ಕಲರವ

Archive for ಮೇ 2009

– ನವಿತಾ.ಎಸ್, ಸಾಗರ

ಈ ಸಂಜೆಯ ಬಾನಲ್ಲಿ ಇನ್ನೂ ಚುಕ್ಕಿಗಳು ಬಹಳ ಮೂಡಿಲ್ಲ. ಆದರೆ ಪ್ರೀತಿಯ ಚುಕ್ಕಿಗಳು ಅಲ್ಲಲ್ಲಿ ಜಗದ ಮನಸುಗಳಲ್ಲಿ ಮೂಡುತ್ತಿವೆ. ಜಗದ ಅಚ್ಚರಿಗೆ ಕಾರಣವೇ ಈ ಪ್ರೀತಿ. ಈ ಜಗತ್ತು ಒಂದಲ್ಲ ಒಂದು ದಿನ ನಿರ್ಮಲ ಪ್ರೇಮವನ್ನು ಪರಿಗಣಿಸಲಿದೆ. ಈ ಪ್ರೀತಿಯಲ್ಲಿ ಅದೆಂತಹ ಸೆಳೆತಗಳು, ಎಷ್ಟೋಂದು ನೋಟಗಳು! ಈ ಜಗದ ನಿಯಮಕ್ಕೆ ಮೂಲ ಕಾರಣವೇ ಪ್ರೀತಿ. ಪ್ರತಿ ಗಾಳಿಯ ಸ್ಪರ್ಶಕ್ಕೂ ಮರಗಳು ತೂಗುವುದಿಲ್ಲವೇ? ಪ್ರತಿ ಗುಟುಕಿಗೂ ಪಕ್ಷಿಗಳು ಹಪಹಪಿಸುವುದಿಲ್ಲವೇ? ಇದೆಲ್ಲವೂ ಪ್ರೀತಿಗಾಗಿ.

ಪ್ರಕೃತಿಯಲ್ಲೂ, ನಮ್ಮಲ್ಲೂ ಕೂಡ ಹಾಗೆಯೇ…
ಜಗದ ನಿಯಮದಲ್ಲಿ, ಒತ್ತಡದಲ್ಲಿ ಸಿಕ್ಕ ನಮ್ಮ ಪಾಡು

ವಿಷಣ್ಣತೆಯ ತಣ್ಣಗಿನ ಬದುಕಿನೊಳಗೆ ಕುದಿಯುವ ಮನಸ್ಸುಗಳಂತೆ. ಅಂತಹ ಮನಸ್ಸಿಗೆ ಮುದನೀಡುವ ಕಾಲವೇ ಈ ವಸಂತ.
ಅದಕ್ಕೇ ನಾನು ವಸಂತನನ್ನು ಕಾಯುತ್ತಿರುವುದು. ಮತ್ತೆ ನನ್ನಲ್ಲೂ ವಸಂತ ಬರುತ್ತಾನೆಂದರೆ ಸಾಕು, ಏನೋ ಸಂಭ್ರಮ… ವಸಂತನಿರದ ಮತ್ಯಾವ ಕಾಲವೂ ಕಾಲವೇ ಅಲ್ಲವೆನ್ನುವ ಹುಚ್ಚು ಭಾವ… ನಾನು ವಸಂತನಿಗಾಗಿ ಪ್ರತಿಕ್ಷಣವೂ ನಿರೀಕ್ಷಿಸುವ ಅಭಿಸಾರಿಕೆಯಾದೆ.

ಈ ವಸಂತ ಯಾವಾಗ ಬರುವನೋ… ಗೋತ್ತೇ ಇಲ್ಲ. ಸುಳಿವಿಲ್ಲದೇ ಬರುತ್ತಾನೆ. ನಿನ್ನೆವರೆಗೂ ತಣ್ಣನೆ ಆವರಿಸಿಕೊಂಡಿದ್ದ ಶಿಶಿರನ ಹಿಡಿತವನ್ನು ಮೆಲ್ಲನೆ ಸರಿಸಿ ಬೆಳಗಾಗುವಷ್ಟರಲ್ಲಿ ಬಂದಿದ್ದಾನೆ. ಮಧುರವಾಗಿ ಮೊಳಗಿದ ಕೋಗಿಲೆಯ ಧ್ವನಿ ಕೇಳಿಸಿದಾಗಲೇ ಗೊತ್ತಾಗಿದ್ದು ಅವನು ಬಂದಿದ್ದಾನೆಂದು. ಇಷ್ಟು ದಿನ ಎಲ್ಲಿಗೆ ಹೋಗಿದ್ದವೋ ಸುಳಿವೇ ಇಲ್ಲದ, ಹೆಸರೇ ತಿಳಿಯದೀ ಹಕ್ಕಿಗಳು, ಕೆಂಪನೆ ಹೊಳೆವ ರತ್ನಗಳಂತಹ ಹೂವನ್ನು ಅಲಂಕರಿಸಿಕೊಂಡಿದ್ದ ಗಿಡಗಳು, ಮಂಜಿನ ಜೋಲಿಯನ್ನು ಕಟ್ಟಿದ್ದವು. ಇದೆಲ್ಲ ಆ ಮಾಯಗಾರನ ಆಟವೇ ಸರಿ…

ಈ ಸುಗಂಧ… ಗಾಳಿಯಲ್ಲೆಲ್ಲಾ ಅದರದೇ ಘಮಲು… ಈ ಹೂವಿನ ಗಿಡದಲ್ಲಿ ಅದ್ಯಾವಾಗ ಇಷ್ಟೋಂದು ಬಣ್ಣದ ಹೂವುಗಳಿದ್ದವೋ, ಮೊಗ್ಗು ಬಿಟ್ಟಿದುದೇ ಜ್ಞಾಪಕವಿಲ್ಲ, ಈ ವಸಂತನ ಸ್ಪರ್ಶ ಮಾತ್ರಕ್ಕೆ ಅವುಗಳ ಮೈ ಪುಳಕಗೊಂಡು ಹೂವರಳಿ, ಅದು ದುಂಬಿಗೂ ತಿಳಿದು, ಇಲ್ಲಿ ಈಗ ಅದರದೇ ಝೇಂಕಾರ ಮೂಡಿದೆ, ಇದೇ ತಾನೇ ಪ್ರೀತಿ…?
ಈ ಪ್ರಕೃತಿಯಲ್ಲಿ ಇಂದು ಸಿಂಗಾರೋತ್ಸವ. ಈ ಪ್ರಕೃತಿಯ ಮನೆಯ ಮೂಲೆ ಮೂಲೆಯಲ್ಲೂ ತರತರದ ಬಣ್ಣ. ಈ ಹಸಿರು ಮಂಟಪ, ಚಿಗುರಿನ ತೋರಣ, ಹೂಗಳ ಸುಂದರ ರಂಗೋಲಿ, ಜೊತೆಗೆ ದುಂಬಿಯ ಮಂಗಳವಾದ್ಯ, ಹಕ್ಕಿಗಳ ತಾಳ, ಮಲ್ಲಿಗೆಯ ಸುಗಂಧ, ಮೈತುಂಬ ರೋಮಾಂಚನ.

ವಸಂತ ಬರುವುದು ಹೀಗೆಯೇ… ಅವನು ಸುಮ್ಮನೆ ಬರುವುದೇ ಇಲ್ಲ. ಇನ್ನೇನು ಎಲ್ಲವೂ ಮುಗಿಯಿತು ಎನ್ನುವಾಗ ಪ್ರತಿ ಜೀವಿಯಲ್ಲೂ ಹೊಸತನ ತರುತ್ತಾನೆ. ಹೊಸ ಹುರುಪು ತುಂಬುತ್ತಾನೆ. ವಸಂತ ಬಂದರು ಸಾಕು ನನ್ನ ಮನಸ್ಸಿನಲ್ಲಿರುವ ಎಲ್ಲಾ ಜಂಜಾಟಗಳನ್ನು ಮರೆತು ಕ್ಷಣಕಾಲವಾದರೂ ಅವನ ಮಧುರ ಸಾನಿಧ್ಯದಲ್ಲಿ ಸಾಂತ್ವನಗೊಳ್ಳುತ್ತೇನೆ. ಹಾಗಾಗಿ ವಸಂತನೇ ಬೇಗ ಬಾ…

ಮಬ್ಬು ಮುಗಿಲ ಹಿಂದೆ ಇದ್ದೇ ಇರುವ
ಸೂರ್ಯನಂತೆ ಈಗ ನನ್ನಲ್ಲಿ ಉಳಿದಿರುವುದೊಂದೇ
ಒಂದು… ಅದು ನಿರೀಕ್ಷೆ,
ಮತ್ತೆ ಮತ್ತೆ ಮತ್ತೊಮ್ಮೆ ಬಾ ವಸಂತ… 

– ಶ್ರೀಕಾಂತ್.ಎನ್.ಎಸ್, ಬೆಂಗಳೂರು

ನಮ್ಮ ನಡುವಿನ, ಈಗಿನ ಹೆಣ್ಣು ಮಕ್ಕಳ ನೆನೆದರೆ ಕಣ್ಣ ಮುಂದೆ ಬರುವುದು ಜೀನ್ಸು, ಹೈ ಹೀಲ್ಸು, ಬಳುಕುವ ನಡಿಗೆ. ಇದೆಲ್ಲದರ ಸಂಗಮವೇ, ಹುಡುಗರ ಹರಿದಿರೋ ಜೇಬು! ಒಬ್ಬ ಹುಡುಗಿ ಬಂದು ತನ್ನನ್ನು ಮಾತಾಡಿಸುತ್ತಿದ್ದಂತೆಯೇ ಹುಡುಗರಿಗೆ ಎಲ್ಲಿಲ್ಲದ ರೋಮಾಂಚನ, ಆನಂದ. ತಮ್ಮದೇ ಆದ ಲೋಕಕ್ಕೆ ಹೋಗಿಬಿಡುತ್ತಾರೆ. ಅದೇ ಗುಂಗಿನಲ್ಲಿ ಒಂದಿಷ್ಟು ಪ್ರೇಮಕಥೆಗಳು ಅವರ ಮನಸ್ಸಿನಲ್ಲಿ ಹಾದುಹೋಗುತ್ತವೆ. ಹೀಗೆ ಪ್ರೀತಿ ಅಪ್ಪಳಿಸಿದ ನಾವೆಯಾಗಿ ಅವರು ತಮ್ಮ ಸ್ವಂತಿಕೆಯನ್ನು ಮರೆಯುತ್ತಾ ಅವನತಿಯ ಹಾದಿಯನ್ನು ಹಿಡಿಯುತ್ತಾರೆ. ಇಷ್ಟೆಲ್ಲಾ ಪ್ರೀತಿ ತುಂಬಿದ ಹುಡುಗಾಟದ ಹುಡುಗರ ಮನಸ್ಸಿನ ಚೀತ್ಕಾರಕ್ಕೆ ವರವಾಗಿ ಸಿಗುವುದು, ಹುಡುಗಿಯಿಂದ ಪಾತಾಳಕ್ಕೆ ಹೆದ್ದಾರಿ, ಅವರಿವರಿಂದ ಛೀಮಾರಿ!

ಹುಡುಗಿ ಹುಡುಗನ ಹಿಂದೆ ಹೋದ್ರೆ,
ಅವಳು ಅವನ ಅತಿಥಿ,
ಹುಡುಗ ಹುಡುಗಿ ಹಿಂದೆ ಹೋದ್ರೆ
ಅವತ್ತೇ ಅವನ ತಿಥಿ.

sad

ಹೀಗೆ ತನ್ನವರ ಒಡಲಿಂದ, ಪ್ರೀತಿಯ ಕಡಲಿಗೆ ಜಾರಿ, ತನ್ನವರ ಮರೆತು ತನ್ನವಳಲ್ಲದ ಹುಡುಗಿಗೆ ತನ್ನದೆಲ್ಲವನ್ನೂ ನೀಡಿ, ಅವಳ ಪ್ರೀತಿಯ ಪಡೆಯಲು ತನ್ನ ಪ್ರಾಣದ ಎಡೆಯಿಟ್ಟು ಜೀವಮಾನವಿಡೀ ಕಾಯುತ್ತಾ ಕೂರುತ್ತಾನೆ. ನೈವೇದ್ಯವಾದರೂ ವರ ನೀಡದ ದೇವರ ಹಾಗೆ, ಇಷ್ಟೆಲ್ಲಾ ನೀಡಿದ ಹುಡುಗರಿಗೆ ಒಂದು ಹನಿ ಪ್ರೀತಿಯೂ ನೀಡದೆ, ಕ್ಯೂಸೆಕ್ಸ್ ಗಟ್ಟಲೆ ಕಣ್ಣೀರ ನೀಡಿ, ಅದರಲ್ಲೇ ಅವರನ್ನು ಮುಳುಗಿಸಿ, ತಮ್ಮ ಮನಸ್ಸಿಂದ ಹುಡುಗರನ್ನು ತೊಳೆದುಕೊಂಡು, ಅವರ ಕಣ್ಣೀರ ಜಲಪಾತಕ್ಕೆ ಒಂದು ಅಣೆ ಕಟ್ಟನ್ನು ಕಟ್ಟದೆ ಹೊರಟು ಹೋಗುತ್ತಾಳೆ. ಆದರೆ ಮುಳುಗಿರುವ ಹುಡುಗರು, ಏಳುವುದರಲ್ಲೇ ತಮ್ಮ ಅಂತ್ಯ ಕಾಣುತ್ತಾರೆ.

ಬಳಿ ಬಂದೆ ನೀನು ಕರೆಯದೆ,
ಆಮಂತ್ರಣ ನೀಡಲಿ ನಾನು ಯಾರಿಗೆ?
ದೂರಾದೆ ನೀನು ಹೇಳದೆ
ದೂರು ನೀಡಲಿ ನಾನು ಯಾರಿಗೆ?

ಪ್ರೀತಿಗೆ ಬೇಕಿರುವುದು ಎರಡು ನಿಷ್ಕಲ್ಮಶ, ಸಮಾನ ಭಾವನೆಗಳುಳ್ಳ ಮನಸ್ಸು. ಪ್ರೀತಿ ನೀಡುವ ಮನಸ್ಸಿಗೆ ಪ್ರತಿಯಾಗಿ ಪ್ರೀತಿ ದೊರಕದಿದ್ದರೆ ಅದು ಪ್ರೀತಿ ನೀಡಬೇಕಾದರೂ ಯಾರಿಗೆ, ಏತಕ್ಕೆ? ಹುಡುಗಿಯರ ಮನಸ್ಸು ಸೂಕ್ಷ್ಮ ಎನ್ನುತ್ತಾರೆ, ಆದರೆ ಕನ್ನಡಕ ಹಾಕಿ ಹುಡುಕಿದರೂ ಕಿಂಚಿತ್ತು ಪ್ರೀತಿಯ ಕುರುಹು ಸಿಗುವುದಿಲ್ಲ. ಸಿಕ್ಕರೆ, ಅದು ಕೇವಲ ತಮಗಾಗಿ ಮಡಿದವರ ಅಸ್ಥಿಪಂಜರ. ಅದರ ಮೇಲೆ ಹುಡುಗಿಯರ ನಿತ್ಯದ ಮೆರವಣಿಗೆ, ಉತ್ಸವ ಎಲ್ಲಾ.
ಮೈ ಡಿಯರ್ ಗಯ್ಸ್, ನಿಮ್ಮ ಪ್ರೀತಿಗೆ ಸ್ಪಂದಿಸಿ ನಿಮ್ಮ ಮನಸ್ಸಿನ ತುಡಿತವನ್ನು ಅರಿತು ಬರುವ ಹುಡುಗಿಯರು ಬೆಳದಿಂಗಳ ಹುಣ್ಣಿಮೆಯಂತೆ, ತುಂಬಾ ಅಪರೂಪ. ಆದರೆ ಅವಸರ ಪಡುವ ನೀವುಗಳು, ಅಮವಾಸ್ಯೆಯ ದಿನವೇ ಹುಡುಗಿಯ ಹಿಂದೆ ಹೋಗಿ, ನಿಮ್ಮ ಬದುಕನ್ನು ಮುಂದೆಂದೂ ಬೆಳಕು ಕಾಣದ ಕತ್ತಲಿಗೆ ದೂಡುತ್ತೀರ. ಈ ರೀತಿ ನಮ್ಮ ಉಜ್ವಲವಾದ ಬದುಕಿಗೆ ಕತ್ತಲಿನ ಕೂಪದ ದಾರಿ ತೋರುವ ಪ್ರೀತಿ ನಮಗೆ ಬೇಕೆ? ನಮ್ಮತನವ ಮಾರಿಕೊಂಡು, ನಮ್ಮ ಮನಸ್ಸಿಗೆ ಮಾರಿಯಾಗಿ ಕಾಡುವ ನಾರಿಯರು ಬೇಕೆ?

ಅಂಧಕಾರದ ದಾರಿ ಹಿಡಿಯುತ್ತಿರುವ ನಿಮ್ಮ ಮನಸ್ಸನ್ನು ಸರಿಯಾದ ದಾರಿಯೆಡೆಗೆ ಕರೆದೊಯ್ದು, ನಿಮ್ಮ ಬಾಳಿಗೆ ಒಂದು ರೂಪವ ಕೊಟ್ಟು ಹುಡುಗಿಯರ ಶಾಪ ತಟ್ಟದಂತೆ ಕಾಪಾಡಿಕೊಳ್ಳಿ.

ನಿಮ್ಮ ಬಾಳು ಮಿನುಗುವ ನಕ್ಷತ್ರವಾಗಲಿ, ಸದಾ ವಿಜಯದ ಪಾಂಚಜನ್ಯ ಮೊಳಗಲಿ, ನಿಮ್ಮ ಮನಸ್ಸನ್ನು, ನಿಮ್ಮ ವಯಸ್ಸಿಗೆ ಮಾರಿಕೊಳ್ಳದೆ, ಸಂತೋಷದ ಹಾದಿ ಹಿಡಿದು ಸಂತೃಪ್ತಿಯನ್ನು ಪಡೆಯಿರಿ.

 

ಜಳಜಳನೆ ಹರಿವ ನೀರಿಗೆ ತಡೆ ಬೇಕಿರಲಿಲ್ಲ
ಗುರಿ ಕಡಲಾದರೂ
ಒಡಲಿಗೆ ತಂಪ ಕೊಡಬೇಕಿತ್ತು!

ಸ್ಪೂರ್ತಿ ನೀಡುವ ಪ್ರಕೃತಿಗೆ
ಬರ ಬೇಕಿರಲಿಲ್ಲ.
ಆಕಾಶ ಬರಿದಾಗಿದ್ದರೂ
ಇಳೆ ತುಂಬಾ ಹಸಿರಿರಬೇಕಿತ್ತು!

spring

ಕನಸ ಮಾರುವ ಹುಡುಗಿಗೆ
ಅಳು ಬೇಕಿರಲಿಲ್ಲ.
ಕಣ್ತುಂಬಾ ಕತ್ತಲಿದ್ದರೂ
ಮನದ ತುಂಬಾ ಬೆಳಕಿರಬೇಕಿತ್ತು!

ಆಘಾತ ಕಂಡ ಮನಸಿಗೆ ಪದೇ ಪದೇ
ನೋವು ಬೇಕಿರಲಿಲ್ಲ.
ಸುಖವಿಲ್ಲದಿದ್ದರೂ
ನಿರಾಶೆಯ ತಡೆವ ಹೃದಯವಿರಬೇಕಿತ್ತು!

ಲವಲವಿಕೆಯ ಜೀವಕೆ
ಸತ್ಯ ಕಂಡಿರಲಿಲ್ಲ
ಸಾವು ಖಂಡಿತವಾದರೂ
ಬದುಕನ್ನು ಪ್ರೀತಿಸುವ ಕಲೆ ಗೊತ್ತಿರಬೇಕಿತ್ತು!

-ನವಿತಾ.ಎಸ್, ಸಾಗರ

-ಶ್ರೀಕಾಂತ್.ಎನ್.ಎಸ್, ಬೆಂಗಳೂರು

ನನ್ನ ಮನಸ ಇಂಪೋರ್ಟ್ ಮಾಡ್ಕಂಡು
ಅವಳ ಮನಸ ಎಕ್ಸ್‌ಪೋರ್ಟ್ ಮಾಡದೆ,
ನನ್ನ ದೇಹ ಎಕ್ಸ್‌ಪೈರ್ ಆದಾಗ,
ಮಾಡಿದಳು ಕಣ್ಣೀರಿನ ಎಕ್ಸ್ ಪೋರ್ಟ್

– ಅಂತರ್ಮುಖಿ

ದೇವರೆಂಬ ವ್ಯಕ್ತಿ ಮನುಷ್ಯ ಹಾರಿ ಬಿಡುವ ರಾಕೆಟುಗಳು ತಾಕದಷ್ಟು , ಆತನ ಉಪಗ್ರಹಗಳು ಸಂಕೇತಗಳನ್ನು ಗ್ರಹಿಸಲು ಸಾಧ್ಯವಾಗದಷ್ಟು, ಅತಿ ಸೂಕ್ಷ್ಮ ಕೆಮರಾ ಕಣ್ಣಿಗೆ ಬೀಳದಷ್ಟು, ಆತನೆಂದಾದರೊಂದು ದಿನ ತಲುಪಲು ಅಸಾಧ್ಯವಾದ ದೂರದಲ್ಲಿ ಇರುವುದು ನಿಜವೇ ಆದರೆ ಆತ ನಾನು ಆತನ ವಿಷಯವಾಗಿ ತಲೆ ಕೆಡಿಸಿಕೊಂಡು ನಂಬಿಕೆ ಅಪನಂಬಿಕೆಗಳ ಒಳಸುಳಿಗಳಲ್ಲಿ ಸಿಕ್ಕಿಕೊಂಡು, ವಾದ-ವಿವಾದ, ಸಾಕ್ಷ್ಯಾಧಾರಗಳ ಗೋಜಲಿನಲ್ಲಿ ಕಾಲು ಸಿಗಿಸಿಕೊಂಡು ನರಳಾಡಿದ್ದನ್ನು ಕಂಡು ನಸುನಗುತ್ತಿರಬಹುದು. ಆತನ ಹೆಸರಿನಲ್ಲಿ ನಾನು ರಾತ್ರಿಗಳ ನಿದ್ದೆಗಳನ್ನು ಕಳೆದುಕೊಂಡಿದ್ದು, ಕೆನ್ನೆಯ ಮುಖಾಂತರ ಹರಿದ ಕಂಬನಿಯನ್ನು ಹಾಸಿಗೆ, ದಿಂಬುಗಳಿಗೆ ಕುಡಿಸಿದ್ದು, ಆತನ ಇರುವನ್ನು ಸಾಬೀತು ಮಾಡಲು, ಅಲ್ಲಗಳೆಯಲು ಹತ್ತಿರದವರ, ಆತ್ಮೀಯರ ಪ್ರೀತಿಗೆ ಕಲ್ಲು ಹಾಕಿಕೊಂಡದ್ದು, ನನ್ನ, ಸುತ್ತಮುತ್ತಲಿನವರ ನೆಮ್ಮದಿಯನ್ನೆಲ್ಲ ಕದಡಿ ಹಾಕಿದ್ದು – ಇವೆಲ್ಲ ಆತನಿಗೆ ಕಂಡಿದ್ದೇ ಆದರೆ ಆತ ಅದೆಷ್ಟು ಗಟ್ಟಿಯಾಗಿ ಗಹಗಹಿಸಿ ನಕ್ಕಿರಬೇಕು! prayer

“ಯಾವುದು ಸರಿ? ಮನುಷ್ಯ ದೇವರ ಸೃಷ್ಟಿಯಲ್ಲಿನ ದೊಡ್ಡ ಪ್ರಮಾದವೋ, ದೇವರು ಮನುಷ್ಯನ ಸೃಷ್ಟಿಯಲ್ಲಿನ ದೊಡ್ಡ ಪ್ರಮಾದವೋ” ಎಂದು ಪ್ರಶ್ನಿಸಿದ ಫ್ರೆಡ್ರಿಕ್ ನೀಶೆ. ಆತ ನನ್ನೇನಾದರೂ ಈ ಪ್ರಶ್ನೆಯನ್ನು ಕೇಳಿದ್ದನಾದರೆ ತಪ್ಪು ಯಾವುದು, ಸರಿ ಯಾವುದು ತಿಳಿದಿಲ್ಲ ಆದರೆ ಎಲ್ಲೋ ಒಂದು ಕಡೆ ದೊಡ್ಡ ಪ್ರಮಾದ ಆಗಿರುವುದು ಮಾತ್ರ ಸತ್ಯ ಎಂದಿರುತ್ತಿದ್ದೆ. ಎಷ್ಟೋ ವರ್ಷಗಳ ಕಾಲ ಅಪ್ಪಟ ಸಾತ್ವಿಕ ಆಸ್ತಿಕನಾಗಿ, ದೈವ ಕೃಪೆಯ ಕಳೆಯನ್ನು ಹೊತ್ತು, ಭಕ್ತಿ ಭಾವದಲ್ಲಿ ಮೈಮರೆತು, ದೇವರ ನಿಂದಿಸುವ ಜನರೆಲ್ಲ ಕುಷ್ಠ ರೋಗ ಬಂದು ಹಾಳಾಗಲಿ ಎಂದು ಪ್ರಾಮಾಣಿಕವಾಗಿ ಪ್ರಾರ್ಥಿಸುತ್ತಿದ್ದವ ನಾನು. ಹಾಗೆಯೇ ಉಗ್ರ ನಾಸ್ತಿಕತೆಯ ಉನ್ಮಾದದಲ್ಲಿ ಹುಚ್ಚೆದ್ದು ಕುಣಿದು, ಮರದಿಂದ ಮರಕ್ಕೆ ಹಾರುತ್ತ, ಸ್ವೇಚ್ಛೆಯ ಸವಿಯನ್ನು ಉಂಡು, ನಮ್ಮವರ ಕಂಡವರ ತೋಟವನ್ನೆಲ್ಲಾ ಹಾಳು ಮಾಡಿದವನೂ ನಾನೇ. ಈಗ ಎರಡೂ ಅತಿರೇಕಗಳು ಒಂದೇ ಕೋಲಿನ ಎರಡು ತುದಿಗಳೆಂಬ ಅರಿವಾಗಿರುವುದಾದರೂ ಒಮ್ಮೊಮ್ಮೆ ಕೊಲಾಟವಾಡುವ ಸೆಳೆತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದು.

ಹುಟ್ಟಿದ ಮಗುವಿನ ಜಾತಿ ಎಂಥದ್ದು, ಅದರ ನಂಬಿಕೆಗಳೇನು, ಅದು ಆಸ್ತಿಕನಾಗಿರುತ್ತದೋ, ನಾಸ್ತಿಕನಾಗಿರುತ್ತದೆಯೋ ತಿಳಿದಿಲ್ಲ. ಆದರೆ ಭಾರತದಲ್ಲಿ ಮಾತ್ರ ಅದು ಹುಟ್ಟಿದೊಡನೆಯೇ ಅದಕ್ಕೆ ಬಾಯಿಗಿಡುವ ನಿಪ್ಪಲು, ಸೊಂಟಕ್ಕೆ ಕಟ್ಟುವ ನ್ಯಾಪಿ ಪ್ಯಾಡಿನ ಜೊತೆಯಲ್ಲೇ ಜಾತಿ, ಧರ್ಮ, ನಂಬಿಕೆಯ ಉಡುಗೆಯನ್ನೂ ತೊಡಿಸಲಾಗುತ್ತದೆ. ಜೀವನಿರೋಧಕ ಔಷಧ ಡೋಸುಗಳ ಜೊತೆಗೆ ಶ್ರದ್ಧೆ, ನಂಬಿಕೆಗಳ ಡೋಸನ್ನು ನೀಡಲಾಗಿರುತ್ತದೆ. ಆ ಮಗು ಬೆಳೆದು ದೊಡ್ದದಾದಂತೆ ತೊಡಿಸಿದ ಬಟ್ಟೆಯನ್ನೇ ಮೈಯ ಚರ್ಮವಾಗಿಸಿಕೊಂಡು ಅದರ ಹಿರಿಮೆ ಗರಿಮೆಗಳನ್ನು, ಓರೆ ಕೋರೆಗಳನ್ನು ಚರ್ಚಿಸುತ್ತಲೇ, ಹೆಮ್ಮೆ ಪಡುತ್ತಲೇ, ಅಸೂಯೆ ಪಡುತ್ತಲೇ ಜೀವನ ಕಳೆದು ಬಿಡುತ್ತದೆ.

ನಾನು ಹುಟ್ಟಿನಿಂದ ಗುರುತಿಸಿಕೊಂಡ ಜಾತಿ, ಮನೆಯೆಂಬ ಮೊದಲ ಪಾಠಶಾಲೆಯಲ್ಲಿ ಕಲಿತ ದೈವ ಶ್ರದ್ಧೆಗಳು ಹಲವು ವರ್ಷಗಳವರೆಗೆ ತಮ್ಮ ಆಳ್ವಿಕೆಯನ್ನು ನಡೆಸಿದವು. ನಾನು ಬೆಳೆದ ಪರಿಸರ ಬಹುಮಟ್ಟಿಗೆ ನಗರ ಪರದೇಶವಾಗಿದ್ದರಿಂದ ಜಾತಿಯತೆಯ ಕಮಟು ಅಷ್ಟಾಗಿ ಗಮನಕ್ಕೆ ಬಂದಿರಲಿಲ್ಲ. ಜೊತೆಗೆ ತಾನಾಯಿತು ತನ್ನ ಕೆಲಸವಾಯಿತು ಎಂಬುದು ಮನೆಯಲ್ಲಿ ತುಂಬಾ ಹಿಂದಿನಿಂದಲೇ ಪಾಲಿಸುತ್ತಾ ಬಂದ ಪಾಲಿಸಿಯಾಗಿದ್ದರಿಂದ ಜಾತಿಯ ವಿಷಯವಾಗಿ ಅನವಶ್ಯಕ ಮನಕ್ಲೇಷಗಳು ಉಂಟಾಗುವ ಅವಕಾಶಗಳಿರಲಿಲ್ಲ. ಹಾಗೆಂದ ಮಾತ್ರಕ್ಕೆ ನಾನು ಜಾತಿ ಪ್ರಜ್ಞೆಯಿಂದ ಸಂಪೂರ್ಣ ಮುಕ್ತನಾಗಿದ್ದೆ, ಮುಕ್ತನಾಗಿರುವೆನೆಂದೂ ಅಲ್ಲ. ಚಿಕ್ಕಂದಿನಲ್ಲಿ ಹಲವು ಸಂದರ್ಭಗಳಲ್ಲಿ ಜಾತಿಯ ಹೆಮ್ಮೆ ನನ್ನನ್ನು ತಲೆ ತಿರುಗಿಸಿದ್ದಿದೆ. ಅವರ ಮನೇಲಿ ಊಟ ಮಾಡಬಾರದು, ಇವರನ್ನು ಮುಟ್ಟಿಸಿಕೊಳ್ಳಬಾರದು, ಅವನನ್ನು ಫ್ರೆಂಡ್ ಮಾಡಿಕೊಳ್ಳಬಾರದು ಎಂದು ಹೇಳಿಕೊಡಲು ನನ್ನ ಅಪ್ಪ ಅಮ್ಮರಿಗೆ ಸಂಕೋಚವಾಗುತ್ತಿತ್ತೋ ಅಥವಾ ಅಷ್ಟೆಲ್ಲಾ ಗಮನ ಕೊಡದಷ್ಟು ಅವರು ಲಿಬರಲ್ ಆಗಿದ್ದರೋ ತಿಳಿಯದು ಆದರೆ ಅಂಥ ಕಟ್ಟಪಾಡುಗಳೇನೂ ನನ್ನ ಬಾಲ್ಯದಲ್ಲಿರಲಿಲ್ಲ. ಆದರೆ ಒಂದು ಹೊತ್ತಿನ ಊಟವನ್ನು ಮಾಡದೆ ಉಪವಾಸ ಮಾಡಿ ತನ್ನದೇ ನಿಗ್ರಹ ಶಕ್ತಿಯ ಬಗ್ಗೆ ಹೆಮ್ಮೆ ಪಡುತ್ತಾ, ತನ್ನಷ್ಟು ಶ್ರಮಜೀವಿ ಯಾರೂ ಇಲ್ಲ ಎಂದು ಭ್ರಮಿಸುವಂತೆ ಕೆಲವೊಮ್ಮೆ ಇಲ್ಲದ ಕಟ್ಟುಪಾಡುಗಳನ್ನು ಕಲ್ಪಿಸಿಕೊಂಡು ಅವನ್ನು ಪಾಲಿಸುವ ಮೂಲಕ ಜಾತಿಯ ಗೌರವ ಉಳಿಸುವ, ಸಮಾಜದ ಆರೋಗ್ಯ ಕಾಪಾಡುವ ಪ್ರಯತ್ನಗಳನ್ನೂ ಮಾಡಿದ್ದುಂಟು. ಪ್ರೈಮರಿ ಶಾಲೆಯಲ್ಲಿ ಮಧ್ಯಾನ ಎಲ್ಲರೂ ಒಟ್ಟಿಗೆ ಕಲೆತು ಊಟ ಮಾಡುವಾಗ ಬುದ್ಧಿಗೆ ಗೋಚರವಾದ ಮಟ್ಟಿಗೆ ಮಡಿ-ಮೈಲಿಗೆಯನ್ನು ತೋರ್ಪಡಿಸಿ ಒಂದಷ್ಟು ಮಂದಿ ಗೆಳೆಯರನ್ನು ದಿಗ್ಭ್ರಮೆಗೊಳಿಸಿ, ಉಳಿದವರಿಗೆಲ್ಲಾ ತನ್ನ ಜಾತಿ ಯಾವುದೆಂದು ಸೂಚ್ಯವಾಗಿ ತಿಳಿಸಿ ಶಿಸ್ತು ಪಾಲಿಸಿದ ಹೆಮ್ಮೆಯನ್ನು ಉಂಡದ್ದಿದೆ. ಪಾಲಿಸಬೇಕಾದ ಶಿಸ್ತನ್ನೇ ನಿಯತ್ತಾಗಿ ನಿರ್ವಹಿಸಲಾಗದ ನನ್ನಂಥವನಿಗೆ ಸ್ವಯಂ ಸೃಷ್ಟಿಸಿಕೊಂಡ ಶಿಸ್ತನ್ನು ಮುರಿಯುವುದಕ್ಕೆ ಬಹಳ ಸಮಯ ಬೇಕಾಗುತ್ತಿರಲಿಲ್ಲ. ಕುಟುಂಬ ವಲಯದ ಸಮಾರಂಭಗಳಲ್ಲಿ ಜಾತಿಯ ಹಿರಿಮೆಯ ವಿಜೃಂಭಣೆಯನ್ನು ಮಾಡುವಾಗ, ಜಾತಿಯ ಕಾರಣವಾಗಿ ಜನ ಮನ್ನಣೆ ಸಿಕ್ಕುವಾಗ, ‘ಓ ಆ ಪೈಕಿಯವನಾ ನೀನು… ಅದಕ್ಕೆ ಹೀಗೆ…’ ಹೊಗಳುವಾಗಾ ಯಾವ ಸಂಕೋಚ, ನಾಚಿಕೆ ಕಾಣುತ್ತಿರಲಿಲ್ಲವಾದರೂ ಸ್ವಜಾತಿಯ ಹೆಮ್ಮೆ ಎಂದಿಗೂ ನನ್ನ ಪ್ರಜ್ಞೆಯಲ್ಲಿ ಸಕ್ರಿಯವಾಗಿರುತ್ತಿರಲಿಲ್ಲ.

ಜಾತಿ ಪ್ರಜ್ಞೆಯ ಜೊತೆ ದೈವಭಕ್ತಿಗೂ ಮನೆಯೇ ಮೊದಲ ಪಾಠ ಶಾಲೆ. ಮೌಲ್ಯಗಳು, ಆದರ್ಶಗಳ ಜೊತೆಯಲ್ಲೇ ಅಥವಾ ಅವಕ್ಕೆ ಪೂರಕವಾಗಿಯೇ ನಮ್ಮ ದೈವ ಶ್ರದ್ಧೆ, ಧರ್ಮ ಶ್ರದ್ಧೆ ರೂಪುಗೊಳ್ಳುತ್ತದೆ. ದೇವರೆಡೆಗೆ ಭಯ, ಭಕ್ತಿ, ಧರ್ಮ ಗ್ರಂಥಗಳ ಬಗೆಗಿನ ಭಯ ಮಿಶ್ರಿತ ಕುತೂಹಲ, ದೆವ್ವ ಪಿಶಾಚಿ ಅಪಶಕುನಗಳೆಡೆಗಿನ ಭಯ, ಪವಾಡ ಪುರುಷರು, ಸಂತರು ಬಾಬಾಗಳ ಕುರಿತ ಮಮಕಾರ, ಭಕ್ತಿ ಇವೆಲ್ಲವೂ ಸಂಸ್ಕಾರದ ಹೆಸರಿನಲ್ಲಿ ಹೇರಲ್ಪಡುವ ಗುಣಗಳೇ ಆಗಿವೆ.ವ್ಯಕ್ತಿತ್ವ, ಸ್ವತಂತ್ರ ಆಲೋಚನೆ ರೂಪುಗೊಳ್ಳುವ ಮೊದಲಿನಿಂದಲೇ ಆರಂಭವಾಗುವ ಈ ಶಿಕ್ಷಣ ನಮ್ಮಲ್ಲಿ ಬೆಳೆಸುವ ದೃಷ್ಟಿಕೋನ, ರಾಗ ದ್ವೇಷ ಮುಂದೆ ನಾವು ಬೆಳೆದು ದೊಡ್ಡವರಾಗಿ ಅದೆಷ್ಟೇ ವೈಚಾರಿಕರಾದರೂ, ಅದೆಷ್ಟೇ ವಸ್ತುನಿಷ್ಠತೆ, ನಿಷ್ಟುರತೆಯನ್ನು ಬೆಳೆಸಿಕೊಂಡರೂ ನಮ್ಮ ಆಲೋಚನೆ, ನಿರ್ಧಾರಗಳಲ್ಲಿ ತನ್ನ ಪ್ರಭಾವವನ್ನು ಬೀರಿಯೇ ತೀರುತ್ತದೆ. ಬಾಲ್ಯದಲ್ಲಿ ಪ್ರಾರ್ಥನೆ, ಪುರಾಣ ಕಥೆಗಳು, ದೇವರ ಲೀಲಾ ವರ್ಣನೆ, ತಂದೆ ತಾಯಿಯ, ಪ್ರೀತಿಪಾತ್ರರಾದವರ, ಗುರುಹಿರಿಯರ ಹಿತನುಡಿಗಳು  ಭಾವನಾತ್ಮಕವಾಗಿ ನಮ್ಮನ್ನು ಬೆಸೆದುಕೊಂಡು ನಮ್ಮ ವ್ಯಕ್ತಿತ್ವದ ಮೇಲೆ ಬಹುದೊಡ್ಡ ಪ್ರಭಾವವನ್ನು ಉಂಟು ಮಾಡುತ್ತವೆ. ಸುಪ್ತ ಮನಸ್ಸನ್ನು ಪ್ರಭಾವಿಸಿ ಅವ್ಯಕ್ತವಾಗಿ ನಮ್ಮನ್ನೊಂದು ಪೂರ್ವಾಗ್ರಹಕ್ಕೆ ಈಡು ಮಾಡಿರುತ್ತವೆ.

ಚಿಕ್ಕಂದಿನಲ್ಲೇ ಮೌಲ್ಯಗಳ, ಸಂಸ್ಕಾರದ ಹೆಸರಿನಲ್ಲಿ ಮಕ್ಕಳ ಮೇಲೆ ಧಾರ್ಮಿಕ ನಂಬಿಕೆಗಳನ್ನು, ಅಂಧವಿಶ್ವಾಸವನ್ನು, ಜಾತಿ ಪ್ರಜ್ಞೆಯನ್ನು, ನಮ್ಮ ಪೂರ್ವಾಗ್ರಹಗಳನ್ನು, ಒಳಿತು ಕೆಡುಕುಗಳ ತೀರ್ಮಾನವನ್ನು ಹೇರುವುದು ಅದೆಷ್ಟರ ಮಟ್ಟಿಗೆ ಸರಿ ಎನ್ನುವ ನಿಷ್ಕರ್ಷೆಗೆ ಇಳಿಯುವುದು ಬೇಡ. ಆದರೆ ಸದ್ಯಕ್ಕೆ ಆ ಹೇರಿಕೆಯೆಂಬುದು ಜೀವನ ಪೂರ್ತಿ ನಮ್ಮ ಪ್ರಜ್ಞೆಯ ಭಾಗವಾಗಿರುತ್ತದೆ, ನಮ್ಮೆಲ್ಲಾ ಆಲೋಚನೆ, ಇಷ್ಟ ಕಷ್ಟಗಳು, ಆಯ್ಕೆ- ನಿರ್ಧಾರಗಳ ಮೇಲೆ ಪ್ರಭಾವ ಬೀರುತ್ತದೆ ಎಂಬ ಅರಿವಿದ್ದರೆ ಸಾಕು. 

(ಮುಂದಿನ ಸಂಚಿಕೆಗೆ)

– ಬಾಲು ಪ್ರಸಾದ್.ಆರ್, ಬೆಂಗಳೂರು 

ರವಿಬೆಳಗೆರೆಯವರ ಪ್ರಾರ್ಥನಾ ಶಾಲೆಯ ಯಾವುದಾದರೊಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಕಳೆದೆರಡು ವರ್ಷಗಳಿಂದ ಅಂದುಕೊಳ್ಳೂತ್ತಿದ್ದೆ, ಸಾಧ್ಯವಾಗಿರಲಿಲ್ಲ. ಆದರೆ, ಈ ಬಾರಿ ಶಾಲೆಯ ಶಿಶಿರ ಸಂಭ್ರಮಕ್ಕೆ ತಪ್ಪದೇ ಹಾಜರಿದ್ದೆ. ಕಾರಣ, ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದವರು ಅಮರ ಯೋಧ ಸಂದೀಪ್ ಉನ್ನಿಕೃಷ್ಣನ್‌ರ ತಂದೆ ಉನ್ನಿಕೃಷ್ಣನ್ ಮತ್ತು ತಾಯಿ ಧನಲಕ್ಷ್ಮಿ. ಆ ಪುಣ್ಯವಂತರನ್ನು ನೋಡಿ, ಅವರ ಮಾತುಗಳನ್ನು ಆಲಿಸಿ ಧನ್ಯನಾಗಲು ಹೋಗಿದ್ದೆ.

“ಭಾವೋದ್ವೇಗಕ್ಕೆ ಒಳಗಾಗಬಾರದು ಅಂತ ನನ್ನ ಹೆಂಡತಿ ಮಾತು ತೊಗೊಂಡಿದ್ದಾಳೆ” – ಎಂದು ಮಾತು ಆರಂಭಿಸಿದ ಉನ್ನಿಕೃಷ್ಣನ್‌ರ ಧ್ವನಿ ಈಗಲೂ ನನ್ನ ಕಿವಿಯಲ್ಲಿ ಮಾರ್ದನಿಸುತ್ತಿದೆ. ಹಾಗಾಗಿ ಅವರ ಧ್ವನಿಯಲ್ಲೇ ಅವರ ಮಾತನ್ನು ಬರೆಯುತ್ತೇನೆ-

“ಇವತ್ತು ನನ್ನ ಮಗ ಸಾಧನೆ ಮಾಡಿದ್ದಾನೆ ಅಂತ ನಾನು ಹೇಳಲ್ಲ. ಅವನ ಕರ್ತವ್ಯವನ್ನಷ್ಟೆ ಮಾಡಿದ್ದಾನೆ. (ಸಭಿಕರಿಂದ ಚಪ್ಪಾಳೆ) ದಯವಿಟ್ಟು clap ಮಾಡಬೇಡಿ. ಮಧ್ಯಮಧ್ಯ clap ಮಾಡೋದು ನನಗಾಗೋಲ್ಲ. ಕೊನೆಗೆ ಬೇಕಿದ್ರೆ ಮಾಡಿ. ನಾನು ಹುಟ್ಟಿದ್ದು ಕೇರಳದಲ್ಲಿ. ಬಹಳ ಬಡತನ. ಒಂದೇ ಹೊತ್ತು ಊಟ. ತಾಯಿ ಕಷ್ಟಪಟ್ಟು ದುಡಿದು ನನ್ನನ್ನು ಶಾಲೆಗೆ ಕಳಿಸುತ್ತಿದ್ದರು. ಶಾಲೆಗೆ ಕಟ್ಟಡ ಇರಲಿಲ್ಲ. ಯಾವುದೋ ಒಂದು ಮುರಿದ ಝೋಪಡಿಯಲ್ಲಿ ಪಾಠ ಮಾಡುತ್ತಿದ್ದರು. ಹತ್ತನೇ ತರಗತಿಯವರೆಗೂ ಅಲ್ಲೇ ಓದಿದೆ. ಮುಂದೆ ಓದಲು ಹಣ ಇರಲಿಲ್ಲ. ಆಗ ಯಾರೋ ಒಬ್ಬರು typing ಕಲಿತರೆ ಕೆಲಸ ಸಿಗುತ್ತೆ ಅಂತ ಹೇಳಿದರು. ಅದಕ್ಕೆ ಏನೋ ಮಾಡಿ typing ಕಲಿತೆ. ಒಂದು ಕಡೆ ಕೆಲಸ ಸಿಕ್ಕಿತು. ನಾಲ್ಕು ರೂಪಾಯಿ ಸಂಬಳ. ಓದು ಮುಂದುವರಿಸಿದೆ.

“ನಂತರ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದೆ. ರೈಲು ಇಳಿದವನಿಗೆ ಗೋಡೆ ಮೇಲೆ ಹಾಕಿದ್ದ ಜಾಹೀರಾತು ಕಾಣಿಸ್ತು. stenographer ಬೇಕಾಗಿದ್ದಾರೆ ಅಂತ ಹಾಕಿದ್ದರು. ಕೂಡಲೇ ಹೋಗಿ ಕೆಲಸ ಗಿಟ್ಟಿಸಿಕೊಂಡೆ. ಸ್ವಲ್ಪ ದಿನಗಳ ನಂತರ ಪತ್ರಿಕೆಯಲ್ಲಿ ಇಸ್ರೋ advertise ನೋಡಿದೆ. stenographer  ಹುದ್ದೆಗೆ call ಮಾಡಿದ್ರು. ಅರ್ಜಿ ಹಾಕಿದೆ. ೧೫ನೇ ಏಪ್ರಿಲ್ ೧೯೭೪ರಂದು ಕೆಲಸ ಸಿಕ್ಕಿತು. ತಿಂಗಳಿಗೆ ೫೩೦ರೂ. ಸಂಬಳ. deducations ಎಲ್ಲ ಹೋಗಿ ೩೫೦ರೂ. ಬರುತ್ತಿತ್ತು. glad_281108_unni1

“೩೧ನೇ ಆಗಸ್ಟ್ ೧೯೭೫ರಂದು ಲಕ್ಷ್ಮಿಯನ್ನು ಮದುವೆಯಾದೆ. ಮೊದಲ ಬಾರಿಗೆ single bedroom ಮನೆ ಮಾಡಿದೆ. ಒಂದು room, ಒಂದು hall ಅಷ್ಟೆ ಇತ್ತು. ಹಾಲ್‌ನ ಒಂದು ಬದಿಯಲ್ಲೇ ಅಡಿಗೆ ಮಾಡಿಕೊಳ್ಳೋಣವೆಂದು ಅಂದುಕೊಂಡೆವು. ನನ್ನ ಹತ್ತಿರ ಇದ್ದದ್ದು ಒಂದು ಚಾಪೆ, ಒಂದು ಬಕೆಟ್, ಮತ್ತೊಂದು ತಟ್ಟೆ. ಅದರ ಜೊತೆಗೆ ಇನ್ನೊಂದು ಚಾಪೆ, ಒಂದು ಜೊತೆ ತಟ್ಟೆ ಮತ್ತು ಲೋಟ ಮತ್ತು ೧೦ಕಿಲೋ ಅಕ್ಕಿ , ಇಷ್ಟನ್ನು ತೆಗೆದುಕೊಂಡು ಹೋಗಿ ಇಟ್ಟೆ. ಅವಳು ಗಂಜಿ ಮಾಡಿದಳು. ಇಬ್ಬರೂ ಕುಡಿದೆವು. ಇನ್ನುಳಿದ ಸಾಮಾನುಗಳನ್ನು ತರಲು ನನ್ಹತ್ತಿರ ಹಣ ಇರಲಿಲ್ಲ, ಮತ್ತು ಅದುವರೆಗೂ ನಾನು ಯಾವತ್ತೂ ಯಾರಲ್ಲಿಯೂ ಕೈಚಾಚಿದವನಲ್ಲ. ಆಗ ಲಕ್ಷ್ಮಿ ಅವಳ ಹತ್ತಿರ ಇದ್ದ ಹಣದಿಂದ ಮನೆಗೆ ಬೇಕಿದ್ದ ಸಾಮಾನುಗಳನ್ನು ತಂದಳು. ಮುಂದೆ ಸಂದೀಪ್ ಹುಟ್ಟಿದ. ಮಗುವಿನಲ್ಲೇ ಹುಷಾರು ತಪ್ಪಿತು . ಎದೆಹಾಲು ಕೊಟ್ಟರೆ ಸರಿಹೋಗುತ್ತೆ ಅಂತ ಡಾಕ್ಟರ್ ಹೇಳಿದ್ರು. ಆದ್ರೆ, ಎದೆಹಾಲು ಕೊಡುವ ಸ್ಥಿತಿಯಲ್ಲಿ ಲಕ್ಷ್ಮಿ ಇರಲಿಲ್ಲ. ಅಷ್ಟು weak ಆಗಿದ್ಲು. (ಗದ್ಗದಿತರಾದರು) ಆವಾಗ ಅವಳು ಹೇಳಿದ್ಲು, ’ರೀ, ನಮಗಿದೊಂದೇ ಮಗು ಸಾಕು. ಇವನನ್ನೇ ಚೆನ್ನಾಗಿ ಸಾಕೋಣ. ನಮ್ಮ ಕೈಲಿ ಆಗೋಂತ best foodನ ಕೊಡೋಣ ಮತ್ತು best educationನ ಕೋಡಬೇಕು’-ಅಂತ. ಅವತ್ತಿನಿಂದ ಅಗತ್ಯ ಬಿದ್ದಾಗ ಸಾಲ ಮಾಡಲು ಶುರು ಮಾಡ್ದೆ.

“ಇವತ್ತು ನನ್ನ ಮಗನ ಸಾಧನೆಗೆ ಎಲ್ಲರೂ ಹೊಗಳ್ತಾರೆ. ಆದರೆ ಸಂದೀಪ್‌ಗೋಸ್ಕರ ನಾನೇನನ್ನೂ ಮಾಡ್ಲಿಲ್ಲ. ಎಲ್ಲ ಅಲ್ಲಿ ಕೂತಿದ್ದಾಳಲ್ಲ, ಆ ತಾಯಿಯದು. ಸಂದೀಪ್ ಅವಳ ಮಗ. (ಒಂದು ಕ್ಷಣ ಮೌನ) Now you can clap.(ಚಪ್ಪಾಳೆಗಳು). ನಾನೇನಾದ್ರೂ ಮಾಡಿದ್ರೆ ಅದು ಒಂದೇಒಂದು. ಸಂದೀಪ್‌ನನ್ನು ಶಾಲೆಗೆ ಸೇರಿಸಲುapplicationಗಾಗಿ ರಾತ್ರಿಯೇ ಹೋಗಿದ್ದೆ. ಬೆಳಿಗ್ಗೆ ೬ಗಂಟೆಗೆ ಜನ ಬರಲು ಆರಂಭಿಸಿದ್ದರು. Queueನಲ್ಲಿ ನಾನೇ first. Applicationಗೆ ೨೮ರೂ. ನಂತರ ಶಾಲೆಗೆ ಸೇರಿಸುವಾಗಲೂ ಪುಸ್ತಕ ಬಟ್ಟೆಗಳಿಗೆ ಹಣ ಬೇಕಾದಾಗ, ಲಕ್ಷ್ಮಿ ತನ್ನ ಬಳೆಗಳನ್ನು ಕೊಟ್ಟು ಹಣ ತರಲು ಹೇಳಿದಳು. ಮೊದಲ ದಿನ, ಸಂದೀಪ್‌ನನ್ನು ಶಾಲೆಗೆ ಕರೆದೊಯ್ದೆವು. Classನಲ್ಲಿ ಕೂರಿಸಿ ಹೊರಗೆ ಬಂದೆವು. ಕಿಟಕಿ ಸಂದಿನಿಂದ ನೋಡಿದೆವು. ಎಲ್ಲ ಪುಟಾಣಿಗಳು ಅಳುತ್ತಿದ್ದಾರೆ, ಆದರೆ ಸಂದೀಪ್ ಅಳುತ್ತಿಲ್ಲ. ನಮಗೆ ಖುಷಿಯಾಯಿತು. ಅವತ್ತಿನಿಂದ ಸಂದೀಪ್ ತಿರುಗಿ ನೋಡಿದ್ದೇ ಇಲ್ಲ. ಯಾವತ್ತೂ ಒಂದೇಒಂದುhealth problemಅವನಿಗೆ ಬರ್ಲಿಲ್ಲ. sports, games, studies ಎಲ್ಲದ್ರಲ್ಲೂ ಮುಂದಿದ್ದ. ಹೈಸ್ಕೂಲಿನಲ್ಲಿದ್ದಾಗ House captainಆಗಿದ್ದ. Tenthನಲ್ಲಿ ೮೭% ತೆಗೆದುಕೊಂಡಿದ್ದ. ಇಂಗ್ಲೀಷ್‌ನಲ್ಲಿ ೯೮. ಯಾವತ್ತೂ ಒಂದೇಒಂದು complaint  ಇರಲಿಲ್ಲ. ಕೇವಲ appreciationಗೆ ಅಥವಾ progress report ತೆಗೆದುಕೊಳ್ಳೋದಕ್ಕೆ ಮಾತ್ರ ನಾವು ಶಾಲೆಗೆ ಹೋಗಬೇಕಿತ್ತು. ಪಿಯುಸಿ ಅದೇ ಶಾಲೆಯಲ್ಲಿ ಮಾಡ್ತೀನಿ ಅಂದ. ಅವನಿಗೆ seಚಿಣ ಸಿಕ್ಕಿತು. ಆದರೆ, ಅವನ ಸ್ನೇಹಿತನೊಬ್ಬನಿಗೆ ಸಿಗಲಿಲ್ಲ. ಆ ಹುಡುಗ ಕಡು ಬಡವರು. ’ನೀನು ಬಂದು ನನ್ನ ಸ್ನೇಹಿತನಿಗೆ seat ಕೊಡಲು ಕೇಳಬೇಕು’ ಅಂತ ಸಂದೀಪ್ ಹೇಳಿದ. ನಾನು ಹೋಗಿ ಕೇಳ್ದೆ. ಸ್ನೇಹಿತನಿಗೂ seat ಕೊಟ್ರು. ಆ ಹುಡುಗ ಇಲ್ಲೇ, ಈ ಊರಲ್ಲೇ ಇದ್ದಾನೆ. ಮೊನ್ನೆ ಸಂದೀಪ್‌ನ body ಬಂದಾಗ್ಲೂ ಇಲ್ಲೇ ಇದ್ದ. ಪಿಯುಸಿ ನಂತರ ಇಂಜಿನಿಯರಿಂಗ್ ಮಾಡಿಸ್ಬೇಕು ಅಂತ ನಾವು ಅಂದುಕೊಂಡಿದ್ವಿ. ಆದರೆ, ಅಷ್ಟೊತ್ತಿಗಾಗಲೇ ಸಂದೀಪ್ ಎನ್‌ಡಿಎ ಪರೀಕ್ಷೆ ಬರೆದು ೧೪ನೇ ರ‍್ಯಾಂಕ್ ತೆಗೆದುಕೊಂಡಿದ್ದ. Armyಗೆ ಸೇರ್ಬೇಕು ಅಂತ ಎಂಟನೇ classನಲ್ಲೇ ನಿರ್ಧರಿಸಿದ್ದನಂತೆ!! (ನನ್ನ ಮೈ ಝುಂ ಅಂತು). ನಾವೂ ಒಪ್ಪಿದೆವು. ಆದರೆ, ದೃಷ್ಟಿದೋಷ ಇದ್ದಿದ್ದರಿಂದ navy ಸಿಗಲಿಲ್ಲ. ನಂತರ cadet trainingಗೆ ಹೋದ. ಇಂಡಿಯನ್ ಮಿಲಿಟರಿ ಅಕಾಡೆಮಿ(IMA)ಗೆ select ಆದ. ದೇಶದಲ್ಲೇ ಅತಿ ಕಷ್ಟಕರವಾದ training  ಅದು. Remember, ೭೫% of selected are dropouts. ಅದರಲ್ಲೂ ಕೂಡ ನನ್ನ ಮಗ pass ಆಗಿದ್ದ. ಅವನು training ನಲ್ಲಿ ಇದ್ದಾಗ ನಾವೂ ಕೆಲವೊಮ್ಮೆ ಹೋಗಿದ್ವಿ. ಒಂದು ಬಾರಿ ಹೋಗಿದ್ದಾಗ ಹೀಗಾಯ್ತು. IMA Campusನಲ್ಲಿ ಒಂದು ಸಮಾಧಿಯಿದೆ. ಅದು ೧೯೭೧ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ವಿಶೇಷ ಸಾಧನೆ ಮಾಡಿ ಅಮರನಾದ ಯೋಧನದ್ದು. ಆ ಸಮಾಧಿಯ ಮೇಲೆ ಒಂದು roof ಇದೆ. ಅದರ ಮೇಲೆ ಬರೆದಿದ್ದ ಒಂದಷ್ಟು ಹೆಸರುಗಳನ್ನು ತೋರಿಸಿ ಸಂದೀಪ್ ಹೇಳಿದ್ದ-’ಅಪ್ಪ, ಇವರೆಲ್ಲ ಇಲ್ಲೇ training  ಪಡೆದು army ಸೇರಿ ದೇಶಕ್ಕಾಗಿ ಪ್ರಾಣ ತೆತ್ತವರು. ನನ್ನ ಹೆಸರೂ ಇಲ್ಲಿ ಬರಬೇಕು ಅಂತ ನನಗಾಸೆ’. ಅವತ್ತು ನಾನದಕ್ಕೆ ಹಾಗೇ ನಕ್ಕು ಸುಮ್ಮನಾಗಿದ್ದೆ. ಇವತ್ತು ಅವನ ಹೆಸರನ್ನು ಅಲ್ಲಿ ಬರೆದಿದ್ದಾರೆ.(ಮೌನ)

ಅವನು training ನಲ್ಲಿ ಇದ್ದಾಗ ನಾವೂ ಕೆಲವೊಮ್ಮೆ ಹೋಗಿದ್ವಿ. ಒಂದು ಬಾರಿ ಹೋಗಿದ್ದಾಗ ಹೀಗಾಯ್ತು. IMA Campusನಲ್ಲಿ ಒಂದು ಸಮಾಧಿಯಿದೆ. ಅದು ೧೯೭೧ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ವಿಶೇಷ ಸಾಧನೆ ಮಾಡಿ ಅಮರನಾದ ಯೋಧನದ್ದು. ಆ ಸಮಾಧಿಯ ಮೇಲೆ ಒಂದು roof ಇದೆ. ಅದರ ಮೇಲೆ ಬರೆದಿದ್ದ ಒಂದಷ್ಟು ಹೆಸರುಗಳನ್ನು ತೋರಿಸಿ ಸಂದೀಪ್ ಹೇಳಿದ್ದ-’ಅಪ್ಪ, ಇವರೆಲ್ಲ ಇಲ್ಲೇ training  ಪಡೆದು army ಸೇರಿ ದೇಶಕ್ಕಾಗಿ ಪ್ರಾಣ ತೆತ್ತವರು. ನನ್ನ ಹೆಸರೂ ಇಲ್ಲಿ ಬರಬೇಕು ಅಂತ ನನಗಾಸೆ’. ಅವತ್ತು ನಾನದಕ್ಕೆ ಹಾಗೇ ನಕ್ಕು ಸುಮ್ಮನಾಗಿದ್ದೆ. ಇವತ್ತು ಅವನ ಹೆಸರನ್ನು ಅಲ್ಲಿ ಬರೆದಿದ್ದಾರೆ.

“ಆನಂತರ ಎನ್‌ಎಸ್‌ಜಿಗೆ ಸೇರಿದ. Usually,  ಕಮಾಂಡೋಗಳು ತಾವು NSGಯಲ್ಲಿರೋದನ್ನು ತಮ್ಮ ಮನೆಯವರಿಗೂ ಹೇಳುವುದಿಲ್ಲ. ನಮಗೂ ಸುಮಾರು ದಿನಗಳ ನಂತರ ಅವನು NSGಯಲ್ಲಿರೋದು ಗೊತ್ತಾಯಿತು. ಅವನು ಮುಂಬೈ operationಗೆ ಹೋಗಿದ್ದಾನೆ ಅಂತ ಗೊತ್ತಿರಲಿಲ್ಲ. ಅವತ್ತು ಬೆಳಿಗ್ಗೆ ನಾನು ಎಂದಿನಂತೆ ವಾಕ್ ಹೋಗಿಬಂದು news ನೋಡ್ತಾ ಕುಳಿತಿದ್ದೆ. ಲಕ್ಷ್ಮಿ kitchen ನಲ್ಲಿ ಇದ್ದಳು. ಆಗ `ಮೇಜರ್ ಸಂದೀಪ್ ಉನ್ನಿಕೃಷ್ಣನ್ passed away’ ಅಂತ ಬಂತು. ಯಾವುದೋ ಒಂದು ಶಕ್ತಿ ನನ್ನ ದೇಹವನ್ನು ದೂಡಿ ಹೊರಗೆ ಹೋದಂತಾಯಿತು. (ಮೌನ) ನಂತರ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬಂದ್ವಿ. ನಂತರ body ಬಂತು. ಎಲ್ಲ ಕಾರ್ಯಗಳನ್ನು ಮಾಡಿದ್ವಿ.

“ನಂತರ ಸಂದೀಪ್‌ನ collegue  ಸಂಜಯ್ ಅಂತ, New Taj operationನಲ್ಲಿದ್ದ. ಸಂದೀ2008112950940401 ಪ್ Old Taj operationನಲ್ಲಿದ್ದ. ಸಂದೀಪ್ ಏನಾದ್ರೂ ತಪ್ಪು ಮಾಡಿದ್ನಾ, ಅದಕ್ಕೆ ಈ ರೀತಿ ಆಯ್ತಾ ಅಂತ ಅವನಲ್ಲಿ ಕೇಳಿದೆ. ಅವನು ಹೇಳಿದ-`Never sir, ಮತ್ತೊಬ್ಬ ಕಮಾಂಡೋವನ್ನ ಉಳೀಸೋದಕ್ಕೆ ಹೋಗಿ ಹೀಗಾಯ್ತು. Old Tajಗೆ ನಾಲ್ಕು RDX ಇಡಲಾಗಿತ್ತು. ಆದರೆ Detonaters ಇಲ್ಲದ ಕಾರಣ ಅವು explode ಆಗಲಿಲ್ಲ. ಸಂದೀಪ್ ಆ ಎಲ್ಲ RDXಗಳನ್ನ deactivate ಮಾಡಿದ್ದ’- ಅಂತ.

“ಸಂದೀಪ್‌ಗೆ ಯಾವುದೇ bad habits ಇರಲಿಲ್ಲ. ಅವನಿಗೆ ಅವನ ತರಹದವನೇ roommate ಬೇಕು ಅಂತ ಕೇಳಿದ್ದ. ಆದರೆ NSGಯಲ್ಲಿ ಆ ರೀತಿ ಮಾಡೋಕ್ಕಾಗೋಲ್ಲ. ಅವನು ಯಾಕೆ NDA exam ಬರೆದ ಅಂತ ಹೇಳಿದ್ದ. Because, NDA is the only instituition where there is no reservation. I hate reservations; I hate recommendations. ನಮ್ಮ ದೇಶ ಯಾಕೆ ಇನ್ನೂ ಮುಂದುವರಿದಿಲ್ಲ ಅಂತ minister ಕೇಳಿದ್ರಲ್ಲ, (ಸಚಿವೆ ಶೋಭಾ ಕರಂದ್ಲಾಜೆ)(ಕೋಪದಿಂದ) ಇದಕ್ಕಿಂತ ಬೇಕಾ. ಮೊನ್ನೆ ಸಿಲಿಂಡರ್ ತರೋದಿಕ್ಕೆ ಹೋಗಿದ್ದೆ. ಖಾಲಿ ಸಿಲಿಂಡರ್‌ನ ಕೆಳಗಿಟ್ಟು filled oneನ ನಾನೇ ಎತ್ತಿ ನನ್ನ vehicleಗೆ ಇಟ್ಟುಕೊಂಡಿದ್ದೀನಿ , ಆದರೂ ಸಿಲಿಂಡರ್‌ನವನು ಹತ್ತು ರೂಪಾಯಿ ಕೇಳ್ತಾನೆ, Bribery. ಸಂದೀಪ್‌ಗೆ ಬೆಂಗಳೂರಂದ್ರೆ ಇಷ್ಟ. ಇಲ್ಲಿ briibe ಕೊಡ್ದೆ ಏನೂ ಆಗಲ್ಲ, ಆದ್ರೂ ಯಾಕೆ ಈ ಊರನ್ನ ಇಷ್ಟ ಪಡ್ತೀಯಾ? ಅಂತ ಕೇಳಿದ್ದೆ. ’ಇಲ್ಲಿ atleast bribe  ಕೊಟ್ರಾದ್ರೂ ಕೆಲ್ಸ ಆಗುತ್ತೆ’ ಅಂತ ಹೇಳಿದ್ದ. (ಮೌನ)

“ದಾಳಿ ಆಗಿ ಇಷ್ಟು ದಿನಗಳಾಯ್ತು. ಏನ್ ಮಾಡ್ತಾ ಇದೆ ನಮ್ಮ ಸರ್ಕಾರ. ಭಯೋತ್ಪಾದನೆಯನ್ನು ಹತ್ತಿಕ್ಕಿ ಅಂತ Afghanistanಗೆ ಕೇಳ್ತಾ ಇದೆ, Bangladeshಗೆ ಕೇಳ್ತಾ ಇದೆ. I appreciate our Railway minister, Lalu Prasad. ಯಾವುದೇ scamನಲ್ಲಿ ಅವರಿರಬಹುದು.But, I appreciate his Courage. He said-’ಪತ್ಥರ್ ಸೆ ಮಾರೂಂಗಾ ಪಾಕಿಸ್ತಾನ್ ಕೋ, ಪತ್ಥರ್ ಸೆ’.  ಪ್ರತಿಯೊಬ್ಬ ಭಾರತೀಯನೂ ಪಾಕಿಸ್ತಾನಕ್ಕೆ ಒಂದೊಂದು ಕಲ್ಲು ಹೊಡೆದರೆ, ಪಾಕಿಸ್ತಾನ ಮುಚ್ಚಿಹೋಗುತ್ತೆ. ಅಂಥ ಪಾಕಿಸ್ತಾನದ ಎದುರು ಯುದ್ಧಕ್ಕೆ ಹೆದರಿ ಕೂತಿದ್ದಾರೆ.

“ಸಂದೀಪ್ ಬದುಕಿದ್ದಿದ್ದರೆ ಇನ್ನೊಂದಿಷ್ಟು ದೇಶಸೇವೆ ಮಾಡುತ್ತಾ ಇದ್ದ. ನನ್ನ ಮಗ ಹೋದ ಅಂತ ಬೇಸರ ಇಲ್ಲ. ಆದರೆ ಸಾಯಲಿಕ್ಕೇ ಅಂತ ಬಂದ ಕಳ್ಳರ ಕೈಯಲ್ಲಿ ಸತ್ತನಲ್ಲ ಅಂತ ಬೇಸರ. (ಭಾವಪರವಶರಾಗಿ) A GEM lost to the theives. Sandeep was a gem. He was a gem. ಇವತ್ತು ರವಿ ಬೆಳಗೆರೆಯವರು ಹೇಳ್ತಾರೆ, `ನನ್ನ ಮಗನನ್ನು ನಿಮ್ಮ ಮಗ ಅಂದುಕೊಳ್ಳಿ. ಅವನು ಇನ್ನು ಮುಂದೆ ನಿಮ್ಮ ಜೊತೆಯಲ್ಲೇ ಇದ್ದು ನಿಮ್ಮ ಸೇವೆ ಮಾಡ್ತಾನೆ’ ಅಂತ. ನೀವೂ ಎಲ್ಲಾ ಹಾಗೆ ಹೇಳ್ತೀರಾ. ನಿಮ್ಮ ಮಕ್ಕಳು ನಾನು ಹೇಳಿದ್ದನ್ನು ಮಾಡಬಹುದು; ನನ್ನನ್ನು ಗೌರವಿಸಬಹುದು, ಆದರೆ ನನ್ನನ್ನು ಬೈಯ್ಯೋಕಾಗತ್ತ? ಸಂದೀಪ್ ನನ್ನನ್ನ ಅರ್ಥ ಮಾಡ್ಕೊಂಡಿದ್ದ, ನನ್ನನ್ನ criticize ಮಾಡ್ತಾ ಇದ್ದ, ನನ್ನ ಜೊತೆ ಜಗಳ ಮಾಡ್ತಾ ಇದ್ದ. ಹಾಗೆ, ನೀವು ಮಾಡ್ತೀರಾ ಎಂದು ಒಂದೇ ಉಸಿರಲ್ಲಿ ಹೇಳಿ ಮಾತು ನಿಲ್ಲಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಪ್ರಾರ್ಥನಾ ನರ್ಸರಿಯ ಪುಟಾಣಿಗಳು ತಮ್ಮ ಸಹಜ ಮುಗ್ಧತೆಯಿಂದ ಪುಣ್ಯಕೋಟಿಯ ಕಥೆಯನ್ನು ತೆರೆದಿಟ್ಟರು. ಪುಣ್ಯಕೋಟಿ ಹುಲಿಗೆ ಆಹಾರವಾಗಲು ಹೊರಡುವಾಗ ಅದರ ಕಂದಮ್ಮ ’ಯಾರ ಮೊಲೆಯನು ಕುಡಿಯಲಿ, ಯಾರ ನೆರಳಿಗೆ ಹೋಗಲಿ, ಯಾರ ಆಸರೆಯಲಿ ನಾ ಬದುಕಲಿ’ ಎಂದು ರೋದಿಸುತ್ತಾ ಮತ್ತೆ ಮತ್ತೆ ತಾಯಿಯನ್ನು ಅಪ್ಪಿಕೊಳ್ಳುವ ದೃಶ್ಯ, ಅರಿವಿಲ್ಲದೆಯೇ ಕಣ್ಣಿನಲ್ಲಿ ನೀರು ತರಿಸಿತ್ತು; ಆ ಮಹಾಮಾತೆಯ ಕರುಳು ಇನ್ನೆಷ್ಟು ನೊಂದಿತೋ ಏನೋ!!!

ಒಂದು ಕಥೆ ನೆನಪಿಗೆ ಬರುತ್ತಿದೆ. ಒಬ್ಬ ವೃದ್ಧನಿರುತ್ತಾನೆ. ಅವನ ದೊಡ್ಡ ಮಗ ರೋಮ್‌ನ ಚಕ್ರವರ್ತಿ ಟಿಬೇರಿಯಸ್‌ನ ಆಸ್ಥಾನ ಕವಿಯಾಗಿರುತ್ತಾನೆ. ಪ್ರಖಾಂಡ ಪಾಂಡಿತ್ಯವುಳ್ಳ ಗ್ರಂಥಗಳನ್ನು ರಚಿಸಿರುತ್ತಾನೆ. ವೃದ್ಧನ major-sandeep-unnikrishnan ಮತ್ತೊಬ್ಬ ಮಗ ಸೈನ್ಯ ಸೇರಿ ದೂರದ ಊರಿನಲ್ಲಿರುತ್ತಾನೆ. ಒಮ್ಮೆ ವೃದ್ಧನ ಕನಸಿನಲ್ಲಿ ದೇವದೂತನೊಬ್ಬ ಬಂದು ಹೀಗೆನ್ನುತ್ತಾನೆ- ನಿನ್ನ ಮಗನೊಬ್ಬನ ಮಾತು ಶತಮಾನಗಳ ಕಾಲ ಜನಮಾನಸದಲ್ಲಿ ನೆನಪಿನಲ್ಲಿರುತ್ತದೆ. ವೃದ್ಧನಿಗೆ ಬದುಕು ಸಾರ್ಥಕ ಎನಿಸುತ್ತದೆ. ಮರುದಿನವೇ ಸಾವನ್ನಪ್ಪಿದ ವೃದ್ಧನಿಗೆ ಸ್ವರ್ಗದಲ್ಲಿ ಅದೇ ದೇವದೂತ ಎದುರಾಗುತ್ತಾನೆ. ವೃದ್ಧನ ಇಚ್ಛೆಯ ಮೇರೆಗೆ ಕಾಲವನ್ನು ನಾಲ್ಕು ಶತಮಾನ ಮುಂದಕ್ಕೆ ತಳ್ಳುತ್ತಾನೆ. ವೃದ್ಧನಿಗೆ ಆಶ್ಚರ್ಯ ಕಾದಿರುತ್ತದೆ. ಅವನ ಎರಡನೆಯ ಮಗನ ಮಾತು ಎಲ್ಲೆಡೆ ಪ್ರಚಲಿತದಲ್ಲಿರುತ್ತದೆ.  ಮಿಲಿಟರಿಯಲ್ಲಿದ್ದ ಆತನ ಸ್ನೇಹಿತನಿಗೆ ವಿಚಿತ್ರ ಖಾಯಿಲೆ ಅಂಟಿಕೊಳ್ಳುತ್ತದೆ. ಅದನ್ನು ಗುಣಪಡಿಸಬಲ್ಲವನು ಒಬ್ಬನೇ ವೈದ್ಯನೆಂದು ತಿಳಿದು, ಅವನ ಹುಡುಕಾಟದಲ್ಲಿ ವರ್ಷಗಟ್ಟಲೆ ಅಲೆಯುತ್ತಾನೆ. ನಂತರ ತಿಳಿಯುತ್ತದೆ, ಆ ವೈದ್ಯ ದೇವರ ಮಗನೆಂದು. ಆ ವೈದ್ಯನನ್ನು ಕಂಡು ಹೇಳುತ್ತಾನೆ- ’ನೀನು ನನ್ನ ಮನೆಗೆ ಬರಬೇಕೆಂದು ಬಯಸುವಷ್ಟು ದೊಡ್ಡವನು ನಾನಲ್ಲ. ಆದರೆ, ನನ್ನ ಸೇವಕನೊಡನೆ ಮಾತನಾಡಿ, ಅವನನ್ನು ಬದುಕಿಸು’- ಎಂದು. ಈ ಮಾತು ಹೇಗೆ ಶತಮಾನಗಳ ಕಾಲ ಬಾಳಿತೋ ಹಾಗೇ ಮೇಜರ್ ಸಂದೀಪ್‌ರ ಸಾಧನೆ ಕೂಡ ಸಾವಿರ ವರ್ಷ ಸ್ಥಿರವಾಗಿ ನಿಲ್ಲುತ್ತದೆ. ನಮ್ಮಂತ ಯುವಕರಿಗೆ ಅವರ ಕಣ್ಣುಗಳೇ ಸ್ಫೂರ್ತಿಯ ಸೆಲೆ. ಇಂದಿನ ಮಕ್ಕಳಲ್ಲಿ ತ್ಯಾಗ, ಶೌರ್ಯ, ದೇಶಪ್ರೇಮ ಮುಂತಾದ ಗುಣಗಳನ್ನು ಬಿತ್ತಲು ಬೇಕಾದ ಆದರ್ಶ, ಸಂದೀಪ್‌ರ ಸಾಧನೆ.

ಇಷ್ಟು ಹೇಳಿ ಈ ಲೇಖನ ಮುಗಿಯಬೇಕಿತ್ತು. ಆದರೆ ಈ ಲೇಖನ ಬರೆಯುವಾಗ ನನ್ನ ಅನುಭವಕ್ಕೆ ಬಂದ ಒಂದು ಸನ್ನಿವೇಶ; ಅದನ್ನು ನಿಮ್ಮೋಡನೆ ಹೇಳಿಕೊಳ್ಳಬೇಕೆಂದಿದ್ದೇನೆ. ಈ ಲೇಖನ ಬರೆಯಲು ನಾನು ಎರಡು ಹಾಳೆಗಳನ್ನು ತೆಗೆದುಕೊಂಡು ಕೂತೆ. ಆ ಎರಡೂ ಹಾಳೆಗಳ ಒಂದೊಂದು ಬದಿಗಳು ತುಂಬಿದ್ದವು. ಉಳಿದ ಬದಿಗಳಲ್ಲಿ ನಾನು ಲೇಖನ ಬರೆಯುತ್ತಾ ಹೋದೆ. ನಂತರ ಪಕ್ಕದಲ್ಲಿದ್ದ ಮೂರನೇ ಹಾಳೆ ಎಳೆದುಕೊಂಡಾಗ ಒಂದು ಕ್ಷಣ ಮೂಕವಿಸ್ಮಿತನಾದೆ ! ಆ ಹಾಳೆಗಳ ಒಂದು ಬದಿಗಳಲ್ಲಿ ಇದ್ದುದು ಸ್ವಾತಂತ್ರ್ಯ ಯೋಧ ಖುದೀರಾಮ್ ಬೋಸ್‌ರ ಜೀವನಗಾಥೆ! ಖುದೀರಾಮ್ ಬೋಸ್ ಕೂಡಾ ಬಾಲ್ಯದಿಂದಲೇ ಬ್ರಿಟೀಷರ ವಿರುದ್ಧ ಹೋರಾಡಿ, ೧೯ನೇ ವರ್ಷದಲ್ಲೇ ತನ್ನ ಉಸಿರನ್ನ ಅರ್ಪಿಸಿದ್ದರು. ಒಬ್ಬ ಹುಟ್ಟು ದೇಶಪ್ರೇಮಿಯ ಸಾಹಸಗಾಥೆಯ ಹಿಂದೆ ಮತ್ತೊಬ್ಬ ಅಮರ ಯೋಧನ ಕೀರ್ತಿಚರಿತೆ!!! ಅದೂ ನಾನು ಖುದೀರಾಮ್‌ರ ಲೇಖನ ಬರೆದು ಮೂರು ವರ್ಷಗಳೇ ಕಳೆದಿದ್ದವು!!! ಮೂರು ವರ್ಷಗಳಿಂದ ಈ ಕಾಗದ ಸಂದೀಪ್‌ರ ಹೆಸರಿಗಾಗಿ ಕಾಯುತ್ತಿತ್ತಾ!!? ಪ್ರತಿಯೊಂದು ವಸ್ತುವಿನಲ್ಲೂ ಜಗತ್ತಿನ ಆಗುಹೋಗುಗಳಿಗೆ ಸ್ಪಂದಿಸುವ ವಿಶ್ವಚೇತನವೊಂದು ಇರುತ್ತದೆ ಎಂಬ ತತ್ವಜ್ಞಾನಿಯ ಮಾತು ನೆನಪಾಯಿತು. Life attracts life ಎಂಬ ಮೂರು ಪದಗಳ ತಾತ್ಪರ್ಯದ ಅನ್ವೇಷಣೆಯಲ್ಲಿದ್ದ ನನಗೆ, ಅದೂ ತಿಳಿಯಿತು. ಸಾಮಾನ್ಯವಾಗಿ, ನಾನು ಇಂಥ ಘಟನೆಗಳನ್ನು coincedence ಎಂದು ಸ್ವೀಕರಿಸಿ, ಆ ಸನ್ನಿವೇಶವನ್ನು ಹೆಣೆದ `ಕಾಲದೇವ’ನೆಡೆಗೆ ಒಮ್ಮೆ ನಗು ಚೆಲ್ಲಿ ಸುಮ್ಮನಾಗುತ್ತೇನೆ. ಆದರೆ, ಇಂದೇಕೋ, ಈ ಘಟನೆಯನ್ನು ಒಂದು coincedence ಎಂದು ಮನಸ್ಸು ಒಪ್ಪುತ್ತಿಲ್ಲ; ನಗುವೂ ಬರುತ್ತಿಲ್ಲ.


Blog Stats

  • 68,988 hits
ಮೇ 2009
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 123
45678910
11121314151617
18192021222324
25262728293031

Top Clicks

  • ಯಾವುದೂ ಇಲ್ಲ