ಕಲರವ

Archive for the ‘ಮಾತುಕತೆ’ Category

– ರಂಜಿತ್ ಅಡಿಗ, ಕುಂದಾಪುರ
  adiga.ranjith@gmail.com

ಕುಂಟುತ್ತಾ ಕುಂಟುತ್ತಾ ಸಾಗುತ್ತಿದ್ದ ಸಡಗರ ಸಡನ್ನಾಗಿ ನಿಂತಿದ್ದು ಎಲ್ಲರಿಗೂ ತಿಳಿದ ವಿಚಾರ. ಮೊದಲು  ಸಡಗರ ಮುಚ್ಚಲಿದ್ದೇವೆಂದು ತಿಳಿಸಿದಾಗ ಸಂಪಾದಕರು ಏಪ್ರಿಲ್ ಫೂಲ್ ಮಾಡುತ್ತಿದ್ದಾರೇನೋ ಎಂಬ ಗುಮಾನಿ ಎಲ್ಲರಲೂ. ಪರಿಸ್ಥಿತಿಯ ಅರಿವಿದ್ದುದರಿಂದ ನಿಜ ಅನ್ನುವುದೂ ಮನ ಒಪ್ಪಲಾರದ ಸತ್ಯವಾಗಿತ್ತು. ಪತ್ರಿಕೆ ನಡೆಸಲು ಆಗುವ ಪ್ರಯಾಸಗಳಿಂದ ಹೇಗೋ ಸಾವರಿಸಿಕೊಂಡು ಮತ್ತೆ ಯಾವುದೋ ಒಂದು ದಿನ ’ ಅದು ಸುಮ್ಮನೆ ಏಪ್ರಿಲ್ ಫೂಲ್ ಮಾಡಿದ್ದು.. ಈ ಸಲದ ಪತ್ರಿಕೆ ಹೇಗೆ ಮಾಡೋಣ’ ಅನ್ನುತ್ತಾರೆಂಬ ಆಸೆಯಿತ್ತು. ಪ್ರತೀ ಸಲ ಪತ್ರಿಕೆ ಕೈಗೆ ಬಂದೊದನೆ ಪರೀಕ್ಷೆಗಳು ನೀಡುವ ಒತ್ತಡಗಳು, ಪರ್ಸನಲ್ ಕೆಲಸಗಳು, ಪತ್ರಿಕೆಯ ಬರಹಗಳ ತಯಾರಿ ಬೇಡುವ ಬೇಜಾನ್ ಸಮಯ ಈ ಎಲ್ಲಾ ಕಷ್ಟಗಳೂ ಇಷ್ಟವಾಗಿಬಿಡುತ್ತಿದ್ದವು. ಸಡಗರ ಬಳಗದವರಿಗೆ ಹೆರಿಗೆ ನಂತರ ಮಗು ನೋಡಿದ ಅಮ್ಮನ ನಲಿವು. ಸಡಗರ ಪತ್ರಿಕೆಯ ಅಂದ, ಒಳಗಿನ ಮುದ್ದಾದ ಬರಹಗಳನ್ನು ಕಂಡು ’ಓ.. ಮನಸೇ ..’ ಪತ್ರಿಕೆ ನಿಂತಿದ್ದು ಯಾಕೇಂತ ಗೊತ್ತಾಯ್ತೀಗ ಅಂತ ಸುಮ್ಮಸುಮ್ಮನೆ ಹೆಮ್ಮೆ ಪಡುತ್ತಿದ್ದೆವು. ಆರ್ಥಿಕ ಬಲವಿದ್ದಿದ್ದಲ್ಲಿ ಅದು ಅಸಾಧ್ಯವೂ ಆಗಿರಲಿಲ್ಲ ಅನ್ನುವ ಆತ್ಮವಿಶ್ವಾಸ, ನಂಬಿಕೆ ಈಗಲೂ ಇದೆ.

ನಿಜವಾಗಿಯೂ ಸಡಗರದ ಬಂಡವಾಳ, ಕೆಲ ಹುಡುಗ-ಹುಡುಗಿಯರ ಒಂದಿಷ್ಟು ಕನಸುಗಳು, ಬರೆಯುವ ಉಮೇದು, ಉತ್ಸಾಹಗಳು ಮತ್ತು ಓದುಗರ ಪ್ರೋತ್ಸಾಹ,ಬೆಂಬಲಗಳಷ್ಟೇ ಆಗಿದ್ದವು. ಪ್ರೊಫೆಶನಲ್ ಪತ್ರಕರ್ತರಿಗಿರುವಷ್ಟು ಸಮಯ, ಸೌಲಭ್ಯ, ಸವಲತ್ತುಗಳಿಲ್ಲದೇ, ತಿಂಗಳಿಗೊಂದು ಇಂಟರ್ನಲ್ಸು, ಅಂತಾದ್ದು ಮೂರು ಬರುವುದರೊಳಗೆ ಸೆಮಿಸ್ಟರ್ ಪರೀಕ್ಷೆಗಳು, ಹಾರಿ ಬಂದು ಸೋರಿ ಹೋಗುವ ರಜೆಗಳು ಇವೆಲ್ಲದರ ನಡುವೆಯೂ ಸಡಗರವೆಂಬ ಕನಸು ಸಾವಿರ ತಾವರೆಯಂತೆ ಅರಳಿ ನಿಂತಿತ್ತು. ಪತ್ರಿಕೆಯನ್ನು ಎಲ್ಲಾ ಊರಿನ ಪ್ರತೀ ಸ್ಟಾಲ್ ಗಳಲ್ಲಿ ಮಾರಾಟ ಮಾಡಲು ಜನಬಲ, ಧನಬಲವಿರಲಿಲ್ಲ. ಆದರೂ ಅಂತಿಮವಾಗಿ ಪತ್ರಿಕೆಮೂಡಿ ಓದುಗನೊಬ್ಬ ಹಿಡಿದಾಗ ಅವನ ಮೊಗದಲ್ಲಿ ಅಚ್ಚರಿ ಮೂಡಿಸದೇ ಇರಲಿಲ್ಲ. ಸಿನೆಮಾ ಮಂದಿಯ ಗಾಸಿಪ್ಪುಗಳ ಹಂಗಿಲ್ಲದೇ, ಗೃಹಿಣಿಯರಿಗೆ ಕಿವಿಮಾತುಗಳು, ಗಂಡನನ್ನು ಒಲಿಸಿಕೊಳ್ಳುವ ವಿಧಾನಗಳು, ಮೇಕಪ್ ಮಾಡಿಕೊಳ್ಳುವುದು ಹೇಗೆ?  ಇಂತಹ ವಿಷಯಗಳೇನೂ ಇಲ್ಲದೇ, ಯಾವುದೇ ಕ್ರೈಮ್ ಕತೆಗಳ ಫುಲ್ ಡೀಟೈಲ್ಸ್, ಡೇಂಜರಸ್ ಡೀಟೈಲ್ಸ್ ಮುಖಪುಟದಲ್ಲಿ ರಾರಾಜಿಸದೇ ಒಂದು ಸಹೃದಯ ವಿಚಾರಗಳ, ಮಾನಸಿಕ ಪ್ರಬುದ್ಧತೆಗಳುಳ್ಳ ಬರಹಗಳು, ಓದಿದ ನಂತರ ಬದುಕಿನ ಬಗ್ಗೆ, ನಮ್ಮ ಕುರಿತು ನಾವು Untitled pictureಚಿಂತಿಸುವಂತಹ ಲೇಖನಗಳುಳ್ಳದ್ದಾಗಿತ್ತು.

ಹೀಗೆ ಕನಸುಗಳು ಒಂದರ ಮೇಲೊಂದು ಅರಳುತ್ತಿದ್ದಾಗ ಲೋಕಕ್ಕೆ ರಿಸೆಶನ್ ರೋಗ ಬಡಿದ ಪರ್ವಕಾಲದಲ್ಲೇ ಪತ್ರಿಕೆಗೂ ಅರ್ಥಿಕ ಹಿಂಜರಿತ ಕಾಡಿತು. ಕೆಲವರು ಬೆಂಬಲಿಸಿ ಮುಂದುವರೆಯಿರಿ ಎಂದರು, ಸಹಾಯ ಮಾಡಲು ಅಣಿಯಾದರು. ಆದರೆ ಇದು ಕೆಲದಿನಗಳ ಉಸಿರಾಟವಷ್ಟೇ ಎಂಬುದು ನಿರ್ಲಕ್ಷಿಸಲಾಗದ, ಅರಗಿಸಿಕೊಳ್ಳಲೇಬೇಕಾದ ಸತ್ಯವಾಗಿತ್ತು. ಸಡಗರ ನಿಂತ ಶಾಕ್ ಗೆ ಗರಬಡಿದವರಂತಿದ್ದ ಬಳಗಕ್ಕೆ ನಿಜವಾಗಿಯೂ ಪತ್ರಿಕೆಗೆ ಮುಖ್ಯ ತಡೆಯಾಗಿದ್ದು ಆರ್ಥಿಕ ವಿಷಯವೇ; ಬೇರೇನೂ ಅಲ್ಲದಿರುವಾಗ ಬ್ಲಾಗ್ ನ ಮೂಲಕ ಯಾಕೆ ಮುಂದುವರಿಸಬಾರದು ಎಂಬ ಆಲೋಚನೆ ಮೂಡುತ್ತಿದ್ದಂತೆ ಮತ್ತೆ ಕನಸುಗಳು ಮೊಳಕೆಯೊಡೆದಿವೆ. ಸಡಗರ ಪತ್ರಿಕೆಯ ಹೆಚ್ಚಿನ ಓದುಗರು ಬ್ಲಾಗಿನ ಓದುಗರೂ ಆದುದು ನಮ್ಮ ನಿರ್ಧಾರಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.
ಅರೆ! ನಿಜವಲ್ಲವೇ? ಎಲ್ಲೆಡೆ ಇಂಟರ್ನೆಟ್ಟು ಹಬ್ಬುತ್ತಿರುವ ವೇಗ ನೋಡುತ್ತಿದ್ದರೆ ಇದಕ್ಕಿಂತ ಒಳ್ಳೆಯ ಮಾಧ್ಯಮವುಂಟಾ ಕನಸುಗಳನ್ನು ಹಂಚಿಕೊಳ್ಳಲು ಅನ್ನಿಸಿದ್ದು ಸುಳ್ಳಲ್ಲ. ಮನಸ್ಸಿನ ಹಸುವಿಗೆ ಜ್ಞಾನದ ಹುಲ್ಲುಗಾವಲಿನಲ್ಲಿ ಆರ್ಥಿಕತೆಯ ಬೇಲಿಯಿಲ್ಲ! ಬ್ಲಾಗ್ ಎಂಬುದು ಜನರನ್ನು ಮುಟ್ಟುವ ಸುಲಭ ಮಾರ್ಗವಾಗುವತ್ತ ದಾಪುಗಾಲಿಡುತ್ತಿದೆ. ಇಂಟರ್ನೆಟ್ಟು ಯಾರು ಬಳಸ್ತಾರೆ? ಬ್ಲಾಗ್ ಯಾರು ಓದುತ್ತಾರೆ ಎನ್ನುವವರು ಕೇವಲ ಕನ್ನಡಭಾಷೆಯಲ್ಲಿಯೇ ಸಾವಿರಕ್ಕೂ ಮಿಗಿಲು ಬ್ಲಾಗ್ ಇರುವುದನ್ನು ನೋಡಿ ಮೂಗಿನ ಮೇಲಿಟ್ಟ ಬೆರಳು ಅಚ್ಚರಿಯಿಂದ ಕಣ್ಣಿನವರೆಗೆ ಏರಿದೆ! a_new_blossom_by_tagabohol

ಬ್ಲಾಗ್ ಎಂದರೆ ಮೂಗು ಮುರಿಯುವಂತಿದ್ದ ಪ್ರಿಂಟ್ ಮಾಧ್ಯಮಕ್ಕೂ ಇದರ ಮಹತ್ವ ಅರಿವಾಗಿದೆ. ಅದರಲ್ಲೂ ಬ್ಲಾಗ್ ಬರಹಗಳು ಮನ್ನಣೆ ಪಡೆಯುತ್ತಿದೆ. ಸಿನೆಮಾ ನಟರು ತಮ್ಮ ಮೇಲಿನ ಅಪವಾದಗಳನ್ನು, ರೂಮರ್ ಗಳಿಗೆ ಉತ್ತರವನ್ನು, ತಮ್ಮ ಭಾವನೆಗಳನ್ನು ಬ್ಲಾಗ್ ಮೂಲಕ ಹರಿಸಿ ತೀರಿಸಿಕೊಳ್ಳುತ್ತಿದ್ದಾರೆ. ಕೋಲಾರದ ಪೋಲಿಸ್ ವಿಭಾಗ ತಮ್ಮ ಕೆಲಸದ ಪಾರದರ್ಶಕತೆಯನ್ನು ಬ್ಲಾಗಿನಲ್ಲಿ ಈಗಲೂ ತೋರಿಸುತ್ತಿದ್ದಾರೆ. ಯಾವುದೇ ಪತ್ರಕರ್ತರೆನ್ನುವ ಟ್ಯಾಗ್ ಇಲ್ಲದ, ಬರಹಗಾರನೆಂಬ ಹಣೆಪಟ್ಟಿಯಿಲ್ಲದ ಸಾಮಾನ್ಯ ಜನರೂ ತಮ್ಮ ಮನದ ಭಾವನೆಗಳನ್ನು ನಿರ್ವಿಘ್ನವಾಗಿ ಬ್ಲಾಗ್ ಮೂಲಕ ತೋಡಿಕೊಳ್ಳಬಹುದಾಗಿದೆ. ಬಹುಶಃ ಮುಖ್ಯಮಂತ್ರಿಗಳು ಜನತಾದರ್ಶನವೆಂದು ತಮ್ಮ ಅಮೂಲ್ಯ ಸಮಯವನ್ನು ಕೆಲ ಜನರಿಗಷ್ಟೇ ಸೀಮಿತವಾಗಿಡುವ ಬದಲು ಬಿಡುವಾದಾಗ ಬ್ಲಾಗ್ ಮೂಲಕವೇ ಜನರ ಅಹವಾಲುಗಳನ್ನು ಸುಲಭವಾಗಿ ಪಡೆಯಬಹುದು. ಬ್ಲಾಗ್ ಪ್ರಕಾಶಿಸುತ್ತಿರುವ ಪರಿಸ್ಥಿತಿಯಲ್ಲಿ ಬರೀ ಆರ್ಥಿಕತೆಯ ಕಾರಣ ಹೇಳಿ ನಮ್ಮಯ ಸಡಗರವನ್ನು ಮುಚ್ಚುವುದು ಸರಿಯಾದುದಲ್ಲ.

ಓದುಗರ ಪ್ರೀತಿ, ತೊಡಗಿಸಿಕೊಳ್ಳುವಿಕೆಯನ್ನು ಇಟ್ಟುಕೊಂಡು ಪತ್ರಿಕೆಯನ್ನು ಬ್ಲಾಗಿನ ಮೂಲಕವೇ ನಡೆಸೋಣ ಎಂದು ನಿರ್ಧರಿಸಿದ್ದೇವೆ. ಇನ್ನು ಪತ್ರಿಕೆಗೆ ಯಾವ ಆರ್ಥಿಕ ಹರ್ಡಲ್ಸ್ ಅಡಚಣೆಯಾಗದು. ಸಮಯಕ್ಕೆ ಸರಿಯಾಗಿ ಪತ್ರಿಕೆ ಕೊಡಲಿಲ್ಲ ಎಂದು (ಪ್ರೀತಿಯಿಂದ) ಬೈಸಿಕೊಳ್ಳುವಂತಿಲ್ಲ. ಬರಹಗಳನ್ನು ಚಂದಗಾಣಿಸಿ ನೀಡಬೇಕೇ ವಿನಃ ಚಂದಾ ಕೇಳಬೇಕಿಲ್ಲ. ಯಾವಾಗ ಇನ್ನೊಂದು ಸಂಚಿಕೆ ಎಂದು ಕಾಯುವ ಅಗತ್ಯವಿಲ್ಲ. ಸಡಗರ ಇನ್ನು ನಿಮ್ಮ ಬೆರಳಿನ ಕ್ಲಿಕ್ಕಿನಷ್ಟು ದೂರ!

ಇನ್ನು ಮತ್ತೆ ಮನದ ಗೂಡಿನಲಿ ಕಲರವ-ಸಡಗರ ಇಂಚರಿಸಲಿವೆ. ಸಡಗರ ಬಳಗದ ಮನದಾಗಸದಲ್ಲಿ ವಿಚಾರಗಳ ಮೋಡ ದಟ್ಟೈಸಿವೆ.

`ಕಲರವ’ ಬ್ಲಾಗ್ ಪತ್ರಿಕೆ ಮಳೆಗಾಲದ ಆರಂಭದ ದಿನದಿಂದ ಹನಿಸಲಿವೆ!

…………………………………………

ಪ್ರತಿ ತಿಂಗಳು ‘ಸಡಗರ’ ಎಂಬ ಹೆಸರಿನಲ್ಲಿ ಮುದ್ದಾಗಿ ಮುದ್ರಣ ಕಂಡು ಹೊರ ಬರುತ್ತಿದ್ದ ನಮ್ಮ ನಾನಾ ಸಾಹಸ, ತುಂಟತನ, ಕ್ರಿಯೇಟಿವಿಟಿ, ತೆವಲುಗಳು ಇನ್ನು ಮುಂದೆ ಎಲೆಕ್ಟ್ರಾನ್ ಹರಿವಿನಲ್ಲಿ ಲೀನವಾಗಿ ಈ ಬ್ಲಾಗಿನಲ್ಲಿ ಬೆಳಕು ಕಾಣಲಿವೆ. ಜೂನ್ ಒಂದರಿಂದ ಪೂರ್ಣ ಪ್ರಮಾಣದಲ್ಲಿ ‘ಕಲರವ’ ಬ್ಲಾಗು ಅರಳಿಕೊಳ್ಳಲಿದೆ. ಎಂದೂ ತೀರದ ನಮ್ಮ ಅಕ್ಷರದ ಮೋಹಕ್ಕೆ ಈ ಬ್ಲಾಗು ಒಂದು ಸಣ್ಣ ಸಮಾಧಾನವನ್ನು ನೀಡುತ್ತದೆ ಎನ್ನುವುದು ನಮ್ಮ ನಂಬಿಕೆ.

ಈ ಯುವ ಮನಸುಗಳ ‘ಕಲರವ’ಕ್ಕೆ ಕಿವಿಗೊಡದಷ್ಟು ನಿಷ್ಕರುಣಿಗಳು ನೀವಲ್ಲ ಎಂಬುದೂ ನಮಗೆ ತಿಳಿದಿದೆ.

– ಸಂಪಾದಕ

‘ಇನ್ನು ಸಾಧ್ಯವಾಗುವುದಿಲ್ಲ’ ಎನ್ನುವ ಷರಾದೊಂದಿಗೆ ನಾನು ನನ್ನ ಮತ್ತೊಂದು ಹುಂಬತನವನ್ನು ಕೊನೆಗಾಣಿಸಬೇಕಿದೆ.

ಸುಮಾರು ಎರಡು ವರ್ಷಗಳಿಂದ ಕುಂಟುತ್ತಲೋ, ತೆವಳುತ್ತಲೋ ನಡೆಯುತ್ತಿದ್ದ ನಮ್ಮ ಪತ್ರಿಕೆಯನ್ನು ಅಧಿಕೃತವಾಗಿ ಮುಚ್ಚುವ ಸಮಯ ಬಂದಾಗಿದೆ. ಇಷ್ಟು ದಿನ ನಾನಾ ಕಷ್ಟಗಳು, ತಾಪತ್ರಯಗಳ ನಡುವೆ ಹೇಗೋ ‘ಸಡಗರ’ವನ್ನು ನಡೆಸಿಕೊಂಡು ಬರುತ್ತಿದ್ದೆವು. ಆದರೆ ಈಗ ನಾವು ಡೆಡ್ ಎಂಡ್ ತಲುಪಿದ್ದೇವೆ. ಎಲ್ಲಾ ವಿಧದಲ್ಲೂ ಹೈರಾಣಾಗಿದ್ದೇವೆ. ಆರ್ಥಿಕವಾಗಿ ಕುಗ್ಗಿಹೋಗಿದ್ದೇವೆ, ಉತ್ಸಾಹವೂ ಬತ್ತಿ ಹೋಗಿದೆ. ಈ ಸಂದರ್ಭದಲ್ಲಿ ನಮ್ಮ ಕನಸಿನ ಸಮಾಧಿಯನ್ನು ಶಾಸ್ತ್ರೋಕ್ತವಾಗಿ ನೆರವೇರಿಸುವುದೊಂದೇ ಬಾಕಿ ಉಳಿದಿರುವುದು. ಈಗದನ್ನು ಮಾಡುತ್ತಿರುವೆ.

ಝೆರಾಕ್ಸಿನಿಂದ ಶುರುವಾಗಿ ಸಾವಿರ ಪ್ರತಿ ಪ್ರಸಾರದ ಪತ್ರಿಕೆಯಾಗಿ ಬೆಳೆದ ‘ಸಡಗರ’ ಈ ಚಿಕ್ಕ ಸಾಧನೆಗೆ ಕಾರಣಕರ್ತರಾದ ನಮ್ಮ ಓದುಗರನ್ನು ನಾವು ಅಭಿನಂದಿಸುತ್ತೇವೆ. ಇಷ್ಟು ದಿನ ನಮಗೆ ಅಕಾರಣ ಪ್ರೀತಿ ತೋರಿದ ಎಲ್ಲಾ ಚಂದಾದಾರರಿಗೂ, ಪ್ರಿಯ ಓದುಗರಿಗೂ ನಮ್ಮ ನಮನ.

ಇನ್ನು ನನ್ನ ಈ ಕನಸನ್ನು ತಮ್ಮ ಕೂಸೆಂದು ಭಾವಿಸಿ ಸಾಕಿ ಸಲುಹಿದ ನನ್ನ ಗೆಳೆಯರ ಬಳಗಕ್ಕೆ ನಾನು ಚಿರಋಣಿಯಾಗಿರುವೆ. ಅವರ ಬೆಂಬಲ, ನಿರಂತರ ಪ್ರೋತ್ಸಾಹ ಇರದಿದ್ದರೆ ನನ್ನ ಈ ಪತ್ರಿಕೆಯ ಕನಸು ನನ್ನ ಇತರೆ ನೂರಾರು ಕನಸುಗಳಂತೆ ಕತ್ತಲೆಯ ಲೋಕದ ದಾರಿ ಹಿಡಿಯುತ್ತಿದ್ದವು. ಈ ಪತ್ರಿಕೆಯ ಅಭಿವೃದ್ಧಿಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನೆರವಾದ ಎಲ್ಲಾ ಗೆಳೆಯರಿಗೂ ನಾನು ಮನಸಾ ವಂದಿಸುವೆ.

ಪತ್ರಿಕೆಯ ಬ್ಲಾಗಿನ ಓದುಗರಾದ  ನಿಮ್ಮನ್ನು ಮರೆಯಲಾದೀತೇ? ನಿಮಗೂ ನಮ್ಮ ತಂಡದ ಪರವಾಗಿ ಕೃತಜ್ಞತೆಗಳು.

ಇನ್ನು ಮುಂದೆ ಈ ಬ್ಲಾಗಿನಲ್ಲಿ ಯಾವ ಬರಹಗಳೂ ಪ್ರಕಟವಾಗುವುದಿಲ್ಲ ಎಂದು ತಿಳಿಸಲು ವಿಷಾದಿಸುತ್ತೇವೆ. ನಿಮ್ಮ ಬೆಂಬಲ, ಸ್ನೇಹ, ಪ್ರೋತ್ಸಾಹಕ್ಕೆ ವಂದನೆಗಳು.

ಇಂತಿ,
ನಿಮ್ಮ ವಿಶ್ವಾಸಿ
ಸುಪ್ರೀತ್.ಕೆ.ಎಸ್
(ಸಂಪಾದಕ)
‘ಸಡಗರ’ ಮಾಸಪತ್ರಿಕೆ

‘ರಿಸೆಶನ್ ಬಿಸಿ ನಿಮಗೂ ತಟ್ಟಿತಾ’ ಎಂದು ಉಡಾಫೆ ಮಾಡಿದರು ಕೆಲವರು. ದೊಡ್ಡ ದೊಡ್ಡ ಕಂಪೆನಿಗಳೆಲ್ಲ ತಮ್ಮ ಉದ್ಯೋಗಿಗಳು ಕುಡಿಯುವ ನೀರು, ಬಳಸುವ ಟಿಶ್ಯು ಪೇಪರುಗಳಲ್ಲೆಲ್ಲಾ ಉಳಿತಾಯ ಮಾಡುತ್ತ ಈ ಕಷ್ಟದ ದಿನಗಳಲ್ಲಿ ಜೀವವನ್ನುಳಿಸಿಕೊಳ್ಳಲು ಹೋರಾಡುತ್ತಿರುವಾಗ ನಾವು ಪತ್ರಿಕೆಯ ಗಾತ್ರವನ್ನು ಅರ್ಧಕ್ಕಿಳಿಸಿದ್ದು ಅನೇಕರಲ್ಲಿ ಈ ಭಾವನೆ ಹುಟ್ಟಿಸಿದೆ. ನಿಜಕ್ಕೂ ಪತ್ರಿಕೆಯೊಂದರ ನಿರ್ವಹಣೆ ಎಷ್ಟು ಕಷ್ಟದ್ದು ಎಂಬುದರ ಅರಿವು ಈಗಾಗುತ್ತಿದ್ದೆ. ಎಲ್ಲವೂ ಸರಿಯಾಗಿ ನಡೆಯುತ್ತಿದ್ದಾಗ ಕೆಲಸಗಳು ಬೆಣ್ಣೆಯಿಂದ ಕೂದಲು ತೆಗೆದಷ್ಟು ಸಲೀಸಾಗಿ ನಡೆದುಹೋಗುತ್ತವೆ. ಆದರೆ ಒಂದೊಂದೇ ಲೋಪ, ಅನನಕೂಲ ಎದುರಾದ ಹಾಗೆ ಕೆಲಸ ಮುಳ್ಳಿನ ಮೇಲಿನ ನಡಿಗೆಯಾಗುತ್ತದೆ.

ಏನೇ ಆದರೂ ಪತ್ರಿಕೆಯ ಪ್ರಯತ್ನಕ್ಕೆ ಅಂತ್ಯ ಹಾಡುವುದು ಬೇಡ. ದೊಡ್ಡ ಪ್ರಮಾಣದಲ್ಲಿ ಸಾಧ್ಯವಾಗದಿದ್ದರೆ ಸಣ್ಣದಾಗಿ, ಸಾವಿರ ಮಂದಿಯನ್ನು ತಲುಪಲು ಸಾಧ್ಯವಾಗದಿದ್ದರೆ ನೂರೇ ಮಂದಿಯನ್ನು ತಲುಪುವ ಗುರಿ ಇಟ್ಟುಕೊಳ್ಳೋಣ ಎಂದು ಆಲೋಚಿಸಿ ನಮ್ಮನ್ನು ನಾವು ಹುರಿದುಂಬಿಸಿಕೊಂಡಿದ್ದೇವೆ. ಅದರ ಫಲವಾಗಿ ನಿಮ್ಮೆದುರು ಈ ತಿಂಗಳ ಸಂಚಿಕೆ ಮೈತಳೆದು ನಿಂತಿದೆ.

ನಿಮ್ಮ ಸಲಹೆ, ಅಭಿಪ್ರಾಗಳಿಗೆ ಸದಾ ಸ್ವಾಗತವಿದೆ.

ಅಕ್ಟೋಬರ್ ತಿಂಗಳ ‘ಸಡಗರ’ ಪತ್ರಿಕೆಯ ತಯಾರಿಯಲ್ಲಿ ಮುಳುಗಿಹೋಗಿದ್ದೇನೆ. ಪತ್ರಿಕೆಯು ಸರಿಯಾದ ಸಮಯಕ್ಕೆ ಪ್ರಕಟವಾಗುವುದಿಲ್ಲ ಎಂಬುದು ನಮ್ಮ ಮೇಲಿರುವ ಆರೋಪಗಳಲ್ಲಿ ಬಹಳ ಪ್ರಮುಖವಾದದ್ದು. ಈ  ಆರೋಪ ಕೇಳಿಬರದ ಹಾಗೆ ನಾವು ಕೆಲಸ ಮಾಡಬೇಕು ಎಂಬುದು ಒಂದು ಬಗೆಯ ಚಿಂತನೆಯಾದರೂ, ಪತ್ರಿಕೆಯು ಸಮಯಕ್ಕೆ ಸರಿಯಾಗಿ ಬರದದ್ದನ್ನು ಕಂಡು ಬೇಸರಗೊಳ್ಳುವ, ಅದರ ದಾರಿ ಕಾಯುತ್ತಾ ಗೊಣಗುವವರ ಸಂಖ್ಯೆ ಇಷ್ಟು ದೊಡ್ಡದಿದೆಯಲ್ಲ ಎಂದು ಸಂತೋಷ ಪಡುವುದು ನಮಗೆ ಇಷ್ಟವಾದದ್ದು. ಹಾಗಂತ ನಾವು ಸಂಪೂರ್ಣ ಬೇಜವಾಬ್ದಾರಿಯ ದಾರಿ ಹಿಡಿಯುತ್ತೇವೆ ಎಂದುಕೊಳ್ಳಬೇಡಿ. ನಮ್ಮ ಮಿತಿಯಲ್ಲೇ ಸಾಧ್ಯವಾದಷ್ಟು ಮಟ್ಟಿಗೆ ನಿಮ್ಮ ನಿರೀಕ್ಷೆಯನ್ನು ಮುಟ್ಟಲು ಪ್ರಯತ್ನಿಸುತ್ತೇವೆ.

ಪ್ರತಿ ತಿಂಗಳು ನಮ್ಮಿಡೀ ತಂಡ ಒಂದು ವಿಷಯವನ್ನು ಧೇನಿಸಬೇಕು. ಅದರ ನಾನಾ ಮಜಲುಗಳನ್ನು ಕೂಲಂಕುಶವಾಗಿ ಪರಿಶೀಲಿಸಬೇಕು. ಆ ವಿಷಯದ ಬಗೆಗಿನ ನಮ್ಮ-ನಮ್ಮ ಗ್ರಹಿಕೆಗಳನ್ನು ಪುನರ್ ಪರಿಶೀಲಿಸಿಕೊಳ್ಳಬೇಕು. ಹೊಸ ಆಯಾಮಗಳನ್ನು ಕಂಡುಕೊಳ್ಳಬೇಕು. ನಮ್ಮ ಚಿಂತನೆಯಲ್ಲಿನ, ಗ್ರಹಿಕೆಯಲ್ಲಿನ ಲೋಪಗಳನ್ನು ತಿಳಿದು ತಿದ್ದಿಕೊಳ್ಳಬೇಕು. ಈ ಇಡೀ ಪ್ರಕ್ರಿಯೆಯಲ್ಲಿ ನಮ್ಮ ಓದುಗರನ್ನೂ ತೊಡಗಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಮುಖಪುಟದ ವಿಷಯವನ್ನು ಆಯ್ದುಕೊಳ್ಳುತ್ತೇವೆ. ಈ ಹಿಂದಿನ ಸಂಚಿಕೆಗಳಲ್ಲಿ ಸ್ನೇಹ, ಪ್ರೀತಿ, ಸ್ವಾತಂತ್ರ್ಯದ ಬಗೆಗೆ ಮುಖಪುಟವನ್ನು ರೂಪಿಸಿ ಲೇಖನಗಳನ್ನು ಪ್ರಕಟಿಸಿದ್ದೇವು. ಅಕ್ಟೋಬರ್ ಸಂಚಿಕೆಗಾಗಿ ನಾವು ಆಯ್ಕೆ ಮಾಡಿಕೊಂಡಿರುವ ವಿಷಯ: ಗೂಡಿನಿಂದ ದೂರಾದ ಹಕ್ಕಿಗಳು.

ಓದಿಗಾಗಿ, ನೌಕರಿಗಾಗಿ, ಯಶಸ್ಸಿಗಾಗಿ, ಬಾಳ ಸಂಗಾತಿಗಾಗಿ, ಆಧ್ಯಾತ್ಮಕ್ಕಾಗಿ, ಸುಖಕ್ಕಾಗಿ, ಶಿಕ್ಷೆಗಾಗಿ, ಸ್ವಾತಂತ್ರ್ಯಕ್ಕಾಗಿ, ವಿಧಿಯ ವಿಲಾಸದಿಂದಾಗಿ ಮನೆಯಿಂದ, ಮನೆಯವರಿಂದ ದೂರಾದವರ ಬಗೆಗಿನ ಮಾತುಕತೆಯೇ ಈ ಸಂಚಿಕೆಯ ಫೋಕಸ್. ಬುದ್ಧಿ ಬೆಳೆಯುವ ಮೊದಲೇ ಓದುವುದಕ್ಕೆಂದು ದೂರದ ರೆಸಿಡೆನ್ಷಿಯಲ್ ಸ್ಕೂಲುಗಳಿಗೆ ಹಾಕಲ್ಪಟ್ಟ ಮಕ್ಕಳಿಂದ ಹಿಡಿದು ಮನೆ ಭವ ಬಂಧನ ಎಂದು ಬಗೆದು ಮೋಕ್ಷಕ್ಕಾಗಿ ಹಿಮಾಲಯಕ್ಕೆ ಹೊರಟು ನಿಲ್ಲುವ ಸರ್ವಪರಿತ್ಯಾಗಿಯವರೆಗೆ ಎಲ್ಲರನ್ನೂ ಕೂರಿಸಿಕೊಂಡು ಮಾತಾಡುವುದು, ಅವರಂತರಾಳವನ್ನು ಕೆದಕುವುದು, ಪ್ರಶ್ನೆಗಳನ್ನು ಎಸೆಯುವುದು, ಸಲಹೆ ಪಡೆಯುವುದು, ಕೆಲವು ಸಲಹೆ ಕೊಡುವುದು – ಇದು ಈ ಸಂಚಿಕೆಯಲ್ಲಿನ ಮುಖಪುಟದ ಬರಹಗಳಲ್ಲಿ ನಾವು ನಡೆಸುವ ಪ್ರಯತ್ನಗಳು.

ಇಷ್ಟಲ್ಲದೇ ನಮ್ಮ ಪತ್ರಿಕೆಯ ಮೂಲಗುಣವಾದ ‘ಅಶಿಸ್ತು’ ಹಾಗೂ ಅದರ ಫಲವಾಗಿ ಆಗುವ ಅನೇಕಾನೇಕ ಬದಲಾವಣೆಗಳು, ಹೊಸ ಪ್ರಯತ್ನಗಳು ನಿಮ್ಮನ್ನು ಸೆಳೆಯಲಿವೆ ಎಂಬುದು ನಮ್ಮ ನಂಬಿಕೆ.

-ಸಂ

(‘ಸಡಗರ’ಕ್ಕೆ ಚಂದಾದಾರರಾಗಿ ನಮ್ಮ ಪ್ರಯತ್ನವನ್ನು ಜೀವಂತವಾಗಿರಿಸಲು ಸಹಾಯ ಮಾಡಿ)

ಕನ್ನಡದ ಬ್ಲಾಗುಗಳ ಆಗುಹೋಗುಗಳ ಮೇಲೊಂದು ಕಣ್ಣನ್ನಿಟ್ಟು ಅಲ್ಲಿನ ಸತ್ವಯುತವಾದ ಸಂಗತಿಗಳೆಡೆಗೆ ತಮ್ಮ ಪತ್ರಿಕೆಯ ಓದುಗರನ್ನು ಸೆಳೆಯುವ, ಹೊಸತನ್ನು ಪರಿಚಯಿಸುವ ಸಹೃದಯತೆಯಿರುವ ಕನ್ನಡಪ್ರಭದ ‘ಸಾಪ್ತಾಹಿಕ ಪುರವಣಿ’ಯ ಸಂಪಾದಕರು ಜೋಗಿ.
ನಮ್ಮ ಪತ್ರಿಕೆಯ ಬ್ಲಾಗನ್ನು ಪರಿಚಯಿಸಿ ‘ಇಲ್ಲಿಗೀ ಕಥೆ ಮುಗಿಯಿತು’ ಲೇಖನವನ್ನು ಕಳೆದ ರವಿವಾರದ (೧೯-೧೦-೨೦೦೮) ಸಾಪ್ತಾಹಿಕ ಪುರವಣಿಯನ್ನು ಪ್ರಕಟಿಸಿದ್ದಾರೆ. ನಮ್ಮ ಬೆನ್ನು ತಟ್ಟಿದ್ದಾರೆ. ನಮ್ಮ ಹುಮ್ಮಸ್ಸಿನ, ಹುಂಬತನದ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಆ ಮೂಲಕ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದ್ದಾರೆ. ಅವರಿಗೆ ಹಾಗೂ ಕನ್ನಡಪ್ರಭ ಪತ್ರಿಕೆಗ ನಮ್ಮ ಬಳಗದ ಕೃತಜ್ಞತೆಗಳು…

ಕನ್ನಡಪ್ರಭದಲ್ಲಿನ ಸಾಪ್ತಾಹಿಕ ಪುರವಣಿಯ ಅಂತರ್ಜಾಲ ಪುಟವನ್ನು ಇಲ್ಲಿ ನೋಡಬಹುದು. (ಬಹುಶಃ ಇಂಟರ್ನೆಟ್ ಎಕ್ಸ್‌ಪ್ಲೋರರ್‌ನಲ್ಲಿ ಚೆಂದಗೆ ಕಾಣುತ್ತದೆ)

ಆಗಸ್ಟ್ ಹಾಗೂ ಸೆಪ್ಟೆಂಬರ್ ಎರಡೂ ತಿಂಗಳಿಗೆ ಸೇರಿ ಎಂಬಂತೆ ಒಂದೇ ಸಂಚಿಕೆಯನ್ನು ಮಾಡಿದ್ದಕ್ಕಾಗಿ ನಾವು ಅನೇಕರಿಂದ ಆಕ್ಷೇಪಣೆಗಳನ್ನು ಎದುರಿಸಬೇಕಾಯ್ತು. ಆದರೆ ಪರಿಸ್ಥಿತಿಗಳ ಅನಿವಾರ್ಯತೆಯಲ್ಲಿ ನಾವು ಅಸಹಯಾಕರಾಗಿದ್ದೇವೆ ಎಂದು ತಿಳಿಸಲೇಬೇಕು. ಬ್ಲಾಗುಗಳಲ್ಲಿ ಚಿಟಿಕೆ ಹೊಡೆಯುವಷ್ಟರಲ್ಲಿ ಲೇಖನಗಳನ್ನು ಪ್ರಕಟಿಸಿಬಿಡಬಹುದು. ಆದರೆ ಪತ್ರಿಕೆಯನ್ನು ಮುದ್ರಿಸಿ ಅದನ್ನು ಓದುಗರಿಗೆ ತಲುಪಿಸುವ ಕೆಲಸ ತ್ರಾಸದ್ದು. ಮೇಲಾಗಿ ಈ ಪೋಸ್ಟ್ ಆಫೀಸು, ಪ್ರೆಸ್ಸುಗಳೆಲ್ಲಾ ನಮ್ಮ ಕಾಲೇಜು ಸಮಯ ಮುಗಿಯುವುದನ್ನೇ ಕಾಯುತ್ತಿರುವಂತೆ ಮುಂಚಿಕೊಂಡು ಬಿಡುತ್ತವೆ. ನಾವು ನಾನಾ ತರಹದ ಸಾಹಸಗಳನ್ನು ಮಾಡುತ್ತಾ ಪ್ರತಿ ತಿಂಗಳ ಪತ್ರಿಕೆಯ ಕೆಲಸವನ್ನು ಮುಗಿಸಬೇಕು. ಹೀಗಾಗಿ ಇಂಥ ಅಪಸವ್ಯಗಳಾಗುತ್ತಿರುತ್ತವೆ. ಆದರೆ ನಾವು ಎಂದಿಗೂ ಬದಲಾವಣೆಗೆ, ಬೆಳವಣಿಗೆಗೆ, ನಮ್ಮನ್ನು ನಾವು ತಿದ್ದಿಕೊಳ್ಳುವುದಕ್ಕೆ ಬದ್ಧರು.

ಆಗಸ್ಟ್, ಸೆಪ್ಟೆಂಬರ್ ತಿಂಗಳ ಪತ್ರಿಕೆಯ ಪಿಡಿಎಫ್ ಪ್ರತಿಯನ್ನು ಇಲ್ಲಿಂದ ಇಳಿಸಿಕೊಳ್ಳಬಹುದು

ಯಾರಿಗೆ ಬಂತು, ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ?

ಹೆಣ್ಣು ಮಗಳೊಬ್ಬಳು ಭಾರತದ ರಸ್ತೆಗಳ ಮೇಲೆ ಮಧ್ಯರಾತ್ರಿಯಲ್ಲಿ ನಿರ್ಭಯವಾಗಿ ಓಡಾಡುವಂತಾದಾಗಲೇ ನಮ್ಮ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಂತೆ’ ಎಂದರು ಮಹಾತ್ಮಾ ಗಾಂಧಿ.

ನಮ್ಮ ದೇಶದ, ಸಮಾಜದ ಪ್ರಸ್ತುತ ಸನ್ನಿವೇಶವನ್ನು ಗಮನಿಸಿದರೆ ನಾವು ಸಿಕ್ಕಿತು, ಸಿಕ್ಕಿತು’ ಎಂದು ಸಂಭ್ರಮಿಸುತ್ತಿರುವ ಸ್ವಾತಂತ್ರ್ಯವಾದರೂ ಎಂಥದ್ದು ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಲೇ ಬೇಕಾಗುತ್ತದೆ. ದೇಶದ ಸ್ವಾತಂತ್ರ್ಯಕ್ಕಾಗಿ ಅಷ್ಟು ಹೋರಾಡಿದ ಮಹಾತ್ಮರು ಬಯಸಿದ್ದ ಸ್ವಾತಂತ್ರ್ಯ ಯಾವ ಬಗೆಯದ್ದು, ನಾವು ಪಡೆದಿರುವ ಸ್ವಾತಂತ್ರ್ಯ ಎಂಥದ್ದು?

ಸ್ವಾತಂತ್ರ್ಯವೆಂದರೆ ಅದು ಸ್ವೇಚ್ಛೆಯಾ? ಏನನ್ನು ಬೇಕಾದರೂ ಮಾಡುವ, ದಕ್ಕಿಸಿಕೊಳ್ಳುವ ಸ್ಥಿತಿಯಾ? ಸ್ವಾತಂತ್ರ್ಯ ಎಂದರೆ ಜವಾಬ್ದಾರಿಯಾ? ವ್ಯಕ್ತಿಯೊಬ್ಬನ ಸ್ವಾತಂತ್ರ್ಯಕ್ಕೂ ಸಮಾಜಕ್ಕೂ ಏನು ಸಂಬಂಧ? ಸ್ವಾತಂತ್ರ್ಯ ನಾವು ಪಡೆದುಕೊಳ್ಳುವಂಥದ್ದಾ ಅಥವಾ ಯಾರಾದರೂ ಕರುಣಿಸುವಂಥದ್ದಾ? ನಮ್ಮ ಸ್ವಾತಂತ್ರ್ಯ ಇತರರ ಮರ್ಜಿಯನ್ನು ಅವಲಂಬಿಸಿದರೆ ಅದು ಸ್ವಾತಂತ್ರ್ಯವಾದರೂ ಹೇಗಾಗಲಿಕ್ಕೆ ಸಾಧ್ಯ?

ಇವೆಲ್ಲಾ ಪ್ರಶ್ನೆಗಳನ್ನು ಇಟ್ಟುಕೊಂಡು ಭಾರತದ ಅರವತ್ತೊಂದನೆಯ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಸಂಚಿಕೆಯನ್ನು ರೂಪಿಸಿದ್ದೇವೆ. ನಮ್ಮ ಪ್ರಯತ್ನ ಕಂಡು ನಿಮಗೆ ಏನನ್ನಿಸಿತು ತಿಳಿಸುತ್ತೀರಲ್ಲವಾ?

ಸಂ


ಆಗಸ್ಟ್ ಸಂಚಿಕೆಯ ತಯಾರಿ

ಜುಲೈ ಸಂಚಿಕೆಯನ್ನು ಮುಗಿಸಿ ಕೊಂಚ ದಣಿವಾರಿಸಿಕೊಂಡು ಆಗಸ್ಟ್ ತಿಂಗಳ ಸಂಚಿಕೆಯ ತಯಾರಿಗೆ ಕೈ ಹಾಕಿದ್ದೇವೆ. ಆಗಸ್ಟ್ ಸಂಚಿಕೆಯ ಮುಖಪುಟದ ವಿಷಯ ‘ಸ್ವಾತಂತ್ರ್ಯ’.
ಸ್ವಾತಂತ್ರ್ಯ ಎಂದರೇನು? ೧೯೪೭ ಆಗಸ್ಟ್ ಹದಿನೈದರಂದು ನಾವು ಪಡೆದದ್ದು ಯಾವ ಬಗೆಯ ಸ್ವಾತಂತ್ರ್ಯ? ಇದನ್ನೇನಾ ನಮ್ಮ ನಾಯಕರು, ಸ್ವಾತಂತ್ರ್ಯ ಹೋರಾಟಗಾರರು ಆಶಿಸಿದ್ದು. ಈ ಸ್ವಾತಂತ್ರ್ಯಕ್ಕೇನಾ ನಮ್ಮ ದೇಶದ ಲಕ್ಷಾಂತರ ಮಂದಿ ಯುವಕ-ಯುವತಿಯರು ಪ್ರಾಣ ತೆತ್ತಿದ್ದು? ನಾವು ನಿಜಕ್ಕೂ ಈಗ ಸ್ವತಂತ್ರರೇ? ನಿಜವಾದ ಸ್ವಾತಂತ್ರ್ಯವೆಂದರೆ ಹೇಗಿರಬೇಕು? ಸ್ವತಂತ್ರ ಭಾರತದಲ್ಲಿ ಪ್ರಜೆಗಳ ಚೇತನ, ಆತ್ಮಶಕ್ತಿ ಎಷ್ಟು ಸ್ವತಂತ್ರ?

ಈ ವಿಚಾರಗಳನ್ನು ಮೂಲವಾಗಿಟ್ಟುಕೊಂಡು ಈ ಸಂಚಿಕೆಯನ್ನು ರೂಪಿಸುತ್ತಿದ್ದೇವೆ. ನಿಮ್ಮ ಸಲಹೆ, ಅಭಿಪ್ರಾಯಗಳಿಗೆ ಸ್ವಾಗತ.

ಟ್ಯಾಗ್ ಗಳು: , ,

ಕೊಂಚ ತಡವಾದರೂ ಜುಲೈ ತಿಂಗಳ ಪತ್ರಿಕೆಯನ್ನು ರೆಡಿ ಮಾಡಿ ಆಗಿದೆ. ಇದು ನಮ್ಮ ಪ್ರತಿ ತಿಂಗಳ ದಿಗ್ವಿಜಯ! ಈ ತಿಂಗಳ ಸಂಚಿಕೆಯ ಪಿಡಿಎಫ್ ಪ್ರತಿಗಾಗಿ ಇಲ್ಲಿ ಚಿಟುಕಿಸಿ.


Blog Stats

  • 71,866 hits
ಮಾರ್ಚ್ 2023
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 12345
6789101112
13141516171819
20212223242526
2728293031  

Top Clicks

  • ಯಾವುದೂ ಇಲ್ಲ