ಕಲರವ

Archive for the ‘ಮುಖಪುಟ ಲೇಖನ’ Category

– ಅಜಿತ ಚಂದ್ರ.ಎಸ್, ಬೆಂಗಳೂರು

ನಮ್ಮ ಬದುಕಿನ ಪಯಣ ಎಲ್ಲಿಗೆ?….. ಪ್ರಶ್ನೆ ವಿಚಿತ್ರ ಎನಿಸಿದರೆ ಅದು ಸಹಜ. ಆದರೆ ಆತ್ಮಾವಲೋಕನೆಗೆ ಕುಳಿತರೆ ಎಲ್ಲರ ಮನಸ್ಸಿನಲ್ಲಿ ಮೂಡುವ ಮೊದಲ ಪ್ರಶ್ನೆ ಇದೇ ಎಂಬುದು ನನ್ನ ನಂಬಿಕೆ.

ಬದುಕು ಸಾಗುವ ಬಗೆಗೆ ಕುಳಿತು ಯೋಚಿಸಿದಾಗ ಎಲ್ಲರ ಮನಸ್ಸನ್ನು ಹೊಕ್ಕುವ ಯೋಚನೆ- ನನ್ನ ಬದುಕಿನ ಗುರಿ ಯಾವುದು?? ಅದರೆಡೆಗಿನ ಹಾದಿ ಎಷ್ಟು ಹಸನಾಗಿದೆ?? ಬದುಕಿನ ಪಯಣದ ಹಾದಿಯಲ್ಲಿ ಬಂದ ಸಂತಸದ ಆ ಮನತುಂಬಿದ ಸವಿಘಳಿಗೆಗಳು, ಅವುಗಳ ಸಿಹಿ ನೆನಪುಗಳು……. ಅಲ್ಲಲ್ಲಿ ಮನಸ್ಸನ್ನು ಕಲಕುವ, ಮರೆಯಲೇ ಬೇಕೆಂದಿದ್ದರೂ ಮರೆಯಲಾಗದ ಘಟನೆಗಳು, ದುಗುಡ-ದುಮ್ಮಾನಗಳು… ಹೀಗೆ ಮನಸ್ಸಿನಲ್ಲಿಯೇ ಮಂಥನ ನಡೆದರೆ ಎಲ್ಲರಿಗೂ ಎಂದಿಗೂ ಗೋಚರಿಸುವ ಒಂದು ಸತ್ಯ- ಬಾಳು ಸುಖ-ದುಃಖಗಳ ಮಿಲನ ಎಂಬುದು. ಪ್ರತಿಯೊಬ್ಬರ ಬದುಕೂ ನೆರಳು-ಬೆಳಕಿನ ನಡುವೆ..

ತನ್ನ ಹಸಿವನ್ನು ಹಿಂಗಿಸುವ ಸಲುವಾಗಿ ಹೂವಿಂದ ಹೂವಿಗೆ ಹಾರಿ ಮಕರಂದವನ್ನು ಹೀರುವ ದುಂಬಿಯಂತೆ ಪ್ರತಿಯೊಬ್ಬರ ಮನಸ್ಸು ತನ್ನನ್ನು ಅರಿತು ಪ್ರೀತಿಸುವ, ತನ್ನ ಮನಸ್ಸಿಗೆ ಸ್ಪಂದಿಸುವ ಮನಸ್ಸನ್ನು ಅರಸಿ ಸಾಗುತ್ತದೆ. ಹೀಗೆ ಹುಟ್ಟಿದಾಗಿನಿಂದ ಸಾಯುವವರೆಗೂ ಪ್ರತಿಯೊಬ್ಬನ ಮನಸ್ಸು ತನ್ನ ಬದುಕಿನ ಪಯಣದ ಯಾವುದೇ ಹಂತದಲ್ಲಾದರೂ ತನಗೆ ಸ್ಪಂದಿಸುವ ಮನಸ್ಸನ್ನು ಬಯಸಿ ಅದರ ಹುಡುಕಾಟದಲ್ಲಿರುತ್ತದೆ. ಮನಸ್ಸು ತನ್ನ ನೆಮ್ಮದಿಗಾಗಿ ಪ್ರೀತಿ-ನಂಬಿಕೆಗಳನ್ನು ಗಳಿಸಲು ಅದನ್ನು ಹಂಚಿಕೊಳ್ಳಲು ಬಯಸುತ್ತದೆ. ಮೂಲಭೂತವಾಗಿ ಎಲ್ಲರ ಮನಸ್ಸು ನೆಮ್ಮದಿಯ ಬೆಳಕನ್ನು ಕಾಣಬಯಸುತ್ತದೆ.

ಕನಸಿನಿಂದಲೇ ಮನುಷ್ಯನಿಗೊಂದು ಗುರಿ ಎಂದು ಸಿಗುವುದು. ಆ ಗುರಿಯನ್ನು ತಲುಪುವುದರೆಡೆಗೆ ಅವನ ಶಕ್ತಿಯ, ಬುದ್ಧಿಯ ವಿನಿಯೋಗ… ಗುರಿ ತಲುಪಿದಾಗ ಮನುಷ್ಯನ ಸಂತೋಷಕ್ಕೆ ಆಕಾಶವೇ ಅಂಚು… ಏನಾದರೂ, ಆ ಸಂತಸ ಕ್ಷಣಿಕ. ಕಣ್ಣಿನಲ್ಲಿ ಮತ್ತೊಂದು ಕನಸು, ಗುರಿ… ಅಲ್ಲಿಂದ ಅದರೆಡೆಗೆ ನಮ್ಮ ಪಯಣ. ಹೀಗೆ ನಿರಂತರ ಪಯಣವೇ ಜೀವನ. ದಾರಿಯಲ್ಲಿ ಸಿಗುವ, ಗುರಿ ತಲುಪಿದಾಗ ಮನಸ್ಸು ಹೊಂದುವ ಆ ಕ್ಷಣಿಕ ಸಂತೋಷಗಳು ಕತ್ತಲಲ್ಲಿ ಹತಾಶೆಯ ಹೊಂದಿ ಪಯಣವನ್ನು ನಿಲ್ಲಿಸುವ ಹಂತ ತಲುಪಿದ ಮನಸ್ಸುಗಳಲ್ಲಿ ಆಸೆಯ ಚಿಲುಮೆಯನ್ನು ಮತ್ತೆ ಮೂಡಿಸುವ ಸಾಧನ. ಎಲ್ಲರ ಪಯಣವೂ ದೂರದಲ್ಲೆಲ್ಲೋ ಗೋಚರಿಸುವ ಪ್ರಕಾಶiiನವಾದ ಬೆಳಕಿನ ಕಡೆಗೆ…

ಹೀಗೆ ಮನುಷ್ಯನ ಜೀವನದಲ್ಲಿ, ತನ್ನ ಬದಲಾಗುವ ಗುರಿಗಳ ಕಡೆಗಿನ ಪಯಣದಲ್ಲಿ ಎಂದಿಗೂ ಎಡವದೆ ಮುಂದೆ ಹೋಗಲು ಸಧ್ಯವಿಲ್ಲ. ಸೋಲೇ ಗೆಲುವಿನ ಮೆಟ್ಟಿಲು ಎಂಬ ಹಿರಿಯರ ಅನುಭವದಿಂದ ಹೊರಹೊಮ್ಮಿದ iiತು ಈ ವಿಷಯವನ್ನು ಪುಷ್ಠೀಕರಿಸುತ್ತದೆ. ಹೀಗೆ ಎಡವಿ-ದಡವೀ ಸಾಗುವ ಬದುಕಿನ ಪಯಣದಲ್ಲಿ ಕೆಲವೊಮ್ಮೆ ಮನಸ್ಸು ದಿಶೆ ತಪ್ಪಿ ಹತಾಶವಾಗುತ್ತದೆ. ತನ್ನ ಆಸೆಗಳನ್ನು ಕಳೆದುಕೊಂಡು ಗುರಿಯಿಂದ ವಿಮುಖವಗುತ್ತದೆ. ಭಾವನೆಗಳ ತೊಳಲಾಟದಲ್ಲಿ ಮುಳುಗಿ ನೆಮ್ಮದಿಯೆಂಬ ಬೆಳಕಿನಿಂದ ದೂರವಾಗುತ್ತದೆ. ಬದುಕಿನ ಇನ್ನೊಂದು ಬಣ್ಣವಾದ ಕತ್ತಲಿನಲ್ಲಿ ಕಳೆದುಹೋಗುತ್ತದೆ.

ಬೆಳಕಿನ ದಿಕ್ಕಿನಲ್ಲೇ ಬೆಳೆಂiವ ಬಳ್ಳಿಯಂತೆ ನಮ್ಮು ಮನಸ್ಸೂ ಸಹ ಎಲ್ಲ ಅಡೆತಡೆಗಳನ್ನೂ ದಾಟಿ, ಅದರ ಚೈತನ್ಯವನ್ನೆಲ್ಲ ಒಟ್ಟುಗೂಡಿಸಿಕೊಂಡು ಮತ್ತೆ ತನ್ನ ಗುರಿಯ ಕಡೆಗೆ ಪಯಣಿಸುವ ಸಕಲ ಪ್ರಯತ್ನವನ್ನೂ ಮಾಡುತ್ತದೆ. ಆ ಮೂಲಕ ನೆಮ್ಮದಿ ಪಡೆಯುತ್ತದೆ. ಆ ಚೈತನ್ಯವನ್ನು ಮೈಗೂಡಿಸಿಕೊಳ್ಳಲು ಅಥವಾ ಅಂಥದೊಂದು ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳಲು ಒಂದು ಮಾತನ್ನು ನೆನಪಿನಲ್ಲಿಡಬೇಕು- ಬದುಕು ನೆರಳು-ಬೆಳಕಿನ ನಡುವೆ.

– ‘ಯಶೋಧತನಯ’

ಓದುವುದಕ್ಕಾಗಿಯೋ, ಕೆಲಸ ಸಿಕ್ಕ ಕಾರಣಕ್ಕೋ ಮನೆಯಿಂದ ಹೊರಗೆ ಮನೆ ಮಾಡಲು ಹೊರಟಾಗ ಕಾಡುವ ಮನದ ವಿರಹಕ್ಕೆ, ಒಂದು ಜಾತಿಯ ಬಾಯಿತಿಗೆ ‘ಹೋಂ ಸಿಕ್‌ನೆಸ್’ ಅಂತ ಹೆಸರು. ಪ್ರತಿಯೊಬ್ಬರೂ ಬಾಳಿನ ಯಾವುದೋ ಘಟ್ಟದಲ್ಲಿ ಅನುಭವಿಸಬೇಕಾದ ತಹತಹವಿದು.

ಹುಟ್ಟಿದಾಗಿನಿಂದ ‘ಪರಾವಲಂಬಿ’ ಸಸ್ಯವನ್ನು ಮನದಲ್ಲಿ ಪೋಷಿಸುತ್ತಿರುವವರೇ ಎಲ್ಲರೂ. ಮಗುವಾಗಿದ್ದಾಗ ಆಹಾರದಿಂದ ಹಿಡಿದು ಎಲ್ಲ ಕೆಲಸಕ್ಕೂ ತಾಯಿಯ ಸಹಾಯಬೇಕು. ಬೆಳೆಯುತ್ತಾ ಹೋದಂತೆ ಸ್ವಲ್ಪ ಸ್ವಲ್ಪವಾಗಿ ತಮ್ಮ ಕೆಲಸ ತಾವೇ ಮಾಡುವಷ್ಟಕ್ಕೆ ಬಂದರೂ ಮಾನಸಿಕವಾಗಿ ಪರಿವಾರದೊಡನೆ ಅವಲಂಬಿತವಾಗಿರಲೇಬೇಕು. ತಾತ್ಕಾಲಿಕವಾಗಿ ಯಾವುದೇ ಕಾರಣಕ್ಕೆ ಮನೆ ಬಿಟ್ಟು ಬೇರೆಡೆ ವಾಸಿಸಬೇಕಾದಾಗ ಮಾನಸಿಕವಾಗಿ ಅದಕ್ಕೆ ನಾವು ತಯಾರಿರುವುದಿಲ್ಲ. ಪರಾವಲಂಬಿ ಸಸ್ಯ ಮರವಾಗಿರುತ್ತದೆ. ಜೀವನ ಯುದ್ಧಕ್ಕೆ ಅಣಿಯಾದಾಗ, ಒಮ್ಮೆಲೇ ಆ ಮರವನ್ನು ಕಡಿಯಬೇಕಾದಾಗ ನೋವಾಗುವುದು ಸಹಜ. ನಿಜವಾಗಿಯೂ ಆ ನೋವು ತಮ್ಮ ಕೆಲಸ ತಾವೇ ಮಾಡಿಕೊಳ್ಳಬೇಕಲ್ಲ ಎಂಬ ಆಲಸ್ಯದಿಂದ ಹುಟ್ಟಿದ ನೋವಲ್ಲ. ಸುತ್ತ ಮುತ್ತಲೆಲ್ಲಾ ತಮ್ಮನ್ನೇ ಪ್ರೀತಿಸುವ ಜನರಿರುವ ಪರಿಸರವನ್ನು ಬಿಟ್ಟು ಬೇರೊಂದು ವಿಚಿತ್ರ ವಿಶ್ವಕ್ಕೆ ಕಾಲಿರಿಸಿದಾಗ ಉಂಟುಆಗುವ ಮನಸ್ಸಿನ ಬೇಗೆ ಅದು. ಆ ವಿಶ್ವದಲ್ಲಿ ಎಲ್ಲರೂ ತಂತಮ್ಮ ಕೆಲಸ ಮಾಡಿಕೊಂಡು ಹೋಗುವವರೇ.

ಕಾಲೇಜಿನಿಂದ ಬಂದಾಗ ‘ಹಸಿವಾಗ್ತಿದೆಯೇನೋ ಮಗಾ?’ ಎಂದು ಕೇಳುವ ಅಮ್ಮ ಇಲ್ಲದೇ, ಸದಾ ಜಗಳಾಡುವ ತಮ್ಮನಿಲ್ಲದೆ , ಚಿಕ್ಕ ಚಿಕ್ಕ ವಿಷಯಕ್ಕೂ ಅಳುವ ತಂಗಿಯ ಸಂತೈಸಲಾಗದೆ, ಫಕ್ಕನೆ ಹಣಕ್ಕೆ ತೊಂದರೆ ಬರಲು ನೀಡಲು ತಂದೆಯಿಲ್ಲದೆ ಮನೆಯ ನೆನಪುಗಳು ಸೂಜಿಯಂತೆ ಚುಚ್ಚುವ ಅವಧಿಯಿದು. ಒಂದು ರೀತಿ ‘ಟೆಂಪರರಿ ಅನಾಥ’ರೆನ್ನುವ ಭಾವ ಮೂಡಿಸುವ ಘಳಿಗೆಗಳು!

ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ವಾತಂತ್ರ್ಯವಿದ್ದರೂ ಆ ಪ್ರತಿ ನಿರ್ಧಾರಗಳಲ್ಲೂ ತಂದೆ ತಾಯಿ ಇಣುಕದೆ ಇರುವುದಿಲ್ಲ. ಹೊಸ ಗೆಳೆಯರು ಸಿನೆಮಾಕ್ಕೆ ಕರೆದಾಗ ‘ಹೂಂ’ ಅಂದರೂ ‘ಅಪ್ಪ ಇದ್ದಿದ್ದರೆ ಬಯ್ಯುತ್ತಿದ್ದರೇನೋ’ ಅಂತ ಅನ್ನಿಸಿ ಮನಸ್ಸಿಗೆ ಕಿರಿಕಿರಿ ಉಂಟಾಗಬಹುದು. ನಂತರ ಅದೇ ಅಭ್ಯಾಸ ಬಲವಾಗಿ ಅತಿ ಸ್ವಾತಂತ್ರ್ಯ ಬಾಳಿಗೆ ಮುಳುವಾದರೂ ಅಚ್ಚರಿಯಿಲ್ಲ. ಏಕೆಂದರೆ ಹದಿಹರೆಯ, ಬದುಕನ್ನು ಎತ್ತಬೇಕಾದರೆ ಅತ್ತ ಎಸೆಯಬಲ್ಲ ಬಿರುಗಾಳಿ. ಇಂತಹ ಸಮಯದಲ್ಲಿ ಪಾಲಕರು ದೂರದಲ್ಲಿದ್ದರೂ ಮಕ್ಕಳ ಮೇಲೆ ಕಣ್ಣಿರಿಸಬೇಕಾದ್ದು ಅಗತ್ಯ ಮತ್ತು ಅನಿವಾರ್ಯ.

ಮನಸ್ಸಿನ ಮರುಕಕ್ಕೆ ಮತ್ತೊಂದು ಕಾರಣವಾಗಿರುವುದು ಆರೋಗ್ಯ. ಮನೆಯಲ್ಲಾದರೆ ಅಮ್ಮನ ಪ್ರೀತಿಯ ಔಷಧಿಯಿದೆ; ಇಲ್ಲಿ ಅನಾರೋಗ್ಯವಾದರೆ ಏನು ಗತಿ? ಎಂಬ ಪ್ರಶ್ನೆ ಹಾಸ್ಟೆಲಿಗೆ ಬರುವ ಪ್ರತಿ ಹುಡುಗನನ್ನೂ ಕಾಡದೆ ಇರದು.

ಹಾಸ್ಟೆಲ್ಲುಗಳೆಂದರೆ ಹೋಂ ಸಿಕ್‌ನೆಸ್ ನ ಗೂಡು. ಹಾಸ್ಟೆಲ್ಲಿನ ಪ್ರತಿಗೋಡೆಗೂ ನೂರಾರು ಕತೆಗಳು ಗೊತ್ತು. ತವರಿನ ಹಂಬಲ ತಾಳಲಾರದೆ ರಾತ್ರೋ ರಾತ್ರಿ ಮನೆಗೆ ಫೋನ್ ಮಾಡಿ ಗಳ ಗಳನೆ ಅತ್ತು ನೂರಾರು ರೂಪಾಯಿ ಬಿಲ್ ಮಾಡಿದ ಹುಡುಗರು; ಸುತ್ತಲೂ ಪ್ರೀತಿಯಿರದೆ, ಪ್ರೀತಿಗಾಗಿ ನಾಲಿಗೆ ಚಾಚುವ ಮನಕ್ಕೆ ಯಾವುದೋ ಹುಡುಗಿಯ ಚಿಕ್ಕ ಮಾತು ಪ್ರೀತಿಯಂತಾಗಿ ಮೋಸಹೋಗುವ ಹುಡುಗರು; ಮನೆಯ ನೆನಪು ಕಾಡಿ ಕಾಡಿ ಓದಿನ ಮೇಲೆ, ಕಡೆಗೆ ಬದುಕಿನ ಮೇಲೆ ವೈರಾಗ್ಯ (ತಾತ್ಕಾಲಿಕ!) ತಾಳುವ ಹುಡುಗರೂ ಕಡಿಮೆಯಿಲ್ಲ. ಹುಡುಗಿಯರಿಗೂ ಈ ಎಲ್ಲಾ ಮಾತುಗಳು ಅನ್ವಯವಾಗುತ್ತವೆ.

‘ಹೋಂ ಸಿಕ್ ನೆಸ್’ ಎಂಬುದು ಎಷ್ಟು ನೋವುದಾಯಕ ಎನ್ನಿಸಿದರೂ ಅದು ಪ್ರತಿ ವ್ಯಕ್ತಿಗೂ ತನ್ನ ಮೇಲೆ ತಾನು ಅವಲಂಬಿತನಾಗಲು ಮೊದಲ ಮೆಟ್ಟಿಲು. ಸೈಕಲ್ ಕಲಿಯುವಾಗ ಪ್ರಾರಂಭದಲ್ಲಿ ಬೀಳುವುದು ತಪ್ಪದು. ಆ ನೋವು ಇಲ್ಲದೆ ಕಲಿಯಲಾಗದು. ಹಾಗೆ ಬದುಕನ್ನು ಕಲಿಯಲು – ಅರಿಯಲು ನೋವುಗಳು ಅಗತ್ಯ.

ಒಬ್ಬರ ಸಾಂಗತ್ಯದಲ್ಲಿರಲು ಅಲ್ಲಿದ್ದ ಪ್ರೀತಿಯ ಘಮ ಮನಕ್ಕೆ ಅಡರುವುದಿಲ್ಲ. ಅವರಿಲ್ಲದಾಗಲೇ ಅವರ ಇರುವಿನ ಮಹತ್ವ, ಆ ಪ್ರೀತಿಯ ಗಂಧ ಅರಿವಾಗುವುದು. ಮನೆಯಲ್ಲಿ ಸದಾ ಜಗಳಾಡುವ ಮಗ ದೂರದ ಹಾಸ್ಟೆಲಿನಲ್ಲಿದ್ದಾಗ ಪ್ರೀತಿಯಿಂದ ಪತ್ರ ಬರೆಯುವುದಕ್ಕೂ, ಫೋನಿನಲ್ಲಿ ಮಾತು ಮೃದುವಾಗುವುದಕ್ಕೂ ಅದೇ ಕಾರಣ. ದೂರ ಸನಿಹದ ಮಹತ್ವ ಸೂಚಿಸುತ್ತದೆ.

ಮನುಷ್ಯ ಹರಿವ ನೀರಿನಂತಾಗಬೇಕು. ಹೊಸ ಮಣ್ಣು, ಹೊಸ ಗಾಳಿಗೆ ಒಗ್ಗಿಕೊಳ್ಳಬೇಕು. ಹೊಸತೆನ್ನುವುದು ಎದೆಯೊಳಗಿಳಿಯುತ್ತಿದ್ದಂತೆಯೇ ‘ಹೋಂ ಸಿಕ್ ನೆಸ್’ ಇಲ್ಲವಾಗುತ್ತದೆ. ಯಾವ ಮನುಷ್ಯನೂ ಪ್ರತಿಭೆ ಇಲ್ಲದೆ ಹುಟ್ಟಿರಲಾರ. ಅದನ್ನು ಹೊಸ ಜಗದೆಡೆಗೆ ತೋರಿಸಿದರೆ ಜಗತ್ತು ನಿಬ್ಬೆರಗಾಗಿ ನೋಡುತ್ತದೆ. ಹೊಸ ಜಗತ್ತಿನ ಮಂದಿ ಇಷ್ಟ ಪಡುತ್ತಾರೆ. ಇಷ್ಟ ಪ್ರೀತಿಯಾಗಿ ಮನುಷ್ಯರ ನಡುವಿನ ಕೊಂಡಿಯಾಗುತ್ತದೆ!

 

– ಪಲ್ಲವಿ.ಎಸ್, ಧಾರವಾಡ

ಬೆಳ್ಳಂಬೆಳಿಗ್ಗೆ ಒಮ್ಮೊಮ್ಮೆ ಬಸ್‌ಸ್ಟ್ಯಾಂಡ್ ಕಡೆ ಸುಮ್ಮನೇ ಹೋಗುತ್ತೇನೆ.

ಚಳಿ ಅಲ್ಲೆಲ್ಲ ಮಡುಗಟ್ಟಿ ನಿಂತಿರುತ್ತದೆ. ಉಗಿಮಂಜಾಗಿ ತೇಲುತ್ತಿರುತ್ತದೆ. ಬಸ್‌ಸ್ಟ್ಯಾಂಡ್‌ನ ಸುತ್ತಮುತ್ತಲಿನ ಹೋಟೆಲುಗಳಲ್ಲಿ ನಿಜವಾದ ಬಿಸಿ ಉಗಿ ಚಹದ ಪಾತ್ರೆಯಿಂದ, ಇಡ್ಲಿ ಸ್ಟ್ಯಾಂಡ್‌ನಿಂದ, ಕಾಯ್ದ ಎಣ್ಣೆಯಿಂದ ಏಳುತ್ತಿರುತ್ತದೆ. ಇನ್ನೂ ಬಸ್ ಬಂದಿಲ್ಲ ಎಂದು ತಮ್ಮೊಳಗೇ ಪಿಸುಗುಟ್ಟುತ್ತ ಕೂತವರ ಬಾಯಿಂದಲೂ ಅದೇ ಬಿಸಿ ಉಗಿ.

ಅವರೆಲ್ಲ ಊರಿಗೆ ಹೊರಡಲು ಕಾಯ್ದವರು. ಮೊದಲ ಬಸ್ ಬಂದು ನಿಂತಿದೆಯಾದರೂ ಅದರೊಳಗೆ ಚಾಲಕನಿಲ್ಲ. ಕಂಡಕ್ಟರ್ ಜೊತೆಗೆ ಆತ ಅಲ್ಲೆಲ್ಲೋ ಚಹ ಕುಡಿಯುತ್ತಿರಬೇಕು. ತಣ್ಣಗಿರುವ ಬಸ್ ಒಳಗೆ ಹೆಣ್ಣುಮಕ್ಕಳು ಹಾಗೂ ಮಕ್ಕಳು ಹತ್ತಿ ಕೂತಿದ್ದಾರೆ. ಇದ್ದಬದ್ದ ಬಟ್ಟೆಗಳನ್ನು ಬಿಗಿಯಾಗಿ ಅವಚಿ ಹಿಡಿಯುವ ಮೂಲಕ ಚಳಿಯನ್ನು ಹೊರಹಾಕಲು ಯತ್ನಿಸುತ್ತಿದ್ದಾರೆ. ಅವರನ್ನು ಅಲ್ಲಿ ಕೂಡಿಸಿ ಚಾದಂಗಡಿ ಕಡೆ ನಡೆದಿರುವ ಯಜಮಾನ ಪ್ಲಾಸ್ಟಿಕ್‌ನ ಕಪ್‌ಗಳಲ್ಲಿ ಚಹ ತಂದು ಕಿಟಕಿ ಮೂಲಕ ಕೊಡುತ್ತಿದ್ದಾನೆ. ಒಳಗೆ ಕೂತವರ ಕಣ್ಣಲ್ಲಿ ಎಂಥದೋ ಬೆಚ್ಚನೆಯ ಖುಷಿ. indiabus

ಇನ್ನೊಂದಿಷ್ಟು ಬಸ್‌ಗಳು ಬಂದು ನಿಲ್ಲುತ್ತವೆ. ಅವುಗಳ ಚಾಲಕರೂ ಇಂಜಿನ್ ಚಾಲೂ ಇಟ್ಟು ಚಾದಂಗಡಿಗಳ ಕಡೆ ನಡೆದಿದ್ದಾರೆ. ಇಡೀ ಜೀವನ ಚಾದಂಗಡಿಯ ಬೆಚ್ಚನೆಯ ಉಗಿ ತುಂಬಿದ ವಾತಾವರಣಕ್ಕೆ ಆಕರ್ಷಿತವಾದಂತಿದೆ. ಪೇಪರ್ ಹುಡುಗರು ಪುರವಣಿಗಳನ್ನು ಸೇರಿಸುತ್ತಿದ್ದಾರೆ. ಇನ್ನೊಂದಿಷ್ಟು ಹುಡುಗರು ಎಣಿಸಿ ಜೋಡಿಸಿಟ್ಟುಕೊಂಡ ಪೇಪರ್‍ಗಳನ್ನು ಸೈಕಲ್‌ಗಳಲ್ಲಿ ನೇತಾಕಿರುವ ಕ್ಯಾನ್ವಾಸ್ ಚೀಲಗಳಿಗೆ ಹುಷಾರಾಗಿ ತುಂಬುತ್ತಿದ್ದಾರೆ. ಆಗಲೇ ತಡವಾಗುತ್ತಿದೆ ಎಂಬ ಧಾವಂತ. ಮುಖವೇ ಕಾಣದಂತೆ ಬಿಗಿದು ಕಟ್ಟಿದ ಮಫ್ಲರ್, ಅಳತೆ ಮೀರಿದ ಹಳೆಯ ಸ್ವೆಟರ್‌ನೊಳಗಿನ ಜೀವಗಳು ಬೆಚ್ಚಗಿವೆ. ತುಂಬಿದ ಚಳಿಯಲ್ಲೂ ನಗುತ್ತ, ತಡವಾಗಿದೆ ಎಂದು ಅವಸರ ಮಾಡುತ್ತ ಅವರೆಲ್ಲ ಒಬ್ಬೊಬ್ಬರಾಗಿ ಬಸ್‌ಸ್ಯಾಂಡ್‌ನಿಂದ ಹೊರಬೀಳುತ್ತಿದ್ದಾರೆ.

ಪೇಪರ್‌ಗಳು ಬೆಚ್ಚಗಿವೆ. ಅದರೊಳಗಿನ ಸುದ್ದಿಗಳೂ ಬೆಚ್ಚಗಿವೆ. ಅಲ್ಲೆಲ್ಲೋ ಬೆಚ್ಚನೆಯ ಮನೆಯಲ್ಲಿ, ಬಿಸಿಬಿಸಿ ಕಾಫಿ ಕುಡಿಯುತ್ತಿರುವ ಜೀವಗಳು, ಈ ಬಿಸಿ ಬಿಸಿ ಪೇಪರ್‌ಗಾಗಿ ಕಾಯುತ್ತಿವೆ. ಎಲ್ಲ ಸುದ್ದಿಗಳನ್ನು ನಿನ್ನೆಯೇ ಟಿವಿಯಲ್ಲಿ ನೋಡಿದ್ದರೂ, ಪೇಪರ್‌ನ ಬಿಸಿಯನ್ನೊಮ್ಮೆ ತಾಕದಿದ್ದರೆ ಅವರಿಗೆ ಸಮಾಧಾನವಿಲ್ಲ. ಕಾಯುತ್ತಿರುವ ಅವರಿಗೆ ಪೇಪರ್ ತಲುಪಿಸುವವರೆಗೆ ಈ ಹುಡುಗರಿಗೆ ನೆಮ್ಮದಿಯಿಲ್ಲ. ಬೇಗ ಹೋಗ್ರೋ ಎಂದು ಪೇಪರ್ ಏಜೆಂಟ್ ಅವಸರ ಮಾಡುತ್ತಿದ್ದಾನೆ.

ಹೂ ಮಾರುವವಳು ನಡುಗುತ್ತ ಬರುತ್ತಾಳೆ. ನೀರು ಚಿಮುಕಿಸಿಕೊಂಡು ತಣ್ಣಗಿರುವ ಹೂವಿನ ಸರಗಳು ದೇವರ ಫೊಟೊ ಏರಲು, ಆಟೊ ಎದುರು ತೂಗಲು, ತವರಿಗೆ ಹೊರಟ ಹೆಂಗಳೆಯರ ಮುಡಿ ಸೇರಲು ಕಾಯುತ್ತಿವೆ. ಬೆಳ್ಳಂಬೆಳಿಗ್ಗೆ ಹೂವಾಡಗಿತ್ತಿ ಹೆಚ್ಚು ಚೌಕಾಸಿ ಮಾಡುವುದಿಲ್ಲ. ಮೊದಲ ಕಂತಿನ ಹೂವಿನ ಸರಗಳನ್ನು ಆಕೆ ಬೇಗ ಮಾರಿ, ಬೆಚ್ಚಗೆ ಹೊದಿಸಿ ಬಿಟ್ಟು ಬಂದ ಕಂದಮ್ಮ ಏಳುವುದರೊಳಗೆ ಮನೆಗೆ ಹೋಗಬೇಕಿದೆ.

ನಡುಗುತ್ತಿರುವ ಬಸ್‌ಗಳ ಇಂಜಿನ್‌ಗಳು ಅಷ್ಟೊತ್ತಿಗೆ ಸಾಕಷ್ಟು ಬೆಚ್ಚಗಾಗಿವೆ. ಬಸ್‌ನಲ್ಲಿ ಕೂತ ಪೋರರು ಬಾನೆಟ್‌ಗೆ ಕೈಯೊತ್ತಿ, ಆ ಬಿಸಿಯನ್ನು ನರನಾಡಿಗಳಿಗೆ ಹರಿಸಿಕೊಂಡು ಬೆಚ್ಚನೆಯ ಖುಷಿ ಅನುಭವಿಸುತ್ತಿದ್ದಾರೆ. ಅವರನ್ನೇ ಹುಸಿ ಗದರುತ್ತ ತಾಯಂದಿರು ತಮ್ಮೊಳಗೇ ಸಣ್ಣಗೆ ಮಾತಿಗಿಳಿದಿದ್ದಾರೆ. ಹೊಲದಲ್ಲಿರುವ ಪೈರು, ಬರಬಹುದಾದ ಸುಗ್ಗಿ, ತೀರಿಸಬೇಕಾದ ಸಾಲದ ಬಗ್ಗೆ ಮಾತುಗಳು ಹೊರಬರುತ್ತಿವೆ. ಮಾತಾಡುತ್ತ ಆಡುತ್ತ ಅವರು ಯಾವುದೋ ಲೋಕದಲ್ಲಿ ಇಲ್ಲವಾಗುತ್ತಿದ್ದಾರೆ.

ಸೂರ್ಯ ಆಕಳಿಸುತ್ತ ಕಣ್ತೆರೆಯುತ್ತಾನೆ. ಅಲ್ಲೆಲ್ಲೋ ದೂರದ ಮರಗಳ ತುದಿ ಹೊನ್ನ ಬಣ್ಣದಲ್ಲಿ ತೇಲುತ್ತವೆ. ಎತ್ತರದ ಕಟ್ಟಡದ ಮೇಲ್ಭಾಗ ಬೆಳಕಲ್ಲಿ ಮೀಯುತ್ತದೆ. ಒಂದಿಷ್ಟು ಹಕ್ಕಿಗಳ ಮೆಲು ಉಲಿ ಗಾಳಿಯನ್ನು ತುಂಬುತ್ತದೆ. ಬಸ್‌ಸ್ಟ್ಯಾಂಡ್‌ನ ಹೊರಗೆ ಒಂದಿಷ್ಟು ಆಟೊಗಳು ಬಂದು ನಿಲ್ಲುತ್ತವೆ. ಅವುಗಳ ಚಾಲಕರು ಕೊಳೆಯಾದ ಬಟ್ಟೆಯಿಂದ ಆಟೊದ ಮೈಯನ್ನು ತಿಕ್ಕಿ ತಿಕ್ಕಿ ಸ್ಚಚ್ಛಗೊಳಿಸುತ್ತಾರೆ. ಅಲ್ಲೇ ಚಾದಂಗಡಿಯಲ್ಲಿರುವ ನೀರಿನ ಮಗ್‌ನಿಂದ ಕೈತೊಳೆದು, ಆಟೊದೊಳಗಿನ ದೇವರಿಗೆ ಊದುಬತ್ತಿ ಹಚ್ಚುತ್ತಾರೆ. ಹೂ ಏರಿಸುತ್ತಾರೆ. ಸಿದ್ಧಾರೂಢರ ಸುಪ್ರಭಾತದ ಕ್ಯಾಸೆಟ್‌ಗೆ ಜೀವ ತುಂಬಿ, ತಾವು ಬಿಸಿ ಬಿಸಿ ಚಾ ಕುಡಿಯಲು ಅಂಗಡಿಗೆ ಬಂದು ಕೂತಿದ್ದಾರೆ.

ಮಂಡಾಳ ಒಗ್ಗರಣೆ, ಮಿರ್ಚಿ, ಭಜಿ, ಪೂರಿಗಳಿಗೆ ಜೀವ ಬಂದಿದೆ. ಇಡ್ಲಿ ತಿನ್ನುವವರೂ ಮಿರ್ಚಿಯ ಕಡೆ ಆಸೆಯ ಕಣ್ಣು ಹೊರಳಿಸಿದ್ದಾರೆ. ಅದನ್ನು ಅರಿತವನಂತೆ ಮಾಲೀಕ, ಬಿಸಿಯಾಗಿವೆ ತಗೊಳ್ರೀ ಎಂದು ಒಂದು ಪ್ಲೇಟ್ ಮಿರ್ಚಿ ತಂದಿಟ್ಟಿದ್ದಾನೆ. ಘಮ್ಮೆನ್ನುವ ಮಿರ್ಚಿ ಇಡ್ಲಿಯ ಆರೋಗ್ಯ ಪ್ರವಚನದ ಬಾಯಿ ಮುಚ್ಚಿಸಿದೆ. ಬಿಸಿ ಬಿಸಿ ಮಿರ್ಚಿಯಲ್ಲಿ ಹುದುಗಿಕೊಂಡಿದ್ದ ಮೆಣಸಿನಕಾಯಿ ಬಾಯೊಳಗೆ ಒಲೆ ಹೊತ್ತಿಸಿದೆ. ಅದರೊಳಗಿಂದ ಉಕ್ಕಿದ ಕಾವು ಇಡೀ ದೇಹದ ನರನಾಡಿಗಳನ್ನು ಚಾಲೂ ಮಾಡಿದೆ. ಹೊರಗಿನ ಚಳಿಯನ್ನು ಹಿತವಾಗಿಸಿದೆ.

ಅದನ್ನು ಕಂಡ ಇನ್ನೊಂದಿಷ್ಟು ಜನ ತಾವೂ ಮಿರ್ಚಿಗೆ ಆರ್ಡರ್ ಮಾಡಿದ್ದಾರೆ. ಮಿರ್ಚಿ ಕರಿಯುವವ ತರಾತುರಿಯಿಂದ ಕೆಲಸ ಮುಂದುವರೆಸಿದ್ದಾನೆ. ಉಗಿಯಾಡುವ ಬಿಸಿ ಎಣ್ಣೆಯಲ್ಲಿ ಹಳದಿ ಕವಚ ತೊಟ್ಟ ಮಿರ್ಚಿಗಳು ಈಜಿಗಿಳಿದಿವೆ. ಅದನ್ನೇ ನೋಡುತ್ತ ನೋಡುತ್ತ ಜನ ಪುಳಕಗೊಂಡಿದ್ದಾರೆ. ಎಂಥದೋ ಭರವಸೆ ತಂದುಕೊಂಡಿದ್ದಾರೆ.

ಮಂಡಾಳ ಒಗ್ಗರಣೆಯ ಗುಡ್ಡ ಕರಗುತ್ತದೆ, ಮಿರ್ಚಿಗಳು ಮಾಯವಾಗುತ್ತವೆ, ಕೆಟಲ್‌ನಿಂದ ಬಿಸಿ ಬಿಸಿ ಚಾ ಕಪ್‌ಗಳಿಗೆ ಇಳಿದು ಜನರೊಳಗೆ ಇಲ್ಲವಾಗುತ್ತದೆ. ಮಂಡಾಳ ಒಗ್ಗರಣೆ, ಮಿರ್ಚಿ ಕಂಡು ಸೂರ್ಯನಿಗೂ ಆಸೆಯಾದಂತಿದೆ. ಬಸ್ ಸ್ಟ್ಯಾಂಡ್‌ನ ಛಾವಣಿಗೂ ಆತನ ಬಿಸಿಲು ತಾಕುತ್ತದೆ.

ಈಗ ಗಡಿಯಾರ ನೋಡುತ್ತ ಡ್ರೈವರ್ ಮತ್ತು ಕಂಡಕ್ಟರ್ ಲಗುಬಗೆಯಿಂದ ಎದ್ದು ಬಸ್‌ನತ್ತ ಹೆಜ್ಜೆ ಹಾಕುತ್ತಾರೆ. ಎಲ್ಲರೂ ಹತ್ತಿ ಕೂತಿದ್ದು ಗೊತ್ತಿದ್ದರೂ ಅಭ್ಯಾಸಬಲದಿಂದ ಕಂಡಕ್ಟರ್ ಸೀಟಿ ಊದಿ ಬಾಗಿಲು ಹಾಕಿಕೊಳ್ಳುತ್ತಾನೆ. ಅದುವರೆಗೆ ವಿಕಾರವಾಗಿ ಗುರುಗುಡುತ್ತ ಅಲುಗುತ್ತಿದ್ದ ಬಸ್, ಗೇರ್‌ನ ತಾಳಕ್ಕೆ ಮೆದುವಾದಂತೆ ಗುಟುರು ಹಾಕುತ್ತದೆ. ಬಸ್‌ಸ್ಟ್ಯಾಂಡ್ ತುಂಬಿರುವ ಗುಂಡಿಗಳಲ್ಲಿ ಏರಿಳಿಯುತ್ತ ಬಸ್ ಹೊರಗಿನ ರಸ್ತೆಗೆ ಇಳಿಯುತ್ತದೆ. ನಿಧಾನವಾಗಿ ವೇಗ ಹೆಚ್ಚಿಸಿಕೊಳ್ಳುತ್ತದೆ.

ಪೇಪರ್‌ನವನ ಹತ್ತಿರ ಒಂದೆರಡು ಪೇಪರ್ ಕೊಳ್ಳಲು ಬಂದವಳು ಮೋಡಿಗೆ ಒಳಗಾದಂತೆ ಸುಮ್ಮನೇ ನಿಂತುಕೊಳ್ಳುತ್ತೇನೆ. ಬಿಸಿ ಮಿರ್ಚಿಗಳು ನನ್ನಲ್ಲೂ ಆಸೆ ಹುಟ್ಟಿಸುತ್ತವೆ. ಆರು ಮಿರ್ಚಿ ಪಾರ್ಸೆಲ್ ಕೊಡಪ್ಪಾ ಎಂದು ಕಟ್ಟಿಸಿಕೊಂಡು, ಸ್ಕೂಟಿಯ ಮುಂದಿರುವ ಕೊಂಡಿಗೆ ಮಿರ್ಚಿ ತುಂಬಿರುವ ಪ್ಲಾಸ್ಟಿಕ್ ಚೀಲ ಇರಿಸಿ ಹೊರಡುತ್ತೇನೆ. ಅಲ್ಲಾಡುವ ಚೀಲ ದಾರಿಯುದ್ದಕ್ಕೂ ಕಾಲಿಗೆ ಬೆಚ್ಚಗೆ ತಾಕುತ್ತದೆ.

ಹೊರ ಭರವಸೆ ಹುಟ್ಟಿಸುತ್ತದೆ.

-ರಂಜಿತ್ ಅಡಿಗ, ಕುಂದಾಪುರ

ಕಿಟಕಿಯಾಚೆ ಜೋರಾಗಿ ’ಗಣಪತಿ ಬಪ್ಪಾ ಮೊರ್ಯಾ’ ಕೇಳುತ್ತಿದೆ. ಅಸಹನೆಯಿಂದ ಕಿಟಕಿ ಮುಚ್ಚಿ ಕೂತರೆ, ಈ ಸಲ ಗೆಳೆಯರ್ಯಾರೂ ಹಬ್ಬಕ್ಕೆ ಮನೆಗೆ ಕರೆಯದೇ ಹೋದರಾ ಎಂಬ ಆಲೋಚನೆ. ಇಂಟರ್ನೆಟ್ಟು ತೆಗೆದರೆ ಸಾಕು ’ಹ್ಯಾಪಿ ಗಣೇಶ ಚತುರ್ಥಿ’ಯದೇ ರಗಳೆ. ಚುರುಗುಟ್ಟುವ ಹೊಟ್ಟೆ, ಆಗಷ್ಟೇ ಖಾಲಿಯಾದ ಅಡುಗೆ ಮನೆಯ ಡಬ್ಬಿಯನ್ನು ನೆನಪಿಸುತ್ತದೆ. ದರ್ಶಿನಿಯ ಹುಡುಗರೂ ತಮ್ಮ ಗುಂಪುಗಳಲ್ಲೇ ಹಬ್ಬ ಆಚರಿಸುತ್ತಿದ್ದಾರೆ. ಪಾತ್ರೆ ತೊಳೆಯುವ ಚಿಣ್ಣ ಇವತ್ತು ಕಾಲು ತುರಿಸಿಕೊಳ್ಳುವಂತಿಲ್ಲ. ಬಚ್ಚಲು ಮನೆಯ ಚೌಕಟ್ಟಿನಿಂದ ಹೊರಗೆ ಇಣುಕುತವೆ ಇಂದವನ ಕಣ್ಣುಗಳು.

ಗೋಡೆಗೆ ನೇತು ಹಾಕಿಕೊಂಡ ಕ್ಯಾಲೆಂಡರೂ ಭಾರಿಯಾದ ಗಣಪತಿ ಪೋಟೋವನ್ನು ಹೊತ್ತಿದೆ, ಅವನ ಪಕ್ಕದ ಇಲಿ ಲಾಡನ್ನು ಮೆಲ್ಲುತ್ತಾ ಮೆಲ್ಲಗೆ ನನ್ನನ್ನು ಉರಿಸುತ್ತಿದೆ.

ಹರಿದಿದ್ದರಿಂದ ಸೂಟ್ ಕೇಸಿನ ಜೈಲಿನೊಳಗೆ ಸೇರಿಸಲ್ಪಟ್ಟ ದುಬಾರಿ ಪ್ಯಾಂಟು ’ಯಾವಾಗ ಊರಿಗೆ ಹೋಗ್ತಿಯಪ್ಪಾ?’ ಅಂತ ದೈನ್ಯತೆಯಿಂದ ಬೇಡಿಕೊಳ್ಳುತ್ತಿದೆ, ಅದಕ್ಕೆ ಅಮ್ಮನ ಕೈಯಿಂದಲೇ ಆಪರೇಷನ್ ಆಗಬೇಕಿದೆ. ಹಬ್ಬದ ಸಡಗರವಿಲ್ಲದ ಜೀವ ಸುಮ್ಮನೆ ಅದರ ನೆನಪನ್ನು ಮೂಲೆಗೆ ತಳ್ಳಿ ’ಮುಂದಿನ ಸಲ ಊರಿಗೆ ಯಾವಾಗ ಹೋಗೋಣ?’ ಅಂತ ಖುಷಿಯಿಂದ ಚಿಂತಿಸುತ್ತ ಎಲ್ಲ ದುಃಖವನ್ನೂ ಮೀರುವ ಪ್ರಯತ್ನ ಮಾಡುತಿದೆ.

ಇವೆಲ್ಲ ತಮ್ಮ ಮನೆ ಬಿಟ್ಟು ತಮ್ಮನ್ನು ಬೇರೆ ಜಾಗದಲ್ಲಿ ಅನಿವಾರ್ಯತೆಯಿಂದಲೋ ಅಥವಾ ಬೇರೆ ಬೇರೆ ಕಾರಣಗಳಿಂದಲೋ ಉಳಿಯಬೇಕಾಗಿ ಬಂದವರ ಮನದ ಒಳಸುಳಿಯ ಕತೆಗಳು. ಅಲ್ಲಿ ಭೋರೆಂದು ಅಳುವ ದುಃಖವಿರುವುದಿಲ್ಲ. ದುಃಖ ಒಳಗೆಲ್ಲೋ ಮೆಲ್ಲಗೆ ತನ್ನಷ್ಟಕ್ಕೆ ಹರಿಯುತ್ತಿರುತ್ತದೆ. ಮುಖದ ಮೇಲೆ ಅದನ್ನೆಲ್ಲಾ ತಳ್ಳಿ ಹಾಕುವುದಕ್ಕೋಸ್ಕರವೇ ತೇಪೆ ಹಚ್ಚಿದಂತಿರುವ ನಗು ಪೇಲವವಾಗಿ ಕಾಣಿಸುತ್ತಿರುತ್ತದೆ. hakki

ಹಿಂದಿನ ಕಾಲದ ಕೂಡು ಕುಟುಂಬ ವ್ಯವಸ್ಥೆಯಲ್ಲಿ ಮನೆಯಿಂದ ಹೊರಹೋಗುವ ಅವಕಾಶಗಳೇ ಕಡಿಮೆ. ಇಂತಹ ನೋವು ಮದುವೆಯಾಗಿ ಹೋಗುವ ಹುಡುಗಿಗೆ ಮಾತ್ರವಿತ್ತು. ಅದನ್ನು ಪಾತ್ರೆಯನ್ನು ತೀರ್ವ ಆಕ್ರೋಶದಿಂದ ಉಜ್ಜುತ್ತಲೋ ಅಥವಾ ದುಃಖವನ್ನೆಲ್ಲಾ ಈರುಳ್ಳಿ ಕತ್ತರಿಸುವ ನೆಪದಲ್ಲೋ ಹೊರಹಾಕುತ್ತಿದ್ದಿರಬೇಕು. ಈಗಿನ ನ್ಯೂಕ್ಲಿಯರ್ ಫ್ಯಾಮಿಲಿ ಅವತಾರದಲ್ಲಿ ಹಣಕ್ಕಾಗಿ, ಒಳ್ಳೆಯ ಭವಿಷ್ಯಕ್ಕಾಗಿ ಮನೆಬಿಟ್ಟು ತಮ್ಮನ್ನು ಬೇರೆ ಕಡೆಯಲ್ಲಿ ನೆಟ್ಟು ಹೋರಾಟ ಮಾಡಲೇ ಬೇಕಾದ ಪರಿಸ್ಥಿತಿ.

ಮುಖ್ಯವಾಗಿ ಓದಲೆಂದು ಕಡಿಮೆ ವಯಸ್ಸಿನಲ್ಲಿ ಮನೆಯಿಂದ ಹೊರತಳ್ಳಲ್ಪಟ್ಟ ಹುಡುಗರ ವ್ಯಥೆಗೆ ಭಾರ ಹೆಚ್ಚು. ಅಮ್ಮನ ಸಹಾಯ ಅಪ್ಪನ ಪ್ರೀತಿ ಮತ್ತು ಪರ್ಸಿನ ಮೇಲೆಯೇ ಅವಲಂಬಿತರಾದ ಮಕ್ಕಳು ಅವರ ಹೊರತಾದ ’ಪ್ರೀತಿ ಸರಕು ಕಾಣದ ಸಂತೆಯ’ ಪ್ರಪಂಚದಲ್ಲಿ ಒಗ್ಗಿಕೊಳ್ಳಲು ಪಡುವ ಪರಿಪಾಡು ದೇವರಿಗೇ ಪ್ರೀತಿ. ಹೃದಯವ ಗಟ್ಟಿ ಮಾಡಿಕೊಂಡಿರುವ ಮೊಬೈಲು, ಅವರ ಮನೆಯ ನೆನಪುಗಳಿಗೆ, ದುಃಖಗಳಿಗೆ ಎಂದೂ ಅಳದು.

ಕಾಲೇಜಿನಿಂದ ಮನೆಗೆ ನಡೆದು ಬರುವಾಗ ಸಿಗುವ ಅನಾಥಾಶ್ರಮ ನೋಡಿ, ಊರು ಬಿಟ್ಟು ಬಂದ ತಾನೂ ಒಂದು ರೀತಿ ಇದೇ ಅಲ್ಲವೇ? ಅಂದುಕೊಳ್ಳುತ್ತಾ, ಹಾಸ್ಟೆಲುಗಳಿಗೆ ’ಟೆಂಪರರಿ ಅನಾಥರ ಆಶ್ರಮ’ ಅಂದ್ಯಾಕೆ ಕರೆಯಬಾರದು ಎಂದು ತನಗೆ ತಾನೇ ಜೋಕು ಮಾಡಿಕೊಳ್ಳುತ್ತದೆ ಮನಸು.

’ನೋಡಿಕೊಳ್ಳಲು ಅಮ್ಮನಿಲ್ಲ ಪಾಪ!’ ಅಂದುಕೊಳ್ಳೂತ್ತ ಅವರೆಡೆಗೆ ಬರದೇ ಕರುಣೆ ತೋರುತ್ತವೆ ಖಾಯಿಲೆಗಳು. ಒಂದು ವೇಳೆ ಬಂದರೆ ಗಂಚಿ ಯಾರು ಕುಡಿಸುವವರು? ಬೈದು ಮಾತ್ರೆಯನ್ನು ಜೇನುತುಪ್ಪದಲ್ಲಿ ಕೊಡುವವರಾರು? ಇಂಜಕ್ಷನ್ನಿಗೆ ಹೆದರಿದರೆ, (ಬಲವಂತದಿಂದ) ಡಾಕ್ಟರ್ ಹತ್ತಿರ ಕರೆದೊಯ್ಯುವವರಾರು? ಎನ್ನುತ್ತಾ ಸುಮ್ಮಸುಮ್ಮನೆ ಆತಂಕಕ್ಕೊಳಗಾಗುವ ಹುಡುಗಿ ನಿಷ್ಕರುಣಿ ದಿಂಬಿಗೆ ಎಲ್ಲ ದುಃಖವನ್ನು ಕಣ್ಣೀರ ಮೂಲಕ ಹೇಳಿಕೊಳ್ತಾಳೆ.

ಆದರೆ ಬಹಳ ದಿನವಿರದು ಇಂಥ ತೊಳಲಾಟ. ಮನಸ್ಸು ಎಲ್ಲದಕ್ಕೂ ಅಡ್ಜಸ್ಟ್ ಆಗುತ್ತದೆ. ತನ್ನದೇ ಪ್ರೀತಿಯ ವಲಯವೊಂದು ಕಟ್ಟಿಕೊಳ್ಳುತ್ತದೆ. ಪ್ರತಿಭೆಯೊಂದರ ಮೂಲಕ ಎಲ್ಲರ ಮೆಚ್ಚುಗೆಗಳಿಸುತ್ತದೆ. ಹೇಗಾದರೂ ಕಷ್ಟಪಟ್ಟು ತನ್ನ ಬದುಕನ್ನು ಸಹನೀಯವಾಗಿಸುತ್ತವೆ.

ಹಾಗೆಯೇ ಈ ದೂರಗಳು ಒಂದು ನೀತಿಪಾಠವನ್ನು ಮೌನವಾಗಿ ಕಲಿಸುತ್ತದೆ. ಮನೆಯಲ್ಲಿದ್ದಾಗ ರುಚಿಯಿಲ್ಲ ಅಂತ ಎಸೆದ ತಿಂಡಿ ಹಾಸ್ಟೆಲಿನ ಅನಿವಾರ್ಯ ಆಹಾರಗಳನ್ನು ಕಷ್ಟಪಟ್ಟು ಬಾಯೊಳಗೆ ಸೇರಿಸಿಕೊಳ್ಳುವಾಗ ಅಮ್ಮ ನೆನಪಾಗ್ತಾಳೆ. ಮತ್ತೆಂದೂ ಅಮ್ಮನ ಪ್ರೀತಿಯ ತಿಂಡಿ ರುಚಿ ತಪ್ಪುವುದಿಲ್ಲ.

ಅತ್ತೆ ಮಾವನಿಂದ ಉಗಿಸಿಕೊಂಡು ಸೊಸೆ ಬಾಗಿಲು ಹಾಕಿಕೊಂಡು ಒಂಟಿಯಾಗಿ ರೂಮಿನಲ್ಲಿದ್ದಾಗ ಅಪ್ಪ-ಅಮ್ಮನೇ ಕಾಣಿಸುತ್ತಾರೆ. ಅವರ ಕಣ್ಣೊಳಗಿನ ಪ್ರೀತಿಯು ಈ ಹಿಂದೆಂದೂ ಕಾಣದಷ್ಟು ಇಷ್ಟವಾಗಿ ದಟ್ಟವಾಗಿ ಹೊಳೆಯುತ್ತಿರುತ್ತದೆ.

ಇಂತಹ ’ಹೋಮ್ ಸಿಕ್ ನೆಸ್’ ಅಂತ ಕರೆಸಿಕೊಳ್ಳುವ ಖಾಯಿಲೆಗೆ ಮದ್ದೆಂದರೆ, ತಮ್ಮದೇ ಹೊಸ ಪ್ರಪಂಚ ಸೃಷ್ಠಿಸಿಕೊಳ್ಳುವುದು. ಮಾನಸಿಕ ಪರಾವಲಂಬಿತನ ಹೊಡೆದೋಡಿಸಿಕೊಳ್ಳೂತ್ತಾ ನಿರ್ಣಯಗಳಿಗೆಲ್ಲ ತಮ್ಮನ್ನು ತಾವೇ ಒಡ್ಡಿಕೊಂಡು ಅದರ ಫಲಿತಾಂಶದ ಹೊಣೆಯನ್ನು ತಮ್ಮ ಹೆಗಲಿಗೇ ಹಾಕಿಕೊಳ್ಳುವುದು. ತಮ್ಮ ಪ್ರತಿಭೆ ಪ್ರಪಂಚಕ್ಕೆ ಅರಿವಾಗುತ್ತಿದ್ದಂತೆ ಮೆಚ್ಚಿಕೊಳ್ಳುವ ಜನ ಹತ್ತಿರಾಗುತ್ತಾರೆ. ಹೊಸ ಪ್ರಪಂಚದ ಗೆಳೆಯರಾಗುತ್ತಾರೆ. ಹೊಸತನ್ನು ಜೀರ್ಣಿಸಿಕೊಳ್ಳುವಂತಹ ಶಕ್ತಿ ಒಳಗಿನಿಂದಲೇ ಚಿಮ್ಮುತ್ತದೆ.

ಗೂಡಿನ ಹೊರಗೂ ಹಾರುವ ಹಕ್ಕಿ ಇಡಿ ವಿಶ್ವವೇ ತನ್ನ ಕಾಲ್ಗೆಳಗಿರುವುದನ್ನು ಕಂಡು ತನ್ನಷ್ಟಕ್ಕೆ ತಾನೇ ಹೆಮ್ಮೆಯಿಂದ ನಗುತ್ತದೆ!

– ಅಂತರ್ಮುಖಿ

ನಮ್ಮ ಸಮಾಜದಲ್ಲಿ ನಾವಿಷ್ಟು ಗೌರವನ್ನು, ಪ್ರಾಮುಖ್ಯತೆಯನ್ನು ಕೊಡುತ್ತಿರುವ ಕುಟುಂಬ ವ್ಯವಸ್ಥೆ ಹುಟ್ಟಿಕೊಂಡಿದ್ದೇ ಸ್ವಾತಂತ್ರ್ಯದ, ಮುಕ್ತ ಅವಕಾಶದ ಬಯಕೆಯಿಂದಾಗಿ ಎನ್ನುತ್ತಾರೆ ಬುಡಕಟ್ಟುಗಳಲ್ಲಿ ಜೀವಿಸುತ್ತಿದ್ದ ಆದಿ ಮಾನವರ ಬದುಕನ್ನು ಅಧ್ಯಯನ ಮಾಡಿದವರು. ಒಂದು ಬುಡಕಟ್ಟಿನ ಪಂಗಡದಲ್ಲಿ ಒಬ್ಬ ಬಲಿಷ್ಠವಾದ ನಾಯಕನಿರುತ್ತಾನೆ. ಆತನೇ ಇಡೀ ಪಂಗಡದ ಆಗುಹೋಗುಗಳ ಮೇಲೆ ಹಕ್ಕುಳ್ಳವನಾಗಿರುತ್ತಾನೆ. ಆತನ ಸ್ಥಾನಮಾನ ಇಡೀ ಗುಂಪಿನಲ್ಲಿ ಶ್ರೇಷ್ಠವಾಗಿರುತ್ತದೆ. ಆ ಪಂಗಡದಲ್ಲಿನ ಸಮಸ್ತ ವೈಭೋಗ, ಸುಖ, ಸಂಪತ್ತು ಆತನ ಒಡೆತನದಲ್ಲಿರುತ್ತದೆ, ಗುಂಪಿನ ಎಲ್ಲಾ ಸುಂದರ ಹೆಣ್ಣುಗಳನ್ನು ಆತನೇ ಇಟ್ಟುಕೊಂಡಿರುತ್ತಾನೆ. ಆತನು ಬಳಸಿ ಬಿಟ್ಟದ್ದು ಗುಂಪಿನ ಇತರ ಸದಸ್ಯರು ಉಪಯೋಗಿಸಬಹುದು. ಇಲ್ಲಿ ವ್ಯಕ್ತಿಯೊಬ್ಬನಿಗೆ ಪ್ರತ್ಯೇಕವಾದ ಐಡೆಂಟಿಟಿ ಇರುವುದಿಲ್ಲ. ಆತ ಆ ಪಂಗಡದ ಒಬ್ಬ ಸದಸ್ಯ ಮಾತ್ರ. ವ್ಯಕ್ತಿಯ ಸ್ವಂತ ಆಲೋಚನೆಗಳಿಗೆ, ನಿರ್ಧಾರಗಳಿಗೆ ಅಲ್ಲಿ ಬೆಲೆಯಿರುವುದಿಲ್ಲ. ಯಾರೊಂದಿಗೆ ಕೂಡಬೇಕು ಯಾರಲ್ಲಿ ಮಕ್ಕಳನ್ನು ಪಡೆಯಬೇಕು, ಎಷ್ಟು ಸಂಪಾದನೆ ಮಾಡಬೇಕು ಯಾರೊಂದಿಗೆ ಜೀವನವನ್ನು ಕಳೆಯಬೇಕು, ಯಾವ ಕೆಲಸ ಮಾಡಬೇಕು ಎಂಬ ಸಂಗತಿಗಳಲ್ಲಿ ಆತನ ವೈಯಕ್ತಿಕ ಆಯ್ಕೆಗೆ ಅವಕಾಶವೇ ಇರುವುದಿಲ್ಲ. ಪಂಗಡದ ನಾಯಕ ಯುದ್ಧಕ್ಕೆ ಹೊರಟರೆ ಸದಸ್ಯರೆಲ್ಲರೂ ಆತನ ಹಿಂದೆ ಶಸ್ತ್ರ ಹಿಡಿದು ಸಜ್ಜಾಗಿ ನಿಲ್ಲಬೇಕು. ಬೇಟೆಗೆ ಹೊರಟರೆ ಅಲ್ಲಿಗೆ ಹೊರಡಲು ತಯಾರಾಗಬೇಕು. ಪಂಗಡದ ಹಿರಿಯನ ಆಜ್ಞೆಯನ್ನು ಉಲ್ಲಂಘಿಸುವ ಪ್ರಯತ್ನ ಮಾಡಿದವರಿಗೆ ಕಠಿಣಾತಿಕಠಿಣ ಶಿಕ್ಷೆಯನ್ನು ಕೊಡಲಾಗುತ್ತಿತ್ತು.

ಮನುಷ್ಯನ ಜೀವಕೋಶಗಳಲ್ಲೇ ಈ ಗುಣ ಅಡಗಿ ಕುಳಿತಿದೆಯೇನೋ! ಆತ ಎಂದಿಗೂ ಸ್ವಾತಂತ್ರ್ಯವನ್ನು, ಸ್ವೇಚ್ಛೆಯನ್ನು, ಮುಕ್ತ ಅವಕಾಶಗಳಿಗೆ ಬೇರೆಲ್ಲವುಗಳಿಗಿಂತ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾನೆ. ಸಾವಿರ ವರ್ಷಗಳಿಂದ ಗುಲಾಮಗಿರಿಯಲ್ಲಿ ನರಳುತ್ತಿದ್ದರೂ ಆತನೊಳಗೆ ಬಿಡುಗಡೆಯ, ಸ್ವಾತಂತ್ರ್ಯದ, ಬಂಡಾಯದ ಬೀಜಗಳಿರುತ್ತವೆ. ಪಂಗಡದಲ್ಲಿನ ಶ್ರೇಷ್ಠ ವಸ್ತುಗಳು, ಸಕಲ ವೈಭೋಗ, ಸಮಸ್ತ ಸುಂದರಿಯರು ವಯಸ್ಸಾದ ಮುಖಂಡನ ಪಾಲಾಗುವುದನ್ನು ಆ ಪಂಗಡದ ಯುವ ತಲೆಗಳು ಎಷ್ಟು ದಿನ ತಾನೆ ಸಹಿಸಿಯಾವು? ಒಂದು ದಿನ ಎಲ್ಲಾ ಯುವ ತಲೆಗಳು ಸೇರಿ ಆ ಮುಖಂಡನ ತಲೆಯನ್ನು ತೆಗೆದು ಹಾಕಿದವು. ಒಮ್ಮೆ ನಾಯಕ ಎಂಬ ಸ್ಥಾನದ ಹಿಡಿತದಿಂದ ಪಂಗಡ ತಪ್ಪಿಸಿಕೊಂಡಾಗ, ಆ ವ್ಯವಸ್ಥೆಯು ನಾಶವಾದಾಗ ಬದಲಿ ವ್ಯವಸ್ಥೆಯ ಆವಶ್ಯಕತೆ ಕಂಡಿತು. ಹಿಂದಿನ ವ್ಯವಸ್ಥೆಯಲ್ಲಿನ ಬಂಡಾಯಕ್ಕೆ ಕಾರಣವಾಗಿದ್ದ ಕನಸುಗಳು, ಆಸೆಗಳು ಸೇರಿಕೊಂಡು ಹೊಸ ವ್ಯವಸ್ಥೆಯ ಜನ್ಮವಾಯಿತು. ಒಬ್ಬನ ಒಡೆತನದಲ್ಲಿ ಇಡೀ ಪಂಗಡ ಬಾಳುವ ವ್ಯವಸ್ಥೆಯಿಂದ ಬೇರ್ಪಟ್ಟು ನಾಲ್ಕೈದು ಮಂದಿಯ ಸಣ್ಣ ಸಣ್ಣ ಗುಂಪುಗಳು ಒಗ್ಗೂಡಿ ಸಮಾಜವಾಗುವ ವ್ಯವಸ್ಥೆಗೆ ಜನರು ಒಗ್ಗಿಕೊಂಡರು. ಹೀಗೆ ಬಳಕೆಗೆ ಬಂದ ಕುಟುಂಬ, ಕೌಟುಂಬಿಕ ವ್ಯವಸ್ಥೆ, ತಂದೆ-ತಾಯಿ-ಮಕ್ಕಳ ಸಂಬಂಧ ಎಲ್ಲಕ್ಕೂ ಮೂಲಕಾರಣ ಸ್ವಾತಂತ್ರ್ಯದ, ಸಮಾನ ಅವಕಾಶಗಳ ಹಂಬಲ. ಸರ್ವಾಧಿಕಾರಿ ನಾಯಕನ ಹಿಡಿತದಿಂದ ತಪ್ಪಿಸಿಕೊಂಡು ಸ್ವತಂತ್ರರಾಗಬೇಕೆನ್ನುವ ಅಭಿಲಾಷೆ.

Read the rest of this entry »


ಸ್ವಾತಂತ್ರ್ಯದೆಡೆಗೆ ಮನುಷ್ಯನ ತುಡಿತ ಅದೆಷ್ಟು ಅದಮ್ಯವಾಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕಾದರೆ ತಮ್ಮದಲ್ಲದ ತಪ್ಪಿಗೆ ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡು, ದಾಸ್ಯದಲ್ಲಿ ದಿನಗಳನ್ನು ದೂಡುತ್ತಾ, ಪ್ರಾಣದ ಹಂಗನ್ನೂ ತೊರೆದು ಸ್ವಾತಂತ್ರ್ಯ ದಕ್ಕಿಸಿಕೊಳ್ಳುವುದಕ್ಕಾಗಿ ನಡೆಸಿದ ಹೋರಾಟದ ಕಥನವನ್ನು ಕೇಳಬೇಕು.

ಭಾರತದ ಸ್ವಾತಂತ್ರ್ಯ ಸಂಗ್ರಾಮವೆನ್ನುವುದೇ ಮೈನವಿರೇಳಿಸುವ ಅದ್ಭುತ ಕಥಾನಕ. ಒಬ್ಬ ಧಿಂಗ್ರಾ, ಒಬ್ಬ ಭಗತ್ ಸಿಂಗ್, ಒಬ್ಬ ಆಜಾದ್, ಒಬ್ಬ ಸಾವರ್ಕರ್, ಒಬ್ಬ ಬೋಸ್, ಒಬ್ಬ ಗಾಂಧಿಯ ಜೀವನಗಾಥೆಯನ್ನು ಓದುತ್ತಾ ಹೋದಂತೆ ಇಡೀ ಭಾರತದ ಜನಮಾನಸದಲ್ಲಿ ಸ್ವಾತಂತ್ರ್ಯದೆಡೆಗೆ ಇದ್ದ ಹಂಬಲದ ತೀವ್ರತೆಯನ್ನು ಅಂದಾಜಿಸಲು ಸಾಧ್ಯವಾಗುತ್ತದೆ.

ಇನ್ನೆರಡು ಮಹಾಪಲಾಯನದ ಕಥೆಗಳಿವೆ. ದಾಸ್ಯದಿಂದ ತಮ್ಮ ಸ್ವಾತಂತ್ರ್ಯಕ್ಕಾಗಿ ಅಸಾಧ್ಯವೆನಿಸಿದ ಸಾಹಸವನ್ನು ಮಾಡಿ ಕಡೆಗೆ ಅದನ್ನು ದಕ್ಕಿಸಿಕೊಂಡಾವರ ಕಥೆ. ಕಮ್ಯುನಿಸ್ಟರ ಕೆಂಗಣಿಗೆ ಗುರಿಯಾಗಿ ಸೈಬಿರಿಯಾದ ಶ್ರಮ ಶಿಬಿರದಲ್ಲಿ ಬಂಧಿಯಾಗಿದ್ದ ಏಳು ಮಂದಿ ಸ್ವಾತಂತ್ರ್ಯದ ಕನಸನ್ನು ಅರಸಿಕೊಂಡು ಹೊರಡುತ್ತಾರೆ. ಶ್ರಮ ಶಿಬಿರದಲ್ಲಿನ ಯೋಧರ ಕಣ್ಗಾವಲನ್ನು ತಪ್ಪಿಸಿಕೊಂಡು ಹೊರಕ್ಕೆ ಪಾರಾಗುತ್ತಾರೆ. ಅವರೆದುರು ತೀರಾ ಅಸಾಧ್ಯವಾದ ಸವಾಲಿರುತ್ತದೆ. ಪ್ರಾಣವೆನ್ನುವುದು ಯಾವ ಕ್ಷಣದಲ್ಲಾದರೂ ತೊರೆದುಹೋಗಬಹುದಾದ ಅಪಾಯವಿರುತ್ತದೆ. ಆದರೆ ಸ್ವಾತಂತ್ರ್ಯದ ಗಮ್ಯದೆಡೆಗೆ ಅವರ ಹೆಜ್ಜೆಗಳು ಸ್ಪಷ್ಟವಾಗಿರುತ್ತವೆ. ಮೂಳೆಯನ್ನು ಕೊರೆಯುವಷ್ಟು ಛಳಿಯಿರುವ ಸೈಬೀರಿಯಾ, ಅತ್ಯುಗ್ರವಾದ ಗೋಬಿ ಮರುಭೂಮಿ, ಕಡಿದಾದ ಹಿಮಾಲಯದ ತಪ್ಪಲು ಸೇರಿದಂತೆ ಸುಮಾರು ನಾಲ್ಕು ಸಾವಿರ ಮೈಲುಗಳಷ್ಟು ಹಾದಿಯನ್ನು ಒಂದು ವರ್ಷಗಳ ಕಾಲ ಕ್ರಮಿಸಿ ಏಳು ಮಂದಿಯಲ್ಲಿ ನಾಲ್ಕು ಮಂದಿ ಜೀವಂತವಾಗಿ ಭಾರತಕ್ಕೆ ಬರುತ್ತಾರೆ. ತಮ್ಮ ಸ್ವಾತಂತ್ರ್ಯದ ಕನಸನ್ನು ನನಸಾಗಿಸಿಕೊಳ್ಳುತ್ತಾರೆ. ತಮ್ಮ ಸಾಹಸದ ಕಥನವನ್ನು ಸ್ಲಾವೋಮಿರ್ ರಾವಿಸ್ ‘ದಿ ಲಾಂಗ್ ವಾಕ್’ ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾನೆ.

ಇನ್ನೊಂದು ಮಹಾ ಪಲಾಯನದ ಕಥಾನಕ ‘ಪ್ಯಾಪಿಲಾನ್’. ಫ್ರಾನ್ಸಿನ ಹೆನ್ರಿ ಛಾರೇರೆ ಬದುಕಿನ ಸಾಹಸ ಗಾಥೆ. ಇವೆರೆಡೂ ಪೂರ್ಣಚಂದ್ರ ತೇಜಸ್ವಿಯವರಿಂದ ಕನ್ನಡಕ್ಕೆ ಬಂದಿವೆ. ಅವರನ್ನು ಬಹು ಆಳವಾಗಿ ಕಲಕಿದ ಕೃತಿಗಳೂ ಆಗಿವೆ.

ಕಳೆದ ಆಗಸ್ಟ್ ಹದಿನೈದರಂದು ನಾವು ಭಾರತದ ಅರವತ್ತೊಂದನೆಯ ಸ್ವಾತಂತ್ರ್ಯೊತ್ಸವವನ್ನು ಆಚರಿಸಿದೆವು. ಇದೇ ತಿಂಗಳು ಅರವತ್ತೊಂದು ವರ್ಷಗಳ ಹಿಂದೆ ನಮ್ಮ ದೇಶ ಬ್ರಿಟೀಷ್ ರಾಜರ ಅಧೀನದಲ್ಲಿತ್ತು. ಕೇವಲ ಅರವತ್ತು ಎಪ್ಪತ್ತು ವರ್ಷಗಳ ಹಿಂದೆ ನಾವು ನಮ್ಮದೇ ನಾಡಿನಲ್ಲಿ ಪರದೇಶಿಗಳಂತೆ ಬದುಕುತ್ತಿದ್ದೆವು. ನಮ್ಮದೇ ಮನೆಯಲ್ಲಿ ಅಪರಿಚಿತರ ಹಾಗೆ ಅಸಹಾಯಕರ ಹಾಗೆ ದಿನದೂಡುತ್ತಿದ್ದೆವು. ಆದರೆ ಕಡೆಗೂ ನಮಗೆ ನಾವು ಬದುಕಬೇಕಾದ್ದು ಹೀಗಲ್ಲ ಎಂದು ಮನದಟ್ಟಾಯಿತು. ನಮ್ಮ ಸುತ್ತಲೂ ಕಟ್ಟಿದ್ದ ಸೆರೆಮನೆಯ ಸಲಾಕೆಗಳನ್ನು ಮುರಿಯುವಷ್ಟರ ಮಟ್ಟಿಗೆ ನಮ್ಮೊಳಗೆ ಒಂದು ಹಂಬಲ ಹುಟ್ಟಿಕೊಂಡಿತು. ದೇಶದ ಕೋಟಿ ಕೋಟಿ ಹೃದಯಗಳು ಆಗ ತುಡಿಯುತ್ತಿದ್ದದ್ದು ಒಂದೇ ಒಂದು ಗುರಿಯನ್ನು ಮುಟ್ಟಲು. ಅಂಹಿಸಾವಾದಿಗಳು, ಕ್ರಾಂತಿಕಾರಿಗಳು, ಹಿರಿಯರು, ಯುವಕರು, ಹೆಂಗಸರು, ಮಕ್ಕಳು, ಧನಿಕರು, ಬಡವರು, ಕಾರ್ಮಿಕರು, ಸಾಹುಕಾರರು ಎಲ್ಲರಿಗೂ ಬೇಕಾಗಿದ್ದು ಅದೊಂದೇ. ಅದು ಸ್ವಾತಂತ್ರ್ಯ!

ಸ್ವಾತಂತ್ರ್ಯದ ಆಯಾಮಗಳು

ಅನಾದಿ ಕಾಲದಿಂದಲೂ ನಮ್ಮ ದೇಶ ಸ್ವಾತಂತ್ರ್ಯದ ಸವಿಯನ್ನು ಉಣ್ಣುತ್ತಲೇ ಬೆಳೆದದ್ದು. ನಮ್ಮ ನಾಡು ಮನುಷ್ಯನ ಸಮಗ್ರ ಸ್ವಾತಂತ್ರ್ಯದಲ್ಲಿ ಅಪಾರವಾದ ನಂಬಿಕೆಯನ್ನು ಇಟ್ಟುಕೊಂಡಿತ್ತು. ಪ್ರತಿಯೊಬ್ಬನೂ ಸ್ವತಂತ್ರವಾಗಿ ಬದುಕಲು, ಸ್ವಾವಲಂಬಿಯಾಗಿ ಬೆಳೆಯಲು, ಎಲ್ಲಾ ಬಗೆಯ ದಾಸ್ಯಗಳಿಂದ ಮುಕ್ತವಾಗಲು ಶ್ರಮಿಸಬೇಕು ಎಂಬುದು ನಮ್ಮ ನಾಗರೀಕತೆಯ ಸಂದೇಶವಾಗಿತ್ತು. ರಾಜಕೀಯವಾಗಿ ಯಾರ ಹಂಗಿಗೂ ಒಳಗಾಗದಿರುವುದೇ ಸ್ವಾತಂತ್ರ್ಯವಲ್ಲ ಎಂಬುದು ನಮ್ಮ ಹಿರಿಯರಿಗೆ ಚೆನ್ನಾಗಿ ತಿಳಿದಿತ್ತು. ದಾಸ್ಯವೆಂಬುದು ಯಾವ ರೀತಿಯಲ್ಲಾದರೂ ನಮ್ಮನ್ನು ಹುರಿದು ಮುಕ್ಕಬಲ್ಲದು ಎಂಬುದು ಅವರಿಗೆ ತಿಳಿದಿತ್ತು. ದಾಸ್ಯದಲ್ಲಿರುವ ಮನುಷ್ಯನಿಗೆ ತನ್ನ ಶಕ್ತಿಯ ಬಗ್ಗೆ ತನ್ನಲ್ಲೇ ನಂಬಿಕೆ ಕಳೆದುಹೋಗುತ್ತದೆ, ಆಗ ಆತ ಮೃಗಗಳಿಗಿಂತಲೂ ಕೀಳಾಗಿಬಿಡುತ್ತಾನೆ ಎಂಬ ಅರಿವು ಅವರಿಗಿತ್ತು. ಹೀಗಾಗಿ ಹಿಂದೆಲ್ಲಾ ಮನುಷ್ಯ ದೈಹಿಕವಾಗಿ ಯಾವ ರೋಗ, ರುಜಿನಗಳಿಗೆ ದಾಸನಾಗದಂತೆ, ತನ್ನ ಮನಸ್ಸನ್ನು ಯಾವ ಸಂಗತಿಗಳಿಗೂ ಒತ್ತೆಯಾಳಾಗಿ ಇರಿಸದಂತೆ, ತನ್ನ ಇಚ್ಛಾಶಕ್ತಿ, ಸೃಜನಶೀಲತೆ ಯಾವ ಬಂಧನಗಳಿಗೂ ಒಳಗಾಗದಂತೆ, ಕಡೆಗೆ ತನ್ನ ಆತ್ಮ ಯಾವ ಹಂಗೂ ಇಲ್ಲದ ಸ್ಥಿತಿಯನ್ನು ತಲುಪುವುದಕ್ಕೆ ಏನೇನು ಮಾಡಬೇಕು ಎಂಬ ಬಗ್ಗೆ ವಿಪರೀತ ಕಾಳಜಿಯನ್ನು ಹೊಂದಲಾಗುತ್ತಿತ್ತು. ನಮ್ಮ ನಾಡಿನ ಅರಿವಿನ ಖನಿಗಳಾದ ಆಯುರ್ವೇದ, ವೇದ, ಉಪನಿಷತ್ತುಗಳು ಮನುಷ್ಯ ಎಲ್ಲಾ ಬಗೆಯ ದಾಸ್ಯದಿಂದ ಬಿಡುಗಡೆಗೊಂಡು ಸ್ವಚ್ಛಂದವಾದ ಸ್ವತಂತ್ರ ಸ್ಥಿತಿಯನ್ನು ತಲುಪಿಕೊಳ್ಳಲು ನೆರವಾಗುವಂಥವು.

ಹೀಗಾಗಿ ಸ್ವಾತಂತ್ರ್ಯದ ಬಗ್ಗೆ ಚರ್ಚಿಸುವಾಗ ನಾವು ಅದರ ಈ ಎಲ್ಲಾ ಆಯಾಮಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾದ್ದು ಆವಶ್ಯಕ. ಸ್ವಾತಂತ್ರ್ಯದ ಸಮರ್ಥವಾದ ವ್ಯಾಖ್ಯೆ ಏನು ಎಂದು ನಿರ್ಧರಿಸುವುದು ಸುಲಭದ ವಿಷಯವಲ್ಲ. ಯಾವ ಹಂಗಿಗೂ ಒಳಗಾಗದಿರುವುದು ಸ್ವಾತಂತ್ರ್ಯ ಎಂದು ಸುಲಭವಾಗಿ ಹೇಳಿಬಿಡಬಹುದು. ಆದರೆ ಹಂಗು, ಅವಲಂಬನೆ ಇಲ್ಲದ ಸ್ಥಿತಿಯಾದರೂ ಯಾವುದು? ಹುಟ್ಟಿದಾಗಿನಿಂದ ಉಸಿರು ನಿಲ್ಲುವವರೆಗೂ ನಾವು ಹಲವಾರು ಆವಶ್ಯಕತೆಗಳಿಗಾಗಿ ಪ್ರಕೃತಿಯ ಮೇಲೆ, ನಮ್ಮ ಪರಿಸರದ ಮೇಲೆ, ನಮ್ಮವರ ಮೇಲೆ ಅವಲಂಬಿಸಿಯೇ ಇರುತ್ತೇವೆ. ಆಹಾರಕ್ಕಾಗಿ ನಾವು ಸಸ್ಯಗಳು, ಮಾಂಸವನ್ನು ಕೊಡುವ ಪ್ರಾಣಿಗಳಿಂದ ಹಿಡಿದು ಸಮುದ್ರದಲ್ಲಿ ಬೆಳೆಯುವ ಪಾಚಿಗಳವರೆಗೆ ಅವಲಂಬಿಸಿದ್ದೇವೆ, ನಾಗರೀಕರಾಗುತ್ತಾ ಈ ಅವಲಂಬನೆಯ ಪಟ್ಟಿಗೆ ಹೊಟೇಲುಗಳನ್ನೂ, ಕಾಫಿ ಬಾರುಗಳನ್ನೂ, ದರ್ಶಿನಿ – ಮೆಸ್ಸುಗಳನ್ನೂ ಸೇರಿಸಿಕೊಳ್ಳಬಹುದು. ಕುಡಿಯುವ ನೀರಿಗಾಗಿ ನದಿ, ಸರೋವರ, ಹಳ್ಳ ಕೊಳ್ಳಗಳಿಂದ ಶುರುವಾಗಿ ಈಗೀಗ ಬಿಸ್ಲೇರಿ ಬಾಟಲುಗಳವರೆಗೆ ನಮ್ಮ ಅವಲಂಬನೆ ಚಾಚಿಕೊಂಡಿದೆ. ತಲೆಯ ಮೇಲಿನ ಸೂರಿಗಾಗಿ, ಮೈಮೇಲಿನ ಬಟ್ಟೆಗಾಗಿ ಹೀಗೆ ನಮ್ಮ ಪ್ರತಿಯೊಂದು ಆವಶ್ಯಕತೆಗಳಿಗಾಗಿ ನಾವು ಹೆತ್ತವರ ಮೇಲೆ, ಪೋಷಕರ ಮೇಲೆ, ನಮ್ಮ ಸರಕಾರಗಳ ಮೇಲೆ ಅವಲಂಬಿತರೇ.

ಇವೆಲ್ಲಾ ಆವಶ್ಯಕತೆಗಳನ್ನು ತುಂಬಿಸಿಕೊಡುವ ‘ದುಡ್ಡು’ ಒಂದಿದ್ದರೆ ನಾವು ಸ್ವತಂತ್ರರೇ? ದುಡ್ಡು ಎಂಬುದೊಂದಿದ್ದರೆ ನಾವು ಸ್ವತಂತ್ರರು ಎಂಬ ಭಾವನೆ ತುಂಬಾ ಹಿಂದಿನಿಂದಲೇ ಗಟ್ಟಿಯಾಗಿದೆ. ತನ್ನ ಖರ್ಚನ್ನು ತಾನು ನಿಭಾಯಿಸಿಕೊಳ್ಳುವಷ್ಟು ಸಂಪಾದನೆ ಮಾಡಿಕೊಳ್ಳುವವನು ಸ್ವತಂತ್ರ, ತನ್ನ ಕಾಲ ಮೇಲೆ ತಾನು ನಿಂತಿದ್ದಾನೆ, ಆತ ಸ್ವಾಭಿಮಾನಿ ಎಂದೆಲ್ಲಾ ಹೇಳುವುದನ್ನು ಕೇಳಿರುತ್ತೇವೆ. ಹೀಗಾಗಿ ದುಡ್ಡು ನಮ್ಮೆಲ್ಲಾ ಬಂಧನಗಳನ್ನು, ನಮ್ಮ ದಾಸ್ಯವನ್ನು ತೊಡೆದು ಹಾಕುವ, ನಮಗೆ ಸ್ವಾತಂತ್ರ್ಯವನ್ನು ಕರುಣಿಸುವ ಪ್ರವಾದಿ ಎಂದು ಜನರು ನಂಬಿದ್ದಾರೆ. ದುಡ್ಡೊಂದಿದ್ದರೆ ನಾವು ಯಾರ ಮೇಲೂ ಅವಲಂಬಿತರಲ್ಲ ಎನ್ನುವುದು ಈಗಿನ ನಂಬಿಕೆ. ಆದರೆ ಈ ದುಡ್ಡು ಎಂಬ ಮಾಯಾವಿ ಎಷ್ಟು ಚಾಣಾಕ್ಷನೆಂದರೆ, ಸ್ವಾತಂತ್ರ್ಯದ ಮಾಯಾಮೃಗವನ್ನು ತೋರಿಸುತ್ತಾ ನಮ್ಮ ಸಣ್ಣ ಸಣ್ಣ ಸ್ವಾತಂತ್ರ್ಯಗಳನ್ನು, ಸ್ವಾಭಿಮಾನಗಳನ್ನು ಕಸಿದುಕೊಂಡು ನಮ್ಮನ್ನು ತನ್ನ ದಾಸರನ್ನಾಗಿಸಿಕೊಂಡಿದೆ. ಯೋಚಿಸಿ, ಹಿಂದೆಲ್ಲಾ ತನ್ನ ಆಹಾರವನ್ನು ತಾನು ಸಂಪಾದಿಸಬಲ್ಲ, ತನ್ನ ಅಡುಗೆಯನ್ನು ತಾನು ಬೇಯಿಸಿಕೊಳ್ಳಬಲ್ಲ, ತನ್ನ ಬಟ್ಟೆಯನ್ನು ತಾನು ತಯಾರು ಮಾಡಿಕೊಳ್ಳಬಲ್ಲ, ತನ್ನ ಗೂಡನ್ನು ತಾನು ಕಟ್ಟಿಕೊಳ್ಳಬಲ್ಲ, ತನ್ನ ರಕ್ಷಣೆಯನ್ನು ತಾನು ಮಾಡಿಕೊಳ್ಳ, ತನ್ನ ಮನರಂಜನೆಯ ಹಾದಿಯನ್ನು ತಾನೇ ಸೃಷ್ಟಿಸಿಕೊಳ್ಳ ಬಲ್ಲವನಾಗಿದ್ದ ಮನುಷ್ಯ ಈಗ ಇವೆಲ್ಲವುಗಳಿಗೂ ಹಣವನ್ನು ಆಶ್ರಯಿಸಿದ್ದಾನೆ. ತನಗೆ ಆಹಾರ ಬೆಳೆಯುವುದಕ್ಕಾಗಿ, ಅದನ್ನು ತಂದು ತನಗೆ ವಿತರಿಸುವುದಕ್ಕಾಗಿ ಆತ ಹಣವನ್ನು ತೆರಬೇಕು. ತನಗೆ ಅಡುಗೆಯನ್ನು ಬೇಯಿಸಿ ಹಾಕುವುದಕ್ಕಾಗಿ ಸಿಲಿಂಡರ್ ತಂದುಕೊಡುವವನಿಂದ ಹಿಡಿದು, ಪಾತ್ರೆ ತೊಳೆದು ಕೊಡುವ ಕೆಲಸದಾಕೆಯವರೆಗೆ ಎಲ್ಲರಿಗೂ ಹಣದ ಮುಖ ತೋರಿಸಬೇಕು. ತನ್ನ ಮೈಮುಚ್ಚಲು ದರ್ಜಿಗೆ ದುಂಬಾಲು ಬೀಳಬೇಕು. ತನ್ನ ರಕ್ಷಣೆಗಾಗಿ ಸರಕಾರಕ್ಕೆ ಕಪ್ಪ ಕಾಣಿಕೆ ಕೊಡಬೇಕು. ತನ್ನ ಮನರಂಜನೆಗಾಗಿ ಸಿನೆಮಾ, ನಾಟಕ, ದಿನ ಪತ್ರಿಕೆ, ಅಂತರ್ಜಾಲ ಹೀಗೆ ಎಲ್ಲಾ ಕಡೆ ಕಾಸೆಂಬ ಬಾಸನ್ನು ಕರೆದೊಯ್ಯಬೇಕು. ಹೇಳಿ ದುಡ್ಡು ನಮ್ಮನ್ನು ಎಷ್ಟು ಸ್ವತಂತ್ರರನ್ನಾಗಿಸಿದೆ?

‘ತಾನು ಸರ್ವಸ್ವತಂತ್ರನು’ ಎಂದು ಹೇಳಲು ಯಾರಿಂದಲೂ ಸಾಧ್ಯವಿಲ್ಲ. ಹೀಗಾಗಿ ಸ್ವಾತಂತ್ರ್ಯ ಎಂಬ ಪದವೇ ಅತ್ಯಂತ ಗೊಜಲು ಗೊಜಲಾಗಿ, ನಿಷ್ಕರ್ಷೆಗೆ ನಿಲುಕದ್ದಾಗಿ ಕಾಣುತ್ತದೆ.

ಪಂಜರದೊಳಗೆ ದೇಶ

೧೪೯೮ರಲ್ಲಿ ದಕ್ಷಿಣ ಭಾರತದ ಪಶ್ಚಿಮ ಕರಾವಳಿಯ ಕಿನಾರೆಯ ಬಳಿಗೆ ಹಡಗೊಂದು ಬಂದು ತಲುಪಿತು. ಅದರಿಂದ ಕೆಳಕ್ಕಿಳಿದವನು ಪೋರ್ಚುಗಲ್ ನಾವಿಕ ವಾಸ್ಕೋ ಡ ಗಾಮ. ಆತ ಅತ್ಯಂತ ಲಾಭದಾಯಕವಾದ ಸಾಂಬಾರು ಪದಾರ್ಥದ ವ್ಯಾಪಾರಕ್ಕಾಗಿ ಭಾರತವನ್ನು ಹುಡುಕಿಕೊಂಡು ಅಲೆದಿದ್ದ. ಅಂದು ಆತ ಸರಿಯಾದ ಜಾಗವನ್ನು ತಲುಪಿಕೊಂಡಿದ್ದ. ಭಾರತದಲ್ಲಿ ದೊರೆಯುತ್ತಿದ್ದ ಸಾಂಬಾರು ಪದಾರ್ಥಗಳಿಗೆ ಯುರೋಪಿನಲ್ಲಿ ಅಗಾಧವಾದ ಬೇಡಿಕೆಯಿತ್ತು. ಹೀಗಾಗಿ ಯುರೋಪಿನಲ್ಲಿ ಡಕೇತಿ, ಕಳ್ಳತನ ಮಾಡಿಕೊಂಡಿದ್ದ ಪಾತಕಿಗಳೆಲ್ಲಾ ಹಡಗನ್ನು ಏರಿಕೊಂಡು ಲಕ್ಷಾಂತರ ರೂಪಾಯಿ ಲಾಭ ಗಳಿಸುವ ಆಸೆಯಿಂದ ಭಾರತವನ್ನು ಹುಡುಕಿಕೊಂಡು ಹೊರಟಿದ್ದರು. ಹೀಗೆ ಹೊರಟ ಅಸಂಖ್ಯಾತ ನಾವಿಕರಲ್ಲಿ ಭಾರತವನ್ನು ಮೊದಲು ತಲುಪಿದವ ವಾಸ್ಕೋ ಡ ಗಾಮ. ಈತನ ನಂತರ ಫ್ರೆಂಚರು ಭಾರತದೊಳಕ್ಕೆ ಕಾಲಿಟ್ಟರು, ಅನಂತರ ಡಚ್ಚರು ಬಂದರು, ಕೊನೆಗೆ ಇಂಗ್ಲೀಷರು ಬಂದರು.

ಮೊದಮೊದಲು ಸ್ಥಳಿಯ ರಾಜರ ಮರ್ಜಿಯನ್ನು ಕಾದು ತಮ್ಮ ವ್ಯಾಪಾರವನ್ನು ನಿರ್ವಹಿಸಿಕೊಂಡು ಹೋಗುತ್ತಿದ್ದ ಯುರೋಪಿಯನ್ನರಿಗೆ ಲಾಭದ ಆಸೆ ಅತಿಯಾಗಿ, ತಮ್ಮ ವ್ಯಾಪಾರದ ಏಕಸ್ವಾಮ್ಯತೆಗಾಗಿ ಆಡಳಿತವನ್ನು ತಮ್ಮ ಕೈಗೆ ತೆಗೆದುಕೊಳ್ಳುವ ಹಂಬಲ ಹುಟ್ಟಿತು. ೧೭೫೭ರಲ್ಲಿ ಇಂಗ್ಲೀಷ್ ಸೈನ್ಯಾಧಿಕಾರಿ ರಾಬರ್ಟ್ ಕ್ಲೈವನ ನಾಯಕತ್ವದಲ್ಲಿ ಪ್ಲಾಸೀ ಕದನದಲ್ಲಿ ಬಂಗಾಳದ ನವಾಬನನ್ನು ಉರುಳಿಸಿ ತಮ್ಮ ಆಜ್ಞೆಯನ್ನು ಪಾಲಿಸುವ ಕೈಗೊಂಬೆಯಾದ ಮತ್ತೊಬ್ಬ ನವಾಬನನ್ನು ಪಟ್ಟಕ್ಕೇರಿಸಲಾಯ್ತು. ಈಸ್ಟ್ ಇಂಡಿಯಾ ಕಂಪೆನಿ ಕಣ್ತೆರೆಯಿತು. ೧೭೬೫ರಲ್ಲಿ ಬುಕ್ಸರ್ ಕದನವನ್ನು ಜಯಿಸಿ ಬಂಗಾಲ, ಒರಿಸ್ಸಾ, ಬಿಹಾರದ ಆಡಳಿತದ ಹಕ್ಕನ್ನು ಪಡೆದುಕೊಂಡ ಈಸ್ಟ್ ಇಂಡಿಯಾ ಕಂಪೆನಿ ೧೮೩೯ರಲ್ಲಿ ಪಂಜಾಬದ ರಾಜ ರಂಜಿತ್ ಸಿಂಗ್ ಸತ್ತ ನಂತರ ಪಂಜಾಬನ್ನು ಕಬಳಿಸಿದರು. ಇದಕ್ಕಾಗಿ ಅವರು ಎರಡು ಆಂಗ್ಲೋ ಸಿಖ್ ಕದನಗಳಲ್ಲಿ ಹೋರಾಡಬೇಕಾಯ್ತು. ಹೀಗೆ ಭಾರತದಲ್ಲಿನ ವ್ಯಾಪಾರದಲ್ಲಿ ಸರ್ವಸ್ವತಂತ್ರವನ್ನು ಪಡೆಯುವುದಕ್ಕಾಗಿ, ಏಕಸ್ವಾಮ್ಯವನ್ನು ಸಾಧಿಸುವುದಕ್ಕಾಗಿ ಈಸ್ಟ್ ಇಂಡಿಯಾ ಕಂಪೆನಿ ಒಂದೊಂದೇ ಪ್ರದೇಶವನ್ನು ಗೆಲ್ಲುತ್ತಾ ಹೋಗುತ್ತಿದ್ದರೆ ಭಾರತವೆಂಬ ನೂರಾರು ಪ್ರದೇಶಗಳ ಸಮೂಹ ಹಂತ ಹಂತವಾಗಿ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾ ಹೋಯಿತು. ಕಡೆಗೊಂದು ದಿನ ಭಾರತ ಬ್ರಿಟೀಷ್ ಸಾಮ್ರಾಜ್ಯದ ವಸಾಹತುವಾಗಿ ರೂಪುಗೊಂಡಿತು.

ಬಿಡುಗಡೆಗಾಗಿ ಹೋರಾಟ

ಹಾಗೆ ನೋಡಿದರೆ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟವೆಂಬುದು ಇಡೀ ದೇಶದಾದ್ಯಂತ ಒಮ್ಮೆಗೇ ಶುರುವಾಗಲಿಲ್ಲ. ಏಕೆಂದರೆ ಯುರೋಪಿಯನ್ನು ಭಾರತಕ್ಕೆ ಬರುವ ಮುಂಚಿನಿಂದಲೂ ‘ಭಾರತ’ ಎಂಬ ದೇಶದ ಅಸ್ತಿತ್ವವಾಗಲಿ, ಪ್ರಜ್ಞೆಯಾಗಲಿ ನಮ್ಮವರಲ್ಲಿರಲಿಲ್ಲ. ಭಾರತದ ಭೂಖಂಡವು, ನೂರಾರು ರಾಜ ಮನೆತನಗಳ ಆಳ್ವಿಕೆಯನ್ನು ಒಪ್ಪಿಕೊಂಡಿತ್ತು. ಒಬ್ಬೊಬ್ಬ ರಾಜನದು ಒಂದೊಂದು ಸಾಮ್ರಾಜ್ಯ. ಹೀಗೆ ಸಣ್ಣ ಸಣ್ಣ ಆಡಳಿತ ಕೇಂದ್ರಗಳು ಭಾರತದ ತುಂಬಾ ಆವರಿಸಿದ್ದವು. ಮೊಘಲರ ಆಕ್ರಮಣದ ನಂತರ ತುಸು ದೊಡ್ಡದಾದ ಆಡಳಿತ ಕೇಂದ್ರ ಸ್ಥಾಪಿತವಾದರೂ ಭಾರತವೆಂಬ ದೇಶದ ಪ್ರಜ್ಞೆ ಆಗಿರಲಿಲ್ಲ. ಹೀಗಾಗಿ ಈಸ್ಟ್ ಇಂಡಿಯಾ ಕಂಪೆನಿಯ ದಬ್ಬಾಳಿಕೆಯ ವಿರುದ್ಧ ಪ್ರತಿಭಟನೆಗಳು, ಹೋರಾಟಗಳು, ಪ್ರಾಣ ತ್ಯಾಗಗಳು ನಡೆದರೂ ಸಹ ಅವು ಸಣ್ಣ ಸಣ್ಣ ರಾಜ ಮನೆತನಗಳು, ಆಡಳಿತ ಯಂತ್ರಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು, ಸಾರ್ವಭೌಮತೆಯನ್ನು ರಕ್ಷಿಸಿಕೊಳ್ಳಲು ನಡೆಸಿದ ಹತಾಶ ಯತ್ನಗಳಾಗಿದ್ದವು. ಇಂತಹ ಸಣ್ಣ ಸಣ್ಣ, ಸ್ವತಂತ್ರ ಪ್ರಯತ್ನಗಳು ಒಂದು ಗೂಡಿ ೧೮೫೭ರಲ್ಲಿ ದೊಡ್ಡ ಪ್ರಮಾಣದ ಹೋರಾಟ ನಡೆಯಿತಾದರೂ ಅದನ್ನು ಹತ್ತಿಕ್ಕುವಲ್ಲಿ ಬ್ರಿಟೀಷರು ಯಶಸ್ವಿಯಾದರು. ಇಂದಿಗೂ ನಾವು ಆ ಹೋರಾಟವನ್ನು ‘ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ’ ಎಂದು ನೆನೆಯುತ್ತೇವೆ.

ಈಸ್ಟ್ ಇಂಡಿಯಾ ಕಂಪೆನಿ ಕನ್ಯಾಕುಮಾರಿಯಿಂದ ಹಿಡಿದು ಹಿಮಾಲಯದವರೆಗೆ ತನ್ನ ಹಿಡಿತವನ್ನು ವಿಸ್ತರಿಸಿ ಯಾವಾಗ ಕೇಂದ್ರೀಕೃತವಾದ ಆಡಳಿತವನ್ನು ನಡೆಸಲು ಶುರು ಮಾಡಿತೋ ಆಗಲೇ ಇಡೀ ದೇಶದ ಜನರಲ್ಲಿ ತಾವೆಲ್ಲರೂ ಒಂದು ‘ದೇಶ’ ಎಂಬ ಪ್ರಜ್ಞೆ ಬೆಳೆದದ್ದು. ಅನಂತರ ಪಾಶ್ಚಾತ್ಯ ವಿದ್ಯಾಭ್ಯಾಸದಿಂದಾಗಿ ಕೊಂಚ ರಾಜಕೀಯ ತಿಳಿವು ಬೆಳೆಯುತ್ತಲೇ ತಾವು ಅನ್ಯರಿಗೆ ಅಡಿಯಾಳಾಗಿ ಬದುಕುತ್ತಿದ್ದೇವೆ ಎಂಬ ಅರಿವು ಜಾಗೃತವಾದದ್ದು. ತಮಗೆ ಸ್ವಾತಂತ್ರ್ಯ ಬೇಕು ಎಂದು ಇಡೀ ರಾಷ್ಟ್ರದ ಸಮುದಾಯಕ್ಕೆ ಅನ್ನಿಸಲು ಶುರುವಾದದ್ದೇ ಆಗ. ಆಗಲೇ ರಾಷ್ಟ್ರೀಯ ಮಟ್ಟದಲ್ಲಿ ಚಳುವಳಿಗಳು ನಡೆಯಲು ಶುರುವಾಗಿದ್ದು. ತಾವು ಕಳೆದುಕೊಂಡ ಸ್ವಾತಂತ್ರ್ಯ, ತಮ್ಮ ನಾಡಿನ ಸಂಪತ್ತಿನ ಮೇಲಿನ ಯಾಜಮಾನ್ಯ, ತಮ್ಮನ್ನು ತಾವು ಆಳಿಕೊಳ್ಳುವ ಹಕ್ಕನ್ನು ಮರಳಿ ಪಡೆಯುವುದಕ್ಕಾಗಿ ಜನರು ಸಂಘಟಿತರಾಗತೊಡಗಿದರು.

ಸ್ವಾತಂತ್ರ್ಯಕ್ಕಾಗಿ ನಡೆದ ಆಗ್ರಹಗಳಲ್ಲಿ ನೂರಾರು ವಿಧಗಳಿದ್ದವು. ವಿವಿಧ ನಾಯಕರು ತಮಗೆ ತೋಚಿದ ಹಾದಿಯಲ್ಲಿ ಸ್ವಾತಂತ್ರ್ಯವನ್ನು ಪಡೆಯಲು ಪ್ರಯತ್ನಗಳನ್ನು ನಡೆಸಿದರು. ಜನರಲ್ಲಿ ರಾಜಕೀಯ ಪ್ರಜ್ಞೆಯನ್ನು ಮೂಡಿಸಿ ಅವರನ್ನು ಪ್ರಜಾಪ್ರಭುತ್ವಕ್ಕೆ ಅಣಿಗೊಳಿಸುವ ಉದ್ದೇಶದಿಂದ ಎ.ಓ.ಹ್ಯೂಂ ನೇತೃತ್ವದ ಕಾಂಗ್ರೆಸ್ ರಚನೆಯಾಯಿತು. ಯುರೋಪಿನ ರಾಜಕೀಯ ಪ್ರಜ್ಞೆಯನ್ನು ಭಾರತೀಯರಲ್ಲಿ ಬೆಳೆಸುವುದು ಅದರ ಉದ್ದೇಶವಾಗಿತ್ತು. ಅದು ರಾಷ್ಟ್ರವ್ಯಾಪಿಯಾಗಿ ಪ್ರತಿಭಟನೆಗಳನ್ನು ನಡೆಸುತ್ತಾ ತನ್ನ ಗುರಿಯನ್ನು ಸಾಧಿಸುವ ಪ್ರಯತ್ನದಲ್ಲಿ ತೊಡಗಿಕೊಂಡಿತು. ಈ ಸಂಘಟನೆಯ ಶಾಂತಿಯುತ  ಮನವಿಗಳಿಂದ ಸರಕಾರ ಬಗ್ಗುವುದಿಲ್ಲ ಎಂದು ತೀರ್ವಾನಿಸಿದ ತೀವ್ರವಾದಿಗಳು ಉಗ್ರವಾದ ಹೋರಾಟಕ್ಕೆ ಆಲನೆ ನೀಡಿದರು. ಲಾಲಾ ಲಜಪತ್ ರಾಯ್ , ಬಿಪಿನ್ ಚಂದ್ರ ಪಾಲ್, ಬಾಲ ಗಂಗಾಧರ ತಿಲಕರ ಮುಖಂಡತ್ವದಲ್ಲಿ ಪ್ರತಿಭಟನೆ ತೀವ್ರ ಸ್ವರೂಪವನ್ನು ಪಡೆದುಕೊಂಡಿತು. ಕೇವಲ ನಮ್ಮ ಅಸಹನೆಯನ್ನು ವ್ಯಕ್ತಪಡಿಸುವುದರಿಂದ ಕಿವುಡ ಸರಕಾರದ ಗಮನವನ್ನು ಸೆಳೆಯಲು ಸಾಧ್ಯವಾಗುವುದಿಲ್ಲ ಎಂದು ತೀರ್ಮಾನಿಸಿದ ಒಂದು ವರ್ಗ ಕ್ರಾಂತಿಕಾರಿ ಚಟುವಟಿಕೆಗಳಿಗೆ ಕೈ ಹಾಕಿತು. ಕಣ್ಣಿಗೆ ಕಣ್ಣು, ರಕ್ತಕ್ಕೆ ರಕ್ತ ಎಂಬ ನೀತಿಯನ್ನು ಅಳವಡಿಸಿಕೊಂಡ ಇವರು ಸಶಸ್ತ್ರವಾದ ಹೋರಾಟವನ್ನು ಜಾರಿಯಲ್ಲಿಟ್ಟರು. ಚಂದ್ರಶೇಖರ್ ಆಜಾದ್, ಭಗತ್ ಸಿಂಗ್, ರಾಜಗುರು, ಸುಖದೇವ್, ಸಾವರ್ಕರ್, ಮದನ್ ಲಾಲ್ ಧೀಗ್ರಾ ಮುಂತಾದವರ ಅಗ್ರಪಂಕ್ತಿಯಲ್ಲಿ ಕ್ರಾಂತಿಕಾರಿ ಹೋರಾಟಗಳು ನಡೆದು ಸ್ವಾತಂತ್ರ್ಯದ ಕಿಚ್ಚು ಜಾಗೃತವಾಗಿತ್ತು.

ಶಾಂತಿಯುತ ಆಗ್ರಹ

ಈ ಎಲ್ಲಾ ಹೋರಾಟಗಳಿಗೆ ಸಲ್ಲಬೇಕಾದ ಗೌರವ ಹಾಗೂ ಮನ್ನಣೆಯನ್ನು ಕೊಟ್ಟು ಪಕ್ಕಕ್ಕಿಟ್ಟು ನೋಡಿದರೆ, ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅತಿ ಮುಖ್ಯವಾದ ಪಾತ್ರವನ್ನು ವಹಿಸಿದ ಎರಡು ಹೋರಾಟಗಳನ್ನು ನೆನೆಯಬೇಕೆನಿಸುತ್ತದೆ. ಅವು: ಗಾಂಧೀಜಿ ಪ್ರಚಾರಕ್ಕೆ ತಂದ ಸತ್ಯಾಗ್ರಹ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್‌ರ ಸಂಘಟಿತ ಸಶಸ್ತ್ರ ಹೋರಾಟ.

ಬಹುತೇಕರು ತಿಳಿದುರುವಂತೆ ಸತ್ಯಾಗ್ರಹವೆಂಬ ವಿನೂತನವಾದ, ಹಿಂದೆದ್ದೂ ಜಗತ್ತು ಕಲ್ಪಿಸಿಕೊಂಡಿರದಿದ್ದ ಹೋರಾಟದ ವಿಧಾನವನ್ನು ಮೊಟ್ಟ ಮೊದಲು  ಪರಿಚಯಿಸಿದ್ದು ಗಾಂಧೀಜಿಯಲ್ಲ. ಗಾಂಧಿ ಹುಟ್ಟುವ ಹನ್ನೆರಡು ವರ್ಷ ಮುಂಚೆಯೇ ಪಂಜಾಬಿನಲ್ಲಿ ಸತ್ಯಾಗ್ರಹವನ್ನು ಬಳಸಿ ಬ್ರಿಟೀಷರ ವಿರುದ್ಧ ಹೋರಾಟ ನಡೆದಿತ್ತು. ಸಿಖ್ ತತ್ವಜ್ಞಾನಿ ಹಾಗೂ ನಾಮ್‌ಧಾರಿ ಪಂಗಡದ ಮುಖಂಡರಾಗಿದ್ದ ಗುರು ರಾಮ್ ಸಿಂಗ್‌ಜೀ ಬ್ರಿಟೀಷರ ದಬ್ಬಾಳಿಕೆಯನ್ನು ಪ್ರತಿಭಟಿಸಲು ಸಾಮೂಹಿಕ ಅಸಹಕಾರ ಹಾಗೂ ವಿದೇಶಿ ವಸ್ತುಗಳ ಬಹಿಷ್ಕಾರವನ್ನು ಅಸ್ತ್ರವಾಗಿ ಬಳಸಿದರು. ಸ್ವಾತಂತ್ರ್ಯಾ ನಂತರ ರಾಮ್ ಜೀ ಸಿಂಗ್‌ರ ಹೋರಾಟವನ್ನು ನೆನೆಯುತ್ತಾ ಭಾರತದ ಮೊದಲ ರಾಷ್ಟ್ರಪತಿ ಡಾ|| ಬಾಬು ರಾಜೇಂದ್ರ ಪ್ರಸಾದ್ ಹೀಗೆಂದಿದ್ದರು: “ಪೂಜ್ಯ ಗುರು ರಾಮ ಸಿಂಗ್‌ಜೀಯವರು ಪ್ರಾರಂಭಿಸಿದ ಅಸಹಕಾರ ಹಾಗೂ ಸ್ವದೇಶಿ ಚಳುವಳಿ ಭಾರತದಲ್ಲಿನ ಬ್ರಿಟೀಶ್ ಸಾಮ್ರಾಜ್ಯದ ಬುಡವನ್ನು ಅಲ್ಲಾಡಿಸಿದ್ದು ಐತಿಹಾಸಿಕ ಸತ್ಯ. ಗುರು ರಾಮ್ ಸಿಂಗ್ ರಾಜಕೀಯ ಸ್ವಾತಂತ್ರ್ಯವನ್ನು ಧರ್ಮದ ಭಾಗವಾಗಿ ಪರಿಗಣಿಸಿದವರು. ಅಸಹಕಾರ ಹಾಗೂ ಬಹಿಷ್ಕಾರದಂತಹ ಶಕ್ತಿಶಾಲಿ ಹೋರಾಟ ಪದ್ಧತಿಗಳನ್ನು ಭಾರತದ ಸ್ವತಂತ್ರ ಚಳುವಳಿಗೆ ಪರಿಚಯಿಸಿದ ಗಾಂಧೀಜಿಗೆ ರಾಮ್ ಸಿಂಗ್‌ಜೀಯವರ ಹೋರಾಟವೇ ಸ್ಪೂರ್ತಿ.”

ರಕ್ತಪಾತವಿಲ್ಲದ, ವಿನಾಶವಿಲ್ಲದ ಈ ಬಗೆಯ ಶಾಂತಿಯುತ ಹಾಗೂ ಪರಿಣಾಮಕಾರಿ ಹೋರಾಟದಿಂದ ಇಡೀ ಜಗತ್ತೇ ಸ್ಪೂರ್ತಿಗೊಳ್ಳಲು ಕಾರಣ ಗಾಂಧೀಜಿಯೇ. ಜಗತ್ತಿನ ಇತಿಹಾಸಕ್ಕೆ ಭಾರತದ ಕೊಡುಗೆಯಾದ ಸತ್ಯಾಗ್ರಹವನ್ನು ಸಮರ್ಥವಾಗಿ ಬಳಕೆಗೆ ತಂದು ಯಶಸ್ಸು ಸಾಧಿಸಿ ತೋರಿಸಿದ ಕೀರ್ತಿ ಗಾಂಧೀಜಿಯರಿಗೇ ಸಲ್ಲಬೇಕು. ‘ಸತ್ಯಾಗ್ರಹ’ ಎಂಬುದು ನಾನಾ ಆಯಾಮಗಳನ್ನು ಪಡೆದಂತಹ ಹೋರಾಟ. ಅದು ಕೇವಲ ರಾಜಕೀಯ ಸ್ವಾತಂತ್ರ್ಯಕ್ಕಾಗಿ ಹೊರಗಿನ ಶತ್ರುವಿನ ಜೊತೆ ನಡೆಸುವ ಹೋರಾಟವಲ್ಲ, ಅಂತರಂಗದಲ್ಲಿನ ಅಸತ್ಯದ ವಿರುದ್ಧವೂ ನಡೆಸಬೇಕಾದ ಹೋರಾಟ. ಅಂತರಂಗದ ಹಾಗೂ ಬಾಹ್ಯದ ಸತ್ಯಕ್ಕಾಗಿ ಆಗ್ರಹಿಸುವುದೇ ಸತ್ಯಾಗ್ರಹ. ಎದುರಾಳಿಯನ್ನು ಶತ್ರುವನ್ನಾಗಿ ಕಾಣದೆ, ಆತನ ಮೇಲೆ ಹಲ್ಲೆ ಮಾಡದೆ, ಆತನಿಗೆ ತೊಂದರೆ ಉಂಟು ಮಾಡದೆ ತನ್ನ ಹಕ್ಕನ್ನು ತಾನು ಪಡೆಯುವುದು ಸತ್ಯಾಗ್ರಹದ ಕ್ರಮ. ನಮ್ಮ ಸ್ವಾತಂತ್ರ್ಯವನ್ನು ಕಸಿದುಕೊಂಡಿರುವವನ ಹೃದಯದಲ್ಲಿರುವ ದಬ್ಬಾಳಿಕೆಯ, ಸ್ವಾರ್ಥದ ಭಾವನೆಯಿಂದ ಆತನೂ ಮುಕ್ತನಾಗುವುದಕ್ಕೆ ಸಹಾಯ ಮಾಡುತ್ತಾ ಆಮೂಲಕ ನಮ್ಮ ಸ್ವಾತಂತ್ರ್ಯವನ್ನೂ ಪಡೆದುಕೊಳ್ಳುವ ಅತ್ಯದ್ಭುತವಾದ ಚಿಂತನೆಯನ್ನು ಮೈಗೂಡಿಸಿಕೊಂಡ ಹೋರಾಟವದು. ಬಹುಶಃ ಈ ಹೋರಾಟ ಪದ್ಧತಿಯ ಪ್ರಭಾವದ ಆಳ, ಅಗಲ ಅದರಲ್ಲಿ ಭಾಗವಹಿಸಿದವರಿಗೂ ತಿಳಿದಿರಲಿಲ್ಲ ಅನ್ನಿಸುತ್ತದೆ. ಭಾರತಕ್ಕೆ ಸ್ವಾತಂತ್ರ್ಯ ಬಂದದ್ದು ಸತ್ಯಾಗ್ರಹದಿಂದಲೇ ಎಂಬುದರ ಬಗ್ಗೆ ಅನೇಕ ಪ್ರಶ್ನೆಗಳಿದ್ದರೂ, ಗಾಂಧೀಜಿಯ, ದೇಶದ ಬಹುಸಂಖ್ಯಾತರ ಆಗ್ರಹಕ್ಕೆ ವಿರುದ್ಧವಾಗಿ ದೇಶ ಇಬ್ಭಾಗವಾಗಿ ಸ್ವತಂತ್ರವಾದದ್ದರ ಬಗ್ಗೆ ಏನೇ ಅಸಮಾಧಾನವಿದ್ದರೂ ಸಹ ಈ ಮಾಂತ್ರಿಕವಾದ ಹೋರಾಟದಿಂದ ಸ್ಪೂರ್ತಿ ಪಡೆದು ಜಗತ್ತಿನಲ್ಲಿ ಅನೇಕ ಹೋರಾಟಗಳು ನಡೆದವು.  ೧೯೫೫ ರಿಂದ ೧೯೭೮ರವರೆಗೆ ಅಮೇರಿಕಾದಲ್ಲಿ ಕರಿಯರ ನಾಗರೀಕ ಹಕ್ಕುಗಳಿಗಾಗಿ ಆಗ್ರಹ ನಡೆಸಿದ ಮಾರ್ಟಿನ್ ಲೂಥರ್‌ರಿಗೆ ಸತ್ಯಾಗ್ರಹವೇ ಸ್ಪೂರ್ತಿಯಾಗಿತ್ತು. ಬರ್ಮಾದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಗೆ ಆಗ್ರಹಿಸಿ ಹೋರಾಟ ನಡೆಸಿ ಈಗಲೂ ಗೃಹಬಂಧನದಲ್ಲಿರುವ   ಆಂಗ್ ಸನ್ ಸೂ ಕಿ, ಆಫ್ರಿಕಾದಲ್ಲಿ ವರ್ಣಬೇಧ ನೀತಿಯನ್ನು ಕಿತ್ತೊಗೆಯಲು ಹೋರಾಡಿ ಯಶಸ್ವಿಯಾದ ನೆಲ್ಸೆನ್ ಮಡೆಲಾ ನೇತೃತ್ವದ ಹೋರಾಟಗಳಿಗೆಲ್ಲಾ ಗಾಂಧೀಜಿ ಪ್ರತಿಪಾದಿಸಿದ ‘ಸತ್ಯಾಗ್ರಹ’ವೇ ದಾರಿದೀಪವಾಯಿತು.

ಆದರೆ ಗಾಂಧೀಜಿಯವರ ಈ ಪ್ರತಿಭಟನೆಯ ಅಸ್ತ್ರ ಇಂದು ಬಳಕೆಯಾಗುತ್ತಿರುವ ರೀತಿಯನ್ನು ಗಮನಿಸಿದರೆ ನಿಜಕ್ಕೂ ವಿಷಾದ ಆವರಿಸುತ್ತದೆ.

ಸಶಸ್ತ್ರ ಆಗ್ರಹ

ಅಹಿಂಸಾತ್ಮಕ ಹೋರಾಟದಲ್ಲಿ ಎದುರಾಳಿಯ ಇಚ್ಛೆಗೆ ಮಣಿಯದೆ ನಮ್ಮ ಸ್ವಾತಂತ್ರ್ಯಕ್ಕಾಗಿ ಆಗ್ರಹ ನಡೆಸುವುದು, ನಮ್ಮ ಅಹಿಂಸಾತ್ಮಕವಾದ ಪ್ರತಿಭಟನೆಯಿಂದ ನಮ್ಮ ಹಕ್ಕನ್ನು ವಾಪಸ್ಸು ಕೊಡುವಂತೆ ಮಾಡುವುದು ಮುಖ್ಯವಾಗುತ್ತದೆ. ಆದರೆ ಸುಭಾಶ್ ಚಂದ್ರ ಬೋಸ್‌ರಿಗೆ ಈ ಬಗೆಯ ಹೋರಾಟದ ಯಶಸ್ಸಿನ ಬಗ್ಗೆ ನಂಬಿಕೆಯಿರಲಿಲ್ಲ. ನಮ್ಮ ಹಕ್ಕನ್ನು ಹಿಂಸೆಯ ಮಾರ್ಗದಲ್ಲಿ ಕಿತ್ತುಕೊಂಡವನೆದುರು ಅಹಿಂಸೆಯ ಮಾತಿನಲ್ಲಿ ಸಂಧಾನಕ್ಕೆ ಕೂರುವುದು ನಮ್ಮ ಶಕ್ತಿಯ ಮೇಲಿರುವ ನಮ್ಮ ಸಂಶಯವನ್ನು ತೋರಿಸುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು. ಸ್ವಾತಂತ್ರ್ಯವನ್ನು ಬ್ರಿಟೀಷರು ಭಾರತೀಯರಿಗೆ ಕೊಡುವುದಲ್ಲ. ಅದನ್ನು ಭಾರತೀಯರು ಬ್ರಿಟೀಷರಿಂದ ಕಿತ್ತುಕೊಳ್ಳಬೇಕು ಎಂದರು ಸುಭಾಷ್.

ಸ್ವಾತಂತ್ರ್ಯವೆಂಬುದು ಹೊಣೆಗಾರಿಕೆ, ಸ್ವಾತಂತ್ರ್ಯವೆಂದರೆ ಜವಾಬ್ದಾರಿ. ಬಲಿಷ್ಟವಾಗಿರುವವರು, ಸಶಕ್ತರು ಮಾತ್ರವೇ ಸ್ವತಂತ್ರವಾಗಿರಬಲ್ಲರು. ಎಲ್ಲಾ ಬಗೆಯ ದಬ್ಬಾಳಿಕೆಯನ್ನು, ದಾಸ್ಯವನ್ನು ವಿರೋಧಿಸುವ ಸಾಮರ್ಥವಿರುವವನು ಮಾತ್ರ ಸ್ವತಂತ್ರನಾಗಬಲ್ಲ. ಈ ಬಗೆಯ ಸ್ವಾತಂತ್ರ್ಯವನ್ನು ಪಡೆಯುವುದಕ್ಕಾಗಿ ಬಲಿದಾನ ಆವಶ್ಯಕ. ‘ನನಗೆ ನಿಮ್ಮ ರಕ್ತವನ್ನು ನೀಡಿ, ನಾನು ನಿಮಗೆ ಸ್ವಾತಂತ್ರ್ಯವನ್ನು ನೀಡುವೆ’ ಎಂದು ಅಬ್ಬರಿಸಿದವರು ನೇತಾಜಿ. ಸಂಘಟಿತವಾದ ಬ್ರಿಟೀಷ್ ಮಿಲಿಟರಿ ಭಾರತೀಯರ ಮೇಲಿನ ಬ್ರಿಟೀಷರ ಆಳ್ವಿಕೆಯನ್ನು, ಯಜಮಾನಿಕೆಯನ್ನು ಕಾಯುತ್ತಿರುವಾಗ ಭಾರತದ ಮಿಲಿಟರಿಯನ್ನು ಬಳಸಿ ಸ್ವಾತಂತ್ರ್ಯವನ್ನು ಪಡೆಯುವುದು ನ್ಯಾಯಯುತವಾದ ಮಾರ್ಗ ಎನ್ನುವುದು ಸುಭಾಶ್‌ರ ನಿಲುವಾಗಿತ್ತು. ಮಿಲಿಟರಿ ಹೋರಾಟವೇ ತಾರ್ಕಿಕವಾದ ಅಂತ್ಯವಲ್ಲ. ಅದು ರಾಜಕೀಯ ಸ್ವಾತಂತ್ರ್ಯವನ್ನು ಪಡೆಯುವ ಒಂದು ಉಪಾಯ ಮಾತ್ರ ಎಂಬುದು ಅವರ ಸ್ಪಷ್ಟ ನಿಲುವಾಗಿತ್ತು. ಆದರೆ ಈ ಹೋರಾಟ ನಿರೀಕ್ಷಿಸಿದ ಯಶಸ್ಸನ್ನು ಕಾಣದಿದ್ದರೂ ಭಾರತೀಯರನ್ನು ಸ್ವಾತಂತ್ರ್ಯದ ಹೊಣೆಗಾರಿಕೆಯನ್ನು ಹೊರುವುದಕ್ಕೆ ಸಿದ್ಧಪಡಿಸಿತು.

ಸುಭಾಷರ ಈ ತತ್ವವನ್ನು ಬಳಸಿಯೇ ಭಾರತ ಸದೃಢವಾದ ರಾಷ್ಟ್ರವಾಗಿ ಎದ್ದು ನಿಂತದ್ದು. ಸ್ವಾತಂತ್ರ ಸಿಕ್ಕ ತಕ್ಷಣ ನಮ್ಮೆಲ್ಲಾ ಕಷ್ಟ ಕೋಟಲೆಗಳು ಕೊನೆಯಾಗಲಿಲ್ಲ. ಆಗ ತಾನೆ ನಮ್ಮಿಂದ ವಿಭಜಿತವಾಗಿದ್ದ ಪಾಕಿಸ್ತಾನದ ಕಿರಿಕಿರಿ ಒಂದೆಡೆಯಾದರೆ ದೇಶದೊಳಗಿದ್ದ ಹತ್ತಾರು ರಾಜ ಸಂಸ್ಥಾನಗಳ ಕಟಿಪಿಟಿ ಮತ್ತೊಂದೆಡೆ. ಪಾಲು ಪಡೆದು ಮನೆಯಿಂದ ಹೊರ ಹೋದ ತಕ್ಷಣ ತಾನಿದ್ದ ಮನೆಗೇ ಕೊಳ್ಳಿ ಇಡಲು ಬಂದ ಪಾಕಿಸ್ತಾನದ ಮಿಲಿಟರಿಯನ್ನು ಹೆಡೆ ಮುರಿ ಕಟ್ಟಿ ಹಿಂದಕ್ಕೆ ರವಾನಿಸಿ, ನಖರಾ ಮಾಡುತ್ತಿದ್ದ ರಾಜ ಮನೆತನಗಳ ಕೈಯಿಂದ ಆಡಳಿತವನ್ನು ಕಿತ್ತುಕೊಂಡು ಪ್ರಜಾಪ್ರಭುತ್ವವನ್ನು ಸ್ಥಾಪಿಸಲು ನಮಗೆ ಬೇಕಾದದ್ದು ನಮ್ಮ ಮಿಲಿಟರಿ ಶಕ್ತಿಯೇ. ಮುಂದೆ ಪಾಕಿಸ್ತಾನ ಕಾಲು ಕೆರೆದುಕೊಂಡು ಭಾರತದ ಮೇಲೆ ದಂಡೆತ್ತಿ ಬಂದಾಗಲೆಲ್ಲಾ ನಮ್ಮ ಗೌರವವನ್ನು, ಸಾರ್ವಭೌಮತೆಯನ್ನು ರಕ್ಷಿಸಿದ್ದು ನಮ್ಮ ಮಿಲಿಟರಿ ಶಕ್ತಿ. ಇಂದಿರಾ ಗಾಂಧಿಯಂತಹ ಉಕ್ಕಿನ ಮಹಿಳೆ ಪಾಕಿಸ್ತಾನದಿಂದ ಬಾಂಗ್ಲಾವನ್ನು ಕಿತ್ತು ಪಕ್ಕಕ್ಕಿಡದಿದ್ದರೆ ದೇಶಕ್ಕಾಗಬಹುದಾಗಿದ್ದ ಅಪಾಯ ವರ್ಣಿಸಲು ಅಸಾಧ್ಯ. ಬಲಿಷ್ಟ ಚೀನಾದೆದುರು ನಮ್ಮ ಸೈನ್ಯ ಕೈ ಚೆಲ್ಲಿ ಕುಳಿತಾಗ ನಮಗಾದ ಅವಮಾನವನ್ನು ನೆನೆಸಿಕೊಳ್ಳಿ…

ಒಟ್ಟಿನಲ್ಲಿ ಸ್ವಾತಂತ್ರ್ಯ ಹಾಗೂ ಅದರ ಗಳಿಕೆ, ಉಳಿಕೆಯ ಬಗ್ಗೆ ಹೀಗೇ ಎಂದು ತೀರ್ಮಾನಗಳಿಗೆ ಬರುವುದಕ್ಕೆ ಸಾಧ್ಯವಿಲ್ಲ. ಇಂದು ರಾಜಕೀಯವಾಗಿ ನಾವು ಸ್ವತಂತ್ರರು. ಆದರೆ ಅದೆಷ್ಟು ಸಂಗತಿಗಳಿಗೆ ನಾವು ದಾಸ್ಯರಾಗಿದ್ದೇವೆ ಅಲ್ಲವೇ, ಹಾಗಾದರೆ ನಿಜವಾದ ಸ್ವಾತಂತ್ರ್ಯ ಅಂದರೇನು?


ಮಾರ್ಚ್ ೨೦೦೮ರ ಸಂಚಿಕೆಯ ಮುಖಪುಟವನ್ನು ಸ್ನೇಹದ ಬಗೆಗಿನ ಚರ್ಚೆಗೆ ಮೀಸಲಿರಿಸಲಾಗಿತ್ತು. ಗೆಳೆತನ ಹುಟ್ಟುವುದು ಕೇವಲ ಪರಸ್ಪರರಲ್ಲಿನ ಆವಶ್ಯಕತೆಗಾಗಿ ಎನ್ನುತ್ತಾರೆ ಬಾಲುಪ್ರಸಾದ್.ಆರ್.

ಸ್ನೇಹ ಅಂದರೇನು?

ಒಂದೇ ಮನೋಭಾವ, ಒಂದೇ ಆಸಕ್ತಿ-ನಿರಾಸಕ್ತಿ, ಒಂದೇ ಆಯ್ಕೆ-ವಿಮುಖತೆ- ಹೀಗೆ ಹಲವು ‘ಒಂದೇ’ಗಳನ್ನು ಹೊಂದಿರುವ ಇಬ್ಬರ ನಡುವಿನ ಸಂಬಂಧವಾ? ಹೌದು ಅಂತೀನಿ. ಸ್ನೇಹ ಅಂತಸ್ತು, ಗೌರವ, ಸ್ಥಾನಮಾನಗಳ ಹಾರೈಕೆಯಲ್ಲಿ ಬೆಳೆಯುತ್ತಾ? ಅದಕ್ಕೂ ಹೌದು ಅಂತೀನಿ. ಯಾಕಂದ್ರೆ, ಸ್ನೇಹ ಹುಟ್ಟುವುದು basically ಆವಶ್ಯಕತೆಗೆ. ನಮ್ಮ ಚಿಂತನೆಗೆ ಮನ್ನಣೆಯ ಆವಶ್ಯಕತೆ, ಸಂಕಷ್ಟಕ್ಕೆ ಸಾಂತ್ವನ, ಹಾಸ್ಯಕ್ಕೆ ನಗು, ಸಾಧನೆಗೆ ಮೆಚ್ಚುಗೆ, ಸಹಾಯಕ್ಕೆ ಕೃತಜ್ಞತೆಗಳನ್ನು ನಮ್ಮ ಮನಸ್ಸು ನಿರೀಕ್ಷಿಸುತ್ತದೆ. ಇಷ್ಟೇ ಅಲ್ಲದೆ ನಾವು ನಮ್ಮ ವ್ಯವಹಾರಗಳಲ್ಲಿ, ನಮ್ಮ ಆಯ್ಕೆಗಳಲ್ಲಿ, ಮತ್ತೊಬ್ಬರ ಬದುಕಿನಲ್ಲಿ ಐಡೆಂಟಿಟಿಯನ್ನು ಸ್ಥಾಪಿಸ ಬಯಸುತ್ತೀವಿ. ಒಟ್ಟಾರೆ ನಮ್ಮ ಭಾವಕ್ಕೆ ನಾವು ನಿರೀಕ್ಷಿಸಿದ ಪ್ರತಿಭಾವ ಎಲ್ಲಿ ದೊರೆಯುತ್ತೋ ಅಲ್ಲಿ ಒಂದು ನಂಬಿಕೆ ಮೊಳಕೆಯೊಡೆಯುತ್ತದೆ. ಕ್ರಮೇಣ ಈ ನಂಬಿಕೆಯಿಂದಾಗಿ ಆವಶ್ಯಕತೆಗಳು ತಂತಾನೇ ಪೂರೈಕೆಯಾಗಿ ಮಧುರ ಹೊಂದಾಣಿಕೆಗೆ ಎಡೆಮಾಡಿಕೊಡುತ್ತದೆ.

ಸ್ನೇಹ ಅಂತಸ್ತು, ಸ್ಥಾನಮಾನ, ಪರಸ್ಪರ ಗೌರವಗಳ ಹಾರೈಕೆಯಲ್ಲಿ ಬೆಳೆಯುತ್ತೆ. ಸಮಾನ ಸ್ಥಿತಿವಂತರ ನಡುವಿನ ಸಮಾನವಾದ ಪರಿಸ್ಥಿತಿಗಳು ಬಹುಬೇಗ ಅವರ ನಡುವೆ ಸಂಬಂಧವನ್ನು ಏರ್ಪಡಿಸುತ್ತವೆ. ಇನ್ನು ವಿಭಿನ್ನ ಸ್ಥಿತಿವಂತರ ನಡುವೆ ಅದು ಬೇರೆಯದೇ ನೆಲೆಯಲ್ಲಿ ಕೆಲಸ ಮಾಡುತ್ತದೆ. ಸ್ನೇಹಕ್ಕೆ ಬಾಹ್ಯದ ಪರಿವಿಲ್ಲ. ಎಲ್ಲರೊಟ್ಟಿಗೆ ಬೆರೆಯಬೇಕು ಎಂಬ ಆದರ್ಶ ಹಾಕುವ ಬಯಕೆ. ಕೆಲವೊಮ್ಮೆ ಅದರ ಬಗ್ಗೆ ಇತರರಿಂದ ಮೆಚ್ಚುಗೆಯ ನಿರೀಕ್ಷೆ. ಕೃಷ್ಣನಿಗೆ ಅವ್ಯಕ್ತ ಕನಿಕರ; ಕುಚೇಲನಿಗೆ ತನ್ನ ಸ್ಥಿತಿಯ ಮೇಲೆ ತಿರಸ್ಕಾರವಿಟ್ಟುಕೊಳ್ಳದ ಕೃಷ್ಣನನ್ನು ಕಂಡರೆ ಮೆಚ್ಚು. ಅವನಂತಹ ಸಖ ದೊರೆತನಲ್ಲ ಎಂಬ ಹೆಮ್ಮೆಯ ಭಾವ. ಕೃಷ್ಣನ ಸಾಮೀಪ್ಯದ ಮೂಲಕ ಹೆಮ್ಮೆ ಪಡುವುದರ ಮೂಲಕ ತನ್ನ ಗೌರವ ಗಳಿಕೆ.

ಬಂಧುವು ನಾವು ಶ್ರೀಮಂತರಾಗಲೀ, ಬಡವರಾಗಲೀ ಯಾವಾಗಲೂ ನಮ್ಮ ಜೊತೆ ಇರುತ್ತಾನೆ. ಹಾಗೇ, ಸ್ನೇಹ ಕೂಡ ಬಾಂಧವ್ಯವಾದಾಗ ಇನ್ನಷ್ಟು ಗಟ್ಟಿಗೊಳ್ಳುತ್ತಾ? ಖಂಡಿತಾ ಇಲ್ಲ. ಬಂಧುಗಳು ನಾವು ಹುಟ್ಟಿದಾಗಿನಿಂದ ಸಾಯುವ ತನಕವೂ ಇರುತ್ತಾರೆ. ಆದ್ದರಿಂದಲೇ ಅವರ ಬಗೆಗೊಂದು ಭಯ ಕೂಡ ಇರುತ್ತದೆ. ಎಲ್ಲಿ ನಮ್ಮ ಆವಶ್ಯಕತೆ-ಪರಿಸ್ಥಿತಿಗಳು ಅವರಿಗೆ ಹೊರೆಯಾಗಿ ಬಿಡುತ್ತವೆಯೋ ಅನ್ನೋ ಭಯ. ಆದ್ದರಿಂದಲೇ ಅವರು ಸ್ನೇಹಿತರಿಗಿಂತ ಹೆಚ್ಚು ಅಂತರ ಕಾಯ್ದುಕೊಳ್ಳುತ್ತಾರೆ. ಸ್ನೇಹದಲ್ಲಿ ಹಾಗಲ್ಲ. ನಮ್ಮ ಎಲ್ಲಾ ನಿರೀಕ್ಷೆ-ಆವಶ್ಯಕತೆಗಳನ್ನು ಪೂರೈಸುವ ಸಾಮರ್ಥ್ಯ ಸ್ನೇಹಿತರಲ್ಲಿರುತ್ತೆ. ಅದಕ್ಕಿಂತ ಮುಖ್ಯವಾಗಿ, ಇವೆಲ್ಲಾ ಅವರಿಗೆ ಹೊರೆಯೆನಿಸಿದಾಗ, ನಮ್ಮಿಂದ ದೂರವಾಗುವ ಸ್ವಾತಂತ್ರ್ಯ ಅವರಿಗಿರುತ್ತದೆ. ಆದರೆ ಬಂಧುವಿಗೆ ಅಗಲುವಿಕೆಯ ಸ್ವಾತಂತ್ರ್ಯ ಇರುವುದಿಲ್ಲ. ಈ ಅಗಲುವಿಕೆಯ ಸ್ವಾತಂತ್ರ್ಯ ಸ್ನೇಹವನ್ನು ಬಾಂಧವ್ಯಕ್ಕಿಂತ ಒಂದು ಸ್ತರ ಮೇಲಿಡುತ್ತದೆ, ಒಂದು ಹೆಜ್ಜೆ ಹತ್ತಿರ ತರಿಸುತ್ತೆ.

ಸ್ನೇಹದಲ್ಲಿ ಅಂತರ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಗಂಡ ಹೆಂಡತಿ ಉತ್ತಮ ದಂಪತಿಗಳಾಗೋದು ಅವರು ಉತ್ತಮ ಸ್ನೇಹಿತರಾದಾಗ; ಬೆಳೆದ ಮಕ್ಕಳು ಹಾಗೂ ತಂದೆ ತಾಯಿಗಳ ನಡುವಿನ ಬಾಂಧವ್ಯ ಉತ್ತಮವಾಗುವುದು ಅವರು ಒಳ್ಳೆಯ ಗೆಳೆಯರಾದಾಗ ಅಂತ ಹೇಳ್ತಾರೆ. ಯಾಕಂದ್ರೆ ಸ್ನೇಹದಲ್ಲಿ ಸ್ವಾತಂತ್ರ್ಯ ಇರುತ್ತದೆ. ಸ್ವತಂತ್ರ ಚಿಂತನೆಗಳಿಗೆ, ಸ್ವತಂತ್ರ ನಿರ್ಧಾರಗಳಿಗೆ, ಸ್ವಂತ ಆಶೆಗಳಿಗೆ-ಆಯ್ಕೆಗಳಿಗೆ ಅವಕಾಶಗಳಿರುತ್ತವೆ. ಆ ಸ್ವಾತಂತ್ರ್ಯದ ಅಂತರ ಸ್ನೇಹವನ್ನು ಗಟ್ಟಿಗೊಳಿಸುತ್ತದೆ.

ಹೀಗಾಗಿ, ಸ್ನೇಹ ಅನ್ನೋದು ಆತ್ಮಗಳ ಸಮ್ಮಿಲನವಲ್ಲ; ಆವಶ್ಯಕತೆಗಳ ಪೂರೈಕೆ ಅಷ್ಟೇ. ಆವಶ್ಯಕತೆಗಳ ಬಯಕೆಯಾಗಲೀ ಅವುಗಳ ಪೂರೈಕೆಯಾಗಲೀ ತಪ್ಪಲ್ಲ. Infact, ಈ ಕ್ರಿಯೆಗಳಲ್ಲೇ ಮನುಷ್ಯ ಸಂಬಂಧ ಉಸಿರಾಡೋದು. ಅದನ್ನು ಒಳಗೊಂಡ ಕ್ರಿಯೆಗಳಲ್ಲಿ ಸ್ವಾರ್ಥ, ಅಸೂಯೆಗಳು ತುಂಬಿದರೆ, ಅಲ್ಲಿ ದ್ರೋಹ ತಲೆಹಾಕುತ್ತದೆ. ಕರ್ಣ ದುರ್ಯೋಧನರ ಸ್ನೇಹ ಇದಕ್ಕೆ ಉತ್ತಮ ನಿದರ್ಶನ. We live in a need based society, mind you!


ಮಾರ್ಚ್ ೨೦೦೮ರ ಸಂಚಿಕೆಯ ಮುಖಪುಟವನ್ನು ಸ್ನೇಹದ ಬಗೆಗಿನ ಚರ್ಚೆಗೆ ಮೀಸಲಿರಿಸಲಾಗಿತ್ತು. ಗೆಳೆತನ ಎಂಬುದು ನೀಡ್‌ಶಿಪ್ ಅಲ್ಲ ಎನ್ನುತ್ತಾರೆ ಶ್ರೇಯಸ್.ಕೆ.ಎಂ.

What is a friend?
I will tell you… It is someone with whom you dare to be yourself.
-Frank Crane

ಸ್ನೇಹಿತರು ಎಂದರೆ ಯಾರು ಎನ್ನುವುದಕ್ಕೆ ಬಹುಶಃ ಇದಕ್ಕಿಂತ ಉತ್ತಮವಾದ ವಿವರಣೆ ಇರಲಿಕ್ಕಿಲ್ಲವೇನೋ. ನಾವು ಯಾರೊಂದಿಗಿರುವಾಗ ನಮ್ಮ ನೈಜತೆಯನ್ನು, ನಮ್ಮತನವನ್ನು ಕಳೆದುಕೊಳ್ಳುವುದಿಲ್ಲವೋ ಆ ವ್ಯಕ್ತಿಯನ್ನೇ ನಮ್ಮ ಸ್ನೇಹಿತ ಎಂದು ಕರೆಯಬಹುದು. ನಾವು ಏನಾಗಿದ್ದೇವೋ, ಹೇಗಿದ್ದೇವೋ ಅದಕ್ಕಾಗಿಯೇ ನಮ್ಮನ್ನು ಇಷ್ಟಪಡುವವನು ಸ್ನೇಹಿತ. ನಮ್ಮಲ್ಲಿರುವ ಅಪರಿಪೂರ್ಣತೆಯನ್ನು ಸ್ವೀಕರಿಸಿ, ವಿಭಿನ್ನತೆಯನ್ನು ಗೌರವಿಸುವವನೇ ನಿಜವಾದ ಗೆಳೆಯ.

ಆದರೆ ನನ್ನ ಅನಿಸಿಕೆಯ ಪ್ರಕಾರ ನನ್ನ ಸ್ನೇಹಿತ ಯಾರು ಅಂತ ತಿಳಿಯುವುದಕ್ಕೆ ಇಷ್ಟೊಂದು ಮಾನದಂಡಗಳು ಖಂಡಿತವಾಗ್ಯೂ ಬೇಕಿಲ್ಲ. ಸ್ನೇಹಿತನಾಗಿರುವವನಿಗೆ ತಾನಾಗಿಯೇ ಇವು ಬಂದಿರುತ್ತವೆ. ‘ಜೇನು ತುಂಬಾ ಸಿಹಿಯಾಗಿರುತ್ತಂತೆ ಕಣೋ’ ಎಂದು ಒಬ್ಬ ಅಂದಾಗ, ‘ಜೇನು ಸಕ್ಕರೆಯಷ್ಟು ಸಿಹಿಯಾಗಿರುತ್ತದೆಯೋ ಅಥವಾ ಅದಕ್ಕಿಂತ ಸಿಹಿಯಾಗಿರುತ್ತಾ’ ಅಂತ ಇನ್ನೊಬ್ಬ ಕೇಳಿದ ಹಾಗೆ ಆಯ್ತು. ಜೇನು ಹೇಗಿರುತ್ತೆ ಎಂಬ ವ್ಯಾಖ್ಯಾನ ಜೇನನ್ನು ಸವಿದವರಿಗೆ ಅನವಶ್ಯಕ. ಸ್ನೇಹವೆಂಬ ಜೇನಿನ ಬಗ್ಗೆ ಆ ಬಗೆಯ ವ್ಯಾಖ್ಯಾನವನ್ನು ಕೊಡುವ ವ್ಯರ್ಥ್ಯ ಪ್ರಯತ್ನಕ್ಕೆ ನಾನು ಕೈ ಹಾಕುವುದಿಲ್ಲ.

ಸಂತೋಷ ಎಂದರೆ ಏನು ಎಂಬ ಪ್ರಶ್ನೆ ಮನಸ್ಸನ್ನು ಕಾಡಲು ಶುರು ಮಾಡಿತ್ತು. ಮನುಷ್ಯ ತನ್ನ ಸುತ್ತ ಏನೆಲ್ಲಾ ಕಟ್ಟಿಕೊಳ್ಳುತ್ತಾ ಹೋದ… ಒಂದು ವ್ಯವಸ್ಥೆಯನ್ನು ಸೃಷ್ಟಿಸಿದ. ಅದಕ್ಕೊಂದು ಕಾನೂನು ತಂದ. ಒಂದು ಆಚರಣೆಯನ್ನು ತಂದ ಅದಕ್ಕೊಂದು ಅರ್ಥವನ್ನು ಹುಡುಕಿಕೊಂಡ. ಸೌಕರ್ಯಗಳ ಹುಡುಕಾಟದಲ್ಲಿ ತೊಡಗಿದ. ಹುಡುಕಾಟದಲ್ಲೇ ಬದುಕುವುದನ್ನೂ ರೂಢಿಸಿಕೊಂಡುಬಿಟ್ಟ. ವಸ್ತುಗಳಲ್ಲಿ ಸಂತೋಷವನ್ನು ಹುಡುಕುತ್ತಲೋ ಏನೋ, ಬಿಸಿಲಿನ ತಾಪ ತಾಳಲಾರದೆ ಫ್ಯಾನ್ ಕಂಡು ಹಿಡಿದ. ಫ್ಯಾನಿಗಿಂತಲೂ ಉತ್ತಮ ಎಂದು ಏರ್ ಕಂಡೀಶನರ್ ಕಂಡು ಹಿಡಿದ. ಆ ಏರ್ ಕಂಡೀಶನ್ಡ್ ರೂಮಿನಲ್ಲಿ ಕುಳಿತು ಬಿಸಿಲನ್ನು ಆಸ್ವಾದಿಸುವ ಮನಸ್ಸನ್ನೇ ಕಳೆದುಕೊಳ್ಳುತ್ತಿದ್ದಾನೆ. ಮತ್ತದೇ ಕಂಪ್ಯೂಟರಿನ ಮುಂದೆ ಮತ್ತದೇ ಸಂತೋಷವನ್ನು ‘ಗೂಗಲ್ ಸರ್ಚ್’ ಮಾಡುತ್ತಾ ಇದ್ದಾನೆ. ಹಾಗಾದರೆ ಸಂತೋಷ ಎಂದರೆ…?

“ಯುದ್ಧ ಭೂಮಿಯಿಂದ ನನ್ನ ಗೆಳೆಯ ಇನ್ನೂ ಹಿಂದಕ್ಕೆ ಬಂದಿಲ್ಲ ಸಾರ್… ದಯವಿಟ್ಟು ಒಮ್ಮೆ ಹೋಗಿ ಬರುವುದಕ್ಕೆ ಅವಕಾಶ ಮಾಡಿಕೊಡಿ” ಕೇಳಿದ ಜಾನ್.

“ಖಂಡಿತಾ ಸಾಧ್ಯವಿಲ್ಲ. ಈಗಾಗಲೇ ಸತ್ತಿರಬಹುದಾದವನಿಗೋಸ್ಕರ ನೀನು ನಿನ್ನ ಪ್ರಾಣವನ್ನು ಪಣವಾಗಿಡುವುದು ನನಗೆ ಇಷ್ಟವಿಲ್ಲ.” ಕಡ್ಡಿ ಮುರಿದ ಹಾಗೆ ಹೇಳಿದ ಕಮಾಂಡರ್ ಅವನ ಬೇಡಿಕೆಯನ್ನು ತಿರಸ್ಕರಿಸುತ್ತಾ…

ಒಂದೆರಡು ಗಂಟೆಗಳ ನಂತರ ತೀವ್ರವಾಗಿ ಗಾಯಗೊಂಡ ಆ ಯೋಧ ತನ್ನ ಸ್ನೇಹಿತನ ಶವವನ್ನು ಹೊತ್ತುಕೊಂಡು ಬಂದ. ಕಮಾಂಡರ್‌ನ ಕೋಪ ನೆತ್ತಿಗೇರಿತ್ತು. “ಅವನಾಗಲೇ ಸತ್ತಿರುತ್ತಾನೆ ಅಂತ ನಿನಗೆ ನಾನು ಹೇಳಿದ್ದೆ. ನೋಡು ನಾನೀಗ ನಿಮ್ಮಿಬ್ಬರನ್ನೂ ಕಳೆದುಕೊಳ್ಳುತ್ತಿದ್ದೇನೆ. ಕೇವಲ ಒಂದು ಶವವನ್ನು ತರುವುದಕ್ಕೋಸ್ಕರ ಅಲ್ಲಿಗೆ ಹೋಗಬೇಕಾಗಿತ್ತಾ…?”

ಸಾಯುತ್ತಾ ಇರುವ ಮನುಷ್ಯ ಉತ್ತರಿಸಿದ “ಖಂಡಿತವಾಗ್ಯೂ ಸರ್, ನಾನಲ್ಲಿಗೆ ಹೋದಾಗ ಅವನಿನ್ನೂ ಬದುಕಿದ್ದ. ಅವನು ಹೇಳಿದ, ‘ಜಾನ್ ನಂಗೆ ಗೊತ್ತು, ನೀನು ಬಂದೇ ಬರ್ತೀಯ ಅಂತ'”.

ಪ್ರತಿ ಸಾರಿ ಈ ಕಥೆಯನ್ನು ಓದುವಾಗಲೂ ಏನೋ ಒಂದು ರೀತಿಯ ರೋಮಾಂಚನಕ್ಕೆ ಒಳಗಾಗುತ್ತೇನೆ. ಚಿಕ್ಕಂದಿನಿಂದಲೂ ನನ್ನ ಜೊತೆಗೇ ಬೆಳೆದು ಬಂದ ಗೆಳೆತನದ ಕಲ್ಪನೆ ಅದರ ಮಾಧುರ್ಯ ಮನಸ್ಸನ್ನು ತುಂಬಿಕೊಳ್ಳುತ್ತದೆ.

ಹೀಗೆ ಹರಿಯುತ್ತಿದ್ದ ಯೋಚನಾ ಲಹರಿಗೆ ‘ಬ್ರೇಕ್’ ಎಂಬಂತೆ ಒಂದು ಉತ್ತರ ಸಿಕ್ಕಿತು: ಮನುಷ್ಯನ ಸಂತೋಷ ಇರುವುದು ಬಾಂಧವ್ಯಗಳಲ್ಲಿ. (ನನ್ನ ಈ ಉತ್ತರ ಪರಿಪೂರ್ಣ ಅಲ್ಲದೆ ಇರಬಹುದು. ಆದರೂ ಪಾಸ್ ಆಗೋದಕ್ಕೇನೂ ಕಷ್ಟ ಇಲ್ಲ… ಎಷ್ಟೇ ಆದರೂ ನಾನು ಇಂಜಿನಿಯರಿಂಗ್ ಸ್ಟೂಡೆಂಟ್ಸ್ ಅಲ್ಲವೇ..?!) ಈ ಮನುಷ್ಯ ಬಾಂಧವ್ಯಗಳಲ್ಲಿ ಸ್ನೇಹಕ್ಕೆ ಒಂದು ಅಪರೂಪದ ಸ್ಥಾನವಿದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದ ನಿರ್ಮಲ ಪ್ರೇಮ ಅಂದರೆ ಮಾತೃಪ್ರೇಮ. ಅದರ ನಂತರದ ಸ್ಥಾನ ಸ್ನೇಹದ್ದು.

ಸ್ನೇಹ ಅನ್ನುವುದು ಹುಟ್ಟುವುದೂ ಇಲ್ಲ. ಅದು ಸಾಯುವುದೂ ಇಲ್ಲ. ನಾವು ಸ್ನೇಹಿತರಾಗಿ ಹುಟ್ಟಿರುತ್ತೇವೆ, ಸ್ನೇಹಿತರನ್ನು ಮಾಡಿಕೊಳ್ಳುವುದಿಲ್ಲ ಎನ್ನುವುದು ನನ್ನ ಅನುಭವ ಒಪ್ಪಿದ ಮಾತು. ನನ್ನ ನೆನಪಿನ ಪುಟಗಳನ್ನು ತಿರುವಿದಂತೆ ಇದಕ್ಕೊಂದು ಒಳ್ಳೆಯ ಉದಾಹರಣೆ ಸಿಕ್ಕುತ್ತದೆ. ನನ್ನ ಹಾಸ್ಟೆಲ್ ಜೀವನದ ಮೊದಲ ದಿನಗಳವು. ಅವತ್ತು ನನ್ನ ಜೀವಮಾನದಲ್ಲಿ ಮೊದಲಬಾರಿಗೆ ಬಟ್ಟೆ ತೊಳೆಯುವ ಸಾಹಸಕ್ಕೆ ಕೈಹಾಕಿದ್ದೆ. ಬಟ್ಟೆ ತೊಳೆಯುವ ಜಾಗದಲ್ಲಿ ನನಗಿಂತ ಮೊದಲೇ ಒಬ್ಬ ಬಟ್ಟೆ ತೊಳೆಯುತ್ತಿದ್ದ. ಅಲ್ಲಿಯವರೆಗೆ ನಾನು ಅವನ ಬಗ್ಗೆ ಕೇಳಿದ ಮಾತುಗಳ್ಯಾವೂ ಆತನ ಬಗ್ಗೆ ನನ್ನಲ್ಲಿ ಅಷ್ಟೇನು ಒಳ್ಳೆಯ ಅಭಿಪ್ರಾಯವನ್ನು ಮೂಡಿಸಿರಲಿಲ್ಲ. ಅದೇಕೋ ಏನೋ, ಅವನ ಕೈಯಲ್ಲಿದ್ದ ಬಟ್ಟೆ ಉಜ್ಜುವ ಬ್ರಶ್ಯು ನನ್ನ ಮನಸ್ಸನ್ನು ಗೆದ್ದಿತ್ತು! ಅದನ್ನು ಹೇಗಾದರೂ ಮಾಡಿ ನೋಡಬೇಕೆಂಬ ಉದ್ದೇಶದಿಂದ ಅವನನ್ನು ಮಾತಿಗೆಳೆದೆ. ಅವನ ಮತ್ತು ನನ್ನ ನಡುವೆ ಯಾವುದೇ ರೀತಿಯ ಸಾಮ್ಯತೆ ಇರಲಿಲ್ಲ. ಸಮಾನ ಆಸಕ್ತಿಯ ಪ್ರಶ್ನೆಯೇ ಇರಲಿಲ್ಲ. ಆದರೂ ಅಲ್ಲೊಂದು ಸ್ನೇಹ ಮೊಳಕೆಯೊಡೆದಿತ್ತು. ಇವತ್ತಿಗೂ ಆ ದಿನವನ್ನು ನೆನೆಸಿಕೊಂಡಾಗ ಇಬ್ಬರೂ ಎದ್ದೂ ಬಿದ್ದೂ ನಗ್ತೀವಿ. ನಮ್ಮ ಸ್ನೇಹ ಹುಟ್ಟುವುದಕ್ಕೆ ಆ ಬ್ರಶ್ ಕಾರಣವಾಗಿತ್ತು. ಅದಕ್ಕೇ ನಾನು ಹೇಳಿದ್ದು, ಸ್ನೇಹ ಹುಟ್ಟುವುದಕ್ಕೆ ಕಾರಣ ಬೇಕಿಲ್ಲ. ಹೀಗೆ ಕಾರಣವಿದ್ದು ಹುಟ್ಟುವುದು ಅಂದರೆ, ನಾನು ಒಳ್ಳೆಯವನು ಎಂಬ ಕಾರಣಕ್ಕೋ, ನಾನು ಇನ್ನೊಬ್ಬನ ಮೆಂಟಾಲಿಟಿಗೆ ಹೊಂದಿಕೆಯಾಗುತ್ತೀನಿ ಎಂಬ ಕಾರಣಕ್ಕೋ ಹುಟ್ಟುವುದು ಫ್ರೆಂಡ್‌ಶಿಪ್ ಅಲ್ಲ ಅದು ನೀಡ್‌ಶಿಪ್ ಅಷ್ಟೇ.

ಸ್ನೇಹದ ಬಗ್ಗೆ ಹೆಚ್ಚಿನದೇನನ್ನು ಬರೆಯೋದಕ್ಕೆ ನನ್ನ ಲೇಖನಿ ಕೂಡ ಒಪ್ಪುತ್ತಾ ಇಲ್ಲ. ಕೆಲವು ವಿಷಯಗಳನ್ನು ಅನುಭವಿಸಬೇಕು ಮತ್ತೆ ಕೆಲವನ್ನು ಅರ್ಥಮಾಡಿಕೊಳ್ಳಬೇಕು. ಅನುಭವಿಸಬೇಕಾದ್ದನ್ನೆಲ್ಲವನ್ನೂ ಅರ್ಥಮಾಡಿಕೊಳ್ಳಲು ಹೋಗಬಾರದು. ರಸ್ತೆಯ ತಿರುವಿನಲ್ಲಿ ಕಂಡ ಅಪ್ಸರೆಯನ್ನು ವರ್ಣಿಸುವುದಕ್ಕೆ, ಓದಿದ ಪುಸ್ತಕವೊಂದರ ಮೇಲೆ ಭಾಷಣ ಹೊಡೆಯುವುದಕ್ಕೆ, ಟೀಮ್ ಇಂಡಿಯಾ ಮ್ಯಾಚ್ ಗೆದ್ದರೂ ಸಚಿನ್ ಸೆಂಚುರಿ ಹೊಡೆಯಲಿಲ್ಲವಲ್ಲಾ ಎಂದು ಪರಿತಪಿಸಲಿಕ್ಕೆ. ಲಾಸ್ಟ್ ಬೆಂಚಿನಲ್ಲಿ ಕುಳಿತು ಕದ್ದು ಕಡಲೇ ಮಿಠಾಯಿ ತಿನ್ನುವುದಕ್ಕೆ, ಬಿಡುಗಡೆಯಾದ ಹೊಸ ಸಿನೆಮಾವನ್ನು ಗಾಂಧಿ ಸೀಟಿನಲ್ಲಿ ಕುಳಿತು ನೋಡುವುದಕ್ಕೆ, ಕನಸುಗಳನ್ನು ಕಟ್ಟುವುದಕ್ಕೆ, ಜೀವನ, ತರ್ಕ ಅಂತ ಕೆಲಸಕ್ಕೆ ಬಾರದ ವೇದಾಂತ ಹೊಡೆಯುವುದಕ್ಕೆ, ಸೋತಾಗ ಹೆಗಲು ಕೊಡುವುದಕ್ಕೆ, ಗೆದ್ದಾಗ ಸಂತೋಷ ಪಡುವುದಕ್ಕೆ ಸ್ನೇಹಿತರು ಇಲ್ಲದಿದ್ದರೆ ಜೀವನ ಎಷ್ಟು ಬೋರ್ ಆಗಿಬಿಡುತ್ತಿತ್ತು ಅಲ್ಲವಾ?

ಜೀವನದಲ್ಲಿ ಸಿಹಿನೆನಪುಗಳು ಮತ್ತು ಒಳ್ಳೆಯ ಅನುಭವಗಳಿಗಿಂತ ಹೆಚ್ಚು ಬೆಲೆಬಾಳುವುದೇನನ್ನು ತಾನೆ ನಾವು ಸಂಪಾದಿಸುತ್ತೇವೆ? ಚಿಕ್ಕವನಾಗಿದ್ದಾಗ ಬಿಸಿನೀರು ಹಂಡೆಯಲ್ಲಿ ಸ್ವಲ್ಪ ನೀರನ್ನು ಉಳಿಸದೇ ಹೋದರೆ ಅದು ತಳ ಸಿಡಿಯುತ್ತದೆ ಎನ್ನುವುದನ್ನು ನನ್ನ ಪುಟ್ಟ ತಲಗೆ ತುರುಕಲಾಗದೆ ನನ್ನ ಅಮ್ಮ, “ನೀರು ಉಳಿಸದೇ ಹೋದರೆ ನಿಂಗೆ ಫ್ರೆಂಡ್ಸ್ ಕಡಿಮೆಯಾಗ್ತಾರೆ.” ಅಂತ ಹೇಳಿಕೊಟ್ಟಿದ್ದರು. ಇಂಜಿನಿಯರಿಂಗಿಗೆ ಬಂದು ಮೆಟೀರಿಯಲ್ ಸೈನ್ಸ್ ತಿಳಿದುಕೊಂಡಿದ್ದರೂ, ಪ್ಲಾಸ್ಟಿಕ್ ಬಕೆಟ್‌ನಲ್ಲಿ ಸ್ನಾನ ಮಾಡುವಾಗಲೂ ಕೊನೆಯಲ್ಲಿ ಒಂದಿಷ್ಟು ನೀರು ಉಳಿಸದೇ ಹೋದರೆ ಮನಸ್ಸಿಗೆ ಸಮಾಧಾನ ಆಗೋದೇ ಇಲ್ಲ…


ಮಾರ್ಚ್ ೨೦೦೮ರ ಸಂಚಿಕೆಯ ಮುಖಪುಟವನ್ನು ಸ್ನೇಹದ ಬಗೆಗಿನ ಚರ್ಚೆಗೆ ಮೀಸಲಿರಿಸಲಾಗಿತ್ತು. ಸ್ನೇಹ ಎನ್ನುವುದು ನಮ್ಮ ಮನಸ್ಸಿನ ಸ್ಥಿತಿ, ಪ್ರತಿಕ್ರಿಯಿಸುವ ವಿಧಾನ ಎನ್ನುತ್ತಾರೆ ‘ಅಂತರ್ಮುಖಿ.’

ಜನಜಂಗುಳಿಯಿಂದ ತುಂಬಿದ ರೈಲಿನಲ್ಲಿ ನಮ್ಮ ಪಕ್ಕದಲ್ಲಿ ಕುಳಿತವನೊಬ್ಬ ತನ್ನ ಹೆಸರು ಹೇಳಿ, ನಮ್ಮ ಪರಿಚಯ ಕೇಳಿಕೊಂಡ ನಂತರ ನಮ್ಮಿಬ್ಬರ ನಡುವೆ ಒಂದು ಆಪ್ಯಾಯಮಾನವಾದ ಭಾವ ಸೃಷ್ಟಿಯಾಗುತ್ತದಲ್ಲಾ, ಥೇಟ್ ಅಂಥದ್ದೇ ಭಾವನೆಗೂ, ಎಲ್ಲೋ ಅಪರಿಚಿತ ಪ್ರದೇಶದಲ್ಲಿ ಅವಘಡ ಮಾಡಿಕೊಂಡಾಗ, ಜೀವವೇ ಹೊರಕ್ಕೆ ಬರುವಷ್ಟು ಭಯ ಆವರಿಸಿಕೊಂಡಾಗ ನಾವು ಕೂಡಲೇ ಅಪ್ಪನನ್ನು ನೆನೆದು ಹಪಹಪಿಸುವ ಆಸರೆಯಿದೆಯಲ್ಲಾ- ಇವೆರಡರ ಮಧ್ಯದ ಮನಸ್ಥಿತಿಯೇ ಸ್ನೇಹ. ಅದು ಪರಿಚಿತತೆಯನ್ನು ಮೀರಿದ, ಕಮಿಟ್‌ಮೆಂಟಿನ ಅನಿವಾರ್ಯತೆಯನ್ನು ಅಂಟಿಸಿಕೊಳ್ಳದ ಒಂದು ಶುದ್ಧ ಮನಸ್ಥಿತಿ.

ಗೆಳೆತನ, ಸ್ನೇಹ ಎಂಬುದು ಒಂದು ಮನಸ್ಥಿತಿ. ಅದು ಸಂಬಂಧವಲ್ಲ. ಗಂಡ ಹೆಂಡತಿಯರ ನಡುವೆ ಸ್ನೇಹವಿದ್ದರೆ ಅವರ ದಾಂಪತ್ಯ ಸುಗಮವಾಗಿರುತ್ತದ್ದೆ ಎನ್ನುತ್ತಾರೆ. ಬೆಳೆದ ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು ಎನ್ನುತ್ತಾರೆ. ಮದುವೆಯಾಗುವ ಮುನ್ನ, ಪ್ರೀತಿ ಹುಟ್ಟುವ ಮುನ್ನ ಹೆಣ್ಣು-ಗಂಡು ಏನಾಗಿರುತ್ತಾರೆ? ಅವರು ಗೆಳೆಯರೇ ತಾನೆ? ಹಾಗಾದರೆ ಪ್ರೀತಿ ಪ್ರಾರಂಭವಾದೊಡನೆ, ಇಲ್ಲವೇ ಮದುವೆಯಾದ ತಕ್ಷಣ ಗೆಳೆತನ ಸತ್ತು ಹೋಗಿಬಿಡುತ್ತದಾ? ಹಾಗೊಂದು ವೇಳೆ ಗೆಳೆತನದ ಗೋರಿಯ ಮೇಲೆಯೇ ಪ್ರೀತಿಯ ಸಸಿ ಮೊಳೆಯುವುದು, ಮದುವೆಯ ತೋಟ ಹುಟ್ಟಿಕೊಳ್ಳುವುದು ಎನ್ನುವುದಾದರೆ ದಂಪತಿಗಳ ನಡುವೆ ಮತ್ತೆ ಗೆಳೆತನದ ಆವಶ್ಯಕತೆ ಹುಟ್ಟುವುದಾದರೂ ಯಾಕೆ? ತಂದೆ ಮಗನ ನಡುವಿನದು ರಕ್ತ ಸಂಬಂಧ ಎನ್ನುವುದಾದರೆ ಅದು ಸಾಯುವ ತನಕ ಉಳಿಯುವಂಥದ್ದು. ಮಗ ಎಷ್ಟೇ ದೊಡ್ಡವನಾದರೂ ಅಪ್ಪನಿಗೆ ಆತ ಮಗನೇ. ಆದರೂ ಅಪ್ಪ ಮಗನ ಸಂಬಂಧ ಒಂದು ಹಂತಕ್ಕೆ ಬಂದಾಗ ಗೆಳೆತನದ ಲೇಪವನ್ನು ಬಯಸುವುದೇಕೆ? ಅಪ್ಪ ಮಕ್ಕಳು ಸ್ನೇಹಿತರಂತಿರಬೇಕು ಎಂದು ಆಶಿಸಲು ಇರುವ ಕಾರಣವಾದರೂ ಏನು?

ನಮ್ಮ ಬದುಕಿನಲ್ಲಿ ನಾವು ಕಾಣುವ ಸಂತೋಷ, ತೃಪ್ತಿ, ಉತ್ಸಾಹದಂತೆಯೇ ಸ್ನೇಹ. ಅದು ನಮ್ಮ ದೃಷ್ಟಿಕೋನ, ಜಗತ್ತನ್ನು, ಜಗತ್ತಿನ ವಿದ್ಯಮಾನಗಳನ್ನು ನೋಡುವ, ಗ್ರಹಿಸುವ ಅವಕ್ಕೆ ಪ್ರತಿಕ್ರಿಯಿಸುವ ವಿಧಾನದಂತೆ. ಸ್ನೇಹ ಇಬ್ಬರು ವ್ಯಕ್ತಿಗಳ ನಡುವೆ ಹುಟ್ಟಿಕೊಳ್ಳುವಂಥದ್ದಲ್ಲ. ಹಾಗೆ ಇಬ್ಬರು ವ್ಯಕ್ತಿಗಳ ನಡುವೆ ಬೆಸೆಯುವ ಭಾವಕ್ಕೆ ಸಂಬಂಧ ಎನ್ನಬಹುದು. ಆದರೆ ಸ್ನೇಹ ಹಾಗಲ್ಲ. ಸ್ನೇಹ ಎಂಬುದು ತೀರಾ ವಯಕ್ತಿಕ. ಸ್ನೇಹ ಎನ್ನುವುದು ನಿಮ್ಮ ಮನಸ್ಸಲ್ಲಿರುವ ಒಂದು ಆಲೋಚನಾ ಶೈಲಿ. ಉದಾಹರಣೆಗೆ ನೀವು ಜೋಗ ಜಲಪಾತವನ್ನು ಕಂಡ ತಕ್ಷಣ ‘ವಾಹ್’ ಎಂದು ಉದ್ಗಾರವೆಳೆಯುತ್ತೀರಿ. ಇಂತಹ ರುದ್ರ ರಮಣೀಯ ಪ್ರಕೃತಿಯ ಎದುರು ನಾನೆಷ್ಟು ಕುಬ್ಜ ಎಂದುಕೊಳ್ಳುತ್ತೀರಿ. ಇದು ನೀವು ಹೊರಗೆ ಕಂಡ ಜಲಪಾತಕ್ಕೆ ಪ್ರತಿಕ್ರಿಯೆ ನೀಡುವ ವಿಧಾನ. ಹಾಗೆಯೇ ಸ್ನೇಹ. ನಾವು ನಮ್ಮ ಬದುಕಿನ ಅಂಗಳಕ್ಕೆ ಬರುವ ವ್ಯಕ್ತಿಗಳಿಗೆ ತೋರುವ ಪ್ರತಿಕ್ರಿಯೆಯನ್ನೇ ಸ್ನೇಹ ಎನ್ನುವುದು.

ಕೆಲವರಿಗೆ ಯಾರನ್ನಾದರೂ ಸ್ನೇಹಿತರನ್ನಾಗಿಸಿ ಕೊಳ್ಳಬೇಕೆಂದರೆ ಅಲರ್ಜಿ. ಅವರಿಗೆ ಯಾರೂ ಆಪ್ತರೆನ್ನಿಸುವ ಸ್ನೇಹಿತರಿರುವುದಿಲ್ಲ. ಇನ್ನೂ ಕೆಲವರಿಗೆ ಅಸಂಖ್ಯಾತ ಗೆಳೆಯರು, ಒಮ್ಮೆ ಸಿಟಿ ಬಸ್ಸಿನಲ್ಲಿ ಕುಳಿತಾಗಲೂ ಅವರಿಗೆ ಒಬ್ಬೊಬ್ಬರು ಸ್ನೇಹಿತರಾಗುತ್ತಿರುತ್ತಾರೆ. ಕೆಲವರಿಗೆ ಸಾಕು ಪ್ರಾಣಿಗಳೇ ಗೆಳೆಯರಾಗಿರುತ್ತವೆ. ಕೆಲವರಿಗೆ ಬುಕ್ಕುಗಳಲ್ಲೇ ಸ್ನೇಹಲೋಕ ಕಾಣಸಿಕ್ಕರೆ ಮತ್ತೆ ಕೆಲವರು ತಮಗೆ ತಾವೇ ಒಳ್ಳೆಯ ಸ್ನೇಹಿತರು ಎನ್ನುವಂತಿರುತ್ತಾರೆ.

ಸ್ನೇಹ ಒಂದು ಕಮಿಟ್‌ಮೆಂಟ್ ಆಗಿರದೆ ಕೇವಲ ಒಂದು ಮನಸ್ಥಿತಿ,ನಮಗೆ ಹತ್ತಿರವಾಗುವ ವ್ಯಕ್ತಿಗಳಿಗೆ ನಾವು ಸ್ಪಂದಿಸುವ ವಿಧಾನವಾಗಿರುವುದರಿಂದಲೇ ಒಬ್ಬನಿಗೆ ಎಷ್ಟಾದರೂ ಮಂದಿ ಸ್ನೇಹಿತರಿರಲು ಸಾಧ್ಯ. ನಮಗಿರುವ ಇಬ್ಬರು ಸ್ನೇಹಿತರು ತಾವೂ ಸ್ನೇಹಿತರಾಗಿರಬೇಕಾದ ಆವಶ್ಯಕತೆಯಿಲ್ಲ. ನಮಗೆ ತುಂಬಾ ಹತ್ತಿರವಾದ ಒಬ್ಬ ಗೆಳೆಯನಿಗೆ ತುಂಬಾ ಮೆಚ್ಚಿನ ಸ್ನೇಹಿತ ನಮಗೆ ಇಷ್ಟವಾಗಬೇಕೆಂದಿಲ್ಲ.

ನಾವು ಸುತ್ತಮುತ್ತಲಿನ ವಿದ್ಯಮಾನಗಳಿಗೆ ಪ್ರತಿಕ್ರಿಯಿಸುವ ರೀತಿ ಬದಲಾಗುತ್ತಾ ಹೋದಂತೆಯೇ ನಮ್ಮ ಸ್ನೇಹವೂ ಬದಲಾಯಿಸುತ್ತದೆ. ಬಾಲ್ಯದಲ್ಲಿ ವಿಪರೀತ ಹಠ ಮಾಡಿ ಊಟ ಬಿಟ್ಟಂತೆ ನಾಟಕವಾಡಿ ಕೊಡಿಸಿಕೊಂಡ ಆಟಿಕೆಯನ್ನು ನಾವು ದೊಡ್ಡವರಾದ ಮೇಲೂ ಅಷ್ಟೇ ಪ್ರೀತಿಯಿಂದ, ಕಾಳಜಿಯಿಂದ ಕಾಣಲು ಸಾಧ್ಯವಿಲ್ಲ. ಚಿಕ್ಕಂದಿನಲ್ಲಿ ನಮ್ಮನ್ನು ರಮಿಸುತ್ತಿದ್ದ ಚಂದಮಾಮ ಕಥೆಗಳನ್ನು ಡಿಗ್ರಿ ಮುಗಿಸಿದ ಮೇಲೂ ನಾವು ಓದುವುದಿಲ್ಲ. ಹಾಗೆಯೇ, ನಮ್ಮ ಗೆಳೆತನದ ವ್ಯಾಖ್ಯಾನವೂ ಬದಲಾಯಿಸುತ್ತಾ, ಸ್ನೇಹದ ಪರಿಧಿ ಬೇರೆ ಬೇರೆ ಬಣ್ಣ ಪಡೆಯುತ್ತಾ ಹೋಗುತ್ತದೆ. ಏನಂತೀರಿ?


Blog Stats

  • 71,866 hits
ಮಾರ್ಚ್ 2023
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 12345
6789101112
13141516171819
20212223242526
2728293031  

Top Clicks

  • ಯಾವುದೂ ಇಲ್ಲ