Archive for the ‘ಅರಿವು ತೋರಿದ ಗುರುವಿಗೆ ನಮನ’ Category
ಅರಿವು ತೋರಿದ ಗುರುವಿಗೆ ನಮನ
Posted ಜೂನ್ 3, 2009
on:
ಇದು ಹೊಸ ಅಂಕಣ. ವಿದ್ಯಾರ್ಥಿ ಜೀವನದಲ್ಲಿ ನಮ್ಮ ಬದುಕಿನ ದಿಕ್ಕು, ರೂಪು ರೇಷೆಗಳನ್ನು ಪ್ರತಿ ದಿನ ತಿದ್ದಿ ತೀಡುವ, ಕನಸುಗಳನ್ನು ಬಿತ್ತುವ ಕೆಲಸ ಮಾಡುವಂಥವರು ನಮ್ಮ ಶಿಕ್ಷಕರು. ಒಬ್ಬ ಶಿಕ್ಷಕನ ಮಾತುಗಳಿಂದ ಜೀವನವನ್ನೇ, ಜೀವನ ದೃಷ್ಟಿಯನ್ನೇ ಬದಲಾಯಿಸಿಕೊಂಡ ವಿದ್ಯಾರ್ಥಿಗಳಿದ್ದಾರೆ. ಅನೇಕ ಮಂದಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಸಾಕ್ಷಾತ್ ಪರಬ್ರಹ್ಮರೇ ಆಗಿ ಸಲಹಿದ್ದಾರೆ. ಅಂತಹ ನೆನಪುಗಳನ್ನು ಹಂಚಿಕೊಳ್ಳಲು ಇದೊಂದು ವೇದಿಕೆ.
ಈ ಸಂಚಿಕೆಯಲ್ಲಿ ಯು.ವಿ.ಸಿ.ಇ ಯಲ್ಲಿ ಎರಡನೆಯ ವರ್ಷದ ಬಿಇ ಓದುತ್ತಿರುವ ಶ್ರೀಧರ್.ಜಿ.ಎಸ್ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಗುರುಬ್ರಹ್ಮ ಗುರುವಿಷ್ಣು, ಗುರುದೇವೋ ಮಹೇಶ್ವರಾ, ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ
ಆಚಾರ್ಯ ದೇವೋಭವ, ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ.
ಇಂತಹ ಸೂಕ್ತಿ ಸುಭಾಷಿತಗಳ ಮಾತುಗಳು ಇಂದಿನ ಪೀಳಿಗೆಗೆ ಅರಿವೇ ಇಲ್ಲದಂತಾಗಿವೆ.ಶಿಕ್ಷಣವೆಂದರೆ ಕೇವಲ ಓದುವುದು, ಬರೆಯುವುದು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಪಾಸಾಗುವುದು ಮಾತ್ರವಲ್ಲ, ಪ್ರತಿಯೊಬ್ಬನ ಜೀವನದಲ್ಲಿ ನೈತಿಕತೆಯನ್ನು ಅಳವಡಿಸಿಕೊಳ್ಳಬೇಕು. ಇಂದಿನ ಆಧುನಿಕ ಮಾನವ ಬುದ್ಧಿ ಶಕ್ತಿಯಿಂದಾಗಿ ವಿಜ್ಞಾನ ಸಾಕಷ್ಟು ಬೆಳೆದಿದೆ. ಕ್ಷಣಾರ್ಧದಲ್ಲಿ ಜಗತ್ತಿನ ಯಾವುದೇ ಭಾಗದೊಂದಿಗೆ ಸಂಪರ್ಕ ಸಾಧಿಸಬಲ್ಲ ವಿಜ್ಞಾನಿಯಾಗುತ್ತಾನೆ, ಡಾಕ್ಟರ್, ಇಂಜಿನಿಯರ್ ಏನೆಲ್ಲಾ ವರ್ಗಕ್ಕೆ ಹೋಗುತ್ತಾನೆ. ಅದಕ್ಕೆ ಆತನಿಗೆ ಎಲ್ಲಾ ಪ್ರಶಂಸೆ ದೊರೆಯುತ್ತವೆ ಆದರೆ ಎಲ್ಲರೂ ಆ ಗೆಲುವಿನ ತೊಳಲಾಟದಲ್ಲಿ ಬೆನ್ನೆಲುಬಾದಂತಹ ಗುರುವನ್ನು ಮರೆಯುತ್ತಾರೆ.
ಆದರೆ ಇಂದು ನಾನು ತಮ್ಮೆಲ್ಲರಿಗೂ ಇಡೀ ತಾಲ್ಲೂಕೊಂದರಲ್ಲೇ ಅತ್ಯುತ್ತಮ ಶಿಕ್ಷಕರೆನಿಸುವುವರ ಪರಿಚಯ ಮಾಡಲಿಚ್ಚಿಸುತ್ತೇನೆ. ಅವರೇ N.V.S. ಯಾರು N.V.S, N.V.S ಏನು ಮಾಡಿದ್ದಾರೆ, ಎಲ್ಲರೂ ಯಾಕೆ N.V.S ಅವರನ್ನು ನೆನೆಯುತ್ತಾರೆ? ಹಾಸ್ಯವೆಂದರೆ N.V.S ಅಂದ್ರೆ ಈಗ್ಲೂ ದೊಡ್ಡ ಹುದ್ದೆಯಲ್ಲಿರುವ, ಅವರ ವಿದ್ಯಾರ್ಥಿಗಳಾಗಿದ್ದವರು ಕೂಡ ಹೆದರುತ್ತಾರೆ. ಹಾಗಾದ್ರೆ ಅವರ ಬಗ್ಗೆ ತಿಳಿಯೋದು ಅವಶ್ಯಕ ಅಲ್ವೇ…?
ಶ್ರೀ ಸಿದ್ಧಗಂಗಾ ಮಹಾಸಂಸ್ಥೆಯ ವಿದ್ಯಾಕೇಂದ್ರಗಳಲ್ಲೊಂದಾದ ಗಟ್ಟೀಪುರದ SUSRHS (Sree Uddana Shivayogi Rural High School) ಶಾಲೆ ಪ್ರಾರಂಭವಾದ ಕೆಲವೇ ವರ್ಷದಲ್ಲಿ ಬಂದ ಎನ್.ವಿ.ಸತ್ಯನಾರಾಯಣ್ ಸರ್ ಅವರು ತಮ್ಮ ಆದರ್ಶ, ಮೌಲ್ಯಗಳಿಂದಲೇ ಎಲ್ಲರ ಚಿರಪರಿಚಿತರಾದರು.
ವಿದ್ಯಾರ್ಥಿಗಳಿಗೆ ಎನ್.ವಿ.ಎಸ್ ಎಂದರೆ ನಿಜಕ್ಕೂ ಭಯವೇ ಆಗ್ತಾ ಇತ್ತು. ಅದಕ್ಕೆ ಮುಖ್ಯ ಕಾರಣ ಅವರ ಏಟುಗಳು ಎಂದರೆ ತಪ್ಪಾಗಲಾರದು, ಯಾಕಂದ್ರೆ ಹಳ್ಳಿಯ ಹುಡುಗರು ನಯವಾದ ಮಾತಿಗೆ ಬಗ್ಗುವುದಿಲ್ಲ ಎಂಬುದು ಅವರಿಗೂ ಗೊತ್ತಿತ್ತು. “Rural Guys Has mathematic Headache” ಇದು ಅನಾದಿಕಾಲದಿಂದಲೂ ನಮ್ಮೂರಲ್ಲಿ ಇದ್ದ ಹೇಳಿಕೆಯಾಗಿತ್ತು. ಇಂತಹ ಬೀಡಿಗೆ ಬಂದು ಶೇ ೩೦ರಷ್ಟಿದ್ದ ಶಾಲೆಯ ಫಲಿತಾಂಶವನ್ನು ಹತ್ತಿರತ್ತಿರ ಶೇ ೧೦೦ರಷ್ಟು ಮಾಡಿದ ಕೀರ್ತಿ ನಿಜವಾಗ್ಲೂ ಎನ್.ವಿ.ಎಸ್ ಅವರಿಗೇ ಸಲ್ಲುತ್ತದೆ. ಅದಕ್ಕಾಗಿಯೇ ಎನ್.ವಿ.ಎಸ್ ಎಂಬ ಈ ಮೂರಕ್ಷಕರಕ್ಕೆ ಎಲ್ಲಿಲ್ಲದ ಬೆಲೆ. ಹೇಗೆ ಶಿಲ್ಪಿಯೊಬ್ಬನು ಕಲ್ಲೊಂದರಿಂದ ಶಿಲೆಯನ್ನು ಕೆತ್ತುವನೋ ಅಂತೆಯೇ ಇವರು ಅಲ್ಪಜ್ಞಾನಿಯನ್ನು ವಿದ್ಯಾಪಾರಂಗತನಾಗಿ ಮಾಡುವ ಚತುರತೆಯನ್ನು ಹೊಂದಿದವರು.
ತಮ್ಮ ಮನೆಯಲ್ಲೇ ವಿದ್ಯಾರ್ಥಿಗಳನ್ನಿಟ್ಟುಕೊಂಡು ಅವರೆಲ್ಲರಿಗೂ ಓದಲು, ವಿದ್ಯುತ್ ವ್ಯವಸ್ಥೆ, ಲೂಟಿ, ವಸತಿ ನೀಡಿ ಬೆಳೆಸಿದಂತಹ ಗುಣ ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ಅಂತಹ ವಿದ್ಯಾರ್ಥಿಗಳಲ್ಲಿ ನಾನೂ ಒಬ್ಬ. ನನ್ನ ನೈಜ ಅನುಭವದ ಪ್ರಕಾರ ಅಂತಹ ವಾತಾವರಣವನ್ನು ಪಾಲಕರು ಕೂಡ ಕೊಡ ಮಾಡಲು ಸಾಧ್ಯವಿಲ್ಲ. ಇಂತಹ ಅತ್ಯುತ್ತಮವಾದ ಶಿಕ್ಷಕರು ನಮ್ಮ ನಡುವೆ ಇರುವುದು ನಮ್ಮೆಲ್ಲರಿಗೂ ಹೆಮ್ಮೆ ತರುವ ವಿಷಯವೇ ಸರಿ. ವಿದ್ಯಾರ್ಥಿಗಳಲ್ಲಿ ಪಠ್ಯ ವಿಷಯದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿ, ಜೀವನದ ಗುರಿಯ ಬಗೆಗೆ ಅರಿವು ಮೂಡಿಸುವ ನೈಪುಣ್ಯತೆ ಅವರಲ್ಲಿತ್ತು. ನಮ್ಮೆಲ್ಲರಿಗೂ ಸಮಾಜದಲ್ಲಿ ಬದುಕಿಬಾಳಲಿ ಒಳ್ಳೆಯ ನಡತೆ, ಒಳ್ಳೆಯ ಮಾತು ಇವು ಎಲ್ಲರೊಡನೆ ಸಹಬಾಳ್ವೆ ನಡೆಸಲು ದಾರಿದೀಪಗಳು ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.
ಟೀಕಿಸಿಕೊಂಡ ವ್ಯಕ್ತಿ ಖಂಡಿಸುವುದನ್ನು ಕಲಿಯುತ್ತಾನೆ. ವಿರೋಧದಲ್ಲಿ ಬೆಳೆದ ವ್ಯಕ್ತಿ ಹೋರಾಡುವುದನ್ನು ಕಲಿಯುತ್ತಾನೆ, ಅಪಹಾಸ್ಯಕ್ಕೆ ಒಳಗಾದ ಮಗು ನಾಚಿಕೆ ಸ್ವಭಾವ ಕಲಿಯುತ್ತದೆ. ನಿಜವಾಗಿಯೂ ಎನ್.ವಿ.ಎಸ್‌ರಿಂದ ವಿದ್ಯೆ ಕಲಿತ ವ್ಯಕ್ತಿ ಆತ್ಮವಿಶ್ವಾಸ ಹೊಂದುವುದರಲ್ಲಿ ಸಂಶಯವಿಲ್ಲ. ಎಲ್ಲರಲ್ಲೂ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತಾರೆ ಎನ್.ವಿ.ಎಸ್. ಜನರ ಪ್ರೀತಿ ಅವರ ಮೇಲೆ ಎಷ್ಟಿದೆ ಎಂಬುದಕ್ಕೆ ಸ್ಪಷ್ಟ ನಿದರ್ಶನವೆಂದರೆ ಇಪ್ಪತ್ತು ವರ್ಷಗಳ ಕಾಲ ಅವರನ್ನು ಬೇರೆಡೆಗೆ ವರ್ಗಾಯಿಸಲು ಬಿಟ್ಟಿರಲಿಲ್ಲ. ಆದರೆ ನೋವಿನ ವಿಚಾರವೆಂದರೆ ಇಂತಹ ಆದರ್ಶ ಮೌಲ್ಯವಿರುವಂತಹ ವ್ಯಕ್ತಿಯನ್ನು ಗುರುತಿಸುವಲ್ಲಿ ನಾವೆಲ್ಲರೂ ವಿಫಲರಾಗುತ್ತಾ ಇದ್ದೇವೆ. ಇಂತಹ ಶಿಕ್ಷಕರನ್ನು ಗುರುತಿಸಿ ಅವರಿಗೆ ತಕ್ಕ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ.
“The Destiny of the nation has been shaped by teachers” ಅಂತಹ ಶಿಕ್ಷಕರನ್ನು ಗುರುತಿಸಿ ಗೌರವಿಸಿ. ನಮ್ಮ ವಿದ್ಯಾರ್ಥಿ ವೃಂದದ ತೀವ್ರ ಕಳಕಳಿಯೆಂದರೆ ಸಂಬಂಧ ಪಟ್ಟ ಅಧಿಕಾರಿಗಳು ಕಳೆದ ೨೦ಕ್ಕೂ ಹೆಚ್ಚು ವರ್ಷಗಳ ಕಾಲ SUSRHS ಗಟ್ಟೀಪುರ ಪ್ರೌಢಶಾಲೆಯಲ್ಲಿ ಗಣಿತ ಶಿಕ್ಷಕರಾಗಿದ್ದು, ಸದ್ಯ ಕಡೂರಿನ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿರುವಂತಹ ಮಾನ್ಯ ‘ಸತ್ಯನಾರಾಯಣ್.ಎನ್.ವಿ’ ಅವರಿಗೆ ಅಭಿನಂದಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ. ಇದು ಇವರಿಂದ ವಿದ್ಯೆ ಕಲಿತಂತಹ ಎಲ್ಲಾ ವಿದ್ಯಾರ್ಥಿಗಳ ಕಳಕಳಿಯ ಆಶಯ.
ಶ್ರೀಧರ.ಜಿ.ಎಸ್, ಯುವಿಸಿಇ
ಇತ್ತೀಚಿನ ಟಿಪ್ಪಣಿಗಳು