ಒಂದು ಕತೆ: ಏಳು ಮಲ್ಲಿಗೆ ತೂಕದ ಹುಡುಗಿ
Posted ಜೂನ್ 10, 2009
on:- In: ಒಂದು ಕತೆ
- 5 Comments
– ರಂಜಿತ್ ಅಡಿಗ, ಕುಂದಾಪುರ
"ಬೇಕಾಗಿದ್ದಾರೆ!
ಇಪ್ಪತ್ತರ ಆಸುಪಾಸಿನಲ್ಲಿರುವ, ಮುಗ್ಧ ಕಂಗಳ, ಚೆಲುವಾದ ಏಳುಮಲ್ಲಿಗೆ ತೂಕವಿರುವ ಹುಡುಗಿಯೊಬ್ಬಳು ಬೇಕಾಗಿದ್ದಾಳೆ. ಕೂಡಲೇ ಸಂಪರ್ಕಿಸಿ,"
ಜನಪ್ರಿಯ ಪತ್ರಿಕೆಯೊಂದರ ಮೂರನೇ ಪುಟದ ಮೂಲೆಯಲ್ಲಿದ್ದ ಈ ಚಿಕ್ಕ-ಚೊಕ್ಕ ಜಾಹೀರಾತನ್ನು ಓದಿ ಯಾವುದೋ ಶ್ರೀಮಂತ ಪಡ್ಡೆ ಹುಡುಗನ ಕರಾಮತ್ತಿರಬೇಕೆಂದುಕೊಂಡು ಪುಟ ಮಗುಚಿ ಹಾಕಿದವರು ಕೆಲವರಾದರೆ, ’ಏಳು ಮಲ್ಲಿಗೆ ತೂಕದ ಹುಡುಗಿಯಾ!’ ಎಂದು ಮನದಲ್ಲೇ ಚಪ್ಪರಿಸಿ ತಮ್ಮ ಫ್ರೆಂಡ್ಸ್ ಗಳಿಗೆ ಹೇಳಿ ನಗಲು ಒಳ್ಳೆಯ ವಿಷಯ ಸಿಕ್ಕಿತಲ್ಲ ಎಂದು ಸಂಭ್ರಮ ಪಟ್ಟವರು ಕೆಲವರು. ಇನ್ನೂ ಬೇರೆ ಥರದವರು ಎದುರು ಮನೆಯ ಧಡೂತಿ ಹುಡುಗಿಯನ್ನು ಸಂಪರ್ಕಿಸಲು ಹೇಳಿದರೆ ಹೇಗೆ? ಎಂದು ಜೋಕ್ ಮಾಡಿ ನಕ್ಕರು.
ಇಂತಹ ವಿಚಿತ್ರ ಜಾಹೀರಾತು ಪತ್ರಿಕೆಗೆ ನೀಡಿದ ಮಹಾನುಭಾವ ಸಂದೀಪ್ ಜಾಹೀರಾತನ್ನು ನೋಡಿ ಮುಗುಳ್ನಗೆ ಸೂಸಿದ. ಕೂಡಲೇ ಮೊಬೈಲ್ ನಿಂದ ಪತ್ರಿಕೆಗೆ ಕರೆ ಮಾಡಿದ. ಯಾವುದಾದರೂ ಲೆಟರ್ ಬಂದಲ್ಲಿ ತಕ್ಷಣವೇ ತನಗೆ ಕಾಲ್ ಮಾಡುವಂತೆ ತಿಳಿಸಿದ. ನಂತರ ಅಲೋಚನಾಮಗ್ನನಾದ. ಮನದ ತುಂಬಾ ಒಂದೇ ಪ್ರಶ್ನೆ ಲಾಸ್ಯವಾಡುತಿತ್ತು. ಅಂತಹ ಹುಡುಗಿ ಸಿಗುತ್ತಾಳಾ? ಆ ರೀತಿಯ ಹುಡುಗಿಯೆಂದರೆ ಏಳು ಮಲ್ಲಿಗೆ ತೂಕದ ಹುಡುಗಿಯಲ್ಲ!
ಮತ್ತೆ..?
************
ಬದುಕಿನ ತುಂಬ ಖಾಲಿ ಆಕಾಶದಂತಹ ಏಕತಾನತೆ. ಆಸ್ತಿ, ಅಂತಸ್ತು, ಬಂಗಲೆ ಬ್ಯಾಂಕ್ ಬ್ಯಾಲನ್ಸ್, ತಾಯಿ ಮಮತೆ, ಫ್ರೆಂಡ್ಸ್ ಹರಟೆ, ಹಣ ನೀಡುವ ಆನಂದ ಎಲ್ಲಾ ಇದ್ದರೂ ತುಂಬಿದ ಕೊಡದ ಚಿಕ್ಕ ತೂತಿನಂತಹ ಸಣ್ಣ ಕೊರತೆ. ಮನದಲ್ಲಿ ಬತ್ತಿದ ಉತ್ಸಾಹದ ಒರತೆ.
ಇಂತಹಾ ಖಾಲಿ-ಖಾಲಿಯಾದ ಬದುಕಿನ ಕೊಡದಲ್ಲಿ ಕೊಂಚ ಉತ್ಸಾಹ, ಉನ್ಮಾದ, ರೋಚಕತೆ, ರಮ್ಯತೆ ತುಂಬುವುದು ಹೇಗೆ?
ಅದಕ್ಕೆ ಉತ್ತರವಾಗಿ ಹೊಳೆದದ್ದೇ ಆ ವಿಚಿತ್ರ ಜಾಹೀರಾತು.
ಎಲ್ಲೋ ದೂರದಲ್ಲಿ, ರೂಮಿನ ಕದವಿಕ್ಕಿ ಮೂಲೆಯೊಂದರಲ್ಲಿ ಕುಳಿತು, ಜಾಹೀರಾತು ಓದಿ ಜಾಣತನದ ಉತ್ತರ ನೀಡುವ ತುಂಟ ಹುಡುಗಿಗಾಗಿ ಈ ಶೈಲಿಯ ಅನ್ವೇಷಣೆಗೆ ಕೈ ಹಾಕಿದ್ದ ಸಂದೀಪ್. ಅಂತಹ ಒಂದು ಅಲೋಚನೆ, ಅದರಲ್ಲಿರುವ ಕುತೂಹಲದಿಂದ ಅವನ ಬದುಕಿಗೆ ಎಂದೂ ಇರದಂತಹ ವಿಚಿತ್ರ ಕಳೆ ಬಂದುಬಿಟ್ಟಿತ್ತು. ತಾನೆಂದೂ ಅರಿಯದ ವಿಚಿತ್ರ ಹುರುಪು ಹುಟ್ಟಿತ್ತು. ಪ್ರತಿದಿನ ಪತ್ರಿಕೆಯ ಫೋನ್ ಕರೆಗಾಗಿ ಕಾಯುತ್ತ ಪರಿತಪಿಸುವುದರಲ್ಲಿ ಏನೋ ಆನಂದ, ಹರುಷ ಅವನಲ್ಲಿ.
ಮೂರು ದಿನ ಕಳೆದರೂ ಪತ್ರಿಕೆಯಿಂದ ಏನೂ ಉತ್ತರ ಬರದಾದಾಗ ತಾನೇ ಪರಿಸ್ಥಿತಿ ತಿಳಿದುಕೊಳ್ಳಲೋಸುಗ ಫೋನ್ ಮಾಡಿದ. "ನಾನು ಸಂದೀಪ್ ಮಾತಾಡ್ತಿರೋದು, ಏನಾದ್ರೂ ರೆಸ್ಪಾನ್ಸ್ ಬಂತೇ ನನ್ನ ಜಾಹೀರಾತಿಗೆ?"
"ಸಾರ್.. ನಿಮ್ಗೆ ಒಂದು ಸ್ಯಾಡ್ ನ್ಯೂಸ್..!" ಅಂದನಾತ.
ಆಶ್ಚರ್ಯದಿಂದ," ಒಂದೂ ಲೆಟರ್ ಬಂದಿಲ್ವಾ?!"
"ಅಯ್ಯೋ! ಹಾಗಲ್ಲ ಸರ್… ರಾಶಿ-ರಾಶಿ ಲೆಟರ್ಸ್ ಬಂದಿವೆ, ಒಟ್ಟೂ ಸಧ್ಯಕ್ಕೆ ಮುನ್ನೂರ ಎಪ್ಪತ್ನಾಕು ಸರ್!…"
"ಉಸ್ಸ್ ಸ್.." ಎಂಬ ಉದ್ಗಾರ ಅವನಿಗರಿವಿರದಂತೆಯೇ ಹೊರಹೊಮ್ಮಿತು. ಫೋನ್ ಇಟ್ಟ ನಂತರ ಆಲೋಚಿಸಿದಾಗ ನಗು ಉಕ್ಕಿತವನಿಗೆ. ಯಾವುದೇ ಹುಡುಗಿ ತನ್ನ ಸೌಂದರ್ಯದ ಹೊಗಳಿಕೆಯನ್ನು ತನ್ನದಲ್ಲ ಅಂದುಕೊಳ್ಳುತ್ತಾಳಾ? ತನ್ನ ವಯಸ್ಸು ಇಪ್ಪತ್ತಲ್ಲವೆಂದೂ, ತನ್ನ ಕಣ್ಣಲ್ಲಿ ಮುಗ್ಧತೆ ಇಲ್ಲವೆಂದೂ ಯಾವತ್ತಾದರೂ ಒಂದು ಕ್ಷಣವಾದರೂ ಅಲೋಚಿಸುತ್ತಾಳಾ?
ಇಂತಹ ವಿಚಾರ ಮನದಲ್ಲಿ ಮೂಡಿ ಮೊಗದಲ್ಲಿ ನಗು ತರಿಸಿತು.
ಮತ್ತೆ ಆಲೋಚನಾಲಹರಿ ಆ ಕನಸಿನ ಏಳುಮಲ್ಲಿಗೆ ತೂಕದ ಹುಡುಗಿಯತ್ತ ವಾಲಿತು. ಮುನ್ನೂರ ಎಪ್ಪತ್ನಾಕರಲ್ಲಿ ಒಬ್ಬಳಾದರೂ ಅಂತವಳು ಇರುವುದಿಲ್ಲವಾ ಎನ್ನುವ ಆಸೆ ಅವನಲ್ಲಿ ಅರಳಿ ಒಂದು ನಿರ್ಧಾರಕ್ಕೆ ಬಂದ.
ತಾಳ್ಮೆಯಿಂದ, ಪ್ರೀತಿಯಿಂದ ಆ ಎಲ್ಲಾ ಪತ್ರಗಳನ್ನು ಒಂದೊಂದಾಗಿ ಓದುವ ನಿರ್ಧಾರವದು.
***********
"ತೂಕವೇನೋ ಏಳುಮಲ್ಲಿಗೆಯದೇ.. ಕಣ್ಣತಕ್ಕಡಿ ಪ್ರೀತಿಯಿಂದ ಅಳೆದರೆ ಮಾತ್ರ!
ಹೂವ ತೂಕ ಕಟ್ಟಿಕೊಂಡು ದುಂಬಿಗೇನಾಗಬೇಕು? ಅದಕ್ಕೆ ಸರಾಗವಾಗಿ ಪರಾಗ ಸಿಕ್ಕರೆ ಆಯಿತು. ಆದರೆ ಅನುರಾಗಕ್ಕಾಗಿ ಹುಡುಕುವ ದುಂಬಿ ನೋಡಿದ್ದು ಇದೇ ಮೊದಲ ಬಾರಿ ಕಣ್ರೀ..:)"
ರಾತ್ರಿ ಮೂರು ಘಂಟೆಯಾದರೂ ನಿದ್ರಿಸದೇ, ಸದ್ದಿರದ ನಿಶ್ಯಬ್ಧದಲ್ಲಿ ರಾಶಿ ರಾಶಿ ಪತ್ರಗಳನ್ನು ಗುಡ್ಡೆಹಾಕಿಕೊಂಡು ಒಂದೊಂದೇ ಬಿಡಿಸಿ ಓದುತ್ತಿದ್ದರೆ ಚಿಕ್ಕ ಲಹರಿ ಮೂಡಿಸಿದ್ದೆಂದರೆ ಈ ಪತ್ರವೇ. ಹುಡುಗಿಯನ್ನು ಹೂವಿಗೆ ಹೋಲಿಸಿದರೆ ಆಕೆ ತನ್ನನು ದುಂಬಿಗೆ ಹೋಲಿಸಿ, ಅಲ್ಪ ಕಾವ್ಯಾತ್ಮಕವಾಗಿಯೂ ಸ್ವಲ್ಪ ಹುಡುಗಾಟಿಕೆಯಿಂದಲೂ ಬರೆದದ್ದು ನೋಡಿ ಈಕೆ ಬುದ್ಧಿವಂತೆ ಅನ್ನಿಸಿತವನಿಗೆ. ಪತ್ರದ ಅಡಿಭಾಗದಲ್ಲಿ ಹೆಸರಿಗಾಗಿ ಕಣ್ಣಲ್ಲೇ ತಡಕಾಡಿದ. ಅಲ್ಲಿ ಹೆಸರಿರಲಿಲ್ಲ. ಬದಲಿಗೆ ಚಿಕ್ಕ ನಕ್ಷತ್ರ ಚಿಹ್ನೆಯೂ ಅದರ ಕೆಳಗೆ ದೂರದಿಂದ ನೋಡಿದರೆ ಸಹಿಯಂತೆ ಕಾಣುವ ಪು. ತಿ. ನೋ. ಎಂಬ ಸೂಚನೆಯೂ ಇತ್ತು. ಲಗುಬಗನೇ ಪುಟ ಮಗುಚಿದ.
ಅಲ್ಲಿ-
"ನೀವಿಟ್ಟ ಪರೀಕ್ಷೆಯಲಿ ನಾನು ಯಶಸ್ವಿಯಾಗದೇ ಇದ್ದಿದ್ದರೆ ಈ ಪತ್ರ ಕಸದ ಬುಟ್ಟಿಯಲ್ಲಿರುತ್ತಿತ್ತು. ನನ್ನ ಹೆಸರಿಗಾಗಿ ಇಲ್ಲಿ ನೋಡಿದಿರೆಂದರೆ ಕೊನೆ ಪಕ್ಷ ಇಷ್ಟವಾಯಿತು ಎಂದಾಯ್ತು. ಥ್ಯಾಂಕ್ಸ್. ಆದರೆ ನನ್ನ ಹೆಸರು ಖಂಡಿತಾ ಹೇಳಲಾರೆ.
ನಾನು ಯಾರು ಎಂದು ತಿಳಿದುಕೊಳ್ಳಬೇಕಾದರೆ ತಕ್ಷಣ ಕೆಳಗಿನ ನಂಬರ್ ಗೆ ಡಯಲ್ ಮಾಡಿ.
ಇಷ್ಟವಾಗಿರದಿದ್ದರೆ ಕಸದ ಬುಟ್ಟಿ ಕಾಯುತಿದೆ, ತುಂಬಿಸಿ."
ತಾನು ಮಾಡುತ್ತಿರುವುದು ಪರೀಕ್ಷೆ ಅಂತಲೂ, ತನ್ನೆದುರಿಗೆ ಪತ್ರಗಳ ರಾಶಿ ಇರುವುದೆಂದೂ ಸರಿಯಾಗಿ ಊಹಿಸಿದ್ದಾಳೆ. ಕಸದ ಬುಟ್ಟಿಯನ್ನು ಕರೆಕ್ಟಾಗಿ ಕಲ್ಪಿಸಿಕೊಂಡಿದ್ದಾಳೆ. ಆದರೆ ಮುಂಜಾವಿನ ಮೂರು ಘಂಟೆ ಎಂಬ ಈಗಿನ ಯುವಜನರ ಅರ್ಧರಾತ್ರಿಯಲ್ಲಿ ಪತ್ರ ಓದುತ್ತಿರುವೆನೆಂದು ಅಂದುಕೊಂಡಿರಲಿಕ್ಕಿಲ್ಲ. ಅಂದುಕೊಂಡಿರಲಾರಳು ಎಂಬ ಕಾರಣಕ್ಕೇ ಈಗಲೇ ಫೋನ್ ಮಾಡಿ ತಾನೇ ಬುದ್ಧಿವಂತನೆನ್ನಿಸಿಕೊಳ್ಳಬೇಕು. ಉಳಿದೆಲ್ಲ ಪತ್ರಗಳನ್ನು ಬದಿಗೆಸೆದು ಫೋನ್ ಗೆ ಕೈ ಹಾಕಿದ.
ಆ ಕಡೆ ಫೋನ್ ರಿಂಗಾಗುತಿತ್ತು. ಸಂದೀಪ್ ಉಸಿರು ಬಿಗಿ ಹಿಡಿದಿದ್ದ. ಮನೆಯಲ್ಲಿ ಬೇರೆ ಯಾರಾದರೂ ಫೋನ್ ಎತ್ತಿದರೆ? .. " ಹಲೋ.." ಎಂದ ನಿಧಾನವಾಗಿ. ಆ ಕಡೆ ಲೈನ್ ನಲ್ಲಿರುವವರ ಪ್ರತಿಸ್ಪಂದನೆ ಕೇಳುವುದಕ್ಕಾಗಿ ಉತ್ಸುಕನಾಗಿದ್ದ.
"ಯಾರ್ರೀ.. ಅದು ಇಷ್ಟ್ ಹೊತ್ನಲ್ಲಿ..?" ಗಡಸು ಹೆಂಗಸಿನ ಬೈಗುಳದಂತಹ ಉತ್ತರ!
" ನಾನು.. ನಾನು.. ಸಂದೀಪ್.. ಅದೂ.. ಏಳು..ಮ.." ಎಮ್ದು ಬಡಬಡಿಸುತ್ತಿರುವಾಗ "ಬೆಳ್ಳಂಬೆಳಿಗ್ಗೆ ಮೂರುಘಂಟೆಗೆ ನಿದ್ರೆ ಹಾಳುಮಾಡಿ ಏಳು ಅನ್ನೋಕೆ ನೀನ್ಯಾವನಯ್ಯ?!" ಎಂದು ಸಿಡುಕಿನಿಂದ ಉತ್ತರಿಸಿದಳಾಕೆ.
ಗೊಂದಲಮಯನಾದ ಸಂದೀಪ್ ಇನ್ನೇನು ಫೋನ್ ಇಡಬೇಕು ಅಂದುಕೊಳ್ಳುತಿರುವಾಗ ಆ ಕಡೆಯಿಂದ ಸಿಟ್ಟಿನ ಗಡಸು ಹೆಂಗಸಿನ ಧ್ವನಿ ಮರೆಯಾಗಿ ಸಿಹಿಯಾದ ಉಲಿತವೊಂದು ಕೇಳಿಸಿತು.." ಪ್ಲೀಸ್.. ಫೋನ್ ಇಟ್ಟುಬಿಡಬೇಡಿ!"
ಆಶ್ಚರ್ಯವಾಯಿತವನಿಗೆ. "ಅಂದರೆ ಇಷ್ಟು ಹೊತ್ತು ಮಾತಾಡಿದ್ದು ನೀವೇನಾ?!"
ಅವಳು ನಸುನಕ್ಕು," ಹ್ಮ್.. ಕಾಲೇಜಿನಲ್ಲಿ ಓದುತ್ತಿದ್ದಾಗ ಮಿಮಿಕ್ರಿಯಲ್ಲಿ ಪ್ರೈಜ್ ಬಂದಿತ್ತು, ಅಮಿತಾಭ್ ಬಚ್ಚನ್ ತರಹ ಮಾತಾಡೋಣ ಅಂದ್ಕೊಂಡೆ. ನಿಮ್ಗೆ ಅನುಮಾನವಾಗುತ್ತದೆಂದು…"
ಸಂದೀಪ್ ಬೇಸ್ತುಬಿದ್ದಿದ್ದ. ತುಂಟ ಹುಡುಗಿಯೊಬ್ಬಳನ್ನು ಗೆಳತಿಯನ್ನಾಗಿ ಮಾಡಿಕೊಳ್ಳೋಣವೆಂದರೆ ತನ್ನನ್ನೇ ಸುಲಭವಾಗಿ ಗೋಳುಹೋಯ್ದುಕೊಂಡಳಲ್ಲಾ ಅಂದುಕೊಂಡ. ಅವಳ ಬಗ್ಗೆ ಮನಸ್ಸು ಏನೆಲ್ಲಾ ಕಲ್ಪಿಸಿಕೊಳ್ಳುತಿತ್ತು. ಕೊಂಚ ಕ್ಷಣಗಳ ಮೌನದಲ್ಲಿ ಅವನ ಮನದಾಳದೊಳಗೆ ಒಂದು ನಿರ್ಧಾರ ಮೆದುವಾಗಿ ಹದಗಟ್ಟುತ್ತಿತ್ತು.
"ಹಲೋ… ಏನಾಲೋಚಿಸುತ್ತಿದ್ದೀರಿ?"
ನಿರ್ಧಾರ ಗಟ್ಟಿಯಾಯಿತು. " ನನ್ನನ್ನು ಮದುವೆಯಾಗುವಿರಾ?" ಕೇಳಿದ.
"ವ್ಹಾಟ್?!" ಎಂಬ ಉದ್ಗಾರ ಅವಳಾಶ್ಚರ್ಯದ ಮೇರೆ ಸೂಚಿಸಿತು.
ಅವನಲ್ಲಿ ಅದೇ ಮಾತಿನ ಖಚಿತತೆ. ಅದೇ ನಿರ್ಧಾರದ ಗಟ್ಟಿತನ. ಪುನಃ ಅದೇ ಪ್ರಶ್ನೆ ಕೇಳಿದ.
"ಅಲ್ರೀ.. ನೀವು ನನ್ನನ್ನ ನೋಡೇ ಇಲ್ಲ?!"
" ನೋಡಬೇಕಾಗಿಲ್ಲ!"
"ನಾನು ಮುದ್ಕಿಯಾಗಿರಬಹುದು!" ಎಂದಳು; ದನಿಯಲ್ಲಿ ಶುದ್ಧ ತುಂಟತನ.
"ಪರವಾಗಿಲ್ಲ!"
"ಮ್..ನಿಮಗೆ ಬೇಕಾಗಿರೋದು ಏಳುಮಲ್ಲಿಗೆ ತೂಕದವಳಲ್ಲವೇ? ಆದ್ರೆ ನಾನು ಸ್ವಲ್ಪ ಡುಮ್ಮಿ ರೀ.."
"ಆದರೂ ಸರಿ"
"ಇಷ್ಟಕ್ಕೂ ನನ್ನಲ್ಲೇನು ಇಷ್ಟ ಆಯಿತು ನಿಮಗೆ?"
"ನಿಮ್ಮಲ್ಲಿರೋ ಜೀವಂತಿಕೆ!"
ಒಂದು ಕ್ಷಣದ ಮೌನ. ಆ ಅವಧಿಯಲ್ಲಿ ಇಬ್ಬರೂ ಭಾವವನ್ನು ಅರಗಿಸಿಕೊಳ್ಳಲು ಪ್ರಯತ್ನಿಸಿದರು. ಅವನ ಆ ನಿಜಾಯಿತಿಯ ಉತ್ತರಕ್ಕೆ ಅವಳ ತುಂಟತನ ಅಡಗಿ ತಂಪು ಹವೆಯೊಂದು ತಟ್ಟಿಹೋದಂತೆ ತನ್ಮಯಳಾದಳು. ಸಂದೀಪ್ ಮತ್ತೆ ಮುಂದುವರಿಸಿದ." … ಹೌದು. ಬತ್ತಿದ ಬದುಕಲ್ಲಿ ಉತ್ಸಾಹ ಮೂಡಿಸುವ ಚಿಲುಮೆ ನಿಮ್ಮಲ್ಲಿ ಧ್ವನಿಸುತ್ತಿದೆ. ನಿಮ್ಮ ಮುಖ ನಿಮ್ಮ ಮಾತಿನ ಲಹರಿಯಲ್ಲೇ ಕಾಣಿಸುತಿದೆ. ನಿಜವಾಗಿಯೂ ನನಗೆ ಬೇಕಿರುವುದು ಏಳುಮಲ್ಲಿಗೆತೂಕದ ಹುಡುಗಿಯ ಸ್ನೇಹವೇ. ಆದರೆ ಆ ತೂಕ ಮನಸ್ಸಿಗೆ ಸಂಬಂಧಿಸಿದ್ದು.ನಿಮ್ಮ ಮನಸ್ಸೂ ಮಲ್ಲಿಗೆಯಂಥದ್ದು, ಅಷ್ಟೇ ಮಧುರ… ಅಷ್ಟೇ ಕಂಪು!"
ಅವಳು ನಕ್ಕಳು," ಮತ್ತೆ..?"
"ಚೈತನ್ಯದ ಸುಗಂಧ ನಿಮ್ಮಲ್ಲಿದೆ. ಅದರ ಘಮ ಇಲ್ಲೂ ನನಗರಿವಾಗುತಿದೆ. ಹೇಳಿ ನನ್ನನ್ನು ಮದುವೆಯಾಗುತ್ತೀರಾ?"
ಅವಳು ಮತ್ತೊಮ್ಮೆ ನಕ್ಕು ಫೋನ್ ಇಟ್ಟುಬಿಟ್ಟಳು.
ಸಂದೀಪ್ ವಿಜಯದ ನಿಟ್ಟುಸಿರಿಟ್ಟು ಮೆಲುವಾದ ಅವಳ ದನಿಯ ಗುಂಗಿನಲ್ಲಿಯೇ ಪರವಶನಾಗುತ್ತಿದ್ದ.
ಅವಳು ಫೋನಿಟ್ಟು ಎದುರಿಗಿರುವ ಕನ್ನಡಿಯಲ್ಲಿ ತನ್ನ ಮೊಗ ನೋಡಿ ನಸುನಕ್ಕಳು.
5 Responses to "ಒಂದು ಕತೆ: ಏಳು ಮಲ್ಲಿಗೆ ತೂಕದ ಹುಡುಗಿ"

GGGGGGGGGGGGGGGGG


its realy intresting.i liked it


i m in office.nijvaglu enjoy madhe ,ತೂಕವೇನೋ ಏಳುಮಲ್ಲಿಗೆಯದೇ.. ಕಣ್ಣತಕ್ಕಡಿ ಪ್ರೀತಿಯಿಂದ ಅಳೆದರೆ ಮಾತ್ರ! e line tumba estta aythu…..continue like this only:) all the best


It is a great story, good feelings and talented answers. I love this story.

1 | Twitted by uniquesupri
ಜೂನ್ 10, 2009 at 12:04 ಅಪರಾಹ್ನ
[…] This post was Twitted by uniquesupri – Real-url.org […]