ನೆನಪಿನ ಜೋಳಿಗೆ ಹೊತ್ತ ಫಕೀರನೆದುರು ಹಸಿದು ನಿಂತ ಬಕಾಸುರ ಕ್ಷಣಗಳು..!
Posted ಜುಲೈ 7, 2009
on:– ರಂಜಿತ್ ಅಡಿಗ, ಕುಂದಾಪುರ
ಅವತ್ತು ನೀ ಹಾಗೆ ಬೆನ್ನು ತೋರಿ ಹೊರಡುವಾಗ ನಿನ್ನ ಕಣ್ಣು ನೋಡಬೇಕೆನ್ನಿಸಿತ್ತು ಕಣೇ. ಪ್ರೀತಿಯಿಂದ ತುಳುಕುತಿದ್ದ ಕಣ್ಣ ಭಾವವನ್ನಷ್ಟೇ ಸವಿದು ಅಭ್ಯಾಸವಾಗಿಬಿಟ್ಟಿತ್ತಲ್ಲ; ಮೋಸದ ಕಹಿಯೂ ಅರಿವಾಗಬೇಕಿತ್ತು. ಮೊದಲು ನನ್ನ ಕಂಡೊಡನೆ ತಾರೆಯಂತೆ ಜಗಮಗಿಸುತ್ತಿದ್ದ ಕಣ್ಣುಗಳಲ್ಲಿ ಈ ಬಗೆಯ ನಿರ್ಲಕ್ಷ್ಯ, ’ನಿನ್ನ ಬದುಕು ನಿನಗೆ; ಎಲ್ಲೋ ಹೇಗೋ ಬದುಕಿಕೊಂಡು ಸಾಯಿ’ ಅನ್ನುವಂಥ ದ್ವೇಷ ಹೇಗೆ ಧಗಧಗಿಸುತ್ತದೆ ಎಂದಾದರೂ ಕಾಣಬೇಕಿತ್ತು.
ಅದರಿಂದಲಾದರೂ ನಿನ್ನ ಮೇಲೊಂದಿಷ್ಟು ಸಿಟ್ಟು ಹುಟ್ಟಿ ನಿನ್ನ ಮರೆಯಲು ಸುಲಭವಾಗುತಿತ್ತಲ್ಲವೇ? ಈ ಪರಿ ರಾತ್ರಿಗಳನ್ನು, ನೆನಪುಗಳು ಸುಡುವ ಅವಕಾಶ ಇಲ್ಲವಾಗುತಿತ್ತಲ್ಲವೇನೆ ಗೆಳತೀ?
ಹಾಗೆ ಅಷ್ಟು ನಿರ್ದುಷ್ಟವಾಗಿ ಹೋಗುವಾಗ, ವಿಲವಿಲ ಒದ್ದಾಡುವ ಹೃದಯವನ್ನು ನೇವರಿಸುವಂತಹ ಪುಟ್ಟನೋಟವೊಂದನ್ನು ಇತ್ತು ಹೋಗಿದ್ದರೆ ಜನುಮದ ಕ್ಷಣಗಳನ್ನೆಲ್ಲಾ ಅದರ ತೆಕ್ಕೆಯಲ್ಲಿ ಹಾಕಿ ಖುಷಿಯಿಂದ ಕಳೆದುಬಿಡುತ್ತಿದ್ದೆ. ’ನಿನ್ನದೇನೂ ತಪ್ಪಿಲ್ಲ; ಏನೋ ಸಮಸ್ಯೆಯಿಂದಾಗಿ ಹೊರಟಿದ್ದೀ, ಬದುಕಿನ ಯಾವುದೋ ಒಂದು ಸುಂದರ ತಿರುವಿನಲ್ಲಿ ನನಗಾಗಿ ಕಾಯುತಿರುತ್ತೀ’ ಎಂಬ ಭ್ರಮೆಯನ್ನು ಸತ್ಯವೆಂದೇ ಮನಸ್ಸಿಗೆ ನಂಬಿಸುತ್ತಾ ಅಂತಿಮವಾಗಿ ಸಾವಿನ ತಿರುವು ಬರುವವರೆಗೂ ಕಾಲ ಕಳೆಯುತ್ತಿದ್ದೆ. ನಮ್ಮ ಯುಗಗಳು ದೇವರಿಗೆ ಕ್ಷಣಗಳಂತೆ. ಅಂತಹ ಸಾವಿರ ಕ್ಷಣಗಳನ್ನು ಯುಗಗಳಂತಾದರೂ ಗರ್ಭಗುಡಿಯೊಳಗಿನ ಮೂರ್ತಿಯಂತೆ ಬಾಳಿ ಕಳೆದುಬಿಡುತ್ತಿದ್ದೆ.
ಹಾಗಾಗಲಿಲ್ಲ.
ನೀ ತೊರೆದ ಘಳಿಗೆಯಲ್ಲಿ ನಿಶ್ಯಬ್ದವೂ ಸಂತೈಸಲಿಲ್ಲ; ತಂಗಾಳಿಯೂ ಸಾಂತ್ವನ ಹೇಳಲಿಲ್ಲ. ಮೌನವಾಗಿ ನಿಂತ ನನ್ನ ಹಿಂದೆ ಅದೇ ಯುಗಗಳಂತಹ ಕ್ಷಣಗಳ ಕ್ಯೂ. ನೆನಪಿನ ಜೋಳಿಗೆ ಹೊತ್ತ ಫಕೀರನೆದುರು ಹಸಿದು ನಿಂತ ಬಕಾಸುರನಂತೆ ಕ್ಷಣಗಳು.
ಹಾಗೆ ಹೊರಟುಹೋಗಲು ಕಾರಣವಾದರೂ ಏನಿತ್ತು? ಕೇಳೋಣ ಅಂದುಕೊಂಡಿದ್ದೆ.
ಕೇಳಿಯೇ ಬಿಟ್ಟಿದ್ದರೆ ಮತ್ತೊಂದು ಅನಾಹುತವಾಗುತಿತ್ತು. ಮೊದಲಿಂದಲೂ ಆಸೆಪಟ್ಟದ್ದನ್ನು ಪಡೆದೇ ಅಭ್ಯಾಸ. ಅಮ್ಮನ ಖಾಲಿ ಕೈಗೆ ವಾಚು ಉಡುಗೊರೆ ಮಾಡಬೇಕೆಂದು ಯಾವಾಗನ್ನಿಸಿತ್ತೋ ಅದೇ ದಿನ ಮನೆಮನೆಗೆ ಪೇಪರ್ ಹಾಕಿ ಹಾಲಿನ ಪ್ಯಾಕೆಟ್ಟೆಸೆದು ತಿಂಗಳು ಮುಗಿಯುವುದರೊಳಗೆ ಟೈಟನ್ ವಾಚು ತಂದುಕೊಟ್ಟಿರಲಿಲ್ಲವೇ?
ಕುಡುಮಿ ವಿಧ್ಯಾರ್ಥಿಯೊಬ್ಬನಿಗಿಂತ ಜಾಸ್ತಿ ಮಾರ್ಕ್ಸು ಪಡೆಯಲೇಬೇಕೆಂದು ಯಾವಾಗನ್ನಿಸಿತ್ತೋ ಆಗೆಲ್ಲಾ ನಿದಿರಿಸುವುದೇ ಕಾಲಹರಣ ಅನ್ನಿಸತೊಡಗಿತ್ತಲ್ಲವ? ಮುಂದಿನ ಪರೀಕ್ಷೆಯಲ್ಲಿಯೇ ಹೆಚ್ಚು ಅಂಕ ಗಳಿಸಿ ತೋರಿಸಿರಲಿಲ್ಲವೇ?
ಹಾಗೆಯೇ (ನೀನೆಲ್ಲಾದರೂ ನನ್ನ ದುಃಖ ಕಡಿಮೆಯಾಗುತ್ತದೆಂದು ಊಹಿಸಿ ಸುಳ್ಳಿಗಾದರೂ) ತೊರೆಯಲು ಏನೋ ಒಂದು ಕಾರಣ ಹೇಳಿದ್ದರೆ ಅದನ್ನು ಜಯಿಸಲು ನನಗೆಷ್ಟು ಸಮಯ ಬೇಕಾಗುತಿತ್ತು ಹೇಳು? ಅದಕ್ಕೇ ಕಾರಣ ಕೇಳುತ್ತಿದ್ದ ಮನದ ಕತ್ತನ್ನು ಹಿಸುಕಿ ಮೌನವಾಗಿಸಿದೆ.
ಇನ್ನು ಮುಂದೇನೂ ಇಲ್ಲ. ಕನಸು, ವಾಸ್ತವಗಳು ಸುತ್ತಲಿಂದಲೂ ಅಟ್ಯಾಕ್ ಮಾಡಿದಾಗ ಆಯುಧ ಕಳಕೊಂಡ ಸೈನಿಕ. ಮನಸ್ಸು, ಸಾಗರದ ನಡುಮಧ್ಯೆ ದಿಕ್ಸೂಚಿ ಬೀಳಿಸಿಕೊಂಡ ನಾವಿಕ. ತೂರಾಡುವ ಹಡಗಿಲ್ಲದೇ ಅಲೆಗಳಿಗೂ ಮಜವಿಲ್ಲ. ತೂಗಾಡಿಸುವ ಗಾಳಿಯಿಲ್ಲದೇ ಹೂಗಳಿಗೂ ಖುಷಿಯಿಲ್ಲ. ಸತ್ತವನಂತಿರುವವನಿಗೆ ಬಡಿದು ಪ್ರಯೋಜನವೇನು ಎಂಬಂತೆ ಬೇರೆ ದುಃಖಗಳೆಲ್ಲ ಇನ್ಯಾರನ್ನೋ ಹುಡುಕಿಕೊಂಡು ಹೊರಟಿದೆ. ಜೀವ ಬಸಿದು ಪದಗಳಾಗುತಿರಲು ಬರೆಯಲೂ ಕೈ ನಡುಗುತಿದೆ ; ಬಹುಶಃ ನಿನ್ನ ಮೇಲೆ, ಬದುಕಿನ ಮೇಲೆ, ಪ್ರೀತಿಯ ಮೇಲೆ ಮತ್ತು ದೇವರ ಮೇಲೆ ಬರೆಯುತ್ತಿರುವ ಕೊನೆಯ ಅಕ್ಷರಗಳಿವು.
ಓದಿ, ಲೊಚಗುಟ್ಟಿಯೋ, ಕನಿಕರಿಸಿಯೋ, ಧಿಕ್ಕರಿಸಿಯೋ, ನೇವರಿಸಿಯೋ, ಹರಿದು ಹಾಕಿಯೋ, ಫ್ರೇಮ್ ಹಾಕಿಸಿಯೋ, ಮದುವೆ ಅಲ್ಬಮ್ಮಿನ ಫೋಟೋ ಹಿಂದುಗಡೆ ಯಾರಿಗೂ ಕಾಣದಂತಿರಿಸಿಯೋ, ಚಿಂದಿ ಮಾಡಿ ಕಸದ ಬುಟ್ಟಿಗೆಸೆದೋ….
ಸಾರ್ಥಕವಾಗಿಸು.
ನಿಮ್ಮದೊಂದು ಉತ್ತರ