ವಾರಾಂತ್ಯದ ಕವಿತೆ: “ಹೋಗುವ ಮುನ್ನ..”
Posted ಜುಲೈ 10, 2009
on:–ಜ್ಞಾನಮೂರ್ತಿ, ಬೆಂಗಳೂರು.
ಮಣ್ಣಲ್ಲಿ ಮಣ್ಣಾಗಿ ಹೋಗುವ ಮುನ್ನ,
ಧರಿತ್ರಿಯ ಸಂಗವ ತೊರೆಯುವ ಮುನ್ನ
ತಾಯ್ಮಡಿಲಿನಲಿ ಶಿರವನಿರಿಸಿ ನಾ ಅಲೆದಿರುವಾ
ನನ್ನ ನೆನಪಿನಂಗಳವನ್ನ ತವೆಯುತ್ತ
ತಾಯ್ಮಡಿಲ ಸೇರಿದ ನೆನಪಾಗಿ,
ಬಾಲ್ಯದ ತುಂಟಾಟ ಕೈಬೀಸಿದಂತಾಗಿ
ಗೆಳೆಯರ ಜಗಳ ಸಂಧಾನಗಳು ಕೂಗಿ ಕರೆದಂತಾಗಿ
ಕೈಹಿಡಿದ ಕೈಯನ್ನು ಹಿಡಿದು ನಡೆಸುವ ಹಂಬಲವಾಗಿ
ಮನಸು ಸಾವಿನ ದಾರಿಯಲಿ ತಾ ಹಿಂದೆ ನೋಡುತಿರೆ,
ವಾಸ್ತವಕೆ ಬಂದು ನಾ ಸುತ್ತ ನೋಡುತಿರೆ
ತೇವದಿ೦ದೆಲ್ಲರ ಕಂಗಳಲಿ ನನ್ನ ಬಿಂಬ
ಕಂಡು ಸಂತಸಗೊಂಡೆ ನಾ ಈ ಕ್ಷಣ
ಮಾತೃದೇವತೆಯ ಮಡಿಲ ತೊರೆಯಲಾಗುತ್ತಿಲ್ಲ
ಮಡದಿಯ ಸಿಂಧೂರ ನೋಡಲಾಗುತ್ತಿಲ್ಲ.
ಕಾಲಚಕ್ರವ ಹಾಗೆ ಹಿಂದೆ ಸರಿಸುವ ಆಸೆ,
ಅಮ್ಮಾ ನಿನ್ನ ಮಡಿಲಲಿ ನಾ ಮತ್ತೆ ಶಿಶುವಾಗುವಾಸೆ
ಬಾಳೆಂಬ ನಾಣ್ಯದ ಎರಡನೇ ಮುಖವ ನೋಡುವ ಸಮಯ
ಓಗೊಟ್ಟು ಸ್ವೀಕರಿಸಲೇಬೇಕು ಜವರಾಯನ ಈ ಕರೆಯ
ಕಣ್ಣಾಲಿಗಳು ತೇಲುತಿರೆ, ಉಸಿರಾಟ ನಿಲ್ಲುತಿರೆ,
ಹೃದಯವಿದು ತನ್ನ ಬಡಿತವಾ ತಾನು ನಿಲ್ಲಿಸಿರೆ,
ಕಣ್ಣ ರೆಪ್ಪೆಯಲೇ ಕಡೆಯ ನಮನವಾ ತಿಳಿಸಿ
ಹೋಗುತಿರುವೆ ನಾ……..
ಜವರಾಯನ ಗೆದ್ದು ಜೀವಿಸಲೇ ಬೇಕೆಂದು ಏಕನಿಸಿತೋ ಕಾಣೆ
ಹೋಗುವ ಮುನ್ನ, ಹೋಗುವಾ ಮುನ್ನ……
ನಿಮ್ಮದೊಂದು ಉತ್ತರ