Archive for the ‘ಝೆನ್ ಕತೆ’ Category
ಝೆನ್ ಕಥೆಗಳು
Posted ಜೂನ್ 15, 2009
on:ಕಣ್ಣು ಮಿಟುಕಿಸದೆ
ಆಂತರಿಕ ಯುದ್ಧಗಳಲ್ಲಿ ತೊಡಗಿದ್ದ ಜಪಾನಿನಲ್ಲಿ ಸೈನ್ಯ ಊರೊಂದಕ್ಕೆ ನುಗ್ಗಿದರೆ ಕೈಗೆ ಸಿಕ್ಕವರನ್ನೆಲ್ಲ ಕೊಂದು ಊರನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದ್ದರು. ಆ ಒಂದು ಹಳ್ಳಿಯಲ್ಲಿನ ಜನರು ಸೈನ್ಯ ಆಕ್ರಮಣ ಮಾಡುವ ಮುನ್ನವೇ ತಮ್ಮ ಸಾಮಾನು ಸರಂಜಾಮುಗಳನ್ನು ಕಟ್ಟಿಕೊಂಡು ಪಲಾಯನ ಗೈದಿದ್ದರು.
ಹಳ್ಳಿಗೆ ದಾಳಿಯಿಟ್ಟ ಸೈನ್ಯಕ್ಕೆ ಬರಿದಾದ ಮನೆಗಳು, ಮಾರುಕಟ್ಟೆಗಳು ಕಂಡವು. ಆದರೆ ಒಂದು ವಿಹಾರದಲ್ಲಿ ವಯಸ್ಸಾದ ಒಬ್ಬ ಝೆನ್ ಗುರು ಮಾತ್ರ ಉಳಿದಿದ್ದ. ಆ ವೃದ್ಧ ಗುರುವಿನ ಬಗ್ಗೆ ಕುತೂಹಲ ಉಂಟಾಗಿ ಸೈನ್ಯದ ದಂಡನಾಯಕ ಆತನನ್ನು ನೋಡಲು ವಿಹಾರಕ್ಕೆ ಬಂದ.
ದಂಡನಾಯಕನನ್ನು ಕಂಡೂ ಗುರುವು ವಿಚಲಿತನಾಗಲಿಲ್ಲ. ತನ್ನನ್ನು ಕಂಡು ನಡುಗುವ, ಮಂಡಿಯೂರಿ ಕುಳಿತುಕೊಳ್ಳುವವರನ್ನೇ ಎಲ್ಲೆಡೆ ಕಂಡಿದ್ದ ದಂಡನಾಯಕನಿಗೆ ಕೋಪ ನೆತ್ತಿಗೇರಿತು.
“ಮೂರ್ಖ! ನೀನು ಯಾರ ಎದುರು ನಿಂತಿದ್ದೀಯ ಅಂತ ಗೊತ್ತಿದೆಯಾ? ಕಣ್ಣು ಮಿಟುಕಿಸದೆ ನಾನು ನಿನ್ನ ಕತ್ತು ಸೀಳಿಹಾಕಬಲ್ಲೆ” ದಂಡನಾಯಕ ಅಬ್ಬರಿಸಿದ.
ಗುರು ತಣ್ಣನೆಯ ಧ್ವನಿಯಲ್ಲಿ ಉತ್ತರಿಸಿದ, “ನೀನು ಯಾರ ಎದುರು ನಿಂತಿದ್ದೀಯ ಅಂತ ತಿಳಿದಿದೆಯಾ? ಕಣ್ಣು ಮಿಟುಕಿಸದೆ ನಾನು ನಿನ್ನ ಕತ್ತಿಗೆ ಕತ್ತು ಒಡ್ಡಬಲ್ಲೆ.”
ಈಗ ಹೇಗಿದೆ
ಸುಪ್ರಸಿದ್ಧ ಝೆನ್ ದೇವಾಲಯವೊಂದರಲ್ಲಿ ಯುವಕ ಸನ್ಯಾಸಿಯೊಬ್ಬನಿಗೆ ತೋಟವನ್ನು ನೋಡಿಕೊಳ್ಳುವ ಕೆಲಸ ಕೊದಲಾಗಿತ್ತು. ಅವನಿಗೆ ಹೂಗಳು, ಗಿಡಮರಗಳು ಎಂದರೆ ಬಹಳ ಪ್ರೀತಿ, ಅದಕ್ಕೇ ಆ ಕೆಲಸ ಕೊಟ್ಟಿದ್ದರು. ಆ ದೇವಸ್ಥಾನದ ಪಕ್ಕದಲ್ಲಿ ಇನ್ನೊಂದು ಹಳೆಯ ಪುಟ್ಟ ದೇವಸ್ಥಾನವಿತ್ತು. ಅಲ್ಲೊಬ್ಬ ವಯಸ್ಸಾದ ಝೆನ್ ಗುರು ಇದ್ದ.
ಒಂದು ದಿನ ಈ ಸುಪ್ರಸಿದ್ಧ ದೇವಾಲಯಕ್ಕೆ ಯಾರೋ ಅತಿಥಿಗಳುಬರುವರಿದ್ದರು. ಯುವಕ ಸನ್ಯಾಸಿ ಹೆಚ್ಚು ಎಚ್ಚರಿಕೆಯಿಂದ ತೋಟದ ಕೆಲಸ ಮಾಡುತ್ತಿದ್ದ. ಕಳೆಗಳನ್ನು ಕಿತ್ತ, ತರಗೆಲೆಗಳನ್ನೆಲ್ಲ ಗುಡಿಸಿದ, ಮುಳ್ಳಿನ ಪೊದೆಗಳನ್ನು ಸವರಿದ, ಸೊಟ್ಟ ಪಟ್ಟ ಬೆಳೆದಿದ್ದ ಬಳ್ಳಿಗಳನ್ನು ನೇರ ಮಾಡಿದ…ಹೀಗೇ. ತೋಟ ಅತ್ಯಂತ ಸ್ವಚ್ಛವಾಗಿಬಿಟ್ಟಿತ್ತು. ಇದನ್ನೆಲ್ಲ ಪಕ್ಕದ ಪುಟ್ಟ ದೇವಾಲಯದ ಮುದುಕ ಸನ್ಯಾಸಿ ಕುತೂಹಲದಿಂದ ನೋಡುತ್ತಿದ್ದ. ಎರಡೂ ದೇವಾಲಯಗಳ ನಡುವೆ ಪುಟ್ಟ ಗೋಡೆ ಇತ್ತು.
ಕೆಲಸ ಮುಗಿಸಿದ ಯುವಕ ಸನ್ಯಾಸಿ ಹೆಮ್ಮೆಯಿಂದ "ಹೇಗಿದೆ? ಚೆನ್ನಾಗಿದೆ ಅಲ್ಲವೇ?" ಎಂದು ಕೇಳಿದ. ವೃದ್ಧ ಸನ್ಯಾಸಿ ತನ್ನ ಕೆಲಸ ಮೆಚ್ಚುವನೆಂಬ ವಿಶ್ವಾಸ ಅವನಿಗೆ.
"ಓಹೋ, ಚೆನ್ನಾಗಿದೆ! ಆದರೆ ಏನೋ ಕೊರತೆ ಅನ್ನಿಸುತ್ತದೆ. ದಯವಿಟ್ಟು ಈ ಗೋಡೆ ಹತ್ತಿ ಬರುವುದಕ್ಕೆ ಸಹಾಯಮಾಡು, ಸರಿ ಮಾಡಿಕೊಡುತ್ತೇನೆ" ಅಂದ ವೃದ್ಧ.
ಕೊಂಚ ಹಿಂಜರಿದರೂ ಯುವಕ ಸನ್ಯಾಸಿ ವೃದ್ಧನು ಗೋಡೆ ಏರಿ ಬರುವುದಕ್ಕೆ ಸಹಾಯ ಮಾಡಿದ. ಸರಿ, ವೃದ್ಧ ನೇರವಾಗಿ ತೋಟದ ನಡುವೆ ಇದ್ದ ಮರದ ಬಳಿಗೆ ಹೋದ. ಜೋರಾಗಿ ಮರವನ್ನು ಹಿಡಿದು ಅಲುಗಿಸಿದ. ದಳದಳನೆ ಮರದೆಲೆಗಳು ಸುತ್ತಲೆಲ್ಲ ನೆಲದ ಮೇಲೆ ಉದುರಿ ಬಿದ್ದವು. "ನೋಡಿದೆಯಾ, ಈಗ ಹೇಗಿದೆ? ಸರಿ, ನನ್ನನ್ನು ಆಚೆಕಡೆಗೆ ಕಳಿಸು" ಎಂದ ವೃದ್ಧ.
ಈ ಕ್ಷಣ
ಜಪಾನಿನ ಯೋಧನೊಬ್ಬ ಯುದ್ಧದಲ್ಲಿ ಬಂಧಿತನಾಗಿ ಸೆರೆಮನೆಗೆ ತಳ್ಳಲ್ಪಟ್ಟ. ಆ ರಾತ್ರಿ ಆತನಿಗೆ ನಿದ್ದೆ ಹತ್ತಲಿಲ್ಲ. ಮರುದಿನವನ್ನು ನೆನೆಸಿಕೊಂಡು ಆತ ಕಂಗಾಲಾಗಿದ್ದ. ಮರುದಿನ ತನಗೆ ಎದುರಾಗಲಿರುವ ಹಿಂಸೆ, ಅವಮಾನಗಳನ್ನು ನೆನೆದು ಆತ ಆತಂಕಗೊಂಡಿದ್ದ. ಆಗ ಆತನಿಗೆ ತನ್ನ ಝೆನ್ ಗುರುವಿನ ಮಾತುಗಳು ನೆನಪಾದವು,
“ನಾಳೆ ಎಂಬುದು ಸತ್ಯವಲ್ಲ. ಅದೊಂದು ಮಾಯೆ. ಈ ಕ್ಷಣ ಎಂಬುದು ಮಾತ್ರ ಸತ್ಯ.”
ಯೋಧ ಗುರುವಿನ ಮಾತುಗಳನ್ನು ಮನನ ಮಾಡುತ್ತ ತನ್ನೊಳಗಿಳಿಸಿಕೊಂಡ. ಆತನ ಮನಸ್ಸು ಶಾಂತವಾಯಿತು, ಕೂಡಲೆ ನಿದ್ದೆಗೆ ಜಾರಿದ.
ಇತ್ತೀಚಿನ ಟಿಪ್ಪಣಿಗಳು