Posts Tagged ‘ಬ್ಲಾಗು’
– ಸುಪ್ರೀತ್ ಕೆ. ಎಸ್, ಬೆಂಗಳೂರು.
ಪ್ರತಿನಿತ್ಯ ತಪ್ಪದೆ ಬ್ಲಾಗಿಗೆ ಬರೆಯಬೇಕು ಅಂದುಕೊಂಡಿದ್ದೆ. ಅದನ್ನೊಂದು ಸಾಧನೆ ಎನ್ನುವ ಹಾಗೆ ಭಾವಿಸಿದ್ದೆ. ಏಕೆ ದಿನನಿತ್ಯ ಬರೆಯಬೇಕು ಎಂದು ಕೇಳಿಕೊಳ್ಳುವ ತಾಳ್ಮೆ ಇರುತ್ತಿರಲಿಲ್ಲ. ಏನೋ ಉನ್ಮಾದ. ಬರೀ ಬೇಕು ಅನ್ನಿಸಿದ ತಕ್ಷಣ ಬರೆಯಲು ಶುರುಮಾಡಿಬಿಡಬೇಕು. ಏನಾದರೂ ಮಾಡಬೇಕೆಂಬ ಹುಮ್ಮಸ್ಸು ಹುಟ್ಟಿದಾಗ ದೊಡ್ಡವರು ಅದರ ಇಹಪರಗಳ ಬಗ್ಗೆ ಯೋಚಿಸಿ ಮಾಡು ಎಂದಾಗ ಹುಟ್ಟುವ ರೇಜಿಗೆಯನ್ನೇ ನಮ್ಮನ್ನು ನಾವು ನಿಧಾನಿಸಲು ಪ್ರಯತ್ನಿಸಿದಾಗ ಎದುರಿಸಬೇಕಾಗುತ್ತದೆ. ಈ ಹದಿ ವಯಸ್ಸಿನಲ್ಲಿ ಯಾವಾಗಲೂ ವಿವೇಕಕ್ಕಿಂತ ಸಂಕಲ್ಪಶಕ್ತಿ, ಕ್ರಿಯಾಶೀಲತೆಯೇ ಹೆಚ್ಚಾಗಿರುತ್ತದೆಯೇನೋ! ಹಾಗಾಗಿ ನಾನು ಉಕ್ಕುವ ಉತ್ಸಾಹಕ್ಕೆ ಬ್ರೇಕ್ ಹಾಕುವ ಯಾವ ಪ್ರಯತ್ನವನ್ನೂ ಮಾಡುವುದಿಲ್ಲ. ಆದರೆ ಆ ಕೆಲಸವನ್ನು ನನ್ನ ಸೋಮಾರಿತನ, ಅಶಿಸ್ತುಗಳು ನಿರ್ವಹಿಸುವುದರಿಂದ ನನಗೆ ಹೆಚ್ಚಿನ ಹಾನಿಯೇನೂ ಆಗಿಲ್ಲ!
ಪ್ರತಿದಿನ ಬ್ಲಾಗು ಬರೆಯಬೇಕು ಎಂಬುದರ ಹಿಂದೆ ಕೇವಲ ಬರಹದ ಪ್ರಮಾಣದ ಮೇಲಿನ ಮೋಹ ಕೆಲಸ ಮಾಡುತ್ತಿತ್ತು. ನನ್ನನ್ನು ಪ್ರಭಾವಿಸಿದ ಪತ್ರಕರ್ತನ ಹಾಗೆ ದಿನಕ್ಕಷ್ಟು ಪುಟ ಬರೆಯಬೇಕು, ವಾರಕ್ಕೆ ಇಷ್ಟು ಓದಬೇಕು ಎಂಬ ಅನುಕರಣೆಯ ಗುರಿಗಳನ್ನು ನನ್ನೆದುರು ಇರಿಸಿಕೊಂಡಿದ್ದೆ. ನನ್ನದಲ್ಲದ ಗುರಿಯೆಡೆಗೆ ಓಡುವ ಧಾವಂತ ಪಡುತ್ತಿದ್ದೆ. ನನ್ನದಲ್ಲದ ಹಸಿವಿಗೆ ಊಟ ಮಾಡುವ, ನನ್ನದಲ್ಲದ ಹೊಟ್ಟೆನೋವಿಗೆ ಔಷಧಿ ಕುಡಿಯುವ ಹುಂಬತನದ ಅರಿವೇ ಆಗಿರಲಿಲ್ಲ. ಒಬ್ಬ ಕವಿಯನ್ನೋ, ಲೇಖಕನನ್ನೋ, ಕಥೆಗಾರನನ್ನೋ, ಸಿನೆಮಾ ನಿರ್ದೇಶಕನನ್ನೋ, ಹೀರೋವನ್ನೋ ಪ್ರಾಣ ಹೋಗುವಷ್ಟು ಗಾಢವಾಗಿ ಪ್ರೀತಿಸುವುದು, ಆರಾಧಿಸುವುದು, ಅನುಕರಣೆಯಲ್ಲಿ ಸಾರ್ಥಕ್ಯವನ್ನು ಕಂಡುಕೊಳ್ಳುವುದು, ಅನಂತರ ಸ್ವಂತಿಕೆ ಕಳೆದುಕೊಂಡ ಅಭದ್ರತೆ ಕಾಡಿದಾಗ ಆ ಪ್ರೇರಣೆಯ ಮೂಲವನ್ನೇ ದ್ವೇಷಿಸಲು ತೊಡಗುವುದು ಇದೆಲ್ಲಾ ಯಾಕೆ ಬೇಕು? ಆದರೆ ಈ ಅರಿವು ಒಂದು ಅಚ್ಚಿನಲ್ಲಿ ಮೌಲ್ಡ್ ಆಗುವಾಗಿನ ಸುಖವನ್ನು, ಐಶಾರಾಮವನ್ನು ಅನುಭವಿಸುವಾಗ ಉಂಟಾಗುವುದಿಲ್ಲ. ಅದೇ ತಮಾಷೆಯ ಹಾಗೂ ದುರಂತದ ಸಂಗತಿ.
ವಿಪರೀತ ಬರೆಯಬೇಕು ಅನ್ನಿಸುವುದು ಸಹ ತುಂಬಾ ಮಾತಾಡಬೇಕು ಅನ್ನಿಸುವುದುರ ತದ್ರೂಪು ಭಾವವಾ? ಮಾತು ಹೇಗೆ ಚಟವಾಗಿ ಅಂತಃಸತ್ವವನ್ನು ಕಳೆದುಕೊಂಡು ಕೇವಲ ಶಬ್ಧವಾಗಿಬಿಡಬಲ್ಲುದೋ ಹಾಗೆಯೇ ಬರವಣಿಗೆಯು ಬರಡಾಗಬಲ್ಲದಾ? ವಿಪರೀತ ಬರೆಯಬೇಕು ಎಂದು ತೀರ್ಮಾನಿಸಿದವರು ವಾಚಾಳಿಯಾಗಿಬಿಡಬಲ್ಲರಾ? ಮನಸ್ಸಲ್ಲಿ ಕದಲುವ ಪ್ರತಿ ಭಾವವನ್ನೂ ಅಕ್ಷರಕ್ಕಿಳಿಸಿಬಿಡುವ, ಆ ಮೂಲಕ ತೀರಾ ಖಾಸಗಿಯಾದ ಭಾವವನ್ನು ಪ್ರದರ್ಶನದ ‘ಕಲೆ’ಯಾಗಿಸಿಬಿಡುವುದು ಒಳ್ಳೆಯದಾ? ಇವೆಲ್ಲಕ್ಕೂ ಉತ್ತರವನ್ನೂ ಸಹ ಅಕ್ಷರದ ಮೂಲಕವೇ ಕೇಳಿಕೊಳ್ಳುವ ಅನಿವಾರ್ಯತೆ ಇರುವುದು ನಮ್ಮ ಪರಿಸ್ಥಿತಿಯ ವ್ಯಂಗ್ಯವಲ್ಲವೇ? ನಮ್ಮೊಳಗಿನ ದನಿಗೆ ಅಭಿವ್ಯಕ್ತಿಕೊಡುವ ಮಾಧ್ಯಮವೂ ಕೂಡ ನಮ್ಮ ಚಟವಾಗಿಬಿಡಬಹುದೇ? ಅಕ್ಷರಗಳ ಮೋಹ ನಮ್ಮೊಳಗಿನ ದನಿಯನ್ನು ನಿರ್ಲಕ್ಷಿಸಿಬಿಡುವ ಅಪಾಯವಿದೆಯೇ? ಅಥವಾ ಇವೆಲ್ಲಕ್ಕೂ ಮನ್ನಣೆ, ಪ್ರಸಿದ್ಧಿ, ಹೆಸರುಗಳೆಂಬ ವಿಷಗಳು ಸೇರಿಕೊಂಡು ಬಿಟ್ಟಿವೆಯೇ?
ತುಂಬಾ ಬರೆಯುತ್ತಾ, ಯಾವಾಗಲೋ ಒಮ್ಮೆ ನಾನು ವಿಪರೀತ ವಾಚಾಳಿಯಾಗಿಬಿಟ್ಟೆನಾ ಅನ್ನಿಸತೊಡಗುತ್ತದೆ. ಅದರಲ್ಲೂ ಈ ಬ್ಲಾಗ್ ಬರಹಗಳಲ್ಲಿ ನನ್ನ ವೈಯಕ್ತಿಕ ಅನುಭವ, ವಿಚಾರ, ತಳಮಳಗಳನ್ನೇ ದಾಖಲಿಸುತ್ತಾ ಕೆಲವೊಮ್ಮೆ ನಾನು ಬರೀ ಮಾತುಗಾರನಾಗಿಬಿಟ್ಟೆನಾ ಎಂಬ ಭಯವಾಗುತ್ತದೆ. ನನ್ನ ಓದು ನಿಂತುಹೋಗಿಬಿಟ್ಟಿತಾ ಎಂಬ ಆತಂಕ ಕಾಡುತ್ತದೆ. ಈ ಸಕಲ ವ್ಯವಹಾರಗಳಿಗೂ ತಿಲಾಂಜಲಿಯಿತ್ತು ಕೆಲಕಾಲ ಎಲ್ಲಾದರೂ ಅಡಗಿಕೊಂಡು ಬಿಡಲಾ ಅನ್ನಿಸುತ್ತದೆ. ಬರೆಯುವುದನ್ನೆಲ್ಲಾ ಬಿಟ್ಟು ಓ ಹೆನ್ರಿಯ ಕಥೆಯಲ್ಲಿನ ಪಾತ್ರದ ಹಾಗೆ ಒಬ್ಬಂಟಿ ಕೋಣೆಯಲ್ಲಿ ಓದುತ್ತಾ, ಚಿಂತಿಸುತ್ತಾ, ಧ್ಯಾನಿಸುತ್ತಾ ಬದುಕು ಕಳೆದುಬಿಡಲಾ ಎನ್ನಿಸುತ್ತದೆ. ಹೀಗೆ ಬರೆಯುತ್ತಲೇ ಇದ್ದರೆ ನನ್ನ ತಿಳುವಳಿಕೆ, ಜ್ಞಾನ ಸೀಮಿತವಾಗಿಬಿಡುತ್ತದಾ ಎನ್ನಿಸುತ್ತದೆ. ಈ ಬಗೆಯ ಭಾವಗಳು ಕಾಡಿದಾಗ ಒಂದಷ್ಟು ದಿನ ಬ್ಲಾಗು ಬರೆಯುವುದನ್ನು ನಿಲ್ಲಿಸಿಬಿಟ್ಟಿದ್ದೇನೆ. ನಾವು ಗೆಳೆಯರು ನಡೆಸುತ್ತಿರುವ ಈ ಪತ್ರಿಕೆಗೆ ರಾಜೀನಾಮೆ ಕೊಟ್ಟುಬಿಟ್ಟಿದ್ದೇನೆ. ಒಂದೆರಡು ತಿಂಗಳು ಅದರಿಂದ ದೂರವಾಗಿಬಿಟ್ಟಿದ್ದೇನೆ. ಮತ್ತೆ ಅದನ್ನು ಅಪ್ಪಿಕೊಂಡಿದ್ದೇನೆ.
ಪರಿಸ್ಥಿತಿ ಬದಲಾಯಿಸಿತಾ? ಬ್ಲಾಗು ಬರೆಯುವುದನ್ನು ಬಿಟ್ಟಾಗ ನನಗೆ ತೃಪ್ತಿ ಸಿಕ್ಕಿತಾ? ಸಮಾಧಾನ ಎನ್ನುವುದು ಸಿಕ್ಕಿತಾ? ನನ್ನನ್ನು ನಾನು ನಿರಂತರವಾದ ಓದಿಗೆ, ಅಧ್ಯಯನಕ್ಕೆ ತೊಡಗಿಸಿಕೊಳ್ಳಲು ಸಾಧ್ಯವಾಯಿತಾ? ಖಂಡಿತಾ ಇಲ್ಲ. ಓದು ಅನ್ನೋದು ತೀರಾ ಖಾಸಗಿಯಾದ ಕ್ರಿಯೆಯೇ ಆದರೂ ಅದರಲ್ಲಿ ದೊರೆಯುವ ಸಂತೋಷವನ್ನು, ನಾನು ಕಂಡುಕೊಂಡ ಸಂಗತಿಗಳನ್ನು, ಅನುಭವಿಸಿದ ಬೆರಗನ್ನು ಹಂಚಿಕೊಳ್ಳಬೇಕು ಎನ್ನುವ ಹಂಬಲವನ್ನು ಹತ್ತಿಕ್ಕಲು ಸಾಧ್ಯವಾಗುವುದಿಲ್ಲ. ಬರೆಯುವಾಗ ನಾನು ಅದುವರೆಗೂ ಆಲೋಚಿಸಿರದಿದ್ದ ಅನೇಕ ಒಳನೋಟಕಗಳು ದಕ್ಕಿದಂತಾಗಿ ಪುಳಕಗೊಳ್ಳುವ ಸುಖವನ್ನು ಬಿಡಲು ಸಾಧ್ಯವಾಗುವುದಿಲ್ಲ. ಸೃಜನಶೀಲತೆಯಲ್ಲಿ ಸಿಕ್ಕುವ ಸಮಾಧಾನವನ್ನು ಕಳೆದುಕೊಂಡು ಇರುವುದು, ಪ್ರತಿದಿನ ರುಚಿ ರುಚಿಯಾಗಿ ತಿನ್ನುತ್ತಿದ್ದವನಿಗೆ ಒಮ್ಮೆಗೇ ಸಪ್ಪೆ ಊಟ ಹಾಕಲು ಶುರುಮಾಡಿದ ಹಾಗಾಗುತ್ತದೆ. ಬಹುಶಃ ಸ್ವಂತ ಅಭಿವ್ಯಕ್ತಿಗೆ, ನಮ್ಮವೇ ಆದ ಸೃಷ್ಠಿಗೆ ಯಾವ ಅವಕಾಶವನ್ನೂ ಕೊಡದೆ ಕೇವಲ ಹೊರಗಿನಿಂದ ಒಳಗೆ ಫೀಡ್ ಮಾಡಿಕೊಳ್ಳಬೇಕಾದ ನಮ್ಮ ಈ ಶಿಕ್ಷಣ ವ್ಯವಸ್ಥೆಯಿಂದಾಗಿ ಸಣ್ಣ ಸಣ್ಣ ಸೃಜನಶೀಲ ಕೆಲಸಗಳಲ್ಲೂ ಅಪಾರವಾದ ಖುಷಿ ಸಿಕ್ಕುತ್ತದೆಯೇನೋ! ಈ ಸಣ್ಣ ಖುಶಿ, ಅಹಂಕಾರಕ್ಕೆ ಸಿಕ್ಕುವ ಬೆಚ್ಚಗಿನ ಪ್ರೋತ್ಸಾಹಗಳನ್ನು ತೊರೆಯುವುದು ರಾಜಕಾರಣಿ ಕುರ್ಚಿಯ ಮೇಲಿನ ಆಸೆಯನ್ನು ಬಿಟ್ಟಂತೆಯೇ ಏನೋ! ಈ ನಮ್ಮ ಹಪಹಪಿಗೆ ಒಂದು ಗೌರವಯುತವಾದ ಸ್ಥಾನವಿದೆ ಆದರೆ ಅಧಿಕಾರದ ಮೇಲಿನ ಹಂಬಲಕ್ಕೆ ಅದಿಲ್ಲ ಅಷ್ಟೇ ವ್ಯತ್ಯಾಸ!
ಬ್ಲಾಗಿಂಗ್ ಕೂಡಾ ಚಟವಾಗುತ್ತಿದೆ ಎಂಬ ಇತ್ತೀಚಿನ ಕೆಲವು ಇಂಗ್ಲೀಷ್ ಪತ್ರಿಕೆಗಳ ವರದಿಗಳಲ್ಲಿನ ವೈಜ್ಞಾನಿಕ ಕಾರಣಗಳನ್ನು ಅವಲೋಕಿಸುವಾಗ ಇದೆಲ್ಲಾ ಹೊಳೆಯಿತು. ಆದರೆ ಇದನ್ನೆಲ್ಲಾ ಬರೆಯುತ್ತಾ ಹೋದಂತೆ ಹಲವು ಸಂಗತಿಗಳು ಸ್ಪಷ್ಟವಾಗುತ್ತಾ ಹೋದವು. ನಾವು ಬರೆಯುವುದು ನಮ್ಮೊಳಗೆ ಸ್ಪಷ್ಟತೆಯನ್ನು ಸ್ಥಾಪಿಸಿಕೊಳ್ಳುವುದಕ್ಕಾ?
ಬ್ಲಾಗೆಂಬ ಅಕ್ಷರ ಲೋಕದ ಕುರಿತು…
Posted ಜುಲೈ 25, 2008
on:- In: ಬಿಡಿ ಲೇಖನ
- 2 Comments
ಇದುವರೆಗೆ ಮನುಷ್ಯ ಮಾಡಿದ ಆವಿಷ್ಕಾರಗಳಲ್ಲಿ ಕಂಪ್ಯೂಟರಿನ ಆವಿಷ್ಕಾರವೇ ಬೆರಗನ್ನು ಹುಟ್ಟಿಸುವಂಥದ್ದು. ನಾವು ಹೇಳಿದ್ದನ್ನೆಲ್ಲ ಕ್ಷಣಾರ್ಧದಲ್ಲಿ ಯಾವ ಲೋಪವೂ ಇಲ್ಲದ ಹಾಗೆ ಮಾಡಿ ಮುಗಿಸುವ ವಿಧೇಯ ಸೇವಕನ ಹುಡುಕಾಟದಲ್ಲಿ ಮನುಷ್ಯ ನಾಗರೀಕತೆಯ ಹಾದಿಯಲ್ಲಿ ಬಹುದೂರ ಬಂದಿದ್ದ. ಕಂಪ್ಯೂಟರೆಂಬ ದಿವ್ಯ ಉಪಕರಣ ಅವನ ಹುಡುಕಾಟಕ್ಕೆ ನಿಲ್ದಾಣವೊಂದನ್ನು ಸೃಷ್ಟಿಸಿಕೊಟ್ಟಿತು. ಈಗ ಕಂಪ್ಯೂಟರೆಂಬ ಅಲ್ಲಾವುದ್ದೀನನ ಅದ್ಭುತ ದೀಪದ ಜೀನಿಯ ಜೊತೆಗೆ ಅಂತರ್ಜಾಲವೆಂಬ ಮಾಯಾವಿಯೂ ಸೇರಿಕೊಂಡು ಮನುಷ್ಯನೆದುರು ನಂಬಲಸಾಧ್ಯವಾದ, ಅದ್ಭುತಗಳನ್ನು ತೆರೆದಿಡುತ್ತಿದೆ. ಅಂಥದ್ದೇ ಅದ್ಭುತಗಳಲ್ಲಿ ಒಂದು ಈ ಬ್ಲಾಗ್ ಎಂಬ ಅಕ್ಷರ ಲೋಕ!
ಇದು ಅಂತರ್ಜಾಲದ ದಿನಚರಿ!
ಬ್ಲಾಗ್ ಎಂಬುದು ವೆಬ್ ಹಾಗೂ ಲಾಗ್ ಎಂಬ ಎರಡು ಪದಗಳ ಸಂಯೋಗದಿಂದ ಹುಟ್ಟಿದ ಪದ. ತೀರಾ ಹಿಂದೇನಲ್ಲ, ಒಂಭತ್ತು ವರ್ಷದ ಕೆಳಗೆ ೧೯೯೭ರ ಡಿಸೆಂಬರ್ ೧೭ರಂದು ಜಾರ್ನ್ ಬಾರ್ಗರ್ ಎಂಬುವವನು ಈ ತಂತ್ರಜ್ಞಾನಕ್ಕೆ ವೆಬ್ ಲಾಗ್ ಎಂದು ಹೆಸರಿಟ್ಟ. ವೆಬ್ ಎಂದರೆ ಅಂತರ್ಜಾಲ ಹಾಗೂ ಲಾಗ್ ಎಂದರೆ ಡೈರಿ ಅಥವಾ ದಿನಚರಿ ಎಂದು ಅರ್ಥೈಸಿಕೊಳ್ಳಬಹುದು. ಮುಂದೆ ೧೯೯೯ ರಲ್ಲಿ ಪೀಟರ್ ಲೆರೋಲ್ಜ್ ಎಂಬಾತ ಕೀಟಲೆಗಾಗಿ ವೆಬ್ ಹಾಗೂ ಲಾಗ್ ಪದಗಳನ್ನು ಒಡೆದು ಜೋಡಿಸಿ ಬ್ಲಾಗ್ ಎಂಬ ಪದವನ್ನು ಟಂಕಿಸಿದ. ಈಗ ಜಗತ್ತಿನಾದ್ಯಂತ ಪೀಟರನ ಮೋಜಿನ ಪದ ‘ಬ್ಲಾಗ್’ ಅಂತರ್ಜಾಲ ಬಳಸುವವರ ನಾಲಿಗೆಯಲ್ಲಿ ನಲಿದಾಡುತ್ತಿದೆ.
ಅಂತರ್ಜಾಲದ ಪರಿಚಯವಿರುವವರಿಗೆ ವೆಬ್ ಸೈಟುಗಳ ಬಗ್ಗೆ ತಿಳಿದಿರಬಹುದು. ತೀರಾ ಟೆಕ್ನಿಕಲ್ ಆಗಿ ತಿಳಿಯುವ ಗೋಜಿಗೆ ಹೋಗದಿದ್ದರೆ, ಈ ಬ್ಲಾಗುಗಳನ್ನೂ ಒಂದು ಬಗೆಯ ವೆಬ್ ಸೈಟುಗಳು ಎಂದುಕೊಳ್ಳಬಹುದು. ಒಂದೇ ವ್ಯತ್ಯಾಸವೆಂದರೆ ಈ ತಾuದ ನಿರ್ವಹಣೆ ವೈಯಕ್ತಿಕ ಮಟ್ಟದಲ್ಲಿ ನಡೆಯುತ್ತದೆ. ನೀವು ಒಂದು ಡೈರಿಯನ್ನು ತಂದು ಅದರಲ್ಲಿ ಡೇಟ್ ಹಾಕಿ ಸುಮ್ಮನೆ ಅನ್ನಿಸಿದ್ದನ್ನೆಲ್ಲಾ ಬರೆಯುತ್ತಾ ಹೋಗುತ್ತೀರಲ್ಲ, ಹಾಗೆ ಅಂತರ್ಜಾಲದಲ್ಲಿ ನೀವು ಬರೆಯಬಹುದು. ಹಾಗೆ ಬರೆದದ್ದನ್ನು ಕ್ಷಣಾರ್ಧದಲ್ಲಿ ಪ್ರಕಟಿಸಿಯೂಬಿಡಬಹುದು. ಅದು ಪ್ರಕಟವಾದ ಮರುಕ್ಷಣದಲ್ಲಿಯೇ ಜಗತ್ತಿನ ಯಾವ ಮೂಲೆಯಿಂದಾದರೂ ಓದುಗರು ಅದನ್ನು ಓದಬಹುದು. ಪ್ರತಿಕ್ರಿಯೆಗಳನ್ನೂ ಸಹ ಸೇರಿಸಬಹುದು. ಇದೆಲ್ಲಕ್ಕೂ ಅವಕಾಶ ಮಾಡಿಕೊಡುವ ಮೋಹಕ ತಂತ್ರಜ್ಞಾನವೇ ಬ್ಲಾಗ್.
ಹಂಗಿಲ್ಲದ ಕ್ಯಾನ್ವಾಸ್
ನೀವು ಓದಿ ಖುಶಿ ಪಟ್ಟ ಪುಸ್ತಕದ ಬಗ್ಗೆ, ನೋಡಿ ಮೆಚ್ಚಿದ ಸಿನೆಮಾದ ಬಗ್ಗೆ, ಕೇಳಿ ಗುನುಗುನಿಸುವ ಹಾಡಿನ ಸಾಲಿನ ಬಗ್ಗೆ, ನೆನಪಾಗಿ ಕಾಡುವ ಮುಖಗಳ ಬಗ್ಗೆ, ರೋಷ ಉಕ್ಕಿಸುವ ಅವ್ಯವಸ್ಥೆಯ ಬಗ್ಗೆ, ಕಣ್ಣೆದುರಿನ ಅನ್ಯಾಯದ ಬಗ್ಗೆ ಬರೆದು ಅದನ್ನು ಪತ್ರಿಕೆಗಳಿಗೆ ಕಳುಹಿಸುತ್ತೀರಿ. ನಿಮ್ಮ ಬರಹ ಪ್ರಕಟವಾಗಬೇಕೆ ಬೇಡವೇ ಎಂಬುದನ್ನು ಸಂಪಾದಕ ನಿರ್ಧರಿಸುತ್ತಾನೆ. ಪ್ರಕಟ ಪಡಿಸಿದರೂ ಅದನ್ನು ತನ್ನ ಮೂಗಿನ ನೇರಕ್ಕೆ ಕತ್ತರಿ ಪ್ರಯೋಗಕ್ಕೆ ಒಳಪಡಿಸುತ್ತಾನೆ. ಕೆಲವೊಮ್ಮೆ ನಿಮ್ಮ ಬರಹಗಳನ್ನು ಮುಲಾಜಿಲ್ಲದೆ ವಾಪಸ್ಸು ಕಳುಹಿಸಿಬಿಡುತ್ತಾನೆ. ಒಟ್ಟಿನಲ್ಲಿ ನೀವು ನಿಮ್ಮ ವಿಚಾರವನ್ನು ಜಗತ್ತಿನೊಂದಿಗೆ ಹಂಚಿಕೊಳ್ಳಲು ಈ ಸಂಪಾದಕ ಅಥವಾ ಪ್ರಕಾಶಕನೆಂಬ ದೊಣ್ಣೆ ನಾಯಕನ ಮರ್ಜಿಯನ್ನು ಕಾಯುತ್ತ ಕೂರಬೇಕಾಗುತ್ತದೆ.
ಈ ಎಲ್ಲಾ ಅಡೆತಡೆಗಳನ್ನು ಧ್ವಂಸಗೊಳಿಸಿ ಮುಕ್ತವಾದ, ಯಾರ ಹಂಗೂ ಇಲ್ಲದ ಅಭಿವ್ಯಕ್ತಿಯ ವೇದಿಕೆಯನ್ನು ಒದಗಿಸಿಕೊಡುತ್ತದೆ ಬ್ಲಾಗ್. ನಿಮಗೆ ಕನಿಷ್ಠವಾದ ಕಂಪ್ಯೂಟರ್ ಜ್ಞಾನವಿದ್ದರೆ ಸಾಕು. ಅಂತರ್ಜಾಲದ ಬಗ್ಗೆ ಇಷ್ಟೇ ಇಷ್ಟು ತಿಳಿದಿದೆ ಎಂಬ ಆತ್ಮವಿಶ್ವಾಸವಿದ್ದರೆ ಸಾಕು. ನಿಮ್ಮದೇ ಪುಟ್ಟದೊಂದು ಬ್ಲಾಗ್ ತೆರೆದುಕೊಳ್ಳಬಹುದು. ಅದಕ್ಕೆ ಚೆಂದದ ಹೆಸರು ಇಟ್ಟುಕೊಳ್ಳಬಹುದು. ಮಿತಿಯಲ್ಲಿಯೇ ಅದನ್ನು ಅಂದಚೆಂದಗೊಳಿಸಿಕೊಳ್ಳಬಹುದು. ಅನಂತರ ನಿಮಗೆ ತೋಚಿದ್ದನ್ನು ಅದರಲ್ಲಿ ಪ್ರಕಟಿಸುತ್ತಾ ಹೋಗಬಹುದು. ನಿಮ್ಮ ವೈಯಕ್ತಿಕ ಅನುಭವ, ದಿನಚರಿ, ನಿಮ್ಮ ಉದ್ಯೋಗದ ಕ್ಷೇತ್ರದ ಬಗೆಗಿನ ಮಾಹಿತಿ, ನಿಮ್ಮ ಇಷ್ಟದ ಹವ್ಯಾಸದ ಬಗೆಗಿನ ವಿವರ, ನಿಮ್ಮ ಪ್ರವಾಸದ ಕಥನ, ಕಥೆ, ಕಾದಂಬರಿ, ಕವನ- ಹೀಗೆ ಏನನ್ನು ಬೇಕಾದರೂ ದಾಖಲಿಸುತ್ತಾ ಹೋಗಬಹುದು. ಬರೀ ಅಕ್ಷರಗಳಿಗೆ ಜೋತು ಬೀಳಬೇಕಿಲ್ಲ. ನೂರು ಮಾತು ಹೇಳುವ ಒಂದು ಮುದ್ದಾದ ಚಿತ್ರ, ನಿಮ್ಮ ಕ್ಯಾಮರದಲ್ಲಿ ಕ್ಲಿಕ್ಕಿಸಿದ ಚೆಂದದ ಫೋಟೊ, ವಿಡಿಯೋ ಕ್ಲಿಪ್ಪಿಂಗುಗಳು, ನೀವು ಹಾಡಿದ ಹಾಡು, ನಿಮ್ಮ ಭಾಷಣ, ಪ್ರೀತಿಯಿಂದ ಹೇಳಿದ ಕಥೆ- ಹೀಗೆ ಸಾಂಪ್ರದಾಯಿಕ ಪತ್ರಿಕೆಗಳು, ಮ್ಯಾಗಝೀನುಗಳು ಒದಗಿಸಲಾಗದ ಅಸಂಖ್ಯ ಅವಕಾಶಗಳನ್ನು ಕೊಡುವ ಅದ್ಭುತ ಕ್ಯಾನ್ವಾಸ್ ಈ ಬ್ಲಾಗ್.
ಸ್ವರ್ಗಕ್ಕೆ ಮೂರೇ ಗೇಣು
ಓದುಗರೊಂದಿಗೆ ಸಂವಾದಿಸಲು, ಜಗತ್ತಿಗೆ ನಮ್ಮ ವಿಚಾರಗಳನ್ನು ಹೇಳಿಕೊಳ್ಳಲು ಇಷ್ಟು ಸುಲಭದ ಮಾರ್ಗವಿದೆ ಎಂಬುದನ್ನು ನಂಬುವುದಕ್ಕೂ ಸಾಧ್ಯವಾಗುವುದಿಲ್ಲ. ಎರಡು ಅಂದರೆ ಎರಡೇ ನಿಮಿಷದಲ್ಲಿ ನೀವು ಬ್ಲಾಗೊಂದನ್ನು ತೆರೆಯಬಹುದು. ಅದಕ್ಕೆ ನೀವು ಯಾವ ದಾಖಲೆಗಳನ್ನೂ ಸಲ್ಲಿಸಬೇಕಿಲ್ಲ. ಯಾವ ಕಛೇರಿಯಲ್ಲೂ ಸಾಲುಗಟ್ಟಿ ನಿಂತು ನಮೂದಿಸಿಕೊಳ್ಳಬೇಕಿಲ್ಲ. ಯಾರ ಶಿಫಾರಸ್ಸಿಗೂ ಅಂಗಲಾಚಬೇಕಿಲ್ಲ. ನಿಮ್ಮದೊಂದು ಇ-ಮೇಲ್ ಅಕೌಂಟ್ ಇದ್ದರೆ ಸಾಕು ನೀವು ಎಷ್ಟು ಬ್ಲಾಗುಗಳನ್ನಾದರೂ ತೆರೆದು ಕೂರಬಹುದು. ಒಂದು ನಯಾ ಪೈಸೆ ಖರ್ಚಿಲ್ಲದೆ! ಬ್ಲಾಗ್ ಸ್ಪಾಟ್, ವರ್ಡ್‌ಪ್ರೆಸ್ ಮುಂತಾದ ತಾಣಗಳು ನಿಮ್ಮಿಂದ ಚಿಕ್ಕಾಸನ್ನೂ ಪಡೆಯದೆ ನಿಮ್ಮ ಅಭಿವ್ಯಕ್ತಿಗೆ ಬೇಕಾದಂತಹ ಕ್ಯಾನ್ವಾಸನ್ನು ಒದಗಿಸಿಕೊಡುತ್ತವೆ.
ಅವಕಾಶಗಳು ಅಪಾರ
ಬ್ಲಾಗುಗಳು ತೆರೆದಿರಿಸುವ ಅವಕಾಶಗಳು ಸಾಗರದಷ್ಟು ವಿಶಾಲವಾದದ್ದು. ಅದು ಒದಗಿಸಿಕೊಟ್ಟಿರುವ ಅಡೆತಡೆ ಇಲ್ಲದ ಮುಕ್ತ ಅವಕಾಶವನ್ನು ಬುದ್ಧಿವಂತಿಕೆಯಿಂದ ಉಪಯೋಗಿಸಿಕೊಳ್ಳುವವರಿಗೆ ಅದು ಕಲ್ಪವೃಕ್ಷವಾಗುತ್ತದೆ. ಗಂಭೀರವಾದ ಸಂಗತಿಗಳನ್ನು ಮುಖ್ಯವಾಹಿನಿಯ ಮಾಧ್ಯಮಗಳು ಪ್ರಕಟಿಸಿವುದಿಲ್ಲ ಎಂದು ಆಸಕ್ತ ಓದುಗರು ಹಲುಬುವುದು, ತೀರಾ ಅಕಾಡೆಮಿಕ್ ಆದ ಸಂಗತಿ ಪ್ರಕಟಿಸಿದರೆ ಜನರಿಗೆ ಅರ್ಥವಾಗುವುದಿಲ್ಲ, ಅವರು ಓದುವುದೂ ಇಲ್ಲ ಎಂದು ಪತ್ರಿಕೆಗಳು ಆರೋಪಿಸಿವುದು ಎಲ್ಲಕ್ಕೂ ಬ್ಲಾಗುಗಳು ತಿಲಾಂಜಲಿ ಇತ್ತಿವೆ. ಎಂಥದ್ದೇ ಕಂಟೆಂಟನ್ನು ಜಾಗತಿಕವಾಗಿ ಪ್ರಕಟಿಸಬಹುದು. ಅದನ್ನು ಯಾರಾದರೂ ಓದಬಹುದು, ಓದದೆಯೂ ಇರಬಹುದು. ಓದುಗರು ತಮ್ಮ ತಮ್ಮ ಆಸಕ್ತಿಗೆ ತಕ್ಕಂಥ ಬ್ಲಾಗುಗಳಿಗೆ ಅಂಟಿಕೊಳ್ಳುವುದು- ಇವೆಲ್ಲವೂ ಜ್ಞಾನದ ಶಾಖೆಗಳು ವಿಸ್ತಾರಗೊಳ್ಳಲು ಸಹಾಯಕವಾಗುತ್ತವೆ.
ಅಲ್ಲದೆ ಭಾರಿ ಬಂಡವಾಳದ ಬಲಿಷ್ಠ ಬಹುಸಂಖ್ಯಾತ ಭಾಷೆಯ ಎದುರು ಅಲ್ಪಸಂಖ್ಯಾತ, ಸ್ಥಳೀಯ ಭಾಷೆಗಳು ತಮ್ಮತನವನ್ನು ಉಳಿಸಿಕೊಂಡು, ತಮ್ಮ ಭಾಷೆಯಲ್ಲಿ ಸಂವಾದವನ್ನು, ಸಂವೇದನೆಯನ್ನು ಹಸಿರಾಗಿರಿಸಿಕೊಳ್ಳಲು ಬ್ಲಾಗುಗಳು ನೆರವಾಗುತ್ತಿರುವುದು ಆರೋಗ್ಯಕರ ಸಂಗತಿ. ಬ್ಲಾಗು ಬರೆಯುವವರಿಗೆ ಯಾವ ನಿಬಂಧನೆ, ಷರತ್ತುಗಳೂ ಇಲ್ಲವಾದುದರಿಂದ ಬೇರೆ ಬೇರೆ ಸಂಸ್ಕೃತಿ, ಮನಸ್ಥಿತಿ, ವಯೋಮಾನ, ಧರ್ಮ, ದೇಶ, ಭಾಶೆಗಳ ಜನರು ಮುಕ್ತವಾಗಿ ಬೆರೆತು ಕೊಟ್ಟು-ತೆಗೆದುಕೊಳ್ಳುವ ಕ್ರಿಯೆಯಲ್ಲಿ ಪಾಲ್ಗೊಳ್ಳಲು ನೆರವಾಗುತ್ತದೆ.
ಅಪಸ್ವರಗಳು
ಬ್ಲಾಗುಗಳು ಅನಂತ ಅವಕಾಶದ ಬಾಗಿಲುಗಳು ಎಂಬುದೇನೋ ನಿಜ. ಹಾಗಂತ ಅವುಗಳಿಂದೇನೂ ಹಾನಿಯಾಗುತ್ತಲೇ ಇಲ್ಲ ಎಂದು ಹೇಳಲಾಗದು. ಬ್ಲಾಗು ಬರೆಯುವುದಕ್ಕೆ ಯಾವ ಯೋಗ್ಯತೆಯ ಮಾನದಂಡವೂ ಇಲ್ಲದಿರುವುದರಿಂದ ಅಂತರ್ಜಾಲದಲ್ಲಿ ಯಾರೂ ಓದದ, ಯಾರಿಗೂ ಉಪಯೋಗವಿಲ್ಲದ ಸಂಗತಿಗಳು ಶೇಖರಣೆಯಾಗಿ ಕೊಳೆಯುತ್ತಿವೆ ಎಂಬ ಆರೋಪವಿದೆ. ಜೊತೆಗೆ ಮಾಹಿತಿಯನ್ನು ಕೊಡುವ ಬ್ಲಾಗುಗಳ ವಿಶ್ವಾಸಾರ್ಹತೆಯನ್ನು ಒಪ್ಪಿಕೊಳ್ಳಲು ಸುಲಭ ಸಾಧ್ಯವಾಗುವುದಿಲ್ಲ. ಒಬ್ಬರ ಮೇಲಿನ ವೈಯಕ್ತಿಕ ಟೀಕೆಗೆ, ತೇಜೋವಧೆಗೆ ಬ್ಲಾಗುಗಳನ್ನು ಆಯುಧಗಳನ್ನಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪದಲ್ಲೂ ಹುರುಳಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಗಾಸಿಪ್ಪುಗಳನ್ನು, ಸುಳ್ಳು ಮಾಹಿತಿಯನ್ನು, ಕೋಮು ದ್ವೇಷವನ್ನು, ಜನಾಂಗೀಯ ತಾರತಮ್ಯವನ್ನು ಪ್ರಚೋದಿಸಲು ಬ್ಲಾಗುಗಳು ನೆರವಾಗುತ್ತಿವೆ ಎಂಬ ಟೀಕೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಈಗಾಗಲೇ ಜಗತ್ತಿನಾದ್ಯಂತ ಹಲವು ಬ್ಲಾಗಿಗರು ಜೈಲು ಪಾಲಾಗಿದ್ದಾರೆ. ಕೆಲವರು ಸರಕಾರದ ಅನ್ಯಾಯದ ವಿರುದ್ಧ ದನಿಯೆತ್ತಿ ಕಂಬಿ ಎಣಿಸುತ್ತಿದ್ದರೆ ಕೆಲವರು ಬ್ಲಾಗೆಂಬ ಮಂತ್ರದಂಡವನ್ನು ದುರ್ಬಳಕೆ ಮಾಡಿಕೊಂಡದ್ದಕ್ಕಾಗಿ ಶಿಕ್ಷೆಯನುಭವಿಸುತ್ತಿದ್ದಾರೆ.
ಮುಕ್ತ ಮಾರುಕಟ್ಟೆ, ಮುಕ್ತ ಸಮಾಜ, ಮುಕ್ತ ಅವಕಾಶಗಳಿಗಾಗಿ ಹಂಬಲಿಸುತ್ತಿರುವ ಆಧುನಿಕ ಜಗತ್ತಿನಲ್ಲಿ ಬ್ಲಾಗ್ ಎಂಬುದು ಸಹ ಅಸಂಖ್ಯ ಅವಕಾಶಗಳನ್ನು ಜೊತೆಗೇ ಅಪಾಯಗಳನ್ನೂ ತನ್ನೊಡಲಲ್ಲಿ ಹೊತ್ತು ತರುವ ಸಂಗತಿಯಾಗಿದೆ. ನಡೆಯುವುದರಲ್ಲೂ ಅಪಾಯವಿದೆ. ವಾಹನ ಚಲಾಯಿಸುವುದರಲ್ಲೂ ಅಪಾಯವಿದೆ. ಹಾಗಂತ ಅದನ್ನೇ ನಿಷೇಧಿಸುವುದು ಮೂರ್ಖತನವಾಗುತ್ತದೆ. ರಸ್ತೆ ಸುರಕ್ಷತೆಗಾಗಿ ಕ್ರಮಗಳನ್ನು ರೂಪಿಸಿ ಸೂಕ್ತವಾಗಿ ನಿರ್ವಹಣೆ ಮಾಡುವುದು ಜಾಣತನವೆನಿಸಿಕೊಳ್ಳುತ್ತದೆ. ಆಧುನೀಕರಣ, ಜಾಗತೀಕರಣ ಎಂಬ ದೈತ್ಯನನ್ನು ಹೆಡೆ ಮುರಿ ಕಟ್ಟಿ ನಮ್ಮ ಏಳಿಗೆಗೆ ದುಡಿಸಿಕೊಳ್ಳುವುದರಲ್ಲೇ ಬುದ್ಧಿವಂತಿಕೆ ಇದೆ.
ಅಂದಹಾಗೆ ನೀವಿನ್ನೂ ಬ್ಲಾಗು ತೆರೆದಿಲ್ಲವಾ?
-ಸುಪ್ರೀತ್.ಕೆ.ಎಸ್
ಇತ್ತೀಚಿನ ಟಿಪ್ಪಣಿಗಳು