ಕಲರವ

Posts Tagged ‘ಮಾಹಿತಿ ಕ್ರಾಂತಿ


ಈ ಸಂಚಿಕೆಯ ಚರ್ಚೆಯ ವಸ್ತು, ಇಪ್ಪತೊಂದನೆಯ ಶತಮಾನದ ಮಾಹಿತಿಕ್ರಾಂತಿಯ ಯುಗದಲ್ಲಿ ಶಿಕ್ಷಕರು, ಗುರು-ಶಿಷ್ಯ ಸಂಸ್ಕೃತಿ ಅಪ್ರಸ್ತುತವಾಗುತ್ತಿದೆಯೇ? ಇಲ್ಲ, ಯಾವ ಕಾಲದಲ್ಲೂ ಗುರುವಿನ ಸ್ಥಾನವನ್ನು ಯಾವುದರಿಂದಲೂ ತುಂಬಲುಸ ಸಾಧ್ಯವಿಲ್ಲ ಎಂದು ವಾದಿಸಿದ್ದಾರೆ ಚೇತನ್ ಸಾಗರ್.

ವಿದ್ಯೆಯೆಂಬುದು ಒಬ್ಬ ಕೊಟ್ಟು ಇನ್ನೊಬ್ಬ ಪಡೆದುಕೊಂಡು ಕೂಡಿಡಬಹುದಾದ ವಸ್ತುವಲ್ಲ. ಅದು ಬಿಕರಿಯಾಗುವ ಮಾಲೂ ಅಲ್ಲ. ಹಣವಿದ್ದವನು, ಅಧಿಕಾರವಿದ್ದವನು, ವಶೀಲಿ ಮಾಡಲು ಸಾಧ್ಯವಿದ್ದವನು ಸಂಪಾದಿಸಬಹುದಾದ ಸಂಪತ್ತಲ್ಲ. ಬಲ ಪ್ರಯೋಗದಿಂದ ಪಡೆಯಬಹುದಾದ ಸವಲತ್ತೂ ಅಲ್ಲ. ಅಸಲಿಗೆ ಅದು ವಶಪಡಿಸಿಕೊಂಡು ಮೆರೆಯಬಹುದಾದ ಐಶ್ವರ್ಯವೂ ಅಲ್ಲ. ವಿದ್ಯೆಯೆಂಬುದು ಶುದ್ಧವಾಗುವ ಪ್ರಕ್ರಿಯೆ. ಕುಲುಮೆಯ ಕಾವಿನಲ್ಲಿ ನಲುಗಿ ಚಿನ್ನ ಹೊಳೆಪು ಪಡೆಯುವಂತೆ ಮನುಷ್ಯ ತನ್ನ ಪ್ರಜ್ಞೆಗೆ, ತಿಳಿವಿಗೆ ಹೊಳಪು ಪಡೆದುಕೊಳ್ಳುವ ಕ್ರಿಯೆ ವಿದ್ಯಾಭ್ಯಾಸ. ಹೀಗೆ ಚಿನ್ನಕ್ಕೆ ಪುಟಕೊಡುವ ಮಾಂತ್ರಿಕನೇ ಶಿಕ್ಷಕ. ಕಲ್ಲು ಮಣ್ಣುಗಳ ಅದಿರನ್ನು ಸಂಸ್ಕರಿಸಿ ಚಿನ್ನವನ್ನು ಹೊರತೆಗೆಯುವ ಜಾದೂಗಾರನೇ ಗುರು ಎನ್ನಿಸಿಕೊಳ್ಳುತ್ತಾನೆ.

teacher2.gif

ಇಪ್ಪತೊಂದನೆಯ ಶತಮಾನವನ್ನು ಮಾಹಿತಿ ಸ್ಫೋಟದ ಶತಮಾನ ಎಂದೇ ಕರೆಯಲಾಗುತ್ತದೆ. ಒಂದು ಬಾಂಬ್ ಸ್ಫೋಟದಲ್ಲಿ ಉಂಟಾಗುವ ಒತ್ತಡ ಹಾಗೂ ರಭಸದೊಂದಿಗೆ ಮಾಹಿತಿಯು ಲಭ್ಯವಾಗುತ್ತಿರುವುದು ನಿಜಕ್ಕೂ ಮಾನವ ಕುಲ ಸಾಕ್ಷಿಯಾದ ಹಲವು ಅದ್ಭುತಗಳಲ್ಲಿ ಒಂದು. ಯಾವ ವಿಷಯದ ಬಗ್ಗೆ ಏನು ತಿಳಿಯಬೇಕಾದರೂ ಕಂಪ್ಯೂಟರಿನ ಎದುರು ಪದ್ಮಾಸನ ಹಾಕಿ ಕುಳಿತರೆ ಸಾಕು. ಜಗತ್ತಿನ ಮೂಲೆ ಮೂಲೆಯಲ್ಲಿನ ಮಾಹಿತಿಯನ್ನು ಅಂತರ್ಜಾಲವೆಂಬ ಮಾಟಗಾತಿ ನಮ್ಮೆದುರು ತಂದು ಸುರಿಯುತ್ತಾಳೆ. ಯಾರ ಹಂಗೂ ಇಲ್ಲದೆ, ಯಾರ ಮರ್ಜಿಗೂ ತಲೆಬಾಗದೆ ನಮಗೆ ಬೇಕಾದ ಮಾಹಿತಿಯನ್ನೆಲ್ಲಾ ಪಡೆಯುವ ಸೌಲಭ್ಯವನ್ನು ಮಾಹಿತಿ ಕ್ರಾಂತಿಯು ಒದಗಿಸಿಕೊಟ್ಟಿದೆ. ಒಂದು ತುದಿಬೆರಳ ಚಿಟುಕಿನಲ್ಲಿ ಬ್ರಹ್ಮಾಂಡದ ಜ್ಞಾನವೆಲ್ಲಾ ಕಣ್ಣೆದುರು ತೆರೆದುಕೊಳ್ಳುವಾಗ ಹಿಂದಿನಿಂದ ನಡೆದುಕೊಂಡು ಬಂದಿರುವ ಗುರು ಹಾಗೂ ಶಿಷ್ಯ ಸಂಸ್ಕೃತಿ ತನ್ನ ಪ್ರಸ್ತುತತೆಯನ್ನು ಉಳಿಸಿಕೊಳ್ಳುತ್ತದೆಯೇ ಎಂಬುದು ಪ್ರಶ್ನೆ. ಮಾಹಿತಿಯ ಅಲೆಯ ಮೇಲೆ ತೇಲುತ್ತಿರುವವರಿಗೆ ‘ಗುರು’ ಎಂಬ ಸ್ಥಾನವೇ ಸವಕಲು ನಾಣ್ಯವಾಗಿದೆ ಎಂಬ ಉಡಾಫೆಯಿದೆ. ಗುರುವಿನ ಹಂಗಿಲ್ಲದೆ ಏನನ್ನು ಬೇಕಾದರೂ ಕಲಿಯಬಹುದು ಎಂಬ ಆತ್ಮವಿಶ್ವಾಸ ಕಾಣುತ್ತಿದೆ.

ಕುವೆಂಪು ತುಂಬಾ ಹಿಂದೆ ಕವನವೊಂದರಲ್ಲಿ ಗುರು ಹಾಗೂ ಗುರಿಯ ಮಹತ್ವವನ್ನು ಹೇಳಿದ್ದರು. ಹಿಂದೆ ಗುರು ಹಾಗೂ ಮುಂದೆ ಗುರಿ ಇರುವ ಮಂದಿ ಧೀರರ ಹಾಗೆ ಮುನ್ನುಗ್ಗುತ್ತಾರೆ ಎಂದು. ಧೀರರಿಗೆ ಮುಂದೆ ಗುರಿಯೂ ಇರಬೇಕು, ಹಿಂದೆ ಮಾರ್ಗದರ್ಶನ ಮಾಡುವ ಗುರುವೂ ಇರಲೇಬೇಕು. ಒಂದು ಪಾತ್ರೆಯಲ್ಲಿ ತರಕಾರಿ, ನೀರು, ಮಸಾಲೆ, ಉಪ್ಪು, ಕೊತ್ತಂಬರಿ ಹಾಕಿದ ತಕ್ಷಣ ಅದು ಸಾಂಬಾರು ಆಗಿಬಿಡುವುದಿಲ್ಲ. ಅವೆಲ್ಲವನ್ನೂ ಒಂದೇ ಹದದಲ್ಲಿ ಬೇಯಿಸುವ ಬೆಂಕಿ ಬೇಕು ಅದು ಗುರು. ಶಿಕ್ಷಕನಿಲ್ಲದೆ ಗುರಿಯೆಡೆಗೆ ನುಗ್ಗಬಹುದು. ಆದರೆ ಅದು ಹಗಲು ಕಂಡ ಬಾವಿಗೆ ರಾತ್ರಿ ಬಿದ್ದ ಹಾಗಾಗುತ್ತದೆ.

ಪುಸ್ತಕಗಳು ಒಳ್ಳೆಯ ಮಿತ್ರ ಎನ್ನುವುದು ಸರಿ. ಅಂತರ್ಜಾಲ ಮಾಹಿತಿಯ ಕಣಜ ಎನ್ನುವುದನ್ನೂ ಒಪ್ಪಿಕೊಳ್ಳೋಣ. ಆದರೆ ಅವು ನಿರ್ಜೀವವಾದ ಸಂಗತಿಗಳು. ಒಂದು ಪುಸ್ತಕಕ್ಕೆ ತಾನು ಕೊಡುತ್ತಿರುವ ಮಾಹಿತಿಯ ಅರಿವು ಇರುವುದಿಲ್ಲ. ಮೇಲಾಗಿ ಶಿಕ್ಷಣ ಎಂದರೆ ಕೇವಲ ಮಾಹಿತಿಯ ಕ್ರೂಢೀಕರಣ ಮಾತ್ರವಲ್ಲ. ನಮ್ಮ ಮೆದುಳು ಕೇವಲ ವಿಷಯಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ಕಂಪ್ಯೂಟರ್ ಅಲ್ಲ. ಶಿಕ್ಷಣದಲ್ಲಿ ವಿದ್ಯಾರ್ಥಿಗೆ ಆವಶ್ಯಕವಾದ ಮಾಹಿತಿಯನ್ನು ಕೊಡುವುದರ ಜೊತೆಗೆ ಆತನ ಸರ್ವತೋಮುಖ ಬೆಳವಣಿಗೆ ಆಗುವಂತೆ ನೋಡಿಕೊಳ್ಳಬೇಕಾದದ್ದು ಶಿಕ್ಷಕರ ಕರ್ತವ್ಯ. ವಿದ್ಯಾರ್ಥಿಯ ಭಾವ ಲೋಕದ ಬೆಳವಣಿಗೆಯಾಗಬೇಕು, ಅವನ ಕಲ್ಪನಾ ಶಕ್ತಿಗೆ ಪ್ರೋತ್ಸಾಹ ಸಿಕ್ಕಬೇಕು. ಬದುಕು ಸಹ್ಯವಾಗಿಸಿಕೊಳ್ಳಲು ಆತನ ಹೃದಯವಂತಿಕೆಗೆ ಪುಟ ಕೊಡಬೇಕು. ಆತನಲ್ಲಿ ಆತ್ಮವಿಶ್ವಾಸ, ಎದೆಗಾರಿಗೆ, ಹೋರಾಟ ಮಾಡುವ ನೈತಿಕ ಶಕ್ತಿ ಜೊತೆಗೇ ಸೋಲನ್ನು ಸಮಚಿತ್ತದಿಂದ ಸ್ವೀಕರಿಸುವ ಮನೋಭಾವವನ್ನು ಸೃಷ್ಟಿಸುವುದಕ್ಕೆ ಗುರು ಅತ್ಯವಶ್ಯಕವಾಗಿ ಬೇಕು. ಈ ಎಲ್ಲಾ ಕೆಲಸಗಳನ್ನು ಪುಸ್ತಕಗಳು ಮಾಡಲು ಸಾಧ್ಯವಿಲ್ಲ.

ಒಂದು ಸಸಿಗೆ ಚಿಗುರಿಕೊಂಡು ನೆಲದೊಳಗೆ ಬೇರುಗಳನ್ನು ಹರಡಿಕೊಂಡು ಭದ್ರವಾಗಲು, ನೆಲದ ಮೇಲೆ ಎತ್ತರಕ್ಕೆ ಏರಿ ಹರಡಿಕೊಳ್ಳಲು ಸಾಧ್ಯವಾಗುವವರೆಗೆ ಸುತ್ತಲೂ ಬೇಲಿ ಹಾಕಬೇಕಾದುದು ಆವಶ್ಯಕ. ಬೇಲಿ ಸಸಿಯ ರಕ್ಷಣೆಗೆ, ಬೆಳವಣಿಗೆಗೆ ಹಾಕುವುದೇ ಹೊರತು ಸಸಿಯ ಬೆಳವಣಿಗೆಯನ್ನು ಕುಂಠಿತಗೊಳಿಸುವುದಕ್ಕಾಗಿ ಅಲ್ಲ. ಸಸಿಗಳಿಗೆ ಆಸರೆಗೆ ಕೆಲವೊಮ್ಮೆ ಕೋಲು ಬೇಕಾಗುತ್ತದೆ. ಮುಂದೆ ಅದು ಸಾವಿರಾರು ಹಕ್ಕಿಗಳಿಗೆ ಆಸರೆ ನೀಡುವ ಬೃಹದಾಕಾರದ ಮರವಾಗಿ ಬೆಳೆಯಬಹುದು. ಆದರೆ ಸಸಿಯಾಗಿದ್ದಾಗ ಅದಕ್ಕೆ ಸೂಕ್ತವಾದ ಆಸರೆ ಹಾಗೂ ಸಹಾಯ ಬೇಕು. ಇದೇ ಕೆಲಸವನ್ನು ಶಿಕ್ಷಕನಾದವನು ಮಾಡುತ್ತಾನೆ. ಪುಸ್ತಕಗಳು ಎಷ್ಟೇ ಇದ್ದರು ಏನನ್ನು, ಎಷ್ಟರ ಮಟ್ಟಿಗೆ ಯಾವಾಗ ತಿಳಿಯಬೇಕು ಎನ್ನುವ ವಿವೇಕ ಮಕ್ಕಳಿಗೆ ಇರುವುದಿಲ್ಲ. ಪಕ್ವವಾಗದ ಮನಸ್ಸಿಗೆ ಕೆಲವು ಮಾಹಿತಿಯನ್ನು ಕೊಟ್ಟರೆ ಅದು ಅನರ್ಥಕ್ಕೆ ಈಡು ಮಾಡುವುದೇ ಹೆಚ್ಚು. ಪುಸ್ತಕವಾಗಲೀ ಅಂತರ್ಜಾಲವಾಗಲೀ ತನ್ನ ಮಾಹಿತಿಯನ್ನು ಗ್ರಹಿಸುತ್ತಿರುವ ಮನಸ್ಸು ಪಕ್ವವಾದದ್ದಾ ಅಥವಾ ಇನ್ನೂ ಅಪಕ್ವವಾ ಎಂದು ತಿಳಿಯಲು ಸಾಧ್ಯವೇ ಇಲ್ಲ. ಜೊತೆಗೆ ಅವು ತಾವು ಕೊಡುವ ಮಾಹಿತಿ, ಜ್ಞಾನದ ಪರಿಣಾಮವನ್ನು ನಿಯಂತ್ರಿಸಲು ಶಕ್ತವಾದವಲ್ಲ. ಅವು ವಿದ್ಯಾರ್ಥಿಗೆ ಶಕ್ತವಾದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಯಾವ ರೀತಿಯಿಂದಲೂ ನೆರವಾಗುವುದಿಲ್ಲ. ಪುಸ್ತಕಗಳು, ಅಂತರ್ಜಾಲ ಎಂದಿಗೂ ಶಿಕ್ಷಕನ, ಗುರುವಿನ ಸ್ಥಾನವನ್ನು ತುಂಬಲು ಸಾಧ್ಯವೇ ಇಲ್ಲ. ಅದಕ್ಕಾಗಿಯೇ ದಾಸರು ಹಾಡಿ ಹೊಗಳಿದ್ದು, ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂದು!


ಈ ಸಂಚಿಕೆಯ ಚರ್ಚೆಯ ವಸ್ತು, ಇಪ್ಪತೊಂದನೆಯ ಶತಮಾನದ ಮಾಹಿತಿಕ್ರಾಂತಿಯ ಯುಗದಲ್ಲಿ ಶಿಕ್ಷಕರು, ಗುರು-ಶಿಷ್ಯ ಸಂಸ್ಕೃತಿ ಅಪ್ರಸ್ತುತವಾಗುತ್ತಿದೆಯೇ? ಹೌದು, ಮಾಹಿತಿ ಕ್ರಾಂತಿಯ ಈ ಶತಮಾನದಲ್ಲಿ ಶಿಕ್ಷಕ ನೆಪಮಾತ್ರವಾಗಿದ್ದಾನೆ. ಶಿಕ್ಷಣ ಕ್ಷೇತ್ರವೇ ವ್ಯಾಪಾರೀಕರಣಗೊಂಡಿರುವಾಗ ಗುರು-ಶಿಷ್ಯ ಸಂಸ್ಕೃತಿ ಹಾಸ್ಯಾಸ್ಪದ ಎಂದು ವಾದಿಸಿದ್ದಾರೆ ಚಂದ್ರಶೇಖರ್ ಪ್ರಸಾದ್.

‘ಗುರು ಹೆಗಲ ಮೇಲಿನ ಹೆಣ. ಅದನ್ನು ಕೆಳಕ್ಕೆ ಹಾಕಿ ನೀನು ಮುಂದೆ ಸಾಗು’
– ಸತ್ಯಕಾಮ

ಮಾಹಿತಿ ತಂತ್ರಜ್ಞಾನ ಉಚ್ಛ್ರಾಯ ಸ್ಥಿತಿಯಲ್ಲಿರುವ ಈ ಶತಮಾನದಲ್ಲಿ ಗುರುವಿನ ಅಸ್ತಿತ್ವಕ್ಕೇ ಸಂಚಕಾರ ಪ್ರಾಪ್ತವಾಗುವ ಕುರುಹುಗಳು ದೊರೆಯುತ್ತಿವೆ. ‘ಗುರು ಬ್ರಹ್ಮ, ಗುರು ವಿಷ್ಣು, ಗುರುವೇ ಪರಮೇಶ್ವರ’ ಎಂದು ಪೂಜಿಸಿದ ನಮ್ಮ ದೇಶದಲ್ಲೂ ಸಹ ಗುರುವಿನ ಸಹಾಯವಿಲ್ಲದೆಯೇ ಎಂಥಾ ವಿದ್ಯೆಯನ್ನಾದರೂ ಕಲಿಯಬಹುದು ಎಂಬ ವಾತಾವರಣದ ಸೂಚನೆಗಳು ಸಿಕ್ಕುತ್ತಿವೆ. ಶಿಕ್ಷಕರಿಗಾಗಿ ತಮ್ಮ ಹುಟ್ಟಿದ ದಿನವನ್ನೇ ಬಿಟ್ಟು ಕೊಟ್ಟ ಭಾರತದ ಶ್ರೇಷ್ಠ ತತ್ವಜ್ಞಾನಿ, ಶಿಕ್ಷಕ ಡಾ||ಎಸ್.ರಾಧಾಕೃಷ್ಣನ್, ಲಕ್ಷಾಂತರ ಮಂದಿ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಹಾಗೂ ಆದರ್ಶವಾಗಿರುವ ಭಾರತದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ಗುರು ಪರಂಪರೆಯನ್ನು ಹುಟ್ಟಿ ಹಾಕಿದ, ಗುರುಕುಲಗಳನ್ನು ಸ್ಥಾಪಿಸಿ ‘ಗುರು’ ಸ್ಥಾನಕ್ಕೆ ವ್ಯಾಖ್ಯಾನವನ್ನು ಒದಗಿಸಿಕೊಟ್ಟ ಋಷಿಗಳನ್ನು ನೆನೆಯುತ್ತಲೇ, ಅವರ ಕೊಡುಗೆಗಳಿಗೆ ಗೌರವಯುತವಾಗಿ ತಲೆಬಾಗುತ್ತಲೇ ಇಂದು ಅಂತರ್ಜಾಲ ಹಾಗೂ ಮಾಹಿತಿ ಕ್ರಾಂತಿಯ ಯುಗದಲ್ಲಿ ಶಿಕ್ಷಕರ ಅಗತ್ಯವಿದೆಯೇ ಎಂಬುದನ್ನು ಆಲೋಚಿಸಬೇಕಾಗುತ್ತದೆ.

ie7.jpg

‘ನಾನು ಹುಟ್ಟುತ್ತಲೇ ಜೀನಿಯಸ್ ಆಗಿದ್ದೆ. ನಮ್ಮ ಶಾಲೆಗಳು ನನ್ನನ್ನು ಸರ್ವನಾಶ ಮಾಡಿದವು’ ಎಂಬ ವಾಕ್ಯ ಅನೇಕ ಮಂದಿ ವಿದ್ಯಾರ್ಥಿಗಳ ಟೀಶರ್ಟುಗಳ ಮೇಲೆ ರಾರಾಜಿಸುತ್ತಿದೆ. ಇದರ ಹಿಂದಿರುವ ವ್ಯಂಗ್ಯ ಹಾಗೂ ಸಿನಿಕತನದ ಮೊನಚನ್ನು ಸ್ವಲ್ಪ ಪಕ್ಕಕ್ಕಿಟ್ಟು ಗಮನಿಸಿದರೆ ಈ ಮಾತು ಅದೆಷ್ಟು ಸತ್ಯ ಎಂಬುದು ವೇದ್ಯವಾಗುತ್ತದೆ. ನಮ್ಮ ಶಿಕ್ಷಣ ಪದ್ಧತಿ ಹಾಗೂ ನಮ್ಮ ಶಿಕ್ಷಕರ ಕೈಯಲ್ಲಿ ದಿನೇ ದಿನೇ ಅಸಂಖ್ಯಾತ ಪ್ರತಿಭೆಗಳ ಕಗ್ಗೊಲೆ ನಡೆಯುತ್ತಿದೆ. ಶಿಕ್ಷಕ ಎನ್ನುವವನು, ಸತ್ಯಕಾಮರು ಹೇಳಿದ ಹಾಗೆ ದಾರಿ ತೋರುವ ಮ್ಯಾಪ್ ಮಾತ್ರವಾಗದೆ ದಾರಿಯುದ್ದಕ್ಕೂ ಹೊತ್ತೊಯ್ಯಬೇಕಾದ ಹೆಣವಾಗಿ ವಿದ್ಯಾರ್ಥಿಗಳ ಬೆನ್ನನ್ನು ಏರಿದ್ದಾನೆ. ಗುರು, ಶಿಕ್ಷಕ ಎಂದ ಕೂಡಲೆ ಋಷಿ ಮುನಿಗಳ ಆಶ್ರಮಗಳನ್ನು, ಗುರುಕುಲ ಮಾದರಿಯ ಗುರು-ಶಿಷ್ಯ ಪದ್ಧತಿಯನ್ನು ನೆನೆಪಿಸಿಕೊಳ್ಳುವವರಿಗೆ ಇಂದಿನ ಸಮಾಜದಲ್ಲಿ ಶಿಕ್ಷಕರು ಎಂಥವರಿದ್ದಾರೆ ಹಾಗೂ ಶಿಕ್ಷಣ ವ್ಯವಸ್ಥೆ ಎಂಥದ್ದಿದೆ ಎಂಬುದನ್ನು ನೆನಪಿಸಬೇಕಾಗಿದೆ. ವಾಸ್ತವದ ಚಿತ್ರಣವನ್ನು ತೆರೆದಿಡಬೇಕಾಗಿದೆ.

ಹಿಂದೆ ಶಿಕ್ಷಣವೆಂಬುದು ಒಂದು ಪವಿತ್ರ ಕ್ಷೇತ್ರವಾಗಿತ್ತು. ಗುರು-ಶಿಷ್ಯ ಸಂಬಂಧ ಎಂಬುದು ಕೇವಲ ಕೊಟ್ಟು ತೆಗೆದುಕೊಳ್ಳುವ ವ್ಯವಹಾರವಾಗಿರಲಿಲ್ಲ. ಶಿಷ್ಯ ಗುರುವಿನ ಆಶ್ರಮದಲ್ಲೇ ಇದ್ದು ಗುರುವಿನ ಸೇವೆ ಮಾಡುತ್ತಿದ್ದ. ಆಶ್ರಮದ ಕೆಲಸಗಳನ್ನು ಮಾಡುತ್ತಿರುತ್ತಿದ್ದ. ಆ ಮೂಲಕ ಗುರುವಿನಿಂದ ಪಡೆಯುವ ಶಿಕ್ಷಣಕ್ಕೆ ಬೇಕಾದ ಮನೋಭೂಮಿಕೆಯನ್ನು ಸಿದ್ಧ ಪಡಿಸಿಕೊಳ್ಳುತ್ತಿದ್ದ. ಆತನಿಗೆ ಗುರುದಿನ ಆಶ್ರಮದಲ್ಲಿದ್ದಷ್ಟೂ ಕಾಲ ಶಿಕ್ಷಣವನ್ನು ಪಡೆಯಬೇಕು ಎಂಬ ಹಂಬಲವಿರುತ್ತಿತ್ತು. ಜೊತೆಗೆ ತಾನು ಪಡೆಯುತ್ತಿರುವ ಶಿಕ್ಷಣಕ್ಕೆ ಕೊಡಬೇಕಾದ ಮರ್ಯಾದೆ ಎಂಥದ್ದೂ ಎಂಬುದನ್ನೂ ಆತ ಕಲಿಯುತ್ತಿದ್ದ. ತಾನು ಕಲಿತ ಶಿಕ್ಷಣದಿಂದ ತನ್ನ ಕಲ್ಯಾಣ ಮಾಡಿಕೊಳ್ಳುವುದ ಜೊತೆಗೆ ಸಮಾಜದ ಕಲ್ಯಾಣವನ್ನೂ ಮಾಡಬೇಕೆಂಬ ಗುರಿ ಆತನಲ್ಲಿರುತ್ತಿತ್ತು. ಶಿಕ್ಷಣಕ್ಕಾಗಿ ಶಿಕ್ಷಣ ಎಂಬುದು ಆಗ ಸಮಾಜದ ನೀತಿಯಾಗಿತ್ತು. ಗುರುವಿಗೋ ಶಿಷ್ಯಂದಿರಿಗೆ ವಿದ್ಯೆಯನ್ನು ಧಾರೆಯೆರೆಯುವುದೇ ಜೀವನದ ಪರಮೋದ್ದೇಶವಾಗಿತ್ತು.

ಆದರೆ ಈಗಿನ ಪರಿಸ್ಥಿತಿ ಹೇಗಿದೆ? ಶಿಕ್ಷಕನಾಗಲೇ ಬೇಕು ಎಂದು ಎಷ್ಟು ಮಂದಿ ಜೀವನ ಗುರಿಯನ್ನು ಹೊಂದಿರುತ್ತಾರೆ? ವಿದ್ಯೆಯನ್ನು ಧಾರೆಯೆರೆಯುವುದಕ್ಕಾಗಿ ಶಿಕ್ಷಕರಾಗುತ್ತಿದ್ದೇವೆ ಎಂದು ಅದೆಷ್ಟು ಮಂದಿ ಶಿಕ್ಷಕರು ಎದೆಯ ಮೇಲೆ ಕೈ ಇಟ್ಟು ಹೇಳಬಲ್ಲರು? ಧಾರೆಯೆರೆಯಲು ಅವರ ಬಳಿ ವಿದ್ಯೆ ಇದ್ದರೆ ತಾನೆ! ಬೇರಾವ ಕೆಲಸವೂ ಸಿಕ್ಕದಿದ್ದರೆ ಶಿಕ್ಷಕನಾಗಬಹುದು ಎಂದು ಆಲೋಚಿಸಿ ಶಿಕ್ಷಣ ಕ್ಷೇತ್ರಕ್ಕೆ ಧಾವಿಸುವವರಿಗೆ ‘ಗುರು’ವಿನ ಸ್ಥಾನವನ್ನು ತುಂಬುವಂಥ ಅರ್ಹತೆ ಇರುತ್ತದಾ? ಬೇರೆಲ್ಲಾ ಕ್ಷೇತ್ರಗಳಿದ್ದ ಹಾಗೆಯೇ ಶಿಕ್ಷಣ ಕ್ಷೇತ್ರವೂ ಹಣ ಮಾಡುವ ದಂಧೆಯಾಗಿರುವಾಗ ಯಾವ ಗುರು-ಶಿಷ್ಯ ಸಂಬಂಧವನ್ನು ನಾವು ಅಪೇಕ್ಷಿಸಲು ಸಾಧ್ಯ? ಬೇರೆಲ್ಲಾ ಕ್ಷೇತ್ರಗಳಲ್ಲಿರುವ ಮಾರುಕಟ್ಟೆ ವ್ಯಾಕರಣವೇ ಶಿಕ್ಷಣ ಕ್ಷೇತ್ರದಲ್ಲೂ ಚಲಾವಣೆಯಾಗುತ್ತಿದೆ. ವಿದ್ಯಾರ್ಥಿ ಕಸ್ಟಮರ್ ಆಗುತ್ತಿದ್ದಾನೆ. ಶಾಲೆಗಳು ಒಳ್ಳೆಯ ಕಸ್ಟಮರ್ ಸರ್ವೀಸ್ ಕೊಡುವ ಕಂಪನಿಗಳಾಗುತ್ತಿವೆ. ಅವಕ್ಕೂ ಜಾಹೀರಾತು, ಡೊನೇಷನ್ ಪೈಪೋಟಿ, ರಾಜಕೀಯದ ಪಿಡುಗುಗಳು ಅಂಟಿಕೊಂಡಿವೆ. ಇಷ್ಟೇ ಅಲ್ಲದೆ ಶಿಕ್ಷಣ ಎಂಬುದು ಕೇವಲ ಪರೀಕ್ಷೆಗಳನ್ನು ಪಾಸು ಮಾಡುತ್ತಾ ಒಳ್ಳೆಯ ಮಾರ್ಕು ಗಳಿಸುವ ಉದ್ಯಮವಾಗಿ ರೂಪುಗೊಂಡಿದೆ. ಶಿಕ್ಷಣ ಪದ್ಧತಿಯು ಮಾರ್ಕುಗಳನ್ನೇ ‘ವಿದ್ಯೆ’ಯೆಂದು ಪರಿಗಣಿಸುತ್ತಿರುವಾಗ, ಪರೀಕ್ಷೆಗಳನ್ನು ಪಾಸು ಮಾಡಿದವರನ್ನೇ ವಿದ್ಯಾವಂತರು ಎಂದು ಘೋಷಿಸುತ್ತಿರುವಾಗ ‘ಗುರು ಬ್ರಹ್ಮ, ಗುರು ವಿಷ್ಣು…’ ಎನ್ನುವುದು ಹಾಸ್ಯಾಸ್ಪದವಾಗುತ್ತದೆ. ಗುರುವನ್ನು ದೈವ ಎಂದು ವಿದ್ಯಾರ್ಥಿಗಳು ಭಾವಿಸಬೇಕು ಎಂದು ಅಪೇಕ್ಷಿಸುವುದು ಅತಿಯಾಗುತ್ತದೆ. ಇವೆಲ್ಲದರ ಜೊತೆಗೆ ಡೊನೇಶನ್ ಹೆಸರಿನಲ್ಲಿ ನಿಜವಾದ ಪ್ರತಿಭೆಗೆ ಸಲ್ಲ ಬೇಕಾದ ಮನ್ನಣೆಯನ್ನು ವಂಚಿಸುವ ಶಿಕ್ಷಣ ಸಂಸ್ಥೆಗಳು, ಇಂಟರ್ನಲ್‌ಗಳು, ಅಟೆಂಡೆನ್ಸಿನ ನೆಪದಲ್ಲಿ ವೈಯಕ್ತಿಕ ಸೇಡು ತೀರಿಸಿಕೊಳ್ಳುವ ಶಿಕ್ಷಕರು, ತಮ್ಮ ಸ್ಥಾನವನ್ನು ದುರುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳ ಮೇಲೆ ಎರಗುವ ಕಾಮುಕರು ಇಂಥದ್ದೆಲ್ಲಾ ಕಣ್ಣ ಮುಂದೇ ನಡೆಯುವಾಗ ‘ಗುರುವಿನ ಗುಲಾಮನಾಗು..’ ಎಂದು ಹೇಳಲು ಯಾರಿಗೆ ಮನಸ್ಸು ಬಂದೀತು?

ವಿದ್ಯೆಯೆಂಬುದು ವಿದ್ಯೆಯಾಗಿ ಉಳಿದಿಲ್ಲ. ಗುರುವೆಂಬುವವನು ಗುರುವಾಗಿ ಉಳಿದಿಲ್ಲ – ಇದು ಅರಗಿಸಿಕೊಳ್ಳಲು ಸ್ವಲ್ಪ ಕಷ್ಟವಾದರೂ ಈ ದಿನದ ಸತ್ಯ. ಗುರು ಪರಂಪರೆಯಿಂದ ಎಂದಿಗೂ ನಿಜವಾದ ವಿದ್ಯಾಕಾಂಕ್ಷಿಗೆ ನ್ಯಾಯ ದಕ್ಕಲು ಸಾಧ್ಯವಿಲ್ಲ ಎಂಬುದನ್ನು ಏಕಲವ್ಯ ಹಾಗೂ ದ್ರೋಣರ ಕಥೆಯಿಂದ ತಿಳಿಯಬಹುದು. ಈ ಪರಂಪರೆಯ ಹಂಗಿನಿಂದ ಹೊರಬರಲು ನಮಗೆ ಆಶಾಕಿರಣವಾಗಿ ಗೋಚರಿಸಿರುವುದೇ ಈ ಮಾಹಿತಿ ಕ್ರಾಂತಿ ಹಾಗೂ ಪುಸ್ತಕ ಲೋಕ. ಇಲ್ಲಿಗೆ ಯಾರೂ ನಿಷಿದ್ಧರಲ್ಲ. ಇವು ನಿಮ್ಮ ಜಾತಿ ಯಾವುದು, ನಿಮ್ಮ ವಂಶ ಯಾವುದು, ನಿಮ್ಮ ಪೂರ್ಜರು ಯಾರು ಎಂದು ಕೇಳುವುದಿಲ್ಲ. ಗಂಡೋ, ಹೆಣ್ಣೋ ಎಂದು ಭೇದ ಮಾಡುವುದಿಲ್ಲ. ಚಿಕ್ಕವರು, ದೊಡ್ಡವರು ಎಂಬ ತಾರತಮ್ಯ ಇವಕ್ಕೆ ತಿಳಿದಿಲ್ಲ. ಯಾರೆಂದರೆ ಯಾರು ಬೇಕಾದರೂ ವಿದ್ಯೆಗಾಗಿ ಕೈಚಾಚ ಬಹುದು. ಇವು ಮೊಗೆದು ಮೊಗೆದು ಕೊಡುತ್ತವೆ. ಅರ್ಹತೆಯಿರುವವರು ಅದನ್ನು ದಕ್ಕಿಸಿಕೊಳ್ಳುತ್ತಾರೆ. ಪುಸ್ತಕಗಳು ಎಂದಿಗೂ ನಮ್ಮ ಬಲಹೀನತೆಯ ಲಾಭ ಪಡೆಯುವುದಿಲ್ಲ. ಅಂತರ್ಜಾಲ ಎಂದಿಗೂ ಶೋಷಣೆಗೆ ಕೈ ಹಾಕುವುದಿಲ್ಲ. ಹಳ್ಳಿಯ ಮೂಲೆಯ ಹುಡುಗನು ಸಹ ನಾಸಾದ ಬಾಗಿಲು ತಟ್ಟಬಹುದು. ಬಡವನ ಮಗಳು ಸಹ ವರ್ಲ್ಡ್ ಬ್ಯಾಂಕಿನೊಳಕ್ಕೆ ಹೋಗಬಹುದು. ಇಷ್ಟೆಲ್ಲಾ ಸೌಲಭ್ಯ ಕೊಡಮಾಡಿರುವ ಮಾಹಿತಿ ಕ್ರಾಂತಿ ಶಿಕ್ಷಕನ ಪಾತ್ರವನ್ನು ಆಕ್ರಮಿಸಿಕೊಂಡಿರುವುದು ಸ್ಪಷ್ಟ. ಶಿಕ್ಷಣವೆನ್ನುವುದು ವ್ಯಾಪಾರವಾಗಿರುವಾಗ, ಶಿಕ್ಷಕನೆಂಬುವವನು ದಲ್ಲಾಳಿಯಾಗಿರುವಾಗ ಅರಿವೇ ಗುರು, ಪುಸ್ತಕವೇ ಮಾರ್ಗದರ್ಶಿ, ಅಂತರ್ಜಾಲವೇ ಜ್ಞಾನದೇಗುಲ ಎನ್ನುವುದರಲ್ಲಿ ತಪ್ಪೇನಿದೆ?

blogcover1.jpg

ಇದುವರೆಗೆ ಮನುಷ್ಯ ಮಾಡಿದ ಆವಿಷ್ಕಾರಗಳಲ್ಲಿ ಕಂಪ್ಯೂಟರಿನ ಆವಿಷ್ಕಾರವೇ ಬೆರಗನ್ನು ಹುಟ್ಟಿಸುವಂಥದ್ದು. ನಾವು ಹೇಳಿದ್ದನ್ನೆಲ್ಲ ಕ್ಷಣಾರ್ಧದಲ್ಲಿ ಯಾವ ಲೋಪವೂ ಇಲ್ಲದ ಹಾಗೆ ಮಾಡಿ ಮುಗಿಸುವ ವಿಧೇಯ ಸೇವಕನ ಹುಡುಕಾಟದಲ್ಲಿ ಮನುಷ್ಯ ನಾಗರೀಕತೆಯ ಹಾದಿಯಲ್ಲಿ ಬಹುದೂರ ಬಂದಿದ್ದ. ಕಂಪ್ಯೂಟರೆಂಬ ದಿವ್ಯ ಉಪಕರಣ ಅವನ ಹುಡುಕಾಟಕ್ಕೆ ನಿಲ್ದಾಣವೊಂದನ್ನು ಸೃಷ್ಟಿಸಿಕೊಟ್ಟಿತು. ಈಗ ಕಂಪ್ಯೂಟರೆಂಬ ಅಲ್ಲಾವುದ್ದೀನನ ಅದ್ಭುತ ದೀಪದ ಜೀನಿಯ ಜೊತೆಗೆ ಅಂತರ್ಜಾಲವೆಂಬ ಮಾಯಾವಿಯೂ ಸೇರಿಕೊಂಡು ಮನುಷ್ಯನೆದುರು ನಂಬಲಸಾಧ್ಯವಾದ, ಅದ್ಭುತಗಳನ್ನು ತೆರೆದಿಡುತ್ತಿದೆ. ಅಂಥದ್ದೇ ಅದ್ಭುತಗಳಲ್ಲಿ ಒಂದು ಈ ಬ್ಲಾಗ್ ಎಂಬ ಅಕ್ಷರ ಲೋಕ!

ಇದು ಅಂತರ್ಜಾಲದ ದಿನಚರಿ!

ಬ್ಲಾಗ್ ಎಂಬುದು ವೆಬ್ ಹಾಗೂ ಲಾಗ್ ಎಂಬ ಎರಡು ಪದಗಳ ಸಂಯೋಗದಿಂದ ಹುಟ್ಟಿದ ಪದ. ತೀರಾ ಹಿಂದೇನಲ್ಲ, ಒಂಭತ್ತು ವರ್ಷದ ಕೆಳಗೆ ೧೯೯೭ರ ಡಿಸೆಂಬರ್ ೧೭ರಂದು ಜಾರ್ನ್ ಬಾರ್ಗರ್ ಎಂಬುವವನು ಈ ತಂತ್ರಜ್ಞಾನಕ್ಕೆ ವೆಬ್ ಲಾಗ್ ಎಂದು ಹೆಸರಿಟ್ಟ. ವೆಬ್ ಎಂದರೆ ಅಂತರ್ಜಾಲ ಹಾಗೂ ಲಾಗ್ ಎಂದರೆ ಡೈರಿ ಅಥವಾ ದಿನಚರಿ ಎಂದು ಅರ್ಥೈಸಿಕೊಳ್ಳಬಹುದು. ಮುಂದೆ ೧೯೯೯ ರಲ್ಲಿ ಪೀಟರ್ ಲೆರೋಲ್ಜ್ ಎಂಬಾತ ಕೀಟಲೆಗಾಗಿ ವೆಬ್ ಹಾಗೂ ಲಾಗ್ ಪದಗಳನ್ನು ಒಡೆದು ಜೋಡಿಸಿ ಬ್ಲಾಗ್ ಎಂಬ ಪದವನ್ನು ಟಂಕಿಸಿದ. ಈಗ ಜಗತ್ತಿನಾದ್ಯಂತ ಪೀಟರನ ಮೋಜಿನ ಪದ ‘ಬ್ಲಾಗ್’ ಅಂತರ್ಜಾಲ ಬಳಸುವವರ ನಾಲಿಗೆಯಲ್ಲಿ ನಲಿದಾಡುತ್ತಿದೆ.

ಅಂತರ್ಜಾಲದ ಪರಿಚಯವಿರುವವರಿಗೆ ವೆಬ್ ಸೈಟುಗಳ ಬಗ್ಗೆ ತಿಳಿದಿರಬಹುದು. ತೀರಾ ಟೆಕ್ನಿಕಲ್ ಆಗಿ ತಿಳಿಯುವ ಗೋಜಿಗೆ ಹೋಗದಿದ್ದರೆ, ಈ ಬ್ಲಾಗುಗಳನ್ನೂ ಒಂದು ಬಗೆಯ ವೆಬ್ ಸೈಟುಗಳು ಎಂದುಕೊಳ್ಳಬಹುದು. ಒಂದೇ ವ್ಯತ್ಯಾಸವೆಂದರೆ ಈ ತಾuದ ನಿರ್ವಹಣೆ ವೈಯಕ್ತಿಕ ಮಟ್ಟದಲ್ಲಿ ನಡೆಯುತ್ತದೆ. ನೀವು ಒಂದು ಡೈರಿಯನ್ನು ತಂದು ಅದರಲ್ಲಿ ಡೇಟ್ ಹಾಕಿ ಸುಮ್ಮನೆ ಅನ್ನಿಸಿದ್ದನ್ನೆಲ್ಲಾ ಬರೆಯುತ್ತಾ ಹೋಗುತ್ತೀರಲ್ಲ, ಹಾಗೆ ಅಂತರ್ಜಾಲದಲ್ಲಿ ನೀವು ಬರೆಯಬಹುದು. ಹಾಗೆ ಬರೆದದ್ದನ್ನು ಕ್ಷಣಾರ್ಧದಲ್ಲಿ ಪ್ರಕಟಿಸಿಯೂಬಿಡಬಹುದು. ಅದು ಪ್ರಕಟವಾದ ಮರುಕ್ಷಣದಲ್ಲಿಯೇ ಜಗತ್ತಿನ ಯಾವ ಮೂಲೆಯಿಂದಾದರೂ ಓದುಗರು ಅದನ್ನು ಓದಬಹುದು. ಪ್ರತಿಕ್ರಿಯೆಗಳನ್ನೂ ಸಹ ಸೇರಿಸಬಹುದು. ಇದೆಲ್ಲಕ್ಕೂ ಅವಕಾಶ ಮಾಡಿಕೊಡುವ ಮೋಹಕ ತಂತ್ರಜ್ಞಾನವೇ ಬ್ಲಾಗ್.

ಹಂಗಿಲ್ಲದ ಕ್ಯಾನ್ವಾಸ್

ನೀವು ಓದಿ ಖುಶಿ ಪಟ್ಟ ಪುಸ್ತಕದ ಬಗ್ಗೆ, ನೋಡಿ ಮೆಚ್ಚಿದ ಸಿನೆಮಾದ ಬಗ್ಗೆ, ಕೇಳಿ ಗುನುಗುನಿಸುವ ಹಾಡಿನ ಸಾಲಿನ ಬಗ್ಗೆ, ನೆನಪಾಗಿ ಕಾಡುವ ಮುಖಗಳ ಬಗ್ಗೆ, ರೋಷ ಉಕ್ಕಿಸುವ ಅವ್ಯವಸ್ಥೆಯ ಬಗ್ಗೆ, ಕಣ್ಣೆದುರಿನ ಅನ್ಯಾಯದ ಬಗ್ಗೆ ಬರೆದು ಅದನ್ನು ಪತ್ರಿಕೆಗಳಿಗೆ ಕಳುಹಿಸುತ್ತೀರಿ. ನಿಮ್ಮ ಬರಹ ಪ್ರಕಟವಾಗಬೇಕೆ ಬೇಡವೇ ಎಂಬುದನ್ನು ಸಂಪಾದಕ ನಿರ್ಧರಿಸುತ್ತಾನೆ. ಪ್ರಕಟ ಪಡಿಸಿದರೂ ಅದನ್ನು ತನ್ನ ಮೂಗಿನ ನೇರಕ್ಕೆ ಕತ್ತರಿ ಪ್ರಯೋಗಕ್ಕೆ ಒಳಪಡಿಸುತ್ತಾನೆ. ಕೆಲವೊಮ್ಮೆ ನಿಮ್ಮ ಬರಹಗಳನ್ನು ಮುಲಾಜಿಲ್ಲದೆ ವಾಪಸ್ಸು ಕಳುಹಿಸಿಬಿಡುತ್ತಾನೆ. ಒಟ್ಟಿನಲ್ಲಿ ನೀವು ನಿಮ್ಮ ವಿಚಾರವನ್ನು ಜಗತ್ತಿನೊಂದಿಗೆ ಹಂಚಿಕೊಳ್ಳಲು ಈ ಸಂಪಾದಕ ಅಥವಾ ಪ್ರಕಾಶಕನೆಂಬ ದೊಣ್ಣೆ ನಾಯಕನ ಮರ್ಜಿಯನ್ನು ಕಾಯುತ್ತ ಕೂರಬೇಕಾಗುತ್ತದೆ.

ಈ ಎಲ್ಲಾ ಅಡೆತಡೆಗಳನ್ನು ಧ್ವಂಸಗೊಳಿಸಿ ಮುಕ್ತವಾದ, ಯಾರ ಹಂಗೂ ಇಲ್ಲದ ಅಭಿವ್ಯಕ್ತಿಯ ವೇದಿಕೆಯನ್ನು ಒದಗಿಸಿಕೊಡುತ್ತದೆ ಬ್ಲಾಗ್. ನಿಮಗೆ ಕನಿಷ್ಠವಾದ ಕಂಪ್ಯೂಟರ್ ಜ್ಞಾನವಿದ್ದರೆ ಸಾಕು. ಅಂತರ್ಜಾಲದ ಬಗ್ಗೆ ಇಷ್ಟೇ ಇಷ್ಟು ತಿಳಿದಿದೆ ಎಂಬ ಆತ್ಮವಿಶ್ವಾಸವಿದ್ದರೆ ಸಾಕು. ನಿಮ್ಮದೇ ಪುಟ್ಟದೊಂದು ಬ್ಲಾಗ್ ತೆರೆದುಕೊಳ್ಳಬಹುದು. ಅದಕ್ಕೆ ಚೆಂದದ ಹೆಸರು ಇಟ್ಟುಕೊಳ್ಳಬಹುದು. ಮಿತಿಯಲ್ಲಿಯೇ ಅದನ್ನು ಅಂದಚೆಂದಗೊಳಿಸಿಕೊಳ್ಳಬಹುದು. ಅನಂತರ ನಿಮಗೆ ತೋಚಿದ್ದನ್ನು ಅದರಲ್ಲಿ ಪ್ರಕಟಿಸುತ್ತಾ ಹೋಗಬಹುದು. ನಿಮ್ಮ ವೈಯಕ್ತಿಕ ಅನುಭವ, ದಿನಚರಿ, ನಿಮ್ಮ ಉದ್ಯೋಗದ ಕ್ಷೇತ್ರದ ಬಗೆಗಿನ ಮಾಹಿತಿ, ನಿಮ್ಮ ಇಷ್ಟದ ಹವ್ಯಾಸದ ಬಗೆಗಿನ ವಿವರ, ನಿಮ್ಮ ಪ್ರವಾಸದ ಕಥನ, ಕಥೆ, ಕಾದಂಬರಿ, ಕವನ- ಹೀಗೆ ಏನನ್ನು ಬೇಕಾದರೂ ದಾಖಲಿಸುತ್ತಾ ಹೋಗಬಹುದು. ಬರೀ ಅಕ್ಷರಗಳಿಗೆ ಜೋತು ಬೀಳಬೇಕಿಲ್ಲ. ನೂರು ಮಾತು ಹೇಳುವ ಒಂದು ಮುದ್ದಾದ ಚಿತ್ರ, ನಿಮ್ಮ ಕ್ಯಾಮರದಲ್ಲಿ ಕ್ಲಿಕ್ಕಿಸಿದ ಚೆಂದದ ಫೋಟೊ, ವಿಡಿಯೋ ಕ್ಲಿಪ್ಪಿಂಗುಗಳು, ನೀವು ಹಾಡಿದ ಹಾಡು, ನಿಮ್ಮ ಭಾಷಣ, ಪ್ರೀತಿಯಿಂದ ಹೇಳಿದ ಕಥೆ- ಹೀಗೆ ಸಾಂಪ್ರದಾಯಿಕ ಪತ್ರಿಕೆಗಳು, ಮ್ಯಾಗಝೀನುಗಳು ಒದಗಿಸಲಾಗದ ಅಸಂಖ್ಯ ಅವಕಾಶಗಳನ್ನು ಕೊಡುವ ಅದ್ಭುತ ಕ್ಯಾನ್ವಾಸ್ ಈ ಬ್ಲಾಗ್.

ಸ್ವರ್ಗಕ್ಕೆ ಮೂರೇ ಗೇಣು

ಓದುಗರೊಂದಿಗೆ ಸಂವಾದಿಸಲು, ಜಗತ್ತಿಗೆ ನಮ್ಮ ವಿಚಾರಗಳನ್ನು ಹೇಳಿಕೊಳ್ಳಲು ಇಷ್ಟು ಸುಲಭದ ಮಾರ್ಗವಿದೆ ಎಂಬುದನ್ನು ನಂಬುವುದಕ್ಕೂ ಸಾಧ್ಯವಾಗುವುದಿಲ್ಲ. ಎರಡು ಅಂದರೆ ಎರಡೇ ನಿಮಿಷದಲ್ಲಿ ನೀವು ಬ್ಲಾಗೊಂದನ್ನು ತೆರೆಯಬಹುದು. ಅದಕ್ಕೆ ನೀವು ಯಾವ ದಾಖಲೆಗಳನ್ನೂ ಸಲ್ಲಿಸಬೇಕಿಲ್ಲ. ಯಾವ ಕಛೇರಿಯಲ್ಲೂ ಸಾಲುಗಟ್ಟಿ ನಿಂತು ನಮೂದಿಸಿಕೊಳ್ಳಬೇಕಿಲ್ಲ. ಯಾರ ಶಿಫಾರಸ್ಸಿಗೂ ಅಂಗಲಾಚಬೇಕಿಲ್ಲ. ನಿಮ್ಮದೊಂದು ಇ-ಮೇಲ್ ಅಕೌಂಟ್ ಇದ್ದರೆ ಸಾಕು ನೀವು ಎಷ್ಟು ಬ್ಲಾಗುಗಳನ್ನಾದರೂ ತೆರೆದು ಕೂರಬಹುದು. ಒಂದು ನಯಾ ಪೈಸೆ ಖರ್ಚಿಲ್ಲದೆ! ಬ್ಲಾಗ್ ಸ್ಪಾಟ್, ವರ್ಡ್‌ಪ್ರೆಸ್ ಮುಂತಾದ ತಾಣಗಳು ನಿಮ್ಮಿಂದ ಚಿಕ್ಕಾಸನ್ನೂ ಪಡೆಯದೆ ನಿಮ್ಮ ಅಭಿವ್ಯಕ್ತಿಗೆ ಬೇಕಾದಂತಹ ಕ್ಯಾನ್ವಾಸನ್ನು ಒದಗಿಸಿಕೊಡುತ್ತವೆ.

ಅವಕಾಶಗಳು ಅಪಾರ

ಬ್ಲಾಗುಗಳು ತೆರೆದಿರಿಸುವ ಅವಕಾಶಗಳು ಸಾಗರದಷ್ಟು ವಿಶಾಲವಾದದ್ದು. ಅದು ಒದಗಿಸಿಕೊಟ್ಟಿರುವ ಅಡೆತಡೆ ಇಲ್ಲದ ಮುಕ್ತ ಅವಕಾಶವನ್ನು ಬುದ್ಧಿವಂತಿಕೆಯಿಂದ ಉಪಯೋಗಿಸಿಕೊಳ್ಳುವವರಿಗೆ ಅದು ಕಲ್ಪವೃಕ್ಷವಾಗುತ್ತದೆ. ಗಂಭೀರವಾದ ಸಂಗತಿಗಳನ್ನು ಮುಖ್ಯವಾಹಿನಿಯ ಮಾಧ್ಯಮಗಳು ಪ್ರಕಟಿಸಿವುದಿಲ್ಲ ಎಂದು ಆಸಕ್ತ ಓದುಗರು ಹಲುಬುವುದು, ತೀರಾ ಅಕಾಡೆಮಿಕ್ ಆದ ಸಂಗತಿ ಪ್ರಕಟಿಸಿದರೆ ಜನರಿಗೆ ಅರ್ಥವಾಗುವುದಿಲ್ಲ, ಅವರು ಓದುವುದೂ ಇಲ್ಲ ಎಂದು ಪತ್ರಿಕೆಗಳು ಆರೋಪಿಸಿವುದು ಎಲ್ಲಕ್ಕೂ ಬ್ಲಾಗುಗಳು ತಿಲಾಂಜಲಿ ಇತ್ತಿವೆ. ಎಂಥದ್ದೇ ಕಂಟೆಂಟನ್ನು ಜಾಗತಿಕವಾಗಿ ಪ್ರಕಟಿಸಬಹುದು. ಅದನ್ನು ಯಾರಾದರೂ ಓದಬಹುದು, ಓದದೆಯೂ ಇರಬಹುದು. ಓದುಗರು ತಮ್ಮ ತಮ್ಮ ಆಸಕ್ತಿಗೆ ತಕ್ಕಂಥ ಬ್ಲಾಗುಗಳಿಗೆ ಅಂಟಿಕೊಳ್ಳುವುದು- ಇವೆಲ್ಲವೂ ಜ್ಞಾನದ ಶಾಖೆಗಳು ವಿಸ್ತಾರಗೊಳ್ಳಲು ಸಹಾಯಕವಾಗುತ್ತವೆ.

ಅಲ್ಲದೆ ಭಾರಿ ಬಂಡವಾಳದ ಬಲಿಷ್ಠ ಬಹುಸಂಖ್ಯಾತ ಭಾಷೆಯ ಎದುರು ಅಲ್ಪಸಂಖ್ಯಾತ, ಸ್ಥಳೀಯ ಭಾಷೆಗಳು ತಮ್ಮತನವನ್ನು ಉಳಿಸಿಕೊಂಡು, ತಮ್ಮ ಭಾಷೆಯಲ್ಲಿ ಸಂವಾದವನ್ನು, ಸಂವೇದನೆಯನ್ನು ಹಸಿರಾಗಿರಿಸಿಕೊಳ್ಳಲು ಬ್ಲಾಗುಗಳು ನೆರವಾಗುತ್ತಿರುವುದು ಆರೋಗ್ಯಕರ ಸಂಗತಿ. ಬ್ಲಾಗು ಬರೆಯುವವರಿಗೆ ಯಾವ ನಿಬಂಧನೆ, ಷರತ್ತುಗಳೂ ಇಲ್ಲವಾದುದರಿಂದ ಬೇರೆ ಬೇರೆ ಸಂಸ್ಕೃತಿ, ಮನಸ್ಥಿತಿ, ವಯೋಮಾನ, ಧರ್ಮ, ದೇಶ, ಭಾಶೆಗಳ ಜನರು ಮುಕ್ತವಾಗಿ ಬೆರೆತು ಕೊಟ್ಟು-ತೆಗೆದುಕೊಳ್ಳುವ ಕ್ರಿಯೆಯಲ್ಲಿ ಪಾಲ್ಗೊಳ್ಳಲು ನೆರವಾಗುತ್ತದೆ.

ಅಪಸ್ವರಗಳು

ಬ್ಲಾಗುಗಳು ಅನಂತ ಅವಕಾಶದ ಬಾಗಿಲುಗಳು ಎಂಬುದೇನೋ ನಿಜ. ಹಾಗಂತ ಅವುಗಳಿಂದೇನೂ ಹಾನಿಯಾಗುತ್ತಲೇ ಇಲ್ಲ ಎಂದು ಹೇಳಲಾಗದು. ಬ್ಲಾಗು ಬರೆಯುವುದಕ್ಕೆ ಯಾವ ಯೋಗ್ಯತೆಯ ಮಾನದಂಡವೂ ಇಲ್ಲದಿರುವುದರಿಂದ ಅಂತರ್ಜಾಲದಲ್ಲಿ ಯಾರೂ ಓದದ, ಯಾರಿಗೂ ಉಪಯೋಗವಿಲ್ಲದ ಸಂಗತಿಗಳು ಶೇಖರಣೆಯಾಗಿ ಕೊಳೆಯುತ್ತಿವೆ ಎಂಬ ಆರೋಪವಿದೆ. ಜೊತೆಗೆ ಮಾಹಿತಿಯನ್ನು ಕೊಡುವ ಬ್ಲಾಗುಗಳ ವಿಶ್ವಾಸಾರ್ಹತೆಯನ್ನು ಒಪ್ಪಿಕೊಳ್ಳಲು ಸುಲಭ ಸಾಧ್ಯವಾಗುವುದಿಲ್ಲ. ಒಬ್ಬರ ಮೇಲಿನ ವೈಯಕ್ತಿಕ ಟೀಕೆಗೆ, ತೇಜೋವಧೆಗೆ ಬ್ಲಾಗುಗಳನ್ನು ಆಯುಧಗಳನ್ನಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪದಲ್ಲೂ ಹುರುಳಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಗಾಸಿಪ್ಪುಗಳನ್ನು, ಸುಳ್ಳು ಮಾಹಿತಿಯನ್ನು, ಕೋಮು ದ್ವೇಷವನ್ನು, ಜನಾಂಗೀಯ ತಾರತಮ್ಯವನ್ನು ಪ್ರಚೋದಿಸಲು ಬ್ಲಾಗುಗಳು ನೆರವಾಗುತ್ತಿವೆ ಎಂಬ ಟೀಕೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಈಗಾಗಲೇ ಜಗತ್ತಿನಾದ್ಯಂತ ಹಲವು ಬ್ಲಾಗಿಗರು ಜೈಲು ಪಾಲಾಗಿದ್ದಾರೆ. ಕೆಲವರು ಸರಕಾರದ ಅನ್ಯಾಯದ ವಿರುದ್ಧ ದನಿಯೆತ್ತಿ ಕಂಬಿ ಎಣಿಸುತ್ತಿದ್ದರೆ ಕೆಲವರು ಬ್ಲಾಗೆಂಬ ಮಂತ್ರದಂಡವನ್ನು ದುರ್ಬಳಕೆ ಮಾಡಿಕೊಂಡದ್ದಕ್ಕಾಗಿ ಶಿಕ್ಷೆಯನುಭವಿಸುತ್ತಿದ್ದಾರೆ.

ಮುಕ್ತ ಮಾರುಕಟ್ಟೆ, ಮುಕ್ತ ಸಮಾಜ, ಮುಕ್ತ ಅವಕಾಶಗಳಿಗಾಗಿ ಹಂಬಲಿಸುತ್ತಿರುವ ಆಧುನಿಕ ಜಗತ್ತಿನಲ್ಲಿ ಬ್ಲಾಗ್ ಎಂಬುದು ಸಹ ಅಸಂಖ್ಯ ಅವಕಾಶಗಳನ್ನು ಜೊತೆಗೇ ಅಪಾಯಗಳನ್ನೂ ತನ್ನೊಡಲಲ್ಲಿ ಹೊತ್ತು ತರುವ ಸಂಗತಿಯಾಗಿದೆ. ನಡೆಯುವುದರಲ್ಲೂ ಅಪಾಯವಿದೆ. ವಾಹನ ಚಲಾಯಿಸುವುದರಲ್ಲೂ ಅಪಾಯವಿದೆ. ಹಾಗಂತ ಅದನ್ನೇ ನಿಷೇಧಿಸುವುದು ಮೂರ್ಖತನವಾಗುತ್ತದೆ. ರಸ್ತೆ ಸುರಕ್ಷತೆಗಾಗಿ ಕ್ರಮಗಳನ್ನು ರೂಪಿಸಿ ಸೂಕ್ತವಾಗಿ ನಿರ್ವಹಣೆ ಮಾಡುವುದು ಜಾಣತನವೆನಿಸಿಕೊಳ್ಳುತ್ತದೆ. ಆಧುನೀಕರಣ, ಜಾಗತೀಕರಣ ಎಂಬ ದೈತ್ಯನನ್ನು ಹೆಡೆ ಮುರಿ ಕಟ್ಟಿ ನಮ್ಮ ಏಳಿಗೆಗೆ ದುಡಿಸಿಕೊಳ್ಳುವುದರಲ್ಲೇ ಬುದ್ಧಿವಂತಿಕೆ ಇದೆ.

ಅಂದಹಾಗೆ ನೀವಿನ್ನೂ ಬ್ಲಾಗು ತೆರೆದಿಲ್ಲವಾ?

-ಸುಪ್ರೀತ್.ಕೆ.ಎಸ್


Blog Stats

  • 69,005 hits
ಸೆಪ್ಟೆಂಬರ್ 2021
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 12345
6789101112
13141516171819
20212223242526
27282930