ಕಲರವ

Archive for the ‘ಕವಿತೆಗೊಂದು ತಾವು’ Category

– ರಂಜಿತ್ ಅಡಿಗ, ಕುಂದಾಪುರ.

ಒಮ್ಮೆಯಾದರೂ ಈ ಸಂಬಂಧಗಳಾಳಕ್ಕೆ
ಇಣುಕಲೇ ಬೇಕು

ಅದು ಈರುಳ್ಳಿ ಸಿಪ್ಪೆ ಸುಲಿದಂತೆ

ಮೊನ್ನೆಮೊನ್ನೆಯವರೆಗೂ ತನ್ನ
ಜೀವಕ್ಕಿಂತ ಹೆಚ್ಚು ಪ್ರೀತಿಸ್ತೀನಿ ಅಂತ
ಒದ್ದೆ ಕಣ್ಣಾಲಿಗಳಿಂದ ಹೇಳಿದ ಗೆಳತಿ
4tmbಕಮ್ಮಿ ಮಾರ್ಕ್ಸು ಬಂದರೆ
ಮನೆಯಿಂದ ಓಡಿಸ್ತೀನಿ ಎಂದು
ಸಿಕ್ಕಾಪಟ್ಟೆ ಬೈದ ಅಪ್ಪ

ಕ್ಯಾಂಪಸ್ಸಿನಲ್ಲಿ ಕೆಲಸ
ಸಿಗಲಿಲ್ಲವೆಂದೊಮ್ಮೆ ಸುಮ್ಮನೆ
ಪರೀಕ್ಷೆ ಮಾಡಲು ಹೇಳಿದ ಕೂಡಲೇ
ಕೆಲಸ ಸಿಗದವನನ್ನು ಮದ್ವೆಯಾಗ್ತೀನಂತ
ಹ್ಯಾಗೆ ತನ್ನಪ್ಪನನ್ನು ಒಪ್ಪಿಸಬೇಕು
ನೀ ನನ್ನ ಮರೆಯಲೇಬೇಕು
ಎಂದು ತನ್ನ ಜೀವವನ್ನೇ ಕಡೆಗಣಿಸಿದಳಾಕೆ

ಮನೆಯನ್ನು ಒತ್ತೆಯಿಡೋಣ
ರಿಟಾಯರ್ಮೆಂಟ್ ಹಣವೂ ಬರಬಹುದು
ಸ್ವಂತ ಬಿಸಿನೆಸ್ಸು ಆರಂಭಿಸು ಮಗನೇ ಅನ್ನುವನು ಅಪ್ಪ

ಎರಡೂ ಮಾತಿಗೂ ಉಕ್ಕಿದ್ದು
ಕಣ್ಣೆದುರಿಗಿನ
ಪರದೆ ಜಾರಿಸೋ ಕಣ್ಣಿರೇ.

-ರಂಜಿತ್ ಅಡಿಗ , ಕುಂದಾಪುರ.

ಮೂರು ಕಾಸಿತ್ತು ಕೊಂಡ ವಸ್ತು
ಎಲ್ಲೆಂದರೆ ಅಲ್ಲೇ ಬಿದ್ದುಕೊಂಡಿತ್ತು
ಎರಡು ಹನಿ ಉಸಿರು ತುಂಬಿದರೆ
ತನ್ನೊಳಗನು ಅರಿಯಿತು, ಎಚ್ಚೆತ್ತಿತು ಆತ್ಮ

Baloon-7-28-03

ಉಸಿರಿಗೆಲ್ಲ ಬೆಲೆಯಿಲ್ಲ ಎಂದು ನೊಂದು
ಸಾಯಿಸಿಕೊಳ್ಳುವವರನು ನಾಚಿಸುತ್ತ
ಸ್ವತಃ ಬೆಲೆಯ ಮಟ್ಟವನು ಸೂಚಿಸುತ್ತ
ಎತ್ತರೆತ್ತರ ಏರುತಿತ್ತು,ಆಗಸವನೇ ತಲುಪುವತ್ತ

ಯಮನ ಜೋಳಿಗೆಯಂತೆ ಗರ್ಭದೊಳು
ಮುದುಡಿದ ಮಗುವಿನಂತೆ
ತೇಲುತ್ತ ಹಾರುತ್ತ ಆಗುತ್ತ ಚುಕ್ಕಿ

ಸುತ್ತಲಿನ ಜನರೆಲ್ಲ ನೋಡಿ
ಉಸಿರು ಹೋಯಿತು, ಉಸಿರು ಹೋಯಿತು
ಎಂದೆಸೆದರು ಉದ್ಗಾರವನು!

****

ಜ್ಞಾನಮೂರ್ತಿ, ಬೆಂಗಳೂರು.


ಮಣ್ಣಲ್ಲಿ ಮಣ್ಣಾಗಿ ಹೋಗುವ ಮುನ್ನ,
ಧರಿತ್ರಿಯ ಸಂಗವ ತೊರೆಯುವ ಮುನ್ನ
ತಾಯ್ಮಡಿಲಿನಲಿ ಶಿರವನಿರಿಸಿ ನಾ ಅಲೆದಿರುವಾ
ನನ್ನ ನೆನಪಿನಂಗಳವನ್ನ ತವೆಯುತ್ತ
ತಾಯ್ಮಡಿಲ ಸೇರಿದ ನೆನಪಾಗಿ,


ಬಾಲ್ಯದ ತುಂಟಾಟ ಕೈಬೀಸಿದಂತಾಗಿ
ಗೆಳೆಯರ ಜಗಳ ಸಂಧಾನಗಳು ಕೂಗಿ ಕರೆದಂತಾಗಿ
ಕೈಹಿಡಿದ ಕೈಯನ್ನು ಹಿಡಿದು ನಡೆಸುವ ಹಂಬಲವಾಗಿ
ಮನಸು ಸಾವಿನ ದಾರಿಯಲಿ ತಾ ಹಿಂದೆ ನೋಡುತಿರೆ,
ವಾಸ್ತವಕೆ ಬಂದು ನಾ ಸುತ್ತ ನೋಡುತಿರೆ
ತೇವದಿ೦ದೆಲ್ಲರ ಕಂಗಳಲಿ ನನ್ನ ಬಿಂಬ
ಕಂಡು ಸಂತಸಗೊಂಡೆ ನಾ ಈ ಕ್ಷಣ


ಮಾತೃದೇವತೆಯ ಮಡಿಲ ತೊರೆಯಲಾಗುತ್ತಿಲ್ಲ
ಮಡದಿಯ ಸಿಂಧೂರ ನೋಡಲಾಗುತ್ತಿಲ್ಲ.
ಕಾಲಚಕ್ರವ ಹಾಗೆ ಹಿಂದೆ ಸರಿಸುವ ಆಸೆ,
ಅಮ್ಮಾ ನಿನ್ನ ಮಡಿಲಲಿ ನಾ ಮತ್ತೆ ಶಿಶುವಾಗುವಾಸೆ
ಬಾಳೆಂಬ ನಾಣ್ಯದ ಎರಡನೇ ಮುಖವ ನೋಡುವ ಸಮಯ
ಓಗೊಟ್ಟು ಸ್ವೀಕರಿಸಲೇಬೇಕು ಜವರಾಯನ ಈ ಕರೆಯ


ಕಣ್ಣಾಲಿಗಳು ತೇಲುತಿರೆ, ಉಸಿರಾಟ ನಿಲ್ಲುತಿರೆ,
ಹೃದಯವಿದು ತನ್ನ ಬಡಿತವಾ ತಾನು ನಿಲ್ಲಿಸಿರೆ,
ಕಣ್ಣ ರೆಪ್ಪೆಯಲೇ ಕಡೆಯ ನಮನವಾ ತಿಳಿಸಿ
ಹೋಗುತಿರುವೆ ನಾ……..
ಜವರಾಯನ ಗೆದ್ದು ಜೀವಿಸಲೇ ಬೇಕೆಂದು ಏಕನಿಸಿತೋ ಕಾಣೆ
ಹೋಗುವ ಮುನ್ನ, ಹೋಗುವಾ ಮುನ್ನ……

 – ಜ್ಞಾನಮೂರ್ತಿ, ಬೆಂಗಳೂರು.

 

ನಿನ್ನ ಒಳ ಜಗತ್ತಿನಲ್ಲೆಲ್ಲ ಮೂಡಿರುವ ನನ್ನುಸಿರ
ಹೆಜ್ಜೆಗಳು 
ಆತನ ಸ್ಪರ್ಶಕ್ಕೆ ಮಾಸುವ ಮುನ್ನ ನೋವ
ಪೆಟ್ಟಿಗೆಯಲ್ಲಿ ಬಚ್ಚಿಟ್ಟುಕೋ

ಏಕಾಂತದಿ ನನ್ನ ಜೊತೆ ಮಿಂದು ಬಂದ
ಮನಸ್ಸನ್ನು
ಸಪ್ಪಳವಿಲ್ಲದೆ ಒಳಕರೆದುಕೋ
ಆತ ಎಚ್ಚರವಾಗುವ ಮುನ್ನ ಮನಸ್ಸಿನ
ಮೈತೊಳೆದು
ಹೊಸ ಬಟ್ಟೆ ತೊಡಿಸಿಬಿಡು

ನನ್ನ ನೆನಪುಗಳ ನಿನ್ನ ಮಗುವಿನ
ಆಟಿಕೆಗಳಾಗಿಸುವುದಾದರೆ
ಅವುಗಳೆಲ್ಲ ಆತನ ಕಾಲ್ತುಳಿತಕ್ಕೆ ಸಿಗದಂತೆ
ಎಚ್ಚರವಹಿಸು!

ನಿನ್ನೊಳಗಣ ನನ್ನ ನೆನಪ ಮೊಟ್ಟೆಗಳಿಗೆ
ಕಾವುಕೊಡುವುದ
ನಿಲ್ಲಿಸಿಬಿಡು
ಇಲ್ಲವಾದರೆ ಮೊಟ್ಟೆಯೊಡೆದ ಜೀವಗಳು ಆತನಿಗೆ
ಸತ್ಯ ಹೇಳಿಬಿಟ್ಟಾವು!
ಹರಿದ ನನ್ನ ನೆನಪುಗಳ ನೀ ಹೊಲೆಯುವಾಗ
ಆತ
ಸೂಜಿಮೊನೆಯಾಗಿ ಚುಚುತ್ತಾನೆ
ಈ ನೋವಲ್ಲೂ ನಾನು ನಿನ್ನ ಕೈ ಕೌದಿಯಾಗಿ
ಅರಳುತ್ತೇನೆ!

– ನೂತನ್ ಹೆಚ್. ಬಿ., ಹಾಲಾಡಿ.

8expose


ಬೇರಿನಲ್ಲಿ ಬುತ್ತಿ ಕಟ್ಟಿಟ್ಟಿದ್ದಳು ಅಮ್ಮ
ಮರಕೆಲ್ಲಿ ಗೊತ್ತು?
ಎಲ್ಲಿಂದಲೋ ಬಂದ ರವಿಕಿರಣಕ್ಕೆ
ಮುಖ ಮಾಡಿತ್ತು!

ಮೈ ಎಲ್ಲ ಮನಮಾಡಿ ಹಸಿರುಗನಸುಗಳ ಹೊತ್ತು
ಮಂದ ಮಾರುತಕ್ಕೆ ಮೈಯ್ಯ ಮರೆತಿತ್ತು!
ಬಳುಕುವ ಬಳ್ಳಿಗೆ ಸೋತು ಅಪ್ಪಿ ಬೆಳೆದಿತ್ತು!
ಬಣ್ಣ ಬಣ್ಣಗಳ ಹಕ್ಕಿಗಳ ಸಂಸಾರ ಮೈಎಲ್ಲಾ ಹೊತ್ತು
ತಾನೊಬ್ಬನೆ ಆಕಾಶಕ್ಕೇಣಿಯಾಗುವವನೆಂದು
ಉಬ್ಬಿ ನಿಂತಿತ್ತು!

ಆಗಸವೂ ಸಿಗದೆ ಅಳುಕಿ ತಡಕಾಡಿ
ಬೇರೂ ಸಿಗದೇ ಬುತ್ತಿಯೂ ಸಿಗದೆ ಕಂಗಾಲಾಗಿತ್ತು!
ಮತ್ತೆ ಬೇರನ್ನರಸಿ ಕೆಳಗಿಳಿದಿತ್ತು!

ತಾನು ತಂದಿದ್ದ ಬುತ್ತಿ ಗೆದ್ದಲ ಗೂಡಿನಲ್ಲಿ ಜೀರ್ಣವಾಗಿತ್ತು
ಬೇರುಗಳ ಸಂಧಿಯಲ್ಲಿ ಎಲ್ಲೋ ಹಣ್ಣಾಗಿದ್ದ ಈಗ
ಮಣ್ಣಾಗಿದ್ದ ಅದರಮ್ಮ ಹೇಳಿದ್ದು
ಆತ್ಮರತಿಗೆ ಮಾತ್ರ ಕೇಳುವಂತಿತ್ತು;
’ಮಗುವೇ, ನೀನಿನ್ನೂ ಬೆಳೆಯಬೇಕಿತ್ತು!’

ರೂಪಾ ಸತೀಶ್, ಬೆಂಗಳೂರು.

 

42-15426165

ಜೀವತಾಣದ ಜನಜಾತ್ರೆಯ ನಡುವೆ
ಕಳೆದು ಅಳೆದು ಪ್ರತಿ ಘಳಿಗೆ,
ವಿರಸದ ಏರಿಳಿತಗಳಲ್ಲಿ ಬೇಸತ್ತು ಬಡವಾಗಿದ್ದರು ಮನ….
ಜಿನುಗುತಿರಲಿ ಬಾಳೆಂಬ ಚಿಮ್ಮುವ ಚೇತನ !!

ಬಯಸಿ ಬಯಸದೆಯೋ ಹೃದಯಗಳಿಗೆ
ಆಗಿ ಹೋಗುವ ನಿಶ್ಚಿತ ಪೆಟ್ಟು ಕಲೆಗಳು,
ಅಗ್ನಿಕುಂಡದ ನೋವನ್ನು ನುಂಗಿ ಬೆಂದರು ಜೀವ….
ಬೆಳಗುತಿರಲಿ ಬಾಳೆಂಬ ಹುರಿದುಂಬಿದ ಚೇತನ !!

ಬದುಕಿನ ಲೆಕ್ಕಾಚಾರಗಳು ತಲೆಕೆಳಗಾಗುತ್ತ
ಬವಣೆಗಳನ್ನರಿತ ಗಣಿತಶಾಸ್ತ್ರಜ್ಞ ಮೇಲೆ ಕುಂತು ನೋಡುತ್ತಾ,
ನಿನ್ನ ಗಣನೆ ತಪ್ಪು ತಪ್ಪು ಎಂದು ಪ್ರತೀಸಾರಿ ಸಾರಿದರೂ….
ಆರದಿರಲಿ ಬಾಳೆಂಬ ಪ್ರಜ್ವಲಿತ ಚೇತನ !!

ತುಳಿದು ಅಳಿದು ಹೊಸಕಿಹಾಕುವ ಮಾತುಗಳ ಗಾಣ
ಹರಿದು ಒಗೆದು ಜಡಿದುಹಾಕುವ ಮನುಜಕುಲದ ತಾಣ,
ಅಲ್ಲಲ್ಲಿ ಬೀಳುವ ಛಡಿ ಏಟಿನ ಅವಮಾನಗಳ ನಡುವೆಯೂ….
ಕುಗ್ಗದಿರಲಿ ಬಾಳೆಂಬ ಉತ್ತೇಜಿತ ಚೇತನ !!

ವಿವೇಕ್ ಘಾಟೆ, ಮಂಗಳೂರು

vive.1990@gmail.com

ಬಾರದ ಮಳೆಯ.. ಸುರಿಯುತ್ತಾ
ಸ್ಪರ್ಶಿಸುವ ಹನಿಗಳ ಮಧ್ಯ,
ತೆರೆದಿದೆ ನೊಂದ ಮನಗಳ
ಸಾಹಿತ್ಯವನ್ನು ಹೊತ್ತ ಗದ್ಯ!

ಪುಟ ಪುಟವೂ ಮೆದುವಾಯಿತು
ಆವರಿಸಿದ ದಟ್ಟ ನೀಲಿ ಆಗಸದ ಕೆಳಗೆ,
ಹರಿದಾಡಿ, ಗೋಳಾಡಿ ಬೇಯುತಲಿದೆ
ಕನಸುಗಳು ಮಿನುಗುವ ಕಣ್ಣ ಪದರದೊಳಗೆ!

zx

ವಿಚಾರಿಸುತ್ತಲೇ ಬಂತು ಗರಿಯುದುರಿದ
ನವಿಲು ಸಹಾಯ ಹಸ್ತದ ಹೊದಿಕೆಗಾಗಿ,
ಬಿಸಿಯುಸಿರ ಮಾತಿನಲ್ಲಿ ನಿರಾಕರಿಸಿದವು ಕೈಗಳು
ತನ್ನ ತನುವ ಚಳಿಯಿಂದ ಬೆಚ್ಚಗಿಡುವ ಸಲುವಾಗಿ!

ಪ್ರಾಣ ನೆತ್ತರ ಚಲನೆಯು ಕ್ಷೀಣಿಸಿತು,
ಹೃದಯ ಬಡಿತವು ಮೆಲ್ಲನೆ ಮೌನ ತಾಳಿತು..
ಹೊಳಪಿನ ಕವನಗಳ ಬಣ್ಣವನ್ನು ಕರಗಿಸಿ
ನಿರ್ನಾಮವಾಗಿಸಿತು, ರೌದ್ರತೆಯಲ್ಲಿ ತೇಗಿತು!

ಮಾಡು ಇಲ್ಲದ ಆಸರೆಯ ಮೇಲೆ ಸಡಗರದಿಂದ
ಸುರಿದ ಮಳೆಯು ಆ ಒಂದು ತಾಸಿನಲ್ಲಿ,
ಶಾಶ್ವತವಾಗಿ ನಿದ್ರಿಸುವಂತೆ ಮಾಡಿತು
ಚಿಗುರಬೇಕಾದ ಪ್ರೇಮ ಬೀಜವ ದ್ವೇಷವೆಂಬ ಹಾಸಿನಲ್ಲಿ!

ರಂಜಿತ್ ಅಡಿಗ, ಕುಂದಾಪುರ

adiga.ranjith@gmail.com

ಅವಳು ಆಗಸ

ಸುಮ್ಮನೆ ಏಣಿ ಕಟ್ಟದಿರು ಅಂದರು

ನನಗೆ

ರೆಕ್ಕೆ ಮೂಡುತಿತ್ತು,

ಅವಳು ನಿನಗೆ ಸರಿಯಾದವಳಲ್ಲ

ಎಂದರು,

ತಪ್ಪುಗಳನ್ನು ಮಾಡುವುದು

ತಪ್ಪಲ್ಲವೆನಿಸತೊಡಗಿತು!

…………………………………………………………………………

ರಂಜಿತ್ ಅಡಿಗ, ಕುಂದಾಪುರ
adiga.ranjith@gmail.com

ಅಪರೂಪವಾಗಿ
ಬೇರೆಯೇ ಲೋಕದ ಜನ
ತಿನ್ನುವವರೆಂಬಷ್ಟು ಅಪರಿಚಿತವಾಗಿ
ಹೋಗಿದ್ದ ಜಾಮೂನು ಅಚಾನಕ್ಕಾಗಿ
ಅದೃಷ್ಟದಿಂದ ಆಕೆಗೆ ಸಿಕ್ಕಿದಾಗ
ಅದು ಚಂದ್ರ ಅಪಹಾಸ್ಯ ಮಾಡಿ
ನಗುವ ನಡುರಾತ್ರಿ!

gulab jamon

ಮಗುವಿನ ಕನಸನ್ನಲ್ಲಾಡಿಸಿ
ಎಬ್ಬಿಸಿ ತಿನ್ನಿಸಿ
ತಾನು ಖುಷಿಪಟ್ಟಾಗ
ಮಗುವಿನ ಕಣ್ಣಲ್ಲೂ ಅಂದು ಹುಣ್ಣಿಮೆ!

ಹಸಿವಿನ
ಜೋಗುಳ ಹಾಡಿಕೊಂಡೇ
ನಿದಿರಿಸಿದ ಅವ್ವನ ಕನಸಲ್ಲಿ
ಕೊಟ್ಟ ಖುಷಿಯ ಜಾತ್ರೆ

ಬೆಳಗಾತನೆದ್ದು ಕನಸ ಮಧ್ಯದಲ್ಲೇ
ಜಾಮೂನು ತಿಂದು ತೇಗಿದ್ದ ಮಗ
ಅದರ ರುಚಿಯ ನೆನಪಾಗದೇ ಹಲುಬಿದ್ದಾನೆ,
ಬೆಳಿಗ್ಗೆ ಕೊಟ್ಟರಾಗದಿತ್ತೇ ಎಂದು ರೇಗಿದ್ದಾನೆ..

ತಿಂದ ಜಾಮೂನಿನ ರುಚಿ
ಹೇಗಿದ್ದಿರಬಹುದು ಎಂದೂಹೆ ಮಾಡುತ್ತಾ
ಮಗನಿದ್ದರೆ

ಕೈಯ್ಯಲ್ಲಿದ್ದ ಚಂದಿರನಂತಿದ್ದ
ಜಾಮೂನು ಮಗನ ಹೊಟ್ಟೆ ಸೇರಿಯೂ
ಅವನಿಗೆ ಸಂತೋಷವಾಗದಿದ್ದುದ್ದಕ್ಕೆ
ಅವ್ವನನ್ನು ಹಸಿವು ಸುಟ್ಟಿದೆ!

-ರಂಜಿತ್ ಅಡಿಗ, ಕುಂದಾಪುರ

ಹಾದಿಯಲಿ ಒಂದಿಷ್ಟು ಸಿಗುತ್ತದೆ
ಸಾಕಷ್ಟು ಹೋಗುತ್ತದೆ
ತುಲನೆ ಮಾಡಿ ನೋಡಿದರೆ
ಹೋದಷ್ಟೇ ನೋವು,
ಸಿಕ್ಕಷ್ಟೂ ಸಂಭ್ರಮ…

ಜನರು ಹೇಳುವರು
ತಲುಪಲಾಗದು
ಗುರಿಯೆಂಬುದು ಬಹಳ ದೂರ…
ಅರಿವಿದೆಯೆನಗೆ
ಯಾರೂ ಹೋಗರು ಸೋತು
ಕೇಳಿದರೆ ಎದೆಯ ಮಾತು.. 

path

ಡೇರೆ ಹಾಕಿ ಮಲಗಿದವರು
ಹೊಟ್ಟೆಕಿಚ್ಚಿನಿಂದ ಸುಡುವವರು
ಸಾಗಲಾರೆ ಎಂದು ಹಂಗಿಸುವವರು
ದಾರಿ ತುಂಬಾ ಸಿಗುವರು
ಪ್ರೀತಿಯಿಂದ ನೇವರಿಸುವೆನು,

ಕಾರುವ ಕಣ್ಣುಗಳೂ ತಣ್ಣಗಾಗಬಹುದು
ನೋಡುವ ಆಸೆಯಿದ್ದರೆ
ನಿಲುಕಿದಷ್ಟೂ ನೋಟವಿದೆ,
ಸಾಗುವ ಇಚ್ಚೆಯಿದ್ದರೆ
ನಡೆದಷ್ಟೂ ದಾರಿಯಿದೆ

ಬದುಕಿನ ಸವಿ ಹೊತ್ತು
ಹೊಡೆಸಬೇಕಿದೆ
ರಸ್ತೆಗೇ ಸುಸ್ತು!


Blog Stats

  • 71,866 hits
ಮಾರ್ಚ್ 2023
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 12345
6789101112
13141516171819
20212223242526
2728293031  

Top Clicks

  • ಯಾವುದೂ ಇಲ್ಲ