ಕಲರವ

Posts Tagged ‘ಸಡಗರ

 

‘ಸಡಗರ’ ಪತ್ರಿಕೆಯನ್ನು ಪ್ರಕಟಿಸುತ್ತಿದ್ದ ಕಾಲದಲ್ಲಿ ‘ನಾವು ಮಾಡುತ್ತಿರೋದು ಏನು?’, ‘ಇದನ್ನು ಮಾಡುತ್ತಿರುವುದಕ್ಕೆ ಕಾರಣವೇನು?’, ‘ಈ ಕೆಲಸ ನಾವು ಮಾಡದಿದ್ದರೆ ಏನಾದೀತು?’, ‘ಯಾರಿಗಾಗಿ ನಾವು ಈ ಕೆಲಸ ಮಾಡುತ್ತಿರುವುದು?’, ‘ನಮ್ಮ ಕೆಲಸದ ಸಾರ್ಥಕತೆ ಇರುವುದು ಯಾವುದರಲ್ಲಿ?’ ಇಂತಹ ಪ್ರಶ್ನೆಗಳನ್ನು ಎದುರಿಟ್ಟುಕೊಂಡು ಅನೇಕ ಘಂಟೆಗಳನ್ನು ಕಳೆದಿದ್ದೇನೆ. ಒಂಭತ್ತನೆಯ ತರಗತಿಯಲ್ಲಿರುವಾಗ ಪುಟ್ಟದೊಂದು ಪತ್ರಿಕೆಯನ್ನು ಶುರುಮಾಡಿ ರವಿ ಬೆಳಗೆರೆಯ ಅನುಕರಣೆಯಲ್ಲೇ ಖುಶಿ ಅನುಭವಿಸುತ್ತಿದ್ದ ಕಾಲದಿಂದ ಹಿಡಿದು ತೀರಾ ಇತ್ತೀಚಿನವರೆಗೆ, ಪತ್ರಿಕೆ ಎಂಬುದು ನನ್ನ ಐಡೆಂಟಿಟಿಯಾಗಿ ರೂಪುಗೊಳ್ಳುವವರೆಗೆ ನನ್ನನ್ನು ಪದೇ ಪದೇ ಕಾಡುತ್ತಿದ್ದ, ಕಾಡುತ್ತಿರುವ ಪ್ರಶ್ನೆಗಳಿವು.

ಒಂದು ಪತ್ರಿಕೆ ಮಾಡಬೇಕು, ನಾನದರ ಸಂಪಾದಕನಾಗಬೇಕು, ಮುಕ್ಕಾಲು ಪಾಲು ಪುಟಗಳನ್ನು ತುಂಬಿಸುವಷ್ಟು ಬರೆಯಬೇಕು, ಬರವಣಿಗೆಯಲ್ಲಿನ ಕುಸುರಿಯಿಂದ, ಸುಂದರವಾದ ಪದ ಪುಂಜಗಳಿಂದ ಓದುಗರನ್ನು ದಂಗು ಬಡಿಸಬೇಕು, ಆಕರ್ಷಕ ತಲೆ ಬರಹಗಳಿಂದ ಓರಗೆಯ ಹುಡುಗ ಹುಡುಗಿಯರಲ್ಲಿ ಬೆರಗನ್ನು ಹುಟ್ಟಿಸಬೇಕು ಎಂಬ ಮುಗ್ಧ ಹಂಬಲಗಳ ಆಸರೆಯಲ್ಲಿ ಚಿಗುರೊಡೆದ ಪತ್ರಿಕೆಯ ಕನಸು ‘ಉತ್ಸಾಹ’, ‘ಕಲರವ’, ‘ಸಡಗರ’ ಹೀಗೆ ಬಗೆ ಬಗೆಯ ಹೆಸರುಗಳನ್ನು ಪಡೆಯುತ್ತ, ಕೈಬರಹ, ಝೆರಾಕ್ಸ್ ಮಶೀನಿನ ಸಹವಾಸ, ಆಫ್ ಸೆಟ್ ಎಂಬ ಅತ್ಯಾಧುನಿಕ ತಂತ್ರಜ್ಞಾನದ ಸನ್ನಿಧಾನಗಳಿಂದ ರೂಪ ಬದಲಾಯಿಸುತ್ತಾ ಆ ಹೈಸ್ಕೂಲು ಹುಡುಗನ ಮುಗ್ಧ ಹಂಬಲಗಳ ಸುತ್ತ ಬೆಳೆಯತೊಡಗಿತು. ಮುಗ್ಧ ಹುಮ್ಮಸ್ಸಿನಲ್ಲಿ, ಅನುಕರಣೆಯ ಅವಸರದಲ್ಲಿ ಶುರುವಾದ ಪತ್ರಿಕೆ ಕಣ್ಣೆದುರು ಬೆಳೆಯುತ್ತ ಬೆಳೆಯುತ್ತ ನನ್ನಲ್ಲಿ ಅನೇಕ ಪ್ರಶ್ನೆಗಳನ್ನು ಮೂಡಿಸುತ್ತಾ ಹೋಯಿತು.

ಈ ಪತ್ರಿಕೆಯನ್ನು ವ್ಯಾಪಾರದ ಉದ್ದೇಶದಿಂದ ಹೊರ ತಂದಿದ್ದಾಗಿದ್ದರೆರೆ ನನ್ನನ್ನು ಕಾಡುತ್ತಿದ್ದ ಹಲವಾರು ಪ್ರಶ್ನೆಗಳು ನಿವೃತ್ತಿಯನ್ನು ಪಡೆಯುತ್ತಿದ್ದವೇನೋ! ಯಾವುದೇ ಕೆಲಸವನ್ನು ಮಾಡುವುದಕ್ಕೆ ಮನುಷ್ಯನಿಗೆ ಹಣಕ್ಕಿಂತ ದೊಡ್ಡದಾದ ಸ್ಪೂರ್ತಿ ಹಾಗೂ ಉದ್ದೇಶಗಳು ಬಹುಶಃ ಬೇಕಾಗುವುದಿಲ್ಲ. ಹಣದ ಹರಿವು ಇರುವವರೆಗೆ ನಾವು ಮಾಡುವ ಕೆಲಸದ ಉದ್ದೇಶ, ಅದರ ಸಾರ್ಥಕ್ಯದ ಬಗ್ಗೆ ಅಷ್ಟು ಗಂಭೀರವಾದ ಪ್ರಶ್ನೆಗಳನ್ನು ನಮ್ಮನ್ನು ಕಾಡುವುದಿಲ್ಲ. ಹಣದ ಚರಿಷ್ಮಾ ಅಂಥವೆಲ್ಲ ಪ್ರಶ್ನೆಗಳನ್ನು ಅಪ್ರಸ್ತುತವಾಗಿಸಿಬಿಡುತ್ತದೆ. ಹಣದ ಆವಾಹನೆಯಾದೊಡನೆ ಹೆಣವೂ ಜೀವನೋತ್ಸಾಹದಿಂದ ವಿಜೃಂಭಿಸುವಂತೆ ಕಾಣುತ್ತದೆ. ಶವದಲ್ಲಿ ಜೀವದ ಸಂಚಾರದ ಭ್ರಮೆಯನ್ನು ಸೃಷ್ಟಿಸಬಲ್ಲ ಶಕ್ತಿ ಹಣಕ್ಕಿದೆ. ಪತ್ರಿಕೆಯನ್ನು ಮಾರುಕಟ್ಟೆಯಲ್ಲಿನ ರ್ಯಾಟ್ ರೇಸಿಗೆ ಬಿಟ್ಟಿದ್ದರೆ ಬಹುಶಃ ನನ್ನೆಲ್ಲ ಸಾಮರ್ಥ್ಯವನ್ನು, ತಂತ್ರಗಾರಿಕೆ, ಬುದ್ಧಿವಂತಿಕೆ, ಪ್ರತಿಭೆಯನ್ನು ಉತ್ತರವಿಲ್ಲದ ಈ ಮೇಲಿನ ಪ್ರಶ್ನೆಗಳಲ್ಲಿ ವ್ಯಯಿಸದೆ ಏನಾದರೂ ಮಾಡುತ್ತಿರಬಹುದಿತ್ತು. ಸದಾ ಬ್ಯುಸಿಯಾಗಿರುವುದು, ಸದಾ ಓಡುತ್ತಿರುವುದು ನಮ್ಮಲ್ಲಿ ‘ಎಲ್ಲಿಗೆ ಹೋಗುತ್ತಿದ್ದೇವೆ?’ ಎನ್ನುವ ಜಿಜ್ಞಾಸೆಯನ್ನೇ ಅಪ್ರಸ್ತುತವಾಗಿಸಿಬಿಡುತ್ತದೆ. ಇಷ್ಟು ವೇಗದಲ್ಲಿ ಹೋಗುತ್ತಿದ್ದೇವೆ ಎಂದರೆ ಎಲ್ಲಿಗೋ ಹೋಗುತ್ತಲೇ ಇರಬೇಕು ಎಂದು ಭಾವಿಸುತ್ತೇವೆ. ಆದರೆ ಮೊದಲಿನಿಂದಲೂ ನನಗೆ ಆ ಸೌಕರ್ಯ ಲಭಿಸಲಿಲ್ಲ. ಹಣದ ವಿಷಯದಲ್ಲಿ ನಾನು ಹುಟ್ಟಿದಾಗಿನಿಂದ ದಡ್ದನಾಗಿರುವುದಕ್ಕೋ, ಹಣ ನನ್ನನ್ನು ಬಹುಕಾಲ ಮೋಟಿವೇಟ್ ಮಾಡುವ ಶಕ್ತಿಯನ್ನು ಹೊಂದಿಲ್ಲದಿರುವುದಕ್ಕೋ ನಾನು ಪತ್ರಿಕೆಯ ಪ್ರಕಟಣೆಯನ್ನು ಜೇಬಿಗೆ ಹೊರೆಯಾಗುವ ದುಬಾರಿ ಹವ್ಯಾಸವಾಗಿಯೇ ನಡೆಸಿಕೊಂಡು ಬಂದೆ.

ಪತ್ರಿಕೆ ಶುರು ಮಾಡುವುದಕ್ಕೆ ಅಂಧ ಅನುಕರಣೆಯೇ ಪ್ರಮುಖ ಕಾರಣವಾಯಿತಾದರೂ ಅನುಕರಣೆಯ ಹುಮ್ಮಸ್ಸು ಕಡಿಮೆಯಾದ ಮೇಲೆಯೂ ಇದರ ಆವಶ್ಯಕತೆ ಕಂಡಿದ್ದಕ್ಕೆ ನಾನು ಇತರೆ ಕಾರಣಗಳನ್ನು ಕಂಡುಕೊಂಡಿದ್ದೇನೆ. ತಾನು ಜಗತ್ತಿಗೆ ಏನನ್ನೋ ಹೇಳಬೇಕಿದೆ ಎನ್ನುವ ತುಡಿತದ ಕಾರಣದಿಂದಾಗಿಯೇ ಮನುಷ್ಯ ನಾನಾ ಅಭಿವ್ಯಕ್ತಿಗಳನ್ನು ಹುಡುಕಿಕೊಂಡದ್ದು. ಎದೆಯೊಳಗೆ ಹುಟ್ಟಿ ಸರಿದಾಡುವ ರಾಗಕ್ಕೆ ಧ್ವನಿ ನೀಡಿ ಹಾಡಾಗಿಸುವಾಗ, ಕೈಗೆ ಸಿಗದೆ ಅಮೂರ್ತವಾಗಿ ಹರಿದಾಡುವ ಭಾವನೆಗೆ ಶಬ್ಧದ ರೂಪ ಕೊಟ್ಟು ಕವಿತೆಯಾಗಿಸುವಾಗ, ಕಲ್ಪನೆಯಲ್ಲಿ ಆವಿರ್ಭವಿಸಿದ ರೂಪವನ್ನು, ಸೌಂದರ್ಯವನ್ನು ಕ್ಯಾನ್ವಾಸಿನ ಹರವಿನ ಮೇಲೆ ಮೂಡಿಸುವಾಗ ದೊರೆಯುವ ಖುಶಿಗೆ, ಸಂತೃಪ್ತಿಯ ಭಾವನೆಗೆ ಯಾವ ತಾರ್ಕಿಕ ಕಾರಣವನ್ನೂ ನೀಡಲಾಗದು. ಒಂದು ಕವಿತೆಯನ್ನು ಬರೆಯುವಾಗಿನ, ಚಿತ್ರ ಬಿಡಿಸುವಾಗಿನ, ರಾಗದ ಬೆನ್ನು ಬಿದ್ದು ಆಲಾಪಿಸುವಾಗಿನ ರೋಮಾಂಚನಕಾರಿ ಅನುಭವವ ಬೇರಾವ ಕೆಲಸದಲ್ಲೂ ಕಾಣಲಾಗದ ಅಸಹಾಯಕತೆ ಅನುಭವಿಸಿದವರಿಗೇ ಗೊತ್ತು. ಈ ಬಗೆಯ ಸೃಜನಶೀಲತೆಯ ತುಡಿತ ಬರವಣಿಗೆಯನ್ನು ನನಗೆ ನಂಟು ಹಾಕಿದೆ.

ಬರೆಯುವ ಧ್ಯಾನದಲ್ಲಿ ತೊಡಗಿರುವಾಗ ಕಾಡದೆ ಬರೆದು ಮುಗಿಸಿದ ಸಂತೃಪ್ತ ಭಾವನೆಯಲ್ಲಿ ಹೊರಳುವಾಗ ಕತ್ತು ಹಿಸುಕುವ ಪ್ರಶ್ನೆಯೊಂದಿದೆ. ‘ಇದನ್ನೇನು ಮಾಡುವುದು?’ ತಲೆಯಲ್ಲಿದ್ದ ಆಲೋಚನೆಯನ್ನು ಕಂಪ್ಯೂಟರ್ ಪರದೆಯ ಮೇಲೋ, ಕಾಗದದಲ್ಲೋ ಇಳಿಸಿದ ತಕ್ಷಣ ನನ್ನ ಸೃಜನಶೀಲ ತುಡಿತಕ್ಕೆ, ಅಭಿವ್ಯಕ್ತಿಯ ಹಪಹಪಿಗೆ ನ್ಯಾಯದೊರಕಿಸಿದಂತಾಗುತ್ತದೆ. ಆದರೆ ಅಲ್ಲಿಗೆ ಸಂಪೂರ್ಣ ಸಮಾಧಾನ ಸಿಕ್ಕುವುದಿಲ್ಲ. ಮಗು ಹೆತ್ತ ಮಾತ್ರಕ್ಕೆ ಮುಗಿಯದ ಸಂಭ್ರಮದಂಥದ್ದು ಅದು. ಅದನ್ನು ಒಳ್ಳೆಯ ಶಾಲೆಗೆ ಸೇರಿಸಿ, ಅದರ ಬೆಳವಣಿಗೆಗೆ ಉತ್ತಮ ಪರಿಸರ ಸೃಷ್ಟಿಸಿ ಅದರ ಸಾಧನೆ, ಅದು ಪಡೆಯುವ ಮನ್ನಣೆಯಲ್ಲಿ ಸಂತೃಪ್ತಿಯನ್ನು ಕಾಣುತ್ತಾ ಸುಖಿಸುವ ದೀರ್ಘ ಪ್ರಯಾಣವದು. ಬರೆದು ಬಿಸಾಕಿದ ಲೇಖನವನ್ನೋ, ಕವಿತೆ, ಕಥೆಯನ್ನೋ ನಾಲ್ಕು ಜನರೆದುರು ಬೆಳೆಯ ಬಿಟ್ಟಾಗಲೆ ನಿಜವಾದ ಸಾರ್ಥಕ್ಯ ಪಡೆದ ಭಾವ. ಇದು ಕೇವಲ ಸಾಹಿತ್ಯ, ಬರವಣಿಗೆಯ ಬಗ್ಗೆ ರೋಮ್ಯಾಂಟಿಕ್ ಆಗಿ ಆಲೋಚಿಸಿ ಬರೆದ ಮಾತಲ್ಲ. ನಮ್ಮೆಲ್ಲಾ ಕೆಲಸಗಳಲ್ಲೂ, ಸೃಜನಶೀಲ ಚಟುವಟಿಕೆಗಳಲ್ಲೂ ಅಡಗಿರುವ ಸಂಗತಿಯಿದು. ಸಬ್ಜೆಕ್ಟ್ ಮೇಲಿನ ಆಸಕ್ತಿಯಿಂದ ಎಷ್ಟೇ ಓದಿಕೊಂಡರೂ ಪರೀಕ್ಷೆಯಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಸೃಷ್ಟಿಸಿದಾಗ ಕಲಿತ ಸಬ್ಜೆಕ್ಟಿಗೆ ಸಿಕ್ಕುವ ಸಂಪೂರ್ಣತೆಯ ಮೊಹರಿನಂಥದ್ದು ಇದು.

ಏನಾದರೂ ಬರೆಯಲೇ ಬೇಕು, ಅವರ ರೀತಿ ಬರೆಯಬೇಕು, ಅಂಥ ವಿಷಯದ ಬಗ್ಗೆ ಬರೆಯಬೇಕು, ಅದಕ್ಕಿಂತ ಉತ್ತಮವಾಗಿ ಬರೆಯಬೇಕು ಎಂಬ ಉತ್ಸಾಹ, ಹುಮ್ಮಸ್ಸಿನ ಭಾವಗಳೂ, ಇದೆಲ್ಲದರಿಂದ ಉಪಯೋಗವೇನಿದೆ?, ಇದನ್ನು ಸಾಹಿತ್ಯ ಎನ್ನಬೇಕೇ?, ಯಾರು ಓದುತ್ತಾರೆ ಇದನ್ನೆಲ್ಲ… ಎನ್ನುವ ಸಿನಿಕ ಜಿಜ್ಞಾಸೆಗಳೂ ನನ್ನೊಳಗೆ ಹಾಗೂ ನಮ್ಮ ಟೀಮಿನ ಪ್ರತಿಯೊಬ್ಬರೊಳಗೂ ಹೋರಾಡುತ್ತಾ , ಗೆಲ್ಲುತ್ತಾ, ಸೋಲುತ್ತಾ ಉಂಟು ಮಾಡುವ ಪರಿಣಾಮಗಳ ಅಭಿವ್ಯಕ್ತಿಯನ್ನು ನೀವಿನ್ನು ಈ ಬ್ಲಾಗಿನಲ್ಲಿ ಗುರುತಿಸಬಹುದು.

ಬಿಗಿದ ರೋಪಿನ ಮೇಲೆ ನಡೆಯ ಹೊರಟ ಹವ್ಯಾಸಿ ಸಾಹಸಿಗರು ನಾವು. ನಿಮ್ಮ ಒಂದೊಂದೇ ಚಪ್ಪಾಳೆ, ಮಾತಿನಲ್ಲಿನ ಅಭಯ, ಎಡವಿದಾಗ ಒಂದು ಮೃದುವಾದ ಬುದ್ಧಿ ಮಾತು ಇವೆಲ್ಲ ನಮ್ಮೊಳಗಿನ ಕಿಚ್ಚನ್ನು ಬೆಳಗಿಸಿಡುತ್ತವೆ. ನಿಮ್ಮಿಂದ ಇಷ್ಟನ್ನು ಮಾತ್ರ ನಿರೀಕ್ಷಿಸಿದ್ದೇವೆ. ನಮಗೆ ನಿರಾಸೆಯಾಗದು ಎಂಬ ನಂಬಿಕೆ ನಮ್ಮದು!

– ಸಂಪಾದಕ
Editor.sadagara@gmail.com

ಪ್ರತಿ ತಿಂಗಳು ‘ಸಡಗರ’ ಎಂಬ ಹೆಸರಿನಲ್ಲಿ ಮುದ್ದಾಗಿ ಮುದ್ರಣ ಕಂಡು ಹೊರ ಬರುತ್ತಿದ್ದ ನಮ್ಮ ನಾನಾ ಸಾಹಸ, ತುಂಟತನ, ಕ್ರಿಯೇಟಿವಿಟಿ, ತೆವಲುಗಳು ಇನ್ನು ಮುಂದೆ ಎಲೆಕ್ಟ್ರಾನ್ ಹರಿವಿನಲ್ಲಿ ಲೀನವಾಗಿ ಈ ಬ್ಲಾಗಿನಲ್ಲಿ ಬೆಳಕು ಕಾಣಲಿವೆ. ಜೂನ್ ಒಂದರಿಂದ ಪೂರ್ಣ ಪ್ರಮಾಣದಲ್ಲಿ ‘ಕಲರವ’ ಬ್ಲಾಗು ಅರಳಿಕೊಳ್ಳಲಿದೆ. ಎಂದೂ ತೀರದ ನಮ್ಮ ಅಕ್ಷರದ ಮೋಹಕ್ಕೆ ಈ ಬ್ಲಾಗು ಒಂದು ಸಣ್ಣ ಸಮಾಧಾನವನ್ನು ನೀಡುತ್ತದೆ ಎನ್ನುವುದು ನಮ್ಮ ನಂಬಿಕೆ.

ಈ ಯುವ ಮನಸುಗಳ ‘ಕಲರವ’ಕ್ಕೆ ಕಿವಿಗೊಡದಷ್ಟು ನಿಷ್ಕರುಣಿಗಳು ನೀವಲ್ಲ ಎಂಬುದೂ ನಮಗೆ ತಿಳಿದಿದೆ.

– ಸಂಪಾದಕ

‘ಕಲರವ’ ಎಂಬ ಹೆಸರಿನಲ್ಲಿ ಝೆರಾಕ್ಸ್ ಪ್ರತಿಯಾಗಿ ಶುರುವಾದ ನಮ್ಮ ಪತ್ರಿಕೆ ಆಫ್ ಸೆಟ್ ಮುದ್ರಣ ಕಂಡು ಎ-ನಾಲ್ಕು ಸೈಜಿಗೆ ಭಡ್ತಿ ಪಡೆದು ಬೆಳೆದದ್ದು ಸುಂದರವಾದ ಫ್ಲಾಶ್‌ಬ್ಯಾಕಿನಂತೆ ಆಗಾಗ ನಮ್ಮ ಕಣ್ಣ ಮುಂದೆ ಸುಳಿದು ಹೋಗುತ್ತದೆ. ಸುಮಾರು ಇಪ್ಪತ್ತಕ್ಕಿಂತ ಹೆಚ್ಚು ಸಂಚಿಕೆಗಳನ್ನು ಪ್ರಕಟಿಸಿದ ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳಲು ಸಹ ನಮಗೆ ಸಮಯವಾಗಿಲ್ಲ.

ಈ ವರ್ಷಕ್ಕೆ ಕೆಲವು ಹೊಸ ಯೋಜನೆಗಳನ್ನು ಹಾಕಿಕೊಂಡು ಕೆಲಸ ಮಾಡಬೇಕೆಂದಿದ್ದೇವೆ. ಅದರ ಮೊದಲ ಹಂತವಾಗಿ ಹಳೆಯ ಎಲ್ಲಾ ಸಂಚಿಕೆಗಳನ್ನು ಡಿಜಿಟಲೈಸ್ ಮಾಡುವುದು ನಮ್ಮ ಯೋಜನೆ. ಹಳೆಯ ಎಲ್ಲಾ ಸಂಚಿಕೆಗಳನ್ನು ಪಿಡಿಎಫ್ ಪ್ರತಿಯಾಗಿಸಿ ಅಂತರ್ಜಾಲದಲ್ಲಿ ಲಭ್ಯವಾಗಿಸುವುದು ನಮ್ಮ ಮುಂದಿರುವ ಕೆಲಸ. ಜೊತೆಗೆ ಇತ್ತೀಚಿನ ಸಂಚಿಕೆಗಳನ್ನು ಇಳಿಸಿಕೊಳ್ಳಲು ನೀಡಿದ್ದ ಕೊಂಡಿಗಳು ಕೆಲಸ ಮಾಡುತ್ತಿಲ್ಲ ಎಂಬ ಕಂಪ್ಲೆಂಟುಗಳಿವೆ, ಅವನ್ನು ಸರಿ ಪಡಿಸಬೇಕು. ಇನ್ನು ಒಂದು ವಾರದಲ್ಲಿ ಅವನ್ನು ಮುಗಿಸುವ ವಿಶ್ವಾಸ ನಮಗಿದೆ.

ಜೊತೆಗೆ ಈ ತಿಂಗಳ ಸಂಚಿಕೆಯ ತಯಾರಿಯು ಭರದಿಂದ ಸಾಗಿದೆ. ಫೆಬ್ರವರಿ ಎಂಬ ಪುಟ್ಟ ತಿಂಗಳು ನೋಡು ನೋಡುವಷ್ಟರಲ್ಲೇ ಕಳೆದು ಹೋಗುತ್ತಿದೆ. ಎಲ್ಲರೂ ವ್ಯಾಲಂಟೈನ್ ದಿನ, ಪಬ್ಬು-ಮಬ್ಬಿನ ಗಲಾಟೆಯಲ್ಲಿ ಬ್ಯುಸಿಯಾಗಿದ್ದಾರೆ ನಾವು ಲವಲವಿಕೆಯ, ಹೊಸ ಗಾಳಿಯ ಸಂಚಿಕೆಯೊಂದನ್ನು ನಿಮ್ಮ ಮುಂದಿಡುವ ಕನಸು ಕಂಡಿದ್ದೇವೆ.

ಕನ್ನಡದ ಬ್ಲಾಗುಗಳ ಆಗುಹೋಗುಗಳ ಮೇಲೊಂದು ಕಣ್ಣನ್ನಿಟ್ಟು ಅಲ್ಲಿನ ಸತ್ವಯುತವಾದ ಸಂಗತಿಗಳೆಡೆಗೆ ತಮ್ಮ ಪತ್ರಿಕೆಯ ಓದುಗರನ್ನು ಸೆಳೆಯುವ, ಹೊಸತನ್ನು ಪರಿಚಯಿಸುವ ಸಹೃದಯತೆಯಿರುವ ಕನ್ನಡಪ್ರಭದ ‘ಸಾಪ್ತಾಹಿಕ ಪುರವಣಿ’ಯ ಸಂಪಾದಕರು ಜೋಗಿ.
ನಮ್ಮ ಪತ್ರಿಕೆಯ ಬ್ಲಾಗನ್ನು ಪರಿಚಯಿಸಿ ‘ಇಲ್ಲಿಗೀ ಕಥೆ ಮುಗಿಯಿತು’ ಲೇಖನವನ್ನು ಕಳೆದ ರವಿವಾರದ (೧೯-೧೦-೨೦೦೮) ಸಾಪ್ತಾಹಿಕ ಪುರವಣಿಯನ್ನು ಪ್ರಕಟಿಸಿದ್ದಾರೆ. ನಮ್ಮ ಬೆನ್ನು ತಟ್ಟಿದ್ದಾರೆ. ನಮ್ಮ ಹುಮ್ಮಸ್ಸಿನ, ಹುಂಬತನದ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಆ ಮೂಲಕ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದ್ದಾರೆ. ಅವರಿಗೆ ಹಾಗೂ ಕನ್ನಡಪ್ರಭ ಪತ್ರಿಕೆಗ ನಮ್ಮ ಬಳಗದ ಕೃತಜ್ಞತೆಗಳು…

ಕನ್ನಡಪ್ರಭದಲ್ಲಿನ ಸಾಪ್ತಾಹಿಕ ಪುರವಣಿಯ ಅಂತರ್ಜಾಲ ಪುಟವನ್ನು ಇಲ್ಲಿ ನೋಡಬಹುದು. (ಬಹುಶಃ ಇಂಟರ್ನೆಟ್ ಎಕ್ಸ್‌ಪ್ಲೋರರ್‌ನಲ್ಲಿ ಚೆಂದಗೆ ಕಾಣುತ್ತದೆ)

ಆಗಸ್ಟ್ ಹಾಗೂ ಸೆಪ್ಟೆಂಬರ್ ಎರಡೂ ತಿಂಗಳಿಗೆ ಸೇರಿ ಎಂಬಂತೆ ಒಂದೇ ಸಂಚಿಕೆಯನ್ನು ಮಾಡಿದ್ದಕ್ಕಾಗಿ ನಾವು ಅನೇಕರಿಂದ ಆಕ್ಷೇಪಣೆಗಳನ್ನು ಎದುರಿಸಬೇಕಾಯ್ತು. ಆದರೆ ಪರಿಸ್ಥಿತಿಗಳ ಅನಿವಾರ್ಯತೆಯಲ್ಲಿ ನಾವು ಅಸಹಯಾಕರಾಗಿದ್ದೇವೆ ಎಂದು ತಿಳಿಸಲೇಬೇಕು. ಬ್ಲಾಗುಗಳಲ್ಲಿ ಚಿಟಿಕೆ ಹೊಡೆಯುವಷ್ಟರಲ್ಲಿ ಲೇಖನಗಳನ್ನು ಪ್ರಕಟಿಸಿಬಿಡಬಹುದು. ಆದರೆ ಪತ್ರಿಕೆಯನ್ನು ಮುದ್ರಿಸಿ ಅದನ್ನು ಓದುಗರಿಗೆ ತಲುಪಿಸುವ ಕೆಲಸ ತ್ರಾಸದ್ದು. ಮೇಲಾಗಿ ಈ ಪೋಸ್ಟ್ ಆಫೀಸು, ಪ್ರೆಸ್ಸುಗಳೆಲ್ಲಾ ನಮ್ಮ ಕಾಲೇಜು ಸಮಯ ಮುಗಿಯುವುದನ್ನೇ ಕಾಯುತ್ತಿರುವಂತೆ ಮುಂಚಿಕೊಂಡು ಬಿಡುತ್ತವೆ. ನಾವು ನಾನಾ ತರಹದ ಸಾಹಸಗಳನ್ನು ಮಾಡುತ್ತಾ ಪ್ರತಿ ತಿಂಗಳ ಪತ್ರಿಕೆಯ ಕೆಲಸವನ್ನು ಮುಗಿಸಬೇಕು. ಹೀಗಾಗಿ ಇಂಥ ಅಪಸವ್ಯಗಳಾಗುತ್ತಿರುತ್ತವೆ. ಆದರೆ ನಾವು ಎಂದಿಗೂ ಬದಲಾವಣೆಗೆ, ಬೆಳವಣಿಗೆಗೆ, ನಮ್ಮನ್ನು ನಾವು ತಿದ್ದಿಕೊಳ್ಳುವುದಕ್ಕೆ ಬದ್ಧರು.

ಆಗಸ್ಟ್, ಸೆಪ್ಟೆಂಬರ್ ತಿಂಗಳ ಪತ್ರಿಕೆಯ ಪಿಡಿಎಫ್ ಪ್ರತಿಯನ್ನು ಇಲ್ಲಿಂದ ಇಳಿಸಿಕೊಳ್ಳಬಹುದು

ಎಲ್ರಿಗೂ hi,
ಮುಂಚೆ ಕರೆಕ್ಟ್ ಒಂದು ತಿಂಗ್ಳಿಗೆ ಕೈಸೇರುತ್ತಿದ್ದ ‘ಸಡಗರ’ ಆಮೇಲಾಮೇಲೆ ಕುಂಟುತ್ತಾ, ತೆವಳುತ್ತಾ ಹೊರಬರತೊಡಗಿದಾಗ ನಮ್ ಎಡಿಟರ್ ಸಾಹೇಬ್ರು ‘ಸಡಗರ’ವನ್ನ ಎರಡು ತಿಂಗ್ಳಿಗೆ ಒಂದ್ಸಲ ಅಂತ ಮಾಡೋಣ ಅಂದ್ರು. ನಂಗಂತೂ ಭಯಂಕರ ಬೇಜಾರಾಗೋಗಿತ್ತು. ಯಾಕೆಂದ್ರೆ ತಿಂಗ್ಳಿಗೆ ಒಂದ್ಸರಿಯಾದ್ರೂ ನನ್ನ ಕಷ್ಟ ಸುಖಾನ ನಿಮ್ಮ ಜೊತೆ ಹಂಚ್ಕಂತಾ ಇದ್ದೆ. ಎರಡು ತಿಂಗ್ಳವರ್ಗೂ ಕಾಯ್ಬೇಕು ಅಂದ್ರೆ ಕಷ್ಟ ಆಗ್ತಿತ್ತು. ಆ ದೇವ್ರು ನಮ್ ಎಡಿಟರ್ಗೆ ಒಳ್ಳೆ ಬುದ್ಧಿ ಕೊಟ್ಟು ‘ಸಡಗರ’ ತಿಂಗ್ಳಿಗೆ ಒಂದ್ಸರಿ ಮಾಡೋ ಹಂಗೆ ಮಾಡಿದ್ದಾನೆ.

ಈ ಸಲ ಒಂದು practical problemನ ಹೇಳ್ಕಳಣಾ ಅಂತ ಅನ್ನಿಸ್ತಾ ಇದೆ. ಇದು almost ನನ್ನ ಥರಾ ಇರೋ ಏಕಾಂಗಿಗಳಿಗೆ ಅನ್ವಯಿಸಿದ್ದು. ಅಂದ್ರೆ ತಮ್ಮ parentsಗೆ ಒಬ್ನೇ ಮಗ/ಮಗಳು ಇರೋರಿಗೆ. Professional collegeಗೆ ಬಂದ್ಮೇಲೆ ನಮ್ಮ internals ಮುಗಿದ ಮೇಲೋ, exam ಖತಂ ಆದ್ಮೇಲೋ ಮನೆಗೆ ಹೋಗೋದು ಸಾಮಾನ್ಯ. ಆದ್ರೆ ಊರ್‍ನಲ್ಲಿ ನಮ್ಮ friendsಉ ಸಿಗೋದು ತುಂಬಾ ಕಷ್ಟ. ಯಾಕಂದ್ರೆ ಎಲ್ರಿಗೂ ಒಂದೇ ಟೈಂಗೆ ರಜಾ ಇರೋದಿಲ್ಲ. Atleast ಮನೇಲಿ ಅಣ್ಣ ತಮ್ಮಂದಿರೋ, ಅಕ್ಕ ತಂಗಿಯರೋ ಇದ್ರೆ ಅವರ ಜೊತೆ ಜಗಳ ಮಾಡ್ಕಂಡಾದ್ರೂ time pass ಮಾಡ್ಬೋದು. ಅವ್ರೂ ಇರದಿಲ್ಲ ಅಂದ್ರೆ ಮನೆಗೆ ಹೋಗೋದೇ ಬೇಜಾರಾಗ್ಬಿಡುತ್ತೆ. ಯಾಕಂದ್ರೆ hostelನಲ್ಲಿದ್ದೋರ್‍ಗಂತೂ ಯಾರಾದ್ರೂ ಜೊತೆಗಿದ್ರೆ ಒಂದು ಥರ ‘ಹಿತ’ ಇರುತ್ತೆ ಅಲ್ವಾ?

ಕೆಲೂರು ಕೇಳ್ಬೋದು, “ಮಗಾ! ಮನೇಲಿ ಅಪ್ಪ-ಅಮ್ಮ ಇರ್ತಾರೆ. ಅವ್ರ ಜೊತೆ time pass ಮಾಡ್ಬೋದಲ್ಲ ” ಅಂತ. ಒಪ್ಕೊಂತೀನಿ. ಆದ್ರೆ ನಾನೇ ಅನುಭವಿಸಿದ ಒಂದು factಉ ಹೇಳ್ತೀನಿ. ಕೇಳಿ, ಪ್ರತಿ time ನಾನು ಮನೆಗೆ ಹೋದಾಗ, next morning ನಂದು ನಮ್ಮಮ್ಮಂದು ಒಂದು ಮುಖಾಮುಖಿ ಮಾತುಕತೆ ಇರುತ್ತೆ. ನಾನು ನನ್ನ problemsನ ಹೇಳ್ಕಂತೀನಿ. ಅವ್ಳು ಅದಕ್ಕೆ ತಕ್ಕ suggestionsಉ, promisesಉ ಎಲ್ಲ ಕೊಡ್ತಾಳೆ. ಮತ್ತೆ ನಾನೂ ಅವ್ಳ ಕಷ್ಟಾನೂ ಅಲ್ಪ ಸ್ವಲ್ಪ ಕಿವಿಗೆ ಹಾಕ್ಕಂಡು ಸಾಂತ್ವಾನ ಕೊಡ್ತೀನಿ. ನಂತರ every discussions end uo in past. ಮಾತಾಡ್ತಾ, ಮಾತಾಡ್ತಾ sudden ಆಗಿ ನಿಮ್ಮಪ್ಪ ಹಂಗಿದ್ರು, ನಿಮ್ಮಾವ ಹಿಂಗ್ಮಾಡ್ದ, ನಿಮ್ಮ ಚಿಕ್ಕಪ್ಪ ಸರಿಯಿಲ್ಲ, ನಿಮ್ಮ ದೊಡ್ಡಪ್ಪ ಪೋಲಿ ಅಂತ ಎರ್ರಾಬಿರ್ರಿ ಬಯ್ಯಾಕೆ start ಮಾಡಿತ್ತಕ್ಷಣ ನಾನು silent ಆಗಿ ಎಸ್ಕೇಪು! ಅಪ್ಪನಾದ್ರೂ ಏನ್ಮಾಡ್ತಾರೆ, ಒಂದಿಷ್ಟು advices, ಅದೂ-ಇದೂ ಅಂತ ಕೊಡ್ತಾರೆ. ಹೆಚ್ಚಂದ್ರೆ ಎರಡು ಅರ್ಥ ಇರೋ ಜೋಕು ಮಾಡ್ತಾರೆ. ಹೆಚ್ಚೇನು ಮಾಡಕ್ಕಾಗುತ್ತೆ?

So, ಮನೆಗೆ text books ಒಯ್ತೀನಿ, ಅಲ್ಲಿ ಓದ್ತೀನಿ ಅಂದ್ರೆ ಸತ್ರೂ ಆಗಲ್ಲ. ಚಿತ್ರ ಬರೀತೀನಿ, poems ಬರೀತೀನಿ ಅಂದ್ರೆ ಮನಸ್ಸು ಬರಲ್ಲ. ಹೊರಗೆ ಹೋಗಿ ‘ಕಣ್ಣು ತಂಪು’ ಮಾಡ್ಕಂಡು ಬರಣಾ ಅಂದ್ರೆ ಅಂಕಲ್ ಇದ್ದೋರು, “ಎರಡು ದಿನಕ್ಕೋಸ್ಕರ ಮನೆಗೆ ಬಂದಿದ್ದೀಯ, ಸುಮ್ನೆ ಹೊರಗೆ ತಿರುಗಾಡಿ ಯಾಕೆ ಸುಸ್ತು ಮಾಡ್ಕಂತೀಯ?” ಅಂತ dialogue ಹೊಡೆದ ತಕ್ಷಣ, ಹೊರ ಹೊಮ್ಮುತ್ತಿರುವ josh ಎಲ್ಲ ಮಾಯ! ಟಿ.ವಿ.ನಾದ್ರೂ ಎಷ್ಟು ಅಂತ ನೋಡೋದು. ನಮ್ಮನ್ನ ನೋಡಿ ಆ ಟಿ.ವಿ.ಗೇ ಬೇಜಾರಾಗಿಬಿಡುತ್ತೆ. ‘ದೇವದಾಸ್ ನನ್ಮಗ! ನಂಗೆ ಹಿಂದೆ ಕರೆಂಟ್ ಚುಚ್ಚಿ ಅದೆಷ್ಟು ಮಜಾ ತಗೊಂತಾನೆ.’ ಅಂತ ಆನ್ ಮಾಡಿದ್ರಿಂದ off ಮಾಡೋ ತನಕಾ ಉರ್ಕೊಂತಾ ಇರುತ್ತೇನೋ!

ಇನ್ನು, ಯಾರ್ದೋ ಮನೇಲಿ function ಇದೆ ಅಂತ ನಮ್ಮನ್ನ ಹೋರಿ ಥರ ಅಲ್ಲಿಗೆ ಎಳ್ಕಂಡೋದ್ರೆ, ಅಲ್ಲಿ ನೋಡ್ದೋರೆಲ್ಲ, ಯಾರನ್ನೋ interview ಮಾಡೋಥರ, “ಏನ್ರೀ, ನಿಮ್ಮಗಾನಾ? ಎಷ್ಟೆತ್ತರ ಆಗ್ಬಿಟ್ಟಿದ್ದಾನೆ. ಏನಪ್ಪಾ? ಏನ್ ಮಾಡ್ತಿದ್ದೀಯಾ? ಯಾವೂರು? ಯಾವ ವರ್ಷ? ಇನ್ನೂ ಎಷ್ಟು ವರ್ಷ? ಮುಂದೇನು? ಚೆನ್ನಾಗಿ ಓದ್ತಾ ಇದೀಯಾ? Exam ಯಾವಾಗ?” ಕಸ-ಕಡ್ಡಿ ಎಲ್ಲಾನೂ ಕೇಳ್ತಾರೆ. Silly questionsಉ. ‘ಎಷ್ಟೆತ್ತರ ಬೆಳೆದುಬಿಟ್ಟಿದ್ದಾನೆ, ಮುಂಚೆ ಎಷ್ಟು ಸಣ್ಣಕ್ಕಿದ್ದ’ ಏನು, ಎಲ್ರೂ ಸಣ್ಣಕೇ ಇರೋಕಾಗುತ್ತಾ? ನಮ್ಮ exam ಬಗ್ಗೆ ನಮಗಿಂಥಾ ಅವ್ರಿಗೇ ಹೆಚ್ಚು interestಉ. ಒಬ್ರಿಬ್ರಲ್ಲ, ಅಲ್ಲಿರೋರು ಎಲ್ರೂ ಹಿಂಗೇ. ಒಂದು board ನೇತಾಕ್ಕಂಬೇಕು ಅನ್ನಿಸ್ಬಿಟ್ಟಿರುತ್ತೆ. ಆ function Hall middleನಲ್ಲಿ ನಿಂತ್ಕಂಡು ಜೋರಾಗಿ ಅರುಚ್ಕೊಂಡು biodata ಹೇಳಣಾ ಅನ್ನಿಸುತ್ತೆ. ಅಟ್ಟಿಸ್ಕೊಂಡು ಬಂದು ಬಗ್ಗಿಸಿ ಬಾರ್ಸಿದ್ರೆ ಅಂತ ಭಯ.

ಇನ್ನು ಊರಿಗೆ ಹೋದ್ರೆ ಇನ್ನೂ ಮಜಾ. ಅಮ್ಮ ಇದ್ದೋಳು “ಎಲ್ರ ಮನೆಗೆ ಹೋಗಿ ಒಮ್ಮೆ ಮುಖ ತೋರಿಸ್ಕಂಡು ಬಾ” ಅಂತ ಆಜ್ಞೆ ಕೊಟ್ಟ ತಕ್ಷಣ, ಹೊರಡೋದು. ಪ್ರತಿ ಒಬ್ರ ಮನೇಲೂ ಅರ್ಧರ್ಧ ಗಂಟೆ ಸುಮ್ನೆ ಮುಖ-ಮುಖ ನೋಡ್ಕಂಡು ಕುಂತ್ಕಂಡ್ರೆ, ಕೊನೇಗೆ ಅವ್ರು ಕಾಫಿ ಕೊಟ್ರೆ ಹೋಗ್ತಾನೆ ಅಂತ sketch ಹಾಕ್ಕಂಡು ಒಂದು ದೊಡ್ಡ ಲೋಟದಲ್ಲಿ ಕಾಫಿ ಕೊಡ್ತಾರೆ. “ಚೆನ್ನಾಗಿ ಓದ್ಕೋ. ನಿಮ್ಮ ಆ ಬದ್ಮಾಶ್ ಚಿಕ್ಕಪ್ಪಂಗೆ ನೀನೇನು ಅಂತ ತೋರಿಸ್ಬೇಕು.’’ ಅಂತ ಒಂದು ಜ್ವಾಲೆ ಹೊತ್ತಿಸಿ ಬೀಳ್ಕೊಡ್ತಾರೆ. ಎಲ್ರ ಮನೇಲೂ ಅದೇ tank size ಲೋಟದಲ್ಲಿ coffee ಕುಡ್ದೂ ಕುಡ್ದೂ blood ಎಲ್ಲಾ decoction ಆಗ್ಬಿಟ್ಟಿರುತ್ತೆ.

ಮನೆಗೆ ಹೋದ್ರೆ ‘ಎರಡು ಮೂರು ದಿನಕ್ಕೆ’ ಅಂತ ಹೋಗೋದು. ಏನಕ್ಕೆ ಹೋಗೋದು ಅಂದ್ರೆ relaxationಗೆ ಅಂತ. Change of work is rest ಅಂತಾ ಹೇಳ್ತಾರೆ. But ಈ ರೀತಿ ಆದ್ರೆ, no work no rest. ನಾನು ತುಂಬಾ ಜನರತ್ರ discuss ಮಾಡಿದ್ದೀನಿ. ಆದ್ರೆ ಇನ್ನೂ ನಂಗೊಂದು idea ಸಿಕ್ಕಿಲ್ಲ. “ಏನೋ ಮನೆಗೋಗಿ ಏನ್ ಮಾಡೋದು ಅಂತೀಯ? ನಾಚಿಕೆ ಆಗಲ್ವಾ waste body. Enjoy ಮಾಡೋ’ ಅಂತ ಬಾಯಿಗೆ ಬಂದಂಗೆಲ್ಲ suggestion ಕೊಟ್ಟಿದ್ದಾರೆ. ಅವ್ರು ಮಾಡೋದು ಅಷ್ಟೇ. Content ಇಲ್ದಂಗೆ ಕುಯ್ಯಕ್ಕೆ ಹೇಳ್ಕೊಡ್ಬೇಕಾ?

So, at last; one request. At least ನಿಮ್ಮಲ್ಲೇ ಯಾರಾದ್ರೂ ಒಬ್ಬ ಪುಣ್ಯಾತ್ಮ “ಹಿಂಗೆ ಮಆಡು ತಮ್ಮಾ, ಬದುಕ್ಕಂಟೀಯ” ಅಂತ ಉತ್ತಮ ದಾರಿ ತೋರಿಸಿ ಕೊಟ್ರೆ “ಗುರುವೇ, ಶರಣು” ಅಂತ surrender ಆಗ್ಬಿಡ್ತೀನಿ. ಅಂತಹ golden wordsನ ನಮ್ಮ ಎಡಿಟರ್ ಸಾಹೇಬ್ರು ನನ್ನ ಕಾಲಂನ ಸ್ವಲ್ಪ ಸ್ಪೇಸಿನಲ್ಲಿ ತುಂಬುಸ್ತಾರೆ. ನನ್ನ ಪಿಟೀಲಿನ ಜೊತೆ ನಿಮ್ದು ಸ್ವಲ್ಪ remix ಇರ್ಲಿ. ಮತ್ತೊಂದು ವಿಸ್ಯ. ಈ ರೀತಿ problemಗಳು ತುಂಬಾ ಇರ್ತಾವೆ. ಅದ್ನ ನಮ್-ನಮ್ಮಲ್ಲೇ discuss ಮಾಡ್ಕಂಡು, ಒಳ್ಳೊಳ್ಳೇ ideas ಜೊತೆ ಮೇಲೆ ಬಂದ್ರೆ, ಇಂಥ ಚಿಕ್ಕ ವಿಷಯಗಳೇ ಮುಂದೆ ನಿಮ್ಮ ನಸೀಬನ್ನು ಬದಲಾಯಿಸಬಹುದು. Great people do the same normal work differently. ಹಂಗಂತ ಏನೇನೋ ಮಾಡ್ಬೇಡಿ. ಕೈ ಜೊತೆ ಮೈ ಕೂಡ ಸುಟ್ಟೋಗತ್ತೆ. Ok! So, think on every bit of work you do, ಇಷ್ಟೋತ್ತಂಕ ನನ್ನ ಭಾಷಣ ಬಿಗಿಸಿಕೊಂಡಿದ್ದಕ್ಕೆ ಧನ್ಯವಾದ.

Meet you in the next issue, Bye.

ನಿಮ್ಮ ಪ್ರೀತಿಯ
ಮಚೆಂಪು

ಟ್ಯಾಗ್ ಗಳು: , ,

ಆಗಸ್ಟ್ ಸಂಚಿಕೆಯ ತಯಾರಿ

ಜುಲೈ ಸಂಚಿಕೆಯನ್ನು ಮುಗಿಸಿ ಕೊಂಚ ದಣಿವಾರಿಸಿಕೊಂಡು ಆಗಸ್ಟ್ ತಿಂಗಳ ಸಂಚಿಕೆಯ ತಯಾರಿಗೆ ಕೈ ಹಾಕಿದ್ದೇವೆ. ಆಗಸ್ಟ್ ಸಂಚಿಕೆಯ ಮುಖಪುಟದ ವಿಷಯ ‘ಸ್ವಾತಂತ್ರ್ಯ’.
ಸ್ವಾತಂತ್ರ್ಯ ಎಂದರೇನು? ೧೯೪೭ ಆಗಸ್ಟ್ ಹದಿನೈದರಂದು ನಾವು ಪಡೆದದ್ದು ಯಾವ ಬಗೆಯ ಸ್ವಾತಂತ್ರ್ಯ? ಇದನ್ನೇನಾ ನಮ್ಮ ನಾಯಕರು, ಸ್ವಾತಂತ್ರ್ಯ ಹೋರಾಟಗಾರರು ಆಶಿಸಿದ್ದು. ಈ ಸ್ವಾತಂತ್ರ್ಯಕ್ಕೇನಾ ನಮ್ಮ ದೇಶದ ಲಕ್ಷಾಂತರ ಮಂದಿ ಯುವಕ-ಯುವತಿಯರು ಪ್ರಾಣ ತೆತ್ತಿದ್ದು? ನಾವು ನಿಜಕ್ಕೂ ಈಗ ಸ್ವತಂತ್ರರೇ? ನಿಜವಾದ ಸ್ವಾತಂತ್ರ್ಯವೆಂದರೆ ಹೇಗಿರಬೇಕು? ಸ್ವತಂತ್ರ ಭಾರತದಲ್ಲಿ ಪ್ರಜೆಗಳ ಚೇತನ, ಆತ್ಮಶಕ್ತಿ ಎಷ್ಟು ಸ್ವತಂತ್ರ?

ಈ ವಿಚಾರಗಳನ್ನು ಮೂಲವಾಗಿಟ್ಟುಕೊಂಡು ಈ ಸಂಚಿಕೆಯನ್ನು ರೂಪಿಸುತ್ತಿದ್ದೇವೆ. ನಿಮ್ಮ ಸಲಹೆ, ಅಭಿಪ್ರಾಯಗಳಿಗೆ ಸ್ವಾಗತ.

ಟ್ಯಾಗ್ ಗಳು: , ,

ಕೊಂಚ ತಡವಾದರೂ ಜುಲೈ ತಿಂಗಳ ಪತ್ರಿಕೆಯನ್ನು ರೆಡಿ ಮಾಡಿ ಆಗಿದೆ. ಇದು ನಮ್ಮ ಪ್ರತಿ ತಿಂಗಳ ದಿಗ್ವಿಜಯ! ಈ ತಿಂಗಳ ಸಂಚಿಕೆಯ ಪಿಡಿಎಫ್ ಪ್ರತಿಗಾಗಿ ಇಲ್ಲಿ ಚಿಟುಕಿಸಿ.

ಜುಲೈ ತಿಂಗಳ ಸಂಚಿಕೆ ತಯಾರಾಗಿದೆ. ಮುಖಪುಟ ಹಾಗೂ ಹಿಂಬದಿಯ ರಕ್ಷಾಪುಟ ಇಲ್ಲಿವೆ. ಹೇಗಿದೆ ಅಂತ ಹೇಳಿ… ಅಂಗೈ ತೋರಿಸಿ ಅವಲಕ್ಷಣ ಅನ್ನಿಸಿಕೊಂಡ ಹಾಗಾಗುತ್ತಾ ಎಂಬ ಭಯ ನನ್ನದು!

ಟ್ಯಾಗ್ ಗಳು: , , ,

Blog Stats

  • 69,005 hits
ಸೆಪ್ಟೆಂಬರ್ 2021
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 12345
6789101112
13141516171819
20212223242526
27282930