ಕಲರವ

Archive for the ‘ಇಂತಿ ನಿನ್ನ ಪ್ರೀತಿಯ’ Category

ರಂಜಿತ್ ಅಡಿಗ, ಕುಂದಾಪುರ


 


ಅವತ್ತು ನೀ ಹಾಗೆ ಬೆನ್ನು ತೋರಿ ಹೊರಡುವಾಗ ನಿನ್ನ ಕಣ್ಣು ನೋಡಬೇಕೆನ್ನಿಸಿತ್ತು ಕಣೇ. ಪ್ರೀತಿಯಿಂದ ತುಳುಕುತಿದ್ದ ಕಣ್ಣ ಭಾವವನ್ನಷ್ಟೇ ಸವಿದು ಅಭ್ಯಾಸವಾಗಿಬಿಟ್ಟಿತ್ತಲ್ಲ; ಮೋಸದ ಕಹಿಯೂ ಅರಿವಾಗಬೇಕಿತ್ತು. ಮೊದಲು ನನ್ನ ಕಂಡೊಡನೆ ತಾರೆಯಂತೆ ಜಗಮಗಿಸುತ್ತಿದ್ದ ಕಣ್ಣುಗಳಲ್ಲಿ ಈ ಬಗೆಯ ನಿರ್ಲಕ್ಷ್ಯ, ’ನಿನ್ನ ಬದುಕು ನಿನಗೆ; ಎಲ್ಲೋ ಹೇಗೋ ಬದುಕಿಕೊಂಡು ಸಾಯಿ’ ಅನ್ನುವಂಥ ದ್ವೇಷ ಹೇಗೆ ಧಗಧಗಿಸುತ್ತದೆ ಎಂದಾದರೂ ಕಾಣಬೇಕಿತ್ತು.


ಅದರಿಂದಲಾದರೂ ನಿನ್ನ ಮೇಲೊಂದಿಷ್ಟು ಸಿಟ್ಟು ಹುಟ್ಟಿ ನಿನ್ನ ಮರೆಯಲು ಸುಲಭವಾಗುತಿತ್ತಲ್ಲವೇ? ಈ ಪರಿ ರಾತ್ರಿಗಳನ್ನು, ನೆನಪುಗಳು ಸುಡುವ ಅವಕಾಶ ಇಲ್ಲವಾಗುತಿತ್ತಲ್ಲವೇನೆ ಗೆಳತೀ?


ಹಾಗೆ ಅಷ್ಟು ನಿರ್ದುಷ್ಟವಾಗಿ ಹೋಗುವಾಗ, ವಿಲವಿಲ ಒದ್ದಾಡುವ ಹೃದಯವನ್ನು ನೇವರಿಸುವಂತಹ ಪುಟ್ಟನೋಟವೊಂದನ್ನು ಇತ್ತು ಹೋಗಿದ್ದರೆ ಜನುಮದ ಕ್ಷಣಗಳನ್ನೆಲ್ಲಾ ಅದರ ತೆಕ್ಕೆಯಲ್ಲಿ ಹಾಕಿ ಖುಷಿಯಿಂದ ಕಳೆದುಬಿಡುತ್ತಿದ್ದೆ. ’ನಿನ್ನದೇನೂ ತಪ್ಪಿಲ್ಲ; ಏನೋ ಸಮಸ್ಯೆಯಿಂದಾಗಿ ಹೊರಟಿದ್ದೀ, ಬದುಕಿನ ಯಾವುದೋ ಒಂದು ಸುಂದರ ತಿರುವಿನಲ್ಲಿ ನನಗಾಗಿ ಕಾಯುತಿರುತ್ತೀ’ ಎಂಬ ಭ್ರಮೆಯನ್ನು ಸತ್ಯವೆಂದೇ ಮನಸ್ಸಿಗೆ ನಂಬಿಸುತ್ತಾ ಅಂತಿಮವಾಗಿ ಸಾವಿನ ತಿರುವು ಬರುವವರೆಗೂ ಕಾಲ ಕಳೆಯುತ್ತಿದ್ದೆ. ನಮ್ಮ ಯುಗಗಳು ದೇವರಿಗೆ ಕ್ಷಣಗಳಂತೆ. ಅಂತಹ ಸಾವಿರ ಕ್ಷಣಗಳನ್ನು ಯುಗಗಳಂತಾದರೂ ಗರ್ಭಗುಡಿಯೊಳಗಿನ ಮೂರ್ತಿಯಂತೆ ಬಾಳಿ ಕಳೆದುಬಿಡುತ್ತಿದ್ದೆ.


ಹಾಗಾಗಲಿಲ್ಲ.


ನೀ ತೊರೆದ ಘಳಿಗೆಯಲ್ಲಿ ನಿಶ್ಯಬ್ದವೂ ಸಂತೈಸಲಿಲ್ಲ; ತಂಗಾಳಿಯೂ ಸಾಂತ್ವನ ಹೇಳಲಿಲ್ಲ. ಮೌನವಾಗಿ ನಿಂತ ನನ್ನ ಹಿಂದೆ ಅದೇ ಯುಗಗಳಂತಹ ಕ್ಷಣಗಳ ಕ್ಯೂ. ನೆನಪಿನ ಜೋಳಿಗೆ ಹೊತ್ತ ಫಕೀರನೆದುರು ಹಸಿದು ನಿಂತ ಬಕಾಸುರನಂತೆ ಕ್ಷಣಗಳು.


ಹಾಗೆ ಹೊರಟುಹೋಗಲು ಕಾರಣವಾದರೂ ಏನಿತ್ತು? ಕೇಳೋಣ ಅಂದುಕೊಂಡಿದ್ದೆ.


ಕೇಳಿಯೇ ಬಿಟ್ಟಿದ್ದರೆ ಮತ್ತೊಂದು ಅನಾಹುತವಾಗುತಿತ್ತು. ಮೊದಲಿಂದಲೂ ಆಸೆಪಟ್ಟದ್ದನ್ನು ಪಡೆದೇ ಅಭ್ಯಾಸ. ಅಮ್ಮನ ಖಾಲಿ ಕೈಗೆ ವಾಚು ಉಡುಗೊರೆ ಮಾಡಬೇಕೆಂದು ಯಾವಾಗನ್ನಿಸಿತ್ತೋ ಅದೇ ದಿನ ಮನೆಮನೆಗೆ ಪೇಪರ್ ಹಾಕಿ ಹಾಲಿನ ಪ್ಯಾಕೆಟ್ಟೆಸೆದು ತಿಂಗಳು ಮುಗಿಯುವುದರೊಳಗೆ ಟೈಟನ್ ವಾಚು ತಂದುಕೊಟ್ಟಿರಲಿಲ್ಲವೇ?


ಕುಡುಮಿ ವಿಧ್ಯಾರ್ಥಿಯೊಬ್ಬನಿಗಿಂತ ಜಾಸ್ತಿ ಮಾರ್ಕ್ಸು ಪಡೆಯಲೇಬೇಕೆಂದು ಯಾವಾಗನ್ನಿಸಿತ್ತೋ ಆಗೆಲ್ಲಾ ನಿದಿರಿಸುವುದೇ ಕಾಲಹರಣ ಅನ್ನಿಸತೊಡಗಿತ್ತಲ್ಲವ? ಮುಂದಿನ ಪರೀಕ್ಷೆಯಲ್ಲಿಯೇ ಹೆಚ್ಚು ಅಂಕ ಗಳಿಸಿ ತೋರಿಸಿರಲಿಲ್ಲವೇ?


ಹಾಗೆಯೇ (ನೀನೆಲ್ಲಾದರೂ ನನ್ನ ದುಃಖ ಕಡಿಮೆಯಾಗುತ್ತದೆಂದು ಊಹಿಸಿ ಸುಳ್ಳಿಗಾದರೂ) ತೊರೆಯಲು ಏನೋ ಒಂದು ಕಾರಣ ಹೇಳಿದ್ದರೆ ಅದನ್ನು ಜಯಿಸಲು ನನಗೆಷ್ಟು ಸಮಯ ಬೇಕಾಗುತಿತ್ತು ಹೇಳು? ಅದಕ್ಕೇ ಕಾರಣ ಕೇಳುತ್ತಿದ್ದ ಮನದ ಕತ್ತನ್ನು ಹಿಸುಕಿ ಮೌನವಾಗಿಸಿದೆ.


ಇನ್ನು ಮುಂದೇನೂ ಇಲ್ಲ. ಕನಸು, ವಾಸ್ತವಗಳು ಸುತ್ತಲಿಂದಲೂ ಅಟ್ಯಾಕ್ ಮಾಡಿದಾಗ ಆಯುಧ ಕಳಕೊಂಡ ಸೈನಿಕ. ಮನಸ್ಸು, ಸಾಗರದ ನಡುಮಧ್ಯೆ ದಿಕ್ಸೂಚಿ ಬೀಳಿಸಿಕೊಂಡ ನಾವಿಕ. ತೂರಾಡುವ ಹಡಗಿಲ್ಲದೇ ಅಲೆಗಳಿಗೂ ಮಜವಿಲ್ಲ. ತೂಗಾಡಿಸುವ ಗಾಳಿಯಿಲ್ಲದೇ ಹೂಗಳಿಗೂ ಖುಷಿಯಿಲ್ಲ. ಸತ್ತವನಂತಿರುವವನಿಗೆ ಬಡಿದು ಪ್ರಯೋಜನವೇನು ಎಂಬಂತೆ ಬೇರೆ ದುಃಖಗಳೆಲ್ಲ ಇನ್ಯಾರನ್ನೋ ಹುಡುಕಿಕೊಂಡು ಹೊರಟಿದೆ. ಜೀವ ಬಸಿದು ಪದಗಳಾಗುತಿರಲು ಬರೆಯಲೂ ಕೈ ನಡುಗುತಿದೆ ; ಬಹುಶಃ ನಿನ್ನ ಮೇಲೆ, ಬದುಕಿನ ಮೇಲೆ, ಪ್ರೀತಿಯ ಮೇಲೆ ಮತ್ತು ದೇವರ ಮೇಲೆ ಬರೆಯುತ್ತಿರುವ ಕೊನೆಯ ಅಕ್ಷರಗಳಿವು.


ಓದಿ, ಲೊಚಗುಟ್ಟಿಯೋ, ಕನಿಕರಿಸಿಯೋ, ಧಿಕ್ಕರಿಸಿಯೋ, ನೇವರಿಸಿಯೋ, ಹರಿದು ಹಾಕಿಯೋ, ಫ್ರೇಮ್ ಹಾಕಿಸಿಯೋ, ಮದುವೆ ಅಲ್ಬಮ್ಮಿನ ಫೋಟೋ ಹಿಂದುಗಡೆ ಯಾರಿಗೂ ಕಾಣದಂತಿರಿಸಿಯೋ, ಚಿಂದಿ ಮಾಡಿ ಕಸದ ಬುಟ್ಟಿಗೆಸೆದೋ….


ಸಾರ್ಥಕವಾಗಿಸು.

ಪ್ರಿಯ ಆತ್ಮಬಂಧು,
ಹೌದು ನಿನ್ನ ಹೀಗಂತ ಮಾತ್ರ ಕರೆಯಲು ಸಾಧ್ಯ. ಒಮ್ಮೆ ಹೀಗೆ ಕರೆದುಬಿಟ್ಟ ನಂತರ ನನ್ನಲ್ಲಿ ಅದೆಷ್ಟು ನಿರಾಳತೆ ಆವರಿಸಿಕೊಂಡಿದೆ ಎಂಬುದು ನಿನಗೆ ತಿಳಿಯುವುದಿಲ್ಲ. ಇಷ್ಟು ವರ್ಷಗಳಲ್ಲಿ ನಾನು ನಿನ್ನಲ್ಲಿ ಹುಡುಕುತ್ತಿದ್ದದ್ದು ಏನನ್ನು ಎನ್ನುವುದು ತಿಳಿಯದೆ ಗೊಂದಲಗೊಂಡಿದ್ದೆ, ಕ್ಷಣಕ್ಷಣವೂ ಮುಂದೆ ಏನಾಗುವುದೋ ಎಂಬ ಆತಂಕದಲ್ಲೇ ನಾನು ನನ್ನ ಎಂ.ಬಿ.ಬಿ.ಎಸ್ ಮುಗಿಸಿದೆ. ರಾತ್ರಿ ಕಳೆದು ಹಗಲಾಗುವುದರೊಳಗೆ ನನ್ನ ನಿನ್ನ ನಡುವಿನ ಸಂಬಂಧ ಯಾವ ರೂಪವನ್ನು ತಳೆದು ಕಣ್ಣ ಮುಂದೆ ಎದ್ದು ನಿಂತು ಬಿಡುವುದೋ ಎಂಬ ಕಳವಳದಲ್ಲಿ ರಾತ್ರಿಗಳನ್ನು ತಳ್ಳುತ್ತಿದ್ದೆ. ನನ್ನ ಬಗ್ಗೆ ನಿನ್ನ ಮನಸ್ಸಿನಲ್ಲಿರುವ ಭಾವನೆಯೇನು ಎಂಬುದನ್ನು ತಿಳಿದುಕೊಳ್ಳುವ ಇಂದ್ರಜಾಲದ ವಿದ್ಯೆಯಾವುದಾದರೂ ಇದ್ದರೆ ನನಗೆ ಕಲಿಸಪ್ಪ ಎಂದು ನಾನು ದೇವರನ್ನು ಪ್ರಾರ್ಥಿಸುವಾಗಲೆಲ್ಲಾ ಬೇಡಿಕೊಳ್ಳುತ್ತಿದ್ದೆ. ನಿನ್ನಲ್ಲಿ ನನ್ನೆಡೆಗೆ ಯಾವ ಭಾವನೆಯಿದು ಎನ್ನುವುದು ತಿಳಿಯುವುದಿರಲಿ, ನನೆಗೆ ನಿನ್ನ ಬಗ್ಗೆ ಏನು ಅನ್ನಿಸುತ್ತಿದೆ ಎಂಬುದನ್ನು ಗ್ರಹಿಸುವುದಕ್ಕೇ ನಾನು ವಿಫಲಳಾಗಿದ್ದೆ.

ಆ ಐದು ವರ್ಷಗಳಲ್ಲಿ ಏನೇನೆಲ್ಲಾ ನಡೆಯಿತು ಅಲ್ಲವಾ? ಗಾರ್ಮೆಂಟ್ ಕೆಲಸಕ್ಕೆ ಎಂದು ಸೇರಲು ತಯಾರಾಗಿದ್ದ ನಾನು ಡಾಕ್ಟರ್ ಆಗಬಹುದು ಎಂದು ಕನಸಿನಲ್ಲಷ್ಟೇ ಬಯಸಬಹುದಾಗಿದ್ದ ಸವಲತ್ತಾಗಿತ್ತು. ನೀನು ನನ್ನ ಕನಸನ್ನು ನನಸು ಮಾಡಿದೆ. ನಮ್ಮೆಲ್ಲಾ ಕಥೆಗಳಲ್ಲಿ ರಾಜಕುಮಾರಿಯರಿಗೆ ಕನಸಿನಲ್ಲಿ ರಾಜಕುಮಾರರು ಕಾಣಿಸಿಕೊಂಡು ತಮ್ಮ ಪರಾಕ್ರಮ ತೋರುತ್ತಾರಂತೆ! ನೀನು ನನ್ನ ಕನಸಿನಲ್ಲಿ ಬರುವ ಕಷ್ಟವನ್ನು ತೆಗೆದುಕೊಳ್ಳಲಿಲ್ಲ. ನನ್ನ ಕನಸನ್ನೇ ಎಳೆದು ತಂದು ಬದುಕಾಗಿಸಿದೆ. ಆ ಬದುಕಿನಲ್ಲಿ ಸಹಜವಾಗಿ ನೀನು ಇದ್ದೆ.

ನೀನು ಬರುವ ಮುಂಚೆ ನನ್ನ ಬದುಕು ಹೇಗಿತ್ತು? ಅಲ್ಲಿ ಇರಬೇಕಾದದ್ದೆಲ್ಲಾ ಕನ್ನಡಿಯೊಳಗಿನ ಗಂಟಾಗಿತ್ತು. ಅಪ್ಪನಿಗೆ ಮತಿಭ್ರಮಣೆ. ತಾನು ಮಾಡುತ್ತಿರುವುದೇನು ಎಂಬುದನ್ನು ಅರ್ಥ ಮಾಡಿಕೊಳ್ಳಲಾಗದ ಅಸಹಾಯಕತೆ. ಕೆಲವೊಮ್ಮೆ ದಿನವಿಡೀ ಮಂಕಾಗಿ ಕುಳಿತರೆ ಮತ್ತೊಂದಷ್ಟು ದಿನ ವಿನಾಕಾರಣದ ರಗಳೆಗಳನ್ನು ಮಾಡಿ, ಕೂಗಾಡಿ ಗದ್ದಲವೆಬ್ಬಿಸಿ ಎಲ್ಲರ ನೆಮ್ಮದಿಯನ್ನು ಕೆಡಿಸುತ್ತಿದ್ದ. ಇದನ್ನೆಲ್ಲಾ ನನ್ನಮ್ಮ ಹೇಗೋ ಸಹಿಸಿಕೊಳ್ಳುತ್ತಿದ್ದಳು. ಇವೆಲ್ಲದರ ಮಧ್ಯೆಯೂ ನಮ್ಮಿಬ್ಬರಿಗೆ – ನಾನು ಹಾಗೂ ತಮ್ಮನಿಗೆ- ಅಪ್ಪನ ಬಗ್ಗೆ ಅಗೌರವ, ಅಸಹ್ಯ ಬರದ ಹಾಗೆ ಆಕೆ ನಡೆಸಿಕೊಳ್ಳುತ್ತಿದ್ದಳು. ಆಕೆಯ ಮುಖದಲ್ಲೆಂದೂ ಅಪ್ಪನ ಬಗೆಗೆ ಅಪ್ರಸನ್ನತೆಯ ಗೆರೆ ಮೂಡಿರಲಿಲ್ಲ. ಆದರೆ ಅಂಥಾ ಸಂಯಮಿಯೂ ತಾಳ್ಮೆ ಕಳೆದುಕೊಳ್ಳಬೇಕಾಯ್ತು. ಅಪ್ಪ ತನಗಿದ್ದ ಮತಿಭ್ರಮಣೆಯ ಜೊತೆಗೆ ಕುಡಿತದ ಹುಚ್ಚನ್ನೂ ಅಂಟಿಸಿಕೊಂಡು ಬಿಟ್ಟ. ಅಮ್ಮನಿಗೆ ಸಂಯಮ ತಪ್ಪಿಹೋಯ್ತು. ದಿನವೂ ಕುಡಿಯಲು ಕಾಸು ಬೇಡುತ್ತಾ ನಿಲ್ಲುವ ಅಪ್ಪನನ್ನು ನಿಷ್ಕೃಷ್ಟ ಪ್ರಾಣಿಯ ಹಾಗೆ ಅಮ್ಮ ಕಾಣಲು ಶುರುವಾದಾಗಿನಿಂದ ಮನೆಯಲ್ಲಿ ನೆಮ್ಮದಿಯೆಂಬುದು ಕಾಣೆಯಾಯ್ತು. ಅಲ್ಲಿಯವರೆಗೂ ಅಸಮಾಧಾನ, ದುಸುಮುಸುಗಳು ದೇವರ ಕೋಣೆಯಲ್ಲಿ, ಮಲಗುವ ಕೋಣೆಯ ದಿಂಗಿನ ಹೆಗಲಲ್ಲಿ ಇಳಿದು ಹೋಗುತ್ತಿದ್ದವು. ನಾನು ಪಿಯುಸಿ ಮುಗಿಸಿ ಸಿಇಟಿ ಪರೀಕ್ಷೆ ಬರೆದು ವೈದ್ಯಳಾಗುವ ಕನಸನ್ನು ಕಾಣುತ್ತಾ ದಿನಗಳನ್ನು ಕಳೆಯುತ್ತಲಿದ್ದೆ. ರಜೆಯಲ್ಲಿ ಅಮ್ಮನಿಗೆ ನೆರವಾಗಲೆಂದು ಇಂಗ್ಲೀಷ್ ಗ್ರಾಮರ್ ಕಲಿಸುವ ಶಾಲೆಯೊಂದರಲ್ಲಿ ಕೆಲಸ ಮಾಡಲು ಶುರು ಮಾಡಿದೆ.

ಸಿಇಟಿಯಲ್ಲಿ ಒಳ್ಳೆಯ ರಿಸಲ್ಟೇನೋ ಬಂತು ಆದರೆ ಆ ರ್ಯಾಂಕಿಗೆ ಮೆಡಿಕಲ್ ಸೀಟು ಕಟ್ಟಲು ಬೇಕಾದಷ್ಟು ಹಣವಿರಲಿಲ್ಲ. ಬ್ಯಾಂಕಿನಲ್ಲಿ ಸಾಲ ಎತ್ತಲು ಏನನ್ನಾದರೂ ಅಡವಿಡಲೇ ಬೇಕಲ್ಲವೇ? ನಮ್ಮ ಬಳಿ ಹೇಳಿಕೊಳ್ಳುವಂಥದ್ದೇನೂ ಇರಲಿಲ್ಲ. ಪ್ರತಿ ದಿನ ಗ್ರಾಮರ್ ಕಲಿಸುವ ಶಾಲೆಯ ಸೈಬರಿನಲ್ಲಿ ಕುಳಿತು ದಿನ ದಿನಕ್ಕೆ ಕರಗುತ್ತಿದ್ದ ಮೆಡಿಕಲ್ ಸೀಟುಗಳನ್ನು, ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪ್ಲಾಟ್ ಫಾರಂ ಬಿಟ್ಟು ಹೊರಡುವ ಬಸ್ಸುಗಳನ್ನು ನೋಡಿದ ಹಾಗೆ ನೋಡುತ್ತಾ ಕುಳಿತಿದ್ದಾಗ ನಿನ್ನ ತಂಗಿಗೆ ನನ್ನ ನೆನಪಾದದ್ದು. ನನ್ನ ಮನೆಯ ಸ್ಥಿತಿಯನ್ನು ಹೇಳಿಕೊಂಡು ಸಮಾಧಾನ ಪಡೆಯಲು ನಾನು ಆಯ್ದುಕೊಂಡದ್ದು ತರಗತಿಯಲ್ಲಿನ ಮೂವತ್ತು ಮಂದಿ ಹುಡುಗಿಯರಲ್ಲಿ ನಿನ್ನ ತಂಗಿಯನ್ನೇ. ಆಕೆಯಲ್ಲಿನ ಮುಗ್ಧತೆ, ಅಪಾರ ಸಹಾನುಭೂತಿ ಹಾಗೂ ಆ ವಯಸ್ಸಿನಲ್ಲಿ ಹುಡುಗಿಯರಿಗೆ ಸಹಜವಾಗಿ ಇರುವ ಮತ್ಸರದ ಲವಲೇಶವೂ ಇಲ್ಲಂಥ ಆಕೆಯನ್ನು ಕಂಡಾಗ ನನಗೆ ಜನುಮವಿಡೀ ಹುಡುಕುತ್ತಿದ್ದ ಗೆಳತಿ ಸಿಕ್ಕಂತಾಗಿತ್ತು. ತನ್ನ ಕಷ್ಟಗಳಲ್ಲೇ ಹೈರಾಣಾಗಿ ಹೋಗಿದ್ದ ಅಮ್ಮ, ಏನೂ ತಿಳಿಯದ, ಅರ್ಥಮಾಡಿಕೊಳ್ಳಲಾಗದ ತಮ್ಮ -ಇವರಲ್ಲಿ ನನಗೆ ಬೇಕಾದ ಭಾವನಾತ್ಮಕ ವಾತಾವರಣ ಸಿಕ್ಕದೆ ನಾನು ಭಾವನೆಗಳಿಲ್ಲದ ಸೂತ್ರದ ಬೊಂಬೆಯಂತಾಗಿ ಹೋಗಿದ್ದೆ. ಬಡವರು, ಕಷ್ಟದಲ್ಲಿರುವವರು ಸೂಕ್ಷ್ಮ ಮನಸ್ಸಿನವರಾಗಬಾರದು, ಆರ್ದ್ರತೆ, ಭಾವನಾತ್ಮಕತೆ ಎಂಬುವೆಲ್ಲಾ ಬಡವರ ಬಜೆಟ್ಟಿಗೆ ದಕ್ಕದ ಸಂಗತಿಗಳು ಎಂದು ಕಂಡುಕೊಂಡು ಕಲ್ಲು ಮನಸ್ಸಿನವಳಾಗಿದ್ದೆ. ಸುಮ ಸಿಕ್ಕ ಮೇಲೆ ನನ್ನ ಭಾವನೆಗಳಿಗೂ ಬೆಲೆಯಿದೆ ಎನ್ನಿಸತೊಡಗಿತು. ಅಂಥ ವಯಸ್ಸಿನಲ್ಲಿ ಆಕೆಯಲ್ಲಿ ತಾಯಿಯಂತಹ ವ್ಯಕ್ತಿತ್ವ ಹೇಗೆ ಬೆಳೆಯಿತು ಎಂದು ನಾನು ಆಗಾಗ ಯೋಚಿಸುತ್ತಿದ್ದೆ.

ನನ್ನ ಕೌನ್ಸೆಲಿಂಗಿಗೆ ಮೂರು ದಿನಗಳಿವೆ ಎಂದಾಗ ಅಮ್ಮ ಅಲ್ಲಿ ಇಲ್ಲಿ ಕೈಲಾದಲ್ಲೆಲ್ಲಾ ಪ್ರಯತ್ನಿಸಿ ಫೀಸು ಕಟ್ಟುವುದಕ್ಕೆ ಬೇಕಾವ ಹಣವನ್ನು ಹೊಂದಿಸುವ ಪ್ರಯತ್ನ ಕೈ ಬಿಟ್ಟಿದ್ದಳು. ಆಕೆ ಅದೆಷ್ಟೇ ಕಷ್ಟ ಪಟ್ಟರೂ ಫೀಸಿಗೆ ಬೇಕಾದ ದುಡ್ಡಿನ ಅರ್ಧ ಭಾಗವೂ ಸೇರಿರಲಿಲ್ಲ. ಇನ್ನು ಮೆಡಿಸಿನ್ ಮಾಡುವುದೆಂದರೆ ಸುಮ್ಮನೆಯಲ್ಲ, ಕಾಲೇಜು ಫೀಸಿನ ಜೊತೆಗೆ ದೊಡ್ಡ ದೊಡ್ಡ ಪುಸ್ತಕಗಳು.. ಇತರ ಖರ್ಚುಗಳು… ಸರಿ ಡಾಕ್ಟರಾಗಬೇಕೆಂಬ ಗುರಿಗೆ ರಾತ್ರಿಯ ಕನಸಿನಲ್ಲಿ ಬರುವ ಆದೇಶವನ್ನು ಕೊಟ್ಟು ಇದ್ದ ದುಡ್ಡಿನಲ್ಲಿ ಸಿಕ್ಕುವ ವಿದ್ಯಾಭ್ಯಾಸವನ್ನು ಪಡೆದರಾಯಿತು ಎಂದು ತೀರ್ಮಾನಿಸಿದ್ದೆ. ನನ್ನ ಕನಸನ್ನು ನನಸಾಗಿಸಿಕೊಳ್ಳಲು ಬೇಕಾದ ನೆರವು ನೀಡಲಾಗದ ಅಪ್ಪ-ಅಮ್ಮನ ಮೇಲೆ ಸಿಟ್ಟು ಉಕ್ಕಿ ಉಕ್ಕಿ ಬರುತ್ತಿತ್ತು. ಅಪ್ಪನಿಗೆ ಏನೂ ನಾಟವುದಿಲ್ಲ, ಅಮ್ಮನಿಗೆ ಏನೂ ಮಾಡಲಾಗದ ಅಸಹಾಯಕತೆ. ಇನ್ನು ತಮ್ಮನ ವಿದ್ಯಾಭ್ಯಾಸವೂ ನಡೆಯಬೇಕು. ಬಡತನವೆಂಬ ರಕ್ಕಸ ಹೇಗೆ ಕನಸುಗಳೆಂಬ ಅಬೋಧ ಶಿಶುಗಳನ್ನು ಹೊಸಕಿ ಹಾಕುತ್ತದೆ ಎಂದು ರಸವತ್ತಾಗಿ ಕಥೆ ಹೇಳುತ್ತಾ ತಮ್ಮನು ಮಲಗುತ್ತಿದ್ದ ಹಾಗೆ ಆ ಕಥೆಯ ವಿಸ್ತರಣೆಯನ್ನು ಕನಸಲ್ಲಿ ಎಳೆದುಕೊಂಡು ಆ ರಕ್ಕಸನನ್ನು ಸದೆಬಡಿದು ಮೇಲಕ್ಕೇಳುವ ಸಾಹಸ ಮೆರೆದು ಬೆಳಗಾಗೆದ್ದು ಮುಸುರೆ ತಿಕ್ಕುವುದಕ್ಕೆ ಸಿದ್ಧಳಾಗುತ್ತಿದ್ದೆ.

ಅಂದು ವಿಪರೀತ ದುಃಖದಲ್ಲಿದ್ದೆ. ಎರಡು ದಿನ ಕಳೆದರೆ ಸಿಇಟಿ ಕೌನ್ಸೆಲಿಂಗು. ನನ್ನ ಪ್ರತಿಭೆಗೆಯನ್ನು ಪರೀಕ್ಷಿಸಿ ನನಗೆ ನ್ಯಾಯಯುತವಾಗಿ ದಕ್ಕಬೇಕಾದ ವಿದ್ಯಾಭ್ಯಾಸವನ್ನು ಕೊಡುವ ದಿನ. ನನ್ನದು ಮಾತ್ರ, ಯಾವ ಅರ್ಹತೆಯೂ ಇಲ್ಲದಿದ್ದರೂ ಅಪ್ಪನ ಸಂಪಾದನೆ ಎಂಬ ‘ಪ್ರಭಾವಿ ವ್ಯಕ್ತಿ’ಯ ಮುಖ ತೋರಿಸಿ ಬೇಕಾದ ವಿದ್ಯಾಭಾಸದ ಹಕ್ಕನ್ನು ಪಡೆಯುವವರನ್ನು ಅಸಹನೆಯಿಂದ ನೋಡುತ್ತಾ ಕೂರುವ ಕರ್ಮ. ಇನ್ನು ನನಗೆ ಬದುಕಿಡೀ ಇದೇ ವೃತ್ತಿಯಾಗಬಹುದು ಎಂದು ಆಲೋಚಿಸುತ್ತಾ, ಮುಂದೆ ಎಷ್ಟೇ ಕಷ್ಟವಾದರೂ ನನ್ನ ಮಗಳಿಗೆ ಮೆಡಿಕಲ್ ಓದಿಸಬೇಕು ಎಂದು ಯೋಜನೆ ಹಾಕುತ್ತಾ, ಅಪ್ಪನಂತಲ್ಲದ ಗಂಡನನ್ನು ವರಿಸುವ ಕನಸು ಕಾಣುತ್ತಾ ಹೊಸ್ತಿಲ ಮೇಲೆ ಕುಳಿತಿದ್ದೆ. ಮೆಲ್ಲಗೆ ಎದುರು ನಿಂತ ನೆರಳು, ‘ಹಾಯ್, ರಂಜು…’ ಎಂದಂತಾಯ್ತು. ತಲೆ ಎತ್ತಿ ನೋಡಿದೆ, ಸುಮ! ಅಂದು ತಾನೆ ಆಕೆ ಕೌನ್ಸೆಲಿಂಗ್ ಮುಗಿಸಿಕೊಂಡು ತನಗೆ ಸಿಕ್ಕ ಮೆಡಿಕಲ್ ಸೀಟಿನ ಆರ್ಡರ್ ಕಾಪಿ, ಒಂದು ಪೊಟ್ಟಣದಲ್ಲಿ ಸ್ವೀಟು ಹಿಡಿದು ಬಂದಿದ್ದಳು. ಕಾಟಾಚಾರದ ಹೆಲೋ, ಹಾಯ್‌ಗಳು ಮುಗಿದ ಮೇಲೆ ಆಕೆ ನನ್ನ ಕೌನ್ಸೆಲಿಂಗಿಗೆ ಡಿಡಿ ಮಾಡಿಸಿಯಾಯ್ತಾ ಎಂದು ಕೇಳಿದಳು. ನನ್ನ ಪರಿಸ್ಥಿತಿಯ ಅರಿವಿದ್ದ ಆಕೆಗೆ ವಿವರಿಸಿ ಹೇಳುವುದು ಕಷ್ಟವಾಗಲಿಲ್ಲ. ಎರಡು ಕ್ಷಣ ಸುಮ್ಮನಿದ್ದ ಆಕೆ ಒಡನೆಯೇ ಸರಬರನೆ ತನ್ನ ಪುಟ್ಟ ವ್ಯಾನಿಟಿ ಬ್ಯಾಗಿನಿಂದ ಚೆಂದದ ಮೊಬೈಲ್ ತೆಗೆದುಕೊಂಡು ಕೊಂಚ ಮರೆಗೆ ಹೋಗಿ ಯಾರಿಗೋ ಕರೆ ಮಾಡಿದಳು. ಎರಡು ನಿಮಿಷ ಮಾತಾಡಿದವಳೇ ನನ್ನ ಬಳಿಗೆ ಬಂದು ಮೊಬೈಲ್ ಕೈಯಲ್ಲಿ ತುರುಕಿ, ‘ನಮ್ಮಣ್ಣ… ಮಾತಾಡಬೇಕಂತೆ’ ಅಂದ್ಳು.

ನಾನು ಗಾಬರಿಯಾಗಿ ಏನು ಮಾತಾಡುವುದು ಎಂದು ತೋಚದೆ, ಒಣಗಿದ ಗಂಟಲಿನಿಂದ ಪ್ರಯಾಸ ಪಟ್ಟು ಹೊರಡಿಸಲು ಸಾಧ್ಯವಾದದ್ದು ‘ಹೆಲೋ’ ಎಂಬಂತೆ ಕೇಳಿಸುವ ಶಬ್ಧವನ್ನು ಮಾತ್ರ. ‘ಹ್ಹ ಹೆಲೋ ರಂಜಿತಾನಾ? ನನ್ನ ಹೆಸರು ಸುನೀಲ್. ನಿಮ್ಮಮ್ಮ ಇದ್ದಾರಾ ಮನೆಯಲ್ಲಿ..’ ಕೇಳಿದ್ದೆ ನೀನು. ಮೊದಲ ಮಾತಲ್ಲೇ ನಮ್ಮಿಬ್ಬರ ನಡುವಿನ ಅಪರಿಚಿತತೆಯ ಗೋಡೆಯನ್ನು ಕೆಡವಿ ಹಾಕಿದ್ದೆ. ನಾಲ್ಕು ನಿಮಿಷ ಮಾತಾಡುವಷ್ಟರಲ್ಲಿ ಜಗತ್ತಿನಲ್ಲಿ ನೀನೊಬ್ಬನಿದ್ದರೆ ನನಗೆ ಯಾವ ಅಂಜಿಕೆಯೂ ಇಲ್ಲ ಎನ್ನುವ ಧೈರ್ಯವನ್ನು ಮೂಡಿಸಿಬಿಟ್ಟಿದ್ದೆ.

(ಮುಂದಿನ ಸಂಚಿಕೆಗೆ)

(ಕಳೆದ ಸಂಚಿಕೆಯಿಂದ….)

‘ನಾನಾಗಿಯೇ ಮೇಲೆ ಬಿದ್ದು ಮಾತನಾಡಿಸಲು ಹೋದರೆ ಹುಡುಗೀರು ನನ್ನನ್ನು ಚೀಪ್ ಅಂತ ನೋಡುವುದಿಲ್ಲವಾ? ನನ್ನ ಗೆಳೆಯರನೇಕರು ಹಾಗೆ ಮಾಡುವುದನ್ನು ನೋಡಿದ್ದೇನೆ. ನನಗೇ ಅವರು ಜೊಲ್ಲು ಪಾರ್ಟಿಗಳ ಹಾಗೆ ಕಾಣಿಸಿಬಿಡುತ್ತಾರೆ. ಇನ್ನು ಹುಡುಗಿಯರು ಅವರನ್ನು ಹೇಗೆ ಕಾಣಬಹುದು ಅಲ್ಲವಾ? ಅದಕ್ಕೇ ನಾನಾಗಿ ಯಾವ ಹುಡುಗಿಯನ್ನೂ ಮಾತನಾಡಿಸುವುದಿಲ್ಲ, ಎಲ್ಲಾದರೂ ಮಾತನಾಡುವ ಅವಕಾಶ ಸಿಕ್ಕರೂ ತೀರಾ ಚುಟುಕಾಗಿ, ಎಲ್ಲೂ ನನ್ನ ಆತ್ಮಾಭಿಮಾನಕ್ಕೆ ಧಕ್ಕೆಯಾಗದ ಹಾಗೆ, ಆಕೆ ಬೇರೇನನ್ನೂ ಕಲ್ಪಿಸಿಕೊಳ್ಳದ ಹಾಗೆ, ಅಸಲಿಗೆ ಇಬ್ಬರ ನಡುವೆ ಯಾವುದಾದರೂ ಸೆಳೆತಕ್ಕೆ ಆಸ್ಪದವನ್ನೂ ಕೊಡದ ಹಾಗೆ ಮಾತನಾಡಿ ಮುಗಿಸಿಬಿಡುತ್ತೇನೆ.’ ನಾನು ನಿನ್ನೊಂದಿಗೆ ಫೋನಿನಲ್ಲಿ ಮಾತನಾಡುತ್ತಿರುವೆ ಎಂಬುದನ್ನೇ ಮರೆತವನಂತೆ, ಯಾವುದೋ ಕೌನ್ಸಿಲಿಂಗ್ ರೂಮಿನಲ್ಲಿ ಮನಃಶಾಸ್ತ್ರಜ್ಞನ ಎದುರು ಕುಳಿತು ಮಾತನಾಡಿದ ಹಾಗೆ ಪಿಸುಗುಡುತ್ತಿದ್ದೆ.

ನೀನು ನನ್ನನ್ನು ಗೇಲಿ ಮಾಡಲಿಲ್ಲ. ನೀನು ಅಂಜುಬುರುಕ, ಮಖೇಡಿ ಎಂದು ಕಾಲೆಳೆಯಲಿಲ್ಲ. ‘ಹುಡುಗಿಯೊಂದಿಗೆ ಸಲುಗೆಯಲ್ಲಿ ಮಾತನಾಡಿದರೆ ಆಕೆ ನಿನ್ನನ್ನು ಚೀಪ್ ಅಂತ ತಿಳಿದಿಕೊಳ್ಳಬಹುದು ಎಂಬುದು ನಿನ್ನ ಭಯ. ಯೋಚನೆ ಮಾಡು, ನೀನೊಬ್ಬ ಹುಡುಗ, ಈ ಸೊಸೈಟಿಯಲ್ಲಿ ಹುಡುಗಿಗಿಂತ ಹೆಚ್ಚು ಸ್ವತಂತ್ರನಾದವನು. ನಿನಗೇ ಇಷ್ಟು ಆತಂಕವಿರುವಾಗ, ಯಾವ ಹುಡುಗಿ ತಾನೆ ಮೇಲೆ ಬಿದ್ದು ನಿನ್ನನ್ನು ಮಾತನಾಡಿಸುವ ಪ್ರಯತ್ನ ಮಾಡುತ್ತಾಳೆ ಹೇಳು? ಒಂದು ವೇಳೆ ಆಕೆಯೇನಾದರೂ ಸ್ವಲ್ಪ ಸಲುಗೆ ತೋರಿಸಿದರೂ ಅದಕ್ಕೆ ತಪ್ಪಾದ ಅರ್ಥ ಅಂಟಿಕೊಳ್ಳುತ್ತೆ. ಹುಡುಗರಿಗೆ ಇಲ್ಲದ ಅಸಂಖ್ಯಾತ ಅದೃಶ್ಯವಾದ ಕಟ್ಟಳೆಗಳು ಹುಡುಗಿಗೆ ಇರುತ್ತವೆ ತಿಳಿದುಕೋ. ನಮ್ಮಮ್ಮ ಯಾವಾಗಲೂ ಹೇಳ್ತಾಳೆ, ‘ಹುಡುಗಿಯ ವ್ಯಕ್ತಿತ್ವ ಅನ್ನೋದು ಹೂವಿನ ಪಕಳೆಯ ಹಾಗೆ, ತಾನಾಗಿ ಮುಳ್ಳನ್ನು ಸವರಿದರೂ, ಮುಳ್ಳೇ ಬಂದು ಇರಿದರೂ ಹರಿಯುವುದು ಪಕಳೆಯ ಎದೆಯೇ’ ಅಂತ. ನಾನು ಆಗ ಆಕೆ ನನ್ನಲ್ಲಿ ಕೀಳರಿಮೆ ಬಿತ್ತುತ್ತಿದ್ದಾಳೆ ಅಂತ ಭಾವಿಸಿ ವಿರೋಧಿಸುತ್ತಿದ್ದೆ. ಕೋಪಮಾಡಿಕೊಂಡು ಕೂಗಾಡುತ್ತಿದ್ದೆ. ಆದರೆ ಅದು ವಾಸ್ತವಕ್ಕೆ ತೀರಾ ಹತ್ತಿರವಾದದ್ದು ಅಂತ ಅನ್ನಿಸುತ್ತಿದೆ…’ ಹುಡುಕಿ ಹುಡುಕಿ ನೋಡಿದರೂ ನಿನ್ನ ಮಾತಿನಲ್ಲಿ ಚೂರೂ ನಂಜು ಕಾಣಲಿಲ್ಲ. ನನ್ನ ಆತಂಕ, ತಳಮಳಗಳೆಡೆಗೆ ನಿನ್ನ ಮಾತಿನಲ್ಲಿದ್ದದ್ದು ಶುದ್ಧ ಸಹಾನುಭೂತಿ. ಬದುಕಿನಲ್ಲಿ ಹೆಚ್ಚು ವಸಂತಗಳನ್ನು ಕಂಡ ತಂದೆ ಮಗನನ್ನು ಸಂತೈಸುವಂತೆ ನೀನು ಮಾತನಾಡುತ್ತಲಿದ್ದೆ. ಗೆಳತಿಯೊಬ್ಬಳನ್ನು ಗುರುವಾಗುವ ಪರಿಯನ್ನು ನಾನು ಮೌನವಾಗಿ ಅನುಭವಿಸುತ್ತಿದ್ದೆ.

ಪ್ರತಿರಾತ್ರಿ ನಿನ್ನ ಕರೆಗಾಗಿ ನಾನು ಚಡಪಡಿಸುವುದನ್ನು ಗಮನಿಸಿ ನನಗೇ ವಿಚಿತ್ರ ಎನ್ನಿಸುತ್ತಿತ್ತು. ನಾನೇಕೆ ಹೀಗೆ ನಿನ್ನ ಗುಂಗಿನಲ್ಲಿ ಸಿಕ್ಕಿಹಾಕಿಕೊಂಡಿರುವೆ ಎಂದು ಕೇಳಿಕೊಳ್ಳುತ್ತಿದ್ದೆ. ನನ್ನ ಬುದ್ಧಿ, ‘ಎಚ್ಚರವಾಗಿರು ಗುರು, ಹುಡುಗೀರ ಸಂಗತಿ ಸ್ವಲ್ಪ ಕೇರ್ ಫುಲ್ಲಾಗಿರು. ಯಾಕೆ ಹಿಂಗೆ ನೀನು ಅವಳೊಂದಿಗೆ ಮಾತಾಡಲು, ಹರಟೆ ಹೊಡೆಯಲು ಕಾತರಿಸುತ್ತಿದ್ದೀಯ?’ ಅಂತ ಹೇಳಿದರೂ  ನನ್ನ ಮನಸ್ಸು ಅದಕ್ಕೆ ಕವಡೆ ಕಾಸಿನ ಬೆಲೆಯನ್ನೂ ಕೊಡದಂತೆ, ಅಸಲಿಗೆ ಪ್ರಶ್ನೆಯೇ ಕೇಳಲಿಲ್ಲವೆನ್ನುವಂತೆ ಲಹರಿಯಲ್ಲಿರುತ್ತಿತ್ತು. ನಿನ್ನ ನಂಬರು ನನ್ನ ಮೊಬೈಲಿನ ಹಣೆಯ ಮೇಲೆ ಕುಣಿಯುತ್ತಿದ್ದ ಹಾಗೆ ನಾನು ಪುಟಿಯುವ ಹೃದಯವನ್ನು ಹೊತ್ತುಕೊಂಡು ರೂಮಿನಿಂದ ಹೊರಕ್ಕೆ ಹಾರುತ್ತಿದ್ದೆ. ಟೆರೇಸಿನ ಮೇಲೇರಿ, ಅಲ್ಲಿನ ಏಕಾಂತದಲ್ಲಿ ನಿನ್ನ ಧ್ವನಿಗೆ ಕಿವಿಯಾಗುತ್ತಿದ್ದೆ. ಎಷ್ಟೇ ಹತ್ತಿರದ ಗೆಳೆಯನೇ ಆದರೂ ಎರಡು ನಿಮಿಷ ಕಳೆಯುತ್ತಿದ್ದ  ಹಾಗೆಯೇ ವಿಷಯಗಳು ಮುಗಿದು ಅಧಿಕೃತ ವಂದನಾರ್ಪಣೆಗಾಗಿ ಕಾಯುತ್ತಿರುವವನಂತೆ  ಮಾತನಾಡುತ್ತಿದ್ದ ನನಗೆ ನೀನು ಸಾಮು ಕಲಿಸುವ ಗರಡಿಯ ಪೈಲ್ವಾನನ ಹಾಗೆ ಮಾತನಾಡುವ ಕಲೆಯ ಒಂದೊಂದೇ ಮಟ್ಟುಗಳನ್ನು ಕಲಿಸುತ್ತಾ ಹೋದೆ. ನಾನು ದಿನವಿಡೀ ಓದಿದ ಪುಸ್ತಕದ ಬಗ್ಗೆ, ಎಂದೋ ನೋಡಿದ್ದ ಸಿನೆಮಾದ ಬಗ್ಗೆ, ಇಬ್ಬರಿಗೂ ಇಷ್ಟವಾದ ಲೇಖಕನ ಬಗ್ಗೆ, ಟಿವಿ ಪರ್ಸನಾಲಿಟಿಯ ಬಗ್ಗೆ, ನನಗಷ್ಟೇ ಇಷ್ಟವಾದ ಓಶೋ ಬಗ್ಗೆ – ಹೀಗೆ ಮಾತೆಂಬ ಮಹಾನದಿಗೆ ಎಷ್ಟೆಲ್ಲಾ ಪಾತ್ರಗಳು ಸೃಷ್ಟಿಯಾಗುತ್ತಿದ್ದವು!

ಎರಡು ಮೂರು ತಿಂಗಳಾಗಿತ್ತು ನಾವು ಪರಿಚಯವಾಗಿ. ಆದರೆ ನಾವು ಒಬ್ಬರನ್ನೊಬ್ಬರು ನೋಡಿಯೇ ಇರಲಿಲ್ಲ. ಮೊಬೈಲಿನಲ್ಲಿ ಪರಸ್ಪರರ ಧ್ವನಿ ಪರಿಚಿತವಾಗಿದ್ದರೆ ಆರ್ಕುಟ್ಟಿನ ಆಲ್ಬಮ್ಮಿನಲ್ಲಿ ಇಬ್ಬರ ಪುಟ್ಟ ಪುಟ್ಟ ಫೋಟೊಗಳು ಮಾತಾಡಿಕೊಂಡಿದ್ದವು. ಈ ಮನುಷ್ಯನೆಂಬ ಬುದ್ಧಿವಂತ ಮೊಬೈಲು, ಇಂಟರ್ನೆಟ್ಟುಗಳನ್ನು ಕಂಡುಹಿಡಿಯದೇ ಹೋಗಿದ್ದರೆ ನಾವಿಬ್ಬರೂ ಜಗತ್ತಿನ ಒಂದೊಂದು ಮೂಲೆಯಲ್ಲಿ ಪರಿಚಯವೇ ಇಲ್ಲದವರ ಹಾಗೆ, ಬಂಧನದ ಯಾವ ಎಳೆಯೂ ಇಲ್ಲದ ಹಾಗೆ ಜೀವಮಾನವಿಡೀ ಕಳೆದುಬಿಡುತ್ತಿದ್ದೆವಲ್ಲವಾ? ಏನಾದರಾಗಲಿ ಒಮ್ಮೆ ಮುಖಾಮುಖಿಯಾಗಿ ಭೇಟಿಯಾಗಿ ನಮ್ಮ ತಂತ್ರಜ್ಞಾನದ ‘ಸಂಬಂಧ’ವನ್ನು ವೈಯಕ್ತಿಕ ಮಟ್ಟಕ್ಕೆ ವಿಸ್ತರಿಸಬೇಕು ಅಂತ ನಾನು ತೀರ್ಮಾನಿಸುವಷ್ಟರಲ್ಲಿ ನೀನು ಕೇಳಿದ್ದೆ, ‘ಎಲ್ಲಿ ಭೇಟಿಯಾಗೋಣ?’
ಮೊದಲೇ ಮಾತಾಡಿಕೊಂಡ ಜಾಗಕ್ಕೆ ಬಂದು ಅಲ್ಲಿನ ಮುಖಗಳಲ್ಲಿ ನಿನ್ನ ಆತ್ಮೀಯತೆಯನ್ನು ಹುಡುಕುತ್ತಾ ನಿಂತಿದ್ದೆ. ನೀನು ಬರುವ ಮುಂಚಿನ ಐದಾರು ನಿಮಿಷ ನನ್ನ ತಲೆಯಲ್ಲಿ ಗೊಂದಲದ ಅಲೆಗಳು ಮೊರೆತ. ನೀನು ಬಂದು ಎದುರು ನಿಂತು ‘ಹೆಲೋ!’ ಎಂದಾಗ ನಾನು ಅಕ್ಷರಶಃ ಬೆಚ್ಚಿ ಬಿದ್ದಿದ್ದೆ. ಫೋನಿನಲ್ಲಿ, g-ಣಚಿಟಞನ ಕೋಣೆಯಲ್ಲಿ ನಾವೆಷ್ಟು ಪರಿಚಿತರು, ಆತ್ಮೀಯರಾಗಿದ್ದರೂ ಧುತ್ತೆಂದು ಎದುರು ಬಂದು ನಿಂತಾಗ ನನ್ನ ಮೈ ಮನಸ್ಸುಗಳಿಗೆ ಆ ಆತ್ಮೀಯತೆಯನ್ನು ಒಪ್ಪಿಕೊಳ್ಳಲು ಕೊಂಚ ಸಮಯ ಹಿಡಿಯಿತು. ಒಬ್ಬರ ಪಕ್ಕ ಒಬ್ಬರು ಕುಳಿತು ನಾವು ತಾಸುಗಟ್ಟಲೆ ಮಾತನಾಡುತ್ತಿದ್ದರೆ ನನಗೆ ಸುತ್ತಲಿದ್ದವರ ಕಣ್ಣುಗಳಲ್ಲಿ ನಮ್ಮೆಡೆಗೆ ಪ್ರತಿಫಲಿತವಾಗುತ್ತಿದ್ದ ಭಾವದ್ದೇ ಚಿಂತೆ. ನನ್ನೊಳಗಿನ ಪ್ರಶ್ನೆಯನ್ನು ಸುತ್ತಲ ಜಗತ್ತು ಮೈಯೆಲ್ಲಾ ಬಾಯಾಗಿ ಕೇಳಿದಂತೆ ಭಾಸವಾಗುತ್ತಿತ್ತು, ಈಕೆ ನನಗೇನಾಗಬೇಕು!

ನನ್ನ ಈ ಪ್ರಶ್ನೆ ನಿನಗೆ ತಿಳಿದುಬಿಟ್ಟಿತೇನೋ ಎಂಬಂತೆ ನೀನು ಕೆಲವೇ ದಿನಗಳಲ್ಲಿ ಒಂದು ಬಾಂಬು ಸಿಡಿಸಿದೆ. ಜಿ-ಟಾಕಿಯ ಪರದೆಯ ಮೇಲೆ ನಿನ್ನ ಅಕ್ಷರಗಳು ಮೂಡುತ್ತಿದ್ದ ಹಾಗೆ ನನ್ನ ನೆಮ್ಮದಿ ಚೂರು ಚೂರಾಗುತ್ತಿತ್ತು. ‘ನನಗೊಬ್ಬ ಬಾಯ್ ಫ್ರೆಂಡ್ ಇದ್ದಾನೆ. ಕಳೆದ ಆರು ತಿಂಗಳಿಂದ ನಮ್ಮ ಅಫೇರ್ ನಡೆಯುತ್ತಿದೆ’. ಒಂದು ಕ್ಷಣ ನಾನು ದಿಗ್ಮೂಢನಾಗಿ ಕುಳಿತಿದ್ದೆ. ನೀನು ಟೈಪಿಸಿ ಕಳುಹಿಸಿದ ಈ ಸಾಲುಗಳೊಳಗೆ ಯಾವ ಭಾವವಿರಬಹುದು ಎಂದು ಯೋಚಿಸಿ ಮನಸ್ಸು ವಿಹ್ವಲಗೊಂಡಿತು. ನಾನು ನಿನ್ನೊಂದಿಗಿನ ಸಂಬಂಧದಲ್ಲಿ ಎಲ್ಲೆ ಮೀರುತ್ತಿದ್ದೇನೆ ಎಂಬುದನ್ನು ನೆನಪಿಸಲು ಹೀಗೆ ಹೇಳಿದ್ದೆಯಾ, ‘ನೋಡು, ಇದು ವಾಸ್ತವ. ನೀನು ಸುಮ್ಮನೆ ಆಶಾಗೋಪುರವನ್ನು ಕಟ್ಟಿಕೊಳ್ಳಬೇಡ’ ಎಂಬ ಎಚ್ಚರಿಕೆ ಕೊಟ್ಟೆಯಾ, ಇಲ್ಲ, ಸಹಜವಾಗಿ ನಿನ್ನ ಇತರ ವೈಯಕ್ತಿಕ ರಹಸ್ಯಗಳನ್ನು ಹೇಳಿಕೊಳ್ಳುವ ಸಲುಗೆಯಲ್ಲಿ ಇದನ್ನು ಹೇಳಿದ್ದೆಯಾ? ಗೊತ್ತಾಗಲಿಲ್ಲ. ನಾನು ನಿನ್ನೆದುರು ಚೀಪ್ ಆದ ಅನುಭವವಾಯ್ತು. ‘ಇದ್ದರೇನಂತೆ, ನನಗೂ ಒಬ್ಬಳು ಗರ್ಲ್ ಫ್ರೆಂಡ್ ಇದ್ದಾಳೆ. ಏನೀಗ’ ಎಂದು ಮುಯ್ಯಿ ತೀರಿಸಿಕೊಳ್ಳುವ ಮನಸ್ಸಾಯಿತು. ಶುಭ್ರವಾದ ನೀರಿನ ಪಾತ್ರೆಯಲ್ಲಿ ಬಿದ್ದ ಒಂದು ಹನಿ ಇಂಕು ಪಾತ್ರೆಯನ್ನೆಲ್ಲಾ ವಿಷಾನಿಲದ ಹಾಗೆ ಆವರಿಸುವಂತೆ ನಿನ್ನ ಮಾತಿನೊಳಗಿನ ಕಹಿ ನನ್ನ ಮನಸ್ಸನ್ನು ಆವರಿಸಿತು. ನಿನಗೆ ನಾನು ಏನು ಉತ್ತರಿಸಿದೆನೋ ನೆನಪಿಲ್ಲ. ಆದರೆ ಆ ಸಂಜೆಯೆಲ್ಲಾ ನಾನು ಮೋಸ ಹೋದವನಂತೆ, ಬೆನ್ನಿಗೆ ಚೂರಿ ಹಾಕಿಸಿಕೊಂಡವನಂತೆ ಹಿಂಸೆ ಅನುಭವಿಸಿದ್ದೆ. ರಾತ್ರಿಯಿಡೀ ಅವ್ಯಕ್ತವಾದ ಬೇನಯಲ್ಲಿ ನರಳಾಡಿದ್ದೆ. ‘ನಾನು ನಿನ್ನನ್ನು ಪ್ರೀತಿಸಲು ಶುರು ಮಾಡಿಬಿಟ್ಟೆನಾ?’ ಎಂದು ಕೇಳಿಕೊಳ್ಳಲೂ ಸಹ ಸಮಯವಿಲ್ಲದ ಹಾಗೆ ನೋವು ನನ್ನನ್ನು ತಿನ್ನುತ್ತಿತ್ತು.

ಬೆಳಗಾಯಿತೆಂದು ಸೂರ್ಯ ಕಿಟಕಿಯ ಮುಖಾಂತರ ವರ್ತಮಾನ ಕೊಟ್ಟಾಗ ಕಣ್ಣು ಬಿಟ್ಟೆ. ರಾತ್ರಿಯಿಡೀ ನಿದ್ದೆ ಮಾಡದಿದ್ದುದರಿಂದಲೋ ಏನೋ ಕಣ್ಣುಗಳು ಕೆಂಡದಂತೆ ಕೆಂಪಾಗಿದ್ದವು.ನಿದ್ದೆ ಬಾರದೆ ಹಾಸಿಗೆಯಲ್ಲಿ ಹೊರಳಾಡಿ ಕೂದಲು ಕೆದರಿ ಹೋಗಿತ್ತು. ನನ್ನ ಅವತಾರವನ್ನು ಕಂಡ ನನ್ನ ರೂಂ ಮೇಟು ‘ಏನೋ, ಹುಶಾರಿಲ್ಲವಾ?’ ಎಂದು ವಿಚಾರಿಸಿದ. ನಾನು ಭಗ್ನ ಪ್ರೇಮಿಯ ಹಾಗೆ, ಶಾಪಗ್ರಸ್ತ ಗಂಧರ್ವನ ಹಾಗೆ ಬೆಳಗನ್ನು ಕಳೆದೆ. ಆ ದರಿದ್ರ ಮೂಡಿನಲ್ಲಿ ಕಾಲೇಜಿಗೂ ಹೋಗಲಾಗಲಿಲ್ಲ. ಸಂಜೆಯವರೆಗೆ ಯಾವುದೋ ಆಲಸ್ಯ ಮೈಯನ್ನೆಲ್ಲಾ ಆವರಿಸಿತ್ತು. ಸಂಜೆಯಾಗುತ್ತಿದ್ದ ಹಾಗೆ ನನ್ನ ಮೊಬೈಲಿನ ಮೆಸೇಜು ಡಬ್ಬಿ ತೆಗೆದು ಕುಟ್ಟಿ ಕಳಿಸಿದ್ದು ಒಂದೇ ಸಾಲು, ‘ಐ ಲವ್ ಯೂ’. ತಲೆಯ ಮೇಲಿನ ದೊಡ್ಡ ಹೊರೆ ಇಳಿಸಿದಷ್ಟು ನಿರಾಳ. ಮರುಕ್ಷಣದಲ್ಲೇ ನಿನ್ನ ಸಂದೇಶ ಬಂದಿತ್ತು, ‘ಏನು ತಮಾಶೆ ಮಾಡ್ತಿದ್ದೀಯಾ?’ ಅಂತ ಕೇಳಿದ್ದೆ. ನಾನು ಉತ್ತರಿಸಲಿಲ್ಲ, ‘ತಲೆ ಕೆಟ್ಟಿದೆಯಾ…’ ‘…’ ‘ಇದು ಸರಿಯಲ್ಲ, ನಾನು ಯಾವತ್ತೂ ನಿನ್ನ ಹಾಗೆ ನೋಡಿಲ್ಲ..’ ಉತ್ತರಿಸುವ ಗೋಜಿಗೆ ಹೋಗಲಿಲ್ಲ.
ಮೊಬೈಲು ಮೊರೆಯತೊಡಗಿತು. ಆಕೆಯದೇ ಕರೆ. ನಾಲ್ಕು ಬಾರಿ ರಿಂಗಣಿಸಿದ ಮೇಲೆ ಎತ್ತಿಕೊಂಡೆ.

‘ಏನಾಗಿದೆ ನಿನಗೆ? ಯಾಕೆ ಹಿಂಗೆ ಮೆಸೇಜ್ ಮಾಡಿದೆ?’

‘ನಾನು ನಿನ್ನ ಪ್ರೀತಿಸ್ತಿದ್ದೀನಿ’

‘ಯೂ ಈಡಿಯಟ್! ನಾನು ನಿನ್ನ ಫ್ರೆಂಡ್ ಆಗಿ ಒಪ್ಪಿಕೊಂಡಿದ್ದೀನಿ. ಲವರ್ ಅಂತ ಬೇರೊಬ್ಬನನ್ನು ಒಪ್ಪಿಕೊಂಡಿದ್ದೀನಿ…’

‘…’

‘ನಾವು ಫ್ರೆಂಡ್ಸಾಗಿ ಇರೋದಾದರೆ ಸರಿ, ಇಲ್ಲಾಂದ್ರೆ ನಮ್ಮ ಪರಿಚಯವನ್ನ ಇಲ್ಲಿಗೇ ಕೊನೆ ಮಾಡಿಬಿಡೋಣ. ಛೇ! ನೀನು ಈ ರೀತಿ ವರ್ತಿಸುತ್ತೀಯ ಅಂತ ನಾನು ಅಂದುಕೊಂಡಿರಲಿಲ್ಲ’

ಫೋನು ಕಟ್ ಮಾಡಿದೆ. ಎದೆಯಲ್ಲಿ ಕಾಳ್ಗಿಚ್ಚಿನ ಧಗೆ. ಮುಖದ ತುಂಬಾ ಅಳು ಒತ್ತರಿಸಿಬಂದಂತಾಗಿ ಮುಖ ಮುಚ್ಚಿಕೊಂಡು ಕುಳಿತೆ. ನಾಲ್ಕು ಹನಿ ಕಣ್ಣಿರು ನನ್ನ ಅನುಮತಿಯಿಲ್ಲದೆ ಹರಿದುಹೋದವು. ಮೊಬೈಲಿನ ಮೆಸೇಜು ಡಬ್ಬಿ ಬಿಚ್ಚಿ ನಿನ್ನ ಸಂದೇಶಗಳೆಲ್ಲವನ್ನೂ ನಾಶ ಮಾಡಿದೆ. ನಿನ್ನ ಮೊಬೈಲ್ ನಂಬರನ್ನೇ ಅಳಿಸಿ ಹಾಕಿದೆ. ನಿನ್ನ ನೆನಪನ್ನೇ ನಾಶ ಮಾಡುತ್ತಿದ್ದೇನೆಂಬ ಭ್ರಮೆಯಲ್ಲಿ. ಇನ್ನೆಂದೂ ನಿನ್ನ ಮಾತನಾಡಿಸಬಾರದು ಅಂತ ತೀರ್ಮಾನಿಸಿದೆ. ಈ ಪ್ರೀತಿ ಪ್ರೇಮದ ಗುಂಗಿಗೆ ಬಿದ್ದು ನನ್ನ ಬದುಕಿನ ಗುರಿಯಿಂದ ವಿಮುಖನಾದ ತಪ್ಪಿತಸ್ಥ ಭಾವ ಕವಿಯತೊಡಗಿತು. ಮನಸಾರೆ ಅತ್ತು ಸಂಜೆಗೇ ಮಲಗಿಬಿಟ್ಟೆ. ಕನಸಲ್ಲಿ ನೀನು ಕಾಣಲಿಲ್ಲ.

***

ಇದೆಲ್ಲಾ ಆಗಿ ನಾಲ್ಕು ವರ್ಷಗಳೇ ಕಳೆದಿವೆ. ಈಗ ಇವನ್ನೆಲ್ಲಾ ನೆನಪಿಸಿಕೊಂಡರೆ ಮಜವೆನಿಸುತ್ತದೆ. ಎಂದಿಗೂ ಒಬ್ಬ ಹುಡುಗಿಯನ್ನು ಮಾತನಾಡಿಸಿ ಅಭ್ಯಾಸವಿಲ್ಲದ ನಾನು ನಿನ್ನ ಗೆಳೆತನ, ನಿನ್ನ ಆತ್ಮೀಯತೆಯನ್ನು ಅದರದೇ ಆದ ಭಾವದಲ್ಲಿ ಸ್ವೀಕರಿಸುವಲ್ಲಿ ಸೋತಿದ್ದೆ. ಚಿಕ್ಕ ವಯಸ್ಸಿನಲ್ಲೇ ನನಗೆ ಗೆಳತಿಯರಿದ್ದಿದ್ದರೆ ಇಂತ ಲೋಪ ಆಗುತ್ತಿರಲಿಲ್ಲವಾ ಗೊತ್ತಿಲ್ಲ. ಸಂಬಂಧಗಳನ್ನು ಅರ್ಥ ಮಾಡಿಕೊಳ್ಳಲು ಬೇಕಿರುವುದು ವಿವೇಕವಾ, ಅನುಭವವಾ, ಬುದ್ಧಿವಂತಿಕೆಯಾ? ಗೆಳೆತನ, ಪ್ರೇಮದ ನಡುವಿನೆ ಗಡಿಯನ್ನು ಮೀರದಿರುವ ವಿವೇಕವಿಲ್ಲದೆ ಪ್ರೀತಿಯಲ್ಲಿ ಬಿದ್ದರೆ ಗೆಳೆತನವನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂಬುದು ನನಗೇಕೆ ತಿಳಿಯಲಿಲ್ಲ.

ಇಷ್ಟು ದಿನಗಳ ನಂತರ ಈಗೇಕೆ ಪತ್ರ ಬರೆಯುತ್ತಿರುವೆ ಅಂತ ನಿನಗೆ ಆಶ್ಚರ್ಯವಾಗಬಹುದು. ತುಂಬಾ ಹಿಂದೆಯೇ ನಿನ್ನ ಬಾಯ್ ಫ್ರೆಂಡ್ ಬೇರೊಬ್ಬಳನ್ನು ಮದುವೆಯಾದ ಅನ್ನೋದು ತಿಳಿಯಿತು. ನನಗೆ ನಾಲ್ಕೈದು ಮಂದಿ ಗರ್ಲ್ ಫ್ರೆಂಡ್‌ಗಳ ಅನುಭವವಾಗಿದೆ. ಪ್ರೀತಿಸಲು ಎಷ್ಟಾದರೂ ಹುಡುಗಿಯರು ಸಿಕ್ಕಾರು ಆದರೆ ಗುರುವಿನಂಥ, ತಾಯಿಯಂಥ, ಹಿರಿಯಕ್ಕನಂತಹ ನಿನ್ನಂತಹ ಗೆಳತಿ ನನಗ್ಯಾರೂ ಸಿಕ್ಕುವುದಿಲ್ಲ. ಆ ದಿನಗಳಲ್ಲಿ ನಾನು ನಿನ್ನಲ್ಲಿ ಕಾಣುತ್ತಿದ್ದ ಆತ್ಮೀಯತೆ ನೀನು ಕೊಡುತ್ತಿದ್ದ ರಿಲೀಫ್, ಸಮಾಧಾನ ನನಗೆ ಜಗತ್ತಿನಲ್ಲಿ ಬೇರಾರ ಬಳಿಯೂ ಸಿಕ್ಕದು. ನನ್ನ ಕೋರಿಕೆಯನ್ನು ಮನ್ನಿಸಿ ನನ್ನ ಪುನಃ ಗೆಳೆಯನಾಗಿ ಸ್ವೀಕರಿಸುವೆಯಾ? ನನ್ನನ್ನು ಶಾಪ ವಿಮುಕ್ತನಾಗಿಸುವೆಯಾ?

ಇಂತಿ ನಿನ್ನ,
ಶಾಪಗ್ರಸ್ತ ಗಂಧರ್ವ

inti ninna preetiya copy.jpg

ಗುರುವಿನಂಥ ಗೆಳತಿಯೇ,

‘ಹುಡುಗಿಯರ ಜತೆ ಮಾತಾಡುವುದು ಅಂದರೇನೆ ನನಗೆ ಅಲರ್ಜಿ’, ಒಂದೇ ಮಾತಲ್ಲಿ ಹೇಳಿ ಬಿಟ್ಟಿದ್ದೆ ನಾನು. ನೀನು ಜೋರಾಗಿ ನಗುತ್ತಿದ್ದದ್ದು ನನ್ನ ರೂಂ ಮೇಟ್‌ಗೂ ಕೇಳಿತ್ತು.

‘ಹಾಗಾದರೆ ನನ್ನ ಜೊತೆಗೆ ಮಾತಾಡ್ತಿದ್ದೀಯಲ್ಲ?’ ಅದು ಮಾತೋ, ನಿನ್ನ ನಗುವೇ ಹೊರಡಿಸಿದ ಅರ್ಥವೋ ತಿಳಿಯದೆ ನಾನು ಅರೆಕ್ಷಣ ಮೌನವಾಗಿದ್ದೆ.

‘ಹುಚ್ಚಪ್ಪ, ಹುಡುಗೀರೇನು ಬೇರೆ ಗ್ರಹದಿಂದ ಇಳಿದು ಬಂದವರಲ್ಲ. ಅವರೂ ನಿನ್ನ ಹಾಗೇ ಮನುಷ್ಯರು. ದೇವರು ಎಲ್ಲಾ ಗುಣಗಳು ಇರುವ ಒಂದೇ ಜಾತಿಯ ಮನುಷ್ಯರನ್ನು ಸೃಷ್ಠಿ ಮಾಡಿಬಿಟ್ಟರೆ ಅವರಿಗೆ ಒಬ್ಬರಲ್ಲೊಬ್ಬರಿಗೆ ಆಸಕ್ತಿಯೇ ಹುಟ್ಟುವುದಿಲ್ಲ ಅನ್ನೋ ಕಾರಣಕ್ಕೆ ಗಂಡು ಹೆಣ್ಣನ್ನ ಮಾಡಿದ. ಹೆಣ್ಣಿಗೆ ಗಂಡು ಯಾವಾಗಲೂ ಅಚ್ಚರಿಗಳ ಮೂಟೆಯೇ. ಹುಡುಗನಿಗೂ ಹಾಗೇ ಹುಡುಗಿ ಜಗತ್ತಿನ ವಿಸ್ಮಯಗಳ ಸಂತೆ. ಹುಡುಗಿಯರ ಜೊತೆ ಬೆರೆತು ನೋಡು ನಿನ್ನೊಳಗಿನ ದುಗುಡಗಳು, ನಿನಗೇ ಗೊತ್ತಿಲ್ಲದೆ ಮನಸ್ಸು ಹಾಕಿಟ್ಟುಕೊಂಡ ಕಗ್ಗಂಟುಗಳು ಸಡಿಲವಾಗುತ್ತಾ ಹೋಗುತ್ತವೆ….’ ನೀನು ಮಾತನಾಡುತ್ತಲೇ ಇದ್ದೆ. ನನ್ನೊಳಗೆ ಆ ನಿನ್ನ ದನಿಯ ಏರಿಳಿತಗಳು ನವಿರಾದ ಕಂಪನಗಳನ್ನು ಉಂಟು ಮಾಡುತ್ತಿದ್ದವು. ನೀನು ಗೆಳತಿಯಾಗಿ, ಗುರುವಾಗಿ, ಫಿಲಾಸಫರ್ ಆಗಿ ನನ್ನೆದುರು ನಿಲ್ಲುತ್ತಿದ್ದೆ.

ಅದೊಂದು ಇಳಿಸಂಜೆಯಲ್ಲಿ ತೂಕಡಿಸುತ್ತಾ ಬಿದ್ದಿದ್ದ g-talk ನ ಪರದೆಯಲ್ಲಿ ಅಚಾನಕ್ಕಾಗಿ ನಿನ್ನ ಹೆಸರು ಕಂಡಿತ್ತು. ನೀನಾಗೆ ನಿನ್ನ ಪರಿಚಯಿಸಿಕೊಂಡೆ. ನಿನ್ನ ಹೆಸರು ಹೇಳಿದೆ. ನನ್ನ ಬಗ್ಗೆ ಕೇಳುತ್ತಾ ಹೋದೆ. ನಾನು ಎಲ್ಲಾ ಉತ್ತರ ಗೊತ್ತಿರುವ ಜಾಣ ವಿದ್ಯಾರ್ಥಿಯ ಹಾಗೆ ನಿನ್ನ ಒಂದೊಂದೇ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋದೆ. ನೀನು ನನ್ನ ಬಗ್ಗೆ ಎಲ್ಲಾ ತಿಳಿದುಕೊಳ್ಳಲೇ ಬೇಕು ಎಂಬ ಹಸಿವಿನಿಂದ ಕೇಳುತ್ತಿದ್ದರೆ ನಾನು ಮಾತು ಬರುವ ಮೂಕನ ಹಾಗೆ ಉತ್ತರಿಸುತ್ತಿದ್ದೆ. ಸುಮಾರು ಅರ್ಧ ಗಂಟೆ ಕಳೆದ ಮೇಲೆ, ‘ನನ್ನ ಬಗ್ಗೆ ಕೇಳೋಲ್ಲವೇನೊ’ ಎಂದು ನೀನು ಕೊಂಕು ತೆಗೆದಾಗಲೇ ನಾನು ಎಚ್ಚರನಾದದ್ದು.

ಪ್ರತಿದಿನ ಸಂಜೆಯಾಗುತ್ತಿದ್ದ ಹಾಗೆ ನನ್ನ ಮನಸ್ಸು ಅರಳಿ ನಿಲ್ಲುತ್ತಿತ್ತು. ಕಂಪ್ಯೂಟರಿನ ಮುಂದೆ ಪ್ರತಿಷ್ಠಾಪಿತನಾಗಿ ನಿನ್ನ ಬರುವಿಕೆಗಾಗಿ ಕಾಯುತ್ತಿದ್ದರೆ ನನ್ನೆದೆಯಲ್ಲಿ ನೂರು ಕುದುರೆಗಳ ರೇಸು. ಪರದೆಯ ಮೇಲೆ ‘hi’ ಎಂಬ ನಿನ್ನ ಎರಡು ಅಕ್ಷರದ ಸಂಬೋಧನೆ ಕಾಣುತ್ತಿದ್ದ ಹಾಗೆ ಟ್ರಾನ್ಸಿಸ್‌ಟರು, ಮೈಕ್ರೋ ಕಂಟ್ರೋಲರು ಎಂದು ದಿನವಿಡೀ ಜಪಿಸಿ ದಣಿದ ಮೈ ಮನಗಳು ಆಳವಾದ ನಿದ್ದೆ ಮಾಡಿ ಎದ್ದ ಮಗುವಿನ ಹಾಗಾಗಿ ಬಿಡುತ್ತಿದ್ದವು. ಕೀಬೋರ್ಡಿನೊಂದಿಗೆ ಸಖ್ಯ ಸಂಪಾದಿಸಿಕೊಂಡಿದ್ದ ಕೈ ಬೆರಳುಗಳು ಸರ ಸರನೆ ಓಡಾಡುತ್ತಾ ಚಾಟು ಬಾಕ್ಸಿನ ಪುಟ್ಟ ಸ್ಕ್ರೀನಿನಲ್ಲಿ ಅಕ್ಷರಗಳನ್ನು ಮೂಡಿಸುತ್ತಿದ್ದರೆ ನಮ್ಮಿಬ್ಬರ ಮಧ್ಯೆ ನೂರಾರು ಭಾವನೆಗಳು ವಿನಿಮಯವಾಗುತ್ತಿದ್ದವು. ನನ್ನ ಬ್ಲಾಗಿನಲ್ಲಿ ಹಾಕಿದ ಕವಿತೆ ನಿನಗೆ ಇಷ್ಟವಾಗಿತ್ತು. ಅದನ್ನು ನನಗೆ ತಿಳಿಸಬೇಕು ಅಂತ ನೀನು ಮೊದಲು ಚಾಟಿಸಿದೆ. ಕವಿತೆಯ ಬಗೆಗಿನ ಮಾತು ಮೆಲ್ಲಗೆ ನಮ್ಮ ನಮ್ಮ ಬದುಕಿನ ಕಥೆಗೆ ಹೊರಳಿಕೊಂಡಿತು. ನಾನು ನನ್ನ ಬರವಣಿಗೆಯ ಪ್ರವರವನ್ನು ನಿನ್ನೆದುರು ಕೊಚ್ಚಿಕೊಳ್ಳುತ್ತಿದ್ದರೆ ನೀನು ಮೈತುಂಬಾ ಬೆರಗಾಗಿ ನನ್ನನ್ನು ಆಲಿಸುತ್ತಿದ್ದೆ. ಜಲಾಶಯದ ಕ್ರೆಸ್ಟ್ ಗೇಟ್ ತೆಗೆದಾಗ ಧುಮ್ಮಿಕ್ಕುವ ಜಲಧಾರೆಯ ಹಾಗೆ ನಾನು ನನ್ನ ಬಗ್ಗೆ ಕುಟ್ಟುತ್ತಲೇ ಇದ್ದೆ. ನನ್ನ ಗೋಳು ಕೇಳುವ ಒಂದು ಜೀವಕ್ಕಾಗಿ ಜೀವಮಾನವಿಡೀ ಕಾಯುತ್ತಿದ್ದೆನೇನೋ ಎಂಬಂತೆ ನಾನು ಒದರುತ್ತಲೇ ಹೋದೆ. ನೀನು ಕೊಂಚವೂ ಬೇಸರಿಸದೆ ನನ್ನ ಮಾತಿಗೆ ಕಿವಿಯಾದೆ. ನಾನು ಎಲ್ಲವನ್ನೂ ಹೊರಹಾಕಿ ದಣಿದು ಕುಳಿತಾಗ ನೀನು ಕಳುಹಿಸಿದ ಸ್ಮೈಲಿ ಚಾಟು ಬಾಕ್ಸಿನಲ್ಲಿ ಮಿನುಗುತ್ತಿತ್ತು!

ಚಾಟು ಬಾಕ್ಸಿನ ಕಿಟಕಿಯ ಮೂಲಕ ಸಾವಿರಾರು ಅಕ್ಷರಗಳು ನಮ್ಮಿಬ್ಬರ ನಡುವೆ ಹರಿದಾಡಿದ ನಂತರ ಮೊಬೈಲಿನ ಇನ್ ಬಾಕ್ಸಿಗೆ ಜೀವ ಬಂದಿತ್ತು. ತಾಸೊಂದರಲ್ಲಿ ನನ್ನ ಮೊಬೈಲಿನ ಮೆಸೇಜ್ ಬುಟ್ಟಿಗೆ ಬಂದು ಬೀಳುವ ಹತ್ತಾರು ಮೆಸೇಜುಗಳಲ್ಲಿ ನಿನ್ನ ಹೆಸರನ್ನೇ ಹುಡುಕುತ್ತಿದ್ದೆ. ನಿನ್ನ ಮೆಸೇಜುಗಳನ್ನು ಅಳಿಸಿಹಾಕಿಬಿಟ್ಟರೆ ನಿನಗೆಲ್ಲಿ ನೋವಾಗುವುದೋ ಎಂದು ಒಂದನ್ನೂ ಡಿಲಿಟ್ ಮಾಡದ ಹಾಗೆ ಉಳಿಸಿಟ್ಟುಕೊಳ್ಳುತ್ತಿದ್ದೆ. ನನ್ನ ಮೊಬೈಲಿನ ಪುಟ್ಟ ಮೆದುಳು ಜಾಗ ಸಾಲದು ಎಂದು ಗೋಳಾಡಿದಾಗೆಲ್ಲಾ ನನ್ನ ಗೆಳೆಯರು ಕಳುಹಿಸಿರುತ್ತಿದ್ದ ಬಹುಮುಖ್ಯವಾದ ಮೆಸೇಜುಗಳನ್ನೆಲ್ಲಾ ನಿರ್ದಾಕ್ಷಿಣ್ಯವಾಗಿ ಕಿತ್ತು ಬಿಸಾಕಿ ನಿನ್ನ ಓಲೆಗೆ ಜಾಗ ಮಾಡಿಕೊಟ್ಟೆ, ಪ್ರತಿಸಂಜೆ ನಿನ್ನೊಂದಿಗೆ ಚಾಟಿಸುವುದಕ್ಕಾಗಿ ಜಿಮ್‌ಗೆ ಹೋಗುವುದನ್ನು ಮರೆತ ಹಾಗೆ. ಚಾಟು ಬಾಕ್ಸು, ಮೇಸೇಜು ಬಾಕ್ಸಿನ ಅಕ್ಷರಗಳಿಗೆ ನಮ್ಮ ಕುತೂಹಲಗಳನ್ನು ತಣಿಸುವ ಶಕ್ತಿಯಿಲ್ಲ ಎಂದು ನಮಗೆ ಅರಿವಾಗುತ್ತಿದ್ದಂತೆಯೇ ನಮ್ಮಿಬ್ಬರ ಮೊಬೈಲುಗಳು ಸಖ್ಯಕ್ಕಾಗಿ ಕಾತರಿಸಿದವು. ಆಗಲೂ ಮೊದಲು ಫೋನ್ ಮಾಡಿದವಳು ನೀನೇ. ನನ್ನ ಧ್ವನಿಯಲ್ಲಿನ ಗಾಬರಿಯನ್ನು ನೀನು ಆಗಲೇ ಗುರುತು ಹಿಡಿದುಬಿಟ್ಟಿದ್ದೆ. ‘ಯಾಕೆ ವಾಯ್ಸು ನಡುಗುತ್ತಿದೆ?’ ಎಂದು ನೇರವಾಗಿ ಕೇಳಿದ್ದೆ ನೀನು. ‘ಇಲ್ಲಿ ತುಂಬಾ ಥಂಡಿ’ ಎಂದಿದ್ದೆ ನಾನು, ಹಣೆಯ ಮೇಲೆ ಬೆವರ ಸಾಲು. ನೀನು ಮೆಲ್ಲಗೆ ನಕ್ಕಿದ್ದೆ. ಮೊಗ್ಗು ಅರಳಿದ ಹಾಗೆ ಮಾತು ಇಬ್ಬರ ಮೊಬೈಲುಗಳಲ್ಲಿ ಅರಳುತ್ತಾ ಹೋಯಿತು.

‘ಚಿಕ್ಕಂದಿನಿಂದಲೂ ನಾನು ವಿಪರೀತ ಸಂಕೋಚದಲ್ಲಿಯೇ ಬೆಳೆದವನು. ತೀರಾ ಒಳಮುಚ್ಚುಗ ಮನಸ್ಸಿನವನು. ಓರಗೆಯ ಹುಡುಗರೊಂದಿಗೇ ಮಾತನಾಡಲು ಹಿಂಜರಿಯುತ್ತಿದ್ದೆ. ಇನ್ನು ಹುಡುಗಿಯರನ್ನು ಮಾತನಾಡಿಸುವುದು ದೂರದ ಮಾತಾಗಿತ್ತು. ಇದಕ್ಕೆ ಸರಿಯಾಗಿ ನಾನು ನನ್ನ ಹೈಸ್ಕೂಲು, ಕಾಲೇಜುಗಳನ್ನು ಓದಿದ್ದು ಹುಡುಗರ ಶಾಲೆಯಲ್ಲಿ. ಹೀಗಾಗಿ ಈಗಲೂ ಒಬ್ಬ ಹುಡುಗಿಯನ್ನು ಮಾತನಾಡಿಸುವುದು ಎಂದರೆ ಜೀವ ಬಾಯಿಗೆ ಬಂದ ಹಾಗಾಗುತ್ತದ್ದೆ.’ ಎಂದು ನಾನು ಹೇಳಿಕೊಳ್ಳುತ್ತಿರುವಾಗ ನಿನ್ನ ಜೊತೆ ಮಾತಾಡಲು ನನಗೇಕೆ ಸಂಕೋಚವಾಗುತ್ತಿಲ್ಲ ಎಂದು ವಿಸ್ಮಯಗೊಳ್ಳುತ್ತಿದ್ದೆ.

‘ನೀನು ನಿನ್ನ ಸುತ್ತಲೇ ಕೋಟೆ ಕಟ್ಟಿಕೊಂಡು ಒಳಗೆ ಕೂತಿರುವೆ. ನೀನಾಗಿ ಯಾರನ್ನೂ ಹತ್ತಿರ ಸೇರಿಸುತ್ತಿಲ್ಲ. ನಿನ್ನ ಸಾಮೀಪ್ಯ ಬಳಸಿ ಹತ್ತಿರ ಬಂದವರನ್ನೂ ನೀನು ಅನುಮಾನದಿಂದಲೇ ನೋಡುವೆ. ನಿನ್ನೊಂದಿಗೆ ಸಂಪರ್ಕ ಸಾಧಿಸಲು ಯಾರಾದರೂ ನಿನ್ನ ಸುತ್ತಲಿನ ಕೋಟೆಯನ್ನು ಕೆಡವಲು ಪ್ರಯತ್ನಿಸಿದರೆ ನಿನಗವರು ಶತ್ರುವಿನ ಹಾಗೆ ಕಾಣುತ್ತಾರೆ. ಅಲ್ವಾ?’ ನಿನ್ನ ಧ್ವನಿಗೆ ವಿಲಕ್ಷಣವಾದ ಮಾದಕತೆ ಬೆರೆತಿತ್ತು. ನಿನ್ನ ಮಾತುಗಳಲ್ಲಿನ ಶೀತಲತೆ ಬಿಸಿಯಾಗುತ್ತಿದ್ದ ನನ್ನ ಮೊಬೈಲಿಗೂ ತಂಪನ್ನೆರೆಯುವಂತಿತ್ತು.

(ಮುಂದುವರೆಯುವುದು)

ಕಳೆದ ಸಂಚಿಕೆಯಿಂದ ಮುಂದುವರೆದದ್ದು…

ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ. ನಿನ್ನ ನನ್ನ ಸಂಬಂಧದ ಹಸಿ ಮಣ್ಣಿನಲ್ಲಿ ಚಿಗುರೊಡೆದಿದ್ದ ಪರಿಚಿತತೆ ಎಂಬ ಹುಲ್ಲಿನ ಎಸಳಿಗೆ ಹೆಸರನ್ನಿಟ್ಟುಬಿಡುವ ನಿನ್ನ ಉದ್ವೇಗ ಕಂಡು ನನಗೆ ನಿಜಕ್ಕೂ ದಿಗಿಲಾಗಿತ್ತು. ನಿನ್ನೊಂದಿಗೆ ನಾನು ಲ್ಯಾಬಿನಲ್ಲಿ, ಲಂಚ್ ಟೈಮಿನ ಹರಟೆಯಲ್ಲಿ, ಅಪರೂಪದ ಕಂಬೈನ್ಡ್ ಸ್ಟಡಿಯಲ್ಲಿ ಕಳೆಯುತ್ತಿದ್ದ ಸಮಯದಲ್ಲಿ ನಮ್ಮಿಬ್ಬರ ಮಧ್ಯೆ ಆವರಿಸಿಕೊಳ್ಳುತ್ತಿದ್ದ ಆಹ್ಲಾದವಿದೆಯಲ್ಲಾ, ಅದನ್ನು ನಾನು ಇಂದಿಗೂ ಅನುಭವಿಸಲು ಹಪಹಪಿಸುತ್ತೇನೆ. ಆ ದಿನಗಳಲ್ಲಿ ನಿನ್ನ ಜೊತೆಗೆ ಇರುವಾಗ ಯಾರೇನಂದುಕೊಳ್ಳುವರೋ ಎನ್ನುವ ಭಯವಿತ್ತೇ ವಿನಃ ನೀನು ನನ್ನ ಬಗ್ಗೆ ಏನಂದುಕೊಳ್ಳುವಿಯೋ ಎಂಬ ಚಿಂತೆಯಿರಲಿಲ್ಲ. ನಿನ್ನಲ್ಲಿ ನನ್ನ ಗುಟ್ಟುಗಳನ್ನು ಹೇಳಿಕೊಳ್ಳಲು, ಬೇರೆ ಹುಡುಗರ ಬಗ್ಗೆ ಕಮೆಂಟು ಮಾಡಲು ನನಗ್ಯಾವ ಹಿಂಜರಿಕೆಯೂ ಕಾಣುತ್ತಿರಲಿಲ್ಲ. ನೆನಪಿದೆಯಾ, ಅವತ್ತು ರಾಜೇಶ್ ನನ್ನ ಕಂಡರೆ ಹ್ಯಾಗ್ಹ್ಯಾಗೋ ಆಡುತ್ತಿದ್ದಾನೆ ಅಂತ ನಿನ್ನ ಹತ್ತಿರ ಹೇಳಿದ್ದೆ. ನೀನು ತುಟಿಯ ಕೊನೆಯಲ್ಲಿ ಒಂದು ವಿಕಟ ನಗೆ ನಕ್ಕು ಈ ಹುಡುಗಿಯರು ಕಾಲೇಜಿಗೆ ಬಂದರೆ ಕೊಂಬು ಬಂದು ಬಿಡುತ್ತೆ. ನೋಡೋಕೆ ಸ್ವಲ್ಪ ಸುಂದರವಾಗಿದ್ದರಂತೂ ಮುಗಿದೇ ಹೋಯ್ತು, ನಿಮಗೆ ಕಣ್ಣಿಗೆ ಕಾಣುವ ಹುಡುಗರೆಲ್ಲಾ ನಿಮ್ಮೆದುರು ಪ್ರೇಮಭಿಕ್ಷೆ ಬೇಡಲು ನಿಂತಿರುವ ಭಿಕಾರಿಗಳ ಹಾಗೆ ಕಾಣುತ್ತಾರೆ ಎಂದಿದ್ದೆ. ಆ ಕ್ಷಣದಲ್ಲಿ ನನಗೆ ನಿನ್ನ ಮೇಲೆ ವಿಪರೀತವಾದ ಸಿಟ್ಟು ಬಂದಿತ್ತು. ನಾನು ನಿನ್ನಲ್ಲಿ ಬಯಸಿದ್ದು ‘ನಾನಿದ್ದೇನೆ ಬಿಡು’ ಎನ್ನುವಂಥ ಅಭಯವನ್ನ, ಉಡಾಫೆಯ ಉಪದೇಶವನ್ನಲ್ಲ. ಆದರೆ ಈಗ ಇಷ್ಟೆಲ್ಲಾ ಆದ ನಂತರ ಕುಳಿತು ಯೋಚಿಸಿದರೆ ನಮ್ಮ ಆ ಹೆಸರಿಲ್ಲದ ಸಂಬಂಧದಲ್ಲಿದ್ದ ಉಡಾಫೆ, ಸ್ವಾತಂತ್ರ್ಯ ಹಾಗೂ ಜವಾಬು ನೀಡುವ ಆವಶ್ಯಕತೆಯಿಲ್ಲದ ನಂಬುಗೆಯೇ ಚೆನ್ನಾಗಿತ್ತು ಅನ್ನಿಸುತ್ತಿದೆ.

ಇನ್ನೂ ನನಗೆ ಆ ನಮ್ಮ ಸಂಬಂಧದ ಬಗ್ಗೆ ಬೆರಗಿದೆ. ಹೆಸರಿಲ್ಲದ, ರೂಪವಿಲ್ಲದ, ಗಮ್ಯವಿಲ್ಲದ, ಕಟ್ಟಳೆಗಳಿಲ್ಲದ ಸದಾ ಹರಿಯುವಂತಹ ಅನುಭವವನ್ನು ನೀಡುತ್ತಿದ್ದ ಆ ಸಂಬಂಧ ಯಾವುದು? ಹೀಗೆ ಕೇಳಿಕೊಂಡ ತಕ್ಷಣ ಮತ್ತೆ ನಾವು ಸಮಾಜ ಕೊಡಮಾಡುವ ಹೆಸರುಗಳ ಆಸರೆ ಪಡೆಯಬೇಕಾಗುತ್ತದೆ. ನಮ್ಮ ಸಂಬಂಧವನ್ನು ಏನಾದರೊಂದು ಹೆಸರು ಕೊಟ್ಟು ಗುರುತಿಸಬೇಕಾಗುತ್ತದೆ. ಹರಿಯುವ ನದಿಯ ನೀರಿಗ್ಯಾವ ಹೆಸರು? ನದಿಯು ಹರಿಯುವ ಪಾತ್ರದ ಗುರುತು, ಅದರ ಸುತ್ತಮುತ್ತಲಿನ ಪ್ರದೇಶದ ಗುರುತಿನಿಂದ ನಾವು ನದಿಗೆ ಹೆಸರು ಕೊಡುತ್ತೇವೆ ಆದರೆ ಆ ಹೆಸರು ಎಷ್ಟು ಬಾಲಿಶವಾದದ್ದು ಅಲ್ಲವಾ? ನದಿಯ ಹರಿವು ನಿಂತು ಹೋಗಿ ಒಂದು ಹನಿ ನೀರೂ ಇಲ್ಲದಿದ್ದಾಗ ಅದನ್ನು ಇಂಥ ನದಿ ಅಂತ ಹೆಸರಿಟ್ಟು ಕರೆಯಲು ಸಾಧ್ಯವೇ? ಹಾಗಾದರೆ ನದಿಯೆಂದು ನಾವು ಕರೆಯುವುದು ಹರಿಯುವ ನೀರನ್ನೇ? ಆ ನದಿಗೆ ನೀರು ಬಂದದ್ದು ಎಲ್ಲಿಂದ? ತಾಳ್ಮೆಯ ತಪಸ್ಸಲ್ಲಿ ಫಲಿಸಿದ ಮೋಡದಿಂದ ಧಾರೆಯಾಗಿ ಸುರಿದ ಮಳೆ, ನಗರ, ಹಳ್ಳಿ, ಕೊಂಪೆಗಳ ರಸ್ತೆ, ಚರಂಡಿಗಳಲ್ಲಿ ಹರಿದು ಬಂದ ನೀರು ನದಿಯ ಸತ್ವವಾಗುತ್ತದೆ. ಹಾಗಂತ ನಾವು ನದಿಗೆ ಸೇರುವ ನೀರನ್ನು ‘ನದಿ’ ಎಂದು ಹೆಸರಿಟ್ಟು ಕರೆಯಲಾಗುತ್ತದೆಯೇ? ಲಕ್ಷ ಲಕ್ಷ ಮೈಲುಗಳನ್ನು ಉನ್ಮಾದದಲ್ಲಿ ಕ್ರಮಿಸಿ ವಿಶಾಲವಾದ ಜಲರಾಶಿಯನ್ನು ಸೇರುವ ಈ ನೀರು ಅಷ್ಟರವರೆಗೆ ನದಿಯಾದದ್ದು ‘ಸಮುದ್ರ’ ಹೇಗೆ ಆಗಿಬಿಡಲು ಸಾಧ್ಯ? ಸಮುದ್ರವನ್ನು ಸೇರಿದ ನದಿ ನದಿಯಾಗಿ ಉಳಿಯುವುದೇ? ನೋಡು, ನಮ್ಮ ಹೆಸರಿಡುವ ಪ್ರಯತ್ನ ಎಷ್ಟು ಬಾಲಿಶವಾದದ್ದು ಅಂತ! ನಮ್ಮ ಸಂಬಂಧಗಳಿಗೂ ನಾವು ಇದೇ ಮನಸ್ಥಿತಿಯಲ್ಲಿ ಪ್ರತಿಕ್ರಿಯಿಸುತ್ತಿರುವುದು ವಿಪರ್ಯಾಸ ಅಲ್ಲವೇ?

ಈಗ ನಿನ್ನಿಂದ ದೂರವಾಗಿ ನಿನ್ನೊಂದಿಗಿನ ಸಂಬಂಧವನ್ನು ಅವಲೋಕಿಸುತ್ತಿರುವವಳಿಗೆ ಹೀಗೆ ದೊಡ್ಡ ಚಿಂತಕಿಯ ಹಾಗೆ, ದಾರ್ಶನಿಕಳ ಹಾಗೆ ಮಾತನಾಡಲು ಸಾಧ್ಯವಾಗುತ್ತಿದೆ. ಆದರೆ ಆ ಪರಿಸ್ಥಿತಿಯಲ್ಲಿ, ನಿನ್ನೊಂದಿಗಿನ ಸಂಬಂಧದಲ್ಲಿ ನನ್ನನ್ನೇ ನಾನು ಕಳೆದುಕೊಂಡಿದ್ದಾಗ ನಾನು ಹೇಗಿದ್ದೆ? ಕ್ಷಣ ಕ್ಷಣಕ್ಕೂ ದಿಗಿಲು, ಆತಂಕ, ಗೊಂದಲ. ಏನೋ ಸಿಕ್ಕಬಹುದು ಎಂಬ ಕಾತುರ, ಅದು ಈಗ ಸಿಕ್ಕೀತು, ಆಗ ಸಿಕ್ಕೀತು ಎನ್ನುವ ನಿರೀಕ್ಷೆ, ಒಂದು ವೇಳೆ ಸಿಕ್ಕೇ ಬಿಟ್ಟರೆ ಏನು ಮಾಡುವುದು ಎನ್ನುವ ಆತಂಕ, ಅದನ್ನು ಪಾಲಿಸುವ ಧೈರ್ಯ, ತಾಕತ್ತು ನನ್ನಲ್ಲಿದೆಯೇ ಎನ್ನುವ ಅಭದ್ರತೆ, ಅಥವಾ ಅದು ಸಿಕ್ಕುವ ಸಾಧ್ಯತೆಗಳು ಶಾಶ್ವತವಾಗಿ ಇಲ್ಲವಾಗಿಬಿಟ್ಟರೆ ಎನ್ನುವ ದುಗುಡ, ಇನ್ನು ಅದು ಸಿಕ್ಕುವುದೇ ಇಲ್ಲ ಎಂದು ನಿಶ್ಚಯವಾಗಿಬಿಟ್ಟರೆ ಆಗುವ ನಿರಾಶೆಯನ್ನು, ದುಃಖವನ್ನು ಭರಿಸುವುದು ಹೇಗೆ? – ಹೀಗೆ ಮನಸ್ಸು ಲಕ್ಷ ಲಕ್ಷ ಭಾವನೆಗಳ ಸುಂದರ ಕೊಲಾಜ್ ಆಗಿರುತ್ತಿತ್ತು. ಆದರೆ ಅಸಲಿಗೆ ನನಗೆ ಸಿಕ್ಕಬೇಕಾದ್ದು ಏನು ಎನ್ನುವುದೇ ನನಗೆ ತಿಳಿದಿರುತ್ತಿರಲಿಲ್ಲ. ಯಾಕೆ ಅಂದರೆ, ಈ ತಿಳಿವು ಬುದ್ಧಿಗೆ, ನನ್ನ ಅಹಂಕಾರಕ್ಕೆ ಸಂಬಂಧಿಸಿದ್ದು. ಏನೋ ಸಿಕ್ಕುತ್ತದೆ ಎಂದು ನಿರೀಕ್ಷಿಸುತ್ತಿದ್ದದ್ದು ನನ್ನ ಮನಸ್ಸು. ಮನಸ್ಸು, ಬುದ್ಧಿಗಳ ನಡುವಿನ ತಿಕ್ಕಾಟದಿಂದಲೇ ಈ ಪ್ರೀತಿ ಇಷ್ಟು ನಿಗೂಢವಾಗಿ, ಆಕರ್ಷಕವಾಗಿ, ಗೊಂದಲದ ಗೂಡಾಗಿರುವುದೇ? ನೀನು ಹೇಳಬೇಕು, ಹೇಳುತ್ತಿದ್ದೆಯಲ್ಲ ಯಾವಾಗಲೂ ‘ನಾನು ವಿಪರೀತ ಭಾವಜೀವಿ ಕಣೇ’ ಅಂತ.

ನಿನ್ನ ನನ್ನ ನಡುವೆ ಎಗ್ಗಿಲ್ಲದೆ, ಸರಾಗವಾಗಿ ಪ್ರವಹಿಸುತ್ತಿದ್ದ ಭಾವದ ಹರಿವಿಗೆ ಒಂದು ಸ್ವರೂಪವನ್ನು ಕೊಡುವ ಪ್ರಯತ್ನವನ್ನ ನೀನೇ ಮಾಡಿದ್ದು. ಈ ಹರಿವಿಗೊಂದು ಅಣೇಕಟ್ಟು ಕಟ್ಟಿಕೊಂಡು ನೀನು ನಿನ್ನ ಬದುಕಿನ ತೋಟಕ್ಕೆ ನಿರಾವರಿ ಮಾಡಿಕೊಂಡು ನಿನ್ನ ತೋಟದಲ್ಲಿ ನನ್ನ ಪ್ರೀತಿಯ ಹೂವು ಹಣ್ಣು ಅರಳಬೇಕೆಂದು ಅಪೇಕ್ಷಿಸಿದೆ. ಸ್ವಚ್ಛಂದವಾಗಿ ಹರಿಯುತ್ತಿದ್ದ ಸಂಬಂಧಕ್ಕೆ ಒಂದು ತಂಗುದಾಣ ಕಟ್ಟಬಯಸಿದ್ದೆ. ಅದರ ಸೂಚನೆಯೋ ಎಂಬಂತೆ ನನ್ನೆದುರು ನಿನ್ನ ಮಾತು ಕಡಿಮೆಯಾಯಿತು. ಇನ್ನೊಬ್ಬ ಹುಡುಗಿಯನ್ನು ಹೊಗಳುವಾಗ ವಿಪರೀತ ಕಾಳಜಿಯನ್ನು ವಹಿಸಲು ಪ್ರಯತ್ನಿಸುತ್ತಿದ್ದದ್ದು ನನಗೆ ತಿಳಿಯುತ್ತಿತ್ತು. ಅಪ್ಪಿತಪ್ಪಿಯೂ ನಿನ್ನ ಗೆಳೆಯರ ಬಗ್ಗೆ ನನ್ನೆದುರು ಒಂದೊಳ್ಳೆ ಮಾತು ಆಡದಂತೆ ಎಚ್ಚರ ವಹಿಸುತ್ತಿದ್ದೆ. ಆಗಿನಿಂದ ನಾನಿನ್ನ ಕೆದರಿದ ಕೂದಲು, ವಡ್ಡ-ವಡ್ಡಾದ ಡ್ರೆಸ್ ಸೆನ್ಸ್ ಕಾಣುವುದು ತಪ್ಪಿಯೇ ಹೋಗಿತ್ತು. ನೀನು ಪ್ರಜ್ಞಾಪೂರ್ವಕವಾಗಿ ಬದಲಾಗುತ್ತಿದ್ದೆ, ನನ್ನನ್ನು ಮೆಚ್ಚಿಸಲು. ಒಂದು ಮಾತು ಹೇಳಲಾ, ನೀನು ಬೇಜವಾಬಾರಿಯಿಂದ ಡ್ರೆಸ್ ಮಾಡಿಕೊಂಡಾಗಲೇ ನನಗೆ ಚೆನ್ನಾಗಿ ಕಾಣುತ್ತಿದ್ದೆ. ನಿನ್ನ ವಕ್ರವಕ್ರವಾದ ವ್ಯಕ್ತಿತ್ವವೂ ನನಗೆ ಪ್ರಿಯವಾಗಿತ್ತು. ಆದರೆ ನೀನು ಅವನ್ನೆಲ್ಲಾ ಬದಲಾಯಿಸಿಕೊಳ್ಳುತ್ತಿದ್ದೆ. ನನ್ನನ್ನು ಮೆಚ್ಚಿಸುವುದಕ್ಕೆ. ಒಂದು ವೇಳೆ ನಾನು ನನಗೇನಿಷ್ಟ ಎಂಬುದನ್ನು ಹೇಳಿ, ನೀನು ಮೊದಲಿದ್ದ ಹಾಗೇ ಇರು ಅಂತೇನಾದರೂ ಹೇಳಿದ್ದರೆ ನೀನು ಹಾಗಿರಲು ಪ್ರಯತ್ನ ಮಾಡುತ್ತಿದ್ದೆ. ಪ್ರಯತ್ನಪೂರ್ವಕವಾಗಿ ಅಶಿಸ್ತು ರೂಢಿಸಿಕೊಳ್ಳುತ್ತಿದ್ದೆ, ಆದರೆ ನಾನು ಮೆಚ್ಚಿದ್ದ ನಿನ್ನ ಸಹಜ ಬೇಜವಾಬ್ದಾರಿತನವನ್ನು ನಾನೆಂದಿಗೂ ನಿನ್ನಲ್ಲಿ ಕಾಣಲು ಸಾಧ್ಯವಾಗುತ್ತಿರಲಿಲ್ಲ. ನೀನು ನೀನಾಗಿ ನನ್ನೆದುರು ಉಳಿದಿರಲಿಲ್ಲ. ನಮ್ಮತನವನ್ನು ಕಳೆದುಕೊಂಡು ಅಸ್ವಾಭಾವಿಕವಾಗಿ ವರ್ತಿಸಲೇಬೇಕಾ ಪ್ರೀತಿಸಿದವರು? ಹಾಗಾದರೆ ಪ್ರೀತಿ ಅಸ್ವಾಭಾವಿಕವಾ?

ಅಂದು ಸಂಜೆ ಕಾಫಿ ಬಾರಿನಲ್ಲಿ ಕುಳಿತಿದ್ದಾಗ ನೀನು ನೀನಾಗಿರಲಿಲ್ಲ. ಹಿಂದಿನ ದಿನ ತಾನೆ ನಮಗೆ ಸೆಂಡಾಫ್ ಕೊಟ್ಟಿದ್ದರು. ಇನ್ನು ಒಬ್ಬರದು ಒಂದೊಂದು ತೀರ. ನೀನು ಸಂಜೆ ಕಾಫಿ ಬಾರಿಗೆ ಬರಲು ಹೇಳಿದ್ದೆ. ಬಹುಶಃ ಅದೇ ನಮ್ಮ ಕೊನೆ ಭೇಟಿಯಾಗಬಹುದು ಅಂತ ನನಗೆ ತಿಳಿದಿರಲಿಲ್ಲ. ಅಗಲಿಕೆಯ ಗಾಬರಿ ನನ್ನಲ್ಲಿತ್ತು. ಇಷ್ಟು ದಿನ ಕಾಲೇಜಿನಲ್ಲಿ ಪ್ರತಿದಿನ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡಿರುತ್ತಿದ್ದವರು ಇನ್ನು ಮುಂದೆ ಬೇರೆ ಬೇರೆ ಜಾಗಗಳಿಗೆ ಹೋಗಬೇಕಲ್ಲಾ ಎನ್ನುವುದು ನನ್ನ ವೇದನೆಯಾಗಿತ್ತು. ಅದೇ ಭಾವವನ್ನು ನಾನು ನಿನ್ನ ಮುಖದ ಮೇಲೆ ಕಾಣಲು ಪ್ರಯತ್ನಿಸಿದ್ದೆ. ಆದರೆ ನಿನ್ನ ಮುಖದ ಮೇಲಿನ ಆತಂಕ, ಭಯ, ಅದನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದ ನಿನ್ನ ಶ್ರಮವನ್ನೆಲ್ಲಾ ಕಂಡು ನನಗೆ ಹೆದರಿಕೆಯಾಗಿತ್ತು. ಏನೋ ಅಹಿತವಾದದ್ದು ನಡೆಯಲಿದೆ ಅಂತ ಗಾಳಿ ಸೂಚನೆ ಕೊಡುತ್ತಿತ್ತು. ಕೊನೆಗೂ ನೀನು ಹೇಳಿಬಿಟ್ಟೆ, ‘ಬಿಂದು, ಐ ಲವ್ ಯೂ’! ನನ್ನ ಪ್ರತಿಕ್ರಿಯೆಗೂ ಕಾಯದೆ ಎದ್ದು ಹೋಗಿಬಿಟ್ಟೆ. ನಾನೂ ಎದ್ದು ಬಿಟ್ಟೆ, ಕೇಳಿದ ಪ್ರಶ್ನೆಗೆ ಉತ್ತರ ನೀಡಬೇಕೆಂಬ ಕನಿಷ್ಠ ಸೌಜನ್ಯವೂ ಇಲ್ಲದವಳ ಹಾಗೆ ನಾನು ನಿನ್ನ ಬದುಕಿನಿಂದಲೇ ಎದ್ದುಬಿಟ್ಟೆ. ಉತ್ತರವೇ ಇಲ್ಲದ ನಿನ್ನ ಪ್ರಶ್ನೆಯೊಂದಿಗೆ ನೀನು ಹೇಗಿರುವೆಯೋ!

ನಿನ್ನ ಪ್ರಶ್ನೆಗೆ ನಾನು ಯಾವ ಉತ್ತರವನ್ನೂ ಕೊಡದಿದ್ದರೂ ನನ್ನಿಡೀ ಬದುಕಿಗೆ ಒಂದು ಶಾಶ್ವತ ಕ್ವೆಶ್ಚನ್ ಮಾರ್ಕನ್ನು ಸಿಕ್ಕಿಸಿಬಿಟ್ಟಿತ್ತು ನಿನ್ನ ಪ್ರಶ್ನೆ. ‘ಈ ನಂಟಿಗೇಕೆ ಹೆಸರಿನ ಹಂಗು?’ ಉತ್ತರಿಸುವೆಯಾ ಗೆಳೆಯಾ?

ಇಂತಿ ನಿನ್ನ ಪ್ರೀತಿಯ,

ಆತ್ಮೀಯ ಗೆಳೆಯಾ,

ಇನ್ನೇನಂಥ ಕರೆಯಲಿ ನಿನ್ನ? ನಮ್ಮ ಸಂಬಧಕ್ಕೆ ಇದಕ್ಕಿಂತ ಸೂಕ್ತವಾದ ಯಾವ ಹೆಸರನ್ನು ತಾನೆ ಇಡಲು ಸಾಧ್ಯ? ಹೀಗೆ ಸಂಬಂಧಗಳಿಗೆ ಹೆಸರಿಡುವ ಚಾಳಿಗೆ ಏನನ್ನ ಬೇಕು? ಎಲ್ಲಕ್ಕೂ ನಾವು ಹೆಸರಿಟ್ಟು, ಚೌಕಟ್ಟು ಹಾಕಿ ಹರಿವನ್ನು ನಿಲ್ಲಿಸಿಬಿಡಲು ಏಕೆ ಹವಣಿಸುತ್ತೇವೆ? ಕಣ್ಣೆದುರು ಇರುವ ನಿತ್ಯ ಹಸಿರಾದ ಜೀವನಕ್ಕಿಂತ ನಮಗೆ ಚೌಕಟ್ಟು ಹಾಕಿರಿಸಿದ ಫೋಟೊ ಏಕೆ ಇಷ್ಟವಾಗುತ್ತೆ? ಸದಾ ಹರಿಯುತ್ತಲೇ, ಸದಾ ಬದಲಾಗುತ್ತಲೇ ಇರುವ ನೀರಿನ ಹರಿವಿಗೆ ನದಿ ಅಂತ ಹೆಸರಿಟ್ಟು ಬಿಡಬಹುದೇ? ಮರ ಅಂತ ನಾವು ಕರೆದ ಭೌತಿಕ ವಸ್ತು ಕ್ಷಣಕ್ಷಣಕ್ಕೂ ಬೆಳೆದು, ಬೇರೆಯದೇ ಹಂತವನ್ನು ಮುಟ್ಟುತ್ತಿರುತ್ತದೆ. ಮಗುವಿಗೆ ಹೆಸರಿಡುವ ನಾವು ಅದೇ ಹೆಸರಿಗೆ ಆತನ ಇಡೀ ಆಯುಷ್ಯವನ್ನು ಟ್ಯಾಗ್ ಮಾಡಿಬಿಡುತ್ತೇವಲ್ಲ, ಹೀಗೆ ಹೆಸರಿಡುವುದು ನಮ್ಮ ಮನಸ್ಸಿನ ದೌರ್ಬಲ್ಯವೇ? ಹೀಗೆ ಹೆಸರಿಲ್ಲದ ಸಂಬಂಧಗಳೆಂದರೆ ನಮಗೆ ಭಯವೇ, ಸಂಶಯವೇ, ಅಭದ್ರತೆಯೇ? ಹೆಸರಿಲ್ಲದ ವ್ಯಕ್ತಿಯ ಅಪರಿಚಿತತೆ ಮತ್ತಷ್ಟು ಗಾಢವಾದಂತೆ!

ಈಗೇಕೆ ಹಳೆಯದನ್ನೆಲ್ಲಾ ನೆನಪಿಸಿಕೊಳ್ಳಬೇಕು? ಹಳೆಯ ಸಮಾಧಿಗಳನ್ನೆಲ್ಲಾ ಅಗೆದಗೆದು ನಮ್ಮ ಇಂದಿನ ಸಂಬಂಧದ ಬೇರನ್ನು ಹುಡುಕುವ ಪ್ರಯತ್ನವೇಕೆ? ಹಾಗೆ ಬೇರನ್ನು ಹಿಡಿದಾಗಲಾದರೂ ನಮ್ಮ ಸಂಬಂಧದ ಸ್ವರೂಪದ ದರ್ಶನ ನಮಗಾಗಬಹುದು ಎಂಬ ಆಸೆಯಿಂದಲೇ, ಆಗಲಾದರೂ ನಾವು ಅದಕ್ಕೆ ಹೆಸರಿಡಬಹುದು ಎಂಬ ದುರಾಸೆಯಿಂದಲೇ? ಇರಲಿ, ಹಳೆಯ ನೆನಪಿನ ಪುಟಗಳನ್ನು ತೆರೆಯುವಲ್ಲಿ ಇರುವ ಆಕರ್ಷಣೆಗಾಗಿಯಾದರೂ ನಾನು ನೆನಪುಗಳಿಗೆ ಹೊರಳಿಕೊಳ್ಳುತ್ತೇನೆ.inti ninna preetiya copy.jpg

ಆಗಿನ್ನೂ ನಾವು ಕಾಲೇಜು ಓದುತ್ತಿದ್ದ ದಿನಗಳು. ನಾವು ಹೈಸ್ಕೂಲ್ ಓದಿದ ಸಂಸ್ಥೆಯಲ್ಲೇ ಪಿಯು ಕಾಲೇಜೂ ಇತ್ತು ಡಿಗ್ರಿ ಸಹ ಇತ್ತು. ನನಗೆ ನಿನ್ನ ಪರಿಚಯ ಹೈಸ್ಕೂಲ್ ದಿನಗಳಿಂದಲೇ ಆಗಿತ್ತು. ನಾವಿಬ್ಬರು ಡಿಬೇಟ್‌ಗಾಗಿ ಬೇರೆ ಶಾಲೆಗಳಿಗೆ ಹೋಗುತ್ತಿದ್ದದ್ದು ನಿನಗೆ ನೆನಪಿದೆಯಾ? ನನಗೆ ಬಹುಮಾನ ಬಂದಾಗಲೆಲ್ಲಾ ನೀನು ‘ಈ ಜಡ್ಜುಗಳಿಗೆ ಹುಡುಗೀರು ಅಂದ್ರೇನೇ ಮುದ್ದು’ ಅಂತ ಸೋತ ಅವಮಾನವನ್ನು ಮುಚ್ಚಿಕೊಳ್ಳುವ ಪ್ರಯತ್ನದಲ್ಲಿ ವಟಗುಟ್ಟುತ್ತಿದ್ದೆಯಲ್ಲಾ, ಅದನ್ನು ನಾನು ನನ್ನ ಗೆಳತಿಯರಲ್ಲಿ ಹೇಳಿಕೊಂಡು ಎಷ್ಟು ನಕ್ಕಿದ್ದೇನೆ ಗೊತ್ತಾ? ಅದೇನು ಬರೆದಿತ್ತೋ,ನಮ್ಮ ನಸೀಬಿನಲ್ಲಿ ಶಾಲೆಯಲ್ಲಿ ನಡೆದ ಕ್ವಿಝ್‌ಗೆ ನಮ್ಮಿಬ್ಬರನ್ನೂ ಗ್ರೂಪ್ ಮಾಡಿದ್ದರು. ನೀನು ಅದೆಷ್ಟು ಪಡಿಪಾಟಲು ಪಟ್ಟು ನನಗೆ ಓದುವಂತೆ ಪುಸಲಾಯಿಸಿದರೂ ನಾನು ಗಂಭೀರವಾಗಿ ಕುಳಿತು ಓದಲಿಲ್ಲ, ‘ನೀನು ಓದು ಸಾಕು, ನೀನಿದ್ದ ಮೇಲೆ ನನಗೇಕೆ ಚಿಂತೆ’ ಎಂದು ನಿನಗೆ ಹೇಳಿದ್ದೆ ನಿನ್ನ ಬುದ್ಧಿವಂತಿಕೆಯ ಮೇಲಿದ್ದ ಅಭಿಮಾನದಿಂದ. ನಿನಗೆ ಗೊತ್ತಾ, ನಾವಿಬ್ಬರೂ ಒಂದು ಟೇಬಲ್ಲಿನಲ್ಲಿ ಕುಳಿತು ಕ್ವಿಝ್ ಮಾಸ್ಟರ್ ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ವಿ. ನಮ್ಮ ಟೇಬಲ್‌ಗೆ ‘ಇಂಚರ’ ಅಂತ ಹೆಸರು ಕೊಟ್ಟಿದ್ರು. ಕ್ವಿಝ್ ಮಾಸ್ಟರ್ ಪ್ರಶ್ನೆಯನ್ನು ಪೂರ್ಣಗೊಳಿಸುವ ಮುಂಚೆಯೇ ನೀನು ಉತ್ತರ ಹೇಳುತ್ತಿದ್ದೆ. ನೆಪಮಾತ್ರಕ್ಕೆ ನನ್ನ ಬಳಿ ಚರ್ಚಿಸಿದ ಹಾಗೆ ಮಾಡುತ್ತಿದ್ದೆ. ಆಗೆಲ್ಲಾ ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ನನ್ನ ಗೆಳತಿಯರ ಮುಖದಲ್ಲಿ ಒಡೆದು ಕಾಣುತ್ತಿದ್ದ ಅಸೂಯೆಯನ್ನು ನಾನು ಅದೆಷ್ಟು ಎಂಜಾಯ್ ಮಾಡ್ತಿದ್ದೆ ಗೊತ್ತಾ? ನೀನೊಬ್ಬ ನನ್ನ ಜೊತೆ ಇದ್ದರೆ ಇಡೀ ಜಗತ್ತೇ ಅಸೂಯೆ ಪಟ್ಟುಕೊಳ್ಳುವಂತೆ ಬದುಕಬಹುದಲ್ವಾ ಅಂದುಕೊಳ್ಳುತ್ತಿದ್ದೆ. ನಿನ್ನ ಜೊತೆಗಿರುವುದು ಎಷ್ಟು ಹೆಮ್ಮೆ ಎನ್ನಿಸುತ್ತಿತ್ತು ಗೊತ್ತಾ? ನಾವಿಬ್ಬರೂ ಹೀಗೆ ಇದ್ದು ಬಿಡೋಣ, ಮದುವೆಯಾಗಿ ಅಂತಲೂ ಅನ್ನಿಸಿತ್ತು. ಆದರೆ ಬಹುಮಾನ ಪಡೆದು ಸ್ಟೇಜ್ ಇಳಿದು ಬರುತ್ತಲೇ ಎಲ್ಲಾ ಭಾವ ಕರಗಿಹೋಗಿತ್ತು.

ಹೈಸ್ಕೂಲ್ ಮುಗಿಸಿಕೊಂಡು ನಾವು ಇಬ್ಬರೂ ಪಿಯುಗೆ ಸೇರಿಕೊಂಡ್ವಿ. ಕಾಲೇಜು ಮೆಟ್ಟಿಲೇರಿದ ಪುಳಕ… ಅದೇ ಸಂಸ್ಥೆ, ಅದೇ ಕ್ಯಾಂಪಸ್ಸು, ಬಹುಪಾಲು ಅವೇ ಮುಖಗಳು ಆದರೂ ಏನೋ ಒಂದು ಹೊಸತನ. ಅಷ್ಟು ದಿನವಿಲ್ಲದ್ದು ಆಗ ಏನೋ ಬದಲಾವಣೆ ನಮ್ಮಲ್ಲಿ ಕಾಣಲು ಪ್ರಾರಂಭವಾಗಿಬಿಡುತ್ತವೆ. ಮೊದಲೆಲ್ಲಾ ಬೇಕೆಂದಾಗ ನಿನ್ನ ಬೆಂಚಿನ ಬಳಿ ಬಂದು ನೋಟ್ಸ್ ಪಡೆದು ಕೀಟಲೆ ಮಾಡಿ ರೇಗಿಸಿಕೊಂಡು ಹೋಗುತ್ತಿದ್ದ ನನಗೆ ಕಾಲೇಜು ಶುರುವಾದ ಒಂದೆರಡು ವಾರಗಳಲ್ಲಿ ಎಲ್ಲರೂ ಇರುವಾಗ ನಿನ್ನ ಹತ್ತಿರ ಬಂದು ಮಾತನಾಡೋಕೆ ಎಂಥದ್ದೋ ಹಿಂಜರಿಕೆ ಕಾಡಲಾರಂಭಿಸಿತ್ತು. ನೀನೊಬ್ಬನೇ ಅಂತಲ್ಲ ಕ್ಲಾಸಿನ ಬೇರಾವ ಹುಡುಗರೊಂದಿಗೆ ಮಾತನಾಡಬೇಕೆಂದುಕೊಂಡರೂ ಎದೆ ಬಡಿತ ಏರು ಪೇರಾಗುತ್ತಿತ್ತು. ಇದಕ್ಕೆ ತಕ್ಕ ಹಾಗೆ ನಿನ್ನ ಹಾಗೂ ಇತರ ಹುಡುಗರ ವರ್ತನೆಯೂ ಬದಲಾಗುತ್ತಿತ್ತು. ಮೊದಲೆಲ್ಲಾ ಯಾವ ಮುಜುಗರವಿಲ್ಲದೆ ಹುಡುಗಿಯರ ಗುಂಪಿಗೆ ಬಂದು ಮಾತನಾಡುತ್ತಿದ್ದ ಹುಡುಗರೆಲ್ಲ ಕಾಲೇಜಿಗೆ ಬಂದ ಮೇಲೆ ವಿಪರೀತ ಸಂಕೋಚ ಪಡಲು ಶುರುಮಾಡಿದ್ದರು. ಬಹುಶಃ ಆಗ ತಾನೆ ದೇಹದಲ್ಲಾಗುತ್ತಿದ್ದ ಬದಲಾವಣೆಗಳು, ನೈಸರ್ಗಿಕವಾದ ಹಾರ್ಮೋನ್‌ಗಳ ಕೈವಾಡದಿಂದ ಹೀಗೆ ಮೊದಲ ಬಾರಿಗೆ ನಾವು ವಿರುದ್ಧ ಧೃವಗಳು ಅನ್ನೋ ಅನುಭವವಾಗುತ್ತಿತ್ತೇನೊ.

ಆದರೆ ತುಂಬಾ ಕಾಲ ಹೀಗೇ ಇರಲಾಗುತ್ತಿರಲಿಲ್ಲ. ಕ್ಲಾಸು ಎಂದ ಮೇಲೆ ಹುಡುಗರು-ಹುಡುಗಿಯರು ಬೆರೆಯಲೇ ಬೇಕಾಗುತ್ತಿತ್ತು. ನನ್ನ ನಿನ್ನ ಹೆಸರು ಹಾಜರಾತಿಯಲ್ಲಿ ಒಂದರ ಹಿಂದೊಂದು ಇದ್ದದ್ದಕ್ಕೋ ಏನೊ ಲ್ಯಾಬುಗಳಿಗೆ ನಾವಿಬ್ಬರು couple ಆದೆವು. ಆಗ ಒಂದು ವಿಚಿತ್ರವಾದ ಅನುಭವವನ್ನು ನಾನು ಗಮನಿಸುತ್ತಿದ್ದೆ. ನೀನು ಯಾವುದಾದರೂ ಎಕ್ಸ್‌ಪೆರಿಮೆಂಟನ್ನು ವಿವರಿಸುವಾಗ, ತದೇಕ ಚಿತ್ತದಿಂದ ಕೆಮಿಕಲ್‌ಗಳನ್ನು ಬೆರೆಸುವಾಗ ನಾನು ನಿನ್ನ ಮುಖ ನೋಡುತ್ತಾ ನಿಂತಿರುತ್ತಿದ್ದೆ. ಒಮ್ಮೊಮ್ಮೆ ನೀನು ಆಕಸ್ಮಿಕವಾಗಿ ನನ್ನ ಕಣ್ಣುಗಳಲ್ಲಿ ನೋಡಿಬಿಡುತ್ತಿದ್ದೆ. ಆಗ ನನಗೆ ಮೈಜುಮ್ ಎನ್ನಿಸಿ ನಾನು ನಿನ್ನ ನೋಟವನ್ನು ತಪ್ಪಿಸುತ್ತಿದ್ದೆ. ನಿನಗೂ ಏನೋ ಕಸಿವಿಸಿಯಾಗುತ್ತಿದ್ದದ್ದು ನಿನ್ನ ಮುಖದಲ್ಲಿ ಕಾಣಿಸುತ್ತಿತ್ತು. ಎಷ್ಟೋ ಬಾರಿ ನನ್ನ ಸ್ಪರ್ಶಕ್ಕೆ ನಿನ್ನ ಮೈ ಬೇರೆಯ ಅರ್ಥವನ್ನೇ ಕಂಡುಕೊಳ್ಳುತ್ತಿತ್ತು.

ಇದು ಗೆಳೆತನವಾ, ಪ್ರೀತಿಯಾ, ಆಕರ್ಷಣೆಯಾ.. ಏನೊಂದೂ ಹೆಸರಿಡಲು ನೀನು ತಯಾರಿರಲಿಲ್ಲ. ನಿನ್ನೊಳಗೆ ಅಗಾಧವಾದ ಹೋರಾಟ ನಡೆಯುತ್ತಿದ್ದದ್ದನ್ನು ನಾನು ಗುರುತಿಸಿದ್ದೆ. ನಿಧಾನವಾಗಿ ನಿನ್ನ ಕಣ್ಣುಗಳಲ್ಲಿ ನನ್ನ ಬೆಗೆಗಿದ್ದ ಭಾವ ಬದಲಾಗುತ್ತಾ ಬಂದಿತ್ತು. ಹೈಸ್ಕೂಲು ದಿನಗಳಲ್ಲಿದ್ದ ಮುಗ್ಧ ಬೆರಗು, ಕಾಲೇಜಿಗೆ ಬಂದಾಗ ತುಂಬಿಕೊಂಡಿದ್ದ ತುಸು ನಾಚಿಕೆಯ ಜಾಗಕ್ಕೆ ಈಗ ಸಂಶಯಾಸ್ಪದವಾದ ಪರಿಚಿತತೆ ತುಂಬಿಕೊಂಡಿತ್ತು. ನಿನ್ನ ಕಣ್ಣು ಬೇಟೆಗಾರನ ಕಣ್ಣುಗಳಂತೆ ಕಂಡು ನಾನು ಎಷ್ಟೋ ಬಾರಿ ಬೆಚ್ಚಿದ್ದಿದೆ. ಆದರೆ ನನಗೆ ಈ ನಂಟಿನ ಹರಿವು ಪಡೆಯುತ್ತಿದ್ದ ಹೊಸ ಹೊಸ ಆಕಾರದ ಬಗ್ಗೆ ಕುತೂಹಲ ಹಾಗೂ ಪ್ರೀತಿ ಇತ್ತೇ ವಿನಃ ಅದಕ್ಕೊಂದು ಹೆಸರು ಕೊಟ್ಟುಬಿಡುವ ಉಮ್ಮೇದು ಖಂಡಿತಾ ಇರಲಿಲ್ಲ.

ಹೀಗಿರುವಾಗ…

(ಮುಂದುವರೆಯುವುದು…)


Technorati :


Blog Stats

  • 72,013 hits
ಜೂನ್ 2023
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 1234
567891011
12131415161718
19202122232425
2627282930  

Top Clicks

  • ಯಾವುದೂ ಇಲ್ಲ