ಕಲರವ

Posts Tagged ‘ರಾಫೆಲ್ ನಡಾಲ್

b_06_nadal_14_prosport_s_wake.jpg

‘ಆದರೆ ಫೆಡರರ್‌ಗೆ ನಾನೇ ನಂಬರ್ ಒನ್!’
ಸತತ ನೂರ ಐವತ್ತು ವಾರಗಳವರೆಗೆ ಟೆನ್ನಿಸ್ ವಿಶ್ವ ರ್ಯಾಂಕಿಂಗಿನಲ್ಲಿ ಎರಡನೆಯ ಸ್ಥಾನವನ್ನು ಆಕ್ರಮಿಸಿಕೊಂಡು ಕುಳಿತಿದ್ದ ಸ್ಪೇನಿನ ಕುಡಿ ಮೀಸೆಯ ಯುವಕ ಹೀಗಂತ ಅಬ್ಬರಿಸಿದ್ದ ಪತ್ರಕರ್ತರೆದುರು. ಜುಲೈ ೬, ೨೦೦೮ರ ಸಂಜೆಗಾಗಲೇ ಆತ ಫೆಡರರ್‌ನನ್ನೂ ಸೋಲಿಸಿ ವಿಂಬಲ್ಡನ್ ಕಿರೀಟ ತೊಟ್ಟಾಗಿತ್ತು. ಸತತ ಆರು ವರ್ಷಗಳಲ್ಲಿ ಹುಲ್ಲುಗಾವಲಿನ ಅಂಕಣದಲ್ಲಿ ಆಡಿದ ಅರವತ್ತೈದು ಪಂದ್ಯಗಳನ್ನೂ ಗೆದ್ದುಕೊಂಡು ಹುಲ್ಲುಗಾವಲಿನ ಟೆನ್ನಿಸ್ ಅಂಕಣದ ಸಾಮ್ರಾಟ ಎನ್ನಿಸಿಕೊಂಡಿದ್ದ ಸ್ವಿಝರ್‌ಲ್ಯಾಂಡಿನ ರೋಜರ್ ಫೆಡರರ್‌ನನ್ನು ಭಾರಿ ತಿಕ್ಕಾಟದ ಪಂದ್ಯದಲ್ಲಿ ಸೋಲಿಸಿ ವಿಂಬಲ್ಡನ್ ತನ್ನದಾಗಿಸಿಕೊಂಡ ಆತನಿಗೆ ಮೊನ್ನೆ ಜೂನ್ ಮೂರಕ್ಕೆ ಇಪ್ಪತ್ತೆರೆಡನೆಯ ಬರ್ತಡೇ!
ಆತ ರಾಫೆಲ್ ನಡಾಲ್!

ನಡಾಲ್ ಹುಟ್ಟಿದ್ದು ಸ್ಪೇನ್‌ನ ಮಜೋರ್ಕ ನಗರದಲ್ಲಿ. ಇವನ ಪೂರ್ವಜರು ಹದಿನಾಲ್ಕನೆಯ ಶತಮಾನದಲ್ಲೇ ಅಲ್ಲಿಗೆ ಬಂದು ನೆಲೆಸಿದವರು. ಇವರದು ಕೂಡು ಕುಟುಂಬ. ಸುಮಾರು ಹನ್ನೆರಡು ಮಿಲಿಯನ್ ಬಹುಮಾನದ ಹಣವನ್ನು ಈಗಾಗಲೇ ಗೆದ್ದಿದ್ದರೂ ನಡಾಲ್ ತಾನು ಹುಟ್ಟಿ ಬೆಳೆದ ಮನೆಯಲ್ಲೇ, ತನ್ನ ಕುಟುಂಬದೊಂದಿಗೇ ವಾಸಿಸುತ್ತಿದ್ದಾನೆ. ಫೆಡರರ್, ರಾಡಿಕ್‌ನಂತಹ ಆಟಗಾರರು ಟ್ರೈನಿಂಗ್ ಸೆಂಟರ್‌ಗಳಲ್ಲೇ ವಾಸ್ತವ್ಯ ಹೂಡಿ ಟೆನ್ನಿಸ್ ಕಡೆಗೆ ಗಮನ ಹರಿಸುತ್ತಿದ್ದರೆ ಈತ ಮನೆಯಲ್ಲೇ ಇದ್ದುಕೊಂಡು ಟೆನ್ನಿಸ್ ಕಸರತ್ತು ಮಾಡುತ್ತಾನೆ. ಇವನ ಅಂಕಲ್ ಟೋನಿಯೇ ಈತನಿಗೆ ಕೋಚ್. ಮೂರನೆಯ ವರ್ಷದಲ್ಲೇ ಇವನಿಗೆ ಟೆನಿಸ್ ಆಡಲು ಹಚ್ಚಿದವನು. ಈಗಲೂ ನಡಾಲ್‌ನೊಂದಿಗಿದ್ದೇ ಆತನನ್ನು ಕೋಚ್ ಮಾಡುತ್ತಿದ್ದಾನೆ.

ನಡಾಲ್‌ನ ಕುಟುಂಬ ಶ್ರೀಮಂತ ಕುಟುಂಬವೇ. ತಂದೆ ಸೆಬಾಸ್ಟಿಯನ್ ಕಿಟಕಿ ವ್ಯಾಪಾರವನ್ನು ಹೊಂದಿದ್ದಾರೆ. ಇವನ ಅಂಕಲ್ ಟೋನಿ ಸ್ವತಃ ಟೆನಿಸ್ ಆಟಗಾರನಾಗಿದ್ದವನು. ಇನ್ನೊಬ್ಬ ಅಂಕಲ್ ಮಿಗುಲ್ ಏಂಜಲ್ ಫುಟ್ ಬಾಲ್ ಆಟಗಾರನಾಗಿದ್ದ. ಈತ ಬಾರ್ಸಿಲೋನ, ರಿಯಲ್ ಮಲ್ಲೋರ್ಕಗಳಿಗೆ ಆಡಿದ್ದ. ಮೂರು ಬಾರಿ ವಿಶ್ವಕಪ್‌ನಲ್ಲಿ ಸ್ಪೇನ್‌ನನ್ನು ಪ್ರತಿನಿಧಿಸಿದ್ದ. ಇವನಿಂದ ಪ್ರಭಾವಿತನಾಗಿದ್ದ ನಡಾಲ್ ಟೋನಿ ಅಂಕಲ್ ಕಲಿಸಿದ ಟೆನಿಸ್‌ನೊಂದಿಗೇ ಫುಟ್ಬಾಲನ್ನೂ ಆಡಲು ತೊಡಗಿದ್ದ. ಶಾಲೆಯಲ್ಲಿ ಈತ ಟೆನಿಸ್, ಫುಟ್ಬಾಲ್ ಹಾಗೂ ಬ್ಯಾಡ್‌ಮಿಂಟನ್‌ಗಳನ್ನು ಆಡುತ್ತಿದ್ದ. ತಾನೂ ಮುಂದೊಂದು ದಿನ ಒಳ್ಳೆಯ ಫುಟ್ಬಾಲ್ ಆಟಗಾರನಾಗಬೇಕು ಎಂಬ ಕನಸು ನಡಾಲ್‌ನದಾಗಿತ್ತು. ಹಾಗಂತ ಇತ್ತ ಟೆನಿಸ್ ಬಿಡಲೂ ಅವನಿಗೆ ಮನಸ್ಸಾಗುತ್ತಿರಲಿಲ್ಲ. ಆದರೆ ಆತ ತನ್ನ ಹನ್ನೆರಡನೆಯ ವಯಸ್ಸಿನಲ್ಲಿ ತನ್ನ ಜೀವನದ ಮಹತ್ತರವಾದ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿತ್ತು. ಒಂದು ಕಡೆ ಅಂಕಲ್ ಏಂಜಲ್‌ನ ಫುಟ್ಬಾಲ್ ಸ್ಪೂರ್ತಿ ಮತ್ತೊಂದು ಕಡೆ ಟೋನಿ ಅಂಕಲ್‌ನ ಟೆನ್ನಿಸ್. ಹನ್ನೆರಡರ ಪೋರ ಒಲ್ಲದ ಮನಸ್ಸಿನಿಂದ ಫುಟ್ಬಾಲಿಗೆ ವಿದಾಯ ಹೇಳಿ ಟೆನ್ನಿಸ್ ರ್ಯಾಕೆಟ್ಟಿನ ಮೇಲೆ ತನ್ನ ಹಿಡಿತ ಬಿಗಿಗೊಳಿಸಿದ. ಹದಿನೈದನೇ ವಯಸ್ಸಿಗೆ ಬರುವಾಗಲೇ ಆತ ಟೆನ್ನಿಸ್ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ ಐವತ್ತರ ಪಟ್ಟಿಯೊಳಕ್ಕೆ ನುಸುಳಿಯಾಗಿತ್ತು.

ತನ್ನೆಲ್ಲಾ ಯಶಸ್ಸಿಗೆ ತನ್ನ ಕುಟುಂಬವನ್ನು ಅಭಿನಂದಿಸುವ ನಡಾಲ್ ತಂದೆಗೆ ಮುದ್ದಿನ ಮಗ. ಅಜ್ಜಿ ತಾತನಿಗೆ ಬಲು ಪ್ರಿಯ. ಅಂಕಲ್‌ಗಳ ಪ್ರೀತಿಯ ರಾಫಾ. ಇಂದಿಗೂ ಅವರ ಇಡೀ ಕುಟುಂಬ ಒಂದೇ ಅಪಾರ್ಟ್ ಮೆಂಟಿನಲ್ಲಿ ವಾಸಿಸುತ್ತದೆ. ಸ್ಪೇನ್‌ನ ಮನಕೋರ್‌ನಲ್ಲಿನ ಅಪಾರ್ಟ್‌ಮೆಂಟಿನಲ್ಲಿ ಗ್ರೌಂಡ್ ಫ್ಲೋರಿನಲ್ಲಿ ನಡಾಲ್‌ನ ಅಜ್ಜಿ ತಾತ ವಾಸವಿದ್ದಾರೆ. ಮೊದಲನೆಯ ಅಂತಸ್ತಿನಲ್ಲಿ ಟೋನಿ ಅಂಕಲ್ , ಆತನ ಪತ್ನಿ ಹಾಗೂ ಅವರ ಮೂವರು ಮಕ್ಕಳು ವಾಸವಾಗಿದ್ದಾರೆ. ಎರಡನೆಯ ಫ್ಲೋರಿನಲ್ಲಿ ನಡಾಲ್ ತಂದೆ ತಾಯಿ ಇದ್ದರೆ ನಾಲ್ಕನೆಯ ಫ್ಲೋರಿನಲ್ಲಿ ನಡಾಲ್ ತನ್ನ ತಂಗಿ ಮರಿಯಾ ಇಸಾಬೆಲ್ ಜೊತೆಗೆ ಇರುತ್ತಾನೆ. ಟೆನ್ನಿಸ್ ಸಾಧನೆಯ ಜೊತೆಗೆ ಶಾಲೆಗೂ ಹೋಗುತ್ತಾನೆ.

ಟೆನ್ನಿಸ್ ಅಂಕಣದಲ್ಲಿನ ಈತನ ರಭಸದ ಆಟ, ಪಾದರಸದ ಹಾಗೆ ಅಂಕಣದ ತುಂಬಾ ಓಡಾಡುವ ಲವಲವಿಕೆ, ಕ್ಲಿಷ್ಟವಾದ ಸಂದರ್ಭಗಳಲ್ಲಿ ಈತ ಕಾಪಾಡಿಕೊಳ್ಳುವ ಶಾಂತತೆ, ಸೆಟ್ ಗೆದ್ದಾಗ ಸಂಭ್ರಮದಿಂದ ಹಾಕುವ ಗರ್ಜನೆ ಇವೆಲ್ಲಾ ಜಗತ್ತಿನಾದ್ಯಂತ ನಡಾಲ್‌ಗೆ ಲಕ್ಷಾಂತರ ಮಂದಿ ಅಭಿಮಾನಿಗಳನ್ನು ಹುಟ್ಟು ಹಾಕಿದೆ. ಇಂಥಾ ಚಿಕ್ಕ ವಯಸ್ಸಿನಲ್ಲೇ ಅಗಾಧವನ್ನು ಸಾಧಿಸಿರುವ ನಡಾಲ್ ತನ್ನ ವಿನಯವಂತಿಕೆಯಿಂದಲೂ ಅನೇಕರ ಗೌರವಕ್ಕೆ ಪಾತ್ರನಾಗಿದ್ದಾನೆ. ತನ್ನ ಖಾಸಗಿ ವೆಬ್ ಸೈಟಿನಲ್ಲಿ ಪ್ರತಿದಿನ ಬ್ಲಾಗ್ ಬರೆಯುತ್ತಾನೆ. ತನ್ನ ಬದುಕಿನ ಸಣ್ಣ ಸಣ್ಣ ಖುಶಿಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾನೆ.


Blog Stats

  • 69,008 hits
ಸೆಪ್ಟೆಂಬರ್ 2021
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 12345
6789101112
13141516171819
20212223242526
27282930