ಕಲರವ

Posts Tagged ‘ಬರವಣಿಗೆ

– ಸುಪ್ರೀತ್ ಕೆ. ಎಸ್, ಬೆಂಗಳೂರು.

ಪ್ರತಿನಿತ್ಯ ತಪ್ಪದೆ ಬ್ಲಾಗಿಗೆ ಬರೆಯಬೇಕು ಅಂದುಕೊಂಡಿದ್ದೆ. ಅದನ್ನೊಂದು ಸಾಧನೆ ಎನ್ನುವ ಹಾಗೆ ಭಾವಿಸಿದ್ದೆ. ಏಕೆ ದಿನನಿತ್ಯ ಬರೆಯಬೇಕು ಎಂದು ಕೇಳಿಕೊಳ್ಳುವ ತಾಳ್ಮೆ ಇರುತ್ತಿರಲಿಲ್ಲ. ಏನೋ ಉನ್ಮಾದ. ಬರೀ ಬೇಕು ಅನ್ನಿಸಿದ ತಕ್ಷಣ ಬರೆಯಲು ಶುರುಮಾಡಿಬಿಡಬೇಕು. ಏನಾದರೂ ಮಾಡಬೇಕೆಂಬ ಹುಮ್ಮಸ್ಸು ಹುಟ್ಟಿದಾಗ ದೊಡ್ಡವರು ಅದರ ಇಹಪರಗಳ ಬಗ್ಗೆ ಯೋಚಿಸಿ ಮಾಡು ಎಂದಾಗ ಹುಟ್ಟುವ ರೇಜಿಗೆಯನ್ನೇ ನಮ್ಮನ್ನು ನಾವು ನಿಧಾನಿಸಲು ಪ್ರಯತ್ನಿಸಿದಾಗ ಎದುರಿಸಬೇಕಾಗುತ್ತದೆ. ಈ ಹದಿ ವಯಸ್ಸಿನಲ್ಲಿ ಯಾವಾಗಲೂ ವಿವೇಕಕ್ಕಿಂತ ಸಂಕಲ್ಪಶಕ್ತಿ, ಕ್ರಿಯಾಶೀಲತೆಯೇ ಹೆಚ್ಚಾಗಿರುತ್ತದೆಯೇನೋ! ಹಾಗಾಗಿ ನಾನು ಉಕ್ಕುವ ಉತ್ಸಾಹಕ್ಕೆ ಬ್ರೇಕ್ ಹಾಕುವ ಯಾವ ಪ್ರಯತ್ನವನ್ನೂ ಮಾಡುವುದಿಲ್ಲ. ಆದರೆ ಆ ಕೆಲಸವನ್ನು ನನ್ನ ಸೋಮಾರಿತನ, ಅಶಿಸ್ತುಗಳು ನಿರ್ವಹಿಸುವುದರಿಂದ ನನಗೆ ಹೆಚ್ಚಿನ ಹಾನಿಯೇನೂ ಆಗಿಲ್ಲ!

ಪ್ರತಿದಿನ ಬ್ಲಾಗು ಬರೆಯಬೇಕು ಎಂಬುದರ ಹಿಂದೆ ಕೇವಲ ಬರಹದ ಪ್ರಮಾಣದ ಮೇಲಿನ ಮೋಹ ಕೆಲಸ ಮಾಡುತ್ತಿತ್ತು. ನನ್ನನ್ನು ಪ್ರಭಾವಿಸಿದ ಪತ್ರಕರ್ತನ ಹಾಗೆ ದಿನಕ್ಕಷ್ಟು ಪುಟ ಬರೆಯಬೇಕು, ವಾರಕ್ಕೆ ಇಷ್ಟು ಓದಬೇಕು ಎಂಬ ಅನುಕರಣೆಯ ಗುರಿಗಳನ್ನು ನನ್ನೆದುರು ಇರಿಸಿಕೊಂಡಿದ್ದೆ. ನನ್ನದಲ್ಲದ ಗುರಿಯೆಡೆಗೆ ಓಡುವ ಧಾವಂತ ಪಡುತ್ತಿದ್ದೆ. ನನ್ನದಲ್ಲದ ಹಸಿವಿಗೆ ಊಟ ಮಾಡುವ, ನನ್ನದಲ್ಲದ ಹೊಟ್ಟೆನೋವಿಗೆ ಔಷಧಿ ಕುಡಿಯುವ ಹುಂಬತನದ ಅರಿವೇ ಆಗಿರಲಿಲ್ಲ. ಒಬ್ಬ ಕವಿಯನ್ನೋ, ಲೇಖಕನನ್ನೋ, ಕಥೆಗಾರನನ್ನೋ, ಸಿನೆಮಾ ನಿರ್ದೇಶಕನನ್ನೋ, ಹೀರೋವನ್ನೋ ಪ್ರಾಣ ಹೋಗುವಷ್ಟು ಗಾಢವಾಗಿ ಪ್ರೀತಿಸುವುದು, ಆರಾಧಿಸುವುದು, ಅನುಕರಣೆಯಲ್ಲಿ ಸಾರ್ಥಕ್ಯವನ್ನು ಕಂಡುಕೊಳ್ಳುವುದು, ಅನಂತರ ಸ್ವಂತಿಕೆ ಕಳೆದುಕೊಂಡ ಅಭದ್ರತೆ ಕಾಡಿದಾಗ ಆ ಪ್ರೇರಣೆಯ ಮೂಲವನ್ನೇ ದ್ವೇಷಿಸಲು ತೊಡಗುವುದು ಇದೆಲ್ಲಾ ಯಾಕೆ ಬೇಕು? ಆದರೆ ಈ ಅರಿವು ಒಂದು ಅಚ್ಚಿನಲ್ಲಿ ಮೌಲ್ಡ್ ಆಗುವಾಗಿನ ಸುಖವನ್ನು, ಐಶಾರಾಮವನ್ನು ಅನುಭವಿಸುವಾಗ ಉಂಟಾಗುವುದಿಲ್ಲ. ಅದೇ ತಮಾಷೆಯ ಹಾಗೂ ದುರಂತದ ಸಂಗತಿ.

ವಿಪರೀತ ಬರೆಯಬೇಕು ಅನ್ನಿಸುವುದು ಸಹ ತುಂಬಾ ಮಾತಾಡಬೇಕು ಅನ್ನಿಸುವುದುರ ತದ್ರೂಪು ಭಾವವಾ? ಮಾತು ಹೇಗೆ ಚಟವಾಗಿ ಅಂತಃಸತ್ವವನ್ನು ಕಳೆದುಕೊಂಡು ಕೇವಲ ಶಬ್ಧವಾಗಿಬಿಡಬಲ್ಲುದೋ ಹಾಗೆಯೇ ಬರವಣಿಗೆಯು ಬರಡಾಗಬಲ್ಲದಾ? ವಿಪರೀತ ಬರೆಯಬೇಕು ಎಂದು ತೀರ್ಮಾನಿಸಿದವರು ವಾಚಾಳಿಯಾಗಿಬಿಡಬಲ್ಲರಾ? ಮನಸ್ಸಲ್ಲಿ ಕದಲುವ ಪ್ರತಿ ಭಾವವನ್ನೂ ಅಕ್ಷರಕ್ಕಿಳಿಸಿಬಿಡುವ, ಆ ಮೂಲಕ ತೀರಾ ಖಾಸಗಿಯಾದ ಭಾವವನ್ನು ಪ್ರದರ್ಶನದ ‘ಕಲೆ’ಯಾಗಿಸಿಬಿಡುವುದು ಒಳ್ಳೆಯದಾ? ಇವೆಲ್ಲಕ್ಕೂ ಉತ್ತರವನ್ನೂ ಸಹ ಅಕ್ಷರದ ಮೂಲಕವೇ ಕೇಳಿಕೊಳ್ಳುವ ಅನಿವಾರ್ಯತೆ ಇರುವುದು ನಮ್ಮ ಪರಿಸ್ಥಿತಿಯ ವ್ಯಂಗ್ಯವಲ್ಲವೇ? ನಮ್ಮೊಳಗಿನ ದನಿಗೆ ಅಭಿವ್ಯಕ್ತಿಕೊಡುವ ಮಾಧ್ಯಮವೂ ಕೂಡ ನಮ್ಮ ಚಟವಾಗಿಬಿಡಬಹುದೇ? ಅಕ್ಷರಗಳ ಮೋಹ ನಮ್ಮೊಳಗಿನ ದನಿಯನ್ನು ನಿರ್ಲಕ್ಷಿಸಿಬಿಡುವ ಅಪಾಯವಿದೆಯೇ? ಅಥವಾ ಇವೆಲ್ಲಕ್ಕೂ ಮನ್ನಣೆ, ಪ್ರಸಿದ್ಧಿ, ಹೆಸರುಗಳೆಂಬ ವಿಷಗಳು ಸೇರಿಕೊಂಡು ಬಿಟ್ಟಿವೆಯೇ?

ತುಂಬಾ ಬರೆಯುತ್ತಾ, ಯಾವಾಗಲೋ ಒಮ್ಮೆ ನಾನು ವಿಪರೀತ ವಾಚಾಳಿಯಾಗಿಬಿಟ್ಟೆನಾ ಅನ್ನಿಸತೊಡಗುತ್ತದೆ. ಅದರಲ್ಲೂ ಈ ಬ್ಲಾಗ್ ಬರಹಗಳಲ್ಲಿ ನನ್ನ ವೈಯಕ್ತಿಕ ಅನುಭವ, ವಿಚಾರ, ತಳಮಳಗಳನ್ನೇ ದಾಖಲಿಸುತ್ತಾ ಕೆಲವೊಮ್ಮೆ ನಾನು ಬರೀ ಮಾತುಗಾರನಾಗಿಬಿಟ್ಟೆನಾ ಎಂಬ ಭಯವಾಗುತ್ತದೆ. ನನ್ನ ಓದು ನಿಂತುಹೋಗಿಬಿಟ್ಟಿತಾ ಎಂಬ ಆತಂಕ ಕಾಡುತ್ತದೆ. ಈ ಸಕಲ ವ್ಯವಹಾರಗಳಿಗೂ ತಿಲಾಂಜಲಿಯಿತ್ತು ಕೆಲಕಾಲ ಎಲ್ಲಾದರೂ ಅಡಗಿಕೊಂಡು ಬಿಡಲಾ ಅನ್ನಿಸುತ್ತದೆ. ಬರೆಯುವುದನ್ನೆಲ್ಲಾ ಬಿಟ್ಟು ಓ ಹೆನ್ರಿಯ ಕಥೆಯಲ್ಲಿನ ಪಾತ್ರದ ಹಾಗೆ ಒಬ್ಬಂಟಿ ಕೋಣೆಯಲ್ಲಿ ಓದುತ್ತಾ, ಚಿಂತಿಸುತ್ತಾ, ಧ್ಯಾನಿಸುತ್ತಾ ಬದುಕು ಕಳೆದುಬಿಡಲಾ ಎನ್ನಿಸುತ್ತದೆ. ಹೀಗೆ ಬರೆಯುತ್ತಲೇ ಇದ್ದರೆ ನನ್ನ ತಿಳುವಳಿಕೆ, ಜ್ಞಾನ ಸೀಮಿತವಾಗಿಬಿಡುತ್ತದಾ ಎನ್ನಿಸುತ್ತದೆ. ಈ ಬಗೆಯ ಭಾವಗಳು ಕಾಡಿದಾಗ ಒಂದಷ್ಟು ದಿನ ಬ್ಲಾಗು ಬರೆಯುವುದನ್ನು ನಿಲ್ಲಿಸಿಬಿಟ್ಟಿದ್ದೇನೆ. ನಾವು ಗೆಳೆಯರು ನಡೆಸುತ್ತಿರುವ ಈ ಪತ್ರಿಕೆಗೆ ರಾಜೀನಾಮೆ ಕೊಟ್ಟುಬಿಟ್ಟಿದ್ದೇನೆ. ಒಂದೆರಡು ತಿಂಗಳು ಅದರಿಂದ ದೂರವಾಗಿಬಿಟ್ಟಿದ್ದೇನೆ. ಮತ್ತೆ ಅದನ್ನು ಅಪ್ಪಿಕೊಂಡಿದ್ದೇನೆ.

ಪರಿಸ್ಥಿತಿ ಬದಲಾಯಿಸಿತಾ? ಬ್ಲಾಗು ಬರೆಯುವುದನ್ನು ಬಿಟ್ಟಾಗ ನನಗೆ ತೃಪ್ತಿ ಸಿಕ್ಕಿತಾ? ಸಮಾಧಾನ ಎನ್ನುವುದು ಸಿಕ್ಕಿತಾ? ನನ್ನನ್ನು ನಾನು ನಿರಂತರವಾದ ಓದಿಗೆ, ಅಧ್ಯಯನಕ್ಕೆ ತೊಡಗಿಸಿಕೊಳ್ಳಲು ಸಾಧ್ಯವಾಯಿತಾ? ಖಂಡಿತಾ ಇಲ್ಲ. ಓದು ಅನ್ನೋದು ತೀರಾ ಖಾಸಗಿಯಾದ ಕ್ರಿಯೆಯೇ ಆದರೂ ಅದರಲ್ಲಿ ದೊರೆಯುವ ಸಂತೋಷವನ್ನು, ನಾನು ಕಂಡುಕೊಂಡ ಸಂಗತಿಗಳನ್ನು, ಅನುಭವಿಸಿದ ಬೆರಗನ್ನು ಹಂಚಿಕೊಳ್ಳಬೇಕು ಎನ್ನುವ ಹಂಬಲವನ್ನು ಹತ್ತಿಕ್ಕಲು ಸಾಧ್ಯವಾಗುವುದಿಲ್ಲ. ಬರೆಯುವಾಗ ನಾನು ಅದುವರೆಗೂ ಆಲೋಚಿಸಿರದಿದ್ದ ಅನೇಕ ಒಳನೋಟಕಗಳು ದಕ್ಕಿದಂತಾಗಿ ಪುಳಕಗೊಳ್ಳುವ ಸುಖವನ್ನು ಬಿಡಲು ಸಾಧ್ಯವಾಗುವುದಿಲ್ಲ. ಸೃಜನಶೀಲತೆಯಲ್ಲಿ ಸಿಕ್ಕುವ ಸಮಾಧಾನವನ್ನು ಕಳೆದುಕೊಂಡು ಇರುವುದು, ಪ್ರತಿದಿನ ರುಚಿ ರುಚಿಯಾಗಿ ತಿನ್ನುತ್ತಿದ್ದವನಿಗೆ ಒಮ್ಮೆಗೇ ಸಪ್ಪೆ ಊಟ ಹಾಕಲು ಶುರುಮಾಡಿದ ಹಾಗಾಗುತ್ತದೆ. ಬಹುಶಃ ಸ್ವಂತ ಅಭಿವ್ಯಕ್ತಿಗೆ, ನಮ್ಮವೇ ಆದ ಸೃಷ್ಠಿಗೆ ಯಾವ ಅವಕಾಶವನ್ನೂ ಕೊಡದೆ ಕೇವಲ ಹೊರಗಿನಿಂದ ಒಳಗೆ ಫೀಡ್ ಮಾಡಿಕೊಳ್ಳಬೇಕಾದ ನಮ್ಮ ಈ ಶಿಕ್ಷಣ ವ್ಯವಸ್ಥೆಯಿಂದಾಗಿ ಸಣ್ಣ ಸಣ್ಣ ಸೃಜನಶೀಲ ಕೆಲಸಗಳಲ್ಲೂ ಅಪಾರವಾದ ಖುಷಿ ಸಿಕ್ಕುತ್ತದೆಯೇನೋ! ಈ ಸಣ್ಣ ಖುಶಿ, ಅಹಂಕಾರಕ್ಕೆ ಸಿಕ್ಕುವ ಬೆಚ್ಚಗಿನ ಪ್ರೋತ್ಸಾಹಗಳನ್ನು ತೊರೆಯುವುದು ರಾಜಕಾರಣಿ ಕುರ್ಚಿಯ ಮೇಲಿನ ಆಸೆಯನ್ನು ಬಿಟ್ಟಂತೆಯೇ ಏನೋ! ಈ ನಮ್ಮ ಹಪಹಪಿಗೆ ಒಂದು ಗೌರವಯುತವಾದ ಸ್ಥಾನವಿದೆ ಆದರೆ ಅಧಿಕಾರದ ಮೇಲಿನ ಹಂಬಲಕ್ಕೆ ಅದಿಲ್ಲ ಅಷ್ಟೇ ವ್ಯತ್ಯಾಸ!

ಬ್ಲಾಗಿಂಗ್ ಕೂಡಾ ಚಟವಾಗುತ್ತಿದೆ ಎಂಬ ಇತ್ತೀಚಿನ ಕೆಲವು ಇಂಗ್ಲೀಷ್ ಪತ್ರಿಕೆಗಳ ವರದಿಗಳಲ್ಲಿನ ವೈಜ್ಞಾನಿಕ ಕಾರಣಗಳನ್ನು ಅವಲೋಕಿಸುವಾಗ ಇದೆಲ್ಲಾ ಹೊಳೆಯಿತು. ಆದರೆ ಇದನ್ನೆಲ್ಲಾ ಬರೆಯುತ್ತಾ ಹೋದಂತೆ ಹಲವು ಸಂಗತಿಗಳು ಸ್ಪಷ್ಟವಾಗುತ್ತಾ ಹೋದವು. ನಾವು ಬರೆಯುವುದು ನಮ್ಮೊಳಗೆ ಸ್ಪಷ್ಟತೆಯನ್ನು ಸ್ಥಾಪಿಸಿಕೊಳ್ಳುವುದಕ್ಕಾ?

lahari.png

ವಿಪರೀತ ಮಾತನಾಡುತ್ತಿದ್ದೇನಾ ಎಂಬ ಸಂಶಯ ಮೂಡುತ್ತದೆ. ಅನೇಕ ವೇಳೆ ಆತಂಕಕ್ಕೂ ಒಳಗಾಗುತ್ತೇನೆ. ಯಾರಾದರೂ ಮುಖಕ್ಕೆ ಹೊಡೆದಂತೆ ‘ಮಾತು ಜಾಸ್ತಿ ಆಯ್ತು. ಮಾತು ಕಡಿಮೆ ಮಾಡಿ ಕೆಲಸ ಜಾಸ್ತಿ ಮಾಡಬೇಕು’ ಎಂದು ಬಿಡುವರೋ ಎಂದು ಗಾಬರಿಯಾಗುತ್ತದೆ. ಹಾಗೆ ಬೈಸಿಕೊಳ್ಳಬಾರದು ಎಂದು ಎಚ್ಚರಿಕೆ ತೆಗೆದುಕೊಳ್ಳೋಣ ಎಂದು ಯೋಚಿಸುತ್ತಾ ಕುಳಿತರೆ, ಮಾತು ಎಷ್ಟು ಆಡಬೇಕು ಎಂದು ಯೋಚಿಸುವುದೇ ಒಂದು ಕೆಲಸವಾಗಿ ಗಾಬರಿ ಇಮ್ಮಡಿಯಾಗುತ್ತದೆ.

ನಾನು ಬರೆಯೋದಕ್ಕೆ ಶುರು ಮಾಡಿ ತುಂಬಾ ದಿನವಾಯ್ತು ಎಂಬ ಭ್ರಮೆ ಇದೆ. ಬರೆಯುವಾಗ, ಬರೆಯಬೇಕೆಂದು ಆಲೋಚಿಸಿದಾಗ ನನ್ನಲ್ಲಿ ಹುಟ್ಟುವ ಹುರುಪು, ಮೆಲ್ಲಗೆ ಅಕ್ಷರಗಳು ಮೂಡುತ್ತಾ ಹೋದಾಗ ಸಿಕ್ಕುವ ನಿರಾಳತೆ, ಮನಸ್ಸಿನ ಹಗ್ಗದಲ್ಲಿನ ಒಂದೊಂದೇ ಗಂಟುಗಳು ಬಿಚ್ಚಿಕೊಳ್ಳುತ್ತಾ ಹೋದಂತಾಗುವಾಗ ಸಿಕ್ಕುವ ಅನುಭೂತಿ, ಹುತ್ತಗಟ್ಟುವ ತಾಳ್ಮೆ ಕೈಗೂಡದಾಗ ಮೂಡುವ ಸಿಡಿಮಿಡಿ ಎಲ್ಲವನ್ನೂ ಅನುಭವಿಸುವಾಗ ಬೆರಗು ಮೂಡುತ್ತದೆ. ಒಮ್ಮೆ ಬೆರಗು ಹುಟ್ಟಿದ ಮೇಲೆ ಸುಮ್ಮನಿರಲಾಗುವುದಿಲ್ಲ. ಅದನ್ನು ಯಾರಲ್ಲಾದರೂ ಹೇಳಿಕೊಳ್ಳಬೇಕು ಅನ್ನಿಸುತ್ತದೆ. ಕಾಲ ತೊಡೆ ಗಾತ್ರದ ಟೆಕ್ಸ್ಟ್ ಬುಕ್ಕುಗಳಲ್ಲಿ ತಲೆಯನ್ನು ಹುದುಗಿಸಿ ಸೈಂಟಿಫಿಕ್ ಕ್ಯಾಲ್ಸಿಗೆ ಆಕ್ಯುಪಂಚರ್ ಮಾಡುವಂತೆ ಲೆಕ್ಕ ಮಾಡುತ್ತಾ ಕುಳಿತ ಗೆಳೆಯರಿಗೆ ಬರೆಯುವಾಗಿನ ಸುಖ, ಅನುಭವಿಸುವ ಟ್ರಾನ್ಸ್‌ನ ಬಗ್ಗೆ ಹೇಳಲು ಹೋದರೆ, ಮುಖ ಮುಖ ನೋಡಿ ‘ಹುಶಾರಾಗಿದ್ದೀಯಲ್ವಾ?’ ಎಂದು ಕೇಳುತ್ತಾರೆ. ರಾತ್ರಿ ಸರಿಯಾಗಿ ನಿದ್ದೆ ಮಾಡಿಲ್ವಾ ಎಂದು ನನ್ನ ಯೋಗಕ್ಷೇಮದ ಬಗ್ಗೆ ಕಾಳಜಿ ತೋರಿಸುತ್ತಾರೆ. ಸಂಜೆ ಬೀದಿ ಬದಿಯಲ್ಲಿ ಕುಳಿತು ಕಾಫಿ ಹೀರುವಾಗ ಗೆಳೆಯರ ಗುಂಪಿಗೆ ನನ್ನ ಸಂಭ್ರಮವನ್ನು ಹೇಳಿಕೊಳ್ಳೋಣವೆಂದರೆ ಗುಂಪಿನ ಸ್ಪೇಸನ್ನು ಕಮಲ್‌ನ ದಶಾವತಾರಂ, ಆಪಲ್‌ನ ಐಫೋನು, ಮಹೇಶ್ ಭಟ್‌ನ ಸಿನೆಮಾ ಆವರಿಸಿರುತ್ತದೆ. ಕೇಳಲು ಯಾರೂ ಸಿಕ್ಕದಿದ್ದರೆ ಒಳಗಿನ ಸಂಭ್ರಮ ಎಲ್ಲಿ ಸತ್ತು ಹೋಗುಬಿಡುತ್ತದೋ ಎಂದು ಆತಂಕವಾಗಿ ಲ್ಯಾಪ್ ಟಾಪ್‌ನ ರೆಪ್ಪೆ ಬಿಡಿಸಿ ಕುಟ್ಟ ತೊಡಗುತ್ತೇನೆ. ಯಾರೋ ಬರೆದ ಕಥೆ ಮೌನವನ್ನು ಕರೆತಂದು ಮನಸ್ಸಿನೊಳಕ್ಕೆ ಕೂರಿಸಿದಾಗ, ಯಾವುದೋ ಪದ್ಯದ ಸಾಲುಗಳು ಆಳದಲ್ಲೇನನ್ನೋ ಕದಲಿಸಿದಂತಾದಾಗ ಮೂಡಿದ ಅನುಭೂತಿಯನ್ನು ಅಕ್ಷರಕ್ಕಿಳಿಸಿಬಿಟ್ಟರೆ ಅದು ಸದಾ ಹಸಿರಾಗಿರುತ್ತೇನೋ ಎನ್ನುವ ಭ್ರಮೆ ನನ್ನದು. ಅಕ್ಷರಕ್ಕೆ ನನ್ನೊಳಗೇ ಅಸ್ತಿತ್ವ ಇರುವುದು ಅನ್ನೋದು ಮರೆತಂತಾಗುತ್ತದೆ. ಬರೆದಾದ ನಂತರ ಅದನ್ನು ಬ್ಲಾಗಿನಲ್ಲೋ, ಪತ್ರಿಕೆಯಲ್ಲೋ ವಿಜೃಂಭಿಸಿದ ಮೇಲೆ ನಾನೆಲ್ಲೋ ಅಕ್ಷರದ ಬೆಲೆವೆಣ್ಣಿಗೆ ಮರುಳಾಗಿ ಒಳಗಿನ ಸಂಭ್ರಮವನ್ನು ಹೊರಕ್ಕೆ ಕಳುಹಿಸಿಬಿಟ್ಟೆನಾ ಎಂದು ನಾಚಿಕೆಯಾಗುತ್ತದೆ.

‘ಈ ವಯಸ್ಸಿನವರು ಹೇಗಿರಬೇಕೋ ಹಾಗಿರು. ಇದೆಲ್ಲಾ ಕಥೆ, ಕವಿತೆ ಅದನ್ನ ಮುಂದೆ ನೋಡಿಕೊಳ್ಳಬಹುದು.’ ಎಂದು ಮನೆಯಲ್ಲಿ ಹೇಳಿದಾಗೆಲ್ಲಾ ‘ಕಥೆ , ಕವಿತೆ ಬರೆಯುವುದು, ಸುಮ್ಮನೆ ಒಂದು ಹೂವನ್ನು ನೋಡುತ್ತಾ ಗಂಟೆ ಗಟ್ಟಲೆ ಪಾರ್ಕಿನಲ್ಲಿ ಕುಳಿತುಕೊಳ್ಳುವುದು ಯಾವ ವಯಸ್ಸಿನಲ್ಲಿ?’ ಎಂದು ಕೇಳಬೇಕನ್ನಿಸುತ್ತದೆ. ಕಲೆ ಕೊಡುವ ತಾದಾತ್ಮ್ಯದ ಮೇಲಿನ ಮೋಹವನ್ನು ವಿವರಿಸಿ ಹೇಳುವುದು ಹೇಗೆ ಅನ್ನಿಸುತ್ತದೆ. ಯಾಕೆ ಯಾರಿಗೂ ನನ್ನನ್ನು ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ ಎಂದು ಕಿರಿಕಿರಿಯಾಗುತ್ತದೆ. ಎಲ್ಲರ ಮೇಲೂ ಕೋಪ ಬರುತ್ತದೆ. ಕೆಲವೊಮ್ಮೆ ನನ್ನ ಬಗ್ಗೆಯೇ ಜಿಗುಪ್ಸೆ ಮೂಡಿಬಿಡುತ್ತದೆ. ಬಹುಶಃ ಪ್ರೇಮಿಗಳಿಗೂ ಇಂಥದ್ದೇ ಅನುಭವವಾಗುತ್ತದೆಯೇನೋ, ಪ್ರೀತಿಯೂ ಒಂದು ಕಲೆಯೇನೋ ಎಂಬ ಅನುಮಾನ ಮೂಡುತ್ತದೆ.

ಇದೆಲ್ಲವುಗಳಿಗಿಂತಲೂ ನನಗೆ ವಿಪರೀತ ಆಶ್ಚರ್ಯವಾಗುವುದು ‘ಬರೆಯೋದರಿಂದ ನನಗೇನು ಲಾಭವಾಗುತ್ತಿದೆ?’ ಎಂಬ ಪ್ರಶ್ನೆ ನನ್ನಲ್ಲಿ ಮೂಡಿದಾಗ. ಆ ಕ್ಷಣದಲ್ಲಿ ಕಥೆ ಓದುವಾಗ ಅನುಭವಿಸಿದ ತನ್ಮಯತೆ, ಕವಿತೆ ಕಣ್ಣಲ್ಲಿ ಹುಟ್ಟಿಸಿದ ಮಿಂಚು ಎಲ್ಲವೂ ನಗಣ್ಯವಾಗಿ ಕಂಡುಬಿಡುತ್ತದೆ. ಇದೆಲ್ಲಾ ಯಾತರ ಸಹವಾಸ ಎನ್ನಿಸಿಬಿಡುತ್ತದೆ. ಸುಮ್ಮನೆ ಎಷ್ಟೋಂದು ಸಮಯ ವ್ಯರ್ಥವಾಗಿ ಕಳೆದುಬಿಟ್ಟೆನಲ್ಲಾ ಎಂಬ ಗಿಲ್ಟ್ ಮೂಡುತ್ತದೆ. ಇದೆಲ್ಲಾ ಬಿಟ್ಟು ಸುಮ್ಮನೆ ನನ್ನ ಕಾಲೇಜು, ನನ್ನ ಕೆರಿಯರ್ರು ಅಂತ ಗಮನ ಹರಿಸಬೇಕು ಎಂಬ ವಿವೇಕ ಕಾಣಿಸಿದ ಹಾಗಾಗುತ್ತದೆ. ಪ್ರೀತಿಯಲ್ಲಿ ಬಿದ್ದು ಕ್ಲಾಸಿನಲ್ಲಿ ಫರ್ಸ್ಟ್ ರ್ಯಾಂಕ್ ಕಳೆದುಕೊಂಡವ ಚಡಪಡಿಸಿದ ಹಾಗೆ ಚಡಪಡಿಸುತ್ತೇನೆ. ಕೆಲವು ದಿನ ಪ್ರೀತಿಯನ್ನೇ ದ್ವೇಷಿಸಬೇಕು, ಪ್ರೀತಿಸಿದವರನ್ನು ನೋಯಿಸಬೇಕು ಎಂಬಂಥ ವಿಲಕ್ಷಣ ಭಾವ ಹುಟ್ಟಿಬಿಡುತ್ತದೆ. ಹಾಸ್ಟೆಲ್ಲಿನಲ್ಲಿ ರೂಂ ಮೇಟು ನಿರಾಳವಾಗಿ ಗೊರಕೆ ಹೊಡೆಯುತ್ತಿರುವಾಗ, ನಿದ್ದೆ ಬರದೆ ನರಳಾಡುವಂಥ ಪಾಪ ನಾನೇನು ಮಾಡಿದ್ದೇನೆ ಎಂದು ಖಿನ್ನನಾಗುತ್ತೇನೆ.

‘ಆಹಾ ಎಂಥಾ ಮಧುರ ಯಾತನೆ..’ ಅನ್ನೋ ಸಾಲು ಅದಿನ್ಯಾವ ಯಾತನೆಯಲ್ಲಿ ಹುಟ್ಟಿತೋ ಎಂದು ಅಚ್ಚರಿಯಾಗುತ್ತೇನೆ!

– ‘ಅಂತರ್ಮುಖಿ’


ಕೆಲವು ಸಲ ಹಾಗಾಗುತ್ತದೆ. ಮನಸ್ಸಲ್ಲಿ ಹುಟ್ಟಿದ ಭಾವಕ್ಕೆ ಅಭಿವ್ಯಕ್ತಿಯ ಸ್ವಾತಂತ್ರ್ಯ ಕೊಡದಿದ್ದರೆ ಅದು ಒಳಗೊಳಗೇ ನಮ್ಮನ್ನು ತಿನ್ನತೊಡಗುತ್ತದೆ. ಅಂಥದ್ದನ್ನು ಒಮ್ಮೆ ಹೊರಗೆಡವಿಬಿಟ್ಟರೆ ಮನಸ್ಸಿಗೆ ನಿರಾಳ. ‘ನೆನೆಯದೆ ಇರಲಿ ಹ್ಯಾಂಗ…?‘ ಎನ್ನುತ್ತಾರೆ ‘ಅಂತರ್ಮುಖಿ’.

ಪ್ರೈಮರಿ ಸ್ಕೂಲಿನಲ್ಲಿದ್ದಾಗ ನಮ್ಮ ಕನ್ನಡ ಮೇಷ್ಟ್ರ ಒತ್ತಾಯಕ್ಕಾಗಿ ಒಂದೆರಡು ಪ್ರಬಂಧಗಳನ್ನು, ಪ್ರಾಸಕ್ಕೆ ಜೋತುಬಿದ್ದ ನಾಲ್ಕೈದು ಕವನಗಳನ್ನು ಬರೆದಿದ್ದೆ. ತರಗತಿಯಲ್ಲಿದ್ದ ನಮ್ಮೆಲ್ಲರಿಗೂ ಅವರು ಹೋಂ ವರ್ಕ್ ಎಂಬಂತೆ ಒಂದೊಂದು ವಿಷಯ ಕೊಟ್ಟು ಪ್ರಬಂಧ ಬರೆದು ತರಲು ಹೇಳುತ್ತಿದ್ದರು. ಕೆಲವರಿಗೆ ಚಿತ್ರಗಳನ್ನು ಬರೆದುಕೊಡಲು ಹೇಳುತ್ತಿದ್ದರು. ಅವುಗಳಲ್ಲಿ ಆಯ್ದು ಕೆಲವನ್ನು ಅವರು ಸ್ಥಳೀಯ ಪತ್ರಿಕೆಯೊಂದರ ಮಕ್ಕಳ ಪುಟಕ್ಕೆ ಕಳುಹಿಸಿಕೊಡುತ್ತಿದ್ದರು. ಹೋಂ ವರ್ಕ್ ಎಂದುಕೊಂಡು ಏನೇನನ್ನೋ ಗೀಚಿ ಕೊಟ್ಟಿರುತ್ತಿದ್ದ ನನಗೆ ಅದು ಪೇಪರಿನಲ್ಲಿ ಹಾಕುವುದಕ್ಕಾಗಿ ಎಂದು ಗೊತ್ತಾದಾಗ, ‘ಇನ್ನೂ ಚೆನ್ನಾಗಿ ಬರೆಯಬಹುದಿತ್ತಲ್ಲವಾ’ ಎಂದು ಕೈ ಕೈ ಹಿಸುಕಿಕೊಳ್ಳುವಂತಾಗುತ್ತಿತ್ತು.

ಅದಾದ ನಂತರ ಬರವಣಿಗೆಯ ಅಭ್ಯಾಸ ತಪ್ಪಿ ಹೋಗಿತ್ತು. ಬರವಣಿಗೆ, ಕತೆ, ಕವನ ಎಂಬುವೆಲ್ಲಾ ಅಪರಿಚಿತ ಪದಗಳಾಗಿದ್ದವು. ಆಗ ನನಗೆ ಪರಿಚಯವಾದದ್ದೇ ‘ಹಾಯ್ ಬೆಂಗಳೂರ್!’. ನನ್ನ ಸಂಬಂಧಿಕರೊಬ್ಬರ ಮನೆಯಲ್ಲಿ ಈ ವಾರಪತ್ರಿಕೆಯನ್ನು ರೆಗ್ಯುಲರ್ ಆಗಿ ತರಿಸುತ್ತಿದ್ದರು. ನಾನು ಆಗಾಗ ಅವರ ಮನೆಗೆ ಹೋದಾಗ ಅಲ್ಲಿರುತ್ತಿದ್ದ ದಿಕ್ಸೂಚಿ, ತರಂಗಗಳನ್ನು ತಿರುವಿ ಹಾಕಿದ ನಂತರ ಕಪ್ಪು-ಕಪ್ಪು ಬಣ್ಣದ, ವಿಚಿತ್ರ ಆಕಾರದ ಈ ಪತ್ರಿಕೆಯನ್ನು ಕುತೂಹಲಕ್ಕಾಗಿ ತೆಗೆದು ನೋಡುತ್ತಿದ್ದೆ. ಒಳಪುಟಗಳಲ್ಲಿ, ಕೆಲವೊಮ್ಮೆ ಮುಖಪುಟದಲ್ಲೇ ಇರುತ್ತಿದ್ದ ಮುಜುಗರ ಪಡುವಂತಹ ಫೋಟೊಗಳು, ಕೊಲೆ, ರಕ್ತಪಾತದ ಫೋಟೊಗಳನ್ನು ನೋಡಿ ಕೊಳೆತ ಬಾಳೆಗಣ್ಣಿನ ಬುಟ್ಟಿಗೆ ಕೈ ಹಾಕಿದವನಂತೆ ಅಸಹ್ಯಪಟ್ಟುಕೊಳ್ಳುತ್ತಿದ್ದೆ.

ಹೀಗೆ ಒಮ್ಮೆ ಒಂದು ಬೀಡಾ ಅಂಗಡಿಯ ಎದುರು ನಿಂತಿದ್ದಾಗ ಅಂಗಡಿಯಲ್ಲಿ ನೇತುಹಾಕಿದ್ದ ಹಲವಾರು ಪತ್ರಿಕೆಗಳ ಮಧ್ಯೆ ‘ಹಾಯ್ ಬೆಂಗಳೂರ್!’ ಕಂಡಿತು. ಮುಖಪುಟದಲ್ಲಿ ಅದರ ಸಂಪಾದಕ ಅದೆಲ್ಲೋ ಅಫಘಾನಿಸ್ತಾನಕ್ಕೆ ಹೋಗಿದ್ದಾನೆ… ಅಲ್ಲಿಂದ ಬಂದ ವರದಿಗಳಿವೆ… ಎಂಬ ಹೆಡ್ಡಿಂಗುಗಳನ್ನು ಓದಿ ಕುತೂಹಲ ಕೆರಳಿತ್ತು. ಆ ವಾರ ನನ್ನ ಸಂಬಂಧಿಕರ ಮನೆಗೆ ಹೋದಾಗ ಮರೆಯದೆ ‘ಹಾಯ್’ನ್ನು ಹುಡುಕಿ ಓದತೊಡಗಿದೆ. ಆಗ ನಾನು ಆಶ್ಚರ್ಯದಿಂದ, ಬೆರಗಿನಿಂದ ಕಂಡ ಹೆಸರೇ ರವಿ ಬೆಳಗೆರೆ!

ಆ ಕ್ಷಣದಿಂದ ನನ್ನ ಜೊತೆಯಾದ ಆತನ ವಿಲಕ್ಷಣ ಆಸಕ್ತಿಗಳು, ತಿಕ್ಕಲು ಸಾಹಸಗಳು, ಆತ್ಮೀಯವಾದ ಬರವಣಿಗೆ ಇಂದಿಗೂ ನನ್ನೊಂದಿಗಿವೆ ನನ್ನನ್ನು ಬೆಳೆಸುತ್ತಿವೆ. ಬರವಣಿಗೆಯ ಬಗ್ಗೆ ಒಂದು ಪ್ಯಾಶನ್ ಎಂಬುದು ಹುಟ್ಟಿದ್ದೇ ‘ಹಾಯ್ ಬೆಂಗಳೂರ್!’ ಓದಲು ಪ್ರಾರಂಭಿಸಿದಂದಿನಿಂದ. ಒಂದು ಪತ್ರಿಕೆಯ ಸಂಪಾದಕನಿಗೆ ಇರುವ ಗ್ಲಾಮರ್‌ನ್ನು ಕಂಡು ಮೊದಮೊದಲು ಮುದಗೊಳ್ಳುತ್ತಿದ್ದೆ. ಬಹುಶಃ ಆ ಗ್ಲಾಮರೇ ನನ್ನನ್ನು ಬರವಣಿಗೆಗೆ ಸೆಳೆಯಿತು ಅನ್ನಿಸುತ್ತದೆ. ಒಂದು action ಸಿನೆಮಾ ನೋಡಿದ ನಂತರ ನಮ್ಮಲ್ಲೊಂದು ಹುರುಪು, ಒಂದು ಬಗೆಯ ಹಿರೋಯಿಸಂ ಹುಟ್ಟಿಕೊಳ್ಳುತ್ತದಲ್ಲಾ ಅಂಥದ್ದೇ ಭಾವೋದ್ವೇಗ ‘ಹಾಯ್’ನಲ್ಲಿನ ರವಿ ಬೆಳಗೆರೆಯ ಬರಹಗಳನ್ನು ಓದುವಾಗ ಹುಟ್ಟಿಕೊಳ್ಳುತ್ತಿದ್ದವು.

ಅದೇ ಸಮಯಕ್ಕೆ ಸರಿಯಾಗಿ ದಾವಣಗೆರೆಯ ಹರಪ್ಪನಹಳ್ಳಿಯ ಬಳಿ ನಕಲಿ ಚಿನ್ನದ ಜಾಲದ ಬೆನ್ನುಹತ್ತಿ ಕೊರಚರ ಹಟ್ಟಿಯ ಡಕಾಯಿತನೊಬ್ಬನ ಕಾಲಿಗೆ ಗುಂಡು ಹೊಡೆದು, ಮಾಧ್ಯಮಗಳಲ್ಲಿ ರಾಕ್ಷಸನಂತೆ ಬಿಂಬಿತವಾಗಿ, ತನ್ನ ಪತ್ರಿಕೆಯಲ್ಲಿ ‘ನಾನೇ ಡಕಾಯಿತನ ಕಾಲಿಗೆ ಗುಂಡು ಹೊಡೆದದ್ದು’ ಎಂದು ಬರೆದುಕೊಂಡು ಸರಕಾರದ ವಿರುದ್ಧ ಕೇಸನ್ನು ಗೆದ್ದದ್ದು ಎಲ್ಲವನ್ನೂ ಕಂಡವನಿಗೆ ಬೆಳಗೆರೆ ಮೇಲಿನ ಅಭಿಮಾನ ಹೆಚ್ಚಿತ್ತು. ‘ದಿನಕ್ಕೆ ಹದಿನೆಂಟು ತಾಸು ಓದು ಬರೆದು ಮಾಡುತ್ತೇನೆ’, ‘ನಾಲ್ಕು ದಿನ ನಾಲ್ಕು ರಾತ್ರಿ ಕುಳಿತು ಒಂದು ಪುಸ್ತಕ ಬರೆದು ಮುಗಿಸಿದೆ’ ಎಂಬಂಥ ಅವರ ಕೆಲಸದ ಬಗೆಗಿನ ಅವರದೇ ಮಾತುಗಳನ್ನು ಕೇಳಿ ರೋಮಾಂಚಿತನಾಗುತ್ತಿದ್ದೆ. ಎಂಥವರಿಗಾದರೂ ಅಂಥ ಮಾತುಗಳು ಒಂದೆರಡು ಕ್ಷಣ ಆಸಕ್ತಿಯನ್ನು ಕೆರಳಿಸಿಬಿಡುತ್ತವೆ. ಪತ್ರಿಕೋದ್ಯಮದ ಬಗ್ಗೆ, ಬರವಣಿಗೆಯ ಬಗ್ಗೆ ‘ಹಾಯ್’ನಲ್ಲಿ ರವಿ ಬರೆಯುತ್ತಿದ್ದ ಸಂಗತಿಗಳನ್ನು ಓದಿಕೊಂಡು ನಾನೂ ಬರವಣಿಗೆಗೆ ಕೈ ಹಾಕಿದ್ದೆ. ನಾನಾಗ ನಿಯಮಿತವಾಗಿ ಓದುತ್ತಿದ್ದದ್ದು ‘ಹಾಯ್ ಬೆಂಗಳೂರ್!’ ಒಂದನ್ನೇ ಆದ್ದರಿಂದ ಸ್ವಾಭಾವಿಕವಾಗಿ ನನ್ನ ಬರವಣಿಗೆಯ ಶೈಲಿ, ಚಿಂತನೆಯ ಜಾಡು, ವಿಷಯಗಳ ಆಸಕ್ತಿಯ ಮೇಲೆ ರವಿ ಬೆಳಗೆರೆಯ ಛಾಯೆ ಎದ್ದು ಕಾಣುತ್ತಿತ್ತು. ‘ಹಾಯ್…’ ಎಂಬ ಟ್ಯಾಬ್ಲಾಯ್ಡ್‌‌ನ ಭಾಷೆಯಲ್ಲಿ ನಾನು ಬರೆಯುತ್ತಿದ್ದ ಕೆಲವು ಲೇಖನಗಳು ನಮ್ಮ ಶಾಲೆಯ ಗೋಡೆ ಪತ್ರಿಕೆಯಲ್ಲಿ ಬೆಳಕು ಕಂಡು ಹಲವರನ್ನು ಬೆರಗುಗೊಳಿಸುತ್ತಿದ್ದವು. ಆಗಲೇ ಹುಟ್ಟಿದ್ದು ನಾನೂ ಒಂದು ಪತ್ರಿಕೆಯನ್ನೇಕೆ ಮಾಡಬಾರದು ಎಂಬ ಐಡಿಯಾ!

ನನ್ನ ಬರವಣಿಗೆಯ ಹಾದಿಯಲ್ಲಿನ ಇಷ್ಟು ಕಾಲದಲ್ಲಿ ನಾನು ಪ್ರಜ್ಞಾಪೂರ್ವಕವಾಗಿ ರವಿಬೆಳಗೆರೆ ಎಂಬ ಶಕ್ತಿಯ ಅನುಕರಣೆ ಮಾಡುವ ಪ್ರಯತ್ನ ಮಾಡಿದ್ದೇನೆ. ಅನಂತರ ಆ ಅನುಕರಣೆಗಾಗಿ guilt ಅನುಭವಿಸಿದ್ದೇನೆ. ನಾನು ಯಾರ ಅನುಕರಣೆಯೂ ಮಾಡುತ್ತಿಲ್ಲ ಎಂದು ಸಾಧಿಸುವ ವ್ಯರ್ಥ ಪ್ರಯತ್ನವನ್ನೂ ಮಾಡಿದ್ದೇನೆ. ಈಗೀಗ ಪ್ರಜ್ಞಾಪೂರ್ವಕವಾಗಿ ಎಲ್ಲಾ ಬಗೆಯ ಅನುಕರಣೆಗಳ ಪ್ರಭಾವವನ್ನು ಮೀರಿನಿಲ್ಲುವ ಪ್ರಯತ್ನ ಮಾಡುತ್ತಿದ್ದೇನೆ. ಆದರೂ ತುಂಬಾ ಚಿಕ್ಕಂದಿನಲ್ಲೇ ಬರವಣಿಗೆಯೆಡೆಗೆ, ಓದಿನೆಡೆಗೆ ನನ್ನಲ್ಲಿ ಅದಮ್ಯವಾದ ಪ್ಯಾಶನ್ ಹುಟ್ಟಿಸಿದ ಆ ಲೇಖಕನಿಗೊಂದು ಶುಕ್ರಿಯಾ!


Blog Stats

  • 71,866 hits
ಮಾರ್ಚ್ 2023
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 12345
6789101112
13141516171819
20212223242526
2728293031  

Top Clicks

  • ಯಾವುದೂ ಇಲ್ಲ