Archive for the ‘ಯೂಥ್ ಫೋಕಸ್’ Category
ಯೂಥ್ ಫೋಕಸ್: ಅಡಿಗರ ಬಿಳಿ ಹುಲಿ
Posted ನವೆಂಬರ್ 17, 2008
on:ಆತ ಬಲರಾಮ ಹಲವಾಯಿ ಭಾರತದ ಲಕ್ಷಾಂತರ ಕುಗ್ರಾಮಗಳಂತೆಯೇ ಇದ್ದ ಒಂದು ಗ್ರಾಮದಲ್ಲಿ ಹುಟ್ಟಿದವ. ಆತನ ತಂದೆ ತಾಯಿಗೆ ಆತನಿಗೊಂದು ಹೆಸರಿಡಬೇಕೆನ್ನುವ ಅರಿವೂ ಇರುವುದಿಲ್ಲ.ಆತನನ್ನು ಮುನ್ನಾ ಎಂದಷ್ಟೇ ಕರೆಯುತ್ತಿರುತ್ತಾರೆ. ಇಡೀ ಹಳ್ಳಿಯ ಒಡೆತನ ಜಮೀನುದಾರನ ಕೈಲಿರುತ್ತದಾದ್ದರಿಂದ ಆತನ ತಂದೆ ತಾಯಿಯಂತೆಯೇ ಅನೇಕರು ತಮ್ಮ ಬದುಕಿರುವುದು ಜಮೀನುದಾರರ ಸೇವೆ ಮಾಡುವುದಕ್ಕೆ ಎಂತಲೇ ಭಾವಿಸಿರುತ್ತಾರೆ. ಇಂಥ ಪರಿಸರದಲ್ಲಿ ಬೆಳೆದ ಬಲರಾಮ ಚೂಟಿ ಹುಡುಗ. ಶಾಲೆಗೆ ಬಂದ ಇನ್ಸ್‌ಪೆಕ್ಟರ್ ಈತನ ಬುದ್ಧಿಮತ್ತೆಯನ್ನು ಹೊಗಳುವಷ್ಟು ಚಾಲಾಕಿ.ಆದರೆ ತನ್ನ ತಂಗಿಯ ಮದುವೆಯನ್ನು ಮಾಡುವುದಕ್ಕಾಗಿ ಆತನ ಶಾಲೆಯನ್ನು ಬಿಟ್ಟು ಹೊಟೇಲಿನಲ್ಲಿ ಕಪ್ ತೊಳೆಯಬೇಕಾಗುತ್ತದೆ. ಶಾಲೆಯಲ್ಲಿ ತನ್ನ ಚಾಲಾಕಿತನದಿಂದಾಗಿ ‘ಬಿಳಿ ಹುಲಿ’ ಎಂದು ಕರೆಸಿಕೊಂಡಿದ್ದ ಬಲರಾಮ ಮುಂದೆ ತಾನು ಕೆಲಸ ಮಾಡುತ್ತಿದ್ದ ಶ್ರೀಮಂತ ಯಜಮಾನನ ಪ್ರಾಣವನ್ನೇ ತೆಗೆದು ದೊಡ್ಡ ವ್ಯಾಪಾರ ಪ್ರಾರಂಭಿಸಿ ಶ್ರೀಮಂತನಾಗುತ್ತಾನೆ. ಬೆಂಗಳೂರಿಗೆ ಭೇಟಿ ನೀಡಲಿದ್ದ ಚೀನಾದ ಅಧ್ಯಕ್ಷನಿಗೆ ಅದ್ಯಾಕೋ ತನ್ನ ಕಥೆಯನ್ನೆಲ್ಲಾ ಹೇಳಿಕೊಳ್ಳಬೇಕು ಅನ್ನಿಸುತ್ತದೆ. ಏಳು ರಾತ್ರಿಗಳಲ್ಲಿ ಆತ ತನ್ನ ಬದುಕಿಅ ಚಿತ್ರಣವನ್ನು ಕಟ್ಟಿಕೊಡುತ್ತಾ ಹೋಗುತ್ತಾನೆ.ಆತ ಚೀನಾದ ಅಧ್ಯಕ್ಷನಿಗೆ ಬರೆಯುವ ಸುದೀರ್ಘ ಪತ್ರವೇ ‘ದಿ ವೈಟ್ ಟೈಗರ್’ ಕಾದಂಬರಿಯ ಪುಟಗಳಲ್ಲಿ ತೆರೆದುಕೊಳ್ಳುತ್ತಾ ಹೋಗುತ್ತದೆ.
ಈ ಕೃತಿಗೆ ೨೦೦೮ರ ಸಾಲಿನ ಪ್ರತಿಷ್ಠಿತ ಮ್ಯಾನ್ ಬುಕರ್ ಪ್ರಶಸ್ತಿ ಸಂದಾಯವಾಗಿದೆ. ಕಾಮನ್ ವೆಲ್ತ್ ಒಕ್ಕೂಟದ ರಾಷ್ಟ್ರಗಳು ಇಲ್ಲವೇ ಐರ್ಲೆಂಡಿನ ಒಂದು ಶ್ರೇಷ್ಠ ಕೃತಿಗೆ ಪ್ರತಿವರ್ಷ ಐವತ್ತು ಸಾವಿರ ಯುರೋ ಮೌಲ್ಯದ ಬಹುಮಾನ ಕೊಟ್ಟು ಗುರುತಿಸಲಾಗುತ್ತದೆ. ೨೦೦೨ರಿಂದ ಮ್ಯಾನ್ ಗ್ರೂಪ್ ಎಂಬ ಹಣಕಾಸು ವ್ಯವಹಾರದ ಸಂಸ್ಥೆಯೊಂದು ಈ ಪ್ರಶಸ್ತಿಯನ್ನು ಪ್ರಾಯೋಜಿಸುತ್ತಾ ಬಂದಿದೆ. ಈ ಬಾರಿ ಪ್ರಶಸ್ತಿ ಪಡೆದಿರುವ ಅರವಿಂದ್ ಅಡಿಗ ಮೂಲತಃ ಕನ್ನಡಿಗರು ಹಾಗೂ ಮುವತ್ನಾಲ್ಕು ವರ್ಷದ ತರುಣರು(?) ಎಂಬುದು ಗಮನಿಸಬೇಕಾದ ಸಂಗತಿ. ಅಡಿಗರಲ್ಲದೆ ಇತರ ಮೂವರು ಭಾರತೀಯರು(ಸಲ್ಮಾನ್ ರಶ್ದಿ, ಅರುಂಧತಿ ರಾಯ್, ಕಿರಣ್ ದೇಸಾಯ್) ಈಗಾಗಲೇ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಅರವಿಂದ್ ೧೯೭೪ರಲ್ಲಿ ಮದ್ರಾಸಿನಲ್ಲಿ ಹುಟ್ಟಿದರಾದರೂ ಅವರ ತಂದೆ ತಾಯಿ ಕನ್ನಡಿಗರು, ಮಂಗಳೂರಿನವರು. ಓದಿದ್ದು ಬೆಳೆದದ್ದು ಮಂಗಳೂರಿನಲ್ಲಿ. ಅನಂತರ ಇಡೀ ಕುಟುಂಬ ಆಸ್ಟ್ರೇಲಿಯಾಕ್ಕೆ ವಲಸೆ ಹೋಗುತ್ತದೆ. ಕೊಲಂಬಿಯಾ ಕಾಲೇಜ್ ಹಾಗೂ ಕೊಲಂಬಿಯಾ ವಿಶ್ವವಿದ್ಯಾಲಯಗಳಲ್ಲಿ ಇಂಗ್ಲೀಷ್ ಸಾಹಿತ್ಯವನ್ನು ಅಭ್ಯಸಿಸಿದ ಅಡಿಗ ನ್ಯೂಯಾರ್ಕಿನ ‘ಟೈಮ್’ ಪತ್ರಿಕೆಗೆ ದಕ್ಷಿಣ ಏಷ್ಯಾದ ಪ್ರತಿನಿಧಿಯಾಗಿ ನೇಮಕಗೊಂಡರು. ಪತ್ರಕರ್ತರಾಗಿದ್ದ ಅವಧಿಯಲ್ಲಿ ಭಾರತದಲ್ಲಿ ಸಂಚರಿಸಿ ದೇಶದ ಆಗುಹೋಗುಗಳನ್ನು, ಆರ್ಥಿಕ ಪಲ್ಲಟಗಳನ್ನು ಸೂಕ್ಷ್ಮವಾಗಿ ಗಮನಿಸಿ ಭಾರತದ ಜನಸಾಮಾನ್ಯರ ನಾಡಿಮಿಡಿತವನ್ನು ಅರಿತ ಅಡಿಗರು ಭಾರತದಲ್ಲಿ ಹುಟ್ಟಿಕೊಳ್ಳುತ್ತಿರುವ ಹೊಸ ಬಗೆಯ ಅಸಮಾನತೆಯ ಬಗ್ಗೆ ಗಮನ ಹರಿಸಿದರು. ಜಾತಿಗಳ ನಡುವಿನ ಅಸಮಾನತೆಗಿಂತ ವ್ಯಾಪಕವಾಗಿ ಬೆಳೆಯುತ್ತಿರುವ ಬಡವ ಹಾಗೂ ಶ್ರೀಮಂತರ ನಡುವಿನ ಕಂದರದ ಮೇಲೆ ಬೆಳಕು ಚೆಲ್ಲುವ, ಶ್ರೀಮಂತಿಕೆಯನ್ನು ಬೆನ್ನಟ್ಟಿ ಹೊರಡುವ ಹೊಸ ಆದರ್ಶದ ಬೆಳಕಿನಲ್ಲಿ ಮಾನವೀಯತೆ, ಆತ್ಮಸಾಕ್ಷಿ, ಮೌಲ್ಯಗಳಿಗೆಲ್ಲಾ ಕುರುಡಾಗುತ್ತಾ ಸಾಗುವ ಬೆಳವಣಿಗೆಯನ್ನು ಎಳೆ-ಎಳೆಯಾಗಿ ಬಿಡಿಸಿಡುವ ಕಾದಂಬರಿಯನ್ನು ಬರೆದರು. ಅದಕ್ಕೆ ‘ದಿ ವೈಟ್ ಟೈಗರ್’ ಎಂದು ಹೆಸರಿಟ್ಟರು. ವೈಟ್ ಟೈಗರ್ ಎಂದರೆ ಅಪರೂಪದ ಪ್ರಾಣಿ, ಶತಮಾನದಲ್ಲಿ ಒಮ್ಮೆ ಅವತರಿಸುವ ಜೀವಿ ಎಂದರ್ಥ. ಅಡಿಗರು ತಮ್ಮ ಮೊದಲ ಪ್ರಯತ್ನಕ್ಕೇ ಬಹುದೊಡ್ಡ ಮಾನ್ಯತೆಯನ್ನು ಪಡೆದಿದ್ದಾರೆ.
ಬುಕರ್ ಪ್ರಶಸ್ತಿ ಸಿಕ್ಕೊಡನೆ ಆ ಲೇಖಕನ ಕೃತಿಗಳಿಗೆಲ್ಲಾ ಅಪಾರವಾದ ಬೇಡಿಕೆ ಬರುವುದು ಸಾಮಾನ್ಯ. ಈ ಪ್ರಶಸ್ತಿ ಬೇರೇನು ಮಾಡದಿದ್ದರೂ ಲೇಖಕನಿಗೆ ಆರ್ಥಿಕವಾಗಿ ಲಾಭ ಮಾಡಿಕೊಡುತ್ತದೆ. ಲೇಖಕ ಜಗದ್ವಿಖ್ಯಾತನಾಗುತ್ತಾನೆ. ಕನ್ನಡಿಗರಾದ ಅಡಿಗರ ಸಾಧನೆಯನ್ನು ಮೆಚ್ಚಿಕೊಂಡಾಡುವವರು ಇದ್ದ ಹಾಗೆಯೇ ಕಾದಂಬರಿಯಲ್ಲಿ ಭಾರತದ ಬಗ್ಗೆ ಕೇವಲ ಋಣಾತ್ಮಕವಾದ ಅಂಶಗಳೇ ತುಂಬಿಕೊಂಡಿವೆ.ಭಾರತವನ್ನು, ಭಾರತೀಯರನ್ನು ಮನಸಾರೆ ಬೈಯ್ಯಲಾಗಿದೆ, ಲೇವಡಿ ಮಾಡಲಾಗಿದೆ ಎಂಬ ಆರೋಪ ಹಲವರದ್ದು. ಇದೊಂದು ಆತ್ಮವಿಮರ್ಶೆಯ ಪ್ರಯತ್ನ. ಭಾರತ ಪ್ರಕಾಶಿಸುತ್ತಿದೆ ಎಂದು ಜಗತ್ತಿಗೆ ನಾವು ತೋರಿಸಲಿಚ್ಚಿಸುತ್ತಿರುವ ಮುಖದ ಹಿಂದೆ, ನಮ್ಮ ಜಿಡಿಪಿ ಬೆಳವಣಿಗೆ, ಚಂದ್ರಯಾನ, ಪರಮಾಣು ಒಪ್ಪಂದಗಳನ್ನು ಮೀರಿದ ವ್ಯಕ್ತಿತ್ವವೊಂದು ಭಾರತಕ್ಕಿದೆ ಎಂಬುದು ಅವರ ವಿಚಾರ. ಜಾಗತಿಕ ಮಟ್ಟದ ಪತ್ರಿಕೆಯೊಂದರ ಪ್ರತಿನಿಧಿಯಾಗಿ ಕೆಲಸ ಮಾಡಿದ ಅಡಿಗರು ನಮ್ಮೆಲ್ಲರಿಗಿಂತ ಹೆಚ್ಚು ಚೆನ್ನಾಗಿ ಜಗತ್ತನ್ನು ಬಲ್ಲವರು ಹಾಗೂ ಆ ಪಕ್ವ ದೃಷ್ಟಿಕೋನದಲ್ಲಿ ಭಾರತವನ್ನು ಸಮರ್ಪಕವಾಗಿ ಚಿತ್ರಿಸಬಲ್ಲರು ಎಂಬುದು ನನ್ನಂಥ ಅನೇಕರ ವಿಶ್ವಾಸ!
-ಕೆ.ಎಸ್.ಎಸ್
ಯೂಥ್ ಫೋಕಸ್: ಬಂಗಾರದ ಬಿಂದ್ರಾ
Posted ಸೆಪ್ಟೆಂಬರ್ 25, 2008
on:- In: ಯೂಥ್ ಫೋಕಸ್
- 2 Comments
ಬ್ರಿಟೀಷರು ಬಳುವಳಿಯಾಗಿ ಬಿಟ್ಟುಕೊಟ್ಟು ಹೋದ ಭಾರತದ ಹಾಕಿ ತಂಡ ೧೯೨೮ ರಿಂದ ೧೯೫೬ರವರೆಗೆ ಅಕ್ಷರಶಃ ಇಡೀ ಜಗತ್ತನ್ನೇ ಆಳಿಬಿಟ್ಟಿತು. ಈ ಅವಧಿಯಲ್ಲಿ ಭಾಗವಹಿಸಿದ ಆರು ಒಲಿಂಪಿಕ್ಸ್ ಪಂದ್ಯಾವಳಿಯಲ್ಲಿ ಆರು ಚಿನ್ನದ ಪದಕ ಗಳಿಸಿಕೊಂಡಿತ್ತು. ಪಂದ್ಯಾವಳಿಯಲ್ಲಿ ಆಡಿದ ಇಪ್ಪತ್ನಾಲ್ಕು ಪಂದ್ಯಗಳಲ್ಲಿ ಇಪ್ಪತ್ನಾಲ್ಕನ್ನೂ ಗೆದ್ದು ಒಂದು ಪಂದ್ಯದಲ್ಲಿ ಸರಾಸರಿ ಏಳು ಗೋಲುಗಳ ಲೆಕ್ಕದಲ್ಲಿ ಸುಮಾರು ೧೭೮ ಗೋಲುಗಳನ್ನು ಗಳಿಸಿತ್ತು! ಎದುರಾಳಿಗಳಿಗೆ ಕೇವಲ ಏಳು ಗೋಲುಗಳನ್ನು ಗಳಿಸಲು ಮಾತ್ರ ಅವಕಾಶ ಕೊಟ್ಟಿತ್ತು! ಅನಂತರ ಟೊಕಿಯೋ ಹಾಗೂ ಮಾಸ್ಕೋದಲ್ಲಿ ನಡೆದ ಎರಡು ಒಲಿಪಿಂಕ್ಸಿನಲ್ಲಿ ಸಿಕ್ಕ ಚಿನ್ನದ ಪದಕವನ್ನು ಹೊರತು ಪಡಿಸಿದರೆ ಭಾರತ ಒಂದು ಚಿನ್ನದ ಪದಕ ಮುಖ ನೋಡಲು ಬರೋಬ್ಬರಿ ಇಪ್ಪತ್ತೆಂಟು ವರ್ಷ ಕಾಯಬೇಕಾಯ್ತು!
ಪ್ರತಿವರ್ಷ ಭಾರತದ ಕ್ರೀಡಾಪಟುಗಳು ಒಲಿಂಪಿಕ್ಸಿಗೆ ಹೊರಟು ನಿಂತಾಗಲೂ ಭಾರತ ಈ ಬಾರಿಯಾದರೂ ಒಂದಾದರೂ ಚಿನ್ನ ಗೆಲ್ಲುತ್ತದಾ ಎಂದು ಕನಸು ಕಾಣುತ್ತಾ, ಶೂನ್ಯ ಸಾಧನೆಯೊಂದಿಗೆ ನಮ್ಮವರು ಮರಳಿದಾಗ ನೂರು ಕೋಟಿ ಭಾರತೀಯರಲ್ಲಿ ಒಂದು ಚಿನ್ನದ ಪದಕ ಗೆಲ್ಲುವ ತಾಕತ್ತಿಲ್ಲವಾ ಎಂದು ಗೊಣಗುತ್ತಾ, ಚಿನ್ನ, ಕಂಚುಗಳಲ್ಲಿ ತೃಪ್ತಿಯನ್ನು ಪಡೆಯುತ್ತಿದ್ದ ದೇಶಕ್ಕೆ ಒಮ್ಮೆಗೇ ಚಿನ್ನದ ಕನಸನ್ನು ನನಸು ಮಾಡಿ ತೋರಿಸಿದ್ದಾನೆ ಅಭಿನವ್ ಬಿಂದ್ರಾ ಎಂಬ ಇಪ್ಪತ್ತಾರು ವರ್ಷದ ಪಂಜಾಬಿ ಯುವಕ. ಭಾರತೀಯರಲ್ಲಿ ಚಿನ್ನ ಗೆಲ್ಲುವ ಶಕ್ತಿಯಿದೆಯೇ ಎಂದು ಅನುಮಾನ ಪಡುತ್ತಿದ್ದವರೆಲ್ಲಾ ಆಶ್ಚರ್ಯ ಪಡುವಂಥ ಸಾಧನೆಯನ್ನು ಬಿಂದ್ರಾ ಮಾಡಿದ್ದಾನೆ. ಭಾರತೀಯನಾದವನಿಗೆ ಯಾವ ಸಾಧನೆಯನ್ನೂ ಮಾಡಬಲ್ಲ ತಾಕತ್ತಿದೆ ಎಂದು ತೋರಿಸಿಕೊಟ್ಟು ಯುವಕರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದ್ದಾನೆ ಬಿಂದ್ರಾ.
ಬಿಂದ್ರಾ ಬೀಜಿಂಗಿನಲ್ಲಿ ಬಂಗಾರದ ಹಕ್ಕಿಯನ್ನು ಹೊಡೆಯುತ್ತಿದ್ದ ಹಾಗೆ ಇಲ್ಲಿ ನಮ್ಮ ದೇಶದಲ್ಲಿ ಅಸಹ್ಯ ಮೂಡುವ ಹಾಗೆ ರಾಜ್ಯಗಳು ಆತನ ಯಶಸ್ಸಿನ ಶಾಖದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಹವಣಿಸುತ್ತಿವೆ. ಆತನ ಸಾಧನೆಗೆ ಯಾವ ರೀತಿಯಲ್ಲೂ ಕಾರಣವಾಗದ ಸರ್ಕಾರಗಳೆಲ್ಲಾ ಆತನೆದುರು ಲಕ್ಷ ಲಕ್ಷಗಳ ಹಣ ಸುರಿಯುತ್ತಿವೆ. ಆತನ ಸಾಧನೆಯಲ್ಲಿ ಪಾಲು ಹೊಂದಿರುವವರಂತೆ! ಇವರ ಓಲೈಕೆಗೆಲ್ಲಾ ಬಿಂದ್ರಾನ ಮುಖದ ಮೇಲಿನ ನಿರ್ಲಿಪ್ತ ಮಂದಹಾಸವೇ ಉತ್ತರಿಸುತ್ತಿದೆ.
ಹಾಗೆ ನೋಡಿದರೆ ಅಭಿನವ್ ಬಿಂದ್ರಾ ದೇಶದ ಅಸಂಖ್ಯಾತ ಯುವಕರ ಪಾಲಿನ ಹೀರೋ ಆಗಲಿಕ್ಕೆ ಸಾಧ್ಯವಿಲ್ಲ. ಆತನ ಸಾಧನೆ ಯುವಕರಲ್ಲಿ ಹೊಸ ಹುಮ್ಮಸ್ಸನ್ನು ಹುಟ್ಟಿಸಬಹುದಾದರೂ ಅದು ದಾರಿದೀಪವಾಗುವ ಸಾಧ್ಯತೆಯಿಲ್ಲ. ಆತನ ಯಶಸ್ಸಿನಿಂದ ನಾವು ಭಾರತದ ಕ್ರೀಡಾ ವ್ಯವಸ್ಥೆಯ ಬಗ್ಗೆ ಅಭಿಮಾನ ಪಟ್ಟುಕೊಂಡು, ಕನಸು ಕಾಣುವುದಕ್ಕೆ ಸಾಧ್ಯವಿಲ್ಲ. ಆತನ ಸಾಧನೆ ವೈಯಕ್ತಿಕವಾದದ್ದು. ತನ್ನ ಬೆನ್ನ ಹಿಂದೆ ಕೋಟ್ಯಾಧಿಪತಿಯಾದ ಅಪ್ಪ, ಸ್ವತಃ ಕ್ರೀಡೆಯಲ್ಲಿ ಮುಳುಗಿ ಎದ್ದ ಮನೆತನ ಇರದೇ ಹೋಗಿದ್ದರೆ ಬಿಂದ್ರಾ ಬೀಜಿಂಗಿನಲ್ಲಿ ಚಿನ್ನದ ಪದಕ ತೊಟ್ಟು ನಳನಳಿಸಲು ಸಾಧ್ಯವಾಗುತ್ತಿರಲಿಲ್ಲ. ಜರ್ಮನಿಯ ಕೋಚು, ವಿದೇಶಿ ಫಿಸಿಯೋಥೆರಪಿಸ್ಟುಗಳು, ದುಬಾರಿಯಾದ ಬಂದೂಕು, ಕುಬೇರರಿಗೆ ಮೀಸಲಾದ ತರಬೇತಿಗಳನ್ನು ಹೊಂದಿಸುವಂತಹ ಆರ್ಥಿಕ ತಾಕತ್ತು ಬಿಂದ್ರಾನ ತಂದೆಗೆ ಇಲ್ಲದೆ ಹೋಗಿದ್ದರೆ ಭಾರತದಂತಹ ದೇಶದಲ್ಲಿ ಅಂತಹ ಶೂಟರ್ ಅರಳಲು ಸಾಧ್ಯವೇ ಇರುತ್ತಿರಲಿಲ್ಲ.
ಇಂದಿಗೂ ಭಾರತದಲ್ಲಿ ಕ್ರೀಡೆ ಎನ್ನುವುದು ಸರಕಾರದ ಮುಖ್ಯ ಪ್ರಯಾರಿಟಿಯಾಗಿಲ್ಲ. ಅನುದಾನದ ಹೆಸರಿನಲ್ಲಿ ಕ್ರೀಡಾ ಅಕಾಡೆಮಿಗಳಿಗೆ ಕೋಟ್ಯಂತರ ರೂಪಾಯಿ ಹರಿದು ಬಂದರೂ ಅದು ವ್ಯವಸ್ಥೆಯಲ್ಲಿನ ತಿಮಿಂಗಿಲಗಳ ಹಸಿವನ್ನು ನೀಗಿಸಿ ಕ್ರೀಡೆಯನ್ನು ಬಲಪಡಿಸುವುದಕ್ಕೆ ಬರುವಷ್ಟರಲ್ಲಿ ಮೋರಿಯಲ್ಲಿನ ಹರಿವಾಗಿರುತ್ತದೆ!
ಚಿನ್ನದ ಬೇಟೆಯಾಡಿದ ಬಿಂದ್ರಾನಿಗೊಂದು ಕಂಗ್ರಾಟ್ಸ್ ಹೇಳುತ್ತಾ, ಭಾರತಕ್ಕೆ ಇನ್ನೆರಡು ಕಂಚು ತಂದುಕೊಟ್ಟ ಸುಶೀಲ್ ಕುಮಾರ್ ಹಾಗೂ ವಿಜಯೇಂದರ್ ಕುಮಾರ್‌ರಿಗೆ ನೂರು ಕೋಟಿ ಭಾರತೀಯರ ಪರವಾಗಿ ಥ್ಯಾಂಕ್ಸ್ ಹೇಳೋಣ.
– ಕೆ.ಎಸ್.ಎಸ್
ಇತ್ತೀಚಿನ ಟಿಪ್ಪಣಿಗಳು