Posts Tagged ‘ಶಕ್ತಿಮಾನ್’
ನನ್ನ ಅರ್ಜಿಗೆ ಇನ್ನೂ ಉತ್ತರ ಬಂದಿಲ್ಲ!
Posted ಜುಲೈ 15, 2009
on:- In: ಮೇರಿ ಮರ್ಜಿ
- 3 Comments
– ರೇಶ್ಮಾ ನಾರಾಯಣ, ಉಡುಪಿ
ಅವನು ನಮ್ಮ ಪುಟ್ಟ ಜಗತ್ತಿಗೆ ಅದ್ಭುತ ಹೀರೋ ಆಗಿದ್ದ
ನಾನು ಪ್ರೈಮರಿಯಲ್ಲಿದಾಗ ಟಿ.ವಿ ಯಲ್ಲಿ ಶಕ್ತಿಮಾನ್ ಅಂತ ಒಂದು ಧಾರಾವಾಹಿ ಬರ್ತಿತ್ತು. ನನ್ನ ಥರಾನೇ ಎಲ್ಲ ಮಕ್ಕಳೂ ಇಷ್ಟ ಪಡ್ತಿದ್ದ ಧಾರಾವಾಹಿ ಅದು. ಪ್ರತಿ ಆದಿತ್ಯವಾರ ಮಧ್ಯಾನ್ ೧೨ ಗಂಟೆಗೆ ಬರ್ತಿದ್ದ ಧಾರಾವಾಹಿ ನೋಡ್ಕೊಂಡು ಹೋಗಿ, ಸೋಮವಾರ ಬೆಳಿಗ್ಗೆ study periodನಲ್ಲಿ ಫ್ರೆಂಡ್ಸ್ ಜೊತೆ ಅದರ ಬಗ್ಗೆ ಪಾಠಕ್ಕಿಂತ ಸೀರಿಯಸ್ ಆಗಿ ಚರ್ಚೆ ಮಾಡ್ತಿದ್ವಿ. ಆಕಸ್ಮಾತ್ ಧಾರಾವಾಹಿ ಬರೋ ಟೈಮಲ್ಲಿ ಕರೆಂಟ್ ಇಲ್ಲದಿದ್ರೆ ಮಾತ್ರ ಕೆ. ಇ ಬಿ ಯವರಿಗೆ ಮನಸಾರೆ ಶಾಪ ಹಾಕುತ್ತಿದ್ವಿ. ಕರೆಂಟ್ ಇದ್ದ ಒಂದು ದಿನಾನೂ ’ಶಕ್ತಿಮಾನ್’ ನ ಮಿಸ್ ಮಾಡ್ಕೊಂಡಿರಲಿಲ್ಲ. ಶನಿವಾರನೇ ಹೋಂವರ್ಕ್ ಮುಗಿಸಿ ಕುಳಿತಿರುತ್ತಿದ್ವಿ.
ಆ ಒಂದು ಗಂಟೆಯ ಅವಧಿ ನಮ್ಮ ಪಾಲಿಗೆ ಅತೀ ಪ್ರಿಯವಾಗಿರ್ತಿತ್ತು. ಆ ಟೈಂ ನಲ್ಲಿ ಊಟಕ್ಕೆ ಕರೆದರೂ ನಾವು ಕೇಳಿಸದಂತೆ ಕೂತಿರ್ತಿದ್ವಿ. ಶಕ್ತಿಮಾನ್ ಪಾತ್ರಧಾರಿ ಮುಖೇಶ್ ಖನ್ನಾ ಹಾಕಿಕೊಳ್ತಿದ್ದ ಆ ಕೆಂಪು ಜಾಕೆಟ್, ಅದರ ನಡುವಿನ ಗೋಲ್ಡ್ ಕಲರ್ ಸ್ಟಾರ್ ಎಲ್ಲಾ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಶಕ್ತಿಮಾನ್ ಟ್ಯಾಟ್ಟೂ ಗಳನ್ನಂತೂ ರಾಶಿ ರಾಶಿ ಒಟ್ಟು ಮಾಡಿ ಪುಸ್ತಕ, ಕಂಪಾಸ್ ನ ಮೇಲೆಲ್ಲಾ ಅಂಟಿಸುತ್ತಿದ್ವಿ. ದ್ವಿಜ್ ಎಂಬ ಬಾಲಕನ ಕೈಯಲ್ಲಿನ ಆ ಟೈಮ್ ಮಶೀನ್ ಕನಸಲ್ಲೂ ನಮ್ಮನ್ನು ಕಾಡುತ್ತಿತ್ತು. ಅವನು ಅಲ್ಲಿ ರಾಕ್ಷಸರ ಜೊತೆ ಹೋರಾಡುತ್ತಿದ್ದರೆ ನಾವು ಇಲ್ಲಿ ಕುಳಿತು ನಾವೇ ಹೊಡೆದಾಡ್ತಿದ್ದೀವಿ ಅನ್ನೋ ಥರ ಆಡ್ತಿದ್ವಿ.
ಶಕ್ತಿಮಾನ್ ನ ’ಪಂಡಿತ್ ಗಂಗಾಧರ್ ವಿದ್ಯಾಧರ್ ಮಾಯಾಧರ್ ಓಂಕಾರನಾಥ್ ಶಾಸ್ತ್ರಿ’ ಅನ್ನೋ ಡೈಲಾಗ್ ಅಂತೂ ಫೇವರೀಟ್ ಆಗಿತ್ತು. ಅದರಲ್ಲಿನ ಗಿಲ್ ವಿಶ್ ಅನ್ನೋ ರಾಕ್ಷಸ ಕೈ ಬೆರಳುಗಳನ್ನು ತಿರುಗಿಸೋ ರೀತಿ ಭಯಾನಕವಾಗಿರ್ತಿತ್ತು. ಮಾತಾಡಿದ್ದಕ್ಕೆ ಹೆಸರು ಬರೆದು ಟೀಚರ್ ಗೆ ಕೊಟ್ಟ ನಮ್ಮ ಕ್ಲಾಸ್ ನ ಒಬ್ಬ ಹುಡುಗನಿಗೆ ’ಗಿಲ್ ವಿಶ್’ ಅಂತ ಹೆಸರಿಟ್ಟು ಬೇಕಾದಷ್ಟು ಬೈದು ಸಿಟ್ಟು ತೀರಿಸ್ಕೋತಿದ್ವಿ. ರಜೆಯಲ್ಲಿ ಶಕ್ತಿಮಾನ್ ಆಟ ಆಡೋವಾಗ ’ನಾನಾಗ್ತೀನಿ.. ತಾನಾಗ್ತೀನಿ’ ಅಂತ ಗಲಾಟೆ ಮಾಡಿ ಕೊನೆಗೆ ಆಟ ಜಗಳದಲ್ಲಿ ಮುಗಿದಿರ್ತಿತ್ತು. ಅದರ ಕ್ರೇಜ್ ಎಷ್ಟಿತ್ತು ಅಂದರೆ ಅದು ಮುಗಿದಾಗ, ’ಪುನಃ ಮೊದಲಿನಿಂದನಾದ್ರೂ ತೋರಿಸ್ಬೇಕಿತ್ತು’ ಅಂದುಕೊಂಡಿದ್ವಿ. ಶಕ್ತಿಮಾನ್ ಥರಾನೇ ಮಹಡಿ ಮೇಲಿಂದ ಹಾರೋಕೆ ಹೋಗಿ ಒಬ್ಬ ಹುಡುಗ ಬಿದ್ದು ಪ್ರಾಣ ಕಳೆದುಕೊಂಡ ಅಂತ ಗೊತ್ತಾದಾಗ ತುಂಬಾ ಬೇಜಾರಾಗಿತ್ತು. ಶಕ್ತಿಮಾನ್ ನ ಹಾಗೇ ನಂಗೂ ಅದ್ಭುತವಾದ ಶಕ್ತಿ ಕೊಡು ಅಂತ ದೇವರಿಗೆ ಹಾಕಿದ ಅರ್ಜಿಗೆ ಅವನ ಕಡೆಯಿಂದ ಇನ್ನೂ ಉತ್ತರ ಬಂದಿಲ್ಲ.
ಇತ್ತೀಚಿನ ಟಿಪ್ಪಣಿಗಳು