ಕಲರವ

Posts Tagged ‘ಅರ್ಧಕ್ಕೆ ನಿಂತ ಕಥೆಗಳ


ನಿನ್ನೆಯ ನೆನಪು ನಮ್ಮ ನಾಳೆಗೆ ಬದುಕಿನ ಹಾದಿಗೆ ಬೆಳಕಾಗಲೇ ಬೇಕಂತೇನೂ ಇಲ್ಲ. ಆದರೆ ನೆನಪುಗಳನ್ನು ಮೆಲಕು ಹಾಕುವುದರಲ್ಲಿಯೇ ಎಂಥದ್ದೋ ಒಂದು ಬಗೆಯ ಸಂತೃಪ್ತಿಯಿದೆ. ಸಮಾಧಾನವಿದೆ. ಪುಳಕವಿದೆ. ಕಳೆದ ದಿನಗಳ ನೆನಪಿನ ಹಂಗಿನಲ್ಲಿ ಮೆಲುವಾಗಿ ನರಳುವ ಅಂಕಣ ‘ಬೀಥೆ ಹುಯೆ ದಿನ್…’.
ತಮ್ಮ ಬರವಣಿಗೆಯ ಪ್ರಾರಂಭವನ್ನು ನಯವಾಗಿ ನೇವರಿಸುತ್ತಾ ಅರ್ಧಕ್ಕೆ ನಿಲ್ಲಿಸಿದ ಕಥೆಗಳ ನೆನಪನ್ನು ಮೆಲುಕು ಹಾಕಿದ್ದಾರೆ ‘ಅಂತರ್ಮುಖಿ.’

ಬರವಣಿಗೆಯ ಗೀಳು ನನಗೆ ಹತ್ತನೆಯ ಎಂಟನೆಯ ತರಗತಿಯ ಆಸುಪಾಸಿನಲ್ಲೇ ಹತ್ತಿಕೊಂಡಿತ್ತಾದರೂ ಹತ್ತನೆಯ ತರಗತಿಗೆ ಕಾಲಿಡುವಷ್ಟರಲ್ಲಿ ಅದು ಜ್ವರದಂತೆ ಏರಿತ್ತು. ಮನಸ್ಸಿಗೆ ಬಂದ ವಿಚಾರಗಳನ್ನೆಲ್ಲಾ ಅಕ್ಷರಕ್ಕಿಳಿಸುವ ಚಟ ಹತ್ತಿಕೊಂಡು ಬಿಟ್ಟಿತ್ತು. ಅದೊಂದು ರೀತಿಯಲ್ಲಿ emotional outlet ಆಗಿ ಕೂಡ ಸಹಾಯ ಮಾಡುತ್ತಿತ್ತು. ಮನೆಯಲ್ಲಿ ಚಿಕ್ಕ ಪುಟ್ಟದ್ದಕ್ಕೆ ಸಿಟ್ಟಾದಾಗ ನೇರವಾಗಿ ರೂಮಿಗೆ ಹೋಗಿ ಬಾಗಿಲು ಗಿಡಿದುಕೊಂಡು ನನ್ನ ಸಿಟ್ಟನ್ನೆಲ್ಲಾ ಅಕ್ಷರಕ್ಕಿಳಿಸಿ ಡರಿಯ ಪುಟಗಳನ್ನು ತುಂಬಿಸುತ್ತಿದ್ದೆ. ವಾದ ಮಾಡುವಾಗ, ಅಪ್ಪನಿಗೆ ಎದುರು ಮಾತನಾಡುವಾಗ ನನಗೆ ವಿಪರೀತ ಭಾವೋದ್ವೇಗ ಉಂಟಾಗುತ್ತಿತ್ತು. ಮಾತಿಗೂ ಮುನ್ನ ಅಳು ಬಂದುಬಿಡುತ್ತಿತ್ತು. ಕಣ್ಣಲ್ಲಿ ನೀರು ತುಂಬಿಬಿಡುತ್ತಿತ್ತು. ಮಾತನಾಡಬೇಕು ಅಂದುಕೊಂಡದ್ದು ಗಂಟಲಲ್ಲೇ ಸಿಕ್ಕಿ ಹಾಕಿಕೊಂಡು ಸತ್ತು ಹೋಗಿಬಿಡುತ್ತಿತ್ತು. ಆಗೆಲ್ಲಾ ನನ್ನ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಳ್ಳುವ, ನನ್ನ ಭಾವೋದ್ವೇಗದ ಅಣೆಕಟ್ಟಿಗೆ ಪುಟ್ಟ ಕಿಂಡಿಯಾಗುವ ಪಾತ್ರವನ್ನು ನನ್ನ ಡೈರಿಯ ಪುಟಗಳು ವಹಿಸುತ್ತಿದ್ದವು. ಅಸಲಿಗೆ ನಾನು ಡೈರಿಗಾಗಿ ಪುಸ್ತವೊಂದನ್ನು ಕೊಂಡು ತಂದು ‘ಓಂ’ ಬರೆದಿಟ್ಟುಕೊಂಡು ಮೊದಲ ಎಂಟ್ರಿಯನ್ನು ಮಾಡಿದ್ದೇ ನನ್ನ ಸಿಟ್ಟಿಗೆ ಅಭಿವ್ಯಕ್ತಿಯನ್ನು ಕೊಡಲು.

ಹತ್ತನೆಯ ತರಗತಿಯ ಪಬ್ಲಿಕ್ ಪರೀಕ್ಷೆಯೆಂಬ ವಕ್ರವ್ಯೂಹವನ್ನು ಬೇಧಿಸಿ ಸುಸ್ತಾಗಿ ಕುಳಿತ ಅಭಿಮನ್ಯುವಿನ ಹಾಗೆ ರಜೆಯಲ್ಲಿ ಕಾಲ ಕಳೆಯುತ್ತಿದ್ದೆ. ತಲೆಯನ್ನು ಹೊಕ್ಕಿದ್ದ ಬರವಣಿಗೆಯ ಚಟ ಸುಮ್ಮನಿರಲು ಬಿಡುತ್ತಿರಲಿಲ್ಲ. ಕಂಡ ಕಂಡ ಪತ್ರಿಕೆಗಳನ್ನು ಹೊತ್ತು ತಂದು ಓದುವ ಖಯಾಲಿ ಬೇರೆ ಇತ್ತು. ಹಾಗೆ ಓದುತ್ತಿದ್ದವನಿಗೆ ಅದ್ಯಾವುದೋ ದಿವ್ಯ ಘಳಿಗೆಯಲ್ಲಿ ಇವಕ್ಕೆಲ್ಲಾ ನಾನು ಬರೆದು ಕಳುಹಿಸಿದರೆ ಹೇಗೆ ಎನ್ನಿಸುತ್ತಿತ್ತು. ಹಾಗನ್ನಿಸಲು ನನ್ನ ಬರವಣಿಗೆ ಪತ್ರಿಕೆಗಳಲ್ಲಿ ಬೆಳಕು ಕಾಣಬೇಕು, ನನ್ನ ಕೆಲಸಕ್ಕೆ recognition ಸಿಗಬೇಕು ಎನ್ನುವುದು ಒಂದು ಕಾರಣವಾದರೆ, ಪತ್ರಿಕೆಯಲ್ಲಿ ಲೇಖನಗಳು ಪ್ರಕಟವಾದರೆ ಒಂದಷ್ಟು ಗೌರವ ಧನವನ್ನು ಕಳುಹಿಸುತ್ತಾರೆ ಎಂಬ ದುರಾಸೆ ಇನ್ನೊಂದು ಕಾರಣವಾಗಿತ್ತು! ನಾನೋದುತ್ತಿದ್ದ ಪತ್ರಿಕೆಗಳಲ್ಲಿ ಯಾವ ಯಾವ ಅಂಕಣಗಳಿಗೆ ಲೇಖನಗಳನ್ನು ಬರೆಯಬಹುದು ಎಂದು ಗುರುತು ಮಾಡಿಟ್ಟುಕೊಳ್ಳುತ್ತಿದ್ದೆ. ವಾಚಕರವಾಣಿ, ವೈಯಕ್ತಿಕ ಅನುಭವದ ಪುಟಗಳು, ನಿಮ್ಮ ಪ್ರಶ್ನೆ ಕೇಳಿ ಎಂಬಂತಹ ಕಾಲಮ್ಮುಗಳಿಗೆ ನನ್ನ ಮೊದಲ ಆದ್ಯತೆ. ಪಟ್ಟಾಗಿ ಕುಳಿತು ಒಂದು ವಿಷಯದ ಬಗ್ಗೆ ಅಧ್ಯಯನ ಮಾಡಿ ಬರೆಯುವಷ್ಟು ತಾಳ್ಮೆಯಾಗಲೀ, ಆಸಕ್ತಿಯಾಗಲೀ ನನಗಿರುತ್ತಿರಲಿಲ್ಲ. ಮನಸ್ಸಿಗೆ ತೋಚಿದ ವಿಚಾರವನ್ನು ಆಧರಿಸಿ ಪುಟ್ಟಪುಟ್ಟದಾಗಿ ಒಂದಿಷ್ಟು ಲೇಖನಗಳನ್ನು ಬರೆದಿಟ್ಟುಕೊಳ್ಳುತ್ತಿದ್ದೆ. ಅವುಗಳಲ್ಲಿ ಹೆಚ್ಚಿನವು ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತಹ ಲೇಖನಗಳಾಗಿರುತ್ತಿದ್ದವು. ಆ ಸಮಯದಲ್ಲಿ ನಾನು ಹೆಚ್ಚಾಗಿ ಓದುತ್ತಿದ್ದದ್ದು ಅಂಥದ್ದೇ ಧಾಟಿಯ ಪುಸ್ತಕಗಳನ್ನಾದ್ದರಿಂದ ಬರವಣಿಗೆಗೆ ಅಂಥವೇ ಸರಕುಗಳನ್ನು ಆಯ್ದುಕೊಳ್ಳುತ್ತಿದ್ದೆ. ಹತ್ತು ಲೇಖನ ಬರೆದರೆ ಒಂದನ್ನು ಯಾವುದಾದರೂ ಪತ್ರಿಕೆಯ ವಿಳಾಸಕ್ಕೆ ಕಳುಹಿಸಿಕೊಡುತ್ತಿದ್ದೆ. ನನ್ನ ಲೇಖನ ಪ್ರಕಟಿಸಿದ್ದಾರೋ ಇಲ್ಲವೋ ಎಂದು ಪ್ರತಿ ಸಂಚಿಕೆಯನ್ನು ಖರೀದಿಸಿ ಹುಡುಕುತ್ತಿದ್ದೆ. ಒಂದು ವೇಳೆ ಪ್ರಕಟವಾಗಿದ್ದರೆ ಆ ಪತ್ರಿಕೆಯ ಇನ್ನೊಂದು ಪ್ರತಿಯನ್ನು ಬೇರೆಯ ಅಂಗಡಿಯಿಂದ ಕೊಂಡು ತಂದು ಮನೆಯಲ್ಲಿ ಒಂದು ಕಡೆ ಶೇಖರಿಸಿಡುತ್ತಿದ್ದೆ. ಅಪ್ಪಿತಪ್ಪಿಯೂ ಮನೆಯಲ್ಲಿ ಪ್ರಕಟವಾದ ಲೇಖನಗಳನ್ನು ತೋರಿಸುತ್ತಿರಲಿಲ್ಲ. ನನ್ನ ಸ್ವಭಾವ ಸಹಜವಾದ ಸಂಕೋಚವೇ ಇದಕ್ಕೆ ಕಾರಣವಾಗಿತ್ತು.

ಹೀಗೆ, ಸಣ್ಣ ಪುಟ್ಟ ಲೇಖನಗಳನ್ನು ಬರೆಯುತ್ತಾ, ಜೋಕುಗಳನ್ನು, ವಿಸ್ಮಯಕಾರಿ ವಿಚಾರಿಗಳನ್ನು ಸಂಗ್ರಹಿಸುತ್ತಾ ಎಷ್ಟು ದಿನ ಅಂತ ಕೂರಲಾಗುತ್ತದೆ? ಸಹಜವಾಗಿ ಅದಕ್ಕಿಂತ ಹೆಚ್ಚಿನದಕ್ಕೆ ಕೈ ಹಾಕುವ ಮನಸ್ಸಾಗುತ್ತಿತ್ತು. ಆಗ ಒಂದೆರಡು ಕಥೆಗಳನ್ನೂ ಬರೆದದ್ದುಂಟು. ಮನೆಯಲ್ಲಿ ಆಗಾಗ ನಡೆಯುತ್ತಿದ್ದ ಅಪ್ಪ-ಅಮ್ಮನ ನಡುವಿನ ಕಾಳಗ ಕಂಡು ಮನಸ್ಸಿನಲ್ಲಿ ವಿಪರೀತವಾದ ಹಿಂಸೆಯನ್ನನುಭವಿಸುತ್ತಿದ್ದೆ. ಏನು ಮಾಡಲೂ ಸಾಧ್ಯವಾಗದಂತೆ ಮನಸ್ಸು ಮುದುಡಿ ಬಿಡುತ್ತಿತ್ತು. ನನ್ನ ಅಸಹನೆಯನ್ನು ತೋರ್ಪಡಿಸುವ ಯಾವ ಮಾರ್ಗವೂ ಇಲ್ಲದೆ ನಾನು ಅಸಹಾಯಕನಾಗಿ ಉಗುಳು ನುಂಗುತ್ತಿದ್ದೆ. ಒಂದು ದಿನ ಹಾಗೇ ಯಾವುದೋ ವಿಷಯಕ್ಕೆ ಅಪ್ಪ ರೇಗುತ್ತಿದ್ದರು. ನಾನು ಅದಕ್ಕೆ ಮೂಕ ಸಾಕ್ಷಿಯಾಗಿ ಕೂರಲಾಗದೆ ಮಹಡಿಗೆ ಓಡಿದೆ, ಕೈಯಲ್ಲಿ ಪೇಪರ್ ಪ್ಯಾಡಿತ್ತು. ಜೊತೆಗೆ ಪೆನ್ನು ಇತ್ತು. ಅಲ್ಲೆ ಕುಳಿತು ಒಂದು ಕಥೆಯನ್ನು ಬರೆದೆ. ಆ ಕಥೆ ಒಬ್ಬ ಹುಡುಗನದ್ದು. ಅವನು ತುಂಬಾ ಸೂಕ್ಷ್ಮ ಮನಸ್ಸಿನವನು. ಮನೆಯಲ್ಲಿ ತನ್ನೆದುರು ಅಪ್ಪ ಅಮ್ಮ ಜಗಳವಾಡುವುದನ್ನು ಕಂಡು ಆತನಿಗೆ ವಿಪರೀತ ವೇದನೆಯಾಗುತ್ತಿತ್ತು. ಒಮ್ಮೆ ಈ ವೇದನೆಯ ಉತ್ಕಟತೆಯನ್ನು ಸಹಿಸಲಾಗದೆ ಆತ ಮನೆ ಬಿಟ್ಟು ಹೋಗಿಬಿಡುತ್ತಾನೆ. ಅಪ್ಪ-ಅಮ್ಮ ಎಷ್ಟು ಹುಡುಕಿದರೂ ಆತ ಸಿಕ್ಕುವುದಿಲ್ಲ. ಎರಡು ದಿನಗಳಾದ ನಂತರ ಆ ಮನೆಯ ಬಾಗಿಲು ತೆರೆಯುತ್ತದೆ, ಮಗ ಹಿಂದಿರುಗಿರುತ್ತಾನೆ, ಹೆಣವಾಗಿ. ಆ ಕಥೆಯಲ್ಲಿದ್ದದ್ದು ನಾನೇ, ನನ್ನ ಆವೇಶವೇ ಆ ಹುಡುಗನ ಪಾತ್ರವಾಗಿತ್ತು. ಆದರೆ ಆ ಕಥೆಯನ್ನು ಯಾವ ಪತ್ರಿಕೆಗೂ ಕಳುಹಿಸುವ ಮನಸ್ಸಾಗಲಿಲ್ಲ. ಯಾವುದೋ ಆವೇಶದ ಸಮಯದಲ್ಲಿ ಸೃಷ್ಟಿಯಾದ ಅದನ್ನು ಮತ್ತ್ಯಾವಗಲೋ ಶಾಂತಚಿತ್ತನಾಗಿರುವಾಗ ಓದಿದಾಗ ನನಗೇ ರುಚಿಸಲಿಲ್ಲ. ಅದನ್ನು ಹಾಗೇ ನನ್ನ ಲಾಕರ್‌ನೊಳಕ್ಕೆ ಹಾಕಿಟ್ಟೆ.

ಬದುಕಿನ ಬಗೆಗೆ ನಿರ್ದಿಷ್ಟವಾದ ಯಾವ ದೃಷ್ಟಿಕೋನವೂ ಆಗ ಇರಲಿಲ್ಲ. ನನ್ನ ಅದೃಷ್ಟಕ್ಕೆ ನಾನಾವ ಸಿದ್ಧಾಂತಗಳ ಪ್ರಭಾವಕ್ಕೂ ಬಿದ್ದಿರಲಿಲ್ಲ. ಹಾಗಾಗಿ ನನ್ನ ಕಥೆಗಳಿಗೆ ನನ್ನ ಸುತ್ತಮುತ್ತಲು ಕಂಡ,ಅನುಭವಕ್ಕೆ ದಕ್ಕಿದ ಸಂಗತಿಗಳೇ ವಸ್ತುವಾಗುತ್ತಿದ್ದವು. ಹೊಟೇಲಿನೆದುರು ಸಾಫ್ಟಿ ಐಸ್ ಕ್ರೀಮ್‌ ಗಿಟ್ಟಿಸಿಕೊಂಡು ನೆಕ್ಕುತ್ತಿರುವಾಗ ಕಂಕುಳಲ್ಲಿ ಚಿಕ್ಕ ಮಗುವನ್ನೆತ್ತಿಕೊಂಡು ಸೋರುತ್ತಿದ್ದ ತನ್ನ ಮೂಗನ್ನು ತನ್ನ ಮಲಿನವಾದ ಬಟ್ಟೆಯಿಂದ ಒರೆಸಿಕೊಂಡು ನನ್ನೆದುರು ಬಂದು ನಿಂತು ಕೈ ಚಾಚಿ ಒಂದು ಬಗೆಯ ಯಾಂತ್ರಿಕ ದೀನತೆಯಿಂದ ಬೇಡುತ್ತಾ ನಿಂತ ಸುಮಾರು ನನ್ನದೇ ವಯಸ್ಸಿನ ಹುಡುಗಿಯನ್ನು ಕಂಡು ಆ ಕ್ಷಣ ಹೇಸಿಗೆಯಾದಂತಾದರೂ, ಆ ಕ್ಷಣಕ್ಕೆ ಆಕೆಯನ್ನು ಗದರಿ ಅಟ್ಟಿದರೂ ಆ ದಿನವಿಡೀ ಆ ಘಟನೆ ಮನಸ್ಸನ್ನು ಕೊರೆಯುತ್ತಿತ್ತು. ಸರಿ, ಮತ್ತೊಂದು ಕಥೆಗೆ ಕೈ ಹಚ್ಚಿದೆ. ಒಬ್ಬ ಹುಡುಗ, ಮನೆಯಲ್ಲಿ ಶ್ರೀಮಂತಿಕೆ ಕಾಲು ಮುರಿದು ಬಿದ್ದಿದೆ. ಅಪ್ಪನ ಜೊತೆಗೆ ಹಠ ಮಾಡುತ್ತಿದ್ದಾನೆ. ತಾನು ಕೇಳಿದ್ದ ಏರೋಪ್ಲೇನ್ ಅಪ್ಪ ತಂದು ಕೊಟ್ಟಿಲ್ಲ ಅನ್ನೋದು ಅವನ ತಕರಾರು. ಮುನಿಸಿಕೊಂಡು ಊಟ ಮಾಡಲ್ಲ ಅಂತ ಕೂತಿದ್ದಾನೆ. ಸಮಾಧಾನ ಮಾಡಲು ಬಂದ ಅಮ್ಮನಿಗೆ ಬಯ್ದು ಮನೆಯ ಬಾಲ್ಕನಿಗೆ ಬಂದು ಬೀದಿ ನೋಡುತ್ತಾ ಕುಳಿತಿದ್ದಾನೆ. ಅತ್ತ ಬೀದಿಯಲ್ಲಿ ಒಬ್ಬ ಹುಡುಗ ಇವನದೇ ವಯಸ್ಸಿನವನು ಪೇಪರ್ ಆಯುತ್ತಿದ್ದಾನೆ. ಹರಿದ, ಕೊಳಕು ಬಟ್ಟೆ, ಮಂಡಿ, ಹಿಮ್ಮಡಿಯೆನ್ನದೆ ಕಾಲುಗಳ ತುಂಬಾ ಗಾಯದ ಗುರುತುಗಳು, ಕೆಲವು ಕಡೆ ಗಾಯಕ್ಕೆ ಕಟ್ಟಿದ ಬಟ್ಟೆ ಬಣ್ಣಗೆಟ್ಟು, ಅದಕ್ಕೆ ಧೂಳು ಮೆತ್ತಿಕೊಂಡು ಅದರ ಸುತ್ತ ನೊಣಗಳು ಸುತ್ತುತ್ತಿವೆ. ತಲೆ ಕೂದಲು ತೊಳೆದು ಎಷ್ಟು ವರ್ಷವಾಯಿತೋ ಎಂಬಂತೆ ಕೆಂಚಗಾಗಿ ಉರುಟು ಉರುಟಾಗಿ ಸುತ್ತಿಕೊಂಡಿವೆ. ಇಷ್ಟು ಸಾಲದು ಎಂಬಂತೆ ಅವನ ಬಾಲದಂತೆ ಅವನ ತಮ್ಮನೋ, ಪುಟ್ಟ ಸ್ನೇಹಿತನೋ ಅಲೆಯುತ್ತಿದ್ದಾನೆ. ಇವನು ಆಯುವ ಪೇಪರುಗಳನ್ನು ಒಂದು ಗೋಣಿಗೆ ತುಂಬುತ್ತಿದ್ದಾನೆ. ಇದನ್ನೆಲ್ಲಾ ಬಾಲ್ಕನಿಯಲ್ಲಿ ಕುಳಿತು ನೋಡುತ್ತಿದ್ದ ಹುಡುಗನಿಗೆ ತನ್ನ ಹಠ, ತನ್ನ ಸಿಡುಕಿನ ಬಗ್ಗೆ ನಾಚಿಕೆಯೆನ್ನಿಸುತ್ತದೆ. ಒಳಕ್ಕೆ ಬಂದು ಅಮ್ಮನ ಬಳಿ ಹೋಗಿ ಸಾರಿ ಕೇಳುತ್ತಾನೆ. ಒಳ್ಳೆಯ ಹುಡುಗನಂತೆ ಉಟಕ್ಕೆ ಕೂರುತ್ತಾನೆ. ಕಥೆಯ ವಸ್ತು ಇಷ್ಟು ಚೆನ್ನಾಗಿದ್ದರೂ ಬರವಣಿಗೆಯ ಶೈಲಿ, ಬಂಧ ಈಗ ಸಾರಾಂಶ ಕೊಟ್ಟಷ್ಟು ಚೆಂದಗೆ ಇರಲಿಲ್ಲ ಹಾಗಾಗಿ ಆ ಕಥೆಯೂ ಕತ್ತಲ ಮೆರೆಗೆ ಸರಿಯಿತು.

ಈ ಮಧ್ಯೆ ಕೇವಲ ವೈಯಕ್ತಿಕ ಆವೇಶವನ್ನು ಕಥೆಯ ಚೌಕಟ್ಟಿಗೆ ಸಿಕ್ಕಿಸಿ ಕಥೆ ಹೆಣೆಯುವ ಕಸರತ್ತಿನಿಂದ ಕೊಂಚ ಬೇಸರವೆನಿಸಿತ್ತು. ಕೆಲವು ಕಥೆಗಳನ್ನು ಓದಿದರೆ ಒಳ್ಳೆಯ ಐಡಿಯಾ ಬರಬಹುದೆಂದು ಒಳ್ಳೆಯ ಕಥಾಗಾರರು ಎಂದು ನಾನು ಕೇಳಲ್ಪಟ್ಟಿದ್ದವರ ಕಥೆಗಳನ್ನು ಓದಿದೆ. ಆದರೆ ಅವುಗಳು ಅರ್ಥವಾಗುತ್ತಿರಲಿಲ್ಲ. ಅದೊಂದು ಸಂಜೆ ನನ್ನ ಹೈಸ್ಕೂಲಿನ ಮೆಚ್ಚಿನ ಟೀಚರ್ ಒಬ್ಬರ ಬಳಿ ಮಾತನಾಡುತ್ತಿದ್ದೆ. ಪರೀಕ್ಷೆಗಳೆಲ್ಲಾ ಮುಗಿದಿದ್ದವಾದ್ದರಿಂದ ನಮ್ಮ ಮಾತು ಕಥೆಗಳ ಬಗ್ಗೆ, ಕಾದಂಬರಿಗಳ ಕಡೆಗೆ ಹೊರಳಿಕೊಂಡಿತ್ತು. ಅವರು ತಾವು ತುಂಬಾ ಮೆಚ್ಚಿದ ಚಿತ್ರ ನಿರ್ದೇಶಕ ಸತ್ಯಜಿತ್ ರೇ ಬರೆದಿದ್ದ ಕಥೆಯೊಂದರ ಬಗ್ಗೆ ಹೇಳಿದರು. ಎಂದೋ ಓದಿದ್ದ ಅವರ ಕಥೆಯ ಕನ್ನಡಾನುವಾದವನ್ನು ನೆನಪಿನಿಂದ ಹೆಕ್ಕಿ ತೆಗೆದು ನನಗೆ ವಿವರಿಸುತ್ತಿದ್ದರು. ಆ ಕಥೆಗೆ ‘ತದ್ರೂಪು’ ಎಂಬ ಶೀರ್ಷಿಕೆ ಕೊಟ್ಟಿದ್ದನ್ನು ನೆನಪು ಮಾಡಿಕೊಂಡರು. ಅದರ ವಿವರಗಳು ನನಗೆ ಸ್ಪಷ್ಟವಾಗಿ ನೆನಪಿಲ್ಲ. ಆದರೆ ಆ ಕ್ಷಣದಲ್ಲಿ ಆ ಕಥೆ ನನ್ನನ್ನು ಆಳವಾಗಿ ಪ್ರಭಾವಿಸಿತ್ತು. ಹೆಂಡತಿಯೊಬ್ಬಳು ದೂರದಲ್ಲಿರುವ ತನ್ನ ಗಂಡನಿಗೆ ಪತ್ರ ಬರೆದ ಧಾಟಿಯಲ್ಲಿ ರವೀಂದ್ರನಾಥ್ ಠಾಗೋರ್‍ರ ಒಂದು ಕಥೆಯ ಪ್ರಸ್ತಾಪವೂ ಆಗಿತ್ತು. ಅದೇ ಗುಂಗಿನಲ್ಲಿ ನಾನು ‘ತದ್ರೂಪು’ ಎಂಬ ಹೆಸರಿನಲ್ಲೇ ಒಂದು ಕಥೆಯನ್ನು ಬರೆದೆ. ಅದನ್ನು ನನ್ನ ಟೀಚರ್‌ಗೂ ತೋರಿಸಿದ್ದೆ. ಶೈಲಿ ಚೆನ್ನಾಗಿದೆ, ಕಥೆ ಹೆಣೆಯುವ ಶ್ರದ್ಧೆ ಇಷ್ಟವಾಯ್ತು ಆದರೆ ಇದರಲ್ಲಿ ಕಥೆಯೇ ಇಲ್ಲವಲ್ಲಾ, stuff ಎನ್ನುವುದು ಏನೂ ಇಲ್ಲ- ಅಂದರು ಕಡ್ಡಿ ಮುರಿದಂತೆ! ಅವತ್ತೇ ಹಠ ಮಾಡಿದವನ ಹಾಗೆ ಮತ್ತದೇ ಶೀರ್ಷಿಕೆಯನ್ನಿಟ್ಟು ಮತ್ತೊಂದು ಕಥೆ ಬರೆಯಲು ಶುರುಮಾಡಿದೆ ಅದರಲ್ಲಿ ಹಿಂದೆಂದೂ ಬರೆದಿರದಿದ್ದ ರೀತಿಯಲ್ಲಿ ಕಥೆಯನ್ನು ಬಿಚ್ಚಿಡುವ ಪ್ರಯತ್ನ ಮಾಡಿದೆ. ಪ್ರಜ್ಞಾಪೂರ್ವಕವಾಗಿ ಅಸ್ಪಷ್ಟತೆ, ನಿಗೂಢತೆ, ಗೊಂದಲಗಳನ್ನು ಎಳೆದು ತರುವ ಪ್ರಯತ್ನ ಮಾಡಿದ್ದೆ. ಆದರೆ ಎಲ್ಲಿಂದಲೋ ಹೇಗ್ಹೇಗೋ ಬೆಳೆಯುತ್ತಾ ಹೋದ ಆ ಕಥೆಗೆ ಹೇಗೆ ಅಂತ್ಯ ಹಾಡಬೇಕೆಂದೇ ತಿಳಿಯದೆ ಅದನ್ನು ಹಾಗೇ ಇಟ್ಟುಕೊಂಡಿದ್ದೆ. ಈ ನಡುವೆ ಈ ಕಥೆಯನ್ನು ಒಂದು ಕಾದಂಬರಿಯಾಗಿ ಬರೆಯಬಾರದೇಕೆ ಎಂಬ ಭಯೋತ್ಪಾದಕ ವಿಚಾರವೂ ಬಂದಿತ್ತು. ಆದರೆ ಆಪದ್ಭಾಂದವನ ಹಾಗೆ ಸದಾ ನನ್ನ ಜೊತೆಗಿರುವ ಸೋಮಾರಿತನ ಅಂತಹ ಕ್ರಾಂತಿಕಾರಕ ಸಾಹಸಗಳಿಗೆ ನಾನು ಧುಮುಕದಂತೆ ತಡೆದಿತ್ತು!

ಒಂದೆರಡು ದೆವ್ವದ ಕಥೆಗಳನ್ನು ಓದಿ, ದೆವ್ವದ ಬಗ್ಗೆ ‘ವೈಜ್ಞಾನಿಕವಾಗಿ’ ಗೆಳೆಯರೊಂದಿಗೆ ಹರಟಿದ್ದರ ಫಲವಾಗಿ ಒಂದು ಕಥೆಯನ್ನು ಬರೆದಿದ್ದೆ. ಅನಂತ್ ನಾಗ್, ರಮೇಶ್ ಭಟ್ ಅಭಿನಯದ ‘ಗಣೇಶ ಸುಬ್ರಹ್ಮಣ್ಯ’ ಸಿನೆಮಾದಲ್ಲಿ ಮುಖ್ಯಮಂತ್ರಿ ಚಂದ್ರು ಅನಂತ್ ನಾಗ್‌ಗೆ ರಾತ್ರಿ ಒಂದು ಪತ್ತೇದಾರಿ ಕಥೆಯನ್ನು ರೋಚಕವಾಗಿ, ಮಿಮಿಕ್ರಿ ಮಾಡಿ ಅಭಿನಯಿಸುತ್ತಾ ಹೇಳಿದ್ದನ್ನು ಅನುಕರಿಸಿ ದೆವ್ವದ ಕಥೆಯನ್ನು ನಿರೂಪಿಸಿದ್ದೆ. ರೋಚಕವಾದ ವಿವರಗಳನ್ನು ಸೇರಿಸಿದ್ದೆ. ಬರೆಯುವಾಗ ಪ್ರತಿ ಸಾಲಿಗೂ ನಾನೇ ಬೆಚ್ಚಿ ಬೀಳುವವನಂತೆ ನಟಿಸುತ್ತಾ ವಿವರಗಳನ್ನು ದಾಖಲಿಸುತ್ತಿದೆ. ಆ ಕಥೆಯನ್ನ ತುಷಾರಕ್ಕೆ ಕಳುಹಿಸಿಕೊಟ್ಟಿದ್ದೆ. ಆದರ ಪ್ರಕಟವಾದಂತೆ ಕಾಣಲಿಲ್ಲ. ಕಳೆದ ಎರಡು ಸಂಚಿಕೆಗಳಲ್ಲಿ ಅದೇ ಕಥೆಯನ್ನು ತಿಕ್ಕಿ ತೀಡಿ ‘ವೈಚಾರಿಕತೆ’ ಎಂಬ ಹೆಸರಲ್ಲಿ ಪ್ರಕಟಿಸಿದ್ದೆ.

‘ಕಲರವ’ವನ್ನು ಪ್ರಾರಂಭಿಸಿದಾಗಿನಿಂದ ನಿಯಮಿತವಾಗಿ ಕಥೆಗಳನ್ನು ಬರೆಯುತ್ತಿರುವೆನಾದರೂ ನನ್ನ ಕಥೆಗಳ ಬಗ್ಗೆ ನನಗೆ ತೃಪ್ತಿಯಿಲ್ಲ. ಈ ಹಾದಿಯಲ್ಲಿ ನಾನಿನ್ನೂ ಕ್ರಮಿಸಬೇಕಾದ ಮೈಲುಗಲ್ಲುಗಳು ಬೇಕಾದಷ್ಟಿವೆ. ನನ್ನ ನೆನಪಿನ ಖಜಾನೆಯನ್ನು ಬಿಚ್ಚಿಕೊಂಡು ಕುಳಿತರೆ ಅರ್ಧಕ್ಕೆ ನಿಲ್ಲಿಸಿದ, ದಾರಿ ತಪ್ಪಿದ, ಮೊದಲಿಂದಲೇ ವಕ್ರವಾಗಿ ಚಲಿಸಿದ, ಅಸ್ಪಷ್ಟವಾಗಿ ಮೂಡಿದ ಕಥೆಗಳ ರಾಶಿಯೇ ಇವೆ. ಹಾಗೆ ಸುಮ್ಮನೆ ನೆನಪಿನ ಕಂತೆಯನ್ನು ಕೆದರುತ್ತಾ ಕುಳಿತವನಿಗೆ ಸಿಕ್ಕಿದ್ದು ಇಷ್ಟು.


Blog Stats

  • 68,988 hits
ಸೆಪ್ಟೆಂಬರ್ 2021
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 12345
6789101112
13141516171819
20212223242526
27282930  

Top Clicks

  • ಯಾವುದೂ ಇಲ್ಲ