ಬರದವನ ದಾರಿ ಕಾಯುತ್ತಾ…!
Posted ಜುಲೈ 8, 2009
on:– ರೇಶ್ಮಾ, ಉತ್ತರ ಕನ್ನಡ.
ಹೊರಗೆ ಬಿಸಿಲಿಲ್ಲ. ಕಪ್ಪು ಮೋಡ. ಇನ್ನೇನು, ಕ್ಷಣಗಳಲ್ಲಿ ಮಳೆ ಶುರುವಾಗತ್ತೆ. ಒಳಗೆ ಎಷ್ಟು ಕೂಗಿಕೊಂಡರೂ ಕೇಳಿಸದ ಹಾಗೆ ಧೋ.. ಅಂತ ಸುರಿವ ಮಳೆ. ಕಿಟಕಿ, ಬಾಗಿಲು ಮುಚ್ಚಿ ಕುಳಿತರೆ ಕೊನೆಗೆ ವೆಂಟಿಲೇಟರ್ ನಲ್ಲಾದರೂ ನುಸುಳಿ ಒಳ ಬಂದು ಥಂಡಿ ಹುಟ್ಟಿಸುವ ಗಾಳಿ. ಅವನೂ ಇದ್ದಿದ್ದರೆ ಚೆನ್ನಾಗಿರ್ತಿತ್ತು.
ತುಂಬಾ ಚಳಿಯಾಗುತ್ತಿದೆ. ಬಿಸಿಯಾಗಿ ಏನಾದರೂ ಹೊಟ್ಟೆಗೆ ಬೇಕು ಅನಿಸ್ತಿದೆ. ಒಬ್ಬಳೇ ಮಾಡಿಕೊಂಡು ಕುಡೀಬೇಕಲ್ಲ ಅಂತ ಸ್ವಲ್ಪ ಉದಾಸೀನ. ಆದರೂ ಬೇಕು ಅನ್ನುತ್ತಿದೆ ಮನಸ್ಸು. ಲೋಟದ ತುಂಬ ಬಿಸಿ ಬಿಸಿ ಕಾಫಿ ಮಾಡಿಕೊಂಡು ಬಾಲ್ಕನಿಗೆ ಬರುವಾಗ ಹೊರಗೆ ಮಳೆ ಇನ್ನೂ ಅದೇ ಆವೇಶದಲ್ಲಿ ಸುರಿಯುತ್ತಿದೆ. ಅವನು ಇದ್ದಿದ್ದರೆ ಬರೀ ಕಾಫಿ ನಾ? ಏನಾದ್ರೂ ತಿಂಡಿ ಪ್ಲೀಸ್ ಮುಖ ಚಿಕ್ಕದು ಮಾಡುತ್ತಿದ್ದ. ಈಗ ತಿಂಡಿ ಮಾಡಬೇಕು ಅನಿಸ್ತಿಲ್ಲ. ಅವನು ಇವತ್ತಷ್ಟೇ ಹೋಗಿದ್ದಾನೆ, ಬರೋಕೆ ಒಂದು ವಾರ ಬೇಕು ಅನ್ನೋದು ಗೊತ್ತಿದ್ದರೂ ಮತ್ತೆ ಮತ್ತೆ ಅವನ ಬರವು ಕಾಯುತ್ತಾ ರಸ್ತೆ ನೋಡುವುದು. ಅವನಿಲ್ಲದೆ ಒಂದು ಕ್ಷಣ ಕಳೆಯೋದು ಸಹ ಕಷ್ಟ ಆಗ್ತಿದೆ. ಮಳೆ ಬರುತ್ತಿರುವಾಗ ಅವನಿರಬೇಕಿತ್ತು ಜೊತೆಗೆ. ಅಲ್ಲಿ ಈಗ ಏನು ಮಾಡ್ತಿರಬಹುದು? ಒಮ್ಮೆ ಫೋನ್ ಮಾಡಿ ಮಾತಾಡಿದರೆ ಹೇಗೆ? ಬೇಡ, ಮೆಸೇಜ್ ಮಾಡಿದ್ರೇ ಒಳ್ಳೇದು. ಮೀಟಿಂಗ್ ನಲ್ಲಿದ್ದರೆ ಡಿಸ್ಟರ್ಬ್ ಆಗೋದಿಲ್ಲ.
ಮೆಸೇಜ್ ಮಾಡಿ ಹತ್ತು ನಿಮಿಷಗಳಾದರೂ ಉತ್ತರವಿಲ್ಲ. ಬಹುಶಃ ನಿದ್ರೆ ಮಾಡ್ತಿರಬಹುದು ಅನಿಸಿದ್ದೇ ಅವನು ಮಲಗುವ ರೀತಿ ನೆನಪಿಗೆ ಬಂತು. ಥೇಟ್ ಚಿಕ್ಕ ಮಕ್ಕಳ ಹಾಗೇ.. ಪ್ರಶಾಂತವಾದ ಮುಖ, ತುಂಟ ಕಣ್ಣುಗಳು.. ಅವನು ಮನೆಯಲ್ಲಿದ್ದರೆ ಒಂದು ನಿಮಿಷವೂ ಬಿಡುವೇ ಸಿಗುವುದಿಲ್ಲ. ಅಮ್ಮ, ಅಪ್ಪನಿಗೆ ಅಂತ ಹೀಗೆ ಒಮ್ಮೆಯಾದರೂ ಹೀಗೇ ಕಾಯುತ್ತಾ ನಿಂತಿದ್ದು ನೆನಪಿಗೆ ಬರುತ್ತಿಲ್ಲ. ಹಳ್ಳಿ ಮನೆಯ ಮುಗಿಯದ ಕೆಲಸಗಳ ಜೊತೆ ಮಕ್ಕಳ ಗಲಾಟೆ ಸುಧಾರಿಸುತ್ತಿದ್ದವಳಿಗೆ ಅಪ್ಪನಿಗೆ ಕಾಯುತ್ತಾ ನಿಲ್ಲಲು ಪುರುಸೊತ್ತೆಲ್ಲಿರ್ತಿತ್ತು?
ಆಗಾಗ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿರುವವಳಿಗೆ ಅಮ್ಮನ ನೆನಪಲ್ಲಿ ಕಣ್ತುಂಬಿ ಬರುತ್ತೆ. ಟಿ. ವಿ ನೋಡುತ್ತಾ ಕುಳಿತವನಿಗೆ ಅದು ಹೇಗೆ ಗೊತ್ತಾಗುತ್ತೋ, ಪಕ್ಕದಲ್ಲಿ ಹಾಜರ್. ಅವನನ್ನು ನೋಡುತ್ತಿದ್ದ ಹಾಗೇ ನಿಯಂತ್ರಿಸಿಕೊಳ್ಳಲಾಗದೇ ಕಣ್ಣೀರ ಹೊಳೆಯೇ ಹರಿದುಬಿಡುತ್ತೆ. ಆಗ ಎದೆಗೊರಗಿಸಿಕೊಂಡು, ನಾಳೆ ಅಮ್ಮನ್ನ ನೋಡ್ಕೊಂಡು ಬರೋಣ ಅನ್ನುತ್ತಾನೆ.
ಅರೇ.. ಮೆಸೇಜ್ ಬಂತು, ಅವನದ್ದೇ. ನಿದ್ರೆ ಮಾಡಿದ್ದೆ. ನಂತರ ಕಾಲ್ ಮಾಡ್ತೀನಿ. ದೂರ ಇದ್ದರೂ ಮೆಸೇಜ್ ಮಾಡೋವಾಗ, ಫೋನನಲ್ಲಿ ಮಾತಾಡೋವಾಗ ಒಮ್ಮೆಯೂ ಮಿಸ್ ಯೂ ಅಂತ ಹೇಳಿದ್ದಿಲ್ಲ. ಕಾಲ್ ಮಾಡಿದ ತಕ್ಷಣ ಕೇಳ್ತಾನೆ, ಅಲ್ಲಿ ಮಳೆ ಇದ್ಯಾ?. ಅವನಿಗೂ ಸಹ ಮಳೆ ಅಂದ್ರೆ ಇಷ್ಟ. ಅರೇ ಮಳೆ ಕಡಿಮೆಯಾಗಿಬಿಡ್ತು. ಎಲ್ಲೋ ನೋಡುತ್ತಾ ಲೋಟ ಬಾಯಿಗಿಟ್ಟರೆ, ಕಾಫಿಯೂ ಖಾಲಿ.
2 Responses to "ಬರದವನ ದಾರಿ ಕಾಯುತ್ತಾ…!"

wah!!! good writing

ಜುಲೈ 10, 2009 at 5:17 ಫೂರ್ವಾಹ್ನ
ರಶ್ಮಿ ಕಲರವದ ಸಡಗರಕ್ಕೆ ಸ್ವಾಗತ. ಬರಹ ಚೆನ್ನಾಗಿದೆ. ಭಾವಪೂರ್ಣವಾಗಿದೆ. ಹೀಗೆ ಬರೆಯುತ್ತಿರಿ. 🙂