ಕಲರವ

Posts Tagged ‘ಲಹರಿ

ಹಾಗೆ ನೋಡಿದರೆ ಬೇಸರಿಸಿಕೊಳ್ಳಲು ಕಾರಣಗಳೇ ಬೇಕಿಲ್ಲ. ಬೆಳಿಗ್ಗೆ ಹಾಲಿನವನು ಬರದೇ ರಜೆ
ಹಾಕಿದರೂ ಮನಸ್ಸು ಮುದುಡುತ್ತದೆ.ಗೋಡೆಗೆ ನೇತು ಹಾಕಿದ ಕ್ಯಾಲೆಂಡರ್ ನ್ನು ಕಂಡರೂ ಸಾಕು,
ಇಷ್ಟು ವಯಸ್ಸಾದರೂ ಎನೂ ಸಾಧಿಸದೇ ಹೋದೆನಲ್ಲಾ ಎಂಬುದು ಕೂಡ ಸಾಕು ಮನಸ್ಸು ಬೇಸರಿಸಿ
ಮನದ ಚಿಪ್ಪೊಳಗೆ ಅವಿತು ಕುಳಿತುಕೊಳ್ಳಲು!       

ಈ ಥರದ ಬೇಸರದ ಗಳಿಗೆಗಳು ಬಹುಶಃ ಪ್ರತಿ ವರುಷದ ಹುಟ್ಟುಹಬ್ಬದ ದಿನ ತಪ್ಪದೇ ಕಾಡುತ್ತದೆ.
ಹಾಗೆ ಅಲೋಚಿಸಿದರೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬಾರದು,pen-and-paper
ಎರಡು ನಿಮಿಷದ ಮೌನ ಆಚರಣೆ ಮಾಡಬೇಕು!

ಅದೇನೆ ಇರಲಿ. ಇಂತಹ ಮುದುಡಿದ ಮನವ ಅರಳಿಸಲು ನಾನು ಮೊರೆ ಹೋಗುವುದು ಪುಸ್ತಕಗಳಿಗೆ.   ಕೆಲವೊಂದು ವ್ಯಕ್ತಿಗಳಿಗೆ.ಸುಮ್ಮನೆ ಅರೆಗಳಿಗೆ ನೆನೆದುಕೊಂಡರೂ ಸಾಕು ಮನ ಪುಟಿದೆದ್ದ ಚೆಂಡು.
ಪ್ರತಿ ಮನುಷ್ಯನೊಳಗೂ ಅದಮ್ಯ ಪ್ರತಿಭೆಯ ಊಟೆಯಿರುತ್ತದೆ.ಪ್ರತಿದಿನವೂ ಸ್ವಲ್ಪ ಹೆಚ್ಚು ಕಷ್ಟಪಟ್ಟರೆ
ಅದನ್ನು ಹೊರತರಬಹುದು.ಸ್ವರ್ಗ-ನರಕಗಳೆನ್ನುವುದಿದ್ದರೆ ಸತ್ತ ನಂತರದ ಬದುಕೆನ್ನುವುದಿದ್ದರೆ ಅದನ್ನು ನಿರ್ಧರಿಸುವುದು ನಮ್ಮೊಳಗಿನ
ಪ್ರತಿಭೆಯನ್ನು ಎಷ್ಟರಮಟ್ಟಿಗೆ ಉಪಯೋಗಿಸಿದೆವು ಅನ್ನುವುದರ ಮೇಲೆ ಮಾತ್ರ ಅಂತ ಗಾಢ ವಾಗಿ
ನಂಬುವವನು ನಾನು.  ಹೀಗಾಗಿ ಎನೂ ಸಾಧಿಸಲಿಲ್ಲ ಎಂಬ ವಿಷಯ ಬೇರೆಲ್ಲದಕ್ಕಿಂತ ಹೆಚ್ಚು ಆಳವಾಗಿ ಕಾಡಿಸುವ
ವಿಚಾರ ನನ್ನ ಪಾಲಿಗೆ. ಆದ್ದರಿಂದ ಈ ವಿಷಯದ ನಾಸ್ಟಾಲ್ಜಿಯ ಆಗಾಗ್ಗೆ ಹಸಿವಿನಂತೆ ಕಾಡುತಿರುತ್ತದೆ.
ಇದಕ್ಕೆ ಮದ್ದಾಗಿ ಕೆಲ ಸಲ ಯಂಡಮೂರಿ ಪುಸ್ತಕಗಳನ್ನು ಓದುತಿರುತ್ತೇನೆ. ಗುರಿ ಏನಂತ ನಿರ್ಧರಿಸುವುದರಲ್ಲಿ,
ಗುರಿಯತ್ತ ಹೆಜ್ಜೆಯಿಡುವತ್ತ ನಿಜವಾದ ನೆಮ್ಮದಿ ಸಂತೃಪ್ತಿ ಏನೆಂದು ತಿಳಿದುಕೊಳ್ಳಲು ಇದು ಬಹಳ ಸಹಾಯಕಾರಿ.
ಅದೂ ಅಲ್ಲದೇ ಸ್ಟೀಫನ್ ಹಾಕಿಂಗ್, ಹೆಲೆನ್ ಕೆಲ್ಲರ್ ನೀಲ್ ಆರ್ಮ್ ಸ್ಟ್ರಾಂಗ್ ಅಂತವರು ಜೀವನದಲ್ಲಿ ನಡೆದು
ಬಂದ ಹಾದಿಯನ್ನು ನೆನೆದುಕೊಂಡರೂ ನಿಮ್ಮಲ್ಲಿ ಜೀವನದೆಡೆಗೆ ಅನಂತ ಉತ್ಸಾಹ ಉಕ್ಕದಿದ್ದರೆ ನನ್ನಾಣೆ!

ಕಡು ಬಡತನದಲ್ಲಿದ್ದ ಉಪೇಂದ್ರ ಕನ್ನಡ ಚಿತ್ರರಂಗದಲ್ಲಿ ನೆಲೆ ನಿಂತ ಪರಿ, ಪದ್ಮನಾಭನಗರದ ರೂಮೊಂದರಲ್ಲಿ
ಕುಳಿತು ಕನ್ನಡದ ಲಕ್ಷ ಲಕ್ಷ ಜನರಿಗೆ ಪ್ರೇರಣೆ ನೀಡುತಿರುವ ಬೆಳಗೆರೆಯ ಬರಹಗಳು ಇವೆಲ್ಲವೂ ಹೇಳುವುದೊಂದೇ,
“ನೀನು ಏರಬೇಕೆಂದಿರುವ ಎತ್ತರ ನೀನು ಈಗಿರುವ ಸ್ಥಿತಿಯಲ್ಲಿಲ್ಲ… ನಿನ್ನ ಮನದೊಳಗಡೆ ನೀನಿರಿಸಿಕೊಂಡಿರುವ
ಎತ್ತರಕ್ಕಿಂತಲೂ ಮಿಗಿಲಾಗಿ ಎಷ್ಟು ಎತ್ತರ ಏರಬಲ್ಲೆ ಎಂಬುವ ಉತ್ಸಾಹದಲ್ಲಿ ಮತ್ತು ಅದರೆಡೆಗೆ ಹೋಗುವ ಶ್ರಧ್ದೆಯಲ್ಲಿದೆ”

ಇಂತಹ ಬದುಕು-ಬರಹಗಳು ನಮ್ಮನ್ನು ಒಳಗಿಂದ ದಿನೇ ದಿನೇ ಬೆಳೆಸುತ್ತಿರುವಾಗ ಇನ್ನು ಬೇಸರವೆಲ್ಲಿಯದು?
ಶ್ರಧ್ದೆ ಅಂಕಿತಭಾವಗಳು ತಮ್ಮ ಬ್ರಹ್ಮಾಂಡ ರೂಪ ಪ್ರದರ್ಶಿಸಬೇಕಾದರೆ ಗುಬ್ಬಚ್ಚಿಯಾಕಾರದ ಬೇಸರ ತಾನೆ
ಏನು ಮಾಡಬಲ್ಲದು?!

ಬೈಕಿಗೆ
ನೂರು ಅಶ್ವದ
ಉನ್ಮಾದ
ಒಳಗಿನ
ಚೈತನ್ಯಕ್ಕೆ
ದಿವ್ಯ
ಆಲಸ್ಯ

ಗೋಡೆಯ
ಗಡಿಯಾರದಲ್ಲಿ
ಮುಳ್ಳುಗಳ ದುಡಿಮೆ
ಕೈಗಳಿಗೆ
ಸಂಕೋಲೆಯಲ್ಲದ
ಬೇಡಿ

ದಿನ ಪತ್ರಿಕೆಗೆ
ಎಲ್ಲಾ ಗೊತ್ತೆಂಬ
ಉಡಾಫೆ
ಕಣ್ಣುಗಳಿಗೆ
ರೆಪ್ಪೆ ಬಡಿಯಲೂ
ನಿರಾಸಕ್ತಿ

ಅಡುಗೆ ಮನೆಗೆ
ಬೆಲೆವೆಣ್ಣಿನ
ವಯ್ಯಾರ
ಹೊಟ್ಟೆಗೆ
ಸದ್ದು ಮಾಡದ
ಎಚ್ಚರ

ಕಿಟಾರೆನ್ನುವ
ಬೀದಿಯಲ್ಲಿನ
ಆಟೋ
ಸುಮ್ಮನಿರು
ಮಗು ಮಲಗಿದೆ
ಎಂಬ ಉತ್ತರ

ಕಾಗದದ
ಎದೆಯಲ್ಲಿ
ಅಕ್ಷರದ ಸಂತೆ
ಕವಿಗೆ
ಏನೆಂದು
ಹೆಸರಿಡುವ ಚಿಂತೆ.

– ‘ಅಂತರ್ಮುಖಿ’

lahari.png

ವಿಪರೀತ ಮಾತನಾಡುತ್ತಿದ್ದೇನಾ ಎಂಬ ಸಂಶಯ ಮೂಡುತ್ತದೆ. ಅನೇಕ ವೇಳೆ ಆತಂಕಕ್ಕೂ ಒಳಗಾಗುತ್ತೇನೆ. ಯಾರಾದರೂ ಮುಖಕ್ಕೆ ಹೊಡೆದಂತೆ ‘ಮಾತು ಜಾಸ್ತಿ ಆಯ್ತು. ಮಾತು ಕಡಿಮೆ ಮಾಡಿ ಕೆಲಸ ಜಾಸ್ತಿ ಮಾಡಬೇಕು’ ಎಂದು ಬಿಡುವರೋ ಎಂದು ಗಾಬರಿಯಾಗುತ್ತದೆ. ಹಾಗೆ ಬೈಸಿಕೊಳ್ಳಬಾರದು ಎಂದು ಎಚ್ಚರಿಕೆ ತೆಗೆದುಕೊಳ್ಳೋಣ ಎಂದು ಯೋಚಿಸುತ್ತಾ ಕುಳಿತರೆ, ಮಾತು ಎಷ್ಟು ಆಡಬೇಕು ಎಂದು ಯೋಚಿಸುವುದೇ ಒಂದು ಕೆಲಸವಾಗಿ ಗಾಬರಿ ಇಮ್ಮಡಿಯಾಗುತ್ತದೆ.

ನಾನು ಬರೆಯೋದಕ್ಕೆ ಶುರು ಮಾಡಿ ತುಂಬಾ ದಿನವಾಯ್ತು ಎಂಬ ಭ್ರಮೆ ಇದೆ. ಬರೆಯುವಾಗ, ಬರೆಯಬೇಕೆಂದು ಆಲೋಚಿಸಿದಾಗ ನನ್ನಲ್ಲಿ ಹುಟ್ಟುವ ಹುರುಪು, ಮೆಲ್ಲಗೆ ಅಕ್ಷರಗಳು ಮೂಡುತ್ತಾ ಹೋದಾಗ ಸಿಕ್ಕುವ ನಿರಾಳತೆ, ಮನಸ್ಸಿನ ಹಗ್ಗದಲ್ಲಿನ ಒಂದೊಂದೇ ಗಂಟುಗಳು ಬಿಚ್ಚಿಕೊಳ್ಳುತ್ತಾ ಹೋದಂತಾಗುವಾಗ ಸಿಕ್ಕುವ ಅನುಭೂತಿ, ಹುತ್ತಗಟ್ಟುವ ತಾಳ್ಮೆ ಕೈಗೂಡದಾಗ ಮೂಡುವ ಸಿಡಿಮಿಡಿ ಎಲ್ಲವನ್ನೂ ಅನುಭವಿಸುವಾಗ ಬೆರಗು ಮೂಡುತ್ತದೆ. ಒಮ್ಮೆ ಬೆರಗು ಹುಟ್ಟಿದ ಮೇಲೆ ಸುಮ್ಮನಿರಲಾಗುವುದಿಲ್ಲ. ಅದನ್ನು ಯಾರಲ್ಲಾದರೂ ಹೇಳಿಕೊಳ್ಳಬೇಕು ಅನ್ನಿಸುತ್ತದೆ. ಕಾಲ ತೊಡೆ ಗಾತ್ರದ ಟೆಕ್ಸ್ಟ್ ಬುಕ್ಕುಗಳಲ್ಲಿ ತಲೆಯನ್ನು ಹುದುಗಿಸಿ ಸೈಂಟಿಫಿಕ್ ಕ್ಯಾಲ್ಸಿಗೆ ಆಕ್ಯುಪಂಚರ್ ಮಾಡುವಂತೆ ಲೆಕ್ಕ ಮಾಡುತ್ತಾ ಕುಳಿತ ಗೆಳೆಯರಿಗೆ ಬರೆಯುವಾಗಿನ ಸುಖ, ಅನುಭವಿಸುವ ಟ್ರಾನ್ಸ್‌ನ ಬಗ್ಗೆ ಹೇಳಲು ಹೋದರೆ, ಮುಖ ಮುಖ ನೋಡಿ ‘ಹುಶಾರಾಗಿದ್ದೀಯಲ್ವಾ?’ ಎಂದು ಕೇಳುತ್ತಾರೆ. ರಾತ್ರಿ ಸರಿಯಾಗಿ ನಿದ್ದೆ ಮಾಡಿಲ್ವಾ ಎಂದು ನನ್ನ ಯೋಗಕ್ಷೇಮದ ಬಗ್ಗೆ ಕಾಳಜಿ ತೋರಿಸುತ್ತಾರೆ. ಸಂಜೆ ಬೀದಿ ಬದಿಯಲ್ಲಿ ಕುಳಿತು ಕಾಫಿ ಹೀರುವಾಗ ಗೆಳೆಯರ ಗುಂಪಿಗೆ ನನ್ನ ಸಂಭ್ರಮವನ್ನು ಹೇಳಿಕೊಳ್ಳೋಣವೆಂದರೆ ಗುಂಪಿನ ಸ್ಪೇಸನ್ನು ಕಮಲ್‌ನ ದಶಾವತಾರಂ, ಆಪಲ್‌ನ ಐಫೋನು, ಮಹೇಶ್ ಭಟ್‌ನ ಸಿನೆಮಾ ಆವರಿಸಿರುತ್ತದೆ. ಕೇಳಲು ಯಾರೂ ಸಿಕ್ಕದಿದ್ದರೆ ಒಳಗಿನ ಸಂಭ್ರಮ ಎಲ್ಲಿ ಸತ್ತು ಹೋಗುಬಿಡುತ್ತದೋ ಎಂದು ಆತಂಕವಾಗಿ ಲ್ಯಾಪ್ ಟಾಪ್‌ನ ರೆಪ್ಪೆ ಬಿಡಿಸಿ ಕುಟ್ಟ ತೊಡಗುತ್ತೇನೆ. ಯಾರೋ ಬರೆದ ಕಥೆ ಮೌನವನ್ನು ಕರೆತಂದು ಮನಸ್ಸಿನೊಳಕ್ಕೆ ಕೂರಿಸಿದಾಗ, ಯಾವುದೋ ಪದ್ಯದ ಸಾಲುಗಳು ಆಳದಲ್ಲೇನನ್ನೋ ಕದಲಿಸಿದಂತಾದಾಗ ಮೂಡಿದ ಅನುಭೂತಿಯನ್ನು ಅಕ್ಷರಕ್ಕಿಳಿಸಿಬಿಟ್ಟರೆ ಅದು ಸದಾ ಹಸಿರಾಗಿರುತ್ತೇನೋ ಎನ್ನುವ ಭ್ರಮೆ ನನ್ನದು. ಅಕ್ಷರಕ್ಕೆ ನನ್ನೊಳಗೇ ಅಸ್ತಿತ್ವ ಇರುವುದು ಅನ್ನೋದು ಮರೆತಂತಾಗುತ್ತದೆ. ಬರೆದಾದ ನಂತರ ಅದನ್ನು ಬ್ಲಾಗಿನಲ್ಲೋ, ಪತ್ರಿಕೆಯಲ್ಲೋ ವಿಜೃಂಭಿಸಿದ ಮೇಲೆ ನಾನೆಲ್ಲೋ ಅಕ್ಷರದ ಬೆಲೆವೆಣ್ಣಿಗೆ ಮರುಳಾಗಿ ಒಳಗಿನ ಸಂಭ್ರಮವನ್ನು ಹೊರಕ್ಕೆ ಕಳುಹಿಸಿಬಿಟ್ಟೆನಾ ಎಂದು ನಾಚಿಕೆಯಾಗುತ್ತದೆ.

‘ಈ ವಯಸ್ಸಿನವರು ಹೇಗಿರಬೇಕೋ ಹಾಗಿರು. ಇದೆಲ್ಲಾ ಕಥೆ, ಕವಿತೆ ಅದನ್ನ ಮುಂದೆ ನೋಡಿಕೊಳ್ಳಬಹುದು.’ ಎಂದು ಮನೆಯಲ್ಲಿ ಹೇಳಿದಾಗೆಲ್ಲಾ ‘ಕಥೆ , ಕವಿತೆ ಬರೆಯುವುದು, ಸುಮ್ಮನೆ ಒಂದು ಹೂವನ್ನು ನೋಡುತ್ತಾ ಗಂಟೆ ಗಟ್ಟಲೆ ಪಾರ್ಕಿನಲ್ಲಿ ಕುಳಿತುಕೊಳ್ಳುವುದು ಯಾವ ವಯಸ್ಸಿನಲ್ಲಿ?’ ಎಂದು ಕೇಳಬೇಕನ್ನಿಸುತ್ತದೆ. ಕಲೆ ಕೊಡುವ ತಾದಾತ್ಮ್ಯದ ಮೇಲಿನ ಮೋಹವನ್ನು ವಿವರಿಸಿ ಹೇಳುವುದು ಹೇಗೆ ಅನ್ನಿಸುತ್ತದೆ. ಯಾಕೆ ಯಾರಿಗೂ ನನ್ನನ್ನು ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ ಎಂದು ಕಿರಿಕಿರಿಯಾಗುತ್ತದೆ. ಎಲ್ಲರ ಮೇಲೂ ಕೋಪ ಬರುತ್ತದೆ. ಕೆಲವೊಮ್ಮೆ ನನ್ನ ಬಗ್ಗೆಯೇ ಜಿಗುಪ್ಸೆ ಮೂಡಿಬಿಡುತ್ತದೆ. ಬಹುಶಃ ಪ್ರೇಮಿಗಳಿಗೂ ಇಂಥದ್ದೇ ಅನುಭವವಾಗುತ್ತದೆಯೇನೋ, ಪ್ರೀತಿಯೂ ಒಂದು ಕಲೆಯೇನೋ ಎಂಬ ಅನುಮಾನ ಮೂಡುತ್ತದೆ.

ಇದೆಲ್ಲವುಗಳಿಗಿಂತಲೂ ನನಗೆ ವಿಪರೀತ ಆಶ್ಚರ್ಯವಾಗುವುದು ‘ಬರೆಯೋದರಿಂದ ನನಗೇನು ಲಾಭವಾಗುತ್ತಿದೆ?’ ಎಂಬ ಪ್ರಶ್ನೆ ನನ್ನಲ್ಲಿ ಮೂಡಿದಾಗ. ಆ ಕ್ಷಣದಲ್ಲಿ ಕಥೆ ಓದುವಾಗ ಅನುಭವಿಸಿದ ತನ್ಮಯತೆ, ಕವಿತೆ ಕಣ್ಣಲ್ಲಿ ಹುಟ್ಟಿಸಿದ ಮಿಂಚು ಎಲ್ಲವೂ ನಗಣ್ಯವಾಗಿ ಕಂಡುಬಿಡುತ್ತದೆ. ಇದೆಲ್ಲಾ ಯಾತರ ಸಹವಾಸ ಎನ್ನಿಸಿಬಿಡುತ್ತದೆ. ಸುಮ್ಮನೆ ಎಷ್ಟೋಂದು ಸಮಯ ವ್ಯರ್ಥವಾಗಿ ಕಳೆದುಬಿಟ್ಟೆನಲ್ಲಾ ಎಂಬ ಗಿಲ್ಟ್ ಮೂಡುತ್ತದೆ. ಇದೆಲ್ಲಾ ಬಿಟ್ಟು ಸುಮ್ಮನೆ ನನ್ನ ಕಾಲೇಜು, ನನ್ನ ಕೆರಿಯರ್ರು ಅಂತ ಗಮನ ಹರಿಸಬೇಕು ಎಂಬ ವಿವೇಕ ಕಾಣಿಸಿದ ಹಾಗಾಗುತ್ತದೆ. ಪ್ರೀತಿಯಲ್ಲಿ ಬಿದ್ದು ಕ್ಲಾಸಿನಲ್ಲಿ ಫರ್ಸ್ಟ್ ರ್ಯಾಂಕ್ ಕಳೆದುಕೊಂಡವ ಚಡಪಡಿಸಿದ ಹಾಗೆ ಚಡಪಡಿಸುತ್ತೇನೆ. ಕೆಲವು ದಿನ ಪ್ರೀತಿಯನ್ನೇ ದ್ವೇಷಿಸಬೇಕು, ಪ್ರೀತಿಸಿದವರನ್ನು ನೋಯಿಸಬೇಕು ಎಂಬಂಥ ವಿಲಕ್ಷಣ ಭಾವ ಹುಟ್ಟಿಬಿಡುತ್ತದೆ. ಹಾಸ್ಟೆಲ್ಲಿನಲ್ಲಿ ರೂಂ ಮೇಟು ನಿರಾಳವಾಗಿ ಗೊರಕೆ ಹೊಡೆಯುತ್ತಿರುವಾಗ, ನಿದ್ದೆ ಬರದೆ ನರಳಾಡುವಂಥ ಪಾಪ ನಾನೇನು ಮಾಡಿದ್ದೇನೆ ಎಂದು ಖಿನ್ನನಾಗುತ್ತೇನೆ.

‘ಆಹಾ ಎಂಥಾ ಮಧುರ ಯಾತನೆ..’ ಅನ್ನೋ ಸಾಲು ಅದಿನ್ಯಾವ ಯಾತನೆಯಲ್ಲಿ ಹುಟ್ಟಿತೋ ಎಂದು ಅಚ್ಚರಿಯಾಗುತ್ತೇನೆ!

– ‘ಅಂತರ್ಮುಖಿ’

ಕೆಂಪು… ಹಳದಿ… ಮೂರು…ಎರಡು…ಒಂದು, ಬಿತ್ತು ಹಸಿರು! ಬಾಗಿಲ ಸಂದಿನಲ್ಲಿ ಇಲಿಯ ಚಲನವಲನವನ್ನೇ ಏಕಾಗ್ರಚಿತ್ತದಿಂದ ನೋಡುತ್ತಾ ನಿಂತ ಬೆಕ್ಕು ಗಕ್ಕನೆ ಅದರ ಮೇಲೆ ಜಿಗಿದಂತೆ ಬಸ್ಸು ಮುನ್ನುಗ್ಗಿತು.ಹಾಲಿನ ಪಾಕೀಟನ್ನು ಒಮ್ಮೆಗೇ ಅತ್ತಿಂದಿತ್ತ ಅಲಾಡಿಸಿದಾಗ ಒಳಗಿನ ಹಾಲು ಅತ್ತಿತ್ತ ಅಲ್ಲಾಡುವ ಹಾಗೆ ಬಸ್ಸಿನಲ್ಲಿದ್ದ ಜನರು ಮುಂದಕ್ಕೂ ಹಿಂದಕ್ಕೂ ಒಲಾಡಿದರು. ಇದ್ಯಾವುದೂ ವಿಶೇಷವಲ್ಲವೆಂಬಂತೆ ಎಲ್ಲರೂ ಮತ್ತೆ ಚಲಿಸುವ ಬಸ್ಸಿನ ಲಹರಿಗೆ ಹೊಂದಿಕೊಳ್ಳುತ್ತಿದ್ದರೆ ಅಗೋ ಅಲ್ಲಿ ಎದುರುಗಡೆ ಬಲ ಬದಿಯ ಎರಡನೆಯ ಸಾಲಿನಲ್ಲಿ ಕುಳಿತಿರುವ ಪುಟ್ಟ ತಾಯಿಯ ಮಡಿಲಲ್ಲಿ ಬೆಚ್ಚನೆಯ ಬಟ್ಟೆ ಸುತ್ತಿಕೊಂಡು ಪವಡಿಸಿರುವ ಮಗುವಿಗೆ ಮಾತ್ರ ಏನಾಯಿತೋ ಎಂಬ ಉದ್ವೇಗ. ಬಸ್ಸು ಸಿಗ್ನಲ್ಲಿನಲ್ಲಿ ನಿಂತಾಗ, ಹಸಿರು ಬಿದ್ದು ಒಮ್ಮೆಗೇ ಮುಂದಕ್ಕೆ ಚಿಮ್ಮಿದಾಗಲೆಲ್ಲಾ ಆ ಪುಟ್ಟ ಮಗುವಿನ ಮಿನುಗುವ ಕಣ್ಣುಗಳಲ್ಲಿ ಜಗತ್ತಿನ ಬೆರಗೆಲ್ಲಾ ಮನೆ ಮಾಡಿಕೊಂಡಂತಹ ನೋಟ.

ಆ ತಾಯಿ ಹಾಗೂ ಮಗುವಿನ ಪಕ್ಕದ ಸೀಟಿನಲ್ಲಿ ಕಿಟಕಿಗೆ ತಲೆಯಾನಿಸಿ ಮಲಗಿದಂತೆ ನಟಿಸುತ್ತಿರುವ ಕಾಲೇಜು ಹುಡುಗಿ ಗಮನವೆಲ್ಲಾ ಇರುವುದು ತನ್ನ ಮೊಬೈಲೆಂಬ ಪುಟ್ಟ ಯಂತ್ರದ ಮೇಲೆ. ನಿರ್ಜೀವವಾದ ಆ ಪುಟ್ಟ ಉಪಕರಣ ಆ ಕ್ಷಣ ಅವಳ ಭಾವುಕತೆ, ನಿರೀಕ್ಷೆ, ಉನ್ಮಾದಗಳಿಗೆ ಕಾರಣವಾಗಿದೆ. ಆ ಉಪಕರಣ ಹೊತ್ತು ತರುವ ಆಕೆಯ ಇನಿಯನ ಸಂದೇಶ, ಅದಕ್ಕೆ ಒಂದಿನಿತೂ ವಿಶೇಷವಾಗಿ ಕಾಣದಿದ್ದರೂ ಆಕೆಯಲ್ಲಿ ನೂರಾರು ಭಾವಗಳ ಕಡಲನ್ನೇ ಉಕ್ಕಿಸುತ್ತದೆ. ಆಕೆಯ ಕೈಯಲ್ಲಿ ಆ ಒರಟು ಉಪಕರಣ ಸಹ ಕೋಮಲವಾದ ಹಂಸವಾಗಿ ಜನ್ಮ ತಾಳುತ್ತಿದ್ದೆ. ಆಕೆಯ ಸಂದೇಶವನ್ನು ಹೊತ್ತು ಆಕೆಯ ಇನಿಯನತ್ತ ಹಾರುವ ಹಂಸ ಪಕ್ಷಿಯಾಗುತ್ತಿದೆ. ಆದರೆ ಈ ಯಾವ ಮನೋ ವ್ಯಾಪಾರದ ಚಿಕ್ಕ ಸುಳಿವೂ ಅಕ್ಕ ಪಕ್ಕವಿದ್ದವರಿಗೆ ಸಿಕ್ಕದ ಹಾಗೆ ಎಚ್ಚರ ವಹಿಸುವುದು ಆಕೆಯ ಮುಖಕ್ಕೆ ಅಭ್ಯಾಸವಾಗಿಹೋಗಿದೆ. ಆದರೂ ಹಿಂದೆ ಕಂಬಿ ಹಿಡಿದು ನೇತಾಡುವವನಂತೆ ನಿಂತಿರುವ ಹುಡುಗನಿಗೆ ಇದೆಲ್ಲಾ ಗೊತ್ತಾಗುತ್ತಿದೆ ಎಂಬುದನ್ನು ನಾಲ್ಕನೆಯ ಸಾಲಿನಲ್ಲಿ ಕುಳಿತ ವಯಸ್ಕರೊಬ್ಬರು ಊಹಿಸುತ್ತಿದ್ದಾರೆ.

ಇತ್ತ ಹಿಂದುಗಡೆಯಿಂದ ಎರಡನೆಯ ಸಾಲಿನಲ್ಲಿರುವ ಸೀಟಿಗೆ ಆತುಕೊಂಡು ನಿಂತಿರುವ ಯುವಕ ಕಿವಿಗೆ ಸಿಕ್ಕಿಸಿಕೊಂಡಿರುವ ಹ್ಯಾಂಡ್ಸ್ ಫ್ರೀಯಲ್ಲಿ ಯಾರೊಂದಿಗೋ ಹರಟುತ್ತಿದ್ದಾನೆ. ಆತನ ಉಡುಗೆಯಲ್ಲಿರುವ ನಾಜೂಕು, ಆತನ ಪರ್‌ಫ್ಯೂಮಿನ ಪರಿಮಳ ಇಲ್ಲಿ ಕೊನೆಯ ಸೀಟಿನಲ್ಲಿರುವ ನನ್ನ ಗಮನವನ್ನೂ ಸೆಳೆಯುವಂತಿದೆ. ಮೂರ್ನಾಲ್ಕು ಪದರದಷ್ಟು ಧೂಳು ಬಸ್ಸಿನ ಫ್ಲೋರಿನ ಮೇಲಿದ್ದರೂ ಆತನ ಶೂ ಒಂದಿನಿತೂ ಕೊಳಕಾಗದೆ ಹೊಳೆಯುತ್ತಿರುವುದನ್ನು ಆತನ ಎದುರಿನ ಸೀಟಿನಲ್ಲಿ ಕುಳಿತಿರುವ ಸ್ಕೂಲು ಹುಡುಗ ಬೆರಗಿನಿಂದ ನೋಡುತ್ತಿದ್ದಾನೆ. ಬಸ್ಸು ಮಾರ್ಕೆಟಿನ ಬಳಿ ಹಾದು ಹೋದರೂ ಫೋನಿನಲ್ಲಿ ಮಾತನಾಡುತ್ತಿರುವ ಆ ಯುವಕನ ಧ್ವನಿ ಕೇಳುವುದಿಲ್ಲ. ನನ್ನ ಪಕ್ಕದಲ್ಲಿ ಕುಳಿತ ದಢೂತಿ ವ್ಯಕ್ತಿಯೊಬ್ಬರು ಅಬ್ಬರಿಸುವ ಧ್ವನಿಯಲ್ಲಿ ಇಡೀ ಬಸ್ಸಿಗೇ ಕೇಳುವಂತೆ ತನ್ನ ವ್ಯಪಾರದ ಬಗ್ಗೆ ಮಾತನಾಡುತ್ತಿರುವುದನ್ನು ಆ ನಾಜೂಕಿನ ಯುವಕ ತಿರಸ್ಕಾರ ಬೆರೆತ ನೋಟದಲ್ಲಿ ಗಮನಿಸುತ್ತಿದ್ದಾನೆ. ಆ ಸ್ಕೂಲು ಹುಡುಗನ ಬೆರಗಿನ್ನೂ ಕಡಿಮೆಯಾದಂತೆ ಕಾಣುವುದಿಲ್ಲ.

ನಾಜೂಕು ಯುವಕನ ಮುಂದೆ ನಿಂತಿರುವ ಮತ್ತೊಬ್ಬ ಯುವಕ ಬಸ್ಸಿನ ಕಿಟಕಿಯಿಂದ ತೂರಿಬರುವ ಗಾಳಿಗೆ ಕೆಟ್ಟುಹೋಗುತ್ತಿರುವ ತನ್ನ ಕ್ರಾಪನ್ನು ತನ್ನ ಬೆರಳುಗಳಿಂದಲೇ ತೀಡಿಕೊಳ್ಳುತ್ತಿದ್ದಾನೆ. ಆಗಾಗ ತನ್ನ ಬಲ ಪಕ್ಕದಲ್ಲಿ , ಮುಂದಿನ ಸಾಲಿನಲ್ಲಿ ಸಂಜೆವಾಣಿ ಓದುತ್ತಾ ಕುಳಿತಿರುವ ಬೋಳುತಲೆಯ ಅಂಕಲ್‌ನ್ನು ನೋಡುತ್ತಾನೆ. ಮತ್ತೆ ಕಿಟಕಿಯಾಚೆ ಕಣ್ಣು ಹಾಯಿಸುತ್ತಾನೆ. ಚಡಪಡಿಸುವವನಂತೆ ಸುತ್ತಲೂ ಒಮ್ಮೆ ಕಣ್ಣು ಹಾಯಿಸುತ್ತಾನೆ, ಹುಡುಗಿಯರ್ಯಾರಾದರೂ ಹತ್ತಿಕೊಂಡರಾ ಎಂದು ಬಾಗಿಲ ಬಳಿ ನೋಡುತ್ತಾನೆ. ಮೊದಲ ಸಾಲಿನಲ್ಲಿ ಕಿಟಕಿಗೆ ತಲೆಯಾನಿಸಿ ಎಫ್.ಎಂ ಕೇಳುತ್ತಾ ಕಣ್ಣು ಮುಚ್ಚಿಕೊಂಡಿರುವ ಮಾಡರ್ನ್ ಆಂಟಿಯ ಹರವಿದ ಕೂದಲ ನಡುವೆ ಆಕೆಯ ಮುಖವನ್ನು ನೋಡುವ ಪ್ರಯತ್ನ ಮಾಡುತ್ತಾನೆ, ಅದರಲ್ಲೇ ಕೆಲ ಕಾಲ ಮೈ ಮರೆಯುತ್ತಾನೆ. ಮೈತಿಳಿದು ಏಳುತ್ತಿದ್ದಂತೆಯೇ ತಾನು ಹಾಗೆ ನೋಡುತ್ತಿದ್ದದ್ದನ್ನು ಯಾರಾದರೂ ನೋಡಿಬಿಟ್ಟರಾ ಎಂಬಂತೆ ಸುತ್ತಲೂ ಕಣ್ಣು ಹಾಯಿಸುತ್ತಾನೆ. ನಾನು ಆತನ ಕಣ್ಣು ತಪ್ಪಿಸುವವನಂತೆ ಕಿಟಕಿಯಿಂದ ಹೊರಗೆ ನೋಡುತ್ತೇನೆ. ಆತ ಮತ್ತೆ ಒಮ್ಮೆ ಆ ಆಂಟಿಯನ್ನು ನೋಡಿ ಆಕೆಯನ್ನು ತನ್ನಂತೆಯೇ ಯಾರಾದರೂ ನೋಡುತ್ತಿದ್ದಾರಾ ಎಂದು ಅತ್ತಿತ್ತ ಪರೀಕ್ಷಿಸುತ್ತಾನೆ. ಈ ನಡುವೆ ಮತ್ತೊಮ್ಮೆ ಕ್ರಾಪನ್ನು ತೀಡಿಕೊಂಡು ಅಸಹನೆಯಿಂದ ಪೇಪರ್ ಓದುತ್ತಿದ್ದ ಅಂಕಲ್ ಕಡೆಗೆ ತಿರುಗುತ್ತಾನೆ. ಬಿಟ್ಟಿ ಪೇಪರ್ ಸಿಕ್ಕಿಬಿಟ್ಟರೆ ಜನರಿಗೆ ಅದೇನು ಓದಿನ ಮೋಹ ಹತ್ತಿಬಿಡುತ್ತೋ ಎಂದು ಮನಸ್ಸಿನಲ್ಲೇ ಗೊಣಗಿಕೊಂಡು ಸುಮ್ಮನಾಗುತ್ತಾನೆ.

ನನ್ನೆದುರು ಸಾಲಿನ ಸೀಟಿನಲ್ಲಿ ಕುಳಿತ ಮುದುಕನೊಬ್ಬ ರಾಮ ರಕ್ಷಾ ಸ್ತೋತ್ರದ ಪಾಕೆಟ್ ಸೈಜಿನ ಪುಸ್ತಕ ಹಿಡಿದುಕೊಂಡು ಮಣಮಣಿಸುತ್ತಿದ್ದಾನೆ. ಆತನ ಮತ್ತೊಂದು ಕೈಲಿರುವ ಕೈಚೀಲದಲ್ಲಿ ಪಂಚಾಂಗದಂತೆ ಕಾಣುವ ಒಂದೆರಡು ಪುಸ್ತಕಗಳಿವೆ. ಪ್ರತಿ ಸಲ ಬಸ್ಸು ಗಕ್ಕನೆ ನಿಂತಾಗಲೂ ಆ ಮುದುಕ ಕಿಟಿಪಿಟಿ ಮಾಡುತ್ತಾ, ತನ್ನ ತಲೆಗೆ ತಾಕುತ್ತಿದ್ದ ಇಂಜಿನಿಯರಿಂಗ್ ಕಾಲೇಜು ಹುಡುಗನ ಬ್ಯಾಗನ್ನು ದೂಡುತ್ತಾ ಆತನ ಮೇಲೆ ಹುಸಿ ಸಿಟ್ಟು ಮಾಡಿಕೊಳ್ಳುತ್ತಾ ಸ್ತೋತ್ರವನ್ನು ಗುನುಗುತ್ತಿದ್ದಾನೆ. ಆತನ ಪಕ್ಕದಲ್ಲಿ ಕುಳಿತ ಹುಡುಗ ಸೀಟಿಗೆ ಬೆನ್ನು ಕೊಟ್ಟು ಬಾಯ್ತೆರೆದು ಆಳವಾದ ನಿದ್ರೆಯಲ್ಲಿ ಮುಳುಗಿದ್ದಾನೆ. ಇನ್ನೂ ಎರಡು ನಿಮಿಷವಾಗಿಲ್ಲ ಆತನಿಗೆ ಸೀಟು ಸಿಕ್ಕು, ಆಗಲೇ ಹೆಂಗೆ ಗೊರಕೆ ಹೊಡೆಯುತ್ತಿದ್ದಾನಲ್ಲ ಎಂದುಕೊಳ್ಳುತ್ತಾ ಬೆವರೊರೆಸಿಕೊಳ್ಳುತ್ತಿದ್ದಾನೆ ಮುಂದೆ ನಿಂತ ಇಂಜಿನಿಯರಿಂಗು ಹುಡುಗ.

ಇಷ್ಟು ಮನೋವ್ಯಾಪಾರದ ಗದ್ದಲದ ನಡುವೆಯೇ ರೂಢಿಸಿಕೊಂಡ ಮೌನದಲ್ಲಿ ನಾನು ಯೋಚಿಸುತ್ತಿದ್ದೇನೆ. ಈ ಯಕಶ್ಚಿತ್ ಸಿಟಿ ಬಸ್ಸು ನನಗ್ಯಾಕೆ ಕಾಡುತ್ತಿದೆ? ಚಲಿಸುವ ಈ ಸೂರಿನಡಿ ಅದೆಷ್ಟು ಜೀವಗಳು ಅಲೆದಾಡುತ್ತವೆಯೋ, ಅದೆಷ್ಟು ಭಾವನೆಗಳು ವಿಲೇವಾರಿಯಾಗುತ್ತವೆಯೋ, ಅದೆಷ್ಟು ಕನಸುಗಳು, ನೋವು -ನಿರಾಸೆಗಳು, ಹುರುಪು- ಉತ್ಸಾಹಗಳು, ಅಸಹನೆ- ಅಂಜಿಕೆಗಳು ಓಡಾಡಿಕೊಂಡಿರುತ್ತವೆಯೋ! ಈ ಬಸ್ಸಿಗೆ ಅವುಗಳ ಬಗ್ಗೆ ಯಾವ ಬೆರಗೂ ಇಲ್ಲ. ಅದಂತೂ ನಿರ್ಜೀವಿ, ಆದರೆ ರಕ್ತ ಮಾಂಸ, ಮಜ್ಜೆ ತುಂಬಿಕೊಂಡು ಜೀವ ಜಲದಿಂದ ತುಳುಕುವ ಈ ಮನುಷ್ಯರಿಗೂ ಈ ಬೆರಗು ಕಾಣುತ್ತಿಲ್ಲವಲ್ಲಾ? ಇದಕ್ಕಿಂತ ಬೆರಗು ಇನ್ನೊಂದಿದೆಯೇ? ಈ ಬೆರಗಿನ ಗುಂಗಿನಲ್ಲೇ ನಾನು ತುಸುವಾಗಿ ನಗುತ್ತೇನೆ, ಪಕ್ಕದಲ್ಲಿ ಕುಳಿತ ವ್ಯಕ್ತಿಗೆ ನನ್ನ ಕಿವಿಗೆ ಯಾವ ಮೊಬೈಲೂ, ಎಫ್.ಎಮ್ಮೂ, ಐಪಾಡೂ ಇಲ್ಲದೆ, ಕೈಯಲ್ಲಿ ಯಾವ ಪುಸ್ತಕ, ದಿನಪತ್ರಿಕೆಯೂ ಇಲ್ಲದೆಯೂ ನಾನು ನಗುತ್ತಿರುವುದು ವಿಚಿತ್ರವಾಗಿ ಕಾಣುತ್ತದೆ…


Blog Stats

  • 69,182 hits
ಅಕ್ಟೋಬರ್ 2021
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 123
45678910
11121314151617
18192021222324
25262728293031

Top Clicks

  • ಯಾವುದೂ ಇಲ್ಲ