ಕಲರವ

Archive for the ‘ದಿ ಡಿಬೇಟ್’ Category

ಚಂದ್ರಯಾನ ಜುಟ್ಟಿನ ಮಲ್ಲಿಗೆಯೇ?

– ಸುಪ್ರೀತ್.ಕೆ.ಎಸ್

ಪುರಾತನ ಕಾಲದಿಂದಲೂ ಭಾರತೀಯರು ಜ್ಞಾನದ ಉಪಾಸನೆಯನ್ನು ಮಾಡುತ್ತಾ ಬಂದವರು. ಜ್ಞಾನ Moon11-19-02b ಯಾವ ದಿಕ್ಕಿನಿಂದ ಬಂದರೂ ಅದನ್ನು ಸ್ವೀಕರಿಸುವ ಮನೋಭೂಮಿಕೆಯನ್ನು ಸಿದ್ಧ ಪಡಿಸಿಕೊಂಡವರು. ಭೂಮಿಯ ಮೇಲಿನ ಸಂಗತಿಗಳ ಬಗ್ಗೆ ತಿಳಿಯುತ್ತಾ ಅವರ ಹಸಿವು ದಿಗಂತದೆಡೆಗೆ ವಿಸ್ತರಿಸಿತು. ನೆಲದ ಮೇಲೆ ನೆಟ್ಟಿದ್ದ ದೃಷ್ಟಿ ಸೂರ್ಯ, ಚಂದ್ರರನ್ನು ದಾಟಿ ದೂರದ ನಕ್ಷತ್ರ ಪುಂಜಗಳವರೆಗೆ ವ್ಯಾಪಿಸಿತು. ಗ್ರಹಗಳ ಚಲನೆಯ ಬಗ್ಗೆ, ನಕ್ಷತ್ರಗಳ ಪುಂಜಗಳ ಸ್ಥಾನಗಳ ಬಗ್ಗೆ, ಗ್ರಹಣಗಳ ಬಗ್ಗೆ ತಿಳಿಯುತ್ತಾ ಅಂತರಿಕ್ಷವೆಂಬುದು ಇಡೀ ಬ್ರಹ್ಮಾಂಡದ ರಹಸ್ಯವನ್ನು ಬಿಚ್ಚಿಡುವ ಕೀಲಿಕೈ ಎಂಬುದನ್ನು ಕಂಡುಕೊಂಡರು. ಕ್ರಿಸ್ತಶಕ ೧೨೦೦ ರಷ್ಟು ಹಿಂದೆಯೇ, ಅಂದರೆ ಪಶ್ಚಿಮದಲ್ಲಿ ಗೆಲಿಲಿಯೋ ಗೆಲಿಲಿ ಎಂಬ ಬುದ್ಧಿವಂತ ಖಗೋಳ ವಿಜ್ಞಾನಿ ಭೂಮಿ ಗುಂಡಗಿದೆ, ಭೂಮಿಯ ಸುತ್ತ ಸೂರ್ಯ ಸುತ್ತುವುದಿಲ್ಲ ಬದಲಾಗಿ ಸೂರ್ಯನ ಸುತ್ತ ಭೂಮಿ ಹಾಗೂ ಇತರ ಗ್ರಹಗಳು ಸುತ್ತುತ್ತವೆ ಎಂದು ಸಾಬೀತು ಪಡಿಸುವ ಎರಡು ಸಾವಿರದ ಎಂಟುನೂರು ವರ್ಷಗಳ ಹಿಂದೆಯೇ ಖಗೋಳ ಶಾಸ್ತ್ರಕ್ಕೆ ಸಂಬಂಧಿಸಿದ ಹಾಗೆ ಲಗಧ ‘ವೇದಾಂಗ ಜೋತಿಷ್ಯ’ ಎಂಬ ಕೃತಿ ರಚಿಸಿದ್ದ! ಮುಂದೆ ಆರ್ಯಭಟ, ಬ್ರಹ್ಮಗುಪ್ತ, ವರಹಾಮಿಹಿರ, ಭಾಸ್ಕರ ೧, ಲಲ್ಲ , ಭಾಸ್ಕರ ೨, ಶ್ರೀಪಾಠಿ, ಮಹೆಂದ್ರ ಸೂರಿ ಮುಂತಾದ ಮಹಾಮಹಿರು ಅಂತರಿಕ್ಷವನ್ನು ಅಕ್ಷರಶಃ ಜಾಲಾಡಿ ಬಿಟ್ಟರು. ಬ್ರಹ್ಮಾಂಡದ ಬಗ್ಗೆ ಜ್ಞಾನವನ್ನು ಧಾರೆಯೆರೆಯುವ ಅಂತರಿಕ್ಷವನ್ನು ಅವರು ಜ್ಞಾನ ದೇಗುಲವಾಗಿ ಕಂಡರು. ಅವರಿಗೆಂದೂ ಆ ಜ್ಞಾನ ಅನುಪಯುಕ್ತವಾಗಿ ಕಂಡಿರಲಿಲ್ಲ.

ಎರಡು ಸಾವಿರ ವರ್ಷಗಳ ಕಾಲ ಹೊರಗಿನವರ ಆಳ್ವಿಕೆಯಲ್ಲಿ ನಲುಗಿದ ಭಾರತೀಯರು ತಮ್ಮೆ ಜ್ಞಾನದಾಹ, ಶ್ರೇಷ್ಠತೆಗಾಗಿನ ಹಂಬಲವನ್ನೆಲ್ಲಾ ಮರೆತು ದಾಸ್ಯದಲ್ಲಿ ಮುಳುಗಿದ್ದಾರೆ. ಸಾವಿರ ವರ್ಷಗಳ ಪಾಶ್ಚಾತ್ಯರ ದಬ್ಬಾಳಿಕೆಯಿಂದ ಆತ್ಮವಿಶ್ವಾಸವೆಂಬುದು ನಶಿಸಿ ಹೋಗಿದೆ. ಬದುಕಿನಲ್ಲಿರಬೇಕಾದ ಹುಮ್ಮಸ್ಸು, ಜ್ಞಾನವನ್ನು ಪಡೆಯುದರೆಡೆಗಿನ ತುಡಿತ, ವಿಜ್ಞಾನದಲ್ಲಿನ ಆಸಕ್ತಿಯನ್ನೆಲ್ಲಾ ಕಳೆದುಕೊಂಡು ಪಾಶ್ಚಾತ್ಯರು ಹಾಕಿಕೊಟ್ಟ ಮಾರ್ಗದಲ್ಲಿ ಕುರಿಗಳ ಹಾಗೆ ನಡೆಯುವುದನ್ನು ಅಭ್ಯಾಸ ಮಾಡಿಕೊಂಡುಬಿಟ್ಟಿದ್ದಾರೆ. ಹೀಗಾಗಿ ನಮಗೆಂದೂ ಹೊಸ ಸಾಹಸಗಳು, ಆವಿಷ್ಕಾರಗಳು, ಹೊಸತನದ ಆಲೋಚನೆಗಳು, ನವೀನ ಯೋಜನೆಗಳು ಪ್ರಿಯವಾಗುವುದಿಲ್ಲ. ಬದಲಾವಣೆಗಳು ನಮ್ಮ ಜಡತ್ವವನ್ನು ಕುಟುಕುತ್ತವೆಯಾದ್ದರಿಂದ ನಾವು ನಮಗೆ ತಿಳಿಯದಂತೆ ಅವುಗಳಿಗೆ ಪ್ರತಿರೋಧ ಒಡ್ಡುತ್ತಿದ್ದೇವೆ. ನಮಗೆ ಅಣು ವಿದ್ಯುತ್ ಬೇಕಿಲ್ಲ, ಹೆಚ್ಚಿನ ವೇಗದ ಸಾರಿಗೆ ಬೇಕಿಲ್ಲ, ಉಪಗ್ರಹಳ ಉಡಾವಣೆ ನಮಗೆ ಅನುಪಯುಕ್ತ. ಇದೇ ಮನೋಭಾವದ ಮುಂದುವರೆಕೆಯಾಗಿ ಇತ್ತೀಚಿನ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ‘ಚಂದ್ರಯಾನ’ ಜುಟ್ಟಿನ ಮಲ್ಲಿಗೆಯಾಗಿ ಕಾಣುತ್ತಿದೆ. ಪ್ರತಿವರ್ಷ ಸುಮಾರು ೯೦೦ ಕೋಟಿ ರೂಪಾಯಿ ಮೌಲ್ಯದಷ್ಟು ಪಟಾಕಿಯನ್ನು ಸುಟ್ಟು ಸಂಭ್ರಮಿಸುವಾಗ ಇಲ್ಲದ ಹಣದ ಬಗೆಗಿನ ಕಾಳಜಿ ಇಸ್ರೋ ತನ್ನ ಪಾಲಿನ ಬಜೆಟಿನಿಂದ ೩೬೮ ಕೋಟಿಯನ್ನು ಈ ಯೋಜನೆಗೆ ವೆಚ್ಚ ಮಾಡಿದ್ದನ್ನು ಕೇಳಿ ಉದ್ಭವಿಸಿಬಿಡುತ್ತದೆ!

ಅಭಿವೃದ್ಧಿ ಹೊಂದುತ್ತಿರುವ ಭಾರತದಂತಹ ದೇಶಕ್ಕೆ, ಬಡತನ, ರೋಗ-ರುಜಿನಗಳಿಂದ ಮುಕ್ತವಾಗಲು ಬಡಿದಾಡುತ್ತಿರುವ, ತನ್ನ ಪ್ರಜೆಗಳಿಗೆ ಮೂಲಭೂತ ಆವಶ್ಯಕತೆಗಳನ್ನು ಸಮರ್ಪಕವಾಗಿ ಪೂರೈಸುವಲ್ಲಿ ವಿಫಲವಾಗಿರುವ ದೇಶಕ್ಕೆ ಇಸ್ರೋದಂತಹ ಬಾಹ್ಯಾಕಾಶ ಸಂಸ್ಥೆ ಏತಕ್ಕೆ ಬೇಕು? ದೇಶದ ಜನರ ಹುಟ್ಟೆ ತುಂಬಿಸುವಲ್ಲಿ ಸೋತಿರುವ ಸರಕಾರ ಅಂತರಿಕ್ಷಕ್ಕೆ ಕೋಟಿ ಕೋಟಿ ರೂಪಾಯಿಗಳನ್ನು ಸುರಿಯುವುದು ಯಾವ ದಿಕ್ಕಿನಿಂದ ಬುದ್ಧಿವಂತಿಕೆಯಾಗಿ ಕಾಣುತ್ತದೆ ಎಂದೆಲ್ಲಾ ವಾದಿಸುವವರು, ದೇಶದ ಅಭಿವೃದ್ಧಿಗೆ ಪೂರಕವಾಗುವ ಆವಿಷ್ಕಾಕರಗಳಿಗಾಗಿ ಇಸ್ರೋ ತನ್ನ ಸಾಮರ್ಥ್ಯವನ್ನು ವಿನಿಯೋಗಿಸಲು ಎಂದು ಪುಕ್ಕಟೆ ಉಪದೇಶ ನೀಡುವವರು ೧೯೭೪ರಲ್ಲಿ ಭಾರತ ಮೊಟ್ಟ ಮೊದಲ ಬಾರಿಗೆ ಪರಮಾಣು ಬಾಂಬ್ ಸಿಡಿಸಿದಾಗ ಉಂಟಾದ ಜಾಗತಿಕ ಬಿಕ್ಕಟ್ಟಿನ ಬಗ್ಗೆ ತಿಳಿಯಬೇಕು. ಅಮೇರಿಕಾ ಸೇರಿದಂತೆ ಮುಂದುವರಿದ ಬಲಿಷ್ಠ ರಾಷ್ಟ್ರಗಳು ಭಾರತಕ್ಕೆ ಯಾವುದೇ ಬಗೆಯ ತಂತ್ರಜ್ಞಾನ, ಉಪಕರಣವನ್ನು ನೀಡುವುದಕ್ಕೆ ನಿರಾಕರಿಸಿದಾಗ ಇಸ್ರೋದ ವಿಜ್ಞಾನಿಗಳು ಹಗಲು ರಾತ್ರಿಯೆನ್ನದೆ ಶ್ರಮವಹಿಸಿ ದೇಶೀಯ ತಂತ್ರಜ್ಞಾನವನ್ನು ಬೆಳೆಸಿದರು. ದೇಶ ಹಲವು ಅತ್ಯವಶ್ಯಕ ಮೂಲಭೂತ ತಂತ್ರಜ್ಞಾನಗಳಲ್ಲಿ ಸ್ವಾಲವಂಬನೆಯನ್ನು ಸಾಧಿಸುವುದಕ್ಕೆ ಕಾರಣಕರ್ತರಾದರು.

ಇಸ್ರೋ ಈಗಾಗಲೇ ಭೂಮಿಯ ಕಕ್ಷೆಯಲ್ಲಿ ಆರು ದೂರ ಸಂವೇದಿ ಉಪಗ್ರಹಗಳನ್ನು ನೆಟ್ಟಿದೆ. ಇದರಿಂದ ಮೀನುಗಾರರಿಗೆ ಸಮುದ್ರದ ಅಲೆಗಳ ಬಗ್ಗೆ ಮುನ್ಸೂಚನೆ ನೀಡಲು, ತೀರದಲ್ಲಿರುವವರಿಗೆ ಮುನ್ನೆಚ್ಚರಿಕೆಗಳನ್ನು ನೀಡಲು ಸಾಧ್ಯವಾಗಿದೆ. ಭಾರತದ ಏಳು ದೂರ ಸಂಪರ್ಕ ಉಪಗ್ರಹಗಳು ಭೂಮಿಯ ಮೂಲೆಗೆ ಸಂಪರ್ಕವನ್ನು ಹೊಂದಿವೆ. ಈ ಉಪಗ್ರಹಗಳ ನೆರವಿನಿಂದ ದೇಶದ ಸುಮಾರು ತೊಂಭತ್ತರಷ್ಟು ಜನಸಂಖ್ಯೆಗೆ ದೂರದರ್ಶನ ವೀಕ್ಷಣೆ ಸಾಧ್ಯವಾಗಿದೆ. ಅಲ್ಲದೆ ಉಪಗ್ರಹಗಳ ಮೂಲಕ ಕೃಷಿ ಮಾಹಿತಿ, ಶಿಕ್ಷಣ ಬಿತ್ತರಿಸಲು ಸಾಧ್ಯವಾಗಿದೆ. ದೇಶದ ೬೯ ಆಸ್ಪತ್ರೆಗಳನ್ನು ಪರಸ್ಪರ ಸಂಪರ್ಕಕ್ಕೆ ಲಭ್ಯವಾಗಿಸಿ ತಜ್ಞರ ಸೇವೆ ಎಲ್ಲಾ ಕಡೆ ಲಭ್ಯವಾಗುವಂತೆ ಮಾಡಲಾಗಿದೆ. ಇಸ್ರೋ ನೆಟ್ಟಿರುವ ಉಪಗ್ರಹಗಳಿಂದ ನೈಸರ್ಗಿಕ ವಿಪತ್ತುಗಳ ಮುನ್ಸೂಚನೆ ಪಡೆದು ದೇಶ ಅನೇಕ ಗಂಡಾಂತರಗಳಿಂದ ಪಾರಾಗಿದೆ. ೧೯೭೭ರಲ್ಲಿ ಆಂಧ್ರಪ್ರದೇಶದ ಕರಾವಳಿ ತೀರಕ್ಕೆ ಅಪ್ಪಳಿಸಿದ ಚಂಡಮಾರುತಕ್ಕೆ ಸುಮಾರು ಹತ್ತು ಸಾವಿರ ಮಂದಿ ಬಲಿಯಾಗಿದ್ದರೆ. ಆಗ ಚಂಡಮಾರುತದ ಬಗ್ಗೆ ಮುನ್ಸೂಚನೆ ನೀಡುವ ಯಾವ ಸವಲತ್ತುಗಳೂ ನಮ್ಮ ಬಳಿ ಇರಲಿಲ್ಲ ಎಂಬುದನ್ನು ನೆನಪಿಡಬೇಕು. ಮುಂದೆ ೧೯೯೦ರಲ್ಲಿ ಮತ್ತೆ ಅಪ್ಪಳಿಸಿದ ಚಂದಮಾರುತದ ಬಗ್ಗೆ ಸೂಕ್ತ ಮಾಹಿತಿ ಉಪಗ್ರಹಗಳಿಂದ ಪಡೆದು ಅವಶ್ಯಕವಾದ ಮುನ್ನೆಚರಿಕೆಗಳನ್ನು ಕೈಗೊಂಡು ಸಾವಿನ ಪ್ರಮಾಣವನ್ನು ೯೦೦ಕ್ಕೆ ಇಳಿಸಲಾಯ್ತು.

ಜಾಗತೀಕರಣ, ಔದ್ಯೋಗಿಕ ಕ್ರಾಂತಿ, ಬಾಹ್ಯಾಕಾಶ ಸಂಶೋಧನೆಯಲ್ಲಿನ ಪ್ರಗತಿಯನ್ನೆಲ್ಲಾ ಸಂಶಯ ದೃಷ್ಟಿಯಿಂದ ಕಾಣುವುದರಿಂದ ಯಾವ ಲಾಭವೂ ಇಲ್ಲ. ಜಾಗತೀಕರಣದಿಂದ ಲಕ್ಷಾಂತರ ಯುವಕ ಯುವತಿಯರು ತಮ್ಮ ಅರ್ಹತೆಗೆ ತಕ್ಕ ಆರ್ಥಿಕ ಸ್ಥಾನಮಾನವನ್ನು ಗಳಿಸಿಕೊಳ್ಳಲು, ಮಧ್ಯಮ ವರ್ಗ ಸದೃಢವಾಗಿ ರೂಪುಗೊಳ್ಳಲು ಸಾಧ್ಯವಾದಂತೆಯೇ ಯುವ ಜನಾಂಗದಲ್ಲಿ ಹೊಸ ಹುಮ್ಮಸ್ಸನ್ನು, ಸ್ಪೂರ್ತಿಯನ್ನು ಮೂಡಿಸಿತು. ಒಬ್ಬ ನಾರಾಯಣ ಮೂರ್ತಿ, ಒಬ್ಬ ಧೀರುಭಾಯಿ ಅಂಬಾನಿಯಿಂದ ಲಕ್ಷಾಂತರ ಮಂದಿ ಯುವಕರು ಸ್ಪೂರ್ತಿ ಪಡೆದರು. ಕೋಟ್ಯಂತರ ರೂಪಾಯಿ ವಹಿವಾಟು ಹೊಂದಿರುವ ಕ್ರಿಕೆಟ್, ಅದರಷ್ಟೇ ಹಣಕಾಸಿನ ವ್ಯವಹಾರ ನಡೆಸುವ ಬಾಲಿವುಡ್‌ನಿಂದ ದೇಶದ ಪ್ರಗತಿಗೆ ನೇರವಾಗಿ ಯಾವ ಕೊಡುಗೆಯೂ ಸಲ್ಲದಿರಬಹುದು. ಆದರೆ ಅವು ಇಡೀ ದೇಶದ ಜನರ ಮನಸ್ಥಿತಿಯನ್ನು ಬದಲಾಯಿಸುತ್ತವೆ. ಬದುಕಿಗೆ ಅರ್ಥವಂತಿಕೆಯನ್ನು ತರುತ್ತವೆ. ಹೊಸ ಕನಸುಗಳನ್ನು ಬಿತ್ತುತ್ತವೆ. ಮನುಷ್ಯ ಆಹಾರವಿಲ್ಲದೆ ಬದುಕಬಹುದು, ವಿದ್ಯುತ್, ನೀರು ಇಲ್ಲದೆ ಜೀವನ ಸಾಗಿಸಬಹುದು ಆದರೆ ಕನಸುಗಳೆಂಬುವು ಇಲ್ಲವಾಗಿದ್ದರೆ ಮನುಷ್ಯ ಕುಲ ಅಸ್ತಿತ್ವದಲ್ಲೇ ಇರುತ್ತಿರಲಿಲ್ಲ. ಇಸ್ರೋ ಕೈಗೊಂಡಿರುವ ಚಂದ್ರಯಾನ ಯೋಜನೆ ದೇಶದ ಮಕ್ಕಳಲ್ಲಿ, ಯುವಕರಲ್ಲಿ ಕನಸುಗಳನ್ನು ಬಿತ್ತುವಲ್ಲಿ ಯಶಸ್ವಿಯಾದರೆ ಅದಕ್ಕಿಂತ ದೊಡ್ಡ ಕೊಡುಗೆ ಏನು ಬೇಕು? ಈಗಾಗಲೇ ನಮ್ಮ ವಿಜ್ಞಾನಿಗಳು ಚಂದ್ರಯಾನದ ಪೇಲಾಯ್ಡನ್ನು ಚಂದ್ರನ ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ತಂತ್ರಜ್ಞಾನದ ಉತ್ಕೃಷ್ಟತೆ,ನಿಖರತೆಯಿಂದ ಜಗತ್ತಿನ ಗಮನ ಸೆಳೆದಿದ್ದಾರೆ. ಅತಿ ಕಡಿಮೆ ಖರ್ಚಿನಲ್ಲಿ ಚಂದ್ರಯಾನವನ್ನು ಕೈಗೊಂಡು ವಿಶ್ವವೇ ಹುಬ್ಬೇರಿಸುವಂತೆ ಮಾಡಿದ್ದಾರೆ. ಅವರು ತಮ್ಮ ಯೋಜನೆಯಲ್ಲಿ ಸಾಧಿಸುವ ಒಂದೊಂದೇ ಸಣ್ಣ ಯಶಸ್ಸು ದೇಶದ ಯುವಕರನ್ನು ಅಪರಿಮಿತವಾಗಿ ಪ್ರಭಾವಿಸುತ್ತದೆ. ದುಡ್ಡಿನ ಹಿಂದೆ ಬಿದ್ದು ವೃತ್ತಿ ಪರ ಕೋರ್ಸುಗಳನ್ನು ತೆಗೆದುಕೊಂಡು ತಮ್ಮ ಪ್ರತಿಭೆಯನ್ನು ಯಾರದೋ ಕಂಪನಿ ಕಟ್ಟುವಲ್ಲಿ ಕಳೆಯುತ್ತಿರುವ ಯುವಕ ಯುವತಿಯರು ವೈಜ್ಞಾನಿಕ ಸಂಶೋಧನೆಯ ಕ್ಷೇತ್ರದೆಡೆಗೆ ಇದರಿಂದ ಆಕರ್ಷಿತರಾದರೆ, ದೇಶದಲ್ಲಿ ವಿಜ್ಞಾನಕ್ಕೆ ಭವಿಷ್ಯವಿದೆ, ವಿಜ್ಞಾನಿಗಳಿಗೆ ಮನ್ನಣೆಯಿದೆ ಎಂಬ ಸಂದೇಶ ರವಾನೆಯಾದರೆ ಹಿಂದೊಮ್ಮೆ ಅಮೇರಿಕ ತೀವ್ರ ಆರ್ಥಿಕ ಕುಸಿತದಲ್ಲಿದ್ದಾಗ ಅದರ ಪ್ರಜೆಗಳು ತೋರಿದ ಅಪ್ರತಿಮ ಉತ್ಸಾಹ, ಹೋರಾಟ ಮನೋಭಾವವನ್ನು ನಮ್ಮ ದೇಶದಲ್ಲೂ ಕಾಣಬಹುದು. ಅಣು ಬಾಂಬಿನ ಶಾಖದಲ್ಲಿ ಬೂದಿಯಾದ ನಗರಗಳನ್ನು ಮತ್ತೆ ಕಟ್ಟಿದ ಜಪಾನಿನ ಜನರ ಆತ್ಮಶಕ್ತಿಯನ್ನು ನಮ್ಮ ದೇಶವೂ ಪಡೆಯಬಹುದು. ಇಂಥ ಕೊಡುಗೆಯನ್ನು ನೀಡಬಲ್ಲ ಚಂದ್ರಯಾನಕ್ಕೆ ಸರಿಸಾಟಿಯಾದ ಯೋಜನೆ ದೇಶದ ಬೇರಾವ ಕ್ಷೇತ್ರದಲ್ಲಿದೆ? ಹೀಗಿರುವಾಗ ಚಂದ್ರಯಾನ ನಮಗೆ ಜುಟ್ಟಿನ ಮಲ್ಲಿಗೆಯಾಗುತ್ತದೆಯೇ?

No way!

ಚಂದ್ರಯಾನ ಜುಟ್ಟಿನ ಮಲ್ಲಿಗೆಯೇ?

– ಚಂದ್ರಶೇಖರ್ ಪ್ರಸಾದ್

Moon11-19-02b ‘ಮನುಷ್ಯ ಚಂದ್ರನವರೆಗೆ ಹೋಗಿ ಒಂದಿಶ್ಟು ಮಣ್ಣು ತಂದನೇ ವಿನಾ ಒಂದು ಹಿಡಿ ಬೆಳಕನ್ನು ತರಲಿಲ್ಲ’ – ವೀರಭದ್ರ ಚನ್ನಮಲ್ಲಸ್ವಾಮಿ.

ಭೂಮಿಯಿಂದ ಸುಮಾರು ಮೂರು ಮುಕಾಲು ಲಕ್ಷ ಕಿಮೀ ದೂರದಲ್ಲಿರುವ ಚಂದ್ರನನ್ನು ಅಪ್ಪುವ, ಆತನ ಅಂಗಳದ ಮೇಲೆ ಇಳಿದು ಭಾರತದ ತಿರಂಗ ಧ್ವಜವನ್ನು ಹಾರಿಸುವ ಮುನ್ನ ಇಲ್ಲೇ ನಮ್ಮ ನೆಲದಲ್ಲಿ ನಿಂತು ದೇಶವನ್ನು ಸರಿಯಾಗಿ ದಿಟ್ಟಿಸಿ ನೋಡೋಣ. ನೂರ ಹದಿಮೂರು ಕೋಟಿ ಮಂದಿ ಭಾರತದಲ್ಲಿ ಜೀವಿಸುತ್ತಿದ್ದಾರೆ. ಜಗತ್ತಿನ ಆರರಲ್ಲಿ ಒಂದು ಭಾಗದಷ್ಟು ಜನಸಂಖ್ಯೆ ಈ ದೇಶದಲ್ಲಿದೆ. ಇದು ನಮ್ಮ ದೇಶದ ಹಿರಿಮೆಯಾಗಬಹುದಿತ್ತು. ಅತ್ಯಧಿಕ ಮಾನವ ಸಂಪನ್ಮೂಲ ಹೊಂದಿರುವ ಎರಡನೆಯ ರಾಷ್ಟ್ರ ಎಂಬ ಬಿರುದನ್ನು ತಲೆಯ ಮೇಲೆ ಹೊತ್ತು ಮೆರೆಯಬಹುದಿತ್ತು ಆದರೆ ಈ ಬಿರುದಿನ ಹೊಳಪನ್ನು ಮರೆ ಮಾಡುವ ಕಗ್ಗತ್ತಲ ಬಗ್ಗೆ ತಿಳಿಯಬೇಕು. ಒಟ್ಟು ಜನಸಂಖ್ಯೆಯ ಶೇ ೪೧.೬ರಷ್ಟು ಮಂದಿ ಬಡತನ ರೇಖೆಗಿಂತ ಕೆಳಗಿದ್ದಾರೆ ಎನ್ನುತ್ತದೆ ೨೦೦೫ರ ವಿಶ್ವ ಸಂಸ್ಥೆಯ ವರದಿ. ಅಂದರೆ ದೇಶದಲ್ಲಿ ಸುಮಾರು ನಲವತ್ತೈದು ಕೋಟಿ ಮಂದಿಯ ದಿನದ ಸರಾಸರಿ ಆದಾಯ ೧.೨೫ ಡಾಲರ್(ಅಂದಾಜು ಐವತ್ತು ರೂಪಾಯಿ). ಒಂಭತ್ತನೆಯ ಯೋಜನಾ ಆಯೋಗದ ವರದಿಯ ಪ್ರಕಾರ ದೇಶದಲ್ಲಿ ೭.೫ ಮಿಲಿಯನ್ ಜನರು ನಿರುದ್ಯೋಗಿಗಳಾಗಿದ್ದಾರೆ. ಇಷ್ಟು ಮಾನವ ಸಂಪನ್ಮೂಲ ಬಳಕೆಯಿಲ್ಲದೆ ವ್ಯರ್ಥವಾಗುತ್ತಿದೆ.

ನಮ್ಮ ದೇಶದಲ್ಲಿನ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ತೀವ್ರವಾದ ಆರೋಪಗಳನ್ನು ಮಾಡಿದೆ. ನೈಸರ್ಗಿಕವಾಗಿ ಸಿಕ್ಕುವ ಕುಡಿಯಲು ಯೋಗ್ಯವಾದ ನೀರನ್ನು ಸರಿಯಾಗಿ ನಿರ್ವಹಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಎಷ್ಟೋ ಹಳ್ಳಿಗಳಲ್ಲಿ ಒಂದು ಕೊಡ ನೀರಿಗೆ ಮಹಿಳೆಯರು ಕಿಲೋಮೀಟರ್‌ ಗಟ್ಟಲೆ ಓಡಾಡಬೇಕು. ಇನ್ನು ಹಲವು ಹಳ್ಳಿಗಳಲ್ಲಿ ಅಪಾಯಕಾರಿ ಮಟ್ಟ ಮುಟ್ಟಿರುವ ಫ್ಲೋರೈಡ್‌ಯುಕ್ತ ಅಂತರ್ಜಲ ಹಲವರ ಪ್ರಾಣಕ್ಕೆ ಕುತ್ತಾಗಿದೆ. ೨೦೦೩ರಲ್ಲಿ ಅಂದಾಜಿಸಿದಂತೆ ನಮ್ಮ ದೇಶದಲ್ಲಿ ಶೇ ೩೦ರಷ್ಟು ನೀರನ್ನು ಮಾತ್ರ ಪುನರ ಶುದ್ಧೀಕರಣ ಮಾಡಲಾಗುತ್ತಿದೆ. ಉಳಿದ ನೀರು ನದಿಗಳಲ್ಲಿ ಹರಿದು ಸಮುದ್ರ ಸೇರಿ ವ್ಯರ್ಥವಾಗುತ್ತಿದೆ. ೨೦೦೨ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಕೊಟ್ಟ ಅಂದಾಜಿನ ಪ್ರಕಾರ ಭಾರತದಲ್ಲಿ ಸುಮಾರು ಏಳು ಲಕ್ಷ ಮಂದಿ ಅತಿಸಾರ ಬೇಧಿಯಿಂದ ಸತ್ತಿದ್ದಾರೆ. ಇದಕ್ಕೆ ಕಲುಷಿತವಾದ ನೀರು ಕಾರಣ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಚಂದ್ರನ ಮೇಲೆ ಮನುಷ್ಯನನ್ನು ಕಳುಹಿಸಿ ಜಾಗತಿಕ ಶಕ್ತಿಯಾಗಿ ಮೆರೆಯುವ ಉತ್ಸಾಹದಲ್ಲಿರುವ ನಾಯಕರುಗಳಿಗೆ, ಭಾರತದ ಪ್ರಕಾಶಿಸುತ್ತಿದೆ ಎಂದು ಹುಸಿ ಸಂಭ್ರಮದಲ್ಲಿ ಮುಳುಗಿರುವ ಮಾಧ್ಯಮಗಳಿಗೆ ನೆಲದ ಮೇಲಿನ ಈ ಸತ್ಯಗಳ ಬಗ್ಗೆ ಕಾಳಜಿ ಇದ್ದಂತಿಲ್ಲ.

ದೇಶವೊಂದರ ಆರ್ಥಿಕ ಅಭಿವೃದ್ಧಿ ನೇರವಾಗಿ ಅದರ ಶಕ್ತಿ ಸಂಪನ್ಮೂಲಗಳ ಮೇಲೆ ಅವಲಂಬಿಸಿರುತ್ತದೆ. ನಮ್ಮ ದೇಶದಲ್ಲಿ ಕೃಷಿಗೆ, ಕೈಗಾರಿಕೆಗಳಿಗೆ ಅತ್ಯವಶ್ಯಕವಾದದ್ದು ವಿದ್ಯುತ್. ನೀರಾವರಿ ಪಂಪ್‌ ಸೆಟ್‌ಗಳು, ಕೈಗಾರಿಕೆಗಳ ಬೃಹತ್ ಮಶೀನುಗಳು, ನಗರಗಳ ವ್ಯಾಪಾರಿ ಕೇಂದ್ರಗಳು ಎಲ್ಲವೂ ವಿದ್ಯುತ್ತಿನ ತುತ್ತಿನಿಂದಲೇ ಜೀವ ತಳ್ಳುವಂಥವು. ಶೇ ೮ರ ಜಿಡಿಪಿ ಬೆಳವಣಿಗೆಯಲ್ಲಿ ದೇಶ ಮುನ್ನುಗ್ಗುತ್ತಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವವರಿಗೆ ನಮ್ಮ ದೇಶದಲ್ಲಿ ಇನ್ನೂ ಬೇಡಿಕೆಗೆ ತಕ್ಕಷ್ಟು ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿಲ್ಲ ಎಂಬ ಕಟು ಸತ್ಯ ಕಾಣುವುದೇ? ಈಗಾಗಲೇ ನಿರ್ಮಾಣವಾಗಿರುವ ವಿದ್ಯುತ್ ಉತ್ಪಾದನಾ ಕೇಂದ್ರಗಳ ಒಟ್ಟು ಸಾಮರ್ಥ್ಯ ೧ ಲಕ್ಷ ನಲವತ್ತೈದು ಸಾವಿರ ಮೆಗಾ ವ್ಯಾಟುಗಳಿದ್ದರೂ ನಮಗೆ ಆ ಸಾಮರ್ಥ್ಯಕ್ಕೆ ತಕ್ಕ ಹಾಗೆ ಉತ್ಪಾದನೆ ಮಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಇನ್ನೂ ಭವಿಷ್ಯತ್ತಿನ ಬೇಡಿಕೆಯನ್ನು ಹೇಗೆ ನಿಭಾಯಿಸುವುದು ಎಂಬ ಬಗ್ಗೆಯೇ ನಾವು ಸ್ಪಷ್ಟವಾದ ಯೋಜನೆಗಳನ್ನು ಹಾಕಿಕೊಂಡಿಲ್ಲ. ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಬೇಕು ಎಂಬ ಉದ್ದೇಶದಿಂದ ಅಮೇರಿಕಾದೊಂದಿಗೆ ಅಣು ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ಅಣು ವಿದ್ಯುತ್ ಉತ್ಪಾದನೆಯಾಗಲು ಇನ್ನೂ ಕನಿಷ್ಠ ಹತ್ತು ಹನ್ನೆರಡು ವರ್ಷಗಳು ಬೇಕು. ಅದರ ಉತ್ಪಾದನೆ ಪ್ರಾರಂಭವಾಗುವ ವೇಳೆಗೆ ಬೇಡಿಕೆ ಎಷ್ಟು ಎತ್ತರಕ್ಕೆ ಜಿಗಿದಿರುತ್ತದೆ ಊಹಿಸಿಕೊಳ್ಳಿ… ನಮ್ಮ ಹಳ್ಳಿಗಳಲ್ಲಿ ಸಮರ್ಪಕವಾದ ವಿದ್ಯುತ್ ಪೂರೈಕೆ ಮಾಡಲು ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಮಿಲೇನಿಯಂ ನಗರ ಎಂದು ಹೆಸರು ಪಡೆದ ಬೆಂಗಳೂರಿನಂತಹ ನಗರಗಳು ಸಹ ಲೋಡ್ ಶೆಡ್ಡಿಗಿನಿಂದ ಮುಕ್ತಿ ಪಡೆಯುವಲ್ಲಿ ಯಶಸ್ವಿಯಾಗಿಲ್ಲ. ಹೀಗಿರುವಾಗ ಪ್ರಾಥಮಿಕ ಶಿಕ್ಷಣ, ವಿದ್ಯುತ್, ಸಾರಿಗೆ, ಆರೋಗ್ಯ ಸೌಲಭ್ಯಗಳಲ್ಲಿ ತಮ್ಮ ಜನರಿಗೆ ಯಾವ ಕೊರತೆಯನ್ನೂ ಮಾಡದೆ ಅಭಿವೃದ್ಧಿ ಹೊಂದಿ ಬೊಜ್ಜು ಬೆಳೆಸಿಕೊಂಡು ಕೂತಿರುವ ಅಮೇರಿಕಾ, ಬ್ರಿಟನ್ ನಂತಹ ದೇಶಗಳೊಂದಿಗೆ ಅಂತರಿಕ್ಷದಲ್ಲಿನ ಸರ್ಕಸ್ಸಿಗೇಕೆ ಇಷ್ಟು ಪೈಪೋಟಿ?

ನಮ್ಮ ದೇಶದಲ್ಲಿ ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಇಸ್ರೋದ ಉಪಯುಕ್ತತೆಯನ್ನು ಅಲ್ಲಗಳೆಯಲು ಆಗುವುದಿಲ್ಲ. ಅದು ಹಾರಿಸಿಬಿಟ್ಟ ಉಪಗ್ರಹಗಳ ನೆರವಿನಿಂದಲೇ ಮೊಬೈಲ್ ಕ್ರಾಂತಿಯಾಗಿರುವುದು, ದೂರ ದರ್ಶನ, ದೂರ ಸಂಪರ್ಕದಲ್ಲಿ ನಾವಿಷ್ಟು ಪ್ರಗತಿ ಕಾಣುವುದಕ್ಕೆ ಸಾಧ್ಯವಾಗಿರುವುದು. ಅಲ್ಲದೆ ಇಸ್ರೋದ ವಿಜ್ಞಾನಿಗಳ ಅನೇಕ ಆವಿಷ್ಕಾರಗಳು ವಿವಿಧ ಕ್ಷೇತ್ರಗಳಲ್ಲಿ ಕಂಡರಿಯದಷ್ಟು ಸುಧಾರಣೆಗಳನ್ನು ತಂದಿದೆ. ಈ ಹಿನ್ನೆಲೆಯ ಜಾಡಿನಲ್ಲೇ ನಾವು ಚಂದ್ರಯಾನ ಯೋಜನೆಯನ್ನು ಗಮನಿಸಿದರೆ ನಮಗೆ ನಿರಾಶೆ ಕಾಡುತ್ತದೆ. ಚಂದ್ರಯಾನದಿಂದ ದೇಶಕ್ಕೆ ಉಪಯೋಗವಾಗಬಹುದಾದದ್ದು ಏನೂ ಇಲ್ಲ. ಇಸ್ರೋ ಈಗ ಚಂದ್ರನ ಮೇಲೆ ಪ್ರೋಬ್ ಇಳಿಸಿದೆ. ಈ ಕೆಲಸವನ್ನು ಅಮೇರಿಕಾ, ರಷ್ಯಾಗಳು ಅವತ್ತು ವರ್ಷಗಳ ಹಿಂದೆಯೇ ಮಾಡಿದೆ. ಚಂದ್ರನ ಬಗೆಗಿನ ಕೂಲಂಕುಶವಾದ ಅಧ್ಯಯನವನ್ನು ಅಮೇರಿಕಾ, ರಷ್ಯಾ, ಯುರೋಪ್,ಚೀನಾ, ಜಪಾನುಗಳು

ಕೈಗೊಂಡಿವೆ. ಅಮೇರಿಕ ಹಲವು ಬಾರಿ ಮನುಷ್ಯನನ್ನೇ ಚಂದ್ರನ ಅಂಗಳದಲ್ಲಿ ಓಡಾಡಿಸಿದೆ. ಹೀಗಿರುವಾಗ ಅವರು ಐವತ್ತು ಅರವತ್ತು ವರ್ಷಗಳ ಹಿಂದೆ ಮಾಡಿದ್ದನ್ನು ನಾವು ಈಗ ಇಷ್ಟು ಖರ್ಚು ಮಾಡಿಕೊಂಡು ಮಾಡುವುದು ಎಂಥಾ ಬುದ್ಧಿವಂತಿಕೆ? ಚಂದ್ರನ ಮೇಲೆ ಮನುಷ್ಯನನ್ನು ಇಳಿಸುವುದು ಚಂದ್ರಯಾನದ ಮುಂದಿನ ಯೋಜನೆ. ಭೂಮಿಯ ಮೇಲೆ ಪ್ರಜೆಗಳ ಬದುಕನ್ನು ಹಸನಾಗಿ ಮಾಡಲಾಗದ ದೇಶ ಚಂದ್ರನ ಮೇಲೆ ಪ್ರಜೆಯನ್ನಿಳಿಸಿ ಬಂದರೆ ಪಡೆಯುವ ಕಿರೀಟವಾದರೂ ಎಂಥದ್ದು?

ಭಾರತ ಚಂದ್ರಯಾನವನ್ನು ಕೈಗೊಂದಿರುವುದಕ್ಕೆ ಭವಿಷ್ಯದ ಇಂಧನವಾದ ಹೀಲಿಯಂನ್ನು ಚಂದ್ರನಿಂದ ತರುವುದು ಒಂದು ಕಾರಣ ಎನ್ನಲಾಗುತ್ತಿದೆ. ‘ಈ ಭೂಮಿಯಲ್ಲಿನ ಒಟ್ಟೂ ಖನಿಜ ಇಂಧನಕ್ಕಿಂತ ಹತ್ತು ಪಟ್ಟು ಶಕ್ತಿ ಚಂದ್ರನ ನೆಲದಲ್ಲಿದೆ’ ಎಂದು ಅಬ್ದುಲ್ ಕಲಾಂ ಹೇಳಿದ್ದಾರೆ. ಆದರೆ ಇದು ಮತ್ತೊಂದು ಮರೀಚಿಕೆಯಾಗಲಿದೆ ಎನ್ನುತ್ತಾರೆ ವಿಜ್ಞಾನ ಅಂಕಣಕಾರರಾದ ನಾಗೇಶ್ ಹೆಗಡೆ.

“ ಚಂದ್ರಶಿಲೆಯನ್ನು ೮೦೦ ಡಿಗ್ರಿ ಸೆ.ಗೆ ಕಾಯಿಸಿದಾಗ ಮಾತ್ರ ಹೀಲಿಯಂ ೩ ಅನಿಲ ಹೊಮ್ಮುತ್ತದೆ. ಸುಮಾರು ೨೦ ಕೋಟಿ ಟನ್ ಅನಿಲವನ್ನು ಸಂಗ್ರಹಿಸಲು ಸುಮಾರು ೨೦ ಕೋಟಿ ಟನ್ ಶಿಲಾಧೂಳನ್ನು ಕೆಂಪಗೆ ಕಾಯಿಸಬೇಕು.

ಅದನ್ನು ಕಾಸಲೆಂದು ಇಲ್ಲಿಂದ ಕಲ್ಲಿದ್ದಲನ್ನು ಒಯ್ಯಲಂತೂ ಸಾಧ್ಯ ಇಲ್ಲ. ಅದೇನೇ ಮಾಡಿದರೂ ಅಲ್ಲಿ ಸಿಗುವ ಶಕ್ತಿಗಿಂತ ಹೆಚ್ಚಿನ ಶಕ್ತಿಯನ್ನು ಅದಕ್ಕೆಂದು ವ್ಯಯಿಸಬೇಕಾಗುತ್ತದೆ.

ಯಾರಿಗೆ ಹೇಳೋಣ ಇದನ್ನೆಲ್ಲ? ಅದೆಲ್ಲ ಕೈಗೆಟಕುವಷ್ಟರಲ್ಲಿ ಭೂಮಿ ಸುರಕ್ಷಿತವಾಗಿ ಉಳಿದೀತೆ? ಅದಿರಲಿ: ಸೂರ್ಯನಿಂದ ಹೊರಟು ಎಂದೋ ಚಂದ್ರನ ಮೇಲೆ ಬಿದ್ದ ಹಳಸಲು ಶಕ್ತಿಯೇ ಏಕೆ ಬೇಕು? ಗಾಳಿ, ಬಿಸಿಲು, ಸಮುದ್ರದ ಅಲೆಗಳ ಮೂಲಕ ಸೂರ್ಯನಿಂದ ಭೂಮಿಗೆ ನಿತ್ಯವೂ ಸಿಗುವ ತಾಜಾ ಚೈತನ್ಯ ಇಂದಿನ ನಾಯಕರಿಗೇಕೆ ಕಾಣುತ್ತಿಲ್ಲ?”

ಧರ್ಮವನ್ನು ಜನತೆಯ ಅಫೀಮು ಎಂದು ಕರೆದ ಕಾರ್ಲ್ ಮಾರ್ಕ್ಸ್. ಆದರೆ ಇಂದು ವಿಜ್ಞಾನವೂ ಸಹ ಅದೇ ರೀತಿ ಬಳಕೆಯಾಗುತ್ತಿರುವುದು ವಿಪರ್ಯಾಸ. ನಮ್ಮ ದಿನನಿತ್ಯದ ಜಂಜಡಗಳು, ಅವ್ಯವಸ್ಥೆಗಳು, ಅಭದ್ರತೆಗಳು, ಅನನುಕೂಲಗಳು, ಅದಕ್ಷತೆಯನ್ನು ಮರೆಯುವುದಕ್ಕಾಗಿ ಇಂತಹ ಆವಿಷ್ಕಾರಗಳನ್ನು ಚಪ್ಪರಿಸಿಕೊಂಡು ಮೆಲ್ಲುವುದು ನಮಗೆ ರೂಢಿಯಾಗುತ್ತಿದೆ. ಪ್ರತಿನಿತ್ಯ ನಮ್ಮ ದೇಶ ೨೦೨೦ಕ್ಕೆ ಸೂಪರ್ ಪವರ್ ಆಗುತ್ತದೆ ಎಂದು ಓದುತ್ತಾ ಎರಡು ತಾಸಿನಿಂದ ಕಾಣೆಯಾದ ಕರೆಂಟಿಗಾಗಿ ಕೆಇಬಿಯನ್ನು ಶಪಿಸುತ್ತಾ, ಗುಂಡಿಬಿದ್ದ ರಸ್ತೆಯಲ್ಲಿ ಕುಲುಕುತ್ತಾ ಆಫೀಸು ತಲುಪಿಕೊಳ್ಳುವುದು ದಿನಚರಿಯಾಗಿದೆ!

ಈ ಸಂಚಿಕೆಯ ಡಿಬೇಟಿನ ವಿಷಯ ದೇಶಪ್ರೇಮಿ V/s ವಿಶ್ವಮಾನವ. ದೇಶಪ್ರೇಮ ವಿಶ್ವಮಾನವತೆಯನ್ನು ಹೊಂದಲು ಅಡ್ಡಿಯಾಗುತ್ತದೆಯೇ? ದೇಶಪ್ರೇಮವಿಲ್ಲದವ ವಿಶ್ವಮಾನವನಾಗಲು ಸಾಧ್ಯವಿಲ್ಲವೇ?

ದೇಶಪ್ರೇಮವಿಲ್ಲದವನು ಇಡೀ ವಿಶ್ವದ ಬಗ್ಗೆ ಅಭಿಮಾನವನ್ನು ಹೊಂದಲು ಸಾಧ್ಯವಿಲ್ಲ. ದೇಶದಲ್ಲಿನ ವೈವಿಧ್ಯತೆಯನ್ನು ಪ್ರೀತಿಸದವನು ಜಗತ್ತಿನ ಓರೆಕೋರೆಗಳನ್ನು ಸಮದೃಷ್ಠಿಯಿಂದ ಕಾಣಲಾರ ಎಂದು ವಾದಿಸಿದ್ದಾರೆ  ಸುಪ್ರೀತ್.ಕೆ.ಎಸ್

ನಮ್ಮ ಆದರ್ಶಗಳು, ಕಲ್ಪನೆಗಳು ಎಷ್ಟೇ ಉದಾತ್ತವಾದರೂ ನಮ್ಮ ಹೃದಯ ಅಷ್ಟು ವಿಶಾಲವಾಗದೆ, ನಮ್ಮ ಗ್ರಹಿಕೆ ಅಷ್ಟು ಪಕ್ವವಾಗದೆ ಅವು ಯಥಾವತ್ತಾಗಿ ಅನುಷ್ಠಾನಕ್ಕೆ ಬರಲು ಸಾಧ್ಯವಾಗುವುದಿಲ್ಲ. ಸರೋವರದ ನೀರು ಎಷ್ಟೇ ಶುಭ್ರವಾದರೂ, ಎಷ್ಟೇ ಸವಿಯಾಗಿದ್ದರೂ ನಮ್ಮ ಪಾತ್ರೆ ಮಲಿನವಾಗಿದ್ದರೆ ನಮಗೆ ದಕ್ಕುವುದು ಮಲಿನವಾದ ನೀರೇ. ಚರಂಡಿಯಲ್ಲಿ ಗಂಗೆಯೇ ಹರಿದರೂ ಗಬ್ಬುನಾತವೇ ಹೊಮ್ಮುತ್ತದೆ. ನಮ್ಮ ಆದರ್ಶಗಳ ಸಂಗತಿಯೂ ಇಷ್ಟೇ. ಎಷ್ಟೇ ಉತ್ತಮವಾದ, ಸಾರ್ವತ್ರಿಕವಾದ ಚಿಂತನೆಯನ್ನು, ಜೀವನ ಧ್ಯೇಯವನ್ನು ಹೊಂದಿದ್ದರೂ ಸಹ ನಮ್ಮ ವ್ಯಕ್ತಿತ್ವದ ಸಾಮರ್ಥ್ಯಕ್ಕನುಗುಣವಾಗಿ ಅದು ಸಾಕಾರಗೊಳ್ಳುತ್ತದೆ. ಸಮಾಜದ ಸುಲಲಿತ ಆಡಳಿತಕ್ಕಾಗಿ ರೂಪುಗೊಂಡ ಶ್ರೇಣಿಕೃತ ವ್ಯವಸ್ಥೆ ಮನುಷ್ಯನ ಚೇತನವನ್ನೇ ತಿಂದುಹಾಕುವ ಕ್ರೂರ ಜಾತಿ ಪದ್ಧತಿಯಾಗಿ ರೂಪುಗೊಳ್ಳುತ್ತದೆ. ಮನುಷ್ಯನಲ್ಲಿ ಪ್ರೇಮ, ಸಹೋದರತೆಯನ್ನು ಬಿತ್ತಲು ಸ್ಥಾಪಿತವಾದ ಧರ್ಮ ಬಾಂಬುಗಳನ್ನು ಸಿಡಿಸುತ್ತದೆ. ಪ್ರಜ್ಞೆಯನ್ನು ಎತ್ತರೆತ್ತರಕ್ಕೆ ಕೊಂಡಯ್ಯಲು ಸ್ಪೂರ್ತಿಯಾಗಿ ಹುಟ್ಟಿದ ದೇವರುಗಳು ಶೋಷಣೆಯ ಸರಕಾಗುತ್ತವೆ. ಈ ವಾಸ್ತವವನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯತೆ ಹಾಗೂ ದೇಶಪ್ರೇಮದ ಬಗ್ಗೆ ಚಿಂತಿಸಬೇಕಾಗುತ್ತದೆ.

‘ದೇಶಪ್ರೇಮವೆಂದರೆ, ಜಗತ್ತಿನಲ್ಲಿ ತನ್ನ ದೇಶವೊಂದೇ ಶ್ರೇಷ್ಠ ಎಂದು ನಂಬುವುದು’ ಎಂದು ಲೇವಡಿ ಮಾಡುತ್ತಾನೆ ಜಾರ್ಜ್ ಬರ್ನಾಡ್ ಶಾ. ರಾಷ್ಟ್ರ ಎಂಬ ಕಲ್ಪನೆ ವಿವಿಧ ಮನೋಭಾವದ, ವಿವಿಧ ಸಂಸ್ಕೃತಿ, ಸಂಸ್ಕಾರದ ಜನರು ಕಲೆತು ಒಂದಾಗುವುದಕ್ಕೆ ನೆರವಾಗುವ ಬದಲು ಹೊರಗಿನವರೊಡನೆ ಹೋರಾಡಲು ಒಂದಾಗುವ ಗುಂಪಾಗುತ್ತಿದೆ. ರಾಷ್ಟ್ರೀಯತೆಯ ಕಲ್ಪನೆ ನಮ್ಮ ಚಿಂತನೆಯನ್ನು, ಕಾಳಜಿಗಳನ್ನು ಸಂಕುಚಿತಗೊಳಿಸುತ್ತಿದೆ. ನಮ್ಮಲ್ಲಿ ಸ್ವಾರ್ಥವನ್ನು ಬಿತ್ತಿ ಯುದ್ಧಗಳಿಗೆ ಕಾರಣವಾಗುತ್ತಿದೆ ಎಂಬುದು ಹಲವರ ವಾದ. ಇವರ ದೃಷ್ಟಿಯಲ್ಲಿ ರಾಷ್ಟ್ರೀಯತೆ ಮನುಷ್ಯನು ‘ವಿಶ್ವ ಮಾನವ’ನಾಗುವುದಕ್ಕೆ ಅಡ್ಡಿಯಾಗಿ ನಿಂತ ತಡೆಗೋಡೆ. ಅದನ್ನು ಕುಟ್ಟಿ ಪುಡಿ ಮಾಡದಿದ್ದರೆ ಮನುಕುಲದ ಏಳಿಗೆ ಸಾಧ್ಯವಿಲ್ಲ.

ರಾಷ್ಟ್ರೀಯತೆಯ ಮಹತ್ವವೇನು ಎಂದು ಆಲೋಚಿಸುವ ಮೊದಲು ಆ ಕಲ್ಪನೆಯ ಆವಶ್ಯಕತೆ ಹುಟ್ಟಿದ್ದು ಎಲ್ಲಿ ಎಂಬುದನ್ನು ತಿಳಿಯಲು ಪ್ರಯತ್ನಿಸೋಣ. ಮನುಷ್ಯ ಸಂಘ ಜೀವಿ ಎನ್ನುತ್ತೇವೆ. ಆತ ಒಬ್ಬಂಟಿಯಾಗಿ ಬದುಕಲಾರದೆ ತನ್ನದೊಂದು ಪರಿವಾರವನ್ನು ಕಟ್ಟಿಕೊಂಡು ಅಲೆದಾಡುತ್ತಿದ್ದ. ಪ್ರತಿಯೊಬ್ಬರೂ ಆ ಪರಿವಾರದ ಸದಸ್ಯರಾದರು. ತನ್ನ ಏಳಿಗೆಯ ಬಗ್ಗೆ, ತನ್ನ ಹಸಿವಿನ ಬಗ್ಗೆ ಮಾತ್ರ ಆಲೋಚಿಸುತ್ತಿದ್ದವನ ಪರಿಧಿಗೆ ಪರಿವಾರವೂ ಸೇರಿಕೊಂಡಿತು. ಪರಿವಾರದ ಯೋಗಕ್ಷೇಮ, ಸೌಖ್ಯದ ರಕ್ಷಣೆ ಆತನ ಕರ್ತವ್ಯವಾಯಿತು. ಪರಿವಾರವೆಂಬುದು ಆತನ ವ್ಯಕ್ತಿತ್ವದ ವಿಸ್ತರಣೆಯಾಯಿತು. ಪರಿವಾರದ ಏಳಿಗೆಗಾಗಿ ತನ್ನನ್ನು ತಾನು ಬಲಿದಾನ ಮಾಡಲು ಸಿದ್ಧನಾಗುವಷ್ಟು ಗಾಢವಾಗಿ ‘ಪರಿವಾರ ಪ್ರಜ್ಞೆ’ ಆತನಲ್ಲಿ ಮನೆ ಮಾಡಿತು. ಹೀಗೆ ತಾನು, ತನ್ನದು ಎಂಬ ಲೋಕದಲ್ಲಿ ತನ್ನವರು ಎನ್ನುವ ಆಯಾಮವೂ ಸೇರಿಕೊಂಡಿತು. ತನ್ನ ಬೆಳವಣಿಗೆಯಿಂದ ಪರಿವಾರದ ಇತರರಿಗೆ ತೊಂದರೆಯಾಗಬಾರದು ಎಂಬ ನಾಗರೀಕ ಪ್ರಜ್ಞೆ ಬೆಳೆಯಿತು. ಇದರೊಂದಿಗೆ ಸಹಜವಾಗಿ ತನ್ನ ಪರಿವಾರದ ಬಗ್ಗೆ ಪೊಸೆಸಿವ್‌ನೆಸ್ ಕೂಡ ಬೆಳೆಯಿತು. ಇದರಿಂದ ಇತರ ಪರಿವಾರಗಳೊಂದಿಗೆ ವ್ಯವಹರಿಸುವಲ್ಲಿ ಹಲವು ಅಡಚಣೆಗಳನ್ನು ಆತ ಎದುರಿಸಬೇಕಾಯಿತು. ಸದಾ ಅನುಮಾನ, ಅಭದ್ರತೆಯಲ್ಲೇ ನರಳುತ್ತಾ ತನ್ನ ಪರಿವಾರದ ಹಿತ ಕಾಯುವ ಕೆಲಸ ಅವನದಾಯಿತು.

ಕಾಲ ಚಲಿಸಿದಂತೆ ಪರಿವಾರಗಳೆಲ್ಲಾ ಒಟ್ಟಾಗಿ ಕಲೆತು ನಾಗರೀಕತೆಗಳು ಹುಟ್ಟಿಕೊಂಡವು. ಗ್ರಾಮಗಳು ಮೈದಳೆದವು. ಅನೇಕ ಪರಿವಾರಗಳು ಪರಸ್ಪರ ಕೈ ಜೋಡಿಸಿ ಗ್ರಾಮವನ್ನು ಕಟ್ಟಿಕೊಂಡವು. ಪರಿವಾರ ಪ್ರಜ್ಞೆಯ ಪರಿಧಿ ಮತ್ತಷ್ಟು ವಿಸ್ತರಿಸಿ ಗ್ರಾಮವಾಯಿತು. ತಮ್ಮ ಗ್ರಾಮದ ಏಳಿಗೆಗೆ ಪರಿವಾರ ಅಥವಾ ಕುಟುಂಬವನ್ನೂ ಸಹ ತ್ಯಾಗ ಮಾಡಲು ಜನರ ಮನಸ್ಥಿತಿ ರೂಪುಗೊಂಡಿತು. ಗ್ರಾಮಗಳು ಸೇರಿ ಜಿಲ್ಲೆಯಾಗಿ, ಅನೇಕ ಜಿಲ್ಲೆಗಳ ಗುಂಪು ರಾಜ್ಯವಾಗಿ, ಹತ್ತಾರು ರಾಜ್ಯಗಳ ಸಮೂಹ ರಾಷ್ಟ್ರವಾಗಿ ಬೆಳೆಯುವಲ್ಲಿ ಮನುಷ್ಯನ ಕಾಳಜಿ, ಆಲೋಚನೆಯ ಪರಿಧಿ ವಿಸ್ತಾರವಾಗುತ್ತಾ ಬಂದಿರುವುದನ್ನು ಗಮನಿಸಬೇಕು. ಕ್ರಮೇಣ ಹೆಚ್ಚು ಹೆಚ್ಚು ಗಾಳಿಯನ್ನು ತುಂಬಿಕೊಳ್ಳುತ್ತಾ ವಿಶಾಲವಾಗುವ ಬಲೂನಿನ ಹಾಗೆ ಮನುಷ್ಯನ ಹೃದಯ ವಿಶಾಲವಾಗಲು ಇವೆಲ್ಲಾ ಹಂತಗಳು ಆವಶ್ಯಕವಾದವು.

ತನ್ನ ಕುಟುಂಬದ ಒಳಿತು, ಸ್ವಹಿತಕ್ಕಿಂತ ಮಿಗಿಲು ಎಂದೆನಿಸಿದಾಗಲಷ್ಟೇ ವ್ಯಕ್ತಿಯೊಬ್ಬ ಕುಟುಂಬದ ಪ್ರತಿಯೊಬ್ಬರ ಬಗೆಗೂ ಆದರವನ್ನು, ಸಮಭಾವವನ್ನು, ವಿಶ್ವಾಸವನ್ನು ತಾಳಲು ಸಾಧ್ಯ.    ಹಾಗೆಯೇ ಗ್ರಾಮವು ತನ್ನ ಕುಟುಂಬಕ್ಕಿಂತ ಮುಖ್ಯವಾದದ್ದು ಎಂದು ಭಾವಿಸಿದಾಗ ಕುಟುಂಬಗಳ ನಡುವೆ ಹಂಚಿಕೊಂಡು ಬಾಳುವ, ಹೊಂದಿಕೊಂಡು ನಡೆಯುವ ಪ್ರಬುದ್ಧತೆ ಬರುತ್ತದೆ. ಹೀಗೆ ಮುನ್ನಡೆದು ತಮ್ಮೆಲ್ಲಾ ವಿಂಗಡಣೆಗಳಿಗಿಂತ ದೇಶವೆಂಬುದು ದೊಡ್ಡದು ಎನ್ನುವುದು ಮನಸ್ಸಿನಲ್ಲಿ ಮೂಡಿದಾಗ ಜನರು ತಮ್ಮೆಲ್ಲಾ ಪ್ರತ್ಯೇಕತೆ, ಅಸಮಾನತೆಗಳನ್ನು ಮರೆತು ಒಂದಾಗುತ್ತಾರೆ.ಈ ಎಲ್ಲಾ ಮೆಟ್ಟಿಲುಗಳನ್ನು ಹಂತ ಹಂತವಾಗಿ ಏರುತ್ತಾ ಮನುಷ್ಯ ರಾಷ್ಟ್ರದ ಕಲ್ಪನೆಯನ್ನು ಆರಾಧಿಸುವ ಹಂತವನ್ನು ತಲುಪುತ್ತಾನೆ. ಇವುಗಳೆಲ್ಲಾ ಒಂದೇ ಏಣಿಯ ಮೆಟ್ಟಿಲುಗಳು. ಒಂದಕ್ಕೊಂದು ಪೂರಕವೇ ಹೊರತು ವಿರುದ್ಧವಲ್ಲ. ಮೊದಲ ಮೆಟ್ಟಿಲು ಎರಡನೆಯ ಮೆಟ್ಟಿಲನ್ನು ಹತ್ತುವುದಕ್ಕೆ ಸಹಕಾರಿಯೇ ಹೊರತು ಎರಡನೆಯದನ್ನು ಹತ್ತದಂತೆ ತಡೆಯುವ ಕಂಟಕವಲ್ಲ. ಹೀಗಾಗಿ ಏಣಿಯ ಅತಿ ಎತ್ತರದ ಮೆಟ್ಟಿಲ ಮೇಲೆ ನಿಂತು ನಮಗೆ ಬೇಕಿರುವುದು ಇದೊಂದೇ, ಇದೇ ಶ್ರೇಷ್ಠವಾದ, ಅತ್ಯುಚ್ಛವಾದದ್ದು ಉಳಿದವೆಲ್ಲಾ ಅನುಪಯುಕ್ತ, ಕೀಳು ಎಂದು ಹೇಳುವುದು ಮೂರ್ಖತನವಲ್ಲದೆ ಮತ್ತೇನು?

ಒಂದೊಂದೇ ಮೆಟ್ಟಿಲುಗಳನ್ನು ಏರುತ್ತಾ ಅತ್ಯುಚ್ಛ ಎತ್ತರವನ್ನು ತಲುಪಿಕೊಳ್ಳಬೇಕು. ಅದು ಸಹಜವಾದ ಬೆಳವಣಿಗೆ. ಮೇಲೆ ಏರುವ ಪ್ರಕ್ರಿಯೆಯಲ್ಲಿ ಒಂದೊಂದೇ ಮೆಟ್ಟಿಲುಗಳನ್ನು ಬಿಟ್ಟು ನಡೆಯಬೇಕಾಗುತ್ತದೆ. ರಾಜ್ಯದ ಏಳಿಗೆಗಾಗಿ ಆಲೋಚಿಸುವಾಗ ತನ್ನ ಗ್ರಾಮದ ನೆನಪು ಮಸುಕಾಗುತ್ತದೆ. ದೇಶದ ಬಗ್ಗೆ ಚಿಂತಿಸುವಾಗ ರಾಜ್ಯಗಳ ಐಡೆಂಟಿಟಿ ಅಳಿಸಿಹೋಗುತ್ತದೆ. ಆದರೆ ನಿಂತ ಮೆಟ್ಟಿಲ ಮೇಲಿನ ಮೋಹದಿಂದ ಅಲ್ಲೇ ನಿಂತು ಇದೇ ಶ್ರೇಷ್ಠ. ನಾನು ಇನ್ನು ಮುಂದೆ ಏರುವುದಿಲ್ಲ. ನನಗಿದೇ ಸಾಕು ಎಂದು ಕೂರುವುದು ನಿಜವಾದ ಸಂಕುಚಿತತೆ. ಸಂಕುಚಿತತೆಗೆ ಏಣಿಯ ಮೆಟ್ಟಿಲು ಕಾರಣವಲ್ಲ, ಅದರ ಮೇಲಿನ ಮೋಹದಿಂದ ಅದನ್ನು ಕಚ್ಚಿಕೊಂಡು ನಿಂತವನ ದೌರ್ಬಲ್ಯ ಕಾರಣ.

ಹೀಗಾಗಿ ರಾಷ್ಟ್ರೀಯತೆ ಎಂದಿಗೂ ಮನುಷ್ಯನ ಚೇತನವನ್ನು ಬಂಧಿಸುವ ಸೆರೆಮನೆಯಾಗದು. ಆತ ವಿಶ್ವಮಾನವನಾಗಲಿಕ್ಕೆ ದೇಶಪ್ರೇಮ ಎಂದಿಗೂ ಮಾರಕವಾಗದು, ಬದಲಿಗೆ ಸಹಾಯಕವಾಗುವುದು.  ಆದರೆ ದೇಶಪ್ರೇಮವನ್ನು ಕೀಳಾಗಿ ಕಾಣುವವ ಎಂದಿಗೂ ವಿಶ್ವಮಾನವನಾಗಲಾರ!

ಈ ಸಂಚಿಕೆಯ ಡಿಬೇಟಿನ ವಿಷಯ ದೇಶಪ್ರೇಮಿ V/s ವಿಶ್ವಮಾನವ. ದೇಶಪ್ರೇಮ ವಿಶ್ವಮಾನವತೆಯನ್ನು ಹೊಂದಲು ಅಡ್ಡಿಯಾಗುತ್ತದೆಯೇ? ದೇಶಪ್ರೇಮವಿಲ್ಲದವ ವಿಶ್ವಮಾನವನಾಗಲು ಸಾಧ್ಯವಿಲ್ಲವೇ?

ದೇಶಪ್ರೇಮವೆಂಬುದು ಯುದ್ಧಗಳ ತಾಯಿ. ದೇಶಪ್ರೇಮದಿಂದ ವಿಶ್ವ ಭ್ರಾತೃತ್ವ ಅಸಾಧ್ಯವಾದ ಸಂಗತಿಯಾಗುತ್ತದೆ ಎಂದು ವಾದಿಸಿದ್ದಾರೆ ಚಂದ್ರಶೇಖರ್ ಪ್ರಸಾದ್.

ಇಬ್ಬರು ಮಕ್ಕಳು ಆಟವಾಡಲು ಅಂಗಳದಲ್ಲಿ ಕಲೆಯುತ್ತಾರೆ. ಅಲ್ಲೇ ಬಿದ್ದಿದ್ದ ಹತ್ತಾರು ಕಲ್ಲುಗಳನ್ನು ಸಮಾನವಾಗಿ ಹಂಚಿಕೊಳ್ಳುತ್ತಾರೆ. ಆಟದ ಓಘದಲ್ಲಿ ತಮ್ಮ ತಮ್ಮ ಕಲ್ಲುಗಳ ಮೇಲೆ ಹೆಮ್ಮೆ ಬೆಳೆಯುತ್ತದೆ. ತನ್ನದೇ ಕಲ್ಲುಗಳು ಶ್ರೇಷ್ಠ ಎಂದು ಇಬ್ಬರೂ ವಾದ ಮಾಡಲು ಶುರುಮಾಡುತ್ತಾರೆ. ಮೊದ ಮೊದಲು ಬಾಯಿಮಾತಿನಲ್ಲಿ ಶುರುವಾಗುವ ಜಗಳ ಕೈಕೈ ಮಿಲಾಯಿಸುವ ಹಂತವನ್ನು ಮುಟ್ಟುತ್ತದೆ. ಇಬ್ಬರೂ ಒಬ್ಬರನ್ನೊಬ್ಬರು ದ್ವೇಷಿಸಲು ಶುರು ಮಾಡುತ್ತಾರೆ. ಒಬ್ಬ ಮತ್ತೊಬ್ಬನ ಕಲ್ಲುಗಳನ್ನು ನಾಶ ಮಾಡಲಿಕ್ಕೆ ಯೋಜನೆಗಳನ್ನು ಹಾಕುತ್ತಾನೆ. ತನ್ನ ಕಲ್ಲುಗಳನ್ನು ರಕ್ಷಿಸಿಟ್ಟುಕೊಳ್ಳಲು ಸುಭದ್ರವಾದ ಬೇಲಿಯನ್ನು ಕಟ್ಟಿಕೊಳ್ಳುತ್ತಾನೆ. ತಾನು ಇಲ್ಲದಿರುವ ಸಮಯದಲ್ಲಿ ಕಲ್ಲುಗಳಿಗೆ ಅಪಾಯವಾಗಬಾರದೆಂದು ಅವನ್ನು ಕಾಯಲು ಆಳುಗಳನ್ನು ನೇಮಿಸುತ್ತಾನೆ. ತಮ್ಮ ತಮ್ಮ ಕಲ್ಲುಗಳನ್ನು ಕಾಯುವುದರಲ್ಲಿ ಪ್ರಾಣ ಬಿಟ್ಟವರನ್ನು ಮಹಾತ್ಮರು ಎಂದು ಆರಾಧಿಸುತ್ತಾರೆ.ಇಬ್ಬರೂ ವರ್ಷದ ಮುನ್ನೂರ ಅರವತ್ನಾಲ್ಕು ದಿನವೂ ಕತ್ತಿ ಮಸೆಯುತ್ತಾ ಕುಳಿತಿದ್ದು ಒಂದು ದಿನ ದ್ವೇಷ ಮರೆತು ಒಟ್ಟಾಗಿ ಕಲೆತು ಆಟವಾಡುವ ಒಪ್ಪಂದ ಮಾಡಿಕೊಳ್ಳುತ್ತಾರೆ.

ಹೇಗಿದೆ, ಕಲ್ಪನೆ? ಹಾಸ್ಯಾಸ್ಪದ ಎನಿಸುತ್ತದೆಯಲ್ಲವೇ? ಭೂಮಿಯ ಮೇಲೆ ಬುದ್ಧಿವಂತ ಜೀವಿ ಎನ್ನಿಸಿಕೊಂಡಿರುವ ಮನುಷ್ಯರು ಘನಗಂಭೀರವಾಗಿ ಮಾಡುತ್ತಿರುವುದು ಇದೇ ಕೆಲಸವನ್ನೇ. ಇರುವ ಒಂದೇ ಭೂಮಿಯ ಮೇಲೆ ಇದು ತನ್ನದು, ಇದು ನಿನ್ನದು ಎಂದು ಗೀರುಗಳನ್ನೆಳೆದು ಪಾಲು ಮಾಡಿಕೊಂಡು, ತನ್ನದನ್ನು ರಕ್ಷಿಸಿಕೊಳ್ಳುವ ಇತರರದನ್ನು ಹಾಳು ಮಾಡುವ ಸಂಭ್ರಮದಲ್ಲಿ ಮುಳುಗಿ ಏಳುತ್ತಿದ್ದಾನೆ. ಈತನ ಈ ‘ಅತಿ ಬುದ್ಧಿವಂತಿಕೆ’ಯಿಂದಲೇ ಜಗತ್ತು ಎರಡು ಮಹಾಯುದ್ಧಗಳನ್ನು ಕಂಡಿದೆ. ಅಸಂಖ್ಯಾತ ಕಾಳಗಗಳಿಗೆ ಸಾಕ್ಷಿಯಾಗಿದೆ. ತನ್ನ ಹೆಮ್ಮೆ, ಸ್ವಾರ್ಥ, ಆದರ್ಶ, ಸಿದ್ಧಾಂತ, ತತ್ವದ ಜಾತ್ರೆಯಲ್ಲಿ ಮೈಮರೆತವನಿಗೆ ಇರುವ ಇದೊಂದೇ ಭೂಮಿ ಕೇವಲ ನಮಗೆ ಮಾತ್ರವಲ್ಲ, ಇಡೀ ಜೀವ ಸಂಕುಲಕ್ಕೆ ಸೇರಿದ್ದು ಎಂಬುದು ಮರೆತುಹೋಗಿದೆ.
ಭೂಮಿಯ ಮೇಲೆ ಯಾರ ಒಡೆತನವೂ ಇರಬಾರದು ಎಂಬ ತತ್ವ ಬಹಳ ಮುಖ್ಯವಾದದ್ದು. ಒಡೆತನದ ಪ್ರಶ್ನೆ ಬಂದಾಗಲೇ ಜಗಳಗಳು, ಬಲಾ ಬಲದ ಪ್ರದರ್ಶನಗಳು, ಅಸಂಬದ್ಧ ಮೇಲಾಟಗಳು ನಡೆಯುವುದು. ಸ್ವಚ್ಛಂದವಾಗಿ ಓಡಾಡಿಕೊಂಡು ಸಿಕ್ಕಲ್ಲಿ ಸಿಕ್ಕಷ್ಟನ್ನು ತಿಂದು ಬದುಕಿ, ಬಾಳಿ, ನಲಿದು ಸವೆದು ಹೋಗುವ ಪ್ರಾಣಿಗಳಲ್ಲಿಯೂ ಸ್ವಲ್ಪ ಅಂಶದ ‘ಒಡೆತನದ’ ವರ್ತನೆ ಕಂಡುಬರುತ್ತದೆ. ಪ್ರಾಣಿಯೂ ಸಹ ತನ್ನ ಆಹಾರದ ಭದ್ರತೆಗಾಗಿ, ತನ್ನ ಗುಂಪಿನ ಹಿತಕ್ಕಾಗಿ ಸೀಮೆಗಳನ್ನು ರೂಪಿಸಿಕೊಂಡಿರುತ್ತದೆ. ಈ ಸೀಮೆಯನ್ನು ಮೀರಿ ಬರುವ ಪ್ರಾಣಿಯೊಂದಿಗೆ ಇವು ಹೋರಾಡುತ್ತವೆ. ತಮ್ಮೊಳಕ್ಕೆ ಹೊರಗಿನದನ್ನು ಸೇರಿಸಿಕೊಳ್ಳಲು ಇವು ಇಚ್ಚಿಸುವುದಿಲ್ಲ. ಇದೆಲ್ಲಾ ನಡೆಯುವುದು ತನ್ನ ಆಹಾರಕ್ಕೆ ಎಲ್ಲಿ ಕುತ್ತು ಬರುತ್ತದೆಯೋ ಎಂಬ ಅಭದ್ರತೆಯಲ್ಲಿ. ವಿವೇಚನಾಶಕ್ತಿಯಿಲ್ಲದ ಪ್ರಾಣಿಗಳು ವರ್ತಿಸಿದ ಹಾಗೆಯೇ ಮನುಷ್ಯನೂ ವರ್ತಿಸುವುದೆಂದರೆ? ಒಂದು ದೇಶದ ಪ್ರಜೆ ಮತ್ತೊಂದು ದೇಶಕ್ಕೆ ಹೋಗಬೇಕೆಂದರೆ ಅಲ್ಲಿನ ಸರಕಾರದ ಅಂದರೆ ಅಲ್ಲಿನ ಜನಗಳ ಅನುಮತಿಯನ್ನು ಪಡೆಯಬೇಕಾಗುತ್ತದೆ ಎಂದರೆ ಮನುಷ್ಯರಾಗಿ ನಮ್ಮದು ಅದೆಂಥಾ ಹಿರಿಮೆ?

ಮನುಷ್ಯ ಸರ್ವಸ್ವತಂತ್ರವಾಗಿ ಬಾಳಿ ಬದುಕಬೇಕು. ಆತನ ಎಲ್ಲಾ ಆವಶ್ಯಕತೆಗಳನ್ನು ಪೂರೈಸುವುದಕ್ಕೆ ನಿಸರ್ಗ ಸಮರ್ಥವಾಗಿದೆ. ಈ ಸೃಷ್ಟಿಯಲ್ಲಿನ ಪ್ರತಿಯೊಂದು ಸಂಪತ್ತಿನ ಮೇಲೂ ಎಲ್ಲರ ಹಕ್ಕು ಇದೆ. ತನ್ನ ಜೀವಿತಕ್ಕೆ ಎಷ್ಟು ಬೇಕೋ ಅಷ್ಟು ನಿಸರ್ಗ ಸಂಪತ್ತನ್ನು ಬಳಸಿಕೊಂಡು ಉಳಿದದ್ದನ್ನು ಹಾಳು ಮಾಡದೆ ಬದುಕಬೇಕಾದ ಹೊಣೆಗಾರಿಕೆ ಮನುಷ್ಯನ ಮೇಲಿದೆ. ಆದರೆ ದೇಶಗಳ ಗಡಿಯನ್ನು ಕೊರೆದುಕೊಂಡು ಕೂತಿರುವ ನಾವು ಮಾಡುತ್ತಿರುವುದಾದರೂ ಏನನ್ನು? ನಿಸರ್ಗದ ಸಂಪತ್ತಿನ ಮೇಲೆ ಯಜಮಾನಿಕೆಯನ್ನು ಸ್ಥಾಪಿಸಿದ್ದೇವೆ. ತಮ್ಮ ತಾತಂದಿರು, ಮುತ್ತಾತಂದಿರು ಅಲ್ಲಿ ವಾಸವಾಗಿದ್ದರು ಎಂಬ ಕಾರಣಕ್ಕೆ ಚಿನ್ನದ ಗಣಿಗಳು, ಪೆಟ್ರೋಲಿನ ಬಾವಿಗಳು ಒಂದು ದೇಶದವರ ಒಡೆತನಕ್ಕೆ ಬರುತ್ತವೆ. ಫಲವತ್ತಾದ ಭೂಮಿ, ಸಮೃದ್ಧವಾದ ಕಾಡುಗಳ ಮೇಲೆ ಇನ್ಯಾವುದೋ ದೇಶ ತನ್ನ ಮೊಹರನ್ನು ಒತ್ತುತ್ತದೆ. ಒಂದು ದೇಶದಲ್ಲಿನ ಜನರು ಕನಿಷ್ಠ ಆವಶ್ಯಕತೆಗಳ ಪೂರೈಕೆಯಾಗದೆ ಹತಾಶೆಯಲ್ಲಿ ನರಳಿ ಪ್ರಾಣಬಿಡುತ್ತಿದ್ದರೆ ಮತ್ತೊಂದು ದೇಶದಲ್ಲಿ ಅತಿಯಾಗಿ ತಿಂದು  ವಿವಿಧ ರೋಗಗಳಿಗೆ ತುತ್ತಾಗಿ ಜನರು ಸಾಯುತ್ತಿದ್ದಾರೆ. ಎಲ್ಲರ ಆವಶ್ಯಕತೆಯನ್ನು ಪೂರೈಸುವುದಕ್ಕೆ ಬಳಕೆಯಾಗಬೇಕಾದ ಪ್ರಾಕೃತಿಕ ಸಂಪತ್ತಿನ ಪಾಲು ಪಡೆಯಲು ಅವುಗಳ ಮೇಲೆ ಒಡೆತನವನ್ನು ಸ್ಥಾಪಿಸಿಕೊಂಡು ಕುಳಿತವರ ಮರ್ಜಿಯನ್ನು ಕಾಯುತ್ತಾ ಕೂರಬೇಕಾಗುತ್ತೆ.

ಮನುಷ್ಯ ತನ್ನ ಬದುಕನ್ನು ಹೆಚ್ಚು ಸಂಘಟಿತವಾಗಿಸಿಕೊಳ್ಳಲು ಕುಟುಂಬ, ಗ್ರಾಮ, ರಾಜ್ಯ, ದೇಶಗಳೆಂಬ ಯುನಿಟುಗಳನ್ನು ಕಟ್ಟಿಕೊಂಡ. ಇವೆಲ್ಲಾ ಕೇವಲ ಆತನ ಸೃಷ್ಟಿ. ಆತ ಒಪ್ಪಿಕೊಂಡ ವ್ಯವಸ್ಥೆ. ನಿಜವಾಗಿ ಅಸ್ತಿತ್ವದಲ್ಲಿರುವುದು, ಬದುಕಿರುವುದು ಮನುಷ್ಯ. ಹಸಿವಾಗುವುದು ಮನುಷ್ಯನಿಗೆ, ಸಮಾಜಕ್ಕಲ್ಲ. ನೀರು ಕುಡಿಯುವವನು ಮನುಷ್ಯ ‘ಭಾರತ’ ಎಂಬ ದೇಶವಲ್ಲ. ಜ್ಞಾನ ಬೇಕಿರುವುದು ಮನುಷ್ಯನಿಗೆ, ‘ಆಫ್ರಿಕಾ’ ಎಂಬ ಭೂಭಾಗಕ್ಕಲ್ಲ. ಆಡಳಿತದ, ನಿರ್ವಹಣೆಯ ಅನುಕೂಲಕ್ಕಾಗಿ ಮಾಡಿಕೊಂಡ ಏರ್ಪಾಟುಗಳಿಂದಾಗಿ ನಮ್ಮ ಮೂಲಭೂತ ಘಟಕವಾದ ‘ವ್ಯಕ್ತಿ’ಯೇ ಕಳೆದುಹೋಗುತ್ತಿದ್ದಾನೆ. ಒಂದು ಭೂಪ್ರದೇಶದ ಹೆಸರಿಗೆ ಮತ್ತಷ್ಟು ಭೂಪ್ರದೇಶವನ್ನು ಸೇರಿಸುವ ಭ್ರಮಯೆಲ್ಲಿ, ಒಂದು ಹೆಸರಿನ ಭೂಪ್ರದೇಶವನ್ನು ಕಾಯ್ದುಕೊಳ್ಳುವ ನೆಪದಲ್ಲಿ ಲಕ್ಷಾಂತರ ಮನುಷ್ಯರ ಪ್ರಾಣ ಆಹುತಿಯಾಗುತ್ತಿದೆ. ಧರ್ಮಗಳ, ಸಿದ್ಧಾಂತಗಳ  ರಕ್ಷಣೆಯಲ್ಲಿ    ಹೆಸರಿನಲ್ಲಿ ಮನುಷ್ಯರು ಬದುಕನ್ನು ಕೊನೆಗಾಣಿಸಿಕೊಳ್ಳುತ್ತಿದ್ದಾರೆ. ದೇಶ, ಗಡಿ, ಪಹರೆ, ಸೈನ್ಯ ಎಂದೆಲ್ಲಾ ನಾವು ಮಾಡಿಕೊಂಡದ್ದು ಪ್ರತಿಯೊಬ್ಬ ವ್ಯಕ್ತಿಯೂ ಸ್ವಚ್ಛಂದವಾಗಿ, ಪೂರ್ಣವಾಗಿ ತನ್ನ ಬದುಕನ್ನು ಬದುಕಲು. ಆದರೆ ಈಗ ನಡೆಯುತ್ತಿರುವುದೇನು? ದೇಶ ದೇಶಗಳ ನಡುವೆ ನಡೆಯುತ್ತಿರುವ ಯುದ್ಧ, ನೆಲೆಯಾಗುತ್ತಿರುವ ವೈಮನಸ್ಸುಗಳಿಗೇನಾದರೂ ಅರ್ಥವಿದೆಯೇ?


‘ದೇಶಪ್ರೇಮವೆಂಬ ಭಾವನೆಯಿಂದಾಗಿ ಯುದ್ಧಗಳು ಹುಟ್ಟುವುದು’ ಎಂಬ ಹೇಳಿಕೆಯ ಸತ್ಯಾಸತ್ಯತೆಯನ್ನು ಪರೀಕ್ಷಿಸಲು  ಜಾಗತಿಕ ಇತಿಹಾಸದಲ್ಲಿನ ಸಾಲು ಸಾಲು ಕಾಳಗಗಳ, ಮಹಾ ಸಮರಗಳ ವಿವರಣೆಯನ್ನು ತಿರುವಿ ಹಾಕಿದರೆ ಸಾಕು. ಬೇಲಿಗಳಿಲ್ಲದ ಇಡೀ ಭೂಮಿಯನ್ನೇ ಒಂದು ದೇಶವಾಗಿ ಕಾಣಲು ದೇಶ ಪ್ರೇಮ ಅವಕಾಶ ಮಾಡಿಕೊಡುವುದಿಲ್ಲ. ದೇಶಪ್ರೇಮದ ಅಸ್ತಿತ್ವವಿರುವುದು ಸ್ಪರ್ಧೆಯಲ್ಲಿ, ಇತರ ದೇಶಗಳೊಂದಿಗಿನ ತುರಿಸಿನಲ್ಲಿ. ಹೀಗಾಗಿ ದೇಶಪ್ರೇಮವೆಂಬ ಉನ್ಮಾದ ಮನುಷ್ಯನ ಮನಸ್ಸಿನಿಂದ ಮರೆಯಾಗುವವರೆಗೂ ರಕ್ತಪಾತ, ಕೊಲೆ, ಯುದ್ಧಗಳಿಗೆ ಭೂಮಿಯ ಮೇಲೆ ಕೊರತೆಯಿರುವುದಿಲ್ಲ.


ಈ ಸಂಚಿಕೆಯ ಚರ್ಚೆಯ ವಸ್ತು, ಇಪ್ಪತೊಂದನೆಯ ಶತಮಾನದ ಮಾಹಿತಿಕ್ರಾಂತಿಯ ಯುಗದಲ್ಲಿ ಶಿಕ್ಷಕರು, ಗುರು-ಶಿಷ್ಯ ಸಂಸ್ಕೃತಿ ಅಪ್ರಸ್ತುತವಾಗುತ್ತಿದೆಯೇ? ಇಲ್ಲ, ಯಾವ ಕಾಲದಲ್ಲೂ ಗುರುವಿನ ಸ್ಥಾನವನ್ನು ಯಾವುದರಿಂದಲೂ ತುಂಬಲುಸ ಸಾಧ್ಯವಿಲ್ಲ ಎಂದು ವಾದಿಸಿದ್ದಾರೆ ಚೇತನ್ ಸಾಗರ್.

ವಿದ್ಯೆಯೆಂಬುದು ಒಬ್ಬ ಕೊಟ್ಟು ಇನ್ನೊಬ್ಬ ಪಡೆದುಕೊಂಡು ಕೂಡಿಡಬಹುದಾದ ವಸ್ತುವಲ್ಲ. ಅದು ಬಿಕರಿಯಾಗುವ ಮಾಲೂ ಅಲ್ಲ. ಹಣವಿದ್ದವನು, ಅಧಿಕಾರವಿದ್ದವನು, ವಶೀಲಿ ಮಾಡಲು ಸಾಧ್ಯವಿದ್ದವನು ಸಂಪಾದಿಸಬಹುದಾದ ಸಂಪತ್ತಲ್ಲ. ಬಲ ಪ್ರಯೋಗದಿಂದ ಪಡೆಯಬಹುದಾದ ಸವಲತ್ತೂ ಅಲ್ಲ. ಅಸಲಿಗೆ ಅದು ವಶಪಡಿಸಿಕೊಂಡು ಮೆರೆಯಬಹುದಾದ ಐಶ್ವರ್ಯವೂ ಅಲ್ಲ. ವಿದ್ಯೆಯೆಂಬುದು ಶುದ್ಧವಾಗುವ ಪ್ರಕ್ರಿಯೆ. ಕುಲುಮೆಯ ಕಾವಿನಲ್ಲಿ ನಲುಗಿ ಚಿನ್ನ ಹೊಳೆಪು ಪಡೆಯುವಂತೆ ಮನುಷ್ಯ ತನ್ನ ಪ್ರಜ್ಞೆಗೆ, ತಿಳಿವಿಗೆ ಹೊಳಪು ಪಡೆದುಕೊಳ್ಳುವ ಕ್ರಿಯೆ ವಿದ್ಯಾಭ್ಯಾಸ. ಹೀಗೆ ಚಿನ್ನಕ್ಕೆ ಪುಟಕೊಡುವ ಮಾಂತ್ರಿಕನೇ ಶಿಕ್ಷಕ. ಕಲ್ಲು ಮಣ್ಣುಗಳ ಅದಿರನ್ನು ಸಂಸ್ಕರಿಸಿ ಚಿನ್ನವನ್ನು ಹೊರತೆಗೆಯುವ ಜಾದೂಗಾರನೇ ಗುರು ಎನ್ನಿಸಿಕೊಳ್ಳುತ್ತಾನೆ.

teacher2.gif

ಇಪ್ಪತೊಂದನೆಯ ಶತಮಾನವನ್ನು ಮಾಹಿತಿ ಸ್ಫೋಟದ ಶತಮಾನ ಎಂದೇ ಕರೆಯಲಾಗುತ್ತದೆ. ಒಂದು ಬಾಂಬ್ ಸ್ಫೋಟದಲ್ಲಿ ಉಂಟಾಗುವ ಒತ್ತಡ ಹಾಗೂ ರಭಸದೊಂದಿಗೆ ಮಾಹಿತಿಯು ಲಭ್ಯವಾಗುತ್ತಿರುವುದು ನಿಜಕ್ಕೂ ಮಾನವ ಕುಲ ಸಾಕ್ಷಿಯಾದ ಹಲವು ಅದ್ಭುತಗಳಲ್ಲಿ ಒಂದು. ಯಾವ ವಿಷಯದ ಬಗ್ಗೆ ಏನು ತಿಳಿಯಬೇಕಾದರೂ ಕಂಪ್ಯೂಟರಿನ ಎದುರು ಪದ್ಮಾಸನ ಹಾಕಿ ಕುಳಿತರೆ ಸಾಕು. ಜಗತ್ತಿನ ಮೂಲೆ ಮೂಲೆಯಲ್ಲಿನ ಮಾಹಿತಿಯನ್ನು ಅಂತರ್ಜಾಲವೆಂಬ ಮಾಟಗಾತಿ ನಮ್ಮೆದುರು ತಂದು ಸುರಿಯುತ್ತಾಳೆ. ಯಾರ ಹಂಗೂ ಇಲ್ಲದೆ, ಯಾರ ಮರ್ಜಿಗೂ ತಲೆಬಾಗದೆ ನಮಗೆ ಬೇಕಾದ ಮಾಹಿತಿಯನ್ನೆಲ್ಲಾ ಪಡೆಯುವ ಸೌಲಭ್ಯವನ್ನು ಮಾಹಿತಿ ಕ್ರಾಂತಿಯು ಒದಗಿಸಿಕೊಟ್ಟಿದೆ. ಒಂದು ತುದಿಬೆರಳ ಚಿಟುಕಿನಲ್ಲಿ ಬ್ರಹ್ಮಾಂಡದ ಜ್ಞಾನವೆಲ್ಲಾ ಕಣ್ಣೆದುರು ತೆರೆದುಕೊಳ್ಳುವಾಗ ಹಿಂದಿನಿಂದ ನಡೆದುಕೊಂಡು ಬಂದಿರುವ ಗುರು ಹಾಗೂ ಶಿಷ್ಯ ಸಂಸ್ಕೃತಿ ತನ್ನ ಪ್ರಸ್ತುತತೆಯನ್ನು ಉಳಿಸಿಕೊಳ್ಳುತ್ತದೆಯೇ ಎಂಬುದು ಪ್ರಶ್ನೆ. ಮಾಹಿತಿಯ ಅಲೆಯ ಮೇಲೆ ತೇಲುತ್ತಿರುವವರಿಗೆ ‘ಗುರು’ ಎಂಬ ಸ್ಥಾನವೇ ಸವಕಲು ನಾಣ್ಯವಾಗಿದೆ ಎಂಬ ಉಡಾಫೆಯಿದೆ. ಗುರುವಿನ ಹಂಗಿಲ್ಲದೆ ಏನನ್ನು ಬೇಕಾದರೂ ಕಲಿಯಬಹುದು ಎಂಬ ಆತ್ಮವಿಶ್ವಾಸ ಕಾಣುತ್ತಿದೆ.

ಕುವೆಂಪು ತುಂಬಾ ಹಿಂದೆ ಕವನವೊಂದರಲ್ಲಿ ಗುರು ಹಾಗೂ ಗುರಿಯ ಮಹತ್ವವನ್ನು ಹೇಳಿದ್ದರು. ಹಿಂದೆ ಗುರು ಹಾಗೂ ಮುಂದೆ ಗುರಿ ಇರುವ ಮಂದಿ ಧೀರರ ಹಾಗೆ ಮುನ್ನುಗ್ಗುತ್ತಾರೆ ಎಂದು. ಧೀರರಿಗೆ ಮುಂದೆ ಗುರಿಯೂ ಇರಬೇಕು, ಹಿಂದೆ ಮಾರ್ಗದರ್ಶನ ಮಾಡುವ ಗುರುವೂ ಇರಲೇಬೇಕು. ಒಂದು ಪಾತ್ರೆಯಲ್ಲಿ ತರಕಾರಿ, ನೀರು, ಮಸಾಲೆ, ಉಪ್ಪು, ಕೊತ್ತಂಬರಿ ಹಾಕಿದ ತಕ್ಷಣ ಅದು ಸಾಂಬಾರು ಆಗಿಬಿಡುವುದಿಲ್ಲ. ಅವೆಲ್ಲವನ್ನೂ ಒಂದೇ ಹದದಲ್ಲಿ ಬೇಯಿಸುವ ಬೆಂಕಿ ಬೇಕು ಅದು ಗುರು. ಶಿಕ್ಷಕನಿಲ್ಲದೆ ಗುರಿಯೆಡೆಗೆ ನುಗ್ಗಬಹುದು. ಆದರೆ ಅದು ಹಗಲು ಕಂಡ ಬಾವಿಗೆ ರಾತ್ರಿ ಬಿದ್ದ ಹಾಗಾಗುತ್ತದೆ.

ಪುಸ್ತಕಗಳು ಒಳ್ಳೆಯ ಮಿತ್ರ ಎನ್ನುವುದು ಸರಿ. ಅಂತರ್ಜಾಲ ಮಾಹಿತಿಯ ಕಣಜ ಎನ್ನುವುದನ್ನೂ ಒಪ್ಪಿಕೊಳ್ಳೋಣ. ಆದರೆ ಅವು ನಿರ್ಜೀವವಾದ ಸಂಗತಿಗಳು. ಒಂದು ಪುಸ್ತಕಕ್ಕೆ ತಾನು ಕೊಡುತ್ತಿರುವ ಮಾಹಿತಿಯ ಅರಿವು ಇರುವುದಿಲ್ಲ. ಮೇಲಾಗಿ ಶಿಕ್ಷಣ ಎಂದರೆ ಕೇವಲ ಮಾಹಿತಿಯ ಕ್ರೂಢೀಕರಣ ಮಾತ್ರವಲ್ಲ. ನಮ್ಮ ಮೆದುಳು ಕೇವಲ ವಿಷಯಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ಕಂಪ್ಯೂಟರ್ ಅಲ್ಲ. ಶಿಕ್ಷಣದಲ್ಲಿ ವಿದ್ಯಾರ್ಥಿಗೆ ಆವಶ್ಯಕವಾದ ಮಾಹಿತಿಯನ್ನು ಕೊಡುವುದರ ಜೊತೆಗೆ ಆತನ ಸರ್ವತೋಮುಖ ಬೆಳವಣಿಗೆ ಆಗುವಂತೆ ನೋಡಿಕೊಳ್ಳಬೇಕಾದದ್ದು ಶಿಕ್ಷಕರ ಕರ್ತವ್ಯ. ವಿದ್ಯಾರ್ಥಿಯ ಭಾವ ಲೋಕದ ಬೆಳವಣಿಗೆಯಾಗಬೇಕು, ಅವನ ಕಲ್ಪನಾ ಶಕ್ತಿಗೆ ಪ್ರೋತ್ಸಾಹ ಸಿಕ್ಕಬೇಕು. ಬದುಕು ಸಹ್ಯವಾಗಿಸಿಕೊಳ್ಳಲು ಆತನ ಹೃದಯವಂತಿಕೆಗೆ ಪುಟ ಕೊಡಬೇಕು. ಆತನಲ್ಲಿ ಆತ್ಮವಿಶ್ವಾಸ, ಎದೆಗಾರಿಗೆ, ಹೋರಾಟ ಮಾಡುವ ನೈತಿಕ ಶಕ್ತಿ ಜೊತೆಗೇ ಸೋಲನ್ನು ಸಮಚಿತ್ತದಿಂದ ಸ್ವೀಕರಿಸುವ ಮನೋಭಾವವನ್ನು ಸೃಷ್ಟಿಸುವುದಕ್ಕೆ ಗುರು ಅತ್ಯವಶ್ಯಕವಾಗಿ ಬೇಕು. ಈ ಎಲ್ಲಾ ಕೆಲಸಗಳನ್ನು ಪುಸ್ತಕಗಳು ಮಾಡಲು ಸಾಧ್ಯವಿಲ್ಲ.

ಒಂದು ಸಸಿಗೆ ಚಿಗುರಿಕೊಂಡು ನೆಲದೊಳಗೆ ಬೇರುಗಳನ್ನು ಹರಡಿಕೊಂಡು ಭದ್ರವಾಗಲು, ನೆಲದ ಮೇಲೆ ಎತ್ತರಕ್ಕೆ ಏರಿ ಹರಡಿಕೊಳ್ಳಲು ಸಾಧ್ಯವಾಗುವವರೆಗೆ ಸುತ್ತಲೂ ಬೇಲಿ ಹಾಕಬೇಕಾದುದು ಆವಶ್ಯಕ. ಬೇಲಿ ಸಸಿಯ ರಕ್ಷಣೆಗೆ, ಬೆಳವಣಿಗೆಗೆ ಹಾಕುವುದೇ ಹೊರತು ಸಸಿಯ ಬೆಳವಣಿಗೆಯನ್ನು ಕುಂಠಿತಗೊಳಿಸುವುದಕ್ಕಾಗಿ ಅಲ್ಲ. ಸಸಿಗಳಿಗೆ ಆಸರೆಗೆ ಕೆಲವೊಮ್ಮೆ ಕೋಲು ಬೇಕಾಗುತ್ತದೆ. ಮುಂದೆ ಅದು ಸಾವಿರಾರು ಹಕ್ಕಿಗಳಿಗೆ ಆಸರೆ ನೀಡುವ ಬೃಹದಾಕಾರದ ಮರವಾಗಿ ಬೆಳೆಯಬಹುದು. ಆದರೆ ಸಸಿಯಾಗಿದ್ದಾಗ ಅದಕ್ಕೆ ಸೂಕ್ತವಾದ ಆಸರೆ ಹಾಗೂ ಸಹಾಯ ಬೇಕು. ಇದೇ ಕೆಲಸವನ್ನು ಶಿಕ್ಷಕನಾದವನು ಮಾಡುತ್ತಾನೆ. ಪುಸ್ತಕಗಳು ಎಷ್ಟೇ ಇದ್ದರು ಏನನ್ನು, ಎಷ್ಟರ ಮಟ್ಟಿಗೆ ಯಾವಾಗ ತಿಳಿಯಬೇಕು ಎನ್ನುವ ವಿವೇಕ ಮಕ್ಕಳಿಗೆ ಇರುವುದಿಲ್ಲ. ಪಕ್ವವಾಗದ ಮನಸ್ಸಿಗೆ ಕೆಲವು ಮಾಹಿತಿಯನ್ನು ಕೊಟ್ಟರೆ ಅದು ಅನರ್ಥಕ್ಕೆ ಈಡು ಮಾಡುವುದೇ ಹೆಚ್ಚು. ಪುಸ್ತಕವಾಗಲೀ ಅಂತರ್ಜಾಲವಾಗಲೀ ತನ್ನ ಮಾಹಿತಿಯನ್ನು ಗ್ರಹಿಸುತ್ತಿರುವ ಮನಸ್ಸು ಪಕ್ವವಾದದ್ದಾ ಅಥವಾ ಇನ್ನೂ ಅಪಕ್ವವಾ ಎಂದು ತಿಳಿಯಲು ಸಾಧ್ಯವೇ ಇಲ್ಲ. ಜೊತೆಗೆ ಅವು ತಾವು ಕೊಡುವ ಮಾಹಿತಿ, ಜ್ಞಾನದ ಪರಿಣಾಮವನ್ನು ನಿಯಂತ್ರಿಸಲು ಶಕ್ತವಾದವಲ್ಲ. ಅವು ವಿದ್ಯಾರ್ಥಿಗೆ ಶಕ್ತವಾದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಯಾವ ರೀತಿಯಿಂದಲೂ ನೆರವಾಗುವುದಿಲ್ಲ. ಪುಸ್ತಕಗಳು, ಅಂತರ್ಜಾಲ ಎಂದಿಗೂ ಶಿಕ್ಷಕನ, ಗುರುವಿನ ಸ್ಥಾನವನ್ನು ತುಂಬಲು ಸಾಧ್ಯವೇ ಇಲ್ಲ. ಅದಕ್ಕಾಗಿಯೇ ದಾಸರು ಹಾಡಿ ಹೊಗಳಿದ್ದು, ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂದು!


ಈ ಸಂಚಿಕೆಯ ಚರ್ಚೆಯ ವಸ್ತು, ಇಪ್ಪತೊಂದನೆಯ ಶತಮಾನದ ಮಾಹಿತಿಕ್ರಾಂತಿಯ ಯುಗದಲ್ಲಿ ಶಿಕ್ಷಕರು, ಗುರು-ಶಿಷ್ಯ ಸಂಸ್ಕೃತಿ ಅಪ್ರಸ್ತುತವಾಗುತ್ತಿದೆಯೇ? ಹೌದು, ಮಾಹಿತಿ ಕ್ರಾಂತಿಯ ಈ ಶತಮಾನದಲ್ಲಿ ಶಿಕ್ಷಕ ನೆಪಮಾತ್ರವಾಗಿದ್ದಾನೆ. ಶಿಕ್ಷಣ ಕ್ಷೇತ್ರವೇ ವ್ಯಾಪಾರೀಕರಣಗೊಂಡಿರುವಾಗ ಗುರು-ಶಿಷ್ಯ ಸಂಸ್ಕೃತಿ ಹಾಸ್ಯಾಸ್ಪದ ಎಂದು ವಾದಿಸಿದ್ದಾರೆ ಚಂದ್ರಶೇಖರ್ ಪ್ರಸಾದ್.

‘ಗುರು ಹೆಗಲ ಮೇಲಿನ ಹೆಣ. ಅದನ್ನು ಕೆಳಕ್ಕೆ ಹಾಕಿ ನೀನು ಮುಂದೆ ಸಾಗು’
– ಸತ್ಯಕಾಮ

ಮಾಹಿತಿ ತಂತ್ರಜ್ಞಾನ ಉಚ್ಛ್ರಾಯ ಸ್ಥಿತಿಯಲ್ಲಿರುವ ಈ ಶತಮಾನದಲ್ಲಿ ಗುರುವಿನ ಅಸ್ತಿತ್ವಕ್ಕೇ ಸಂಚಕಾರ ಪ್ರಾಪ್ತವಾಗುವ ಕುರುಹುಗಳು ದೊರೆಯುತ್ತಿವೆ. ‘ಗುರು ಬ್ರಹ್ಮ, ಗುರು ವಿಷ್ಣು, ಗುರುವೇ ಪರಮೇಶ್ವರ’ ಎಂದು ಪೂಜಿಸಿದ ನಮ್ಮ ದೇಶದಲ್ಲೂ ಸಹ ಗುರುವಿನ ಸಹಾಯವಿಲ್ಲದೆಯೇ ಎಂಥಾ ವಿದ್ಯೆಯನ್ನಾದರೂ ಕಲಿಯಬಹುದು ಎಂಬ ವಾತಾವರಣದ ಸೂಚನೆಗಳು ಸಿಕ್ಕುತ್ತಿವೆ. ಶಿಕ್ಷಕರಿಗಾಗಿ ತಮ್ಮ ಹುಟ್ಟಿದ ದಿನವನ್ನೇ ಬಿಟ್ಟು ಕೊಟ್ಟ ಭಾರತದ ಶ್ರೇಷ್ಠ ತತ್ವಜ್ಞಾನಿ, ಶಿಕ್ಷಕ ಡಾ||ಎಸ್.ರಾಧಾಕೃಷ್ಣನ್, ಲಕ್ಷಾಂತರ ಮಂದಿ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಹಾಗೂ ಆದರ್ಶವಾಗಿರುವ ಭಾರತದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ಗುರು ಪರಂಪರೆಯನ್ನು ಹುಟ್ಟಿ ಹಾಕಿದ, ಗುರುಕುಲಗಳನ್ನು ಸ್ಥಾಪಿಸಿ ‘ಗುರು’ ಸ್ಥಾನಕ್ಕೆ ವ್ಯಾಖ್ಯಾನವನ್ನು ಒದಗಿಸಿಕೊಟ್ಟ ಋಷಿಗಳನ್ನು ನೆನೆಯುತ್ತಲೇ, ಅವರ ಕೊಡುಗೆಗಳಿಗೆ ಗೌರವಯುತವಾಗಿ ತಲೆಬಾಗುತ್ತಲೇ ಇಂದು ಅಂತರ್ಜಾಲ ಹಾಗೂ ಮಾಹಿತಿ ಕ್ರಾಂತಿಯ ಯುಗದಲ್ಲಿ ಶಿಕ್ಷಕರ ಅಗತ್ಯವಿದೆಯೇ ಎಂಬುದನ್ನು ಆಲೋಚಿಸಬೇಕಾಗುತ್ತದೆ.

ie7.jpg

‘ನಾನು ಹುಟ್ಟುತ್ತಲೇ ಜೀನಿಯಸ್ ಆಗಿದ್ದೆ. ನಮ್ಮ ಶಾಲೆಗಳು ನನ್ನನ್ನು ಸರ್ವನಾಶ ಮಾಡಿದವು’ ಎಂಬ ವಾಕ್ಯ ಅನೇಕ ಮಂದಿ ವಿದ್ಯಾರ್ಥಿಗಳ ಟೀಶರ್ಟುಗಳ ಮೇಲೆ ರಾರಾಜಿಸುತ್ತಿದೆ. ಇದರ ಹಿಂದಿರುವ ವ್ಯಂಗ್ಯ ಹಾಗೂ ಸಿನಿಕತನದ ಮೊನಚನ್ನು ಸ್ವಲ್ಪ ಪಕ್ಕಕ್ಕಿಟ್ಟು ಗಮನಿಸಿದರೆ ಈ ಮಾತು ಅದೆಷ್ಟು ಸತ್ಯ ಎಂಬುದು ವೇದ್ಯವಾಗುತ್ತದೆ. ನಮ್ಮ ಶಿಕ್ಷಣ ಪದ್ಧತಿ ಹಾಗೂ ನಮ್ಮ ಶಿಕ್ಷಕರ ಕೈಯಲ್ಲಿ ದಿನೇ ದಿನೇ ಅಸಂಖ್ಯಾತ ಪ್ರತಿಭೆಗಳ ಕಗ್ಗೊಲೆ ನಡೆಯುತ್ತಿದೆ. ಶಿಕ್ಷಕ ಎನ್ನುವವನು, ಸತ್ಯಕಾಮರು ಹೇಳಿದ ಹಾಗೆ ದಾರಿ ತೋರುವ ಮ್ಯಾಪ್ ಮಾತ್ರವಾಗದೆ ದಾರಿಯುದ್ದಕ್ಕೂ ಹೊತ್ತೊಯ್ಯಬೇಕಾದ ಹೆಣವಾಗಿ ವಿದ್ಯಾರ್ಥಿಗಳ ಬೆನ್ನನ್ನು ಏರಿದ್ದಾನೆ. ಗುರು, ಶಿಕ್ಷಕ ಎಂದ ಕೂಡಲೆ ಋಷಿ ಮುನಿಗಳ ಆಶ್ರಮಗಳನ್ನು, ಗುರುಕುಲ ಮಾದರಿಯ ಗುರು-ಶಿಷ್ಯ ಪದ್ಧತಿಯನ್ನು ನೆನೆಪಿಸಿಕೊಳ್ಳುವವರಿಗೆ ಇಂದಿನ ಸಮಾಜದಲ್ಲಿ ಶಿಕ್ಷಕರು ಎಂಥವರಿದ್ದಾರೆ ಹಾಗೂ ಶಿಕ್ಷಣ ವ್ಯವಸ್ಥೆ ಎಂಥದ್ದಿದೆ ಎಂಬುದನ್ನು ನೆನಪಿಸಬೇಕಾಗಿದೆ. ವಾಸ್ತವದ ಚಿತ್ರಣವನ್ನು ತೆರೆದಿಡಬೇಕಾಗಿದೆ.

ಹಿಂದೆ ಶಿಕ್ಷಣವೆಂಬುದು ಒಂದು ಪವಿತ್ರ ಕ್ಷೇತ್ರವಾಗಿತ್ತು. ಗುರು-ಶಿಷ್ಯ ಸಂಬಂಧ ಎಂಬುದು ಕೇವಲ ಕೊಟ್ಟು ತೆಗೆದುಕೊಳ್ಳುವ ವ್ಯವಹಾರವಾಗಿರಲಿಲ್ಲ. ಶಿಷ್ಯ ಗುರುವಿನ ಆಶ್ರಮದಲ್ಲೇ ಇದ್ದು ಗುರುವಿನ ಸೇವೆ ಮಾಡುತ್ತಿದ್ದ. ಆಶ್ರಮದ ಕೆಲಸಗಳನ್ನು ಮಾಡುತ್ತಿರುತ್ತಿದ್ದ. ಆ ಮೂಲಕ ಗುರುವಿನಿಂದ ಪಡೆಯುವ ಶಿಕ್ಷಣಕ್ಕೆ ಬೇಕಾದ ಮನೋಭೂಮಿಕೆಯನ್ನು ಸಿದ್ಧ ಪಡಿಸಿಕೊಳ್ಳುತ್ತಿದ್ದ. ಆತನಿಗೆ ಗುರುದಿನ ಆಶ್ರಮದಲ್ಲಿದ್ದಷ್ಟೂ ಕಾಲ ಶಿಕ್ಷಣವನ್ನು ಪಡೆಯಬೇಕು ಎಂಬ ಹಂಬಲವಿರುತ್ತಿತ್ತು. ಜೊತೆಗೆ ತಾನು ಪಡೆಯುತ್ತಿರುವ ಶಿಕ್ಷಣಕ್ಕೆ ಕೊಡಬೇಕಾದ ಮರ್ಯಾದೆ ಎಂಥದ್ದೂ ಎಂಬುದನ್ನೂ ಆತ ಕಲಿಯುತ್ತಿದ್ದ. ತಾನು ಕಲಿತ ಶಿಕ್ಷಣದಿಂದ ತನ್ನ ಕಲ್ಯಾಣ ಮಾಡಿಕೊಳ್ಳುವುದ ಜೊತೆಗೆ ಸಮಾಜದ ಕಲ್ಯಾಣವನ್ನೂ ಮಾಡಬೇಕೆಂಬ ಗುರಿ ಆತನಲ್ಲಿರುತ್ತಿತ್ತು. ಶಿಕ್ಷಣಕ್ಕಾಗಿ ಶಿಕ್ಷಣ ಎಂಬುದು ಆಗ ಸಮಾಜದ ನೀತಿಯಾಗಿತ್ತು. ಗುರುವಿಗೋ ಶಿಷ್ಯಂದಿರಿಗೆ ವಿದ್ಯೆಯನ್ನು ಧಾರೆಯೆರೆಯುವುದೇ ಜೀವನದ ಪರಮೋದ್ದೇಶವಾಗಿತ್ತು.

ಆದರೆ ಈಗಿನ ಪರಿಸ್ಥಿತಿ ಹೇಗಿದೆ? ಶಿಕ್ಷಕನಾಗಲೇ ಬೇಕು ಎಂದು ಎಷ್ಟು ಮಂದಿ ಜೀವನ ಗುರಿಯನ್ನು ಹೊಂದಿರುತ್ತಾರೆ? ವಿದ್ಯೆಯನ್ನು ಧಾರೆಯೆರೆಯುವುದಕ್ಕಾಗಿ ಶಿಕ್ಷಕರಾಗುತ್ತಿದ್ದೇವೆ ಎಂದು ಅದೆಷ್ಟು ಮಂದಿ ಶಿಕ್ಷಕರು ಎದೆಯ ಮೇಲೆ ಕೈ ಇಟ್ಟು ಹೇಳಬಲ್ಲರು? ಧಾರೆಯೆರೆಯಲು ಅವರ ಬಳಿ ವಿದ್ಯೆ ಇದ್ದರೆ ತಾನೆ! ಬೇರಾವ ಕೆಲಸವೂ ಸಿಕ್ಕದಿದ್ದರೆ ಶಿಕ್ಷಕನಾಗಬಹುದು ಎಂದು ಆಲೋಚಿಸಿ ಶಿಕ್ಷಣ ಕ್ಷೇತ್ರಕ್ಕೆ ಧಾವಿಸುವವರಿಗೆ ‘ಗುರು’ವಿನ ಸ್ಥಾನವನ್ನು ತುಂಬುವಂಥ ಅರ್ಹತೆ ಇರುತ್ತದಾ? ಬೇರೆಲ್ಲಾ ಕ್ಷೇತ್ರಗಳಿದ್ದ ಹಾಗೆಯೇ ಶಿಕ್ಷಣ ಕ್ಷೇತ್ರವೂ ಹಣ ಮಾಡುವ ದಂಧೆಯಾಗಿರುವಾಗ ಯಾವ ಗುರು-ಶಿಷ್ಯ ಸಂಬಂಧವನ್ನು ನಾವು ಅಪೇಕ್ಷಿಸಲು ಸಾಧ್ಯ? ಬೇರೆಲ್ಲಾ ಕ್ಷೇತ್ರಗಳಲ್ಲಿರುವ ಮಾರುಕಟ್ಟೆ ವ್ಯಾಕರಣವೇ ಶಿಕ್ಷಣ ಕ್ಷೇತ್ರದಲ್ಲೂ ಚಲಾವಣೆಯಾಗುತ್ತಿದೆ. ವಿದ್ಯಾರ್ಥಿ ಕಸ್ಟಮರ್ ಆಗುತ್ತಿದ್ದಾನೆ. ಶಾಲೆಗಳು ಒಳ್ಳೆಯ ಕಸ್ಟಮರ್ ಸರ್ವೀಸ್ ಕೊಡುವ ಕಂಪನಿಗಳಾಗುತ್ತಿವೆ. ಅವಕ್ಕೂ ಜಾಹೀರಾತು, ಡೊನೇಷನ್ ಪೈಪೋಟಿ, ರಾಜಕೀಯದ ಪಿಡುಗುಗಳು ಅಂಟಿಕೊಂಡಿವೆ. ಇಷ್ಟೇ ಅಲ್ಲದೆ ಶಿಕ್ಷಣ ಎಂಬುದು ಕೇವಲ ಪರೀಕ್ಷೆಗಳನ್ನು ಪಾಸು ಮಾಡುತ್ತಾ ಒಳ್ಳೆಯ ಮಾರ್ಕು ಗಳಿಸುವ ಉದ್ಯಮವಾಗಿ ರೂಪುಗೊಂಡಿದೆ. ಶಿಕ್ಷಣ ಪದ್ಧತಿಯು ಮಾರ್ಕುಗಳನ್ನೇ ‘ವಿದ್ಯೆ’ಯೆಂದು ಪರಿಗಣಿಸುತ್ತಿರುವಾಗ, ಪರೀಕ್ಷೆಗಳನ್ನು ಪಾಸು ಮಾಡಿದವರನ್ನೇ ವಿದ್ಯಾವಂತರು ಎಂದು ಘೋಷಿಸುತ್ತಿರುವಾಗ ‘ಗುರು ಬ್ರಹ್ಮ, ಗುರು ವಿಷ್ಣು…’ ಎನ್ನುವುದು ಹಾಸ್ಯಾಸ್ಪದವಾಗುತ್ತದೆ. ಗುರುವನ್ನು ದೈವ ಎಂದು ವಿದ್ಯಾರ್ಥಿಗಳು ಭಾವಿಸಬೇಕು ಎಂದು ಅಪೇಕ್ಷಿಸುವುದು ಅತಿಯಾಗುತ್ತದೆ. ಇವೆಲ್ಲದರ ಜೊತೆಗೆ ಡೊನೇಶನ್ ಹೆಸರಿನಲ್ಲಿ ನಿಜವಾದ ಪ್ರತಿಭೆಗೆ ಸಲ್ಲ ಬೇಕಾದ ಮನ್ನಣೆಯನ್ನು ವಂಚಿಸುವ ಶಿಕ್ಷಣ ಸಂಸ್ಥೆಗಳು, ಇಂಟರ್ನಲ್‌ಗಳು, ಅಟೆಂಡೆನ್ಸಿನ ನೆಪದಲ್ಲಿ ವೈಯಕ್ತಿಕ ಸೇಡು ತೀರಿಸಿಕೊಳ್ಳುವ ಶಿಕ್ಷಕರು, ತಮ್ಮ ಸ್ಥಾನವನ್ನು ದುರುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳ ಮೇಲೆ ಎರಗುವ ಕಾಮುಕರು ಇಂಥದ್ದೆಲ್ಲಾ ಕಣ್ಣ ಮುಂದೇ ನಡೆಯುವಾಗ ‘ಗುರುವಿನ ಗುಲಾಮನಾಗು..’ ಎಂದು ಹೇಳಲು ಯಾರಿಗೆ ಮನಸ್ಸು ಬಂದೀತು?

ವಿದ್ಯೆಯೆಂಬುದು ವಿದ್ಯೆಯಾಗಿ ಉಳಿದಿಲ್ಲ. ಗುರುವೆಂಬುವವನು ಗುರುವಾಗಿ ಉಳಿದಿಲ್ಲ – ಇದು ಅರಗಿಸಿಕೊಳ್ಳಲು ಸ್ವಲ್ಪ ಕಷ್ಟವಾದರೂ ಈ ದಿನದ ಸತ್ಯ. ಗುರು ಪರಂಪರೆಯಿಂದ ಎಂದಿಗೂ ನಿಜವಾದ ವಿದ್ಯಾಕಾಂಕ್ಷಿಗೆ ನ್ಯಾಯ ದಕ್ಕಲು ಸಾಧ್ಯವಿಲ್ಲ ಎಂಬುದನ್ನು ಏಕಲವ್ಯ ಹಾಗೂ ದ್ರೋಣರ ಕಥೆಯಿಂದ ತಿಳಿಯಬಹುದು. ಈ ಪರಂಪರೆಯ ಹಂಗಿನಿಂದ ಹೊರಬರಲು ನಮಗೆ ಆಶಾಕಿರಣವಾಗಿ ಗೋಚರಿಸಿರುವುದೇ ಈ ಮಾಹಿತಿ ಕ್ರಾಂತಿ ಹಾಗೂ ಪುಸ್ತಕ ಲೋಕ. ಇಲ್ಲಿಗೆ ಯಾರೂ ನಿಷಿದ್ಧರಲ್ಲ. ಇವು ನಿಮ್ಮ ಜಾತಿ ಯಾವುದು, ನಿಮ್ಮ ವಂಶ ಯಾವುದು, ನಿಮ್ಮ ಪೂರ್ಜರು ಯಾರು ಎಂದು ಕೇಳುವುದಿಲ್ಲ. ಗಂಡೋ, ಹೆಣ್ಣೋ ಎಂದು ಭೇದ ಮಾಡುವುದಿಲ್ಲ. ಚಿಕ್ಕವರು, ದೊಡ್ಡವರು ಎಂಬ ತಾರತಮ್ಯ ಇವಕ್ಕೆ ತಿಳಿದಿಲ್ಲ. ಯಾರೆಂದರೆ ಯಾರು ಬೇಕಾದರೂ ವಿದ್ಯೆಗಾಗಿ ಕೈಚಾಚ ಬಹುದು. ಇವು ಮೊಗೆದು ಮೊಗೆದು ಕೊಡುತ್ತವೆ. ಅರ್ಹತೆಯಿರುವವರು ಅದನ್ನು ದಕ್ಕಿಸಿಕೊಳ್ಳುತ್ತಾರೆ. ಪುಸ್ತಕಗಳು ಎಂದಿಗೂ ನಮ್ಮ ಬಲಹೀನತೆಯ ಲಾಭ ಪಡೆಯುವುದಿಲ್ಲ. ಅಂತರ್ಜಾಲ ಎಂದಿಗೂ ಶೋಷಣೆಗೆ ಕೈ ಹಾಕುವುದಿಲ್ಲ. ಹಳ್ಳಿಯ ಮೂಲೆಯ ಹುಡುಗನು ಸಹ ನಾಸಾದ ಬಾಗಿಲು ತಟ್ಟಬಹುದು. ಬಡವನ ಮಗಳು ಸಹ ವರ್ಲ್ಡ್ ಬ್ಯಾಂಕಿನೊಳಕ್ಕೆ ಹೋಗಬಹುದು. ಇಷ್ಟೆಲ್ಲಾ ಸೌಲಭ್ಯ ಕೊಡಮಾಡಿರುವ ಮಾಹಿತಿ ಕ್ರಾಂತಿ ಶಿಕ್ಷಕನ ಪಾತ್ರವನ್ನು ಆಕ್ರಮಿಸಿಕೊಂಡಿರುವುದು ಸ್ಪಷ್ಟ. ಶಿಕ್ಷಣವೆನ್ನುವುದು ವ್ಯಾಪಾರವಾಗಿರುವಾಗ, ಶಿಕ್ಷಕನೆಂಬುವವನು ದಲ್ಲಾಳಿಯಾಗಿರುವಾಗ ಅರಿವೇ ಗುರು, ಪುಸ್ತಕವೇ ಮಾರ್ಗದರ್ಶಿ, ಅಂತರ್ಜಾಲವೇ ಜ್ಞಾನದೇಗುಲ ಎನ್ನುವುದರಲ್ಲಿ ತಪ್ಪೇನಿದೆ?


ಈ ಸಂಚಿಕೆಯ ಚರ್ಚೆ: ಮಹಿಳೆಯ ಉಡುಪು ಹಾಗೂ ಪ್ರಚೋದನೆ. ಮಹಿಳೆ ತೊಡುವ ಪ್ರಚೋದನಾಕಾರಿ ಉಡುಪಿನಿಂದ ಆಕೆಯ ಮೇಲೆ ಅತ್ಯಾಚಾರಗಳು ನಡೆಯುತ್ತಿವೆಯೇ? ಎಲ್ಲಕ್ಕೂ ಮಹಿಳೆಯೇ ಕಾರಣವೇ?
ಎಲ್ಲಾ ವಿಷಯಗಳಲ್ಲೂ ಹೆಣ್ಣನ್ನು ಬಲಿಪಶುವಾಗಿಸುವುದೇಕೆ? ಪ್ರಚೋದನೆ ಇರುವುದು ತೊಡುಗೆಯಲ್ಲಾ ಅಥವಾ ಪುರುಷನ ಕಣ್ಣುಗಳಲ್ಲಾ ಎಂದು ಕೇಳುತ್ತಾರೆ ‘ಅಂತರ್ಮುಖಿ’

ಕಳೆದ ವರ್ಷ ಪಾಕಿಸ್ತಾನದಲ್ಲಿ ನಲವತ್ತರ ಆಸುಪಾಸಿನಲ್ಲಿದ್ದ ವ್ಯಕ್ತಿಯೊಬ್ಬ ಕೈಯಲ್ಲಿ ಗನ್ ಅಡಗಿಸಿಟ್ಟುಕೊಂಡು ಬಂದು ದೇಶದ ಮಹಿಳಾ ಮಂತ್ರಿಯೊಬ್ಬಳನ್ನು ಕೊಂದು ಬಿಟ್ಟ.

ಆಕೆ ಜಿಲ್ಲಾ ಹುಮಾ ಉಸ್ಮಾನ್. ಆಕೆ ಮುವತ್ತೈದರ ಆಸುಪಾಸಿನಲ್ಲಿದ್ದ ಹೆಣ್ಣು. ಪಾಕಿಸ್ತಾನವೆಂಬ ಧರ್ಮಾಧಾರಿತ ದೇಶದಲ್ಲಿ ಆಕೆ ಮಂತ್ರಿಯಾಗಿದ್ದಳು. ಹೆಣ್ಣು ಮಕ್ಕಳಿಗೆ ಸಿಗಬೇಕಾದ ಹಕ್ಕುಗಳ ಬಗ್ಗೆ ಹೋರಾಟ ನಡೆಸಿದ್ದಳು. ಆ ಮತಾಂಧನ ಗುಂಡಿಗೆ ಈಕೆ ಬಲಿಯಾದದ್ದು ಈಕೆ ಇಸ್ಲಾಂ ನಿಯಮಾನುಸಾರ ಬುರ್ಕಾ ತೊಟ್ಟಿರಲಿಲ್ಲವೆಂಬ ಕಾರಣಕ್ಕೆ. ಮೇಲಾಗಿ ಹೆಣ್ಣಾಗಿ ಆಕೆ ರಾಜಕೀಯ ನಾಯಕಿಯಾದದ್ದು ಆಕೆ ಮಾಡಿದ ಅಪರಾಧವಾಗಿತ್ತು.

ನಮ್ಮ ಪುರುಷ ಪ್ರಧಾನ ಸಮಾಜದ ಒಟ್ಟು ಮನಸ್ಥಿತಿ ಆ ಮತಾಂಧನಿಗಿಂತ ಬೇರೆಯಾಗಿಲ್ಲ. ಮಬ್ಬುಗತ್ತಲ ಅಡುಗೆ ಮನೆಯಲ್ಲಿ ಹೊಗೆಗೆ ಕಣ್ಣಿರು ಸುರಿಸುತ್ತಲೇ ಜೀವನ ಸವೆಸುತ್ತಿದ್ದ ಹೆಣ್ಣು ಮಕ್ಕಳು ಈಗ ಮನೆಯ ಹೊಸ್ತಿಲನ್ನು ದಾಟಿ ಹೊರಬಂದು ಗಂಡಸಿಗೆ ಸರಿ ಸಮಾನವಾಗಿ ವಿದ್ಯೆಯನ್ನು ಪಡೆದು ಕೆಲಸ ಮಾಡಿ ತೋರಿಸುತ್ತಿರುವುದನ್ನು ಯಾವ ಸಮಾಜದಲ್ಲೂ ಸಂತೋಷದಿಂದ ಕಾಣುವುದಿಲ್ಲ ಈ ಪುರುಷ ಪ್ರಧಾನ ವರ್ಗ. ಇದಕ್ಕೆ ತಮ್ಮ ಏಕಸ್ವಾಮ್ಯಕ್ಕೆಲ್ಲಿ ಏಟು ಬೀಳುತ್ತದೆಯೋ ಎಂಬ ಆತಂಕವೇ ಕಾರಣ.

ಮಹಿಳೆಯರನ್ನು ಹಿಮ್ಮೆಟ್ಟಿಸಲು, ಸಮಾನ ಅವಕಾಶಗಳಿಂದ ಆಕೆಯನ್ನು ವಂಚಿಸಲು ಕಾಲಕಾಲಕ್ಕೆ ತಕ್ಕಂತೆ ಧರ್ಮದ, ನೈತಿಕತೆಯ ಸಹಾಯವನ್ನು ಪಡೆಯುತ್ತಾ ಬಂದಿತು ಪುರುಷ ಸಮಾಜ. ಆಕೆಯನ್ನು ವಿದ್ಯೆಯಿಂದ ದೂರವಿರಿಸಲಾಯ್ತು. ಅದಕ್ಕೆ ಕೆಲಸಕ್ಕೆ ಬಾರದ ಪುರಾಣದ ಕಥೆಗಳನ್ನು ಸಾಕ್ಷಿಗಾಗಿ ಸೃಷ್ಟಿಸಿತು. ಆಕೆಯ ಕೈಯಿಂದ ಆರ್ಥಿಕ ಸ್ವಾತಂತ್ರ್ಯವನ್ನು ಕಸಿಯಲಾಯಿತು. ಆ ಮೂಲಕ ಆಕೆಯ ಪ್ರತಿಭಟನೆಯ ಸ್ವಾತಂತ್ರ್ಯವನ್ನೇ ಕಸಿದುಕೊಂಡು ಆಕೆಯನ್ನು ಎಲ್ಲದಕ್ಕೂ ತನ್ನ ಮೇಲೆ ಅವಲಂಬಿತವಾಗುವಂತೆ ಮಾಡಿದ ಪುರುಷ ಪುಂಗವ. ಆ ಮೂಲಕ ತನ್ನನ್ನು ತಾನು ಪುರುಷೋತ್ತಮನಾಗಿಸಿಕೊಳ್ಳಲು ಪ್ರಯತ್ನಿಸಿದ. ಯಾವಾಗ ಮಹಿಳೆ ಪುರುಷರಿಗೆ ಸಮಾನವಾಗಿ ಅಕ್ಷರ ತಿದ್ದಲು ಶಾಲೆಗಳಿಗೆ ಕಾಲಿರಿಸಿದಳೋ ಆಗಲೇ ಪುರುಷ ಸಮಾಜದಲ್ಲಿ ಅಪಸ್ವರ ಕೇಳಿ ಬರಲಾರಂಭಿಸಿತು. ಹೆಣ್ಣಿಗೆ ಓದಿಸುವುದು ಮರಳಿಗೆ ನೀರು ಹೊಯ್ದಂತೆ, ಎಷ್ಟು ಓದಿಸಿದರೇನು ಕೊನೆಗೆ ಆಕೆ ಗಂಡನ ಮನೆಯಲ್ಲಿ ಮುಸುರೆ ತಿಕ್ಕುವ ಕೆಲಸ ಮಾಡಿಕೊಂಡೇ ಇರಬೇಕು ಎನ್ನುವ ಭಾವನೆಯ ವಿಷ ಬೀಜ ಬಿತ್ತಲಾಯ್ತು. ಆದರೆ, ಹೆಣ್ಣು ಮಕ್ಕಳಿಗೆ ತಮ್ಮ ಪ್ರತಿಭೆಗೆ ತಕ್ಕ ಹಾಗೆ ಕೆಲಸ, ಪರಿಶ್ರಮಕ್ಕೆ ತಕ್ಕಂತೆ ಕೈತುಂಬಾ ಸಂಬಳ ದೊರೆಯಲಾರಂಭಿಸಿತೋ ಆಗ ಶುರುವಾಯ್ತು ಪುರುಷ ಪುಂಗವರ ಅಸೂಯೆಯ ಪ್ರದರ್ಶನ. ಹೆಣ್ಣು ಮನೆ ಬಿಟ್ಟು ದುಡಿಯೋಕೆ ನಿಂತದ್ದರಿಂದಲೇ ಮನೆಗಳು ಹಾಳಾಗುತ್ತಿರುವುದು, ಆಕೆ ದುಡಿಯುತ್ತಿರುವುದರಿಂದಲೇ ಮಕ್ಕಳು ದಾರಿ ತಪ್ಪುತ್ತಿರುವುದು. ಅಪರಾಧ ಹೆಚ್ಚಲಿಕ್ಕೆ ಆಕೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದೇ ಕಾರಣ ಎಂದು ಘೋಷಿಸತೊಡಗಿದರು.

ಇದೇ ಮನಸ್ಥಿತಿಯ ಮುಂದುವರಿಕೆಯಂತೆ ಕಾಣುವುದು, ಮಹಿಳೆಯರ ಆಧುನಿಕ ತೊಡುಗೆ ಪ್ರಚೋದನಾಕಾರಿಯಾಗಿದೆ ಎಂಬ ಆರೋಪ. ಮಹಿಳೆಯರು ಆಧುನಿಕವಾಗಿ ಬಟ್ಟೆ ತೊಡುವುದು ಆಕೆಗೆ ಕ್ಷೇಮವಲ್ಲ, ಪ್ರಚೋದನಕಾರಿಯಾಗಿ ಬಟ್ಟೆ ತೊಟ್ಟ ಹೆಣ್ಣನ್ನು ರೇಗಿಸಿದರೆ, ಚೇಡಿಸಿದರೆ, ಅತ್ಯಾಚಾರಕ್ಕೀಡು ಮಾಡಿದರೆ ಅದು ಪುರುಷರ ತಪ್ಪಲ್ಲ. ಆಕೆ ಪ್ರಚೋದನಕಾರಿಯಾಗಿ ಬಟ್ಟೆ ತೊಟ್ಟದ್ದೇ ತಪ್ಪು ಎಂಬ ಭಾವನೆ ಬೆಳೆಯುತ್ತಿದೆ. ಮಗಳ ಹಿಂದೆ ಯಾವ ಹುಡುಗನೋ ಬಿದ್ದಿದ್ದಾನೆ ಎಂದಾಗ ಮನೆಯವರು ಹುಡುಗನನ್ನು ಗದುಮಿ ಬುದ್ಧಿ ಕಲಿಸುವ ಬದಲು ಹುಡುಗಿಯ ಮೇಲೆ ‘ನೀನೇ ಏನೋ ಮಾಡಿದ್ದೀಯಾ’ ಎಂದು ಆರೋಪ ಹೊರಿಸಿ ಆಕೆಯನ್ನು ಕಾಲೇಜು ಬಿಡಿಸಿಬಿಡುವಂತೆಯೇ ಇದೂ ಸಹ.

ಪ್ರಚೋದನಕಾರಿಯಾದ ತೊಡುಗೆ ಎಂಬುದಕ್ಕೆ ವ್ಯಾಖ್ಯಾನ ಎಲ್ಲಿದೆ? ಧರ್ಮ ಬೀರುಗಳು ಹೇಳಿದ್ದೇ ಮಾಪನವೇ? ಹಳ್ಳಿಗಳಲ್ಲಿ ದುಡಿಯುವ ರೈತ ಹೆಣ್ಣು ಮಕ್ಕಳು ಕೆಲಸದ ವೇಳೆಯಲ್ಲಿ ತೊಡುವ ಕಡಿಮೆ ಪ್ರಮಾಣದ ಬಟ್ಟೆ ಪ್ರಚೋದನಾಕಾರಿಯಾಗಿ ಕಾಣುತ್ತದೆಯೇ? ಚಿಕ್ಕ ಪಟ್ಟಣಗಳಲ್ಲಿ ಜೀನ್ಸು, ಶರ್ಟು ಹಾಕಿಕೊಂಡು ಓಡಾಡುವ ಹೆಣ್ಣು ಮಕ್ಕಳನ್ನು ಬಿಟ್ಟ ಕಣ್ಣು ಬಿಟ್ಟು ನೋಡುವ ಜನರಿದ್ದಾರೆ. ಅದೇ ದೊಡ್ಡ ನಗರಗಳಲ್ಲಿ ಇಂಥ ಬಟ್ಟೆಯೇ ಸಭ್ಯ ಎನ್ನುವಂತೆ ಜನರು ಮನ್ನಣೆ ಕೊಡುತ್ತಾರೆ. ಹಾಗಾದರೆ ಪ್ರಚೋದನಕಾರಿ ಎಂಬುದಕ್ಕಿರುವ ಮಾಪನವಾದರೂ ಯಾವುದು?

ಬೇಲೂರು ಹಳೆ ಬೀಡುಗಳಲ್ಲಿ ಬೆತ್ತಲೆಯಾಗಿ ನಿಂತ ಶಿಲಾ ಬಾಲಿಕೆಯರ ಶಿಲ್ಪವನ್ನು ಕಂಡಾಗ ಪ್ರಚೋದನೆಯಾಗುತ್ತದೆಯೇ? ಎಷ್ಟೋ ದೇವ ದೇವತೆಯರ ವಿಗ್ರಹಗಳಲ್ಲಿ ನಗ್ನತೆಯೇ ಕಲೆಯಾಗಿದ್ದರೂ ನಾವು ಅವುಗಳಿಗೆ ಕೈ ಮುಗಿಯುವುದಿಲ್ಲವೇ? ಹಾಗಾದರೆ ಪ್ರಚೋದನೆ ಎಂಬುದು ಇರುವುದು ಮಹಿಳೆಯರು ತೊಡುವ ಬಟ್ಟೆಯಲ್ಲಾ ಅಥವಾ ನೋಡುವ ಪುರುಷರ ಕಣ್ಣುಗಳಲ್ಲಾ? ಅಸಲಿಗೆ ಪುರುಷರಿಗೆ ನೈತಿಕತೆಯ, ಕಾನೂನಿನ ಗಡಿಯೇ ಇಲ್ಲವೇ? ಗಂಡು ಏನು ಮಾಡಿದರೂ ಮಾಫಿ ಇದೆಯಾ?

ನಮ್ಮ ಸುತ್ತ ಮುತ್ತ ಲಕ್ಷಾಂತರ ವಿದ್ಯಮಾನಗಳು ನಡೆಯುತ್ತಿರುತ್ತವೆ. ಅವುಗಳೆಲ್ಲಾ ಒಬ್ಬರಿಲ್ಲ ಒಬ್ಬರಿಗೆ ಪ್ರಚೋದನೆಯನ್ನು ನೀಡುವಂತೆಯೇ ಇರುತ್ತವೆ. ಕುಡಿತ ಕೆಟ್ಟದ್ದು ಎಂಬುದನ್ನು ಮನವರಿಕೆ ಮಾಡಿಕೊಡಲು ನಿರ್ಮಿಸಿದ ಚಿತ್ರದಲ್ಲಿ ವ್ಯಕ್ತಿಯೊಬ್ಬ ಕಂಠಮಟ್ಟ ಕುಡಿದು ತೂರಾಡುವುದುದನ್ನೂ, ಬಗೆ ಬಗೆಯ ಮದ್ಯದ ಬಾಟಲಿಗಳನ್ನು ನೋಡಿ ಕುಡಿಯುವುದಕ್ಕೆ ಪ್ರಚೋದನೆ ಪಡೆದರೆ ಅದು ಸಿನೆಮಾ ಮಾಡಿದವನ ತಪ್ಪಾ ಅಥವಾ ನೋಡುಗನ ದೃಷ್ಟಿಯಲ್ಲಿರುವ ಲೋಪವಾ? ದೃಷ್ಟಿಯಂತೆ ಸೃಷ್ಟಿ ಎಂಬ ಹಳೆಯ ಮಾತಿನಂತೆ ಮೊದಲು ದೃಷ್ಟಿಕೋನದಲ್ಲಿನ ಲೋಪವನ್ನು ಸರಿ ಪಡಿಸುವ ಕೆಲಸವಾಗಬೇಕು. ಇಲ್ಲವಾದರೆ ತನ್ನ ವಿಕೃತ ಕಾಮ ತೃಷೆಯನ್ನು ಪೂರೈಸಿಕೊಳ್ಳಲು ಅಪ್ರಾಪ್ತ ವಯಸ್ಕ ಹೆಣ್ಣು ಮಕ್ಕಳ ಮೇಲೆ, ಕಂದಮ್ಮಗಳ ಮೇಲೆ, ವಯಸ್ಸಾದ ಹೆಂಗಸರ ಮೇಲೆರಗುವ ಗಂಡಿನ ಕುಕೃತ್ಯವನ್ನು ಸಮರ್ಥಿಸಲು ಹೆಣ್ಣು ಬದುಕಿರುವುದೇ ಕಾರಣ ಎಂದೂ ವಾದಿಸಬಹುದು. ಈಗಾಗಲೇ, ಗಂಡಿನ ಪಾರಮಾರ್ಥಿಕ ಸಾಧನೆಗೆ ಹೆಣ್ಣೇ ಅಡ್ಡಿ ಎಂಬಂತೆ ಕಾಣುತ್ತಿಲ್ಲವೇ? ಹೀಗಿರುವಾಗ ಪ್ರಚೋದನೆಯಿರುವುದು ಹೆಣ್ಣಿನ ಬಟ್ಟೆಯಲ್ಲಾ ಅಥವಾ ಅದನ್ನು ನೋಡುವ ಪುರುಷರ ಕಣ್ಣಿನಲ್ಲಾ ಎಂಬುದನ್ನು ಚಿಂತಿಸಬೇಕಾದ ತುರ್ತಿದೆ.


ಈ ಸಂಚಿಕೆಯ ಚರ್ಚೆ: ಮಹಿಳೆಯ ಉಡುಪು ಹಾಗೂ ಪ್ರಚೋದನೆ. ಮಹಿಳೆ ತೊಡುವ ಪ್ರಚೋದನಾಕಾರಿ ಉಡುಪಿನಿಂದ ಆಕೆಯ ಮೇಲೆ ಅತ್ಯಾಚಾರಗಳು ನಡೆಯುತ್ತಿವೆಯೇ? ಎಲ್ಲಕ್ಕೂ ಮಹಿಳೆಯೇ ಕಾರಣವೇ?
ತನ್ನ ಎಚ್ಚರಿಕೆಯಲ್ಲಿ ತಾನಿರಲು ಹೆಣ್ಣು ಪ್ರಚೋದನಕಾರಿಯಾಗಿ ಬಟ್ಟೆ ತೊಡುವುದನ್ನು ತಪ್ಪಿಸಬೇಕೇ ಹೊರತು ಅದು ಆಕೆಗೆ ಕಟ್ಟಳೆಯಾಗಬೇಕಿಲ್ಲ ಎನ್ನುತ್ತಾರೆ ಸುಪ್ರೀತ್.ಕೆ.ಎಸ್.

ಸಮಾನತೆ, ಸ್ತ್ರೀವಾದದ ಬಗ್ಗೆ ಮಾತನಾಡುವ ಮೊದಲು ನಮ್ಮ ಸಮಾಜ ಸಮಾನತೆಯ ಸಮಾಜವಾ ಎಂಬುದನ್ನು ಕೂಲಂಕುಶವಾಗಿ ಪರಿಶೀಲಿಸಬೇಕು. ನಮ್ಮ ಮನೆಗಳಲ್ಲಿ ಹೆಣ್ಣು ಮಕ್ಕಳು ಗಂಡಿನ ಸರಿಸಮಾನವಾಗಿ ಓದಬಹುದು, ಕೆಲಸಗಿಟ್ಟಿಸಿಕೊಳ್ಳಬಹುದು, ಸಂಪಾದನೆ ಮಾಡಬಹುದು. ಇದನ್ನೆಲ್ಲಾ ಹೆಮ್ಮೆಯಿಂದ, ಮಮತೆಯಿಂದ ಕಾಣುವ ನಮಗೆ ಆಕೆ ಗಂಡಿನ ಸರಿ ಸಮಾನವಾಗಿ ಸ್ವೇಚ್ಛಾಚಾರಕ್ಕಿಳಿದರೆ ಸಹಿಸಲು ಸಾಧ್ಯವೇ? ಗಮನಿಸಿ ನೋಡಿ, ಮಗ ಮನೆಗೆ ತಡವಾಗಿ ಬರಲಾರಂಭಿಸಿದರೆ ಆತನ ಸಹವಾಸದ ಬಗ್ಗೆ ಸಂಶಯ ಬರಬಹುದು. ಆತನೇನಾದರೂ ಕೆಟ್ಟ ಚಟಗಳಿಗೆ ಅಂಟಿಕೊಂಡಿದ್ದಾನಾ ಎಂಬ ಆತಂಕ ಕಾಡಬಹುದು. ಅದನ್ನು ನಾವು ಪ್ರಶ್ನಿಸುತ್ತೇವೆಯೇ ಹೊರತು ಮನೆಗೆ ತಡವಾಗಿ ಬರುವ ಅವನ ಸ್ವಾತಂತ್ರ್ಯವನ್ನಲ್ಲ. ಆದರೆ ಅದೇ ಹೆಣ್ಣು ಮಗಳು ಸಕಾರಣಕ್ಕಾಗಿ ಮನೆಗೆ ತಡವಾಗಿ ಬರುತ್ತಿದ್ದಾಳೆ ಎಂದರೆ ನಾವು ವರ್ತಿಸುವ ರೀತಿಯಿದೆಯಲ್ಲಾ, ಅದನ್ನು ಗಮನಿಸಬೇಕು. ನಾವು ಮೊಟ್ಟಮೊದಲು ಆಕೆಯ ವ್ಯಕ್ತಿತ್ವವನ್ನೇ ಸಂಶಯಿಸುತ್ತೇವೆ, ಆಕೆಯ ಆತ್ಮಗೌರವವನ್ನೇ ನಾವು ಅನುಮಾನಿಸುತ್ತೇವೆ. ಆಕೆಯನ್ನು ಹೊರಗೇ ಹೋಗದ ಹಾಗೆ ಕಟ್ಟು ನಿಟ್ಟು ಮಾಡುತ್ತೇವೆ. ಆಕೆಯ ಎಲ್ಲಾ ಖಾಸಗಿ ಸಂಗತಿಗಳಲ್ಲಿ ಮೂಗು ತೂರಿಸುತ್ತೇವೆ. ನಮ್ಮ ಮನಸ್ಥಿತಿ ಹೀಗಿರುವಾಗ ಹೆಣ್ಣು ಮಕ್ಕಳು ಗಂಡಿನ ಸರಿಸಮಾನವಾಗಿ ಸ್ವೇಚ್ಛೆಗಿಳಿಯುವುದು ಸ್ವಾತಂತ್ರ್ಯದ ಅಭಿವ್ಯಕ್ತಿಯಾಗುತ್ತದೆಯೇ?

ಪೊಳ್ಳು ಸ್ತ್ರೀವಾದವನ್ನು ಭಾಷಣಗಳಲ್ಲಿ ಗಂಟಾಘೋಷವಾಗಿ ಉದ್ಗರಿಸುವ ‘ಲೇಡಿ’ಗಳಿಗೆ ಒಂದು ಸಂಗತಿ ಮನವರಿಕೆಯಾಗಬೇಕು. ಮಹಿಳೆಯ ಮೇಲಿರುವ ನೈತಿಕ ಜವಾಬುದಾರಿಗಳು, ಆಕೆಯ ಮೇಲಿರುವ ಕಟ್ಟುನಿಟ್ಟು, ಆಕೆಯ ವ್ಯಕ್ತಿತ್ವಕ್ಕಿರುವ ಸಭ್ಯತೆಯ ಎಲ್ಲೆ ಎಲ್ಲವನ್ನೂ ನಿರ್ಧರಿಸುವಲ್ಲಿ ಪುರುಷರು ಎಷ್ಟು ಪ್ರಮಾಣದಲ್ಲಿ ಕಾರಣಕರ್ತರೋ ಅದೇ ಪ್ರಮಾಣದಲ್ಲಿ ಮಹಿಳೆಯರೂ ಕಾರಣಕರ್ತರು. ಅಸಭ್ಯವಾಗಿ ವರ್ತಿಸುವ ಮಗಳನ್ನು ಹದ್ದುಬಸ್ತಿನಲ್ಲಿಡಲು ತಂದೆ ಎಷ್ಟು ಪ್ರಯತ್ನ ಮಾಡುತ್ತಾನೋ ಅದರಷ್ಟೇ ಹೆಚ್ಚು ಕಾಳಜಿಯನ್ನು, ಕಠಿಣತೆಯನ್ನು ತಾಯಿಯೂ ತೋರುತ್ತಾಳೆ. ಒಂದು ಕಾಲದಲ್ಲಿ ಅತ್ತೆಯ ಕಟ್ಟುನಿಟ್ಟಿನಲ್ಲಿ ಉಸಿರುಗಟ್ಟಿದ ಭಾವವನ್ನು ಅನುಭವಿಸುವ ಹೆಣ್ಣುಮಗಳೇ ಮುಂದೆ ತನ್ನ ಮಗನಿಗೆ ಹೆಣ್ಣನ್ನು ತಂದಾಗ ಆಕೆಯ ಮೇಲೆ ಕಟ್ಟುನಿಟ್ಟು ಮಾಡುತ್ತಾಳೆ. ಆಕೆಯ ಮೇಲೆ ಇನ್ನಿಲ್ಲದ ನಿಗಾ ಇಡುತ್ತಾಳೆ. ನಮ್ಮ ಸಮಾಜದಲ್ಲಿ ಹೆಣ್ಣು ಅವಕಾಶ ವಂಚಿತೆ ಎಂಬುದು ಸೂರ್ಯನಷ್ಟೇ ಸತ್ಯವಾದ ಸಂಗತಿ. ಆದರೆ ಇದಕ್ಕೆ ಪುರುಷರ ದಬ್ಬಾಳಿಕೆ ಎಷ್ಟರ ಮಟ್ಟಿಗೆ ಕಾರಣವೋ, ಅಷ್ಟೇ ಮಹಿಳೆಯರೂ ಕಾರಣ. ವಾಸ್ತವ ಸ್ಥಿತಿ ಹೀಗಿರುವಾಗ ವಿವೇಚನೆಯಿಲ್ಲದೆ ಎಲ್ಲಕ್ಕೂ ಪುರುಷರನ್ನೇ ಅಪರಾಧಿಯಾಗಿ ನಿಲ್ಲಿಸಿ ಏಕಪಕ್ಷೀಯವಾದ ಜಡ್ಜ್ ಮೆಂಟುಗಳನ್ನು ಹೊರಡಿಸುವುದು ಸರಿಯೇ?

ಸಮಾಜ ಸೃಷ್ಟಿಸಿರುವ ಸಿದ್ಧ ಮಾದರಿಗಳಿಗೆ ಸ್ತ್ರೀಯರಷ್ಟೇ ಪುರುಷರೂ ಬಾಧ್ಯರಾಗಿದ್ದಾರೆ. ಒಬ್ಬ ಹುಡುಗನನ್ನು ನಾವು ಪೋಲಿ ಎನ್ನುವುದಕ್ಕೂ, ಒಬ್ಬ ಹುಡುಗಿಯನ್ನು ಆಕೆ ಸ್ವಲ್ಪ ಸಡಿಲ ಎನ್ನುವುದಕ್ಕೂ ವ್ಯತ್ಯಾಸವಿದೆ. ಹೀಗಾಗಿಯೇ ಶೀಲವೆಂಬುದು ಕೇವಲ ಹೆಣ್ಣಿಗೆ ಸಂಬಂಧಿಸಿದ ಸಂಗತಿಯಾಗಿದೆ. ಸಭ್ಯತೆ, ಮರ್ಯಾದೆ, ಸೌಜನ್ಯಗಳು ಸಮಾಜ ಹೆಣ್ಣಿನ ಮೇಲೆ ಹೇರಿರುವ ಸಂಕೋಲೆಗಳು. ಒಂದು ವೇಳೆ ಇವು ಕೇವಲ ಸಂಕೋಲೆಗಳು ಎಂಬ ಅರಿವು ಹೆಣ್ಣಿನಲ್ಲಿದ್ದರೆ ಅವುಗಳನ್ನು ಮುರಿದು ಮುಕ್ತರಾಗುವ ಸಾಧ್ಯತೆಯಿರುತ್ತಿತ್ತು, ಆದರೆ ದುರದೃಷ್ಟದ ಸಂಗತಿಯೆಂದರೆ ಹೆಣ್ಣು ಸಮಾಜ ವಿಧಿಸಿದ ಈ ಸಂಕೋಲೆಗಳನ್ನು ಆಭರಣಗಳನ್ನಾಗಿ ಧರಿಸಿಕೊಂಡು ಓಡಾಡುತ್ತಿದ್ದಾಳೆ. ಅವುಗಳನ್ನು ಮೆರೆಸುವ, ಗೌರವ, ಹೆಮ್ಮೆ ಪಟ್ಟುಕೊಳ್ಳುವ ವಸ್ತುವಾಗಿ ಆಕೆ ಪರಿಗಣಿಸಿದ್ದಾಳೆ. ಹೀಗಾಗಿಯೇ ಒಬ್ಬ ಹೆಣ್ಣನ್ನು ಪತಿವೃತೆ, ಸತಿಯೇ ದೇವರು ಎಂದು ನಂಬಿಕೊಂಡಾಕೆ ಎಂದಾಗ ಆ ಹೆಣ್ಣಿಗೆ ಸಮಾಜದಲ್ಲಿ ಗೌರವ ದೊರೆಯುತ್ತದೆ, ಆಕೆಗೆ ಆ ಬಗ್ಗೆ ಹೆಮ್ಮೆಯೆನಿಸುತ್ತದೆ.

ಹೀಗೆ ಆಕೆ ತನ್ನ ವ್ಯಕ್ತಿತ್ವದ ಘನತೆಗೆ ಸಮಾಜವನ್ನು ಅವಲಂಬಿಸಿರುವಾಗ, ಸರಪಳಿಗಳನ್ನೇ ಆಭರಣಗಳೆಂದು ಭಾವಿಸಿರುವಾಗ ಅವುಗಳನ್ನು ಮೀರಲು ಮಾಡಿದ ಪ್ರಯತ್ನಗಳು ಸಮಾಜದ ಕಣ್ಣಿಗೆ ಅನಾರೋಗ್ಯಕರವಾಗಿ ಕಾಣುತ್ತದೆ. ಹೆಣ್ಣು ಪ್ರಚೋದನಕಾರಿಯಾಗಿ ಬಟ್ಟೆ ತೊಡುವುದರಿಂದ, ಸಿಗ್ಗಿಲ್ಲದ ಹಾಗೆ ವರ್ತಿಸುವುದರಿಂದ, ಗಂಡುಗಳಿಗೆ ಸಮಾನವಾಗಿ ಮದ್ಯಪಾನ, ಸಿಗರೇಟು ಸೇದುತ್ತಾ ನಿಲ್ಲುವುದರಿಂದ ಆಕೆ ಪುರುಷರನ್ನು ಆಕರ್ಷಸಿವುದು, ಪ್ರಚೋದಿಸುವುದಲ್ಲದೆ ತನ್ನ ವ್ಯಕ್ತಿತ್ವವನ್ನೇ ತಾನು ಕೀಳು ಮಟ್ಟಕ್ಕೆ ಎಳೆದುಕೊಂಡಂತಾಗುತ್ತದೆ. ಇಲ್ಲಿ ತುಂಬಾ ಸೂಕ್ಷ್ಮವಾಗಿ ಗಮನಿಸಬೇಕಾದ ಅಂಶವೆಂದರೆ, ಅಡಸಾಬಡಸಾ ಬಿಹೇವಿಯರ್ ಇರುವ ಹೆಣ್ಣು ಕೇವಲ ಗಂಡಸಿನ ಕಣ್ಣಿಗೆ ಅಗ್ಗವಾಗಿ ಕಾಣಿಸುವುದಿಲ್ಲ, ಉಳಿದ ಹೆಣ್ಣುಗಳ ನಡುವೆಯೂ ಆಕೆಯ ಅಗ್ಗವಾದ ಇಮೇಜು ಚಾಲ್ತಿಯಲ್ಲಿರುತ್ತದೆ. ಹೀಗಾಗಿ ಆಕೆಯ ಅಂತಃಸತ್ವ ಹೇಗೇ ಇದ್ದರೂ ಸಹ ತೊಡುವ ಬಟ್ಟೆಯಿಂದ ಹುಟ್ಟುವ ವ್ಯಕ್ತಿತ್ವವಿದೆಯಲ್ಲಾ, ಅದು ಅಗ್ಗದ್ದಾಗಿರುತ್ತದೆ.

ಸಭ್ಯತೆಯ ಮಾನದಂಡ ದೇಶ, ಕಾಲಗಳಿಗೆ ತಕ್ಕಂತೆ ಬದಲಾಗುವಂಥದ್ದು ಎಂಬುದು ಎಲ್ಲರೂ ಒಪ್ಪಿಕೊಳ್ಳಬೇಕಾದ ಸಂಗತಿ. ಆದರೆ ಹೆಣ್ಣು ತಾನು ತೊಡುವ ಬಟ್ಟೆಯ ಬಗ್ಗೆ ಯೋಚಿಸುವಾಗ ಅಷ್ಟೆಲ್ಲಾ ವೈಚಾರಿಕವಾಗಿ ಚಿಂತಿಸುವ ಅಗತ್ಯವಿಲ್ಲ. ಕಳ್ಳಕಾಕರು ಹೆಚ್ಚಿರುವ ಪ್ರದೇಶದಲ್ಲಿ, ನಿರ್ಜನವಾದ ರಸ್ತೆಯಲ್ಲಿ ಹೊತ್ತು ಕಳೆದ ಮೇಲೆ ಸಂಚರಿಸುವ ಸಂದರ್ಭದಲ್ಲಿ ನಾವು ಸಹಜವಾಗಿ ನಮ್ಮ ಎಚ್ಚರಿಕೆಯಿಂದ ಬೆಲೆಬಾಳುವ ವಾಚು, ರಿಂಗು, ಚೈನು, ಮೊಬೈಲುಗಳನ್ನು ಒಳಕಿಸೆಗಳಲ್ಲಿಟ್ಟುಕೊಂಡು ಜೋಪಾನ ಮಾಡಿಕೊಳ್ಳುತ್ತೇವಲ್ಲಾ, ಬಸ್ಸಿನಲ್ಲಿ ದೂರ ಪ್ರಯಾಣ ಮಾಡುವಾಗ, ರೈಲಿನಲ್ಲಿ ಹೋಗುವಾಗ ಹಣವನ್ನೆಲ್ಲಾ ಕಳ್ಳ ಜೇಬಿನಲ್ಲಿಟ್ಟುಕೊಳ್ಳುತ್ತೇವಲ್ಲಾ ಹಾಗೆ ಹೆಣ್ಣು ತನ್ನ ದೈಹಿಕ ಪಾವಿತ್ರ್ಯಕ್ಕೆ ಪ್ರಾಮುಖ್ಯತೆ ಕೊಡುವುದಾದರೆ ಹಾಗೂ ಅದಕ್ಕೆ ಸಮಾಜ ಕೊಡುವ ಬೆಲೆಯನ್ನು ನಂಬಿಕೊಂಡವಳಾದರೆ ಆಕೆ ತನ್ನ ಹುಷಾರಿನಲ್ಲಿ ತಾನಿರಬೇಕು. Of course, ಕಳ್ಳತನ ಮಾಡುವುದು, ಪಿಕ್ ಪಾಕೆಟ್ ಮಾಡುವುದು ಅಪರಾಧವೇ, ಅದರಲ್ಲಿ ತೊಡಗಿದವರನ್ನು ಶಿಕ್ಷಿಸುವುದಕ್ಕಾಗಿಯೇ ಕಾನೂನು, ಪೊಲೀಸು,ಕೋರ್ಟುಗಳಿರುವುದು ಹಾಗಂತ ನಮ್ಮ ರಕ್ಷಣೆಯನ್ನು ನಾವು ನಿರ್ಲಕ್ಷಿಸುವುದಕ್ಕೆ ಸಾಧ್ಯವೇ? ಇದನ್ನು ಹೆಣ್ಣು ತನ್ನ ಸುರಕ್ಷತೆಗಾಗಿ ತಾನು ಕಂಡುಕೊಳ್ಳಬೇಕಾದ ಉಪಾಯವೆಂದು ಕಾಣಬೇಕೇ ಹೊರತು ತನಗೆ ಸಮಾಜ ವಿಧಿಸಿದ ಕಟ್ಟಳೆ ಎಂದು ಭಾವಿಸಬಾರದು. ಹಾಗೆ ಭಾವಿಸಿದಾಗ ಅದನ್ನು ಮೀರುವ ಹುಚ್ಚು ಉನ್ಮಾದ ಬೆಳೆಯುತ್ತದೆ. ಏನಂತೀರಿ?

ಈ ಸಂಚಿಕೆಯ ಡಿಬೇಟಿನ ವಿಷಯ “ವ್ಯವಸ್ಥೆ ಮನುಷ್ಯನ ಬೆಳವಣಿಗೆಗೆ ಮಾರಕವೇ, ಪೂರಕವೇ?” ವ್ಯವಸ್ಥೆ ಮನುಷ್ಯನ ಸಹಜವಾದ ಜೀವನೊಲ್ಲಾಸವನ್ನು ಕಟ್ಟಿಹಾಕುವ ಸೆರೆಮನೆ ಎಂದು ವಾದಿಸಿದ್ದಾರೆ ‘ಅಂತರ್ಮುಖಿ’.

ನಿಮ್ಮ ಅಭಿಪ್ರಾಯವೇನು ತಿಳಿಸ್ತೀರಲ್ಲಾ?

ಮನುಷ್ಯ ನಿಸರ್ಗದಿಂದ ದೂರಾದ ಪ್ರಕ್ರಿಯೆಯ ಮೊದಲ ಹಂತವೇ ವ್ಯವಸ್ಥೆ. ಭೂಮಿಯ ಮೇಲಿನ ಸಕಲೆಂಟು ಜೀವ ಜಂತುಗಳು ಸಹಬಾಳ್ವೆಯಿಂದ ಜೀವಿಸುವುದಕ್ಕೆ ಪ್ರಕೃತಿ ತನ್ನದೇ ಆದ ನಿಯಮಗಳನ್ನು ರೂಪಿಸಿದೆ. ಇದರಲ್ಲಿ ಪ್ರತಿಯೊಂದು ಜೀವಿಗೂ ಪ್ರತ್ಯೇಕವಾದ ಅಸ್ತಿತ್ವವಿದೆ. ಅವಕ್ಕೆ ಪ್ರಕೃತಿ ಕೊಡಮಾಡಿದ ತಮ್ಮವೇ ಆದ ಸಾಮರ್ಥ್ಯಗಳಿವೆ, ದೌರ್ಬಲ್ಯಗಳಿವೆ. ಮನುಷ್ಯ ಪ್ರಕೃತಿಯ ಅನುಸಾರವಾಗಿ ನಡೆದುಕೊಳ್ಳಲು ಇರುವ ಏಕೈಕ ಅಡ್ಡಿಯೆಂದರೆ ಪ್ರಕೃತಿ ವಿಧಿಸುವ ಮಿತಿಗಳು. ಈ ಎಲ್ಲಾ ಮಿತಿಗಳನ್ನು ಮೀರುವ ತುಡಿತ, ಜೀವನೋಲ್ಲಾಸವಿರುವ ಮನುಷ್ಯ ಸ್ವಭಾವತಃ ಯಾವ ವ್ಯವಸ್ಥೆಗೂ ಬಂಧಿತನಲ್ಲ. ಆತನ ಚೈತನ್ಯ ಸೀಮೆಯನ್ನು ಅರಿಯದಂಥದ್ದು. ಮನುಷ್ಯನಿಗೆ ಯಾವ ಕೌಶಲ್ಯವೂ ಹುಟ್ಟಿನಿಂದಲೇ ತಾನೇ ತಾನಾಗಿ ಕೈಗೂಡುವುದಿಲ್ಲ. ಆಗ ತಾನೆ ತಾಯ ಗರ್ಭದಿಂದ ಹೊರಬಂದ ಆಡಿನ ಮರಿ ತನ್ನ ಕಾಲ ಮೇಲೆ ತಾನು ನಿಂತು ಬಿಡಬಲ್ಲದು. ಆಹಾರ ಹುಡುಕಿ ಹೊರಟು ಬಿಡಬಲ್ಲದು. ಇದು ಪ್ರಕೃತಿ ನಿರ್ದೇಶಿತ. ಆದರೆ ಅದೇ ಆಡಿನ ಮರಿಗೆ ಪ್ರಕೃತಿ ವಿಧಿಸಿದ ಮಿತಿಯನ್ನು ಮೀರಿ ನಡೆಯುವ ಜೀವನೋಲ್ಲಾಸ ಇರುವುದಿಲ್ಲ. ಮನುಷ್ಯ ಬೇರೆಲ್ಲಾ ಜೀವಿಗಳಿಗಿಂತ ವಿಭಿನ್ನವಾಗಿರುವುದು ಇದೇ ಕಾರಣಕ್ಕೆ.

ಮನುಷ್ಯ ಚೇತನಕ್ಕೆ ಪ್ರಕೃತಿಯ ಮಿತಿಗಳನ್ನು, ಎಲ್ಲೆಯನ್ನು ಮೀರುವ ಜೀವನೊಲ್ಲಾಸವಿರುವುದು ಮಾತ್ರವಲ್ಲ, ಆತನ ಚೇತನವನ್ನು ಯಾವ ಬೇಲಿಯೂ ಕಟ್ಟಿಹಾಕಲಾರದು. ಆತನ ಮೂಲ ಸ್ವಭಾವ ಅನಿಕೇತನವಾದದ್ದು. ಮನೆಯನ್ನೆಂದೂ ಕಟ್ಟದೆ ಪರಿಪೂರ್ಣತೆಯ ಗುರಿಯೆಡೆಗೆ ಸಾಗುವುದು. ಆದರೆ ಮನುಷ್ಯ ಚೇತನದ ಜೀವನೋಲ್ಲಾಸಕ್ಕೆ, ಸಹಜವಾದ ಅಭಿವ್ಯಕ್ತಿಗೆ ಎಲ್ಲೆಯೇ ಇರದಿದ್ದರೆ ಆತನನ್ನು ನಿಯಂತ್ರಿಸಲಾಗದು, ಆತನನ್ನು ಬಗ್ಗಿಸಲು ಸಾಧ್ಯವಾಗದು ಎಂಬುದನ್ನು ಮನುಷ್ಯನೇ ಕಂಡುಕೊಂಡ. ಪ್ರಕೃತಿಯ ನಿಯಮಗಳನ್ನೇ ಮೀರಿದ ಮನುಷ್ಯ ತನ್ನ ಚೇತನದ ಅನಂತತೆಗೆ ತಾನೇ ಹೆದರಿ ಅದಕ್ಕೊಂದು ಅಣೆಕಟ್ಟು ಕಟ್ಟಿದ. ಧುಮ್ಮಿಕ್ಕಿ ಹರಿಯಬೇಕಾದ ಚೈತನ್ಯಕ್ಕೆ ಬಲವಾದ ತಡೆಗೋಡೆ ನಿರ್ಮಿಸಿ ಚೇತನವನ್ನು ಬಂಧಿಸುವ ಪ್ರಯತ್ನ ಮಾಡಿದ. ಒಂದು ಹಂತದವರೆಗೆ ಇದು ಆತನಿಗೆ ಒಳ್ಳೆಯ ಫಲವನ್ನೇ ನೀಡಿತು. ಸ್ವಚ್ಛಂದವಾಗಿ ಹರಿಯಬೇಕಾದ ಮನುಷ್ಯನ ಪ್ರಜ್ಞೆಗೆ ಅಣೆಕಟ್ಟು ಕಟ್ಟಿ ಅದನ್ನು ಮಿತವಾಗಿ ಹರಿಸುವ ವ್ಯವಸ್ಥೆ ಆತನಿಗೆ ತಕ್ಕ ಪ್ರತಿಫಲವನ್ನೂ ನೀಡಿತ್ತು. ಆದರೆ ಆ ಅಣೆಕಟ್ಟಿನ ಬಾಗಿಲುಗಳನ್ನು ಯಾವ ದಿಕ್ಕಿಗೆ ತೆರೆಯಬೇಕು, ಹರಿವು ಎಷ್ಟಿರಬೇಕು ಎನ್ನುವುದನ್ನು ತೀರ್ಮಾನಿಸಲು ತಮ್ಮಲ್ಲೇ ಒಬ್ಬನನ್ನು ಯಾವಾಗ ನೇಮಿಸಿಕೊಂಡನೋ ಅಲ್ಲಿಂದಲೇ ಅವನತಿ ಪ್ರಾರಂಭವಾಯಿತು.spirituality4.jpg

ವ್ಯವಸ್ಥೆ ಕುರುಡು. ಅದಕ್ಕೆ ಸಹಜತೆ ಕಾಣಿಸುವುದಿಲ್ಲ. ಇದಕ್ಕೊಂದು ಸರಳವಾದ ಉದಾಹರಣೆಯನ್ನು ಕೊಡುತ್ತೇನೆ ಕೇಳಿ, ವ್ಯವಸ್ಥೆಯ ರೀತಿ-ರಿವಾಜುಗಳು ಯೂನಿಫಾರಂ ಇದ್ದಂತೆ. ಸಹಸ್ರಾರು ಮಂದಿಗೆ ಒಂದೇ ರೀತಿಯ ಅಪಿಯರೆನ್ಸ್ ಕೊಡುವುದಕ್ಕಾಗಿ ಯೂನಿಫಾರಂ ಬಳಕೆ ಬಂದಂತೆ ವ್ಯವಸ್ಥೆ ರೂಪುಗೊಳ್ಳುತ್ತದೆ. ಯೂನಿಫಾರಮ್ಮಿನ ಬಣ್ಣ ಒಂದೇ ತೆರನಾದರೂ, ಯೂನಿಫಾರಂನ ಬಟ್ಟೆ ಒಂದೇ ಗುಣಮಟ್ಟದ್ದಾದರೂ ಅದರ ಅಳತೆ ಆಯಾಯ ವ್ಯಕ್ತಿಗೆ ತಕ್ಕನಾಗಿರಬೇಕು ಅಲ್ಲವೇ? ವ್ಯವಸ್ಥೆ ಎಡವಿದ್ದೇ ಇಲ್ಲಿ. ಎಲ್ಲರಿಗೂ ಒಂದೇ ಯೂನಿಫಾರಂ ಕೊಡುವ ಭರದಲ್ಲಿ ಅದು ಒಂದೇ ಸೈಜಿನ ಯೂನಿಫಾರಂಗಳನ್ನು ಹೊಲಿದು ಕೊಡುತ್ತದೆ. ಅಳತೆ ಸೂಕ್ತವಾದವರಿಗೆ ಆ ಯೂನಿಫಾರಂ ತಮಗೆ ಬೇಕಾದ ಎಲ್ಲಾ ಐಶಾರಾಮವನ್ನು ಕೊಡುತ್ತದೆ.ಕೆಲವರಿಗೆ ಅದು ಕೊಂಚ ಬಿಗ್ಗ ಬಿಗಿಯಾದರೆ ಮತ್ತೆ ಕೆಲವರಿಗೆ ದೊಗಲೆ ದೊಗಲೆಯಾಗುತ್ತದೆ. ಕುರುಡಾದ ವ್ಯವಸ್ಥೆ ತಪ್ಪನ್ನು ಯೂನಿಫಾರಂ ಮೇಲೆ ಹಾಕುವುದಿಲ್ಲ, ಯೂನಿಫಾರಮ್ಮಿನ ಅಳತೆಗೆ ಸರಿಯಾಗಿಲ್ಲದ ವ್ಯಕ್ತಿಗಳ ಮೇಲೆ ತಪ್ಪು ಹೊರಿಸುತ್ತದೆ. ವ್ಯಕ್ತಿಯ ಅಳತೆಗೆ ಅನುಗುಣವಾಗಿ ಯೂನಿಫಾರಂ ಹೊಲಿಯುವ ಬದಲಾಗಿ ಯೂನಿಫಾರಂನ ಅಳತೆಗೆ ವ್ಯಕ್ತಿಯನ್ನು ಮಿತಿಗೊಳಿಸುವ ಪ್ರಯತ್ನ ಮಾಡುತ್ತದೆ ವ್ಯವಸ್ಥೆ. ಈ ಹಂತದಲ್ಲೇ ಇದು ಮನುಷ್ಯನ ಜೀವನೋಲ್ಲಾಸಕ್ಕೆ, ಮಿತಿಯಿಲ್ಲದ ಚೇತನಕ್ಕೆ ಸೆರೆಮನೆಯಾಗುವುದು.

ಸೂಕ್ಷ್ಮವಾಗಿ ಗಮನಿಸಿ ನೋಡಿ, ಈ ಯೂನಿಫಾರಂನ ಉದಾಹರಣೆ ಎಷ್ಟು ಸಮರ್ಥವಾಗಿ ನಮ್ಮ ವ್ಯವಸ್ಥೆಯ ಗುಣ ಸ್ವಭಾವವನ್ನು ಪ್ರತಿನಿಧಿಸಬಲ್ಲದು. ಸಹಜವಾದ ಪ್ರತಿಭೆಯಿರುವ, ಹೆಚ್ಚಿನ ಬುದ್ಧಿ ಮಟ್ಟವಿರುವ ಮಕ್ಕಳು ಪರೀಕ್ಷೆಯಲ್ಲಿ ಅಂಕಗಳಿಸಲಾರದೆ ಮೂರ್ಖರೆನ್ನಿಸಿಕೊಳ್ಳುತ್ತಾರೆ. ಮಕ್ಕಳ ಸಹಜವಾದ ಬುದ್ಧಿ ಶಕ್ತಿಗೆ, ಸಾಮರ್ಥ್ಯಕ್ಕೆ ತಕ್ಕಹಾಗೆ ಶಿಕ್ಷಣ ವ್ಯವಸ್ಥೆ ರೂಪಿಸಿ ಅವರ ಬುದ್ಧಿವಂತಿಕೆಯನ್ನು ಬೆಳೆಸುವ, ಒರೆಗೆ ಹಚ್ಚುವ ಕೆಲಸ ಮಾಡುವ ಬದಲು ನಾವು ನಮ್ಮ ಶಿಕ್ಷಣ ವ್ಯವಸ್ಥೆಗೆ ಅನುಗುಣವಾಗಿ ಮಗುವಿನ ಬುದ್ಧಿವಂತಿಕೆಯನ್ನೇ, ಪ್ರತಿಭೆ, ಆಸಕ್ತಿಗಳನ್ನೇ ರೂಪಿಸುವ ತಪ್ಪು ಮಾಡುತ್ತಿದ್ದೇವೆ. ಬುದ್ಧಿವಂತ ಮಗು ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸದಿದ್ದರೆ ಅದು ವ್ಯವಸ್ಥೆಯ ಲೋಪವಾಗುವುದರ ಬದಲು ಮಗುವಿನ ಲೋಪವಾಗಿ, ಅಪರಾಧವಾಗಿ ಕಾಣುತ್ತದೆ. ತರಗತಿಯಲ್ಲಿ ಅತ್ಯಂತ ಮಂದ ಮತಿಯ ವಿದ್ಯಾರ್ಥಿ ಎಂದು ಹೆಸರುಗಳಿಸಿದ್ದ ಆಲ್ಬರ್ಟ್ ಐನ್‌ಸ್ಟೀನ್, ಮೂರ್ಖ ಎಂದು ಶಿಕ್ಷಕರಿಂದ ಮೂದಲಿಸಲ್ಪಟ್ಟಿದ್ದ ಥಾಮಸ್ ಅಲ್ವಾ ಎಡಿಸನ್ ಜಗತ್ತೇ ತಲೆಬಾಗುವ ಬುದ್ಧಿವಂತರಾಗಿ ಮಿಂಚಿದ್ದು ವ್ಯವಸ್ಥೆಯನ್ನು ಮೀರಿದ್ದರಿಂದ. ಇದನ್ನೇ ಹೆಸರಾಂತ ಚಿಂತಕರೊಬ್ಬರು, ‘ನಾನು ಪರೀಕ್ಷೆಯಲ್ಲಿ ಫೇಲ್ ಆಗಲಿಲ್ಲ. ಪರೀಕ್ಷೆ ನನ್ನನ್ನು ಪರೀಕ್ಷಿಸುವಲ್ಲಿ ಫೇಲ್ ಆಯಿತು’ ಎಂದು ವ್ಯವಸ್ಥೆಯ ವಿಪರ್ಯಾಸವನ್ನು ವಿವರಿಸಿದ್ದಾರೆ.

ವ್ಯವಸ್ಥೆ ನಿಂತಿರುವುದೇ ಅದನ್ನು ಪಾಲಿಸುವವರ ದೌರ್ಬಲ್ಯಗಳ ಮೇಲೆ. ಮೂಲದಲ್ಲಿ ಒಂದೇ ಆಗಿರುವ ಸತ್ಯವನ್ನು ಕಾಣುವ, ಪರಿಪೂರ್ಣತೆಯನ್ನು ಕಂಡುಕೊಳ್ಳುವ ಸಾಮರ್ಥ್ಯವಿರದ ಜನರಿರುವುದರಿಂದಲೇ ಹತ್ತಾರು ಧರ್ಮಗಳು ಬದುಕಿರುವುದು. ಇಡೀ ಮನುಷ್ಯ ಕುಲ ಒಂದೇ ಸತ್ಯದೆಡೆಗೆ ಮುಖ ಮಾಡಿರುವುದು ಎಂಬ ಅರಿವನ್ನು ಪಡೆಯಲಾಗದಿರುವುದರಿಂದಲೇ ಸಾವಿರಾರು ಪಂಥಗಳು ಉಸಿರಾಡುತ್ತಿರುವುದು. ಹೆಣ್ಣು ಗಂಡಿನ ನಡುವಿನ ಸಂಬಂಧ ಕೇವಲ ಲೈಂಗಿಕ ಹಸಿವಿನ ಪೂರೈಕೆಗಷ್ಟೇ ಅಲ್ಲದೆ, ಆತ್ಮಗಳ ಸಮ್ಮಿಲನಕ್ಕೆ, ಸಂತಾನ ಪೋಷಣೆಗೆ ಎಂಬ ಸತ್ಯವನ್ನು ಅರಗಿಸಿಕೊಳ್ಳಲಾಗದಿರುವುದರಿಂದಲೇ ನಮ್ಮ ಸಮಾಜಕ್ಕೆ ಮದುವೆ ಎಂಬ ವ್ಯವಸ್ಥೆಯ ಆವಶ್ಯಕತೆ ಕಂಡಿದ್ದು. ಮನುಷ್ಯನಿಗೆ ತನ್ನ ಅರಿ ಷಡ್ವರ್ಗವನ್ನು ನಿಯಂತ್ರಿಸಿಕೊಳ್ಳುವ ಸಾಮರ್ಥ್ಯ ಇಲ್ಲ ಎಂಬ ಅರಿವಾದಾಗಲೇ ಪೊಲೀಸು, ನ್ಯಾಯಾಲಯ, ಕಾನೂನಿನ ನೆರವು ಬೇಕಾಯಿತು. ಮನುಷ್ಯನ ಪ್ರೀತಿಗೆ,ಹೃದಯದ ಮಿಡಿತಕ್ಕೆ ಎಲ್ಲೆಯನ್ನು ವಿಧಿಸಲಾಗದು ಎಂಬ ಸೂಕ್ಷ್ಮವನ್ನು ಅರಿಯಲು ಮನುಷ್ಯ ಎಡವಿರುವುದರಿಂದಲೇ ಪಾತಿವ್ರತ್ಯ, ಏಕ ಪತಿ ವ್ರತಸ್ಥನ ಆದರ್ಶಗಳನ್ನು ರೂಪಿಸಿಕೊಂಡಿರುವುದು. ಒಂದು ವೇಳೆ ಈ ಮಿತಿಗಳನ್ನು ಮೀರಿದ ಮನುಷ್ಯ ಚೇತನಗಳು ಭೂಮಿಯಲ್ಲಿ ಜನಿಸಿದರೆ ವ್ಯವಸ್ಥೆಯನ್ನು ಆತನ ಸತ್ಯಕ್ಕೆ ಅನುಗುಣವಾಗಿ ಬೆಳೆಸಿ ವಿಸ್ತರಿಸುವ ಬದಲು ಆ ಚೇತನಗಳನ್ನೇ ನಿರ್ನಾಮ ಮಾಡುವ ಮೂಲಕ ವ್ಯವಸ್ಥೆಯೆ ನೆಮ್ಮದಿಗೆ ಯಾವ ತೊಂದರೆಯೂ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ಯೇಸು ಕ್ರಿಸ್ತ ಶಿಲುಬೆಯೇರಬೇಕಾದ್ದು ಇದಕ್ಕಾಗಿಯೇ, ಸಾಕ್ರಟಿಸ್ ವಿಷ ಕುಡಿದು ಪ್ರಾಣ ನೀಗಬೇಕಾದ್ದು ಈ ಕಾರಣಕ್ಕಾಗಿಯೇ. ಚರ್ಚು ದಾರ್ಶನಿಕರನ್ನು, ವಿಜ್ಞಾನಿಗಳನ್ನು ಕೊಲ್ಲುತ್ತಿದ್ದದ್ದು ವ್ಯವಸ್ಥೆಯ ಅಮಲಿನಿಂದಾಗಿಯೇ.

ವ್ಯವಸ್ಥೆಯೆಂಬುದು ಕೋಮಲವಾದ ಸಸಿಯನ್ನು ಹೊರಗಿನ ಶಕ್ತಿಗಳಿಂದ, ದನ ಕರುಗಳಿಂದ ರಕ್ಷಿಸುವ ಬೇಲಿಯಾಗಿ ಮಾತ್ರ ಕೆಲಸ ಮಾಡಬೇಕು. ಸಸಿ ಮರವಾಗಿ ಬೆಳೆಯಲು, ಸಾವಿರಾರು ಹಸಿರು ಎಲೆಗಳನ್ನು, ಹೂವು ಹಣ್ಣುಗಳನ್ನು ತೊಟ್ಟು ನಿಂತುಕೊಳ್ಳಲು ಸಹಾಯಕವಾಗಬೇಕು. ಆದರೆ ನಾವು ಕಟ್ಟಿಕೊಂಡಿರುವ ವ್ಯವಸ್ಥೆಯು ಸಸಿಯ ಬೆಳವಣಿಗೆಗೆ ಅಡ್ಡಿಯಾಗುವ ಸೆರೆಮನೆಯಾಗಿದೆ. ಆ ಸೆರೆಮನೆಯ ಬಲಿಷ್ಠ ಗೋಡೆಗಳೊಳಗೆ ಸಸಿಯು ಜೀವ ಕಳೆದುಕೊಂಡು ಮುರುಟಿಹೋಗುತ್ತಿದೆ. ಇದೇ ವ್ಯವಸ್ಥೆಯ ದುರಂತ!


Technorati : , ,

ಈ ಸಂಚಿಕೆಯ ಡಿಬೇಟಿನ ವಿಷಯ “ವ್ಯವಸ್ಥೆ ಮನುಷ್ಯನ ಬೆಳವಣಿಗೆಗೆ ಮಾರಕವೇ, ಪೂರಕವೇ?” ವ್ಯವಸ್ಥೆ ಮನುಷ್ಯನನ್ನು ತನ್ನದೇ ಕ್ರೂರತೆ, ದೌರ್ಬಲ್ಯಗಳಿಂದ ರಕ್ಷಿಸುವ ಕೋಟೆಯಿದ್ದಂತೆ ಎಂದು ವಾದಿಸಿದ್ದಾರೆ ಸುಪ್ರೀತ್.ಕೆ.ಎಸ್.

ನಿಮ್ಮ ಅಭಿಪ್ರಾಯವೇನು ತಿಳಿಸ್ತೀರಲ್ಲಾ?

ವ್ಯವಸ್ಥೆಯು ಮನುಷ್ಯನ ಸಮಗ್ರವಾದ ಅಭಿವ್ಯಕ್ತಿಗೆ ತೊಡಕಾಗುತ್ತದೆಯೇ ಇಲ್ಲವೇ ಎಂದು ಚರ್ಚಿಸುವ ಮೊದಲು ವ್ಯವಸ್ಥೆಯ ಹುಟ್ಟಿಗೆ ಕಾರಣವಾದ ಸಂಗತಿಗಳನ್ನು ಗಮನಿಸೋಣ. ಈ ಭೂಮಿಯ ಮೇಲಿರುವ ಯಾವ ಪ್ರಕ್ರಿಯೆಗಳನ್ನೇ ಗಮನಿಸಿ, ಅಲ್ಲಿ ವ್ಯವಸ್ಥೆಯೆಂಬುದು ಎದ್ದು ಕಾಣುತ್ತದೆ. ಇಡೀ ವಿಶ್ವ ನಡೆಯುತ್ತಿರುವುದು ಅಗೋಚರವಾದ ವ್ಯವಸ್ಥೆಯ ಮೇಲೆ. ಸೂರ್ಯನ ಸುತ್ತ ಗ್ರಹಗಳು ವ್ಯವಸ್ಥಿತವಾಗಿ ಸುತ್ತುಹಾಕುತ್ತಿರುವುದರಿಂದಲೇ ಭೂಮಿಯ ಮೇಲೆ ಜೀವದ ಉಗಮ ಸಾಧ್ಯವಾದದ್ದು. ಭೂಮಿಯಲ್ಲಿ ಹಗಲು ರಾತ್ರಿಗಳೆಂಬ ವ್ಯವಸ್ಥೆಗೆ ಅನುಗುಣವಾಗಿ ಜೀವಿಗಳು ಹಾಗೂ ಅವುಗಳ ಜೀವನ ವಿಧಾನ ರೂಪುಗೊಂಡಿದೆ. ಪ್ರಕೃತಿಯಲ್ಲಿರುವಷ್ಟು ಸುಸಜ್ಜಿತವಾದ ವ್ಯವಸ್ಥೆಯನ್ನು ಮಾನವ ಆದರ್ಶವಾಗಿ ಇಟ್ಟುಕೊಳ್ಳಬಹುದು ಅಷ್ಟು ವ್ಯವಸ್ಥಿತವಾದ ಪ್ರಕ್ರಿಯೆಗಳು ಪ್ರಕೃತಿಯಲ್ಲಿ ನಡೆಯುತ್ತವೆ. ಎಲ್ಲೋ ಬಿದ್ದ ಬೀಜದಿಂದ ಹುಟ್ಟಿದ ಹುಲ್ಲಿಗೆ ಸಿಗುವ ಸೂರ್ಯನ ಬೆಳಕು, ಮಳೆಯ ನೀರು, ಮಣ್ಣಿನ ಸತ್ವದಿಂದ ಅದು ಪೌಷ್ಟಿಕವಾಗಿ ಬೆಳೆಯುತ್ತದೆ. ಅದನ್ನು ತಿನ್ನುವ ಮೊಲಗಳ ಹಿಂಡನ್ನೇ ಆಹಾರಕ್ಕಾಗಿ ಅವಲಂಬಿಸಿದ ಮಾಂಸಾಹಾರಿ ಮೃಗಗಳಿರುತ್ತವೆ. ಆ ಮಾಂಸಾಹಾರಿಗಳ ಸಂಖ್ಯೆ ವಿಪರೀತವಾಗಬಾರದೆನ್ನುವ ಎಚ್ಚರಿಕೆ ಅವುಗಳ ಸಂತಾನೋತ್ಪತ್ತಿಯ ಮಿತಿಯನ್ನು ನಿಗಧಿಪಡಿಸುತ್ತದೆ. ಪ್ರತಿಯೊಂದಕ್ಕೂ ಅರ್ಹವಾದ ಪ್ರಾಮುಖ್ಯತೆ ಹಾಗೂ ಸ್ಥಾನವನ್ನು ಕೊಟ್ಟು ಸಲಹುವ ಶಕ್ತಿಯಿರುವುದು ವ್ಯವಸ್ಥೆಗೆ.

ಪ್ರಾಕೃತಿಕವಾದ ವ್ಯವಸ್ಥೆಗೆ ಅನುಗುಣವಾಗಿ ನಡೆಯಲು ಪ್ರಜ್ಞೆಯ ಆವಶ್ಯಕತೆಯಿಲ್ಲ. ಪ್ರಾಣಿಗಳ ಹಾಗೆ ಪ್ರಕೃತಿಯ ನಿಯಮಗಳಿಗನುಸಾರವಾಗಿ ಸಾಗಲು ಬುದ್ಧಿ ಶಕ್ತಿ, ವಿವೇಚನಾ ಸಾಮರ್ಥ್ಯದ ಅಗತ್ಯತೆಯಿಲ್ಲ. ಆದರೆ ಮನುಷ್ಯ ಬುದ್ಧಿ ಜೀವಿ ಆತನಿಗೆ ವಿವೇಚನೆಯ ಶಕ್ತಿಯಿದೆ. ಆತ ಪ್ರಕೃತಿಯ ನಿಯಮಗಳಿಗೆ ತಲೆಬಾಗಲು ಆತನ ಪ್ರಜ್ಞೆ ಬಿಡುವುದಿಲ್ಲ. ಸದಾ ಆತನಿಗೆ ಮೀರುವ, ಕಾಣದ್ದನ್ನು ಹಿಡಿಯುವ ಹಂಬಲ. ಹೀಗಾಗಿ ಆತ ಪ್ರಕೃತಿ ವಿಧಿಸುವ ನಿಯಮಗಳಿಗೆ ಬದ್ಧನಾದವನಲ್ಲ. ಆತ ಸ್ವಚ್ಛಂದ ಜೀವಿ.

ಒಮ್ಮೆ ಹೀಗೆ ಸ್ವಚ್ಛಂದತೆಯ ರುಚಿ ಕಂಡ ಮನುಷ್ಯನಿಗೆ ಪ್ರಕೃತಿಯ ಮತ್ತಷ್ಟು ನಿಯಮಗಳನ್ನು ಮುರಿಯುತ್ತಾ ತನ್ನ ಮನಸ್ಸು ಎಳೆದ ಕಡೆಗೆ ಸಾಗುವ ಹಂಬಲ ತೀವ್ರವಾಗಲಾರಂಭಿಸುತ್ತದೆ. ಬರುಬರುತ್ತಾ ಆತನ ಸ್ವಚ್ಛಂದತೆ ಇತರರ ಪಾಲಿನ ನೆಮ್ಮದಿಯ ತೆರಿಗೆಯನ್ನು ಬಯಸಲು ಶುರು ಮಾಡುತ್ತದೆ. ಆಗಲೇ ಅನಾಹುತದ ಪ್ರಕ್ರಿಯೆ ಶುರುವಾಗುವುದು. ಒಬ್ಬ ಮನುಷ್ಯನ ಸ್ವಾತಂತ್ರ್ಯದ ಧ್ವಜ ಇನ್ನೊಬ್ಬನ ಶವದ ಮೇಲೆ ಹಾರಾಡಬಾರದಲ್ಲವಾ? ಈ ಕಾರಣಕ್ಕಾಗಿ ಮನುಷ್ಯನಿಗೆ ತನ್ನನ್ನೇ ತಾನು ನಿಯಂತ್ರಿಸಿಕೊಳ್ಳುವ, ತನ್ನ ಸ್ವಾತಂತ್ರ್ಯ ಹಾಗೂ ಸ್ವಚ್ಛಂದತೆ ಮತ್ತೊಬ್ಬನ ಸ್ವಾತಂತ್ರ್ಯ ಹರಣ ಮಾಡದ ಹಾಗೆ ಎಚ್ಚರ ವಹಿಸುವ ಸಲುವಾಗಿ ವ್ಯವಸ್ಥೆಯ ಆವಶ್ಯಕತೆ ಎದ್ದು ಕಂಡಿತು. ಮನುಷ್ಯನ ವೈಯಕ್ತಿಕ ವ್ಯಕ್ತಿತ್ವಕ್ಕೆ ಸಾಮಾಜಿಕ ಆಯಾಮವೂ ದೊರೆಯಲು ಪ್ರಾರಂಭವಾಯಿತು. ಒಂದು ಆದರ್ಶಯುತ ವ್ಯವಸ್ಥೆಯನ್ನು ರೂಪಿಸಿಕೊಳ್ಳುವೆಡೆ ಮನುಷ್ಯನ ನಿರಂತರ ಅನ್ವೇಷಣೆ ನಡೆಯುತ್ತಲೇ ಇದೆ. ಪರಿಪೂರ್ಣತೆಯನ್ನು ಬೆನ್ನಟ್ಟುತ್ತಾ ಮನುಷ್ಯ ಸಾಗುತ್ತಲೇ ಇದ್ದಾನೆ.Untitled picture.png

ಒಂದು ವ್ಯವಸ್ಥೆಯಲ್ಲಿ ಎಷ್ಟೇ ಕುಂದುಗಳಿದ್ದರೂ ವ್ಯವಸ್ಥೆಯ ಆವಶ್ಯಕತೆ ಮನುಷ್ಯನಿಗೆ ಇದ್ದೇ ಇದೆ. ಇದಕ್ಕೆ ಒಂದು ಸರಳವಾದ ಉದಾಹರಣೆಯನ್ನು ಕೊಡುತ್ತೇನೆ ಕೇಳಿ. ಪ್ರಕೃತಿಯಲ್ಲಿರುವ ಪ್ರತಿಯೊಂದು ಜೀವಿಗೂ ತನ್ನದೇ ಆದ ಸಾಮರ್ಥ್ಯವಿದೆ ಹಾಗೂ ತನ್ನದೇ ಆದ ದೌರ್ಬಲ್ಯಗಳಿವೆ. ಒಂದು ಪ್ರಾಣಿಯ ಬದುಕು ತನ್ನ ಸಾಮರ್ಥ್ಯದ ಮೇಲೆ ಹಾಗೂ ಇತರರ ದೌರ್ಬಲ್ಯದ ಮೇಲೆ ಅವಲಂಬಿತವಾಗಿದೆ. ಕಾಡಿನಲ್ಲಿ ಬೆಳೆದ ಹಸಿರು-ಹುಲ್ಲು ತಿಂದು ಬೆಳೆಯುವ ಮೊಲಕ್ಕೆ ತಾನು ಸಸ್ಯಾಹಾರಿಯಾಗಿರುವುದು ತನ್ನ ಬದುಕಿನ ಪ್ಲಸ್ ಪಾಯಿಂಟ್ ಆದರೆ ತಾನು ಹುಲಿಯಷ್ಟು ಬಲಶಾಲಿಯಾಗದಿರುವುದು ಅದಕ್ಕೆ ಆಪತ್ತು. ಇನ್ನು ಹುಲಿಗೋ, ಮೊಲದಂತಹ ಪ್ರಾಣಿಗಳ ಮೇಲೆರಗಿ ಅವುಗಳ ರಕ್ತ ಹೀರುವಷ್ಟು ಕಸುವು ಮೈಯಲ್ಲಿರುವುದೇ ವರವಾದರೆ, ಯಥೇಚ್ಛವಾಗಿರುವ ಸಸ್ಯ ಆಹಾರವನ್ನು ದಕ್ಕಿಸಿಕೊಳ್ಳಲಾಗದ ದೌರ್ಬಲ್ಯವೇ ಶಾಪ.ಸಾಮರ್ಥ್ಯದ ಜೊತೆಗೆ ದೌರ್ಬಲ್ಯ, ಶಕ್ತಿಯ ಜೊತೆಗೆ ಬಲಹೀನತೆ ಇದ್ದಾಗಲೇ ಈ ಎರಡೂ ವರ್ಗದ ಪ್ರಾಣಿಗಳ ಬದುಕು ಸಾಧ್ಯವಾಗುವುದು.

ಆದರೆ ಮನುಷ್ಯನ ವಿಚಾರದಲ್ಲಿ ಪ್ರಕೃತಿ ಕೊಂಚ ಉದಾರತೆಯನ್ನು ತೋರಿದೆ. ತಾನಾಗಿ ಆಯ್ದು ಸಾಮರ್ಥ್ಯ, ದೌರ್ಬಲ್ಯಗಳನ್ನು ನಿರ್ಧರಿಸಿದೆ ನಮ್ಮ ನಮ್ಮ ಪರಿಶ್ರಮ, ವಿವೇಕಕ್ಕೆ ಅನುಗುಣವಾಗಿ ಬೆಳೆಯಲು ಅನುವು ಮಾಡಿಕೊಟ್ಟಿದೆ. ಅನಂತ ಅವಕಾಶಗಳನ್ನು ನಮ್ಮ ಮುಂದೆ ಇಟ್ಟಿದೆ. ಹುಲಿಯ ಮರಿಯೊಂದು ಬೆಳೆಯುತ್ತಾ ಬೆಳೆಯುತ್ತಾ ಬೇಟೆ ಆಡುವುದರಲ್ಲಿ ತನ್ನ ಕೌಶಲ್ಯವನ್ನು ಬೆಳೆಸಿಕೊಳ್ಳುತ್ತಾ ಹೋಗಬಹುದೇ ವಿನಃ ಅದು ಎಂದಿಗೂ ತನ್ನ ಆಹಾರ ಬೇಟೆ ಆಡಿಕೊಡಲು ಗುಲಾಮರಾಗಿ ನರಿಯನ್ನೋ, ತೋಳಗಳನ್ನೋ ಬಳಸಿಕೊಳ್ಳುವ ಆಲೋಚನೆ ಮಾಡಲಾಗದು. ಮನುಷ್ಯನ ಪಾಲಿಗೆ ವರವಾಗಿಯೂ, ಶಾಪವಾಗಿಯೂ ಲಭ್ಯವಾಗಿರುವುದೇ ಈ ಸವಲತ್ತು. ಪ್ರಕೃತಿ ನೀಡಿರುವ ವಿವೇಕ, ಸ್ವತಂತ್ರ ಆಲೋಚನಾಶಕ್ತಿಯಿಂದಾಗಿ ಮನುಷ್ಯ ಹೆಚ್ಚು ಹೆಚ್ಚು ಬುದ್ಧಿವಂತನಾದಷ್ಟೂ ಹೆಚ್ಚು ಮೋಸಗಾರನಾಗುತ್ತಾ ಹೋಗುತ್ತಾನೆ. ಪರಿಪೂರ್ಣತೆಯ ಹಾದಿಯಲ್ಲಿ ಸಾಗುವ ಉಮ್ಮೇದಿಯೇ ಇರದ ಸಹಸ್ರಾರು ಜೀವಜಂತುಗಳ ಹಾಗೆ ಮನುಷ್ಯನೂ ಇದ್ದಿದ್ದರೆ ಯಾವ ತೊಂದರೆಯೂ ಇರುತ್ತಿರಲಿಲ್ಲ. ಆದರೆ ಪ್ರಕೃತಿ ಮನುಷ್ಯನಿಗೆ ಆ ಹಸಿವಿನ ಬೆಂಕಿಯನ್ನು ಹಚ್ಚಿ ಕಳುಹಿಸಿದೆ. ಹೀಗೆ ಎಲ್ಲರೂ ತಮ್ಮ ಪರಿಪೂರ್ಣತೆಯ ಹಸಿವನ್ನು ಇಂಗಿಸಿಕೊಳ್ಳಲು ಹೊರಟಾಗ ಸ್ಪರ್ಧೆಯೆಂಬುದು ಅನಿವಾರ್ಯ. ಎತ್ತರೆತ್ತರಕ್ಕೆ ಹೋದವನು ಕೆಳಗಿನವನ ಶೋಷಣೆಯನ್ನು ಮಾಡಲು ಶುರುಮಾಡುತ್ತಾನೆ. ಇದನ್ನು ಹೀಗೇ ಬಿಟ್ಟರೆ ಮನುಷ್ಯ ಭಸ್ಮಾಸುರನ ಹಾಗೆ ತನ್ನ ತಲೆಯ ಮೇಲೆ ತಾನೇ ಕೈಯಿಟ್ಟುಕೊಂಡು ಭಸ್ಮವಾಗುತ್ತಾನೆ. ಈ ಅಪಾಯದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಮನುಷ್ಯ ವ್ಯವಸ್ಥೆಯ ಮೊರೆ ಹೋಗುತ್ತಾನೆ.

ವ್ಯವಸ್ಥೆ ಮನುಷ್ಯನದೇ ಸೃಷ್ಟಿಯಾದರೂ ಅದನ್ನಾತ ತನ್ನ ಧೀಶಕ್ತಿಗಿಂತ ಹೆಚ್ಚು ಬಲಿಷ್ಠವಾಗಿಸುವಲ್ಲಿ, ಶಕ್ತಿಶಾಲಿಯಾಗಿಸುವಲ್ಲಿ, ಸಮರ್ಥವಾಗಿಸುವಲ್ಲಿ ಸದಾ ಕಾರ್ಯಶೀಲನಾಗಿರುತ್ತಾನೆ. ಏಕೆಂದರೆ ಈ ವ್ಯವಸ್ಥೆಗೆ ಇಡೀ ಮಾನವ ಸಮಾಜವನ್ನು ನಿಯಂತ್ರಿಸುವ ಶಕ್ತಿ ಬೇಕು. ಅತಿ ಬಲಿಷ್ಠನ ಕಾಲ್ತುಳಿತದಿಂದ ಅತಿ ದುರ್ಬಲನಾದವನನ್ನು ರಕ್ಷಿಸಲು ವ್ಯವಸ್ಥೆಗೆ ಬಲಿಷ್ಠನಿಗಿಂತ ಹೆಚ್ಚಿನ ಶಕ್ತಿಬೇಕು. ವ್ಯವಸ್ಥೆಯ ಹಲ್ಲುಗಳು ಹೆಚ್ಚು ಹರಿತವಾಗಿರಬೇಕು. ಈ ನಿಟ್ಟಿನಲ್ಲಿ ಸಾಗುವಾಗ ವ್ಯವಸ್ಥೆ ಕೊಂಚ ಕ್ರೂರಿಯಾಗಬೇಕಾಗುತ್ತದೆ, ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವಾಗ ವ್ಯವಸ್ಥೆಯ ಮುಳ್ಳಿನ ಮೊನಚು ಕೋಮಲವಾದ ಹೂವಿನ ಪಕಳೆಗಳ ಕೆನ್ನೆಯನ್ನು ಗೀರಲೂ ಬಹುದು. ಇದು ವ್ಯವಸ್ಥೆ ತಂದೊಡ್ಡುವ ಅನಿವಾರ್ಯತೆ.

ವ್ಯವಸ್ಥೆ ಬಹುಪಾಲು ಮಂದಿ ವಾದಿಸುವಂತೆ ಜಡವಲ್ಲ. ಅದು ನಿತ್ಯ ಚಲನೆಯಲ್ಲಿರುವಂಥದ್ದು. ವ್ಯವಸ್ಥೆಗೆ ಸ್ವತಂತ್ರವಾದ ಅಸ್ತಿತ್ವವಿಲ್ಲ. ಅದು ಅದನ್ನೊಪ್ಪಿಕೊಂಡ ಮಾನವ ಸಮೂಹದ ಅಡಿಯಾಳು. ಅವರ ಮರ್ಜಿಯಂತೆ ಅದು ಕೆಲಸ ಮಾಡುತ್ತದೆ. ಒಂದು ವ್ಯವಸ್ಥೆಯಲ್ಲಿನ ಕುಂದು, ಕೊರತೆ, ಅನ್ಯಾಯಗಳಿಂದ ಕುದ್ದ ಜನ ಸಮೂಹ ಕ್ರಾಂತಿಗೆ ಕೈ ಹಾಕುತ್ತದೆ ಹೊಸ ವ್ಯವಸ್ಥೆಗೆ ನಾಂದಿ ಹಾಡುತ್ತದೆ. ಹೊಸತಾಗಿ ಕಟ್ಟಿಕೊಂಡ ವ್ಯವಸ್ಥೆ ಸ್ವಲ್ಪ ಕಾಲ ಹಳೆಯ ವ್ಯವಸ್ಥೆ ಮಾಡಿ ಹೋದ ಗಾಯಗಳಿಗೆ ಮುಲಾಮು ಸವರುವ ಕೆಲಸ ಮಾಡುತ್ತದೆ, ಆದರೆ ಕಾಲಾ ನಂತರ ಹೊಸ ವ್ಯವಸ್ಥೆಯ ಹಲ್ಲುಗಳೂ ಹರಿತವಾದಷ್ಟು ಅದು ಉಂಟು ಮಾಡುವ ಗಾಯಗಳಿಂದಾಗಿ ಮತ್ತೊಂದು ಹೊಸ ವ್ಯವಸ್ಥೆಯ ಆವಶ್ಯಕತೆ ಹುಟ್ಟಿಕೊಳ್ಳುತ್ತದೆ. ಜಮೀನ್ದಾರೀ ವ್ಯವಸ್ಥೆಯ ಉಪಟಳದಿಂದ ಬೇಸತ್ತ ರಷ್ಯಾ ಅಪ್ಪಿಕೊಂಡ ಕಮ್ಯುನಿಸಂನ ಮುಷ್ಠಿಯಿಂದ ಪಾರಾಗಲಿಕ್ಕೆ ಪಟ್ಟ ಪಾಡು ಇಲ್ಲಿ ಉಲ್ಲೇಖಾರ್ಹ.

ವ್ಯವಸ್ಥೆಯೆಂಬುದು ನಮ್ಮ ರಕ್ಷಣೆಗಾಗಿ ನಾವು ನಮ್ಮ ಸುತ್ತ ಕಟ್ಟಿಕೊಂಡ ಕೋಟೆ. ಆದರೆ ಅದೇ ನಮ್ಮನ್ನು ಬಂಧಿಸಿಡಬಲ್ಲ ಸೆರೆಮನೆಯಾಗಬಹುದು. ಕೋಟೆಯ ಬಲಿಷ್ಠವಾದ ನಾಲ್ಕು ಗೋಡೆಗಳು ಸೆರೆಮನೆಯ ಗೋಡೆಗಳಾಗಬಹುದು. ಎಲ್ಲರಲ್ಲೂ ಸೆರೆಮನೆಯ ಗೋಡೆಗಳನ್ನು ಜಜ್ಜಿ ಪುಡಿ ಪುಡಿ ಮಾಡಿ ಹೊರಕ್ಕೆ ಹಾರುವ ತುಡಿತವಿರುತ್ತದೆಯಾದರೂ ಕೋಟೆಯಿಂದ ಹೊರಬಂದು ವಿಶಾಲ ಬಯಲಿನಲ್ಲಿ ಇತರರ ಬಾಣಗಳಿಗೆ ನೇರ ಗುರಿಯಾಗಿ ನಿಲ್ಲುವ ಶಕ್ತಿ ಹಲವರಲ್ಲಿರುವುದಿಲ್ಲ. ಆದರೆ ಕೆಲವರು ತಮ್ಮ ಚೈತನ್ಯಕ್ಕೆ ಸೆರೆಮನೆಯಾಗಿ ಪರಿಣಮಿಸಿದ ಕೋಟೆಯ ಗೋಡೆಗಳನ್ನು ಕೆಡವಿ ಹಾಕುವ ಪ್ರಯತ್ನ ಮಾಡುತ್ತಾರೆ. ವ್ಯವಸ್ಥೆಯಿಂದ ಹೊರಗೆ ಜಿಗಿಯುವ ಸಾಹಸಕ್ಕೆ ಕೈ ಹಾಕುತ್ತಾರೆ. ಅಲ್ಲಿ ಬೇಗನೇ ಶತ್ರುವಿನ ಬಾಣಗಳಿಗೆ, ನಮ್ಮದೇ ಕೋಟೆಯ ಕಲ್ಲುಗಳ ಏಟಿಗೆ ಬಲಿಯಾಗುವ ಅಪಾಯವಿದೆಯಾದರೂ ಅವರಿಗೆ ಸೆರೆಮನೆಯಲ್ಲಿ ಬಾಳು ದೂಡುವುದಕ್ಕಿಂತ ಹೊರಗೆ ಬರುವ ಪ್ರಯತ್ನದಲ್ಲಿ ಸಾರ್ಥಕತೆ ಕಾಣುವ ಹಂಬಲವಿರುತ್ತದೆ. ಅಂಥವರನ್ನು ಯಾವ ವ್ಯವಸ್ಥೆಯೂ ಬಂಧಿಸಿಡಲಾರದು! ಆದರೆ ನಮ್ಮ ದುರದೃಷ್ಟವೆಂದರೆ ನಮ್ಮ ನಡುವೆ ಅಂಥ ಚೇತನಗಳು ಇರುವುದು ಕೇವಲ ಬೆರಳೆಣಿಕೆಯಷ್ಟು ಮಾತ್ರ!


Technorati : ,


Blog Stats

  • 71,866 hits
ಮಾರ್ಚ್ 2023
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 12345
6789101112
13141516171819
20212223242526
2728293031  

Top Clicks

  • ಯಾವುದೂ ಇಲ್ಲ