ಕಲರವ

Posts Tagged ‘ಐಐಟಿ

-ಆಕಾಂಕ್ಷ . ಬಿ

‘ಗಣಿತವೆಂಬುದು ಮೊದಲೇ ಉಕ್ಕಿನ ಕಡಲೆ ಇದ್ದ ಹಾಗೆ. ಅದರಲ್ಲೂ ಹುಡುಗಿಯರಿಗೆ ಗಣಿತ, ಲೆಕ್ಕ ಅಂದರೆ ಅಷ್ಟಕಷ್ಟೆ. ಅವರೆಷ್ಟೇ ಕಷ್ಟ ಪಟ್ಟರೂ ಲೆಕ್ಕ ಅವರಿಗೆ ದಕ್ಕದ ವಿಷಯ. ಇದಕ್ಕೆ ಬಯಾಲಜಿಕಲ್ ಕಾರಣಗಳು ಇವೆ. ಹುಡುಗಿಯರ ಮೆದುಳಿಗೇ ಗಣಿತದ ಬಗ್ಗೆ ಮುನಿಸಿದೆ. ಅವರದು ಭಾವ ಪ್ರಧಾನವಾದ ವ್ಯಕ್ತಿತ್ವ.’ ಎಂಬ ವಾದ ತುಂಬಾ ಹಿಂದಿನಿಂದಲೂ ಚಾಲ್ತಿಯಲ್ಲಿದೆ.

ಎಸ್ಸೆಸ್ಸೆಲ್ಸಿ, ಪಿಯುಸಿಯ ಪಬ್ಲಿಕ್ ಪರೀಕ್ಷೆಗಳಲ್ಲಿ ವರ್ಷ ವರ್ಷವೂ ಹುಡುಗಿಯರೇ ಮೇಲುಗೈ ಸಾಧಿಸಿ ವಿಜಯದ ನಗೆ ಬೀರುತ್ತಾ ಪತ್ರಿಕೆಗಳ ಮುಖಪುಟಗಳನ್ನು ಆಕ್ರಮಿಸಿಕೊಳ್ಳುತ್ತಿರುವರಾದರೂ ಹುಡುಗಿಯರಿಗಿಂತ ಹುಡುಗರೇ ಲಕ್ಕದಲ್ಲಿ ಮುಂದು ಎಂದು ನಂಬಲಾಗಿತ್ತು. ಹುಡುಗರಿಗೆ ಗಣಿತವೆಂಬ ಉಕ್ಕಿನ ಕಡಲೆಯನ್ನು ಅರಗಿಸಿಕೊಳ್ಳಲು ಮೆದುಳಿನಲ್ಲಿ ನಿಸರ್ಗದತ್ತವಾದ ಕಠಿಣ ‘ಹಲ್ಲು’ಗಳಿವೆ ಎಂದು ಭಾವಿಸಲಾಗಿತ್ತು. ವಿವರಣೆಯನ್ನು ಬೇಡುವ ಪ್ರಶ್ನೆಗಳಿರುವ ಪರೀಕ್ಷೆಗಳಲ್ಲೇನೋ ಹುಡುಗಿಯರು ಹಾಗೂ ಹೀಗೂ ಮೇಲುಗೈ ಸಾಧಿಸಿಬಿಡುತ್ತಾರೆ ಆದರೆ ಅವರ ನಿಜವಾದ ಬಂಡವಾಳ ಬಯಲಾಗುವುದು ವಸ್ತುನಿಷ್ಠ ಪ್ರಶ್ನೆಗಳನ್ನು ಹೊಂದಿರುವ ಸಿಇಟಿ, ಐಐಟಿ ಪ್ರವೇಶ ಪರೀಕ್ಷೆಗಳಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ. ಪ್ರತಿ ವರ್ಷ ಸಿಇಟಿಯಲ್ಲಿ ಹುಡುಗರು ಹುಡುಗಿಯರಿಗಿಂತ ಹೆಚ್ಚಿನ ಮಟ್ಟದ ಸಾಧನೆ ಮಾಡಿರುತ್ತಾರೆ. ಐಐಟಿಗಳಿಗೆ ಪ್ರವೇಶ ಗಿಟ್ಟಿಸಿಕೊಳ್ಳುವ ವಿದ್ಯಾರ್ಥಿಗಳಲ್ಲಿ ಹುಡುಗಿಯರನ್ನು ಮೈಕ್ರೋಸ್ಕೋಪು ಹಿಡಿದು ಹುಡುಕಬೇಕು ಎಂದೆಲ್ಲಾ ಮನೋವಿಜ್ಞಾನ, ಬಯಾಲಜಿ ಹಾಗೂ ಕೆಲವು ಅಂಕಿಂಶಗಳನ್ನು ಬಳಸಿಕೊಂಡು ತಾರ್ಕಿಕವಾಗಿ ವಾದ ಮಾಡುವವರಿದ್ದರು.

ಆದರೆ ಈಗ ಈ ವಾದಗಳು ಪೊಳ್ಳು ಎಂದು ವೈಜ್ಞಾನಿಕ ಸಂಶೋಧನೆಯೊಂದರಿಂದ ತಿಳಿದುಬಂದಿದೆ. ಗಣಿತವನ್ನು ಅರಗಿಸಿಕೊಳ್ಳುವುದರಲ್ಲಿ ಹುಡುಗಿಯರು ಹುಡುಗರಿಗಿಂತ ಯಾವ ರೀತಿಯಲ್ಲೂ ಕಡಿಮೆಯಿಲ್ಲ ಎಂದು ವಿಸ್ಕೋನ್ಸಿನ್ ಮ್ಯಾಡಿಸನ್ ವಿಶ್ವವಿದ್ಯಾಲಯ ಜಾನೆಟ್ ಹೈದ್ ತಮ್ಮ ಸಂಶೋಧನೆಯಿಂದ ಕಂಡುಕೊಂಡಿದ್ದಾರೆ. ವಿಶ್ವದ ಎಲ್ಲಾ ವಿಶ್ವ ವಿದ್ಯಾಲಯಗಳಲ್ಲಿ ಗಣಿತದಲ್ಲಿ ಪದವಿಯನ್ನು ಪಡೆಯುತ್ತಿರುವವರ ಪ್ರಮಾಣ ಶೇ ನಲವತ್ತೆಂಟು ಮುಟ್ಟಿದ್ದು ಹುಡುಗಿಯರಿಗೆ ಗಣಿತ ಇಷ್ಟವಾಗದು ಎಂಬ ಅಭುಪ್ರಾಯ ಕಪೋಲಕಲ್ಪಿತವಾದದ್ದು ಎಂದು ವಾದಿಸಿದ್ದಾರೆ. ಅಮೇರಿಕಾದ ಸುಮಾರು ಏಳು ಮಿಲಿಯನ್ ಶಾಲಾ ಮಕ್ಕಳ ಪರೀಕ್ಷಾ ಫಲಿತಾಂಶಗಳನ್ನು ಅನಲೈಸ್ ಮಾಡಿ ಈ ತೀರ್ಮಾನಕ್ಕೆ ಹೈದ್ ಅವರು ಬಂದಿದ್ದಾರೆ. ಗಣಿತದ ಕಲಿಕೆಯಲ್ಲಿ ಲಿಂಗಬೇಧ ಯಾವ ವ್ಯತ್ಯಾಸವನ್ನೂ ಮಾಡುವುದಿಲ್ಲ. ನಿಸರ್ಗ ಮೆದುಳಿನ ವಿನ್ಯಾಸದ ವಿಷಯದಲ್ಲಿ ಯಾವ ತಾರತಮ್ಯವನ್ನೂ ಮಾಡಿಲ್ಲ ಎಂಬುದು ಅವರ ಸ್ಪಷ್ಟ ಅಭಿಮತ.

ಭಾರತದಲ್ಲಿ ಹುಡುಗಿಯರಿಗೆ ಗಣಿತ ಕಷ್ಟವೆಂದೋ, ಅವರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹುಡುಗರಿಗಿಂತ ಹಿಂದೆ ಎಂದೋ ವಾದ ಮಾಡುವವರು ಮಂಡಿಸುವ ಅಂಕಿ ಅಂಶಗಳು ಬಹುಪಾಲು ಸತ್ಯವೇ, ಆದರೆ ಅದಕ್ಕೆ ಕಾರಣವಾದ ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿಗಳನ್ನು ಗುರುತಿಸಬೇಕು. ಹೆಣ್ಣಿಗಿರುವ ಸಾಮಾಜಿಕ ಕಟ್ಟುಪಾಡು, ಆರ್ಥಿಕ ಗುಲಾಮಗಿರಿ, ನೈತಿಕತೆಯ ಬಂಧನಗಳನ್ನೆಲ್ಲಾ ನಾವು ಗಮನಕ್ಕೆ ತೆಗೆದುಕೊಳ್ಳದೆ ಹೆಣ್ಣಿನ ಸಾಮರ್ಥ್ಯವನ್ನು ನಿರ್ಧರಿಸುವುದು ತಪ್ಪಾಗುತ್ತದೆ ಎಂಬುದು ಈ ಸಂಶೋಧನೆಯಿಂದ ತಿಳಿದುಬಂದಿದೆ. ಆಟೋ ಡ್ರೈವರ್ ಇಂದ ಹಿಡಿದು ವಿಮಾನದ ಪೈಲೆಟ್ ಸ್ಥಾನದವರೆಗೆ ಎಲ್ಲವನ್ನೂ ತಾನು ನಿಭಾಯಿಸಬಲ್ಲೆ ಎಂಬುದನ್ನು ಸಾಬೀತು ಮಾಡಿ ತೋರಿಸುವ ಹೆಣ್ಣಿನ ಬಗ್ಗೆ ನಮ್ಮ ಸಮಾಜದಲ್ಲಿರುವ ಇಂತಹ ಅಸಂಖ್ಯಾತ ನಂಬಿಕೆಗಳನ್ನು ಕಿತ್ತುಹಾಕಲು ಇನ್ನೆಷ್ಟು ಸಂಶೋಧನೆಗಳು ನಡೆಯಬೇಕೋ!


Blog Stats

  • 69,009 hits
ಸೆಪ್ಟೆಂಬರ್ 2021
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 12345
6789101112
13141516171819
20212223242526
27282930