ಕಲರವ

Posts Tagged ‘ಚಟ

(ಹಿಂದಿನ ಸಂಚಿಕೆಯಿಂದ)

ನೀನು ನನ್ನ ಬದುಕಿನಲ್ಲಿ ಬಂದ ಮೇಲೆ ನಾನು ಅದೆಷ್ಟು ಬದಲಾಗಿ ಹೋಗಿದ್ದೆನಲ್ಲವಾ? ನಿನ್ನ ಪರಿಚಯ, ಸಾಹಚರ್ಯದಿಂದಾಗಿ ನನ್ನಲ್ಲಿ ಹೊಸತೊಂದು ಹುಮ್ಮಸ್ಸು ಹುಟ್ಟಿಕೊಂಡಿತ್ತು.  ನಿನ್ನೊಂದಿಗೆ ಪ್ರತಿದಿನ ಒಂದಷ್ಟು ಸಮಯ ಕಳೆದರೆ ವಿಲಕ್ಷಣವಾದ ಧೈರ್ಯ ಬರುತ್ತಿತ್ತು. ನೀನು ನನ್ನ ಬೆರಳುಗಳ ನಡುವೆ ನುಲಿಯುತ್ತಿರುವಾಗ ನಾನು ಇಡೀ ಜಗತ್ತನ್ನೇ ಜಯಿಸುವ ಕನಸನ್ನು ಕಾಣುತ್ತಿದ್ದೆ. ಸುತ್ತಲಿನ ಜಗತ್ತೂ ಕೊಂಚ ಬದಲಾದ ಹಾಗೆ ಅನ್ನಿಸುತ್ತಿತ್ತು. ಅದುವರೆಗೂ ಕಣ್ಣೆತ್ತಿಯೂ ನೋಡದವರೆಲ್ಲಾ ನಾನು ನಿನ್ನೊಂದಿಗಿರುವಾಗ ನಮ್ಮಿಬ್ಬರನ್ನು ದುರುದುರನೆ ನೋಡಿ ಮುಂದೆ ಹೋಗುತ್ತಿದ್ದರು. ಕೆಲವರ ಕಣ್ಣಲ್ಲಿ ನಾನು ನೀನು ಆದರ್ಶ

ಪ್ರೇಮಿಗಳಾಗಿದ್ದೆವು. ನಾನು ಒಬ್ಬನೇ ತಿರುಗಾಡುವಾಗ ಎದುರಲ್ಲಿ ಕಂಡ ಕೆಲವು ಹುಡುಗರ ಕಣ್ಣಲ್ಲಿನ ಭಯ, ಭಕ್ತಿ, ಗೌರವ ಬೆರೆತ ಭಾವವನ್ನು ಗು

ರುತಿಸುತ್ತಿದ್ದೆ. ಕೆಲವು ಮುದುಕರು ವಾಕಿಂಗ್ ಸ್ಟಿಕ್ಕನ್ನು ಕುಟ್ಟುತ್ತಾ ಎದುರು ಸಾಗುವಾಗ ನನ್ನ ಮೇಲೆ ದುಸುಮುಸು ಮಾಡಿಕೊಳ್ಳುತ್ತಿದ್ದನ್ನೂ ಕಂಡಿದ್ದೆ. ಆದರೆ ನನಗೆ ಅವ್ಯಾವೂ ಮುಖ್ಯವಾಗಿರಲಿಲ್ಲ. ನಾನು ಹಾಗೂ ನೀನು ಇಬ್ಬರೇ ಇಡೀ ಜಗತ್ತಿನಲ್ಲಿ ಸಮಯ ಕೊನೆಯಾಗುವರೆಗೆ ಹಾಯಾಗಿರಬೇಕು ಅನ್ನಿಸುತ್ತಿತ್ತು.


ನಿನ್ನೊಳಗೆ ನಾನು, ನನ್ನೊಳಗೆ ನೀನು ಬೆರೆತು ಹೋಗಿ ಇಬ್ಬರೂ ಇಲ್ಲವಾಗಿ ಬಿಡಬೇಕು ಎಂಬ ಕಾತರ ನನ್ನಲ್ಲಿದ್ದರೂ ಈ ಸುತ್ತಲ ಸಮಾಜದ ನಿಯಮಗಳು ಅದಕ್ಕೆ ಅವಕಾಶಕೊಡುವುದಿಲ್ಲ ಎಂಬುದು ನಮ್ಮಿಬ್ಬರಿಗೂ ಗೊತ್ತಿತ್ತು. ನಾನು ನೀನು ಎಲ್ಲೆಂದರಲ್ಲಿ ಸಂಧಿಸುವ ಹಾಗಿರಲಿಲ್ಲ. ನಮ್ಮ ಸಮಾಗಮಕ್ಕಾಗಿ ಅತೀ ಎಚ್ಚರಿಕೆಯಿಂದ ಸಮಯವನ್ನೂ, ಸ್ಥಳವನ್ನೂ ನಾವು ಆಯ್ಕೆ ಮಾಡಿಕೊಳ್ಳಬೇಕಿತ್ತು.  ಕಾಲೇಜು ಇರುವಾಗಲೆಲ್ಲಾ ಇಲ್ಲಿ ಹಾಸ್ಟೆಲ್ಲಿನಲ್ಲಿ ಉಳಿದುಕೊಂಡಾಗ ನನಗಷ್ಟು ತೊಂದರೆಯಾಗುತ್ತಿರಲಿಲ್ಲ. ನೀನು ಯಾವ ಘಳಿಗೆಯಲ್ಲಿ ಕಳೆದರೂ ಉಟ್ಟ ಬಟ್ಟೆಯಲ್ಲಿ ಧಾವಿಸುವಷ್ಟು ಸ್ವಾತಂತ್ರ್ಯವಿರುತ್ತಿತ್ತು. ನನ್ನನ್ನು ತಡೆಯುವುದಕ್ಕೆ ಯಾರಿಗೂ ಸಾಧ್ಯವಿರಲಿಲ್ಲ. ಮೇಲಾಗಿ ಈ ಊರಿಗೆ ನಾನು ಅಪರಿಚಿತ. ಈ ಬೆಂಗಳೂರಿನ ಸಂಗತಿ ನಿನಗೆ ಗೊತ್ತಿಲ್ಲ ಅನ್ನಿಸುತ್ತೆ, ಇಲ್ಲಿ ನಿನ್ನ ಬೆನ್ನ ಹಿಂದಿರುವ ಒಂದು ಅಡಿ ದಪ್ಪನೆಯ ಗೋಡೆಯ ಆಚೆ ಬದಿಯಲ್ಲಿ ಕೂತ ವ್ಯಕ್ತಿಗೆ ನಿನ್ನ ಪರಿಚಯವಿರುವುದಿಲ್ಲ. ಪಕ್ಕದ ಮನೆಯಲ್ಲಿ ಮನುಷ್ಯರು ಇದ್ದಾರೆ, ಅವರು ಇನ್ನೂ ಉಸಿರಾಡುತ್ತಿದ್ದಾರೋ ಇಲ್ಲವೋ ಎಂಬುದು ಇಲ್ಲಿನವರಿಗೆ ಆಸಕ್ತಿಯ ವಿಷಯವಾಗುವುದಿಲ್ಲ. ಹೀಗಾಗಿ ನಾನು ಹಾಸ್ಟೆಲ್ಲಿನ ಕಾಂಪೌಂಡು ದಾಟುತ್ತಿದ್ದ ಹಾಗೆಯೇ ಕಿಸೆಯಲ್ಲಿ ಭದ್ರವಾಗಿದ್ದ ನಿನ್ನನ್ನು ಹೊರಕ್ಕೆಳೆದು ಪ್ರೀತಿಯಿಂದ ಕಿಚ್ಚು ಹೊತ್ತಿಸುವಾಗಲೂ ಭಯವಾಗುತ್ತಿರಲಿಲ್ಲ. ತೀರಾ ನನ್ನ ಕಾಲೇಜಿನವರು, ನನ್ನ ವರ್ತಮಾನವನ್ನು ಊರಿಗೆ ತಲುಪಿಸುವಂಥವರು, ಕಾಲೇಜಿನ ಲೆಕ್ಛರುಗಳು- ಇವರ ಕಣ್ಣಿಗಾದರೂ ನಾವಿಬ್ಬರೂ ಒಟ್ಟಾಗಿರುವುದು ಬೀಳದಂತೆ  ಎಚ್ಚರ ವಹಿಸುತ್ತಿದ್ದೆ.

ದಿನಕ್ಕೆ ಒಂದು ಬಾರಿ ಎರಡು ಬಾರಿಯೆಲ್ಲಾ ಸಂಧಿಸುವುದರಿಂದ ನನಗೆ ತೃಪ್ತಿಯಾಗುತ್ತಿರಲಿಲ್ಲ. ಐದು, ಆರು ಕಡೆ ಕಡೆಗೆ ಹತ್ತು ಹದಿನೈದು ಸಲವಾದರೂ ನಿನ್ನ ಮಡಿಲಿಗೆ ನನ್ನನ್ನು ನಾನು ಒಪ್ಪಿಸಿಕೊಂಡುಬಿಡಲು ಶುರು ಮಾಡಿದೆ. ನೀನೂ ಏನೂ ಅಷ್ಟು ಸುಲಭಕ್ಕೆ ಸಿಕ್ಕುವವಳಾಗಿರಲಿಲ್ಲ. ನಿನ್ನ ಬೇಡಿಕೆಯೇನು ಸಣ್ಣ ಪ್ರಮಾಣದ್ದಲ್ಲ. ಮನೆಯಿಂದ ಬರುತ್ತಿದ್ದ ತಿಂಗಳ ಕಾಸಿನಲ್ಲಿ ಒಂದಷ್ಟನ್ನು ಕದ್ದು ಮುಚ್ಚಿ ನಿನಗೆ ತಲುಪಿಸುತ್ತಿದ್ದೆ. ಅಲ್ಲಿ ಇಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದೆನಾದ್ದರಿಂದ ನಿನ್ನನ್ನು ಸಾಕಲು ಕಷ್ಟವಾಗುತ್ತಿರಲಿಲ್ಲ. ಆದರೆ ಕೆಲವೊಮ್ಮೆ ವಿಪರೀತವಾಗಿ ಕೈ ಕಟ್ಟಿ ಹೋಗಿ ಬಿಡುತ್ತಿತ್ತು. ಕೈಲಿ ಬಿಡುಗಾಸೂ ಇರುತ್ತಿರಲಿಲ್ಲ. ಹಿಂದೆಂದೂ ಅಮ್ಮನಿಗೆ ಸುಳ್ಳು ಹೇಳದ ನಾನು ಆಕೆಗೆ ಅರ್ಥವಾಗದ ಪುಸ್ತಕಗಳ ಹೆಸರು ಹೇಳಿ ಬ್ಯಾಂಕ್ ಅಕೌಂಟು ತುಂಬಿಸಿ ಕೊಳ್ಳುತ್ತಿದ್ದೆ.  ನಮ್ಮ ಪ್ರೀತಿಗಾಗಿ ನಾನು ಅಪ್ರಮಾಣಿಕನಾದೆ, ಸ್ವಾಭಿಮಾನವನ್ನೂ ಕಳೆದುಕೊಂಡು ಗೆಳೆಯರ ಬಳಿ ಅಂಗಲಾಚಿದೆ. ಆಪ್ತರ ಕಣ್ಣಲಿ ಸಣ್ಣವನಾದೆ, ಆದರೆ ನಿನ್ನ ಕಣ್ಣಲ್ಲಿ ನಾನು ದೊಡ್ಡವನಾಗುತ್ತಿದ್ದೆ ಎಂದುಕೊಂಡಿದ್ದೆ. ನಾನು ನಿನ್ನ ಕಾಣುವುದಕ್ಕಾಗಿ, ನಿನ್ನನ್ನು ಸೇರುವುದಕ್ಕಾಗಿ ಇಷ್ಟೆಲ್ಲಾ ತ್ಯಾಗಗಳನ್ನು ಮಾಡುತ್ತಿದ್ದೆ. ಆದರೆ ನೀನೋ ಅಂತಃಪುರದ ಮಹಾರಾಣಿಯ ಹಾಗೆ ಕೂದಲೂ ಸಹ ಕೊಂಕದ ಹಾಗೆ ಇರುತ್ತಿದ್ದೆ.  ಪಾಪ ಇದರಲ್ಲಿ ನಿನ್ನದೇನೂ ತಪ್ಪಿರಲಿಲ್ಲ ಬಿಡು. ನಿನಗೆ ನನ್ನ ಎಷ್ಟೇ ಪ್ರೀತಿಯಿದ್ದರೂ ನೀನಾದರೂ ಏನು ಮಾಡಲು ಸಾಧ್ಯವಿತ್ತು? ನೀನು ಅಬಲೆ, ಅಸಹಾಯಕಿ ನಾನು ನಿನ್ನ ಪೊರೆಯುವ, ಸದಾ ನಿನ್ನ ಹಿತವನ್ನು ಕಾಯುವ, ನಿನ್ನ ಕೋಮಲತೆಯನ್ನು ಕಾಪಾಡುವ ಶಕ್ತಿವಂತ ಯೋಧನಾಗಿದ್ದೆ. ನಮ್ಮಿಬ್ಬರ ಮಿಲನಕ್ಕೆ ನಾನು ಈ ಸುಂಕವನ್ನು ತೆರಲೇ ಬೇಕಿತ್ತು.

ನಿಜಕ್ಕೂ ನನಗೆ ಹಾಗೆ ಅನ್ನಿಸುತ್ತಿತ್ತೋ ಅಥವಾ ಅದು ಕೇವಲ ನನ್ನ ಭ್ರಮೆಯಾಗಿತ್ತೋ ನನಗಿನ್ನೂ ಸರಿಯಾಗಿ ತೀರ್ಮಾನಿಸಲು ಸಾಧ್ಯವಾಗುತ್ತಿಲ್ಲ. ಆಗಿನ ನನ್ನ ಬದುಕಿಗೇ ನೀನೇ ಸ್ಪೂರ್ತಿಯಾಗಿದ್ದೆ. ನನ್ನ ಅಂತರಂಗದ ಪ್ರೇರಕ ಶಕ್ತಿಯಾಗಿದ್ದೆ. ನಾನು ಹೆದರಿ ಹೆಜ್ಜೆ ಹಿಂದಿಟ್ಟಾಗಲೆಲ್ಲಾ ನೀನು ಧೈರ್ಯ ತುಂಬಿ ಮುಂದಕ್ಕೆ ತಳ್ಳುತ್ತಿದ್ದೆ. ದಣಿದು ಕುಳಿತಾಗಲೆಲ್ಲಾ ಶಕ್ತಿಯನ್ನು ಧಾರೆಯೆರೆದು ಜಿಗಿದು ನಿಲ್ಲುವಂತೆ ಮಾಡುತ್ತಿದ್ದೆ. ನನ್ನ ಸೃಜನಶಿಲತೆ, ನನ್ನ ಸಾಧನೆಗಳಿಗೆ ನೀನೇ ಬೆಂಬಲವಾಗಿದ್ದೆ. ಒಮ್ಮೆ ನಿನ್ನೊಡನೆ ಕೈಯೊಳಗೆ ಕೈ ಬೆಸೆದುಕೊಂಡು ಕುಳಿತು ಐದು ನಿಮಿಷ ಕಳೆದರೆ ನನ್ನೆಲ್ಲಾ ಸಭಾ ಕಂಪನ ಕಾಣೆಯಾಗಿ ನೂರಾರು ಮಂದಿಯೆದುರು ನಿರ್ಭಯವಾಗಿ, ಅದ್ಭುತವವಾಗಿ ಮಾತಾಡುತ್ತಿದ್ದೆ. ಹಿಂದೆಲ್ಲಾ ಪದಗಳು ಸಿಕ್ಕದೆ ತಡವರಿಸುತ್ತಿದ್ದವನು ನಾನೇನಾ ಎಂದು ಆಶ್ಚರ್ಯ ಪಡುವಷ್ಟರ ಮಟ್ಟಿಗೆ ನಿನ್ನ ಸ್ಪೂರ್ತಿ ನನ್ನನ್ನು ಬದಲಾಯಿಸಿತ್ತು. ಅಪರೂಪಕ್ಕೆ ಕಾಲೇಜಿನ ಪತ್ರಿಕೆಗಾಗಿಯೋ, ಇಲ್ಲವೇ ‘ಮಯೂರ’, ‘ತುಷಾರ’ಕ್ಕಾಗಿಯೋ ಕಥೆಯೊಂದನ್ನು ಬರೆಯುವುದಕ್ಕೆ ಕೂತಾಗ ಗಂಟೆ ಗಟ್ಟಲೆ ಮೇಜಿನ ಮುಂದೆ ಜಿಮ್ನಾಸ್ಟಿಕ್ ನಡೆಸಿದರೂ, ಹಾಸಿಗೆಯ ಮೇಲೆ ಶೀರ್ಷಾಸನ ಹಾಕಿದರೂ ಹೊಳೆಯದಿದ್ದ ವಿಚಾರಗಳು, ಕೈಯಿಂದ ತಪ್ಪಿಸಿಕೊಂಡು ಓಡುತ್ತಿದ್ದ ಕಥೆಯ ಎಳೆಗಳು ನಿನ್ನನ್ನು ಜೊತೆಯಲ್ಲಿಟ್ಟುಕೊಂಡು ಕೂತೊಡನೆ ಬಾಲ ಮುದುರಿಕೊಂಡ ಬೆಕ್ಕಿನ ಮರಿಯ ಹಾಗೆ ಕಾಗದದ ಮೇಲೆ ಇಳಿಯುತ್ತಿದ್ದವು. ನಾನು ನನ್ನ ಬದುಕಿನ ಅತಿ ಶ್ರೇಷ್ಠ ಕಥೆಗಳನ್ನು, ಕವಿತೆಗಳನ್ನು ಬರೆದದ್ದು, ತುಂಬಾ ಒಳ್ಳೆಯ ಐಡಿಯಾಗಳನ್ನು ಪಡೆದದ್ದು ನಿನ್ನೊಂದಿಗಿದ್ದಾಗಲೇ. ಅದ್ಯಾರೋ ಮಹಾನ್ ಲೇಖಕ, ‘ಬರೆಯುವಾಗ ಯಾರೆಂದರೆ ಯಾರೂ ಇರಬಾರದು ನನ್ನನ್ನೂ ಸೇರಿಸಿ’ ಎಂದು ಹೇಳಿದ್ದಾನೆ. ಆ ಸ್ಥಿತಿಯನ್ನು ತಲುಪಿಕೊಳ್ಳಲು ನೀ ನನಗೆ ನೆರವಾಗುತ್ತಿದ್ದೆ ಎಂದುಕೊಳ್ಳುತ್ತಿದ್ದೆ. ಕಾರಂತರು, ಲಂಕೇಶರು, ಅಡಿಗರು, ರವಿ ಬೆಳಗೆರೆಯಂಥವರೆಲ್ಲಾ ನಿನ್ನ ಪರಿವಾರವನ್ನು ನೆಚ್ಚಿಕೊಂಡವರು ಎಂದು ತಿಳಿದು ಪುಳಕಿತನಾಗುತ್ತಿದ್ದೆ. ಕಡೆ ಕಡೆಗೆ ಅದ್ಯಾವ ಪರಿ ನಿನ್ನನ್ನು ಹಚ್ಚಿಕೊಂಡೆನೆಂದರೆ ನೀನಿಲ್ಲದೆ ನನ್ನಲ್ಲಿ ಕಥೆಯಿರಲಿ, ಒಂದು ಸಾಲು ಕೂಡ ಹುಟ್ಟಲು ಸಾಧ್ಯವಾಗುತ್ತಿರಲಿಲ್ಲ. ನಿನ್ನೊಡನೆ ಇರದಿದ್ದ ಘಳಿಗೆಯಲ್ಲಿ ಯಾರಾದರೂ ಬಂದು ಈ ಐಡಿಯಾಗಳು ನಿಮ್ಮದೇನಾ ಅಂತ ಕೇಳಿಬಿಟ್ಟರೆ ಎಂದು ಕಲ್ಪಿಸಿಕೊಂಡು ಭಯವಾಗಿ ನಡುಗಿಹೋಗುತ್ತಿದ್ದೆ.

(ಮುಂದಿನ ಸಂಚಿಕೆಗೆ)

ಪ್ರೀತಿಯ ಸಿಗರೇಟೇ,
ಹೇಗಿರುವೆ… ನಿನ್ನನ್ನು ಕಂಡು ತುಂಬಾ ದಿನಗಳಾದವು ಅಲ್ಲವಾ? ನಿನಗೆ ನನ್ನ ನೆನಪಿದೆಯೋ ಇಲ್ಲವೋ ಕಾಣೆ. ಆದರೆ ನಾನು ಮಾತ್ರ ಕಳೆದ ಹದಿನೈದೋ, ಇಪ್ಪತ್ತೋ ದಿನಗಳಿಂದ ನಿನ್ನನ್ನು ನೆನದು ನೆನೆದು ವಿಪರೀತ ಹಿಂಸೆಯನ್ನು ಅನುಭವಿಸಿದ್ದೇನೆ. ಮರೆವು ಇಷ್ಟು ದುಬಾರಿ ಎಂತ ನನಗೆ ಎಂದೂ ಅನಿಸಿದ್ದೇ ಇಲ್ಲ. ಪರೀಕ್ಷೆಗಾಗಿ ಓದಿದ್ದ ವಿಷಯಗಳನ್ನು ಬಿಡು, ಉಪನಯನ ಮಾಡಿಸಿದ ಮೂರನೆಯ ದಿನಕ್ಕೆ ಅಪ್ಪ ಆಕ್ಸಿಡೆಂಟಿನಲ್ಲಿ ಉಸಿರುಬಿಟ್ಟ ದಿನದ ನೆನಪು ಮಸುಕು ಮಸುಕಾಗಿಯಾದರೂ ನೆನಪಿಲ್ಲ. ಆದರೆ ನಿನ್ನ ಮರೆಯುವುದಕ್ಕೆ ನಾನು ಪಟ್ಟ ಪಾಡಿದೆಯಲ್ಲ, ಅದನ್ನ ಹೇಗೆ ವಿವರಿಸಲಿ? ನಿನ್ನ ನೆನಪು ಬರೀ ನನ್ನ ಮನಸ್ಸಿಗೆ ಸಂಬಂಧಿಸಿದ್ದಾಗಿದ್ದರೆ ಮನಸ್ಸಿನ ಮೇಲೆ ಹೇರಲ್ಪಡುವ ಸಾವಿರಾರು ಸಂಗತಿಗಳಲ್ಲಿ ಅದೂ ಕಳೆದುಹೋಗಿಬಿಡುತ್ತಿತ್ತು. ಆದರೆ ನಿನ್ನ ನೆನಪಿಗೆ ನನ್ನ ದೇಹದ ನರ-ನರವೂ, ಶ್ವಾಸಕೋಶದ ಪ್ರತಿ ಗಾಳಿ ಚೀಲವೂ ತುಡಿಯುತ್ತಿದ್ದುದರಿಂದ ನಿನ್ನ ಮರೆಯುವುದು ಎಂದರೆ ನನ್ನನ್ನೇ ನಾನು ನಿರಾಕರಿಸಿದಂತಾಗಿತ್ತು. ನಿನ್ನಿಂದ ದೂರವಾಗಿ ಇಷ್ಟು ದಿನ ಕಳೆದ ಮೇಲೂ ನಿನ್ನ ನೆನಪು ಅಳಿದಿಲ್ಲ. ಅದಕ್ಕೆ ಈ ಓಲೆ ನಿನಗಾಗಿ…

ನೀನು ನನಗೆ ಪರಿಚಯವಾದ ಘಳಿಗೆಯನ್ನು ಏನೆಂದು ಕರೆಯಲಿ? ಅಮೃತ ಘಳಿಗೆಯೆನ್ನಲ್ಲಾ, ದೇವರು ನನ್ನ ಬದುಕಿನಲ್ಲಿ ಮಾರ್ಕು ಮಾಡಿಟ್ಟ ಸಮಯವೆನ್ನಲಾ, ನನ್ನ ಅವನತಿಗೆ ವಿಧಿ ಇಟ್ಟುಕಳುಹಿಸಿದ್ದ ಮುಹೂರ್ತವೆನ್ನಲಾ? ನಿನ್ನ ಬಗ್ಗೆ ನನಗೇನೂ ಅಂಥಾ ಅಜ್ಞಾನವಿರಲಿಲ್ಲ. ಎತ್ತೆತ್ತಲೂ ನಿನ್ನನ್ನೇ ನೋಡುತ್ತಿದ್ದೆ. ಬೀದಿಯ ಕೊನೆಯ ಬೀಡಾ ಸ್ಟಾಲಿನ ಎದುರು ಗುಂಪು ನಿಂತ ಜನರಿಗೆ ಬೆಚ್ಚಗೆ ಕಾವು ಕೊಡುವಂತೆ ಬೆಂಕಿ ಹಾಕಿಸಿಕೊಳ್ಳುತ್ತಿದ್ದೆ. ಕಾಲೇಜಿನಲ್ಲಿ ಸಿನಿಯರುಗಳ ಎರಡು ಬೆರಳುಗಳ ಮಧ್ಯದಲ್ಲಿ ತೂರಿ, ‘ಇವರಿಗೆ ಸಿನಿಯಾರಿಟಿಯನ್ನು ಕೊಟ್ಟಿದ್ದೇ ನಾನು’ ಎಂದು ಬೀಗುತ್ತಿದ್ದೆ. ಸಿನೆಮಾ ನಟರ ತುಟಿಯಲ್ಲಿ ಕುಣಿದಾಡುತ್ತಾ ಅವರ ಸ್ಟೈಲಿಗೆ ಮೆಚ್ಚಿ ತಲೆದೂಗುತ್ತಿದ್ದೆ. ಆದರೂ ಹದಿನೆಂಟು ದಾಟುವವರೆಗೆ ನಾನು ನಿನಗಾಗಿ ಕೈಚಾಚಿರಲಿಲ್ಲ. ಅಲ್ಲಿಯವರೆಗೆ ಸಂಯಮಿಯಾಗಿದ್ದೆ ಅಂತೇನಲ್ಲ, ಅವಕಾಶ ಸಿಕ್ಕಿರಲಿಲ್ಲ ಅಷ್ಟೇ. ಮುಂದೆಂದಾದರೂ ಬೇರೆಯವರಿಗೆ ನನ್ನ ನಿನ್ನ ಚರಿತ್ರೆಯನ್ನು ಹೇಳುವಾಗ ನಾನು ಹದಿನೆಂಟು ದಾಟುವವರೆಗೆ ನಿನ್ನನ್ನು ದ್ವೇಷಿಸುತ್ತಿದ್ದೆ, ನೀನು ಎಂದರೆ ಅಲರ್ಜಿ ಎಂದು ಮೂಗು ಮುರಿಯುತ್ತಿದ್ದೆ. ನಿನ್ನ ಬಳಗದವರೊಂದಿಗೆ ಚೆಲ್ಲಾಟವಾಡುತ್ತಾ ನಿಂತವರನ್ನು ಕಂಡು ರೇಗಿಕೊಳ್ಳುತ್ತಿದ್ದೆ ಎಂದೆಲ್ಲಾ ಹೇಳಬಹುದೇನೋ, ಆದರೆ ನಿನಗೆ ನನ್ನ ಅಂತರಂಗ ತಿಳಿದಿಲ್ಲವೇ? ನಿನ್ನಲ್ಲೇಕೆ ಮುಚ್ಚು ಮರೆ.

ಅದೊಂದು ದಿನ ವಿಪರೀತ ತಲೆಬಿಸಿಯಾಗಿತ್ತು. ನಾಲ್ಕಾರು ದಿನಗಳಿಂದ ಕಾಲೇಜಿಗೆ ಹೋಗಿರಲಿಲ್ಲ. ಪ್ರಿನ್ಸಿಪಾಲರು ಬಂದು ನೋಡಲು ಹೇಳಿದ್ದರು. ಹೋಟೆಲಿನ ಕೌಂಟರಿನಲ್ಲಿ ಕುಳಿತವನಿಗೆ ಮುಖ ತೋರಿಸಬೇಕಾಗುತ್ತದೆ ಎಂದು ಹೊಟ್ಟೆ ಹಸಿದಿದ್ದರೂ ಹೋಟೆಲಿಗೆ ಹೋಗದ ಮಖೇಡಿಯಾದ ನನಗೆ ಪ್ರಿನ್ಸಿಪಾಲರನ್ನು ಏಕಾಂಗಿಯಾಗಿ ಭೇಟಿಯಾಗುವುದು ಭಯ ಹುಟ್ಟಿಸಿತ್ತು. ಬೇರಾವ ಸಂಗತಿಗೂ ಗಮನ ಕೊಡಲಾಗದ ಹಾಗೆ ಆ ಭಯ ನನ್ನ, ಹಿಂಜರಿಕೆ ನನ್ನನ್ನು ಆವರಿಸಿತ್ತು. ಇಡೀ ಸಂಜೆ ನಾನು ಪ್ರಿನ್ಸಿಪಾಲರ ಕೊಠಡಿಗೆ ಹೋದಂತೆ, ಅವರೆದುರು ಧೈರ್ಯವಾಗಿ ಮಾತಾಡಿದಂತೆ, ನನ್ನ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಿದಂತೆ ಕಲ್ಪಿಸಿಕೊಂಡು – ಹಾಗೆ ಮಾಡುವ ಧೈರ್ಯವಿದೆಯೇ ಎಂದು ಯೋಚಿಸಿ ಕಂಗಾಲಾಗಿದ್ದೆ. ರೂಮಿನಲ್ಲಿ ಕೂತರೆ ತಲೆ ಒಡೆದು ನೂರು ಚೂರಾದೀತು ಅನ್ನಿಸಿ ಹೊರಕ್ಕೆ ಜಿಗಿದೆ. ರಸ್ತೆಯ ಮೇಲೆ ಓಡಾಡುವ ಪ್ರತಿ ಮುಖದಲ್ಲೂ ನನ್ನೆಡೆಗೆ ತಿರಸ್ಕಾರ ಕಂಡಂತಾಗಿ ದಿಗಿಲಾಯಿತು. ಟೀ ಅಂಗಡಿಯ ಬಳಿ ನಿಂತು ಅರ್ಧ ಕಪ್ ಟೀ ಬೇಡಿದೆ. ಆತ ಡಿಕಾಕ್ಷನ್ನಿಗೆ ಹಾಲು ಬೆರೆಸುತ್ತಾ ಸಮಯ ದೂಡುತ್ತಿರುವಾಗ ಆಕಸ್ಮಿಕವಾಗಿ ನೀನು ಕಣ್ಣಿಗೆ ಬಿದ್ದೆ. ಅದೇನನ್ನಿಸಿತೋ, ಒಮ್ಮೆ ನಿನ್ನ ಸಂಗಾತವನ್ನು ಅನುಭವಿಸಬೇಕು ಎಂಬ ಹಂಬಲ ಹುಟ್ಟಿಕೊಂಡುಬಿಟ್ಟಿತು. ನಿನ್ನ ಸನ್ನಿಧಿಯಲ್ಲಿ ನನ್ನೆಲ್ಲಾ ದುಗುಡ, ಆತಂಕಗಳು ಕಳೆದು ನನ್ನ ಬದುಕು ಬಂಗಾರದ್ದಾಗಿ ಬಿಡುತ್ತದೆ ಅನ್ನಿಸಿತು. ನಿನ್ನ ಬಗ್ಗೆ ಅವರಿವರು ಹೇಳಿದ್ದು, ಅಲ್ಲಲ್ಲಿ ಓದಿದ್ದು ಎಲ್ಲಾ ಅಪರೂಪಕ್ಕೊಮ್ಮೆಮ್ಮೆ ನಿನ್ನೆಡೆಗೆ ಹುಟ್ಟಿಕೊಂಡಿದ್ದ ಬೆರಗು, ಆಸಕ್ತಿ ಎಲ್ಲಾ ಸೇರಿ ಕೈ ಎಳೆದು ನಿನ್ನ ಕೈಕುಲುಕಿಸಿತು. ನಿನ್ನ ಪ್ರೀತಿಯಲ್ಲೂ ಅದೇಷ್ಟೆಷ್ಟೋ ವಿಧಗಳಿವೆ ಎಂಬುದನ್ನು ಟೀ ಅಂಗಡಿಯವ ಟೀ ಬಸಿದು ಕೊಟ್ಟು ನನಗ್ಯಾವ ಟೈಪು ಬೇಕು ಅಂದಾಗಲೇ ತಿಳಿದದ್ದು. ಚಿಕ್ಕದಾಗಿದ್ದ ನಿನ್ನ ಒಲವನ್ನು ಆಯ್ದುಕೊಂಡೆ. ಕಿಂಗ್ ಸೈಜಿನಲ್ಲೂ ನಿನ್ನ ಒಲವು ದೊರೆಯುತ್ತದೆ ಎಂದು ಅನಂತರ ಗೆಳೆಯರಿಂದ ತಿಳೀತು.

ನಿನ್ನ ಕೋಮಲವಾದ ಫಿಲ್ಟರನ್ನು ತುಟಿಗಳಿಗೆ ಚುಂಬಿಸುತ್ತಿರುವಾಗ ನಡುಗುತ್ತಿದ್ದ ನನ್ನ ತುಟಿಗಳನ್ನು ಯಾರಾದರೂ ನೋಡುತ್ತಿದ್ದಾರಾ ಎಂದು ಆತಂಕವಾಗಿದ್ದನ್ನು ನೀನು ಗಮನಿಸಿದ್ದೆಯಾ? ಕಡ್ಡಿ ಗೀರಿ ನಿನ್ನ ಮೂತಿಗೆ ಕಿಚ್ಚು ಹೊತ್ತಿಸಿ ಅರೆಕ್ಷಣ ಮುಂದೇನು ಮಾಡಬೇಕು ಎನ್ನುವುದು ತೋಚದೆ ಹಾಗೇ ನಿಂತಿದ್ದೆ. ಯಾರಾದರೂ ನೋಡಿಬಿಟ್ಟರೆ ಎಂಬ ಆತಂಕಕ್ಕಿಂತ ನಿನ್ನೆದುರು ನಾನು ಸೋತು ಬಿಟ್ಟರೆ ಎಂಬ ಭಯ ಕಾಡುತ್ತಿತ್ತು. ನಾನು ನಾಲಾಯಕ್ಕು ಅಂತ ನೀನು ಕೈ ಬಿಟ್ಟರೆ ಎಂಬ ಅಭದ್ರತೆಯು ಕಾಡುತ್ತಿತ್ತು. ಇದೇ ದುಗುಡದಲ್ಲಿ ಉಸಿರಾಡುವುದನ್ನೂ ಮರೆತವನಂತೆ ನಿಂತಿದ್ದ ನಾನು ಒಮ್ಮೆಗೇ ಬಾಯಲ್ಲಿ ಗಾಳಿಯೆಳೆದುಕೊಂಡೆ, ಕಾದ ಸೀಸವನ್ನು ಬಾಯ ಮೂಲಕ ಎದೆಯ ಗೂಡಿಗೆ ಸುರಿದಂತಾಗಿ ಕೆಮ್ಮು ಒತ್ತರಿಸಿ ಬಂತು. ಕಣ್ಣಲ್ಲಿ ನೀರು ಚಿಮ್ಮಿ ‘ಕವ್ವು ಕವ್ವು’ ಎಂದು  ಕೆಮ್ಮುತ್ತಾ ಯಾರಿಗೂ ಕಾಣದ ಮೂಲೆಯೊಂದನ್ನು ತಲುಪಿಕೊಂಡೆ. ಎದೆಯ ಬಣವೆಗೆ ಬೆಂಕಿ ಬಿದ್ದಿದೆ ಎಂಬ ವರ್ತಮಾನವನ್ನು ಹೃದಯದ ಗಂಟೆ ಢಣ ಢಣನೆ ಬಾರಿಸುವ ಮೂಲಕ ದೇಹ ತಿಳಿಸುತ್ತಿತ್ತು. ಎದೆಯನ್ನು ಹೊಕ್ಕಿದ್ದ ನಿನ್ನ ಗಂಧ ಕೆಮ್ಮಿದಾಗೆಲ್ಲಾ ಮೂಗು, ಬಾಯೊಳಗಿಂದ ಇಷ್ಟಿಷ್ಟೇ ಹೊರ ಬರುತ್ತಿತ್ತು. ಪಕ್ಕೆಯನ್ನು ಒದಾಗಲೆಲ್ಲಾ ಬೈಕು ಕೆಮ್ಮುವಾಗ ಹೊಮ್ಮುವ ಹೊಗೆಯ ಹಾಗೆ!

ಹೇಗೋ ಸಾವರಿಸಿಕೊಂಡು ನಿನನ್ನು ಇಡಿಯಾಗಿ ಹೀರಿಕೊಳ್ಳುವಷ್ಟರಲ್ಲಿ ಟೀ ತಣ್ಣಗಾಗಿತ್ತು. ನನ್ನ ಆತಂಕ, ತಳಮಳದಲ್ಲಿ ನಿನ್ನ ಫಿಲ್ಟರು ಒದ್ದೆಯಾಗಿತ್ತು. ಟೀ ಅಂಗಡಿಯ ಮುದುಕನಿಗೆ ಇನ್ನೊಂದು ಟೀ ಬಸಿದುಕೊಡುವಂತೆ ಹೇಳಿ ಮತ್ತೆ ನಿನ್ನನ್ನು ಬರಸೆಳೆದೆ. ನಳನಳಿಸುವ ಹೊಸ ಫಿಲ್ಟರು, ಘಮಘಮಿಸುವ ಬಿಳಿಯ ನಳಿಕೆ. ಮೊದಲ ಚುಂಬನದಲ್ಲಿ ಆದ ಅವಾಂತರಗಳು ಈಗಾಗಲಿಲ್ಲ. ನಾನು ಬಲು ನಾಜೂಕಾಗಿ, ನಯವಾಗಿ ನಿನ್ನನ್ನು ಹ್ಯಾಂಡಲ್ ಮಾಡಿದೆ. ನೀನೂ ಕೂಡ ನನ್ನ ಮೊದಲ ಮಿಲನದ ಒರಟೊರಟು ಬಿಹೇವಿಯರನ್ನು ಮರೆತು ಲವಲವಿಕೆಯಿಂದ ಬೆರಳುಗಳ ಮಧ್ಯೆ ಒರಗಿಕೊಂಡಿದ್ದೆ. ತಾತ ಬಸಿದುಕೊಟ್ಟ ಟೀಯಲ್ಲಿ ಒಂದೇ ಒಂದು ಗುಟುಕು ಹೀರುವುದು,  ಎದೆಯ ಮೂಲೆ ಮೂಲೆ ತಲುಪುವಷ್ಟು ದೀರ್ಘವಾಗಿ ನಿನ್ನನ್ನು ಚುಂಬಿಸುವುದು, ಮತ್ತೆ ಒಂದು ಗುಟುಕು ಟೀ… ಮತ್ತೆ ನಿನ್ನ ಸುದೀರ್ಘ ಚುಂಬನ… ಅನಾಯಾಸವಾಗಿ ನನ್ನನ್ನು ಮೌನಿಯಾಗಿಸಿಬಿಟ್ಟಿದ್ದೆ ನೀನು. ಹೌದು ಆ ನಾಲ್ಕಾರು ನಿಮಿಷಗಳಲ್ಲಿ ನಾನು ಅಕ್ಷರಶಃ ಮೌನಿಯಾಗಿದ್ದೆ, ಬಾಯೂ ಬಂದ್, ಮನಸ್ಸೂ ಬಂದ್! ಯಾವ ಧ್ಯಾನದಲ್ಲೂ ಸಾಧ್ಯವಾಗದ ಮೌನವನ್ನು ಪರಿಚಯಿಸಿದ್ದೆ ನೀನು. ನಿನ್ನ ಬೀಳ್ಕೊಡುವಾಗ ನಾನು ಉನ್ಮತ್ತನಾದ ಗಂಧರ್ವನಾಗಿದ್ದೆ!

ಟೀ ಅಂಗಡಿಯ ತಾತನಿಗೆ ಚಿಲ್ಲರೆ ಎಣಿಸಿಕೊಟ್ಟು ವಾಪಸ್ಸು ಬರುವಾಗ ನಾನು ನಿರಾಳನಾಗಿದ್ದೆ. ಹಗಲಿಡೀ ಕಾಡುತ್ತಿದ್ದ ಪ್ರಿನ್ಸಿಪಾಲನ ಮುಖ ಮಾಯವಾಗಿತ್ತು. ನನ್ನ ಮಖೇಡಿತನ, ಕೀಳರಿಮೆ, ಆತಂಕಗಳು ಮನಸ್ಸಿನ ಅಂಗಳದಿಂದ ಜಾಗ ಖಾಲಿ ಮಾಡಿದ್ದವು. ಎಲ್ಲವೂ ಹಗುರಾದ ಅನುಭವ. ಲೋಕದಲ್ಲಿ ಯಾಕಿಷ್ಟು ದುಃಖವಿದೆ ಎನ್ನಿಸುವಂತೆ ಮಾಡಿದ್ದು ನೀನು ಕೊಟ್ಟ ಅನುಭೂತಿ. ರಾತ್ರಿ ಊಟವಾದೊಡನೆ ವಾರ್ಡನ್ನಿನ ಕಣ್ಣು ತಪ್ಪಿಸಿ ಬಂದು ನಿನ್ನ ತೆಕ್ಕೆಯನ್ನು ಸೇರಿದ್ದೆ. ನಿನ್ನದು ಅದೇ ಒಲುಮೆ, ಕೊಂಚವೂ ಊನವಿಲ್ಲದ ಪ್ರೀತಿ. ಸಿಕ್ಕು ಬೀಳಬಹುದೆಂಬ ಆತಂಕದಲ್ಲಿ ಹೊಡೆದುಕೊಳ್ಳುತ್ತಿದ್ದ ಎದೆಗೆ ನೀನೇ ಸಮಾಧಾನ ಹೇಳುತ್ತಿದ್ದ. ನಿನ್ನ ಪ್ರೀತಿಯ ಕಾವಿನಲ್ಲಿ ನನ್ನ ಮನಸ್ಸಿನ ಗಂಟುಗಳೆಲ್ಲಾ ಕರಗಿ ಕರಗಿ ನೀರಾದಂಥ ಭಾವ. ನಿನ್ನೊಂದಿಗಿನ ಸರಸವನ್ನು ಮುಗಿಸಿ ನೇರವಾಗಿ ಹಾಸ್ಟೆಲ್ಲಿಗೆ ನುಗ್ಗಿದರೆ ವಾರ್ಡನ್ನು ನಮ್ಮ ಗುಟ್ಟನ್ನು ತಿಳಿದುಬಿಡಬಹುದು ಎನಿಸಿ ಬೇರೆಲ್ಲಾ ಪ್ರೇಮಿಗಳು ಮಾಡುವಂತೆ ನಮ್ಮ ಮಿಲನದ ಸುಳಿವು ಅಳಿಸಿಹಾಕಲು ಎರಡು ಕ್ಲೊರೊಮಿಂಟ್ ಬಾಯಿಗೆ ಎಸೆದುಕೊಂಡು ನಡೆದೆ. ಮರುದಿನ ಬೆಳಿಗ್ಗೆ ನಿನ್ನನ್ನೊಮ್ಮೆ ಕಂಡು ಬೇಕಿದ್ದ ಸ್ಪೂರ್ತಿ, ಧೈರ್ಯವನ್ನೆಲ್ಲಾ ಪಡೆದುಕೊಂಡು ಪ್ರಿನ್ಸಿಪಾಲರ ಎದುರು ಹೋದೆ. ನನ್ನ ಪ್ರಾಮಾಣಿಕ ಕ್ಷಮಾಪಣೆಯನ್ನು ಮಾನ್ಯ ಮಾಡಿ ನನ್ನ ತಪ್ಪು ಮಾಫಿ ಮಾಡಿದರು. ಕೂಡಲೇ ನಿನಗೆ ಅದನ್ನು ತಿಳಿಸಿ ಅಪ್ಪಿ ಮುದ್ದಾಡ ಬೇಕು ಅನ್ನಿಸಿತ್ತು ಗೊತ್ತಾ?

(ಮುಂದಿನ ಸಂಚಿಕೆಗೆ)


Blog Stats

  • 69,005 hits
ಸೆಪ್ಟೆಂಬರ್ 2021
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 12345
6789101112
13141516171819
20212223242526
27282930