Posts Tagged ‘ರಂಜಿತ್ ಅಡಿಗ’
ವಾರಾಂತ್ಯದ ಕವಿತೆ: ಈರುಳ್ಳಿ
Posted ಜುಲೈ 31, 2009
on:– ರಂಜಿತ್ ಅಡಿಗ, ಕುಂದಾಪುರ.
ಒಮ್ಮೆಯಾದರೂ ಈ ಸಂಬಂಧಗಳಾಳಕ್ಕೆ
ಇಣುಕಲೇ ಬೇಕು
ಅದು ಈರುಳ್ಳಿ ಸಿಪ್ಪೆ ಸುಲಿದಂತೆ
ಮೊನ್ನೆಮೊನ್ನೆಯವರೆಗೂ ತನ್ನ
ಜೀವಕ್ಕಿಂತ ಹೆಚ್ಚು ಪ್ರೀತಿಸ್ತೀನಿ ಅಂತ
ಒದ್ದೆ ಕಣ್ಣಾಲಿಗಳಿಂದ ಹೇಳಿದ ಗೆಳತಿ
ಕಮ್ಮಿ ಮಾರ್ಕ್ಸು ಬಂದರೆ
ಮನೆಯಿಂದ ಓಡಿಸ್ತೀನಿ ಎಂದು
ಸಿಕ್ಕಾಪಟ್ಟೆ ಬೈದ ಅಪ್ಪ
ಕ್ಯಾಂಪಸ್ಸಿನಲ್ಲಿ ಕೆಲಸ
ಸಿಗಲಿಲ್ಲವೆಂದೊಮ್ಮೆ ಸುಮ್ಮನೆ
ಪರೀಕ್ಷೆ ಮಾಡಲು ಹೇಳಿದ ಕೂಡಲೇ
ಕೆಲಸ ಸಿಗದವನನ್ನು ಮದ್ವೆಯಾಗ್ತೀನಂತ
ಹ್ಯಾಗೆ ತನ್ನಪ್ಪನನ್ನು ಒಪ್ಪಿಸಬೇಕು
ನೀ ನನ್ನ ಮರೆಯಲೇಬೇಕು
ಎಂದು ತನ್ನ ಜೀವವನ್ನೇ ಕಡೆಗಣಿಸಿದಳಾಕೆ
ಮನೆಯನ್ನು ಒತ್ತೆಯಿಡೋಣ
ರಿಟಾಯರ್ಮೆಂಟ್ ಹಣವೂ ಬರಬಹುದು
ಸ್ವಂತ ಬಿಸಿನೆಸ್ಸು ಆರಂಭಿಸು ಮಗನೇ ಅನ್ನುವನು ಅಪ್ಪ
ಎರಡೂ ಮಾತಿಗೂ ಉಕ್ಕಿದ್ದು
ಕಣ್ಣೆದುರಿಗಿನ
ಪರದೆ ಜಾರಿಸೋ ಕಣ್ಣಿರೇ.
ಮನದ ಹನಿ
Posted ಜೂನ್ 11, 2009
on:ರಂಜಿತ್ ಅಡಿಗ, ಕುಂದಾಪುರ
adiga.ranjith@gmail.com
ಅವಳು ಆಗಸ
ಸುಮ್ಮನೆ ಏಣಿ ಕಟ್ಟದಿರು ಅಂದರು
ನನಗೆ
ರೆಕ್ಕೆ ಮೂಡುತಿತ್ತು,
ಅವಳು ನಿನಗೆ ಸರಿಯಾದವಳಲ್ಲ
ಎಂದರು,
ತಪ್ಪುಗಳನ್ನು ಮಾಡುವುದು
ತಪ್ಪಲ್ಲವೆನಿಸತೊಡಗಿತು!
…………………………………………………………………………
ಕವಿತೆ: ಒಂದು ಗುಲಾಬ್ ಜಾಮೂನ್!
Posted ಜೂನ್ 4, 2009
on:ರಂಜಿತ್ ಅಡಿಗ, ಕುಂದಾಪುರ
adiga.ranjith@gmail.com
ಅಪರೂಪವಾಗಿ
ಬೇರೆಯೇ ಲೋಕದ ಜನ
ತಿನ್ನುವವರೆಂಬಷ್ಟು ಅಪರಿಚಿತವಾಗಿ
ಹೋಗಿದ್ದ ಜಾಮೂನು ಅಚಾನಕ್ಕಾಗಿ
ಅದೃಷ್ಟದಿಂದ ಆಕೆಗೆ ಸಿಕ್ಕಿದಾಗ
ಅದು ಚಂದ್ರ ಅಪಹಾಸ್ಯ ಮಾಡಿ
ನಗುವ ನಡುರಾತ್ರಿ!
ಮಗುವಿನ ಕನಸನ್ನಲ್ಲಾಡಿಸಿ
ಎಬ್ಬಿಸಿ ತಿನ್ನಿಸಿ
ತಾನು ಖುಷಿಪಟ್ಟಾಗ
ಮಗುವಿನ ಕಣ್ಣಲ್ಲೂ ಅಂದು ಹುಣ್ಣಿಮೆ!
ಹಸಿವಿನ
ಜೋಗುಳ ಹಾಡಿಕೊಂಡೇ
ನಿದಿರಿಸಿದ ಅವ್ವನ ಕನಸಲ್ಲಿ
ಕೊಟ್ಟ ಖುಷಿಯ ಜಾತ್ರೆ
ಬೆಳಗಾತನೆದ್ದು ಕನಸ ಮಧ್ಯದಲ್ಲೇ
ಜಾಮೂನು ತಿಂದು ತೇಗಿದ್ದ ಮಗ
ಅದರ ರುಚಿಯ ನೆನಪಾಗದೇ ಹಲುಬಿದ್ದಾನೆ,
ಬೆಳಿಗ್ಗೆ ಕೊಟ್ಟರಾಗದಿತ್ತೇ ಎಂದು ರೇಗಿದ್ದಾನೆ..
ತಿಂದ ಜಾಮೂನಿನ ರುಚಿ
ಹೇಗಿದ್ದಿರಬಹುದು ಎಂದೂಹೆ ಮಾಡುತ್ತಾ
ಮಗನಿದ್ದರೆ
ಕೈಯ್ಯಲ್ಲಿದ್ದ ಚಂದಿರನಂತಿದ್ದ
ಜಾಮೂನು ಮಗನ ಹೊಟ್ಟೆ ಸೇರಿಯೂ
ಅವನಿಗೆ ಸಂತೋಷವಾಗದಿದ್ದುದ್ದಕ್ಕೆ
ಅವ್ವನನ್ನು ಹಸಿವು ಸುಟ್ಟಿದೆ!
ಪ್ರೀತಿ ಎಂಬ ಅಮೃತ
Posted ಅಕ್ಟೋಬರ್ 1, 2008
on:– ರಂಜಿತ್ ಅಡಿಗ
ಪ್ರೀತಿಯೇ ಹಾಗೆ!
ಬದುಕಿನಲ್ಲಿ ಎಲ್ಲಾ ಸಾಧಿಸಿದವನಿಗೆ ತೃಪ್ತಿ ಸಿಗಬಹುದು. ‘ಅಬ್ಬ! ಎಲ್ಲ ಸಾಧಿಸಿದೆ… ಇನ್ನು ಸಾಕು’ ಅನ್ನಿಸಬಹುದು. ಆದರೆ ಪ್ರೀತಿಯ ವಿಷಯದಲ್ಲಿ ಎದೆಯ ಮಡಿಕೆಗೆ ಎಂದಿಗೂ ತೂತು. ಪ್ರೀತಿ ಎಷ್ಟು ಸಿಕ್ಕಿದರೂ ಅವರ ದಾಹ ನೀಗದು. ಜಗತ್ತನ್ನೇ ಗೆದ್ದೆ ಅಂದವನೂ ಪ್ರೀತಿಯ ವಿಷಯದಲ್ಲಿ ಮೊಣಕಾಲೂರಿ ಬೇಡಲೇಬೇಕು. ಹಿಡಿ ಪ್ರೀತಿಗಾಗಿ ಫಕೀರನಾಗಲೇ ಬೇಕು. ಯಾಕೆಂದರೆ…
ಪ್ರೀತಿಯೇ ಹಾಗೆ!
ಪ್ರೀತಿಯೆಂದರೆ ಎದೆಯ ಹಸಿವು. ಉಸಿರು, ನೀರು, ಆಹಾರ ದೇಹಕ್ಕೆಷ್ಟು ಅಗತ್ಯವೋ ಅಷ್ಟೇ ಅಗತ್ಯ ಹೃದಯದ ಹಸಿವು ನೀಗಲೂ ಇದೆ. ಪ್ರೀತಿ ಎಂಬುದು ಬೊಗಳೆ… ಇಂಪ್ರಾಕ್ಟಿಕಲ್ ಅಂದವನೂ ಒಂದು ಘಟ್ಟದಲ್ಲಿ ಪ್ರೀತಿಯ ಕೊರತೆಯಿಂದ ಹಪಹಪಿಸಲೇಬೇಕು. ಎದೆಯ ಏಕಾಂಗಿತನಕ್ಕೆ ಸಂಗಾತಿಯನ್ನು ಅರಸಲೇ ಬೇಕು.
ಪ್ರೀತಿಯೆಂದರೆ ಹೃದಯದ ಹಸಿವು, ಯಾಕೆಂದರೆ… ಹೃದಯವುಳ್ಳ ಪ್ರತಿ ಜೀವವೂ ಪ್ರೀತಿಗಾಗಿ ತುಡಿಯುತ್ತಿರುತ್ತದೆ. ಸ್ವಲ್ಪ ಪ್ರೀತಿಯ ತೋರಿದರೆ ನಾಯಿಗಳು ಕೊನೆವರೆಗೂ ನೆನಪಿರಿಸಿಕೊಳ್ಳುತ್ತವೆ. ದನಗಳು ತೋರುವ ಪ್ರೀತಿ ಅದನ್ನು ಸಾಕಿದವರಿಗೇ ಗೊತ್ತು. ಬೆಕ್ಕಿನಿಂದ ಸಿಕ್ಕುವ ಪ್ರೀತಿಯ ನೆಕ್ಕುವಿಕೆ ಅದನ್ನು ಪ್ರೀತಿಸಿದವರಿಗೆ ಮಾತ್ರ. ಬರಿಯ ಸಾಕು-ಪ್ರಾಣಿಗಳಷ್ಟೇ ಅಲ್ಲ. ಭಾವನೆಗಳು, ಪ್ರೀತಿಯ ಹಂಚುವಿಕೆ ಕ್ರೂರ ಪ್ರಾಣಿಗಳಲ್ಲೂ ಇರುತ್ತದೆ. ವ್ಯಾಘ್ರನ ಇನ್ನೊಂದು ಮುಖ ‘ಧರಣಿ ಮಂಡಲ ಮಧ್ಯದೊಳಗೆ’ ಕಥೆಯಲ್ಲೂ ಕಾಣಸಿಗುತ್ತದೆ.
ಪ್ರೀತಿ-ಪ್ರೇಮ ಯಾವಾಗಲೂ ಹಚ್ಚ ಹಸಿರು. ಮಾನವ ಜನ್ಮ ಉಗಮವಾದಾಗಿನಿಂದಲೂ ಪ್ರತಿ ಮನಸ್ಸನ್ನು ಕಾಡಿದೆ. ಪ್ರತಿಯೊಬ್ಬರನ್ನೂ ಕ್ಷಣಕಾಲ ಚಲಿಸುವಂತೆ ಮಾಡಿದೆ. ಎಲ್ಲ ರೀತಿಯ ಕಥೆಗಳು ಮನುಷ್ಯನಿಗೆ ಬೋರ್ ಹೊಡೆಸಿದರೂ… ಪ್ರೀತಿ ಪ್ರೇಮ ಅಂದೊಡನೆ ಮನ ಅರಳುತ್ತದೆ. ಅದೇ ಕಥೆಯನ್ನು ಮತ್ತೆ ಮತ್ತೆ ಕೇಳುವಂತೆ ಅನುಭವಿಸುವಂತೆ ಮಾಡುವ ಶಕ್ತಿ ಪ್ರೇಮಕ್ಕಿದೆ. ಹೀಗಾಗಿ ಪ್ರೇಮದ ವಿಷಯ ಮಾತ್ರ ಸಾಹಿತ್ಯದಲ್ಲಿ, ಸಿನೆಮಾದಲ್ಲಿ ಅಜರಾಮರ.
ಕಲಿಗಾಲದಲ್ಲಿ ಎಲ್ಲದರಲ್ಲೂ ಕಲಬೆರಕೆ ಉಂಟಾಗುವಂತೆ ಪ್ರೀತಿಯಲ್ಲೂ ಆಗಿದೆ. ಪ್ರೇಮವೆಂಬುದು ಪೊಸೆಸಿವ್‌ನೆಸ್ ಆದಾಗ… ವಿಕೃತಿಯ ಹುಟ್ಟು. ತನಗೇ ಬೇಕೆಂಬ ಸ್ವಾರ್ಥ. ಹೀಗಾಗಿ ಪ್ರೇಮ ಎಂಬ ಪವಿತ್ರ ಪದದ ಮೇಲೆ ಮನುಷ್ಯನಿಗೆ ಹೇಕರಿಕೆ ಉಂಟಾಗುತ್ತಿದೆ. ಅನ್ ಕಂಡೀಶನಲ್ ಆಗಿ ಪ್ರೇಮಿಸುವ, ಪ್ರೇಮವೆಂದರೆ ಕೊನೆಯವರೆಗೆ ಸಂಗಾತಿಯನ್ನು ಕಂಫರ್ಟ್ ಆಗಿರಿಸುವ… ಅದೂ ಖಾಯಂ ಆಗಿರುವ ಭಾವನೆ ಎಂಬುದು ಅರ್ಥ ಮಾಡಿಕೊಳ್ಳದೇ, ಕ್ಷಣಿಕ ಆವೇಶಗಳಿಗೆ ಮಣಿದು, ಆಕರ್ಷಣೆಗಳಿಗೇ ಸೋಲುವ ಯುವ ಹೃದಯಗಳು ಸಾಕಷ್ಟು.
ಪ್ರೇಮವೆಂದರೆ ಪರಸ್ಪರ ನೀಡುವ ಗೌರವ. ‘ನಿನಗೆ ಬೇಕಾದ್ದನ್ನು ನೀಡಲು ಸಾಧ್ಯವಾಗದೇ ಇರಬಹುದು… ಆದರೆ ಎಂದಿಗೂ ಕಣ್ಣೀರು ಹಾಕಿಸಲಾರೆ… ಕೊನೆವರೆಗೂ ಕಷ್ಟದಲ್ಲಿ- ಇಷ್ಟದಲ್ಲಿ ಜತೆಗೇ ಇರುವೆ… ನೆಮ್ಮದಿಯನ್ನು ನೀಡುವೆ’ ಎಂಬ ಭಾವನೆಯೇ ಪ್ರೇಮ.
ಪಕ್ವ ಪ್ರೇಮಕ್ಕೆ ಹಣದ, ಸೌಂದರ್ಯದ ಹಂಗಿಲ್ಲ. ಸುಂದರ ಭವಿಷ್ಯಕ್ಕೆ ಜತೆಯಾಗಿ ನಡೆವುದೇ ಪ್ರೇಮ.
ಬದುಕು ಎಲ್ಲವನ್ನೂ ಸುಲಭವಾಗಿ ನೀಡದು. ಅದರ ದಾರಿ ಬಲುದೂರ. ಸಾಧನೆಯ, ನೆಮ್ಮದಿಯ ಗುರಿ ತಲುಪಲು ಕಷ್ಟದ ಬಿಸಿಲಿನಲ್ಲಿ ಬರಿಗಾಲ ನಡಿಗೆ. ಪ್ರೇಮವೆಂಬುದು ಅದರಲ್ಲಿನ ತಂಪು ನೆರಳು. ಬದುಕಿನ ದಾರಿಯಲ್ಲಿ ಸುಸ್ತಾದವನಿಗೆ ದೊರಕುವ ಅಮೃತ. ಅಮೃತ ಕುಡಿದೊಡನೆ ಮತ್ತೆ ಸುಸ್ತನ್ನೆಲ್ಲ ಕೊಡವಿ ಎದ್ದು ನಿಲ್ಲಬೇಕು. ಮತ್ತೆ ನೆಮ್ಮದಿಯತ್ತ ನಡೆಯಬೇಕು.
ಪ್ರೇಮವೆಂದರೆ ಬರಿಯ ಅಮೃತವಷ್ಟೇ ಅಲ್ಲ. ಪರಸ್ಪರ ಗೌರವ, ತ್ಯಾಗ, ಹೊಂದಾಣಿಕೆ, ಕಾಳಜಿ, ಕೊನೆವರೆಗೂ ಜತೆಗಿರುವ ಸ್ಥೈರ್ಯಗಳೆಂಬ ಪಂಚಾಮೃತ. ಸಾಧನೆಯ ಮಾರ್ಗದಲ್ಲಿ ಬೇಸರ, ಸುಸ್ತಾಗದೇ ಪ್ರೇಮದ ಅಮೃತ ಪಾತ್ರೆ ಜತೆಗಿರಲಿ; ಅನುದಿನವೂ ಪಕ್ವ ಪ್ರೇಮಕ್ಕೆ ಜಯವಾಗಲಿ!
ಇತ್ತೀಚಿನ ಟಿಪ್ಪಣಿಗಳು