Archive for the ‘ಒಂದು ಕತೆ’ Category
ಒಂದು ಕತೆ: ನಿರೀಕ್ಷೆ
Posted ಜೂನ್ 15, 2009
on:‘ಜಟಾಯು’, ಬೆಂಗಳೂರು
ಅವಳನ್ನು ನೋಡಲು ತುಂಬಾ ಹುಡುಗರು ಬರುತ್ತಿರುತ್ತಾರೆ.ಆದರೆ ಯಾರೂ ಅವಳನ್ನು ಒಪ್ಪುತ್ತಿರಲಿಲ್ಲ. ಅವಳಲ್ಲಿ ಹಣವಿಲ್ಲವೆಂದಲ್ಲ. ಅವಳ ಮೊಮ್ಮಗನೂ ತಿಂದು ತೇಗುವಷ್ಟು ಆಸ್ತಿಯಿದೆ. ಹಾಗಾದರೆ ಅವಳು ಸೌಂದರ್ಯವತಿಯಲ್ಲವೇ? ಕುರೂಪಿಯೇ? ಉಹೂಂ.. ಪದ್ಮಿನಿ ಜಾತಿಯ ಹುಡುಗಿ; ಸ್ವಂತ ಕಣ್ಣು ಬೀಳಬೇಕು ಅಂಥ ಸ್ಪುರದ್ರೂಪಿ ಹೆಣ್ಣವಳು.
ಅದೂ ಅಲ್ಲವಾದರೆ, ಸಿನೆಮಾದಲ್ಲಿ ತೋರಿಸುವಂತೆ " ಹಣವಂತರೆಲ್ಲಾ ಗುಣವಿರುವವರಲ್ಲ" ಎಂದುಕೊಂಡು ಕೆಟ್ಟವಳಿರಬೇಕು ಅಂತ ಊಹಿಸುವುದಾದರೆ ಅದೂ ನಿಜವಲ್ಲ. ಅವಳು ಒಳ್ಳೆಯವಳೇ.
ಅವಳಿಗಿರುವ ಒಂದೇ ಕೆಟ್ಟ(?) ಗುಣವೆಂದರೆ ನಿರೀಕ್ಷೆ! ಅದೇ ಅವಳನ್ನು ಎಲ್ಲರಿಂದ ದೂರ ಮಾಡುತ್ತಿರುವುದು!!
**********
ಅವತ್ತು ಮನೆಯಲ್ಲಿ ಸಡಗರ, ಸಂಭ್ರಮ. ಯಾಕೆಂದರೆ ಆ ದಿನ ಶ್ಯಾಮಲಾಳನ್ನು ನೋಡಲು ಹುಡುಗನೊಬ್ಬ ಬಂದಿದ್ದ. ಅದು ಶ್ಯಾಮಲಾಳ ತಂದೆ-ತಾಯಿಗೆ ಮಾತ್ರ ಸಡಗರ. ಅವಳಿಗದು ಮಾಮೂಲಿಯಾಗಿಬಿಟ್ಟಿದೆ.
ಅವಳು ಮರೆಯಲ್ಲಿ ನಿಂತು ತಂದೆ-ತಾಯಿಯ ಮಾತನ್ನು ಆಲಿಸುತ್ತಿದ್ದಳು. ಹುಡುಗ ಡಾಕ್ಟರಂತೆ. ಒಳ್ಳೆಯ ಮನೆತನದವನಂತೆ.
ಶ್ಯಾಮಲಾಳೇ ಅವರೆಲ್ಲರಿಗೂ ಕಾಫಿಯನ್ನು ತಂದುಕೊಟ್ಟು ತಂದೆಯ ಪಕ್ಕದಲ್ಲೇ ನಿಂತುಕೊಂಡಳು.
ಹುಡುಗನ ದೃಷ್ಟಿ ಅವಳ ಮೇಲೆಯೇ ನೆಟ್ಟಿತ್ತು. ತೆಳು ನೀಲಿ ಬಣ್ಣದ ಸೀರೆಯಲ್ಲಿ ಅಂದವಾಗಿ, ಮುದ್ದಾಗಿ ಕಾಣುತ್ತಿದ್ದಳು.
ಔಪಚಾರಿಕತೆಯ ಮಾತು ಮುಗಿದ ಬಳಿಕ ಶ್ಯಾಮಲ ಅವಳ ಬಳಿ ಮಾತನಾಡಬಯಸಿದಳು.
*********
ಶ್ಯಾಮಲಳ ಹವ್ಯಾಸ ಸಿನೆಮಾ ನೋಡುವುದು, ಕಾದಂಬರಿ ಓದುವುದು ಇತ್ಯಾದಿ. ಯಾವುದಾದರೂ ಸಿನೆಮಾದ ಅಥವ ಕಾದಂಬರಿಯ ನಾಯಕಿಯನ್ನು ಊಹಿಸಿದರೆ ಅವಳಿಗೆ ಅಸೂಯೆಯಾಗುತ್ತಿತ್ತು. ಕಾರಣ ನಾಯಕಿಯ ತುಂಟತನ, ಬುದ್ಧಿವಂತಿಕೆಯಲ್ಲ. ನಾಯಕನ ಒಳ್ಳೆಯತನ, ನಿಯತ್ತುಗಳು. ಅಂಥ ಗುಣವಂತ ನಾಯಕಿಗೆ ದೊರಕುತಿರುವುದಕ್ಕೆ ಹೊಟ್ಟೆ ಉರಿದುಕೊಳ್ಳುತ್ತಿದ್ದಳು.
ಪ್ರಸ್ತುತ ಅವಳು ಓದುತ್ತಿರುವ ಕಾದಂಬರಿಯಲ್ಲಿ ನಾಯಕಿ ಅವನನ್ನು ಮೋಸ ಮಾಡಿ ಒಂದು ಕೇಸಿನಲ್ಲಿ ಜೈಲಿಗೆ ಹೋಗುವಂತೆ ಮಾಡಿದರೆ ಅವನು ಮಾತ್ರ ಅವಳ ತಾಯಿಯ ಆಪರೇಷನ್ ಗೆ ಬೇಕಾದ ಖರ್ಚುಗಳನ್ನು ನೀಡಿಯೇ ಜೈಲಿಗೆ ಹೋಗುತ್ತಾನೆ. ಶ್ಯಾಮಲಾಗೆ ಅಂಥ ಕಾದಂಬರಿಗಳೇ ಹೆಚ್ಚು ಇಷ್ಟವಾಗುತ್ತದೆ…
ತೋಟದ ಮಧ್ಯದಲ್ಲಿ ತೆಳುವಾಗಿ ಹಾವಿನಂತೆ ಬಳುಕುವ ರಸ್ತೆಯಲ್ಲಿ ನಡೆದು ಹೋಗುತ್ತಿದ್ದರು ಅವರಿಬ್ಬರೂ.
ತುಂಬ ಹೊತ್ತಿನಿಂದ ಅವಳೇನೂ ಮಾತಾಡಿಸಲಿಲ್ಲದ ಕಾರಣ ಅವನೇ ಮಾತಿಗಾರಂಭಿಸಿದ.
"ನನ್ನ ಹೆಸರು ಮಹೇಂದ್ರ. ನೀವು ನನ್ನ ಜತೆ ಮಾತಡಲು ಬಯಸಿದ್ದು ಖುಷಿಯಾಯಿತು. ಒಬ್ಬರನ್ನೊಬ್ಬರು ಅರಿಯದೇ ಮದುವೆಯಾಗುವುದು ಸರಿಯಲ್ಲ ಅನ್ನುವುದು ನನ್ನ ಅಭಿಮತ. ಹೀಗೆ ಕೊಂಚ ಏಕಾಂತ ಸಿಕ್ಕಿದರೆ ನಮ್ಮ ನಮ್ಮ ಅಭಿರುಚಿಗಳನ್ನು ಹಂಚಿಕೊಳ್ಳಬಹುದು.. ಅದನ್ನು ನೀವಾಗಿಯೇ ಎಲ್ಲರೆದುರು ಕೇಳಿದ್ದು ನನಗಿಷ್ಟವಾಯಿತು…"
ಅವಳು ಥ್ಯಾಂಕ್ಯೂ ಕೂಡ ಅನ್ನಲಿಲ್ಲ.
ಅವನು ಸೌಜನ್ಯಕ್ಕಾಗಿ ನಕ್ಕ ನಗೆ ನಿಲ್ಲಿಸಿದ.
ಶ್ಯಾಮಲಾ ಏನನ್ನೋ ಹೇಳಲು ಬಯಸುತ್ತಿದ್ದಾಗ್ಯೂ, ಹೇಳಲು ಒದ್ದಾಡುತಿರುವುದನ್ನು ಆತ ಗಮನಿಸುತ್ತಲೇ ಇದ್ದ.
ಏನಾದರಾಗಲಿ ಎಂದು ಅವಳು ಹೇಳತೊಡಗಿದಳು." ನಾನು ಶ್ಯಾಮಲ… ನಿಮಗೆ ಈಗ ಒಂದು ವಿಷಯ ತಿಳಿಸಬೇಕಿದ್ದು.. ಅದು.. ಅದನ್ನು ಹೇಗೆ ಹೇಳಲಿ ಎಂದೇ ತಿಳಿಯುತ್ತಿಲ್ಲ.."
ಆಗ ತಣ್ಣನೇ ಗಾಳಿ ಬೀಸಿತು. ಕೋಗಿಲೆಯೊಂದು ಆಗಲಿಂದಲೂ ಹಾಡುತ್ತಿತ್ತು. ಮಹೇಂದ್ರ ಉದ್ವೇಗದಿಂದ ಕೇಳಿಸಿಕೊಳ್ಳುತ್ತಿದ್ದು, "ಹೇಳಿ , ಪರವಾಗಿಲ್ಲ.." ಎಂದ.
"ಇದುವರೆಗೂ ನನ್ನ ನೋಡಲು ಬಂದವರೆಲ್ಲ ಈ ವಿಷಯ ಕೇಳಿಯೇ ಒಪ್ಪಿಕೊಳ್ತಾ ಇಲ್ಲ. ನನಗೆ.. ನನಗೆ.. ಏಯ್ಡ್ಸ್ ಇದೆ!!!"
ಆಗ ಚಲಿಸಿದ ಅವನು.
ಅವಳು ನಿರ್ಲಿಪ್ತಳಾಗಿಯೇ ಇದ್ದಳು.
ಅವನ ಮುಖ ಪೂರ್ತಿಯಾಗಿ ಬಿಳಿಚಿಕೊಂಡಿತ್ತು. ಮಾತನಾಡಲು ಪದಗಳಿಗಾಗಿ ತಡವರಿಸುತ್ತಿದ್ದ. ಸಹಾನುಭೂತಿ ಹೇಳಬೇಕೋ ? ಅಥವ ತಂದೆ-ತಾಯಿಗೆ ಈ ವಿಷಯ ತಿಳಿಸದೇ ಇದ್ದುದ್ದಕ್ಕೆ ಬೈದು ಬುದ್ಧಿವಾದ ಹೇಳಬೇಕೋ ತಿಳಿಯಲಿಲ್ಲ.
ಅವಳು ಅವನ ಪ್ರತಿಕ್ರಿಯೆಯನ್ನು ಎಚ್ಚರಿಕೆಯಿಂದ ಗಮನಿಸುತ್ತಿದ್ದಳು.
ಅವನು ಚೇತರಿಸಿಕೊಂಡ. ನಿರ್ಣಯ ತೆಗೆದುಕೊಳ್ಳಲು ಹೆಚ್ಚು ಸಮಯ ಬೇಕಾಗಲಿಲ್ಲ. ಯಾವ ಕಾರಣದಿಂದ ಏಯ್ಡ್ಸ್ ಬಂದರೂ, ಏಯ್ಡ್ಸ್ ಇರುವ ಹುಡುಗಿಯನ್ನು ಯಾರಾದರೂ ಮದುವೆಯಾಗ ಬಯಸುವುದಿಲ್ಲ. ಅದನ್ನೇ ಅವಳ ಬಳಿ ಹೇಳಲಾಗದೇ ತಿರುಗಿ ಅಲ್ಲಿಂದ ಚಲಿಸಿ ತಂದೆಯನ್ನು ಕರೆದುಕೊಂಡು ಏನೂ ಹೇಳದೇ ಹೊರಟುಬಿಟ್ಟ.
ಅವಳು ನಿಶ್ಯಬ್ದವಾಗಿ ನೋಡುತ್ತಾ ನಿಂತುಬಿಟ್ಟಳು.
ಅವಳನ್ನು ತಂಗಾಳಿಯೊಂದು ಸ್ಪರ್ಶಿಸಿಕೊಂಡುಹೋಯಿತು.
ಮರದೆಡೆಯಿಂದ ಎರಡು ಕಣ್ಣುಗಳೂ ನೀರಿನಿಂದ ತುಂಬಿಬಂದ ಒಂದು ಆಕೃತಿಯೊಂದು ಮನೆಯೆಡೆಗೆ ಚಲಿಸಿತು.
********
ಅಂದು ರಾತ್ರಿ…
ಅವಳು ಮುಖವನ್ನು ದಿಂಬಿನಲ್ಲಿ ಹುದುಗಿಸಿ ಅಳುತ್ತಿದ್ದಳು. ವಿಷಾದ ಎಂಬ ಭಾವನೆ ಕಣ್ಣೀರಿನಲ್ಲಿ ತುಂಬಿಕೊಂಡು ದಿಂಬನ್ನು ಒದ್ದೆ ಮಾಡುತ್ತಿದ್ದವು.
ಮನಸಿನಲ್ಲೆಲ್ಲ ಒಂದೇ ದುಃಖ ಬುಗುರಿಯಂತೆ ಸುತ್ತುತ್ತಿದ್ದವು.
" ಮನುಷ್ಯರೆಲ್ಲಾ ಸ್ವಾರ್ಥಿಗಳು..ಪ್ರೇಮವೆಂದರೆ ಕೇವಲ ಕೊಡುವುದು ಅನ್ನುವುದನ್ನು ಮರೆತಿದ್ದಾರೆ.ಎಲ್ಲರೂ ಕಿತ್ತುಕೊಳ್ಳಲು ನೋಡುತ್ತಾರೆ. ನನ್ನ ಸೌಂದರ್ಯ, ಹಣ ನೋಡಿದ ಕೂಡಲೇ ಎಲ್ಲರೂ ಮದುವೆಯಾಗಲು ಒಪ್ಪಿಕೊಳ್ಳುತ್ತಾರೆ. ಆದರೆ ನನ್ನಲ್ಲಿ ಕೇವಲ ಒಂದು ಕೆಟ್ಟ ಗುಣವಿದ್ದರೆ ಹಾವನ್ನು ಕಂಡಂತೆ ಹೆದರಿ ಓಡುಹೋಗುತ್ತಾರೆ.." ಎಂಬುದೇ ಆಕೆಯ ಮನಸಿನಲ್ಲಿ ತಾಳಮದ್ದಳೆ ಆಡುತ್ತಿದೆ.
ಆಗ ಅವಳ ತಂದೆ ಅವಳ ರೂಮನ್ನು ಪ್ರವೇಶಿಸಿದರು.
ಅವಳು ಅವರತ್ತ ನಿರ್ವಿಕಾರವಾಗಿ ನೋಡಿದಳು.ಅವರ ಕಣ್ಣಲ್ಲಿ ಆರ್ದ್ರತಾಭಾವ ನಲಿದಾಡುತಿತ್ತು. " ಅಮ್ಮಾ.." ನಿಲ್ಲಿಸಿ ಸ್ವಲ್ಪ ಸಮಯದ ನಂತರ "…. ನನ್ನ ಚಿನ್ನದಂಥಾ ಮಗಳನ್ನು ಯಾರೊಬ್ಬನೂ ಒಪ್ಪಿಕೊಳ್ಳದಿರುವುದನ್ನು ನೋಡಿ ನನಗಾಶ್ಚರ್ಯವಾಗುತ್ತಿತ್ತು. ಅವರ ಬಳಿ ಕಾರಣ ಕೇಳಿದರೂ ಹೇಳುತ್ತಿರಲಿಲ್ಲ. ಅದಕ್ಕೆ ನಾನೇ ತಿಳಿದುಕೊಳ್ಳಬೇಕೆಂಬ ಹಂಬಲ ಬೆಳೆಯಿತು. ಅದಕ್ಕೆ…. ನೀನು ಮಹೇಂದ್ರನ ಬಳಿ ಮಾತಾಡಿದ್ದನ್ನು ಕದ್ದು ಕೇಳಿಸಿಕೊಂಡೆನಮ್ಮಾ…"
ಅವಳು ಚಕ್ಕನೆ ತಲೆಯೆತ್ತಿ ಅಳುವುದನ್ನು ನಿಲ್ಲಿಸಿ ತಂದೆಯತ್ತ ನೋಡಿದಳು.
ಅವರು ಮುಂದುವರಿಸಿದರು." ನಿನ್ನ ನೋವು ನನಗರ್ಥವಾಗುತ್ತದಮ್ಮಾ.. ತಾನು ಸಾಯುತ್ತಿದ್ದೇನೆಂದು ತಂದೆಗೆ ತಿಳಿಸಲಾಗದೇ ಒಳಗೊಳಗೇ ಸ್ವಲ್ಪ ಸ್ವಲ್ಪವಾಗಿ ನಶಿಸಿಹೋಗುತ್ತಾ, ತನ್ನ ತಂದೆ ಒಬ್ಬೊಬ್ಬರೇ ಹುಡುಗರನ್ನು ಮದುವೆಗಾಗಿ ಕರೆತರುತ್ತಿದ್ದರೆ ತಂದೆಯೆದುರಿಗೆ ಏನೂ ಹೇಳಲಾಗದೇ ಮನಸ್ಸು ನೀರಿನಿಂದ ಹೊರಬಿದ್ದ ಮೀನಿನಂತೆ ಒದ್ದಾಡುವುದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ.. ಪ್ರತೀ ಹುಡುಗನ ಬಳಿಯೂ ನನಗೆ ಏಯ್ಡ್ಸ್ ಇದೆ ಎಂದು ಹೇಳಿದ ಬಳಿಕ ನಂತರ ಅವರ ಮೌನದ ಚಾಟಿಯೇಟನ್ನು ನಾನು ಗುರುತಿಸಲಾಗದೇ ಹೋಗುತ್ತೇನೆಂದು ತಿಳಿದಿದ್ದೀಯಾ?"
ಅವಳು ತಲೆತಗ್ಗಿಸಿಕೊಂಡು ತಂದೆಯ ಮಾತನ್ನು ಆಶ್ಚರ್ಯದಿಂದ ಆಲಿಸುತ್ತಿದ್ದಳು.
ಅವರ ನೋವನ್ನು ಅವರ ಮಾತುಗಳೇ ಸ್ಪಷ್ಟವಾಗಿ ಪ್ರತಿಧ್ವನಿಸುತ್ತಿದ್ದವು.ಪ್ರತಿಯೊಂದು ಶಬ್ದವೂ ಅವಳನ್ನು ಇರಿಯುತ್ತಿದ್ದವು. ಅವರ ಮಾತು ಅವಳ ಬಾಯನ್ನು ಕಟ್ಟಿಹಾಕಿತ್ತು.
ಅವರು ತಮ್ಮ ಮಾತನ್ನು ನಿಲ್ಲಿಸಿದರು.
ಇರುವೆ ಚಲಿಸಿದರೂ ಕೇಳುವಷ್ಟು ನಿಶ್ಯಬ್ದ ಆವರಿಸಿಕೊಂಡಿತ್ತು. ಆ ನಿಶ್ಯಬ್ದದಲ್ಲಿ ಆ ತಂದೆಯ ಹೃದಯ ಮಗಳಿಗಾಗಿ ವಿಲವಿಲ ಒದ್ದಾಡುತಿತ್ತು.
ಒಂದು ನಿರ್ಧಾರಕ್ಕೆ ಬಂದವರಂತೆ, " ನೀನು ಹೋಗುವ ಸಮಯದಲ್ಲೂ ವಿಷಾದ ಇಟ್ಟುಕೊಂಡು ಎದುರಿಗಿರುವವರ ಸಂತೋಷ ಬಯಸಿದ್ದಕ್ಕೆ ನನಗೆ ಹೆಮ್ಮೆಯಾಗುತ್ತಿದೆ. ಆದರೆ ನೀನು ಹೀಗೆ ಅಳುತ್ತಿರುವುದು ನನಗೆ ನೆಮ್ಮದಿ ನೀಡದು.. ಕೊನೆಯ ದಿನಗಳಲ್ಲಿ ನಿನ್ನನ್ನು ಆನಂದದಿಂದ ಕಳುಹಿಸಿಕೊಡುವೆನಮ್ಮಾ…"ಎಂದು ನುಡಿದರು.
ಉಕ್ಕಿಬಂದ ಅಳುವನ್ನು ತಡೆದುಕೊಳ್ಳುತ್ತಾ ರೂಮಿನಿಂದ ಹೊರಕ್ಕೆ ಹೋದ ತಂದೆಯತ್ತ ನಂತರ ಶೂನ್ಯದತ್ತ ನೋಡುತ್ತಾ ನಿಂತುಬಿಟ್ಟಳು ಶ್ಯಾಮಲಾ.
********
ಈಗ ಅವಳು ಮನುಷ್ಯರೆಲ್ಲಾ ಸ್ವಾರ್ಥಪರರು ಎಂದು ಆಲೋಚಿಸುತ್ತಿರಲಿಲ್ಲ. ಏನೋ ಮಾಡಲು ಹೋಗಿ ಅದು ಏನೇನೋ ಆಗುತ್ತಿದ್ದುದನ್ನು ಗಮನಿಸುತ್ತಿದ್ದಳು. ತನ್ನ ತಂದೆ ತನ್ನೆದುರೇ ಅಪಾರ್ಥ ಮಾಡಿಕೊಂಡು ನೋವನುಭವಿಸುತ್ತಿರುವುದನ್ನು ಕಂಡಿದ್ದಳು.
ಅವಳಿಗೆ ರಾತ್ರಿಯಿಡೀ ನಿದ್ದೆ ಬರಲಿಲ್ಲ. ಮತ್ತೆ ಮತ್ತೆ ಆಲೋಚಿಸಿದಳು.
ನಂತರ ಒಂದು ನಿರ್ಧಾರಕ್ಕೆ ಬಂದಳು. ಅದು ತನ್ನ ತಂದೆಗೆ ಎಲ್ಲ ನಿಜವನೂ ಹೇಳುವ ನಿರ್ಧಾರ. ನಂತರ ಎಲ್ಲ ಸರಿಹೋಗುತ್ತದೆಂದು ಅನ್ನಿಸಿ ನಿಟ್ಟುಸಿರಿಟ್ಟಳು.
ಆದರೆ ವಿಧಿಬರಹ ಬರೆಯುವವನು ಅವಳನ್ನು ನೋಡಿ ಮರುಕಪಟ್ಟ. ಏಕೆಂದರೆ ಅವಳಿಗೆ ಮರುದಿನವೇ ಮತ್ತೊಂದು ಆಘಾತ ಕಾದಿತ್ತು.
******
ಅರುಣೋದಯವಾಗಿತ್ತು. ಸೂರ್ಯನ ಕಿರಣಗಳು ಎಲ್ಲೆಂದರಲ್ಲಿ ಚೆಲ್ಲುತ್ತಿದ್ದವು.
ಅವಳು ತಂದೆಯನ್ನು ಮನೆಯಲ್ಲೆಲ್ಲಾ ಹುಡುಕಿದಳು. ಎಲ್ಲೂ ಇರಲಿಲ್ಲ. ತೋಟಕ್ಕೆ ಹೋದಾಗ ಮರದ ಕೆಳಗೆ ಖುರ್ಚಿ ಹಾಕಿಕೊಂಡು ಶೂನ್ಯದತ್ತ ನೋಡುತ್ತಾ ಸಿಗರೇಟು ಸೇದುತ್ತಾ ಕುಳಿತಿದ್ದರು.
"ಸಿಗರೇಟ್ ಮತ್ತೆ ಪ್ರಾರಂಭಿಸಿದೆಯಾ ಅಪ್ಪಾ?"
"ಓ.. ಬಾಮ್ಮಾ… ಸಿಗರೇಟ್.. ಇದೀಗ ಅವಶ್ಯಕತೆ ಅನ್ನಿಸಿದೆಯಮ್ಮಾ.."
"ಅಪ್ಪಾ.. ಅದು.. ನಾನು ನಿಮಗೊಂದು ವಿಷಯ ಹೇಳಬೇಕು. ಕೋಪ ಮಾಡಿಕೊಳ್ಳೋಲ್ಲ ತಾನೆ?"
"ಕೋಪ? ಇಲ್ಲಮ್ಮಾ.. ಸಿಗರೇಟನ್ನು ಶುರು ಮಾಡಿದ ನಂತರ ಕೋಪ, ಆನಂದ, ವಿಷಾದ ಎಲ್ಲವನ್ನೂ ಬಿಟ್ಟಿದ್ದೇನೆ"
"ಅಪ್ಪಾ.. ನನಗೆ.. ನನಗೆ ಏಯ್ಡ್ಸ್ ಇಲ್ಲವಪ್ಪ.. ನಾನು ಸುಳ್ಳು ಹೇಳಿದ್ದೆ!"
" ಇನ್ನೂ ನನಗೆ ನೋವುಂಟು ಮಾಡಬಾರದೆಂಬ ಆಲೋಚನೆಯೇನಮ್ಮಾ..?"
"ಇಲ್ಲಪ್ಪ. ನಾನು ನಿಜ ಹೇಳ್ತಿದ್ದೀನಿ. ನ..ನ..ಗೆ ಏಯ್ಡ್ಸ್ ಇಲ್ಲ.."
ತಕ್ಷಣದ ಅವರ ಖುಷಿಗೆ ಪಾರವೇ ಇರಲಿಲ್ಲ. ನಂಬಲಾಗದಷ್ಟು ಖುಷಿಯಾಗ್ತಿದೆ ಅನ್ನುತ್ತಾ ಸಂತೋಷದಿಂದ ಅವಳನ್ನೆತ್ತಿ ಎರಡು ಸುತ್ತು ತಿರುಗಿಸಿದರು. ಅವರ ಖುಷಿ ಆನಂದ ನೋಡಿ ಅವಳೂ ಸಂತಸಪಟ್ಟಳು. ಅವರ ಕಣ್ಣಿನಿಂದ ಆನಂದ ಭಾಷ್ಪವೊಂದು ಕೆನ್ನೆ ಸವರಿಕೊಂಡು ಕೆಳಕ್ಕೆ ಜಾರಿ ಮಣ್ಣುಪಾಲಾಯಿತು.
ಸ್ವಲ್ಪ ಹೊತ್ತಿನ ಬಳಿಕ " ಆದರೂ.. ಒಮ್ಮೆ ಪರೀಕ್ಷೆ ಮಾಡಿ ನೋಡಬೇಕು" ಎಂದರು.
*********
"ನೀನು ಯಾಕೆ ಹೀಗೆ ಮಾಡಿದಿ?" ಎಂದು ತಂದೆ ಶ್ಯಾಮಲಳ ಬಳಿ ಕೇಳಿದರು.
" ಹಿಂದೆ ವಧುಪರೀಕ್ಷೆ ಇದ್ದ ಹಾಗೆ ಇದು ವರ ಪರೀಕ್ಷೆಯಪ್ಪ. ಕಾಲೇಜಿನಲ್ಲಿ ಓದುತ್ತಿದ್ದಾಗ ಅನೇಕ ಹುಡುಗರು ’ಐ ಲವ್ ಯೂ’ ಎನ್ನುತ್ತಾ ನನಗೋಸ್ಕರ ಏನು ಮಾಡಲೂ ತಯಾರಾಗಿ ಬರುತ್ತಿದ್ದರು. ನನ್ನ ಬಳಿ ಹಣವಿದೆಯೆಂದೋ, ರೂಪಕ್ಕಾಗಿಯೋ ನಾನು ಕೇಳದಿದ್ದರೂ ನನಗೆ ಸಹಾಯ ಮಾಡುತ್ತಿದ್ದರು. ಇವರ ನಿಜಾಂಶ ತಿಳಿದುಕೊಳ್ಳುವುದಕ್ಕೋಸ್ಕರ ಒಂದು ಮಾಸ್ಟರ್ ಪ್ಲಾನ್ ಮಾಡುತ್ತಿದ್ದೆ. ಆಗಲೇ ನಿರ್ಧರಿಸಿದ್ದೆ. ನನಗೆ ಮಾರಣಾಂತಿಕ ಖಾಯಿಲೆಯಿದ್ದರೂ ನನ್ನನ್ನು ಮದುವೆಯಾಗುತ್ತೇನೆನ್ನುವವನೇ ನನಗೆ ಸರಿಯಾದ ಗಂಡು ಎಂದು…. ಆದರೆ ಇದುವರೆಗೂ ಸ್ವಾರ್ಥವಿಲ್ಲದ ಪುರುಷರು ಸಿಗಲಿಲ್ಲವಪ್ಪಾ… "
"ಇದು ತಪ್ಪಮ್ಮಾ.. ನೀನು ಊಹಿಸಿದಂತಹ ಗುಣವುಳ್ಳವರು ಯಾವ ಕಾಲದಲ್ಲಾದರೂ ಸಿಗುವುದಿಲ್ಲ. ಸ್ವಾರ್ಥವಿಲ್ಲದೇ ಬದುಕುವುದೇ ಅಸಾಧ್ಯ. ಅಂತಹ ಬೇಡಿಕೆಯನ್ನು ಮರೆತುಬಿಡಮ್ಮ.. ಅಂತವರ್ಯಾರೂ ಸಿಗಲಾರರು.." ಅವರ ಅನುಭವವೇ ಈ ಮಾತನ್ನು ಆಡಿಸಿತ್ತು.
"ಇನ್ನು ಒಂದು ವರ್ಷ ಅಷ್ಟೇ ಅಪ್ಪ. ಅಲ್ಲಿಯವರೆಗೂ ಹುಡುಕುತ್ತೇನೆ. ಅಷ್ಟರವರೆಗೂ ಸಿಗಲಿಲ್ಲವಾದರೆ ನೀವು ಹೇಳಿದ ಗಂಡನ್ನೇ ಮದುವೆಯಾಗುವೆ"
ನಿನ್ನಿಷ್ಟವಮ್ಮಾ.." ನಿಟ್ಟುಸಿರು ಬಿಡುತ್ತ ಶ್ಯಾಮಲಳ ತಂದೆ ಹೇಳಿದರು.
******
ಮಗಳು ಎಷ್ಟು ಬಾರಿ ಹೇಳಿದರೂ ಕೇಳದೇ ಟೆಸ್ಟ್ ಮಾದಿಸಿದರೇನೆ ಮನ್ಸಿಗೆ ನೆಮ್ಮದಿ ಎಂದರು ಶ್ಯಾಮಲಳ ತಂದೆ. ಒಂದು ದಿನ ಡಾಕ್ಟರನು ಭೇಟಿಯಾಗಲು ಹೊರಟರು.
"ಡಾಕ್ಟರ್.. ನನ್ನ ಮಗಳಿಗೆ ಏಯ್ಡ್ಸ್ ಇಲ್ಲವೆಂಬ ರಿಪೋರ್ಟ್ ನೀಡುವ ಟೆಸ್ಟ್ ಮಾಡಿಸಬೇಕಾಗಿತ್ತು.."
" ಈಕೆ ಶ್ಯಾಮಲಳಲ್ಲವೇ?"
ತಂದೆ ಆಶ್ಚರ್ಯದಿಂದ, " ಅರೆ.. ನಿಮಗೆ ಹೇಗೆ ಗೊತ್ತು ನನ್ನ ಮಗಳು?" ಕೇಳಿದರು.
"ನಿಮ್ಮ ಮಗಳ ಕಾಲೇಜಿನ ಕನ್ಸಲ್ಟಿಂಗ್ ಡಾಕ್ಟರ್ ನಾನೇ. ಇವಳು ಡಿಸ್ಟಿಂಕ್ಷನ್ ಸ್ಟೂಡೆಂಟ್ ಎಂದ ಬಳಿಕ ಮರೆಯಲು ಸಾಧ್ಯವೇ?"
ಶ್ಯಾಮಲ ಮಾತ್ರ ಅವರತ್ತ ಆಶ್ಚರ್ಯದಿಂದ ನೋಡಿದಳು. ಹಿಂದೆಂದೂ ನೋಡಿದ ನೆನಪಿರಲಿಲ್ಲ ಆ ಚಹರೆಯನ್ನು.
ಡಾಕ್ಟರ್ ಮುಗುಳ್ನಗೆಯೊಂದಿಗೆ "ನರ್ಸ್… ಎಲಿಸಾ ಟೆಸ್ಟಿಗೆ ತಯಾರಿ ಮಾಡಿ" ಎಂದರು.
*********
ಸಂಜೆಯಾಗಿತ್ತು.
’ಎಲಿಸಾ’ ಪರೀಕ್ಷೆಯ ಫಲಿತಾಂಶಕ್ಕಾಗಿ ಎದುರುನೋಡುತ್ತಿದ್ದಾರೆ, ತಂದೆ ಮತ್ತು ಮಗಳು. ನರ್ಸ್ ’ಒಳಕ್ಕೆ ಹೋಗಿ’ ಎಂದಾಗ ಉದ್ವೇಗದಿಂದ ಒಳ ನಡೆದರು.
ಡಾಕ್ಟರ್ ನ ಮುಖ ನಿರ್ಲಿಪ್ತತೆಯಿಂದ ತುಳುಕಾಡುತ್ತಿತ್ತು.
"ಏನಾತು ಡಾಕ್ಟ್ರೇ" ಎಂದರು ತಂದೆ ಉದ್ವೇಗದಿಂದ.
"ಕುಳಿತುಕೊಳ್ಳಿ" ಎಂದರು. "ಮನಸ್ಸು ಸ್ವಲ್ಪ ಗಟ್ಟಿಮಾಡಿಕೊಳ್ಳಿಸರ್ .. ಎಲ್ಲರಿಗೂ ಹಣೆಬರಹ ಮೊದಲೇ ಬರೆದಿಟ್ಟಿರುತ್ತಾರೆ ಆ ದೇವರು…" ಎಂದು ಸ್ವಲ್ಪ ಕಾಲ ಮೌನವಹಿಸಿ, ನಿಟ್ಟುಸಿರಿಟ್ಟು "ನಿಮ್ಮ ಮಗಳಿಗೆ ಏ…ಯ್ಡ್ಸ್.. ಇ..ದೆ..!" ಎಂದರು.
ಶ್ಯಾಮಲಳ ತಂದೆ ತತ್ತರಿಸಿ ಹೋದರು.
ಅವಳಿಗೆ ಭೂಮಿ ಬಾಯ್ತೆರೆದು ತನ್ನನ್ನು ಒಳಕ್ಕೆಳೆದುಕೊಳ್ಳಬಾರದೇ ಎನಿಸಿತು. ಮನದಲ್ಲಿ ವಿಷಾದದ ಜ್ವಾಲಾಮುಖಿಯೊಂದು ಹತ್ತಿ ಉರಿಯಿತು. ನೀರಸತ್ವವೆಂಬ ಲಾವಾರಸ ಉಕ್ಕಿ ಹರಿಯಿತು.
ಏನೋ ತಮಾಷೆಗಾಗಿ ’ ಏಯ್ಡ್ಸ್ ಇದೆ’ ಎನ್ನುವುದಕ್ಕೂ, ನಿಜಕ್ಕೂ ಏಯ್ಡ್ಸ್ ಬಂದರೆ ಹೇಗಿರುತ್ತದೆಂದು ಮನಸು ಊಹಿಸಿಯೇ ಇರಲಿಲ್ಲ. ಅಷ್ಟು ವಿಷಾದವನ್ನು ಅವಳ ಮನಸ್ಸು ಸಹಿಸುತ್ತಿಲ್ಲ. ಕಾಣದ ಕೈಯ್ಯೊಂದು ಹೃದಯವನ್ನು ಹಿಂಡಿದಂತಾಗುತ್ತಿದೆ ಅವಳಿಗೆ.
ಮೃತ್ಯು ತನ್ನನ್ನು ಗಬಳಿಸಲು ಹೊಂಚು ಹಾಕುತ್ತಿದೆಯೆಂದು ಊಹಿಸಿದೊಡನೆ ಮೈ ನಡುಗಲಾರಂಭಿಸಿತು.
ಯಾರಾದರೂ ಇದುವರೆಗೆ ತನ್ನನ್ನು ಮದುವೆಯಾಗಿದ್ದರೆ ಅವರ ಗತಿ ಊಹಿಸಿಕೊಂದಳು. ವಿಧಿಗೆ ಏಟು ಕೊಡಬೇಕೆಂದುಕೊಂಡಿದ್ದಳು; ಆದರೆ ವಿಧಿ ತನಗೆ ಈ ರೀತಿಯಾದ ಶಿಕ್ಷೆ ಕೊಡುತ್ತದೆಂದು ಅವಳು ಕಿಂಚಿತ್ತೂ ಊಹೆ ಮಾಡಿರಲಿಲ್ಲ.
ತಂದೆ ಹೃದಯವೇ ಹೋಳಾದಂತೆ ಕುಳಿತಿದ್ದರು.
ಆಗ ಆ ರೂಮನ್ನು ಮಹೇಂದ್ರ ಪ್ರವೇಶಿಸಿದ.
**********
ಹಠಾತ್ತನೆ ಬಂದಿದ್ದರಿಂದ ಡಾಕ್ಟರ್ ಒಬ್ಬರನ್ನು ಬಿಟ್ಟು ಉಳಿದವರೆಲ್ಲರೂ ಆಶ್ಚರ್ಯಗೊಂಡರು.
ಶ್ಯಾಮಲಳ ಬಳಿ ತೆರಳಿ," ನನ್ನನ್ನು ಮದುವೆಯಾಗುತ್ತೀಯಾ ಶ್ಯಾಮಲಾ?" ಎಂದು ಮಹೇಂದ್ರ ಶಾಂತವಾಗಿ ಕೇಳಿದನು.
ಎರಗಿ ಬಂದ ಪ್ರಶ್ನೆಗೆ ಅವಳು ತಕ್ಷಣಕ್ಕೆ ಉತ್ತರಿಸದಾದಳು. ನಂತರ ಸಾವರಿಸಿಕೊಂಡು, "ನನಗೆ ಏಯ್ಡ್ಸ್ ಇದೆ ಮಹೇಂದ್ರ" ಅವಳ ದನಿ ಅವಳಿಗೇ ಕೇಳಿಸಲಿಲ್ಲ. ಕಣ್ಣೀರು ಕೆನ್ನೆಯನ್ನೆಲ್ಲಾ ಒದ್ದೆ ಮಾಡಿಬಿಟ್ಟಿತು.
"ನನ್ನ ಪ್ರಶ್ನೆಗೆ ಉತ್ತರ ಅದಲ್ಲ, ನಿನಗೆ ನಾನು ಇಷ್ಟವಾಗಿರುವೆನಾ?"
ಅವಳ ನಿರೀಕ್ಷೆ ದುಃಖದೇಟಿನಿಂದ ಸತ್ತಿತ್ತು. ಜಂಬವೆಲ್ಲ ನೀರಿನಂತೆ ಕರಗಿತ್ತು. "ಹ..ಹೌ..ದು!" ಎಂದು ಮತ್ತಷ್ಟು ಅತ್ತಳು.
ಅವಳ ತಂದೆ ಈ ಪರಿಣಾಮಗಳನ್ನು ಎವೆಯಿಕ್ಕದೇ ನೋಡುತ್ತಿದ್ದರು.
ಮಹೇಂದ್ರನಿಗೆ ಅವಳ ಪಶ್ಚಾತ್ತಾಪ ಸ್ಪಷ್ಟವಾಗಿ ತಿಳಿಯುತ್ತಿತ್ತು. ಇನ್ನೂ ಮುಚ್ಚಿಟ್ಟು ಪ್ರಯೋಜನವಿಲ್ಲವೆಂದು ಅರಿತು," ಐ ಯಾಮ್ ರಿಯಲಿ ಸಾರಿ. ನಾನೂ ಈ ಡಾಕ್ಟರ್ ಇಬ್ಬರೂ ಸ್ನೇಹಿತರು. ಕೊಲೀಗ್ಸ್ ಕೂಡ. ಇಲ್ಲೀಗ ನಡೆದದ್ದು ಸುಳ್ಳು. ಈ ಕಪಟ ನಾಟಕದ ಸೂತ್ರಧಾರಿ ನಾನೇ"
ಶ್ಯಾಮಲ ತಕ್ಷಣ "ಹಾಗಾದರೆ ನನಗೆ ಏಯ್ಡ್ಸ್ ಇ..ಲ್ಲ…ವಾ..?" ಏನೋ ಅದ್ಭುತವಾದದ್ದನ್ನು ಕೇಳುವಂತೆ ಕೇಳಿದಳು.
ಆಗ ಡಾಕ್ಟರ್, " ಇಲ್ಲ. ನಾನು ಸುಮ್ಮನೇ ಸುಳ್ಳು ಹೇಳಿದೆ. ಮೊದಲು ಆಗೋಲ್ಲವೆಂದೆ. ಒಬ್ಬ ಪೇಷೆಂಟ್ ಗೆ ಹೀಗೆ ಸುಳ್ಳು ಹೇಳಲಾರೆನೆಂದೆ. ಆದರೆ ಮಹೇಂದ್ರ ಕಾರಣ ಹೇಳಿದಾಗ ಒಪ್ಪಿಕೊಂಡೆ. ನನ್ನಿಂದ ತಪ್ಪಾಗಿದ್ದಲ್ಲಿ ಕ್ಷಮಿಸಿ. ಐ ಯಾಮ್ ಸಾರಿ.."
ಅವಳ ತಂದೆ ಇದನ್ನೇ ಎಂಟನೇ ಅದ್ಭುತವೆಂಬಂತೆ ನೋಡುತ್ತಿದ್ದರು.
**********
"ಅವನೇ ನನ್ನ ಗಂಡ" ಸಿನೆಮಾ ಬಿಟ್ಟಿತು. ಜನಸಂದಣಿಯ ಮಧ್ಯದಲ್ಲಿ ಶ್ಯಾಮಲಾ ಮತ್ತು ಮಹೇಂದ್ರ ನಗುತ್ತಾ ಬರುತ್ತಿದ್ದರು.
"ನಿನ್ನ ಗಂಡ ಹೇಗಿರಬೇಕು?" ತುಂಟತನದಿಂದ ಕೇಳಿದನು.
ಅದಕ್ಕವಳು," ನಿನ್ನ ಹಾಗಂತೂ ಇರಕೂಡದು" ಎಂದಳೂ ಚೂಟಿಯಾಗಿ.
ಇಬ್ಬರೂ ನಕ್ಕರು.
ಒಂದು ಕತೆ: ಏಳು ಮಲ್ಲಿಗೆ ತೂಕದ ಹುಡುಗಿ
Posted ಜೂನ್ 10, 2009
on:- In: ಒಂದು ಕತೆ
- 5 Comments
– ರಂಜಿತ್ ಅಡಿಗ, ಕುಂದಾಪುರ
"ಬೇಕಾಗಿದ್ದಾರೆ!
ಇಪ್ಪತ್ತರ ಆಸುಪಾಸಿನಲ್ಲಿರುವ, ಮುಗ್ಧ ಕಂಗಳ, ಚೆಲುವಾದ ಏಳುಮಲ್ಲಿಗೆ ತೂಕವಿರುವ ಹುಡುಗಿಯೊಬ್ಬಳು ಬೇಕಾಗಿದ್ದಾಳೆ. ಕೂಡಲೇ ಸಂಪರ್ಕಿಸಿ,"
ಜನಪ್ರಿಯ ಪತ್ರಿಕೆಯೊಂದರ ಮೂರನೇ ಪುಟದ ಮೂಲೆಯಲ್ಲಿದ್ದ ಈ ಚಿಕ್ಕ-ಚೊಕ್ಕ ಜಾಹೀರಾತನ್ನು ಓದಿ ಯಾವುದೋ ಶ್ರೀಮಂತ ಪಡ್ಡೆ ಹುಡುಗನ ಕರಾಮತ್ತಿರಬೇಕೆಂದುಕೊಂಡು ಪುಟ ಮಗುಚಿ ಹಾಕಿದವರು ಕೆಲವರಾದರೆ, ’ಏಳು ಮಲ್ಲಿಗೆ ತೂಕದ ಹುಡುಗಿಯಾ!’ ಎಂದು ಮನದಲ್ಲೇ ಚಪ್ಪರಿಸಿ ತಮ್ಮ ಫ್ರೆಂಡ್ಸ್ ಗಳಿಗೆ ಹೇಳಿ ನಗಲು ಒಳ್ಳೆಯ ವಿಷಯ ಸಿಕ್ಕಿತಲ್ಲ ಎಂದು ಸಂಭ್ರಮ ಪಟ್ಟವರು ಕೆಲವರು. ಇನ್ನೂ ಬೇರೆ ಥರದವರು ಎದುರು ಮನೆಯ ಧಡೂತಿ ಹುಡುಗಿಯನ್ನು ಸಂಪರ್ಕಿಸಲು ಹೇಳಿದರೆ ಹೇಗೆ? ಎಂದು ಜೋಕ್ ಮಾಡಿ ನಕ್ಕರು.
ಇಂತಹ ವಿಚಿತ್ರ ಜಾಹೀರಾತು ಪತ್ರಿಕೆಗೆ ನೀಡಿದ ಮಹಾನುಭಾವ ಸಂದೀಪ್ ಜಾಹೀರಾತನ್ನು ನೋಡಿ ಮುಗುಳ್ನಗೆ ಸೂಸಿದ. ಕೂಡಲೇ ಮೊಬೈಲ್ ನಿಂದ ಪತ್ರಿಕೆಗೆ ಕರೆ ಮಾಡಿದ. ಯಾವುದಾದರೂ ಲೆಟರ್ ಬಂದಲ್ಲಿ ತಕ್ಷಣವೇ ತನಗೆ ಕಾಲ್ ಮಾಡುವಂತೆ ತಿಳಿಸಿದ. ನಂತರ ಅಲೋಚನಾಮಗ್ನನಾದ. ಮನದ ತುಂಬಾ ಒಂದೇ ಪ್ರಶ್ನೆ ಲಾಸ್ಯವಾಡುತಿತ್ತು. ಅಂತಹ ಹುಡುಗಿ ಸಿಗುತ್ತಾಳಾ? ಆ ರೀತಿಯ ಹುಡುಗಿಯೆಂದರೆ ಏಳು ಮಲ್ಲಿಗೆ ತೂಕದ ಹುಡುಗಿಯಲ್ಲ!
ಮತ್ತೆ..?
************
ಬದುಕಿನ ತುಂಬ ಖಾಲಿ ಆಕಾಶದಂತಹ ಏಕತಾನತೆ. ಆಸ್ತಿ, ಅಂತಸ್ತು, ಬಂಗಲೆ ಬ್ಯಾಂಕ್ ಬ್ಯಾಲನ್ಸ್, ತಾಯಿ ಮಮತೆ, ಫ್ರೆಂಡ್ಸ್ ಹರಟೆ, ಹಣ ನೀಡುವ ಆನಂದ ಎಲ್ಲಾ ಇದ್ದರೂ ತುಂಬಿದ ಕೊಡದ ಚಿಕ್ಕ ತೂತಿನಂತಹ ಸಣ್ಣ ಕೊರತೆ. ಮನದಲ್ಲಿ ಬತ್ತಿದ ಉತ್ಸಾಹದ ಒರತೆ.
ಇಂತಹಾ ಖಾಲಿ-ಖಾಲಿಯಾದ ಬದುಕಿನ ಕೊಡದಲ್ಲಿ ಕೊಂಚ ಉತ್ಸಾಹ, ಉನ್ಮಾದ, ರೋಚಕತೆ, ರಮ್ಯತೆ ತುಂಬುವುದು ಹೇಗೆ?
ಅದಕ್ಕೆ ಉತ್ತರವಾಗಿ ಹೊಳೆದದ್ದೇ ಆ ವಿಚಿತ್ರ ಜಾಹೀರಾತು.
ಎಲ್ಲೋ ದೂರದಲ್ಲಿ, ರೂಮಿನ ಕದವಿಕ್ಕಿ ಮೂಲೆಯೊಂದರಲ್ಲಿ ಕುಳಿತು, ಜಾಹೀರಾತು ಓದಿ ಜಾಣತನದ ಉತ್ತರ ನೀಡುವ ತುಂಟ ಹುಡುಗಿಗಾಗಿ ಈ ಶೈಲಿಯ ಅನ್ವೇಷಣೆಗೆ ಕೈ ಹಾಕಿದ್ದ ಸಂದೀಪ್. ಅಂತಹ ಒಂದು ಅಲೋಚನೆ, ಅದರಲ್ಲಿರುವ ಕುತೂಹಲದಿಂದ ಅವನ ಬದುಕಿಗೆ ಎಂದೂ ಇರದಂತಹ ವಿಚಿತ್ರ ಕಳೆ ಬಂದುಬಿಟ್ಟಿತ್ತು. ತಾನೆಂದೂ ಅರಿಯದ ವಿಚಿತ್ರ ಹುರುಪು ಹುಟ್ಟಿತ್ತು. ಪ್ರತಿದಿನ ಪತ್ರಿಕೆಯ ಫೋನ್ ಕರೆಗಾಗಿ ಕಾಯುತ್ತ ಪರಿತಪಿಸುವುದರಲ್ಲಿ ಏನೋ ಆನಂದ, ಹರುಷ ಅವನಲ್ಲಿ.
ಮೂರು ದಿನ ಕಳೆದರೂ ಪತ್ರಿಕೆಯಿಂದ ಏನೂ ಉತ್ತರ ಬರದಾದಾಗ ತಾನೇ ಪರಿಸ್ಥಿತಿ ತಿಳಿದುಕೊಳ್ಳಲೋಸುಗ ಫೋನ್ ಮಾಡಿದ. "ನಾನು ಸಂದೀಪ್ ಮಾತಾಡ್ತಿರೋದು, ಏನಾದ್ರೂ ರೆಸ್ಪಾನ್ಸ್ ಬಂತೇ ನನ್ನ ಜಾಹೀರಾತಿಗೆ?"
"ಸಾರ್.. ನಿಮ್ಗೆ ಒಂದು ಸ್ಯಾಡ್ ನ್ಯೂಸ್..!" ಅಂದನಾತ.
ಆಶ್ಚರ್ಯದಿಂದ," ಒಂದೂ ಲೆಟರ್ ಬಂದಿಲ್ವಾ?!"
"ಅಯ್ಯೋ! ಹಾಗಲ್ಲ ಸರ್… ರಾಶಿ-ರಾಶಿ ಲೆಟರ್ಸ್ ಬಂದಿವೆ, ಒಟ್ಟೂ ಸಧ್ಯಕ್ಕೆ ಮುನ್ನೂರ ಎಪ್ಪತ್ನಾಕು ಸರ್!…"
"ಉಸ್ಸ್ ಸ್.." ಎಂಬ ಉದ್ಗಾರ ಅವನಿಗರಿವಿರದಂತೆಯೇ ಹೊರಹೊಮ್ಮಿತು. ಫೋನ್ ಇಟ್ಟ ನಂತರ ಆಲೋಚಿಸಿದಾಗ ನಗು ಉಕ್ಕಿತವನಿಗೆ. ಯಾವುದೇ ಹುಡುಗಿ ತನ್ನ ಸೌಂದರ್ಯದ ಹೊಗಳಿಕೆಯನ್ನು ತನ್ನದಲ್ಲ ಅಂದುಕೊಳ್ಳುತ್ತಾಳಾ? ತನ್ನ ವಯಸ್ಸು ಇಪ್ಪತ್ತಲ್ಲವೆಂದೂ, ತನ್ನ ಕಣ್ಣಲ್ಲಿ ಮುಗ್ಧತೆ ಇಲ್ಲವೆಂದೂ ಯಾವತ್ತಾದರೂ ಒಂದು ಕ್ಷಣವಾದರೂ ಅಲೋಚಿಸುತ್ತಾಳಾ?
ಇಂತಹ ವಿಚಾರ ಮನದಲ್ಲಿ ಮೂಡಿ ಮೊಗದಲ್ಲಿ ನಗು ತರಿಸಿತು.
ಮತ್ತೆ ಆಲೋಚನಾಲಹರಿ ಆ ಕನಸಿನ ಏಳುಮಲ್ಲಿಗೆ ತೂಕದ ಹುಡುಗಿಯತ್ತ ವಾಲಿತು. ಮುನ್ನೂರ ಎಪ್ಪತ್ನಾಕರಲ್ಲಿ ಒಬ್ಬಳಾದರೂ ಅಂತವಳು ಇರುವುದಿಲ್ಲವಾ ಎನ್ನುವ ಆಸೆ ಅವನಲ್ಲಿ ಅರಳಿ ಒಂದು ನಿರ್ಧಾರಕ್ಕೆ ಬಂದ.
ತಾಳ್ಮೆಯಿಂದ, ಪ್ರೀತಿಯಿಂದ ಆ ಎಲ್ಲಾ ಪತ್ರಗಳನ್ನು ಒಂದೊಂದಾಗಿ ಓದುವ ನಿರ್ಧಾರವದು.
***********
"ತೂಕವೇನೋ ಏಳುಮಲ್ಲಿಗೆಯದೇ.. ಕಣ್ಣತಕ್ಕಡಿ ಪ್ರೀತಿಯಿಂದ ಅಳೆದರೆ ಮಾತ್ರ!
ಹೂವ ತೂಕ ಕಟ್ಟಿಕೊಂಡು ದುಂಬಿಗೇನಾಗಬೇಕು? ಅದಕ್ಕೆ ಸರಾಗವಾಗಿ ಪರಾಗ ಸಿಕ್ಕರೆ ಆಯಿತು. ಆದರೆ ಅನುರಾಗಕ್ಕಾಗಿ ಹುಡುಕುವ ದುಂಬಿ ನೋಡಿದ್ದು ಇದೇ ಮೊದಲ ಬಾರಿ ಕಣ್ರೀ..:)"
ರಾತ್ರಿ ಮೂರು ಘಂಟೆಯಾದರೂ ನಿದ್ರಿಸದೇ, ಸದ್ದಿರದ ನಿಶ್ಯಬ್ಧದಲ್ಲಿ ರಾಶಿ ರಾಶಿ ಪತ್ರಗಳನ್ನು ಗುಡ್ಡೆಹಾಕಿಕೊಂಡು ಒಂದೊಂದೇ ಬಿಡಿಸಿ ಓದುತ್ತಿದ್ದರೆ ಚಿಕ್ಕ ಲಹರಿ ಮೂಡಿಸಿದ್ದೆಂದರೆ ಈ ಪತ್ರವೇ. ಹುಡುಗಿಯನ್ನು ಹೂವಿಗೆ ಹೋಲಿಸಿದರೆ ಆಕೆ ತನ್ನನು ದುಂಬಿಗೆ ಹೋಲಿಸಿ, ಅಲ್ಪ ಕಾವ್ಯಾತ್ಮಕವಾಗಿಯೂ ಸ್ವಲ್ಪ ಹುಡುಗಾಟಿಕೆಯಿಂದಲೂ ಬರೆದದ್ದು ನೋಡಿ ಈಕೆ ಬುದ್ಧಿವಂತೆ ಅನ್ನಿಸಿತವನಿಗೆ. ಪತ್ರದ ಅಡಿಭಾಗದಲ್ಲಿ ಹೆಸರಿಗಾಗಿ ಕಣ್ಣಲ್ಲೇ ತಡಕಾಡಿದ. ಅಲ್ಲಿ ಹೆಸರಿರಲಿಲ್ಲ. ಬದಲಿಗೆ ಚಿಕ್ಕ ನಕ್ಷತ್ರ ಚಿಹ್ನೆಯೂ ಅದರ ಕೆಳಗೆ ದೂರದಿಂದ ನೋಡಿದರೆ ಸಹಿಯಂತೆ ಕಾಣುವ ಪು. ತಿ. ನೋ. ಎಂಬ ಸೂಚನೆಯೂ ಇತ್ತು. ಲಗುಬಗನೇ ಪುಟ ಮಗುಚಿದ.
ಅಲ್ಲಿ-
"ನೀವಿಟ್ಟ ಪರೀಕ್ಷೆಯಲಿ ನಾನು ಯಶಸ್ವಿಯಾಗದೇ ಇದ್ದಿದ್ದರೆ ಈ ಪತ್ರ ಕಸದ ಬುಟ್ಟಿಯಲ್ಲಿರುತ್ತಿತ್ತು. ನನ್ನ ಹೆಸರಿಗಾಗಿ ಇಲ್ಲಿ ನೋಡಿದಿರೆಂದರೆ ಕೊನೆ ಪಕ್ಷ ಇಷ್ಟವಾಯಿತು ಎಂದಾಯ್ತು. ಥ್ಯಾಂಕ್ಸ್. ಆದರೆ ನನ್ನ ಹೆಸರು ಖಂಡಿತಾ ಹೇಳಲಾರೆ.
ನಾನು ಯಾರು ಎಂದು ತಿಳಿದುಕೊಳ್ಳಬೇಕಾದರೆ ತಕ್ಷಣ ಕೆಳಗಿನ ನಂಬರ್ ಗೆ ಡಯಲ್ ಮಾಡಿ.
ಇಷ್ಟವಾಗಿರದಿದ್ದರೆ ಕಸದ ಬುಟ್ಟಿ ಕಾಯುತಿದೆ, ತುಂಬಿಸಿ."
ತಾನು ಮಾಡುತ್ತಿರುವುದು ಪರೀಕ್ಷೆ ಅಂತಲೂ, ತನ್ನೆದುರಿಗೆ ಪತ್ರಗಳ ರಾಶಿ ಇರುವುದೆಂದೂ ಸರಿಯಾಗಿ ಊಹಿಸಿದ್ದಾಳೆ. ಕಸದ ಬುಟ್ಟಿಯನ್ನು ಕರೆಕ್ಟಾಗಿ ಕಲ್ಪಿಸಿಕೊಂಡಿದ್ದಾಳೆ. ಆದರೆ ಮುಂಜಾವಿನ ಮೂರು ಘಂಟೆ ಎಂಬ ಈಗಿನ ಯುವಜನರ ಅರ್ಧರಾತ್ರಿಯಲ್ಲಿ ಪತ್ರ ಓದುತ್ತಿರುವೆನೆಂದು ಅಂದುಕೊಂಡಿರಲಿಕ್ಕಿಲ್ಲ. ಅಂದುಕೊಂಡಿರಲಾರಳು ಎಂಬ ಕಾರಣಕ್ಕೇ ಈಗಲೇ ಫೋನ್ ಮಾಡಿ ತಾನೇ ಬುದ್ಧಿವಂತನೆನ್ನಿಸಿಕೊಳ್ಳಬೇಕು. ಉಳಿದೆಲ್ಲ ಪತ್ರಗಳನ್ನು ಬದಿಗೆಸೆದು ಫೋನ್ ಗೆ ಕೈ ಹಾಕಿದ.
ಆ ಕಡೆ ಫೋನ್ ರಿಂಗಾಗುತಿತ್ತು. ಸಂದೀಪ್ ಉಸಿರು ಬಿಗಿ ಹಿಡಿದಿದ್ದ. ಮನೆಯಲ್ಲಿ ಬೇರೆ ಯಾರಾದರೂ ಫೋನ್ ಎತ್ತಿದರೆ? .. " ಹಲೋ.." ಎಂದ ನಿಧಾನವಾಗಿ. ಆ ಕಡೆ ಲೈನ್ ನಲ್ಲಿರುವವರ ಪ್ರತಿಸ್ಪಂದನೆ ಕೇಳುವುದಕ್ಕಾಗಿ ಉತ್ಸುಕನಾಗಿದ್ದ.
"ಯಾರ್ರೀ.. ಅದು ಇಷ್ಟ್ ಹೊತ್ನಲ್ಲಿ..?" ಗಡಸು ಹೆಂಗಸಿನ ಬೈಗುಳದಂತಹ ಉತ್ತರ!
" ನಾನು.. ನಾನು.. ಸಂದೀಪ್.. ಅದೂ.. ಏಳು..ಮ.." ಎಮ್ದು ಬಡಬಡಿಸುತ್ತಿರುವಾಗ "ಬೆಳ್ಳಂಬೆಳಿಗ್ಗೆ ಮೂರುಘಂಟೆಗೆ ನಿದ್ರೆ ಹಾಳುಮಾಡಿ ಏಳು ಅನ್ನೋಕೆ ನೀನ್ಯಾವನಯ್ಯ?!" ಎಂದು ಸಿಡುಕಿನಿಂದ ಉತ್ತರಿಸಿದಳಾಕೆ.
ಗೊಂದಲಮಯನಾದ ಸಂದೀಪ್ ಇನ್ನೇನು ಫೋನ್ ಇಡಬೇಕು ಅಂದುಕೊಳ್ಳುತಿರುವಾಗ ಆ ಕಡೆಯಿಂದ ಸಿಟ್ಟಿನ ಗಡಸು ಹೆಂಗಸಿನ ಧ್ವನಿ ಮರೆಯಾಗಿ ಸಿಹಿಯಾದ ಉಲಿತವೊಂದು ಕೇಳಿಸಿತು.." ಪ್ಲೀಸ್.. ಫೋನ್ ಇಟ್ಟುಬಿಡಬೇಡಿ!"
ಆಶ್ಚರ್ಯವಾಯಿತವನಿಗೆ. "ಅಂದರೆ ಇಷ್ಟು ಹೊತ್ತು ಮಾತಾಡಿದ್ದು ನೀವೇನಾ?!"
ಅವಳು ನಸುನಕ್ಕು," ಹ್ಮ್.. ಕಾಲೇಜಿನಲ್ಲಿ ಓದುತ್ತಿದ್ದಾಗ ಮಿಮಿಕ್ರಿಯಲ್ಲಿ ಪ್ರೈಜ್ ಬಂದಿತ್ತು, ಅಮಿತಾಭ್ ಬಚ್ಚನ್ ತರಹ ಮಾತಾಡೋಣ ಅಂದ್ಕೊಂಡೆ. ನಿಮ್ಗೆ ಅನುಮಾನವಾಗುತ್ತದೆಂದು…"
ಸಂದೀಪ್ ಬೇಸ್ತುಬಿದ್ದಿದ್ದ. ತುಂಟ ಹುಡುಗಿಯೊಬ್ಬಳನ್ನು ಗೆಳತಿಯನ್ನಾಗಿ ಮಾಡಿಕೊಳ್ಳೋಣವೆಂದರೆ ತನ್ನನ್ನೇ ಸುಲಭವಾಗಿ ಗೋಳುಹೋಯ್ದುಕೊಂಡಳಲ್ಲಾ ಅಂದುಕೊಂಡ. ಅವಳ ಬಗ್ಗೆ ಮನಸ್ಸು ಏನೆಲ್ಲಾ ಕಲ್ಪಿಸಿಕೊಳ್ಳುತಿತ್ತು. ಕೊಂಚ ಕ್ಷಣಗಳ ಮೌನದಲ್ಲಿ ಅವನ ಮನದಾಳದೊಳಗೆ ಒಂದು ನಿರ್ಧಾರ ಮೆದುವಾಗಿ ಹದಗಟ್ಟುತ್ತಿತ್ತು.
"ಹಲೋ… ಏನಾಲೋಚಿಸುತ್ತಿದ್ದೀರಿ?"
ನಿರ್ಧಾರ ಗಟ್ಟಿಯಾಯಿತು. " ನನ್ನನ್ನು ಮದುವೆಯಾಗುವಿರಾ?" ಕೇಳಿದ.
"ವ್ಹಾಟ್?!" ಎಂಬ ಉದ್ಗಾರ ಅವಳಾಶ್ಚರ್ಯದ ಮೇರೆ ಸೂಚಿಸಿತು.
ಅವನಲ್ಲಿ ಅದೇ ಮಾತಿನ ಖಚಿತತೆ. ಅದೇ ನಿರ್ಧಾರದ ಗಟ್ಟಿತನ. ಪುನಃ ಅದೇ ಪ್ರಶ್ನೆ ಕೇಳಿದ.
"ಅಲ್ರೀ.. ನೀವು ನನ್ನನ್ನ ನೋಡೇ ಇಲ್ಲ?!"
" ನೋಡಬೇಕಾಗಿಲ್ಲ!"
"ನಾನು ಮುದ್ಕಿಯಾಗಿರಬಹುದು!" ಎಂದಳು; ದನಿಯಲ್ಲಿ ಶುದ್ಧ ತುಂಟತನ.
"ಪರವಾಗಿಲ್ಲ!"
"ಮ್..ನಿಮಗೆ ಬೇಕಾಗಿರೋದು ಏಳುಮಲ್ಲಿಗೆ ತೂಕದವಳಲ್ಲವೇ? ಆದ್ರೆ ನಾನು ಸ್ವಲ್ಪ ಡುಮ್ಮಿ ರೀ.."
"ಆದರೂ ಸರಿ"
"ಇಷ್ಟಕ್ಕೂ ನನ್ನಲ್ಲೇನು ಇಷ್ಟ ಆಯಿತು ನಿಮಗೆ?"
"ನಿಮ್ಮಲ್ಲಿರೋ ಜೀವಂತಿಕೆ!"
ಒಂದು ಕ್ಷಣದ ಮೌನ. ಆ ಅವಧಿಯಲ್ಲಿ ಇಬ್ಬರೂ ಭಾವವನ್ನು ಅರಗಿಸಿಕೊಳ್ಳಲು ಪ್ರಯತ್ನಿಸಿದರು. ಅವನ ಆ ನಿಜಾಯಿತಿಯ ಉತ್ತರಕ್ಕೆ ಅವಳ ತುಂಟತನ ಅಡಗಿ ತಂಪು ಹವೆಯೊಂದು ತಟ್ಟಿಹೋದಂತೆ ತನ್ಮಯಳಾದಳು. ಸಂದೀಪ್ ಮತ್ತೆ ಮುಂದುವರಿಸಿದ." … ಹೌದು. ಬತ್ತಿದ ಬದುಕಲ್ಲಿ ಉತ್ಸಾಹ ಮೂಡಿಸುವ ಚಿಲುಮೆ ನಿಮ್ಮಲ್ಲಿ ಧ್ವನಿಸುತ್ತಿದೆ. ನಿಮ್ಮ ಮುಖ ನಿಮ್ಮ ಮಾತಿನ ಲಹರಿಯಲ್ಲೇ ಕಾಣಿಸುತಿದೆ. ನಿಜವಾಗಿಯೂ ನನಗೆ ಬೇಕಿರುವುದು ಏಳುಮಲ್ಲಿಗೆತೂಕದ ಹುಡುಗಿಯ ಸ್ನೇಹವೇ. ಆದರೆ ಆ ತೂಕ ಮನಸ್ಸಿಗೆ ಸಂಬಂಧಿಸಿದ್ದು.ನಿಮ್ಮ ಮನಸ್ಸೂ ಮಲ್ಲಿಗೆಯಂಥದ್ದು, ಅಷ್ಟೇ ಮಧುರ… ಅಷ್ಟೇ ಕಂಪು!"
ಅವಳು ನಕ್ಕಳು," ಮತ್ತೆ..?"
"ಚೈತನ್ಯದ ಸುಗಂಧ ನಿಮ್ಮಲ್ಲಿದೆ. ಅದರ ಘಮ ಇಲ್ಲೂ ನನಗರಿವಾಗುತಿದೆ. ಹೇಳಿ ನನ್ನನ್ನು ಮದುವೆಯಾಗುತ್ತೀರಾ?"
ಅವಳು ಮತ್ತೊಮ್ಮೆ ನಕ್ಕು ಫೋನ್ ಇಟ್ಟುಬಿಟ್ಟಳು.
ಸಂದೀಪ್ ವಿಜಯದ ನಿಟ್ಟುಸಿರಿಟ್ಟು ಮೆಲುವಾದ ಅವಳ ದನಿಯ ಗುಂಗಿನಲ್ಲಿಯೇ ಪರವಶನಾಗುತ್ತಿದ್ದ.
ಅವಳು ಫೋನಿಟ್ಟು ಎದುರಿಗಿರುವ ಕನ್ನಡಿಯಲ್ಲಿ ತನ್ನ ಮೊಗ ನೋಡಿ ನಸುನಕ್ಕಳು.
ಇತ್ತೀಚಿನ ಟಿಪ್ಪಣಿಗಳು