ಕಲರವ

Posts Tagged ‘ಅಹಿಂಸೆ

ಕಳೆದ ಆಗಸ್ಟ್ ಹದಿನೈದರಂದು ನಾವು ಭಾರತದ ಅರವತ್ತೊಂದನೆಯ ಸ್ವಾತಂತ್ರ್ಯೊತ್ಸವವನ್ನು ಆಚರಿಸಿದೆವು. ಇದೇ ತಿಂಗಳು ಅರವತ್ತೊಂದು ವರ್ಷಗಳ ಹಿಂದೆ ನಮ್ಮ ದೇಶ ಬ್ರಿಟೀಷ್ ರಾಜರ ಅಧೀನದಲ್ಲಿತ್ತು. ಕೇವಲ ಅರವತ್ತು ಎಪ್ಪತ್ತು ವರ್ಷಗಳ ಹಿಂದೆ ನಾವು ನಮ್ಮದೇ ನಾಡಿನಲ್ಲಿ ಪರದೇಶಿಗಳಂತೆ ಬದುಕುತ್ತಿದ್ದೆವು. ನಮ್ಮದೇ ಮನೆಯಲ್ಲಿ ಅಪರಿಚಿತರ ಹಾಗೆ ಅಸಹಾಯಕರ ಹಾಗೆ ದಿನದೂಡುತ್ತಿದ್ದೆವು. ಆದರೆ ಕಡೆಗೂ ನಮಗೆ ನಾವು ಬದುಕಬೇಕಾದ್ದು ಹೀಗಲ್ಲ ಎಂದು ಮನದಟ್ಟಾಯಿತು. ನಮ್ಮ ಸುತ್ತಲೂ ಕಟ್ಟಿದ್ದ ಸೆರೆಮನೆಯ ಸಲಾಕೆಗಳನ್ನು ಮುರಿಯುವಷ್ಟರ ಮಟ್ಟಿಗೆ ನಮ್ಮೊಳಗೆ ಒಂದು ಹಂಬಲ ಹುಟ್ಟಿಕೊಂಡಿತು. ದೇಶದ ಕೋಟಿ ಕೋಟಿ ಹೃದಯಗಳು ಆಗ ತುಡಿಯುತ್ತಿದ್ದದ್ದು ಒಂದೇ ಒಂದು ಗುರಿಯನ್ನು ಮುಟ್ಟಲು. ಅಂಹಿಸಾವಾದಿಗಳು, ಕ್ರಾಂತಿಕಾರಿಗಳು, ಹಿರಿಯರು, ಯುವಕರು, ಹೆಂಗಸರು, ಮಕ್ಕಳು, ಧನಿಕರು, ಬಡವರು, ಕಾರ್ಮಿಕರು, ಸಾಹುಕಾರರು ಎಲ್ಲರಿಗೂ ಬೇಕಾಗಿದ್ದು ಅದೊಂದೇ. ಅದು ಸ್ವಾತಂತ್ರ್ಯ!

ಸ್ವಾತಂತ್ರ್ಯದ ಆಯಾಮಗಳು

ಅನಾದಿ ಕಾಲದಿಂದಲೂ ನಮ್ಮ ದೇಶ ಸ್ವಾತಂತ್ರ್ಯದ ಸವಿಯನ್ನು ಉಣ್ಣುತ್ತಲೇ ಬೆಳೆದದ್ದು. ನಮ್ಮ ನಾಡು ಮನುಷ್ಯನ ಸಮಗ್ರ ಸ್ವಾತಂತ್ರ್ಯದಲ್ಲಿ ಅಪಾರವಾದ ನಂಬಿಕೆಯನ್ನು ಇಟ್ಟುಕೊಂಡಿತ್ತು. ಪ್ರತಿಯೊಬ್ಬನೂ ಸ್ವತಂತ್ರವಾಗಿ ಬದುಕಲು, ಸ್ವಾವಲಂಬಿಯಾಗಿ ಬೆಳೆಯಲು, ಎಲ್ಲಾ ಬಗೆಯ ದಾಸ್ಯಗಳಿಂದ ಮುಕ್ತವಾಗಲು ಶ್ರಮಿಸಬೇಕು ಎಂಬುದು ನಮ್ಮ ನಾಗರೀಕತೆಯ ಸಂದೇಶವಾಗಿತ್ತು. ರಾಜಕೀಯವಾಗಿ ಯಾರ ಹಂಗಿಗೂ ಒಳಗಾಗದಿರುವುದೇ ಸ್ವಾತಂತ್ರ್ಯವಲ್ಲ ಎಂಬುದು ನಮ್ಮ ಹಿರಿಯರಿಗೆ ಚೆನ್ನಾಗಿ ತಿಳಿದಿತ್ತು. ದಾಸ್ಯವೆಂಬುದು ಯಾವ ರೀತಿಯಲ್ಲಾದರೂ ನಮ್ಮನ್ನು ಹುರಿದು ಮುಕ್ಕಬಲ್ಲದು ಎಂಬುದು ಅವರಿಗೆ ತಿಳಿದಿತ್ತು. ದಾಸ್ಯದಲ್ಲಿರುವ ಮನುಷ್ಯನಿಗೆ ತನ್ನ ಶಕ್ತಿಯ ಬಗ್ಗೆ ತನ್ನಲ್ಲೇ ನಂಬಿಕೆ ಕಳೆದುಹೋಗುತ್ತದೆ, ಆಗ ಆತ ಮೃಗಗಳಿಗಿಂತಲೂ ಕೀಳಾಗಿಬಿಡುತ್ತಾನೆ ಎಂಬ ಅರಿವು ಅವರಿಗಿತ್ತು. ಹೀಗಾಗಿ ಹಿಂದೆಲ್ಲಾ ಮನುಷ್ಯ ದೈಹಿಕವಾಗಿ ಯಾವ ರೋಗ, ರುಜಿನಗಳಿಗೆ ದಾಸನಾಗದಂತೆ, ತನ್ನ ಮನಸ್ಸನ್ನು ಯಾವ ಸಂಗತಿಗಳಿಗೂ ಒತ್ತೆಯಾಳಾಗಿ ಇರಿಸದಂತೆ, ತನ್ನ ಇಚ್ಛಾಶಕ್ತಿ, ಸೃಜನಶೀಲತೆ ಯಾವ ಬಂಧನಗಳಿಗೂ ಒಳಗಾಗದಂತೆ, ಕಡೆಗೆ ತನ್ನ ಆತ್ಮ ಯಾವ ಹಂಗೂ ಇಲ್ಲದ ಸ್ಥಿತಿಯನ್ನು ತಲುಪುವುದಕ್ಕೆ ಏನೇನು ಮಾಡಬೇಕು ಎಂಬ ಬಗ್ಗೆ ವಿಪರೀತ ಕಾಳಜಿಯನ್ನು ಹೊಂದಲಾಗುತ್ತಿತ್ತು. ನಮ್ಮ ನಾಡಿನ ಅರಿವಿನ ಖನಿಗಳಾದ ಆಯುರ್ವೇದ, ವೇದ, ಉಪನಿಷತ್ತುಗಳು ಮನುಷ್ಯ ಎಲ್ಲಾ ಬಗೆಯ ದಾಸ್ಯದಿಂದ ಬಿಡುಗಡೆಗೊಂಡು ಸ್ವಚ್ಛಂದವಾದ ಸ್ವತಂತ್ರ ಸ್ಥಿತಿಯನ್ನು ತಲುಪಿಕೊಳ್ಳಲು ನೆರವಾಗುವಂಥವು.

ಹೀಗಾಗಿ ಸ್ವಾತಂತ್ರ್ಯದ ಬಗ್ಗೆ ಚರ್ಚಿಸುವಾಗ ನಾವು ಅದರ ಈ ಎಲ್ಲಾ ಆಯಾಮಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾದ್ದು ಆವಶ್ಯಕ. ಸ್ವಾತಂತ್ರ್ಯದ ಸಮರ್ಥವಾದ ವ್ಯಾಖ್ಯೆ ಏನು ಎಂದು ನಿರ್ಧರಿಸುವುದು ಸುಲಭದ ವಿಷಯವಲ್ಲ. ಯಾವ ಹಂಗಿಗೂ ಒಳಗಾಗದಿರುವುದು ಸ್ವಾತಂತ್ರ್ಯ ಎಂದು ಸುಲಭವಾಗಿ ಹೇಳಿಬಿಡಬಹುದು. ಆದರೆ ಹಂಗು, ಅವಲಂಬನೆ ಇಲ್ಲದ ಸ್ಥಿತಿಯಾದರೂ ಯಾವುದು? ಹುಟ್ಟಿದಾಗಿನಿಂದ ಉಸಿರು ನಿಲ್ಲುವವರೆಗೂ ನಾವು ಹಲವಾರು ಆವಶ್ಯಕತೆಗಳಿಗಾಗಿ ಪ್ರಕೃತಿಯ ಮೇಲೆ, ನಮ್ಮ ಪರಿಸರದ ಮೇಲೆ, ನಮ್ಮವರ ಮೇಲೆ ಅವಲಂಬಿಸಿಯೇ ಇರುತ್ತೇವೆ. ಆಹಾರಕ್ಕಾಗಿ ನಾವು ಸಸ್ಯಗಳು, ಮಾಂಸವನ್ನು ಕೊಡುವ ಪ್ರಾಣಿಗಳಿಂದ ಹಿಡಿದು ಸಮುದ್ರದಲ್ಲಿ ಬೆಳೆಯುವ ಪಾಚಿಗಳವರೆಗೆ ಅವಲಂಬಿಸಿದ್ದೇವೆ, ನಾಗರೀಕರಾಗುತ್ತಾ ಈ ಅವಲಂಬನೆಯ ಪಟ್ಟಿಗೆ ಹೊಟೇಲುಗಳನ್ನೂ, ಕಾಫಿ ಬಾರುಗಳನ್ನೂ, ದರ್ಶಿನಿ – ಮೆಸ್ಸುಗಳನ್ನೂ ಸೇರಿಸಿಕೊಳ್ಳಬಹುದು. ಕುಡಿಯುವ ನೀರಿಗಾಗಿ ನದಿ, ಸರೋವರ, ಹಳ್ಳ ಕೊಳ್ಳಗಳಿಂದ ಶುರುವಾಗಿ ಈಗೀಗ ಬಿಸ್ಲೇರಿ ಬಾಟಲುಗಳವರೆಗೆ ನಮ್ಮ ಅವಲಂಬನೆ ಚಾಚಿಕೊಂಡಿದೆ. ತಲೆಯ ಮೇಲಿನ ಸೂರಿಗಾಗಿ, ಮೈಮೇಲಿನ ಬಟ್ಟೆಗಾಗಿ ಹೀಗೆ ನಮ್ಮ ಪ್ರತಿಯೊಂದು ಆವಶ್ಯಕತೆಗಳಿಗಾಗಿ ನಾವು ಹೆತ್ತವರ ಮೇಲೆ, ಪೋಷಕರ ಮೇಲೆ, ನಮ್ಮ ಸರಕಾರಗಳ ಮೇಲೆ ಅವಲಂಬಿತರೇ.

ಇವೆಲ್ಲಾ ಆವಶ್ಯಕತೆಗಳನ್ನು ತುಂಬಿಸಿಕೊಡುವ ‘ದುಡ್ಡು’ ಒಂದಿದ್ದರೆ ನಾವು ಸ್ವತಂತ್ರರೇ? ದುಡ್ಡು ಎಂಬುದೊಂದಿದ್ದರೆ ನಾವು ಸ್ವತಂತ್ರರು ಎಂಬ ಭಾವನೆ ತುಂಬಾ ಹಿಂದಿನಿಂದಲೇ ಗಟ್ಟಿಯಾಗಿದೆ. ತನ್ನ ಖರ್ಚನ್ನು ತಾನು ನಿಭಾಯಿಸಿಕೊಳ್ಳುವಷ್ಟು ಸಂಪಾದನೆ ಮಾಡಿಕೊಳ್ಳುವವನು ಸ್ವತಂತ್ರ, ತನ್ನ ಕಾಲ ಮೇಲೆ ತಾನು ನಿಂತಿದ್ದಾನೆ, ಆತ ಸ್ವಾಭಿಮಾನಿ ಎಂದೆಲ್ಲಾ ಹೇಳುವುದನ್ನು ಕೇಳಿರುತ್ತೇವೆ. ಹೀಗಾಗಿ ದುಡ್ಡು ನಮ್ಮೆಲ್ಲಾ ಬಂಧನಗಳನ್ನು, ನಮ್ಮ ದಾಸ್ಯವನ್ನು ತೊಡೆದು ಹಾಕುವ, ನಮಗೆ ಸ್ವಾತಂತ್ರ್ಯವನ್ನು ಕರುಣಿಸುವ ಪ್ರವಾದಿ ಎಂದು ಜನರು ನಂಬಿದ್ದಾರೆ. ದುಡ್ಡೊಂದಿದ್ದರೆ ನಾವು ಯಾರ ಮೇಲೂ ಅವಲಂಬಿತರಲ್ಲ ಎನ್ನುವುದು ಈಗಿನ ನಂಬಿಕೆ. ಆದರೆ ಈ ದುಡ್ಡು ಎಂಬ ಮಾಯಾವಿ ಎಷ್ಟು ಚಾಣಾಕ್ಷನೆಂದರೆ, ಸ್ವಾತಂತ್ರ್ಯದ ಮಾಯಾಮೃಗವನ್ನು ತೋರಿಸುತ್ತಾ ನಮ್ಮ ಸಣ್ಣ ಸಣ್ಣ ಸ್ವಾತಂತ್ರ್ಯಗಳನ್ನು, ಸ್ವಾಭಿಮಾನಗಳನ್ನು ಕಸಿದುಕೊಂಡು ನಮ್ಮನ್ನು ತನ್ನ ದಾಸರನ್ನಾಗಿಸಿಕೊಂಡಿದೆ. ಯೋಚಿಸಿ, ಹಿಂದೆಲ್ಲಾ ತನ್ನ ಆಹಾರವನ್ನು ತಾನು ಸಂಪಾದಿಸಬಲ್ಲ, ತನ್ನ ಅಡುಗೆಯನ್ನು ತಾನು ಬೇಯಿಸಿಕೊಳ್ಳಬಲ್ಲ, ತನ್ನ ಬಟ್ಟೆಯನ್ನು ತಾನು ತಯಾರು ಮಾಡಿಕೊಳ್ಳಬಲ್ಲ, ತನ್ನ ಗೂಡನ್ನು ತಾನು ಕಟ್ಟಿಕೊಳ್ಳಬಲ್ಲ, ತನ್ನ ರಕ್ಷಣೆಯನ್ನು ತಾನು ಮಾಡಿಕೊಳ್ಳ, ತನ್ನ ಮನರಂಜನೆಯ ಹಾದಿಯನ್ನು ತಾನೇ ಸೃಷ್ಟಿಸಿಕೊಳ್ಳ ಬಲ್ಲವನಾಗಿದ್ದ ಮನುಷ್ಯ ಈಗ ಇವೆಲ್ಲವುಗಳಿಗೂ ಹಣವನ್ನು ಆಶ್ರಯಿಸಿದ್ದಾನೆ. ತನಗೆ ಆಹಾರ ಬೆಳೆಯುವುದಕ್ಕಾಗಿ, ಅದನ್ನು ತಂದು ತನಗೆ ವಿತರಿಸುವುದಕ್ಕಾಗಿ ಆತ ಹಣವನ್ನು ತೆರಬೇಕು. ತನಗೆ ಅಡುಗೆಯನ್ನು ಬೇಯಿಸಿ ಹಾಕುವುದಕ್ಕಾಗಿ ಸಿಲಿಂಡರ್ ತಂದುಕೊಡುವವನಿಂದ ಹಿಡಿದು, ಪಾತ್ರೆ ತೊಳೆದು ಕೊಡುವ ಕೆಲಸದಾಕೆಯವರೆಗೆ ಎಲ್ಲರಿಗೂ ಹಣದ ಮುಖ ತೋರಿಸಬೇಕು. ತನ್ನ ಮೈಮುಚ್ಚಲು ದರ್ಜಿಗೆ ದುಂಬಾಲು ಬೀಳಬೇಕು. ತನ್ನ ರಕ್ಷಣೆಗಾಗಿ ಸರಕಾರಕ್ಕೆ ಕಪ್ಪ ಕಾಣಿಕೆ ಕೊಡಬೇಕು. ತನ್ನ ಮನರಂಜನೆಗಾಗಿ ಸಿನೆಮಾ, ನಾಟಕ, ದಿನ ಪತ್ರಿಕೆ, ಅಂತರ್ಜಾಲ ಹೀಗೆ ಎಲ್ಲಾ ಕಡೆ ಕಾಸೆಂಬ ಬಾಸನ್ನು ಕರೆದೊಯ್ಯಬೇಕು. ಹೇಳಿ ದುಡ್ಡು ನಮ್ಮನ್ನು ಎಷ್ಟು ಸ್ವತಂತ್ರರನ್ನಾಗಿಸಿದೆ?

‘ತಾನು ಸರ್ವಸ್ವತಂತ್ರನು’ ಎಂದು ಹೇಳಲು ಯಾರಿಂದಲೂ ಸಾಧ್ಯವಿಲ್ಲ. ಹೀಗಾಗಿ ಸ್ವಾತಂತ್ರ್ಯ ಎಂಬ ಪದವೇ ಅತ್ಯಂತ ಗೊಜಲು ಗೊಜಲಾಗಿ, ನಿಷ್ಕರ್ಷೆಗೆ ನಿಲುಕದ್ದಾಗಿ ಕಾಣುತ್ತದೆ.

ಪಂಜರದೊಳಗೆ ದೇಶ

೧೪೯೮ರಲ್ಲಿ ದಕ್ಷಿಣ ಭಾರತದ ಪಶ್ಚಿಮ ಕರಾವಳಿಯ ಕಿನಾರೆಯ ಬಳಿಗೆ ಹಡಗೊಂದು ಬಂದು ತಲುಪಿತು. ಅದರಿಂದ ಕೆಳಕ್ಕಿಳಿದವನು ಪೋರ್ಚುಗಲ್ ನಾವಿಕ ವಾಸ್ಕೋ ಡ ಗಾಮ. ಆತ ಅತ್ಯಂತ ಲಾಭದಾಯಕವಾದ ಸಾಂಬಾರು ಪದಾರ್ಥದ ವ್ಯಾಪಾರಕ್ಕಾಗಿ ಭಾರತವನ್ನು ಹುಡುಕಿಕೊಂಡು ಅಲೆದಿದ್ದ. ಅಂದು ಆತ ಸರಿಯಾದ ಜಾಗವನ್ನು ತಲುಪಿಕೊಂಡಿದ್ದ. ಭಾರತದಲ್ಲಿ ದೊರೆಯುತ್ತಿದ್ದ ಸಾಂಬಾರು ಪದಾರ್ಥಗಳಿಗೆ ಯುರೋಪಿನಲ್ಲಿ ಅಗಾಧವಾದ ಬೇಡಿಕೆಯಿತ್ತು. ಹೀಗಾಗಿ ಯುರೋಪಿನಲ್ಲಿ ಡಕೇತಿ, ಕಳ್ಳತನ ಮಾಡಿಕೊಂಡಿದ್ದ ಪಾತಕಿಗಳೆಲ್ಲಾ ಹಡಗನ್ನು ಏರಿಕೊಂಡು ಲಕ್ಷಾಂತರ ರೂಪಾಯಿ ಲಾಭ ಗಳಿಸುವ ಆಸೆಯಿಂದ ಭಾರತವನ್ನು ಹುಡುಕಿಕೊಂಡು ಹೊರಟಿದ್ದರು. ಹೀಗೆ ಹೊರಟ ಅಸಂಖ್ಯಾತ ನಾವಿಕರಲ್ಲಿ ಭಾರತವನ್ನು ಮೊದಲು ತಲುಪಿದವ ವಾಸ್ಕೋ ಡ ಗಾಮ. ಈತನ ನಂತರ ಫ್ರೆಂಚರು ಭಾರತದೊಳಕ್ಕೆ ಕಾಲಿಟ್ಟರು, ಅನಂತರ ಡಚ್ಚರು ಬಂದರು, ಕೊನೆಗೆ ಇಂಗ್ಲೀಷರು ಬಂದರು.

ಮೊದಮೊದಲು ಸ್ಥಳಿಯ ರಾಜರ ಮರ್ಜಿಯನ್ನು ಕಾದು ತಮ್ಮ ವ್ಯಾಪಾರವನ್ನು ನಿರ್ವಹಿಸಿಕೊಂಡು ಹೋಗುತ್ತಿದ್ದ ಯುರೋಪಿಯನ್ನರಿಗೆ ಲಾಭದ ಆಸೆ ಅತಿಯಾಗಿ, ತಮ್ಮ ವ್ಯಾಪಾರದ ಏಕಸ್ವಾಮ್ಯತೆಗಾಗಿ ಆಡಳಿತವನ್ನು ತಮ್ಮ ಕೈಗೆ ತೆಗೆದುಕೊಳ್ಳುವ ಹಂಬಲ ಹುಟ್ಟಿತು. ೧೭೫೭ರಲ್ಲಿ ಇಂಗ್ಲೀಷ್ ಸೈನ್ಯಾಧಿಕಾರಿ ರಾಬರ್ಟ್ ಕ್ಲೈವನ ನಾಯಕತ್ವದಲ್ಲಿ ಪ್ಲಾಸೀ ಕದನದಲ್ಲಿ ಬಂಗಾಳದ ನವಾಬನನ್ನು ಉರುಳಿಸಿ ತಮ್ಮ ಆಜ್ಞೆಯನ್ನು ಪಾಲಿಸುವ ಕೈಗೊಂಬೆಯಾದ ಮತ್ತೊಬ್ಬ ನವಾಬನನ್ನು ಪಟ್ಟಕ್ಕೇರಿಸಲಾಯ್ತು. ಈಸ್ಟ್ ಇಂಡಿಯಾ ಕಂಪೆನಿ ಕಣ್ತೆರೆಯಿತು. ೧೭೬೫ರಲ್ಲಿ ಬುಕ್ಸರ್ ಕದನವನ್ನು ಜಯಿಸಿ ಬಂಗಾಲ, ಒರಿಸ್ಸಾ, ಬಿಹಾರದ ಆಡಳಿತದ ಹಕ್ಕನ್ನು ಪಡೆದುಕೊಂಡ ಈಸ್ಟ್ ಇಂಡಿಯಾ ಕಂಪೆನಿ ೧೮೩೯ರಲ್ಲಿ ಪಂಜಾಬದ ರಾಜ ರಂಜಿತ್ ಸಿಂಗ್ ಸತ್ತ ನಂತರ ಪಂಜಾಬನ್ನು ಕಬಳಿಸಿದರು. ಇದಕ್ಕಾಗಿ ಅವರು ಎರಡು ಆಂಗ್ಲೋ ಸಿಖ್ ಕದನಗಳಲ್ಲಿ ಹೋರಾಡಬೇಕಾಯ್ತು. ಹೀಗೆ ಭಾರತದಲ್ಲಿನ ವ್ಯಾಪಾರದಲ್ಲಿ ಸರ್ವಸ್ವತಂತ್ರವನ್ನು ಪಡೆಯುವುದಕ್ಕಾಗಿ, ಏಕಸ್ವಾಮ್ಯವನ್ನು ಸಾಧಿಸುವುದಕ್ಕಾಗಿ ಈಸ್ಟ್ ಇಂಡಿಯಾ ಕಂಪೆನಿ ಒಂದೊಂದೇ ಪ್ರದೇಶವನ್ನು ಗೆಲ್ಲುತ್ತಾ ಹೋಗುತ್ತಿದ್ದರೆ ಭಾರತವೆಂಬ ನೂರಾರು ಪ್ರದೇಶಗಳ ಸಮೂಹ ಹಂತ ಹಂತವಾಗಿ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾ ಹೋಯಿತು. ಕಡೆಗೊಂದು ದಿನ ಭಾರತ ಬ್ರಿಟೀಷ್ ಸಾಮ್ರಾಜ್ಯದ ವಸಾಹತುವಾಗಿ ರೂಪುಗೊಂಡಿತು.

ಬಿಡುಗಡೆಗಾಗಿ ಹೋರಾಟ

ಹಾಗೆ ನೋಡಿದರೆ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟವೆಂಬುದು ಇಡೀ ದೇಶದಾದ್ಯಂತ ಒಮ್ಮೆಗೇ ಶುರುವಾಗಲಿಲ್ಲ. ಏಕೆಂದರೆ ಯುರೋಪಿಯನ್ನು ಭಾರತಕ್ಕೆ ಬರುವ ಮುಂಚಿನಿಂದಲೂ ‘ಭಾರತ’ ಎಂಬ ದೇಶದ ಅಸ್ತಿತ್ವವಾಗಲಿ, ಪ್ರಜ್ಞೆಯಾಗಲಿ ನಮ್ಮವರಲ್ಲಿರಲಿಲ್ಲ. ಭಾರತದ ಭೂಖಂಡವು, ನೂರಾರು ರಾಜ ಮನೆತನಗಳ ಆಳ್ವಿಕೆಯನ್ನು ಒಪ್ಪಿಕೊಂಡಿತ್ತು. ಒಬ್ಬೊಬ್ಬ ರಾಜನದು ಒಂದೊಂದು ಸಾಮ್ರಾಜ್ಯ. ಹೀಗೆ ಸಣ್ಣ ಸಣ್ಣ ಆಡಳಿತ ಕೇಂದ್ರಗಳು ಭಾರತದ ತುಂಬಾ ಆವರಿಸಿದ್ದವು. ಮೊಘಲರ ಆಕ್ರಮಣದ ನಂತರ ತುಸು ದೊಡ್ಡದಾದ ಆಡಳಿತ ಕೇಂದ್ರ ಸ್ಥಾಪಿತವಾದರೂ ಭಾರತವೆಂಬ ದೇಶದ ಪ್ರಜ್ಞೆ ಆಗಿರಲಿಲ್ಲ. ಹೀಗಾಗಿ ಈಸ್ಟ್ ಇಂಡಿಯಾ ಕಂಪೆನಿಯ ದಬ್ಬಾಳಿಕೆಯ ವಿರುದ್ಧ ಪ್ರತಿಭಟನೆಗಳು, ಹೋರಾಟಗಳು, ಪ್ರಾಣ ತ್ಯಾಗಗಳು ನಡೆದರೂ ಸಹ ಅವು ಸಣ್ಣ ಸಣ್ಣ ರಾಜ ಮನೆತನಗಳು, ಆಡಳಿತ ಯಂತ್ರಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು, ಸಾರ್ವಭೌಮತೆಯನ್ನು ರಕ್ಷಿಸಿಕೊಳ್ಳಲು ನಡೆಸಿದ ಹತಾಶ ಯತ್ನಗಳಾಗಿದ್ದವು. ಇಂತಹ ಸಣ್ಣ ಸಣ್ಣ, ಸ್ವತಂತ್ರ ಪ್ರಯತ್ನಗಳು ಒಂದು ಗೂಡಿ ೧೮೫೭ರಲ್ಲಿ ದೊಡ್ಡ ಪ್ರಮಾಣದ ಹೋರಾಟ ನಡೆಯಿತಾದರೂ ಅದನ್ನು ಹತ್ತಿಕ್ಕುವಲ್ಲಿ ಬ್ರಿಟೀಷರು ಯಶಸ್ವಿಯಾದರು. ಇಂದಿಗೂ ನಾವು ಆ ಹೋರಾಟವನ್ನು ‘ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ’ ಎಂದು ನೆನೆಯುತ್ತೇವೆ.

ಈಸ್ಟ್ ಇಂಡಿಯಾ ಕಂಪೆನಿ ಕನ್ಯಾಕುಮಾರಿಯಿಂದ ಹಿಡಿದು ಹಿಮಾಲಯದವರೆಗೆ ತನ್ನ ಹಿಡಿತವನ್ನು ವಿಸ್ತರಿಸಿ ಯಾವಾಗ ಕೇಂದ್ರೀಕೃತವಾದ ಆಡಳಿತವನ್ನು ನಡೆಸಲು ಶುರು ಮಾಡಿತೋ ಆಗಲೇ ಇಡೀ ದೇಶದ ಜನರಲ್ಲಿ ತಾವೆಲ್ಲರೂ ಒಂದು ‘ದೇಶ’ ಎಂಬ ಪ್ರಜ್ಞೆ ಬೆಳೆದದ್ದು. ಅನಂತರ ಪಾಶ್ಚಾತ್ಯ ವಿದ್ಯಾಭ್ಯಾಸದಿಂದಾಗಿ ಕೊಂಚ ರಾಜಕೀಯ ತಿಳಿವು ಬೆಳೆಯುತ್ತಲೇ ತಾವು ಅನ್ಯರಿಗೆ ಅಡಿಯಾಳಾಗಿ ಬದುಕುತ್ತಿದ್ದೇವೆ ಎಂಬ ಅರಿವು ಜಾಗೃತವಾದದ್ದು. ತಮಗೆ ಸ್ವಾತಂತ್ರ್ಯ ಬೇಕು ಎಂದು ಇಡೀ ರಾಷ್ಟ್ರದ ಸಮುದಾಯಕ್ಕೆ ಅನ್ನಿಸಲು ಶುರುವಾದದ್ದೇ ಆಗ. ಆಗಲೇ ರಾಷ್ಟ್ರೀಯ ಮಟ್ಟದಲ್ಲಿ ಚಳುವಳಿಗಳು ನಡೆಯಲು ಶುರುವಾಗಿದ್ದು. ತಾವು ಕಳೆದುಕೊಂಡ ಸ್ವಾತಂತ್ರ್ಯ, ತಮ್ಮ ನಾಡಿನ ಸಂಪತ್ತಿನ ಮೇಲಿನ ಯಾಜಮಾನ್ಯ, ತಮ್ಮನ್ನು ತಾವು ಆಳಿಕೊಳ್ಳುವ ಹಕ್ಕನ್ನು ಮರಳಿ ಪಡೆಯುವುದಕ್ಕಾಗಿ ಜನರು ಸಂಘಟಿತರಾಗತೊಡಗಿದರು.

ಸ್ವಾತಂತ್ರ್ಯಕ್ಕಾಗಿ ನಡೆದ ಆಗ್ರಹಗಳಲ್ಲಿ ನೂರಾರು ವಿಧಗಳಿದ್ದವು. ವಿವಿಧ ನಾಯಕರು ತಮಗೆ ತೋಚಿದ ಹಾದಿಯಲ್ಲಿ ಸ್ವಾತಂತ್ರ್ಯವನ್ನು ಪಡೆಯಲು ಪ್ರಯತ್ನಗಳನ್ನು ನಡೆಸಿದರು. ಜನರಲ್ಲಿ ರಾಜಕೀಯ ಪ್ರಜ್ಞೆಯನ್ನು ಮೂಡಿಸಿ ಅವರನ್ನು ಪ್ರಜಾಪ್ರಭುತ್ವಕ್ಕೆ ಅಣಿಗೊಳಿಸುವ ಉದ್ದೇಶದಿಂದ ಎ.ಓ.ಹ್ಯೂಂ ನೇತೃತ್ವದ ಕಾಂಗ್ರೆಸ್ ರಚನೆಯಾಯಿತು. ಯುರೋಪಿನ ರಾಜಕೀಯ ಪ್ರಜ್ಞೆಯನ್ನು ಭಾರತೀಯರಲ್ಲಿ ಬೆಳೆಸುವುದು ಅದರ ಉದ್ದೇಶವಾಗಿತ್ತು. ಅದು ರಾಷ್ಟ್ರವ್ಯಾಪಿಯಾಗಿ ಪ್ರತಿಭಟನೆಗಳನ್ನು ನಡೆಸುತ್ತಾ ತನ್ನ ಗುರಿಯನ್ನು ಸಾಧಿಸುವ ಪ್ರಯತ್ನದಲ್ಲಿ ತೊಡಗಿಕೊಂಡಿತು. ಈ ಸಂಘಟನೆಯ ಶಾಂತಿಯುತ  ಮನವಿಗಳಿಂದ ಸರಕಾರ ಬಗ್ಗುವುದಿಲ್ಲ ಎಂದು ತೀರ್ವಾನಿಸಿದ ತೀವ್ರವಾದಿಗಳು ಉಗ್ರವಾದ ಹೋರಾಟಕ್ಕೆ ಆಲನೆ ನೀಡಿದರು. ಲಾಲಾ ಲಜಪತ್ ರಾಯ್ , ಬಿಪಿನ್ ಚಂದ್ರ ಪಾಲ್, ಬಾಲ ಗಂಗಾಧರ ತಿಲಕರ ಮುಖಂಡತ್ವದಲ್ಲಿ ಪ್ರತಿಭಟನೆ ತೀವ್ರ ಸ್ವರೂಪವನ್ನು ಪಡೆದುಕೊಂಡಿತು. ಕೇವಲ ನಮ್ಮ ಅಸಹನೆಯನ್ನು ವ್ಯಕ್ತಪಡಿಸುವುದರಿಂದ ಕಿವುಡ ಸರಕಾರದ ಗಮನವನ್ನು ಸೆಳೆಯಲು ಸಾಧ್ಯವಾಗುವುದಿಲ್ಲ ಎಂದು ತೀರ್ಮಾನಿಸಿದ ಒಂದು ವರ್ಗ ಕ್ರಾಂತಿಕಾರಿ ಚಟುವಟಿಕೆಗಳಿಗೆ ಕೈ ಹಾಕಿತು. ಕಣ್ಣಿಗೆ ಕಣ್ಣು, ರಕ್ತಕ್ಕೆ ರಕ್ತ ಎಂಬ ನೀತಿಯನ್ನು ಅಳವಡಿಸಿಕೊಂಡ ಇವರು ಸಶಸ್ತ್ರವಾದ ಹೋರಾಟವನ್ನು ಜಾರಿಯಲ್ಲಿಟ್ಟರು. ಚಂದ್ರಶೇಖರ್ ಆಜಾದ್, ಭಗತ್ ಸಿಂಗ್, ರಾಜಗುರು, ಸುಖದೇವ್, ಸಾವರ್ಕರ್, ಮದನ್ ಲಾಲ್ ಧೀಗ್ರಾ ಮುಂತಾದವರ ಅಗ್ರಪಂಕ್ತಿಯಲ್ಲಿ ಕ್ರಾಂತಿಕಾರಿ ಹೋರಾಟಗಳು ನಡೆದು ಸ್ವಾತಂತ್ರ್ಯದ ಕಿಚ್ಚು ಜಾಗೃತವಾಗಿತ್ತು.

ಶಾಂತಿಯುತ ಆಗ್ರಹ

ಈ ಎಲ್ಲಾ ಹೋರಾಟಗಳಿಗೆ ಸಲ್ಲಬೇಕಾದ ಗೌರವ ಹಾಗೂ ಮನ್ನಣೆಯನ್ನು ಕೊಟ್ಟು ಪಕ್ಕಕ್ಕಿಟ್ಟು ನೋಡಿದರೆ, ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅತಿ ಮುಖ್ಯವಾದ ಪಾತ್ರವನ್ನು ವಹಿಸಿದ ಎರಡು ಹೋರಾಟಗಳನ್ನು ನೆನೆಯಬೇಕೆನಿಸುತ್ತದೆ. ಅವು: ಗಾಂಧೀಜಿ ಪ್ರಚಾರಕ್ಕೆ ತಂದ ಸತ್ಯಾಗ್ರಹ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್‌ರ ಸಂಘಟಿತ ಸಶಸ್ತ್ರ ಹೋರಾಟ.

ಬಹುತೇಕರು ತಿಳಿದುರುವಂತೆ ಸತ್ಯಾಗ್ರಹವೆಂಬ ವಿನೂತನವಾದ, ಹಿಂದೆದ್ದೂ ಜಗತ್ತು ಕಲ್ಪಿಸಿಕೊಂಡಿರದಿದ್ದ ಹೋರಾಟದ ವಿಧಾನವನ್ನು ಮೊಟ್ಟ ಮೊದಲು  ಪರಿಚಯಿಸಿದ್ದು ಗಾಂಧೀಜಿಯಲ್ಲ. ಗಾಂಧಿ ಹುಟ್ಟುವ ಹನ್ನೆರಡು ವರ್ಷ ಮುಂಚೆಯೇ ಪಂಜಾಬಿನಲ್ಲಿ ಸತ್ಯಾಗ್ರಹವನ್ನು ಬಳಸಿ ಬ್ರಿಟೀಷರ ವಿರುದ್ಧ ಹೋರಾಟ ನಡೆದಿತ್ತು. ಸಿಖ್ ತತ್ವಜ್ಞಾನಿ ಹಾಗೂ ನಾಮ್‌ಧಾರಿ ಪಂಗಡದ ಮುಖಂಡರಾಗಿದ್ದ ಗುರು ರಾಮ್ ಸಿಂಗ್‌ಜೀ ಬ್ರಿಟೀಷರ ದಬ್ಬಾಳಿಕೆಯನ್ನು ಪ್ರತಿಭಟಿಸಲು ಸಾಮೂಹಿಕ ಅಸಹಕಾರ ಹಾಗೂ ವಿದೇಶಿ ವಸ್ತುಗಳ ಬಹಿಷ್ಕಾರವನ್ನು ಅಸ್ತ್ರವಾಗಿ ಬಳಸಿದರು. ಸ್ವಾತಂತ್ರ್ಯಾ ನಂತರ ರಾಮ್ ಜೀ ಸಿಂಗ್‌ರ ಹೋರಾಟವನ್ನು ನೆನೆಯುತ್ತಾ ಭಾರತದ ಮೊದಲ ರಾಷ್ಟ್ರಪತಿ ಡಾ|| ಬಾಬು ರಾಜೇಂದ್ರ ಪ್ರಸಾದ್ ಹೀಗೆಂದಿದ್ದರು: “ಪೂಜ್ಯ ಗುರು ರಾಮ ಸಿಂಗ್‌ಜೀಯವರು ಪ್ರಾರಂಭಿಸಿದ ಅಸಹಕಾರ ಹಾಗೂ ಸ್ವದೇಶಿ ಚಳುವಳಿ ಭಾರತದಲ್ಲಿನ ಬ್ರಿಟೀಶ್ ಸಾಮ್ರಾಜ್ಯದ ಬುಡವನ್ನು ಅಲ್ಲಾಡಿಸಿದ್ದು ಐತಿಹಾಸಿಕ ಸತ್ಯ. ಗುರು ರಾಮ್ ಸಿಂಗ್ ರಾಜಕೀಯ ಸ್ವಾತಂತ್ರ್ಯವನ್ನು ಧರ್ಮದ ಭಾಗವಾಗಿ ಪರಿಗಣಿಸಿದವರು. ಅಸಹಕಾರ ಹಾಗೂ ಬಹಿಷ್ಕಾರದಂತಹ ಶಕ್ತಿಶಾಲಿ ಹೋರಾಟ ಪದ್ಧತಿಗಳನ್ನು ಭಾರತದ ಸ್ವತಂತ್ರ ಚಳುವಳಿಗೆ ಪರಿಚಯಿಸಿದ ಗಾಂಧೀಜಿಗೆ ರಾಮ್ ಸಿಂಗ್‌ಜೀಯವರ ಹೋರಾಟವೇ ಸ್ಪೂರ್ತಿ.”

ರಕ್ತಪಾತವಿಲ್ಲದ, ವಿನಾಶವಿಲ್ಲದ ಈ ಬಗೆಯ ಶಾಂತಿಯುತ ಹಾಗೂ ಪರಿಣಾಮಕಾರಿ ಹೋರಾಟದಿಂದ ಇಡೀ ಜಗತ್ತೇ ಸ್ಪೂರ್ತಿಗೊಳ್ಳಲು ಕಾರಣ ಗಾಂಧೀಜಿಯೇ. ಜಗತ್ತಿನ ಇತಿಹಾಸಕ್ಕೆ ಭಾರತದ ಕೊಡುಗೆಯಾದ ಸತ್ಯಾಗ್ರಹವನ್ನು ಸಮರ್ಥವಾಗಿ ಬಳಕೆಗೆ ತಂದು ಯಶಸ್ಸು ಸಾಧಿಸಿ ತೋರಿಸಿದ ಕೀರ್ತಿ ಗಾಂಧೀಜಿಯರಿಗೇ ಸಲ್ಲಬೇಕು. ‘ಸತ್ಯಾಗ್ರಹ’ ಎಂಬುದು ನಾನಾ ಆಯಾಮಗಳನ್ನು ಪಡೆದಂತಹ ಹೋರಾಟ. ಅದು ಕೇವಲ ರಾಜಕೀಯ ಸ್ವಾತಂತ್ರ್ಯಕ್ಕಾಗಿ ಹೊರಗಿನ ಶತ್ರುವಿನ ಜೊತೆ ನಡೆಸುವ ಹೋರಾಟವಲ್ಲ, ಅಂತರಂಗದಲ್ಲಿನ ಅಸತ್ಯದ ವಿರುದ್ಧವೂ ನಡೆಸಬೇಕಾದ ಹೋರಾಟ. ಅಂತರಂಗದ ಹಾಗೂ ಬಾಹ್ಯದ ಸತ್ಯಕ್ಕಾಗಿ ಆಗ್ರಹಿಸುವುದೇ ಸತ್ಯಾಗ್ರಹ. ಎದುರಾಳಿಯನ್ನು ಶತ್ರುವನ್ನಾಗಿ ಕಾಣದೆ, ಆತನ ಮೇಲೆ ಹಲ್ಲೆ ಮಾಡದೆ, ಆತನಿಗೆ ತೊಂದರೆ ಉಂಟು ಮಾಡದೆ ತನ್ನ ಹಕ್ಕನ್ನು ತಾನು ಪಡೆಯುವುದು ಸತ್ಯಾಗ್ರಹದ ಕ್ರಮ. ನಮ್ಮ ಸ್ವಾತಂತ್ರ್ಯವನ್ನು ಕಸಿದುಕೊಂಡಿರುವವನ ಹೃದಯದಲ್ಲಿರುವ ದಬ್ಬಾಳಿಕೆಯ, ಸ್ವಾರ್ಥದ ಭಾವನೆಯಿಂದ ಆತನೂ ಮುಕ್ತನಾಗುವುದಕ್ಕೆ ಸಹಾಯ ಮಾಡುತ್ತಾ ಆಮೂಲಕ ನಮ್ಮ ಸ್ವಾತಂತ್ರ್ಯವನ್ನೂ ಪಡೆದುಕೊಳ್ಳುವ ಅತ್ಯದ್ಭುತವಾದ ಚಿಂತನೆಯನ್ನು ಮೈಗೂಡಿಸಿಕೊಂಡ ಹೋರಾಟವದು. ಬಹುಶಃ ಈ ಹೋರಾಟ ಪದ್ಧತಿಯ ಪ್ರಭಾವದ ಆಳ, ಅಗಲ ಅದರಲ್ಲಿ ಭಾಗವಹಿಸಿದವರಿಗೂ ತಿಳಿದಿರಲಿಲ್ಲ ಅನ್ನಿಸುತ್ತದೆ. ಭಾರತಕ್ಕೆ ಸ್ವಾತಂತ್ರ್ಯ ಬಂದದ್ದು ಸತ್ಯಾಗ್ರಹದಿಂದಲೇ ಎಂಬುದರ ಬಗ್ಗೆ ಅನೇಕ ಪ್ರಶ್ನೆಗಳಿದ್ದರೂ, ಗಾಂಧೀಜಿಯ, ದೇಶದ ಬಹುಸಂಖ್ಯಾತರ ಆಗ್ರಹಕ್ಕೆ ವಿರುದ್ಧವಾಗಿ ದೇಶ ಇಬ್ಭಾಗವಾಗಿ ಸ್ವತಂತ್ರವಾದದ್ದರ ಬಗ್ಗೆ ಏನೇ ಅಸಮಾಧಾನವಿದ್ದರೂ ಸಹ ಈ ಮಾಂತ್ರಿಕವಾದ ಹೋರಾಟದಿಂದ ಸ್ಪೂರ್ತಿ ಪಡೆದು ಜಗತ್ತಿನಲ್ಲಿ ಅನೇಕ ಹೋರಾಟಗಳು ನಡೆದವು.  ೧೯೫೫ ರಿಂದ ೧೯೭೮ರವರೆಗೆ ಅಮೇರಿಕಾದಲ್ಲಿ ಕರಿಯರ ನಾಗರೀಕ ಹಕ್ಕುಗಳಿಗಾಗಿ ಆಗ್ರಹ ನಡೆಸಿದ ಮಾರ್ಟಿನ್ ಲೂಥರ್‌ರಿಗೆ ಸತ್ಯಾಗ್ರಹವೇ ಸ್ಪೂರ್ತಿಯಾಗಿತ್ತು. ಬರ್ಮಾದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಗೆ ಆಗ್ರಹಿಸಿ ಹೋರಾಟ ನಡೆಸಿ ಈಗಲೂ ಗೃಹಬಂಧನದಲ್ಲಿರುವ   ಆಂಗ್ ಸನ್ ಸೂ ಕಿ, ಆಫ್ರಿಕಾದಲ್ಲಿ ವರ್ಣಬೇಧ ನೀತಿಯನ್ನು ಕಿತ್ತೊಗೆಯಲು ಹೋರಾಡಿ ಯಶಸ್ವಿಯಾದ ನೆಲ್ಸೆನ್ ಮಡೆಲಾ ನೇತೃತ್ವದ ಹೋರಾಟಗಳಿಗೆಲ್ಲಾ ಗಾಂಧೀಜಿ ಪ್ರತಿಪಾದಿಸಿದ ‘ಸತ್ಯಾಗ್ರಹ’ವೇ ದಾರಿದೀಪವಾಯಿತು.

ಆದರೆ ಗಾಂಧೀಜಿಯವರ ಈ ಪ್ರತಿಭಟನೆಯ ಅಸ್ತ್ರ ಇಂದು ಬಳಕೆಯಾಗುತ್ತಿರುವ ರೀತಿಯನ್ನು ಗಮನಿಸಿದರೆ ನಿಜಕ್ಕೂ ವಿಷಾದ ಆವರಿಸುತ್ತದೆ.

ಸಶಸ್ತ್ರ ಆಗ್ರಹ

ಅಹಿಂಸಾತ್ಮಕ ಹೋರಾಟದಲ್ಲಿ ಎದುರಾಳಿಯ ಇಚ್ಛೆಗೆ ಮಣಿಯದೆ ನಮ್ಮ ಸ್ವಾತಂತ್ರ್ಯಕ್ಕಾಗಿ ಆಗ್ರಹ ನಡೆಸುವುದು, ನಮ್ಮ ಅಹಿಂಸಾತ್ಮಕವಾದ ಪ್ರತಿಭಟನೆಯಿಂದ ನಮ್ಮ ಹಕ್ಕನ್ನು ವಾಪಸ್ಸು ಕೊಡುವಂತೆ ಮಾಡುವುದು ಮುಖ್ಯವಾಗುತ್ತದೆ. ಆದರೆ ಸುಭಾಶ್ ಚಂದ್ರ ಬೋಸ್‌ರಿಗೆ ಈ ಬಗೆಯ ಹೋರಾಟದ ಯಶಸ್ಸಿನ ಬಗ್ಗೆ ನಂಬಿಕೆಯಿರಲಿಲ್ಲ. ನಮ್ಮ ಹಕ್ಕನ್ನು ಹಿಂಸೆಯ ಮಾರ್ಗದಲ್ಲಿ ಕಿತ್ತುಕೊಂಡವನೆದುರು ಅಹಿಂಸೆಯ ಮಾತಿನಲ್ಲಿ ಸಂಧಾನಕ್ಕೆ ಕೂರುವುದು ನಮ್ಮ ಶಕ್ತಿಯ ಮೇಲಿರುವ ನಮ್ಮ ಸಂಶಯವನ್ನು ತೋರಿಸುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು. ಸ್ವಾತಂತ್ರ್ಯವನ್ನು ಬ್ರಿಟೀಷರು ಭಾರತೀಯರಿಗೆ ಕೊಡುವುದಲ್ಲ. ಅದನ್ನು ಭಾರತೀಯರು ಬ್ರಿಟೀಷರಿಂದ ಕಿತ್ತುಕೊಳ್ಳಬೇಕು ಎಂದರು ಸುಭಾಷ್.

ಸ್ವಾತಂತ್ರ್ಯವೆಂಬುದು ಹೊಣೆಗಾರಿಕೆ, ಸ್ವಾತಂತ್ರ್ಯವೆಂದರೆ ಜವಾಬ್ದಾರಿ. ಬಲಿಷ್ಟವಾಗಿರುವವರು, ಸಶಕ್ತರು ಮಾತ್ರವೇ ಸ್ವತಂತ್ರವಾಗಿರಬಲ್ಲರು. ಎಲ್ಲಾ ಬಗೆಯ ದಬ್ಬಾಳಿಕೆಯನ್ನು, ದಾಸ್ಯವನ್ನು ವಿರೋಧಿಸುವ ಸಾಮರ್ಥವಿರುವವನು ಮಾತ್ರ ಸ್ವತಂತ್ರನಾಗಬಲ್ಲ. ಈ ಬಗೆಯ ಸ್ವಾತಂತ್ರ್ಯವನ್ನು ಪಡೆಯುವುದಕ್ಕಾಗಿ ಬಲಿದಾನ ಆವಶ್ಯಕ. ‘ನನಗೆ ನಿಮ್ಮ ರಕ್ತವನ್ನು ನೀಡಿ, ನಾನು ನಿಮಗೆ ಸ್ವಾತಂತ್ರ್ಯವನ್ನು ನೀಡುವೆ’ ಎಂದು ಅಬ್ಬರಿಸಿದವರು ನೇತಾಜಿ. ಸಂಘಟಿತವಾದ ಬ್ರಿಟೀಷ್ ಮಿಲಿಟರಿ ಭಾರತೀಯರ ಮೇಲಿನ ಬ್ರಿಟೀಷರ ಆಳ್ವಿಕೆಯನ್ನು, ಯಜಮಾನಿಕೆಯನ್ನು ಕಾಯುತ್ತಿರುವಾಗ ಭಾರತದ ಮಿಲಿಟರಿಯನ್ನು ಬಳಸಿ ಸ್ವಾತಂತ್ರ್ಯವನ್ನು ಪಡೆಯುವುದು ನ್ಯಾಯಯುತವಾದ ಮಾರ್ಗ ಎನ್ನುವುದು ಸುಭಾಶ್‌ರ ನಿಲುವಾಗಿತ್ತು. ಮಿಲಿಟರಿ ಹೋರಾಟವೇ ತಾರ್ಕಿಕವಾದ ಅಂತ್ಯವಲ್ಲ. ಅದು ರಾಜಕೀಯ ಸ್ವಾತಂತ್ರ್ಯವನ್ನು ಪಡೆಯುವ ಒಂದು ಉಪಾಯ ಮಾತ್ರ ಎಂಬುದು ಅವರ ಸ್ಪಷ್ಟ ನಿಲುವಾಗಿತ್ತು. ಆದರೆ ಈ ಹೋರಾಟ ನಿರೀಕ್ಷಿಸಿದ ಯಶಸ್ಸನ್ನು ಕಾಣದಿದ್ದರೂ ಭಾರತೀಯರನ್ನು ಸ್ವಾತಂತ್ರ್ಯದ ಹೊಣೆಗಾರಿಕೆಯನ್ನು ಹೊರುವುದಕ್ಕೆ ಸಿದ್ಧಪಡಿಸಿತು.

ಸುಭಾಷರ ಈ ತತ್ವವನ್ನು ಬಳಸಿಯೇ ಭಾರತ ಸದೃಢವಾದ ರಾಷ್ಟ್ರವಾಗಿ ಎದ್ದು ನಿಂತದ್ದು. ಸ್ವಾತಂತ್ರ ಸಿಕ್ಕ ತಕ್ಷಣ ನಮ್ಮೆಲ್ಲಾ ಕಷ್ಟ ಕೋಟಲೆಗಳು ಕೊನೆಯಾಗಲಿಲ್ಲ. ಆಗ ತಾನೆ ನಮ್ಮಿಂದ ವಿಭಜಿತವಾಗಿದ್ದ ಪಾಕಿಸ್ತಾನದ ಕಿರಿಕಿರಿ ಒಂದೆಡೆಯಾದರೆ ದೇಶದೊಳಗಿದ್ದ ಹತ್ತಾರು ರಾಜ ಸಂಸ್ಥಾನಗಳ ಕಟಿಪಿಟಿ ಮತ್ತೊಂದೆಡೆ. ಪಾಲು ಪಡೆದು ಮನೆಯಿಂದ ಹೊರ ಹೋದ ತಕ್ಷಣ ತಾನಿದ್ದ ಮನೆಗೇ ಕೊಳ್ಳಿ ಇಡಲು ಬಂದ ಪಾಕಿಸ್ತಾನದ ಮಿಲಿಟರಿಯನ್ನು ಹೆಡೆ ಮುರಿ ಕಟ್ಟಿ ಹಿಂದಕ್ಕೆ ರವಾನಿಸಿ, ನಖರಾ ಮಾಡುತ್ತಿದ್ದ ರಾಜ ಮನೆತನಗಳ ಕೈಯಿಂದ ಆಡಳಿತವನ್ನು ಕಿತ್ತುಕೊಂಡು ಪ್ರಜಾಪ್ರಭುತ್ವವನ್ನು ಸ್ಥಾಪಿಸಲು ನಮಗೆ ಬೇಕಾದದ್ದು ನಮ್ಮ ಮಿಲಿಟರಿ ಶಕ್ತಿಯೇ. ಮುಂದೆ ಪಾಕಿಸ್ತಾನ ಕಾಲು ಕೆರೆದುಕೊಂಡು ಭಾರತದ ಮೇಲೆ ದಂಡೆತ್ತಿ ಬಂದಾಗಲೆಲ್ಲಾ ನಮ್ಮ ಗೌರವವನ್ನು, ಸಾರ್ವಭೌಮತೆಯನ್ನು ರಕ್ಷಿಸಿದ್ದು ನಮ್ಮ ಮಿಲಿಟರಿ ಶಕ್ತಿ. ಇಂದಿರಾ ಗಾಂಧಿಯಂತಹ ಉಕ್ಕಿನ ಮಹಿಳೆ ಪಾಕಿಸ್ತಾನದಿಂದ ಬಾಂಗ್ಲಾವನ್ನು ಕಿತ್ತು ಪಕ್ಕಕ್ಕಿಡದಿದ್ದರೆ ದೇಶಕ್ಕಾಗಬಹುದಾಗಿದ್ದ ಅಪಾಯ ವರ್ಣಿಸಲು ಅಸಾಧ್ಯ. ಬಲಿಷ್ಟ ಚೀನಾದೆದುರು ನಮ್ಮ ಸೈನ್ಯ ಕೈ ಚೆಲ್ಲಿ ಕುಳಿತಾಗ ನಮಗಾದ ಅವಮಾನವನ್ನು ನೆನೆಸಿಕೊಳ್ಳಿ…

ಒಟ್ಟಿನಲ್ಲಿ ಸ್ವಾತಂತ್ರ್ಯ ಹಾಗೂ ಅದರ ಗಳಿಕೆ, ಉಳಿಕೆಯ ಬಗ್ಗೆ ಹೀಗೇ ಎಂದು ತೀರ್ಮಾನಗಳಿಗೆ ಬರುವುದಕ್ಕೆ ಸಾಧ್ಯವಿಲ್ಲ. ಇಂದು ರಾಜಕೀಯವಾಗಿ ನಾವು ಸ್ವತಂತ್ರರು. ಆದರೆ ಅದೆಷ್ಟು ಸಂಗತಿಗಳಿಗೆ ನಾವು ದಾಸ್ಯರಾಗಿದ್ದೇವೆ ಅಲ್ಲವೇ, ಹಾಗಾದರೆ ನಿಜವಾದ ಸ್ವಾತಂತ್ರ್ಯ ಅಂದರೇನು?


Blog Stats

  • 69,182 hits
ಅಕ್ಟೋಬರ್ 2021
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 123
45678910
11121314151617
18192021222324
25262728293031

Top Clicks

  • ಯಾವುದೂ ಇಲ್ಲ