ಕಲರವ

Posts Tagged ‘ಮಂಥನ

ಈ ಟಿವಿಯಲ್ಲಿ ರಾತ್ರಿ ಎಂಟೂ ವರೆಗೆ ‘ಮಂಥನ’ ಎಂಬ ಧಾರಾವಾಹಿ ಪ್ರಸಾರವಾಗುತ್ತಿತ್ತು. ‘ಇದು ಇನ್ನೊಂದು ಮುಕ್ತ’ ಅಂತ ಹೆಸರು ಪಡೆದ ಈ ಧಾರಾವಾಹಿ ಇತ್ತೀಚೆಗೆ ಮುಕ್ತಾಯ ಕಂಡಿತು. ಧಾರಾವಾಹಿಗಳು ಎಂದರೆ ಸಾವಿಲ್ಲದ, ಕೊನೆಯಿಲ್ಲದ ಚಿರಂಜೀವಿಗಳು ಎಂದೇ ಜನರು ಭಾವಿಸಿರುವ ಇತ್ತೀಚಿನ ದಿನಗಳಲ್ಲಿ ಒಂದು ಧಾರಾವಾಹಿ ಮುಕ್ತಾಯವಾಯ್ತಂತೆ ಎಂದು ಕೇಳಿದರೇನೇ ಆಶ್ಚರ್ಯವಾಗುತ್ತದೆ!

ಈ ‘ಮಂಥನ’ದ ಬಗೆಗೊಂದು ಪುಟ್ಟ ಟಿಪ್ಪಣಿ, ಒಂದೊಳ್ಳೆ ಧಾರಾವಾಹಿಯ ನೆನಪಿಗಾಗಿ… ‘ಮಂಥನ’ದಪಾತ್ರಗಳ ಸಂಭಾಷಣೆ ಮೊದಲ ವೀಕ್ಷಣೆಯಲ್ಲೇ ನಮ್ಮ ಗಮನವನ್ನು ಸೆಳೆದುಬಿಡುತ್ತದೆ. ತುಂಬಾ ನಾಟಕೀಯ ಎನ್ನಿಸುವಂತಹ ಸಂಭಾಷಣೆಗಳು, ಗ್ರಾಂಥಿಕ ಭಾಷೆ ಎಲ್ಲವೂ ಹೊಸ ಪ್ರಯೋಗದಂತೆ ಮನಸ್ಸನ್ನು ಸೆಳೆಯುತ್ತವೆ. ಆದರೆ ಇಡೀ ಧಾರಾವಾಹಿಯನ್ನು ಆ ಹೊಸತನವೇ ಆಕ್ರಮಿಸಿಕೊಂಡು ಹೊಸಕಿ ಹಾಕಿಬಿಡುತ್ತದೆ. ಸೃಜನಶೀಲತೆ, ಬುದ್ಧಿವಂತಿಕೆ, ವೈಚಾರಿಕತೆಯನ್ನು ಮೆರೆಸುವ ಸಡಗರದಲ್ಲಿ ಸಹಜತೆ ನರಳುತ್ತದೆ. ಕಾವ್ಯಾತ್ಮಕವಾದ ಅಭಿವ್ಯಕ್ತಿ ಕಾಣೆಯಾಗುತ್ತದೆ, ಕಲಾಕೃತಿಯಾಗುವ ಬದಲು ಅದೊಂದು ಹತ್ತು ಬಟ್ಟೆ ಸೇರಿಸಿ ಹೊಲಿದ ಕೌದಿಯಾಗಿಬಿಡುತ್ತದೆ. ಚಿಕ್ಕ ಮಕ್ಕಳ ಬಾಯಲ್ಲಿ ದೊಡ್ಡವರೂ ಅರ್ಥಮಾಡಿಕೊಳ್ಳಲಾಗದಂತಹ ಮಾತುಗಳನ್ನು ತುರುಕುವುದು ಇದಕ್ಕೆ ಸಾಕ್ಷಿ. ಮೊದಲೇ ತಯಾರಿಸಿಟ್ಟುಕೊಂಡ ವಾದವನ್ನು, ವಿಚಾರವನ್ನು ಎರಡು ಪಾತ್ರಗಳು ಮಂಡಿಸುವಂತೆ ಸಂಭಾಷಣೆಯಿರುತ್ತದೆ. ಪಾತ್ರಗಳ ಸಂಸ್ಕಾರ, ವಯೋಮಾನ, ಮನೋಧರ್ಮಕ್ಕನುಗುಣವಾಗಿ ಸಂಭಾಷಣೆಯಿದ್ದರೆ ಕಲಾಕೃತಿ ಗೆಲ್ಲುತ್ತದೆ ಇಲ್ಲವಾದರೆ ಸಂಭಾಷಣೆ ಬರೆಯುವವ ಮಾತ್ರ ಗೆಲ್ಲುತ್ತಾನೆ.

ಹಾಗೆ ನೋಡಿದರೆ, ಈಗ ಕನ್ನಡದ ಚಾನಲ್ಲುಗಳಲ್ಲಿ ಹರಿಯುತ್ತಿರುವ ‘ಧಾರಾವಾಹಿ’ಗಳಿಗೆ ಹೋಲಿಸಿದರೆ ‘ಮಂಥನ’ ಸಾವಿರ ಪಾಲು ಶ್ರೇಷ್ಠ. ಮನುಷ್ಯ ಸಂಬಂಧಗಳನ್ನು ಹೆಜ್ಜೆ ಹೆಜ್ಜೆಗೂ ಪ್ರಶ್ನಿಸುವ, ಅಗ್ನಿ ಪರೀಕ್ಷೆಗೊಡ್ಡುವ, ಸಂಶಯದಿಂದ ಕಾಣುವ, ಸೀಳಿ ನೋಡಿ ವಿಶ್ಲೇಷಿಸುವ ಪ್ರಯತ್ನ ಹೊಸತನದಿಂದ ಕೂಡಿದೆ. ಮದುವೆ, ಮಕ್ಕಳ ಮೇಲಿನ ಪ್ರೀತಿ, ನಿರೀಕ್ಷೆ, ಕುಟುಂಬ ವ್ಯವಸ್ಥೆ, ಸಂಬಂಧಗಳ ಸ್ವರೂಪವನ್ನು ಎಳೆ ಎಳೆಯಾಗಿ ಕಾಣುವ ಪ್ರಯತ್ನ ಮನಸ್ಸಿಗೆ ಮುಟ್ಟುತ್ತದೆ. ವ್ಯವಹಾರ, ಪ್ರಾಮಾಣಿಕತೆ- ಸುತ್ತಲಿನ ಭ್ರಷ್ಟ ಪರಿಸರದಲ್ಲಿ ಅದು ಪ್ರಾಮಾಣಿಕನಲ್ಲಿ ಹುಟ್ಟಿಸುವ ಅಹಂಕಾರ, ಹಣದ ಗುಣ, ಸರಕಾರಿ ಅಧಿಕಾರಿ, ಕಾರ್ಖಾನೆಯ ಶ್ರೀಮಂತರು, ತೆರಿಗೆ ಸಂಸ್ಕೃತಿ -ಹೀಗೆ ಅನೇಕ ಸಾಮಾಜಿಕ ಮುಖಗಳ ಮೇಲೂ ಬೆಳಕು ಚೆಲ್ಲುವ ಪ್ರಯತ್ನ ಸ್ತುತ್ಯಾರ್ಹ.

ಗಮನಿಸಬೇಕಾದ ಮತ್ತೊಂದು ಸೂಕ್ಷ್ಮ ಸಂಗತಿಯೆಂದರೆ, ‘ಮಂಥನ’ದ ಪ್ರತಿ ಪಾತ್ರದ ಆಲೋಚನೆಯಲ್ಲೂ ಹೊಸತನವನ್ನು ಒತ್ತಾಯದಿಂದ ತೂರಿಸುವ ಪ್ರಯತ್ನ ಉಂಟುಮಾಡುವ ಕಿರಿಕಿರಿ. ಎಲ್ಲಾ ಪಾತ್ರಗಳಿಗೂ ಮಾನವೀಯ ಸಂಬಂಧಗಳ ಬಗ್ಗೆ ಸಮಾಜ ಸೃಷ್ಟಿಸಿರುವ ‘ಮಾದರಿ'(stereotype)ಗಳನ್ನು ಧಿಕ್ಕರಿಸುವ, ಅವುಗಳ ಹಂಗನ್ನು ಮೀರುವ ಉನ್ಮಾದವಿದೆ, ಹೊಸ ಆಯಾಮಗಳಿಗೆ ಕೈಚಾಚುವ ಹಸಿವಿದೆ. ಇದು ಮೆಚ್ಚುಗೆಗೆ ಅರ್ಹವಾದ ವಿಚಾರವೇ ಆದರೆ ಈ ಭಾವ ಎಲ್ಲಾ ಪಾತ್ರಗಳನ್ನೂ ಆವರಿಸುವುದರಿಂದ ಕಥಾನಕದ ಒಟ್ಟು ಅಂದಕ್ಕೆ ತೊಂದರೆಯಾಗುತ್ತದೆ. ಸಮಾಜದಲ್ಲಿ ಸಂಬಂಧಗಳು ಪುನರ್ ಮೌಲ್ಯಮಾಪನ ಗೊಳ್ಳುತ್ತಾ ಹೋಗುತ್ತಲೇ ಇರುತ್ತವೆ. ಹೊಸ ಹೊಸ ಆಯಾಮಗಳು ತೆರೆದುಕೊಳ್ಳುತ್ತಲೇ ಹೋಗುತ್ತಿರುತ್ತವೆ. ಹತ್ತಾರು ವರ್ಷಗಳ ನಂತರ ಈ ಧಾರಾವಾಹಿಯನ್ನು ನೋಡುವವನಿಗೆ ಇವೆಲ್ಲಾ ಹೊಸ ಚಿಂತನೆಗಳು ಅನ್ನಿಸದಷ್ಟು ಸಹಜವಾಗಿಬಿಟ್ಟಿರುತ್ತವೆ, ಇಲ್ಲವೆ ಅಪ್ರಸ್ತುತವಾಗಿಬಿಟ್ಟಿರುತ್ತವೆ. ಸತಿ ಪದ್ಧತಿ, ಬಾಲ್ಯವಿವಾಹಗಳ ಪ್ರಶ್ನೆ ನಮ್ಮಲ್ಲಿ ಅಪ್ರಸ್ತುತವಾಗಿರುವಂತೆ. ಈ ಬಗೆಯ ಸಂಬಂಧಗಳ ವಿಶ್ಲೇಷಣೆ ಸಲ್ಲದು ಅಂತಲ್ಲ, ಆ ಅಂಶದ ನೆರಳು ಎಲ್ಲಾ ಪಾತ್ರಗಳ ಮೇಲೂ ಬೀಳುವುದು ಸರಿಯಲ್ಲ.

ಇಷ್ಟೆಲ್ಲಾ ವಿಚಾರಗಳನ್ನು- ಅವುಗಳಲ್ಲಿ ನೆಗೆಟೀವ್ ಅಭಿಪ್ರಾಯಗಳೂ ಸೇರಿದ್ದರೂ- ಹುಟ್ಟುಹಾಕುವ ಕೆಲಸವನ್ನು ಒಂದು ಕನ್ನಡ ಧಾರಾವಾಹಿ ಮಾಡಿದೆಯೆಂದರೆ ಅದು ಆ ಧಾರಾವಾಹಿಯ ಯಶಸ್ಸೆಂದೇ ಕರೆಯಬೇಕು.ಇದು ‘ಮಂಥನ’ಕ್ಕೊಂದು ಆತ್ಮೀಯ ವಿದಾಯ…


Blog Stats

  • 68,988 hits
ಸೆಪ್ಟೆಂಬರ್ 2021
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 12345
6789101112
13141516171819
20212223242526
27282930  

Top Clicks

  • ಯಾವುದೂ ಇಲ್ಲ