Archive for the ‘ಬೀಥೆ ಹುಯೆ ದಿನ್…’ Category
ಬೀಥೆ ಹುಯೆ ದಿನ್: ಎಲ್ಲಾ ಆತನ ಹೆಸರಿನಲ್ಲಿ!
Posted ಮೇ 14, 2009
on:– ಅಂತರ್ಮುಖಿ
ದೇವರೆಂಬ ವ್ಯಕ್ತಿ ಮನುಷ್ಯ ಹಾರಿ ಬಿಡುವ ರಾಕೆಟುಗಳು ತಾಕದಷ್ಟು , ಆತನ ಉಪಗ್ರಹಗಳು ಸಂಕೇತಗಳನ್ನು ಗ್ರಹಿಸಲು ಸಾಧ್ಯವಾಗದಷ್ಟು, ಅತಿ ಸೂಕ್ಷ್ಮ ಕೆಮರಾ ಕಣ್ಣಿಗೆ ಬೀಳದಷ್ಟು, ಆತನೆಂದಾದರೊಂದು ದಿನ ತಲುಪಲು ಅಸಾಧ್ಯವಾದ ದೂರದಲ್ಲಿ ಇರುವುದು ನಿಜವೇ ಆದರೆ ಆತ ನಾನು ಆತನ ವಿಷಯವಾಗಿ ತಲೆ ಕೆಡಿಸಿಕೊಂಡು ನಂಬಿಕೆ ಅಪನಂಬಿಕೆಗಳ ಒಳಸುಳಿಗಳಲ್ಲಿ ಸಿಕ್ಕಿಕೊಂಡು, ವಾದ-ವಿವಾದ, ಸಾಕ್ಷ್ಯಾಧಾರಗಳ ಗೋಜಲಿನಲ್ಲಿ ಕಾಲು ಸಿಗಿಸಿಕೊಂಡು ನರಳಾಡಿದ್ದನ್ನು ಕಂಡು ನಸುನಗುತ್ತಿರಬಹುದು. ಆತನ ಹೆಸರಿನಲ್ಲಿ ನಾನು ರಾತ್ರಿಗಳ ನಿದ್ದೆಗಳನ್ನು ಕಳೆದುಕೊಂಡಿದ್ದು, ಕೆನ್ನೆಯ ಮುಖಾಂತರ ಹರಿದ ಕಂಬನಿಯನ್ನು ಹಾಸಿಗೆ, ದಿಂಬುಗಳಿಗೆ ಕುಡಿಸಿದ್ದು, ಆತನ ಇರುವನ್ನು ಸಾಬೀತು ಮಾಡಲು, ಅಲ್ಲಗಳೆಯಲು ಹತ್ತಿರದವರ, ಆತ್ಮೀಯರ ಪ್ರೀತಿಗೆ ಕಲ್ಲು ಹಾಕಿಕೊಂಡದ್ದು, ನನ್ನ, ಸುತ್ತಮುತ್ತಲಿನವರ ನೆಮ್ಮದಿಯನ್ನೆಲ್ಲ ಕದಡಿ ಹಾಕಿದ್ದು – ಇವೆಲ್ಲ ಆತನಿಗೆ ಕಂಡಿದ್ದೇ ಆದರೆ ಆತ ಅದೆಷ್ಟು ಗಟ್ಟಿಯಾಗಿ ಗಹಗಹಿಸಿ ನಕ್ಕಿರಬೇಕು!
“ಯಾವುದು ಸರಿ? ಮನುಷ್ಯ ದೇವರ ಸೃಷ್ಟಿಯಲ್ಲಿನ ದೊಡ್ಡ ಪ್ರಮಾದವೋ, ದೇವರು ಮನುಷ್ಯನ ಸೃಷ್ಟಿಯಲ್ಲಿನ ದೊಡ್ಡ ಪ್ರಮಾದವೋ” ಎಂದು ಪ್ರಶ್ನಿಸಿದ ಫ್ರೆಡ್ರಿಕ್ ನೀಶೆ. ಆತ ನನ್ನೇನಾದರೂ ಈ ಪ್ರಶ್ನೆಯನ್ನು ಕೇಳಿದ್ದನಾದರೆ ತಪ್ಪು ಯಾವುದು, ಸರಿ ಯಾವುದು ತಿಳಿದಿಲ್ಲ ಆದರೆ ಎಲ್ಲೋ ಒಂದು ಕಡೆ ದೊಡ್ಡ ಪ್ರಮಾದ ಆಗಿರುವುದು ಮಾತ್ರ ಸತ್ಯ ಎಂದಿರುತ್ತಿದ್ದೆ. ಎಷ್ಟೋ ವರ್ಷಗಳ ಕಾಲ ಅಪ್ಪಟ ಸಾತ್ವಿಕ ಆಸ್ತಿಕನಾಗಿ, ದೈವ ಕೃಪೆಯ ಕಳೆಯನ್ನು ಹೊತ್ತು, ಭಕ್ತಿ ಭಾವದಲ್ಲಿ ಮೈಮರೆತು, ದೇವರ ನಿಂದಿಸುವ ಜನರೆಲ್ಲ ಕುಷ್ಠ ರೋಗ ಬಂದು ಹಾಳಾಗಲಿ ಎಂದು ಪ್ರಾಮಾಣಿಕವಾಗಿ ಪ್ರಾರ್ಥಿಸುತ್ತಿದ್ದವ ನಾನು. ಹಾಗೆಯೇ ಉಗ್ರ ನಾಸ್ತಿಕತೆಯ ಉನ್ಮಾದದಲ್ಲಿ ಹುಚ್ಚೆದ್ದು ಕುಣಿದು, ಮರದಿಂದ ಮರಕ್ಕೆ ಹಾರುತ್ತ, ಸ್ವೇಚ್ಛೆಯ ಸವಿಯನ್ನು ಉಂಡು, ನಮ್ಮವರ ಕಂಡವರ ತೋಟವನ್ನೆಲ್ಲಾ ಹಾಳು ಮಾಡಿದವನೂ ನಾನೇ. ಈಗ ಎರಡೂ ಅತಿರೇಕಗಳು ಒಂದೇ ಕೋಲಿನ ಎರಡು ತುದಿಗಳೆಂಬ ಅರಿವಾಗಿರುವುದಾದರೂ ಒಮ್ಮೊಮ್ಮೆ ಕೊಲಾಟವಾಡುವ ಸೆಳೆತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದು.
ಹುಟ್ಟಿದ ಮಗುವಿನ ಜಾತಿ ಎಂಥದ್ದು, ಅದರ ನಂಬಿಕೆಗಳೇನು, ಅದು ಆಸ್ತಿಕನಾಗಿರುತ್ತದೋ, ನಾಸ್ತಿಕನಾಗಿರುತ್ತದೆಯೋ ತಿಳಿದಿಲ್ಲ. ಆದರೆ ಭಾರತದಲ್ಲಿ ಮಾತ್ರ ಅದು ಹುಟ್ಟಿದೊಡನೆಯೇ ಅದಕ್ಕೆ ಬಾಯಿಗಿಡುವ ನಿಪ್ಪಲು, ಸೊಂಟಕ್ಕೆ ಕಟ್ಟುವ ನ್ಯಾಪಿ ಪ್ಯಾಡಿನ ಜೊತೆಯಲ್ಲೇ ಜಾತಿ, ಧರ್ಮ, ನಂಬಿಕೆಯ ಉಡುಗೆಯನ್ನೂ ತೊಡಿಸಲಾಗುತ್ತದೆ. ಜೀವನಿರೋಧಕ ಔಷಧ ಡೋಸುಗಳ ಜೊತೆಗೆ ಶ್ರದ್ಧೆ, ನಂಬಿಕೆಗಳ ಡೋಸನ್ನು ನೀಡಲಾಗಿರುತ್ತದೆ. ಆ ಮಗು ಬೆಳೆದು ದೊಡ್ದದಾದಂತೆ ತೊಡಿಸಿದ ಬಟ್ಟೆಯನ್ನೇ ಮೈಯ ಚರ್ಮವಾಗಿಸಿಕೊಂಡು ಅದರ ಹಿರಿಮೆ ಗರಿಮೆಗಳನ್ನು, ಓರೆ ಕೋರೆಗಳನ್ನು ಚರ್ಚಿಸುತ್ತಲೇ, ಹೆಮ್ಮೆ ಪಡುತ್ತಲೇ, ಅಸೂಯೆ ಪಡುತ್ತಲೇ ಜೀವನ ಕಳೆದು ಬಿಡುತ್ತದೆ.
ನಾನು ಹುಟ್ಟಿನಿಂದ ಗುರುತಿಸಿಕೊಂಡ ಜಾತಿ, ಮನೆಯೆಂಬ ಮೊದಲ ಪಾಠಶಾಲೆಯಲ್ಲಿ ಕಲಿತ ದೈವ ಶ್ರದ್ಧೆಗಳು ಹಲವು ವರ್ಷಗಳವರೆಗೆ ತಮ್ಮ ಆಳ್ವಿಕೆಯನ್ನು ನಡೆಸಿದವು. ನಾನು ಬೆಳೆದ ಪರಿಸರ ಬಹುಮಟ್ಟಿಗೆ ನಗರ ಪರದೇಶವಾಗಿದ್ದರಿಂದ ಜಾತಿಯತೆಯ ಕಮಟು ಅಷ್ಟಾಗಿ ಗಮನಕ್ಕೆ ಬಂದಿರಲಿಲ್ಲ. ಜೊತೆಗೆ ತಾನಾಯಿತು ತನ್ನ ಕೆಲಸವಾಯಿತು ಎಂಬುದು ಮನೆಯಲ್ಲಿ ತುಂಬಾ ಹಿಂದಿನಿಂದಲೇ ಪಾಲಿಸುತ್ತಾ ಬಂದ ಪಾಲಿಸಿಯಾಗಿದ್ದರಿಂದ ಜಾತಿಯ ವಿಷಯವಾಗಿ ಅನವಶ್ಯಕ ಮನಕ್ಲೇಷಗಳು ಉಂಟಾಗುವ ಅವಕಾಶಗಳಿರಲಿಲ್ಲ. ಹಾಗೆಂದ ಮಾತ್ರಕ್ಕೆ ನಾನು ಜಾತಿ ಪ್ರಜ್ಞೆಯಿಂದ ಸಂಪೂರ್ಣ ಮುಕ್ತನಾಗಿದ್ದೆ, ಮುಕ್ತನಾಗಿರುವೆನೆಂದೂ ಅಲ್ಲ. ಚಿಕ್ಕಂದಿನಲ್ಲಿ ಹಲವು ಸಂದರ್ಭಗಳಲ್ಲಿ ಜಾತಿಯ ಹೆಮ್ಮೆ ನನ್ನನ್ನು ತಲೆ ತಿರುಗಿಸಿದ್ದಿದೆ. ಅವರ ಮನೇಲಿ ಊಟ ಮಾಡಬಾರದು, ಇವರನ್ನು ಮುಟ್ಟಿಸಿಕೊಳ್ಳಬಾರದು, ಅವನನ್ನು ಫ್ರೆಂಡ್ ಮಾಡಿಕೊಳ್ಳಬಾರದು ಎಂದು ಹೇಳಿಕೊಡಲು ನನ್ನ ಅಪ್ಪ ಅಮ್ಮರಿಗೆ ಸಂಕೋಚವಾಗುತ್ತಿತ್ತೋ ಅಥವಾ ಅಷ್ಟೆಲ್ಲಾ ಗಮನ ಕೊಡದಷ್ಟು ಅವರು ಲಿಬರಲ್ ಆಗಿದ್ದರೋ ತಿಳಿಯದು ಆದರೆ ಅಂಥ ಕಟ್ಟಪಾಡುಗಳೇನೂ ನನ್ನ ಬಾಲ್ಯದಲ್ಲಿರಲಿಲ್ಲ. ಆದರೆ ಒಂದು ಹೊತ್ತಿನ ಊಟವನ್ನು ಮಾಡದೆ ಉಪವಾಸ ಮಾಡಿ ತನ್ನದೇ ನಿಗ್ರಹ ಶಕ್ತಿಯ ಬಗ್ಗೆ ಹೆಮ್ಮೆ ಪಡುತ್ತಾ, ತನ್ನಷ್ಟು ಶ್ರಮಜೀವಿ ಯಾರೂ ಇಲ್ಲ ಎಂದು ಭ್ರಮಿಸುವಂತೆ ಕೆಲವೊಮ್ಮೆ ಇಲ್ಲದ ಕಟ್ಟುಪಾಡುಗಳನ್ನು ಕಲ್ಪಿಸಿಕೊಂಡು ಅವನ್ನು ಪಾಲಿಸುವ ಮೂಲಕ ಜಾತಿಯ ಗೌರವ ಉಳಿಸುವ, ಸಮಾಜದ ಆರೋಗ್ಯ ಕಾಪಾಡುವ ಪ್ರಯತ್ನಗಳನ್ನೂ ಮಾಡಿದ್ದುಂಟು. ಪ್ರೈಮರಿ ಶಾಲೆಯಲ್ಲಿ ಮಧ್ಯಾನ ಎಲ್ಲರೂ ಒಟ್ಟಿಗೆ ಕಲೆತು ಊಟ ಮಾಡುವಾಗ ಬುದ್ಧಿಗೆ ಗೋಚರವಾದ ಮಟ್ಟಿಗೆ ಮಡಿ-ಮೈಲಿಗೆಯನ್ನು ತೋರ್ಪಡಿಸಿ ಒಂದಷ್ಟು ಮಂದಿ ಗೆಳೆಯರನ್ನು ದಿಗ್ಭ್ರಮೆಗೊಳಿಸಿ, ಉಳಿದವರಿಗೆಲ್ಲಾ ತನ್ನ ಜಾತಿ ಯಾವುದೆಂದು ಸೂಚ್ಯವಾಗಿ ತಿಳಿಸಿ ಶಿಸ್ತು ಪಾಲಿಸಿದ ಹೆಮ್ಮೆಯನ್ನು ಉಂಡದ್ದಿದೆ. ಪಾಲಿಸಬೇಕಾದ ಶಿಸ್ತನ್ನೇ ನಿಯತ್ತಾಗಿ ನಿರ್ವಹಿಸಲಾಗದ ನನ್ನಂಥವನಿಗೆ ಸ್ವಯಂ ಸೃಷ್ಟಿಸಿಕೊಂಡ ಶಿಸ್ತನ್ನು ಮುರಿಯುವುದಕ್ಕೆ ಬಹಳ ಸಮಯ ಬೇಕಾಗುತ್ತಿರಲಿಲ್ಲ. ಕುಟುಂಬ ವಲಯದ ಸಮಾರಂಭಗಳಲ್ಲಿ ಜಾತಿಯ ಹಿರಿಮೆಯ ವಿಜೃಂಭಣೆಯನ್ನು ಮಾಡುವಾಗ, ಜಾತಿಯ ಕಾರಣವಾಗಿ ಜನ ಮನ್ನಣೆ ಸಿಕ್ಕುವಾಗ, ‘ಓ ಆ ಪೈಕಿಯವನಾ ನೀನು… ಅದಕ್ಕೆ ಹೀಗೆ…’ ಹೊಗಳುವಾಗಾ ಯಾವ ಸಂಕೋಚ, ನಾಚಿಕೆ ಕಾಣುತ್ತಿರಲಿಲ್ಲವಾದರೂ ಸ್ವಜಾತಿಯ ಹೆಮ್ಮೆ ಎಂದಿಗೂ ನನ್ನ ಪ್ರಜ್ಞೆಯಲ್ಲಿ ಸಕ್ರಿಯವಾಗಿರುತ್ತಿರಲಿಲ್ಲ.
ಜಾತಿ ಪ್ರಜ್ಞೆಯ ಜೊತೆ ದೈವಭಕ್ತಿಗೂ ಮನೆಯೇ ಮೊದಲ ಪಾಠ ಶಾಲೆ. ಮೌಲ್ಯಗಳು, ಆದರ್ಶಗಳ ಜೊತೆಯಲ್ಲೇ ಅಥವಾ ಅವಕ್ಕೆ ಪೂರಕವಾಗಿಯೇ ನಮ್ಮ ದೈವ ಶ್ರದ್ಧೆ, ಧರ್ಮ ಶ್ರದ್ಧೆ ರೂಪುಗೊಳ್ಳುತ್ತದೆ. ದೇವರೆಡೆಗೆ ಭಯ, ಭಕ್ತಿ, ಧರ್ಮ ಗ್ರಂಥಗಳ ಬಗೆಗಿನ ಭಯ ಮಿಶ್ರಿತ ಕುತೂಹಲ, ದೆವ್ವ ಪಿಶಾಚಿ ಅಪಶಕುನಗಳೆಡೆಗಿನ ಭಯ, ಪವಾಡ ಪುರುಷರು, ಸಂತರು ಬಾಬಾಗಳ ಕುರಿತ ಮಮಕಾರ, ಭಕ್ತಿ ಇವೆಲ್ಲವೂ ಸಂಸ್ಕಾರದ ಹೆಸರಿನಲ್ಲಿ ಹೇರಲ್ಪಡುವ ಗುಣಗಳೇ ಆಗಿವೆ.ವ್ಯಕ್ತಿತ್ವ, ಸ್ವತಂತ್ರ ಆಲೋಚನೆ ರೂಪುಗೊಳ್ಳುವ ಮೊದಲಿನಿಂದಲೇ ಆರಂಭವಾಗುವ ಈ ಶಿಕ್ಷಣ ನಮ್ಮಲ್ಲಿ ಬೆಳೆಸುವ ದೃಷ್ಟಿಕೋನ, ರಾಗ ದ್ವೇಷ ಮುಂದೆ ನಾವು ಬೆಳೆದು ದೊಡ್ಡವರಾಗಿ ಅದೆಷ್ಟೇ ವೈಚಾರಿಕರಾದರೂ, ಅದೆಷ್ಟೇ ವಸ್ತುನಿಷ್ಠತೆ, ನಿಷ್ಟುರತೆಯನ್ನು ಬೆಳೆಸಿಕೊಂಡರೂ ನಮ್ಮ ಆಲೋಚನೆ, ನಿರ್ಧಾರಗಳಲ್ಲಿ ತನ್ನ ಪ್ರಭಾವವನ್ನು ಬೀರಿಯೇ ತೀರುತ್ತದೆ. ಬಾಲ್ಯದಲ್ಲಿ ಪ್ರಾರ್ಥನೆ, ಪುರಾಣ ಕಥೆಗಳು, ದೇವರ ಲೀಲಾ ವರ್ಣನೆ, ತಂದೆ ತಾಯಿಯ, ಪ್ರೀತಿಪಾತ್ರರಾದವರ, ಗುರುಹಿರಿಯರ ಹಿತನುಡಿಗಳು ಭಾವನಾತ್ಮಕವಾಗಿ ನಮ್ಮನ್ನು ಬೆಸೆದುಕೊಂಡು ನಮ್ಮ ವ್ಯಕ್ತಿತ್ವದ ಮೇಲೆ ಬಹುದೊಡ್ಡ ಪ್ರಭಾವವನ್ನು ಉಂಟು ಮಾಡುತ್ತವೆ. ಸುಪ್ತ ಮನಸ್ಸನ್ನು ಪ್ರಭಾವಿಸಿ ಅವ್ಯಕ್ತವಾಗಿ ನಮ್ಮನ್ನೊಂದು ಪೂರ್ವಾಗ್ರಹಕ್ಕೆ ಈಡು ಮಾಡಿರುತ್ತವೆ.
ಚಿಕ್ಕಂದಿನಲ್ಲೇ ಮೌಲ್ಯಗಳ, ಸಂಸ್ಕಾರದ ಹೆಸರಿನಲ್ಲಿ ಮಕ್ಕಳ ಮೇಲೆ ಧಾರ್ಮಿಕ ನಂಬಿಕೆಗಳನ್ನು, ಅಂಧವಿಶ್ವಾಸವನ್ನು, ಜಾತಿ ಪ್ರಜ್ಞೆಯನ್ನು, ನಮ್ಮ ಪೂರ್ವಾಗ್ರಹಗಳನ್ನು, ಒಳಿತು ಕೆಡುಕುಗಳ ತೀರ್ಮಾನವನ್ನು ಹೇರುವುದು ಅದೆಷ್ಟರ ಮಟ್ಟಿಗೆ ಸರಿ ಎನ್ನುವ ನಿಷ್ಕರ್ಷೆಗೆ ಇಳಿಯುವುದು ಬೇಡ. ಆದರೆ ಸದ್ಯಕ್ಕೆ ಆ ಹೇರಿಕೆಯೆಂಬುದು ಜೀವನ ಪೂರ್ತಿ ನಮ್ಮ ಪ್ರಜ್ಞೆಯ ಭಾಗವಾಗಿರುತ್ತದೆ, ನಮ್ಮೆಲ್ಲಾ ಆಲೋಚನೆ, ಇಷ್ಟ ಕಷ್ಟಗಳು, ಆಯ್ಕೆ- ನಿರ್ಧಾರಗಳ ಮೇಲೆ ಪ್ರಭಾವ ಬೀರುತ್ತದೆ ಎಂಬ ಅರಿವಿದ್ದರೆ ಸಾಕು.
(ಮುಂದಿನ ಸಂಚಿಕೆಗೆ)
– ‘ಅಂತರ್ಮುಖಿ’
ಹೈಸ್ಕೂಲು ದಿನಗಳಿಂದಲೂ ಪತ್ರಕರ್ತರ ಬಗ್ಗೆ ನನಗೆ ವಿಲಕ್ಷಣವಾದ ಕುತೂಹಲ ಬೆಳೆದಿತ್ತು. ಯಾವ ಹಾಲಿವುಡ್ ಹೀರೋನ ಸಾಹಸಗಳಿಗೂ ಕಡಿಮೆಯಿರದ ‘ಹಾಯ್ ಬೆಂಗಳೂರ್’ ಸಂಪಾದಕರಾದ ರವಿ ಬೆಳಗೆರೆಯವರ ಚಿತ್ರ ವಿಚಿತ್ರ ಸಾಧನೆಗಳು, ಮೈಲುಗಲ್ಲುಗಳು ಹಾಗೂ ರೋಮಾಂಚನಕಾರಿ ಸಾಹಸಗಳು, ಅವುಗಳಷ್ಟೇ ಥ್ರಿಲ್ಲಿಂಗಾಗಿರುತ್ತಿದ್ದ ಅವರ ಬರವಣಿಗೆ ಪತ್ರಕರ್ತ ಎಂದರೆ ಸಿನೆಮಾದಲ್ಲಿ ಅಕರಾಳ-ವಿಕಾರಾಳವಾಗಿ ಮುಖಭಾವ ಪ್ರಕಟಿಸುತ್ತಾ ಆಕ್ರಮಣ ಮಾಡುವ ಹತ್ತಾರು ಮಂದಿ ದಾಂಢಿಗರಿಗೆ ಒದೆ ಕೊಟ್ಟು ಗರಿ ಮುರಿಯದ ಶರ್ಟನ್ನೊಮ್ಮೆ ಕೊಡವಿ ನಿಂತು ಕೈ ಬೀಸುವ ಸಣಕಲ ಹೀರೋನ ಹಾಗೆ ಎಂಬ ಭ್ರಮೆಯನ್ನು ಮೂಡಿಸುತ್ತಿದ್ದವು. ಪತ್ರಿಕೋದ್ಯಮವೆಂಬುದು ಅತ್ಯಂತ ತ್ಯಾಗಮಯವಾದ, ನಿಸ್ವಾರ್ಥದಿಂದ ಕೂಡಿದ ಉದ್ಯಮ ಎಂಬುದು ಆಗಿನ ಗ್ರಹಿಕೆಯಾಗಿತ್ತು. ಸತ್ಯದ ಉಪಾಸಕರನ್ನು ಪತ್ರಕರ್ತರು ಎಂಬ ಹೆಸರಿನಿಂದ ಕರೆಯುತ್ತಾರೆ, ಜಗತ್ತಿಗೆ ಎಂದಾದರೂ ಪ್ರಾಮಾಣಿಕತೆ, ನಿಷ್ಠುರತೆ, ವಸ್ತುನಿಷ್ಠತೆ, ಧೈರ್ಯಗಳ ಕೊರತೆ ಬಿದ್ದರೆ ಇವರಿಂದ ಕಡ ಪಡೆಯಬಹುದು ಎಂಬುದು ಮುಗ್ಧ ನಂಬಿಕೆಯಾಗಿತ್ತು. ಪತ್ರಿಕೆಗಳಲ್ಲಿ ಪ್ರಕಟವಾಗುವುದು ಗಾಸ್ಪೆಲ್ ಟ್ರುಥ್ ಎಂದು ಈಗಲೂ ಶ್ರದ್ಧೆಯಿಂದ ನಂಬುವ ‘ಭಕ್ತಾದಿ’ಗಳಲ್ಲಿ ನಾನೂ ಒಬ್ಬನಾಗಿದ್ದೆ. ಪತ್ರಿಕೆಗಳ ಬಗ್ಗೆ, ಪತ್ರಕರ್ತರ ಬಗ್ಗೆ ನನ್ನ ಕ್ರೇಜು ಅದೆಷ್ಟರ ಮಟ್ಟಿಗೆ ಹುಚ್ಚುತನದ ಪರಿಧಿಯನ್ನು ಮುಟ್ಟುತ್ತಿತ್ತೆಂದರೆ ನ್ಯೂಸ್ ಸ್ಟಾಂಡಿನಲ್ಲಿ ಕಣ್ಣಿಗೆ ಬೀಳುವ ಪ್ರತಿಯೊಂದು ಹೊಸ ಪತ್ರಿಕೆಯನ್ನೂ ತಂದಿಟ್ಟುಕೊಂಡು ಜೋಪಾನ ಮಾಡುತ್ತಿದ್ದೆ.
ಅಳಿಕೆಯಲ್ಲಿ ಕಾಲೇಜು ಓದುವುದಕ್ಕೆ ಸೇರಿದಾಗ ನನ್ನ ಅನೇಕ ಹುಚ್ಚಾಟಗಳಿಗೆ ಅನಿವಾರ್ಯವಾಗಿ ಕಡಿವಾಣ ಹಾಕಿಕೊಳ್ಳಬೇಕಿತ್ತು. ಕಾಲೇಜಿನ ಇನ್ನೂರು ಚಿಲ್ಲರೆ ಹುಡುಗರಿಗೆ ಸೇರಿ ಅಲ್ಲಿಗೆ ನಾಲ್ಕು ಪೇಪರುಗಳು ಬರುತ್ತಿದ್ದವು. ಎರಡು ಇಂಗ್ಲೀಷು, ಎರಡು ಕನ್ನಡ. ಜೊತೆಗೆ ಜಗತ್ತಿನಲ್ಲಿ ಇರಬಹುದಾದ ಅತ್ಯಂತ ಸಪ್ಪೆಯಾದ, ಎಂಥಾ ಸಾಹಸಿಗಾದರೂ ಬೋರು ಹೊಡೆಸುವ ಆಧ್ಯಾತ್ಮಿಕ ಮಾಸ ಪತ್ರಿಕೆಗಳು ಬಿಟ್ಟರೆ ಬೇರಾವ ಸರಕೂ ನಮ್ಮ ಕೈಗೆ ಸಿಕ್ಕುತ್ತಿರಲಿಲ್ಲ. ಇದ್ದುದರಲ್ಲಿ ಟೈಮ್ಸಾಫಿಂಡಿಯಾದ ಮನರಂಜನೆಯ ಪುಟಗಳು, ವಿಜಯಕರ್ನಾಟಕದ ಕೆಲವು ಜನಪ್ರಿಯ ಅಂಕಣಗಳು ನಮ್ಮ ಹಸಿವನ್ನು ತಣಿಸುತ್ತಾ ನಮ್ಮ ಪ್ರಾಣವನ್ನು ಉಳಿಸಿದ್ದವು ಎನ್ನಬಹುದು! ಬೆಳಗಿನ ತಿಂಡಿಯನ್ನು ಮುಗಿಸಿಕೊಂಡು ಒಲಂಪಿಕ್ಸಿನಲ್ಲಿ ಓಡಿದಂತೆ ನಾವು ರೀಡಿಂಗ್ ರೂಮಿಗೆ ಓಡುತ್ತಿದ್ದೆವು. ಸಾಮಾನ್ಯವಾಗಿ ಈ ರೇಸಿನಲ್ಲಿ ಭಾಗವಹಿಸುವವರ ಸಂಖ್ಯೆ ನಾಲ್ಕಕ್ಕಿಂತ ಹೆಚ್ಚು ಇರುತ್ತಿರಲಿಲ್ಲ. ಒಂದು ವೇಳೆ ಈ ಸಂಖ್ಯೆ ನಾಲ್ಕನ್ನು ದಾಟಿ ಹತ್ತು-ಹದಿನೈದರ ಗಡಿಯನ್ನು ಮುಟ್ಟಿತು ಎಂದರೆ ಹಿಂದಿನ ದಿನ ಯಾವುದೋ ಕ್ರಿಕೆಟ್ ಮ್ಯಾಚ್ ನಡೆದಿರಬೇಕು ಎಂತಲೇ ತಿಳಿಯಬೇಕು. ಪ್ರಪಂಚದ ಹೊಸ ಹೊಸ ಆವಿಷ್ಕಾರಗಳನ್ನು, ವಿದ್ಯಮಾನಗಳನ್ನು ಅರಗಿಸಿಕೊಂಡು ಗಟ್ಟಿಗರಾಗಲು ತಯಾರಾಗುತ್ತಿದ್ದ ನಮ್ಮಂತಹ ನೂರಾರು ವಿದ್ಯಾರ್ಥಿಗಳಿಗೆ ಒಂದು ದಿನದ ಕ್ರಿಕೆಟ್ ಪಂದ್ಯದಲ್ಲಿ ಯಾರು ಗೆದ್ದರು ಎಂಬುದು ತಿಳಿಯುವುದಕ್ಕೆ ಸುಮಾರು ಹತ್ತು ಹನ್ನೆರಡು ತಾಸು ಬೇಕಾಗಿತ್ತು ಎಂಬುದನ್ನು ತಿಳಿದರೆ ಸಂಪರ್ಕ ಕ್ರಾಂತಿಯ ಪಿತಾಮಹ ಎದೆ ಒಡೆದು ಸಾಯುತ್ತಿದ್ದುದು ಖಂಡಿತ!
ಹೀಗೆ ಸರ್ವೈವಲ್ ಆಫ್ ದ ಫಿಟ್ಟೆಸ್ಟ್ ಎಂಬ ಡಾರ್ವಿನನ್ನ ಸಿದ್ಧಾಂತವನ್ನು ಅತ್ಯಂತ ಸಮರ್ಕಪವಾಗಿ ಅನುಷ್ಠಾನಕ್ಕೆ ತಂದು ಸುದ್ದಿ ಸಮಾಚಾರಗಳನ್ನು ತಿಳಿದುಕೊಂಡು, ಜಗತ್ತಿನ ವಿದ್ಯಮಾನದ ಬಗ್ಗೆ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು ಭವ್ಯ ಭಾರತದ ಜವಾಬ್ದಾರಿಯುತ ಪ್ರಜೆಯಾಗುವ ಹಾದಿಯಲ್ಲಿ ಸಮರ್ಪಕವಾಗಿ ನಡೆಯುತ್ತಿದ್ದೇವೆ ಎಂದು ನಮ್ಮನ್ನು ನಾವು ಸಂತೈಸಿಕೊಳ್ಳುತ್ತಿದ್ದೆವು. ಹೈಸ್ಕೂಲಿನಲ್ಲಿದ್ದಾಗ ಕಂಡಕಂಡ ಪತ್ರಿಕೆ, ಮ್ಯಾಗಜೀನುಗಳನ್ನು ಗುಡ್ಡೆ ಹಾಕಿಕೊಂಡು ಶೂನ್ಯ ಸಂಪಾದನೆ ಮಾಡುತ್ತಿದ್ದ ನನಗೆ ನಮ್ಮ ಕಾಲೇಜಿನ ರೀಡಿಂಗ್ ರೂಮೆಂಬುದು ಪ್ರತಿದಿನ ಮೃಷ್ಟಾನ್ನ ತಿಂದು ಹಾಲಿನಲ್ಲಿ ಕೈತೊಳೆಯುವವನಿಗೆ ಗಂಜಿ ಕುಡಿಸಿ ಕೈತೊಳೆಯಲು ಬೀದಿ ನಲ್ಲಿ ತೋರಿದ ಹಾಗಾಗಿತ್ತು. ಆದರೂ ಮರುಭೂಮಿಯಲ್ಲಿನ ಓಯಸ್ಸಿಸಿನ ಹಾಗೆ ನನ್ನ ಹಾಗೂ ನನ್ನಂಥ ತಿಕ್ಕಲರ ದಾಹವನ್ನು ತೀರಿಸುವುದಕ್ಕಾಗಿ ವಿಜಯ ಕರ್ನಾಟಕ, ಟೈಮ್ಸಾಫಿಂಡಿಯ, ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್‌ಗಳು ಕೈಲಾದ ಪ್ರಯತ್ನ ಮಾಡುತ್ತಿದ್ದವು. ವಿಜಯ ಕರ್ನಾಟಕವನ್ನು ಅದೆಷ್ಟು ಗಾಢವಾಗಿ ಓದುತ್ತಿದ್ದೆವೆಂದರೆ ಪತ್ರಿಕೆಯ ಮಧ್ಯದ ಸಂಪಾದಕೀಯ ಪುಟವನ್ನು ನೋಡಿಯೇ ಇವತ್ತು ಯಾವ ದಿನ ಎಂಬುದನ್ನು ಹೇಳಬಲ್ಲ ಕೌಶಲ್ಯವನ್ನು ಸಂಪಾದಿಸಿಕೊಂಡಿದ್ದೆವು. ಗುರುವಾರವೆಂದರೆ ವಿಶ್ವೇಶ್ವರ ಭಟ್ಟರ ನೂರೆಂಟು ಮಾತು, ಆ ಜಾಗದಲ್ಲಿ ಚೂಪು ನೋಟದ ಬೈತೆಲೆ ಕ್ರಾಪಿನ ಯುವಕನೊಬ್ಬನ ಫೋಟೊ ಪ್ರಕಟವಾಗಿದೆಯೆಂದರೆ ನಿಸ್ಸಂಶಯವಾಗಿ ಅದು ‘ಬೆತ್ತಲೆ ಜಗತ್ತು’ ಎಂದು ಹೇಳಿಬಿಡಬಹುದಿತ್ತು,ಜೊತೆಗೆ ಅಂದು ಶನಿವಾರ ಎಂಬುದನ್ನು ಯಾವ ಪಂಚಾಂಗದ ನೆರವಿಲ್ಲದೆ ಹೇಳಿಬಿಡುತ್ತಿದ್ದೆವು. ಭಾನುವಾರವೆಂಬ ‘ಸಬ್ಬತ್ ದಿನ’ವನ್ನು ನಾವು ಪರಮ ಶ್ರದ್ಧಾವಂತ ಯಹೂದಿಗಿಂತ ಶ್ರದ್ಧೆಯಿಂದ ಆಚರಿಸುತ್ತಿದ್ದೆವು. ಆ ದಿನ ಕೆಲಸಕ್ಕೆ ರಜೆ. ಯಾವ ಕೆಲಸವನ್ನೂ ಮಾಡಬಾರದು ಎಂಬುದು ಯಹೂದಿಗಳ ನಂಬಿಕೆ. ನಾವದನ್ನು ಅಕ್ಷರಶಃ ಪಾಲಿಸುತ್ತಿದ್ದೆವು. ಭಾನುವಾರ ನಮ್ಮ ಪಠ್ಯಪುಸ್ತಕಗಳ ಮುಖವನ್ನೂ ನೋಡುವ ಕಷ್ಟ ತೆಗೆದುಕೊಳ್ಳುತ್ತಿರಲಿಲ್ಲ. ರೆಕಾರ್ಡ್ ಬರೆಯುವುದಂತೆ, ನೋಟ್ಸ್ ಮಾಡಿಕೊಳ್ಳುವುದಂತೆ, ಸಿಇಟಿಗೆ ಓದಿಕೊಳ್ಳುವುದಂತೆ – ಹೀಗೆ ನಾನಾ ಕೆಲಸಗಳಲ್ಲಿ ಮುಳುಗಿ ಹೋಗಿರುತ್ತಿದ್ದ ಓರಗೆಯ ಗೆಳೆಯರನ್ನು ಅಧರ್ಮಿಯನ್ನು ಕನಿಕರದಿಂದ, ಸಹಾನುಭೂತಿಯಿಂದ ನೋಡುವ ಧರ್ಮಿಷ್ಟರ ಹಾಗೆ ನೋಡುತ್ತಿದ್ದೆವು. ಮೌನವಾಗಿ ‘ದೇವರೇ ತಾವೇನು ಮಾಡುತ್ತಿದ್ದೇವೆಂಬುದನ್ನು ಇವರರಿಯರು, ಇವರನ್ನು ಕ್ಷಮಿಸು’ ಎಂದು ಪ್ರಾರ್ಥಿಸಿ ನಮ್ಮ ‘ಸಬ್ಬತ್’ ಆಚರಣೆಯಲ್ಲಿ ಭಕ್ತಿಯಿಂದ ಮಗ್ನರಾಗುತ್ತಿದ್ದೆವು.
ನಮ್ಮ ಭಾನುವಾರದ ‘ಸಬ್ಬತ್’ ಆಚರಣೆಗೆ ಕೆಲವೊಂದು ಅನುಕೂಲ ಸಿಂಧುಗಳನ್ನು ಮಾಡಿಕೊಂಡಿದ್ದೆವೆಂಬುದನ್ನು ತಿಳಿಸಬೇಕು. ಆ ದಿನ ಯಾವ ಕೆಲಸವನ್ನೂ ಮಾಡಬಾರದು (ಉಳಿದ ದಿನಗಳಲ್ಲಿ ನಾವು ಮಾಡುತ್ತಿದ್ದದ್ದು ಅಷ್ಟರಲ್ಲೇ ಇತ್ತು!) ಎಂದು ನಾವು ನಿಯಮ ವಿಧಿಸಿಕೊಂಡಿದ್ದರೂ ಸಾಪ್ತಾಹಿಕ ಸಂಚಿಕೆಗಳನ್ನು ಓದುವುದಕ್ಕಾಗಿ ನಿಯಮವನ್ನು ಸಡಿಲಿಸಿಕೊಳ್ಳುತ್ತಿದ್ದೆವು. ಕೆಲವೊಮ್ಮೆ ನಾನಾ ಮೂಲಗಳಿಂದ ಅಕ್ರಮವಾಗಿ ಸಂಪಾದಿಸಿಕೊಂಡಿರುತ್ತಿದ್ದ ‘ಹಾಯ್ ಬೆಂಗಳೂರು’, ಮಾಂಡೋವಿ, ಹೇಳಿ ಹೋಗು ಕಾರಣ, ಪರಿಸರದ ಕಥೆ, ವಿಶ್ವ ವಿಸ್ಮಯದಂತಹ ಪುಸ್ತಕಗಳ ಓದಿಗಾಗಿ ನಮ್ಮ ಭಾನುವಾರವನ್ನು ಮೀಸಲಿಡುತ್ತಿದ್ದೆವು. ತರಗತಿಗೆ ಸಂಬಂಧ ಪಟ್ಟ ಪುಸ್ತಕ ಓದುವುದು ಬಿಟ್ಟು ಕೆಲಸಕ್ಕೆ ಬಾರದವುಗಳನ್ನು ಓದುತ್ತಿದ್ದ ನಮ್ಮನ್ನು ಕಂಡು ಅನೇಕ ಗೆಳೆಯರು ಪ್ರಾಮಾಣಿಕವಾಗಿ ಸಂತಾಪ ಸೂಚಿಸುತ್ತಿದ್ದರಾದರೂ ನಮ್ಮ ಸಾಂಕ್ರಾಮಿಕ ಖಾಯಿಲೆ ಅವರಿಗೂ ತಗುಲಿಕೊಂಡೀತೆಂದು ಹತ್ತಿರ ಬರಲು ಹೆದರುತ್ತಿದ್ದುದರಿಂದ ಭಾನುವಾರಗಳಲ್ಲಿ ನಾವು ಅವರ ‘ಧರ್ಮ ಬೋಧನೆ’ಯಿಂದ ಪಾರಾಗುತ್ತಿದ್ದೆವು!
Ignorance is bliss ಎಂದು *ತಿಳಿದವರು* ಹೇಳುತ್ತಾರೆ. ಅದರಂತೆ ಆ ತಿಳುವಳಿಕೆಯಿಲ್ಲದ ದಿನಗಳಲ್ಲೇ ನಮ್ಮ ಬದುಕು pause ಆಗಿಬಿಟ್ಟಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅನ್ನಿಸುತ್ತದೆ. ತಿಳುವಳಿಕೆ ಬರುತ್ತಾ ನಾವು ಭಾವಿಸಿಕೊಂಡಿದ್ದ ದೇವ-ದೇವತೆಗಳ ನಿಜಬಣ್ಣ ಬಯಲಾಗತೊಡಗಿತು. ಪರದೆಯ ಮೇಲೆ ಕಂಡ ಬೆಳ್ಳಿ ಬಣ್ಣದ ಹೀರೋ ಮೇಕಪ್ ಕಳಚಿ ಎದುರು ಬಂದಾಗ ಆಗುವ ಆಘಾತ ಪತ್ರಕರ್ತರ ನಿಜಮುಖ ತಿಳಿದಾಗ ಆಗತೊಡಗಿತು. ಹಿಂದೆ ಭಾವಿಸಿದ್ದ ಹಾಗೆ ಪತ್ರಕರ್ತರು ಜಗತ್ತಿಗೆ ಪ್ರಾಮಾಣಿಕತೆ, ಅಕೌಂಟೆಬಿಲಿಟಿ, ದಕ್ಷತೆ ಮುಂತಾದ ಸದ್ಗುಣಗಳನ್ನು, ಆದರ್ಶದ ಸಗಟನ್ನು ಸಾಲ ಕೊಡಬಲ್ಲ ಧನಿಕರು ಅಲ್ಲ ಎಂಬುದು ತಿಳಿಯತೊಡಗಿತು. ಅಸಲಿಗೆ ಬಹುತೇಕರಲ್ಲಿ ಈ ದಾಸ್ತಾನಿನ ಕೊರತೆ ತೀವ್ರವಾಗಿರುತ್ತದೆ. ಹಲವು ಸಂದಭ್ರಗಳಲ್ಲಿ ನಮ್ಮಂತಹ ಸಾಮಾನ್ಯರು ಒಟ್ಟುಗೂಡಿ ಕೈಲಾದ ಸಹಾಯ ಮಾಡದ ಹೊರತು ಅವರು ಸಂಪೂರ್ಣ ದಿವಾಳಿಯೆದ್ದು ಹೋಗುತ್ತಾರೆ ಎಂಬ ಜ್ಞಾನೋದಯವಾಗುತ್ತಿದ್ದ ಹಾಗೆ ಕಟ್ಟಿಕೊಂಡಿದ್ದ ಆಶಾಗೋಪುರಗಳು ಕಣ್ಣ ಮುಂದೆ ಕುಸಿದು ಬೀಳಲು ಶುರುವಾದವು. ಇಡೀ ಕಟ್ಟಡವೇ ಕುಸಿದು ಬಿದ್ದ ನಂತರವೂ ಆಕಾಶದತ್ತ ಮುಖ ಮಾಡಿ ಅಪರಿಮಿತ ಆಶಾಭಾವದೊಂದಿಗೆ ಹಲ್ಲು ಕಚ್ಚಿ ಹಿಡಿದು ನಿಂತಿರುವ ಪಿಲ್ಲರುಗಳ ಹಾಗೆ ಅಲ್ಲಲ್ಲಿ ಕಂಡ ಕೆಲವು ಅಪವಾದಗಳು ನಿಂತಿವೆಯಾದರೂ ಮನಸ್ಸನ್ನೆಲ್ಲಾ ಕುಸಿದು ಬಿದ್ದ ಕಟ್ಟಡದ ಧೂಳು ಆಕ್ರಮಿಸಿಕೊಂಡಿದೆ.
ಹಾಗೆ ಅರ್ಧಕ್ಕೆ ನಿಂತ ಕಥೆಗಳ ಕುರಿತು
Posted ಏಪ್ರಿಲ್ 24, 2008
on:ನಿನ್ನೆಯ ನೆನಪು ನಮ್ಮ ನಾಳೆಗೆ ಬದುಕಿನ ಹಾದಿಗೆ ಬೆಳಕಾಗಲೇ ಬೇಕಂತೇನೂ ಇಲ್ಲ. ಆದರೆ ನೆನಪುಗಳನ್ನು ಮೆಲಕು ಹಾಕುವುದರಲ್ಲಿಯೇ ಎಂಥದ್ದೋ ಒಂದು ಬಗೆಯ ಸಂತೃಪ್ತಿಯಿದೆ. ಸಮಾಧಾನವಿದೆ. ಪುಳಕವಿದೆ. ಕಳೆದ ದಿನಗಳ ನೆನಪಿನ ಹಂಗಿನಲ್ಲಿ ಮೆಲುವಾಗಿ ನರಳುವ ಅಂಕಣ ‘ಬೀಥೆ ಹುಯೆ ದಿನ್…’.
ತಮ್ಮ ಬರವಣಿಗೆಯ ಪ್ರಾರಂಭವನ್ನು ನಯವಾಗಿ ನೇವರಿಸುತ್ತಾ ಅರ್ಧಕ್ಕೆ ನಿಲ್ಲಿಸಿದ ಕಥೆಗಳ ನೆನಪನ್ನು ಮೆಲುಕು ಹಾಕಿದ್ದಾರೆ ‘ಅಂತರ್ಮುಖಿ.’
ಬರವಣಿಗೆಯ ಗೀಳು ನನಗೆ ಹತ್ತನೆಯ ಎಂಟನೆಯ ತರಗತಿಯ ಆಸುಪಾಸಿನಲ್ಲೇ ಹತ್ತಿಕೊಂಡಿತ್ತಾದರೂ ಹತ್ತನೆಯ ತರಗತಿಗೆ ಕಾಲಿಡುವಷ್ಟರಲ್ಲಿ ಅದು ಜ್ವರದಂತೆ ಏರಿತ್ತು. ಮನಸ್ಸಿಗೆ ಬಂದ ವಿಚಾರಗಳನ್ನೆಲ್ಲಾ ಅಕ್ಷರಕ್ಕಿಳಿಸುವ ಚಟ ಹತ್ತಿಕೊಂಡು ಬಿಟ್ಟಿತ್ತು. ಅದೊಂದು ರೀತಿಯಲ್ಲಿ emotional outlet ಆಗಿ ಕೂಡ ಸಹಾಯ ಮಾಡುತ್ತಿತ್ತು. ಮನೆಯಲ್ಲಿ ಚಿಕ್ಕ ಪುಟ್ಟದ್ದಕ್ಕೆ ಸಿಟ್ಟಾದಾಗ ನೇರವಾಗಿ ರೂಮಿಗೆ ಹೋಗಿ ಬಾಗಿಲು ಗಿಡಿದುಕೊಂಡು ನನ್ನ ಸಿಟ್ಟನ್ನೆಲ್ಲಾ ಅಕ್ಷರಕ್ಕಿಳಿಸಿ ಡರಿಯ ಪುಟಗಳನ್ನು ತುಂಬಿಸುತ್ತಿದ್ದೆ. ವಾದ ಮಾಡುವಾಗ, ಅಪ್ಪನಿಗೆ ಎದುರು ಮಾತನಾಡುವಾಗ ನನಗೆ ವಿಪರೀತ ಭಾವೋದ್ವೇಗ ಉಂಟಾಗುತ್ತಿತ್ತು. ಮಾತಿಗೂ ಮುನ್ನ ಅಳು ಬಂದುಬಿಡುತ್ತಿತ್ತು. ಕಣ್ಣಲ್ಲಿ ನೀರು ತುಂಬಿಬಿಡುತ್ತಿತ್ತು. ಮಾತನಾಡಬೇಕು ಅಂದುಕೊಂಡದ್ದು ಗಂಟಲಲ್ಲೇ ಸಿಕ್ಕಿ ಹಾಕಿಕೊಂಡು ಸತ್ತು ಹೋಗಿಬಿಡುತ್ತಿತ್ತು. ಆಗೆಲ್ಲಾ ನನ್ನ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಳ್ಳುವ, ನನ್ನ ಭಾವೋದ್ವೇಗದ ಅಣೆಕಟ್ಟಿಗೆ ಪುಟ್ಟ ಕಿಂಡಿಯಾಗುವ ಪಾತ್ರವನ್ನು ನನ್ನ ಡೈರಿಯ ಪುಟಗಳು ವಹಿಸುತ್ತಿದ್ದವು. ಅಸಲಿಗೆ ನಾನು ಡೈರಿಗಾಗಿ ಪುಸ್ತವೊಂದನ್ನು ಕೊಂಡು ತಂದು ‘ಓಂ’ ಬರೆದಿಟ್ಟುಕೊಂಡು ಮೊದಲ ಎಂಟ್ರಿಯನ್ನು ಮಾಡಿದ್ದೇ ನನ್ನ ಸಿಟ್ಟಿಗೆ ಅಭಿವ್ಯಕ್ತಿಯನ್ನು ಕೊಡಲು.
ಹತ್ತನೆಯ ತರಗತಿಯ ಪಬ್ಲಿಕ್ ಪರೀಕ್ಷೆಯೆಂಬ ವಕ್ರವ್ಯೂಹವನ್ನು ಬೇಧಿಸಿ ಸುಸ್ತಾಗಿ ಕುಳಿತ ಅಭಿಮನ್ಯುವಿನ ಹಾಗೆ ರಜೆಯಲ್ಲಿ ಕಾಲ ಕಳೆಯುತ್ತಿದ್ದೆ. ತಲೆಯನ್ನು ಹೊಕ್ಕಿದ್ದ ಬರವಣಿಗೆಯ ಚಟ ಸುಮ್ಮನಿರಲು ಬಿಡುತ್ತಿರಲಿಲ್ಲ. ಕಂಡ ಕಂಡ ಪತ್ರಿಕೆಗಳನ್ನು ಹೊತ್ತು ತಂದು ಓದುವ ಖಯಾಲಿ ಬೇರೆ ಇತ್ತು. ಹಾಗೆ ಓದುತ್ತಿದ್ದವನಿಗೆ ಅದ್ಯಾವುದೋ ದಿವ್ಯ ಘಳಿಗೆಯಲ್ಲಿ ಇವಕ್ಕೆಲ್ಲಾ ನಾನು ಬರೆದು ಕಳುಹಿಸಿದರೆ ಹೇಗೆ ಎನ್ನಿಸುತ್ತಿತ್ತು. ಹಾಗನ್ನಿಸಲು ನನ್ನ ಬರವಣಿಗೆ ಪತ್ರಿಕೆಗಳಲ್ಲಿ ಬೆಳಕು ಕಾಣಬೇಕು, ನನ್ನ ಕೆಲಸಕ್ಕೆ recognition ಸಿಗಬೇಕು ಎನ್ನುವುದು ಒಂದು ಕಾರಣವಾದರೆ, ಪತ್ರಿಕೆಯಲ್ಲಿ ಲೇಖನಗಳು ಪ್ರಕಟವಾದರೆ ಒಂದಷ್ಟು ಗೌರವ ಧನವನ್ನು ಕಳುಹಿಸುತ್ತಾರೆ ಎಂಬ ದುರಾಸೆ ಇನ್ನೊಂದು ಕಾರಣವಾಗಿತ್ತು! ನಾನೋದುತ್ತಿದ್ದ ಪತ್ರಿಕೆಗಳಲ್ಲಿ ಯಾವ ಯಾವ ಅಂಕಣಗಳಿಗೆ ಲೇಖನಗಳನ್ನು ಬರೆಯಬಹುದು ಎಂದು ಗುರುತು ಮಾಡಿಟ್ಟುಕೊಳ್ಳುತ್ತಿದ್ದೆ. ವಾಚಕರವಾಣಿ, ವೈಯಕ್ತಿಕ ಅನುಭವದ ಪುಟಗಳು, ನಿಮ್ಮ ಪ್ರಶ್ನೆ ಕೇಳಿ ಎಂಬಂತಹ ಕಾಲಮ್ಮುಗಳಿಗೆ ನನ್ನ ಮೊದಲ ಆದ್ಯತೆ. ಪಟ್ಟಾಗಿ ಕುಳಿತು ಒಂದು ವಿಷಯದ ಬಗ್ಗೆ ಅಧ್ಯಯನ ಮಾಡಿ ಬರೆಯುವಷ್ಟು ತಾಳ್ಮೆಯಾಗಲೀ, ಆಸಕ್ತಿಯಾಗಲೀ ನನಗಿರುತ್ತಿರಲಿಲ್ಲ. ಮನಸ್ಸಿಗೆ ತೋಚಿದ ವಿಚಾರವನ್ನು ಆಧರಿಸಿ ಪುಟ್ಟಪುಟ್ಟದಾಗಿ ಒಂದಿಷ್ಟು ಲೇಖನಗಳನ್ನು ಬರೆದಿಟ್ಟುಕೊಳ್ಳುತ್ತಿದ್ದೆ. ಅವುಗಳಲ್ಲಿ ಹೆಚ್ಚಿನವು ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತಹ ಲೇಖನಗಳಾಗಿರುತ್ತಿದ್ದವು. ಆ ಸಮಯದಲ್ಲಿ ನಾನು ಹೆಚ್ಚಾಗಿ ಓದುತ್ತಿದ್ದದ್ದು ಅಂಥದ್ದೇ ಧಾಟಿಯ ಪುಸ್ತಕಗಳನ್ನಾದ್ದರಿಂದ ಬರವಣಿಗೆಗೆ ಅಂಥವೇ ಸರಕುಗಳನ್ನು ಆಯ್ದುಕೊಳ್ಳುತ್ತಿದ್ದೆ. ಹತ್ತು ಲೇಖನ ಬರೆದರೆ ಒಂದನ್ನು ಯಾವುದಾದರೂ ಪತ್ರಿಕೆಯ ವಿಳಾಸಕ್ಕೆ ಕಳುಹಿಸಿಕೊಡುತ್ತಿದ್ದೆ. ನನ್ನ ಲೇಖನ ಪ್ರಕಟಿಸಿದ್ದಾರೋ ಇಲ್ಲವೋ ಎಂದು ಪ್ರತಿ ಸಂಚಿಕೆಯನ್ನು ಖರೀದಿಸಿ ಹುಡುಕುತ್ತಿದ್ದೆ. ಒಂದು ವೇಳೆ ಪ್ರಕಟವಾಗಿದ್ದರೆ ಆ ಪತ್ರಿಕೆಯ ಇನ್ನೊಂದು ಪ್ರತಿಯನ್ನು ಬೇರೆಯ ಅಂಗಡಿಯಿಂದ ಕೊಂಡು ತಂದು ಮನೆಯಲ್ಲಿ ಒಂದು ಕಡೆ ಶೇಖರಿಸಿಡುತ್ತಿದ್ದೆ. ಅಪ್ಪಿತಪ್ಪಿಯೂ ಮನೆಯಲ್ಲಿ ಪ್ರಕಟವಾದ ಲೇಖನಗಳನ್ನು ತೋರಿಸುತ್ತಿರಲಿಲ್ಲ. ನನ್ನ ಸ್ವಭಾವ ಸಹಜವಾದ ಸಂಕೋಚವೇ ಇದಕ್ಕೆ ಕಾರಣವಾಗಿತ್ತು.
ಹೀಗೆ, ಸಣ್ಣ ಪುಟ್ಟ ಲೇಖನಗಳನ್ನು ಬರೆಯುತ್ತಾ, ಜೋಕುಗಳನ್ನು, ವಿಸ್ಮಯಕಾರಿ ವಿಚಾರಿಗಳನ್ನು ಸಂಗ್ರಹಿಸುತ್ತಾ ಎಷ್ಟು ದಿನ ಅಂತ ಕೂರಲಾಗುತ್ತದೆ? ಸಹಜವಾಗಿ ಅದಕ್ಕಿಂತ ಹೆಚ್ಚಿನದಕ್ಕೆ ಕೈ ಹಾಕುವ ಮನಸ್ಸಾಗುತ್ತಿತ್ತು. ಆಗ ಒಂದೆರಡು ಕಥೆಗಳನ್ನೂ ಬರೆದದ್ದುಂಟು. ಮನೆಯಲ್ಲಿ ಆಗಾಗ ನಡೆಯುತ್ತಿದ್ದ ಅಪ್ಪ-ಅಮ್ಮನ ನಡುವಿನ ಕಾಳಗ ಕಂಡು ಮನಸ್ಸಿನಲ್ಲಿ ವಿಪರೀತವಾದ ಹಿಂಸೆಯನ್ನನುಭವಿಸುತ್ತಿದ್ದೆ. ಏನು ಮಾಡಲೂ ಸಾಧ್ಯವಾಗದಂತೆ ಮನಸ್ಸು ಮುದುಡಿ ಬಿಡುತ್ತಿತ್ತು. ನನ್ನ ಅಸಹನೆಯನ್ನು ತೋರ್ಪಡಿಸುವ ಯಾವ ಮಾರ್ಗವೂ ಇಲ್ಲದೆ ನಾನು ಅಸಹಾಯಕನಾಗಿ ಉಗುಳು ನುಂಗುತ್ತಿದ್ದೆ. ಒಂದು ದಿನ ಹಾಗೇ ಯಾವುದೋ ವಿಷಯಕ್ಕೆ ಅಪ್ಪ ರೇಗುತ್ತಿದ್ದರು. ನಾನು ಅದಕ್ಕೆ ಮೂಕ ಸಾಕ್ಷಿಯಾಗಿ ಕೂರಲಾಗದೆ ಮಹಡಿಗೆ ಓಡಿದೆ, ಕೈಯಲ್ಲಿ ಪೇಪರ್ ಪ್ಯಾಡಿತ್ತು. ಜೊತೆಗೆ ಪೆನ್ನು ಇತ್ತು. ಅಲ್ಲೆ ಕುಳಿತು ಒಂದು ಕಥೆಯನ್ನು ಬರೆದೆ. ಆ ಕಥೆ ಒಬ್ಬ ಹುಡುಗನದ್ದು. ಅವನು ತುಂಬಾ ಸೂಕ್ಷ್ಮ ಮನಸ್ಸಿನವನು. ಮನೆಯಲ್ಲಿ ತನ್ನೆದುರು ಅಪ್ಪ ಅಮ್ಮ ಜಗಳವಾಡುವುದನ್ನು ಕಂಡು ಆತನಿಗೆ ವಿಪರೀತ ವೇದನೆಯಾಗುತ್ತಿತ್ತು. ಒಮ್ಮೆ ಈ ವೇದನೆಯ ಉತ್ಕಟತೆಯನ್ನು ಸಹಿಸಲಾಗದೆ ಆತ ಮನೆ ಬಿಟ್ಟು ಹೋಗಿಬಿಡುತ್ತಾನೆ. ಅಪ್ಪ-ಅಮ್ಮ ಎಷ್ಟು ಹುಡುಕಿದರೂ ಆತ ಸಿಕ್ಕುವುದಿಲ್ಲ. ಎರಡು ದಿನಗಳಾದ ನಂತರ ಆ ಮನೆಯ ಬಾಗಿಲು ತೆರೆಯುತ್ತದೆ, ಮಗ ಹಿಂದಿರುಗಿರುತ್ತಾನೆ, ಹೆಣವಾಗಿ. ಆ ಕಥೆಯಲ್ಲಿದ್ದದ್ದು ನಾನೇ, ನನ್ನ ಆವೇಶವೇ ಆ ಹುಡುಗನ ಪಾತ್ರವಾಗಿತ್ತು. ಆದರೆ ಆ ಕಥೆಯನ್ನು ಯಾವ ಪತ್ರಿಕೆಗೂ ಕಳುಹಿಸುವ ಮನಸ್ಸಾಗಲಿಲ್ಲ. ಯಾವುದೋ ಆವೇಶದ ಸಮಯದಲ್ಲಿ ಸೃಷ್ಟಿಯಾದ ಅದನ್ನು ಮತ್ತ್ಯಾವಗಲೋ ಶಾಂತಚಿತ್ತನಾಗಿರುವಾಗ ಓದಿದಾಗ ನನಗೇ ರುಚಿಸಲಿಲ್ಲ. ಅದನ್ನು ಹಾಗೇ ನನ್ನ ಲಾಕರ್‌ನೊಳಕ್ಕೆ ಹಾಕಿಟ್ಟೆ.
ಬದುಕಿನ ಬಗೆಗೆ ನಿರ್ದಿಷ್ಟವಾದ ಯಾವ ದೃಷ್ಟಿಕೋನವೂ ಆಗ ಇರಲಿಲ್ಲ. ನನ್ನ ಅದೃಷ್ಟಕ್ಕೆ ನಾನಾವ ಸಿದ್ಧಾಂತಗಳ ಪ್ರಭಾವಕ್ಕೂ ಬಿದ್ದಿರಲಿಲ್ಲ. ಹಾಗಾಗಿ ನನ್ನ ಕಥೆಗಳಿಗೆ ನನ್ನ ಸುತ್ತಮುತ್ತಲು ಕಂಡ,ಅನುಭವಕ್ಕೆ ದಕ್ಕಿದ ಸಂಗತಿಗಳೇ ವಸ್ತುವಾಗುತ್ತಿದ್ದವು. ಹೊಟೇಲಿನೆದುರು ಸಾಫ್ಟಿ ಐಸ್ ಕ್ರೀಮ್ ಗಿಟ್ಟಿಸಿಕೊಂಡು ನೆಕ್ಕುತ್ತಿರುವಾಗ ಕಂಕುಳಲ್ಲಿ ಚಿಕ್ಕ ಮಗುವನ್ನೆತ್ತಿಕೊಂಡು ಸೋರುತ್ತಿದ್ದ ತನ್ನ ಮೂಗನ್ನು ತನ್ನ ಮಲಿನವಾದ ಬಟ್ಟೆಯಿಂದ ಒರೆಸಿಕೊಂಡು ನನ್ನೆದುರು ಬಂದು ನಿಂತು ಕೈ ಚಾಚಿ ಒಂದು ಬಗೆಯ ಯಾಂತ್ರಿಕ ದೀನತೆಯಿಂದ ಬೇಡುತ್ತಾ ನಿಂತ ಸುಮಾರು ನನ್ನದೇ ವಯಸ್ಸಿನ ಹುಡುಗಿಯನ್ನು ಕಂಡು ಆ ಕ್ಷಣ ಹೇಸಿಗೆಯಾದಂತಾದರೂ, ಆ ಕ್ಷಣಕ್ಕೆ ಆಕೆಯನ್ನು ಗದರಿ ಅಟ್ಟಿದರೂ ಆ ದಿನವಿಡೀ ಆ ಘಟನೆ ಮನಸ್ಸನ್ನು ಕೊರೆಯುತ್ತಿತ್ತು. ಸರಿ, ಮತ್ತೊಂದು ಕಥೆಗೆ ಕೈ ಹಚ್ಚಿದೆ. ಒಬ್ಬ ಹುಡುಗ, ಮನೆಯಲ್ಲಿ ಶ್ರೀಮಂತಿಕೆ ಕಾಲು ಮುರಿದು ಬಿದ್ದಿದೆ. ಅಪ್ಪನ ಜೊತೆಗೆ ಹಠ ಮಾಡುತ್ತಿದ್ದಾನೆ. ತಾನು ಕೇಳಿದ್ದ ಏರೋಪ್ಲೇನ್ ಅಪ್ಪ ತಂದು ಕೊಟ್ಟಿಲ್ಲ ಅನ್ನೋದು ಅವನ ತಕರಾರು. ಮುನಿಸಿಕೊಂಡು ಊಟ ಮಾಡಲ್ಲ ಅಂತ ಕೂತಿದ್ದಾನೆ. ಸಮಾಧಾನ ಮಾಡಲು ಬಂದ ಅಮ್ಮನಿಗೆ ಬಯ್ದು ಮನೆಯ ಬಾಲ್ಕನಿಗೆ ಬಂದು ಬೀದಿ ನೋಡುತ್ತಾ ಕುಳಿತಿದ್ದಾನೆ. ಅತ್ತ ಬೀದಿಯಲ್ಲಿ ಒಬ್ಬ ಹುಡುಗ ಇವನದೇ ವಯಸ್ಸಿನವನು ಪೇಪರ್ ಆಯುತ್ತಿದ್ದಾನೆ. ಹರಿದ, ಕೊಳಕು ಬಟ್ಟೆ, ಮಂಡಿ, ಹಿಮ್ಮಡಿಯೆನ್ನದೆ ಕಾಲುಗಳ ತುಂಬಾ ಗಾಯದ ಗುರುತುಗಳು, ಕೆಲವು ಕಡೆ ಗಾಯಕ್ಕೆ ಕಟ್ಟಿದ ಬಟ್ಟೆ ಬಣ್ಣಗೆಟ್ಟು, ಅದಕ್ಕೆ ಧೂಳು ಮೆತ್ತಿಕೊಂಡು ಅದರ ಸುತ್ತ ನೊಣಗಳು ಸುತ್ತುತ್ತಿವೆ. ತಲೆ ಕೂದಲು ತೊಳೆದು ಎಷ್ಟು ವರ್ಷವಾಯಿತೋ ಎಂಬಂತೆ ಕೆಂಚಗಾಗಿ ಉರುಟು ಉರುಟಾಗಿ ಸುತ್ತಿಕೊಂಡಿವೆ. ಇಷ್ಟು ಸಾಲದು ಎಂಬಂತೆ ಅವನ ಬಾಲದಂತೆ ಅವನ ತಮ್ಮನೋ, ಪುಟ್ಟ ಸ್ನೇಹಿತನೋ ಅಲೆಯುತ್ತಿದ್ದಾನೆ. ಇವನು ಆಯುವ ಪೇಪರುಗಳನ್ನು ಒಂದು ಗೋಣಿಗೆ ತುಂಬುತ್ತಿದ್ದಾನೆ. ಇದನ್ನೆಲ್ಲಾ ಬಾಲ್ಕನಿಯಲ್ಲಿ ಕುಳಿತು ನೋಡುತ್ತಿದ್ದ ಹುಡುಗನಿಗೆ ತನ್ನ ಹಠ, ತನ್ನ ಸಿಡುಕಿನ ಬಗ್ಗೆ ನಾಚಿಕೆಯೆನ್ನಿಸುತ್ತದೆ. ಒಳಕ್ಕೆ ಬಂದು ಅಮ್ಮನ ಬಳಿ ಹೋಗಿ ಸಾರಿ ಕೇಳುತ್ತಾನೆ. ಒಳ್ಳೆಯ ಹುಡುಗನಂತೆ ಉಟಕ್ಕೆ ಕೂರುತ್ತಾನೆ. ಕಥೆಯ ವಸ್ತು ಇಷ್ಟು ಚೆನ್ನಾಗಿದ್ದರೂ ಬರವಣಿಗೆಯ ಶೈಲಿ, ಬಂಧ ಈಗ ಸಾರಾಂಶ ಕೊಟ್ಟಷ್ಟು ಚೆಂದಗೆ ಇರಲಿಲ್ಲ ಹಾಗಾಗಿ ಆ ಕಥೆಯೂ ಕತ್ತಲ ಮೆರೆಗೆ ಸರಿಯಿತು.
ಈ ಮಧ್ಯೆ ಕೇವಲ ವೈಯಕ್ತಿಕ ಆವೇಶವನ್ನು ಕಥೆಯ ಚೌಕಟ್ಟಿಗೆ ಸಿಕ್ಕಿಸಿ ಕಥೆ ಹೆಣೆಯುವ ಕಸರತ್ತಿನಿಂದ ಕೊಂಚ ಬೇಸರವೆನಿಸಿತ್ತು. ಕೆಲವು ಕಥೆಗಳನ್ನು ಓದಿದರೆ ಒಳ್ಳೆಯ ಐಡಿಯಾ ಬರಬಹುದೆಂದು ಒಳ್ಳೆಯ ಕಥಾಗಾರರು ಎಂದು ನಾನು ಕೇಳಲ್ಪಟ್ಟಿದ್ದವರ ಕಥೆಗಳನ್ನು ಓದಿದೆ. ಆದರೆ ಅವುಗಳು ಅರ್ಥವಾಗುತ್ತಿರಲಿಲ್ಲ. ಅದೊಂದು ಸಂಜೆ ನನ್ನ ಹೈಸ್ಕೂಲಿನ ಮೆಚ್ಚಿನ ಟೀಚರ್ ಒಬ್ಬರ ಬಳಿ ಮಾತನಾಡುತ್ತಿದ್ದೆ. ಪರೀಕ್ಷೆಗಳೆಲ್ಲಾ ಮುಗಿದಿದ್ದವಾದ್ದರಿಂದ ನಮ್ಮ ಮಾತು ಕಥೆಗಳ ಬಗ್ಗೆ, ಕಾದಂಬರಿಗಳ ಕಡೆಗೆ ಹೊರಳಿಕೊಂಡಿತ್ತು. ಅವರು ತಾವು ತುಂಬಾ ಮೆಚ್ಚಿದ ಚಿತ್ರ ನಿರ್ದೇಶಕ ಸತ್ಯಜಿತ್ ರೇ ಬರೆದಿದ್ದ ಕಥೆಯೊಂದರ ಬಗ್ಗೆ ಹೇಳಿದರು. ಎಂದೋ ಓದಿದ್ದ ಅವರ ಕಥೆಯ ಕನ್ನಡಾನುವಾದವನ್ನು ನೆನಪಿನಿಂದ ಹೆಕ್ಕಿ ತೆಗೆದು ನನಗೆ ವಿವರಿಸುತ್ತಿದ್ದರು. ಆ ಕಥೆಗೆ ‘ತದ್ರೂಪು’ ಎಂಬ ಶೀರ್ಷಿಕೆ ಕೊಟ್ಟಿದ್ದನ್ನು ನೆನಪು ಮಾಡಿಕೊಂಡರು. ಅದರ ವಿವರಗಳು ನನಗೆ ಸ್ಪಷ್ಟವಾಗಿ ನೆನಪಿಲ್ಲ. ಆದರೆ ಆ ಕ್ಷಣದಲ್ಲಿ ಆ ಕಥೆ ನನ್ನನ್ನು ಆಳವಾಗಿ ಪ್ರಭಾವಿಸಿತ್ತು. ಹೆಂಡತಿಯೊಬ್ಬಳು ದೂರದಲ್ಲಿರುವ ತನ್ನ ಗಂಡನಿಗೆ ಪತ್ರ ಬರೆದ ಧಾಟಿಯಲ್ಲಿ ರವೀಂದ್ರನಾಥ್ ಠಾಗೋರ್‍ರ ಒಂದು ಕಥೆಯ ಪ್ರಸ್ತಾಪವೂ ಆಗಿತ್ತು. ಅದೇ ಗುಂಗಿನಲ್ಲಿ ನಾನು ‘ತದ್ರೂಪು’ ಎಂಬ ಹೆಸರಿನಲ್ಲೇ ಒಂದು ಕಥೆಯನ್ನು ಬರೆದೆ. ಅದನ್ನು ನನ್ನ ಟೀಚರ್‌ಗೂ ತೋರಿಸಿದ್ದೆ. ಶೈಲಿ ಚೆನ್ನಾಗಿದೆ, ಕಥೆ ಹೆಣೆಯುವ ಶ್ರದ್ಧೆ ಇಷ್ಟವಾಯ್ತು ಆದರೆ ಇದರಲ್ಲಿ ಕಥೆಯೇ ಇಲ್ಲವಲ್ಲಾ, stuff ಎನ್ನುವುದು ಏನೂ ಇಲ್ಲ- ಅಂದರು ಕಡ್ಡಿ ಮುರಿದಂತೆ! ಅವತ್ತೇ ಹಠ ಮಾಡಿದವನ ಹಾಗೆ ಮತ್ತದೇ ಶೀರ್ಷಿಕೆಯನ್ನಿಟ್ಟು ಮತ್ತೊಂದು ಕಥೆ ಬರೆಯಲು ಶುರುಮಾಡಿದೆ ಅದರಲ್ಲಿ ಹಿಂದೆಂದೂ ಬರೆದಿರದಿದ್ದ ರೀತಿಯಲ್ಲಿ ಕಥೆಯನ್ನು ಬಿಚ್ಚಿಡುವ ಪ್ರಯತ್ನ ಮಾಡಿದೆ. ಪ್ರಜ್ಞಾಪೂರ್ವಕವಾಗಿ ಅಸ್ಪಷ್ಟತೆ, ನಿಗೂಢತೆ, ಗೊಂದಲಗಳನ್ನು ಎಳೆದು ತರುವ ಪ್ರಯತ್ನ ಮಾಡಿದ್ದೆ. ಆದರೆ ಎಲ್ಲಿಂದಲೋ ಹೇಗ್ಹೇಗೋ ಬೆಳೆಯುತ್ತಾ ಹೋದ ಆ ಕಥೆಗೆ ಹೇಗೆ ಅಂತ್ಯ ಹಾಡಬೇಕೆಂದೇ ತಿಳಿಯದೆ ಅದನ್ನು ಹಾಗೇ ಇಟ್ಟುಕೊಂಡಿದ್ದೆ. ಈ ನಡುವೆ ಈ ಕಥೆಯನ್ನು ಒಂದು ಕಾದಂಬರಿಯಾಗಿ ಬರೆಯಬಾರದೇಕೆ ಎಂಬ ಭಯೋತ್ಪಾದಕ ವಿಚಾರವೂ ಬಂದಿತ್ತು. ಆದರೆ ಆಪದ್ಭಾಂದವನ ಹಾಗೆ ಸದಾ ನನ್ನ ಜೊತೆಗಿರುವ ಸೋಮಾರಿತನ ಅಂತಹ ಕ್ರಾಂತಿಕಾರಕ ಸಾಹಸಗಳಿಗೆ ನಾನು ಧುಮುಕದಂತೆ ತಡೆದಿತ್ತು!
ಒಂದೆರಡು ದೆವ್ವದ ಕಥೆಗಳನ್ನು ಓದಿ, ದೆವ್ವದ ಬಗ್ಗೆ ‘ವೈಜ್ಞಾನಿಕವಾಗಿ’ ಗೆಳೆಯರೊಂದಿಗೆ ಹರಟಿದ್ದರ ಫಲವಾಗಿ ಒಂದು ಕಥೆಯನ್ನು ಬರೆದಿದ್ದೆ. ಅನಂತ್ ನಾಗ್, ರಮೇಶ್ ಭಟ್ ಅಭಿನಯದ ‘ಗಣೇಶ ಸುಬ್ರಹ್ಮಣ್ಯ’ ಸಿನೆಮಾದಲ್ಲಿ ಮುಖ್ಯಮಂತ್ರಿ ಚಂದ್ರು ಅನಂತ್ ನಾಗ್‌ಗೆ ರಾತ್ರಿ ಒಂದು ಪತ್ತೇದಾರಿ ಕಥೆಯನ್ನು ರೋಚಕವಾಗಿ, ಮಿಮಿಕ್ರಿ ಮಾಡಿ ಅಭಿನಯಿಸುತ್ತಾ ಹೇಳಿದ್ದನ್ನು ಅನುಕರಿಸಿ ದೆವ್ವದ ಕಥೆಯನ್ನು ನಿರೂಪಿಸಿದ್ದೆ. ರೋಚಕವಾದ ವಿವರಗಳನ್ನು ಸೇರಿಸಿದ್ದೆ. ಬರೆಯುವಾಗ ಪ್ರತಿ ಸಾಲಿಗೂ ನಾನೇ ಬೆಚ್ಚಿ ಬೀಳುವವನಂತೆ ನಟಿಸುತ್ತಾ ವಿವರಗಳನ್ನು ದಾಖಲಿಸುತ್ತಿದೆ. ಆ ಕಥೆಯನ್ನ ತುಷಾರಕ್ಕೆ ಕಳುಹಿಸಿಕೊಟ್ಟಿದ್ದೆ. ಆದರ ಪ್ರಕಟವಾದಂತೆ ಕಾಣಲಿಲ್ಲ. ಕಳೆದ ಎರಡು ಸಂಚಿಕೆಗಳಲ್ಲಿ ಅದೇ ಕಥೆಯನ್ನು ತಿಕ್ಕಿ ತೀಡಿ ‘ವೈಚಾರಿಕತೆ’ ಎಂಬ ಹೆಸರಲ್ಲಿ ಪ್ರಕಟಿಸಿದ್ದೆ.
‘ಕಲರವ’ವನ್ನು ಪ್ರಾರಂಭಿಸಿದಾಗಿನಿಂದ ನಿಯಮಿತವಾಗಿ ಕಥೆಗಳನ್ನು ಬರೆಯುತ್ತಿರುವೆನಾದರೂ ನನ್ನ ಕಥೆಗಳ ಬಗ್ಗೆ ನನಗೆ ತೃಪ್ತಿಯಿಲ್ಲ. ಈ ಹಾದಿಯಲ್ಲಿ ನಾನಿನ್ನೂ ಕ್ರಮಿಸಬೇಕಾದ ಮೈಲುಗಲ್ಲುಗಳು ಬೇಕಾದಷ್ಟಿವೆ. ನನ್ನ ನೆನಪಿನ ಖಜಾನೆಯನ್ನು ಬಿಚ್ಚಿಕೊಂಡು ಕುಳಿತರೆ ಅರ್ಧಕ್ಕೆ ನಿಲ್ಲಿಸಿದ, ದಾರಿ ತಪ್ಪಿದ, ಮೊದಲಿಂದಲೇ ವಕ್ರವಾಗಿ ಚಲಿಸಿದ, ಅಸ್ಪಷ್ಟವಾಗಿ ಮೂಡಿದ ಕಥೆಗಳ ರಾಶಿಯೇ ಇವೆ. ಹಾಗೆ ಸುಮ್ಮನೆ ನೆನಪಿನ ಕಂತೆಯನ್ನು ಕೆದರುತ್ತಾ ಕುಳಿತವನಿಗೆ ಸಿಕ್ಕಿದ್ದು ಇಷ್ಟು.
ಪರಮ ಹಠಮಾರಿ ಬೈಕಿನ ಬೆನ್ನೇರಿ…
Posted ಫೆಬ್ರವರಿ 25, 2008
on:ನಿನ್ನೆಯ ನೆನಪು ನಮ್ಮ ನಾಳೆಗೆ ಬದುಕಿನ ಹಾದಿಗೆ ಬೆಳಕಾಗಲೇ ಬೇಕಂತೇನೂ ಇಲ್ಲ. ಆದರೆ ನೆನಪುಗಳನ್ನು ಮೆಲಕು ಹಾಕುವುದರಲ್ಲಿಯೇ ಎಂಥದ್ದೋ ಒಂದು ಬಗೆಯ ಸಂತೃಪ್ತಿಯಿದೆ. ಸಮಾಧಾನವಿದೆ. ಪುಳಕವಿದೆ. ಕಳೆದ ದಿನಗಳ ನೆನಪಿನ ಹಂಗಿನಲ್ಲಿ ಮೆಲುವಾಗಿ ನರಳುವ ಅಂಕಣ ‘ಬೀಥೆ ಹುಯೆ ದಿನ್…’. ಈ ಸಂಚಿಕೆಯ ಅಂಕಣದಲ್ಲಿ ‘ಅಂತರ್ಮುಖಿ’ ತಮ್ಮ ಬೈಕ್ ಕಲಿಕೆಯ ರಸವತ್ತಾದ ಅನುಭವವನ್ನು ಅಕ್ಷರಗಳಲ್ಲಿ ಕಡೆದಿರಿಸಿದ್ದಾರೆ.
ಬೈಕು ಓಡಿಸುವುದು ತುಂಬಾ ಸುಲಭ ಅಂದುಕೊಂಡಿದ್ದೆ. ಪ್ರೈಮರಿ ಸ್ಲೂಲಿನಲ್ಲಿರುವಾಗಲೇ ಸೈಕಲ್ ಹೊಡೆಯುವುದನ್ನು ಕಲಿತುಕೊಂಡಿದ್ದೆ. ಅನಂತರ ಹೈಸ್ಕೂಲ್ ಮೆಟ್ಟಿಲು ಏರುತ್ತಿದ್ದಂತೆಯೇ ಗೇರ್ ಇಲ್ಲದ, ಸ್ಕೂಟಿಯಂತಹ ಮೊಪೆಡ್‌ಗಳನ್ನು ಓಡಿಸುವುದನ್ನು ಕಲಿತೆ. ಹತ್ತನೆಯ ತರಗತಿಯಲ್ಲಿ ನಮ್ಮ ಶಾಲೆಯಲ್ಲಿ ಪಬ್ಲಿಕ್ ಪರೀಕ್ಷೆಗಳಿಗೆ ಅಂತ ಪ್ರತ್ಯೇಕವಾದ ಕೋಚಿಂಗ್ ತರಗತಿಗಳು ನಡೆಯುತ್ತಿದ್ದವು. ಮುಂಜಾನೆ ಆರುಗಂಟೆಯಿಂದ ಒಂಭತ್ತರವರೆಗೆ, ಸಂಜೆ ಆರರಿಂದ ಒಂಭತ್ತರವರೆಗೆ. ಒಟ್ಟು ಆರು ತಾಸುಗಳು. ಇದಲ್ಲದೆ ರೆಗ್ಯುಲರ್ ಆಗಿ ತರಗತಿಗಳು ನಡೆಯುತ್ತಿದ್ದವು. ಒಟ್ಟು ಹದಿನಾಲ್ಕು ತಾಸುಗಳ ಕಾಲ ಶಾಲೆಯಲ್ಲಿರುತ್ತಿದ್ದೆವು! ಗಾಬರಿಯಾಗಬೇಡಿ, ಈ ಪ್ರತ್ಯೇಕ ಕೋಚಿಂಗ್ ತರಗತಿಗಳು ಪ್ರಾರಂಭವಾಗುತ್ತಿದ್ದದ್ದು ಪರೀಕ್ಷೆಗೆ ಒಂದು ತಿಂಗಳಿರುವಾಗ ಮಾತ್ರ.
ಮುಂಜಾನೆ ಆರುಗಂಟೆಗೇ ಮನೆಯಿಂದ ಕೊಂಚ ದೂರವೇ ಇದ್ದ ಶಾಲೆಗೆ ಸೈಕಲ್ಲಿನಲ್ಲಿ ಹೋಗಲು ನಾನು ಸಿದ್ಧನಿರಲಿಲ್ಲ. ಮುಂಜಾನೆಯ ಸವಿ ನಿದ್ದೆಯನ್ನು ತಪ್ಪಿಸಿಕೊಳ್ಳುವುದೇ ನನಗೆ ಅತ್ಯಂತ ದುಃಖದ ಸಂಗತಿಯಾಗಿತ್ತು. ಅದರ ಜೊತೆಗೆ ಆ ಚುಮುಚುಮು ಮೈಕೊರೆವ ಚಳಿಯಲ್ಲಿ ನಾಲ್ಕು ವರ್ಷ ಹಳೆಯದಾದ ಆದರೆ ಮಾಡರ್ನಾಗಿದ್ದ ಹೀರೋ ಸೈಕಲ್ಲನ್ನು ಏರಿಕೊಂಡು ಹೋಗುವುದೆಂದರೆ ನರಕಯಾತನೆಯನ್ನು ಅನುಭವಿಸಿದ ಹಾಗಾಗುತ್ತಿತ್ತು. ಮನೆಯಿಂದ ಶಾಲೆಗೆ ಹೋಗುವ ದಾರಿ ತುಂಬಾ ಏರಿನದಾಗಿತ್ತು ಬೆಳಿಗ್ಗೆ ಹಸಿ ಹೊಟ್ಟೆಯಲ್ಲಿ ಸೈಕಲ್ ಏರಿ ಹೊರಟರೆ ಆ ಏರಿಯನ್ನು ದಾಟಿ ಶಾಲೆಯನ್ನು ತಲುಪುವಷ್ಟರಲ್ಲಿ ಬೆವರಿನಿಂದ ಮೈ ಜಳಕವಾಗಿಬಿಟ್ಟಿರುತ್ತಿತ್ತು. ಅಲ್ಲಿ ಹೋಗಿ ಮಾಡುವುದಾದರೂ ಏನು? ಓದಬೇಕು! ಅದರಷ್ಟು repulsive ಹಾಗೂ disturbing ಆದ ಕೆಲಸ ನಮಗಿನ್ನ್ಯಾವುದಿತ್ತು? ಕರಾಟೆ ಕಲಿಯುವುದಕ್ಕೆ, ಖೊ-ಖೊ ಅಭ್ಯಾಸ ಮಾಡುವುದಕ್ಕೆ, ಕ್ರಿಕೆಟ್ ಮ್ಯಾಚ್ ಗಾಗಿ ಹೀಗೆ ಐದು, ಆರು ಗಂಟೆಗೇ ಎದ್ದು ಸೈಕಲ್ ಏರಿ ಹೊರಟಿದ್ದುಂಟು ಆದರೆ ಅದು ನಮ್ಮ ಪರ್ಸನಲ್ ಪ್ಯಾಶನ್‌ಗಾಗಿ. ವಿದ್ಯಾರ್ಥಿ ಜೀವನ ಮುಗಿವವರೆಗೂ ಓದುವುದೂ ಒಂದು ಪ್ಯಾಶನ್ ಅಂತ ನಮಗೆ ಅರಿವಾಗುವುದಾದರೂ ಹೇಗೆ?
ಸರಿ, ನನ್ನ ಬೆಳಗಿನ ಜಾವದ ಪಡಿಪಾಟಲನ್ನು ನೋಡಲಾಗದೆ ಅಪ್ಪ ಮನೆಯಲ್ಲಿದ್ದ ಹೀರೋ ಹೊಂಡದವರ ‘ಸ್ಟ್ರೀಟ್’ ಎಂಬ ಸ್ಕೂಟರನ್ನು ಶಾಲೆಗೆ ತೆಗೆದುಕೊಂಡು ಹೋಗಲು ಅನುಮತಿಸಿದರು. ಅದು ಬಹುಪಾಲು ಉಳಿದೆಲ್ಲಾ ಬೈಕ್ ಗಳಂತೇ ಗೇರ್ ಹೊಂದಿತ್ತು, ಆದರೆ ಕ್ಲಚ್ ಇರಲಿಲ್ಲ. ಬೈಕುಗಳಲ್ಲಿ ಗೇರುಗಳನ್ನು ಬದಲಾಯಿಸುವಾಗ ಕ್ಲಚ್ಚನ್ನು ಬಳಸಬೇಕಾಗುತ್ತದೆ. ಆದರೆ ಈ ‘ಸ್ಟ್ರೀಟ್’ನಲ್ಲಿ ನೇರವಾಗಿ ಗೇರುಗಳನ್ನು ಬದಲಾಯಿಸಬಹುದಿತ್ತು. ಕೆಲವು ದಿನ ಸೈಕಲ್ಲಿಗಿಂತ ನೂರುಪಟ್ಟು ಹೆವಿಯಾದ ಗಾಡಿಯನ್ನು ಬ್ಯಾಲೆನ್ಸ್ ಮಾಡುವುದು ಕಷ್ಟವಾಯಿತು. ಒಂದು ಸಲ ಅದು ನನಗೆ ಪಳಗಿದ ಮೇಲೆ ನೋಡಬೇಕಿತ್ತು ನನ್ನ ಸವಾರಿ! ಬೆಳಿಗ್ಗೆ ಆರುಗಂಟೆಯ ಮಸುಕು ಮಸುಕಾದ ವಾತಾವರಣ, ಡಿಸೆಂಬರ್-ಜನವರಿ ಸಮಯದ ಮೈ ಕೊರೆವ ಚಳಿ, ನಿರ್ಜನವಾದ ಟಾರು ರೋಡುಗಳು. ಕಿವಿಗೆ ಬಿಗ್ಗ ಬಿಗಿಯಾದ ಸ್ಕಾರ್ಫು, ಎದೆಗೆ ಬೆಚ್ಚನೆಯ ಜರ್ಕಿನ್ನು ಹಾಕಿಕೊಂಡು ಚಳಿಗಾಲದಲ್ಲಿ ಬಿರುಕು ಬಿಟ್ಟುಕೊಂಡ ತುಟಿ ಅಂದಗೆಟ್ಟ ಮೂಗಿಗೆ ಕೊಂಚ ವ್ಯಾಸಲೀನ್ ಸವರಿಕೊಂಡು ಬ್ಯಾಗ್ ಹೆಗಲೇರಿಸಿ ಶಾಲೆಗೆ ಹೊರಡುತ್ತಿದ್ದೆ. ಬೆಳಗಿನ ಸವಿನಿದ್ದೆಯಲ್ಲಿ ಮೈಚಾಚು ಮಲಗಿರುತ್ತಿದ್ದ ಸ್ಕೂಟರಿನ ಪಕ್ಕೆ ಒದ್ದು ಸ್ಟಾರ್ಟ್ ಮಾಡಿ ಮನೆಯಿಂದ ಮರೆಯಾಗುವವರೆಗೆ ನಿಧಾನವಾಗಿ ಕಾಳಜಿಯಿಂದ ಓಡಿಸಿದಂತೆ ಮಾಡಿ ಆ ರಸ್ತೆ ದಾಟುತ್ತಿದ್ದಂತೆಯೇ ಒಂದನೇ ಗೇರಿಗೆ ನೆಗೆದುಬಿಡುತ್ತಿದ್ದೆ. ಆಮೇಲಿನದು ಹುಚ್ಚು ಕುದುರೆಯ ವೇಗ. ಮೊದಲೇ ನಿರ್ಜನವಾದ ರಸ್ತೆ, ಮನೆ-ಮನೆಗೆ ಹಾಲು ಪೂರೈಸುವ ಹುಡುಗರು, ಪೇಪರ್ ಹಾಕಲು ಸೈಕಲ್ಲುಗಳ ಕ್ಯಾರಿಯರ್‌ನಲ್ಲಿ ಬಂಡಲು ಸಿದ್ಧಪಡಿಸಿಕೊಳ್ಳುತ್ತಿದ್ದ ಹುಡುಗರು, ಹತ್ತು ಗಂಟೆಗೆ ಬಾಗಿಲು ತೆರೆಯುತ್ತಿದ್ದ ಸೊಸೈಟಿಯ ಸೀಮೆ ಎಣ್ಣೆಗಾಗಿ ಕ್ಯಾನುಗಳನ್ನು ಸಾಲಾಗಿ ಜೋಡಿಸಿಟ್ಟು ಸೊಸೈಟಿಯ ಜಗುಲಿಯ ಮೇಲೇ ಕಂಬಳಿ ಹೊದ್ದು ತೂಕಡಿಸುತ್ತಿದ್ದ ಜನ, ಕಾಫಿ ಬಾರ್‌ನ ಬಾಗಿಲು ಅರ್ಧದವರೆಗೆ ಏರಿಸಿ ಕೆಲಸದ ಹುಡುಗನ ಕೈಲಿ ಅಂಗಳ ಗುಡಿಸಿಸುತ್ತಿರುವ ಯಜಮಾನರು, ಚಿಲಿ ಪಿಲಿಗುಟ್ಟುತ್ತಾ ಗೂಡುಗಳಿಂದ ಹೊರಬರುತ್ತಿರುವ ಹಕ್ಕಿಗಳು, ಚಳಿಗೆ ವಿಕಾರವಾಗಿ ಊಳಿಡುತ್ತಾ ಅಲೆದಾಡುವ ಬೀದಿನಾಯಿಗಳನ್ನು ಹೊರತು ಪಡಿಸಿದರೆ ನಾನು ಹಾಗೂ ನನ್ನ ಕಾಲುಗಳ ಸಂದಿಯಲ್ಲಿ ಹುಚ್ಚೇಳಿಸುವ ಸ್ಪೀಡಿನ ಸ್ಕೂಟರ್ರು! ಕೆಲವು ದಿನಗಳ ಕಾಲ ಸ್ಕೂಟರಿನಲ್ಲಿ ಹೋಗಬೇಕೆಂಬ ಹಪಹಪಿಯಲ್ಲಿ ಮೈ ಹುಶಾರು ಇಲ್ಲದ ದಿನವೂ ಸ್ಕೂಲಿಗೆ ಹೋಗುತ್ತಿದ್ದೆ.
ಹತ್ತನೆಯ ತರಗತಿ ಮುಗಿದ ನಂತರ ಪಿಯುಸಿಗೆ ದೂರದ ಮಂಗಳೂರಿನ ಹತ್ತಿರದ ರೆಸಿಡೆನ್ಶಿಯಲ್ ಕಾಲೇಜ್‌ಗೆ ಸೇರಿದ್ದರಿಂದ ಸ್ಕೂಟರು, ಬೈಕುಗಳಿರಲಿ, ನನ್ನ ಐದು ವರ್ಷಗಳ ಸಂಗಾತಿಯಾದ ಸೈಕಲ್ಲನ್ನೂ ಬಿಟ್ಟಿರಬೇಕಾಯಿತು. ಎರಡು ವರ್ಷಗಳ ಪಿ.ಯು ಓದು ಮುಗಿಸಿ ಇಂಜಿನಿಯರಿಂಗ್ ಸೀಟು ಪಡೆದುಕೊಂಡು ಬೆಂಗಳೂರಿನ ಕಾಲೇಜಿಗೆ ಸೇರಿದ ಮೇಲಂತೂ ಬಿ.ಎಂ.ಟಿ.ಸಿ ಬಸ್ಸುಗಳೇ ನಿತ್ಯದ ಸಂಗಾತಿಗಳಾದವು. ರಜೆಯಲ್ಲಿ ಮನೆಗೆ ಹೋದಾಗ ಬೈಕ್ ಓಡಿಸಬೇಕೆಂಬ ಆಸೆಯಾಗುತ್ತಿದ್ದಾದರೂ ಸರಿಯಾದ ತರಬೇತಿ ನೀಡದೆ ಬೈಕನ್ನು ಮುಟ್ಟಗೊಡುವುದಿಲ್ಲ ಎಂದು ಅಪ್ಪ ಶಿಸ್ತು ಮಾಡಿದ್ದರಿಂದ ಸುಮ್ಮನಾಗುತ್ತಿದ್ದೆ.
ಈ ಸಲದ ಪರೀಕ್ಷೆ ಮುಗಿಸಿ ರಜೆಗೆ ಮನೆಗೆ ಬಂದಾಗ ಈ ಸಲ ಏನೇ ಆಗಲಿ ಬೈಕನ್ನು ಪಳಗಿಸಿಕೊಂಡೇ ಬಿಡಬೇಕು ಎಂದು ನಿರ್ಧರಿಸಿದೆ. ಹಿಂದೆ ಕ್ಲಚ್ ಇಲ್ಲದ ಸ್ಕೂಟರ್‌ಗಳನ್ನು ಓಡಿಸಿದ ಆತ್ಮವಿಶ್ವಾಸ ಇದ್ದುದರಿಂದ ಬೈಕನ್ನು ಓಡಿಸುವುದು ಅಂತಹ ಪ್ರಯಾಸದ ಕೆಲಸವಾಗಲಿಕ್ಕಿಲ್ಲ ಎಂದು ಭಾವಿಸಿದ್ದೆ. ಆದರೆ ಯಾವಾಗ ಊರ ಹೊರಗಿನ ನಿರ್ಜನ ಮೈದಾನದಲ್ಲಿ ಬೈಕಿನ ಮೇಲೆ ಕುಳಿತು ಬೈಕನ್ನು ನ್ಯೂಟ್ರಲ್ಲಿನಿಂದ ಮೊದಲ ಗೇರಿಗೆ ಹಾಕಿ ಹಿಡಿದಿದ್ದ ಕ್ಲಚ್ಚನ್ನು ಒಮ್ಮೆಗೇ ಕೈಬಿಟ್ಟೆನೋ ಹುಚ್ಚು ಕುದುರೆ ಮುಗಿಲೆತ್ತರಕ್ಕೆ ಚಿಮ್ಮಿ ಸವಾರನನ್ನು ಬೆನ್ನ ಮೇಲಿಂದ ಕೆಳಕ್ಕೆ ಕೆಡವುತ್ತದೆಯೋ ಹಾಗೆ ‘ಗಕ್!’ ಅಂತ ಮುಂದಕ್ಕೆ ಎಗರಿ ಮುಂದಿನ ಗಾಲಿ ಗಾಳಿಯಲ್ಲಿ ಗಿರ್ರನೆ ತಿರುಗಿತು, ಗಾಬರಿಯಿಂದ ಬಲಗಾಲು ಬ್ರೇಕ್ ಅದುಮಿದ್ದರೆ ಬಲಗೈ ಆತಂಕದಲ್ಲಿ ಏಕ್ಸಲೇಟರನ್ನು ಹಿಂಡುತ್ತಿತ್ತು. ಬೈಕಿನ ಇಂಜಿನ್ನು ಗಾಯಗೊಂಡ ಆನೆಯ ಹಾಗೆ ಒಂದೇ ಸಮನೆ ಘೀಳಿಡುತ್ತಿತ್ತು. ನನ್ನ ತಲೆಗೆ ಅಮರಿಕೊಂಡಿದ್ದ ಹೆಮ್ಮೆಯೆಲ್ಲ ಒಂದೇ ಕ್ಷಣಕ್ಕೆ ಜರ್ರನೆ ಇಳಿದುಹೋಯ್ತು. ಪ್ರಯಾಸದಿಂದ ಬೈಕನ್ನು ನಿಲ್ಲಿಸಿ, ಸ್ಟ್ಯಾಂಡ್ ಹಾಕಿ ಕೆಳಗಿಳಿದು ಕೆಲಕಾಲ ಶಾಕ್ ನಿಂದ ಹೊರಬಂದು ‘ಎಲಾ, ಬೈಕೇ ನಿನಗಿಷ್ಟೊಂದು ಧಿಮಾಕೇ…’ ಎಂದು ಕೊಂಡೆ. ಹೊಸ ಸವಾರನ್ನು ಒಲ್ಲದ ಮನಸ್ಸಿನಿಂದ ಬೆನ್ನ ಮೇಲೇರಿಸಿಕೊಂಡು ಒಮ್ಮೆ ಕೆಳಕ್ಕೊಗೆದು ‘ಹೆಂಗೆ’ ಎಂದು ಗುರಾಯಿಸುತ್ತ ನಿಲ್ಲುವ ಕುದುರೆಯ ಹಾಗೆ ಬೈಕು ನಿಂತಿತ್ತು!
ಆ ದಿನ ಸುಮಾರು ಅರ್ಧಗಂಟೆಗಳ ಕಾಲ ಕ್ಲಚ್ ಹಿಡಿಯುವ, ಅದನ್ನು ನಿಧಾನವಾಗಿ ಬಿಡುವ ತರಬೇತಿ ನಡೆಯಿತು. ಬೈಕನ್ನು ಬ್ಯಾಲೆನ್ಸ್ ಮಾಡುವುದರಲ್ಲಿ, ಓಡಿಸುವುದರಲ್ಲಿ ನನಗೆ ಯಾವ ಅಡ್ಡಿಯೂ ಇರಲಿಲ್ಲ. ಸಮಸ್ಯೆಯಿದ್ದದ್ದೆಲ್ಲಾ ಈ ಹಾಳಾದ್ದು ಕ್ಲಚ್ಚಿನದ್ದು. ಅಪ್ಪ ಹೇಳುತ್ತಿದ್ದ ಇಂಜಿನ್ನಿನ ಮೆಕಾನಿಸಂ, ಕ್ಲಚ್, ಗೇರ್ ಬಾಕ್ಸ್ ಕೆಲಸ ಮಾಡುವ ವಿಧಾನಗಳನ್ನು ತಿಳಿದು, ಹತ್ತಾರು ಬಾರಿ ನೆಗೆ-ನೆಗೆದು ಅಭ್ಯಾಸ ಮಾಡಿ ಇನ್ನು ಪರವಾಗಿಲ್ಲ ಎನ್ನಿಸಿದ ಮೇಲೆ ಮನಗೆ ಮರಳಿದ್ದೆ. ಒಮ್ಮೆ ಬೈಕನ್ನು ಸ್ಟಾರ್ಟ್ ಮಾಡಿ ಅದರ ಮನವೊಲಿಸಿ ಮುಂದಕ್ಕೆ ನಡೆಸಬಲ್ಲೆ ಅಂತ ಆತ್ಮವಿಶ್ವಾಸ ಬಂದ ಕೂಡಲೇ ಮತ್ತೆ ‘ಅಹಂ’ನ ಭೂತ ತಲೆಯೇರಿತ್ತು. ನಾಳೆ ಈ ಬೈಕಿನ ಸೊಕ್ಕು ಮುರಿಯಬೇಕು ಅಂದುಕೊಂಡು ರಾತ್ರಿ ನಿದ್ದೆಹೋದೆ.
ಮರುದಿನ ಬೈಕನ್ನೇರಿ ಸ್ಟಾರ್ಟ್ ಮಾಡಿ ನಿರಾಯಾಸವಾಗಿ ಕ್ಲಚ್ ನಿರ್ವಹಣೆ ಮಾಡಿ ದೂರದವರೆಗೆ ಓಡಿಸಿದೆ. ಇನ್ನು ಕಲಿಯುವುದು ಏನೂ ಇಲ್ಲ, ಬೈಕೆಂದರೆ ಇಷ್ಟೇ ಅಂತ ಅಂದುಕೊಂಡು ಹೋದ ರಸ್ತೆಯಲ್ಲೇ ಹಿಂತಿರುಗಿ ಬರೋಣವೆಂಡುಕೊಂಡು ವೇಗ ಕಡಿಮೆ ಮಾಡಿ ಟರ್ನ್ ಮಾಡುತ್ತಿರುವಾಗ ‘ಗಕ್ಕ್..ಕ್ಕ್..’ ಅಂತ ಬಿಕ್ಕಳಿಸುತ್ತ ಇಂಜಿನ್ ಆಫ್ ಮಾಡಿಕೊಂಡು ಬೈಕು ನಿಂತುಬಿಟ್ಟಿತು. ತೀವ್ರವಾದ ಅವಮಾನವಾಯಿತು. ‘ಗಾಡಿ ನಾಲ್ಕು ಅಥವಾ ಮೂರನೆ ಗೇರಿನಲ್ಲಿರುವಾಗ ಕ್ಲಚ್ ಅದುಮದೆ ಏಕ್ಸ್ ಲೇಟರನ್ನು ಸಂಪೂರ್ಣವಾಗಿ ಕಡಿಮೆಮಾಡಿಬಿಟ್ಟರೆ ಇಂಜಿನ್ ಆಫ್ ಆಗಿಬಿಡುತ್ತೆ. ಟರ್ನಿಂಗ್ ಮಾಡುವಾಡುವಾಗ ಎರಡನೆಯ ಗೇರಿಗೆ ಗಾಡಿಯನ್ನು ತಳ್ಳಬೇಕು.’ ಎಂಬ ಅಪ್ಪನ ಸಲಹೆಯಂತೆ ಒಂದೆರಡು ಬಾರಿ ಟರ್ನಿಂಗ್ ಮಾಡುವಷ್ಟರಲ್ಲಿ ನನ್ನ ಬೈಕ್ ಕಲಿಕೆ ‘ಟರ್ನಿಂಗ್ ಪಾಯಿಂಟ್’ಬಂದಿತ್ತು.
ಮೂರನೆಯ ದಿನ ಯಥಾಪ್ರಕಾರ ಇನ್ನೇನಿದೆ ಕಲಿಯಲಿಕ್ಕೆ ಎಂಬ ಭಾವದಲ್ಲೇ ಅಪ್ಪನೊಂದಿಗೆ ಅಭ್ಯಾಸದ ಮೈದಾನಕ್ಕೆ ಹೋದೆ. ಒಂದೆರಡು ಸಲ ಹಿಂದಿನ ದಿನ ಕಲಿತ ಕಸರತ್ತುಗಳನ್ನು revise ಮಾಡಿಕೊಂಡ ನಂತರ ಅಪ್ಪ ‘ರಸ್ತೆಯಲ್ಲಿ ತಿರುವು ಬಂದಾಗ, ತಿರುವಿನಲ್ಲಿ ಬಂದು ಮುಖ್ಯ ರಸ್ತೆಯನ್ನು ಸೇರಿಕೊಳ್ಳುವಾಗ ಬೈಕನ್ನು ನಿಲ್ಲಿಸಿ ಹಿಂದೆ ಮುಂದೆ ಬರುತ್ತಿರುವ ವಾಹನಗಳನ್ನು ಗಮನಿಸಿ ಮತ್ತೆ ಮುಂದೆ ಹೋಗಬೇಕು. ಆ practice ಮಾಡು’ ಎಂದರು. ಅದರಲ್ಲೇನಿದೆ ಮಹಾ ಅಂದುಕೊಂಡು ನೇರವಾದ ರಸ್ತೆಯಲ್ಲಿ ವೇಗವಾಗಿ ಬಂದು ಟರ್ನಿಂಗಿನಲ್ಲಿ ನಿಲ್ಲಿಸಲೆಂದು ಬ್ರೇಕ್ ಒತ್ತಿದೆ, ಜೊತೆಗೆ ಕ್ಲಚ್ಚನ್ನೂ ಕಚ್ಚಿ ಹಿಡಿದಿದ್ದರಿಂದ ಬೈಕು ಸರ್ರನೆ, ಸ್ಕೀಯಿಂಗ್ ಮಾಡುವವನಂತೆ ರಸ್ತೆಯ ಮೇಲೆ ಜಾರಿತು. ‘ಹೀಗೆ ರಸ್ತೆಯಲ್ಲಿ ಜಾರಿದರೆ ಹಿಂದೆ ಬರುವ ಲಾರಿ ಬಸ್ಸಿನಡಿ ಹೋಗಬೇಕಾಗುತ್ತೆ’ ಅಂತ ಅಪ್ಪ ಹೇಳಿದರು ನಸುನಗುತ್ತ. ಅನಂತರ ಬ್ರೇಕ್ ಹಾಗು ಕ್ಲಚ್ ಕೆಲಸ ಮಾಡುವ ವಿಧಾನವನ್ನು ಮತ್ತೊಮ್ಮೆ brief ಆಗಿ ಹೇಳಿದರು. ಬ್ರೇಕ್ ಹಾಕಿದಾಗ ಇಂಜಿನ್ನು ವೇಗಕಳೆದುಕೊಳ್ಳುತ್ತ ನಿಂತು ಆಫ್ ಆಗಿಬಿಡುತ್ತೆ. ಕ್ಲಚ್ ಅವುಚಿ ಹಿಡಿದರೆ ಬ್ರೇಕ್ ಹಾಕಿ ನಿಲ್ಲಿಸಿದಾಗಲೂ ಇಂಜಿನ್ ಆಫ್ ಆಗುವುದಿಲ್ಲ. ಸರಿ ಹಲವು ಟೆಸ್ಟ್ ಡ್ರೈವ್‌ಗಳ ನಂತರ ಆ ಕಸರತ್ತೂ ಕರಗತವಾಯಿತು.
ನಾಲ್ಕನೆಯ ದಿನ ಮುಂಚೆ ಕಲಿತ ಎಲ್ಲಾ ವಿದ್ಯೆಗಳನ್ನು ಒರೆಗೆ ಹಚ್ಚಿ ಪರೀಕ್ಷಿಸಿಯಾದ ಮೇಲೆ ಅಪ್ಪನನ್ನು ಕೂರಿಸಿಕೊಂಡು ಮೈದಾನದಲ್ಲಿದ್ದ ಎಪಿಎಂಸಿ ಕಚೇರಿಯ ಸುತ್ತ ರೌಂಡು ಹೊಡೆದೆ. ಇಂಡಿಕೇಟರ್ ಹಾಕುವುದು, ಹಾರ್ನ್ ಮಾಡುವುದು, ಎದುರು ಬರುವ ವಾಹನಕ್ಕೆ ಒಮ್ಮೆ ಕಣ್ಣು ಮಿಟುಕಿಸಿದಂತೆ ಹೈ ಬೀಮಿನಲ್ಲಿ ಲೈಟ್ ಬ್ಲಿಂಕ್ ಮಾಡಿ ಸೂಚನೆ ಕೊಡುವುದನ್ನೆಲ್ಲ ಅಭ್ಯಾಸ ಮಾಡಿಸಿದರು. ಅದಕ್ಕೂ ಮುನ್ನ ಗಮನವಿಡೀ ಕ್ಲಚ್ಚು ಅವುಚಿ ಹಿಡಿದ ಕೈ ಹಾಗೂ ಗೇರ್ ಬದಲಿಸುವ ಕಾಲಿನ ಮೇಲೆಯೇ ಇರುತ್ತಿತ್ತು. ಅತ್ತ ಕಡೆಯಿಂದ ಗಮನವನ್ನು ಎಳೆದು ತಂದು ಇಂಡಿಕೇಟರ್, ಹಾರನ್ ಕಡೆಗೆ ವಾಲಿಸುವಷ್ಟರಲ್ಲಿ ಕ್ಲಚ್ಚು, ಗೇರುಗಳ ಮೇಳ ತಪ್ಪಿ ಬೈಕು ರ್ರ್‌ರ್ರ್ ಅಂತ ರೇಗುತ್ತಿತ್ತು.
ಕೊನೆಗೂ ಎಲ್ಲಾ ರಹಸ್ಯ ವಿದ್ಯೆಗಳನ್ನು ಸಿದ್ಧಿಸಿಕೊಂಡು ಹೆಮ್ಮೆಯಿಂದ ರಸ್ತೆಗಿಳಿಯುತ್ತಿದ್ದರೆ ಎದೆಯಲ್ಲಿ ಪುಟಿಯುವ ಉತ್ಸಾಹ. ಎದೆಯ ಮೂಲೆ ಮೂಲೆ ತಲುಪುವಂತೆ ಗಾಳಿ ಎಳೆದುಕೊಂಡು ಎದೆಯುಬ್ಬಿಸಿ ಏಕ್ಸಲೇಟರ್‌ನ ಕತ್ತು ಹಿಚುಕಿದರೆ ಬೈಕು ಉನ್ಮಾದದಲ್ಲಿ ಮುನ್ನೆಗೆಯುತ್ತಿತ್ತು. ಆದರೆ ಭರ್ರೋ ಅಂತ ಎದುರು ಬರುವ ವಾಹನಗಳು, ಹಿಂದಿನಿಂದ ಕಿಟಾರನೆ ಹಾರ್ನ್ ಬಾರಿಸುತ್ತಾ ಸವರಿಕೊಂಡು ಹೋಗುವ ಬಸ್ಸು, ಲಾರಿಗಳು ದಿಗಿಲನ್ನುಂಟು ಮಾಡುತ್ತಿದ್ದವು. ಅಲ್ಲಿಯವರೆಗೂ ನಿರ್ಮಾನುಷವಾದ ಮೈದಾನದ ರೋಡುಗಳಲ್ಲಿ ಕಲಿತ ವಿದ್ಯೆಗಳು, ಮಾಡಿದ ಕಸರತ್ತುಗಳೆಲ್ಲಾ ತಲೆಕೆಳಗಾದಂತಹ ಅಭದ್ರತೆಯಲ್ಲಿ ನಲುಗಿ ಹೋಗುತ್ತಿದ್ದೆ. ಆ ರಸ್ತೆಯ ಮೇಲೆ ಓಡಾಡುವ ಕಾರು, ಬಸ್ಸು, ಲಾರಿ, ಮತ್ತೊಬ್ಬ ಬೈಕಿನವ ನನ್ನನ್ನು ಕಂಡು ಕೊಂಚ ಕನಿಕರ, ಕೊಂಚ ರೇಗುವಿಕೆ, ಕೊಂಚ ಕೀಟಲೆಯ ಕಣ್ಣುಗಳಲ್ಲಿ ದಿಟ್ಟಿಸಿ ಹೊರಟು ಹೋಗುತ್ತಾರೆ. ನನಗೆ ಹೊಸಬನೆಂಬ ಭಯ. ತಾನು ಕಲಿತದ್ದು ಇಲ್ಲಿ ಯಾವ ಉಪಯೋಗಕ್ಕೂ ಬರುವುದಿಲ್ಲ ಎಂಬ ಬಿಟ್ಟಿ ಉಪದೇಶಗಳು. ಕೆಲವು ದಿನ ಕಳೆಯುವಷ್ಟರಲ್ಲಿ ಎಲ್ಲಾ ಸರಾಗ. ಬೈಕೆಂಬುದು ನಮ್ಮ ರಕ್ತ ಹಂಚಿಕೊಂಡು ಬೆಳೆದ ದೇಹದ ಭಾಗವೇನೊ ಎಂಬ ಆಪ್ತತೆ ಬೆಳೆದುಬಿಡುತ್ತದೆ. ಎಷ್ಟೋ ದಿನಗಳ ನಂತರ ಬೈಕಿನ ಬೆನ್ನೇರಿ ಗಾಳಿಯನ್ನು ಅಟ್ಟಿಕೊಂಡು ಹೋಗುವಾಗ ಬೆದರಿದ ಕಣ್ಣುಗಳ ಹೊಸ ಬೈಕ್ ಸವಾರ ಎದುರಾದಾಗ ಹಳೆಯದೆಲ್ಲ ನೆನಪಾಗಿ ನಮಗೆದುರಾಗಿದ್ದವರ ಕಣ್ಣುಗಳಲ್ಲಿದೆ ಅದೇ ಕನಿಕರ, ಕೀಟಲೆಯನ್ನು ನಾವು ತುಂಬಿಕೊಂಡು ಆತನನ್ನು ದಿಟ್ಟಿಸಿ ನೋಡಿ ಮುಂದೆ ಹೊರಟು ಹೋಗುತ್ತೇವೆ…
ಇತ್ತೀಚಿನ ಟಿಪ್ಪಣಿಗಳು