Archive for the ‘ಹಾಸ್ಯ’ Category
ಶಾಂತಿ ಮಂತ್ರ!
Posted ಜುಲೈ 23, 2009
on:ನಾನು ನನ್ನ ಸಂಸಾರ!
Posted ಜುಲೈ 20, 2009
on:- In: ಹಾಸ್ಯ
- 6 Comments
– ‘ಅಂತರ್ಮುಖಿ’
‘ಎಷ್ಟನೆ ಸಲದ ದಂಡ ಯಾತ್ರೆಯಪ್ಪಾ ಇದು?’ ಹಾಗಂತ ಕಾಫಿಗೆ ಕರೆಯುವ ಗೆಳೆಯರನ್ನು ರೇಗಿಸುತ್ತಿರುತ್ತೇನೆ. ಹಾಸ್ಟೆಲ್ಲಿನ ಹುಡುಗರು ಕಾಫಿಗೆ ಹೋಗುವ ಸಂಭ್ರಮವೇ ಬೇರೆ. ಬೆಳಿಗಿನ ಚಳಿಯಲ್ಲಿ ಧೈರ್ಯ ಮಾಡಿ ಎದ್ದವರು ಮಾಡಿಟ್ಟ ಕಾಫಿಯನ್ನು ತಮ್ಮ ಕೆಪಾಸಿಟಿಗೆ ತಕ್ಕಂತ ಹೀರಿಬಿಟ್ಟಿರುತ್ತರಾದ್ದರಿಂದ ನನ್ನಂಥ ಸೂರ್ಯದ್ವೇಷಿಗಳಿಗೆ, ಏಳು ಗಂಟೆಯ ಮೊದಲು ಎದ್ದು ಬಿಡುವುದು ನೈತಿಕ ಅಧಃಪಥನ ಎಂದು ಭಾವಿಸಿರುವವರಿಗೆ ಖಾಲಿ ಕಾಫಿ ಜಗ್ ಮಾತ್ರ ಕಾದಿರುತ್ತದೆ!
ಎಲ್ಲಾ ಹುಡುಗರು ಇದ್ದಾಗ ಹಾಸ್ಟೆಲ್ಲಿನ ವಾತಾವರಣ ಕಲಕಲ ಎನ್ನುತ್ತಿರುತ್ತದೆ. ಎಲ್ಲರಿಗೂ ಕಾಲೇ ಜು ರಜೆಯಿದ್ದರೆ, ಇಲ್ಲವೇ ಪರೀಕ್ಷೆಗಳಿಗೆ ಓದಲು ಕಾಲೇಜಿನವರೇ ರಜೆ ಕರುಣಿಸಿ ಓಡಿಸಿದ್ದರೆ ಕಾಫಿ ಟೀ ಕುಡಿಯಲು ಸಮೀಪದ ಕಾಫಿ ಬಾರ್‌ಗೆ ದಂಡು ದಂಡು ಸಮೇತ ಲಗ್ಗೆ ಹಾಕುವುದನ್ನು ನೋಡುವುದು ಕಣ್ಣಿಗೆ ಹಬ್ಬ. ಬೆಳಗಿನ ತಿಂಡಿ ಮುಗಿಸಿಕೊಂಡ ನಂತರ ಒಂದು ಸುತ್ತು, ಮಧ್ಯಾನದ ಊಟಕ್ಕೂ, ತಿಂಡಿಗೂ ನಡುವಿನ ಸಮಯದಲ್ಲಿ ಓದಿ ಓದಿ ಸುಸ್ತಾದವರಿಗಾಗಿ ಒಂದು ಸುತ್ತು, ಮಧ್ಯಾನದ ಊಟ ಮುಗಿಸಿ ಗಡದ್ದಾಗಿ ನಿದ್ದೆ ಹೊಡೆದು ಸಂಜೆಗೆ ಎದ್ದು ಒಂದು ಸುತ್ತು, ರಾತ್ರಿ ಊಟವಾದ ಮೇಲೆ ಓದುತ್ತಾ ಕೂರಲು ಎನರ್ಜಿ ಬೇಕಾದವರದ್ದು ಒಂದು ಸುತ್ತು ಕಾಫಿ ಬಾರ್ ಪರ್ಯಟನೆ- ಇದು ನಮ್ಮ ದೈನಂದಿನ ಅವಿಭಾಜ್ಯ ಅಂಗ. ಕೆಲವೊಮ್ಮೆ ಕಾಲೇಜು ಗೆಳೆಯರು ನಮ್ಮ ಭೇಟಿಗೆ ಹಾಸ್ಟೆಲ್ಲಿಗೇ ಬಂದಾಗ, ಒಲ್ಲದ ಅತಿಥಿ ರೂಮಿನಲ್ಲಿ ಒಕ್ಕರಿಸಿಕೊಂಡು ಕೊರೆತದಿಂದ ರೋಧನೆ ಕೊಡುವಾಗ ಅವನನ್ನು ಸಾಗಿ ಹಾಕಲು ಈ ‘ಕಾಫಿ’ ಆಪದ್ಭಾಂದವನ ಹಾಗೆ ನೆರವಿಗೆ ಬರುವುದೂ ಇದೆ.
ಕಾಫಿಗೆ ದಂಡು ಕಟ್ಟಿಕೊಂಡು ಹೋಗುವ ಸಮಯ ಬರುತ್ತಿದ್ದ ಹಾಗೆಯೇ ಇಡೀ ಹಾಸ್ಟೆಲ್ಲಿನಲ್ಲಿ ಸದ್ದುಗದ್ದಲ ತಣ್ಣಗಾಗುತ್ತದೆ. ಆ ಮೌನದಲ್ಲಿ ಗಾಳಿ ಕೊಂಚ ವೇಗವಾಗಿ ಬೀಸಿದರೂ ಸದ್ದು ಮಾಡಿ ಅಸಭ್ಯ ಎನ್ನಿಸಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆಯಿಂದ ಬೀಸಲು ಶುರು ಮಾಡಿರುತ್ತದೆ. ಕಾಫಿಗೆ ಹೋಗಬೇಕೆಂಬುದು ಎಲ್ಲರ ಇರಾದೆಯಾದರೂ ಯಾರೂ ಏಕಾಏಕಿ ರೂಮುಗಳೆಂಬ ಗೂಡುಗಳಿಂದ ಹೊರಬಂದು ಬಿಡುವುದಿಲ್ಲ. ಮೇಲಿನ ಫ್ಲೋರಿನ ಕೊನೆಯ ರೂಮಿನ ದಂಡನಾಯಕ ತನ್ನ ಮೊಬೈಲಿಗೆ ಬಂದ ಮೆಸೇಜುಗಳನ್ನು ಓದಿಕೊಳ್ಳುತ್ತಾ ಮತ್ತೊಂದು ಕೈಯನ್ನು ಪ್ಯಾಂಟಿನ ಜೇಬಿನೊಳಕ್ಕೆ ಇಳಿಬಿಟ್ಟು ‘ಬನ್ರಪ್ಪಾ, ಕಾಫಿಗೆ.’ ಅನ್ನಬೇಕು. ಆಗ ಕಾವು ಇಳಿದ ಕುಕ್ಕರು ಉಶ್ ಎಂದು ನಿಟ್ಟುಸಿರಿಟ್ಟ ಹಾಗೆ ಸದ್ದು ಮಾಡಿ ಮಾಡುತ್ತಿದ್ದ ಕೆಲಸಗಳನ್ನು ಬಿಟ್ಟು ಹೋಗಬೇಕೆಂಬ ನೋವನ್ನು ನಟಿಸಿ ಒಬ್ಬೊಬ್ಬರೇ ಚಪ್ಪಲಿ ಮೆಟ್ಟಿಕೊಂಡು ಹೊರಬರುತ್ತಾರೆ. ‘ಎಲ್ಗೆ? ಗೋವಿಂದಣ್ಣನಾ, ರಾಘವೇಂದ್ರನಾ?’ ಅಂತ ಕೆಲವರು ಚರ್ಚೆಗೆ ನಿಲ್ಲುತ್ತಾರೆ. ‘ಇಲ್ಲೇ ಗೋವಿಂದಣ್ಣನ ಅಂಗ್ಡಿಗೇ ಹೋಗಣ, ಅಷ್ಟು ದೂರ ಯಾರು ಹೋಗ್ತಾರೆ?’ ಎಂದು ಕೆಲವರು ಮೈಮುರಿದು ವಟಗುಟ್ಟುತ್ತಾರೆ. ಮತ್ತೆ ಕೆಲವರು, ‘ರಾಘವೇಂದ್ರದಲ್ಲಿ ಒಂದ್ರುಪಾಯಿ ಜಾಸ್ತಿ ಮಾಡಿದಾರೆ’ ಎಂದು ನೆನಪಿಸುತ್ತಾನೆ. ಮಳೆ ಬರುವ ಮುನ್ನ ಕಪ್ಪು ಮೋಡ ಮೆಲ್ಲ ಮೆಲ್ಲಗೆ ಸುತ್ತಮುತ್ತಲಿನ ಮೋಡದ ತುಣುಕುಗಳನ್ನು ಅಪ್ಪಿಕೊಂಡು ದೊಡ್ಡದಾಗಿ ವ್ಯಾಪಿಸಿಕೊಳ್ಳುತ್ತಾ ಹೋದಂತೆ ಒಬ್ಬೊಬ್ಬರನ್ನೇ ರೂಮಿನಿಂದ ಹೊರಗೆಳೆದು ತರುತ್ತಾ ನಮ್ಮ ಗುಂಪು ದೊಡ್ಡದಾಗುತ್ತದೆ. ಕೆಲವರು ಮೊಬೈಲು ತಮ್ಮ ಕಿವಿಯ ಜೊತೆಗೇ ಬ್ರಹ್ಮ ಕಳುಹಿಸಿಕೊಟ್ಟ accessory ಏನೋ ಎಂಬಂತೆ ವರ್ತಿಸುತ್ತಿರುತ್ತಾರೆ. ಅವರು ನಮ್ಮೊಂದಿಗೆ ಹೆಜ್ಜೆ ಹಾಕುತ್ತಿದ್ದರೂ, ಅವರ ಒಡನಾಟವೆಲ್ಲಾ ‘ಅಶರೀರ ವಾಣಿ’ ಯ ಜೊತೆಗೇ.
ನಮ್ಮ ಹಾಸ್ಟೆಲ್ಲಿನ ಉದ್ದನೆಯ ಕಾರಿಡಾರನ್ನು ದಾಟಿ ರಸ್ತೆಗೆ ಕಾಲಿರಿಸುತ್ತಿದ್ದ ಹಾಗೆಯೇ ಇಡೀ ರಸ್ತೆಯ ತುಂಬ ಎಂಥದ್ದೋ ಕಂಪನ. ಸಲಗಗಳ ಗುಂಪು ನಡೆದದ್ದೇ ದಾರಿ ಎಂಬಂತೆ ನಾವು ನಮ್ಮೊಳಗೇ ಕಲಕಲ ಮಾತನಾಡುತ್ತಾ ಅಕ್ಕ ಪಕ್ಕದ ಮನೆಗಳ ಬಗ್ಗೆ ನಮ್ಮ ತಿಳುವಳಿಕೆಯನ್ನು ಹಂಚಿಕೊಳ್ಳುತ್ತಾ ಸಾಗುತ್ತೇವೆ. ಗುಂಪಿಗೆ ಸೇರದ ಪದದ ಹಾಗೆ ಗುಂಪನ್ನು ಬಿಟ್ಟು ಹಿಂದೆ ಯಾರಾದರೂ ಒಬ್ಬರೇ ಸೆಲ್ ಫೋನಿನಲ್ಲಿ ಮಾತನಾಡುತ್ತಾ ಬರುತ್ತಿದ್ದಾರೆಂದರೆ ಅವರು ಮಾತನಾಡುತ್ತಿರುವುದು ಗರ್ಲ್ ಫ್ರೆಂಡ್ ಒಟ್ಟಿಗೆ ಇಲ್ಲವಾದರೆ ಮನೆಯಿಂದ ಫೋನ್ ಬಂದಿರುತ್ತದೆ ಎಂದೇ ತಿಳಿಯಬೇಕು. ಹಾಸ್ಟೆಲ್ಲಿನಲ್ಲಿರುವಾಗ ತೊಟ್ಟ ಬರ್ಮುಡಾ ಚೆಡ್ಡಿ, ನೈಟ್ ಪ್ಯಾಂಟುಗಳಲ್ಲೇ ಬೀದಿಗಿಳಿದ ಕೆಲವರಿಗೆ ಅಕ್ಕಪಕ್ಕದ ಮನೆಯ ಮಂದಿ ಏನೆಂದುಕೊಳ್ಳುತ್ತಾರೋ ಎಂಬ ಮುಜುಗರ. ಹಾಗೆ ದಂಡು ಕಾಫಿ ಹೀರುವ ಮಹೋದ್ದೇಶಕ್ಕಾಗಿ ಸಾಗುತ್ತಿರುವಾಗ ಮಾತಿಗೆ ಇಂಥದ್ದೇ ವಿಷಯಬೇಕು ಅಂತೇನಿಲ್ಲ. ಜಾರ್ಜ್ ಬುಶ್‌ನಿಂದ ಹಿಡಿದು ಹಾಸ್ಟೆಲ್ಲಿನ ಹಿಂದಿನ ಮನೆಗೆ ಹೊಸತಾಗಿ ಬಂದ ರಾಜಸ್ಥಾನದ ದಂಪತಿಗಳವರೆಗೆ ಯಾವುದಾದರೂ ನಡೆದೀತು. ಅಸಲಿಗೆ ಯಾವ ವಿಷಯವೂ ಇಲ್ಲದಿದ್ದರೂ ಆದೀತು. ಮಾತಿಗೆ ವಿಷಯವೇ ಬೇಕು ಎಂಬ ದಾರಿದ್ರ್ಯದ ಸ್ಥಿತಿಗೆ ಹುಡುಗರು ಎಂದೂ ತಲುಪೋದೇ ಇಲ್ಲ. ಅವರಿವರನ್ನು ರೇಗಿಸಿಕೊಂಡು, ಇಟ್ಟ ಅಡ್ಡ ಹೆಸರುಗಳನ್ನು ಕರೆದುಕೊಂಡು ಪೋಲಿ ಜೋಕುಗಳನ್ನು ಕಟ್ ಮಾಡುತ್ತಾ ಪರೇಡ್ ಸಾಗುತ್ತಿರುತ್ತದೆ.
ಗುಂಪಿನಲ್ಲಿ ಹತ್ತು ಹನ್ನೆರಡು ಮಂದಿ ಇದ್ದರೂ ಎಲ್ಲರೂ ಒಟ್ಟಾಗಿ ಹೋಗಲು ಅದೇನು ಮಾರ್ಚ್ ಫಾಸ್ಟೇ? ಮೂರು ನಾಲ್ಕು ಮಂದಿ ಕ್ಲಸ್ಟರ್ ಕ್ಲಸ್ಟರ್‌ಗಳಾಗಿ ಚದುರಿಕೊಂಡು ಗಲಗಲಿಸುತ್ತಾ ಸಾಗುತ್ತಿರುತ್ತೇವೆ. ಅನೇಕ ವೇಳೆ ಇಂಥ ಕ್ಲಸ್ಟರ್‌ಗಳು ಸಹಜವಾದ ಪರ್ಮುಟೇಶನ್, ಕಾಂಬಿನೇಶನ್ನಿನ ಮೇಲೆ ರೂಪುಗೊಂಡಿರುತ್ತದಾದರೂ ಕೆಲವೊಮ್ಮೆ ಗುಂಪುಗಾರಿಕೆ, ‘ಭಿನ್ನ ಮತೀಯತೆ’ಯಿಂದ ಹುಟ್ಟು ಪಡೆದಿರುತ್ತವೆ. ಹಾಸ್ಟೆಲ್ಲಿನಲ್ಲಿ ಯಾರೆಷ್ಟೇ ಗುಂಪುಗಾರಿಕೆ ಮಾಡಿಕೊಂಡು, ಒಬ್ಬರ ಮೋಲೊಬ್ಬರು ಕತ್ತಿ ಮಸೆಯುತ್ತಾ ಓಡಾಡಿಕೊಂಡರೂ ಕಾಫಿಗೆ ಹೊರಡುವಾಗ ಮಾತ್ರ ಎಲ್ಲರೂ ಬಂದೇ ಬರುವರು. ಅದೊಂದು ಕದನ ವಿರಾಮದ ಹಾಗೆ. ಹಾಗಂತ, ವೈರ ಕರಗಿ ಮಾತು ಅರಳಿಬಿಡುತ್ತದೆ ಅಂತಲ್ಲ. ಎಲ್ಲರೂ ಕಲೆತು ಹೊರಗಿನವರಿಗೆ ನಾವೆಲ್ಲರೂ ಒಂದು ಎಂದು ಕಂಡುಬಂದರೂ ಒಳಗೊಳಗೆ ಕ್ಲಸ್ಟರುಗಳಿಂದ ಹೊರಗೆ ಮಾತು ಹರಿಯುವುದಿಲ್ಲ. ಭಾಷೆ ಬೇರೆ, ಆಚಾರ ಬೇರೆಯಾದರೂ ಭಾರತವೆಂಬ ಒಂದೇ ದೇಶದ ಮುಖ ನೋಡಿಕೊಂಡು ಸುಮ್ಮಗಿರುವ ರಾಜ್ಯಗಳ ಹಾಗೆ ನಮ್ಮ ಗುಂಪುಗಾರಿಕೆ ತಣ್ಣಗೆ ಸಾಗುತ್ತಿರುತ್ತದೆ.
ಬೇರಾವ ಕೆಲಸಕ್ಕೆ ಪಾರ್ಟನರ್ ಇಲ್ಲದಿದ್ದರೂ ನದೆಯುತ್ತದೆಯೇನೋ, ಆದರೆ ಕಾಫಿ ಹೀರುವುದಕ್ಕೆ ಜೊತೆ ಇಲ್ಲವೆಂದರೆ ಏನನ್ನೋ ಕಳೆದುಕೊಂಡ ಭಾವ. ಜೊತೆಯಲ್ಲಿ ಹರಟೆಗೆ ಯಾರೂ ಇರದಿದ್ದರೆ ಹಬೆಯಾಡುವ ಕಾಫಿ ಗಂಟಲೊಳಕ್ಕೆ ಇಳಿಯುವುದೇ ಇಲ್ಲ. ಜೊತೆಗಿರುವ ಜನರ ಸಂಖ್ಯೆ ಹೆಚ್ಚಾದಷ್ಟೂ ಕಾಫಿ ರುಚಿಗಟ್ಟುತ್ತಾ ಹೋಗುತ್ತದೆ. ಆರೆಂಟು ಮಂದಿಯ ಗುಂಪು ಪುಟ್ಟ ಕಾಫಿ ಬಾರಿನೆದುರು ಜಮಾಯಿಸಿ ಒಬ್ಬೊಬ್ಬರು ತಮ್ಮ ಆಸಕ್ತಿ, ಅಭಿರುಚಿಗನುಸಾರವಾಗಿ ಕಾಫಿ, ಟೀ, ಬಾದಾಮಿ ಹಾಲುಗಳಿಗೆ ಆರ್ಡರ್ ಮಾಡುತ್ತಾರೆ. ಮುಂದುವರೆದ ವರ್ಗದ ಕೆಲವರು ನಮಗೆ ತಿಳಿಯದ ಕೋಡ್ ವರ್ಡ್‌ಗಳನ್ನು ಹೇಳಿ ಸಿಗರೇಟು ಪಡೆಯುತ್ತಾರೆ. ಹೊಸದಾಗಿ ಗುಂಪಿಗೆ ಸೇರಿದವರು ಈ ಮುಂದುವರಿದವರನ್ನು ತುಸು ಹೆಮ್ಮೆಯಿಂದ, ತುಸು ಕುತೂಹಲದಿಂದ ನೋಡುತ್ತಿರುತ್ತಾರೆ. ಉಳಿದವರಿಗೆ ಅಂಥಾ ಯಾವ ಕುತೂಹಲವೂ ಉಳಿದಿರುವುದಿಲ್ಲ. ತಿಂಗಳ ಕೊನೆ ಬರುತ್ತಿದ್ದಂತೆಯೇ ಈ ಮುಂದುವರಿದವರು ನಮ್ಮೆಲ್ಲರ ಮುಂದೆ ಮೊಣಕಾಲೂರಿ ಕುಳಿತು ಪ್ರಾರ್ಥಿಸಿ ಒಂದೊಂದು ಸಿಗರೇಟು ಗಿಟ್ಟಿಸಿಕೊಳ್ಳುವುದನ್ನು ಕಂಡ ನಾವು ಅವರ ಬಗ್ಗೆ ಹೆಚ್ಚೆಂದರೆ ಅನುಕಂಪವನ್ನು ತಾಳಬಹುದು ಅಷ್ಟೇ, ಹೆಮ್ಮೆಯಂತೂ ದೂರದ ಮಾತು!
ಕಂಠ ಬಿಟ್ಟು ಸೊಂಟ ಹಿಡಿದರೆ ನಲುಗಿ ಒಳಗಿರುವುದನ್ನೆಲ್ಲಾ ಹೊರಗೆ ಕಕ್ಕಿ ಕವುಚಿಕೊಳ್ಳುವ ಪುಟಾಣಿ ಪ್ಲಾಸ್ಟಿಕ್ ಕಪ್ಪುಗಳನ್ನು ಹಿಡಿದುಕೊಂಡು ಪಟ್ಟಾಂಗಕ್ಕೆ ಸೂಕ್ತ ಜಾಗವನ್ನು ಆಯ್ದುಕೊಂಡು ಎಲ್ಲರೂ ಆಸೀನರಾಗುವುದರೊಳಗೆ ಹತ್ತಾರು ಸಂಗತಿಗಳು ಚರ್ಚಿತವಾಗಿರುತ್ತವೆ. ಬರುಬರುತ್ತಾ ಕಾಫಿ ಲೋಟ ಸಣ್ಣದಾಗುತ್ತಿದೆಯಲ್ಲ ಎಂಬ ಕಳವಳ ಕೆಲವರದಾದರೆ, ಮುಂದಿನ ತಿಂಗಳಿನಿಂದ ಈ ಕಾಫಿ, ಟೀ ಅಭ್ಯಾಸವನ್ನೆಲ್ಲಾ ಬಿಟ್ಟು ಬಿಡಬೇಕು- ದಿನಕ್ಕೆ ಹತ್ತು ರೂಪಾಯಿ ಉಳಿಸಬಹುದು ಅನ್ನುವ ಯೋಜನೆ ಕೆಲವರದ್ದು. ಮೆಲ್ಲಗೆ ನಮ್ಮ ನಮ್ಮ ಕೈಲಿರುವ ಪಾನೀಯವನ್ನು ಹೀರುತ್ತಾ, ಧೂಮಪಾನಿಗಳ ದಾಳಿಯಿಂದ ನಮ್ಮನ್ನು ರಕ್ಷಿಸಿಕೊಳ್ಳುತ್ತಾ ನಾವು ಮತ್ತೆ ನಮ್ಮ ಗಾಢ ಆಲೋಚನೆಗಳಲ್ಲಿ ಮುಳುಗಿಹೋಗುತ್ತೇವೆ. ಹುಡುಗರಿಗೆ ಸಾಮಾನ್ಯವಾಗಿ ಮಾತನಾಡುವುದಕ್ಕೆ ಏನಿರುತ್ತದೆ ಎಂಬುದು ಹಲವು ಹುಡುಗಿಯರ ಕುತೂಹಲದ ಪ್ರಶ್ನೆ. ಅವರ ಕುತೂಹಲ ಸಹಜವಾದದ್ದೇ, ಏಕೆಂದರೆ ಲೋಕದ ದೃಷ್ಟಿಯಲ್ಲಿ ಹೆಂಗಸರು ಮಾತುಗಾರ್ತಿಯರು. ಆದರೆ ಇಲ್ಲಿ ಲೋಕದ ದೃಷ್ಟಿ ಎಂದರೆ ‘ಗಂಡಸರ ದೃಷ್ಟಿ’ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲವಷ್ಟೇ! ಸೂಜಿ ಮೊನೆಯಿಂದ ಹಿಮಾಲಯದವರೆಗೆ ಯಾವ ವಿಷಯ ಸಿಕ್ಕರೂ ಬೇಜಾರಿಲ್ಲದೆ ಚಹಾದ ಜೊತೆಗೆ ಮೆಲ್ಲುವುದು ಹುಡುಗರಿಗೇನು ಕಷ್ಟವಲ್ಲ. ಮಾತುಕತೆಯ ಬಹುಪಾಲು ಸಮಯ ಹುಡುಗಿಯರ ವಿಷಯದಲ್ಲೇ ವ್ಯರ್ಥವಾಗುತ್ತದೆ ಎಂಬ ಆರೋಪ ಸತ್ಯವೇ ಆದರೂ ಆ ಜಾಗದಲ್ಲಿ ಬೇರೆ ವಿಷಯ ಇದ್ದರೆ ಆಗುವ ಉಪಯೋಗವೇನು ಎಂದು ಯಾರೂ ಹೇಳರು.
ಬರಿದಾದ ಕಾಫಿ ಕಪ್ಪುಗಳನ್ನು ಕುಳಿತಲ್ಲಿಂದಲ್ಲೇ ಗುರಿಯಿಟ್ಟು ಕಸದ ಬುಟ್ಟಿಗೆ ಎಸೆದು ಸಂಪಾದಕನೊಬ್ಬ ಪತ್ರಿಕೆಯ ಚಂದಾ ಹಣಕ್ಕಾಗಿ ಪರದಾಡುವಂತೆ ದಿನಕ್ಕೊಬ್ಬ ಚಿಲ್ಲರೆಯನ್ನು ಆಯುತ್ತಾ ಅಷ್ಟೂ ಮಂದಿಯ ಖರ್ಚನ್ನು ಹೊಂದಿಸಿ ಅಂಗಡಿಯವನಿಗೆ ಪಾವತಿಸಿ ಹಿಂದಿನ ಸಾಲಕ್ಕೆ ಕೆಲವೊಮ್ಮೆ ಬಾಲಂಗೋಚಿ ಅಂಟಿಸಿ ಕಾಲ್ಕಿತ್ತುವುದು ಸಂಪ್ರದಾಯ. ಕಾಫಿ ಬಾರಿನಿಂದ ವಾಪಸ್ಸು ಹಾಸ್ಟೆಲ್ಲಿಗೆ ಬರುವಾಗ ಹಿಂದೆ ಹೇಳಿದ ಸಂಗತಿಗಳೆಲ್ಲಾ ಪುನರಾವರ್ತನೆಗೊಳ್ಳುವುದು ಸಾಮಾನ್ಯ. ಹದಿನೇಳು ಬಾರಿ ಸೋಮನಾಥ ದೇವಾಲಯಕ್ಕೆ ದಂಡ ಯಾತ್ರೆ ಮಾಡಿದ ನಂತರ ಮಹಮ್ಮದ್ ಘೋರಿಯಾದರೂ ದಣಿದಿದ್ದನೇನೋ ನಾವು ಮಾತ್ರ ದಿನಕ್ಕೆ ಇಪ್ಪತ್ತು ಬಾರಿ ಯಾತ್ರೆ ಕೈಗೊಂಡರೂ ಚೂರೂ ದಣಿಯದೆ, ಕಾಫಿ ತುಂಬಿ ಕೊಂಡು ಚುರುಕಾದ ಮೈಮನಗಳೊಂದಿಗೆ ಹಿಂದಿರುಗುತ್ತೇವೆ.
– ನಗೆ ಸಾಮ್ರಾಟ್
ಗಣೇಶ ಚತುರ್ಥಿಯ ಹಬ್ಬದ ಸಂಭ್ರಮದಲ್ಲೇ ಬಿಡುವು ಮಾಡಿಕೊಂಡು ವಿನಾಯಕ ನಗೆ ನಗಾರಿಗಾಗಿ ಕೊಟ್ಟ ಎಕ್ಸ್‌ಕ್ಲೂಸಿವ್‌ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.
ನಗೆ ಸಾಮ್ರಾಟ್: ಗಜಮುಖ, ವಿನಾಯಕ, ಮೂಷಿಕವಾಹನನಿಗೆ ಶರಣು ಶರಣು.
ವಿನಾಯಕ: ನಮಸ್ಕಾರ ನಮಸ್ಕಾರ ನಮಸ್ಕಾರ!
ನ.ಸಾ: ಏನು ಲಾರ್ಡ್ ಇದು, ಸಿನೆಮಾ ಹೀರೋ ಗಣೇಶ್ ಸ್ಟೈಲಲ್ಲಿ ನಮಸ್ಕಾರ?
ವಿ: ಹೌದು, ಹೌದು ಈ ಭೂಲೋಕದವರಿಗೆ ಅವರದೇ ಧಾಟಿಯಲ್ಲಿ ಮಾತಾಡಿಸಬೇಕು. ಆಗಲೇ ಆಪ್ತತೆ ಬೆಳೆಯೋದು. ಈ ಸತ್ಯವನ್ನು ನಾನು ತುಂಬಾ ಹಿಂದೇ ಕಂಡುಕೊಂಡೆ ಆದ್ರೆ ನಮ್ಮ ಇತರ ದೇವರುಗಳಿಗೆ ಇದು ಅರ್ಥವಾಗಿಲ್ಲ. ಅದಕ್ಕೇ ಭೂಲೋಕದಲ್ಲಿ ಈ ಸ್ಥಿತಿ ಇರುವುದು.
ನ.ಸಾ: ಹಾಗಂದ್ರೆ, ಅರ್ಥ ಆಗಲಿಲ್ಲ…
ವಿ: ಅರ್ಥ ಆಗದ್ದನ್ನು ಕೇಳಿ ತಿಳ್ಕೋಬೇಕು. ನೋಡ್ರಿ, ನಿಮ್ಮ ಮಹಾತ್ಮಾ ಗಾಂಧಿ ಹೇಳಿಲ್ಲವಾ, ಪ್ರಾರ್ಥನೆ ಅನ್ನೋದು ದೇವರು ಹಾಗೂ ಮಾನವನ ನಡುವಿನ ಸೇತುವೆ ಅಂತ. ಮನುಷ್ಯರಿಗೆ ದೇವರೊಂದಿಗೆ ಮಾತನಾಡಬೇಕು ಎಂಬ ಹಂಬಲವಿದೆಯೋ ಇಲ್ಲವೋ ಕಾಣೆ. ಆದರೆ ದೇವರಿಗೆ ಮಾತ್ರ ಮನುಷ್ಯನೊಂದಿಗೆ ಮಾತಾಡಬೇಕು ಎನ್ನುವ ಆಸೆ ಇದೆ. ಅದರಲ್ಲೂ ಈ ಹಿಂದೂ ದೇವರುಗಳಿದ್ದಾರಲ್ಲ, ಅವರ ಸಂಖ್ಯೆ ಮುಕ್ಕೋಟಿಗಿಂತ ಹೆಚ್ಚು. ಎಲ್ಲರಿಗೂ ಮನುಷ್ಯರೊಂದಿಗೆ ಮಾತನಾಡಬೇಕು ಎನ್ನುವ ಆಸೆ. ಏನು ಮಾಡುವುದು, ಈ ಮನುಷ್ಯರು ಅದಕ್ಕೆ ಟೈಮೇ ಕೊಡೋದಿಲ್ಲ. ಯಾವಾಗಲೂ ತಮ್ಮ ಮನೆ, ಮಕ್ಕಳು, ಬ್ಯಾಂಕ್ ಬ್ಯಾಲನ್ಸು, ತಮ್ಮ ಕ್ರಿಕೆಟ್ ಟೀಮು, ಕನಸಿನಲ್ಲೆಂಬಂತೆ ಬಂದ ಒಲಿಂಪಿಕ್ಸ್ ಚಿನ್ನದ ಪದಕ, ನ್ಯೂಕ್ಲಿಯಾರ್ ಡೀಲು ಅಂತಲೇ ತಮ್ಮ ಸಮಯವನ್ನೆಲ್ಲಾ ಕಳೆದುಬಿಡುತ್ತಾರೆ. ದೇವರೊಂದಿಗೆ ಮಾತನಾಡಲಿಕ್ಕೆ ಸಮಯವೇ ಅವರಿಗೆ ಇರುವುದಿಲ್ಲ. ದಿನದ ಇಪ್ಪತ್ನಾಲ್ಕು ತಾಸಿನಲ್ಲಿ ಒಂದರ್ಧ ಗಂಟೆಯಾದರೂ ನಮ್ಮೊಂದಿಗೆ ಕಳೆಯಲು ಅವರಿಗೆ ಬಿಡುವು ಇರೋದಿಲ್ಲ. ಈಗ ಮಾತನಾಡಿಸ ಬಹುದು ಆಗ ಮಾತನಾಡಿಸ ಬಹುದು ಎಂದು ನಮ್ಮ ದೇವಲೋಕದಲ್ಲಿ ದೇವರು ದೇವತೆಗಳು ಕಾಯುತ್ತಾ ಕೂತಿರುತ್ತಾರೆ.
ನ.ಸಾ: ಅಲ್ಲಾ, ನಾವು ಪ್ರತೀ ದಿನ ಪ್ರಾರ್ಥನೆ ಮಾಡ್ತೀವಲ್ಲ, ನಮ್ಮಲ್ಲಿ ಇಷ್ಟು ದೇವಸ್ಥಾನಗಳಿವೆ…
ವಿ: ಹೌದು ಹೌದು. ನೀವು ದಿನಕ್ಕೆ ನೂರು ಬಾರಿಯಾದರೂ ದೇವರನ್ನು ನೆನೆಯುತ್ತೀರಿ. ಆಸ್ಪತ್ರೆ, ಶಾಲೆಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿರುವ ದೇವಸ್ಥಾನಗಳಿಗೆ ಸುತ್ತುತ್ತೀರಿ. ಆದರೆ ಎಲ್ಲ ಕಡೆಯಲ್ಲೂ ಬರೀ ನಿಮ್ಮದೇ ಆರ್ಭಟ. ಬೆಳಿಗ್ಗೆ ಎದ್ದೇಳುತ್ತಿದ್ದಂತೆಯೇ ಕೈಗಳೆರಡನ್ನೂ ಉಜ್ಜಿ ಕೊಂಡು ಮುಖಕ್ಕೆ ಹಿಡಿದು ‘ಕರಾಗ್ರೇ ವಸತೇ ಲಕ್ಷ್ಮಿ…’ ಎಂದು ಪ್ರಾರ್ಥಿಸತೊಡಗುತ್ತೀರಿ. ಲಕ್ಷ್ಮೀ, ಪಾರ್ವತಿ, ಸರಸ್ವತಿಯರು ನೀವು ಅವರನ್ನು ಕರೆಯುತ್ತಿದ್ದೀರಿ ಎಂದು ದೌಡಾಯಿಸುತ್ತಾರೆ, ಮಾತನಾಡಿಸಬಹುದು ಎಂದು ಕಾತರಿಸುತ್ತಾರೆ. ಆದರೆ ನೀವು ಅವರಿಗೆ ಮಾತನಾಡಲು ಕ್ಷಣ ಮಾತ್ರವೂ ಬಿಡುವು ದೊರೆಯದ ಹಾಗೆ ‘ನನ್ನನ್ನು ಕಾಪಾಡಿ, ನನ್ನ ಮನೆಯನ್ನು ಕಾಪಾಡಿ, ನನ್ನ ಅಂಗಡಿಯನ್ನು- ಬಿಸಿನೆಸ್ಸನ್ನು ಕಾಪಾಡಿ…’ ಎಂದು ಅಪ್ಪಣೆಗಳನ್ನು ಕೊಡಲು ಶುರುಮಾಡುತ್ತೀರಿ. ಸ್ನಾನ ಗೀನ ಮುಗಿಸಿ ದೇವರ ಮುಂದೆ ನಿಂತಾಗಲೂ ದೇವರಿಗೆ ಒಂದಕ್ಷರ ಮಾತಾಡಲೂ ಸಮಯ ಕೊಡದಂತೆ ನಿಮ್ಮ ಪ್ರವರವನ್ನೇ ಶುರು ಮಾಡಿಕೊಳ್ಳುತ್ತೀರಿ. ‘ನಂಗೆ ಎಂಬಿಎ ಸೀಟು ಸಿಗಲಿ, ನನ್ನ ಮುಖದ ಮೇಲಿನ ಮೊಡವೆ ಮಾಯವಾಗಲಿ, ನನ್ನ ಮಗಂಗೆ ತಲೇಲಿ ಐನ್‌ಸ್ಟೀನನ ಮೆದುಳು ಬರಲಿ, ಅಕ್ಕನಿಗೆ ಬೇಗ ಮದುವೆಯಾಗಿ ಬಿಡಲಿ, ಗಂಡನಿಗೆ ನೌಕರಿ ಸಿಗಲಿ..’ ಹೀಗೆ ಕಿರಾಣಿ ಅಂಗಡಿಗೆ ಸಾಮಾನು ಪಟ್ಟಿಬರೆಯುವಂತೆ ದೇವರೆದುರು ನಿಮ್ಮ ಬೇಡಿಕೆ ಪಟ್ಟಿಯನ್ನು ಹೇಳುತ್ತಾ ಕೂರುತ್ತೀರಿ. ಪಾಪ ನಿಮ್ಮ ‘ಬೇಡಿಕೆ ನಿವೇದನೆ’ಯ ಮಧ್ಯೆ ದೇವರಿಗೆ ಒಂದಕ್ಷರ ಉಸುರಲೂ ಸಾಧ್ಯವಾಗುವುದಿಲ್ಲ.
ಇನ್ನು ದೇವಸ್ಥಾನಕ್ಕೆ ಹೋಗುತ್ತೀರಿ. ಅಲ್ಲಿಯೂ ನಿಮ್ಮ ಕಿರಾಣಿ ಅಂಗಡಿ ಪಟ್ಟಿಯನ್ನು ಸಲ್ಲಿಸುವ ಕೆಲಸ ಮುಗಿಯಿತು, ಇನ್ನೇನು ಸ್ವಲ್ಪ ಬಿಡುವು ಸಿಕ್ಕಿತು ಅನ್ನುವಷ್ಟರಲ್ಲಿ ಪೂಜಾರಿ ವಕ್ಕರಿಸಿ ಬಿಡುತ್ತಾನೆ. ನೀವು ದೇವರೊಂದಿಗೆ ಮಾತನಾಡಲಿಕ್ಕೆ, ದೇವರು ನಿಮ್ಮೊಂದಿಗೆ ಮಾತನಾಡಲಿಕ್ಕೆ ಅಡ್ಡಿಯಾಗಿ ನಿಂತು ಬಿಡುತ್ತಾನೆ. ದೇವರ ಹತ್ತಿರ ನಿಮ್ಮ ಪರವಾಗಿ ಮಾತನಾಡಿದಂತೆ ಮಾಡುತ್ತಾನೆ. ನಿಮ್ಮ ಹತ್ತಿರ ದೇವರ ಪರವಾಗಿ ಮಾತನಾಡುವಂತೆ ನಟಿಸುತ್ತಾನೆ. ನೀವು ಅವನ ಮಾತನ್ನು ಕೇಳಿ ದೇವರೇ ಹಿಂಗಂದ, ಹಂಗಂದ ಎಂದು ನಂಬಿಕೊಂಡು ಜಾಗ ಖಾಲಿ ಮಾಡುತ್ತೀರಿ. ನಾನೂ ಆತ ಹೇಳಿದ್ದು ಕೇಳಿಕೊಂಡು ತೆಪ್ಪಗಿರಬೇಕು ಇಲ್ಲಾಂದ್ರೆ ಮಾರನೆಯ ದಿನದಿಂದ ಹಾಲು, ತುಪ್ಪದ ಅಭಿಷೇಕ ಕಳೆದುಕೊಳ್ಳಬೇಕಾಗುತ್ತೆ.
ನ.ಸಾ: ತುಂಬಾ ಬೇಸರದ ಸಂಗತಿ ಇದು. ಹೌದು, ಎಲ್ಲಾ ಸರಿ ಆದರೆ ನೀವೇನೋ ಹೊಸ ಸಂಗತಿ ಕಂಡುಕೊಂಡಿದ್ದೀರಿ ಅಂದ್ರಿ…
ವಿ: ಹ್ಹಾ! ಅದನ್ನೇ ಹೇಳಬೇಕಿತ್ತು. ಹೀಗೆ ದೇವರೊಂದಿಗೆ ಮಾತನಾಡಲು ಮನುಷ್ಯನಿಗೆ ಸಮಯವೇ ಸಿಕ್ಕದಂತೆ ಆಗಿರುವಾಗ ಎಂದೋ ಒಮ್ಮೆಮ್ಮೊ ಅಪರೂಪಕ್ಕೆ ಮಾತನಾಡುವ ಅವಕಾಶ ಸಿಕ್ಕಾಗಲೂ ನಮ್ಮ ದೇವರುಗಳು ಅದನ್ನು ಹಾಳು ಮಾಡಿಕೊಂಡುಬಿಡುತ್ತಾರೆ. ಹೇಗೆ, ಅಂತೀರಾ? ಇಂದಿನ ಜನರು ಮಾತಾಡುವ ಶೈಲಿಯಲ್ಲಿ, ಬಳಸುವ ಭಾಷೆಯಲ್ಲಿ ಮಾತಾಡಿದರೆ ಮಾತ್ರವಲ್ಲವೇ ಅವರಿಗೆ ಅರ್ಥವಾಗುವುದು. ಅದು ಬಿಟ್ಟು ಹಳೇ ಕಾಲದವರ ಹಾಗೆಯೇ, ‘ವತ್ಸಾ… ನಿನಗೇನು ಬೇಕು ಕೇಳುವಂತವನಾಗು..’ ಅಂತ ಮಾತಾಡಿದರೆ ಯಾರು ಕೇಳುತ್ತಾರೆ? ಅದಕ್ಕೇ ನಾನು ನನ್ನ ಲಿಂಗೋ ಬದಲಾಯಿಸಿಕೊಂಡಿದ್ದೇನೆ. ಬೆಂಗಳೂರಿನ ಯುವಕರೊಂದಿಗೆ ಮಾತಾಡುವ ರೀತಿಗೂ, ಸಾಗರದ ಹೌಸ್ ವೈಫ್ ಜೊತೆಗೆ ಮಾತಾಡುವ ರೀತಿಗೂ ವ್ಯತ್ಯಾಸವಿದೆ ಅನ್ನೋದನ್ನ ಅರ್ಥ ಮಾಡಿಕೊಳ್ಳಬೇಕು.
ನ.ಸಾ: ಹೌದೌದು. ದೇವರೂ ಸಹ ಅಪ್ ಡೇಟ್ ಆಗುತ್ತ ಇರಬೇಕಲ್ಲವೇ? ಅಂದ ಹಾಗೆ ಈ ಸಲದ ಭೂಲೋಕದ ಟೂರ್ ಹೇಗಿತ್ತು?
ವಿ: ಪ್ರತೀ ವರ್ಷದ ಹಾಗೆಯೇ ಇದೆ ಮೈ ಸನ್! ಭಾರತ ಅಮೇರಿಕಾ ಆಗುವುದು ಯಾವಾಗ , ಬೆಂಗಳೂರು ಸಿಂಗಾಪುರವಾಗುವುದು ಯಾವಾಗ ಎಂದು ಸರಕಾರಗಳು ಕನಸುತ್ತಿದ್ದರೆ, ನಮ್ಮ ಹುಡುಗ ಅಮೇರಿಕಾಗೆ ಹೋಗುವುದು ಯಾವಾಗ, ತಾನು ಸಿಂಗಾಪುರದ ಪ್ರಜೆಯಾಗುವುದು ಯಾವಾಗ ಅಂತ ಜನರು ಕನಸುತ್ತಿದ್ದಾರೆ. ಇದರಲ್ಲಿ ಒಂದಿನಿತೂ ಬದಲಾವಣೆಯಾಗಿಲ್ಲ. ಅದೇ ಬೆಲೆ ಏರಿಕೆ, ಬಡವರು ಬಡತನದಲ್ಲಿ ಪ್ರಗತಿ ಸಾಧಿಸುವುದು ಧನಿಕರು ಸಿರಿತನದಲ್ಲಿ ಪ್ರಗತಿ ಸಾಧಿಸುವುದು, ಇದನ್ನೇ ಶೇ ೭ ರ ರಾಷ್ಟ್ರೀಯ ಪ್ರಗತಿ ಎಂದು ಸಂಭ್ರಮಿಸುವುದು – ಏನೂ ವ್ಯತ್ಯಾಸ ಕಂಡಿಲ್ಲ. ಆದರೆ ಒಂದು ಬಹುಮುಖ್ಯವಾದ ಬದಲಾವಣೆ ನಡೆದಿದೆ. ಇದರಿಂದ ನನ್ನ ಅಸ್ತಿತ್ವಕ್ಕೇ ಪೆಟ್ಟು ಬೀಳುತ್ತಿರುವುದರಿಂದ ನನಗೆ ಆತಂಕವಾಗಿದೆ.
ನ.ಸಾ: ಅದ್ಯಾವ ಸಂಗತಿ ಮೈಲಾರ್ಡ್!
ವಿ: ನಿಮ್ಮ ನಾಡಿನಲ್ಲಿ ಮಣ್ಣಿಗೆ ಹೊನ್ನಿನ ಬೆಲೆ ಬರುತ್ತಿದೆ ಅಲ್ಲವಾ? ಮಣ್ಣಿನಿಂದ ಕಬ್ಬಿಣ ಸಿಕ್ಕುತ್ತದೆ ಅಂದಕೂಡಲೇ ಮಣ್ಣು ಚಿನ್ನದ ಬೆಲೆಯನ್ನು ಪಡೆದುಕೊಂಡು ಬಿಟ್ಟಿದೆ. ರಿಯಲ್ ಎಸ್ಟೇಟು ದಾಂಢಿಗರು ಮಣ್ಣಿಗೆ ಉಕ್ಕಿನ ಬೇಲಿಯನ್ನು ಹಾಕಿ, ಹರಿತವಾದ ಚಾಕುವಿನಿಂದ ಕೇಕ್ ಕಟ್ ಮಾಡಿದ ಹಾಗೆ ತುಂಡು ತುಂಡು ಮಾಡಿ ಚಿನ್ನದ ಬೆಲೆಗೆ ಮಾರುತ್ತಿದ್ದಾರೆ. ಸರಕಾರಗಳು ಮಣ್ಣಿರುವುದು ಸಿರಿವಂತರು ತಮ್ಮ ಕಾರ್ಖಾನೆ ಸ್ಥಾಪಿಸುವುದಕ್ಕೇ ಹೊರತು ರೈತರು ಉಳುಮೆ ಮಾಡುವುದಕ್ಕಲ್ಲ ಎಂದು ವರ್ತಿಸುತ್ತಾ ಬಡವರ ಬಾಯಿಗೆ ಮಣ್ಣು ಹಾಕುತ್ತಿವೆ. ಇಷ್ಟೆಲ್ಲಾ ಸಂಗತಿ ಮಣ್ಣಿನ ವಿಚಾರವಾಗಿಯೇ ನಡೆಯುತ್ತಿರುವುದು.
ನ.ಸಾ: ಅದೇನೋ ಸರಿ ಲಾರ್ಡ್ ಆದರೆ ಇದರಿಂದ ನಿಮಗೇನು ತೊಂದರೆ?
ನ.ಸಾ: ತೊಂದರೆ ಇದೆ. ನೋಡಿ, ನಾನು ಹುಟ್ಟಿದ್ದು ಮಣ್ಣಿನಿಂದ. ನಮ್ಮ ತಾಯಿ ಪಾರ್ವತಿ ಪರ್ವತ ರಾಜನ ಮಗಳು. ಆಕೆಯ ಮೈಯಿಂದ ತೆಗೆದ ಮಣ್ಣಿನಿಂದಲೇ ನಾನು ಹುಟ್ಟಿದ್ದು. ನನ್ನ ದೇಹದ ಪ್ರತಿಯೊಂದು ಕಣಕಣವೂ ಮಣ್ಣೇ. ಹೀಗಾಗಿ ನಾನು ಮಣ್ಣಿನ ಮಗ! ಮಣ್ಣಿನಿಂದಾಗಿ ಇಷ್ಟೆಲ್ಲಾ ಅನ್ಯಾಯ, ಅನಾಹುತ, ಅತ್ಯಾಚಾರ, ಶೋಷಣೆ ನಡೆಯುತ್ತಿರುವುದು ನನಗೆ ಅಪಮಾನ ಮಾಡಿದ ಹಾಗೇ ಅಲ್ಲವೇ? ಪರಿಸ್ಥಿತಿ ಯಾವ ಹಂತಕ್ಕೆ ಬಂದಿದೆಯೆಂದರೆ ಚೌತಿಯ ದಿನ ನನ್ನ ಮೂರ್ತಿಯನ್ನು ಮಾಡಲೂ ಜನರಿಗೆ ಮಣ್ಣು ಸಿಕ್ಕುತ್ತಿಲ್ಲ. ಪ್ಲಾಸ್ಟರ್ ಆಫ್ ಪ್ಯಾರಿಸ್‌ನ್ನು ಕಲೆಸಿ ನಿರ್ಜೀವವಾದ ಮೌಲ್ಡಿಗೆ ಸುರಿದು ನನ್ನನ್ನು ಮಾಡುತ್ತಿದ್ದಾರೆ. ಹೀಗಾದರೆ ನಾನು ಮಣ್ಣಿನ ಮಗ ಹೇಗಾದೇನು? ಪ್ಲಾಸ್ಟರ್ ಆಫ್ ಪ್ಯಾರಿಸ್‌ನ ಮಗನಾಗಬಹುದು ಅಷ್ಟೇ! (ಇದೇ ಸುಸಂಧಿಯನ್ನು ಬಳಸಿಕೊಂಡು ‘ಮಣ್ಣಿನ ಮಗ’ ಟೈಟಲನ್ನು ಯಾರ್ಯಾರೋ ಹೈಜಾಕ್ ಮಾಡುತ್ತಿದ್ದಾರೆ)
ನ.ಸಾ: ಹೌದು ಲಾರ್ಡ್ ಇದು ನಿಜಕ್ಕೂ ದುಃಖದ ಸಂಗತಿ. ಆದರೆ ನಮ್ಮಗಳ ಕೈಗಳೂ ಕಟ್ಟಿಹೋಗಿವೆ. ನಾವೇನೂ ಮಾಡಲು ಸಾಧ್ಯವಿಲ್ಲ. ನಮ್ಮ ಅಧಿಕಾರಗಳನ್ನೆಲ್ಲಾ ಸರಕಾರಗಳ ಕೈಗೆ ಕೊಟ್ಟು ಸುಮ್ಮನಾಗಿದ್ದೇವಲ್ಲ?
ವಿ: ನೀವೆಂಥಾ ಮಡ್ಡಿಗಳು! ನಿಮ್ಮನ್ನು ನೀವು ಪ್ರಾಮಾಣಿಕರು, ಅಸಹಾಯಕರು, ಶೋಷಿತರು ಎಂದು ಅದೆಷ್ಟು ಕಾಲ ನಂಬಿಕೊಂಡು ಕಾಲ ಕಳೆಯುತ್ತೀರಿ? ನಡೆಯುತ್ತಿರುವ ಎಲ್ಲಾ ಅಕ್ರಮ, ಅನ್ಯಾಯಗಳಲ್ಲಿ ನೀವೂ ಪಾಲುದಾರರು ಎಂಬುದನ್ನು ನೆನೆಪಿಟ್ಟುಕೊಳ್ಳಿ. ಸರಕಾರವೇನು ದೇವರು ಮಾಡಿದ ವ್ಯವಸ್ಥೆಯಲ್ಲ. ನೀವೇ ಕಟ್ಟಿಕೊಂಡದ್ದು. ಅದರ ಮಂತ್ರಿಗಳೇನೂ ದೇವರ ಆಯ್ಕೆಯಲ್ಲ. ನೀವೇ ಐದು ವರ್ಷಕ್ಕೊಮ್ಮೆ ಆರಿಸಿ ಕಳುಹಿಸಿದ್ದು. ಅವರು ಲೂಟಿ ಮಾಡಿದ ರಖಮಿನಲ್ಲಿ ಸಾಧ್ಯವಾದಷ್ಟನ್ನು ಚುನಾವಣೆಯ ಸಮಯದಲ್ಲಿ ಗೆಬರಿಕೊಂಡು ಓಟು ಹಾಕುತ್ತೀರಿ. ಮತ್ತದೇ ಸರಕಾರವನ್ನು ತಂದುಕೊಳ್ಳುತ್ತೀರಿ. ಪಾಪ, ನಾಡಿನಲ್ಲಿ ನಡೆಯುತ್ತಿರುವ ಅನ್ಯಾಯದ ಬಗ್ಗೆ ಕಾಳಜಿ ನಿಮಗೆ! ಹೆಚ್ಚು ಬೈಯ್ಯುವುದಕ್ಕೆ ಹೋಗುವುದಿಲ್ಲ, ಈ ಬಾರಿ ಬೆಲೆಯೇರಿಕೆಯ ಸಂಕಷ್ಟದಲ್ಲೂ ಸಹ ನನಗೆ ಹೊಟ್ಟೆ ತುಂಬಾ ಭಕ್ತಿಯ, ಶ್ರದ್ಧೆಯ ಕಾಯಿ ಕಡುಬು, ಮೋದಕಗಳನ್ನು ಪ್ರೀತಿಯಿಂದ ತಿನ್ನಿಸಿದ್ದೀರಿ. ನಿಮಗೆ ನಾನು ವಿದ್ಯಾ, ಬುದ್ಧಿಯನ್ನು ಕರುಣಿಸುತ್ತೇನೆ. ನಿಮ್ಮನ್ನು ನೀವು ಉದ್ಧಾರ ಮಾಡಿಕೊಳ್ಳಿ.
ನ.ಸಾ: ಧನ್ಯವಾದಗಳು ಲಾರ್ಡ್ ವಿಘ್ನೇಶ್ವರ, ನಗೆ ನಗಾರಿಯೊಂದಿಗಿನ ನಿಮ್ಮ ಸಂದರ್ಶನಕ್ಕಾಗಿ ಧನ್ಯವಾದಗಳು.
ವಿ: ಹ್ಹ! ಹಾಗೆ ಈ ಸಂದರ್ಶನದ ಬಗ್ಗೆ ಏನಾದರೂ ಡಿಬೇಟ್ ಮಾಡುವುದಿದ್ದರೆ ನನ್ನ ಮೇಲ್ ಐಡಿ(vnk_gaja@gmail.com) ಗೆ ಒಂದು ಮೇಲ್ ಒಗಾಯಿಸಿ.
ಇತ್ತೀಚಿನ ಟಿಪ್ಪಣಿಗಳು