ಕಲರವ

Archive for the ‘ಇತರೆ’ Category

ಹಾಗೆ ನೋಡಿದರೆ ಬೇಸರಿಸಿಕೊಳ್ಳಲು ಕಾರಣಗಳೇ ಬೇಕಿಲ್ಲ. ಬೆಳಿಗ್ಗೆ ಹಾಲಿನವನು ಬರದೇ ರಜೆ
ಹಾಕಿದರೂ ಮನಸ್ಸು ಮುದುಡುತ್ತದೆ.ಗೋಡೆಗೆ ನೇತು ಹಾಕಿದ ಕ್ಯಾಲೆಂಡರ್ ನ್ನು ಕಂಡರೂ ಸಾಕು,
ಇಷ್ಟು ವಯಸ್ಸಾದರೂ ಎನೂ ಸಾಧಿಸದೇ ಹೋದೆನಲ್ಲಾ ಎಂಬುದು ಕೂಡ ಸಾಕು ಮನಸ್ಸು ಬೇಸರಿಸಿ
ಮನದ ಚಿಪ್ಪೊಳಗೆ ಅವಿತು ಕುಳಿತುಕೊಳ್ಳಲು!       

ಈ ಥರದ ಬೇಸರದ ಗಳಿಗೆಗಳು ಬಹುಶಃ ಪ್ರತಿ ವರುಷದ ಹುಟ್ಟುಹಬ್ಬದ ದಿನ ತಪ್ಪದೇ ಕಾಡುತ್ತದೆ.
ಹಾಗೆ ಅಲೋಚಿಸಿದರೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬಾರದು,pen-and-paper
ಎರಡು ನಿಮಿಷದ ಮೌನ ಆಚರಣೆ ಮಾಡಬೇಕು!

ಅದೇನೆ ಇರಲಿ. ಇಂತಹ ಮುದುಡಿದ ಮನವ ಅರಳಿಸಲು ನಾನು ಮೊರೆ ಹೋಗುವುದು ಪುಸ್ತಕಗಳಿಗೆ.   ಕೆಲವೊಂದು ವ್ಯಕ್ತಿಗಳಿಗೆ.ಸುಮ್ಮನೆ ಅರೆಗಳಿಗೆ ನೆನೆದುಕೊಂಡರೂ ಸಾಕು ಮನ ಪುಟಿದೆದ್ದ ಚೆಂಡು.
ಪ್ರತಿ ಮನುಷ್ಯನೊಳಗೂ ಅದಮ್ಯ ಪ್ರತಿಭೆಯ ಊಟೆಯಿರುತ್ತದೆ.ಪ್ರತಿದಿನವೂ ಸ್ವಲ್ಪ ಹೆಚ್ಚು ಕಷ್ಟಪಟ್ಟರೆ
ಅದನ್ನು ಹೊರತರಬಹುದು.ಸ್ವರ್ಗ-ನರಕಗಳೆನ್ನುವುದಿದ್ದರೆ ಸತ್ತ ನಂತರದ ಬದುಕೆನ್ನುವುದಿದ್ದರೆ ಅದನ್ನು ನಿರ್ಧರಿಸುವುದು ನಮ್ಮೊಳಗಿನ
ಪ್ರತಿಭೆಯನ್ನು ಎಷ್ಟರಮಟ್ಟಿಗೆ ಉಪಯೋಗಿಸಿದೆವು ಅನ್ನುವುದರ ಮೇಲೆ ಮಾತ್ರ ಅಂತ ಗಾಢ ವಾಗಿ
ನಂಬುವವನು ನಾನು.  ಹೀಗಾಗಿ ಎನೂ ಸಾಧಿಸಲಿಲ್ಲ ಎಂಬ ವಿಷಯ ಬೇರೆಲ್ಲದಕ್ಕಿಂತ ಹೆಚ್ಚು ಆಳವಾಗಿ ಕಾಡಿಸುವ
ವಿಚಾರ ನನ್ನ ಪಾಲಿಗೆ. ಆದ್ದರಿಂದ ಈ ವಿಷಯದ ನಾಸ್ಟಾಲ್ಜಿಯ ಆಗಾಗ್ಗೆ ಹಸಿವಿನಂತೆ ಕಾಡುತಿರುತ್ತದೆ.
ಇದಕ್ಕೆ ಮದ್ದಾಗಿ ಕೆಲ ಸಲ ಯಂಡಮೂರಿ ಪುಸ್ತಕಗಳನ್ನು ಓದುತಿರುತ್ತೇನೆ. ಗುರಿ ಏನಂತ ನಿರ್ಧರಿಸುವುದರಲ್ಲಿ,
ಗುರಿಯತ್ತ ಹೆಜ್ಜೆಯಿಡುವತ್ತ ನಿಜವಾದ ನೆಮ್ಮದಿ ಸಂತೃಪ್ತಿ ಏನೆಂದು ತಿಳಿದುಕೊಳ್ಳಲು ಇದು ಬಹಳ ಸಹಾಯಕಾರಿ.
ಅದೂ ಅಲ್ಲದೇ ಸ್ಟೀಫನ್ ಹಾಕಿಂಗ್, ಹೆಲೆನ್ ಕೆಲ್ಲರ್ ನೀಲ್ ಆರ್ಮ್ ಸ್ಟ್ರಾಂಗ್ ಅಂತವರು ಜೀವನದಲ್ಲಿ ನಡೆದು
ಬಂದ ಹಾದಿಯನ್ನು ನೆನೆದುಕೊಂಡರೂ ನಿಮ್ಮಲ್ಲಿ ಜೀವನದೆಡೆಗೆ ಅನಂತ ಉತ್ಸಾಹ ಉಕ್ಕದಿದ್ದರೆ ನನ್ನಾಣೆ!

ಕಡು ಬಡತನದಲ್ಲಿದ್ದ ಉಪೇಂದ್ರ ಕನ್ನಡ ಚಿತ್ರರಂಗದಲ್ಲಿ ನೆಲೆ ನಿಂತ ಪರಿ, ಪದ್ಮನಾಭನಗರದ ರೂಮೊಂದರಲ್ಲಿ
ಕುಳಿತು ಕನ್ನಡದ ಲಕ್ಷ ಲಕ್ಷ ಜನರಿಗೆ ಪ್ರೇರಣೆ ನೀಡುತಿರುವ ಬೆಳಗೆರೆಯ ಬರಹಗಳು ಇವೆಲ್ಲವೂ ಹೇಳುವುದೊಂದೇ,
“ನೀನು ಏರಬೇಕೆಂದಿರುವ ಎತ್ತರ ನೀನು ಈಗಿರುವ ಸ್ಥಿತಿಯಲ್ಲಿಲ್ಲ… ನಿನ್ನ ಮನದೊಳಗಡೆ ನೀನಿರಿಸಿಕೊಂಡಿರುವ
ಎತ್ತರಕ್ಕಿಂತಲೂ ಮಿಗಿಲಾಗಿ ಎಷ್ಟು ಎತ್ತರ ಏರಬಲ್ಲೆ ಎಂಬುವ ಉತ್ಸಾಹದಲ್ಲಿ ಮತ್ತು ಅದರೆಡೆಗೆ ಹೋಗುವ ಶ್ರಧ್ದೆಯಲ್ಲಿದೆ”

ಇಂತಹ ಬದುಕು-ಬರಹಗಳು ನಮ್ಮನ್ನು ಒಳಗಿಂದ ದಿನೇ ದಿನೇ ಬೆಳೆಸುತ್ತಿರುವಾಗ ಇನ್ನು ಬೇಸರವೆಲ್ಲಿಯದು?
ಶ್ರಧ್ದೆ ಅಂಕಿತಭಾವಗಳು ತಮ್ಮ ಬ್ರಹ್ಮಾಂಡ ರೂಪ ಪ್ರದರ್ಶಿಸಬೇಕಾದರೆ ಗುಬ್ಬಚ್ಚಿಯಾಕಾರದ ಬೇಸರ ತಾನೆ
ಏನು ಮಾಡಬಲ್ಲದು?!

ಪ್ರೀತಿ

ಝೆನ್ ಗುರು ಸುಜುಕಿ ರೋಶಿಯ ಬಳಿ ಯುವತಿಯೊಬ್ಬಳು ಬಂದಳು. ಅವರೆಡೆಗೆ ತನ್ನಲ್ಲಿರುವ ಪ್ರೀತಿಯನ್ನು ನಿವೇದಿಸಿಕೊಂಡಳು. ಇದರಿಂದಾಗಿ ತಾನು ವಿಪರೀತವಾದ ಗೊಂದಲಕ್ಕೆ ಒಳಗಾಗಿರುವುದಾಗಿ ತಿಳಿಸಿದಳು.
“ಚಿಂತಿಸಬೇಡ”, ಸುಜುಕಿ ಹೇಳಿದರು “ನಿನ್ನ ಗುರುವಿನೆಡೆಗೆ ಯಾವ ಭಾವನೆಯನ್ನಾದರೂ ನೀನು ಇಟ್ಟುಕೊಳ್ಳಲು ಅವಕಾಶವಿದೆ. ಅದು ಒಳ್ಳೆಯದು. ಇಬ್ಬರಿಗೂ ಬೇಕಾದ ಸಂಯಮ ನನ್ನಲ್ಲಿದೆ.”

ಟೀ ಪಾತ್ರೆ

ಶಿಷ್ಯನೊಬ್ಬ ಗುರು ಸುಜುಕಿ ರೋಶಿಯನ್ನು ಕೇಳಿದ: “ಜಪಾನಿನಲ್ಲಿ ಟೀಪಾತ್ರೆಗಳನ್ನು ಅಷ್ಟು ನಾಜೂಕಾಗಿ ಏಕೆ ತಯಾರಿಸುತ್ತಾರೆ? ಅವು ಸುಲಭವಾಗಿ ಮುರಿದು ಹೋಗುತ್ತವೆ.”zen
ಸುಜುಕಿ ಹೇಳಿದರು: “ಅವು ನಾಜೂಕಾಗಿಯೇನು ಇರುವುದಿಲ್ಲ. ಅವುಗಳನ್ನು ಹೇಗೆ ಬಳಸಬೇಕು ಎನ್ನುವುದು ನಿನಗೆ ತಿಳಿದಿಲ್ಲ. ನೀನು ಪರಿಸರಕ್ಕೆ ಹೊಂದಿಕೊಳ್ಳಬೇಕು, ಪರಿಸರವನ್ನು ನಿನಗೆ ಹೊಂದಿಸಿಕೊಳ್ಳಬಾರದು.”

ಸಿದ್ಧತೆ

ಪೂರ್ವ ಕರಾವಳಿಯಲ್ಲಿನ ಕೇಂಬ್ರಿಜ್ ಬುದ್ಧಿಸ್ಟ್ ಸೊಸೈಟಿಯ ಕೂಟಕ್ಕೆಂದು ಸುಜುಕಿ ರೋಶಿ ಆಗಮಿಸಿದ್ದರು. ಅವರು ಕೂಟದ ಸ್ಥಳಕ್ಕೆ ಆಗಮಿಸಿದಾಗ ಪ್ರತಿಯೊಬ್ಬರೂ ಸಭಾಂಗಣವನ್ನು ತೊಳೆದು ಸ್ವಚ್ಛಗೊಳಿಸುವುದರಲ್ಲಿ ನಿರತರಾಗಿದ್ದರು. ತಾವು ಬರುತ್ತೇವೆ ಎಂದು ಹೇಳಿದ್ದಕ್ಕಿಂತ ಒಂದು ದಿನ ಮುಂಚಿತವಾಗಿ ಬಂದ ರೋಶಿಯವರನ್ನು ಕಂಡು ಎಲ್ಲರೂ ದಿಗ್ರ್ಭಾಂತರಾಗಿದ್ದರು.
ಸುಜುಕಿ ರೋಶಿ ತಮ್ಮ ಉಡುಗೆಯ ತೋಳನ್ನು ಮೇಲೇರಿಸಿಕೊಂಡು “ನನ್ನ ಆಗಮನದ ಅಮೋಘ ದಿನಕ್ಕಾಗಿ” ಎಂದು ಹೇಳಿ ಅವರೊಂದಿಗೆ ಸೇರಿ ಸಭಾಂಗಣವನ್ನು ಸ್ವಚ್ಚಗೊಳಿಸುವುದಕ್ಕೆ ಮುಂದಾದರು.

ಹಿರಿಯ ಸ್ವಾಮಿಗಳು ಇಲ್ಲಿದ್ದಾರೆ!

ಪಟ್ಟಕ್ಕೆ ಬಂದ ಕೆಲವೇ ತಿಂಗಳಲ್ಲಿ ಮರಿ ಸ್ವಾಮಿಗಳು ತೀರಿಕೊಂಡು ಬಿಟ್ಟರು. ಯಮದೂತರು ಅವರನ್ನು ನರಕಕ್ಕೆ ಎಳೆದುಕೊಂಡು ಹೋಗಿ ಒಂದು ಕೋಣೆಯಲ್ಲಿ ದೂಡಿದರು. ಮರಿ ಸ್ವಾಮಿಗಳು ಒಂದೇ ಸಮ ಕಿರುಚುತ್ತಿದ್ದರು. “ಏಯ್ ನನ್ನನ್ನು ನರಕಕ್ಕೆ ಏಕಯ್ಯಾ ತಂದಿರಿ? ನಾನು ಸ್ವಾಮಿ ಕಣಯ್ಯ, ಬಿಡಿರಯ್ಯ” ಭಟರು ಹೇಳಿದರು, “ಶ್! ಜೋರಾಗಿ ಒದರಾಡಬೇಡಿ. ಪಕ್ಕದ ಕೊಠಡಿಯಲ್ಲಿ ಹಿರಿಯ ಸ್ವಾಮಿಗಳು ನಿದ್ದೆ ಮಾಡುತ್ತಿದ್ದಾರೆ.”

ಮುಖ ಭಾವ!

ಚರ್ಚಿನ ಪ್ರಧಾನ ಗುರುಗಳು ಕಿರಿಯ ಪಾದ್ರಿಗಳ ಗುಂಪಿಗೆ ತರಬೇತಿ ನೀಡುತ್ತಿದ್ದರು. “ನೋಡಿ, ಸ್ವರ್ಗದ ವೈಭವವನ್ನು ಕುರಿತು ವರ್ಣಿಸುವಾಗ ಜನ ನಿಮ್ಮ ಮುಖ ನೋಡಿಯೇ ಸ್ವರ್ಗ ಇದೆಯೆಂಬುದಾಗಿ ನಂಬುವಂತೆ ಆಗಬೇಕು. ಅದಕ್ಕೆ ಸ್ವರ್ಗದ ವಿಷಯ ಹೇಳುವಾಗ ನೀವು ಹೇಗಾದರೂ ಮಾಡಿ ನಿಮ್ಮ ಮುಖದಲ್ಲಿ ಸಂತೋಷ ಉಕ್ಕಿ ಹರಿಯುವ ಹಾಗೆ ನೋಡಿಕೊಳ್ಳಿ.
“ಇನ್ನು ನರಕದ ವಿಷಯ, ಅದಕ್ಕೆ ನಿಮ್ಮ ಮುಖ ಹೀಗೇ ಇದ್ದರೆ ಸಾಕು.”

ಬಹು ದೂರದ ಪಯಣಕ್ಕೆ ತನ್ನನ್ನು ತಾನು ತಯಾರು ಮಾಡಿಕೊಳ್ಳುತ್ತಿರುವಂತೆ ಗಂಭೀರವಾಗಿ ನಿಂತಿತ್ತು ಬಸ್ಸು. ಡ್ರೈವರ್ ಬಸ್ಸಿನ ಏಜನ್ಸಿಯ ಮಾಲೀಕನೊಂದಿಗೆ ಅದರ ಗೇರ್ ಬಾಕ್ಸ್ ಬಗೆಗೆ ಏನೋ ಕಮೆಂಟ್ ಮಾಡುತ್ತಿದ್ದ. ಕ್ಲೀನರ್ ತನ್ನ ಎಂದಿನ ಚಾಕಚಕ್ಯತೆಯಿಂದ ಬಸ್ಸಿನ ಗಾಜಿನ ಮುಖವನ್ನು ಒರೆಸುತ್ತಿದ್ದ. ಕಂಡಕ್ಟರ್ ಬಸ್ಸಿನ ಪಕ್ಕೆಯನ್ನು ಸೀಳಿಟ್ಟಂತೆ ಡಿಕ್ಕಿಯನ್ನು ತೆರೆದು ಪ್ರಯಾಣಿಕರ ಲಗೇಜುಗಳನ್ನು ಗುರುತು ಹಾಕಿ ಒಳಕ್ಕೆ ನೂಕುತ್ತಿದ್ದ. ಆಗ ತಾನೆ ಆವರಿಸುತ್ತಿದ್ದ ಕತ್ತಲೆಗೆ ಇದ್ಯಾವುದರ ಪರಿವೆಯೂ ಇದ್ದಂತೆ ಕಾಣುತ್ತಿರಲಿಲ್ಲ. ಜಗತ್ತಿನ ಕೋಟ್ಯಂತರ ಜೀವಿ ಜಂತುಗಳ ವ್ಯವಹಾರಗಳಲ್ಲಿ ಇದೂ ಕೂಡ ಒಂದು ಎಂಬ ನಿರ್ಲಿಪ್ತತೆಯಲ್ಲಿ ಸೂರ್ಯ ಪಶ್ಚಿಮದ ಬಾನಿನಲ್ಲಿ ಮುಳುಗು ಹಾಕುತ್ತಿದ್ದ. ಪಕ್ಷಿಗಳು ಕಚಪಿಚವೆನ್ನುತ್ತಾ ದಿನವನ್ನು ಕಳೆದ ಸಂಭ್ರಮವನ್ನು ಆಚರಿಸುತ್ತಿದ್ದವು. ಮೆಲ್ಲಗೆ ಕತ್ತಲು ಕಿಟಕಿಗಳ ಮೂಲಕ ಬಸ್ಸಿನ ಒಳಕ್ಕೂ ತೂರಲು ಶುರುವಾದದ್ದನ್ನು ಸುಹಾಸ್ ಗಮನಿಸಿದ.

spirituality4.jpg

ಮಾತು ಮುಗಿಸಿದ ಡ್ರೈವರ್ ಬಸ್ಸಿನೊಳಕ್ಕೆ ಹಾರಿ ಬಸ್ಸಿನ ಲೈಟುಗಳನ್ನು ಹತ್ತಿಸಿದ. ಬಸ್ಸಿನೊಳಕ್ಕಿದವರಲ್ಲಿ ಅನೇಕರು ಕಣ್ಣು ಮುಚ್ಚಿ ಎದೆ ಮುಟ್ಟಿಕೊಂಡು ದೇವರನ್ನು ಸ್ಮರಿಸಿದ್ದು ಸುಹಾಸನಿಗೆ ಮಜವಾಗಿ ಕಂಡಿತು. ಡ್ರೈವರ್ ತನ್ನೆದುರಿದ್ದ ದೇವರ ಫೋಟೊಗೆ ಊದುಬತ್ತಿ ಬೆಳಗಿ ಅದನ್ನು ಸ್ಟೇರಿಂಗಿನ ಪಕ್ಕದಲ್ಲಿ ಅಂಟಿಸಿಕೊಂಡಿದ್ದ ಸ್ಟ್ಯಾಂಡಿನೊಳಕ್ಕೆ ಇಟ್ಟ. ಅಲ್ಲೇ ಪಕ್ಕದಲ್ಲಿ ಅಜ್ಜಿಯೊಬ್ಬಳಿಂದ ಕೊಂಡ ಮಲ್ಲಿಗೆ ಹೂವಿನ ಮಾಲೆ ದೇವರ ಫೋಟೊವನ್ನು ಅಪ್ಪಿಕೊಂಡಿತ್ತು. ಕ್ಲೀನರ್ ತನ್ನ ಕೆಲಸ ಮುಗಿಸಿ ಹಸಿಯಾದ ಬನಿಯನ್ ಬಿಚ್ಚಿ ಹಳೆಯ ದೊಗಲೆ ಶರ್ಟಿನೊಳಕ್ಕೆ ನುಸುಳಿದ. ಮೇಲೇರಿಸಿದ್ದ ಪ್ಯಾಂಟಿನ ಮಡಿಕೆಗಳನ್ನು ಬಿಡಿಸಿಕೊಂಡ. ಲಗೇಜ್ ವಿಚಾರದಲ್ಲಿ ಯಾರೊಂದಿಗೋ ಜಗಳ ತೆಗೆದಿದ್ದ ಕಂಡಕ್ಟರ್, ‘ಹೌದ್ರೀ, ಲಗೇಜಿಗೂ ಟಿಕೆಟ್ ತಗೋ ಬೇಕು. ನೀವು ಟಿಕೆಟ್ ತಗೊಂಡ್ರೆ ಲಗೇಜನ್ನು ಫ್ರೀ ಸಾಗಿಸ್ತೀವಿ ಅಂತೇನು ನಾವು ಹೇಳಿಲ್ಲ’ ಎನ್ನುತ್ತಾ ಸರಸವಾಡುತ್ತಿದ್ದ. ಆದರೆ ಅವನೊಂದಿಗೆ ವಾದಿಸುತ್ತಿದ್ದ ಪ್ರಯಾಣಿಕನಿಗೆ ಅವನ ಯಾವ ಸರಸದ ಮಾತಿನ ಮೇಲೂ ಗಮನವಿರಲಿಲ್ಲ. ಆತ ಧ್ವನಿಯೇರಿಸಿ ಏನನ್ನೋ ಬಡಬಡಿಸುತ್ತಿದ್ದ. ಡ್ರೈವರ್ ಹಾಗೂ ಕ್ಲೀನರ್ ಸಹ ಈ ಜಗಳ ನಡೆಯುತ್ತಿದ್ದ ಜಾಗಕ್ಕೆ ದೌಡಾಯಿಸಿದರು.

ಇದೇ ಸಮಯ ಕಾಯುತ್ತಿದ್ದಂತೆ ಕಾಣುತ್ತಿದ್ದ ಪುಟ್ಟ ಹುಡುಗಿಯೊಬ್ಬಳು ಕಂಕುಳಲ್ಲಿ ಮಲಗಿದ ಮಗುವನ್ನು ಎತ್ತಿಕೊಂಡು ಬಂದು ಕಾಸಿಗೆ ಕೈ ಚಾಚುತ್ತಿದ್ದಳು. ಯಾರೂ ಆಕೆಯ ಮುಖವನ್ನೂ ಸಹ ನೋಡುವ ಪ್ರಯತ್ನ ಮಾಡದೆ ಆಕೆಯನ್ನು ಮುಂದಕ್ಕೆ ಹೋಗುವಂತೆ ಹೇಳುತ್ತಿದ್ದರು. ಚಿಕ್ಕ ಮಕ್ಕಳು, ಹೆಂಗಸರು, ಫ್ಯಾಮಿಲಿ ಇರುವ ಕಡೆ ಆ ಪುಟ್ಟ ಭಿಕ್ಷುಕಿ ಎರಡು ಮೂರು ಸಲ ‘ಮುಂದಕ್ಕೆ ಹೋಗು’ ಎಂದು ಹೇಳಿದರೂ ಕದಲದೆ ನಿಲ್ಲುತ್ತಿದ್ದುದನ್ನು ಕಂಡ ಸುಹಾಸನಿಗೆ ಈಕೆ ಪಕ್ಕಾ ಫ್ರೊಫೆಶನಲ್ ಭಿಕ್ಷುಕಿಯಿರಬೇಕು ಎನ್ನಿಸಿತು. ತನ್ನೆದುರು ಆಕೆ ಬಂದು ಕೈಯೊಡ್ಡಿದಾಗ ‘ಇದರಲ್ಲಿ ನಿನಗೆ ಎಷ್ಟು ವರ್ಷ ಎಕ್ಸ್ ಪೀರಿಯನ್ಸ್ ಇದೆ’ ಎಂದು ಕೇಳಿಬಿಡಬೇಕೆನಿಸಿತು. ಸುಮ್ಮನೆ ಆತ ಆಕೆಯನ್ನು ದಿಟ್ಟಿಸಿದ. ಅವನ ನಗುವನ್ನು ಕಂಡು ಗಾಬರಿಯಾದ ಹುಡುಗಿ ಸುಮ್ಮನೆ ಮುಂದಕ್ಕೆ ಸರಿದಳು. ಆಕೆ ಏತಕ್ಕೆ ಗಾಬರಿಯಾಗಿರಬಹುದು ಎಂದು ಆಲೋಚಿಸಿದ. ತಲೆಯಲ್ಲಿ ಏನೇನೋ ಹರಿದಾಡಿದಂತಾಗಿ ಅರೆಕ್ಷಣ ಸುಹಾಸ ಮೈಮರೆತಿದ್ದ. ಅಷ್ಟರಲ್ಲಿ ಆತನ ಪಕ್ಕದಲ್ಲಿಂದ ಒಂದು ಧ್ವನಿ ಹೊರಟಿತು.

“ನಾನು ಹಾಗೆ ಅರ್ಧಕ್ಕೇ ಕಾಲೇಜು ಬಿಟ್ಟು ಹೋದದ್ದಕ್ಕೆ ಬರೀ ಹೋಂ ಸಿಕ್‌ನೆಸ್ ಕಾರಣ ಅಂತ ನಿಂಗೂ ಅನ್ನಿಸುತ್ತಾ?”

ಸುಹಾಸ ನಸುನಗುತ್ತಾ ಅಮರ್‌ನ ಮುಖ ನೋಡಿದ.

***

“ಇವ್ನು ಚಿಕ್ಕವನಾಗಿದ್ದಾಗ ಹಠ ಮಾಡಿದರೆ ರಾಜಗಿರಿಯ ಹಾಸ್ಟೆಲ್‌ಗೆ ಹಾಕ್ತೀವಿ ನೋಡು ಎಂದು ಇವರು ಗದರಿಸುತ್ತಿದ್ದರು. ಗಪ್ ಚುಪ್ ಆಗಿಬಿಡ್ತಿದ್ದ. ಮನೆ ಬಿಟ್ಟು ಹಾಸ್ಟೆಲ್ಲಿಗೆ ಹೋಗುವುದು ಅಂದರೇನೇ ಹೆದರಿ ನಡುಗುತ್ತಿದ್ದ ಈಗ ನೋಡು ಹೆಂಗೆ ಕುಣಿದುಕೊಂಡು ರೆಡಿಯಾಗ್ತಿದಾನೆ ರಾಜಗಿರಿ ಕಾಲೇಜಿಗೆ ಹೋಗೋದಕ್ಕೆ..” ಸುಹಾಸನ ಅಮ್ಮ ತನ್ನ ಗೆಳತಿಗೆ ಹೇಳುತ್ತಿದ್ದರು. ಸುಹಾಸ ಮುಜುಗರ ತಾಳಲಾಗದೆ ಹಾಲಿನಿಂದ ಎದ್ದು ಹೊರಗಿನ ಕೋಣೆಗೆ ಬಂದ. ತನ್ನ ಕ್ರಿಕೆಟ್ ಬ್ಯಾಟು ಹಾಗೂ ಬಾಲನ್ನು ತೆಗೆದುಕೊಂಡು ಹೋಗಿ ತನ್ನ ರೂಮಿನ ಮೂಲೆಯಲ್ಲಿ ಭದ್ರವಾಗಿರಿಸುತ್ತಾ ಇನ್ನು ಎರಡು ವರ್ಷ ಇವು ಬೇಕಾಗಲ್ಲ ಎಂದುಕೊಂಡ. ಮುಂದೆ ಏನು ಮಾಡಬೇಕು ಅನ್ನೋದು ತೋಚದೆ ವಾಪಸ್ಸು ಹಾಲಿಗೆ ಬಂದು ಕುಳಿತ.

ರಾತ್ರಿ ಹನ್ನೊಂದಕ್ಕೆ ಬಸ್ಸು ಬುಕ್ ಮಾಡಿ ಆಗಿತ್ತು. ಚಿತ್ರದುರ್ಗದಿಂದ ರಾಜಗಿರಿಗೆ ಎಂಟು ತಾಸು ಪ್ರಯಾಣ ಇತ್ತು. ಪಶ್ಚಿಮ ಘಟ್ಟವನ್ನು ಬಳಸಿ ಮಂಗಳೂರು ತಲುಪಿದರೆ ಅಲ್ಲಿಂದ ಒಂದು ತಾಸು ಪ್ರಯಾಣ ಮಾಡಬೇಕಿತ್ತು ರಾಜಗಿರಿಗೆ. ಘಾಟಿಯನ್ನು ಏರಬೇಕು ಎಂಬ ವಿಚಾರವೇ ಸುಹಾಸನ ಹೊಟ್ಟೆಯಲ್ಲಿ ತಳಮಳವನ್ನೇಳಿಸಿತ್ತು. ಆತನಿಗೆ ಬಸ್ ಪ್ರಯಾಣವೆಂದರೇನೆ ಆಗದು. ಅದರಲ್ಲೂ ಗುಡ್ಡಗಾಡುಗಳ ಘಾಟಿಯಾದರಂತೂ ಮುಗಿಯಿತು, ಬಸ್ಸಿನೊಳಗಿಂದ ಘಾಟಿಯನ್ನು ನೋಡುತ್ತಿದ್ದ ಹಾಗೆ ಈತನಿಗೆ ಹೊಟ್ಟೆ ತೊಳಲಿಸಿದಂತಾಗಿ ವಾಂತಿ ಕಾರಿಕೊಂಡು ಬಿಡುತ್ತಿದ್ದ. ಎಷ್ಟೇ ನಿಂಬೆ ಹಣ್ಣು ಮೂಸಿದರೂ ವಾಂತಿ ನಿಲ್ಲುತ್ತಿರಲಿಲ್ಲ. ಪ್ರಯಾಣದುದ್ದಕ್ಕೂ ಹೊಟ್ಟೆಯೊಳಗಿದ್ದುದನೆಲ್ಲಾ ಕಾರಿಕೊಂಡು ಬಸ್ಸು ಇಳಿಯುವಷ್ಟರಲ್ಲಿ ಹತ್ತು ದಿನದಿಂದ ಉಪವಾಸವಿದ್ದವನ ಹಾಗೆ ಸುಸ್ತಾಗಿರುತ್ತಿದ್ದ. ರಸ್ತೆಯನ್ನು ನೋಡುತ್ತಾ ಕೂರು, ಎಚ್ಚರವಾಗಿರಬೇಡ ಮಲಗಿಕೊಂಡುಬಿಡು ಎಂದು ಅಪ್ಪ ಎಷ್ಟೇ ಉಪದೇಶಿಸಿದರೂ ಈತನಿಗೆ ಘಾಟಿಯಲ್ಲಿನ ಬಸ್ ಪ್ರಯಾಣದಲ್ಲಿ ನರಳುವುದನ್ನು ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಎಲ್ಲಿಗೆ ಹೋಗಬೇಕಾದರೂ ಬಸ್ಸಿನ ಟೈಮಿಂಗ್ ವಿಚಾರಿಸುವ ಮುನ್ನ ಅಲ್ಲಿಗೆ ರೈಲು ಇದೆಯಾ ಎಂದು ಕೇಳಿಕೊಳ್ಳುತ್ತಿದ್ದ. ರೈಲಿನಲ್ಲಿ ಸಾವಿರ ಕಿಲೋಮೀಟರ್ ಬೇಕಾದರೂ ಕ್ರಮಿಸಬಲ್ಲೆ ಎಂಬ ವಿಶ್ವಾಸ ಅವನಲ್ಲಿತ್ತು. ರೈಲಿನ ಪ್ರಯಾಣವನ್ನು ಆತ ವಿಪರೀತವಾಗಿ ಎಂಜಾಯ್ ಮಾಡುತ್ತಿದ್ದ. ಎಷ್ಟೋ ಒಳ್ಳೆಯ ಪುಸ್ತಕಗಳನ್ನು ಆತ ಓದಿದ್ದು ರೈಲಿನಲ್ಲಿ ಓಡಾಡುವಾಗಲೇ. ರಾಜಗಿರಿಗೆ ರೈಲು ಇಲ್ಲ ಅಂತ ಕಾಲೇಜಿನ ಆಫೀಸಿನವರು ಫೋನಿನಲ್ಲಿ ಹೇಳಿದಾಗಲೇ ಸುಹಾಸನ ಮುಖದ ಮೇಲೆ ಅಪ್ರಸನ್ನತೆ ಸುಳಿದು ಮಾಯವಾಗಿತ್ತು. ಈಗ ರಾತ್ರಿಯ ಪ್ರಯಾಣವನ್ನು ಹೇಗೆ ನಿಭಾಯಿಸುವುದು ಎಂದು ಆಲೋಚಿಸುತ್ತಾ ಟಿವಿ ಆನ್ ಮಾಡಿದ, ‘ಇನ್ನು ಎರಡು ವರ್ಷ ಇದನ್ನೂ ನೋಡೋಕೆ ಆಗೋದಿಲ್ಲ’ ಅಂತ ಮತ್ತೆ ಅನ್ನಿಸಿತು. ಅಮ್ಮ ಆಂಟಿಯೊಂದಿಗೆ ಹರಟುತ್ತಿದ್ದದ್ದು ಕಿವಿಗೆ ಬೀಳುತ್ತಲೇ ಇತ್ತು.

Sky-River.jpg

“ಅಲ್ವೇ ರಾಜಗಿರಿಯ ಕಾಲೇಜಲ್ಲಿ ಸೀಟು ಸಿಕ್ಕೋದು ಬಹಳ ಕಷ್ಟ ಅಂತಾರೆ. ನಮ್ಮ ಅಣ್ಣನ ಮಗನಿಗೆ ಅಲ್ಲಿ ಟ್ರೈ ಮಾಡಿದ್ರು ಎಂ.ಎಲ್.ಎ ಕಡೆಯಿಂದ ಲೆಟರ್ ಒಯ್ದಿದ್ರು ಆದ್ರೂ ಸೀಟ್ ಸಿಕ್ಕಲಿಲ್ಲ. ಅವನ ಪರ್ಸೆಂಟ್ ನೋಡಿ ಎಂಟ್ರೆನ್ಸ್ ಬರೆಯೋಕೆ ಹೇಳಿದ್ರಂತೆ. ಇವರು ಇಂಟರ್ವ್ಯೂನಲ್ಲಿ ಎ.ಎಲ್.ಎ ರೆಕಮಂಡೇಶನ್ ಲೆಟರ್ ಕೊಟ್ಟರೆ ಅದನ್ನು ಪಕ್ಕಕ್ಕಿಟ್ಟು ಪ್ರಶ್ನೆಗಳನ್ನು ಕೇಳಿದರಂತೆ, ಆಮೇಲೆ ಒಂದು ವಾರ ಬಿಟ್ಟು ರಿಸಲ್ಟ್ ಕಳಿಸ್ತೇವೆ ಅಂದ್ರಂತೆ. ಒಂದು ವಾರ ಆದ್ಮೇಲೆ ಸೀಟ್ ಸಿಕ್ಕಿಲ್ಲ ಅಂತ ಉತ್ತರ ಬಂದಿತ್ತು. ನಮ್ಮಣ್ಣ ಏನೆಲ್ಲಾ ಪ್ರಯತ್ನ ಮಾಡಿದ್ರು ಆದ್ರೆ ಸೀಟು ಸಿಕ್ಕಲಿಲ್ಲ. ಸುಹಾಸಂಗೆ ಹೆಂಗೆ ಸಿಕ್ತು? ಪರ್ಸೆಂಟೇಜೇನೋ ಚೆನ್ನಾಗಿದೆ. ಆದ್ರೆ ಅಲ್ಲಿ ಹೊರಗಿನವರಿಗೆ ಸೀಟು ಸಿಕ್ಕೋದು ಕಷ್ಟ ಅಂತಾರಲ್ವಾ?” ಅಮ್ಮನ ಗೆಳತಿ ಅನುರಾಧಾ ಕೇಳಿದರು.

ಅಮ್ಮನಿಗೆ ಸುಹಾಸನ ಬಗ್ಗೆ ಹೇಳಿಕೊಳ್ಳಲು ಸಂಭ್ರಮ, “ಇವಂದು ತೊಂಭತ್ತೈದು ಪರ್ಸೆಂಟು ಇತ್ತಲ್ಲ ಎಸ್.ಎಸ್.ಎಲ್.ಸಿಯಲ್ಲಿ, ಅದಕ್ಕೇ ಎಂಟ್ರೆನ್ಸ್ ಎಕ್ಸಾಂ ಬರೆಯೋದಕ್ಕೆ ಹೇಳಿ ಕಳುಹಿಸಿದ್ರು. ಕಳೆದ ತಿಂಗಳೇ ಹೋಗಿ ಬರೆದು ಬಂದ. ಇವಂಗೂ ಇಂಟರ್ವ್ಯೂ ಮಾಡಿದ್ರು. ಅಷ್ಟೇನು ಚೆನ್ನಾಗಿ ಮಾಡಿಲ್ಲ ಅಂದಿದ್ದ. ಅವ್ರು ರಿಸಲ್ಟು ಕಳ್ಸೋಕೆ ಎರಡು ದಿನ ಮುಂಚೆಯೇ ಇಲ್ಲಿ ಎಲ್ಲಾ ಕಾಲೇಜ್‌ಗಳಲ್ಲಿ ಅಡ್ಮಿಷನ್ ಡೇಟ್ ಮುಗಿದು ಆಗಿತ್ತು. ಇವ್ನ ಎಲ್ಲಾ ಫ್ರೆಂಡ್ಸು ಕಾಲೇಜು ಸೇರಿಕೊಂಡಿದ್ರು. ಅಷ್ಟು ದೂರ ಯಾಕೆ ಹೋಗ್ತೀಯ ಅಂತ ಇವನ ಟೀಚರ್ ಕೇಳಿದ್ರಂತೆ. ಇವನಿಗೆ ಏನೋ ಒಮ್ಮೆ ಮನೆಯಿಂದ ದೂರ ಇದ್ದು ಓದಬೇಕು ಅನ್ನಿಸಿದೆ. ನಂಗೆ ಕಚ್ಚಿಕೊಂಡು ಬೆಳಿದಿದ್ದಾನೆ ಅಂತ ಇವರಪ್ಪ ರೇಗಿಸುತ್ತಿದ್ದರಲ್ಲ, ಅದ್ಕೇ ಏನಾದರಾಗಲೀ ಎರಡು ವರ್ಷ ಅಮ್ಮನಿಂದ ದೂರ ಇರಬೇಕು ಅನ್ನಿಸಿದೆ ಇವ್ನಿಗೆ. ಇಲ್ಲಿ ಎಲ್ಲಾ ಕಾಲೇಜ್ ಅಡ್ಮಿಶನ್ ಮುಗಿದ ಮೇಲೆ ಅಲ್ಲಿಂದ ಫೋನ್ ಬಂದಿತ್ತು. ಸೆಲೆಕ್ಟ್ ಆಗಿದಾನೆ ಅಂದ್ರು. ಹತ್ತು ದಿನದಲ್ಲಿ ಬಂದು ಅಡ್ಮಿಶನ್ ಮಾಡಿಸಿ ಅಂದ್ರು. ಇವ್ರು ಹೋಗಿ ಅಡ್ಮಿಶನ್ ಮಾಡಿಸಿ ಬಂದಿದ್ದಾರೆ.” ಅಮ್ಮ ಹೇಳುತ್ತಲೇ ಇದ್ದಳು.

ಸುಹಾಸ ಟಿವಿ ನ್ಯೂಸ್ ನೋಡುವುದರಲ್ಲಿ ಮಗ್ನನಾಗಿದ್ದ. ಸಂಜೆ ಎಂಟಕ್ಕೇ ಮನೆ ಬಿಡಬೇಕು. ಬಸ್ಸು ಕರೆಕ್ಟ್ ಟೈಮಿಗೆ ಹೊರಡುತ್ತಂತೆ, ಅದಕ್ಕೂ ಮುಂಚೆ ಶ್ರೀನಾಥ, ವಿಜಯ್, ಮಂಜುಗೆ ಫೋನ್ ಮಾಡಿ ತಾನು ಹೋಗುತ್ತಿರೋದನ್ನು ತಿಳಿಸಬೇಕು. ಹಂಗೇ ಸುರೇಶ್ ಸರ್‌ಗೂ ಫೋನ್ ಮಾಡ್ಬೇಕು ಅಂದುಕೊಂಡ. ಅದಕ್ಕೂ ಮುನ್ನ ಅರ್ಧಕ್ಕೆ ಬಿಟ್ಟಿದ್ದ ಪ್ಯಾಕಿಂಗನ್ನು ಮುಗಿಸಬೇಕು ಎಂದುಕೊಂಡು ತನ್ನ ರೂಮಿಗೆ ಬಂದ. ಹಾಲಿನಲ್ಲಿ ಅಮ್ಮ ತನ್ನ ಬಟ್ಟೆಗೆ ಇಸ್ತ್ರಿ ಹಾಕುತ್ತಾ ರಾಧಾ ಆಂಟಿಯ ಜೊತೆಗೆ ಮಾತಾಡುತ್ತಿದ್ದುದನ್ನು ಗಮನಿಸಿ ಒಳಕ್ಕೆ ಹೋದ.

ತನ್ನ ರೂಮನ್ನೊಮ್ಮೆ ಗಮನಿಸಿದ. ಇನ್ನೆರಡು ವರ್ಷ ಅದು ಹೇಗೆ ಮನೆ ಬಿಟ್ಟು ಇರುತ್ತೇನೋ ಅನ್ನಿಸಿತು. ಎಲ್ಲಿಗೂ ಹೋಗೋದು ಬೇಡ. ಇಲ್ಲೇ ಮನೆಯಲ್ಲೇ ಇದ್ದು ಬಿಡೋಣ. ಇಲ್ಲೇ ಯಾವ್ದಾದರೂ ಕಾಲೇಜಿಗೆ ಸೇರಿದರೆ ಆಯ್ತು ಅನ್ನಿಸಿತು. ಒಡನೆಯೇ ತಾನು ದುರ್ಬಲನಾಗಬಾರದು. ತಾನು ಅಳುಮುಂಜಿಯಾಗಬಾರದು. ಧೈರ್ಯ ತಂದುಕೊಳ್ಳಬೇಕು. ಎಷ್ಟೋ ಜನಕ್ಕೆ ಸಿಕ್ಕದ ಅವಕಾಶ ನನಗೆ ಸಿಕ್ಕಿದೆ. ಹಾಸ್ಟೆಲ್ಲಿನಲ್ಲಿ ಇದ್ದು ಓದುವ ಹೊಸ ಅನುಭವವನ್ನು ನನ್ನದಾಗಿಸಿಕೊಳ್ಳಬೇಕು. ಎಷ್ಟು, ಅಬ್ಬಬ್ಬಾ ಎಂದರೆ ಎರಡು ವರ್ಷ ಎಂದು ಮನಸ್ಸಿನ ವ್ಯಾಪಾರಗಳನ್ನು ತಹಬಂದಿಗೆ ತಂದುಕೊಂಡು ಪ್ಯಾಕಿಂಗ್ ಮಾಡಲು ತೆಗೆದಿಟ್ಟುಕೊಂಡಿದ್ದ ತನ್ನ ಪುಸ್ತಕಗಳನ್ನು ತಡವಿದ. ಪುಸ್ತಕಗಳ ರಾಶಿಯ ನಡುವೆ ಇಣುಕುತ್ತಿದ್ದ ಕಾರ್ಡನ್ನು ಕೈಗೆತ್ತಿಕೊಂಡ. ‘ಟು ಡಿಯರ್ ಸುಹಾಸ್…’ ಎಂದು ಮುದ್ದಾದ ಅಕ್ಷರಗಳಲ್ಲಿ ಬರೆದಿದ್ದಳು ಆಶಾ. ಸುರೇಶ್ ಸರ್ ಅವಳಿಗೆ, ಇನ್ನೂ ನಾಲ್ಕೈದು ಮಂದಿಗೆ ಹೇಳಿ ನನಗೆ ಅಂಥ ಪತ್ರಗಳನ್ನು ಬರೆಸಿದ್ದರು, ನಾನು ದೂರದ ಊರಿಗೆ ಹೋಗುತ್ತಿದ್ದೇನೆ ಎಂಬುದನ್ನು ಕೇಳಿ. ಎಲ್ಲಾ ಗೆಳೆಯರೂ ತಮ್ಮ ನೆನಪುಗಳನ್ನು ಹಂಚಿಕೊಂಡು ಆತ್ಮೀಯವಾಗಿ ಪತ್ರಗಳನ್ನು ಬರೆದು ತಾನು ಶಾಲೆಗೆ ಹೋದಾಗ ಕೊಟ್ಟಿದ್ದರು. ಅವತ್ತು ಗಂಟಲ ಸೆರೆ ಉಬ್ಬಿಬಂದಂತಾಗಿ ಮಾತು ಮರೆತುಹೋಗಿತ್ತು. ಈಗ ಆಶಾ ಬರೆದ ಪತ್ರವನ್ನು ಕೈಗೆತ್ತಿಕೊಂಡು ನಾಲ್ಕು ಸಾಲು ಓದುತ್ತಿದ್ದ ಹಾಗೆ ಮತ್ತೆ ಮನಸ್ಸಿನ ವ್ಯಾಪಾರಗಳು ಜಿಗಿಯಲು ಶುರುಮಾಡಿದ್ದವು. ಯಾವ ರಗಳೆಯೂ ಬೇಡ ಅಂದುಕೊಂಡು ಆ ಪತ್ರವನ್ನೂ, ಇನ್ನುಳಿದ ಐದು ಪತ್ರಗಳನ್ನೂ ಜೋಡಿಸಿ ಒಂದು ಪುಸ್ತಕದೊಳಗಿಟ್ಟು ಟ್ರಂಕಿನಲ್ಲಿಟ್ಟ. ಸುರೇಶ್ ಸರ್ ಅವತ್ತು ಯಾಕೆ ಹಾಗೆ ಹೇಳಿದರು ಎಂಬ ಪ್ರಶ್ನೆ ಧುತ್ತೆಂದು ಎದ್ದು ಅವನ ಪ್ರಜ್ಞೆಯನ್ನೆಲ್ಲಾ ಆವರಿಸಿತು!

(ಸಶೇಷ)

lahari.png

ವಿಪರೀತ ಮಾತನಾಡುತ್ತಿದ್ದೇನಾ ಎಂಬ ಸಂಶಯ ಮೂಡುತ್ತದೆ. ಅನೇಕ ವೇಳೆ ಆತಂಕಕ್ಕೂ ಒಳಗಾಗುತ್ತೇನೆ. ಯಾರಾದರೂ ಮುಖಕ್ಕೆ ಹೊಡೆದಂತೆ ‘ಮಾತು ಜಾಸ್ತಿ ಆಯ್ತು. ಮಾತು ಕಡಿಮೆ ಮಾಡಿ ಕೆಲಸ ಜಾಸ್ತಿ ಮಾಡಬೇಕು’ ಎಂದು ಬಿಡುವರೋ ಎಂದು ಗಾಬರಿಯಾಗುತ್ತದೆ. ಹಾಗೆ ಬೈಸಿಕೊಳ್ಳಬಾರದು ಎಂದು ಎಚ್ಚರಿಕೆ ತೆಗೆದುಕೊಳ್ಳೋಣ ಎಂದು ಯೋಚಿಸುತ್ತಾ ಕುಳಿತರೆ, ಮಾತು ಎಷ್ಟು ಆಡಬೇಕು ಎಂದು ಯೋಚಿಸುವುದೇ ಒಂದು ಕೆಲಸವಾಗಿ ಗಾಬರಿ ಇಮ್ಮಡಿಯಾಗುತ್ತದೆ.

ನಾನು ಬರೆಯೋದಕ್ಕೆ ಶುರು ಮಾಡಿ ತುಂಬಾ ದಿನವಾಯ್ತು ಎಂಬ ಭ್ರಮೆ ಇದೆ. ಬರೆಯುವಾಗ, ಬರೆಯಬೇಕೆಂದು ಆಲೋಚಿಸಿದಾಗ ನನ್ನಲ್ಲಿ ಹುಟ್ಟುವ ಹುರುಪು, ಮೆಲ್ಲಗೆ ಅಕ್ಷರಗಳು ಮೂಡುತ್ತಾ ಹೋದಾಗ ಸಿಕ್ಕುವ ನಿರಾಳತೆ, ಮನಸ್ಸಿನ ಹಗ್ಗದಲ್ಲಿನ ಒಂದೊಂದೇ ಗಂಟುಗಳು ಬಿಚ್ಚಿಕೊಳ್ಳುತ್ತಾ ಹೋದಂತಾಗುವಾಗ ಸಿಕ್ಕುವ ಅನುಭೂತಿ, ಹುತ್ತಗಟ್ಟುವ ತಾಳ್ಮೆ ಕೈಗೂಡದಾಗ ಮೂಡುವ ಸಿಡಿಮಿಡಿ ಎಲ್ಲವನ್ನೂ ಅನುಭವಿಸುವಾಗ ಬೆರಗು ಮೂಡುತ್ತದೆ. ಒಮ್ಮೆ ಬೆರಗು ಹುಟ್ಟಿದ ಮೇಲೆ ಸುಮ್ಮನಿರಲಾಗುವುದಿಲ್ಲ. ಅದನ್ನು ಯಾರಲ್ಲಾದರೂ ಹೇಳಿಕೊಳ್ಳಬೇಕು ಅನ್ನಿಸುತ್ತದೆ. ಕಾಲ ತೊಡೆ ಗಾತ್ರದ ಟೆಕ್ಸ್ಟ್ ಬುಕ್ಕುಗಳಲ್ಲಿ ತಲೆಯನ್ನು ಹುದುಗಿಸಿ ಸೈಂಟಿಫಿಕ್ ಕ್ಯಾಲ್ಸಿಗೆ ಆಕ್ಯುಪಂಚರ್ ಮಾಡುವಂತೆ ಲೆಕ್ಕ ಮಾಡುತ್ತಾ ಕುಳಿತ ಗೆಳೆಯರಿಗೆ ಬರೆಯುವಾಗಿನ ಸುಖ, ಅನುಭವಿಸುವ ಟ್ರಾನ್ಸ್‌ನ ಬಗ್ಗೆ ಹೇಳಲು ಹೋದರೆ, ಮುಖ ಮುಖ ನೋಡಿ ‘ಹುಶಾರಾಗಿದ್ದೀಯಲ್ವಾ?’ ಎಂದು ಕೇಳುತ್ತಾರೆ. ರಾತ್ರಿ ಸರಿಯಾಗಿ ನಿದ್ದೆ ಮಾಡಿಲ್ವಾ ಎಂದು ನನ್ನ ಯೋಗಕ್ಷೇಮದ ಬಗ್ಗೆ ಕಾಳಜಿ ತೋರಿಸುತ್ತಾರೆ. ಸಂಜೆ ಬೀದಿ ಬದಿಯಲ್ಲಿ ಕುಳಿತು ಕಾಫಿ ಹೀರುವಾಗ ಗೆಳೆಯರ ಗುಂಪಿಗೆ ನನ್ನ ಸಂಭ್ರಮವನ್ನು ಹೇಳಿಕೊಳ್ಳೋಣವೆಂದರೆ ಗುಂಪಿನ ಸ್ಪೇಸನ್ನು ಕಮಲ್‌ನ ದಶಾವತಾರಂ, ಆಪಲ್‌ನ ಐಫೋನು, ಮಹೇಶ್ ಭಟ್‌ನ ಸಿನೆಮಾ ಆವರಿಸಿರುತ್ತದೆ. ಕೇಳಲು ಯಾರೂ ಸಿಕ್ಕದಿದ್ದರೆ ಒಳಗಿನ ಸಂಭ್ರಮ ಎಲ್ಲಿ ಸತ್ತು ಹೋಗುಬಿಡುತ್ತದೋ ಎಂದು ಆತಂಕವಾಗಿ ಲ್ಯಾಪ್ ಟಾಪ್‌ನ ರೆಪ್ಪೆ ಬಿಡಿಸಿ ಕುಟ್ಟ ತೊಡಗುತ್ತೇನೆ. ಯಾರೋ ಬರೆದ ಕಥೆ ಮೌನವನ್ನು ಕರೆತಂದು ಮನಸ್ಸಿನೊಳಕ್ಕೆ ಕೂರಿಸಿದಾಗ, ಯಾವುದೋ ಪದ್ಯದ ಸಾಲುಗಳು ಆಳದಲ್ಲೇನನ್ನೋ ಕದಲಿಸಿದಂತಾದಾಗ ಮೂಡಿದ ಅನುಭೂತಿಯನ್ನು ಅಕ್ಷರಕ್ಕಿಳಿಸಿಬಿಟ್ಟರೆ ಅದು ಸದಾ ಹಸಿರಾಗಿರುತ್ತೇನೋ ಎನ್ನುವ ಭ್ರಮೆ ನನ್ನದು. ಅಕ್ಷರಕ್ಕೆ ನನ್ನೊಳಗೇ ಅಸ್ತಿತ್ವ ಇರುವುದು ಅನ್ನೋದು ಮರೆತಂತಾಗುತ್ತದೆ. ಬರೆದಾದ ನಂತರ ಅದನ್ನು ಬ್ಲಾಗಿನಲ್ಲೋ, ಪತ್ರಿಕೆಯಲ್ಲೋ ವಿಜೃಂಭಿಸಿದ ಮೇಲೆ ನಾನೆಲ್ಲೋ ಅಕ್ಷರದ ಬೆಲೆವೆಣ್ಣಿಗೆ ಮರುಳಾಗಿ ಒಳಗಿನ ಸಂಭ್ರಮವನ್ನು ಹೊರಕ್ಕೆ ಕಳುಹಿಸಿಬಿಟ್ಟೆನಾ ಎಂದು ನಾಚಿಕೆಯಾಗುತ್ತದೆ.

‘ಈ ವಯಸ್ಸಿನವರು ಹೇಗಿರಬೇಕೋ ಹಾಗಿರು. ಇದೆಲ್ಲಾ ಕಥೆ, ಕವಿತೆ ಅದನ್ನ ಮುಂದೆ ನೋಡಿಕೊಳ್ಳಬಹುದು.’ ಎಂದು ಮನೆಯಲ್ಲಿ ಹೇಳಿದಾಗೆಲ್ಲಾ ‘ಕಥೆ , ಕವಿತೆ ಬರೆಯುವುದು, ಸುಮ್ಮನೆ ಒಂದು ಹೂವನ್ನು ನೋಡುತ್ತಾ ಗಂಟೆ ಗಟ್ಟಲೆ ಪಾರ್ಕಿನಲ್ಲಿ ಕುಳಿತುಕೊಳ್ಳುವುದು ಯಾವ ವಯಸ್ಸಿನಲ್ಲಿ?’ ಎಂದು ಕೇಳಬೇಕನ್ನಿಸುತ್ತದೆ. ಕಲೆ ಕೊಡುವ ತಾದಾತ್ಮ್ಯದ ಮೇಲಿನ ಮೋಹವನ್ನು ವಿವರಿಸಿ ಹೇಳುವುದು ಹೇಗೆ ಅನ್ನಿಸುತ್ತದೆ. ಯಾಕೆ ಯಾರಿಗೂ ನನ್ನನ್ನು ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ ಎಂದು ಕಿರಿಕಿರಿಯಾಗುತ್ತದೆ. ಎಲ್ಲರ ಮೇಲೂ ಕೋಪ ಬರುತ್ತದೆ. ಕೆಲವೊಮ್ಮೆ ನನ್ನ ಬಗ್ಗೆಯೇ ಜಿಗುಪ್ಸೆ ಮೂಡಿಬಿಡುತ್ತದೆ. ಬಹುಶಃ ಪ್ರೇಮಿಗಳಿಗೂ ಇಂಥದ್ದೇ ಅನುಭವವಾಗುತ್ತದೆಯೇನೋ, ಪ್ರೀತಿಯೂ ಒಂದು ಕಲೆಯೇನೋ ಎಂಬ ಅನುಮಾನ ಮೂಡುತ್ತದೆ.

ಇದೆಲ್ಲವುಗಳಿಗಿಂತಲೂ ನನಗೆ ವಿಪರೀತ ಆಶ್ಚರ್ಯವಾಗುವುದು ‘ಬರೆಯೋದರಿಂದ ನನಗೇನು ಲಾಭವಾಗುತ್ತಿದೆ?’ ಎಂಬ ಪ್ರಶ್ನೆ ನನ್ನಲ್ಲಿ ಮೂಡಿದಾಗ. ಆ ಕ್ಷಣದಲ್ಲಿ ಕಥೆ ಓದುವಾಗ ಅನುಭವಿಸಿದ ತನ್ಮಯತೆ, ಕವಿತೆ ಕಣ್ಣಲ್ಲಿ ಹುಟ್ಟಿಸಿದ ಮಿಂಚು ಎಲ್ಲವೂ ನಗಣ್ಯವಾಗಿ ಕಂಡುಬಿಡುತ್ತದೆ. ಇದೆಲ್ಲಾ ಯಾತರ ಸಹವಾಸ ಎನ್ನಿಸಿಬಿಡುತ್ತದೆ. ಸುಮ್ಮನೆ ಎಷ್ಟೋಂದು ಸಮಯ ವ್ಯರ್ಥವಾಗಿ ಕಳೆದುಬಿಟ್ಟೆನಲ್ಲಾ ಎಂಬ ಗಿಲ್ಟ್ ಮೂಡುತ್ತದೆ. ಇದೆಲ್ಲಾ ಬಿಟ್ಟು ಸುಮ್ಮನೆ ನನ್ನ ಕಾಲೇಜು, ನನ್ನ ಕೆರಿಯರ್ರು ಅಂತ ಗಮನ ಹರಿಸಬೇಕು ಎಂಬ ವಿವೇಕ ಕಾಣಿಸಿದ ಹಾಗಾಗುತ್ತದೆ. ಪ್ರೀತಿಯಲ್ಲಿ ಬಿದ್ದು ಕ್ಲಾಸಿನಲ್ಲಿ ಫರ್ಸ್ಟ್ ರ್ಯಾಂಕ್ ಕಳೆದುಕೊಂಡವ ಚಡಪಡಿಸಿದ ಹಾಗೆ ಚಡಪಡಿಸುತ್ತೇನೆ. ಕೆಲವು ದಿನ ಪ್ರೀತಿಯನ್ನೇ ದ್ವೇಷಿಸಬೇಕು, ಪ್ರೀತಿಸಿದವರನ್ನು ನೋಯಿಸಬೇಕು ಎಂಬಂಥ ವಿಲಕ್ಷಣ ಭಾವ ಹುಟ್ಟಿಬಿಡುತ್ತದೆ. ಹಾಸ್ಟೆಲ್ಲಿನಲ್ಲಿ ರೂಂ ಮೇಟು ನಿರಾಳವಾಗಿ ಗೊರಕೆ ಹೊಡೆಯುತ್ತಿರುವಾಗ, ನಿದ್ದೆ ಬರದೆ ನರಳಾಡುವಂಥ ಪಾಪ ನಾನೇನು ಮಾಡಿದ್ದೇನೆ ಎಂದು ಖಿನ್ನನಾಗುತ್ತೇನೆ.

‘ಆಹಾ ಎಂಥಾ ಮಧುರ ಯಾತನೆ..’ ಅನ್ನೋ ಸಾಲು ಅದಿನ್ಯಾವ ಯಾತನೆಯಲ್ಲಿ ಹುಟ್ಟಿತೋ ಎಂದು ಅಚ್ಚರಿಯಾಗುತ್ತೇನೆ!

– ‘ಅಂತರ್ಮುಖಿ’

Silhouette logo - purple.JPG

‘ಜಿಂದಗಿ’ ಇದು ಕಾಲೇಜು ಹಂತದ ಯುವ ಮನಸ್ಸಿನ ತಳಮಳ, ಗೊಂದಲ, ಆಸೆ, ಕನಸುಗಳ ಗುಚ್ಛ.

ಆಗಿನ್ನೂ ನನಗೂ ಎಲ್ಲಾ ತಿಳಿಯುತ್ತೆ ಅಂತ ಅನ್ನಿಸುತ್ತಲೇ ಇರಲಿಲ್ಲ. ಮನೆಗೆ ಪೇಪರ್ ಹಾಕುವ ಹುಡುಗ ಲೇಟಾಗಿ ಬಂದಾಗ, ಹಾಲಿನವನು ತನ್ನ ಸಹಜ ಅಪ್ರಮಾಣಿಕತೆಯ ಪ್ರಮಾಣವನ್ನು ಯಾವ ಸೂಚನೆಯೂ ಇಲ್ಲದೆ ಏರಿಸಿಬಿಟ್ಟಾಗ, ತಂಗಿ ದೂರದ ಗೆಳತಿಯ ಮನೆಗೆ ಹೋಗಿ ಬರಲು ಅಪ್ಪಣೆ ಕೋರುವಂತೆ ಮುಖ ಮಾಡಿಕೊಂಡು ನಿಂತಾಗ, ಮಾರ್ಕೆಟ್ಟಿನಲ್ಲಿ ಅಪ್ಪ ಅಂಗಡಿಯಾತ ಕೇಳಿದಷ್ಟು ದುಡ್ಡು ತೆತ್ತು ಬೆನ್ನು ಹಾಕಿದಾಗ ಅಂಗಡಿಯವ ಮರೆಯಲ್ಲಿ ಕಿಸಿ ಕಿಸಿ ನಕ್ಕಾಗ, ಅಮ್ಮ ಅಡುಗೆ ಮನೆಯಲ್ಲಿ ಅಸಹಾಯಕಳಾಗಿ ಪಾತ್ರೆ ನೆಲಕ್ಕೆ ಕುಟ್ಟುತ್ತಿರುವಾಗ, ಮನೆಗೆ ಯಾವ ಮಾಡೆಲ್ ಟಿವಿ ತರಬೇಕು ಎಂಬ ಚರ್ಚೆ ನಡೆಯುವಾಗ, ತೋಟದ ಕೆಲಸಕ್ಕೆ ಇವನು ಆಗ್ತಾನಾ ಎಂದು ಮನೆಯಲ್ಲಿ ಚಿಂತಿಸುವಾಗ, ನನ್ನ ಕೋಣೆಯ ಎದುರಿನ ಗೋಡೆಯ ಮೇಲೆ ಸರಸ್ವತಿ ಶಂಕರಾಚಾರ್ಯರ ಫ್ರೇಮು ಹಾಕಿದ ಫೋಟೊ ಇರಬೇಕಾ, ಬಿಜೆಪಿ ಬಂದರೆ ಒಳ್ಳೆಯದಾ ಇಲ್ಲಾ ಕಾಂಗ್ರೆಸ್ಸು ಛಲೋದಾ ಎಂದೆಲ್ಲಾ ನನ್ನೆದುರು ಅನೇಕ ಸಂಗತಿಗಳು ಜರುಗುತ್ತಿರುವಾಗ ನನಗೂ ಇವೆಲ್ಲಾ ತಿಳಿಯುತ್ತೆ ಅಂತ ಅನ್ನಿಸುತ್ತಲಿರಲಿಲ್ಲ.

ಬಟ್ಟೆ ಅಂಗಡಿಗೆ ಅಪ್ಪನ ಜೊತೆಗೆ ಹೋಗದಿದ್ದರೆ ಆತ ಬಟ್ಟೆಯನ್ನು ತೋರಿಸುವುವೇ ಇಲ್ಲ ಎಂದುಕೊಂಡಿದ್ದೆ. ತರಕಾರಿ ತರಲು ಹೋದಾಗ ಅಪ್ಪ ನನ್ನ ಹಿಂದಿರದಿದ್ದರೆ ಅಂಗಡಿಯಾಕೆ ಮುಲಾಜಿಲ್ಲದೆ ಹುಳವಿರುವ ಬದನೇಕಾಯಿ, ಬೆಂಡು ಬಂದ ಕ್ಯಾರೆಟ್ ಬ್ಯಾಗಿಗೆ ತುರುಕುತ್ತಾಳೆ ಎಂದು ಆತಂಕಗೊಂಡಿದ್ದೆ. ಸೈಕಲ್ ಶಾಪಿಗೆ ಪಂಕ್ಚರ್ ಹಾಕಿಸಲು ಹೋದಾಗ ಅಪ್ಪನ ಹೆಸರು ಹೇಳಿದರೆ ಆತ ಪಂಕ್ಚರಿನ ಕಾಸಿನಲ್ಲಿ ಒಂದು ರೂಪಾಯಿ ಕಡಿಮೆ ಪಡೆಯುತ್ತಿದ್ದ ಎಂದು ನಂಬಿಕೊಂಡಿದ್ದೆ. ಶಾಲೆಗೆ ತಾನೇಕೆ ಲೇಟು ಬಂದೆ ಅನ್ನೋದನ್ನ ಹೆಡ್ ಮಾಸ್ಟರ್‌ಗೆ ಹೇಳೋದಕ್ಕೆ ಅಪ್ಪನೇ ಬರಬೇಕು ಎಂದುಕೊಂಡಿದ್ದೆ. ಚಿಲ್ಲರೆ ಕಾಸಿನ ನಾಣ್ಯ ಬಿಟ್ಟರೆ ದೊಡ್ಡ ದೊಡ್ಡ ನೋಟುಗಳೇನಿದ್ದರೂ ಅಪ್ಪನ ಜೇಬಿನಲ್ಲಿ ಮಾತ್ರ ಇರಬೇಕು ಎನ್ನಿಸುತ್ತಿತ್ತು. ಶಾಲೆಗೆ ಹೊತ್ತಾಯಿತೆಂದು ಅಪ್ಪ ಉಟ್ಟ ಲುಂಗಿಯಲ್ಲೇ ಸ್ಕೂಟರ್ ಚಾಲು ಮಾಡಿದರೆ ನನ್ನ ಗೆಳೆಯರ್ಯಾರೂ ಅಪ್ಪನನ್ನು ನೋಡದಿದ್ದರೆ ಸಾಕು ಎಂದು ಆಶಿಸುತ್ತಿದ್ದೆ. ವಾರ್ಷಿಕೋತ್ಸವಕ್ಕೆ ಆಡಿಸುತ್ತಿದ್ದ ನಾಟಕದಲ್ಲಿ ಪಾತ್ರ ಮಾಡುತ್ತೀಯಾ ಅಂದರೆ ಅಪ್ಪನನ್ನೊಂದು ಮಾತು ಕೇಳಲೇಬೇಕು ಎಂದಿರುತ್ತಿದ್ದೆ. ದೊಡ್ಡಪ್ಪ ಅಪ್ಪನ ಮೇಲೆ ವಿನಾಕಾರಣ ರೇಗುವಾಗ ಉಮ್ಮಳಿಸಿ ಬಂದ ಅಳುವನ್ನು ಹತ್ತಿಕ್ಕಲಾಗದೆ ಮಹಡಿಗೆ ಓಡಿ ಮೂಲೆಯಲ್ಲಿ ಕಣ್ಣೀರಾಗಿದ್ದೆ. ಅಪ್ಪನಿಗೆ ನಿಜಕ್ಕೂ ಎಲ್ಲಾ ಗೊತ್ತಿದೆ ಎಂದೇ ನನಗಾಗ ಅನ್ನಿಸುತ್ತಿತ್ತು.

ಶಾಲೆಯ ಯೂನಿಫಾರಂ ಚಡ್ಡಿಯಿಂದ ಪ್ಯಾಂಟಿಗೆ ಪ್ರಮೋಶನ್ ಪಡೆದು ಮುಂದೆ ಯೂನಿಫಾರಮ್ಮೇ ಇಲ್ಲದ ಕಾಲೇಜು ಕಂಡಾಗ ಅಪ್ಪನಿಗೇನೂ ಗೊತ್ತಾಗುವುದಿಲ್ಲ ಎಂಬುದು ಗೊತ್ತಾಗತೊಡಗಿತು. ನನ್ನ ಕ್ಯಾಲ್ಕುಲಸ್, ನ್ಯೂಕ್ಲಿಯಾರ್ ಫಿಸಿಕ್ಸುಗಳ ಬಗ್ಗೆ ಅಪ್ಪನಿಗೆ ಗೊತ್ತಿರಲು ಸಾಧ್ಯವೇ ಇಲ್ಲ ಎಂಬುದು ಅರಿವಾಗತೊಡಗಿತು. ಏಳನೆಯ ತರಗತಿಯ ಪಬ್ಲಿಕ್ ಪರೀಕ್ಷೆಗೆ ಒಂದು ತಿಂಗಳಿರುವಾಗ ಅಂಗಳದಲ್ಲಿ ಪೇಪರ್ ಓದುತ್ತಾ ಕುಳಿತಿದ್ದ ಅಪ್ಪನ ಎದುರು ತಲೆ ಮೇಲೆತ್ತದೆ ಲೆಕ್ಕ ಮಾಡಲು ತಿಣುಕುತ್ತಿದ್ದ ನನ್ನನ್ನು ನೆನಪಿಸಿಕೊಂಡರೆ ಸಣ್ಣಗೆ ನಗುಬರುವುದು ಗಮನಕ್ಕೆ ಬರತೊಡಗಿತು. ತರಕಾರಿ, ಹಣ್ಣುಗಳನ್ನು ಅಪ್ಪನಿಗಿಂತ ಕಡಿಮೆ ದುಡ್ಡಿನಲ್ಲಿ ನಾನು ತರುತ್ತೀನಿ ಅಂತ ಅಮ್ಮ ನನ್ನನ್ನೇ ಮಾರ್ಕೆಟ್ಟಿಗೆ ಅಟ್ಟಲು ಶುರು ಮಾಡಿದಾಗ ಅಪ್ಪ ನನ್ನ ನೋಡಿ ನಕ್ಕಿದ್ದು ವಿಚಿತ್ರವಾಗಿ ಕಂಡಿತ್ತು. ಮನೆಗೆ ಕಂಪ್ಯೂಟರ್ ತರುವಾಗ ಅಪ್ಪ ಅಂಗಡಿಯವನೊಂದಿಗೆ ಮಾತಾಡಲು ನನಗೇ ಹೇಳುತ್ತಿದ್ದರು. ಹೊಸ ಮೊಬೈಲು ಮನೆಗೆ ಬಂದಾಗ ಮ್ಯಾನುಯಲ್ಲು ನನ್ನ ತೊಡೆಯ ಮೇಲಿರುತ್ತಿತ್ತು. ಕಾಲೇಜಿಗೆ ರಜೆ ಹಾಕಲು ಲೀವ್ ಲೆಟರ್‌ಗೆ ಅಪ್ಪನ ಸಿಗ್ನೇಚರು ಬೇಕಿರಲಿಲ್ಲ. ಶಾಪಿಂಗ್ ಮಾಲಿಗೆ ಹೋದರೆ ಅಪ್ಪ ಇಲ್ಲ ಎಂಬ ಹೆದರಿಕೆ ಸುಳಿಯುತ್ತಿರಲಿಲ್ಲ. ಥಿಯೇಟರಿನಲ್ಲಿ ಒಬ್ಬನೇ ಕುಳಿತು ನೋಡಿದರೆ ಸಿನೆಮಾದ ಮಜಾನೆ ಬೇರೆ ಅನ್ನಿಸತೊಡಗಿತ್ತು. ಮನೆಯಲ್ಲಿ ಅಮ್ಮನ ಪರವಾಗಿ ಮಾತನಾಡಿದರೆ ಅಪ್ಪ ಎದುರಾಡುತ್ತಿರಲಿಲ್ಲ. ಧರ್ಮಸ್ಥಳದಲ್ಲಿ ಕೇಶ ಮುಂಡನಕ್ಕೆ ಒಲ್ಲೆ ಎಂದರೆ ಅಮ್ಮ ‘ಹೇಳಿದಂತೆ ಕೇಳು ನಿನಗೆ ಇದೆಲ್ಲಾ ಗೊತ್ತಾಗಲ್ಲ’ ಎಂದು ಹೇಳುತ್ತಿದ್ದದ್ದು ನಿಂತು ಹೋಗಿ ಯಾವ ಕಾಲವಾಯಿತು ಎಂಬುದು ನೆನಪಿಲ್ಲ. ಮನೆಗೆ ತಡವಾಗಿ ಬರುವಾಗ ರಸ್ತೆಯುದ್ದಕ್ಕೂ ಅಪ್ಪ ಮನೆಗೆ ಬಂದಿರುವುದು ಬೇಡ ಅಂತ ದೇವರಲ್ಲಿ ಬೇಡಿಕೊಳ್ಳುವುದರ ಆವಶ್ಯಕತೆಯಿರಲಿಲ್ಲ. ಅಪರೂಪಕ್ಕೊಮ್ಮೆ ಅಪ್ಪ ‘ನಿನಗಿದೆಲ್ಲಾ ಅರ್ಥವಾಗಲ್ಲ’ ಎಂದಾಗ ನನಗೆ ಅರ್ಥವಾಗದ್ದು ಏನಿದೆ ಎಂದೇ ಅನ್ನಿಸುತ್ತಿತ್ತು.

ಈಗೇನು ಪರಿಸ್ಥಿತಿ ಬದಲಾಗಿಲ್ಲ. ನಾನು ಕ್ರಿಕೆಟ್ ನೆಟ್ ಪ್ರ್ಯಾಕ್ಟಿಸ್ ಮಾಡುತ್ತಿರುವುದು ಅಪ್ಪನಿಗೆ ಇಷ್ಟವಿಲ್ಲ. ಅಮ್ಮ ಮೊದಲು ಓದು ಮುಗಿಸು ಅನ್ನೋದು ತಪ್ಪಿಲ್ಲ. ಹಾಗಂತ ಪ್ರತಿದಿನ ನಾನು ಮೈದಾನದಲ್ಲಿ ಬೆವರಿಳಿಸುವುದು ನಿಂತಿಲ್ಲ. ಈಗ್ಲೂ ಕ್ರಿಕೆಟ್ ಕೋಚಿಂಗ್‌ಗೆ ಹೋಗ್ತಿದ್ದೀಯಾ ಅಂತ ಅಪ್ಪ ಕೇಳೋದಿಲ್ಲ. ಆದರೆ ಪ್ರತಿ ತಿಂಗಳ ಮುವತ್ತಕ್ಕೆ ಬ್ಯಾಂಕಿನ ಅಕೌಂಟಿನಲ್ಲಿ ಹಣ ಜಮೆಯಾಗಿರುತ್ತದೆ. ಅದರಲ್ಲಿ ಕ್ರಿಕೆಟ್ ಕೋಚಿಂಗ್‌ನ ಫೀಸೂ ಸೇರಿರುತ್ತೆ! ತಮ್ಮ ಸಿಇಟಿ ಆದ ಮೇಲೆ ಏನು ಮಾಡಲಿ ಎಂದು ನನ್ನ ಮೊದಲು ಕೇಳುತ್ತಾನೆ. ಮನೆಗೆ ಹೋದಾಗ ಅಮ್ಮ ಅಪ್ಪನ ಖರ್ಚು ವಿಪರೀತವಾಯ್ತು ಎನ್ನುತ್ತಿರುತ್ತಾಳೆ. ಮಾತಿಗೆ ಮಾತು ಬಂದಾಗ ನೀನೂ ಮದುವೆಯಾಗ್ತೀಯಲ್ಲಪ್ಪ ನೋಡೋಣಂತೆ ಎಂದು ಕೊಂಕು ತೆಗೆಯುತ್ತಾಳೆ. ವಾರ ವಾರ ಮನೆಗೆ ಬಂದಾಗ ನಿಂಗೂ ಕಂಪ್ಯೂಟರ್ ಕಲಿಸ್ತೇನೆ ಅಂದರೆ ನಂಗೆಲ್ಲಿ ಪುರುಸೊತ್ತು ಎಂದು ತಪ್ಪಿಸಿಕೊಳ್ಳುತ್ತಾಳೆ. ಅಪ್ಪ ಟ್ಯಾಬಲಾಯ್ಡ್‌ಗಳನ್ನು ತಮ್ಮ ಬೀಗವಿರುವ ಟೇಬಲ್ಲಿನ ಡ್ರಾದೊಳಗೆ ಇಡುವ ಎಚ್ಚರಿಕೆಯನ್ನು ಕೈಬಿಟ್ಟಿದ್ದಾರೆ. ಟಿವಿಯಲ್ಲಿ ಕಾಂಡೋಮ್ ಜಾಹೀರಾತು ಬಂದೊಡನೆ ಚಾನಲ್ ಬದಲಾಗುವುದು ನಿಂತು ಹೋಗಿದೆ. ಬೆಂಗಳೂರಿಗೆ ಬರುವ ಮೊದಲು ‘ಅಲ್ಲಿನ ಬಿ.ಎಂ.ಟಿ.ಸಿ ಬಸ್ಸು ಮತ್ತು ಬೆಂಗಳೂರಿನ ಹುಡುಗಿಯರ ಬಗ್ಗೆ ಹುಶಾರಗಿರಬೇಕು. ಎರಡೂ ಸ್ಪೀಡು ಜಾಸ್ತಿ’ ಎಂದು ಅಪ್ಪ ಹೇಳಿದ್ದು ಮತ್ತೆಂದೂ ರಿಪೀಟಾಗಿಲ್ಲ!

ನಾನು ತಿಳಿದುಕೊಂಡಿರುವುದರಲ್ಲಿ ಎಷ್ಟೋಂದು ಅಪ್ಪನಿಗೆ ಗೊತ್ತೇ ಇಲ್ಲ ಎನ್ನುವ ನನ್ನ ಉಡಾಫೆ ನಿಂತಿಲ್ಲ. ಈ ವಯಸ್ಸಿನವರೆಲ್ಲಾ ಇರೋದೇ ಹೀಗೆ ಎಂಬ ವಯಸ್ಸಾದವರ ಕಮೆಂಟಿಗೆ ಕೊರತೆಯಿಲ್ಲ, ಜೊತೆಗೆ ನಾವು ಇರಬೇಕಾದ್ದೇ ಹೀಗೆ ಎನ್ನುವ ನಮ್ಮ ಹುಂಬತನಕ್ಕೂ .

– ಸುಪ್ರೀತ್

ಪಕ್ಕದ ಮನೆಯಾಕೆ ಬೆಳಿಗ್ಗೆಯಿಂದ ಹುಡುಕಾಡುತ್ತಿದ್ದರು. ಅವರ ೨ ವರ್ಷದ ಮಗು ಹಣವಿದ್ದ ಪರ್ಸನ್ನು ಎಲ್ಲೋ ಹಾಳು ಮಾಡಿತ್ತು. ಆಟದ ಸಂಭ್ರಮದಲ್ಲಿ ಗೃಹಕೃತ್ಯದಲ್ಲಿದ್ದಾಕೆ ಆ ಹೊತ್ತಿನಲ್ಲಿ ಗಮನಿಸಲಿಲ್ಲ. ಏನನ್ನೋ ಕೊಳ್ಳಬಯಸಿದಾಗ ಆ ಬಗ್ಗೆ ಗಮನಿಸಿದ್ದರು. ಹುಡುಕಾಟ ಪ್ರಾರಂಭವಾಗಿತ್ತು. ಮನೆ ಹೊರಗೆ, ಒಳಗೆ ಎಲ್ಲಾ ಕಡೆ ಹುಡುಕಾಡಿದರೂ ಪರ್ಸು ಸಿಕ್ಕಲಿಲ್ಲ. ಅಳುತ್ತಾ ಬಂದ ಆಕೆ ಪಕ್ಕದ ಮನೆಯವರ ಸಂಗಡ ಹೇಳಿಕೊಂಡರು. ಬಡವರಾದ, ವಿಧವೆ ನರಸಮ್ಮ ಅವರ ನೆರೆಮನೆಯಾಕೆ. ತಕ್ಷಣ ಅವರೊಂದಿಗೆ ಸೇರಿ ತಾವೂ ಹುಡುಕಾಡತೊಡಗಿದ್ದರು. ಹಣದ ಬೆಲೆ ನರಸಮ್ಮ ಚೆನ್ನಾಗಿ ಅರಿತಿದ್ದವರು. ಮಗು ಕೈಯಲ್ಲಿ ಆಡಲು ಹಣವಿದ್ದ ಪರ್ಸು ಕೊಡಬಾರದಿತ್ತು ಎಂದು ಹೇಳುತ್ತ ಪಕ್ಕದ ಮನೆಯಾಕೆಗೆ ಸಮಾಧಾನ ಪಡಿಸಿದರು. ದೇವರಿದ್ದಾನೆ ಖಂಡಿತಾ ಕಷ್ಟಪಟ್ಟ ಹಣ ಸಿಗುತ್ತೆ ಎಂದೂ ಹೇಳಿದರು.

ಮಗ ನಾರಾಯಣ ಹೈಸ್ಕೂಲ್ ವಿದ್ಯಾರ್ಥಿ. ಮಧ್ಯಾಹ್ನ ಊಟಕ್ಕೆ ಬಂದಿದ್ದಾಗ ನರಸಮ್ಮ ವಿಷಯ ಮಗನ ಕಿವಿಗೂ ಹಾಕಿ ಹುಡುಕಿ ನೋಡು ನಾರಾಯಣ. ಪಾಪ ಪುಟ್ಟ ಮಗು ಎಲ್ಲಾದರೂ ಬೀಳಿಸಿರಬಹುದು ಆಡುತ್ತ. ಆಕೆ ಬೆಳಿಗ್ಗೆಯಿಂದ ಅಳುತ್ತಿದ್ದಾರೆ. ಗಂಡ ಬಂದರೆ ಬೈದಾರು ಅಂತ ವಿವರಿಸಿದ್ದರು. ನಾರಾಯಣ ಹುಡುಕಾಡಿದ. ಶ್ರಮ ವ್ಯರ್ಥವಾಗಲಿಲ್ಲ. ಪರ್ಸ್ ಸಿಕ್ಕಿದ ಖುಶಿಯಲ್ಲಿ ಓಡಿಹೋಗಿ ಪರ್ಸ್ ಸಿಕ್ಕಿದೆ. ಬೇಲಿ ಬಳಿ ಎಸೆದಿದ್ದರು ಎಂದ, ಕಂಡು ಹಿಡಿದ ಹೆಮ್ಮೆಯಲ್ಲಿ.ಆತುರದಿಂದ ಪರ್ಸ್ ತೆಗೆದ ಪಕ್ಕದ ಮನೆಯಾಕೆ ಹಣವಿಲ್ಲದ್ದನ್ನು ಕಂಡು ಬಡ ನಾರಾಯಣನನ್ನು ಅಪಾದಮಸ್ತಕ ನೋಡುತ್ತ, ‘ಹಣ ತೆಗೆದುಕೊಂಡಿದ್ದರೆ ಪ್ಲೀಸ್ ಹೇಳಿಬಿಡು ನಾರಾಯಣ’ ಎಂದರು. ನಾರಾಯಣನಿಗೆ ಭೂಮಿ ಕುಸಿಯಬಾರದೆ ಎನ್ನಿಸಿತು. ನಾಲಿಗೆ ಒಣಗಿ ಕಣ್ಣಲ್ಲಿ ನೀರು ಬಂದಿತ್ತು. ನಿರ್ಮಲ ಮನದಿಂದ ದೇವರಲ್ಲಿ ಪ್ರಾರ್ಥಿಸಿದ್ದ, ಪರಿಸ್ಥಿತಿಯಿಂದ ಪಾರು ಮಾಡು ಎಂದು. ಹೊರಗೆ ಗದ್ದಲ. ಪೊಲೀಸಿನವರು ಹೆಂಗಸೊಬ್ಬಳನ್ನು ಎಳೆದು ತಂದಿದ್ದರು ವಿಚಾರಣೆಗೆ. ‘ಇದೇ ಮನೆಯಲ್ಲಿ ಪರ್ಸ್‌ನಲ್ಲಿದ್ದ ಹಣ ಕದ್ದದ್ದು’- ಎಂದಾಕೆ ತೋರಿಸಿದಳು. ಅಲ್ಲಿಗೆ ಪಕ್ಕದ ಮನೆಯಾಕೆ ಹಣ ಹಿಂದಕ್ಕೆ ಬಂದಿತ್ತು. ಬಡ ನಾರಾಯಣನಿಗೆ ಆಗಿದ್ದ ಅಂದಿನ ನೋವಿಗೆ ಮಾತ್ರ ಔಷಧಿ ಸಿಕ್ಕಿದ್ದು ತಾಯಿ ಮಡಿಲಲ್ಲಿ ಅತ್ತಾಗ ಮಾತ್ರ.

– ವೈ.ಎಂ.ರಘುನಂದನ್, ಮೈಸೂರು

ಟ್ಯಾಗ್ ಗಳು: , ,

ಸಾಮ್ರಾಟರ ಸಡಗರ!

ಅಂತರ್ಜಾಲದಲ್ಲಿ ನಗೆ ನಗಾರಿ ಡಾಟ್ ಕಾಮ್ ಎಂಬ ಬ್ಲಾಗನ್ನು ತೆರೆದುಕೊಂಡು ಹಾಸ್ಯದ ರಸಗವಳವನ್ನು ಉಣಬಡಿಸುವ ನಗೆ ಸಾಮ್ರಾಟರು ನಮ್ಮ ಪತ್ರಿಕೆಯ ಬಳಗಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಅವರ ಬ್ಲಾಗಿನ ಬರಹಗಳ ರಾಶಿಯಿಂದ ಯಾವ ಬರಹವನ್ನಾದರೂ ಆರಿಸಿಕೊಂಡು ಪ್ರಕಟಿಸಿಕೊಳ್ಳುವ ಸ್ವಾತಂತ್ರ್ಯವನ್ನು ನಮಗೆ ಕೊಟ್ಟುಬಿಟ್ಟಿದ್ದಾರೆ!

ಈ ಸಂಚಿಕೆಯಿಂದ ಪ್ರತಿ ತಿಂಗಳು ಎರಡು ಪುಟ ನಗೆ ಸಾಮ್ರಾಟರಿಗೆ ಮೀಸಲು. ನಗೆಯ ನಗಾರಿಯ ಸದ್ದಿಗೆ ನಿಮ್ಮ ಮನಸ್ಸುಗಳು ನಲಿಯಲಿ ಎಂದು ಆಶಿಸುವೆ. – ಸಂಪಾದಕ

ಮಾನವನಿಗೆ ದೇವನ ಮೊರೆ!

(ನಗೆ ನಗಾರಿ ಆಧ್ಯಾತ್ಮ ಬ್ಯೂರೋ)

ಜಗತ್ತಿನ ಸಮಸ್ತ ಲೌಕಿಕ ಸಂಗತಿಗಳ ಬಗ್ಗೆ ಹೆಕ್ಕಿ, ಹರಡಿ ವರದಿ ಮಾಡುವ ನಗೆ ಸಾಮ್ರಾಟರಿಗೆ ಒಂದು ಅನಾಮಧೇಯ ಸಂಖ್ಯೆಯಿಂದ ಫೋನ್ ಬಂದಿತು. ಯಾವುದೋ ಅಪರೂಪದ ವರದಿಯಿರಬೇಕೆಂದು ನಗೆ ಸಾಮ್ರಾಟರು ಹಿಗ್ಗಿದರು. ಹೀಗೆ ಅನಾಮಧೇಯ, ಅವಿಶ್ವಾಸನೀಯ, ಅಗೋಚರ ಸುದ್ದಿ ಮೂಲಗಳಿಂದ ಪಡೆದ ಸುದ್ದಿಯನ್ನು ರಸವತ್ತಾಗಿ ಪ್ರಕಟಿಸಿ ಕೊನೆಗೆ ಇದು ನಮ್ಮ ‘ನಂಬಲರ್ಹ’ ಮೂಲಗಳಿಂದ ಬಂದದ್ದು ಎಂದು ಹೇಳುವ ಸಂಪ್ರದಾಯವನ್ನು ಸಾಮ್ರಾಟರು ನಮ್ಮ ಮುಖ್ಯವಾಹಿನಿಯ ಸುದ್ಧಿ ಮಾಧ್ಯಮಗಳಿಂದ ಕಲಿತುಕೊಂಡಿದ್ದಾರೆ. ಗುರುವಿಲ್ಲದೆಯೇ, ಏಕಲವ್ಯನ ಥರ.

‘ಪ್ರಿಯ ಸಾಮ್ರಾಟ್!’ ಎಂದಿತು ಅತ್ತಲಿನ ದನಿ. ‘ನನ್ನ ದುಃಖ, ಸಂಕಟಗಳು ನಿನಗೆ ಮಾತ್ರ ತಿಳಿಯುತ್ತವೆ ಎಂದು ನಿನಗೆ ಫೋನ್ ಮಾಡಿರುವೆ.’

t-mobile-shadow-hands1.jpg

‘ಹೇಳಿ. ಏನಾಗಬೇಕಿತ್ತು. ನಾನು ಸದಾ ನಿಮ್ಮ ಸೇವೆಗೆ ಸಿದ್ದ, ಸಮರಕ್ಕೂ ಬದ್ಧ (ಅಯ್ಯೋ, ಅದು ಇಲ್ಲಿ ಬಳಸೋದಲ್ಲ, ಬಿಡಿ). ನೀವೇ ನಮ್ಮ ಓದುಗ ಮಹಾಶಯರು.’ ಪೀಟಿಕೆ ಹಾಕಿದರು ಸಾಮ್ರಾಟರು ಸುದ್ದಿಯನ್ನು ಪೀಕಲು.

‘ನಾನು ನಗೆ ನಗಾರಿಯ ಸ್ಕೂಪ್ ವರದಿಗಳನ್ನ ಆಗಾಗ ನಮ್ಮ ಗಣೇಶ್‌ನ ಲ್ಯಾಪ್‌ಟಾಪಿನಲ್ಲಿ ಓದುತ್ತಿರುತ್ತೇನೆ. ಅದಕ್ಕಾಗಿಯೇ ನಿಮ್ಮನ್ನು ಸಂಪರ್ಕಿಸಿದ್ದು. ಬೇರೆಯವರ ಬಳಿಗೆ ನಾನು ಹೋಗಬಹುದಿತ್ತು. ಆದರೆ ಅವರು ನಾನು ಹೇಳಿದ್ದನ್ನು ಇನ್ನು ಹೇಗೋ ತಿರುಚಿ ಬರೆದು ಅದು ಕ್ಯಾತೆಯಾಗಿ ಆಮೇಲೆ ನಾನು ಪತ್ರಿಕೆಗಳಿಗೆ ಮಾತಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಆಮೇಲೆ ಪ್ರಚಾರ ಬೇಕಾದಾಗ ಅದನ್ನು ಮುರಿಯುವುದು? ಇವೆಲ್ಲಾ ಸರಿ ಕಾಣಲಿಲ್ಲ.

‘ಹ್ಹಾ? ವಿಷಯಕ್ಕೆ ಬರುತ್ತೀನಿ. ನಾನು ದೇವರು. ನಾನು ಒಬ್ಬನೇ ಅಂತೆ, ನನಗೆ ನೂರು ನಾಮಗಳು ಎನ್ನುತ್ತಾರೆ ನನ್ನ ಭಕ್ತರು. ಆದರೆ ಒಬ್ಬೊಬ್ಬರೂ ನನಗೆ ನೂರು ನೂರು ‘ನಾಮ’ಗಳನ್ನು ತಿಕ್ಕುತ್ತಿದ್ದಾರೆ. ನನ್ನ ಸಂಕಟಗಳನ್ನು ಕೇಳುವವರು ಗತಿಯಿಲ್ಲ.
‘ನನ್ನ ಗೋಳು ಹೇಳುತ್ತಾ ಹೋದರೆ ಇಲ್ಲಿ ಮೊಬೈಲ್ ಬಿಲ್ಲು ಜಾಸ್ತಿ ಬರಬಹುದು ಎಂದು ಸುಬ್ರಹ್ಮಣ್ಯ ಎಚ್ಚರಿಸುತ್ತಿದ್ದಾನೆ. ಅದಕ್ಕೆ ಒಂದೇ ಒಂದು ಸಂಗತಿಯನ್ನು ಹೇಳುತ್ತೇನೆ. ಈ ಜನರು ನನ್ನ ಮೂರ್ತಿ ಎಂದು ಎಲ್ಲಿಂದಲೇ ತಂದ ಕಲ್ಲನ್ನು ಸಮನಾಗಿ ಕಟೆದು ದೇವಸ್ಥಾನದಲ್ಲಿ ನಿಲ್ಲಿಸುತ್ತಾರೆ. ಕೆಲವೊಮ್ಮೆ ಭೂಮಿಯಲ್ಲಿರುವ ಯಾವುದೋ ಕಲ್ಲನ್ನು ದೇವರು ಎಂದು ಉದ್ಭವ ಮೂರ್ತಿಯಾಗಿಸುತ್ತಾರೆ. ಅಸಲಿಗೆ ನಾನು ಬ್ರಹ್ಮಾಂಡದ ಎಲ್ಲಾ ಕಲ್ಲು, ಬಂಡೆ, ಮಣ್ಣು, ಚರಾಚರ ಜೀವಿಗಳಲ್ಲಿ ಇದ್ದೇನೆ. ಆದರೆ ಇವರು ಸಾಂಕೇತಿಕವಾಗಿ ಒಂದು ಕಲ್ಲನ್ನು ದೇವರು ಅಂದಾಗ ನಾನೇನು ಬೇಡ ಅನ್ನಲಿಲ್ಲ. ಕಲ್ಲಿಗೆ ಹಾಲು, ಮೊಸರು, ಬೆಣ್ಣೆ, ತುಪ್ಪ ಎಲ್ಲಾ ಸುರಿಯುತ್ತಾರೆ. ನಾನು ಅವರಿಗೆ ಇದೆಲ್ಲಾ ಏನಕ್ಕಯ್ಯಾ? ನಿಮ್ಮ ಮಧ್ಯೆಯೇ ಹಸಿವು, ನೀರಡಿಕೆ ಇರುವಾಗ ಮೊದಲು ಅದನ್ನು ತಣಿಸಿಕೊಳ್ಳಿ ನನಗ್ಯಾಕೆ ಎಂದು ಹೇಳಬೇಕೆನ್ನಿಸಿದರೂ ಸುಮ್ಮನಾದೆ.

‘ಆದರೆ ಈ ಒಂದು ಸಂಗತಿಯ ಬಗ್ಗೆ ಹೇಳಲೇಬೇಕು. ಇದು ನನಗೆ ವಿಪರೀತ ಕಿರಿಕಿರಿ ಮಾಡುತ್ತಿದೆ. ಈ ಜನರಿಗೆ ನನಗೆ ಹೂವಿನ ಮಾಲೆಯನ್ನಾಗಲೀ, ಬಿಡಿಹೂಗಳ ಅಲಂಕಾರವನ್ನಾಗಲೀ, ಚಿನ್ನದ ಬೆಳ್ಳಿಯ ತೊಡುಗೆಗಳನ್ನಾಗಲೀ ಹಾಕಬೇಡಿ ಎಂದು ಆಗ್ರಹಿಸಬೇಕು.

‘ಏಕೆ ಅನ್ನುತ್ತೀರಾ? ನೋಡಪ್ಪಾ, ನೂರಾರು ನಮೂನೆಯ ಹೂಗಳನ್ನು ತಂದು ಕಲ್ಲ ಮೇಲೆ ಜೋಡಿಸಿ ದೇವರಿಗೆ ಅಲಂಕಾರ ಮಾಡಿದೆವು ಅಂದುಕೊಳ್ತಾರೆ. ನಾನೂ ಅವರ ಮೇಲಿನ ಮಮತೆಗೆ ಕಲ್ಲೊಳಗೆ ಬಂದು ಕುಳಿತರೆ ಕಾಣುವುದು ಏನು? ಬರೀ ಹೂಗಳ ತುಂಬುಗಳು! ಚಿನ್ನದ ತೊಡುಗೆ, ಒಡವೆಯ ಹಿಂಬದಿಯನ್ನು ನಾನು ನೋಡಿ ಸಮಾಧಾನ ಪಟ್ಟುಕೊಳ್ಳಬೇಕು. ಹುಂಡಿಗೆ ದುಡ್ಡು ಹಾಕಲು ಬರುವವರ ಕಣ್ಣುಗಳಿಗೆ ತಂಪು ಕೊಡುವ ಅಲಂಕಾರ. ಈ ದೇವಸ್ಥಾನದವರಿಗೆ ದೇವರಾದ ನನಗಿಂಥಾ ಹುಂಡಿಗೆ ಹಾಕುವ ಭಕ್ತ-ಆದಿಗಳೇ ಮುಖ್ಯವಾದರಾ? ಸರಿ, ಏನೋ ಹುಚ್ಚಾಟ ಮಾಡಿಕೊಳ್ಳಲಿ, ನಾನೇ ಆ ಭಕ್ತರ ಕಣ್ಣುಗಳನ್ನು ಸೇರಿ ನನ್ನ ಅಲಂಕಾರವನ್ನು ನೋಡೋಣ ಎಂದುಕೊಂಡರೆ ಅದೂ ಸಾಧ್ಯವಿಲ್ಲ.

‘ಹೂಂ, ಹೇಳ್ತೇನೆ ಇರು. ಜಗತ್ತಿನ ಬೇರೆಲ್ಲಾ ವಸ್ತು, ಜೀವಿಗಳಲ್ಲಿ ನಾನು ವಾಸವಿದ್ದೇನೆ. ನಾನು ಯಾವುದನ್ನಾದರೂ ಪ್ರವೇಶಿಸಬಹುದು. ಆದರೆ ಈ ಮನುಷ್ಯನನ್ನು ಮಾತ್ರ ನಾನು ಪ್ರವೇಶಿಸಲಾಗದು. ಆತ ತನ್ನ ಸ್ವಂತ ಪರಿಶ್ರಮದಿಂದ ಈ ಸಾಧನೆ ಮಾಡಿದ್ದಾನೆ. ಅದಕ್ಕೇ ನಾನು ಅವನ ಕಣ್ಣು ಸೇರಿ ನನ್ನ ಅಲಂಕಾರ ನೋಡಲಾಗದು.

‘ನನಗೊಂದು ಸಹಾಯ ಮಾಡಪ್ಪ. ನೀನು ಜನರಿಗೆ ಇನ್ನು ಮುಂದೆ ದೇವರಿಗೆ ಯಾವ ಹೂವು, ಹೂಹಾರ, ಫಲ, ಪತ್ರೆ, ಒಡವೆ, ಕವಚಗಳ ಅಲಂಕಾರ ಬೇಡವಂತೆ ಎಂಬ ಸಂದೇಶವನ್ನು ತಲುಪಿಸಿಬಿಡಪ್ಪ. ನೀನು ನನ್ನ ಆಶಯದ ‘ಆವರಣ’ದಲ್ಲಿ ನಿನ್ನ ಆಶಯವನ್ನು ತುಂಬಿ ಹೂರಣವನ್ನು ಕೆಡಿಸಿ ವರದಿ ಮಾಡುವುದಿಲ್ಲ ಅನ್ನೋ ನಂಬಿಕೆ ನನಗಿದೆ.

‘ಸರಿಯಪ್ಪ, ಸುಬ್ರಹ್ಮಣ್ಯ ಎಚ್ಚರಿಸ್ತಾ ಇದ್ದಾನೆ. ಇಡಲಾ ಫೋನು. ದೇವರು ನಿನಗೆ ಒಳ್ಳೆಯದು ಮಾಡಲಿ’

‘ಫೋನಿ’ಗನ ಮಾತಿನ ಕೊನೆಯ ಸಾಲನ್ನು ಕೇಳಿ ಸಾಮ್ರಾಟರಿಗೆ ದಿಗ್ಧರ್ಶನವಾದ ಹಾಗಾಗಿ ಜ್ಞಾನೋದಯವಾಗಿದೆ. ಮಠ, ಮಂದಿರ, ಬದುಕಿನ ಆರ್ಟು, ‘ಕಾಮ’ರ್ಸು ಕಲಿಸುವ ಶಾಲೆ ತೆರೆಯುವ ಉದ್ದೇಶವಿರುವವರು ಆವಶ್ಯಕವಾಗಿ ಸಂಪರ್ಕಿಸಬಹುದು.

ಭಜ್ಜಿ ಸಿಂಗಿಗೆ ಶಾಂತನಿಂದ ಕೋಚಿಂಗ್!

(ನಗೆ ನಗಾರಿ ಕ್ರೀಡಾ ಬ್ಯೂರೋ)

ದೇಶ ಬಿಟ್ಟು ನೂರಾರು ಮೈಲು ದೂರ ಹಾರಿ ಹೋಗಿ ಅಲ್ಲಿನ ತಂಡದ ಆಟಗಾರನೊಬ್ಬನಿಗೆ ತನ್ನ ಭಾಷೆಯಲ್ಲಿಯೇ ‘ತೆರೆ ಮಾ ಕೀ..’ ಎಂದು ಮೈದನದಲ್ಲೇ ಬೈದು ಅದನ್ನು ಆ ಆಸ್ಟ್ರೇಲಿಯನ್ನು ‘ಮಂಕೀ’ ಎಂದು ಅರ್ಥೈಸಿಕೊಂಡು ಅವಮಾನಿತನಾದವನಂತೆ ನಟಿಸಿ ಕೇಸು ಜರುಗಿಸಿ ಸುಸ್ತಾದದ್ದು ಹಳೆಯ ಸಂಗತಿಯಾದರೂ ಆ ಮಂಕೀ ವೀರನಿಗೆ ಟಾಂಗುಕೊಟ್ಟ ಹರ್‌ಭಜನ್ ಸಿಂಗ್ ದೇಶದ ಜನರ ಕಣ್ಣಿನಲ್ಲಿ ಹೀರೋ ಆಗಿದ್ದ. ಅವನ ವಿರುದ್ಧ ಪ್ರಪಂಚದ ಪತ್ರಿಕೆಗಳೆಲ್ಲಾ ಮುರಕೊಂಡು ಬಿದ್ದರೂ ನಮ್ಮ ಜನರು ಎರಡೂ ಕೈಚಾಚಿ ಆತನನ್ನು ಬರಸೆಳೆದು ಅಪ್ಪಿಕೊಂಡರು. ಏನೋ ಸ್ವಲ್ಪ ಒರಟ ಅನ್ನೋ ಕಾರಣಕ್ಕೆ ಮನೆ ಮಗನನ್ನು ದೂರಲು ಸಾಧ್ಯವಾಗುತ್ತದೆಯೇ ನೀವೇ ಹೇಳಿ. (ಅಲ್ಲದೆ ಒರಟ ಐ ಲವ್ ಯೂ ಎಂದು ಹಾಡುವವರ ನಾಡು ನಮ್ಮದು!)

ದುಡ್ಡಿನ ಜಾತ್ರೆಯ ನೆಪದಲ್ಲಿ ನಲವತ್ತು ಚಿಲ್ಲರೆ ದಿನಗಳಲ್ಲಿ ಆಡಿಸಿದ ಕ್ರಿಕೆಟ್ ಎಂಬ ಆಟದಲ್ಲಿ ನಮ್ಮ ಭಜ್ಜಿ ರಾಂಗಾದದ್ದನ್ನು ಯಾರೂ ಮರೆತಿಲ್ಲ. ತನ್ನ ತಂಡ ಹೀನಾಯವಾಗಿ ಸೋತಾಗ ಎದುರಾಳಿ ತಂಡದಲ್ಲಿರುವ ತನ್ನದೇ ಸಹೋದ್ಯೋಗಿಗೆ ಕಪಾಳಮೋಕ್ಷ ಮಾಡಿದ. ಅವನ ಸಿಟ್ಟು, ಒರಟುತನ ಗೊತ್ತಿದ್ದವರಿಗೇ ಗಾಬರಿಯಾಯಿತು. ಸೋಲು ಗೆಲುವನ್ನು ಕ್ರೀಡಾ ಮನೋಭಾವದಿಂದ ತೆಗೆದುಕೊಳ್ಳಬೇಕು ಎಂದು ಬುದ್ಧಿ ಮಾತು ಹೇಳಲು ಹೋದರೆ ನಮ್ಮ ಕೆನ್ನೆಗೊಂದು ಬಾರಿಸಿ ‘ಇದೂ ಕ್ರೀಡಾ ಮನೋಭಾವವೇ, ಬಾಕ್ಸಿಂಗಿನದು’ ಎನ್ನಬಹುದು ಎಂಬ ಭಯದಿಂದ ಬುದ್ಧಿಜೀವಿಗಳು ತೆಪ್ಪಗಾದರು. ಸಿಂಗಿಗೆ ಪನಿಶ್ ಮೆಂಟ್ ಕೊಟ್ಟು ಶಾಂತನಿಗೆ ಉಶ್..ಉಶ್ ಮಾಡಿ ಕೈತೊಳೆದುಕೊಂಡರು.

2008042952831802.jpg

ಕೆನ್ನೆಗೆ ಬಾರಿಸಿದ ತಪ್ಪಿಗಾಗಿ ಭಜ್ಜಿ ಈಗ ಶಾಂತನಿಗೆ ಕಂಡಕಂಡಲ್ಲಿ ಡಿನ್ನರ್ ಕೊಡಿಸುವ ಕರ್ಮ ಅಂಟಿಸಿಕೊಂಡಿದ್ದಾನೆ. ಈ ನಡುವೆ ಬೇರಾವ ಪತ್ರಿಕೆ, ನ್ಯೂಸ್ ಚಾನಲ್ಲು, ಟ್ಯಾಬಲಾಯ್ಡು, ಸುದ್ದಿ ಸಂಸ್ಥೆಗಳಿಗೆ, ಬೊಗಳೆ ಮಜಾದ ಬ್ಯೂರೋಗೂ ದಕ್ಕದ ಸುದ್ದಿ ನಗೆ ನಗಾರಿಯ ಒನ್ ರೂಂ ಕಚೇರಿಯನ್ನು ತಲುಪಿದೆ.

ಅದೇನೆಂದರೆ ಐಪಿಎಲ್ ಎಂಬ ಹಣದ ತೈಲಿಯ ಜಾತ್ರೆಯ ನೆಪದಲ್ಲಿ ನಡೆಯುವ ಕ್ರಿಕೆಟ್ ಆಟದಲ್ಲಿ ಭಾರೀ ಕಾಸನ್ನು ಹೂಡಿರುವ ಕುಳಕ್ಕೆ ಸಿಂಗನ ಬಗ್ಗೆ ಚಿಂತೆಯಾಗಿದೆಯಂತೆ. ಆತನ ಕೋಪಕ್ಕೆ, ಒರಟುತನಕ್ಕೆ ಒಳ್ಳೆ ಇಲಾಜು ಕೊಡಿಸಬೇಕೆಂದು ಆತ ಅವನನ್ನು ಕೋಚಿಂಗಿಗೆ ಕಳುಹಿಸುತ್ತಿದ್ದಾನಂತೆ. ಯಾರ ಬಳಿ ಅಂದಿರಾ? ನಂಬ್ತೀರೋ ಬಿಡ್ತೀರೋ ಕೇಳಿ, ಶಾಂತನ ಬಳಿ! ಹೌದು ಹೌಹಾರಬೇಡಿ. ಈ ಹಿಕಮತ್ತಿನ ಹಿಂದಿನ ಮರ್ಮ ತಿಳಿಯಲು ನಗೆ ಸಾಮ್ರಾಟರು ತಮ್ಮ ಚೇಲ ಕುಚೇಲನನ್ನು ಅಟ್ಟಿದ್ದು ವರದಿ ಈಗ ತಾನೆ ಟೆಲಿ ಪ್ರಿಂಟರಿನಿಂದ ತಲೆಗೆ ಹಾರಿದೆ.

ಅದು ಆಸ್ಟ್ರೇಲಿಯಾದ ಆಂಡ್ರೂ ಸಾಯಿ-ಮೊಂಡನೇ ಆಗಿರಲಿ, ಹೇ-ಡಾನ್ ಆಗಲಿ, ಸೋತ ಆಫ್ರಿಕಾದ ಆಂಡ್ರೂ ನೆಲ್ಲಿಯಾಗಲಿ ಎಲ್ಲರ ವಿರುದ್ಧವೂ ಮೂಗಿನ ಹೊಳ್ಳೆ ಅಗಲಿಸಿಕೊಂಡು ಡ್ರಾಗನ್ನಿನ ಹಾಗೆ ಘರ್ಜಿಸುವ ಶಾಂತನಿಗೆ ಏಕೆ ಯಾರೂ ಶಿಕ್ಷೆ ವಿಧಿಸಿಲ್ಲ? ಅದಕ್ಕೆ ಕಾರಣವಿದೆ. ಶಾಂತನು ತನ್ನ ಎದುರಾಳಿಯ ಮೇಲಿನ ಸಿಟ್ಟು, ಸೆಡುವುಗಳನ್ನೆಲ್ಲಾ ಹೊರಹಾಕಲು ಅತ್ಯಂತ ಚಾಣಾಕ್ಷವಾದ ವಿಧಾನವೊಂದನ್ನು ಕಂಡುಕೊಂಡಿದ್ದಾನಂತೆ. ಕ್ರಿಕೆಟ್ ಮೈದಾನದ ಪಿಚ್‌ನ್ನೇ ಎದುರಾಳಿಯ ಕೆನ್ನೆ ಎಂದುಕೊಂಡು ಅದಕ್ಕೇ ತನ್ನೆರಡು ಹಸ್ತಗಳಿಂದ ಮನಸ್ಸಿಗೆ ನೆಮ್ಮದಿ ಸಿಗುವಷ್ಟು ಹೊತ್ತು ‘ನಗಾರಿ’ ಬಾರಿಸುತ್ತಾನಂತೆ. ಇತ್ತ ಹಾವೂ ಸಾಯಬೇಕು ಅತ್ತ ಕೋಲೂ ಮುರಿಯಬಾರದು ಎಂಬ ಬುದ್ಧಿವಂತಿಕೆ. ಇದನ್ನು ಕಲಿಯುವುದಕ್ಕೆ ಭಜ್ಜಿಯನ್ನು ಶಾಂತನ ಬಳಿಗೆ ಕೋಚಿಂಗಿಗೆ ಕಳಿಸಲಾಗುತ್ತಿದೆಯಂತೆ. ಹೀಗಾಗಿ ಭಜ್ಜಿ ಶಾಂತನಿಗೆ ಬಿಟ್ಟಿ ಡಿನ್ನರುಗಳಿಗೆ ಕರೆಯುವ ಅನಿವಾರ್ಯತೆಯಿದೆಯಂತೆ.

ಈ ಮಧ್ಯೆ ನಮ್ಮ ವರದಿ ಮಧ್ಯದಲ್ಲೆಲ್ಲೋ ಲೀಕ್ ಆಗಿ ಕ್ರಿಕೆಟ್ ಮೈದಾನದ ಅಂಗಳದ ಕ್ಯೂರೇಟರ್ ನಮ್ಮನ್ನು ಸಂಪರ್ಕಿಸಿ ಈ ಸುದ್ದಿಯಿಂದ ನಮಗೆ ತೀವ್ರವಾದ ಹಾನಿಯಾಗುತ್ತದೆ. ಎಲ್ಲಾ ಕ್ರಿಕೆಟ್ ಮಂದಿಯೂ ಶಾಂತನ ಟೆಕ್ನಿಕ್ ಬಳಸಲು ಶುರು ಮಾಡಿಕೊಂಡರೆ ನಮ್ಮ ಪಿಚ್ಚುಗಳ ಕೆನ್ನೆ ಜಖಂ ಗೊಳ್ಳುತ್ತದೆ ಎಂದು ಅವರು ತಮ್ಮ ಆತಂಕ ತೋಡಿಕೊಂಡಿದ್ದಾರೆ.

ಚರ್ಚೆ: ಕಲ್ಲು ನಗುವ ಸಮಯ

ನಮ್ಮ ವೇಗದ ನಗರದ ಬದುಕಿನಲ್ಲಿ ಎಲ್ಲವೂ ಕಮಾಡಿಟಿಗಳಾದ ಹಾಗೆಯೇ ನಗುವೂ ಒಂದು ಪ್ರಾಡಕ್ಟ್ ಆಗುತ್ತಿದೆಯಾ ಎಂಬ ಸಂಶಯ ಮೂಡುತ್ತದೆ. ಜನರಿಗೆ ನಗುವುದಕ್ಕೆ ಕಾರಣಗಳು ಬೇಕು. ನಗು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಿದರೆ ಜೋಕುಗಳನ್ನು ಹುಡುಕಲು ಶುರು ಮಾಡುತ್ತಾರೆ. ಜೋಕ್ ಪುಸ್ತಕಗಳನ್ನು ಕೊಳ್ಳುತ್ತಾರೆ. ನೂರಾರು ರುಪಾಯಿ ಶುಲ್ಕ ಕಟ್ಟಿ ಲಾಫಿಂಗ್ ಕ್ಲಬ್ಬುಗಳಿಗೆ ಸೇರಿಕೊಂಡು ನಗುತ್ತಾರೆ. ಕೆಲವರು ತುಂಬಾ ಪರಿಶ್ರಮ ವಹಿಸಿ ನಗುವುದರಲ್ಲಿ ಗಂಭೀರವಾದ ಸಾಧನೆ ಮಾಡುತ್ತಾರೆ. ನಗುವುದು ಎಂದರೇನೇ ಎಲ್ಲಾ ಪ್ರಯತ್ನಪೂರ್ವಕ ಕ್ರಿಯೆಗಳನ್ನು ಮರೆಯುವುದು, ಜನರು ನಗುವುದನ್ನೂ ಪ್ರಯತ್ನ ಪೂರ್ವಕವಾದ ಕ್ರಿಯೆಯಾಗಿಸಿಕೊಳ್ಳುತ್ತಿರುವುದನ್ನು ಕಂಡರೆ ಅಪ್ರಯತ್ನ ಪೂರ್ವಕವಾಗಿ ನಗು ಬರುತ್ತದೆ!

ಕಾಮಿಡಿ ಸೀರಿಯಲ್ಲುಗಳು, ಜೋಕುಗಳನ್ನು ಹೇಳಿ ಬಹುಮಾನ ಪಡೆಯಲು ಅದನ್ನೊಂದು ಸ್ಪರ್ಧೆಯಾಗಿಸಿದ ಕಾರ್ಯಕ್ರಮಗಳು ಬಹು ಮಜವಾಗಿರುತ್ತವೆ. ಒಂದೊಂದು ಹಾಸ್ಯ ಪ್ರಸಂಗ ಬಂದಾಗಲೂ, ಸಂಭಾಷಣೆಯಲ್ಲಿ ಒಂದೊಂದು ಪಂಚಿಂಗ್ ಲೈನ್ ಬಂದಾಗಲೂ ಹಿನ್ನೆಲೆಯಲ್ಲಿ ‘ಹ್ಹ..ಹ್ಹ?ಹ್ಹ’ ಎಂಬ ರೆಕಾರ್ಡೆಡ್ ನಗುವನ್ನು ಪ್ಲೇ ಮಾಡುತ್ತಾರೆ. ನಗುವುದಕ್ಕೆಂದೇ ಟಿವಿ ಸೆಟ್‌ಗಳ ಮುಂದೆ ಕುಳಿತ ಜನ ಆ ಎಲ್ಲಿ ನಗಬೇಕು ಎಂದು ಟಿವಿಯವರು ಸೂಚಿಸುವಂತೆ! ನಿಜಕ್ಕೂ ನಾವು ಅಷ್ಟು ಯಾಂತ್ರಿಕವಾಗಿದ್ದೇವೆ. ಮನಃಪೂರ್ವಕವಾಗಿ ನಗುವುದಕ್ಕೂ ಮುಂಚೆ ಇಲ್ಲಿ ನಗಬಹುದಾ, ನಕ್ಕರೆ ಯಾರೇನು ತಿಳಿಯುತ್ತಾರೆ ಎಂದು ಆಲೋಚಿಸಿ ಮುಂದುವರೆಯುವಷ್ಟು ಯಾಂತ್ರಿಕರಾಗಿದ್ದೇವೆ.

ಹೀಗಾಗಿ ನಮ್ಮ ನಗುವೂ, ನಮ್ಮನ್ನು ನಗಿಸಲು ಪ್ರಯತ್ನಿಸುವವರೂ ಇಷ್ಟೇ ಯಾಂತ್ರಿಕವಾಗುತ್ತಿದ್ದಾರೆ.

ಕಾರಣವಿರಲಿ, ಕಾರಣವಿಲ್ಲದೆ ಇರಲಿ,
ನಗಿ, ಆಗ ನಿಮ್ಮನ್ನು ನೋಡಿ
ಇತರರೂ ನಗುತ್ತಾರೆ.
– ಟಿ.ಪಿ.ಕೈಲಾಸಂ

hemantaranga.png

ಹುಡ್ಗೀರೇ ಹಿಂಗೇನೋ? ಯಾವ್ದನ್ನಾದ್ರೂ ತೀರ ಹಚ್ಕೋಬಿಡ್ತಾರೆ, ಯಾವ್ದ್ರಿಂದ ಆದ್ರೂ ತೀರ ಹರ್ಟ್ ಆಗ್ಬಿಡ್ತಾರೆ! ಎಲ್ಲಾ ಹುಡ್ಗೀರೂ ಹೀಗೆ ಇರ್‍ತಾರೇನೋ ಅಥವಾ ನಾನು ಮಾತ್ರ ಹೀಗಾ ಗೊತ್ತಿಲ್ಲ. ಇಷ್ಟಕ್ಕೂ ಅಪ್ಪ ಅಂತ ಅನ್ನಬಾರದ್ದೇನೂ ಅಂದಿರಲಿಲ್ಲ. “ಗಂಡು ಮಕ್ಕಳಿದ್ದಿದ್ದರೆ ಯೋಚನೆ ಇರ್‍ತಿರ್‍ಲಿಲ್ಲ. ನನಗೆ ನನ್ನ ಎರಡನೇ ಮಗಳದೇ ಯೋಚನೆ” ಅಷ್ಟೆ ಅಪ್ಪ ಹೇಳಿದ್ದು. ಅದೂ ಅವರಿಗೆ ಒಂದು ಮೈನರ್ ಹಾರ್ಟ್ ಅಟ್ಯಾಕ್ ಆಗಿ ಆಸ್ಪತ್ರೆಲಿ ಇರ್‍ಬೇಕಾದ್ರೆ!

ಆ ಮಾತಲ್ಲಿ ಅಪ್ಪನ ಭಯ ಪ್ರೀತಿ ಕಾಳಜಿ ಎಲ್ಲಾ ತುಂಬಿತ್ತು ಆದ್ರೆ ನನಗೆ ಆಗ ಅದ್ರಲ್ಲಿ ಕಾಣ್ಸಿದ್ದೆ ಬೇರೆ. ಅದೊಂದು ಮಾತು ನನ್ನ ಜೀವನದ ರೀತೀನೇ ಬದಲಾಯಿಸಿ ಬಿಡ್ತು. ಅಷ್ಟು ದಿನ ಕಾಲೇಜು, ಪಿಕ್ಚರ್ರು, ಹರಟೆ ಅಂತ ಟೈಮ್ ಪಾಸ್ ಮಾಡ್ತಿದ್ದ ನನಗೆ ಇದ್ದಕ್ಕಿದ್ದಂತೆ ನಾನು ಬದುಕ್ತಿದ್ದ ರೀತೀನೇ ಅಸಹ್ಯ ಅನ್ಸೋಕೆ ಶುರು ಆಯ್ತು. ಗಂಡು ಮಗ ಆಗಿದ್ರೆ ಇಷ್ಟು ಯೋಚನೆ ಮಾಡ್ತಿದ್ದನೋ ಇಲ್ವೋ ಆದ್ರೆ ನನಗೆ ಅವತ್ತಿಂದ ಹೇಳಲಾರದ ಚಡಪಡಿಕೆ ಶುರುವಾಗಿದ್ದಂತು ನಿಜ.

ಆಗಿನ್ನೂ second year PUC ಎಕ್ಸಾಮ್ ಬರೆದಿದ್ದೆ ಇನ್ನೂ ರಿಸಲ್ಟ್ ಬಂದಿರ್‍ಲಿಲ್ಲ ಏನು ಘನಂದಾರಿ qualification ಇತ್ತು ಅಂತ ನನಿಗೆ ಕೆಲ್ಸ ಕೊಡ್ತಾರೆ? ಒಂದೊಂದು ಇಂಟರ್‌ವ್ಯೂವ್‌ಗೆ ಹೋಗಿ ಬಂದಾಗಲೂ ತೀರ depression. ಛೆ! ಇನ್ನೂ ಚೆನ್ನಾಗಿ ಮಾಡಿದ್ರೆ ಕೆಲ್ಸ ಸಿಗದೇನೋ ಅಂತ. ಅಷ್ಟರಲ್ಲಿ ರಿಸಲ್ಟ್ಸ್ ಬಂದಿತ್ತು. ೬೭%. ನಾನು ಅನ್ಕೊಂಡಿದ್ದಕ್ಕಿಂತ ಜಾಸ್ತೀನೇ ಮಾರ್ಕ್ಸ್ ಬಂದಿತ್ತು. ಮನೇಲಿ ಅಕ್ಕಂದು ಬೇರೆ ಒಂದೇ ಬಲವಂತ ಕಾಲೇಜು ಸೇರು ಅಂತ. ಆದ್ರೆ ನಾನಾಗಲೇ ತೀರ್ಮಾನ ಮಾಡ್ಬಿಟ್ಟಿದ್ದೆ ಮುಂದೆ ಓದೋದು ಅಂತ ಆದ್ರೆ ಅಪ್ಪನ್ನ ದುಡ್ಡು ಕೇಳ್ಬಾರ್‍ದು. ಭೀಷ್ಮ ಶಪಥ ಮಾಡಿಯಾಗಿತ್ತು ಆದ್ರೆ ಅದನ್ನ ಜಾರಿಗೆ ತರೋ ಯಾವ ದಾರಿಗಳು ಕಾಣ್ತಾ ಇರ್‍ಲಿಲ್ಲ. ಪೂರ್ತಿ ನಾಲ್ಕು ತಿಂಗಳು ಕಳೀತು. ಫ್ರೆಂಡ್ಸ್ ಎಲ್ಲಾ ಬಿಕಾಂ ಸೇರಿದ್ರೂ ನಾನು ಸೇರ್‍ಲಿಲ್ಲ. ಕಾಲೇಜ್‌ಗೆ ಕೂಡಾ ಹೋಗ್ದೆ ಸುಮ್ನೆ ಮನೇಲಿರೋದು ತೀರ ಹಿಂಸೆ ಆಗ್ತಿತ್ತು. ಸುಮ್ನೆ ಯಾರಿಗೂ ಹೇಳೋದೇ ಬೇಡ ಎಲ್ಲಿಗಾದ್ರೂ ಹೋಗಿಬಿಡೋಣ ಅನ್ಸೋದು. ಬಹುಶಃ ಹುಡುಗಿ ಅನ್ನೋ ಹೆದರಿಕೆ ಇಲ್ದಿದ್ರೆ ಹಾಗೇ ಮಾಡ್ತಿದ್ದೆ ಅನ್ನಿಸುತ್ತೆ. ಛೆ ನಾನು ಹುಡುಗಿ ಆಗಿದ್ದೇ ತಪ್ಪು, ಹುಡುಗ ಆಗಿದ್ರೆ ಯಾವ್ದಾದ್ರೂ ಕೆಲ್ಸ ಮಾಡಬಹುದಿತ್ತು ಅನ್ಕೊಳ್ತಿದ್ದೆ. ಹುಡುಗಿ ಆಗಿ ನಾನೇನು ಕಡಿಮೆ ಇಲ್ಲ ಅಂತ ತೋರ್‍ಸೋಕೆ ಓದನ್ನ ನಿಲ್ಸಿ ಕೆಲಸ ಹುಡುಕ್ತಿರೋದು ಜ್ಞಾಪಕ ಬಂದಾಗ ನನ್ನ ಯೋಚನೆಗೆ ನನಗೆ ನಗು ಬರೋದು.

ಬೆಂಗಳೂರು, ಉದ್ಯಾನನಗರಿ, ಅವಕಾಶಗಳು ಉಕ್ಕಿ ಹರೀತಿರ್ತವೆ! ಹುಡುಗೀರು ಜೀವನ ಸಾಗಿಸೋ ಅಷ್ಟು ದುಡಿದು ಬದುಕಬಹುದು! ಅಂತ ಓದಿದ್ದು, ಬೇರೆ ಬೇರೆ ಸೆಮಿನಾರ್‌ಗಳಲ್ಲಿ, ಪರ್ಸನಾಲಿಟಿ ಡೆವಲಪ್‌ಮೆಂಟ್ ಕ್ಲಾಸ್‌ಗಳಲ್ಲಿ ಕೇಳಿದ್ದು ಎಲ್ಲಾ ಸುಳ್ಳು ಅನ್ನಿಸ್ತಿದ್ವು. ಒಂದೊಂದು ಇಂಟರ್‌ವ್ಯೂವ್‌ನಲ್ಲಿ ಒಂದೊಂದು ಪ್ರಶ್ನೆ ಕೇಳ್ತಿದ್ರು (ಅಫ್‌ಕೋರ್ಸ್ ಅವ್ರು ಕೇಳ್ಲೇಬೇಕು ಎಲ್ಲಾ ಇಂಟರ್‌ವ್ಯೂವ್‌ನಲ್ಲೂ ಒಂದೇ ಪ್ರಶ್ನೆ ಕೇಳ್ತಾರಾ?) ಒಂದ್ಸಲ ಒಂದು ವಿಷಯಕ್ಕೆ ಪ್ರಿಪೇರ್ ಆದ್ರೆ ಅದಕ್ಕೆ ಸಂಬಂಧಾನೇ ಇಲ್ದೆ ಇರೋಅಂಥದ್ದು ಇನ್ನೊಂದು ಕೇಳೋರು. ಎಲ್ಲಾದಕ್ಕಿಂತ ನಾನು ತೀರ ಅವಮಾನಪಟ್ಕೊಂಡಿದ್ದು ಒಂದು ಇಂಟರ್‌ವ್ಯೂವ್‌ನಲ್ಲಿ. ಕಾಲ್ ಸೆಂಟರ್‌ಗೆ ಅಪ್ಲೈ ಮಾಡಿದ್ದೆ ರಿಟನ್ ಟೆಸ್ಟು ಪಾಸೂ ಮಾಡಿದ್ದೆ, ಕಮ್ಯುನಿಕೇಷನ್ ರೌಂಡ್ ಅಂತ ಒಂದಿತ್ತು, ಒಂದು ಟಾಪಿಕ್ ಕೊಟ್ಟು ಅದರ ಬಗ್ಗೆ ಮಾತಾಡಿ ಅಂತ ಹೇಳಿದ್ರು, ನಾನು ಮಾತಾಡ್ಬೇಕು ಅಂತ ಎದ್ದು ನಿಂತ್ಕೊಂಡೆ ನಾನು ಎಷ್ಟು ನರ್ವಸ್ ಆಗಿದ್ದೆ ಅಂದ್ರೆ ಒಂದೇ ಒಂದು ಶಬ್ದ ನನ್ನ ಬಾಯಿಯಿಂದ ಬರ್‍ಲಿಲ್ಲ ಎರಡು ನಿಮಿಷ ನಿಂತೇ ಇದ್ದೆ. “ಯು ಕ್ಯಾನ್ ಸಿಟ್” ಅಂದ್ರು. ಆಮೇಲೆ ಇಂಟರ್‌ವ್ಯೂವ್ ಏನಾಗಿರಬಹುದು ಅಂತ ನಾನು ಹೇಳ್ಬೇಕಾಗಿಲ್ಲ. ಅವತ್ತು ತುಂಬಾನೇ ಬೇಜಾರಾಯ್ತು ಮನೆಗೆ ಬಂದು ಬಿಕ್ಕಿ ಬಿಕ್ಕಿ ಅತ್ಬಿಟ್ಟೆ. ಆ ಇಂಟರ್‌ವ್ಯೂವ್ ಆದ್ಮೇಲೆ ನನಗೆ ಇಂಥ ಹೈ ಕ್ಲಾಸ್ ಕೆಲ್ಸಗಳು ಸರಿ ಬರಲ್ಲ ಅಂತ ಒಂದು ಡಿ.ಟಿ.ಪಿ. ಸೆಂಟರ್‌ಗೆ ಕೆಲ್ಸಕ್ಕೆ ಸೇರಿದೆ. ೨೦೦೦ ಸಂಬಳ! ಕಡಿಮೆ ಅನ್ನಿಸ್ತು ಆದ್ರೂ ಸೇರಿದೆ. ಮೊದಮೊದಲು ಬೇಜಾರಾಗ್ತಿತ್ತು, ೫ ಗಂಟೆ ಆಗೋದನ್ನೇ ಕಾಯ್ತಿದ್ದು ಮನೆಗೆ ಬಂದ್ಬಿಡ್ತಿದ್ದೆ. ಆಮೇಲೆ ಡಿ.ಟಿ.ಪಿ. ಕಲಿಯೋಕೆ ಶುರು ಮಾಡ್ದೆ ಕಂಪ್ಯೂಟರ್ ಬಗ್ಗೆ ಆಸಕ್ತಿ ಬೆಳೀತು. ಆದಷ್ಟು ಕಲಿತೆ. ಮೊದಲನೇ ತಿಂಗಳು ಸಂಬಳ ಬಂದಾಗ ಅದೆಷ್ಟು ಖುಷಿ ಆಯ್ತು ಅಂದ್ರೆ ಅಷ್ಟನ್ನೂ ಅಮ್ಮನ ಕೈಗೆ ತಂದ್ಕೊಟ್ಬಿದ್ದೆ ಅಮ್ಮ ತುಂಬಾನೇ ಖುಷಿಪಟ್ರು. ಆ ಖುಷಿ ಈಗ ಅದರ ಐದು ಪಟ್ಟು ಸಂಬಳ ತಗೊಂಡ್ರು ಸಿಗಲ್ಲ. ಆದ್ರೆ ಎರಡೇ ತಿಂಗಳು ಅಲ್ಲಿ ಕೆಲ್ಸ ಮಾಡಿದ್ದು ಆಮೇಲೆ ಅಲ್ಲಿದ್ದವನೊಬ್ಬ ನಂಜೊತೆ ಕೆಟ್ಟದಾಗಿ ನಡ್ಕೊಂಡ ಅಂತ ಆ ಕೆಲ್ಸ ಇದ್ದಕ್ಕಿದ್ದಂಗೆ ಬಿಡ್ಬೇಕಾಯ್ತು.

ಮತ್ತೆ ಡಿಫೀಟೆಡ್ ಅಂತನ್ನಸ್ತು ಅದೂ ಒಬ್ಬ ಗಂಡಸಿಂದಲೇ. ತುಂಬಾ ಬೇಗ ಇನ್ನೊಂದು ಕೆಲ್ಸಕ್ಕೆ ಸೇರಿದೆ. ಆಡಿಟರ್ ಆಫೀಸ್‌ನಲ್ಲಿ. ಅಲ್ಲಿ ತುಂಬಾನೆ ಕೆಲ್ಸ ಇರ್‍ತಿತ್ತು ಇಲ್ಲಿಗಿಂತ ೫೦೦ ರೂಪಾಯಿ ಜಾಸ್ತಿ ಸಂಬಳ. ಬೆಳಿಗ್ಗೆಯಿಂದ ರಾತ್ರಿ ೮.೩೦ ವರೆಗೂ ಕೆಲ್ಸ ಮಾಡ್ತಿದ್ದೆ. ೯.೩೦ ಗೆ ಮನೆಗೆ ಬರ್‍ತಿದ್ದೆ ಆಗ ಅದು ತುಂಬಾ ಲೇಟ್ ಅನ್ಸೋದು ಆದ್ರೆ ಈಗ ನನ್ನ ಕೆಲ್ಸ ೫ ಗಂಟೆಗೆ ಬಿಟ್ರೂ ನಾನು ಮನೆಗೆ ಬರೋದೆ ೧೦ ಗಂಟೆಗೆ. ಅಲ್ಲಿ ತುಂಬಾನೇ ಕಲಿತೆ. ಅಷ್ಟೊತ್ತಿಗೆ ಕಂಪ್ಯೂಟರ್ ಅಭ್ಯಾಸ ಆಗಿತ್ತು, ಬೋಲ್ಡ್ ಆಗಿ ಮಾತಾಡ್ತಿದ್ದೆ. ಜನರನ್ನ ಕಂಡರೆ ಮೊದಲಿದ್ದ ಭಯ ಹೋಗಿತ್ತು. ಬೇರೆ ಕಡೆಗೆ ಇಂಟರ್‌ವ್ಯೂವ್‌ಗೆ ಹೋಗ್ತಿದ್ದೆ. ಕಡೆಗೂ ಒಂದು ಲಾಯರ್ ಆಫೀಸಿನಲ್ಲಿ ಕೆಲ್ಸ ಸಿಕ್ಕಿತು ಏಕ್‌ದಂ ಇಲ್ಲಿನ ಎರಡರಷ್ಟು ಸಂಬಳಕ್ಕೆ, ಅದೂ ನಮ್ಮ ಮನೆ ಹತ್ರಾನೇ!! ಆದ್ರೆ ಆ ಕೆಲ್ಸಕ್ಕೂ ನಾನು ಮಾಡ್ತಿದ್ದ ಕೆಲ್ಸಕ್ಕೂ ಸಂಬಂಧವೇ ಇರ್‍ಲಿಲ್ಲ. ಜಾಸ್ತಿ ಸಂಬಳ ಅಂತ ಸೇರಿಬಿಟ್ಟೆ. ಅಲ್ಲಿಗೆ ಹೋಗೋಕೆ ಶುರುವಾದ ಮೇಲೆ ಚೂರು ಆರಾಮನ್ನಿಸ್ತು. ಅಷ್ಟೊತ್ತಿಗೆ ನನ್ನ ಫ್ರೆಂಡ್ಸೆಲ್ಲ ಫಸ್ಟ್ ಇಯರ್ ಬಿ.ಕಾಂ. ಮುಗಿಸಿ ಸೆಕೆಂಡ್ ಇಯರ್‌ನಲ್ಲಿ ಓದ್ತಿದ್ರು. ಆ ವರ್ಷ ಸಂಜೆ ಕಾಲೇಜು ಸೇರಕ್ಕೆ ಪ್ರಯತ್ನಪಟ್ಟೆ ಆದ್ರೆ ಅದಾಗ್ಲೆ ಟೈಮ್ ಆಗ್ಹೋಗಿತ್ತು. ಸರಿ ಇಡೀ ವರ್ಷ ಬರೀ ಕೆಲ್ಸ ಮಾಡ್ದೆ. ಮಾರನೇ ವರ್ಷಕ್ಕೆ ಸಂಜೆ ಕಾಲೇಜು ಸೇರ್‍ದೆ (ನನ್ನದೇ ದುಡ್ಡಿಂದ). ಆಗ್ಲೇ ಗೊತ್ತಾಗಿದ್ದು ಕಾಲೇಜು ಕ್ಲಾಸುಗಳು ನನಗೆ ಎಷ್ಟು ಅಪರಿಚಿತ ಆಗ್ಬಿಟ್ಟಿವೆ ಅಂತ. ಮೊದಲನೇ ವರ್ಷ ಹೇಳ್ಕೊಳೋ ಅಂತ ಮಾರ್ಕ್ಸ್ ಬರಲಿಲ್ಲ. ಎರಡೂ ಸೆಮಿಸ್ಟರ್ ಸೆಕೆಂಡ್ ಕ್ಲಾಸ್‌ನಲ್ಲಿ ಪಾಸ್ ಆಗಿದ್ದೆ. ಮತ್ತೆ ಮತ್ತೆ ಇಂಟರ್‌ವ್ಯೂವ್‌ಗಳಿಗೆ ಹೋಗ್ತಲೇ ಇದ್ದೆ (ಇದೀನಿ). ತುಂಬಾ ಪ್ರಯತ್ನ ಪಟ್ಟ ಮೇಲೆ ಒಂದು ಎಂಜಿನಿಯರಿಂಗ್ ಕನ್ಸಲ್ಟೆನ್ಸಿನಲ್ಲಿ HR Recruiter ಆಗಿ ಸೇರ್‍ದೆ. ಆಗ ಅವಮಾನವಾಗಿದ್ದ ಅದೇ ಕಮ್ಯುನಿಕೇಷನ್ ಆಧಾರದ ಮೇಲೆ ಬೇರೆ ಗ್ರಾಜುಯೇಟ್ಸ್‌ಗಳ ಜೊತೆ ಕಾಂಪೀಟ್ ಮಾಡಿ ಈ ಕೆಲ್ಸ ಪಡ್ಕೊಂಡೆ.

ನಾನೀಗ ಸೆಕೆಂಡ್ ಇಯರ್ ಬಿ.ಕಾಂ.ನಲ್ಲಿದೀನಿ ಆದ್ರೆ ನನ್ನ ಕೆಲಸ ನನ್ನ ಓದಿಗಿಂತ ಮುಂದೆ ಇದೆ. ಈಗ್ಲೂ ಇಂಟರ್‌ವ್ಯೂವ್‌ಗಳಿಗೆ ಹೋಗ್ತಲೇ ಇದೀನಿ. ಎಷ್ಟೋ ಕಡೆ ಸೆಲೆಕ್ಟ್ ಆಗಿದ್ರೂ ನಾನೇ ರಿಜೆಕ್ಟ್ ಮಾಡಿದೀನಿ. ಎಷ್ಟೋ ಸಲ ನನ್ನ qualification ಕಡಿಮೆ ಅಂತ ಅವ್ರೇ ರಿಜೆಕ್ಟ್ ಮಾಡ್ಬಿಡ್ತಾರೆ. ನನಗೆ ಗೊತ್ತು ಇದ್ಯಾವುದು ಸಾಧನೆ ಅಲ್ಲ. ಸಾಧನೆಯ ಮೆಟ್ಟಿಲಿನ ಸಣ್ಣ ಕಲ್ಲೂ ಅಲ್ಲ ಇದು ಬರೀ ನನ್ನ ಮೂರುವರೆ ವರ್ಷಗಳ ಶ್ರಮದ ಸಣ್ಣ ಪ್ರತಿಫಲ. ನನ್ನ ಮುಂದಿನ ಸಾಧನೆಗೆ ಸಣ್ಣ ಪ್ರೇರಣೆ. ನಾನ್ಯಾವತ್ತು ಅಪ್ಪನ್ನ ಕೇಳಿಲ್ಲ ಆದ್ರೆ ನನಗನ್ನಿಸೋದು “ಗಂಡು ಮಗ ಇದ್ದಿದ್ರೆ ಇದಕ್ಕಿಂತ ಹೆಚ್ಚಿದನದೇನಾದ್ರೂ ಮಾಡ್ತಿದ್ದನಾ ಅಪ್ಪ?”

-ಹೇಮಾ ಪವಾರ್

book review copy.jpg

ಸಮಾಜದ ಯಾವುದೇ ವ್ಯಕ್ತಿಯನ್ನು ಪ್ರಶ್ನಿಸುವ ಹಕ್ಕು ಹೊಂದಿರುವುದಾಗಿ ಬೀಗುತ್ತಿದ್ದ ಸುದ್ದಿ ಮಾಧ್ಯಮಗಳು ಈಗ ತಾವೇ ಪ್ರಶ್ನೆಗೊಳಗಾಗುವಂತೆ ನಡೆದುಕೊಳ್ಳುತ್ತಿವೆ. ಸಮಾಜದ ಆಗುಹೋಗುಗಳ ಮೇಲೆ ನಿಗಾ ಇಡಬೇಕಾದ ಪತ್ರಕರ್ತರು ಜನರ ವಿಮರ್ಶೆಯ ಎಕ್ಸ್ ರೇ ಕಿರಣಗಳನ್ನು ಹಾಯಬೇಕಾದ ಪರಿಸ್ಥಿತಿ ಬಂದೊದಗಿದೆ. ಬದಲಾಗುತ್ತಿರುವ ಸಮಾಜದ ಸ್ಥಿತಿಗತಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗದೆ ಮಾಧ್ಯಮ ಜಗತ್ತು ಎಡವಿ ತಡವಿಕೊಂಡು ಹೆಜ್ಜೆ ಹಾಕುತ್ತಿದೆ. ಕುರುಡು ಅನುಕರಣೆಯಿಂದಾಗಿ ಅನೇಕಾನೇಕ ಅಧ್ವಾನಗಳನ್ನು ಸೃಷ್ಟಿಸಿಕೊಳ್ಳುತ್ತಿದೆ. ಪ್ರಜಾಪ್ರಭುತ್ವದ ಕಾವಲು ನಾಯಿಯ ನಿಯತ್ತಿನ ಮೇಲೆಯೇ ಸಂಶಯದ ತೂಗು ಕತ್ತಿ ನೇತಾಡುತ್ತಿದೆ. ಈ ಸಂದರ್ಭದಲ್ಲಿ ಡಿ.ವಿ.ಜಿಯವರು ಸುಮಾರು ಎಂಭತ್ತು ವರ್ಷಗಳ ಹಿಂದೆ ಪತ್ರಿಕೆಗಳ ಬಗೆಗೆ ದಾಖಲಿಸಿದ ವಿಚಾರಗಳ ಸಂಗ್ರಹದ ಪುಸ್ತಕ ‘ವೃತ್ತ ಪತ್ರಿಕೆಗಳು’ ತೀರಾ ಮಹತ್ವದ್ದಾಗಿ ಕಾಣುತ್ತದೆ.

ಪುಸ್ತಕ: ವೃತ್ತ ಪತ್ರಿಕೆಗಳು ಅವುಗಳ ಚರಿತ್ರೆ ಕರ್ತವ್ಯ ಅಪೇಕ್ಷೆ ಸ್ವಾತಂತ್ರ್ಯಗಳು
ಲೇಖಕರು: ಡಿ.ವಿ.ಗುಂಡಪ್ಪ
ಪ್ರಕಾಶಕರು: ಕರ್ನಾಟಕ ಪ್ರಕಟನಾಲಯ, ಬೆಂಗಳೂರು
ಪ್ರಕಟಣೆ: ೧೯೨೮

ಆಗಿನ್ನೂ ಭಾರತ ಬ್ರಿಟೀಷರ ಆಳ್ವಿಕೆಯಿಂದ ಮುಕ್ತವಾಗಿರಲಿಲ್ಲ. ಜನರಿಗೆ ಸ್ವಾತಂತ್ರ್ಯ ಬೇಕಿತ್ತು, ಸ್ವರಾಜ್ಯ ಬೇಕಿತ್ತು, ಪ್ರಜಾಪ್ರಭುತ್ವ ಬೇಕಿತ್ತು. ಜೊತೆಗೆ ಇಡೀ ದೇಶಕ್ಕೆ ಒಬ್ಬ ಶತೃ ಇದ್ದ. ಜನರೂ ಪತ್ರಿಕೆಗಳೂ ನಾಯಕರೂ ಏಕಕಂಠದಲ್ಲಿ ಆ ಶತೃವಿನ ವಿರುದ್ಧ ದನಿಯೆತ್ತುವ ಅಗತ್ಯವಿತ್ತು. ಪ್ರಜೆಗಳ ಎದೆಯ ಭಾವನೆಗೆ ಕಿವಿಗೊಟ್ಟರೆ ಪತ್ರಕರ್ತನಾದವನು ಆಳುವ ಅರಸರ ಕೆಂಗಣ್ಣಿಗೆ ಗುರಿಯಾಗಬೇಕಾಗಿತ್ತು. ಅರಸರ ಎಂಜಲಿನ ಪ್ರಸಾದದಿಂದ ಕೊಬ್ಬಿದ ಪತ್ರಿಕೆಗಳನ್ನು ಜನರು ಅಸಹ್ಯದಿಂದ ದೂರವಿರಿಸುತ್ತಿದ್ದರು. ಪತ್ರಿಕೆಗಳ ನಿಜವಾದ ಚಾರಿತ್ರ್ಯ ಬಯಲಾಗುತ್ತಿದ್ದ ಸಂದರ್ಭವದು. ಆಗ ತಾನೆ ದೇಶದಲ್ಲಿ ಕಣ್ತೆರೆಯುತ್ತಿದ್ದ ಪತ್ರಿಕೆಗಳಿಗೆ ಜನರಿಗೆ ಜಗತ್ತಿನ ಎಲ್ಲಾ ಸುದ್ದಿ ಸಮಾಚಾರವನ್ನು ತಲುಪಿಸುವ ಹುಮ್ಮಸ್ಸು ಇತ್ತು. ಜನರಿಗೂ ಪತ್ರಿಕೆಗಳು ಹೊರಗಿನ ಜಗತ್ತಿಗೂ ತಮಗೂ ನಡುವಿನ ಸೇತುವೆ ಎಂಬ ಅರಿವಿತ್ತು. ಜನರು ಸುದ್ದಿಗಾಗಿ, ಸಿದ್ಧಾಂತಗಳಿಗಾಗಿ, ರಾಜಕೀಯ ನಿಲುವುಗಳಿಗಾಗಿ, ಸಂದಿಗ್ಧ ಪರಿಸ್ಥಿತಿಗಳಲ್ಲಿನ ತೀರ್ಮಾನಗಳಿಗಾಗಿ ಪತ್ರಿಕೆಗಳತ್ತ ಮುಖ ಮಾಡುತ್ತಿದ್ದರು. ಅಲ್ಲದೆ ಆಗ ಸಾರ್ವಜನಿಕ ಹೋರಾಟದ ಮುಂದಾಳುಗಳಾಗಿರುತ್ತಿದ್ದ ನಾಯಕರುಗಳೇ ಪತ್ರಿಕೆಗಳ ಸಾರಥಿಗಳಾಗಿರುತ್ತಿದ್ದರು. ಪತ್ರಿಕೆಗೆ ಅನಾಯಾಸವಾಗಿ ಜನರ ಮಧ್ಯೆ ಸ್ಥಾನಮಾನ ಲಭ್ಯವಾಗಿತ್ತು.

ಆದರೆ ಸ್ವಾತಂತ್ರ್ಯ ಬಂದ ನಂತರ ಸರಕಾರದ ಸ್ವರೂಪ ಬದಲಾಯಿತು. ಆಡಳಿತ ರೀತಿ ನೀತಿಗಳು ಬದಲಾದವು. ಈ ಬದಲಾವಣೆಗೆ ಕೆಲವು ಪತ್ರಿಕೆಗಳು ತೆರೆದುಕೊಂಡವು ಕೆಲವು ಅದನ್ನು ಗಮನಿಸುವಷ್ಟು ಸೂಕ್ಷ್ಮತೆಯನ್ನು ಕಳೆದುಕೊಂಡಿದ್ದವು. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳು ಕಳೆದರೂ ಡೆಮಾಕ್ರಸಿಯಲ್ಲಿ ಜನ ಸಾಮಾನ್ಯರೇ ರಾಜರಾಗಿರುವಾಗ ಪತ್ರಿಕೆಗಳ ಸ್ಥಾನ ಯಾವುದು ಎಂಬುದನ್ನು ನಿರ್ಧರಿಸುವಲ್ಲಿ ಮಾಧ್ಯಮಗಳು ಅನೇಕ ವೇಳೆ ಎಡವುತ್ತಿವೆ. ತಮ್ಮ ಅಧಿಕಾರ ವ್ಯಾಪ್ತಿಯ ಗಡಿಯನ್ನು ಕಾಣಲಾಗದೆ ಅನೇಕ ವೇಳೆ ಅಪಸವ್ಯಗಳನ್ನು ಮಾಡಿಕೊಂಡದ್ದಿದೆ. ಪತ್ರಿಕೆಗಳು ಬಂಡವಾಳ ಶಾಹಿ ಸಮಾಜದಲ್ಲಿ ತಮ್ಮ ನೆಲೆಯನ್ನು ಕಂಡುಕೊಳ್ಳಲು ಇಂದಿಗೂ ತೊಳಲಾಡುತ್ತಿವೆ. ಈ ಸಮಯದಲ್ಲಿ ಪತ್ರಕರ್ತರು, ಕಗ್ಗದ ಕರ್ತೃವೂ ಆಗಿದ್ದ ಡಿ.ವಿ ಗುಂಡಪ್ಪನವರ ವಿಚಾರಗಳು ಪ್ರಸ್ತುತಯನ್ನು ಉಳಿಸಿಕೊಳ್ಳುತ್ತವೆ ಅನ್ನಿಸುತ್ತದೆ.

newspapers.jpg

ಸುಮಾರು ಎಂಭತ್ತು ಪುಟಗಳ ಪುಸ್ತಕದಲ್ಲಿ ಗುಂಡಪ್ಪನವರು ಸ್ಥೂಲವಾಗಿ ಪತ್ರಿಕೆಗಳ ಬಗೆಗೆ ಚಿಂತಿಸಿದ್ದಾರೆ. ಆ ಕಾಲದಲ್ಲಿ ಇಂಗ್ಲೆಂಡು, ಅಮೇರಿಕಾ, ಫ್ರಾನ್ಸ್, ಜಪಾನ್‌ಗಳಲ್ಲಿನ ಪತ್ರಿಕೆಗಳ ಸ್ಥಿತಿಗತಿಯನ್ನು ವಿವರಿಸಿ ಭಾರತ ಹಾಗೂ ಕರ್ನಾಟಕದಲ್ಲಿನ ಪ್ರಯತ್ನಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ೧೯೨೮ರಲ್ಲಿ ಬಾಗಲಕೋಟೆಯಲ್ಲಿ ನಡೆದ ಅಖಿಲ ಕರ್ಣಾಟಕ ವೃತ್ತಪತ್ರಿಕಾಕರ್ತರ ಪ್ರಥಮ ಪರಿಷತ್ತಿನ ಅಧ್ಯಕ್ಷರಾಗಿ ಮಾಡಿದ ಉಪನ್ಯಾಸದಲ್ಲಿ ಸಮಕಾಲೀನ ಪತ್ರಕರ್ತರೊಂದಿಗೆ ಕನ್ನಡದ ಪತ್ರಿಕೋದ್ಯಮದ ಕಷ್ಟ ನಷ್ಟ, ಸಾಧನೆ- ನ್ಯೂನ್ಯತೆಗಳ ಬಗ್ಗೆ ಚರ್ಚಿಸಿದ್ದಾರೆ. ಆ ಉಪನ್ಯಾಸದ ಜೊತೆಗೇ ಪತ್ರಿಕೆಗಳ ಸ್ವಾತಂತ್ರ್ಯ ಹಾಗೂ ಜವಾಬ್ದಾರಿಗಳ ಬಗ್ಗೆ ಬರೆದ ಲೇಖನ ಈ ಪುಸ್ತಕದಲ್ಲಿದೆ.

ಪತ್ರಿಕೆಯಲ್ಲಿನ ವಿಷಯಗಳನ್ನು ಗುಂಡಪ್ಪನವರು ಸ್ಥೂಲವಾಗಿ ನಾಲ್ಕು ಭಾಗಗಳಾಗಿ ವಿಂಗಡಿಸುತ್ತಾರೆ. ವೃತ್ತಾಂತ ಭಾಗ ಪ್ರಾದೇಶಿಕ, ರಾಜ್ಯ ಹಾಗೂ ರಾಷ್ಟ್ರೀಯ ಸುದ್ದಿ ಸಮಾಚಾರ, ಅಂತರಾಷ್ಟ್ರೀಯ ವಿದ್ಯಮಾನಗಳನ್ನು ಬಗ್ಗೆ ಮಾಹಿತಿಯನ್ನು ಒದಗಿಸುವ ಕೆಲಸ ಮಾಡಬೇಕು. ವಾದ ವಿಭಾಗದಲ್ಲಿ ರಾಜಕೀಯ ವಿದ್ಯಮಾನಗಳ ಬಗ್ಗೆ ಟೀಕೆ ಟಿಪ್ಪಣಿ, ಸಂಪಾದಕರ ಅಭಿಪ್ರಾಯ, ಯಾವುದೇ ಪ್ರಚಲಿತ ವಿಷಯದ ಬಗ್ಗೆ ಪತ್ರಿಕೆ ತಳೆದ ನಿಲುವು ವ್ಯಕ್ತವಾಗಬೇಕು. ವಿದ್ಯಾಪ್ರಚಾರ ಭಾಗದಲ್ಲಿ ಜ್ಞಾನದ ಎಲ್ಲಾ ಶಾಖೆಗಳಲ್ಲಿ ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ಓದುಗರಿಗೆ ಮಾಹಿತಿಯನ್ನು ಕೊಡುವ ಕೆಲಸವನ್ನು ಆಯಾ ಕ್ಷೇತ್ರಗಳಲ್ಲಿನ ಪರಿಣಿತರ ಮುಖಾಂತರ ಮಾಡಿಸಬೇಕು. ಇನ್ನು ವ್ಯಾಪಾರ ಪ್ರಕಟಣೆಯ ವಿಭಾಗ ಜಾಹೀರಾತು ಮುಂತಾದವಕ್ಕೆ ಸಂಬಂಧಿಸಿದ್ದು. ಪತ್ರಿಕೆಯ ಹೂರಣದಲ್ಲಿ ಈ ನಾಲ್ಕೂ ಭಾಗಗಳಿಗೆ ಸೂಕ್ತ ನ್ಯಾಯ ಸಲ್ಲಿಸಿರಬೇಕು.

ಪತ್ರಿಕೆಗಳಾಗಲಿ, ನ್ಯೂಸ್ ಚಾನಲ್ಲುಗಳಾಗಲಿ ಸದಾ ತಮ್ಮ ಕರ್ತವ್ಯ ಏನು ಎಂಬುದರ ಬಗ್ಗೆ ಗಮನ ಕೊಡಬೇಕು. ” ವೃತ್ತಾಂತ ಪ್ರಕಟನೆಯ ಮುಖ್ಯೋದ್ದೇಶವು ಜನರ ದಿನಚರಿಗೆ ಆವಶ್ಯಕವಾದ ತಿಳಿವಳಿಕೆಯನ್ನು ಕೊಡುವುದು. ರಾಜಕೀಯ ವ್ಯತ್ಯಾಸಗಳು, ಸಾಮಾಜಿಕ ಸಮಾರಂಭಗಳು, ವ್ಯಾಪಾರದ ಬದಲಾವಣೆಗಳು, ಶಾಸ್ತ್ರಕಲೆಗಳಲ್ಲಿ ನೂತನ ರಚನೆಗಳು- ಇವೇ ಮೊದಲಾದುವನ್ನು ಈ ಭಾಗವು ತಿಳಿಸಬೇಕು. ಈ ನಾನಾ ಸಂಗತಿಗಳು ಸ್ವದೇಶಕ್ಕೆ ಸಂಬಂಧಪಟ್ಟವಾದರೆ ಹೆಚ್ಚು ಗಮನಕ್ಕೆ ಅರ್ಹವಾಗುವುವು. ಇಂಥವುಗಳನ್ನು ಬಿಟ್ಟು, ಮೂರು ಕೈಯುಳ್ಳ ಮನುಷ್ಯ, ಎರಡು ತಲೆಯ ಆಡು, ಹಲ್ಲಿಲ್ಲದ ಹಾವು- ಇಂಥಾ ಅದ್ಭುತ ಕಥೆಗಳನ್ನು ಪ್ರಕಟಿಸುತ್ತಿದ್ದರೆ ಪತ್ರಿಕೆಯ ಮುಖ್ಯೋದ್ದೇಶವು ನೆರವೇರಿದಂತಾಗುವುದಿಲ್ಲ.” ಎನ್ನುತ್ತಾರೆ ಡಿ.ವಿ.ಜಿ. ಅವರ ಈ ಮಾತನ್ನು ನಮ್ಮ ಮಾಧ್ಯಮಗಳು ಗಮನಿಸಿದರೆ ತಾವು ಪದೇ ಪದೇ ಎಡವುತ್ತಿರುವುದು ಎಲ್ಲಿ ಎಂಬುದು ಸ್ಪಷ್ಟವಾಗುತ್ತದೆ.

ಪತ್ರಿಕೆಗಳಿಗೆ ಇರಬೇಕಾದ ಸ್ವಾತಂತ್ರ್ಯ ಹಾಗೂ ಸರಕಾರದ ಅಧಿಕಾರದ ಬಗ್ಗೆ ಬರೆಯುತ್ತಾ ಜಾನ್ ಮಿಲ್ಟನ್‌ನ ವಿಚಾರವೊಂದನ್ನು ಪ್ರಸ್ತಾಪಿಸುತ್ತಾರೆ. “ಯಾರು ಒಬ್ಬ ಮನುಷ್ಯನನ್ನು ಕೊಲ್ಲುತ್ತಾನೆಯೋ ಅವನು ವಿವೇಚನಾ ಶಕ್ತಿಯುಳ್ಳ ಪ್ರಾಣಿಯೊಂದನ್ನು, ಭಗವಂತನ ಪ್ರತಿಬಿಂಬವೊಂದನ್ನು ಕೊಂದಂಥವನಾಗುತ್ತಾನೆ; ಯಾರು ಒಂದು ಸದ್ಗ್ರಂಥವನ್ನು ನಾಶಪಡಿಸುತ್ತಾನೆಯೋ ಅವನು ವಿವೇಚನಾಶಕ್ತಿಯನ್ನೇ ಕೊಂದವನಾಗುತ್ತಾನೆ- ಎಂದರೆ ಭಗವಂತನ ಪ್ರತಿಬಿಂಬದ ಕಣ್ಣನ್ನೇ ಕಿತ್ತು ಅದನ್ನು ಕೊಂದವನಾಗುತ್ತಾನೆ… ನನಗೆ ಎಲ್ಲ ಸ್ವಾತಂತ್ರ್ಯಗಳಿಗಿಂತಲೂ ಮುಖ್ಯವಾಗಿ ಬೇಕಾದುದು ತಿಳಿವಳಿಕೆ ಪಡೆದುಕೊಳ್ಳುವ, ತಿಳಿದುದನ್ನು ಹೇಳುವ ಮತ್ತು ಆತ್ಮಸಾಕ್ಷಿಗನುಸಾರವಾಗಿ, ನಿರಾತಂಕವಾಗಿ, ಚರ್ಚೆ ನಡೆಸುವ ಸ್ವಾತಂತ್ರ್ಯ” ಸುಮಾರು ನಾಲ್ಕು ಶತಮಾನದ ಹಿಂದೆ ಮಿಲ್ಟನ್ ಹೇಳಿದ್ದು ಇಂದಿಗೂ ಪ್ರಸ್ತುತವಾಗಿದೆ. ನಮ್ಮ ನಡುವಲ್ಲಿರುವ ಪತ್ರಕರ್ತರಲ್ಲಿ ಈ ಸ್ವಾತಂತ್ರ್ಯಕ್ಕಾಗಿನ ಆಗ್ರಹದ ದನಿ ಸದಾ ಎಚ್ಚರವಾಗಿರಬೇಕು.

ಬದಲಾವಣೆಯ ಹಾದಿಯಲ್ಲಿ ಹೊಸತನಕ್ಕೆ ಒಗ್ಗಿಕೊಳ್ಳುವುದಕ್ಕೆ ಬೇರೆಲ್ಲಾ ಉದ್ಯಮಗಳು ಒದ್ದಾಡುವ ಹಾಗೆಯೇ ನಮ್ಮ ಮಾಧ್ಯಮಗಳೂ ತೊಳಲಾಡುತ್ತಿವೆ. ಜಾಗತೀಕರಣ, ತಂತ್ರಜ್ಞಾನಗಳು ತಂದೊಡ್ಡುತ್ತಿರುವ ಹೊಸ ಅವಕಾಶಗಳನ್ನು ಬಳಸಿಕೊಳ್ಳುವ, ರೂಪಾಂತರಗೊಳ್ಳುವ ಭರದಲ್ಲಿ ನಮ್ಮ ಮಾಧ್ಯಮಗಳು ತಮ್ಮ ಮೂಲಭೂತ ಕಾಳಜಿ ಹಾಗೂ ಆಶಯಗಳಿಗೆ ಅನ್ಯಾಯ ಮಾಡಿಕೊಳ್ಳಬಾರದು. ಡಿವಿಜಿಯವರ ಈ ಪುಸ್ತಕ ಆ ಎಚ್ಚರವನ್ನು ನಮಗೆ ನೀಡುತ್ತದೆ.


Blog Stats

  • 71,866 hits
ಮಾರ್ಚ್ 2023
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 12345
6789101112
13141516171819
20212223242526
2728293031  

Top Clicks

  • ಯಾವುದೂ ಇಲ್ಲ