Archive for the ‘ಹೀಗೊಂದು ಪತ್ರ’ Category
ನೀನು ನನ್ನ ಬದುಕಿನಲ್ಲಿ ಬಂದ ಮೇಲೆ ನಾನು ಅದೆಷ್ಟು ಬದಲಾಗಿ ಹೋಗಿದ್ದೆನಲ್ಲವಾ? ನಿನ್ನ ಪರಿಚಯ, ಸಾಹಚರ್ಯದಿಂದಾಗಿ ನನ್ನಲ್ಲಿ ಹೊಸತೊಂದು ಹುಮ್ಮಸ್ಸು ಹುಟ್ಟಿಕೊಂಡಿತ್ತು. ನಿನ್ನೊಂದಿಗೆ ಪ್ರತಿದಿನ ಒಂದಷ್ಟು ಸಮಯ ಕಳೆದರೆ ವಿಲಕ್ಷಣವಾದ ಧೈರ್ಯ ಬರುತ್ತಿತ್ತು. ನೀನು ನನ್ನ ಬೆರಳುಗಳ ನಡುವೆ ನುಲಿಯುತ್ತಿರುವಾಗ ನಾನು ಇಡೀ ಜಗತ್ತನ್ನೇ ಜಯಿಸುವ ಕನಸನ್ನು ಕಾಣುತ್ತಿದ್ದೆ. ಸುತ್ತಲಿನ ಜಗತ್ತೂ ಕೊಂಚ ಬದಲಾದ ಹಾಗೆ ಅನ್ನಿಸುತ್ತಿತ್ತು. ಅದುವರೆಗೂ ಕಣ್ಣೆತ್ತಿಯೂ ನೋಡದವರೆಲ್ಲಾ ನಾನು ನಿನ್ನೊಂದಿಗಿರುವಾಗ ನಮ್ಮಿಬ್ಬರನ್ನು ದುರುದುರನೆ ನೋಡಿ ಮುಂದೆ ಹೋಗುತ್ತಿದ್ದರು. ಕೆಲವರ ಕಣ್ಣಲ್ಲಿ ನಾನು ನೀನು ಆದರ್ಶ
ಪ್ರೇಮಿಗಳಾಗಿದ್ದೆವು. ನಾನು ಒಬ್ಬನೇ ತಿರುಗಾಡುವಾಗ ಎದುರಲ್ಲಿ ಕಂಡ ಕೆಲವು ಹುಡುಗರ ಕಣ್ಣಲ್ಲಿನ ಭಯ, ಭಕ್ತಿ, ಗೌರವ ಬೆರೆತ ಭಾವವನ್ನು ಗು
ರುತಿಸುತ್ತಿದ್ದೆ. ಕೆಲವು ಮುದುಕರು ವಾಕಿಂಗ್ ಸ್ಟಿಕ್ಕನ್ನು ಕುಟ್ಟುತ್ತಾ ಎದುರು ಸಾಗುವಾಗ ನನ್ನ ಮೇಲೆ ದುಸುಮುಸು ಮಾಡಿಕೊಳ್ಳುತ್ತಿದ್ದನ್ನೂ ಕಂಡಿದ್ದೆ. ಆದರೆ ನನಗೆ ಅವ್ಯಾವೂ ಮುಖ್ಯವಾಗಿರಲಿಲ್ಲ. ನಾನು ಹಾಗೂ ನೀನು ಇಬ್ಬರೇ ಇಡೀ ಜಗತ್ತಿನಲ್ಲಿ ಸಮಯ ಕೊನೆಯಾಗುವರೆಗೆ ಹಾಯಾಗಿರಬೇಕು ಅನ್ನಿಸುತ್ತಿತ್ತು.
ನಿನ್ನೊಳಗೆ ನಾನು, ನನ್ನೊಳಗೆ ನೀನು ಬೆರೆತು ಹೋಗಿ ಇಬ್ಬರೂ ಇಲ್ಲವಾಗಿ ಬಿಡಬೇಕು ಎಂಬ ಕಾತರ ನನ್ನಲ್ಲಿದ್ದರೂ ಈ ಸುತ್ತಲ ಸಮಾಜದ ನಿಯಮಗಳು ಅದಕ್ಕೆ ಅವಕಾಶಕೊಡುವುದಿಲ್ಲ ಎಂಬುದು ನಮ್ಮಿಬ್ಬರಿಗೂ ಗೊತ್ತಿತ್ತು. ನಾನು ನೀನು ಎಲ್ಲೆಂದರಲ್ಲಿ ಸಂಧಿಸುವ ಹಾಗಿರಲಿಲ್ಲ. ನಮ್ಮ ಸಮಾಗಮಕ್ಕಾಗಿ ಅತೀ ಎಚ್ಚರಿಕೆಯಿಂದ ಸಮಯವನ್ನೂ, ಸ್ಥಳವನ್ನೂ ನಾವು ಆಯ್ಕೆ ಮಾಡಿಕೊಳ್ಳಬೇಕಿತ್ತು. ಕಾಲೇಜು ಇರುವಾಗಲೆಲ್ಲಾ ಇಲ್ಲಿ ಹಾಸ್ಟೆಲ್ಲಿನಲ್ಲಿ ಉಳಿದುಕೊಂಡಾಗ ನನಗಷ್ಟು ತೊಂದರೆಯಾಗುತ್ತಿರಲಿಲ್ಲ. ನೀನು ಯಾವ ಘಳಿಗೆಯಲ್ಲಿ ಕಳೆದರೂ ಉಟ್ಟ ಬಟ್ಟೆಯಲ್ಲಿ ಧಾವಿಸುವಷ್ಟು ಸ್ವಾತಂತ್ರ್ಯವಿರುತ್ತಿತ್ತು. ನನ್ನನ್ನು ತಡೆಯುವುದಕ್ಕೆ ಯಾರಿಗೂ ಸಾಧ್ಯವಿರಲಿಲ್ಲ. ಮೇಲಾಗಿ ಈ ಊರಿಗೆ ನಾನು ಅಪರಿಚಿತ. ಈ ಬೆಂಗಳೂರಿನ ಸಂಗತಿ ನಿನಗೆ ಗೊತ್ತಿಲ್ಲ ಅನ್ನಿಸುತ್ತೆ, ಇಲ್ಲಿ ನಿನ್ನ ಬೆನ್ನ ಹಿಂದಿರುವ ಒಂದು ಅಡಿ ದಪ್ಪನೆಯ ಗೋಡೆಯ ಆಚೆ ಬದಿಯಲ್ಲಿ ಕೂತ ವ್ಯಕ್ತಿಗೆ ನಿನ್ನ ಪರಿಚಯವಿರುವುದಿಲ್ಲ. ಪಕ್ಕದ ಮನೆಯಲ್ಲಿ ಮನುಷ್ಯರು ಇದ್ದಾರೆ, ಅವರು ಇನ್ನೂ ಉಸಿರಾಡುತ್ತಿದ್ದಾರೋ ಇಲ್ಲವೋ ಎಂಬುದು ಇಲ್ಲಿನವರಿಗೆ ಆಸಕ್ತಿಯ ವಿಷಯವಾಗುವುದಿಲ್ಲ. ಹೀಗಾಗಿ ನಾನು ಹಾಸ್ಟೆಲ್ಲಿನ ಕಾಂಪೌಂಡು ದಾಟುತ್ತಿದ್ದ ಹಾಗೆಯೇ ಕಿಸೆಯಲ್ಲಿ ಭದ್ರವಾಗಿದ್ದ ನಿನ್ನನ್ನು ಹೊರಕ್ಕೆಳೆದು ಪ್ರೀತಿಯಿಂದ ಕಿಚ್ಚು ಹೊತ್ತಿಸುವಾಗಲೂ ಭಯವಾಗುತ್ತಿರಲಿಲ್ಲ. ತೀರಾ ನನ್ನ ಕಾಲೇಜಿನವರು, ನನ್ನ ವರ್ತಮಾನವನ್ನು ಊರಿಗೆ ತಲುಪಿಸುವಂಥವರು, ಕಾಲೇಜಿನ ಲೆಕ್ಛರುಗಳು- ಇವರ ಕಣ್ಣಿಗಾದರೂ ನಾವಿಬ್ಬರೂ ಒಟ್ಟಾಗಿರುವುದು ಬೀಳದಂತೆ ಎಚ್ಚರ ವಹಿಸುತ್ತಿದ್ದೆ.
ದಿನಕ್ಕೆ ಒಂದು ಬಾರಿ ಎರಡು ಬಾರಿಯೆಲ್ಲಾ ಸಂಧಿಸುವುದರಿಂದ ನನಗೆ ತೃಪ್ತಿಯಾಗುತ್ತಿರಲಿಲ್ಲ. ಐದು, ಆರು ಕಡೆ ಕಡೆಗೆ ಹತ್ತು ಹದಿನೈದು ಸಲವಾದರೂ ನಿನ್ನ ಮಡಿಲಿಗೆ ನನ್ನನ್ನು ನಾನು ಒಪ್ಪಿಸಿಕೊಂಡುಬಿಡಲು ಶುರು ಮಾಡಿದೆ. ನೀನೂ ಏನೂ ಅಷ್ಟು ಸುಲಭಕ್ಕೆ ಸಿಕ್ಕುವವಳಾಗಿರಲಿಲ್ಲ. ನಿನ್ನ ಬೇಡಿಕೆಯೇನು ಸಣ್ಣ ಪ್ರಮಾಣದ್ದಲ್ಲ. ಮನೆಯಿಂದ ಬರುತ್ತಿದ್ದ ತಿಂಗಳ ಕಾಸಿನಲ್ಲಿ ಒಂದಷ್ಟನ್ನು ಕದ್ದು ಮುಚ್ಚಿ ನಿನಗೆ ತಲುಪಿಸುತ್ತಿದ್ದೆ. ಅಲ್ಲಿ ಇಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದೆನಾದ್ದರಿಂದ ನಿನ್ನನ್ನು ಸಾಕಲು ಕಷ್ಟವಾಗುತ್ತಿರಲಿಲ್ಲ. ಆದರೆ ಕೆಲವೊಮ್ಮೆ ವಿಪರೀತವಾಗಿ ಕೈ ಕಟ್ಟಿ ಹೋಗಿ ಬಿಡುತ್ತಿತ್ತು. ಕೈಲಿ ಬಿಡುಗಾಸೂ ಇರುತ್ತಿರಲಿಲ್ಲ. ಹಿಂದೆಂದೂ ಅಮ್ಮನಿಗೆ ಸುಳ್ಳು ಹೇಳದ ನಾನು ಆಕೆಗೆ ಅರ್ಥವಾಗದ ಪುಸ್ತಕಗಳ ಹೆಸರು ಹೇಳಿ ಬ್ಯಾಂಕ್ ಅಕೌಂಟು ತುಂಬಿಸಿ ಕೊಳ್ಳುತ್ತಿದ್ದೆ. ನಮ್ಮ ಪ್ರೀತಿಗಾಗಿ ನಾನು ಅಪ್ರಮಾಣಿಕನಾದೆ, ಸ್ವಾಭಿಮಾನವನ್ನೂ ಕಳೆದುಕೊಂಡು ಗೆಳೆಯರ ಬಳಿ ಅಂಗಲಾಚಿದೆ. ಆಪ್ತರ ಕಣ್ಣಲಿ ಸಣ್ಣವನಾದೆ, ಆದರೆ ನಿನ್ನ ಕಣ್ಣಲ್ಲಿ ನಾನು ದೊಡ್ಡವನಾಗುತ್ತಿದ್ದೆ ಎಂದುಕೊಂಡಿದ್ದೆ. ನಾನು ನಿನ್ನ ಕಾಣುವುದಕ್ಕಾಗಿ, ನಿನ್ನನ್ನು ಸೇರುವುದಕ್ಕಾಗಿ ಇಷ್ಟೆಲ್ಲಾ ತ್ಯಾಗಗಳನ್ನು ಮಾಡುತ್ತಿದ್ದೆ. ಆದರೆ ನೀನೋ ಅಂತಃಪುರದ ಮಹಾರಾಣಿಯ ಹಾಗೆ ಕೂದಲೂ ಸಹ ಕೊಂಕದ ಹಾಗೆ ಇರುತ್ತಿದ್ದೆ. ಪಾಪ ಇದರಲ್ಲಿ ನಿನ್ನದೇನೂ ತಪ್ಪಿರಲಿಲ್ಲ ಬಿಡು. ನಿನಗೆ ನನ್ನ ಎಷ್ಟೇ ಪ್ರೀತಿಯಿದ್ದರೂ ನೀನಾದರೂ ಏನು ಮಾಡಲು ಸಾಧ್ಯವಿತ್ತು? ನೀನು ಅಬಲೆ, ಅಸಹಾಯಕಿ ನಾನು ನಿನ್ನ ಪೊರೆಯುವ, ಸದಾ ನಿನ್ನ ಹಿತವನ್ನು ಕಾಯುವ, ನಿನ್ನ ಕೋಮಲತೆಯನ್ನು ಕಾಪಾಡುವ ಶಕ್ತಿವಂತ ಯೋಧನಾಗಿದ್ದೆ. ನಮ್ಮಿಬ್ಬರ ಮಿಲನಕ್ಕೆ ನಾನು ಈ ಸುಂಕವನ್ನು ತೆರಲೇ ಬೇಕಿತ್ತು.
ನಿಜಕ್ಕೂ ನನಗೆ ಹಾಗೆ ಅನ್ನಿಸುತ್ತಿತ್ತೋ ಅಥವಾ ಅದು ಕೇವಲ ನನ್ನ ಭ್ರಮೆಯಾಗಿತ್ತೋ ನನಗಿನ್ನೂ ಸರಿಯಾಗಿ ತೀರ್ಮಾನಿಸಲು ಸಾಧ್ಯವಾಗುತ್ತಿಲ್ಲ. ಆಗಿನ ನನ್ನ ಬದುಕಿಗೇ ನೀನೇ ಸ್ಪೂರ್ತಿಯಾಗಿದ್ದೆ. ನನ್ನ ಅಂತರಂಗದ ಪ್ರೇರಕ ಶಕ್ತಿಯಾಗಿದ್ದೆ. ನಾನು ಹೆದರಿ ಹೆಜ್ಜೆ ಹಿಂದಿಟ್ಟಾಗಲೆಲ್ಲಾ ನೀನು ಧೈರ್ಯ ತುಂಬಿ ಮುಂದಕ್ಕೆ ತಳ್ಳುತ್ತಿದ್ದೆ. ದಣಿದು ಕುಳಿತಾಗಲೆಲ್ಲಾ ಶಕ್ತಿಯನ್ನು ಧಾರೆಯೆರೆದು ಜಿಗಿದು ನಿಲ್ಲುವಂತೆ ಮಾಡುತ್ತಿದ್ದೆ. ನನ್ನ ಸೃಜನಶಿಲತೆ, ನನ್ನ ಸಾಧನೆಗಳಿಗೆ ನೀನೇ ಬೆಂಬಲವಾಗಿದ್ದೆ. ಒಮ್ಮೆ ನಿನ್ನೊಡನೆ ಕೈಯೊಳಗೆ ಕೈ ಬೆಸೆದುಕೊಂಡು ಕುಳಿತು ಐದು ನಿಮಿಷ ಕಳೆದರೆ ನನ್ನೆಲ್ಲಾ ಸಭಾ ಕಂಪನ ಕಾಣೆಯಾಗಿ ನೂರಾರು ಮಂದಿಯೆದುರು ನಿರ್ಭಯವಾಗಿ, ಅದ್ಭುತವವಾಗಿ ಮಾತಾಡುತ್ತಿದ್ದೆ. ಹಿಂದೆಲ್ಲಾ ಪದಗಳು ಸಿಕ್ಕದೆ ತಡವರಿಸುತ್ತಿದ್ದವನು ನಾನೇನಾ ಎಂದು ಆಶ್ಚರ್ಯ ಪಡುವಷ್ಟರ ಮಟ್ಟಿಗೆ ನಿನ್ನ ಸ್ಪೂರ್ತಿ ನನ್ನನ್ನು ಬದಲಾಯಿಸಿತ್ತು. ಅಪರೂಪಕ್ಕೆ ಕಾಲೇಜಿನ ಪತ್ರಿಕೆಗಾಗಿಯೋ, ಇಲ್ಲವೇ ‘ಮಯೂರ’, ‘ತುಷಾರ’ಕ್ಕಾಗಿಯೋ ಕಥೆಯೊಂದನ್ನು ಬರೆಯುವುದಕ್ಕೆ ಕೂತಾಗ ಗಂಟೆ ಗಟ್ಟಲೆ ಮೇಜಿನ ಮುಂದೆ ಜಿಮ್ನಾಸ್ಟಿಕ್ ನಡೆಸಿದರೂ, ಹಾಸಿಗೆಯ ಮೇಲೆ ಶೀರ್ಷಾಸನ ಹಾಕಿದರೂ ಹೊಳೆಯದಿದ್ದ ವಿಚಾರಗಳು, ಕೈಯಿಂದ ತಪ್ಪಿಸಿಕೊಂಡು ಓಡುತ್ತಿದ್ದ ಕಥೆಯ ಎಳೆಗಳು ನಿನ್ನನ್ನು ಜೊತೆಯಲ್ಲಿಟ್ಟುಕೊಂಡು ಕೂತೊಡನೆ ಬಾಲ ಮುದುರಿಕೊಂಡ ಬೆಕ್ಕಿನ ಮರಿಯ ಹಾಗೆ ಕಾಗದದ ಮೇಲೆ ಇಳಿಯುತ್ತಿದ್ದವು. ನಾನು ನನ್ನ ಬದುಕಿನ ಅತಿ ಶ್ರೇಷ್ಠ ಕಥೆಗಳನ್ನು, ಕವಿತೆಗಳನ್ನು ಬರೆದದ್ದು, ತುಂಬಾ ಒಳ್ಳೆಯ ಐಡಿಯಾಗಳನ್ನು ಪಡೆದದ್ದು ನಿನ್ನೊಂದಿಗಿದ್ದಾಗಲೇ. ಅದ್ಯಾರೋ ಮಹಾನ್ ಲೇಖಕ, ‘ಬರೆಯುವಾಗ ಯಾರೆಂದರೆ ಯಾರೂ ಇರಬಾರದು ನನ್ನನ್ನೂ ಸೇರಿಸಿ’ ಎಂದು ಹೇಳಿದ್ದಾನೆ. ಆ ಸ್ಥಿತಿಯನ್ನು ತಲುಪಿಕೊಳ್ಳಲು ನೀ ನನಗೆ ನೆರವಾಗುತ್ತಿದ್ದೆ ಎಂದುಕೊಳ್ಳುತ್ತಿದ್ದೆ. ಕಾರಂತರು, ಲಂಕೇಶರು, ಅಡಿಗರು, ರವಿ ಬೆಳಗೆರೆಯಂಥವರೆಲ್ಲಾ ನಿನ್ನ ಪರಿವಾರವನ್ನು ನೆಚ್ಚಿಕೊಂಡವರು ಎಂದು ತಿಳಿದು ಪುಳಕಿತನಾಗುತ್ತಿದ್ದೆ. ಕಡೆ ಕಡೆಗೆ ಅದ್ಯಾವ ಪರಿ ನಿನ್ನನ್ನು ಹಚ್ಚಿಕೊಂಡೆನೆಂದರೆ ನೀನಿಲ್ಲದೆ ನನ್ನಲ್ಲಿ ಕಥೆಯಿರಲಿ, ಒಂದು ಸಾಲು ಕೂಡ ಹುಟ್ಟಲು ಸಾಧ್ಯವಾಗುತ್ತಿರಲಿಲ್ಲ. ನಿನ್ನೊಡನೆ ಇರದಿದ್ದ ಘಳಿಗೆಯಲ್ಲಿ ಯಾರಾದರೂ ಬಂದು ಈ ಐಡಿಯಾಗಳು ನಿಮ್ಮದೇನಾ ಅಂತ ಕೇಳಿಬಿಟ್ಟರೆ ಎಂದು ಕಲ್ಪಿಸಿಕೊಂಡು ಭಯವಾಗಿ ನಡುಗಿಹೋಗುತ್ತಿದ್ದೆ.
(ಮುಂದಿನ ಸಂಚಿಕೆಗೆ)
ಪ್ರೀತಿಯ ಸಿಗರೇಟೇ,
ಹೇಗಿರುವೆ… ನಿನ್ನನ್ನು ಕಂಡು ತುಂಬಾ ದಿನಗಳಾದವು ಅಲ್ಲವಾ? ನಿನಗೆ ನನ್ನ ನೆನಪಿದೆಯೋ ಇಲ್ಲವೋ ಕಾಣೆ. ಆದರೆ ನಾನು ಮಾತ್ರ ಕಳೆದ ಹದಿನೈದೋ, ಇಪ್ಪತ್ತೋ ದಿನಗಳಿಂದ ನಿನ್ನನ್ನು ನೆನದು ನೆನೆದು ವಿಪರೀತ ಹಿಂಸೆಯನ್ನು ಅನುಭವಿಸಿದ್ದೇನೆ. ಮರೆವು ಇಷ್ಟು ದುಬಾರಿ ಎಂತ ನನಗೆ ಎಂದೂ ಅನಿಸಿದ್ದೇ ಇಲ್ಲ. ಪರೀಕ್ಷೆಗಾಗಿ ಓದಿದ್ದ ವಿಷಯಗಳನ್ನು ಬಿಡು, ಉಪನಯನ ಮಾಡಿಸಿದ ಮೂರನೆಯ ದಿನಕ್ಕೆ ಅಪ್ಪ ಆಕ್ಸಿಡೆಂಟಿನಲ್ಲಿ ಉಸಿರುಬಿಟ್ಟ ದಿನದ ನೆನಪು ಮಸುಕು ಮಸುಕಾಗಿಯಾದರೂ ನೆನಪಿಲ್ಲ. ಆದರೆ ನಿನ್ನ ಮರೆಯುವುದಕ್ಕೆ ನಾನು ಪಟ್ಟ ಪಾಡಿದೆಯಲ್ಲ, ಅದನ್ನ ಹೇಗೆ ವಿವರಿಸಲಿ? ನಿನ್ನ ನೆನಪು ಬರೀ ನನ್ನ ಮನಸ್ಸಿಗೆ ಸಂಬಂಧಿಸಿದ್ದಾಗಿದ್ದರೆ ಮನಸ್ಸಿನ ಮೇಲೆ ಹೇರಲ್ಪಡುವ ಸಾವಿರಾರು ಸಂಗತಿಗಳಲ್ಲಿ ಅದೂ ಕಳೆದುಹೋಗಿಬಿಡುತ್ತಿತ್ತು. ಆದರೆ ನಿನ್ನ ನೆನಪಿಗೆ ನನ್ನ ದೇಹದ ನರ-ನರವೂ, ಶ್ವಾಸಕೋಶದ ಪ್ರತಿ ಗಾಳಿ ಚೀಲವೂ ತುಡಿಯುತ್ತಿದ್ದುದರಿಂದ ನಿನ್ನ ಮರೆಯುವುದು ಎಂದರೆ ನನ್ನನ್ನೇ ನಾನು ನಿರಾಕರಿಸಿದಂತಾಗಿತ್ತು. ನಿನ್ನಿಂದ ದೂರವಾಗಿ ಇಷ್ಟು ದಿನ ಕಳೆದ ಮೇಲೂ ನಿನ್ನ ನೆನಪು ಅಳಿದಿಲ್ಲ. ಅದಕ್ಕೆ ಈ ಓಲೆ ನಿನಗಾಗಿ…
ನೀನು ನನಗೆ ಪರಿಚಯವಾದ ಘಳಿಗೆಯನ್ನು ಏನೆಂದು ಕರೆಯಲಿ? ಅಮೃತ ಘಳಿಗೆಯೆನ್ನಲ್ಲಾ, ದೇವರು ನನ್ನ ಬದುಕಿನಲ್ಲಿ ಮಾರ್ಕು ಮಾಡಿಟ್ಟ ಸಮಯವೆನ್ನಲಾ, ನನ್ನ ಅವನತಿಗೆ ವಿಧಿ ಇಟ್ಟುಕಳುಹಿಸಿದ್ದ ಮುಹೂರ್ತವೆನ್ನಲಾ? ನಿನ್ನ ಬಗ್ಗೆ ನನಗೇನೂ ಅಂಥಾ ಅಜ್ಞಾನವಿರಲಿಲ್ಲ. ಎತ್ತೆತ್ತಲೂ ನಿನ್ನನ್ನೇ ನೋಡುತ್ತಿದ್ದೆ. ಬೀದಿಯ ಕೊನೆಯ ಬೀಡಾ ಸ್ಟಾಲಿನ ಎದುರು ಗುಂಪು ನಿಂತ ಜನರಿಗೆ ಬೆಚ್ಚಗೆ ಕಾವು ಕೊಡುವಂತೆ ಬೆಂಕಿ ಹಾಕಿಸಿಕೊಳ್ಳುತ್ತಿದ್ದೆ. ಕಾಲೇಜಿನಲ್ಲಿ ಸಿನಿಯರುಗಳ ಎರಡು ಬೆರಳುಗಳ ಮಧ್ಯದಲ್ಲಿ ತೂರಿ, ‘ಇವರಿಗೆ ಸಿನಿಯಾರಿಟಿಯನ್ನು ಕೊಟ್ಟಿದ್ದೇ ನಾನು’ ಎಂದು ಬೀಗುತ್ತಿದ್ದೆ. ಸಿನೆಮಾ ನಟರ ತುಟಿಯಲ್ಲಿ ಕುಣಿದಾಡುತ್ತಾ ಅವರ ಸ್ಟೈಲಿಗೆ ಮೆಚ್ಚಿ ತಲೆದೂಗುತ್ತಿದ್ದೆ. ಆದರೂ ಹದಿನೆಂಟು ದಾಟುವವರೆಗೆ ನಾನು ನಿನಗಾಗಿ ಕೈಚಾಚಿರಲಿಲ್ಲ. ಅಲ್ಲಿಯವರೆಗೆ ಸಂಯಮಿಯಾಗಿದ್ದೆ ಅಂತೇನಲ್ಲ, ಅವಕಾಶ ಸಿಕ್ಕಿರಲಿಲ್ಲ ಅಷ್ಟೇ. ಮುಂದೆಂದಾದರೂ ಬೇರೆಯವರಿಗೆ ನನ್ನ ನಿನ್ನ ಚರಿತ್ರೆಯನ್ನು ಹೇಳುವಾಗ ನಾನು ಹದಿನೆಂಟು ದಾಟುವವರೆಗೆ ನಿನ್ನನ್ನು ದ್ವೇಷಿಸುತ್ತಿದ್ದೆ, ನೀನು ಎಂದರೆ ಅಲರ್ಜಿ ಎಂದು ಮೂಗು ಮುರಿಯುತ್ತಿದ್ದೆ. ನಿನ್ನ ಬಳಗದವರೊಂದಿಗೆ ಚೆಲ್ಲಾಟವಾಡುತ್ತಾ ನಿಂತವರನ್ನು ಕಂಡು ರೇಗಿಕೊಳ್ಳುತ್ತಿದ್ದೆ ಎಂದೆಲ್ಲಾ ಹೇಳಬಹುದೇನೋ, ಆದರೆ ನಿನಗೆ ನನ್ನ ಅಂತರಂಗ ತಿಳಿದಿಲ್ಲವೇ? ನಿನ್ನಲ್ಲೇಕೆ ಮುಚ್ಚು ಮರೆ.
ಅದೊಂದು ದಿನ ವಿಪರೀತ ತಲೆಬಿಸಿಯಾಗಿತ್ತು. ನಾಲ್ಕಾರು ದಿನಗಳಿಂದ ಕಾಲೇಜಿಗೆ ಹೋಗಿರಲಿಲ್ಲ. ಪ್ರಿನ್ಸಿಪಾಲರು ಬಂದು ನೋಡಲು ಹೇಳಿದ್ದರು. ಹೋಟೆಲಿನ ಕೌಂಟರಿನಲ್ಲಿ ಕುಳಿತವನಿಗೆ ಮುಖ ತೋರಿಸಬೇಕಾಗುತ್ತದೆ ಎಂದು ಹೊಟ್ಟೆ ಹಸಿದಿದ್ದರೂ ಹೋಟೆಲಿಗೆ ಹೋಗದ ಮಖೇಡಿಯಾದ ನನಗೆ ಪ್ರಿನ್ಸಿಪಾಲರನ್ನು ಏಕಾಂಗಿಯಾಗಿ ಭೇಟಿಯಾಗುವುದು ಭಯ ಹುಟ್ಟಿಸಿತ್ತು. ಬೇರಾವ ಸಂಗತಿಗೂ ಗಮನ ಕೊಡಲಾಗದ ಹಾಗೆ ಆ ಭಯ ನನ್ನ, ಹಿಂಜರಿಕೆ ನನ್ನನ್ನು ಆವರಿಸಿತ್ತು. ಇಡೀ ಸಂಜೆ ನಾನು ಪ್ರಿನ್ಸಿಪಾಲರ ಕೊಠಡಿಗೆ ಹೋದಂತೆ, ಅವರೆದುರು ಧೈರ್ಯವಾಗಿ ಮಾತಾಡಿದಂತೆ, ನನ್ನ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಿದಂತೆ ಕಲ್ಪಿಸಿಕೊಂಡು – ಹಾಗೆ ಮಾಡುವ ಧೈರ್ಯವಿದೆಯೇ ಎಂದು ಯೋಚಿಸಿ ಕಂಗಾಲಾಗಿದ್ದೆ. ರೂಮಿನಲ್ಲಿ ಕೂತರೆ ತಲೆ ಒಡೆದು ನೂರು ಚೂರಾದೀತು ಅನ್ನಿಸಿ ಹೊರಕ್ಕೆ ಜಿಗಿದೆ. ರಸ್ತೆಯ ಮೇಲೆ ಓಡಾಡುವ ಪ್ರತಿ ಮುಖದಲ್ಲೂ ನನ್ನೆಡೆಗೆ ತಿರಸ್ಕಾರ ಕಂಡಂತಾಗಿ ದಿಗಿಲಾಯಿತು. ಟೀ ಅಂಗಡಿಯ ಬಳಿ ನಿಂತು ಅರ್ಧ ಕಪ್ ಟೀ ಬೇಡಿದೆ. ಆತ ಡಿಕಾಕ್ಷನ್ನಿಗೆ ಹಾಲು ಬೆರೆಸುತ್ತಾ ಸಮಯ ದೂಡುತ್ತಿರುವಾಗ ಆಕಸ್ಮಿಕವಾಗಿ ನೀನು ಕಣ್ಣಿಗೆ ಬಿದ್ದೆ. ಅದೇನನ್ನಿಸಿತೋ, ಒಮ್ಮೆ ನಿನ್ನ ಸಂಗಾತವನ್ನು ಅನುಭವಿಸಬೇಕು ಎಂಬ ಹಂಬಲ ಹುಟ್ಟಿಕೊಂಡುಬಿಟ್ಟಿತು. ನಿನ್ನ ಸನ್ನಿಧಿಯಲ್ಲಿ ನನ್ನೆಲ್ಲಾ ದುಗುಡ, ಆತಂಕಗಳು ಕಳೆದು ನನ್ನ ಬದುಕು ಬಂಗಾರದ್ದಾಗಿ ಬಿಡುತ್ತದೆ ಅನ್ನಿಸಿತು. ನಿನ್ನ ಬಗ್ಗೆ ಅವರಿವರು ಹೇಳಿದ್ದು, ಅಲ್ಲಲ್ಲಿ ಓದಿದ್ದು ಎಲ್ಲಾ ಅಪರೂಪಕ್ಕೊಮ್ಮೆಮ್ಮೆ ನಿನ್ನೆಡೆಗೆ ಹುಟ್ಟಿಕೊಂಡಿದ್ದ ಬೆರಗು, ಆಸಕ್ತಿ ಎಲ್ಲಾ ಸೇರಿ ಕೈ ಎಳೆದು ನಿನ್ನ ಕೈಕುಲುಕಿಸಿತು. ನಿನ್ನ ಪ್ರೀತಿಯಲ್ಲೂ ಅದೇಷ್ಟೆಷ್ಟೋ ವಿಧಗಳಿವೆ ಎಂಬುದನ್ನು ಟೀ ಅಂಗಡಿಯವ ಟೀ ಬಸಿದು ಕೊಟ್ಟು ನನಗ್ಯಾವ ಟೈಪು ಬೇಕು ಅಂದಾಗಲೇ ತಿಳಿದದ್ದು. ಚಿಕ್ಕದಾಗಿದ್ದ ನಿನ್ನ ಒಲವನ್ನು ಆಯ್ದುಕೊಂಡೆ. ಕಿಂಗ್ ಸೈಜಿನಲ್ಲೂ ನಿನ್ನ ಒಲವು ದೊರೆಯುತ್ತದೆ ಎಂದು ಅನಂತರ ಗೆಳೆಯರಿಂದ ತಿಳೀತು.
ನಿನ್ನ ಕೋಮಲವಾದ ಫಿಲ್ಟರನ್ನು ತುಟಿಗಳಿಗೆ ಚುಂಬಿಸುತ್ತಿರುವಾಗ ನಡುಗುತ್ತಿದ್ದ ನನ್ನ ತುಟಿಗಳನ್ನು ಯಾರಾದರೂ ನೋಡುತ್ತಿದ್ದಾರಾ ಎಂದು ಆತಂಕವಾಗಿದ್ದನ್ನು ನೀನು ಗಮನಿಸಿದ್ದೆಯಾ? ಕಡ್ಡಿ ಗೀರಿ ನಿನ್ನ ಮೂತಿಗೆ ಕಿಚ್ಚು ಹೊತ್ತಿಸಿ ಅರೆಕ್ಷಣ ಮುಂದೇನು ಮಾಡಬೇಕು ಎನ್ನುವುದು ತೋಚದೆ ಹಾಗೇ ನಿಂತಿದ್ದೆ. ಯಾರಾದರೂ ನೋಡಿಬಿಟ್ಟರೆ ಎಂಬ ಆತಂಕಕ್ಕಿಂತ ನಿನ್ನೆದುರು ನಾನು ಸೋತು ಬಿಟ್ಟರೆ ಎಂಬ ಭಯ ಕಾಡುತ್ತಿತ್ತು. ನಾನು ನಾಲಾಯಕ್ಕು ಅಂತ ನೀನು ಕೈ ಬಿಟ್ಟರೆ ಎಂಬ ಅಭದ್ರತೆಯು ಕಾಡುತ್ತಿತ್ತು. ಇದೇ ದುಗುಡದಲ್ಲಿ ಉಸಿರಾಡುವುದನ್ನೂ ಮರೆತವನಂತೆ ನಿಂತಿದ್ದ ನಾನು ಒಮ್ಮೆಗೇ ಬಾಯಲ್ಲಿ ಗಾಳಿಯೆಳೆದುಕೊಂಡೆ, ಕಾದ ಸೀಸವನ್ನು ಬಾಯ ಮೂಲಕ ಎದೆಯ ಗೂಡಿಗೆ ಸುರಿದಂತಾಗಿ ಕೆಮ್ಮು ಒತ್ತರಿಸಿ ಬಂತು. ಕಣ್ಣಲ್ಲಿ ನೀರು ಚಿಮ್ಮಿ ‘ಕವ್ವು ಕವ್ವು’ ಎಂದು ಕೆಮ್ಮುತ್ತಾ ಯಾರಿಗೂ ಕಾಣದ ಮೂಲೆಯೊಂದನ್ನು ತಲುಪಿಕೊಂಡೆ. ಎದೆಯ ಬಣವೆಗೆ ಬೆಂಕಿ ಬಿದ್ದಿದೆ ಎಂಬ ವರ್ತಮಾನವನ್ನು ಹೃದಯದ ಗಂಟೆ ಢಣ ಢಣನೆ ಬಾರಿಸುವ ಮೂಲಕ ದೇಹ ತಿಳಿಸುತ್ತಿತ್ತು. ಎದೆಯನ್ನು ಹೊಕ್ಕಿದ್ದ ನಿನ್ನ ಗಂಧ ಕೆಮ್ಮಿದಾಗೆಲ್ಲಾ ಮೂಗು, ಬಾಯೊಳಗಿಂದ ಇಷ್ಟಿಷ್ಟೇ ಹೊರ ಬರುತ್ತಿತ್ತು. ಪಕ್ಕೆಯನ್ನು ಒದಾಗಲೆಲ್ಲಾ ಬೈಕು ಕೆಮ್ಮುವಾಗ ಹೊಮ್ಮುವ ಹೊಗೆಯ ಹಾಗೆ!
ಹೇಗೋ ಸಾವರಿಸಿಕೊಂಡು ನಿನನ್ನು ಇಡಿಯಾಗಿ ಹೀರಿಕೊಳ್ಳುವಷ್ಟರಲ್ಲಿ ಟೀ ತಣ್ಣಗಾಗಿತ್ತು. ನನ್ನ ಆತಂಕ, ತಳಮಳದಲ್ಲಿ ನಿನ್ನ ಫಿಲ್ಟರು ಒದ್ದೆಯಾಗಿತ್ತು. ಟೀ ಅಂಗಡಿಯ ಮುದುಕನಿಗೆ ಇನ್ನೊಂದು ಟೀ ಬಸಿದುಕೊಡುವಂತೆ ಹೇಳಿ ಮತ್ತೆ ನಿನ್ನನ್ನು ಬರಸೆಳೆದೆ. ನಳನಳಿಸುವ ಹೊಸ ಫಿಲ್ಟರು, ಘಮಘಮಿಸುವ ಬಿಳಿಯ ನಳಿಕೆ. ಮೊದಲ ಚುಂಬನದಲ್ಲಿ ಆದ ಅವಾಂತರಗಳು ಈಗಾಗಲಿಲ್ಲ. ನಾನು ಬಲು ನಾಜೂಕಾಗಿ, ನಯವಾಗಿ ನಿನ್ನನ್ನು ಹ್ಯಾಂಡಲ್ ಮಾಡಿದೆ. ನೀನೂ ಕೂಡ ನನ್ನ ಮೊದಲ ಮಿಲನದ ಒರಟೊರಟು ಬಿಹೇವಿಯರನ್ನು ಮರೆತು ಲವಲವಿಕೆಯಿಂದ ಬೆರಳುಗಳ ಮಧ್ಯೆ ಒರಗಿಕೊಂಡಿದ್ದೆ. ತಾತ ಬಸಿದುಕೊಟ್ಟ ಟೀಯಲ್ಲಿ ಒಂದೇ ಒಂದು ಗುಟುಕು ಹೀರುವುದು, ಎದೆಯ ಮೂಲೆ ಮೂಲೆ ತಲುಪುವಷ್ಟು ದೀರ್ಘವಾಗಿ ನಿನ್ನನ್ನು ಚುಂಬಿಸುವುದು, ಮತ್ತೆ ಒಂದು ಗುಟುಕು ಟೀ… ಮತ್ತೆ ನಿನ್ನ ಸುದೀರ್ಘ ಚುಂಬನ… ಅನಾಯಾಸವಾಗಿ ನನ್ನನ್ನು ಮೌನಿಯಾಗಿಸಿಬಿಟ್ಟಿದ್ದೆ ನೀನು. ಹೌದು ಆ ನಾಲ್ಕಾರು ನಿಮಿಷಗಳಲ್ಲಿ ನಾನು ಅಕ್ಷರಶಃ ಮೌನಿಯಾಗಿದ್ದೆ, ಬಾಯೂ ಬಂದ್, ಮನಸ್ಸೂ ಬಂದ್! ಯಾವ ಧ್ಯಾನದಲ್ಲೂ ಸಾಧ್ಯವಾಗದ ಮೌನವನ್ನು ಪರಿಚಯಿಸಿದ್ದೆ ನೀನು. ನಿನ್ನ ಬೀಳ್ಕೊಡುವಾಗ ನಾನು ಉನ್ಮತ್ತನಾದ ಗಂಧರ್ವನಾಗಿದ್ದೆ!
ಟೀ ಅಂಗಡಿಯ ತಾತನಿಗೆ ಚಿಲ್ಲರೆ ಎಣಿಸಿಕೊಟ್ಟು ವಾಪಸ್ಸು ಬರುವಾಗ ನಾನು ನಿರಾಳನಾಗಿದ್ದೆ. ಹಗಲಿಡೀ ಕಾಡುತ್ತಿದ್ದ ಪ್ರಿನ್ಸಿಪಾಲನ ಮುಖ ಮಾಯವಾಗಿತ್ತು. ನನ್ನ ಮಖೇಡಿತನ, ಕೀಳರಿಮೆ, ಆತಂಕಗಳು ಮನಸ್ಸಿನ ಅಂಗಳದಿಂದ ಜಾಗ ಖಾಲಿ ಮಾಡಿದ್ದವು. ಎಲ್ಲವೂ ಹಗುರಾದ ಅನುಭವ. ಲೋಕದಲ್ಲಿ ಯಾಕಿಷ್ಟು ದುಃಖವಿದೆ ಎನ್ನಿಸುವಂತೆ ಮಾಡಿದ್ದು ನೀನು ಕೊಟ್ಟ ಅನುಭೂತಿ. ರಾತ್ರಿ ಊಟವಾದೊಡನೆ ವಾರ್ಡನ್ನಿನ ಕಣ್ಣು ತಪ್ಪಿಸಿ ಬಂದು ನಿನ್ನ ತೆಕ್ಕೆಯನ್ನು ಸೇರಿದ್ದೆ. ನಿನ್ನದು ಅದೇ ಒಲುಮೆ, ಕೊಂಚವೂ ಊನವಿಲ್ಲದ ಪ್ರೀತಿ. ಸಿಕ್ಕು ಬೀಳಬಹುದೆಂಬ ಆತಂಕದಲ್ಲಿ ಹೊಡೆದುಕೊಳ್ಳುತ್ತಿದ್ದ ಎದೆಗೆ ನೀನೇ ಸಮಾಧಾನ ಹೇಳುತ್ತಿದ್ದ. ನಿನ್ನ ಪ್ರೀತಿಯ ಕಾವಿನಲ್ಲಿ ನನ್ನ ಮನಸ್ಸಿನ ಗಂಟುಗಳೆಲ್ಲಾ ಕರಗಿ ಕರಗಿ ನೀರಾದಂಥ ಭಾವ. ನಿನ್ನೊಂದಿಗಿನ ಸರಸವನ್ನು ಮುಗಿಸಿ ನೇರವಾಗಿ ಹಾಸ್ಟೆಲ್ಲಿಗೆ ನುಗ್ಗಿದರೆ ವಾರ್ಡನ್ನು ನಮ್ಮ ಗುಟ್ಟನ್ನು ತಿಳಿದುಬಿಡಬಹುದು ಎನಿಸಿ ಬೇರೆಲ್ಲಾ ಪ್ರೇಮಿಗಳು ಮಾಡುವಂತೆ ನಮ್ಮ ಮಿಲನದ ಸುಳಿವು ಅಳಿಸಿಹಾಕಲು ಎರಡು ಕ್ಲೊರೊಮಿಂಟ್ ಬಾಯಿಗೆ ಎಸೆದುಕೊಂಡು ನಡೆದೆ. ಮರುದಿನ ಬೆಳಿಗ್ಗೆ ನಿನ್ನನ್ನೊಮ್ಮೆ ಕಂಡು ಬೇಕಿದ್ದ ಸ್ಪೂರ್ತಿ, ಧೈರ್ಯವನ್ನೆಲ್ಲಾ ಪಡೆದುಕೊಂಡು ಪ್ರಿನ್ಸಿಪಾಲರ ಎದುರು ಹೋದೆ. ನನ್ನ ಪ್ರಾಮಾಣಿಕ ಕ್ಷಮಾಪಣೆಯನ್ನು ಮಾನ್ಯ ಮಾಡಿ ನನ್ನ ತಪ್ಪು ಮಾಫಿ ಮಾಡಿದರು. ಕೂಡಲೇ ನಿನಗೆ ಅದನ್ನು ತಿಳಿಸಿ ಅಪ್ಪಿ ಮುದ್ದಾಡ ಬೇಕು ಅನ್ನಿಸಿತ್ತು ಗೊತ್ತಾ?
(ಮುಂದಿನ ಸಂಚಿಕೆಗೆ)
ಓ ಮಾಯಾಂಗನೆ ನಗರವೇ!
ನಾನು ಕಲಾವಿದ. ನೆನಪಾಗಲಿಲ್ಲವಾ?ಊರೆಲ್ಲಾ ಸವಿ ನಿದ್ದೆಯಲ್ಲಿ ಮುಳುಗಿ ದಣಿವು ಕಳೆದುಕೊಳ್ಳುತ್ತಾ ಸವಿಗನಸು ಕಾಣುತ್ತಿರುವಾಗ ನಾನು ನದಿಯ ದಂಡೆಯ ಮೇಲೆ ಕುಳಿತು ಶುಭ್ರ ಬಿಳಿಯ ಕಾಗದಕ್ಕೆ ಬಣ್ಣದ ಕುಂಚದ ಸ್ಪರ್ಶ ನೀಡುವುದರಲ್ಲಿ ಮಗ್ನನಾಗಿರುತ್ತೇನೆ. ಮುಸ್ಸಂಜೆಯ ಹೊತ್ತಿನಲ್ಲಿ ಮರದ ಕೆಳಗೆ ಕುಳಿತು ನಾಲ್ಕು ಸಾಲು ಗೀಚಿ ಬಿಸಾಕುವುದಕ್ಕಾಗಿ ಗಂಟೆ ಗಟ್ಟಲೆ ಧ್ಯಾನಸ್ಥನಾಗಿರುತ್ತೇನೆ. ನಿಸರ್ಗದ ನಾಡಿ ಮಿಡಿತಕ್ಕೆ ನನ್ನ ದೇಹವನ್ನೇ ಶ್ರುತಿಗೊಳಿಸಿ ಕುಣಿಯುತ್ತಿರುತ್ತೇನೆ. ಗಂಟಲಿನಿಂದ ಹೊರಡುವ ಯಃಕಶ್ಚಿತ್ ಧ್ವನಿಯಲ್ಲಿ ಅಲೌಕಿಕ ಸಂದೇಶವನ್ನು ಹುಡುಕುತ್ತಾ ಹಾಡುತ್ತಿರುತ್ತೇನೆ. ಊರ ಹೊರಗಿನ ಮೈದಾನದಲ್ಲಿ ಕಲ್ಲು ಬಂಡೆಯನ್ನು ಕಟೆಯುತ್ತಾ ನನ್ನೊಳಗಿನ ಅಮೂರ್ತ ಭಾವಕ್ಕೆ ಆಕಾರವನ್ನು ಕೊಟ್ಟು ತಿಕ್ಕಿ ತೀಡುತ್ತಿರುತ್ತೇನೆ. ಇಹ ಪರವನ್ನು ಮರೆತು ಯಾವುದೋ ಪಾತ್ರದ ಪರಕಾಯ ಪ್ರವೇಶ ಮಾಡಿ ಒಮ್ಮೆ ರಾಜನಂತೆಯೂ ಮತ್ತೊಮ್ಮೆ ಭಿಕ್ಷುಕನಂತೆಯೂ ಹುಚ್ಚುಹುಚ್ಚಾಗಿ ಮಾತನಾಡುತ್ತಿರುತ್ತೇನೆ. ನೆನಪಾಯಿತಾ? ಹ್ಹಾ! ನಾನು ಅದೇ ಕಲಾವಿದ.
ನೀ ಹೇಗಿದ್ದೀ? ಹೇಗಿದ್ದೇನೆ ಅಂತ ಕೇಳಿಕೊಳ್ಳಲಿಕ್ಕೂ ಬಹುಶಃ ನಿನಗೆ ಪುರುಸೊತ್ತಿಲ್ಲ ಅಂತ ಕಾಣುತ್ತೆ. ಒಂದೇ ಸಮನೆ ಓಡುತ್ತಿರುವೆ. ಲಕ್ಷ ಅಶ್ವಧ ಸಾರೋಟಿನಲ್ಲಿ ಆಸೀನಳಾಗಿ ಓಡುತ್ತಲೇ ಇರುವೆ. ಕನಸುಗಳನ್ನು ಬೆನ್ನಟ್ಟಿ ಓಡುತ್ತಿರುವೆ. ಸಿದ್ಧಾಂತಗಳನ್ನು ಬೆನ್ನಟ್ಟಿ ಓಡುತ್ತಿರುವೆ. ನಿನ್ನ ಕಾಲುಗಳ ಕಸುವನ್ನು ಮೆಚ್ಚಲೇ ಬೇಕು. ಈ ವೇಗ ಪಡೆಯುವುದಕ್ಕೆ ನೀನು ಅದೆಷ್ಟು ಬಲಿದಾನಗಳನ್ನು ಮಾಡಿದ್ದೀಯೆ. ಅದೆಷ್ಟು ರಾತ್ರಿಗಳ ಸವಿ ನಿದ್ದೆಯನ್ನು ನಿರ್ದಯವಾಗಿ ಸುಟ್ಟು ಬಿಟ್ಟಿದ್ದೀಯೆ. ಅವೆಷ್ಟು ಸಣ್ಣ ಸಣ್ಣ ಸುಖಗಳಿಗೆ ನೀನು ಬೆನ್ನು ಹಾಕಿ ಬಂದು ಬಿಟ್ಟಿದ್ದೀಯೆ. ರಾಕ್ಷಸನ ರಭಸದಲ್ಲಿ ಓಡುತ್ತಿರುವೆ. ನೀನು ಓಡುತ್ತಿರುವ ದಿಕ್ಕಾದರೂ ನಿನಗೆ ತಿಳಿದಿರಲಿ ಎಂದು ಆಶಿಸುವೆ.
ನಿನ್ನ ಬೆಡಗು ಬಿನ್ನಾಣಗಳನ್ನು ಕಂಡು ನಾನು ಅನೇಕ ವೇಳೆ ಮೈಮರೆತಿದ್ದೇನೆ. ನಿನ್ನ ಮೋಹಕ ಸೌಂದರ್ಯದ ಮುಖವಾಡದ ಹಿಂದೆ ಎಂಥಾ ಕ್ರೂರತೆ ಇದೆ ಅನ್ನೋದು ತಿಳಿಯದೆ ಮುಗ್ಧವಾಗಿ ಆಕರ್ಷಿತನಾಗಿದ್ದೇನೆ. ತನ್ನ ಯೌವನವನ್ನು ಕಾಪಾಡಿಕೊಳ್ಳಲು ಮೈನೆರೆದ ಯುವತಿಯರ ರಕ್ತದಿಂದ ಅಭಿಷೇಕ ಮಾಡಿಕೊಂಡು ಕೊಬ್ಬಿದ ಮಾಟಗಾತಿಯಂಥ ನಿನ್ನ ವಾಸ್ತವದ ರೂಪವನ್ನು ಕಂಡು ನಾನು ದಿಗ್ಮೂಢನಾಗಿದ್ದೇನೆ. ನಿನ್ನ ಆಕಾಶ ಚುಂಬಿಸುವ ಕಟ್ಟಡಗಳು, ಒಂದು ಒಣಗಿದ ಎಲೆಯನ್ನೂ ಮಲಗಲು ಬಿಡದಷ್ಟು ಬ್ಯುಸಿಯಾದ, ಸ್ವಚ್ಛವಾದ ನಿನ್ನ ರಸ್ತೆಗಳು, ಕತ್ತಲಲ್ಲಿ ಕಣ್ಣು ಕೋರೈಸುವ ನಿನ್ನ ಕಾಂತಿ, ಝಗಮಗಿಸುವ ನಿನ್ನ ಒಡವೆಗಳು- ಊಹುಂ, ಇವೆಲ್ಲವನ್ನು ವರ್ಣಿಸಲು ನನ್ನಲ್ಲಿ ಪದಗಳಿಲ್ಲ. ಹೌದು, ಕವಿಯೂ ಸೋಲುತ್ತಾನೆ ಈ ಪ್ರಯತ್ನದಲ್ಲಿ.
ನಿನ್ನ ಪರಿವಾರವಾದರೂ ಎಂಥದ್ದು? ನರ ನಾಡಿಗಳಲ್ಲಿ ಉನ್ಮಾದವೇ ಹರಿಯುತ್ತಿರುವ ಯುವಕರು ಎಲ್ಲೆಲ್ಲೂ ಕಾಣುತ್ತಾರೆ. ತೋಳುಗಳಲ್ಲಿ ಉಕ್ಕಿನ ಕಠಿಣತೆ, ಕೈಗಳಲ್ಲಿ ಮಿಂಚಿನ ಚಾಕಚಕ್ಯತೆ, ಕಾಲುಗಳಿಗೆ ಹುಚ್ಚು ನದಿಯ ವೇಗ ಬೆನ್ನಟ್ಟುವ ತುಡಿತ. ಅವರಿಗೂ ನೀನು ನಿನ್ನ ರಾಕ್ಷಸ ಹಸಿವೆಯನ್ನು ಅಂಟಿಸಿಬಿಟ್ಟಿರುವೆ. ರಾಕ್ಷಸನ ಹಸಿವಿರುವವನು ರಾಕ್ಷಸನ ಹಾಗೇ ದುಡಿಯಬೇಕು, ರಾಕ್ಷಸನ ಹಾಗೇ ತಿನ್ನಬೇಕು ಅಲ್ಲವೇ? ಅವರೂ ಓಡುತ್ತಿದ್ದಾರೆ. ಬೆನ್ನಟ್ಟುತ್ತಿದ್ದಾರೆ. ಕೆಲವರು ಹೆಸರಿನ, ಪ್ರಸಿದ್ಧಿಯ ಹಿಂದೆ ಬಿದ್ದಿದ್ದಾರೆ. ಕೆಲವರು ಹಣದ ಕಂತೆಯ ಹಿಂದೆ ಓಡುತ್ತಿದ್ದಾರೆ. ಇನ್ನೂ ಕೆಲವರು ಪ್ರೀತಿ, ನೆಮ್ಮದಿ, ಮನಃಶಾಂತಿಗಳ ಹಿಂದೆ ರೇಸಿಗೆ ಬಿದ್ದವರ ಹಾಗೆ ಓಡುತ್ತಿದ್ದಾರೆ, ಅವೂ ಸಹ ಗಳಿಸಬಹುದಾದ ವಸ್ತುಗಳೇನೋ ಎಂಬ ಭ್ರಮೆಯಲ್ಲಿ! ಒಂದೇ ಸಮನೆ ಓಡುತ್ತಿರುವ ಅವರಿಗೆ ಕೂತು ದಣಿವಾರಿಸಿಕೊಂಡು ಮುಂದಿನ ದಾರಿಯನ್ನು ನಿರ್ಧರಿಸಿ ಮುಂದೆ ಸಾಗುವ ವ್ಯವಧಾನವನ್ನೂ ನೀನು ಕರುಣಿಸಿಲ್ಲ. ದಣಿವಾರಿಸಿಕೊಳ್ಳಲು ಕೂತವನನ್ನು ಹೂತು ಹಾಕಿಬಿಡುತ್ತೀಯೆ. ಎಲ್ಲರಿಗೂ ಓಟದ ಚಿಂತೆ, ಎಲ್ಲರಿಗೂ ಹಾದಿಗಿಂತ ಹೆಜ್ಜೆ ಸ್ಪಷ್ಟ.
ನಂಗೆ ಗೊತ್ತು. ಹೀಗೆ ಕುಳಿತು ನಾನು ನಿನ್ನ ಬಗ್ಗೆ ಮಾತನಾಡುತ್ತಿರುವುದು ನಿನಗೆ ಕಿರಿಕಿರಿ ಉಂಟು ಮಾಡುತ್ತಿದೆ. ನಾನೂ ನಿನ್ನೊಳಗಿನ ರೇಸಿನಲ್ಲಿ ಕುದುರೆಯಾಗಿ ಓಡಬೇಕು ಅನ್ನೋದು ನಿನ್ನ ಆಸೆ. ಆದರೇನು ಮಾಡಲಿ ನನಗೆ ಓಡುವ ಉನ್ಮಾದವೇ ಇಲ್ಲ. ಯಾವ ದಿಕ್ಕಿನತ್ತ ತಿರುಗಿ ನೋಡಿದರೂ ಮಾಯಾ ಮೃಗವೇ ಕಾಣುವಾಗ ಓಡಬೇಕಿರುವುದಾದರೂ ಎಲ್ಲಿಗೆ? ನೀನು ಓಡುವುದಕ್ಕೆ ಕೊಡಮಾಡುವ ಸ್ಪೂರ್ತಿ, ಉಚಾವಣೆ, ಒಡ್ಡುವ ಸವಾಲುಗಳು ಇವೆಲ್ಲದರ ಹಿಂದಿರುವ ಶುದ್ಧ ನಿರರ್ಥಕತೆಯನ್ನು ಕಂಡವನಿಗೆ ನಿನ್ನ ಯಾವ ಜಾಲವೂ ಆಕರ್ಷಕವಾಗಿ ಕಾಣದು. ಅದಕ್ಕೇ ನಾನು ಸಂಭ್ರಮದಿಂದ ಬಂದು ನಿನ್ನ ತೆಕ್ಕೆಯಲ್ಲಿ ಬೀಳುವುದಿಲ್ಲ. ನೀನು ಹಬ್ಬಿಸಿರುವ ಜಾಲದಲ್ಲಿ ಸಿಕ್ಕಿಹಾಕಿಕೊಂಡು ಕೈ ಕಾಲು ಬಡಿಯುತ್ತಾ ಕುಟುಕು ಉಸಿರಾಗಿ ಒದ್ದಾಡುತ್ತಾ ಮರಣ ಭಿಕ್ಷೆಗಾಗಿ ನಿನ್ನೆದುರು ಕೈ ಚಾಚಿ ನಿಲ್ಲುವುದಿಲ್ಲ. ಓ ಮಾಯಾಂಗನೆ ನಗರವೇ, ನೀನು ನನ್ನ ಮುಟ್ಟುವುದಕ್ಕೂ ಸಾಧ್ಯವಿಲ್ಲ. ನೆನಪಿಟ್ಟುಕೋ!
ಹೌದು, ನನಗೆ ಗೊತ್ತು. ನಿನ್ನ ಹಂಗಿನರಮನೆಯಲ್ಲಿ ನನ್ನ ಸ್ಥಾನ ಯಾವುದು ಅಂತ. ನನಗೆ ಅದರ ಬಗ್ಗೆ ಬೇಸರವಿಲ್ಲ. ನಿನ್ನ ತೆಕ್ಕೆಗೆ ಬಿದ್ದು ನಿನ್ನ ರೇಸಿನಲ್ಲಿ ಕುದುರೆಗಳಾಗಿ ಓಡುವವರಿಗೆ ನೀನು ನನ್ನನ್ನು ಹೇಗೆ ಪರಿಚಯಿಸುವೆ ಎಂಬುದು ನನಗೆ ಗೊತ್ತು. ನಾನು ಅವರ ಕಣ್ಣುಗಳಲ್ಲಿ ಶುದ್ಧ ಗೇಲಿಯ ವಸ್ತುವಾಗಿರುತ್ತೇನೆ ಎಂಬುದನ್ನು ನಾನು ಬಲ್ಲೆ. ಕುಡಿಯಲು ಹಾಲು ಕೊಟ್ಟ ತಾಯಿ ತಲೆಯಲ್ಲಿ ವಿಷವ ಬಿತ್ತಿದರೆ ಯಾವ ಮಗುವಿಗೆ ತಾನೆ ತಿಳಿಯುತ್ತದೆ. ನನಗೆ ನಿನ್ನ ಮಕ್ಕಳ ಬಗ್ಗೆ ಬೇಸರವಿಲ್ಲ. ಅವರ ಕಣ್ಣಿಗೆ ನಾನು ನಿರುಪಯುಕ್ತ ಕ್ರಿಮಿಯಾಗಿ, ಆಸರೆಗೆ ಹಂಬಲಿಸಿ ಅಂಟಿಕೊಂಡ ಪ್ಯಾರಸೈಟ್ ಆಗಿ, ಓಡಲು ಬಾರದ ಹೆಳವನಾಗಿ, ಪರಿಶುದ್ಧ ಸೋಮಾರಿಯಾಗಿ ಕಾಣುತ್ತೇನೆ ಎಂಬುದನ್ನು ನಾನು ಅರಿತಿದ್ದೇನೆ. ತಮ್ಮ ಓಟ ನನಗೆ ಆದರ್ಶವಾಗಲಿ, ನನಗೆ ಸ್ಪೂರ್ತಿಯಾಗಲಿ ಎಂದು ಅವರು ತೀರಾ ಪ್ರಾಮಾಣಿಕವಾಗಿ ಹಂಬಲಿಸಿ ಪ್ರಯತ್ನಿಸುವುದನ್ನು ಕಂಡು ಮರುಗಿದ್ದೇನೆ. ನನ್ನ ಧ್ಯಾನ ಅವರಿಗೆ ಸೋಮಾರಿತನವಾಗಿ ಕಂಡರೆ, ನನ್ನ ಏಕಾಂತವನ್ನು ಅವರು ಮುಖಹೇಡಿತನದ ಹಾಗೆ ಭಾವಿಸಿದರೆ, ನನ್ನ ಕ್ರಿಯಾಶೀಲತೆಯನ್ನು ಅವರು ಹುಚ್ಚಾಟ ಎಂದು ಅರ್ಥಮಾಡಿಕೊಂಡರೆ ನಾನೇನು ಮಾಡಲು ಸಾಧ್ಯ? ಅವರು ಹಾಗೆ ನನ್ನನ್ನು ಅವಮಾನಿಸಿದಾಗಲೆಲ್ಲಾ ನಾನು ನಿನ್ನ ನೆನೆಯುತ್ತೇನೆ. ನಿನ್ನ ವಿಕಟ ಹಾಸವನ್ನು ಸ್ಮರಿಸುತ್ತೇನೆ. ಅವರ ಮುಗ್ಧತೆಗಾಗಿ ನನ್ನಲ್ಲಿ ಅನುಕಂಪ ಮೂಡುತ್ತದೆ. ಓ ನಗರವೇ ನಿನ್ನ ಮಕ್ಕಳ ನೀ ಚೆನ್ನಾಗಿ ನೋಡಿಕೋ?
ಇಂತಿ,
ಒಬ್ಬ ಕಲಾವಿದ
ಮಾರ್ಚ್ ಎಂಟು ಬಂದಿತು, ಕಳೆದೂ ಹೋಯಿತು- ಪ್ರತಿವರ್ಷದಂತೆ. ಆ ದಿನವನ್ನು ಜಗತ್ತು ಮಹಿಳೆಯರಿಗಾಗಿ ಮೀಸಲಿಟ್ಟಿದೆ. ಆ ದಿನ ಮಹಿಳೆಗೆ ಜಗತ್ತು ಶುಭಾಶಯ ಕೋರುತ್ತದೆ. ಆಕೆಯ ಸಾಧನೆಯನ್ನು ಪತ್ರಿಕೆಗಳ ಪುರವಣಿಗಳು ಹಾಡಿ ಹೊಗಳುತ್ತವೆ. ಕೆಲವು ಕಾಲಂಗಳಲ್ಲಿ ಮಹಿಳೆಯರು ತಮ್ಮ ವಾದಗಳನ್ನು ಮುಂದಿಡುತ್ತಾರೆ. ತಮ್ಮ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆ ಮಾತನಾಡುತ್ತಾರೆ. ಕೆಲವು ಇಂಗ್ಲೀಷ್ ಪತ್ರಿಕೆಗಳಲ್ಲಿ ಹೆಸರಿಲ್ಲದ ಅನಾಮಿಕ ಸಮೀಕ್ಷೆಗಳಲ್ಲಿ ಹದಿಹರೆಯದ ಹುಡುಗಿಯರು ತಮಗೆ ಇಷ್ಟಬಂದ ಹಾಗೆ ಹಾಗೂ ಇಷ್ಟವಾಗುವಷ್ಟು ಪ್ರಮಾಣದ ಬಟ್ಟೆಯನ್ನು ಹಾಕಿಕೊಂಡು ಹೊರಕ್ಕೆ ಬರಲು ಅನುಮತಿ ಕೊಡದ ಸಮಾಜದ ಪುರುಷ ಪ್ರಾಧಾನ್ಯತೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಇನ್ನು ಕೆಲ ಗಂಡಸರು ಹೆಣ್ಣು ಎಂದರೆ ಹಾಗಿರಬೇಕು, ಕೈ ಎತ್ತಿ ಮುಗಿಯುವ ಹಾಗೆ ಎಂದು ಗತವಾದ ಹೆಣ್ಣುಮಕ್ಕಳ ಫೋಟೋಗಳನ್ನು ತೋರಿಸಿ ಕಣ್ಣು ಮಿಟುಕಿಸುತ್ತಾರೆ. ಒಟ್ಟಿನಲ್ಲಿ ಆ ದಿನ ಮಾತ್ರ ಎಲ್ಲಾ ಹೆಣ್ಣು ದನಿಗಳಿಗೂ ಕಿವಿಗಳಿರುತ್ತವೆ. ಆದರೆ ನನ್ನ ದನಿಗೆ?
ಹೌದು ನಾನು ಹೆಣ್ಣು. ತಾಯ ಗರ್ಭದಲ್ಲಿ ಅರಳಿಕೊಂಡು ಜೀವ ತಳೆದು ಧರೆಯ ಮೇಲಿಳಿಯುವ ಮೊದಲೇ ನನ್ನ ಕತ್ತು ಹಿಸುಕಿ ಸಾಯಿಸಿಬಿಡುತ್ತಾರೆ. ಇದು ಡಾಕ್ಟರುಗಳ ಕ್ರೌರ್ಯ ಮಾತ್ರವಾಗಿದ್ದರೆ ನನಗೆ ನೋವಾಗುತ್ತಿರಲಿಲ್ಲ. ಆದರೆ ನನ್ನ ಅಪ್ಪ, ನನ್ನಂತೇ ಹೆಣ್ಣಾಗಿರುವ ಅಮ್ಮ, ಅಜ್ಜಿಯರು ಸೇರಿ ನನ್ನ ಕೊಲೆಗೆ ಪೌರೋಹಿತ್ಯವಹಿಸುತ್ತಾರೆ ಎಂಬುದನ್ನು ಕೇಳಿ ನನ್ನ ಹೃದಯ ಒಡೆದುಹೋಗುತ್ತದೆ. ನಮ್ಮ ದೇಶದಲ್ಲಿ ವರ್ಷವೊಂದಕ್ಕೇ ಮುವ್ವತ್ತು ಲಕ್ಷ ಸಂಖ್ಯೆಯ ನನ್ನಂಥ ಹೆಣ್ಣು ಜೀವಗಳು ಬೆಳಕು ಕಾಣುವ ಮುನ್ನವೇ ಕಣ್ಣು ಮುಚ್ಚುತ್ತಿವೆ. ಬ್ಯೂಟಿ ಪಾರ್ಲರುಗಳಿಂದ ಹೊರಬರುತ್ತಿರುವ ‘ಲೇಡಿ’ಗಳ ಹೈ ಹೀಲ್ ಗಳ ನಡುವೆ ನನ್ನ ದನಿ ಕೇಳುತ್ತಿದೆಯಾ?
ಹೆಣ್ಣನ್ನ ದೇವಿ ಎಂದು ಕರೆದವರ ನಾಡು ನಮ್ಮದು. ಹತ್ತು ದೇವರುಗಳಿಗಿಂತ ಹೆತ್ತ ತಾಯಿ ದೊಡ್ಡವಳು ಎಂದು ಬೋಧಿಸಿದ ಸಂಸ್ಕೃತಿ ನಮ್ಮದು. ಹೆಣ್ಣನ್ನು ಕ್ಷಮಯಾ ಧರಿತ್ರಿ ಎನ್ನುತ್ತೇವೆ. ಭೂಮಿಯನ್ನು ತಾಯಿ ಎಂದು ಪೂಜಿಸುತ್ತೇವೆ. ದೇಶವನ್ನು ಭಾರತಮಾತೆ ಎಂದು ಬಾಯ್ತುಂಬಾ ಕರೆದು ಆರಾಧಿಸುತ್ತೇವೆ. ಎಲ್ಲೆಲ್ಲಿ ನಾರಿಯನ್ನು ಗೌರವದಿಂದ ಕಾಣುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂದು ಹಾಡಿ ಹೊಗಳಿದವರು ನಮ್ಮ ಹಿರಿಯರು. ಹೆಣ್ಣು ಸಮಾಜದ ಕಣ್ಣು ಎಂಬ ಆದರ್ಶ ನಮ್ಮ ನಾಡಿನದು ಎಂದು ಬೀಗುವ ಪಂಡಿತೋತ್ತಮರು, ದೇಶಪ್ರೇಮಿಗಳು, ಸಂಸ್ಕಾರವಂತರ ನಮ್ಮ ನಾಡಿನಲ್ಲಿ ಹಾಡಹಗಲಲ್ಲಿ ನನ್ನಂತಹ ಸಾವಿರಾರು ಭ್ರೂಣಗಳ ಕೈಯಿಂದ ಬದುಕುವ ಹಕ್ಕನ್ನು ಕಿತ್ತುಕೊಳ್ಳುತ್ತಿರುವುದು ಯಾವ ಸಂಸ್ಕೃತಿ? ನನಗೆ ನಿಮ್ಮ ಶ್ಲೋಕಗಳು ಬೇಕಿಲ್ಲ, ದೇವಿಯ ಪಟ್ಟ ಬೇಕಿಲ್ಲ, ಕ್ಷಮಯಾ ಧರಿತ್ರಿಯ ಗುಣಗಾನ ಬೇಕಿಲ್ಲ ನನಗೆ ನನ್ನ ಬದುಕುವ ಹಕ್ಕನ್ನು ಕೊಟ್ಟುಬಿಡಿ. ಹೀಗೆ ಕೇಳುವುದು ನಿಮ್ಮ ಧರ್ಮ ಪಠ್ಯಗಳ ಪ್ರಕಾರ ಅಪರಾಧವಾ?
ಹೆಣ್ಣು ಹೊರೆ ಅಂತ ನಂಬಿಕೊಂಡು, ನಂಬಿಸುತ್ತಾ ಬಂದಿರುವ ನಿಮಗೆ ನಿಮ್ಮ ಸಂಸ್ಕೃತಿ ಜಗತ್ತಿನಲ್ಲೇ ಶ್ರೇಷ್ಠದ್ದು ಎಂದುಕೊಂಡು ತಿರುಗಾಡಲು ಹೇಗೆ ತಾನೆ ಧೈರ್ಯ ಬಂದೀತು? ಒಂದು ಗಂಡು ಮಗುವಾಗದಿದ್ದರೆ ಜನ್ಮವೇ ವ್ಯರ್ಥ ಎಂದು ಹಂಬಲಿಸುವ ತಾಯ್ತಂದೆಯರಿಗೆ ತಮಗೆ ಬದುಕುವ ಹಕ್ಕನ್ನು ನೀಡಿದ, ಭೂಮಿಗಿಳಿಯುವ ಅವಕಾಶವನ್ನು ಕೊಟ್ಟಾಕೆಯೂ ಒಬ್ಬ ತಾಯಿ, ಒಬ್ಬ ಹೆಣ್ಣು ಎಂಬುದರ ಬಗ್ಗೆ ಕೃತಜ್ಞತೆ ಬೇಡವೇ? ಹೆಣ್ಣು ಮಕ್ಕಳನ್ನು ಕೊಲ್ಲುತ್ತಿರುವುದು ಪುರುಷಪ್ರಧಾನವಾದ ವ್ಯವಸ್ಥೆ, ಪುರುಷರ ಸರಿಸಮಾನವಾಗಿ ಹೆಣ್ಣು ಬೆಳೆಯುತ್ತಾಳೆ ಇದನ್ನು ಸಹಿಸಲಾಗದ ಪುರುಷ ಸಮಾಜ ಹೆಣ್ಣನ್ನು ಕತ್ತು ಹಿಸುಕುತ್ತಿದೆ ಎಂದು ವಾದಿಸುವ ಸ್ತ್ರೀವಾದಿಗಳಿದ್ದಾರೆ. ಹೆಣ್ಣಿಗೆ ಹೆಣ್ಣೇ ಶತ್ರು. ತನ್ನ ಸೊಸೆಯ ಗರ್ಭದಲ್ಲಿ ಗಂಡು ಹುಳವೇ ಹುಟ್ಟಲಿ ಎಂದು ಹಂಬಲಿಸುವಾಕೆ ಅತ್ತೆ. ಆಕೆ ಹೆಣ್ಣಲ್ಲವೇ? ತನ್ನದೇ ಒಡಲ ಕುಡಿಯ ಕತ್ತು ಹಿಸುಕಿ ಸಾಯಿಸಲು ಸಮ್ಮತಿಸುವ ತಾಯಿ ಹೆಣ್ಣಲ್ಲವೇ ಎಂದು ಪ್ರತಿವಾದವನ್ನೊಡ್ಡುವ ಪುರುಷ ಪುಂಗವರು ಇದ್ದಾರೆ. ಆದರೆ ಇವರ ಅಬ್ಬರದ ನಡುವೆ ನನ್ನ ಎದೆಯ ದನಿಯನ್ನು ಕೇಳುವವರು ಯಾರು?
ಹೆಣ್ಣು ಈಗ ಅಬಲೆಯಲ್ಲ. ಆಕೆ ಹುಡುಗರಿಗಿಂತ ಬುದ್ಧಿವಂತಳಾಗುತ್ತಿದ್ದಾಳೆ. ಆಕೆ ಶ್ರದ್ಧೆಯಿಂದ ಓದುತ್ತಿದ್ದಾಳೆ. ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದಾಳೆ. ಸಹನೆಯಿಂದ ಯಶಸ್ಸಿನ ಒಂದೊಂದೇ ಮೆಟ್ಟಿಲುಗಳನ್ನು ಏರುತ್ತಿದ್ದಾಳೆ. ಆಕೆ ಪುರುಷರಿಗೆ ಸರಿ ಸಮಾನಳಾಗಿ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ತೋರುತ್ತಿದ್ದಾಳೆ. ಪುರುಷರಿಗಿಂತ ಹೆಚ್ಚಿನ ಗುಣಮಟ್ಟದ ಕೆಲಸವನ್ನು ಆಕೆ ಮಾಡಿ ತೋರಿಸುತ್ತಿದ್ದಾಳೆ. ಪುರುಷರು ತಮ್ಮಿಂದ ಬಚ್ಚಿಟ್ಟಿದ್ದ ಎಲ್ಲಾ ಅವಕಾಶಗಳನ್ನು ಕಸಿದುಕೊಂಡು ಬೆಳೆಯುತ್ತಿದ್ದಾಳೆ. ಈಗ ಹೆಣ್ಣು ಹುಟ್ಟಿತೆಂದು ನಿಟ್ಟುಸಿರಡಬೇಕಿಲ್ಲ. ನಿಮ್ಮ ಹೆಣ್ಣು ಮಗಳು ನಾಳಿನ ಕಿರಣ್ ಬೇಡಿಯಾಗಬಹುದು, ನಾಳಿನ ಇಂದಿರಾ ಗಾಂಧಿಯಾಗಬಹುದು. ನಿಮ್ಮ ಕೊನೆ ಕಾಲದಲ್ಲಿ ಈಗ ಗಂಡು ಮಕ್ಕಳು ಕೈಬಿಡುತ್ತಾರೆ ಆದರೆ ಹೆಣ್ಣು ಮಕ್ಕಳು ನಿಮ್ಮನ್ನು ತನ್ನ ಮಗುವಿನೊಡನೆ ಮಗುವಾಗಿ ಸಾಕುತ್ತಾಳೆ. ಹೆಣ್ಣು ಮಕ್ಕಳನ್ನು ಸಾಕಿ ಎಂದು ಹೇಳುತ್ತಿರುವುದನ್ನೇ ನನ್ನ ಪರವಾದ ದನಿ ಎಂದು ನಂಬುತ್ತಿದೆ ಜಗತ್ತು. ಇದರ ಹಿಂದಿನ ಸ್ವಾರ್ಥದ ನೆರಳನ್ನು ನೋಡಿ ನಾನು ಬೆಚ್ಚುತ್ತಿದ್ದೇನೆ. ನಿಮಗೆ ಉಪಯೋಗವಾಗುತ್ತಾಳೆ ಅದಕ್ಕೇ ಹೆಣ್ಣನ್ನು ಸಾಕಿ ಬೆಳಸಿ ಎಂದು ನನ್ನನ್ನೂ ತಮ್ಮ ಕಂಪನಿಗಳಲ್ಲಿ ಮಾಡುವ ಇನ್ ವೆಸ್ಟ್ ಮೆಂಟಿನ ಹಾಗೆ ಕಾಣುತ್ತಿರುವವರಿಗೆ ನನ್ನೆದೆಯ ದನಿ ಕೇಳಲು ಸಾಧ್ಯವೇ?
ನನಗೆ ಬದುಕುವ ಹಕ್ಕನ್ನು ಕೊಟ್ಟಿರುವುದು ಆ ದೇವರು. ಆತನೇ ಅದನ್ನು ಹಿಂದಕ್ಕೆ ಪಡೆಯುವವರೆಗೂ ಅದನ್ನು ಕಿತ್ತುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಜನ್ಮ ಕೊಟ್ಟ ತಂದೆಯೇ ಆಗಲಿ, ಹೊತ್ತು ಹೆರುವ ತಾಯೇ ಆಗಲಿ, ಸಾಕಿ ಪೋಷಿಸುವ ಸಮಾಜವಾಗಲಿ ನನ್ನ ಬಾಳ್ವೆಯ ಹಕ್ಕನ್ನು ನನ್ನಿಂದ ಕಸಿಯಲು ಸಾಧ್ಯವಿಲ್ಲ. ಹಾಗೆ ಮಾಡುವುದು ಹಗಲೇ ಮಾಡುವ ಕೊಲೆಯಂಥದ್ದು. ಐದು ನಿಮಿಷಕ್ಕೊಂದರಂತೆ ಹೆಣ್ಣು ಭ್ರೂಣವನ್ನು ಮಣ್ಣು ಮಾಡುತ್ತಿರುವ ನಿಮ್ಮ ಸಮಾಜದ ಕೃತಕ ನಾಗರೀಕತೆಗೆ ನನ್ನ ಧಿಕ್ಕಾರವಿರಲಿ. ಹೆಣ್ಣು ಅನುಪಯುಕ್ತೆ, ಆಕೆ ಅಪವಿತ್ರಳು, ಆಕೆ ಒಂದು ಹೊರೆ, ಆಕೆ ಅಬಲೆ ಎಂದು ಸಾರುವ ಧರ್ಮಗಳಿಗೆ, ಧರ್ಮ ಗ್ರಂಥಗಳಿಗೆ ನನ್ನ ಧಿಕ್ಕಾರವಿರಲಿ. ಹೆಣ್ಣು ಸರ್ವಶಕ್ತೆ, ಆಕೆ ದುಡಿಯಬಲ್ಲಳು, ಆಕೆ ಗಂಡಸರಿಗಿಂತ ಹೆಚ್ಚು ಹಣ ಮಾಡಬಲ್ಲಳು, ಆಕೆ ತಂದೆ ತಾಯಿಯರನ್ನು ಮುದಿವಯಸ್ಸಿನಲ್ಲಿ ಕಾಪಾಡಬಲ್ಲಳು ಎಂದು ಆಕೆಯ ವ್ಯಕ್ತಿತ್ವವನ್ನು ಗುರುತಿಸದೆ, ಆಕೆಯನ್ನು ಒಂದು ಕಮಾಡಿಟಿಯ ಹಾಗೆ, ಇನ್ವೆಸ್ಟ್ ಮೆಂಟಿನ ಹಾಗೆ ನೋಡುವವರಿಗೆ ಧಿಕ್ಕಾರವಿರಲಿ…
ಇಂತಿ,
ಒಂದು ಹೆಣ್ಣು ಭ್ರೂಣ
ಇಂಥದ್ದೊಂದು ಪತ್ರವನ್ನು ನೀವು ಯಾರಿಗೂ ಬರೆದಿರಲಾರಿರಿ. ಯಾರಿಂದಲೂ ಪಡೆದಿರಲಾರಿರಿ. ಇಂತಹ ಪತ್ರ ಸಿಗುವುದು ಇಲ್ಲಿ ಮಾತ್ರ.ಇದು ‘ ಹೀಗೊಂದು ಪತ್ರ’. ಪ್ರೀತಿಯ ಬಗ್ಗೆ ಎಲ್ಲರೂ ಪುಟಗಟ್ಟಲೆ ಬರೀತಾರೆ. ಆದರೆ ಪ್ರೀತಿಗೂ ಮಾತನಾಡೋಕೆ ಏನಾದರೂ ಇದೆಯೇ?
ಹೀಗೆ ನಾನು ಪತ್ರ ಬರೆಯುತ್ತಿರುವುದು ಇದೇ ಮೊದಲು. ನಿನಗೆ ಆಶ್ಚರ್ಯವಾಗಬಹುದು, ನನಗೂ ಮಾತನಾಡುವುದಕ್ಕೆ ಇದೆಯಾ ಅಂತ ನಿನಗೆ ಅಚ್ಚರಿಯಾಗಬಹುದು. ನಾನು ಏನು, ನಾನು ಹೇಗಿದ್ದೇನೆ, ನನ್ನ ವ್ಯಾಪ್ತಿ ಏನು ಎಂಬುದರ ಬಗ್ಗೆ ಇದುವರೆಗೇ ನೀನು ದಣಿವಿಲ್ಲದೆಯೇ ಮಾತನಾಡಿದ್ದೀಯ ಈಗ ನನಗೂ ಹೇಳಿಕೊಳ್ಳುವುದಕ್ಕೆ, ವಿವರಿಸಿಕೊಳ್ಳುವುದಕ್ಕೆ, ನನ್ನ ಸ್ವಭಾವವನ್ನು ಸೂಚಿಸುವುದಕ್ಕೆ ಆಸೆಯಿದೆ ಎಂಬುದನ್ನು ಊಹಿಸಿದರೇನೆ ನಿನಗೆ ಬೆರಗಾಗಬಹುದು. ಸಾವರಿಸಿಕೊಂಡು ಈ ನನ್ನ ಪತ್ರವನ್ನು ಓದು ಇದು ಪ್ರೀತಿ ಇಡೀ ಮನುಷ್ಯಕುಲವನ್ನು ಸಂಬೋಧಿಸಿ ಬರೆಯುತ್ತಿರುವ ಪತ್ರ.
ನಾನು ಯಾರು? ಅನಾದಿಕಾಲದಿಂದಲೂ ನೀನು ಈ ಪ್ರಶ್ನೆಯನ್ನು ಕೇಳುತ್ತಲೇ ಬಂದಿದ್ದೀಯ. ಈ ಪ್ರಶ್ನೆಗೆ ನೂರಾರು ರೂಪಗಳನ್ನು ಕೊಟ್ಟು ವಿಸ್ತರಿಸಿದ್ದೀಯ, ಹತ್ತಾರು ಬಣ್ಣಗಳನ್ನು ಲೇಪಿಸಿ ಸಿಂಗರಿಸಿದ್ದೀಯ. ಉತ್ತರ ಹುಡುಕುವುದಕ್ಕೆ ನಿಜಕ್ಕೂ ಕಷ್ಟಪಟ್ಟಿದ್ದೀಯ. ನಿನ್ನ ಬದುಕಿನ ಬೇರೆಲ್ಲಾ ಸಂಗತಿಗಳನ್ನು ಕಡೆಗಣಿಸಿ ನನ್ನ ಹಿಂದೆ ಬಿದ್ದಿದ್ದೀಯ. ಬಾಗದ ಮೈಯನ್ನು ಮನಸಾರೆ ದಂಡಿಸಿದ್ದೀಯ, ಮಾಗದ ಮನಸ್ಸನ್ನು ಸಹಸ್ರ ಸಂಕಟಗಳಿಗೆ ಈಡುಮಾಡಿಕೊಂಡಿದ್ದೀಯ. ಕಾಡುಗಳಲ್ಲಿ ಅಲೆದಾಡಿದ್ದೀಯ, ಗಿರಿ ಕಂದರಗಳಲ್ಲಿ ಧೇನಿಸಿದ್ದೀಯ, ನೀರೊಳಗೆ ಮುಳುಗು ಹಾಕಿ ಅರಸಿದ್ದೀಯ. ಮೈಲುಗಟ್ಟಲೆ ಕಾಲಿಗೆ ಚಕ್ರ ಕಟ್ಟಿಕೊಂಡು ಅಲೆದಾಡಿದ್ದೀಯ. ಹಸಿರಿನ ಮಡಿಲೊಳಗೆ ತಲೆ ಹುದುಗಿಸಿ ಮೌನವನ್ನೇ ಹನಿಯಾಗಿಸಿ ಕಣ್ಣು ನೆನೆಸಿದ್ದೀಯ. ಅಕ್ಷರಗಳ ನೆರವು ಪಡೆದು ಕವಿತೆಗಳ ಹಾದಿಯಲ್ಲಿ ನನ್ನೆಡೆಗೆ ಸೇರುವ ಯತ್ನ ಮಾಡಿದ್ದೀಯ. ನಾದದ ಅಲೆಯ ಮೇಲೆ ತೇಲುವ ನಾವೆಯಾಗಿ ನನ್ನೆಡೆಗೆ ತಲುಪುವ ತುಡಿತ ತೋರಿದ್ದೀಯ. ಕೋಟಿ ಕೋಟಿ ಬಣ್ಣಗಳೊಂದಿಗೆ ಸರಸವಾಡಿ ನನ್ನನ್ನು ರಮಿಸಿದ್ದೀಯ. ಹಂಗಿನ ಹಿಡಿತದಿಂದ ಕಾಲುಗಳನ್ನು ಸ್ವತಂತ್ರಗೊಳಿಸಿ ನಲಿದಾಡಿ ನನ್ನ ಮುದಗೊಳಿಸಿದ್ದೀಯ. ನಿನ್ನೊಳಗೆ ಬೇರಾರನ್ನೋ ಆವಾಹಿಸಿಕೊಂಡು ನನ್ನ ಕಾಣುವ ಪ್ರಯತ್ನ ಮಾಡಿದ್ದೀಯ. ಯಂತ್ರ ತಂತ್ರದ ನೆರವು ಪಡೆದು ಈ ಭುವಿಯ ಸೆಳೆತವನ್ನೇ ಮೀರಿ ಹಾರಿದ್ದೀಯ. ನನ್ನ ಹುಡುಕುವ ಚಪಲದಲ್ಲಿ ಕೈಗೆ ಸಿಕ್ಕಿದ್ದನ್ನು ಒಡೆದು ಒಡೆದು ಪರಮಾಣು, ಅಣುವಿನ ಎದುರು ನಿಂತಿದ್ದೀಯ. ನನಗಾಗಿ ಕೋಟಿ ಕಟ್ಟಿದ್ದೀಯ, ಅದರೊಳಗೆ ನೀನೇ ಬಂಧಿಯಾಗಿದ್ದೀಯ. ನನಗಾಗಿ ಕತ್ತಿ ಹರಿತಗೊಳಿಸಿದ್ದೀಯ, ಕತ್ತಿಗೆ ಕತ್ತು ಕೊಟ್ಟಿದ್ದೀಯ. ಇಷ್ಟೆಲ್ಲಾ ಮಾಡುತ್ತಾ ನಾನು ಯಾರು ಎಂಬ ಪ್ರಶ್ನೆಗೆ ಸಾವಿರ–ಸಾವಿರ ಬಗೆಯ ಉತ್ತರಗಳನ್ನು ನೀನೇ ಕಂಡುಕೊಂಡಿದ್ದೀಯಾ! ಎಲ್ಲಾ ಉತ್ತರ ಅವಲೋಕಿಸಿದ ನಂತರವೂ ನಿಸ್ಸಹಾಯಕನಾಗಿ ನಿಟ್ಟುಸಿರು ಬಿಟ್ಟಿದ್ದೀಯ. ದಣಿವಾರಿಸಿಕೊಂಡು ಮತ್ತದೇ ಉತ್ಸಾಹದಲ್ಲಿ ಹುಡುಕಾಟಕ್ಕೆ ಹೊರಟಿದ್ದೀಯ.
ನಿನ್ನ ಹಟಕ್ಕೆ, ನಿನ್ನ ಪ್ರಯತ್ನಕ್ಕೆ ನನ್ನ ಮೆಚ್ಚುಗೆ ಇದೆ ಕಣೋ. ಆದರೆ ಉತ್ತರವೇ ಅಲ್ಲದ ಸಂಗತಿಗಳಿಗೆ ಪ್ರಶ್ನೆಗಳನ್ನು ಸೃಷ್ಟಿಸಿಕೊಂಡು ಆ ಸಂಗತಿಗಳಿಗೆ ಉತ್ತರವಾಗುವ ಬಲಾತ್ಕಾರ ಮಾಡಿದರೆ ಅವು ಸತ್ತು ಹೋಗುತ್ತವೆ. ನಿನ್ನ ಎಲ್ಲಾ ಪ್ರಶ್ನೆಗಳ ಶವಪೆಟ್ಟಿಗೆಯೊಳಗೆ ನಿನ್ನ ಅಭಿರುಚಿಯ ಸಿಂಗಾರ ಪಡೆದು ನಿರ್ಜೀವವಾಗಿ ಮಲಗಿಕೊಳ್ಳುತ್ತವೆ. ಈ ಸೂಕ್ಷ್ಮ ನಿನಗೆ ಯಾವಾಗ ಅರ್ಥವಾಗುತ್ತದೆಯೋ! ಎಂದೂ ನಿನ್ನ ಕೈಗೆ ಸಿಗದ ಆದರೆ ಸದಾ ನಿನ್ನೊಂದಿಗಿರುವ ನನಗೆ ‘ಪ್ರೀತಿ‘ ಅಂತ ಹೆಸರಿಟ್ಟು ಅದನ್ನು ಹುಡುಕಲು ಸೇನೆ ಕಟ್ಟಿಕೊಂಡು ಹೊರಟಿದ್ದೀಯ. ನಿನ್ನ ಕಣ್ಣುಗಳೊಳಗಿರುವ ಕಾಂತಿ, ಹುರುಪು, ರಣೋತ್ಸಾಹ, ಯೌವನಗಳು ದೂರದ ದಿಗಂತದೆಡೆಗೆ ಬೆರಳು ಮಾಡುತ್ತಿವೆ. ನೀನು ದಾಪುಗಾಲು ಹಾಕಿಕೊಂಡು ಅತ್ತ ಮುನ್ನುಗುತ್ತಿದ್ದೀಯ. ಆದರೆ ನಾನು ನಿನ್ನ ನೆರಳಿನಂತೆ ನಿನ್ನ ಹಿಂಬಾಲಿಸುತ್ತಲೇ ಇದ್ದೇನೆ, ಒಮ್ಮೆ ಹಿಂದೆ ತಿರುಗಿ ನೋಡುತ್ತೀಯಾ ಎಂಬ ಸಣ್ಣ ಆಸೆಯಲ್ಲಿ!
ನಿನಗೆ ಈ ಅಭ್ಯಾಸ ಯಾವಾಗ ಅಂಟಿಕೊಂಡಿತೋ ಗೊತ್ತಿಲ್ಲ. ನಿನ್ನ ಸಂಧಿಸಬಯಸುವ, ನಿನ್ನ ಪರಿಧಿಯೊಳಗೆ ಸೇರಬಯಸುವ ಎಲ್ಲವನ್ನೂ ಹಿಡಿದು ಕಟ್ಟಿಹಾಕಿ ಸಂತೆ ಸೇರಿಸಿ ನಿನ್ನ ತರ್ಕ, ವಿಶ್ಲೇಷಣೆಯ ಹರಿತವಾದ ಅಲಗಿನಿಂದ ತುಂಡು ತುಂಡು ಮಾಡಿ ವಿವರಿಸುವ ಚಟ ಯಾವಾಗಿನಿಂದ ಬೆಳೆಯಿತು? ಮುಗ್ಧ ಪ್ರಪಂಚದಿಂದ ಆಗತಾನೆ ಕಣ್ತೆರೆದ ಮೊಗ್ಗಿನ ಸೌಂದರ್ಯವನ್ನು ಮುಷ್ಠಿಯಲ್ಲಿ ಹಿಸುಕಿಯೇ ಪಡೆದುಕೊಳ್ಳಬೇಕು ಎಂಬ ತುಡಿತ ನಿನ್ನೊಳಗೇಕೆ ಹುಟ್ಟುತ್ತದೆ? ನಿನ್ನ ಈ ಚಟದಿಂದ ನಿನಗೇ ನೀನು ಮಾಡಿಕೊಂಡ ಅನಾಹುತಗಳು ಅವೆಷ್ಟಿವೆ ಎನ್ನುವುದು ನಿನ್ನ ಊಹೆಗಾದರೂ ಬಂದಿವೆಯಾ? ಜೀವಂತವಾಗಿ ನಿನ್ನೆದುರು ನಡೆದಾಡಿದ ಹಾರುವ ಹಕ್ಕಿಯಂತಹ ಯೇಸುವನ್ನು ನೀನು ಶಿಲುಬೆಗೆ ಹಾಕಿದೆ. ಆತನ ಪ್ರಾಣ ತೆಗೆದೆ. ಅನಂತರ ಆತನ ಶವವನ್ನಿಟ್ಟುಕೊಂಡು ಸಿಂಗಾರ ಶುರು ಮಾಡಿದೆ. ವಿವರಣೆ ಕೊಡಲು ಕುಳಿತುಕೊಂಡೆ. ಅಖಂಡವಾಗಿ ಬರೆಯುತ್ತಾ ಹೋದೆ. ಲಕ್ಷಾಂತರ ಮಂದಿಯನ್ನು ಪ್ರಭಾವಿಸುತ್ತಾ ಹೋದೆ. ಆದರೇನು ಮಾಡುವುದು? ನಿನ್ನ ಒರಟು ಮುಷ್ಠಿಯ ಬಿರುಸಿಗೆ ಯೇಸು ಎಂಬ ಹೂವು ಎಂದೋ ಮುರುಟಿಹೋಗಿತ್ತು. ನೀನು ಮಾತ್ರ ಇಂದಿಗೂ ಆ ಹಕ್ಕಿಯ ಶವದೆದುರು ಹಬ್ಬದ ಊಟ ಮಾಡುತ್ತಿರುವೆ, ಪಾಂಡಿತ್ಯದ ಪ್ರದರ್ಶನ ಮಾಡುತ್ತಿರುವೆ. ಪಾಪ!
ನನ್ನ ಬುದ್ಧಿವಂತ ಗೆಳೆಯನೇ ಆಪ್ತವಾದ ಒಂದು ಸಲಹೆಯನ್ನು ಕೊಡುತ್ತೇನೆ ಕೇಳು… ಈ ಭಾಷೆ, ಹೆಸರುಗಳ ನಾಮಕರಣ, ಚರ್ಚೆ, ಪಾಂಡಿತ್ಯ, ತರ್ಕ, ಪ್ರಯೋಗ, ವಿವಾದ, ವಿಚಾರ, ಪುಸ್ತಕ, ಗುಂಪುಗಾರಿಕೆ, ಶಕ್ತಿ ಪ್ರದರ್ಶನ ಇವೆಲ್ಲಾ ನೀನು ಕಟ್ಟಿಕೊಂಡಿರುವ ಕೋಟೆಗಳು ಕಣೋ. ಇದಕ್ಕಿಂತ ಹೆಚ್ಚಿನ ದುರದೃಷ್ಟದ ಸಂಗತಿಯೆಂದರೆ, ಇವನ್ನೆಲ್ಲಾ ನೀನು ನಿನ್ನ ಸುತ್ತಲೇ ಕಟ್ಟಿಕೊಳ್ಳುತ್ತಾ ಬಂದಿದ್ದೀಯ. ಈ ಕೋಟೆಯೊಳಗೆ ನಿನ್ನೊಬ್ಬನನ್ನು ಬಿಟ್ಟು ಎಲ್ಲವನ್ನೂ ನೀನು ಪರಕೀಯವಾಗಿ ಕಾಣುತ್ತೀಯ. ಈ ಕೋಟೆಯೇನು ಸಾಮಾನ್ಯವಾದದ್ದಲ್ಲ, ನಿನ್ನ ಬಿಟ್ಟು ಉಳಿದೆಲ್ಲವನ್ನೂ ಅವು ನಿನ್ನ ಅನುಭೂತಿಗೆ ನಿಲುಕದ ಹಾಗೆ ಮಾಡಿಬಿಡುತ್ತವೆ. ಆದರೂ ನನ್ನಂಥವರಿಗೆ ಆಶಾವಾದ ಅಳಿಯುವುದಿಲ್ಲ. ನಿನ್ನ ಕೋಟೆಗೆ ಎಷ್ಟೇ ಗಡುಸಾದ ಗೋಡೆಯನ್ನು ಕಟ್ಟಿಸಿಕೊಂಡಿರು, ನಾನು ಸಣ್ಣ ಬಿಲ ಕೊರೆದುಕೊಂಡು ಕಳ್ಳನ ಹಾಗೆ ಒಳ ನುಸುಳಿಬಿಡುತ್ತೇನೆ. ನಿನ್ನ ಕೋಟೆಗೆ ಎಷ್ಟೇ ಬಾಗಿಲುಗಳನ್ನು ಹಾಕಿಸಿಕೊಂಡಿರು, ನಾನು ಎಲ್ಲಾ ಬಾಗಿಲುಗಳನ್ನು ನುಚ್ಚುನೂರು ಮಾಡಿಕೊಂಡು ಪ್ರವಾಹದ ಹಾಗೆ ಒಳನುಗ್ಗುತ್ತೇನೆ. ನೀನು ಎಷ್ಟೇ ಬಲಿಷ್ಠವಾದ ಉಕ್ಕಿನ ಕವಚ ತೊಟ್ಟು ಅದರೊಳಗೆ ಅವಿತಿರು, ನನ್ನ ಶಾಖದೆದುರು ಆ ಕವಚ ಕರಗಿ ನೀರಾಗದಿದ್ದರೆ ಕೇಳು. ನೀನು ಎಷ್ಟೇ ಎತ್ತರಕ್ಕೆ, ನಿಲುಕದ ಎತ್ತರಕ್ಕೆ ಹೋಗಿ ಕುಳಿತುಕೋ ನಾನು ನೀನು ಉಸಿರಾಡುವ ಗಾಳಿಯ ಹಾಗೆ ನಿನ್ನ ಅರಿವಿಗೇ ಬರದ ಹಾಗೆ ನಿನ್ನ ವ್ಯಾಪಿಸಿಕೊಂಡಿರುತ್ತೇನೆ. ಇಷ್ಟೆಲ್ಲಾ ಕಷ್ಟ ಪಟ್ಟು ನಾನು ನಿನ್ನ ಬಳಿ ಬಂದು ‘ಇಗೋ ನಾನೇ ಬಂದಿರುವೆ. ನಾನೇ ಪ್ರೀತಿ‘ ಎಂದು ನಿಂತರೂ ನೀನು ನಿನ್ನ ಕಣ್ಣುಗಳಿಗೆ ಕಪ್ಪು ಗಾಜು ಅಡ್ಡ ಇಟ್ಟುಕೊಂಡು ‘ಪ್ರೀತಿ ಎಂದರೇನು? ಪ್ರೀತಿ ಇರುವುದು ಹೇಗೆ?’ ಅಂತ ಪ್ರಶ್ನಿಸಿಕೊಳ್ಳುತ್ತೀಯ. ಅನಂತರ ನೀನೇ ‘ಪ್ರೀತಿಯೆಂಬುದು ಮಾಯೆ, ಪ್ರೀತಿಯೆಂಬುದು ವಂಚನೆ, ಪ್ರೀತಿ ಕುರುಡು, ಪ್ರೀತಿ ಅಗೋಚರ, ಪ್ರೀತಿ….’ ಎಂದು ಸಾಲು ಸಾಲುಗಟ್ಟಲೆ ಬರೆಯುತ್ತಾ ಹೋಗುತ್ತೀಯ. ನೀನೇ ಸೃಷ್ಟಿಸಿಕೊಂಡ ಪ್ರಶ್ನೆಗಳಿಗೆ ನೀನೇ ಉತ್ತರ ಕಂಡುಕೊಳ್ಳುತ್ತೀಯ. ನಿನ್ನ ಪ್ರಶ್ನೆಗೂ ಉತ್ತರಕ್ಕೂ ಸಂಬಂಧಿಸಿರದ ನನ್ನನ್ನು ಅನಾಥವಾಗಿ ಬಿಟ್ಟು ದೂರ ದೂರಕ್ಕೆ ನನ್ನ ಹುಡುಕುತ್ತಾ ಹೊರಟು ಹೋಗುತ್ತೀಯ.
ಇನ್ನು ಪತ್ರವನ್ನು ಮುಗಿಸಬೇಕು. ಮತ್ತೆ ನಿನ್ನದು ಅದೇ ಚಾಳಿ, ‘ಸರಿ, ಕೊನೆಗೆ ಹೇಳಿ ಬಿಡು ನೀನು ಯಾರು‘ ಅಂತ ಬಲವಂತ ಮಾಡ್ತಿದ್ದೀಯ. ಪ್ರತಿ ಪತ್ರಕ್ಕೂ ನಿನಗೆ ಉಪಸಂಹಾರ ಬೇಕು. ಎಲ್ಲಾ ಪ್ರಶ್ನೆಗಳಿಗೆ ನಿನಗೆ ಉತ್ತರಗಳು ಬೇಕು. ಪ್ರತೀ ಉತ್ತರಗಳಿಗೆ ನಿನ್ನಲ್ಲಿ ಮತ್ತಷ್ಟು ಪ್ರಶ್ನೆಗಳು ಹುಟ್ಟಬೇಕು. ಆ ಪ್ರಶ್ನೆಗಳ ಬೆನ್ನ ಮೇಲೆ ಏರಿ ಉತ್ತರದ ಮಾಯಾ ಮೃಗವನ್ನು ಅಟ್ಟಿಕೊಂಡು ನುಗ್ಗುತ್ತೀಯ. ನಾನು ನಿನ್ನ ಹಿಂದೇ, ನಿನ್ನ ಒಳಗೇ ನಿನ್ನ ಒಂದೇ ಒಂದು ಕ್ಷಣದ ಮೌನಕ್ಕಾಗಿ, ಒಂದೇ ಒಂದು ಹಿನ್ನೋಟಕ್ಕಾಗಿ ಕಾಯುತ್ತಾ ನಿಂತಿರುತ್ತೇನೆ ಅನಾಥವಾಗಿ!
ಇಂತಿ ನಿನ್ನ,
ಪ್ರೀತಿ
ಇತ್ತೀಚಿನ ಟಿಪ್ಪಣಿಗಳು