ಕಲರವ

Archive for the ‘ನಾನ್ರಿ ಎಡಿಟರ್’ Category

 

‘ಸಡಗರ’ ಪತ್ರಿಕೆಯನ್ನು ಪ್ರಕಟಿಸುತ್ತಿದ್ದ ಕಾಲದಲ್ಲಿ ‘ನಾವು ಮಾಡುತ್ತಿರೋದು ಏನು?’, ‘ಇದನ್ನು ಮಾಡುತ್ತಿರುವುದಕ್ಕೆ ಕಾರಣವೇನು?’, ‘ಈ ಕೆಲಸ ನಾವು ಮಾಡದಿದ್ದರೆ ಏನಾದೀತು?’, ‘ಯಾರಿಗಾಗಿ ನಾವು ಈ ಕೆಲಸ ಮಾಡುತ್ತಿರುವುದು?’, ‘ನಮ್ಮ ಕೆಲಸದ ಸಾರ್ಥಕತೆ ಇರುವುದು ಯಾವುದರಲ್ಲಿ?’ ಇಂತಹ ಪ್ರಶ್ನೆಗಳನ್ನು ಎದುರಿಟ್ಟುಕೊಂಡು ಅನೇಕ ಘಂಟೆಗಳನ್ನು ಕಳೆದಿದ್ದೇನೆ. ಒಂಭತ್ತನೆಯ ತರಗತಿಯಲ್ಲಿರುವಾಗ ಪುಟ್ಟದೊಂದು ಪತ್ರಿಕೆಯನ್ನು ಶುರುಮಾಡಿ ರವಿ ಬೆಳಗೆರೆಯ ಅನುಕರಣೆಯಲ್ಲೇ ಖುಶಿ ಅನುಭವಿಸುತ್ತಿದ್ದ ಕಾಲದಿಂದ ಹಿಡಿದು ತೀರಾ ಇತ್ತೀಚಿನವರೆಗೆ, ಪತ್ರಿಕೆ ಎಂಬುದು ನನ್ನ ಐಡೆಂಟಿಟಿಯಾಗಿ ರೂಪುಗೊಳ್ಳುವವರೆಗೆ ನನ್ನನ್ನು ಪದೇ ಪದೇ ಕಾಡುತ್ತಿದ್ದ, ಕಾಡುತ್ತಿರುವ ಪ್ರಶ್ನೆಗಳಿವು.

ಒಂದು ಪತ್ರಿಕೆ ಮಾಡಬೇಕು, ನಾನದರ ಸಂಪಾದಕನಾಗಬೇಕು, ಮುಕ್ಕಾಲು ಪಾಲು ಪುಟಗಳನ್ನು ತುಂಬಿಸುವಷ್ಟು ಬರೆಯಬೇಕು, ಬರವಣಿಗೆಯಲ್ಲಿನ ಕುಸುರಿಯಿಂದ, ಸುಂದರವಾದ ಪದ ಪುಂಜಗಳಿಂದ ಓದುಗರನ್ನು ದಂಗು ಬಡಿಸಬೇಕು, ಆಕರ್ಷಕ ತಲೆ ಬರಹಗಳಿಂದ ಓರಗೆಯ ಹುಡುಗ ಹುಡುಗಿಯರಲ್ಲಿ ಬೆರಗನ್ನು ಹುಟ್ಟಿಸಬೇಕು ಎಂಬ ಮುಗ್ಧ ಹಂಬಲಗಳ ಆಸರೆಯಲ್ಲಿ ಚಿಗುರೊಡೆದ ಪತ್ರಿಕೆಯ ಕನಸು ‘ಉತ್ಸಾಹ’, ‘ಕಲರವ’, ‘ಸಡಗರ’ ಹೀಗೆ ಬಗೆ ಬಗೆಯ ಹೆಸರುಗಳನ್ನು ಪಡೆಯುತ್ತ, ಕೈಬರಹ, ಝೆರಾಕ್ಸ್ ಮಶೀನಿನ ಸಹವಾಸ, ಆಫ್ ಸೆಟ್ ಎಂಬ ಅತ್ಯಾಧುನಿಕ ತಂತ್ರಜ್ಞಾನದ ಸನ್ನಿಧಾನಗಳಿಂದ ರೂಪ ಬದಲಾಯಿಸುತ್ತಾ ಆ ಹೈಸ್ಕೂಲು ಹುಡುಗನ ಮುಗ್ಧ ಹಂಬಲಗಳ ಸುತ್ತ ಬೆಳೆಯತೊಡಗಿತು. ಮುಗ್ಧ ಹುಮ್ಮಸ್ಸಿನಲ್ಲಿ, ಅನುಕರಣೆಯ ಅವಸರದಲ್ಲಿ ಶುರುವಾದ ಪತ್ರಿಕೆ ಕಣ್ಣೆದುರು ಬೆಳೆಯುತ್ತ ಬೆಳೆಯುತ್ತ ನನ್ನಲ್ಲಿ ಅನೇಕ ಪ್ರಶ್ನೆಗಳನ್ನು ಮೂಡಿಸುತ್ತಾ ಹೋಯಿತು.

ಈ ಪತ್ರಿಕೆಯನ್ನು ವ್ಯಾಪಾರದ ಉದ್ದೇಶದಿಂದ ಹೊರ ತಂದಿದ್ದಾಗಿದ್ದರೆರೆ ನನ್ನನ್ನು ಕಾಡುತ್ತಿದ್ದ ಹಲವಾರು ಪ್ರಶ್ನೆಗಳು ನಿವೃತ್ತಿಯನ್ನು ಪಡೆಯುತ್ತಿದ್ದವೇನೋ! ಯಾವುದೇ ಕೆಲಸವನ್ನು ಮಾಡುವುದಕ್ಕೆ ಮನುಷ್ಯನಿಗೆ ಹಣಕ್ಕಿಂತ ದೊಡ್ಡದಾದ ಸ್ಪೂರ್ತಿ ಹಾಗೂ ಉದ್ದೇಶಗಳು ಬಹುಶಃ ಬೇಕಾಗುವುದಿಲ್ಲ. ಹಣದ ಹರಿವು ಇರುವವರೆಗೆ ನಾವು ಮಾಡುವ ಕೆಲಸದ ಉದ್ದೇಶ, ಅದರ ಸಾರ್ಥಕ್ಯದ ಬಗ್ಗೆ ಅಷ್ಟು ಗಂಭೀರವಾದ ಪ್ರಶ್ನೆಗಳನ್ನು ನಮ್ಮನ್ನು ಕಾಡುವುದಿಲ್ಲ. ಹಣದ ಚರಿಷ್ಮಾ ಅಂಥವೆಲ್ಲ ಪ್ರಶ್ನೆಗಳನ್ನು ಅಪ್ರಸ್ತುತವಾಗಿಸಿಬಿಡುತ್ತದೆ. ಹಣದ ಆವಾಹನೆಯಾದೊಡನೆ ಹೆಣವೂ ಜೀವನೋತ್ಸಾಹದಿಂದ ವಿಜೃಂಭಿಸುವಂತೆ ಕಾಣುತ್ತದೆ. ಶವದಲ್ಲಿ ಜೀವದ ಸಂಚಾರದ ಭ್ರಮೆಯನ್ನು ಸೃಷ್ಟಿಸಬಲ್ಲ ಶಕ್ತಿ ಹಣಕ್ಕಿದೆ. ಪತ್ರಿಕೆಯನ್ನು ಮಾರುಕಟ್ಟೆಯಲ್ಲಿನ ರ್ಯಾಟ್ ರೇಸಿಗೆ ಬಿಟ್ಟಿದ್ದರೆ ಬಹುಶಃ ನನ್ನೆಲ್ಲ ಸಾಮರ್ಥ್ಯವನ್ನು, ತಂತ್ರಗಾರಿಕೆ, ಬುದ್ಧಿವಂತಿಕೆ, ಪ್ರತಿಭೆಯನ್ನು ಉತ್ತರವಿಲ್ಲದ ಈ ಮೇಲಿನ ಪ್ರಶ್ನೆಗಳಲ್ಲಿ ವ್ಯಯಿಸದೆ ಏನಾದರೂ ಮಾಡುತ್ತಿರಬಹುದಿತ್ತು. ಸದಾ ಬ್ಯುಸಿಯಾಗಿರುವುದು, ಸದಾ ಓಡುತ್ತಿರುವುದು ನಮ್ಮಲ್ಲಿ ‘ಎಲ್ಲಿಗೆ ಹೋಗುತ್ತಿದ್ದೇವೆ?’ ಎನ್ನುವ ಜಿಜ್ಞಾಸೆಯನ್ನೇ ಅಪ್ರಸ್ತುತವಾಗಿಸಿಬಿಡುತ್ತದೆ. ಇಷ್ಟು ವೇಗದಲ್ಲಿ ಹೋಗುತ್ತಿದ್ದೇವೆ ಎಂದರೆ ಎಲ್ಲಿಗೋ ಹೋಗುತ್ತಲೇ ಇರಬೇಕು ಎಂದು ಭಾವಿಸುತ್ತೇವೆ. ಆದರೆ ಮೊದಲಿನಿಂದಲೂ ನನಗೆ ಆ ಸೌಕರ್ಯ ಲಭಿಸಲಿಲ್ಲ. ಹಣದ ವಿಷಯದಲ್ಲಿ ನಾನು ಹುಟ್ಟಿದಾಗಿನಿಂದ ದಡ್ದನಾಗಿರುವುದಕ್ಕೋ, ಹಣ ನನ್ನನ್ನು ಬಹುಕಾಲ ಮೋಟಿವೇಟ್ ಮಾಡುವ ಶಕ್ತಿಯನ್ನು ಹೊಂದಿಲ್ಲದಿರುವುದಕ್ಕೋ ನಾನು ಪತ್ರಿಕೆಯ ಪ್ರಕಟಣೆಯನ್ನು ಜೇಬಿಗೆ ಹೊರೆಯಾಗುವ ದುಬಾರಿ ಹವ್ಯಾಸವಾಗಿಯೇ ನಡೆಸಿಕೊಂಡು ಬಂದೆ.

ಪತ್ರಿಕೆ ಶುರು ಮಾಡುವುದಕ್ಕೆ ಅಂಧ ಅನುಕರಣೆಯೇ ಪ್ರಮುಖ ಕಾರಣವಾಯಿತಾದರೂ ಅನುಕರಣೆಯ ಹುಮ್ಮಸ್ಸು ಕಡಿಮೆಯಾದ ಮೇಲೆಯೂ ಇದರ ಆವಶ್ಯಕತೆ ಕಂಡಿದ್ದಕ್ಕೆ ನಾನು ಇತರೆ ಕಾರಣಗಳನ್ನು ಕಂಡುಕೊಂಡಿದ್ದೇನೆ. ತಾನು ಜಗತ್ತಿಗೆ ಏನನ್ನೋ ಹೇಳಬೇಕಿದೆ ಎನ್ನುವ ತುಡಿತದ ಕಾರಣದಿಂದಾಗಿಯೇ ಮನುಷ್ಯ ನಾನಾ ಅಭಿವ್ಯಕ್ತಿಗಳನ್ನು ಹುಡುಕಿಕೊಂಡದ್ದು. ಎದೆಯೊಳಗೆ ಹುಟ್ಟಿ ಸರಿದಾಡುವ ರಾಗಕ್ಕೆ ಧ್ವನಿ ನೀಡಿ ಹಾಡಾಗಿಸುವಾಗ, ಕೈಗೆ ಸಿಗದೆ ಅಮೂರ್ತವಾಗಿ ಹರಿದಾಡುವ ಭಾವನೆಗೆ ಶಬ್ಧದ ರೂಪ ಕೊಟ್ಟು ಕವಿತೆಯಾಗಿಸುವಾಗ, ಕಲ್ಪನೆಯಲ್ಲಿ ಆವಿರ್ಭವಿಸಿದ ರೂಪವನ್ನು, ಸೌಂದರ್ಯವನ್ನು ಕ್ಯಾನ್ವಾಸಿನ ಹರವಿನ ಮೇಲೆ ಮೂಡಿಸುವಾಗ ದೊರೆಯುವ ಖುಶಿಗೆ, ಸಂತೃಪ್ತಿಯ ಭಾವನೆಗೆ ಯಾವ ತಾರ್ಕಿಕ ಕಾರಣವನ್ನೂ ನೀಡಲಾಗದು. ಒಂದು ಕವಿತೆಯನ್ನು ಬರೆಯುವಾಗಿನ, ಚಿತ್ರ ಬಿಡಿಸುವಾಗಿನ, ರಾಗದ ಬೆನ್ನು ಬಿದ್ದು ಆಲಾಪಿಸುವಾಗಿನ ರೋಮಾಂಚನಕಾರಿ ಅನುಭವವ ಬೇರಾವ ಕೆಲಸದಲ್ಲೂ ಕಾಣಲಾಗದ ಅಸಹಾಯಕತೆ ಅನುಭವಿಸಿದವರಿಗೇ ಗೊತ್ತು. ಈ ಬಗೆಯ ಸೃಜನಶೀಲತೆಯ ತುಡಿತ ಬರವಣಿಗೆಯನ್ನು ನನಗೆ ನಂಟು ಹಾಕಿದೆ.

ಬರೆಯುವ ಧ್ಯಾನದಲ್ಲಿ ತೊಡಗಿರುವಾಗ ಕಾಡದೆ ಬರೆದು ಮುಗಿಸಿದ ಸಂತೃಪ್ತ ಭಾವನೆಯಲ್ಲಿ ಹೊರಳುವಾಗ ಕತ್ತು ಹಿಸುಕುವ ಪ್ರಶ್ನೆಯೊಂದಿದೆ. ‘ಇದನ್ನೇನು ಮಾಡುವುದು?’ ತಲೆಯಲ್ಲಿದ್ದ ಆಲೋಚನೆಯನ್ನು ಕಂಪ್ಯೂಟರ್ ಪರದೆಯ ಮೇಲೋ, ಕಾಗದದಲ್ಲೋ ಇಳಿಸಿದ ತಕ್ಷಣ ನನ್ನ ಸೃಜನಶೀಲ ತುಡಿತಕ್ಕೆ, ಅಭಿವ್ಯಕ್ತಿಯ ಹಪಹಪಿಗೆ ನ್ಯಾಯದೊರಕಿಸಿದಂತಾಗುತ್ತದೆ. ಆದರೆ ಅಲ್ಲಿಗೆ ಸಂಪೂರ್ಣ ಸಮಾಧಾನ ಸಿಕ್ಕುವುದಿಲ್ಲ. ಮಗು ಹೆತ್ತ ಮಾತ್ರಕ್ಕೆ ಮುಗಿಯದ ಸಂಭ್ರಮದಂಥದ್ದು ಅದು. ಅದನ್ನು ಒಳ್ಳೆಯ ಶಾಲೆಗೆ ಸೇರಿಸಿ, ಅದರ ಬೆಳವಣಿಗೆಗೆ ಉತ್ತಮ ಪರಿಸರ ಸೃಷ್ಟಿಸಿ ಅದರ ಸಾಧನೆ, ಅದು ಪಡೆಯುವ ಮನ್ನಣೆಯಲ್ಲಿ ಸಂತೃಪ್ತಿಯನ್ನು ಕಾಣುತ್ತಾ ಸುಖಿಸುವ ದೀರ್ಘ ಪ್ರಯಾಣವದು. ಬರೆದು ಬಿಸಾಕಿದ ಲೇಖನವನ್ನೋ, ಕವಿತೆ, ಕಥೆಯನ್ನೋ ನಾಲ್ಕು ಜನರೆದುರು ಬೆಳೆಯ ಬಿಟ್ಟಾಗಲೆ ನಿಜವಾದ ಸಾರ್ಥಕ್ಯ ಪಡೆದ ಭಾವ. ಇದು ಕೇವಲ ಸಾಹಿತ್ಯ, ಬರವಣಿಗೆಯ ಬಗ್ಗೆ ರೋಮ್ಯಾಂಟಿಕ್ ಆಗಿ ಆಲೋಚಿಸಿ ಬರೆದ ಮಾತಲ್ಲ. ನಮ್ಮೆಲ್ಲಾ ಕೆಲಸಗಳಲ್ಲೂ, ಸೃಜನಶೀಲ ಚಟುವಟಿಕೆಗಳಲ್ಲೂ ಅಡಗಿರುವ ಸಂಗತಿಯಿದು. ಸಬ್ಜೆಕ್ಟ್ ಮೇಲಿನ ಆಸಕ್ತಿಯಿಂದ ಎಷ್ಟೇ ಓದಿಕೊಂಡರೂ ಪರೀಕ್ಷೆಯಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಸೃಷ್ಟಿಸಿದಾಗ ಕಲಿತ ಸಬ್ಜೆಕ್ಟಿಗೆ ಸಿಕ್ಕುವ ಸಂಪೂರ್ಣತೆಯ ಮೊಹರಿನಂಥದ್ದು ಇದು.

ಏನಾದರೂ ಬರೆಯಲೇ ಬೇಕು, ಅವರ ರೀತಿ ಬರೆಯಬೇಕು, ಅಂಥ ವಿಷಯದ ಬಗ್ಗೆ ಬರೆಯಬೇಕು, ಅದಕ್ಕಿಂತ ಉತ್ತಮವಾಗಿ ಬರೆಯಬೇಕು ಎಂಬ ಉತ್ಸಾಹ, ಹುಮ್ಮಸ್ಸಿನ ಭಾವಗಳೂ, ಇದೆಲ್ಲದರಿಂದ ಉಪಯೋಗವೇನಿದೆ?, ಇದನ್ನು ಸಾಹಿತ್ಯ ಎನ್ನಬೇಕೇ?, ಯಾರು ಓದುತ್ತಾರೆ ಇದನ್ನೆಲ್ಲ… ಎನ್ನುವ ಸಿನಿಕ ಜಿಜ್ಞಾಸೆಗಳೂ ನನ್ನೊಳಗೆ ಹಾಗೂ ನಮ್ಮ ಟೀಮಿನ ಪ್ರತಿಯೊಬ್ಬರೊಳಗೂ ಹೋರಾಡುತ್ತಾ , ಗೆಲ್ಲುತ್ತಾ, ಸೋಲುತ್ತಾ ಉಂಟು ಮಾಡುವ ಪರಿಣಾಮಗಳ ಅಭಿವ್ಯಕ್ತಿಯನ್ನು ನೀವಿನ್ನು ಈ ಬ್ಲಾಗಿನಲ್ಲಿ ಗುರುತಿಸಬಹುದು.

ಬಿಗಿದ ರೋಪಿನ ಮೇಲೆ ನಡೆಯ ಹೊರಟ ಹವ್ಯಾಸಿ ಸಾಹಸಿಗರು ನಾವು. ನಿಮ್ಮ ಒಂದೊಂದೇ ಚಪ್ಪಾಳೆ, ಮಾತಿನಲ್ಲಿನ ಅಭಯ, ಎಡವಿದಾಗ ಒಂದು ಮೃದುವಾದ ಬುದ್ಧಿ ಮಾತು ಇವೆಲ್ಲ ನಮ್ಮೊಳಗಿನ ಕಿಚ್ಚನ್ನು ಬೆಳಗಿಸಿಡುತ್ತವೆ. ನಿಮ್ಮಿಂದ ಇಷ್ಟನ್ನು ಮಾತ್ರ ನಿರೀಕ್ಷಿಸಿದ್ದೇವೆ. ನಮಗೆ ನಿರಾಸೆಯಾಗದು ಎಂಬ ನಂಬಿಕೆ ನಮ್ಮದು!

– ಸಂಪಾದಕ
Editor.sadagara@gmail.com

ಇವತ್ತಿನ ಪರಿಸ್ಥಿತಿಯಲ್ಲಿ ಕೋಮುವಾದ, ಮತೀಯವಾದ, ಭಯೋತ್ಪಾದನೆಯ ಬಗ್ಗೆ ಮಾತಾಡುವುದು ಅಷ್ಟು ಸುಲಭವಲ್ಲ. ಯಾವ ಸಂದರ್ಭದಲ್ಲಿ, ಯಾರ ಎದುರು ನಾವು ಮಾತಾಡುತ್ತೇವೆ ಎಂಬುದರಿಂದ ಹಿಡಿದು ಯಾವ ಸ್ಥಾನದಿಂದ ನಾವು ಮಾತಾಡುತ್ತೇವೆ ಎಂಬುದೂ ಮುಖ್ಯವಾಗುತ್ತದೆ. ಇಬ್ಬರು ಹಿಂದೂಗಳು ಮಾತಾಡುವಾಗ ಭಯೋತ್ಪಾದನೆ ಹಾಗೂ ಇಸ್ಲಾಮಿನ ನಂಟಿನ ಬಗ್ಗೆ ಉಡಾಫೆಯಿಂದ ಮಾತಾಡಿಬಿಡಬಹುದು. ಆದರೆ ಅದೇ ಗೆಳೆಯರ ಗುಂಪಿನ ಮುಸ್ಲೀಂ ಯುವಕನೊಬ್ಬ ಬಂದ ತಕ್ಷಣ ಮಾತಿನ ವರಸೆ ಬದಲಾಯಿಸಿಬಿಡಬೇಕಾಗುತ್ತದೆ. ಪತ್ರಿಕೆಯ ಸಂಪಾದಕನಾದವನು, ಧಾರ್ಮಿಕ ಮುಖಂಡನಾದವನು, ಸಾಹಿತಿಯಾದವನು, ರಾಜಕಾರಣಿಯಾದವನು ತನ್ನ ಮಾತಿನ ಮೇಲೆ, ಅದು ಧ್ವನಿಸುವ ಅರ್ಥದ ಮೇಲೆ ಸದಾ ಗಮನವಿಟ್ಟುಕೊಂಡಿರಬೇಕಾಗುತ್ತದೆ. ಎಡ ಅಥವಾ ಬಲ ಪಂಥೀಯತೆಯ ಹಣೆ ಪಟ್ಟಿ ಹತ್ತಿಸಿಕೊಳ್ಳದೆ ಏನನ್ನೂ ಮಾತಾಡಲು ಸಾಧ್ಯವೇ ಆಗದು. ಏನು ಮಾತಾಡಿದರೂ ಲೇಬಲಿಂಗ್ ನಡೆದೇ ನಡೆಯುತ್ತದೆ. ಹಾಗಂತ ಮಾತಾಡದೆ ಸುಮ್ಮನೆ ಉಳಿಯುವುದು ಪ್ರಜ್ಞಾವಂತರ ಲಕ್ಷಣವಲ್ಲ. ಮಾತಾಡಿಯೇ ಆಡುತ್ತೇವೆ. ಅದರಿಂದ ಅಂಟಿಕೊಳ್ಳುವ ಹಣೆಪಟ್ಟಿಯನ್ನು ಉಳಿಸಿಕೊಳ್ಳಲು ಇಲ್ಲವೇ ಅದರಿಂದ ಪಾರಾಗಲೂ ಮತ್ತೆ ಏನನ್ನಾದರೂ ಮಾತಾಡುತ್ತೇವೆ. ಹೊಸ ಹಣೆಪಟ್ಟಿಯನ್ನು ಅಂಟಿಸಿಕೊಳ್ಳುತ್ತೇವೆ. ಹಣೆಪಟ್ಟಿಗಳ ಚಕ್ರವ್ಯೂಹದಲ್ಲಿ ಕಳೇದುಹೋಗಿಬಿಡುತ್ತೇವೆ. ಹೀಗಾಗಿಯೇ ಹೊಸ ಚಿಂತನೆಯು ಹುಟ್ಟುವುದಿಲ್ಲ. ಅಪ್ಪಟ ಪ್ರಾಮಾಣಿಕವಾದ, ಮಾನವೀಯತೆಯ ನಿಲುವುಗಳು ಹೊರಬರುವುದಿಲ್ಲ. ಯಾವ ಸಮಸ್ಯೆಗೂ ಪರಿಹಾರಗಳು ಹೊಳೆಯುವುದಿಲ್ಲ. ಚರ್ಚೆಗಳು ನಮ್ಮನ್ನು ಬೆಳೆಸದೆ, ನಮ್ಮನ್ನು ಒಂದುಗೂಡಿಸದೆ ಹೋಗುತ್ತವೆ.

police.png

ಇತ್ತೀಚಿನ ಎರಡು ವಿದ್ಯಮಾನಗಳನ್ನೇ ಗಮನಿಸಿ. ದೇಶದಾದ್ಯಂತ ಅಸಂಖ್ಯಾತ ಬಾಂಬ್ ಸ್ಪೋಟಗಳು (ಇತ್ತೀಚಿನ ಪತ್ರಿಕಗಳಲ್ಲಿ ವರದಿಯಾಗುತ್ತಿರುವ ಆತಂಕಕಾರಿ ಅಂಶವೆಂದರೆ ಭಯೋತ್ಪಾದಕ ಕೃತ್ಯಗಳ ಹಿಂದೆ ಕೆಲವು ಹಿಂದೂಗಳ ಕೈವಾಡವೂ ಇದೆ. ಮಲೆಗಾಂವ್‌ನಲ್ಲಿ ನಡೆದ ಬಾಂಬ್ ಸ್ಪೋಟಕ್ಕೆ ಸಂಬಂಧಿಸಿದ ಹಾಗೆ ಸಾಧ್ವಿ ಪ್ರಜ್ಞಾ, ಶ್ರೀಕಾಂತ್ ಪುರೋಹಿತ್ ಎಂಬ ಸೈನ್ಯಾಧಿಕಾರಿ ಹಾಗೂ ಪಾಂಡೆ ಎಂಬ ಧರ್ಮ ಗುರುವನ್ನು ಬಂಧಿಸಲಾಗಿದೆ) ನಡೆಯುತ್ತಿವೆ. ಇವ್ಯಾವೂ ಆಕಸ್ಮಿಕಗಳಲ್ಲ. ಇಂತಹ ಕೃತ್ಯ ನಡೆಸುವುದಕ್ಕೆ ದೊಡ್ಡ ಮಟ್ಟದ ಸಂಘಟನೆ ಹಾಗೂ ಯೋಜನೆ ಬೇಕು. ಆ ಸಂಘಟನೆಗೆ ಒಂದು ಐಡಿಯಾಲಜಿ ಅದನ್ನು ಆರ್ಥಿಕವಾಗಿ, ಭಾವುಕವಾಗಿ ಬೆಂಬಲಿಸುವ ವರ್ಗ ಬೇಕೇ ಬೇಕು. ಅದ್ಯಾವುದೂ ಇಲ್ಲದೆ ಇಷ್ಟು ವ್ಯಾಪಕವಾಗಿ ಬಾಂಬ್ ಸ್ಪೋಟಗಳು ನಡೆಯಲು, ಮುಗ್ಧರ ಜೀವ ಹೋಗಲು ಸಾಧ್ಯವೇ ಇಲ್ಲ. ಆದರೆ ಭಯೋತ್ಪಾದನೆಯ ಬಗ್ಗೆ ಮಾತನಾಡುವಾಗ ನಮಗೆ ಎದುರಾಗುವ ಪರಿಸ್ಥಿತಿಯಾದರೂ ಎಂಥದ್ದು? ರಾಜಕಾರಣಿಗಳನ್ನು ಬಿಟ್ಟು ಬಿಡಿ, ಇಂದು ಬಿಜೆಪಿಯಲ್ಲಿರುವ ವ್ಯಕ್ತಿ ಭಯೋತ್ಪಾದನೆಗೆ ಮುಸ್ಲೀಂ ಮೂಲಭೂತವಾದವೇ ಕಾರಣ ಎಂದು ಹೇಳಿದರೆ ಮರುದಿನ ಕಾಂಗ್ರೆಸ್ಸಿಗೆ ಹಾರಿ ಇದು ಅಲ್ಪಸಂಖ್ಯಾತರ ವಿರುದ್ಧ ಬಹುಸಂಖ್ಯಾತರಲ್ಲಿ ಕಹಿಯನ್ನು ಬಿತ್ತಲು ಪಟ್ಟ ಭದ್ರ ಹಿತಾಸಕ್ತಿಗಳು ನಡೆಸುತ್ತಿರುವ ಕೃತ್ಯ ಎಂದು ಮಾತನಾಡುತ್ತಾನೆ. ಅಸಲಿಗೆ ರಾಜಕಾರಣಿಗೆ ಭಯೋತ್ಪಾದನೆಯ ಬಗ್ಗೆ ಮಾತಾಡಲಿಕ್ಕೆ ಅರ್ಹತೆ ಏನಿದೆ? ಭಯೋತ್ಪಾದನೆಯನ್ನು ಭದ್ರತೆಯ ಸಮಸ್ಯೆಯಾಗಿ ಪರಿಶೀಲಿಸಲು ಆತನೇನು ಪೊಲೀಸ್ ಅಧಿಕಾರಿಯಲ್ಲ. ಅದನ್ನೊಂದು ವೈಚಾರಿಕ ಭಿನ್ನಮತೀಯತೆಯಾಗಿಯೋ, ಚಳುವಳಿಯ ಇಲ್ಲವೇ ಪ್ರತಿಕ್ರಿಯೆಯ ಪ್ರಕ್ರಿಯೆಯಾಗಿ ಪರಿಶೀಲಿಸಿ ಮಾತಾಡಲು ಆತ ಸಮಾಜ ವಿಜ್ಞಾನಿಯೂ ಅಲ್ಲ. ಆತ ಕೇವಲ ತನ್ನ ಹಿತಾಸಕ್ತಿಗೆ ಪೂರಕವಾಗುವ ನೆಲೆಯಿಂದ ಮಾತಾಡಬಲ್ಲ. ಆದರೆ ನಮ್ಮ ಮಾಧ್ಯಮಗಳ ಬಹುಪಾಲು ಸ್ಪೇಸ್‌ನ್ನು ಆಕ್ರಮಿಸಿಕೊಳ್ಳುವವರು ಇವರೇ. ನಮಗೆ ಗುಪ್ತಚರ ಇಲಾಖೆಯ ಅಧಿಕಾರಿಯ ಅಭಿಪ್ರಾಯಗಳು ತಿಳಿಯುವುದಿಲ್ಲ, ಸಮಾಜ ತಜ್ಞರ ತರ್ಕದ ಬಗ್ಗೆ ಯಾವ ಪತ್ರಿಕೆಗಳೂ ತಿಳಿಸುವುದಿಲ್ಲ. ಹೀಗಾಗಿ ಭಯೋತ್ಪಾದನೆಯಾಗಲೀ, ಚರ್ಚ್ ಮೇಲಿನ ದಾಳಿಯನ್ನಾಗಲೀ ಕೇವಲ ಲಾ ಅಂಡ್ ಆರ್ಡರ್ ಸಮಸ್ಯೆಯೆಂದು ಪರಿಗಣಿಸಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಪೊಲೀಸರಿಗೆ ತಮ್ಮ ಕೆಲಸವನ್ನು ತಾವು ಮಾಡಲು ಬಿಡದೆ ಎಲ್ಲರೂ ಮಾತಾಡಲು ಶುರುಮಾಡುತ್ತೇವೆ. ರಾಜಕಾರಣಿಗಳು ಒಂದು ರೀತಿಯಲ್ಲಿ ಚರ್ಚೆಯನ್ನು ಕ್ಲಿಷ್ಟಗೊಳಿಸಿದರೆ, ನಮ್ಮ ಸಂಸ್ಕೃತಿ ಚಿಂತಕರು, ಸಾಹಿತಿಗಳು ರಂಗ ಪ್ರವೇಶ ಮಾಡಿ ಮತ್ತಷ್ಟು ಗೊಂದಲ ಹುಟ್ಟಿಸುತ್ತಾರೆ.

ಬಾಂಬ್ ಸ್ಪೋಟವನ್ನು ಒಂದು ದೇಶದ ಭದ್ರತೆಯ ಸಮಸ್ಯೆಯಾಗಿ ಪರಿಗಣಿಸಿದರೆ ಸಮಸ್ಯೆ ಎಷ್ಟೋ ಪರಿಹಾರವಾದಂತಾಗಿಬಿಡುತ್ತದೆಯಲ್ಲವೇ? ಬಾಂಬ್ ಸ್ಪೂಟವನ್ನು ಒಂದು ಕೋಮಿನೊಂದಿಗೆ ಗುರುತಿಸಿದಾಗ, ಪೊಲೀಸರ ಕಗ್ಗೊಲೆಯನ್ನು, ಭೂ ಮಾಲೀಕರ ಕೊಲೆಯನ್ನು ಒಂದು ಐಡಿಯಾಲಜಿಯೊಂದಿಗೆ ಗುರುತಿಸಿದಾಗ ಅನವಶ್ಯಕವಾದ ಗೊಂದಲ ಹುಟ್ಟಿಕೊಳ್ಳುತ್ತದೆ. ಭಯೋತ್ಪಾದನೆಯ ನಿಯಂತ್ರಣದ ಕೆಲಸವನ್ನು ಪೊಲೀಸರಿಗೆ ಒಪ್ಪಿಸಿ ಆ ಇಲಾಖೆ ತನ್ನ ಗರಿಷ್ಠ ಸಾಮರ್ಥ್ಯವನ್ನು ಬಳಸಿ ಅದನ್ನು ಮಾಡಲು ಬಿಟ್ಟು ರಾಜಕಾರಣಿಗಳು ತಣ್ಣಗೆ ಏಕಿರಬಾರದು? ನಮ್ಮ ಸಂಸ್ಕೃತಿ ಚಿಂತಕರು ಸಾಹಿತಿಗಳು ಚರ್ಚ್ ಮೇಲೆ ನಡೆದ ದಾಳಿ, ಮಕ್ಕಳು- ಮರಿಯನ್ನದೆ ಅಮಾಯಕರ ಜೀವ ತೆಗೆದು, ನನ್‌ಗಳ ಮಾನಹರಣ ಮಾಡಿ ಬೆತ್ತಲಾಗಿ ಪರೇಡ್ ನಡೆಸಿದ್ದನ್ನೆಲ್ಲಾ ಲಾ ಅಂಡ್ ಆರ್ಡರ್ ಸಮಸ್ಯೆ ಎಂದು ಬಗೆದು ಅದನ್ನು ಬದಿಗಿಟ್ಟು ಮತಾಂತರದ ಕೆಡುಕು ಹಾಗೂ ಕ್ರಿಶ್ಚಿಯಾನಿಟಿಯ ಆಕ್ರಮಣಕಾರಿ ಸ್ವಭಾವದ ಬಗ್ಗೆ ಚರ್ಚೆ ನಡೆಸಲು ಏನು ಧಾಡಿ? ಒಂದು ಐಡಿಯಾಲಜಿ ಎಷ್ಟೇ ಉದಾತ್ತವಾಗಿರಬಹುದು ಹಾಗಂತ ಅದರಿಂದುಂಟಾಗುವ ಹಿಂಸೆ, ಪ್ರಾಣನಾಶ, ಆಸ್ಥಿ ನಾಶವನ್ನೆಲ್ಲಾ ಸಮರ್ಥಿಸಿಕೊಳ್ಳುವುದು ತಪ್ಪು. ಪೊಲೀಸರು ಅಮಾಯಕ ಮುಸಲ್ಮಾನರನ್ನು ಬಂಧಿಸಿ ಹಿಂಸಿಸುತ್ತಿದ್ದಾರೆ ಎಂದು ಆರೋಪಿಸುವ ಮಾನವ ಹಕ್ಕು ರಕ್ಷಣೆಯ ಯೋಧರಿಗೂ, ಕ್ರೈಸ್ತರ ಮೇಲಿನ ದಾಳಿಗೆ ಹಿಂದೂ ದೇವತೆಗಳ, ಹಿಂದೂ ಧರ್ಮದ ಅವಹೇಳನದಿಂದ ಹುಟ್ಟಿದ ಆವೇಶವೇ ಕಾರಣ ಎನ್ನುವ ಹಿಂದೂ ಧರ್ಮ ರಕ್ಷಣೆಯ ಸೈನಿಕರಿಗೂ ಇದು ಅರ್ಥವಾಗಬೇಕು. ಬಜರಂಗ ದಳದ ಕಾರ್ಯಕರ್ತನಿಗಾಗಲೀ, ಸಿಮಿಯ ಸದಸ್ಯನಿಗಾಗಲಿ ತನ್ನ ತತ್ವ ಪ್ರತಿಪಾದಿಸಲು ತಾನು ನಂಬಿದ್ದು ಶ್ರೇಷ್ಠ ಎಂದು ವಾದಿಸಲು ಹಕ್ಕು ಇದೆಯಾದರೂ ಪ್ರಾಣ ಹಾನಿ, ಗದ್ದಲ ಮಾಡಿದರೆ ಅದನ್ನು ಒಂದು ಭದ್ರತೆಯ ಸವಾಲಿನ ಹಾಗೆ ಕಾಣಬೇಕು. ಕಲ್ಲು ತೂರಿದವ ಯಾರು ಎಂದು ನೋಡಿ ಲಾಠಿ ಬೀಸುವ ಅನಿವಾರ್ಯತೆ ಪೊಲೀಸರಿಗಿರಬಾರದು. ಏಕೆಂದರೆ ತೂರಿದ ಕಲ್ಲಿಗೆ ಯಾವ ಪಂಥೀಯತೆಯೂ, ಯಾವ ವೈಚಾರಿಕತೆಯೂ, ಯಾವ ಧಾರ್ಮಿಕತೆಯೂ ಇರದು. ಅದನ್ನು ಎದುರಿಸುವ ಪೊಲೀಸರ ಬ್ಯಾರಿಕೇಡಿಗೂ ಅದಿರಬಾರದು.
ಏನಂತೀರಿ?

ಸುಪ್ರೀತ್.ಕೆ.ಎಸ್

ಇತ್ತೀಚೆಗೆ ಬಿಡುಗಡೆಯಾದ ಎರಡು ಹಿಂದಿ ಸಿನೆಮಾಗಳ ಬಗ್ಗೆ ಸ್ವಲ್ಪ ಬರೆಯಬೇಕು. ಒಂದು, ನಿಶಿಕಾಂತ್ ಕಾಮತ್ ನಿರ್ದೇಶನದ ‘ಮುಂಬೈ ಮೇರಿ ಜಾನ್’. ಮತ್ತೊಂದು, ನೀರಜ್ ಪಾಂಡೆಯ ನಿರ್ದೇಶನದ ಸಿನೆಮಾ ‘ಎ ವೆಡ್‌ನೆಸ್‌ಡೇ’.

ಮೇಲ್ನೋಟಕ್ಕೆ ಎರಡೂ ಸಿನೆಮಾಗಳು ಒಂದೇ ಕಥಾವಸ್ತುವನ್ನು ಹೊಂದಿರುವಂತೆ, ಒಂದೇ ಸಮಸ್ಯೆಯೊಂದಿಗೆ ವ್ಯವಹರಿಸುವಂತೆ ಕಂಡರೂ ಈ ಎರಡೂ ಸಿನೆಮಾಗಳು ತಮ್ಮದೇ ಆದ ವಿಶಿಷ್ಟತೆಯನ್ನು ಹೊಂದಿವೆ. ಎರಡೂ ಚಿತ್ರಗಳು ಭಯೋತ್ಪಾದನೆಯ ಸಮಸ್ಯೆಯ ಬಗ್ಗೆ ಮಾತನಾಡುತ್ತವೆ. ಭಯೋತ್ಪಾದಕ ಕೃತ್ಯಗಳಲ್ಲಿ ಬಲಿಯಾದವರ ಬಗ್ಗೆ ಕಾಳಜಿಯಿಟ್ಟುಕೊಂಡು ರೂಪುಗೊಂಡಿವೆ.  ಮುಂಬೈ ಮೇರಿ ಜಾನ್‌ನಲ್ಲಿ ಯಾವುದೋ ಮುಖವಿಲ್ಲದ, ಹೆಸರಿಲ್ಲದ ಪಾತಕಿಗಳು ನಡೆಸುವ ವಿಧ್ವಂಸಕ ಕೃತ್ಯದಲ್ಲಿ ಬಲಿಯಾದ ಮುಂಬೈನ ಹಸಿ ಹಸಿ ಚಿತ್ರಣವಿದ್ದರೆ, ‘ಎ ವೆಡ್‌ನೆಸ್‌ಡೇ’ನಲ್ಲಿ ಆ ಅಗೋಚರ ಶತ್ರುಗಳ ವಿರುದ್ಧ ಶಸ್ತ್ರವೆತ್ತಿ ನಿಲ್ಲಲು ಸಜ್ಜಾಗುವ ಜನಸಾಮಾನ್ಯನ ಆಕ್ರೋಶ, ಹತಾಶೆಯ ಚಿತ್ರಣವಿದೆ. ಈ ಎರಡೂ ಸಿನೆಮಾಗಳ ಬಾಕ್ಸ್ ಆಫೀಸ್ ಸಾಧನೆಯನ್ನು ಪಕ್ಕಕ್ಕಿಟ್ಟು ನೋಡುವುದಾದರೆ ಇವೆರಡೂ ಸಿನೆಮಾ ಪ್ರತಿಪಾದಿಸುತ್ತಿರುವ ಕಾಳಜಿಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ.

ಕಳೆದ ವರ್ಷ ಸೆಪ್ಟೆಂಬರ್ ಹನ್ನೊಂದರಂದು ಮುಂಬೈನಲ್ಲಿ ನಡೆದ ರೈಲು ಸ್ಫೋಟದ ಸುತ್ತ ‘ಮುಂಬೈ ಮೇರಿ ಜಾನ್’ ಸಿನೆಮಾದ ಕಥೆ ಹಬ್ಬಿಕೊಳ್ಳುತ್ತಾ ಸಾಗುತ್ತದೆ. ಯಾವುದೋ ಉದ್ದೇಶಕ್ಕಾಗಿ, ಜಗತ್ತಿನ ಯಾವುದೋ ಮೂಲೆಯಲ್ಲಿ ಕುಳಿತ ಭಯೋತ್ಪಾದಕರು ಮುಂಬೈನ ರೈಲುಗಳಲ್ಲಿ, ಹೆಸರಿಲ್ಲದ ಗಲ್ಲಿಗಳಲ್ಲಿ ಇಟ್ಟು ಹೋದ ಬಾಂಬುಗಳು ಇಡೀ ಸಮಾಜವನ್ನು ಹೇಗೆ ಘಾಸಿಗೊಳಿಸುತ್ತವೆ, ವಿವಿಧ ಸ್ತರದ ಜನರ ಜನಜೀವನದ ಸೂಕ್ಷ್ಮ ತಂತುಗಳನ್ನು ಹೇಗೆ ಛಿದ್ರಗೊಳಿಸುತ್ತವೆ ಎಂಬುದನ್ನು ಅನಾವರಣಗೊಳಿಸುತ್ತಾ ಹೋಗುತ್ತಾರೆ ನಿಶಿಕಾಂತ್ ಕಾಮತ್. ಹಾಗೆ ನೋಡಿದರೆ ಈ ಸಿನೆಮಾ ಸಾಮಾನ್ಯ ವೀಕ್ಷಕರು ಬಯಸುವ ರೋಚಕತೆಯನ್ನಾಗಲೀ, ತಾರ್ಕಿಕ ಅಂತ್ಯಗಳಿರುವ ಕಥಾವಸ್ತುವನ್ನಾಗಲೀ ಒಳಗೊಂಡಿಲ್ಲ. ಇಲ್ಲಿರುವುದು ಯಾವ ಪೂರ್ವಾಗ್ರಹವಿಲ್ಲದೆ, ಯಾವ ತಾತ್ವಿಕತೆಯಿಲ್ಲದೆ, ಯಾವ ಸಂದೇಶಗಳನ್ನು ನೀಡುವ ತುರ್ತು ಇಲ್ಲದೆ ಬಾಂಬ್ ಸ್ಫೋಟ ನಡೆದ ನಂತರದಲ್ಲಿ ಮುಂಬೈನ ಜನರ ಬದುಕಿನಲ್ಲಾದ ಸ್ಥಿತ್ಯಂತರಗಳ, ಬದಲಾವಣೆಗಳ, ಪರಿಣಾಮಗಳ ಅವಲೋಕನ.

ಸಿನೆಮಾದಲ್ಲಿ ಬಾಂಬ್ ಬ್ಲಾಸ್ಟ್ ನಡೆಯುವ ಮುಂಚಿನ ಮುಂಬೈನ ವಿವಿಧ ವರ್ಗಗಳ ಜನರ ಬದುಕಿನ ಪರಿಚಯ ನಿಮಗೆ ಮಾಡಿಸಬೇಕು. ಆಕೆ ಒಬ್ಬ ಟಿವಿ ಜರ್ನಲಿಸ್ಟ್. ವರದಿಗಾರಿಕೆಯಲ್ಲಿ ಬಹಳ ಹೆಸರು ಮಾಡಿದವಳು. ಮುಂಬೈಯನ್ನು ಮುಳುಗಿಸುವ ಹಾಗೆ ಬಿದ್ದ ಮಳೆಯಲ್ಲಿ, ಗುಂಪು ಕಾಳಗದಲ್ಲಿ ಬಲಿಯಾದ ಹಳ್ಳಿಯಲ್ಲಿ – ಹೀಗೆ ಎಲ್ಲೆಂದರಲ್ಲಿಗೆ ತೆರಳಿ ವರದಿಗಾರಿಕೆ ಮಾಡುವ ಛಾತಿ ಉಳ್ಳವಳು. ಆಕೆಯ ವೃತ್ತಿಪರತೆ ಹಾಗೂ ಕೌಶಲ ಆಕೆಗೆ ದೊಡ್ಡ ಹೆಸರನ್ನು ತಂದುಕೊಟ್ಟಿರುತ್ತವೆ. ಈಕೆಗೊಬ್ಬ ಪ್ರಿಯಕರನಿರುತ್ತಾನೆ. ಇನ್ನು ಈತ ಮೇಲ್ಮಧ್ಯಮ ವರ್ಗದ ಗೃಹಸ್ಥ. ಪರಿಸರ ಪ್ರೇಮಿ, ಆದರ್ಶವಾದಿ. ಆಫೀಸಿಗೆ ಓಡಾಡಲು ಕಾರು ಕೊಂಡರೆ ಪೊಲ್ಯುಶನ್ ಹೆಚ್ಚುತ್ತದೆ, ಎಂದು ರೈಲಿನಲ್ಲಿ ಓಡಾಡುವವ. ಈತನಿಗೊಬ್ಬ ಮಡದಿಯಿದ್ದಾಳೆ. ಆಕೆ ಗರ್ಭಿಣಿ. ಸ್ವಲ್ಪ ಇತ್ತ ಬನ್ನಿ, ಇದು ಮುಂಬೈನ ಅತೀ ಸಾಮಾನ್ಯವಾದ ಒಂದು ಗಲ್ಲಿ. ಇಲ್ಲೊಂದು ಸಾಧಾರಣವಾದ ಟೀ ಅಂಗಡಿಯಿದೆ. ನಾಲ್ಕು ಮಂದಿ ಗೆಳೆಯರು ಗಂಟೆ ಗಟ್ಟಲೆ ಟೀ ಕುಡಿಯುತ್ತಾ, ಟಿವಿಯಲ್ಲಿ ಬರುವ ಸಂಗತಿಗಳ ಬಗ್ಗೆ ಗಹನವಾಗಿ ಮಾತನಾಡುತ್ತಾ ಹೋಗಿ ಬರುವವರ ಮೇಲೆ ಒಂದು ಕಣ್ಣಿಟ್ಟುಕೊಂಡು ಕೂತಿರುತ್ತಾರೆ. ಜೇಬಲ್ಲಿ ಹತ್ತು ರುಪಾಯಿ ಇರುತ್ತೆ, ಅದರಲ್ಲೇ ಇಡೀ ದಿನ ತಳ್ಳಬೇಕಿರುತ್ತದೆ. ಈಗ ಇವನನ್ನು ಪರಿಚಯಿಸಿಕೊಳ್ಳಿ, ಈತ ಮದ್ರಾಸಿ. ಇಲ್ಲಿ ಮುಂಬೈಯಲ್ಲಿ ಸೈಕಲ್ಲಿನ ಮೇಲೆ ಕಾಫಿ ಫಿಲ್ಟರ್ ಹೊತ್ತುಕೊಂಡು ಕಾಫಿ ಮಾರಿಕೊಂಡು ಜೀವನ ನಡೆಸುತ್ತಿರುತ್ತಾನೆ. ಇವರಿಬ್ಬರು ಮುಂಬೈ ಪೊಲೀಸ್. ಇವರಲ್ಲಿ ಒಬ್ಬಾತನಿಗೆ ನಿವೃತ್ತಿಯ ವಯಸ್ಸಾಗಿದೆ. ಮತ್ತೊಬ್ಬ ಹೊಸತಾಗಿ ಸೇವೆಗೆ ಸೇರಿದವ. ತನ್ನ ಸರ್ವೀಸಿಡೀ ತಾನೊಬ್ಬ ನಿರುಪಯುಕ್ತ ವ್ಯಕ್ತಿಯಾಗಿ ಜೀವನ ಕಳೆದೆ ಎಂಬುದು ಮೊದಲಿನವನ ಸಂಕಟವಾದರೆ, ಕಣ್ಣೆದುರಿನ ಭ್ರಷ್ಠಾಚಾರ, ಅನ್ಯಾಯವನ್ನು ಕಂಡು ಒಳಗೊಳಗೇ ಕುದಿಯುತ್ತಾ ಅಸಹಾಯಕನಾಗಿ ಕೂರುವುದು ನಂತರದವನ ಕರ್ಮ.

ಹೀಗಿರುವ ಮುಂಬೈಯಿಯಲ್ಲಿ ಬಾಂಬ್ ಸ್ಪೋಟಿಸುತ್ತದೆ. ಬಾಂಬ್ ಸ್ಪೋಟದ ತಾಜಾ ಸುದ್ದಿಗಳನ್ನು ವರದಿ ಮಾಡುವಲ್ಲಿ, ದುರಂತವನ್ನು ಯಾವ ಯಾವ ಕೋನದಿಂದ ವಿಮರ್ಶಿಸಬೇಕು, ದುಡಿಯುತ್ತಿದ್ದ ಒಬ್ಬನೇ ಮಗನನ್ನು ಕಳೆದುಕೊಂಡ ಕುಟುಂಬದ ಬಗೆಗಿನ ವರದಿಯನ್ನು ಯಾರು ಮಾಡಬೇಕು- ಎಂದೆಲ್ಲಾ ನಿಷ್ಕರ್ಷೆ ಮಾಡುವಲ್ಲಿ ಬ್ಯುಸಿಯಾಗಿದ್ದ  ಆಕೆಯ ಮೊಬೈಲು ಕುಣಿಯತೊಡ- ಗುತ್ತದೆ. ಬ್ಲಾಸ್ಟಿನಲ್ಲಿ ತನ್ನ ಪ್ರಿಯಕರ ನಾಪತ್ತೆಯಾಗಿದ್ದಾನೆ ಎಂಬುದು ಆಕೆಗೆ ತಿಳಿಯುತ್ತದೆ. ಆಸ್ಪತ್ರೆಯ ಶವಾಗಾರದಲ್ಲಿ ಹತ್ತಾರು ಶವಗಳ ಮಧ್ಯೆ ಆಕೆಗೆ ರುಂಡವಿಲ್ಲದ ತನ್ನ ಪ್ರಿಯಕರನ ಶವ ಎದುರಾಗುತ್ತದೆ. ಈತ ಎಂದಿನಂತೆ ತಾನು ಕಾರು ತೆಗೆದುಕೊಳ್ಳದಿರಲು ತೀರ್ಮಾನಿಸಿರುವ ಕಾರಣವನ್ನು ವಿವರಿಸುತ್ತಾ ಫರ್ಸ್ಟ್ ಕ್ಲಾಸ್ ಬೋಗಿಗೆ ತೆರಳಲು ಸಿದ್ಧನಾಗಿರುತ್ತಾನೆ. ಅಕಸ್ಮಾತಾಗಿ ಅಂದು ಜನರಲ್ ಕ್ಲಾಸ್‌ಗೆ ಹತ್ತಿಕೊಳ್ಳುತ್ತಾನೆ. ಸ್ವಲ್ಪ ಸಮಯದಲ್ಲೇ ಫರ್ಸ್ಟ್ ಕ್ಲಾಸ್ ಕಂಪಾರ್ಟ್‌ಮೆಂಟಿನಲ್ಲಿ ಬಾಂಬ್ ಸಿಡಿಯುತ್ತದೆ. ಹೊತ್ತುರಿಯುವ ರೇಲ್ವೆ ಡಬ್ಬಿ, ಸುಟ್ಟು ಕರಕಲಾದ ದೇಹಗಳು, ಕೈ ಕಾಲು ಕಳೆದುಕೊಂಡು ರಕ್ತ ಸುರಿಸುತ್ತಾ ಎದುರಲ್ಲೇ ಹಾದು ಹೋಗುತ್ತಿರುವ ಜನರು – ಇವನ್ನೆಲ್ಲಾ ಕಂಡು ಆತ ದಂಗಾಗಿ ಹೋಗುತ್ತಾನೆ. ಏನನ್ನೂ ಗ್ರಹಿಸಲಾಗದ ಸ್ಥಿತಿಗೆ ತಲುಪುತ್ತಾನೆ. ಅಲ್ಲಿ, ಮುಂಬೈನ ಗಲ್ಲಿಯೊಂದರ ಟೀ ಅಂಗಡಿಯಲ್ಲಿ ಟೀ ಹೀರುತ್ತಾ ಕುಳಿತಿದ್ದ ಈತನಿಗೆ ಅವಸರವಸರವಾಗಿ ಅಂಗಡಿಯಿಂದ ಓಡಿ ಹೋದ ಮುಸಲ್ಮಾನ ಯುವಕರಿಬ್ಬರ ಮೇಲೆ ಸಂಶಯ ಬಂದಿರುತ್ತದೆ. ಈತ ಬಾಂಬ್ ಬ್ಲಾಸ್ಟ್ ನಡೆದಾಗ ರೇಲ್ವೇ ಸ್ಟೇಷನ್ನಿನಲ್ಲೇ ಇರುತ್ತಾನೆ. ಬಾಂಬು ಸಿಡಿದಾಕ್ಷಣ ನೆರವಿಗೆ ಧಾವಿಸುತ್ತಾನೆ. ಅಲ್ಲಿ ರೇಲಿನಲ್ಲಿ ಸಿಡಿದ ಬಾಂಬಿಗೂ, ಅಂಗಡಿಯಿಂದ ಅವಸರವಸರಕ್ಕೆ ಓಡಿಹೋದ ಮುಸ್ಲೀಂ ಯುವಕರಿಗೂ ಆತನ ಮನಸ್ಸಿನಲ್ಲಿ ನಂಟು ಏರ್ಪಡುತ್ತದೆ. ಸೈಕಲ್ಲಿನ ಮೇಲೆ ಕಾಫಿ ಫಿಲ್ಟರ್ ಇಟ್ಟುಕೊಂಡು ವ್ಯಾಪಾರ ಮಾಡುವ ಮದ್ರಾಸಿ ಅಂದು ತನ್ನ ಹೆಂಡತಿ ಮಗಳನ್ನು ಕರೆದುಕೊಂಡು ನಗರದ ಶ್ರೀಮಂತ ಮಾಲ್‌ವೊಂದಕ್ಕೆ ಹೋಗಿರುತ್ತಾನೆ. ಪ್ರದರ್ಶನಕ್ಕಿಟ್ಟ ಸೆಂಟನ್ನು ಮೈಗೆ ಸಿಂಪಡಿಸಿಕೊಳ್ಳುತ್ತಾನೆ, ಹೆಂಡತಿಗೆ, ಮಗಳಿಗೂ ಸ್ಪ್ರೇ ಮಾಡುತ್ತಾನೆ. ಈತನ ಹಿನ್ನೆಲೆ ತಿಳಿದ ಮಾಲಿನವರು ಸೆಕ್ಯುರಿಟಿಯವರನ್ನು ಕರೆಸಿ ಇವರನ್ನು ಹೊರಗೆ ದಬ್ಬಿಸುತ್ತಾರೆ. ಮನೆಗೆ ತೆರಳಿದ ಆತ ಸೆಂಟಿನ ಘಮವಿದ್ದ ಅಂಗಿ ಕಿತ್ತೊಗೆದು ನಲುಗುತ್ತಾನೆ. ಬಾಂಬ್ ಸ್ಪೋಟದಂತಹ ದುರಂತದ ನಡುವೆ ಆತನಿಗೆ ತನಗಾದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ವಿಲಕ್ಷಣವಾದ ಉಪಾಯ ಕಾಣುತ್ತದೆ. ನಗರದ ಎಲ್ಲಾ ಶ್ರೀಮಂತ ಮಾಲ್‌ಗಳಿಗೆ ಪಬ್ಲಿಕ್ ಬೂತಿನಿಂದ ಫೋನ್ ಮಾಡಿ ಬಾಂಬ್ ಇಟ್ಟಿರುವುದಾಗಿ ಹೆದರಿಸಲು ಶುರುಮಾಡುತ್ತಾನೆ. ಮಾಲಿನಲ್ಲಿದ್ದ ಜನರೆಲ್ಲಾ ಜೀವಭಯದಿಂದ ಹೊರಗೆ ಓಡುತ್ತಿರುವುದನ್ನು ಕಂಡು ಸಂಭ್ರಮಿಸುತ್ತಾನೆ. ಇವರಿಬ್ಬರಿಗೆ ಯಾವ ರಾತ್ರಿಗಳಲ್ಲೂ ನೆಮ್ಮದಿಯಿಲ್ಲ. ಬಾಂಬ್ ಬ್ಲಾಸ್ಟ್ ನಡೆದ ರಾತ್ರಿ ಕ್ಲಬ್ಬಿನಲ್ಲಿ ಕೂತು ಮಜಾ ಮಾಡುತ್ತಿದ್ದವರನ್ನು ಓಡಿಸಲಾಗದು, ರಸ್ತೆ ಮಧ್ಯ ಕಾರಿನಲ್ಲಿ ಡ್ರಗ್ಸ್ ತೆಗೆದುಕೊಂಡು ಸುಖ ಪಡುತ್ತಿದ್ದ ಶ್ರೀಮಂತನ ಮಗನನ್ನು ಮುಟ್ಟಲಾಗದು.  ಬ್ಲಾಸ್ಟ್ ಮಾಡಿದವರನ್ನು ಹಿಡೀರಿ ಮೊದ್ಲು ಎನ್ನುವ ಸವಾಲು ಎಲ್ಲರಿಂದ. ‘ಖಾಕಿಯಲ್ಲಿರುವಾಗ ಅಳುವುದು ನಿಷಿದ್ಧ. ಅಳಬೇಕನ್ನಿಸಿದರೆ ಟಾಯ್ಲೆಟ್ಟಿಗೆ ಹೋಗಿ ಪೂರ್ತಿ ನೀರನ್ನು ಹೊರಹಾಕಿಬಿಡಬೇಕು’ ಎನ್ನುವ ವೃದ್ಧ ಪೇದೆಯ ಉಪದೇಶ ಹೊಸಬನನ್ನು ಇಂಚು ಇಂಚಾಗಿ ಕೊಲ್ಲುತ್ತಿರುತ್ತದೆ.

ಅನಂತರದ ಬದುಕನ್ನು ಮುಂಬೈ ಕಟ್ಟಿಕೊಳ್ಳುವುದು ಹೇಗೆ? ಭೀಕರವಾದ ರಾತ್ರಿ ಕಳೆದು ಬೆಳಗಾಗುತ್ತಿದ್ದ ಹಾಗೆಯೇ ನಿನ್ನೆ ಏನೂ ಘಟಿಸಿಯೇ ಇಲ್ಲ ಎಂಬಂತೆ, ಮುಂದೆ ಮತ್ತೇಂದೂ ಇಂಥ ಘಟನೆ ನಡೆಯುವುದಿಲ್ಲ ಎಂಬಂತೆ ರೈಲುಗಳಲ್ಲಿ ತುಂಬಿಕೊಳ್ಳುವ ಜನರಲ್ಲಿರುವುದು ಜೀವನದ ಬಗ್ಗೆಯೇ ಅಸಡ್ಡೆಯಾ ಅಥವಾ ನಿಜವಾದ ಕೆಚ್ಚಾ, ಜೀವನೋತ್ಸಾಹವಾ? ಪ್ರಿಯತಮನನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿ ಬಿದ್ದ ಈಕೆಯ ಎದುರು ತನ್ನದೇ ಸಂಸ್ಥೆಯ ಕೆಮರಾ ಇದೆ. ತಾನು ಮಾಡುತ್ತಿದ್ದ ಕೆಲಸವನ್ನೇ ಮತ್ತೊಬ್ಬಾಕೆ ಮಾಡುತ್ತಿದ್ದಾಳೆ. ‘ಈಗ ನಿಮಗೇನನ್ನಿಸುತ್ತಿದೆ’ ಎಂಬ ಪ್ರಶ್ನೆ ತೂರಿ ಬರುತ್ತಿದೆ. ಹತ್ತಾರು ಟೇಕ್‌ಗಳಾದರೂ ಈಕೆಯಿಂದ ಸರಿಯಾಗಿ ಮಾತನಾಡಲಾಗದು. ವೈಬ್ರಂಟ್ ಜರ್ನಲಿಸ್ಟ್ ಆದಾಕೆಗೆ ಕೆಮರಾದೆದುರು ಮಾತಾಡುವುದೂ ಕಷ್ಟವಾಗುತ್ತದೆ. ಭೂಮಿಗೆ ಬರಲಿರುವ ತನ್ನ ಮಗುವಿಗೆ ಈ ದೇಶ ಸುರಕ್ಷತೆ ಒದಗಿಸಬಲ್ಲದೇ? ಆತ ಯೋಚಿಸುತ್ತಿದ್ದಾನೆ. ತನ್ನ ಭವಿಷ್ಯ ಇಲ್ಲಿ ಹಸಿರಾಗಲು ಸಾಧ್ಯವೇ ಕೇಳಿಕೊಳ್ಳುತ್ತಾನೆ, ಲ್ಯಾಪ್ ಟಾಪಿನಲ್ಲಿ ತೆರೆದುಕೊಂಡ ಗ್ಲೋಬಿನಲ್ಲಿ ಅಪ್ರಯತ್ನಪೂರ್ವಕವಾಗಿ ಗಮನ ಭಾರತದಿಂದ ಅಮೇರಿಕಾದತ್ತ ಚಲಿಸುತ್ತದೆ. ಅಮೇರಿಕಾ, ಇಂಗ್ಲೆಂಡ್ ಯಾವ ದೇಶವೂ ನಮ್ಮ ಮಕ್ಕಳಿಗೆ ಭದ್ರ ಭವಿಷ್ಯದ ಗ್ಯಾರಂಟಿಯನ್ನು ಕೊಡಲಾರದು ಎನ್ನುವುದು ಅಮೇರಿಕಾದ ಗೆಳೆಯನಿಂದ ತಿಳಿಯುತ್ತದೆ. ಬಾಂಬ್ ಬ್ಲಾಸ್ಟಿನ ದಿನ ಅವಸರವಸರವಾಗಿ ಓಡಿಹೋದ ಮುಸ್ಲಿಂ ಯುವಕ ಈತನ ಎದುರಲ್ಲಿ ಕೂತಿದ್ದಾನೆ. ಈತನಿಗಾಗಿ ಟೀ ಆರ್ಡರ್ ಮಾಡಿದ್ದಾನೆ. ಶಿರ್ಡಿಯಿಂದ ತಂದ ಬಾಬಾ ಪ್ರಸಾದ ಈತನಿಗೆ ಕೊಟ್ಟಿದ್ದಾನೆ. ಈತ ತನ್ನ ಗೆಳೆಯರ ಗುಂಪಿಗೆ ಆ ಮುಸ್ಲಿಂ ಯುವಕನ ಪರಿಚಯ ಮಾಡಿಸುತ್ತಾನೆ. ಮುಸ್ಲೀಮರೊಂದಿಗೆ ವ್ಯವಹಾರ ಬೇಡ ಎಂಬ ನಿರ್ಧಾರ ಕರಗಿ ಕೈಯಲ್ಲಿ ಕಾಸು ಓಡಾಡಲು ಶುರುವಾಗುತ್ತದೆ. ಈ ಮದ್ರಾಸಿ ಚಾಯ್‌ವಾಲಾ ಹೀಗೆ ಒಂದು ಮಾಲಿಗೆ ಬಾಂಬ್ ಬೆದರಿಕೆ ಕೊಟ್ಟು ಮಜಾ ನೋಡುತ್ತಾ ನಿಂತಿರುತ್ತಾನೆ. ಎದುರಲ್ಲಿ ಒಬ್ಬ ಮುದುಕನಿಗೆ ಓಡುವ ತರಾತುರಿಯಲ್ಲಿ ಹೃದಯಾಘಾತವಾಗಿ ನರಳುತ್ತಿರುತ್ತಾನೆ. ಆತನನ್ನು ಆಸ್ಪತ್ರೆಗೆ ಕರೆದೊಯ್ಯುವವರೆಗೆ ಈತ ಹಿಂಬಾಲಿಸುತ್ತಾನೆ. ಆತ ಗುಣಮುಖನಾಗಲಿ ಎಂದು ಆಶಿಸುತ್ತಾನೆ. ತಾನು ಮಾಡುತ್ತಿದ್ದ ಕಿಡಿಗೇಡಿತನದ ಅಪಾಯವನ್ನು ಅರಿತು ಕಂಬನಿ ಸುರಿಸುತ್ತಾನೆ. ಈತ ಇವತ್ತು ರಿಟೈರ್ ಆಗುವವನಿದ್ದಾನೆ. ‘ಮುಂದಿನ ಜನ್ಮದಲ್ಲಿ ಮತ್ತೆ ಮುಂಬೈ ಪೊಲೀಸ್ ಆಗಿ ಹುಟ್ಟುವುದಾದರೆ ಏನಾದರೂ ಸಾಧನೆ ಮಾಡಿಯೇ ಸಾಯುತ್ತೇನೆ’ ಎಂದುಕೊಳ್ಳುತ್ತಾನೆ. ‘ಒಬ್ಬನಾದರೂ ದೊಡ್ಡ ಪಾತಕಿಯನ್ನು, ಭಯೋತ್ಪಾದಕನನ್ನು ಹಿಡಿಯುತ್ತೇನೆ’ ಎನ್ನುತ್ತಾನೆ.  ಇಡೀ ಮುಂಬೈ ಅಂದು ಅರೆಕ್ಷಣ ಮೌನವನ್ನಾಚರಿಸುತ್ತದೆ.

ಇನ್ನು ‘ಎ ವೆಡ್ ನೆಸ್‌ಡೇ’. ನೀರಜ್ ಪಾಂಡೆಯ ನಿರ್ದೇಶನದ ಮೊದಲ ಚಿತ್ರ. ಬಾಕ್ಸಾಫೀಸ್ ಲೆಕ್ಕಾಚಾರದಲ್ಲಿ ಅಳೆದರೆ ‘ಮುಂಬೈ ಮೇರಿ ಜಾನ್’ ಚಿತ್ರಕ್ಕಿಂತ ಹೆಚ್ಚು ಸಾಧನೆ ಮಾಡಿರುವಂಥದ್ದು. ಆತ ಒಬ್ಬ ಸಾಮಾನ್ಯ ಮನುಷ್ಯ (ನಸ್ರುದ್ದೀನ್ ಶಾ). ಕಾಂಗ್ರೆಸ್ಸಿನವರು ತುಂಬಾ ಪ್ಯಾಶನೇಟ್ ಆಗಿ ಕರೆಯುವ ‘ಆಮ್ ಆದ್ಮಿ’. ಆರ್.ಕೆ.ಲಕ್ಷ್ಮಣ್‌ರ ಕಾರ್ಟೂನುಗಳಲ್ಲಿ ಸಾಕ್ಷಿ ಪ್ರಜ್ಞೆಯಾಗಿ ಕಾಣುವ ಆಸಾಮಿ. ಈತನಿಗೆ ತಾನೆಷ್ಟು ಅಸಹಾಯಕನಾಗಿದ್ದೇನೆ ಎನ್ನುವುದರ ಅರಿವಾಗುತ್ತದೆ. ತನ್ನ ರಕ್ಷಣೆಗಾಗಿ,ತನ್ನ ಕುಟುಂಬದ, ಮಕ್ಕಳ ಭದ್ರತೆಗಾಗಿ ತಾನು ಆಯ್ಕೆ ಮಾಡಿ ಕಳುಹಿಸಿದ ಸರಕಾರ, ಪೋಲೀಸ್, ಕಾನೂನು ವ್ಯವಸ್ಥೆ ತನ್ನನ್ನು ನಡು ನೀರಿನಲ್ಲಿ ಕೈಬಿಟ್ಟಿದೆ ಎಂದು ತೀರ್ಮಾನಿಸುತ್ತಾನೆ. ಭಯೋತ್ಪಾದಕರು ಈತ ಓಡಾಡುವ ರೈಲಿನಲ್ಲಿ, ಸಿಟಿ ಬಸ್ಸಿನಲ್ಲಿ, ಈತನ ಹೆಂಡತಿ ಖರೀದಿಗೆಂದು ಹೋಗುವ ಮಾರುಕಟ್ಟೆಯಲ್ಲಿ, ಶಾಪಿಂಗ್ ಕಾಂಪ್ಲೆಕ್ಸುಗಳಲ್ಲಿ, ಈತನ ಮಕ್ಕಳ ಶಾಲೆಯ ಕಾರಿಡಾರುಗಳಲ್ಲಿ ಹೀಗೆ ಎಲ್ಲೆಂದರಲ್ಲಿ ಪ್ರತ್ಯಕ್ಷರಾಗಿ ಬಾಂಬ್ ಉಡಾಯಿಸುತ್ತಿದ್ದಾರೆ. ‘ನಾವು ಹೀಗೇ ನಿನ್ನನ್ನು, ನಿನ್ನ ಕುಟುಂಬವನ್ನು ಕೊಲ್ಲುತ್ತಿರುತ್ತೇವೆ. ನೀನೇನು ಮಾಡಿಕೊಳ್ತೀಯೋ ಮಾಡು’ ಎಂದು ಫೂತ್ಕರಿಸುತ್ತಿದ್ದಾರೆ. ನಮ್ಮ ಸರಕಾರ, ನಮ್ಮ ಪೊಲೀಸ್ ಹಾಗೂ ನಮ್ಮ ನ್ಯಾಯ ವ್ಯವಸ್ಥೆ ಇದುವರೆಗೂ ಒಬ್ಬ ಭಯೋತ್ಪಾದಕನನ್ನು ದಂಡಿಸಿ, ನೋಡು ನಮ್ಮ ‘ಆಮ್ ಆದ್ಮೀ’ ಮೇಲೆ ಕೈ ಇಟ್ಟರೆ ನಿನ್ನ ಗತಿಯೇನಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿಲ್ಲ. ಸರಕಾರ, ಮಂತ್ರಿಗಳು, ಪೊಲೀಸರು ಎಲ್ಲರೂ ಕೈ ಕಟ್ಟಿ ಕೂತಿರುವಾಗ ಈತ ಎದ್ದು ನಿಲ್ಲುತ್ತಾನೆ. ಕಾನೂನನ್ನು ತನ್ನ ಕೈಗೆ ತೆಗೆದುಕೊಳ್ಳುತ್ತಾನೆ. ತನ್ನನ್ನು ಕೆಣಕಿದವರನ್ನು ತಾನೇ ಶಿಕ್ಷಿಸಬೇಕು ಎಂದು ತೀರ್ಮಾನಿಸುತ್ತಾನೆ. ತಾನೇ ಭಯೋತ್ಪಾದಕರನ್ನು ಕೊಲ್ಲುತ್ತಾನೆ. ಉಳಿದ ವಿವರಗಳು ಇಲ್ಲಿ ಬೇಕಿಲ್ಲ.

ಬೆಂಗಳೂರಿನಲ್ಲಿ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಬಾಂಬ್ ಸ್ಫೋಟಗಳು ನಡೆದಿದ್ದರೂ ಇನ್ನೂ ಮುಂಬೈನಷ್ಟು ಪರಿಸ್ಥಿತಿ ಬಿಗಡಾಯಿಸಿಲ್ಲ. ಹೀಗಾಗಿ ನಮಗೆ ‘ಮುಂಬೈ ಮೇರಿ ಜಾನ್’ ಚಿತ್ರದ ಅಂತರಾಳದ ಕಾಳಜಿ ಅಷ್ಟಾಗಿ ತಟ್ಟದಿರಬಹುದು. ಇಡೀ ಸಮಾಜವನ್ನು ಮಮತೆಯಿಂದ ನೋಡುವ ದೃಷ್ಟಿ ಅಷ್ಟಾಗಿ ಆಕರ್ಷಕವೆನಿಸದಿರಬಹುದು. ಆದರೆ ‘ಎ ವೆಡ್‌ನೆಸ್ ಡೇ’ ಖಂಡಿತವಾಗಿ ನಮ್ಮನ್ನು ಥ್ರಿಲ್ಲಾಗಿಸುತ್ತದೆ. ಭ್ರಷ್ಟರ ವಿರುದ್ಧ ಸಮರ ಸಾರುವ ಪ್ರತಿಯೊಬ್ಬ ಏಕಾಂಗಿ ವೀರನ ಬಗ್ಗೆಯೂ  ಪ್ರೀತಿ ನಮ್ಮಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿರುತ್ತದೆ. ವ್ಯವಸ್ಥೆಯನ್ನು ಧಿಕ್ಕರಿಸುವ ಪ್ರತಿ ವ್ಯಕ್ತಿಯನ್ನೂ ನಾವು ಆರಾಧಿಸುತ್ತೇವೆ. ಇದು ಎಷ್ಟರ ಮಟ್ಟಿಗೆ ಸರಿ? ವೆಡ್ ನೆಸ್ ಡೇ.. ನಲ್ಲಿ ಆ ಆಮ್ ಆದ್ಮೀ ಪೊಲೀಸರು ಬಂಧಿಸಿದ್ದ, ಇನ್ನೂ ಶಿಕ್ಷೆ ವಿಧಿಸದ ಭಯೋತ್ಪಾದಕರನ್ನು ಕೊಲ್ಲುತ್ತಾನೆ. ನಿಜಕ್ಕೂ ಅವರೇ ಬಾಂಬ್ ಬ್ಲಾಸ್ಟ್‌ಗೆ ಕಾರಣಕರ್ತರು ಎಂದು ಆ ಆದ್ಮೀ ಹೇಗೆ ತೀರ್ಮಾನಿಸಿದ? ಇಷ್ಟಕ್ಕೂ ನಾವು ರೂಪಿಸಿಕೊಂಡ ವ್ಯವಸ್ಥೆ ಸಮರ್ಥವಾಗಿಲ್ಲ ಎಂದರೆ ನಾವು ಸಮರ್ಥವಾಗಿಲ್ಲ ಎಂದೇ ಅರ್ಥ. ಪ್ರತಿ ಬಾರಿ ಬಾಂಬ್ ಸ್ಪೂಟಗೊಂಡಾಗಲೂ ಗೃಹ ಮಂತ್ರಿ ‘ನಾವು ಉಗ್ರರನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ಅಬ್ಬರಿಸುವುದನ್ನು ನೋಡಿ ಕಿಡಿಕಾರುವ ನಾವು ಆತ ಅಲ್ಲಿ ತಲುಪಿಕೊಳ್ಳಲು ಪರೋಕ್ಷವಾಗಿ ಕಾರಣ ಎಂಬುದನ್ನು ಮರೆತಿರುತ್ತೇವೆ. ಅಲ್ಲವೇ?

ಈ ಎರಡು ಸಿನೆಮಾಗಳು ನನ್ನನ್ನು ಕಲಕಿದ್ದರಿಂದ ಇವುಗಳ ಬಗ್ಗೆ ಬರೆಯಬೇಕಾಯ್ತು. ಸಮಯವಾದಾಗ ಇವೆರಡನ್ನೂ ನೋಡಿ…

– ಸುಪ್ರೀತ್.ಕೆ.ಎಸ್

ನಾನು ಹಾಗೂ ನನ್ನಂಥ ಕಾಲೇಜು ಹುಡುಗರು ಒಂದು ಅಪವಾದವನ್ನು ಎದುರಿಸುತ್ತಿದ್ದೇವೆ. ಇಂಜಿನಿಯರಿಂಗ್, ಮೆಡಿಸಿನ್, ಲಾ, ಎಂಬಿಎ ಹೀಗೆ ಏನಾದರೊಂದು ವೃತ್ತಿಪರ ಕೋರ್ಸುಗಳನ್ನು ಆಯ್ದುಕೊಂಡು ಓದಿನಲ್ಲಿ ತೊಡಗಿದವರಿಗೆ ಸ್ವಚಿಂತನೆ ಹಾಗೂ ಸ್ವಾರ್ಥವೇ ಹೆಚ್ಚು. ಸುತ್ತಮುತ್ತಲ ಸಮಾಜದ ಬಗ್ಗೆ, ಅದರ ರೀತಿ ನೀತಿಗಳ ಬಗ್ಗೆ ಅಸಡ್ಡೆ ಮೂಡಿರುತ್ತದೆ. ಎಲ್ಲರೂ ಒಂದಲ್ಲ ಒಂದು ದಿನ ಅಮೇರಿಕಾಗೆ ಹಾರಲು ಸಿದ್ಧರಾಗಿರುವಂತೆ ಕಾಣುತ್ತಾರೆ. ಅವರಿಗೆ ಇಲ್ಲಿನ ಎಲ್ಲಾ ಬೇರುಗಳನ್ನೂ ಕತ್ತರಿಸಿಕೊಂಡು ಹಾರಲು ಯಾವ ತೊಂದರೆಯೂ ಇಲ್ಲದ ಹಾಗೆ ಮಾಡಿಕೊಳ್ಳುವ ತವಕ. ಇಲ್ಲಿನ ಯಾವ ಸಂಗತಿಗಳೂ ತಮ್ಮನ್ನು ಬಾಧಿಸಿದ ಹಾಗೆ ಬದುಕು ರೂಪಿಸಿಕೊಳ್ಳುತ್ತಾರೆ. ಓದು ಮುಗಿಯುವ ಮೊದಲೇ ಅವರ ಆಕ್ಸಂಟ್ ಬದಲಾಗಿರುತ್ತದೆ. ಅವರ ಅಭಿರುಚಿ ರಿಪೇರಿಯಾಗಿರುತ್ತದೆ. ಸಂಪೂರ್ಣವಾಗಿ ರಫ್ತಿಗೆ ಸಿದ್ಧವಾಗಿ ಮೈಮೇಲೆ ಸ್ಟಿಕ್ಕರು ಅಂಟಿಸಿಕೊಂಡು ಡಬ್ಬಿಯಲ್ಲಿ ಕುಳಿತ ಹಣ್ಣಿನ ಹಾಗಾಗಿರುತ್ತಾರೆ. ಈ ಆರೋಪದಲ್ಲಿ ಸತ್ಯವಿಲ್ಲವೆಂದಲ್ಲ.

youth.png

ಗಮನಿಸಿ ನೋಡಿ, ತಮ್ಮ ಮೂಲದಿಂದ ಕಳಚಿಕೊಳ್ಳುವುದನ್ನೇ ಆಧುನಿಕತೆ ಎಂದು ಭಾವಿಸಿರುವ ಹುಡುಗರಿಗೆ ಐಡೆಂಟಿಟಿ ಇಲ್ಲದ ಹಾಗಾಗುತ್ತದೆ. ಯಾವ ಜಾಗಕ್ಕೆ ಹೋದರೂ ಪರದೇಶಿಯಂತೆ ಭಾಸವಾಗುತ್ತದೆ. ಯಾವುದೂ ನನ್ನದಲ್ಲ ಎಂಬ ನಿರ್ಲಿಪ್ತತೆ ಅವರನ್ನು ಕಾಡುತ್ತದೆ. ಹೀಗೆ ತಮ್ಮ ಜಾತಿ, ಹುಟ್ಟಿದ ಊರು, ರಕ್ತ ಸಂಬಂಧಿಗಳು, ತಮ್ಮ ಆಚಾರಗಳು, ಸಂಸ್ಕೃತಿ, ಹಬ್ಬಗಳು ಮುಂತಾದವುಗಳನ್ನೆಲ್ಲಾ ಬಿಡುತ್ತಾ ಅಧುನಿಕರಾಗುತ್ತಾ, ಅಮೇರಿಕಾಗೆ ರಫ್ತಾಗಲು ತಯಾರಾಗುತ್ತಾ ಈ ಹುಡುಗರಿಗೆ ವಿಪರೀತವಾದ ಅಭದ್ರತೆ ಕಾಡಲು ಶುರುವಾಗುತ್ತದೆ. ಸದಾ ಒಂದು ಕಾಲು ಹೊರಗೇ ಇಟ್ಟುಕೊಂಡು ಬದುಕು ದೂಡುತ್ತಿರುವವರಿಗೆ ತಮ್ಮದೆಂಬ ನೆಲೆಯೇ ಇಲ್ಲ ಎಂಬ ಅರಿವು ಮಾನಸಿಕ ಕಳವಳಕ್ಕೆ ಕಾರಣವಾಗುತ್ತದೆ. ಹೀಗಾಗಿ ಉನ್ನತ ಶಿಕ್ಷಣವನ್ನು ಪಡೆದುಕೊಂಡು, ಕೈತುಂಬ ಹಣ ತರುವ ಕೆಲಸಗಳನ್ನು ಪಡೆದ ಯುವಕರು, ಯುವತಿಯರು ಕೋಮುವಾದವನ್ನು ಅಪ್ಪಿಕೊಳ್ಳುತ್ತಾರೆ. ತಾನೊಬ್ಬ ಹಿಂದು ಎಂದುಕೊಳ್ಳುವುದೇ ಅವರಿಗೆ ನೆಮ್ಮದಿಯನ್ನೂ, ಭದ್ರತೆಯನ್ನೂ ಕೊಡುತ್ತದೆ. ಆತನಿಗೆ ಹಿಂದೂವಿಗಿರಬೇಕಾದ ಸಾಂಸ್ಕೃತಿಕ ಬೇರುಗಳ್ಯಾವೂ ಉಳಿದಿರದಿದ್ದರೂ ‘ಹಿಂದೂ’ ಎಂಬ ಐಡೆಂಟಿಟಿ ಬೇಕಿರುತ್ತದೆ. ಅವರಿಗೆ ತಾವು ಆಧುನಿಕತೆಯ ಭರದಲ್ಲಿ, ಪಾಶ್ಚಾತ್ಯ ಆಚಾರ ವಿಚಾರದ ಅನುಕರಣೆಯ ಹುಮ್ಮಸ್ಸಿನಲ್ಲಿ ಕತ್ತರಿಸಿಕೊಂಡ ಕರುಳ ಬಳ್ಳಿಗಳ ಬಗೆಗೂ ಪ್ರಾಮಾಣಿಕ ಕಾಳಜಿ ಬೆಳೆಯುವುದಿಲ್ಲ. ಕಡಿದ ತಂತುಗಳನ್ನು ನವೀಕರಿಸಿಕೊಳ್ಳಬೇಕೆಂಬ ಯಾವ ಹಂಬಲವೂ ಇರುವುದಿಲ್ಲ. ಅಸಲಿಗೆ ಕಳೆದುಕೊಂಡ ಸ್ವಂತಿಕೆಗಾಗಿ ಅವರು ಮರುಗುವುದೂ ಇಲ್ಲ. ಅವರಿಗೆ ಯಾವ ಅಟ್ಯಾಚ್ ಮೆಂಟುಗಳೂ ಬೇಡ ಆದರೆ ತಮ್ಮದೆಂದು ಭಾವಿಸಿಕೊಳ್ಳಲು ಒಂದು ಐಡೆಂಟಿಟಿಯ ಆಸರೆ ಬೇಕು. ಇದು ಕೇವಲ ಹಿಂದೂಗಳಲ್ಲಿ ನಡೆಯುತ್ತಿರುವ ಪ್ರಕ್ರಿಯೆಯಲ್ಲ, ಆಧುನಿಕತೆಯೊಂದಿಗೆ ಮುಖಾಮುಖಿಯಾಗುತ್ತಿರುವ ಎಲ್ಲಾ ಧರ್ಮಗಳೂ, ಸಮಾಜಗಳೂ, ಸಂಸ್ಕೃತಿಗಳೂ ಎದುರಿಸುತ್ತಿರುವ ಸಮಸ್ಯೆ.
ಬಹುಶಃ ಈ ಕಾರಣಕ್ಕಾಗಿಯೇ ಯುವಕರಿಗೆ ಕೋಮುವಾದ ಪ್ರಿಯವಾಗುತ್ತದೆಯೇನೊ. ತಾನು ಆಸರೆಗಾಗಿ ವಾಲಿಕೊಂಡ ಐಡೆಂಟಿಟಿಗೆ ಯಾವಾಗ ಧಕ್ಕೆಯಾಗುತ್ತದೋ, ಪೆಟ್ಟು ಬೀಳುತ್ತದೋ ಆಗೆಲ್ಲಾ ಆತ ಹೆಡೆಯೆತ್ತಿ ಕೆರಳಿ ನಿಲ್ಲುತ್ತಾನೆ. ರಾಮಾಯಣವನ್ನು ಓದಿಯೇ ಇರದಿದ್ದರೂ, ಶ್ರೀರಾಮನ ಪುರಾಣ, ಆದರ್ಶದೊಂದಿಗೆ ಕೊಟ್ಟು ತೆಗೆದುಕೊಳ್ಳಲು ಏನೂ ಇಲ್ಲದಿದ್ದರೂ ರಾಮ ಸೇತುವಿನ ವಿವಾದ ಅವನನ್ನು ರೊಚ್ಚಿಗೆಬ್ಬಿಸುತ್ತದೆ. ಬೀದಿಗಿಳಿಯುವಂತೆ ಮಾಡುತ್ತದೆ. ಎಂದೂ ಒಂದು ಕಲಾಕೃತಿಯನ್ನು ಕಲಾತ್ಮಕ ದೃಷ್ಟಿಯಿಂದ ನೋಡಿರದಿದ್ದರೂ, ಕಲೆಗೂ ಅವನಿಗೂ ಯಾವ ಹೊಂದಾಣಿಕೆಯೂ ಇಲ್ಲದಿದ್ದರೂ ಎಂ.ಎಫ್. ಹುಸೇನನ ನಗ್ನ ಚಿತ್ರಗಳು ಕಣ್ಣುರಿಯನ್ನು ಉಂಟುಮಾಡುತ್ತವೆ. ಆದರೆ ಇದೇ ಕೆಲಸವನ್ನು ಅನ್ಯ ಕೋಮಿನವರು ಮಾಡಿದಾಗ, ತಸ್ಲೀಮಾಳನ್ನು ಹೊರದಬ್ಬಿದಾಗ, ಡ್ಯಾನಿಶ್ ಚಿತ್ರಕಾರನ ಮೇಲೆ ಫತ್ವಾ ಹೊರಡಿಸಿದಾಗ, ಸಲ್ಮಾನ್ ರಶ್ದಿಯನ್ನು ಪೀಡಿಸಿದಾಗ ಇವರು ಅದನ್ನೆಲ್ಲಾ ಟೀಕಿಸಬಲ್ಲರು, ವಸ್ತುನಿಷ್ಠವಾಗಿ ಅವಲೋಕನ ಮಾಡಬಲ್ಲರು. ಆದರೆ ತಮ್ಮ ಐಡೆಂಟಿಟಿಗೆ ಗಾಯವಾದಾಗ ಮಾತ್ರ ಯಾವ ವಸ್ತುನಿಷ್ಠತೆಯೂ ಕಾಣುವುದಿಲ್ಲ. ಇದೂ ಎಲ್ಲಾ ಕೋಮುಗಳ ಈ ‘ಐಡೆಂಟಿಟಿ ಜೀವಿ’ಗಳ ಪರಿಸ್ಥಿತಿ.

ಇದೇ ಜಾಡಿನಲ್ಲಿ ಆಲೋಚಿಸಿ ಸಮಾಜವಾದಿ ಚಿಂತಕರಾದ ಡಿ.ಎಸ್.ನಾಗಭೂಷಣ್‌ರಿಗೆ ಒಂದು ಪತ್ರ ಬರೆದಿದ್ದೆ. ಅದರಲ್ಲಿ ನಮ್ಮಂಥ ಯುವಕರು ಈ ಸಮಸ್ಯೆಯಿಂದ ಪಾರಾಗಲು ಏನು ಮಾಡಬಹುದು ಎಂದು ಕೇಳಿದ್ದೆ. ಒಂದು ಸೈದ್ಧಾಂತಿಕ ನೆಲೆಯನ್ನು ರೂಪಿಸಿಕೊಂಡು, ಕೋಮಿನ ಐಡೆಂಟಿಯ ಬಂಧದಿಂದ ಮುಕ್ತರಾಗಲು ಸಹಾಯಕವಾಗುವ ಸಾಹಿತ್ಯವನ್ನು ಶಿಫಾರಸ್ಸು ಮಾಡುವಂತೆ ಕೇಳಿಕೊಂಡಿದ್ದೆ. ಯಾವುದೋ ಲಹರಿಯಲ್ಲಿ ಪತ್ರಿಸಿದ್ದ ನನ್ನ ಓಲೆಗೆ ಉತ್ತರ ಬರಬಹುದೆಂಬ ಖಾತರಿ ಇರಲಿಲ್ಲ, ನಿರೀಕ್ಷೆಯೂ ಹೆಚ್ಚಿರಲಿಲ್ಲ. ಆದರೆ ‘ವಿಕ್ರಾಂತ ಕರ್ನಾಟಕ’ ವಾರ ಪತ್ರಿಕೆಯ ತಮ್ಮ ಅಂಕಣದಲ್ಲಿ ನನ್ನ ಪತ್ರವನ್ನು ಉಲ್ಲೇಖಿಸಿ ಅದರಲ್ಲಿ ನಾನು ಎತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನಮಾಡಿದರು. ನನ್ನಂಥದ್ದೇ ಸನ್ನಿವೇಶಗಳಲ್ಲಿರುವ, ನನ್ನ ಸಮಸ್ಯೆಗಳನ್ನೇ ಹೊಂದಿರುವ ಯುವಕ-ಯುವತಿಯರಿಗೆ ನಾಗಭೂಷಣ್‌ರ ಮಾತುಗಳು ಸಹಾಯಕವಾಗಬಹುದು ಎಂದುಕೊಂಡು ಅವನ್ನು ಇಲ್ಲಿ ಕೊಡುತ್ತಿದ್ದೇನೆ:

“ಇತ್ತೀಚೆಗೆ ನನ್ನ ಇದೇ ಲೇಖನದ ಬಗ್ಗೆ ಕೆ.ಎಸ್.ಸುಪ್ರೀತ್ ಎಂಬ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರ ಪ್ರತಿಕ್ರಿಯೆಯೊಂದನ್ನು, ಇದಕ್ಕೆ ನಿಮ್ಮ ಪ್ರತಿಕ್ರಿಯೆ ಅಗತ್ಯ ಎಂಬರ್ಥದಲ್ಲಿ ನನಗೆ ರವಾನಿಸಿದ್ದಾರೆ. ಇವರು ನನ್ನ ಈ ಲೇಖನದಲ್ಲಿ ವ್ಯಕ್ತವಾಗಿರುವ ಆತಂಕಗಳ ಬಗ್ಗೆ ತಾತ್ವಿಕವಾಗಿ ಆಂತರಂಗಿಕ ಸಹಮತ ಹೊಂದಿರುವುದಾದರೂ, ಬಹಿರಂಗ ವಾತಾವರಣ ಅದಕ್ಕೆ ಪೂರಕವಾಗಿಲ್ಲದಿರುವುದರ ವಾಸ್ತವದ ಬಗ್ಗೆ ಬರೆದಿದ್ದಾರೆ. ತಾವು ಸಹ ಇಂತಹ ವಾತಾವರಣದ ಸಹಜ ಬಲಿಯಾಗಿದ್ದು, ಇದರಿಂದ ತಮ್ಮಂತಹವರು ಹೊರ ಬರಲು ಪೂರಕವಾಗುವಂತಹ ವಾತಾವರಣವನ್ನು ನಿರ್ಮಿಸಲು ಸೆಕ್ಯುಲರ್‌ವಾದಿಗಳು ಏಕೆ ಪ್ರಯತ್ನಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಹಾಗೇ, ಈ ವಿಷಯದಲ್ಲಿ ಮಾರ್ಗದರ್ಶಕವಾಗುವಂತಹ ಸಾಹಿತ್ಯವನ್ನೂ ಸೂಚಿಸಿ ಎಂದು ಸುಪ್ರೀತ್ ಕೇಳಿದ್ದಾರೆ.

ಮೊದಲಿಗೆ, ನಾನೇನೂ ಇಂದಿನ ಸೆಕ್ಯುಲರ್ವಾದಿಗಳ ವಕ್ತಾರನಲ್ಲ ಎಂದು ಸ್ಪಷ್ಟಪಡಿಸ ಬಯಸುವೆ. ಈ ಸೆಕ್ಯಲರ್‌ವಾದವೆಂಬುದೇ ಅನುಮಾನಾಸ್ಪದತೆಗೆ ಈಡಾಗಿರುವ ಇಂದಿನ ರಾಜಕೀಯ ಸನ್ನಿವೇಶದಲ್ಲಿ ನಿಂತು, ಕೋಮುವಾದದ ವಿರುದ್ಧ ಮಾತನಾಡುವಾಗ ಅನೇಕ ತಪ್ಪು ಕಲ್ಪನೆಗಳುಂಟಾಗುವ ಸಂಭವವಿದೆ. ಏಕೆಂದರೆ, ಕೋಮುವಾದದ ವಿರುದ್ಧ ಏಕೈಕ ಅಸ್ತ್ರ ಸೆಕ್ಯುಲರ್‌ವಾದ ಎಂಬ ನಂಬಿಕೆಯನ್ನು ಸೃಷ್ಟಿಸಲಾಗಿದೆ. ಮೂಲತಃ ಭೌತವಾದಿ ರಾಜಕಾರಣದ ಪ್ರತಿಪಾದಕರಾದ ಕಟ್ಟಾ ಎಡಪಂಥೀಯರು ಸೃಷ್ಟಿಸಿರುವ ನಂಬಿಕೆಯಿದು. ಆದರೆ ಸೆಕ್ಯುಲರಿಸಂ ಎಂದರೇನೆಂದು ಈವರೆಗೆ ಈ ಯಾರೂ ಖಚಿತವಾಗಿ, ನಿರ್ದಿಷ್ಟವಾಗಿ ನಿರೂಪಿಸಿಲ್ಲ. ಅದಕ್ಕೆ ನಮ್ಮ ಯಾವುದೇ ಭಾರತೀಯ ಭಾಷೆಯಲ್ಲೂ ಸಮರ್ಪಕವಾದ ಸಮಾನ ಶಬ್ದವನ್ನು ಟಂಕಿಸಲಾಗಿಲ್ಲ. ಧರ್ಮ ನಿರಪೇಕ್ಷತೆ ಎಂಬ ಶಬ್ದದಿಂದ ಹಿಡಿದು ಇದಕ್ಕೆ ತದ್ವಿರುದ್ಧ ಅರ್ಥವಿರುವ ಸರ್ವಧರ್ಮ ಸಮಭಾವ ಎಂಬ ಶಬ್ದದವರೆಗೆ ಇದರರ್ಥವನ್ನು ಎಳೆದಾಡಲಾಗಿದೆ! ಇದಕ್ಕೆ ಕಾರಣ ಇದು ಆಧುನಿಕತೆಯ ಹಂಬಲದಲ್ಲಿ ನಮ್ಮ ಸಂವಿಧಾನ ನಿರ್ಮಾತೃಗಳು ಐರೋಪ್ಯ ರಾಜಕಾರಣದಿಂದ ಕಿತ್ತು ತಂದು ಇಲ್ಲಿ ನೆಡಲಾಗಿರುವ ಪರಿಕಲ್ಪನೆಯಾಗಿರುವುದೇ ಆಗಿದೆ…

…ಹಾಗೇ ಸುಪ್ರೀತ್ ಅವರಿಗೆ ಗಾಂಧಿ, ಅಂಬೇಡ್ಕರ್ ಹಾಗೂ ಲೋಹಿಯಾರನ್ನು ಮುಕ್ತ ಮನಸ್ಸಿನಿಂದ ಓದಿ ಎಂದು ಸೂಚಿಸಬಯಸುವೆ. ರಾಷ್ಟ್ರ ವಿಭಜನೆ ಸೃಷ್ಟಿಸಿದ್ದ ಕೋಮು ದಳ್ಳುರಿಯ ಮಧ್ಯೆಯೂ, ಪಾಕಿಸ್ತಾನಕ್ಕೆ ಕೊಡಬೇಕಾದ ನಿಧಿಯನ್ನು ಕೊಡುವಂತೆ ಸಾರ್ವಜನಿಕವಾಗಿ ಒತ್ತಾಯಿಸಿ ಹಿಂದೂ ಕೋಮುವಾದಿಯೊಬ್ಬನ ಗುಂಡಿಗೆ ಬಲಿಯಾದ ಸನಾತನ ಹಿಂದೂ ಎನ್ನಿಸಿಕೊಂಡಿದ್ದ ಗಾಂಧಿ; ತಾವು ರೂಪಿಸಿದ್ದ ಸಮಗ್ರ ಹಿಂದೂ ನಾಗರಿಕ ಸಂಹಿತೆ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ಅವಕಾಶ ಕೊಡದ ಸರ್ಕಾರದ ಮಂತ್ರಿ ಪದವಿಗೇ ರಾಜೀನಾಮೆ ನೀಡಿ ಹೊರಬಂದ ಆಧುನಿಕತಾವಾದಿ ಅಂಬೇಡ್ಕರ್ ಮತ್ತು ಸಾಮಾನ್ಯ ನಾಗರಿಕ ಸಂಹಿತೆಯ ಜಾರಿಯನ್ನು ತಮ್ಮ ಪಕ್ಷದ ಒಂದು ಚುನಾವಣಾ ವಿಷಯವನ್ನಾಗಿ ಮಾಡಿಕೊಂಡು ಪ್ರಚಾರ ಮಾಡಬಲ್ಲವರಾಗಿದ್ದ ರಾಜಕೀಯ ದುಸ್ಸಾಹಸಿ ಲೋಹಿಯಾ ಹೊಸ ರಾಷ್ಟ್ರಕ್ಕೆ ಹೊಸ ಧರ್ಮ ಸಂಹಿತೆಯೊಂದನ್ನು ರೂಪಿಸಿ ಸೆಕ್ಯುಲರಿಸಂಗೆ ಹೊಸ ಅರ್ಥ ಕೊಡಲೆತ್ನಿಸಿದವರು. ಇವರ ಜೊತೆಗೇ, ಈಚಿನ ಅಸ್ಘರಾಲಿ ಇಂಜಿನಿಯರರ ಪುಸ್ತಕ – ಲೇಖನಗಳನ್ನು ಓದಿದರೆ ಚೆನ್ನು. ಆಗ ಆರೋಗ್ಯಕರ ವರ್ತಮಾನವನ್ನು ಕಟ್ಟಲು ಚರಿತ್ರೆಯನ್ನು ಎಷ್ಟು ಎಚ್ಚರಿಕೆ ಮತ್ತು ವಿವೇಕಗಳಿಂದ ಅರ್ಥ ಮಾಡಿಕೊಂಡು ಬಳಸಿಕೊಳ್ಳಬೇಕಾಗುತ್ತದೆ ಎಂಬುದು ಗೊತ್ತಾಗುತ್ತದೆ.”

-ಸುಪ್ರೀತ್.ಕೆ.ಎಸ್


ಇದು ಈ ಸಂಚಿಕೆಯ ಸಂಪಾದಕೀಯ

ಕಾಫಿ ಡೇಗಳಲ್ಲಿ, ಹೊಟೇಲುಗಳಲ್ಲಿ, ಸಿನೆಮಾ ಥಿಯೇಟರುಗಳಲ್ಲಿ, ಹಾಸ್ಟೆಲ್ಲಿನ ಕಿಕ್ಕಿರಿದ ರೂಮುಗಳಲ್ಲಿ, ಮೊಬೈಲುಗಳಲ್ಲಿ, ಗಂಭೀರ ಚರ್ಚೆಗಳಲ್ಲಿ, ಬೀದಿ ದೀಪದ ಅಡಿಯ ಬೆಳಕಿನಲ್ಲಿ ಗುಂಪು ಕಟ್ಟಿದಾಗ ನಾವು ದೇಶದ ಬಗ್ಗೆ ಅಪಾರ ಕಾಳಜಿ ಉಳ್ಳವರ ಹಾಗೆ ಮಾತನಾಡುತ್ತಿರುತ್ತೇವೆ. ‘ಈ ದೇಶದ ಗತಿಯೇ ಇಷ್ಟು, ಇಲ್ಲಿದ್ದುಕೊಂಡು ನಾವು ಉದ್ಧಾರವಾಗುವುದಕ್ಕೆ ಸಾಧ್ಯವಾ? ಇಂತಹ ವ್ಯವಸ್ಥೆಯನ್ನು ನೆಚ್ಚಿಕೊಂಡು ನಾವು ದೇಶವನ್ನು ಉದ್ಧಾರ ಮಾಡಲು ಸಾಧ್ಯವಾಗುತ್ತದಾ? ನಮ್ಮ ದೇಶದ ದೊಡ್ಡ ಸಮಸ್ಯೆಯೆಂದರೆ ರಾಜಕೀಯ. ಈ ಪೊಲಿಟೀಶಿಯನ್ನುಗಳನ್ನು ಲೈನಾಗಿ ನಿಲ್ಲಿಸಿ ಶೂಟ್ ಮಾಡಬೇಕು. ಆಗಲೇ ನಮ್ಮ ದೇಶ ಸುಧಾರಿಸೋದು. ಇಲ್ಲಾಂದ್ರೆ ಖಂಡಿತಾ ಸಾಧ್ಯವಿಲ್ಲ ಬಾಸ್’ ಎಂದು ಭಾಷಣ ಕಚ್ಚುತ್ತಿರುತ್ತೇವೆ. ಗದ್ದದ ಮೇಲೆ ಬೆರಳಿಟ್ಟುಕೊಂಡು ಆಳವಾಗಿ ಯೋಚಿಸುವವರಂತೆ ಫೋಸುಕೊಡುತ್ತಾ ಆಗಾಗ ನಿಟ್ಟುಸಿರಿಡುತ್ತಿರುತ್ತೇವೆ.

ನಿಜಕ್ಕೂ ನಮ್ಮ ದೇಶದ ಎಲ್ಲಾ ಸಮಸ್ಯೆಗಳಿಗೂ ನಾವು ದೂಷಿಸುವಂತೆ ಕೇವಲ ರಾಜಕೀಯವೇ ಕಾರಣವಾ? ರಾಜಕಾರಣಿಗಳ ಮೇಲೆ ಅಷ್ಟು ಭಯಾನಕವಾದ ಕೋಪವನ್ನು ವ್ಯಕ್ತಪಡಿಸುವ ನಮಗೆ ಒಮ್ಮೆಗೇ ಎಲ್ಲಾ ರಾಜಕಾರಣಿಗಳನ್ನು ನಿರ್ನಾಮ ಮಾಡಿಬಿಟ್ಟರೆ ದೇಶವನ್ನು ನಡೆಸಲು ಸಾಧ್ಯವಾ? ಈಗಿರುವ ರಾಜಕಾರಣಿಗಳನ್ನೆಲ್ಲಾ ಬದಿಗೆ ಸರಿಸಿಬಿಟ್ಟರೆ ಅವರ ಸ್ಥಾನವನ್ನು ತುಂಬಲು ನಾವು ಸಿದ್ಧರಿದ್ದೇವಾ? ಒಂದು ಮಾತು ನೆನಪಿರಬೇಕು, ಹಿಂದೆಂದೋ ಹೀಗೇ ನಮ್ಮ ನಡುವೆಯೇ, ನಮ್ಮಂತೆಯೇ ಇದ್ದವರೇ ಅಧಿಕಾರಕ್ಕೇರಿದಾಗ ರಾಜಕಾರಣಿಗಳು ಎನ್ನಿಸಿಕೊಳ್ಳುವುದು. ಅವರು ನಮ್ಮ ನಡುವಿನಿಂದಲೇ ಅಧಿಕಾರದ ಶಕ್ತಿ ಕೇಂದ್ರದೆಡೆಗೆ ನಡೆದವರು. ಅವರು ನಮ್ಮ ಸಮಾಜದ ಪ್ರತಿನಿಧಿಗಳು. ಅವರನ್ನೇ ನಿರ್ನಾಮ ಮಾಡಬೇಕು ಎಂದರೆ ನಮ್ಮಿಡೀ ಸಮಾಜ ನಿರ್ನಾಮಕ್ಕೆ ಅರ್ಹವಾದದ್ದು ಎಂಬ ತೀರ್ಮಾನಕ್ಕೆ ಬಂದಂತಾಗುವುದಿಲ್ಲವೇ?

ನಿಜ, ರಾಜಕೀಯವೆಂಬುದು ಈಗ ಹಣ ಮಾಡುವ ದಂಧೆಯಾಗಿದೆ. ಹಿಂದೆಲ್ಲ ತಮ್ಮ ತತ್ವಾದರ್ಶಗಳ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಪಕ್ಷಗಳು ಸಿದ್ಧಾಂತದ ಆಧಾರದ ಮೇಲೆ ಓಟು ಕೇಳಲು ಜನರ ಬಳಿಗೆ ಹೋಗುತ್ತಿದ್ದರು. ಜನರು ಪಕ್ಷಗಳ ತತ್ವಾದರ್ಶಗಳನ್ನು ನಂಬಿಕೊಂಡು ಓಟುಕೊಡುತ್ತಿದ್ದರು. ರಾಜಕೀಯ ನಾಯಕರುಗಳು ನಿಜವಾದ ಜನಪ್ರತಿನಿಧಿಗಳಾಗಿರುತ್ತಿದ್ದರು. ಚಳುವಳಿ, ಸಂಘಟನೆಗಳಲ್ಲಿ ಬೆಳೆದವರು ನಾಯಕರಾಗುತ್ತಿದ್ದರು. ಆದರೆ ಇಂದು ರಾಜಕಾರಣವೆಂಬುದೂ ಕುದುರೆ ರೇಸಿನಂತಾಗಿದೆ. ಜನಸೇವೆ ಮಾಡುವುದಕ್ಕಾಗಿ ರಾಜಕೀಯಕ್ಕೆ ಇಳಿಯುತ್ತಿರುವುದಾಗಿ ಘೋಷಿಸುತ್ತಿರುವ ನಮ್ಮ ರಾಜಕಾರಣಿಗಳು ಹೇಳುವುದನ್ನೇ ನಂಬುವುದಾಗಿದ್ದರೆ, ಈ ‘ಜನಸೇವೆ’ಗಾಗಿ ಇರುವ ಪೈಪೋಟಿಯನ್ನು ಗಮನಿಸಿದ್ದೇ ಆದಲ್ಲಿ ನಮ್ಮ ದೇಶ ಎಂದೋ ಸುಭೀಕ್ಷವಾಗಿರಬೇಕಿತ್ತು. ನಮ್ಮ ರಾಜಕಾರಣಿಗಳ ಪ್ರಕಾರ ಈ ‘ಜನಸೇವೆ’ಯ ಜನ ಯಾರೋ! ತಮಗೆ ಓಟುಕೊಟ್ಟ ಜನರೋ ಅಥವಾ ತಮ್ಮ ಮನೆ ಮಂದಿಯೋ?

ಇಂದು ರಾಜಕಾರಣಿಯಾದವನೊಬ್ಬ ಭ್ರಷ್ಠನಾಗಿದ್ದಾನೆ ಎಂದರೆ ನಮಗ್ಯಾರಿಗೂ ಗಾಬರಿಯಾಗುವುದಿಲ್ಲ. ಆತನನ್ನು ವಿರೋಧಿಸುವ ಕೆಚ್ಚು ಹುಟ್ಟುವುದಿಲ್ಲ. ಅದೇ ಒಂದು ವೇಳೆ ಒಬ್ಬ ರಾಜಕಾರಣಿ ಶುದ್ಧ ಹಸ್ತದವನಾಗಿದ್ದಾನೆ ಎಂದರೆ ನಮಗೆ ಆಶ್ಚರ್ಯವಾಗುತ್ತದೆ. ನಾವು ಆತನನ್ನು ಸಂಶಯಿಸುತ್ತೇವೆ. ಆತನನ್ನು ಭ್ರಷ್ಟನನ್ನಾಗಿಸಲು ಪ್ರಯತ್ನಿಸುತ್ತೇವೆ. ಇವನಿಗೆ ಪ್ರಾಕ್ಟಿಕಲ್ಲಾಗಿರೋದು ಗೊತ್ತೇ ಇಲ್ಲ ಅಂತ ಚುಡಾಯಿಸುತ್ತೇವೆ. ಕೊನೆಗೆ ಆತನೂ ಭ್ರಷ್ಠಾಚಾರದ ಕೊಚ್ಚೆಯಲ್ಲಿ ಬೀಳುವವರೆಗೂ ನಮಗೆ ನೆಮ್ಮದಿಯಿರುವುದಿಲ್ಲ . ಇದು ಅಸ್ವಾಭಾವಿಕ ಎನ್ನಿಸುವುದಾದರೆ ನಿಮ್ಮ ನಡುವಿನ ಉದಾಹರಣೆಗಳನ್ನೇ ತೆಗೆದುಕೊಳ್ಳಿ, ನಮ್ಮೊಡನೆ ಹರಟೆಗಳಲ್ಲಿ ಪಾಲ್ಗೊಳ್ಳದ, ನಿಮ್ಮ ಹಾಗೆ ಸಣ್ಣ ಪುಟ್ಟ ಕರ್ಮಕಾಂಡಗಳನ್ನು ಮಾಡಿಕೊಳ್ಳದವನನ್ನು ನಾವು ನಮ್ಮ ಹಾಗೆ ಮಾಡಲು ಎಷ್ಟು ಚಡಪಡಿಸುತ್ತೇವೆ ಅಲ್ಲವೇ? ಆದರ್ಶವಾದಿಗಳನ್ನು ನಾವು ಕನಿಕರದಿಂದ ನೋಡುವ ನೈತಿಕ ಅಧಃಪತನವನ್ನು ನಾವು ಕಂಡಿದ್ದೇವೆನ್ನುವುದಾದರೆ ಇದಕ್ಕೆ ರಾಜಕೀಯ ಮಾತ್ರ ಹೇಗೆ ಹೊಣೆಯಾದೀತು?

ರಾಜ್ಯದಲ್ಲಿ ಮತ್ತೊಂದು ಚುನಾವಣೆ ಬಂದಿದೆ. ಪಕ್ಷಗಳ ಮೇಲಾಟ ನಡೆಯುತ್ತಿದ್ದೆ. ಹಣವಿದ್ದವರು, ರಿಯಲ್ ಎಸ್ಟೇಟು ಕುಳಗಳು, ಗಣಿ ಧಣಿಗಳು, ಮದ್ಯದ ದೊರೆಗಳು ಓಟು ಕೇಳಿಕೊಂಡು ಮನೆ ಬಾಗಿಲಿಗೆ ಬಂದಿದ್ದಾರೆ. ಪ್ರಜ್ಞಾವಂತರು, ವಿಚಾರವಂತರು ಎಂದುಕೊಳ್ಳುವ ನಮ್ಮಂತಹ ಯುವಕರು ಬಾಗಿಲು ಗಿಡಿದುಕೊಂಡು ಮನೆಯೊಳಗೆ ಕುಳಿತು ಮಜವಾಗಿ ಸಿನೆಮಾ ನೋಡುತ್ತಿದ್ದೇವೆ. ಅದರಲ್ಲಿ ಕಾಣುವ ರಾಜಕಾರಣಿಗಳನ್ನು ಕೊಲ್ಲಬೇಕು, ಗಲ್ಲಿಗೇರಿಸಬೇಕು ಅಂತ ಮಾತನಾಡುತ್ತೇವೆ. ಬಾಗಿಲು ತೆರೆದು ಹೊರಗೆ ಬಂದು ಒಂದು ಓಟು ಹಾಕಲಾಗದ ನಮಗೆ ದೇಶದ ಬಗ್ಗೆ ಮಾತನಾಡುವ ಹಕ್ಕು ಬರುವುದಾದರೂ ಹೇಗೆ? ರಾಜಕಾರಣಿಗಳ ಕೊರಳ ಪಟ್ಟಿ ಹಿಡಿದು ಪ್ರಶ್ನಿಸುವ ನೈತಿಕತೆ ಬರುವುದಾದರೂ ಎಲ್ಲಿಂದ?

ಹದಿನೆಂಟು ದಾಟಿರುವ ನಮ್ಮಲ್ಲಿ ಬಹುತೇಕರಿಗೆ ಇದೇ ಮೊದಲ ವೋಟಿಂಗ್ ಅವಕಾಶ. ಮತದಾನ ನಡೆಯುವ ದಿನದ ರಜೆಯನ್ನು ಹೇಗೆ ಕಳೆಯುವುದು ಎಂದು ಪ್ಲಾನ್ ಮಾಡುವ ಮುನ್ನ ಯಾರಿಗೆ ಓಟ್ ಹಾಕಬೇಕು ಎಂಬುದನ್ನೂ ಕೊಂಚ ವಿವೇಚಿಸೋಣ. ನಮ್ಮ ಮೊದಲ ಮತವನ್ನು , ಮಗುವನ್ನು ಶಾಲೆಗೆ ಸೇರಿಸುವ ಕಾಳಜಿಯಲ್ಲಿ ಚಲಾಯಿಸೋಣ. If you are not the part of the solution, then you are the part of the problem!

ಭಯೋತ್ಪಾದನೆ, ಭಯೋತ್ಪಾದಕ ಎಂಬ ಪತ್ರಿಕೆಗಳಲ್ಲಿ ಓದಿದ, ಸುದ್ದಿ ವಾಹಿನಿಗಳಲ್ಲಿ ಕೇಳಿದ ಪದಗಳು ನಮ್ಮ ಪಕ್ಕದಲ್ಲೇ ಕುಳಿತು ನಮ್ಮ ಕಿವಿಗಳೊಳಗೇ ಪಿಸುಗುಟ್ಟಿದ ಅನುಭವವಾಗುತ್ತಿದೆ.editor copy.jpg ದೂರದಲ್ಲೆಲ್ಲೋ ಅಲ್ಲ, ಇಲ್ಲೇ ನಮ್ಮ ದಾವಣಗೆರೆಯಲ್ಲಿ ಇಬ್ಬರು ಭಯೋತ್ಪಾದಕರು ಪೋಲೀಸರಿಗೆ ಸಿಕ್ಕುಬಿದ್ದಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ ನಂತಹ ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿನ ವಿದ್ಯಾರ್ಥಿಗಳ ನಡುವೆಯೇ ಭಯೋತ್ಪಾದನೆಯ ಬೀಜಗಳು ಮೊಳೆತಿರುವುದು ಬೆಳಕಿಗೆ ಬರುತ್ತಲಿದೆ. ನಮ್ಮ ಮಧ್ಯೆ ಓಡಾಡಿಕೊಂಡಿದ್ದ ವ್ಯಕ್ತಿಗಳು ನಮ್ಮ ನೆತ್ತರನ್ನು ನೆಲದ ಮೇಲೆ ಹರಿಸುವ ಹೊಂಚು ಹಾಕುತ್ತಿದ್ದುದನ್ನು ಅರಿಯದ ಹಾಗಿದ್ದ ನಮಗೀಗ ಬೆನ್ನ ಹುರಿಯಗಂಟ ನಡುಕ! ಹೌದು ಭಯೋತ್ಪಾದಕ, ನಮ್ಮ ಮನೆಯ ಹೊಸ್ತಿಲು ದಾಟಿ ಒಳಬಂದಿದ್ದಾನೆ!

ಈ ಸಂದರ್ಭದಲ್ಲಿ ದೇಶದ ಸಾಮಾನ್ಯರಾದ ನಾವು ಯಾವ ರೀತಿ ಪ್ರತಿಕ್ರಿಯಿಸಬೇಕು? ಮಾಧ್ಯಮಗಳ ಅತಿರಂಜಿತ ವರದಿಗಳನ್ನು, ರಾಜಕಾರಣಿಗಳ ಎಂದಿನ ಮತೀಯ ಓಲೈಕೆಯನ್ನು ಯಾವ ರೀತಿಯಲ್ಲಿ ಎದುರಿಸಬೇಕು? ಜನಸಾಮಾನ್ಯರು ಯಾವ ನಿಲುವಿಗೆ ಬರಬೇಕು? ಈ ಬಗ್ಗೆ ಕ್ಷಕಿರಣ ಬೀರುವ ಒಂದು ಹಳೆಯ ಅಪ್ರಕಟಿತ ಬರಹ ಇಲ್ಲಿದೆ:

ನಮ್ಮದೇ ಶ್ರದ್ಧೆ, ಮೂಢನಂಬಿಕೆ, ಅಭಿಮಾನ, ತರ್ಕವಿಲ್ಲದ ಹೆಮ್ಮೆ, ಸರಿಪಡಿಸಲಾಗದ ನ್ಯೂನ್ಯತೆಗಳನ್ನಿಟ್ಟುಕೊಂಡೂ ನಾವು ಅದು ಹೇಗೆ ಇತರರ ನಂಬಿಕೆಗಳನ್ನು, ಹೆಮ್ಮೆಯನ್ನು ಜರಿಯುವ, ಪ್ರವಾದಿಯಾಂತೆ ಬೋಧಿಸುವ ಧೈರ್ಯವನ್ನು ಪಡೆಯುತ್ತೇವೆ ಎಂಬುದೇ ಸೋಜಿಗ! ಮನುಷ್ಯನ ಭಾವಲೋಕದ ಅತಿಸೂಕ್ಷ್ಮ ಅಂಶವಾದ ಧಾರ್ಮಿಕ ನಂಬಿಕೆಗಳ ವಿಚಾರವಾಗಿ ಮಾತನಾಡುವಾಗಲಂತೂ ಈ ಸೋಜಿಗ ಮತ್ತಷ್ಟು ಗಾಢವಾಗುತ್ತದೆ. ಒಂದು ಧರ್ಮವನ್ನು ಒಪ್ಪಿಕೊಂಡವನಿಗೆ ತನ್ನದೇ ಧರ್ಮ ಶ್ರೇಷ್ಠ ಎನ್ನಿಸುತ್ತದೆ. ಹಾಗೆ ಆತ ಭಾವಿಸುವಾಗ ತನ್ನ ವೈಯಕ್ತಿಕ ಅಹಂ ಕೂಡಾ ಸೇರಿಕೊಂಡು ತಾನು ಈ ಧರ್ಮೀಯನಾಗಿರುವುದಕ್ಕೇ ಈ ಧರ್ಮ ಶ್ರೇಷ್ಠ ಎಂಬ ಭಾವವೂ ಅದರಲ್ಲಿ ಬೆರೆತಿರುತ್ತದೆ. ಹಾಗಾಗಿ ತನ್ನ ಧರ್ಮದ ಉಗಮದ ಬಗ್ಗೆ, ಅದರ ಬೋಧನೆಯ ಬಗ್ಗೆ ಏನನ್ನೂ ಸಹ ತಿಳಿಯದವನು ತನ್ನ ಧರ್ಮದಲ್ಲಿನ ಅನೀತಿಯ ಬಗ್ಗೆ ಪ್ರಶ್ನೆಯೆದ್ದಾಗ ತಕ್ಷಣ ಅದನ್ನು ಪರಾಮರ್ಶಿಸುವ, ತಪ್ಪನ್ನು ಒಪ್ಪಿ ತಿದ್ದಿಕೊಳ್ಳುವ ಯೋಚನೆಯನ್ನು ಮಾಡುವ ಬದಲು ಅದನ್ನು ಸಮರ್ಥಿಸಿಕೊಳ್ಲಲು ಪ್ರಯತ್ನಿಸುತ್ತಾನೆ. ಒಬ್ಬ ಹಿಂದುವಿಗೆ ಮನುಸ್ಮೃತಿಯಲ್ಲಿ ಸಮಾಜ ವಿಂಗಡಣೆಯಿದೆ, ಅಸಮಾನತೆಯಿದೆ ಎಂದು ಹೇಳಿ ನೋಡಿ, ಆತ ಮನುಸ್ಮೃತಿ ಸೂಚಿಸುವ ಬೇರೆ ಯಾವ ಆಚರಣೆಯನ್ನು ಪಾಲಿಸದಿದ್ದರೂ, ಅಸಲಿಗೆ ಮನುಸ್ಮೃತಿಯನ್ನೇ ಓದಿರದಿದ್ದರೂ ‘ಜಾತಿ ಪದ್ಧತಿ ಒಂದು ಕಾಲದಲ್ಲಿ ಸಮಾಜದ ಸಮರ್ಥ ವ್ಯವಸ್ಥೆಯಾಗಿತ್ತು?’ ಎಂದು ಸಮರ್ಥನೆಗೆ ತೊಡಗುತ್ತಾನೆ. ಇದೇ ಉದಾಹರಣೆಯನ್ನು ಎಲ್ಲಾ ಧರ್ಮಗಳಿಗೂ, ವಿಜ್ಞಾನವೇ ಸರ್ವಸ್ವ, ಕಮ್ಯುನಿಸಂ ಒಂದೇ ಜಗತ್ತಿನ ಉಳಿವಿಗೆ ಆಧಾರ ಎನ್ನುವವರಿಗೆ ಅನ್ವಯಿಸಬಹುದು.

ಹೀಗೆ ಯೋಚಿಸಲು ಕಾರಣವಾದದ್ದು ವಿಜಯ ಕರ್ನಾಟದಲ್ಲಿ ಪ್ರತಿಶನಿವಾರ ‘ಬೆತ್ತಲೆ ಜಗತ್ತು’ ಎಂಬ ಅಂಕಣ ಬರೆಯುವ ಪ್ರತಾಪ್ ಸಿಂಹರ ಒಂದು ಲೇಖನ. ನವೆಂಬರ್ ೨೪ರ ಲೇಖನದ ಶೀರ್ಷಿಕೆ ” ಭಾರತೀಯ ಮುಸ್ಲಿಮರಿಗೆ ಇವರೇಕೆ ಮಾದರಿ ವ್ಯಕ್ತಿಗಳಾಗಲ್ಲ? “. ಮುಸ್ಲಿಂ ಸಮಾಜದಲ್ಲಿ ನಾನಾ ಕ್ಷೇತ್ರಗಳಲ್ಲಿ ಹೆಸರು ಮಾಡಿದ ಮಹನೀಯರು ಕಣ್ಣ ಮುಂದಿದ್ದರೂ ಮುಸಲ್ಮಾನರು ಮದನಿ, ಮಸೂದ್, ಮಲ್ಲಿಕ್, ಮಸ್ತಾನ್‌ಗಳಂತಹ ದೇಶದ್ರೋಹಿ, ಭಯೋತ್ಪಾದಕರನ್ನು ಮಾದರಿ ವ್ಯಕ್ತಿಗಳಾಗಿ ತೆಗೆದುಕೊಳ್ಳುತ್ತಾರೆ ಎಂಬುದು ಅವರ ಪ್ರಶ್ನೆ. ಈ ಪ್ರಶ್ನೆಗೆ ಕಾರಣವಾಗಿದ್ದು ತಸ್ಲೀಮಾ ನಸ್ರೀನ್ ಎಂಬ ಬಾಂಗ್ಲಾ ಲೇಖಕಿಯ ‘ದ್ವಿಖಂಡಿತೋ’ ಪುಸ್ತಕವನ್ನು ವಿರೋಧಿಸಿ ಕೊಲ್ಕತ್ತಾದಲ್ಲಿ ‘ಆಲ್ ಇಂಡಿಯಾ ಮೈನಾರಿಟಿ ಫ್ರಂಟ್’ ನಡೆಸಿದ ದಾಂಧಲೆ. ಅದಕ್ಕೂ ಮುನ್ನ ಹೈದರಾಬಾದಿನಲ್ಲಿ ತಸ್ಲಿಮಾಳ ಮೇಲೆ ನಡೆದ ಹಲ್ಲೆ ಯತ್ನ. ಇದನ್ನು ಉದಾಹರಿಸಿ ಲೇಖಕರು ಮುಸ್ಲೀಮರು ಹೀಗೇಕೆ ಎಂದು ಪ್ರಶ್ನಿಸುತ್ತಾರೆ.

ತಸ್ಲಿಮಾ ಪ್ರಕರಣದ ಬಗ್ಗೆ ಮಾತನಾಡುವ ಮುನ್ನ ಈಕೆ ಯಾರು, ಈಕೆಯ ಬರಹದಲ್ಲಿ ಮುಸ್ಲಿಮರನ್ನು ಕೆಣಕುವ ಅಂಶವಾದರೂ ಯಾವುದು ಎಂಬುದನ್ನು ತಿಳಿಯೋಣ.೧೯೬೨ರಲ್ಲಿ ಬಾಂಗ್ಲಾದೇಶದಲ್ಲಿ ಜನಿಸಿದಳು ತಸ್ಲೀಮಾ ನಸ್ರೀನ್. ನಿಮಗೆ ಆಶ್ಚರ್ಯವಾಗಬಹುದು, ತನ್ನ ಬರವಣಿಗೆಗಿಂತ ಹೆಚ್ಚಾಗಿ ವಿವಾದದಿಂದಲೇ ಪ್ರಚಾರ ಪಡೆದ ತಸ್ಲೀಮಾ ಮೈಮನ್ ಸಿಂಗ್ ಮೆಡಿಕಲ್ ಕಾಲೇಜಿನಲ್ಲಿ ಮೆಡಿಸಿನ್ ಓದಿದ್ದಳು. ಕೆಲವು ವರ್ಷ ಸರಕಾರಿ ವೈದ್ಯಯಾಗಿಯೂ ಸಹ ಕೆಲಸ ಮಾಡಿದ್ದಳು. ಆದರೆ ಆಕೆ ಅನಂತರ ಆಯ್ದುಕೊಂಡದ್ದು ಹೈಸ್ಕೂಲ್ ದಿನಗಳಿಂದ ತನ್ನ ಒಡನಾಡಿಯಾಗಿದ್ದ ಬರವಣಿಗೆಯನ್ನು. ತನ್ನ ಬರವಣಿಗೆಯ ಕಾರಣದಿಂದ ಆಕೆ ದೇಶ ತೊರೆದು ಅಲೆದಾಡಬೇಕಾಯಿತು. ಭಾರತಕ್ಕೆ ಬಂದ ನಂತರ ಆಕೆ ಅನೇಕ ವರ್ಷಗಳಿಂದಲೂ ಕೊಲ್ಕತ್ತಾದಲ್ಲಿ ನೆಮ್ಮದಿಯಿಂದಿದ್ದಳು. ಅಲ್ಲಿ ಇಲ್ಲಿ ಕೆಲವು ಧರ್ಮಾಂಧ ಸಂಘಟನೆಗಳು ಉಡಾಫೆಯಿಂದ ಆಕೆಯ ಮೇಲೆ ಫತ್ವಾ ಹೊರಡಿಸುತ್ತಿದ್ದದ್ದು ಬಿಟ್ಟರೆ ಸಾಮಾನ್ಯ ಮುಸಲ್ಮಾನರು ಬೀದಿಗಿಳಿದು ತಸ್ಲಿಮಾಳನ್ನು ದೇಶದಿಂದ ಹೊರಕ್ಕೆ ಅಟ್ಟಬೇಕು ಅಂತ ಒತ್ತಾಯಿಸಿರಲಿಲ್ಲ. ಹೈದರಾಬಾದಿನಲ್ಲಿ ಆಕೆಯ ಮೇಲೆ ಹಲ್ಲೆಗೆ ಮುಂದಾದ ಎಂಐಎಂನ ಸದಸ್ಯರು ಸಹ ಅದನ್ನು ರಾಜಕೀಯ ಲಾಭಕ್ಕಾಗಿ ಮಾಡಿದ್ದರೇ ವಿನಃ ಅವರ ಕೃತ್ಯದ ಹಿಂದೆ ಇಡೀ ಮುಸ್ಲಿಂ ಸಮಾಜದ ಬೆಂಬಲವಿರಲಿಲ್ಲ. ಆದರೆ ಕೊಲ್ಕತ್ತಾದಲ್ಲಿ ಬೀದಿಗಿಳಿದ ಮುಸಲ್ಮಾನರು ಆಕೆಯನ್ನು ಗಡಿಪಾರು ಮಾಡದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂಬ ಎಚ್ಚರಿಕೆಯನ್ನು ರವಾನಿಸಿದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಆದರೆ ಇಲ್ಲೊಂದು ಸೂಕ್ಷ್ಮವಾದ ಅಂಶವನ್ನು ಗಮನಿಸಬೇಕಿದೆ. ನಿಜವಾಗಿಯೂ ತಸ್ಲಿಮಾಳ ‘ದ್ವಿಖಂಡಿತೊ’ ಪುಸ್ತಕದಲ್ಲಿ ಮುಸಲ್ಮಾನರ ಧಾರ್ಮಿಕ ಭಾವನೆಗಳಿಗೆ ನೋವಾಗುವ ಅಂಶವಿದ್ದದ್ದೇ ಆದರೆ ಅದು ಬಿಡುಗಡೆಯಾಗಿ ಅನಾಮತ್ತು ನಾಲ್ಕು ವರ್ಷಗಳ ನಂತರವೇಕೆ ಈ ಹೋರಾಟ, ಹಾರಾಟ? ಅಲ್ಲಿಯವರೆಗೆ ಯಾವ ಮುಸಲ್ಮಾನರ ಧಾರ್ಮಿಕ ನಂಬಿಕೆಗೂ ಪೆಟ್ಟಾಗಿರಲಿಲ್ಲವೇ? ಕಣ್ಣಿಗೆ ಕಾಣುವ ಘಟನೆಯ ಹಿಂದಿನ ರಹಸ್ಯವೇ ಬೇರೆ. ತಸ್ಲಿಮಾಳ ವಿರುದ್ಧ ಘೋಷಣೆ ಕೂಗುತ್ತಾ ಬೀದಿಗಿಳಿದವರಲ್ಲಿ ಅಸಲಿಗೆ ಎಷ್ಟು ಮಂದಿ ಆಕೆಯ ಪುಸ್ತವನ್ನು ಓದಿರಬಹುದು, ಊಹಿಸಿ… ನಂದಿಗ್ರಾಮದಲ್ಲಿ ಮಾರಣಹೋಮವನ್ನೇ ನಡೆಸಿದ ಪಶ್ಚಿಮ ಬಂಗಾಳದ ಸರಕಾರ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ತಸ್ಲಿಮಾಳನ್ನು ನೆಪವಾಗಿ ಬಳಸಿಕೊಂಡಿರಬಹುದಲ್ಲವೇ? ಇಲ್ಲವಾದರೆ ನಂದಿಗ್ರಾಮದ ಕ್ರೌರ್ಯ ಇನ್ನೂ ಹೊಗೆಯಾಡುತ್ತಿರುವ ಸಮಯಕ್ಕೆ ಸರಿಯಾಗಿ ಮುಸ್ಲಿಮರ ಶ್ರದ್ಧೆಗೆ ಘಾಸಿಯಾದದ್ದು ಹೇಗೆ?

ಇಷ್ಟು ಸಣ್ಣ ಸಂಗತಿಯನ್ನು ಅರಿಯಲಾಗದ ನಾವು ಯಾವುದೋ ರಾಜಕೀಯ ಪಟ್ಟಭದ್ರ ಹಿತಾಸಕ್ತಿಗಳ ಕೆಲಸವನ್ನು ಒಂದಿಡೀ ಸಮಾಜದ ಮೇಲೆ ಹೊರೆಸುವ ತಪ್ಪನ್ನೇಕೆ ಮಾಡುತ್ತೇವೆ? ಆಧುನಿಕ ಶಿಕ್ಷಣದಿಂದ ಮನುಷ್ಯನ ಧಾರ್ಮಿಕ ನಂಬಿಕೆಗಳ ಮೇಲೆ ಜಿಗುಟು ಮೋಹ ಅಳಿಯುತ್ತದೆ ಎಂದು ನಾವೆಲ್ಲಾ ಭಾವಿಸಿದ್ದು ಬಹುಶಃ ತಪ್ಪೇನೋ. ಮನುಷ್ಯನ ಸುಪ್ತಪ್ರಜ್ಞೆಯಲ್ಲಿ, ಆತನ ಅನುಭವ ಲೋಕದಲ್ಲಿ ದಾಖಲಾದ ಧಾರ್ಮಿಕ ನಂಬಿಕೆ, ಸ್ವ-ಧರ್ಮದ ಬಗೆಗಿನ ಹೆಮ್ಮೆಯನ್ನು ಹೋಗಲಾಡಿಸಲು ನಮ್ಮ ಆಧುನಿಕ ಶಿಕ್ಷಣವೂ ವಿಫಲವಾಗುತ್ತಿದೆಯೇನೊ ಅನ್ನಿಸುತ್ತದೆ.ಇದಕ್ಕೆ ಕಾರಣವಿಲ್ಲದಿಲ್ಲ. ಪೆನ್ಸಿಲ್ವೇನಿಯಾ ಯೂನಿವರ್ಸಿಟಿಯ ಮಾರ್ಕ್ ಸೇಜ್‌ಮನ್ ನಡೆಸಿದ ಅಧ್ಯಯನದ ಪ್ರಕಾರ ಭಯೋತ್ಪಾದನೆಯ ಕೃತ್ಯಗಳನ್ನು ಯೋಜಿಸುವವರು ಅನಕ್ಷರರಲ್ಲ, ಮದರಸಾಗಳಲ್ಲಿ ಬೆಳೆದವರಲ್ಲ ವಿಶ್ವದ ಪ್ರತಿಷ್ಠಿತ ಯೂನಿವರ್ಸಿಟಿಗಳಲ್ಲಿ ಪದವಿ ಪಡೆದಿರುವವರು. ಇಂದಿಗೂ ಎಷ್ಟು ಮಂದಿ ಸುಶಿಕ್ಷಿತ ಹಿಂದೂಗಳು ಜಾತಿಪದ್ಧತಿಯನ್ನು, ಅಸ್ಪೃಶ್ಯತೆಯನ್ನು ಸಮರ್ಥಿಸುತ್ತಾರೆ ಎಂಬುದನ್ನು ಕೇಳಿ ನೋಡಿ.

ಇಂದು ಭಾರತ ನಿಜಕ್ಕೂ ಸೆಕ್ಯುಲರ್! ಎಲ್ಲಾ ಧರ್ಮಗಳು, ಜಾತಿಗಳು, ಉಪಜಾತಿ, ಒಳಜಾತಿಗಳು ಸಮಾನವಾದ ಅಗ್ರೆಶನ್ ಹೊಂದಿವೆ. ಸಣ್ಣ ಸಣ್ಣ ವಿಚಾರಗಳಿಗೂ ಜನರ ಭಾವನೆಗಳು ಕೆರಳಲ್ಪಡುತ್ತವೆ. ಒಂದು ಮಸೀದಿಯನ್ನು ಕೆಡವಿ ರೈಲು ಕಂಬಿಹಾಕುವುದು ಎಷ್ಟು ಅಪಾಯಕಾರಿಯೋ, ರಸ್ತೆ ಮಧ್ಯದಲ್ಲಿರುವ ಅನಾಮಧೇಯ ‘ಉದ್ಭವ’ ಲಿಂಗ, ಬಸವಮೂರ್ತಿಗಳನ್ನು ಕಿತ್ತುಹಾಕು ರಸ್ತೆಗೆ ಟಾರು ಹಾಕುವುದೂ ಅಷ್ಟೇ ಅಸಾಧ್ಯದ ಕೆಲಸ. ಮುಸಲ್ಮಾನರ ಓಲೈಕೆಯ ಬಗ್ಗೆ ಮಾತನಾಡುವ ನಾವು ನಮ್ಮ ಕಣ್ಣೆದುರೇ ಲಿಂಗಾಯತು, ಒಕ್ಕಲಿಗರ ಓಲೈಕೆಗಳು, ರಾಜಕೀಯಗಳು ನಡೆಯುವುದನ್ನು ನೋಡುವುದಿಲ್ಲವೇ? ಒಬ್ಬರ ಹುಳುಕನ್ನು ಒಬ್ಬರು ಹೆಕ್ಕುತ್ತಾ ಕೂರುವುದೇ ಬೆಳವಣಿಗೆಯ ಲಕ್ಷಣವೇ?


Technorati : , , ,


Blog Stats

  • 71,866 hits
ಮಾರ್ಚ್ 2023
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 12345
6789101112
13141516171819
20212223242526
2728293031  

Top Clicks

  • ಯಾವುದೂ ಇಲ್ಲ