ಕಲರವ

Posts Tagged ‘ಕವನ

ಹಗಲು ಮಲಗಿತೆಂದರೆ ಸಾಕು
ಮಬ್ಬಿದಿರಿಸಿನಲಿ ಕುಣಿಯತೊಡಗುತವೆ ಕನಸುಗಳು
ಯಾರ ಒತ್ತಾಯಕ್ಕೊ ಸಿಕ್ಕು
ಅವಳೆಂದುಕೊಂಡು ನೀಡಿದ ಅಂತರಂಗದ ಒಳಗೆ..
ಆಚಮನಕ್ಕೆ ತೆಗೆದಿರಿಸಿದ ಉದಕ
ಅಂಗೈಗೆ ಜಾರಿದೊಡೆ ಆವಿಯಾದುದಕೆ ಆಶ್ಚರ್ಯವಿಲ್ಲ
ನಾನು ಮಾತ್ರ ಕಾಣಬಲ್ಲೆ ವಡಬಾನಲ
ಅವಳೆಂದು ಕೊಂಡು ನೀಡಿದ ಅಂತರಂಗದ ಒಳಗೆ..
ಬದುಕು ಹಸನಾಗುವ ಬಯಕೆಗಳೆಲ್ಲ
ಆಣೆಗಳೊಡಗೂಡಿ ಭರವಸೆಗಳ ಜೋಡಿ ಮೆರೆದಿದ್ದವು
ಇಂದಿಗೂ ಒಬ್ಬಂಟಿಯಾಗಿ ಚರಿಸುತಿವೆ
ಅವಳೆಂದುಕೊಂಡು ನೀಡಿದ ಅಂತರಂಗದ ಒಳಗೆ..
ಸುಧೆ ಸೂಸುವ ಹೂದೋಟದಲಿ
ಹಾಲಾಹಲವನೆರೆದು ಹಣ್ಣು ನೀಡೆಂದು ಹೇಳಬಹುದೆ?
ಒಲವೆಲ್ಲ ಉಡುಗಿ ಹೋದ ಮೇಲೆ ಉಳಿಯಿತೇನು..?
ಅವಳೆಂದು ನೀಡಿದ ಅಂತರಂಗದ ಒಳಗೆ…

-ಸಚಿನ್ ಕುಮಾರ ಬಿ.ಹಿರೇಮಠ

ಟ್ಯಾಗ್ ಗಳು: ,

ಬೈಕಿಗೆ
ನೂರು ಅಶ್ವದ
ಉನ್ಮಾದ
ಒಳಗಿನ
ಚೈತನ್ಯಕ್ಕೆ
ದಿವ್ಯ
ಆಲಸ್ಯ

ಗೋಡೆಯ
ಗಡಿಯಾರದಲ್ಲಿ
ಮುಳ್ಳುಗಳ ದುಡಿಮೆ
ಕೈಗಳಿಗೆ
ಸಂಕೋಲೆಯಲ್ಲದ
ಬೇಡಿ

ದಿನ ಪತ್ರಿಕೆಗೆ
ಎಲ್ಲಾ ಗೊತ್ತೆಂಬ
ಉಡಾಫೆ
ಕಣ್ಣುಗಳಿಗೆ
ರೆಪ್ಪೆ ಬಡಿಯಲೂ
ನಿರಾಸಕ್ತಿ

ಅಡುಗೆ ಮನೆಗೆ
ಬೆಲೆವೆಣ್ಣಿನ
ವಯ್ಯಾರ
ಹೊಟ್ಟೆಗೆ
ಸದ್ದು ಮಾಡದ
ಎಚ್ಚರ

ಕಿಟಾರೆನ್ನುವ
ಬೀದಿಯಲ್ಲಿನ
ಆಟೋ
ಸುಮ್ಮನಿರು
ಮಗು ಮಲಗಿದೆ
ಎಂಬ ಉತ್ತರ

ಕಾಗದದ
ಎದೆಯಲ್ಲಿ
ಅಕ್ಷರದ ಸಂತೆ
ಕವಿಗೆ
ಏನೆಂದು
ಹೆಸರಿಡುವ ಚಿಂತೆ.

– ‘ಅಂತರ್ಮುಖಿ’

ದಡವಿನ್ನೂ ಕಂಡಿಲ್ಲ
ದಿಗಿಲು ನನಗೆ
ದೋಣಿ
ಶುದ್ಧ ನಿರ್ಲಿಪ್ತ

ಬಿರುಸು ಗಾಳಿಗೆ
ನೂರು ದಿಕ್ಕುಗಳ
ಗಮ್ಯ
ದೋಣಿ ನಿರ್ಲಿಪ್ತ

ಅಡಿಯ ಅಲೆಗಳಿಗೆ
ಅರ್ಥವಾಗದ
ಮಮತೆ
ದೋಣಿ ನಿರ್ಲಿಪ್ತ

ಭೋರ್ಗರೆವ ಮಳೆಗೆ
ದಾರಿ ತಪ್ಪಿಸುವ
ತವಕ
ದೋಣಿ ನಿರ್ಲಿಪ್ತ

ದಡ ಕಾಣಿಸುವ
ಕಂದೀಲ
ಕರುಣೆಗೆ
ದೋಣಿ ನಿರ್ಲಿಪ್ತ

ಹಾದ ಹಡಗಿಗೆ
ಕೆರಳಿಸುವ
ಗತ್ತು
ದೋಣಿ ನಿರ್ಲಿಪ್ತ

ಒಬ್ಬಂಟಿ ನಾವಿಕ
ಮನದಲ್ಲಿ
ಸಂಶಯ
ದೋಣಿ ನಿರ್ಲಿಪ್ತ

ನೆಟ್ಟ ಕಂಗಳಲ್ಲಿ
ಹಸಿವಿನ
ಸಂಕಟ
ದೋಣಿ ನಿರ್ಲಿಪ್ತ

ಕ್ರೂರ ರಾತ್ರಿಗೆ
ಕೊಲೆಗಾರನ
ಉನ್ಮಾದ
ದೋಣಿ ನಿರ್ಲಿಪ್ತ.

– ಅಂತರ್ಮುಖಿ


Blog Stats

  • 68,988 hits
ಸೆಪ್ಟೆಂಬರ್ 2021
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 12345
6789101112
13141516171819
20212223242526
27282930  

Top Clicks

  • ಯಾವುದೂ ಇಲ್ಲ