಿದ್ದಂಗೆ ಬಿಡ್ಬೇಕಾಯ್ತು.

ಮತ್ತೆ ಡಿಫೀಟೆಡ್ ಅಂತನ್ನಸ್ತು ಅದೂ ಒಬ್ಬ ಗಂಡಸಿಂದಲೇ. ತುಂಬಾ ಬೇಗ ಇನ್ನೊಂದು ಕೆಲ್ಸಕ್ಕೆ ಸೇರಿದೆ. ಆಡಿಟರ್ ಆಫೀಸ್‌ನಲ್ಲಿ. ಅಲ್ಲಿ ತುಂಬಾನೆ ಕೆಲ್ಸ ಇರ್‍ತಿತ್ತು ಇಲ್ಲಿಗಿಂತ ೫೦೦ ರೂಪಾಯಿ ಜಾಸ್ತಿ ಸಂಬಳ. ಬೆಳಿಗ್ಗೆಯಿಂದ ರಾತ್ರಿ ೮.೩೦ ವರೆಗೂ ಕೆಲ್ಸ ಮಾಡ್ತಿದ್ದೆ. ೯.೩೦ ಗೆ ಮನೆಗೆ ಬರ್‍ತಿದ್ದೆ ಆಗ ಅದು ತುಂಬಾ ಲೇಟ್ ಅನ್ಸೋದು ಆದ್ರೆ ಈಗ ನನ್ನ ಕೆಲ್ಸ ೫ ಗಂಟೆಗೆ ಬಿಟ್ರೂ ನಾನು ಮನೆಗೆ ಬರೋದೆ ೧೦ ಗಂಟೆಗೆ. ಅಲ್ಲಿ ತುಂಬಾನೇ ಕಲಿತೆ. ಅಷ್ಟೊತ್ತಿಗೆ ಕಂಪ್ಯೂಟರ್ ಅಭ್ಯಾಸ ಆಗಿತ್ತು, ಬೋಲ್ಡ್ ಆಗಿ ಮಾತಾಡ್ತಿದ್ದೆ. ಜನರನ್ನ ಕಂಡರೆ ಮೊದಲಿದ್ದ ಭಯ ಹೋಗಿತ್ತು. ಬೇರೆ ಕಡೆಗೆ ಇಂಟರ್‌ವ್ಯೂವ್‌ಗೆ ಹೋಗ್ತಿದ್ದೆ. ಕಡೆಗೂ ಒಂದು ಲಾಯರ್ ಆಫೀಸಿನಲ್ಲಿ ಕೆಲ್ಸ ಸಿಕ್ಕಿತು ಏಕ್‌ದಂ ಇಲ್ಲಿನ ಎರಡರಷ್ಟು ಸಂಬಳಕ್ಕೆ, ಅದೂ ನಮ್ಮ ಮನೆ ಹತ್ರಾನೇ!! ಆದ್ರೆ ಆ ಕೆಲ್ಸಕ್ಕೂ ನಾನು ಮಾಡ್ತಿದ್ದ ಕೆಲ್ಸಕ್ಕೂ ಸಂಬಂಧವೇ ಇರ್‍ಲಿಲ್ಲ. ಜಾಸ್ತಿ ಸಂಬಳ ಅಂತ ಸೇರಿಬಿಟ್ಟೆ. ಅಲ್ಲಿಗೆ ಹೋಗೋಕೆ ಶುರುವಾದ ಮೇಲೆ ಚೂರು ಆರಾಮನ್ನಿಸ್ತು. ಅಷ್ಟೊತ್ತಿಗೆ ನನ್ನ ಫ್ರೆಂಡ್ಸೆಲ್ಲ ಫಸ್ಟ್ ಇಯರ್ ಬಿ.ಕಾಂ. ಮುಗಿಸಿ ಸೆಕೆಂಡ್ ಇಯರ್‌ನಲ್ಲಿ ಓದ್ತಿದ್ರು. ಆ ವರ್ಷ ಸಂಜೆ ಕಾಲೇಜು ಸೇರಕ್ಕೆ ಪ್ರಯತ್ನಪಟ್ಟೆ ಆದ್ರೆ ಅದಾಗ್ಲೆ ಟೈಮ್ ಆಗ್ಹೋಗಿತ್ತು. ಸರಿ ಇಡೀ ವರ್ಷ ಬರೀ ಕೆಲ್ಸ ಮಾಡ್ದೆ. ಮಾರನೇ ವರ್ಷಕ್ಕೆ ಸಂಜೆ ಕಾಲೇಜು ಸೇರ್‍ದೆ (ನನ್ನದೇ ದುಡ್ಡಿಂದ). ಆಗ್ಲೇ ಗೊತ್ತಾಗಿದ್ದು ಕಾಲೇಜು ಕ್ಲಾಸುಗಳು ನನಗೆ ಎಷ್ಟು ಅಪರಿಚಿತ ಆಗ್ಬಿಟ್ಟಿವೆ ಅಂತ. ಮೊದಲನೇ ವರ್ಷ ಹೇಳ್ಕೊಳೋ ಅಂತ ಮಾರ್ಕ್ಸ್ ಬರಲಿಲ್ಲ. ಎರಡೂ ಸೆಮಿಸ್ಟರ್ ಸೆಕೆಂಡ್ ಕ್ಲಾಸ್‌ನಲ್ಲಿ ಪಾಸ್ ಆಗಿದ್ದೆ. ಮತ್ತೆ ಮತ್ತೆ ಇಂಟರ್‌ವ್ಯೂವ್‌ಗಳಿಗೆ ಹೋಗ್ತಲೇ ಇದ್ದೆ (ಇದೀನಿ). ತುಂಬಾ ಪ್ರಯತ್ನ ಪಟ್ಟ ಮೇಲೆ ಒಂದು ಎಂಜಿನಿಯರಿಂಗ್ ಕನ್ಸಲ್ಟೆನ್ಸಿನಲ್ಲಿ HR Recruiter ಆಗಿ ಸೇರ್‍ದೆ. ಆಗ ಅವಮಾನವಾಗಿದ್ದ ಅದೇ ಕಮ್ಯುನಿಕೇಷನ್ ಆಧಾರದ ಮೇಲೆ ಬೇರೆ ಗ್ರಾಜುಯೇಟ್ಸ್‌ಗಳ ಜೊತೆ ಕಾಂಪೀಟ್ ಮಾಡಿ ಈ ಕೆಲ್ಸ ಪಡ್ಕೊಂಡೆ.

ನಾನೀಗ ಸೆಕೆಂಡ್ ಇಯರ್ ಬಿ.ಕಾಂ.ನಲ್ಲಿದೀನಿ ಆದ್ರೆ ನನ್ನ ಕೆಲಸ ನನ್ನ ಓದಿಗಿಂತ ಮುಂದೆ ಇದೆ. ಈಗ್ಲೂ ಇಂಟರ್‌ವ್ಯೂವ್‌ಗಳಿಗೆ ಹೋಗ್ತಲೇ ಇದೀನಿ. ಎಷ್ಟೋ ಕಡೆ ಸೆಲೆಕ್ಟ್ ಆಗಿದ್ರೂ ನಾನೇ ರಿಜೆಕ್ಟ್ ಮಾಡಿದೀನಿ. ಎಷ್ಟೋ ಸಲ ನನ್ನ qualification ಕಡಿಮೆ ಅಂತ ಅವ್ರೇ ರಿಜೆಕ್ಟ್ ಮಾಡ್ಬಿಡ್ತಾರೆ. ನನಗೆ ಗೊತ್ತು ಇದ್ಯಾವುದು ಸಾಧನೆ ಅಲ್ಲ. ಸಾಧನೆಯ ಮೆಟ್ಟಿಲಿನ ಸಣ್ಣ ಕಲ್ಲೂ ಅಲ್ಲ ಇದು ಬರೀ ನನ್ನ ಮೂರುವರೆ ವರ್ಷಗಳ ಶ್ರಮದ ಸಣ್ಣ ಪ್ರತಿಫಲ. ನನ್ನ ಮುಂದಿನ ಸಾಧನೆಗೆ ಸಣ್ಣ ಪ್ರೇರಣೆ. ನಾನ್ಯಾವತ್ತು ಅಪ್ಪನ್ನ ಕೇಳಿಲ್ಲ ಆದ್ರೆ ನನಗನ್ನಿಸೋದು “ಗಂಡು ಮಗ ಇದ್ದಿದ್ರೆ ಇದಕ್ಕಿಂತ ಹೆಚ್ಚಿದನದೇನಾದ್ರೂ ಮಾಡ್ತಿದ್ದನಾ ಅಪ್ಪ?”

-ಹೇಮಾ ಪವಾರ್


Blog Stats

  • 69,009 hits
ಸೆಪ್ಟೆಂಬರ್ 2021
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 12345
6789101112
13141516171819
20212223242526
27282930